ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-36

   ಆವೊತ್ತು ಬೆಳಿಗ್ಗೆ ಸಿಂಬಾವಿಯ ಹೊಲೆಗೇರಿಯಲ್ಲಿ, ಗಟ್ಟದ ತಗ್ಗಿನವರ ಬಿಡಾರಗಳಲ್ಲಿ ಮತ್ತು ಹಳೆಪೈಕದ ಒಕ್ಕಲು ಮನೆಯ ಗುಡಿಸಲುಗಳಲ್ಲಿ ಮಕ್ಕಳಿಗೆ ಸಂಭ್ರಮವೋ ಸಂಭ್ರಮವಾಗಿ ಹೋಯ್ತು:

ಹೊಲಗೇರಿಯ ಅಂಚಿನಲ್ಲಿದ್ದು ಬಹು ಎತ್ತರಕ್ಕೆ ಬೆಳೆದಿದ್ದ ಒಂದು ಬೃಹದಾಕಾರದ ಗೊಜ್ಜಿನ ಮಾವಿನ ಮರದ ಬುಡದಲ್ಲಿ, ಕಳೆದ ರಾತ್ರಿಯಲ್ಲಿ ಗಾಲಿಗೆ ಉದಿರಿದ್ದ ಹಣ್ಣುಗಳನ್ನು ಹೆರಕುವುದಕ್ಕಾಗಿ ಹೊತ್ತಾರೆ ಮುಂಚೆಯೆ ನೆರೆದಿದ್ದ ಹೊಲೆಯರ ಕುರುದೆಗಳಿಗೆ ಅವರ ದೈನಂದಿನ  ನಿತ್ಯಜೀವನದ ನೀರಸ ಸಾಧಾರಣತೆಯನ್ನು ಕಲಕಿ ಅಲ್ಲೋಲಕಲ್ಲೋಲ ಮಾಡುವಂತಹ ಒಂದು ಅಪೂರ್ವ ವಸ್ತು ದೃಗ್ಗೋಚರವಾಯಿತು! ಅದು ಮೊದಲು ಗೋಚರವಾದದ್ದು ದೃಕ್ಕಿಗಲ್ಲ, ಕರ್ಣಕ್ಕೆ.
ಲಕ್ಕಿಮಟ್ಟಿನ ಬುಡದಲ್ಲಿ, ತನಗೆ ತುಸುದೂರದಲ್ಲಿಯೆ ನಿಂತು ಯಾಚನಾಧ್ವನಿಯಿಂದ ಅರಚಿಕೊಳ್ಳುತ್ತಿದ್ದ ಊರುಹಂದಿಯ ಮತ್ತು ಸದರ ಮರಿಯ ನಿತ್ಯಪರಿಚಿತ ಆರ್ತನಾದವನ್ನು ಗಮನಿಸದೆ, ‘ಹೇಲಕ್ಕೆ ಕೂತಿತ್ತು’ ಒಂದು ಕುರುದೆ! ಹೆಣ್ಣು ಕುರುದೆ! ಅದರ ಮೈಮೇಲೆ ಬಟ್ಟೆಯ ಚೂರು ಯಾವ ರೂಪದಲ್ಲಿಯೂ ಇರಲಿಲ್ಲ. ತಲೆ ಕೆದರಿದ್ದ ಆ ಬತ್ತಲೆಯ ಮಗು ತನ್ನೆದುರಿಗೆ ಬಿದ್ದಿದ್ದು, ಹಕ್ಕಿಯೊ ಅಳಿಲೊ ತಿಂದು ಅರೆಯಾಗಿದ್ದ ಒಂದು ಮಾವಿನ ಹಣ್ಣನ್ನು ಹೆರಕಿಕೊಂಡು ತಿಂದು, ಅದರ ಗೊರಟನ್ನು ಚೀಪುತ್ತಾ ಇತ್ತು. ಇದ್ದಕ್ಕಿದ್ದ ಹಾಗೆ ತಾನೆಂದೂ ಕೇಳದಿದ್ದ ಒಂದು ಭಯಂಕರ ಗರ್ಜನೆ ಕೇಳಿಸಿದಂತಾಗಿ,  ಚಿಟಾರನೆ ಚೀರುತ್ತಾ, ತನ್ನ ಅಣ್ಣ ಇದ್ದೆಡೆಗೆ ಓಡಿ ಬಂತು. ಅವನೂ ತನ್ನ ತಂಗಿಯಂತೆಯೆ ನಗ್ನನಾಗಿದ್ದರೂ ಅವಳಿಗಿಂತಲೂ ಬಹುಶಃ ಒಂದು ವರ್ಷಕ್ಕೆ ಹಿರಿಯನಾಗಿದ್ದು, ಸೊಂಟಕ್ಕೆ ಒಂದು ಕೊಳೆಮುಸುಕಿನ ಉಡಿದಾರ ಕಟ್ಟಿದ್ದರಿಂದ ತನ್ನ ತಂಗಿಯ ರಕ್ಷೆಯಧಿಕಾರ ಪಡೆದಿದ್ದನಷ್ಟೆ! ಆದರೆ ಅವನಿಗೂ ಆ ಅಪರಿಚಿತ ಸದ್ದನ್ನೂ ಕೇಳಿ ಅವನ ತಂಗಿಗೆ ಆಗಿದ್ದಷ್ಟೆ ಹೆದರಿಕೆಯಾಗಿದ್ದರಿಂದ ಅವರಿಬ್ಬರೂ ತಮಗಿಂತಲೂ ಒಂದು ವರ್ಷಕ್ಕೆ ದೊಡ್ಡವನಾಗಿ ಜ್ವರಗಡ್ಡೆಯಿಂದ ಹೊಟ್ಟೆ ಡೊಳ್ಳಾಗಿದ್ದು ಲಂಗೋಟಿದಾರಿಯಾಗಿದ್ದ ಒಬ್ಬನ ಬಳಿಗೆ ಆಶ್ರಯಕ್ಕಾಗಿ ಓಡಿ ಬಂದರು. ಆ ಲಂಗೋಟಿಯ ಕುರುದೆಗೆ ಆ ಶಬ್ದ ಅಷ್ಟು ಅಪರಿಚಿತವಾದುದಾಗಿರಲಿಲ್ಲ. ಹೋದ ವರುಷವೆ ಅವನು ಅದನ್ನು ಕೇಳಿದ್ದನು. ಅವನು ಆ ಶಬ್ದಕ್ಕೆ ಕಾರಣವಾದದು ಅಲ್ಲೆ ಎಲ್ಲಿಯೊ ಮೇಯುತ್ತಿರಬೇಕೆಂದು ನಿಶ್ಚಯಿಸಿ, ನಾಲ್ಕು ಕಡೆಯೂ ನೋಡಿ. ಕಂಡು “ಕುದ್ರೆ ಕಣ್ರೋ, ಕುದ್ರೆ! ಸಾಬರ ಕುದ್ರೆ!” ‘ಹೇ ಹೇ ಹೇ’ ಎಂದು ಕೂಗಿ ಹರ್ಷಘೋಷ ಮಾಡುತ್ತಾ, ದೂರದಲ್ಲಿ ಮೇಯುತ್ತಿದ್ದಾ ಪ್ರಾಣಿಯ ಕಡೆಗೆ ಓಡಿದನು. ಸರಿ, ಹೊರಟಿತು ಹತ್ತಾರು ಹುಡುಗರ ಕೊರಳ ಕೂಗು: “ಕುದ್ರೆ! ಕುದ್ರೆ! ಕುದ್ರೆ! ಕುದ್ರೆ! ಬನ್ರೋ ಬನ್ರೋ! ಕುದ್ರೆ! ಕುದ್ರೆ! ಕುದ್ರೆ! ಹೇ ಹೇ ಹೇ!….
ಲಂಗೋಟಿ, ಉಡಿದಾರ, ಬತ್ತಲೆ ಇತ್ಯಾದಿ ಎಲ್ಲ ‘ಹೊಲೇರ ಕುರುದೆ’ಗಳೂ ಧಾವಿಸಿ, ಮೇಯುತ್ತಿದ್ದ ಕುದುರೆಗಳಿಗೆ ಸಾಕಷ್ಟು ದೂರದಲ್ಲಿಯೆ ಭಯಭಕ್ತಿಯಿಂದ ಗುಂಪುನಿಂತು ಅವುಗಳ ಅದ್ಭುತ ವೈಚಿತ್ಯ್ರವನ್ನು ಬೆರಗುಗಣ್ಣಾಗಿ ನೋಡತೊಡಗಿದುವು.
ನಾಗರಿಕತೆಗೆ ಸುದುಷ್‌ಪ್ರವೇಶ್ಯವಾಗಿದ್ದ ಆ ಮಲೆನಾಡಿನ ಕೊಂಪೆಯ ಕಾಡುಹಳ್ಳಿಯ ಹುಡುಗರಿಗೆ ಮೇಗರವಳ್ಳಿಯ ಕರ್ಮಿನ್‌ಸಾಬರ ಕುದುರೆಯ ಆಗಮನವೆಂದರೆ ಒಂದು ಮಹತ್ತಾದ ಐತಿಹಾಸಿಕ ಘಟನೆಯೆ! ಆ ಅಪೂರ್ವಪ್ರಾಣಿಯನ್ನು ನೋಡುವುದೆ ಅವರಿಗೆಲ್ಲ ಒಂದು ಮಹತ್ತಾದ ಅದ್ಭುತಾನುಭವ. ಜೊತೆಗೆ, ಆ ಅನುಭವವನ್ನು ಮತ್ತಷ್ಟು ಆನಂದಮಯವನ್ನಾಗಿ ಮಾಡುವ ಇನ್ನೊಂದು ಕಾರಣವೂ ಇತ್ತು. ಕರ್ಮಿನ್ ಸಾಬರು ನೀರುಳ್ಳಿ, ದಿನಸಿ, ಒಣಮೀನು ಮುಂತಾದ, ದೊಡ್ಡವರಿಗೆ ಸಂಸಾರ ನಡೆಸಲು ಆವಶ್ಯಕವಾದ, ಪದಾರ್ಥಗಳ ಜೊತೆಗೆ ಕೊಬರಿ, ಕಡಲರ, ಉತ್ತುತ್ತೆ, ಓಲೆಬೆಲ್ಲ, ಕರ್ಜೂರ, ಮಿಠಾಯಿ, ಬತ್ತಾಸು, ಬೆಂಡು ಮೊದಲಾದ, ವಿಶೇಷವಾದ ಮಕ್ಕಳ ಹಿಗ್ಗಿಗೆ ಕಾರಣವಾಗುವ, ಪದಾರ್ಥಗಳನ್ನೂ ಮಾರಾಟಕ್ಕೆ ತರುತ್ತಿದ್ದರು. ಮೊದಲನೆಯ ವರ್ಗದ ಸರಕನ್ನು ಬಹಿರಂಗವಾಗಿಯೆ, ಎಂದರೆ ಮನೆಯ: “ಮುಂಚೆಕಡೆ”ಯೆ ವ್ಯಾಪಾರ ಮಾಡುತ್ತಿದ್ದರು, ಮನೆಯ ಯಜಮಾನರ ಸಮ್ಮುಖದಲ್ಲಿ. ಎರಡನೆಯ ವರ್ಗದ ಸರಕಿನ ವ್ಯಾಪಾರವೆಲ್ಲ ಸಾಧಾರಣವಾಗಿ ಅಂತರಂಗದಲ್ಲಿ, ಎಂದರೆ ಮನೆಯ ಹಿತ್ತಲುಕಡೆಯ ಬಾಗಿಲಲ್ಲಿ, ಹೆಂಗಸರು ಮಕ್ಕಳೊಡನೆ ನಡೆಯುತ್ತಿತ್ತು. “ಹಿತ್ತಲುಕಡೆಯ” ಮಾರುಕಟ್ಟೆಯಲ್ಲಿಯೆ ಚೆನ್ನಾಗಿ ಗಿಟ್ಟುತ್ತದ್ದುದು!….
ಅಲ್ಲಿ ನೋಡಿ:
ಸಿಂಬಾವಿ ಮನೆಯ ಹಿತ್ತಲುಕಡೆಯ ಬಾಗಿಲಾಚೆ, ದೊಡ್ಡ ಹುಣಿಸೆಮರದ ಬುಡದಲ್ಲಿ ನಿಬಿಡವಾಗಿ ಬೆಳೆದಿದ್ದ ಲಕ್ಕಿ, ಅರಮರಲು, ಹುಳಿಚೊಪ್ಪು ಮೊದಲಾದ ಪೊದೆಗಳ ಮಧ್ಯೆ, ಸಹಿಸಬಾರದ ಉಚ್ಚೆಯ ಸಿನುಗು, ಹೇಲಿನ ನಾತಗಳನ್ನು ಒಂದಿನಿತೂ ಗಮನಕ್ಕೂ ತಂದುಕೊಳ್ಳದೆ, ಮನೆಗೆಲಸದ ಹುಡುಗ, ದೊಳ್ಳ, ಏನೋ ಕಳ್ಳ ಕೆಲಸದಲ್ಲಿ ತೊಡಗಿದಂತೆ ಅತ್ತ ಇತ್ತ ನೋಡುತ್ತಾ ಏನನ್ನೊ ಎತ್ತುತ್ತಿದ್ದಾನೆ!
ಕಳೆದ ರಾತ್ರಿಯೆ ಆ ಗೋಣಿಚೀಲದ ಗಂಟನ್ನು ಗುಟ್ಟಾಗಿ ತಂದು ಅಲ್ಲಿ ಬೈತಿಟ್ಟಿದ್ದನು: ಹಿಂದಿನ ದಿನ ಸಂಜೆಯ ಮುಂಗಪ್ಪಿನಲ್ಲಿ ಕರ್ಮಿನ ಸಾಬರ ಗುಂಪು ಕುದುರೆಗಳೊಡನೆ ಬಂದು, ‘ಹೆಗ್ಗಡೇರು ಇದ್ದಾರೆಯೆ?’ ಎಂದು ವಿಚಾರಿಸಿ, ಅವರು ಕಲ್ಲೂರಿಗೆ ಹೋಗಿರುವುದನ್ನು ತಿಳಿದು, ಜಟ್ಟಮ್ಮ ಹೆಗ್ಗಡಿತಿಯರ ಅಪ್ಪಣೆ ಪಡೆದು, ಸೌದೆ ಕೊಟ್ಟಿಗೆಯ ಕಡಿಮಾಡಿನಲ್ಲಿ. ವರ್ಷ ವರ್ಷವೂ ಅವರು ಸಿಂಬಾವಿಗೆ ಹೇರು ತಂದಾಗಲೆಲ್ಲ ಅನುಸರಿಸುವ ಪದ್ಧತಿಯಂತೆ, ಬೀಡು ಬಿಟ್ಟಾಗಲೆ ಮನೆಗೆಲಸದ ಹುಡುಗ, ದೊಳ್ಳ, ಅಡುಗೆ ಕೆಲಸದ ಮರಾಟಿ ಮಂಜನ ಕದರಡಕೆಯ ದಾಸ್ತಾನನ್ನು ಅಜಮಾಯಿಸಿ ಮಾಡಿದ್ದನು: ಅಂದರೆ ಮರಾಟಿ ಮಂಜನು ಸಾತ್ವಿಕ ಸತ್ಯಸಂಧತೆಯಿಂದ ಶೇಖರಿಸಿದ್ದ ಕದರಡಕೆ ಬರಿಯ ಬೆಟ್ಟೆ ಗೋಟು ಎಂದು ಕಂಡುಬಂದಿದ್ದರಿಂದ ಅದರ ಜೊತೆಗೆ ಸ್ವಲ್ಪ ಹಸ ಮತ್ತು ದಳಗಳನ್ನಾದರೂ ಬೆರಕೆ ಮಾಡದಿದ್ದರೆ ಸಾಬರು ಕಡಲೆ ಕೊಬ್ಬರಿ ಬತ್ತಾಸುಗಳನ್ನು ಸರಿಯಾದ ಪರಿಮಾಣದಲ್ಲಿ ತನಗೆ ಕೊಡುವುದಿಲ್ಲ ಎಂದು ಶಂಕಿಸಿ, ಮನೆಯ ಸ್ವಂತ ಮಾರಾಟದ ಅಡಕೆ ರಾಶಿಗಳಿದ್ದ ಗರಡೀಕೋಣೆಗೂ ಕದ್ದು ನುಗ್ಗಿ, ಮರಾಟಿಮಂಜನ ದಾಸ್ತಾನಿನಲ್ಲಿ ಕಂಡು ಬಂದಿದ್ದ ನ್ಯೂನತೆಯನ್ನು ನಿವಾರಿಸಿ ಕೊಂಡಿದ್ದನು.
ಆದರೂ ಅವನು ಅಷ್ಟೆಲ್ಲ ಮೆಹನತ್ತು ಮಾಡಿದ್ದರೂ, ಕರ್ಮಿನ್ ಸಾಬರ ಟೀಕೆ ಸ್ವಲ್ಪ ನಿರಾಶಾದಾಯಕವಾಗಿಯೆ ಇತ್ತು. ಯಾರಾದರೂ ಕಂಡುಬಿಟ್ಟಾರು ಎಂದು ಕಳವಳಗೊಂಡಿದ್ದ ದೊಳ್ಳನಿಗೆ ಗಂಟಲು ಗದ್ಗದವಾಗಿ, ಕಣ್ಣು ಹನಿತುಂಬಿ, ಅಳು ಬರುವಂತಾಯ್ತು.
ದೊಳ್ಳ ತಂದಿದ್ದ ಗೋಣಿಚೀಲದ ಗಂಟನ್ನು ಉದ್ದೇಶಪೂರ್ವಕವಾದ ತಿರಸ್ಕಾರದ ಭಾವದಿಂದಲೂ ಔದಾಸೀನ್ಯದಿಂದಲೂ ನಿಧಾನವಾಗಿ ಬಿಚ್ಚುತ್ತಾ, ಅದರಲ್ಲಿದ್ದ ಅಡಕೆಯ ಗುಣಕ್ಕೂ ಪ್ರಮಾಣಕ್ಕೂ ಒಳಗೊಳಗೆ ಹೃದಯ ಹಿಗ್ಗುತ್ತಿದ್ದರೂ ಮುಖವನ್ನು ಸಿಂಪಡಿಸುತ್ತಾ, ಕರೀಂಸಾಬಿ, “ತ್ಚು! ತ್ಚು! ತ್ಚು! ಏ ಹುಡುಗಾ, ಎಂಥಾ ಬುರ್ನಾಸ್ ಅಡಕೆಯೋ ಇದು? ಎಲ್ಲಿ ಸಿಕ್ಕಿತೊ ನಿನಗೆ?” ಎನ್ನುತ್ತಾ ಅಡಕೆಯಲ್ಲಿ ಕೈಯಾಡಿಸಿ, ತನ್ನ ತಮ್ಮ ಪುಡೀಸಾಬೂಗೆ ಏನನ್ನೊ ಮಲೆಯಾಳಿಯಲ್ಲಿ ಹೇಳಿ ಕಣ್ಣು ಮಿಟುಕಿಸಿದನು.
“ಅದ್ಯಾಕೆ, ಸಾಬ್ರೆ? ತಾನೇ ತ್ವಾಟದಾಗೆ ಕದರಡಿಕೆ ಹೆರಕಿ, ಸುಲಿದು, ಚೊಗರು ಹಾಕಿ ಬೇಯಿಸಿ ಮಾಡಿದ್ದು.” ದೊಳ್ಳನೆಂದನು ಅಳುಕು ದನಿಯಿಂದಲೆ.
“ಬರೀ ಗೋಟು, ಬೆಟ್ಟ! ಇದಕ್ಕೆ ಏನು ಕೊಡೋದೋ ನಿನಗೆ?…. ಹೋಗು ಪುಡೀ ಸಾಬರ ಹತ್ತಿರ; ಕೊಟ್ಟುಕಳಿಸುತ್ತಾರೆ.” ಎಂದು ಅವಸರವಸರವಾಗಿ, ದೊಳ್ಳನ ಯಾವ ಅಭಿಪ್ರಾಯಕ್ಕೂ ಕಾಯದೆ, ಅಡಕೆಯನ್ನೆಲ್ಲ ತಮ್ಮ ದೊಡ್ಡ ಹಸುಬೆ ಚೀಲಕ್ಕೆ ಸುರಿದುಕೊಂಡು, ದೊಳ್ಳನ ಹರಕಲು ಚೀಲವನ್ನು ಅವನಿಗೆ ಕೊಟ್ಟುಬಿಟ್ಟು, ಅವನು ಅಲ್ಲಿ ಇದ್ದಾನೆಯೆ ಇಲ್ಲವೆ ಎಂಬ ಪ್ರಜ್ಞೆಯೆ ಇಲ್ಲದವರಂತೆ, ಅನ್ಯಕಾರ್ಯದಲ್ಲಿ ಮಗ್ನರಾದರು ‘ಕರ್ಮಿನ ಸಾಬ್ರು!’
ತಾನು ಕದ್ದಿದ್ದ ಮರಾಟಿಮಂಜನ ‘ಕದರಡಕೆ’ಗೆ ಸರಿಯಾದ ತಿಂಡಿಸಾಮಾನು ಬರುವುದಿಲ್ಲ ಎಂದು ಶಂಕಿಸಿ. ಒಡೆಯರ ಮನೆಯ ಅಡಕೆಯ ರಾಶಿಯಿಂದಲೂ ಒಂದಷ್ಟು ಒಳ್ಳೆಯ ಹಸ ಮತ್ತು ದಳಗಳನ್ನು ಕದ್ದು ಸೇರಿಸಿಕೊಂಡು ಬಂದಿದ್ದ ದೊಳ್ಳನಿಗೆ ಕರ್ಮಿನ್ ಸಾಬರು ಬೇಕೆಂದೇ ಸುಳ್ಳೆ ಹೇಳಿ, ತನಗೆ ದಗಾ ಹಾಕುತ್ತಿದ್ದಾರೆಂದು ಗೊತ್ತಾದರೂ, ಉಕ್ಕಿಬರುತ್ತಿದ್ದ ದುಃಖ ಕೋಪಗಳನ್ನು ನುಂಗಿಕೊಂಡನು. ಮರಾಟಿ ಮಂಜನಾಗಲಿ ಮತ್ತೆ ಯಾರಾದರಾಗಲಿ ಬಂದು ತಾನು ಮಾಡುತ್ತಿದ್ದ ವ್ಯಾಪಾರವನ್ನು ಗಮನಿಸಿದರೆ, ಎಲ್ಲಿ ಸಿಕ್ಕಿಬೀಳುತ್ತೇನೆಯೊ ಎಂದು ಅಂಜಿ, ವಿನಿಮಯ ಕಾರ್ಯವನ್ನು ಆದಷ್ಟು ಬೇಗನೆ ಮುಗಿಸುವ ಆತುರದಿಂದ ಪುಡೀಸಾಬರ ಕಡೆಗೆ ಹೋದನು. ಅಲ್ಲಿ, ಕಟ್ಟಿ ಇಟ್ಟಿದ್ದ ಚೀಲಗಳಲ್ಲಿ, ಉತ್ತುತ್ತೆಯೊ ಕರ್ಜೂರವೊ ಓಲೆಬೆಲ್ಲೊ ಬತ್ತಾಸೊ ಬೆಂಡೊ ಮಿಠಾಯಿಯೊ ಯಾವ ಯಾವ ದೇವತೆಗಳೊ ತನ್ನನ್ನು ಅನುಗ್ರಹಿಸಲು ಕಾತರರಾಗಿ, ಪ್ರತ್ಯಕ್ಷರಾಗಲು ಕಾದು ಕುಳಿತಿರುವ ಚಿತ್ರವನ್ನು ಕಲ್ಪನೆಯ ಕಣ್ಣುಕೆರಳಿ ಕಾಣುತ್ತಾ ನಿಂತನು. ಆದರೆ ಪುಡೀಸಾಬು ಬಿದಿರಿನ ಗೆಣ್ಣು ಕತ್ತರಿಸಿ ಇಚಿಸಿದ್ದ ಒಂದು ಸಣ್ಣ ಸಿದ್ದೆಯನ್ನು ಕೈಗೆ ತೆಗೆದುಕೊಂಡು, ಅದನ್ನು ಒಂದು ಚೀಲದೊಳಗೆ ತೂರಿಸಿ, ಹೊರಗೆ ತೆಗೆದು, ದೊಳ್ಳನತ್ತ ಕೈ ಚಾಚಿ ನೀಡಿದಾಗ, ಪ್ರತ್ಯಕ್ಷವಾಗಿದ್ದ ಆ ಬಡಕಲು ಬೂಸಲು ದೇವತೆಯನ್ನು ನೋಡಿ  ಅವನ ಆಶೆ ತಲೆಕೆಳಗಾಗಿ ಉರುಳಿ ಹೋಯಿತು! ಆ ಸಿದ್ಧೆಯೊಳಗಿದ್ದ ತಿನಿಸಿನ ಗುಣ ಮಾತ್ರ ಎರಡೂ ಅತ್ಯಂತ ನಿರಾಶಾದಾಯಕವಾಗಿತ್ತು! ಆ ಹಳೆಯ ಮುಗ್ಗಲು ಹುರಿಗಡಲೆಗೆ ನಿಡುಸುಯ್ಯುತ್ತಾ ಇನ್ನೇನು ಮಾಡುವುದು ಎಂದು ಸೆರಗನ್ನೇನೋ ಒಟ್ಟಿದನು, ತನ್ನ ಅಡಕೆಯನ್ನೆಲ್ಲ ಸವನಿಸಿಕೊಂಡು ಕರ್ಮಿನ್ ಸಾಬರು ಹಿಂತಿರುಗಿಸಿದ್ದ ಖಾಲಿ ಚೀಲವನ್ನೆ!
ತಾನು ಕೊಟ್ಟಿದ್ದ ಅಷ್ಟೊಂದು ಅಡಕೆಗೆ ಇನ್ನೂ ಬೇರೆ ಬೇರೆಯ ಉತ್ತಮತರದ ತಿಂಡಿಸಾಮಾನುಗಳೂ ದೊರೆಯುತ್ತವೆ ಎಂದು ಚೀಲವನ್ನೊಡ್ಡಿಕೊಂಡೇ ಕಾದು ನಿರೀಕ್ಷಿಸಿ ನಿಂತಿದ್ದ ದೊಳ್ಳನನ್ನು ಗಂಭೀರ ಮುಖಮುದ್ರೆಯಿಂದ ನೋಡಿ ಪುಡೀಸಾಬು “ಮತ್ತೆ ಯಾಕೆ ನಿಂತೀಯ, ದೊಳ್ಳಣ್ಣಾ?” ಎಂದು ಆಶ್ಚರ್ಯ ಸೂಚಿಸುವ ಧ್ವನಿಯಲ್ಲಿ ಕೇಳಿದನು.
“ಏನು, ಸಾಬ್ರೆ, ಇದು? ಅಷ್ಟೊಂದು ಅಡಿಕೆ ಕೊಟ್ಟೀನಿ! ಬರೀ ಉಂದು ಮುಷ್ಟಿ ಕಡಲೆ ಕೊಟ್ಟೀರಲ್ಲಾ? ಉತ್ತುತ್ತೆ ಕರ್ಜೂರ ಬತ್ತಾಸು ಏನೂ ಇಲ್ಲೇನು?” ತುಸು ಅಳುದನಿಯಿಂದಲೆ ಯಾಚಿಸಿದನು ದೊಳ್ಳ.
“ಉತ್ತುತ್ತೆ ಕರ್ಜೂರ ಅಂದ್ರೆ ಏನೂ ಅಂತಾ ತಿಳಿದುಕೊಂಡಿದ್ದೀಯಾ? ಅವೇನು ನಿನ್ನ ಅಡಕೆ ಸಿಕ್ಕಹಾಗೆ ಕಾಡು ಬದಿಯ ತೋಟದಾಗೆ ಸಿಕ್ಕುತ್ತವೆ ಅಂತಾ ಮಾಡಿದ್ದೀಯಾ? ಅವು ಎಲ್ಲಿಂದ ಬರುತ್ತವೆ ನಿನಗೆ ಗೊತ್ತೇ? ಅರಬ್ಬೀ, ಅರಬ್ಬೀ, ಅರಬ್ಬೀ ದೇಶದಿಂದ ಕಣೋ! ಸಾವಿರಾರು ಮೈಲಿ ದಾಟಿಕೊಂಡು, ಸಮುದ್ರ ಹಾದು ಬರುತ್ತವೆ! ತಿಳಿಯಿತೇನು? ನೀನು ತಂದ ಅಡಕೆಯ ಕರೀದಿಯೆಲ್ಲ ಒಂದೇ ಒಂದು ಉತ್ತುತ್ತೆಗೆ ಸಾಲದೋ! ನಿನ್ನನ್ನೆ ಮಾರಿಕೊಂಡರೂ ಒಂದು ಅಚ್ಚೇರು ಕರ್ಜೂರವೂ ಸಿಗಲಾರದೋ!…. ಅರೆ! ಇಷ್ಟು ದೊಡ್ಡ ಹುಡುಗನಾಗಿ ಕಣ್ಣೀರು ಹಾಕುತ್ತೀಯಲ್ಲೋ! ನಾಚಿಕೆ ಆಗೋದಿಲ್ಲವೆ ನಿಮಗೆ?” ಅಣಕು ನಗೆಯಾಡಿದನು ಪುಡೀಸಾಬು, ದೊಳ್ಳನ ಕಣ್ಣಿನಿಂದ ಬಳಬಳನೆ ಎರಡು ಮೂರು ಹನಿ ತೊಟ್ಟಿಕ್ಕಿದುದನ್ನು ಕಂಡು.
ಪಕ್ಕದಲ್ಲಿ ಏನೋ ಬಹು ಮುಖ್ಯವಾದ ಕೆಲಸದಲ್ಲಿ ತೊಡಗಿರುವಂತೆ ನಟಿಸಿಯೂ ಎಲ್ಲವನ್ನೂ ಗಮನಿಸುತ್ತಿದ್ದ ಕರೀಂಸಾಬು ಪುಡೀಸಾಬುಗೆ ಕನ್ನಡದಲ್ಲಿಯೆ “ಹೋಗಲಿ, ಪಾಪ! ಒಂದೊಂದೇ ಉತ್ತುತ್ತೆ ಕರ್ಜೂರ ಬತಾಸು ಕೊಟ್ಟು ಕಳಿಸು.” ಎಂದನು. ದೊಳ್ಳ ಕೊಟ್ಟಿದ್ದ ಅಡಕೆಯ ಬೆಲೆ ಅದಕ್ಕೆ ನೂರುಮುಡಿ ಆಗುತ್ತದೆ ಎಂದು ಅವನಿಗೆ ಗೊತ್ತಿಲ್ಲವೆ?
ಕಣ್ಣೀರೊರೆಸಿಕೊಂಡು ದೊಳ್ಳ ಪುಡೀಸಾಬಿಯಿಂದ ಆ ಅನುಗ್ರಹವನ್ನು ಸ್ವೀಕರಿಸಿ, ಅಳುವಿಗೂ ನಗುವಿಗೂ ನಡುವಣ ಮುಖಭಂಗಿಯನ್ನು ಪ್ರದರ್ಶಿಸುತ್ತಾ ಯಾಚಿಸಿದನು: “ಉಂದೇ ಉಂದು ವಾಲೆಬೆಲ್ಲಾನಾದ್ರೂ ಕೊಡಿ, ಸಾಬ್ರೆ!”
“ಅರೆ ಅಲ್ಲಾ! ನಿನಗೆ ಎಷ್ಟುಕೊಟ್ಟರೂ ಸಾಲದಲ್ಲೊ!….” ಎಂದು ಪುಡೀಸಾಬು ಇಡಿಯ ಓಲೆಬೆಲ್ಲವಲ್ಲದಿದ್ದರೆ ಒಂದು ಚೂರನ್ನಾದರೂ ಕೊಡುವ ಮನಸ್ಸುಮಾಡಿ, ಸಾವಧಾನವಾಗಿ ಓಲೆಬೆಲ್ಲವಿದ್ದ ಚೀಲವನ್ನು ಗೊತ್ತುಮಾಡಿಕೊಳ್ಳುವುದರಲ್ಲಿದ್ದನು. ಅಷ್ಟರಲ್ಲಿ ತನ್ನ ಗಳುಕಾಲುಗಳನ್ನು ನಿಧಾನವಾಗಿ ಎತ್ತಿಎತ್ತಿ ಬೀಸಿ ಹಾಕುತ್ತಾ ದೂರದಲ್ಲಿ ಬರುತ್ತಿದ್ದ ಮರಾಟಿಮಂಜನನ್ನು ಕಂಡು ಹೌಹಾರಿ ದೊಳ್ಳ “ಆಮ್ಯಾಲೆ ಬತ್ತೀನಿ, ಸಾಬ್ರೆ. ಕೊಡಬೈದಂತೆ!” ಎಂದು ಕರೀಂಸಾಬು ಕಡೆ ತಿರುಗಿನೋಡಿ ಪಿಸುದನಿಯಲ್ಲಿ “ಆ ಮಂಜಗೆ ಹೇಳಬ್ಯಾಡಿ, ಸಾಬ್ರೆ.” ಎಂದು ಪೊದೆಗಳ ನಡುವೆ ನುಸಿದು ಓಡಿ ಕಣ್ಮರೆಯಾದನು.
ಕೊನೆಯ ಮಾತುಗಳನ್ನು ದೊಳ್ಳ ಹೇಳುವುದೇನೂ ಬೇಡವಾಗಿತ್ತು. ಏಕೆಂದರೆ, ಕಳ್ಳವ್ಯಾಪಾರದಲ್ಲಿ ನುರಿತಿದ್ದ ಕರ್ಮಿನ್ ಸಾಬುವಿಗೆ ಒಬ್ಬ ಗಿರಾಕಿಯ ಗುಟ್ಟನ್ನು ಇನ್ನೊಬ್ಬ ಗಿರಾಕಿಗೆ ಬಿಟ್ಟುಕೊಡಬಾರದು ಎಂಬ ಅರ್ಥಶಾಸ್ತ್ರದ ರಹಸ್ಯ ಅನುಭವಪೂರ್ವಕವಾಗಿಯೆ ಚೆನ್ನಾಗಿ ಗೊತ್ತಾಗಿತ್ತು.
“ನಮ್ಮ….ದೊಳ್ಳ ಹುಡುಗ…. ಆ! ಇಲ್ಲೆಲ್ಲಾದ್ರು ಬಂದಿದ್ನ, ಸಾಬ್ರೆ? ಆ?” ಆಲಿಸುವವರಿಗೆ ಆಕಳಿಕೆಯೆ ಬರುವಷ್ಟು ಸಾವಕಾಶವಾಗಿ ಪ್ರಶ್ನಿಸಿದ್ದನು ಮರಾಟಿ ಮಂಜ, ತುಸು ರಾಗಧ್ವನಿಯಲ್ಲಿ.
ತಲೆಯಲ್ಲಾಡಿಸಿ “ಇಲ್ಲ; ಇಲ್ಲಿ ಬರಲಿಲ್ಲ.” ಎಂದರು ಸಾಬರು.
“ಆ? ಆ ಮುಂಡೇಕುರುದೆ ನನ್ನ ಕದರಡಿಕೆ ಕದ್ದುಕೊಂಡು ಹೋಗಿದಾನಲ್ಲಾ! ಆ?…. ಅಂವ ಏನಾದ್ರೂ ಅಡಿಕೆ ತಂದರೆ, ಹಿಡಿದು ಇಟ್ಟುಕೊಂಡಿರಿ! ಆ? ಆ’ತಾ? ಆ?”
ಸಾಬರು ಮಾತನಾಡಲಿಲ್ಲ; ತಲೆದೂಗಿ ಸಮ್ಮತಿಸಿದರು, ಅಷ್ಟೆ. ಮಂಜ ಹತಾಶನಾದಂತೆ ಹಿಂದಿರುಗಿ, ತುಸು ಬಿರಬಿರನೆ ನಡೆದನು.
ಹಿಂತಿರುಗಿ ಮನೆಗೆ ಬಂದ ಮರಾಟಿ ಮಂಜನ ಬರಿಗೈಯನ್ನು ಕಂಡು ತರುಣಿ ಲಕ್ಕಮ್ಮ ಸ್ವಲ್ಪ ರಹಸ್ಯಧ್ವನಿಯಲ್ಲಿ ಕೇಳಿದಳು, ಅತ್ತಿಗೆ ಜಟ್ಟಮ್ಮ ಹೆಗ್ಗಡತಿಯವರು ಅಲ್ಲೆಲ್ಲಿಯೂ ಇಲ್ಲ ಎಂಬುದನ್ನು ನಿಶ್ಚಯಿಸಿಕೊಂಡು, “ಏನೋ? ಸಿಕ್ಕಲ್ಲೇನೋ?”
“ಆ ಹಾಳು ಮುಂಡೆ ಕುರುದೆ ಅಲ್ಲಿಗೆ ಬರನೇಇಲ್ಲಂತೇ” – ಮಂಜನೆಂದನು ರಾಗಧ್ವನಿಯಿಂದ..
“ಹಾಂಗಾದರೆ “ ಅತ್ತ ಇತ್ತ ನೋಡಿ, ಸ್ವಲ್ಪ ಆಲೋಚಿಸಿ, ಏನನ್ನೊ ನಿರ್ಣಯಿಸಿದಂತೆ ಸರಕ್ಕನೆ ಹೊರಟು “ಬಾರೋ ನಾನೇ ಕೊಡ್ತೀನಿ.” ಎಂದು ಲಕ್ಕಮ್ಮ ಮನೆಯ ಅಡಕೆ ರಾಶಿಯಿದ್ದ ಕೋಣೆಯ ಕಡೆಗೆ ಹೋದಳು.
ಲಕ್ಕಮ್ಮ ಕೊಟ್ಟಿದ್ದ ಹಸನಡಕೆಯನ್ನು ಮಂಜ ಸಾಬರ ಬೀಡಿಗೆ ಒಯ್ದು, ಹೆಗ್ಗಡೆಯವರ ತಂಗಿಯೆ ಹೇಳಿ ಕಳುಹಿಸಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಿ, ಓಲೆಬೆಲ್ಲ, ಉತ್ತುತ್ತೆ, ಕರ್ಜೂರಾದಿ ತಿಂಡಿಸಾಮಾನುಗಳನ್ನು ಮುಚ್ಚಿಕೊಂಡೆ ತಂದುಕೊಟ್ಟರು. ಈ ಸಾರಿಯೂ ಕರ್ಮಿನ್ ಸಾಬರು ಲಾಭಕರವಾಗಿಯೆ ವ್ಯಾಪಾರ ಮಾಡಿದ್ದರೂ ದೊಳ್ಳನಿಗೆ ಮಾಡಿದಂತೆ ಬುಡಕಟ್ಟು ಚೌರ ಮಾಡುವ ಸಾಹಸಕ್ಕೆ ಹೋಗಿರಲಿಲ್ಲ.
ಸಿಂಬಾವಿ ಭರಮೈಹೆಗ್ಗಡೆಯವರ ಖಾಸಾ ತಂಗಿಯಾಗಿದ್ದು ಅವಿವಾಹಿತೆಯಾಗಿದ್ದ ಲಕ್ಕಮ್ಮ ತಮ್ಮ ಮನೆಯ ಅಡಕೆಯನ್ನು ತಾನೆಯೆ, ತಮ್ಮ ಅಡುಗೆ  ಆಳಿನ ಸಮ್ಮುಖದಲ್ಲಿಯೆ, ‘ಕದ್ದು ಮುಚ್ಚಿ’ ಮಾಡಿದುದು ಏಕೆ ಎಂದು ಅರಿಯಬೇಕಾದರೆ, ತುಸು ಒಳಹೊಕ್ಕು ನೋಡಿದಲ್ಲದೆ ತಿಳಿಯುವುದಿಲ್ಲ: ಅಡಕೆಕೊಯ್ಲು ಪೂರೈಸಿ, ಮನೆಯ ಕೊನೆತೆಗೆಯಿಸುವುದೆಲ್ಲ ಮುಗಿದ ಮೇಲೆ ಮನೆಯ ಹೆಂಗಸರು ಮಕ್ಕಳೂ ಮತ್ತು ಅವರ ಅನುಮತಿ ಪಡೆದ ಮನೆಯ ಒಳಗೆಲಸದ ಆಳುಗಳೂ ತೋಟದಲ್ಲಿ ಉದುರಿ ಬಿದ್ದಿರುವ ಅಡಕೆಕಾಯಿಗಳನ್ನು ಆಯ್ದು, ಸುಲಿದು, ಬೇಯಿಸಿ, ಹರಡಿ ಆರಿಸಿ ತಮ್ಮ ತಮ್ಮ ಸ್ವಂತ ಚಿಲ್ಲರೆ ಖರ್ಚನ್ನು ಸಂಪಾದಿಸಿಕೊಳ್ಳಲು ‘ಕದರಡಕೆ’ ಮಾಡಿಕೊಳ್ಳುತ್ತಿದ್ದುದು ವಾಡಿಕೆ. ಆದರೆ ಸಿಂಬಾವಿ ಭರಮೈಹೆಗ್ಗಡೆಯವರ ಹೆಂಡತಿ ಜಟ್ಟಮ್ಮ ಹೆಗ್ಗಡತಿಗೂ ಅವರ ಗಂಡನ ತಂಗಿ ಲಕ್ಕಮ್ಮನಿಗೂ ಹುಯ್ದಕ್ಕಿ ಬೇಯುತ್ತಿರಲಿಲ್ಲ ವಾದ್ದರಿಂದ ಲಕ್ಕಮ್ಮಗೆ ‘ಕದರಡಿಕೆ’ ಹೆರಕಲು ಆಗದಿರುವಂತೆ ಆಳುಗಳಿಂದ ಅಡಚಣೆ ತಂದೊಡ್ಡಿದ್ದಳು ಜಟ್ಟಮ್ಮ.
ಜಟ್ಟಮ್ಮ ದೊಳ್ಳ ಹುಡುಗನನ್ನು ತನ್ನ ಪರ ಒಳಗೆ ಹಾಕಿಕೊಂಡು ಕೆಲಸ ಮಾಡಿಸುತ್ತಿದ್ದಳು. ಲಕ್ಕಮ್ಮ ತನ್ನ ಸುಖ ದುಃಖ ತೋಡಿಕೊಂಡು ಕೆಲಸ ಮಾಡಿಸುತ್ತಿದ್ದಳು. ಲಕ್ಕಮ್ಮ ತನ್ನ ದುಃಖ ತೋಡಿಕೊಂಡು ಅಡುಗೆಯಾಳು ಮರಾಟಿ ನಂಜನ ಸಹಾನುಭೂತಿ ಸಂಪಾದಿಸಿದಳು. ಆದರೆ ದೊಳ್ಳನ ಚುರುಕಿನ ಮುಂದೆ ಮರಾಟೆ ಮಂಜನ ‘ನಿಧಾನ’ ಏನೇನೂ ನಡೆಯುತ್ತಿರಲಿಲ್ಲ. ಮಂಜನೂ ತನಗೆ ಬಿಡುವಾದಾಗಲೆಲ್ಲಾ ತೋಟಕ್ಕೆ ಹೋಗಿ ಸ್ವಲ್ಪ ಕದರಡಕೆ ಹೆರಕಿದ್ದನು, ಲಕ್ಕಮ್ಮನಿಗಾಗಿ. ಆದರೆ ಅದನ್ನೂ ದೊಳ್ಳ ಕದ್ದು ಹಾರಿಸಿದ್ದನು. ಅತ್ತಿಗೆ ತನಗೆ ಯಾವ ವಿಶೇಷವಾದ ತಿಂಡಿಗಳನ್ನೂ ಕೊಂಡು ಕೊಡುತ್ತಿರಲಿಲ್ಲವಾದ್ದರಿಂದ, ತಾಯಿ ಬದುಕಿದ್ದಾಗ ತಾನು ಹುಡುಗಿಯಾಗಿದ್ದಾಗಿನಿಂದಲೂ ವರುಷ ವರುಷವೂ ಕರ್ಮಿನ್ ಸಾಬರಿಂದ ತಪ್ಪದೆ ತಿಂಡಿ ಸಾಮಾನುಗಳನ್ನು ಕದರಡಕೆ ಕೊಟ್ಟು ಕೊಂಡೂ. ತುಡು ತೀರಿಸಿಕೊಂಡ ಅಭ್ಯಾಸವಿದ್ದ ತರುಣಿ ಲಕ್ಕಮ್ಮ ಮನೆಯ ಅಡಕೆಯನ್ನೆ ಕದ್ದೂ ಮುಚ್ಚಿ ತೆಗೆದುಕೊಂಡು ತನ್ನ ಪಾಲಿನ ‘ಕದರಡಕೆ’ ಮಾಡಿಕೊಳ್ಳುತ್ತಿದ್ದುದು ಅನಿವಾರ್ಯವಾಗಿತ್ತು. ಅದನ್ನು ಕಂಡು ಹಿಡಿದಿದ್ದ ಅತ್ತಿಗೆಗೂ ನಾದಿನಿಗೂ ವರುಷವರುಷವೂ ಜಗಳವಾಗುತ್ತಲೆ ಇತ್ತು. ನಾದಿನಿ ಮಾಡುತ್ತಿದ್ದ ಮನೆಹಾಳು ಒಗೆತನದ ವಿಚಾರವಾಗಿ ದೂರು ಹೇಳಿದರೂ ತನ್ನ ಗಂಡ ಸುಮ್ಮನಿದ್ದುಬಿಡುತ್ತಿದ್ದುದರಿಂದ ಪ್ರತೀಕಾರಸ್ವರೂಪವಾಗಿ ಜಟ್ಟಮ್ಮ ತಾನೂ ಮನೆಯ ಅಡಕೆಯ ರಾಶಿಯಿಂದಲೆ ಸಾಕಷ್ಟು ‘ಕದರಡಕೆ’ಯನ್ನು ಆಕ್ರಮಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿರಲಿಲ್ಲ, ನಾದಿನಿಗೆ ಇಮ್ಮಡಿ ಮುಮ್ಮಡಿ ಪ್ರತಿಸ್ಪರ್ಧಿಯಾಗಿ: ಅಂತೂ ಒಟ್ಟಿನಲ್ಲಿ ಕರ್ಮಿನ್‌ಸಾಬರಿಗೆ ‘ಒಳ್ಳೆಯ ಪಡಾವು!’
* * *
ದೊಳ್ಳ ಮತ್ತು ಮಂಜರಂತಹ ಗಿರಾಕಿಗಳು ಒಬ್ಬೊಬ್ಬರಾಗಿ ಬಂದು ಅಕ್ಕಿ ಬತ್ತ ಅಡಕೆಯಂತಹ ಬೆಳೆಯ ಸಾಮಾನುಗಳನ್ನೊ, ಹಾರೆ ಕತ್ತಿ ಸವೆಗೋಲು ಮೆಟ್ಟುಗತ್ತಿ ಮುಂತಾದ ಕದ್ದ ಹತಾರುಗಳನ್ನೊ ಕೊಟ್ಟು ಕರೀಂ ಸಾಬರ ವಾಣಿಜ್ಯ ಜಾಣ್ಮೆ ದಯಪಾಲಿಸಿದಷ್ಟು ತಿಂಡಿ ಪದಾರ್ಥಗಳನ್ನು ತೆಗೆದುಕೊಂಡು ಹೋಗತೊಡಗಿದರು. ಅಂತಹ ಗಿರಾಕಿಗಳಲ್ಲಿ ಗಂಡಸರಿಗಿಂತಲೂ ಹೆಂಗಸರು ಮಕ್ಕಳೇ ಹೆಚ್ಚಾಗಿರುತ್ತಿದ್ದರು: ಹೊಲೆಯರು, ದೀವರು, ಗಟ್ಟದ ತಗ್ಗಿನವರು, ಗೌಡರು ಎಲ್ಲ ಜಾತಿವರ್ಗಗಳಿಗೂ ಅಲ್ಲಿ ಪ್ರಾತಿನಿಧ್ಯವಿರುತ್ತಿತ್ತು.
ಗಂಡಸರೂ ಅನೇಕರು ತಮ್ಮ ಸಂಸಾರಕ್ಕೆ ವರ್ಷಕ್ಕೆ ಬೇಕಾಗುವ ದಿನಸಿ ಕೊಬ್ಬರಿ ಕೊತ್ತುಂಬರಿ ಇತ್ಯಾದಿ ವಸ್ತುಗಳನ್ನು ಸಾಮಾನಿಗೋ ದುಡ್ಡಿಗೋ ಒಡವೆ ವಸ್ತ್ರಗಳಿಗೋ ಬಹಿರಂಗವಾಗಿಯೆ ವಿನಿಮಯ ವ್ಯಾಪಾರ ಮಾಡಿಯೋ ಕೊಂಡುಕೊಂಡೋ ಹೋಗುತ್ತಿದ್ದರು. ಗುತ್ತಿಯೂ ಅವರ ನಡುವೆ ನಿಂತಿದ್ದುದನ್ನು ಕರೀಂಸಾಬರು ಗಮನಿಸಿ, ಅವನ ಕಡೆಗೆ ವಿಶೇಷವಾಗಿ ಎಂಬಂತೆ ನೋಡಿ, ಅವನನ್ನೇ ಪ್ರತ್ಯೇಕವಾಗಿ ಸ್ವಾಗತಿಸಲೆಂಬಂತೆ ಮುಗುಳು ನಕ್ಕರು; ಗುತ್ತಿಯೂ ಹಲ್ಲು ಕಾಣುವಂತೆ ಬಾಯಿ ಹಿಗ್ಗಿಸಿ ನಕ್ಕು, ಸ್ವಾಗತವನ್ನು ಸ್ವೀಕರಿಸಿ, ಕೃತಜ್ಞತೆಯನ್ನು ಪ್ರದರ್ಶಿಸಿದನು.
ಬಂದ ಗಿರಾಕಿಗಳೆಲ್ಲ ಹೋಗುವವರೆಗೆ ದೂರ ಹಿಂದೆ ನಿಂತಿದ್ದ ಗುತ್ತಿ ಹತ್ತಿರಕ್ಕೆ ಬರಲು ‘ಕರ್ಮಿನ್‌ಸಾಬು’ ಅವನು ಹಾಕಿಕೊಂಡಿದ್ದ ಹೊಸ ಬಟ್ಟೆಗಳನ್ನೂ, ಜುಟ್ಟಿಗೆ ಮುಡಿದಿದ್ದ ಹೂವನ್ನೂ, ಎಲ್ಲಕ್ಕೂ ವಿಶೇಷವಾಗಿ ಕಾಲುಬೆರಳಿಗೆ ಹಾಕಿಕೊಂಡಿದ್ದ ದಪ್ಪನಾದ ಬೆಳ್ಳಿಯ ಉಂಗುರವನ್ನೂ ಗಮನಿಸಿ ನಗುತ್ತಾ “ಏನು ಮದುಮಗನ ಸವಾರಿ ಖುದ್ದಾಗಿ ಬಂದುಬಿಟ್ಟಿದೆಯಲ್ಲಾ?” ಎಂದು ಒಡನೆಯೆ ಮುಖಭಂಗಿವನ್ನು ಗಂಭೀರ ಮುದ್ರೆಗೆ ತಿರುಗಿಸಿ “ನಮಗೆ ಬರಬೇಕಾದ ‘ಚಿಲ್ಲರೆ’ ತಂದಿದ್ದೀಯಷ್ಟೆ?” ಎಂದು ವ್ಯಂಗ್ಯಧ್ವನಿಯಲ್ಲಿ ‘ಚಿಲ್ಲರೆ’ ಎನ್ನುವುದನ್ನು ಒತ್ತಿಹೇಳಿ ಮೂದಲಿಸುವಂತೆ ಕೇಳಿದನು.
“ನಮ್ಮ ಹೆಗ್ಗಡೇರು ಮನೇಲಿಲ್ಲ ಕಣ್ರೋ. ಅವರು ಬಂದ ಕೂಡ್ಲೆ ನಿಮ್ಮ ದುಡ್ಡೆಲ್ಲ ಈಸಿಕೊಟ್ಟು ಬಿಡ್ತೀನಿ. ಈಗ ತುರುತ್ತಾಗಿ ಅಷ್ಟು ಸಾಮಾನು ಬೇಕಾಗದೆ. ಮನೀಗೆ ನೆಂಟರು ಬಂದಾರೆ….”
“ಮತ್ತೆ ನೀನು ಆವೊತ್ತು ಏನು ಹೇಳಿದ್ದು?….”
“ಯಾವೊತ್ರೋ?”
“ಯಾವೊತ್ತು? ಆವೊತ್ತು, ಬೆಳಿಗ್ಗೆ ಮುಂಚೆ ಮೇಗರವಳ್ಳೀಲಿ ಕಣ್ಣಾ ಪಂಡಿತರ ಹತ್ತಿರ ಅಂತ್ರ ತೆಗೆದುಕೊಂಡು ಹೋದೆಯಲ್ಲಾ….”
“ಏ ಯಾರು ಹೇಳ್ದೋರಾ ನಿಮಗೆ?” ತನ್ನ ಗುಟ್ಟು ಬಯಲಾದುದಕ್ಕೆ ನಾಚಿಕೊಂಡು ಕೇಳಿದ್ದನು ಗುತ್ತಿ.
“ಯಾರಾದರೂ ಹೇಳಲಿ, ನಿನಗೆ ಏಕೆ ಅದು?…. ಯಾರು ಹೇಳಬೇಕು ಏಕೆ? ನಮಗೆ ಕಣ್ಣಿಲ್ಲವೊ ನೋಡುವುದಕ್ಕೆ? ಬೆಕ್ಕು ಕಣ್ಣು ಮುಚ್ಚಕೊಂಡು ಹಾಲು ಕುಡಿಯುತ್ತಂತೆ!…. ಆವೊತ್ತು ನೀನು ಎಷ್ಟು ದಿಮಾಕಿ ನಿಂದ ಹೇಳಿದೆ? ‘ಇನ್ನೆಂಟು ದಿನಾ ತಡೀರಿ, ನನ್ನ ಮದೇಗೆ ಹೆಗ್ಗಡೇರ ಕೈಲಿ ದುಡ್ಡು ಕೇಳೀನಿ, ಅದರಾಗೆ ನಿಮ್ಮ ಚಿಳ್ರೇನೂ ತೀರಸಿ ಬಿಡ್ತೀನಿ’ ಅಂತಾ. ಆ ‘ಚಿಳ್ರೇ’ನ ತೀರಿಸಿಬಿಡು ಮೊದಲು. ಆಮೇಲೆ ಸಾಮಾನು ಕೊಡುವ ಮಾತು. ಸುಮ್ಮನೆ ಸತಾಯಿಸಬೇಡ.” ಮಾಪಿಳ್ಳೆಯ ಕನ್ನಡದ ಕಾಕುದನಿ ನಿಷ್ಠುರ ನುಡಿದು ನಿಂತಿತು.
ಗುತ್ತಿ ಸ್ವಲ್ಪ ಅತ್ತ ಇತ್ತ ನೋಡಿ, ಕರೀಂ ಸಾಬರಿಗೆ ತುಂಬ ಸಮೀಪಕ್ಕೆ ಸರಿದು ಕಿವಿಯಲ್ಲಿ ಹೇಳುವಂತೆ ಪಿಸುಮಾತಿನಲ್ಲಿ “ಹಂಗ್ಯಾರೆ ಒಂದು ಕೆಲ್ಸ ಮಾಡಿ, ಸಾಬ್ರೆ. ಈಗ ತುರ್ತು ಸಾಮಾನು ಬೇಕಾಗದೆ. ಬೆಟ್ಟಳ್ಳಿಯಿಂದ ನನ್ನ ಮಾವ ಬಾವ ಎಲ್ಲ ಬಂದಾರೆ; ಅವಳನ್ನ ತವರಿಗೆ ಕರಕೊಂಡು ಹೋಗ್ತಾರಂತೆ….” ಎಂದು ಸೊಂಟದ ಪಂಚೆಯಲ್ಲಿ ಸುತ್ತಿದ್ದ ಯಾವುದೋ ಒಂದು ವಸ್ತುವಿಗೆ ಕೈಹಾಕಿ ಬಿಚ್ಚಿ, ಮೆಲ್ಲಗೆ ಕಳ್ಳಭಂಗಿಯಲ್ಲಿ ಹೊರದೆಗೆದು ಮುಚ್ಚುಗೈಯಲ್ಲಿಯೆ ನೀಡಿದನು.
ಅದನ್ನು ಕೈಗೆ ತೆಗೆದುಕೊಂಡು ನೋಡಿದ ಕರೀಂ ಸಾಬಿಗೆ ತನ್ನ ಕಣ್ಣನ್ನೆ ನಂಬಲಾಗಲಿಲ್ಲ. ಕೇಳಿದನು ತಲೆಯೆತ್ತಿ ಪಿಸುದನಿಯಲ್ಲಿಯೆ “ಎಲ್ಲಿತ್ತೋ ಇದು ನಿನಗೆ?”
ಅಂತಹ ಚಿನ್ನದ ಬೆಳ್ಳಿಯ ಆಭರಣಗಳನ್ನೆಷ್ಟೊ ಕಳವು ಮಾಲುಗಳನ್ನು ಲಪಟಾಯಿಸಿ ಜೀರ್ಣಿಸಿಕೊಂಡಿದ್ದ ಸಾಬಿಗೆ ತುಸು ಬೆರಗು ಇದ್ದಿತೆ ಹೊರತು ಅಂಜಿಕೆ ಏನೂ ಇರಲಿಲ್ಲ. ಆದರೂ ಕಳ್ಳಮಾಲನ್ನು ತಾನು ತೆಗೆದುಕೊಳ್ಳುತ್ತಿರುವುದರಿಂದ ಎಂತಹ ಅಪಾಯ ಸ್ಥಿತಿಯಿಂದ ಗಿರಾಕಿಯನ್ನು ಪಾರು ಮಾಡುತ್ತದ್ದೇನೆಂದೂ, ಮತ್ತು ಗಿರಾಕಿಗಾಗಿ ತಾನು ಎಂತಹ ಅಪಾಯವನ್ನು ಎದುರಿಸಬೇಕಾಗಿದೆ ಎಂದೂ ಗಿರಾಕಿಗೆ ಚೆನ್ನಾಗಿ ಮನದಟ್ಟು ಮಾಡಿ, ಅದರ ಬೆಲೆಯನ್ನು ಅರ್ಧಕ್ಕೋ ಕಾಲಿಗೋ ಇಳಿಸುವ ಸಲುವಾಗಿಯೇ ಅವನು ಆ ಪ್ರಶ್ನೆ ಹಾಕಿದ್ದನು.
“ಹಂಗೇನೂ ಕದ್ದಿದ್ದಲ್ಲ, ಸಾಬ್ರೆ! ನನ್ನತ್ತೆ ಅವಳ ಮಗಳಿಗೆ ಮದೇಮನೇಲಿ ಕೊಟ್ಟದ್ದು: ನಾನೇನು ಇದನ್ನು ನಿಮಗೆ ಮಾರಾಟ ಮಾಡಾಕೆ ಬಂದಿಲ್ಲ. ಹೆಗ್ಗಡೇರು ಮನೀಗೆ ಬಂದಕೂಡ್ಲೆ, ನಿಮ್ಮ ದುಡ್ಡು ಈಸಿಕೊಡ್ತೀನಿ. ಅಲ್ಲಿ ತಂಕಾ ಇದನ್ನು ಅಡು ಇಟ್ಟುಕೊಂಡಿರಿ. ಆಗಬೈದಾ?”
ಅನುಭವಿಯಾದ ಸಾಬಿ ಗುತ್ತಿಯ ಮಾತನ್ನು ನಂಬಲಿಲ್ಲ. ಒಂದು ವೇಳೆ ಅವನು ಹೇಳುತ್ತಿರುವುದರಲ್ಲಿ ನಿಜಾಂಶ ಇದ್ದರೂ, ಹೊಲೆಯ ತಾನು ಅಡವು ಇಟ್ಟ ಆಭರಣವನ್ನು ಅವಧಿಯೊಳಗಾಗಿಯಾಗಲಿ ಅವಧಿಯ ಹೊರಗೇ ಆಗಲಿ ಬಿಡಿಸಿ ಕೊಂಡಿದ್ದನ್ನು ಅವನು ಎಂದೂ ನೋಡಿಯೂ ಇರಲಿಲ್ಲ; ಕೇಳಿಯೂ ಇರಲಿಲ್ಲ. ಒಂದು ವೇಳೆ ಹಣ ದೊರಕಿದರೂ ಅವನು ಬಿಡಿಸಿಕೊಳ್ಳದೆ ಇರುವ ಹಾಗೆ ಸಂಗತಿ ಏರ್ಪಡಿಸಿ, ಸನ್ನವೇಶ ರಚನೆ ಮಾಡುವ ಜಾಣ್ಮೆ ತನಗೆ ಗೊತ್ತಿಲ್ಲವೇ? ಕರೀಂ ಸಾಬಿ ಮರುಮಾತಾಡದೆ ಗುತ್ತಿ ಕೇಳಿದ ಎಲ್ಲ ಸಾಮಾನುಗಳನ್ನೂ ಕೊಟ್ಟು ಕಳುಹಿಸಿದನು. ಬೆಟ್ಟಳ್ಳಿ ಕಲ್ಲಯ್ಯಗೌಡರು ತಿಮ್ಮಿ ಬಚ್ಚರ ಮದುವೆಯ ಸಮಯದಲ್ಲಿ ಉಪಯೋಗಿಸಿಕೊಳ್ಳಲಿ ಎಂದು ದೊಡ್ಡಬೀರನಿಗೆ ಕೊಟ್ಟಿದ್ದು, ಗುತ್ತಿಯ ಜೊತೆಯಲ್ಲಿ ಓಡಿಹೋಗುವಾಗ ತಿಮ್ಮಿ ಗಂಟಿಕಟ್ಟಿ ಬಿಡಾರದಲ್ಲಿಯೆ ಇಟ್ಟು ಹೋಗಿದ್ದು, ಸೇಸಿ ಸಿಂಬಾವಿಗೆ ಬರುವಾಗ ಗುಟ್ಟಾಗಿ ಹೊತ್ತು ತಂದಿದ್ದ ಆ ಗಂಟಿನಲ್ಲಿದ್ದ ಆಭರಣಗಳಲ್ಲಿ ಅವಳು ಧಾರೆಯ ಸಮಯದಲ್ಲಿ ಮದುಮಗಳಾಗಿದ್ದ ತನ್ನ ಮಗಳಿಗೆ ತೊಡಿಸಿದ್ದ ಒಂದು ಬಂಗಾರದ ಜಡೆಬಿಲ್ಲೆ ಕರೀಂ ಸಾಬಿಯ ಹಮ್ಮಿಣಿಯೊಳಗೆ ಅಡಗಿಹೋಯಿತು.
* * *
ಮರಾಟಿಮಂಜನನ್ನು ಕಂಡು, ಹಳುವಿನಲ್ಲಿ ನುಗ್ಗಿ ಕಣ್ಮರೆಯಾದ ದೊಳ್ಳ, ಮನೆಗೆ ಹಿಂದಿರುಗುವುದಕ್ಕೆ ಬದಲಾಗಿ ಕಾಡಿನ ಕಡೆ ತಿರುಗಿ ಗುಡ್ಡವೇರಿದ್ದನು. ಹುರಿಗಡಲೆಯನ್ನು ತಿಂದು ಖರ್ಚುಮಾಡಿಯೆ ಮನೆಗೆ ಹೋಗುವುದು ಉತ್ತಮ ಎಂದು ಅವನ ಜಾಣತನ ನಿರ್ಣಯಿಸಿತ್ತು. ಅಲ್ಲದೆ ಮನೆಗೆ ಹೋಗುವುದು ಉತ್ತಮ ಎಂದು ಅವನ ಜಾಣತನ ನಿರ್ಣಯಿಸಿತ್ತು. ಅಲ್ಲದೆ ಮನೆಗೆ ಹಿಂದಕ್ಕೆ ಹೋಗುವಾಗ ಪುಡೀಸಾಬರಿಂದ ಓಲೆಬೆಲ್ಲ ಉತ್ತುತ್ತೆ ಖರ್ಜೂರಾದಿಗಳನ್ನು ಈಸಿಕೊಂಡು ಹೋಗಲು ಅನುಕೂಲವಾಗಬಹುದೆಂದೂ ಭಾವಿಸಿದ್ದನು. ಎಂತಿದ್ದರೂ ಮನೆಗೆ ಹಿಂತಿರುಗಿದ ಮೇಲೆ ಬೈಗುಳ ತಪ್ಪಿದ್ದಲ್ಲ; ಒಂದೆರಡು ಗುದ್ದೂ ಬಿದ್ದರೂ ಬೀಳಬಹುದು; ಹುರಿಗಡಲೆಯನ್ನಾದರೂ ವಿರಾಮವಾಗಿ ಕಾಡಿನಲ್ಲಿ ಮರ ಪೊದೆಗಳ ನಡುವೆ ತಿರುಗುತ್ತಾ ಚೆನ್ನಾಗಿ ಮೆದ್ದು ಹೋದರಾಯಿತು ಎಂದು “ನಿಚ್ಚಯ್ಸಿ”ಯೆ “ಕೆಮ್ಮಣ್ಣುಬ್ಬಿ”ನ ಕಡೆ ಹೊರಟಿದ್ದನು.
ಹುರಿಗಡಲೆಯೇ ಅಪೂರ್ವವೂ ಅತ್ಯಮೂಲ್ಯವೂ ಆದ ತಿಂಡಿಯಾಗಿದ್ದ ಆ ಹಳ್ಳಿಯ ಆಳುಗೆಲಸದ ಹುಡುಗನಿಗೆ ಇತ್ತಣ ಧ್ಯಾಸವೆ ಇರಲಿಲ್ಲ: ಅವನ ಪ್ರಜ್ಞೆಯ ಬಹುಪಾಲು ಅವನು ಅಗಿಯುತ್ತಿದ್ದ ಕಡಲೆಯ ರುಚಿಯ ಆಸ್ವಾದನೆಯಲ್ಲಯೆ ಮಗ್ನವಾಗಿತ್ತು. ಕಾಡಿನ ಸೌಂದರ್ಯವಾಗಲಿ ಭಯಂಕರತೆಯಾಗಲಿ, ಹಕ್ಕಿಗಳ ಉಲಿಹವಾಗಲಿ ಹೂವುಗಳ ಬಣ್ಣವಾಗಲಿ, ಹಸುರಿನಲ್ಲಿ ಸೋಸಿ ಬರುತ್ತಿದ್ದ ಪೂರ್ವಾಹ್ನದ ಬಿಸಿಲಿನ ಬೆಚ್ಚನೆಯ ಸುಖವಾಗಲಿ, ಆಕಾಶದಲ್ಲಿ ತೇಲುತ್ತಿದ್ದ ಮುಮ್ಮಳೇಗಾಲದ ಮೋಡಗಳ ಚೆಲುವಾಗಲಿ ಯಾವುದಕ್ಕೂ ಅವನ ಒಳಮನಸ್ಸಿನ ವಲಯಕ್ಕೆ ಪ್ರಜ್ಞಾಪೂರ್ವಕವಾಗದ ಪ್ರವೇಶವಿರಲಿಲ್ಲ…. ಆದರೆ, ಅದೇನು? ಸಾಮಾನ್ಯವಾಗಿ ಕಾಗೆಗಳೇ ವಿರಳವಾಗಿರುತ್ತಿದ್ದ ಆ ಮಲೆನಾಡಿನಲ್ಲಿ, ಅದೇನು ಅಷ್ಟೊಂದು ಕಾಗೆಗಳು ನೆರೆದು ಕೂಗಿಕೊಳ್ಳುತ್ತಿವೆ, ಆ ಸರಲಿನಲ್ಲಿ ಹರಿಯುವ ಅಡೆಹಳ್ಳದ ಹತ್ತಿರ! ಮರಗಳಲ್ಲಿ ಮಂಗಗಳೂ ಕಿರಿಚಿಕೊಳ್ಳುವ ಸದ್ದು! ಸುತ್ತಲೂ ಗಿಡ ಪೊದೆ ಬೆಳೆದು ಎತ್ತರವಾಗಿದ್ದ ಒಂದು ಮೊರಡಿಯ ಬಂಡೆಗಲ್ಲ ಮೇಲೆ ಏರಿನಿಂತು, ಹಳು ತುಂಬಿದ್ದ ಕಣಿವೆಯಲ್ಲಿ ದೂರ ಕೆಳಗೆ ಹರಿಯುತ್ತಿದ್ದ ಅಡೆ ಹಳ್ಳದ ಕಡೆ ನೋಡಿದನು: ನೋಡಿ ಬೆಚ್ಚಿದನು! ಒಂದು ಮಟ್ಟಿನ ಹಿಂದೆ ಮರೆಯಾಗಿ ನಿಂತು, ಕಾಲ ತುದಿಯ ಹೆಬ್ಬೆಟ್ಟಿನ ಮೇಲೆ ನಿಮಿರಿ ನಿಕ್ಕುಳಿಸಿ ನೋಡಿದನು! ಬೆರಗಾಯಿತು! ಹೆದರಿಕೆಯೂ ಆಯಿತು! ಕಡಲೆಯನ್ನು ಅಗಿಯುತ್ತಿದ್ದ ಬಾಯಿ ಅರೆತೆಗೆದು ನಿಷ್ಪಂದವಾಗಿಬಿಟ್ಟಿತು!
ಕಾಗೆಗಳು ಹಾರಾಡಿ ಕೂಗುತ್ತಿದ್ದುದನ್ನೂ ಮರಗಳಲ್ಲಿ ಮಂಗಗಳು ಕಿರಿಚಿಕೊಳ್ಳುತ್ತಿದ್ದುದನ್ನೂ ಗಮನಿಸಿದ್ದ ದೊಳ್ಳ, ಕಾಡಿನ ಅನುಭವವವಿದ್ದ ಎಲ್ಲರೂ ಊಹಿಸುವಂತೆ, ಅಲ್ಲೆಲ್ಲಿಯೋ ಹುಲಿಯೋ ಕುರ್ಕನೋ ಇರಬೇಕೆಂದು ಊಹಿಸಿದ್ದನು. ಅದಕ್ಕಾಗಿಯೆ ಎಚ್ಚರಿಕೆಯಿಂದಾಗಿ ದಿಬ್ಬವೇರಿ ಅರೆಕಲ್ಲ ಮರೆನಿಂತು ಕಣ್ಣಟ್ಟಿ ನೋಡಿದ್ದನು: ಆದರೆ ಅವನು ಕಂಡದ್ದೇನು? ಹೆಬ್ಬುಲಿಯೇ ಆಗಿದ್ದರೂ ಅವನಿಗೆ ಅಷ್ಟು ದಿಗಿಲೂ ಬೆರಗೂ ಆಗುತ್ತಿರಲಿಲ್ಲ:
ಸೊಂಟದ ಮೇಲಣ ಮೈಯೆಲ್ಲ ಬತ್ತಲೆಯಾಗಿ, ಮೊಣಕಾಲಿಗೂ ಮೇಲೆ ಮಡಿಚಿದ್ದ ಇಜಾರ ಮಾತ್ರದಿಂದಿದ್ದ ಇಜಾರದ ಸಾಬಿಯೂ ಅವನಂತೆಯೆ ಬತ್ತಲೆಯಾಗಿ ಲುಂಗಿಯನ್ನು ಸೊಂಟದವರೆಗೂ ಎತ್ತಿ ಬಿಗಿದಿದ್ದ ಲುಂಗೀಸಾಬಿಯೂ ಚೂರಿಗಳನ್ನು ಹಿಡಿದು, ಕೈಯೆಲ್ಲ ರಕ್ತಮಯವಾಗಿ, ಯಾರನ್ನೊ ಕೊಲೆಮಾಡುವ ಕರ್ಮದಲ್ಲಿ ತೊಡಗಿದ್ದಂತೆ ಭೈರವವಾಗಿ ಕಾಣುತ್ತಿದ್ದರು. ಉಸಿರು ಕಟ್ಟಿದಂತಾಗಿ, ಒಡನೆಯೆ ಏದುಸಿರು ಬಿಡತೊಡಗಿದ್ದ ದೊಳ್ಳನ ಕಾಲು ನಡುಗತೊಡಗಿತ್ತು. ಅವನೂ ಆ ಸಾಬರ ವಿಚಾರ ಏನೇನೊ ಭಯಂಕರ ಸುದ್ದಿಗಳನ್ನು ಕೇಳಿದ್ದನು. ಗಾಬರಿಯಿಂದ ಕೂಗಿಕೊಳ್ಳಬೇಕೆಂದು ಮನಸ್ಸಾದರೂ ಕೂಗು ಕೊರಳಿನಿಂದ ಹೊರಡಲಿಲ್ಲ. ಅಲ್ಲದೆ, ತಾನೂ ಒಬ್ಬನೆ ಇದ್ದುದರಿಂದ, ಅವರು ಮಾಡುತ್ತಿದ್ದ ಕೊಲೆಗೆಲಸವನ್ನು ತಾನು ಕಂಡ ಮೇಲೆ ಅವರ ಕೈಗೆ ಸಿಕ್ಕಿಕೊಂಡರೆ, ಆ ಸುದ್ದಿ ಇತರರಿಗೆ ತನ್ನಿಂದ ಗೊತ್ತಾಗುತ್ತದೆ ಎಂಬ ಕಾರಣಕ್ಕಾಗಿಯೇ ತನ್ನನ್ನೂ ಪೂರೈಸದೆ ಬಿಡುವುದಿಲ್ಲ ಎಂದೂ ಅವನಿಗೆ ಭೀತಿ ಬಡಿದಂತಾಗಿತ್ತು. ಚಲಿಸಿದರೂ ಅವರಿಗೆಲ್ಲಿ ಗೊತ್ತಾಗಿಬಿಡುತ್ತದೆಯೋ ಎಂದು ಮರವಟ್ಟು ನಿಂತು ನಿರುಪಾಯನಾಗಿ ಎವೆಯಿಕ್ಕದೆ ನೋಡುತ್ತಿರಲೇಬೇಕಾಯಿತು.
ಹಾಗೆ ನೋಡುತ್ತಿದ್ದಾಗ, ಸಾಬರು ಅತ್ತ ಇತ್ತ ಚಲಿಸಿದಾಗ, ಅವರು ಯಾರನ್ನೂ ಕೊಲೆ ಮಾಡುತ್ತಿಲ್ಲವೆಂದೂ, ಒಂದು ಸಣ್ಣ ಮರದ ಹರೆಗೆ ಬಳ್ಳಿಯಿಂದ ನೇತುಹಾಕಿದ್ದ ಕುರಿಯನ್ನು ಸುಲಿಯುತ್ತಿದ್ದಾರೆಂದು ಗೊತ್ತಾಗಿ, ದೊಳ್ಳನ ಹೃದಯದಲ್ಲಿ ತುಸು ಧೈರ್ಯ ಸಂಚಾರವಾಗಿ ಮನಸ್ಸಿಗೆ ಸಮಾಧಾನವೂ ಆಯಿತು. ಆ ದೃಶ್ಯವನ್ನು ಇನ್ನೂ ಸ್ವಲ್ಪ ವಿವರವಾಗಿ ಈಕ್ಷಿಸಲೂ ಸಾಧ್ಯವಾಯಿತು ಅವನಿಗೆ.
ಅವರು ಚರ್ಮ ಸುಲಿಯುತ್ತಿದ್ದ ಕುರಿಯ ತಲೆಯಿಂದ ಅದು ‘ಸೊಪ್ಪುಗುರಿ’  ಎಂದೂ ಗೊತ್ತಾಗುವಂತಿತ್ತು. ಅದರ ಕೊಂಬೊ ಕಿವಿಯೊ ಗಡ್ಡವೊ ಕುತ್ತಿಗೆಯ ಮೊಲೆಯೊ? ಯಾವುದೂ ಸ್ಪಷ್ಟವಾಗಿ ತೋರುತ್ತಿರಲಿಲ್ಲವಾದರೂ ಅವನಿಗೆ ಅದು ಪರಿಚಯದ ಪ್ರಾಣಿಯಂತೆಯೆ ಭಾಸವಾಗತೊಡಗಿತು: ಹಳೆಪೈಕದ ತಿಮ್ಮನ ಹೋತವಿರಬಹುದೇ? – ಇಲ್ಲ, ಗುತ್ತಿಯ ಅಪ್ಪ ಕರಿಸಿದ್ದನ ಗಬ್ಬದ ಆಡು ಇರಬಹುದೇ? ಛೇಛೇ! – ಗಬ್ಬದ ಕುರಿಯನ್ನು ಯಾರಾದರೂ ಕೊಯ್ಯುತ್ತಾರೆಯೇ? ಹೊಟ್ಟೆಯಲ್ಲಿ ಮರಿಗಳಿಲ್ಲವೆ? ಪಾಪ! – ದೊಳ್ಳ ನೋಡುತ್ತಿದ್ದಂತೆಯೆ, ಮಿಂಚಿನ ವೇಗದಲ್ಲಿ, ಚರ್ಮ ಸುಲಿದ ಕುರಿಯ ಕೆಂಪು ಮಾಂಸದ ಒಡಲು ಗೋಚರಿಸಿ ನೇತಾಡುತ್ತಿತ್ತು! ಸಾಬರಿಬ್ಬರೂ ತುಂಬ ಚುರುಕಿನಿಂದ ಕೆಲಸ ಸಾಗಿಸುತ್ತಿದ್ದರು: ಅವರ ಅವಸರದ ಚಲನವಲನಗಳಿಂದಲೂ, ಅವರಿಬ್ಬರೂ ಮತ್ತೆ ಮತ್ತೆ ತಲೆಯೆತ್ತಿ ಆಕಾಶದ ಕಡೆ ಸಿಟ್ಟಿನಿಂದ ನೋಡಿ, ಕೂಗಿ ಎರಗಿ ಹಾರಾಡುತ್ತಿದ್ದ ಕಾಗೆಗಳನ್ನೂ ಮರಗಳಲ್ಲಿ ಕಿರಿಚುತ್ತಿದ್ದ ಕೋತಿಗಳನ್ನೂ ಕಲ್ಲುಬೀರುವಂತೆ ಹೆದರಿಸಿ ಅಟ್ಟಲು ಪ್ರಯತ್ನಿಸುತ್ತಿದ್ದುದರಿಂದಲೂ ತಮ್ಮ ಗುಟ್ಟಿನ ಕಾರ್ಯ ಬಯಲಾಗುವುದಕ್ಕೆ ಅವಕಾಶ ಕೊಡದಂತೆ ಬೇಗಬೇಗನೆ ಮುಗಿಸಬೇಕೆಂಬುದರಲ್ಲಿ ಆಸಕ್ತರಾಗಿದ್ದಂತೆ ತೋರಿತು. ಅವರು ಪೂರೈಸುವ ಮುನ್ನವೆ ತಾನು ವರ್ತಮಾನ ಕೊಟ್ಟು, ಅವರನ್ನು ಸಿಕ್ಕಹಾಕಿರಬೇಕೆಂದು ಮನಸ್ಸು ಮಾಡಿದ ದೊಳ್ಳ ಮೆಲ್ಲನೆ ಬಗ್ಗಿ ಜುಣುಗಿ ಅರೆಕಲ್ಲಿನಿಂದ ಇಳಿದು ಹಳುವಿನಲ್ಲಿ ಹಿಂದಕ್ಕೆ ಓಡಿದನು. ತನ್ನ ‘ಕದರಡಕೆ’ಗೆ ನ್ಯಾಯವಾದ ಬೆಲೆಯ ತಿಂಡಿ ಸಾಮಾನು ಕೊಡದೆ ಮೋಸ ಮಾಡಿದ ಸಾಬರಿಗೆ ತಕ್ಕ ಶಾಸ್ತಿ ಮಾಡಿಸುತ್ತೇನೆ ಎಂಬ ಪ್ರತೀಕಾರದ ಹೆಮ್ಮೆಯೂ ಅವನಿಗೆ ಪ್ರೇರಕವಾಗಿತ್ತು. ಈ ಹೊನ್ನಾಲಿ ಸಾಬರಿಗೆ ಶಿಕ್ಷೆಯಾದರೆ ಆ ಮಲೆಯಾಳಿ ಮಾಪಿಳ್ಳೆಗಳು ಅಷ್ಟೇನೂ ಕಣ್ಣೀರು ಕರೆಯುವುದಿಲ್ಲ ಎಂಬುದು ದೊಳ್ಳನಿಗೆ ಹೇಗೆ ಗೊತ್ತಾಗಬೇಕು?
ಗುಡ್ಡವಿಳಿದು ದೊಳ್ಳನೇನೋ ಬರ್ದಂಡು ಓಡಿದನು. ಆದರೆ ತಾನು ಕಂಡದ್ದನ್ನು ಹೊಲಗೇರಿಗೆ ಹೋಗಿ ಕರಿಸಿದ್ದನ ಕಡೆಯವರಿಗೆ ಹೇಳಬೇಕೋ? ಅಥವಾ ಹಳೆಪೈಕದವರ ಹಟ್ಟಿಗೆ ಹೋಗಿ ಹೇಳಬೇಕೋ? ಎಂಬ ಯೋಚನೆಯಲ್ಲಿ ಯಾವುದರ ಇತ್ಯರ್ಥವೂ ಥಟ್ಟನೆ ಹೊಳೆಯದೆ, ಉತ್ತುತ್ತೆ ಖರ್ಜೂರ ಓಲೆಬೆಲ್ಲಗಳ ನೆನಪಾಗಿ ಸಾಬರ ಬೀಡಿನ ಕಡೆಗೆ ಹೋದನು, ತನಗೆ ಸಲ್ಲಬೇಕಾದ ತಿಂಡಿಸಾಮಾನುಗಳನ್ನು ತೆಗೆದುಕೊಂಡು ಆಮೇಲೆ ದೂರು ಹೇಳುವುದೆಂದು ನಿಶ್ಚಯಿಸಿ. ಅಲ್ಲಿ, ಅವನು ಪುಡೀಸಾಬರಿಂದ ಒಂದೊಂದೇ ಉತ್ತುತ್ತೆ ಖರ್ಜೂರ ಓಲೆಬೆಲ್ಲದ ಚೂರುಗಳನ್ನು ಪಡೆದು, ಹರಕಲು ದಗಲೆಯ ಜೇಬಿಗೆ ಹಾಕಿಕೊಳ್ಳುತ್ತಿದ್ದಾಗಲೆ ಮರಾಟಿಮಂಜನೂ ಹಾಜರಾದನು! ಕಳ್ಳನನ್ನು ಮಾಲುಸಮೇತ ಹಿಡಿದ ಪೋಲೀಸಿನವನಂತೆ ದೊಳ್ಳನನ್ನು ರಟ್ಟೆ ಹಿಡಿದು ಮನೆಯ ಕಡೆ ಎಳೆದುಕೊಂಡು ಹೋದನು.
* * *
ಅಂತೂ, ಸದ್ಯಕ್ಕೆ ಯಾವ ಗಲಾಟೆಯೂ ಇಲ್ಲದೆ, ಆ ದಿನ ಮಧ್ಯಾಹ್ನದ ಹೊತ್ತಿಗೆ ಕರಿಸಿದ್ದನ ಗಬ್ಬದ ಆಡು ಸಾಬರ ಅಡುಗೆಯ ಪಲಾವಿನ ವಾಸನೆಯಾಗಿ ಪರಿವರ್ತಿತವಾಗಿ ಸಿಂಬಾವಿ ಹಳ್ಳಿಯ ಮಲೆನಾಡಿನ ವಾಯುಮಂಡಲದಲ್ಲಿ ಪಸರಿಸಿತ್ತು.
ಆದರೆ ಅಪರಾಹ್ನದಲ್ಲಿ ವಿಷಯ ವಿಕೋಪಕ್ಕೇರಿತು:
ದೊಳ್ಳನನ್ನು ಎಳೆದುಕೊಂಡು ಹೋಗಿ ‘ಸಣ್ಣಮ್ಮ’ನ ಸಮ್ಮುಖದಲ್ಲಿ ನಿಲ್ಲಿಸಿ ಮರಾಟಿಮಂಜ ಅವನಿಗಿನ್ನೂ ಶಿಕ್ಷೆ ವಿಧಿಸಿರಲಿಲ್ಲ, ಬರಿಯ ವಿಚಾರಣೆಯ ಮಟ್ಟದಲ್ಲಿಯೆ ದೊಳ್ಳ ಗೊಳೋ ಎಂದು ಗಟ್ಟಿಯಾಗಿ ಅಳತೊಡಗಿ ‘ದೊಡ್ಡಮ್ಮ’ನ ರಕ್ಷಣೆಗಾಗಿ ಕೂಗಿಕೊಳ್ಳತೊಡಗಿದನು.
ಅಡುಗೆಮನೆಯಲ್ಲಿದ್ದ ಜಟ್ಟಮ್ಮಗೆ ದೊಳ್ಳನ ಕೂಗು ಕೇಳಿಸಿದೊಡನೆಯೆ ಲಕ್ಕಮ್ಮನಿಗೆ  ತೇಜೋವಧೆ ಮಾಡಲು ಅವಕಾಶ ಸಿಕ್ಕಿತೆಂದು ಉರಿಮೋರೆ ಮಾಡಿಕೊಂಡೆ ನುಗ್ಗಿ ಬಂದು ಕೂಗಿದಳು: “ಯಾಕೋ ಆ ಹುಡುಗನಿಗೆ ಸುಮ್ಮನೆ ಹೊಡೀತಿದ್ದೀಯಾ? ಪಾಪದಂವ ಸಿಕ್ಕಿದಾ ಅಂತಾ? ಈ ಮನೇಲಿ ಯಾರೂ ಹೇಳೋರು ಕೇಳೋರು ಇಲ್ಲೇನೋ?”
“ಆನಾ….ಹೊದೆನೇನಮ್ಮಾ?…. ನನ್ನ ಕದರಡಿಕೆ ಕದ್ದುಕೊಂಡು ಹೋಗಿ…. ಆ… ಸಾಬರಿಗೆ ಕೊಟ್ಟು….ಉತ್ತುತ್ತೆ ವಾಲೆಬೆಲ್ಲ ತಂದಾನೆ….ಆ ನೋಡಿ, ನೀವೇ ನೋಡಿ” ಎಂದು ಮಂಜ ದೊಳ್ಳನ ಜೇಬಿನಿಂದ ಆ ಪದಾರ್ಥಗಳ ಅವಶೇಷಗಳನ್ನು ಹೊರಕ್ಕೆ ತೆಗೆದು ತೋರಿಸಿದನು.
ಆದರೆ ಜಟ್ಟಮ್ಮ ನ್ಯಾಯಾನ್ಯಾಯ ನಿರ್ಣಯಮಾಡಲು ಅಲ್ಲಿಗೆ ಧಾವಿಸಿರಲಿಲ್ಲ. ಲಕ್ಕಮ್ಮನ ಕಡೆ ದುರುದುರು ನೋಡುತ್ತಾ “ಮನೇಲಿರೋ ದಿಂಡೆಬಸವೀನೆ ಮನೇ ಅಡಕೇನೆಲ್ಲ ಕದ್ದು ಸಾಬರಿಗೆ ಕೊಟ್ಟು ಕೊಬ್ರಿ ಬೆಲ್ಲ ತಿನ್ತಾ ಕೂತ್ರೇ ಆ ಅರಿಯದ  ಹುಡುಗನಿಗೆ ಯಾಕೆ ಸುಮ್ಮನೆ ಹೊಡೀತೀಯಾ?” ಎಂದು, ದೊಳ್ಳನ ಕಡೆ ತಿರುಗಿ ಹೇಳಿದಳು: “ಹೋಗೋ ನೀನು ಒಳಗೆ, ಕಾರ ಕಡೆಯೋದು ಬಿಟ್ಕೊಂಡು ಇಲ್ಯಾಕೆ ನಿಂತೀಯಾ?”
ದೊಳ್ಳನೇನೊ ಸದ್ಯಕ್ಕೆ ಬದುಕಿದೆ ಎಂದುಕೊಂಡು, ಒಳಗೊಳಗೆ ನಗುತ್ತಾ, ಖಾರ ಕಡೆಯಲು ಹೋದನು. ಆದರೆ ಲಕ್ಕಮ್ಮ ಅತ್ತಿಗೆ ತನ್ನನ್ನು ‘ದಿಂಡೆ ಬಸವಿ’ ಎಂದುದಕ್ಕೆ “ಯಾರೇ ದಿಂಡೇ ಬಸವಿ? ನಾನೋ? ನೀನೋ? ಗಂಡನ ಕೊಲ್ಲಾಕೆ, ಔಂಸ್ತಿ ಕೊಡೋ ನೆವ ಹೂಡಿ, ಕಣ್ಣಾಪಂಡಿತರಿಂದ ಗುತ್ತಿ ಕೈಲಿ ಮದ್ದು ತರಸಿ ಹಾಕ್ತಾ ಇದ್ದೀಯಲ್ಲಾ? ಯಾರಿಗೂ ಗೊತ್ತಿಲ್ಲ ಅಂತಾ ಮಾಡಿಯೇನು? ಅದಕ್ಕೇ ಅಲ್ಲೇನು? ಅಣ್ಣಯ್ಯ ದಿನಕ್ಕೂ ಬಡಕಲು ಆಗ್ತಾ, ಹೋಗ್ತಾ ಇರೋದು? ಗಂಡನ್ನ ತಿಂದು, ಮಿಂಡನ್ನ ಇಟ್ಟುಕೊಳ್ಳಾನ ಅಂತಾ ಮಾಡ್ದೋಳು ನೀನು ದಿಂಡೇ ಬಸವೀನೋ? ನಾನೋ?” ಎಂದುಬಿಟ್ಟಳು, ತಾನು ಆಪಾದಿಸುತ್ತಿರುವುದು ನಿಜವಲ್ಲವೆಂದು ಗೊತ್ತಿದ್ದರೂ, ಭಾವೋಪಯೋಗಿಯಾದ ನಿಂದನೆಯ ಪ್ರತೀಕಾರ ಖಡ್ಗಧಾರೆ ಎಷ್ಟು ತೀಕ್ಷ್ಣವಾಗಿದ್ದರೆ ಅಷ್ಟೂ ಬಲವಾಗಿ ಹೃದಯಕ್ಕೆ ಏಟು ನಾಟುತ್ತದೆ ಎಂದು.
ಸರಿ, ಇಬ್ಬರಿಗೂ ಪದ್ದತಿಯಂತೆ ಬೈಗುಳದ ಒಂದು ಲಡಾಯವೆ ನಡೆದುಹೋಯ್ತು, ಅವಾಚ್ಯ ಅಶ್ಲೀಲಭಾಷೆಯ ಕುಳ್ಳೆಗಳನ್ನೆ ಒಬ್ಬರಮೇಲೊಬ್ಬರು ಎಸೆಮಾಡಿ.
ಇತ್ತ ಜಟ್ಟಮ್ಮ ಲಕ್ಕಮ್ಮರಿಗೆ ಜಟಾಪಟಿ ನಡೆಯುತ್ತಿದ್ದಾಗ, ಅತ್ತ ತೊಂದರೆಯ ರಂಗದಿಂದ ನುಸುಳಿಹೋಗಿದ್ದ ದೊಳ್ಳ, ಹಿತ್ತಲುಕಡೆಯ ಬಾಗಿಲಲ್ಲಿ ಹೆಗ್ಗಡತಮ್ಮೋರಿಂದ ನಂಟರುಪಚಾರಕ್ಕೆ ಏನಾದರೂ ಈಸಿಕೊಂಡು ಹೋಗಲು ಬಂದು ನಿಂತಿದ್ದ ಗಿಡ್ಡಿಗೆ, ತಾನು ಕೆಮ್ಮಣ್ಣುಬ್ಬಿನಲ್ಲಿ ಕಂಡದ್ದನ್ನು ಭಾವಪೂರ್ಣವಾಗಿ ವರ್ಣಿಸುತ್ತಿದ್ದನು. ಅಷ್ಟೊಂದು ಆಶೆಪಟ್ಟು ಸಾಕಿದ್ದ ತನ್ನ ಶಬ್ದದ ಆಡಿಗೆ ಆದ ಗತಿಯನ್ನು ಕೇಳಿ ಅವಳು ಮಾತಾಡದಾದಳು. ಗದ್ಗದ ಸ್ವರದಿಂದ “ನಿಜವಾಗಿಯೂ ಹೌದೇನ್ರೋ ನೀವು ಕಂಡಿದ್ದು? ಆ ಮುಂಡೇ ಮಕ್ಕಳ ಹೆಂಡ್ರು ಮುಂಡೇರಾಗಾಕೆ! ಇವತ್ತೋ ನಾಳೇ ಮರಿ ಹಾಕ್ತಿತ್ತಲ್ರೋ ನಮ್ಮ ಕುರಿ!” ಎನ್ನುತ್ತಾ ಬಿಡಾರಕ್ಕೆ ಹೊರಡುತ್ತಿದ್ದವಳಿಗೆ ದೊಳ್ಳ ಕೂಗಿ ಹೇಳಿದ “ ನಾನೇನು ಹತ್ರ ಹೋಗಿ ನೋಡ್ಲಿಲ್ಲೇ! ಅಂತೂ ಕಂಡ್ಹಂಗಾಯ್ತು, ಹೇಳ್ದೆ. ನಿಮ್ಮದೋ? ಹಳೇಪೈಕದೋರದೋ? ಅಂತೂ ಯಾರದ್ದೋ ಒಂದನ್ನು ಕತ್ರಾಯ್ಸಿ ಬಿಟ್ಟಾರೆ ಸಾಬ್ರು.”
ಮರುದಿನ ಬೆಳಿಗ್ಗೆ ಮುಂಚೆ ಸೊಸೆಯನ್ನು ತವರುಮನೆಗೆ ಕಳುಹಿಸುವ ಸಂಭ್ರಮದಲ್ಲಿದ್ದ ಕರಿಸಿದ್ದನ ಬಿಡಾರಕ್ಕೆ ಸಿಡಿಲು ಬಡಿದಂತಾಯ್ತು, ದೊಳ್ಳ ತಿಳಿಸಿದ್ದ ಸಂಗತಿಯನ್ನು ಗಿಡ್ಡಿಯಿಂದ ಕೇಳಿ. ಬಡಹೊಲೆಯರ ಸಂಸಾರಕ್ಕೆ ತಮ್ಮ ಒಂದು ಗಬ್ಬದ ಆಡು ಕೊಲೆಯಾದ ವಿಚಾರ ಹೇಗೆ ತಾನೆ ಲಘುವಾದೀತು? ಅಲ್ಲದೆ ಹುಟ್ಟಿದಂದಿನಿಂದ ಅವರೊಡನೆ ಬೆಳೆದಿದ್ದ ಅದರೊಡನೆ ಅಕ್ಕರೆಯ ಸಂಬಂಧಗಳು ಬೇರೆ ಬೆಳೆದಿರುತ್ತವೆ! ಮನುಷ್ಯರಾಗಿದ್ದರೂ ಪಶುಜೀವನದ ಮಟ್ಟಕ್ಕೆ ಅತಿ ನಿಕಟವಾಗಿದ್ದ ಅವರಿಗೆ ತಮ್ಮ ಒಂದು ಪ್ರೀತಿಯ ಪ್ರಾಣಿ ಕಳುವಾಗಿ ಕೊಲೆಯಾದದ್ದು ನಮ್ಮ ಕುಟುಂಬದ ಒಂದು ವ್ಯಕ್ತಿಯೆ ಅಪಮೃತ್ಯುವಿಗೀಡಾದಂತಾಗಿತ್ತು. ಮೊದಲನೆಯದಾಗಿ, ಆ ಆಡನ್ನು ದಿನವೂ ಅದು ಮೇಯುತ್ತಿದ್ದ ಜಾಗಗಳಲ್ಲಿ ಹುಡುಕಿದರು. ಗುತ್ತಿ ತಾನು ಅದನ್ನು ಮ್ಹೇ ಮ್ಹೇ ಎಂದು ಕೂಗಿ ಕರೆದು ಸೊಪ್ಪು ತಿನ್ನಿಸುತ್ತಿದ್ದ ರೀತಿಯಲ್ಲಿ ಕರೆದು ಕೂಗಿದನು. ಅದನ್ನು ಕಂಡಿರಬಹುದಾಗಿದ್ದ ಇತರ ಬಿಡಾರದವರನ್ನು ವಿಚಾರಿಸಿದನು. ಅದನ್ನು ಹುಡುಕುವುದರಲ್ಲಿ ತನ್ನ ನೆಚ್ಚಿನ ನಾಯಿ ‘ಹುಲಿಯ’ನ ನೆರವನ್ನು ಮಾತ್ರ ಪಡೆಯಲಾರದೆ ಹೋಗಿ ಅವನ ಸಂಕಟ ಇಮ್ಮಡಿಯಾಯಿತು. ಎರಡು ದಿನಗಳ ಹಿಂದೆ ಹುಲಿಕಲ್ಲು ನೆತ್ತಯಲ್ಲಿ ತಿಮ್ಮಿಯೊಡನೆ ಇಳಿಯುತ್ತಿದ್ದಾಗ ಕುರ್ಕನಿಂದ ಗಾಯಗೊಂಡ ಅದು ನಂಜೇರಿ ನರಳುತ್ತಾ ಮಲಗಿತ್ತು. ಕಾಡುಜೀರಿಗೆ ಅರೆದು ಹಚ್ಚಿದ್ದ ಅದರ ಒಂದು ಕಣ್ಣಂತೂ ಊದಿಕೊಂಡು ಇನ್ನುಮುಂದೆ ಕೆಲಸಕ್ಕೆ ಬರುವುದಿಲ್ಲ ಎಂಬಂತೆ ತೋರುತ್ತಿತ್ತು. “ತ್ಚು! ನನ್ನ ಹುಲಿಯ ಸರಿಯಾಗಿದ್ದಿದ್ರೆ ಅದನ್ನು ಒಂದು ಚಣಕ್ಕೆ ಪತ್ತೆ ಹಚ್‌ತಿದ್ದೆ” ಎಂದು ಮರುಗಿದನು ಗುತ್ತಿ.
ಇಜಾರದ ಸಾಬಿಯ ಮೇಲೆ ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಿದರೂ ಸಿಕ್ಕಬಹುದು ಎಂದು ಆಲೋಚಿಸಿದ್ದ ಬೆಟ್ಟಳ್ಳಿಯ ಸಣ್ಣಬೀರ ತನ್ನ ಬಾವನನ್ನು ಹುರಿದುಂಬಿಸಿ, ಹಗಲೂಟವಾದ ಮೇಲೆ, ಕತ್ತಿ ದೊಣ್ಣೆ ತೆಗೆದುಕೊಂಡು, ಒಂದು ಸಣ್ಣ ಗುಂಪನ್ನೆ ಕಟ್ಟಿಕೊಂಡು, ದೊಳ್ಳ ಹೇಳಿದ್ದ ಕೆಮ್ಮಣ್ಣುಬ್ಬಿನ ಹಳ್ಳದ ಆ ಸ್ಥಳಕ್ಕೆ ಹೋದನು, ತಲಾಸು ಮಾಡುವುದಕ್ಕೆ.
ಕುರಿಯನ್ನು ಕೊಂಬೆಗೆ ನೇತುಹಾಕಿ ಚರ್ಮ ಸುಲಿದಿದ್ದ ಜಾಗವನ್ನೇನೋ ರಕ್ತ ಮೊದಲಾದ ಗುರುತುಗಳಿಂದ ಕಂಡುಹಿಡಿದರು. ಆದರೆ ಕೊಲೆಯಾಗಿ ಸುಲಿಗೆಯಾದದ್ದು ತಮ್ಮ ಗಬ್ಬದ ಆಡೇ ಎಂದು ಗುರುತು ಸಾಕ್ಷಿ ಹೇಳುವಂತಹ ಯಾವ ಪದಾರ್ಥವೂ ಅಲ್ಲಿ ಇರದಂತೆ ಮಾಡಿದ್ದರು, ಆ ಕಲೆಯಲ್ಲಿ ನಿಷ್ಟಾತರಾಗಿದ್ದ ಸಾಬರು. ಇನ್ನೇನು ಹತಾಶರಾಗಿ ಹಿಂದಿರುಗಬೇಕು; ಅಷ್ಟರಲ್ಲಿ ಅವರ ಜೊತೆ ಬಂದಿದ್ದ ಅವರ ಕೇರಿಯ ಒಂದು ಮೂಳೂನಾಯಿ ಹಳ್ಳದ ಪಾತ್ರದ ಪಕ್ಕದಲ್ಲಿದ್ದ ಒಂದು ಮಳಲಿನ ದಂಡೆಯನ್ನು ಪರಪರನೆ ಸೋದ್ವಿಗ್ನವಾಗಿ ಕರೆಯುತ್ತಿದ್ದುದು ಗೋಚರಿಸಿತು. ಆ ಸ್ಥಳದ ಮಳಲನ್ನು ಕೆದಕಿ ತೆಗೆದು ನೋಡಿದಾಗ:
“ಅಯ್ಯಯ್ಯೋ! ಅಯ್ಯಯ್ಯೋ! ಹಾಳು ಮುಂಡೇಮಕ್ಕಳು! ಅವರ ಕುಲ ನಾಶನಾಗ! ಎರಡು ಮರೀನೂ ಹೂಣಿಬಿಟ್ಟಿದರಲ್ಲೋ!” ರೋದನ ಧ್ವನಿಯಿಂದ ಅರಚಿಕೊಂಡನು ಗುತ್ತಿ, ಸಿಟ್ಟಿನ, ಸಂಕಟದ ಮತ್ತು ದುಃಖದ ಭರದಲ್ಲಿ.
“ಅಯ್ಯಯ್ಯೋ! ಹೊಟ್ಟೆ ಬಗೆದು ಪಚ್ಚೀನೂ ಹೀಂಗೆ ತೆಗೀಬೇಕು, ಬಾವ, ಬಿಡಬಾರ್ದು ಇವತ್ತು, ಏನೇ ಆಗ್ಲಿ!….ಥ್ಪೂ!” ಶಪಿಸಿದನು ಸಣ್ಣಬೀರ.
“ಅಯ್ಯಯ್ಯೋ! ಇಲ್ಲಿ ನೋಡಿ, ಇಲ್ಲಿ! ತೊಳ್ಳೇನೂ ಬಿಸಾಡಿ ಹೋಗ್ಯಾರೆ.” ಸಂಕಟ ತೋಡಿಕೊಂಡಿತು ಒಂದು ಎಳಸು ಕೀಚಲು ಕಂಠ.
“ತೊಳ್ಳೇನೂ ಪಚ್ಚೀನೂ ತಗಂಡು ಉಂದು ಹಾಳೆಕೊಟ್ಟೆಗಾರೂ ಹಾಕ್ಕೋಳ್ಳೋ.” ಬುದ್ಧಿ ಹೇಳಿತು ಮತ್ತೊಂದು ಕೊರಳು. ಅಷ್ಟು ಅಮೂಲ್ಯ ವಸ್ತುವನ್ನು ಹೀಗೆ ಎಸೆದು ಹೋಗಿದ್ದಾರಲ್ಲಾ ಎಂಬ ಸಂಕಟಕ್ಕೆ.
ಅಷ್ಟರಲ್ಲಿ ಇನ್ನೊಂದು ಮರಳುದಿಣ್ಣೆಯನ್ನು ಕೆದರುತ್ತಿದ್ದ ಒಬ್ಬ “ಅಯ್ಯಯ್ಯೋ! ತಲೆಬುಲ್ಡೇನ ಇಲ್ಲೇ ಹಾಕಿ ಹೋಗ್ಯಾರಲ್ಲೋ!” ಎಂದು ಕೂಗಿ, ಅದನ್ನು ಕೊಂಬು ಹಿಡಿದು ಎತ್ತಿ ತೋರುತ್ತಾ ನಿಂತನು.
ಎಲ್ಲರೂ ಓಡಿಹೋಗಿ ನೋಡಿದರು. ನಿಸ್ಸಂದೇಹವಾಗಿ ಅದು ಗುತ್ತಿಯ ಬಿಡಾರದ ಗಬ್ಬದ ಆಡಿನ ಮುಖವೇ ಆಗಿತ್ತು. ಗುತ್ತಿ ಅದನ್ನು ಅಕ್ಕೆರೆಗೆಂಬಂತೆ ಎರಡೂ ಕೈಯಲ್ಲಿ ಆಂತು ದುಃಖಿಸತೊಡಗಿದನು.
* * *
ದನ ಕೊಟ್ಟಿಗೆಗೆ ಬರುವ ಬೈಗಿನ ಹೊತ್ತು ಕರೀಂ ಸಾಬು ದಿನದ ‘ಯಾಪಾರ’ವನ್ನೆಲ್ಲ ಪೂರೈಸಿ ಗಂಟಿಮೂಟೆ ಕಟ್ಟಿತ್ತಿದ್ದಾಗ ದೂರದಲ್ಲಿ ಏನೋ ಗಲಾಟೆ ಕೇಳಿಸಿತು. ಏನೊ ಹೊಲೆಯರ ಕೇರಿಯ ಕೂಗಾಟವಿರಬೇಕು ಎಂದುಕೊಂಡು ತನ್ನ ಕೆಲಸ ಮುಂದುವರಿಸುತ್ತಿರಲು, ಯಾರೋ ಹಳುವಿನ ನಡುವೆ ಸದ್ದಾಗುವಂತೆ ಓಡಿ ಬರುತ್ತಿದ್ದುದನ್ನು ಗಮನಿಸಿ ಸತ್ತಕಡೆ ನೋಡುತ್ತಿದ್ದ ಹಾಗೆಯೆ, ದೊಳ್ಳ ಏದುತ್ತಾ ದೌಡಾಯಿಸಿ ಬಂದು ಬಾಲಕ ಸಹಜವಾದ ಬಿಜಿಲು ಬಿಜಿಲು ರೀತಿಯಲ್ಲಿ ಕೂಗಿಕೊಂಡನು “:ಕರ್ಮಿನ್‌ ಸಾಬ್ರೇ, ಓಡಿಬಲ್ಲಿ ಓಡಿಬಲ್ಲಿ! ಕತ್ತೀಲಿ ಕಡೀತಿದಾರೆ! ಬಲ್ಲೀ, ಬಲ್ಲೀ, ಬ್ಯಾಗ ಬಲ್ಲಿ!”
ಕರೀಂ ಸಾಬು ಬೇಗಬೇಗನೆ ಗಂಟುಮೂಟೆ ಕಟ್ಟಿ, ಅದನ್ನು ಭದ್ರಪಡಿಸಿ ಮೂಲೆಯಲ್ಲಿಟ್ಟು, ತಟ್ಟಿಬಾಗಿಲನ್ನು ಎಳೆದು ಕಟ್ಟಿದನು. ಹಾಗೆ ಮಾಡುತ್ತಿದ್ದಾಗಲೆ ಕೆಲವು ಪ್ರಶ್ನೆ ಹಾಕಿ ದೊಳ್ಳನಿಂದ ವಿಷಯ ಏನೆಂದು ವಿವರ ತಿಳಿಯಲು ಪ್ರಯತ್ನಿಸಿದನು. ಆದರೆ ದೊಳ್ಳನ ಹೇಳಿಕೆಗಳು ವಿರೋಧಾಭಾಸದಿಂದ ಕೂಡಿ. ನಡೆದ ಸಂಗತಿಯನ್ನು ಸ್ಪಷ್ಟಪಡಿಸುವುದಕ್ಕೆ ಬದಲಾಗಿ, ಮತ್ತಷ್ಟು ಕಳವಳವುಂಟುಮಾಡಿದುವಷ್ಟು: ‘ಸಾಬರಿಗೂ ಹೊಲೇರಿಗೂ ಜಟಾಪಟಿ….’ ‘ಇಜಾರದ ಸಾಬರಿಗೆ ಕೈ ಕತ್ತರಿಸಿ…. ಮಂಡೆಗೆ ಪೆಟ್ಟು ಬಿದ್ದು….’ ‘ಗುತ್ತಿಗೂ ಕಾಲು ಸಂದಿ ತಪ್ಪಿಹೋಯ್ತು….’ ‘ಅವರ ಗಬ್ಬದ ಕುರೀನ ಇವರು ಕುಯ್ಕೊಂಡು ತಿಂದ್ರಂತೆ….!’
‘ಬಂತಪ್ಪಾ ಏನೋ ಮಲಾಮತ್ ಗ್ರಾಚಾರ!’ ಎಂದುಕೊಳ್ಳುತ್ತಾ ಕರೀಂಸಾಬರು ಬೇಗಬೇಗನೆ ದೊಳ್ಳನ ಮಾರ್ಗದರ್ಶನದಲ್ಲಿ ಕುಕ್ಕೋಟ ಓಡುತ್ತಲೆ ಹೋದರು.
ಇವರು ಆ ಸ್ಥಳಕ್ಕೆ ತಲುಪುವಷ್ಟರಲ್ಲಿ ಹೊಡೆದಾಟ ಕೊನೆಯ ಹಂತಕ್ಕೆ ಕಾಲಿಟ್ಟಿತ್ತು. ಕರೀಂ ಸಾಬರ ಕೊರಳು ಕೇಳಿಸಿ, ಅವರನ್ನು ಕಂಡೊಡನೆ ಇಬ್ಬಣದವರೂ ಕದನವಿರಾಮ ಘೋಷಣೆ ಮಾಡಿದಂತೆ ಕೈ ತಡೆದು ನಿಂತು, ಅವರಿಗೆ ದೂರು ಕೊಟ್ಟು ತಮ್ಮ ತಮ್ಮ ವರ್ತನೆಯ ನ್ಯಾಯ ಸಮರ್ಥನೆ ಮಾಡಿಕೊಳ್ಳುವ ಭಂಗಿಯಲ್ಲಿ ಅವರ ಕಡೆ ತಿರುಗಿ ಬಳಿ ಸಾರಿದರು. ಕರೀಂಸಾಬರು ಹೊನ್ನಳಿಯ ವಸೂಲಿ ಸಾಬರುಗಳಂತೆ ಮೊನ್ನೆ ಮೊನ್ನೆ ಬಂದು, ಇಂದೊ ನಾಳೆಯೊ ಮರಳುವವರಾಗಿರಲಿಲ್ಲ. ಅವರು ಬಹುಕಾಲದಿಂದಲೂ ಮೇಗರವಳ್ಳಿಯಲ್ಲಿ ಮನೆಮಾಡಿಕೊಂಡು, ಅಂಗಡಿ ನಡೆಸುತ್ತಾ, ಸುತ್ತಣ ಹಳ್ಳಿಗಳಲ್ಲಿ ವ್ಯಾಪಾರ ಮಾಡುತ್ತಿದ್ದುದರಿಂದ ಎಲ್ಲರಿಗೂ ಪರಿಚಯದವರಾಗಿ, ಬೇಕಾದವರಾಗಿ, ಅನೇಕರ ಗೌರವಕ್ಕೂ ಕೃತಜ್ಞತೆಗೂ ಪಾತ್ರರಾಗಿದ್ದರು. ಬಡವರಾದ ಸಾಮಾನ್ಯ ಜನರಿಗೆ ಅವರಲ್ಲಿ ಒಂದು ಯಜಮಾನ ಕಳೆ ಕಾಣಿಸುತ್ತಿದ್ದು, ಕಷ್ಟಕಾಲದಲ್ಲಿ ಅವರ ಹಿತೋಪದೇಶದ ಮಾತುಗಳಿಗೆ ಮನ್ನಣೆ ಕೊಡುತ್ತಿದ್ದರು.
ಗಬ್ಬದ ಆಡಿನ ಮಂಡೆಯೂ, ಅಜ್ಜೀಸಾಬುವ ಚರ್ಮದ ಚೀಲದಲ್ಲಿ ಇತರ ಕುರಿ ಮತ್ತು ದನದ ಚರ್ಮಗಳೊಡನೆ ಹುದುಗಿದ್ದು ಗುತ್ತಿಯ ಕಡೆಯವರಿಂದ ಹೊರಗೆ ಎಳೆದುಹಾಕಲ್ಪಟ್ಟಿದ್ದ ಅವರ ಆಡಿನದೇ ಆಗಿದ್ದ ಕಪ್ಪು ಬಿಳಿಯ ಬಣ್ಣದ ರೋಮಮಯ ಚರ್ಮವೂ, ಕುರಿಮರಿಯ ಭ್ರೂಣಗಳೂ ರಕ್ತಮಿಶ್ರಿತವಾದ ಭಯಾನಕ ಸಾಕ್ಷಿಗಳಾಗಿ ಅಲ್ಲಿ ಬಿದ್ದಿದ್ದುವು. ತಲೆಬುರುಡೆಗೆ ಬಲವಾದ ದೊಣ್ಣೆ ಪೆಟ್ಟು ತಗುಲಿ ರಕ್ತ ಸೋರುತ್ತಿದ್ದ ಇಜಾರದ ಸಾಬಿ ಎತ್ತಿ ಹಿಡಿದಿದ್ದ ಅವನ ಬಲಗೈಯ ಹೆಬ್ಬೆರಳು ಅರ್ಧ ಭಾಗಕ್ಕೂ ಹೆಚ್ಚಾಗಿಯೆ ಕತ್ತರಿಸಿ ನೇತಾಡುತ್ತಿತ್ತು. ಮೊಣಕಾಲ ಕೆಳಗಿನ ಭಾಗಕ್ಕೆ ಬಲವಾದ ಏಟುತಗುಲಿ ಮಾಂಸ ಹಿಸಿದು, ನೆತ್ತರು ಸೋರಿ, ಎಲುಬೂ ಕಾಣಿಸುತ್ತಿದ್ದ ಗುತ್ತಿಯ ಮುಖ ಮತ್ತು ಭುಜದ ಭಾಗಗಲ್ಲಿ ಚೂರಿಯ ಇರಿತದಿಂದಾಗಿ ಗಾಯಗಳಿಂದ ತೊಯ್ದು, ಉಟ್ಟ ಬಟ್ಟೆ ಕರಿಗೆಂಪು ಕಲೆಗಳಿಂದ ರುದ್ರವಾಗಿತ್ತು. ಇಕ್ಕಡೆಯ ಇತರರೂ ಸಣ್ಣಪುಟ್ಟ ಗಾಯಗಳಿಂದಲೂ ಮೂಗೇಟುಗಳಿಂದಲೂ ನೊಂದು ಒಬ್ಬರ ಮೇಲೊಬ್ಬರು ದೂರು ಹೇರುತ್ತಾ ಕೂಗಾಡುತ್ತಿದ್ದರು.
*****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ