ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-34

      ಒಡೆಯರ ಮನೆಯಿಂದ ಗಂಡನನ್ನೂ ಹಿರಿಯ ಮಗನನ್ನೂ ರಕ್ಷಿಸಿ ಕೇರಿಗೆ ಕರೆದುಕೊಂಡು ಬಂದ ಸೇಸಿ ಆ ದಿನವೆ ಮಧ್ಯಾಹ್ನದ ಮೇಲೆ, ಕಲ್ಲಯ್ಯಗೌಡರಿಗೆ ಮಾತುಕೊಟ್ಟಿದ್ದ ಪ್ರಕಾರ, ಮಗಳನ್ನು ಹಿಂದಕ್ಕೆ ಕರೆತರುತ್ತೇನೆಂದು ಹೇಳಿ ತನ್ನ ಕಿರಿಯ ಮಗ ಪುಟ್ಟಬೀರನನ್ನು ಜೊತೆಗಿಟ್ಟಿಕೊಂಡು ಸಿಂಬಾವಿಗೆ ಹೊರಟಳು.

ಪುಟ್ಟಬೀರನಿಗೆ ಬದಲಾಗಿ ಅವನ ಹೆಂಡತಿ ಚಿಕ್ಕಪುಟ್ಟಯನ್ನೆ ಕರೆದುಕೊಂಡು ಹೋಗಲು ಮೊದಲು ಮನಸ್ಸು ಮಾಡಿದ್ದಳು, ಆದರೆ ಆ ಸೊಸೆ ತಾನು ಬರಲೊಲ್ಲೆ ಎಂದು ಬಿಟ್ಟಿದ್ದಲ್ಲದೆ ‘ಇವರ ಕಿಸುರಿಗೆ ನೀವ್ಯಾಕೆ ಹೋಗಿ ಸಿಕ್ಕುಹಾಕ್ಕೊಳ್ತೀರಿ?’ ಎಂದು ತನ್ನ ಗಂಡನನ್ನೂ ಅವನ ತಾಯಿಯೊಡನೆ ಹೋಗದಂತೆ ಪುಸಲಾಯಿಸಿದ್ದಳು.  ಆದರೆ ಬಾಸುಂಡೆಗಾಯಗಳಿಂದ ಅವನೇ ಜೊತೆ ಹೋಗುವಂತೆ ಮಾಡಿದ್ದನು.
ಅದಕ್ಕೆ ಇನ್ನೂ ಒಂದು ಕಾರಣವಿತ್ತು: ನೆಂಟರ ಮನೆಗೆ ಹೋಗುವುದೆಂದರೆ ಅವನ ಹೆಂಡತಿ ಲಕ್ಕಿಗೆ (ಅವಳು ಸಣ್ಣಸಣ್ಣ ಅನ್ನದ ದಿಬ್ಬಗಳನ್ನೆ ತಿನ್ನುತ್ತಿದ್ದುದರಿಂದ ಅವಳಿಗೆ ‘ಹೊಟ್ಟೆಲಕ್ಕಿ’ ಎಂಬ ಅಡ್ಡ ಹೆಸರೂ ಇತ್ತು.) ರೆಕ್ಕೆಯೆ ಬಂದಂತಾಗುತ್ತಿತ್ತು. ಅವಳೇ ಕಾತರಳಾಗಿದ್ದಳು ಅತ್ತೆಯೊಡಗೂಡಿ ಸಿಂಬಾವಿಗೆ ಹೋಗಲು, ಗಂಡನಿಗೆ ಏಟುಬಿದ್ದಿದೆ; ಆತನಿಗೆ ಶುಶ್ರೂಷೆ ಮಾಡಬೇಕೇಂದೇನೂ ಅವಳಿಗೆ ಅಷ್ಟಾಗಿ ಅನ್ನಿಸಿರಲಿಲ್ಲ. ಅಷ್ಟೆ ಅಲ್ಲ, ಗಂಡನನ್ನು ಚೆನ್ನಾಗಿ ಹೊನ್ನಳ್ಳಿ ಹೊಡೆತ ಹಾಕಿ ಥಳಿಸಿದರು ಎಂಬ ಸುದ್ದಿ ಅವಳ ಕಿವಿಗೆ ಬಿದ್ದಾಗ ಅವಳು ಮುತಿ ಚೂಪಗೆ ಮಾಡಿಕೊಂಡು “ಹಂಗಾಗಬೇಕು ಅವರಿಗೆ! ಬೀಳಲಿ ಇನ್ನೂ ಎಲ್ಡು ಕನಾತಿ! ನಂಗೆ ಮಾತ್ರ ಬೆನ್ನಮ್ಯಾಲೆ ಇಕ್ಕಡಿಸ್ತಾರಲ್ಲಾ? ನಂಗೆ ಹೆಂಗೆ ನೋವಾಗ್ತದೆ ಅನ್ನಾದು. ಈಗ್ಲಾದ್ರೂ ಗೊತ್ತಾಗ್ಲಿ!” ಎಂದು ಮೂದಲಿಸಿದ್ದಳು. ಆದರೆ ಸಣ್ಣಬೀರನನ್ನು ತನ್ನ ಮಾವನೂ ಅತ್ತೆಯೂ ಮೆಲ್ಲಗೆ ನಡೆಸಿಕೊಂಡು ಬಂದು ಬಿಡಾರದಲ್ಲಿ ಚಾಪೆಯ ಮೇಲೆ ಮಲಗಿಸಿದಾಗ ಗಾಯಗಳನ್ನೂ, ಅದಕ್ಕೆ ಹಚ್ಚಿದ್ದ ತೆಂಗಿನೆಣ್ಣೆಯನ್ನೂ ಮೀರಿ ಹರಿಯುತ್ತಿದ್ದ ನೆತ್ತರನ್ನೂ, ಅಲ್ಲಲ್ಲಿ ಬೆಳ್ಳಗಿದ್ದ ಔಷಧಿಯ ಬಿಳಿಪುಡಿಯ ರಂಪವನ್ನೂ ಮೀರಿ ಹರಿಯುತ್ತಿದ್ದ ನೆತ್ತರನ್ನೂ, ಅಲ್ಲಲ್ಲಿ ಬೆಳ್ಳಗಿದ್ದ ಔಷಧಿಯ ಬಿಳಿಪುಡಿಯ ರಂಪವನ್ನೂ ನೋಡಿ, ಲಬಲಬನೆ ಬಾಯಿಬಡಿದುಕೊಂಡೂ ಎದೆಗುದ್ದಿಕೊಂಡೂ ಕೇರಿಯಲ್ಲಾ ನೆರೆಯುವಂತೆ ಗೋಳುಹೊಯ್ದುಕೊಂಡಿದ್ದಳು! ಇಜಾರದ ಸಾಬಿಯನ್ನು ಬಯ್ಯುವ ನೆವದಿಂದ ಎಲ್ಲರಿಗೂ ಸಹಸ್ರನಾಮಾರ್ಚನೆ ಮಾಡಿದ್ದಳು: “ಪಾಪಿ ಮುಂಡೇಗಂಡ! ಅವನ ಯದಿಗೆ ರಣ ಹೊಡಿಯಾ! ಅವನಿಗೆ ದೊಡ್ಡರೋಗ ಬರಾ! ಅವನ ಬಾಯಿಗೆ ಹುಳಾ ಬೀಳಾ! ಅವನ ರಟ್ಟೆ ಸೇದಿಹೋಗಾ! ಅವನ ಹೆಂಡ್ತಿ….!” ಎಂದು ಮೊದಲಾಗಿ ತನಗೆ ಗೊತ್ತಿದ್ದ ನಿಂದಾ ನಿಘಂಟನ್ನೆಲ್ಲ ಬರಿದುಮಾಡಿದ್ದಳು! ಆದರೂ ಸ್ವಲ್ಪ ಹೊತ್ತಿನಲ್ಲಯೆ ಅವಳು ತನ್ನ ಅತ್ತೆ ಸೇಸಿಯೊಡನೆ ಸಿಂಬಾವಿ ಕೇರಿಯ ನೆಂಟರ ಮನೆಗೆ ಹೊರಡಲು ಉತ್ಸುಕಳಾಗಿದ್ದಳು! ಕಡೆಗೂ ಅವಳು ಸಿಂಬಾವಿಗೆ ಹೊರಡದಿದ್ದುದಕ್ಕೆ ಕಾರಣವಾಗಿದ್ದ ಒಳಗುಟ್ಟೆಂದರೆ, ನೆರೆಯ ಬಿಡಾರದ ಮೈದುನ ಪುಟ್ಟಬೀರನ ಹೆಂಡತಿ, ಚಿಕ್ಕಪುಟ್ಟಿ, ತಾನಿಲ್ಲದ ವೇಳೆಯಲ್ಲಿ ತನ್ನ ಗಂಡನಿಗೆ ಅನ್ನಗಂಜಿ ಕೊಡುವ ನೆವದಲ್ಲಿ ಎಲ್ಲ ಗುಡಿಸಿಲಿಗೆ ಬಂದು ಏನು ಮಾಡಿಬಿಡುತ್ತಾಳೊ ಎಂಬುದೆ ಆಗಿತ್ತು!
ಸೇಸಿ ಹೊರಡುವ ಮುನ್ನ ತನ್ನ ಮಗಳು ಮದುವಣಗಿತ್ತಿಯಾಗಿ ಧರಿಸಿದ್ದು, ಗುತ್ತಿಯೊಡನೆ ಓಡಿಹೋಗುವ ಮೊದಲು ಗಂಟು ಕಟ್ಟಿ ತನಗೆ ಕೊಟ್ಟಿದ್ದ ನಗದ ಗಂಟನ್ನೂ ಮಡಿಲಿಗೆ ಹಾಕಿಕೊಂಡಿದ್ದಳು. ಮಗಳನ್ನೆ ಸಿಂಬಾವಿಯಿಂದ ಹಿಂದಕ್ಕೆ ಕರೆತರಲು ಹೋಗುವವಳು ಬೆಟ್ಟಳ್ಳಿಗೌಡರದಾಗಿದ್ದ ನಗಗಳನ್ನು ಏತಕ್ಕೆ ಒಯ್ಯುತ್ತೀಯೆ ಎಂದು ಯಾರಾದರೂ ಕೇಳಿದ್ದರೆ ಉತ್ತರ ಹೇಳುವುದಕ್ಕೆ ಅವಳಿಗೇ ಸರಿಯಾಗಿ ಗೊತ್ತಾಗುತ್ತಿತ್ತೊ ಇಲ್ಲವೊ? ಅವಳ ಮನಸ್ಸಿನಲ್ಲಿಯೂ ಯಾವುದೂ ಇನ್ನೂ ಸ್ಪಷ್ಟವಾಗಿರಲಿಲ್ಲ. ಮಗನಿಗಾಗಿದ್ದ ರಾಕ್ಷಸ ಶಿಕ್ಷೆಯನ್ನು ಕಂಡಾಗಣಿಂದ, ಹಿಂದೆ ಅವಳ ಮನಸ್ಸಿನಲ್ಲಿ ಅಸ್ಪಷ್ಟವಾಗಿದ್ದ ಅಭಿಪ್ರಾಯವೊಂದು ಖಚಿತವಾಗತೊಡಗಿತ್ತು. ತನ್ನ ಮಗನನ್ನು ದನ ಹೊಡೆದ  ಹಾಗೆ ಹೊಡೆದದ್ದೇನೋ ಆಗಿಹೋಗಿತ್ತು. ಅದಕ್ಕೆ ಪ್ರತೀಕಾರವಾಗಿ ಅವರ ನಗಗಳನ್ನೆಲ್ಲ ಮಗಳೇ ಓಡಿಹೋಗುವಾಗ ತೆಗೆದುಕೊಂಡು ಹೋಗಿ ಹಾಳುಮಾಡಿಬಿಟ್ಟಿದ್ದಾಳೆ ಎಂದು ಹೇಳಿ ಲಪಟಾಯಿಸಬಾರದೇಕೆ? ಮತ್ತೂ ಒಂದು ಯೋಚನೆ: ಮಗಳನ್ನು ಹಿಂದಕ್ಕೆ ಕರೆತಂದು ಕಟುಕರಿಗೆ ಒಪ್ಪಿಸುವುದಿರಲಿ; ತಾನೇ ಹಿಂದಿರುಗಿ ಬರೆದಿದ್ದರಾಯಿತು. ತನ್ನ ಗಂಡನನ್ನು ಉಪಾಯದಿಂದ ಸಿಂಬಾವಿಗೇ ಬಂದು ಹೆಗ್ಗಡೆಯವರ ಆಳಾಗಿರುವಂತೆ ಒಪ್ಪಿಸಿದರಾಯಿತು! ಎಂತಿದ್ದರೂ ಗೌಡರಿಗೂ ಹೆಗ್ಗಡೆಯವರಿಗೂ ಹಿಂದಿನಿಂದಲೂ ಜಿದ್ದು! ಅದನ್ನೇಕೆ ನಮ್ಮ ಕ್ಷೇಮಕ್ಕೆ ಬಳಸಿಕೊಳ್ಳಬಾರದು? ಹೀಗೆಲ್ಲಾ ಸೇಸಿಯ ತಲೆಯಲ್ಲಿ ದೂರಾಲೋಚನೆ ದುರಾಲೋಚನೆಗಳು ಒಳಸಂಚು ಹುಡುತ್ತಿದ್ದ ಹಾಗೆಯೆ ದಾರಿ ಸಾಗುತ್ತಿತ್ತು. ತಾಯಿಯ ಮಣವನ್ನು ಗಮನಿಸಿದ ಪುಟ್ಟಬೀರ ಒಂದೆರಡು ಸಾರಿ ನಿಂತು, ಅವಳು ಮುಂದೆ ಹೋಗುತ್ತಿದ್ದ ತನ್ನನ್ನು ಬಳಿಸಾರಿದೊಡನೆ “ಯಾಕವ್ವಾ ಬಾ’ಳ ದಣಿವಾಯ್ತೆ?” ಎಂದು ಪ್ರಶ್ನಿಸಿದ್ದನು. ಅದಕ್ಕೆ ಅವಳು ಅಳುದನಿಯಿಂದ “ಇಲ್ಲಪ್ಪಾ, ನಿನ್ನ ಅಣ್ಣನ್ನ ಆ ರೀತಿ ಜಪ್ಪಿದರಲ್ಲಾ ಅದನ್ನೆ ನೆನೆಸಿಕೊಂಡು ಬರ್ತಿದ್ದೆ! ಅವರೇನು ನರಮನುಸರೋ ರಾಕ್ಷೇಸರೋ? ನಾವಿನ್ನು ಅವರ ಹತ್ರ ಹೆಂಗೆ ಗೆಯ್ದು ಕಾಲಹಾಕಾದು ಅಂತಾ….” ಎಂದು ಅರ್ಧಕ್ಕೆ ನಿಲ್ಲಿಸಿ ದೀರ್ಘವಾಗಿ ಸುಯ್ದಿದ್ದಳು. ತನ್ನ ಮನಸ್ಸಿನಲ್ಲಿದ್ದ ಕ್ರಾಂತಿಕಾರಕ ವಿಚಾರಗಳನ್ನು ಹೆದರುಪುಕ್ಕಲು ಮತ್ತು ಬಾಯಿಹರಕಲು ಸ್ವಭಾವದ ಮಗನಿಗೆ ತಿಳಿಸಲು ಅಂಜಿದಳು.
ಸೇಸಿ ಪುಟ್ಟಬೀರರು ಸಿಂಬಾವಿಯ ಕೇರಿಯ ಸಮೀಪಕ್ಕೆ ಬರುವಷ್ಟರಲ್ಲಿ ದನ ಕೊಟ್ಟಿಗೆಗೆ ಬರುವ ಹೊತ್ತಾಗಿತ್ತು. ಹಿಂದೆ ಎಷ್ಟೋ ಸಾರಿ ಸೇಸಿ ಬೆಟ್ಟಳ್ಳಿಯಿಂದ ಸಿಂಬಾವಿಯ ತವರು ಮನೆಗೆ ಹೀಗೆಯೆ ನಡೆದುಕೊಂಡು ಬಂದಿದ್ದಳು. ತರುಣಿ ನವವಧುವಾಗಿ ಯುವಕನಾಗಿದ್ದ ದೊಡ್ಡಬೀರನೊಡನೆ ಸಂಭ್ರಮದಿಂದ ನಡೆದು ಬಂದಿದ್ದಳು. ಆಗ ತನ್ನ ತಂದೆತಾಯಿಯರಿದ್ದರು. ಕೇರಿಗೆ ಕೇರಿಯ ತಮ್ಮನ್ನು ಉತ್ಸಾಹದಿಂದ ಇದಿರುಗೊಂಡಿತ್ತು. ಆಮೇಲೆ ಶಿಶುವಾಗಿದ್ದ ಸಣ್ಣಬೀರನನ್ನು ಹೊತ್ತು ನಡೆದು ಬಂದಿದ್ದಳು. ಆಮೇಲೆ ಶಿಶು ಪುಟ್ಟಬೀರನನ್ನು ಹೊತ್ತುಕೊಂಡು ಬಾಲಕ ಸಣ್ಣಬೀರನನ್ನು ನಡೆಸಿಕೊಂಡು ಬಂದಿದ್ದಳು. ಒಂದು ಸಾರಿ ಬಂದಾಗ ತಂದೆ ತೀರಿಹೋಗಿದ್ದ ಕೇರಿಯಾಗಿತ್ತು. ಮತ್ತೊಂದು ಸಾರಿ ಬಂದಾಗ ತಾಯಿ ಇಲ್ಲದ ಕೇರಿಯಾಗಿತ್ತು. ಅಣ್ಣ ಕರಿಸಿದ್ದ ಅತ್ತಿಗೆ ಗಿಡ್ಡಿಯೊಡನೆ ಇದಿರುಗೊಂಡು ತನ್ನನ್ನೂ ತನ್ನ ಮಕ್ಕಳನ್ನೂ ಸ್ವಾಗತಿಸಿ ಸತ್ಕರಿಸಿದ್ದರು. ತಂದೆತಾಯಿ ತೀರಿಹೋದಮೇಲೆ ಸಿಂಬಾವಿಗೆ ಬರುವುದೆ ಅಪರೂಪವಾಗಿ ಹೊಗಿತ್ತು ಸೇಸಿಗೆ. ಮೊದಮೊದಲು ಹೇಗೊ ಪ್ರಯತ್ನಮಾಡಿ ವರ್ಷಕ್ಕೆ ಒಮ್ಮೆಯಾದರೂ ಬಂದು ಹೋಗುತ್ತಿದ್ದಳು. ಕಡೆಕಡೆಗೆ ಅದು ಸಾಧ್ಯವಾಗದೆ ಹೋಗಿತ್ತು, ಸೊಂಟ ನಸುಬಾಗಿ, ಕೂದಲು ನರೆ ಕಂಡು, ನಡುವಯಸ್ಸಿನಲ್ಲಿಯೆ ನಡು ಡೊಂಕಿ ಮುದಿತನಕ್ಕೆ ಕಾಲಿಟ್ಟ ಅವಳಿಗೆ. ಮೂರು ವರ್ಷಗಳ ಹಿಂದೆ ಒಮ್ಮೆ ಅಣ್ಣನಿಗೆ ಸಖತ್ತು ಕಾಯಿಲೆಯಾಗಿ ಅತ್ತಮುಖವೊ ಇತ್ತ ಮುಖವೊ ಎಂಬಂತಾಗಿದೆ ಎಂಬುದನ್ನು ಕೇಳಿ ಮುದುಕಿ ತನ್ನ ಮುದಿ ಗಂಡನೊಡನೆ, ಮಳೆಗಾಲವಾಗಿದ್ದರೂ ಕೂಡ, ಅರ್ಧ ದಿನವೆಲ್ಲಾ ನಡೆದೂ ನಡೆದೂ ಸಿಂಬಾವಿಗೆ ಬಂದು ಒಪ್ಪತ್ತು ಇದ್ದು ಹೋಗಿದ್ದಳು. ಆಗಲೆ ಅವಳು ಮನಸ್ಸು ಮಾಡಿದ್ದು, ಕಟ್ಟಾಳಾಗಿದ್ದ ತರುಣ ಗುತ್ತಿಯನ್ನು ನೋಡಿ, ತನ್ನ ಮಗಳು ತಿಮ್ಮಿಯನ್ನು, ಏನೇ ಆಗಲಿ, ಅವನಿಗೇ ಕೊಟ್ಟು ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂದು. ಆದರೆ ಜೀತದಾಳುಗಳಿಗೆ ಆ ಹಕ್ಕನ್ನು ಎಲ್ಲಿಂದ ಬರಬೇಕು? ಒಡೆಯರ ಆಸ್ತಿಯಾಗಿದ್ದ ಅವರನ್ನು ಯಾರಿಗೆ ಕೊಡಬೇಕು? ಎಂಬುದನ್ನು ತಂದೆತಾಯಿಗಳು ನಿರ್ಧರಿಸಲು ಸಾಧ್ಯವೆ? ತಮ್ಮ ಜಾನುವಾರಗಳನ್ನು ಬಿಕರಿ ಮಾಡುವ ಹಕ್ಕು ಎಂತೋ ಅಂತೆ ಬೇಲರು ಹೊಲೆಯರು ಮಾದಿಗರು ಮೊದಲಾದ ತಮ್ಮ ಹೆಣ್ಣುಗಂಡು ಜೀತದಾಳುಗಳನ್ನೂ ಇಡುವ ಕೊಡುವ ಬಿಡುವ ಹಕ್ಕು ಅವರದ್ದೆ ತಾನೆ? ವಸ್ತುತಃ ಹಾಗಿದ್ದರೂ, ಸೇಸಿ ಎಷ್ಟಾದರೂ ಮನುಷ್ಯ ವರ್ಗಕ್ಕೆ ಸೇರಿದವಳಲ್ಲವೆ? ಅವಳೇನು ದನ ಅಲ್ಲವಲ್ಲ! ಮಾನವ ವರ್ಗಕ್ಕೇ ಸಹಜವಾದ ಸ್ವಾತಂತ್ರೈ ಇಚ್ಛೆ, ಆಶೆ, ಅಪೇಕ್ಷೆ, ಪ್ರಯತ್ನಶೀಲತೆ ಇವುಗಳಿಂದ ಅವಳು ತಪ್ಪಿಸಿಕೊಳ್ಳಲು ಸಾಧ್ಯವೆ? ಆ ಇಚ್ಛೆ ಆಶೆ ಅಪೇಕ್ಷೆಗಳು ಕೈಗೂಡಲಿ ಬಿಡಲಿ, ಪ್ರಯತ್ನಮಾಡುವುದರಿಂದ ತಪ್ಪಿಸಿಕೊಳ್ಳಲಾದೀತೆ? ಅದರಿಂದ ಎಂತಹ ಹಾನಿಯೆ ಒದಗಲಿ, ಸರ್ವನಾಶವೆ ಬೇಕಾದರೂ ಆಗಲಿ, ಮಾನವತ್ವವನ್ನು ತಲುಪಿದ ಚೇತನ ಕಲ್ಲು ಮಣ್ಣುಗಳಂತೆ ತಟಸ್ಥವಾಗಿ ಬಿದ್ದಿರಲು ಸಾಧ್ಯವಿಲ್ಲ.
ಆದ್ದರಿಂದಲೆ ಸೇಸಿಯ ಚೇತನ, ಅದು ಪ್ರಾಣಿಸಮೀಪವೇ ಆಗಿದ್ದರೂ, ತನ್ನ ಮನುಷ್ಯತ್ವ ಸಹಜವಾಗಿದ್ದ ಹಕ್ಕನ್ನು ಸ್ಥಾಪಿಸಿಕೊಳ್ಳಲು, ಭಯಂಕರವಾದ ಕ್ರೂರವಾದ ದುರ್ದಮ್ಯವಾದ ಪ್ರತಿಭಟನೆ ಮತ್ತು ಪ್ರತೀಕಾರಗಳ ಮೃತ್ಯುಭೀಕರ ರೌರವ ನರಕವೆ ತನ್ನಿದಿರೇ ಆ ಎಂದು ಬಾಯಿ ತೆರೆಯುವ ಸಂಭವವಿದ್ದರೂ, ಅಂಜುತಂಜುತ್ತಲೆ ಬದ್ದಕಂಕಣವಾದಂತೆ ಯತ್ನಶೀಲವಾಗಿತ್ತು.
ನೂರಾರು ಚಿಂತೆಗಳಿಂದ ಆಕುಲವಾಗಿದ್ದ ಅವಳಿಗೆ, ಮೂರು ವರುಷಗಳ ತರುವಾಯ ತವರನ್ನು ಸಮೀಪಿಸುತ್ತಿದ್ದರೂ, ಹಿಂದೆ ಆಗುತ್ತಿದ್ದ ಹಿಗ್ಗು ಒದಗಲಿಲ್ಲ. ಅದಕ್ಕೆ ಬದಲಾಗಿ ಏನೊ ಉದ್ವೇಗವೆ ಹೃದಯವನ್ನು ಕದಡಿದಂತಿತ್ತು. ಇಕ್ಕಟ್ಟಾಗಿದ್ದ ಕಾಲು ಹಾದಿಯ ಇಕ್ಕಲಗಳಲ್ಲಿಯೂ ಮುತ್ತಿದ್ದ ಗಿಡಪೊದೆಗಳ ನಡುವೆ, ತನಗಿಂತಲೂ ಮುಂದೆ ನಡೆಯುತ್ತಿದ್ದ ಪುಟ್ಟಬೀರನು ತಟಕ್ಕನೆ ನಿಂತು, ತನ್ನನ್ನು ಸಂಬೋಧಿಸಿದಾಗಲೆ ಅವಳಿಗೆ ಎಚ್ಚರವಾದಂತಾಗಿದ್ದು:
“ಅವ್ವಾ, ಆಲೇಸು! ಏನೋ ವಾಲಗ ಕೇಳಿಸ್ತದೆ ಅಲ್ಲೇನು? ಕೇರೀಲಿ!” ತಿರುಗಿ ನಿಂತು, ಕಿವಿಗೊಡುವ ಭಂಗಿಯಿಂದ ತಲೆಯನ್ನು ತುಸು ಓರೆಮಾಡಿ, ತಾಯಿಯನ್ನೆ ಪ್ರಶ್ನಾರ್ಥಕವಾಗಿ ನೋಡುತ್ತಿದ್ದನು ಪುಟ್ಟಬೀರ.
ಸೇಸಿ ಸೊಂಟಗೈಯಾಗಿ ಸುಯ್ದು ನಿಂತು ಆಲಿಸಿದಳು. ಹೌದು, ಕೆಳಗೆ ಕಣಿವೆಯಲ್ಲಿ, ಗದ್ದೆಕೋಗಿನ ನೆತ್ತಿಯಲ್ಲಿ, ದಟ್ಟವಾಗಿ ಬೆಳೆದ ಮರಗಳ ಮರೆಯಲ್ಲಿ ತನ್ನ ಹುಟ್ಟು ಕೇರಿಯಿಂದ ಬೈಗುಗಾಳಿಯಲ್ಲಿ ತೇಲಿಬರುತ್ತಿದೆ ವಾಲಗದ ಸುಸ್ವರ! ಏಕೋ ಏನೋ? ಸುಖವೋ ದುಃಖವೋ? ಸೇಸಿಯ ಗಂಟಲಲ್ಲಿ ಏನೊ ಕಟ್ಟಿಕೊಂಡಂತಾಗಿ ಅದನ್ನು ಕೆಮ್ಮಿನಿಂದ ಮರೆಮಾಚಿದಳು. ಕೊನೆಬೈಗಿನ ಮುದಿಬಿಸಿಲಲ್ಲಿ ಕೇರಿಯ ಬಿಡಾರಗಳಿಂದೇಳುತ್ತಿದ್ದ ಅಡುಗೆಯ ಹೊಗೆ ಹೇಗೆ ಕಾಣಿಸುತ್ತಿದೆ, ಎಂದೋ ತೀರಿಹೋಗಿದ್ದ ಅವ್ವನ ನೆನಪಾಗುವಂತೆ!
‘ಯಾರದ್ದೊ ಮದೆಮನೆ ಇರಬೈದು’ ಎಂದಳು ತಾಯಿ.
ತಾಯಿಯ ಕಡೆಗೆ ತಿರುಗಿ ನಿಂತು ಅವಳನ್ನೆ ಗಮನಿಸುತ್ತಿದ್ದ ಪುಟ್ಟಬೀರ “ಅದೆಂಥದವ್ವಾ? ಜೋತುಬೀಳಾಹಾಂಗೆ ಮಡ್ಲುತುಂಬ ತುಂಬಿಕೊಂಡಿದ್ದೀಯಲ್ಲಾ ಅಷ್ಟು ಭಾರಾನ? ಹೊರೆಯಾದ್ರೆ ಇತ್ತ ಕೊಟ್ಟಾದ್ರೂ ಕೊಡು” ಎಂದನು.
“ಎಂಥದಿಲ್ಲೋ…. ಹುಡುಗರಿಗೆ ಕೊಡಾನ ಅಂತ ಒಂದು ಚೂರು ಕೊಬ್ರಿ ಕಡ್ಲೆ ಬೆಲ್ಲಾ ಹಾಕ್ಕೋಂಡೀನಿ…. ಏನು ಭಾರ ಬಿಡು! ನಿಮ್ಮನ್ನೆಲ್ಲ ಹೊತ್ತೋಳಿಗೆ?” ಎಂದು ಮುದುಕಿ ನಗೆಸುಳಿಸಿ, ಮುಂದಕ್ಕೆ ಕಾಲು ಹಾಕಿದಳು “ಹೋಗಾನ ಬಾ. ಹೊತ್ತು ಮುಳುಗ್ತು.”
ಇಬ್ಬರೂ ಹತ್ತು ಹೆಜ್ಜೆ ಹಾಕಿ ಗುಡ್ಡವಿಳಿಯುತ್ತಿರಲು ಪಕ್ಕದೊಂದು ಮಟ್ಟಿನ ಹತ್ತಿರದಿಂದ ಅಗೆಯುವ ಸದ್ದು ಕೇಳಿಸಿತು.
ಕತ್ತಲಾಗುತ್ತಿರುವ ಅಷ್ಟುಹೊತ್ತಿನಲ್ಲಿ ಯಾರು ಏನನ್ನು ಅಗೆಯುತ್ತಿರಬಹುದು ಎಂಬ ಕುತೂಹಲದಿಂದ, ಮುಂದೆ ಹೋಗುತ್ತಿದ್ದ  ಪುಟ್ಟಬೀರ “ಯಾರೋ ಅದೂ? ಹೋಯ್?” ಎಂದು ಕೂಗಿದನು. ಗೂಡಿಗೂ ಗೊತ್ತಿಗೂ ಹಾರಿಹೋಗುತ್ತಿದ್ದ ಹಕ್ಕಿಗಳ ಸದ್ದಿನೊಡನೆ ಬೆರೆತು ಅವನ ಪ್ರಶ್ನೆಗೆ ಉತ್ತರವಾಗಿ ತುಸು ಅಣುಕುದನಿಯ ‘ಹೋಯ್!’ ಕೇಳಿಸಿತು. ಆ ಕಡೆ ನೋಡುತ್ತಿದ್ದಂತೆಯೆ ಸವೆಗೋಲನ್ನೂ ಕಿತ್ತಿದ್ದ ಬೇರುಗಳನ್ನೂ  ಹೆಗಲಮೇಲೆಯೂ ಕೈಯಲ್ಲಿಯೂ ಹೊತ್ತು ಹಿಡಿದಿದ್ದ ಸಿಂಬಾವಿ ಹೆಗ್ಗಡೆಯವರ ಕೆಲಸದ ಹುಡುಗ, ದೊಳ್ಳ, ಪೊದೆಯ ಸಂಧಿಯಿಂದ ಕಾನಿಸಿಕೊಮಡು “ಓಹೋಹೋ! ಏನು ಸೇಸಿ ಸವಾರಿ ಹಾಜರು, ಮಗಳಮದುವೆಗೆ!” ಎನ್ನುತ್ತಾ ಹತ್ತಿರಕ್ಕೆ ಬಂದನು.
ದೊಳ್ಳ ಹೇಳಿದ್ದನ್ನು ಸರಿಯಾಗಿ ಗ್ರಹಿಸದೆ ಸೇಸಿ ವಿಷಾದ ಸ್ವರದಲ್ಲಿ “ಹೌದು, ದೊಳ್ಳಯ್ಯಾ, ಮಗಳನ್ನು ಮದುವೆ ಮಾಡಾಕೆ ಕರಕೊಂಡು ಹೋಗಾಕೆ ಬಂದೀನಿ, ನಮ್ಮ ಗಿರಾಚಾರ!” ಎಂದಳು.
“ಎಲ್ಲೀಗೆ ಕರಕೊಂಡು ಹೋಗ್ತೀಯಾ?…. ಇಲ್ಲೇ ಅಂತೆ ಮದುವೆ! ಇವತ್ತು ರಾತ್ರೀನೆ ಧಾರೆಯಂತೆ! ಕೇಳ್ಸದಿಲ್ಲೇನು ವಾಲಗ, ನಿಮ್ಮ ಕೇರೀಲಿ?”
“ಯಾರದ್ರಾ ಧಾರೆ?” ಬೆಪ್ಪಾಗಿ ಕೇಳಿದನು ಪುಟ್ಟಬೀರ.
“ಯಾರದ್ದೂ?….ಹಿ ಹ್ಹಿ ಹ್ಹಿ! ನಿನ್ನ ತಂಗೀದೋ! ನಿನ್ನ ಸ್ವಾದರತ್ತೆಮಗ, ನುನ್ನ ಬಾವ ಇದಾನಲ್ಲಾ, ಆ ಗುತ್ತಿಗೇ ಕೊಟ್ಟು ಮದುವೆ!…. ಹಂಗಾರೆ ನಿಮಗೆ ಯಾರಿಗೂ ಗೊತ್ತೇ ಇಲ್ಲ?…. ಹಿಹ್ಹಿಹ್ಹಿ!…. ನೀವು ಯಾರೂ ಬರಾದಿಲ್ಲ ಅಂತಾನೂ ಹೇಳ್ತಿದ್ರು ಅಂತಾ ಇಟ್ಟುಗೋ, ಅದ್ಕೇ ನಿಮ್ಮಿಬ್ಬರನ್ನೂ ಕಂಡು ನನಗೆ ಸೋಜಿಗ ಆಯ್ತು, ಅಂತೂ ಬಂದೇಬಿಟ್ರಲ್ಲಾ ಮದೇಗೆ ಅಂತಾ! ಹಿಹ್ಹಿಹ್ಹಿ!”
ದೊಳ್ಳ ತಾನು ಸಂತೋಷ ವಾರ್ತೆಯನ್ನೆ ಹೇಳುತ್ತಿದ್ದೇನೆ ಎಂದು ಲಘು ಹೃದಯದಿಂದ ಹೇಳುತ್ತಿದ್ದ ಆ ಮಾತುಗಳನ್ನು ಕೇಳಿ ಸೇಸಿಗೆ ದಿಗ್‌ಭ್ರಮೆಯಾಯಿತು: ಒಮ್ಮೆ ಸಂತೋಷವೆ  ಉಕ್ಕಿದಂತಾಯಿತು! ಆದರೆ ಕ್ಷಣಮಾತ್ರದಲ್ಲಿ ಏನೋ ಭೀತಿ ಕವಿದು ಅವಳ ಮೋರೆಗೆ ದೆವ್ವ ಕಂಡವರ ಮುಖದ ವಿಕೃತಛಾಯೆ ಮೂಡಿತು. ಅವಳಿಗೆ ದೊಳ್ಳನ ಮಾತು ಅರ್ಥವಾಗಲಿಲ್ಲ; ಅದರಲ್ಲಿ ನಂಬಿಕೆಯೂ ಬರಲಿಲ್ಲ. ಸುಳ್ಳೆ ಹೇಳುತ್ತಿದ್ದಾನೆ ಅಥವಾ ತಪ್ಪು ತಿಳಿವಳಿಕೆಯಿಂದ ಆಡುತ್ತಿರಬೇಕು ಎಂದು ಭಾವಿಸಿದಳು. ಎಷ್ಟಾದರೂ ಬುದ್ಧಿ ಬಲಿಯದ ಹುಡುಗ!…. ಹಿಂದಿನ ರಾತ್ರಿ ಗುತ್ತಿಯೊಡನೆ ಓಡಿಬಂದ ತನ್ನ ಮಗಳಿಗೆ ಈ ರಾತ್ರಿಯೆ ಮದುವೆಯಾಗುತ್ತಿದೆ ಎಂಬುದು ಅವಳಿಗೆ ಅಸಂಭವನೀಯವಾಗಿತ್ತು.
“ಏನು ಬೇರೋ ಅದು? ಯಾರಿಗ್ರೋ?” ಎಂದು ಪ್ರಶ್ನಿಸಿ ವಿಷಯದ ದಿಕ್ಕನ್ನೆ ಬದಲಾಯಿಸಿದಳು ಸೇಸಿ.
“ಹೆಗ್ಗಡೇರಿಗೆ ಕಸಾಯಕ್ಕೆ!” ಉತ್ತರಿಸಿದನು ದೊಳ್ಳ, ಅಳಲೆಕಾಯಿ ಪಂಡಿತನೆಂಬಂತೆ!
ಹಸಿಬೇರಿನ ವಾಸನೆ ಮೂಗಿಗೂ ಹಿತಕರವಾಗಿ ವ್ಯಾಪಿಸುತ್ತಿದ್ದುದನ್ನು ಗಮನಿಸಿ ದೊಳ್ಳ ತನ್ನ ಅಭಿಜ್ಞತೆಯನ್ನು ಪ್ರದರ್ಶಿಸಲು ಮುಂದುವರೆದನು: “ಸಣಲೆ ಸದುಗನ್ನ ಕಿತ್ತುಕೊಂಡು ಬಾ ಅಂದ್ರು, ಮರಾಟಿ ಮಂಜಗೆ. ‘ನಂಗೊತ್ತಿಲ್ಲಮ್ಮಾ’ ಅಂದ ಅಂವ…. ಹಿಹ್ಹಿಹ್ಹಿ!…. ಆಮ್ಯಾಲೆ ನನ್ನ ಕೇಳಿದ್ರೂ ‘ನಿಂಗೊತ್ತೇನೊ?’ ಅಂತ. ಹಿಹ್ಹಿಹ್ಹಿ! ‘ಗೊತ್ತಿಲ್ದೆ ಏನು?’ ಅಂದೆ…. ನಾನಿಲ್ದೆ ಇದ್ರೆ ನಮ್ಮ ಜಟ್ಟಮ್ಮ ಹೆಗ್ಗಡ್ತೇರಿಗೆ ಕೈಕಾಲೆ ಬಿದ್ದುಹೋದ್ಹಾಂಗಾಗ್ತದೆ! ಆ ಹಳ್ಳಿಮುಕ್ಕ ಮರಾಟಿ ಮಂಜನ್ನ ಕಟ್ಟಿಕೊಂಡು ಎಂಥದು ಮಾಡ್ತಾರೆ ಅವರಾದ್ರೂ?…. ಒಂದಿಷ್ಟು ಕೂಳು ಬೇಯಿಸಕ್ಕೆ ಗೊತ್ತು ಅವನಿಗೆ ಅಷ್ಟೆ. ಅದಕ್ಕೆ ನಮ್ಮ ಒಡೇರು ನಂಗೆ ‘ನೀ ಕೆಲಸಕ್ಕೆ ಬ್ಯಾಡ ಹೋಗೋ’ ಅಂದ್ರೂ, ನಮ್ಮ ಜಟ್ಟಮ್ಮ ಹೆಗ್ಗಡ್ತೇರು ‘ನೀ ಹೋದ್ರೆ ಅವರಿಗೆ ಗಿಡಮೂಲಿಕೆ ತಂದು ಕೊಡೋರು ಯಾರಪ್ಪಾ? ಇರು.’ ಅಂತಾ ಹೇಳಿದ್ದು!…. ಆ ಹೆಗ್ಗಡೇರ ತಂಗೀಗೆ ಮಾತ್ರ ನನ್ನ ಕಂಡರಾಗಾದಿಲ್ಲಾ…. ನಾಯಿ ಕಂಡ್ಹಾಂಗೆ ಮಾಡ್ತಾರೆ….”
“ಹೆಗ್ಗಡೇರಿಗೆ ಏನು?…. ಕಾಯಿಲೇನಾ?” ಕೇಳಿದಳು ಸೇಸಿ, ದೊಳ್ಳನ ಮಾತಿನ ಹೊನಲಿಗೆ ತಡೆಹಾಕಲೆಂದು.
“ಅಯ್ಯೋ ಅವರಿಗೆ ರ್ವಾತೆ ತಪ್ಪಿದ್ದು ಯಾವಾಗ? ಮೂರು ಹೊತ್ತೂ ಕಾಯಿಲೆ, ಕಾಯಿಲೆ! ಹಿಹ್ಹಿಹ್ಹಿ!…. ಕೆಮ್ಮು, ಸೀತ, ಗೂರ್ಲು, ಸೊಂಟನೋವು, ಜರ, ಹಸಿಬಕ್ಕೆ, ತುರಿಗಜ್ಜಿ, ಕುರು, ಆಮಶಂಕೆ, ತಲೆನೋವು, ಉಬ್ಬಸ! ಒಂದೊ, ಎಲ್ಡೊ? ಹಿಹ್ಹಿಹ್ಹಿ….”
“ಕತ್ತಲಾತು, ದೊಳ್ಳಯ್ಯ, ನೀವು ಹೊಲ್ಡಿ,” ಎಂದು ನಡುವೆ ಬಾಯಿಹಾಕಿ ಪುಟ್ಟಬೀರ ಸರಸರನೆ ಕೇರಿಯ ದಿಕ್ಕಿಗೆ ಇಳಿದುನಡೆದನು, ತಾಯಿಯೊಡಗೂಡಿ.
ಭರಮೈಹೆಗ್ಗಡೆಯವರು ಗುತ್ತಿಗೆ “ನಿನ್ನ ಅಪ್ಪನ್ನ ಬಂದು ನನ್ನ ನೋಡಾಕೆ ಹೇಳೋ! ಹೋಗೋ!” ಎಂದಾಗ ಗುತ್ತಿಗೆ ಹೋದ ಜೀವ ಮತ್ತೆ ಬಂದಂತಾಯಿತು. ಹಿತ್ತಲು ಕಡೆ ಬಾಗಿಲಿಗೆ ಹೋಗಿ, ಜಟ್ಟಮ್ಮ ಹೆಗ್ಗಡತಿಯವರಿಗೆ ಕಣ್ಣಾಪಂಡಿತರು ಇನ್ನೊಂದೆರಡು ಮೂರು ದಿನಗಳಲ್ಲಿ ಔಷಧ ತಯಾರಿಮಾಡಿಕೊಂಡು ತಾವೇ ಖುದ್ದು ಬಂದು, ಹೆಗ್ಗಡೆ ಹೆಗ್ಗಡತಿ ಇಬ್ಬರಿಗೂ ಮಕ್ಕಳಾಗುವುದಕ್ಕೂ ಆರೋಗ್ಯವಾಗುವುದಕ್ಕೂ ಮದ್ದು ಕೊಡುವುದಾಗಿ ಹೇಳಿದರು ಎಂಬುದಾಗಿ ತಿಳಿಸಿ, ತಂಗಳನ್ನ ಮಜ್ಜಿಗೆ ಉಪ್ಪಿನಕಾಯಿಗಳನ್ನು ಕಾಣಿಕೆಯಾಗಿ ಪಡೆದು, ಬಿಡಾರಕ್ಕೆ ಹಿಂತಿರುಗಿದ್ದನು.
ಹಗಲೂಟಕ್ಕೆ ಕೆಲಸ ಬಿಟ್ಟು ಬಂದ ಕರಿಸಿದ್ದನಿಗೆ ಮಗನೊಡನೆ ಅನಿರೀಕ್ಷಿತವಾಗಿ ಒಬ್ಬಳೆ ಬಂದಿದ್ದ ತಂಗಿಯ ಮಗಳನ್ನು ಕಂಡು ಅಚ್ಚರಿಗಿಂತಲೂ ಹೆಚ್ಚು ಅನುಮಾನವಾಯಿತು. ಆದರೆ ಗುತ್ತಿ ನಡೆದಿದ್ದ ಸಂಗತಿಯನ್ನು ಸಂಕ್ಷೇಪವಾಗಿ ತಿಳಿಸಿದ ಮೇಲೆ ಅವನಿಗೂ ಧೈರ್ಯ ಹಿಂತಿರುಗಿದಂತಾಗಿತ್ತು. ಮಗನು ತಿಳಿಸಿದಂತೆ ಹೋಗಿ ಒಡೆಯರನ್ನು ಕಂಡನು. ಅವರು ಅವನೊಡನೆ ಸ್ವಲ್ಪ ಆಲೋಚನೆ ಮಾಡಿ, ಮರುದಿನ ಬೆಳಗಾಗುವುದರೊಳಗೆ ಆ ರಾತ್ರಿಯೆ ಲಗ್ನ ಪ್ರಸ್ತ ಎಲ್ಲವನ್ನೂ ಮಾಡಿ, ಮುಗಿಯಿಸಿ ಬಿಡಬೇಕೆಂದು ಸಲಹೆ ಮಾಡಿದ್ದರು. ಲಗ್ನಕ್ಕೆ ಬೇಕಾದ ಕೆಲವು ಸಾಮಗ್ರಿಗಳನ್ನೂ ಕೊಡಿಸಿದರು. ‘ವಾಲಗ ಎಂತಿದ್ದರೂ ನಿಮ್ಮದೇ ಅದೆ. ನಿಮ್ಮ ಒಡ್ಡಿಯದೇ ಒಂದು ಹಂದಿ ಕಡಿದು ಬಿಡಿ. ಮನೆಯಿಂದ ಅಕ್ಕಿ ಬೆಲ್ಲ ಕೊಡಿಸ್ತೇನೆ. ಹೆಣ್ಣಿಗೆ ಗಂಡಿಗೆ ಉಡಾಕೆ ತೊಡಾಕೆ ಏನು ಬೇಕೋ ತಗೊಂಡು ಹೋಗು….’ ಎಂದು ಪ್ರೋತ್ಸಾಹಿಸಿ ಕಳುಹಿಸಿದ್ದರು.
ಹುಡುಗಿಯ ತಂದೆ ತಾಯಿಯರಿಲ್ಲದೆ, ಬೇರೆ ಊರಿನ ಕೇರಿಗಳ ನಂಟರಿಷ್ಟರಿಗೆ ತಿಳಿಸದೆ, ಕರೆಯದೆ, ಹೇಗೆ ಲಗ್ನ ಮಾಡುವುದು ಎಂಬುದಕ್ಕೆ‘ಆ ಶಾಸ್ತ್ರಾನೆಲ್ಲಾ ಹಿಂದಿನಿಂದ ಮಾಡಿಕೊಳ್ಳಬಹುದು.’ ಎಂದು ಸಮಾಧಾನ ಹೇಳಿದ್ದರು. ಬೆಟ್ಟಳ್ಳಿಗೌಡರ ಕಡೆಯಿಂದ ಕಾಗದವಾಗಲಿ ಜನವಾಗಲಿ ಬರುವ ಮೊದಲೇ ಲಗ್ನ ನೆರವೇರಿಬಿಟ್ಟಿದ್ದರೆ ತಮ್ಮ ಕೇರಿಗೆ ಒಂದು ಹೆಣ್ಣಾಳನ್ನು ಗಿಟ್ಟಿಸಿಕೊಂಡಂತಾಗುತ್ತದೆ ಎಂಬುದು ಅವರ ಉದ್ದೇಶದ ಒಂದು ಪಾದವಾಗಿತ್ತು; ಇನ್ನೊಂದು, ಬೆಟ್ಟಳ್ಳಿ ಮನೆತನದ ಮೇಲೆ ಸಿಂಬಾವಿ ಮನೆತನ ಒಂದು ವಿಜಯ ಸಾಧಿಸಿದಂತಾಗುತ್ತದೆ ಎಂಬ ಪ್ರತಿಷ್ಠೆ.
ಕರಿಸಿದ್ದ ಕೇರಿಯರ ನೆರವಿನಿಂದ ಮಗನ ಲಗ್ನಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡನು. ಆದರೆ ಹೆಣ್ಣಿನ ತಾಯಿ, ತನ್ನ ಒಡಹುಟ್ಟಿದವಳು, ಲಗ್ನದ ಉತ್ಸವದಲ್ಲಿ ಮುಖ್ಯಭಾಗಿನಿಯಾಗಿ ಇರಬೇಕಾದವಳು ಇಲ್ಲದುದಕ್ಕಾಗಿ ಅವನ ಮನಸ್ಸು ಖಿನ್ನವಾಗಿತ್ತು. ಆದ್ದರಿಂದಲೆ ಸೇಸಿ ಪುಟ್ಟಬೀರರು ಅನಿರೀಕ್ಷಿತವಾಗಿ ಕೇರಿಯಲ್ಲಿ ಕಾಣಿಸಿಕೊಂಡಾಗ ಅವನ ಹಿಗ್ಗು ಸಗ್ಗಕ್ಕೇರಿತ್ತು! ಏನೋ ಒಂದು ಶುಭಶಕುನವೆ ಇಳಿದು ಬಂದಂತಾಗಿ, ದೇವರ ಆಶೀರ್ವಾದ ತನ್ನ ಕಡೆಗಿದೆ ಎಂದು ಭಾವಿಸಿದ್ದನು.
ಬಹು ಭಾವ ಸಂಚಲನೆಯ ಗರಗಸದಲ್ಲಿ ಸಿಕ್ಕಿದಂತಾಗಿದ್ದ ಸೇಸಿಯ ಹೃದಯವೂ ಎಲ್ಲ ವಿಷಯಗಳನ್ನೂ ಅಣ್ಣನಿಂದ ಕೇಳಿ ತಿಳಿದಮೇಲೆ ತಕ್ಕಮಟ್ಟಿಗೆ ನಿಶ್ಚಿಂತವಾಯಿತು. ಜೊತೆಗೆ  ಹೆಗ್ಗಡೆಯವರೂ ಅವಳನ್ನು ಮನೆಗೆ ಕರೆಸಿ, ಧೈರ್ಯ ಹೇಳಿದರು: “ಹೆಂಗಿದ್ರೋ ನೀನೂ ನಮ್ಮ ಕೇರಿಯ ಮಗಳೇ! ನಿನ್ನ ಮಗಳೊ ನಿನ್ನ ತವರಿಗೇ ಸೇರುವುದರಲ್ಲಿ ನ್ಯಾಯ ಇದೆ! ಏನು ಬಂದ್ರೂ, ನಾನು ನೋಡಿಕೊಳ್ಳುತ್ತೇನೆ, ಇದೇನು ಬಲಾತ್ಕಾರದ ಮದುವೆ ಅಲ್ಲ. ಹೆಣ್ಣು, ಹೆಣ್ಣಿನ ತಾಯಿ, ಹೆಣ್ಣಿನ ಸೋದರಮಾವ ಎಲ್ಲಾ ತಮ್ಮ ಸ್ಮಂತ ಖುಷಿಯಿಂದಲೇ ಒಪ್ಪಿ ಲಗ್ನ ನಡೆದ ಮೇಲೆ, ಯಾರು ಏನು ಮಾಡುವ ಹಾಂಗಿದ್ದಾರೆ?”
ಪುಕ್ಕಲೆದೆಯ ಪುಟ್ಟಬೀರನಿಗೆ ಅದೆಲ್ಲವನ್ನೂ ಕೇಳಿ, ನೋಡಿ, ದಿಗಿಲೋ ದಿಗಿಲು! ತನ್ನ ತಾಯಿಯನ್ನು ಗುಟ್ಟಾಗಿ ಕರೆದು “ಅವ್ವಾ, ತಿಮ್ಮೀನ ಕರಕೊಂಡು ಹೋಗಾಕೆ ಅಂತ ಬಂದವರು ನಾವೇ ಅವಳನ್ನು ಅವಸರವಸರವಾಗಿ ಲಗ್ನ ಮಾಡಿಕೊಟ್ಟೆವು ಅಂತಾ ಗೊತ್ತಾದ್ರೆ ನಮ್ಮ ಗೌಡ್ರು ನಮನ್ನ ಸುಮ್ನೆ ಬಿಟ್ಟಾರೆ? ಸಿಗಿದು ತೋರಣ ಕಟ್ಟಿಸ್ತಾರಲ್ಲ ನಮ್ಮನ್ನೆಲ್ಲ!….” ಎಂದು ತನ್ನ ಭೀತಿಯನ್ನು ತೋಡಿಕೊಂಡಾಗ ಸೇಸಿ “ಹೆಗ್ಗಡೇರು ಹೇಳಿದಾರೆ, ನಾನೆಲ್ಲ ನೋಡಿಕೊಳ್ತೀನಿ ಅಂತಾ. ನಮಗೇನು ಹೆದರಿಕೆ? ಸುಮ್ಮನೀರು. ಅಷ್ಟರಮ್ಯಾಲೆ, ನಮ್ಮನ್ನೆಲ್ಲ ಹೊಡೆಸ್ತಾರೆ ಅಂತಾ ಕಂಡ್ರೆ, ಆ ಊರನ್ನೆ ಬಿಟ್ಟು ಇಲ್ಲಿಗೇ ಬಂದರಾಯ್ತು.” ಎಂದು ಸಮಾಧಾನ ಹೇಳಿ ಧೈರ್ಯ ಕೊಟ್ಟಿದ್ದಳು. ಸೇಸಿಗೂ ಗೊತ್ತಿತ್ತು, ಒಂದು ವೇಳೆ ತಿಮ್ಮಿಯನ್ನು ಹಿಂದಕ್ಕೆ ಕರೆದುಕೊಂಡು ಹೋಗಿದ್ದರೂ ಏನೇನು ದುರಂತ ನಡೆಯಬಹುದಿತ್ತು ಎಂದು: ತಮ್ಮೆಲ್ಲರ ಇಷ್ಟಕ್ಕೆ ವಿರುದ್ದವಾಗಿ, ಹೆಣ್ಣಿನ ಇಚ್ಛೆಯನ್ನೂ ನಿರ್ದಯವಾಗಿ ತುಳಿದು, ತನ್ನ ಮಗಳನ್ನು ಆ ಬಚ್ಚನ ಕೊರಳಿಗೆ ಕಟ್ಟಿ ಬಿಡುತ್ತಾರೆ ಎಂದು.
ಆದ್ದರಿಂದ ದೇವರೆ ತಮ್ಮನ್ನು ಪಾರುಮಾಡಿದ ಎಂದುಕೊಂಡು ಸೇಸಿ ಮಗಳ ಮದುವೆಯಲ್ಲಿ ಮನಃಪೂರ್ವಕವಾಗಿ ಭಾಗವಹಿದಳು. ತಾನು ಗುಟ್ಟಾಗಿ ತಂದಿದ್ದ ಬೆಟ್ಟಳ್ಳಿಗೌಡರ ‘ನಗದ ಗಂಟಿ’ನಿಂದ ಒಂದೆರಡು ಆಭರಣಗಳನ್ನೂ ತೆಗೆದು, ಮದುವಣಗಿತ್ತಿಗೆ ತೊಡಿಸಿ, ನೋಡಿ, ಹೆಮ್ಮೆಯಿಂದ ಸೊಗಸಿದ್ದಳು!
* * *
ಎರಡು ಮೂರು ದಿನಗಳಾದರೂ ಸೇಸಿಯಾಗಲಿ ಪುಟ್ಟಬೀರನಾಗಲಿ ಹಿಂತಿರಿಗದಿದ್ದುದನ್ನು ನೋಡಿ ದೊಡ್ಡಬೀರನಿಗೆ ಕಳವಳವಾಯಿತು. ಬಚ್ಚನನ್ನು ಕರೆದು, ತನ್ನ ಹೆಂಡತಿಯನ್ನೂ ಕಿರಿಯ ಮಗಳನ್ನೂ ಅವನಿದಿರಿನಲ್ಲಿಯೆ ಬಾಯಿಗೆ ಬಂದಂತೆ ಬಯ್ದು, ಇನ್ನೊಂದು ದಿನದೊಳಗೆ ಯಾರೂ ಬರದಿದ್ದರೆ ತಾನೆ ಹೋಗಿ ಬರುವುದಾಗಿ ಗೌಡರಿಗೆ ತಿಳಿಸುವಂತೆ ಹೇಳಿದನು. ಆದರೆ ಬಚ್ಚನಿಗಾಗಲೆ ಗಾಳಿಸುದ್ದಿ ತಲುಪಿತ್ತು. ಅದನ್ನು ದೇವಯ್ಯಗೌಡರಿಗೆ ಹೇಳಿಯೂ ಇದ್ದನು. ಆದ್ದರಿಂದಲೆ ಆ ದಿನವೆ ಸಂಜೆ ಪುಟ್ಟಬೀರನೊಬ್ಬನೆ ಹಿಂತಿರುಗಿ, ತಂಗಿಗೆ ಗುತ್ತಿಯೊಡನೆ ಮದುವೆಯಾಗಿ ಹೋಯಿತೆಂದೂ, ತಾನೂ ತಾಯಿಯೂ ಎಷ್ಟು ಹೇಳಿದರೂ ಕೇಳಲಿಲ್ಲವೆಂದೂ, ಸಿಂಬಾವಿ ಹೆಗ್ಗಡೆಯವರೆ ಖುದ್ದು ನಿಂತು ಲಗ್ನ ಮಾಡಿಸಿದರೆಂದೂ, ಗೌಡರಿಗೆ ವರದಿಯೊಪ್ಪಿಸಿದಾಗ ಅದು ಅವರಿಗೆ ಹೊಸವಾರ್ತೆಯಾಗಿರಲಿಲ್ಲ.
ಕಲ್ಲಯ್ಯಗೌಡರಿಗೆ ಸಿಟ್ಟು ನೆತ್ತಿಗೇರಿತು. ತಮಗೆ ಸೇರಿದ ಹೆಣ್ಣಾಳೊಂದನ್ನು ಅವರ ಆಳೊಬ್ಬನು ಹಾರಿಸಿಕೊಂಡು ಹೀಗಿದ್ದಾನೆಂದೂ ಅವಳನ್ನು ಒಡನೆಯೆ ಕಳಿಸಿಕೊಡಬೇಕೆಂದೂ ಕಾಗದ ಬರೆದು ಕಳಿಸಿದರು. ಅದಕ್ಕೆ ಉತ್ತರವಾಗಿ ಸಿಂಬಾವಿ ಹೆಗ್ಗಡೆಯವರು, ಕಾಗದ ಬರೆದು ಕಳಿಸಿದರು. ಅದಕ್ಕೆ ಉತ್ತರವಾಗಿ ಸಿಂಬಾವಿ ಹೆಗ್ಗಡೆಯವರು, ನಡೆದ ಅವಿವೇಕಕ್ಕೆ ತಮ್ಮ ವಿಷಾದವನ್ನು ವ್ಯಕ್ತಪಡಿಸಿ, ತಾವು ವಿಚಾರಿಸಿದ್ದಲ್ಲಿ ಆ ಗಂಡು ಹೆಣ್ಣುಗಳಿಗೆ ಆಗಲೆ ಮದುವೆ ನಡೆದುಹೋಗಿದೆಯೆಂದೂ, ಹೆಣ್ಣು ಮತ್ತು ಹೆಣ್ಣಿನ ತಾಯಿ, ಅಣ್ಣ ಎಲ್ಲರೂ ಒಪ್ಪಿಯೆ ಮದುವೆಯಾಗಿರುವುದರಿಂದ ಅದರಲ್ಲಿ ಯಾವ ಜುಲುಮ್ಮಿನ ಅಂಶವೂ ಕಾಣಿಸುತ್ತಿಲ್ಲವೆಂದೂ ಉತ್ತರ ಬರೆದರು: ಬೆಂಕಿ ಆರಿಸಲೆಂದು ತುಪ್ಪ ಹೊಯ್ದಂತಾಯಿತು!
ಉಪಾಯದಿಂದಾಗಲಿ ಬಲಪ್ರಯೋಗದಿಂದಾಗಲಿ ತಮ್ಮ ಜೀತದವಳಾಗಿ ಯಮಗೆ ಸೇರಿರುವ ತಮ್ಮ ಕೇರಿಯ ಹುಡುಗಿಯನ್ನು ಕರೆತಂದೋ ಎಳೆತಂದೋ ಬಚ್ಚನಿಗೆ ಮದುವೆ ಮಾಡಿಸಿಯೇ ತೀರಬೇಕೆಂದು ಕಲ್ಲಯ್ಯಗೌಡರು ಹಠಪ್ರತಿಜ್ಞೆ ಮಾಡಿಕೊಂಡರು. ಆದರೆ ತಮ್ಮ ಮನಸ್ಸಿನ ಗುಟ್ಟನ್ನು ಹೊರಗೆ ಹಾಕಲಿಲ್ಲ. ಸಮಯ ಕಾದು ಕೆಲಸ ಮಾಡಲು ನಿರ್ಧರಿಸಿದರು.
ಆ ಹುನಾರಿನ ಅಂಗವಾಗಿ ಸಿಂಬಾವಿ ಹೆಗ್ಗಡೆಯವರಿಗೆ ಒಂದು ಕಾಗದ ಬರೆದರು: ಆದದ್ದು ಆಗಿಹೋಯಿತು. ಆದರೆ ನಮ್ಮ ಹೊಲಗೇರಿಯ ಹೆಣ್ಣಿಗೆ ಬದಲಾಗಿ ನಿಮ್ಮ ಹೊಲಗೇರಿಯಿಂದ ಒಂದು ಹೆಣ್ಣನ್ನು ನಮ್ಮ ಕೇರಿಯ ಆಳುಹುಡುಗನೊಬ್ಬನಿಗೆ ತಂದುಕೊಳ್ಳುವ ಇಚ್ಛೆ ಇದೆ. ನಿಮ್ಮ ಆಳುಹುಡುಗ ಹಾರಿಸಿಕೊಂಡು ಹೋದ ದೊಡ್ಡಬೀರನ ಮಗಳನ್ನು ಈ ಹುಡುಗನಿಗೆ ಲಗ್ನ ಮಾಡಲು ಎಲ್ಲ ಏರ್ಪಾಡು ಆಗಿತ್ತು. ಆದ್ದರಿಂದ ಆ ವಿಚಾರದಲ್ಲಿ ನಮಗೆ ಆದಷ್ಟು ಬೇಗನೆ ಸಹಾಯ ಮಾಡುವಿರೆಂದು ನಂಬಿದ್ದೇನೆ – ಎಂದು.
ಇದರ ಮಧ್ಯೆ ಕಲ್ಲಯ್ಯಗೌಡರು ಮದುಮಗಳಿಗೆ ತೊಡಿಸಲೆಂದು ತಾವು ಕೊಟ್ಟಿದ್ದ ನಗಗಳನ್ನು ಹಿಂತಿರುಗಿಸುವಂತೆ ದೊಡ್ಡಬೀರನನ್ನು ಕೇಳಿದರು. ತಿಮ್ಮಿ ಕಾಣೆಯಾದ ಮೇಲೆ ತನ್ನ ಹೆಂಡತಿ ಸೇಸಿ ಆ ನಗದ ಗಂಟನ್ನು ತನಗೆ ತೋರಿಸಿ ಇಟ್ಟಿದ್ದು ನೆನಪಿಗೆ ಬಂದರೂ ದೊಡ್ಡಬೀರ ಆ ನಗವೆಲ್ಲ ಮಗಳ ಮೈಮೇಲೆಯೆ ಇತ್ತೆಂದೂ ಅವಳು ಓಡಿಹೋಗುವಾಗ ಅವನ್ನೂ ತೆಗೆದುಕೊಂಡೇ ಹೋಗಿದ್ದಾಳೆಂದೂ ಹೇಳಿಬಿಟ್ಟನು. ಆ ಆಭರಣಗಳನ್ನೆಲ್ಲ ಕಳುಹಿಸಿಕೊಡಿ ಎಂದು ಸಿಂಬಾವಿ ಹೆಗ್ಗಡೆಯವರಿಗೆ ಬರೆದ ಕಾಗದಕ್ಕೆ ಅವರು, ಆ ನಗಗಳನ್ನೆಲ್ಲ ಗಂಟುಕಟ್ಟಿ ಬಿಡಾರದಲ್ಲಿಯೆ ಬಿಟ್ಟು ಬಂದುದಾಗಿ ಹುಡುಗಿ ಹೇಳುತ್ತಾಳೆಂದೂ ಇಲ್ಲಿ ಅವಳ ಬಿಡಾರವನ್ನೆಲ್ಲ ಸೋಸಿ ನೋಡಿದರೂ ಒಂದೂ ನಗ ಕಾಣಿಸಲಿಲ್ಲವೆಂದೂ ಉತ್ತರ ಬರೆದರು. ಕಲ್ಲಯ್ಯಗೌಡರು ಮೇಗರವಳ್ಳಿಯ ವಸೂಲಿಸಾಬರ ಗುಂಪನ್ನು ಗುಟ್ಟಾಗಿ ಕರೆಯಿಸಿ, ಅವರಿಗೆ ಹೇಳಬೇಕಾದುದನ್ನೆಲ್ಲ ಹೇಳಿದರು. ದೊಡ್ಡಬೀರನನ್ನೂ ಕರೆದು ಸಾಮ ದಾನ ಭೇದ ದಂಡೋಪಾಯಗಳೆಲ್ಲವನ್ನೂ ಅವನ ಮುಂದಿಟ್ಟು, ವಸೂಲಿ ಸಾಬರನ್ನು ಅವನಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಅವನೇನಾದರೂ ತಾವು ಹೇಳಿದಂತೆ ಮಾಡಲು ಹಿಂಜರಿದರೆ, ಮೋಸಮಾಡುವ ಸೂಚನೆ ಏನಾದರೂ ಕಂಡುಬಂದರೆ, ಅವನ ಕೈಗೆ ಕೋಳಹಾಕಿಸಿ, ಮೈ ಮುರಿಯುವಂತೆ ಲಾಕಪ್ಪಿನಲ್ಲಿ ಹೊಡೆಯಿಸಿ, ಜೈಲಿನಲ್ಲಿಯೆ ಸಾಯುವಂತೆ ಮಾಡುವುದಾಗಿಯೂ ಬೆದರಿಕೆ ಹಾಕಿದರು.
* * *
ಕಲ್ಲೂರು ಸಾಹುಕಾರ ಮಂಜಭಟ್ಟರು ತುರುತ್ತಾಗಿ ಬಂದು ತಮ್ಮನ್ನು ಕಾಣಬೇಕೆಂದು ಸಿಂಬಾವಿ ಭರಮೈ ಹೆಗ್ಗಡೆಯವರಿಗೆ ಹೇಳಿ ಕಳಿಸಿದ್ದರು. ಬ್ರಾಹ್ಮಣರನ್ನು ಅವರ ಮನೆಯಲ್ಲಿಯೆ ನೋಡಹೋಗುವ ನಿಮಿತ್ತ ಭರಮೈಹೆಗ್ಗಡೆಯವರು ಮಿಂದು, ಆದಷ್ಟು ಮಡಿಯಾದ ಬಟ್ಟೆ ಹಾಕಿಕೊಂಡು ಹೊರಟರು ಕಲ್ಲೂರಿಗೆ, ಭಟ್ಟರು ಕಳುಹಿಸಿದ್ದ ಆಳಿನೊಡನೆ. ಸೀತೂರು ಗುಡ್ಡವನ್ನು ಹತ್ತಿಳಿದು. ಲಕ್ಕುಂದವನ್ನು ದಾಟಿ, ದಟ್ಟಗಾಡಿನ ಹಳುವಿಡಿದ ಕಾಲುದಾರಿಯಲ್ಲಿ ಹೋಗುತ್ತಿದ್ದಾಗ ಎದುರಾಗಿ ಬರುತ್ತಿದ್ದ ಬೆಟ್ಟಳ್ಳಿ ಹೊಲೆಯರ ಗುಂಪು ಕಾಣಿಸಿತು: ದೊಡ್ಡಬೀರ, ಸಣ್ಣಬೀರ ಮತ್ತು ಅವನ ಹೆಂಡತಿ ಚಿಕ್ಕಪುಟ್ಟಿ. ಹೊಟ್ಟೆಲಕ್ಕಿ (ಸಣ್ಣಬೀರನ ಹೆಂಡತಿ) ಚಿಕ್ಕಪುಟ್ಟಿಯೊಡನೆ ಹೋಗಲು ಒಪ್ಪದೆ ಹಿಂದೆಯೆ ಉಳಿದಿದ್ದರು. ರೂಢಿಯಂತೆ ಗಂಡಸರೆಲ್ಲರೂ ನೆಲಮುಟ್ಟಿ ನಮಸ್ಕಾರ ಮಾಡಿ, ಅರುಗಾಗಿ ನಿಂತರು; ಹೆಂಗಸು ಹಳುವಿನಲ್ಲಿ ಮರೆಯಾಗಿ ನಿಂತಳು.
“ಎಲ್ಲಿಗ್ರೋ? ಎಲ್ಲ ಗುಂಪುಕಟ್ಟಿಕೊಂಡು ಹೊರಟೀರಲ್ಲಾ! ಅಪ್ಪಾ ಮಕ್ಕಳು?” ಹೆಗ್ಗಡೆಯವರು ಅಧಿಕಾರವಾಣಿಯಲ್ಲಿ ಕೇಳಿದರು.
“ಅಳಿಯ – ಮಗಳನ್ನೂ ಕರಕೊಂಡು ಹೋಗಾನ ಅಂತ ನೆಂಟರ ಮನೆಗೆ ಹೋಗ್ತಾ ಇದ್ದೀವಿ, ಒಡೆಯಾ!” ಸೊಂಟಬಾಗಿ ಕೈಮುಗಿದು ವಿನಯದಿಂದ ಉತ್ತರಿಸಿದ ದೊಡ್ಡಬೀರ.
“ನಿಮ್ಮ ಗೌಡರು ಹೇಳಿ ಕಳಿಸಿದಾರೇನೋ?” ಹೆಗ್ಗಡೆಯವರ ಪ್ರಶ್ನೆ ಅರ್ಥಗರ್ಭಿತವಾಗಿತ್ತು.
“ಇಲ್ಲ, ಅಯ್ಯಾ. ಲಗ್ನ ಆದ ಹುಡುಗೀನ ತವರು ಮನೆಗೆ ಕರಕೊಂಡು ಹೋಗಾನ ಅಂತಾ….”
“ಕರಕೊಂಡು ಹೋಗಿ….”
“ನಾಕು ದಿನ ಇಟ್ಟುಕೊಂಡು ಕಳಿಸ್ತೀನಿ.”
“ನೀನೇನು ಆ ಹುಡುಗೀನ ಬಲಾತ್ಕಾರವಾಗಿ ಇನ್ಯಾರಿಗೊ ಕೊಡಾಕೆ ಮಾಡಿದ್ಯಂತೆ?”
“ನಮ್ಮ ದೊಡ್ಡಗೌಡರ ಅಪ್ಪಣೆ ಏನೊ ಆಗಿತ್ತು….” ಸ್ವಲ್ಪ ತಡೆದೂ ತಡೆದೂ ದೊಡ್ಡಬೀರ ಮುಂದುವರಿದನು. “ಆದರೆ…. ನಮಗ್ಯಾರಿಗೂ…. ಅಷ್ಟೇನೂ…. ಮನಸ್ಸಿರಲಿಲ್ಲ…. ಈಗ ಆಗಿದ್ದೆಲ್ಲ ಒಳ್ಳೇದ್ಕೇ ಆಯ್ತಲ್ಲ!….”  ಎಂದು ಹಲ್ಲು ಬಿಟ್ಟು ನಕ್ಕು, ತನ್ನ ಸಮ್ಮತಿಯನ್ನೂ ಸಂತೋಷವನ್ನೂ ಹೆಗ್ಗಡೆಯವರಿಗೆ ಮನದಟ್ಟಾಗುವಂತೆ ಸೂಚಿಸಿದನು.
“ಆಗ್ಲಿ ಹೋಗೋ…. ಆದರೆ ಗುತ್ತೀನ ಮಾತ್ರ ಈಗ ಕರಕೊಂಡು ಹೋಗಬ್ಯಾಡ…. ಗದ್ದೆ ಕೆಲಸ ಸುರುವಾಗ್ಯದೆ” ಎಂದು ಎಚ್ಚರಿಕೆ ಹೇಳಿ, ಹೆಗ್ಗಡೆ ಮುಂದೆ ನಡೆದು ಹಳುವಿನಲ್ಲಿ ಮರೆಯಾದರು.
* * *
ಭರಮೈಹೆಗ್ಗಡೆಯವರು ತಮ್ಮ ಸಾಧಾರಣ ಮನಃಸ್ಥಿತಿಯಲ್ಲಿ ಇದ್ದಿದ್ದರೆ ದೊಡ್ಬೀರನನ್ನು ಅಷ್ಟು ಸುಲಭದಲ್ಲಿ ಅಷ್ಟು ಶೀಘ್ರವಾಗಿ ಬಿಟ್ಟು ಹೋಗುತ್ತಿರಲಿಲ್ಲ. ಅಷ್ಟು ಹೊಟ್ಟೆಯಡಿಯಾಗಿ ಅಡ್ಡಬಿದ್ದರೂ, ಕೈಮುಗಿದುಕೊಂಡೆ ಸೊಂಟಬಾಗಿ ಭಯಭಕ್ತಿಗಳಿಂದ ಮಾತನಾಡಿದ್ದರೂ ಅವನನ್ನು ಅಷ್ಟು ಸರಳವಾಗಿ ನಂಬುತ್ತಲೂ ಇರಲಿಲ್ಲ. ತಾವು ಕೈಕೊಳ್ಳಬೇಕಾದ ಮುಂಜಾಗ್ರತೆಯ ಕಾರ್ಯಕ್ರಮಗಳನ್ನು ಕೈಕೊಳ್ಳದೆ ಬಿಡುತ್ತಿರಲಿಲ್ಲ. ಆದರೆ ಅವರು ಅಂದು ಒಂದು ಅಸಾಧರಣ ಮನಃಸ್ಥಿತಿಯಲ್ಲಿದ್ದರು.
ಹೂವಳ್ಳಿ ವೆಂಕಪ್ಪನಾಯಕರ ಮಗಳನ್ನು, ತಾವು ಕೇಳುವುದೆ ತಡ, ಅನುಗ್ರಹ ಮಾಡಿದಂತಾಯಿತೆಂದು ದುಂಬಾಲು ಬಿದ್ದು ತಮಗೆ ಕೊಟ್ಟುಬಿಡುತ್ತಾರೆ ಎಂದು ಭಾವಿಸಿದ್ದರು ಸಿಂಬಾವಿ ಭರಮೈಹೆಗ್ಗಡೆ. ವೆಂಕಟಣ್ಣನಂತಹ ಬಡವ ಮತ್ತು ಸಾಲಗಾರ, ಅವನ ಮನೆತನದ ಹಿಂದಿನ ದೊಡ್ಡಸ್ತಿಕೆ ಏನೆ ಆಗಿರಲಿ, ತಮ್ಮಂತಹ ಸಿರಿವಂತರೂ ಜಮೀನುದಾರರೂ ಬಯಸಿದ್ದಾರೆಂದು ಗೊತ್ತಾದರೆ, ತನ್ನ ಮಗಳನ್ನು ಮದುವೆ ಮಾಡಿಕೊಡಲು ಎಂದಾದರೂ ಹಿಂದೆ ಮುಂದೆ ನೋಡುತ್ತಾನೆಯೆ? ಅಲ್ಲದೆ, ತೆರ ಕೊಡುವ ದೃಷ್ಟಯಿಂದಲಾದರೂ ತನಗಿಂತಲೂ ಹೆಚ್ಚು ಕೊಡುವವರು ಯಾರಾದರೂ ಇದ್ದರೆಯೆ? – ಎಂಬುದು ಅವತ ಠೀವಿಯಾಗಿತ್ತು.
ಆದರೆ ಭರಮೈಹೆಗ್ಗಡೆಯವರ ಹೆಂಡತಿ ಜಟ್ಟಮ್ಮ ಹೆಗ್ಗಡಿತಿಯವರು ಮಧ್ಯಸ್ಥಗಾರರ ಮುಖಾಂತರ ಆ ಪ್ರಸ್ತಾಪವೆತ್ತಿದಾಗ ಹೂವಳ್ಳಿ ವೆಂಕಟಣ್ಣ ಏನೇನೊ ಸಬೂಬು ಹೇಳಿ ನುಣುಚಿಕೊಂಡಿದ್ದನು. ಅವನು ಕೊಟ್ಟಿದ್ದ ಮುಖ್ಯ ಕಾರಣ, ಹುಡುಗಿಯ ಅಜ್ಜಿಗೆ ಇಷ್ಟವಿಲ್ಲ ಎಂದು. ಕೋಣೂರು ಮುಕುಂದಯ್ಯ ತನ್ನನ್ನು ಒಂದು ದಿನ ಗುಟ್ಟಾಗಿ ಸಂಧಿಸಿ, ತನ್ನ ಮಗಳು ಚಿನ್ನಮ್ಮನನ್ನು ರೋಗಿಷ್ಠನೂ, ವಯಸ್ಸಾದವನೂ, ಮೊದಲ ಹೆಂಡತಿ ಇನ್ನೂ ಬದುಕಿರುವವನೂ ಆಗಿರುವ ಸಿಂಬಾವಿ ಹೆಗ್ಗಡೆಗೆ ಖಂಡಿತ ಕೊಡಬಾರದೆಂದು ಪ್ರಕಟವಾಗಿಯೂ, ತನಗೂ ಚಿನ್ನಮ್ಮಗೂ ಚಿಕ್ಕಂದಿನಿಂದಲೂ ಪರಸ್ಪರ ಅನುರಾಗವಿದ್ದು ಒಬ್ಬರನ್ನೊಬ್ಬರು ಒಪ್ಪಿರುವುದರಿಂದ ಆಕೆಯ ಮತ್ತು ತನ್ನ ಇಬ್ಬರ ಸುಖವೂ ಆಕೆಯನ್ನು ತನಗೇ ಕೊಟ್ಟು ಮದುವೆ ಮಾಡುವುದರಿಂದ ಸಾಧಿತವಾಗುತ್ತದೆ ಎಂದು ಇಂಗಿತವಾಗಿಯೂ, ಸೂಚಿಸಿದ್ದ ಏಕಾಂತ ವಿಷಯವನ್ನು ಮಾತ್ರ ವೆಂಕಟಣ್ಣ ಯಾರೊಡನೆಯೂ ಹೇಳಿರಲಿಲ್ಲ. ಆದರೂ ಅದು, ಚಿನ್ನಮ್ಮನ ಮೇಲೆ ಮುಕುಂದಯ್ಯನಿಗಿದ್ದ ಮನಸ್ಸು, ಅಷ್ಟೇನೂ ರಹಸ್ಯವಿಷಯವಾಗಿ ಉಳಿದಿರಲಿಲ್ಲ. ಆ ಸುದ್ದಿಗಾಳಿ ಭರಮೈ ಹೆಗ್ಗಡೆಯ ಕಿವಿಗೂ ಬೀಸಿತ್ತು.
ಗುಣದಿಂದ ಗೆಲ್ಲಲಾದುದನ್ನು ಹಣದಿಂದ ಗೆಲ್ಲಲಾರೆನೆ? ಎಂಬ ಹಠದಿಂದ ಭರಮೈ ಹೆಗ್ಗಡೆ ಬೇರೆಯ ದಾರಿ ಹಿಡಿದಿದ್ದರು, ಚಿನ್ನಮ್ಮನ ತಂದೆಯನ್ನು ದಣಿಸಿ, ಸೋಲಿಸಿ, ವಶಪಡಿಸಿಕೊಳ್ಳಲು. ಆ ವಿಚಾರವಾಗಿ ಕಲ್ಲೂರು ಸಾಹುಕಾರರಿಗೂ ಕಿವಿಮಾತು ಹೇಳಿ, ಅವರನ್ನೂ ಒಳಗೆ ಹಾಕಿಕೊಂಡಿದ್ದರು.
ಹೂವಳ್ಳಿಯ ಅಂಗಳದಲ್ಲಿ ಎದ್ದು ಓಡುವ ಭರದಲ್ಲಿ ಮುಂಡಿಗೆಗೆ ಹಾಯ್ದು, ಪೆಟ್ಟಾಗಿ, ಹಣೆಯೊಡೆದು, ರಕ್ತಸೋರಿ, ಅವಮಾನಿತನಾಗಿ ಹಿಂತಿರುಗಿದ ಲುಂಗೀಸಾಬು ಕಲ್ಲೂರು ಸಾಹುಕಾರರು ಮಂಜಭಟ್ಟರ ಕರಣಿಕರಾಗಿದ್ದ ಕಿಟ್ಟೈತಾಳರ ಮೂಖಾಂತರ ಸಾಹುಕಾರರ ಕಿವಿಯಲ್ಲಿ ಹೂವಳ್ಳಿ ವೆಂಕಪ್ಪನಾಯಕರ ಮೇಲೆ, ತನಗಾಗಿದ್ದ ಅವಮಾನಕ್ಕೆ ರಚ್ಚು ತೀರಿಸಿಕೊಳ್ಳುವ ಸಲುವಾಗಿ, ವಿಷವನ್ನೆ ಕಾರಿದ್ದನು: “ಆ ಕಟ್ಟೈತಾಳ ನನಗೆ ಗೊತ್ತಿಲ್ಲೇನೋ? ಹಾದರಗಿತ್ತಿ ಹೆಂಡತೀನೆ ಆಳಲಾರದೆ ಸಾಹುಕಾರರ ಮಗಗೆ ಗುತ್ತಿಗೆ ಕೊಟ್ಟಾಂವ, ಅಂವ ನನ್ನ – ಟ ಹರಿಯೋದು ಅಷ್ಟರೊಳಗೆ ಇದೆ!” “ನಿನ್ನ ಸಾಹುಕಾರ ಮಂಜಭಟ್ಟನನ್ನೂ ನಾ ಬಲ್ಲೆ, ಬಿಡು; ಜುಗ್ಗ! ಹೇಲಿನಾಗೆ ಬಿದ್ದ ಕಾಸ್ನೂ ನಾಲಿಗೇಲಿ ನೆಕ್ಕೊಳ್ತಾನೆ!” “ಹಡಬೇತಿರುಗೋ ಮಗನ್ನ ಸರಿಮಾಡಲಾರದೆ, ಆ ಬಡ ಸೊಸೇನ, ಮಾವನೂ ಅತ್ತೇನೂ ಸೇರಿಕೊಂಡು, ಕಾಲು ತಿರುಪಿ ಹೆಳವ ಮಾಡಿದಾರಲ್ಲಾ ಹಾಂಗಲ್ಲ…. ನನ್ನ ಸುದ್ದಿ ಬಂದರೆ, ಅವನ ಜನಿವಾರ ಹರಿದು ಅವನ ಹೆಂಡ್ತೀನಾ….” ಇಂತಹ ಬೈಗುಳವನ್ನೆಲ್ಲ ಸ್ಪಷ್ಟನೆ ಮಾಡಿ, ವೆಂಕಪ್ಪನಾಯಕರ ಮೇಲೆ ಹೇರಿ, ಕಿಟ್ಟೈತಾಳರನ್ನೂ ಮಂಜಭಟ್ಟರನ್ನೂ ಮೆಟ್ಟಿದ ಘಟಸರ್ಪಗಳನ್ನಾಗಿ ಕೆಣಕಿ ಛೂ ಬಿಟ್ಟನು ಲುಂಗೀಸಾಬಿ.
ಆ ಬೈಗುಳಗಳೆಲ್ಲ ಬರಿಯ ಭಾವೋಪಯೋಗದವುಗಳಾಗಿದ್ದಿದ್ದರೆ ಬೈಸಿಕೊಂಡವರು ಅಷ್ಟೊಂದು ರೇಗುತ್ತಿದ್ದರೋ ಇಲ್ಲವೋ? ಆದರೆ ದುರದೃಷ್ಟವಶಾತ್ ಅವುಗಳಿಗೆ ಲೋಕ ಸಂವಾದವೂ ಇದ್ದುದರಿಂದ ಹಸಿಗಾಯದ ಮೇಲೆ ಬಿಸಿನೀರು ಹೊಯ್ದಹಾಗಾಗಿತ್ತು. ಕಿಟ್ಟತಾಳನ ಹೆಂಡತಿ ಹಾದರಗಿತ್ತಿ ಎಂಬುದಾಗಲಿ, ಮಂಜಭಟ್ಟರ ಪೋಲಿ ಮಗ ತನ್ನ ಸಾತ್ವಿಕ ಶೀಲದ ಹೆಂಡತಿಯನ್ನು ನಿರ್ಲಕ್ಷಿಸಿ ಐತಾಳರ ಹೆಂಡತಿಯೊಡನೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬುದಾಗಲಿ, ಮಂಜಭಟ್ಟರೂ ಅವರ ಹೆಂಡತಿಯೂ ಸೇರಿ ಸೊಸೆಯ ಕಾಲು ಮುರಿದಿದ್ದಾರೆ ಎಂಬುದಾಗಲಿ – ವೆಂಕಟಪ್ಪನಾಯಕರಿಗೆ ಗೊತ್ತಿದ್ದ ವಿಷಯಗಳಾಗಿರಲಿಲ್ಲ; ಅವೆಲ್ಲ ಹೊಕ್ಕು ಬಳಸುತ್ತಿದ್ದ ಲುಂಗೀಸಾಬುವಂತಹರಿಗೆ ಮಾತ್ರ  ತಿಳಿದಿದ್ದ ಗುಟ್ಟುಗಳಾಗಿದ್ದುವು. ಆ ಅಂತಃಪುರದ ಅಂತರಂಗದ ರಹಸ್ಯಗಳನ್ನೆಲ್ಲ ಬಯಲಿಗೆಳೆದುದಕ್ಕಾಗಿ ವೆಂಕಟಪ್ಪನಾಯಕರ ಮೇಲೆ ಸೇಡು ತೀರಿಸಿಕೊಳ್ಳಲು ಉಗ್ರಕ್ರಮ ಕೈಗೊಳ್ಳಲು ನಿಶ್ಚಯಿಸಿದರು, ಭಟ್ಟರು ಮತ್ತು ಅವರ ಕರಣಿಕರು.
ಪರಿಣಾಮವಾಗಿ, ಒಂದು ದಿನ ಹೊತ್ತಾರೆ ಗಟ್ಟದಾಳೊಬ್ಬನು ಓಡೋಡಿ ಬಂದು ಹೂವಳ್ಳಿ ವೆಂಕಟಣ್ಣನಿಗೆ ಹೇಳಿದ, “ನಿಮ್ಮ ಗದ್ದೆಯನ್ನು ಯಾರೊ ಹತ್ತಿಪ್ಪತ್ತು ಜನರು ಎತ್ತು ನೇಗಿಲುಗಳೊಡನೆ ಬಂದು ಉಳತೊಡಗಿದ್ದಾರೆ” ಎಂದು.
ವೆಂಕಟಣ್ಣ ಹೋಗಿ ನೋಡುತ್ತಾನೆ: ಕಲ್ಲೂರು ಸಾಹುಕಾರ ಮಂಜಭಟ್ಟರ ಕರಣಿಕರಾಗಿದ್ದ ಕಿಟ್ಟೈತಾಳರೆ ಖುದ್ದು ನಿಂತು, ತನಗೆ ಸೇರಿದ್ದ ಗದ್ದೆಯನ್ನು ಸಾಗುವಳಿ ಮಾಡಲು ತೊಡಗಿದ್ದಾರೆ! “ಏನು? ಏಕೆ?” ಎಂದು ಕೇಳಿದ್ದಕ್ಕೆ, “ಸಾಹುಕಾರರ ಅಪ್ಪಣೆಯಾಗಿದೆ, ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ. ನೀವು ಏನು ಹೇಳಿಕೊಳ್ಳುದಿದ್ದರೂ ಅವರ ಹತ್ತಿರವೆ ಹೋಗಿ ಹೇಳಿಕೊಳ್ಳಿ” ಎಂದುಬಿಟ್ಟರು. ಮಾತಿಗೆ ಮಾತು ಮಸೆಯಿತು. ಊಳುವುದನ್ನು ತಡೆಯಲು ಹೋಗಿ, ಎತ್ತಿನ ಮೂಗುದಾರವನ್ನು ಹಿಡಿದು ನಿಲ್ಲಿಸಿದ ವೆಂಟಣ್ಣನನ್ನು ಲುಂಗೀಸಾಬು, ಇಜಾರದಸಾಬು, ಅಜ್ಜೀಸಾಬು ಮೂವರೂ ಸೇರಿ ಇತರ ಆಳುಗಳ ಬೆಂಬಲದೊಡನೆ ಹೊಡೆದು ಗದ್ದೆಯಿಂದಾಚೆಗೆ ನೂಕಿದರು. ಹೊಡೆದಾಟದಲ್ಲಿ ಎರಡು ಕಡೆಯವರಿಗೂ ಪೆಟ್ಟು ಬಿದ್ದು ನೆತ್ತರು ಸೋರಿತು. ಆ ದೊಂಬಿಯ ವಾರ್ತೆ ಕೋಣೂರು ರಂಗಪ್ಪಗೌಡರಿಗೆ ತಲುಪಿ, ಅವರು ಮುಕುಂದಯ್ಯನನ್ನೂ ಕರೆದುಕೊಂಡು ಕೆಲವು ಆಳುಗಳೊಡನೆ ಸ್ಥಳಕ್ಕೆ ಧಾವಿಸಿಬಂದರು.
ಎದುರುಪಕ್ಷಕ್ಕೆ ಸೇರಿದವರು ಬಹಳ ಜನ ಬಂದುದನ್ನು ಕಂಡು ನರಿಬುದ್ದಿಯ ಐತಾಳರು, ನಮಸ್ಕಾರಪೂರ್ವಕವಾಗಿ ಕೋಣೂರು ರಂಗಪ್ಪಗೌಡರನ್ನು ಸ್ವಾಗತಿಸಿ, ಅಂಧಾನ ನಡೆಸಿದರು. ಹೂವಳ್ಳಿ ವೆಂಕಟಪ್ಪನಾಯಕರು ತಮ್ಮ ಜಮೀನನ್ನೆಲ್ಲ ಕಲ್ಲೂರು ಸಾಹುಕಾರರಿಗೆ ಕ್ರಯಕ್ಕೆ ಬರೆದುಕೊಟ್ಟಿರುವುದರಿಂದ ಅವರಿಗೆ ಸೇರಿರುವ ಜಮೀನಿನ ಬೇಸಾಯಕ್ಕೆ ಅವರು ಏರ್ಪಾಡು ಮಾಡಿರುವರೆಂದೂ, ಅದರ ತೀರ್ಮಾನ ಅವರಿಗೇ ಸೇರಿದ್ದೆಂದೂ, ತಾನಾಗಲಿ ಬೇಸಾಯದ ಕೆಲಸಕ್ಕೆ ಬಂದಿರುವ ಆಳುಗಳಾಗಲಿ ಹೊಣೆಯಲ್ಲವೆಂದೂ ತಿಳಿಸಿದರು.
ರಂಗಪ್ಪಗೌಡರು ಗದ್ದೆಯಂಚಿನ ಮೇಲೆಯೆ ಸಂಬಂಧಪಟ್ಟವರೆಲ್ಲರನ್ನೂ ಕೂರಿಸಿಕೊಂಡು ಪಂಚಾಯಿತಿ ನಡೆಸಿದರು. ಅದರ ಪರಿಣಾಮವಾಗಿ ಕಿಟ್ಟೈತಾಳರು ಆಳು ಎತ್ತು ನೇಗಿಲುಗಳನ್ನೆಲ್ಲ ವಾಪಾಸು ಕಳಿಸಿ. ಇನ್ನೊಂದು ವಾರದೊಳಗಾಗಿ ವೆಂಕಟಪ್ಪನಾಯಕರು ಸಾಹುಕಾರರಲ್ಲಗೆ ಬಂದು ಯಾವುದನ್ನೂ ಇತ್ಯರ್ಥಮಾಡಿ ಕೊಳ್ಳಬೇಕೆಂದೂ, ತಡಮಾಡಿದರೆ ಮಳೆ ಹಿಡಿಯುವುದರೊಳಗೆ ಗದ್ದೆಯ ಬೇಸಾಯಕ್ಕೆ ತೊಡಗುವುದಾಗಿಯೂ ತಿಳಿಸಿ ಹಿಂದಿರುಗಿದರು. ಐತಾಳರು ಹೋದಮೇಲೆ ರಂಗಪ್ಪಗೌಡರು ವಿಚಾರಿಸಿದರು. ಹೂವಳ್ಳಿ ವೆಂಕಟಣ್ಣ ತನಗೆ ಭಟ್ಟರಲ್ಲಿದ್ದ ಸಾಲದ ಮೊತ್ತವನ್ನು ತಿಳಿಸಿ, ನಂಬಿಕೆ ಕ್ರಯ ಬರೆದುಕೊಟ್ಟಿದ್ದನ್ನು ನಿಜಕ್ರಯವೆಂದೇ ಮೋಸ ಮಾಡಿದ್ದಾರೆಂದು ಅವರನ್ನು ನಿಂದಿಸತೊಡಗಿದನು. ಭಟ್ಟರು ಸಾಹುಕಾರರಾದ ವಂಚನೆಯ ರೀತಿಗಳನ್ನು ವೆಂಕಟಣ್ಣನ ನೆನಪಿಗೆ ತಂದುಕೊಟ್ಟು ‘ಅವರ ಹತ್ತಿರ ಹೋದವರು ಅನೇಕರು ಹಾಳಾಗಿದ್ದಾರೆ. ನೀನು ಹೇಗಾದರೂ ಉಪಾಯದಿಂದ ಪಾರಾಗದಿದ್ದರೆ ನಿನ್ನ ಜಮೀನು ಉಳಿಯುವುದಿಲ್ಲ’ ಎಂದು ರಂಗಪ್ಪಗೌಡರು ಎಚ್ಚರಿಕೆ ಹೇಳಿದ್ದಕ್ಕೆ ವೆಂಕಟಣ್ಣ ನರಿನಗೆ ನಗುತ್ತಾ ಕಣ್ಣು ಮಿಂಚಿಸಿ ಹೇಳಿದನು: “ಕಾನೂನು ಪರ್ಕಾರ ಅವರು ನನ್ನ ಜಮೀನು ದಕ್ಕಿಸಿಕೊಳ್ಳಾದು ಅಷ್ಟೇನು ಸುಲಭ ಅಲ್ಲಾ! ಅವರಿಗೆ ಬರಕೊಡಾಕೆ ಮುಂಚೇನೆ ಅದರಲ್ಲಿ  ಸುಮಾರು ಪಾಲು ಗದ್ದೆ ತೋಟಾನ ಬೆಟ್ಟಳ್ಳಿ ಗೌಡರಿಗೆ, ಹಳೆಮನೆ ಹೆಗ್ಗಡೇರಿಗೆ, ಸಿಂಬಾವಿ ಹೆಗ್ಗಡೇರಿಗೆ ಎಲ್ಲ ದೀಡು, ಭೋಗ್ಯ, ಕ್ರಯ ಎಲ್ಲಾ ಮಾಡಿಟ್ಟೀನಿ!…. ಅವರಲ್ಲೂ ಹತ್ರಾನೂ ಸುಮಾರು ಸಾಲ ಅದೆ ನನಗೆ!”
ಹೊರನೋಟಕ್ಕೆ ಸ್ಥೂಲಕಾಯವಾಗಿ ಸ್ಥೂಲಮತಿಯಾಗಿ ತೋರುತ್ತಿದ್ದ ವೆಂಕಟಣ್ಣನ ದಪ್ಪಬುದ್ದಿಯ ಚಪ್ಪಡಿಬೆಪ್ಪಿನ ಅಡಿಯಲ್ಲಿ ಎಂತೆಂತಹ ವಿಷದ ಹಾವು ಚೇಳು ಮನೆಮಾಡಿ ಅಡಗಿಕೊಂಡಿವೆ ಎಂಬುದನ್ನರಿತು ರಂಗಪ್ಪಗೌಡರಿಗೂ ಮುಕುಂದಯ್ಯನಿಗೂ ಬೆರಗುಬಡಿದಂತಾಯಿತು. ‘ಈ ಮನುಷ್ಯ ಏನು ಬೇಕಾದರೂ ಮಾಡಲು ಸಿದ್ಧ!’ ಎಂದುಕೊಂಡರು ಮನಸ್ಸಿನಲ್ಲಿಯೆ. ಅವನು ಚಿನ್ನಮ್ಮನ ತಂದೆ ಎಂಬುದನ್ನು ಗ್ರಹಿಸಿದ ಮುಕುಂದಯ್ಯನ ಹೃದಯದಲ್ಲಿ ಏತಕ್ಕೊ ಏನೊ ಭೀತಿಸಂಚಾರದ ಅನುಭವವಾಯಿತು.
ಮಂಜಭಟ್ಟರ ಸಾಲಕ್ಕೆ ರಂಗಪ್ಪಗೌಡರು ಜಾಮೀನು ನಿಂತು ನಂಬಿಕೆಯ ಕ್ರಯಪತ್ರವನ್ನು ಬಿಡಿಸಿಕೊಡಬೇಕೆಂದು ವೆಂಕಟಣ್ಣ ಮುಗ್ಧಭಂಗಿಯಿಂದ ಸೂಚಿಸಲು ರಂಗಪ್ಪಗೌಡರು ಹೌಹಾರಿ “ಎಲ್ಲಾರು ಉಂಟೆ, ಮಾರಾಯ? ಹೊಳೇಲಿ ಮುಳುಗೋನ್ನ ಎತ್ತಿಕೊಂಡು ಬರ್ತಿನಿ ಅಂತಾ ಮೀಸು ಬರದ ಮೂಳ ಹೊಳೀಗೆ ಹಾರದ್ಹಂಗೆ ಆದಾತು!” ಎಂದು ನಿರಾಕರಿಸಿದರು.
ವೆಂಕಟಣ್ಣ ಮುಕುಂದಯ್ಯನ ಕಡೆ ಸಹಾಯ ಯಾಚನೆಯ ನೋಟ ಬೀರಿದಾಗ, ಅವನು ತಾನು ಅಣ್ಣನ ಅಧೀನನಾಗಿರುವುದರಿಂದ ಏನನ್ನೂ ಸ್ವತಂತ್ರಿಸಿ ಮಾಡಲಾರೆ ಎಂಬುದನ್ನು ಸೂಚಿಸುವಂತೆ ನೆಲದ ಕಡೆ ನೋಡತೊಡಗಿದ್ದನು.
ಆದಿನ ರಾತ್ರಿಯೆ ಚಿನ್ನಮ್ಮನ ಬಾಳಿನಹಣೆಬರಹ ನಿರ್ಣಯವಾದದ್ದು: ಮುಕುಂದಯ್ಯನದೂ ಕೂಡ!
ಮಂಜಭಟ್ಟರ ಮೊಸಳೆಬಾಯಿಂದ ಹೇಗೆ ತಪ್ಪಿಸಿಕೊಳ್ಳುವುದು? ಎಂದು ನಿದ್ದೆಯಿಲ್ಲದೆ ಯೋಚಿಸುತ್ತಾ ಮಲಗಿದ್ದ ವೆಂಕಟಣ್ಣನಿಗೆ ತನ್ನನ್ನು ಸದ್ಯದ ಕಷ್ಟದಿಂದ ಪಾರುಮಾಡಲು ಶಕ್ತವಾಗಿ ತೋರಿದ್ದೆಂದರೆ ಒಂದೇ ಒಂದು ದಾರಿ: ಎಷ್ಟಾದರೂ ತೆರಕೊಟ್ಟು ತನ್ನ ಮಗಳನ್ನು ಮದುವೆಯಾಗಲು ಉತ್ಸುಕರಾಗಿದ್ದ ಸಿಂಬಾವಿ ಭರಮೈಹೆಗ್ಗಡೆಯವರನ್ನೆ ಜಾಮೀನು ನಿಲ್ಲಲು ಕೇಳಿ, ಅವರು ಒಪ್ಪಿದರೆ, ಕೃತಜ್ಞತಾರೂಪವಾಗಿ ಅವರನ್ನೆ ಅಳಿಯನನ್ನಾಗಿ ಮಾಡಿಕೊಳ್ಳುವುದು!
ತಮ್ಮ ಭಾವಿ ಮಾವನ ಆ ನಿಶ್ಚಯದ ಪರಿಣಾಮವಾಗಿಯೆ, ಅಂದು ಸಿಂಬಾವಿ ಹೆಗ್ಗಡೆಯವರು ಕಲ್ಲೂರು ಮಂಜಭಟ್ಟರಲ್ಲಿಗೆ ಹೊರಟಿದ್ದರು. ಆದ್ದರಿಂದಲೆ ಅವರು ಅಸಾಧಾರಣ ಮನಸ್ಥಿತಿಯಲ್ಲಿದ್ದದ್ದು: ದೊಡ್ಡಬೀರನ ದೀರ್ಘದಂಡ ನಮಸ್ಕಾರಕ್ಕೂ ಸೊಂಟಬಾಗಿನ ಮತ್ತು ಕೈ ಮುಗಿಹದ ಮರುಳು ಮಾತಿಗೂ ಒಳಗಾಗಿ, ಮದುಮಗಳು ತಿಮ್ಮಿಯನ್ನು ಅವಳ ತವರಿಗೆ ನೆಂಟರುಪಚಾರಕ್ಕಾಗಿ ಕರೆದುಕೊಂಡು ಹೋಗಬಹುದೆಂದೂ, ಬೇಗನೆ ಗಂಡನ ಮನೆಗೆ ಹಿಂದಕ್ಕೆ ಕಳುಹಿಸಿಕೊಡಬೇಕೆಂದೂ ಹೇಳಿ, ಒಪ್ಪಿಗೆ ಕೊಟ್ಟದ್ದು!
ಹಡಬೆ ತಿರುಗುವ ಚಾಳಿಯ ಮಗನ ತಂದೆಯಾಗಿ, ಸೊಸೆ ಕಾಲನ್ನೆ ತಿರುಪಿ ಹಾಕಿದ್ದ ಸಾಹುಕಾರ ಮಂಜಭಟ್ಟರಿಗೆ ಶೂದ್ರತ್ವವೊಂದರಿಂದ ಮಾತ್ರವೆ ಬೇರೆಯಾಗಿ, ಉಳಿದುದೆಲ್ಲದರಲ್ಲಿಯೂ ತದ್ರೂಪಗುಣ ಸದೃಶರಾಗಿದ್ದ ಹೆಗ್ಗಡೆಯವರು ಅಂದು ಅವರಿಗೆ ಎಷ್ಟು ಕೃತಜ್ಞರಾಗಿದ್ದರೆಂದರೆ, ಎಳೆಹರೆಯದ ನವವಧುವಿನ ಪಾಣಿಗ್ರಹಣ ಮಾಡಿ, ಆಗಳೆಯ ಮಧುಮಂಚಕ್ಕೆ ಅವಳನ್ನೂ ಒಯ್ಯುತ್ತಿದ್ದಾರೆಯೊ ಎಂಬಂತೆ, ಮಹಾ ಉದಾರ ಮನಸ್ಕರಾಗಿದ್ದರು, ತಮ್ಮ ಎಂದಿನ ಹುಟ್ಟುಗುಣವಾದ ಕೃಪಣ ಬುದ್ದಿಯ ಜಾಗರೂಕತೆಯಿಂದಲೂ ದೂರವಾಗಿ!
*****


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ