ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-24

        ತಿಮ್ಮಿಯೊಡನೆ ಗುತ್ತಿ, ಆಗತಾನೆ ಮೈದೋರುತ್ತಿದ್ದ ಸೂರ್ಯನಾರಾಯಣನಿಗೆ ಕೈ ಮುಗಿದು, ಹುಲಿಕಲ್ಲುನೆತ್ತಿಯ ಕಾವಲು ಮಂಟಪದ ಅಡಗುದಾಣದಿಂದ, ಯಾರಿಗೂ ಗೊತ್ತಾಗದಂತೆ ಕಾಡುದಾರಿಯಲ್ಲಿಯೇ ನಡೆದು ಸಿಂಬಾವಿಯ ಹೊಲೆಗೇರಿಗೆ ಸೇರುವ ಸಲುವಾಗಿ, ಗುಡ್ಡವಿಳಿಯುತ್ತಿದ್ದ ಸಮಯದಲ್ಲಿಯೇ ಕೋಣೂರಿನ ಅದೇಗುಡ್ಡದ ಬುಡದಲ್ಲಿದ್ದ ಗಟ್ಟದವರ ಬಿಡಾರದಲ್ಲಿ ಪ್ರಣಯದ ಮತ್ತೊಂದು ವಿಕೃತಮುಖದ ದುರಂತ ಜರುಗುತ್ತಿತ್ತು.

ಹುಲಿಕಲ್ಲು ನೆತ್ತಿಗೆ ಸೂರ್ಯೋದಯವಾಗಿದ್ದರೂ ಕೋಣೂರಿನ ಗಟ್ಟದವರ ಬಿಡಾರಕ್ಕೆ ಇನ್ನೂ ಕಾಡುಗತ್ತಲೆ ಕವಿದೆ ಇತ್ತು. ಅಲ್ಲದೆ ತಿಮ್ಮಿಯ ಅಚ್ಚರಿಗೆ ಕಾರಣವಾಗಿದ್ದು ಕಣಿವೆಗಳನ್ನೆಲ್ಲ ತುಂಬಿದ್ದ ನೊರೆಯ ಕಾವಣದ ಕಡಲಿನಲ್ಲಿಯೆ ಮುಳುಗಿ ನಿಂತಿದ್ದ ಗಟ್ಟದ ತಗ್ಗಿನವರ ಜೋಪಡಿಗಳ ಸಾಲು ಮಂಜಿನ ಮಬ್ಬಿನಲ್ಲಿ ಮುಸುಗಿ ಹೋಗಿತ್ತು. ಕಲ್ಲು, ತಗಡು, ಬಿದಿರಗಣೆ, ಮಡಕೆಯ ಚೂರು ಮೊದಲಾದ ಪದಾರ್ಥಗಳ ಮೇಲೆ ಇಬ್ಬನಿ ದಟ್ಟವಾಗಿ ಕೂತು, ಮುಟ್ಟಿದರೆ ನೀರಾಗುವಂತಿತ್ತು. ಸುತ್ತಮುತ್ತಲಿದ್ದ ಎತ್ತರದ ಮರಗಳಿಂದಲೂ ಎಲೆಯ ಹನಿ ತೊಟ್ಟಿಕ್ಕುತ್ತಿತ್ತು. ಇರುಳು ಕವುಚಿಹಾಕಿದ ಬುಟ್ಟಿಗಳನ್ನು  ಎತ್ತಿದ್ದರೂ ಕೋಳಿಗಳು ಹೊರಗೆ ಹಾರಲು ತುಸು ಹಿಂದೆಮುಂದೆ ನೋಡುವಂತಿತ್ತು. ಬಿಡಾರದ ಹೊರಗೆ ಬೂದಿ ಗುಡ್ಡೆಯಲ್ಲಿಯೊ ಕಸದ ರಾಶಿಯಲ್ಲಯೊ ಮುದುರಿ ಮಲಗಿದ್ದ ಮೂಳುನಾಯಿಗಳು ಕಣ್ಣುಬಿಡಲೂ ಮನಸ್ಸಿಲ್ಲದೆ ಮಲಗಿದ್ದುವು.
ಚೀಂಕ್ರನ ಬಿಡಾರದ ಮಗ್ಗುಲಲ್ಲಿಯೆ ಇದ್ದ ಪಿಜಿಣನ ಬಿಡಾರದಲ್ಲಿ ಅವನ ಹೆಂಡತಿ ಎಚ್ಚರವಾಗಿದ್ದರೂ ಪಕ್ಕದಲ್ಲಿ ಮಲಗಿದ್ದ ಗಂಡನ ರೋತೆಯನ್ನು ನೆನೆದು ಚಿಂತಿಸುತ್ತಾ ಮಲಗಿದ್ದಳು. ಅವನಿಗಿಂತ ಒಳ್ಳೆಯ ಗಂಡ ತನಗೆ ಸಿಕ್ಕುತ್ತಿರಲಿಲ್ಲ: ಅದೇನೆಂದರೆ – ಗಂಡನ ರೋಗಿಷ್ಠತೆ. ಒಂದು ದಿನ ಕೆಲಸಕ್ಕೆ ನಾಲ್ಕು ದಿನ ಉಳಿ. ಅದಕ್ಕಿಂತಲೂ ಹೆಚ್ಚಾಗಿದ್ದ ಮೂಕವೇದನೆ ಎಂದರೆ, ಅವನಿಂದ ತನಗೆ ಗಂಡಿನಿಂದ ಹೆಣ್ಣಿಗೆ ದೊರೆಯಬೇಕಾದ ಸುಖ ಸರಿಯಾಗಿ ದೊರೆಯುತ್ತಿರಲಿಲ್ಲ ಎಂಬುದು! ಅವನು ಕೆಲಸಕ್ಕೆ ಹೋಗದೆ ಉಳಿದರೂ ಚಿಂತೆಯಿಲ್ಲ, ತಾನೆ ದುಡಿದು ತರುತ್ತಿದ್ದಳು. ಆದರೆ ಯಾರೋಡನೆಯೂ ಹೇಳಬಾರದಿದ್ದ, ಹೇಳಲಾರದಿದ್ದ, ಹೇಳಹೋದರೆ ಅವಮಾನ ನಿಂದೆ ತಿರಸ್ಕಾರಗಳಿಗೆ ತಾನೆ ಒಳಗಾಗುತ್ತಿದ್ದುದನ್ನು ನಿವಾರಿಸುವುದು ಹೇಗೆ? ಪಕ್ಕದ ಬಿಡಾರದವನು ತನ್ನ ವಿಚಾರದಲ್ಲಿ ತುಂಬಾ ಆಸಕ್ತಿ ವಹಿಸುತ್ತಾನೆ; ಆಗಾಗ್ಗೆ ಕಷ್ಟಸುಖಗಳನ್ನು ಸಹಾನುಭೂತಿಯಿಮದ ವಿಚಾರಿಸುತ್ತಾನೆ. ಅವನ ನೋಟದಲ್ಲಿ ಅಕ್ಕಣಿಗೆ ಒಮ್ಮೊಮ್ಮೆ ಏನೇನೊ ಅರ್ಥದ ಸುಳಿವು ಮಿಂಚುವಂತೆ ತೋರುತ್ತದೆ. ಆದರೆ ತಾನು ಗರತಿ: ಗಟ್ಟದೋಳಾದರೇನು? ಕೈ ಹಿಡಿದ ಗಂಡನಿಗೆ, ಅದರಲ್ಲಿಯೂ ಅವನು ತನ್ನೆಲ್ಲ ಕನಿಕರಕ್ಕೂ ಸೇವೆಗೂ ಪಾತ್ರನಾಗಬೇಕಾಗಿರುವ ಕಷ್ಟ ಪರಿಸ್ಥಿತಿಯಲ್ಲಿರುವಾಗ, ಮೋಸಮಾಡುವುದೇ?  ದ್ರೋಹ ಮಾಡುವುದೇ? ಪಕ್ಕದಲ್ಲಿ ಕಣ್ಣುಮುಚ್ಚಿ ಮಲಗಿದ್ದ ಗಂಡನನ್ನು ದಿಟ್ಟಿಸಿ ನೋಡಿ ‘ಇಲ್ಲ, ಇಲ್ಲ, ಈ ಅಕ್ಕಣಿ ಎಂದಿಗೂ ನಿನಗೆ ದ್ರೋಹಮಾಡುವುದಿಲ್ಲ’ ಎಂದು ತನ್ನ ಪ್ರಜ್ಞೆಗೆ ಪ್ರತಿಜ್ಞೆಯ ಎಚ್ಚರಿಕೆ ಕೊಟ್ಟುಕೊಂಡಳು.
ಯಾರೋ ಬಿಡಾರದ ತಟ್ಟಿಬಾಗಿಲೆಡೆಗೆ ಅವಸರವಾಗಿ ಓಡಿ ಬಂದಂತಾಯಿತು. ಅಕ್ಕಣಿ ತನ್ನ ಚಾಪೆಯ ಮೇಲೆ ಎದ್ದು ಕೂತು, ಬಾಗಿಲಕಡೆ ಕಣ್ಣಾಗಿ, ಆಲಿಸಿದಳು.
“ಅಕ್ಕಣೀ! ಅಕ್ಕಣೀ!” ತನ್ನನ್ನೇ ಕರೆಯುತ್ತಿದ್ದಾರೆ! ಯಾರು?
ದೇಯಿಯ ದನಿಯಂತೆ ಕೇಳಿಸಿತು. ಇಷ್ಟು ಹೊತ್ತಾರೆ ಅವಳೇಕೆ ಎದ್ದಿದ್ದಾಳೆ? ಇವತ್ತೊ ನಾಳೆಯೊ ಹೆರಲಿರುವ ತುಂಬು ಬಸಿರಿ? ನಿನ್ನೆ ಬೆಳಿಗ್ಗೆ ಅವಳು ತನಗೆ ಕೂಡುವುದಿಲ್ಲ ಎಂದಿದ್ದರೂ ಚೀಂಕ್ರ ಬಲಾತ್ಕಾರವಾಗಿ ಅವಳನ್ನು ಕೆಲಸಕ್ಕೆ ಎಬ್ಬಿಸಿದ್ದ. ಮಧ್ಯಾಹ್ನ ತೋಟದಿಂದ ಹಿಂದಕ್ಕೆ ಬರುವಾಗ ಅವಳಿಗೆ ನೆಟ್ಟಗೆ ನಡೆಯಲಾಗದೆ ತಾನೂ ಬಾಗಿಯೂ ರಟ್ಟೆಹಿಡಿದು ಮೆಲ್ಲಗೆ ನಡೆಸಿಕೊಂಡು ಬಂದಿದ್ದವು. ರಾತ್ರಿ ಬೇರೆ ಹೊತ್ತಾಗಿ ಕುಡಿದು ಮತ್ತೇರಿ ಬಂದಿದ್ದ ಚೀಂಕ್ರನ ಕ್ರೌರ್ಯಕ್ಕೆ ತುತ್ತಾಗಿದ್ದಳು. ನನಗೆ ಮಕ್ಕಳಾಗದ ವ್ಯಥೆ. ಅವಳಿಗೋ ಈ ವಯಸ್ಸಿಗಾಗಲೆ ಆರು ಮಕ್ಕಳಾಗಿ, ಮೂರು ಸತ್ತು, ಏಳನೆಯದನ್ನು ಹೊತ್ತಿದ್ದಾಳೆ! ಮೈಯಲ್ಲಿ ರಕ್ತವಿಲ್ಲ. ಹೊಟ್ಟೆಯೊಂದೆ ಎದ್ದುಕಾಣುತ್ತಿರುವ ಭಾಗ; ಮತ್ತೆಲ್ಲ ಎಲುಬು, ಚರ್ಮ, ಅವಳೇಕೆ ಇಷ್ಟು ಹೊತ್ತಾರೆ ಬಂದು ಕರೆಯುತ್ತಿದ್ದಾಳೆ? ಪಾಪ, ಏನು ಕಷ್ಟವೊ? ಸಂಕಟವೋ? ಎದ್ದು ಹೋಗಿ ಬಾಗಿಲು ತೆರೆದು ನೋಡುತ್ತೇನೆ.
ಅಕ್ಕಣಿ ಎದ್ದು, ಬಾಗಿಲ ಬಳಿಗೆ ಹೋಗುತ್ತಿದ್ದಾಗಲೆ ಮತ್ತೆ ಅದೇ ಧ್ವನಿ ‘ಅಕ್ಕಣೀ ಅಕ್ಕಣೀ!’
‘ಹೌದು ದೇಸಾಯದೇ ಆ ಸ್ವರ!’ ಎಂದುಕೊಂಡು ಅಕ್ಕಣಿ ಬೇಗ ಬೇಗನೆ ಬಿಗಿದಿದ್ದ ಹಗ್ಗ ಬಿಚ್ಚಿ ತಟ್ಟಿಬಾಗಿಲನ್ನು ನೂಕಿ ತೆರೆದಳು.
ಹೊರಗೆ ಯಾರೂ ಇರಲಿಲ್ಲ. ದಟ್ಟವಾಗಿ ಕವಿದಿದ್ದ ಮಂಜಿನಲ್ಲಿ ಎಲ್ಲ ಮುಚ್ಚಿ ಹೋಗಿತ್ತು. ಬಹಳ ಹತ್ತಿರ ಇದ್ದ ವಸ್ತುಗಳು ಮಾತ್ರ ಹೊಗೆ ಸುತ್ತಿದ್ದ ಹಾಗೆ ಮಸುಗು ಮಸುಗಾಗಿ ಕಾಣಿಸುತ್ತಿದ್ದುವು. ಬಹುಶಃ ಕರೆದಳು ತಾನು ಬಾಗಿಲು ತೆರೆಯುತ್ತಿದ್ದಾಗ ಬೇನೆ ತಾಳಲಾರದೆ ಮತ್ತೆ ತನ್ನ ಬಿಡಾರಕ್ಕೆ ಹೋಗಿರಬೇಕು ಎಂದು ಊಹಿಸಿ, ಅಕ್ಕಣಿ ಕವಿದಿದ್ದ ಮಂಜಿನಲ್ಲಿ ಪಕ್ಕದ ಬಿಡಾರದ ಬಾಗಿಲಿಗೆ ಹೋದಳು. ಅದರ ಬಾಗಿಲೂ ಮುಚ್ಚಿತ್ತು! ಒಳಗಡೆ ಯಾರೋ ಅಳುವ ಸದ್ದಾಗುತ್ತಿತ್ತು. ಮಕ್ಕಳಳುವ ಸದ್ದು: ಇದೇನಿದು? ಕೂಸನ್ನ ಹೆತ್ತ ದೇಯಿ ಎದ್ದುಬಂದು ಕರೆದುಹೋದಳೇ? ಅಥವಾ  ಕರೆದು ಹೋಗಿ ಕೂಸನ್ನು ಹೆತ್ತಳೆ? ಛೆ! ಉಂಟೇ?
ಬಾಗಿಲನ್ನು ನೂಕಿದಳು, ಅದೂ ತೆರೆಯಲಿಲ್ಲ. ಭದ್ರವಾಗಿ ಬಿಗಿದು ಕಟ್ಟಿತ್ತು. ಅಕ್ಕಣಿಗೆ ಏನೋ ಹೆದರಿಕೆಯಾದಂತಾಯಿತು. ಜ್ವರ ಬಂದು ಮಲಗಿದ್ದ ತನ್ನ ಗಂಡನನ್ನು ಎಬ್ಬಿಸುವುದರಿಂದ ಪ್ರಯೋಜನವಿಲ್ಲ ಎಂದು ನಿಶ್ಚಯಿಸಿ, ಐತನ ಬಿಡಾರಕ್ಕೆ ಓಡಿದಳು.
“ಪೀಂಚಲೂ! ಪೀಂಚಲೂ! ಪೀಂಚಲೂ!” ಎಂದು ಒಂದೇ ಸಮನೆ ಗಾಬರಿಪಡಿಸುವ ದನಿಯಲ್ಲಿ ಕೂಗಿದಳು.
ಗಂಡನನ್ನಪ್ಪಿ ಅವನ ಅಪ್ಪುಗೆಯಲ್ಲಿ ನಿದ್ರಿಸುತ್ತಿದ್ದ ಪೀಂಚಲು ಏನೋ ದುಃಸ್ವಪ್ನದಿಂದ ಎಚ್ಚರುವಂತೆ ಬಡರುಬಿದ್ದೆದ್ದಳು. ಬೇಗಬೇಗನೆ ಐತನ ಕಾಲಿನ ಬದಿ ಬಿದ್ದಿದ್ದ ತನ್ನ ಹೊಸ ಸೀರೆಯನ್ನೆತ್ತಿ ಬತ್ತಲೆಯ ಮೈಗೆ ಸುತ್ತಿಕೊಂಡಳು, ಗಂಡನೆಲ್ಲಿ ಕಂಡುಬಿಡುತ್ತಾನೊ ಎಂಬಂತೆ ಮತ್ತೆ ಮತ್ತೆ ಕಣ್ಣು ಮುಚ್ಚಿ ಮಲಗಿದ್ದ ಅವನ ಕಡೆ ನೋಡುತ್ತಾ. ಓಡಿಬಂದು ಹಗ್ಗಬಿಚ್ಚಿ ತಟ್ಟಿಬಾಗಿಲು ನೂಕಿ “ಏನಕ್ಕಾ?” ಎಂದಳು, ಅಕ್ಕಣಿಯನ್ನು ಗುರುತಿಸಿ. ಕವಿದಿದ್ದ ಮಂಜು ಸಾಧಾರಣೆತೆಗೆ ರಹಸ್ಯಮಯ ಅಸ್ಪಷ್ಟತೆಯನ್ನುಂಟುಮಾಡಿ ಗಾಬರಿಗೊಳಿಸುವಂತಿತ್ತು.
ಅಕ್ಕಣಿ ಮಾತಾಡಲಿಲ್ಲ; ಸನ್ನೆಮಾಡಿದಳು. ಇಬ್ಬರೂ ಚೀಂಕ್ರನ ಬಿಡಾರಕ್ಕೆ ಓಡಿದರು.
ಒಳಗಡೆ ಮಕ್ಕಳು. ಅಳುವ ಸದ್ದು ಜೋರಾಗಿತ್ತು.
“ದೇಯೀ! ದೇಯೀ! ದೇಯೀ!” ಇಬ್ಬರೂ ಕರೆದರು.
ಯಾರೊ ಓ ಕೊಳ್ಳಲೂ ಇಲ್ಲ; ಬಾಗಿಲು ಬಿಚ್ಚಿ ತೆರೆಯಲೂ ಇಲ್ಲ. ಇವರು ಕರೆಯುವ ಕೂಗನ್ನು ಕೇಳಿ ಚೀಂಕ್ರನ ಬಿಡಾರದ ಎಡಪಕ್ಕದಲ್ಲಿ ನಾಲ್ಕೇ ಮಾರು ದೂರದಲ್ಲಿದ್ದ ಮೊಡಂಕಿಲನ ಬಿಡಾರದಿಂದ ಅವನೂ ಹೆಂಡತಿ ಬಾಗಿಯೂ ಎದ್ದುಬಂದರು. ಹಸಲವರ ಬಿಡಾರದ ಕಡೆಯಿಂದಲೂ ಕುದುಕನೊಡನೆ ಇನ್ನಿಬ್ಬರು ಓಡಿಬಂದರು. ಐತನು ಸೊಂಟದ ಪಂಚೆಯನ್ನು ಸುತ್ತಿಕೊಳ್ಳುತ್ತಲೆ ಓಡಿಬಂದು ಗುಂಪು ಸೇರಿಕೊಂಡನು.
ತಟ್ಟಿ ಬಾಗಿಲಿಗೆ ಕಟ್ಟಿದ್ದ ಹಗ್ಗವನ್ನು ಕೊಯ್ದು, ತೆರೆದು, ಒಳಗೆ ದಾಟಿದ ಅಕ್ಕಣಿ ಪೀಂಚಲು ಇಬ್ಬರೂ ಚಿಟ್ಟನೆ ಚೀರಿಕೊಂಡು ಹಿಂದಕ್ಕೆ ನುಗ್ಗಿ ಓಡಿಬಂದರು! ಗುಡಿಸಿಲಿನ ಒಳಗೆ ಅರೆಗತ್ತಲೆಯಲ್ಲಿ ಅವರು ಕಂಡಿದ್ದ ದೃಶ್ಯ ಘೋರವಾಗಿತ್ತು: ಅಳುತ್ತಿದ್ದ ಮಕ್ಕಳ ನಡುವೆ ನಿದ್ದೆಮಾಡುವಂತೆ ಮಲಗಿದ್ದ ದೇಯಿಯ ಕಾಲಕಡೆ ರಕ್ತದಂತಹ ಕೆಂಪು ನೀರು ಕಪ್ಪಗಾಗಿ ನಿಂತಿತ್ತು! ದೇಯಿಯ ಬಾಯಿ ವಿಕಾರವಾಗಿ ತೆರೆದಿತ್ತು! ಸ್ವಲ್ಪ ದೂರದಲ್ಲಿ ಚೀಂಕ್ರ ನಿದ್ದೆಮಾಡುತ್ತಿರುವವನಂತೆ ಮಗ್ಗುಲಾಗಿ ಮಲಗಿದ್ದನು.
* * *
ಬಿಡಾರದಿಂದ ಓಡುತ್ತಲೆ ಬಂದಿದ್ದ ಐತ ಕೋಣೂರು ಮನೆಯ ಹೆಬ್ಬಾಗಿಲ ಮೆಟ್ಟಲಿನ ಬಳಿ ಸುಯ್ಯುಸಿರು ಬಿಟ್ಟು ಏದುತ್ತಾ ನಿಂತಾಗ ಮನೆಗೆ ಇನ್ನೂ ಅದರ ಎಲ್ಲ ಭಾಗಗಳಲ್ಲಿಯೂ ಎಚ್ಚರವಾಗಿರಲಿಲ್ಲ…. ಬೊಗುಳುತ್ತಾ ಬಳಿ ಸಾರಿದ್ದ ನಾಯಿಗಳು ಐತನನ್ನು ಗುರುತಿಸಿ ಬಾಲವಳ್ಳಾಡಿಸಿದ್ದುವು. ಹಲಗಣೆ ಹಾಕಿದ್ದ ಕೆಳಗರುಡಿಯಲ್ಲಿ ಒಂದು ಹಣತೆಯ ಬೆಳಕಿನಲ್ಲಿ ಐಗಳು ಅನಂತಯ್ಯ ಏನನ್ನೊ ರಾಗವಾಗಿ ಓದುತ್ತಿದ್ದುದು ಕೇಳಿಸಿ, ಐತ ಆ ಕಡೆ ಹೋಗಿ “ಅಯ್ಯಾ ಅಯ್ಯಾ, ಹೆಬ್ಬಾಕಲು ತೆಗೀರಿ!” ಎಂದನು.
ಅಷ್ಟು ಹೊತ್ತಿನಲ್ಲಿ ಅವನು ಹಾಗೆ ಕರೆದುದಕ್ಕೆ, ಅವಲ್ಪ ಗಾಬರಿಗೊಂಡೆ ಎದ್ದು ಐಗಳು ಹೆಬ್ಬಾಗಿಲೆಡೆಗೆ ಬಂದು ಅದನ್ನು ತೆಗೆಯತೊಡಗಿದರು. ದಪ್ಪ ದಪ್ಪ ಕಬ್ಬಣದ ಪಟ್ಟಿಗಳನ್ನು ಜೋಡಿಸಿ ಹೊಡೆದಿದ್ದ ದಿಮ್ಮಿಯ ಹೆಬ್ಬಾಗಿಲು ಅವರು ತಮ್ಮೆಲ್ಲ ಬಲವನ್ನೂ ಪ್ರಯೋಗಿಸಿದರೂ ತುಸು ಕಂಡಿಬಿಟ್ಟಿತೆ ಹೊರತು ತೆರೆಯಲಿಲ್ಲ. ಅಷ್ಟರಲ್ಲಿ ಜಗಲಿಯಲ್ಲಿ ಓದುವ ಹುಡುರೊಡನೆ ಮಲಗಿದ್ದ ಮುಕುಂದಯ್ಯನಿಗೆ ಎಚ್ಚರವಾಗಿ ಅವನೂ ಎದ್ದು ಬಂದು ಐಗಳಿಗೆ ನೆರವಾಗಲು, ಹೆಬ್ಬಾಗಿಲು ತೆರೆಯಿತು, ಕಿರ್ ರ್ ರ್ ದಡ್‌ಬಡ್‌ದಡಾರ್‌ ಎಂದು.
ಐತ ತಾನು ಕಂಡದ್ದು ಕೇಳಿದ್ದು ಊಹಿಸಿದ್ದು ಎಲ್ಲವನ್ನೂ ಒಂದೆ ಉಸಿರಿನಲ್ಲಿ ಒದರಿಬಿಟ್ಟನು. ಅಷ್ಟು ಭಯಂಕರವಾಗಿತ್ತು ಅವನಿಗೆ ಚೀಂಕ್ರನ ಬಿಡಾರದಲ್ಲಿ ರಾತ್ರಿ ನಡೆದಿದ್ದ ರುದ್ರಘಟನೆ; ಅಷ್ಟು ಮುಖ್ಯವಾದದ್ದೂ ಆಗಿತ್ತು. ತನ್ನಂತೆ ಎಲ್ಲರೂ ಆಃ ಆಃ ಆಃ ಆಶ್ಚರ್ಯದಿಂದ ಹೌಹಾರಿಬಿಡುತ್ತಾರೆ ಎಂದು ಭಾವಿಸಿದ್ದನು. ಮತ್ತೇನು? ಅದು ಅಲ್ಪ ವಿಷಯವೆ, ತಾನು ಚಿಕ್ಕಂದಿನಿಂದಲೂ ತಿಳಿದಿದ್ದ ದೇಯಿಯ ಸಾವು?
ಆದರೆ ಆ ಸುದ್ದಿಯನ್ನು ಕೇಳಿ ಐಗಳೂ ಮುಕುಂದಯ್ಯನೂ ಸ್ವಲ್ಪವೂ ಹೌಹಾರಲಿಲ್ಲ. ಅಂತಹ ಸಂದರ್ಭಗಳಲ್ಲಿ ಎಲ್ಲರೂ ಆಡಬಹುದಾದ ಅನುಕಂಪೆಯ ಮತ್ತು ಸಹಾನುಭೂತಿಯ ಎರಡು ಮಾತು ಆಡಿದರಷ್ಟೆ. ಏನೋ ಮಹತ್ಸಂಕಟದ ಜಗತ್‌ಪ್ರಲಯಕರವಾದ ವಿಷಯವನ್ನು ಹೊತ್ತುತಂದು ಹೇಳುತ್ತಿದ್ದೇನೆ ಎಂದು ಭಾವಿಸಿದ್ದ ಐತನಿಗೆ ತನ್ನ ಅತಿ ಉದ್ವೇಗಕ್ಕೆ ನಾಚಿಕೆ ಆಗುವಷ್ಟರಮಟ್ಟಿಗಿತ್ತು ಒಡೆಯರಾಗಿದ್ದವರ ಪ್ರತಿಕ್ರಿಯೆ.
ತಮ್ಮ ಕೋಣೆಯಲ್ಲಿ ಒಬ್ಬರೆ ಮಲಗಿದ್ದ ರಂಗಪ್ಪಗೌಡರು ತಮ್ಮನಿಂದ ಸುದ್ದಿ ಕೇಳಿ ಎದ್ದುಬಂದು “ಆ ಕುಡುಕ ಮುಂಡೇಗಂಡ, ಚೀಂಕ್ರ, ಬಸಿರಿಗೆ ಏನು ಮಾಡಿದನೊ ಏನೋ? ಎತ್ತು ಹಾರಿದ ಹಾಂಗೆ ಹಾರಿಯೆ ಕೊಂದುಹಾಕಿದ ಅಂತ ಕಾಣ್ತದೆ” ಎಂದು ಚೀಂಕ್ರನನ್ನು ಬೈದು, ಐತನನ್ನು ಪ್ರಶ್ನಿಸಿದರು: “ಅವನು ನಿನ್ನೆ ಕುಡಿದು ಬಂದಿದ್ದನೇನೋ?”
ಐತ ಅಪರಾಧವನ್ನು ಮುಚ್ಚಲು ಎಳಸುವ ಅಪರಾಧಿಯ ಸ್ವರದಿಂದ “ನಂ….ಗೊ….ತ್ತಿಲ್ಲ….ಯ್ಯಾ!” ಎಂದು ಕೆಳದನಿಯಲ್ಲಿ ಸುಳ್ಳನ್ನೆ ಹೇಳಿಬಿಟ್ಟನು.
ಗೌಡರು “ಐಗಳೆ, ಅದನ್ನು ಮಣ್ಣುಮಾಡಾಕೆ ಏನೇನು ಬೇಕೊ ಕೊಡಿ….ಆಮ್ಯಾಲೆ ನೀವೂ ಹೋಗಿ ಒಂದು ಸೊಲ್ಪ ಕಂಡು ಬನ್ನಿ…. ಅವನಿಗೆ ಕೊಟ್ಟ ಮುಂಗಡವೆ ಸುಮಾರು ಆಗ್ತದೆ” ಎಂದು ಹೇಳಿ, ಆಕಳಿಸುತ್ತಾ, ಸೊಂಟದ ನಶ್ಯಡಬ್ಬಿಯಿಂದ ಒಂದು ಗುಳಿಗೆ ಮಡ್ಡಿನಶ್ಯ ತೆಗೆದು ಸೇಯತೊಡಗಿದರು.
ಹೊರಡುವಾಗ ಐತ ಐಗಳೊಬ್ಬರಿಗೆ ಕೇಳಿಸುವಂತೆ, ಕಳೆದ ಬೈಗಿನಲ್ಲಿ ಬೆಟ್ಟಳ್ಳಿ ಹಕ್ಕಲಿನ ಹತ್ತಿರ ತನ್ನನ್ನು ಬೋಳ್ಕೊಳ್ಳುತ್ತಿದ್ದಾಗ ಗುತ್ತಿ ಹೇಳಿದುದನ್ನು ಹೇಳಿದನು, ಹಳೆಮನೆಯ ದೊಡ್ಡ ಹೆಗ್ಗಡೆಯವರು ಅವರನ್ನು ಬರಲು ಹೇಳಿದ್ದಾರಂತೆ ಎಂದು.
ಐತ ಹಿಂದಕ್ಕೆ ಹೋಗುವಷ್ಟರಲ್ಲಿಯೆ ಚೀಂಕ್ರನ ಮೂರು ಚಿಕ್ಕ ಮಕ್ಕಳನ್ನೂ ಪೀಂಚಲು ತನ್ನ ಬಿಡಾರಕ್ಕೆ ಕರೆತಂದಿದ್ದಳು. ಚೀಂಕ್ರ ದೇಯಿಯ ಹೆಣದ ಹತ್ತಿರ “ಅಯ್ಯೋ ನನ್ನ ಬಿಟ್ಟು ಹೋದೆಯಾ? ನನಗಿನ್ಯಾರು ಗತಿ? ಮಕ್ಕಳಿಗೆ ಗಂಜಿ ಮಾಡಿ ಹಾಕೋರ್ಯಾರು?” ಎಂದು ಮಹಾ ಸಂಕಟದಿಂದೆಂಬಂತೆ ಬಾಯಿ ಬಡುಕೊಂಡು ರೋದಿಸುತ್ತಿದ್ದನು. ಉಳಿದವರು ಹೆಣವನ್ನು ಮಣ್ಣು ಮಾಡಲಿಕ್ಕೆ ಏರ್ಪಾಡು ಮಾಡುವುದರಲ್ಲಿದ್ದರು.
ಐತನನ್ನು ನೋಡಿದೊಡನೆ ಚೀಂಕ್ರ “ಅಯ್ಯೋ ಐತಾ, ಚಿನ್ನದಂಥಾ ಹೆಂಡ್ತಿ ಹೋಯ್ತಲ್ಲೋ? ಕಳಕೊಂಡೆನಲ್ಲೋ?” ಎಂದೆಲ್ಲಾ ಎದೆ ಎದೆ ಬಡಿದುಕೊಂಡು ಮತ್ತಷ್ಟು ಗಟ್ಟಿಯಾಗಿ ರೋದಿಸತೊಡಗಿದನು.
ಅದನ್ನೆಲ್ಲ ಕೇಳಿ ಐತನಿಗೆ ಮೈಯೆಲ್ಲ ಉರಿಯುವಂತಾಯ್ತು! ಒಡೆಯರ ಪ್ರತಿಕ್ರಿಯೆಗೆ ನೂರುಮಡಿ ವಿಡಂಬನವಾಗಿ ತೋರಿತು ಚೀಂಕ್ರನ ರೋದನ, “ಬಿಡಾರಕ್ಕೆ ಹೋಗಿ ಮಜಾಮಾಡಾನ ಬಾರೋ!” ಎಂದು ಕುಡಿದು ಮತ್ತಿನಲ್ಲಿ ಕಮ್ಮಾರಸಾಲೆಯ ಬಳಿ ಕೇಕೆ ಹಾಕುತ್ತಿದ್ದ ಅವನ ಚಿತ್ರ ನೆನಪಿಗೆ ಬಂದು!
ಮುಂದೆ ಮಾಡಬೇಕಾದುದೆಲ್ಲವೂ ಲೆಕ್ಕಾಚಾರದಂತೆ ನಡೆಯಿತು. ಕೆಲವರಿಗೆ ಅಳುವುದೂ ಆ ಲೆಕ್ಕಾಚಾರದಂತೆ ನಡೆಯುವುದರ ಒಂದು ಭಾಗವೆ ಆಗಿತ್ತು. ನಿಜವಾಗಿ ಅತ್ತವರೆಂದರೆ ದೇಯಿಯ ಮೂರು ಮಕ್ಕಳು! ತಮ್ಮ ಅಬ್ಬೆಯನ್ನು ಚಟ್ಟಕಟ್ಟಿ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದೊಡನೆ ಆ ಮೂರು ಮಕ್ಕಳೂ ಬೊಬ್ಬೆಯಿಡತೊಡಗಿದ್ದರು. ಅಬ್ಬೇ ಅಬ್ಬೇ ಎಂದು ಒರಲುತ್ತಾ ಹೆಣ ಹೊತ್ತವರನ್ನು ಹಿಡಿದು ನಿಲ್ಲಿಸಲೆಂಬಂತೆ ಓಡಲೆಳೆಸಿದ್ದ ಅವರನ್ನು ಅಕ್ಕಣಿ ಬಾಗಿ ಪೀಂಚಲು ಒಬ್ಬೊಬ್ಬರನ್ನು ತಬ್ಬಿ ತಡೆದು ಸಮಾಧಾನ ಮಾಡಲು ಪ್ರಯತ್ನಿಸಿದ್ದರು, ತಾವೂ, ಮರಣದ ದುಃಖಕ್ಕೂ ಮಿಗಿಲಾಗಿ, ಮಕ್ಕಳ ದುಃಖಕ್ಕೆ, ದುಃಖಿಸುತ್ತಾ….
* * *
ಹೂವಳ್ಳಿ ಮನೆಯ ಹಿತ್ತಲುಕಡೆಯ ಚೌಕಿಯಲ್ಲಿ, ಹೊಲಸಿನ ಒಲೆಯ ಬಳಿ ಕುಳಿತು ನಾಗತ್ತೆ, ಹಿಂದಿನ ದಿನ ದೆಯ್ಯದ ಹರಕೆಗೆ ಕುಯ್ದಿದ್ದ ಹಂದಿಯ ಮಾಂಸದ ದೊಡ್ಡ ದೊಡ್ಡ ತುಂಡುಗಳನ್ನು ಹಗ್ಗಕ್ಕೆ ಕೊದು, ಒಣಗಿಸಿ ಸಂಡಿಗೆ ಮಾಡುವ ಸಲುವಾಗಿ, ಒಲೆಯ ಮೇಲೆ ಕಟ್ಟಿದ್ದ ಬಿದಿರುಗಳುವಿಗೆ ನೇತುಹಾಕುವ ಕೆಲಸದಲ್ಲಿ ತೊಡಗಿದ್ದಳು. ಅಲ್ಲಿಯೆ ಸ್ವಲ್ಪ ದೂರದಲ್ಲಿದ್ದ ನೀರಿನ ಹಂಡೆಯ ಹತ್ತಿರ ಚಿನ್ನಮ್ಮನ ಅಜ್ಜಿ ತೊಂಡೆಕಾಯಿ ಹರೆಯುತ್ತಾ ಕುಳಿತಿದ್ದರು. ಬೆಳಗಿನ ಬಿಸಿಲು ಕೋಲು ಕೋಲಾಗಿ ಬಿದ್ದಿದ್ದು, ಮನೆಯ ನೊಣಗಳು ಹಾರಿ ಕೂರುವ ಲೀಲೆಗೆ ರಂಗವಾಗಿದ್ದ ಒಂದು ಮೂಲೆಯಲ್ಲಿ ಚಿನ್ನಮ್ಮ ಹೂವು ಕಟ್ಟುವ ಕಾಯ್ದಲ್ಲಿ ನಿರತಳಾಗಿದ್ದಳು. ಪಕ್ಕದಲ್ಲಿಯೆ ಆವುದೊ ಚಿಂತೆಯಿಂದ ಅನ್ಯಮನಸ್ಕಳಾಗಿದ್ದಂತೆ ಕುಳಿತಿದ್ದ ನಾಗಕ್ಕ ತಲೆ ಬಾಚಿಕೊಳ್ಳುತ್ತಿದ್ದಳು. ಕೆಲಸದ ಆಳು ಸುಬ್ಬಿ ಎಲ್ಲಕ್ಕೂ ದೂರವಾಗಿ ಬಾಗಿಲು ಸಂದಿಯಲ್ಲಿ ನಾಗಂದಿಗೆಯಿಂದ ನೇಲುತ್ತಿದ್ದ ಸಿಕ್ಕದಲ್ಲಿದ್ದ ಬುಟ್ಟಿಯಲ್ಲಿ ಕಾವು ಕೂತಿದ್ದ ಹೇಟೆಯನ್ನೆತ್ತಿ ಅದನ್ನು ಕೊರ್‌ರ್‌ರೆನ್ನಿಸುತ್ತಿದ್ದಳು, ಮೊಟ್ಟೆಗಳೆಲ್ಲ ಮರಿಯಾಗಿವೆಯೊ ಎಂದು ನೋಡುವುದಕ್ಕಾಗಿ.
ಅಜ್ಜಿ ಆ ದಿನ ತೋಟದಾಚೆಯ ಗುಡ್ಡದಲ್ಲಿ ಸೀಗೆಕಾಯಿ ಉದುರಿಸಿ ಹೆರಕುವ ಸಂಕಲ್ಪವನ್ನು ನೆನಪಿಗೆ ತಂದುಕೊಂಡು “ಹೊತಾರೆ ಅಷ್ಟು ಹೊತ್ತಿಗೆ ಬತ್ತೀನಿ ಅಂದಿದ್ದ, ಹೊತ್ತು ಮೇಲೇರಿ ಇಷ್ಟೊತ್ತಾದ್ರೂ ಕಾಣಿನಲ್ಲಾ!” ಎಂದಳು, ತನಗೆ ತಾನೆಂಬಂತೆ.
ನಾಗತ್ತೆ ಕೇಳಿದಳು “ಯಾರು?… ಹಳೇಮನೆ ಹೋಲೇರ ಮಂಜನಾ?”
“ಅಲ್ಲ. ಕೋಣೂರಿನ ಗಟ್ಟದ ತಗ್ಗಿನವನು. ಅವನ ಹೆಸರು – ಅದು ಎಂಥದ್ದೋ ಸುಡುಗಾಡು? – ಅದೇ ಆ ಬಾಗಿ ಗಂಡ” ಎಂದಳು ಅಜ್ಜಿ.
ಚಿನ್ನಮ್ಮ ದೂರದಿಂದಲೆ ಗಟ್ಟಿಯಾಗಿ ಕೇಳಿದಳು “ಯಾರಜ್ಜೀ? ಆ ಮೊಡಂಕಿಲನಾ?”
“ಹೂ ಕಣೇ! ಅವನೇ! ನಿನ್ನೆ ದೆಯ್ಯದ ಹರಕೆ ಕಡುಬು ತುಂಡು ತಿನ್ನಾಕೆ ಬಂದಿದ್ದನಲ್ಲಾ? ಸೀಗೆ ಉಡಿ ಹತ್ತಿ, ಕಾಯಿ ಉದುರಿಸಿಕೊಡ್ತಿಯೇನೋ ಅಂತಾ ಕೇಳ್ದೆ, ‘ಹ್ಞೂ’ ಅಂದ; ಅವನ ಹೆಂಡ್ತಿ ಬಾಗೀನೂ ಕರಕೊಂಡು ಬತ್ತೀನಿ, ಕಾಯಿ ಹೆರಕಾಕೆ ಅಂತಾನೂ ಹೇಳಿದ್ದ.”
“ಆ ಪೀಂಚಲುಗಾದ್ರೂ ಹೇಳಿದ್ರೆ ಅವಳ ಗಂಡ ಐತನನ್ನು ಕರಕೊಂಡು ಬರ್ತಿದ್ಲಲ್ಲಾ” ಎಂದಳು ಚಿನ್ನಮ್ಮ.
“ಅವಳೆಲ್ಲ ಬಂದಿದ್ಲೆ?” ಅಜ್ಜಿಯ ಪ್ರಶ್ನೆ.
“ಬಂದಿದ್ಲು…. ಉಣ್ಣಾಕೆ ನಿಲ್ಲಲಿಲ್ಲ…” ಮೊಮ್ಮಗಳ ಉತ್ತರ.
“ಯಾವ ಮಾಯಕದಾಗೆ ಬಂದಿದ್ಲೋ? ಯಾವ ಮಾಯಕದಾಗೆ ಹೋದ್ಲೊ? ನಂಗೊತ್ತಿಲ್ಲಾ….” ಎಂದಳು ಅಜ್ಜಿ.
ಅಷ್ಟರಲ್ಲಿ ಕಾವುಕೂತಿದ್ದ ಕೋಳಿ ಹೇಟೆಯ ಸಹಿತವಾಗಿ ಸಿಕ್ಕಿದ ಮೇಲಿದ್ದ ಬುಟ್ಟಿಯನ್ನು ನೆಲಕ್ಕಿಳಿಸಿ ಸುಬ್ಬಿ ಕೂಗಿದಳು “ಚಿನ್ನಕ್ಕಾ, ಚಿನ್ನಕ್ಕಾ, ಎಲ್ಲಾ ಮಟ್ಟೇನೂ ಮರಿ ಆಗ್ಯವೆ! ಹೂಮರಿ! ಅಯ್ಯಯ್ಯಯ್ಯೊ ಏನು ಹೇನು ಮುಲುಗುಡ್ತವೆ? ದೂರಾನೆ ಇರಿ…. ಹತ್ರ ಬರಬ್ಯಾಡಿ!…. ಹೇನು ಹತ್‌ತಾವೆ!”
ಹೂಕಟ್ಟುವುದನ್ನು ನಿಲ್ಲಿಸಿ, ಹೂಮರಿಗಳನ್ನು ನೋಡಲು ಓಡಿಹೋಗಿದ್ದ ಚಿನ್ನಮ್ಮಗೆ ಅವಳ ಅಜ್ಜಿ “ಹೌದು ಕಣೇ, ಹತ್ರ ಹೋಗಬ್ಯಾಡೇ! ಮೈಗೆಲ್ಲ ಹೇನು ಹತ್‌ತಾವೇ!” ಎಂದು ಸುಬ್ಬಿಯ ಎಚ್ಚರಿಕೆಯನ್ನು ಪುಷ್ಟೀಕರಿಸಿ, ಮತ್ತೆ ಸುಬ್ಬಿಗೆ ಆಜ್ಞೆ ಮಾಡಿದಳು: “ಏ ಸುಬ್ಬೀ, ಆ ಹ್ಯಾಟೇನೂ ಮರೀನೂ ಒಂದು ಕುಕ್ಕೇಲಿ ಕವುಂಚ್ಹಾಕಿ, ಕಾವು ಕೂತಿದ್ದ ಬುಟ್ಟಿ ಹುಲ್ಲೂ ಎಲ್ಲಾನೂ ಗೊಬ್ಬರ ಗುಂಡಿಗೆ ತಗೊಂಡು ಹೋಗಿ ಸುಟ್ಟು ಹಾಕಿಬಿಡೇ; ಬ್ಯಾಗ!…. ಮನೇ ತುಂಬ ಹೇನು ಮಾಡಬ್ಯಾಡ!”
ಅಜ್ಜಿಯ ಅಪ್ಪಣೆಯಂತೆ ಸುಬ್ಬಿ ಹೇಟೆಮರಿಗಳನ್ನು ಒಂದು ಕುಕ್ಕೆಯಲ್ಲಿ ಕವುಚಿ ಹಾಕಿ, ಕಾವು ಕೂತಿದ್ದ ಬುಟ್ಟಿಯನ್ನು ಅದಕ್ಕೆ ಹಾಕಿದ್ದ ಹುಲ್ಲಿನ ಸಮೇತವಾಗಿ ಹೊರಕ್ಕೆ ಎತ್ತಿಕೊಂಡು ಹೋದಳು. ದಹನ ಸಂಸ್ಕಾರಕ್ಕೆ. ಚಿನ್ನಮ್ಮ ಒಳಗೆ ಓಡಿಹೋಗಿ ಒಂದು ಬೊಗಸೆ ಸಣ್ಣ ನುಚ್ಚನ್ನು ತಂದು ಹೇಟೆ ಮರಿಗಳನ್ನು ಕವುಚಿ ಹಾಕಿದ್ದ ಕುಕ್ಕೆಯೊಳಗೆ ಹಾಕಿದಳು.
“ಸುರು ಆಯ್ತಪ್ಪಾ ಇನ್ನು. ಸುಮ್ಮನೆ ಅಕ್ಕಿ ತಂದು ಸುರಿಯಾಕೆ!” ಎಂದು ಗೊಣಗಿದಳು ಅಜ್ಜಿ.
ಚಿನ್ನಮ್ಮ ಹೂವು ಕಟ್ಟಲು ಮತ್ತೆ ಹಿಂದಕ್ಕೆ ಹೋಗುತ್ತಾ ಬಾಗಿಲ ಕಡೆ ನೋಡಿ “ಓ ಬಂತಲ್ಲಾ ಮೊಡಂಕಿಲನ ಸವಾರಿ!” ಎಂದಳು.
ಅಜ್ಜಿ ಬಾಗಿಲಲ್ಲಿ ಕಾನಿಸಿಕೊಂಡ ಅವನಿಗೆ “ಎಷ್ಟೊತ್ತಿಗೆ ಬರಾದೋ? ಬಿಸಿಲೇರಿ ಹೋಯ್ತಲ್ಲೊ!…. ಬಾಗಿ ಎಲ್ಲೋ?….”
ಮೊಡಂಕಿಲ ತಾನು ತಡವಾಗಿ ಬಂದುದಕ್ಕೂ ತನ್ನ ಹೆಂಡತಿ ಬಾಗಿ ಬರೆದಿದ್ದುದಕ್ಕೂ ಕಾರಣವಾಗಿ ಕೋಣೂರಿನ ಗಟ್ಟದವರ ಬಿಡಾರದಲ್ಲಿ ನಡೆದ ದುರಂತವನ್ನೆಲ್ಲ ಹೇಳಿ “ಅದನ್ನು ಮಣ್ಣುಮಾಡಿ ಬರುವುದೆ ಹೊತ್ತಾಯಿತಮ್ಮಾ” ಎಂದನು.
“ಅವಳು ಬಸಿರುಯಾಗಿದ್ಲಂತಲ್ಲೋ?”
“ಹೌದಮ್ಮಾ, ಇವತ್ತೊ ನಾಳೆಯೊ ಹೆರುತ್ತಿದ್ದಳಂತೆ!”
“ಕೂಸನ್ನ ಹೊರಗೆ ತೆಗೆದು ಹುಗಿದರೋ? ಇಲ್ಲಾ…?”
“ಚೀಂಕ್ರಿನ ಕೈಲಿ ಕತ್ತಿಕೊಟ್ಟು ಏನೇನೋ ಮಾಡುವುದಕ್ಕೆ ಹೇಳುತ್ತಾ ಇದ್ದರು… ಅಮ್ಮಾ, ನಿಜಕ್ಕೂ ಹೇಳುತ್ತೇನೆ. ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಹೆದರಿ ಹಿಂದಕ್ಕೆ ಬಂದು ಬಿಟ್ಟೆ!”
“ಏನೋ ಕೂದಲು ಹಣ್ಣಾಗಕ್ಕೆ ಬಂದದೆ ನಿನಗೆ? ಹುಡುಗರು ಹೇಳಿದ್ಹಾಂಗೆ ‘ಹೆದರ್ದೆ’ ಅಂತೀಯಲ್ಲೋ?”
ಮೊಡಂಕಿಲ ತುಟಿಮುಚ್ಚಿ ನಗುತ್ತಾ ನಾಚಿ ತಲೆಬಾಗಿದನಷ್ಟೆ.
ಮೊಡಂಕಿಲ ಒಂದು ಉದ್ದನೆಯ ದೋಟಿ ತೆಗೆದುಕೊಂಡು ಹೋಗಿ, ಸೀಗೆಯ ಉಡಿ ಅಡರಿದ್ದ ಹೆಮ್ಮಾವಿನ ಮರ ಹತ್ತಿ, ಒಣಗಿ ನಿಂತಿದ್ದ ಕಾಯನ್ನು ಬಡಿದು ಬಡಿದು ಉದುರಿಸುತ್ತಿದ್ದನು. ಅಡಿಗೆ ಊಟ ಎಲ್ಲ ಮುಗಿಸಿ, ಹಗಲು ನಿದ್ದೆಯನ್ನೂ ಸ್ವಲ್ಪ ಮಾಡಿ, ಚಿನ್ನಮ್ಮ ನಾಗಕ್ಕ ಇಬ್ಬರೂ ಸುಬ್ಬಿಯನ್ನು ಕೂಡಿಕೊಂಡು ಮೊಡಂಕಿಲ ಉದುರಿಸಿದ್ದ ಸೀಗೇಕಾಯಿ ಹೆರಕಲು ಹೋದರು. ಅಜ್ಜಿ ‘ಇಳಿಹೊತ್ತು ತಂಪಾದ ಮೇಲೆ ಬರುತ್ತೇನೆ’ ಎಂದಿದ್ದಳು. ನಾಗತ್ತೆ ತನಗೆ ಸೊಂಟನೊವು ಎಂದು ಬೆಳಕಂಡಿಯನ್ನೆಲ್ಲ ಮುಚ್ಚಿ ಕತ್ತಲು ಮಾಡಿಕೊಂಡು ಮಲಗಿದ್ದಳು.
ಪೊದೆಗಳ ನಡುನಡುವೆ ತರಗಿನ ಮೇಲೆ ಬಿದ್ದಿದ್ದ ಸೀಗೆಯಕಾಯಿಗಳನ್ನು ಹೆರಕುತ್ತಿದ್ದ ನಾಗಕ್ಕನನ್ನು ಮತ್ತೆ ಮತ್ತೆ ತಲೆಯೆತ್ತಿ ಎತ್ತಿ ನೋಡುತ್ತಿದ್ದ ಚಿನ್ನಮ್ಮ ಕೇಳಿದಳು: “ನಾಗಕ್ಕ, ಯಾಕೆ ಇವತ್ತು ಹೊತಾರೆಯಿಂದ ಏನೋ ಒಂದು ತರಾ ಆಗಿದ್ದಿಯಲ್ಲಾ? ಮೈ ಹುಷಾರಿಲ್ಲೇನು?”
ಹೊರಕ್ಕೆ ನೆಗೆಯಲು ಪ್ರಶ್ನೆಯ ನೆವವನ್ನೆ ಕಾಯುತ್ತಿತ್ತೊ ಎಂಬಂತೆ ಭಾವವುಕ್ಕಿ, ಕಣ್ಣು ತೇವವೇರಿ, ಉಸಿರಾಡುತ್ತಾ ನಿಂತು ನಾಗಕ್ಕ: “ಮೈಗೇನಾಗಿದೆ? ಮೈಗೆ ಏನೂ ಆಗಿಲ್ಲ. ಹುಸಾರಾಗಿದ್ದೀನಿ!” ಎಂದಳು. ಅವಳ ರೀತಿ ಅಳುವಂತೆಯೂ ಎರಡೂ ಗೊತ್ತಾಗುವಂತಿರಲಿಲ್ಲ.
“ಮತ್ತೆ? ಯಾಕೆ ಹಿಂಗೆ ಉಸಿರು ಬಿಡ್ತೀಯಲ್ಲಾ?” ಆಶ್ಚರ್ಯಚಕಿತೆಯಾಗಿ ಕೇಳಿದಳು ಚಿನ್ನಮ್ಮ.
“ಅಕ್ಕಾ, ನಾನೊಂದು ಕೇಳ್ತೀನಿ, ಹೇಳ್ತೀಯಾ?”
“ಏನೇ?”
“ಹೇಳ್ತೀನಿ ಅಂತ ಹೇಳಿದ್ರೆ, ಹೇಳ್ತೀನಿ…”
“ಗೊತ್ತಾಗಾದಂತಾದ್ರೆ ಹೇಳೇ ಹೇಳ್ತೀನಿ…”
“ಬುದ್ದಿವಂತೆ. ನಿಂಗೆ ಗೊತ್ತಾಗೇ ಆಗ್ತದೆ….”
“ಯಾರು ಹೇಳಿದ್ರೆ ನಿಂಗೆ? ನಾ ಒಂದು ಹಳ್ಳಿಮಡ್ಡಿ. ಓದಾಕೆ ಬರಿಯಾಕೆ ಒಂದೂ ಗೊತ್ತಿಲ್ಲ…”
“ಓದಾಕೆ ಬರಿಯಾಕೆ ಬರದಿದ್ರೆ ಏನಾಯ್ತೂ? ಐಗಳ ಹತ್ರ, ಮುಕುಂದಣ್ಣನ ಹತ್ರ, ಕೇಳೀಮಾಡೀ ಎಲ್ಲ ತಿಳಿಕೊಂಡೀಯಂತೆ! ಕೋಣೂರಿನಾಗೆ ಕಾಗಿನಹಳ್ಳಿ ಅಮ್ಮನೂ ಹೇಳ್ತಿದ್ರು. ಇಲ್ಲಿ ಅಜ್ಜಮ್ಮನೂ ಹೇಳ್ತಾರೆ….”
“ಏನು ತಿಳಿಕೊಂಡ್ರೆ ಏನು ಬಂತು? ಅದೃಷ್ಟ ಸರಿಯಾಗಿ ಇಲ್ಲದಿದ್ರೆ?…”
“ನಿಂಗೇನು ಅದೃಷ್ಟ ನನ್ನ ಹಂಗಲ್ಲ…”
“ಅವರವರ ಕಷ್ಟ ಅವರವರಿಗೇ ಗೊತ್ತು.” ಚಿನ್ನಮ್ಮ ಹೇಳಿದಳು, ಹೋದ ಇರುಳು ಪೀಂಚಲು ಹೇಳಿದ್ದುದನ್ನು ನೆನೆದು: “ಹೋಗಲಿ ಬಿಡು. ನೀ ಏನೋ ಕೇಳ್ತಿದ್ದೆಲ್ಲ? ಏನದು?”
ಮಾತಾಡುತ್ತಾ ಇಬ್ಬರೂ ಒಂದು ದಟ್ಟ ಪೊದೆಯ ಹಿಂದೆ ಬಂದಿದ್ದವರು ಅಲ್ಲಿಯೆ ನೆರಳಲ್ಲಿ ಮರೆಯಾಗಿ ಕುಳಿತರು.
“ಅಕ್ಕಾ, ಸತ್ತುಹೋದವರು ಮತ್ತೆ ಬರ್ತಾರೇನೆ?”
ಅತ್ಯಂತ ಅನಿರೀಕ್ಷಿತವಾಗಿ ನಾಗಕ್ಕನ ಪ್ರಶ್ನೆಗೆ ಬೆಪ್ಪಾಗಿ ಹೋದಳು ಚಿನ್ನಮ್ಮ ಕಿಸಕ್ಕನೆ ನಕ್ಕುಬಿಟ್ಟಳು!
“ಅಯ್ಯೋ ಮಾರಾಯ್ತಿ, ಎಂತಾ ಪ್ರಶ್ನೆ ಹಾಕಿಬಿಟ್ಟೆ?” ಎಂದಳು.
“ನಗಾಡಬ್ಯಾಡ, ಹೇಳಕ್ಕ” ನಾಗಕ್ಕ ತನ್ನ ಪ್ರಶ್ನೆಯನ್ನು ಗಂಭೀರವಾಗಿ ಪುನರುಚ್ಚರಿಸಿದಳು.
“ಕನಸಿಗಾ?” ಕೇಳಿದಳು ಚಿನ್ನಮ್ಮ.
“ಅಲ್ಲ, ನಿಜವಾಗಿಯೂ!”
“ಎಲ್ಲಾರೂ ಉಂಟೇನೆ?”
“ಮತ್ತೆ? ನಿನ್ನೆ ರಾತ್ರೆ ನನ್ನ…. “ ಎಂದು ಅರ್ಧದಲ್ಲಿಯೆ ನಿಲ್ಲಿಸಿದಳು ನಾಗಕ್ಕ.
ಚಿನ್ನಮ್ಮ ಮುನ್ನಿನ ಲಘುತ್ವವನ್ನೆಲ್ಲ ಬಿಟ್ಟು ಕಿವಿಗೊಟ್ಟು ಕೇಳತೊಡಗಿದಳು.
ತಿಳಿವಳಿಕೆಯುಳ್ಳ ಜಾಣ ಹುಡುಗಿಯಾಗಿದ್ದರೂ ಕನ್ಯಾನುಭವಕ್ಕೆ ಅವೇದ್ಯವಾದ ಕೆಲವು ಗೋಪ್ಯ ವಿಷಯಗಳಲ್ಲಿ ಸಂಪೂರ್ಣ ಮುಗ್ಧೆಯಾಗಿದ್ದ ಚಿನ್ನಮ್ಮಗೆ ನಾಗಕ್ಕ ನಡೆದುದೆಲ್ಲವನ್ನೂ ಬಿಡಿಸಿ ಹೇಳಲು ಸಮರ್ಥೆಯಾಗಿರಲಿಲ್ಲ. ಸ್ಥೂಲವಾಗಿ ಸೂಚ್ಯವಾಗಿ ಮಾನಕ್ಕೆ ಮೀರದಿರುವಷ್ಟನ್ನು ಮಾತ್ರ ಹೇಳಿದಳು.
ನಾಗತ್ತೆ ಕೋಣೆಯ ಬಾಗಿಲನ್ನು ತೆರೆದು ವೆಂಕಣ್ಣನನ್ನು ಒಳಕ್ಕೆ ಬಿಟ್ಟುಹೋದ ಮೇಲೆ ಅವನು ತಾಳ ಹಾಕಿಕೊಂಡು ಹೋಗಿ ನಾಗತ್ತೆ ಮಲಗಿದ್ದಲ್ಲಿ ನಾಗಕ್ಕನ ಪಕ್ಕದಲ್ಲಿ ಮಲಗಿದ್ದನು. ಆದರೆ ನಾಗಕ್ಕಗೆ ಇತ್ತಣ ಪ್ರಜ್ಞೆ ಇರಲಿಲ್ಲ: ಅವಳಿಗೆ ಬಂದಿದ್ದದು ನಿದ್ದೆ ಮಾತ್ರವಾಗಿರಲಿಲ್ಲ, ಕಳ್ಳುಹೆಂಡಗಳೊಡನೆ ನಾಗತ್ತೆ ಸೇರಿಸಿಕೊಟ್ಟಿದ್ದ ಮದ್ದಿನ ಮತ್ತೂ ಸೇರಿತ್ತು. ವೆಂಕಟಪ್ಪನಾಯಕನಿಂದ ತನ್ನ ಮೇಲೆ ನಡೆದಿದ್ದ ಅತ್ಯಾಚಾರವೆಲ್ಲ ಅವಳಿಗೆ ಒಮದು ಸವಿಗನಸಿನಂತೆ ಅನುಭವಕ್ಕೆ ಬಂದಿತ್ತು. ಆ ಸ್ವಪ್ನದಲ್ಲಿ ಅವಳು ತನ್ನ ದಿವಂಗತ ಪತಿ ನಾಗಣ್ಣನೊಡನೆ ಮತ್ತೆ ಕೂಡಿದ್ದಳು! ಬಹುಕಾಲದ ಮೇಲೆ ತನ್ನಲ್ಲಿಗೆ ಬಂದಿದ್ದ ಅವನನ್ನು ನೋಡಿ ಮೋಹಿಸಿ ಮುದ್ದಿಸಿದ್ದಳು. ತಾನು ಇಷ್ಟು ಕಾಲವೂ ಅತ್ತೆಯ ಕುಹಕಕ್ಕೆ ಬಲಿಬೀಳದೆ ಯಾರೊಡನೆಯೂ ಸೀರುಡಿಕೆಯಾಗದೆ ಇದ್ದುದಕ್ಕೆ ಸಾರ್ಥಕ ಪ್ರತಿಫಲವೊದಗಿದಂತೆ ಭಾವಿಸಿ ಕೃತಜ್ಞೆಯಾಗಿದ್ದಳು. ಅವನು ತನ್ನ ಲಜ್ಜಾವಲಯವನ್ನು ಅನಾವರನ ಮಾಡಿದಾಗ ಸ್ವಲ್ಪ ದಿಗಿಲಾದಂತೆ ಅನುಭವವಾಗಿದ್ದರೂ, ತನ್ನ ಗಂಡನೊಡನೆ ನಾನು ರಮಿಸುವುದರಲ್ಲಿ ತಪ್ಪೇನು ಎಂದು ಅವಳು ತನ್ನ ಅಂತಃಸಾಕ್ಷಿಗೆ ತಾನೆ ಸಮಾಧಾನ ಹೇಳಿಕೊಂಡು, ಅವನನ್ನು ಆಲಿಂಗಿಸಿ, ಚುಂಬಿಸಿ, ಒತ್ತಿಕೊಂಡು ಪುಲಕಿತೆಯಾಗಿ ಆನಂದಮಗ್ನೆಯಾಗಿದ್ದಳು.
ಅವಳ ಆ ಚರ್ಯೆಯನ್ನೆಲ್ಲ ವೆಂಕಟಣ್ಣ ತನ್ನ ಪರವಾಗಿ ಅವಳಿಗಿರುವ ಬೇಟದ ಚಿಹ್ನೆಯಿಂದೆ ಭಾವಿಸಿ, ಸುಖರಸಪ್ಲಾವಿತ ಚಿತ್ತನಾಗಿ, ನಾಗತ್ತೆಗೆ ಮನದಲ್ಲಿಯೆ ವಂದಿಸಿದ್ದನು. ತನ್ನ ಪೂರೈಸಿಕೊಮಡು ಅವನು ಹಿಂದಕ್ಕೆ ತನ್ನ ಕೋಣೆಗೆ ಹೋಗಿ ಮಲಗಿಬಿಡಬೇಕು ಎಂಬುದು ಅವರಿಬ್ಬರೂ – ನಾಗತ್ತೆ ಮತ್ತು ವೆಂಕಟಣ್ಣ – ಒಟ್ಟಿ ಒಪ್ಪಿದ್ದ ವ್ಯೂಹವಾಗಿತ್ತು. ಏಕೆಂದರೆ ನಾಗಕ್ಕನನ್ನು ಇನ್ನೂ ಅವನು ಶಾಸ್ತ್ರೀಯವಾಗಿ ಸೀರುಡಿಕೆ ಮಾಡಿಕೊಂಡಂತೆ ಆಗಿರಲಿಲ್ಲ. ಆ ಸಾರ್ವಜನಿಕವಾದ ಬಹಿರಂಗ ‘ಕೂಡಿಕೆ’ಯನ್ನು ತರುವಾಯ – ಈ ರೀತಿಯಲ್ಲಿ ಸೋತ ನಾಗಕ್ಕ ಅನಿವಾರ್ಯಕ್ಕೆ ಸಿಕ್ಕಿ ಒಪ್ಪಗೆ  ಕೊಡಬೇಕಾಗಿಯೆ ಬಂದಮೇಲೆ – ಮಾಡಿಕೊಳ್ಳುವುದು ಅವರ ಹರುವಾಗಿತ್ತು. ಆದರೆ ವೆಂಕಟಪ್ಪನಾಯಕರಿಗೆ ನಾಗಕ್ಕನ ಮಗ್ಗುಲಿಂದ ಕೆಲಸ ಪೂರೈಸಿದ ಮೇಲೆಯೂ ಏಳುವ ಮನಸ್ಸಾಗಲಿಲ್ಲ. ನಾಗತ್ತೆ ಬಂದು ಸ್ವಲ್ಪ ಬಲವಾಗಿಯೆ ಬಾಗಿಲು ತಟ್ಟಲು ತೊಡಗಿದ ಮೇಲೆಯೆ ವೆಂಕಟಣ್ಣ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಬಾಗಿಲು ತೆರೆದು ತನ್ನ ಕೋಣೆಗೆ ಹೋಗಿದ್ದನು. ನಾಗತ್ತೆ ಮೊದಲಿನಂತೆ ಬಾಗಿಲು ಮುಚ್ಚಿ ತಾಳ ಹಾಕಿಕೊಂಡು ಹೋಗಿ ನಾಗಕ್ಕನ ಬಳಿ ಮಲಗಿದ್ದಳು. ಬೆಳಿಗ್ಗೆ ನಿದ್ದೆಯೂ ಅಮಲೂ ಇಳಿದಮೇಲೆ ನಾಗಕ್ಕ ತನಗೆ ಬಿದ್ದಿದ್ದ ಕನಸನ್ನು ನೆನೆದು ಆನಂದಾನುಭವ ಮಾಡಿದ್ದಳು. ಆದರೆ ತನ್ನ ಅಂಗಉಪಾಂಗಗಳಿಗೂ ಉಟ್ಟ ಸೀರೆಗೂ ಒದಗಿದ್ದ ಸ್ಥೂಲಭೌತಿಕ ಪರಿಣಾಮವನ್ನು ಕಂಡು ಅವಳಿಗೆ ಅರ್ಥವಾಗದೆ ಹೆದರಿಕೆಯಾಗಿತ್ತು. ಆಲೋಚಿಸಿದಂತೆಲ್ಲ ಅವಳಿಗೆ ಏನೇನೋ ಅನುಮಾನಗಳೂ ತಲೆಹೊಕ್ಕಿದ್ದುವು. ಆದರೆ ಒಂದು ಮಾತ್ರ ಅವಳ ಧೈರ್ಯಕ್ಕೂ ಸಂತೋಷಕ್ಕೂ ಬೆಂಬಲವಾಗಿತ್ತು: ಅತ್ತೆ ಪಕ್ಕದಲ್ಲಿಯೆ ಮಲಗಿದ್ದಳಲ್ಲಾ! ಅವಳೇ ಬಾಗಿಲು ಮುಚ್ಚಿ ತಾಳ ಹಾಕಿಕೊಂಡಳಷ್ಟೆ? ಮನುಷ್ಯರು ಯಾರೂ ಒಳಗೆ ಬರಲು ಸಾಧ್ಯವೇ ಇಲ್ಲ! ಆದ್ದರಿಂದ ಬಂದಿದ್ದಾತನು, ತನಗೆ ಸ್ಪಷ್ಟವಾಗಿ ಆಗಿದ್ದ ಅನುಭವದಂತೆ, ತನ್ನ ತೀರಿಕೊಂಡ ಗಂಡ ನಾಗಣ್ಣನೇ ಆಗಿರಬೇಕು!
“ಹಂಗಾರೆ ನಾಗಜ್ಜಿ ನಿನ್ನ ಮಗ್ಗುಲಾಗೇ ಮನಗಿತ್ತು?” ಎಲ್ಲವನ್ನೂ ಆಲಿಸಿದ ಚಿನ್ನಮ್ಮ ಇತ್ಯರ್ಥ ಹೇಳುವ ಮುನ್ನ ಕೇಳಿದ್ದಳು.
“ಹೌದಕ್ಕಾ!” ಸಮರ್ಥಿಸಿದಳು ನಾಗಕ್ಕ.
“ನಿಜ ಅಲ್ಲ ಕಣೇ. ಸಪ್ನಾನೆ ಇರಬೇಕು. ನಂಗೂ ಸಪ್ಪನದಲ್ಲಿ ನನ್ನವ್ವ ಬರ್ತಿತ್ತು…. ನಿಜ ಆಗಿದ್ದರೆ ನಾಗಜ್ಜಿಗೆ ಎಚ್ಚರ ಆಗ್ದೆ ಇರ್ತಿತ್ತೆ?…. “
ನಿಜ ಎಂದು ಸಾಧಿಸುವುದಕ್ಕೆ ಕೊಡಬಹುದಾಗಿದ್ದ ಸಾಕ್ಷಿಗಳೆಲ್ಲ ಅವಾಚ್ಯವಾಗಿದ್ದು, ಚಿನ್ನಮ್ಮಗೆ ಅಗ್ರಾಹ್ಯವೂ ಆಗಿದುದ್ದರಿಂದ ನಾಗಕ್ಕ ಸುಮ್ಮನಾದಳು.
“ಎಲ್ಲಿ ಹೋದ್ರೇ ಅವರಿಬ್ಬರೂ? ಇಷ್ಟೇ ಏನೇ ಹೆರಕಿದ್ದು, ಏ ಸುಬ್ಬೀ?” ಮನೆಯಿಂದ ಗುಡ್ಡ ಹತ್ತಿ ಬಂದಿದ್ದ ಚಿನ್ನಮ್ಮನ ಅಜ್ಜಿ ಸೊಂಟಗೈಯಾಗಿ ನಿಂತು ಬುಟ್ಟಿಯ ಕಡೆ ನೋಡುತ್ತಾ ಕೇಳಿದಳು.
“ಅಲ್ಲೆಲ್ಲೊ ಮಟ್ಟಿನ ಹಿಂದೆ ಮಾತಾಡ್ತಾ ಕೂತಾರೆ…. ನಾನೊಬ್ಬಳೆ ಎಷ್ಟು ಅಂತಾ ಹೆರಕ್ಲಿ?” ಸುಬ್ಬಿ ಸ್ವಲ್ಪ ಅಸಮಾಧಾನ ಧ್ವನಿಯಿಂದಲೆ ಹೇಳಿದಳು!
ಅಜ್ಜಿಯ ಪ್ರಶ್ನೆ ಮತ್ತು ಸುಬ್ಬಿಯ ಉತ್ತರ ಎರಡನ್ನೂ ಆಲಿಸಿ ಮರೆಯಿಂದ ನಾಗಕ್ಕನೊಡನೆ ಹೊರಗೆ ಬಂದ ಚಿನ್ನಮ್ಮ “ಇಷ್ಟೊತ್ತಿನ ತನಕಾ ಹೆರಕ್ತಾನೇ ಇದ್ದೆವು, ಅಜ್ಜಿ, ಈಗ ತಾನೆ ಇಲ್ಲಿ ಕೂತಿದ್ದು, ನೆಳ್ಳಲ್ಲಿ ಸ್ವಲ್ಪ ದಣಿವಾರಿಸಿಕೊಳ್ಳಾಕೆ.” ಎಂದು ಸುಬ್ಬಿಯ ಕಡೆ ತಿರುಗಿ ಸಿಡುಕಿದಳು “ಮಾತಾಡ್ತಾ ಕೂತಿದ್ದಂತೆ? ನೀನು ಕೂತೂ ಕೂತೂ ಏಳ್ತಿದ್ಯೆಲ್ಲಾ? ನಾನೇನು ನೋಡ್ಲಿಲ್ಲಾ ಅಂತ ಮಾಡೀಯೇನು?”
ನಾಗಕ್ಕ ಪಿಸುಮಾತಿನ ಕೆಳದನಿಯಲ್ಲಿ ಚಿನ್ನಮ್ಮಗೆ ಹೇಳಿದಳು “ಕಣ್ಣು ಮೂಗು ಒರಸಿಕೊಳ್ಳೆ; ಅಜ್ಜಮ್ಮ ನೋಡ್ತಾರೆ.”
ಇಬ್ಬರೂ ತಮಗರಿವಿಲ್ಲದೆಯೆ ಸಂವಾದ ಕಾಲದಲ್ಲಿ ಅತ್ತಿದ್ದರು. ಅದರ ಗುರುತು ಸಿಗಬಾರದೆಂದು ಇಬ್ಬರೂ ಬೆವರು ಒರೆಸಿಕೊಳ್ಳುವ ರೀತಿಯಲ್ಲಿ ಕಣ್ಣು ಮೂಗು ಮುಖ ಎಲ್ಲವನ್ನೂ ಗೊಬ್ಬೆ ಸೆರಗಿನಿಂದ ಒರಸಿಕೊಂಡರು.
ಆದರೂ ಚಿನ್ನಮ್ಮ ಹತ್ತಿರಕ್ಕೆ ಬಂದಾಗ ವಯಸ್ಸಿನ ದೆಸೆಯಿಂದ ದೃಷ್ಟಿ ಮಂದವಾಗಿದ್ದ ಅಜ್ಜಿ ಮೊಮ್ಮಗಳ ಮೋರೆಯ ಕಡೆ ಬಿಡದೆ ನೋಡುತ್ತಾ “ಯಾಕೆ? ಕಣ್ಣು ಕೆಂಪಗೆ ಆಗ್ಯದೆಲ್ಲಾ?” ಎಂದವಳು, ತನ್ನ ಪ್ರಶ್ನೆಗೆ ತಾನೇ ಉತ್ತರ ಹೇಳುವಂತೆ ಮುಂದುವರೆಸಿದಳು “ನಮ್ಮ ತ್ವಾಟದ ಮ್ಯಾಲಿನ ಈ ಸೀಂಗೆಉಡಿ ಕಾಯಿ ಬಾಳ ಘಾಟು ಕಣೇ? ಕುಟ್ತಾ ಇದ್ರೆ, ಮನೇಲಿ ಎಲ್ಲಿದ್ರೂ ಸೀನೀ ಸೀನೀ ಸಾಕಾಗಿ ಹೋಗ್ತದೆ!…. ನಮಗೇನು ಒಂದು ಚರ್ಷಕ್ಕೆಲ್ಲಾ ನಾಕು ಕೊಟ್ಟೆ ಸೀಂಗೆಬುತ್ತಿ ಆದ್ರೆ ಸಾಕಾಗಿ ಹೋಗ್ತದೆ…. ಎಲ್ಲಿ ಹೋದ್ನೆ ಅಂವ, ಆ ಬಾಗೀ ಗಂಡ?….”
“ಇಲ್ಲೇ ಕೂತೀನ್ರಮ್ಮಾ!” ಪೊದೆಯ ಮರೆಯಿಂದ ಮೊಡಂಕಿಲ ಕೂಗಿದನು.
“ಏನೋ? ಹೊತ್ತಿನ್ನೂ ಸುಮಾರು ಮ್ಯಾಲೆ ಅದೆ; ಆಗ್ಲೆ ಇಳಿದುಬಿಟ್ಯೇನೋ?… ಹೋಗ್ಲಿ ಬಾ. ಒಂದೀಟು ಬ್ಯಾಗ ಬ್ಯಾಗ ಒಟ್ಟುಮಾಡಿ ಮನೇತನಕಾ ತಂದು ಕೊಟ್ಟಿಡು…. ನಿನ್ನ ಹೆಂಡ್ತೀಗೆ ಹೇಳೋ, ಒಂದು ದಿನಾ ಬಂದು ಕುಟ್ಟಿ ಕೊಡಾಕೆ….”
ಇನ್ನೂ ಕಪ್ಪಾಗಲು ಸುಮಾರು ಹೊತ್ತಿದರೂ ಪಡುವಣ ಬಾನಿನಲ್ಲಿ ಬೈಗುಗೆಂಪಿನ ಛಾಯೆ ಆಗಲೆ ಮೈದೋರಿತ್ತು. ಅವರಿದ್ದ ಸ್ಥಾನಕ್ಕೆ ಗುಡ್ಡದ ನೆತ್ತಿಗಾಡಿನ ದಟ್ಟ ನೆಳಲು ಇರುಳಿನ ಮಂಚೂಣಿಯಂತೆ ಕವಿಯತೊಡಗಿತ್ತು. ಚಿನ್ನಮ್ಮ ಅದುವರೆಗೂ ಗಮನಿಸಿಯೆ ಇರಲಿಲ್ಲ: ಗೊತ್ತು ಕೂರಲು ನೆರೆಯುತ್ತಿವೆ ಹಕ್ಕಿಹಿಂಡು! ಎಷ್ಟು ಹಕ್ಕಿಗಳಿವೆ ಈ ಕಾಡಿನ ಸೆರಗಿನಲ್ಲಿ? ಯಾವ ಯಾವ ತರದ ಹಕ್ಕಿ? ಛೆ ಛೆ ಛೆ ಎಷ್ಟು ಬಣ್ಣ? ಒಂದೊಂದರ ಕೂಗೂ ಒಂದೊಂದು ತರ! ಆ ಸಿಳ್ಳು ಹಾಕುವ ನೇಲುಪುಕ್ಕದ ಕರಿಹಕ್ಕಿ? ಅವಳಿಗೆ ಗೊತ್ತು:  ಮುಕುಂದಯ್ಯ ತೋರಿಸಿದ್ದ; ಅದು ಕಾಜಾಣ! ಅದೆಂಥ ಹಕ್ಕಿಯೊ ಅದು, ಪಳಪಳ ಹೊಳೆಯುತ್ತಿದೆ, ಬಿಸಿಲುಬಿದ್ದ ಬಳೆಯ ಕಣ್ಣು ಹೊಳೆದ ಹಾಗೆ? ಈಗ ಹಾರಿಹೋಗಿದ್ದು: ಗಿಣಿ ಹಿಂಡು! ಅಕ್ಕೋ ಅದೇ ಕಾಮಳ್ಳಿ ಹಿಂಡು! ಇದು ಪಿಕಳಾರ: ಆವಿತ್ತು ಕೋಣೂರಿನಲ್ಲಿ ಕಣದ ಹತ್ತಿರ ಮಟ್ಟಿನಲ್ಲಿ ಗೂಡುಕಟ್ಟಿ ಮರಿ ಮಾಡಿತ್ತಲ್ಲಾ ಅದೇ! ಛೆ ಛೆ ಛೆ ಛೆ ಎಷ್ಟು ಹಕ್ಕಿ! ಅವೆಲ್ಲವೂ ಒಟ್ಟುಲಿದು ಕಾಡೆಲ್ಲಾ ಗಿಲಿಗಿಚ್ಚಿ ಆಡಿಸಿದ ಹಾಂಗಿದೆಯಲ್ಲಾ!
*****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ