ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-19

          ಐತನಿಗೆ ಅವನ ಹೆಂಡತಿಯನ್ನು ಬಿಟ್ಟು ಅವನೊಬ್ಬನೆ ಬಂದಿದ್ದ ಅಪೂರ್ವಘಟನೆಯ ವಿಚಾರದಲ್ಲಿ ವ್ಯಂಗ್ಯಪ್ರಶ್ನೆ ಹಾಕಿ, ಹಕ್ಕಲಿನಿಂದ ಹೊಲಗೇರಿಯ ಕಡೆಗೆ ಬೇಗಬೇಗನೆ ಕಾಲು ಹಾಕಲು ತೊಡಗಿದ್ದ ಗುತ್ತಿಯ ಮನದಲ್ಲಿ ನಾನಾ ಭಾವತರಂಗಗಳು ಏಳತೊಡಗಿದುವು:

“ಎಲಾ ಇವನ್ನ! ಗಟ್ಟದ ತಗ್ಗಿನಿಂದ ಬಂದ ಈ ಬಿಲ್ಲೋರ ಕುರುದೆ, ನನಗಿಂತಲೂ ಸಣ್ಣವನಾಗಿ ಕಾಣ್ತಾನೆ, ಇನ್ನೂ ಮೀಸೆ ಹುಟ್ಟದ ಬೋಳ, ಆಗಲೆ ಆ ಹುಡುಗೀನ ಕಟ್ಟಿಕೊಂಡು ಏನು ದಿಂಗಾಗಿದಾನೆ! ಅವಳನ್ನ ಒಂದು ನಿಮಿಸಾನೂ ಬಿಟ್ಟಿರ ಒಲ್ಲನಂತೆ!….”
ಗುತ್ತಿಗೆ ಒಳಗಣ್ಣಿಗೆ ತಿಮ್ಮಿಯ ಚಿತ್ರ ಮೋಹಕವಾಗಿ ಕಟ್ಟಿ ನಿಂತಿತು. ಅವಳ ಆಕಾರ ರತಿಯ ಮುಂದೆ ಅವನ ಆಶಾಮನ್ಮಥ ಸೋತುಹೋದನು. ಆ ಕಣ್ಣು, ಆ ಹುಬ್ಬು, ಆ ಮೂಗು, ಆ ಕೆನ್ನೆ, ಆ ತುಟಿ, ಆ ಹಣೆ, ಅವಳ ನಿಲುವಿನ ಭಂಗಿ, ಅವಳ ಮಾತಿನ ಇಂಪು,…. ಇದುವರೆಗೆ ಉಗುರುಬೆಚ್ಚಗಿದ್ದ ಅವನ ಸಾಹಸೋತ್ಸಾಹ ಅವಳನ್ನು ಭಾವಿಸುತ್ತಾ ಭಾವಿಸುತ್ತಾ ಕುದಿನೀರಿನ ಮಟ್ಟಕ್ಕೇರಿತು. ಆ ದಿನವೆ ಯಾವುದಾದರೊಂದು ರೀತಿಯಲ್ಲಿ ನಿರ್ಣಾಯಕವಾಗಿ ವಿಸ್ತರಿಸಿಯೇ ಬಿಡುವ ದೃಢಹಠ ರಾಗೋದ್ರೇಕದಿಂದ ವೇಗ ವೇಗವಾಗಿ ಕಾಲುಹಾಕಿದನು: “ ಎಲಾ ನಾನೇನು ಈ ಐತ ಹುಡುಗನಿಗಿಂತ ಕಳಪೆಯಾಗಿ ಹೋದೆನೆ?”
ಗುತ್ತಿ ಹೊಲೆಗೇರಿಯ ವಲಯದೊಳೆಗೆ ಪ್ರವೇಶಿಸುತ್ತಿದ್ದಂತೆಯೆ, ತನ್ನ ಹೆಣ್ಣು ಗಂಡು ಶುನಕ ಪರಿವಾರ ಸಮೇತನಾಗಿ ಹುಲಿಯ ಅವನನ್ನು ಎದುರುಗೊಂಡಿತು. ಆದರೆ ಎಷ್ಟು ಬಾಲ ಅಳ್ಳಾಡಿಸಿದರೂ ಮಲಗಿಸಿದರೂ ಯಜಮಾನನಿಂದ ಯಾವ ವಿಶ್ವಾಸದ ಅಥವಾ ಮುದ್ದಿನ ಸೂಚನೆಯೂ ಹೊರಹೊಮ್ಮಲಿಲ್ಲ. ಅವನ ಮುಖದ ಕಡೆ ನೋಡಿ, ಅದರ ಉಗ್ರಗಭೀರ ಮುದ್ರೆಯಿಂದ ಏನನ್ನೊ ಅರ್ಥಮಾಡಿಕೊಂಡಂತೆ ತನ್ನ ಉಲ್ಲಾಸಭಂಗಿಯನ್ನೆಲ್ಲ ತ್ಯಜಿಸಿ, ಪಕ್ಕಕ್ಕೆ ಸರಿದು, ಹಿಂಬಾಲಿಸತೊಡಗಿತ್ತು ಆ ಸ್ವಾಮಿನಿಷ್ಠ ಪ್ರಾಣಿ?
ಹೊಲೆಗೇರಿಯ ಅಗ್ರಸ್ಥಾನದಲ್ಲಿದ್ದು, ಎದ್ದುಕಾಣುವಂತಿದ್ದ, ತಳವಾರ ದೊಡ್ಡಬೀರನ ಗುಡಿಸಲು ಸಾಲಕೃತವಾಗಿದ್ದುದನ್ನು ತಟಕ್ಕನೆ ಗ್ರಹಿಸಿತು ಗುತ್ತಿಯ ದೃಷ್ಟಿ. ಎಂದಿನಂತೆ ಬಿಡಾರದ ಸುತ್ತ ಕಸೆ ಕೊಳಕು ಇರದೆ, ಸೆಗಣಿಹಾಕಿ ಸಾರಿಸಿ ಗುಡಿಸಿ ಚೊಕ್ಕಟವಾಗಿತ್ತು. ಅದಕ್ಕಿಂತಲೂ ಅತಿಶಯವಾಗಿ ಕಣ್ಣಿಗೆ ಹೊಡೆಯುವಂತೆ ಕಂಡಿದ್ದೆಂದರೆ ಬಿಡಾರದ ಗೋಡೆಗಳಿಗೆ ಬಳಿದಿದ್ದ ಜೇಡಿ, ಮತ್ತು ತೆಣೆಗೂ ತೆಣೆಯ ಕಂಬಗಳಿಗೂ ಬಳಿದಿದ್ದ ಕೆಮ್ಮಣ್ಣಿನ ಮತ್ತು ಜೇಡಿಯ ಪಟ್ಟೆಗಳು! ತಿಮ್ಮಿಯ ಲಗ್ನದ ನಿಶ್ಚಯದ ವಿಚಾರವಾಗಿ ಗುತ್ತಿಯ ತಲೆಯಲ್ಲಿದ್ದಿರಬಹುದಾದ ಕೊಟ್ಟ ಕೊನೆಯ ಸಂದೇಹದ ಛಾಯೆಯೂ ಅಳಿಸಿಹೋಯಿತು.
ನೆಟ್ಟಗೆ ಗುಡಿಸಿಲಿಗೆ ನಡೆದು, ತೆಣೆಗೆ ಹತ್ತಿ, ಕೈಯಲ್ಲಿದ್ದ ಬಗನಿಯ ದೊಣ್ಣೆಯನ್ನು ಸೊಂಟದ ಒಡ್ಯಾಣದಲ್ಲಿದ್ದ ಕೆಲಸದ ಕತ್ತಿಯನ್ನೂ ಹೆಗಲ ಮೇಲಿದ್ದ ಕಂಬಳಿಯನ್ನೂ ಜಗಲಿಯ ಹೆಸರು ಪಡೆದಿದ್ದು ಆ ಗುಡಿಸಿಲಿನ ತೆರೆದ ಮುಂಭಾಗದಲ್ಲಿ ಎಂದಿನಂತೆಯೆ ಇಡುವಲ್ಲಿ ಇಟ್ಟು, ಆಯಾಸಗೊಂಡವನಂತೆ ಉಸ್ಸೆಂದು ಕುಳಿತನು.
ಜನ ಖಾಲಿಯಾಗಿ, ಕೇರಿಯೇ ನಿಃಶಬ್ದವಾಗಿತ್ತು. ಆದರೆ ಗುತ್ತಿಯ ಅತ್ತೆಯ ಬಿಡಾರದಲ್ಲಿ ಸದ್ದಿಲ್ಲದಿರುವಿಕೆ ಶಕುನಪೂರ್ಣವಾಗಿತ್ತು.
“ ಅತ್ತೇ, ಮನೇಲಿ ಇದ್ದೀಯಾ?” ಕರೆದನು ಗುತ್ತಿ.
ಸೇಸಿ ಒಳಗಣಿಂದಲೆ “ಯಾರೂ?” ಎಂದು ಕೇಳಿ, ತನ್ನ ಮಗಳಿಗೆ “ಯಾರು? ಹೋಗಿ ನೋಡೆ” ಎಂದದ್ದೂ ಗುತ್ತಿಗೆ ಕೇಳಿಸಿ, ಆ ಕಡೆಯೆ ಕಣ್ಣಾಗಿದ್ದನು.
ತಿಮ್ಮಿ ಯಾವ ವಿಶೇಷ ವ್ಯಕ್ತಿಯನ್ನೂ ನಿರೀಕ್ಷಿಸದೆ, ಯಾರಾದರೂ ಕೇರಿಯವರನ್ನೇ ಕಾಣುತ್ತೇನೆ ಎಂಬ ದೈನಂದಿನ ಸಾಧಾರಣ ಪ್ರಜ್ಞೆಯಿಂದ ಜಗಲಿಗೆ ದಾಟಿ, ಎರಡು ಹೆಜ್ಜೆ ಮುಂಬರಿದವಳು, ತನ್ನನ್ನೆ ನಟ್ಟದಿಟ್ಟಿಯಿಂದ ನೋಡುತ್ತಿದ್ದ ಗುತ್ತಿಯ ಕಣ್ಣಿಗೆ ತನ್ನ ಕಣ್ಣು ತಗುಲಿ, ಕಲ್ಲಾದಂತೆ ಬೆರಗುಹೊಡೆದು ನಿಂತುಬಿಟ್ಟಳು! ಅವಳಿಗೆ ಒಂದು ಕ್ಷಣ ಉಸಿರೇ ಕಟ್ಟಿದಂತಾಯ್ತು. ಅಲ್ಲಿ ಕುಳಿತಿದ್ದವನು ತನ್ನ ತಾಯಿಯ ಅಣ್ಣನ ಮಗ ಸಿಂಬಾವಿ ಬಾವ, ಗುತ್ತಿ ಎಂಬುದನ್ನು ಅವಳ ಪ್ರಜ್ಞೆ ಗ್ರಹಿಸಿ, ಬುದ್ಧಿ ಒಳಕೊಂಡು, ಭಾವ ಸ್ಥಿಮಿತಕ್ಕೆ ಬರಬೇಕಾದರೆ ಒಂದೆರಡು ನಿಮಿಷಗಳ ಬೇಕಾಯಿತು. ಖೇದ, ಪಶ್ಷಾತ್ತಾಪ, ಮರುಕೊಳಿಸಿದ ಆಶೆ, ಬಹುಶಃ ಪಾರಾರಬಹುದು ಎಂಬ ಧೈರ್ರ‍, ಅಯ್ಯೋ ಅದೆಲ್ಲ ಎಲ್ಲಿ ಸಾಧ್ಯ ಎಂಬ ಸರ್ವನಾಶಭಾವದ ನಿರಾಶೆ-ಇವೆಲ್ಲವೂ ಮಿಂಚುಗಳು ಸಂಚರಿಸುವಂತೆ ಅವಳ ಹೃದಯ ಮನಸ್ಸುಗಳಲ್ಲಿ ಹಾಸುಹೊಕ್ಕಾಗಿ ಚಲಿಸಿ, ಒಂದು ವಿಸ್ಮರತಿ ಸದೃಶ ಜಾಲವಸ್ತುವನ್ನೆ ನೆಯ್ದು, ಅವಳ `ಗ್ಯಾನ’ವನ್ನೆಲ್ಲ ಮುಸುಗಿ ಮಬ್ಬುಗೊಳಿಸಿದುವು.
ಮಗಳು ಏನನ್ನೂ ಕೂಗಿ ಹೇಳದಿದ್ದುದನ್ನೂ ಹಿಂತಿರುಗಿಯೂ ಬಾರದಿದ್ದುದನ್ನೂ ನೋಡಿ, ಸೇಸಿ “ಯಾರೇ ಅದೂ? ಎಲ್ಲಿ ಹೋದೆಯೆ, ತಿಮ್ಮೂ?” ಎಂದು ತನ್ನ ಅವ್ವ ಕೂಗಿದ ಮೇಲೆಯೆ ಅವಳಿಗೆ ಎಚ್ಚರವಾದಂತಾಗಿ, ಹಿಂತಿರುಗಿ ಒಳಗೆ ಓಡಿ, ಏದುತ್ತಾ ಬಾಯಾರಿದವಳಂತೆ ಎಂಜಲು ನುಂಗುತ್ತಾ, ತುಟಿಯನ್ನು ನಾಲಗೆಯಿಂದ ಸವರಿಕೊಳ್ಳುತ್ತಾ ತೊದಲಿದಳು “ಅವನೆ! ಅವನೆ ಬಂದಾನೆ! ಸಿಂಬಾವಿ ಬಾವ!”
“ಯಾರೇ? ಗುತ್ತಿ ಏನೇ?”
ಮಗಳು ತಲೆದೂಗಿ ಹೌದೆಂದು ಸೂಚಿಸಲು, ಸೇಸಿ ತಟಕ್ಕನೆ ತನ್ನ ಕೈಲಿದ್ದ ಕೆಲಸ ನಿಲ್ಲಿಸಿ, ಒಂದು ಕ್ಷಣ ಆಲೋಚನಾಮಗ್ನಳಾದಂತೆ ಕುಳಿತು, ಸುಯ್ಯುತ್ತಾ ಮೇಲೆದ್ದಳು, ಸೊಂಟಗೈಯಾಗಿ ಬಾಗಿ ಮೆಲ್ಲಗೆ ಜಗಲಿಗೆ ಹೋದಳು, ಮಗಳಿಗೆ ಕಣ್ಣಿನಲ್ಲಿಯೇ ಸನ್ನೆಮಾಡಿ.
“ಮನೇಕಡೆ ಎಲ್ಲ ಹ್ಯಾಂಗಿದ್ದಾರೋ?” ಅತ್ತೆಯ ದನಿಯಲ್ಲಿ ಏನೊ ಅಂಜಿಕೆ,
“ಇದಾರೆ…. ಹಾಂಗೆ!” ಗುತ್ತಿ ಉದಾಸೀನದಿಂದ ಉತ್ತರಿಸಿ, ಮತ್ತೆ ಉಪಚಾರದ ವ್ಯಂಗ್ಯಭಂಗಿಯಲ್ಲಿ “ ಹ್ಯಾಂಗಿದೀರಿ….ನೀವೆಲ್ಲ?” ಎಂದನು.
“ಕಾಣ್ತದಲ್ಲ; ಇರೋದಪ್ಪಾ ಹೀಂಗೆ”.
“ಹ್ಞೂ ಕಾಣ್ತಾ ಇದೆಯಲ್ಲಾ!” ಗುತ್ತಿ ಮನೆಯ ಗೋಡೆ ತೆಣೆಗಳಿಗಾಗಿದ್ದ ಜೇಡಿ ಮಣ್ಣಿನ ಅಲಂಕಾರವನ್ನೂ ಅಂಗಳಕ್ಕೆ ಸಾರಿಸಿದ್ದ ಸೆಗಣೆಯ ಚೊಕ್ಕತನವನ್ನೂ ಗುಡಿಸಿಲಿಗೆ ಹೊದೆಸಿ, ಅಂಚನ್ನು ಬಟ್ಟಗೆ ಕತ್ತರಿಸಿದ್ದ ಹೊಸ ಹುಲ್ಲನ್ನೂ ಕಣ್ಣಿಂದಲೆ ನಿರ್ದೇಶಿಸಿದನು. ತನ್ನ ಮಗಳ ಮದುವೆಯ ಪೂರ್ವಸಿದ್ಧತೆಯನ್ನು ಕುರಿತು ವ್ಯಂಗ್ಯವಾಡಿದ ಸೋದರಳಿಯನಿಗೆ ಅತ್ತೆ ಕ್ಷಮೆ ಕೇಳುವಂತೆ “ಧಣೇರು ಹಿರೇರು ಸೇರಿ ನಿಶ್ಚಯ್ಸಿಬಿಟ್ಟಾರೆ! ನಾವು ಹೆಣ್ಣು ಹೆಂಗಸರು ಏನು ಮಾಡಾಕಾಗ್ತದಪ್ಪಾ? ನಮ್ಮನ್ನೇನು ಕೇಳ್ತಾರಾ? ಕೋಳಿ ಕೇಳಿ ಕಾರಾ ಕಡೀತಾರಾ?” ಎಂದು ಹೇಳುತ್ತಲೆ ಗೊಬ್ಬೆಸೆರಗಿನಿಂದ ಕಣ್ಣೊತ್ತಿಕೊಂಡಳು. ಗುತ್ತಿಗೆ ಗೊತ್ತಿತ್ತು, ಅತ್ತೆಗೆ ತನ್ನ ಮಗಳನ್ನು ಬಚ್ಚನಿಗೆ ಕೊಡುವುದಕ್ಕೆ ಸ್ವಲವೂ ಮನಸ್ಸಿರಲಿಲ್ಲ ಎಂದು, ಅಲ್ಲದೆ ತಿಮ್ಮಿಯನ್ನು ತನಗೇ ಕೊಡುವುದಕ್ಕೆ ಮನಸ್ಸಿದ್ದುದನ್ನೂ ನಾನಾ ರೀತಿಗಳಿಂದ ವ್ಯಕ್ತಪಡಿಸಿಯೂ ಇದ್ದಳು. ತಾನು ತಿಮ್ಮಿಗಾಗಿ ತಂದುಕೊಟ್ಟು ಸಣ್ಣಪುಟ್ಟ ಕಾಣಿಕೆಗಳನ್ನೂ ಹೆಮ್ಮೆಯಿಂದ ಸ್ವೀಕರಿಸಿದ್ದಳು. ಆದರೆ ಗೌಡರ ಜೀತದಾಳಾಗಿ, ಅವರಲ್ಲಿ ಸಾಲಮಾಡಿ, ಅವರಿಗೆ ತನ್ನನ್ನು ಸಂಪೂರ್ಣವಾಗಿ ಮಾರಿಕೊಂಡಿದ್ದ ದೊಡ್ಡಬೀರ ಆ ವಿಚಾರದಲ್ಲಿ ನಿರುಪಾಯನಾಗಿ ಒಡೆಯರ ಆಜ್ಞೆಗೆ ತಲೆಬಾಗಿದ್ದನು.
ಒಡೆಯರಿಗೆ ಬೇಕಾಗಿದ್ದುದು ಜೀತಮಾಡಲು ಒಂದು ಆಳು. ತಮ್ಮ ಹೊಲೆಗೇರಿಯ ಒಂದು ಹೆಣ್ಣನ್ನು ಹೊರಗೆ ಕೊಟ್ಟರೆ ತಮ್ಮ ಕೆಲಸಕ್ಕೆ ಒಂದಾಳು ಖೋತ ಬೀಳುತ್ತದೆ. ಆದ್ದರಿಂದ ಕೇರಿಯ ಹೆಣ್ಣನ್ನು ಕೇರಿಯ ಗಂಡೇ ಮದುವೆಯಾಗಬೇಕು ಎಂಬುದು ಅವರ ಕಟ್ಟಪ್ಪಣೆ. ಬೇರೆ ರೀತಿಯಿಂದ ವರ್ತಿಸಿದರೆ, ಆ ಹೆಣ್ಣು ಇನ್ನೊಬ್ಬ ಬೇರೆ ಹಳ್ಳಿಯ ಕೇರಿಯವನಿಂದ ತಾಳಿಕಟ್ಟಿಸಿಕೊಂಡಿದ್ದರೂ ಸರಿ, ಅವಳನ್ನು ಎಳೆದು, ತರಿಸಿ, ತಾಳಿ ಕೀಳಿಸಿ, ತಮ್ಮ ಕೇರಿಯವನಿಗೇ ಮದುವೆ ಮಾಡಿಸುತ್ತಿದ್ದರೆಂಬುದರಲ್ಲಿ ಸಂದೇಹವಿರಲಿಲ್ಲ. ಅಪ್ಪಿ ತಪ್ಪಿ ಒಡೆಯರ ಇಚ್ಛೆಗೆ ವಿರೋಧವಾಗಿ ನಡೆದವರಿಗೆ ಹಿಂದೆ ಅಂತಹ ಗತಿಯೇ ಒದಗಿತ್ತು. ಕೀಳುಜಾತಿಯವರಿಗೆ ಅವರ ಇಚ್ಛಾನುಸಾರ ಒಲವು ಅಕ್ಕರೆ ಇರುವುದೆಂದರೇನು? ಒಲವು ಅಕ್ಕರೆ ಏನಿದ್ದರೂ ಎಲ್ಲ ಒಡೆಯರ ಲಾಭದ ವಲಯದೊಳಗಿದ್ದು, ಅವರ ಇಚ್ಛಾಧೀನವಾಗಿರಬೇಕು. ಅವರ ಆಜ್ಞೆಯ ಗೆರೆ ದಾಟುವಂತಿರಲಿಲ್ಲ.
“ಕಡೀಗೆ ನೆಂಟರಿಷ್ಟರಿಗೆ ಒಂದು ಮಾತು ತಿಳಿಸಬಾರದಾಗಿತ್ತೆ?” ವ್ಯಂಗ್ಯವನ್ನು ಬಿಟ್ಟು ಅನುಕಂಪೆಗೆ ತಿರುಗಿತ್ತು ಗುತ್ತಿಯ ಸ್ವರ.
“ಎಲ್ಲ ಏನೊ ಗುಟ್ಟುಗುಟ್ಟಾಗಿ ಅವಸರವಸರವಾಗಿ ಮಾಡ್ತಿದಾರಪ್ಪಾ! ನಂಗೊಂದು ತಿಳೀದು. ತಿಮ್ಮಿ ಕಣ್ಣೀರು ಹಾಕ್ತಾ ಕೂತದೆ! ಅಂವ ಬ್ಯಾರೆ, ಸಣ್ಣಗೌಡ್ರು ಸಂಗಡಾನೆ, ಆ ಪಾದ್ರಿ ಜಾತಿಗೆ ಸೇರತಾನೆ ಅಂತಾ ಕೇರೀಲೆಲ್ಲ ಗುಸುಗುಸು! ಜಾತಿಕೆಟ್ಟೋವನಿಗೆ ಕೊಡಾಕೆ ಬದಲಾಗಿ ಬಾವಿಗೆ ಹಾಕಾದು ಲೇಸು. ನೀನು ಬರಲಿ ಇಲ್ಲಾ ಅಂತಾ ತಿಮ್ಮು ಏನು ಮಾಡಾಕೂ ತಿಳೀದೆ…” ಸುಯ್ದು ಹೇಳಿದಳು ಸೇಸಿ “ಏನೇನೋ ಕೆಟ್ಟ ವೇಚ್ನೆ ಮಾಡ್ತಿದ್ಲು….ಅಂತೂ ಸ್ವಾಮಿ ನಿನ್ನೂ ಕಳಿಸಿದ್ಹಾಂಗಾತು! ಇನ್ನು ನೀವುನೀವೆ ಏನು ಮಾಡ್ತೀರೋ ಮಾಡಿ.”
ಸೇಸಿ ಗುತ್ತಿಯನ್ನು ಒಳಗೆ ಕರೆದಳು. ಅವನು, ಹೊಸತನದ ಬಟ್ಟೆ ವಾಸನೆ ಇನ್ನೂ ಹೊಮ್ಮುತ್ತಿದ್ದು, ಗೊಬ್ಬೆಸೆರಗು ಕಟ್ಟಿ ಉಟ್ಟಿದ್ದ ಹೊಸಸೀರೆಯ ಬರ್ ಬರ್ ಬರ್ ಸದ್ದಿನೊಡನೆ ಕೈ ಬಳೆಗಳ ನಾದವೂ ಸೇರುವಂತೆ, ತುಸು ಸಡಗರದಿಂದಲೆ ತಿಮ್ಮಿ ತಂದಿಟ್ಟ ಚೊಂಬಿನ ನೀರಿನಿಂದ ಅಂಗಳಕ್ಕೆ ಹಾಕಿದ್ದ ಮೆಟ್ಟಲು ಕಲ್ಲಮೇಲೆ ಕಾಲು ತೊಳೆದುಕೊಂಡು ಒಳಗೆ ಹೋದನು.
ತಿಮ್ಮಿ ಒಂದು ಕರಟಕ್ಕೆ ಮಡಕೆಯಲ್ಲಿ ತುಂಬಿಟ್ಟಿದ್ದ ಹೆಂಡ ಬೊಗ್ಗಿಸಿದಳು. ಒಂದು ಬಾಳೆಯ ಕೀತಿನಲ್ಲಿ ಜೀರಿಗೆ ಮೆಣಸಿನಕಾಯಿಯ ಖಾರ ಹಾಕಿ ಹುರಿದಿದ್ದ ಉಪ್ಪು ತುಂಡನ್ನು ನೆಂಚಿಕೊಳ್ಳಲು ತಂದಿಟ್ಟಳು.
ಆ ಉಪ್ಪುತುಂಟು ದನದ ಮಾಂಸದ್ದು. ಗೌಡರ ಮನೆಯ ಒಂದು ದನವನ್ನು ಹುಲಿ ಹಿಡಿದು, ಅದರ ಗಂಟಲನ್ನು ಮುರಿದು ರಕ್ತ ಕುಡಿದು, ಬಡುವನ್ನು ಕಾಡಿಗೆ ಎಳೆದುಕೊಂಡು, ಹೋಗಿ, ಗುರಗಿ ಹುಳುವಿನಲ್ಲಿ ಮುಚ್ಚಿಟ್ಟಿತ್ತು. ತರುವಾಯ ಸಾವಕಾಶವಾಗಿ ಬಂದು ಮಾಂಸಭಕ್ಷಣೆ ಮಾಡುವ ಉದ್ದೇಶದಿಂದ, ಅದನ್ನು ಪತ್ತೆಹಚ್ಚಿದ ಬೆಟ್ಟಳ್ಳಿ ಹೊಲಗೇರಿಯವರು ಆ ಬಡುವಿನ ಬಾಡನ್ನೆಲ್ಲ ಕೊಯ್ದು ತಮ್ಮ ತಮ್ಮ ಕಂಬಳಿಗಳಲ್ಲಿಯೇ ತುಂಬಿ ಹೊತ್ತು ತಂದು, ಹುಲಿಗೆ ತಾವು ಕಡಿದು ತರಲಾದಿದ್ದ ದೊಡ್ಡದೊಡ್ಡ ಎಲುಬುಗಳನ್ನು ಮಾತ್ರ ಬಿಟ್ಟಿದ್ದರು! ಗೋಮಾತೆಯ ಚರ್ಮವನ್ನಂತೂ ವಾಡಿಕೆಯಂತೆ ಕುದರೆ ತಟ್ಟಿನ ಮೇಲೆ ಸವಾರಿ ಮಾಡಿಕೊಂಡು ಬಂದ ಮೇಗರವಳ್ಳಿ `ಕರ್ಮಿನು ಸಾಬರ’ ಕಡೆಯ `ಅಜ್ಜೀ ಸಾಬರಿಗೆ’ ಮಾರಿದ್ದರು!
ಅದರ ಪೂರ್ವೇತಿಹಾಸದ ಅರಿವಾಗಲಿ ಪ್ರಜ್ಞೆಯಾಗಲಿ ಒಂದಿನಿತೂ ಗಮನಕ್ಕೆ ಬಾರದ ಗುತ್ತಿ ನಾಲಗೆಗೆ ಚುರುಗುಟ್ಟುತ್ತಿದ್ದ ಹುಳಿಹೆಂಡವನ್ನು ಹೀರಿ, ಉಪ್ಪು ತುಂಡುಗಳನ್ನು ಜಗಿದು ಚಪ್ಪರಿಸತೊಡಗಿದನು. ಅತ್ತೆ ಅಳಿಯರ ಮಾತು ಮಾತ್ರ ಗುಸುಗುಸು ಸಾಗಿತ್ತು. ತಿಮ್ಮಿ ಗುತ್ತಿಗೆ ತುಸು ದೂರದಲ್ಲಿ ಹಿಂದುಗಡೆ, ತನ್ನ ಮುಖ ಅವನಿಗೆ ಕಾಣದಂತೆ, ತಾನು ಮಾತ್ರ ಅವನ ಮುಖವನ್ನು ಗಮನಿಸುವಂತೆ, ತನ್ನ ತಾಯಿಯ ಮುಖಕ್ಕೆ ನೇರ ಎದುರಾಗಿರುವಂತೆ ನಿಂತಿದ್ದಳು. ಮಾತಿನ ನಡು ನಡುವೆ ಕಣ್ಣುಮಿಟುಕಿಸಿಯೊ, ತುಟಿ ಊದಿಸಿಯೊ. ಕೈ ಅಳ್ಳಾಡಿಸಿ ಬಳೆ ಸದ್ದು ಮಾಡಿಯೊ, ತನ್ನ ತಾಯಿಗೆ ಸನ್ನೆ ಸಲಹೆ ನೀಡುತ್ತಿದ್ದಳು.
ಸಂವಾದ ಮುಂದುವರಿದಂತೆಲ್ಲ ಮೂವರ ರಕ್ತಪರಿಚಲನೆಯಲ್ಲಿ ವೇಗೋತ್ಕರ್ಷವಾಗತೊಡಗಿತ್ತು. ಅದರ ಪರಿಣಾಮ ಒಮ್ಮೊಮ್ಮೆ ದೃಗ್ಗೋಚರವಾಗುವ ಬಹಿಃಕ್ರಿಯೆ ಮತ್ತು ಅಂಗವ್ಯಾಪಾರಾದಿಗಳಲ್ಲಿಯೂ ಹೊರದೋರುತ್ತಿತ್ತು. ತಿಮ್ಮಿ ಒಮ್ಮೆ ತನ್ನ ಮೂಕಸಂದೇಶದ ಸಾಮರ್ಥ್ಯ ಸೋತು ಬಿಕ್ಕಿಬಿಟ್ಟಿದ್ದಳು; ಒಮ್ಮೆ ಒಲ್ಲೆ ಎಂದು ತನ್ನವ್ವನಿಗೆ ತನ್ನ ನಿರ್ಧಾರವನ್ನು ಸೂಚಿಸಲು ತಲೆ ಕೊಡಹಿ, ಅವಳು ಮದುಮಗಳಾಗುವ ಪೂರ್ವಚಿನ್ಹೆಯಾಗಿ ತೊಟ್ಟಕೊಂಡಿದ್ದ, ಬಹುಪಾಲು ಕಡ ತಂದಿದ್ದ, ಸರಗಳೆಲ್ಲ ಸದ್ದಾಗಿದ್ದುವು; ಒಂದು ಸಾರಿಯಂತೂ, ತಾನು ಗುತ್ತಿಯೊಡನೆ ಓಡಿಹೋಗಿಯೆ ಹೋಗುತ್ತೇನೆ ಎಂಬ ದೃಢ ಹಠವನ್ನು ತನ್ನ ಬಾಯಲ್ಲಿಯೆ ಮೆಲ್ಲಗೆ ಹೇಳಿಕೊಳ್ಳುತ್ತಿರಲು. ಆ ವಾಕ್ಯದ ಕೊನೆಯ ಭಾಗಕ್ಕೆ ಬರುವ ಹೊತ್ತಿಗೆ ತಾಳ್ಮೆ ತಪ್ಪಿ ಮೈಮರೆತು ‘….ಗ್ತೀನಿ!’ ಎಂಬುದನ್ನು ಗಟ್ಟಿಯಾಗಿ ಉಚ್ಚರಿಸಿ, ಗುತ್ತಿ ತಿರುಗಿನೋಡುವಂತೆ ಮಾಡಿದ್ದಳು. ಸೇಸಿಯ ಬಹಿರ್ವ್ಯಾಪಾರ ಅಷ್ಟು ರಭಸವಾಗಿ ಪ್ರಕಟಿತವಾಗಿರಲಿಲ್ಲ. ಆದರೆ ಸುಯ್ಲು, ಕಣ್ಣೊರಸಿಕೆ, ಎದೆಯ ಏರಿಳಿತ, ಸಿಂಬಳ ಸುರಿಯುವಿಕೆ, ಹಣೆ ಚಚ್ಚಿಕೊಳ್ಳುವಿಕೆ, ಕಿವಿಯ ಅಲೆಯನ್ನು ಅನಾವಶ್ಯಕವಾಗಿ ಉಜ್ಜಿಕೊಳ್ಳುವಿಕೆ, ಬೆವರೊರಸಿಕೊಳ್ಳುವಿಕೆ ಇವು ಅವಳ ಹೃದಯದ ಸಂಕಟಕ್ಕೂ ಮನಸ್ಸಿನ ತುಯ್ದಾಟಕ್ಕೂ ಕನ್ನಡಿ ಹಿಡಿದಿದ್ದುವು. ಬಾಡು ತಿನ್ನುವ ಮತ್ತು ಹೆಂಡ ಕುಡಿಯುವ ಒಂದು ಬಹಿಃಕ್ರಿಯೆಯಲ್ಲಿ ಆಗಲೆ ತೊಡಗಿದ್ದ ಗುತ್ತಿ, ಹೊಸದಾಗಿ ಬೇರೆಯ ತರಹದ ಕ್ರಿಯೆಯಿಂದ ತನ್ನ ಆಂತರ್ರ‍ದ ಆಂದೋಲಗಳನ್ನು ಪ್ರಕಟಪಡಿಸಲಾರದೆಯೊ ಮತ್ತು ಹಾಗೆ ಪ್ರಕಟಪಡಿಸುವ ಗೋಜಿಗೆ ಹೆಚ್ಚಾಗಿ ಹೋಗದೆಯೂ, ತಾನು ಕೈಕೊಂಡಿದ್ದ ಕ್ರಿಯೆಯ ತೀವ್ರ ಮಂದಾದಿ ಗತಿಯ ರಭಸತಾರತಮ್ಯದಿಂದಲೆ ತನ್ನ ಭಾವಗಳಿಗೆ ಅಭಿವ್ಯಕ್ತಿ ನೀಡಿದ್ದನು. ತಿಂದೂ ಕುಡಿದೂ ಪೂರೈಸಿದೊಡನೆ ಕರಟವನ್ನಲ್ಲಿಯೆ ಪಕ್ಕಕ್ಕೆ ಸರಿಸಿಟ್ಟು, ಸೇಸಿ ಬೇಡಬೇಡವೆಂದರೂ ಬಾಳೆಯ ಕೀತನ್ನು ಎತ್ತಿಕೊಂಡು ತನಗೆ ಸುಪರಿಚಿತವಾಗಿದ್ದ ಕೈಬಾಯಿ ತೊಳೆದುಕೊಂಡು ಉಟ್ಟಬಟ್ಟೆಗೇ ಒರೆಸಿಕೊಂಡನು.
ತಿಮ್ಮಿಗೆ ಹೇಳುವುದನ್ನೆ ಸೇಸಿಯ ಕಡೆಗೆ ತಿರುಗಿ ಹೇಳಿದನು: “ಹಾಂಗಾರೆ ನಾ ಬರತಿನಿ. ಆ ಅರೆಕಲ್ಲಿನ ಹತ್ರ ಕಾರೇಮಟ್ಟಿನ ಬದೀಲಿ, ಹೊಂಡ ಇದೆಯಲ್ಲಾ? ಅಲ್ಲಿರಾ ಕ್ಯಾದಿಗೆ ಹಿಂಡ್ಲ ಹತ್ರ ಮರೇಲಿ ಕೂತಿರತಿನಿ.” ಎಂದವನು ‘ಆಗಬಹುದೇ?’ ಎಂದು ಪ್ರಶ್ನಿಸುವ ರೀತಿಯಲ್ಲಿ ತಿಮ್ಮಿಯನ್ನು ಕಣ್ಣಿಗೆ ಕಣ್ಣಿಟ್ಟು ನೋಡಿದಳು. ಅವಳೂ ಹಾಗೆಯೆ ನೋಡುತ್ತಿದ್ದಳು, ಗುತ್ತಿಯ ಕಣ್ಣನ್ನಲ್ಲ, ಹೃದಯಾಂತರಾಳವನ್ನೆ, ಜೀವವನ್ನೆ! ಎಂಥ ನೋಟಗಳೂ ಅವು? ಗಂಡು ಹೆಣ್ಣು ಘಟಸರ್ಪಗಳು ಎಣೆಯಾಡುವಾಗ ಒಂದನ್ನೊಂದು ಸರಪಣಿ ಸುತ್ತುವಂತೆ ಸುತ್ತಿ ಬಿಗಿಯುವ ಪ್ರಣಯಫಣಿಬಂಧನವೂ ಸಪ್ಪೆಯಾಗುವಂತೆ ಒಂದನ್ನೊಂದು ಆಲಿಂಗಿಸಿದ್ದುವು. ಕೆಂಪಗೆ ಕರಗಿ ದ್ರವವಾದ ಜೀವಗಳೆರಡರ ಚೈತನ್ಯವೆ ಅತ್ತಿಂದಿತ್ತ ಇತ್ತಿಂದತ್ತ ಹೃದಯದಿಂದ ಹೃದಯಕ್ಕೆ ಹರಿಯುವ ಬೇಟದ ಒದಗೆಗಳಾಗಿದ್ದುವು ಆ ನೋಟಗಳು! ಸಮರ್ಪಣೆ, ಆಶ್ವಾಸನೆ, ವಿನ್ಯಾಸ ಧೈರ್ರ‍, ಪ್ರತಿಜ್ಞಾಸೈರ್ಥ್ಯ, ಆಮರಣಪರ್ರ‍ಂತ ತ್ಯಾಗಭಾವ, ದುರ್ದಮ್ಯ ಸಾಹಸೋಲ್ಲಾಸ-ಇವೆಲ್ಲವನ್ನೂ ಒಬ್ಬರಿಂದೊಬ್ಬರಿಗೆ ಸಾಗಿಸುವ ಜೀವಂತ ವಿದ್ಯುನ್ಮಯ ತ್ಯಾಗಪ್ರಣಾಳಗಳಾಗಿದ್ದುವು ಆ ದೃಷ್ಟಿದ್ವಯ!
ತನ್ನ ದೊಣ್ಣಿ ಕತ್ತಿ ಕಂಬಳಿಗಳನ್ನು ಎತ್ತಿಕೊಂಡು ಹೊರಡುತ್ತಿದ್ದ ಗುತ್ತಿಗೆ ತಿಮ್ಮಿ ನಾಚಿಕೆಯಿಂದ ಮೃದುವಾಗಿ ಎಚ್ಚರಿಕೆ ಹೇಳಿದಳು: “ ಆ ಕ್ಯಾದಿಗೆ ಹಿಂಡ್ಲ ಹತ್ರಾನೆ ಕೂತುಕೊಬ್ಯಾಡಿ, ನಾ ದನಾಕಾಯಕ್ಕೆ ಹೋದಾಗ ನೋಡೀನಿ, ಸರ್ಪನ ಹಾಂವು ಇರ್ತವೆ! ಸ್ವಲ್ಪ ದೂರಾನೆ ಕೂತ್ಕೊಳ್ಳಿ!”
ಎಷ್ಟಾದರೂ ಆ ಪ್ರದೇಶದ ನಿಕಟ ಪರಿಚಯ ಗುತ್ತಿಗಿಂತಲೂ ಹೆಚ್ಚಾಗಿರುವುದು ಆ ಜಾಗದ ಹುಟ್ಟುಮಗುವಾದ ತಿಮ್ಮಿಗೆ ತಾನೆ? ಆದರೆ ಒಂದನ್ನು ಮಾತ್ರ ಗುತ್ತಿ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಕೊನೆಯ ಸಾರಿ ತನ್ನನ್ನೆ ನೇರವಾಗಿ ನಿರ್ದೇಶಿಸಿ ಮಾತನಾಡಿದಾಗ ತಿಮ್ಮಿಯ ರೂಢಿಯ ಏಕವಚನ ಬಹುವಚನಕ್ಕೆ ತಿರುಗಿತ್ತು! ಸೇಸಿ ಮಾತ್ರ ಅದನ್ನು ಗಮನಿಸಿ ಆ ಉತ್ಕಟಸ್ಥಿಯಲ್ಲಿಯೂ ಮುಗುಳುನಗದೆ ಇರಲು ಸಾಧ್ಯವಾಗದೆ ನೆಲಕ್ಕೆ ಮೋರೆ ತಿರುಗಿಸಿದ್ದಳು.
ಇಬ್ಬರೂ ಒಟ್ಟಿಗೆ ಹೊರಡುವುದು ಚೆನ್ನಾಗಿ  ಕಾಣಿಸುವುದಿಲ್ಲವೆಂದೂ, ಯಾರಾದರೂ ಕಂಡರೆ ಅನುಮಾನಕ್ಕೆ ಆಸ್ಪದವಾಗಿ ತೊಂದರೆಗೀಡಾಗಬಹುದೆಂದೂ, ಗುತ್ತಿ ಹೊರಟ ತುಸು ಹೊತ್ತಿನ ಮೇಲೆ ತಿಮ್ಮಿ ಬಯಲು ಕಡೆಗೆ ಹೋಗುವ ರೀತಿಯಲ್ಲಿ ಹಾಡ್ಯಕ್ಕೆ ಹೋಗಿ, ಅಲ್ಲಿಂದ ಗುತ್ತಿ ಹೇಳಿದ್ದ ಗೊತ್ತಿಗೆ ಹೋಗುವುದೆಂದೂ ಸಂಚುಹೂಡಿದ್ದರು.
ಗುತ್ತಿ ಕಣ್ಮರೆಯಾದೊಡನೆ ತಿಮ್ಮಿ ಬೇಗಬೇಗನೆ ಹೋಗಿ, ತನ್ನ ಮದುವಣ ಗಿತ್ತಿಯ ಲಕ್ಷಣದ ಒಡವೆಗಳೆಲ್ಲವನ್ನೂ ತೆಗೆದು, ಗಂಟು ಕಟ್ಟಿ, ಅವ್ವ ಹೇಳಿದ ಮಡಕೆಯೊಳಗಿಟ್ಟಳು. ದಾರಿಗೆ ಬೇಕಾಗಬಹುದೆಂದು ಅವ್ವ ಕಟ್ಟಿಕೊಟ್ಟ ಸಣ್ಣದೊಂದು ಬುತ್ತಿಯನ್ನು ನೀರು ತೆಗೆದುಕೊಂಡು ಹೋಗುವ ನೆವದ ಮಡಕೆಯಲ್ಲಿಟ್ಟುಕೊಂಡಳು. ಅವರು ಮನೆದೇವರೆಂದು ಮೊಲೆಯಲ್ಲಿಟ್ಟು ಪೂಜೆಮಾಡುತ್ತಿದ್ದ  ಒಂದು ಕುಂಕುಮ ಹಚ್ಚಿ ಕಾಣಿಕೆ ಕಟ್ಟಿದ್ದ ಒನಕೆ ತುಂಡಿನಂತಹ ಪ್ರತಿಮೆಯ ಮುಂದೆ ಅಡ್ಡಬಿದ್ದು, ಅವ್ವನ ನಿಷ್ಕ್ರಿಯಾ ಮೌನದ ಮತ್ತು ಆರ್ದ್ರನಯನದ ಆಶೀರ್ವಾದಪಡೆದು ಬೀಳ್ಕೊಂಡಳು.
ಮಗಳು ಕಣ್ಮರೆಯಾದ ಮೇಲೆಯೊ ಆ ದಿಕ್ಕಿಗೇ ಕಣ್ಣಾಗಿ ಸ್ವಲ್ಪ ಹೊತ್ತು ನಿಂತಿದ್ದ ಸೇಸಿ ಸುಯ್ದು ಸೆರಗಿನಿಂದ ಕಣ್ಣೊರಸಿಕೊಂಡಳು. ಅವಳ ಎದೆ ಏನೋ ತನಗರಿಯದೊಂದು ಪುಕ್ಕಲನ್ನನುಭವಿಸಿ ಡವಡವಿಸತೊಡಗಿತು. ಮಗಳ ಸಂತೋಷಾರ್ಥವಾಗಿ, ಅಳಿಯನ ಇದಿರಿನ ಧೈರ್ರ‍ದಲ್ಲಿ, ಈ ಸಾಹಸಕ್ಕೆ ಒಪ್ಪಿಗೆ ಕೊಟ್ಟಿದ್ದಳು. ಆದರೆ ಈಗ ತಾನೊಬ್ಬಳೆ ಬಿಡಾರದ ಜಗಲಿಯಲ್ಲಿ ಒಂಟಿಯಾಗಿ ನಿಂತಾಗ ಜೀವ ತಲ್ಲಣಿಸತೊಡಗಿತ್ತು.  ತಾನೇನು ಮಾಡಿಬಿಟ್ಟೆ? ನಡೆದ ನಿಜಾಂಶ ಗೊತ್ತಾದರೆ, ತನ್ನ ಗತಿ ಏನಾಗುತ್ತದೆ? ಗೌಡರ ಕೋಪ, ಗಂಡನ ರೌದ್ರತೆ, ಅಳಿಯನಾಗಲಿದ್ದವನ ಕ್ರೋಧ ಮಾತ್ಸರ್ರ‍, ಕೇರಿಯವರ ನಿಂದೆ, ಸರ್ವರ ತಿರಸ್ಕಾರ-ನೆನೆದಂತೆಲ್ಲ ಘೋರವಾಗತೊಡಗಿತು ಸೇಸಿಯ ಮನಸ್ಸಿನಲ್ಲಿ,  ತನಗೆ ಒದಗುವ ಗತಿ ಇರಲಿ, ಮಗಳಿಗೂ ಸೋದರಳಿಯನಿಗೂ ಏನಾದೀತು, ಏನಾಗಿದಿದ್ದೀತು, ಸಿಕ್ಕಿಬಿದ್ದರೆ? ದಿಕ್ಕು ತೋಚದೆ “ಸ್ವಾಮಿ, ಕಾಪಾಡಪ್ಪಾ!” ಎಂದು ಕೈ ಮುಗಿದಳು, ಆಕಾಶಕ್ಕೊ, ಭೂಮಿಗೊ, ಕಾಡಿಗೊ, ಸಹ್ಯಾದ್ರಿಶ್ರೇಣಿಗಳಿಗೊ?
ಬೇಗಬೇಗ ಓಡಿಹೋಗಿ ಮಗಳನ್ನು ಹಿಂದಕ್ಕೆ ಕರೆಯುವ ಮನಸ್ಸೂ ಆಯಿತು. ಆದರೆ ಅವಳು ಹೋಗಿಬಿಟ್ಟಿದ್ದಳು. ತಾನು ಕರೆದರೂ ಅವಳು ಹಿಂದಿರುಗುತ್ತಾಳೆಯೆ? ಮಗಳು ಈ ಮದುವೆ ಗೊತ್ತಾದಂದಿನಿಂದಲೂ ಹೊಟ್ಟೆಯಲ್ಲಿಯೆ ಅನುಭವಿಸುತ್ತಿದ್ದ ಬೆಂಕಿಯ ಕಾವು ತಾಯಿಗೂ ಚೆನ್ನಾಗಿ ಮುಟ್ಟಿತ್ತು. ಅಲ್ಲದಿದ್ದರೆ ಗುತ್ತಿ ಅಷ್ಟು ಬೇಗನೆ ಅಷ್ಟು ಸುಲಭದಲ್ಲಿ ಜಯಶೀಲನಾಗುತ್ತಿದ್ದನೇ ತನ್ನ ಸಂಚಿನಲ್ಲಿ? ಸೇಸಿ ಒಳಗೆ ನಡೆದು, ಒಂದು ಬಿಲ್ಲೆಯನ್ನು ತೊಳೆದು, ಕಲ್ಲೂರು ಗಣಪನಿಗೆ ಹಣ್ಣುಕಾಯಿ ಮಾಡಿಸುವುದಾಗಿ ಹೇಳಿಕೊಂಡು, ಅದನ್ನು ಮೂಲೆಯ ಒನಕೆ ದೇವರಿಗೆ ಸುತ್ತು ಬರಿಸಿ, ಒಂದು ಬಟ್ಟೆಯಲ್ಲಿ ಸುತ್ತಿ, ಆಗಲೆ ಕಟ್ಟುಗೊಂಡು ನೇತಾಡುತ್ತಿದ್ದ ಇತರ ಕಾಣಿಕೆಗಳ ಸಾಲಿಗೆ ಇದನ್ನೂ ಜೋತುಹಾಕಿದಳು.
ಕೇರಿಯ ಕೋಳಿಗಳೆಲ್ಲ ಆಯಾ ಬಿಡಾರಗಳಲ್ಲಿರುವ ತಮ್ಮ ತಮ್ಮ ಬುಟ್ಟಿಯಡಿಯನ್ನೊ ಒಡ್ಡಿಯನ್ನೊ ಸೂರಿನ ಬಿದಿರಟ್ಟಣೆಯನ್ನೊ ಸೇರಿ, ಕಪ್ಪು ಕವಿಯತೊಡಗಿತ್ತು, ಬಿಡಾರದ ಎದುರಿಗಿದ್ದ ಹಾಡ್ಯದ ಮರಗಳ ಪ್ರತ್ಯೇಕತೆಯೂ ವಿವರವೂ ಅಡಗಿ ಎಲ್ಲ ಮುದ್ದೆಯಾಗತೊಡಗಿದ್ದುವು. ಅಷ್ಟು ಹೊತ್ತಿಗೆ, ಬೀಸೆಕಲ್ಲು ಸವಾರಿ ನೋಡಲು ಹಕ್ಕಲಿಗೆ ಹೋಗಿದ್ದ ಜನ ಒಬ್ಬೊಬ್ಬರಾಗಿ ಇಬ್ಬಿಬ್ಬರಾಗಿ ಹಿಂದಿರುಗತೊಡಗದಿದ್ದರು. ದೊಡ್ಡಬೀರನ ಎರಡನೆ ಮಗ ಪುಟ್ಟಬೀರನ ಹೆಂಡತಿ ಚಿಕ್ಕಪುಟ್ಟಿಯೆ ಸೇಸಿಗೆ ಮೊದಲು ಸುದ್ದಿ ತಿಳಿಸಿದ್ದು, ತನ್ನ ಮಾವಗೆ ಬೈಸಿಕಲ್ಲು ಎಳೆಯುತ್ತಿದ್ದಾಗ ಎಡವಿಬಿದ್ದು ಪೆಟ್ಟಾಗಿದೆ ಎಂದು. ಸೇಸಿ ತನ್ನ ಗಂಡನಿಗಾದ ಪೆಟ್ಟಿನ ಗಾತ ತಿಳಿಯದೆ ತಳಮಳಿಸುತ್ತಿರಲು, ತನ್ನ ಗಂಡುಮಕ್ಕಳಿಬ್ಬರೂ ಸೇರಿ ದೊಡ್ಡಬೀರನನ್ನು ಮೆಲ್ಲಗೆ ನಡೆಸಿಕೊಂಡು ಬರುತ್ತಿದ್ದುದನ್ನು ಕಂಡಳು. ಹಿರಿಯ ಮಗ ಸಣ್ಣಬೀರ ತನ್ನ ತಂದೆಯಾಗಿರುವ ಪೆಟ್ಟು ಅಷ್ಟೇನೂ ದೊಡ್ಡದಲ್ಲ ಎಂದು ಹೇಳಿ ತಾಯಿಯನ್ನು ಸಮಾಧಾನಗೊಳಿಸಿದನು. ಎರಡನೆ ಮಗ ಪುಟ್ಟಬೀರ ಜಗಲಿಯ ಮೇಲೆ ಒಂದು ಗೀಕಿನ ಚಾಪೆಹಾಕಿ ಅಪ್ಪನನ್ನು ಮಲಗಿಸಿದನು. ದೊಡ್ಡಬೀರನ ಗಾಯಗಳಿಗೆ ಪಾದ್ರಿಯೂ ದೇವಯ್ಯಗೌಡರೂ ಸೇರಿ ಇಲಾಜುಮಾಡಿ ಬಟ್ಟೆಕಟ್ಟಿದ್ದರು.
ತಮ್ಮ ತಮ್ಮ ಬಿಡಾರಗಳಿಗೆ ಹೋಗುವ ಮೊದಲು ಸಣ್ಣಬೀರನೂ ಪುಟ್ಟಬೀರನೂ
ಅಪ್ಪ ಮಲಗಿದ್ದ  ಚಾಪೆಯ ಪಕ್ಕದಲ್ಲಿಯೆ ಕುಳಿತು ಅವ್ವ ಕೊಟ್ಟ ಹೆಂಡ ಕುಡಿಯುತ್ತಿದ್ದರು, ಅದು ಇದು ಮಾತಾಡುತ್ತಾ.
“ತಂಗಿ ಎಲ್ಲವ್ವಾ? ಕಾಣಾದಿಲ್ಲಾ?” ಎಂದನು ಸಣ್ಣಬೀರ. ಬಚ್ಚನನ್ನು ಮದುವೆಯಾಗುವ ಇಷ್ಟವಿಲ್ಲದೆ ತಿಮ್ಮಿ ಕುದಿಯುತ್ತಿದ್ದುದು ಅವನಿಗೆ ಗೂತ್ತಿದ್ದುದರಿಂದ ಆ ಪ್ರಶ್ನೆಯ ಧ್ವನಿಯಲ್ಲಿ ಅಸಹಾಯಕತೆಯ ಅನುಕಂಪೆ ತೋರುತ್ತಿತ್ತು.
“ಎಲ್ಲೋ ಮೂಲೇಲಿ ಅಳ್ತಾ ಕೂತಿರ್ಬೈದು” ಎಂದನು ಪುಟ್ಟಬೀರ, ಬಚ್ಚನ ವಿಚಾರದಲ್ಲಿ ತನಗಿದ್ದ ವಿರುದ್ಧಾಭಿಪ್ರಾಯವನ್ನು ರೂಪಿಸುವ ರೀತಿಯಲ್ಲಿ.
ಮಲಗಿದ್ದ ಮುದುಕ ದೊಡ್ಡಬೀರ ತುಸು ಗಡಸುದನಿಯಲ್ಲಿ “ಅದಕ್ಕೇನಾಗದೆ, ಅಳ್ತಾ ಕೂರಕ್ಕೆ?” ಎಂದು ತಾನು ಕೈಗೊಂಡ ನಿರ್ಣಯವನ್ನು ಸಮರ್ಥಿಸಿ ತೋರುವಂತೆ “ತಿಮ್ಮೂ, ಇಲ್ಲಿ ಬಾರೆ. ನಿನ್ನ ಅಣ್ಣಾರು ನೋಡಬೇಕಂತೆ!” ಎಂದು ಗಟ್ಟಿಯಾಗಿ ಕರೆದನು.
ಸೇಸಿ ಏನೂ ಹೇಳದೆ ದೂರ ಗೋಡೆಗೆ  ಒರಗಿ ಚಿಂತಾಕ್ರಾಂತಳಾಗಿ ಕೂತಿದ್ದಳು. ಒಂದು ಹರಳೆಣ್ಣೆ ಹಾಕಿದ್ದ ದೊಡ್ಡಹಣತೆಯ ದೀಪ ಅದಕ್ಕಾಗಿ ಮಾಡಿದ್ದ ಗೂಡಿನಲ್ಲಿ ಉರಿಯುತ್ತಿತ್ತು. ಸುತ್ತಲೆಲ್ಲ ಆಗಲೆ ಕತ್ತಲೆ ದಟ್ಟಯಿಸಿತ್ತು.
ಸ್ವಲ್ಪಹೊತ್ತಾದರೂ ತಿಮ್ಮಿ ಬಾರದಿರಲು ಮುದುಕ ತನ್ನ ಹೆಂಡತಿಗೆ ಮಗಳನ್ನು ಕರೆತರಲು ಹೇಳಿದನು. ಅದರಲ್ಲಿ ಅವಳನ್ನು ಸಂತೈಸುವ ಒಳ ಉದ್ದೇಶವೂ ಇತ್ತು ಅವನಿಗೆ.
ಸೇಸಿ ಒಳಗೆ ಹೋಗಿ ಬಂದು “ಹೊರಕಡೆಗೆ ಹೋಗ್ಯದೆ ಅಂತಾ ಕಾಣ್ತದೆ, ಹಾಡ್ಯಕ್ಕೆ” ಎಂದಳು.
ಹೊಲೆಯರ ಹುಡುಗಿ, ಹುಟ್ಟಿದಂದಿನಿಂದಲೂ ಮೂರುಹೊತ್ತೂ ಕಾಡುಗಡ್ಡೆಗಳಲ್ಲಿ  ಹೆದರಿಕೆಯನ್ನೆ ಕಾಣದೆ ತಿರುಗಿ ರೂಢಿಯಾಗಿರುವ ತಿಮ್ಮಿ, ಕತ್ತಲೆಯಲ್ಲಿ ಬಿಡಾರದ  ಮುಂದಣ ಹಾಡ್ಯಕ್ಕೆ ಹೊರಕಡೆಗೆ ಹೋಗಿರುವುದು ಯಾರಿಗೂ  ಆತಂಕದ ವಿಷಯವಾಗಲಿಲ್ಲ. ತುಸು ಹೊತ್ತಾದ ಮೇಲೆ  ಸಣ್ಣಬೀರ ಪುಟ್ಟಬೀರರು ಅಲ್ಲಿಯೆ ಬಳಿಯಿದ್ದ ತಮ್ಮ ತಮ್ಮ ಬಿಡಾರಗಳಿಗೆ ಹೋದರು.
ಅವರು ಹೋಗಿ  ಸ್ವಲ್ಪ ಹೊತ್ತಾದ ಮೇಲೆ ದೊಡ್ಡ ಬೀರ ವ್ಯಗ್ರನಾಗಿ “ನಿಂಗೇನು ತಲೆ ನೆಟ್ಟಗದೆಯೇನೆ? ಮದುವೆಗೆ ತಂದ ಒಡವೆನೆಲ್ಲ ಹಾಕಿ, ಈ ಕತ್ತಲೇಲಿ ಹುಡುಗಿ ಒಬ್ಬಳನ್ನೆ ಹಾಡ್ಯಕ್ಕೆ ಕಳ್ಸಾಕೆ, ಹೊರಕಡೆಗೆ? ಹೋಗಿ ಕೃತಿಯೊ ಇಲ್ಲೊ?” ಎಂದು ಮಲಗಿದ್ದವನು ಅಸ್ಥಿರನಾದಂತೆ ಎದ್ದು ಕೂತನು.
ಸೇಸಿ ಕತ್ತಲೆಯಲ್ಲಿಯೆ ಹಾಡ್ಯದ ಕಡೆಗೆ ಹೋಗಿ ಬಂದು “ಅಲ್ಲೆಲ್ಲೊ ಕಾಣ್ಲಿಲ್ಲ; ಕರೆದ್ರೂ ಓಕೊಳ್ಲಿಲ್ಲ! ಇಲ್ಲೆ ಎಲ್ಲೊ ನೆರೆಮನೆ  ಕಡೆ ಹೊಗ್ಯದೆಯೋ ಏನೊ? ನೋಡಿ ಬರ್ಲೇನು?” ಎನ್ನುತ್ತಾ ಹೊರಟುಹೋದಳು.
ಮುದುಕನಿಗೆ ಏಕೋ ಏನೊ ದಿಗಿಲಾಗತೊಡಗಿತು. ಕಾಲು ಪೆಟ್ಟಾಗಿ ಉಳುಕಿರದಿದ್ದರೆ ಅವನು ಕೂತಿರುತ್ತಿರಲಿಲ್ಲ. ತಂದೆಯಾಗಿದ್ದ ಅವನಿಗೆ ಮಗಳ ಮನಸ್ಸಿನಂತೆ  ನಡೆಯಲು ಅನೇಕ ಕಾರಣಗಳಿಂದ ಸಾದ್ಯವಾಗದೆ, ಅನಿವಾರ್ಯಕ್ಕೆ ಸಿಕ್ಕಿ, ಬಚ್ಚನಿಗೆ  ಅವಳನ್ನು ಲಗ್ನ ಮಾಡಿಕೊಡಲು ಒಪ್ಪಿದ್ದಳು. ಆದರೆ ತನ್ನ ತಳವಾರತನದ  ಪ್ರತಿಷ್ಠೆಗೆ ಕೊಂದು ಬರಬಾರದೆಂದು, ತಾನೆ ತನ್ನ ಸ್ವಂತ ಇಚ್ಛೆಯಿಂದ ಒಪ್ಪಿಗೆ ಕೊಟ್ಟಿದ್ದೇನೆ ಎಂಬಂತೆ ವರ್ತಿಸುತ್ತಿದ್ದನು. ಈಗ ಇದ್ದಕ್ಕಿದ್ದಂತೆ  ಮಗಳು ಎಲ್ಲಿ (ಅವಳು ಹಾಗೆ ಹೇಳಿದ್ದಳು  ಎಂಬುದೂ ಅವನಿಗೆ ಗೊತ್ತಿತ್ತು.) ‘ಪಾರಾಣ ತೆಗೆದುಕೊಂಡು ಬಿಡ್ತಾಳೋ!’ ಎಂದು ಹೆದರಿಕೆ ಹುಟ್ಟಿಬಿಟ್ಟಿತ್ತು. ಹೆಂಡತಿ ಹಿಂದಿರುಗಿ ಬರುವವರೆಗೂ ಕಾಯುವ ತಾಳ್ಮೆಯಿಲ್ಲದೆ ಗಟ್ಟಿಯಾಗಿ ಕೂಗಿ ಕರೆಯತೊಡಗಿದನುಃ “ಏ ಸಣ್ಣಾ, ಏ ಪುಟ್ಟಾ, ಬನ್ನ್ರೋ ಬೇಗ ಬನ್ನ್ರೋ”
ದೊಡ್ಡಬೀರನ ಗಂಟಲು ಕೇಳಿಸಿ  ಸೇಸಿಯೊಡಗೂಡಿಯೆ ಓಡಿ ಬಂದರು, ಸಣ್ಣಬೀರ  ಪುಟ್ಟಬೀರನು.
ಕೇರಿಗೆ ತಳವಾರನ ಬಿಡಾರದ ಮುಂದೆ ನೆರೆಯಿತು. ಹತ್ತಾರು ಊಹಾಪೋಹಗಳಾಗಿ  ತಮತಮಗೆ ಹೊಳೆದಂತೆ  ಹೇಳಿದರು: ಕೆರೆಗೆ ಬಿದ್ದಳೊ? ನೇಣುಹಾಕಿಕೊಂಡಳೊ? ಹಾವು ಕಚ್ಚಿ ಸತ್ತಳೊ ಹುಲಿ ಹಿಡಿಯಿತೊ? ಕೊನೆಯದಾಗಿ  ಕಲ್ಲೂರು ಸಾಹುಕಾರ ಮಂಜಭಟ್ಟರು ಪ್ರಮುಖವಾಗಿಯೂ  ಮತ್ತು ಇತರ ರೀತಿಯ  ಬಲಾತ್ಕಾರದಿಂದ  ದವಸ ಧಾನ್ಯ ಜಮೀನು ಇವುಗಳ  ಸಂಪಾದನೆಗಾಗಿಯೂ, ಹೊನ್ನಾಳಿಯಿಂದ  ಕರೆಯಿಸಿ ಮೇಗರವಳ್ಳಿಯಲ್ಲಿ  ಜಮಾಯಿಸಿಕೊಂಡಿರುವ ಪುಂಡ ಸಾಬರ  ತಂಡದವರಿಂದ, ಆಭರಣಕಾರಣಕ್ಕಾಗಿಯೋ ಅಥವಾ  ಅತ್ಯಾಚಾರಕ್ಕಾಗಿಯೋ, ಅಪಹರಿಸಲ್ಪಟ್ಟಳೊ…….?
ಅಡಕೆ ದಬ್ಬೆ ಸೀಳಿ, ಕಟ್ಟಿ, ಹತ್ತಿಪ್ಪತ್ತು ದೊಂದಿ  ಮಾಡಿ, ಒಬ್ಬೊಬ್ಬರು ಒಂದೊಂದನ್ನು ಹೊತ್ತಿಸಿಕೊಂಡು, ಅದರ ಬೆಳಕಿನಲ್ಲಿ ತಿಮ್ಮಿಯನ್ನು ಹುಡುಕಲು ಹಾಡ್ಯದ ಕಾಡಿಗೆ ಹೊರಟರು. ಬೀಸಿ ಬೀಸಿ ಹೊತ್ತಿಸಿಕೊಳ್ಳುತ್ತಿದ್ದ  ಆ ಕೆಂಡಬೆಳಕುಗಳು ದೂರ ದೂರ ಹೋಗಿ ಹಳುವಿನಲ್ಲಿ ಮರೆಯಾಗುವುದನ್ನೆ ನೋಡುತ್ತಾ ಜಗಲಿಯ ಮೇಲೆ ಕುಳಿತಿದ್ದ ದೊಡ್ಡಬೀರ “ಅಯ್ಯೋ ದೇವರೆ! ನನಗೀ ವಯಸ್ಸಿನಲ್ಲಿ ಹೀಂಗಾಗ ಬೇಕೇ?….” ಎಂದೆಲ್ಲ ನಾನಾ  ವಿಧವಾಗಿ ನರಳುತ್ತಿದ್ದನು.
ಸೇಸಿ ಕೇರಿಯ ಇತರ ಹೆಂಗಸರ ಸಮಾಧಾನದ ಮತ್ತು ಧೈರ್ಯದ ಮಾತುಗಳನ್ನು ಕೇಳಿಯೂ ಕೇಳದಂತೆ  ತಲೆಬಾಗಿ ನೆಲನೋಡುತ್ತಾ ಅವರ ನಡುವೆ ಅಂಗಳದಲ್ಲಿ ಕುಳಿತಿದ್ದಳು. ಹೊತ್ತು ಮೆಲ್ಲಗೆ, ಬಹುಮೆಲ್ಲಗೆ, ಸುದೀರ್ಘವಾಗಿ, ತುದಿಮೊದಲಿಲ್ಲದ ಕರಿಯ ಹೆಬ್ಬಾವಿನಂತೆ ಹರಿಯುತ್ತಿತ್ತು. ಜಗಲಿಯ ಮೇಲೆ ಗೂಡಿನಲ್ಲಿ ಉರಿಯುತ್ತಿದ್ದ ಹಣತೆ ಎಣ್ಣೆತೀರಯೋ ಗಾಳಿಬೀಸಿಯೋ ಇದ್ದಕ್ಕಿದ್ದಂತೆ ಆರಿಹೋಯಿತು. ಅದನ್ನು ಮತ್ತೆ ಹೊತ್ತಿಸಬೇಕೆಂದು ಯಾರಿಗೂ ಅನ್ನಿಸಲೂ ಇಲ್ಲ.
ಹುಡುಕುವವರು ಹೋಗಿ ಅರ್ಧಗಂಟೆ ಆಗಿತ್ತು ಏನೊ, ಹಾಡ್ಯದ ಕಡೆಯಿಂದ ಒಂದು ದೊಂದಿ  ಬೆಳಕು ತಮ್ಮ ಬಿಡಾರದ ಕಡೆಗೆ ವೇಗದಿಂದ ಚಲಿಸುತ್ತದ್ದುದು ಜಗಲಿಯ ಮೇಲೆ ಕಗ್ಗತ್ತಲೆಯಲ್ಲಿ ಕುಳಿತಿದ್ದ ದೊಡ್ಡಬೀರನ ಕಣ್ಣಿಗೆ ಬಿತ್ತು. ಅವವನ ಜೀವವೆ ಬಾಯ್ಗೆ ಬಂದಂತಾಯಿತು, ತನ್ನ ಮಗಳಿಗೆ ನಡೆದಿರುವ ಏನೊ ಒಂದು ಅನಾಹುತವನ್ನು ತಿಳಿಸಲು ಯಾರೊ  ಓಡಿಬರುತ್ತಿದ್ದಾರೆ ಎಂದು.
ಬಂದವನು ದೊಂದಿ ಬೀಸಿ ಬೆಳಕು ಮಾಡಿ, ಒಂದು ಮಡಕೆ ಯನ್ನು ತೋರಿ “ಅವ್ವಾ, ಇದೇ ಏನು, ತಂಗಿ ಹೊರಕಡೆಗೆ ತಗೊಂಡು ಹೋದ ಮಡಕೆ?” ಎಂದನು.
ಸೆಸಿ ನೋಡಿ ಸಂಕಟದ ಸ್ವರದಿಂದ “ಹೌದಪ್ಪಾ” ಎಂದಳು.
“ಎಲ್ಲಿ ಬಿದ್ದಿತ್ತೊ ಅದು, ಪುಟ್ಟಬೀರ?” ಜಗಲಿಯಿಂದ  ಬಂತು ದೊಡ್ಡಬೀರನ ಆರ್ತಧ್ವನಿ.
ಆ ಮಡಕೆ ತಿಮ್ಮಿ ತೆಗೆದುಕೊಂಡು ಹೋದದ್ದು ಎಂಬುದನ್ನು ಖಾತ್ರಿ ಮಾಡಿಕೊಂಡ ಪುಟ್ಟಬೀರ, ಕೊಲೆಪಾತಕನನ್ನು ಹಿಡಿಯಲು ತನಗೆ ಬೇಕಾಗಿದ್ದ ಮುಖ್ಯ ವಸ್ತುವೆ ದೊರಕಿದೆ ಪತ್ತೇದಾರನ ಠೀವಿಯಿಂದ, ದೊಂದಿ ಬೀಸುತ್ತಾ ಬಂದ ಹಾದಿಯಲ್ಲಿಯೆ ಹಿಂದಿರುಗಿ ಓಡಿ ಕಣ್ಮರೆಯಾದನು. ಆ ಮಡಕೆ ಕಗ್ಗತ್ತಲೆಯಲ್ಲಿ ಯಾರ ಕಣ್ಣಿಗೂ ಬೀಳದೆ ಅಂಗಳದಲ್ಲಿ ಬಿದ್ದಿತ್ತು, ಕುರುಡು ಸಾಕ್ಷಿಯಾಗಿ!
ಪುಟ್ಟಬೀರ ಹೋಗಿ ಇನ್ನೂ ಐದು ನಿಮಿಷವೂ  ಕಳೆದಿರಲಿಲ್ಲ. ಹಠಾತ್ತನೆ ಅಂಗಳದಲ್ಲಿ ನೆರೆದಿದ್ದ  ಹೆಂಗಸರ ನಡುವಣಿಯಿಂದ  ಒಂದು ವಿಕಾರವಾದ ಹುಹೂಂಕಾರದ ಸದ್ದು ಎದ್ದಿತು. ಎಲ್ಲರೂ ವಕಿತಗೊಂಡರಾದರೂ ಯಾರೂ ಹೆದರಲಿಲ್ಲ. ಆ ಹೂಂಕಾರ ಅಭ್ಯಾಸವಾಗಿದ್ದ  ಅವರೆಲ್ಲರಿಗೂ ಅದರ ಅರ್ಥ ಗೊತ್ತಾಯಿತುಃ ಸೇಸಿಯ ಮೈಮೇಲೆ ಜಕಣಿ ಬಂದಿತ್ತು!
ಇನ್ನೇನು ತಿಮ್ಮಿಯ ಅಂತರ್ಧಾನ ರಹಸ್ಯದ ಮೇಲೆ ಸತ್ಯದ ಬೆಳಕು ಬಿದ್ದೇ ಬೀಳುತ್ತದೆಂದು ಸರ್ವರೂ ಆಲಿಸಿದರುಃ ಆ ಅತೀಂದ್ರಿಯ ಭಾಷೆಯನ್ನೆಲ್ಲ ಅಳೆದು ತೂಗಿ  ಕೇರಿ  ತೂರಿ ನೆರೆದಿದ್ದರು ಹೀಗೆಂದು  ಅದರ ಸಾರ ಸಂಗ್ರಹ ಮಾಡಿಕೊಂಡರುಃ
“ಹ್ಞೂಂ ಹ್ಞ್ರೀಂ ಹೂಂ…. ಜಾತಿಕೆಟ್ಟು ನೀತಿಕೆಟ್ಟು ಕೇರಿಗೆಲ್ಲ ಮುಟ್ಟುಚಿಟ್ಟು! ಹಲಸಿನ ಮರದ ಮೇಲೆ ನನ್ನ ಜುಟ್ಟು! ನಾನೆ  ಅಡಗಿಸಿದ್ದೇನೆ! ಹೆದರಬೇಡಿ, ನನಗೆ ಆಯಾರ ಕೊಟ್ಟು ಪೂಜೆಮಾಡಿ! ಹೋದ ಹೆಣ್ಣು ಕೋದಲು ಕೊಂಕದೆ ಬರುತ್ತದೆ ಹ್ಞೂ ಹ್ಞೂ ಹ್ಞೂ… “
ಕತ್ತಲೆಯಲ್ಲಿ ಒಂದು ಪಿಸುಮಾತು ಕೇಳಿಸಿತುಃ “ಹೌದು ಮತ್ತೆ? ಕಿಲಸ್ತರ ಜಾತಿಗೆ  ಹೆಣ್ಣು ಕೊಟ್ರೆ ಆಗ್ದೆ ಬಿಡ್ತದೆಯೆ…. ಮುಟ್ಟುಚಿಟ್ಟು….. ಕೇರಿಗೆ?”
*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ