ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-12

        ಮಿಂದು ಮಡಿಯುಟ್ಟು ತುಳಸಿಕಟ್ಟೆಗೆ ಸುತ್ತು ಬರುತ್ತಿದ್ದ ಶಂಕರಪ್ಪ ಹೆಗ್ಗಡೆಯವರು ಹೂವಳ್ಳಿ ವೆಂಕಟಣ್ಣನು ಸುಬ್ಬಣ್ಣ ಹೆಗ್ಗಡೆಯವರೊಡನೆ ಮಾತಾಡಿ ಬೀಳ್ಕೊಂಡು ತಾನಿದ್ದ ಕಡೆಗೆ ದೊಣ್ಣೆಯೂರಿ ಕುಂಟುತ್ತಾ ಬರುತ್ತಿದ್ದುದನ್ನು ಗಮನಿಸಿ, ಬಾಯಿ ಏನೊ ದೇವರ ಹೆಸರನ್ನೊ ಮಂತ್ರವನ್ನೊ ಗೊಣಗುಟ್ಟುತ್ತಿದ್ದರೂ, ಮನಸ್ಸಿನಲ್ಲಿಯೆ ಅಂದುಕೊಂಡರು: “ಏನು ಸೈಂಧವನ ಸವಾರಿ ಇತ್ತಲಾಗಿ ಬರುತ್ತಿದೆಯಲ್ಲಾ?!”

ಸೈಂಧವ ಎಂಬುದು ಹೂವಳ್ಳಿ ವೆಂಕಟಣ್ಣನಿಗೆ ಜನ ಇಟ್ಟಿದ್ದ ಅಡ್ಡ ಹೆಸರಾಗಿತ್ತು. ಅದಕ್ಕೆ ಮುಖ್ಯ ಕಾರಣ ಅವನ ದೈತ್ಯ ಗಾತ್ರ; ಅವನ ಎತ್ತರವೂ ಆರು ಅಡಿಗಳಿಗೆ ಮೀರಿಯೆ ಇತ್ತು. ಕೈಕಾಲು ತೊಡೆಗಳೆಲ್ಲವೂ ಇದ್ದ ದಪ್ಪಗಳಲ್ಲಿ ಒಂದರೊಡನೊಂದು ಸ್ಪರ್ಧಿಸುವಂತಿದ್ದುವು. ಮುಖ ಸ್ವಲ್ಪ ಉದ್ದವಾಗಿದ್ದು ಕೆನ್ನೆ ದವಡೆಯ ಎಲುಬುಗಳು ಎದ್ದು ಕಾಣುತ್ತಿದ್ದವು. ಕರಿಯ ಮೀಸೆಗಳು ನೀಳಾಗಿ ಬೆಳೆದು ಕಿವಿಯ ಕಡೆಗೆ ಪಯಣ ಹೊರಟು ಮೇಲಕ್ಕೆ ಬಾಗಿದ್ದುವು. ಹುಬ್ಬುಗಳೆರಡೂ ಪೊದೆಗಳಾಗಿ ಮೀಸೆಗಳನ್ನು ತಲುಪಲೆಂಬಂತೆ ಕೊಂಕಿದ್ದುವು. ಭಯಂಕರತೆಯ್ನನೂ ಧೀರ ಗಾಂಭೀರ್ಯವನ್ನೂ ವದನಕ್ಕೆ ತಂಡುಕೊಡಬಹುದಾಗಿದ್ದ ಈ ಎಲ್ಲಾ ಪರಿಕರಗಳಿದ್ದರೂ ಅವನ ಚಪ್ಪಟೆ ಮೂಗೂ ನಿಸ್ತೇಜದ ಕಣ್ಣುಗಳೂ ಅವನ ವ್ಯಕ್ತಿತ್ವವನ್ನು ಸಾಧಾರಣತ್ವಕ್ಕೆ ಇಳಿಸಿಬಿಟ್ಟಿದ್ದುವು. ಅವನಲ್ಲಿದ್ದ ಪಶುಬಲಕ್ಕೆ ಎಂಥವರೂ ಅಳುಕುತ್ತಿದ್ದರು; ಆದರೆ ಅವನಿಗೆ ಸಿಟ್ಟು ಬಂದಾಗ ಜನ ಹೆದರಿಕೊಳ್ಳುತ್ತಿದ್ದುದಕ್ಕಿಂತಲೂ ಹೆಚ್ಚಾಗಿ ವಿನೋದಪಟ್ಟುಕೊಂಡು ನಗುತ್ತಿದ್ದರು! ಅವನ ಹೊರ ಆಕಾರದ ಉಗ್ರತೆ ಅವನನ್ನು ತಿಳಿಯದವರಿಗೆ ಹುಲಿಯಂತೆ ಕಾಣಿಸುತ್ತಿದ್ದರೂ, ಅವನನ್ನು ತಿಳಿದಿದವರಿಗೆ ಅವನು ಒಂದು ಬೃಹತ್ಕಾಯದ ಸಾಧುಪ್ರಾಣಿಯಂತಿದ್ದನು. ಹಸುವಿನಂತಹ ಸಾಧುಪ್ರಾಣಿಯೂ ಒಮ್ಮೊಮ್ಮೆ ತನಗೆ ನೋವಾದಾಗಲೊ ಸಿಟ್ಟು ಬಂದಾಗಲೊ ತಿವಿದುಬಿಡುವಂತೆ ವೆಂಕಟಣ್ಣನೂ ತಿವಿದುಬಿಡುತ್ತಿದ್ದುದು ಉಂಟು. ಪ್ರಾಣಿ ಸಾಧುವಾಗಿದ್ದರೂ ಅದು ಬೃಹತ್ ಪರಿಣಾಮದ್ದಾಗಿದ್ದರೆ ಅದರ ಸಾಧಾರಣ ತಿವಿತವೂ ಭಯಂಕರ ಪರಿಣಾಮಕಾರಿಯಾಗುವಂತೆ ವೆಂಕಟಣ್ಣನ ಮೊಂಡಸಿಟ್ಟೂ ಅನೈಚ್ಛಿಕವಾಗಿಯೆ ಹಲವು ಅನಾಹುತಗಳಿಗೆ ಕಾರಣವಾಗಿತ್ತು. ಸ್ಪುರದ್ರೂಪಿಣಿಯೂ ಸೂಕ್ಷ್ಮಪ್ರಕೃತಿಯವಳೂ ಆಗಿದ್ದ ಅವನ ಹೆಂಡತಿ, ಹೂವಳ್ಳಿ ಚಿನ್ನಮ್ಮನ ತಾಯಿ, ಅಷ್ಟು ಎಳೆವಯಸ್ಸಿನಲ್ಲಿಯೆ ಸಾಯುವುದಕ್ಕೂ ವೆಂಕಟಣ್ಣನ ಈ ಗುಣವೇ ಕಾರಣವಾಗಿತ್ತೆಂದು ಜನ ಆಡಿಕೊಳ್ಳುತ್ತಿದ್ದರು. ಆ ಕಾರಣದಿಂದಲೆ ಅವನು ಮತ್ತೊಂದ ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರೂ ಹೆಣ್ಣು ಕೊಡಲು ಯಾರೂ ಮುಂದೆ ಬಂದಿರಲಿಲ್ಲ.
ವೆಂಕಟಣ್ಣನ ಈ ಲಕ್ಷಣಗಳೆಲ್ಲ ಅನುವಂಶಿಕವಾಗಿದ್ದುವು. ಅವನ ಅಜ್ಜನೋ ಮುತ್ತಜ್ಜನೋ ದುರ್ಗದ ಪಾಳೆಯಗಾರಿಕೆಯ ಕಾಲದಲ್ಲಿ ದಂಡನಾಯಕನಾಗಿದ್ದನಂತೆ. ಅದಕ್ಕೆ ಸಾಕ್ಷಿಯಾಗಿ ಈಗಲೂ ಹೂವಳ್ಳಿ ಮನೆಯ ಅಟ್ಟದ ಮೂಲೆಯಲ್ಲಿ ಕರಿಹಿಡಿದು ಕರ್ರಗಾದ ಖಡ್ಗಗಳೂ ಈಟಿ ಭರ್ಜಿಗಳೂ ಗುರಾಣಿಗಳೂ ಇವೆ ಎಂಬ ವದಂತಿ ಇತ್ತು. ಅವನದು ನಾಯಕರ ಮನೆತನವಾದರೂ ಸರಿಸಮಾನರು ಯಾರೂ ಈಗ ಅವನನ್ನು  ವೆಂಕಟಪ್ಪನಾಯಕರು ಎಂದು ಕರೆಯುತ್ತಿರಲಿಲ್ಲ. ತೀರ ಕೆಳವರ್ಗದವರೇನೊ ಹೂವಳ್ಳಿ ನಾಯಕರು ಎಂದು ಸಂಬೋಧಿಸುತ್ತಿದ್ದುದುಂಟು. ಆದರೆ ಆ ‘ನಾಯಕ’ ಶಬ್ದಕ್ಕೆ ಪೂರ್ವದ ಗೌರವವಾಗಲಿ ಅರ್ಥವಾಗಲಿ ಇರಲಿಲ್ಲ. ಹುಲಿ ಮುಪ್ಪಾಗಿ ಕಪ್ಪೆ ಹೆರಕುವ ಸ್ಥಿತಿಯಂತಿತ್ತು. ಅದರ ಸರ್ದ್ಯಸ್ಥಿತಿ! ಅವನು ದುಗ್ಗದ ಪಾಳೆಯಗಾರರ ನಾಯಕ ಮನೆತನಕ್ಕೆ ಸೇರಿದವನು ಎಂಬುದಕ್ಕೆ ಅವನ ಮಹಾಕಾಯದ ಬೃಹತ್ತೊಂದೇ ಅವಶಿಷ್ಟವಾದ ಬಹಿಃಪ್ರಮಾಣವಾಗಿತ್ತು. ಭಾಗವತರಾಟದಲ್ಲಿ ಸೈಂಧವನ ಪಾತ್ರಧಾರಿಗೆ ಇರುತ್ತಿದ್ದ ಆ ಸಮಾನ ಲಕ್ಷಣವನ್ನು ಆಧರಿಸಿ ಜನ ಅವನನ್ನು ಸೈಂಧವ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಅವನಿಗೂ ಅದು ಗೊತ್ತಿತ್ತು!
ವೆಂಕಟಣ್ಣ ಹೆಂಚಿನ ಮನೆಯ, ಇನ್ನೂ ಚೌಕಿ ಕಟ್ಟದೆ ಇದ್ದುದರಿಂದ  ತೆರೆದೇ ಇದ್ದ, ಹೊರ ಅಂಗಳವನ್ನು ಪ್ರವೇಶಿಸುತ್ತಿದ್ದಾಗಲೆ ಅವನ ಮೂಗಿಗೆ ಹೂವಿನ, ಗಂಧದ ಮತ್ತು ಲೋಬಾನದ ಮಿಶ್ರ ಪರಿಮಳ ಬಂದಿತ್ತು. ಅದರಲ್ಲಿಯೂ ಆಗತಾನೆ ಸೋಗೆಮನೆಯ ಹೊರ ಅಂಗಳದಲ್ಲಿದ್ದ ಕೋಳಿ ಒಡ್ಡಿ, ಹಂದಿಒಡ್ಡಿ ದನಕೊಟ್ಟಿಗೆ ಇವುಗಳ ಸಂಮಿಶ್ರ ವಾಸನೆಯ ವಲಯದಿಂದ ಹೊರಬರುತ್ತಿದ್ದ ಅವನಿಗೆ ಆ ಪರಿಮಳ ದೇವಸ್ಥಾನ ಪ್ರವೇಶ ಮಾಡಿದ ಭಾವನೆಯನ್ನುಂಟುಮಾಡಿತ್ತು.
ಅವನ ಕೈ ಅವನಿಗೆ ತಿಳಿಯದಂತೆಯೆ ಮುಗಿಯ ತೊಡಗಿತ್ತು. ತನ್ನ ಜಿಡ್ಡು ಹಿಡಿದು ತೇಪೆಹಾಕಿದ ದಗಲೆ, ಮೊಳಕಾಲಿನ ವರೆಗಿನ ಕೊಳಕು ಪಂಚೆ, ತಲೆಗೆ ಸುತ್ತಿದ್ದ ಬಡ್ಡು ಕೆಂಬರು ವಸ್ತ್ರ ಇವುಗಳ ಮೈಲಿಗೆಯ ಅರಿವಾಗಿಯೊ ಎಂಬಂತೆ ವೆಂಕಟಣ್ಣ ಸ್ವಲ್ಪ ದೂರದಲ್ಲಿಯೆ ನಿಂತು ನೋಡತೊಡಗಿದನು.
ಅಂಗಳದ ನಡುವೆ ಹೊಸದಾಗಿ ಹಾಕಿದ್ದ ಮಣ್ಣಿನ ತುಳಸಿಕಟ್ಟೆ ಕೆಮ್ಮಣ್ಣು ಬಳಿದಿದ್ದರಿಂದ ಕೆಂಪಗೆ ಕಾಣುತ್ತಿತ್ತು. ಅದರ ತಲೆಯ ಮೇಲೆ ಎಲ್ಲಿಯೊ ಕೆಲದಿನಗಳ ಹಿಂದೆ ನೆಟ್ಟಿದ್ದ ತುಳಸಿಯ ಪುಟ್ಟ ಸಸಿ ಹಸುರುತನದಿಂದ ಗಮನಸೆಳೆಯುವಷ್ಟೂ ಬೆಳೆದಿರಲಿಲ್ಲ. ಕೆಂಪು ನಾಮಗಳ ನಡುವೆ ಬಿಳಿಯ ನಾಮಗಳು ತುಳಸಿಯ ನಾಲ್ಕೂ ಮೈಗಳ್ಲಲಿ ಎದ್ದು ಕಾಣುವಂತಿದ್ದವು. ಮುಡಿಸಿದ್ದ ಗೊರಟೆ ಹೂಗಳ ಹಳದಿಯ ನಡುವೆ ಕೆಂಪು ಪರ್ವತ ಬಾಳೆಯ ಹೂಗಳೂ ಭೂತಾಳಿಯ ರಕ್ತವಣ್ಣದ ಎಲೆಯ ರೂಪದ ಹೂಗಳೂ ರಂಜಿಸಿದ್ದುವು. ಕೈಮುಗಿದುಕೊಂಡು ಬಾಯಲ್ಲಿ ಏನನ್ನೊ ಹೇಳಿಕೊಳ್ಳುತ್ತಾ ದೇವರಿಗೆ ಸುತ್ತು ಬರುತ್ತಿದ್ದ ಶಂಕರಪ್ಪ ಹೆಗ್ಗಡೆಯವರು ಸೊಂಟಕ್ಕೆ ಸುತ್ತಿದ್ದ ಒಂದು ಅರೆ ಒದ್ದೆಯಾಗಿದ್ದ ಪಾಣಿಪಂಚೆ ವಿನಾ ಸಂಪೂರ್ಣವಾಗಿ ನಗ್ನರಾಗಿದ್ದರು. ಆ ಪಾಣಿ ಪಂಚೆ ಎಷ್ಟು ಜಾಳಾಗಿತ್ತೆಂದರೆ ಒಳಗೆ ಕಟ್ಟಿದ್ದ ಲಂಗೋಟಿಯ ರೂಪು ರೇಖೆ ಸ್ಪಷ್ಟವಾಗಿ ಕಾಣುತ್ತಿತ್ತು.  ಅವರ ಹೊಕ್ಕುಳದ ಮೇಲ್ಭಾಗದಲ್ಲಿಯೂ ಎದೆಯ ಇಕ್ಕೆಲಗಳಲ್ಲಿಯೂ ತೋಳುಗಳ ಭುಜ ಪ್ರದೇಶದಲ್ಲಿಯೂ ತುಳಸಿಕಟ್ಟೆಗೆ ಬಳಿದಂತಹ ಬಿಳಿಯ ನಾಮಗಳ ನಡುವಣ ಕೆಂಪು ನಾಮಗಳ ತ್ರಿಪುಂಡ್ರಗಳು ಮೆರೆಯುತ್ತಿದ್ದುವು. ಹಣೆಯ ಮೇಲೆ ಮಾತ್ರ ಕೆಂಪು ನಾಮವೊಂದೇ ವಿರಾಜಮಾನವಾಗಿತ್ತು. ಲಾಳಾಕಾರವಾಗಿ ನುಣ್ಣಗೆ ಚೌರಮಾಡಿದ್ದ ಅವರ ಮುಂದಲೆಯ ಮೇಲೆಯೂ ನಾಮದ ಗುರುತು ಕಾಣುತ್ತಿತ್ತು. ಚಿನ್ನದ ಒಂಟಿಗಳಿದ್ದ ಕಿವಿಯ ಸಂಧಿಯಲ್ಲಿ ಸಿಕ್ಕಿಸಿಕೊಂಡಿದ್ದ ತುಳಸಿಯ ಕುಡಿಯ ಗೊಂಚಲೂ ಚೆನ್ನಾಗಿ ಕಾಣುವ ಪ್ರಮಾಣದಲ್ಲಿಯೆ ಇತ್ತು. ಸುಪುಷ್ಟವಾಗಿ ಕಾಣುತ್ತಿದ್ದ ಮೈಕಟ್ಟೂ ಸ್ವಲ್ಪ ಮಟ್ಟಿಗೆ ಬೊಜ್ಜಾಗಿದ್ದ ಹೊಟ್ಟೆಯೂ ಅವರು ಸುಖಜೀವಿ ಎಂಬುದನ್ನು ಸೂಚಿಸುತ್ತಿದ್ದುವು.
ಚೆನ್ನಾಗಿ ಬೆಳಗಿ ಥಳಥಳಿಸುತ್ತಿದ್ದ ತಾಮ್ರದ ಹೂವಿನ ತಂಬಿಗೆಯಲ್ಲಿದ್ದ ನೀರನ್ನು ತುಳಸಿಯ ಗಿಡದ ಬುಡಕ್ಕೆ ಹೊಯ್ದು, ಬೆರಳ ತುದಿಯಿಂದ ಆ ತೀರ್ಥವನ್ನೆತ್ತಿ ಬಾಯಿಗೆ ಚಿಮುಕಿಸಕೊಂಡು, ದೂರದಲ್ಲಿಯೆ ನಿಂತಿದ್ದ ವೆಂಕಟಣ್ಣನ ಬೃಹನ್ಮೂರ್ತಿಯನ್ನು ನೋಡುತ್ತಾ ನಗೆಗೂಡಿ ಶಂಕರಪ್ಪ ಹೆಗ್ಗಡೆಯವರು “ಏನು ನಾಯಕರ ಸವಾರಿ ಬಹಳ ಅಪರೂಪ ಬಂದುಬಿಟ್ಟಿತಲ್ಲಾ!” ಎಂದು ವ್ಯಂಗ್ಯವಾಗಿ ಪ್ರಶ್ನಿಸಿ, ಉತ್ತರಕ್ಕೆ ಕಾಯದೆ “ಅಲ್ಲೇ ನಿಂತುಬಿಟ್ಟೆಯಲ್ಲೋ? ಬಾರೋ ಮೇಲೆ” ಎಂದು ಸಹಜವಾದ ಸಲುಗೆಯ ಏಕವಚನದಲ್ಲಿ ಕರೆಯುತ್ತಾ ತಾವೂ ಮೆಟ್ಟಲು ಏರಿ ಜಗಲಿಗೆ ಹೋದರು. ವೆಂಕಟಣ್ಣನೂ ಹೊರಗಿನಿಂದ ಕಾಲು ಕೆಸರಾಗಿ ಬರುವ ನೆಂಟರಿಗಾಗಿಯೆ ಎಂದು ಮುಂದಿಗೆಯ ಬದಿ ಇಟ್ಟಿದ್ದ ಹಿತ್ತಾಳೆ ಚೊಂಬಿನಲ್ಲಿದ್ದ ನೀರಿನಿಂದ ಕಾಲು ತೊಳೆದುಕೊಂಡು, ಕಿರುಜಗಲಿಗೆ ಏರಿ, ಜಗಲಿಯ ತುದಿಯ ಕೆಸರ್ಹಲಗೆಯ ಮೇಲೆ ಹಾಸಿದ್ದ ಕೊಳಕು ಕೊಳಕಾದ ಜಾಡಿಯ ಮೇಲೆ ಕೂತನು. ಪದ್ಧತಿಯಂತೆ ಎಲೆ ಅಡಿಕೆಯ ಹರಿವಾಣ ತಂದು ಅವನ ಮುಂದಿಡ್ಡು ಶಂಕರಪ್ಪ ಹೆಗ್ಗಡೆಯವರೂ ತುಸು ದೂರದಲ್ಲಿಯೆ ಕೂತುಕೊಂಡರು.
ಜಗಲಿಯ ಮೂಲೆಯಲ್ಲಿ ಒಂದು ಐದಾರು ತಿಂಗಳ ಕೂಸನ್ನು ಅರುವೆಯ ಮೇಲೆ ಉರುಡುಹಾಕಿಕೊಂಡು ಆಡಿಸುತ್ತಿದ್ದಳು ಬಾಲೆಯಾಡಿಸುವ ಹುಡುಗಿ. ಅವಳ ಪಕ್ಕದ್ಲಲಿ ಸುಮಾರು ಎರಡೂವರೆ ಮೂರು ವರ್ಷದ ವಯಸ್ಸಿನ ಒಂದು ಬಡಕಲು ಹುಡುಗ ಬತ್ತಲೆ ಕುಳಿತು ತಾನೂ ಬಾಲೆಯಾಡಿಸುವ ಆಟದಲ್ಲಿ ತೊಡಗಿತ್ತು.  ವೆಂಕಟಣ್ಣನ ಆಕೃತಿ ಅಂಗಳದಿಂದ ಮೆಟ್ಟಲು ಹತ್ತಿ ಕಿರುಜಗಲಿಗೆ ಬಂದುದನ್ನು ಕಂಡು, ಹೊಸಬರನ್ನು ಕಂಡೋ, ಗಾತ್ರಕ್ಕೆ ದಿಗಿಲುಗೊಂಡೋ ಹೆಮ್ಮೀಸೆಗೆ ಹೆದರಿಯೋ ಬಾಲೆಯಾಡಿಸುವ ಹುಡುಗಿಯನ್ನು ಅಪ್ಪಿಕೊಂಡು ಅದು ಅಳತೊಡಗಿತ್ತು.
ವೆಂಕಟಣ್ಣ ಆ ಹುಡುಗನನ್ನು ಸಮಾಧಾನ ಮಾಡುವ ಸಲುವಾಗಿ “ಯಾಕೆ ಅಳ್ತೀಯೋ, ರಾಮು?” ಎಂದು ಮೈತಡವಲು ಕೈ ನೀಡಿದ ಕೂಡಲೆ ರಾಮು ಕಿಟಾರನೆ ಕೀರಿಕೊಂಡು ಮಾಣಿಗೆ ಒಳಗಿನಿಂದ ನುಗ್ಗಿ ಅಡುಗೆ ಮನೆಗೆ ಅಮ್ಮನನ್ನು ಕೂಗುತ್ತಾ ಓಡಿಹೋದನು. ಆ ಕೂಗಿಗೆ ಬೆಚ್ಚಿ ಕೂಸೂ ಒರಲತೊಡಗಿತು.
ಶಂಕರಪ್ಪ ಹೆಗ್ಗಡೆ ತುಸು ರೇಗಿದ್ದ ಧ್ವನಿಯಲ್ಲಿ ಗಟ್ಟಿಯಾಗಿ ಕೂಗಿ ಹೇಳಿದರು; “ಏ ಕೆಂಪೀ, ಬಾಲೇನ ಅದರ ಹತ್ರಕ್ಕೆ ಕರೆದುಕೊಂಡು ಹೋಗೆ ಅತ್ತಲಾಗಿ!”
ಅದರ ಹತ್ತಿರಕ್ಕೆ ಎಂದರೆ ತಮ್ಮ ಹೆಂಡತಿಯ ಬಳಿಗೆ ಎಂದರ್ಥ. ಸಾಮಾನ್ಯವಾಗಿ ಗಂಡಸು ತನ್ನ ಹೆಂಡತಿಯನ್ನು ಹೆಸರು ಹಿಡಿದು ಕರೆಯುತ್ತಿದ್ದಿಲ್ಲ. ಕೆಲವು ಗಂಡಂದಿರು ‘ಅವಳು’ ಎಂಬುದಾಗಿಯೂ ಮತ್ತೆ ಕೆಲವರು ‘ಅದು’ ಎಂಬುದಾಗಿಯೂ ಕರೆಯುತ್ತಿದ್ದುದೆ ಹೆಚ್ಚು ವಾಡಿಕೆ. ಅಂತೆಯೆ ಹಳೆಮನೆಯ ಶಂಕರಪ್ಪ ಹೆಗ್ಗಡೆಯವರ ಅರ್ಧಾಂಗಿ ಸೀತಮ್ಮನವರು ಗಂಡನ ಭಾಗಕ್ಕೆ ‘ಅದು’ ಆಗಿದ್ದರು. ಹಾಗೆ ಕರೆಯುತ್ತಿದ್ದುದರಲ್ಲಿ ಯಾವ ಬುದ್ದಿಪೂರ್ವಕವಾದ ಇಲ್ಲವೆ ವೈಯಕ್ತಿಕವಾದ ತಿರಸ್ಕಾರ ಭಾವವೂ ಇರುತ್ತಿರಲಿಲ್ಲ ನಿಜ. ಆದರೆ ಅದು ಸಾಮಾಜಿಕವಾದ ಸಮಷ್ಟಿರೂಪದ ಒಂದು ಕೀಳುಭಾವನೆಯನ್ನು ಪ್ರತಿಬಿಂಬಿಸುತ್ತಿತ್ತು.
ಹುಡುಗಿ ಕೂಸನ್ನು ಎತ್ತಿಕೊಂಡು ಹೋದಮೇಲೆ ವೆಂಕಟಣ್ಣ “ರಾಮು ಯಾಕೆ ಪೂರಾ ಲಾಚಾರಾಗಿ ಸೋತು ಹೋದ್ಹಾಂಗೆ ಕಾಣ್ತದಲ್ಲಾ?” ಎನ್ನುತ್ತಾ ಹರಿವಾಣದಲ್ಲಿದ್ದ ಒಂದು ವೀಳೆಯದೆಲೆಗೆ ಕೈ ಹಾಕಿದನು.
“ಹುಟ್ಟಿದಾರಭ್ಯ ಅದರ ಹಣೇಬರಾನೆ ಹಾಂಗೆ. ಯಾವಾಗ್ಲೂ ರ್ವೋತೆ ತಪ್ಪದು.”
“ದೋಯಿಸರ ಹತ್ರ ಉಂದು ಚೀಟಿಬೂತಿನಾದ್ರೂ ತರಿಸಿ ಕಟ್ಟಿನೋಡು.”
“ಅಯ್ಯೋ ನೀನೊಬ್ಬ! ಜೋಯಿಸರ ಕೈಲಿ ಚೀಟಿಬೂತಿ ತರಿಸಿ ಆಯ್ದು; ನಿಮಿತ್ತ ನೋಡಿಸಿ ಆಯ್ತು; ಕಡೆಗೆ ಕಲ್ಲೂರು ದೇವಸ್ಥಾನದಲ್ಲಿ ಅವರು ಹೇಳಿದ ಹಾಂಗೆ ಸತ್ಯನಾರಾಯಣ ವ್ರತಾನೂ ಮಾಡಿಸಿ ಆಯ್ತು.”
“ಸಿದ್ದರ ಮಠಕ್ಕೆ?”
“ಅದೂ ಆಯ್ತು…. ಅದರ ಸೊಂಟದಾಗ್ ನೇತಾಡ್ತದಲ್ಲಾ, ಸಿದ್ದರ ಮಠದ ತಾಯಿತ!”
“ಹಾಂಗ್ಯಾರೆ ಆಮೂಗೂರು ಗಣಮಗನ್ನಾದ್ರೂ ಕರ್ಸಿ, ಮನೇಲಿ ಗಣ ಬರ್ಸಿ, ಕೇಳಿ ನೋಡಬೈದಲ್ಲಾ?”
“ಹ್ಞೂ ಅದೊಂದು ಬಾಕಿ!…. ಆದರೆ ನಮ್ಮ ಜೋಯಿಸರು ಏನೋ ಇನ್ನೊಂದು ಅನುಮಾನ ಪಡ್ತಾರೆ… ಯಾರೋ ನಮಗೆ ಆಗದವರು…”
“ನಿನ್ನ ಮ್ಯಾಲೆ ಮಾಟ ಮಾಡ್ಸೋರು ಯಾರಂತಪ್ಪಾ…?”
“ಯಾರಂದ್ರೆ? ಹೊಟ್ಟೆಕಿಚ್ಚಿನವರಿಗೆ ಏನು ಬರಗಾಲವೆ?”
“ಬಸವನಂಥಾ ಮನುಷ್ಯ; ದೇವರು ದಿಂಡರು ಪೂಜೆಗೀಜೆ ಮಾಡ್ತೀಯ; ನಿನ್ನ ಮಾಲೇಜು ಹೊಟ್ಟೆ ಕಿಚ್ಚು?”
“ಊರ ಯಾಕೆ ಹೋಗ್ಬೇಕೋ, ಎಂಕಟಣ್ಣ? ನೆರೆಮನೇನೆ ಸಾಲದೇ?”
“ಸುಳ್ಳೋ ಬದ್ದೋ?” ವೆಂಕಟಣ್ಣನ ಪ್ರಶ್ನೆ ವಿಷಾದ, ಆಶ್ಚರ್ಯ, ಸಂದೇಹ, ಆಶಂಕೆ ಎಲ್ಲಕ್ಕೂ ಪ್ರತಿಮೆಯಾಗಿತ್ತು.
“ಪಾಲಾದ ಮೇಲಾದರೂ ಸರಿಹೋಗ್ತದೆ ಅಂತಾ ಮಾಡಿದ್ದೆ. ಆದರೆ….?”
“ಯಾಕಂತೆ ನಿನ್ನ ಮ್ಯಾಲೆ ಹಟಾ?”
“ಯಾಕೆ ಅಂದರೆ? ಅವರ ಮನೆಗೆ ಸೋಗೆ ಹೊದಿಸಿರುವಾಗ ನನ್ನ ಮನೆಗೆ ಹೆಂಚು ಹಾಕ್ಸೋದೆ? ಅವರ ಮನೇಲಿ ಗಂಡಸ್ರು, ಹೆಂಗಸ್ರು ಎಲ್ಲಾ ವಾರಕ್ಕೆ ಒಂದು ಸಾರಿ, ಶನಿ ಶನಿವಾರ, ಸಾನ ಮಾಡಿದ್ರೆ, ನನ್ನ ಮನೇಲಿ ನಾನು ದಿನಾ ಸಾನ ಮಾಡೋದಲ್ಲದೆ ಅದಕ್ಕೂ ಮೀಯೋಕೆ ಹೇಳೋದೆ…?”
“ಅವರಿಗೇನು ಕಡಮೆ ಆಗ್ಯದೆ! ನೀ ಊರ ಹೆಂಚು ಹಾಕ್ಸಿದ್ರೆ ಅವರು ಮಂಗಳೂರು ಹೆಂಚೇ ಹಾಕ್ಲಿ. ಅವರ ದುಡ್ಡಿನಲ್ಲಿ ಏನಾದ್ರೂ ನೀ ಹಾಕಿಸ್ದೇನು…?”
“ಅಯ್ಯೋ…. ನನಗೆ ಕೊಡಾ ದುಡ್ಡನ್ನೇ ಇನ್ನೂ ಕೊಟ್ಟಿಲ್ಲ; ಇನ್ನು ನಾ ಹೆಂಚು ಹಾಕ್ಸೋದಕ್ಕೆ ಬ್ಯಾರೆ ದುಡ್ಡು ಕೊಡ್ತಾರ್ಯೇ? ಮನೆ ಪಾಲಾಗುವಾಗ್ಲೆ ನನಗೆ ಬರಬೇಕಾದ ಹಿಸ್ಸೇನ ‘ನಂಗೆ ಆ ಗದ್ದೆ ಬೇಕು, ನಂಗೆ ಈ ತೋಟದ ತುಂಡು ಬೇಕು, ನಂಗೆ ಅದು ಸಾಲದು, ನಂಗೆ ಇದು ಸಾಲದು’ ಅಂತಾ ನೂರೊಂದು ತಂಟೆ ತಕರಾರು ಮಾಡಿ, ತಮ್ಮ ಪಾಲಿಗೆ ಮಾಡಿಕೊಂಡರು. ತಾಳತಂತ್ರದ ಲೆಕ್ಕ ಮಾಡಿ ನನಗೆ ಇಂತಿಷ್ಟು ಕೊಡೋದು ಅಂತ ಒಪ್ಪಂದ ಆಯ್ತು. ಇಲ್ಲೀ ತನಕ ಒಂದು ಚಿಕ್ಕಾಸು ಕೊಟ್ಟಿಲ್ಲ. ಕೇಳಿದ್ರೆ ‘ನಿನ್ನ ಗಂಟೇನು ತಿಂದುಕೊಂಡು ಹೋದವನ್ನ ಹುಡುಕಿಕೊಂಡು ಬರಾಕೆ ಅಂತಾ ಆ ಕಣ್ಣಾಪಂಡಿತರಿಗೆ, ಆ ಪುಡಿ ಸಾಬ್ರಿಗೆ, ಆ ಕಿಲಸ್ತರ ಪಾದ್ರಿ ಜೀವರತ್ನಯ್ಯಗೆ, ಇನ್ನೂ ಯಾರು ಯಾರೊ ಹೆಸರನ್ನೆಲ್ಲ ಹೆಳ್ತಾರಪ್ಪಾ- ದುಡ್ಡು ಕೊಟ್ಟೂ ಕೊಟ್ಟೂ ಸಾಲ ಆಗಿದೆ ಅಂತಾರೆ!”
ವೆಂಕಟಣ್ಣಗೆ ನಗೆ ತಡೆಯುವುದಕ್ಕೆ ಆಗಲಿಲ್ಲ. ಬಾಯಲ್ಲಿದ್ದ ಎಲೆಯಡಿಕೆಯ ಉಗುಳು ಎಲ್ಲಿ ಶಂಕರಪ್ಪನ ಮುಖಕ್ಕೆ ಹಾರುತ್ತದೆಯೊ ಎಂದು ಹೆದರಿ ಬೇಗಬೇಗ ಎದ್ದುಹೋಗಿ ತೆಣೆಯ ಕೆಳಗಡೆ ಅಂಗಳದಲ್ಲಿಟ್ಟಿದ್ದ ಉಮ್ಮಿಡಬ್ಬಿಗೆ ಎಲ್ಲವನ್ನೂ ಉಗುಳಿ ಬಂದು, ದೊಡ್ಡದಾಗಿ ಅಟ್ಟಹಾಸ ಮಾಡುವಂತೆ ನಗುತ್ತಾ “ಅಂವ ಹೋಗಿ ಎಂಟ್ಹತ್ತು ವರ್ಷಾನೆ ಆಯ್ತೋ ಏನೋ? ಇನ್ನೂ ದುಡ್ಡು ಕೊಡ್ತಾನೆ ಇದ್ದಾರಂತೋ, ಅವನ್ನ ಹುಡಕ್ಕೊಂಡು ಬರಾಕೆ? ಅಂವ ದಾರಿಮೇಲೆ ವಾಂತಿಭೇದಿ ಹತ್ತಿಕೊಂಡು ಸತ್ತುಹೋದ ಅಂತಾ ಅವನ ಜೊತೆ ಹೋದೋರು, ಕಂಡೋರೆ ಹೇಳಿದ್ರೂ, ಇವರ ಆ ತೀರ್ಥಳ್ಳಿ ದಾಸಯ್ಯನ, ಅಂವ ಪಕ್ಕಾ ಕಳ್ಳ- ಅವನ ಮಾತು ಕಟ್ಟಿಕೊಂಡು ಅಂವ ಬದುಕಿದ್ದಾನೆ, ಇವತ್ತು ಬರ್ತಾನೆ, ನಾಳೆ ಬರ್ತಾನೆ, ಜೋಗೇರ ಗುಂಪಿನಲ್ಲಿ ಇದಾನಂತೆ, ಅವರು ಅಲ್ಲಿ ಕಂಡರಂತೆ, ಇವರು ಇಲ್ಲಿ ಮಾತಾಡಿಸಿದರಂತೆ. ಅಂತಾ ಏನೇನೋ ಸುಳ್ಳು ಹುಟ್ಟಿಸಿ, ಅವನ ಹೆಂಡ್ತಿ ತಲೇನೂ ಕೆಡ್ಸಿ,…. ಹಹ್ಹಹ್ಹಹ್ಹ…. ಒಟ್ಟು ನಿನ್ನ ದುಡ್ಡಿಗೆ ದುಡ್ಡಿಗೆ ಚಕ್ರ ಹಾಕಾಕೆ ಹುನಾರು ಮಾಡ್ತಿದ್ದಾರೆ!”
“ದಿನ ಬೆಳಗಾದರೆ ಆ ಪುಣ್ಯಾತಗಿತ್ತೀದೂ ಒಂದು ರಂಪ ಇದ್ದೇ ಇರ್ತದೆ. ಅದ್ಕಕೀಗ ತಲೆ ಪೂರಾ ಕೆಟ್ಟದೆ ಅಂತ ಕಾಣ್ತದೆ. ನಾವು ಒಟ್ಟಾಗಿದ್ದಾಗಲೆ ಷುರುವಾಗಿತ್ತು. ಪಾಲಾದ ಮೇಲೆ ಮತ್ತೂ ಹೆಚ್ಚಿದೆ. ನಾನು ಅದೂ ಸೇರಿ ತನ್ನ ಗಂಡಗೆ ಏನೋ ಮಂಕು ಬೂದಿ ಹಾಕಿಸಿ, ತಿರುಪತಿ ಯಾತ್ರೆಗೆ ಹೋದವ ಹಿಂದಕ್ಕೆ ಬರದೇ ಇದ್ದಹಾಂಗೆ ಮಾಡೀವಿ ಅಂತಾ!… ಅಂವ ಎಲ್ಲೊ ತಲೆಕೆಟ್ಟು, ಎಲ್ಲಾ ಮರೆತು, ಸನ್ನೇಸಿಗಳ ಹೊತೇಲಿ ತಿರುಗ್ತಾ ಅದಾನಂತೆ! ಅದಕ್ಕೀಗ ಧರ್ಮಸ್ಥಳಕ್ಕೆ ಹೋಗ, ದೇವರ ಕೇಳಿಸಿ, ಶಾಂತಿ ಮಾಡಿಸಬೇಕಂತೆ ಮರೆತು ಹೋದದ್ದೆಲ್ಲ ನೆನಪಾಗಿ ಮತ್ತೆ ಅಂವ ಮನೆಗೆ ಬರುವಂತೆ! ಅಲ್ಲೇ ನಮ್ಮ ಮನೆ ಎಲ್ಲಾ ಹಾಳಾಗಾಕೆ ಹುಯ್ಲು ಕೊಡಿಸ್ತಾರಂತೆ!”
“ಅದೊಂದು ಹುಚ್ಚು ಹೆಗ್ಗಡ್ತಿ! ತಿರುಪತೀಗೆ ಹೋದೋರು ಹಿಂದಕ್ಕೆ ಬರಾದೂ ಉಂದೆ, ನೆರೇ ಹೊಳೀಗೆ ಬಿದ್ದೋರು ದಡ ಹತ್ತಾದೂ ಉಂದೆ! ಅದೇನು ತೀರ್ಥಳ್ಳಿ ಎಳ್ಳಾಮಾಸೆಗೆ ಹೋಗಿ ಬಂದ ಹಾಂಗೇನು? ಎಷ್ಟು ದೂರ ಏನು ಕತೆ! ಕಳ್ಳರು ಕಾಕರು ಕಾಡು ಕಾಯಿಲೆ ಎಲ್ಲ ದಾಟಿಕೊಂಡು ಹೋದರೂ ಹಿಂದಕ್ಕೆ ಬರಾದುಂಟೇ? ತಿಮ್ಮಪ್ಪನ ಪಾದವೇ ಗತಿ!”
“ಅದೇನು, ಮಾರಾಯ, ಅಲ್ಲಿ? ಆ ಗಲಾಟೆ? ಆ ಹಂದಿ ಒಡ್ಡಿಹತ್ರ!” ಎನ್ನುತ್ತಾ ಶಂಕರಪ್ಪ ಹೆಗ್ಗಡೆ ಸೋಗೆಮನೆ ಅಂಗಳದ ಕಡೆ ನೋಡಿದರು.
“ನಂಗುಂದು ಹಂದಿಮರಿ ಬೇಕಾಗಿತ್ತೊ. ಹೇಳಿದ್ದೆ.  ಅದ್ಕೇ ಹೆಗ್ಗಡೇರು ಹೊಲೇರ ಕೈಲಿ ಹಿಡಿಸಿ ಅಡ್ಡೆ ಕಟ್ಟಿಸ್ತಿದಾರೆ ಅಂತಾ ಕಾಣುತ್ತೆ.”
“ಯಾಕೆ? ನೀನೂ ಹಂದಿ ಸಾಕ್ತೀಯಾ?”
“ಅಯ್ಯಯ್ಯಯ್ಯೋ ಆ ಹೇಸಿಗೆ, ಆ ಫಚೀತಿ ನಂಗೆ ಬ್ಯಾಡಪ್ಪಾ! ಏನೋ ದೆಯ್ಯದ ಹರಕೆಗೆ ಬೇಕಾದಾಗ ಯಾರ ಹತ್ರನಾದರೂ ಹೋಗಿ ತಂದರಾಯ್ತು.”
ವೆಂಕಟಣ್ಣ ತಾನು ಹಂದಿಮರಿ ತೆಗೆದುಕೊಂಡು ಹೋಗುತ್ತೇನೆ ಎಂದದ್ದು ಬರಿಯ ರೂಢಿಯ ಮಾತಾಗಿತ್ತು. ಅವನಿಗೆ ಬೇಕಾಗಿದ್ದುದು ನಿಜವಾಗಿಯೂಮರಿಯಾಗಿರಲಿಲ್ಲ. ತಕ್ಕಮಟ್ಟಿಗೆ ದೊಡ್ಡ ಸಲಗವನ್ನೆ ಕೇಳಿದ್ದನು. ಅದರಂತೆ ಸುಬ್ಬಣ್ಣ ಹೆಗ್ಗಡೆಯವರು ಬೆಳಿಗ್ಗೆಯೆ ತನ್ನ ಪ್ರಾಯದ ಮದದಿಂದ ಸಣ್ಣ ಮರಿಗಳೆನ್ನದೆ ಆಗತಾನೆ ಮರಿಹಾಕಿದ್ದವೆನ್ನದೆ ಗಬ್ಬದ ದಡ್ಡೆಗಳೆನ್ನದೆ ಎಲ್ಲವುಗಳ ಮೇಲೆಯೂ ಹತ್ತಿ ಹತ್ತಿ, ಕಚ್ಚಿ ತಿವಿದು, ಗಾಯಗೊಳಿಸಿ ದೊಂಬಿ ಎಬ್ಬಿಸುತ್ತಿದ್ದ ಒಂದು ಸಲಗವನ್ನು ವೆಂಕಟಣ್ಣಗೆ ಮಾರಿಬಿಡಬೇಕೆಂದು ನಿರ್ಣಯ ಮಾಡಿಬಿಟ್ಟಿದ್ದರು. ಅಪರಾಧಿಯಾದ ಹಂದಿಗೆ ಮರಣದಂಟನೆ, ಅದನ್ನು ಮಾರುವ ತಮಗೆ ಧನಲಾಭ; ಕೊಳ್ಳುವವನಿಗೆ ಕೊಳಗ್ಗಟ್ಟಲೆ ಮಾಂಸ, ಒಡ್ಡಿಯ ಇತರ ಚತುಷ್ಪಾದಿ ಪ್ರಜೆಗಳಿಗೆ ಕ್ಷೇಮ- ಎಲ್ಲವೂ ಒಟ್ಟಿಗೆ ಸಂಘಟಿಸುವಂತೆ!
“ಈಗ  ಎಂಥ ದೆಯ್ಯದ ಹರಕೇನೊ ನಿನಗೆ?” ಶಂಕರಪ್ಪ ಒಳಗೊಳಗೇ ನಗುತ್ತಾ ಕೇಳಿದರು. ಗುಸುಗುಸು ಸುದ್ದಿ ಅವರ ಕಿವಿಗೂ ಬಿದ್ದಿತ್ತು, ನಾಗತ್ತೆ ತನ್ನ ಸೊಸೆಯನ್ನು ವೆಂಕಟಣ್ಣಗೆ ಸೀರುಡಿಕೆ ಮಾಡಿಸಲು ಒಂದು ವರ್ಷದಿಂದಲೂ ಬಹಳ ಉಪಾಯ ಮಾಡುತ್ತಿದ್ದಾಳೆ ಎಂದು. ಆ ವಿಚಾರದಲ್ಲಿ ನಾಗಕ್ಕ ಇತರ ಗಂಡುಗಳೊಡನೆ ಬೇರೆ ಬೇರೆಯ ಕಡೆಗಳಲ್ಲಿ ಹೇಗೆ ನಡೆದುಕೊಂಡಿದ್ದಳು ಎಂಬುದಂತೂ ಎಲ್ಲರಿಗೂ ಗೊತ್ತಿದ್ದಂತೆ ಅವರಿಗೂ ತಿಳಿದ ವಿಷಯವಾಗಿತ್ತು. ಆದ್ದರಿಂದಲೆ ಹಿತವಲ್ಲದ ಆ ಪರಸಂಗವನ್ನು ಕುರಿತು ತಾವು ಬಾಯಿಬಿಟ್ಟು ಕೇಳಲು ಹಿಂದೆಗೆದಿದ್ದರು.
“ನಮ್ಮ ಮನೆ ಹಿಂದೆ, ಅದೇ ಆ ಹಾಡ್ಯದ ಬಲಗಡೆಗೆ, ಉಂಡು ಮಾರಿಗುಡಿ ಇದೆಯಲ್ಲಾ?…. ನೀನು ನೋಡೀಯಲ್ಲಾ?” ವೆಂಕಟಣ್ಣ ಮಾರಿ ಹರಕೆಯ ವಿಶೇಷಕ್ಕಾಗಿ ಹಂದಿ ತೆಗೆದುಕೊಂಡು ಹೋಗುತ್ತಿರುವುದೆಂದು ನಿಜವನ್ನು ಮರೆಸಿದ್ದ.
“ಹ್ಞೂ ನೋಡೀನಿ ಅಂತ ಕಾಣ್ತದೆ. ಯಾವತ್ತೊ ಒಂದು ಸಾರಿ ದೊಡ್ಡ ಬೇಟೆಗೆ ಹೋದಾಗ, ಆ ಗುಡಿ ಬದೀಲೆ ಅಲ್ಲೇನು ಮಿಣಿಬಲೆಗೆ ಒಂದು ಒಂಟಿಗ ಬಿದ್ದು, ನೀನು ಭರ್ಜಿಲಿ ತಿವಿದು, ಒಂದುರುಳು ಉರುಳು ಹಂದಿ ಹತ್ರಾನೆ ಬಿದ್ದದ್ದು!…” ವೆಂಕಟಣ್ಣ ಆ ಘಟನೆಯನ್ನು ನೆನೆದು ಹೊಹ್ಹೊಹ್ಹೊಹ್ಹೊ ಎಂದು ಗಟ್ಟಿಯಾಗಿ ನಗುತ್ತಿರಲು ಶಂಕರಪ್ಪ ಮುಂದುವರಿಸಿ “ನಮ್ಮ ತಿರುಪತಿಗೆ ಹೋದ ದೊಡ್ಡಣ್ಣ ಅದಕ್ಕೊಂದು ಈಡು ಹೊಡೀದಿದ್ದರೆ ನಿನ್ನ ಗತಿ ಮುಗೀತಿತ್ತು….”
“ಹೌದಲ್ಲಾ?…. ಆ ಮಾರಾಯನಿಂದ ನನ್ನ ಪರಾಣ ಉಳೀತು! ಪುಣ್ಯಾತ್ಮ! ತಿಮ್ಮಪ್ಪ ಅವನಿಗೆ ಒಳ್ಳೇದು ಮಾಡ್ಲಿ!”
“ಬದುಕಿದ್ದರೆ ತಾನೆ ಒಳ್ಳೇದು ಮಾಡಾದು? ನೀನೇ ಹೇಳ್ದೆ, ವಾಂತಿಭೇದಿ ಆಗಿ ಅಂವ ಸತ್ತಿದ್ನ ಕಂಡೋರೆ ಹೇಳಿದ್ರು ಅಂತಾ.”
“ಯಾರಿಗೂ ಗೊತ್ತು ಯಾವುದು ನಿಜಾ ಅಂತ? ಕಡೀಗೆ ಆ ತೀರ್ಥಳ್ಳಿ ದಾಸಯ್ಯನ ಮಾತೇ ಸತ್ಯವಾದ್ರೂ ಆಗಬೈದು?….
“ಅದೇನು ಗುಲ್ಲು, ಮಾರಾಯ? ಇತ್ತ ಮಖಾನೆ ಬರಾಹಾಂಗೆ ಕಾಣ್ತದೆ!”
ಅತ್ತಕಡೆಗೆ ಬೆನ್ನುಹಾಕಿ ಕುಳಿತಿದ್ದ ವೆಂಕಟಣ್ಣ ಶಂಕರಪ್ಪ ಹೆಗ್ಗಡೆಯವರು ಹೇಳಿದ್ದು ಕೇಳಿ ಆ ಕಡೆ ಮುಖ ತಿರುಗಿಸಿ ನೋಡುತ್ತಾನೆ: ಹಂದಿ, ನಾಯಿ, ಮನುಷ್ಯರು, ಬೊಬ್ಬೆ, ಕರೆ, ಕೂಗು, ಬೂಗುಳ, ಗಲಾಟೆ ‘ಹಿಡಿಯೋ”’’, ‘ಹೊಡೆಯೋ’, ‘ಅವರ ಮನೆ ಅಂಗಳಕ್ಕೆ ನುಗ್ತದಲ್ಲೋ’, ‘ಮುಂದೆ ಹೋಗಿ ಅಡ್ಡ ಹಾಕೋ’, ‘ತಡೆಯೋ!’ ‘ಓಡೋ, ಬೇಗೋಡೋ, ನಿನ್ನ ಗುಡ್ಲೀಗೆ ಬೆಂಕಿ ಬೀಳ!’ ಎಂಬೆಲ್ಲ ಸದ್ದಿನ ತುಮುಲವು ಶರವೇಗದಿಂದ ನುಗ್ಗಿ ತಾವಿದ್ದ ಕಡೆಗೇ ಮೇಲ್ವಾಯುತ್ತಿದೆ!
ಶಂಕರಪ್ಪ ಹೆಗ್ಗಡೆಯವರು ಸ್ನಾನಮಾಡಿ ಕೆದರಿ ಬೆನ್ನಮೇಲೆ ಇಳಿಬಿಟ್ಟಿದ್ದ ತಮ್ಮ ಉದ್ದನೆಯ ಕೂದಲನ್ನು ಬೇಗಬೇಗನೆ ಒಟ್ಟು ಮಾಡಿ ಜುಟ್ಟು ಕಟ್ಟಿಕೊಳ್ಳುತ್ತಾ “ಅಯ್ಯಯ್ಯೋ! ಹೊಲೆಮಾದಿಗೆ ಸಾವಾಸ! ತುಳಸೀ ಮೇಲೆ ನುಗ್ಗಿಸ್ತಾರಲ್ಲೋ ಹೇಲ್ ತಿನ್ನ ಹಂದೀನ! ಥೂ!” ಎಂದು ಕೂಗುತ್ತಲೆ ಮೆಟ್ಟಲು ಹಾರಿ ಅಂಗಳಕ್ಕೆ ದುಮುಕಿದರು. ವೆಂಕಟಣ್ಣ ಆ ಉದ್ವೇಗ ಉತ್ಸಾಹ ಅವಸರಗಳಲ್ಲಿ ತನ್ನ ಕಾಲಿನ ಹುಣ್ಣನ್ನು ಮರೆತು, ಹಂದಿಗೆ ಹೇರಲೆಂದೊ, ಇಲ್ಲವೆ ಅಂಗಳಕ್ಕೆ ಧಾವಿಸುತ್ತಿದ್ದ ದಾಳಿಯನ್ನು ತಡೆಯಲೆಂದೊ, ತಟಕ್ಕನೆ ಎದ್ದು ಬಳಿಯಿದ್ದ ದೊಣ್ಣೆಯನ್ನು ತುಡುಕಿ ಶಂಕರಪ್ಪನ ಹಿಂದೆಯೆ ನುಗ್ಗಿದನು. ಆದರೆ ಮೆಟ್ಟಲಿಗೆ ಹಾರಿದವನೆ ದೊಸಕ್ಕನೆ ಕೂತು ‘ಅಯ್ಯಪ್ಪಾ’ ಎಂದು ಒರಲಿಬಿಟ್ಟನು! ಕಣ್ಣಾಪಂಡಿತರು ಮದ್ದು  ಹಾಕಿ ಕಟ್ಟಿದ ಬಟ್ಟೆಯೆಲ್ಲ ಕಂಪಾಗಿ, ನೆತ್ತರು ಇಳಿಯ ತೊಡಗಿತು. ಆದರೆ ಯಾರೊಬ್ಬರೂ ಅವನಿಗೆ ಒದಗಿದ್ದ ಆ ದುರವಸ್ಥೆಯನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಗಲಾಟೆಯನ್ನು ಕೇಳಿ ಕೂಸನ್ನೆತ್ತಿಕೊಂಡು ಬಂದು ಜಗಲಿಯ ಮೇಲೆ ಮಗ ರಾಮು ಮತ್ತು ಬಾಲೆ ಆಡಿಸುವ ಹುಡುಗಿ ಕೆಂಪಿ ಇವರೊಡನೆ ನಿಂತಿದ್ದ ಸೀತಮ್ಮನವರೂ ನಾಯಿಗಳೂ ಮನುಷ್ಯರೂ ತುರುಬಿಕೊಂಡು ಬರುತ್ತಿದ್ದ ಹಂದಿಯನ್ನೆ ನೋಡುತ್ತಿದ್ದರು.
******


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ