ನನ್ನ ಪುಟಗಳು

05 ಏಪ್ರಿಲ್ 2022

Mankuthimmanakagga-201-220

ರಸಧಾರೆ – 201

ಉರಿಯುತಿರೆ ಹೊಟ್ಟೆ ಕಿಚ್ಚಾರಿಸಲು ನೀರೆಲ್ಲಿ?
ನರಕವೆದೆಯಲಿ ನೆಲೆಸೆ ನಿದ್ದೆಗೆಡೆಯೆಲ್ಲಿ?
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ ?
ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ.

ಕಿಚ್ಚಾರಿಸಲು = ಕಿಚ್ಚ+ ಆರಿಸಲು // ನರಕವೆದೆಯಲಿ = ನರಕವು + ಎದೆಯಲಿ// ನಿದ್ದೆಗೆಡೆಯೆಲ್ಲಿ = ನಿದ್ದೆಗೆ + ಎಡೆಯಲ್ಲಿ// ಹರಿಸಲಪ್ಪುದೆ = ಹರಿಸಲು + ಅಪ್ಪುದೆ //

ಕಿಚ್ಚು = ಬೆಂಕಿ, ಉರಿ// ಎಡೆಯಲ್ಲಿ = ಅವಕಾಶವೆಲ್ಲಿ// ಹರಿಸಲು = ಹೋಗಲಾಡಿಸಲು // ಅಪ್ಪುದೆ = ಆಗುವುದೆ// ಮತ್ಸರಿಯ = ಮತ್ಸರ ಪಡುವವನ// ಕರುಬಿದನ = ಕರುಬುವವನ// ಪೊರೆಗೆ = ರಕ್ಷಣೆ.

ಹೊಟ್ಟೆಯುರಿಯನ್ನು ಆರಿಸಲು ನೀರು ಎಲ್ಲಿಹುದು? ನರಕದಂಥ ಹಿಂಸೆಯನ್ನು ನೀಡುವ ಈ ಅಸೂಯೆ ಎನ್ನವ ಉರಿ ಹೃದಯದಲಿ ನೆಲೆಸಿರುವಾಗ, ನಿದ್ದೆ ಬರಲು ಹೇಗೆ ಸಾಧ್ಯ. ಮತ್ಸರ ಪಡುವವನ ಸಂಕಟವನ್ನು ಯಾರಾದರೂ ನಿವಾರಿಸಲು ಸಾಧ್ಯವೇ? ಅಂತಹವನನ್ನು ಆ ದೇವರೇ ಕಾಪಾಡಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಯಾರಿಗೆ ಏನು, ಎಷ್ಟು ಮತ್ತು ಯಾವ ಸಮಯಕ್ಕೆ ಸಿಗಬೇಕೆನ್ನುವುದು ವಿಧಿ ಲಿಖಿತವೆನ್ನುತ್ತದೆ ನಮ್ಮ ಸನಾತನ. ಪ್ರತಿಯೊಬ್ಬರ ಅನುಭವವೂ ಅದನ್ನು ಪುಷ್ಟೀಕರಿಸುತ್ತದೆ. ಆಸೆ ಪಟ್ಟು ಸಿಕ್ಕದ್ದರಲ್ಲಿ ತೃಪ್ತಿಯಿಂದ ಜೀವನ ಮಾಡಿದವರ ಮತ್ತು ಅತಿಯಾಸೆ ಪಟ್ಟು ಅಸೂಯೆಯಿಂದ ಮತ್ತು ಅಹಂಕಾರದಿಂದ ತಮ್ಮ ಮತ್ತು ತಮ್ಮನ್ನು ನಂಬಿದವರ ಜೀವನವನ್ನು ನಾಶಮಾಡಿದವರ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತವೆ. ಮಹಾಭಾರತದ ಧುರ್ಯೋಧನನೆ ಇದಕ್ಕೆ ಸೂಕ್ತ ಉದಾಹರಣೆ. ಹಾಗೆ ನಾವು ಆಸೆಪಟ್ಟು ನಮಗೆ ಸಿಗದಿದ್ದನ್ನು ನೆನೆದು ಮತ್ತು ಅದು ಬೇರೆಯವರಿಗೆ ಸಿಕ್ಕಿದರೆ ಕಂಡು ಅಸೂಯೆ ಪಡುವುದು ಎಷ್ಟು ಸರಿ? ಆದರೆ ಮಾನವನ ಸ್ವಭಾವವು ಹೀಗೆ ಅಸೂಯೆ ಪಡುತ್ತಲೇ ಇರುತ್ತದೆ. ಈ ಅಸೂಯೆ ಎನ್ನುವ ಬೆಂಕಿ, ಅಸೂಯೆ ಪಡುವವನನ್ನು ಒಳಗೊಳಗೇ ಸುಡುತ್ತಲೇ ಇರುತ್ತದೆ. ಈ ಬೆಂಕಿಯನ್ನು ಯಾರಿಂದಲೂ ಆರಿಸಲು ಸಾಧ್ಯವಿಲ್ಲ.

ಅಸೂಯೆ ಪಟ್ಟಾಕ್ಷಣ ನಮಗೆ ನಾವು ಬಯಸಿದ್ದು ಸಿಗುವ ಹಾಗಿದ್ದರೆ, ಅದು ಬೇರೆ ವಿಷಯ. ಹಾಗೆ ಸಿಗುವುದಿಲ್ಲವಲ್ಲ. ವಸ್ತುವಂತೂ ಸಿಗುವುದಿಲ್ಲ, ಉಳಿಯುವುದೇನು, ಕೇವಲ ನಮ್ಮನ್ನು ಸುಡುವ ಅಸೂಯೆಯ ಬೆಂಕಿ. ಇದು ಮನಸ್ಸನ್ನು ಸುಡುತ್ತದೆ ಮತ್ತು ಆ ಸುಡುವ ಮನಸ್ಸು ದೈಹಿಕ ಆರೋಗ್ಯವನ್ನೂ ಹಾಳುಗೆಡುವುತ್ತದೆ. ಚಿಂತೆ ಹತ್ತಿ ನಿದ್ದೆಯೂ ಬರುವುದಿಲ್ಲ. ಈ ಚಿಂತೆಗೆ ಕಾರಣ, ಆಸೆ ಪಡುವ ನಾವು, ನಮ್ಮ ಯೋಗ್ಯತೆ ಮತ್ತು ಸಾಮರ್ತ್ಯದ ಮಿತಿ ಎರಡನ್ನೂ ಅರಿತಿರುವುದಿಲ್ಲ. ಅನ್ಯರಿಗೆ ಅದು ಗೊತ್ತಾದರೂ ಅವರು ನಮ್ಮ ಮನಸ್ಸಿನ ಈ ತೊಳಲಾಟವನ್ನು ಹಿಂಸೆಯನ್ನು ಹೋಗಲಾಡಿಸಲಾರರು. ಕಾರಣ ನಮ್ಮ ಮನಸ್ಸನ್ನು ಅವರು ಅರಿಯಲಾರರು. ಆದರೆ ವಿವೇಚನೆಯಿಂದ ಕೂಡಿದ ಆಲೋಚನೆಯಿದ್ದರೆ, ಖಂಡಿತ ನಾವು ನಮ್ಮ ಮನಸ್ಸಿನಲ್ಲಿ ನಡೆಯುವ ಈ ತೀರಲಾರದ ಆಸೆಗಳನ್ನು ಮತ್ತು ಆ ಆಸೆಗಳಿಂದ ಉಂಟಾದ ಅಸೂಯೆಯನ್ನು ಹೋಗಲಾಡಿಸಿಕೊಳ್ಳಬಹುದು. ಆದರೆ ಅದಕ್ಕೆ ನಮಗೆ ನಮ್ಮ ” ಅಹಂಕಾರ ” ಅಡ್ಡ ಬರುತ್ತದೆ. ಅಂತಹವರನ್ನು ಆ ದೇವರೇ ಕಾಪಾಡಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

” ಅನ್ಯೇಷಾಂ ಉದಯಂ ದೃಷ್ಟ್ವಾ ಯೇ ಅಭಿನಂದಂತಿ ಮಾನವಾಃ, ತೇ ವೈ ಭಾಗವತೋತ್ತಮಾಃ” ಪರರ ಅಭಿವೃದ್ಧಿಯನ್ನು ಕಂಡು ಸಂತೋಷಪಡುವವನು, ಪರಮಾತ್ಮನಿಗೆ ಪ್ರಿಯನಾಗುತ್ತಾನೆ ಎಂದು ಅರ್ಥ. “ಅಸೂಯೆ ಪಡುವವನು ಅಲ್ಲ” ಎಂದೂ ಅರ್ಥ, ಅಲ್ಲವೇ ವಾಚಕರೆ? ಹಾಗಾಗಿ ನಮ್ಮ ಮಾನಸಿಕ ಸ್ವಾಸ್ಥ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು, ನಮ್ಮ ಮಿತಿಗಳನ್ನು ಅರಿತುಕೊಂಡು, ಪೂರ್ವಕರ್ಮಾನುಸಾರ, ನಮ್ಮ ವಿಧಿಯನುಸಾರ, ನಮ್ಮ ಸಾಮರ್ಥ್ಯಕ್ಕನುಸಾರ ನಮಗೆ ಲಭ್ಯವಾದದ್ದನ್ನು ತೃಪ್ತಿಯಿಂದ ಅನುಭವಿಸಿದರೆ ಮನಸ್ಸಿಗೆ ನಿರಾಳ, ನೆಮ್ಮದಿ. ನಮಗೆ ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಮತ್ತು ಅಧಿಕಾರವುಂಟು. ನಾವೇನು ಆಯ್ದು ಕೊಂಡರೆ ಅದರನುಸಾರ ನಮಗೆ ಕಷ್ಟವೋ ಅಥವಾ ಸುಖವೋ ಸಿಗುತ್ತದೆ.


ರಸಧಾರೆ – 202

ರಾವಣನ ದಶಶಿರವದೇಂ? ನರನು ಶತಶಿರನು
ಸಾವಿರಾಸ್ಯಗಳನೊಂದರೊಳಣಗಿಸಿಹನು
ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ
ಭೂವ್ಯೋಮಕತಿಶಯನು – ಮಂಕುತಿಮ್ಮ

ದಶಶಿರವದೇಂ = ದಶ + ಶಿರವು+ಅದೇಂ // ಸಾವಿರಾಸ್ಯಗಳನೊಂದರೊಳಣಗಿಸಿಹನು = ಸಾವಿರ+ಆಸ್ಯಗಳನು+ಒಂದರ+ಒಳಗೆ+ಅಣಗಿಸಿಹನು// ಹುಲ್ಲೆಯುಮಾಗಿ = ಹುಲ್ಲೆಯುಂ+ಆಗಿ//
ಭೂವ್ಯೋಮಕತಿಶಯನು = ಭೂ+ವ್ಯೋಮಕೆ+ ಅತಿಶಯನು.
ಆಸ್ಯಗಳನು = ಮುಖಗಳನು// ಹುಲ್ಲೆಯುಂ = ಜಿಂಕೆಯೂ// ವ್ಯೋಮಕೆ = ಆಕಾಶಕ್ಕೆ.

ರಾವಣನಿಗೆ ಹತ್ತು ತಲೆಗಳಿರಬಹುದು. ಆದರೆ ನಮ್ಮ ಮನುಷ್ಯನಿಗೆ ನೂರಾರು ತಲೆಗಳು. ಸಾವಿರ ಮುಖಗಳನ್ನು ಒಂದೇ ಮುಖದಲ್ಲಿ ಅಡಗಿಸಿಟ್ಟುಕೊಂಡು ಪ್ರದರ್ಶಿಸುವ ಕ್ಷಮತೆ ಇರುವವನು ಮನುಷ್ಯ. ಹಾವಾಗಿ, ಹುಲಿಯಾಗಿ, ಕಪ್ಪೆ, ಜಿಂಕೆಯಾಗಿಯೂ ತನ್ನ ಗುಣಗಳನ್ನು ತೋರುವ ಈ ಮನುಷ್ಯ ಇಡೀ ಜಗತ್ತಿನಲ್ಲಿ ಅತಿಶಯದ ಪ್ರಾಣಿ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ಮಾನ್ಯ ಗುಂಡಪ್ಪನವರು ಮಾನವನ ಬಹುಮುಖ “ಪ್ರತಿಭೆ” ಕುರಿತು ಈ ಕಗ್ಗದಲ್ಲೂ ಉಲ್ಲೇಖ ಮಾಡುತ್ತಾರೆ. ರಾಮಾಯಣದಲ್ಲಿ ರಾವಣನಿಗೆ ದಶಗ್ರೀವ, ದಶಕಂಠ ಎಂದೂ ಕರೆದಿದ್ದಾರೆ. ೬೪ ವಿಧ್ಯೆಗಳಲ್ಲಿ ಪಾರಂಗತನಾದ ರಾವಣ ಏಕ ಕಾಲದಲ್ಲಿ ಹತ್ತಾರು ಕೆಲಸಗಳನ್ನು ಮಾಡುವ ಕ್ಷಮತೆಯನ್ನು ಹೊಂದಿದ್ದನಾದ್ದರಿಂದ ಅವನಿಗೆ ಸೂಚ್ಯವಾಗಿ ದಶಕಂಠನೆಂದು ಕರೆದಿದ್ದಾರೆ, ವಾಲ್ಮೀಕಿ ರಾಮಾಯಣದಲ್ಲಿ. ಅಷ್ಟೇ ಅಲ್ಲ, ರಾಮ ರಾವಣ ಯುದ್ಧದಲ್ಲಿ ಒಂದು ತಲೆ ಕಡಿದರೆ ಮತ್ತೊಂದು ತಲೆ ಉದ್ಭವವಾಗುತ್ತಂತೆ. ಅದು ಕೂಡ, ಅವನ ಒಂದು ಸಾಮರ್ಥ್ಯವನ್ನು ಯಾರಾದರೂ ಮೀರಿಸಿದರೆ ಅವನ ಮತ್ತೊಂದು ಸಾಮರ್ಥ್ಯ ಕೆಲಸಮಾಡುತಿತ್ತು ಎನ್ನುವುದನ್ನು ಸೂಚ್ಯವಾಗಿ ಹಾಗೆ ಹೇಳಿದ್ದರೆ ಅಷ್ಟೇ.

ರಾವಣನಿಗೆ ಹತ್ತು ತಲೆಗಳಾದರೆ ಮನುಷ್ಯನಿಗೆ ನೂರಾರು ತಲೆಗಳಿವೆ ಎಂದು ಮನುಷ್ಯನ ಬಹು ರೂಪಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಹಾವಾಗಿ ಛಲ ಹಿಡಿಯುವ ಗುಣ , ಕೋಪಗೊಂಡು ಹುಲಿಯಂತೆ ಮತ್ತೊಬ್ಬರ ಮೇಲೆ ಎರಗುವ ಗುಣ, ಕಪ್ಪೆಯಂತೆ ತಾನುಂಟು ತನ್ನ ಪ್ರಪಂಚವುಂಟು ಎಂದು ತಮ್ಮ ಸ್ವಾರ್ಥದ ವೃತ್ತದಲ್ಲೇ ಇರುವ ಗುಣ, ಸಾತ್ವಿಕ ಗುಣಗಳನ್ನು ಸಂಪೂರ್ಣವಾಗಿ ಹೊಂದಿರುವ ಆ ಜಿಂಕೆ ಮರಿಯಂತ ಗುಣ, ಗೋವಿನಂತೆ ಮಮತೆಯ ಗುಣ, ಹೀಗೆ ಎಲ್ಲ ಗುಣಗಳನ್ನೂ ಹೊಂದಿ ಸಮಯ ಸಂದರ್ಭಕ್ಕೆ ಸರಿಯಾಗಿ ಅವುಗಳನ್ನು ಪ್ರದರ್ಶಿಸುವ ಕಲೆಯನ್ನು ಆ ಪರಮಾತ್ಮ ಕೇವಲ ಮನುಷ್ಯನಿಗಷ್ಟೇ ಕೊಟ್ಟಿದ್ದಾನೆ ಎಂದರೆ ಆಶ್ಚರ್ಯದ ವಿಷಯವೇ ಅಲ್ಲವೇ? ಈ ಗುಣ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ರೀತಿಯಲ್ಲಿ ಮತ್ತು ಬೇರೆ ಬೇರೆ ಪ್ರಮಾಣ, ಪರಿಮಾಣಗಳಲ್ಲಿ ಇರುತ್ತದೆ.

ಒಂದೇ ವ್ಯಕ್ತಿ ಒಂದೇ ಸಮಯದಲ್ಲಿ ಹಲವರೊಡನೆ ಹಲ ಬಗೆಯಲ್ಲಿ ನಡೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಒಂದೇ ವ್ಯಕ್ತಿ ಎಷ್ಟೊಂದು ವೈವಿಧ್ಯತೆಯನ್ನು ಹೊಂದಿ ವ್ಯವಹರಿಸುವುದನ್ನು ನೋಡಿ ಇಡೀ ಜಗತ್ತೇ ಚಕಿತಗೊಂಡಿದೆ ಎಂದು ಒಂದು ಅತಿಶಯವನ್ನು ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು. ಈ ರೀತಿಯ ಬಹು ಮುಖ ಮನುಷ್ಯನಿಗೆ ಬೇಕೇ? ಎಂದರೆ ಹೌದು ಬೇಕು. ಇದನ್ನೂ ಆ ಪರಮಾತ್ಮನೇ ಕೊಟ್ಟ ಗುಣವಲ್ಲವೇ? ಅವನಾಡಿಸುವ ಜಗನ್ನಾಟಕದಲ್ಲಿ, ಪಾತ್ರಗಳು ಸರಿಯಾದ ನಟನೆಯನ್ನು ಮಾಡಲು ಅವನು ನೀಡಿರುವ ಒಂದು ಪರಿಕರ ( property ) ವಲ್ಲವೇ ಈ ಬಹುಮುಖತ್ವ. ಈ ಜಗತ್ತನ್ನು ಸುಂದರವಾಗಿಡಲು ಹೆಚ್ಚು ತಿಳುವಳಿಕೆಯನ್ನೂ ಈ ಬಹುಮುಖ ಪ್ರತಿಭೆಯನ್ನೂ ಆ ಪರಮಾತ್ಮ ನೀಡಿದರೆ ಮನುಷ್ಯ “ಪರಮಾತ್ಮನ ಕಾರಣ”ವನ್ನು ಕಡೆಗಣಿಸಿ ತನ್ನ ಸ್ವಾರ್ಥಕ್ಕಾಗಿಯೇ ಅದನ್ನು ಉಪಯೋಗಿಸಿ ” ರಾವಣನಿಗಿಂತ ತಾನು ಒಂದು ಕೈ ಹೆಚ್ಚು” ಎನ್ನುವಂತೆ ನಡೆದುಕೊಳ್ಳುತ್ತಿದ್ದಾನೆ. ಕೇವಲ ಸ್ವಾರ್ಥದಿಂದ, ಈ ಜಗತ್ತಿನ ಎಲ್ಲವನ್ನೂ ತನ್ನದಾಗಿಸಿಕೊಳ್ಳಲು ಅವನು ತೋರುವ “ಬಹುಮುಖ ಪ್ರತಿಭೆ”ಯನ್ನು ನೋಡಿದರೆ ಅಸಹ್ಯವಾಗುತ್ತದೆ.

ವಾಚಕರೆ ನಾವು ಲೋಕದ ಡೊಂಕನ್ನು ತಿದ್ದಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ನಮ್ಮ ವಿಶ್ಲೇಷಣೆ ನಾವೇ ಮಾಡಿಕೊಂಡು ಸಾಧ್ಯವಾದಷ್ಟು ನಮ್ಮನ್ನು ನಾವು ತಿದ್ದಿಕೊಳ್ಳಲು ಪ್ರಯತ್ನ ಪಟ್ಟರೆ ಒಳ್ಳೆಯದು.

ರಸಧಾರೆ – 203

ತಲೆಯೊಳಗೆ ನೆರದಿಹವು ನೂರಾರು ಹಕ್ಕಿಗಳು
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು
ಕಿಲಕಿಲನೆ ಗೊರಗೊರಣೆ ಕಿರಿಚಿ ಕೂಗುತ್ತಿಹವು
ನೆಲೆಯಲ್ಲಿ ನಿದ್ದೆಗೆಲೋ ? ಮಂಕುತಿಮ್ಮ.

ನಾವು ಈ ಹಿಂದಿನ ಕಗ್ಗಗಳಲ್ಲಿ ಮನುಷ್ಯನ ಮನಸ್ಸಿನಲಿ ಒಂದೇ ಸಮಯದಲ್ಲಿ ನಡೆಯುವ ಹಲವಾರು ಯೋಚನೆಗಳ ವಿಚಾರ ಮತ್ತು ಮನುಷ್ಯನ ಗುಣಗಳ ಹಲವಾರು ಮುಖವಾಡಗಳ ವಿಚಾರವನ್ನು ನೋಡಿದ್ದೇವೆ. ಒಂದು ಬಾರಿ ಯಾವುದೇ ಮನುಷ್ಯನ ಮಸ್ತಿಷ್ಕದಲ್ಲಿ ಹೊಕ್ಕು ನೋಡಿದರೆ, ನಮಗೆ ಅಲ್ಲಿ ಭಯಂಕರವಾಗಿ ನಡೆಯುವ ಚಿತ್ರ ವಿಚಿತ್ರವಾದ ವಿಚಾರಗಳ ಕುಸ್ತಿಯು ಕಾಣುತ್ತದೆ. ಒಂದರ ಮೇಲೊಂದು ಬೀಳುತ್ತಾ, ಒಂದರೊಂದಿಗೆ ಇನ್ನೊಂದು ಗುದ್ದಾಡುತ್ತಾ, ಕೆಲವು ಸೋಲುತ್ತಾ, ಕೆಲವು ಗೆಲ್ಲುತ್ತಾ, ಸೋತದ್ದು ಮತ್ತೆ ಗೆಲ್ಲುತ್ತಾ, ಗೆದ್ದು ಸೋಲುತ್ತಾ, ಹೊಸ ಹೊಸ ಪಟ್ಟುಗಳನ್ನು ಹಾಕುತ್ತಾ, ತಮ್ಮೊಳಗೆ ತಾವೇ ಗುದ್ದಾಡುವ, ವಿವೇಕದೊಡನೆ ಮತ್ತು ಬುದ್ಧಿಯೊಡನೆ ಗುದ್ದಾಡುವ ಸಾವಿರಾರು ಯೋಚನೆಗಳ ಆಗರವೇ ನಮ್ಮ ಮನಸ್ಸಿನ ಹಂದರ. ವಾಸ್ತಿವಿಕವಾಗಿ ಯಾವ ಶಬ್ದವೂ ಆಗದಿದ್ದರೂ ನಮಗೆ ನಮ್ಮ ಮನದಲ್ಲಿ, ಗಿಳಿ – ಕಾಗೆ – ಗೂಬೆ – ಕೋಗಿಲೆಯಂತಹ ಪಕ್ಷಿಗಳು ಒಂದೇ ಬಾರಿ ಕೂಗಿದರೆ ಆಗುವ ಕಲರವವಾದಂತೆ ಭಾಸವಾಗುತ್ತದೆ . ಈ ಶಬ್ದಗಳೇ ಹಲ ವಿಧವಾದ ಆಲೋಚನೆಗಳಂತೆ ನಮ್ಮ ಮನಸ್ಸಿನಲ್ಲಿ ಹೊಕ್ಕು ರಾದ್ದಾಂತ ಮಾಡುತ್ತಿರುತ್ತದೆ. ಅಂತಹ ಕಲಸುಮೆಲೋಗರವಾದ ಆಲೋಚನೆಗಳ ಗೂಡಿನಲ್ಲಿ ಶಬ್ದವೆಲ್ಲಾ ಸ್ಥಬ್ದವಾಗಿ ನಮಗೆ ನಿದ್ದೆ ಬರುವುದು ಸಾಧ್ಯವೇ ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಒಂದು ಯೋಚನೆ ಹೋದರೆ ಮತ್ತೊಂದು ಆ ಕ್ಷಣವೇ ನುಸುಳುತ್ತದೆ. ಹಾಗೆ ಬಂದು ಹೋಗುವ ಆಲೋಚನೆಗಳನ್ನು ನಾವು ದೂರನಿಂತು ನೋಡಿ, ಅವು ಏಕೆ ಬರುತ್ತವೆ ಎಂದು ಆಲೋಚಿಸಿದರೆ, ನಮಗೆ ಕಾರಣವೇ ತಿಳಿಯುವುದಿಲ್ಲ. ಈ ಮನಸ್ಸೇ ಒಂದು ಚಿತ್ರ ವಿಚಿತ್ರ ಆಲೋಚನೆಗಳ ಗೂಡು. ಇದರಲ್ಲಿ ಕೇಳಿಬರುವ ಶಬ್ಧವನ್ನು ಸುಮ್ಮನಾಗಿಸಲೇ ನಮ್ಮ ಅಪೂರ್ವಜರು ನಮಗೆ ಪೂಜೆ, ಧ್ಯಾನ, ಯೋಗ, ಅಧ್ಯಯನ, ಭಜನೆ, ಸಂಗೀತ ಮುಂತಾದ ವಿಷಯಗಳನ್ನು ಕೊಟ್ಟಿದ್ದಾರೆ. ಯೋಗವನ್ನು ” ಚಿತ್ತ ವೃತ್ತಿ ನಿರೋದಕ ” ಎಂದು ಪರಿಭಾಷಿಸಿದ್ದಾರೆ ಎಂದಮೇಲೆ, ಮನಸ್ಸನ್ನು ಸುಮ್ಮನಾಗಿಸಬೇಕಾದ ಕಾರಣವೂ ಅವರಿಗೆ ಗೊತ್ತಿತ್ತು ಎಂದು ಅರ್ಥವಲ್ಲವೇ?

ಮನಸ್ಸಿನ ಶಬ್ದ ಜಂಗುಳಿ ಕಡಿಮೆಯಾದರೆ ಅಥವಾ ಮನಸ್ಸು ಒಂದು ಸಮಯದಲ್ಲಿ ಯಾವುದಾದರೂ ಒಂದೇ ವಿಷಯದ ಮೇಲೆ ಸಕಾರಾತ್ಮಕವಾಗಿ ಕೇಂದ್ರೀಕೃತವಾದರೆ, ಅದು ಧ್ಯಾನವಾಗುತ್ತದೆ. ಧ್ಯಾನದಲ್ಲಿ ಅನವಶ್ಯಕವಾದ ಶಬ್ಧಗಳೆಲ್ಲ ಶಾ೦ತವಾಗಿ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮೊದಮೊದಲು ಜಾಗೃತವಾಗಿರುವಾಗ ಮಾತ್ರ ಶಾಂತವಾಗಿದ್ದು ನಿದ್ದೆ ಬಂದಂತಾಗಿ, ಆ ಆಲೋಚನೆಗಳು ಕನಸಿನಲ್ಲಿ ತಮ್ಮ

ರುದ್ರನರ್ತನ ಮಾಡುತ್ತವೆ. ಆದರೆ ಧ್ಯಾನ ಧೀರ್ಘ ಮತ್ತು ದೃಢವಾದಾಗ ನಮಗೆ ಸಂಪೂರ್ಣ, ಕನಸಿಲ್ಲದ ( ಸಾವಿನಂತ ) ನಿದ್ದೆ ಬರುತ್ತದೆ.


ರಸಧಾರೆ – 204

ದೇವಾಂಶ ಪಶ್ವಂಶಗಳ ಗಂಟು ಮಾನುಷತೆ
ಧೀವಿಮರ್ಶೆಯಿನೊಂದ ಸತ್ಕರಿಸಿ ಬಳಿಸಿ
ಭಾವಪರಿಶೋಧನೆಯಿನಿನ್ನೊಂದ ದಂಡಿಪುದೆ
ಜೀವಪ್ರಕರ್ಷಗತಿ – ಮಂಕುತಿಮ್ಮ.

ಪಶ್ವಂಶಗಳ = ಪಶು + ಅಂಶಗಳ // ಧೀವಿಮರ್ಶೆಯಿನೊಂದ = ಧೀ + ವಿಮರ್ಶೆಯಿನ್+ಒಂದ// ಭಾವಪರಿಶೋಧನೆಯಿನಿನ್ನೊಂದ = ಭಾವ + ಪರಿಶೋಧನೆಯಿನ್+ಒಂದ// ಜೀವಪ್ರಕರ್ಷಗತಿ = ಜೀವ+ ಪ್ರಕರ್ಷ+ ಗತಿ

ಧೀ= ಬುಧ್ಧಿವಂತಿಕೆ// ಪ್ರಕರ್ಷ= ಪ್ರಗತಿ.

ದೇವತೆಗಳಿಗಿರುವ ಗುಣಗಳ ಮತ್ತು ಪಶುಗಳಿಗಿರುವ ಗುಣಗಳ ಮಿಶ್ರಣವೇ ಮನುಷ್ಯಗುಣ. ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಪಶುಗುಣಗಳನ್ನು ಕರಗಿಸುತ್ತಾ ದೈವೀಗುಣಗಳನ್ನು ಹೆಚ್ಚಿಸಿ ಕೊಳ್ಳುವುದೇ ಪ್ರಕರ್ಷ, ಎಂದರೆ ಪ್ರಗತಿ ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಹಲವಾರು ಜನ್ಮಗಳಲ್ಲಿ, ಹಲವಾರು ದೇಹಗಳನ್ನು ಧರಿಸಿ, ಅವುಗಳ ಗುಣಗಳನ್ನು ತನ್ನದಾಗಿಸಿಕೊಂಡಿರುವ ಮನುಷ್ಯನಲ್ಲಿರುವ ಚೇತನ ಸಂಪೂರ್ಣವಾಗಿ ತನ್ನ ಹಳೆಯ ವಾಸನೆಗಳನ್ನು ಬಿಡದ ಕಾರಣ ಮನುಷ್ಯನಲ್ಲಿ ಆ ಪಶುಗುಣಗಳು ಇರುತ್ತವೆ. ಆದರೆ ಎಲ್ಲ ಪ್ರಾಣಿಗಳಿಗಿಂತ ಉತ್ತಮ ದೇಹವನ್ನು ಹೊಂದಿರುವ ಮನುಷ್ಯ ದೈವೀಗುಣಗಳನ್ನೂ ಹೊಂದಿರುತ್ತಾನೆ. ಆದರೆ ಪ್ರತಿ ಮನುಷ್ಯನಲ್ಲೂ ಈ ಎರಡೂ ಗುಣಗಳ ಪರಿಮಾಣ ಮತ್ತು ಪ್ರಮಾಣ ಬೇರೆ ಬೇರೆಯದಾಗಿರುತ್ತದೆ. ಹಾಗಾಗಿ ಪ್ರತೀ ಮನುಷ್ಯನ ನಡವಳಿಕೆಯೂ ಈ ಗುಣಗಳು ಮತ್ತು ಅವುಗಳ ಪ್ರಮಾಣ ಪರಿಮಾಣಗಳಗನುಗುಣವಾಗಿಯೇ ಇರುತ್ತದೆ.

ತನ್ನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಮನುಷ್ಯನಿಗೆ ಅನ್ಯ ಪ್ರಾಣಿಗಳಿಗಿಂತ ಅಧಿಕವಾದ ಬುದ್ಧಿಶಕ್ತಿಯನ್ನು ಆ ಪರಮಾತ್ಮ ಕರುಣಿಸಿದ್ದಾನೆ. ಅದನ್ನು ಉಪಯೋಗಿಸಿಕೊಂಡು ತನ್ನಲ್ಲಿರುವ ಪಶು ಗುಣಗಳನ್ನು ಕಡಿಮೆ ಮಾಡಿಕೊಳ್ಳುತ್ತಾ, ದೈವೀ ಗುಣಗಳನ್ನು ಹೆಚ್ಚು ಮಾಡಿಕೊಳ್ಳುವ ಪ್ರಯತ್ನವನ್ನು ಮನುಷ್ಯ ಮಾಡಿದರೆ ಅದು ಪ್ರಗತಿಯಾಗುತ್ತದೆ. ಹಾಗೆ ಪಶುಗುಣಗಳನ್ನು ಸಂಪೂರ್ಣವಾಗಿ ನೀಗಿಸಿಕೊಂದರೆ ಮನುಷ್ಯ

“ಮಾನವ” ನಾಗುತ್ತಾನೆ ಎಂಬುದೇ ಈ ಕಗ್ಗದ ಹೂರಣ.

ಆದರೆ ವಸ್ತುಸ್ಥಿತಿಯೇ ಬೇರೆಯಾಗಿದೆ. ಈ ಜಗತ್ತಿನ ಆಕರ್ಷಣೆಯಲ್ಲಿ ಮನುಷ್ಯ ವಿವೇಚನೆಯನ್ನು ತೊರೆದು, ಸ್ವಾರ್ಥದಿಂದ ತನ್ನಲ್ಲಿರುವ ಪಾಶವೀ ಗುಣಗಳನ್ನು ಅಧಿಕವಾಗಿಸಿಕೊಳ್ಳುತ್ತಿದ್ದಾನೆ. ಇವನ ದುರಾಸೆಗೆ ಅಂತ್ಯವೇ ಇಲ್ಲವೆಂಬಂತೆ, ಎಲ್ಲಿ ನೋಡಿದರೂ ಭಾಷೆ, ಜಾತಿ, ಧರ್ಮ, ನೀರು, ನೆಲ, ಆಕಾಶ, ಸಮುದ್ರಗಳ ಇತ್ಯಾದಿ ಕಾರಣದಿಂದ ಪ್ರಪಂಚದ ಯಾವುದಾದರೊಂದು ಮೂಲೆಯಲ್ಲಿ ಪ್ರತಿ ನಿತ್ಯ ಕದನ ಮತ್ತು ಹೋರಾಟ ನಡೆದೇ ಇರುತ್ತದೆ. “ಪಶುಗುಣಗಳನ್ನು ಸಂಪೂರ್ಣವಾಗಿ ಪಡೆದ ಆ ಪಶುಗಳಿಗಿಲ್ಲದ ಪಾಶವೀ ಭಾವದಿಂದ ಮನುಷ್ಯ ತನ್ನ ಜೀವನವನ್ನು ನರಕವಾಗಿಸಿಕೊಂಡಿದ್ದಾನೆ. ಜಗತ್ತಿನ ಜನರೆಲ್ಲಾ ಈ ಬಗ್ಗೆ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.”ನಾವು ಏಕೆ ಹೀಗೆ, ಶಾಂತವಾಗಿ, ಸುಂದರವಾಗಿ ಬಾಳಲು ನಮಗೆ ಸಾಧ್ಯವಿಲ್ಲವೇ” ಎಂದು ಯೋಚಿಸಬೇಕಾಗಿದೆ.

ಪ್ರತಿ ವ್ಯಕ್ತಿಯೂ ಬದಲಾಗಿ, ಇಡೀ ಸಮಾಜವೇ ಬದಲಾಗಿ, ಈ ಜಗತ್ತು ಎಲ್ಲರೂ ಶಾಂತಿಯಿಂದ ಬಾಳಲು ಆಗುವಂತೆ ಬದಲಾಗಬೇಕು. ಅದರ ಪ್ರಯತ್ನ ನಮ್ಮಿಂದಲೇ ಮೊದಲಾಗಬೇಕಲ್ಲವೇ? ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯವಲ್ಲವೇ?


ರಸಧಾರೆ – 205

ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳುಕುವನು
ಮುಳ್ಳಾಗಿ ಚುಚ್ಚುವನು, ಪುಲ್ಲಸುಮವಹನು
ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು
ಕ್ಷುಲ್ಲಮಾನಸನಿವನು – ಮಂಕುತಿಮ್ಮ

ಪುಲ್ಲಸುಮವಹನು = ಫುಲ್ಲ + ಸುಮವು+ ಅಹನು// ಕಲ್ಲೋಲವಾರಿಧಿವೊಲುರವಣಿಸಿ = ಕಲ್ಲೋಲ + ವಾರಿಧಿ + ವೊಲು+ ಉರವಣಿಸಿ// ಕ್ಷುಲ್ಲಮಾನಸನಿವನು = ಕ್ಷುಲ್ಲ + ಮಾನಸನು + ಇವನು

ಫುಲ್ಲ = ಅರಳಿದ // ಅಹನು = ಇಹನು// ವಾರಿಧಿ = ಸಮುದ್ರ// ವೊಲು = ಹಾಗೆ, ಅಂತೆ// ಉರವಣಿಸಿ = ಮೇಲೆ ಬಿದ್ದು // ಕ್ಷುಲ್ಲಮಾನಸನಿವನು = ಕ್ಷುಲ್ಲಕ( ನೀಚ) ಮನಸಿನವನು

ಮನುಷ್ಯನ ಹಲವಾರು ಗುಣಗಳನ್ನು ವರ್ಣಿಸುತ್ತಾ, ಮಾನವನು ಕೆಲಬಾರಿ, ಕಲ್ಲಿನಂತೆ ಗಟ್ಟಿಯಾಗಿಯೂ, ಕೆಲಬಾರಿ ಬಳ್ಳಿಯಂತೆ ವಾಲುತ್ತಾ, ಕೆಲಬಾರಿ ಮುಳ್ಳಿನಂತೆ ಪರರನ್ನು ಚುಚ್ಚುತ್ತಾ, ಕೆಲಬಾರಿ ಅರಳಿದ ಕುಸುಮದಂತೆ ಸುಗಂಧವನ್ನು ಬೀರುತ್ತಾ, ಕೆಲಬಾರಿ ಸಮುದ್ರದ ಅಲೆಯಂತೆ ಮೇಲೆದ್ದು ಮತ್ತೆ ಕೆಳಗೆ ಬೀಳುತ್ತಾ ಸ್ಥಿರ ಮನಸ್ಸಿಲ್ಲದ ಕ್ಷುಲ್ಲಕ ಮನಸ್ಸಿನವನು ಇವನು, ಎಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಗುಹೆಯಂತಿರುವ, ಆಳವಾದ ಸಮುದ್ರದಂತಿರುವ ಈ ಮಾನವನ ಮನಸ್ಸನ್ನು ಅರಿಯುವುದು ಬಹಳ ಕಷ್ಟ. ಒಂದು ಸಮಯವಿದ್ದ ಇವನ ಮನೋಭಾವ ಮತ್ತೊಂದು ಘಳಿಗೆ ಇರುವುದಿಲ್ಲ. ಇವನ ಮನಸ್ಸು ಬಹಳ ಸೂಕ್ಷ್ಮ. ಕಷ್ಟಗಳು ಬಂದಾಗ ಇವನು ಕೆಲಬಾರಿ ಕುಸಿದೇ ಹೋಗುತ್ತಾನೆ ಅಥವಾ ಗಟ್ಟಿಯಾಗಿ ಕಲ್ಲಿನಂತೆ ಸೆಟೆದು ನಿಲ್ಲುತ್ತಾನೆ. ತನ್ನ ಕಾರ್ಯಗಳನ್ನು ಪೂರೈಸಿಕೊಳ್ಳಲು ಇವನು ಹಲವುಬಾಗಿ ಪರರ ಸಹಾಯಕ್ಕಾಗಿ “ಬಳ್ಳಿ”ಯಂತೆ ಅನ್ಯರ ಮೇಲೆ ಅಧಾರಪಡುತ್ತಾನೆ ಮತ್ತೆ ಕೆಲಬಾರಿ ಯಾರ ಸಹಾಯವೂ ಇಲ್ಲದೆ ಗೆಲ್ಲುತ್ತಾನೆ. ತನ್ನ ಕಾರ್ಯಸಾಧನೆಯ ದಾರಿಯಲ್ಲಿ ಅವನಿಗೆ ತೊಡಕಾದವರನ್ನು “ಮುಳ್ಳಿನಂತೆ ಚುಚ್ಚಿ” ತನಗಿರುವ ಅಡ್ಡಿಯನ್ನು ತೊಲಗಿಸಿಕೊಂಡು ಮುಂದುವರೆಯುತ್ತಾನೆ. ಸಫಲನಾದಾಗ ತನ್ನ ಸಫಲತೆಯ ಫಲವನ್ನು ಸ್ವಾರ್ಥದಿಂದ ತಾನೊಬ್ಬನೇ ಅನುಭವಿಸುತ್ತಾನೆ ಅಥವಾ ಒಂದು ಹೂ ಸಫಲತೆಯಿಂದ ಅರಳಿ ತನ್ನ ಸುಗಂಧವನ್ನು ಜಗಕೆಲ್ಲ ಪಸರಿಸುವಂತೆ, ತನ್ನ ಸಫಲತೆಯ ಫಲವನ್ನು ಹಲವರೊಡನೆ ಹಂಚಿಕೊಂಡು ಬಾಳುತ್ತಾನೆ. ಇವೆಲ್ಲ ಮಾನವನ ಸಹಜ ಗುಣಗಳು.

ವಿಪರ್ಯಾಸವೇನೆಂದರೆ, ತಮ್ಮ ಕಷ್ಟಗಳನ್ನು ತಾವೇ ನಿವಾರಿಸಿಕೊಳ್ಳಲು ಸಾಮರ್ಥ್ಯವಿದ್ದರೂ, ಆಲಸ್ಯದಿಂದ ಅನ್ಯರಮೇಲೆ ಆಧಾರಪಡುವವರು ನಮಗೆ ಬಹಳಷ್ಟು ಜನರು ಸಿಗುತ್ತಾರೆ. ತಮಗೆ ಯಾವ ರೀತಿಯ ತೊಂದರೆಯನ್ನು ಕೊಡದೆ ಇದ್ದರೂ ಪರರನ್ನು ಘಾಸಿಗೊಳಿಸಿ, ಅವರಿಗೆ ತೊಂದರೆಯನ್ನು ಕೊಟ್ಟಾಗಲೀ ತಮ್ಮ ಕಾರ್ಯ ಸಾಧಿಸುವವರೂ ಬಹಳಷ್ಟು ಜನ ನಮಗೆ ಸಿಗುತ್ತಾರೆ. ತಮ್ಮ ಸುತ್ತಲೂ ಕಷ್ಟದಿಂದ ಕಾರ್ಪಣ್ಯದಿಂದ ನರಳುತ್ತಿರುವ ಜನರನ್ನೂ ಕಂಡೂ ಕಾಣದಂತ ” ಕಣ್ಣಿದ್ದ ಕುರುಡ”ರೂ ಸಹ ನಮಗೆ ವಿಫುಲವಾಗಿ ಕಾಣಸಿಗುತ್ತಾರೆ. ತಮ್ಮಲ್ಲಿ ಹೇರಳವಾಗಿ ಧನವಿದ್ದರೂ ಮತ್ತಷ್ಟಕ್ಕೆ ದುರಾಸೆ ಪಡುತ್ತಾ” ಎಲ್ಲವೂ ತನಗೆ ಬೇಕು” ಎನ್ನುವ ಭಾವದಿಂದ, ತಮ್ಮ ಬುಧ್ಧಿ, ಸಾಮರ್ಥ್ಯ ಮತ್ತು ಸಂಪತ್ತು ಕೇವಲ ತನಗಾಗಿಯೇ ಎಂದುಕೊಳ್ಳುವ “ಅಪ್ಪಟ ಸ್ವಾರ್ಥಿ”ಗಳೂ ನಮಗೆ ಹೇರಳವಾಗಿ ಸಿಗುತ್ತಾರೆ.

ಈ ಜಗತ್ತಿನಲ್ಲಿ ಅನೇಕಾನೇಕ ವಿಧವಾದ ಮನೋಭಾವವುಳ್ಳ ಜನರು ಇರುತ್ತಾರೆ. ನಾವೂ ಅವರಲ್ಲಿ ಒಂದು. ನಮ್ಮ ವಿಧ್ಯೆ, ಜ್ಞಾನ ಮತ್ತು ಸಂಸ್ಕಾರಗಳು ನಮ್ಮನ್ನು ನಾವು ಅವಲೋಕಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿ, ನಾವು ಏನಾಗಬೇಕು,ಏನು ಮಾಡಬೇಕು, ಏನು ಮಾಡಬಾರದು ಎಂದು ವಿಶ್ಲೇಷಣೆ ಮಾಡಿಕೊಳ್ಳುವ ಅರಿವನ್ನು ಮೂಡಿಸಿದರೆ ಒಳ್ಳೆಯದು. ಹಾಗಲ್ಲದೆ ನಾವು ಮಾಡುವುದೇ ಸರಿ ಎನ್ನುವ ಪ್ರವೃತ್ತಿ ಬೆಳೆಸಿಕೊಂಡರೆ ನಾವು ಬದಲಾಗುವ ಸಾಧ್ಯವೇ ಇಲ್ಲ. ಹಾಗಾಗಿ ವಾಚಕರೆ, ನಾವು ಯೋಚನೆ ಮಾಡಬೇಕು. ನಾವೇನಾಗಿದ್ದೇವೆ? ನಾವೇನಾಗಬೇಕು? ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡಬೇಕು. ಇರುವ ಸ್ಥಿತಿಯಿಂದ ಉತ್ತಮವಾಗುವ ಆಸೆ ಮತ್ತು ಆಸೆಗೆ ಪೂರಕವಾದ ಪ್ರಯತ್ನ ನಡೆದರೆ ನಾವೂ ಸಹ ಉತ್ತಮ ಮಾನವರಾಗಲು ಸಾಧ್ಯ


ರಸಧಾರೆ – 206

ಸತ್ತವೆನ್ನಾಶೆಗಳು , ಗೆದ್ದೆನಿಂದ್ರಿಯಗಣವ
ಚಿತ್ತವಿನ್ನಲುಗದೆಂಬಾ ಜಂಬ ಬೇಡ
ಎತ್ತಣಿಂದಲೋ ಗಾಳಿ ಮೋಹಬೀಜವ ತಂದು
ಬಿತ್ತಲಾರದೆ ಮನದಿ – ಮಂಕುತಿಮ್ಮ.

ಸತ್ತವೆನ್ನಾಶೆಗಳು = ಸತ್ತವು+ ಎನ್ನ + ಆಸೆಗಳು // ಗೆದ್ದೆನಿಂದ್ರಿಯಗಣವ = ಗೆದ್ದೆನು + ಇಂದ್ರಿಯ+ ಗಣವ// ಚಿತ್ತವಿನ್ನಲುಗದೆಂಬಾ = ಚಿತ್ತವು+ ಇನ್ನು + ಅಲುಗದು + ಎಂಬ//

ಚಿತ್ತ = ಮನಸ್ಸು // ಎತ್ತಣಿಂದಲೋ = ಎಲ್ಲಿಂದಲೋ

“ನನಗೆ ಆಸೆಗಳು ಸತ್ತಿವೆ. ನಾನು ಇಂದ್ರಿಯಗಳನ್ನು ಗೆದ್ದಿದ್ದೇನೆ. ನನ್ನ ಮನಸ್ಸು ಇನ್ನು ಚಂಚಲವಾಗದು ” ಎಂಬ ಜಂಬ ಪಡಬೇಡ. ಯಾವುದಾದರೂ ಒಂದು ಕಾರಣದಿಂದ, ನಿನ್ನ ಮನಸ್ಸಿನಲ್ಲಿ ಮತ್ತೆ ಆಸೆಯ ಬೀಜ ಬಂದು ಮೊಳಕೆಯೊಡೆಯಬಹುದಲ್ಲ ಎಂದು ಒಂದು ವಾಸ್ತವಿಕತೆಯನ್ನು ಬಣ್ಣಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮಲ್ಲಿ ಎಷ್ಟೋಜನ ” ಅಯ್ಯೋ, ನನಗಿನ್ನೇನೂ ಬೇಡಪ್ಪ. ನನಗೆ ಯಾವ ಆಸೇನೂ ಇಲ್ಲ” ಎಂದು ಹೇಳುವವರನ್ನು ನೋಡುತ್ತೇವೆ. ಅವರೆಲ್ಲ ಸತ್ಯವಾಗಿ ಸಂಪೂರ್ಣವಾಗಿ ಆಸೆಯನ್ನು ಗೆದ್ದವರೇ. ಇಂದ್ರಿಯಗಳನ್ನು ಗೆದ್ದವರೇ ಎಂದು ಅವಲೋಕಿಸಿ ನೋಡಿದರೆ, ಅದು ಬಾರೀ ಬಾಯಿ ಮಾತು ಎಂದು ನಮಗೆ ಅರ್ಥವಾಗುತ್ತದೆ. . ಇದು ಬಹಳ ಸಹಜವಾದ ವಿಷಯ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಈ ರೀತಿಯ ವೈರಾಗ್ಯದ ಮಾತುಗಳು ಸಾಂದರ್ಭಿಕವಾಗಿ, ಆ ಸಮಯಕ್ಕೆ ಬಂದು ಹೋಗುವ ಭಾವಗಳಷ್ಟೇ ಎಂದು ಎಲ್ಲರಿಗೂ ಗೊತ್ತು. ವೈರಾಗ್ಯದಲ್ಲಿ ಹಲವಾರು ಬಗೆಗಳಿವೆ. ” ಸ್ಮಶಾನ ವೈರಾಗ್ಯ” “ಅಭಾವ ವೈರಾಗ್ಯ” ” ಪ್ರಸವ ವೈರಾಗ್ಯ” ಮುಂತಾದವು. ಇಂತಹ ವೈರಾಗ್ಯಗಳು ಕೇವಲ ತಾತ್ಕಾಲಿಕ. ಆ ಸಮಯಕ್ಕೆ ಅಷ್ಟೇ. ನಮ್ಮ ಮನಸ್ಸ್ಸುಮತ್ತೆ ಮೊದಲಿನಂತಾಗುತ್ತದೆ,.

ಕಷ್ಟಗಳು ಬಂದಾಗ ಅಥವಾ ನಮಗೆ ಹೋರಾಡುವ ಸಾಮರ್ಥ್ಯ ಕಡಿಮೆಯಾದಾಗ ಒಂದು ರೀತಿಯ ವೈರಾಗ್ಯ ಬರುತ್ತದೆ. ಆದರೆ ಹಾದಿಯ ಅಂತ್ಯದಲ್ಲಿ ಬೆಳಕು ಕಂಡಾಗ ಮತ್ತೆ ಆಸೆ ಚಿಗುರುತ್ತದೆ. ಮತ್ತೆ ನಾವು ಕಾರ್ಯ ಪ್ರವೃತ್ತರಾಗುತ್ತೇವೆ. ಮತ್ತೆ ಆಸೆಗಳ ಬೆನ್ನೇರಿ ಹೋಗುತ್ತೇವೆ. ಇದು ಮಾನವನ ಸಹಜಗುಣ. ನಾವು ಜೀವಿಸಿರುವ ತನಕ ಈ ಆಸೆಗಳ ಪ್ರಭಾವ ನಮ್ಮ ಮೇಲೆ ಸದಾ ಆಗುತ್ತಲೇ ಇರುತ್ತದೆ. ಆಸೆಗಳಿದ್ದಷ್ಟುದಿನ ನಾವು ಅವುಗಳನ್ನು ತೀರಿಸಿಕೊಳ್ಳಲಿಕ್ಕೆ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರುತ್ತೇವೆ.

ಆಸೆ ಪಡುವುದು ತಪ್ಪಲ್ಲ. ಆದರೆ ನಮ್ಮಾಸೆಯನ್ನು ನಾವು ಅರಿತು ಪಟ್ಟರೆ, ಮಿತಿಗಳನ್ನು ಅರಿತರೆ , ಅದನ್ನು ಸಾಧಿಸುವ ತೀವ್ರತೆಯನ್ನು ಬಿಟ್ಟರೆ, ಅದರಿಂದ ಬರುವ ಫಲ, ಫಲದಿಂದ ಬರುವ ಸುಖಗಳಿಗೆ ಹೆಚ್ಚು ಮಹತ್ವವನ್ನು ನೀಡದೆ ಶಾಂತವಾಗಿ ಮತ್ತು ನಿರ್ಲಿಪ್ತತೆಯಿಂದ ಇದ್ದರೆ, ಪರಿಣಾಮಗಳಿಂದಾಗುವ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇರುತ್ತದೆ. ಇದು ಪ್ರತಿಯೊಬ್ಬರಿಗೂ ವೇದ್ಯವಾದರೆ ಒಳ್ಳೆಯದು. ಅರಿಯದಿದ್ದರೆ ಮನುಷ್ಯ ಈ ಆಸೆಗಳ ವಿಷಮ ವೃತ್ತದಿಂದ ಹೊರಬರಲು ಸಾಧ್ಯವೇ ಇಲ್ಲ. ಮತ್ತೆ ಮತ್ತೆ ಆ ಆಸೆಗಳು ನಮ್ಮಲ್ಲಿ ಹೊಕ್ಕು ನಮ್ಮನ್ನು ತನ್ನ ಸೆಳೆತಕ್ಕೆ ಬೀಳಿಸಿ, ನಮ್ಮನ್ನು ನಾನಾ ರೀತಿಯಲ್ಲಿ ಪೀಡಿಸುತ್ತದೆ. ಎಚ್ಚರದಿಂದುರುವುದು ಒಳ್ಳೆಯದು.


ರಸಧಾರೆ – 207

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ
ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ
ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ
ಕುಣಿವುದನುಕೂಲ ಬರೆ – ಮಂಕುತಿಮ್ಮ

ಹನಿಯೆರಡು = ಹನಿ+ ಎರಡು|ಅಣಗಿದ್ದು = ಅಣಗಿ + ಇದ್ದು |ನರನಾಶೆಯಂತು = ನರನ + ಆಶೆ + ಎಂತು |ಕುಣಿವುದನುಕೂಲ = ಕುಣಿವುದು+ ಅನುಕೂಲ + ಬರೆ.

ತೃಣ = ಹುಲ್ಲು |ಅಣಗಿದ್ದು = ಸುಪ್ತವಾಗಿದ್ದು

ಬೇಸಿಗೆಯಲ್ಲಿ ಒಣಗಿ ನಮಗೆ ಬರೀ ಮಣ್ಣಂತೆ ಕಾಣುವ ಹುಲ್ಲು ನಾಲ್ಕು ಹನಿ ಮಳೆ ಬಿದ್ದರೆ ಮತ್ತೆ ಚಿಗುರುವಂತೆ, ಕಷ್ಟದ ದಿನಗಳಲ್ಲಿ ಮನದ ಅಂತರ್ಯದಲ್ಲಿ, ಕಾಣದಂತೆ ಇದ್ದ ಮನುಷ್ಯನ ಆಸೆಗಳೆಲ್ಲ ಅನುಕೂಲವಾದ ಸ್ಥಿತ ಬಂದೊಡನೆಯೇ ಮತ್ತೆ ಚಿಗುರುತ್ತವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುತ್ತಾರೆ.

ಮನುಷ್ಯನ ಅಂತರ್ಯವನ್ನು ಬೆದಕಿ ನೋಡಿದರೆ ಆಸೆ ಸಾಯುವುದೇ ಇಲ್ಲ. ಅದನ್ನೇ ದಾಸರು” ಆಸೆ ಸತ್ತಂತಿರಬಹುದು” ಎಂದರು. “ಆಸೆ ಸತ್ತಂತೆ ಇರಬಹುದು” ಅಷ್ಟೇ, ನಿಜವಾಗಿ ಆಸೆ ಸಾಯುವುದೇ ಇಲ್ಲ. ಯಾವುದೋ ವಸ್ತುವಿನ ಬಯಕೆ ಪೂರೈಸಿಕೊಳ್ಳಲು ಸಾಧ್ಯವಾದರೆ ಸರಿ. ಇಲ್ಲವಾದರೆ ಆಸೆ ಕೊನೆಯಾಗುವುದೇ ಇಲ್ಲ. ಇಂದು ಸಿಗದಿದ್ದರೆ ಮತ್ತೆ ನಾಳೆ ಪ್ರಯತ್ನ. ಈ ಪ್ರಯತ್ನ ನಿರಂತರವಾಗಿ ಸಾಗುತ್ತದೆ. ಒಂದು ಆಸೆ ಪೂರೈಸಿಕೊಳ್ಳಲಾಗದಿದ್ದರೆ, ಮತ್ತೊಂದು ಆಸೆ ಚಿಗುರೊಡೆಯುತ್ತದೆ. ಆಸೆ ತೀರದೆ ಹೋದರೆ ಅದು ಸುಪ್ತವಾಗಿ ಮನದ ಯಾವುದೋ ಮೂಲೆಯಲ್ಲಿ ಬಿದ್ದುಕೊಂಡಿರುತ್ತದೆ. ಮತ್ತೆ ಅನುಕೂಲ್ಲ ಸ್ಥಿತಿ ಬಂದರೆ ಆ ಅಸೆ ಮತ್ತೆ ಚಿಗುರಿ ಅದನ್ನು ಪೂರೈಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಇದು ಮನುಷ್ಯನ ಸಹಜ ಸ್ವಭಾವ.

ಆದರೆ ಮನುಷ್ಯನ ಆಸೆಗಳಿಗೆ ಮಿತಿಯೇ ಇರುವುದಿಲ್ಲ. ಒಂದು ಪೂರ್ಣವಾದರೆ ಮತ್ತೊಂದು ಮೊಳಕೆಯೊಡೆಯುತ್ತದೆ. ” ಇಷ್ಟಾದರೆ ಮತ್ತಷ್ಟರ ಆಸೆ. ಇದಾದರೆ ಇನ್ನೊಂದರ ಆಸೆ” ಎನ್ನುವುದು ಎಲ್ಲರಿಗೂ ತಿಳಿದ ವಿಷಯವಲ್ಲವೇ. ನಾವೆಲ್ಲರೂ ಅದೇ ಸ್ಥಿತಿಯಲ್ಲಿರುವವರು. ವಾಚಕರೆ ಇದನ್ನು ತಾವು ಇದು ಸಹಜ ಗುಣವಾದ್ದರಿಂದ “ತಪ್ಪೇನು?” ಎಂದರೆ, ಖಂಡಿತ ತಪ್ಪಿಲ್ಲ. ಹಾಗಿದ್ದರೆ ” ಆಸೆ ತಪ್ಪು” ಎಂದು ಹಲವಾರು ಜನ ಏಕೆ ವಿಶ್ಲೇಷಣೆ ಮಾಡಿದ್ದಾರೆ ಎಂದರೆ, ಆಸೆ ಜೀವನಕ್ಕೆ” ಪೂರಕ” ವಾಗಿರಬೇಕು.

ವ್ಯಕ್ತಿ , ವಸ್ತು ಮತ್ತು ವಿಷಯಾಸಕ್ತಿ ಒಂದು ವ್ಯಕ್ತಿಯ ಇಹಲೋಕದ ಜೀವನಕ್ಕೆ ಮತ್ತು ಇಲ್ಲಿನ ತೊಳಲಾಟಕ್ಕೆ ಪೂರಕವಾಗಿರಬಹುದು. ಸತ್ಯವಾದ ಆನಂದಕ್ಕೆ ಸುಖಕ್ಕೆ ಖಂಡಿತ ಅದು ಮಾರಕವೇ ಅಲ್ಲವೇ? ಅಧ್ಯಾತ್ಮಿಕ ಔನ್ನತ್ಯಕ್ಕೆ ಖಂಡಿತ

ಮಾರಕ. ಆಸೆಯನ್ನು ಬಿಡುವ ಆಸೆ ಬರಬೇಕು. ಜ್ಞಾನವನ್ನು ಪಡೆದು ಆ ಜ್ಞಾನದ ಬಲದಿಂದ ಈ ಜಗತ್ತಿನ ಮತ್ತು ಈ ಜಗತ್ತಿನ ವಸ್ತುಗಳ ಮೇಲೆ ಆಸೆಯನ್ನು ಬಿಡಬೇಕು.

ಆಸೆಯನ್ನು ಬಿಟ್ಟಾಕ್ಷಣ ಜಗತ್ತಿನಿಂದ ನಿರ್ಗಮಿಸಬೇಕು ಎಂದು ಅರ್ಥವಲ್ಲ. ಈ ಜಗತ್ತಿನಲ್ಲಿ ಇದ್ದು, ಜಗತ್ತಿನ ಆಸೆ ತೊರೆದು, ಜಗತ್ತಿನಲ್ಲಿ ವಿರಕ್ತಿ ಹೊಂದಿ ಜಗತ್ಕಾರಕನಲ್ಲಿ ರಕ್ತಿ ಬೆಳೆಸಿಕೊಂಡರೆ, ಸತ್ಯದ ದರ್ಶನವಾಗುತ್ತದೆ. ಸತ್ಯದರ್ಶನವಾದರೆ ತತ್ವ ದರ್ಶನವಾಗುತ್ತದೆ. ನಿಜವಾದ ಆನಂದ ನಮ್ಮದಾಗುತ್ತದೆ. ಹೇಳುವುದು ಬಹಳ ಸುಲಭ. ಪ್ರಯತ್ನ ಪಟ್ಟರೆ ಅಸಾಧ್ಯವಲ್ಲ. “ಸತ್ಯ ಮತ್ತು ತತ್ವದ ಆಸೆ” ಇರುವವರೆಲ್ಲರೂ ನಾವೆಲ್ಲರೂ ಆ ಪ್ರಯತ್ನವನ್ನು ಮಾಡಬೇಕು.


ರಸಧಾರೆ – 208

ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು
ಅದಕಾಗಿ ಇದಕಾಗಿ ಮತ್ತೊಂದಕಾಗಿ
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು
ಕುದಿಯುತಿಹುದಾವಗಂ – ಮಂಕುತಿಮ್ಮ

ಕುದಿಯುತಿಹುದಾವಗಂ = ಕುದಿಯುತಿಹುದು + ಆವಗಂ

ಬೆದಕಾಟ = ಪರದಾಟ/ ಚಣಚಣವು = ಪ್ರತಿ ಕ್ಷಣವೂ /ಹಸಿವು= ಆಸೆ, ಕಾಮನೆ./ಆವಗಂ = ಸದಾಕಾಲ.

ಪ್ರತೀ ಕ್ಷಣವೂ ನಾವುಗಳೆಲ್ಲ ಹೊಸ ಹೊಸ ಯೋಜನೆಗಳು, ಯೋಚನೆಗಳು, ಆಸೆಗಳು, ಆಕಾಂಕ್ಷೆಗಳನ್ನು ಹೊತ್ತು, ಇದನ್ನೋ, ಅದನ್ನೋ ಅಥವಾ ಮತ್ಯಾವುದನ್ನೋ ಪಡೆಯುವುದಕ್ಕೆ ಪರದಾಡುತ್ತಿರುತ್ತೇವೆ. ಈ ಪರದಾಟ, ಅಧಿಕಾರ ಸಂಪತ್ತು, ಅಂದ ಚೆಂದ ಅಥವಾ ಕೀರ್ತಿಗಳಂತಹ ವಿಚಾರಗಳನ್ನು ನೆನೆದು ನಮ್ಮ ಮನಸ್ಸುಗಳು ಕುದಿಯುತ್ತಿರುತ್ತವೆ ಎಂಬ ವಿಷಯವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮ ಈ ಪರದಾಟ ಬೆದಕಾಟಗಳು ಅಧಿಕಾರಕ್ಕಾಗಿ, ಸಿರಿವಂತಿಕೆಗೆ, ಅಂದ ಚೆಂದಗಳಿಗೆ, ಕೀರ್ತಿಯ ಆಸೆಗಾಗಿ ಇನ್ನೂ ಹತ್ತು ಹಲವಾರು ಕಾರಣಗಳಿಗೆ ನಡೆಯುತ್ತಲೇ ಇರುತ್ತದೆ. ಈ ಬೆದಕಾಟಗಳಲ್ಲಿ ಮನುಷ್ಯ ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ಹಾದಿಯಲ್ಲಿ ಯಾವ ಯಾವ ವೇಷಗಳನ್ನು ಹಾಕುತ್ತಾನೆ, ಎಂತೆಂತಹ ಮಾರ್ಗಗಳನ್ನು ತುಳಿಯುತ್ತಾನೆ, ಹೇಗೆಲ್ಲಾ ತನ್ನ ಬುದ್ಧಿಯನ್ನು ಉಪಯೋಗಿಸುತ್ತಾನೆಂಬುದು ಪ್ರತಿಯೊಬ್ಬರ ಅನುಭವಕ್ಕೂ ಬಂದಿರುತ್ತದೆ. ಈ ಕಾರಣಗಳಿಗಾಗಿಯೇ, ಈ ಜಗತ್ತಿನಲ್ಲಿ ಒಂದು ಮುಖ , ಪೈಪೋಟಿ, ಹೊಡೆದಾಟ, ಕೊಲೆ, ಕೊಳ್ಳೆ, ದರೋಡೆ, ಬೆದರಿಕೆ, ಅಪಹರಣಗಳಂತಹ ವೈಯಕ್ತಿಕ ಅಪರಾಧಗಳು ಮತ್ತು ಆಕ್ರಮಣ, ಯುದ್ಧ, ಭಯೋತ್ಪಾದನೆ ಮುಂತಾದ ಸಾಮೂಹಿಕ ಅಪರಾಧಗಳಿಂದ ಕೂಡಿದ್ದರೆ ಮತ್ತೊಂದು ಮುಖ ಪ್ರೇಮ, ಪ್ರೀತಿ, ಸೌಹಾರ್ದತೆ, ಬ್ರಾತ್ರುತ್ವ, ಮಿತ್ರತ್ವ, ಮುಂತಾದ ಸಕಾರಾತ್ಮಕವಾದ ನಡವಳಿಕೆಗಳಿಂದ ಕೂಡಿದೆ. ಇವೆರಡಕ್ಕೂ ಮಾನವ ಇತಿಹಾಸದಲ್ಲಿ ಹೇರಳವಾದ ಉದಾಹರಣೆಗಳು ದೊರೆಯುತ್ತವೆ.

ಪ್ರತೀ ನಿಮಿಷವೂ ನಮ್ಮಲ್ಲಿ ಹೊಸ ಹೊಸ ಆಸೆಗಳು ಅಲೆ ಅಲೆಯಂತೆ ಹುಟ್ಟುತ್ತಲೇ ಇರುತ್ತವೆ. ನಾವು ಆ ಆಸೆಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಪಡುತ್ತಲೇ ಇರುತ್ತೇವೆ. ಹಲವು ಬಾರಿ ನಮಗೆ ಯಶಸ್ಸೂ ದೊರಕುತ್ತದೆ. ಹಲವು ಬಾರಿ ನಾವು ನಿರಾಶರಾಗುತ್ತೇವೆ. ನಿತ್ಯವೂ ನಮ್ಮ ಆಸೆಗಳನ್ನು ತೀರಿಸಿಕೊಳ್ಳಲು ಪರದಾಡುತ್ತೇವೆ. ಇದನ್ನೇ ಮಾನ್ಯ ಗುಂಡಪ್ಪನವರು ” ಬೆದಕಾಟ ಬದುಕೆಲ್ಲ; ಚಣಚಣವು” ಎಂದು ನಾವು ಪಡುವ ಪರದಾಟವನ್ನು ಅಣಕವಾಡುತ್ತಾರೆ. ಇದು ವಸ್ತು ಸ್ಥಿತಿ. ಇದರಲ್ಲೇನೂ ತಪ್ಪಿಲ್ಲ. ಇದು ಈ ಜಗತ್ತಿನಲ್ಲಿ ವಿಧಿಗನುಗುಣವಾಗಿ ಪ್ರತಿಯೊಬ್ಬರ ಕರ್ಮಗಳ ಅನುಸಾರವಾಗಿ ನಡೆಯುತ್ತಿರುತ್ತದೆ.

ಈ ಬೆದಕಾಟವಿದ್ದಷ್ಟು ದಿನವೂ ಮನುಷ್ಯ ಸದಾಕಾಲ ಅವಶ್ಯಕವಾಗಿಯೋ ಅಥವಾ ಅನಾವಶ್ಯಕವಾಗಿಯೋ ಈ ಜಗತ್ತಿಗೆ ಅಂಟಿಕೊಂಡು ಸಕ್ರಿಯನಾಗಿರುತ್ತಾನೆ.ಇದೂ ಸಹಜವೇ. ಆದರೆ ಈ ಸಕ್ರಿಯತೆ, ನಮ್ಮನ್ನು ನಾವು ಈ ಜಗತ್ತಿನ ಅಂಟನ್ನು ಕಡಿಮೆ ಮಾಡಿಕೊಳ್ಳಲು, ಜ್ಞಾನ ವೃದ್ಧಿ ಮಾಡಿಕೊಳ್ಳಲು, ಆಕಾರಗಳಿಂದ ಸಿಗುವ ಆನಂದಕ್ಕಿಂತ ನಿರಾಕಾರಾನಂದವನ್ನು , ನಿಜಾನಂದವನ್ನು ಪಡೆಯಲು ಬೇಕಾದ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಪಟ್ಟರೆ ಇಹಕ್ಕೂ ಮತ್ತು ಪರಕ್ಕೂ ಸಹಾಯವಾಗುತ್ತದೆ. ಈ ಜಗತ್ತು ನಮ್ಮ ಇಂದ್ರಿಯಗಳನ್ನು ಆಕರ್ಷಿಸುತ್ತದೆ ಮತ್ತು ನಾವು ಈ ಇಂದ್ರಿಯಗಳ ಸೆಳೆತಕ್ಕೆ ಆಕರ್ಷಣೆಗೆ ಒಳಗಾಗುತ್ತೇವೆ. ಈ ಆಕರ್ಷಣೆಯೇ ನಮ್ಮನ್ನು ” ಪರದಾಡುವಂತೆ ಅಥವಾ ಬೆದಕಾಡುವಂತೆ” ಮಾಡುತ್ತದೆ. ನಾವು ಎಷ್ಷ್ಟು ಕಡಿಮೆ ಈ ಜಗತ್ತಿಗೆ ಅಂಟಿಕೊಂಡರೆ ಅಷ್ಟು ಸುಖ. ಇದನ್ನು ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ಅರ್ಥಮಾಡಿಕೊಂಡು ಅವರವರ ಪ್ರಯತ್ನ ಪಡಬೇಕು. ಪ್ರಯತ್ನ ಪಟ್ಟರೆ ಹಿತ, ಇಲ್ಲದಿದ್ದರೆ ಈ “ಪರದಾಟ-ಬೆದಕಾಟ”ವೇ ನಮ್ಮ ನಿತ್ಯ ಪರಿಪಾಟವಾಗಿಬಿಡುತ್ತದೆ.


ರಸಧಾರೆ – 209

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲ
ಇನಿಸುಣಿಸು, ಬೆದೆ, ಬೆದರು – ಅಷ್ಟೇ ಜೀವಿತವು
ಮನುಜನೆಂತನಿತರಿಂ ತೃಪ್ತಿಪಡೆವನವಂಗೆ
ಕ್ಷಣ ಕ್ಷಣವು ಹೊಸ ಹಸಿವು – ಮಂಕುತಿಮ್ಮ

ಇನಿಸುಣಿಸು = ಇನಿಸು+ಉಣಿಸು// ಮನುಜನೆಂತನಿತರಿಂ = ಮನುಜನ್ + ಎಂತಂ+ಅನಿತರಿಂ// ತೃಪ್ತಿಪಡೆವನವಂಗೆ = ತೃಪ್ತಿಪಡೆವನ್+ ಅವಂಗೆ

ಉಣಿಸು= ಆಹಾರ/ ಬೆದೆ= ಬಿಸಿ/ ಬೆದರು= ಹೆದರಿಕೆ /ಅನಿತರಿಂ=ಇಷ್ಟರಿಂದ ಮಾತ್ರ

ದನ,ಸಿಂಹ, ಹುಲಿ, ಹಕ್ಕಿ, ಹಾವು, ಮೀನು ಮಂತಾದ ಪ್ರಾಣಿಗಳಿಗೆ ಹಸಿವಾದಾಗ ಆಹಾರ, ಸಂತಾನಾಭಿವೃದ್ಧಿ ಮತ್ತು ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೆ ಪೂರಕವಾದ ಅವಶ್ಯಕತೆಗಳನ್ನು ಬಿಟ್ಟರೆ ಬೇರಾವ ಆಸೆಗಳೂ ಇರದು ಮತ್ತು ಅವುಗಳ ಜೀವಿತವು ಅಷ್ಟಕ್ಕೇ ಸೀಮಿತವು. ಆದರೆ ಕೋಟ್ಯಂತರ ಆಸೆ ಆಕಾಂಕ್ಷೆಗಳ ಆಗರವೇ ಆದ ಮನುಷ್ಯ ಎಂದಿಗೂ ತೃಪ್ತನಾಗುವುದೇ ಇಲ್ಲ. ಕ್ಷಣ ಕ್ಷಣವೂ ಅವನ ಆಸೆಗಳ ಹಸಿವು ಅಧಿಕವಾಗುತ್ತಲೇ ಇರುತ್ತದೆ ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವು ಮನುಷ್ಯನನ್ನು ಬಿಟ್ಟು ಬೇರಾವ ಪ್ರಾಣಿ, ಪಕ್ಷಿ, ಕೀಟ, ಜಂತು ಮುಂತಾದವುಗಳನ್ನು ಕೂಲಂಕುಷವಾಗಿ ಅಭ್ಯಸಿಸಿದರೆ ಈ ಪ್ರಾಣಿಗಳ ಬೆದಕಾಟ ಕೇವಲ ಮೂರು ವಿಷಯಗಳಿಗೆ ಸೀಮಿತವಾಗಿರುತ್ತದೆ ಎಂದು.ನಮಗೆ ಸುಲಭವಾಗಿ ಅರ್ಥವಾಗುತ್ತದೆ, ಆದರೆ ಮನುಷ್ಯನ ಅವಶ್ಯಕತೆಗಳನ್ನು ಪಟ್ಟಿ ಮಾಡಿದರೆ ನಮ್ಮ ಜೀವಮಾನವೆಲ್ಲ ಬರೆಯುತ್ತಾ ಹೋಗಬಹುದು. ಅವುಗಳ ಪರದಾಟ ಕೇವಲ ಮೂರು ಕಾರಣಗಳಿಗಾಗಿ ಆದರೆ ಮನುಷ್ಯನ ಬೆದಕಾಟ ೩ ಕೋಟಿ ಕಾರಣಗಳಿಗಾಗಿ. ತನ್ನ ಆಹಾರವನ್ನು ಹುಡುಕಿಕೊಳ್ಳುವುದು, ತನ್ನ ಸಂತತಿಯನ್ನು ಮುಂದುವರೆಸುವುದು ಮತ್ತು ತನ್ನನ್ನು ತಾನು ಕಾಪಾಡಿಕೊಳ್ಳುವುದ ಬಿಟ್ಟರೆ ಈ ಪ್ರಾಣಿ, ಪಕ್ಷಿ, ಕೀಟ ಮತ್ತು ಜಂತು ಸಂಕುಲಕ್ಕೆ ಅನ್ಯ ಅವಶ್ಯಕತೆಗಳೇ ಇರುವುದಿಲ್ಲ. ಆದರೆ ಮನುಷ್ಯನಿಗೆ ಈ ಮೂರೂ ಅವಶ್ಯಕತೆಗಳು ಬಹಳ ಗೌಣವಾಗಿಬಿಟ್ಟಿದೆ. ಇವುಗಳೊಟ್ಟಿಗೆ ಮನುಷ್ಯನ ಆಸೆಗಳು ಮತ್ತು ಅವಶ್ಯಕತೆಗಳು ಹತ್ತಾರು ಪಟ್ಟು ಅಧಿಕವಾಗಿದೆ.

ಮೊದಲು ಈ ಮೂರೇ ಅವಶ್ಯಕತೆಗಳನ್ನೇ ಹೊಂದಿದ್ದ ಮನುಷ್ಯ, ಈ ಅವಶ್ಯಕತೆಗಳನ್ನು ಸಮರ್ಪಕವಾಗಿ ಅಥವಾ ಸಂಪೂರ್ಣವಾಗಿ ಪೂರೈಸಿಕೊಳ್ಳಲಿಕ್ಕೆ ತನ್ನ ಬುದ್ಧಿಶಕ್ತಿಯನ್ನುಪಯೋಗಿಸಿ ಕಂಡುಕೊಂಡ ಹಲವಾರು ಮಾರ್ಗಗಳಿಂದ ಇವನ ಅವಶ್ಯಕತೆಗಳು ಬೆಳೆಯುತ್ತಾ ಹೋದವು. ಅವುಗಳನ್ನು ಪಡೆಯಲು ಅವನು ತನ್ನ ಸುತ್ತಲಿನ ಪರಿಸರವನ್ನು ಮತ್ತು ಈ ಸೃಷ್ಟಿಯಲ್ಲಿನ ಪ್ರತೀ ವಸ್ತುವನ್ನೂ ತನ್ನ ಉಪಯೋಗಕ್ಕೆ ಬಳೆಸಿಕೊಳ್ಳುತ್ತಾಹೋದ. ಈ ಪ್ರಯತ್ನದಲ್ಲಿ ಇವನು ವಿಜ್ಞಾನಿಯಾದ. ಸಾವಿರಾರು ಆವಿಷ್ಕಾರಗಳನ್ನು ಮಾಡುತ್ತಾ ತನ್ನ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಇವನ ನಿರಂತರ ಪ್ರಯತ್ನ ನಡೆದೇ ಇದೆ. ಒಂದು ನಿಟ್ಟಿನಲ್ಲಿ ಇದು ಮಾನವನ ಪ್ರಗತಿಯಂದೇ ಅಂದುಕೊಂಡರೂ, ಈ ವಿಜ್ಞಾನದ ಆವಿಷ್ಕಾರಗಳು ದುರ್ಬುದ್ಧಿಯ ಮನುಷ್ಯರ ಕೈಗೆ ಸಿಕ್ಕಾಗ ಪರಿಣಾಮ ಏನಾಗುವುದೆಂದು ವಾಚಕರ ಊಹೆಗೆ ಬಿಟ್ಟದ್ದು. ದುಷ್ಟನ ಕೈಯಲ್ಲಿ ದೊಣ್ಣೆ ಸಿಕ್ಕರೆ ಹೇಗಿರುತ್ತೋ ಹಾಗೆ. ಇದಕ್ಕೆಲ್ಲ ಕಾರಣ ಪ್ರತೀ ನಿತ್ಯ ಮನುಷ್ಯರ ಮನಸ್ಸುಗಳಲ್ಲಿ ಬುಗ್ಗೆ ಬುಗ್ಗೆಯಾಗಿ ಅಲೆ ಅಲೆಯಾಗಿ ಮೇಲೇಳುವ ಆಸೆಗಳ ಮಹಾಪೂರವೇ ಕಾರಣ. ಇದು ತಪ್ಪು ಎಂದೂ ಹೇಳಲಾಗುವುದಿಲ್ಲ.

ಇವನ ಆಸೆಗಳು ವೈಯಕ್ತಿಕ ಅವಶ್ಯಕತೆಗಳನ್ನು ಮಿತಿಯಲ್ಲಿಟ್ಟುಕೊಂಡು ಒಟ್ಟು ಸಮಾಜದ ಒಳಿತಿಗಾದರೆ ಬಹಳ ಒಳ್ಳೆಯದು. ಆದರೆ ಇವನ ಆಸೆಗಳು ಸ್ವಾರ್ಥಕ್ಕೆ, ಸ್ವಪ್ರತಿಷ್ಟೆಯನ್ನು ಮೆರೆಯುವುದಕ್ಕೆ, ಅನ್ಯರನ್ನು ಮೆಟ್ಟಿ ನಿಲ್ಲುವುದಕ್ಕೆ, ಅನ್ಯರ ನಾಶಕ್ಕೆ, ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿ ಸಂಸ್ಕಾರಗಳ ನಾಶಕ್ಕೆ ಆದರೆ ಇದು ಕೆಡುಕಿನ ಆಸೆ. ಇದು ದುರಾಸೆ. ಇಂತಹ ಆಸೆಗಳನ್ನು ನಾವು ಸಂಪೂರ್ಣವಾಗಿ ನಮ್ಮಲ್ಲಿ ದೂರವಿಡಬೇಕು ಮತ್ತು ಅನ್ಯರಲ್ಲಿದ್ದರೆ ವಿರೋಧಿಸಬೇಕು. ಆದರೆ ಇಂದು ಕೇವಲ ಹಣದ ಭಾಷೆ ಮಾತ್ರ ಅರ್ಥವಾಗುತ್ತಿರುವ ಕಾಲದಲ್ಲಿ ಬದಲಾವಣೆ ಬಹಳ ಕಷ್ಟ. ಅದರೂ ಪ್ರಯತ್ನಪಡಬಹುದಲ್ಲವೇ?


ರಸಧಾರೆ – 210

ತಂಗಳುಣಿಸಾದೊಡಂ ಸಾಕೆನುವವನುಪವಾಸಿ
ಸಿಂಗಾರ ಸಂಗಾತಿ ಬೇಕುಂಡವನಿಗೆ
ಬಂಗಾರ ಪದವಿ ಪ್ರತಿಷ್ಠೆ ಬೇಕಾ ಬಳಿಕ
ಹಿಂಗದಾಯದೆಚಿಲುಮೆ – ಮಂಕುತಿಮ್ಮ

ತಂಗಳುಣಿಸಾದೊಡಂ = ತಂಗಳು+ ಉಣಿಸು + ಆದೊಡಂ// ಸಾಕೆನುವವನುಪವಾಸಿ = ಸಾಕು+ ಎನುವವನು+ ಉಪವಾಸಿ//ಬೇಕುಂಡವನಿಗೆ= ಬೇಕು+ ಉಂಡವನಿಗೆ//ಹಿಂಗದಾಯದೆಚಿಲುಮೆ= ಹಿಂಗದಾ+ಎದೆ + ಚಿಲುಮೆ.

ಬಹಳ ಹಸಿವಿನಿಂದಿರುವವನಿಗೆ ತಂಗಳನ್ನವಾದರೂ ತೃಪ್ತಿ ನೀಡುತ್ತದೆ. ಒಂದು ಬಾರಿ ಆ ಹಸಿವು ನೀಗಿದರೆ ಅವನಿಗೆ ಶೃಂಗಾರ, ಬಟ್ಟೆ ಬರೆ, ಸಂಗಾತಿ ಬೇಕೆನಿಸುತ್ತದೆ. ಅವುಗಳು ಸಿಕ್ಕರೆ ಮುಂದಕ್ಕೆಆಸ್ತಿಅಂತಸ್ತು ಪದವಿ ಬೇಕೆನಿಸುತ್ತದೆ, ಹೀಗೆ ಬಯಕೆಗಳ ಒರತೆ ಮನುಜನ ಮನದಲ್ಲಿ ಎಂದಿಗೂ ಹಿಂಗದು ಎಂದು ಸ್ಪಷ್ಟಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

“ಬಡತನಕೆ ಉಂಬುವ ಚಿಂತೆ, ಉಂಬುವುದಾದರೆ ಉಡುವ ಚಿಂತೆ, ಉಡುವುದಾದರೆ ಮನೆಯ ಚಿಂತೆ ಮನೆಯದಾದರೆ ಮಡದಿಯ ಚಿಂತೆ ” ಎಂದು ಶಿವಶರಣರ ಉಕ್ತಿ. ಪ್ರತೀ ಮನುಷ್ಯನಿಗೂ ಆಸೆಗಳಿರುತ್ತದೆ.ಆ ಆಸೆಗಳೇ ಅವನನ್ನು ಪುರೋಗಾಮಿಯಾಗಿಸುತ್ತದೆ, ಪ್ರಗತಿಯ ಪಥದಲ್ಲಿ ಕೊಂಡು ಹೋಗುತ್ತದೆ, ತನ್ನ ಜೀವನವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಇದಕ್ಕೆ ಕೊನೆಯಲ್ಲಿ. ಯಾರಿಗೂ ಗೊತ್ತಿಲ್ಲ. ಮನುಷ್ಯನಿಗೆಆಸೆಪಡುವುದೇ ಗೊತ್ತು, ಅದನ್ನು ನಿಲ್ಲಿಸುವುದು ಹೇಗೆ ಎಂದು ಗೊತ್ತಿಲ್ಲ. ನಮ್ಮ ಜೀವನಗಳು ಒಂದು ಬ್ರೇಕ್ ಇಲ್ಲದ ಗಾಡಿಗಳಂತೆ. ಒಂದು ಸಲ ಸ್ಟಾರ್ಟ್ ಮಾಡಿಬಿಟ್ಟರೆ ಓಡುತ್ತಲೇ ಓಡುತ್ತಲೇ ಇರುತ್ತದೆ. ನಿಲ್ಲಿಸಲು ಸಾಧ್ಯವೇ ಇಲ್ಲ. ಇದು ನಿಲ್ಲಬೇಕಾದರೆ ಒಂದು ಇದರಲ್ಲಿನ ಇಂದನ ಖಾಲಿಯಾಗಬೇಕು ಅಥವಾ ಎಲ್ಲಿಯಾದರೂಅಪಘಾತವಾಗಿ ನಿಲ್ಲಬೇಕು.

ಅಂದರೆ ನಮ್ಮ ಆಸೆಗಳ ಬುಗ್ಗೆ, ಒರತೆ, ಊಟೆ ಕಡಿಮೆಯಾಗುವುದೇ ಇಲ್ಲ. ನಿರಂತರ ಮೇಲೇಳುತ್ತಲೇಇರುತ್ತದೆ. ಈ ಆಸೆಗಳನ್ನು ಪೂರೈಸಿಕೊಳ್ಳಲು ನಾವು ಪಡುವ ಪಾಡೇ ನಮ್ಮ ಜೀವನ. “ಇದಾದರೆ ಅದು, ಅದಾದರೆ ಮತ್ತೊಂದು. ಇಷ್ಟಾದರೆ ಅಷ್ಟು, ಅಷ್ಟಾದರೆ ಮತ್ತಷ್ಟು” ಹೀಗೆ ನಡೆದೇ ಇರುತ್ತದೆ ನಮ್ಮ ಓಟ. ಬ್ರೇಕ್ ಇಲ್ಲದ ಗಾಡಿ. ಬ್ರೇಕ್ ಹಾಕಿದರೆ ಅಥವಾ ಓಟದ ವೇಗವನ್ನು ಕಡಿಮೆ ಮಾಡಿದರೆ ಸುಖ. ಆದರೆ ಎಲ್ಲಿ ಬ್ರೇಕ್ ಹಾಕಬೇಕು ಎನ್ನುವುದು ನಮಗೆ ಗೊತ್ತೇ ಇಲ್ಲ. ಅರಿಯುವ ಮಾರ್ಗಗಳು ಹಲವಾರು ಇದ್ದರೂ, ಅನ್ಯರ ಅನುಭವಗಳನ್ನು ನೋಡಿ ತಿಳಿದರೂ ನಮ್ಮ ಅನುಭವಕ್ಕೆ ಬರದೆ ನಾವು ಏನನ್ನೂ ಮಾಡಲಾರೆವು.

ವಾಚಕರೆ ಇದರ ಬಗ್ಗೆ ಎಷ್ಟು ಪುಟಗಳು ಬರೆದರೂ ಸಾಲದು. ಪ್ರತಿಯೊಬ್ಬರಿಗೂ ತಾವೇನು ಆಸೆ ಪಡುತ್ತೀದ್ದೆವೆಂಬ ಪರಿವೆ ಇರಬೇಕು. ಎಷ್ಟು ಆಸೆಪಡಬೇಕೆಂಬ ಅರಿವಿರಬೇಕು. ಸಿಕ್ಕದ್ದರಲ್ಲಿ ತೃಪ್ತಿಪಡುವ ಸಂಸ್ಕಾರವಿರಬೇಕು ಮತ್ತು ಇದು ಸಾಕು, ಇಷ್ಟು ಸಾಕು ಎಂದು ಗೆರೆ ಎಳೆಯುವ ಧೈರ್ಯ ಬರಬೇಕು. ಹಾಗೆ ಬಂದರೆ ನಮಗೆ ಸುಖ. ಇಲ್ಲದಿದ್ದರೆ ನಿರಂತರ ಆಶೆಗಳ ಪಾಶದೊಳಗೆ ಬಂದನ. ಪ್ರಯತ್ನ ಪ್ರತಿಯೊಬ್ಬರ ಇಚ್ಚೆಗೆ ಸೇರಿದ್ದು.


ರಸಧಾರೆ – 211

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ
ಕೊನೆಯಲ್ಲಿ? ಚಿಂತಿಸೆಲೊ – ಮಂಕುತಿಮ್ಮ

ತಣಿಸಲದನೊಗೆಯುವುದು = ತಣಿಸಲು + ಅದನು + ಒಗೆಯುವುದು// ಮನುಜನೇಳಿಗೆಯದರಿನ್= ಮನುಜನ+ಏಳಿಗೆ+ಅದರಿನ್// ಮನಸಿನೇಳಿಗೆಗೆ = ಮನಸಿನ+ ಏಳಿಗೆಗೆ.

ಮನುಷ್ಯನ ಮನಸ್ಸು ಬೆಳೆದಂತೆಲ್ಲ ಅವನ ಮನಸ್ಸಿನ ಹಸಿವೂ ಸಹ ಬೆಳೆಯುತ್ತದೆ. ಆ ಹಸಿವನ್ನು ಇಂಗಿಸಲು ಮನಸ್ಸು ಬಗೆ ಬಗೆಯ ಉಪಾಯಗಳನ್ನು ಹುಡುಕುತ್ತದೆ. ಈ ರೀತಿಯ ಹಸಿವು ಮತ್ತು ಆ ಹಸಿವಿನ ತಣಿಯುವಿಕೆಯಿಂದ ಮನುಷ್ಯನ ಬಾಹ್ಯ ಜೀವನ ಉತ್ತಮವಾಗಬಹುದು.ಈ ರೀತಿ ಆಸೆ ಪಡುವುದು, ಆ ಆಸೆಗಳನ್ನು ತೀರಿಸಿಕೊಳ್ಳಲು ಹಲವಾರು ಉಪಾಯಗಳನ್ನು ಮಾಡುವುದು ಮತ್ತು ಈ ಉಪಾಯಗಳಿಂದ ಉನ್ನತ ಸ್ಥಾನ ಹೊಂದುವುದು, ಹೀಗೆ ನಡೆಯುವ ಏಳಿಗೆಗೆ ಕೊನೆಯಲ್ಲಿ ಎಂದು ಒಂದು ಪ್ರಶ್ನೆಯ ಮೂಲಕ ಬಹಳ ಗಹನವಾದ ವಿಚಾರವನ್ನು ಈ ಕಗ್ಗದಲ್ಲಿ ಪ್ರಸ್ತುತ ಪಡಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಾವು ಚಿಕ್ಕವರಾಗಿದ್ದಾಗಿನಿಂದ ಬೆಳೆದು ಯುವಕರಾಗಿ, ವಯಸ್ಕರಾಗಿ, ವಾರ್ಧಕ್ಯಕ್ಕೆ ಇಳಿದು ಜೀವನ ಅಂತ್ಯವಾಗುವ ತನಕ ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ರೀತಿಯ ಆಸೆಗಳು ಹುಟ್ಟುತಲೇ ಇರುತ್ತವೆ. ನಮ್ಮ ಚಿಕ್ಕಂದಿನ ಆಸೆಗಳು ಇಂದು ನಮಗೆ ಬಾಲಿಶವಾಗಿ ಕಾಣಬಹುದು. ನಮ್ಮ ಆಸೆಗಳು ನಮಗೇ ಸೇರಿದ್ದು. ನಮ್ಮ ಆಸೆಗಳಂತೆ ಅನ್ಯರ ಆಸೆಗಳಿರುವುದಿಲ್ಲ ಮತ್ತು ಅನ್ಯರಂತೆ ನಾವು ಆಸೆಪಡಲಾಗುವುದಿಲ್ಲ. ನಮ್ಮದೇ ವಿಧಾನದಲ್ಲಿ ನಾವು ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಹಲವಾರು ರೀತಿಯಲ್ಲಿ ಯೋಜನೆಗಳನ್ನು ಹಾಕುತ್ತಲೇ ಇರುತ್ತೇವೆ. ಒಂದು ಪ್ರಯತ್ನದಲ್ಲಿ ಸೋತರೆ ಮತ್ತೊಂದು ಯೋಜನೆ ಮತ್ತು ಮತ್ತೊಂದು ಪ್ರಯತ್ನ. ಹೀಗೆ ನಿರಂತರವಾಗಿ ನಡೆಯುವ ಈ ಆಸೆಪಡುವ ಮತ್ತು ಆ ಆಸೆಗಳನ್ನು ಪೂರೈಸಿಕೊಳ್ಳುವ ಪ್ರಯತ್ನಗಳ ಸರಮಾಲೆಯೇ ನಮ್ಮ ಜೀವನವೋ? ಮನಸ್ಸಿನ ಈ ಆಸೆಪಡುವ ಜಾಣ್ಮೆಗೆ ಕೊನೆಯಿಲ್ಲವೋ? ಎಂದು ಒಂದು ಸೂಕ್ತ ಪ್ರಶ್ನೆಯನ್ನು ಕೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ವಾಚಕರೆ, ನಾವು ಹೌದು ಎನ್ನಲೇ ಬೇಕು. ಈ ಭೂಮಿಯಮೇಲೆ ಇರುವ ತನಕ ಈ ಆಸೆಗಳ ಪಾಶದ ಹಿಡಿತ ನಮ್ಮನ್ನು ಬಿಡುವುದೇ ಇಲ್ಲ. ಇವುಗಳ ಮಧ್ಯೆ ನಾವು ನಲುಗಿ ಹೋಗುತ್ತೇವೆ. ಜೀವನದ ಅಂತ್ಯದಲ್ಲಿ ಒಂದು ಬಾರಿ ಹಿಂತಿರುಗಿ ನೋಡಿದರೆ, ತೃಪ್ತಿಯ ಅಥವಾ ಧನ್ಯತೆಯ ಭಾವ ಬರುವುದು ಬಹಳ ಕಡಿಮೆ ಜನಕ್ಕೆ. ಬಹಳ ಪಾಲು ಜನಕ್ಕೆ ಕೇವಲ ಒಂದು ವಿಷಾದದ ನಗೆ ಮನದಲ್ಲಿ ಮೂಡುತ್ತದೆ. ಇದರಿಂದ ಪಾರಾಗಬೇಕಾದರೆ ನಾವು ನಮ್ಮ ಆಸೆಗಳ ಗಂಟನ್ನು ಕರಗಿಸಿಕೊಳ್ಳಬೇಕು ಮತ್ತು ಮತ್ತಷ್ಟು ಆಸೆಗಳನ್ನು ಸೇರಿಸಿಕೊಳ್ಳುವುದನ್ನು ಬಿಡಬೇಕು. ಒಂದು ಹಂತದಿಂದ ತೃಪ್ತಿಯಭಾವ ಬರಬೇಕು. ಅನವಶ್ಯಕ ತುಡಿತದ ಮನಸ್ಸನ್ನು ಶಾಂತಗೊಳಿಸಬೇಕು. ಹಾಗೆ ಮಾಡಲಾದರೆ ನಮಗೆ ನಿರಾಸೆಯ ಭಾವ ಕಡಿಮೆಯಾಗಬಹುದು. ಶಾಂತಿ ನೆಮ್ಮದಿಗಳು ನಮ್ಮದಾಗಬಹುದು. ನಮ್ಮ ಪ್ರಯತ್ನ ನಾವು ಮಾಡಲೇ ಬೇಕು.


ರಸಧಾರೆ – 212

ದಿನದಿನವು ಹಳಸುವುವು ದಿನದಿನವು ಕೊಳೆಯುವುವು
ಮನುಜಕುಲದೆಲ್ಲ ಕೃತಿವಿಜಯವಿಭವಗಳು
ಅನುದಿನವು ಮತ್ತದನು ತೊಳೆದು ಹೊಸತೆನಿಸುವುದೆ
ಮನುಜಸಫಲತೆ ನಿನಗೆ – ಮಂಕುತಿಮ್ಮ

ಮನುಜಕುಲದೆಲ್ಲ = ಮನುಜ+ ಕುಲದ + ಎಲ್ಲ// ಕೃತಿವಿಜಯವಿಭವಗಳು= ಕೃತಿ + ವಿಜಯ+ ವಿಭಾವಗಳು// ಹೊಸತೆನಿಸುವುದೆ = ಹೊಸತು + ಎನಿಸುವುದೆ//

ಮನುಜಕುಲ= ಮಾನವ ಕುಲ // ವಿಭವಗಳು = ವೈಭವಗಳು //ಅನುದಿನವು = ಪ್ರತಿ ನಿತ್ಯ // ಮನುಜಸಫಲತೆ = ಮನುಷ್ಯನ ಸಾಧನೆ.

ಮನುಷ್ಯನ ಕೆಲಸಗಳು, ಸಾಧನೆಗಳು ಮತ್ತು ಅದರ ವೈಭವಗಳು ದಿನ ಕಳೆದಂತೆ ಹಳತಾಗುತ್ತಾ ಹೋಗುತ್ತದೆ ಮತ್ತು ಹಳಸುತ್ತಾ, ಕೊಳೆಯುತ್ತಾ ಹೋಗುತ್ತದೆ. ಅಂತಹ ಹಳಸಿದ ಮತ್ತು ಕೊಳೆತ ಸಾಧನೆಗಳನ್ನು ಮತ್ತೆ ತೊಳೆದು ಹೊಳಪನ್ನು ನೀಡುವುದೇ ನೀನು ಸಾಧಿಸುವ ಸಫಲತೆ, ಹೇ ! ಮಾನವ ಎಂದು ಉದ್ಘಾರವನ್ನು ತೆಗೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮನುಷ್ಯನ ಆದಿಕಾಲದಿಂದ ಅವನು ನಿರಂತರವಾಗಿ ಏನೇನನ್ನೋ ಸಾಧಿಸುತ್ತಲೇ ಇದ್ದಾನೆ. ಅವನ ಶೋಧನೆ ಮತ್ತು ಆ ಶೋಧನೆಯ ಫಲವಾದ ಸಾಧನೆಗಳು ಅಂದಿನಿಂದ ಇಂದಿನವರೆಗೆ ಸಾಗುತ್ತಲೇ ಇದೆ. ಇವನು ಶೋಧಿಸದ ವಸ್ತುವೇ ಇಲ್ಲ. ಭಗವಂತನ ಸೃಷ್ಟಿಯಲ್ಲಿನ ಎಲ್ಲವನ್ನೂ ಇವನು ಪರೀಕ್ಷಿಸಿ, ಶೋಧಿಸಿ, ತನ್ನ ಉಪಯೋಗಕ್ಕೆ ಅದನ್ನು ಸೂಕ್ತವಾಗಿ ಮಾರ್ಪಾಡು ಮಾಡಿಕೊಂಡು ” ನಾ ಸಾಧಿಸಿದೆ, ನಾ ಜಯಿಸಿದೆ” ಎಂದು ಬೀಗುತ್ತಿದ್ದಾನೆ. ಇವನು ಇರುವುದನ್ನು ಮಾರ್ಪಾಡು ಮಾಡಿಕೊಂಡಿದ್ದಾನೆ ಹೊರತು ಇವನಿಂದ ಒಂದು ಅಕ್ಕಿ ಕಾಳನ್ನೂ ಸೃಷ್ಟಿಮಾಡಲು ಆಗುವುದಿಲ್ಲ.

ಹಾಗೆ ಇವನು ಆವಿಷ್ಕರಿಸಿದವು ಕೆಲಕಾಲಕ್ಕೆ ಹಳತಾಗಿ ಕೊಳೆತು ಹಳಸಿ ಹೋಗುತ್ತದೆ. ಮತ್ತೆ ಹೊಸ ಪೀಳಿಗೆ ಹೊಸ ಹೊಸ ವಿಷಯ ಮತ್ತು ವಸ್ತುಗಳನ್ನು ಕಂಡು ಹಿಡಿದು ಅವರೂ ಸಹ ” ನಾ ಸಾಧಿಸಿದೆ, ನಾ ಜಯಿಸಿದೆ” ಎಂದು ಬೀಗುತ್ತಾರೆ. ಕಾಲಾನುಕಾಲಕ್ಕೆ ಅವೂ ಸಹ ಕೊಳೆತು ಹಳತಾಗಿ ಹಳಸಿ ಹೋಗುತ್ತದೆ. ಹೀಗೆ ಈ ಜಗತ್ತಿನಲ್ಲಿ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ವಸ್ತುಗಳನ್ನು ತನ್ನ ಪ್ರಯೋಜನಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ಹೊಸ ಹೊಸತನ್ನು ಕಂಡುಕೊಳ್ಳುತ್ತಲೇ ಇರುತ್ತಾನೆ. ಇಷ್ಟೇ ಇವನ ಸಾಧನೆ ಮತ್ತು ಜಯ. ವಾಚಕರೆ ನೋಡಿ ಅಂದಿನ “ಬೆಂಕಿ” ಮತ್ತು “ಚಕ್ರ” ಎರಡು ಮಾನವನ ಅತೀ ಶ್ರೇಷ್ಠ ಆವಿಷ್ಕಾರಗಳು. ನಂತರದ ವಿದ್ಯುತ್ ಮತ್ತು ಇವನ ಆವಿಷ್ಕಾರಗಳ ಪಟ್ಟಿಯಲ್ಲಿನ ಪ್ರತಿಯೊಂದೂ ಸಹ ಇಂದು ಹೊಸತು, ನಾಳೆ ಹಳತು, ನಾಳಿದ್ದು ಹಳಸಿ ನಾಲ್ಕನೆಯ ದಿನ ಕೊಳೆತು ಹೋಗುತ್ತದೆ. ಅವುಗಳೇ ಮತ್ತೆ ಹೊಸ ರೂಪ ತಾಳಿ ಹೊಸದೆಂಬಂತೆ ಹೊರಬರುತ್ತದೆ. ಇವನ ಹೊಸ ಹೊಸ ವಸ್ತುಗಳ ಹಸಿವು ಇಂಗುವುದೇ ಇಲ್ಲ.

ಆದರೆ ಪರಮಾತ್ಮನ ಸೃಷ್ಟಿಯನ್ನು ನೋಡಿ. ಎಲ್ಲವೂ ನವನವೀನ. ಹಳತಾಗುವ ಸಂಭವವೇ ಇಲ್ಲ. ಎಲ್ಲವೂ ಆನಂದದಾಯಕವೇ. ನೋಡುವ ಹೃದಯವಿರಬೇಕು. ಅನುಭವಿಸುವ ಮನಸ್ಸಿರಬೇಕು. ಪ್ರತಿದಿನ ಮೂಡುವ ಭಾನುತೇಜನ ಹೊಂಗಿರಣಗಳೇ ಇದಕ್ಕೆ ಸಾಕ್ಷಿ. ಆ ಪರಮಾತ್ಮನ ಸೃಷ್ಟಿಯ ಮುಂದೆ ಮಾನವನ ಆವಿಷ್ಕಾರಗಳೆಲ್ಲ ಪೇಲವವಲ್ಲವೇ? ಆದರೂ ಮನುಷ್ಯ ತಾನು ಯಾವುದೋ ಮಹತ್ತದಾದ್ದನ್ನು ಸಾಧಿಸಿದ್ದೇನೆ, ಕಂಡುಹಿಡಿದಿದ್ದೇನೆ, ವಿಜಯವನ್ನು ಪಡೆದಿದ್ದೇನೆ, ವೈಭವದಿಂದ ಮೆರೆದಿದ್ದೇನೆ ಎಂದು ಬೀಗುವುದನ್ನು ನೋಡಿದರೆ……….. ಇರಲಿ, ಇವನ ಮಿತಿಯಲ್ಲಿ ಇವನೇನೋ ಸಾಧಿಸಿದ್ದಾನೆ. ಆದರೆ ಆ ಅಪರಿಮಿತ ಶಕ್ತಿಯುಳ್ಳ ಆ ಪರಮಾತ್ಮನ ಸೃಷ್ಟಿಯ ಮುಂದೆ ಇವನ ಸಾಧನೆಯೆಷ್ಟು ಇವನ ವಿಜಯವೆಷ್ಟು ?


ರಸಧಾರೆ – 213

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ
ಸಾಜವನು ಬಿಟ್ಟಲುಗದಿಹುದು ಮೃಗಕೀಟ
ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು
ಯೋಜಿಪುದೆ ನರಮಹಿಮೆ – ಮಂಕುತಿಮ್ಮ.

ಸಾಜಗುಣವೆಂದುಪೇಕ್ಷಿಪೆಯ=ಸಾಜಗುಣವೆಂದು+ಉಪೇಕ್ಷಿಪೆಯ// ನಿನ್ನವಗುಣವ = ನಿನ್ನ + ಅವಗುಣವ// ಬಿಟ್ಟಲುಗದಿಹುದು = ಬಿಟ್ಟು+ ಅಲುಗದೆ+ಇಹುದು//
ಲೋಕಸಂಸ್ಥಿತಿಗದನು = ಲೋಕ + ಸಂಸ್ಥಿತಿಗೆ+ ಅದನು
ಸಾಜಗುಣ= ಸಹಜಗುಣ // ಉಪೇಕ್ಷಿಪೆಯ= ಕಡೆಗಣಿಸುತ್ತೀಯಾ?// ಅವಗುಣ= ದುರ್ಗುಣ// ಸಂಸ್ಥಿತಿಗೆ = ಸುವ್ಯವಸ್ಥೆಗೆ // ಯೋಜಿಪುದೆ = ಯೋಜನೆ ಮಾಡುವುದೆ.

ತನ್ನ ಅವಗುಣಗಳನ್ನು ತೀರಾ ಸಾಮಾನ್ಯವೆಂದು ಅಥವಾ ಸಹಜವೆಂದು ಅವುಗಳನ್ನು ಉಪೇಕ್ಷಿಸುತ್ತಾನೆ ಮನುಷ್ಯ. ಆದರೆ ಪ್ರಾಣಿ, ಪಕ್ಷಿ, ಕೀಟಗಳು ತಮ್ಮ ಸಹಜ ಗುಣವನ್ನು ಬಿಡುವುದೇ ಇಲ್ಲ. ಹೀಗೆ ಇವನ ದುರ್ಗುಣಗಳನ್ನು ದಂಡಿಸುತ ಅಥವಾ ತಿದ್ದುತ್ತಾ ಈ ಜಗತ್ತಿನಲ್ಲಿ ಮಾನವನ ಬದುಕನ್ನು ಒಂದು ವ್ಯವಸ್ಥಿತವಾದ ರೀತಿಯಲ್ಲಿ ಇಡಬೇಕೆಂದು ಯತ್ನಿಸುವುದೇ ನಿರಂತರವಾಗಿ ನಡೆದಿರುವ ಮನುಷ್ಯ ಪ್ರಯತ್ನವೆಂದು ಒಂದು ಗಹನವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮನುಷ್ಯ ತಾನು ಮಾಡುವ ಕುಕರ್ಮಗಳನ್ನು ” ಇದೇನು ಮಹಾ, ಇವು ಮನುಷ್ಯನ ಸಹಜ ಗುಣಗಳಲ್ಲವೇ” ಎಂದು ಸಮರ್ಥಿಸಿಕೊಳ್ಳುತ್ತಾನೆ. ಮಾನವ, ಮಾನವತಾ ಪೂರ್ಣವಾದ ಸಹಜ ಗುಣಗಳನ್ನು ಮರೆತೇ ಹೋಗಿದ್ದಾನೆ. ತಾನು ಮಾಡುವ ದುಷ್ಕರ್ಮಗಳಿಗೆ ಸಹಜತೆಯ ಹಣೆಪಟ್ಟಿಯನ್ನು ಕೊಟ್ಟು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ.ಇದಕ್ಕೆ ನಮ್ಮ ಪುರಾಣ ಇತಿಹಾಸಗಳಲ್ಲಿ ಹೇರಳವಾದ ದೃಷ್ಟಾಂತಗಳು ದೊರೆಯುತ್ತವೆ. ಇಡೀ ಭಾಗವತ ಪುರಾಣ, ರಾಮಾಯಣ, ಮಹಾಭಾರತ ಪುರಾಣಗಳೆಲ್ಲವೂ, ” ಇದು ಸರಿ, ಇದು ತಪ್ಪು, ಹೀಗೆ ಮಾಡಿದರೆ ಇದು ಫಲ ಹಾಗೆ ಮಾಡಿದರೆ ಹಾಗೆ ಫಲ” ಎಂದು ಇಡೀ ಜನ ಸಮುದಾಯವನ್ನು ತಿದ್ದಲು ಮತ್ತು ಸಮಾಜವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಇಡಲು ಪ್ರಯತ್ನ ಮಾಡಿವೆ. ಇವುಗಳನ್ನು ಕಂಡುಕೊಂಡದ್ದೇ ಮನುಷ್ಯನ ಒಂದು ಮಹತ್ ಸಾಧನೆ. ಆದರೆ ವಾಚಕರೆ ನೋಡಿ ಪ್ರಾಣಿ ಪಕ್ಷಿ ಕೀಟಗಳು ಇನ್ನೂ ತಮ್ಮ ಸಹಜ ಪ್ರವೃತ್ತಿಯನ್ನೇ ಇಟ್ಟುಕೊಂಡಿವೆ. ಅವುಗಳಿಗಿಂತ ಹೆಚ್ಚು ಮತ್ತು ಉತ್ತಮ ಜ್ಞಾನವನ್ನು ಪಡೆದ ಮನುಷ್ಯ ಮಾತ್ರ ತನ್ನ ಸಹಜ ಸ್ವಭಾವ ಮತ್ತು ಗುಣಗಳನ್ನು ಬಿಟ್ಟ ತಪ್ಪು ದಾರಿ ಹಿಡಿದು, ಅದನ್ನು ತಿದ್ದಿಕೊಳ್ಳಲು ಹಲವಾರು ಮಾರ್ಗಗಳನ್ನು ಕಂಡು ಹಿಡಿದುಕೊಂಡಿದ್ದಾನೆ.

ಪ್ರಾಣಿಗಳು ಮತ್ತು ಇತರೆ ಜೀವಿಗಳು ಸಹಜತೆಯಿಂದ ಜೀವಿಸುತ್ತವೆ. ಮನುಷ್ಯಮಾತ್ರ ತಪ್ಪು ದಾರಿ ಹಿಡಿದಿದ್ದಾನೆ. ಆದರೆ ಅವನ ಮಹತ್ಸಾಧನೆ ಏನೆಂದರೆ ತಾನು ಮಾಡುವುದು ತಪ್ಪು ಎಂದು ಅರಿಯಲು ಮತ್ತು ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಪಟ್ಟಿದ್ದಾನೆ. ಈ ಪ್ರಯತ್ನದಲ್ಲಿ ಇವನು ವೇದ ಉಪನಿಷತ್ತು, ಪುರಾಣ, ಧ್ಯಾನ, ಯೋಗ, ಸಾಹಿತ್ಯ, ಸಂಗೀತ, ಮುಂತಾದವುಗಳನ್ನು ಕಂಡುಕೊಂಡು ತನ್ನನ್ನು ತಾನು ತಿದ್ದಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದೆ ಇವನ ಸಾಧನೆ. ಹಾಗೆ ತಾನು ಮಾಡುವುದು ತಪ್ಪು ಎಂದು ಅರಿವು ಮೂಡುವುದು ಎಷ್ಟು ಜನರಿಗೆ ಸಾಧ್ಯ. ಹಾಗೆ ಅರಿವು ಮೂಡಿದವರಲ್ಲಿ, ತಮ್ಮನ್ನು ತಾವು ತಿದ್ದಿಕೊಳ್ಳಲು ಪ್ರಯತ್ನಿಸುವವರು ಎಷ್ಟುಮಂದಿ. ಹಾಗೆ ಪ್ರಯತ್ನಿಸುವವರಲ್ಲಿ ಎಷ್ಟುಜನ ಸಫಲರು ಎಂದು ನೋಡಿದರೆ ನಮಗೆ ಬಹಳ ಕಡಿಮೆ ಜನ ತಿದ್ದಿಕೊಂಡು ಶುದ್ಧರಾದವರು ಸಿಗುತ್ತಾರೆ.

ಸಹಜತೆಯನ್ನು ಉಳಿಸಿಕೊಂಡು, ಕೃತ್ರಿಮತೆಯನ್ನು ಬಿಡಬೇಕು, ದುಷ್ಕರ್ಮಗಳನ್ನು ಬಿಡಬೇಕು, ಶುದ್ಧರಾಗಬೇಕು ಎನ್ನುವ ಅರಿವುಮೂಡಬೇಕು ಮತ್ತು ಅವುಗಳನ್ನು ನೀಗಿಕೊಳ್ಳಲು ನಿರಂತರ ಪ್ರಯತ್ನವನ್ನು ನಾವು ಮಾಡಬೇಕು. ಹಾಗೆ ಮಾಡಿದರೆ ನಮ್ಮನ್ನು ಈ ಜಗತ್ತಿನಲ್ಲಿ ಸೃಷ್ಟಿಸಿದ ಆ ಪರಮಾತ್ಮನ ಇಚ್ಚೆಗೆ ನ್ಯಾಯ ಮಾಡಿದಂತಾಗುತ್ತದೆ.


ರಸಧಾರೆ -214

ಸಹಜ ನಗ್ನತೆ ನಮಗೆ, ಸಹಜ ನಖದಾಡಿಗಳು
ಬಹುಯುಗದ ಸಂಸ್ಕಾರ ವಸ್ತ್ರ ಸಿಂಗಾರ
ಸಹಜತೆ ನಿರಕ್ಷರತೆ, ವಿದ್ಯೆ ತಾಂ ಕೃತಕವಲ
ಸಹಜದಿನೆ ಕೃತಕಮುಂ – ಮಂಕುತಿಮ್ಮ

ನಖದಾಡಿಗಳು = ಉಗುರು ಗಡ್ದಗಳು// ಸಹಜದಿನೆ = ಸಹಜತೆಯಿಂದ

ನಗ್ನತೆಯು ಮನುಜನಿಗೆ ಸಹಜ. ಈ ದೇಹದಲ್ಲಿ ಉಗುರುಗಳು ಗಡ್ಡ ಮೀಸೆಗಳು ಸಹಜ. ಆದರೆ ಸಾವಿರಾರು ವರ್ಷಗಳಕಾಲದ ಸಂಸ್ಕಾರದಿಂದ ಮನುಷ್ಯ ಬಟ್ಟೆ ಹಾಕಿಕೊಳ್ಳುವುದನ್ನು, ತನ್ನನ್ನು ತಾನು

ಸಿಂಗರಿಸಿಕೊಳ್ಳುವುದನ್ನು ಕಲಿತಿದ್ದಾನೆ. ಹಾಗೆಯೇ ನಿರಕ್ಷರತೆ ಸಹಜ. ಇವನು ಅಕ್ಷರವನ್ನು ಮತ್ತು ವಿದ್ಯೆಯನ್ನು ಕಲಿತ. ಆ ಸಹಜತೆಯಿಂದ ಬಂದ ಕೃತಕತೆಯೇ ಇದು. ಹಾಗಾಗಿ ಹೊರಕಾಣುವ ಕೃತಕತೆಯು ಸಹಜತೆಯಿಂದಲೇ ಬರುತ್ತದೆ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಹಿಂದೆ ಆದಿಕಾಲದಲ್ಲಿ ಮನುಷ್ಯ ಕಾಡುಗಳಲ್ಲಿ ಇದ್ದಾಗ, ಸಹಜವಾಗೇ ನಗ್ನವಾಗಿ ಇರುತ್ತಿದ್ದ. ಕಾಲಾನುಕಾಲಕ್ಕೆ ಸಂಸ್ಕೃತನಾಗುತ್ತ, ಸುಸಂಕೃತನಾಗುತ್ತಾ, ಬಟ್ಟೆ ಹಾಕಿಕೊಳ್ಳುವುದು, ಅಲಂಕಾರ ಮಾಡಿಕೊಳ್ಳುವುದು ಮತ್ತು ಅವುಗಳಲ್ಲಿನ ಹಲವಾರು ವಿನ್ಯಾಸಗಳನ್ನು ಕಂಡುಹಿಡಿದು ಕೊಂಡ. ಹಾಗಾಗಿ ನಗ್ನತೆಯು ಸಹಜ ಪ್ರವೃತ್ತಿ. ಅದರಮೇಲೆ ಹಾಕಿಕೊಂಡ ಬಟ್ಟೆ ಮತ್ತು ಮಾಡಿಕೊಂಡ ಅಲಂಕಾರಗಳು ಕೇವಲ ಕೃತ್ರಿಮತೆ, ಎಂದು ಗುಂಡಪ್ಪನವರು ಹೇಳುತ್ತಾರೆ.

ಹಾಗೆಯೇ ನಿರಕ್ಷರಕುಕ್ಷಿಯಾದ ಮನುಷ್ಯ ಕಾಲಾನುಕಾಲದಲ್ಲಿ ಮಾಡಿದ ಒಂದೇ ರೀತಿಯ ಶಬ್ದಗಳೇ ಆಡುವ ಭಾಷೆಯಾಯಿತು. ಆಡುವ ಭಾಷೆಯನ್ನು ಕಾಪಾಡಿಕೊಳ್ಳಲು ಅದಕ್ಕೊಂದು ಆಕಾರವನ್ನು ಮನುಷ್ಯ ಕಂಡುಕೊಂಡ. ಆ ಆಕಾರಗಳು ಕ್ರಮ ಕ್ರಮವಾಗಿ ಲಿಪಿಯಾಯಿತು. ಮೂಲ ರೂಪದ ಲಿಪಿಯು ಇಂದು ಬಹಳಷ್ಟು ಬದಲಾಗಿ ಒಂದು ಸುಂದರ ರೂಪವನ್ನು ಕಂಡುಕೊಂಡಿದೆ. ಅಂದರೆ ಅನಕ್ಷರತೆಯು ಸಹಜತೆಯಾದರೆ, ಅಕ್ಷರತೆ ಅದರ ಮೇಲೆ ತೊಟ್ಟುಕೊಂಡ ಸಿಂಗಾರದ ಉಡುಗೆ ತೊಡುಗೆ. ಈ ಜಗತ್ತಿನಲ್ಲಿ ಎಲ್ಲವೂ ಹಾಗೆಯೇ. ಸಹಜವಾದ ರೂಪ ಭಾವ ಆಲೋಚನೆಗಳಿಗೆ ಒಂದು ಕೃತ್ರಿಮತೆಯ ಲೇಪನವನ್ನು ಕೊಟ್ಟು ಸಹಜತೆಯನ್ನು ಮರೆಸುವುದೇ ಮಾನವನ ಗುಣ.

ನಮ್ಮ ಮನಸ್ಸಿನಲ್ಲಿರುವ ಭಾವ ಒಂದಾದರೆ, ನಾವು ಆಡುವ ಮಾತು, ಮಾಡುವ ಕೃತಿ ಎಲ್ಲವೂ ಬೇರೆ ಬೇರೆ. ಭಾವ ಸಹಜವಾದರೆ, ಮಾತು ಮತ್ತು ಕೃತಿ ಕೃತ್ರಿಮತೆ. ಇದನ್ನೇ ಗುಂಡಪ್ಪನವರು ” ಸಹಜದಿನೆ ಕೃತಕಮುಂ ” ಎಂದು ಸಹಜದಿಂದಲೇ ಕೃತಕವೂ ಎಂದು ಮನುಷ್ಯನ ಸ್ವಭಾವವನ್ನು ವಿಶ್ಲೇಷಣೆ ಮಾಡಿದ್ದಾರೆ. ವಾಚಕರೆ ಈ ಬದಲಾವಣೆಗಳೂ ಸಹಜವಾಗೇ ಮನುಷ್ಯನ ಅವಶ್ಯಕತೆಗಳಿಗನುಗುಣವಾಗೆ ಆಗಿವೆ ಎಂದರೆ ತಪ್ಪಲ್ಲ. ಏಕೆಂದರೆ ಇದರಿಂದ ಮಾನವನ ಸಮಾಜ ಮತ್ತು ಜೀವನ ಸುಧಾರಿತವಾಗಿದೆ ಎಂದರೆ ಒಳ್ಳೆಯದೇ ಅಲ್ಲವೇ? . ಆದರೆ ಇಂದಿನ ಸ್ಥಿತಿಯನ್ನು ನೋಡಿದರೆ ಒಂದು ವಿಷಯ ನಮಗೆ ವೇದ್ಯವಾಗುತ್ತದೆ. ಸಹಜತೆಯಿಂದ ಕೃತಕತೆ ಬಂದಿರಬಹುದು. ಆದರೆ ಸಹಜತೆ ಸಂಪೂರ್ಣ ನಾಶವಾಗಿ ಕೃತಕತೆ, ಕ್ರುತ್ರಿಮತೆಗಳೇ ರಾರಾಜಿಸುತ್ತಿರುವುದು ಮನುಷ್ಯನ ಜೀವನದ ದೌರ್ಭಾಗ್ಯ ಮತ್ತು ವಿಷಾಧನೀಯ. ಕೃತಕತೆ ಅಥವಾ ಕೃತ್ರಿಮತೆಯಿಂದ ಕ್ಲೇಶ ಹೆಚ್ಚು. ಏಕೆಂದರೆ ಮನಃಸಾಕ್ಷಿ ಎಂಬುದು ಇರುವವರೆಲ್ಲರೂ ” ತಮ್ಮ ಒಳಗು ಹೊರಗುಗಳ” ನಡುವೆ ನಡೆಯುವ ತಿಕ್ಕಾಟದಲ್ಲಿ ಪತನಹೊಂದುತ್ತಾರೆ. ನಾವು ಸಾಧ್ಯವಾದಷ್ಟು ಸಹಜತೆಯನ್ನೇ ನಮ್ಮ ಸ್ವಾಭಾವವಾಗಿಸಿಕೊಂಡು, ಕೃತಕತೆಯನ್ನು ಕೇವಲ ನಮ್ಮ ಬಾಹ್ಯ ಜೀವನಕ್ಕೆಷ್ಟು ಬೇಕೋ ಅಷ್ಟಕ್ಕೇ ಸೀಮಿತಗೊಳಿಸಿದರೆ, ಈ ” ತಿಕ್ಕಾಟ” ದಿಂದ ಹೊರಬಂದು ನೆಮ್ಮದಿಯಿಂದ ಇರಬಹುದು. ಆಯ್ಕೆ ಅವರವರಿಗೆ ಬಿಟ್ಟದ್ದು.


ರಸಧಾರೆ -215

ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು
ಸಹಸಿಸುವದಕೆನುವ ಮತಿಯಿನೆ ಪ್ರಗತಿ
ರಹಸಿಯದ ಬುಗ್ಗೆಯದು, ಚಿಮ್ಮುತಿಹುದೆಲ್ಲರೊಳು
ಸಹಜವಾ ಮತಿಕೃತಕ – ಮಂಕುತಿಮ್ಮ

ಇಹುದಕಿಂತೊಳಿತಿಹುದು = ಇಹುದಕಿಂತ + ಒಳಿತು+ ಇಹುದು // ಗಳಿಸಲ್ಬಹುದು = ಗಳಿಸಲು + ಬಹುದು // ಸಹಸಿಸುವದಕೆನುವ = ಸಹಸಿಸುವೆ + ಅದಕೆ + ಎನುವ// ಚಿಮ್ಮುತಿಹುದೆಲ್ಲರೊಳು = ಚಿಮ್ಮುತಿಹುದು+ಎಲ್ಲರೊಳು// ಸಹಜವಾ = ಸಹಜವೂ + ಆ ಸಹಸಿಸುವೆ = ಸಾಹಸಿಸುವೆ// ಮತಿಯಿನೆ – ಬುದ್ಧಿಯಿಂದಲೇ // ರಹಸಿಯದ = ರಹಸ್ಯದ // ಬುಗ್ಗೆಯದು = ಚಿಲುಮೆಯದು// ಮತಿಕೃತಕ = ಕೃತಕ ಬುದ್ಧಿ.

ಈಗ ಇರುವ ಸ್ಥಿತಿಗಿಂತ ಇನ್ನೂ ಉತ್ತಮ ಸ್ಥಿತಿ ಇದೆ, ಒಳಿತಾದ ಸ್ಥಿತಿಯನ್ನು ಪಡೆಯಬಹುದು. ಅದಕ್ಕಾಗಿ ನಾನು ಸಾಹಸ ಮಾಡುತ್ತೇನೆ ಎನ್ನುವುದೇ ಮನುಷ್ಯ ಬುದ್ಧಿ. ಆ ರೀತಿ ಹೊಮ್ಮುವ ಬುದ್ಧಿಯ ಬುಗ್ಗೆಗಳೇ ಪ್ರಗತಿಗೆ ಹಾದಿ. ಈ ರೀತಿಯ ಯೋಚನೆಗಳು ಬುಗ್ಗೆ ಬುಗ್ಗೆಯಾಗಿ, ಅಲೆ ಅಲೆಯಾಗಿ ಎಲ್ಲರಲ್ಲೂ ಸಹಜವಾಗೇ ಇರುತ್ತದೆ. ಈ ರೀತಿ ಇರುವ ಸಹಜ ಬುದ್ಧಿಯೂ ಸಹ ಸಹಜದಿಂದ ಉದ್ಭವವಾದ ಕೃತಕತನವೇ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಕ್ರಿಯಾಶೀಲತೆಯೇ ಮನುಷ್ಯನ ಗುಣ. ಆ ಕ್ರಿಯಾಶೀಲತೆಯೇ ಇವನನ್ನು ಆದಿಮಾನವನ ದೆಶೆಯಿಂದ ಇಂದಿನ ನಾಗರೀಕ ಮಾನವನನ್ನಾಗಿಸಿದೆ. ಈ ಮನುಷ್ಯನ ಸಕ್ರಿಯವಾದ ಮನಸ್ಸು ಬುದ್ಧಿಗಳೇ ಜಗತ್ತಿನಾಧ್ಯಂತ ಹಲವು ರೀತಿಯ ಪ್ರಗತಿಯನ್ನು ಸಾಧಿಸಿವೆ. ವೈಜ್ಞಾನಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಗತಿಗೆ ಈ ಕ್ರಿಯಾಶೀಲತೆಯೇ ಕಾರಣವಲ್ಲವೇ? ಇಂದು ನಾವಿರುವ ಸ್ಥಿತಿಗಿಂತ ಇನ್ನೂ ಉತ್ತಮವಾದ ಸ್ಥಿತಿಯನ್ನು ಹೊಂದುವ ನಿರಂತರ ಪ್ರಯತ್ನ ಜಗತ್ತಿನಲ್ಲಿ ಎಲ್ಲ ಕಡೆಯೂ ಎಲ್ಲ ಮಾನವರ ಮನಸ್ಸುಗಳಲ್ಲಿ ನಡೆದೇ ಇರುತ್ತದೆ ಮತ್ತು ಅದಕ್ಕೆ ಪೂರಕವಾಗಿ ಅವನ ಬುದ್ಧಿ ಕೆಲಸ ಮಾಡುತ್ತಲೇ ಇರುತ್ತದೆ. ಇದು ಅವನ ಸಹಜ ಗುಣದ ಮೇಲೆ ಹೇರಿಕೊಂಡ ಗುಣವಾದ್ದರಿಂದ ಇದೂ ಕೂಡ ಸಹಜತೆಯಿಂದ ಉದ್ಭವವಾದ ಕೃತಕ ಬುದ್ಧಿಯೇ ಎಂದು ಮಾನ್ಯ ಗುಂಡಪ್ಪನವರು ಅಭಿಪ್ರಾಯಪಡುತ್ತಾರೆ.

ವಾಚಕರೆ, ಮನುಷ್ಯನ ಬುದ್ಧಿ ಪ್ರಗತಿ ಪಥದಲ್ಲಿ ಯೋಚಿಸುತ್ತದೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಈ ಪ್ರಗತಿಯ ಫಲ ಕೇವಲ ಸಜ್ಜನರ ಕೈಯಲ್ಲಿಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ದೌರ್ಭಾಗ್ಯವಶಾತ್ ಅದು ದುಷ್ಟ ಜನರ ಕೈಗೂ ಸೇರಿ ಅವರಿಗೆ ತಮ್ಮ ದುಷ್ಟತನದ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಸೂಕ್ತ ಸಾಧನಗಳನ್ನು ಮತ್ತು ಅನ್ಯರ ನಾಶಕ್ಕೆ ಸೂಕ್ತ ಆಯುಧಗಳನ್ನೂ ಕೊಟ್ಟಂತಾಗಿದೆ ಅಲ್ಲವೇ? ಇದೆ ವಿಪರ್ಯಾಸ. ವಿಜ್ಞಾನದ ಪ್ರಗತಿ, ರಾಜಕೀಯ ಪ್ರಗತಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಎಲ್ಲವೂ ಮನುಷ್ಯನ ಆಸೆಯನ್ನು ಇನ್ನಷ್ಟು ಹೆಚ್ಚಿಸಲು ಸಾಧಕವಾಗಿ ಮನುಷ್ಯನಲ್ಲಿ ಸ್ವಾರ್ಥ, ದ್ವೇಷ, ಅಸೂಯೆ, ಅತಿಕೃತ್ರಿಮತೆ, ಅಹಂಕಾರಗಳು ಅಧಿಕವಾಗಲು ಸಹಾಯಮಾಡಿವೆ. ಈ ಪ್ರಗತಿ ಮನುಷ್ಯನನ್ನು ಸಂಪೂರ್ಣ ವಿನಾಶದ ಅಂಚಿಗೆ ತಳ್ಳಿದೆ. ಎಂದಾದರೂ ಒಂದು ದಿನ ಇವೆಲ್ಲವೂ ಕೊನೆಯಾಗಿ, ಎಲ್ಲ ಪ್ರಗತಿಗಳೂ ಮನುಷ್ಯನಲ್ಲಿ ಮಾನವತೆಯನ್ನು ಮೆರೆಸಲು, ಎಲ್ಲರ ಬದುಕೂ ಆನಂದದಾಯಕವಾಗಲು ಪೂರಕವಾದರೆ ಅಂದು ಈ ಧರೆಗೆ ಆನಂದದ ದಿನ.


ಕಗ್ಗ ರಸಧಾರೆ – 216

ಸಿರಿ ಸೊಬಗುಗಳ ಬೆದಕು, ಕೆಳೆ ಬಲುಮೆಗಳ ಬೆದಕು
ಪರಬೊಮ್ಮ ನಾಟಕದವೇಷ ಚೇಷ್ಟೆಗಳು
ಅರಸುತಿಹ ಜೀವ ನಾಯಕನು, ನಾಯಕಿಯವನ
ಕೆರಳಿಸುವ ಮೋಹರುಚಿ – ಮಂಕುತಿಮ್ಮ

ಸಿರಿ = ಐಶ್ವರ್ಯ / ಬೆದಕು= ಹುಡುಕಾಟ, ಅರಸುವಿಕೆ / ಕೆರೆ=ಸ್ನೇಹ/ಬಲುಮೆ= ಪೌರುಷ/ಪರಬೊಮ್ಮ= ಪರಬ್ರಹ್ಮ/ ಮೋಹರುಚಿ = ಆಸೆಯ ಅನುಭವ.

ಮಾನವನಿಗಿರುವ, ಐಶ್ವರ್ಯ ಅಲಂಕಾರಗಳ ಅರಸುವಿಕೆಯ ಆಸೆ, ಸ್ನೇಹ, ಬಂಧನ ಮತ್ತು ಬಲ ಪ್ರದರ್ಶನದಆಸೆ, ಇವೆಲ್ಲವುಗಳನ್ನೂ ಮನುಷ್ಯನ ಮನಗಳಲ್ಲಿ ತುಂಬಿ ಹಲವಾರು ವೇಷಗಳನ್ನು ಹಾಕಲು ಹುರಿದುಂಬಿಸುವುದು ಕೇವಲ ಆ ಪರಮಾತ್ಮನ ಜಗನ್ನಾಟಕದ ಒಂದು ಬಾಗವಷ್ಟೇ . ಪರಮ ಚೇತನದ ಅಂಶವಾದ ಈ ಜೀವನು ಈ ನಾಟಕದ ನಾಯಕನು ಮತ್ತು ಇವನನ್ನು ಈ ನಾಟಕದಲ್ಲಿ ಪಾತ್ರವಹಿಸಲು ಪ್ರೇರೇಪಿಸುವ ನಾಯಕಿಯೇ ಹಲವಾರು ರೀತಿಯ ಆಸೆಗಳು ಮತ್ತು ಜಗತ್ತಿನ ಮೋಹಗಳೆಂದು, ಬಹಳ ಸೂಕ್ಷ್ಮವಾದ ವಿಚಾರವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಿಸಿದ್ದಾರೆ.

ಇದೊಂದು ವಿಚಿತ್ರ . ಪ್ರಾಣಿಗಳನ್ನು ಈ ಜಗತ್ತಿನಲ್ಲಿ ಸೃಷ್ಟಿಸಿ, ಅವುಗಳಮನಸ್ಸಿನಲ್ಲಿ ಆಸೆಯನ್ನುಇಟ್ಟು, ಆ ಆಸೆಗಳನ್ನು ಪೂರೈಸಿಕೊಳ್ಳಲು ಚುಂಬಕದಂತಹ ಬಯಕೆಗಳನ್ನುಕೊಟ್ಟು ಪ್ರತೀ ಜೀವಿಯೂ ತನ್ನ ತನ್ನ ಪಾತ್ರವನ್ನು ನಿರ್ವಹಿಸಲು ಪ್ರೇರೇಪಿಸುವ ಈ ಮೋಹವನ್ನೂ ಸೃಷ್ಟಿಮಾಡಿ ಈ ಜಗನ್ನಾಟಕವನ್ನು ಆಡಿಸುತ್ತಿದ್ದಾನೆ ಆ ಪರಬ್ರಹ್ಮ. ಇದೆಲ್ಲ ಒಂದು ನಾಟಕ. ಯಾವುದೂಸತ್ಯವಲ್ಲ. ಏಕೆಂದರೆ ಯಾವುದು ನಿತ್ಯವೋ ಅದು ಮಾತ್ರ ಸತ್ಯ. ನಿತ್ಯವೆಂದರೆ ನಿರಂತರವಾಗಿ ನಾಶವಾಗದೇ ಇರುವುದು. ಯಾವುದು ನಿತ್ಯವಲ್ಲವೋ ಅದು ಸತ್ಯವೂ ಅಲ್ಲ. ನಿತ್ಯನಾದ ಮತ್ತು ಸತ್ಯನಾದ ಪರಮಾತ್ಮನು ತನ್ನ ಲೀಲಾ ವಿನೋದಕ್ಕೆ ಈ ಅನಿತ್ಯವಾದ, ನಿರಂತರ ಬೇರೆ ಬೇರೆ ವೇಷಗಳನ್ನು ಧರಿಸಿ ನಟಿಸಿ ಅವನನ್ನು ರಂಜಿಸಲಿಕ್ಕಾಗಿಯೇ ಇರುವ ಈ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾನೆ.

ಅಂತಹ ಸೃಷ್ಟಿಯಲ್ಲೂ ನಾವು ಕೇವಲಪಾತ್ರಧಾರಿಗಳು. ಆದರೂ ಇದು ನಮ್ಮ ಬದುಕು, ನಾವು ಜೀವಿಸುತ್ತಿದ್ದೇವೆ, ನಾವು ಸಾಹಸ ಮಾಡುತ್ತಿದ್ದೇವೆ, ನಾವು ಸಾಧಿಸಿದ್ದೇವೆ ಎಂಬ ಹಲವಾರು” ನಾವು” ಗಳ ಪಟ್ಟಿಯನ್ನು ಅಂಟಿಸಿಕೊಂಡು ಅಹಂಕಾರದಿಂದ ಮೆರೆಯುತ್ತೇವೆ. ಮತ್ತೊಂದು ನಿಟ್ಟಿನಿಂದ ಯೋಚಿಸಿದರೆ ಈ ಅಹಂಕಾರವನ್ನೂ ಅವನೇ ಕೊಟ್ಟದ್ದಲ್ಲವೇ, ಈ ಅಹಂಕಾರದಾಟವೂ, ” ಅವನು” ಬರೆದ ನಾಟಕದ ಚಿತ್ರಕಥೆಯ ಸಾಲುಗಳೇ ಇರಬೇಕು ಎಂದು ಅನ್ನಿಸುತ್ತದಲ್ಲವೇ? ಇರಲಿ, ಅಹಂಕಾರವು ದುರಹಂಕಾರವಾಗದೆ, ಈ ನಾಟಕದಅನ್ಯ ಪಾತ್ರಗಳಿಗೆ ಉಪದ್ರವ ಕೊಡುವಂತಾಗದೆ ನಾವು ನಮ್ಮ ನಮ್ಮ ಪಾತ್ರಗಳನ್ನೂ ನಿರ್ವಹಿಸಿನೇಪತ್ಯಕ್ಕೆಸರಿದರೆ, ನಾವು ನಮ್ಮ ನಿರ್ಧಾರಿತ ಪಾತ್ರಗಳಿಗೆ ನ್ಯಾಯ ಮಾಡಿದಂತಾಗುತ್ತದೆ ಅಲ್ಲವೇ?


ರಸಧಾರೆ – 217

ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು
ಸಾಗರದ ತೆರವಂಕು, ಗಿಡಬಳ್ಳಿ ಬಳುಕು
ಮೇಘವರ್ಣಚ್ಚಾಯೆ-ಯೀಸೃಷ್ಟಿಯಿಂ ನಮ್ಮೊ
ಲಾಗಿಹುದು ರೂಪರುಚಿ – ಮಂಕುತಿಮ್ಮ.

ತೆರವಂಕು = ಅಂಕು ಡೊಂಕಾದ ಅಲೆಗಳು

ದಿಗಂತದಲ್ಲಿ ಕಾಣುವ ಬಾಗಿದಂತ ಮುಗಿಲು, ನುಣುಪಾಗಿ ಮತ್ತು ಗುಂಡಾಗಿ ಕಾಣುವ ಹುಣ್ಣಿಮೆಯ ಚಂದಿರ, ಅಂಕುಡೊಂಕಾದ ಸಾಗರದ ಅಲೆಗಳು, ಚಿತ್ರ ವಿಚಿತ್ರ ವಿನ್ಯಾಸದ ಗಿಡ ಬಳ್ಳಿಗಳ ಬಳುಕು, ಹಲ ವಿದವಾದ ವರ್ಣಗಳನ್ನು ಧರಿಸುವ ಮೋಡಗಳು, ಆ ಮೋಡಗಳ ವಿನ್ಯಾಸದಿಂದ ಭೂಮಿಯಮೇಲೆ ಬೀಳುವ ನೆರಳಿನಾಕಾರಗಳು, ಹೀಗೆ ಸೃಷ್ಟಿಯ ಹಲವಾರು ವಿಚಿತ್ರಗಳೇ ನಮ್ಮೊಳಗಿನ ರೂಪ ಮತ್ತು ರುಚಿಗಳಿಗೆ ಕಾರಣವಾಗಿವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ಮಾನವನ ರಸಿಕತೆಗೆ ಇವೆಲ್ಲ ಕಾರಣವಾಗಿದೆಯಂದರೆ, ತಪ್ಪಾಗಲಾರದು. ನೀಲಾಕಾಶ, ಆಕಾಶದಲ್ಲಿನ ಚಿತ್ರ ವಿಚಿತ್ರ ವಿನ್ಯಾಸದ ಮೋಡಗಳು, ಹುಣ್ಣಿಮೆಯ ಚಂದಿರ, ಭೋರ್ಗರೆವ ಕಡಲು, ಗಿಡ ಮರ ಬಳ್ಳಿಗಳು, ಹೂ ಹಣ್ಣುಗಳು, ಪ್ರಾಣಿ ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು, ಕ್ರಿಮಿ, ಕೀಟಗಳು ಹೀಗೆ ಪರಮಾತ್ಮನ ಸೃಷ್ಟಿಯೆಲ್ಲವೂ ಮನುಷ್ಯನ ರಸಿಕತೆಗೆ ಪೂರಕವಾಗೆ ಇವೆ. ಕವಿಗಳಿಗೆ, ಪ್ರೇಮಿಗಳಿಗೆ, ವಾಗ್ಗೇಯಕಾರರಿಗೆ, ಚಿತ್ರಕಲಾವಿದರಿಗೆ, ಮಣ್ಣು ಮರಳಿನಲ್ಲಿ ಬೊಂಬೆ ಮಾಡುವವರಿಗೆ, ಹೀಗೆ ನಮ್ಮ ಸುತ್ತಲಿನ ಎಲ್ಲಕ್ಕೂ ಪ್ರತಿಸ್ಪಂದಿಸುವವರಿಗೆ ಸ್ಪೂರ್ತಿದಾಯಕವಾಗೆ ಇದೆ.

ಎಲ್ಲವೂ ಎಲ್ಲರನ್ನೂ ಆಕರ್ಷಿಸುವುದಿಲ್ಲ. ಕೆಲವರಿಗೆ ಸ್ಪಂದನವೇ ಇರುವುದಿಲ್ಲ. ಕೆಲವರಿಗೆ ಸ್ಪಂದನವಿರುತ್ತದೆ. ಕೆಲವರು ಆ ಸ್ಪಂದನಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಈ ರೀತಿಯ ಪ್ರತಿಕ್ರಿಯೆಯೇ, ಮನುಷ್ಯನ ಮನಸ್ಸಿನಲ್ಲಿ ಪ್ರೀತಿ ಪ್ರೇಮಗಳನ್ನು, ಆನಂದ ಉಲ್ಲಾಸಗಳನ್ನು ಉಂಟುಮಾಡುತ್ತದೆ. ಇವನ ಪ್ರತಿ ಕ್ರಿಯೆಗೂ ಅವನು ಕಾಣುವ, ಕೇಳುವ ಮತ್ತು ಅನುಭವಿಸುವ ವಿಷಯ ವಸ್ತುಗಳಿಂದ ಉಂಟಾದ ಸ್ಪಂದನವೇ ಕಾರಣ.

ಈ ಜಗತ್ತಿನಲ್ಲಿ ಇಂದು ನಾವು ಕಾಣುವ ಸಾವಿರಾರು ವರ್ಷಗಳಿಂದ ಮನುಷ್ಯ ಸೃಷ್ಟಿಸಿದ, ಸಾಹಿತ್ಯ, ಶಿಲ್ಪ ಮತ್ತು ಚಿತ್ರ ಕಲೆ ಎಲ್ಲವೂ ಈ ರೀತಿಯ ಸ್ಪಂದನದಿಂದ ಉಂಟಾದ ಪ್ರತಿಕ್ರಿಯೆಯೇ ಆಗಿದೆ. ಅಂದಿನ ಕಾಳಿದಾಸ, ಬಾಣ, ಕುಮಾರವ್ಯಾಸ ಶೇಕ್ಸ್ ಪಿಯರ್ನಂಥಹ, ಮಹಾನ್ ಕವಿಗಳು, ಮೈಖೇಲ್ ಅಂಜೆಲೋ, ಪಿಕಾಸೋ, ರಾಜಾ ರವಿವರ್ಮನಂಥ ಕಲಾವಿದರಿಂದ ಹಿಡಿದು ಇಂದಿನ ಕವಿ ಕಲಾವಿದರ ತನಕ ಎಲ್ಲಕ್ಕೂ ಈ ಸೃಷ್ಟಿಯ ಆಕರ್ಷಣೆಯೇ ಕಾರಣ.

ಮನುಷ್ಯನ ಪರಸ್ಪರ ಸಂಭಂದಗಳ ಸಂಕೀರ್ಣತೆಗೂ ಈ ಪರಮಾತ್ಮ ಸೃಷ್ಟಿಯ ಜಗತ್ತಿನ ಪ್ರತಿಯೊಂದೂ ಕಾರಣವಾಗಿದೆ. ನಾವು ನೋಡಬೇಕು, ಒಳ್ಳೆಯದನ್ನು ಅನುಭವಿಸಬೇಕು ಒಳ್ಳೆಯ ಪ್ರತಿಕ್ರಿಯೆ ನೀಡಬೇಕು. ಪ್ರತಿಕ್ರಿಯೆ ನೀಡುವ ಶಕ್ತಿ, ಅನುಭವಿಸುವ ಬುದ್ಧಿ ಇಲ್ಲದಿದ್ದರೆ ಸುಮ್ಮನೆ ನೋಡಿ ಅಂತರ್ಯದಲ್ಲಿ ಆನಂದಿಸಬೇಕು. ಖಂಡಿತ ನಕಾರಾತ್ಮಕ ಪ್ರತಿಕ್ರಿಯೆ ನೀಡಲೇ ಬಾರದು. ಹಾಗಾದರೆ ಮಾತ್ರ ಹಲವರ ಅದ್ಭುತ ಪ್ರತಿಕ್ರಿಯೆಗಳು ಶಾಶ್ವತವಾಗಿ ಈ ಜಗತ್ತಿನಲ್ಲಿ ಇರಲು ಸಾಧ್ಯ.


ರಸಧಾರೆ – 218

ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ

ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ
ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು
ಗುರು ರುಚಿಗೆ ಸೃಷ್ಟಿಯಲ – ಮಂಕುತಿಮ್ಮ.

ವಿಧ ವಿಧವಾದ ರೂಪಗಳಲ್ಲಿ, ಕಾಂತಿಗಳಲ್ಲಿ, ಹಲವಾರು ಇಂಪಾದ ದನಿಗಳಲ್ಲಿ, ರಸಭರಿತವಾಗಿ ಪ್ರಕಟಗೊಂಡು, ಪ್ರಕೃತಿ, ನಿಸರ್ಗಅವುಗಳಲ್ಲಿಈ ಜಗತ್ತಿನ ಜೀವಿಗಳ ಮನಸ್ಸಿನಲ್ಲಿ ಆಸೆ ಹಸಿವು ಬಯಕೆ ಮತ್ತು ರುಚಿಗಳಂಥಾ ಭಾವಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಸೃಷ್ಟಿಯೇ ರುಚಿಗಳಿಗೆ ಗುರು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.

ಪ್ರಪಂಚದಲ್ಲಿ ಇರುವ ಎಲ್ಲವನ್ನೂ ಸಮಗ್ರವಾಗಿ ನಿಸರ್ಗವೆಂದು ಕರೆಯುತ್ತಾರೆ. ಈ ನಿಸರ್ಗದ ಒಂದು ಭಾಗವೇ ಮನುಷ್ಯನ ಜೀವನ. ಪಂಚಭೂತಗಳಿಂದಾದ ಈ ಭೂಮಿಯ ಮೇಲಿರುವುದೆಲ್ಲ ಈ ಪಂಚಭೂತಗಳ ಮಿಶ್ರಿತ ರೂಪ. ನಮ್ಮ ಮನುಷ್ಯನೂ ಸಹ ಈ ಪಂಚಭೂತಗಳಿಂದಆದವನೇ. ಪಂಚ ಜ್ಞಾನೆಂದ್ರಿಯಗಳೂ ಮತ್ತು ಪಂಚ ಸ್ಪರ್ಶ ಇಂದ್ರಿಯಗಳಿಂದಾದ ಮನುಷ್ಯನಲ್ಲಿಈಆಕರ್ಷಣೆ ಸಹಜವಾಗೇ ಇದೆ ಅಲ್ಲವೇ? ಮನುಷ್ಯ ಜನ್ಮ ಜನ್ಮಾಂತರದಿಂದಲೂ ಇವುಗಳೆಲ್ಲದರಿಂದ ಆಕರ್ಷಿತನಾಗುತ್ತಿದ್ದಾನೆ. ಇವನಿಗೆ ಇದೇನೂ ಹೊಸದಲ್ಲ. ಆದರೆ ಪ್ರತೀ ಬಾರಿ ಜನ್ಮ ಪಡೆದಾಗಲೂ ಒಂದು ವಿಸ್ಮ್ರುತಿಯಿಂದ ಹುಟ್ಟುತ್ತಾನೆ. ಹಾಗಾಗಿ ಪ್ರತೀ ಬಾರಿಯೂ ಇವೆಲ್ಲ ಇವನಿಗೆ ಹೊಸದಾಗಿ ಕಾಣುತ್ತದೆ. ಇವಗಳಿಂದ ಆಕರ್ಷಿತನಾಗುತ್ತಾನೆ ಮತ್ತು ಅವುಗಳನ್ನು ಪಡೆಯಬೇಕೆಂಬ ಆಸೆ ಇವನಲ್ಲಿ ಹೊಮ್ಮುತ್ತದೆ.

ಮನುಷ್ಯನ ಆಸೆ ಏಕಮುಖವಾಗೂ ಇರುವುದಿಲ್ಲ. "ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ " ಎಂದು ಬೇರೆ ಬೇರೆ ರೀತಿಯ ಕಾಂತಿ ರೂಪ ರುಚಿ ಮತ್ತು ರಸಗಳಿಂದಾದ ಪ್ರಕೃತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಕರ್ಷಣೆಯಿರುತ್ತದೆ. ಪ್ರತಿಯೊಬ್ಬನ ಸ್ವಭಾವಕ್ಕೆ (DNA ) ಗೆ ಅನುಗುಣವಾಗಿ ಅವನವನ ಅಭಿರುಚಿ ಇರುತ್ತದೆ.ಅದನ್ನೇ ಮಾನ್ಯ ಗುಂಡಪ್ಪನವರು "ಕೆರಳಿಸುತ ಹಸಿವುಗಳ, ಸವಿಗಳನು " ಎಂದು ಈ ಪ್ರಕೃತಿ ತನ್ನ ಹಲವಾರು ಬಣ್ಣ ಬಣ್ಣದ ರೂಪಗಳನ್ನು ತೋರುತ್ತಾ ಮನುಷ್ಯರನ್ನು ಹೇಗೆ ತನ್ನೆಡೆಗೆ ಸೆಳೆದು ಇವರುಗಳ ಮನಸ್ಸುಗಳಲ್ಲಿ ಆಸೆಯನ್ನು ಚಿಗುರಿಸುತ್ತದೆ ಎಂದು ಸ್ಪಷ್ಟಪಡಿಸುತ್ತಾರೆ. ಹಾಗಾಗಿ ಈ ಪ್ರಕೃತಿಯೇ ಮನುಷ್ಯನ ಮನದಲ್ಲಿದ ಆಸೆಗೆ ಮತ್ತು ಹಲವಾರು ರುಚಿ, ಅಭಿರುಚಿಗೆ " ಗುರು" ಎಂದು ಹೇಳುತ್ತಾರೆ.

ಮನುಷ್ಯನ ಮನಸ್ಸಿನಲ್ಲಿರುವ ಈಅಭಿರುಚಿಯೇ ಈ ಜಗತ್ತಿನ ವೈವಿಧ್ಯತೆಗೆ ಕಾರಣ. ಇವನ ಅಭಿರುಚಿಗೆ ಸಿಕ್ಕ ಎಲ್ಲವನ್ನೂಮನುಷ್ಯಸುಂದರವಾಗಿಸಲು ಪ್ರಯತ್ನಿಸಿದ್ದಾನೆ ಮತ್ತು ಆ ಸುಂದರತೆಯನ್ನು ತಾನೂ ಅನುಭವಿಸಲು ಪ್ರಯತ್ನಿಸಿದ್ದಾನೆ. ಶಬ್ದ ಸ್ಪರ್ಶ ರೂಪ ರಸ ಗಂಧ ಎಲ್ಲದರ ಮೂಲಕವೂ ಈ ಜಗತ್ತಿನಎಲ್ಲವನ್ನೂ ನೋಡಿ ಇಷ್ಟಪಟ್ಟು ಪಡೆದು ಅನುಭವಿಸಿ ಆನಂದಿಸುವ ಭಾಗ್ಯ ಮನುಷ್ಯನಿಗೆ ಮಾತ್ರ ಆ ಪರಮಾತ್ಮ ಕೊಟ್ಟಿದ್ದಾನೆ. ಇಂತಹ ಒಂದು ಗುಣವನ್ನು ಪಡೆದ ನಾವೇ ಧನ್ಯರು. ನಮ್ಮನ್ನು ರಂಜಿಸುವ ಈ ಪ್ರಕೃತಿಗೆ ಮತ್ತು ಅದನ್ನು ರುಚಿಸುತ್ತಾ ಆನಂದ ಪಡುವ ಗುಣ ನಮಗೆ ಕೊಟ್ಟ ಆ ಪರಮಾತ್ಮನಿಗೆ ನಾವು ಮನಸಾರ ವಂದಿಸೋಣ.


ರಸಧಾರೆ – 219

ಅರೆಯರೆಯೆ ನಮಗೆ ತೋರ್ಪೋಲವು ಚೆಲುವುಗಳೆಲ್ಲ
ಪರಿಪೂರ್ಣ ಸುಖ ಸತ್ವ ಸಾಗರದ ತೆರೆಗಳ್
ತರಣಿ ದೂರದೊಳಿಹನು; ಕಿರಣ ನಮಗೆಟಕುವುದು
ತೆರೆಯು ನೆರೆತದ ಕುರುಹೊ- ಮಂಕುತಿಮ್ಮ

ತೋರ್ಪೋಲವು = ತೋರ್ಪ+ ಒಲವು// ದೂರದೊಳಿಹನು = ದೂರದೊಳು + ಇಹನು // ನಮಗೆಟಕುವುದು = ನಮಗೆ ಎಟುಕುವುದು/// ತರಣಿ= ಸೂರ್ಯ.

ನಮಗೆ ಕಾಣುವ ಒಲವು ಚೆಲುವುಗಳೆಲ್ಲ, ಅರೆ ಬರೆ. ಒಂದು ಪರಿಪೂರ್ಣತೆಯ ಅಪೂರ್ಣ ರೂಪ. ಮಹಾನ್ ಸಾಗರದಲ್ಲಿ ಎದ್ದ ತೆರೆಗಳಂತೆ. ಹೇಗೆ ದೂರದಲ್ಲಿರುವ ಸೂರ್ಯನ ಕಿರಣಗಳನ್ನು ಮಾತ್ರ ನಾವು ಕಾಣುತ್ತೇವೆಯೋ, ಹೇಗೆ ಉಕ್ಕುವ ಸಾಗರದ ತೆರೆಗಳನ್ನು ಮಾತ್ರ ನಾವು ನೋಡಲಿಕ್ಕಾಗುತ್ತದೆಯೋ, ಹಾಗೆ ಪರಬ್ರಹ್ಮನ ಈ ಸೃಷ್ಟಿಯಲ್ಲಿಯೂ ಸಹ ನಾವು ನೋಡುವುದು ಕೇವಲ ಹೊರನೋಟ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಜಗತ್ತಿನಲ್ಲಿರುವ ಎಲ್ಲವೂ ಆ ಪರಮ ಚೇತನದ ಬಲದಿಂದ ಅಸ್ಥಿತ್ವದಲ್ಲಿ ಇವೆ. ಆದರೆ ಆ ಚೇತನ ಎಂದಿಗೂ ತನ್ನ ನಿಜ ಸ್ವರೂಪವನ್ನು ನಮಗೆ ಸಮಗ್ರವಾಗಿ ತೋರುವುದಿಲ್ಲ. ತನ್ನ ಕಾರ್ಯವನ್ನು ಮತ್ತು ತನ್ನ ಇರುವಿಕೆಯನ್ನು, ಕುರುಹುಗಳ ಮೂಲಕ ನಮಗೆ ತಿಳಿಸುತ್ತದೆ. ಎಲ್ಲ ಪ್ರಾಣಿಗಳು, ಮನುಷ್ಯನನ್ನೂ ಸೇರಿ, ಮಾಡುವ ಪ್ರತೀ ಕ್ರಿಯೆಗೂ, ಆ ಪರಮ ಚೇತನದಿಂದಾದ ಸ್ಥೂಲ ರೂಪ (ಜಡ) ಮತ್ತು ಅದನ್ನು ಸಕ್ರಿಯವಾಗಿಡುವ ಸೂಕ್ಷ್ಮ ರೂಪ (ಚೇತನ) ವೇ ಕಾರಣ. ಎಲ್ಲಕ್ಕೂ ಆ ಮಹಾನ್ ಪರಮ ಚೇತನವೇ ಕಾರಣವಾಗಿದ್ದರೂ ಅದರ ಸಮಗ್ರ ರೂಪ ನಮಗೆ ಕಾಣಲು ಸಾಧ್ಯವೇ ಇಲ್ಲವೆಂಬಂತೆ ನಾವು ಅದರ ಕುರುಹುಗಳನ್ನು ಮಾತ್ರ ನೋಡುತ್ತೇವೆ.

ಉದಾಹರಣೆಗೆ, ೧೫.೨೦ ಕೋಟಿ ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಸೂರ್ಯನ ಕಿರಣಗಳು ಮತ್ತು ಆ ಕಿರಣಗಳ ಮೂಲಕ ಬರುವ ಶಾಖ ಮಾತ್ರ ಸಕಲ ಚರಾಚರಗಳಿಗೂ ಅನುಭವಕ್ಕೆ ಬರುತ್ತದೆ. ನಾವು ಕೇವಲ ಇಂದೂ ನೋಡುತ್ತೇವೆ ಮತ್ತು ಅನುಭವಿಸುತ್ತೇವೆ ಮತ್ತು ಅದರಿಂದ ಪ್ರಭಾವಿತರಾಗುತ್ತೇವೆ. ಆ ಸೂರ್ಯನ ಎಲ್ಲ ಗುಣಗಳನ್ನೂ ನಾವು ನೋಡಲು, ಪಡೆಯಲು ಮತ್ತು ಅನುಭವಿಸಲು ಸಾಧ್ಯವಿಲ್ಲ. ಒಂದು ಅಗಾಧ ಸಮುದ್ರ. ಆ ಸಮುದ್ರದಲ್ಲಿ ಒಳಪ್ರವಾಹಗಳು( under currents ) ಹಲವಾರು. ಅವುಗಳನ್ನು ನಾವು ನೋಡಲು ಸಾಧ್ಯವಿಲ್ಲ ಅಲ್ಲವೇ? ನಾವು ನೋಡುವುದು ಕೇವಲ ಶಾಂತ ಸಾಗರ ಅಥವಾ ಆಗಾಗ ಅದರ ಮೇಲೆ ಏಳುವ ಅಲೆಗಳು.

ಗಿಡ ಮರಗಳಲ್ಲಿ, ನದಿ ಸಾಗರಗಳಲ್ಲಿ, ಸಸಿ ಬಳ್ಳಿಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ, ಕ್ರಿಮಿ ಕೀಟಗಳಲ್ಲಿ, ಹೀಗೆ ಎಲ್ಲದರಲ್ಲಿಯೂ ಆ ಚೇತನನೆ ಸಕ್ರಿಯವಾಗಿದ್ದರೂ ಅದನ್ನು ನಮಗೆ ನೋಡಲಾಗುವುದಿಲ್ಲ. ನಾವು ಕೇವಲ ಬಾಹ್ಯ ರೂಪ ಮತ್ತು ಆ ರೊಪದಲ್ಲಿ ಪ್ರಕಟವಾಗುವ ಕ್ರಿಯೆ ಮತ್ತು ಭಾವಗಳನ್ನು ಮಾತ್ರ ನೋಡುತ್ತೇವೆ. ಅದಕ್ಕೆ ಕಾರಣ ಕೇವಲ ನಮ್ಮ ಜ್ಞಾನದ ಮಿತಿ. ನಮ್ಮ ಮಿತಿಯನ್ನು ಹೆಚ್ಚಿಸಿಕೊಂಡು ಅವುಗಳೆಲ್ಲದರ ಹಿಂದೆ ಅಡಗಿರುವ ಮತ್ತು ಸಕ್ರಿಯವಾಗಿರುವ ಆ ಪರಮ ಚೇತನವನ್ನು ನೋಡಲಾದರೆ, ನಮ್ಮ ಮನಸ್ಸುಗಳಲ್ಲಿ ಅಡಗಿರುವ ಬೇಧ ಭಾವಗಳನ್ನು ಅಳಿಸಬಹುದು. ಆದರೆ ನಮ್ಮ ಸ್ವಭಾವದಲ್ಲಿ ಒಂದಾಗಿ ಹೋಗಿರುವ ಈ ಬೇಧವನ್ನು ತೊಳೆಯಲು ಜ್ಞಾನದ ಹೊಳೆ ಹರಿಯಬೇಕು. ನಾವು ಜ್ಞಾನವನ್ನು ಪಡೆದರೆ, ನಮಗೆ ಇಡೀ ಸೃಷ್ಟಿಯ ಮತ್ತು ಮತ್ತು ಸೃಷ್ಟಿಕರ್ತನ ಸಮಗ್ರ ಚಿತ್ರದ ದರ್ಶನವಾಗಬಹುದು.


ರಸಧಾರೆ – 220

ಸೌಂದರ್ಯ ಬಾಂಧವ್ಯಗಳು ಸತ್ಯವಲ್ಲದೊಡೆ
ಕುಂದುವಡೆಯದ ಸತ್ಯವಿಳೆಯೊಳಿನ್ನೆಲ್ಲಿ
ಗಂಧಾನಿಲಂಗಳವು ಪರಸತ್ವಪುಷ್ಪದವು
ಸಂದೇಹವೇನೆಲವೋ – ಮಂಕುತಿಮ್ಮ
ಸತ್ಯವಲ್ಲದೊಡೆ = ಸತ್ಯ + ಅಲ್ಲದೊಡೆ// ಕುಂದುವಡೆಯದ = ಕುಂದು+ ಅಡೆಯದ//ಸತ್ಯವಿಳೆಯೊಳಿನ್ನೆಲ್ಲಿ = ಸತ್ಯವು+ಇಳೆಯೊಳು+ಇನ್ನೆಲ್ಲಿ// ಗಂಧಾನಿಲಂಗಳವು = ಗಂಧ+ ಅನಿಲಂಗಳು+ ಅವು//ಸಂದೇಹವೇನೆಲವೋ = ಸಂದೇಹವು+ಏನು+ ಎಲವೋ ಕುಂದು = ಕೊರತೆ//ಅಡೆಯದ = ಪಡೆಯದ.

ಈ ಜಗತ್ತಿನ ಸೌಂದರ್ಯ, ಬಾಂಧವ್ಯಗಳು ಸತ್ಯವಲ್ಲದಿದ್ದರೆ, ಕುಂದದ, ಕಡಿಮೆಯಾಗದ ಸತ್ಯವು ಈ ಜಗತ್ತಿನಲ್ಲಿ ಎಲ್ಲಿದೆ ಎಂದರೆ ಪುಷ್ಪದಲ್ಲಿ ಉತ್ತಮವಾದ ಸತ್ವದಂತೆ ಬಂದು ಸೇರುವ ಗಂಧದಂತೆ ಈ ಜಗತ್ತಿನಲ್ಲಿ ಪರಮಾತ್ಮ ತತ್ವದಿಂದ ಈ ಸೌಂದರ್ಯ ಬಾಂಧವ್ಯಗಳೆಲ್ಲ ಬಂದು ಸೇರಿವೆ, ಇದರಲ್ಲಿ ಸಂದೇಹವೇನೂ ಇಲ್ಲ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಪ್ರಕೃತಿಯಸೌಂದರ್ಯ, ಚೆಲುವುಗಳು, ಮನುಷ್ಯರ ಅಂದ ಚೆಂದಗಳು ಹಲವಾರು ವಿನ್ಯಾಸದ, ಬಣ್ಣ ಬಣ್ಣಗಳ ಪ್ರಾಣಿ, ಪಕ್ಷಿ, ಕೀಟ, ಗಿಡ, ಮರ, ಬಳ್ಳಿ ಹೂಗಳು, ವಿಧ ವಿಧವಾದ ರುಚಿಗಳ ಮತ್ತು ಗುಣಗಳ ಸಾವಿರಾರು ಹಣ್ಣುಗಳು, ಹೂ ಮತ್ತು ಹಣ್ಣು ಬಿಡದೆ ಇದ್ದರೂ ಮನುಷ್ಯನಿಗೆ ಉಪಯೋಗಕ್ಕೆ ಬರುವಂಥಾ ಹಲವಾರು ಔಷದೀಯ ಗುಣಗಳುಳ್ಳ ಗಿಡ ಮರಗಳು, ಎಲ್ಲವೂ ಚೆಂದವಾಗಿವೆ. ಆದರೆ ಈ ಚೆಂದಗಳೆಲ್ಲವೂ ಈ ಭೂಮಿಯಲ್ಲಿ ಶಾಶ್ವತವಲ್ಲ. ಅಂದಗೆಡುತ್ತದೆ, ಬದಲಾಗುತ್ತದೆ ಮತ್ತೆ ಮತ್ತೆ ಚಿಗುರಿ, ಅರಳಿ ಅಂದಗಳನ್ನು ಸೂಸುತ್ತಾ ರುಚಿಗಳನ್ನು ಹೊರಗೆಡುಹುತ್ತಾ, ಜಗತ್ತನ್ನು ರಂಜಿಸುತ್ತಿದೆ. ಇದು ಪ್ರಕೃತಿಯ ನಿಯಮ. ಆ ಪರಮ ಚೇತನವೇ ಪ್ರಕೃತಿಯ ರೂಪದಲ್ಲಿ ಹೀಗೆ ಪ್ರಕಟಗೊಂಡು ಈ ಜಗತ್ತನ್ನು ರಂಜಿಸುತ್ತಿದೆ.

ಜಗತ್ತಿನಲ್ಲಿ ಎಲ್ಲಕ್ಕೂ ರುಚಿಯನ್ನು ನೀಡುವ, ಅಂದವನ್ನು ನೀಡುವ ಮತ್ತು ಅವುಗಳನ್ನು ಗುರುತಿಸಿ, ಅನುಭವಿಸುವ ಆಸೆಗಳನ್ನು ಎಲ್ಲ ಪ್ರಾಣಿಗಳಲ್ಲಿ ಉಂಟುಮಾಡಿರುವ ಆ ಪರಮ ಚೇತನವೇ, ಎಲ್ಲ ವಸ್ತುಗಳಲ್ಲಿ ಆಸೆಯಾಗಿ,ಅಂದವಾಗಿ, ರುಚಿಯಾಗಿ ಸೇರಿಕೊಂಡು, ಈ ಜಗತ್ತನ್ನು ಮತ್ತೆ ಮತ್ತೆ ಸ್ವಾಧಿಷ್ಟವಾಗಿ, ಅಂದವಾಗಿ, ಸುಂದರವಾಗಿ ಮಾಡುತ್ತಾ, ಇದೆ ಎಂದರೆ ತಪ್ಪಾಗಲಾರದು.ನಾವು ಅದರ ಕ್ರಿಯೆಯನ್ನು ನೋಡಲಾರೆವು.

ಮಲ್ಲಿಗೆ ಹೂವಿನ ರೂಪವನ್ನುನೋಡಬಹುದು, ಅದರಕೋಮಲತೆಯನ್ನು ಅಭಿನಂದಿಸಬಹುದು, ಅದರಸುಗಂಧವನ್ನು ಆಸ್ವಾಧಿಸಬಹುದು, ಆದರೆ ಅದಕ್ಕೆ ಸುಂದರ ಆಕಾರ, ಕೋಮಲತೆ ಮತ್ತು ಅದ್ಭುತ ಸುಗಂಧವನ್ನು ನೀಡಿದ ಶಕ್ತಿಯನ್ನು ನೋಡಲುಸಾಧ್ಯವೇ ? ಇಲ್ಲ ಊಹಿಸಿಕೊಳ್ಳಬಹುದು. ಅಂತರ್ಯದಲ್ಲಿ ಅನುಭವಿಸಬಹುದು. ಇವುಗಳನೆಲ್ಲ ನೋಡಿದಮೇಲೆ, ಆ ಪರತತ್ವದ ಪರ ಸತ್ವವನ್ನು “ಸಂದೇಹವೇನೆಲವೋ ” ಸಂದೇಹಿಸಲು ಸಾಧ್ಯವೇ.

ಈ ಜಗತ್ತಿನಲ್ಲಿ ನಾವು ಆ ಪರತತ್ವದ ಪರ ಸತ್ವವನ್ನು ಮತ್ತು ಅದರ ಸಂಪೂರ್ಣ ಕ್ರಿಯೆಯನ್ನು ನೋಡಿ ಅಭಿನಂದಿಸಿ ಮತ್ತು ಆನಂದ ಪಡುವುದು ಬಿಟ್ಟರೆ ನಮಗೆ ಬೇರೆ ಮಾರ್ಗ ಉಂಟೆ. ಎಲ್ಲರೂ ಯೋಚಿಸಲೇ ಬೇಕಾದ ವಿಷಯವಿದು. ನಮ್ಮ ನಮ್ಮ ಅಂತರಂಗದಲ್ಲಿ ವಿಶ್ಲೇಷಣೆ ಮಾಡಬೇಕಾದ ವಿಚಾರವಲ್ಲವೇ?

ಮುಂದಿನ ಭಾಗಕ್ಕೆ ಹೋಗಲು ಇಲ್ಲಿ ಕ್ಲಿಕ್‍ಮಾಡಿ

1 ಕಾಮೆಂಟ್‌: