ನನ್ನ ಪುಟಗಳು

24 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-06-ಸುಕುಮಾರಸ್ವಾಮಿಯ ಕಥೆ - ವ್ಯಾಕರಣಾಂಶಗಳು ; ನಾಮಪದ

ನಾಮಪದ
ನಾಮ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದವೇ ನಾಮಪದ. 
  ನಾಮ ಪ್ರಕೃತಿ     +     ವಿಭಕ್ತಿ ಪ್ರತ್ಯಯ    =     ನಾಮಪದ
     ಗಿಳಿ                    ಅನ್ನು                =     ಗಿಳಿಯನ್ನು

ನಾಮವಾಚಕ ಅಥವಾ ನಾಮಪ್ರಕೃತಿಗಳನ್ನು ಪ್ರಮುಖವಾಗಿ 9 ವಿಧಗಳಾಗಿ ವಿಂಗಡಿಸಬಹುದು:
೧) ವಸ್ತುವಾಚಕ, 
೨) ಗುಣವಾಚಕ
೩) ಸಂಖ್ಯಾವಾಚಕ, 
೪) ಸಂಖ್ಯೇಯವಾಚಕ, 
೫) ಭಾವನಾಮ, 
೬) ಪರಿಮಾಣವಾಚಕ, 
೭) ದಿಗ್ವಾಚಕ, 
೮) ಪ್ರಕಾರವಾಚಕ
೯) ಸರ್ವನಾಮ 
 
೧] ವಸ್ತುವಾಚಕಗಳು : ವಸ್ತು, ವ್ಯಕ್ತಿ, ಪ್ರಾಣಿ, ಪಕ್ಷಿ, ಸ್ಥಳ ಒಟ್ಟಾರೆಯಾಗಿ ಈ ಪ್ರಕೃತಿಯಲ್ಲಿ ಕಂಡುಬರುವ ಅಂಶಗಳನ್ನು ಸೂಚಿಸುವ ಪದಗಳನ್ನು ವಸ್ತುವಾಚಕಗಳ ಗುಂಪಿನಲ್ಲಿ ಕಾಣಬಹದು:
        ವಸ್ತುವಾಚಕಗಳನ್ನು ರೂಢನಾಮ, ಅಂಕಿತನಾಮ, ಅನ್ವರ್ಥನಾಮ ಎಂದು ಮೂರು ಉಪ ವಿಭಾಗಗಳಾಗಿ ವಿಂಗಡಿಸಬಹುದು:  
        ರೂಢನಾಮ - ಪ್ರಕೃತಿಯಲ್ಲಿ ಕಂಡುಬರುವ ಹಾಗೂ ರೂಢಿಯಿಂದ ಕರೆಯಲಾಗುವ ಎಲ್ಲವನ್ನು ರೂಢನಾಮ ಎನ್ನಲಾಗುವುದು. ಉದಾ : ನದಿ, ಪರ್ವತ, ಊರು, ಮನುಷ್ಯ, ದೇಶ, ಕಲ್ಲು, ಮಣ್ಣು ಇತ್ಯಾದಿ
        ಅಂಕಿತನಾಮ - ವ್ಯಾವಹಾರಿಕ ದೃಷ್ಟಿಯಿಂದ ನಾಮಕರಣಮಾಡಲಾದ ಅಥವಾ ಇಟ್ಟಿರುವ ಹೆಸರುಗಳನ್ನು ಅಂಕಿತನಾಮ ಎನ್ನುವರು. ಉದಾ: ಸಹದೇವ, ಧರ್ಮರಾಯ, ರಾಹುಲ, ಕಮಲಾಕ್ಷ , ಸೀತೆ, ಲಕ್ಷ್ಮಣ, ಸುರೇಶ .. ಇತ್ಯಾದಿ
        ಅನ್ವರ್ಥನಾಮ - ಒಬ್ಬ ವ್ಯಕ್ತಿ, ವಸ್ತು ಅಥವಾ ಸ್ಥಳಕ್ಕೆ ಅವುಗಳ ವಿಶೇಷ ಲಕ್ಷಣ, ಹುದ್ದೆ, ಸ್ವಭಾವ ಮುಂತಾದವುಗಳ ಆಧಾರದಲ್ಲಿ ಕರೆಯಲಾಗುವ ಹೆಸರುಗಳನ್ನು ಅನ್ವರ್ಥನಾಮ ಎನ್ನುವರು.
            ಉದಾ: ಶಿಕ್ಷಕ, ವ್ಯಾಪಾರಿ, ವಿದ್ವಾಂಸ, ವಿಜ್ಞಾನಿ, ಪೂಜಾರಿ, ಉದ್ಯಾನ ನಗರಿ, ಅರಮನೆ ನಗರಿ.... ಇತ್ಯಾದಿ

೨] ಗುಣವಾಚಕ - ನಾಮಪದದ ಗುಣ, ನಡತೆ, ಸ್ವಭಾವ, ಬಣ್ಣ, ಗಾತ್ರ, ಆಕಾರ ಮುಂತಾದ ಅಂಶಗಳನ್ನು ತಿಳಿಸುವ ಪದಗಳೇ ಗುಣವಾಚಕಗಳು, ಗುಣವಾಚಕಗಳನ್ನು ವಿಶೇಷಣಗಳು, ಗುಣವಿಶೇಷಣಗಳು ಎಂದೂ ಕರೆಯುತ್ತಾರೆ.         ಉದಾ: ಒಳ್ಳೆಯ, ಕೆಟ್ಟ, ದೊಡ್ಡದು, ಹಳತು, ಬಿಳಿಯ, ಕರಿಯ, ಹಸಿರಾದ, ಮೃದು, ಕಠಿಣ ಇತ್ಯಾದಿ...

೩] ಸಂಖ್ಯಾವಾಚಕ - ಒಂದರಿಂದ ಗರಿಷ್ಠ ಸಂಖ್ಯೆಯ ವರೆಗೂ ಸಂಖ್ಯೆಗಳನ್ನು ಸೂಚಿಸುವ ಪದಗಳನ್ನು ಸಂಖ್ಯಾವಾಚಕಗಳು ಎನ್ನುವರು.
        ಉದಾ:  ಹನ್ನೆರಡು, ಐವತ್ತು, ಎಂಬತ್ತು, ಸಾವಿರ, ನಲವತ್ತೆಂಟು, ಕೋಟಿ, ಏಕ, ದ್ವಿ, ಚತುರ್, ಸಹಸ್ರ ಇತ್ಯಾದಿ.....

೪] ಸಂಖ್ಯೇಯವಾಚಕ - ಕ್ರಮಾನುಗತ, ಶ್ರೇಣಿ, ಸರದಿ ಮುಂತಾದ ಸಂದರ್ಭದಲ್ಲಿ ಬಳಸಲಾಗುವ ಸಂಖ್ಯಾರೂಪಿ ಪದಗಳು ಹಾಗೂ ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳೆಲ್ಲ ಸಂಖ್ಯೇಯವಾಚಕಗಳೆನಿಸುವುವು. 
        ಉದಾ: ಒಂದನೆಯ, ಐದನೆಯ, ಹನ್ನೆರಡನೆಯ, ಎಂಬತ್ತನೆಯ, ಮೂವರು, ಐವರು, ನಾಲ್ವಡಿ, ಮುಮ್ಮಡಿ ಇತ್ಯಾದಿ...

೫] ಭಾವನಾಮ - ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳೆಲ್ಲ ಭಾವನಾಮಗಳೆನಿಸುವುವು.
    ಉದಾ:  ಬಿಳಿದರ ಭಾವ – ಬಿಳುಪು (ತದ್ಧಿತಾಂತ ಭಾವನಾಮ)
                ಕರಿದರ ಭಾವ – ಕಪ್ಪು   (ತದ್ಧಿತಾಂತ ಭಾವನಾಮ)
                ಹಿರಿದರ ಭಾವ – ಹಿರಿಮೆ (ತದ್ಧಿತಾಂತ ಭಾವನಾಮ)
                ಪಿರಿದರ ಭಾವ – ಪೆರ‍್ಮೆ=(ಹೆಮ್ಮೆ) (ತದ್ಧಿತಾಂತ ಭಾವನಾಮ)
                ನೋಡುವುದರ ಭಾವ – ನೋಟ (ಕೃದಂತ ಭಾವನಾಮ)
                ಮಾಡುವುದರ ಭಾವ – ಮಾಟ (ಕೃದಂತ ಭಾವನಾಮ)
                ಕೊಡುವುದರ ಭಾವ – ಕೂಟ  (ಕೃದಂತ ಭಾವನಾಮ)
                ಇದರ ಹಾಗೆ-ಬೆಳ್ಪು (ಹಳೆಗನ್ನಡ), ಕರ್ಪು (ಹಳೆಗನ್ನಡ), ಕೆಂಪು=ಕೆಚ್ಚನೆಯದರ ಭಾವ, ಪೆಂಪು (ಹಳೆಗನ್ನಡ) ಇವನ್ನೂ ತಿಳಿಯಬಹುದು.
        (ಕೆಂಪು, ಹಿರಿಮೆ, ಆಟ, ಕೂಟ, ಮೆರೆವಣಿಗೆ ಇತ್ಯಾದಿ...)

೬] ಪರಿಮಾಣವಾಚಕ (ಅಷ್ಟು ದೊಡ್ಡ ಕಲ್ಲು (ಇಷ್ಟು ಜನರ ಗುಂಪು (ಎಷ್ಟು ಕಾಸುಗಳು? – ಇತ್ಯಾದಿ ವಾಕ್ಯಗಳಲ್ಲಿ ಅಷ್ಟುಇಷ್ಟುಎಷ್ಟು ಇತ್ಯಾದಿ ಶಬ್ದಗಳು ಒಂದು ಗೊತ್ತಾದ ಅಳತೆ, ಸಂಖ್ಯೆಯನ್ನು ಹೇಳುವುದಿಲ್ಲ, ಅಂದರೆ ನಿರ್ದಿಷ್ಟಪಡಿಸಿದ ಅಳತೆ, ಸಂಖ್ಯೆ ಇಲ್ಲಿ ಇಲ್ಲ.  ಇಂಥ ಶಬ್ದಗಳು ಕೇವಲ ಪರಿಮಾಣಗಳನ್ನು ಮಾತ್ರ ತಿಳಿಸುತ್ತವೆ.  ಇಂಥ ಶಬ್ದಗಳನ್ನೇ ಪರಿಮಾಣ ವಾಚಕಗಳು ಎನ್ನುತ್ತಾರೆ.
    "ವಸ್ತುಗಳ ಸಾಮಾನ್ಯ ಅಳತೆಪರಿಮಾಣಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳೆನಿಸುವುವು."
ಉದಾಹರಣೆಗೆ:- ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಪಲವು-ಇತ್ಯಾದಿಗಳು.
        ಪರಿಮಾಣಕ್ಕೆ:- ಹಲವು ದಿನಗಳು, ಕೆಲವು ಊರುಗಳು-ಇತ್ಯಾದಿ.
        ಗಾತ್ರಕ್ಕೆ:- ಗುಡ್ಡದಷ್ಟು, ಆನೆಯಷ್ಟು, ಪಲ್ಲದನಿತು-ಇತ್ಯಾದಿ.
        ಅಳತೆಗೆ:- ಅಷ್ಟು ದೂರ, ಇಷ್ಟು ಪುಸ್ತಕಗಳು-ಇತ್ಯಾದಿ.

೭] ದಿಗ್ವಾಚಕ - ದಿಕ್ಕುಗಳು (ನಿಟ್ಟುಗಳಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳೆ ನಿಸುವುವು.
ಉದಾಹರಣೆಗೆ:- ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ವಾಯುವ್ಯ, ಆಗ್ನೇಯ, ನೈಋತ್ಯ, ಮೂಡಲು, ತೆಂಕಲು, ಬಡಗಲು, ಪಡುವಲು, (ಮೂಡಣ, ತೆಂಕಣ, ಪಡುವಣ, ಬಡಗಣ) ಆಚೆ, ಈಚೆ-ಇತ್ಯಾದಿಗಳು.

೮] ಪ್ರಕಾರವಾಚಕಗಳು -
(೧) ಅಂಥ ಮನುಷ್ಯನುಂಟೇ? (೨) ಅಂತಹ ವಿಚಾರ ಬೇಡ. (೩) ಎಂಥ ಬಣ್ಣ. (೪) ಇಂಥವರೂ ಉಂಟೇ? – ಇತ್ಯಾದಿ ವಸ್ತುಗಳ ಸ್ಥಿತಿ, ರೀತಿಗಳನ್ನು ತಿಳಿಸುತ್ತವೆ.
    "ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವುಇವೂ ಒಂದು ಬಗೆಯ ಗುಣವಾಚಕಗಳೇ ಆಗಿವೆ."
    ಉದಾ: ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಅಂಥವನು, ಅಂಥವಳು, ಅಂಥದು, ಅಂತಹನು, ಇಂತಹನು, ಅಂತಹುದು-ಇತ್ಯಾದಿ.

೯]  ಸರ್ವನಾಮಗಳು -
    ಶ್ರೀರಾಮನು ಕಾಡಿಗೆ ಹೋದನು.  ಅವನ ಸಂಗಡ ಸೀತಾಲಕ್ಷ್ಮಣರೂ ಹೊರಟರು.  ಅವರು ಅಲ್ಲಿ ಪರ್ಣಶಾಲೆಯಲ್ಲಿ ವಾಸಿಸುತ್ತಿದ್ದರು.
ಈ ವಾಕ್ಯಗಳಲ್ಲಿ ಅವನ ಸಂಗಡ ಎಂದರೆ ರಾಮನ ಸಂಗಡ ಎಂದು ಅರ್ಥ.  ಅವರು ಅಲ್ಲಿ ಎಂದರೆ ರಾಮಲಕ್ಷ್ಮಣಸೀತೆಯರು ಆ ಕಾಡಿನಲ್ಲಿ ಎಂದು ಅರ್ಥ.  ಅವನು, ಅವರು, ಅಲ್ಲಿ ಇತ್ಯಾದಿ ಶಬ್ದಗಳು ನಾಮಪದಗಳ ಸ್ಥಾನದಲ್ಲಿ ಬಳಸುವ ಬೇರೊಂದು ಬಗೆಯ ಶಬ್ದಗಳು.  ಹೀಗೆ ಸರ್ವ ವಸ್ತುವಾಚಕಗಳ ಸ್ಥಾನದಲ್ಲೂ ಅವಕ್ಕೆ ಬದಲಾಗಿ ಕೆಲವು ಬೇರೆ ಬಗೆಯ ಶಬ್ದಗಳನ್ನು ಪ್ರಯೋಗಿಸುತ್ತೇವೆ.  ಇಂಥ ಶಬ್ದಗಳೇ ಸರ್ವನಾಮಗಳು.

    "ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಬೋಧಿಸುವ (ಸೂಚಿಸುವಶಬ್ದಗಳೆಲ್ಲ ಸರ್ವನಾಮಗಳೆನಿಸುವುವು."

ಉದಾಹರಣೆಗೆ:- ಅದು, ಇದು, ಯಾವುದು, ಎಲ್ಲಾ (ಎಲ್ಲ), ಏನು, ಅವನು, ಇವನು, ಯಾವನು,  ಅವಳು,  ಇವಳು,  ಯಾವಳು,  ತಾನು, ತಾವು, ನೀನು, ನೀವು, ಆವುದು, ಆರು,
ಆರ್, ಏನು, ಏನ್, ಆಂ (ಆನ್), ನಾಂ (ನಾನ್), ನೀಂ (ನೀನ್) -ಇತ್ಯಾದಿಗಳು.

ಈ ಸರ್ವನಾಮಗಳನ್ನು ಮೂರು ಭಾಗ ಮಾಡಬಹುದು.
        (೧) ಪುರುಷಾರ್ಥಕ ಸರ್ವನಾಮಗಳು.
        (೨) ಪ್ರಶ್ನಾರ್ಥಕ ಸರ್ವನಾಮಗಳು.
        (೩) ಆತ್ಮಾರ್ಥಕ ಸರ್ವನಾಮಗಳು.

೧. ಪುರುಷಾರ್ಥಕ ಸರ್ವನಾಮಗಳು
ಉದಾಹರಣೆಗೆ:-
(i)ನಾನು-ನಾವು - ಉತ್ತಮ ಪುರುಷ ಸರ್ವನಾಮಗಳು.
(ii)ನೀನು-ನೀವು - ಮಧ್ಯಮ ಪುರುಷ ಸರ್ವನಾಮಗಳು.
(iii)ಅವನು-ಅವರು ಅವಳು-ಅವರು
ಅದು-ಅವು
ಪ್ರಥಮ ಪುರುಷ ಸರ್ವನಾಮಗಳು

ಪ್ರಶ್ನಾರ್ಥಕ ಸರ್ವನಾಮಗಳು
ಉದಾಹರಣೆಗೆ:- ಯಾವುದು, ಏನು, ಏತರದು, ಆವುದು, ಏನು, ಏನ್ ಇತ್ಯಾದಿಗಳು ಪ್ರಶ್ನಾರ್ಥಕ ಸರ್ವನಾಮಗಳು.  (ಇವೆಲ್ಲ ಪ್ರಶ್ನೆಗೆ ಸಂಬಂಧಿಸಿದ ಸರ್ವನಾಮ ಶಬ್ದಗಳಾದ್ದರಿಂದ ಹಾಗೆ ಕರೆಯಲಾಗುತ್ತದೆ).

ಆತ್ಮಾರ್ಥಕ ಸರ್ವನಾಮಗಳು
ಉದಾಹರಣೆಗೆ:- ತಾನು-ತಾವು ಇವುಗಳನ್ನು ಆತ್ಮಾರ್ಥಕ ಸರ್ವನಾಮಗಳೆಂದು ಹೇಳುವುದು ವಾಡಿಕೆ.

***************




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ