ನನ್ನ ಪುಟಗಳು

27 ಏಪ್ರಿಲ್ 2018

ಮಲೆನಾಡಿನ ಚಿತ್ರಗಳು : ಕಾಡಿನಲ್ಲಿ ಕಳೆದ ಒಂದಿರುಳು

ಕಾಡಿನಲ್ಲಿ ಕಳೆದ ಒಂದಿರುಳು
ಸಂಜೆಗೆ ಮುನ್ನವೇ ಊಟ ಮಾಡಿದೆವು. ಒಬ್ಬೊಬ್ಬರು ಎರಡೆರಡು ಹೆಗ್ಗಂಬಳಿಗಳನ್ನು ಹೆಗಲ ಮೇಲೆ ಹಾಕಿಕೊಂಡು, ತೋಟಾಕೋವಿಗಳನ್ನು ಹಿಡಿದುಕೊಂಡು ಮನೆಯಿಂದ ಹೊರಟು ಕಾಡಿನ ಕಡೆಗೆ ನಡೆದವು. ನಮ್ಮ ಹಣ್ಣಿನ ಮರದ ಅಟ್ಟಣೆ ಮನೆಯಿಂದ ದೂರ ಅರಣ್ಯದ ನಡುವೆಯಿತ್ತು. ಕತ್ತಲಾದ ಮೇಲೆ ಕಾಡಿನಲ್ಲಿ ದಾರಿ ಹುಡುಕುವುದು ಕಷ್ಟವೆಂದು ತಿಳಿದು ಸ್ವಲ್ಪ ಮುಂಚಿತವಾಗಿಯೆ ಹೊರಟಿದ್ದೆವು!

ಸಾಯಂಕಾಲವಾಗಿದ್ದರೂ ನೇಸರು ಇನ್ನೂ ಮುಳುಗಿರಲಿಲ್ಲ. ನಾವು ಬೆಟ್ಟವೇರಿದೆವು – – ಮೊದಲು ಆಗ್ನೇಯ ಮುಖವಾಗಿ, ತರುವಾಯ ಈಶಾನ್ಯದ ಕಡೆಗೆ. ಬನಗಳೆಲ್ಲಾ ಬೈಗುಗೆಂಪಿನಿಂದ ತೊಯ್ದು ಹೋಗಿದ್ದುವು. ಮುಕ್ಕಾಲು ಮೂರುವೀಸ ಪಾಲು ಹಕ್ಕಿಗಳೆಲ್ಲ ಗೊತ್ತು. ಸೇರಿದ್ದುವು. ಎಲ್ಲಿಯೋ ಒಂದೆರೆಡು ‘ಕಾಜಾಣ’ ಗಳು ಆಲಾಪನೆ ಶಬ್ದ ಮಾಡುತ್ತಿದ್ದುವು. ಪಡುವಣ ದೆಸೆಯ ಕೆಮುಗಿಲು ನೋಡುವುದಕ್ಕೆ ಮನೋಹರವಾಗಿದ್ದರೂ ಕಾಲವಿಳಂಬವಾದರೆ ಕಷ್ಟಕ್ಕೆ ಈಡಾಗುವೆವೆಂದು ತಿಳಿದು ಬೇಗ ಬೇಗನೆ ಮುಂನೆಡೆದವು. ನಾವು ಮುಂಬರಿದಂತೆಲ್ಲ ಕಾಂತೀಹೀನವಾಗುತ್ತ ಕಡೆಗೆ ಮುಚ್ಚಂಜೆಯ ಮಬ್ಬು ಕವಿಯಿತು. ಸೂರ್ಯನು ಮಲೆನಾಡಿನ ಉನ್ನತ ಗಿರಿವನ ಶ್ರೇಣಿಗಳ ಶಿಖರ ಪ್ರಾಂತದಿಂದ ಪಡುಗಡಲಿಗೆ ಉರುಳಿಬಿಟ್ಟನು. ಎಲ್ಲಾ ನಸುಗಪ್ಪಾಯಿತು.

ಬೇಗ ಬೇಗನೆ ನಡೆದೆವು. ಅರಣ್ಯ ನಿಬಿಡತರವಾದಂತೆಲ್ಲ ಮೆಲ್ಲಮೆಲ್ಲನೆ ಮಾತಾಡ ತೊಡಗಿದೆವು. ಹೊದರುಗಳ ನಡುವೆ, ಇಲ್ಲದ ಹಾದಿಯನ್ನು ಉಯಿಸಿ ಧಾವಿಸಿದೆವು. ಬನಗತ್ತಲು ಹೆಚ್ಚುತ್ತಿತ್ತು. ಮುಡಿಗೆದರಿ ನಿಂತ ಎತ್ತರವಾದ ಹೆಮ್ಮರಗಳ ನಡುನಡುವೆ ತಾರಕಿತ ನೀಲಾಕಾಶ ಅಲ್ಲಲ್ಲಿ ಗೋಚರವಾಗುತ್ತಿತ್ತು. ದಾರಿಗೆ ಅಡ್ಡವಾಗಿ ಬೆಳೆದ ಮುಳ್ಳು ಬಳ್ಳಿಗಳನ್ನು ಎಡವುತ್ತ ಗುಡ್ಡವೇರಿದೆವು. ಕಾಡಿನೊಳಗೆ ಹೊದೆಂತೆಲ್ಲ ತಿಮಿರದೊಡನೆ ಮೌನವು ಇಮ್ಮಡಿಯಾಯಿತು. ಜೊತೆಗೆ ಒಂದು ವಿಧವಾದ ಭಯವೂ ಪ್ರೇತದಂತೆ ನಮ್ಮ ಸುತ್ತಲೂ ಸುಳಿದಾಡಿತು.

ನಾವು – ನಾನು, ತಿಮ್ಮು, ಓಬು – ನಮ್ಮ ಗೊತ್ತುಗಳನ್ನು ಸೇರಿದಾಗ ಎಲ್ಲ ಕಪ್ಪಾಗಿ ಹೋಗಿತ್ತು. ಪಿಸುಮಾತುಗಳಿಂದ ಒಬ್ಬರನ್ನೊಬ್ಬರು ಬೀಳ್ಕೊಂಡೆವು. ಒಬ್ಬರಿಗೊಬ್ಬರು ಎಚ್ಚರಿಕೆ ಹೇಳಿದೆವು. ಒಬ್ಬರಿಗೊಬ್ಬರು ಧೈರ್ಯ ಹೇಳಿದೆವು. ಆದರೆ ನಿಜವಾಗಿಯೂ ಒಬ್ಬರಿಗೆ ಇನ್ನೊಬ್ಬರ ಧೈರ್ಯವಾಗಿತ್ತೆ ಹೊರತು ಧೈರ್ಯ ಒಬ್ಬರಲ್ಲಿಯೂ ಇರಲಿಲ್ಲವೆಂದೇ ತೋರುತ್ತದೆ.

ನಮ್ಮ ಹಣ್ಣಿನ ಮರ ಒಂದು ದೊಡ್ಡ ಕಾಡುಮಾವಿನ ಮರವಾಗಿತ್ತು. ಆದರ ಸುತ್ತಮುತ್ತಲ್ಲಿದ್ದ ಮರಗಳಲ್ಲಿ ಅಟ್ಟಣೆಗಳನ್ನು ಕಟ್ಟಿದ್ದೆವು. ನನಗೂ ತಿಮ್ಮುಗೂ ಸುಮಾರು ಇಪ್ಪತ್ತು ಗಜ ದೂರ; ನನಗೂ ಓಬುಗೂ ಸುಮಾರು ಹದಿನೈದು ಗಜ ದೂರ. ಆದರೂ ಅ ಮಾರಿ ಕಾಡಿನಲ್ಲಿ ಜೊತೆಯವರು ಒಂದು ಮಾರು ದೂರವಿದ್ದರೂ ಹರಿದಾರಿ ದೂರವಿದ್ದಂತೆಯೇ ಭಾಸವಾಗುವುದು. ನಾನು ನನ್ನ ಅಟ್ಟಣೆಯಿಂದ ಮರದ ಬುಡವನ್ನು ಸೇರಿ, ಮೊದಲು ಕಂಬಳಿಗಳನ್ನು ತೆಗೆದುಕೊಂಡು ಬಹುಶ್ರಮದಿಂದ ಮೇಲೇರಿ ಅಟ್ಟಣೆಯಲ್ಲಿಟ್ಟು ಮರಳಿ ಕೆಳಗಿಳಿದೆ. ಕೋವಿಯಲ್ಲಿದ್ದ ತೋಟಾಗಳನ್ನು ತೆಗೆದು ಜೇಬಿಗೆ ಹಾಕಿಕೊಂಡು, ಬಂದೂಕನ್ನು ಕುತ್ತಿಗೆ ಕಂಕುಳುಗಳ ಸಹಾಯದಿಂದ ಭದ್ರವಾಗಿ ಹಿಡಿದುಕೊಂಡು, ಮರವನ್ನೂ ಜೀವವನ್ನೂ ಕೈಯಲ್ಲಿ ಹಿಡಿದುಕೊಂಡು ಅಟ್ಟಣೆಗೇರಿದೆ! ಅಲ್ಲಿ ಸ್ವಲ್ಪ ಹೊತ್ತು ನಿಟ್ಟುಸಿರೆಳೆದು ಎದೆಯ ಬಡಿತ ಸ್ವಲ್ಪ ಕಡಿಮೆಯಾದ ಮೇಲೆ ಒಂದು ಕಂಬಳಿಯನ್ನು ಹಾಸಿದೆ. ಇನ್ನೊಂದನ್ನು ಹೊದೆಯಲು ಇಟ್ಟೆ. ಜೇಬಿನಲ್ಲಿದ್ದ ಒಂದು ಚಿಕ್ಕ ಕಾಫಿಯ ಸೀಸೆಯನ್ನು ತೆಗೆದು ಒಂದು ಮೂಲೆಯಲ್ಲಿಟ್ಟೆ. ಇಟ್ಟವನ್ನು ಹಾಗೆಯೆ ಎತ್ತಿಕೊಂಡು ಸ್ವಲ್ಪ ಕಾಫಿಯನ್ನು ಬಾಯಿಗೆ ಸುರಿದುಕೊಂಡೆ. ಆ ಕತ್ತಲಲ್ಲಿ ಗುರಿ ತಪ್ಪಿ ಮೂಗಿಗಷ್ಟು ಹೋಯಿತು. ಕಾಡಿನಲ್ಲಿ ಬೇಟೆಗೆ ಹೋದಾಗ, ಅದರಲ್ಲಿಯೂ ‘ಮರಸಿ’ ಗೆ ಹೋದಾಗ ಸ್ವಲ್ಪವೂ ಸದ್ದು ಮಾಡಬಾರದು. ಪ್ರಾಣಿಗಳಿಗೆ ಮನಷ್ಯರಿರುವ ಸೂಚನೆ ಹೋದರೆ ಸಾಕು. ಆ ಎಡೆಗೆ ಕಾಲಿಡುವುದೇ ಇಲ್ಲ. ಈ ವಿಚಾರವನ್ನು ಹಿರಿಯರಿಂದ ಕೇಳಿಯೂ ಇದ್ದೆ. ಹಿಂದೆ ಅನುಭವದಿಂದ ಅರಿತೂ ಇದ್ದೆ. ಆದರೇನು ಮಾಡುವುದು? ಹಾದಿ ತಪ್ಪಿದ ಕಾಫಿ ಶ್ವಾಸಕೋಶದ ಮಾರ್ಗವನ್ನು ಹಿಡಿದುಬಿಟ್ಟದ್ದರಿಂದ, ಸೀನು, ಕೆಮ್ಮು ಎಲ್ಲಾ ಒಟ್ಟಿಗೆ ಬಂದುವು. ನಾನು ತಡೆದೆ, ತಡೆದೆ; ಕಡೆಗೆ ತಡೆದಷ್ಟು ಪ್ರಬಲವಾಗಿ ಟಗರಿನಂತೆ ಸೀನಿ, ಕೆಮ್ಮಿಯೂ ಬಿಟ್ಟೆ!, ಕಾಡಿನಲ್ಲಿ ಕಡ್ಡಿ ಮುರಿದರೂ ದೊಡ್ಡ ಸದ್ದಾಗುತ್ತದೆ. ಮೌನ ಸರೋವರಕ್ಕೆ ಸ್ವನ ಮಹಿಷವು ಧುಮ್ಮಿಕ್ಕಿದಂತಾಗಿ ಒಂದುಸಾರಿ ಕಾಡೆಲ್ಲ ಅಲ್ಲೋಲ ಕಲ್ಲೋಲವಾದಂತಾಯಿತು. ನಾನು ಮಾಡಿದ ತಪ್ಪಿನ ಮಹತ್ತು ನನಗಾಗ ಗೊತ್ತಾಗಲಿಲ್ಲ. ಬೆಳಿಗ್ಗೆ ಗೊತ್ತಾಯಿತು. ಓಬು ಕುಳಿತು ಎರೆಡು ನಿಮಿಷವಾಗುವುದರೊಳಗೆ ಒಂದು ಕಣೆಹಂದಿಯ ಹಿಂಡು ಹಣ್ಣಿನ ಮರಕ್ಕಾಗಿ ಬರುವುದನ್ನು ಕಂಡು ಆ ಕತ್ತಲಲ್ಲಿ ಬಹಳ ಶ್ರಮದಿಂದ ಗುರಿಯಿಡುತ್ತಿದ್ದನಂತೆ. ನಾನು ಸೀನಿದ ಹೊಡೆತಕ್ಕೆ ಅವುಗಳೆಲ್ಲ ಕಾಲಿಗೆ ಬುದ್ದಿ ಹೇಳಿಬಿಟ್ಟುವಂತೆ. ಅವನಿಗೆ ನನ್ನ ಮೇಲೆ ಬಹಳಸಿಟ್ಟಾಗಿ ಶಪಿಸಿಬಿಟ್ಟನಂತೆ, ಮನದಲ್ಲಿಯೆ.

ಹುಣ್ಣಿಮೆಯಾಗಿ ಆಗಲೆ ಎರಡು ದಿನಗಳಾಗಿದ್ದುವು. ಅದರಲ್ಲಿಯೂ ಚಂದ್ರನು ಪರ್ವತಗಳನ್ನು ಏರಿ ಮೇಲೆ ಬರುವುದು ಸ್ವಲ್ಪ ಹೊತ್ತು. ಆ ರಾತ್ರಿ ಸುಮಾರು ಹನ್ನೊಂದು ಗಂಟೆಯಾಯಿತೆಂದು ತೋರುತ್ತದೆ, ಅವನು ಕಾಣಿಸಿಕೊಳ್ಳಲು. ಅಂತೂ ಕಗ್ಗತ್ತಲೆ ಕವಿದಿತ್ತು. ಕಾಡಿನಲ್ಲಿ ಕಗ್ಗತ್ತಲೆ ಎಂದರೆ ಹೇಗಿರುವುದೆಂಬುದನ್ನು ಅನುಭವದಿಂದ ತಿಳಿಯಬೇಕಲ್ಲದೆ ಬಣ್ಣಿಸಿದರೆ ಸಾಲದು. ಗಿಡಮರಗಳೆಲ್ಲ ಕತ್ತಲಲ್ಲಿ ಕರಗಿಹೋಗಿದ್ದುವು. ಸಮಸ್ತ ವಿಶ್ವವೂ ತಿಮಿರ ಬ್ರಹ್ಮ ಸಮಾಧಿಯಲ್ಲಿ ಲೀನವಾದಂತಿತ್ತು. ದೇಹದ ಅನುಭವ ಕೂಡ ಇರಲಿಲ್ಲ. ‘ನಾನು’ ಎಂಬ ಅಹಂಕಾರ ಭಾವವೊಂದೇ ಉಳಿದಿತ್ತು. ಆ ಮೌನವೂ ಕೂಡ ಕತ್ತಲೆಗೆ ಸರಿಸಮಾನವಾಗಿಯೆ ಇತ್ತು. ಮುಟ್ಟಿ ಅನುಭವಿಸಬಹುದು ಎಂಬಂತಿತ್ತು. ಕ್ರಿಮಿಕೀಟಗಳ ವಿಷಣ್ಣ ಗಭೀರ ಧ್ವನಿಯೂ ಕೂಡ ಮೌನವನ್ನು ಮತ್ತಿನಿತು ಕೆಣಕಿ ರೇಗಿಸುವಂತಿತ್ತು. ಬಹು ದೂರ ಕೆಳಗಡೆ ನಮ್ಮ ಮನೆಯಲ್ಲಿ ಬಗುಳುವ ನಾಯಿಯ ಕೂಗಿನಿಂದ ಮೌನ ಮಿಂಚಿದಂತಾಗುತ್ತಿತ್ತು. ದೂರ ಬಯಲಿನಲ್ಲಿ ಇರುಳ್ವಕ್ಕಿಯೊಂದರ ವಿಕಟನಿರ್ಘೋಷ ಕರ್ಕಶವಾಗಿ ಕೇಳಿಬಂದು ಭಯವನ್ನು ಭಯಂಕರವನ್ನಾಗಿ ಮಾಡುತ್ತಿತ್ತು. ಒಂದೊಂದು ಸಾರಿ ಕಣ್ಣಿಗೆ ಏನೋನೊ ವಿಕಾರ ರೂಪಗಳು ಕಾಣಿಸಿದಂತಾಗಿ ಪುನಃ ಕತ್ತಲಲ್ಲಿ ಕರಗುತ್ತಿದ್ದುವು. ಕೋವಿಗೆ ಪುನಃ ತೋಟಾಗಳನ್ನು ಹಾಕಿ ತುಸುಹೊತ್ತು ಕುಳಿತುಕೊಂಡೆ. ಆ ಕತ್ತಲಲ್ಲಿ ಆ ಮೌನದಲ್ಲಿ ಮೂರ್ಛೆ ಹೋಗಿದ್ದ ವನಪ್ರದೇಶವನ್ನು ಶೂನ್ಯ ದೃಷ್ಟಿಯಿಂದ ನೋಡಿನೋಡಿ ನನಗೂ ಬೇಸರವಾಯಿತು; ತಲೆ ಚಿಟ್ಟು ಹಿಡಿಯಿತು; ತುಂಬಾ ರೇಜಿಗೆಯಾಯಿತು. ಚಂದ್ರ ಮೂಡುವವರೆಗೆ ಸ್ವಲ್ಪ ಮಲಗುವೆನೆಂದು ಬಗೆದು, ಕೋವಿಯನ್ನೆ ತಲೆದಿಂಬನ್ನಾಗಿ ಮಾಡಿಕೊಂಡು ಕಂಬಳಿಯನ್ನು ಮೈಮೇಲೆ ಎಳೆದುಕೊಂಡು ಮಲಗಿದೆ. ಹಾಗೆಯೆ ಜೊಂಪು ಹತ್ತಿತು.

ತುಸುಹೊತ್ತಿನಲ್ಲಿಯೇ ಯಾವುದೊ ಒಂದು ಸದ್ದಿನಿಂದ ಎಚ್ಚರವಾಯಿತು. ಮಲಗಿದ್ದ ಹಾಗೆಯೆ ಕಣ್ದೆರೆದೆ. ಅದೇ ಕಗ್ಗತ್ತಲೆ; ಕಣ್ಣಿರಿಯುವಂತಿತ್ತು. ಅದೇ ಮೌನ; ಮೂರ್ಛೆಗೊಳಿಸುವಂತಿತ್ತು. ಕಿವಿಗೂಟ್ಟು ಆಲಿಸಿದೆ. ನಾನು ಕುಳಿತಿದ್ದ ಮರದ ಬುಡದಲ್ಲಿ ಏನೋ ಸರಸರ ಸದ್ದಾದಂತಾಯಿತು. ಒಡನೆಯೆ ಭಯಂಕರವಾದ ಹೂಂಕೃತಿಗಳು ಕತ್ತಲೆಯ ಕಡಲಿನಲ್ಲಿ ತರಂಗತರಂಗವಾಗೆದ್ದುವು. ಮೊದಲು ನನಗೆ ಪ್ರಾಣಿ ಯಾವುದೆಂದು ಬಗೆಹರಿಯಲಿಲ್ಲ. ರಕ್ತನಾಳಗಳಲ್ಲಿ ಉದ್ವೇಗದ ಪ್ರವಾಹ ಸಂಚರಿಸಿತು. ಮೆಲ್ಲನೆ, ಬಹಳ ಜಾಗರೂಕತೆಯಿಂದ ಸ್ವಲ್ಪವೂ ಸದ್ದು ಮಾಡದೆ ಅಟ್ಟಣೆಯಲ್ಲಿ ಎದ್ದು ಕುಳಿತುಕೊಂಡೆ. ಹಾಗೆಯೆ ಬಂದೂಕನ್ನು ಕೈಗೆ ತೆಗೆದುಕೊಂಡೆ. ಪ್ರಾಣಿ ಮಾವಿನ ಹಣ್ಣನ್ನು ಅಗಿಯುವ ಸದ್ದಾಯಿತು. ನೆಲವನ್ನು ಮೂತಿಯಿಂದ ಉಳುವ ಸದ್ದಾಯಿತು. ಜಂತು ವನವರಾಹವೆಂದು ನಿರ್ಧರಿಸಿದೆ. ಆದರ ಆಟೋಪದಿಂದ ಅದು ಬಹುದೊಡ್ಡ ಪ್ರಾಣಿಯಾಗಿರಬೇಕೆಂದೂ ಊಹಿಸಿದೆ. ನನಗೂ ಅದಕ್ಕೂ ಇಪ್ಪತ್ತು ಅಡಿಗಳ ದೂರವಿರಬೇಕೆಂದು ನಿರ್ಣಯಿಸಿದೆ. ಏಕೆಂದರೆ, ನಾನು ಕುಳಿತ ಅಟ್ಟಣೆ ಸುಮಾರು ಮೂವತ್ತು ಮೂವತ್ತೈದು ಅಡಿಗಳಷ್ಟು ಎತ್ತರವಿದ್ದರೂ ಬೆಟ್ಟ ಇಳಿಜಾರಾಗಿದ್ದುದರಿಂದ ಓರೆಯಲ್ಲಿ ಮೇಯುತ್ತಿದ್ದ ಸೂಕರ ನಿಕಟಸ್ಥವಾಗಿಯೆ ಇತ್ತು. ನನಗಿದ್ದ ಘನೀಭೂತವಾದ ಘೋರಾಂಧಕಾರ ಕಾಳಪಾಷಣಭಿತ್ತಿಯೋಪಾದಿಯಲ್ಲಿ ನನ್ನೆದುರು ನಿಂತಿತ್ತು. ವಸ್ತುಮಾತ್ರವಾದರೂ ಗೋಚರಿಸಲಿಲ್ಲ.

ಮುಂದೇನು ಮಾಡುವುದೆಂದು ಯೋಚಿಸಿದೆ. ತಿಲಮಾತ್ರವಾದರೂ ಬೆಳಕಿದ್ದರೆ ಅನಾಯಾಸವಾಗಿ ಪ್ರಾಣಿಯನ್ನು ಸುಟ್ಟುಬಿಡಬಹುದಾಗಿತ್ತು. ಎಲ್ಲಿಯಾದರೂ ಏನಾದರೊಂದು ಸೂಚನೆ ಸಿಗಬಹುದೆಂದು ಹಾರೈಸಿ ಕಣ್ಣು ದಣಿಯುವಂತೆ ಈಕ್ಷಿಸಿದೆ. ಏನೂ ಪ್ರಯೋಜನವಾಗಲಿಲ್ಲ. ಹತಾಶನಾಗಿ ಕುಳಿತುಬಿಟ್ಟೆ. ಮನಸ್ಸಿನಲ್ಲಿಯೆ ಅಯ್ಯೋ ಎಂದುಕೊಂಡೆ. ತರುವಾಯ ಈ ರೀತಿ ಸಮಾಧಾನ ಮಾಡಿಕೊಂಡೆ: ಪ್ರಾಣಿ ಹಣ್ಣು ತಿನ್ನುತ್ತ ಇದ್ದರೆ ಸ್ವಲ್ಪ ಹೊತ್ತಿನಲ್ಲಿಯೆ ಚಂದ್ರೋದಯವಾಗುತ್ತದೆ. ಆಗ ಸುಲಭವಾಗಿ ಸುಡಬಹುದು, ಎಂದು ತುಸುಹೊತ್ತು ಕಾದೆ. ಮನಸ್ಸು ತಾಳ್ಮೆಯಿಂದಿರಲಿಲ್ಲ. ಇದರಥವನ್ನು ಬೇಟೆಗಾರರು ಚೆನ್ನಾಗಿ ತಿಳಿಯಬಹುದು. ಕೈಯಲ್ಲಿ ಬಂದೂಕಿರುವಾಗ, ಜಂತು ಸಮೀಪದಲ್ಲಿರುವಾಗ, ಇಂದ್ರಿಯಗಳನ್ನೆಲ್ಲ ನಿಗ್ರಹಿಸಿದ ಎಂತಹ ತತ್ವಜ್ಞಾನಿಯಾದ ಬೇಟೆಗಾರನಾದರೂ ಕುದಿಯದಿರುವುದಿಲ್ಲ. ರಜೋಗುಣ ಉದ್ದೀಪನವಾಗಿ ವಿಲಯ ರುದ್ರಸ್ವಭಾವ ತಲೆದೋರುತ್ತದೆ. ಸಂಹಾರಲೋಲುಪತೆಯುಂಟಾಗುತ್ತದೆ. ಕಾರ್ಯಶಕ್ತಿ ತಾಂಡವವಾಡುತ್ತದೆ. ಮನುಷ್ಯ ಶ್ಮಶಾನದ ಕಾಪಾಲಿಕನಾಗುತ್ತಾನೆ. ಅಂತೂ ನನಗೆ ತಾಳ್ಮೆ ತಪ್ಪಿತು. ಸದ್ದು ಬರುವ ತಾವನ್ನು ಊಹಿಸಿ ಗುರಿಯಿಟ್ಟು ಈಡು ಹಾರಿಸುವೆನೆಂದು ನಿರ್ಣಯಿಸಿದೆ. ಮತ್ತೆ ಸ್ವಲ್ಪ ಅಳುಕಿದೆ. ಏಕೆಂದರೆ ಸರಿಯಾಗಿ ಪರೀಕ್ಷಿಸದೆ ಗುಂಡು ಕೂಡ, ಹೊಡೆದುಬಿಟ್ಟಿದ್ದಾರೆ. ಅದನ್ನು ಯೋಚಿಸಿಕೊಂಡು ಸ್ವಲ್ಪ ಸುಮ್ಮನಾದೆ. ತಿಂಗಳು ಮೂಡವ ಚಿಹ್ನೆಯಾದರೂ ಇದೆಯೋ ಎಂದು ಗಗನ ಪರ್ಯಾಂತವಾಗಿ ಮೇಲೇರಿದ ಹಿಡಿಯುವ ಸದ್ದು ಕೇಳಿಸಿತು. ನಿಶ್ವಾಸೊಚ್ಛ್ವಾಸಗಳು ತಿದಿಯೊತ್ತಿದಂತೆ ಕೇಳಿಸಿದುವು. ಮನುಷ್ಯರ ವಾಸನೆ ಅದಕ್ಕೆ ಗೊತ್ತಾಯಿತೆಂದು ತೋರುತ್ತದೆ. ಒಂದೇ ಸಾರಿ ಹೂಂಕಾರಮಾಡುತ್ತ, ಗಿಡಮರಗಳನ್ನು ಮುರಿಮುರಿದು ಬೆಟ್ಟದ ನೆತ್ತಿಯಿಂದ ತಪ್ಪಲಿಗುರುಳುವ ಹೆಬ್ಬಂಡೆಯಂತೆ, ಆ ವನಸೂಕರವು ಧಡಧಡ ಎಂದು ಧಾವಿಸಿಬಿಟ್ಟಿತು. ಅದು ಅಡಿಯಿಟ್ಟ ರಭಸಕ್ಕೆ ಕಾಡುಗುಡ್ಡವೆಲ್ಲ ವಿಕಂಪಿಸಿದಂತಾಯಿತು. ಸದ್ದು ಬರಬರುತ್ತ ದೂರವಾಗಿ ಮರಳಿ ಬನದಿರುಳು ಸದ್ದಿಲಿಯಾಯಿತು.

ನಾನು ಸುಮ್ಮನೆ ಕಲ್ಲಾಗಿ ಕುಳಿತುಬಿಟ್ಟೆ. ದೂರದಿಂದ ಗೂಬೆಯ ಕೀಚು ದನಿಯೊಂದು ಶ್ಮಶಾನ ಪ್ರೇತದ ಕರ್ಕಶ ವಿಕಟ ಧ್ವನಿಯಂತೆ ಕೇಳಿಬಂತು. ಕಣಿವೆಯ ದೂರದಲ್ಲಿ ಬೊಗಳುತ್ತಿದ್ದ ಹಳ್ಳಿಯ ನಾಯಿ ಕತ್ತಲೆಯ ಮೌನಕ್ಕೆ ದನಿಯ ಕಲ್ಲೆಸೆಯುತ್ತಿತ್ತು. ಎಲ್ಲವೂ ಏನೋ ಒಂದು ಭೀಷಣರಹಸ್ಯಸ್ಥವಾಗಿದ್ದಂತೆ ಭಾಸವಾಯಿತು. ನನಗೆ ಬಂದಿದ್ದ ನಿದ್ದೆಯೆಲ್ಲ ಪಲಾಯನವಾಯಿತು. ಸುಮ್ಮನೆ ಶೂನ್ಯಮನಸ್ಕನಾಗಿ ಕುಳಿತೆ. ಆಲೋಚಿಸುವುದಕ್ಕೂ ಕೂಡ ಹೆದರಿಕೆಯಾಯಿತು. ಪಿಶಾಚಿಯನ್ನು ನೆನೆನೆನೆದು, ಹೊದಿಕೆಯೊಳಗೆ ಹುದುಗಿ, ಮೈ ಅಲ್ಲಾಡಿದರೆ ಎಲ್ಲಿ ದೆವ್ವಕ್ಕೆ ನಾನಿರುವುದು ಗೊತ್ತಾಗಿಬಿಡುವುದೋ ಎಂದು ಹೆದರಿ ಸುಮ್ಮನೆ ಬೆವರುತ್ತ ಮಲಗುವ ಮಗುವಿನಂತೆ ಕುಳಿತುಬಿಟ್ಟೆ.

ಕುರುಡು ಕಗ್ಗತ್ತಲೆ; ಭೀಷಣ ನೀರವತೆ. ಸ್ವಲ್ಪ ಹೊತ್ತಾಯಿತು. ಇನ್ನೂ ಸ್ವಲ್ಪ ಹೊತ್ತಾಯಿತು. ಮತ್ತೂ ಸ್ವಲ್ಪ ಹೊತ್ತಾಯಿತು. ಕಾಲದ ನಡಿಗೆಯ ಸಪ್ಪಳ ಕೇಳಿಸುವಂತಿತ್ತು. ನೋಡುತ್ತಿದ್ದ ಹಾಗೆಯೆ ಇರುಳು ಕಾಣುವ ಬೆಳಕಿನ ಕನಸಿನಂತೆ ಮೂಡಣ ಬಾನೆಡೆಯಲ್ಲಿ ಏನೊ ಒಂದಿನಿತು ಹೊಳಪು ಮೈದೋರಿತು. ತಿಂಗಳು ಮುಡಿಬರುವನೆಂದು ನನ್ನೆದೆ ಹಿಗ್ಗಿತು. ಆ ಮೌನ ತಿಮಿರಗಳ ಗುರುಭಾರದಿಂದ ಕುಗ್ಗಿ ನೆಲಸಮವಾಗಿದ್ದ ಮನಸ್ಸು ನಿಟ್ಟುಸಿರೆಳೆದು, ನಸು ತಲೆಯೆತ್ತಿತು. ನೋಡುತ್ತಿದ್ದ ಹಾಗೆಯೆ ಕನಸು ನನೆಕೊನೆಯೇರಿತು. ಕಾಂತಿ ಹೆಚ್ಚಿತು. ಹೊಂಬಣ್ಣವಾಯಿತು. ಬಣ್ಣಕ್ಕೆ ಬಣ್ಣವೇರಿತು. ಪರ್ವತ ಶಿಖರ ಶಿರೋರೇಖೆಯಲ್ಲಿ ಬೆಳೆದಿದ್ದ ಭೀಮಭೂರುಹರಾಜಿ ಜ್ಯೋತ್ಸ್ನಾ ಪ್ರದೀಪ್ತವಾದ ನೀಲಾಕಾಶಪಟದಲ್ಲಿ ಚಿತ್ರಿತವಾದಂತೆ ತೋರಿತು. ಉತ್ಕಂಠಿತ ಭಾವದಿಂದ ಅತ್ತಕಡೆ ಉನ್ಮೀಲಿತನಯನನಾಗಿ ದೃಷ್ಟಿಸಲಾರಂಭಿಸಿದೆ. ದೃಶ್ಯ ಅತ್ಯಂತ ರಮಣೀಯವಾಗಿತ್ತು! ಬೇಟೆಗಾರ ಕಬ್ಬಿಗನಾಗಿ ನೋಡಿದನು. ಮೆಲ್ಲಮೆಲ್ಲನೆ ಕತ್ತಲು ಹಿಂಜರಿಯತೊಡಗಿತು. ನೋಡುತ್ತಿದ್ದ ಹಾಗೆಯೆ ಪೂರ್ವಾಕಾಶ ಇನ್ನೂ ಪ್ರಕಾಶಮಾನವಾಯಿತು. ಶೀತಲಚಂದ್ರ ಕಿರಣಸ್ನಾತ ಶ್ವೇತೋರ್ಣಸದೃಶ ಖಂಡನೀರದಗಳು ನಭೋಮಧ್ಯದಲ್ಲಿ ಮೆರೆದುವು. ಸ್ವಲ್ಪ ಹೊತ್ತಿನಲ್ಲಿಯೆ ಆಕಾಶಪಟಸ್ಥ ಸ್ವಲ್ಪ ವಿರಳ ವೃಕ್ಷ ಮಾಲೆಗಳ ಹಿಂಗಡೆಯಲ್ಲಿ ಸುಂದರ ಶಶಾಂಕನು ಗೋಚರವಾದನು. ‘ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು.’ ಹೊಂಗದಿರುಗಳು ಒಯ್ಯೊಯ್ಯನೆ ಅರಣ್ಯಪ್ರವೇಶ ಮಾಡಿದುವು. ಕತ್ತಲು ನಿಬಿಡವೃಕ್ಷವಾಟಿಕೆಗಳಲ್ಲಿ ಅವಿತುಕೊಂಡಿತು. ಆದರೆ ಮೌನ ಎಂದಿನಂತೆ ಗಂಭೀರವಾಗಿತ್ತು. ಚಂದ್ರ ಆಕಾಶಮಾರ್ಗದಲ್ಲಿಡುವ ಹೆಜ್ಜೆಗಳ ಸದ್ದು ಕೂಡ ಕೇಳಿಸುವಂತಿತ್ತು. ಘೋರ ವಿಷಣ್ಣಳಾಗಿದ್ದ ನಿಶಾವನಿತೆ ಮಧುರ ಪ್ರಸನ್ನೆಯಾದಳು. ರುದ್ರವಾಗಿದ್ದುದೆಲ್ಲ ರಮಣೀಯವಾಯ್ತು. ಚಂದ್ರ ಮೇಲೇರಿದನು. ಗಿರಿಶಿಖರವನ್ನು ದಾಟಿ ಬಂದನು. ಗಗನದಿಂದೈತರುವ ಜ್ಯೋತ್ಸ್ನಾತುಷಾರವೃಷ್ಟಿ ಹೆಣೆದು ಕೊಂಡಿದ್ದ ಶ್ಯಾಮಲ ಪರ್ಣಾರ್ಣವವನ್ನು ಸ್ವರ್ಣವರ್ಣಮಯವನ್ನಾಗಿ ಮಾಡಿ ಸಂದು ಗೊಂದುಗಳಲ್ಲಿ ತೂರಿಕೊಂಡುಬಂದು ಬನದ ಸಣ್ಣಪುಟ್ಟ ಗಿಡ ಬಳ್ಳಿ ಹೊದರುಗಳ ಮೇಲೆ ಮಲಗಿತು. ಬೆಳ್ದಿಂಗಳ ಸೋನೆ ಎಡೆಬಿಡದೆ ಸುರಿಯಿತು. ಮರದ ನೆರಳುಗಳು ಮಾತ್ರ ಕತ್ತಲೆಗೆ ಆಶ್ರಯಸ್ಥಾನಗಳಾದುವು. ಅಲ್ಲಿಯೂ ಕೂಡ ಅವಿತುಕೊಂಡಿದ್ದ ಕತ್ತಲೆಯನ್ನು ಕಂಡುಹಿಡಿಯಬಹುದಾಗಿತ್ತು. ಜಗತ್ತೆಲ್ಲ ಚಿತ್ರೀಭೂತವಾದ ಮಧುರ ಕವನದಂತಿತ್ತು.

ಪ್ರಕೃತಿ ಉಪಾಸಕನಾಗಿದ್ದ ನಾನು ಸೌಂದರ್ಯೋಪಾಸನೆಗೆ ತೊಡಗಿದೆ. ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು. ಎಂದುಕೊಂಡೆ. ಕೋವಿಯನ್ನು ತೊಡೆಯಮೇಲೆ ಇಟ್ಟುಕೊಂಡು ಬಿಡುಗಣ್ಣನಾಗಿ ನೋಡತೊಡಗಿದೆ. ಅವ್ಯಕ್ತದ ಅಂತಃಕರಣಮೂರ್ತಿಯಾಗಿರುವ ರತಿ ತನ್ನ ಅನಂತ ಐಶ್ಚರ್ಯವನ್ನು ಮುಕ್ತಹಸ್ತೆಯಾಗಿ ಚೆಲ್ಲಿ ಸೂಸಿದ್ದಳು. ಸೊಬಗು ಸೂರೆಯಾಗಿತ್ತು. ಆದರೆ ಪ್ರೇಕ್ಷಕರಾರು? ಶತಮಾನಗಳಿಂದ ಇದೇ ರೀತಿಯಲ್ಲಿ ಸೊಬಗು ಸೂರೆಯಾಗುತ್ತಿರುವುದು? ಎಷ್ಟು ಜನ ನೋಡಿ ಅನುಭವಿಸಿದಾರೆ? ಈ ಕಾಡಿನ ಬೆಳ್ದಿಂಗಳು ಎನಿತೆದೆಗಳನ್ನು ವಿಕಾಸ ಗೊಳಿಸಿರುವುದು? ಈ ವಿಪಿನ ಚಂದ್ರಿಕೆ ಯಾರ ಆಹ್ಲಾದಕ್ಕಾಗಿ ಇಂತು ದಿನದಿನವೂ ಬೇಸರವಿಲ್ಲದೆ ನಲಿಯುವುದು? ಬಹುಶಃ ನನ್ನ ಆಗಮನವನ್ನೇ ನಿರೀಕ್ಷಿಸಿ ಕೊಂಡಿದ್ದಿರಬಹುದೆ? ಇದರ ತಪಸ್ಸು ಇಂದು ಫಲಿಸಿತೇ? ಇನ್ನು ಮುಂದೆ ಹೀಗಿರುವುದಿಲ್ಲವೇ? ಹೀಗೆಲ್ಲ ಆಲೋಚಿಸಿದೆ. ತರುವಾಯ ಕಾವ್ಯಗಳಲ್ಲಿ ಓದಿದ್ದ ಚಂದ್ರೋದಯಗಳ ವರ್ಣನೆಗಳನ್ನು ನೆನೆದು ವಿಮರ್ಶಿಸಿದೆ. ಮಾತಿನ ಮಂಕುತನ ಮೇಲೆದ್ದು ತೋರಿತು. ಕಬ್ಬಗಳ ಬಡತನ ಎದೆಯಲ್ಲಿ ಒಂದು ವಿಧವಾದ ನೋವನ್ನುಂಟುಮಾಡಿತು. ಈ ಚಂದ್ರೋದಯದ, ಈ ವಿಪಿನಗಳ, ಈ ಚಂದ್ರಿಕೆಯ, ಈ ದೃಶ್ಯದ ವರ್ಣನೆ ಮಾಡಲೆಳಸುವವನೇ ಹುಚ್ಚ; ಮಾಡಿದರೂ ಸಂಪೂರ್ಣವಾಗಿ ಬಣ್ಣಿಸಿಬಿಟ್ಟೆನೆಂದುಕೊಳ್ಳುವವನು ಶುದ್ಧ ಮೂರ್ಖ! ಹೀಗೆಲ್ಲ ಯೋಚಿಸಿದೆ. ತರುವಾಯ ಈ ಮಲೆನಾಡಿನ ಕಾಡುಗಳ ಸಿರಿಯನ್ನು ಅನುಭವಿಸದ ಬಯಲುಸೀಮೆಯರ ಎದೆಯ ಬಡತನವನ್ನು ನೆನೆದು ಮರುಗಿದೆ. ಹೀಗೆಲ್ಲ ಯೋಚಿಸಿದೆ. ಆಲೋಚನೆಗಳಿಗೆ ಒಂದು ಕಟ್ಟು, ಒಂದು ಎಲ್ಲೆ, ಒಂದು ನಿಯಮ, ಒಂದೂ ಇರಲಿಲ್ಲ.

ತಂಗಾಳಿ ಕುಳಿರ್ಗಾಳಿಯಾಗಲಾರಂಭಿಸಿತು. ಜೊನ್ನದ ಸೊನ್ನೆಯೊಂದಿಗೆ ಇಬ್ಬನಿಯ ಸೋನೆಯೂ ಒಯ್ಯೊಯ್ಯನೆ ಇಳಿಯತೊಡಗಿತು. ಗಗನದಲ್ಲಿ ತುಂಡು ಮೋಡಗಳು ತುಂಟಹುಡುಗರಂತೆ ತಿಂಗಳನ್ನು ಸುಮ್ಮನೆ ಕಾಡುತ್ತಿದ್ದವು. ಅವುಗಳ ಕಾಟದಿಂದ ಬೆಳ್ದಿಂಗಳು ಒಮ್ಮೆ ಮಬ್ಬಾಗಿ ಒಮ್ಮೆ ಬೆಳಗುತ್ತಿತ್ತು. ಬೆಳಕು ಹೆಚ್ಚು ಕಡಿಮೆಯಾಗುತ್ತಿದ್ದುದರಿಂದ ನಿಶ್ಚಲವಾದ ಕಲ್ಲು ಗಿಡ ಹೊದರುಗಳು ಹಿಂದಕ್ಕೂ ಮುಂದಕ್ಕೂ ಚಲಿಸಿದಂತಾಗುತ್ತಿತ್ತು. ಆ ಚಲನೆಗೆ ಮನಸ್ಸಿನ ಆವರಣ ವಿಕ್ಷೇಪಶಕ್ತಿಗಳು ರೂಪಗಳನ್ನು ಕಲ್ಪಿಸುತ್ತಿದ್ದುವು. ನಾನೂ ಮೋಹಿತನಾಗಿ ಎರಡು ಮೂರು ಸಾರಿ ಯಾವುದೋ ಪ್ರಾಣಿಯೇ ಇರಬೇಕೆಂದು ಭಾವಿಸಿ ಕೋವಿಯನ್ನೆತ್ತಿ ಗುರಿಯಿಟ್ಟೆ. ಆದರೆ ಮೋಸಹೋಗಲಿಲ್ಲ. ಬೇಗನೆ ಮಾಯೆಯ ಗುಟ್ಟು ಗೊತ್ತಾಗಿ ಹೋಯಿತು. ಆಮೇಲೆ ಕಣ್ಣು ಏನೇನೋ ಮಾಯಾ ರೂಪಗಳನ್ನು ಕಾಣುತ್ತಿತ್ತು. ಆದರೆ ಮನಸ್ಸು ಅವುಗಳನ್ನೆಲ್ಲ ಖಂಡಿಸಿ ಬಿಸುಡುತ್ತಿತ್ತು. ಹೀಗೆಯೇ ಬಹಳ ಹೊತ್ತು ಕುಳಿತು ಕಾದೆ. ಎಲ್ಲ ನೀರವವಾಗಿತ್ತು; ಎಲ್ಲ ರಮಣೀಯವಾಗಿತ್ತು; ಯಾವುದೊಂದು ಜೀವಜಂತುವೂ ಸಂಚರಿಸುವ ಚಿಹ್ನೆ ತೋರಲಿಲ್ಲ. ಹಾಗೆಯೇ ಕೋವಿಯನ್ನು ತಲೆದಿಂಬು ಮಾಡಿಕೊಂಡು, ಕಂಬಳಿಯನ್ನು ಹೊದೆದುಕೊಂಡು, ಅಂಗಾತನೆ ಮಲಗಿ, ಅನಂತಾಕಾಶದಲ್ಲಿ ಸ್ವರ್ಣ ಜ್ಯೋತಿರ್ಮಯ ಬಿಂಬದಿಂದ ರಂಜಿಸುತ್ತಿದ್ದ ಯಾಮಿನೀಕಾಂತನಿಂದ ಹೊರಹೊಮ್ಮಿ ಬನದ ಮೇಲೆ ಎಡಬಿಡದೆ ಸುರಿಯುತ್ತಿದ್ದ ಸ್ನಿಗ್ಧೋಜ್ಜ್ವಲಜ್ಯೋತ್ಸ್ನೆಯನ್ನು ಕಣ್ಣಿನಿಂದ ಕುಡಿಯತೊಡಗಿದೆ. ಕುಡಿದು ಕುಡಿದು ಮತ್ತೇರಿ ಕಣ್ಣು ಮುಚ್ಚಿ ನಿದ್ದೆ ಹೋದೆ.

ಎಷ್ಟು ಹೊತ್ತು ನಿದ್ದೆ ಮಾಡಿದೆನೋ ತಿಳಿಯದು. ಇದ್ದಕಿದ್ದ ಹಾಗೆ ನಿದ್ರಾಭಂಗವಾಯಿತು. ಕಾನನದ ನೀರವತೆಯನ್ನು ಆಲೋಡಿಸಿಕೊಂಡು ಈಡಿನ ಢಂಕಾರವೊಂದು ಸುತ್ತಮುತ್ತಲಿದ್ದ ಪರ್ವತಕಂದರಗಳಿಂದ ಪ್ರತಿಧ್ವನಿತವಾಗಿ ಮರಳಿ ಮೌನದಲ್ಲಿ ಮುಳುಗಿಹೋಯಿತು. ಅರಣ್ಯಶ್ರೇಣಿಗಳು ಕಂಪಿಸಿದುವು. ನನ್ನ ಅಟ್ಟಣೆಯಿಂದ ಒಂದೇ ಮಾರು ದೂರದಲ್ಲಿದ್ದ ಮುತ್ತುಗದ ಮರದೆಲೆಗಳಲ್ಲಿ ಪಟಪಟ ಧ್ವನಿಯಾಯಿತು. ಕೋವಿಯಿಂದ ಸಿಡಿದ ದೊಡ್ಡ ಚರೆಗಳು ಮೃತ್ಯು ವೇಗದಿಂದ ಧಾವಿಸಿದುವೆಂದು ಗೊತ್ತಾಯಿತು. ಗಾಬರಿಯಿಂದ ಎದ್ದು ಕುಳಿತೆ. ಮಂಕುಹಿಡಿದವನಂತೆ ಸುತ್ತಲೂ ಮಿಳ್ಮಿಳನೆ ನೋಡಿದೆ. ಅದೇ ಬೆಳ್ದಿಂಗಳು; ಅದೇ ಸದ್ದಿಲಿಯಿರುಳು; ಅದೇ ನಿಬಿಡ ಕಾನನ; ಅದೇ ಹೆಮ್ಮರಗಳು; ಅದೇ ಛಾಯೆಗಳು; ಅದೇ ಬೆಳ್ಮುಗಿಲು; ಅದೇ ಇಬ್ಬನಿ ಸೋನೆ. ಢಂಕಾರ ಮಾತ್ರ ಎಲ್ಲಿಂದಲೋ ಬಂದು ಎಲ್ಲಿಯೋ ಹೋಯಿತು. ಉದ್ವೇಗದಿಂದ ಬೆವರಿದೆ. ಚರೆಗಳು ಒಂದು ಮಾರು ಈ ಕಡೆ ಬಂದಿದ್ದರೆ ನನ್ನ ಗತಿ ಏನಾಗುತ್ತಿತ್ತು ಎಂದು ಚಿಂತಿಸತೊಡಗಿದೆ. ಎಲ್ಲಿಯಾದರೂ ನನಗೇ ಬಡಿದವೋ ಏನೋ ಎಂದು ಮೈ ಮುಟ್ಟಿ ನೋಡಿಕೊಂಡೆ. ಏಕೆಂದರ, ಪ್ರಾಣಿಗೆ ಗುಂಡು ಬಡಿದ ಕೂಡಲೆ ಅದರ ಅನುಭವವಾಗುವುದಿಲ್ಲ; ಸ್ವಲ್ಪ ಹೊತ್ತಾದ ಕೂಡಲೆ ಗೊತ್ತಾಗುತ್ತದೆ ಎಂಬುದನ್ನು ಹಿರಿಯರಿಂದ ಕೇಳಿ ತಿಳಿದಿದ್ದೆ. ಎಲ್ಲಿಯೂ ನನಗೆ ತಗುಲಿದಂತೆ ತೋರಲಿಲ್ಲ. ಅಂತೂ ಎದೆಯ ಬಡಿತ ನಿಲ್ಲಲಿಲ್ಲ. ದಿಕ್ಕು ಕಟ್ಟವನಂತೆ ಕುಳಿತುಬಿಟ್ಟೆ. ಯಾವ ಆಲೋಚನೆಯೂ ಮನಸ್ಸಿಗೆ ಹೊಳೆಯಲಿಲ್ಲ. ಸ್ವಲ್ಪ ಹೊತ್ತಾದಮೇಲೆ ಸಮಾಧಾನ ತಂದುಕೊಂಡು ವಿಚಾರಮಾಡಲಾರಂಭಿಸಿದೆ. ಈಡನ್ನು ಹೊಡೆದವನು ಓಬುವಾಗಿರಬೇಕು, ಇಲ್ಲದಿದ್ದರೆ ತಿಮ್ಮು. ಬುದ್ದಿಯಿಲ್ಲದೆ ನ್ನ ಕಡೆ ಏಕೆ ಹೊಡೆದರು? ಯಾವ ಪ್ರಾಣಿಗೆ ಹೊಡೆದದ್ದು? ಕಾಡಿನ ಮಧ್ಯೆ ಮರಸಿಗೆ ಕೂತಾಗ ಒಬ್ಬರನೊಬ್ಬರು ಕರೆಯಬಾರದೆಂದು ಬೇಟೆಯ ಕಟ್ಟು. ಆದರೂ ಕರೆದು ನಿಜವನ್ನು ಕೇಳಿ ತಿಳಿಯಬೇಕೆಂದು ನಿರ್ಧರಿಸಿದೆ. ಇನ್ನೇನು ಕರೆಯಬೇಕು, ಅಷ್ಟರಲ್ಲಿ ಬಳಿಯ ಪೊಲೆಯಲ್ಲಿ ಏನೋ ಏಟು ಬಿದ್ದ ನೋವಿನಿಂದ ಒದ್ದಾಡಿಕೊಳ್ಳುವಂತೆ ಸದ್ದಾಯಿತು. ಆಲಿಸಿದೆ. ಹೌದು! ಗುಂಡಿನೇಟು ಬಿದ್ದ ಜೀವಿಯೇ ಇರಬೇಕು ಎಂದು ಗೊತ್ತುಮಾಡಿ, ಕರೆಯುವುದು ತರವಲ್ಲ ಎಂದುಕೊಂಡೆ. ಏಕೆಂದರೆ, ಗಾಯವಾದ ಜೀವಿ ಹುಲಿಚಿರತೆಗಳಲ್ಲಿ ಯಾವುದಾದರೂ ಆಗಿದ್ದರೆ ನಾನು ಕುಳಿತ ಸ್ಥಳ ಗೊತ್ತಾಗಿ, ಮೇಲೆ ನೆಗೆಯಬಹುದು. ಹೀಗೆಂದು ಸುಮ್ಮನಾದೆ. ಸ್ವಲ್ಪ ಕಾಲವಾದ ತರುವಾಯ ಸದ್ದು ನಿಂತಿತು. ಪ್ರಾಣಿ ಸತ್ತುಹೋಯಿತೆಂದು ಊಹಿಸಿದೆ. ಆದರೂ ಕರೆಯಲು ಧೈರ್ಯವಾಗಲಿಲ್ಲ. ಅಷ್ಟರಲ್ಲಿಯೆ ಪ್ರಭಾತ ಸೂಚಕವಾದ ಪುಣ್ಯ ಸಮೀರ ತಣ್ಣನೆ ತೀಡುತ್ತಿದ್ದುದರಿಂದಲೂ, ಚಂದ್ರ ಪಶ್ಚಿಮದಿಗಂತಾಭಿಮುಖನಾಗಿದ್ದುದರಿಂದಲೂ ಬೇಗ ಬೆಳಗಾಗುವುದೆಂದು ಬಗೆದು ಸುಮ್ಮನಾದೆ. ಬರಬರುತ್ತಾ ಇಬ್ಬನಿಯ ಸೋನೆ ಪ್ರಬಲವಾಯಿತು. ಬೆಳ್ದಿಂಗಳು ನಸುಮಬ್ಬಾಯಿತು. ಚಂದ್ರನು ಒಂದಿನಿತು ಕಾಂತಿಹೀನನಾದನು. ಮರದೆಲೆಗಳಿಂದ ಹನಿಗಳು ತಟ್‌ಪಟ್ ಎಂದು ವಿಷಣ್ಣರವದಿಂದ ಬೀಳತೊಡಗಿದುವು. ನಕ್ಷತ್ರಗಳು ಮುಸುಕಿಬರುತ್ತಿದ್ದ ಬೆಳ್ಮಂಜಿನಲ್ಲಿ ಮುಚ್ಚಿಹೋದುವು. ಮುಗಿಲಿನಿಂದ ಜೊನ್ನದ ಸೋನೆಯೊಂದಿಗೆ ಹಿಟ್ಟಿನ ಸೋನೆಯೂ ಇಳಿದಂತಾಯಿತು. ದೂರ ಕಣಿವೆಯಲ್ಲಿ ಊರು ಕೋಳಿಗಳ ಕೂಗು ಕೇಳಿಸಿತು. ಜಗತ್ತಿನ ಉನ್ನಿದ್ರಾವಸ್ಥೆಯ ಸೂಚನೆ ತೋರಿಬಂದಿತು. ಕಂಬಳಿಯನ್ನು ಬಲವಾಗಿ ಸುತ್ತಿಕೊಂಡು ಕೈಯಲ್ಲಿ ಕೋವಿ ಹಿಡಿದುಕೊಂಡು ಕುಳಿತೆ.

ಸ್ವಲ್ಪ ಹೊತ್ತಿನಲ್ಲಿಯೆ ಕಾಡುಕುರಿಯೊಂದು ಗಟ್ಟಿಯಾಗಿ ಅರಚುತ್ತ ಮೌನವನ್ನು ಮಥಿಸುತ್ತ ನಮ್ಮ ಹಣ್ಣಿನ ಮರದ ಕಡೆಗೆ ಬರುವಂತೆ ಭಾಸವಾಯಿತು. ಕೂಗುತ್ತ ಕೂಗುತ್ತ ಬಳಿಸಾರಿತು. ಆದರೆ ನಮ್ಮೆಡೆಗೆ ಬರಲಿಲ್ಲ. ಹಾಗೆಯೇ ಅರಣ್ಯ ಶೃಂಗಾಭಿಮುಖವಾಗಿ ತಿರುಗಿಹೋಯಿತು. ಅಷ್ಟರಲ್ಲಿ ಕಾಡಿನ ನಟ್ಟನಡುವೆ ಸಿಂಗಳೀಕವೊಂದು ವಿಕಟಧ್ವನಿ ಮಾಡತೊಡಗಿತು. ಅದು ಅಪರಿಚಿತ ನಾದವಾದ್ದರಿಂದ ಇಂತಹ ಪ್ರಾಣಿಯ ದನಿಯೆಂದು ಆಗ ನನಗೆ ಗೊತ್ತಾಗಲಿಲ್ಲ. ತರುವಾಯ ತಿಳಿದುಕೊಂಡೆ. ಕೂತಿದ್ದ ಹಾಗೆಯೇ ಮಡಿವಾಳ ಪಕ್ಷಿಯೊಂದು ಉಷಃಕಾಲವನ್ನು ಕರೆಯುವಂತೆ ಹಾಡತೊಡಗಿತು. ಅದರ ಇನಿದನಿ ನಾನಾವಿಧವಾಗಿ ನಲಿನಲಿದು ಬಂದು, ಒಂದು ತಡವೆ ಬನಗಳನ್ನು ಮುಟ್ಟಿತು; ಒಂದು ತಡವೆ ಕಣಿವೆಗಳನ್ನು ಸೇರಿತು; ಒಂದು ತಡವೆ ಗಗನಕ್ಕೇರಿತು; ಒಂದು ತಡವೆ ಪೃಥ್ವಿಯನ್ನೆಲ್ಲ ಮುದದಿಂದ ತಬ್ಬಿತು. ತುಸು ಹೊತ್ತಿನಲ್ಲಿಯೆ ಕಾಜಾಣ ಪಕ್ಷಿಯೊಂದು ರಾಗಾಲಾಪನೆ ಪ್ರಾರಂಭಿಸಿತು. ಎಂತಹ ಭುವನಮೋಹನಗಾನ! ಕಾಜಾನ ಪಕ್ಷಿಯ ಗಾನದೆದುರು ಮತ್ತಾವ ಹಕ್ಕಿಯ ಗಾನವೂ ನಿಲ್ಲಲಾರದು. ಅದರೆದುರು ಕೋಗಿಲೆಯ ಪಂಚಮಸ್ವರ ಕೂಡ ಪಂಚಮ ಸ್ವರವೆ! ಅದರ ಗಾನದ ಆಲಿಂಗನದಲ್ಲಿ ಉಷೆ ಮೈ ಮರೆಯುತ್ತಾಳೆ. ವನಗಾಯಕರಲ್ಲಿ ಕಾಜಾಣಕ್ಕೇ ಪ್ರಥಮಸ್ಥಾನ ಸಲ್ಲತಕ್ಕದ್ದು!

ಮೆಲ್ಲಮೆಲ್ಲನೆ ಬೆಳಕು ಹರಿಯಿತು. ಇಬ್ಬನಿಯ ಸೋನೆಯೂ ಬರಬರುತ್ತ ಕಡಿಮೆಯಾಯಿತು. ಬಾನಿನಿಂದ ಸುರಿದ ಕಾವಣ ಪರ್ವತಪ್ರಾಂತಗಳಿಂದ ಹರಿದು ಕಣಿವೆಗಳಲ್ಲಿ ನಿಂತಿತು. ಚಂದ್ರ ಅಪ್ರಫುಲ್ಲನಾದನು. ಉದಯದಿಗ್ಭಾಗದಲ್ಲಿ ಅರುಣನ ಹೊಂಬೆಳಕು ಪಸರಿಸಿತು. ತಂಗಾಳಿ ತಣ್ಣಗೆ ತೀಡಿತು. ಹೂವಿನ ಮರಗಳಲ್ಲಿ ಕೋಟ್ಯನುಕೋಟಿ ತುಂಬಿಗಳು, ಜೇನುಹುಳುಗಳು, ಹೂವಿನ ಹಕ್ಕಿಗಳು ಎಲ್ಲ ಸೇರಿ ಅನಾಹತಧ್ವನಿಮಾಡತೊಡಗಿದುವು. ಇತರ ಹಕ್ಕಿಗಳೂ ಅಲ್ಲಲ್ಲಿ ಇಂಚರಗೈದುವು. ಇರುಳಿನ ಮಾಯೆಯೆಲ್ಲ ಬಟ್ಟಬಯಲಾಯಿತು. ರಾತ್ರಿ ವಿಕಾರಾಕೃತಿಗಳೆಲ್ಲ ಗಿಡಮರ ಹೊದರುಗಳ ವೇಷವನ್ನು ಧರಿಸಿ ನಿಂತುವು.

ನಾನು ಓಬುವನ್ನು ಕರೆದೆ. ಅವನು “ಓ” ಎಂದನು. ಮೂವರೂ ಅಟ್ಟಣೆಗಳಿಂದ ಕೋವಿ ಕಂಬಳಿಗಳೊಡನೆ ಕೆಳಗಿದೆವು. ಎಲ್ಲರೂ ಮಾವಿನ ಮರದ ಬುಡವನ್ನು ಸೇರಿದೆವು.

“ಯಾರು ಈಡು ಹೊಡೆದದ್ದು?” ಎಂದೆ.

“ನಾನು” ಎಂದನು ಓಬು.

“ಯಾವುದಕ್ಕೆ ಹೊಡೆದದ್ದು?” ಎಂದನು ತಿಮ್ಮು.

ಓಬು ಕತೆ ಹೇಳಿದ: “ಬಹುಶಃ ಕಣೆಹಂದಿ ಎಂದು ಕಾಣುತ್ತದೆ.”

“ಬಹುಶಃ! ಕಾಣುತ್ತದೆ! – ಇದೆಂತಹ ಮಾತು! ಸರಿಯಾಗಿ ನೋಡಿ ಹೊಡೆದೆಯೋ ಇಲ್ಲವೊ?” ಎಂದೆ.

“ನಾನೇನೋ ಸರಿಯಾಗಿ ಗುರಿಯಿಟ್ಟು ಹೊಡೆದೆ. ನೋಡು, ಇಲ್ಲಿತ್ತು ಅದು. ಬಹಳ ಹೊತ್ತಿನಿಂದ ಕಟ್ ಕಟ್ ಎಂದು ಹಣ್ಣನ್ನು ಪುಡಿಮಾಡುತ್ತಿತ್ತು. ನನಗೆ ದೂರ, ನಿನಗೆ ಬಹಳ ಸಮೀಪ. ನೀನು ಹೊಡೆಯುತ್ತೀಯಾ ಎಂದು ನೋಡಿದೆ. ಅದೇಕೆ? ನೀನು ಹೊಡೆಯಬಾರದಾಗಿತ್ತೆ?” ಎಂದನು ಓಬು.

ನಾನು ಮಲಗಿದ್ದ ಸಂಗತಿ ಹೇಳಿದರೆ ಕೆಲಸ ಕೆಡುವುದೆಂದು ತಿಳಿದು, “ಏನೋ! ನನಗೇನೂ ಕಾಣಿಸಲಿಲ್ಲ. ಕಾಣಿಸಿದ್ದರೆ ಹೊಡೆಯದೆ ಬಿಡುತ್ತಿದ್ದೆನೇ?” ಎಂದೆ.

ತಿಮ್ಮು “ಎಲ್ಲಿಯಾದರೂ ಮಲಗಿದ್ದೆಯೋ ಏನು?” ಎಂದನು.

“ಹಾಗೆ ರಾತ್ರಿಯೆಲ್ಲ ಎಚ್ಚರವಾಗಿರುವುದಕ್ಕೆ ಆದೀತೆ? ಸ್ವಲ್ಪ ಮಲಗಿದ್ದೆ” ಎಂದೆ.

“ಅದಕ್ಕೇ ನಾನು ಹೇಳಿದ್ದು ನಿನ್ನೆ! ಅಟ್ಟಣೆ ಚೆನ್ನಾಗಿ ಕಟ್ಟಿದರೆ ಯಾರಿಗಾದರೂ ಹಾಗೆಯೇ, ಮಲಗುವಂತಾಗುತ್ತೆ!” ಎಂದನು ತಿಮ್ಮು.

ಓಬು ಹೊಡೆದ ಸ್ಥಳವನ್ನು ತೋರಿಸಿದನು. ಚೆನ್ನಾಗಿ ಪರೀಕ್ಷೆ ಮಾಡಿದೆವು. ಈಡೇನೂ ಅಲ್ಲಿಗೇ ಬಿದ್ದಿತು; ಚರೆ ಬಡಿದ ಗುರುತೂ ಕಾಣುತ್ತಿತ್ತು. ಚರೆ ನೆಲಕ್ಕೆ ಬಡಿದು ಚಿಗಿದು ನಾನು ಕೂತಿದ್ದ ಮರದ ಬಳಿಯಲ್ಲಿ ಹಾದು ಹೋಗಿದ್ದುವು. ಆದರೆ ಪ್ರಾಣಿಗೆ ಏಟು ಬಿದ್ದ ಕುರುಹು ಯಾವುದೂ ತೋರಲಿಲ್ಲ. ಮುಳ್ಳುಹಂದಿಗೆ ಗುಂಡು ಬಿದ್ದರೆ ಸಾಮಾನ್ಯವಾಗಿ ಕಣೆಗಳಾದರೂ ಉದುರಿ ಅಲ್ಲಿ ಬೀಳಬೇಕು; ಅಥವಾ ರಕ್ತಬೀಳಬೇಕು. ಯಾವುದೂ ಕಾಣಲಿಲ್ಲ.

“ಸರಿಯಾಗಿ ಪ್ರಾಣಿ ಎಂದು ಗೊತ್ತುಮಾಡಿಕೊಂಡು ಹೊಡೆದೆಯೊ? ಅಥವಾ ಬೆಳ್ದಿಂಗಳಲ್ಲಿ ಗಿಡ ಪೊದೆಗಳು ಚಲಿಸಿದಂತಾಗಲು ಹಂದಿ ಎಂದು ಭ್ರಮಿಸಿ ಹೊಡೆದೆಯೋ”? ಎಂದೆ.

ಓಬು ಸ್ವಲ್ಪ ರೇಗಿಬಿದ್ದು, “ನಾವೇನು ಇವತ್ತು ಬೇಟೆಗೆ ಬಂದವನೇ? ಚೆನ್ನಾಗಿ ನೋಡಿ ಹಂದಿ ಎಂದು ಗೊತ್ತುಮಾಡಿಕೊಂಡೇ ಹೊಡಿದಿದ್ದೇನೆ. ಗುರಿ ಕೂಡ ಸರಿಯಾಗಿ ಬಿದ್ದದೆ” ಎಂದನು.

“ಈಡು ಹಾರಿದ ಸ್ವಲ್ಪ ಹೊತ್ತಿನ ಮೇಲೆ ಏನೋ ಬಿದ್ದು ಒದ್ದಾಡಿದಂತಾಯಿತು. ಇಲ್ಲಿ ಸುತ್ತ ಹುಡುಕಿ ನೋಡೋಣ” ಎಂದನು ತಿಮ್ಮು.

ಹಾಗೆಯೆ ಆಗಲಿ ಎಂದು ಎಲ್ಲರೂ ಜಾಡು ಹಿಡಿಯತೊಡಗಿದೆವು. ಎಲ್ಲಿಯೂ ಯಾವ ಚಿಹ್ನೆಯೂ ಕಾಣಲಿಲ್ಲ. ಗುರಿ ತಪ್ಪಿತೆಂದು ನಿರ್ಣಯಿಸಿ ರಾತ್ರಿಯ ಅನುಭವಗಳನ್ನು ಕುರಿತು ಗಟ್ಟಿಯಾಗಿ ಹರಟುತ್ತ ಕಾಡಿನಿಂದ ಮನೆಯ ಕಡೆಗೆ ಹೊರಟೆವು. ಮುಂದೆ ಹೋಗುತ್ತಿದ್ದ ತಿಮ್ಮು ಇದ್ದಕ್ಕಿದಂತೆ ನಿಂತು ಕಡೆ ನೋಡಿದನು. “ರಕ್ತ!” ಎಂದನು. ಎಲ್ಲರೂ ಬಗ್ಗಿ ನೋಡಿದೆವು. ಹೌದು! ರಕ್ತದ ಹನಿಗಳು ಒಣಯೆಲೆಗಳ ಮೇಲೆ ಬಿದ್ದಿದ್ದುವು. ಓಬುಗೆ ಬಹಳ ಸಂತೋಷವಾಯಿತು. “ನೋಡಿ, ಗುರಿ ತಪ್ಪಿತೆಂದು ಸುಮ್ಮನೆ ನನ್ನ ಮೇಲೆ ತಪ್ಪು ಹೊರಿಸಿದ್ದಿರಲ್ಲಾ?” ಎಂದನು. ನೆತ್ತರು ಮುದ್ದೆ ಮುದ್ದೆಯಾಗಿ ಬಿದ್ದಿತ್ತು. ಪ್ರಾಣಿ ಅಲ್ಲೇ ಎಲ್ಲಿಯೋ ಸತ್ತುಬಿದ್ದಿರಬೇಕೆಂದು ಧಾವಿಸಿದೆವು. ಸುಮಾರು ಒಂದೂವರೆ ಫರ್ಲಾಂಗಿನವರೆಗೆ ರಕ್ತದ ಜಾಡು ಸಿಕ್ಕಿತು. ಪ್ರಾಣಿಯೂ ಸಿಕ್ಕಲಿಲ್ಲ. ಹುಡುಕಿ ಹುಡುಕಿ ಬೇಸತ್ತು ಮನೆಯ ಕಡೆ ತಿರುಗಿದೆವು. ದಾರಿಯಲ್ಲಿ ಎಲ್ಲರೂ ಉಪನ್ಯಾಸ ಮಾಡತೊಡಗಿದೆವು! ನನ್ನ ಸೀನು ಕೆಮ್ಮುಗಳಿಗೆ ತಕ್ಕ ಸನ್ಮಾನವೂ ಆಯಿತು. ಅಂತೂ ಮೊಲೆಯ ಹಾಲನ್ನು ನೆನೆದು ಕೊಟ್ಟಿಗೆಗೆ ಹಾರಿ ಹೋಗುವ ಎಳಗರುಗಳಂತೆ ಕಾಫಿತಿಂಡಿಗಳನ್ನು ನೆನೆದು ಮನೆಯ ಕಡೆಗೆ ಭರದಿಂದ ಸಾಗಿದೆವು. ಅರುಣೋದಯದ ಹೇಂಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.

ದಟ್ಟವಾದ ಕಾಡನ್ನು ಹಿಂದಿಕ್ಕಿ ವನದಂಚಿಗೆ ಬಂದೆವು. ಆದರೆ ನಡೆಯಲು ಇನ್ನೂ ಪರ್ವತದ ಅರ್ಧಭಾಗ ಉಳಿದಿತ್ತು. ಅಲ್ಲೊಂದು ಬಂಡೆಗಳಿಂದ ಬಯಲಾದ ಪ್ರದೇಶವಿತ್ತು. ಅಲ್ಲಿ ನಿಂತು ನೋಡಿದೆವು, ಎಂದೂ ಮರೆಯಲಾಗದ ಸ್ವರ್ಗೀಯ ಸುಂದರದೃಶ್ಯವನ್ನು!

ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸೇರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭೀತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡುಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷರಾಜಿಗಳ ಶ್ಯಾಮಲಪರ್ಣ ವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯ ರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಕ್ತಿಯಿಂದ ಭಾವಾವಿಷ್ಟರಾಗಿ!*

ಬೇಟೆಗಾರರಾಗಿ ಬನಕೆ ಹೋದವರು ಕಬ್ಬಿಗರಾಗಿ ಮನೆಗೆ ಬಂದೆವು.
ಮುಂದಿನ ಭಾಗ : http://kannadadeevige.blogspot.com/p/blog-page_87.html ಅಜ್ಜಯ್ಯನ ಅಭ್ಯಂಜನ
********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ