ನನ್ನ ಪುಟಗಳು

04 ಜನವರಿ 2018

9ನೆಯ ತರಗತಿ- ಪದ್ಯ-5 ಮರಳಿ ಮನೆಗೆ

ಪ್ರಸ್ತುತ ಗದ್ಯಭಾಗವನ್ನು ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಮತ್ತು ಆಯ್ದ ಕವಿತೆಗಳು ಕೃತಿಗಳಿಂದ ಆರಿಸಿ ಸಂಪಾದಿಸಿ ಸಂಯೋಜಿಸಲಾಗಿದೆ.
ಅರವಿಂದ ಮಾಲಗತ್ತಿಯವರ ಪರಿಚಯ
(ಮಾಹಿತಿ ಕೃಪೆ: ಜೈಭೀಮ್.ಕಾಂ)
    ಡಾ.ಅರವಿಂದ ಮಾಲಗತ್ತಿಯವರು ೦೧-೦೮- ೧೯೫೬ ಬಿಜಾಪುರ ಜಿಲ್ಲೆಯ ‘ಮುದ್ದೇ ಬಿಹಾಳ’ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ.
   ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.
 ಕವನ ಸಂಕಲನಗಳು
  • ಮೂಕನಿಗೆ ಬಾಯಿ ಬಂದಾಗ – ೧೯೮೨
  • ಕಪ್ಪು ಕಾವ್ಯ – ೧೯೮೫
  • ಮೂರನೇ ಕಣ್ಣು – ೧೯೯೬
  • ನಾದ ನಿನಾದ – ೧೯೯೯
  • ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨
  • ಸಿಲಿಕಾನ್ ಸಿಟಿ ಮತ್ತು ಕೋಗಿಲೆ – ೨೦೦೩
  • ಚಂಡಾಲ ಸ್ವರ್ಗಾರೋಹಣಂ – ೨೦೦೩
  • ಆಯ್ದಕವಿತೆಗಳು – ೨೦೦೪
  • ವಿಶ್ವತೋಮುಖ – ೨೦೧೦
  • ಹೂ ಬಲುಭಾರ – ೨೦೧೦
  • ಸಹಸ್ರಾಕ್ಷಿ – ೨೦೧೨
  • ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨

ಕಥೆ
  • ಮುಗಿಯದ ಕಥೆಗಳು – ೨೦೦೦

ಕಾದಂಬರಿ
  • ಕಾರ್ಯ -೧೯೮೮

ನಾಟಕಗಳು
  • ಮಸ್ತಕಾಭಿಷೇಕ – ೧೯೮೪
  • ಸಮುದ್ರದೊಳಗಣ ಉಪ್ಪು – ೧೯೯೯

ಪ್ರವಾಸ ಕಥನ
  • ಚೀನಾದ ಧರಣಿಯಲ್ಲಿ – ೨೦೧೧
ಆತ್ಮ ಕಥನ
  • ಗೌರ್ಮೆಂಟ್ ಬ್ರಾಹ್ಮಣ (ಈ ಕೃತಿ ಈಗಾಗಲೇ ಚಲನಚಿತ್ರವಾಗಿದೆ) -೧೯೯೪
ಸಂಶೋಧನಾತ್ಮಕ ವಿಮರ್ಶೆಗಳು
  • ಕನ್ನಡ ಸಾಹಿತ್ಯ ಮತ್ತು ದಲಿತಯುಗ
  • ದಲಿತ ಪ್ರಜ್ಞೆ: ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ
  • ಸಾಂಸ್ಕೃತಿಕ ದಂಗೆ
  • ಬೆಂಕಿ ಬೆಳದಿಂಗಳು
  • ದಲಿತ ಸಾಹಿತ್ಯ ಪ್ರವೇಶಿಕೆ
  • ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ
  • ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು
  • ಭೀಮ ನಡೆಯಬೇಕು
  • ಸಾಹಿತ್ಯ ಸಾಕ್ಷಿ
  • ದಲಿತ ಸಾಹಿತ್ಯ ಪರ್ವ
  • ದಲಿತ ಸಾಹಿತ್ಯ
  • ಸಾಹಿತ್ಯ ಕಾರಣ
  • ದಲಿತ ಮಾರ್ಗ
ಜಾನಪದ ಕೃತಿಗಳು
  • ಆಣೀ ಪೀಣಿ -೧೯೮೨
  • ಜಾನಪದ ವ್ಯಾಸಂಗ -೧೯೮೫
  • ಜಾನಪದ ಶೋಧ – ೧೯೮೦
  • ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ -೧೯೯೩
  • ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ – ೧೯೯೧
  • ಪುರಾಣ ಜಾನಪದ ಮತ್ತು ದೇಶಿವಾದ -೧೯೯೮ 
ಸಹಬರವಣಿಗೆ
  • ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧
  • ವಯಸ್ಕರ ಶಿಕ್ಷಣ ಕೃತಿ
  • ಜನಪದ ಆಟಗಳು -೧೯೯೩
  • ತಾಳಿಕೋಟೆ ದ್ಯಾಮವ್ವ – ೧೯೯೫
ಪಿಎಚ್.ಡಿ ಮಹಾಪ್ರಬಂಧ
  • ಜನಪದ ಆಟಗಳು
ಸಂಪಾದಿತ ಕೃತಿಗಳು
  • ನಾಲ್ಕು ದಲಿತೀಯ ಕಾದಂಬರಿಗಳು
  • ಅಂಬೇಡ್ಕರ್ ವಿಚಾರಧಾರೆ
  • ಅಂಬೇಡ್ಕರ್ ವಾದ-ಸಂವಾದ
  • ಗೋಮಾಳದಿಂದ ಗಂಗೋತ್ರಿಗೆ
  • ದಲಿತ ಸಾಹಿತ್ಯ ನೆಲೆ- ಹಿನ್ನೆಲೆ
  • ಕನ್ನಡ ಗ್ರಂಥೋದ್ಯಮ
  • ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ
  • ಜಾನಪದ ಮೂಲತತ್ವ್ತಗಳು
  • ಕಾದಂಬರಿಗಳ ವಿಮರ್ಶೆ
  • ಮಲೆಯ ಮಹದೇಶ್ವರ
ಸಹ ಸಂಪಾದನೆ
  • ಸಮಾವೇಶ
  • ಬೇವು ಬೆಲ್ಲ
  • ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ[ಬದಲಾಯಿಸಿ] ಕನ್ನಡ ವಿಶ್ವಕೋಶ ೧೪ ಸಂಪುಟಗಳು.
ಸಿ.ಡಿ.ರೂಪದಲ್ಲಿ
  • ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರೊಷ್ಕೃತ)
  • ಕನ್ನಡ ವಿಷಯ ವಿಶ್ವಕೋಶ : ಜಾನಪದ ಸಂಪುಟ
  • ಕನ್ನಡ ವಿಷಯ ವಿಶ್ವಕೋಶ :ಪ್ರಾಣಿವಿಜ್ಞಾನ
  • ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು
  • ಕುವೆಂಪು ಕೃತಿ ವಿಮರ್ಶೆ
ದೇವನೂರು ಮಹಾದೇವ ಅವರೊಂದಿಗೆ ಮಾಲಗತ್ತಿಯವರು



`ಮರಳಿ ಮನೆಗೆ' ಪದ್ಯದ ಭಾವಾರ್ಥ
ಆದಿ - ಮೂಲ; ಬಯಲು - ಶೂನ್ಯ, ಮುಕ್ತಿ, ಮೈದಾನ;  ಬಂಧನ - ಐಹಿಕ ಬಂಧನ; ರೀತಿ - ಗತಿ, ಉಸಿರು - ನುಡಿ, ಸೀಮೆ - ಗಡಿ, ಎಮ್ಮ- ನಮ್ಮ
ಬಾರಯ್ಯ ಬಾರೊ ಮರಳಿ ಮನೆಗೆ

ಬಾರಯ್ಯ ಬಾರೊ ಬುದ್ಧನೆಡೆಗೆ

ಬಾರಯ್ಯ ಬಾರೊ ಕತ್ತಲಿಂದೀಚೆಗೆ

ಬಾರಯ್ಯ ಬಾರೊ ಬೆಳಕಿನ ಆದಿಗೆ

- ಬಾರಯ್ಯ ಬಾರೊ
೧) ಅಜ್ಞಾನದಿಂದಾಗಿ ಭಯೋತ್ಪಾದನೆ ಹಾಗೂ ಮತಾಂಧತೆಯಂತಹ ಸಮಸ್ಯೆಗಳು ಉಗ್ರರೂಪ ತಾಳಿವೆ. ಪ್ರಪಂಚದಾದ್ಯಂತ ಮಾರಣಹೋಮ ನಡೆಯುತ್ತಿದೆ. ಅಜ್ಞಾನದ ಕತ್ತಲೆಯನ್ನು ನೀಗಿಸಲು ಇಂದಿನ ದಿನಗಳಲ್ಲಿ ಬುದ್ದನ ಸಂದೇಶಗಳು ಹೆಚ್ಚು ಪ್ರಸ್ತುತವಾಗಿವೆ ಬುದ್ದನ ತತ್ವಗಳು ಮತ್ತೆ ಬೆಳಕಿಗೆ ಬರಬೇಕು ಎಂಬುದು ಕವಿಯ ಆಶಯವಾಗಿದೆ.

ಬುದ್ಧನೆಂದರೆ ನಿತ್ಯ ಬುದ್ಧನೆಂದರೆ ಸತ್ಯ

ಬುದ್ಧನೆಂದರೆ ಶಾಂತಿ ಬುದ್ಧನೆಂದರೆ ಕ್ರಾಂತಿ

ಬುದ್ಧನೆಂದರೆ ಕರುಣೆ ಬುದ್ಧನೆಂದರೆ ಬೆಳಕು

ಲುಂಬಿನಿಯ ಬನಕೆ ವೈಶಾಖ ಬಂದಂತೆ

- ಬಾರಯ್ಯ ಬಾರೊ
೨) ಬುದ್ಧನ ಸಂದೇಶಗಳು ಸದಾ ಪ್ರಸ್ತುತ. ಹಿಂಸಾ ವಿರೋಧಿಯಾದ ಬುದ್ಧನು ಶಾಂತಿಗೆ ಮತ್ತೊಂದು ಹೆಸರು. ಜಡ್ಡುಗಟ್ಟಿದ್ದ ವ್ಯವಸ್ಥೆಯೊಳಗೆ ಹೊಸತನ ಹಾಗೂ ಸರಳತೆಯನ್ನು ತಂದ ಬುದ್ದನ ಸಂದೇಶಗಳು ಸಾಮಾಜಿಕ ಕ್ರಾಂತಿಗೆ ಕಾರಣವಾದವು. ಕರುಣೆಯೇ ಮೈದೆಳೆದಂತಿರುವ ಬುದ್ಧ ಜ್ಞಾನದ ಬೆಳಕಿನ ಮೂಲವಾಗಿದ್ದಾನೆ.ನೇಪಾಳ ದೇಶದಲ್ಲಿರುವ ಲುಂಬಿನಿ ವನದಲ್ಲಿ ಬುದ್ಧನ ಜನನವಾಯಿತು. ವಸಂತ ಋತುವಿನ ಆಗಮನದಿಂದ ವನಗಳು ಕಂಗೊಳಿಸುವಂತೆ ಬುದ್ಧನ ಜನನದಿಂದ ಲುಂಬಿನಿ ವನವು ಸಾರ್ಥಕ್ಯವನ್ನು ಪಡೆಯಿತು

ನೀ ಹುಟ್ಟಿದೀ ಮನೆಯು ನೀ ಕಟ್ಟಿದೀ ಮನೆಯು

ಮರೆತೋದೆ ಹೇಗೆ ನೆನಪಾಯ್ತು ಈಗ

ನಿನಗಾಗಿ ತೆರೆದಿಹುದು ಈ ಮನೆಯ ಬಾಗಿಲು

ಪಂಚಶೀಲ ಪಥದಿ ದೀಕ್ಷಾಭೂಮಿ ರಥದಿ

- ಬಾರಯ್ಯ ಬಾರೊ
೩) ಬೌದ್ಧಧರ್ಮ ಹುಟ್ಟಿ ಬೆಳೆದಿದ್ದು ಭಾರತದಲ್ಲೇ ಆದರೂ ಬುದ್ದ ಮಾರ್ಗವನ್ನು ಮರೆತುಬಿಟ್ಟಿದ್ದೇವೆ ಅದರಿಂದ ಉಂಟಾದ ಪ್ರಕ್ಷುಬ್ದ ಸ್ಥಿತಿಯನ್ನರಿತ  ನಮಗೆ ಮತ್ತೆ ಬುದ್ಧ ಮಾರ್ಗದ ಮಹತ್ವಧ ಮನವರಿಕೆಯಾಗಿದೆ. ಜನತೆ ಅದನ್ನುಅನುಸರಿಸಲು ದೀಕ್ಷೆಯನ್ನು ಬಯಸಿದ್ದಾರೆ ಪಂಚಶೀಲತತ್ವಗಳನ್ನು ಅರಿತು ನಡೆದರೆ ಇಡೀ ಪಪಂಚದಲ್ಲಿಯೇ ನೆಮ್ಮದಿ ನೆಲೆಗೊಳ್ಳುತ್ತದೆ.

ಬುದ್ಧ ನಮ್ಮ ತಂದೆ ಬುದ್ಧ ನಮ್ಮ ತಾಯಿ

ಬುದ್ಧ ನಮ್ಮ ಬಂಧು ಬುದ್ಧ ನಮ್ಮ ಬಳಗ

ಬೋಧಿಸತ್ವ ಮೀರಿದಡೆ ಮೆಚ್ಚನಾ ತಂದೆ

ಬಯಲಿನಲಿ ಬಂಧನ ಮೆಚ್ಚಳಾ ತಾಯಿ

- ಬಾರಯ್ಯ ಬಾರೊ
೪) ನಮ್ಮ ತಂದೆ ತಾಯಿ, ಬಂಧು ಬಳಗ ಹೇಗೆ ನಮ್ಮ ಹಿತವನ್ನೆ ಬಯಸುತ್ತಾರೊ ಹಾಗೆಯೇ ಬುದ್ಧ ಧರ್ಮವು ಸಮಾಜದ ತಾಯಿಯಂತೆ ಸಮಾಜದ ಒಳಿತನ್ನೇ ಬಯಸುತ್ತದೆ. ನಮ್ಮ ನಡೆ ಬುದ್ಧಮಾರ್ಗವನ್ನು ಮೀರಿದಾಗ ನಮ್ಮ ತಂದೆಯಾದ ಬುದ್ಧನು ಮೆಚ್ಚುವುದಿಲ್ಲ. ಮುಕ್ತಿಯ ಬಯಲಿನಲ್ಲಿ ನಿಂತಾಗ ಐಹಿಕ ಬಂಧನವನ್ನು ಬಯಸಿದರೆ ತಾಯಿಯಂತಿರುವ ಬುದ್ಧನು ಒಪ್ಪುವುದಿಲ್ಲ.

ಬಹುಜನತೆಯ ಹಿತವೇ ಬಹುಜನತೆಯ ಸುಖವು

ನಮ್ಮುಸಿರ ನೀತಿಯು ನಮ್ಮನೆಯ ರೀತಿಯು

ಮಹಾಮನೆಯ ಮಹಾಮಂತ್ರ ಸಾರಿರೋ ನೀವೆ

- ಬಾರಯ್ಯ ಬಾರೊ
೫) ಬುದ್ಧನ ಸಂದೇಶಗಳನ್ನು ಅನುಸರಿಸಿದರೆ ಸರ್ವರಿಗೂ ಸುಖ ಸಿಗುತ್ತದೆ. ನಮ್ಮ ನಡೆ ನುಡಿ ಒಂದೇ ಆಗಿರಬೇಕು. ಮೇಲು ಕೀಲುಗಳಿಲ್ಲದ ಸಮಾಜದ ನಿರ್ಮಾಣವೇ ಬಸವಣ್ಣ ನವರ ಮಹಾ ಮನೆಯ ಮಹಾ ಮಂತ್ರ ಆಗಿತ್ತು. ನಾವು ಶ್ರೇಷ್ಠ  ಸಮಾಜದ ಭವ್ಯ ಮನುಜರಾಗಿ ಬಾಳಲು ಬುದ್ಧಮಾರ್ಗದಲ್ಲಿ ನಡೆಯಬೇಕು.

ಬಾರಯ್ಯ ಬಾರೊ ಜಾತಿಯ ಸೀಮೆಯಾಚೆ

ಬಾರಯ್ಯ ಬಾರೊ ಧರ್ಮದ ಗಡಿಯಾಚೆ

ಲಿಂಗಭೇದ ಬೇಕಿಲ್ಲ ಮೇಲುಕೀಳು ಇಲ್ಲಿಲ್ಲ

ಬುದ್ಧ ನಡೆಯೆಮ್ಮನಡೆ ಬುದ್ಧ ನುಡಿಯೆಮ್ಮನುಡಿ

- ಬಾರಯ್ಯ ಬಾರೊ
೬) ಬುದ್ಧಮಾರ್ಗವು ಜಾತಿಧರ್ಮ,ಲಿಂಗಭೇದ, ಮೇಲುಕೀಳುಗಳ ಗಡಿಯನ್ನು ಮೀರಿ ನಿಂತಿದೆ. ಬುದ್ಧನ ತತ್ವಗಳೇ ನಮ್ಮ ನುಡಿಯಾಗಿ ಬುದ್ಧ ಮಾರ್ಗವೆ ನಮ್ಮ ಮಾರ್ಗವಾಗುವ ಮೂಲಕ ಸಮಾನತೆಯ ಸಮಾಜ ಸ್ಥಾಪಿತವಾಗಬೇಕು. ಎಂಬುದು ಕವಿಯ ಇಂಗಿತ. ಅದಕ್ಕಾಗಿ ಬುದ್ಧನು ನಮ್ಮ ಮನೆಗಳಿಗೆ ಹಾಗೂ ನಮ್ಮ ಮನಗಳಿಗೆ ಮರಳಿ ಬರಬೇಕು ಎಂಬುದು ಈ ಕವನದ ಆಶಯವಾಗಿದೆ.

***********************

16 ಕಾಮೆಂಟ್‌ಗಳು:

  1. ಪದ್ಯದ ಭಾವಾರ್ಥ ಬಹಳ ಚೆನ್ನಾಗಿದೆ.
    ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ