ನನ್ನ ಪುಟಗಳು

24 ನವೆಂಬರ್ 2013

ಛಂದಸ್ಸು-ಪೀಠಿಕೆ

ಛಂದಸ್ಸು-ಮಾತ್ರೆಗಳು ಮತ್ತು ಗಣಗಳು
     ಪದ್ಯಗಳನ್ನು ಹೇಗೆ ರಚಿಸಬೇಕು? ಅಲ್ಲಿ ಯಾವ ನಿಯಮಗಳನ್ನು ಕವಿಗಳು ಅನುಸರಿಸುತ್ತಾರೆ? ಎಂಬ ವಿಷಯವನ್ನು ತಿಳಿಯಬೇಕಾದರೆ ಅವಶ್ಯವಾಗಿ ಛಂದಶ್ಯಾಸ್ತ್ರದ ಪರಿಚಯ ಮಾಡಿಕೊಳ್ಳಬೇಕಾಗುವುದು.  ನಮ್ಮ ವಿದ್ಯಾರ್ಥಿಗಳು ತಾವು ಓದುತ್ತಿರುವ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅದೆಷ್ಟೋ ಬಗೆಯ ಪದ್ಯಗಳನ್ನು ಓದುತ್ತಾರೆ.  ಆ ಎಲ್ಲ ಪದ್ಯಗಳನ್ನು ರಚನೆ ಮಾಡಿದ ಕವಿಗಳು ಹಲಕೆಲವು ನಿಯಮಗಳನ್ನನುಸರಿಸಿ ಆ ಪದ್ಯಗಳನ್ನು ರಚಿಸಿರುತ್ತಾರೆ.  ಯಾವ ನಿಯಮವನ್ನು ಅನುಸರಿಸಿ ಈ ಪದ್ಯಗಳು ರಚಿತವಾಗಿವೆ, ಎಂಬುದನ್ನು ತಿಳಿಯದೆ ಅವುಗಳನ್ನು ಓದಿದರೆ ಸಾಕಾದಷ್ಟು ಪ್ರಯೋಜನವಾಗಲಿಕ್ಕಿಲ್ಲ.  ಆದುದರಿಂದ ನಮ್ಮ ಮಕ್ಕಳು ಛಂದಶ್ಯಾಸ್ತ್ರದ ಸ್ಥೂಲವಾದ ಪರಿಚಯ ಮಾಡಿಕೊಳ್ಳಬೇಕಾ ಗುವುದು.  ಈ ದೃಷ್ಟಿಯಿಂದ ಮುಂದೆ ಸಂಗ್ರಹವಾಗಿ ಈ ವಿಷಯವನ್ನು ತಿಳಿಸಲಾಗಿದೆ.
     ವ್ಯಾಕರಣ ಶಾಸ್ತ್ರವು ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದ ಶಾಸ್ತ್ರವಾದರೆ, ಛಂದಸ್ಸು ಕೇವಲ ಪದ್ಯಗಳಿಗೆ ಮಾತ್ರ ಸಂಬಂಧಿಸಿದ ಶಾಸ್ತ್ರವಾಗಿದೆ.  ನಾವು ಓದುವ ಪದ್ಯಗಳು ನಾನಾ ತರವಾಗಿವೆ.  ಕೆಲವು ನಾಲ್ಕು ಸಾಲಿನವು, ಕೆಲವು ಆರು ಸಾಲಿನವು, ಕೆಲವು ಮೂರು ಸಾಲಿನವು, ಕೆಲವು ಸಾಲುಗಳು ಉದ್ದ, ಕೆಲವು ಚಿಕ್ಕವು.  ಹೀಗೆ ನಾನಾ ಬಗೆಯು ಪದ್ಯಗಳಲ್ಲಿ ಕಂಡುಬರುತ್ತವೆ.  ಅವುಗಳೆಲ್ಲವುಗಳ ಸ್ವರೂಪವನ್ನು ತಿಳಿಯದಿದ್ದರೂ ಮುಖ್ಯವಾದ ಕೆಲವು ಪದ್ಯಗಳ ರೀತಿನೀತಿ ಗಳನ್ನು ತಿಳಿಯಬೇಕು.
       ಪದ್ಯಗಳು ವಿಸ್ತಾರವಾದ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಲೂ, ರಸವತ್ತಾದ ಅಂತಗಳನ್ನು ಸ್ವಾರಸ್ಯ ಮಾತುಗಳಿಂದ ವರ್ಣಿಸಲೂ, ಮತ್ತು ಅವುಗಳನ್ನು ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲೂ ಅನುಕೂಲವಾದವು.  ಅಲ್ಲದೆ ರಾಗವಾಗಿ ಹಾಡಿ, ತಾವೂ ಆನಂದ ಪಡಬಹುದು.  ಇತರರನ್ನೂ ಆನಂದಗೊಳಿಸಬಹುದು.  ಇಂಥ ಮಹತ್ವದ ಕಾವ್ಯಭಾಗಗಳಾದ ಪದ್ಯಗಳ ರಚನಾಕ್ರಮದ ಬಗೆಗೆ ಲಕ್ಷಣವನ್ನು ತಿಳಿಸುವ ಗ್ರಂಥವೆಂದರೆ ಮುಖ್ಯವಾಗಿ ‘ಛಂದೋಂಬುಧಿ‘ ಎಂಬುದು.  ಇದು ಹಳಗನ್ನಡ ಪದ್ಯಗಳಲ್ಲಿ ರಚಿಸಲ್ಪಟ್ಟಿದೆ.  ಇದೇ ಕನ್ನಡ ಛಂದಸ್ಸನ್ನು ವಿಶದವಾಗಿ ತಿಳಿಸುವ ಗ್ರಂಥವಾಗಿದೆ.

I – ಛಂದೋಂಬುಧಿ ಗ್ರಂಥ ಕರ್ತೃವಿನ ವಿಚಾರ
ಛಂದೋಂಬುಧಿ ಎಂಬ ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥವನ್ನು ಕ್ರಿ.ಶ. ೯೯೦ ರ ಸುಮಾರಿನಲ್ಲಿ ೧ನೆಯ ನಾಗವರ್ಮನೆಂಬುವನು ಬರೆದನು.  ಇವನು ಕರ್ನಾಟಕ ಕಾದಂಬರಿಯೆಂಬ ಇನ್ನೊಂದು ಗ್ರಂಥವನ್ನೂ ಬರೆದಿದ್ದಾನೆ.  ವೆಂಗಿ ವಿಷಯದಲ್ಲಿನ ಸಪ್ತ ಗ್ರಾಮಗಳಲ್ಲಿ ಮನೋಹರವಾದ ವೆಂಗಿಪಳುವಿನಲ್ಲಿದ್ದ ಕೌಂಡಿನ್ಯ ಗೋತ್ರ ದ ವೆಣ್ಣಮಯ್ಯ ಎಂಬ ಬ್ರಾಹ್ಮಣನ ಮಗ; ತಾಯಿ ಹೋಕಳವ್ವೆ.  ಇವನಿಗೆ ಕವಿರಾಜಹಂಸ, ಬುಧಾಬ್ಜವನಕಳ ಹಂಸ, ಕಂದಕಂದರ್ಪ-ಇತ್ಯಾದಿ ಅನೇಕ ಬಿರುದುಗಳಿದ್ದವು.  ಈತನು ಯುದ್ಧವೀರನಾಗಿದ್ದ ಹಾಗೆಯೂ ತೋರುವುದು.  ಶ್ರವಣಬೆಳ್ಗೊಳದ ಗೊಮ್ಮಟೇಶ್ವರನ ವಿಗ್ರಹವನ್ನು ಕೆತ್ತಿಸಿ ಪ್ರಸಿದ್ಧನಾಗಿರುವ ಚಾವುಂಡರಾಯನೆಂಬುವನು ಇವನ ಆಶ್ರಯದಾತನು.  ಅಜಿತಸೇನದೇವ ನೆಂಬುವರು ಇವನಿಗೆ ಗುರುಗಳು.
ಛಂದೋಂಬುಧಿ ಎಂಬ ಗ್ರಂಥದಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಹೇಳಲ್ಪಟ್ಟಿವೆ.

[1] ನಾಗವರ್ಮನೆಂಬ ಹೆಸರಿನ ಕವಿಗಳಿಬ್ಬರು.  ಮೊದಲನೆಯ ನಾಗವರ್ಮ (ಕ್ರಿ.ಶ. ೯೯೦) ನು ಛಂದೋಂಬುಧಿಯನ್ನೂ, 'ಕರ್ನಾಟಕ ಕಾದಂಬರಿ' ಎಂಬ ಚಂಪೂ ಗ್ರಂಥವನ್ನೂ ರಚಿಸಿದನು.  ಎರಡನೆಯ ನಾಗವರ್ಮನೆಂಬುವನು ಕ್ರಿ.ಶ. ೧೧೪೫ ರ ದವನು.  ಇವನು ಕಾವ್ಯಾವಲೋಕನ, ಕರ್ನಾಟಕ ಭಾಷಾಭೂಷಣ, ವಸ್ತುಕೋಶಗಳೆಂಬ ಮೂರು ಗ್ರಂಥಗಳನ್ನು ರಚಿಸಿದ್ದಾನೆಂದು ಕವಿ ಚರಿತ್ರೆಕಾರರು ತಿಳಿಸಿದ್ದಾರೆ.


ಕನ್ನಡ ಕಾವ್ಯಗಳು
ಕನ್ನಡ ಭಾಷೆಯಲ್ಲಿ ಕಾವ್ಯಗಳು ಪಂಪಕವಿ (ಕ್ರಿ.ಶ. ೯೪೧) ಗಿಂತಲೂ ಮೊದಲೇ ರಚಿತವಾಗಿದ್ದವು.  ಆದರೆ ಆ ಕಾಲದ ಸಮಗ್ರ ಕಾವ್ಯಗಳು ನಮಗೆ ಸಿಕ್ಕಿಲ್ಲ.  ಪಂಪಮಹಾಕವಿ ಬರೆದ ವಿಕ್ರಮಾರ್ಜುನವಿಜಯ, ಆದಿ ಪುರಾಣಗಳೇ ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಮೊದಲಿನವು.  ಪೂರ್ವದ ಗ್ರಂಥಗಳು ಸಿಗದಿದ್ದರೂ ಕ್ರಿ.ಶ. ೯ನೆಯ ಶತಕದಲ್ಲಿ ನೃಪತುಂಗನಿಂದ ರಚಿತವಾದ ‘ಕವಿರಾಜಮಾರ್ಗದಲ್ಲಿ ಉತ್ತಮ ಕಾವ್ಯಮಯವಾದ ಪದ್ಯಗಳನ್ನು ಉದಾಹರಿಸಿದ್ದಾನೆ.  ಇದರಿಂದ ನೃಪತುಂಗನಿಗಿಂತಲೂ ಮೊದಲು ಉತ್ತಮವಾದ ಕನ್ನಡ ಪದ್ಯ ಕಾವ್ಯಗಳು ಇದ್ದುವೆಂದು ತಿಳಿಯಬಹುದು.  ಮತ್ತು ಕಲ್ಲುಗಳ ಮೇಲೆ ಕೆತ್ತಿದ ಅನೇಕ ಪದ್ಯಗಳು ಸಿಗುತ್ತವೆ.  ಇವುಗಳ ಮೇಲಿಂದ ಕ್ರಿ.ಶ. ೬ನೆಯ ಶತಮಾನದ ಹೊತ್ತಿನಲ್ಲಿಯೇ ಛಂದೋಬದ್ಧವಾದ ಪದ್ಯಗಳನ್ನು ನಮ್ಮ ಕವಿಗಳು ಬರೆಯುತ್ತಿದ್ದರೆಂದು ಹೇಳಬಹುದು.  ಪಂಪ (ಕ್ರಿ.ಶ. ೯೪೧), ರನ್ನ (ಕ್ರಿ.ಶ. ೯೯೩), ಅಭಿನವ ಪಂಪ (ಕ್ರಿ.ಶ. ೧೧೦೦), ಜನ್ನ (ಕ್ರಿ.ಶ. ೧೨೦೯) ಇತ್ಯಾದಿ ಮಹಾಕವಿಗಳು ಸಂಸ್ಕೃತ ವೃತ್ತ ಜಾತಿಯ ಛಂದಸ್ಸನ್ನು ಬಳಸಿ ದೊಡ್ಡ ದೊಡ್ಡ ಚಂಪೂಕಾವ್ಯಗಳನ್ನು ಬರೆದರು.  ಚಂಪೂಕಾವ್ಯಗಳೆಂದರೆ ಗದ್ಯಪದ್ಯಗಳಿಂದ ಕೂಡಿದ ಕಾವ್ಯಗಳು.  ಕ್ರಿ.ಶ.ಸು. ೧೨೧೬ ರ ಸುಮಾರಿನಲ್ಲಿದ್ದ ಹರಿಹರೇಶ್ವರನೆಂಬ ಕವಿ ರಗಳೆಗಳ ಛಂದಸ್ಸಿನಲ್ಲಿ ಅನೇಕ ಕಾವ್ಯ ಬರೆದನು.  ಇವನ ಅಳಿಯನಾದ ರಾಘವಾಂಕನು (ಕ್ರಿ.ಶ. ೧೨೧೬) ಷಟ್ಪದಿಗಳ ಛಂದಸ್ಸಿನಲ್ಲಿ ಅನೇಕ ಕಾವ್ಯಗಳನ್ನು ಬರೆದನು.  ಷಟ್ಪದಿಯನ್ನು ಬಳಸಿ ಮುಂದೆ ಗದುಗಿನ ನಾರಣಪ್ಪ (ಕ್ರಿ.ಶ. ೧೪೩೦) ನೇ ಮೊದಲಾದವರು ಕಾವ್ಯ ಬರೆದರು.  ರತ್ನಾಕರವರ್ಣಿ (ಕ್ರಿ.ಶ. ೧೫೫೭) ಯು ಸಾಂಗತ್ಯವೆಂಬ ದೇಶೀಯ ಛಂದಸ್ಸಿನಲ್ಲಿ ಭರತೇಶ ವೈಭವವನ್ನು ಬರೆದನು.  ಹೀಗೆ ಅನೇಕಾನೇಕ ಛಂದೋಬದ್ಧವಾದ ಸಾಹಿತ್ಯರಾಶಿ ಕನ್ನಡಕ್ಕೆ ಇದೆ.  ಈ ಎಲ್ಲ ಛಂದಸ್ಸುಗಳ ಲಕ್ಷಣವನ್ನು ತಿಳಿಯುವುದು ಅವಶ್ಯವಾದರೂ ಪ್ರೌಢಶಾಲೆಗಳಲ್ಲಿ ವ್ಯಾಸಂಗಮಾಡುವ ನಮ್ಮ ಮಕ್ಕಳು, ಮುಖ್ಯವಾಗಿ ಕನ್ನಡದಲ್ಲಿ ವಿಶೇಷವಾಗಿ ಬಳಕೆಯಲ್ಲಿರುವ ಉತ್ಪಲಮಾಲಾ, ಚಂಪಕಮಾಲ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾ-ಇತ್ಯಾದಿ ವೃತ್ತಗಳ ಲಕ್ಷಣಗಳನ್ನೂ, ಷಟ್ಪದಿಗಳು, ರಗಳೆಗಳು ಕಂದ ಪದ್ಯಗಳೇ ಮೊದಲಾದವುಗಳ ಲಕ್ಷಣಗಳನ್ನು ತಿಳಿಯಬೇಕಾದುದು ಅವಶ್ಯಕ.  ಅಂತೆಯೇ ಸಂಕ್ಷೇಪವಾಗಿ ಮುಂದೆ ಆ ವಿಷಯವನ್ನು ಹೇಳಲಾಗಿದೆ.


ಪದ್ಯ
ಒಂದು ಗೊತ್ತಾದ ಸಾಲುಗಳ (ಪಾದಗಳು) ನಿಯಮದಿಂದ ಬರೆದವುಗಳೇ ಪದ್ಯಗಳು.  ಅಂದರೆ ಪದ್ಯಗಳು ಪಾದ (ಸಾಲು) ಗಳಿಂದಲೂ, ಪ್ರತಿಯೊಂದು ಪಾದವೂ ಪ್ರಾಸ, ಯತಿ, ಗಣಗಳ ನಿಯಮದಿಂದಲೂ ಕೂಡಿರುತ್ತವೆ.  ಈಗ ಈ ವಿಚಾರವಾಗಿ ಒಂದೊಂದಾಗಿ ತಿಳಿಯೋಣ.
() ಪ್ರಾಸ
ಪದ್ಯಗಳ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದಕ್ಕೆ ಪ್ರಾಸವೆನ್ನುತ್ತಾರೆ ಪ್ರಾಸವನ್ನು ಕೆಲವರು ಸಾಲುಗಳ (ಪಾದಗಳ) ಕೊನೆಯಲ್ಲೂ ಬರುವಹಾಗೆ ಪದ್ಯ ರಚಿಸುತ್ತಾರೆಪಾದಾಂತದಲ್ಲಿ ಬರುವ ಪ್ರಾಸದ ನಿಯಮವು ಕೇವಲ ರಗಳೆಗಳಲ್ಲಿ ಮಾತ್ರ ಕಂಡು ಬರುತ್ತದೆ.
ಈ ಪ್ರಾಸಾಕ್ಷರದ ಹಿಂದೆ ಹ್ರಸ್ವಸ್ವರವಿದ್ದರೆ ಎಲ್ಲ ಸಾಲುಗಳಲ್ಲಿ ಹ್ರಸ್ವಸ್ವರವೂ ದೀರ್ಘಸ್ವರವಿದ್ದರೆ ಎಲ್ಲ ಕಡೆಗೆ ದೀರ್ಘಸ್ವರವೂ, ಅನುಸ್ವಾರ ವಿಸರ್ಗಗಳಿದ್ದರೆ ಎಲ್ಲ ಕಡೆಗೆ ಅನುಸ್ವಾರ ವಿಸರ್ಗಗಳೂ ಬಂದಿರಬೇಕು.
ಉದಾಹರಣೆಗೆ:-
ಭವದನುಜನರುಣ ಜಲಮಂ |
ಸವಿನೋಡಿದೆನಿಂತು ನಿನ್ನ ಬಲಜಲನಿಧಿಯಂ |
ಸವಿನೋಡಿದೆನೀ ಕೊಳನಂ |
ತವೆಪೀರ್ದು ಬಳಿಕ್ಕೆ ನಿನ್ನ ಸವಿಯಂ ನೋಳ್ಪೆಂ ||
ಈ ಪದ್ಯದಲ್ಲಿ ಮೊದಲನೆಯ ಸ್ವರ-‘ಭ‘ ಕಾರದ ಮುಂದಿರುವ ಅಕಾರ, ೨ನೆಯ ಸ್ವರ ‘ವ‘ ಕಾರದ ಮುಂದಿರುವ ಅಕಾರ.  ಇವೆರಡರ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿದೆ.  ಇದರಂತೆ ೨ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ವ್ಯಂಜನವಿದೆ.  ೩ನೆಯ ಸಾಲಿನಲ್ಲಿ ಅಕಾರ ಇಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ನಾಲ್ಕನೆಯ ಸಾಲಿನಲ್ಲಿ ಅಕಾರ ಎಕಾರಗಳ ಮಧ್ಯದಲ್ಲಿ ‘ವ್‘ ಕಾರವಿದೆ.  ಹೀಗೆ ನಾಲ್ಕು ಸಾಲುಗಳಲ್ಲಿಯೂ ಇರುವ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ‘ವ್‘ ಎಂಬ ವ್ಯಂಜನವಿರುವುದು ಗೊತ್ತಾಗುವುದು.  ಈ ‘ವ‘ ಕಾರವೇ ಪ್ರಸಾಕ್ಷರವೆನಿಸುವುದು.  ಅಲ್ಲದೆ ಪ್ರಾಸಾಕ್ಷರದ ಹಿಂದೆ ಎಲ್ಲ ಕಡೆಗೂ ಹ್ರಸ್ವಸ್ವರವೇ ಇರುವುದು.  ಈಗ ಒಂದಕ್ಕಿಂತ ಹೆಚ್ಚು ವ್ಯಂಜನಗಳ ಪ್ರಾಸಾಕ್ಷರವಾಗಿರುವುದನ್ನು ಗಮನಿಸಿರಿ.
ಉದಾಹರಣೆಗೆ:-
ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು||
ಪುಲ್ಗಳಪಸುರ್ಗೆಳಸಿ ಪೊಕ್ಕೊಡಾ ತೋಟಗಾ- |
ವಲ್ಗೆ ತನ್ನೊಡನಾಡಿಗಳ ಕೂಡಿ ಲೀಲೆಮಿಗೆ |
ಬಿಲ್ಗೊಂಡು ನಡೆತಂದನಂ ಕಂಡನರ್ಚಿತ ಸುವಾಜಿಯಂ ವೀರಲವನು ||
೧ನೆಯ ಸಾಲು-ಬಲ್ಗಯ್ಯ    ………………………… ಅ + ಲ್ ಗ್ + ಅ
೨ನೆಯ ಸಾಲು-ಸೊಲ್ಗೇಳಿ  ………………………… ಒ + ಲ್ ಗ್ + ಏ
೩ನೆಯ ಸಾಲು-ನಲ್ಗುದುರೆ  ………………………… ಅ + ಲ್ ಗ್ + ಉ
೪ನೆಯ ಸಾಲು-ಪುಲ್ಗಳ      ………………………… ಉ + ಲ್ ಗ್ + ಅ
೫ನೆಯ ಸಾಲು-ವಲ್ಗೆತನ್ನೊ          ………………………… ಅ + ಲ್ ಗ್ + ಎ
೬ನೆಯ ಸಾಲು-ಬಿಲ್ಗೊಂಡು          ………………………… ಇ + ಲ್ ಗ್ + ಒ
ಎಲ್ಲ ಸಾಲುಗಳಲ್ಲೂ ಒಂದನೆಯ ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿ ವ್ಯಂಜನಗಳನ್ನು ನೋಡಿರಿ.
ಮೇಲಿನ ಈ ಪದ್ಯದಲ್ಲಿ ‘ಲ್ ಗ್‘ ಈ ಎರಡು ವ್ಯಂಜನಗಳು ಆರೂ ಸಾಲುಗಳಲ್ಲಿ ಪ್ರಾಸಾಕ್ಷರಗಳಾಗಿ ಬಂದಿರುವುದನ್ನು ಗಮನಿಸಿರಿ.  ಮತ್ತು ಪ್ರಾಸಾಕ್ಷರಗಳ ಹಿಂದೆ ಅ, , , , , ಇ – ಇತ್ಯಾದಿ ಹ್ರಸ್ವಸ್ವರಗಳೇ ಬಂದಿರುವುದನ್ನೂ ಗಮನಿಸಿರಿ.  ಇದರ ಹಾಗೆಯೇ ಕೆಲವು ಕಡೆ ಪ್ರಸಾಕ್ಷರಗಳು ಮೂರು ವ್ಯಂಜನಗಳಿಂದಲೂ ಕೂಡಿರುವುದುಂಟು.  ಕೆಲವು ಸಜಾತೀಯ ಸಂಯುಕ್ತಾಕ್ಷರಗಳಿಂದಲೂ ಕೂಡಿರುವುದುಂಟು.
ಒಮ್ಮೊಮ್ಮೆ ದೊಡ್ಡ ದೊಡ್ಡ ಕವಿಗಳೂ ಈ ಪ್ರಾಸದ ನಿಯಮದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿರುವುದೂ ಉಂಟು.  ಹಾಗಾಗಿರುವುದು ಎಲ್ಲೋ ಕೆಲವು ಕಡೆ ಮಾತ್ರ.  ಆದರೆ ಎಲ್ಲ ಕಡೆಗೂ ಪ್ರಾಸದ ನಿಯಮವನ್ನು ಪ್ರಾಚೀನ ಕವಿಗಳು ಪಾಲಿಸಿಕೊಂಡೇ ಬಂದಿದ್ದಾರೆ.  ರಗಳೆಗಳಲ್ಲಿ ಇದುವರೆಗೆ ಹೇಳಿದ ಆದಿ ಪ್ರಾಸದ ಜೊತೆಗೆ ಅಂತ್ಯದಲ್ಲಿಯೂ ಈ ಪ್ರಾಸದ ನಿಯಮವನ್ನು ಪಾಲಿಸಿರುವುದುಂಟು.-
ಉದಾಹರಣೆಗೆ:-
ಆಡುವ ಗಂಡಯ್ಯನ ಹೊಸ ನೃತ್ಯಂ
ನೋಡುವ ಶಿವನಂ ಮುಟ್ಟಿತು ಸತ್ಯಂ
ಇಲ್ಲಿ ಮೊದಲ ಸಾಲಿನ ಕೊನೆಯ ಎರಡು ಸ್ವರಗಳಾದ (ನ್ ಋ + ತ್ ಯ್ + ಅಂ) ಋಕಾರ ಅಕಾರಗಳ ಮಧ್ಯದಲ್ಲಿ ತ್ ಯ್ ಎಂಬುವು ಪ್ರಾಸಾಕ್ಷರಗಳು ೨ನೆಯ ಸಾಲಿನಲ್ಲಿ ಕೊನೆಯ ಎರಡು ಸ್ವರಗಳಾದ (ಸ್ ಅ + ತ್ ಯ್ + ಅಂ) ಅಕಾರ ಮತ್ತು ಅಕಾರಗಳ ಮಧ್ಯದಲ್ಲಿ ‘ತ್ ಯ್‘ ಎಂಬಿವು ಪ್ರಾಸಾಕ್ಷರಗಳಾಗಿವೆ.
ಮೇಲಿನ ಎರಡು ಸಾಲುಗಳ ರಗಳೆಯ ಛಂದಸ್ಸಿನಲ್ಲಿ ಆದಿಪ್ರಾಸವು ಡ್ ವ್ಯಂಜನವಾಗಿದ್ದರೆ, ಅಂತ್ಯ ಪ್ರಾಸವು ‘ತ್ ಯ್‘ ಎಂಬೆರಡು ವ್ಯಂಜನಗಳಾಗಿವೆ.  ಈ ತರದಲ್ಲಿ ಅಂತ್ಯಪ್ರಾಸದ ನಿಯಮವನ್ನು ರಗಳೆಯಲ್ಲಲ್ಲದೆ ಬಹುಶಃ ಉಳಿದ ಕಡೆಗೆ ಕಾಣುವುದು ಅಪರೂಪ.

() ಯತಿ
ಯತಿ ಯೆಂದರೆ ಪದ್ಯಗಳನ್ನು ಓದುವಾಗ ನಿಲ್ಲಿಸುವ ಸ್ಥಳಗಳು.  ಹೀಗೆ ನಿಲ್ಲಿಸುವುದಕ್ಕೆ ಗೊತ್ತಾದ ಸ್ಥಳಗಳಲ್ಲಿ ನಿಲ್ಲಿಸಿದರೆ ಅರ್ಥ ಕೆಡುವಂತಿರಬಾರದು.  ಅಲ್ಲಿಗೆ ಪದ ಮುಗಿದಿರಬೇಕು.  ಕನ್ನಡ ಕವಿಗಳು ಪ್ರಾಸ ನಿಯಮವನ್ನೂ ಪಾಲಿಸಿ ಯತಿಯ ನಿಯಮವನ್ನು ಪಾಲಿಸುವುದು ಕಷ್ಟವೆಂದು ಪ್ರಾಸಕ್ಕೇ ಪ್ರಾಧಾನ್ಯತೆ ಕೊಟ್ಟು, ಯತಿಯ ನಿಯಮವನ್ನು ಮಿಕ್ಕಿದ್ದಾರೆ.  ಸಂಸ್ಕೃತ ಕವಿಗಳು ಪ್ರಾಸನಿಯಮವನ್ನು ಪಾಲಿಸದೆ ಯತಿಯ ನಿಯಮವನ್ನು ಎಲ್ಲ ಕಡೆಗೂ ಪಾಲಿಸಿದ್ದಾರೆ.  ಆದ್ದರಿಂದ ಯತಿಯ ನಿಯಮವು ಕನ್ನಡ ಕಾವ್ಯಗಳಲ್ಲಿ ಅಷ್ಟು ಮುಖ್ಯವಲ್ಲ.  ಅದರ ವಿಷಯವಾಗಿ ಹೆಚ್ಚಿಗೆ ತಿಳಿಯಬೇಕಾದ ಅವಶ್ಯಕತೆಯಿಲ್ಲ.

() ಗಣಗಳು
(೧೦೨) ಗಣ ಎಂದರೆ ಗುಂಪು ಸಮೂಹ ಎಂದು ಅರ್ಥಛಂದಶ್ಯಾಸ್ತ್ರದಲ್ಲಿ ಗಣ ಎಂದರೆ-ಪದ್ಯದ ಪ್ರತಿಯೊಂದು ಪಾದದಲ್ಲೂ ವಿಭಾಗಿಸುವ ಮಾತ್ರೆಗಳ ಅಥವಾ ಅಕ್ಷರಗಳ ಗುಂಪು ಮತ್ತು ಅಂಶಗಳ ಗುಂಪು.
ಮಾತ್ರೆಗಳ ಲೆಕ್ಕದಿಂದ-ಮೂರುಮಾತ್ರೆ ಅಥವಾ ನಾಲ್ಕುಮಾತ್ರೆ ಮತ್ತು ಐದುಮಾತ್ರೆಗಳ ಗುಂಪುಗಳು ಕೆಲವು ಪದ್ಯಗಳಲ್ಲಿ ಬರುತ್ತವೆ.  ಅವೆಲ್ಲ ಮಾತ್ರಾಗಣಗಳು.  ಕೆಲವು ಪದ್ಯಗಳಲ್ಲಿ ಮೂರು ಅಕ್ಷರಗಳ ಗುಂಪುಗಳನ್ನು ವಿಭಾಗಿಸುವರು.  ಅವೆಲ್ಲ ಅಕ್ಷರಗಣಗಳು.  ಕೆಲವು ಪದ್ಯಗಳಲ್ಲಿ ಒಂದೊಂದು ಅಂಶಕ್ಕೆ ಒಂದೊಂದು ಗಣವನ್ನು ವಿಂಗಡಿಸುವರು.  ಅವೆಲ್ಲ ಅಂಶಗಣಗಳು.  ಮುಖ್ಯವಾಗಿ ಈಗ ಮಾತ್ರಾಗಣ, ಅಕ್ಷರಗಣಗಳ ವಿಷಯವನ್ನು ತಿಳಿದರೆ ಸಾಕು.

[1] (i) ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದ ಹಿಂದಿನ ಸ್ವರ ಹ್ರಸ್ವವಾಗಿದ್ದರೆ ಸಿಂಹಪ್ರಾಸ.  ಇದರ ಹಾಗೆಯೇ ಪ್ರಸಾಕ್ಷರದ ಪ್ರಾಸಾಕ್ಷರಗಳ-
(ii) ಹಿಂದಿನ ಸ್ವರವು ದೀರ್ಘವಾಗಿದ್ದರೆ ಗಜಪ್ರಾಸ.
(iii) ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಂ) ವಿದ್ದರೆ ವೃಷಭಪ್ರಾಸ.
(iv) ಪ್ರಾಸಾಕ್ಷರದ ಹಿಂದೆ ವಿಸರ್ಗ (ಃ) ವಿದ್ದರೆ ಅಜಪ್ರಾಸ.
(v) ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ.
(vi) ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ.  ಹೀಗೆ ಪ್ರಾಸದಲ್ಲಿ ಆರು ವಿಧಗಳನ್ನು ಹೇಳುವುದುಂಟು.  ಈ ಆರು ಪ್ರಾಸಗಳನ್ನು ನೆನಪಿನಲ್ಲಿಡಲು ಈ ಕೆಳಗಿನ ಪದ್ಯ ಸಹಕಾರಿ.
ನಿಜದಿಂ ಒಂದೊಡೆಸಿಂಹಂ || ಗಜದೀರ್ಘಂ ಬಿಂದುವೃಷಭ ವ್ಯಂಜನಶರಭಂ ||
ಅಜನು ವಿಸರ್ಗಂ ಹಯನಂ || ಬುಜಮುಖಿದಡ್ಡಕ್ಕರಂಗಳಿವು ಷಟ್ ಪ್ರಾಸಂ||
ಸಿಂಹ, ಗಜ, ವೃಷಭ, ಶರಭ, ಅಜ, ಹಯ-ಈ ಆರೂ ಪ್ರಾಸಗಳ ಸಂಕ್ಷೇಪ ಲಕ್ಷಣ ಈ ಪದ್ಯದಲ್ಲಿ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ