ನನ್ನ ಪುಟಗಳು

23 ಜೂನ್ 2024

Kannada-Letter-writing-Patra-Lekhana


Kannada-Essays-Prabhandagalu

ಪ್ರಬಂಧಗಳು 
೧. ಜನಸಂಖ್ಯಾ ಸ್ಫೋಟ - ಕಾರಣ - ಪರಿಹಾರ
    ಪ್ರಸ್ತಾವನೆ:- ಇಂದು ವಿಶ್ವದಲ್ಲಿ ತಲೆದೋರಿರುವ ಅನೇಕ ಜಟಿಲ ಸಮಸ್ಯೆಗಳಲ್ಲಿ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯೂ ಒಂದು ಪ್ರಮುಖ ಸಮಸ್ಯೆಯಾಗಿದೆ. ಒಂದು ದೇಶದ ಮಿತಿಮೀರಿದ ಜನಸಂಖ್ಯಾ ಬೆಳವಣಿಗೆಯನ್ನು ’ಜನಸಂಖ್ಯಾ ಸ್ಫೋಟ’ ಎನ್ನುವರು. ಜನಸಂಖ್ಯಾ ಸ್ಫೋಟ ಜನರ ಬದುಕಿನ ಮೇಲೆ ದುಷ್ಪರಿಣಾವನ್ನು ಬೀರುತ್ತದೆ. ದೇಶದ ಪ್ರಗತಿಗೆ ಮಾರಕವಾಗುತ್ತದೆ. ಭಾರತ ದೇಶದಲ್ಲಂತೂ ಜನಸಂಖ್ಯೆ ಮಿತಿಮೀರಿ ಬೆಳೆದು ದೇಶದ ಅಭಿವೃದ್ಧಿಯು ಕುಂಠಿತವಾಗಿದೆ.
    ವಿಷಯ ನಿರೂಪಣೆ:- ಜನಸಂಖ್ಯಾ ಬೆಳವಣಿಗೆ ಕಾರಣವೇನೆಂದರೆ ಹವಾಮಾನ, ಭೌಗೋಳಿಕ ಪರಿಸರ, ಅಜ್ಞಾನ, ಬಡತನ, ಅನಕ್ಷರತೆ, ವೈದ್ಯಕೀಯ ಕ್ಷೇತ್ರದ ಪ್ರಗತಿಯಿಂದ ಜನನದಲ್ಲಿ ಏರಿಕೆ - ಮರಣದಲ್ಲಿ ಇಳಿಕೆ, ಅವಿಭಕ್ತ ಕುಟುಂಬ ಪದ್ಧತಿ, ಬಾಲ್ಯ ವಿವಾಹ, ವಲಸೆ, ಪುತ್ರ ವ್ಯಾಮೋಹ, ಮೂಢನಂಬಿಕೆ, ಕುಟುಂಬ ಯೋಜನೆಯ ವಿಫಲತೆ, ಇತ್ಯಾದಿ. ಮಿತಿಮೀರಿದ ಜನಸಂಖ್ಯಾ ಬೆಳವಣಿಗೆಯಿಂದ ದೇಶದಲ್ಲಿ ಅನಾರೋಗ್ಯ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಆಹಾರ ಸಮಸ್ಯೆ, ವಸತಿ ಸಮಸ್ಯೆ, ಶೈಕ್ಷಣಿಕ ಸಮಸ್ಯೆ ಉಂಟಾಗುತ್ತದೆ. ಮಿತಿಮೀರಿದ ಜನಸಂಖ್ಯಾ ಬೆಳವಣಿಗೆಗೆ ಕಡಿವಾಣ ಹಾಕುವುದು ಇಂದಿನ ತುರ್ತು ಅಗತ್ಯವಾಗಿದೆ. ’ಸಣ್ಣ ಕುಟುಂಬ ಸುಖೀ ಕುಟುಂಬ’ ಎಂಬುದನ್ನು ತಿಳಿಸಿ ಹೇಳುವ ಪ್ರಯತ್ನಗಳಾಗಬೇಕು. ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕು. ಜನರಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡಬೇಕು. ’ಕುಟುಂಬಕ್ಕೆ ಒಂದು ಮಗು; ದೇಶಕ್ಕೆ ನಗು’ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡಬೇಕು. ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರಿಗೆ ಸರ್ಕಾರದ ಯಾವ ಸೌಲಭ್ಯಗಳು ದೊರೆಯಬಾರದು. ಒಂದು ಮಗುವನ್ನು ಮಾತ್ರ ಪಡೆದ ದಂಪತಿಗಳಿಗೆ ವಿಶೇಷ ಸೌಲಭ್ಯಗಳನ್ನು / ಪ್ರೋತ್ಸಾಹ ಧನವನ್ನು ನೀಡಬೇಕು. ಇಂತಹ ಕಾರ್ಯಕ್ರಮಗಳಿಂದ ಮಾತ್ರ ಜನಸಂಖ್ಯಾ ಬೆಳವಣಿಗೆಯನ್ನು ಹತೋಟಿಗೆ ತರಬಹುದಾಗಿದೆ.
    ಉಪ ಸಂಹಾರ:- ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಜನಸಂಖ್ಯಾ ಬೆಳವಣಿಗೆಯನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕನು ಕಂಕಣಬದ್ಧನಾಗಬೇಕು. ಬಾಲ್ಯ ವಿವಾಹಗಳು ನಡೆಯುವುದನ್ನು ಕಂಡರೆ ತಕ್ಷಣ ಸಂಬಂಧಪಟ್ಟವರಿಗೆ ತಿಳಿಸಿ ವಿವಾಹವನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳು ಜನರಲ್ಲಿ ಸಣ್ಣಕುಟುಂಬದ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.


೨. ವರದಕ್ಷಿಣೆ ಮತ್ತು ಅದರ ನಿವಾರಣೆ
    ಪ್ರಸ್ತಾವನೆ : ತಲೆತಲಾಂತರದಿಂದ ಸಮಾಜಕ್ಕೆ ಅಂಟಿಕೊಂಡು ಬಂದ ಸಾಮಾಜಿಕ ಪಿಡುಗುಗಳಿವೆ. ವರದಕ್ಷಿಣೆ, ಸತಿ ಪದ್ಧತಿ, ಬಾಲ್ಯವಿವಾಹ, ಅಸ್ವೃಶ್ಯತೆ, ಕುಡಿತ, ಜೀತ ಪದ್ಧತಿ, ದೇವದಾಸಿ ಇತ್ಯಾದಿ. ಇವೆಲ್ಲವೂ ನಮ್ಮ ಸಮಾಜದಲ್ಲಿ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ. ಇವುಗಳು ಒಂದು ಸುಂದರ ನಾಗರಿಕ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿವೆ.
    ವಿಷಯ ನಿರೂಪಣೆ:- ವರದಕ್ಷಿಣೆ ಎಂದರೆ ಮದುವೆಯ ಸಮಯದಲ್ಲಿ ಹೆಣ್ಣು ಹೆತ್ತವರು ಮದುವೆಯ ಗಂಡಿಗೆ ಕೊಡಬೇಕಾದ ದಕ್ಷಿಣೆ. ಇದು ಅವರವರ ಅಂತಸ್ತಿಗೆ ಅನುಸಾರವಾಗಿ ಸಾವಿರ ಲಕ್ಷಗಳ ಮೊತ್ತದಲ್ಲಿರುತ್ತದೆ. ವರದಕ್ಷಿಣೆಯನ್ನು ಮೊದಮೊದಲು ಹೆಣ್ಣು ಹೆತ್ತವರು ಪ್ರೀತಿಯಿಂದ ಕೊಡುತ್ತಿದ್ದರು. ಕೊಡಲೇ ಬೇಕೆಂಬ ಒತ್ತಾಯವಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ವರದಕ್ಷಿಣೆ ಕೊಡುವುದು ಕಡ್ಡಾಯ ಎನ್ನುವಂತೆ ಆಗಿದೆ. ಗಂಡುಗಳು ಸಹ ವರದಕ್ಷಿಣೆ ಪಡೆಯುವುದು ತಮ್ಮ ಹಕ್ಕು ಎನ್ನುವಂತೆ ವರ್ತಿಸುತ್ತಿದ್ದಾರೆ. ವರದಕ್ಷಿಣೆ ಕೊಡದಿದ್ದರೆ ಹೆಣ್ಣಿಗೆ ಸೂಕ್ತ ಗಂಡು ದೊರೆಯುವುದಿಲ್ಲ ಎಂಬ ಭಯದಿಂದ ಹೆಣ್ಣು ಹೆತ್ತವರು ಆಸ್ತಿ ಅಡವಿಟ್ಟು ಅಥವಾ ಸಾಲ ಮಾಡಿ ಈ ಹಣವನ್ನು ಹೊಂದಿಸಿಕೊಂಡು ಗಂಡಿಗೆ ಕೊಡುತ್ತಾರೆ. ವರದಕ್ಷಿಣೆಯ ಮೊತ್ತವನ್ನು ಮದುವೆಯ ಸಮಯದಲ್ಲಿ ಪೂರ್ಣವಾಗಿ ಕೊಡಲಾಗದೆ ಬಾಕಿ ಉಳಿಸಿಕೊಂಡರೆ ಬಾಕಿ ಹಣ ತರುವ ತನಕ ಹೆಣ್ಣಿಗೆ ಗಂಡನ ಮನೆಯಲ್ಲಿ ಕಿರುಕುಳ. ಇಲ್ಲಿ ಹಣನೇ ಪ್ರಧಾನವಾಗಿ ಪ್ರೀತಿಯು ಗೌಣವಾಗಿ, ಹೆಣ್ಣು ಗಂಡಿನ ಬಾಂಧವ್ಯದಲ್ಲಿ ದೊಡ್ಡ ಬಿರುಕು ಉಂಟಾಗುತ್ತಿದೆ. ಸರ್ಕಾರ ವರದಕ್ಷಿಣೆ ನಿಷೇಧ ಕಾನೂನು ಜಾರಿಗೆ ತಂದಿದೆ. ಆದರೂ ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸಮಾಜದ ಜನರ ಮನಃಪರಿವರ್ತನೆಯಾಗದೆಯಿದ್ದರೆ ಯಾವ ಕಾನೂನು ಬಂದರೂ ಪ್ರಯೋಜನವಿಲ್ಲ. ವರ ಹಾಗೂ ಅವರ ಕಡೆಯವರು ಹೆಣ್ಣು ಹೆತ್ತವರ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು.
    ಉಪಸಂಹಾರ:- ವರದಕ್ಷಿಣೆ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು. ಮದುವೆ ಎಂಬುದು ವ್ಯಾಪಾರವಲ್ಲ ಅದೊಂದು ಪ್ರೀತಿಯ ಬಾಂಧವ್ಯ ಎಂಬ ಅರಿವನ್ನು ಮೂಡಿಸುವುದು. ಹೆಣ್ಣು ಮಕ್ಕಳು ವರದಕ್ಷಿಣೆ ಕೇಳುವ ಗಂಡನ್ನು ಮದುವೆಯಾಗದೆ ಬಹಿಷ್ಕರಿಸುವುದು. ವರದಕ್ಷಿಣೆ ಕಿರುಕುಳ ನೀಡುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದು. ಮೊದಲಾದ ಕ್ರಮಗಳಿಂದ ವರದಕ್ಷಿಣೆ ಪಿಡುಗನ್ನು ತಡೆಗಟ್ಟಬಹುದು ಎಂಬುದು ನನ್ನ ಸ್ವಷ್ಟ ಅಭಿಪ್ರಾಯವಾಗಿದೆ.



೩. ಬಾಲಕಾರ್ಮಿಕರ ಪದ್ಧತಿ
    ಪ್ರಸ್ತಾವನೆ:- ೫ ರಿಂದ ೧೬ ವರ್ಷ ವಯಸ್ಸಿನ ದುಡಿಯುವ ಮಕ್ಕಳನ್ನು ’ಬಾಲಕಾರ್ಮಿಕರು’ ಎನ್ನುವರು. ಬಾಲಕರು ಅನೇಕ ಕಾರಣಗಳಿಂದಾಗಿ ನಾಲ್ಕು ಐದು ವರ್ಷವಾಗುತ್ತಿದ್ದ ಹಾಗೆ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿಗೆ ಒಳಗಾಗುತ್ತಾರೆ. ಬಡ ಕುಟುಂಬದಲ್ಲಿ ಜನಿಸಿದ ಬಾಲಕರು ಹಸಿವಿನ ತೊಂದರೆಗೆ ಸಿಲುಕುವ ಕಾರಣ, ಅದರಿಂದ ತಪ್ಪಿಸಿಕೊಳ್ಳಲು ಯಾವುದದರೂ ಒಂದು ಕೆಲಸ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳಲು ಹವಣಿಸುತ್ತಾರೆ.
    ವಿಷಯ ನಿರೂಪಣೆ: ಬಾಲಕಾರ್ಮಿಕರು ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲೂ ಇದ್ದಾರೆ. ಮಾಲೀಕನಿಗೆ ಅತ್ಯಂತ ಕಡಿಮೆ ಕೂಲಿಯಲ್ಲಿ ಪ್ರಾಮಾಣಿಕವಾಗಿ ದುಡಿಯುವ ಕೈಗಳು ಬೇಕಾದುದು, ಚಿಕ್ಕವಯಸ್ಸಿನ ಕೆಲವು ಮಕ್ಕಳು ಮನೆ ಬಿಟ್ಟು ಬಂದು ನಗರ ಸೇರಿಕೊಳ್ಳುವುದು ಬಾಲಕಾರ್ಮಿಕರ ಹೆಚ್ಚಳಕ್ಕೆ ಕಾರಣ. ಭಾರತ ಹಳ್ಳಿಗಳ ದೇಶ. ಹಳ್ಳಿಗಳಲ್ಲಿ ವ್ಯವಸಾಯದ ಬದುಕನ್ನು ಬಿಟ್ಟರೆ ಬೇರೆ ಉದ್ಯೋಗಗಳ ಬೆಳವಣಿಗೆ ಅವಕಾಶವಿಲ್ಲ. ವ್ಯವಸಾಯವೊಂದನ್ನೇ ನಂಬಿದ ಜನರಿಗೆ ಸಾಕಷ್ಟು ಉದ್ಯೋಗ ವರ್ಷಪೂರ್ತಿ ದೊರೆಯುವುದಿಲ್ಲ. ನಗರಕ್ಕೆ ವಲಸೆ ಬರತೊಡಗಿದ ಹಳ್ಳಿಯವರು ಕೆಲಕಾಲ ನಗರದಲ್ಲಿದ್ದು, ಪುನಃ ಹಳ್ಳಿಗೆ ಹಿಂತಿರುಗಲು ಬಯಸುವುದಿಲ್ಲ. ಹತ್ತು - ಹದಿನೈದು ವಯಸ್ಸಿನವರೆಗೆ ಅಲ್ಪ ಸ್ವಲ್ಪ ವಿದ್ಯೆ ಕಲಿತ ಮಕ್ಕಳು ತಂದೆ - ತಾಯಿಯರಿಗೆ ನೆರವಾಗುವ ಆಸೆಯಿಂದ ಚಿಕ್ಕಪುಟ್ಟ ಕೆಲಸಗಳಿಗೆ ಸೇರಿಕೊಂಡರು. ಮಕ್ಕಳು ಕಾರ್ಮಿಕರಾಗಿ ದುಡಿಯುವ ಸನ್ನಿವೇಶ ಹಾಗೂ ಅವಶ್ಯಕತೆ ಎರಡೂ ಸೇರಿಕೊಂಡು ಬಾಲಕಾರ್ಮಿಕರ ಬಗೆಗೆ ನಾವಿಂದು ಚಿಂತಿಸುವಂತಾಗಿದೆ. ಕೆಲವು ಮಕ್ಕಳು ಮಹತ್ವಾಕಾಂಕ್ಷಿಗಳಾಗಿದ್ದು, ಆದರ್ಶವನ್ನೂ ನಂಬಿಕೊಂಡವರು. ನಿರಾಶರಾಗಿ ಬದುಕಿಗೆ ಮುಖ ತಿರುಗಿಸುವ ಮಕ್ಕಳ ಸಂಖ್ಯೆಯೂ ಹೆಚ್ಚದೆ. ಇಂತಹ ನಿರಾಶೆ ಅನುಭವಿಸಿದ ಮಕ್ಕಳು ಸಣ್ಣ ಪುಟ್ಟ ಅಪರಾಧಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಮತ್ತು ಬಾಲಾಪರಾಧಿಗಳಾಗುತ್ತಾರೆ. ಇದು ಬಾಲಕಾರ್ಮಿಕರ ಇನ್ನೊಂದು ಮುಖ. ಇಂದು ಬಾಲಕಾರ್ಮಿಕ ಪದ್ಧತಿಯನ್ನು ಸರ್ಕಾರ ನಿಷೇಧಿಸಿದೆ. ಬಾಲಕಾರ್ಮಿಕರನ್ನು ದುಡಿಸಿಕೊಳ್ಳವುದು ಶಿಕ್ಷಾರ್ಹ ಅಪರಾಧವಾಗಿದೆ. 
    ಉಪಸಂಹಾರ: ಆದರೂ ಇನ್ನೂ ಕೆಲವು ಕಡೆ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರನ್ನು ಸಂರಕ್ಷಿಸಿ, ಇಂತಹ ಮಕ್ಕಳಿಗೆ ವಿದ್ಯೆ ಕಲಿಯಲು ಸೂಕ್ತ ವ್ಯವಸ್ಥೆ ಮಾಡಬೇಕು. ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡಬೇಕು. ಬಾಲಕಾರ್ಮಿಕರ ಬಗೆಗೆ ಸರಕಾರ, ತಂದೆ ತಾಯಿಯರ ಸಮಾಜ ಎಚ್ಚರ ವಹಿಸುವುದು ಅತ್ಯಗತ್ಯ ಎಂಬುದು ನನ್ನ ಅಭಿಪ್ರಾಯವಾಗಿದೆ.



೪. ಬಾಲ್ಯವಿವಾಹ
    ಪ್ರಸ್ತಾವನೆ:- ತಲೆತಲಾಂತರದಿಂದ ಸಮಾಜಕ್ಕೆ ಅಂಟಿಕೊಂಡು ಬಂದ ಸಾಮಾಜಿಕ ಪಿಡುಗುಗಳು ವರದಕ್ಷಿಣೆ, ಸತಿಪದ್ಧತಿ, ಬಾಲ್ಯವಿವಾಹ, ಅಸ್ವೃಶ್ಯತೆ, ಕುಡಿತ, ಜೀತಪದ್ಧತಿ, ದೇವದಾಸಿ ಇತ್ಯಾದಿ. ಇವೆಲ್ಲವೂ ನಮ್ಮ ಸಮಾಜದಲ್ಲಿ ಬೇರು ಬಿಟ್ಟವುಗಳು. ಯಾವ ಶಾಸನಕ್ಕೂ ಜಗ್ಗದವುಗಳು. ಇವುಗಳಿಂದ ಸಾಮಾಜಿಕ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ. ಇವುಗಳು ಒಂದು ಸುಂದರ ನಾಗರಿಕ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿವೆ.
    ವಿಷಯ ನಿರೂಪಣೆ: ಹೆಣ್ಣು ಮಕ್ಕಳಿಗೆ ೧೮ ವರ್ಷ ತುಂಬುವುದಕ್ಕೆ ಮೊದಲು ಹಾಗೂ ಗಂಡು ಮಕ್ಕಳಿಗೆ ೨೧ ವರ್ಷ ತುಂಬುವುದರಲ್ಲೆ ಮೊದಲು ಮಾಡುವ ವಿವಾಹಗಳನ್ನು ’ಬಾಲ್ಯ ವಿವಾಹ’ ಎನ್ನುವರು. ಹೆಣ್ಣು ಮಕ್ಕಳಿಗೆ ವಯಸ್ಸು ಆದನಂತರ ಮದುವೆ ಮಾಡಿದರೆ ಸೂಕ್ತ ಗಂಡು ದೊರೆಯುವುದಿಲ್ಲ ಎಂಬ ಹೆತ್ತವರ ಸ್ವಾರ್ಥ ಮನೋಭಾವನೆಯ ಮೂಢನಂಬಿಕೆಯಿಂದ ಇಂತಹ ಮದುವೆಗಳು ನಡೆಯುತ್ತಿವೆ. ಅನಕ್ಷರತೆ ಮತ್ತು ಬಡತನವು ಸಹ ಬಾಲ್ಯ ವಿವಾಹಕ್ಕೆ ಕಾರಣವಾಗಿದೆ. ಸಣ್ಣ ವಯಸ್ಸಿಗೆ ಮದುವೆಯಾದರೆ ಸಂಸಾರದ ಬಗ್ಗೆ ಅರಿವಿಲ್ಲದೆ ಇರುವುದರಿಂದ ಅನೇಕ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತವೆ. ದೇಹ ಸಧೃಢವಾಗಿಲ್ಲದಿರುವುದರಿಂದ ಸಣ್ಣ ವಯಸ್ಸಿಗೆ ಮದುವೆಯಾದ ಹೆಣ್ಣು ಚಿಕ್ಕ ವಯಸ್ಸಿಗೆ ಮಕ್ಕಳನ್ನು ಹೆರುವುದರಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಹುಟ್ಟಿದ ಮಕ್ಕಳು ಸಹ ಅಪೌಷ್ಟಿಕತೆಯಿಂದ ನರಳುತ್ತಾರೆ. ಬಾಲ್ಯ ವಿವಾಹ ಜನಸಂಖ್ಯಾ ಸ್ಫೋಟಕ್ಕೂ ಸಹ ಕಾರಣವಾಗುತ್ತದೆ. ಆದ್ದರಿಂದ ಭಾರತ ಸರ್ಕಾರ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಗೆ ತಂದಿದೆ. ಆದರೂ ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸಮಾಜದ ಜನರ ಮನಃಪರಿವರ್ತನೆಯಾಗದೆಯಿದ್ದರೆ ಯಾವ ಕಾನೂನು ಬಂದರೂ ಪ್ರಯೋಜವವಿಲ್ಲ. ತಂದೆ - ತಾಯಿ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆಯೂ ಸಹ ಚಿಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹವನ್ನು ಮಾಡಬಾರದು.
    ಉಪಸಂಹಾರ: ಬಾಲ್ಯ ವಿವಾಹದೊಂದಿಗೆ ದುಷ್ಪರಿಣಾಮಗಳನ್ನು ಕುರಿತು ಜನರಿಗೆ ಅರಿವು ಮೂಡಿಸಬೇಕು. ಬಾಲ್ಯ ವಿವಾಹ ನಡೆಯುತ್ತಿರುವುದು ನಮಗೆ ತಿಳಿದ ಕೂಡಲೇ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿ ಬಾಲ್ಯ ವಿವಾಹ ನಡೆಯದಂತೆ ತಡೆಗಟ್ಟಬೇಕು. ಬಾಲ್ಯ ವಿವಾಹಕ್ಕೆ ಕಾರಣವಾದ ಎಲ್ಲರಿಗೂ ಕಾನೂನಿನಂತೆ ಶಿಕ್ಷೆ ನೀಡಬೇಕು. ನಮ್ಮ ನಮ್ಮ ಮನೆಗಳಲ್ಲಿ, ಗ್ರಾಮಗಳಲ್ಲಿ ಬಾಲ್ಯ ವಿವಾಹ ಮಾಡದಂತೆ ಮನವಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತಿ ಮೂಡಿಸಿ ಸರ್ಕಾರದೊಡನೆ ಸಹಕರಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.


೫. ಮಳೆ ನೀರು ಕೊಯ್ಲು
    ಪ್ರಸ್ತಾವನೆ: ನೀರು ಜೀವನಾವಶ್ಯಕ ವಸ್ತು. ಸಕಾಲಕ್ಕೆ ಮಳೆಯಾಗದೆ ನೀರಿನ ಕ್ಷಾಮ ಉಂಟಾಗುತ್ತಿದೆ. ಇಂದು ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಆದ್ದರಿಂದ ನೀರಿನ ಮೂಲಗಳನ್ನು ಸಂರಕ್ಷಿಸುವುದು ಇಂದಿನ ಅತ್ಯಗತ್ಯವಾದ ಕಾರ್ಯವಾಗಿದೆ. ಇಂತಹ ಕಾರ್ಯಗಳಲ್ಲಿ ಮಳೆನೀರು ಕೊಯ್ಲು ವಿಧಾನ ಸಹ ಒಂದಾಗಿದೆ.
    ವಿಷಯ ನಿರೂಪಣೆ: ಮಳೆನೀರು ಕೊಯ್ಲು ಎಂಬುದು ಮಳೆನೀರನ್ನು ಒಟ್ಟುಗೂಡಿಸುವ ಅಥವಾ ಸಂಚಯನ ಮಾಡುವ ಮತ್ತು ಶೇಖರಿಸಿಟ್ಟುಕೊಳ್ಳುವ ವಿಧಾನಕ್ಕಿರುವ ಹೆಸರು. ಕುಡಿಯುವ ನೀರನ್ನು ಒದಗಿಸಲು, ಜಾನುವಾರುಗಳಿಗೆ ನೀರುಣಿಸಲು, ನೀರಾವರಿಗಾಗಿ ನೀರಿನ ವ್ಯವಸ್ಥೆ ಮಾಡಲು ಅಥವಾ ಅಂತರ್ಜಲ ಪುನರ್ಭರ್ತಿಕಾರ್ಯ ಎಂದು ಕರೆಯಲಾಗುವ ಪ್ರಕ್ರಿಯೊಂದರಲ್ಲಿ ನೀರುಪೊಟರೆಯನ್ನು ಪುನಃ ತುಂಬಿಸಲು ಮಳೆನೀರು ಕೊಯ್ಲುಪದ್ಧತಿಯನ್ನು ಬಳಸಿಕೊಂಡು ಬರೆಯಲಾಗಿದೆ. ಮನೆಗಳು, ಗುಡಾರಗಳು ಮತ್ತು ಸ್ಥಳೀಯ ಸಾರ್ವಜನಿಕ ಕಟ್ಟಡಗಳ ಛಾವಣಿಗಳಿಂದ ಅಥವಾ ವಿಶೇಷವಾಗಿ ಸಿದ್ಧಗೊಳಿಸಲಾದ ನೆಲದ ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರು, ಕುಡಿಯುವ ನೀರಿಗೆ ತನ್ನದೇ ಆದ ಪ್ರಮುಖ ಕೊಡುಗೆಯನ್ನು ನೀಡಬಲ್ಲದು. ಛಾವಣಿಯ ಮಳೆನೀರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ್ದಾಗಿ ಇರುತ್ತದೆ. ಆದ್ದರಿಂದ, ಬಳಕೆಗೆ ಮೊದಲು ಅದನ್ನು ಸಂಸ್ಕರಿಸುವ ಅಗತ್ಯ ಕಂಡು ಬರುವುದಿಲ್ಲ. ಸರಳವಾದ ವಿಧಾನದಿಂದ ಮೊದಲ್ಗೊಂಡು ಸಂಕೀರ್ಣವಾದ ಕೈಗಾರಿಕಾ ವ್ಯವಸ್ಥೆಗಳವರೆಗೆ ಮಳೆ ನೀರನ್ನು ಕೊಯ್ಲು ಮಾಡಲು ಹಲವಾರು ವಿವಿಧ ವ್ಯವಸ್ಥೆಗಳಿವೆ. ಸಾಮಾನ್ಯವಾಗಿ ಮಳೆನೀರನ್ನು ನೆಲದಿಂದ ಇಲ್ಲವೆ ಛಾವಣಿಯೊಂದರಿಂದ ವೇಗವು ಸದರಿ ವ್ಯವಸ್ಥೆಯ ಯೋಜನಾ ಪ್ರದೇಶ, ಅದರ ಸಾಮರ್ಥ್ಯ ಮತ್ತು ಮಳೆಸುರಿತದ ತೀವ್ರತೆಯನ್ನು ಅವಲಂಬಿಸಿರುತ್ತದೆ. ಮಳೆನೀರನ್ನು ಅಂತರ್ಜಲ ಪುನರ್ಭರ್ತಿ ಕಾರ್ಯಕ್ಕೂ ಬಳಸಬಹುದಾಗಿದ್ದು ಇದರಲ್ಲಿ ನೆಲದ ಹೀರಿಕೆಗೆ ಒಳಗಾಗುವುದರ ಮೂಲಕ ಅಂತರ್ಜಲದ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಗುತ್ತದೆ.
    ಉಪಸಂಹಾರ: ಸ್ಥಳೀಯವಾಗಿ ದೊರೆಯುವ ಹೆಚ್ಚು ದುಬಾರಿಯಲ್ಲದ ಸಾಮಗ್ರಿಗಳಿಂದ ಮಳೆನೀರು ಕೊಯ್ಲಿನ ವ್ಯವಸ್ಥೆಗಳನ್ನು ಸರಳವಾಗಿ ನಿರ್ಮಿಸಬಹುದು. ಬಹುತೇಕ ವಾಸಯೋಗ್ಯ ತಾಣಗಳಲ್ಲಿ ಇದು ಯಶಸ್ವಿಯಾಗಿದೆ. ಆದ್ದರಿಂದ ಜನರು ಈ ಬಗ್ಗೆ ಹೆಚ್ಚು ಗಮನಹರಿಸಿ. ತಮ್ಮ ತಮ್ಮ ಮನೆಗಳಲ್ಲಿ, ಹೊಲಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿಕೊಂಡರೆ ನೀರಿನ ಸಮಸ್ಯೆಯನ್ನು ಬಹುಮಟ್ಟಿಗೆ ನಿವಾರಿಸಿಕೊಳ್ಳಬಹುದಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.



೬. ಸಾವಯವ ಬೇಸಾಯ
    ಪ್ರಸ್ತಾವನೆ:- ಇಂದು ಕೃಷಿ ಕ್ಷೇತ್ರದಲ್ಲಿ ಅನೇಕ ರೀತಿಯ ಸಂಶೋಧನೆಗಳು ನಡೆಯುತ್ತಿವೆ. ಪಾರಂಪರಿಕ ಕೃಷಿ ಪದ್ಧತಿ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಸಾಧಕ ಬಾಧಕಗಳ ಬಗ್ಗೆ ಕೃಷಿ ವಿಜ್ಞಾನಿಗಳು ಚರ್ಚೆ ನಡೆಸುತ್ತಿದ್ದರೆ, ಹೊಸಹೊಸ ಪ್ರಯೋಗಗಳು ನಡೆಯುತ್ತಿವೆ. ಇದರ ಫಲಸ್ವರೂಪವಾಗಿ ಬಂದಿರುವುದೇ ಸಾವಯವ ಬೇಸಾಯ ಪದ್ಧತಿ.
    ವಿಷಯ ವಿಸ್ತರಣೆ:- ಬೆಳೆಯ ಆವರ್ತನೆ, ಹಸಿರು ಗೊಬ್ಬರ, ಮಿಶ್ರಗೊಬ್ಬರ, ಜೈವಿಕವಾಗಿ ಕೀಟಗಳ ನಿಯಂತ್ರಣಗಳನ್ನು ಅವಲಂಬಿತಗೊಂಡಿರುವುದೇ ಸಾವಯವ ಬೇಸಾಯ. ಹಲವು ರಾಷ್ಟ್ರಗಳಲ್ಲಿ ಸಾವಯವ ಬೇಸಾಯ ಪದ್ಧತಿಗಳನ್ನು ಅಂತಾರಾಷ್ಟ್ರೀಯವಾಗಿ ನಿಯಮಗಳಿಗೊಳಪಡಿಸಲಾಗಿದೆ ಅಂತರರಾಷ್ಟ್ರೀಯವಾಗಿ ನಿಯಮಗಳಿಗೊಳಪಡಿಸಲಾಗಿದೆ. ಅಂತಾರಾಷ್ಟ್ರೀಯ ಆಶ್ರಯ ಸಂಘಟನೆಯ ಸಾವಯವ ಸಮಷ್ಟಿಯನ್ನು ರಚಿಸುವುದಕ್ಕಾಗಿ ೧೯೭೨ರಲ್ಲಿ ಸ್ಥಾಪಿಸಲಾಗಿದೆ. ಸಾವಯವ ಚಳವಳಿ ೧೯೩೦ - ೧೯೪೦ ರ ದಶಕದಲ್ಲಿ ಬೇಸಾಯ ಕ್ಷೇತ್ರವನ್ನು ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು. ಸರ್. ಆಲ್ಬರ್ಟ್ ಹೊವಾರ್ಡ್ ಅವರನ್ನು ಸಾವಯವ ಬೇಸಾಯದ ಪಿತಾಮಹನೆಂದು ವಿಶೇಷವಾಗಿ ಪರಿಗಣಿಸಲಾಗಿದೆ. ವಿಶ್ವದ ಒಟ್ಟು ಕೃಷಿ ಉತ್ವನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯವ ಉತ್ಪನ್ನ ಸಣ್ಣ ಪ್ರಮಾಣವೆನಿಸುತ್ತದೆಯಾದರೂ ಅದು ಅನೇಕ ರಾಷ್ಟ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಸಾವಯವ ವ್ಯವಸಾಯವು ಅರ್ಥಪೂರ್ಣವಾದ ಸಾಮಾಜಿಕ ಆರ್ಥಿಕ ಮತ್ತು ಪರಿಸರ ವಿಜ್ಞಾನದ ಸಮರ್ಥನೀಯ ಬೆಳವಣಿಗೆಗಾಗಿ, ವಿಶೇಷವಾಗಿ ಬಡ ರಾಷ್ಟ್ರಗಳ ಬೆಳವಣಿಗೆಗೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ. ಹಲವು ರಾಷ್ಟ್ರಗಳಲ್ಲಿ ಸಾವಯವ ಬೇಸಾಯ ಪದ್ಧತಿಗಳನ್ನು ಅಂತಾರಾಷ್ಟ್ರೀಯವಾಗಿ ನಿಯಮಗಳಿಗೆ ಒಳಪಡಿಸಲಾಗಿದೆ ಮತ್ತು ಕಾನೂನುಬದ್ಧವಾಗಿ ವಿಧಿಸಲಾಗಿದೆ. ಕರ್ನಾಟಕದಲ್ಲಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲೆಂದು ’ಸಾವಯವ ಕೃಷಿ ಮಿಷನ್’ ರಚಿಸಲಾಗಿದೆ.
    ಉಪಸಂಹಾರ: ಸಾವಯವ ವ್ಯವಸಾಯವು ಒಂದು ಉತ್ತಮ ಜ್ಞಾನಯುಕ್ತ ಕೇಂದ್ರಿಕೃತ ಉತ್ಪಾದನೆಯ ವ್ಯವಸ್ಥೆಯಾಗಿದೆ. ಇಷ್ಟಲ್ಲದೆ ಹೆಚ್ಚು ಇಳುವರಿ ನೀಡುವ ಬೇಸಾಯ ವ್ಯವಸ್ಥೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ. ಆದ್ದರಿಂದ ಇದನ್ನು ರೈತರು ಆಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬಹುದೆಂಬುದು ನನ್ನ ಅಭಿಪ್ರಾಯವಾಗಿದೆ.



೭. ಕ್ರೀಡೆಗಳ ಮಹತ್ವ
    ಪೀಠಿಕೆ: ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬುದು ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಮಾತಾಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸಗಳನ್ನು ಸರಾಗವಾಗಿ ಮಾಡಿಕೊಂಡು ಹೋಗಲು ಆರೋಗ್ಯವಾಗಿರಬೇಕು. ಅದರ ಜೊತೆಗೆ ಮಾನಸಿಕವಾಗಿಯೂ ಸದೃಢವಾಗಿರಬೇಕು. ಇವೆರಡನ್ನು ಸರಿಯಾಗಿ ಇಟ್ಟುಕೊಳ್ಳಬೇಕಾದರೆ ವ್ಯಾಯಾಮ, ಯೋಗ, ಧ್ಯಾನ, ಕ್ರೀಡೆಗಳು ಸಹಕಾರಿಯಾಗಬಲ್ಲವು.
    ವಿಷಯ ವಿವರಣೆ : ಬಾಲಸ್ಥಾವ ಕ್ರೀಡಾಸಕ್ತ ಎಂಬ ಮಾತಿನಂತೆ ಸಹಜವಾಗಿ ಎಲ್ಲರೂ ಬಾಲಕರಾಗಿದ್ದಾಗ ಕ್ರೀಡೆಗಳಲ್ಲಿ ಆಸಕ್ತರಾಗಿರುತ್ತಾರೆ. ಬಾಲ್ಯದಲ್ಲಿಯೇ ಸದೃಢದೇಹವನ್ನು ಬೆಳೆಸಿಕೊಳ್ಳಲು ಕ್ರೀಡೆಗಳು ಅತ್ಯಂತ ಸಹಕಾರಿಯಾಗುತ್ತವೆ. ಆದ್ದರಿಂದಲೆ ಶಾಲಾ-ಕಾಲೇಜುಗಳಲ್ಲಿ ಕ್ರೀಡೆಗಳನ್ನು ಆಡಿಸುತ್ತಾರೆ. ಕ್ರೀಡೆಗಳಿಂದ ಪ್ರತಿಯೊಬ್ಬರು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಸಬಲರಾಗಬಹುದು. ಕ್ರೀಡೆಗಳಿಂದ ನಾಯಕತ್ವ ಗುಣ, ಧೈರ್ಯ, ಪ್ರಾಮಾಣಿಕತೆ, ಹೊಂದಾಣಿಕೆ, ಸಹಕಾರ, ಶಿಸ್ತು, ಸಂಯಮ, ಮನಸ್ಸಿನ ಸ್ಥಿರತೆ, ದೈಹಿಕ ಶಕ್ತಿ, ರೋಗ ನಿರೋಧಕ ಗುಣ, ಉತ್ತಮ ಆರೋಗ್ಯ ಇತ್ಯಾದಿ ಅವಶ್ಯಕ ಗುಣಾಂಶಗಳನ್ನು ಪಡೆಯಬಹುದು. ಕಬಡ್ಡಿ, ಖೋಖೋ, ವಾಲಿಬಾಲ್, ಕುಸ್ತಿ, ಓಟಗಳಂತಹ ಆಟಗಳು ಪ್ರತಿಯೊಬ್ಬರನ್ನು ದೈಹಿಕವಾಗಿ ಬೆಳೆಸಿದರೆ, ಚೆಸ್, ಕೇರಂ, ಹಾವು-ಏಣಿ ಆಟ, ಪಗಡೆ ಆಟ ಇತ್ಯಾದಿ ಆಟಗಳು ನಮ್ಮನ್ನು ಮಾನಸಿಕವಾಗಿ ಬೆಳೆಸುತ್ತವೆ. ನಮ್ಮ ದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ಸಿಗದಿರುವುದು ವಿಷಾದಕರವಾಗಿದೆ. ಶಾಲಾ-ಕಾಲೇಜುಗಳಲ್ಲಿ ಇತರೆ ವಿಷಯಗಳಂತೆ ಕ್ರೀಡೆಗಳಿಗೂ ಮಹತ್ವ ನೀಡಬೇಕು. ಕ್ರೀಡಾಶಾಲೆಗಳನ್ನು ಪ್ರತ್ಯೇಕವಾಗಿ ತೆರೆದು ತರಬೇತಿಯನ್ನು ನೀಡಬೇಕು. ಪ್ರತಿಯೊಬ್ಬರಿಗೂ ಕ್ರೀಡೆಗಳ ಮಹತ್ವವನ್ನು ತಿಳಿಸಿ ಆರೋಗ್ಯವಂತರನ್ನಾಗಿ ಮಾಡಬೇಕು.
    ಉಪಸಂಹಾರ : ಸಮಾಜ ಸ್ವಾಸ್ಥ್ಯವಾಗಿರಬೇಕಾದರೆ ಪ್ರತಿಯೊಬ್ಬರ ದೇಹ ಮತ್ತು ಮನಸ್ಸು ಸ್ವಾಸ್ಥ್ಯವಾಗಿರಬೇಕು ಇಂತಹ ಸ್ವಾಸ್ಥ್ಯ ದೇಹ ಮತ್ತು ಮನಸ್ಸನ್ನು ಹೊಂದಲು ಕ್ರೀಡೆಗಳು ಸಹಾಯವಾಗುತ್ತವೆ. ಪ್ರತಿಯೊಬ್ಬರು ಕ್ರೀಡೆಗಳ ಬಗ್ಗೆ ಆಸಕ್ತಿ, ಅಭಿರುಚಿಯನ್ನು ಬೆಳೆಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಲು ಪ್ರಯತ್ನಿಸಬೇಕು.



೮. ಕಂಪ್ಯೂಟರ್ ಶಿಕ್ಷಣ
    ಪೀಠಿಕೆ: ಆಧುನಿಕ ವಿಜ್ಞಾನದ ಮಹತ್ವದ ಆವಿಷ್ಕಾರಗಳಲ್ಲಿ ಕಂಪ್ಯೂಟರ್ ಸಹ ಒಂದಾಗಿದೆ. ಕಂಪ್ಯೂಟರ್ ಇಂದು ಜಗತ್ತಿಗೆ ಒಂದು ವರವಾಗಿದೆ ಎಂದೇ ಹೇಳಬಹುದು. ಇಂದಿನ ದಿನಗಳಲ್ಲಿ ಯಾವುದೇ ಕಛೇರಿಗಳಿಗೆ ಹೋದರು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದನ್ನು ನೋಡಬಹುದು. ಎಲ್ಲಾ ಕಡತಗಳನ್ನು ಕೂಡ ಗಣಕೀಕರಣ ಮಾಡಲಾಗುತ್ತಿದೆ. ಯಾವುದೇ ಉದ್ಯೋಗ ಹುಡುಕಿಕೊಂಡು ಹೋದರೂ ಕಂಪ್ಯೂಟರ್ ಶಿಕ್ಷಣವನ್ನು ಬಯಸುತ್ತಾರೆ. ಆದ್ದರಿಂದ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದೆ.
    ವಿಷಯ ವಿವರಣೆ: ಕಂಪ್ಯೂಟರ್ ತಂತ್ರಜ್ಞಾನದ ಶಿಕ್ಷಣ ಎಲ್ಲರಿಗೂ ಬೇಕಾಗಿದೆ. ಇಂದಿನ ದಿನಗಳಲ್ಲಿ ಕಂಪ್ಯೂಟರ್‌ಗಳ ಬಳಕೆ ಶಿಕ್ಷಣ ಕ್ಷೇತ್ರದಿಂದ ಹಿಡಿದು ಬ್ಯಾಂಕಿಂಗ್,  ವೈಜ್ಞಾನಿಕ ಸಂಶೋಧನೆ, ಹಣಕಾಸು ವ್ಯವಹಾರ, ಕೃತಕ ಉಪಗ್ರಹದ ಉಡಾವಣೆ ಮತ್ತು ನಿರ್ವಹಣೆಯವರೆಗೆ ತನ್ನ ವ್ಯಾಪ್ತಿಯನ್ನು ಹೊಂದಿದೆ. ಆದ್ದರಿಂದ ಕಂಪ್ಯೂಟರ್ ಶಿಕ್ಷಣವನ್ನು ಶಿಕ್ಷಣವನ್ನು ಪ್ರತಿಯೊಬ್ಬರು ಪಡೆಯಲೇಬೇಕಾಗಿದೆ. ನಮ್ಮ ಸರ್ಕಾರಗಳು ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿವೆ. ಅದರಂತೆ ಎಲ್ಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣವನ್ನು ಪಡೆಯಬಹುದಾಗಿದೆ. ಇಂದು ನಾವು ಯಾವುದೇ ಕಚೇರಿ, ಬಸ್ಸು ನಿಲ್ದಾಣ, ರೈಲ್ವೆ ಸ್ಟೇಷನ್‌ಗೆ ಹೋದರೂ ಕಂಪ್ಯೂಟರ್ ಸ್ಥಾಪಿಸಿರುವುದು ಕಂಡು ಬರುತ್ತದೆ. ಹಿಂದೆ ಓದು ಬರಹ ಬಾರದ ವ್ಯಕ್ತಿ ಮಾತ್ರ ಅನಕ್ಷರಸ್ಥನಾಗಿರುತ್ತಿದ್ದನು. ಇಂದಿನ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಗೊತ್ತಿಲ್ಲದವರೂ ಅನಕ್ಷರರೇ ಆದಂತೆ ಆಗಿದೆ. ಆದ್ದರಿಂದ ಇಂದು ಇತರ ಶೈಕ್ಷಣಿಕ ವಿಷಯದಂತೆ ಕಂಪ್ಯೂಟರ್ ಶಿಕ್ಷಣವೂ ಅತಿ ಅಗತ್ಯ ವಿಷಯವಾಗಿದೆ. 
    ಕಂಪ್ಯೂಟರ್ ಶಿಕ್ಷಣ ಹೊಂದಿದವರು ಸ್ವಉದ್ಯೋಗಗಳನ್ನು ಪ್ರಾರಂಭಿಸಬಹುದಾಗಿದೆ. ಡಿ.ಟಿ.ಪಿ. ಇಂಟರ್ನೆಟ್ ಬ್ರೌಸಿಂಗ್ ಸೆಂಟರ್, ಕಂಪ್ಯೂಟರ್ ಗೇಮ್, ಸೆಂಟರ್ ಫ್ಯಾಕ್ಸ್, ಡಾಟಾ ಎಂಟ್ರಿ ಮುಂತಾದ ಕೆಲಸಗಳನ್ನು ಮಾಡುವ ಮೂಲಕ ಸಂಪಾದನೆ ಮಾಡಬಹುದಾಗಿದೆ. ಇನ್ನೂ ಹೆಚ್ಚಿನ ಕಂಪ್ಯೂಟರ್ ಶಿಕ್ಷಣ ಪಡೆದವರು ಅನೇಕ ಖಾಸಗಿ ಕಚೇರಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಅವರು ಕೂಡ ಕಂಪ್ಯೂಟರ್ ಶಿಕ್ಷಣ ಕೇಂದ್ರಗಳನ್ನು ತೆರೆದು ಇತರರಿಗೆ ಶಿಕ್ಷಣವನ್ನು ನೀಡಬಹುದಾಗಿದೆ. 
    ಉಪಸಂಹಾರ: ಒಟ್ಟಿನಲ್ಲಿ ಇಂದಿನ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣವೂ ಒಂದು ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಹಾಗಾಗಿ ಪ್ರತಿಯೊಬ್ಬರು ಕಂಪ್ಯೂಟರ್ ಶಿಕ್ಷಣವನ್ನು ಪಡೆದು ಆಧುನಿಕ ಜಗತ್ತಿಗೆ ಕಾಲಿಡಬೇಕಾಗಿದೆ. ಕಂಪ್ಯೂಟರ್ ಶಿಕ್ಷಣ ಪಡೆದು ಸ್ವಉದ್ಯೋಗಗಳನ್ನು ಮಾಡುವುದರಿಂದ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪ ದೂರಮಾಡಬಹುದಾಗಿದೆ ಎಂದು ಹೇಳಬಯಸುತ್ತೇನೆ.



೯. ದೂರದರ್ಶನದ ಒಳಿತು-ಕೆಡುಕುಗಳು
    ಪೀಠಿಕೆ: ಆಧುನಿಕ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಅದ್ಭುತವಾದದ್ದು ದೂರದರ್ಶನವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಆಕರ್ಷಣೀಯ ಸಮೂಹ ಮಾಧ್ಯಮವೆಂದರೆ ಅದು ದೂರದರ್ಶನವೇ ಆಗಿದೆ. ಇದು ದೃಶ್ಯಮಾಧ್ಯಮವಾಗಿದ್ದು ಇದರಲ್ಲಿ ವೀಕ್ಷಿಸುವ ಮತ್ತು ಆಲಿಸುವ ಸೌಲಭ್ಯ ಇರುವುದರಿಂದ ಅಬಾಲವೃದ್ಧರಿಗೂ ಆಸಕ್ತಿದಾಯಕವಾಗಿದೆ. ವಿಚಾರಗಳನ್ನು ಅತ್ಯಂತ ಶೀಘ್ರವಾಗಿ ತಲುಪಿಸುವಲ್ಲಿ ದೂರದರ್ಶನ ಪ್ರಮುಖ ಪಾತ್ರವಹಿಸುತ್ತವೆ.
    ವಿಷಯ ವಿವರಣೆ: ದೂರದರ್ಶನ ಅತ್ಯಂತ ಜನಪ್ರಿಯ ಮಾಧ್ಯಮವಾಗಿದ್ದು, ಇದರಿಂದ ಸಾಕಷ್ಟು ಅನೂಕೂಲಗಳಿವೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ಮನೋರಂಜನಾತ್ಮಕ, ಸಾಂಸ್ಕೃತಿಕ, ವೈದ್ಯಕೀಯ, ಕ್ರೀಡೆ ಮುಂತಾದ ವಿಚಾರಗಳು ಪ್ರಸಾರವಾಗುವುದರಿಂದ ಸಮಗ್ರಜ್ಞಾನವನ್ನು ಪಡೆಯಬಹುದು. ವಾರ್ತೆಗಳು, ಧಾರವಾಹಿಗಳು, ಚಲನಚಿತ್ರಗಳು, ನಾಟಕಗಳು, ಸಾಂಸ್ಕೃತಿಕ ಕಾರ‍್ಯಕ್ರಮಗಳು, ಹಾಸ್ಯಕಾರ‍್ಯಕ್ರಮಗಳು, ನೃತ್ಯಗಳು, ಅಡುಗೆ ಕಾರ‍್ಯಕ್ರಮಗಳು  ಹೀಗೆ ವೈವಿಧ್ಯಮಯ ಕಾರ‍್ಯಕ್ರಮಗಳು ಪ್ರಸಾರವಾಗುವುದರಿಂದ ಪ್ರತಿಯೊಬ್ಬರು ದೂರದರ್ಶನವನ್ನು ವೀಕ್ಷಿಸುತ್ತಾರೆ. ಅನಕ್ಷರಸ್ಥರು ಕೂಡ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ಪ್ರತಿಯೊಂದು ಭಾಷೆಯಲ್ಲಿಯೂ ದೂರದರ್ಶನಗಳು ತೆರೆಯಲ್ಪಟ್ಟಿವೆ. ಹಾಗಾಗಿ ಇಡಿ ವಿಶ್ವವೇ ದೂರದರ್ಶನಕ್ಕೆ ಮನಸೋತಿದೆ ಎಂದು ಹೇಳಬಹುದು.
ದೂರದರ್ಶನದಿಂದ ದುಷ್ಪರಿಣಾಮಗಳು ಸಹ ಇವೆ. ವಿದ್ಯಾರ್ಥಿಗಳಾದವರು ಸದಾಕಾಲ ದೂರದರ್ಶನದ ಮುಂದೆ ಕುಳಿತು ತಮ್ಮ ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಆದ್ದರಿಂದ ತಮ್ಮ ಜ್ಞಾನಕ್ಕೆ ಅವಶ್ಯವಾದ ಕಾರ‍್ಯಕ್ರಮಗಳನ್ನು ಮಾತ್ರ ವೀಕ್ಷಿಸಬೇಕು. ಚಿಕ್ಕಮಕ್ಕಳಿಗೆ ಟಿವಿಯನ್ನು ಹೆಚ್ಚು ನೋಡಲು ಬಿಡಬಾರದು. 
    ಉಪಸಂಹಾರ : ದೂರದರ್ಶನವನ್ನು ಮೂರ್ಖರ ಪೆಟ್ಟಿಗೆ ಎಂದು ಕರೆಯಲಾಗಿದೆ. ಆದರೂ ಇದರಿಂದ ಸಾಕಷ್ಟು ಒಳಿತುಗಳಿವೆ. ಅಷ್ಟೇ ದುಷ್ಪರಿಣಾಮಗಳಿವೆ ಎಂಬುದನ್ನು ಮರೆಯಬಾರದು. ಅತಿಯಾದರೆ ಅಮೃತವೂ ವಿಷವಾಗುತ್ತದೆ. ದೂರದರ್ಶನವನ್ನು ಅದರಲ್ಲೂ ವಿದ್ಯಾರ್ಥಿಗಳು ಜ್ಞಾನವಿಕಾಸಕ್ಕೆ ಸಂಬಂಧಿಸಿದ ವಿಚಾರಗಳಿಗೆ ಮಾತ್ರ ಆಕರ್ಷಿತರಾಗುವುದು ಒಳಿತು ಎಂದು ಹೇಳಬಹುದು.


೧೦. ಆರೋಗ್ಯ ಮತ್ತು ನೈರ್ಮಲ್ಯ
    ಪೀಠಿಕೆ: ’ಆರೋಗ್ಯವೇ ಮಹಾಭಾಗ್ಯ’ ಎಂಬಂತೆ ಮನುಷ್ಯರು ಸುಖ-ಸಂತೋಷದಿಂದ ಜೀವಿಸಬೇಕಾದರೆ ಆರೋಗ್ಯ ಬಹಳ ಮುಖ್ಯವೆನಿಸುತ್ತದೆ. ಅದು ದೈಹಿಕವಾಗಿರಬಹುದು ಅಥವಾ ಮಾನಸಿಕವಾಗಿರದಬಹುದು. ಅಂತಹ ಉತ್ತಮ ಆರೋಗ್ಯ ನೈರ್ಮಲ್ಯದಿಂದ ಬರುತ್ತದೆ. ಆದ್ದರಿಂದ ಆರೋಗ್ಯ ಮತ್ತು ನೈರ್ಮಲೀಕರಣ ಪರಸ್ಪರ ಪೂರಕವಾದವುಗಳು.
    ವಿಷಯ ವಿವರಣೆ : ನೈರ್ಮಲ್ಯ ಎಂದರೆ ಪರಿಶುದ್ಧತೆ ಎಂದರ್ಥ. ನೈರ್ಮಲೀಕರಣ ಎಲ್ಲಿದೆಯೋ ಅಲ್ಲಿದೆ ಆರೋಗ್ಯ. ನೈರ್ಮಲೀಕರಣ ಉತ್ತಮ ಆರೋಗ್ಯದ ತಳಹದಿ. ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಹಿತಮಿತವಾದ  ಉತ್ತಮ ಆಹಾರ, ಶುದ್ಧ ನೀರು, ವಾಯು, ಸುತ್ತಮುತ್ತಲಿನ ಸ್ವಚ್ಛ ಪರಿಸರ ಜೊತೆಗೆ ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಮಾನಸಿಕ ನೆಮ್ಮದಿ ಇತ್ಯಾದಿಗಳು ಅವಶ್ಯಕವಾಗಿರುತ್ತವೆ. ಊಟಬಲ್ಲವನಿಗೆ ರೋಗವಿಲ್ಲ ಎನ್ನುವ ಹಾಗೆ ಹಿತಮಿತವಾದ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯಿಂದ ರೋಗಮುಕ್ತರಾಗಬಹುದು. ಅದೇ ರೀತಿಯಾಗಿ ಮಾನಸಿಕ ಆರೋಗ್ಯವು ಅತ್ಯವಶ್ಯಕ. 
’ಆರೋಗ್ಯ ಸಂಪತ್ತು ಇರುವ ದೇಹದಲ್ಲಿ ಆರೋಗ್ಯಪೂರ್ಣ ಮನಸ್ಸು’ ಇರುತ್ತದೆ. ಆದ್ದರಿಂದ ಪ್ರತಿನಿತ್ಯ ದೇಹದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ರೋಗಗಳು ಬಂದ ಮೇಲೆ ಪರದಾಡುವುದಕ್ಕಿಂತ ಮೊದಲೆ ರೋಗಬರದಂತೆ ತಡೆಗಟ್ಟುವುದು ನೈರ್ಮಲೀಕರಣದಿಂದ ಸಾಧ್ಯವಿದೆ. ಆದ್ದರಿಂದ ನಾವು ನಮ್ಮ ದೇಹ ಮತ್ತು ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ನಮ್ಮ ಸರ್ಕಾರಗಳು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಸದುಪಯೋಗಪಡಿಸಿಕೊಳ್ಳಬೇಕು.
    ಉಪಸಂಹಾರ : ಊeಚಿಟಣh is ತಿeಚಿಟಣh ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಮಹಾಭಾಗ್ಯವನ್ನು ತಂದುಕೊಳ್ಳಬೇಕು. ಪ್ರತಿಯೊಬ್ಬರು ಸುಖವಾಗಿರಲು ಬಯಸುತ್ತಾರೆ. ಸುಖದ ಗುಟ್ಟು ಆರೋಗ್ಯದಲ್ಲಿದೆ, ಎಷ್ಟು ಸಂಪತ್ತು ಇದ್ದರೇನು ಆರೋಗ್ಯ ಸರಿ ಇಲ್ಲದ ಮೇಲೆ. ಆ ಸಂಪತ್ತನ್ನು ಅನುಭವಿಸಬೇಕಾದರೆ ಆರೋಗ್ಯ ಬಹಳ ಮುಖ್ಯ. ಯಾರು ಉತ್ತಮ ಆರೋಗ್ಯವಂತರೋ ಅವರೇ ಸಿರಿವಂತರು. ಒಟ್ಟಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಪ್ರತಿಯೊಬ್ಬರಲ್ಲಿ ಇರಬೇಕು.



೧೧. ಮೇಕ್ ಇನ್ ಇಂಡಿಯಾ
    ಪೀಠಿಕೆ : ಭಾರತ ದೇಶವನ್ನು ಒಂದು ಉತ್ಪಾದನಾ ವಲಯದ ಕೇಂದ್ರ ಸ್ಥಾನವನ್ನಾಗಿ ಬೆಳೆಸಬೇಕೆಂಬ ಉದ್ದೇಶದಿಂದ  ಭಾರತ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಮಹತ್ವಪೂರ್ಣ ಯೋಜನೆಯೇ ’ಮೇಕ್ ಇನ್ ಇಂಡಿಯಾ’  ಅಂದರೆ ಭಾರತದಲ್ಲಿ ಉತ್ಪಾದಿಸುವುದು ಎಂದರ್ಥ. ಭಾರತ ದೇಶವು ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಬಹಳ ಉಪಯುಕ್ತ ಯೋಜನೆ ಇದಾಗಿದೆ.
    ವಿಷಯ ನಿರೂಪಣೆ : ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ  ಕನಸಿನ ಕೂಸಾದ ಈ ಯೋಜನೆ ಸೆಪ್ಟಂಬರ್ ೨೫ರ ೨೦೧೪ ರಂದು ಅವರಿಂದಲೆ ಉದ್ಘಾಟನೆಯಾಯಿತು. ಉತ್ಪಾದನಾ ವಲಯದಲ್ಲಿ ಬೇರೆ ರಾಷ್ಟ್ರಗಳ ಸರಕುಗಳಿಗೆ ಅವಲಂಬಿಸಿರುವುದಕ್ಕಿಂತ ನಮ್ಮ ದೇಶದಲ್ಲಿಯೇ ತಯಾರಿಸಿ  ಸ್ವಾವಲಂಬನೆ ಪಡೆಯುವುದಾಗಿದೆ. ಉತ್ಪಾದನಾ ವಲಯದಲ್ಲಿ ಭಾರತ ದೇಶವು ಒಂದು ಸೂಪರ್ ಪವರ್ ರಾಷ್ಟ್ರ ಎನಿಸಿಕೊಳ್ಳಬೇಕಾದರೆ ನಮ್ಮ ದೇಶದ ಉದ್ಯಮಿಗಳು ಮತ್ತು ಅನ್ಯದೇಶದ ಉದ್ಯಮಿಗಳು ನಮ್ಮ ದೇಶದಲ್ಲಿ ಬಂಡವಾಳ ಹೂಡುವಂತೆ ಮಾಡಿ ನಮ್ಮ ದೇಶದ ಕೈಗಾರಿಕೆಗಳನ್ನು ಬಲಪಡಿಸುವುದು. ಆ ಮೂಲಕ ಜನರ ಅವಶ್ಯಕ ವಸ್ತುಗಳನ್ನು ತಯಾರಿಸುವುದು. ಇದರಿಂದ ಆಮದು ಕಡಮೆಯಾಗಿ ರಪ್ತು ಪ್ರಮಾಣ ಹೆಚ್ಚಳವಾಗಬೇಕು. ಹಾಗಾದರೆ ನಮ್ಮ ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ದೊರಕಬಹುದು. ಇದರಿಂದ ನಾಗರಿಕರಿಗೆ ಪ್ರಯೋಜನವಾಗಲಿದೆ. ಐಟಿ-ಬಿಟಿ, ರೈಲ್ವೆ, ಆಟೋಮೊಬೈಲ್, ನಾಗರಿಕ ವಿಮಾನಯಾನ, ರಕ್ಷಣಾ ಸಾಮಗ್ರಿ, ರೋಡ್‌ಗಳ ನವೀಕರಣ, ಆಹಾರ ಉತ್ಪಾದನೆ ಮುಂತಾದ ವಲಯಗಳಲ್ಲಿ ಹೂಡಿಕೆ ಮಾಡಿ ಸ್ವಾವಲಂಬನೆ ಸಾಧಿಸುವಂತೆ ಮಾಡಬಹುದು.
    ಉಪಸಂಹಾರ : ಒಟ್ಟಿನಲ್ಲಿ ಸ್ವಾವಲಂಬನೆಯೇ ಸಾಧನೆಯ ಹಾದಿ ಎಂಬಂತೆ  ಮೇಕ್ ಇನ್ ಇಂಡಿಯಾ ಯೋಜನೆಯು ಭಾರತದ ಅಭಿವೃದ್ಧಿ ಮತ್ತು ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ಭರವಸೆಯನ್ನು ಮೂಡಿಸಿದೆ. ಪ್ರಪಂಚದ ಇತರೆ ದೇಶಗಳು ಭಾರತದತ್ತ ಕಣ್ಣು ಹಾಯಿಸುವಂತೆ ಮಾಡಿದೆ. ಈ ಕಾರ್ಯಕ್ರಮ ಯಶಸ್ವಿಯಾದರೆ ಭಾರತ ಒಂದು ಶಕ್ತಿಶಾಲಿ ರಾಷ್ಟ್ರ ಎನಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.  



೧೨. ಪರಿಸರ ಮಾಲಿನ್ಯ

    ಪೀಠಿಕೆ : ನಾವು ಮತ್ತು ನಮ್ಮ ಸುತ್ತ ಮುತ್ತಲಿನ ಬೆಟ್ಟ-ಗುಡ್ಡ, ಕಲ್ಲು-ಮಣ್ಣು, ಮರ-ಗಿಡ, ನೀರು ವಾಯು, ಪ್ರಾಣಿ-ಪಕ್ಷಿ ಚರಾಚರ ವಸ್ತುಗಳನ್ನು ’ಪರಿಸರ’ ಎಂದು ಕರೆಯಬಹುದು. ಇಂತಹ ಪರಿಸರ ಮಲೀನವಾಗುವುದು ’ಪರಿಸರ ಮಾಲಿನ್ಯ’ ಎಂದು ಕರೆಯಲಾಗಿದೆ. ಪರಿಸರ ಮಾಲಿನ್ಯವಾಗುವುದರಿಂದ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೆ ಹಾನಿಕಾರಕವಾಗುತ್ತದೆ.
    ವಿಷಯ ವಿವರಣೆ : ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಮತ್ತು ಸ್ವಚ್ಛತೆ ಮಹತ್ವದ ಅರಿವಿಲ್ಲದಿರುವುದು, ಅಜ್ಞಾನ, ಮೂಢನಂಬಿಕೆಗಳು, ವಸ್ತುಗಳ ಮರುಬಳಕೆಯಲ್ಲಿ ಅಸಡ್ಡೆ, ಅತಿ ವಾಹನಗಳ ಬಳಕೆ, ಕಾರ್ಖಾನೆಗಳ ಅಸುರಕ್ಷಿತ ಕಾರ‍್ಯಗಳು, ಕಾಡುಗಳ ನಾಶ, ನಗರ ನಿರ್ಮಾಣ ಇತ್ಯಾದಿ ಕಾರ‍್ಯಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಇಂದಿನ ದಿನಮಾನಗಳಲ್ಲಿ ಪರಿಸರ ಮಾಲಿನ್ಯ ಅತಿಯಾಗಿದ್ದು ಜಾಗತಿಕ ತಾಪಮಾನ ಏರುಪೇರಾಗುತ್ತಿದೆ. ಸರಿಯಾದ ಮಳೆ-ಬೆಳೆ ಬರಲು ಸಾಧ್ಯವಾಗುತ್ತಿಲ್ಲ. ಜಲಮಾಲಿನ್ಯ, ವಾಯುಮಾಲಿನ್ಯ, ಭೂಮಾಲಿನ್ಯ, ಶಬ್ಧಮಾಲಿನ್ಯಗಳು ಉಂಟಾಗುವುದರಿಂದ ಜನರ ಆರೋಗ್ಯದ ಮೇಲು ಪರಿಣಾಮ ಉಂಟಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಮಾನವ ಜನಾಂಗವೇ ಭೂಮಿಯ ಮೇಲೆ ವಾಸ ಮಾಡುವುದು ದುಸ್ತರವಾಗುವ ಕಾಲ ಸಮೀಪಿಸಿಬಿಟ್ಟದೆ ಎಂದು ಹೇಳಬಹುದು. ಆದ್ದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಮಾನವ ಕುಲದ ಒಳಿತಿಗೆ ಎಲ್ಲರೂ ಪರಿಶ್ರಮಿಸಬೇಕಾಗಿದೆ. 
    ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು. ಪ್ರತಿಯೊಬ್ಬರಲ್ಲೂ ಪರಿಸರದ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಯೋಜನೆ ಆಗಬೇಕು. ಕಾಡುಗಳನ್ನು ನಾಶಮಾಡಬಾರದು, ಬೆಳೆಸಬೇಕು. ಕಾಡುಗಳಿದ್ದರೆ ನಾಡು ಸುರಕ್ಷತವಾಗಿರಲು ಸಾಧ್ಯ. ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ನೀರಿನ ಮಿತಬಳಕೆ, ವಾಹನಗಳ ಮಿತಬಳಕೆ, ಕಾರ್ಖಾನೆಗಳಿಂದ ಮಾಲಿನ್ಯವಾಗದಂತೆ ಪರ‍್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳುವುದು. ನೀರು, ಪ್ಲಾಸ್ಟಿಕ್, ಕಬ್ಬಿಣದಂತಹ ವಸ್ತುಗಳನ್ನು ಮರುಬಳಕೆಮಾಡುವ ವ್ಯವಸ್ಥೆಯನ್ನು ರೂಪಿಸುವುದು.
    ಉಪಸಂಹಾರ : ’ಕಾಡಿದ್ದರೆ ನಾಡು-ನಾಡಿದ್ದರೆ ನಾವು’. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ವಿದ್ಯಾರ್ಥಿಗಳಾದ ನಾವು ಪರಿಸರ ಸಂರಕ್ಷಣೆ ಅರಿವನ್ನು ಮೂಡಿಸಿಕೊಂಡು ಪ್ರತಿಯೊಬ್ಬರಲ್ಲೂ ಜಾಗೃತಿಯನ್ನು ತರಬೇಕು. ಮೊದಲು ನಮ್ಮ ಸುತ್ತ-ಮುತ್ತ. ಮನೆ, ಶಾಲಾ-ಕಾಲೇಜು, ಗ್ರಾಮಗಳಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಬೆಳೆಸಬೇಕು. ಇತರರಿಗೂ ಬೆಳೆಸಲೂ ಪ್ರೇರಕರಾಗಬೇಕು. ಅಂದಾಗ ಪರಿಸರ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ ಎಂಬುದೆ ನಮ್ಮೆಲ್ಲರ ಆಶಯವಾಗಬೇಕಿದೆ.
ಮನೆಗೊಂದು ಮಗು ಮಗುವಿಗೊಂದು ಮರ.



೧೩. ಪರಿಸರ ಸಂರಕ್ಷಣೆ

    ಪೀಠಿಕೆ : ನಾವು ಮತ್ತು ನಮ್ಮ ಸುತ್ತ ಮುತ್ತಲಿನ ಬೆಟ್ಟ, ಗುಡ್ಡ, ಕಲ್ಲು, ಮಣ್ಣು, ಮರ-ಗಿಡ, ನೀರು ವಾಯು,  ಪ್ರಾಣಿ-ಪಕ್ಷಿ ಚರಾಚರ ವಸ್ತುಗಳನ್ನು ಪರಿಸರ ಎಂದು ಕರೆಯಬಹುದು. ಇವುಗಳನ್ನು ಯಥಾರೀತಿಯಾಗಿ ಉಳಿಸಿ ಬೆಳೆಸಿಕೊಂಡು ಹೋಗುವುದೇ ಪರಿಸರ ಸಂರಕ್ಷಣೆಯಾಗಿದೆ. ಇಂತಹ ಪರಿಸರಸೃಷ್ಠಿ ನಮಗೆ ವರವಾಗಿದೆ ಎಂದು ಹೇಳಬಹುದು. ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸಬಲ್ಲದು. ಇಲ್ಲವಾದರೆ ಪರಿಸರ ನಾಶಮಾಡಿದರೆ ನಾವು ನಾಶವಾಗುವುದರಲ್ಲಿ ಎರಡು ಮಾತಿಲ್ಲ.
    ವಿಷಯ ವಿವರಣೆ : ಪರಿಸರ ಉಳಿದರೆ ನಾಡು ಉಳಿದೀತು ; ಪರಿಸರ ಅಳಿದರೆ ನಾಡು ಕಳೆದೀತು  ಎಂಬ ನಾಣ್ಣುಡಿಯಂತೆ ನಾಡನ್ನು ರಕ್ಷಿಸಿಕೊಳ್ಳಬೇಕಾದರೆ ಪರಿಸರ ಸಂರಕ್ಷಣೆ ಮಾಡಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ. ಯಾಕೆಂದರೆ ನಾವು ಪರಿಸರದಿಂದ ಸಾಕಷ್ಟು ಅನುಕೂಲತೆಗಳನ್ನು ಪಡೆಯುತ್ತಿದ್ದೇವೆ. ’ಹಸಿರೇ ನಾಡಿನ ಉಸಿರು’ ಆದ್ದರಿಂದ ಹಸಿರು ಇಲ್ಲದಿದ್ದರೇ ಉಸಿರು ಉಳಿದೀತು ಹೇಗೆ ? ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ವಿಶ್ವದ ತುಂಬೆಲ್ಲ ಹರಡಿಕೊಂಡು ಬಿಟ್ಟಿದೆ. ಪರಿಸರ ಮಾಲಿನ್ಯದಿಂದ ನಮ್ಮ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಾದ ನಾವು ಮೊದಲು ನಮ್ಮ ಶಾಲಾ-ಕಾಲೇಜುಗಳಲ್ಲಿ ನಮ್ಮ ಮನೆಯ ಸುತ್ತ-ಮುತ್ತ ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು. ಇತರರಿಗೂ ಪ್ರೇರೇಪಿಸಬೇಕು. ವನಮಹೋತ್ಸವ, ಸಸಿನೆಡುವ ಕಾರ‍್ಯಕ್ರಮಗಳನ್ನು ಪ್ರತಿನಿತ್ಯ ಮಾಡುತ್ತ ಪ್ರತಿದಿನ ಪರಿಸರ ದಿನ ಆಚರಿಸಬೇಕು. ಸಾಲುಮರದ ತಿಮ್ಮಕ್ಕನಂತವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು. ಪರಿಸರ ನಾಶದಿಂದಾಗುವ ಅನಾಹುತಗಳನ್ನು ತಿಳಿಸಬೇಕು.
    ಉಪಸಂಹಾರ : ಕಾಡಿದ್ದರೆ ನಾಡು-ನಾಡಿದ್ದರೆ ನಾವು ಕಾಡಿಲ್ಲದಿದ್ದರೆ ಸುಡಗಾಡು ಎನ್ನುವಂತೆ ಕಾಡನ್ನು ನಾಡನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಬೇಕು. ದೈವದತ್ತವಾದ ಪರಿಸರವನ್ನು ನಾಶಮಾಡದೆ, ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನೀಡಬೇಕೆಂಬುದು ಎಲ್ಲರ ಆಶಯವಾಗಬೇಕು.



೧೪. ಪತ್ರಿಕೆಗಳ ಮಹತ್ವ

    ಪೀಠಿಕೆ : ದೈನಂದಿನ ಆಗು-ಹೋಗುಗಳನ್ನು, ಸುದ್ಧಿ-ಸಮಾಚಾರಗಳನ್ನು ತಿಳಿಸುವ ಮಾಧ್ಯಮವೇ ಪತ್ರಿಕೆ. ಸಮೂಹ ಮಾಧ್ಯಮಗಳಲ್ಲಿ ಅತ್ಯಂತ ಹಳೆಯ ಸಮೂಹ ಮಾಧ್ಯಮವೆಂದರೆ ಅದು ಪತ್ರಿಕೆ ಎಂದು ಹೇಳಬಹುದು. ವಿದ್ಯುನ್ಮಾನ ಕಾಲದಲ್ಲಿಯೂ ಪತ್ರಿಕೆಗಳಿಗೆ ಮಹತ್ವದ ಸ್ಥಾನವಿದೆ.
    ವಿಷಯ ವಿವರಣೆ : ಪತ್ರಿಕೆಗಳು ಸುದ್ಧಿ-ಸಮಾಚಾರಗಳ ಮೂಲ ಪ್ರತಿಬಿಂಬಗಳಾಗಿವೆ. ದೇಶ-ವಿದೇಶಗಳ ಸುದ್ಧಿಯನ್ನು ದಿನನಿತ್ಯ ಕೊಡುವುದರ ಜೊತೆಗೆ ಕತೆ-ಕವನ-ಕಾದಂಬರಿಗಳು, ಇತಿಹಾಸ, ಕ್ರೀಡೆ, ಮನೋರಂಜನೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಇತ್ಯಾದಿ ವಿಚಾರಗಳು ಪತ್ರಿಕೆಗಳಲ್ಲಿ ಬರುವುದರಿಂದ ಪ್ರತಿಯೊಬ್ಬರೂ ಕೂಡ ಜ್ಞಾನ ಪಡೆದುಕೊಳ್ಳಬಹುದು. ಓದುವ ಆಸಕ್ತಿ ಇರುವವರಿಗೆ ಮೂಲ ಅವಶ್ಯಕತೆಗಳಲ್ಲಿ ಪತ್ರಿಕೆಯೂ ಒಂದಾಗಿ ಪರಿಣಮಿಸಿದೆ. ಒಂದು ದಿನ ಪತ್ರಿಕೆ ಬರದೆ ಇದ್ದರೆ ಕಸಿವಿಸಿಯಾಗುತ್ತಾರೆ. ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದರಿಂದ ವಿಚಾರವಂತರಾಗಬಹುದು. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ವಾರ್ಷಿಕಪತ್ರಿಕೆಗಳು ಪ್ರಸಾರವಾಗುತ್ತಿವೆ. ಕನ್ನಡದಲ್ಲಿ ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳನ್ನು ಓದಬಹುದು. ಭಾರತದ ಮೊದಲಪತ್ರಿಕೆ ದಿ ಬೆಂಗಾಲ್ ಗೆಜೆಟ್ ಮೊದಮೊದಲು ಸರ್ಕಾರದ ಸುದ್ಧಿ ಪ್ರಸಾರಕ್ಕೆ ಸೀಮಿತವಾಗಿತ್ತು. ನಂತರ ಬೇರೆ ಬೇರೆ ಭಾಷೆಗಳಲ್ಲಿ ಖಾಸಗಿಯಾಗಿ ಪತ್ರಿಕೆಗಳು ಆರಂಭವಾಗಿ ಸಮಗ್ರ ವಿಷಯಗಳ ಪ್ರಸಾರಕ್ಕೆ ನಾಂದಿಯಾದವು. ಆದ್ದರಿಂದ ವೃತ್ತಪತ್ರಿಕೆಗಳನ್ನು ಓದುವುದರಿಂದ ಸಾಕಷ್ಟ ವಿಚಾರಗಳು ಲಭಿಸುತ್ತವೆ.
    ಉಪಸಂಹಾರ : ಪತ್ರಿಕೆಗಳು ವಿಚಾರ ಶಕ್ತಿಯ ಆಕರಗಳು, ಜ್ಞಾನಾರ್ಜನೆಯ ಪ್ರಬಲ ಮಾಧ್ಯಮಗಳು ಆದ್ದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ದಿನನಿತ್ಯ ಬೇರೆಬೇರೆ ಭಾಷೆಯ ಬೇರೆಬೇರೆ ಪತ್ರಿಕೆಗಳನ್ನು ಓದಿ ವಿಚಾರವಂತರಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಬೇಕು.



೧೫. ಭಯೋತ್ಪಾದನೆ
    ಪೀಠಿಕೆ : ೨೧ ನೇ ಶತಮಾನದ ಜಗತ್ತು ಎದುರಿಸುತ್ತಿರುವ ಅತ್ಯಂತ ಪ್ರಮುಖ ಸಮಸ್ಯೆಗಳಲ್ಲಿ ಭಯೋತ್ಪಾದನೆ ಎನ್ನುವಂತಹದ್ದು ಒಂದು. ಆಧುನಿಕ ಜಗತ್ತಿಗೆ ಅಂಟಿಕೊಂಡಿರುವ ಒಂದು ಶಾಪವಾಗಿದೆ. ವಿಶ್ವ ಶಾಂತಿಗೆ ಧಕ್ಕೆಯನ್ನುಂಟು ಮಾಡುವ ಹೇಯಕೃತ್ಯವಾಗಿದೆ.
    ವಿಷಯ ವಿವರಣೆ : Terrorism (ಟೆರರಿಸಂ) ಎನ್ನವ ಪದ ಲ್ಯಾಟಿನ್ ಭಾಷೆಯ Terre (ಟೆರ್ರ‍ೆ) ಎಂಬ ಪದದಿಂದ ಹುಟ್ಟಿದ್ದು ಭಯಪಡಿಸು, ನಡುಗಿಸು ಎಂದರ್ಥ. ಅಂದರೆ ಭಯವನ್ನು ಹುಟ್ಟಿಸುವುದು. ಭಯೋತ್ಪಾದನೆ ಎಂದರೆ ಹಿಂಸಾತ್ಮಕ ಕೃತ್ಯಗಳ ಮೂಲಕ ಜನರಲ್ಲಿ ಭಯವನ್ನು ಉತ್ಪಾದನೆ ಮಾಡುವುದು.  ಕೆಲವು ವ್ಯಕ್ತಿಗಳು ಅಥವಾ ಗುಂಪುಗಳು ಜನರಲ್ಲಿ ಹಿಂಸಾತ್ಮಕ ತಂತ್ರ ಮತ್ತು ನಿರಂತರ ದಾಳಿಯ ಮೂಲಕ ಜನರನ್ನು ಬೆದರಿಸುವುದು, ಭಯಪಡಿಸುವುದಾಗಿದೆ.  ೧೭ನೇ ಶತಮಾನದ ಪ್ರಾನ್ಸ ಕ್ರಾಂತಿಯ ಸಂದರ್ಭದಲ್ಲಿ ಜಾಕೋಬಿನ ಆಡಳಿತದ ಅವಧಿಯಲ್ಲಿ ಸುಮಾರು ೪೦ ಸಾವಿರ ಜನರನ್ನು ಕೊಲ್ಲಲಾಗಿತ್ತು. ಆ ಸಂದರ್ಭದಲ್ಲಿಯೆ ಭಯೋತ್ಪಾದನೆ ಎಂಬ ಶಬ್ದ ಚಾಲ್ತಿಗೆ ಬಂದಿತು. ಇಂದು ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ.
    ಭಯೋತ್ಪಾದನೆಗೆ ಅನೇಕ ಕಾರಣಗಳಿವೆ. ಹೆಚ್ಚುತ್ತಿರುವ ಜನಸಂಖ್ಯೆ, ಬಡತನ, ಜನಾಂಗೀಯ ಸಂಘರ್ಷ, ಧರ್ಮಗಳ ಪ್ರತಿಷ್ಟೆ, ಮೂಲಭೂತವಾದ ಗುಂಪುಗಳ ಸಂಘರ್ಷ, ಪ್ರಾದೇಶಿಕ ಅಸಮತೋಲನ, ಯುದ್ಧ ಸಂಘರ್ಷಗಳು, ನಿರುದ್ಯೋಗ, ಇತ್ಯಾದಿ ಹೆಸರಿಸಬಹುದು. 
    ಐಸಿಸ್, ಮುಜಾಹಿದ್ಧಿನ್, ಎಲ್‌ಟಿಟಿಇ, ತಾಲಿಬಾನ್‌ನಂತಹ ಸಂಘಟನೆಗಳು ಭಯೋತ್ಪಾದನೆಯಲ್ಲಿ ತೊಡಗಿಕೊಂಡಿವೆ. ಅಮೇರಿಕಾ, ಭಾರತ, ಫ್ರಾನ್ಸ್, ಪಾಕಿಸ್ತಾನ, ಅಪ್ಘಾನಿಸ್ತಾನ, ಇಂಗ್ಲೆಂಡ್, ರಷ್ಯಾ ಮುಂತಾದ ದೇಶಗಳು ಭಯೋತ್ಪಾದನೆಯ ಪಿಡುಗಿಗೆ ಸಿಲುಕಿಕೊಂಡ ಪ್ರಮುಖ ರಾಷ್ಟ್ರಗಳಾಗಿವೆ.
    ಉಪಸಂಹಾರ: ಆಧುನಿಕ ಜಗತ್ತಿಗೆ ಅಂಟಿಕೊಂಡಿರುವ ಭಯೋತ್ಪಾದನೆಯಂತಹ ಶಾಪವನ್ನು ತೊಡೆದುಹಾಕಲು ಇಡೀ ವಿಶ್ವ ಸಮುದಾಯವೇ ಒಂದಾಗಬೇಕು. ಇಲ್ಲವಾದರೆ ವಿಶ್ವಶಾಂತಿಗೆ ಧಕ್ಕೆಯನ್ನುಂಟು ಮಾಡಿ, ಸಮಾಜದ ನೀತಿನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನೆ ಬುಡಮೇಲು ಮಾಡಬಹುದು. ಪ್ರತಿಯೊಬ್ಬರಲ್ಲಿಯೂ ಅದರಿಂದಾಗುವ ಹಾನಿಯ ಬಗ್ಗೆ ಅರಿವು ಜಾಗೃತ ಮನೋಭಾವ ಇರಬೇಕು.



೧೬. ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು
    ಪೀಠಿಕೆ : ರೈತ ದೇಶದ ಬೆನ್ನೆಲುಬು. ಅವನಿಲ್ಲದೆ ಯಾರೊಬ್ಬರಿಗೂ ಅನ್ನವಿಲ್ಲ. ಅವನ ದುಡಿಮೆಯೇ ನಮಗೆ ಸಹಕಾರ. ಇಂತಹ ರೈತನ ಬಾಳು ಇಂದಿನ ಕಾಲದಲ್ಲಿ ಗೋಳಾಗಿದೆ. ಇದರಿಂದ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಅವರಲ್ಲಿ ಧೈರ‍್ಯವನ್ನು ತುಂಬುವಂತಹ ಕೆಲಸ ಮಾಡಬೇಕು. ಇಲ್ಲವಾದರೆ ನಮ್ಮ ಅನ್ನಕ್ಕೆ ಕುತ್ತು ಬಂದು ಅವರ ದಾರಿಯನ್ನು ನಾವು ಹಿಡಿಬೇಕಾದಿತು.
    ವಿಷಯ ವಿವರಣೆ : ದೇಶದ ಗಡಿಯನ್ನು ರಕ್ಷಿಸುವವನು ಯೋಧ. ಹಾಗೆಯೇ ದೇಶಕ್ಕೆ ಅನ್ನವನ್ನು ನೀಡುವವನು ರೈತ. ಇವರಿಬ್ಬರು ದೇಶದ ಎರಡು ಕಣ್ಣುಗಳಿದ್ದಂತೆ, ಅವರಿಂದಲೇ ನಾವು ಇಂದು ದೇಶದೊಳಗೆ ಸುಖ, ಸಂತೋಷದಿಂದ ಬಾಳುತ್ತಿದ್ದೇವೆ. ಇಂತಹ ರೈತನ ಇಂದಿನ ಜೀವನ ಬಹಳ ದುಸ್ತರವಾಗಿಬಿಟ್ಟಿದೆ. ರೈತರಿಗೆ ಅವಶ್ಯವಾದ ಮಳೆ ಸರಿಯಾದ ಸಮಯಕ್ಕೆ ಬಾರದೆ ಗೋಳಾಡಿಸುತ್ತಿದೆ. ಇನ್ನೊಂದು ಕಡೆ ಬಿತ್ತಲು ಬೀಜ, ಗೊಬ್ಬರವಿಲ್ಲದೆ ಪರದಾಟ, ಮತ್ತೊಂದೆಡೆ ಇದಕ್ಕೋಸ್ಕರ ಸಾಲ ಮಾಡಿ ತೀರಿಸಲಾಗದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮತ್ತೊಂದು ಸಲ ಮಳೆಬಂದರು ಸರಿಯಾದ ಬೆಳೆ ಬರುವುದಿಲ್ಲ, ಬೆಳೆ ಇದ್ದರೂ ಅದಕ್ಕೆ ಸರಿಯಾದ ಬೆಲೆ ದೊರೆಯದೆ ಇರುವುದು. ಮತ್ತೊಂದೆಡೆ ಬೆಳೆಗಳು ಕೀಟಬಾಧೆಯಿಂದ ನಾಶವಾಗುವುದು. ಒಂದು ಸಲ ಬರಗಾಲ, ಇನ್ನೊಂದು ಸಲ ಪ್ರವಾಹ ಇದರಿಂದ ಬೆಳೆಗಳಿಲ್ಲದೆ ಅನ್ನಕ್ಕೆ ಕುತ್ತು ಬಂದಿದೆ. ಹೀಗೆ ನಾನಾ ಕಾರಣಗಳಿಂದ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂತಹ ರೈತರಿಗೆ ಮೊದಲು ನಾವು ಧೈರ್ಯ ತುಂಬಬೇಕು. ಸಹಾಯ, ಸಹಕಾರ ನೀಡಬೇಕು. ಸ್ಥಾಪಿತ ಸರ್ಕಾರಗಳು ರೈತರಿಗೆ ಅವಶ್ಯವಾದ ಯೋಜನೆಗಳನ್ನು ಜಾರಿಗೊಳಿಸಬೇಕು. ಬೆಳೆ ವಿಮೆಯನ್ನು ಸರಿಯಾದ ರೀತಿಯಲ್ಲಿ ಹಂಚಬೇಕು. ಸಾಲವಸೂಲಾತಿಯನ್ನು ಮುಂದೂಡಬೇಕು. ರೈತರಿಗೆ ಅವಶ್ಯವಾದ ಬೀಜಗೊಬ್ಬರ, ಔಷಧ, ಕೃಷಿ ಸಂಬಂಧಿತ ಸಲಕರಣೆಗಳನ್ನು ಯೋಗ್ಯ ಬೆಲೆಯಲ್ಲಿ ಸಿಗುವಂತೆ ಮಾಡಬೇಕು. ಬೆಳೆಗಳಿಗೆ ಸರಿಯಾದ ಮಾರುಕಟ್ಟೆ, ಬೆಲೆಯನ್ನು ಒದಗಿಸಬೇಕು. ವೈಜ್ಞಾನಿಕವಾಗಿ ಕೃಷಿಚಟುವಟಿಕೆಗಳನ್ನು ಕೈಗೊಳ್ಳುವ ತರಬೇತಿ ನೀಡಬೇಕು. ಹೀಗಾದಲ್ಲಿ ನಾವು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು.
    ಉಪಸಂಹಾರ : ಭಾರತದಂತಹ ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಇಂದಿನ ರೈತರ ಜೀವನ ಅಯೋಮಯವಾಗಿಬಿಟ್ಟಿದೆ. ನಾನಾ ಕೃಷಿ ಸಂಬಂಧಿತ ಕಾರಣಗಳಿಂದ ತನ್ನ ಜೀವವನ್ನೆ ತ್ಯಾಗ ಮಾಡುತ್ತಿದ್ದಾನೆ. ನಮ್ಮ ದೇಶದ ಬಲಗಳಲ್ಲಿ ಒಂದಾದ ರೈತ ಬಲವನ್ನು ಹೆಚ್ಚಿಸಬೇಕಾಗಿದೆ. ಅವನ ಜೀವನವನ್ನು ಸುಧಾರಿಸಬೇಕಾಗಿದೆ. ದೇಶದ ನಿಜವಾದ ಶಕ್ತಿ ರೈತರ ಕೈಯಲ್ಲಿದೆ ಎಂಬುದನ್ನು ಮರೆಯಬಾರದು. ಸರ್ಕಾರಗಳು ಅವರನ್ನು ಉತ್ತಮ ರೀತಿಯಲ್ಲಿ ಕಾಣಬೇಕು ಹಾಗೆಯೇ ರೈತರು ಏನೇ ಕಷ್ಟ ಬಂದರೂ ಎದೆಗುಂದದೆ ಜೀವನವನ್ನು ಸಾಗಿಸಬೇಕೆಂದು ನಮ್ಮಲ್ಲೆರ ಆಶಯವಾಗಬೇಕು.



೧೭. ಸಮೂಹ ಮಾಧ್ಯಮಗಳು
    ಪೀಠಿಕೆ: ಆಧುನಿಕ ಯುಗದಲ್ಲಿ ಸಮೂಹ ಮಾಧ್ಯಮಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದು ಸ್ಥಳದಲ್ಲಿಯ ವಿಚಾರಗಳನ್ನು ಮತ್ತೊಂದು ಸ್ಥಳದ ಜನರಿಗೆ ತಿಳಿಸುವ ಮಾಧ್ಯಮಗಳು ಸಮೂಹ ಮಾಧ್ಯಮಗಳು. ಸಮೂಹ ಮಾಧ್ಯಮಗಳು ಇಡೀ ವಿಶ್ವವನ್ನು ಒಂದುಗೂಡಿಸಿವೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರೂ ತತ್‌ಕ್ಷಣವಾಗಿ ಇಡೀ ವಿಶ್ವದ ಜನರಿಗೆ ಮುಟ್ಟಿಸುವಷ್ಟು ಸಾಮರ್ಥವನ್ನು ಇಂದಿನ ಸಮೂಹ ಮಾಧ್ಯಮಗಳು ಬೆಳೆಸಿಕೊಂಡಿವೆ.
    ವಿಷಯ ವಿವರಣೆ: ಸಾಮಾನ್ಯವಾಗಿ ಒಂದು ವಿಷಯವನ್ನು ಜನರಿಗೆ ತಲುಪಿಸುವ ದೂರದರ್ಶನ, ರೇಡಿಯೋ, ವೃತ್ತಪತ್ರಿಕೆಗಳು, ಅಂತರ್ಜಾಲದಂತಹ ಮೊದಲಾದ ಸಂಪರ್ಕ ಸಾಧನಗಳನ್ನು ಸಮೂಹ ಮಾಧ್ಯಮಗಳು ಎಂದು ಕರೆಯಲಾಗುತ್ತದೆ. ಸುದ್ಧಿ ಮಾಹಿತಿಯ ವರ್ಗಾವಣೆ ಅವಶ್ಯತೆ ಇದ್ದೇ ಇದೆ. ಒಬ್ಬರಿಗೆ ತಿಳಿದಿರುವ  ಮಾಹಿತಿ ಘಟನೆಯ ಬಗ್ಗೆ ತಿಳುವಳಿಕೆ, ಚಿಂತನ-ಸುದ್ಧಿ-ಸಮಾಚಾರ-ವಾರ್ತೆ ವರದಿ ಮುಂತಾದವುಗಳನ್ನು ಸಮೂಹ ಮಾಧ್ಯಮಗಳಲ್ಲಿ ನೋಡಬಹುದು. ಸಮೂಹ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲಾಗುತ್ತದೆ. ನಮ್ಮ ಜನರಿಗೆ ಅವಶ್ಯವಾದ ವಿಷಯಗಳನ್ನು ಮುಟ್ಟಿಸುವಲ್ಲಿ ಹಾಗೂ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸುತ್ತಿವೆ. ಇಂದಿನ ಮಾಧ್ಯಮಗಳು ಮನೋರಂಜನೆಯ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮುಂತಾದ ವಿಷಯಗಳನ್ನು, ವಿಶ್ವದ ಇತರ  ಸುದ್ಧಿಸಮಾಚಾರಗಳನ್ನು ತಿಳಿಸುತ್ತಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಮೂಹ ಮಾಧ್ಯಮಗಳು ಜ್ಞಾನವಿಕಾಸಕ್ಕೂ ಕೂಡ ಸಹಕಾರಿ ಆಗಿವೆ. ಹಾಗೆಯೇ ಸಮೂಹ ಮಾಧ್ಯಮಗಳಿಂದ ಸಾಕಷ್ಟು ದುಷ್ಪರಿಣಾಮಗಳು ಇವೆ ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕಾಗಿದೆ. ವಿದ್ಯಾರ್ಥಿಗಳು ಅವಶ್ಯವಾದ ವಿಚಾರಗಳನ್ನು ಮಾತ್ರ ಆಯ್ದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ವಿಜ್ಞಾನದ ಆವಿಷ್ಕಾರದಿಂದ ಮೊಬೈಲ್ (ವಾಟ್ಸಪ್, ಈಮೇಲ್, ಹೈಕ್ ಗ್ರೂಪ್)ನಂತಹ ಮತ್ತಷ್ಟು ಸಮೂಹ ಮಾಧ್ಯಮಗಳು ಹುಟ್ಟಿಕೊಂಡು ವಿಚಾರ ವಿನಮಯಕ್ಕೆ ಸಹಕಾರಿಯಾಗಿವೆ.
    ಉಪಸಂಹಾರ : ಒಟ್ಟಾರೆಯಾಗಿ ಸಮೂಹ ಮಾಧ್ಯಮಗಳಿಂದ ಇಡಿ ವಿಶ್ವವೇ ಸಾಕಷ್ಟು ವಿಚಾರಗಳನ್ನು ಕ್ಷಣಮಾತ್ರದಲ್ಲಿ ನೋಡಬಹುದಾಗಿದೆ. ಪ್ರತಿಯೊಂದು ಮಾಧ್ಯಮಗಳು ಸಮಾಜವನ್ನು ಸರಿದಾರಿಗೆ ತರುವ ಸುಖಿ ಸಮಾಜ ನಿರ್ಮಾಣ ಕಾರ‍್ಯದಲ್ಲಿ ತೊಡಗಬೇಕೆಂಬುದೇ ಎಲ್ಲರ ಆಶಯವಾಗಿದೆ.



೧೮. ಪರಿಸರ ಮಾಲಿನ್ಯ
    ಪೀಠಿಕೆ : ನಾವು ಮತ್ತು ನಮ್ಮ ಸುತ್ತ ಮುತ್ತಲಿನ ಬೆಟ್ಟ-ಗುಡ್ಡ, ಕಲ್ಲು-ಮಣ್ಣು, ಮರ-ಗಿಡ, ನೀರು ವಾಯು,  ಪ್ರಾಣಿ-ಪಕ್ಷಿ ಚರಾಚರ ವಸ್ತುಗಳನ್ನು ಪರಿಸರ ಎಂದು ಕರೆಯಬಹುದು. ಇಂತಹ ಪರಿಸರ ಮಲಿನವಾಗುವುದು ಪರಿಸರ ಮಾಲಿನ್ಯ ಎಂದು ಕರೆಯಲಾಗಿದೆ. ಪರಿಸರ ಮಾಲಿನ್ಯವಾಗುವುದರಿಂದ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೆ ಹಾನಿಕಾರಕವಾಗುತ್ತದೆ.
    ವಿಷಯ ವಿವರಣೆ : ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಮತ್ತು ಸ್ವಚ್ಛತೆ ಮಹತ್ವದ ಅರಿವಿಲ್ಲದಿರುವುದು, ಅಜ್ಞಾನ, ಮೂಢನಂಬಿಕೆಗಳು, ವಸ್ತುಗಳ ಮರುಬಳಕೆಯಲ್ಲಿ ಅಸಡ್ಡೆ, ಅತಿ ವಾಹನಗಳ ಬಳಕೆ, ಕಾರ್ಖಾನೆಗಳ ಅಸುರಕ್ಷಿತ ಕಾರ‍್ಯಗಳು, ಕಾಡುಗಳ ನಾಶ, ನಗರ ನಿರ್ಮಾಣ ಇತ್ಯಾದಿ ಕಾರ‍್ಯಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಇಂದಿನ ದಿನಮಾನಗಳಲ್ಲಿ ಪರಿಸರ ಮಾಲಿನ್ಯ ಅತಿಯಾಗಿದ್ದು ಜಾಗತಿಕ ತಾಪಮಾನ ಏರುಪೇರಾಗುತ್ತಿದೆ. ಸರಿಯಾದ ಮಳೆ-ಬೆಳೆ ಬರಲು ಸಾಧ್ಯವಾಗುತ್ತಿಲ್ಲ. ಜಲಮಾಲಿನ್ಯ, ವಾಯುಮಾಲಿನ್ಯ, ಭೂಮಾಲಿನ್ಯ, ಶಬ್ಧಮಾಲಿನ್ಯಗಳು ಉಂಟಾಗುವುದರಿಂದ ಜನರ ಆರೋಗ್ಯದ ಮೇಲು ಪರಿಣಾಮ ಉಂಟಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಮಾನವ ಜನಾಂಗವೇ ಭೂಮಿಯ ಮೇಲೆ ವಾಸ ಮಾಡುವುದು ದುಸ್ತರವಾಗುವ ಕಾಲ ಸಮೀಪಿಸಿಬಿಟ್ಟದೆ ಎಂದು ಹೇಳಬಹುದು. ಆದ್ದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಮಾನವ ಕುಲದ ಒಳಿತಿಗೆ ಎಲ್ಲರೂ ಪರಿಶ್ರಮಿಸಬೇಕಾಗಿದೆ. 
    ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು. ಪ್ರತಿಯೊಬ್ಬರಲ್ಲೂ ಪರಿಸರದ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಯೋಜನೆ ಆಗಬೇಕು. ಕಾಡುಗಳನ್ನು ನಾಶಮಾಡಬಾರದು, ಬೆಳೆಸಬೇಕು. ಕಾಡುಗಳಿದ್ದರೆ ನಾಡು ಸುರಕ್ಷಿತವಾಗಿರಲು ಸಾಧ್ಯ. ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ನೀರಿನ ಮಿತಬಳಕೆ, ವಾಹನಗಳ ಮಿತಬಳಕೆ, ಕಾರ್ಖಾನೆಗಳಿಂದ ಮಾಲಿನ್ಯವಾಗದಂತೆ ಪರ‍್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳುವುದು. ನೀರು, ಪ್ಲಾಸ್ಟಿಕ್, ಕಬ್ಬಿಣದಂತಹ ವಸ್ತುಗಳನ್ನು ಮರುಬಳಕೆ ಮಾಡುವ ವ್ಯವಸ್ಥೆಯನ್ನು ರೂಪಿಸುವುದು.
    ಉಪಸಂಹಾರ : ’ಕಾಡಿದ್ದರೆ ನಾಡು-ನಾಡಿದ್ದರೆ ನಾವು’. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ವಿದ್ಯಾರ್ಥಿಗಳಾದ ನಾವು ಪರಿಸರ ಸಂರಕ್ಷಣೆ ಅರಿವನ್ನು ಮೂಡಿಸಿಕೊಂಡು ಪ್ರತಿಯೊಬ್ಬರಲ್ಲೂ ಜಾಗೃತಿಯನ್ನು ತರಬೇಕು. ಮೊದಲು ನಮ್ಮ ಸುತ್ತ-ಮುತ್ತ ಮನೆ, ಶಾಲಾ-ಕಾಲೇಜು, ಗ್ರಾಮಗಳಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಬೆಳೆಸಬೇಕು. ಇತರರಿಗೂ ಬೆಳೆಸಲೂ ಪ್ರೇರಕರಾಗಬೇಕು. ಅಂದಾಗ ಪರಿಸರ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ ಎಂಬುದೆ ನಮ್ಮೆಲ್ಲರ ಆಶಯವಾಗಬೇಕಿದೆ.
ಮನೆಗೊಂದು ಮಗು ಮಗುವಿಗೊಂದು ಮರ.



೧೯. ಸಾಮಾಜಿಕ ಜಾಲತಾಣಗಳ ಮಹತ್ವ
    ಪೀಠಿಕೆ: ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗಿದೆ. ಅದರ ಬಳಕೆಯಿಂದ ಉಪಯೋಗ ಮತ್ತು ದುರುಪಯೋಗಗಳು ಕೂಡ ಇವೆ. ಹಾನಿಗಳಿದ್ದರೂ ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಇವುಗಳ ಮಹತ್ವ ಅಡಗಿದೆ. 
    ವಿಷಯ ನಿರೂಪಣೆ : ವಾಟ್ಸಪ್, ಟ್ವಿಟರ್, ಫೇಸ್ ಬುಕ್, ಹೈಕ್, ಟೆಲಿಗ್ರಾಮ್, ಯೂಟೂಬ್, ಇಮೇಲ್, ಬ್ಲಾಗರ್, ವೆಬ್ ಸೈಟ್‌ಗಳಂತಹ ಸಾಮಾಜಿಕ ಸಂಪರ್ಕದ ಜಾಲತಾಣಗಳು ಬಳಕೆಯಾಗುತ್ತಿವೆ. ಸಾಮಾಜಿಕ ಜಾಲತಾಣಗಳು  ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳನ್ನು ಕಲಿಸುತ್ತವೆ. ಹಲವಾರು ವಿಷಯಗಳ ಅನುಭವವಾಗುತ್ತದೆ. ಮಾಹಿತಿಗಳನ್ನು ಹಂಚಿಕೊಳ್ಳಲು ಮತ್ತು ಪಡೆದುಕೊಳ್ಳಲು ಸಹಾಯಕವಾಗಿವೆ. ಗೂಗಲ್‌ನಂತಹ ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ಜ್ಞಾನಪೂರಕ ಮಾಹಿತಿಗಳು ಇವೆ. ಅವುಗಳನ್ನು ವಿದ್ಯಾರ್ಥಿಗಳ ಬಳಸಿಕೊಂಡು ಜ್ಞಾನವಿಕಾಸ ಮಾಡಿಕೊಳ್ಳಬಹುದು. ಕಲೆ, ಸಾಹಿತ್ಯ, ಸಂಗೀತ, ಇತಿಹಾಸ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿರುತ್ತವೆ. 
    ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳ ಬೆರಳ ತುದಿಯಲ್ಲಿ ಇಡಿ ಜಗತ್ತೆ ಹುದುಗಿರುತ್ತದೆ. ಸುಮಾರು ಪ್ರತಿಶತ ೫೦ ರಷ್ಟು ವಿದ್ಯಾರ್ಥಿಗಳು ಪ್ರಾಯೋಜಿತ ಕಾರ‍್ಯಗಳಿಗೆ ಮತ್ತು ಅಧ್ಯಯನಕ್ಕಾಗಿ ಜಾಲತಾಣಗಳನ್ನು ಜಾಲಾಡುತ್ತಾರೆ. ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳನ್ನು ಅರಿಯುವಲ್ಲಿ ಮತ್ತು ಹೊಸ ಮಾಹಿತಿಯನ್ನು ಪಡೆಯುವಲ್ಲಿ  ಜಾಲತಾಣಗಳಿಂದ ತುಂಬಾ ಅನುಕೂಲವಿದೆ. ಅಗತ್ಯವೆನಿಸಿದ ಚಿತ್ರಗಳು, ವೀಡಿಯೋಗಳು, ಸಾಹಿತ್ಯಗಳನ್ನು ಬಳಸಿಕೊಂಡು ಜ್ಞಾನಾಭಿವೃದ್ಧಿಯನ್ನು ಮಾಡಿಕೊಳ್ಳುವುದು ಮಹತ್ವವಾದ ವಿಷಯವಾಗಿದೆ. ಹೈಕ್‌ನಂತಹ ಸಾಮಾಜಿಕ ಜಾಲತಾಣವೊಂದು ಸಿರಿ ಕನ್ನಡ ನುಡಿ ಬಳಗ ಎಂಬ ಹೆಸರಿನಲ್ಲಿ ಗುಂಪು ರಚಿಸಿಕೊಂಡು ಕರ್ನಾಟಕದ ಸಾವಿರಾರು ಶಿಕ್ಷಕರನ್ನು ಒಗ್ಗೂಡಿಸಿ ಆ ಮೂಲಕ ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಕಾರಣವಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಜ್ಞಾನಪೂರಕ ಆಪ್‌ಗಳು ಕೂಡಿ ಹುಟ್ಟಿಕೊಂಡಿವೆ. ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
    ಉಪಸಂಹಾರ : ಸಾಮಾಜಿಕ ಜಾಲತಾಣಗಳು ಸಾಕಷ್ಟು ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದರೂ ಅವುಗಳಲ್ಲಿನ ಜ್ಞಾನವಿಷಯದ ಅಂಶಗಳನ್ನು ಪಡೆದುಕೊಂಡರೆ ಜ್ಞಾನವಿಕಾಸವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಬಹುದು







********ಕನ್ನಡ ದೀವಿಗೆ********

Grammar-Quizzes

****
ವ್ಯಾಕರಣಾಂಶಗಳ ರಸಪ್ರಶ್ನೆ ಅಭ್ಯಾಸದ ಲಿಂಕ್‌ಗಳು
****
ರಸಪ್ರಶ್ನೆಯಲ್ಲಿ ಭಾಗವಹಿಸಲು ವಿಷಯದ ಮೇಲೆ ಕ್ಲಿಕ್ ಮಾಡಿ.
(ಇಲ್ಲಿ ಅಭ್ಯಾಸಕ್ಕಾಗಿ ಲಿಂಕ್‌ಗಳನ್ನು ನೀಡಲಾಗಿದ್ದು ಇವುಗಳಿಗೆ ಫಲಿತಾಂಶವನ್ನು ಕಳುಹಿಸುವುದಿಲ್ಲ)
********

ಕ್ರ. ಸಂ.

ವ್ಯಾಕರಣಾಂಶಗಳು

1

ಕನ್ನಡ ವರ್ಣಮಾಲೆಕನ್ನಡ ಮತ್ತು ಸಂಸ್ಕೃತ ಸಂಧಿಗಳು

2

ಸಮಾಸಗಳು

3

ನಾಮಪದಸರ್ವನಾಮಗ್ರಾಮ್ಯ-ಗ್ರಾಂಥಿಕಅನ್ಯದೇಶ್ಯ

4

ತತ್ಸಮ-ತದ್ಭವವಿಭಕ್ತಿ ಪ್ರತ್ಯಯ

5

ದ್ವಿರುಕ್ತಿ-ಜೋಡುನುಡಿವಾಕ್ಯಪ್ರಭೇದಕ್ರಿಯಾಪದ

6

ಹೊಸಗನ್ನಡ ರೂಪಅವ್ಯಯಕೃದಂತತದ್ಧಿತಾಂತಲೇಖನ ಚಿಹ್ನೆಗಳು-೧

7

ಹೊಸಗನ್ನಡ ರೂಪಅವ್ಯಯಕೃದಂತತದ್ಧಿತಾಂತಲೇಖನ ಚಿಹ್ನೆಗಳು-೨

8

ಹೊಸಗನ್ನಡ ರೂಪಕೃದಂತತದ್ಧಿತಾಂತಛಂದಸ್ಸುಅಲಂಕಾರ

9

ಸಮಾನಾರ್ಥಕ ಪದಗಳು ಭಾಗ-1

10

ಸಮಾನಾರ್ಥಕ ಪದಗಳು ಭಾಗ-2

11

ಸಮಾನಾರ್ಥಕ ಪದಗಳು ಭಾಗ-3



********

21 ಜೂನ್ 2024

SL-Kan-Nittotadali-Haydanu-Bittamandeyali-Quiz


'ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ'

ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Vachanagalu-Quiz


'ವಚನಗಳು' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Mudal-kunigal-kere-Quiz


'ಮೂಡಲ್ ಕುಣಿಗಲ್ ಕೆರೆ' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Guri-Quiz


'ಗುರಿ' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Saddu-Madadiru-Quiz


'ಸದ್ದು ಮಾಡದಿರು' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Savi-chaithra-Quiz


'ಸವಿಚೈತ್ರ' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Bodhivrukshada-Hadu-Quiz


'ಬೋಧಿವೃಕ್ಷದ ಹಾಡು' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Sowjanya-Quiz


'ಸೌಜನ್ಯ' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Nanna-Gopala-Quiz


'ನನ್ನ ಗೋಪಾಲ' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********

SL-Kan-Gangeyalli-Deepamale-Quiz


'ಗಂಗೆಯಲ್ಲಿ ದೀಪಮಾಲೆ' ಆನ್‌ಲೈನ್ ರಸಪ್ರಶ್ನೆ







*********ಕನ್ನಡ ದೀವಿಗೆ*********