ನನ್ನ ಪುಟಗಳು

30 ಮಾರ್ಚ್ 2022

Mankuthimmanakagga-81-100

ರಸಧಾರೆ - 081
ಮರೆತಿಹನೆ ಬೊಮ್ಮ ಮರೆತಿಲ್ಲಮರೆತವೊಲಿಹನು |
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||
ಅರಸಿಕೊಳುವವೊಲಿಹುದುದೊರೆತವೋಲ್ ತೋರೆ ಸುಖ |
ದೊರೆವರೆಗಾಯಸವೊ – ಮಂಕುತಿಮ್ಮ ||
ಮರೆತಿಹನೆ = ಮರೆತಿದ್ದಾನೇನುಮರೆತವೊಲಿಹನು = ಮರೆತಂತಿದ್ದಾನೆ. ಜೀವಾಕೃತಿಯ = ಎಲ್ಲ ಜೀವಿಗಳ ರೂಪವನು ಅರಸಿಕೊಳುವವೊಲಿಹುದು = ಹುಡುಕುವಂತೆ ಇದೆ. ದೊರೆತವೋಲ್ತೋರೆ = ದೊರೆತಂತೆ ಆದರೆದೊರೆವರೆಗಾಯಸವೊ = ದೊರೆಯುವರೆಗೆ ಆಯಾಸ.
ಈ ಜಗತ್ತಿನ ಎಲ್ಲದರೊಳಗೆ ಆ ಪರಬ್ರಹ್ಮ ತನ್ನನ್ನು ತಾನೇ ಮರೆತಿದ್ದಾನೇನುಎಂದು ಪ್ರಶ್ನಿಸಿಇಲ್ಲ ಅವ ಮರೆತಂತೆ ಇದ್ದಾನೆ ಎಂದು ಉತ್ತರಿಸುತ್ತಾರೆ ಮಾನ್ಯ ಗುಂಡಪ್ಪನವರು. ಎಲ್ಲ ಜೀವಾತ್ಮಗಳ ಸೃಷ್ಟಿಯ ಎಲ್ಲದರ ರೂಪವನ್ನೂ ಧರಿಸಿ ತನ್ನನ್ನು ತಾನೇ ಹುಡುಕುತ್ತಿದ್ದಾನೆ. ಅವನಿಗೆ ದೊರೆತರೆ ಸುಖ ದೊರೆಯದಿದ್ದರೆ ಆಯಾಸ.
ಎಂಥಹ ಅದ್ಭುತ ವಿಚಾರ. ವಾಚಕರೆ ನೋಡಿ ನಾವು ಹಿಂದಿನ ಕಗ್ಗಗಳಲ್ಲಿ ”ಎಲ್ಲವೂ ಅವನೇ. ಎಲ್ಲವೂ ಅವನಿಂದಲೇ ಮತ್ತು ಎಲ್ಲವೂ ಅವನಿಗಾಗಿಯೇ” ಎಂದು ಹೇಳುತ್ತಾ ಬಂದಿದ್ದೇವೆ. ನಮ್ಮ ಮನಸ್ಸು ಬುಧ್ಹಿ ದೇಹಆತ್ಮಗಳೂ ಅವನೇ ಎಂದಮೇಲೆ ಅವನನ್ನು ಹುಡುಕುವುದು ಎಂದರೆ ಏನು . ಯಾರು ಯಾರನ್ನು ಹುಡುಕುವುದುಅವನೇ ಇದ್ದಮೇಲೆಅವನೇ ಎಲ್ಲವೂ ಆಗಿದ್ದಮೇಲೆ ಇಲ್ಲಿ ಹುಡುಕುವುದು ಎಂದರೇನು.ಯಾವುದ್ದಾದರೂ ವಸ್ತು ಕಳೆದು ಹೋದರೆ ಹುಡುಕ ಬೇಕು. ಎಲ್ಲ ಕಡೆಯಲ್ಲೂ ಅವನೇ ಆವರಿಸಿ ತನ್ಮಯನಾಗಿ ಇರಬೇಕಾದರೆ ಹುಡುಕುವುದು ಅಂದರೆ ಎಂತಹ ವಿಪರ್ಯಾಸ ಅಲ್ಲವೇ.?
 ಜಗತ್ತನ್ನು ಸೃಜಿಸಿನಮ್ಮನ್ನು ಇಲ್ಲಿ ಮಾಡಿ ತಾನೂ ಎಲ್ಲರೊಳಗೆ ಇದ್ದು ಇರವಿಕೆಯ ಜ್ಞಾನವನ್ನು ನಮ್ಮಿಂದ ಮರೆಮಾಚಲು ಒಂದು ಮಾಯೆಯಂಬ ಪರದೆಯನ್ನು ನಮ್ಮ ಜ್ಞಾನದ ಮೇಲೆ ಕವಿಸಿನಮ್ಮ ಮನಸ್ಸು ಬುದ್ಧಿಗಳು ಆ ಪರಮ ವಸ್ತುವಿನಿಂದ ಅನ್ಯ ವಸ್ತುಗಳಮೇಲೆ ಮೋಹಗೊಳ್ಳುವಂತೆ ಆ ವಸ್ತುಗಳನ್ನೂ ಮಾಡಿ ಒಂದು ವಿಚಿತ್ರ ಪರಿಸ್ಥಿತಿ ನಿರ್ಮಿಸಿದ್ದಾನೆ ಆ ಪರಮಾತ್ಮ. ಆ ಪರದೆಯು ತೆಳುವಾಗಿದ್ದರೂ ಕಬ್ಬಿನದಷ್ಟು ಗಟ್ಟಿ. ಆ ಕಡೆ ಆ ಪರಮಾತ್ಮನ ಇರವು ಕಾಣುತ್ತಿದ್ದರೂ ಆ ಪರದೆಯನ್ನು ಸೀಳಿ ಆ ಬದಿಗೆ ಹೋಗಲಾರದಂತೆ ಈ ಜಗತ್ತಿನ ಮೋಹದ ಮಾಯೆಯ ಸೆಳೆತದಲ್ಲಿ ಸಿಕ್ಕಿಬಿಟ್ಟಿದ್ದಾನೆ ಈ ಮನುಷ್ಯ ಪ್ರಾಣಿ. ಜ್ಞಾನವಿರುವ ಇವನ ಗತಿಯೇ ಹೀಗಿದ್ದರೆ ಪಾಪ ಜ್ಞಾನವಿಲ್ಲದ ಪ್ರಾಣಿಗಳುಪಶು ಪಕ್ಷಿ ಮತ್ತು ಕೀಟ ಇತ್ಯಾದಿಗಳ ಗತಿಯೇನು.
ಆದರೆ ಮಾನವನುಈ ಮಾಯೆಯ ಪರದೆಯನ್ನು ದಾಟಿ ಆ ಪರಮಾತ್ಮನೊಂದಿಗೆ ಸಾಮೀಪ್ಯಸಾಯುಜ್ಯ ಮತ್ತು ಸಾರೂಪ್ಯವನ್ನು ಪಡೆಯಲು ಹತ್ತು ಹಲವಾರು ವಿಧಾನಗಳ ಮೊರೆ ಹೋಗಿದ್ದಾನೆ. ಪೂಜೆಮಂತ್ರತಂತ್ರಧ್ಯಾನತಪಸ್ಸು ಹೋಮ ಹವನಭಜನೆಯೋಗ ಸತ್ಸಂಗ ಮುಂತಾದ ವಿಧಾನಗಳನ್ನು ಕಂಡು ಕೊಂಡಿದ್ದಾನೆ. ಸರಿಯಾದ ಗುರುವಿನ ಮಾರ್ಗದರ್ಶನದಲ್ಲಿ ಅವುಗಳಲ್ಲಿ ಯಾವುದಾದರೂ ಪಾಲಿಸಿದ್ದಲ್ಲಿ ನಮಗೂ ಸಹ ಆ ಪರಮ ಶಕ್ತಿಯ ಸರ್ವ ವ್ಯಾಪಕತೆಯಸರ್ವ ಶ್ಕಕ್ತಿಯ ಪ್ರಭಾವವಾದ ಅನುಭವವಾಗಬಹುದು. ಅಂತಹ ಅನುಭಾವಾಗುವ ತನಕ ಸುಖ ದೂರ. ಸಿಕ್ಕರೆ ಆ ಸುಖದ ಅನುಭವೇ ಒಂದು ಶಾಶ್ವತ ಸುಖ.
ಅಂತಹ ಅನುಭವವನ್ನು ಪಡೆಯಲು ನಾವೂ ಪ್ರಯತ್ನ ಪಡೋಣವೇ?
ವಿಶ್ವಲೀಲೆ. ರಸಧಾರೆ - 082
ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು |
ಎನ್ನನರಸಿ ಬನ್ನಿ ಮಕ್ಕಳಿರ ಬೇಗ ||
ಬನ್ನಿರಾಟವ ಬೇಡವೆಂಬುವರ ನಾಂ ಬಿಡೆನು |
ಎನ್ನುವಜ್ಜಿಯೋ ಬೊಮ್ಮ – ಮಂಕುತಿಮ್ಮ ||
ಹಿಂದಿನ ಕಾಲದ ಅವಿಭಕ್ತ ಕುಟುಂಬಗಳಲ್ಲಿ ಯುವತಿಯರು ಮತ್ತು ವಯಸ್ಕರು ಕೆಲಸಗಳಲ್ಲಿ ಮಗ್ನರಾಗಿದ್ದರೆ ವಯಸ್ಸಾದ ಅಜ್ಜಿಯರು ಮಕ್ಕಳನ್ನು ಆಡಿಸಿಕೊಳ್ಳಲುಕಣ್ಣಾ ಮುಚ್ಚಾಲೆ ಆಟವಾಡಿಸುತ್ತಿದ್ದರು. ಅದು ಅವರಿಗೂ ಕಾಲಯಾಪನೆಗೆ ಒಂದು ದಾರಿಯಾಗುತ್ತಿತ್ತು. ಅಜ್ಜಿಯರು ಎಲ್ಲರನ್ನೂ ಸೇರಿಸಿಕೊಂಡು ಆಡುತ್ತಿದ್ದರು. ಯಾರನ್ನೂ ಬಿಡುತ್ತಿರಲಿಲ್ಲ. ಅದರಂತೆ ಕಂಡೂ ಕಾಣದಂತೆ ಎದುರಿಗಿದ್ದರೂ ಬಚ್ಚಿಟ್ಟುಕೊಂಡಂತೆ ಇರುವ ಆ ಪರಮಾತ್ಮನನ್ನು ಹುಡುಕುವಂತೆ ನಮ್ಮನ್ನು ಕರೆಯುತ್ತಿದ್ದಾನೇನು ಆ ಪರಬ್ರಹ್ಮಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.
ವಾಚಕರೆ ಹೌದು ನೋಡಿ ಇದೊಂದು ಕಣ್ಣಾ ಮುಚ್ಚಾಲೆಯೇ. ಆಟದಲ್ಲಿ ನಮ್ಮ ಕಣ್ಣನ್ನು ಮುಚ್ಚಲಾಗುತ್ತದೆ. ಹಾಗೆಯೇ ಈ ಜೀವನದಾಟದಲ್ಲೂ ನಮ್ಮ ಕಣ್ಣು ಮುಚ್ಚಲಾಗಿದೆ,ಅಜ್ಞಾನದಿಂದಮಾಯೆಯೆಂಬ ಪರದೆಯಿಂದ. ಅಹಂಕಾರವೆಂಬ ಮುಚ್ಚಳದಿಂದ. ಎಲ್ಲ ವೇದಗಳೂ ಶಾಸ್ತ್ರಗಳೂ,ಪುರಾಣಗಳೂ ಗ್ರಂಥಗಳೂ ಎಲ್ಲವೂ ಆ ಪರಮಾತ್ಮನ ಸರ್ವವ್ಯಾಪಕತ್ವವನ್ನು ಸಾರಿ ಸಾರಿ ಹೇಳುತ್ತಿದ್ದರೂನಾವು ಸಾವಿರಾರು ವರ್ಷಗಳಿಂದ ಹುಡುಕುತ್ತಿದ್ದೇವೆ. ನಮಗೆ ಅವನ ಇರವಿನ ಭಾಸವಾಗುತ್ತಿದ್ದರೂಭಾವಕ್ಕೆ ಬರುತ್ತಿಲ್ಲ. ಇಲ್ಲಿ ನನಗೆ ಕನಕದಾಸರ ಆ ಬಾಳೆಹಣ್ಣಿನ ಪ್ರಸಂಗ ಮನಸ್ಸಿಗೆ ಬರುತ್ತದೆ. ಗುರುಗಳೇನೋ ಹೇಳಿಬಿಟ್ಟರು ” ಯಾರೂ ನೋಡದ ಕಾಣದ ಇಲ್ಲದ ಸ್ಥಳದಲ್ಲಿ ತಿಂದು ಬನ್ನಿ ಎಂದು. “ ಪಾಪ ಕನಕದಾಸರಿಗೆ ಆ ದೇವರಿಲ್ಲದ ಸ್ಥಳವೇ ಕಾಣಲಿಲ್ಲವಂತೆ. ಹಣ್ಣು ತಿನ್ನಲಾಗಲೇ ಇಲ್ಲವಂತೆ. ಅದು ಮಹಾನುಭಾವರ ಅನುಭೂತಿ. ಸ್ವಾಮೀ ರಾಮತೀರ್ಥರು ಹೇಳಿದರಂತೆ ಒಬ್ಬನಿಗೆ ”ನೀ ಯಾರೆಂದು ಅರಿತುಕೋ. ಅದರ ಆರಿವು ನಿನಗಾದರೆ ಆ ಪರಮಾತ್ಮ ನಿನಗೇ ಗೋಚರವಾಗುವನು. ನಾ ತೋರಿಸಬೇಕೆಂದಿಲ್ಲ” ಎಂದು. ಹಾಗೆ ಎಲ್ಲ ಕಡೆಯೂ ಇರುವ ಆ ಪರಮ ಚೇತನವು ನಮ್ಮ ಅರಿವಿಗೆ ನಿಚ್ಚಳವಾಗಿ ಬರದೆನಾವು ಕಣ್ಣಾಮುಚ್ಚಾಲೆಯಂತಾ ಆಟವಾಡುತ್ತಿದ್ದೇವೆ ಎಂಬುದು ಈ ಕಗ್ಗದ ಹೂರಣ.
ಆ ಪರಮಾತ್ಮ ವಸ್ತು ಸದ್ವಸ್ತು. ಅಂದರೆ ನಿತ್ಯವಾಗಿ ನಿರಂತರವಾಗಿ ಎಲ್ಲೆಡೆಯಲ್ಲೂ ಎಲ್ಲಕಾಲಕ್ಕೂ ಇರುವ ವಸ್ತುವೇ ಸದ್ವಸ್ತು. ” ಸತ್ಸಂಗತ್ವೆ ನಿಸ್ಸಂಗತ್ವಂನಿಸ್ಸಂಗಸ್ತ್ವೆ ನಿರ್ಮೋಹತ್ವಂನಿರ್ಮೋಹತ್ವೆ ನಿಶ್ಚಲ ತತ್ವಂ ನಿಶ್ಚಲ ತತ್ವೆ ಜೀವನ್ಮುಕ್ತಿ:” ಎಂದರು ಶಂಕರ ಭಗವತ್ಪಾದರು. ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಎರಡು ವಸ್ತುಗಳು ಇರಲಾಗದು ಎನ್ನುವುದು ಭೌತಶಾಸ್ತ್ರದ ಸಿದ್ಧಾಂತ. ಹಾಗೆ ನಾವು ಸತ್ತಿನ ಸಂಗ ಮಾಡಿದಾಗ ಅಸತ್ತಿನ ಸಂಗ ಬಿಟ್ಟು ಹೋಗುತ್ತದೆ. ಅಸತ್ತಿನ ಸಂಗಬಿಟ್ಟಾಗವಸ್ತುವಿಷಯ ,ವ್ಯಕ್ತಿಗಳ ಮೇಲಿನ ಮೋಹ ಅಥವಾ ಮಮಕಾರ ಹೋಗಿಬಿಡುತ್ತದೆಮೋಹ ಹೋದರೆ ಆ ಪರಮಾತ್ವ ತತ್ವ ನಿಶ್ಚಲವಾಗಿ ಅಂದರೆ ಸ್ಥಿರವಾಗುತ್ತದೆ. ಆ ಸ್ಥಿತಿಯಲ್ಲಿ ಜೀವನು ಬಂದನಗಳಿಂದ ಮುಕ್ತನಾಗಿ ಪರಮಾತ್ಮನಲ್ಲಿ ಸಾಯುಜ್ಯವನ್ನು ಪಡೆಯುತ್ತಾನೆ. ಇದು ಸತ್ಯ ಸತ್ಯ ಸತ್ಯ. ಅಂತಹ ಸ್ಥಿತಿಗೆ ನಾವು ಹೋದಾಗನಮ್ಮ ಒಳಗಣ್ಣುಗಳು ತೆರೆದುಕೊಂಡು ಆ ಪರಮ ಶಕ್ತಿಯ ಆ ಪರಮ ಚೇತನದ ಸರ್ವ ವ್ಯಾಪಕತ್ವದ ದರ್ಶನವಾಗಿ ನಮಗೆ ಎಲ್ಲೆಲ್ಲೂ ಆ ಪರಮಾತ್ಮನೇ ಕಾಣುತ್ತಾನೆ.
ವಾಚಕರೆ ಅಂತಹ ಅನುಭವವನ್ನು ನಾವೂ ಪಡೆಯುವ ಪ್ರಯತ್ನವನ್ನು ಮಾಡೋಣ.
ವಿಶ್ವ ಲೀಲೆ. ರಸಧಾರೆ - 083
ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |
ತಾನದಾರೊಳೋ ವಾದಿಸುವನಂತೆ ಬಾಯಿಂ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು |
ಭಾನವೊಂದರೊಳೆರಡು – ಮಂಕುತಿಮ್ಮ. ||
ಮಾನಸವ ಚಿಂತೆವಿಡಿದಂದು ಓರ್ವನು ಎರಡಾಗಿ ತಾನು ಅದರಾರೋಳೋ ವಾದಿಸುವವನಂತೆ ಬಾಯಿಂದ ಅದೇನೋ ನುಡಿಯುತ್ತ ಕೈಸನ್ನೆಗೈಯುವನು ಭಾನ ಒಂದರೊಳು ಎರಡು – ಮಂಕುತಿಮ್ಮ.
ಮನಸ್ಸಿಗೆ ಚಿಂತೆ ಹಿಡಿದಾಗ ಹೇಗೆ ಒಬ್ಬನು ತಾನು ಅದ್ಯಾರಲ್ಲೋ ಮಾತನಾಡುವಂತೆ ಏನೇನೋ ಮಾತನಾಡುತ್ತಾ ಕೈಸನ್ನೆ ಮಾಡುತ್ತಾ ಹೋಗುತ್ತಿರುತ್ತಾರೆ. ವ್ಯಕ್ತಿ ಒಬ್ಬರೇ ಆದರೂ ಇಬ್ಬರಂತೆ ಮಾತನಾಡುತ್ತಿರುತ್ತಾರೆ. ಹಾಗೆಯೇ ಒಬ್ಬನೇ ಇರುವ ಬ್ರಹ್ಮನನ್ನುಚಿಂತೆಗೀಡಾದ ಮನುಷ್ಯನಂತೆ ಎರಡೆಂದು ಭಾವಿಸುತ್ತಾರೆಂದು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ವಾಚಕರೆನಾವು ಹಲವಾರು ಬಾರಿ ನೋಡಿರುತ್ತೇವೆಬಹಳ ಚಿಂತಾಕ್ರಾಂತರಾದ ವ್ಯಕ್ತಿಗಳು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಕೈಸನ್ನೆಗಳನ್ನೂ ಮಾಡುತ್ತಿರುತ್ತಾರೆ. ತಾವೊಬ್ಬರೇ ಆದರೂ ಬೇರೆ ಯಾರೊಡನೆಯೋ ಮಾತನಾಡುತ್ತಿದ್ದಂತೆ ಭಾಸವಾಗುತ್ತದೆ. ಇಂತಹ ವಿಪರೀತ ವಿಚಿತ್ರವನ್ನು ನಾವು ಇಂದು ದಾರಿಯಲ್ಲಿ ಹೋಗುವಾಗ ಕಿವಿಗೆ ಕಿವಿ ಫೋನ್ ಸಿಕ್ಕಿಸಿಕೊಂಡು ಸೆಲ್ ಫೋನಿನಲ್ಲಿ ಯಾರೊಡನೆಯೋ ಮಾತನಾಡುತ್ತಾ ಕೈ ಕಾಲು ಅಲ್ಲಾಡಿಸುತ್ತಾ ಹುಚ್ಚರಂತೆ ತಿರುಗುವ ಬಹಳಷ್ಟು ಜನರನ್ನು ಕಾಣುತ್ತೇವೆ. ಪಾಪ ಅವರವರ ಒತ್ತಡಗಳೇನೋ ಯಾರಿಗೆ ಗೊತ್ತು. ಹಾಗೆಯೇ ಈ ಇಡೀ ಜಗತ್ತು ಎಲ್ಲ ಆ ಪರಮ ಚೇತನದ ಒಂದೇ ರೂಪವಾದರೂ ಅದು ಬೇರೆ ನಾವು ಬೇರೆ ಎನ್ನುವ ಭಾವದಲ್ಲಿ ಅರ್ಥೈಸುವುದು. ಆ ಪರಮ ವಸ್ತುವನ್ನೇ ಭಾಗಗಳಾಗಿಸಿ ಒಂದರಿಂದ ಇನ್ನೊಂದು ಭಿನ್ನವೆಂದು ಅರ್ಥೈಸುತ್ತಾ ಚಿತ್ರ ವಿಚಿತ್ರ ವ್ಯಾಖ್ಯಾನಗಳನ್ನು ಮಾಡುತ್ತಾ ನಾನು ಮಾಡುವ ವ್ಯಾಖ್ಯಾನವೇ ಸರಿ ಎಂದು ಪ್ರತಿಪಾದಿಸುತ್ತಾ ಮತಿಭ್ರಾಂತರಂತೆ ಇದ್ದಾರೆ ಈ ಲೋಕದಲ್ಲಿ ಜನ ಎಂದು ಪ್ರಸ್ತಾಪಿಸುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾವೂ ಸಹ ಹಾಗೆಸ್ವಲ್ಪ ಮತಿ ಭ್ರಮಣೆಯಾದವರಂತೆ ಎಲ್ಲವೂ ಆ ಪರಮಶಕ್ತಿಯೇ ಆಗಿರುವಾಗಅದು ಬೇರೆ ಬೇರೆ ಎನ್ನುವ ಭಾವನೆಯಿಂದಇದೆಯೋ – ಇಲ್ಲವೋಇದೋ – ಅದೋಒಂದೋ – ಎರಡೋಹೆಣ್ಣೋ – ಗಂಡೋ ಎಂಬ ದ್ವಂದ್ವಗಳಲ್ಲಿ ಸಿಕ್ಕು ತೊಳಲಾಡುತ್ತಿದ್ದೇವಲ್ಲವೇ?.  ಪರಮಾತ್ಮನ ಕಲ್ಪನೆಯಲ್ಲಿ ಇದರಿಂದಲೇ ಹುಟ್ಟಿಕೊಂಡ ಸಾವಿರಾರು ಭೇದಗಳುಮತಗಳು ಸಿದ್ಧಾಂತಗಳು. ದ್ವೈತಅದ್ವೈತವಿಶಿಷ್ಟಾದ್ವೈತಮತಬೇಧಗಳು. ” ಶಿವಶ್ಚ ನಾರಾಯಣಃ” ಎಂದು ವೇದ ಹೇಳಿದರೂಶಿವ ಮತ್ತು ವಿಷ್ಣುವಿನಲ್ಲಿ ನಮಗೆ ಭೇಧ , ” ನ ದ್ವಿತೀಯೋಸ್ಥಿ ಕಶ್ಚಿತ್” ಎಂದು ಪ್ರತಿಪಾದಿಸಿದರೂ” ಏಕದ” ಕಲ್ಪನೆ ನಮ್ಮಲ್ಲಿ ಇನ್ನೂ ಸ್ಥಿರವಾಗಿ ಬೇರೂರದೆ ದ್ವಂದ್ವಗಳಲ್ಲಿ ನಾವು ಇನ್ನೂ ಪರದಾಡುತ್ತಿದ್ದೇವೆ.
ಹಲವಾಗಿ ಕಾಣುವುದನ್ನು ಒಂದು” ಅಂದು ಅರಿತರೂ ಕಾಣಲು ನಮಗೆ ಜ್ಞಾನ ಪಕ್ವತೆ ಇಲ್ಲ. ಇಂತಹ ಪಕ್ವತೆಯನ್ನು ಬೆಳೆಸಿಕೊಳ್ಳಲು ಸತ್ಯದ ಅರಿವಾಗಬೇಕುಅರಿವಾದ ಸತ್ಯವನ್ನು ಒಪ್ಪಿಕೊಳ್ಳಬೇಕುಒಪ್ಪಿಕೊಂಡ ಸತ್ಯವನ್ನು ಮನಸ್ಸು ಬುದ್ಧಿಗಳಲ್ಲಿ ಸ್ಥಿರವಾಗಿಸಿಕೊಳ್ಳಬೇಕು. ಹಾಗಾದಾಗ ನಮಗೆ ನಿಸ್ಸಂಶಯವಾಗಿ ಆ ಪರಮಾತ್ಮನ ಸಮಗ್ರ ಚಿತ್ರ ಕಾಣುತ್ತದೆ.
ವಾಚಕರೆ ಅಂತಹ ಪ್ರಯತ್ನವನ್ನು ನಾವು ಮಾಡೋಣವೆ?
ಜೀವ ತಾಂಡವ. ರಸಧಾರೆ - 084
ಅಣು ಭೂತ ಭೂಗೋಳ ತಾರಾಂಬರಾದಿಗಳ |
ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||
ಕುಣಿಸುತಿರುವನು ತನ್ನ ಕೃತಿಕಂತುಕವನದರೊ||
ಳಣಗಿರ್ದು ಪರಬೊಮ್ಮ - ಮಂಕುತಿಮ್ಮ
ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದುತಾರಾಂಬರಾದಿಗಳ = ನಕ್ಷತ್ರ ಗಗನಗಳುಅಣಿಮಾಡಿ = ಸಿದ್ಧಪಡಿಸಿಬಿಗಿದು = ಒಂದು ಸೂತ್ರದಲ್ಲಿ ಬಂದಿಸಿನಸು = ಸ್ವಲ್ಪಸಡಿಲವನುಮಿರಿಸಿ = ಸಡಿಲವನು ಇರಿಸಿತಿಕಂತುಕವನದರೊಳಣಗಿರ್ದು = ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.
ಆ ಪರಬ್ರಹ್ಮ ಈ ಜಗತ್ತನ್ನು ಒಂದು ಸೂತ್ರದಲ್ಲಿ ಬಂಧಿಸಿ ಸ್ವಲ್ಪ ಸಡಿಲ ಬಿಟ್ಟುತನ್ನ ಕೃತಿಯಾದ ಈ ಜಗತ್ತನ್ನು ಒಂದು ಚೆಂಡು ಎಂದು ಭಾವಿಸಿತಾನೂ ಅದರೋಗೆ ಸೇರಿ ಒಂದು ಸೂತ್ರದಾಟವ ಆಡುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಕಗ್ಗದಲ್ಲಿ.
ಒಂದು ಬೃಹತ್ ಜಗತ್ತನ್ನು ತನ್ನ ಸಂಕಲ್ಪದಿಂದಲೇ ಸೃಷ್ಟಿಮಾಡಿ ಎಲ್ಲದರೊಳಗೂ ಚೇತನಾ ಸ್ವರೂಪವಾಗಿ ತಾನೇ ಸೇರಿಕೊಂಡು ಎಲ್ಲವನ್ನೂ ಒಂದು ಸೂತ್ರದಲ್ಲಿ ಬಂಧಿಸಿದ್ದಾನೆ ಆ ಪರಮಾತ್ಮ ಎನ್ನುವುದೇ ಈ ಕಗ್ಗದ ಹೂರಣ. ನೋಡಿ ನಮ್ಮಲ್ಲಿ ಒಂದು ಆಟಿಗೆ ಸಿಗುತ್ತಗೆ. ಒಂದು ರಬ್ಬರ್ ಚೆಂಡುಆ ಚೆಂಡಿನ ತುದಿಗೆ ಒಂದು ರಬ್ಬರ್ ದಾರ. ಆ ದಾರವನ್ನು ಕೈಗೆ ಸಿಕ್ಕಿಸಿಕೊಂಡು ಆ ಚೆಂಡನ್ನು ದೂರ ಎಸೆದಂಗೆ ಮಾಡಿದರೆಅದು ಆ ದಾರ ಎಷ್ಟು ದೂರ ಸಾಗಿ ಹೋಗಬಹುದೋ ಅಷ್ಟು ದೂರ ಹೋಗಿ ಮತ್ತೆ ತನ್ನ ಸ್ವಸ್ಥಾನವನ್ನು ಸೇರುತ್ತದೆ. ಆ ಮಕ್ಕಳ ಆಟ ಹಾಗೆ ಸಾಗಿರುತ್ತದೆ. ಹಾಗೆಯೇ ಈ ಜಗತ್ತನ್ನು ಒಂದು ಕಂದುಕ ಅಂದರೆ ಚೆಂಡಿನಂತೆ ಸೃಷ್ಟಿಮಾಡಿ ಅದಕ್ಕೆ ಚೇತನವೆಂಬ ಸೂತ್ರದಿಂದ ಎಲ್ಲವನ್ನೂ ಬಂಧಿಸಿ ತನ್ನ ಲೀಲಾವಿನೋದದಲ್ಲಿಮಕ್ಕಳು ಚೆಂಡಾಡುವಂತೆ ಆಡುತ್ತಿದ್ದಾನೆ ಆ ಪರಮಾತ್ಮ.
ನಿಜವಿರಬಹುದು. ಏಕೆಂದರೆ ನಮಗೆ ನಮ್ಮ ನಮ್ಮ ಬದುಕಿನಲ್ಲಿ ನಡೆಯುವ ಮತ್ತು ಆಗುವ ವಿಧ್ಯಮಾನಗಳಿಗೆ ತಾರ್ಕಿಕ ವಿವರಣೆಯನ್ನು ನೀಡಲು ನಾವು ಎಷ್ಟು ಸಮರ್ಥರೋ ಎಂದು ಯೋಚಿಸಿದಾಗ ಯಾವುದೂ ಒಂದು ಶಕ್ತಿ ನಮ್ಮ ಎಲ್ಲ ಗತಿ ವಿಧಿಯನ್ನು ನಿಯಂತ್ರಿಸುತ್ತಿದೆ ಎಂದು ಸಾಮಾನ್ಯವಾಗಿ ಅನ್ನಿಸುತ್ತದೆ. ಆದರೆ ಸ್ವಲ್ಪ ಸಡಿಲವನ್ನೂ ಬಿಟ್ಟಿದ್ದಾನೆಎಂದರೆ ಎಲ್ಲ ಪ್ರಾಣಿಗಳಿಗೂ ಸ್ವಲ್ಪ ಸ್ವಾತಂತ್ರ್ಯವನ್ನೂ ನೀಡಿದ್ದಾನೆ ಎಂದು ಅರ್ಥೈಸಬಹುದು. ಆ ಸ್ವಲ್ಪ ಸ್ವಾತಂತ್ರ್ಯವನ್ನು ತನ್ನ ಬುದ್ಧಿಶಕ್ತಿಯಿಂದ ನಾವು ನಮ್ಮನ್ನು ಸನ್ಮಾರ್ಗದಲ್ಲಿಸಂತ ಸಂಗದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರೆಅವನ ಸದ್ನಿಯಂತ್ರಣ ಮತ್ತು ನಮ್ಮ ಸದ್ಪ್ರಯತ್ನ ಎರಡರಿಂದ ನಮ್ಮ ಬಾಳೂ ಸ್ವಲ್ಪ ಹಸನಾಗಬಹುದು. ನಮ್ಮನ್ನು ನಾವು ಆ ಪರಮಾತ್ಮನ ಸೂತ್ರದ ಅಂಕೆಯೊಳಕ್ಕೆ ತೊಡಗಿಸಿಕೊಂಡು ಬಿಟ್ಟರೆ ನಮಗೆ ನಿಶ್ಚಿಂತೆ. ಅದು ಬಿಟ್ಟು ನಾವು ಸ್ವತಂತ್ರರು ಅವನು ಸೃಷ್ಟಿಮಾಡಿದಮೇಲೆನಾವು ನಮ್ಮ ಬದುಕನ್ನು ಬದುಕುತ್ತೇವೆಅದರಲ್ಲಿ ಅವನ ಪ್ರಮೆಯವೇನೂ ಇಲ್ಲವೆನ್ನುವವರೂ ಇದ್ದಾರೆ. ಇರಲಿ ಅವರಿಗದು ಪ್ರಿಯ. ನಮಗೇನು ಬೇಕೋ ಅದನ್ನು ಆಯ್ವ ಸ್ವಾತಂತ್ರ್ಯ ನಮಗಿದೆ. ನಮಗಾಗುವ ಪರಿಣಾಮ ನಮ್ಮ ಆಯ್ಕೆ ಮೇಲೆ ಅಧಾರಪಟ್ಟಿರುತ್ತದೆ.
ವಾಚಕರೆ ನಮಗೇನು ಬೇಕೋ ಅದನ್ನು ಆಯ್ದು ಅದರಿಂದ ಬಂದ ಸಾಧಕ ಬಾಧಕಗಳನ್ನು ನಾವು ಅನುಭವಿಸುತ್ತಾ ಅಥವಾ ಆನಂದಿಸುತ್ತಾ ಇರಬಹುದು.
ವಿಶ್ವ ಲೀಲೆ. ರಸಧಾರೆ - 085
ನಭದ ಬಯಲೊಳನಂತಮನದ ಗುಹೆಯೊಳನಂತ |
ಉಭಯದಾ ನಡುವೆ ಸಾದ್ಯಂತ ಜೀವ ಕಥೆ ||
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ||
ಹಬೆಗುಳ್ಳೆಯೋ ಸೃಷ್ಟಿ – ಮಂಕುತಿಮ್ಮ ||
ನಭದ = ಆಕಾಶದಬಯಲೊಳನಂತ = ಅಂತವೇ ಇಲ್ಲದ ಬಯಲುಮನದ = ಮನಸ್ಸಿನಗುಹೆಯೊಳನಂತ = ಅಂತರಂಗದಲ್ಲೂ ಅಂತವಿಲ್ಲದ ವಿಸ್ತಾರಉಭಯದಾ = ಎರಡರಸಾದ್ಯಂತ = ಆದಿಯಿಂದ ಅಂತ್ಯದವರೆಗೆಜೀವ ಕಥೆ = ಜೀವನದ ಕಥೆ. ವಿಭುವೊಬ್ಬನೀ = ಆ ಪರಮಾತ್ಮನೊಬ್ಬನುಹಬೆಗುಳ್ಳೆಯೋ = ಆವಿಯ ಬುಡ್ದೆ.
ಆಕಾಶದ ವಿಸ್ತಾರ ಅನೂಹ್ಯ ಮತ್ತು ಅನಂತ. ಹಾಗೆಯೇ ಜೀವಿಗಳ ಮನಸ್ಸಿನ ಆಳ ಮತ್ತು ವಿಸ್ತಾರಗಳೂ ಸಹ. ಈ ಸೃಷ್ಟಿಯಲ್ಲಿ ಆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ನಾವುಗಳು ಕೇವಲ ಗಾಳಿಯ ಗುಳ್ಳೆಗಳಂತೆ. ಒಂದು ಆದಿ ಮತ್ತು ಒಂದು ಅಂತ್ಯ ಇವುಗಳ ನಡುವೆ ನಮ್ಮ ಜೀವನದ ಕಥೆ. ಇಡೀ ಸೃಷ್ಟಿಯೇ ಒಂದು ದೊಡ್ಡ ಗಾಳಿಯ ಗುಳ್ಳೆಯಂತೆ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು.
ವಾಚಕರೆಈ ಹಿಂದೆಯೂ ಈ ಜಗತ್ ಸೃಷ್ಟಿಯ ವಿಸ್ತಾರದ ಬಗ್ಗೆ ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ. ಇಡೀ ಸೃಷ್ಟಿಯೇ ಎಷ್ಟು ಅಗಾಧವೆಂದರೆನಮಗೆ ಅದನ್ನು ನೋಡುವುದಿರಲಿ ಊಹಿಸಿಕೊಳ್ಳಲ್ಲೂ ಸಾಧ್ಯವಿಲ್ಲಅಲ್ಲವೇ ಹಾಗೆಯೇ ಜೀವಿಗಳ ಮನಸ್ಸೂ ಸಹಎಂದು ವಿಚಾರ ಪ್ರಸ್ತುತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು. ಇಲ್ಲಿ ಮಾನವನ ಮನಸ್ಸು ಚಿತ್ರ ವಿಚಿತ್ರವಾದ ಆಲೋಚನೆಗಳನ್ನು ಮಾಡುತ್ತದೆ. ಹಿಂದೆ ನಡೆದ ಅಲ್ಲ ಘಟನೆಗಳನ್ನೂ ಮೆಲುಕು ಹಾಕುತ್ತದೆ. ಮರೆತದ್ದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಒಂದು ಕ್ಷಣದಲ್ಲಿ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ” ಹರಿದಾಡುವಂಥಾ ಮನವ ನಿಲಿಸುವುದು ಬಲು ಕಷ್ಟ ” ಎಂದು ದಾಸರು ಹೇಳಿದ್ದಾರೆ. ಈ ಮನಸ್ಸಿನಲ್ಲಿಈ ಆಕಾಶದಂತೆಯೇ ಅಂತ್ಯವಿಲ್ಲದ ವಿಸ್ತಾರ ಮತ್ತು ವಿಚಾರ ಮಂಥನ ನಡೆದೇ ಇರುತ್ತದೆ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬ್ರಹ್ಮವಾದಿನಿ ” ಗಾರ್ಗಿ” ಯಾಜ್ಞ್ವವಲ್ಕ್ಯನಿಗೆ ಒಂದು ಪ್ರಶ್ನೆ ಕೇಳುತ್ತಾಳೆ. ” ಅವ್ಯಕ್ತವಾದ ಆಕಾಶ” ಯಾವುದರಿಂದ ವ್ಯಾಪ್ತವಾಗಿದೆ?” ಎಂದು. ಆ ಪ್ರಶ್ನೆಗೆ ಉತ್ತರವಾಗಿ ಯಾಜ್ಞ್ಯವಲ್ಕ್ಯನು ನೀಡುವ ಉತ್ತರದ ಒಂದೊಂದು ಪದವನ್ನೂ ನಾವು ಗ್ರಹಿಸಿಯೋಚಿಸಿಚಿಂತಿಸಿಮನನ ಮಾಡಿಕೊಳ್ಳಬೇಕಾದರೆ ಒಂದು ದೀರ್ಘ ತಪಸ್ಸೇ ಬೇಕಾಗುತ್ತದೆ. ಅಂದರೆ ಆ ನಭೋಮಂಡಲದ ವಿಸ್ತಾರ ಮತ್ತು ಗೂಢತೆಗಳು ಅಗಾಧ. ಅಷ್ಟೇ ಅಗಾಧ ನಮ್ಮ ಮನಸ್ಸುಗಳೂ ಸಹ ಎನ್ನುತ್ತಾರೆಗುಂಡಪ್ಪನವರು. ಆದರೆ ಎಷ್ಟೇ ಅಗಾಧವಾದರೂ ಒಂದು ಆದಿ ಮತ್ತು ಒಂದು ಅಂತ್ಯವಿರಬೇಕು. ಹಾಗೆ ಒಂದು ಆದಿ ಮತ್ತು ಒಂದು ಅಂತ್ಯದ ನಡುವೆ ನಡೆಯುವುದೇ ನಮ್ಮ ಜೀವನ. ಆದರೆ ಈ ಜೀವನದ ಎಲ್ಲವೂ ಅನಿಶ್ಚಯ. ಎಂದು ಮತ್ತು ಹೇಗೆ ಏನಾಗುವುದೋಏನು ನಡೆಯುವುದೋಹೇಗೆ ಅಂತ್ಯಗೊಳ್ಳುವುದೋ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಇದನ್ನೇ ಗಾಳಿಯ ಗುಳ್ಳೆ ಎನ್ನುತ್ತಾರೆ. ಇದನ್ನೇ ” ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇಯಾರಿಗೆ ಯಾರುಂಟು ಎರವಿನ ಸಂಸಾರ” ಎಂದು ಪುರಂದರ ದಾಸರೂ ಸಹ ಹಾಡಿದ್ದಾರಲ್ಲವೇ.
ಹಾಗೆ ನೀರಗುಳ್ಳೆಯಾದ ನಮ್ಮ ನಮ್ಮ ಬದುಕುಗಳನ್ನು ನಾವೇ ಕೈಲಾದಷ್ಟೂ ಸಂತಸದಿಂದಸುಂದರವನ್ನಾಗಿಸಿ ಕೊಳ್ಳಬೇಕು. ಬೇರೆ ದಾರಿಯಿಲ್ಲ. ಈ ಅಂತ್ಯವಿಲ್ಲದ ಆಗಸ ಮತ್ತು ಅದನ್ನೇ ಹೋಲುವ ಅಂತ್ಯವಿಲ್ಲದ ಮನಸ್ಸಿನ ಭಾವದ ಬಗ್ಗೆ ಯೋಚಿಸುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?
ಜೀವ ತಾಂಡವ. ರಸಧಾರೆ - 086
ಗಗನ ತಲೆನವಿರಾಗೆಪೆರೆ ತಾರೆಹೂವಾಗೆ |
ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||
ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |
ಭಗವಂತ ಶಿವರುದ್ರ – ಮಂಕುತಿಮ್ಮ.
ಗಗನ = ಆಕಾಶ ತಲೆನವಿರಾಗೆ= ತಲೆ ಕೂದಲಾಗಲುಪೆರೆ = ಚಂದ್ರತಾರೆ = ನಕ್ಷತ್ರಗಳುಹೂವಾಗೆ =( ಆ ತಲೆಗೂದಲಿಗೆಮೂಡಿವ) ಹೂವುಗಳಾಗಿಜಗವೆಲ್ಲ ವಪುವಾಗೆ = ಈ ಜಗತ್ತೇ ಆ ಪರಮಾತ್ಮನ ದೇಹವಾಗಿಮಾಯೆ ಸತಿಯಾಗಿ = ಮಾಯೆಯೇ ಅವನ ಪತ್ನಿಯಾಗಿನಗುನಗುವ = ಸಂತಸದಿಂದಿರುವಬೊಬ್ಬಿಡುವ = ಗೋಳಾಡುವಜೀವತಾಂಡವ= ಬಾಳ ಜಂಜಾಟರಸಿಕ ಭಗವಂತ = ಇದನ್ನೆಲ್ಲಾ ನೋಡಿ ಆನಂದಿಸುವ ಪರಮಾತ್ಮಶಿವರುದ್ರ = ಮಂಗಳಕರವಾದ ಶಿವನರೂಪ ಮತ್ತು ಭಯಂಕರವಾದ ರುದ್ರ ರೂಪವೂ ಹೌದು.
ಈ ಜಗತ್ತನ್ನೇ ದೇಹವನ್ನಾಗಿಸಿಕೊಂಡಿರುವ ಆ ಪರಮಾತ್ಮನು ಆಕಾಶವನ್ನು ತನ್ನ ತಲೆ ಕೂದಲಾಗಿಸಿಕೊಂಡು ಚಂದ್ರ ಮತ್ತು ನಕ್ಷತ್ರಗಳನ್ನು ಹೂವಂತೆ ಆ ಕೂದಲಲ್ಲಿ ಮುಡಿದು ಮಾಯೆಯನ್ನು ತನ್ನ ಸತಿಯಾಗಿಸಿಕೊಂಡು ಈ ಜಗತ್ತಿನಲ್ಲಿ ಸಂತೋಷ ಮತ್ತು ದುಃಖವನ್ನು ಸಮವಾಗಿ ಅನುಭವಿಸಿ ಆನಂದಿಸುತ್ತಿದ್ದಾನೆ. ಹಾಗೆ ಅವನು ಶಾಂತ ಶಿವ ಸ್ವರೂಪನೂ ಹೌದು ಮತ್ತು ಭಯಂಕರವಾದ ರುದ್ರ ಸ್ವರೂಪನೂ ಹೌದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಈ ಜಗತ್ತೇ ಅವನು. ಇಲ್ಲಿರಿವುದೆಲ್ಲವೂ ಅವನ ಆಭರಣಗಳು. ಆ ಪರಮಾತ್ಮ ನಕ್ಷತ್ರ ಚಂದ್ರ ಸೂರ್ಯ,ಎಲ್ಲವನ್ನೂ ಸೃಷ್ಟಿಮಾಡಿ ಎಲ್ಲವನ್ನೂ ತನ್ನ ಆಭರಣಗಳಂತೆ ತೊಟ್ಟಿದ್ದಾನೆ. ಸಕಲ ಜೀವರಾಶಿಗಳನ್ನುಗಿಡ ಮರಗಳನ್ನು ಗಿರಿ ಬೆಟ್ಟಗಳನ್ನು,ನದಿ ಸಮುದ್ರಗಳನ್ನುಎಲ್ಲವನ್ನೂ ಸೃಷ್ಟಿಮಾಡಿ ಅದರೊಳಗೆ ತಾನೇ ಇದ್ದುಅವುಗಳನ್ನೆಲ್ಲ ಧರಿಸಿ ತಾನು ಸಿಂಗರಿಸಿಕೊಂಡು ನಲಿಯುತ್ತಾಆನಂದವಾಗಿ ಸಂತೋಷವಾಗಿ ಶಿವ” ರೂಪದಲ್ಲಿಯೂಅವುಗಳೊಂದಿಗೆ ಆಡುವಾಗಬರಭೂಕಂಪಅತೀವೃಷ್ಟಿ ಅನಾವೃಷ್ಟಿಗಳಂತ ಉತ್ಪಾತಗಳನ್ನು ಸೃಷ್ಟಿಸಿ ತನ್ನ ರುದ್ರ ರೂಪದಲ್ಲಿಯೂ ಇದ್ದು ಎಲ್ಲವನ್ನೂ ಮಹಾ ರಸಿಕನಂತೆ ಆನಂದಿಸುತಿದ್ದಾನೆ ಎನ್ನುವುದೇ ಈ ಕಗ್ಗದ ಹೂರಣ.
ಒಟ್ಟಾರೆ ನಮಗೊಂದು ಸಂದೇಶ. ಈ ಜಗತ್ತಿನ ಎಲ್ಲದರಲ್ಲಿಯೂ ಆ ಪರಮಾತ್ಮನನ್ನು ಕಾಣಬೇಕು ಮತ್ತು ಈ ಜಗತ್ತಿನಲ್ಲಿ ನಡೆಯುವ ಎಲ್ಲ ವಿಧ್ಯಮಾನಗಳೂ ಆ ಪರಮಾತ್ಮನ ಲೀಲಾವಿನೋದವೆಂದೇ ತಿಳಿಯಬೇಕು.
ಜೀವತಾಂಡವ. ರಸಧಾರೆ - 087
ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ |
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ||
ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ |
ವಿಲಸಿತವು ಬೊಮ್ಮನದು – ಮಂಕುತಿಮ್ಮ ||
ವಿಲಸಿತವು = ಪರಮಾತ್ಮನ ಲೀಲೆ. ವಿಶ್ವಸಂಮೋಹನಗಳೆಲ್ಲವಾ = ವಿಶ್ವದಾಕರ್ಷಣೆಗಳು
ವಿಶ್ವದ ಎಲ್ಲಕ್ಕೂ ಒಂದು ನಿಗಧಿತ ಚಲನೆ ಉಂಟು. ಆ ಚಲನೆಗೆ ಕಾರಣ ಚೇತನ. ಆ ಬೃಹತ್ ಚೇತನದ ಒಂದು ಅಂಶವೇ ಎಲ್ಲಕ್ಕೂ ಚೇತನದ ಮೂಲ. ಒಂದು ಸಣ್ಣ ಬತ್ತದ ಕಾಳು ಭೂಮಿಗೆ ಬಿದ್ದಾಗನೆಲನೀರುಬೆಳಕುಸೂರ್ಯನ ಶಾಖಗಗಳ ಸಂಪರ್ಕಕ್ಕೆ ಬಂದಾಗ ಮೊಳಕೆಯೊಡೆದು ಸಸಿಯಾಗಿ ತೆನೆಯೋಡೆದು ಒಂದು ಇದ್ದದ್ದು ಹಲವಾಗಿ ಮತ್ತೆ ಮತ್ತೊಂದು ಸೃಷ್ಟಿ ಚಕ್ರಕ್ಕೆ ನಾಂದಿ ಹಾಡುತ್ತದೆ. ಅದಾವ ಶಕ್ತಿ ಆ ಒಂದು ಕಾಳನ್ನು ಮೊಳೆಸಿ ಆ ಭೂಮಿಯಿಂದ ಸತ್ವವನ್ನು ಹೀರಿ ಆ ಸಣ್ಣ ಸಸಿಯ ನರ ನಾಡಿಗಳಿಂದ ಶಿಖರಕ್ಕೆ ತಂದು ಕಿರೀಟದಂತೆ ಆ ತೆನೆಯನ್ನು ತೊಯ್ದಾಡಿಸುತ್ತದೆ. ಎಂತಹ ಅದ್ಭುತ. ಆ ಜಗತ್ತಿನ ಸೃಷ್ಟಿಯೆಲ್ಲವೂ ಅಂತಹ ಅದ್ಭುತಗಳಿಂದಲೇ ತುಂಬಿದೆ.
ಭೂಮಿಯ ಚಲನೆಅದರಿಂದಾಗುವ ಹಗಲು ರಾತ್ರಿಗಳುಕಾಲದ ಗಣನೆಸೂರ್ಯಸೂರ್ಯನ ಬೆಳಕು ಮತ್ತು ಶಾಖಪ್ರಾಣಿಗಳ ಮತ್ತು ಗಿಡಮರಗಳ ಮೇಲೆ ಅದರಿಂದಾಗುವ ಪರಿಣಾಮ ಪರಿಣಾಮದಿ೦ದಾಗುವ ಬದಲಾವಣೆಗಳು. ಹೀಗೆ ಒಂದುಬಾರಿ ಎಲ್ಲವನ್ನು ಸಮಗ್ರವಾದಿ ಪರಿಕಿಸಿ ಮತ್ತು ಪರೀಕ್ಷಿಸಿ ನೋಡಿದರೆಎಲ್ಲವೂ ಆ ಪರಮಾತ್ಮನ ಲೀಲಾವಿನೋದದ ಪರಿಚಯವಾಗುತ್ತದೆ. ನೋಡುವ ನೋಟ ಮತ್ತು ಮನಸ್ಸಿರಬೇಕಷ್ಟೆ.
ಇಷ್ಟೊಂದು ವೈವಿಧ್ಯವಾದ ಈ ಸೃಷ್ಟಿಯಲ್ಲಿ ಇಲ್ಲದಿರುವುದಿಲ್ಲ. ಎಲ್ಲವನ್ನೂ ಸಮಗ್ರವಾಗಿ ಒಂದಕ್ಕೊಂದು ಹೊಂದಿಕೊಂಡುಯಾವುದೂ ನಿರರ್ತಕವೆನಿಸದೆ ಎಲ್ಲವೂ ಸಮರ್ಪಕವಾಗಿದೆ. ಇದರ ಗಾಢತೆ ಮತ್ತು ಗೂಢತೆಯನ್ನು ನೋಡಿದರೆ ಇಂತಹ ಸಂಕೀರ್ಣ ಸೃಷ್ಟಿಯಿಂದ ನಾವು ಸಂಮೋಹಿತರಾಗದೆ ಇರಲು ಸಾಧ್ಯವೇ ಇಲ್ಲ. ತನ್ನಿಂದಲೇ ಎಲ್ಲವನ್ನೂ ಸೃಜಿಸಿತಾನೂ ಇದರಲ್ಲಿ ಇದ್ದು ಎಲ್ಲವೂ ಬೇರೆ ಬೇರೆಯಾಗಿ ಕಂಡರೂಒಂದೇ ಆಗಿರುವ ಪರಮಾತ್ಮನ ಈ ಜಗತ್ತನ್ನು ಸೃಷ್ಟಿಸುವ ಕಾರ್ಯ ಕುಶಲತೆಯನ್ನು ಕಂಡು ಆನಂದಿಸದೇ ಇರಲು ಸಾಧ್ಯವೇ ಇಲ್ಲಆ ಕುಶಲತೆಯನ್ನು ಎಷ್ಟು ಹೊಗಳಿದರೂ ಅತಿಶಯೋಕ್ತಿಯಾಗಲಾರದು.
ವಾಚಕರೆ ನಾವೂ ಸಹ ಈ ಸೃಷ್ಟಿಯ ಎಲ್ಲವನ್ನೂ ನೋಡುವಅನುಭವಿಸುವ ಆನಂದಿಸುವಮತ್ತು ಆ ಪರಮಾತ್ಮನಿಗೆ ಕೃತಜ್ಞತೆಯನ್ನು ಸಲ್ಲಿಸುವ.
ಜೀವ ತಾಂಡವ. ರಸಧಾರೆ - 088
ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ||
ಥಳಥಳಿಕೆ ವಜ್ರದಲಿ ನೈಜವಿರುವಂತೆಯು |
ಜ್ವಲತೆ ಬೊಮ್ಮಗೆ ನೈಜ – ಮಂಕುತಿಮ್ಮ ||
ವಿಶ್ವಾಸ್ತರಣೆಯದುವೆ = ವಿಶ್ವ + ಆಸ್ತರಣೆ + ಅದುವೆಬಗೆಯಲದು= ಬಗೆಯಲು + ಅದು,
ಆಸ್ತರಣೆ = ವಿಸ್ತಾರಮಾಯಾಭ್ರಮಣೆ = ವಿಶ್ವ ಮಾಯೆಯ ತಿರುಗಾಟಸಲೆ = ಸರಿಯಾಗಿಬಗೆಯಲದು = ವಿಚಾರಮಾಡಿದರೆಥಳಥಳಿಕೆ = ಹೊಳಹೊಳಪು ಜ್ವಲತೆ = ಹೊಳಪುಬೊಮ್ಮಗೆ = ಬ್ರಹ್ಮನಿಗೆನೈಜ = ಸಹಜ.
ನಿರಂತರ ಚಲನೆಯಲ್ಲಿರುವ ಈ ಜಗತ್ತು ಮತ್ತು ಅದರ ವಿಸ್ತಾರದ ವಿಚಾರ ನಮ್ಮನ್ನು ಭ್ರಮಾಲೋಕಕ್ಕೆ ತಳ್ಳುತದೆ. ಅದನ್ನು ಕೂಲಂಕುಷವಾಗಿ ವಿಚಾರಮಾಡಿ ನೋಡಿದರೆ ಎಲ್ಲೆಲ್ಲೂ ಸಹಜ ಪ್ರಕಾಶದಿಂದ ಪ್ರಾಜ್ವಲ್ಯಮಾನವಾಗಿರುವ ಆ ಪರಮಾತ್ಮ ದರ್ಶನವಾಗುತ್ತದೆ. ಏಕೆಂದರೆ ವಜ್ರಕ್ಕೆ ಹೇಗೆ ಪ್ರಕಾಶವು ಸಹಜ ಗುಣವೋ ಹಾಗೆಯೇ ಆ ಪರಮಾತ್ಮನೂ ತನ್ನದೇ ಪ್ರಕಾಶದಿಂದ ಹೊಳೆಯುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಜಗತ್ತನ್ನೇ ಬೆಳಗುವ ಆ ಜಗದೀಶನು ಸ್ವಯಂಪ್ರಕಾಶ.ನಮ್ಮನ್ನೂ ಸೇರಿ ಈ ಜಗತ್ತಿನ ಎಲ್ಲವಸ್ತುಗಳೂ ಬೆಳಗಲು ಎರವಲುಪಡೆದ ಬೆಳಕು ಬೇಕು. ಆದರೆ ಅವನೇ ಆದಿಪುರುಷ. ಎಲ್ಲವನ್ನೂ ಬೆಳಗುವವನಾಗಿದ್ದರಿಂದ ಅವನಿಗೆ ಜಗತ್ಪ್ರಭು” ಎಂದು ಹೆಸರು. ”ಜಗತ್ಪ್ರಭು” ಎಂದರೆ ಜಗತ್ತಿಗೆ ಪ್ರಭೆಯನ್ನು ನೀಡುವವನೂ ಎಂದು ಅರ್ಥೈಸಬಹುದೇನೋ!!. ಇದನ್ನು ಪಂಡಿತರು ವಿಶ್ಲೇಷಿಸಿದರೆ ಚೆನ್ನ. ಸೂರ್ಯನ ಬೆಳಕಿನಿಂದ ಭೂಮಿ ಬೆಳಗುತ್ತದೆ. ಭೂಮಿಯ ಬೆಳಕಿನಿಂದ ಚಂದ್ರನು ಬೆಳುಗುತ್ತಾನೆ. ಆದರೆ ಆ ಸೂರ್ಯ ಚಂದ್ರರಿಗೂ ಬೆಳಕನ್ನು ನೀಡುವ ಅಥವಾ ಬೆಳಗುವ ಶಕ್ತಿಯನ್ನು ನೀಡುವವನೇ ಸ್ವಯಂಪ್ರಕಾಶ.
ಹಾಗೆ ಅವನ ಪ್ರಕಾಶದಿಂದಲೇ ಇಡೀ ಸೃಷ್ಟಿಯೂ ಬೆಳಗುತ್ತಿದೆ. ದೂರದಲ್ಲಿ ಕಾಣುವ ನಕ್ಷತ್ರಗಳುಗ್ರಹಗಳು ಕಾಣದ ಎಲ್ಲ ಆಕಾಶಕಾಯಗಳೂ ಮತ್ತು ಬಹು ವಿಸ್ತಾರವಾದ ಈ ಜಗದ್ಪ್ರವಾಹವೂ ಸಹ ಆ ಪರಮ ಶಕ್ತಿಯ ಬೆಳಕಿನಿಂದಲೇ ಬೆಳಗುತ್ತದೆ. ಎಲ್ಲಕ್ಕೂ ಬೆಳಕು ನೀಡುವವನಿಗೆ ಆ ಬೆಳಕು ಎಲ್ಲಿಂದ ಬರುತ್ತದೆ ಎಂದರೆಎಲ್ಲಿಂದಲೂ ಬರುವುದಿಲ್ಲ. ಏಕೆಂದರೆ ಅವನೇ ಬೆಳಕು ಮತ್ತು ಬೆಳಕೇ ಅವನು. ಇದನ್ನು ಮಾನ್ಯ ಗುಂಡಪ್ಪನವರು ಒಂದು ಸೂಕ್ತ ಉಪಮೆಯಿಂದ ವಿವರಿಸುತ್ತಾರೆ. ವಜ್ರಕ್ಕೆ ಹೊಳಪನ್ನು ನೀಡಲಾಗುವುದೇಸಾಧ್ಯವಿಲ್ಲ ಏಕೆಂದರೆ ವಜ್ರವೇ ಹೊಳೆಯುತ್ತದೆ. ಹಾಗೆ ಹೊಳೆ ಹೊಳೆಯುವ ವಜ್ರದಂತೆ ಪರಮಾತ್ಮನೂ ಹೊಳೆಯುತ್ತಾನೆ.
ವಾಚಕರೆಈ ಜಗತ್ತಿನ ವಿಸ್ತಾರ ಮತ್ತು ತಿರುಗಾಟವೆಲ್ಲ ಒಂದು ಮಾಯಾ ಭ್ರಮಣೆಯನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ವಿಸ್ತಾರವನ್ನು ಮತ್ತು ಭ್ರಮಣೆಯನ್ನು ಪರೀಕ್ಷಿಸಿ ನೋಡಿದರೆ ಆ ಪರಮಾತ್ಮನ ಬೆಳಕು ನಮಗೆ ಗೋಚರವಾಗುತ್ತದೆ. ಆದರೆ ಇಲ್ಲಿ ಬೆಳಕು ಅಂದಾಕ್ಷಣಕೇವಲ ಬೆಳಕಲ್ಲ. ಅದನ್ನು ಜ್ಞಾನವೆಂದೂ ಸಹ ಅರ್ಥೈಸಿಕೊಳ್ಳಬೇಕು. ಅದನ್ನೇ ” ಜ್ಞಾನಂದಮಯಂ ದೇವಂ ನಿರ್ಮಲಃ ಸ್ಪಟಿಕಾಕೃತಿಂ ಆಧಾರಂ ಸರ್ವ ವಿಧ್ಯಾನಾಂ ಹಯಗ್ರೀವಮುಪಾಸ್ವ್ಮಹೆ” ಎಂದು ಹಯಗ್ರೀವ ಶ್ಲೋಕದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಬೆಳಕೆಂದರೆ ಜ್ಞಾನ. ಪರಮಾತ್ಮನೆಂದರೆ ಜ್ಞಾನ. ಅಂತಹ ಜ್ಞಾನಸ್ವಾರೂಪನಾದ ಪರಮಾತ್ಮನನ್ನು ನಾವು ಆರಾಧಿಸೋಣ.
ರಸಧಾರೆ - 089
ಆದಿದಿವಸವಾವುದೆಂದುಮಿಹ ಜಗಕೆ? |
ಭೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||
ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |
ಸೇದಿಕೊಂಡಿರೆ ಲಯವೊ – ಮಂಕುತಿಮ್ಮ. ||
ಆದಿದಿವಸವಾವುದೆಂದುಮಿಹ = ಆದಿದಿವಸವು + ಆವುದು + ಎಂದೆಂದೂ + ಇಹಆದಿದಿವಸ = ಮೊದಲ ದಿವಸಸೃಷ್ಟಿಲಯಕಥನ = ಆದಿ ಮತ್ತೆ ಅಂತ್ಯದ ವಿವರಣೆ. ಪಾದಶಿರಗಳ = ಕಾಲು ಮತ್ತು ಕೈಗಳು ಸೇದಿಕೊಂಡಿರೆ = ಎಳೆದುಕೊಂಡರೆ.
ಎಂದೆಂದೂ ಇರುವ ಈ ಜಗತ್ತಿಗೆ ಮೊದಲ ದಿನವು ಯಾವುದು ಮತ್ತು ಕೊನೆಯ ದಿನವು ಯಾವುದುಅದು ಹಾಗಾಯಿತುಇದು ಹೀಗಾಯಿತು ಎಂದು ಸುಲಭವಾಗಿ ವಿವರಿಸಲು ಒಂದು ರೀತಿಯ ವಿವರಣೆಯನ್ನು ನೀಡುತ್ತಾರೆ. ಆಮೆ ತನ್ನ ಕಾಲುಗಳನ್ನು ಹೊರಗೆ ತೆಗೆದರೆ ಸೃಷ್ಟಿ ಒಳಗೆಳೆದುಕೊಂಡರೆ ಲಯವೆನ್ನುವ ರೀತಿ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ಈ ಜಗತ್ತು ಅನಾದಿ ಮತ್ತು ಅನಂತ. ಅಂದರೆ ಇದಕ್ಕೆ ಒಂದು ತೊಡಗುವ ಬಿಂದುವೂ (starting point) ಇಲ್ಲ ಅಥವಾ ಕೊನೆಯ ಬಿಂದುವೂ ಇಲ್ಲ. ಮೊದಲೂ ಇತ್ತು ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ. ಆದರೆ ಮೊದಲಿದ್ದಹಾಗೆ ಇಲ್ಲವಲ್ಲ ಎಂದರೆಹೌದು ಒಂದೇ ರೀತಿಯಿರುವುದಿಲ್ಲ . ಬದಲಾಗುತ್ತಲೇ ಇರುತ್ತದೆ. ಒಂದರಿಂದ ಮತ್ತೊಂದು ರೂಪ. ಇಡೀ ಜಗತ್ತೇ ಒಂದು ರೂಪಾಂತರ ಪ್ರಕ್ರಿಯೆ ಎಂದರೆ ಸರಿಯಾಗುವುದೇನೋ. ಪ್ರಕಟವಾಗಿ ನಮಗೆ ಕಂಡರೆ ಸೃಷ್ಟಿ ನಮಗೆ ಕಾಣದೆ ಹೋದರೆ ಲಯ. ಅದಕ್ಕೊಂದು ಉಪಮೆಯನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು. ಆಮೆ ಮುಂದಕ್ಕೆ ಸರಿಯಬೇಕಾದರೆ ತನ್ನ ಕಾಲುಗಳನ್ನು ತನ್ನ ಚಿಪ್ಪಿನಿಂದ ಹೊರತೆಗೆದು ನಡೆಯುತ್ತದೆ. ಹೊರತೆಗೆದು ಎಂದರೆಅದು ಅಲ್ಲಿ ಇತ್ತು ಎಂದರ್ಥವಲ್ಲವೇಆಗ ಸೃಷ್ಟಿಯಾಗಲಿಲ್ಲ ಅಲ್ಲವೇಹಾಗೆಯೇ ಅದು ನಿಲ್ಲಬೇಕಾದರೆ ಅಥವಾ ವಿಶ್ರಮಿಸಬೇಕಾದರೆತನ್ನ ಕಾಲುಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆ. ನಮಗೆ ಕಾಣದಿದ್ದರೂ ಇದೆ. ಅಂದರೆ ಲಯವಲ್ಲ ಅಲ್ಲವೇ?
ವಾಚಕರೆಗಮನಿಸಿ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನ ವಿಷಾದಯೋಗದಲ್ಲಿ ” ನೀನು ಯಾರನ್ನೂ ಕೊಲ್ಲುವುದಿಲ್ಲಇಲ್ಲಿ ಯಾರೂ ಸಾಯಿವುದಿಲ್ಲಅವರೂ ಹಿಂದೆಯೂ ಇದ್ದರು ಮುಂದೆಯೂ ಇರುತ್ತಾರೆನೀನು ಶೋಚಿಸತಕ್ಕುದ್ದಲ್ಲ” ಎನ್ನುತ್ತಾನೆ. ಒಂದೇ ಗೋಳವಾಗಿದ್ದ ಪರಮಾತ್ಮವಸ್ತು ಹಲವಾಗಿ ಪ್ರಕಟಗೊಂಡಾಗ ಈ ಜಗತ್ತಿನ ಸೃಷ್ಟಿಯಾಯಿತು ಎಂದು ನಾವು ಕಥನ ಮಾಡುತ್ತೇವೆ. ಅಂದರೆ ಅದು ರೂಪಾಂತರವಷ್ಟೇ. ಒಂದು ರೀತಿಯಲ್ಲಿ ಇದ್ದದ್ದು ನಮಗೆ ಬೇರೆ ರೂಪದಲ್ಲಿ ಕಂಡಿದೆ ಅಷ್ಟೇ. ನಾವೂ ಸಹ ಇಂದೊಂದು ರೂಪ. ನಂತರ ಮತ್ತೆ ಇನ್ನೊದು ರೂಪ. ಆ ಅರ್ಥದಲ್ಲಿ ಹುಟ್ಟು ಸಾವುಗಳೂ ಸಹ ಒಂದು ರೂಪಾಂತರ ಪ್ರಕ್ರಿಯೆಯಷ್ಟೇ ಆಗಲಿ ಯಾವುದಕ್ಕೂ ಒಂದು ಆದಿ ಇಲ್ಲ ಒಂದು ಅಂತ್ಯವೂ ಇಲ್ಲ.
ಇಷ್ಟೊಂದು ಗಹನವಾದ ವಿಷಯವನ್ನು ಸಾಮಾನ್ಯರು ಕೇಳಿದರೂ ಈ ವಿಷಯದ ಸತ್ವವನ್ನು ಅರಿತು ಅರಗಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಮ್ಮ ಋಷಿಮುನಿಗಳು ಸೃಷ್ಟಿ ಮತ್ತು ಲಯದ ವಿವರಣೆಯನ್ನು ನೀಡಿ ನಮ್ಮ ಪರಿಮಿತ ಅರಿವಿಗೆ ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಪರಮಾತ್ಮ ಸ್ವರೂಪವಾದ ಈ ಜಗತ್ತು ಅವನಂತೆಯೇ ಅನಾದಿ ಮತ್ತು ಅನಂತ. ನಾವೆಲ್ಲರೂ ಈ ಜಗತ್ತಿನ ಒಂದು ಬದಲಾಗುತ್ತಾ ಇರುವ ಅಣುಗಳು ಮಾತ್ರ.
ವಾಚಕರೆ ನಾವು ಆ ಪರಮಾತ್ಮನ ಅನಂತ ಬೃಹದ್ರೂಪವನ್ನು ಕಾಣುವಅನುಭವಿಸುವ ಮತ್ತು ಆನಂದಿಸುವ.
ರಸಧಾರೆ - 090
ಆವುದಿರುವಿಕೆಗಾದಿಎಂದು ಸೃಷ್ಟಿಯ ಮೊದಲು?
ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು?
ಆವುದೆಲರಿನ ನಿಲ್ಲದಲೆತಕ್ಕೆ ಗಡುಸೀಮೆ?
ಈ ವಿಶ್ವಕಥೆಯಂತು ? – ಮಂಕುತಿಮ್ಮ.
ಆವುದಿರುವಿಕೆಗಾದಿ = ಆವುದು+ಇರುವಿಕೆಗೆ + ಆದಿಆವುದಬ್ಧಿಯ = ಆವುದು + ಅಬ್ದಿಯಆವುದೆಲರಿನ = ಆವುದು + ಎಲರಿನನಿಲ್ಲದಲೆತಕ್ಕೆ = ನಿಲ್ಲದ + ಅಲೆತಕ್ಕೆಇರುವಿಕೆ = ಜೀವನಅಬ್ಡಿ = ಸಮುದ್ರಕಡಲುಎಲರು = ಗಾಳಿಪವನಅಲೆತಕ್ಕೆ = ಬೀಸುವಿಕೆಗೆ.
ಈ ಜಗತ್ತಿನ ಇರುವಿಕೆಗೆ ಯಾವುದು ಮೊದಲುಈ ಸೃಷ್ಟಿಯ ಮೊದಲು ಎಂದು ಆಯ್ತುಸಮುದ್ರದ ಅಲೆಗಳಲ್ಲಿ ಮೊದಲ ಅಲೆ ಯಾವುದು. ನಿರಂತರ ನಿಲ್ಲದೆ ಬೀಸುವ ಗಾಳಿಬೀಸಲು ಎಂದು ಮೊದಲಾಯ್ತು ಮತ್ತು ಅದರ ಎಲ್ಲೆಗಳು ಎಲ್ಲಿವೆ. ಈ ವಿಶ್ವ ಕಥೆ ಎಂತು ಎಂದು ಪ್ರಸ್ತಾಪಮಾಡುತ್ತಾರೆಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
ಈ ಜಗತ್ತಿಗೊಂದು ಆದಿ ಉಂಟೆ.ಖಂಡಿತ ಇಲ್ಲ. ಇದು ಅನಾದಿ. ಕೋಟಿ ಕೋಟಿ ವರ್ಷಗಳ ಹಿಂದೆ ರೂಪಾಂತರಗೊಂಡು ನಿರಂತರ ಬದಲಾಗುತ್ತಾ ಇರುವ ಈ ವಿಶ್ವಕ್ಕೆ ಆದಿಯಲ್ಲಿದೆ. ಅಂತ್ಯವೆಲ್ಲಿದೆ. ಇದು ಬದಲಾಗುತ್ತಾ ಇದೆ. ಇಷ್ಟೊಂದು ಬೃಹತ್ ವಿಶ್ವದಲ್ಲಿ ಆಗುವ ಬದಲಾವಣೆಗಳು ನಮಗೆ ಎಷ್ಟು ನಿಧಾನವಾಗಿ ಗೋಚರವಾಗುತ್ತದೆ ಎಂದರೆನಮಗೆ ಈ ಬದಲಾವಣೆಗಳು ಅರಿವಿಗೆ ಬರುವುದಿಲ್ಲ. ಸಮುದ್ರದ ನೀರಿನಲ್ಲಿ ಅಲೆಗಳೇಳುತ್ತವೆ. ಆದರೆ ಯಾವ ಅಲೆ ಯಾವ ಸಮಯಕ್ಕೆ ಏಳುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗಿರುವಾಗ ಅದರೊಳಗೆ ಮೊದಲ ಅಲೆ ಎಂದು ಎದ್ದಿತು ಎಂದು ಹೇಳಲು ಆಗುತ್ತದೆಯೇ.ಇನ್ನು ಅದೇ ರೀತಿ ಈ ಭೂಮಿ ಗಾಳಿ ಮತ್ತು ಆಕಾಶದಲ್ಲಿ ನಡೆಯುವ ಬದಲಾವಣೆಯ ಮೂಲವನ್ನು ಹುಡುಕಲು ಸಾಧ್ಯವೇ ಇಲ್ಲ.
ಆದರೆ ಒಂದು ವಿಚಾರ ಗಮನಿಸಬೇಕಾದದ್ದು ಏನೆಂದರೆಎಲ್ಲ ಚಲನೆ ಅಥವಾ ಬದಲಾವಣೆಗೆ ಹೇತುವಾದ ಆ ಬೃಹತ್ ಚೇತನ ಸ್ವರೂಪನಾದ ಪರಮಾತ್ಮನೇ ಎಲ್ಲಕ್ಕೂ ಕಾರಣನು. ಆ ಚೇತನವಿಲ್ಲದೆ ಇದ್ದರೆ ಏನೂ ನಡೆಯುವುದಿಲ್ಲ. ” ತೃಣಮಪಿ ನ ಚಲತಿ ತೆನ ವಿನಾ” ಎಂದು ಇದನ್ನೇ ಆದಿ ಶಂಕರರು ಹೇಳಿದ್ದು. ಅವನ ಸಂಕಲ್ಪ ಎಂದಾಯಿತೋಜಗತ್ಸೃಷ್ಟಿಯ ಪ್ರಕ್ರಿಯೆ ಎಂದು ಶುರು ಮಾಡಿದನೋ ಯಾರಿಗೆ ಗೊತ್ತು. ಇಲ್ಲಿ ಬದಲಾಗುವುದು ಕೇವಲ ಜಗತ್ತಲ್ಲ. ಜಗತ್ತಿನಲ್ಲಿರುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ವಾಚಕರೆ ನೋಡಿ ಹಿಂದಿನದಾವುದೂ ಇಂದು ಅದೇ ರೂಪದಲ್ಲಿ ಇಲ್ಲ. ಕಲ್ಲು ಬೆಟ್ಟ ಗುಡ್ಡ ಮರಗಳು ಇಂದು ರಸ್ತೆಮನೆಕಿಟಕಿಬಾಗಿಲುಗಳಾಗಿವೆ. ಶುಧ್ಧ ವಾಯು ಮತ್ತು ನೀರುಗಳು ಕಲುಶಿತವಾಗಿವೆ. ಕಾಡು ಕರಗಿ ನಾಡಾಗಿದೆ. ಕಡಿಮೆ ಇದ್ದ ಜನ ಹೆಚ್ಚಾಗಿದ್ದಾರೆ. ಸಹೃದಯತೆಗೆ ಬದಲಾಗಿ ಅಹಂಕಾರ ಸ್ವಾರ್ಥಗಳು ತುಂಬಿಕೊಂಡಿವೆ. ಹೀಗೆ ಬದಲಾಗುವ ಈ ಜಗತ್ತು ಮತ್ತು ಅದರ ಒಳಗುಟ್ಟುಗಳನ್ನು ಅರಿಯಲು ಸಾಧ್ಯವಿಲ್ಲ. ನಾವು ಏನು ಮಾಡಬಹುದೆಂದರೆನಮ್ಮಲ್ಲಿರುವ ವಿವೇಕವನ್ನು ಉಪಯೋಗಿಸಿಸಾಧ್ಯವಾದಷ್ಟು ನಮ್ಮ ಮತ್ತು ನಮ್ಮ ಸುತ್ತಲಿನವರ ಬದುಕು ಹಸನಾಗಿಸಲು ಪ್ರಯತ್ನಿಸಬಹುದು.ಆದರೆ ಒಂದು ವಿಚಾರ ಗಮನಿಸಬೇಕಾದದ್ದು ಏನೆಂದರೆಎಲ್ಲ ಚಲನೆ ಅಥವಾ ಬದಲಾವಣೆಗೆ ಹೇತುವಾದ ಆ ಬೃಹತ್ ಚೇತನ ಸ್ವರೂಪನಾದ ಪರಮಾತ್ಮನೇ ಎಲ್ಲಕ್ಕೂ ಕಾರಣನು. ಆ ಚೇತನವಿಲ್ಲದೆ ಇದ್ದರೆ ಏನೂ ನಡೆಯುವುದಿಲ್ಲ. ” ತೃಣಮಪಿ ನ ಚಲತಿ ತೆನ ವಿನಾ” ಎಂದು ಇದನ್ನೇ ಆದಿ ಶಂಕರರು ಹೇಳಿದ್ದು. ಅವನ ಸಂಕಲ್ಪ ಎಂದಾಯಿತೋಜಗತ್ಸೃಷ್ಟಿಯ ಪ್ರಕ್ರಿಯೆ ಎಂದು ಶುರು ಮಾಡಿದನೋ ಯಾರಿಗೆ ಗೊತ್ತು. ಇಲ್ಲಿ ಬದಲಾಗುವುದು ಕೇವಲ ಜಗತ್ತಲ್ಲ. ಜಗತ್ತಿನಲ್ಲಿರುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ವಾಚಕರೆ ನೋಡಿ ಹಿಂದಿನದಾವುದೂ ಇಂದು ಅದೇ ರೂಪದಲ್ಲಿ ಇಲ್ಲ. ಕಲ್ಲು ಬೆಟ್ಟ ಗುಡ್ಡ ಮರಗಳು ಇಂದು ರಸ್ತೆಮನೆಕಿಟಕಿಬಾಗಿಲುಗಳಾಗಿವೆ. ಶುಧ್ಧ ವಾಯು ಮತ್ತು ನೀರುಗಳು ಕಲುಶಿತವಾಗಿವೆ. ಕಾಡು ಕರಗಿ ನಾಡಾಗಿದೆ. ಕಡಿಮೆ ಇದ್ದ ಜನ ಹೆಚ್ಚಾಗಿದ್ದಾರೆ. ಸಹೃದಯತೆಗೆ ಬದಲಾಗಿ ಅಹಂಕಾರ ಸ್ವಾರ್ಥಗಳು ತುಂಬಿಕೊಂಡಿವೆ. ಹೀಗೆ ಬದಲಾಗುವ ಈ ಜಗತ್ತು ಮತ್ತು ಅದರ ಒಳಗುಟ್ಟುಗಳನ್ನು ಅರಿಯಲು ಸಾಧ್ಯವಿಲ್ಲ. ನಾವು ಏನು ಮಾಡಬಹುದೆಂದರೆನಮ್ಮಲ್ಲಿರುವ ವಿವೇಕವನ್ನು ಉಪಯೋಗಿಸಿಸಾಧ್ಯವಾದಷ್ಟು ನಮ್ಮ ಮತ್ತು ನಮ್ಮ ಸುತ್ತಲಿನವರ ಬದುಕು ಹಸನಾಗಿಸಲು ಪ್ರಯತ್ನಿಸಬಹುದು.
ಪ್ರಪಂಚ ಆಕುಂಚನ. ರಸಧಾರೆ - 091
ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |
ಸುಮವಪ್ಪುವುದಂತೆ ಮರುವಗಲು ಮಗುಳ್ದಂತು ||
ಅಮಿತ ಪ್ರಪಂಚನಾಕುಂಚನಾವರ್ತನ |
ಕ್ರಮವೇ ವಿಶ್ವಚರಿತ್ರೆ – ಮಂಕುತಿಮ್ಮ ||
ಕಮಲವುದಯದೊಳರಳಿ = ಕಮಲವು + ಉದಯದೊಳು + ಅರಳಿಸುಮವಪ್ಪುವುದಂತೆ = ಸುಮವು + ಅಪ್ಪುವುದಂತೆಪ್ರಪಂಚನಾಕುಂಚನಾವರ್ತನ = ಪ್ರಪಂಚನ + ಆಕುಂಚನ + ಆವರ್ತನ
ಮುಗುಳಾಗಿ = ಮೊಗ್ಗಾಗಿಸುಮವಪ್ಪುವುದಂತೆ = ಹೂವಾಗುವುದಂತೆಮರುವಗಲು = ಮತ್ತೆ ಹಗಲುಅಮಿತ = ಮಿತವಿಲ್ಲದಪ್ರಪಂಚನಾಕುಂಚನಾವರ್ತನ = ಪ್ರಪಂಚದ ಹರಡುವುದು ಸೇರಿಕೊಳ್ಳುವುದು
ಕಮಲದ ಹೂ ಸೂರ್ಯನ ರಶ್ಮಿಗಳು ಸೋಕಿದೊಡನೆ ಅರಳಿಮತ್ತೆ ಸಂಜೆಗೆ ಮೊಗ್ಗಾಗಿ ಮತ್ತೆ ಆ ಮೊಗ್ಗು ಮತ್ತೆ ಸೂರ್ಯನ ರಶ್ಮಿಯ ಸ್ಪರ್ಶದಿಂದ ಅರಳುವಂತೆ ಈ ಅನಂತ ಮತ್ತು ಅಮಿತವಾದ ಪ್ರಪಂಚವೂ ಸಹ ನಿರಂತರವಾಗಿ ಹರಡಿಕೊಳ್ಳುತ್ತಾ ಮತ್ತೆ ಸಂಕುಚಿತಗೊಳ್ಳುತ್ತಾ ಮತ್ತೆ ಮತ್ತೆ ಬಿರಿದುಕೊಳ್ಳುತ್ತಾ ಇದೆ ಎಂದು ಈ ಜಗತ್ತಿನ ವಿಸ್ತಾರತೆಯನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಒಂದು ಹುಣಸೆ ಬೀಜ ಸೂಕ್ತ ಪರಿಸರ ಸಿಕ್ಕಾಗ ಒಂದು ಮರವಾಗಿ ವಿಕಸನಗೊಳ್ಳುತ್ತದೆ. ಮೊದಲು ಸಸಿಯಾಗಿಗಿಡವಾಗಿಮರವಾಗಿ ತನ್ನ ಕೊಂಬೆಗಳನ್ನು ನಾಲ್ಕೂ ದಿಕ್ಕುಗಳಲ್ಲಿ ಚಾಚಿಕೊಳ್ಳುತಾಎಲೆ ಹೂಕಾಯಿ ಮತ್ತು ಹಣ್ಣಾಗಿ ಮತ್ತೆ ತನ್ನ ಮೂಲವಾದ ಬೀಜದ ರೂಪದ ಹಲವಾರು ಬೀಜಗಳಿಗೆ ಮೂಲವಾಗುತ್ತದೆ. ಮತ್ತೆ ಆ ಬೀಜವೂ ಮತ್ತೊಂದು ಮರಕ್ಕೆ ಮೂಲವಾಗುತ್ತದೆ. ಇದನ್ನೇ ಪ್ರಪಂಚನ” ಎಂದರೆ ಹರಡುವಿಕೆ ಮತ್ತು ಆಕುಂಚನ”, ಅಂದರೆ ಮುದುರಿಕೊಳ್ಳುವಿಕೆ ಎನ್ನುತ್ತಾರೆ ಶ್ರೀ ಡಿ.ವಿ.ಜಿ.
ಇನ್ನೊಂದು ಉದಾಹರಣೆ. ರೇಷ್ಮೆ ಹುಳದ ಜೀವನ ಚಕ್ರವನ್ನು ನೋಡಿ. ಬಹಳ ಸೂಕ್ತ ಉದಾಹರಣೆಯಾಗುತ್ತದೆ. ಸಣ್ಣ ಮೊಟ್ಟೆ ಆಗಿದ್ದುಹುಳುವಾಗಿ ಪರಿವರ್ತಿತಗೊಂಡುಆ ಹುಳುವು ದೊಡ್ಡದಾಗಿಮಾಗಿ ಹಣ್ಣಾಗಿತನ್ನ ಸುತ್ತ ತನ್ನ ಜೊಲ್ಲಿನಿಂದಲೇ ಒಂದು ಗೂಡನ್ನು ಕಟ್ಟಿ ಅದರೊಳಗೆ ಇರುವಾಗಲೇ ರೂಪ ಪರಿವರ್ತನೆಯಾಗಿ ಒಂದು ಚಿಟ್ಟೆಯಾಗಿಗಟ್ಟಿಯಾದ ಆ ಮೊಟ್ಟೆಯ ಗೋಡೆಯನ್ನು ಸೀಳಿ ಹೊರಬಂದು ಎರಡು ದಿನ ಹಾರಾಡಿ ಮತ್ತೆ ಮೊಟ್ಟೆಗಳನ್ನು ಇಟ್ಟು ತನ್ನ ಜೀವನವನ್ನು ಮುಗಿಸುವ ಮುಂಚೆ ಮತ್ತೊಂದು ಪೀಳಿಗೆಗೆ ನಾಂದಿ ಹಾಡುತ್ತದೆ.
ಈ ಉದಾಹರಣೆಯನ್ನು ನಾವು ಈ ಜಗತ್ತಿನ ಎಲ್ಲಕ್ಕೂ ಅನ್ವಯಿಸಿಕೊಳ್ಳಬಹುದು. ಮನುಷ್ಯನನ್ನೇ ತೆಗೆದುಕೊಳ್ಳಿ. ಒಂದು ಚಿಕ್ಕ ಮಗುವಾಗಿ ಹುಡುಗನಾಗಿ ಬೆಳೆದು ಪ್ರೌಡನಾಗಿ ವಯಸ್ಕನಾಗಿ ವೃದ್ಧನಾಗಿ ಕೃಶನಾಗಿ ಕುಗ್ಗಿ ಮಗುವಿನಂತೆಯೇ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲಾಗದ ಸ್ಥಿತಿಗೆ ಹೋಗಿಕೆಲವರಂತೂ ಮಕ್ಕಳಂತೆಯೇ ಆಗಿಬಿಡುತ್ತಾರಲ್ಲವೇಇದು ಎಲ್ಲ ಪ್ರಾಣಿ ಪಕ್ಷಿಗಳಿಗೂ ಅನ್ವಯಿಸುತ್ತದೆ.
ವಾಚಕರೆ ಈ ಜಗತ್ತುಜಗತ್ತಿನ ಎಲ್ಲವೂ ಅಂದರೆ ಎಲ್ಲವೂ ಈ ರೀತಿಯ ಬಿರಿಯುವಿಕೆ ಮತ್ತ ಮುದುಡುವಿಕೆಯ ಚಕ್ರದನ್ವಯವೇ ನಡೆಯುತ್ತದೆ. ನಾವು ಕೂಲಂಕುಶವಾಗಿ ನೋಡಿದರೆ ಅದರ ಸೂಕ್ಷ್ಮಪರಿಚಯ ನಮಗೆ ಆಗುತ್ತದೆ.
ಪ್ರಪಂಚನ – ಆಕುಂಚನ. ರಸಧಾರೆ - 092
ಎತ್ತಣಿನೋ ದೃಕ್ಪರಿಧಿಯಾಚೆಯಿಂದಲನಂತ |
ಸತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ||
ಬಿತ್ತರಿಸಿತಿಹುದು ಹೊಸತನವನೆದೆಬಿಡದೆ |
ನಿತ್ಯ ನಿತ್ಯವು ಜಗದಿ – ಮಂಕುತಿಮ್ಮ||
ದೃಕ್ಪರಿಧಿಯಾಚೆಯಿಂದಲನಂತ = ದೃಕ್ + ಪರಿಧಿಯಾಚೆಯಿಂದಲಿ + ಅನಂತ ಹೊಸತನವನೆದೆಬಿಡದೆ = ಹೊಸತನವನ್ನು + ಎಡಬಿಡದೆಎತ್ತಣಿನೋ = ಎಲ್ಲಿಂದಲೋದೃಕ್ಪರಿಧಿಯಾಚೆಯಿಂದ = ದೃಷ್ಟಿಯ ಪರಿಧಿಯಾಚೆಯಿಂದಸತ್ವ = ಈ ಜಗತ್ತನ್ನು ನಡೆಸುತ್ತಿರುವ ಶಕ್ತಿ. ಗೂಢದಲಿ = ಗುಪ್ತವಾಗಿಬಿತ್ತರಿಸಿಹುದು = ತೋರುತ್ತಿದೆಹೊಸತನವನೆದೆಬಿಡದೆ = ಹೊಸತನವನ್ನು ನಿರಂತರವಾಗಿ.
ನಮ್ಮ ದೃಷ್ಟಿಯ ಪರಿಧಿ ಆಚೆಗಿರುವ ಅನಂತ ವಿಶ್ವದಲ್ಲಿಯ ಯಾವುದೋ ಒಂದು ನಿಗೂಢ ಸತ್ವ ಅಂದರೆ ಒಂದು ಚೇತನ ಅಲೆ ಅಲೆಯಾಗಿ ಹರಿದುಹಳತನ್ನು ಮರೆಸಿ ಹೊಸತನ್ನು ಮತ್ತೆ ಮತ್ತೆ ನಿರಂತರವಾಗಿ ತರುತ್ತಿದೆ ಎಂದು ಈ ಜಗತ್ತಿನ ಪ್ರಪಂಚನ ಮತ್ತು ಆಕುಂಚನದ ತತ್ವವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಈ ಜಗತ್ತನ್ನು ನಡೆಸುವ ಆ ಚೇತನದ ಮೂಲವೆಲ್ಲೋಅದಿರುವ ಸ್ಥಳವಾವುದೋಅದು ತನ್ನ ಕ್ರಿಯೆಯನ್ನು ಹೇಗೆ ನಡೆಸುತ್ತದೆಯೋಅದು ನಮ್ಮ ಕಣ್ಣಿಗೆ ಕಾಣದಿದ್ದರೂ ನಾವೆಲ್ಲರೂ ಅದರ ಪ್ರಭಾವಕ್ಕೆ ಒಳಗಾಗಿದ್ದೇವೆ ಅಲ್ಲವೇಅಂತಹ ಚೇತನವು ತಾನಿರುವ ನಿಗೂಢತೆಯನ್ನು ಬಿಟ್ಟುಕೊಡದೆತನ್ನ ಪ್ರಭಾವವನ್ನು ಇಡೀ ಜಗತ್ತಿಗೆ ಹರಡಿತಾನದರಿಂದ ಬೇರೆಯಾಗಿರದೆ ಎಲ್ಲದರಲ್ಲೂ ತಾನೂ ಇದ್ದುಎಲ್ಲವಸ್ತುಗಳ ರೂಪಾಂತರಕ್ಕೂ ಕಾರಣವಾಗಿರುವುದನ್ನುನಾವು ಸ್ಪಷ್ಟವಾಗಿ ಕಾಣುತ್ತೇವೆ. ಆದರೆ ನಮ್ಮ ದೈನಂದಿನ ಜೀವನದಲ್ಲಿ ಅದನ್ನು ಗಮನಿಸುವುದಿಲ್ಲ ಮತ್ತು ಅದನ್ನು ನಿಖರತೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ಋತುಮಾನಗಳುಚಳಿಮಳೆಬಿಸಿಲುಹೊಸ ಚಿಗುರುಹೂಹಣ್ಣುಹೊಸ ಹೊಸ ಜೀವ ಸೃಷ್ಟಿ ಎಲ್ಲವೂ ನಿರಂತರವಾಗಿ ನಡೆಯುವ ಜಗದ್ವ್ಯಾಪಾರವಲ್ಲವೇ ?
ಬಿತ್ತರಿಸಿತಿಹುದು ಹೊಸತನವನೆದೆಬಿಡದೆ” ಎಡಬಿಡದೆ ಎಂದರೆ ಗ್ಯಾಪ್ ಇಲ್ಲದಹಾಗೆ ಎಂದರ್ಥ. ಈ ಕ್ಷಣವನ್ನು ಮುಂದಿನ ಕ್ಷಣ ನುಂಗಿಬಿಡುತ್ತೆ. ನಮಗೂ ಸಹ ಒಂದು ಕ್ಷಣ ವಯಸಾಗಿಬಿಡುತ್ತೆಅಂದರೆ ಬದಲಾವಣೆ. ಈ ರೀತಿಯ ಬದಲಾವಣೆ ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳಲ್ಲೂ ನಿರಂತರವಾಗಿ ನಡೆದೇ ಇರುತ್ತದೆ. ಪ್ರತಿ ನಿತ್ಯಪ್ರತಿ ಘಳಿಗೆ ನಾವು ನಮ್ಮ ಸುತ್ತಲಿನ ವಸ್ತುಗಳನ್ನು ಯಾಂತ್ರಿಕವಾಗಿ ನೋಡುತ್ತಿರುತ್ತೇವೆ. ಹಾಗಾಗಿ ನಮಗೆ ಅದರಲ್ಲಿ ಆಗುವ ಬದಲಾವಣೆಗಳು ಕಾಣುವುದಿಲ್ಲ. ಒಂದು ಚಿಕ್ಕ ಬೀಜವನ್ನು ನೆಟ್ಟಾಗ ಅದು ಧರೆಯ ಹೊಟ್ಟೆ ಸೀಳಿ ತಲೆ ಎತ್ತಿ ಮೊಳಕೆಯೊಡೆದು ಸಸಿಯಾಗುವುದನ್ನು ನಾವು ನೋಡುತ್ತೇವೆ. ಅದೂ ಸಹ ಪ್ರತಿನಿತ್ಯ ಕ್ರಮೇಣ ನಿಧಾನವಾಗಿ ಆಗುತ್ತದೆ. ಆದರೆ ಅದನ್ನು ನೆಟ್ಟು ಒಂದು ತಿಂಗಳು ನೋಡದೆ ಇದ್ದರೆತಿಂಗಳ ನಂತರ ಒಂದು ಗಿಡವನ್ನೇ ನೋಡಬಹುದು. ಒಂದು ತಿಂಗಲ ಕಾಲದಲ್ಲಿ ಆ ಬೀಜ ಗಿಡವಾಗುವುದಕ್ಕೆ ಆ ಚೇತನ ಕಾರಣವಲ್ಲವೇ ವಾಚಕರೆ.
ಹೀಗೆ ಆ ಚೇತನವು ತನ್ನ ಕಾರ್ಯ ವೈಖರಿಯಲ್ಲಿ ಹಳತನ್ನು ಕ್ರಮೇಣ ಅಳಿಸಿ ಹೊಸತನ್ನು ತರುತ್ತಲೇ ಇರುತ್ತದೆ. ಕೆಲವಲ್ಲಿ ಬೇಗ ಬೇಗ. ಕೆಲವಲ್ಲಿ ನಿಧಾನವಾದ ಪ್ರಕ್ರಿಯೆ. ಆದರೆ ಕ್ರಿಯೆ ಸತ್ಯ. ಆ ಕ್ರಿಯೆ ನಡೆಸುವುದೇ ಆ ಪರಮಾತ್ಮ ಶಕ್ತಿ. ಅಂತಹ ಶಕ್ತಿಗೆ ನಾವು ನಮಿಸುವ ಕೃತಜ್ಞತೆಯನ್ನು ತೋರುವ ಅದನ್ನು ನೋಡುತ್ತಾ ಅದನ್ನು ಕಾಪಾಡುತ್ತಾಆನಂದ ಪಡುವ.
ರಸಧಾರೆ - 093
ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |
ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||
ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |
ಲೋಲನಾಗಿರ್ಪನೆಲೋ – ಮಂಕುತಿಮ್ಮ ||
ಜ್ವಾಲಮಾಲಾಕುಲ = ಜ್ವಾಲ + ಮಾಲಾ + ಆಕುಲಜಗದ್ರೂಪ = ಜಗತ್ + ರೂಪತಾಳಲಯಮೇಳನದಿನೊಮ್ಮೆ = ತಾಳ + ಲಯ + ಮೇಳನದಿ + ಒಮ್ಮೆರಭಸದಿನೊಮ್ಮೆ = ರಭಸದಿ + ಒಮ್ಮೆಲೋಲನಾಗಿರ್ಪನೆಲೋ = ಲೋಲನಾಗಿ + ಇರ್ಪನು + ಎಲೋ,
ಜ್ವಾಲೆಗಳ ಮಾಲೆಯಲ್ಲಿ ನಡೆಯುತ್ತಿರುವ ಈ ಜಗತ್ತಿನ ತಾಂಡವ ನೃತ್ಯ. ಇದು ಪರಬ್ರಹ್ಮನಿಗೆ ಒಂದು ಲೀಲಾ ವಿನೋದ. ಕೆಲವೊಮ್ಮೆ ತಾಳ ಲಯ ಮತ್ತು ಮೇಳಗಳೊಂದಿಗೆಶಾಂತವಾಗಿ ಮತ್ತು ಕೆಲವೊಮ್ಮೆ ರಭಸದಿಂದ ತನ್ನ ಭೀಕರ ರುದ್ರ ತಾಂಡವವನ್ನು ಮೆರೆಯುತ್ತಾ ಇರುವ ಆ ಪರಬ್ರಹ್ಮಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ವಾಚಕರೆಈ ಹಿಂದೆಯೂ ಒಂದು ವಿಚಾರ ಪ್ರಸ್ತಾಪಿಸಿದ್ದೇನೆ. ಇಡೀ ಸೃಷ್ಟಿಯೇ ನಾನಾ ಅಗ್ನಿ ಗೋಳಗಳ ಒಂದು ಸುಂದರ ಮಾಲೆ. ಆ ಪರಮಾತ್ಮ ತನ್ನಿಂದಲೇ ಸೃಷ್ಟಿಸಿದ ಈ ಜ್ವಾಲೆಗಳ ಗೋಳಗಳ ಮಾಲೆಗಳನ್ನು ತೊಟ್ಟು ಎಲ್ಲೆಲ್ಲೂ ಪ್ರಾಜ್ವಲ್ಯಮಾನನಾಗಿ ವಿರಾಜಿಸುತ್ತಾ ಬೆಳಕಿನಾಟ ಆಡುತ್ತಿದ್ದಾನೆ. ಕೋಟ್ಯಾಂತರ ಅಂತಹ ಅಗ್ನಿ ಅಥವಾ ಜ್ವಾಲಾ ಗೋಳಗಳನ್ನು ಸೃಜಿಸಿ ಅವುಗಳ ಪ್ರಜ್ವಲತೆಗೆ ತಾನೇ ಕಾರಣನಾಗಿಅವುಗಳಲ್ಲಿ ನಾನಾ ವಿಚಿತ್ರಗಳನ್ನು ಸೃಷ್ಟಿಸಿ ಮೆರೆಯುತ್ತಿದ್ದಾನೆ. ಕೆಲವಲ್ಲಿ ಶಾಂತನಾಗಿ ಕೆಲವಲ್ಲಿ ಭೀಕರ ರುದ್ರ ರೂಪದಲ್ಲಿ ತನ್ನ ಲೀಲೆಯನ್ನು ತೋರುತ್ತಿದ್ದಾನೆ. ನಮಗೆ ಗೋಚರವಾಗುವುದು ಮತ್ತು ನಮ್ಮ ಅರಿವಿಗೆ ಬರುವುದು ಅಣು ಮಾತ್ರ. ನಮ್ಮ ಅರಿವಿಗೆ ಬಾರದನಾವು ಊಹಿಸಲೂ ಸಾಧ್ಯವಾಗದ ಅವನ ಲೀಲಾವಿನೋದವೆಷ್ಟೋ?
ನಮಗೆ ಗೊತ್ತಿರುವ ಈ ಭೂಮಿಯನ್ನೇ ನೋಡೋಣ. ಇಲ್ಲಿ ಭೂಮಿಯ ಮೇಲ್ಮೈಯಲ್ಲಿ ಪಂಚ ಭೂತಗಳುಬೆಟ್ಟಗಳುಕಾಡುಗಳುಸಮುದ್ರಗಳುತಟಾಕಗಳುಕೋಟಿ ಕೋಟಿ ವೈವಿಧ್ಯಮಯ ಜೀವಿಗಳು ಭೂಮಿಯ ಅಂತರ್ಯದಲ್ಲಿಭೂ ಪದರಗಳುಅತಿ ತಾಪದ ಲೋಹಗಳ ನದಿಗಳುರಾಸಾಯನಿಕ ವಸ್ತುಗಳುಕುದಿಯುವ ನೀರುಹೀಗೆ ಏನೋನೋ ಇದೆ. ಇವೆಲ್ಲವೂ ಕೆಲಬಾರಿ ಶಾಂತವಾಗಿ ಮತ್ತೆ ಕೆಲಬಾರಿ ರುದ್ರವಾಗಿ ಪ್ರಕಟವಾಗುತ್ತದೆ. ಇದಕ್ಕೆ ಉದಾಹರಣೆಗಳುಕಾಳ್ಗಿಚ್ಚುಚಂಡಮಾರುತಗಳುಅಗ್ನಿಪರ್ವತಗಳುಅತೀ ವ್ರುಷ್ಟಿಗಳುಅನಾವ್ರುಷ್ಟಿಗಳುದುಷ್ಟ ಜನರುದುಷ್ಟ ಪ್ರಾಣಿಗಳುಪರಾಧಾರಿ( parasites ) ಕ್ರಿಮಿ ಕೀಟಗಳುರುದ್ರರೂಪದಲ್ಲೂಪ್ರಶಾಂತ ಸಾಗರಆಹಾರಕ್ಕೆ ಮೂಲವಾದ ಫಲವತ್ತಾದ ಭೂಮಿನದಿಗಳು ಝರಿಗಳುಋತುಮಾನಗಳುಸುಗಂಧ ಭರಿತ ಹೂಗಳುರಸಭರಿತವಾದ ಹಣ್ಣುಗಳುಸಾದು ಪ್ರಾಣಿಗಳುಸಾಧು ಜನರು ಸಂಸ್ಕಾರಗಳುಸಾಹಿತ್ಯ ಮತ್ತು ಕಲೆಗಳು ಪರಸ್ಪರ ಪ್ರೀತಿ ಪ್ರೇಮಗಳು ಹೀಗೇ ಹೇಳುತ್ತಾ ಹೋದರೆ ಇನ್ನೂ ಎಷ್ಟೋ ಎಲ್ಲವೂ ಪರಮಾತ್ಮನ ಶಾಂತ ರೂಪದಲ್ಲಿ ಪ್ರಕಟವಾಗಿದೆಯಲ್ಲವೇ?
ಬಂಧುಗಳೇ ಎಲ್ಲವೂ ಆ ಪರಮಾತ್ಮನೇ. ರೂಪಗಳು ಹಲವು ನಮಗೆ ಹೇಗೆ ಬೇಕೋ ಹಾಗೆ ಕಾಣುವನು. ನಾವು ನೋಡಬೇಕು ಅಷ್ಟೇ. ಹೇಗೆ ಬೇಕೆಂದರೆ ಹಾಗೆ ಕಂಡಾನು. ಅದೇ ಅವನ ಲೀಲಾ ವಿನೋದ. ಅವನಿಗೆ ಇದೆಲ್ಲವೂ ಒಂದು ಆಟ. ಅವನಾಟದಲ್ಲಿ ಎಲ್ಲವೂ ಅದರದರ ಪಾತ್ರ ನಿರ್ವಹಿಸುತ್ತಿದೆ. ಇದನ್ನು ನಾವು ಶುದ್ಧ ರೂಪದಲ್ಲಿಯತಾವತ್ತಾಗಿ ಅರ್ಥಮಾಡಿಕೊಂಡರೆ ನಮಗೆ ಆ ಪರಮಾತ್ಮ ಸ್ವರೂಪ ಸ್ಪಷ್ಟವಾಗುತ್ತದೆ.
ರಸಧಾರೆ - 094
ಕೇಳಿಯುಂ ಮಾಯೆಯದು ನೃತ್ಯಗತಿ ಬರಿತೋರ್ಕೆ|
ಮೂಲಮಂ ಕಂಡಂಗೆ ಸಂಭ್ರಾಂತಿಯೇನು ||
ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |
ಲೀಲಾಪ್ರಿಯಂ ಬ್ರಹ್ಮ – ಮಂಕುತಿಮ್ಮ ||
ಕೇಳಿಯಂ = ಆಟವದು,/ ಮಾಯೆಯದು = ಭ್ರಮೆ./ ನೃತ್ಯಗತಿ = ನಾಟ್ಯದ ರೀತಿ,/ ಬರಿತೋರ್ಕೆ= ಕೇವಲ ತೋರಿಕೆ./ ಮೂಲಮಂ = ಮೂಲವನ್ನು ಕಂಡಂಗೆ ಸಂಭ್ರಾಂತಿಯೇನು = ಕಂಡವನಿಗೆ ಭ್ರಮೆ ಉಂಟೇನು?/ ಆಳದಲಿ ನಿರ್ಲಿಪ್ತ = ಅಂತರ್ಯದಲಿ ಯಾವುದಕ್ಕೂ ಅಂತದ / ಮೇಲೆ ನಿಯತಿಕ್ಲುಪ್ತ= ಹೊರನೋಟಕ್ಕೆ ಒಂದು ನಿಯಮಕ್ಕೆ ಬದ್ಧ.
ಆ ಪರಮಾತ್ಮನ ಆ ಜಗನ್ನಾಟಕ ಕೇವಲ ಮಾಯೆಯಿಂದ ಕೂಡಿದೆ. ಅದರ ನೃತ್ಯ ಬರೀ ತೋರಿಕೆಯಷ್ಟೇ!. ಯಾರಿಗಾದರೂ ಪರಮ ಚೇತನದ ಮೂಲ ರೂಪದ ಅರಿವಾದರೆ ದ್ವಂದ್ವಗಳಾಗಲೀ ಸಂದೇಹಗಲಾಗಲೀ ಇರುವುದಿಲ್ಲ. ಏಕೆಂದರೆತನ್ನ ನಿಜರೂಪದಲ್ಲಿ ಆ ಪರಮಾತ್ಮ ತನ್ನ ಸೃಷ್ಟಿಯಿಂದ ನಿರ್ಲಿಪ್ತಆದರೆ ಈ ಜಗನ್ನಾಟಕದ ಚಿತ್ರ ವಿಚಿತ್ರ ನಾಟ್ಯ ಮತ್ತು ನಡಿಗೆಯನ್ನು ತನ್ನ ವಿನೋದಕ್ಕಾಗಿ ಲೀಲೆಯಂತೆ ನಡೆಸುತ್ತಿದ್ದಾನೆ ಎಂದು ಈ ಕಗ್ಗದಲ್ಲಿ ಪಾನ್ಯ ಗುಂಡಪ್ಪನವರು ವ್ಯಾಖ್ಯಾನಮಾಡಿದ್ದಾರೆ.
ನೋಡಿ ಈ ಜಗತ್ತು ಎಷ್ಟೊಂದು ಸುಂದರನೋಡುವವರಿಗೆ. ಎಷ್ಟೊಂದು ರೂಪಗಳು ಎಷ್ಟೊಂದು ಬಣ್ಣಗಳು ಎಷ್ಟೊಂದು ಭಾವಗಳು ಎಷ್ಟೊಂದು ರಾಗಗಳು. ಎಲ್ಲವೂ ಅವನೇ ಆದರೂ ತಾನು ಯಾವುದೂ ಅಲ್ಲ ” ಅದು ಅದೇ” ಎನ್ನುವ ಭಾವವನ್ನು ಬಿತ್ತಿ ಪ್ರತಿಯೊಂದೂ ಮೂಲದಿಂದ ಬೇರೆಯಾಗಿ ಇದು “ಅದೇ” ಎನ್ನುವಭಾವವನ್ನು ತೋರುತ್ತಾಆ ಪರಮಾತ್ಮ ತನ್ನ ಲೀಲೆಯನ್ನು ಮೆರೆಯುತ್ತಿದ್ದಾನೆ.
ನಾವು ಕಾಣುವ ಜಗತ್ತುನಾ ಹಿಂದೆ ಹೇಳಿದಂತೆ ಜಡ ಮತ್ತು ಜೀವ (ಚೇತನ) ದಿಂದಾಗಿದೆಎರಡಕ್ಕೂ ಮೂಲ ಆ ಪರಮ ಚೇತನವೇ! ಆದರೆ ನಾವು ಎಲ್ಲವನ್ನೂ ಬೇರೆ ಬೇರೆಯಾಗಿ ಗುರುತಿಸುತ್ತೇವೆ. ಆಕಾಶಬೆಟ್ಟನದಿಸಮುದ್ರಕಾಡುಮರ. ಗಿಡಬಳ್ಳಿಹೂಬಣ್ಣರುಚಿಗುಣ ಸ್ವಭಾವ ಹಾವುಚೇಳು ಆನೆಇರುವೆಹಲ್ಲಿ,ಪಕ್ಷಿಪ್ರಾಣಿಮನುಷ್ಯಕ್ರಿಮಿಕೀಟಹೆಣ್ಣುಗಂಡು ಮುಂತಾದವುಗಳಾಗಿ ಎಲ್ಲವನ್ನೂ ಅದರ ಬಾಹ್ಯ ಸ್ವರೂಪದಿಂದ ಗುರುತಿಸುತ್ತೇವೆ. ಏಕೆಂದರೆ ನಮ್ಮ ಇಂದ್ರಿಯಗಳಿಗೆ ಗೋಚರವಾಗುವುದು ಕೇವಲ ಬಾಹ್ಯ ರೂಪವಷ್ಟೇ. ಆದರೆ ಈ ಬಾಹ್ಯ ರೂಪಗಳೆಲ್ಲವೂ ಕೇವಲ ತಾತ್ಕಾಲಿಕ ರೂಪಗಳಷ್ಟೇ. ಅಂದರೆ ಅವು ನಿತ್ಯವಲ್ಲ. ನಿತ್ಯವಲ್ಲದಾದ್ದರಿಂದ ಸತ್ಯವಲ್ಲ. ಅಂದರೆ ಅಸತ್ಯ. ಅಸತ್ಯವನ್ನು ಸತ್ಯವನ್ನು ನಂಬುವುದೇ ಮಾಯೆ ಅಥವಾ ಭ್ರಮೆ. ಅಂತಹ ಭ್ರಮೆಗೆ ಕಾರಣನಾದ ಪರಮಾತ್ಮತಾನೂ ಈ ಭ್ರಮೆಯಲ್ಲಿಚೇತನನಾಗಿ ಇದ್ದೂ ಕಾಣದಂಗೆತೋರದಂಗೆಗುರುತಿಸಲ್ಪಡದಂಗೆ ಇದ್ದು ತನ್ನ ಲೀಲಾವಿನೋದವನ್ನು ಮೆರೆದಿದ್ದಾನೆ.
ತೋರಿಕೆಗೆ ಎಲ್ಲದರಲ್ಲಿ ಇದ್ದೇನೆ ಎನ್ನುವ ಭಾವ ಬಿತ್ತಿಯಾವುದರಲ್ಲಿ ಇದ್ದಾನೋ ಅದನ್ನು ನಾಶಪಡಿಸಿ ಕಾಣದಂತೆ ಮಾಯವಾಗುವುದು ಅವನ ಲೀಲಾವಿನೋದವಲ್ಲದೆ ಮತ್ತೇನು ವಾಚಕರೆಆದರೆ ಅವನು ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ” ಎಂದಿದ್ದಾರೆ ಗುಂಡಪ್ಪನವರು. ಅಂದರೆ ಮೂಲದಲ್ಲಿ ಅವನು ಯಾವುದಕ್ಕೂ ಅಂಟದೆ ಇದ್ದೂ ಇಲ್ಲದಂಗೆ ಇದ್ದು ಜಗನ್ನಾಟಕವನ್ನು ತಾನೇ ರಚಿಸಿದ ಒಂದು ನಿಯಮಕ್ಕೆ ಅನುಸಾರವಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ. ಅದನ್ನು ನಾವು ಸತ್ಯವೆಂದು ನಂಬಿ ಈ ಪ್ರಪಂಚಕ್ಕೆ ಮತ್ತು ಇದರೊಳಗಿನ ಎಲ್ಲಕ್ಕೂ ಅಂಟಿಕೊಂಡು ತೊಲಳುತ್ತಿದ್ದೇವೆ. ಅದೂ ಸಹ ಅವನ ನಾಟಕದ ನಿರ್ದೇಶನದ ಒಂದು ಭಾಗ. ಮಹಾ ಮಾಯಾವಿ ಅವನು.
ಆದರೆ ಆ ಬೃಹತ್ ಚೇತನದ ಮೂಲರೂಪವನ್ನು ಅರಿತವರಿಗೆ ಸಂದೇಹವಿಲ್ಲದೆಅವನ ಅಂದರೆ ಆ ಪರಮ ಚೇತನದ ನಿಜ ಸ್ವರೂಪ ಅರಿವಿಗೆ ಬಂದರೆ ಭ್ರಾಂತಿ ಭ್ರಮೆಗಳಿಂದ ಹೊರಬರಬಹುದು. ಇಡೀ ಸೃಷ್ಟಿಯ ಸಮಗ್ರತೆಯನ್ನೂ ಮತ್ತು ಏಕತ್ವವನ್ನೂ ನಾವು ಕಾಣಲು ಪ್ರಯತ್ನಿಸಬೇಕು. ನಾವೂ ಈ ರೀತಿಯ ಪ್ರಯತ್ನ ಮಾಡಬಹುದು. ಇಂದಲ್ಲಎಂದೋ ಒಂದು ದಿನ ನಮಗೂ ಅರಿವುಂಟಾಗಬಹುದು.
ರಸಧಾರೆ - 095
ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |
ಸೋಮ ಶಂಕರನೆ ಭೈರವ ರುದ್ರನಂತೆ ||
ಹೈಮವತಿ ಶಿವೆ ತಾನೇ ಕಾಳಿ ಚಂಡಿಕೆಯಂತೆ |
ಪ್ರೇಮ ಘೋರಗಳೊಂದೆ – ಮಂಕುತಿಮ್ಮ ||
ಶ್ಯಾಮಸುಂದರನೂ ಅವನೇಚಕ್ರಹಿಡಿದುಶಿಶುಪಾಲನನ್ನು ಅಂತಗೊಳಿಸಿದ ಆ ಶ್ರೀ ಕೃಷ್ಣನೂ ಅವನೇತನ್ನ ಕೈ ಉಗುರುಗಳಿಂದ ಹಿರಣ್ಯಕಶಿಪುವನ್ನು ಕೊಂದ ನರಹರಿ ರೂಪದ ನರಸಿಂಹನೂ ಅವನೇ.
ಸೌಮ್ಯ ರೂಪದ ಚಂದ್ರ ಶೇಖರನೂ ಅವನೇಉಗ್ರರೂಪದ ಭೈರವನೂರುದ್ರನೂ ಅವನೇ. ಸ್ತ್ರೀ ರೂಪಧರಿಸಿ ಹಿಮವಂತನ ಮಗಳಾದ ಪಾರ್ವತಿಯೂ ಅವನೇಉಗ್ರರೂಪದ ಕಾಳಿ ಚಂಡಿಕೆಯೂ ಅವನೇ.
ಹೀಗೆ ಪರಮಾತ್ಮಪುರುಷನರಸಿಂಹಸೌಮ್ಯ ಶ್ಯಾಮನ ರೂಪ ಮತ್ತು ಸ್ತ್ರೀ ರೂಪದಲ್ಲಿಯೂಶಾಂತಮತ್ತು ಪ್ರೇಮ ರೂಪಗಳಲ್ಲಿಯೂಘೋರ ಮತ್ತು ರುದ್ರ ರೂಪದಲ್ಲಿಯೂ ಪ್ರಕಟಗೊಂಡಿದ್ದಾನೆ ಎಂಬುದು ಈ ಕಗ್ಗದ ಹೂರಣ.
ಹಾಗಾದರೆ ಅವರು ಬೇರೆ ಇವರು ಬೇರೆ ಅಲ್ಲವೇ ಎಂದರೆಖಂಡಿತ ಅಲ್ಲ. ಒಂದು ಪರಮ ಶಕ್ತಿ ಹಲವಾರು ರೂಪಗಳನ್ನು ಸಮಯಕ್ಕೆ ಸರಿಯಾಗಿ ಸಂದರ್ಭಕ್ಕೆ ಸರಿಯಾಗಿ ಧರಿಸಿ ತನ್ನ ಲೀಲೆಯನ್ನು ಮೆರೆಯುತ್ತದೆ. ಈ ರೀತಿಯ ಲೀಲಾ ವಿನೋದವನ್ನು ನಾ ಹಿಂದಿನ ಕಗ್ಗದ ವಿವರಣೆಯಲ್ಲೂ ನೀಡಿದ್ದೇನೆ. ಇದಕ್ಕೆ ಪೂರಕವಾಗಿ ವೇದ ಮತ್ತು ಉಪನಿಷತ್ತಿನಲ್ಲೂ ಉಲ್ಲೇಖವುಂಟು. ” ನಾರಾಯಣ ಸೂಕ್ತದಲ್ಲಿ” , ” ಶಿವಶ್ಚ ನಾರಾಯಣಃಶಕ್ರಸ್ಚ ನಾರಾಯಣಃ” ಎಂದು ಹೇಳಲ್ಪಟ್ಟಿದೆ. ಅಂದರೆ ಆ ಪರಮ ಶಕ್ತಿಯೇ ಎಲ್ಲ ರೂಪಗಳೂ ಎಂದು ಸಿದ್ಧವಾಗುತ್ತದೆ. ವೇದಗಳಲ್ಲಿ ಅತೀ ಪುರಾತನವಾದ ಋಗ್ವೇದದ ” ಪುರುಷ ಸೂಕ್ತದಲ್ಲಿ” “ಸ ಬ್ರಹ್ಮ್ಹಃ ಶಿವಃಸ ಹರಿಃಸೇದ್ರಃಸೋಕ್ಷರಃ ಪರಮಸ್ವರಾಟ್” ಎಂದು ಹೇಳಲ್ಪಟ್ಟಿದೆ. ಆದರೆ ಎಲ್ಲ ರೂಪಗಳೂ ಆ ಪರಮ ಪುರುಷನೇ ಧರಿಸಿ ನಮಗೆ ತನ್ನ ಭಿನ್ನತೆಯನ್ನೂ,ಸಾರ್ವಭೌಮತ್ವವನ್ನೂಏಕತೆಯನ್ನೂ ತೋರಿದ್ದಾನೆಂದು ಅರ್ಥವಲ್ಲವೇ?
ಶ್ರೇಷ್ಠ ಭಗವದ್ಭಕ್ತರ ಲಕ್ಷಣವನ್ನು ಹೇಳುವಾಗ ” ಶಿವೇ ಚಪರಮೇಶೇ ಚವಿಷ್ಣೌ ಚ ಪರಮಾತ್ಮನಿ ಸಮಬುದ್ಧ್ಯಾ ಪ್ರವರ್ತಂತೆ ತೇವೈ ಭಾಗವತೋತ್ತಮಾಃ” ಎಂದು ಹೇಳಲ್ಪಟ್ಟಿದೆ. ಅಂದರೆ ಯಾರು ಶಿವ ಮತ್ತು ವಿಷ್ಣು ಎಂದು ಬೇಧ ಮಾಡದೆ ಎರಡು ರೂಪದಲ್ಲೂ ಸಮ ಬುದ್ಧಿಯನ್ನುಮತ್ತು ಸಮಭಾವವನ್ನು ಪ್ರದರ್ಶಿಸುತ್ತಾರೋ ಅವರೇ ಶ್ರೇಷ್ಠ ಭಾಗವತರು ಎಂದು ಹೇಳಿದೆ.
ವೇದವೇ ಪ್ರಮಾಣ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆವೇದವು ಸತ್ಯವೆಂದೂ ಒಪ್ಪಿಕೊಳ್ಳುತ್ತಾರೆ. ಆದರೂ ನಾವು ವೈಷ್ಣವರು ನಾವು ಶೈವರುಇವರು ನಮ್ಮ ದೇವರು ಅವರು ನಿಮ್ಮ ದೇವರುನಾವು ನಾಮ ಹಾಕಿಕೊಳ್ಳುತ್ತೇವೆನೀವು ವಿಭೂತಿ ಹಚ್ಚಿಕೊಳ್ಳಿಅವರು ಮುದ್ರೆ ಹಾಕಿಕೊಳ್ಳಲಿ ಎಂದು ಆ ಪರಮಾತ್ಮನಲ್ಲಿ ಇಲ್ಲದ ಬೇಧವನ್ನು ಸೃಷ್ಟಿಮಾಡಿ ನಮ್ಮ ನಮ್ಮೊಳಗೇ ಕಿತ್ತಾಡುವುದು ಕೇವಲ ಅಜ್ಞಾನವಲ್ಲವೇ?
ನಾವು ಇಂಥಹ ಅಜ್ಞಾನಕ್ಕೆ ಬಲಿಯಾಗದೆ ಏಕ ರೂಪದ ಆ ಪರಮ ಚೇತನವನ್ನು ಆರಾಧಿಸುತ್ತಾ ನಮ್ಮಲ್ಲಿರುವ ಬೇಧಗಳನ್ನುಅಳಿಸುವ ಪ್ರಯತ್ನವನ್ನು ಮಾಡುವ.
ರಸಧಾರೆ - 096
ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ |
ನೃತ್ಯವೇ ಸತ್ಯವಲ ಕಡಲಲೆಯಬಾಳೊಳ್ ||
ಮಿಥ್ಯೆಯಂಬುದೆ ಮಿಥ್ಯೆ ಜೀವನಾಟಕ ಸತ್ಯ |
ಕೃತ್ಯವಿದು ಬೊಮ್ಮನದು – ಮಂಕುತಿಮ್ಮ. ||
ಇಡೀ ಬ್ರಹ್ಮಾಂಡದ ಶಾಂತ ಮತ್ತು ರುದ್ರ ತಾಂಡವದಿಸತ್ಯ ಎಂಬುದು ಆವುದು. ನಮಗೆ ನಾವು ನಡೆಸುವ ಕಡಲ ಅಲೆಯಂಥಾ ಜೀವನವೇ ಸತ್ಯವಲ್ಲವೇಮಿಥ್ಯೆ ಎಂಬುದು ಇಲ್ಲವೇ ಇಲ್ಲ ಈ ಜೀವನದ ನಾಟಕದಲ್ಲಿ. ಇದೆಲ್ಲವೂ ಆ ಪರಬ್ರಹ್ಮನಾಡುವ ಜಗನ್ನಾಟಕವೆನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಕಡಲ ಅಲೆಯಂಥಾ ಜೀವನವೆನ್ನುತ್ತಾರೆ. ಹೌದು ಕಡಲ ಅಲೆಯಂತೆ ನಮ್ಮ ಜೀವನ ಎಂದು ಮೊದಲಾಯಿತು ಎಂದು ಹೇಳುವುದು ಕಷ್ಟವಷ್ಟೇ ಅಲ್ಲ ಅಸಾಧ್ಯವೂ ಹೌದು. ಆ ಕ್ಷಣಕ್ಕೆ ನಮಗೆ ಕಾಣುವ ಆ ಕಡಲ ಅಲೆ ಸತ್ಯ. ಹಾಗೆಯೇ ಇಂದು ನಾವು ನಡೆಸುತ್ತಿರುವ ಜೀವನ ಸತ್ಯ. ಮಿತ್ಯಾವದವೆನ್ನುವುದು ಒಂದು ಉಂಟು . ಜಗತ್ ಮಿಥ್ಯಾ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸುವವರು ಇದ್ದಾರೆ. ಇದು ನಿತ್ಯವಲ್ಲವಾದ್ದರಿಂದ ಸತ್ಯವಲ್ಲ ಎನ್ನುವವರು ಹಲವರು. ಆದರೆ ಒಂದು ವಿಚಾರವನ್ನು ಗಮನಿಸ ಬೇಕಾಗಿದೆ. ನಾವು ಇರುವುದು ಇಂದಿಗೆ ಸತ್ಯ. ಹೌದಲ್ಲವೇ. ಎಂದೋ ಇಲ್ಲವಾಗಬಹುದು. ಆದರೆ ಇಂದಿನ ಜೀವನ ಸತ್ಯ. ಇದಕ್ಕೆ ಕಾರಣವೂ ಸತ್ಯ. ಹಾಗಿದ್ದಮೇಲೆ ಮಿಥ್ಯೆ ಹೇಗಾಗುತ್ತದೆ?
ಸಮುದ್ರದ ಅಲೆಗಳು ವಾಸ್ತವವಾಗಿ ಕೆಲಕ್ಷಣಗಳೇ ಇದ್ದು ಮಾಯವಾಗಿಬಿಡುತ್ತದೆ. ಅದನ್ನು ಮಿಥ್ಯೆ ಎನ್ನಲಾದೀತೇ. ಅದು ಸಮುದ್ರ ಮಟ್ಟದಿಂದ ಎದ್ದ ಆ ಕ್ಷಣಕ್ಕೆ ಸತ್ಯವಲ್ಲವೇಹಾಗೆಯೇ ಕ್ಷಣ ಬಂಗುರವಾದ ನಮ್ಮ ಜೀವನವೂ ಸಹ ಕೆಲಕಾಲ ಇದ್ದು ನಂತರ ಇಲ್ಲದೆ ಹೋಗುವುದಾದರೂ ಇರುವಷ್ಟು ದಿನ ಇದು ಸತ್ಯ ತಾನೇಯಾರಿಗೋ ಬಿದ್ದು ಪೆಟ್ಟಾಗಿದೆರಕ್ತ ಸುರಿಯುತ್ತಿದೆ. ಆಗ ಅವನಿಗೆ ನಾವು ವೇದಾಂತವನ್ನು ಹೇಳಿ ” ಏ ಚಿಂತೆ ಮಾಡಬೇಡ ಈ ಪೆಟ್ಟು ಸತ್ಯವಾಗಿ ನಿನಗಾಗಿಲ್ಲ. ಏಕೆಂದರೆ ನೀನು ಎನ್ನುವುದೇ ಮಿಥ್ಯೆ. ಹಾಗಾಗಿ ನಿನಗಾಗಿರುವ ಪೆಟ್ಟೂ ಸಹಇಲ್ಲಿ ಹರಿಯುತ್ತಿರುವ ನೆತ್ತರೂ ಸಹ ಮಿಥ್ಯೆ” ಎಂದರೆ ನಿಮ್ಮನ್ನು ಹುಚ್ಚನೆಂದು ಕರೆಯುತ್ತಾರೆ. ಲೌಕಿಕ ಬೇರೆ ಪಾರಮಾರ್ಥ ಬೇರೆ. ಲೌಕಿಕದಲ್ಲಿ ಎಲ್ಲವೂ ಸತ್ಯ. ಪಾರಮಾರ್ಥ್ಯದಲ್ಲಿ ಪರಮಾತ್ಮ ಮಾತ್ರ ಸತ್ಯ.
ಲೌಕಿಕ ಎನ್ನುವುದು ಸಕಲ ಜೀವರಾಶಿಗಳ ಇಲ್ಲಿನ ಜೀವನ. ಪಾರಮಾರ್ಥಿಕ ಎನ್ನುವುದು ಇಲ್ಲಿನ ಈ ಜೀವನವನ್ನು ಶಾಂತವಾಗಿಸುವಆನಂದವಾಗಿಸುವ ಒಂದು ಸಾಧನ. ಇವೆರರ ಸಮನ್ವಯವೇ ನಮ್ಮ ಜೀವನಗಳ ತಳಹದಿಯಾಗಬೇಕು. ಹಾಗಾದಲ್ಲಿ ನಮ್ಮ ಜೀವನ ಸುಂದರವಾಗುವುದು. ವಾಚಕರೆ ನಮ್ಮ ಲೌಕಿಕ ಬದುಕೂ ಪರಮಾರ್ಥದ ತಳಹದಿಯಲ್ಲೇ ನಡೆದರೆ ನಾವು ಈ ಬದುಕಿಗೆ ನೀಡುವ ಮಹತ್ವ ಮತ್ತು ನಮ್ಮ ಈ ಬದುಕಿನೊಂದಿಗೆ ಇರುವ ಗಟ್ಟಿ ಅಂಟಿನಂತ ನಂಟು ಕಡಿಮೆಯಾಗಿ ನಮಗೆ ನೋವು ಕಡಿಮೆಯಾಗಬಹುದು. ಇಂತಹ ಪ್ರಯತ್ನವನ್ನು ನಾವೂ ಮಾಡಲುಪಕ್ರಮಿಸುವ.
ಬ್ರಹ್ಮವೇ ಜೀವನವೋ?. ರಸಧಾರೆ - 097
ಬ್ರಹ್ಮವೆಂಬುದುದದೇನುಕರ್ಮವೆಂಬುದದೇನು?|
ಬ್ರಹ್ಮಾಂಡಕಥೆಯೇನುಜೀವಿತವಿದೇನು?||
ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕ್ರುತಿಜಾಲ |
ಬ್ರಹ್ಮವೇ ಜೀವನವೋ ಮಂಕುತಿಮ್ಮ ||
ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಈ ಬ್ರಹ್ಮ ಎಂಬುದು ಏನುಕರ್ಮ ಎಂಬುದು ಏನುಈ ಬ್ರಹ್ಮಾಂಡದ ಕಥೆ ಏನು ನಮ್ಮ ಜೀವನವು ಏನು ಈ ಜೀವನವು ಜಗತೀಗೆಲ್ಲಕ್ಕೂ ಮೂಲವಾದ ಆ ಬ್ರಹ್ಮನ ಕ್ರಿಯೆಯಾದಂತ ಒಂದು ಮಾಯಾಜಾಲವೋಆದರೆ ಬ್ರಹ್ಮನೇ ಜೀವನವೋಎಂದು ಒಂದು ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಾರೆ.
ಬ್ರಹ್ಮ ಎಂದರೆ ಯಾರು ಅಥವಾ ಏನು ಎಂದರೆಸಕಲ ಚರಾಚರ ಸೃಷ್ಟಿಗೆ ಕಾರಣನಾದ ಆ ಪರಮ ಚೇತನಕ್ಕೆ ಬ್ರಹ್ಮನೆಂದು ಹೆಸರು. ಭಾರತೀಯ ಪುರಾಣಗಳಲ್ಲಿ ತ್ರಿಮೂರ್ತಿಗಳ ಪ್ರಸ್ತಾಪ ಬರುತ್ತದೆ. ಬ್ರಹ್ಮ ವಿಷ್ಣು ಮಹೇಶ್ವರ ಎಂದು. ಸೃಷ್ಟಿ ಸ್ಥಿತಿ ಲಯಗಳೆಂಬ ಕಾರ್ಯಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲ್ಪಟ್ಟಿದೆ. ಹೇಗೆ ಒಬ್ಬನೇ ವ್ಯಕ್ತಿ ತಂದೆಪತಿಅಣ್ಣತಮ್ಮ ಮಗ ಮುಂತಾದ ಹೆಸರುಗಳಿಂದ ಮನೆಯಲ್ಲಿ ಗುರುತಿಸಲ್ಪಡುತ್ತಾನೋ ಮತ್ತೆ ಹೊರಗೆ ಸ್ನೇಹಿತಅಧಿಕಾರಿ ನೌಕರಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಾನೋಹಾಗೆಯೇ ಒಂದೇ ಬೃಹತ್ ಚೇತನವು ಹಲವಾರು ಬಗೆಯ ಕಾರ್ಯನಿರ್ವಣೆಯನ್ನು ಮಾಡುತ್ತಾ ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಯಾರು ಯಾವುದೇ ಹೆಸರಿಂದ ಕೆರೆದರೂ ಆ ಮಹಾ ಚೇತನವೇ ಪರಬ್ರಹ್ಮ. ಅದರ ಕಾರ್ಯವೈಖರಿಯೇ ಕರ್ಮ. ಕರ್ಮವೆಂದರೆ ಕ್ರಿಯೆ. ಲೌಕಿಕ ಪ್ರಪಂಚದಲ್ಲಿ ನಾವು ಹೇಳುವ ಕರ್ಮವೇ ಬೇರೆ. ಇಲ್ಲಿ ಹೇಳಿರುವ ಕರ್ಮವೇ ಬೇರೆಯಾಗಿ ಕಂಡರೂ ಎರಡನ್ನೂ ಕೂಲಂಕುಷವಾಗಿ ಅವಲೋಕಿಸಿದರೆ ಇವೆರಡರ ಏಕತ್ವವನ್ನು ನಾವು ಮನಗಾಣಬಹುದು.
ಇಡೀ ಬ್ರಹ್ಮಾಂಡವೆ ಅವನ ಸೃಷ್ಟಿ ಆದರೆ ಅದರ ಕಥೆಯ ಆದಿಯೂಅಂತ್ಯವೂ ಯಾರಿಗೂ ತಿಳಿದಿಲ್ಲ. ಎಷ್ಟೆಷ್ಟೋ ವ್ಯಾಖ್ಯಾನಗಳಿದ್ದರೂ ” ಇದಮಿತ್ಥಂ ” ಎಂದು ಹೇಳುವ ಯಾವುದೇ ಒಂದು ನಿಖರವಾದ ತೀರ್ಮಾನ ಬಂದಿಲ್ಲ. ಇನ್ನು ಜೀವನವೆಂದರೇನುಎಂದರೆ. ಈ ಸೃಷ್ಟಿಯ ಎಲ್ಲಕ್ಕೂ ಒಂದು ಕಾಲಮಾನ ಉಂಟು ಆ ಕಾಲಮಾನದಲ್ಲಿ ಆಯಾಯಾ ಕಾಯಗಳ ಸಂಪರ್ಕದಿಂದ ನಡೆಯುವ ವಿಧ್ಯಮಾನಗಳೇ ಜೀವನವು.
ಆ ಪರಬ್ರಹ್ಮವೇ ಇಡೀ ಸೃಷ್ಟಿಗೆ ಮೂಲ ಮತ್ತು ಆ ಪರಬ್ರಹ್ಮನ ಕೃತಿಯೇ ಈ ಜಗತ್ತಿನ ಮಾಯಾ ಜಾಲಎಂದಿದ್ದಾರೆ ಡಿ.ವಿ.ಜಿ. ಅಂದರೆ ಇಡೀ ಬ್ರಹ್ಮಾಂಡವೇ ಆ ಪರಮ ಪುರುಷನ ಕ್ರಿಯೆಯಂದಾದಮೇಲೆ ಇಲ್ಲಿ ನಡೆಯುವ ಎಲ್ಲ ವಿಧ್ಯಮಾನಗಳೂ ಅವನ ಕ್ರಿಯೆ ಅಂದರೆ ಕರ್ಮ ಎಂದು ಅರ್ಥ. ಹಾಗಾಗಿ ಇಲ್ಲಿ ನಡೆಯುವುದೆಲ್ಲವೂ ಆ ಪರಬ್ರಹ್ಮನು ತಾನೇ ಸೃಜಿಸಿದ ಈ ಜಗತ್ತಿನಲ್ಲಿತಾನೇ ಎಲ್ಲವೂ ಆಗಿತಾನೇ ಎಲ್ಲದರೊಳಗೂ ಸೇರಿಎಲ್ಲ ಭಾವಗಳನ್ನೂ ತಾನೇ ಅನುಭವಿಸುತ್ತಿದ್ದಾನೆ ಎನ್ನುವುದು ಒಂದು ವಾದ. ಹಾಗಾಗಿ ನಾವು ನೀವು ಮತ್ತು ಈ ಜಗತ್ತಿನ ಎಲ್ಲವೂ ಆ ಪರ ಬ್ರಹ್ಮನೇ ಆಗಿ ಇಡೀ ಜೀವನವೇ ಬ್ರಹ್ಮನಾಟವೆಂದರೆ ಸಮರ್ಪಕವಾಗುವುದು. ಹಾಗಾಗಿ ಬ್ರಹ್ಮನೇ ಜೀವನ ಮತ್ತು ಜೀವನವೇ ಬ್ರಹ್ಮ.
ವಾಚಕರೆಈ ಸೃಷ್ಟಿಯ ಮೂಲವನ್ನು ತಿಳಿಯುವುದು ಕಷ್ಟ ಮತ್ತು ಈ ಜಗತ್ತಿನಲ್ಲಿ ನಡೆಯುವ ವಿಧ್ಯಮಾನಗಳ ಕಾರಣ ಮತ್ತು ಕರ್ತೃವನ್ನು ಅರಿಯುವುದೂ ಬಹುಶಃ ಅಸಾಧ್ಯ. ಅರಿತವರು ಭಾಗ್ಯವಂತರು. ನಾವೂ ಸಹ ಇದರ ಗೂಢತೆಯನ್ನು ಅರಿಯುವ ಪ್ರಯತ್ನವನ್ನು ಮಾಡಬಹುದು.
ರಸಧಾರೆ - 098
ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ |
ಪ್ರಾಕೃತದ್ವನಿಮಿಶ್ರವದರಡುಗೆ ರಾಗ ||
ವ್ಯಾಕೃತದಿನವ್ಯಾಕೃತಾದಿಸತ್ವಕೆ ನಿನ್ನ|
ಜಾಗೃತಿಪ ಮತಿ ಧರ್ಮ – ಮಂಕುತಿಮ್ಮ. ||
ಅಂಕು ಡೊ೦ಕುಗಳನೇರ ಸೊಟ್ಟಗಳಸುಳ್ಳು ಸತ್ಯಗಳಕೇಡು ಲೇಸುಗಳ ಬೆರಕೆಯೇ ನಮ್ಮ ಈ ಲೋಕ. ಇವುಗಳನ್ನು ಪರೀಕ್ಷಿಸಿಶೋಧಿಸಿ ನೋಡಿದಾಗ ನಮಗೆ ಅರಿವಾಗುವುದು ಲೋಕ ಧರ್ಮ. ಸಂಸ್ಕಾರವಿಲ್ಲದ ಒರಟು ಯೋಚನೆರಾಗಾದಿಗಳನ್ನು ಸುಸಂಕೃತಗೊಳಿಸಿ ಒಂದು ವ್ಯವಸ್ಥೆಯನ್ನು ನಿರ್ಮಾಣಮಾಡಿಶುದ್ಧವಾದ ಸತ್ಯದ ಅರಿವನ್ನು ಮೂಡಿಸುವುದೇಎಚ್ಚರಗೊಳಿಸುವುದೇ ಧರ್ಮ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.
ಇಡೀ ಪ್ರಪಂಚ ಅಂಕು ಡೊಂಕಾಗಿ ಇದೆ. ಯಾವುದೂ ಸಮವಿಲ್ಲ. ಹೀಗಿರುವುದೇ ಧರ್ಮ. ಅದನ್ನು ಹೇಗೆ ಇದೆಯೋ ಹಾಗೆಯೇ ಅರಿತುಕೊಳ್ಳುವುದು ಧರ್ಮ. ಸತ್ಯವನ್ನರಿತಾಗ ಅರಿವು ಮೂಡುತ್ತದೆ. ಅರಿವು ಮೂಡಿದಾಗ ಸಂಶಯ ಮತ್ತು ಸಂದೇಹಗಳಿರುವುದಿಲ್ಲ. ನಮ್ಮ ಎಲ್ಲ ಓದು ವಿದ್ಯಾಬ್ಯಾಸ ಆಚಾರ ವಿಚಾರ ವಿಜ್ಞಾನ ಎಲ್ಲವೂ ನಮ್ಮನ್ನು ಅಸತ್ಯದಿಂದ ಸತ್ಯದೆಡೆಗೆ ಕೊಂಡು ಹೋಗ ಬೇಕು. ಆಗಲೇ ಅವುಗಳೆಲ್ಲಕ್ಕೂ ಒಂದು ಸಾರ್ಥಕತೆ.” ಅಸತೋಮಾ ಸದ್ಗಮಯತಮಸೋಮಾ ಜ್ಯೋತಿರ್ಗಮಯ ” ಎನ್ನುವ ಉಕ್ತಿಗಳಿಗೆ ಇದೇ ಅರ್ಥ.
ಮನುಷ್ಯ ಮೊದಲಿಗೆ ಪ್ರಾಕೃತನಾಗಿದ್ದ. ಎಲ್ಲ ಪ್ರಾಣಿಗಳಂತೆ ಅವನೂ(ಅವಳೂಸೇರಿ) ಅಲೆಮಾರಿಯಾಗಿ ಸಿಕ್ಕ ಸಿಕ್ಕ ಆಹಾರಗಳನ್ನು ತಿನ್ನುತ್ತಾ, “ನಿದ್ರಾಹಾರಮೈತುನ” ಈ ಮೂರು ಕೆಲಸದಲ್ಲಿ ನಿರತನಾಗಿದ್ದ. ಆದರೆ ಮನುಷ್ಯನಿಗೆ ಯೋಚನಾ ಶಕ್ತಿ ಇದೆ. ಅವನಿಗೆ ಮನದಲ್ಲಿ ಪ್ರಶ್ನೆಗಳು ಉದ್ಭವವಾಗುತಿತ್ತು. ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಮತ್ತಷ್ಟು ಪ್ರಶ್ನೆಗಳು ಉದ್ಭವವಾದವು. ತನ್ನ ವಿಚಾರ ಶಕ್ತಿಯನ್ನು ಉಪಯೋಗಿಸಿ ಅವನು ತನ್ನ ಸುತ್ತಲಿನ ಜಗತ್ತನ್ನು ಅರ್ಥೈಸುವುದಕ್ಕೆ ಪ್ರಯತ್ನಿಸಿದ. ಬೇರೆ ಬೇರೆ ಪ್ರದೇಶಗಳಲ್ಲಿನ ಪರಿಸರಕ್ಕೆ ತಕ್ಕಂತೆ ಅವನ ಸಂದೇಹಗಳಿರುತ್ತಿದ್ದವು. ಅದಕ್ಕೆ ತಕ್ಕಂತೆಯೇ ಅವನಿಗೂ ಉತ್ತರಗಳು ಹೊಳೆಯುತ್ತಿದ್ದವು. ಇದೇ ಪ್ರಕ್ರಿಯೆಯಲ್ಲಿ ಬೆಳೆದದ್ದೇ ನಾಗರೀಕತೆ. ಇಡೀ ಪ್ರಪಂಚದಲ್ಲಿ ಹತ್ತು ಹಲವಾರು ರೀತಿಯ ವೈವಿಧ್ಯಮಯ ನಾಗರೀಕತೆಯ ಬೆಳವಣಿಗೆ.
ಆದರೆ ಸತ್ಯವು ಯಾವಾಗಲೂ ಒಂದೇ ಆಗಿರುತ್ತದೆ. ಯಾವುದೇ ವಿಷಯದಲ್ಲಿ ಎರಡು ಸತ್ಯಗಳು ಇರಲು ಸಾಧ್ಯವಿಲ್ಲ. ಅಂತಹ ಶುದ್ಧ ಸತ್ಯವನ್ನು ಅರಿಯ ಬೇಕು. ಇಂತಹ ಸತ್ಯವನ್ನು ಕಂಡು ಮನಗಾಣಬೇಕು. ಅರಿವಿನಲ್ಲಿ ಗಟ್ಟಿಮಾಡಿಕೊಳ್ಳಬೇಕು ಮತ್ತು ವಿಚಲಿತರಾಗಬಾರದು. ಧರ್ಮವೆಂದರೆ ಸ್ವಭಾವವೆಂದು ಅರ್ಥ. ಗಾಳಿಗೆ ಬೀಸುವುದುನೀರಿಗೆ ಹರಿಯುವುದುಬೆಂಕಿಗೆ ಸುಡುವುದುಮೆಣಸಿನಕಾಯಿ ಖಾರವಾಗಿರುವುದುಬೆಲ್ಲ ಸಿಹಿಯಾಗಿರುವುದುಮನುಷ್ಯ ಮಾನವತೆಯಿಂದ ಇರುವುದು ಧರ್ಮ. ಇದರಲ್ಲಿ ಏರುಪೇರಾದರೆ ಎಂತಹ ಅನಾಹುತವಾಗುತ್ತದೆಂದು ಸ್ವಲ್ಪ ಯೋಚಿಸಿ ವಾಚಕರೆ. ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿದರೆ ತೀವ್ರ ದುಃಖವಾಗುತ್ತದೆ.
ಏಕೆಂದರೆನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲವನ್ನೂ ಸತ್ಯವಾಗಿ ಕಂಡುಕೊಂಡು ಪ್ರಮಾಣಿಸಿಧರ್ಮದ ಪರಿಭಾಷೆಯನ್ನು ಜಗತ್ತಿಗೆವೇದಉಪನಿಷತ್ತುಭಗವದ್ಗೀತೆಭಾಗವತಪುರಾಣಗಳುನೀತಿಕತೆಗಳು ಮುಂತಾದವುಗಳ ಮೂಲಕ ಜನರನ್ನು ಸುಸಂಸ್ಕೃತರನ್ನಾಗಿಸಲುಹೇರಳ ಪ್ರಯತ್ನ ನಡೆದಿದೆ. ಆದರೆ ವಿತಂಡ ವಾದಿಗಳ ಪ್ರಭಾವಪಾಶ್ಚಾತ್ಯ ಜೀವನದ ಪರಿಣಾಮವಿಜ್ಞಾನದ ದುರುಪಯೋಗಮತ್ತು ಜನರಲ್ಲಿ ಮೌಲ್ಯಗಳ ಕುಸಿತದಿಂದ ಇಂದು ” ಸತ್ಯೋರ್ಮಾ ಅಸತ್ಯಂಗಮಯ” ಅಂದರೆ ಸತ್ಯದಿಂದ ಅಸತ್ತಿನೆಡೆಗೆ ಎಂದು ಆಗಿಬಿಟ್ಟಿದೆ. ಇದು ಎಲ್ಲ ಸಜ್ಜನರಿಗೂ ಗೊತ್ತಿರುವ ವಿಷಯವೇ. ಈ ಖಾಯಿಲೆಗೆ ಮದ್ದು ಒಂದು ಸಾಂಸ್ಕೃತಿಕ ಆಂದೋಲನವೇ ಆಗಬೇಕು. ನಮ್ಮ ನಿಮ್ಮಿಂದ ಆಗಬೇಕು. ಬನ್ನಿ ನಾವು ಅದಕ್ಕಾಗಿ ಪ್ರಯತ್ನ ಪಡೋಣ.
ಮೇಯ – ಅಮೇಯ. ರಸಧಾರೆ - 099
ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ |
ಚಲವೊಂದಚಲವೊಂದು ಸಮವದಸಮವಿದು ||
ಕಲೆತಿರ್ಪುವಂತು ಮೇಯಾಮೇಯಗಳು ಜಗದಿ |
ಮಿಲಿತತೆಯಿನೇ ರುಚಿಯೋ – ಮಂಕುತಿಮ್ಮ.||
ಮೇಯ = ಅರಿವಿಗೆ ಬರುವಂಥಾದ್ದುಅಮೇಯ = ಅರಿವಿಗೆ ಬಾರದ್ದುಚಲ = ಚಲಿಸುವುದುಅಚಲ = ಚಲನೆ ಇಲ್ಲದ್ದು.
ಜಲದಿ ತೀರದಿ ನಿಂತು ವೀಕ್ಷಿಸಲು ಇಕ್ಕೆಳಗಳಲಿ ಚಲವೊಂದುಅಚಲವೊಂದುಸಮವದು ಅಸಮವಿದು ಕಲೆತು ಇರ್ಪುವಂತು ಮೇಯಅಮೇಯಗಳು ಜಗದಿಮಿಲಿತತೆ ಯೇ ರುಚಿಯೋ ಮಂಕುತಿಮ್ಮ.
ಸಮುದ್ರದ ತೀರದಲ್ಲಿ ನಿಂತು ಎರಡೂ ಬದಿಯಲ್ಲಿ ನೋಡಿದರೆ ಒಂದು ಕಡೆ ಸಮವಾಗಿರುವ ಕಡಲೂ ಇನ್ನೊಂದು ಬದಿಯಲ್ಲಿ ಅಸಮವಾಗಿರುವ ಭೂಮಿಬೆಟ್ಟ ಗುಡ್ಡಗಳೂ ಕಾಣುತ್ತದೆ. ಇದರಂತೆ ಈ ಜಗತ್ತಿನಲ್ಲಿ ಹಲವು ಸಮವಾಗಿ ಮತ್ತೆ ಹಲವು ಅಸಮವಾಗಿಯೂ ಇವೆ. ಹೀಗೆ ಸಮತೆ ಮತ್ತು ಅಸಮತೆಯಿಂದ ಕೂಡಿ ಇರುವುದೇ ಜಗತ್ತು . ಕೆಲವು ನಮಗೆ ಅರ್ಥವಾಗುತ್ತದೆ. ಕೆಲವು ನಮ್ಮ ಅರಿವಿನ ಪರಿಧಿಯಿಂದಾಚೆಗೆ ಇದೆ. ಹೀಗಿರುವುದೇಈ ಜಗತ್ತಿಗೆ ಸೊಬಗನ್ನು ನೀಡಿದೆಯೋಎಂದು ಕೇಳುತ್ತಾ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ಈ ಜಗತ್ತು ವೈವಿಧ್ಯತೆಯಿಂದ ಕೂಡಿದೆ. ನೈಸರ್ಗಿಕ ಏರುಪೇರುಗಳು. ಕೆಲವು ಸಮಕೆಲವು ಅಸಮ. ಕೆಲವು ನುಣುಪುಕೆಲವು ಒರಟು. ಕೆಲವಕ್ಕೆ ಬೃಹತ್ತಾದ ಗಾತ್ರ ಕೆಲವು ತೀರ ಸಣ್ಣವು. ಕೆಲವು ಒಂದೇ ಬಣ್ಣ ಮತ್ತೆ ಕೆಲವು ಹಲವು ವರ್ಣ ರಂಜಿತ. ಕೆಲವು ಸಾದು ಕೆಲವು ದುಷ್ಟಕೆಲವು ಅಲ್ಪಾಯುಷಿ ಮತ್ತೆ ಕೆಲವು ಧೀರ್ಘಾಯುಷಿ. ಕೆಲವು ಅರ್ಥವಾಗುವುದು ಮತ್ತೆ ಕೆಲವು ಅರ್ಥವೇ ಆಗದುಹೀಗೆ ಹತ್ತು ಹಲವಾರು ಸಾವಿರಾರುವೈವಿಧ್ಯತೆಯಿಂದ ಕೂಡಿರುವುದೇ ಈ ಜಗತ್ತು. ನಮಗೆ ಚೆನ್ನಾಗಿ ಪರಿಚಯವಿರುವ ಮಾನವ ಪ್ರಪಂಚದಲ್ಲಿಯೇ ಎಷ್ಟೊಂದು ಭೇಧಗಳಿವೆಯಲ್ಲ. ಹೀಗೆ ಸಮ ಮತ್ತು ಅಸಮತೆಮೇಯ ಮತ್ತು ಅಮೇಯಗಳಿಂದ ಕೂಡಿರುವ ಜಗತ್ತನ್ನು ಸೃಜಿಸಿ ಆ ಪರಮಾತ್ಮ ಇವುಗಳಲ್ಲಿ ಇದ್ದುಕೊಂಡು ಅಥವಾ ಇಷ್ಟೊಂದು ವೈವಿಧ್ಯಮಯ ರೂಪಗಳನ್ನು ಹೊದ್ದುಕೊಂಡು ಪ್ರತಿಯೊಂದು ಬೇಧವನ್ನೂ ಸಂತೋಷದಿಂದ ಅನುಭವಿಸುತ್ತಿದ್ದಾನೆ (ಮಜಾ ಮಾಡ್ತಾ). ಅದು ಅವನದೇ ಸೃಷ್ಟಿ ತನಗೆ ಹೇಗೆ ಬೇಕೋ ಹಾಗೆ ಮಾಡಿದ ಸೃಷ್ಟಿಮಾಡಿದವನೂ ಅವನೇ ಮತ್ತು ಇರುವುದೂ ಅವನೇ ಮತ್ತು ಅನುಭವಿಸುವವನೂ ಅವನೇ. ಹಾಗೆ ಅವನಿಂದ ಸೃಷ್ಟಿಸಲ್ಪಟ್ಟ ಆ ಜಗತ್ತಿನಲ್ಲಿರುವ ಸಮ – ಅಸಮತೆಯನ್ನು ವೈವಿಧ್ಯತೆಯನ್ನು ಪ್ರಶ್ನಿಸಿದರೆ ಆ ಸೃಷ್ಟಿಕರ್ತನ ಕ್ರಿಯೆಯನ್ನೇ ಪ್ರಶ್ನಿಸಿದಂತೆ ಆಗುತ್ತದೆ ಅಲ್ಲವೇ?
ನಾವೂ ಸಹ ಆ ಜಗನ್ನಾಟಕ ಸೂತ್ರದಾರಿಯಾದ ಪರಮಾತ್ಮನಿಂದ ಸೃಷ್ಟಿಸಲ್ಪತ್ತಿರುವ ಈ ಜಗತ್ತಿನ ಒಂದು ಅಂಶವಷ್ಟೇ. ಇಂತಹ ಸುಂದರಬಣ್ಣ ಬಣ್ಣದವೈವಿಧ್ಯಮಯ ಸೃಷ್ಟಿಯನ್ನು ನೋಡುತ್ತಾಪರಮಾತ್ಮನ ಸೃಷ್ಟಿಯನ್ನು ಅಭಿನಂದಿಸುತ್ತಾಅನುಭವಿಸುತ್ತಾಕಾಪಾಡಲಾಗದಿದ್ದರೂನಮ್ಮನ್ನು ಇಂತಹ ಒಂದು ಅದ್ಭುತ ಸೃಷ್ಟಿಯ ಭಾಗವನ್ನಾಗಿಸಿದ್ದಕ್ಕೆ ಆ ಪರಮಾತ್ಮನಿಗೆ ಕೃತಜ್ಞತೆ ತೋರುತ್ತಾಇದನ್ನು ಹಾಳುಗೆಡವದೆಟೀಕಿಸದೆ, ” ಎಲ್ಲವೂ ಆ ಪರಮಾತ್ಮನ ಸೃಷ್ಟಿನಾನೂ ಇದರ ಒಂದು ಭಾಗಇದನ್ನು ಹಾಳುಮಾಡಲು ನನಗೇನೂ ಅಧಿಕಾರವಿಲ್ಲಇದನ್ನು ಅನುಭವಿಸುವ ಮತ್ತು ಆನಂದಿಸುವ ಅರ್ಹತೆ ಮಾತ್ರ ನನಗುಂಟುಇದನ್ನು ಗೌರವಿಸಬೇಕುಇದನ್ನು ಕಾಪಾಡಬೇಕುಮುಂದಿನ ಪೀಳಿಗೆಗೆ ಇದನ್ನು ಕೊಡಲು ನಾವು ನಮ್ಮ ಹಿಂದಿನವರಿಂದ ಪಡೆದ ಎರವಲು ಮಾತ್ರ” ಎಂಬ ಅರಿವಿನಿಂದ ಇದ್ದರೆ ಒಳಿತು ಇಲ್ಲದಿದ್ದರೆ ಕೆಡುಕು.
ವಾಚಕರೆ ನಾವೇನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಾಗಿ ನಮ್ಮ ನಿಮ್ಮ ಪರಿಮಿತ ಮಿತಿಯೊಳಗೆ ಈ ಜಗತ್ತಿನ ವೈವಿಧ್ಯತೆಯನ್ನು ನೋಡಿ ಕೇವಲ ಅನುಭವಿಸಿ ಅಭಿನಂದಿಸಿಕಾಪಾಡುವಆನಂದಿಸುವ ನಿರ್ಧಾರ ಮಾಡುವ.
ರಸಧಾರೆ - 100
ಅವಿದಿತಾಖಂಡಸತ್ವದಪಾರ ಜಲಧಿಯಲಿ |
ಭುವನದ ದ್ವೀಪ ಕಿಂಚಿನ್ಮಾತ್ರವಿದಿತ ||
ಪವಿತಾಂತರಕ್ಷಿ ಗಾಯೇರಡುವೊಂದೇವಸ್ತು |
ವವಗುಂಠಿತ ಬ್ರಹ್ಮ – ಮಂಕುತಿಮ್ಮ. ||
ಅವಿದಿತಾಖಂಡಸತ್ವದಪಾರ = ಅವಿದಿತ + ಅಖಂಡ + ಸತ್ವದ + ಅಪಾರ/ ಕಿಂಚಿನ್ಮಾತ್ರವಿದಿತ = ಕಿಂಚಿತ್ + ಮಾತ್ರ + ವಿದಿತ, / ಪವಿತಾಂತರಕ್ಷಿ ಗಾಯೇರಡುವೊಂದೇ = ಪವಿತ + ಅಂತರ + ಅಕ್ಷಿಗೆ + ಎರಡು + ಒಂದೇ / ವಸ್ತುವವಗುಂಠಿತ = ವಸ್ತುವು + ಅವಗುಂಠಿತ ಅವಿದಿತ = ನಮಗರಿವಿಲ್ಲದ/ ಅಖಂಡ= ಸಂಪೂರ್ಣವಾದ ತುಂಡರಿಸಲಾಗದ/ ಸತ್ವದ= ಜ್ಞಾನದ/ ಅಪಾರ ಜಲಧಿಯಲಿ = ವಿಶಾಲದವಾದ/ಜಲದಿಯಲಿ = ಸಮುದ್ರದಲಿ/ಭುವನದ = ಈ ಭೂಮಿಯಕಿಂಚಿನ್ಮಾತ್ರವಿದಿತ = ತಿಳಿದಿರುವುದು ಅಲ್ಪಮಾತ್ರ. ಪವಿತಾಂತರಕ್ಷಿ = ಪವಿತ್ರವಾದಶುದ್ಧವಾದ ಒಳಗಣ್ಣುಯೇರಡುವೊಂದೇವಸ್ತು = ಎರಡೂ ವಸ್ತುವನ್ನು ಒಂದೇ ಎನ್ನುವ ರೀತಿ. ಒಂದೇ ವಸ್ತುವವಗುಂಠಿತ = ಈ ಎರಡನ್ನೂ ಆವರಿಸಿರುವುದು ಒಂದೇ ವಸ್ತು. ಅದೇ ಬ್ರಹ್ಮ.
ಇಡೀ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಬಹಳ ಸಣ್ಣದು. ಏಕೆಂದರೆ ನಮಗೆ ಕಾಣುವ ಸೂರ್ಯನ ಗಾತ್ರ ಭೂಮಿಯ ಗಾತ್ರಕ್ಕಿಂತ ೧೩ ಲಕ್ಷ ಪಟ್ಟು ದೊಡ್ಡದು. ಅಬ್ಬಾ!!! ನಮ್ಮ ಅರಿವಿಗೆ ನಿಲುಕ್ಕದ್ದು. ಹಾಗಾದರೆ ಇಡೀ ಬ್ರಹ್ಮಾಂಡಕ್ಕೆ ಹೋಲಿಸಿದರೆ ನಮ್ಮ ಭೂಮಿಯೆಷ್ಟರದ್ದು ಭೂಮಿಯಮೇಲೂಒಂದು ಪಾಲು ನೆಲ ಮತ್ತು ಮೂರು ಪಾಲು ನೀರು. ಹಾಗಾಗಿ ನಾವು ನಿಂತಿರುವ ನೆಲ ಈ ಜಗತ್ತಿನ ವ್ಯಾಪಕತ್ವಕ್ಕೆ ಹೋಲಿಸಿದರೆ ಒಂದು ಸೂಜಿ ಮೊನೆಯಷ್ಟೂ ಅಲ್ಲ. ಇದನ್ನೇ ನಮಗರಿವಿಲ್ಲದ ಮತ್ತು ಅಖಂಡವಾದ ಇಡೀ ಜಗತ್ತಿನಲ್ಲಿ ಭೂಮಿಯಪಾಲು ಕಿಂಚಿನ್ಮಾತ್ರವೆಂದರು ಮಾನ್ಯ ಗುಂಡಪ್ಪನವರು.
ಹಾಗೆಯೇ “ ಅವಿದಿತಾಖಂಡಸತ್ವದಪಾರ ಜಲಧಿಯಲಿ ” ಎನ್ನುವಾಗ ವಿಶಾಲಜಲದಿಯಲ್ಲಿ ಎಂದರೆ ಅಪಾರವಾದ ಜ್ಞಾನ ಸಮುದ್ರದಲ್ಲಿ ನಮಗೆ ತಿಳಿಯದಿರುವುದೇ ಅಧಿಕ. ಹಾಗೆ ತಿಳಿದಿರುವುದೂ ಸಹ ಕಿಂಚಿನ್ಮಾತ್ರವೇ ಎಂಬುದೂ ಸಹ ಮಾನ್ಯ ಗುಂಡಪ್ಪನವರ ಈ ಕಗ್ಗದ ಹೂರಣ. ಈ ಜಗತ್ತಿನಲ್ಲಿರುವ ಎಲ್ಲ ಜ್ಞಾನದ ವಿಶಾಲತೆ ಮತ್ತು ವ್ಯಾಪಕತೆಯನ್ನು ನೋಡಿದರೆನಮಗೆ ತಿಳಿದಿರುವುದು ಎಷ್ಟು ಎಂದರೆ ಆ ಸೂಜಿಮೊನೆಯನ್ನು ಲಕ್ಷಪಾಲು ಮಾಡಿದರೆಆ ಲಕ್ಷದಲ್ಲಿ ಒಂದೂ ಅಲ್ಲಅಲ್ಲವೇ?
ಆದರೆ ಬ್ರಹ್ಮವೆಂದರೆ ಜ್ಞಾನ ಸ್ವರೂಪ. ಆ ಜ್ಞಾನವನ್ನು ಅರಿಯಬೇಕಾದರೆ ನಾವು ನಮ್ಮ ಅಂತಃಚಕ್ಷುವಿನಿಂದ ನೋಡಬೇಕು. ನೋಡುವ ಚಕ್ಷು ಯಾವುದೇ ರೀತಿಯ ಪೂರ್ವಾಗ್ರಹವಿಲ್ಲದೆ ಶುದ್ಧವಾಗಿರಬೇಕು. ಅಂತಹ ಪವಿತ್ರ ಮತ್ತು ಶುದ್ಧವಾದ ಅಂತಃಕರಣದಿಂದ ನೋಡಿದರೆ ಅರಿವಾಗಬಹುದು. ಆದರೆ ನಮಗೆ ಮಿತಿಗಳುಂಟು. ಭಾಷೆಯಜಾತಿಯಧರ್ಮದಪಂಗಡದ ಹೀಗೆ ಹತ್ತು ಹಲವಾರು ಗೋಡೆಗಳನ್ನು ನಾವು ನಮ್ಮ ಸುತ್ತ ನಿರ್ಮಿಸಿಕೊಂಡಿರುವಾಗ ಆ ಶುದ್ಧ ಮನಸ್ಸೂ ಇರಲು ಸಾಧ್ಯವಿಲ್ಲ ಪರಿಶುದ್ಧಮನಸ್ಸಿಲ್ಲದೆ ಜ್ಞಾನವೂ ದೂರ. ಅದನ್ನು ಪಡೆಯಬೇಕಾದರೆಶುದ್ಧವಾದ ಪ್ರಯತ್ನ ಬೇಕು. ಪ್ರಯತ್ನಕ್ಕೆ ಪೂರಕವಾಗಿ ಗುರುವಿನ ಮಾರ್ಗದರ್ಶನ ಬೇಕು. ಅಹಂಕಾರ ಬಿಡಬೇಕು. ಇದನ್ನೇ
ಸತ್ಸಂಗತ್ವೆ ನಿಸ್ಸಂಗತ್ವಂನಿಸ್ಸಂಗತ್ವೆ ನಿರ್ಮೋಹತ್ವಂನಿರ್ಮೋಹತ್ವೆ ನಿಶ್ಚಲ ತತ್ವಂ,ನಿಶ್ಚಲ ತತ್ವೆ ಜೀವನ್ಮುಕ್ತಿ: ” ಎಂದಿದ್ದಾರೆ. ಸತ್ಸಂಗದಲ್ಲಿದ್ದರೆಅಸತ್ತಿನ ನಿಸ್ಸಂಗವಾಗುತ್ತದೆನಿಸ್ಸಂಗವಾದರೆ ಮೋಹ ನಶಿಸಿಹೋಗುತ್ತದೆಮೋಹ ಹೋದರೆ ಪರಮಾತ್ಮ ತತ್ವ ಸಂದೇಹಸಂಶಯಗಳಿಲ್ಲದೆ ಗಟ್ಟಿಯಾಗುತ್ತದೆನಿಶ್ಚಲವಾಗುತ್ತದೆನಿಶ್ಚಲವಾದ ತತ್ವಜ್ಞಾನದಿಂದ ಜೀವಬಂದನಗಳಿಂದ ಮುಕ್ತನಾಗುತ್ತಾನೆ. ಈ ವಿಧದಲ್ಲಿ ಜ್ಞಾನಪ್ರಾಪ್ತಿಯಾದರೆಆಗ ಜಡ ಜೀವದಲ್ಲಿ ಅಂದರೆ ವಸ್ತು ಮತ್ತು ಚೇತನದ ನಡುವಿನ ಬೇಧವೂ ಅಳಿಸಿಹೋಗುತ್ತದೆ. ಏಕೆಂದರೆ ಬ್ರಹ್ಮವೇ ಎಲ್ಲವೂ. ಅಖಂಡ ಜ್ಞಾನವೇ ಬ್ರಹ್ಮ. ಎಲ್ಲವೂ ಬ್ರಹ್ಮವೆಂದಾದಮೇಲೆಜಡ ಜೀವಗಳ ಬೇಧ ಅಳಿಸಿಹೋಗಿ ಶುದ್ಧಜ್ಞಾನ ನಮಗೆ ಲಭ್ಯವಾಗುತ್ತದೆ.
ವಾಚಕರೆಈ ಜಗತ್ತಿನಲ್ಲಿ ಯಾರಿಗೆ ಏನು ಬೇಕೋ ಅದೆಲ್ಲವೂ ಇದೆ. ನಮ್ಮ ಆಯ್ಕೆ ಸರಿಯಾಗಿದ್ದರೆನಮಗೆ ಎಲ್ಲವೂ ಸರಿಯಾದದ್ದೇ ಲಭ್ಯವಾಗುತ್ತದೆ. ಆಯ್ಕೆ ಸರಿಯಿಲ್ಲದಿದ್ದರೆ ಯಾವುದೂ ಸಮರ್ಪಕವಾಗಿರುವುದಿಲ್ಲ.
ನಾವು ಒಳ್ಳೆಯ ಆಯ್ಕೆಯಿಂದ ಒಳ್ಳೆಯದನ್ನೇ ಪಡೆಯುವ ಪ್ರಯತ್ನವನ್ನು ಮಾಡೋಣವೆ 
ಮುಂದುವರಿಯಲು ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ