ಛಂದಸ್ಸು
ಶುದ್ಧ ಹಾಗೂ ಅರ್ಥಪೂರ್ಣವಾಗಿ ಮಾತನಾಡಲು, ಬರೆಯಲು ವ್ಯಾಕರಣ ಶಾಸ್ತ್ರವು ಹೇಗೆ ಅಗತ್ಯವೋ ಹಾಗೆಯೇ ಪದ್ಯರಚನೆ ಮಾಡಲೂ ಕೆಲವು ನಿಯಮಗಳಿರುತ್ತವೆ. ಇಂತಹ ಪದ್ಯರಚನಾ ನಿಯಮವನ್ನು ಛಂದಸ್ಸು ಎಂದು ಕರೆಯಲಾಗಿದೆ. ಸುಮಾರು ಕ್ರಿ.ಶ. ೯೯೦ರಲ್ಲಿ ಇದ್ದ ಒಂದನೆಯ ನಾಗವರ್ಮ ಎಂಬವನು ಛಂದೋಂಬುಧಿ ಎಂಬ ಗ್ರಂಥದ ಮೂಲಕ ಈ ಶಾಸ್ತ್ರವನ್ನು ನೀಡಿದ್ದಾನೆ. ಹಳಗನ್ನಡದ ಮತ್ತು ನಡುಗನ್ನಡದ ಪದ್ಯಕಾವ್ಯಗಳು ಈ ಶಾಸ್ತ್ರವನ್ನು ಅನುಸರಿಸಿಯೇ ಬರೆಯಲ್ಪಟ್ಟವು.
ಛಂದಶ್ಶಾಸ್ತ್ರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳನ್ನು ಪ್ರಾಸ, ಯತಿ, ಗಣಗಳೆಂದು ಕರೆಯಲಾಗಿದೆ.
ಪ್ರಾಸ : ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಆದಿಪ್ರಾಸ ವೆಂತಲೂ ಪ್ರತಿ ಪಾದದ ಕೊನೆಯಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಅಂತ್ಯಪ್ರಾಸವೆಂತಲೂ ಕರೆಯುತ್ತಾರೆ. ಕೆಲವೊಮ್ಮೆ ಅಪರೂಪಕ್ಕೆ ಸಾಲಿನ ಮಧ್ಯದಲ್ಲಿ ಪ್ರಾಸಾಕ್ಷರಗಳು ಬರುವುದುಂಟು ಅದನ್ನು ಒಳಪ್ರಾಸ ಅಥವಾ ಮಧ್ಯಪ್ರಾಸ ಎಂದು ಕರೆಯಲಾಗಿದೆ.
- ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದನ್ನು ಸಿಂಹಪ್ರಾಸ ಎಂತಲೂ
- ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎಂತಲೂ
- ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ ಎಂತಲೂ
- ಹಿಂದೆ ವಿಸರ್ಗವಿದ್ದರೆ ಅಜಪ್ರಾಸ ಎಂತಲೂ
- ಬೇರೆಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ ಎಂತಲೂ
- ಒಂದೇಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ ಎಂತಲೂ ಕರೆಯಲ್ಪಡುವ ಆರು ವಿಧದ ಪ್ರಾಸಗಳನ್ನು ಕಾಣಬಹುದು.
ಯತಿ : ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳವನ್ನು ಯತಿ ಎಂದು ಕರೆಯಲಾಗಿದೆ. ಹಾಗೆಂದ ಮಾತ್ರಕ್ಕೆ ನಮಗೆ ಇಷ್ಟ ಬಂದಲ್ಲಿ ನಿಲ್ಲಿಸುವ ಸ್ವಾತಂತ್ರ್ಯವಿಲ್ಲ. ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪ ಬಾರದಂತೆ ನಿಲ್ಲಿಸಬೇಕಾದ ಅನಿವಾರ‍್ಯತೆಯಿದೆ. ಹೀಗೆ_
ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪಬಾರದಂತೆ ನಿಲ್ಲಿಸುವ ಸ್ಥಳವನ್ನು ’ಯತಿ’ ಎಂದು ಗುರುತಿಸಲಾಗಿದೆ. ಕೆಲವು ಕವಿಗಳು ಯತಿಯ ಸ್ಥಾನವನ್ನು ಕೆಲವು ಸಂಕೇತಗಳೊಂದಿಗೆ ತಮ್ಮ ಕಾವ್ಯಗಳಲ್ಲಿ ಗುರುತಿಸಿದ್ದು ಕಂಡುಬರುತ್ತದೆ. ಕನ್ನಡ ಕಾವ್ಯಗಳಲ್ಲಿ ಯತಿಯ ಬಳಕೆ ಅತ್ಯಂತ ಕಡಿಮೆಯಾಗಿದ್ದು ಸಂಸ್ಕೃತ ಕಾವ್ಯಗಳಲ್ಲಿ ಬಹಳ? ಇರುವುದನ್ನು ಗಮನಿಸಬಹುದು.
ಗಣ : ’ ಗಣ’ ಎಂದರೆ ’ಗುಂಪು’ ಅಥವಾ ’ಸಮೂಹ’ ಎಂದರ್ಥ. ಛಂದಶ್ಶಾಸ್ತ್ರದಲ್ಲಿ ’ಗಣ’ ಎಂದರೆ ಪದ್ಯದ ಪ್ರತಿ ಸಾಲಿನಲ್ಲೂ ವಿಭಾಗಿಸಲ್ಪಡುವ ಮಾತ್ರೆ ಅಥವಾ ಅಕ್ಷರ ಅಥವಾ ಅಂಶಗಳ ಗುಂಪು ಎಂದರ್ಥ.
ಗಣಗಳಲ್ಲಿ ಮೂರು ವಿಧ: ೧) ಅಂಶಗಣ, ೨) ಮಾತ್ರಾಗಣ, ೩) ಅಕ್ಷರಗಣ
ಅಂಶಗಣ: ಮಾತ್ರೆಗಳ ಲೆಕ್ಕಾಚಾರದೊಂದಿಗೆ ವಿಭಾಗಿಸಲ್ಪಡುವ ಗಣವನ್ನು ಮಾತ್ರಾಗಣ ಎಂತಲೂ ಅಕ್ಷರಗಳ ಲೆಕ್ಕಾಚಾರಗಳೊಂದಿಗೆ ವಿಭಾಗಿಸಲ್ಪಡುವ ಗಣವನ್ನು ಅಕ್ಷರಗಣ ಎಂತಲೂ ಅಂಶಗಳ ಆಧಾರದಿಂದ ವಿಭಾಗಿಸಲ್ಪಡುವ ಗಣವನ್ನು ಅಂಶಗಣ ಎಂತಲೂ ಕರೆಯಲಾಗಿದೆ.
ಅಂಶಗಣದಲ್ಲಿ ಬ್ರಹ್ಮ, ವಿಷ್ಣು ಮತ್ತು ರುದ್ರ ಎಂಬ ಮೂರು ವಿಧದ ಗಣಗಳಿವೆ. (ಇವುಗಳ ಬಗ್ಗೆ ಹೆಚ್ಚಿನ ವಿವರವನ್ನು ಮುಂದಿನ ತರಗತಿಗಳಲ್ಲಿ ತಿಳಿದುಕೊಳ್ಳಬಹುದು.)
ಮಾತ್ರಾಗಣ : ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ’ಮಾತ್ರೆ’ ಎಂಬ ಮಾನದಿಂದ ಅಳೆಯಲಾಗುವುದು. ಈ ಮಾತ್ರೆಗಳ ಆಧಾರದಿಂದ ’ಗಣ’ ವಿಭಾಗ ಮಾಡಿದರೆ ಅದನ್ನು ’ಮಾತ್ರಾಗಣ’ ಎಂದು ಕರೆಯುತ್ತಾರೆ. ಹೀಗೆ ಗಣಗಳಾಗಿ ವಿಂಗಡಿಸುವಾಗ ಮೂರು, ನಾಲ್ಕು ಅಥವಾ ಐದು ಮಾತ್ರೆಗಳ ಗಣಗಳನ್ನು ಮಾಡಲಾಗುವುದು, ಪದ್ಯದ ಪ್ರತಿ ಸಾಲಿನಲ್ಲಿರುವ ಎಲ್ಲ ಅಕ್ಷರಗಳ ಮಾತ್ರೆಗಳನ್ನು ನಿಶ್ಶೇಷವಾಗಿ ಗಣಗಳನ್ನಾಗಿ ವಿಂಗಡಿಸಬೇಕು.
ಅಂದರೆ ಯಾವ ಸಾಲಿನಲ್ಲೂ ಗಣ ವಿಂಗಡಣೆ ಆದ ಬಳಿಕ ಮಾತ್ರೆ ಉಳಿಯಬಾರದು. (ಷಟ್ಪದಿಯ ಮೂರು ಮತ್ತು ಆರನೆಯ ಪಾದಗಳ ಕೊನೆಯ ಅಕ್ಷರವನ್ನು ಬಿಟ್ಟು).
ಅಕ್ಷರಗಣ : ಪ್ರತಿಗಣವನ್ನು ಮೂರು ಮೂರು ಅಕ್ಷರಗಳಾಗಿ ವಿಂಗಡಿಸುವುದನ್ನು ಅಕ್ಷರಗಣ ಎನ್ನಲಾಗುವುದು.
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳು:-
ಹ್ರಸ್ವಸ್ವರಗಳು ಮತ್ತು ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳೆಲ್ಲ ಲಘುಗಳೆನಿಸುವುವು. ಲಘುಗಳಾಗಿರುವ ಅಕ್ಷರಗಳ ಮೇಲೆ ‘U‘ ಹೀಗೆ ಛಂದಸ್ಸಿನಲ್ಲಿ ಗುರುತಿಸುವುದು ವಾಡಿಕೆ.
ಉದಾಹರಣೆಗೆ:-
U | U | U | U | U | U |
ಅ | ಇ | ಉ | ಋ | ಎ | ಒ |
U | U | U | U | U | U |
ಕ | ಕಿ | ಕು | ಚ | ಟ | ತ |
U | U | U | U | U | U |
ಕೆ | ಕೊ | ಸು | ಸೊ | ಸೃ | ಕೃ |
ಗುರುಗಳು:- ಎರಡು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳೆಲ್ಲ ಗುರುಗಳೆನಿಸುವುವು. ಗುರುಗಳಾಗಿರುವ ಅಕ್ಷರಗಳ ಮೇಲೆ ಹೀಗೆ ಗುರುತಿಸುವುದು ವಾಡಿಕೆ.
ಗುರುಗಳಾಗುವ ಅಕ್ಷರಗಳು:- ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು, ಒತ್ತಕ್ಷರದ ಹಿಂದಿನ ಅಕ್ಷರ, ವ್ಯಂಜನಾಕ್ಷರದ ಹಿಂದಿನ ಅಕ್ಷರ ಷಟ್ಪದಿ ಪದ್ಯಗಳಲ್ಲಿ ಬರುವ ೩ನೆಯ ೬ನೆಯ ಸಾಲಿನ ಕೊನೆಯಲ್ಲಿರುವ ಅಕ್ಷರ (ಲಘುವಾಗಿದ್ದರೂ) ಗುರುಗಳೆನಿಸುವುವು.
ಉದಾಹರಣೆಗೆ:
(i) ದೀರ್ಘಸ್ವರಾಕ್ಷರಗಳು ಗುರುಗಳಾಗುವುದಕ್ಕೆ-
— | — | — | — | — | — | — |
ಆ | ಈ | ಊ | ೠ | ಏ | ಐ | ಓ |
(ii) ದೀರ್ಘಸ್ವರದಿಂದ ಕೂಡಿದ ಗುಣಿತಾಕ್ಷರಗಳು-
— | — | — | — | — | — | — | — |
ಕಾ | ಕೀ | ಚೇ | ಚೈ | ಸೈ | ನಾ | ರೋ | ಸೌ |
— | — | — | — | — | — | — |
ಕ್ಕಾ | ಸ್ನೇ | ತ್ರೇ | ಪ್ರೈ | ಕ್ರೋ | ಧ್ಯಾ | ಲೋ |
(iii) ಅನುಸ್ವಾರ ವಿಸರ್ಗಗಳಿಂದ ಕೂಡಿದ ಅಕ್ಷರಗಳು-
— | — | — | — | — | — | — |
ಅಂ | ಅಃ | ತಂ | ತಃ | ಸಂ | ಸಃ | ಕಂ |
(iv) ಒತ್ತಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
—U | —U | —U | —UU |
ಕಲ್ಲು | ಮಣ್ಣು | ನಿಲ್ಲು | ಮೆತ್ತಗೆ |
(ಇಲ್ಲಿ ಒತ್ತಕ್ಷರದ ಹಿಂದಿನ ಅಕ್ಷರಗಳು ಗುರುಗಳಾಗಿದ್ದು, ಉಳಿದವು ಲಘುವಾಗಿದ್ದರೆ ಲಘು ಚಿಹ್ನೆಯನ್ನೂ ಗುರುವಾಗಿದ್ದರೆ ಗುರು ಚಿಹ್ನೆಯನ್ನೂ ಹಾಕಬೇಕು)
(v) ವ್ಯಂಜನಾಕ್ಷರದ ಹಿಂದಿನ ಅಕ್ಷರ ಗುರುವಾಗುವುದಕ್ಕೆ-
— | — | — | — | — | — | — | — |
ಕಲ್ | ನಿಲ್ | ಪಣ್ | ತಿನ್ | ಮೇಣ್ | ಕಾಲ್ | ಮೇಲ್ | ತಾಯ್ |
ಉದಾಹರಣೆಗೆ:-
—U | —U |
ಶಾಸ್ತ್ರ | ಕಾಂಕ್ಷೆ |
ಮೇಲಿನ ಉದಾಹರಣೆಗಳಲ್ಲಿ ‘ಶಾ’ ಅಕ್ಷರ ಗುರುವಾಗುವುದಕ್ಕೆ ಎರಡು ಕಾರಣಗಳಿವೆ. ಅದು
ದೀರ್ಘವಾದ್ದರಿಂದ ಗುರು, ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದ ಗುರು. ಕಾ ಎಂಬುದು
ಮೂರು ಕಾರಣ ಹೊಂದಿದೆ. ದೀರ್ಘವಾಗಿರುವುದರಿಂದ ಗುರು; ಅನುಸ್ವಾರವಿರುವುದರಿಂದ ಗುರು;
ಒತ್ತಕ್ಷರದ ಹಿಂದಿನ ಅಕ್ಷರವಾದ್ದರಿಂದಲೂ ಗುರು.
(vi) ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ, ವಾರ್ಧಕ-ಇತ್ಯಾದಿ ಆರು ಜಾತಿಯ ಷಟ್ಪದಿ ಪದ್ಯಗಳಲ್ಲಿ ಬರುವ ಮೂರನೆಯ, ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೆ ಗುರು ಅಕ್ಷರವೆಂದು ಭಾವಿಸಬೇಕು.
ಷಟ್ಪದಿಗಳ ಲಕ್ಷಣಗಳು
![ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ](https://kanaja.karnataka.gov.in/wp-content/uploads/2011/04/chp10_2_1.jpg)
ಈ ಮೇಲಿನ ಪದ್ಯವು ಆರು ಸಾಲುಗಳಿಂದ ಕೂಡಿದೆ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ೪ ಮಾತ್ರೆಯ ೨ ಗಣಗಳಿಂದ ಕೂಡಿವೆ. ೩ ಮತ್ತು ೬ ನೆಯ ಸಾಲುಗಳು ಒಂದು ಸಮನಾಗಿದ್ದು ೪ ಮಾತ್ರೆಯ ೩ ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿವೆ. ಮೂರು ಮತ್ತು ಆರನೆಯ ಸಾಲುಗಳ ಕೊನೆಯಕ್ಷರ ಲಘುವಾಗಿದ್ದರೂ ಗುರುವೆಂದೇ ತಿಳಿಯಬೇಕು. ಈ ಜಾತಿಯ ಪದ್ಯದಲ್ಲಿ ಮಧ್ಯಗುರುವುಳ್ಳ “U _ U” ಈ ರೀತಿಯ ಗಣವು ಎಲ್ಲಿಯೂ ಬರಕೂಡದು. ಇಂಥ ಲಕ್ಷಣದಿಂದ ಕೂಡಿದ ಪದ್ಯಗಳು ಶರಷಟ್ಪದಿಗಳೆಂದು ತಿಳಿಯಬೇಕು.
(೨) ಕುಸುಮಷಟ್ಪದಿ
![ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ](https://kanaja.karnataka.gov.in/wp-content/uploads/2011/04/chp10_2_2.jpg)
ಆರು ಪಾದಗಳುಳ್ಳ ಪದ್ಯ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಎರಡು ಗಣಗಳಿಂದ ಕೂಡಿವೆ. ಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಐದೈದು ಮಾತ್ರೆಗಳ ಮೂರು ಗಣಗಳಿಂದಲೂ ಮೇಲೆ ಒಂದು ಗುರುವಿನಿಂದಲೂ ಕೂಡಿವೆ. ೩ ಮತ್ತು ೬ ನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು. ಈ ಜಾತಿಯ ಪದ್ಯದಲ್ಲಿ “U_UU ” ಹೀಗಿರುವ ಮತ್ತು ” U_ _” ಹೀಗಿರುವ ಗಣವು ಬರಕೂಡದು. ಈ ಲಕ್ಷಣಗಳಿಂದ ಕೂಡಿದ ಪದ್ಯಗಳೇ ಕುಸುಮ ಷಟ್ಪದಿಗಳೆನಿಸುವುವು.
(೩) ಭೋಗಷಟ್ಪದಿ
![ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ](https://kanaja.karnataka.gov.in/wp-content/uploads/2011/04/chp10_3.jpg)
ಆರು ಸಾಲುಗಳಿಂದ ಕೂಡಿದ ಪದ್ಯ. ೧, ೨, ೪, ೫ ನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮೂರು ಮಾತ್ರೆಯ ನಾಲ್ಕು ಗಣಗಳಿಂದ ಕೂಡಿವೆ. ಮೂರು ಮತ್ತು ಆರನೆಯ ಸಾಲುಗಳು ಒಂದು ಸಮನಾಗಿದ್ದು ಮೂರು ಮಾತ್ರೆಗಳ ಆರಾರು ಗಣಗಳಿಂದಲೂ, ಮೇಲೊಂದು ಗುರುವಿನಿಂದಲೂ ಕೂಡಿರುತ್ತವೆ. ಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವಾಗುವುದು. ಈ ಜಾತಿಯ ಛಂದಸ್ಸಿನ ಪದ್ಯದಲ್ಲಿ ” U_ ” ಹೀಗೆ ಇರುವ ಮಾತ್ರಾಗಣ ಬರಕೂಡದು. ಇಂಥ ಲಕ್ಷಣಗಳಿಂದ ಕೂಡಿದ ಪದ್ಯವೇ “ಭೋಗಷಟ್ಪದಿ” ಎನಿಸುವುದು.
(೪) ಭಾಮಿನೀ ಷಟ್ಪದಿ
![ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ](https://kanaja.karnataka.gov.in/wp-content/uploads/2011/04/chp10_2_4.jpg)
![ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ](https://kanaja.karnataka.gov.in/wp-content/uploads/2011/04/chp10_2_5.jpg)
(೬) ವಾರ್ಧಕಷಟ್ಪದಿ
![ಅಧ್ಯಾಯ ೧೦: ಛಂದಸ್ಸು: ಭಾಗ V- ಮಾತ್ರಾಗಣದ ಛಂದಸ್ಸಿನ ಪದ್ಯಗಳು – ಕಣಜ](https://kanaja.karnataka.gov.in/wp-content/uploads/2011/04/chp10_2_6.jpg)
*************
3rd payara beku
ಪ್ರತ್ಯುತ್ತರಅಳಿಸಿಥ್ಯಾಂಕ್ಸ್ ಸರ್
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಸರ್ ನಾನು ಓದಿದೆ
ಪ್ರತ್ಯುತ್ತರಅಳಿಸಿ