ನನ್ನ ಪುಟಗಳು

06 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-02-ಹಕ್ಕಿ ಹಾರುತಿದೆ ನೋಡಿದಿರಾ - ವ್ಯಾಕರಣ : ಅವ್ಯಯಗಳು

ಅವ್ಯಯಗಳು
    "ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳನ್ನು ಅವ್ಯಯ" ಎಂದು ಕರೆಯಲಾಗಿದೆ. 
    ಅವ್ಯಯದ ಪ್ರಮುಖ ವಿಧಗಳು :
    ಸಾಮಾನ್ಯಾವ್ಯಯ
    ಅನುಕರಣಾವ್ಯಯ
    ಭಾವಸೂಚಕಾವ್ಯಯ
    ಕ್ರಿಯಾರ್ಥಕಾವ್ಯಯ
    ಸಂಬಂಧಾರ್ಥಕಾವ್ಯಯ
    ಕೃದಂತಾವ್ಯಯ
    ತದ್ಧಿತಾಂತಾವ್ಯಯ
    ಅವಧಾರಣಾರ್ಥಕಾವ್ಯಯ

ಸಾಮಾನ್ಯಾರ್ಥಕಾವ್ಯಯ : ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತಹ ಅವ್ಯಯಗಳೇ ಸಾಮಾನ್ಯಾವ್ಯಯಗಳು. ಇವು ಹೆಚ್ಚಾಗಿ ವಿಶೇಷಣಗಳಾಗಿರುತ್ತವೆ.
    ಉದಾ:- ಬೇಗನೆ, ಮೆಲ್ಲಗೆ, ಸೊಗಸಾಗಿ, ಸುಮ್ಮನೆ, ತಟ್ಟನೆ, ತರುವಾಯ, ಹಾಗೆ, ಅಂತು, ಬೇರೆ, ಬಳಿಕ, ಕೂಡಲೆ, ಚೆನ್ನಾಗಿ ಇತ್ಯಾದಿಗಳು. 

ಅನುಕರಣಾವ್ಯಯಗಳು : ನಿರ್ದಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳನ್ನು ’ಅನುಕರಣಾವ್ಯಯಗಳೆಂದು’ ಕರೆಯುತ್ತಾರೆ. 
    ಉದಾ: ಚಟಚಟ, ಕರಕರ, ಚುರುಚುರು, ಧಗಧಗ, ರೊಯ್ಯನೆ, ಸುಯ್ಯನೆ, ಘುಳುಘುಳು, ದಡದಡ ಇತ್ಯಾದಿ ಪದಗಳು. 

ಭಾವಸೂಚಕಾವ್ಯಯಗಳು : ಮನಸ್ಸಿನಲ್ಲಿ ಉಂಟಾಗುವ ಕೋಪ, ಹ?, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ -ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಕೆಲವು ಪದಗಳನ್ನು ಬಳಸುತ್ತೇವೆ. ಅಂತಹ ಪದಗಳನ್ನು ಭಾವಸೂಚಕ ಅವ್ಯಯಗಳೆಂದು ಕರೆಯುತ್ತಾರೆ. 
    ಉದಾ:- ಆಹಾ! ಭಳಿರೆ! ಅಯ್ಯೋ! ಓಹೋ! ಹೋ! , ಅಃ! ಆಃ, ಓ - ಇತ್ಯಾದಿ ಪದಗಳು, ಅಥವಾ ಪದರೂಪದ ಅಕ್ಷರಗಳು.
 
ಕ್ರಿಯಾರ್ಥಕಾವ್ಯಯಗಳು : ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳನ್ನು ಕ್ರಿಯಾರ್ಥಕ ಅವ್ಯಯಗಳು ಎಂದು ಕರೆಯಲಾಗಿದೆ. 
    ಉದಾ:- ಅಹುದು, ಸಾಕು, ಅಲ್ಲ, ಹೌದು, ಬೇಡ, ಉಂಟು-ಇತ್ಯಾದಿ. 

ಸಂಬಂಧಾರ್ಥಕಾವ್ಯಯಗಳು : ಎರಡು ಪದಗಳನ್ನಾಗಲೀ ಹಲವು ಪದ ಸಮುಚ್ಚಯಗಳನ್ನಾಗಲೀ, ವಾಕ್ಯಗಳನ್ನಾಗಲೀ, ಜೋಡಿಸುವಂತಹ ಅಥವಾ ಸಂಬಂಧಗೊಳಿಸುವಂತಹ ಪದಗಳೇ ಸಂಬಂಧಾರ್ಥಕ ಅವ್ಯಯಗಳು. 
    ಉದಾ:- ಮತ್ತು, ಅಥವಾ, ಆದ್ದರಿಂದ, ಊ, ಉಂ, ಅಲ್ಲದೆ ಇತ್ಯಾದಿ. 
    ಪದಗಳ ಜೋಡಣೆ :- ರಾಮನೂ ಲಕ್ಷ್ಮಣನೂ ಸೀತೆಯೂ ಕಾಡಿಗೆ ಹೊರಟರು. 
    ಪದಸಮುಚ್ಚಯ ಜೋಡಣೆ:- ಅವನು ಬರುವುದೂ ಬೇಡ; ಆ ಕೆಲಸ ಆಗುವುದೂ ಬೇಡ. 
    ವಾಕ್ಯಗಳ ಜೋಡಣೆ:- ಅವನು ಬರಲಿಲ್ಲ ಆದ್ದರಿಂದ ನಾನೂ ಬರಲಿಲ್ಲ. 

ಅವಧಾರಣಾರ್ಥಕಾವ್ಯಯ : ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯವನ್ನು ಅವಧಾರಣಾರ್ಥಕಾವ್ಯಯ ಎಂದು ಕರೆಯುತ್ತಾರೆ. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಈ ಅವ್ಯಯವನ್ನು ಬಳಸಲಾಗುತ್ತದೆ.
    ಉದಾ:- ಅವನೇ, ಅದುವೇ, ನೀನೇ, ಅವಳೇ, ಅವರೇ, ಇತ್ಯಾದಿ ಪದಗಳ ಕೊನೆಯಲ್ಲಿರುವ ’ಏ’ ಎಂಬ ಅಕ್ಷರವೇ ಅವಧಾರಣಾರ್ಥಕ ಅವ್ಯಯ.

*******
ಅಭ್ಯಾಸಕ್ಕಾಗಿ ಪದ್ಯಾಭಾಗದಲ್ಲಿರುವ ವ್ಯಾಕರಣಾಂಶಗಳ ಹೆಚ್ಚುವರಿ ಪ್ರಶ್ನೆಗಳು
ಅ] ಬಹು ಆಯ್ಕೆ  ಪ್ರಶ್ನೆಗಳು
೧. ’ಸೂರ್ಯ’ ಇದರ ಸಮಾನಾರ್ಥಕ ಪದ :
  ಅ) ಚಂದ್ರ  ಆ) ಆಕಾಶ   ಇ) ನೇಸರ   ಈ) ಭೂಮಿ
೨. ’ಕೆನ್ನ’ ಇದರ ಸಮಾನಾರ್ಥಕ ರೂಪ :
  ಅ) ಚಿನ್ನ  ಆ) ಚೆನ್ನ   ಇ) ಹಳದಿ   ಈ) ಕೆಂಪು
೩. ’ಹಕ್ಕಿ’ ಇದರ ತತ್ಸಮ ರೂಪ :
  ಅ) ಪ್ರಾಣಿ  ಆ) ಪಕ್ಷಿ  ಇ) ಗಿಳಿ  ಈ) ಪಂಜರ
೪. ’ಹೊಸಗಾಲ’ ಪದದಲ್ಲಿರುವ ಸಂಧಿ :
  ಅ) ಲೋಪಸಂಧಿ  ಆ) ಆದೇಶಸಂಧಿ  ಇ) ಆಗಮಸಂಧಿ  ಈ) ಗುಣಸಂಧಿ
೫. ’ತೆರೆದಿಕ್ಕುವ’ ಪದದಲ್ಲಿರುವ ಸಂಧಿ :
  ಅ) ಯಣ್‌ಸಂಧಿ   ಆ) ಗುಣಸಂಧಿ   ಇ) ಲೋಪಸಂಧಿ  ಈ) ಆದೇಶಸಂಧಿ
೬. ’ಇರುಳಿರುಳಳಿದು’ ಪದದಲ್ಲಿರುವ ವ್ಯಾಕರಣಾಂಶ :
  ಅ) ಜೋಡಿಪದ   ಆ) ಅನುಕರಣಾವ್ಯಯ ಇ) ದ್ವಿರುಕ್ತಿ   ಈ) ಸಮಾರ್ಥಕಪದ
೭. ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪ ಭೇದ ಹೊಂದದೆ ಏಕರೂಪವಾಗಿರುವ ಪದಗಳೇ 
  ಅ) ಕ್ರಿಯಾಪದಗಳು  ಆ) ಕೃದಂತಗಳು ಇ) ದ್ವಿರುಕ್ತಿಗಳು  ಈ) ಅವ್ಯಯಗಳು
೮. ’ ಮೆಲ್ಲಗೆ ’ ಇದು ಈ ಅವ್ಯಯ ಪದವಾಗಿದೆ :
  ಅ) ಸಾಮಾನ್ಯ ಆ) ಅನುಕರಣ   ಇ) ಭಾವಸೂಚಕ  ಈ) ಸಂಬಂಧಾರ್ಥಕ
೯. ಧಗಧಗ, ಕರಕರ, ರೊಯ್ಯನೆ , ದಡದಡ ಇವು ಈ ಅವ್ಯಯಕ್ಕೆ ಉದಾಹರಣೆಗಳು :
  ಅ) ಭಾವಸೂಚಕ   ಆ) ಸಾಮಾನ್ಯ   ಇ) ಅನುಕರಣ   ಈ) ಸಂಬಂಧಾರ್ಥಕ
೧೦. ಆಹಾ! ಅಯ್ಯೋ! ಓಹೋ! ಭಲರೆ! - ಇವು ಈ ಅವ್ಯಯಕ್ಕೆ ಉದಾಹರಣೆಗಳು :
  ಅ) ಸಾಮಾನ್ಯ ಆ) ಸಂಬಂಧಾರ್ಥಕ   ಇ) ಭಾವಸೂಚಕ ಈ) ಅನುಕರಣ
೧೧. ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ - ಇಲ್ಲಿರುವ ಅಲಂಕಾರ :
  ಅ) ಉಪಮ  ಆ) ಉತ್ಪ್ರೇಕ್ಷೆ   ಇ) ರೂಪಕ  ಈ) ದೃಷ್ಟಾಂತ
೧೨. ’ಸೂರ್ಯಚಂದ್ರರು’ - ಇಲ್ಲಿರುವ ಸಮಾಸ :
  ಅ) ತತ್ಪುರುಷಸಮಾಸ  ಆ) ದ್ವಂದ್ವಸಮಾಸ   ಇ) ದ್ವಿಗುಸಮಾಸ ಈ) ಗಮಕಸಮಾಸ

[ ಉತ್ತರಗಳು :  ೧. ಇ) ನೇಸರ  ೨. ಈ) ಕೆಂಪು  ೩. ಆ) ಪಕ್ಷಿ ೪. ಆ) ಆದೇಶಸಂಧಿ ೫. ಇ)ಲೋಪಸಂಧಿ  
೬. ಇ) ದ್ವಿರುಕ್ತಿ ೭. ಈ) ಅವ್ಯಯಗಳು  ೮. ಅ)ಸಾಮಾನ್ಯಾವ್ಯಯ  ೯. ಇ) ಅನುಕರಣಾವ್ಯಯ  ೧೦. ಇ) ಭಾವಸೂಚಕಾವ್ಯಯ ೧೧. ಆ) ಉತ್ಪ್ರೇಕ್ಷೆ      ೧೨. ಆ) ದ್ವಂದ್ವಸಮಾಸ. ]

ಆ] ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
  ೧. ಧಗಧಗ      : ಅನುಕರಣಾವ್ಯಯ    : : ನೆರೆಹೊರೆ  : ________
  ೨. ಗಡ        : ಸಣ್ಣಕೋಟೆ        : : ಎವೆ      : ________
  ೩. ಹೊಸಗಾಲ  : ಆದೇಶ ಸಂಧಿ      : : ಮನ್ವಂತರ  : ________
  ೪. ಖಂಡಖಂಡ : ದ್ವಿರುಕ್ತಿ            : : ಸುತ್ತಮುತ್ತ : ________
  ೫. ಸಾಕು      : ಕ್ರಿಯಾರ್ಥಕ ಅವ್ಯಯ : : ಅವನೇ    : ________
  ೬. ಅವನು      : ಏಕವಚನ          : : ಅವರು    : ________
  ೭. ರೆಕ್ಕೆಯ      : ಷಷ್ಠಿವಿಭಕ್ತಿ        : : ಮಕ್ಕಳನ್ನು    : ________

    [ ಉತ್ತರಗಳು : ೧) ಜೋಡಿಪದ   ೨) ಕಣ್ಣರೆಪ್ಪೆ    ೩) ಯಣ್‌ಸಂಧಿ   ೪) ಜೋಡಿಪದ   
೫) ಅವಧಾರಣಾರ್ಥಕಾವ್ಯಯ  ೬) ಬಹುವಚನ   ೭) ದ್ವಿತೀಯ ವಿಭಕ್ತಿ ]

*********





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ