ನನ್ನ ಪುಟಗಳು

27 ಮೇ 2017

10ನೇ ತರಗತಿ ಗದ್ಯ-7-ವೃಕ್ಷಸಾಕ್ಷಿ(10th-kannada-lesson-7-vruksha-sakshi)

ಗದ್ಯಪಾಠ-೭
                                  ವೃಕ್ಷ ಸಾಕ್ಷಿ             
ವೃಕ್ಷಸಾಕ್ಷಿಗೆ ಸಂಬಂಧಿಸಿದ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

****************************************************

ದುರ್ಗಸಿಂಹನ ದೇಶ, ಕಾಲ, ವ್ಯಕ್ತಿವಿಚಾರ


ಕಾಲ:- ಸು.ಕ್ರಿ.ಶ. ೧೦೩೧
ಸ್ಥಳ:- ಕಿಸುಕಾಡುನಾಡಿನ ಸೈಯಡಿ (ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿರುವ ಸವಡಿ)
ಆಶ್ರಯ:- ಕಲ್ಯಾಣದ ಚಾಲುಕ್ಯ ವಂಶದ ಒಂದನೇ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು.
ಕೃತಿ:- ‘ಕರ್ಣಾಟಕ ಪಂಚತಂತ್ರಂ’ಕೃತಿಯ ಮೂಲ:- ಗುಣಾಢ್ಯನು ಪೈಶಾಚಿಕ ಭಾಷೆಯಲ್ಲಿ ರಚಿಸಿರುವ ಬೃಹತ್ಕಥೆಯನ್ನು ಆಧಾರವಾಗಿಟ್ಟುಕೊಂಡು ವಸುಭಾಗಭಟ್ಟನು ಸಂಸ್ಕೃತದಲ್ಲಿ ‘ಪಂಚತಂತ್ರ’ ಎಂಬ ಕೃತಿಯನ್ನು ರಚಿಸಿದ್ದಾನೆ. ಈ ಸಂಸ್ಕೃತ ಕೃತಿಯನ್ನಾಧರಿಸಿ ‘ಕರ್ಣಾಟಕ ಪಂಚತಂತ್ರಂ’ ಎಂಬ ಕೃತಿಯನ್ನು ರಚಿಸಿರುವುದಾಗಿ ತಾನೇ ಹೇಳಿಕೊಂಡಿದ್ದಾನೆ.

ಕವಿಯ ಬಗ್ಗೆ ಮತ್ತಷ್ಟು ವಿಚಾರ:-
    ದುರ್ಗಸಿಂಹನು ತನ್ನವಿಚಾರವನ್ನು ತನ್ನಕೃತಿಯಲ್ಲಿ ಕನ್ನಡದ ಆದಿ ಕವಿ ಪಂಪನ ಹಾಗೆ ವಿವರವಾಗಿ ನಿವೇದಿಸಿಕೊಂಡಿರುವುದರಿಂದ ಕವಿಚರಿತೆಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಅವನು ತನ್ನ ಊರು ಕರ್ನಾಟಕದ ಸಯ್ಯಡಿಯ ಅಗ್ರಹಾರ (ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿಗೆ ಸೇರಿರುವ ಸವಡಿ) ಎಂದು ಹೇಳಿದ್ದಾನೆ. ‘ಛಂದೋಂಬು ಯನ್ನು ಬರೆದ ನಾಗವರ್ಮನ ಊರು ಅದೇ ಆಗಿದೆ. ಅದು ಕಿಸುಕಾಡುನಾಡಿನಲ್ಲಿದೆ ಎಂದು ಅವನು ಹೇಳಿದ್ದಾನೆ. ಆ ಸಯ್ಯಡಿಯಲ್ಲಿ ತನ್ನ ಚಕ್ರವರ್ತಿಯ ಆಜ್ಞೆಯಂತೆ ಹರಿಹರಭವನಗಳನ್ನು ದುರ್ಗಸಿಂಹನು ಕಟ್ಟಿಸಿದನಂತೆ, ಸಯ್ಯಡಿ ಇಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿದೆ.
         ದುರ್ಗಸಿಂಹನ ಪದ್ಯಗಳು ‘ಸೂಕ್ತಿ ಸುಧಾರ್ಣವ’ ದಲ್ಲಿ ದೊರಕುವುದರಿಂದ ದುರ್ಗಸಿಂಹನು ಕ್ರಿ.ಶ. ೧೧೩೯ ರಿಂದ ಕ್ರಿ.ಶ. ೧೧೪೯ರ ವರೆಗೆ ಆಳಿದ ಚಾಲುಕ್ಯ ಜಗದೇಕಮಲ್ಲನಲ್ಲಿ ಸಂಧಿವಿಗ್ರಹಿಯಾಗಿದ್ದಿರಬೇಕೆಂದೂ ಆದರಿಂದ ಇವನ ಕಾಲವು ಕ್ರಿ.ಶ.ಸು. ೧೧೪೫ ಆಗಿದ್ದಿರಬೇಕೆಂದೂ ಕವಿಚರಿತ್ರೆಯ ಪ್ರಥಮ ಸಂಪುಟದಲ್ಲಿ ಶ್ರೀ ಆರ್. ನರಸಿಂಹಾಚಾರ್ಯರು ನಿರ್ಣಯಿಸಿದ್ದರು. ಈ ಅಭಿಪ್ರಾಯವನ್ನೇ ಶ್ರೀ ಎಸ್. ಜಿ. ನರಸಿಂಹಾಚಾರ್ಯರ ಆವೃತ್ತಿಯ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀ ರಾಜಪುರೋಹಿತರು ಒಂದನೆಯ ಜಗದೇಕಮಲ್ಲ ಜಯಸಿಂಹನ ಆಳ್ವಿಕೆಯ ಕಾಲದಲ್ಲಿ ಎಂದರೆ ಕ್ರಿ.ಶ. ೧೦೩೭-೧೦೪೨ರ ಅವಯಲ್ಲಿ ದುರ್ಗಸಿಂಹನು ತನ್ನ ಕೃತಿಯನ್ನು ರಚಿಸಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ರಂ. ಶ್ರೀ. ಮುಗಳಿಯವರು ಸು.ಕ್ರಿ.ಶ. ೧೦೩೦ ಎನ್ನುತ್ತಾರೆ. ಕರ್ಣಾಟಕ ಕವಿಚರಿತ್ರೆಯ ೧೯೬೧ರ ಪರಿಶೋತ ಮುದ್ರಣದಲ್ಲಿ ದುರ್ಗಸಿಂಹನ ಕಾಲವನ್ನು ಕ್ರಿ.ಶ. ಸು. ೧೦೨೫ ಎಂದು ಹೇಳಿದೆ.
       ಪಂಚತಂತ್ರದ ಆರಾ ಪ್ರತಿಯಲ್ಲಿ ದೊರಕಿದ ಒಂದು ಪದ್ಯ ದುರ್ಗಸಿಂಹನ ಕಾಲ ನಿರ್ಣಯ ಮಾಡಲು ಸಹಕಾರಿಯಾಯಿತು. 
ಪದ್ಯ ಹಿಗಿದೆ :
  ಅತಿ ಸಂಪನ್ನತೆವೆತ್ತ ಸದ್ಗೃಹನಿವಾಸಸ್ಥಾನಮಾದ ಪ್ರಜಾಪತಿ
  ಸಂವತ್ಸರ ಚೆತ್ರಮಾಸಸಿತಪಕ್ಷ ದ್ವಾದಶೀ ತಾರಕಾ ಪತಿವಾರಂ
  ಬರೆ ಪಂಚತಂತ್ರಮೆಸೆದತ್ತೀ ಧಾತ್ರಿಯೂಳ್ ದುರ್ಗನಿರ್ಮಿತಮುದ್ಯತ್
  ಕವಿಶೇಖರ ಪ್ರಮದ ಲೀಲಾಪುಷ್ಥಿತಾಮ್ರದ್ರುಮಂ ||

  ವಸುಭಾಗಭಟ್ಟ ಕೃತಿಯಂ
  ವಸುಧಾದಿಪ ಹಿತಮನಖಿಲ ವಿಬುಧಸ್ತುತಮಂ
  ಪೊಸತಾಗಿರೆ ವಿರಚಿಸುವೆಂ
  ವಸುವ್ಮತಿಯೊಳ್ ಪಂಚತಂತ್ರಮಂ ಕನ್ನಡದಿಂ ||


     ಈ ಪದ್ಯವನ್ನು ಆಧರಿಸಿ ರಾಷ್ಥ್ರಕವಿ ಗೋವಿಂದ ಪೈ ಅವರು ಜಯಸಿಂಹ ಜಗದೇಕಮಲ್ಲನ ಕಾಲ ಕ್ರಿ.ಶ. ೧೦೧೫-೧೦೪೨ ಎಂದು ಅವನಲ್ಲಿಯೇ ದುರ್ಗಸಿಂಹನು ಸಂವಿಗ್ರಹಿಯಾಗಿರಬೇಕೆಂದೂ, ಮೇಲಿನ ಪದ್ಯದಲ್ಲಿ ಹೇಳಿದ ಶಕ ಸಂವತ್ಸರ ೯೫೩ ನೆಯ ಪ್ರಜಾಪತಿ ಸಂವತ್ಸರ ಚೈತ್ರಶುದ್ದ ೧೨ ಸೋಮವಾರವು ಕ್ರಿ.ಶ. ೧೦೩೧ನೆಯ ಮಾರ್ಚ್ ಎಂಟನೆಯ ತಾರೀಕು ಆಗುತ್ತದೆ ಎಂದೂ ನಿರ್ಣಯಿಸಿದ್ದಾರೆ. ಇದನ್ನು ದುರ್ಗಸಿಂಹನ ಕೃತಿ ರಚನೆಯ ಕಾಲ ಎಂದು ಒಪ್ಪಬಹುದು.

ದುರ್ಗಸಿಂಹನು ತನ್ನ ಗ್ರಂಥದ ಆದಿಭಾಗದಲ್ಲಿ ಸುಮಾರು ೬೨ ಪದ್ಯಗಳಲ್ಲಿ ತನ್ನ ವಿಚಾರವನ್ನು ವಿವರವಾಗಿ ತಿಳಿಸಿದ್ದಾನೆ. ಅದು ಹೀಗಿದೆ.

   ಕರ್ಣಾಟಕದ ಕಿಸುಕಾಡಿನಲ್ಲಿ ಸಯ್ಯಡಿಯೆಂಬ ಅಗ್ರಹಾರದಲ್ಲಿ ‘ಸಕಲ ಧರ್ಮಕ್ಕೆಲ್ಲಂ ಕಯ್ಕಾಲ್ ಮೂಡಿದಂತೆ,’ದುರ್ಗಸಿಂಹನೆಂಬ ಬ್ರಾಹ್ಮಣನಿದ್ದನು. ಆತನ ಹೆಂಡತಿ ರೇವಕಬ್ಬೆ. ಇವರ ಮಗ ‘ಮನ್ವಾದಿ ಪುರಾಣ ಮುನಿಗಣ ಪ್ರಣುತ ಶ್ರುತಿವಿಹಿತ ವಿಶುದ್ದಮಾರ್ಗನುಂ ನಿತ್ಯಹೋವ್ಮಧಯನಾನೇಕ ಯಾಗಾವಭೃತಸ್ನಾನ ಪವಿತ್ರಗಾತ್ರನುಂ, ಭಗವನ್ನಾರಯಣ ಚರಣಾಂಬುಜ ಸ್ಮರಣ ಪರಿಣತಾಂತ:ಕರಣನುಂ, ತರ್ಕವ್ಯಾಕರಣ ಕಾವ್ಯ ನಾಟಕ ಭರತ ವಾತ್ಸ್ಯಯನಾದ್ಯಶೇಷ ವಿದ್ಯಾಸಮುದ್ರತರಣಗುಣೈಕಪುಣ್ಯನುಂ ಧರಾಮರಾಗ್ರಗಣ್ಯನುಂ, ಅದ ದುರ್ಗಮಯ್ಯನಿದ್ದನು. ಅವನ ಮಗನಾದ ‘ದೇವದ್ವಿಜ ಗುರುಜನಪದಸೇವಾನಿರತ, ನದ ಈಶ್ವರಾರನಿದ್ದನು. ಅವನ ಹೆಂಡತಿ ರೇವಾಂಬಿಕೆ ಇವರಿಬ್ಬರ ಮಗ ಪ್ರಸ್ತುತ ಕವಿಯಾದ ದುರ್ಗಸಿಂಹ. ಈತನು ಬ್ರಾಹಣ. ಕಮ್ಮೆ ಕುಲದವನು ಗೌತಮ ಗೋತ್ರ ಸಂಭೂತನು. ಇವನ ಗುರು ‘ಮಹಾಯೋಗಿ, ಯಾದ ಶಂಕರಭಟ್ಟ. ‘ಸತ್ಯಾಶ್ರಯ ಕುಲತಿಲಕಂ. ಚೋಳ ಕಾಲಾನಲಂ, ಎಂಬ ಬಿರುದುಗಳುಳ್ಳ ಜಗದೇಕಮಲ್ಲ ಜಯಸಿಂಹ ಎಂಬ ರಾಜನಲ್ಲಿ ಶ್ರೀ ಗಂಡಭೂರಿಶ್ರಯನೆಂಬ ಬಿರುದುಳ್ಳ ಸಿಂಹಸನ್ನಾಹನೆಂಬ ದಂಡನಾಯಕನಿದ್ದನು. ಅವನ ಪಾದಕಮಲಭೃಂಗನಾದ ಚಕ್ರವರ್ತಿಯದಂಡಾದೀಶ, ಕೋದಂಡರಾಮಾಪ ಮೊದಲಾದ ಬಿರುದುಳ್ಳ ಕುಮಾರಸ್ವಾಮಿಯು ಕವಿಗೆ ಜಗದೇಕಮಲ್ಲನಲ್ಲಿ ಸಂವಿಗ್ರಹಿ ಪದವಿಯನ್ನು ಕೊಡಿಸಿದನು. ಇವನು ತನ್ನ ಚಕ್ರವರ್ತಿಯ ಅಜ್ಞೆಯ ಸಯ್ಯಡಿಯಲ್ಲಿ ‘ಹರಿಹರಭವನ, ಗಳನ್ನು ಮಾಡಿಸಿದಂತೆ.

    ಈತನು ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸರನ್ನೂ ‘ನಾಭೇಯಂ ಸುರಾಮಾತ್ಯನಿಂದ್ರನದೀನಂದನನುದ್ದವಂ ಮನುವಿಶಾಲಕ್ಷೇಭದಂತಂ ಕುಬೇರನಜಾತಪ್ರಿಯಪುತ್ರ, ಎಂಬ ನೀತಿಶಾಸ್ತ್ರ ಪ್ರವರ್ತಕರನ್ನೂ, ಚಂದ್ರಗುಪ್ತನಿಗೆ ರಾಜ್ಯವನ್ನು ಸಂಪಾದಿಸಿಕೊಟ್ಟ ನೀತಿವಿದನಾದ ವಿಷ್ಣುಗುಪ್ತನನ್ನೂ, ಗುಣಾಡ್ಯ, ವರರುಚಿ, ಕಾಳಿದಾಸ, ಬಾಣ, ಮಯೂರ, ಧನಂಜಯ, ‘ವಾಮನಕುಮಾರನುದ್ಬಟ ಭೀಮಂಭವಭೂತಿ ಭಾರವೀ ಭಟ್ಟಿ ವಚಶ್ರೀಮಾಘ ರಾಜಶೇಖರ ಕಾಮಂದಕರು, ದಂಡಿ ಮೊದಲಾದ ಸಂಸ್ಕೃತ ಕವಿಗಳನ್ನು ಸ್ಮರಿಸಿರುವನು. ಕನ್ನಡದ ಕವಿಗಳಲ್ಲಿ ಶ್ರೀವಿಜಯ, ಕನ್ನಮಯ್ಯ, ಅಸಗ, ಮನಸಿಜ, ಚಂದ್ರ, ಪಂಪ, ಗಜಾಂಕುಶ, ಕವಿತಾವಿಲಾಸರನ್ನು ಸ್ಮರಿಸಿದ್ದಾನೆ. ತನ್ನ ಗ್ರಂಥವನ್ನು‘ ಕವಿ ಗಮಕಿ ವಾದಿ ವಾಗ್ಮಿಪ್ರವರ,ನಾದ ಶ್ರೀಮಾದಿರಾಜ ಮುನಿಪುಂಗವನ್ನು ತಿದ್ದಿದನೆಂದು ಹೇಳಿದ್ದಾನೆ.

     ದುರ್ಗಸಿಂಹನು ತನ್ನ ಗುಣಾವಳಿಗಳನ್ನು ಹೀಗೆ ಹೇಳಿಕೊಂಡಿದ್ದಾನೆ: ನಿರ್ದುಷ್ಟವಾದ ನಡತೆಗೆ ಉದಾಹರಣನು, ಪ್ರಕಾಶಮಾನವಾದ ಕೀರ್ತಿಗೆ ಆಧಾರ, ಸ್ವಾಮಿ ಕಾರ‍್ಯಕ್ಕೆ ಹನುಮಂತ, ತನ್ನ ವಂಶಕ್ಕೆ ಅಲಂಕಾರರತ್ನ, ಸೆನ್ಯ ಸಮುದ್ರವನ್ನು ದಾಟುವುದರಲ್ಲಿ ಶೋಭಾಯಮಾನ, ಸಿದ್ದ ಇಷ್ಟ ಶಿಷ್ಟರ ಸಮೂಹಕ್ಕೆ ದೋಣಿ ಎಂದು ದುರ್ಗಸಿಂಹನನ್ನು ವಿದ್ವಜ್ಜನರು ಹೊಗಳುವರು. ವಿನಯಕ್ಕೆ ಆಶ್ರಯನು ಉತ್ತಮನೂ ಸತ್ಕುಲಸಂಭವನ ಸ್ವಾಮಿಕಾರ‍್ಯಧುರೀಣನೂ ಮನುಧರ್ಮದ ಮಾರ್ಗದಲ್ಲಿರುವವನೂ ಎಂದು ದುರ್ಗಸಿಂಹ ಪ್ರಸಿದ್ದನಲ್ಲವೇ, ಜ್ಞಾನಕ್ಕೆ ಆಶ್ರಯಸ್ಥಾನ, ಒಳ್ಳೆಯ ಗುಣಕ್ಕೆ ಕಣಿ, ಶ್ಮಚಿಗೆ ಆಧಾರ, ಜಾಣತನಕ್ಕೆ ದಿಣ್ಣೆ, ಒಳ್ಳೆಯ ಮಾತಿಗೆ ಒಡೆಯ, ಪರಾಕ್ರಮಕ್ಕೆ ಆಶ್ರಯ, ಸಾಮರ್ಥ್ಯಕ್ಕೆ ಆಟದ ಮನೆ, ಧರ್ಮಕ್ಕೆ, ಗುರಿ, ವಿನಯಕ್ಕೆ ತವರು ಮನೆ, ಸತ್ಯಕ್ಕೆ ಆಶ್ರಯಸ್ಥಾನ ಎಂದು ಬುದ್ದಿಗೆ ಮೀರಿ ಪ್ರೀತಿಸಿ ದುರ್ಗಸಿಂಹನನ್ನು ಪ್ರಪಂಚವು ಹೊಗಳುವುದು. ಚಂಚಲಚಿತ್ತರನ್ನು ದುಷ್ಟರನ್ನು, ಪಡೆದ ದೋಷಕ್ಕೆ ಪ್ರಾಯಶ್ಚಿತ್ತವೆಂಬ ಸರ್ವವಿದ್ವಜ್ಜನಆಶ್ರಯನಾದ ದುರ್ಗಸಿಂಹನನ್ನು ವಿ ಪಡೆದನು ವಿನಯ ಸಮುದ್ರ, ಶಿಷ್ಟಕಲ್ಪವೃಕ್ಷ, ಸತ್ಯವ್ರತ, ಬ್ರಾಹ್ಮಣವಂಶವೆಂಬ ಆಕಾಶಕ್ಕೆ ಸೂರ‍್ಯ, ವಾಗ್ವನಿತೆಯ ಮನೋರಮ, ಎಂದೆಷ್ಟೋ ರೀತಿಯಲ್ಲಿ ತನ್ನ ವಂಶದ ಕೀರ್ತಿಯೆಂಬ ದುರ್ಗಸಿಂಹನನ್ನು ಪ್ರಪಂಚ ಬಣ್ಣಿಸುವುದಂತೆ. ಜಗತ್ತಿನಲ್ಲಿ ಸ್ವಾಮಿಹಿತದಲ್ಲಿ ಪ್ರಸಿದ್ದನಾದ ಕರ್ಣನಿಗಿಂತ, ಹನುಮಂತನಿಗಿಂತ ಗರುಡನಿಗಿಂತ ದುರ್ಗಸಿಂಹನು ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐದುಮಡಿ ದೊಡ್ಡವನಂತೆ !
      ಪರಮಾತ್ಮನು ಪರಮೇಶ್ವರ, ವಿಷ್ಣುವು ದೆವ, ಮಹಾಯೋಗಿಗಳಾದ ಶಂಕರಭಟ್ಟರು ಗುರುಗಳು, ಚೆನ್ನಾಗಿ ಘೋಷಿಸಿದವನು ಶ್ರೀ ಚೋಳಕಾಳಾನಲ ಎಂಬ ಬಿರುದುಳ್ಳ ರಾಜಶ್ರೇಷ್ಟನೂ, ಚಕ್ರವರ್ತಿತಿಲಕನ್ನೂ ಚೆನ್ನಾಗಿ ಸೊಕ್ಕಿದ ವೆರಿಗಳೆಂಬ ಆನೆಗಳಿಗೆ ಸಿಂಹಸ್ವರೂಪನೂ ಅದ ಜಗದೇಕಮಲ್ಲ ಜಯಸಿಂಹನು ಒಡೆಯನು ಎಂದ ಮೇಲೆ ದುರ್ಗಸಿಂಹನ ದೊಡ್ಡತನವನ್ನು ಏನೆಂದು ವರ್ಣಿಸಲಿ !

ಭೇದ ಪ್ರಕರಣಂ – ೨೫. ದುಷ್ಟಬುದ್ದಿಯುಂ ಧರ್ಮಬುದ್ದಿಯುಂ
    ನ್ಯಗ್ಭೂತಸುರಪುರಂ ಸುವ
    ಣಿಗ್ಭಾಸಿ ಸಮಸ್ತವಸ್ತು ಪರಿಪ್ರರ್ಣಂ ಸ
    ಮೃಗ್ಭವನರುಚಿರಮುತ್ತರ
    ದಿಗ್ಭಾಗದೊಳುಂಟು ಮಧುರೆಯೆಂಬುದು ನಗರಂ ||೨೩೨
||

        ಅಂತಾ ನಗರದೊಳಗೆ ಧರ್ಮಬುದ್ದಿಯುಂ ದುಷ್ಟಬುದ್ದಿಯುಮೆಂಬರಿರ್ವರ್ ವಣಿಕ್ಪುತ್ರರ್ ಪುದುವಿನೊಳ್ ಪರದುವೋಗಿ ಪಿರಿದಪ್ಪ ಪೊನ್ನ ಪಡೆದು ಮಗುೞ್ದು ಬಂದು ನಿಜಜನ್ಮಭೂಮಿಯಪ್ಪ ಮಧುರಾಪುರದ ಬಹಿರುದ್ಯಾನವನದೊಳಗೆ ಬೀಡಂ ಬಿಟ್ಟರ್ದರಾತ್ತಿಯೊಳ್ ಧರ್ಮಬುದ್ಧಿ ದುರ್ಬುದ್ಧಿಯಪ್ಪದುಷ್ಟಬುದ್ಧಿಯಂ ಕರೆದು ಪೊನ್ನಂ ಪಚ್ಚುಕೊಳ್ವಮೆನೆ ದುಷ್ಟಬುದ್ಧಿ ಪಾಪಬುದ್ಧಿಯಾಗಲ್ಬಗೆದಿಂತೆಂದಂ: ನಾವೀ ಪೊನ್ನಂ ಪಚ್ಚುಕೊಂಡು ಮನೆಯೊಳ್ ಸ್ವೇಚ್ಚೆಯಿಂದಿರ್ಪ ವರಲ್ಲಂ ಮತ್ತಂ ಪರದುವೋಗಲ್ವೇೞ್ಕುಮದುಕಾರಣದಿಂ ನಿನಗಮೆನಗಂ ಬೀಯಕ್ಕೆ ತಕ್ಕನಿತ್ತು ಪೊನ್ನಂ ಕೊಂಡು ಮಿಕ್ಕ ಪೊನ್ನನೆಲ್ಲಮನಿಲ್ಲಿಯೆ ಮಡಂಗುವಮೆನೆ, ಧರ್ಮಬುದ್ದಿಯಾ ಪಾಪಕರ್ಮನಂ ತನ್ನ ಮನದನ್ನನೆಂದೆ ಬಗೆದುಮದರ್ಕೊಡಂಬಟ್ಟೊಂದು ಮಹವಟವಿಟಪಿಯ ಕೆಲದೊಳ್ ಪೊನ್ನಂ ಪೊಳ್ದು ಮಱುದಿವಸಮಿರ್ವರುಂ ಪೊೞಲಂ ಪೊಕ್ಕು ಇಷ್ಟವಿಷಯ ಕಾಮಬೋಗ ಸುಖಂಗಳನನುಭವಿಸುತಿರ್ದು ದುಷ್ಟಬುದ್ಧಿ ಧರ್ಮಬುದ್ಧಿಯುಂ ವಂಚಿಸಿ ಪೋಗಿ ಪೊನ್ನನೆಲ್ಲಮಂ ಕೊಂಡು ಕುೞ*ಯಂ ಮುನ್ನಿನಂತೆ ಪೊಳ್ದು ಕೆಲವಾನುಂ ದಿವಸಕ್ಕೆ ತಾನೆ ಧರ್ಮಬುದ್ಧಿಚಿiಲ್ಲಿಗೆ ವಂದು ಬೀಯಕ್ಕೆ ಪೊನ್ನಿಲ್ಲವಿನ್ನುಂ ಕಿಱೆದು ಪೊನ್ನಂ ತೆಗುದುಕೊಳ್ವಂ ಬನ್ನಿಮೆಂದೊಡಂಗೊಂಡು ಪೋಗಿ ಪೂೞ್ದೆಡೆಯೊಳ್ ಪೊನ್ನಂ ಕಾಣದೆ ಇನ್ನಸಿರದಿರ್ದೊಡೆ ಅನೃತಂ ತನ್ನ ಮೇಲೆ ವರ್ಪುದೆಂದು
ಪೊನ್ನನೆಲ್ಲಮಂ ನೀನೆ ಕೊಂಡೆಯೆಂಬುದುಂ
ಅತಿಕುಟಿಲಮನಂ ಧನಲು
ಬ್ಧತೆಯಿಂದಂ ದುಷ್ಟಬುದ್ಧಿ ನುಡಿದಂ ಪುಸಿಯಂ
ಮತಿಗೆಟ್ಟು ‘ತಸ್ಕರಸ್ಯಾ
ನೃತಂ ಬಲಂ’ ಎನಿಪ ವಾಕ್ಯವಂ ನೆನೆಯುತ್ತುಂ ||೨೩೩||

          ಅಂತು ದುಷ್ಟಬುದ್ಧಿ ಮುನ್ನಮೆ ಹಾ ! ಹಾ ! ಕೆಟ್ಟನೆಂದು ಬಾಯಂ ಬಸಿಱಂ ಪೊಯ್ದುಕೊಂಡು ಪುಯ್ಲಿಟ್ಟು ಧರ್ಮಬುದ್ಧಿಯ ಮೇಲೆ ಕಳವನಿಟ್ಟು ಕಾಪೞಿದು ನುಡಿಯೆ ತತ್ಕೂರ್ಮೆಗಿಡಲ್ನುಡಿದು ನೀಂ ಗೆಲೆ ಬಾಯಾರ್ದು ಪೋಗಲ್ಪಡೆಯ ವಿಚಾರಂಗೆಯ್ವಮೆಂದು ಧಮಾದಿಕರಣರಲ್ಲಿಗೆ ಬಂದಿರ್ವರುಂ ತತ್ಪ್ರಪಂಚಮೆಲ್ಲಮಂ ಸವಿಸ್ತರಂ ನುಡಿದು ಕಡೆಯೊಳ್ ದುಷ್ಟಬುದ್ಧಿಯಿಂತೆದಂ: ಪೊನ್ನೆಲ್ಲಮನೀತನೆ ಕಳೆದುಕೊಂಡದರ್ಕೆ ಸಾಕ್ಷಿಯುಂಟೆನೆ ಸಭಾಸದರ್ ಸಾಕ್ಷಿಯಂ ಪೇೞೆನೆ ಪೊನ್ನಂ ಮಡಗುವಾಗಳೀತನುಮಾನುಮಲ್ಲದೆ ಮನುಷ್ಯರ್ ಪೆಱರಿಲ್ಲ ತತ್ಸನ್ನಿಧಾನಸ್ಥಿತಮಪ್ಪ ವಟವೃಕ್ಷಮೇ ಸಾಕ್ಷಿಯೆಂಬುದುಂ ಧರ್ಮಾಕರಣರ್ ವಿಸ್ಮಯಂಬಟ್ಟು ಈತನ ಮಾತು ಅಶ್ರುತಪೂರ್ವಮೀ ಚೋದ್ಯಮಂ ನೋಡುವಮೆಂದು ಧರ್ಮಬುದ್ಧಿಯಂ ಕರೆದು ನೀನೀ ಸಾಕ್ಷಿಯಂ ಕೈಕೊಳ್ವದೆಂದೊಡಾತಂ ವೃಕ್ಷಂ ಸಾಕ್ಷಿಯೆಂದು ಮುನ್ನಂ ಪೇೞ್ದರುಂ ಕೇಳ್ದರುಮಿಲ್ಲಮದಲ್ಲದೆಯುಂ,
ಶ್ಲೋ || ಗೃಹಿಣಃ ಪುತ್ರಿಣೋ ಮೂಲಾಃ ಕ್ಷತ್ರವಿಟ್ಛೂದ್ರಯೋನಯಃ
ಇತ್ಯುಕ್ತಾಸ್ಸಾಕ್ಷ್ಯ ಮರ್ಹಂತಿ ನಯಕೋವಿದಮಾಪದಿ ||೧೨೨||
 
ಟೀ|| ಗೃಹಸ್ಥರಪ್ಪ ಪುತ್ರರುಗಳುಳ್ಳ ಕ್ಷತ್ರಿಯವೈಶ್ಯಶೂದ್ರರುಗಳು ಆಪತ್ತಿನಲ್ಲಿ ನೀತಿವಿದರನೆ ಸಾಕ್ಷಿಯೆಂದು ಕೈಕೊಳ್ವರ್ ಎಂದೆ ಶ್ಲೋಕಂಗಳೊಳಂ ಆವಾವ ವಿಷಯದೊಳಂ ಪ್ರಾಪ್ತಮನುಷ್ಯರೆ ಸಾಕ್ಷಿಯಪ್ಪರೆಂದು ಪೇೞ್ದರಲ್ಲದೆ ವೃಕ್ಷಂ ಸಾಕ್ಷಿಯೆಂದು ಪೇೞ್ದರಿಲ್ಲ; ಎಂತು ಕೈಕೊಳ್ವೆನೆನೆ ಧರ್ಮಾಕರಣದವರಿಂತೆಂದರ್:

ಶ್ಲೋ|| ಅದಿತ್ಯಚಂದ್ರಾವನಿಲೋನಲಶ್ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ
ಅಹಶ್ಚ ರಾತ್ರಿಶ್ಚ ಉಭೆ ಚ ಸಂಧ್ಯೇ ಧರ್ಮಸ್ಯ ಜಾನಾತಿ ನರಸ್ಯ ವೃತ್ತಂ ||೧೨೩||

      ಟೀ|| ಸೂರ‍್ಯಚಂದ್ರಮರುಗಳು ವಾಯು ಅಗ್ನಿ ಆಕಾಶ ಭೂಮಿ ಉದಕ ಹೃದಯ ಯಮನು ಹಗಲಿರುಳು ಉದಯ ಬಯ್ಗುಗಳು ಧರ್ಮವು ಎಂಬಿವು ಮನುಷ್ಯರ ನಡೆವಳಿಯ ನಡೆವುವು. ಎಂಬುದು ವಾಕ್ಯಮುಂಟು. ಮನುಷ್ಯರ ಸುಕೃತದುಷ್ಕೃತಂಗಳಂ ದೈವಗಳಱಿಗುಮದಱಿಂದೀ ಸಾಕ್ಷಿಯುಮುಚಿತಂ. ಮನುಷ್ಯಂ ಮೊದಲಾಗಿ ನುಡಿವುದರಿಂದೆಂದೊಡೆ ಮರನಂ ನುಡಿಸುವುದು ಪರಮಗಹನಮೀ ಸಾಕ್ಷಿಯಂ ಕೈಕೊಳ್ವುದೆನೆ ಧರ್ಮಬುದ್ಧಿ ಕರಮೊಳ್ಳಿತ್ತು ಕೈಕೊಂಡೆನೆನೆ ಧರ್ಮಾಕರಣದವರಂದು ಪೋೞ್ತು ಪೋದುದು ನಾಳೆ ಪೋಗಿ ಕೇಳ್ವಮೆನೆ ತಮ್ಮ ತಮ್ಮ ಮನೆಗೆಲ್ಲರುಂ ಪೋದರ್ ಅನ್ನೆಗಂ ದುಷ್ಟಬುದ್ಧಿಯುಂ ತನ್ನ ಮನೆಗೆ ಬಂದು ತಮ್ಮಯ್ಯನ ಕಯ್ಯಂ ಪಿಡಿದುಕಟ್ಟೆಕಾಂತಕ್ಕುಯ್ದು ತದ್ವೃತ್ತಾಂತಮೆಲ್ಲಮಂ ತಿಳಿಯೆ ಪೇೞ್ದು ನಿಮ್ಮೊಂದು ವಚನಮಾತ್ರದಿಂ ನಮ್ಮ ಪರಿಗ್ರಹಮೆಲ್ಲಂ ಪಲವುಕಾಲಂ ಪಸಿಯದುಂಡು ಬಾೞ್ವಂತರ್ಥಂ ಸಾರ್ದಪುದು ನೀವಾ ಮರದ ಪೊೞಲೊಳಡಂಗಿರ್ದು ಧರ್ಮಬುದ್ಧಿಯೆ ಪೊನ್ನಂ ಕೊಂಡುಯ್ದನೆಂದು ನುಡಿಯಿಮೆಂಬುದು ಮಾತನಿಂತೆಂದಂ:
ಧರಣೀವಳಯಂ ಚಿಃ ಎನೆ
ಪರಧನಮಂ ಕಪಟವೃತ್ತಿಯಿಂ ವಂಚಿಸಿಕೊಂ
ಡುರುರಾಜ್ಯಶ್ರೀಸಹಿತಂ
ನಿರುತದೊಳಂದಿೞಿದ ಕೌರವಂ ರೌರವಮಂ ||೨೩೪||


      ಅಚಿತದಱಿಂ ಪರಧನಹರಣಮುಂ ಪರಸ್ತ್ರೀಗಮನಮುಂ ವಿಶ್ವಾಸಘಾತುಕಮುಂ ಸ್ವಾಮಿದ್ರೋಹಮುಂ ಇವೆಲ್ಲಮೇಗೆಯ್ದು ಕಿಡಿಸಿಗುಮಿಂತಪ್ಪುದೆಲ್ಲಮಂ ನೀನಱಿದಿರ್ದೆನ್ನುಮಂ ಸಾಕ್ಷಿ ಮಾಡಿ ನುಡಿಸಿ ಕಿಡಿಸಲ್ಬಗೆದೆ ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ. ಅದಲ್ಲದೆಯುಂ ನಿನ್ನ ಕಂಡೀಯುಪಾಯಕ್ಕಪಾಯಂ ಬಹುಳಮದೆಂತೆನೆ:

ಶ್ಲೋ|| ಶ್ರೂಯತೇ ಹಿ ಸಮುದ್ರಾಂತೇ ನ ಕುಲೈರ್ಭಕ್ಷಿತೋ ಬಕಃ

ಎಂಬ ಕಥೆಯಂ ಕೇಳ್ವಱಿವುದಿಲ್ಲಕ್ಕುಮೆನೆ ದುಷ್ಟಬುದ್ಧಿಯದೆಂತೆನೆ ಪ್ರೇಮಮತಿ ಪೇಳ್ಗುಂ:

ಹೊಸಗನ್ನಡ ಸಾರಾಂಶ:  
           ೨೩೨: ಅಮರಾವತಿಯನ್ನು ಕೀಳುಮಾಡಿದ ಒಳ್ಳೆಯ ವ್ಯಾಪಾರಿಗಳಿಂದ ಶೋಭಿಸುವ ಸಮಸ್ತ ವಸ್ತು ಪರಿಪೂರ್ಣವಾದ ಒಳ್ಳೆಯ ಭವನಗಳಿಂದ ಅಲಂಕೃತವಾದ ಮಧುರೆಯೆಂಬ ನಗರವು ಉತ್ತರ ದಿಕ್ಕಿನಲ್ಲಿದೆ.
         ವ|| ಆ ನಗರದಲ್ಲಿ ದರ್ಮಬುದ್ಧಿಯೂ ದುಷ್ಟಬುದ್ಧಿಯೂ ಎಂಬ ಇಬ್ಬರು ವ್ಯಾಪಾರಿಗಳು ಒಟ್ಟಿಗೆ ವ್ಯಾಪಾರಕ್ಕಾಗಿ ಹೋಗಿ ಬಹಳ ಹೊನ್ನನ್ನು ಪಡೆದು ಹಿಂದುರುಗಿ ಬಂದು ಜನ್ಮಭೂಮಿಯಾದ ಮಧುರಾಪುರದ ಬಹಿರುದ್ಯಾನದಲ್ಲಿ ಬೀಡುಬಿಟ್ಟರು. ಅರ್ಧ ರಾತ್ರಿಯ ಸಮಯ ಧರ್ಮಬುದ್ಧಿಯು ದುರ್ಬುದ್ಧಿಯಾದ ದುಷ್ಟಬುದ್ಧಿಯನ್ನು ಕರೆದು ಹೊನ್ನನ್ನು ಪಾಲು ಮಾಡಿಕೊಳ್ಳೊಣ ಎನ್ನಲು ದುಷ್ಟಬುದ್ಧಿ ಪಾಪಬುದ್ಧಿಯನ್ನು ಬಗೆದು ಹೀಗೆಂದನು: ನಾವು ಈ ಹೊನ್ನನ್ನು ಪಾಲು ಮಾಡಿಕೊಂಡು ಮನೆಯಲ್ಲಿ ಸ್ವೇಚ್ಚೆಯಿಂದ ಇರುವುದು ಸಾಧ್ಯವಿಲ್ಲ ಮರಳಿ ವ್ಯಾಪಾರಕ್ಕೆ ಹೋಗಬೇಕು ಅದರಿಂದ ನಿನಗೂ ನನಗೂ ವ್ಯಯಕ್ಕೆ ಬೇಕಾದಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನೂ ಇಲ್ಲಿಯೇ ಇಟ್ಟು ಹೋಗೋಣ ಎಂದನು ಅದಕ್ಕೆ ಧರ್ಮಬುದ್ಧಿಯೂ ಆ ಪಾಪಕರ್ಮನನ್ನು ತನ್ನಂಥವನೇ ಎಂದು ಬಗೆದು ಅದಕ್ಕೆ ಒಡಂಬಟ್ಟು ಒಂದು ದೊಡ್ಡ ಅಲದ ಮರದ ಬಳಿಯಲ್ಲಿ ಹೊನ್ನನ್ನು ಹೂಳಿ ಮರುದಿನ ಇಬ್ಬರೂ ನಗರಕ್ಕೆ ಹೋಗಿ ಇಷ್ಟ ವಿಷಯ ಕಾಮಭೋಗಗಳನ್ನೂ ಅನುಭವಿಸುತ್ತಿದ್ದರು. ದುಷ್ಟಬುದ್ಧಿಯು ಧರ್ಮಬುದ್ಧಿಯನ್ನು ವಂಚಿಸಿ ಹೋಗಿ ಹೊನ್ನನ್ನೆಲ್ಲ ಕೊಂಡು ಹೊಂಡವನ್ನು ಮೊದಲಿನಂತೆ ಮುಚ್ಚಿದನು. ಸ್ವಲ್ಪ ದಿನಗಳ ಮೇಲೆ ತಾನೇ ಧರ್ಮಬುದ್ಧಿಯಲ್ಲಿಗೆ ಬಂದು ವ್ಯಯಕ್ಕೆ ಇನ್ನು ಹೊನ್ನಿಲ್ಲ: ಮತ್ತಷ್ಟು ಸ್ವಲ್ಪ ಹೊನ್ನನ್ನು ತೆಗೆದುಕೊಂಡು ಬರೋಣ ಎಂದು ಒಟ್ಟಿಗೆ ಹೋಗಿ ಹೂಳಿದ ಸ್ಥಳವನ್ನು ಅಗೆಯಲು ಹೊನ್ನನ್ನು ಕಾಣದೆ ಉಸಿರದೆ ಇರಲು ಸುಳ್ಳು ತನ್ನ ಮೇಲೆ ಬರುವುದೆಂದು ಹೊನ್ನನ್ನೆಲ್ಲ ನೀನೆ ತೆಗೆದಿರಬೇಕು ಎಂದನು.
          ೨೩೩. ಅತಿಕುಟಿಲ ಮನಸ್ಸಿನ ದುಷ್ಟಬುದ್ಧಿ ಮತಿಗೆಟ್ಟು ಧನಲೋಭದಿಂದ ‘ತಸ್ಕರಸ್ಯಾನೃತಂ ಬಲಂ’ ಎಂಬ ವಾಕ್ಯವನ್ನು ನೆನೆದು ಸುಳ್ಳನ್ನು ಅಡಿದನು.
         ವ|| ಹಾಗೆ ದುಷ್ಟಬುದ್ಧಿಯು ಮೊದಲೆ ಹಾ ! ಹಾ ! ಕೆಟ್ಟೆನೆಂದು ಬಾಯಿಯನ್ನೂ ಹೊಟೆಯನ್ನೂ ಹೊಡೆದುಕೊಳ್ಳುತ್ತಾ ಕೂಗಾಡಿ ಧರ್ಮಬುದ್ಧಿಯ ಮೇಲೆ ಕಳವನ್ನು ಅರೋಪಿಸಿದನು. ಧರ್ಮಬುದ್ಧಿಯು ವಿಚಾರಮಾಡೋಣವೆಂದು ಧರ್ಮಾಧಿಕರಣರಲ್ಲಿಗೆ ಬಂದು ಇಬ್ಬರೂ ಆ ವಿಚಾರವನ್ನೆಲ್ಲ ಸವಿಸ್ತಾರವಾಗಿ ನುಡಿದು ಕಟ್ಟಕಡೆಗೆ ದುಷ್ಟಬುದ್ಧಿಯು ಹೀಗೆಂದನು: ಹೊನ್ನೆಲ್ಲವನ್ನೂ ಈತನೇ ಕದ್ದಿರುವನು ಎಂಬುದಕ್ಕೆ ಸಾಕ್ಷಿಯಿದೆ ಎನ್ನಲು ಸಭಾಸದರು ಸಾಕಿ ಯನ್ನು ಹೇಳು ಎಂದರು. ಹೊನ್ನನ್ನು ಇಡುವಾಗ ಈತನೂ ನಾನೂ ಅಲ್ಲದೆ ಮನುಷ್ಯರು ಬೇರೆ ಯಾರೂ ಇರಲಿಲ್ಲ. ಅಲ್ಲಿದ್ದ ವಟವೃಕ್ಷವೇ ಸಾಕ್ಷಿ ಎಂದು ಹೇಳಿದನು. ಧರ್ಮಾಕರಣರು ವಿಸ್ಮಯಪಟ್ಟು ಈತನ ಮಾತು ಹಿಂದೆಂದೂ ಕೇಳದ ವಿಚಾರ. ಈ ಆಶ್ಚರ್ಯವನ್ನು ನೋಡೋಣ ಎಂದು ಧರ್ಮಬುದ್ಧಿಯನ್ನು ಕರೆದು ನೀನು ಈ ಸಾಕ್ಷಿಯನ್ನು ಒಪ್ಪಿಕೊಳ್ಳುವುದು ಎನ್ನಲು ಅತನು ವೃಕ್ಷಸಾಕ್ಷಿಯನ್ನು ಈ ಹಿಂದೆ ಹೇಳಿದವರೂ ಕೇಳಿದವರೂ ಇಲ್ಲ ಅಲ್ಲದೆ
        ಶ್ಲೋ|| ಗೃಹಸ್ಥರೂ ಮಕ್ಕಳೊಂದಿಗರೂ ಅದ ಕ್ಷತ್ರಿಯ ವೈಶ್ಯ ಶೂದ್ರರು ಆಪತ್ತಿನಲ್ಲಿ ನೀತಿವಿದರನ್ನೆ ಸಾಕ್ಷಿಯೆಂದು ಕೈಕೊಳ್ಳುವರು. ಪ್ರಾಪ್ತ ಮನುಷ್ಯರೇ ಸಾಕ್ಷಿಯಾಗುವರು ಎಂದು ಹೇಳಿದರಲ್ಲದೆ ವೃಕ್ಷಸಾಕ್ಷಿಯೆಂದು ಹೇಳಿದವರಿಲ್ಲ, ಹೇಗೆ ಒಪ್ಪಿಕೊಳ್ಳಲಿ ? ಎಂದನು ಅದಕ್ಕೆ ಧರ್ಮಾಕರಣರು ಹೀಗೆಂದರು:
           ಶ್ಲೋ|| ಸೂರ‍್ಯ, ಚಂದ್ರ ವಾಯು, ಅಗ್ನಿ, ಆಕಾಶ, ಭೂಮಿ, ಉದಕ, ಹೃದಯ, ಯಮ, ಹಗಲಿರುಳು ಉದಯ, ಅಸ್ತಮಾನ, ಧರ್ಮ ಎಂಬಿವು ಮನುಷ್ಯನ ನಡೆವಳಿಕೆಯನ್ನು ಅರಿಯುವುವು.
          ವ|| ಮನುಷ್ಯರ ಸುಕೃತ ದುಷ್ಕೃತಗಳನ್ನು ದೈವಗಳು ತಿಳಿಯುವುವು. ಅದರಿಂದ ಈ ಸಾಕ್ಷಿಯೂ ಉಚಿತವಾದುದು. ಸಾಕ್ಷಿಯ ವಿಚಾರದಲ್ಲಿ ಮನುಷ್ಯನೇ ನುಡಿಯುವುದು ಅಸಾಧ್ಯವೆಂದ ಮೇಲೆ ಮರವನ್ನು ಮಾತನಾಡಿಸುವುದು ಪರಮಗಹನವಾದ ವಿಚಾರ. ಈ ಸಾಕ್ಷಿಯನ್ನು ಅಂಗೀಕರಿಸುವುದು ಎಂದರು ಅದಕ್ಕೆ ಧರ್ಮಬುದ್ಧಿಯು ಒಳ್ಳೆಯದು ಹಾಗೆಯೇ ಆಗಲಿ ಎಂದನು. ಧರ್ಮಾಧಿಕರಣರು ಇಂದು ಹೊತ್ತು ಹೋಯಿತು. ನಾಳೆ ಹೋಗಿ ಕೇಳೋಣ ಎನ್ನಲು ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು. ಅಷ್ಟರಲ್ಲಿ ದುಷ್ಟಬುದ್ಧಿಯು ತನ್ನ ಮನೆಗೆ ಬಂದು ತನ್ನ ತಂದೆಯ ಕೈಯನ್ನು ಹಿಡಿದು ಏಕಾಂತಕ್ಕೆ ಕರೆದು ಆ ವೃತ್ತಾಂತವೆಲ್ಲವನ್ನೂ ತಿಳಿಸಿ ನಿಮ್ಮ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲ ದೂರವಾಗಿ ಹಲವು ಕಾಲದವರೆಗೆ ಹಸಿಯದೆ ಉಂಡು ಬಾಳುವಷ್ಟು ಹಣ ಬರುವುದು ನೀವು ಆ ಮರದ ಪೋಟರೆಯಲ್ಲಿ ಅಡಗಿದ್ದು ಧರ್ಮಬುದ್ಧಿಯೇ ಹಣವನ್ನು ಕೊಂಡುಹೋದನೆಂದು ಹೇಳಿರಿ ಎನ್ನಲು ಅವನು ಹೀಗೆಂದನು:
           ೨೩೪: ಸಮಸ್ತ ಪ್ರಪಂಚವೂ ಛೀಮಾರಿ ಹಾಕಲು ಪರಧನವನ್ನು ಕಪಟವೃತ್ತಿಯಿಂದ ವಂಚಿಸಿ ಪಡೆದು ಅಂದು ಕೌರವನು ರಾಜ್ಯಶ್ರೀಸಹಿತ ರೌರವವನ್ನು ಅನುಭವಿಸಿದನಲ್ಲವೇ?
        ವ || ಅದರಿಂದ ಪರಧನಹರಣವೂ ಪರಸ್ತ್ರೀಗಮನವೂ ವಿಶ್ವಾಸಘಾತುಕವೂ ಸ್ವಾಮಿದ್ರೋಹವು ಇವೆಲ್ಲ ಏನು ಮಾಡಿದರೂ ಕೆಡುಕನ್ನು ಉಂಟುಮಾಡುವುವು. ಇವೆಲ್ಲವನ್ನೂ ನೀನು ತಿಳಿದಿದ್ದೂ ನನ್ನನ್ನು ಸಾಕ್ಷಿ ಮಾಡಿ ನುಡಿಸಿ ಕೆಡಿಸಲು ಯೋಚಿಸಿದೆ. ನಿನ್ನ ಕ್ಷುಲ್ಲಕ ಯೋಚನೆಯು ನಮ್ಮ ಕುಲವನ್ನೆ ನಾಶ ಮಾಡುವ ರೀತಿಯದು. ಅಲ್ಲದೆ ನಿನ್ನ ಈ ಬಗೆಯ ಉಪಾಯಕ್ಕೆ ಅಪಾಯ ಬಹಳವಿದೆ. ‘ಶ್ರೂಯತೇ ಹಿ ಸಮುದ್ರಾಂತೇ ನಕುಲೈರ್ಭಕ್ಷಿತೋ ಬಕಃ’ ಎಂಬ ಕಥೆಯನ್ನು ನೀನು ಕೇಳಿರಲಿಕ್ಕಿಲ್ಲ ಎನ್ನಲು ದುಷ್ಟಬುದ್ಧಿಯು ಅದೇನು ಎಂದು ಕೇಳಲು ಪ್ರೇಮಮತಿ ಹೇಳುವನು:
        
ಭೇದ ಪ್ರಕರಣಂ ೨೬. ಬಕನ ತತ್ತಿಯುಂ ಮುಂಗುರಿಗಳುಂ
ಸಮುದ್ರ ತೀರದೊಳೊಂದು ಮರದೊಳ್ ಬಕಮಿಥುನಮಿರ್ಕುಂ ಅವಱ ತತ್ತಿಗಳನಾ ಮರದ ಕೆಲದ ಪುತ್ತಿನೊಳಿರ್ಪುದೊಂದು ಸರ್ಪಂ ಪರಿತಂದು ಮರನನಡರ್ದು ತಿನುತಿರೆ ಬಕಂ ಕಲುಷಿತಚಿತ್ತನಾಗಿಯೇಗೆಯ್ಯಲುಮಱೆಯದೊಂದು ದಿವಸಂ ಸಮುದ್ರತೀರದೊಳ್ ನಿಂದು ಜಾನಿ ಸುತಿರ್ಪುದನೊಂದು ಕರ್ಕಟಕಂ ಕಂಡೇಂ ಭಾವಾ ! ನೀನಂದಾಹಾರಚಿಂತೆಯ ಮಾಣ್ದು ವೇಹಾರಂ ಗೆಯ್ವರಂತೆ ಕಣ್ಣಂ ತಿಣ್ಣಂ ಮುಚ್ಚಿಕೊಂಡಿರ್ಪ ಕಾರಣಮಾವುದೆನೆ ಬಕನಿಂತೆಂದುದು : ಎನಗೆ ಮನದ ಮಱುಕಂ ಪಿರಿದುಮಹಾರಕ್ಕೆಂತು ಚಿಂತೆಗೆಯ್ವೆನೆನೆ ಕರ್ಕಟಕದೇಂ ನಿಮಿತ್ತಮೆನೆ ತದ್ವತ್ತಾಂತಮೆಲ್ಲಮಂ ಬಕಂ ಪೇಳ್ ಕೇಳ್ದಿಂತೆಂದುದು:
ಅಂತಪ್ಪೊಡುರಗನಂ ಕೊ
ಲ್ವಂತಪ್ಪುಪದೇಶಮೊಂದನಾಂ ಪೇೞಿದಪೆಂ
ನೀಂ ತಪ್ಪದೆ ಪಿಶಿತಮನು
ಯ್ದಂತಾ ನಕುಲಂಗಳಾಡುವೆಡೆಯಿಂ ತೊಟ್ಟುಂ ೨೩೫

ಉರಗನ ಪುತ್ತುವರಂ ಸೈ
ತಿರೆ ಸಾಲಿಟ್ಟಂತೆ ಮಾಂಸಖಂಡಮನಿಡೆ ಮುಂ
ಗುರಿಗಳ್ ಲಬ್ಧಾಸ್ವಾದದಿ
ನುರುಗನುಮಂ ತಿಂಗುಮೆಂದು ಪೇೞ್ವುದುಮಾಗಳ್ ೨೩೬

ಅಂತೆಗೆಯ್ವೆನೆಂದುಮಾ ಬಕಂ ಮೀಂಗಳನಾಗಳೆ ಕೊಂಡು ತಂದು ಕರ್ಕಟಂ ಪೇಳ್ದಂದ ದೊಳಿಕ್ಕುವುದುಂ ಮುಂಗುರಿಗಳ್ ಮತ್ಸ್ಯಮಾಂಸಮಂ ತಿನುತಂ ಬಂದು ಪುತ್ತುಮನೈದುವುದುಂ: ಉರಗಂ ಪೊಱಮಟ್ಟು ಮರನನಡರ್ವುದಂ ಕಂಡದಂ ಶತಖಂಡಂ ಮಾಡಿ ಕೊಂದು ತಿಂದು ಮತ್ತಂ ಮಱುದಿವಸಮಾ ಮಾರ್ಗದಿಂ ಬಂದೆಲ್ಲಿಯುಮಡಗಂ ಪಡೆಯದೆ ಮರನನಡರ್ದು ಪಾವಿನ ಬಾಯಿಂ ಬರ್ದುಂಕಿದ ತತ್ತಿಗಳಂ ನಕುಲಂಗಳ್ ತಿಂದುವು. ಅದಱಿಂ,
ಶ್ಲೋ || ಉಪಾಯಂ ಚಿಂತೆಯೇತ್ ಪ್ರಾಜ್ಞಸ್ತಥಾಪಾಯಂ ಚ ಚಿಂತಯೇತ್ ಶ್ರೂಯತೇ ಹಿ ಸಮುದ್ರಾಂತೇ ನಕುಲೈರ್ಭಕ್ಷಿತೋ ಬಕಃ ||೧೨೪||
ಟೀ|| ಬಲ್ಲವರುಪಾಯಮಂ ಚಿಂತಿಸುವುದು. ಮೇಲೆ ಬರ್ಪಪಾಯಮಂ ಚಿಂತಿಸುವುದು ಅದೇನು ಕಾರಣಮೆಂದೊಡೆ ಸಮುದ್ರತೀರದಲ್ಲಿರ್ದ ಬಕನ ತತ್ತಿಗಳಂ ಮುಂಗುರಿಗಳ್ ತಿಂದು ವಪ್ಪುದೆ ಕಾರಣಮಾಗಿ ಎಂಬ ಕಥೆಯ ದುಷ್ಟಬುದ್ಧಿ ಕೇಳ್ದು ನೀನೊಂದು ಭಣಿತೆಯ ಕಥೆಯಂ ಪೇೞ್ದು ನಮ್ಮ ನಿರ್ವಾಹಮಂ ಕಿಡಿಸದೆನ್ನೆಂದುದಂ ಗೆಯ್ಯೆಂದು ತನ್ನ ತಂದೆಯನೊಡಂಬಡಿಸುತಿರ್ಪಿನಮಾದಿತ್ಯನಪರಗಿರಿಯೆಯ್ದುವುದಂ
ಮೇದಿನಿಯ ಕ್ರಮಕ್ರಮದೆ ಪರ್ವಿದುದಾತ್ತನಭೋವಿಭಾಗಮಾ
ಚ್ಛಾದಿತದಿಙ್ಮುಖಂ ವ್ಯವಹಿತಾಖಿಲದೃಷ್ಟಿಪಥಂ ತಮಾಲ ಭೃಂ
ಗೋದರ ನೀರದಾಗಮ ಘನ ಪ್ರಕಾರಂಜನ ಪುಂಜ ಕೋಕಿಲಾ
ಬ್ಬೋದರಕಾಯಕಾಂತಿ ಶಿತಿಕಂಠಗಳಪ್ರತಿಮಪ್ರಭಂ ತಮಂ ೨೩೭

ಅಂತು ಕವಿದ ಕತ್ತಲೆಯೊಳ್ ದುಷ್ಟಬುದ್ಧಿ ತನ್ನ ತಂದೆಯಂ ಕೊಂದಲ್ಲದೆ ಮಾಣೆನೆಂದುಯ್ವಂತುಯ್ದು ಬಳಾರಿಯ ಮನೆಯಂ ಪರಕೆಯ ಕುಱಿಯಂ ಪುಗಿಸುವಂತೆ ವಟವಿಟಪಿ ಕೋಟರಕುಟೀರಾಂತರಮಂ ಪುಗಿಸಿ ಬವರಮಂ ಗೆಲ್ವೆನೆಂದು ರಾಗಿಸಿ ಮನೆಗೆವಂದು ನಿದ್ರಾಂಗ ನಾಸಕ್ತನಾದಂ. ಅನ್ನೆಗಮಿತ್ತಂ

ಪರಧನಹರಣಾರ್ಥಂ ನಿಜ
ಗುರುವಧೆಯುಂ ಮಾೞ್ಪ ದುಷ್ಟಬುದ್ಧಿಯ ಕಥೆಯಂ
ನಿರುತಂ ನೋಡಲ್ ಬರ್ಪಂ
ತಿರೆ ಬಂದಂ ಪೂರ್ವರಿಗೆ ಸರಸಿಜಮಿತ್ರಂ ೨೩೮

ಅಂತಾದಿತ್ಯೋದಯಮಾಗಲೊಡಂ ಧರ್ಮಬುದ್ಧಿ ದೇವಗುರು ದ್ವಿಜಪೂಜೆಗಳಂ ಮಾಡುತ್ತುಂ ತಡೆಯ ದುಷ್ಟಬುದ್ಧಿ ಮುಖಮಂ ತೊಳೆಯದೆ ಬಂದು ಧರ್ಮಾಕರಣಕ್ಕಿಂತೆಂದಂ:
ಪ್ರತ್ಯರ್ಥೀ ಬಂದನಿಲ್ಲ ಪಿರಿದುಂ ಪೊೞ್ತು ಪೋದುದು: ಎನಗೆ ಕರ್ತವ್ಯಮಾವುದೆಂದು ನುಡಿಯುತಿರ್ಪನ್ನೆಗಂ, ಧರ್ಮಬುದ್ಧಿಯ ಬರವಂ ಕಂಡಾಕ್ಷಣದೊಳ್ ಧರ್ಮಾಕರಣರ್ ನಡೆಯಿಂ ನಿಮ್ಮರ್ವರ ಬವರಮಂ ತಿರ್ದುವಮೆಂದು ವಟವೃಕ್ಷದ ಸಮೀಪಕ್ಕೆ ವಂದಷ್ಟವಿಧಾರ್ಚನೆಯಿಂದರ್ಚಿಸಿ ತದನಂತರಮಾಯಿರ್ವರುಮಂ ನುಡಿಸಿ ಬಳಿಕ್ಕಾ ಮರನನಿಂತೆಂದರ್:

ಶ್ಲೋ: ಬ್ರೂಹಿ ಸಾಕ್ಷಿನ್ಯಥಾವೃತ್ತಂ ಲಂಬಂ ತೇ ಪಿತರಸ್ತವ
ತಥಾವಾಕ್ಯಮುದೀಕ್ಷಂತೇ ಉತ್ಪತಂತು ಪತತಂತು ವಾ ||೧೨೪||

ಟೀ|| ಎಲೈ ವೃಕ್ಷವೇ, ಪಿತೃಗಳ್ ನಿನ್ನನ್ನೇ ಅವಲಂಬಿಸಿ ಇದರ್ಹರು: ನಿನ್ನ ವಾಕ್ಯವನೆ ಇಚ್ಛೈಸಿಹರು: ಉತ್ಪತನವಾಗಲಿ ಪತನವಾಗಲಿ ಯಥಾವೃತ್ತಹ ಸಾಕ್ಷಿಯನೆ ನುಡಿ.

ಶ್ಲೋ || ನಗ್ನೋ ಮುಂಡಃ ಕಪಾಲೀ ಚ ಭಿಕ್ಷಾರ್ಥೀ ಕ್ಷುತ್ಪಿಪಾಸಿತಃ
ಅಂಧಶ್ಯತ್ರುಗೃಹಂ ಗಚ್ಪೇದ್ಯಸ್ಸಾಕ್ಷೀಚಾನ್ಲತಂ ವದೇತ್ ||೧೨೫||

ಟೀ|| ಅವನೊರ್ವ ಸಾಕ್ಷಿ ಅನೃತವಂ ನುಡಿವನು ಅವನು ದಿಂಗಂಬರನು ಬೋಳನು ಕಾಪಾಲಿಕನು, ಬಿಕ್ಷುಕನು ಹಸಿವು ತೃಷೆಯುಳ್ಳ ತಾನು ಕುರುಡನು ಅಗಿ ಹಗೆಯ ಮನೆಗೆ ತಿರಿದುಂಬುದಕ್ಕೆ ಹೋಹನು. ಎಂಬುದು ವಾಕ್ಯಮುಂಟು ಸಾಕ್ಷಿಯಾಗಿ ತಪ್ಪಿ ನುಡಿವರ್ಗೆ ಪಾಪಮೆ ಸಂಭವಿಸುವುದು ನೀನಪ್ಪೊಡೆ ಯಕ್ಷಾದಿ ದಿವ್ಯದೇವತಾವಾಸಮುಂ ಸೇವ್ಯಮುಮಪ್ಪ ವೃಕ್ಷಮದು ಕಾರಣದಿಂ ನಿನ್ನಂ ಸಾಕ್ಷಿಮಾಡಿ ಕೇಳ್ದಪೆವು. ನೀಂ ತಪ್ಪದೆ ನುಡಿಯೆಂದು ಧರ್ಮಾಕರಣಂ ಧರ್ಮಶ್ರವಣಂಗೆ ಯ್ದುಸಿರದಿರ್ಪುದುಂ ಪೋಳಲೋಳಡಂಗಿರ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿ ಮತಿಗೆಟ್ಟು ಧರ್ಮಗತಿಯಂ ಬಿಟ್ಟುಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂಎಂದು ನುಡಿವಂತೆ ಧರ್ಮಬುದ್ಧಿಯೆ ಧನಮಂ ತೆಗೆದುಕೊಂಡನೆಂದು ನುಡುವುದುಂ ನೆರವಿಯುಂ ಧರ‍್ಮಾಕರಣಮುಂ ಚೋದ್ಯಂಬಟ್ಟಿರೆ ಧರ್ಮಬುದ್ಧಿ ಧರ್ಮೋಜಯತಿ ನಾಧರ್ಮ ಇತ್ಯಮೋಘ ಕೃತಂ ವಚಃಎಂಬೀ ವಾಕ್ಯಂ ತಪ್ಪಲಱಿಯದಪ್ಪುದಱಿಂದೆನಗಮಿದಂ ಚೋದ್ಯಮಿದು ದೈವಮಲ್ಲಕ್ಕುಮಂತಪ್ಪೊಡೆ ಸತ್ಯಮನೇಕೆ ನುಡಿಯದು. ಇದೇನಾನು ಮೊಂದು ಕೃತ್ರಿಮಮಾಗಲೆವೇೞ್ಕುಮೆಂದಾ ಮರನಂ ಬಲವಂದು ನೋಡಿ ಪಿರಿದಪ್ಪ ಪೊೞಲುಮನಲ್ಲಿಯೆ ಮನುಷ್ಯಸಂಚಾರಮಾಗಿರ್ದುದುಮಂ ಕಂಡು ನಿಶ್ಚೈಸಿ ಧರ್ಮಬುದ್ಧಿ ಧರ್ಮಾಕರಣರ್ಗಿಂತೆಂದಂ ಕಿರಾಟೋ ನಾಸ್ತಿ ನಿಶ್ಯಠಃಎಂಬ ವಾಕ್ಯಾರ್ಥದಿಂ ಹುಸಿಯಾದ ಬೇಹಾರಿಯೇ ಇಲ್ಲ. ನಾಂ ಬೇಹಾರಿಯಪ್ಪುದಱಿಂದೆಮ್ಮ ಜಾತಿಧರ್ಮಕ್ಕೆ ಧರ್ಮಬುದ್ಧಿಯಧರ್ಮಬುದ್ಧಿಯಾಗಿ ಧನಮಂ ಬಂಚಿಸಿಕೊಂಡೆನ್ನ ಮನೆಗುಯ್ವೆನೆಂಬನ್ನೆಗಂ ನೇಸರ್ಮೂಡಿದೊಡುಯ್ಯಲಿಂಬಿಲ್ಲದೆ ಮರದ ಪೊೞಲೊಳಗಿಟ್ಟು ಬಂದು ಮಱುದಿವಸಂ ಪೋಗಿ ನೋಳ್ಪನ್ನೆಗಂ ಆ ಪೊನ್ನನೊಂದು ಪನ್ನಗಂ ಸುತ್ತಿಪಟ್ಟಿರ್ದೊಡೆ ಕೊಳಲಂಜಿ ಪೋದೆಂ: ನೀಮಿಲ್ಲಿರ್ದುಂತೆ ನೋಡುತ್ತುಮಿರಿಂ: ಪೊೞಲೊಳಗೆ ಪೊಗೆಯನಿಕ್ಕಿ ಪಾವಂ ಪೊಱಮಡಿಸಿ ಕಳ್ದುಕೊಂಡೊಡವೆಯಂ ಕುಡುವೆನೆಂದು ಧರ್ಮಬುದ್ಧಿ ಪುಲ್ಲಂ ಪುಳ್ಳಿಯಂ ತರಿಸಿಯಾ ಪೋೞಲೊಳಗಡಸಿ ತುಂಬಿ ದುಷ್ಟಬುದ್ಧಿಯ ಮನೆಯೊಳ್ ಕಿಚ್ಚ ನಿಕ್ಕುವಂತೆ ಕಿಚ್ಚನಿಕ್ಕಲೊಡಂ ಪೊಗೆ ಸುತ್ತಿಯುರಿಯಟ್ಟಲ್ ಪ್ರೇಮಮತಿ ಧೃತಿಗೆಟ್ಟು ಪುಯ್ಯಲಿಟ್ಟು ಪೊೞಲೊಳಗಿಂದಂ ಸುರುಳ್ದುರುೞ್ದು ಕಂಠಗತಪ್ರಾಣನಾಗಿರ್ಪುದುಂ ಧರ್ಮಾಕರಣರ್ ಕಂಡು ದುಷ್ಟಬುದ್ಧಿಯ ತಂದೆಯಪ್ಪುದಂ ಸಂದೆಯಮಿಲ್ಲೆಂದರಿದು ಈ ಪಾಪಕರ್ಮನಪ್ಪ ದುಷ್ಪುನಿಂ ನಿನಗಿಂತಪ್ಪ ದುರ್ಮರಣಂ ಸಮನಿಸಿದುದೆಂದು ನುಡಿವುದಂ ಪ್ರೇಮಮತಿಯಿಂತೆಂದಂ: ಇನಿತನ್ಯಾಯಮನಾನೆ ಮಾಡೆದೆನೆನ್ನ ಮಗನ ಮೇಲೆ ದೋಷಮಾವುದುಮಿಲ್ಲೆಂದು ಲೋಕಾಂತರಿತನಾದಂ, ಅದೆಲ್ಲಮಂ ಕಂಡು ಧರ್ಮಾಕರಣರ್ ತಮ್ಮೊಳಿಂತೆಂದರ್;

ಸಾರಾಂಶ:-
ಸಮುದ್ರತೀರದ ಒಂದು ಮರದಲ್ಲಿ ಬಕಮಿಥುನಗಳಿದ್ದುವು. ಅವುಗಳ ತತ್ತಿಗಳನ್ನು ಆ ಮರದ ಬಳಿಯ ಹುತ್ತದಲ್ಲಿದ್ದ ಒಂದು ಸರ್ಪವು ಬಂದು ಮರವನ್ನೆರಿ ತಿನ್ನುತ್ತಿರಲು ಬಕವು ಕಲುಷಿತ ಚಿತ್ತದಿಂದ ಏನು ಮಾಡುವುದೆಂದು ತಿಳಿಯದೆ ಒಂದು ದಿವಸ ಸಮುದ್ರತೀರದಲ್ಲಿ ನಿಂತು ಜಾನಿಸುತ್ತಿತ್ತು ಅದನ್ನು ಕಂಡು ಒಂದು ಏಡಿ ಏನು ಭಾವಾ ! ನೀನು ಇಂದು ಅಹಾರಚಿಂತೆಯನ್ನು ಬಿಟ್ಟು ತಪಸ್ವಿಗಳಂತೆ ಕಣ್ಣನ್ನು ತೀಕ್ಷ್ಣವಾಗಿ ಮುಚ್ಚಿಕೊಂಡಿರುವ ಕಾರಣವೇನು ಎನ್ನಲು ಬಕವು ಹಿಗೆಂದಿತು: ನನಗೆ ಮನೋಚಿಂತೆ ಅಕವಾಗಿದೆ : ಅಹಾರದ ಚಿಂತೆ ಹೇಗುಂಟಾದೀತು ಎನ್ನಲು ಏಡಿ ಅದೇನು ಎಂದು ಕೇಳಲು ಆ ವೃತ್ತಾಂತವೆಲ್ಲವನ್ನೂ ಬಕವು ಕೇಳಿ ಹೀಗೆಂದಿತು: ೨೩೫. ಹಾಗಾದರೆ ಸರ್ಪವನ್ನು ಕೊಲ್ಲುವಂಥ ಉಪದೇಶವೊಂದನ್ನು ತಿಳಿಸುವೆ. ನೀನು ಮತ್ಸ್ಯದ ಮಾಂಸವನ್ನು ತಂದು ಮುಂಗುರಿಗಳು ಆಡುವ ಸ್ಥಳದಿಂದ ೨೩೬: ಸರ್ಪದ ಹುತ್ತದ ವರೆಗೆ ಸರಿಯಾಗಿ ಸಾಲಾಗಿ ಮಾಂಸ ಖಂಡಗಳನ್ನು ಇಡಲು
|| ಮುಂಗುರಿಗಳು ಮೀನುಗಳನ್ನು ತಿನ್ನುತ್ತ ಬಂದು ಹುತ್ತವನ್ನು ಸೇರಿದವು. ಉರಗವು ಹೊರಹೊರಟು ಮರವನ್ನೆರುವುದನ್ನು ಕಂಡು ಅದನ್ನು ಶತಖಂಡ ಮಾಡಿಕೊಂದವು. ಮರುದಿವಸ ಆ ಮಾರ್ಗದಲ್ಲಿಯೇ ಬಂದು ಎಲ್ಲಿಯೂ ಮಾಂಸವನ್ನು ಕಾಣದೆ ಮರವನ್ನೇರಿ ಹಾವಿನ ಬಾಯಿಯಿಂದ ಬದುಕಿದ ತತ್ತಿಗಳನ್ನು ಮುಂಗುರಿಗಳು ತಿಂದವು.
ಶ್ಲೋ || ಅದರಿಂದ ಪ್ರಾಜ್ಞರಾದವರು ಉಪಾಯವನ್ನು ಚಿಂತಿಸಬೇಕು. ಅದರಿಂದ ಬರುವ ಅಪಾಯವನ್ನು ಚಿಂತಿಸಬೇಕು. ಸಮುದ್ರ ತೀರದಲ್ಲದ್ದ ಬಕನ ತತ್ತಿಗಳನ್ನು ಮುಂಗುರಿಗಳು ಹಾಗೆಯೇ ತಿಂದುವಲ್ಲವೆ
|| ದುಷ್ಟಬುದ್ಧಿಯು ಆ ಕಥೆಯನ್ನು ಕೇಳಿ ನೀನು ಒಂದು ದಂತಕಥೆಗಳನ್ನು ಹೇಳಿ ನಮ್ಮ ಕಾರ್ಯವನ್ನು ಕೆಡಿಸದೆ ನಾನು ಹೇಳಿದುದನ್ನು ಮಾಡು ಎಂದು ತನ್ನ ತಂದೆಯನ್ನು ಒಪ್ಪಿಸುತ್ತಿರಲು ಸಂಜೆಯಾಯಿತು.
೨೩೭. ಆಕಾಶವನ್ನು ಆವರಿಸಿ ದಿಕ್ಕುಗಳನ್ನು ಮುಚ್ಚಿ ದೃಷ್ಟಿಯನ್ನು ತಡೆದು ಹೊಗೆ ತುಂಬಿ ಮಳೆಗಾಲದ ಮೋಡ, ಕಾಡಿಗೆಯ ರಾಶಿ, ಕೋಗಿಲೆ ವಿಷ್ಣುವಿನ ಕಾಯ ಕಾಂತಿ, ಶಿವನ ಕುತ್ತಿಗೆಯ ಬಣ್ಣದ ಕತ್ತಲೆ ಕ್ರಮೇಣ ಹಬ್ಬಿತು. ಕವಿದ ಕತ್ತಲೆಯಲ್ಲಿ ದುಷ್ಟಬುದ್ದಿ ತನ್ನ ತಂದೆಯನ್ನು ಕೊಲ್ಲದೆ ಬಿಡೆನೆಂಬಂತೆ ಕರೆದುಕೊಂಡು ಹೋಗಿ ಮಾರಿಯ ಗುಡಿಗೆ ಕುರಿಯನ್ನು ಕೊಂಡು ಹೋಗುವಂತೆ ಮರದ ಪೊಟ್ಟರೆಗೆ ಹೊಗಿಸಿ ಗೆದ್ದೆನೆಂದು ಮನೆಗೆ ಬಂದು ನಿದ್ದೆಮಾಡಿದನು.
೨೩೮; ಪರಧನವನ್ನು ಕಳಲಿಕ್ಕಾಗಿ ತನ್ನ ತಂದೆಯನ್ನು ವಸುವ ದುಷ್ಟಬುದ್ಧಿಯ ಕಥೆಯನ್ನು ತಾನು ನೋಡಲು ಬರುವಂತೆ ಪೂರ್ವದಲ್ಲಿ ಸೂರ್ಯ ಉದಯಿಸಿದನು.
|| ಬೆಳಗಾಗಲು ಧರ್ಮಬುದ್ಧಿಯು ದೇವ, ಗುರು, ದ್ವಿಜಪೂಜೆಗಳನ್ನು ಮಾಡುತ್ತ ಕಳೆದನು. ದುಷ್ಟಬುದ್ಧಿ ಮುಖವನ್ನು ತೊಳೆಯದೆ ಬಂದು ಧರ್ಮಾಕರಣರಿಗೆ ಹೀಗೆಂದನು: ಪ್ರತ್ಯರ್ಥಿ ಬಂದಿಲ್ಲ ಬಹಳ ಹೊತ್ತಾಯಿತು ನಾನೇನು ಮಾಡಬೇಕು ಎಂದು ಕೇಳುತ್ತಿರಲು ಧರ್ಮಬುದ್ಧಿಯ ಬರವನ್ನು ಕಂಡು ಧರ್ಮಾಕರಣರು ನಡೆಯಿರಿ. ನಿಮ್ಮಿಬ್ಬರ ಜಗಳವನ್ನು ತೀರ್ಮಾನಿಸುವೆವು ಎಂದು ವಟವೃಕ್ಷದ ಸಮೀಪಕ್ಕೆ ಬಂದರು. ಅಷ್ಟ ವಿಧಾರ್ಚನೆಯಿಂದ ಅಲದ ಮರವನ್ನು ಅರ್ಚಿಸಿ ಅನಂತರ ಅವರಿಬ್ಬರನ್ನೂ ವಿಚಾರಿಸಿ ಆ ಮರವನ್ನು ಕುರಿತು ಹೀಗೆಂದರು: ಶ್ಲೋ: ಎಲೈ ವೃಕ್ಷವೇ ಪಿತೃಗಳು ನಿನ್ನನ್ನೇ ಅವಲಂಬಿಸಿರುವರು. ನಿನ್ನ ವಾಕ್ಯವನ್ನೆ ಬಯಸುತ್ತಿರುವರು. ಉದ್ದಾರವಾಗಲಿ ಅಧೋಗತಿಯಾಗಲಿ ಸತ್ಯವಾದ ಸಾಕ್ಷಿಯನ್ನೆ ನುಡಿ ಎಂದರು. ಅಲ್ಲದೆ
ಶ್ಲೋ || ಯಾವ ಸಾಕ್ಷಿ ಸುಳ್ಳು ಹೇಳುವನೋ ಅವನು ದಿಗಂಬರನೂ ಬೋಳನೂ ಕಾಪಾಲಿಕನೂ ಭಿಕ್ಷಕನೂ ಹಸಿವು ಬಾಯಾರಿಕೆಯುಳ್ಳವನೂ ಕುರುಡನೂ ಆಗಿ ಹಗೆಯ ಮನೆಗೆ ತಿರಿದುಣ್ಣುವುದಕ್ಕೆ ಹೋಗುವನು.
|| ಸಾಕ್ಷಿಯಾಗಿ ಸುಳ್ಳಾಡುವವರಿಗೆ ಪಾಪವೇ ಸಂಭವಿಸುವುದು ನೀನಾದರೋ ಯಕ್ಷಾದಿ ದಿವ್ಯದೇವತಾವಾಸವೂ ಸೇವ್ಯವೂ ಅದ ವೃಕ್ಷವಾಗಿರುವೆ. ಅದರಿಂದ ನಿನ್ನನ್ನು ಸಾಕ್ಷಿ ಮಾಡಿ ಕೇಳುವೆವು. ನೀನು ತಪ್ಪದೆ ನುಡಿಯೆಂದು ಧರ್ಮಾಕರಣರು ಕೇಳಿದರು, ಪ್ರೆಟರೆಯಲ್ಲಿ ಅಡಗಿದ್ದ ದುಷ್ಟಬುದ್ಧಿಯ ತಂದೆ ಪ್ರೇಮಮತಿ ಮತಿಗೆಟ್ಟು ಧರ್ಮಗತಿಯನ್ನು ಬಿಟ್ಟು ಪ್ರಕೃತಿವಿಕೃತಿಯಾದ ಮನುಷ್ಯನ ಅಯುಷ್ಯ ಕುಂದುವುದು ಎಂದು ಜನರು ಹೇಳುವಂತೆ ಧರ್ಮಬುದ್ಧಿಯೇ ಧನವನ್ನು ತೆಗೆದುಕೊಂಡಿರುವನೆಂದು ಹೇಳಿದನು ನೆರವಿಯೂ ಧರ್ಮಾಕರಣರೂ ಅದನ್ನು ಕೇಳಿ ವಿಸ್ಮಯಗೊಂಡುರು . ಆಗ ದರ್ಮಬುದ್ಧಿಯು ಧರ್ಮೋ ಜಯತಿ ನಾಧರ್ಮ ಇತ್ಯಮೋಘಕೃತಂ ವಚಃ ಎಂಬ ವಾಕ್ಯ ಸುಳ್ಳಗುವುದು ಸಾಧ್ಯವಿಲ್ಲ. ನನಗೂ ಇದು ಆಶ್ಚರ್ಯ. ಇದು ದೈವವಲ್ಲ: ಆಗಿದ್ದರೆ ಸತ್ಯವನ್ನೆಕೆ ನುಡಿಯದು, ಇದೆನೋ ಒಂದು ಕೃತ್ತಿಮವಾಗಿರಲೇಬೇಕು ಎಂದು ಆ ಮರಕ್ಕೆ ಸುತ್ತು ಬಂದು ದೊಡ್ಡ ಪ್ರೆಟರೆಯನ್ನೂ ಮನುಷ್ಯ ಸಮಚಾರವಾಗಿದ್ದ ಚಿಹ್ನೆಯನ್ನೂ ಕಂಡು ಧರ್ಮಾಬುದ್ಧಿಯು ಧರ್ಮಾಕರಣವನ್ನು ಕುರಿತು ಹೀಗೆಂದನು : ಕಿರಾಟೋ ನಾಸ್ತಿ ನಿಶ್ಯಠಃಹುಸಿಯಾದ ವ್ಯಾಪಾರಿಯೇ ಇಲ್ಲ ! ನಾನು ವ್ಯಾಪಾರಿಯಾಗಿರುವುದರಿಂದ ನನ್ನ ಜಾತಿ ಧರ್ಮಕ್ಕೆ ಧರ್ಮಬುದ್ಧಿ ಅಧರ್ಮಬುದ್ಧಿಯಾಗಿ ಧನವನ್ನು ವಂಚಿಸಿ ನನ್ನ ಮನೆಗೆ ಕೊಂಡು ಹೋಗುವೆನು ಎಂದು ಮನಸ್ಸಿನಲ್ಲೆ ಎಣಿಸಿಕೊಂಡೆನು. ಅಗ ಸೂರ್ಯ ಮೂಡಿದುದರಿಂದ ತೆಗೆದುಕೊಂಡು ಹೋಗಿ ನೋಡಲು ಆ ಹೊನ್ನನ್ನು ಒಂದು ಸರ್ಪ ಸುತ್ತಿಕೊಂಡು ಮಲಗಿರುವುದನ್ನು ಕಂಡು ಕೊಂಡು ಹೋಗಲು ಅಂಜಿದೆನು ನೀವೆಲ್ಲ ಇಲ್ಲಿಯೇ ಇದ್ದು ಹಾಗೆಯೇ ನೋಡುತ್ತ ಇರಿ. ಪೊಟರೆಯಲ್ಲಿ ಹೊಗೆಯನ್ನು ಹಾಕಿ ಹಾವನ್ನು ಹೊರಹೊರಡಿಸಿ ಕದ್ದ ಒಡವೆಯನ್ನು ಕೊಡುವೆನು ಎಂದು ಧರ್ಮಬುದ್ಧಿ ಹುಲ್ಲನ್ನು ಕಟ್ಟಿಗೆಯನ್ನೂ ತರಿಸಿ ಆ ಪೊಟರೆಯಲ್ಲಿ ತುಂಬಿ ದುಷ್ಟಬುದ್ಧಿಯ ಮನೆಗೆ ಕಿಚ್ಚು ಹಾಕುವಂತೆ ಬೆಂಕಿ ಹಾಕಿದನು. ಹೊಗೆ ಸುತ್ತಿ ಬೆಂಕಿ ಧಗಧಗಿಸಲು ಪ್ರೇಮಮತಿ ಧೈರ್ಯಗೆಟ್ಟು ಬೊಬ್ಬೆ ಹಾಕಿ ಪೊಟರೆಯೊಳಗಿನಿಂದ ಹೊರಳಿ ಉರುಳಿ ಕಂಠಗತಪ್ರಾಣನಾದುದನ್ನು ಧರ್ಮಾಕರಣರು ಕಂಡು ದುಷ್ಟಬುದ್ಧಿಯ ತಂದೆಯಾಗಿರುವುದರಲ್ಲಿ ಸಂದೇಹವಿಲ್ಲ ಎಂದು ತಿಳಿದರು. ಈ ಪಾಪಕರ್ಮನಾಗಿರುವ ದುಷ್ಟಮಗನಿಂದ ನಿನಗೆ ಇಂಥ ದುರ್ಮರಣ ಉಂಟಾಯಿತು ಎಂದು ಹೇಳಿದರು ಅದಕ್ಕೆ ಪ್ರೇಮಮತಿ ಹೀಗೆಂದನು. ಇಷ್ಟೆಲ್ಲ ಅನ್ಯಾಯಕ್ಕೆ ನಾನೇ ಕಾರಣನಾದೆ; ನನ್ನ ಮಗನಲ್ಲಿ ಯಾವ ದೋಷವು ಇಲ್ಲ ಎಂದು ಲೋಕಾಂತರಕ್ಕೆ ಹೋದುನು. ಅದೆಲ್ಲವನ್ನೂ ಕಂಡು ಧರ್ಮಾಕರಣರು ತಮ್ಮಲ್ಲೆ ಹೀಗೆಂದುಕೊಂಡರು;

ಪುರುಷೊತ್ತಮನಾದರದಿಂ
ಪರೋಪಕಾರಾರ್ಥಮಿತ್ತನಾತ್ಮೀಯಕಳೇ
ಬರಮಂ ಸುತರಕ್ಷಾರ್ಥ
ಶರೀರಮಂ ಜನಕನೀವುದಾವುದು ಚೋದ್ಯಂ ೨೩೯

ಎಂದು ಸಭಾಸದರ್ ಪರೆದೆರ್ದು ಪೋದರ್, ಅದಱಿಂ
ಶ್ಲೋ|| ದುಷ್ಟಬುದ್ದೇಸ್ಸುಬುದ್ಧೇಶ್ಚ ದ್ವಯೋರ್ಧರ್ಮಸ್ಯ ಸಂಶ್ರಯಾತ್
ಪುತ್ರಸ್ಯಾಪ್ಯತಿ ಪಾಂಡಿತ್ಯಾತ್ ಪಿತಾ ಧೂಮೇನ ಮಾರಿತಃ ||೧೨೬||

ಟೀ|| ದುಷ್ಟಬುದ್ಧಿಯುಂ ಸುಬುದ್ಧಿಯುಮೆಂಬಿರ್ವರೊಳಗೆ ದುಷ್ಟಬುದ್ಧಿ ದುರ್ಬುದ್ಧಿಯಿಂ ತನ್ನ ತಂದೆಯಂ ಹೊಗೆಯಿಂದಂ ಮರಣವನೈದಿಸಿದನು ಎಂಬ ಕಥೆಯಂತೆ ನಿನ್ನ ಪಾಂಡಿತ್ಯದಿಂ ಪತಿಗಿನಿತನರ್ಥಮಾದುದು. ತಮ್ಮಡಿಗೆ ಮೊರೆವ ಶ್ವಾನಂ ದಮ್ಮಿಯನೇಕೆ ಬಾೞಲಿತ್ತಪ್ಪದು ಎಂಬಂತೆ ನೀನುೞಿದರಂ ಬಾಳಲುಂ ಬರ್ದುಂಕಲೇಕಿತ್ತಪೆಯೆನೆ ದವನಕನಿಂತೆದಂ: ಎೞ್ತಂ ಸಿಂಗಂ ಕೊಂದೊಂಡೆ ನಿನಗಾವುದು ಭಯಂ ಬಂದಪ್ಪುದೆನೆ ಮತ್ತಂ ಕರಟಕನಿಂತೆಂದಂ : ದಾಸೀ ಮೇಷ ವಿರುದ್ದೇನ ವಾನರಾಃ ಪ್ರಳಯಂಗತಾಃ ಎಂಬ ಕಥೆಯಂ ನಿನಗೆ ಪೇಳ್ದಪೆಂ ಕೇಳೆಂದಿಂತೆಂದಂ:
೨೩೯. ಪರೋಪರಕ್ಕಾಗಿ ತನ್ನ ದೇಹತ್ಯಾಗ ಮಾಡಿದನು ಪುರುಷೋತ್ತಮನು. ತನ್ನ ಮಗನ ರಕ್ಷಣೆಗೆಂದು ತಂದೆ ತನ್ನ ಶರೀರವನ್ನು ಕೊಡುವುದು ಏನಾಶ್ಚರ್ಯ
|| ಎಂದು ಸಭಾಸದರು ಅಲ್ಲಿಂದ ಚೆದುರಿ ಎದ್ದು ಹೋದರು ಅದರಿಂದ
ಶ್ಲೋ || ದುಷ್ಟಬುದ್ಧಿಯೂ ಸುಬುದ್ಧಿಯೂ ಎಂಬಿಬ್ಬರೊಳಗೆ ದುಷ್ಟಬುದ್ಧಿಯ ದುರ್ಬುದ್ಧಿಯಿಂದ ತನ್ನ ತಂದೆಯನ್ನು ಹೊಗೆಗೆ ಸಿಕ್ಕಿಸಿ ಕೊಂದನು.
|| ಅದರಿಂದ ನಿನ್ನ ಅತಿಪಾಂಡಿತ್ಯದಿಂದ ಒಡೆಯನಿಗೆ ಇಷ್ಟೆಲ್ಲ ಅನರ್ಥವುಂಟಾಯಿತು. ತನ್ನ ಯಜಮಾನನಿಗೆ ಬೊಗಳುವ ನಾಯಿ ಧರ್ಮಿಯನ್ನೇಕೆ ಬದುಕಲು ಬಿಡುವುದು ? ಎಂಬಂತೆ ನೀನು ಉಳಿದವರನ್ನು ಬದುಕಲು ಏಕೆ ಬಿಡುವೆ ಎಂದಿತು.* ಈ ಪುಟವನ್ನು ಡೌನ್ ಲೋಡ್   ಮಾಡಲು ಇಲ್ಲಿ ಕ್ಲಿಕ್ ಮಾಡಿ

*********************************************************************************