ನನ್ನ ಪುಟಗಳು

29 ಜುಲೈ 2014

ಎಮ್ಮನುಡಿಗೇಳ್ (ಪದ್ಯ-1) 10ನೇ ತರಗತಿ (Emmanudigel- 10th Kannada poem)

ಎಮ್ಮನುಡಿಗೇಳ್   -  ಪಂಪ
 

ಪಂಪ: ಕವಿ-ಕೃತಿ ಪರಿಚಯ
ಜನನ :
ಕ್ರಿ.. ೯೦೨, ದುಂದುಭಿ ಸಂವತ್ಸರ
ತಂದೆ :
ಭೀಮಪ್ಪಯ್ಯ.
ತಾಯಿ:
ಅಬ್ಬಣಬ್ಬೆ (ಬೆಳ್ವೊಲದಣ್ಣಿಗೆರೆಯ ಜೋಯಿಸ ಸಿಂಘನ ಮೊಮ್ಮಗಳು)
ಜನ್ಮ ಸ್ಥಳ :
ವೆಂಗಿ ಪುಳುಪು, ವೆಂಗಿ ಮಂಡಳ (ಆಂಧ್ರ), ವೇಮಲವಾಡ, ರಾಜಮಂಡ್ರಿಜಿಲ್ಲೆ (ವೆಂಗಿಪಳು ಎಂಬ ಅಗ್ರಹಾರ)
ಗುರು :
ದೇವೇಂದ್ರಮುನಿ
ವಿದ್ಯಾಭ್ಯಾಸ :
ಗಣಿತ, ವ್ಯಾಕರಣ,ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯ, ವೇದ ಶಾಸ್ತ್ರವನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದನು. ದೇವೇಂದ್ರ ಮುನೀಂದ್ರ ಈತನ ಗುರುಗಳು.
ವೃತ್ತಿ:
ವೆಂಗಿ ಚಾಲುಕ್ಯವಂಶದ ಎರಡನೆಯ ಅರಿಕೇಸರಿಯ ಆಸ್ಥಾನ ಪಂಡಿತ.
ಸಾಹಿತ್ಯಕೃತಿಗಳು :
       ಆದಿಪುರಾಣ-ಮೊದಲನೆಯ ತೀರ್ಥಂಕರನಾದ ಪುರದೇವ/ವೃಷಭದೇವನ ಬಗ್ಗೆ ರಚಿತವಾದ ಜೈನಕಾವ್ಯ. ಜಿನಸೇನಾಚಾರ್ಯರ ಸಂಸ್ಕೃತಕಾವ್ಯ ಪೂರ್ವಪುರಾಣ ಇದರ ಆಕರ ಗ್ರಂಥ. ಇದರಲ್ಲಿ ೧೬ ಆಶ್ವಾಸಗಳು ಮತ್ತು ೧೫೫೫ ಪದ್ಯಗಳೂ ಇವೆ. ಇದರಲ್ಲಿ ಪ್ರಮುಖವಾಗಿ ಆದಿತೀರ್ಥಂಕರನಾದ ವೃಷಭದೇವ ಮತ್ತು ಅವನ ಮಕ್ಕಳಾದ ಭರತ ಮತ್ತು ಬಾಹುಬಲಿಗಳ ಪ್ರಸಂಗವು ಚಿತ್ರಿತವಾಗಿದೆ ಹಾಗೂ ಜೈನಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಮೆರೆದಿದ್ದಾನೆ.
       ವಿಕ್ರಮಾರ್ಜುನ ವಿಜಯ-ಪಂಪಭಾರತವೆಂದೇ ಪ್ರಸಿದ್ಧಿ. ಇದರಲ್ಲಿ ವ್ಯಾಸರಚಿತವಾದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪ ಭಾರತದಲ್ಲಿ ಅರ್ಜುನನನ್ನು ಪ್ರಧಾನ ಭೂಮಿಕೆಯಲ್ಲಿ ನಿಲ್ಲಿಸಿ ತನ್ನ ದೊರೆ ಅರಿಕೇಸರಿಗೆ ಹೋಲಿಸಿದ್ದಾನೆ. ಮಹಾಭಾರತದ ಕಾವ್ಯದ ವರ್ಣನೆಯ ಜೊತೆಗೆ ಪಂಪ ತನ್ನ ಕಾಲದ ಸಮಾಜದ ನಾಗರೀಕತೆ, ಸಂಪ್ರದಾಯ, ಸಂಸ್ಕೃತಿ ಹಾಗೂ ಜನ ಸಾಮನ್ಯರ ಜೀವನದ ಪೂರ್ಣ ಚಿತ್ರಣ ನೀಡಿದ್ದಾನೆ. ಅಂದಿನ ಕಾಲದ ಆಟಗಳು, ವಿದ್ಯಾಭ್ಯಾಸ ಪದ್ಧತಿ, ಜನರ ವಿಲಾಸಿ ಜೀವನ, ಪ್ರಕೃತಿ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿದ್ದಾನೆ.
ಪ್ರಶಸ್ತಿ, ಪುರಸ್ಕಾರ, ಬಿರುದು: ಸಂಸಾರ ಸಾರೋದಯ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ, ಆದಿಕವಿ, ಕನ್ನಡ ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ.
"ಏಂ ಕಲಿಯೋ, ಸತ್ಕವಿಯೋ ಕವಿತಾಗುಣಾರ್ಣಭವಂ"ಎಂದು ಪಂಪನನ್ನು ಹೊಗಳಿದ್ದಾರೆ. "ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ" ಎಂದು ನಾಗರಾಜ ಕವಿಯು ಪಂಪನನ್ನು ಹೊಗಳಿದ್ದಾನೆ
ಕವಿ ಸಂದೇಶ : 'ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪಫಳಂ ಅದರ್ಕ್ಕೆ ರಸಮದುಕಾಮಂ'- ಇದು ಪಂಪನ ಜೀವನ ದೃಷ್ಟಿ.
ಕನ್ನಡನಾಡಿನ ಬಗ್ಗೆ ಅಪಾರ ಹೆಮ್ಮೆಯಿಂದ ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.

ಸೊಗಸಾಗಿ ಬಂದ ಮಾಮರನೆ ತಲ್ತೆಲೆವಳ್ಳಿಯೆ ಪೂತಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನನಂಗಳೊಳಂ ಬನವಾಸಿ ದೇಶದೊಳ್|| - ೨೮||

ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| -೨೯||

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| -೩೦||ಪ್ರಸ್ತುತ ಕಾವ್ಯಭಾಗವನ್ನು ಡಾ|| ಡಿ.ಎಲ್.ನರಸಿಂಹಾಚಾರ್ಯ ಅವರು ಸಂಪಾದಿಸಿರುವ 'ಪಂಪಭಾರತ ದೀಪಿಕೆ' ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

1 ಕಾಮೆಂಟ್‌: