ನನ್ನ ಪುಟಗಳು

23 ಜುಲೈ 2018

ಶ್ರೀ ಸಂಪುಟಂ: ಸಂಚಿಕೆ 8 - ಅರಾವಣಂ ವಾ ಅರಾಮಮಂ ದಿಟಂ


ಪೊಂಗದಿರ್ ಗಯ್ಗಳಿಂದೆಳೆಯನಾಶೀಯೌದಿಸಿ
ಪೂರ್ವಾಚಲವನೇರಿ ಬಂದನು ದಿಗಂತರವಿ,
ಕೃಷ್ಣಪಕ್ಷದ ಪಂಚದಶಿಯ ದಿವಸೇಶ್ವರಂ.
ಶೋಕಕಾನಂದಮಂ ಸಿಂಚಿಸಿ ನವೀನಮಂ.
ದೈತೇಂದ್ರನಾಜ್ಞೆಯಿಂ ನೆರೆದುದು ಸಮರಸಮಿತಿ.
ಏರಿದನು ಕನಕ ಶೂಲೋನ್ನತಾಗ್ರಾಸನಕೆ
ಕರ್ಬುರ ಕುಲೇಶ್ವರಂ. ಆತ್ಮದೊಳತೋಟಿಯಂ
ಒಂದಿನಿತುಮಿಂಗಿತದೊಳಾದೊಡಂ ತೋರದಾ
ಧೀರಮುದ್ರೆಯ ದಾನವೇಂದ್ರಂ ಸಚಿವ ಸಭೆಗೆ             ೧೦
ಆಜ್ಞಾಪಿಸಿದನಿಂತು ತನ್ನ ತರಿಸಲ್ಕೆಯಂ:
“ಸೇನಾನಿಗಳಿರ, ರಣದಕ್ಷರಿರ, ಕಲಿಗಳಿರ,
ಶಸ್ತ್ರಾಸ್ತ್ರ ಸಮರ ಪ್ರವೀಣರಿರ, ರಾಕ್ಷಸ
ಕುಲಾಭ್ಯುದಯ ಸಾಗರ ಸುಧಾಕರೋದಯರಿರಾ,
ಋಣಿ ಲಂಕೆ ನಿಮ್ಮ ಶಕ್ತಿಗೆ; ಸ್ವಾಮಿಭಕ್ತಿಗಾಂ
ಋಣಿ, ನನಗೆ ಮೇಣ್‌ಲಂಕೆಗೆನಿತೆನಿತೊ ಹರಣಗಳ್‌
ಕೊಳುಗುಳದಿ ಬಲಿವೋದುವಿನ್ನೆಗಂ. ಪೋಗವಿನ್‌.
ಲಂಕಧಿದೇವಿಯಿಂದಾಜ್ಞೆಯಾಗಿಹುದೆನಗೆ
ಕಳೆದಿರುಳ್‌. ಇನ್ನುಳಿದುದೆನ್ನೊರ್ವನದೆ ಹರಿಬಂ.
ತೀರ್ಚಿದಪೆನದನೊರ್ವನೆಯೆ ಇಂದು. ಏಕಾಂಗಿ,
ವೈರಿಯನಿದಿರ್ಚಿದಪೆನಾಂ, ಶೂರನಸಹಾಯಿ.                         ೨೦
ಲೋಕದ ಚರಾಚರರ್ ಶಕ್ತಿಗಳ್‌ ಆತ್ಮಗಳ್‌
ಮೂಗುವೆರಳಾಗಿ ಮೂಗರ ತೆರದಿ ನಿಲ್ವಂತೆವೋಲ್‌
ಕಾದುವೆನರಿ ಚಮೂ ಜಗತ್‌ಪ್ರಲಯಹರನಾಗಿ.
ನೀಮಿರಿಮ್‌ ಪ್ರೇಕ್ಷಕರವೋಲ್‌. ನೋಡುತಿರಿಮೀ
ದಶಗ್ರೀವ ಕಾಲರುದ್ರನ ಯುಗಕ್ಷಯ ರೌದ್ರ
ರಣನಾಟ್ಯಮಂ. ಬರಿಯ ಬಿನದಮೆಂದರಿಯದಿರಿ:
ನಾನೊರೆದುದೆಲ್ಲಮುಂ ರಾಜಾಜ್ಞೆ! ಇಂದೆನ್ನ
ರಣಕೆ ನನ್ನೊಡನೆ ಪರಿವಾರಮಲ್ಲದೆ ಬೇರೆ
ಬರಲಾಗದಾರುಮಾಳ್ಗಳ್‌ ಕೈದುವಿಡಿದವರ್.
ಪ್ರೇಕ್ಷಕಸ್ಥಾನದೊಳ್‌ನಿಂದು, ರಸದೊಳ್‌ ಮಿಂದು,        ೩೦
ನೋಡುವುದಿಂದು ಲೋಕತ್ರಯಂ ರಾಮರಾವಣ
ಮಹೋಗ್ರ ಸಂಗ್ರಾಮಮಂ. ನೀವುಮೀಕ್ಷಿಸಿಮಕ್ಷಿ
ಕೈವಲ್ಯಮಂ, ಸಾಕ್ಷಿಗಳವೋಲ್‌. ಇದಿಂದೆ ಮೊದಲ್‌,
ಇಂದೆ ಕಡೆ, ಪಿಂತಿಲ್ಲ, ಮುಂತಿರದು! ಇಂತಪ್ಪುದಂ
ನಿಂತೆ ನೋಡುವುದುಚಿತಮಲ್ಲದಿರೆ ವಂಚಿತರ್, ಮೇಣ್‌
ಬರ್ದುಕಿಯುಂ ಸತ್ತವರ್, ನೀಂ ಚಿರಂ ವಂಚಿತರ್
ದಿಟಂ!”
ಕೇಳ್ದು ರಾಕ್ಷಸ ರಾಜ ರಾಜೇಂದ್ರನಾ
ವೀರ ವಾಗ್‌ವಿನ್ಯಾಸಮಂ ಮೂಕ ವಿಸ್ಮಯ
ಮೌನ ವಾರಿಧಿಗರ್ದ್ದವೋಲಿರ್ದ್ದುದಾ ಸಭಾ
ಸಂಜ್ಞೆ ಮಾರ್ನುಡಿಯಲೆರ್ದೆಯುಂಟೆ ಮನಮಿರ್ದೊಡಂ?         ೪೦
ಸಮಿತಿ ಹೃದಯವನರಿತನಸುರೇಂದ್ರನುತ್ತರಂ
ಗುಡುವ ಮುನ್ನೆತ್ತಿದನು ತಾನೆ ಆ ಪ್ರಶ್ನೆಯಂ:
“ನಿಮ್ಮೆರ್ದೆಯೊಳೇಶ್ವ ಚಿಂತಾವೀಚಿಗಳಿಗೆನ್ನ
ಚಿತ್ತಮನುಕಂಪಿಸಿಹುದಾದೊಡಂ, ಇಂದೆನಗೆ
ನಿಮಗೆ, ನಾನೊರೆದುದಲ್ಲದೆ ಬೇರೆ ಬಟ್ಟೆಯಂ
ಕಾಣೆನಾಂ. ಲಂಕೆಯೊಳ್‌ ವಿಕ್ರಮಿಗಳಿಲ್ಲೆಂದು,
ಮರಣಕಂಜುವಿರೆಂದು, ರಣಕೆ ಮನಮಿಲ್ಲೆಂದು,
ಮೇಣ್‌ ಕ್ಷಾತ್ರತೇಜಸ್‌ ತರಂಗಿಣೀ ಜೀವನಂ
ರಿಪುವೀರ್ಯ ವೈಶಾಖದಾಹಕಾರಿದುದೆಂದು,
ನಿಮ್ಮ ಕೀರ್ತಿಯ ಕಾಮಧೇನುವಿನಮೃತಮಂ             ೫೦
ನಾನೊರ್ವನೆಯೆ ಕುಡಿವ ಲೋಭ ಬುದ್ದಿಯೊಳಿದಂ
ಪೇಳ್ದೆನಿಲ್ಲಾನೀ ಕದನ ಹದನಮಂ. ದಿಟಂ
ಗುಹ್ಯಮೊಂದಿರ್ಪುದೀ ಮನ್ಮನೋನಿಶ್ಚಯದಿ;
ನಿಮಗರಿಯಲಾರದುದು, ನನಗುಸಿರಬಾರದುದು!
ನಾನುಸಿರದಿರ್ದೊಡಂ ನೀಮುರಿಯಬಹುದದಂ
ನಾಳೆ, ವಿಜಯಧ್ವಜಂ ನಗರ ಗೋಪುರವೇರಿ,
ಲೋಕಕದ್ಬುತ ವಾರ್ತೆಯಂ ಸಾರಿ, ಬಾನೆಡೆಗೆ
ಶಿರವೆತ್ತಿ ತಲೆಯೊಲೆದು ದೈತ್ಯರೌನ್ನತ್ಯಮಂ
ತೋರಿ ಹಾರಾಡುವಾ ವೇಳೆ….
“ಚಿಂತಿಸದಿರಿಮ್‌
ನನ್ನುಸಿರ್ಗೋಸುಗಂ ವಿಧಿಹಸ್ತ ವಜ್ರದೊಳ್‌    ೬೦
ವರ ವರಶಲಾಕಾ ರಚಿತ ಪಂಜರದ ಪಕ್ಷಿ
ತಾನೇಗಳುಂ ದಲ್‌ ಸುರಕ್ಷಿತಂ, ಸುಕ್ಷೇಮಿ.
ಕೃಪೆಯಿಂ ಪಿತಾಮಹ ಚತುರ್ಮುಖಂ, ಪರಮೇಷ್ಠಿ
ನನಗೆ ಮೆಚ್ಚುತೆ ತಪಕೆ, ವರಬಲದೊಳೆನ್ನಂ
ಅಜೇಯನಂ ಮಾಡಿದನ್‌. ದಿವ್ಯ ರಥ ದಿವ್ಯಾಶ್ವ
ದಿವ್ಯಧನು ದಿವ್ಯಾಸಿ ದಿವ್ಯ ಕವಚಂಗಳಿಂ,
ದಿವ್ಯ ಚರ್ಮಂ ದಿವ್ಯ ತೂಣೀರಮಕ್ಷಯಂ
ಮಂತ್ರಾಸ್ತ್ರ ಶಸ್ತ್ರಂಗಳಿಂ ನಾನಜೇಯನಾರ್ಗಂ,
ಧೂರ್ಜಟಿಯೆ ತೋಳ್‌ತಟ್ಟಿ ಬಂದೊಡಂ! ಮತ್ತಮ್‌
ಒಂದುರಳಲಿನ್ನೊಂದು ಪತ್ತು ಸೂಳ್‌ವರಮೆನಗೆ        ೭೦
ಶಿರಗಳಿರ್ಪುವು ಸಮರಕಾಳಿಗೆ ಸಮರ್ಪಿಸಲ್‌.
ಸಂಖ್ಯೆಗಾನೊರ್ವನೆಯೆ ಪೋದೊಡಂ, ಕಳಕೆ ನಾಂ
ಶಕ್ತಿಯಿಂ ದಿಟಮಸಂಖ್ಯನ್‌!
“ನಡೆವಮೀಗಳಾ
ಬ್ರಹ್ಮದತ್ತಂಗಳಂ ತೇರ್, ಕುದುರೆ, ಬಿಲ್‌, ಕತ್ತಿ,
ಮೆಯ್‌ಜೋಡು, ಪಕಗೆ, ತವಿಯದ ಬತ್ತಳಿಕೆ ಮೇಣ್‌
ಸರಳ್ಗಳಂ ಪೂಜಿಸಣಿಮಾಡುವಂ. ತರುವಾಯ
ನೋಡುತಿರಿಮೆತ್ತರದ ಕೊತ್ತಳಗಳಂ ಪತ್ತಿ;
ಮಿಳ್ತುವಿಗೊಸಗೆ ಮಾಡುವೆನ್‌; ಮತ್ತೆ ನೋಳ್ಪರ್ಗೆ
ಕಣ್ಗದ್ಭುತದ ಹಬ್ಬದೌತಣವನೊಡುವೆನ್‌!”
ಚರು ರಕ್ತಬಲಿಗಳಿಂದಾಯುಧಾಗಾರದೊಳ್‌   ೮೦
ವಿರಚಿಸಿದರಾಯುಧರೂಪಿ ದುರ್ಗೆಗರ್ಚನೆಯನಾ
ರಾಕ್ಷಸ ಪುರೋಹಿತರ್. ಆರತಿಗಳೆತ್ತಿದುವು;
ವಾದ್ಯಗಳ್‌ಮೊಳಗಿದುವು; ಘಂಟೆ ಜೇಗಟೆಯುಲಿಗೆ
ಬೆರಗಾಗಿ ಕಿವಿಯೆತ್ತಿದುವು ದಿಗುತಟದ ದಂತಿ.
ಪಾಡಿತೊಕ್ಕೊರಲಿಂದಮಿಂತಾ ಪುರೋಹಿತರ
ಪಂತಿ: “ಏಳ್‌, ಸರ್ವಶಕ್ತಿಸ್ವರೂಪಿಣಿಯೆ, ಏಳ್‌!
ಏಳ್‌ಶತ್ರುಹೃದ್ರಕ್ತ ಪಾನಗೈಯಲ್ಕೆ ಏಳ್‌!
ಏಳ್‌, ಲಂಕೆ ಬಾಳಲ್ಕೆ! ಏಳ್‌, ವೈರಿನಾಶಕ್ಕೆ!-
ಏಳ್‌ದೈತ್ಯ ನೃಪಚಂದ್ರ ರಾವಣಶ್ರೇಯಕ್ಕೆ!
ಏಳ್‌ನರಾಧಮ ಕಪಿಪ್ರಾಣಾಪಹಾರಕ್ಕೆ                                   ೯೦
ನೀನೆ ಹೃದಯದಿ ಧೈರ್ಯ! ನೀನೆ ಚಿತ್ತಸ್ಥೈರ್ಯ!
ನೀನೆ ತೇಜಂ ಬಾಳ್ಗೆ! ನೀನೆ ವೀರ್ಯಂ ತೋಳ್ಗೆ!
ನೀನೆ ಪ್ರಾಣದೊಳೊಲ್ಮೆ! ನೀನೆ ಬಾಣದಿ ಬಲ್ಮೆ!-
ಚಾಪದೊಳ್‌ಶಕ್ತಿ ನೀಂ! ತೇರ್ ಕುದುರೆ ಶಕ್ತಿ ನೀಂ!
ಏಳ್‌, ಕಾಳಿ! ಏಳ್‌, ಚಂಡಿ! ಏಳ್‌, ದುರ್ಗೆ, ಚಾಮುಂಡಿ!
ಏಳು, ರಣಚಂಡಿ, ಏಳ್‌! ಏಳ್‌! ಏಳ್‌! ಏಳ್‌!”-
ವಾದ್ಯಗಳ್‌ಘೋಷಿಸಿರೆ, ಹೋಮಾಗ್ನಿಗಳ್‌ಜ್ವಲಿಸೆ
ಧೂಪಧೂಮಗಳೆದ್ದುವಂಬರಕೆ. ಕಾರಿದುವು
ಖಡ್ಗಗಳ್‌ಕಾಂತಿಯಂ. ಮರ್ಮದೀಪ್ತಿಯನುಗುಳಿ                      ೧೦೦
ಶೋಭಿಸಿತು ಕಾರ್ಮುಕಂ. ಪ್ರಾಣಮಂ ಪಡೆದಂತೆ
ಬಾಣಾಳಿ ತಳಿಸಿದುವು ತೂಣೀರದೊಳ್‌. ರಥಂ
ರಂಜಿಸಿತು ತನಗಿಳಿದುದೆನೆ ದಿವ್ಯ ಚೇತನಂ.
ಸ್ಯಂದನಾಗ್ರದ ತೇಜಿಯೋಜೆಯನದೇನೆಂಬೆ?
ಭಯರಸಕೆ ಪುಲಕಿಸಿತು ತನು ವಿಯನ್ನಿಲಯರ್ಗೆ
ಹೇಷಾಧ್ವನಿ ತರಂಗ ತಾಡಿತಕೆ!
ತಪ್ತಮೆನೆ
ಸಪ್ತ ಸಾಗರ ಚೇತನಂ ಕೂಗಿ ಕರೆದುದಯ್‌
ಕುಲಾದ್ರಿಕುಲಸುಪ್ತಿಯಂ: “ಬೇಗಮೇಳ್‌, ಪೋಗುವಂ.
ಬರ್ದಿಲರಂ ಬಾಯ್ಗೇಳಿಸಿದ  ಜಗದ್‌ಭೀಕರಂ
ಪೃಥಿವಿಗೆರ್ದೆ ತಲ್ಲಣಿಸೆ ತೇರೇರುತಿಹನದೊ                      ೧೧೦
ದಶಾನನಂ, ಲೋಕತ್ರಯಾದ್ಭುತಕೆ ರಿಪುಮಥನ
ರಣದೀಕ್ಷಿತಂ! ದಶರಥಾತ್ಮಜನ ತೋಳ್ಗಳಿಗೆ
ನೀಂ ರ್ಸ್ಥೈಮಾಗು; ನಾಂ ಧೈರ್ಯಮಾದಪೆನೆರ್ದೆಗೆ!”
ಮೂಡಿದಾದಿತ್ಯನ ಗಭಸ್ತಿಯಂ ಪ್ರತಿಫಲಿಸಿ
ಶಾತಕೌಂಭೋಜ್ವಲ ಬೃಹದ್‌ವರೂಥಮೆಸೆದುದು
ಕಾಂಚನಾಚಲ ಶಿಖರ ಸನ್ನಿಭಂ ರೌಪ್ಯಗಿರಿ
ಖಂಡ ಶೈಲಂಗಳೆನೆ ಪಂಕ್ತಿಧವಳಾಶ್ವತತಿ
ರಾಜಿಸಿದುವಾ ತೇರ್ ನೊಗಂಗಳಂ ಸಿಂಗರಿಸಿ.
ಸಮರೋಪಕರಣಗಳನಾಂತು ಸಾಲ್ಗೊಂಡಿತರ
ತೇರುಗಳ್‌ಶ್ರೇಣಿಗೊಂಡುವು ಬಳಸಿ, ಸಲಗಮಂ
ಸುತ್ತಿ ಬರ್ಪಾನೆಗಳವೋಲ್‌. ಮಿಳಿರ್ದ್ದುದು ಮುಗಿಲ್‌              ೧೨೦
ಮುಟ್ಟಿ ನರ ರುಂಡ ಮಾಲಾ ಚಂಡಿಕಾ ಧ್ವಜಂ,
ನೆತ್ತರೋಕುಳಿ ವರ್ಣನಗಳನೆರಚಿ, ದಿಗುಮೊಗಂ
ಕೆಂಪೇರ್ವವೋಲ್‌. ಧನುರ್ಬಾಣ ಮಂತ್ರಾಸ್ತ್ರಗಳ್‌,
ಶಸ್ತ್ರಗಳ್‌, ಶಕ್ತಿ ತೋಮರ ಪರಿಗ ಪರಶುಗಳ್‌,
ಪಟ್ಟಸಾದಿಗಳಿತರ ನಾನಾಯುಧಸ್ತೋಮ
ಭೀಮ ರಾಶಿಸ್ತೂಪಗಳ್‌, ನೋಳ್ಪ ಕಣ್ಣಂಜಿ
ಸೆಡೆತು ಗರಿಮುದುರಿ ನೀಡದೊಳಡಗುವಂದದಿಂ,
ಕಡಂ ಭಯಂಕರಮಾದುವೊಂದೊಂದು ತೇರೊಂದೊಂದೆ
ಕುಲದಾಯುಧಕೆ ಕುಲಂ ತಾಣಾದುದೆಂಬಂತೆವೋಲ್‌!           ೧೩೦
ಪ್ರಸ್ಥಾನ ತೂರ್ಯ ಮಂಗಳ ಮಧುರ ಗೇಯಮಾ
ಸಂಗ್ರಾಮ ನಾಟಕಪ್ರಸ್ತಾವನೆಗೆ ನಾಂದಿ
ತಾನಾಗೆ, ಮಂದಾರ ಕುಸುಮ ಹಾರ ಸುಶೋಭಿ ಆ
ರಣವಸನಭೂಷಣಾಭೀಳ ಭವ್ಯಗಾತ್ರಂ,
ಸುಂದರಿಯರೆತ್ತಿದಾರತಿಯ ಪೊಳಪಿಗೆ ಪಣೆಯ
ಕುಂಕುಮದ ಬಿಂದು ಪಣೆಗಣ್ಣಾಗುತಿರೆ, ಮತ್ತೆ
ರುಕ್ಮಕರ್ಮದ್ಯುತಿಯ ವಸ್ತ್ರಶಸ್ತ್ರಗಳುರಿಯೆ ತಾಂ
ವೈರಿಗೊಡ್ಡಿದ ಚಿತೆಯವೋಲೆಸೆಯೆ, ರಾಕ್ಷಸ
ರಣಕಲಾ ವರೇಣ್ಯಂ, ಮಹಾತಿರಥನರಿಮಥನ
ಮಂದರಂ ರಥವೇರಿದನು ಶುಭಮೂಹೂರ್ತದಲಿ                 ೧೪೦
ವೈರಿ ಭೈರವ ಯುದ್ಧರುದ್ರಂ! ಪ್ರಚೋದಿಸಲ್‌
ಸೂತನಾ ಹಯತತಿ ಕೆನೆದು ಕುಪ್ಪಳಿಸೆ, ರಥಂ,
ನಡುಗೆ ಲಂಕಾ ಧಾತ್ರಿವಕ್ಷಂ ಮೇಣಯೋಧ್ಯೆಯೊಳ್‌
ಸರಯೂ ನದೀ ಜಲಂ ಕಳವಳಿಸುತಪ್ಪಳಿಸೆ
ತೀರಪ್ರದೇಶಮಂ, ದಾಂಟಿ ಪೆರ್ಬಾಗಿಲಂ
ಬಡಗಣಕೆ ನಡೆದುದೈ ರಣಕೆ!
ಬೆರಗಿನೊಳಿರ್ದು
ಕಂಡುದು ಕಪಿಧ್ವಜಿನಿ, ಪರಿವಾರಮಾತ್ರಮೆನೆ
ತೇರ್ಗಳಾ ಬೆಂಬಲಂ ಬಡೆದು ಧಾವಿಸುತಿರ್ದ
ದೈತ್ಯನ ವರೂಥಮಂ “ಕಾಣ್‌ ಚಂಡಿಕಾ ಧ್ವಜಂ.
ಇದೆ ಕಣಾ ದೈತ್ಯೇಂದ್ರ ರಾವಣ ವರೂಥಂ!                       ೧೫೦
ವಿಭೀಷಣಂ ಪೇಳ್ದುದೆ ದಿಟಂ. ನಿನ್ನೆ ಬಹುರೂಪಿ
ಕಾಳಗಂಗೊಟ್ಟನಿಂದೇಕಾಂಗಿಯೆನೆ ತೋರ್ದು
ಬರುತಿರ್ಪನೈಸೆ ನೀಚಂ! ಮತ್ತಿದೇನವನ
ವಂಚನೆಯೊ? ನುಗ್ಗಿ ತಳ್ವದೆ ತಡೆಯಿಮಸುರನಂ!”
ವಾನರ ಮಹಾಚಮೂ ವ್ಯೂಹಮುಖದೊಳಗಿದ್ದ
ದಳಪತಿ ದರೀಮುಖಂ ತನ್ನ ಪಡೆಗಾಜ್ಞೆಯಂ
ಕೈಬೀಸಿ ಬೆಸಸಿ ನುಗ್ಗಿದನು ತಾನೆಯೆ ಮುಂದೆ
ರಾವಣೋಲ್ಕೆಯ ಮರಣಮಯ ಪಥಕೆ, ಗದೆಯೆತ್ತಿ
ರಥಕೆ, ಪಿಂತಣ ಕದನದಂದಮೇನಿಂದಿನ
ಮಹಾಹವಂ? ಬಡಿಗೆ ಬಡಿದಳಿವಂದಮಲ್ತಿಂದು                   ೧೬೦
ಬರಸಿಡಿಲ್‌ತಾಂಗಿದೊಡನೆಯೆ ಹರಣಮಂ ಪೀರ್ವ
ಪಾಂಗದು ಕಣಾ! ದಶಮುಖ ಧನುಶ್ಚ್ಯುತಂ, ಕೇಳ್‌,
ಶಿಲೀಮುಖಂ ಸೀಳ್ದುದು ದರೀಮುಖನ ಗದೆಯಂ;
ಕೆತ್ತಿದತ್ತೆತ್ತಿದಾತನ ತೋಳನೊಯ್ಕನೆಯೆ
ತೋಡುತಕ್ಷಿಯನಿರದೆ ಪೊಕ್ಕುದು ಕಪಾಲಮಂ;
ಓಡೊಡೆದು, ನೆತ್ತರ ವೆರಸಿ ಮಿದುಳ್‌ದಿಗುದೆಸೆಗೆ
ಸಿಡಿಯೆ, ದೊಪ್ಪನೆ ಕೆಡೆದು, ಕೈಗೆದರಿ ಕಾಲೊದರಿ
ಶವವಾದನಾ ಭೀಷ್ಮ ಕಲಿ ವಾನರಂ! ಸ್ವಾಮಿ
ಸತ್ತುದೆ ತಡಂ ರೋಷವಿರ್ಮಡಿಸಿ ಮೇಲ್ವಾಯ್ದು,
ಕೂಡಿಟ್ಟ ತುಪ್ಪಕ್ಕೆ ಕೊಳ್ಳೆಬಪ್ಪಾತನಂ
ಜೀನ್ಬುಳು ಮುಸುರ್ವವೊಲ್‌, ದೈತ್ಯನ ವರೂಥಮಂ             ೧೭೦
ಮುತ್ತಿದುದವನ ಸೇನೆ. ತಾಮಸಾಸ್ತ್ರವನೆಚ್ಚು
ಕಿರ್ಚ್ಚಿಗಾಹುತಿಗೊಂಡನಾ ದರೀಮುಖ ದಳ
ಸಮಸ್ತಮಂ. ಕೊಂದು ಕೊಂದಂತಕ ಭಯಂಕರಂ
ಮುಮದೆ ನುಗ್ಗಲ್‌, ದೈತ್ಯ ಶಾರ್ದೂಲ ನಖ ಭಯಕೆ
ಹಿಂಜರಿದು ಸರಿದೋಡತೊಡಗಿದರು ವಾನರರ್
ಪಶುವಿಂಡೆನಲಕ್‌: ಕವಿದುದಾಕಾಶಮಂ ಘೋರ
ಪದಧೂಳಿ!
ಕಂಡರಂಗದನಾಂಜನೇಯಾದಿ
ಪ್ಲವಗೋತ್ತಮರ್ ಪಲಾಯನ ಪಟು ಕಪಿಧ್ವಜ
ರಜೋಪಟದ ವಿಸ್ತರಣವೇಗಮಂ; ರಾವಣ                              ೧೮೦
ಮಹದ್‌ ಧನುರ್ ಮೌರ್ವೀ ಸ್ಫರುತಿ ವಿಷ್ಣುಚರಣಮಂ;
ರಣಧರೆಯೊಳೆಲ್ಲಿಯುಂ ಬಾಣರೂಪದೊಳೆರಗಿ
ವಾನರಪ್ರಾಣಂಗಳಂ ಪೀರ್ದು ರಿಂಗಣಗುಣಿವ
ದುರ್ಮರಣಮಂ. ನೀಲ ನಳ ಜಾಂಬವರ ಕೂಡಿ,
ಕೆಟ್ಟು ಕೆದರೋಡುತಿರ್ದಾಳ್ಗಳಂ ಕರೆಕರೆದು
ತಡೆತಡೆದು ಧೈರ್ಯಮಂ ನೀಡಿ ಹುರಿದುಂಬಿಸುವ
ಯತ್ನಮಂ ಮಾಡಿ, ಲಂಕೇರ್ಶವರನ ತೇರ್ಗಿದರ್
ಮೇಲ್ವಾಯುತಿರ್ದುದು ನೋಡಿ ದನುಜಾರಾತಿ
ಬೆಸಸಿದನು ಕರೆದು ಸುಗ್ರೀವನಂ:
“ನಿಲಲ್‌ವೇಳ್‌,
ಕಪಿನೃಪೋತ್ತಮ, ಆ ಅಸೀಮ, ಸಾಹಸಿಗಳಂ!            ೧೯೦
ನಳ ನೀಲ ಜಾಂಬವಾಂಗದ ಹನುಮ ಮೈಂದಾದಿ
ಕಲಿಗಳಿಂದೀ ಮಹಾ ದೈತ್ಯ ರಣರುದ್ರನಂ
ಕೆಣಕಿ ಬಾಳ್ವೆರಸಿ ಪಿಂತಿರುಗಲರಿಯರ್ ಕಣಾ!
ಮತ್ತೇತಕಿತರರಂ ನೂಂಕುತಿರ್ಪರು ಬರಿದೆ
ಕುರಿಗೊಲೆಗೆ? ಇಂದಿನಾಹನಮೆನಗೆ ಮುಡಿಪಲ್ತೆ?
ಪುಡುಕುತಿಹನಸುರೇಂದ್ರನೆನ್ನನೆಯೆ ಕಾಣ್‌, ಕಡಲ್‌
ಬಳಿಸಾರೆ ಪೊಳೆ ಪುಡುಕುವಂತೆ. ಇಂದವನ ಈ
ತೇಜಮಂ ತಡೆವರೊಳರೇ ಭುವನ ಮೂರರಲಿ?
ತನ್ನಂ ಸಮೀಪಿಸಿದ ನದಿಯನೇಂ ತಡೆಯಲಾ
ಶರಧಿಯುಂ ಪೇಳ್‌ ಸಮರ್ಥಮಪ್ಪುದೆ? ಮತ್ತಮಿನ್‌                  ೨೦೦
ತಡೆಯಲೆಳಸುವ ಮಲೆಯ ಪಾಡೇನ್‌? ಪೊನಲ್‌ಬಿರುಬು
ನುಚ್ಚುನೂರ್ ಕೊಚ್ಚುವುದು ! -ಕರೆ ಬೇಗಮನಿಲಜನ!
ಕೂಗು ನಳನಂ! ಸರಿಯವೇಳ್‌ ವಾಲಿಪುತ್ರಂಗೆ!
ತೊಲಗಿಸಾ ಮುದಿ ಜಾಂಬವನನಸುರ ದೃಷ್ಟಿಯಿಂ!
ಸರಿಯಲಿ ಕಪಿಧ್ವಜಿನಿ ಪಿಂದೆಸೆಗೆ! ಬಟ್ಟೆಗೊಡು,
ಬಟ್ಟೆದೋರೆನ್ನೆಡೆಗೆ ರಾಕ್ಷಸಗೆ! ಬೆಂಕೆಯಂ
ಬೆಂಕೆಯೈಸಲೆ ನಂದಿಪುದು? ಬಡಬನಂ ಕುಡಿಯೆ,
ಕಡಲಲ್ತು, ಬೇಳ್ಕಾ ತ್ರಿಣೇತ್ರ ವೈಶ್ವಾನರಂ!”
ಸುಗ್ರೀವನಾಜ್ಞೆಯಿಂ ಸರಿದುದು ಬಲಾಂಭೋಧಿ
ರಘವೀರನಾಶ್ರಯಂಬುಗುವಂತೆವೋಲವನ               ೨೧೦
ಬೆನ್‌ಬಲಕೆ. ಬತ್ತಲಂಬುಧಿ ತೋರ್ಪವೋಲೊಡನೆ
ಔರ್ವಂ, ಧನುರ್ ಮಧ್ಯಮಂ ಪಿಡಿದ ಮುಷ್ಟಿಯಿಂ
ದನುಜರಥ ಸುಲಗ್ನ ಕಾಳೋಗ್ರದೃಷ್ಟಿಯಿಂ
ಬಾನ್‌ಬುವಿಯನಳೆವವೋಲೆಸೆದನೈ ರಾಮನೊರ್ವಂ
ಕೆರಳೆ ರಾವಣ ರಾಹುಗರ್ವಂ: “ಇವನಲಾ ದಿಟಂ
ಜನಕತನುಜಾ ಪ್ರಾಣ ಕನಕಮಂದಿರ ಮೂರ್ತಿ!
ಇವನಲಾ ಸೀತಾ ಹೃದಯ ಧೈರ್ಯಸಾಗರಂ!
ಇವನಲಾ ಸೀತಾ ಮನಸ್ಥೈರ್ಯ ಮಂದರಂ!
ಆ ಪೂಜ್ಯೆ ಪೂಜೆ ಸಲ್ಲಿಸುವನಿತು ಅರ್ಹನೆ
ಇವನ್‌? ನನ್ನಹಂಕಾರಮಂ ತನ್ನ ಪದತಲದಿ,                          ೨೨೦
ಹಸ್ತಿ ತಾಂ ಖರ್ಪರಕೀಟಮಂ ನುರ್ಚ್ಚುಗೈವಂತೆ,
ತೀಡಿತಿಕ್ಕಿದ ದೇವಿಯಾರಾಧಿಸುವಳಿವನ
ಕಾಲಡಿಯ ಪುಡಿಗರ್ಪಿಸುತ್ತೆ ತನುಮನಸಹಿತ
ತನ್ನಾತ್ಮ ಸರ್ವಸ್ವಮಂ. ಧನ್ಯೆಯೊಲಿದಿವಂ
ಧನ್ಯನೆ ಛಲಂ! ಬರಿಯ ಕಲ್ಪನಾದೇವತೆಯೊ?
ನಿಜದೊಳೀತಂ ಪತಿವ್ರತೆಯ ಆರಾಧನೆಗೆ
ಯೋಗ್ಯಪಾತ್ರನೊ?ನೋಳ್ಪೆನೆನ್ನ ತೋಳೊರೆಗಲ್ಗೆ
ತೀಡುತೀತನ ತಪಸ್‌ಸತ್‌ತ್ವಮಂ. ಪುಸಿಗೆನ್ನ
ಪೂಜೆ ಸಲ್ಲದು. ಸೀತೆಗಾದೊಡಮವಳೊಲಿದ ಈ
ನರನಾಥಗಾದೊಡಂ. ಅಂದಾ ಸ್ವಯಂವರದಿ
ನಾನಿರದ ಪೊಳ್ತು ಹರಧನುವನೆತ್ತಿದುದಿರ್ಕೆ.                            ೨೩೦
ಮಿಥಿಳೇಂದ್ರನಂ ಮೆಚ್ಚಿಸಿದ ಸುಲಭ ಕಲಿತನಂ
ನಡೆಯದಿಲ್ಲಿಗೆ. ಮಾವನಿಂದು ಲಂಕೇಶ್ವರಂ.
ಮೆಚ್ಚಿಸೆನ್ನಂ ಪಡೆಯವೇಳ್ಕುಮಾಂ ಪುಟವಿಟ್ಟು
ಮೊದಲಿಗಿಂ ನೂರ್ಮಡಿಯ ತಳತಳಿಸಿ ಪೊಳೆವಂತೆ
ಮಾಡಿ ಕೊಡಲಿರ್ಪೆನ್ನ ಪೊಡವಿಮಗಳಂ!”
ಇಂತು
ತರತರದ ಚಿಂತೆಯ ತಟಿಲ್ಲತೆಗಳಿಂ ಮನದ
ಕಾರ್ ಮುಗಿಲ್‌ ಮಿಂಚುತಿರೆ, ತಿರುವನೇರಿಸಿ ಬಿಲ್ಗೆ
ಹೆದೆಯ ದನಿಗಾಲಿಪರ್ಗೆದೆ ನಡುಗೆ ಜೇಗೈದು,                         ೨೪೦
ತೇರ್ಗಾಲಿ ಗರಗಸಕೆ ತಿರೆ ಘರ್ಘರಿಸುವಂತೆ
ಮುಂಬರಿದು ಕರ್ರೆ‍ನೆರಗಿದನವನಿಜಾತೆಯ
ಮನೋಹರನ ಹರಕೋಪಭೀಷಣಗಿರಿಯ ಗ್ರೀಷ್ಮ
ಸಮ್ಮುಖಕೆ. ತನ್ನ ವಕ್ಷವನರಸಿ ಬರ್ಪಾ
ನದೀಯುದಕವಾಹಕ್ಕೆ ಸುಸ್ವಗತವನಿತ್ತು,
ಜೀವನವನಾಸ್ವಾದಿಸುತ್ತೀಂಟಿ, ವಾಹಿನನೀ
ಪ್ರಾಣಮಂ ಪೀರ್ವೊಂದು ಬಿರುವುರಿಯ ಬಿತ್ತರದ
ಮರುಭೂಮಿಯೆನೆ, ರುಂದ್ರ ಸತ್ತ್ವಂ ರಘೂದ್ವಹಂ
ದೃಷ್ಟಿಭೈರವನಾಗಿ ಖತಿಗೊಂಡ ಫಣಿಯಂತೆ
ಸುಯ್‌ ಸುಯ್ದು ನಿಂದಿರ್ದನಾಕಾಶದಲಿ ನೆರೆದ
ದೇವತಾತ್ಮಗಳುಸಿರ್ ಕೊರಳೊಳಗೆ ಕುಂಭಕಂ                      ೨೫೦
ಪಡೆಯೆ. ದೃಷ್ಟಿಯಿನೊರ್ವನೊರ್ವನಂ ತೂಗುವೋಲ್‌
ಅಳೆವವೋಲನಿಮೇಷ ಬದ್ಧಭ್ರುಕುಟಿಗಳ್‌
ಸಮ ಈಕ್ಷಿಸಿದರರಿಬಲಕೆ ಒರೆಹಚ್ಚುವೋಲ್‌, ತನ್ನ
ಶಕ್ತಿ ಪೊರೆಯುರ್ಚುವೋಲ್‌, ಮೇಣ್‌ ವೈರಮೊರೆಗಳಚುವೋಲ್‌,
ರಾಮರಾವಣರಾ ಮಹದ್‌ದೃಷ್ಟಿಯುದ್ಧದೊಳ್‌
ಭಾಗಿಯಾದುದು ಸೃಷ್ಟಿ. ವಿಶ್ವದ ಚರಾಚರ
ಸಮಸ್ತ ಶಕ್ತಿದ್ವಂದ್ವ ತತ್ತ್ವಗಳುಮಿರ್ಕಡೆಗೆ
ಸರಿದುವು ನಿಶ್ಚಯಿಸಿ ವಹಿಸಿ: ಗರುಡನಿತ್ತಲ್‌
ಸರಿಯೆ, ಸರಿದುದು ಸರ್ಪಮತ್ತಲ್‌, ಇತ್ತಲ್‌ ಸಿಂಗಮ್‌               ೨೬೦
ಅತ್ತಲ್‌ ಗಜಂ; ಇತ್ತ ಪಗಲತ್ತಿರುಳ್‌; ಇತ್ತ ರವಿ,
ರಾಹುವತ್ತಲ್‌, ಕಾಂತಿಯೀ ಕಡೆಗೆ, ಕಳ್ತಲಾ
ಕಡೆಗೆ; ಸುಖವಿತ್ತಣ್ಗೆ ದುಃಖಮತ್ತಣ್ಗೆ; ಸತ್ಯಂ
ಈ ದೆಸೆಗೆ, ಮಿಥ್ಯೆ ಆ ದೆಸೆಗೆ; ಇತ್ತಲ್‌ ಮುಕ್ತಿ,
ಅತ್ತಲ್‌ ಮಾಯೆ; ವೃತ್ರನತ್ತಲ್‌, ಇಂದ್ರನಿತ್ತಣ್ಗೆ!
ನಿಂದುದು ಜೀವ ರಾಮನ ದೆಸೆಗೆ; ನಿಂದುದು ಜಡಂ
ರಾವಣನ ದೆಸೆಗೆ. ಬಂದನು ಶಿವಂ ದಶರಥ
ಕುಮಾರನಾತ್ಮಕ್ಕೆ; ಬಂದಳು ಶಕ್ತಿ ದಶಶಿರ
ಹೃದಯಮಂದಿರಕೆ. ದಿವಾಕರಕುಲ ಲಲಾಮನಂ
ಒಲಿದು ನೆರೆದುದು ಪರಮ ಚಚ್ಛಕ್ತಿ; ದೈತ್ಯಕುಲ
ಸಾಗರ ಸುಧಾಕರನ ಹೃದಯಕವತರಿಸಿದುದು                        ೨೭೦
ಆದ್ಯಾ ಅಚಿಚ್ಛಕ್ತಿ!
ಅತ್ತಾ ಅಯೋಧ್ಯೆಯಲಿ
ಸರಯೂ ನದಿಯ ನಕ್ರಕುದ್ಭವಿಸಿ ವೈರಾಗ್ನಿ
ಕೆರಳಿ ಕರೆದುದು ಕಾಳಗಕೆ ಮಹಾಮಕರಮಂ
ಕೆಣಕಿ. ಮೇಣಾ ಶೃಂಗಿಬೇರಪುರದಡವಿಯಲಿ
ಕಾಲ್‌ಕೆರೆದು ಕಾಳ್ಬೆಕ್ಕು ಮಲೆತುದು ತರಕ್ಷುವಂ.
ಮತ್ತಾ ಭರದ್ವಾಜನಾಶ್ರಮದಿ ಕೋಳ್ಮಿಗಕೆ
ತೆಕ್ಕನಚ್ಚರಿಯೆನಲ್‌ ಮೂಡಿ ಹಿಂಸಾಬುದ್ಧಿ
ತೃಷ್ಣೆಯಿಂ ನೋಡಿದುದು ಬೆಳ್ಮಿಗದೊಡಲ ಪುಷ್ಟ
ಮಾಂಸತ್ವಮಂ. ಚಿತ್ರಕೂಟದಲಿ ಹೊಡೆತುಂಬೆ                        ೨೮೦
ತಿಂದು ಮಲಗಿರ್ದೊಂದು ಹೆಬ್ಬುಲಿಗೆ ಕನಸಾಯ್ತು,
ಕಾಳ್ಕೋಣವೊಂದು ತನ್ನಂ ತಿವಿಯೆ ತಲೆಮಲೆತು.
ಕೋಡಣೆದು, ಗುಟುರಿಕ್ಕಿ ಧಾವಿಸುವವೋಲ್‌. ಕಾಡು
ನಡುಗುವಂತಾರ್ಭಟಿಸಿ ನೆಗೆದೆದ್ದ ಪೆರ್ಬುಲಿಗೆ
ಕಾಣದಿರೆ ಕಾಡುಕೋಣಂ, ಪುಡುಕತೊಡಗಿದುದು
ಕಿರ್ಚ್ಛಿದ್ದ ಪಗೆತನದ ಭೀಷಣೋತ್ಸಾಹದಿಂ.
ಪಂಚವಟಿಯಲ್ಲಿ, ಗೋದಾವರಿಯ ತಟಿಯಲ್ಲಿ,
ಪಾಳ್‌ಕೆಡೆದ ಕುಟಿಯಲ್ಲಿ ಬೀಡುಗೊಂಡಿರ್ದೊಂದು
ಕೃಷ್ಣಸರ್ಪನ ಕೆಣಕೆ ಮುಂಗುಸಿಗದೇನುರ್ಕು
ಕುದಿದುರ್ಕ್ಕಿದುದೊ! ಮಲೆತು ಪಾಯಲಾ ಫಣಿಯೋಡಿ              ೨೯೦
ಪುತ್ತೊಂದನಾಶ್ರಯಿಸಿ ರೋಷದಿಂ ಪಡಿಮಲೆತು
ಹೆಡೆಯೆತ್ತಿದತ್ತು!
ಇಂತಿಂತಯೋಧ್ಯೆಯೆ ಮೊದಲ್‌
ಲಂಕೆ ತುದಿಯಾಗಿ ರಾವಣರಾಮದೃಷ್ಟಿಗಳ್‌
ಮಿಂಚೆನಲ್‌ ಸಂಚರಿಸುತಿರೆ ಚರಾಚರದುಸಿರ
ಸಂಚಾಗಿ, ಕೋಪಚಾಪಕೆ ತಾಮಸಾಸ್ತ್ರಮಂ
ಪೂಡಿದನು ರಾತ್ರಿಂಚರೇಶ್ವರಂ; ಸಿಂಜಿನಿ ಸಿಡಿಲ್‌
ಬಡಿಯಲೆಚ್ಚನ್‌ ಸ್ವಯಂ ಬ್ರಹ್ಮನಿರ್ಮಿತಮದಂ,
ದುರ್ಗ ಪತ್ತನದೆತ್ತರದ ಕೊತ್ತಳಂಗಳಲಿ
ನೆರೆದು ನಿಟ್ಟಿಸುತಿರ್ದ ಲಂಕಾಪ್ರಜಾಹೃದಯ
ಸಂತೋಷ ಘೋಷಮುಂಬರದೊಳಲೆಯಲೆಯೆ.                      ೩೦೦
ಬರಿ ನಿಮಿತ್ತಮಲಾ ಶರಂ. ಮತ್ತಮಾ ದೈತ್ಯ
ಮಂತ್ರಾಕ್ಷರೋಚ್ಚಾರಣಂ; ಪ್ರಾಣಬಲಮೈಸೆ
ತನಗಾ ಹಿರಣ್ಯಗರ್ಭನ ವರಂ! ಜ್ವಾಲೆಗಳ್‌
ಧೂಮ ಫೂತ್ಕಾರಕಾಸ್ಫೋಟನಾಭೀಳಗಳ್‌
ಬೀಳತೊಡಗಿದುವುಳ್ಕೆಗಳವೋಲ್‌. ಒರಲ್ದುದು
ಕಪಿಧ್ವಜಿನಿ. ಸುಟ್ಟುರಿದು ಬಿದ್ದರು ಕೆಲರ್; ಕೆಲರ್
ಬೂದಿಯಾದರ್; ಕೆಲರ್ ಕಣ್‌ಕಾಣದಾದರ್; ಕೆಲರ್
ಕಿವುಡವೋದರ್; ಕೆಲರ್ ಮತ್ತಮತಿಗಳವೋಲ್‌
ಅಸಂಬದ್ಧಮಾಳಾಪಿಸುತ್ತೋಡಿದರು ಪದಂ
ಪೊತ್ತೋಡಿದತ್ತಣ್ಗೆ. ನೀಲ ಮಾರುತಿ ನಳಂ                              ೩೧೦
ಸುಗ್ರೀವ ಜಾಂಬವಾಂಗದ ಸುಮಿತ್ರಾತ್ಮಜರ್
ತಂತಮ್ಮ ಸಮರಸಾಧನಗಳಂ ತುಡುಕಿ ಮುನ್‌
ಪಾಯಲೆಳಸುತಿರಲಸುರೇಂದ್ರ ಸಮ್ಮುಖಕೆ ಕಣ್‌
ಸನ್ನೆಯಿಂದವರನಿರವೇಳ್ದು ಕೋದಂಡಮಂ
ಕೋದು ನಾದಂಗೆಯ್ದನವನಿಜಾವಲ್ಲಭಂ
ಮೇದಿನಿ ಬಿರಿದುದೆಂಬಿನಂ. ನೋಡುವನಿತರೊಳೆ
ಪೊಣ್ಮಿದಾದಿತ್ಯ ಸಾಯಕಮಸುರ ಬಾಣಮಂ
ತಣ್ಗೊಳಿಸಿ, ಕಾರಿದುದು ಪಂಚಶೀರ್ಷಾಗ್ನಿಮಯ
ನಾರಾಚವರ್ಷಮಂ. ಎಲ್ಲಿ ಕಣ್ಣಿಡಲಲ್ಲಿ
ಕಿಡಿಕಿಡಿದು ಸಿಡಿದು ಬಿದ್ದುವು; ಪೊಗೆದು ಪೊತ್ತಿದುವು;                  ೩೨೦
ಚಿಮ್ಮಿ ತೇರಾಳ್ಗಳಂ ತಾಗಿದುವು; ಕೇಸುರಿಗೆ
ಕಣ್‌ಬೆದರಿ ಗಾಯಗೊಂಡಶ್ವಗಳ್‌ ಸ್ಯಂದನಂ
ವೆರಸಿ ದೆಸೆಗೆಟ್ಟೋಡಿದುವು; ಚೀರಿದತ್ತಸುರ
ಪರಿವಾರ!
ಪೇಳ್ವುದೇನಾ ಬಳಿಕಮಾದುದು,
ರಾಮ ರಾವಣ ಬೃಹದ್‌ ದ್ವಂದ್ವರಣರುಂದ್ರಮಂ!
ಶಸ್ತ್ರಪಂಡಿತರಿರ್ವರಸ್ತ್ರವಿದರಿರ‍್ವರುಂ;
ಇರ್ವರುಮಮರ್ತ್ಯ ಗಾತ್ರರ್; ಮತ್ತಮಿರ್ವರುಂ
ತಪೋಬಲದೊಳಪ್ರಾಕೃತರಮರ್ತ್ಯ ಪಾತ್ರರ್;
ಅಸೀಮ ಸಾಹಸರನಾಸಾಧ್ಯ ವಿಕ್ರಮರತುಲ
ವಿಜಿಗೀಷುಗಳ್‌. ಅಭ್ರಸಮನಿವನ್‌, ಅಂಭೋಧಿ                        ೩೩೦
ಸಮನವನ್‌; ಅದ್ರಿಸಮನವನ್‌, ಅಗ್ನಿಸಮನಿವನ್‌!
ನಂದನದ್ರುಮ ಕುಸುಮ ವರಣ ಮಾಲಾಹಸ್ತೆ,
ರಾಮ ರಾವಣ ಜಯಾಪಜಯ ಶಂಕಾಗ್ರಸ್ತೆ,
ಮೇಘಮಂಚದೊಳಿರ್ದು ಅತ್ತೊಮ್ಮೆ ಇತ್ತೊಮ್ಮೆ
ತನ್ಮ ಮನದುಯ್ಯಲೆಯೊಳೋಲಾಡಿದಳ್‌ ಭ್ರಾಂತೆ,
ಸಂಭ್ರಾಂತೆ, ಭಯಚಕಿತೆ, ಜಯವನಿತೆ!
“ಪಾಣ್ಬೆ ನೀನ್‌,
ಕಾಣ್ಬೆಯೆಂತುಟು ದಿಟದ ಸತ್ತ್ವಮಂ? ದಶಮುಖಗೆ
ಮಾರಾಂತು ಬರ್ದುಕಿ ಪೋಪನೆ ದಶರಥಾತ್ಮಜಂ?
ಮುನಿಯ ಮೋಹಕ್ಕೆ ಪೆಣ್ಗೊಲೆಗೆ ಕೈಯಿಕ್ಕಿದಾ
ಅರಗುಲಿಗೆ ದೊರೆವುದೆ ಜಯಂ? ಬರಿದೆ ತೂಗುತಿಹೆ                 ೩೪೦
ಏಕೆ ಅತ್ತಿತ್ತಲಾ ದಿವಿಜ ಸುಮ ಹಾರಮಂ.
ತಕ್ಕಡಿವಿಡಿದ ಜಿಪುಣನೋಲ್‌? ಲೋಕದೇಕೈಕ
ವೀರನಾ ದೈತ್ಯಕುಲ ರಾಜರಾಜೇಶ್ವರನ
ಕೊರಳಿಗರ್ಪಿಸುತದಂ ಧನ್ಯಗೆಯ್‌! ನೀನುಂ,
ವಿಜಯಲಕ್ಷ್ಮಿ, ಧನ್ಯೆಯಾದಪ ಪತಿವ್ರತೆಯೆಂಬ
ಚಿರಕೀರ್ತಿಯಿಂ!”
ಗಜರುತಿರಲಿಂತು ತಾಟಕಾ
ಪ್ರೇತಕಂಠಂ ಖಂಡತೋಯದಾಕಾರದಿಂ
ಮೆಯ್ಗರೆಯುತಭ್ರಮಂಡಲದಿಳಿರ್ದಮರಕಲಿ
ದಿವ್ಯಜೀವಂ ನುಡಿದನು ಜಟಾಯುದೇವಂ
ಜಯಾಂಗನೆಗೆ:
“ಖಿನ್ನಳಾಗದಿರಾ ಪಿಶಾಚಳ                                    ೩೫೦
ನುಡಿಗೆ, ದೇವಿ, ಪುಣ್ಯಗಂಧವನರಿಯಬಲ್ಲುದೆ
ದುರಿತನಾಸಿಕಂ? ತನ್ನ ಕೊಲೆಯನಲ್ಲದೆ ಬೇರೆ
ಬೆಲೆಗಳಂ ತಿಳಿಯದೀ ಮಾರೀಚನವ್ವೆಯ
ಪರೇತಂ. ಪಿಶಾಚತ್ವಮಂ ತೊರೆಯಲೆನಿತೆನಿತೊ
ವೇಳ್ಕುಮೀಕೆಗೆ ಜನ್ಮಗಳ್‌! ತೊದಲಿವಳದಿರ್ಕ್ಕೆ.
ಕಾಣಲ್ಲಿ ನಡೆವ ದಿವಿಜಾನುಸಂಧಾನಮಂ.
ಸನ್ನಾಹಗೆಯ್ವರವತರಿಸುತಾ ವಾನರರ
ಹೃದಯಗಳಿಗಾಕ್ರಮಿಸಲವರ ತಾಟಸ್ಥ್ಯಮಂ.
ತಾಮುಮುಸುರೇಂದ್ರನಂ ಸಂಹರಿಪ ಕರ್ಮದಲಿ
ಪಸುಗೆಗೊಳಲೆಳಸಿ. ಕಾಣ್‌ ಅಗ್ರಜಂ. ಸಂಪಾತಿ                       ೩೬೦
ತನ್ನ ತಮ್ಮನ ಕೊಂದವನ ತಲೆಗೆ ಸಂಚಾಗಿ
ಹೊಂಚುತಿಹನದೊ ರಾಮನ ನಿಷಂಗ ಪೇಟಿಕಾ
ವಿಷಧರವ್ಯಾಳೋಗ್ರ ಬಾಣಾಂಗಿಯಾಗಿ! ಬಿಡು,
ದೇವಿ, ಸಂದೇಹಮಂ; ಮೀಸಲಿಡು ಮಾಲೆಯಂ
ಕೋಸಲೇಶನ ಕೊರಲ ಕಾಣಿಕೆಗೆ!”
ದೈವೀ
ಪ್ರಭಾವಗಳ್‌ ಜ್ಯೋತಿಃಪ್ರವಾಹವೀಚಿಗಳಂತೆ
ವಾನರದ್ವಜಿನಿಯ ಮನೋಮಯ್ಕಕಿಳಿವುದಂ
ಕಂಡುದೆ ತಡಂ ಸ್ಪರ್ಧಿಪಾಸುರೀ ಶಕ್ತಿಗಳ್‌
ತಾಮುಮುವತರಿಸಿದುವು ತಿಮಿರಛಾಯೆಗಳಂತೆ
ಕನಕ ಲಂಕಾ ರಾಕ್ಷಸಪ್ರಜಾಪ್ರೇಕ್ಷಕರ
ರಣಮನೋರಥಕೆ. ದೈತ್ಯೇಶ್ವರೆಗೆ ಘೇ ಉಘೇ             ೩೭೦
ಎಂದಿತ್ತಲುಲಿದುದು ಲಂಕೆ; ರಘುಕುಲೇಶ್ವರಗೆ
ಘೇ ಉಘೇ ಎಂದತ್ತ ಕಿಷ್ಕಿಂಧೆ! ದಶಶಿರಗೆ
ಘೇ ಎಂದು ರಾಕ್ಷಸಧ್ವಜಿನಿ; ದಶರಥಸುತಗೆ
ಘೇ ಎಂದು ವಾನರಧ್ವಜಿನಿ! ಇಂತಿರ್ಕಡೆಯ
ವಾನರರ ರಾಕ್ಷಸರ ಸೇನಾ ಗಳಧ್ವಾನ
ಘಟ್ಟಣೆಗೆ ನಡುನಡುಗಿ ಮಾರ್ದನಿಯನೊರಲಿದುವು
ಲಂಬತ್ರಿಕೂಟವೇಲಾದ್ರಿಗಳ್‌; ಕುದಿವವೊಲ್‌
ಗದಗದಿಸಿ ವಾರ್ಧಿವೀಚಿಗಳೆದ್ದುವಲೆಯಲೆದು
ಗದೆಯವ್ವಳಿಸಿದುವು ಮಹೇಂದ್ರಮೇಖಲೆಯಾದ
ಪರಪಾರಮಂ!                                                                ೩೮೦
ಇಂತು ನೇತ್ರಭಾಗಿಗಳಾಗಿ
ರಾಮ ರಾವಣ ಸಮರಮಂ ನೋಡುತಿರ್ದರೊಳ್‌
ಮೂಡಿದತ್ತಿರ್ದ್ದಕಿರ್ದಂತೆ ತಮಗಾಜಿಯೊಳ್‌
ಕೂಡುವಾಸಕ್ತಿ. ಸೃಷ್ಟಿಯ ಚರಾಚರವೆಲ್ಲ
ಸಂಗಿಯಾಗಿರೆ ರಾಮರಾವಣ ಮಹಾ ಜಗತ್‌
ಸಂಗ್ರಾಮದಲಿ, ಮುಕ್ತಸಂಗಮೆಂತಪ್ಪುದಯ್‌
ನಿಂದು ನಿಟ್ಟಿಸುತಿರ್ದ್ದ ಲಂಕೆ ಕಿಷ್ಕಿಂಧೆಗಳ
ಸಮರ ಸಾಮೂಹಿಕ ಚಮೂಚೇತನಂ? ತನ್ನ
ಕೈಯ ಕೈದುವನೆತ್ತಿ ಕೂಗಿದನದೊರ್ವನ್‌
ಜಯಧ್ವನಿಯನುತ್ಸಾಹದಿಂ. ಕಾಣುತಿತ್ತಕಡೆ
ಕೈಯ ಕೈದುವನೆತ್ತಿ ಕೊರಳೆತ್ತಿದಾತನಂ,                   ೩೯೦
ತಾನತ್ತಕಡೆಯೊರ್ವನುದ್ಯದಾಯುಧನಾಗಿ
ಕೂಗಿದನ್‌ ದ್ವಿಗುಣಮೆನೆ ಪ್ರತಿಪಕ್ಷದವನುಲಿಯ
ಗೆಲ್ವಂತೆವೋಲ್‌. ಮತ್ತಮಿತ್ತಕಡೆಯೊರ್ವನಾ
ಶತ್ರುವಿಂಗುತ್ತರವನೆಸೆವಂತೆ ಕೊರಳೆತ್ತಿ
ತೋಳೆತ್ತಿ ಬೀಸಿದನ್‌ ಕೈದುವನ್‌. ಕಂಡದಂ
ಅತ್ತಣಿಂದೆಸೆದನೊರ್ವಂ ತನ್ನ ಕೈಲಿರ್ದ
ಕೊಂತಮಂ. ಮತ್ತಿತ್ತಣಿಂದೆರಡು ಕೊಂತಗಳ್‌
ನೆಗೆದುವತ್ತಣ್ಗೆ! ಉತ್ತರವಾದುವತ್ತಣಿಂ
ಕಲ್ಗುಂಡು ಮರಮುಂಡು ಬುಡ ಬೇರು ಕೊಂಬೆಗಳ್‌!     ೪೦೦
ಪೇಳ್ವುದೇನಾ ಬಳಿಂ? ನುಗ್ಗಿದತ್ತಿತ್ತಣಿಂ
ಕೈದುವೆತ್ತಿದ ಭಟರ್ ಜಯಘೋಷಗಳನೊದರಿ!
ಮೇಲ್ವಯ್ದರತ್ತಣಿಂ ರೋಷಕಾಕುಗಳುಲಿಯ
ಕದನಕಲಿಗಳ್‌! ತುಮುಲಮೆತ್ತೆತ್ತಲುಂ ತೊಡಗಿ
ತುಂಬಿದುದು ರಣಧರಣಿ, ತೊರೆದು ತಾಟಸ್ಥ್ಯಮಂ!
ಕಂಡನಸುರಕುಲೇಂದ್ರನಾಜಿರಂಗಕೆ ಧುಮುಕಿ
ಧಾವಿಸುತ್ತಿರ್ದ ವಾನರ ದಳ ಸಮುದ್ರಮಂ
ಶೋಷಿಸುವ ರೋಷದಿಂದುಗಿದನಾಸುರವೆಸರ
ಶರಘೋರಮಂ. ಸೂಕ್ಷ್ಮ ರೂಪದಿಂದಿಳಿತಂದು
ರಾಕ್ಷ ಸುಭಟರಂತರಂಗಮಂ ಪೊಕ್ಕಿರ್ದ                    ೪೧೦
ಆಸುರೀ ಶಕ್ತಿಗಳ್‌ ಸುಪ್ರಕಟರೂಪದಿಂ
ದೈವೀ ಬಲಂಗಳೊಳ್‌ ಸೆಣಸಲಸುರನ ಕೈಯ
ಆಸುರಾಸ್ತ್ರದ ನೆವವನಾಶ್ರಯಿಸಿ ನಿಂದುವಯ್‌
ತವಕಿಸುತ್ತಾ ಇಷುಪ್ರಸ್ಥಾನದಾಶೀವಿಷ
ವಿಷ ಮೂಹೂರ್ತಮಂ. ವೈರಿಹೃದಯಗಳನೊಡೆಯುತಿರೆ
ಜ್ಯಾರಮಂ, ದನುಜ ಧನುವಿಂ ಚಿಮ್ಮಿದುದು ಶರಂ
ಕರ್ಬೊಗೆಯನುಗುಳುವಕ್ಷಯ ಗರ್ಭದಿಂ ಜಗುಳೆ
ನಾನಾಕೃತಿಯ ವಿಕೃತಿ ಶಕ್ತಿಯ ವಿರೂಪಗಳ್‌
ವಿಪ್ಲವಿಸಲಾ ಪ್ಲವಂಗಮ ಚಮೂಚಕ್ರಮಂ.
ತೊಟ್ಟನಾಗ್ನೇಯಮಂ ತನ್ನಿಷುಧಿಯಿಂದುಗಿದು            ೪೨೦
ಹದೆಗಿಟ್ಟನೆಚ್ಚನು ದಿವಾಕರ ಕುಲಂ, ಸೌರ
ಮಂತ್ರೋಕ್ತಿಯಂ, ದೇವಶಕ್ತಿಗಳದಂ ಪೊಕ್ಕು,
ದೇದೀಪ್ಯಮಾನ ನಾನಾ ಸ್ಫೂರ್ತಿಗಳನಾಂತು,
ಸೂರ್ಯನೋಲ್‌ ಚಂದ್ರನೋಲ್‌ ತಾರೆಯೋಲುಲ್ಕೆಯೋಲ್‌
ಧೂಮೇತುಗಳವೋಲ್‌ ಗ್ರಹಗಳೋಲ್‌ ವಜ್ರದೋಲ್‌
ವಿದ್ಯುದಹಿ ಜಿಹ್ವೆಗಳವೋಲ್‌ ದೈತ್ಯಪೃತನೆಯಂ
ದಹಿಸತೊಡಗಿದುವಸುರಹನೆಚ್ಚಾಸುರಾಸ್ತ್ರಮಂ
ನಿಸ್ತೇಜನಂಗೊಳಿಸಿ. ಇಂತಾಸುರಾಸ್ತ್ರಂ ಕಿಡಲ್‌,
ರಾಕ್ಷಸಾಧಿಪನುರಿವ ಕೋಪದಿಂ ಪೂಡಿದನು
ಚಾಪಕ್ಕೆ ಮಯರಚಿತ ರೌದ್ರಾಸ್ತ್ರಮಂ. ಮುಸಲ                       ೪೩೦
ಗದೆ ಶೂಲ ಕೂಟ ಮುದ್ಗರ ಪರಂಪರೆಗಳಂ
ಶತಮುಖಗಳಿಂದೋಕರಿಸಿ ಬಂದು ದಳಗಳನೆ
ಬಡಿಬಡಿದು ಕೆಡಹಿತಾ ಯಮಸಾಯಕಂ. ಕೂಡೆ
ಗಾಂಧರ್ವ ಬಾಣದಿಂ ಶಮನಗೊಳಿಸಲ್ಕದಂ
ರಾಮಚಂದ್ರಂ, ಕೊಂಡನಸುರೇಂಧ್ರನದ್ಭುತದ
ಶಕ್ತಿಯಂ ಕೈಗೆ. ಕಂಡು ವಿಭೀಷಣಂಗುಸಿರ್
ಕಟ್ಟಿದಂತಾಯ್ತು! ಹತ್ತಿರೆ ನಿಂದ ಲಕ್ಷ್ಮಣಗೆ
ತನ್ನೆರ್ದೆಯ ಭೀತಿಯನೊದರಿದನ್‌:
“ಇದು ಕಣಾ
ಶಕ್ತಿ! ತಾನಪ್ರತಿಹತಂ! ಅಮೋಘಂ ದಿಟಂ!
ಕಾಲಭೈರವ ವೀರ್ಯ ಸರ್ವಸ್ವಕಿದು ಕಣಾ                  ೪೪೦
ನಿಕ್ಷೇಪಂ! ರಾವಣನಿದಂ ತೊಡುವ ಮುನ್ನಮೆಯೆ
ಕೆಡಿಸವೇಳ್ಕಲ್ಲದಿರೆ, ದಿಟಂ ಬಿರಿವುದರಿಯೆದೆಯ!”
ಎನುತೊದರಿ ತನ್ನ ತಾಟಸ್ಥ್ಯಮಂ ತೊರೆದೆಸೆದು
ಗದೆಗೊಂಡು ಮೇಲ್ವಾಯ್ದನಣ್ಣನ ರಥಾಶ್ವಗಳ
ಕಾಲ್ಗಳಂ ಗಮನಂಗೆಡಲ್‌ ಮುರಿಯೆ. ಸೌಮಿತ್ರಿಯುಂ
ಬಿಲ್ಗೊಂಡನೆಚ್ಚನಾ ರಥದ ಸಾರಥಿ ಮಡಿಯೆ,
ನರ ಶೀರ್ಷ ಚಂಡಿಕಾ ರಾವಣ ರಥಧ್ವಜಂ
ಪುಡಿಪುಡಿಯುಡಿದು ಕೆಡೆಯೆ. ಗದೆಯೆತ್ತಿ ತೇರೆಡೆಗೆ
ನುರ್ಗ್ಗಿ ಬರುತಿರ್ದಾ ವಿಭೀಷಣನ ಮೋರೆಯಂ
ಕಂಡು ಸಿಗ್ಗುರಿದು, ಮೊದಲೀ ದ್ರೋಹಿಯಂ ತೀರ್ಚೆ                   ೪೫೦
ಮತ್ತಿತರರಂ ನೋಡಕೊಳ್ವೆನೆಂಬನಿತರೊಳ್‌
ಬಡಿದುರುಳ್ಚಲಾ ರಥವಾಜಿಗಳನಸುರೇಶ್ವರಂ
ನೆಗೆದು ತೇರಿಂ ತಿರೆಗೆ, ಶಕ್ತ್ಯಾಯುಧವನೆತ್ತಿ
ಹಾಯ್ದನು ವಿಭೀಷಣನ ಸಮ್ಮುಖಕೆ. ಹಾ ಎಂದು
ರೋದಿಸಿತು ಕಪಿಸೇನೆ! “ಓ ಸಮೀರ ಕುಮಾರ,
ಓ ವಾಲಿಯ ತನೂಜ, ಓ ವಿಶ್ವಕರ್ಮಸುತ,
ಓ ಸೂರ್ಯಸೂನು, ಓ ಅಗ್ನಿಜಾ, ರಕ್ಷಿಸಿಮ್‌,
ರಕ್ಷಿಸಿಮ್‌ ರಾಕ್ಷಸ ಮಹಾತ್ಮನಂ!” ಇಂತೊರಲಿ
ಬಾಯ್ವಿಡುತ್ತಿರೆ ವಾನರರ ಕರುಣೆ ಭಯ ಶೋಕಗಳ್‌,
ಲಕ್ಷ್ಮಣಂ ರಾವಣ ವಿಭೀಷಣರ ನಡುವಾಯ್ದು                            ೪೬೦
ಖಂಡಿಸಿದನಾ ಶಕ್ತಿಯಂ ತುಂಡು ಮೂರುಡಿಯೆ!
ಕೊಂಡನಿನ್ನೊಂದಷ್ಠಘಂಟಾ ಭಯಂಕರ
ಮಹಾಶಕ್ತಿಯಂ. ರೌದ್ರನಾದಕೆ ಜಗತ್‌ತ್ರಯಂ
ಗದಗದಿಸುತಿರೆ, ತೆಗೆದು ಬೀಸಿ ಗುರಿಯೆಚ್ಚನಾ
ಊರ್ಮಿಳಾ ಪ್ರಾಣಪ್ರಿಯನ ವಜ್ರವಕ್ಷಮಂ.
ಜಂಘೆ ಕಂಪಿಸಿ, ರಾಮನಸು ತಮ್ಮನಾಯುವಿಗೆ
ಹಮ್ಮೈಸಿದುದು. ತನ್ನ ಪುಣ್ಯಬಲಮಂ, ತಪದ
ತೇಜಮಂ ಮುಡುಪಿಟ್ಟು ಶಪಿಸಿದನು ಬರ್ಪಾ
ಮಹಾಶಕ್ತಿಯಂ: “ಚಿರಮಕ್ಕೆ ಮಾಂಗಲ್ಯಮೂರ್ಮಿಳೆಗೆ!
ಮೋಘಮಕ್ಕೀ ನಿನ್ನ ಹನನೋದ್ಯಮಂ! ಸ್ವಸ್ತಿ                          ೪೭೦
ಸ್ವಸ್ತ್ಯಸ್ತು!” ಕೊಲಲಿಲ್ಲ; ನಟ್ಟುದೆದೆಯಲ್ಲಿ; ಕಾರಿ
ಲಕೆನ್ನೀರನುರುಳಿಬಿದ್ದನು ನೆಲಕೆ ರಾಮಾನುಜಂ!
ತೆಕ್ಕನೆಯೆ ಪರಿದು ಬಿಗಿದಪ್ಪಿದನು ಸೋದರ
ಶರೀರಮಂ, ಮುಳುಗುವದ್ರಿಯನಪ್ಪುವಬುಧಿಯೋಲ್‌.
“ಗಾಜುಮಣಿಯಂ ಪಡೆಯಲದು ಬಿದ್ದ ತಾಣಮಂ
ತೋರುವುತ್ಸಾಹದಲಿ ಕಯ್ಯಲಿಹ ರನ್ನಮಂ
ಕೆರೆಗೆಸೆವ ಗಾಂಪನಂತಾದೆನೆ ಸುಮಿತ್ರಾತ್ಮ
ಜಾತ ಜೀವವನಿತ್ತು ಜಾನಕಿಯ ಜಂಜಡಕೆ!”
ಸೋದರನ ದುಃಸ್ಥಿತಿಯ ಶೋಕಾತಿಶಯಕಿಂತು
ರೋದಿಸುತ್ತಾತನೆರ್ದೆಯಂ ಪೊಕ್ಕ ಶಕ್ತಿಯಂ                           ೪೮೦
ಕಿತ್ತು ತುಂಡರಿಸಿದನು ನೆಲಕ್ಕಿಕ್ಕಿ. “ನನಗಿದು,
ಕಪೀಂದ್ರ ವಿಷಾದಕೆ ಸಮಯಮಲ್ತು. ನೀನಂಜನಾ
ಸುತನೋಡನೆ ನೇಮಿಗೊಂಡೀತನಂ ರಕ್ಷಿಸು
ಸುಷೇಣ ಮಂತ್ರೌಷಧ ಸಹಾಯದಿಂ. ಬಹುದಿನದ
ಬಯಕೆ ಕೈಗೂಡುವೊಳ್‌ಪೊಳ್ತು ಬಳಿ ಸಾರಿಹುದು
ನನಗಿಂದು. ಪೂಣ್ಡೆನೀ ನೇಸರ್ ಪಡುವ ಮುನ್ನಂ
ಜಗತ್ತಿಂದಕ್ಕುಂ, ಓ ಕಪಿಧ್ವಜರೆ ಕೇಳಿಂ,
ಆರಾವಣಂ ವಾ ಅರಾಮಂ ದಿಟಂ! – ಕರೆಯಿಮಾ
ಸೇನಾನಿ ನೀಲನಂ; ಕರೆಯಿಮಾ ವಾಲಿಯ
ತನೂಜನಂ ತಡೆವುದಿನ್‌ ಬೇಡಮಾ ದೈತ್ಯನಂ,
ವರ ಬಲಾಭೀಳ ರಿಪುರುದ್ರನಂ, ತಡೆವೆನಾಂ.              ೪೯೦
ನೀಂ ನ ಓಡುತಿರಿಮದ್ರಿ ಶೃಂಗಂಗಳಿಂ, ಜಗದ್‌
ಭವ್ಯಸಂಗ್ರಾಮಮಂ,” ತಲೆಯೆತ್ತಿ ಮೇಲ್‌ನೋಡಿ
ಮತ್ತೆ “ಓ ಅಲ್ಲಿ ನೆರೆದಿರ್ಪಮರ ಗಂಧರ್ವ
ಯಕ್ಷಾದಿ ಸರ್ವದೇವರ್ಕಳೋಲ್‌, ರಾಮನೀ
ರಾವಣಾರಾತಿ ರಾಮತ್ವಮಂ!” ಸುಯ್ದೆದ್ದು
ಕಣ್ಣೀರನೊರಸಿದನ್‌. ದೋರ್ದಂಡ ಭೀಮ ಕಲಿ
ಕಲ್ಪಾಂತ ಚಂಡಕಿರಣೋಗ್ರ ಕೋಪವನಾಂತು
ಕೊಂಡನು ಜಗನ್ಮಂಡಲಂ ಪ್ರಕಂಪಿಸುವವೋಲ್‌
ಹರಿಹರಬ್ರಹ್ಮಬಲಮಂ ತನ್ನ ಕೋದಂಡಮಂ!





********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ