ನನ್ನ ಪುಟಗಳು

10 ಏಪ್ರಿಲ್ 2018

ಪಂಪಭಾರತ : ಗದ್ಯಾನುವಾದ - ನವಮಾಶ್ವಾಸಂ

ನವಮಾಶ್ವಾಸಂ
ಕಂ|| ಶ್ರೀಗೆ ನೆಗೞ್ತೆಗೆ ವೀರ
ಶ್ರೀಗಾಗರಮಪ್ಪೆನೆಂಬ ಕಳ ಕಳ ವಿಜಯೋ|
ದ್ಯೋಗದೊಳೆ ನೆಗೞ್ವೆನೆಂಬು
ದ್ಯೋಗಿಗೆ ಮಲೆವನ್ಯನೃಪತಿಮಂಡಳಮೊಳವೇ|| ೧

ಎಂದು ಜಗಜ್ಜನಮಳವನ
ಗುಂದಲೆಯಾಗಡರೆ ಬಿಡದೆ ಪೋಗೞುತ್ತಿರೆ ಕುಂ|
ದೇಂದು ಯಶಂ ರಥಂದಿಂದಿೞ
ತಂದೆಱಗಿದನಗ್ರಜನ್ಮ ಪದ ಸರಸಿಜದೊಳ್|| ೨

ಅಱಮಗನ ಪವನತನಯನ
ನೆದಾಶೀರ್ವಚನಶತಮನಾಂತನುನಯದಿಂ|
ದೆಱಗಿದಮಳರುಮನೞ್ಕಱ
ನೊಱಲ್ದು ತೆಗೆದಪ್ಪಿ ಪರಸೆ ನಲ್ವರಕೆಗಳಿಂ|| ೩

ಚಲ ಚಲದಿನುಱದೆ ಪಗೆವರ
ತಲೆಗಳನರಿದಂದು ಬಂದು ಪಾಂಡುತನೂಜರ್|
ತಲೆದೋಱರೆ ರಾಗಮಗುಂ
ದಲೆಯುಂ ಪೊಂಪುೞಯಮಾಯ್ತು ಮತ್ಸ್ಯಂಗಾಗಳ್|| ೪

ಮ|| ಗುಡಿಯಂ ಕಟ್ಟಿಸಿ ಪೊಯ್ಸಿ ಬದ್ದವಣಮಂ ಪ್ರಾಣಕ್ಕಮರ್ಥಕ್ಕಮಿ
ನ್ನೆಡನೇತಳಪ್ಪುದೆಂದು ಕುರುಡಂ ಕಣ್ಬೆತ್ತವೋಲ್ ರಾಗದಿಂ|
ದೊಡೆಯಂತಾಂ ಬಗೆದುಳ್ಳ ಸಾರ ಧನಮಂ ಮುಂದಿಟ್ಟತಿ ಪ್ರೀತಿಯಂ
ಪಡೆದಂ ಮತ್ಸ್ಯಮಹೇಶನಂದು ಮನದೊಳ್ ತತ್ಪಾಂಡುಪುತ್ರರ್ಕಳಾ|| ೫

ಉ|| ಕೇಳಿರೆ ಕಂಕಭಟ್ಟನೆ ಯುಷ್ಠಿರನಾ ವಲಲಂ ವೃಕೋದರಂ
ಬಾಳೆಯರಂ ದಲಾಡಿಪ ಬೃಹಂದಳೆ ಫಲ್ಗುಣನಂಕದಶ್ವ ಗೋ|
ಪಾಳಕರೆಂಬರಾ ನಕುಳನುಂ ಸಹದೇವನುಮಾದರೇಂ ಮಹೀ
ಪಾಳರೊಳಾದ ಕಾರ್ಯಗತಿಗಳ್ ಬಗೆಯಲ್ಕೆ ಬಹು ಪ್ರಕಾರಮೋ|| ೬

೧. ಸಂಪತ್ತಿಗೂ ಕೀರ್ತಿಗೂ ಜಯಲಕ್ಷ್ಮಿಗೂ ಆವಾಸಸ್ಥಾನವಾಗುತ್ತೇನೆಂಬ, ಉತ್ಸಾಹಕರವೂ ಜಯಪ್ರದವೂ ಆದ ಕಾರ್ಯದಲ್ಲಿ ತೊಡಗಿರುತ್ತೇನೆನ್ನುವ ಕಾರ್ಯಶೀಲನಾದವನಿಗೆ ಪ್ರತಿಭಟಿಸುವ ಶತ್ರುರಾಜಸಮೂಹವುಂಟೇ ೨. ಎಂದು ಲೋಕದ ಜನಗಳು ಅವನ ಶಕ್ತಿಯನ್ನು ಅತಿಶಯವಾಗಿ ಅಭಿವೃದ್ಧಿಯಾಗುವ ಹಾಗೆ ಒಂದೇ ಸಮನಾಗಿ ಹೊಗಳುತ್ತಿರಲು ಕುಂದಪುಷ್ಪದಂತೆಯೂ ಚಂದ್ರನಂತೆಯೂ ಇರುವ ಯಶಸ್ಸುಳ್ಳ ಅರ್ಜುನನು ರಥದಿಂದಿಳಿದು ಬಂದ ಅಣ್ಣನ ಪಾದಕಮಲದಲ್ಲಿ ನಮಸ್ಕಾರ ಮಾಡಿದನು. ೩. ಧರ್ಮರಾಯನ ಮತ್ತು ಭೀಮನ ಸಂಪೂರ್ಣವಾದ ನೂರು ಆಶೀರ್ವಾದಗಳನ್ನೂ ಪಡೆದು ಅಮಳರನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಒಳ್ಳೆಯ ಹರಕೆಗಳಿಂದ ಹರಸಿದನು. ೪. ಪಾಂಡವರು ಉದಾಸೀನರಾಗಿರದೆ ಹಟದಿಂದ ಶತ್ರುಗಳ ತಲೆಗಳನ್ನು ಕತ್ತರಿಸಿ ಅಂದು ಕಾಣಿಸಿಕೊಳ್ಳಲು ವಿರಾಟರಾಜನಿಗೆ ಅತ್ಯತಿಶಯವಾದ ಸಂತೋಷವುಂಟಾಯಿತು. ೫. ಬಾವುಟಗಳನ್ನು ಕಟ್ಟಿಸಿದನು. ಮಂಗಳವಾದ್ಯಗಳನ್ನು ಬಾಜಿಸಿದನು. ನನ್ನ ಪ್ರಾಣಕ್ಕೂ ಐಶ್ವರ್ಯಕ್ಕೂ ಇನ್ನು ಯಾವುದರಿಂದಲೂ ವಿಘ್ನವುಂಟಾಗುವುದಿಲ್ಲ ಎಂದು ಭಾವಿಸಿ ಕುರುಡನು ಕಣ್ಣನ್ನು ಪಡೆದ ಹಾಗೆ ವಿರಾಟನು ಸಂತೋಷಿಸಿದನು. ತನ್ನಲ್ಲಿದ್ದ ಸಾರವತ್ತಾದ ಐಶ್ವರ್ಯವನ್ನೆಲ್ಲ ಪಾಂಡವರ ಮುಂದಿಟ್ಟು ಅವರ ಮನಸ್ಸಿಗೆ ಅತ್ಯಂತ ಸಂತೋಷವನ್ನುಂಟುಮಾಡಿದನು. ೬. ಕೇಳಿರಿ, ಕಂಕಭಟ್ಟನೇ ಧರ್ಮರಾಜನು. ವಲಲನು ಭೀಮಸೇನ, ಬಾಲಕಿಯರನ್ನು ಲಕ್ಷಣವಾಗಿ ಆಡಿಸುವ ಬೃಹಂದಳೆಯು ಅರ್ಜುನ. ಪ್ರಸಿದ್ಧರಾದ ಕುದುರೆ ಮತ್ತು ಗೋವುಗಳ ಪಾಲಕರಾದವರು ನಕುಲ ಮತ್ತು ಸಹದೇವರುಗಳಾಗಿದ್ದಾರೆ. ಈ ರಾಜರುಗಳಲ್ಲಿ ಆದ ಕಾರ್ಯಗಳ ಪರಿಣಾಮವನ್ನು ಯೋಚನೆ ಮಾಡುವುದಾದರೆ ಇವರಿಗೆ ಏನು

ವ|| ಎಂಬ ಪುರಜನಾಳಾಪಂಗಳ್ ನೆಗೞೆ ವಿರಾಟನ ಮಹಾದೇವಿ ಸುದೇಷ್ಣೆ ಕೃಷ್ಣೆಗಾಗಳೆಱಗಿ ಪೊಡೆವಡೆ ಧರ್ಮತನೂಜಂಗೆ ವಿರಾಟನವತಮಣಿಮಕುಟನಿಂತೆಂದು ಬಿನ್ನಪಂಗೆಯ್ದಂ-

ಚಂ|| ಇರದುೞದಾವ ಮಂಡಲದೊಳಂ ನೃಪ ನೀಂ ದಯೆಯಿಂದಮಿಲ್ಲಿ ಬಂ
ದಿರೆ ದೊರೆವೆತ್ತುದನ್ನ ಮೆವಾಳ್ವೆಸನೆನ್ನ ತನೂಜೆಗಂಕದು|
ತ್ತರೆಗೆ ವಿವಾಹಮಂಗಳಮನಿನ್ನಭಿಮನ್ಯುಗೆ ಮಾೞ್ಪುದುತ್ತರೋ
ತ್ತರಮೆನೆ ಮಾಡು ನಿನ್ನ ದಯೆಯಿಂ ಮೆವೆಂ ಯಮರಾಜನಂದನಾ|| ೭

ವ|| ಎಂಬುದುಮಂತೆಗೆಯ್ವೆಂ ನಿಮ್ಮೆಮ್ಮ ನಣ್ಪುಗಳೀಗಳಾದುವಲ್ಲ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದವ್ಯವಚ್ಛಿನ್ನಮಾಗಿ ಬಂದುವು ನಿನ್ನ ದೊರೆಯ ನಂಟನುಮನೆಲ್ಲಿ ಪಡೆವೆನೆಂದು ವಿರಾಟನಂ ಸಂತಸಂಬಡೆ ನುಡಿದು ಚಾಣೂರಾರಿಯಂ ಸುಭದ್ರೆಯುಮನಭಿಮನ್ಯುವುಮನೊಡ ಗೊಂಡು ಬರ್ಪುದೆಂದು ಬೞಯನಟ್ಟಿ ಬರವಱದು ಪಾಂಡವರಯ್ವರುಂ ವಿರಾಟ ಸಮೇತಮಿದಿರ್ವೋಗಿ ಕಂಡಾಗಳ್-

ಚಂ|| ಮುರರಿಪು ಧರ್ಮನಂದನ ಪದಾಬ್ಜಯುಗಕ್ಕೆ ಮರುತ್ಸುತಾದಿಗಳ್
ಹರಿ ಚರಣಾಂಬುಜಕ್ಕೆಱಗೆಯುತ್ಸವದಿಂದಭಿಮನ್ಯು ತಮ್ಮುತೈ|
ವರ ಲಲಿತಾಂಘ್ರಿ ಪದ್ಮನಿವಹಕ್ಕೆಱಗುತ್ತಿರೆ ತನ್ಮುಖಾಬ್ಜದೊಳ್
ಪರಕೆಗಳುಣ್ಮಿ ಪೊಣ್ಮಿದುವು ಪಂಕಜದಿಂ ಮಕರಂದದಂತೆವೋಲ್|| ೮

ವ|| ಅಂತು ಮಂದರಧರನುಂ ತಾಮುಮೊಂದೊರ್ವರನಗಲ್ದಿಂ ಬೞಯಮಾದ ಸುಖದುಖಗಳನನ್ಯೋನ್ಯನಿವೇದನಂಗೆಯ್ದಾನಂದದಿಂ ಪೊೞಲಂ ಪೊಕ್ಕು ಮಜ್ಜನ ಭೋಜನಾದಿಗಳಿಂದಮಪಗತಪರಿಶ್ರಮನಂ ಮಾಡಿ ಮುರಾಂತಕನನಂತಕನಂದನನಭಿಮನ್ಯು ವಿವಾಹಕಾರ್ಯ ಪರ್ಯಾಲೋಚನೆಯೊಳೊಡಂಬಡಿಸಿ ಶುಭಲಗ್ನೋದಯದೊಳ್-

ಉ|| ವಾರಿಘೋಷದಂತೆಸೆವ ಮಂಗಳತೂರ್ಯರವಂಗಳಿಂ ಬಿಯಂ
ಮೇರುವ ಪೊನ್ನಣಂ ನೆಯದೆಂಬಿನಮಿಟ್ಟಳಮಾಗೆ ವಾರನಾ|
ರೀ ರಮಣೀಯ ನೃತ್ತಮಮರುತ್ತಿರೆ ಸಂದ ವಿರಾಟನೆಂದು ಕೆ
ಯ್ಯೀರೆದೀಯೆ ಗೆಯ್ದರಭಿಮನ್ಯುಗಮುತ್ತರೆಗಂ ವಿವಾಹಮಂ|| ೯

ವ|| ಅಂತಾ ವೀರನಂ ವೀರಶ್ರೀಯೊಳ್ ನೆರಪುವಂತುತ್ತರೆಯೊಳ್ ನೆರಪಿ ಕಂಸಧ್ವಂಸಿಯಂ ದ್ವಾರಾವತಿಗೆ ಕಳಿಪಿ-

ವಿಪರೀತ ವಿಯೋ? ವ|| ಎಂಬ ಪಟ್ಟಣಿಗರ ಮಾತುಗಳು ಪ್ರಸಿದ್ಧವಾಗಲು ವಿರಾಟನ ಮಹಾರಾಣಿಯಾದ ಸುದೇಷ್ಣೆಯು ದ್ರೌಪದಿಗೆ ಬಗ್ಗಿ ನಮಸ್ಕಾರ ಮಾಡಿದಳು. ಧರ್ಮರಾಯನಿಗೆ ವಿರಾಟನು ಬಗ್ಗಿದ ಮಕುಟವುಳ್ಳವನಾಗಿ (ನಮಸ್ಕರಿಸಿ) ವಿಜ್ಞಾಪನೆ ಮಾಡಿದನು- ೭. ಧರ್ಮರಾಜನೇ ನೀವು ಬೇರೆ ದೇಶದಲ್ಲಿ ತಂಗದೆ ಕೃಪೆಯಿಂದ ಇಲ್ಲಿಗೆ ಬಂದಿದ್ದೀರಿ. (ಇದರಿಂದ) ನನ್ನ ದೊರೆತನ ಗೌರವಾನ್ವಿತವಾಯಿತು. ಪ್ರಸಿದ್ಧಳಾದ ನನ್ನ ಮಗಳು ಉತ್ತರೆಗೆ ಉತ್ತರೋತ್ತರಾಭಿವೃದ್ಧಿಯಾಗುವ ಹಾಗೆ ನಿನ್ನ ಮಗನಾದ ಅಭಿಮನ್ಯುವಿನೊಡನೆ ಮದುವೆಯ ಮಂಗಳಕಾರ್ಯವನ್ನು ಮಾಡುವುದು. ನಿನ್ನ ದಯೆಯಿಂದ ನಾನು ಪ್ರಸಿದ್ಧಿಪಡೆಯುತ್ತೇನೆ. ವ|| ಎನ್ನಲು ಹಾಗೆಯೇ ಮಾಡುತ್ತೇನೆ. ನಿಮ್ಮ ನಮ್ಮ ಸ್ನೇಹ ಸಂಬಂಧಗಳು ಈಗ ಆದುವಲ್ಲ. ಹಿರಣ್ಯಗರ್ಭಬ್ರಹ್ಮನಿಂದ ಹಿಡಿದು ಎಡಬಿಡದೆ ಏಕಪ್ರಕಾರವಾಗಿ ಬಂದಂತಹವು. ನಿನಗೆ ಸಮಾನವಾದ ಬಂಧುವನ್ನು ನಾನೆಲ್ಲಿ ಪಡೆಯಲು ಸಾಧ್ಯ? ಎಂದು ವಿರಾಟನಿಗೆ ಸಂತೋಷವಾಗುವ ಹಾಗೆ ಮಾತನಾಡಿ ಶ್ರೀಕೃಷ್ಣನಿಗೆ ಸುಭದ್ರೆಯನ್ನೂ ಅಭಿಮನ್ಯುವನ್ನೂ ಜೊತೆಯಲ್ಲಿ ಕರೆದುಕೊಂಡು ಬರಬೇಕು ಎಂದು ಸಮಾಚಾರವನ್ನು ದೂತರ ಮೂಲಕ ಕಳುಹಿಸಿದರು. ಅವರ ಬರುವಿಕೆಯನ್ನು ತಿಳಿದು ಪಾಂಡವರೈದುಮಂದಿಯೂ ವಿರಾಟನೊಡಗೊಂಡು ಎದುರಾಗಿ ಹೋಗಿ ಕಂಡರು. ೮. ಕೃಷ್ಣನು ಧರ್ಮರಾಜನ ಪಾದಯುಗಳಗಳಿಗೂ ಭೀಮಸೇನಾದಿಗಳು ಕೃಷ್ಣನ ಪಾದಕಮಲಕ್ಕೂ ನಮಸ್ಕಾರಮಾಡಿದರು. ಅಭಿಮನ್ಯುವು ಆ ಅಯ್ದುಜನರ ಮನೋಹರವಾದ ಪಾದಕಮಲಗಳಿಗೆ ನಮಸ್ಕಾರಮಾಡಿದನು. ಅವರ ಮುಖಕಮಲದಲ್ಲಿ ಕಮಲದಿಂದ ಮಕರಂದವು ಉಕ್ಕಿ ಹರಿಯುವಂತೆ ಹರಕೆಗಳು ಅಭಿವೃದ್ಧಿಗೊಂಡು ಚಿಮ್ಮಿದುವು. ವ|| ಹಾಗೆ ಶ್ರೀಕೃಷ್ಣನೂ ತಾವೂ ಒಬ್ಬೊಬ್ಬರನ್ನು ಅಗಲಿದ ಬಳಿಕ ಆದ ಸುಖದುಖಗಳನ್ನು ಪರಸ್ಪರ ತಿಳಿಯಪಡಿಸಿ ಸಂತೋಷದಿಂದ ಪುರಪ್ರವೇಶಮಾಡಿದರು. ಧರ್ಮರಾಜನು ಕೃಷ್ಣನೊಡನೆ ಅಭಿಮನ್ಯುವಿನ ಮದುವೆಯ ವಿಚಾರವಾಗಿ ಆಲೋಚನೆ ಮಾಡಿ ಅವನನ್ನು ಒಪ್ಪಿಸಿದನು. ಒಳ್ಳೆಯ ಶುಭಮುಹೂರ್ತದಲ್ಲಿ ೯. ಮಂಗಳವಾದ್ಯವು ಕಡಲ ಮೊರೆಯಂತೆ ಘೋಷಿಸುತ್ತಿರಲು ದಾನಮಾಡಿದ ಸುವರ್ಣಕ್ಕೆ (ದಕ್ಷಿಣೆ) ಮೇರುಪರ್ವತವೂ ಸಮಾನವಾಗಲಾರದು ಎನ್ನುವಷ್ಟು ಅತಿಶಯವಾಗಿರಲು ವೇಶ್ಯಸ್ತ್ರೀಯರ ಮನೋಹರವಾದ ನೃತ್ಯವು ರಮಣೀಯವಾಗಿರಲು ಪ್ರಸಿದ್ಧನಾದ ವಿರಾಟಮಹಾರಾಜನು ಧಾರಾಜಲವನ್ನೆರೆದು ಕನ್ಯಾದಾನಮಾಡಲು ಉತ್ತರೆಗೂ ಅಭಿಮನ್ಯುವಿಗೂ ಮದುವೆಯನ್ನು ಮಾಡಿದನು. ವ|| ಆ ವೀರನನ್ನು

ಮ|| ಮಲೆಪರ್ ಮಂಡಳಿಕರ್ ಕಱುಂಬರದಟರ್ ವೀರರ್ಕಳುಂ ತಮ್ಮ ಬಾ
ೞ್ದಲೆಯಂ ಬೇಡಿದ ವಸ್ತುವಾಹನಮುಮಂ ಮುಂದಿಟ್ಟು ಮೂವಿಟ್ಟಿಯೊ|
ಕ್ಕಲವೋಲಿಂ ಬೆಸಕೆಯ್ಯೆ ಸಂತಮಿರುತುಂ ಕುಂತೀಸುತರ್ ತಮ್ಮ ತೋ
ಳ್ವಲಮಂ ನಚ್ಚರೆ ದಾಯಿಗರ್ ಧರೆಯನಾಳ್ದಂದೞ್ದರೆಂಬೇವದಿಂ|| ೧೦

ವ|| ಅಂತು ತಮ್ಮ ಪೂಣ್ದ ವರ್ಷಾವ ನೆದೊಡಮರಾತಿಗಳ್ಗಂತ್ಯಕಾಲಂ ನೆಯದುದರ್ಕುಮ್ಮಳಿಸಿ ನಮಗೆ ಕೆಮ್ಮಗಿರಲಾಗದು ದುರ್ಯೋಧನನಪ್ಪೊಡೆ ಶ್ವೇತ ಕೃಷ್ಣಾಕಾರಕಂ ಕೃಷ್ಣನಂ ತನಗೆ ಮಾಡದನ್ನೆಗಂ ಮುನ್ನಮೆ ಪನ್ನಗಶಯನನಂ ನಮಗೆ ಮಾಡುವುದುತ್ತಮಪಕ್ಷಮೆಂಬೀ ಪ್ರಧಾನ ಕಾರ್ಯಮಂ ತಮ್ಮೊಳಾಳೋಚಿಸಿ ವಿಕ್ರಮಾರ್ಜುನನಂ ನೀನೆ ಪೋಗಲ್ವೇೞ್ಕುಮಂಬುದು ಮಪ್ರತಿರಥಂ ರಥಮನೇಱ ಮನಪವನವೇಗದಿಂ ದ್ವಾರಾವತಿಯನೆಯ್ದಿ ರಾಜಮಂದಿರಮಂ ಪೊಕ್ಕು ದುಗ್ಧಾಬ್ಧಿಧವಳ ಶಯ್ಯಾತಳದೊಳ್ ಮದೊಱಗಿದ ಮಧುಮಥನನನೆತ್ತಲಣ್ಮದೆ ಕಾಲ ದೆಸೆಯೊಳುಸಿರದೆ ಕುಳ್ಳಿರೆ ದುರ್ಯೋಧನನುಮಾಗಳೆ ಬಂದು ಬಲಿಬಂಧನನ ತಲೆದೆಸೆಯೊಳ್ ಕುಳ್ಳಿರೆ ಕಿಱದಾನುಂ ಬೇಗದಿಂ-

ಕಂ|| ಪವಡಿಸಿದನಂತನೊಸೆದು
ಪ್ಪವಡಿಸಿ ತನ್ನೆರಡುಮಡಿಯನೊತ್ತುತ್ತಿರ್ದಾ|
ಹವ ವಿಜಯಿಯಪ್ಪ ವಿಜಯನ
ನೆ ವಲಂ ಮುಂ ಕಂಡು ಬೞಕೆ ನೃಪನಂ ಕಂಡಂ|| ೧೧

ವ|| ಕಂಡು ತನಗೆ ಪೊಡೆವಟ್ಟಿರ್ವರುಮಂ ಪರಸಿ ನೀವಿರ್ವರುಂ ಬಂದಂದಮುಮಂ ಮನೆವಾೞ್ತೆಯಂ ಪೇೞಮೆಂದೊಡೆಮ್ಮೆಮ್ಮಂ ಕೆಯ್ಕೊಂಡು ಗೆಲಿಸಲ್ವೇೞ್ಕುಮೆಂದು ಬಂದೆವೆನೆ-

ಕಂ|| ಮನ್ನಣೆಗನಗಿರ್ವರುಮೋ
ರನ್ನರೆ ವಿಜಯನನೆ ಮುನ್ನೆ ಕಂಡುದಱಂದಾ|
ನೆನ್ನಂ ಕೊಟ್ಟೆಂ ನಿನಗಂ
ಪನ್ನಗಕೇತನ ಚತುರ್ವಲಂಗಳನಿತ್ತೆಂ|| ೧೨

ವ|| ಎಂದು ತನ್ನೊಳ್ ಸಮಾನಬಲನಪ್ಪ ತನ್ನ ತಮ್ಮಂ ಕೃತವರ್ಮನುಮಂ ತನ್ನೊಡನಾಡಿಗಳಪ್ಪ ತೊಂಬತ್ತಾಱು ಸಾಸಿರ ಗೋಪಕುಮಾರರೊಡನೆ ಕೂಡಿ ಕಳಿಪಿ ವಿಕ್ರಮಾರ್ಜುನನುಂ ತಾನುಂ ವಿರಾಟಪುರಕ್ಕೆ ವಂದು ಮಜ್ಜನ ಭೋಜನಾದಿಗಳೊಳ್ ವಿಗತ ಪರಿಶ್ರಮರಾಗಿ ಮಱುದೆವಸಮಱುವರುಮಾಱುಂಗುಣಂಗಳೆ ಮೂರ್ತಿಮಂತಂಗಳಾದಂತೆ ಮಂತ್ರಶಾಲೆಯಂ ಪೊಕ್ಕಿರ್ದಾಗಳ್-

ವೀರಲಕ್ಷ್ಮಿಯನ್ನು ಕೂಡಿಸುವಂತೆ ಅಭಿಮನ್ಯುವನ್ನು ಉತ್ತರೆಯಲ್ಲಿ ಕೂಡಿಸಿ ಶ್ರೀಕೃಷ್ಣನನ್ನು ದ್ವಾರಕಾಪಟ್ಟಣಕ್ಕೆ ಕಳುಹಿಸಿದನು.

೧೦. ಉದ್ಧತರಾದ ಸಾಮಂತರೂ ಸಣ್ಣಪುಟ್ಟ ರಾಜರೂ ಪರಾಕ್ರಮಶಾಲಿಗಳೂ ವೀರನೂ ತಮ್ಮ ಪ್ರಾಣವನ್ನೂ ಕೇಳಿದ ಎಲ್ಲ ವಸ್ತು ಸಮೂಹಗಳನ್ನೂ ಪಾಂಡವರ ಮುಂದಿಟ್ಟು ಮೂರು ಬಗೆಯಾದ ಬಿಟ್ಟಿಸೇವೆಯನ್ನು ಮಾಡುವ ಜನರಂತೆ ಆಜ್ಞಾಧಾರಿಗಳಾಗಿರಲು ಪಾಂಡವರು ದಾಯಿಗರಾದ ಕೌರವರು ತಮ್ಮ ರಾಜ್ಯವನ್ನು ಅಪಹರಿಸಿ ಆಳುತ್ತಿರುವ ಕ್ಲೇಶವು ತಮ್ಮನ್ನು ಬಾಸುತ್ತಿದ್ದರೂ ತಮ್ಮ ಬಾಹುಬಲವನ್ನೇ ನೆಚ್ಚಿರುತ್ತಿದ್ದರು. ವ|| ಹಾಗೆ ತಾವು ಪ್ರತಿe ಮಾಡಿದ್ದ ಗಡುವು ತೀರಿದರೂ ಶತ್ರುಗಳಿಗೆ ಅಂತ್ಯಕಾಲವು ತುಂಬದೇ ಇದ್ದುದಕ್ಕಾಗಿ ದುಖಪಟ್ಟು ‘ನಾವು ಸುಮ್ಮನಿರಲಾಗದು, ದುರ್ಯೋಧನನಾದರೆ ಬಿಳಿಯದನ್ನು ಕಪ್ಪನ್ನಾಗಿ ಮಾಡುವ ಮೋಸಗಾರ. (ಶ್ವೇತಕೃಷ್ಣಕಾರಕ) ಅವನು ಕೃಷ್ಣನನ್ನು ತನ್ನವನನ್ನಾಗಿ ಮಾಡಿಕೊಳ್ಳುವುದಕ್ಕೆ ಮೊದಲೇ ಶ್ರೀಕೃಷ್ಣನನ್ನು ನಮಗೆ ಸಹಾಯಕನನ್ನಾಗಿ ಮಾಡಿಕೊಳ್ಳುವುದು ಉತ್ತಮಪಕ್ಷ ಎಂಬ ಈ ಪ್ರಧಾನ ಕಾರ್ಯವನ್ನು ತಮ್ಮಲ್ಲಿ ಆಲೋಚಿಸಿದರು. ಆ ಕಾರ್ಯಕ್ಕೆ ವಿಕ್ರಮಾರ್ಜುನನನ್ನು ‘ನೀನೇ ಹೋಗಬೇಕು’ ಎಂದರು. ಅಪ್ರತಿರಥನಾದ ಅವನು ರಥವನ್ನು ಹತ್ತಿ ಮನಪವನವೇಗ (ಮನಸ್ಸಷ್ಟೂ ಗಾಳಿಯಷ್ಟೂ ವೇಗ)ದಿಂದ ದ್ವಾರಾ ವತೀಪಟ್ಟಣವನ್ನು ಸೇರಿ ಅರಮನೆಯನ್ನು ಪ್ರವೇಶಿಸಿದನು. ಕ್ಷೀರಸಮುದ್ರದಷ್ಟು ಬೆಳ್ಳಗಿರುವ ಹಾಸಿಗೆಯ ಮೇಲೆ ನಿದ್ರಿಸುತ್ತಿದ್ದ ಕೃಷ್ಣನನ್ನು ನೋಡಿದನು. ಅವನನ್ನು ಎಬ್ಬಿಸಲು ಇಷ್ಟಪಡದೆ ಕಾಲ ದೆಸೆಯಲ್ಲಿ ಮಾತನಾಡದೆ ಕುಳಿತನು. ದುರ್ಯೋಧನನೂ ಆಗಲೇ ಬಂದು ಶ್ರೀಕೃಷ್ಣನ ತಲೆದೆಸೆಯಲ್ಲಿ ಕುಳಿತನು. ಸ್ವಲ್ಪಕಾಲದ ಮೇಲೆ ೧೧. ಮಲಗಿದ್ದ ಶ್ರೀಕೃಷ್ಣನು ಸಂತೋಷದಿಂದ ಎದ್ದು ತನ್ನ ಎರಡು ಪಾದಗಳನ್ನು ಒತ್ತುತ್ತಿದ್ದ ಯುದ್ಧದಲ್ಲಿ ಜಯಶಾಲಿಯಾದ ಅರ್ಜುನನ್ನೇ ಮೊದಲು ನೋಡಿ ಬಳಿಕ ದುರ್ಯೋಧನನನ್ನು ನೋಡಿದನು. ವ|| ನೋಡಿ ತನಗೆ ನಮಸ್ಕರಿಸಿದ ಇಬ್ಬರನ್ನೂ ಆಶೀರ್ವದಿಸಿ ನೀವಿಬ್ಬರೂ ಬಂದ ಕಾರಣವನ್ನೂ ಗೃಹಕೃತ್ಯವನ್ನೂ ಹೇಳಿ ಎಂದನು. ‘ನಮ್ಮನಮ್ಮನ್ನು ಅಂಗೀಕಾರ ಮಾಡಿ ಗೆಲ್ಲಿಸಬೇಕೆಂದು’ ಕೇಳಿಕೊಳ್ಳಲು ಬಂದೆವು ಎಂದರು. ೧೨. ನನ್ನ ಮನ್ನಣೆಗೆ ನೀವಿಬ್ಬರೂ ಸಮಾನರಾದರೂ ಅರ್ಜುನನನ್ನು ಮೊದಲು ಕಂಡದ್ದರಿಂದ ನಾನು ನನ್ನನ್ನು ಅವನಿಗೆ ಕೊಟ್ಟಿದ್ದೇನೆ. ದುರ್ಯೋಧನ! ನಿನಗೆ ನನ್ನ ಚತುರ್ಬಲಗಳನ್ನೂ ಕೊಟ್ಟಿದ್ದೇನೆ. ವ|| ಎಂದು ಹೇಳಿ ತನಗೆ ಸಮಾನವಾದ ಶಕಿಯುಳ್ಳ ತನ್ನ ತಮ್ಮನಾದ ಕೃತವರ್ಮನನ್ನು ತನ್ನ

ಕಂ|| ಪ್ರಿಯ ವಿಷಯಕಾಂಕ್ಷೆಯಿಂದಿಂ
ದ್ರಿಯಂಗಳೆಂತೆಯ್ದೆ ಮನಮನಾಶ್ರಯಿಸುಗುಮಂ|
ತಯ ನಯ ಪರರಯ್ವರುಮಾ
ಶ್ರಯಿಸಿರ್ದರ್ ವಿಷಯಕಾಂಕ್ಷೆಯಿಂ ಮುರರಿಪುವಂ|| ೧೩

ಲೋಕಕ್ಕಿದರ್ಥಶಾಸ್ತ್ರದ
ಟೀಕೆನಿಸಿದ ತನ್ನ ನುಡಿ ಮನಂಗೊಳಿಸೆ ದಳ|
ತ್ಯೋಕನದ ಜಠರನಂ ನಿ
ರ್ವ್ಯಾಕುಳಮಿಂತೆಂದು ಧರ್ಮತನಯಂ ನುಡಿದಂ|| ೧೪

ಎಳೆ ರಸೆಯೊಳೞ್ದುದಂ ಭುಜ
ಬಳದಿಂ ಮುನ್ನೆತ್ತಿದಂತೆ ವಿಷಯಾಂಬುಯೊಳ್|
ಮುೞುಗಿರ್ದೆಮ್ಮಯ್ವರುಮಂ
ಬಳಿಹರ ಪಿಡಿದೆತ್ತಲೆಂದು ಬಂದೈ ಬರವಂ|| ೧೫

ಬಸಿಳ್ ಜಗತೀತ್ರಯಮುಮ
ನೊಸೆದಿಟ್ಟೋರಂತೆ ಕಾದ ಪೆಂಪಿನ ನಿಮ್ಮೀ|
ಬಸಿಱಂ ಪೊಕ್ಕೆಮ್ಮಯ್ವರ
ನಸುರಕುಳಾಂತಕ ಕಡಂಗಿ ಕಾವುದು ಪಿರಿದೇ|| ೧೬

ಮಲ್ಲಿಕಾಮಾಲೆ|| ಎನ್ನ ನನ್ನಿಯ ಪೆಂಪು ನಿನ್ನ ಮಹತ್ವದಿಂದಮೆ ಸಂದುದೆಂ
ತೆನ್ನ ಪನ್ನಗಕೇತನಂಗೆ ಧರಾವಿಭಾಗಮನಿತ್ತು ಸಂ|
ಪನ್ನ ಯೋಗ ನಿಯೋಗದಿಂದಮರಣ್ಯದೊಳ್ ನೆಲಸಿರ್ದುಣಲ್
ಬನ್ನಮಿಲ್ಲದೆ ಬಾೞ್ವುದೇಂ ಪುೞುವಾನಸಂಗೆನಗಕ್ಕುಮೇ|| ೧೭

ವ|| ಅದಲ್ಲದೆಯುಮೀ ಸೂೞೊಂದುಮೊಡಂಬಡಿಲ್ಲದೆ ಗೋಗ್ರಹಣಮನೆ ನೆವಂ ಮಾಡಿ ಸುಯೋಧನನೆಂಬ ಪಾಪಕರ್ಮನ ಮಾಡಿದನುವರಂ ನಿಮ್ಮನುಬಲದೊಳಮರಿಕೇಸರಿಯ ಭುಜಬಲದೊಳಮೆಮಗಿಂಬುವಂದುದು-

ಜೊತೆಗಾರರಾದ ತೊಂಬತ್ತಾರುಸಾವಿರ ಗೋಪಕುಮಾರರೊಡನೆ ಸೇರಿಸಿ ಕಳುಹಿಸಿದನು. ವಿಕ್ರಮಾರ್ಜುನನೂ ತಾನೂ ವಿರಾಟನಗರಕ್ಕೆ ಬಂದು ಸ್ನಾನಭೋಜನಾದಿಗಳಿಂದ ಶ್ರಮ ಪರಿಹಾರ ಮಾಡಿಕೊಂಡರು. ಮಾರನೆಯ ದಿನ ಆರುಮಂದಿಯೂ ರಾಜ್ಯಶಾಸ್ತ್ರದ ಆರುಗುಣಗಳೇ ಪ್ರತ್ಯಕ್ಷವಾಗಿ ಮೂರ್ತಿತಾಳಿದ ಹಾಗೆ ಆಲೋಚನಾಮಂದಿರವನ್ನು ಪ್ರವೇಶಮಾಡಿದರು. ೧೩. ಕಿವಿ, ಕಣ್ಣು ಮೊದಲಾದ ಪಂಚೇಂದ್ರಿಯಗಳು ತಮ್ಮ ಪ್ರಿಯಳಾದ ವಸ್ತುಗಳ ಅಪೇಕ್ಷೆಯಿಂದ ಮನಸ್ಸನ್ನು ಹೇಗೆ ಆಶ್ರಯಿಸುತ್ತವೆಯೋ ಹಾಗೆ ವಿನಿಯಮಗಳಲ್ಲಿ ಆಸಕ್ತರಾದ ಅಯ್ದುಜನ ಪಾಂಡವರೂ ತಮ್ಮ ಇಷ್ಟಾರ್ಥಸಿದ್ಧಿಗಾಗಿ ಶ್ರೀಕೃಷ್ಣನನ್ನು ಆಶ್ರಯಿಸಿದ್ದರು. ೧೪. ಧರ್ಮರಾಜನು ರಾಜನೀತಿಶಾಸ್ತ್ರದ ವ್ಯಾಖ್ಯಾನದಂತಿದ್ದ ತನ್ನ ಮಾತು ಆಕರ್ಷಕವಾಗಿರಲು ಅರಳಿದ ತಾವರೆಯನ್ನು ನಾಭಿಯಲ್ಲುಳ್ಳ (ಕಮಲನಾಭನಾದ) ಶ್ರೀಕೃಷ್ಣನಿಗೆ ಅನಾಯಾಸವಾಗಿ ಈ ರೀತಿ ಹೇಳಿದನು. ೧೫. ಕೃಷ್ಣಾ ನೀನು ಮೊದಲು ಪಾತಾಳದಲ್ಲಿ ಮುಳುಗಿದ್ದ ಭೂಮಿಯನ್ನು ನಿನ್ನ ಬಾಹುಬಲದಿಂದ ಎತ್ತಿದ ಹಾಗೆ ಇಂದ್ರಿಯಭೋಗವೆಂಬ ಸಮುದ್ರದಲ್ಲಿ ಮುಳುಗಿದ್ದ ನಮ್ಮೆ ದು ಜನವನ್ನೂ ಉದ್ಧಾರಮಾಡಬೇಕೆಂದೇ ಬಂದಿದ್ದೀಯೆ. ೧೬. ಕೃಷ್ಣಾ, ಮೂರು ಲೋಕಗಳನ್ನೂ ಸಂತೋಷದಿಂದ ಹೊಟ್ಟೆಯಲ್ಲಿಟ್ಟು ಕ್ರಮದಿಂದ ರಕ್ಷಿಸಿದ ಮಹಿಮೆಯುಳ್ಳ ನಿಮ್ಮ ಅಂತರಂಗವನ್ನು ಪ್ರವೇಶಿಸಿರುವ ನಮ್ಮೆ ದುಜನರನ್ನು ಉತ್ಸಾಹದಿಂದ ರಕ್ಷಿಸುವುದು ಹಿರಿದೇ? ೧೭. ನನ್ನ ಸತ್ಯದ ಹಿರಿಮೆಯಿಂದಲೇ ಸಾಧ್ಯವಾಯಿತು. ಅದು ಹೇಗೆನ್ನುವೆಯೊ- ದುರ್ಯೋಧನನಿಗೆ ಭೂಮಿಯ ಭಾಗವನ್ನು ಕೊಟ್ಟು ಪರಿಪೂರ್ಣವಾದ ಯೋಗಮಾರ್ಗದಲ್ಲಿ ಕಾಡಿನಲ್ಲಿ ನೆಲಸಿ ನಿರ್ವಿಘ್ನವಾಗಿ ಊಟಮಾಡುತ್ತ ಬದುಕುವುದು ಹುಳುವಂತೆ ಇರುವ ಸಾಮಾನ್ಯ ಮನುಷ್ಯನಾದ ನನಗೆ ಸಾಧ್ಯವಾಗುತ್ತದೆಯೇ. ವ|| ಅಷ್ಟೇ ಅಲ್ಲದೆ ಈ ಸಲವೂ ಒಂದು ಕಾರಣವೂ ಇಲ್ಲದೆ ಗೋಗ್ರಹಣವನ್ನು ನೆಪಮಾಡಿಕೊಂಡು ದುರ್ಯೋಧನನೆಂಬ ಪಾಪಿಯು ಏರ್ಪಡಿಸಿದ ಯುದ್ಧವು ನಿಮ್ಮ ಸಹಾಯದಿಂದಲೂ ಅರಿಕೇಸರಿಯಾದ ಅರ್ಜುನನ ಬಾಹುಬಲದಿಂದಲೂ ಪ್ರಿಯವಾಗಿ ಮುಗಿಯಿತು.

ಉ|| ಕಾದದೆ ಪನ್ನಗಧ್ವಜನಿಳಾತಳಮಂ ಕುಡನಾನುಮಿರ್ಪುದುಂ
ಸೋದರರೆಂದು ನಾಣ್ಚಿ ಸೆಡೆದಿರ್ದಪೆನಿರ್ದೊಡವಸ್ತುಭೂತನೆಂ|
ದಾದಮೆ ಭೂತಳಂ ಪೞಯೆ ತೇಜಮೆ ಕೆಟ್ಟಪುದಿಂತಿದರ್ಕೆ ಪ
ದ್ಮೋದರ ನೀನೆ ಪೇೞು ಬಗೆದು ಕಜ್ಜಮನೀಗಳೆ ದಿವ್ಯಚಿತ್ತದಿಂ|| ೧೮

ವ|| ಎಂಬುದುಮಂಬುಜೋದರಂ ನಯದ ವಿನಯದ ಮಾತು ನೀನೆಂದಂತು ತೊಱಗೆ ನೀರಡಕರಲುಮಾದಿತ್ಯಂಗೆ ಸೊಡರಿಡಲುಮಿಂದ್ರಂಗೆ ದೇವಲೋಕಮಂ ಬಣ್ಣಿಸುವಂತೆಯುಂ ನಿನಗೇನೆಂದು ಕಜ್ಜಂಬೇೞ್ವುದಾದೊಡಂ-

ಮ|| ಬೆಸಮಾರ್ ಕೊಂಡವೊಲಕ್ಕುಮೊಂದೆ ನಯಮಂ ಕೇಳ್ ನಿನ್ನ ಮುಂದೀಗಳಾ
ನುಸಿರ್ದಪ್ಪೆಂ ಸಲೆ ಮೆಲ್ಪು ಬಲ್ಪನೞಗುಂ ಕೈವಾರಮುಂ ಕೂಡೆ ಕೂ|
ರಿಸುಗುಂ ನಿಕ್ಕುವಮಪ್ಪ ಕಾರಣದಿನಿಂತೀ ಸಾಮಮಂ ಮುಂ ಪ್ರಯೋ
ಗಿಸಿದೇಕೆಟ್ಟಪುದಂದು ದಂಡಮನೆ ಮುಂ ಮುಂತಿಕ್ಕುವಂ ಮಂತ್ರಿಯೇ|| ೧೯

ಬಲಿಯಂ ವಾಮನರೂಪದಿಂದಮೆ ವಲಂ ಮುಂ ಬೇಡಿದೆಂ ಭೂರಿ ಭೂ
ತಲಮಂ ಕುಂದೆನಗಾಯ್ತೆ ಕೊಂಡೆನಿಳೆಯಂ ಕಟ್ಟಿಟ್ಟೆನಿನ್ನುಂ ರಸಾ|
ತಲದೊಳ್ ದೈತ್ಯನನಂತೆ ನೀನುಮಿಳೆಯಂ ಮುಂ ಬೇಡಿಯಟ್ಟಟ್ಟೆ ಮಾ
ರ್ಮಲೆದಾತಂ ಕುಡದಿರ್ದೊಡಂದಿಱಯ ನೀಂ ಲೋಕಂ ಗುಣಂಗೊಳ್ವಿನಂ|| ೨೦

ವ|| ಎಂದು ನುಡಿದ ಮಂದರಧರನ ನುಡಿಗೆ ಕಿನಿಸಿ ಕಿಂಕಿಱವೋಗಿ ಭೀಮಸೇನನಿಂತೆಂದಂ-

ಕಂ|| ನಿಜ ಮತಮನೆನಗೆ ವಿಱ
ಲ್ಕಜಾತ ದೊರೆಯಲ್ಲವಲ್ಲದಿರ್ದೊಡಮೆನ್ನಿಂ|
ದ ಜನಿಸಿ ನುಡಿಯಿಸಿದುವಹಿ
ಧ್ವಜನೋವದೆ ಮುನ್ನೆ ನೆಗೞ್ದ ದುಶ್ಚರಿತಂಗಳ್|| ೨೧

ಶಾ|| ಆ ಲಾಕ್ಷಾಗೃಹ ದಾಹಮೊಂದೆ ವಿಷಸಂಯುಕ್ತಾನ್ನಮಂತೊಂದೆ ಪಾಂ
ಚಾಲೀ ನಿಗ್ರಹಮೊಂದೆ ಟಕ್ಕುವಗೆಯಿಂ ಗೆಲ್ದಿರ್ದ ಜೂದೊಂದೆ ಶಾ|
ರ್ದೂಲಾಭೀಲ ವನಂಗಳೊಳ್ ತಿರಿಪಿದೀಯುರ್ಕೊಂದೆ ಲೆಕ್ಕಂಗೊಳಲ್
ಕಾಲಂ ಸಾಲವೆ ಕಂಡುಮುಂಡುಮೆಮಗಿನ್ನಾತಂಗಳೊಳ್ ಪಾೞಯೇ|| ೨೨

೧೮. ದುರ್ಯೋಧನನು ಯುದ್ಧಮಾಡದೆ ರಾಜ್ಯವನ್ನು ಕೊಡುವುದಿಲ್ಲ; ನಾನೂ ಒಡಹುಟ್ಟಿದವರೆಂದು ನಾಚಿಕೆಯಿಂದ ಸಂಕೋಚ ದಿಂದಿದ್ದೇನೆ. ಹಾಗಿದ್ದರೆ ಲೋಕದ ಜನರೆಲ್ಲ ಇವನು ಆಸ್ತಿಯಿಲ್ಲದವನು ಎಂದು ನಿಂದಿಸಿದರೆ ನನ್ನ ಕೀರ್ತಿಯೂ ಮಾಸಿಹೋಗುತ್ತದೆ. ಎಲೈ ಕಮಲನಾಭ ಇದಕ್ಕೆ ಮಾಡಬೇಕಾದ ಕಾರ್ಯವನ್ನು ನೀನು ನಿನ್ನ ದಿವ್ಯಚಿತ್ತದಲ್ಲಿ ಯೋಚಿಸಿ ಹೇಳು. ವ|| ಎನ್ನಲು ಕೃಷ್ಣನು (ಧರ್ಮರಾಜನನ್ನು ಕುರಿತು) ‘ಧರ್ಮರಾಜ ನೀತಿ ಮತ್ತು ನಡತೆಯ ದೃಷ್ಟಿಯಿಂದ ನೋಡಿದರೆ ನೀನು ಹೇಳಿದ ಹಾಗೆಯೆ ಸತ್ಯ, ನಿನಗೆ ಕಾರ್ಯರೀತಿಯನ್ನು ಹೇಗೆಂದು ತಿಳಿಸುವುದು ನದಿಗೆ ನೀರು ತುಂಬುವ ಹಾಗೆ, ಸೂರ್ಯನಿಗೆ ದೀಪವನ್ನು ಹಚ್ಚುವ ಹಾಗೆ, ಇಂದ್ರನಿಗೆ ಸ್ವರ್ಗಲೋಕವನ್ನು ಪರಿಚಯ ಮಾಡಿಸುವ ಹಾಗೆ ಆಗುತ್ತದೆ. ಆದರೂ ೧೯. ಆರಂಭಿಸಿದ ಕಾರ್ಯ ಉದ್ದೇಶಿಸಿದ ಹಾಗೆಯೇ ಆಗುವುದಿಲ್ಲ. ಕಾರ್ಯಸಾಧನೆಯಾಗುವ ಒಂದು ನೀತಿಯನ್ನು ಈಗ ನಿಮಗೆ ತಿಳಿಸುತ್ತೇನೆ. ಮಾರ್ದವವು ಒರಟುತನವನ್ನು ನಾಶಪಡಿಸುತ್ತದೆ. ಹೊಗಳಿಕೆಯು ತಕ್ಷಣವೇ ಪ್ರೀತಿಯನ್ನುಂಟುಮಾಡುತ್ತದೆ. ಆದುದರಿಂದ ಮೊದಲು ಸಾಮೋಪಾಯವನ್ನು ಉಪಯೋಗಿಸುವುದು ಸೂಕ್ತ ಎಂದು ಉಪದೇಶ ಮಾಡುವವನು ನಿಜವಾದ ಮಂತ್ರಿ. ಹಾಗಲ್ಲದೆ ಉದಾಸೀನತೆಯಿಂದ ಏನೀಗ ಎಂದು ಮೊದಲು ದಂಡೋಪಾಯವನ್ನು ಸೂಚಿಸುವವನು ಮಂತ್ರಿಯಾಗಬಲ್ಲನೇ?’ ೨೦. ಹಿಂದಿನ ಕಾಲದಲ್ಲಿ ವಾಮನನ ಆಕಾರದಲ್ಲಿ ಬಲಿಚಕ್ರವರ್ತಿಯಿಂದ ಈ ವಿಸ್ತಾರವಾದ ಭೂಮಿಯನ್ನು ತೆಗೆದುಕೊಂಡೆನು. ಆ ರಾಕ್ಷಸನನ್ನು ಇನ್ನೂ ಪಾತಾಳದಲ್ಲಿಯೇ ಕಟ್ಟಿಟ್ಟಿದ್ದೇನೆ. ಹಾಗೆಯೇ ನೀನು ರಾಜ್ಯಕ್ಕಾಗಿ ಮೊದಲು ಬೇಡಿ ದೂತನನ್ನು ಕಳುಹಿಸಿಕೊಡು. ಆತನು ಪ್ರತಿಭಟಿಸಿ ಕೊಡದಿದ್ದರೆ ಆಗ ಲೋಕವೆಲ್ಲ ಗುಣಗ್ರಹಣಮಾಡುವ ಹಾಗೆ ಯುದ್ಧಮಾಡು. ವ|| ಎಂಬುದಾಗಿ ಹೇಳಿದ ಕೃಷ್ಣನ ಮಾತಿಗೆ ಕೆರಳಿ ಕೋಪಗೊಂಡು ಭೀಮಸೇನನು ಹೀಗೆಂದನು- ೨೧. ಕೃಷ್ಣ, ನಿನ್ನ ಮಾತನ್ನು ಮೀರುವುದು ನನಗೆ ಯೋಗ್ಯವಲ್ಲ. ಅಲ್ಲದಿದ್ದರೂ ದುರ್ಯೋಧನನು ಲಕ್ಷಿಸದೆ ಮಾಡಿದ ಕೆಟ್ಟಕೆಲಸಗಳು ನನ್ನಿಂದ ಒರಟಾಗಿ ಮಾತನಾಡಿಸುತ್ತಿವೆ. ೨೨. ಅರಗಿನ ಮನೆಯಲ್ಲಿ ಸುಟ್ಟುದೊಂದೇ, ವಿಷಮಿಶ್ರವಾದ ಆಹಾರವನ್ನು ತಿನ್ನಿಸಿದುದೊಂದೇ, ದ್ರೌಪದಿಗೆ

ಕಂ|| ಜಟಮಟಿಸಿಕೊಂಡು ನಿಮ್ಮೀ
ಘಟಿಯಿಸುವೀ ಸಂ ಕೌರವರ್ಕಳೊಳೆನ್ನಿಂ|
ಘಟಿತ ಜರಾಸಂಧೋರ
ಸ್ತಟ ಸಂವೊಲೊಂದೆ ಪೊೞ್ತಳ್ ವಿಘಟಿಸದೇ|| ೨೩

ಉ|| ತೋಡುವೆನೊರ್ವನೊಳ್ಗರುಳನುರ್ವಿಗೆ ನೆತ್ತರನೆಯ್ದೆ ಪೀರ್ದುವಿ
ರ್ದಾಡುವೆನೊರ್ವನೂರುಗಳನೆನ್ನ ಗದಾಶನಿಘಾತದಿಂದೆ ನು|
ರ್ಗಾಡುವೆನೆಂದು ಲೋಕಮಱಯುತ್ತಿರೆ ಪೂಣ್ದೆನಗಂತೆ ಸಂತಸಂ
ಮಾಡದೆ ಸಂ ಮಾಡಿ ಕುರುಪುತ್ರರೊಳೆನ್ನನೆ ಜೋಡುಮಾೞರೇ|| ೨೪

ವ|| ಎಂದು ಮಸಗಿದ ಮದಾಂಧಗಂಧಸಿಂಧುರದಂತೆ ದೆಸೆಗೆ ಮಸಗಿದ ವಾಯುಪುತ್ರನಂ ಧರ್ಮಪುತ್ರಂ ಸಂತೈಸಿ-

ಮ|| ಬಕ ಕಿವಿರ ಜಟಾಸುರೋದ್ಧತ ಜರಾಸಂಧರ್ಕಳಂ ಸಂದ ಕೀ
ಚಕರಂ ನೂರ್ವರುಮಂ ಪಡಲ್ವಡಿಸಿದೀ ತ್ವಚ್ಚಂಡದೋರ್ದಂಡಮು|
ಗ್ರ ಕುರುಕ್ಷ್ಮಾಪ ಮಹೀರುಹಪ್ರಕರಮಂ ಮತ್ತೇಭವಿಕ್ರೀಡಿತ
ಕ್ಕೆ ಕರಂ ಪೋಲ್ವೆಗೆ ವಂದು ಭೀಮ ರಣದೊಳ್ ನುರ್ಗಾಡದೇಂ ಪೋಕುಮೇ|| ೨೫

ವ|| ಎಂದು ನಾರಾಯಣನುಂ ಧರ್ಮಪುತ್ರನುಂ ವೃಕೋದರನ ಮನಮನಾ ನುಡಿದು ಮತ್ತಂ ನಾರಾಯಣಂಗೆ ಯುಷ್ಠಿರಂ ನಿಷ್ಠಿತ ಕಾರ್ಯಮನನುಷ್ಕಿಸಲೆಂದಿಂತೆಂದಂ-

ಮ|| ಅವನೀನಾಥನ ಗೆಯ್ದ ಪೊಲ್ಲಮೆಗಮೆನ್ನೊಳ್ಪಿಂಗಮಿಂ ಸಕ್ಕಿಯಾ
ಗವನೀವಂತುಟನೀಯದಂತುಟನದಂ ಬಲ್ಲಂತು ಕಾಲ್ಗುತ್ತಿನೋ|
ಡವನೀ ಭಾಗದೊಳೆನ್ನ ಭಾಗಮನದಂ ತಾನೀಯದಿರ್ದಾಗಳೆ
ನ್ನವನೀ ರಕ್ಷಣ ದಕ್ಷ ದಕ್ಷಿಣ ಭುಜಸ್ತಂಭಂ ಕೊಲಲ್ ಸಾಲದೇ|| ೨೬

ವ|| ಎಂದು ಧರ್ಮರಾಜಂ ರಾಜರಾಜನಲ್ಲಿಗೆ ನಿರ್ವ್ಯಾಜದಿಂ ದಿತಿಜಕುಳ ವಿಜಯಿಯಪ್ಪಜಿತನನೆ ದೂತಕಾರ್ಯಕ್ಕಟ್ಟಿದೊಡಸುರ ವಿಜಯಿಯುಂ ಕತಿಪಯ ಪ್ರಯಾಣಂಗಳಿಂ ಮದಗಜೇಂದ್ರಪುರಮನೆಯ್ದಿ-

ಅವಮಾನಪಡಿಸಿದುದೊಂದೇ, ಮೋಸದ ರೀತಿಯಿಂದ ಗೆದ್ದ ಜೂಜೊಂದೇ, ಹುಲಿಗಳಿಂದ ಭಯಂಕರವಾದ ಕಾಡಿನಲ್ಲಿ ಅಲೆಯುವ ಹಾಗೆ ಮಾಡಿದ ಆ ಅಹಂಕಾರವೊಂದೇ-ಗಣನೆ ಮಾಡುವುದಕ್ಕೆ ಕಾಲಾವಕಾಶವೇ ಸಾಕಾಗುವುದಿಲ್ಲ! ನೋಡಿ ಅನುಭವಿಸಿಯೂ ಇನ್ನೂ ಅವರಲ್ಲಿ ನಮಗೆ ಧರ್ಮಪಾಲನೆಯೆ? ೨೩. ಉತ್ಸಾಹದಿಂದ ಈಗ ನೀವು ಕೌರವರಲ್ಲಿ ಮಾಡಬೇಕೆಂದಿರುವ ಸಂಕಾರ್ಯವು ಕೂಡಿಕೊಂಡಿರುವ ಜರಾಸಂಧನ ಎದೆಯ ಜೋಡಣೆಯ ಹಾಗೆ ನನ್ನಿಂದ ಅಲ್ಪಕಾಲದಲ್ಲಿ ಮುರಿದುಹೋಗದೆ ಇರುತ್ತದೆಯೇ?

೨೪. ಒಬ್ಬನ (ದುಶ್ಶಾಸನನ) ಹೊಟ್ಟೆಯೊಳಗಿನ ಕರುಳನ್ನು ನೆಲಕ್ಕೆ ತೋಡಿಹಾಕುತ್ತೇನೆ. ರಕ್ತವನ್ನು ಪೂರ್ಣವಾಗಿ ಹೀರಿ ಔತಣಮಾಡುತ್ತೇನೆ. ಒಬ್ಬನ (ದುರ್ಯೋಧನನ) ತೊಡೆಗಳನ್ನು ನನ್ನ ಗದೆಯೆಂಬ ವಜ್ರಾಯುಧದ ಪೆಟ್ಟಿನಿಂದ ನುಚ್ಚುನೂರಾಗಿ ಮಾಡುತ್ತೇನೆ ಎಂದು ಪ್ರಪಂಚವೆಲ್ಲ ತಿಳಿದ ಹಾಗೆ ಪ್ರತಿeಮಾಡಿದ ನನಗೆ ಸಂತೋಷವನ್ನುಂಟು ಮಾಡದೆ ಕೌರವರೊಡನೆ ಸಂಮಾಡಿ ನನ್ನನ್ನು ಅವರಿಗೆ ಜೊತೆಮಾಡುತ್ತೀರಾ? ವ|| ಎಂದು ಮದದಿಂದ ಕುರುಡಾದ ಮದ್ದಾನೆಯಂತೆ ದಿಕ್ಕುದಿಕ್ಕಿಗೂ ವಿಜೃಂಭಿಸಿದ ಭೀಮಸೇನನನ್ನು ಧರ್ಮರಾಯನು ಸಮಾಧಾನಮಾಡಿದನು. ೨೫. ಬಕ, ಕಿಮ್ಮೀರ, ಜಟಾಸುರ, ಗರ್ವಿಷ್ಠರಾದ ಜರಾಸಂಧಾದಿಗಳನ್ನೂ ಪ್ರಸಿದ್ಧರಾದ ನೂರು ಕೀಚಕರನ್ನೂ ಕೆಳಗೆ ಬೀಳುವ ಹಾಗೆ ಮಾಡಿಸಿದ ನಿನ್ನ ಭಯಂಕರವಾದ ಕೌರವರಾಜರೆಂಬ ಮರಗಳ ಸಮೂಹವು ಮದ್ದಾನೆಯಾಟಕ್ಕೆ ಸಮನಾಗಿ ನುಚ್ಚು ಮಾಡದೇ ಬಿಡುತ್ತದೆಯೆ? ವ|| ಎಂದು ಕೃಷ್ಣನೂ ಧರ್ಮರಾಯನೂ ಭೀಮನ ಮನಸ್ಸನ್ನು ಸಮಾಧಾನಪಡಿಸಿದರು. ಪುನ ಧರ್ಮರಾಯನು ಕೃಷ್ಣನಿಗೆ ಮಾಡಬೇಕಾದ ಕಾರ್ಯವನ್ನು ಹೀಗೆಂದು ತಿಳಿಸಿದನು. ೨೬. ರಾಜನಾದ ದುರ್ಯೋಧನನು ಮಾಡಿದ ಅಪರಾಧಕ್ಕೂ ನನ್ನ ಒಳ್ಳೆಯ ಸ್ವಭಾವಕ್ಕೂ ನೀನು ಸಾಕ್ಷಿಯಾಗಿದ್ದುಕೊಂಡು ಅವನು ಭೂಮಿಯನ್ನು ಕೊಡುವುದನ್ನೂ ಕೊಡದಿರುವುದನ್ನೂ ಸಾಧ್ಯವಿದ್ದಷ್ಟು ವಿಚಾರಮಾಡಿ ನೋಡು. ನ್ಯಾಯಯುತವಾಗಿ ನನಗೆ ಬರಬೇಕಾದುದನ್ನು ಅವನು ಕೊಡದಿದ್ದಾಗ ನನ್ನ ಭೂಭಾರರಕ್ಷಣಾಸಮರ್ಥವಾದ ಕುಂಭದಂತಿರುವ ಬಲತೋಳು ಅವನನ್ನು ಕೊಲ್ಲಲು ಸಾಲದೇ ಹೋಗುತ್ತದೆಯೇ? ವ|| ಎಂದು ಧರ್ಮರಾಯನು ಕೃಷ್ಣನನ್ನು ಕೌರವಚಕ್ರವರ್ತಿಯ ಹತ್ತಿರಕ್ಕೆ ನಿಷ್ಕಪಟಿಯಾಗಿ- ಸರಳಹೃದಯನಾಗಿ ದೂತಕಾರ್ಯಕ್ಕಾಗಿ ಸಂಯನ್ನು ಏರ್ಪಡಿಸುವ ರಾಯಭಾರಿಯಾಗಿ ಕಳುಹಿಸಿದನು. ಕೃಷ್ಣನು ಕೆಲವು ದಿವಸದ ಪ್ರಯಾಣದಿಂದ ಹಸ್ತಿನಾಪಟ್ಟಣವನ್ನು ಸೇರಿದನು.

ಚಂ|| ಮದಗಜ ಬೃಂಹಿತಧ್ವನಿ ತುರಂಗಮ ಹೇಷಿತಘೋಷದೊಳ್ ಪೊದ
ೞ್ದೊಜವೆ ಗಭೀರ ರ ಮುರಜಧ್ವನಿ ಯೌವನ ಮತ್ತಕಾಮಿನೀ|
ಮೃದು ಪದ ನೂಪುರ ಕ್ವಣಿತದೊಳ್ ಪೆಣೆದೊಂದಿರೆ ಚಕ್ರಿಗುಂಟುಮಾ
ಡಿದುದು ಪೊೞಲ್ ಸುರಾದ್ರಿಮಥಿತಾಂಬುಜಾತನಿನಾದ ಶಂಕೆಯಂ|| ೨೭

ವ|| ಅಂತು ನಾಗಪುರಮನಿೞಸುವ ನಾಗಪುರಮನಾ ನಾಗಶಯನಂ ಪೊಕ್ಕು ವಿದುರಂ ಪಾಂಡವ ಪಕ್ಷಪಾತಿಯಪ್ಪುದಱಂದಾತನ ಮನೆಗೆ ವರೆ ತನಗಿದಿರ್ವಂದ ಕೊಂತಿಗಸುರಾಂತಕನೆಱಗಿ ತನಗೆಱಗಿದ ವಿದುರನಂ ಪರಸಿ ರಥದಿಂದಮಿೞದು ಮಣಿಮಯ ಪೀಠದೊಳ್ ಕುಳ್ಳಿರ್ದು ಪಾಂಡುತನೂಜರ ಕುಶಲವಾರ್ತೆಯನಱಪೆ ತದನಂತರಂ ವಿದುರನಜನನೇಗೆಯ್ವ ತೆಱನುಮನಱಯದೆ-

ಕಂ|| ತೀವಿದ ಮಜ್ಜನದಿಂ ಸ
ದ್ಭಾವದಿನೊಸೆದೆತ್ತಿದೊಂದು ಬೋನದೊಳಂ ನಾ|
ನಾ ವಿಧದ ಪದೆಪಿನೊಳ್ ಹರಿ
ಗಾವಗಮಾಱದುದು ಪಥಪರಿಶ್ರಮಮೆಲ್ಲಂ|| ೨೮

ವ|| ಅಂತು ವಿದುರನಜನನುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ಬಂದ ಬರವನಾಗಳೆ ಸುಯೋಧನಂಗಱಪುವುದುಂ ರಾಜರಾಜನುಱದೆ ಕಿಱುನಗೆ ನಕ್ಕು ನಾಳಿನೋಲಗದೊಳ್ ತಂದು ಕಾಣಿಸೆಂಬುದುಂ ಮಱುದಿವಸಂ ನೇಸಱು ಮೂಡಿದಾಗಳಾದಿತ್ಯನಂತನೇಕಮಣಿಮಯೂಖ ವಿಜೃಂಭಮಾಣಾಖಂಡಳ ವಿಳಂಬಿತಾಭೀಳ ಕೋದಂಡವಿಳಾಸ ವಿಭ್ರಮ ಸಿಂಹಾಸನಾಸೀನನುಂ ಪ್ರಮದಾಹಸ್ತವಿನ್ಯಸ್ತ ವಾಮಕ್ರಮಕಮಳನು ಮನವರತ ಸುರಿತ ತಾರಕಾಕಾರ ಮುಕ್ತಾಭರಣ ಕಿರಣ ನಿಕರ ವಿಳಸಿತ ವಿಶಾಲೋರಸ್ಥಳನುಮನಂತ ಸಾಮಂತ ಮಕುಟ ಮಾಣಿಕ್ಯ ಮಯೂಖ ಮಂಜರೀಜಾಳ ಪಲ್ಲವಿತಾಸ್ಥಾನಮಂಟಪನುಮಾಗಿ ಸಭಾಮಂಟಪದೊಳೊಡ್ಡೋಲಗಂಗೊಟ್ಟೆಡೆ ವಱಯದವರವರ ಪಡೆದ ಪ್ರತಿಪತ್ತಿಗಳನಱದಿಕ್ಕಿದ ಲೋಹಾಸನಂಗಳೊಳಂ ಮಣಿಖಚಿತ ಕನಕ ಪೀಠಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಂ ಭೀಷ್ಮ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಶಲ್ಯ ಶಕುನಿ ಬಾಹ್ಲೀಕ ಸೋಮದತ್ತ ಭಗದತ್ತ ಭೂರಿಶ್ರವ ಪ್ರಭೃತಿಗಳನಿರಿಸಿ ಮತ್ತಮನೇಕ ದೇಶಾಶ್ವರರೆಲ್ಲರುಮನೆಡೆಯಱದು ಕುಳ್ಳಿರಿಸಿ ಪೆಂಡವಾಸದೊಳ್ವೆಂಡಿರನೆರಡೋಳಿಯೊಳಮಿರಿಸಿ ನೂರ್ವರ್ ತಮ್ಮಂದಿರುಮಂ ಪಿಂತಿರಿಸಿ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಮಂ ಮುಂತಿರಿಸಿ ಯುವರಾಜನಪ್ಪಣುಗ ದುಶ್ಶಾಸನನುಮನಂಗರಾಜನಪ್ಪಣುಗಾಳ್ ಕರ್ಣನು ಮನೆರಡುಂ ಕೆಲದೊಳಂ ತೊಡೆ ಸೋಂಕೆ ಕುಳ್ಳಿರಿಸಿ-

೨೭. ಆ ಹಸ್ತಿನಾಪಟ್ಟಣವು ಕುದುರೆಗಳ ಹೇಷಾರವ, ಮದ್ದಾನೆಗಳ ಘೀಂಕಾರಶಬ್ದ, ಮದ್ದಲೆಗಳ ಗಂಭೀರನಾದ, ಯುವತಿಯರೂ, ಮದಿಸಿರುವವರೂ ಆದ ಸ್ತ್ರೀಯರ ಕಾಲಂದಿಗೆಗಳ ಶಬ್ದ ಇವುಗಳಿಂದ ಮಂದರ ಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಶಂಕೆಯನ್ನು ಕೃಷ್ಣನಿಗೆ ಉಂಟುಮಾಡಿತು. ವ|| ಭೋಗವತೀಪಟ್ಟಣವನ್ನು ಕೀಳುಮಾಡುವ ಹಸ್ತಿನಾಪಟ್ಟಣವನ್ನು ಶ್ರೀಕೃಷ್ಣನು ಪ್ರವೇಶಿಸಿದನು. ವಿದುರನು ಪಾಂಡವಪಕ್ಷಪಾತಿಯಾದುದರಿಂದ ಆತನ ಮನೆಗೆ ಬಂದನು. ತನಗೆ ಎದುರಾಗಿ ಬಂದ ಕುಂತಿದೇವಿಗೆ ಕೃಷ್ಣನು ನಮಸ್ಕಾರ ಮಾಡಿ ತನಗೆ ನಮಸ್ಕಾರ ಮಾಡಿದ ವಿದುರನನ್ನು ಹರಸಿದನು. ತೇರಿನಿಂದಿಳಿದು ರತ್ನಖಚಿತವಾದ ಪೀಠದಲ್ಲಿ ಕುಳಿತುಕೊಂಡು ಪಾಂಡವರ ಕ್ಷೇಮಸಮಾಚಾರವನ್ನು ತಿಳಿಸಿದನು. ಕೃಷ್ಣನಿಗೆ ಸತ್ಕಾರಮಾಡುವ ರೀತಿಯು ವಿದುರನಿಗೆ ತೋರದಾಯಿತು. ೨೮. ಅವನು ಸಿದ್ಧಪಡಿಸಿದ ಸ್ನಾನದಿಂದಲೂ ಒಳ್ಳೆಯ ಮನಸ್ಸಿನಿಂದ ಬಡಿಸಿದ ಆಹಾರದಿಂದಲೂ ನಾನಾರೀತಿಯಾದ ಸಾಮಾನ್ಯ ಸತ್ಕಾರಗಳಿಂದಲೂ ಕೃಷ್ಣನಿಗೆ ಮಾರ್ಗಾಯಾಸವೆಲ್ಲ ಪೂರ್ಣವಾಗಿ ಶಮನವಾಯಿತು. ವ|| ವಿದುರನು ಕೃಷ್ಣನನ್ನು ಯೋಗ್ಯವಾದ ಸನ್ಮಾನಗಳಿಂದ ಸಂತೋಷಪಡಿಸಿ ಅವನ ಬರುವಿಕೆಯನ್ನು ದುರ್ಯೋಧನನಿಗೆ ತಿಳಿಸಿದನು. ಚಕ್ರವರ್ತಿಯು ಸುಮ್ಮನಿರಲಾರದೆ ಹುಸಿನಗೆ ನಕ್ಕು ನಾಳೆಯ ಸಭೆಯಲ್ಲಿ ತಂದು ಕಾಣಿಸು ಎಂದನು. ಮಾರನೆಯ ದಿನ ಸೂರ್ಯೋದಯವಾದಾಗ ಸೂರ್ಯನಂತೆ ಅನೇಕ ರತ್ನಕಿರಣಗಳಿಂದ ಮೆರೆಯುತ್ತಿರುವ ಇಂದ್ರನಂತೆ ಉದ್ದವೂ ಭಯಂಕರವೂ ಆದ ಬಿಲ್ಲಿನ ವೈಭವಯುಕ್ತವಾದ ವಿಳಾಸದಿಂದ ಕೂಡಿದ ಸಿಂಹಾಸನದಲ್ಲಿ ಕುಳಿತನು. ಸ್ತ್ರೀಯರು ತಮ್ಮ ಕಯ್ಯಿಂದ ಅವನ ಎಡಗಾಲನ್ನು ಒತ್ತುತ್ತಿದ್ದರು. ಅವನ ವಿಸ್ತಾರವಾದ ಎದೆಯನ್ನು ಅಲಂಕರಿಸಿದ ಆಭರಣಗಳು ನಕ್ಷತ್ರಗಳಂತೆ ಪ್ರಕಾಶಮಾನವಾಗಿದ್ದುವು. ಅನಂತ ಸಾಮಂತ ರಾಜರ ಕಿರೀಟದ ಮಾಣಿಕ್ಯರತ್ನಕಾಂತಿಸಮೂಹದಿಂದ ಸಭಾಮಂಟಪವು ವಿರಾಜಮಾನವಾಗಿದ್ದಿತು. ಆ ಸಭಾಮಂಟಪದಲ್ಲಿ ದುರ್ಯೋಧನನು ಒಡ್ಡೋಲಗದಲ್ಲಿದ್ದನು. ಆ ಸಭಾಮಂಟಪದ ಮಧ್ಯೆ ಅವಕಾಶವೇ ಇಲ್ಲದೆ ಒತ್ತಾಗಿ ಅವರ ಮರ‍್ಯಾದಾನುಗುಣವಾಗಿ ಸಿದ್ಧಪಡಿಸಿದ್ದ ಲೋಹಪೀಠಗಳಲ್ಲಿಯೂ ರತ್ನಖಚಿತವಾದ ಸುವರ್ಣಾಸನಗಳಲ್ಲಿ ಸೇರಿಸಿರುವ ಮೆತ್ತೆಗಳಲ್ಲಿಯೂ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಶಲ್ಯ, ಶಕುನಿ, ಬಾಹ್ಲೀಕ, ಸೋಮದತ್ತ, ಭಗದತ್ತ, ಭೂರಿಶ್ರವರೇ ಮೊದಲಾದವರು ಕುಳಿತಿದ್ದರು. ಇತರ ಅನೇಕದೇಶಾಶರೆಲ್ಲ ತಮ್ಮ ತಮ್ಮ ಸ್ಥಾನಾನುಗುಣವಾಗಿ ಮಂಡಿಸಿದ್ದರು. ರಾಣಿವಾಸದ ಉತ್ತಮಸ್ತ್ರೀಯರು ಎರಡುಪಕ್ಕದಲ್ಲಿಯೂ ಇದ್ದರು. ನೂರುಜನ ತಮ್ಮಂದಿರೂ ಹಿಂದುಗಡೆ ಇದ್ದರು. ಲಕ್ಷಣನೇ ಮೊದಲಾದ

ಮ|| ನನೆಯಂಬಂ ಮಸೆದನ್ನರಪ್ಪ ಪಲರೊಳ್ವೆಂಡಿರ್ ಮನಂಗೊಂಡೊಱ
ಲ್ವಿನಮೆತ್ತಂ ಕೊಳೆ ಪಾಡೆ ಜೇನ ಮೞೆ ಕೊಂಡಂತಪ್ಪ ಗೇಯಂ ಮನ|
ಕ್ಕೆ ನೆಲಕ್ಕಿಟ್ಟಳಮಾಗೆ ಸಂದ ರಥಿಕರ್ ಕಣ್ಗೊಳ್ವಿನಂ ತತ್ಸುಯೋ
ಧನನೊಡ್ಡೋಲಗಮಿಂದ್ರನೋಲಗಮುಮಂ ಕೀೞುಡಿ ಕಣ್ಗೊಪ್ಪುಗುಂ|| ೨೯

ವ|| ಅಂತು ಪಿರಿದೋಲಗಂಗೊಟ್ಟಿರ್ಪನ್ನೆಗಂ ಮುನ್ನಮೆ ಮೂಱನೆಯ ಬಾಗಿಲೊಳ್ ಬಂದಿರ್ದನಂತನ ಬರವಂ ಪಡಿಯಱಂ ಬಿನ್ನಪಂಗೆಯ್ಯೆ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿ-

ಕಂ|| ಲೋಕ ಗುರು ಶಂಖ ಚಕ್ರ ಗ
ದಾಕರನತಿಶಯ ಚತುರ್ಭುಜಂ ಜನಜನಿತ|
ವ್ಯಾಕುಳದೆ ಬಂದನೆಂದೊಡೆ
ಲೋಕದೊಳಿನ್ನೆನ್ನ ದೊರೆಗೆ ಪಿರಿಯರುಮೊಳರೇ|| ೩೦

ವ|| ಎಂದು ತನ್ನ ಬೆಸನನೆ ಪಾರ್ದು ಲಲಾಟ ತಟ ಘಟಿತ ಮುಕುಳಿತ ಕರಕಮಳನಾಗಿರ್ದ ಮಹಾಪ್ರತಿಹಾರನ ಮೊಗಮಂ ನೋಡಿ-

ಮ|| ಬರವೇೞೆಂಬುದುಮಂಜನಾಚಲದವೋಲ್ ಕಣ್ಗೊಪ್ಪಿ ಬರ್ಪಂಬುಜೋ
ದರನಂ ಮೆಲ್ಲನೆ ನೋಡಿ ಮೆಯ್ಯಲಸಿದಂತೆಂತಾನುಮೆೞರ್ದು ಕೇ|
ಸರಿ ಪೀಠಾಗ್ರದಿನಪ್ಪಿಕೊಂಡು ಪೊಡೆವಟ್ಟುಚ್ಚಾಸನಾಸೀನನಾ
ಗಿರವೇೞ್ದರ್ಘ್ಯಮನಿತ್ತನಂತರಮೆ ತಾಂ ಕುಳ್ಳಿರ್ದ ದುರ್ಯೋಧನಂ|| ೩೧

ವ|| ಅಂತು ಮಧುಕೈಟಭಾರಾತಿಯ ಮೊಗಮಂ ನೋಡಿ-

ಕಂ|| ಸಂಸಾರದೊಳಿನ್ನೆನ್ನವೊ
ಲೇಂ ಸೈಪಂ ಪಡೆದರೊಳರೆ ನೀಂ ಬರೆ ಪೆಱತೇಂ|
ಕಂಸಾರೀ ಯುಷ್ಮತ್ಪದ
ಪಾಂಸುಗಳಿಂದಾಂ ಪವಿತ್ರಗಾತ್ರನೆನಾದೆಂ|| ೩೨

ಬಂದ ಬರವಾವುದಿದು ಬಿಸ
ವಂದಂ ಬೆಸನಾವುದಾವ ಬೆಸನಂ ಬೆಸಸಲ್|
ಬಂದಿರ್ ಬರವಿನೊಳೀಗಳ
ಗುಂದಲೆಯಾಯ್ತೆನಗಮೀಗಳೆಂಬುದುಮಾಗಳ್|| ೩೩

ನೂರು ಜನ ಮಕ್ಕಳು ಮುಂಭಾಗವನ್ನಲಂಕರಿಸಿದ್ದರು. ಯುವರಾಜನೂ ಪ್ರೀತಿಯ ತಮ್ಮನೂ ಎರಡು ಪಕ್ಕಗಳಲ್ಲಿಯೂ ತೊಡೆಸೋಂಕುವ ಹಾಗೆ ಹತ್ತಿರದಲ್ಲಿ ಕುಳಿತಿದ್ದರು. ೨೯. ಪುಷ್ಪಬಾಣವನ್ನು ಮಸೆದ ಹಾಗಿರುವ ಅನೇಕ ಒಳ್ಳೆಯ ಸ್ತ್ರೀಯರು ಆಕರ್ಷಕವಾಗಿ ಪ್ರೀತಿಯಿಂದ ಹಾಡುತ್ತಿದ್ದರು. ಜೇನಮಳೆಯನ್ನು ಸುರಿಸಿದಂತಿರುವ ಸಂಗೀತವು ಎಲ್ಲೆಡೆಯಲ್ಲಿಯೂ ವ್ಯಾಪಿಸಿದ್ದಿತು. ಮನಸ್ಸಿಗೂ ಆಸ್ಥಾನಮಂಟಪಕ್ಕೂ ರಮಣೀಯವಾಗಿರುವಂತೆ ಪ್ರಸಿದ್ಧವಾಗಿರುವ ರಥಿಕರು ಚಿತ್ತಾಕರ್ಷಕವಾಗಿರಲು ಆ ದುರ್ಯೋಧನನ ಆಸ್ಥಾನಮಂಟಪವು ಇಂದ್ರನ ಸಭೆಯನ್ನು ಕೀಳ್ಮಾಡಿ ಕಣ್ಣಿಗೆ ಒಪ್ಪುವಂತಿತ್ತು. ವ|| ಅಂತಹ ಒಡ್ಡೋಲಗದಲ್ಲಿ ದುರ್ಯೋಧನನಿಗೆ ಮೂರನೆಯ ಬಾಗಿಲಿನಲ್ಲಿ ಬಂದಿದ್ದ ಕೃಷ್ಣನ ಆಗಮನವನ್ನು ಪ್ರತೀಹಾರಿಯು ಬಂದು ತಿಳಿಸಲು ದುರ್ಯೋಧನನು ಭೀಷ್ಮನ ಮುಖವನ್ನು ನೋಡಿ- ೩೦. ಲೋಕಗುರುವೂ ಶಂಖಚಕ್ರಗದಾಪಾಣಿಯೂ ಅತಿಶಯವಾದ ನಾಲ್ಕುತೋಳುಗಳುಳ್ಳವನೂ ಆದ ಕೃಷ್ಣನೇ ಲೋಕಪ್ರಸಿದ್ಧವಾದ ಚಿಂತೆಯಿಂದ ನನ್ನ ಬಳಿಗೆ ಬಂದಿದ್ದಾನೆ ಎನ್ನುವಾಗ ಲೋಕದಲ್ಲಿ ನನಗೆ ಸಮಾನವಾದ ಹಿರಿಮೆಯುಳ್ಳವರೂ ಇದ್ದಾರೆಯೇ ಎಂದನು. ವ|| ತನ್ನ ಅಪ್ಪಣೆಯನ್ನೇ ನಿರೀಕ್ಷಿಸುತ್ತ ಕೈಮುಗಿದು (ಮೊಗ್ಗಾಗಿ ಮಾಡಿದ್ದ ಕರಕಮಲವನ್ನು ಮುಖದ ಸಮೀಪದಲ್ಲಿ ಸೇರಿಸಿದ್ದ) ನಿಂತಿದ್ದ ಮಹಾದ್ವಾರಪಾಲಕನ ಮುಖವನ್ನು ನೋಡಿ- ೩೧. ‘ಬರಹೇಳು’ ಎಂದನು. ಅಂಜನ ಪರ್ವತದಂತೆ ಕಣ್ಣಿಗೆ ಮನೋಹರವಾಗಿರುವಂತೆ ಕೃಷ್ಣನು ಪ್ರವೇಶಿಸಿದನು. ಅವನನ್ನು ನಿಧಾನವಾಗಿ ನೋಡಿ ಶರೀರಕ್ಕೆ ಏನೋ ಆಯಾಸವಾಗಿರುವಂತೆ ಹೇಗೋ ಎದ್ದು ಸಿಂಹಾಸನದಿಂದಲೇ ಆಲಿಂಗನಮಾಡಿಕೊಂಡು ನಮಸ್ಕಾರಮಾಡಿ ಎತ್ತರವಾದ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ಹೇಳಿದನು. ಅರ್ಘ್ಯವನ್ನು ಕೊಟ್ಟಾದಮೇಲೆಯೇ ದುರ್ಯೋಧನನು ತಾನೂ ಕುಳಿತುಕೊಂಡನು. ವ|| ಮಧುಕೈಟಭರೆಂಬವರ ಶತ್ರುವಾದ ಕೃಷ್ಣನ ಮುಖವನ್ನು ನೋಡಿ ಹೇಳಿದನು. ೩೨. ‘ಕೃಷ್ಣ, ನೀನು ಬರಲಾಗಿ ಸಂಸಾರದಲ್ಲಿ ಇನ್ನು ಮೇಲೆ ನನ್ನಂತಹ ಅದೃಷ್ಟಶಾಲಿಗಳಾದರೂ ಇದ್ದಾರೆಯೇ? ಮತ್ತೇನು ನಿನ್ನ ಪಾದಧೂಳಿಯಿಂದ ನಾನು ಪರಿಶುದ್ಧವಾದ ಶರೀರವುಳ್ಳವನಾಗಿದ್ದೇನೆ. ೩೩. ತಾವು ದಯಮಾಡಿಸಿದ ಕಾರಣ ಯಾವುದು? ನಿಮ್ಮ ಆಗಮನ ಆಶ್ಚರ್ಯಕರವಾದುದು;

ಅಯ ನಯ ಪರಾಕ್ರಮೋಪಾ
ಶ್ರಯಂಗಳಂ ಶ್ರೀಗಡರ್ಪುಮಾಡಿದ ನಿನ್ನಿಂ|
ದ್ರಿಯ ಜಯಮೆ ಕೂಡೆ ಲೋಕ
ತ್ರಯದಿಂ ಪೊಗೞಸಿದುದಿಂತು ಪಿರಿಯರುಮೊಳರೇ|| ೩೫

ಕಂ|| ಉನ್ನತನೆ ಆಗಿಯುಂ ನುಡಿ
ನನ್ನಿಯನಳವಣ್ಮನಱವು ವಿನಯಮನಾದಂ|
ಮನ್ನಣೆ ಗುರುಜನಮಂ ನೆ
ಮನ್ನಿಸಿದುದು ಪಿರಿಯ ಸಿರಿಯೊಳೇಂ ಸುಜನತೆಯೋ|| ೩೬

ಕುವಳಯಬಾಂಧವನೆಸೆವನೆ
ಕುವಳಯಮಂ ಬೆಳಸಿ ಕುವಳಯಂ ಪೊಱಗೆನೆ ಪಾಂ|
ಡವರೆ ಪೊಱಗಾಗೆ ನಿನಗೀ
ಕುವಳಯಪತಿಯೆಂಬ ಪೆಂಪೊಡಂಬಡೆ ನೃಪತೀ|| ೩೭

ಮನಕತದಿಂದೊರ್ವರ
ನಿನಿಸನಗಲ್ದಿರ್ದಿರಿನಿಸೆ ನಿಮಗಂ ತಮಗಂ|
ಮುನಿಸುಂಟೆ ಕಾಯ್ದ ಬೆನ್ನೀರ್
ಮನೆ ಸುಡದೆಂಬೊಂದು ನುಡಿಯವೋಲ್ ಕುರುರಾಜಾ|| ೩೮

ಪೊಂಗುವ ಮಲೆಪರ ಮಲೆಗಳ
ಡಂಗಂ ಕಣ್ಮಲೆವ ಮಂಡಲಂಗಳ್ ಪ್ರತ್ಯಂ|
ತಂಗಳೆನಲೊಳವೆ ಪಾಂಡವ
ರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ|| ೩೯

ಪಟ್ಟದ ಮೊದಲಿಗರಾಜಿಗೆ
ಜಟ್ಟಿಗರವರೆಂದುಮಾಳ್ವ ಮುನ್ನಿನ ನೆಲನಂ|
ಕೊಟ್ಟು ಬೞಯಟ್ಟು ನಿನಗೊಡ
ವುಟ್ಟಿದರಾ ದೊರೆಯರಾಗೆ ತೀರದುದುಂಟೇ|| ೪೦

ಮುನ್ನಿನ ನೆಲನಂ ಕುಡುಗೆಮ
ಗೆನ್ನರ್ ದಾಯಿಗರೆಮೆನ್ನರಂತಲ್ತಿಂತ|
ಲ್ತೆನ್ನರ್ ಕರುಣಿಸಿ ದಯೆಯಿಂ
ದಿನ್ನಿತ್ತುದೆ ಸಾಲ್ಗುಮೆಂಬರೆಂಬುದನೆಂಬರ್|| ೪೧

ಯಾವ ಕಾರ್ಯವನ್ನು ಆe ಮಾಡಲು ಬಂದಿದ್ದೀರಿ? ಈಗ ನಿಮ್ಮ ಬರುವಿಕೆಯಿಂದ ನನಗೂ ಗೌರವವುಂಟಾಗಿದೆ ಎಂದು ಪ್ರಶ್ನೆ ಮಾಡಿದನು. ಆಗ- ೩೪. ಆ ಸಭಾಸ್ಥಾನದಲ್ಲಿ ಕೃಷ್ಣನು ತನ್ನ ಅಭಿನಯದಿಂದಲೇ ಮಾತುಗಳನ್ನು ಜೋಡಿಸುತ್ತಿರಲು ಹಲ್ಲುಗಳ ಕಾಂತಿಯು ಹಾಸುಹೊಕ್ಕಾಗಿ ಹರಡಿ ಸಭಾಭವನವು ಪ್ರಕಾಶಮಾನವಾಗಿರಲು ಮಾತನಾಡಿದನು. ೩೫. ನಯ ನೀತಿ ಪರಾಕ್ರಮಗಳನ್ನು ಯಶೋಲಕ್ಷ್ಮಿಗೆ ಅನವನ್ನಾಗಿಸಿರುವ ಜಿತೇಂದ್ರಿಯತ್ವವು ಮೂರುಲೋಕಗಳಿಂದಲೂ ಹೊಗಳಿಸಿಕೊಳ್ಳುತ್ತಿದೆ. ನಿನ್ನಂತಹ ಹಿರಿಯರು ಯಾರಿದ್ದಾರೆ? ೩೬. ಉನ್ನತವಾಗಿದ್ದರೂ ನಿನ್ನ ಮಾತಿನಲ್ಲಿ ಸತ್ಯಸಂಧತೆಯೂ ಶಕ್ತಿಯಲ್ಲಿ ಪರಾಕ್ರಮವೂ ಪಾಂಡಿತ್ಯದಲ್ಲಿ ವಿನಯವೂ ಹಿರಿಯರಲ್ಲಿ ಮರ್ಯಾದೆಯೂ ನಿನ್ನಲ್ಲಿ ಶೋಭಿಸುತ್ತಿವೆ. ಹೆಚ್ಚಾದ ಸಿರಿಯಿದ್ದರೂ ನಿನ್ನಲ್ಲಿ ಸೌಜನ್ಯವಿದೆ! ೩೭. ಚಂದ್ರನು ಭೂಮಿಯನ್ನೆಲ್ಲ ಬೆಳಗಿಸಿ ಕನ್ನೆ ದಿಲೆಗೆ ಮಾತ್ರ ಹೊರಗಾಗಿದ್ದಾನೆ ಎಂದರೆ ಸೊಗಯಿಸುತ್ತಾನೆಯೆ? ಹಾಗೆಯೇ ಪಾಂಡವರು ಹೊರಗಾಗಿದ್ದರೆ ನಿನಗೆ ಭೂಪತಿ (ಚಕ್ರವರ್ತಿ)ಯೆಂಬ ಹಿರಿಮೆ ಒಪ್ಪುತ್ತದೆಯೇ? ೩೮. ಇದುವರೆಗೆ ಏನೋ ಮನಸ್ತಾಪದಿಂದ ಒಬ್ಬರನ್ನೊಬ್ಬರು ಅಗಲಿದ್ದೀರಿ ಇಷ್ಟೇ. ನಿಮಗೂ ಅವರಿಗೂ ಕ್ರೋಧವುಂಟೆ? ದುರ್ಯೋಧನ, ಕಾದ ಬಿಸಿನೀರು ಮನೆಯನ್ನು ಸುಡುವುದೆ? ೩೯. ಕೌರವವಂಶವೆಂಬ ಆಕಾಶಕ್ಕೆ ಸೂರ್ಯನಂತಿರುವ ಎಲೈ ದುರ್ಯೋಧನನೇ ಪಾಂಡವರೊಡನೆ ಸ್ನೇಹವನ್ನು ಗಳಿಸಿದರೆ ನಿನಗೆ ಪ್ರತಿಭಟಿಸುವ ಪರ್ವತರಾಜರ ಸುಂಕದ ಕಟ್ಟೆಗಳೂ ಅಹಂಕಾರದಿಂದ ವರ್ತಿಸುವ ದೇಶಗಳೂ ಗಡಿಪ್ರದೇಶಗಳೂ ಎನ್ನುವುವು ಇರುತ್ತವೆಯೇ? ೪೦. ಅದೂ ಇರಲಿ, ಅವರು ರಾಜ್ಯಪಟ್ಟಕ್ಕೆ ಮೊದಲು ಅರ್ಹರಾದವರು, ಯುದ್ಧದಲ್ಲಿ ಶೂರರಾದವರು. ಅವರು ಯಾವಾಗಲೂ ಮೊದಲಿಂದ ಆಳುತ್ತಿದ್ದ ರಾಜ್ಯವನ್ನು ಅವರಿಗೆ ಕೊಟ್ಟು ಆ ಸಮಾಚಾರವನ್ನು ದೂತರ ಮೂಲಕ ಹೇಳಿಕಳುಹಿಸು. ನಿನ್ನ ಸಹೋದರರು ಅಂತಹ ಸಮರ್ಥರಾಗಿರಲು ನಿನಗಸಾಧ್ಯವಾದುದೂ ಉಂಟೇ? ೪೧. ಅವರು ನಮಗೆ ಮೊದಲಿನ ನೆಲವನ್ನೆ ಕೊಡು ಎನ್ನುವುದಿಲ್ಲ. ನಾವು ದಾಯಾದಿಗಳು

ಚಂ|| ಕರಿ ಕಳಭ ಪ್ರಚಂಡ ಮೃಗರಾಜ ಕಿಶೋರ ಕಠೋರ ಘೋರ ಹೂಂ
ಕರಣ ಭಯಂಕರಾಟವಿಯೊಳಿನ್ನೆವರಂ ನೆಲಸಿರ್ದ ಸೇದೆ ನೀಂ|
ಕರುಣಿಸಿದಾಗಳಲ್ಲದವರ್ಗಾಱದು ಕೆಮ್ಮಗೆ ನಾಡ ಚಲ್ಲವ
ತ್ತರ ನುಡಿಗೊಳ್ಳದಿರ್ ನಿನಗೆ ಪಾಂಡವರಪ್ಪುದನಾರುಮಪ್ಪರೇ|| ೪೨

ಉ|| ಒಂದುಮೊಡಂಬಡುಂ ಪೊರೆಯುಮಿಲ್ಲವರ್ಗೆಂಬುದನೆಯ್ದ ನಂಬಿ ನಾ
ಡಂ ದಯೆಗೆಯ್ದು ನೀಂ ಕುಡುವಿನಂ ಪೆಱತೇ ಪಡೆಮಾತೊ ಪಳ್ಳಿರ|
ಲ್ಕೆಂದವರ್ಗೀವುದೊಳ್ಪು ನಿಲೆ ಕಂಚಿ ನೆಗೞ್ತೆಯ ವಾರಣಾಸಿ ಕಾ
ಕಂದಿ ಕುರುಸ್ಥಳಂ ವರ ವೃಕಸ್ಥಳಮೆಂಬಿವನಯ್ದು ಬಾಡಮಂ|| ೪೩

ವ|| ಎಂಬುದು ಸುಯೋಧನಂ ಕ್ರೋಧಾನಲೋದ್ದೀಪಿತ ಹೃದಯನಾಗಿ ಶೌರ್ಯಮದಾಡಂಬರದೊಳಂಬರಂಬರಂ ಸಿಡಿಲ್ದು-

ಚಂ|| ತೊಲಗದೆ ಗೋವುಗಾದ ಕಿಱಯಂದಿನ ಗೋವಿಕೆ ನಿನ್ನ ಚಿತ್ತದೊಳ್
ನೆಲಸಿದುದಕ್ಕುಮಗ್ಗಳದ ವೈಷ್ಣವ ಮೋಹಮೆ ನಿನ್ನ ಮೆಯ್ಯೊಳ|
ಗ್ಗಲಿಸಿದುದಕ್ಕುಮಾ ಜಡ ಸಂಗತಿಯಿಂ ಜಡಬುದ್ಧಿ ಬುದ್ಧಿಯಂ
ತೊಲಗಿಸಿತಕ್ಕುಮಲ್ಲದೊಡೆ ನೀನಿನಿತಂ ನುಡಿವೈ ಪಳಾಳಮಂ|| ೪೪

ಕಂ|| ಪಱಪಟ್ಟ ಪಗೆವರಂ ನೆ
ಪಱಪಡಲಣವೀಯದವರನವರ್ಗಳ ಬಾೞೊಳ್|
ನಿಱಸಲ್ ಬಗೆದೈ ಕರಮೆನ
ಗುಱದಿರ್ಕುಮೆ ನಿನ್ನ ಪೇೞ್ದ ಧರ್ಮಶ್ರವಣಂ|| ೪೫

ಉ|| ಭಾಗಮನಾಸೆವಟ್ಟಳಿಪಿ ಬೇೞ್ಪುದು ನಿನ್ನಯ ಕಲ್ತ ವಿದ್ದೆ ನೀ
ನಾಗಳುಮಣ್ಣ ಬೇಡಿದಪೆ ಸಜ್ಜನದಂತೆನಗೆಕ್ಕಬಾಗೆ ನೋ|
ಡೀಗಳಿಳಾಲತಾಂಗಿ ಪುದವಲ್ಲಳದೆಂತೆನೆ ಮುನ್ನ ನೂಲ ತೋ
ಡಾಗದೆ ಕೆಟ್ಟು ಪೋದವರನಿಂ ಮಗುೞ್ದುಂ ನಿಱಪಂತು ಬೆಳ್ಳನೇ|| ೪೬

(ಸಮಭಾಗಿಗಳು) ಎನ್ನುವುದಿಲ್ಲ. ಹೀಗಲ್ಲ ಹಾಗಲ್ಲ ಎನ್ನುವುದಿಲ್ಲ. ನೀನು ದಯೆಯಿಂದ ಕೊಟ್ಟುದು ಸಾಕು ಎನ್ನುತ್ತಾರೆ. ನೀನು ಹೇಳಿದಂತೆ ಕೇಳುವರು. ೪೨. ಆನೆಯ ಮತ್ತು ಭಯಂಕರವಾದ ಸಿಂಹದ ಮರಿಗಳ ಕರ್ಕಶವೂ ಭಯಂಕರವೂ ಆದ ಹೂಂಕರಣ ಶಬ್ದದಿಂದ ಕೂಡಿದ ಘೋರವಾದ ಕಾಡಿನಲ್ಲಿ ಇದುವರೆಗೂ ಅವರು ವಾಸಮಾಡಿದ ಆಯಾಸವು ನೀನು ದಯೆತೋರಿಸಿದಲ್ಲದೆ ಶಮನವಾಗುವುದಿಲ್ಲ. ಸುಮ್ಮನೆ ನಂಬಿಸಿ ಹೊಟ್ಟೆಹೊರೆಯುವ ಬೀದಿಹೋಕರ ಮಾತುಗಳನ್ನು ಕೇಳಬೇಡ. ನಿನ್ನ ಕಷ್ಟಸುಖಕ್ಕೆ ಪಾಂಡವರಾಗುವಂತೆ ಇತರರಾಗುತ್ತಾರೆಯೆ? ೪೩. ಪಾಂಡವರಿಗೆ ಯಾವ ಒಡಂಬಡಿಕೆಯೂ ರಕ್ಷಣೆಯೂ ಇಲ್ಲ ಎಂದು ಚೆನ್ನಾಗಿ ನಂಬಿ ಬೇರೆ ಮಾತಿಲ್ಲದೆ ರಾಜ್ಯವನ್ನು ದಯೆಮಾಡಿ ಕೊಡುವುದಾದರೆ ಕಂಚಿ, ಶ್ರೇಷ್ಠವಾದ ವಾರಣಾಸಿ, ಕಾಕಂದಿ, ಕುರುಸ್ಥಳ, ಉತ್ತಮವಾದ ವೃಕಸ್ಥಳ ಎಂಬ ಅಯ್ದ ಹಳ್ಳಿಗಳನ್ನು ಅವರಿಗೆ ಮಲಗುವುದಕ್ಕೆ (ಸಾಕಷ್ಟು ನೆಲವನ್ನು) ಲೋಕ ಮೆಚ್ಚುವ ಹಾಗೆ (ನಿನ್ನ ಸದ್ಗುಣ ಸ್ಥಿರವಾಗುವ ಹಾಗೆ) ಕೊಟ್ಟರೆ ಸಾಕು. ವ|| ಎನ್ನಲು ದುರ್ಯೋಧನನು ಕ್ರೋಧಾಗ್ನಿಯಿಂದ ಉರಿಯುತ್ತಿರುವ ಹೃದಯವುಳ್ಳವನಾಗಿ ಶೌರ್ಯದ ಸೊಕ್ಕಿನ ಉಬ್ಬರದಲ್ಲಿ ಆಕಾಶದವರೆಗೂ ಸಿಡಿದು ಕೃಷ್ಣನನ್ನು ಕುರಿತು ಹೇಳಿದನು. ೪೪. “ಬಾಲ್ಯದ ದನಕಾಯುವ ಮನೋಭಾವ ನಿನ್ನಲ್ಲಿ ಹೋಗದೆ ಇನ್ನೂ ನೆಲೆಸಿರುವಂತಿದೆ. ಅತಿಶಯವಾದ ವೈಷ್ಣವ ಮೋಹವು ನಿನ್ನ ಶರೀರದಲ್ಲಿ ಮಿತಿಮೀರಿರಬೇಕು.

ಆ ಜಲ (ಕ್ಷೀರಸಮುದ್ರ) ಸಂಬಂಧದಿಂದ ಬಂದ ಜಡಬುದ್ಧಿಯು ನಿನ್ನ ಬುದ್ಧಿಯನ್ನು ತೊಲಗಿಸಿರಬೇಕು. ಅಲ್ಲದಿದ್ದರೆ ನೀನು ಈ ಮೋಸದ ಮಾತನ್ನು ಆಡುತ್ತಿದ್ದೆಯಾ ೪೫. ಹರಿದುಹೋದ (ಕತ್ತರಿಸಿಹೋಗಿರುವ) ಸಂಬಂಧವುಳ್ಳ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವುದಕ್ಕೆ ಅವಕಾಶಕೊಡದೆ ಅವರ ಮೊದಲ ಉನ್ನತಸ್ಥಿತಿಯಲ್ಲಿ ಪುನ ಸ್ಥಾಪಿಸಲು ಮನಸ್ಸು ಮಾಡಿದ್ದೀಯೆ. ನೀನು ಹೇಳಿದ ಧರ್ಮಶ್ರವಣವು ನನಗೆ ಹಿಡಿಸುವುದಿಲ್ಲವಲ್ಲವೆ? ೪೬. ಭೂಭಾಗವನ್ನು ಕೊಡೆಂದು ಆಶೆಪಟ್ಟು ಕೇಳಿಕೊಳ್ಳುವುದು ನೀನು ಮೊದಲಿಂದ ಕಲಿತ ವಿದ್ಯೆ. ನೀನು ಯಾವಾಗಲೂ ಬೇಡುವ ಸ್ವಭಾವವುಳ್ಳವನು ತಾನೆ. ಈಗ ನನಗೆ ಭೂಮಿಯೆಂಬ ಸ್ತ್ರೀಯು ಕುಲವಧುವಿನಂತೆ

ಮ|| ವಿಜಿಗೀಷುತ್ವದೊಳೊಂದಿ ಗೋವುಳಿಗನಪ್ಪಂ ಮತ್ಸ್ಯನಾಳಾಗಿ ವಾ
ರಿಜನಾಭಂ ಹರಿಯೆಂಬ ದೊಡ್ಡಿವೆಸರಂ ಪೊತ್ತಿರ್ದ ನೀಂ ಮಂತ್ರಿಯಾ|
ಗೆ ಜಯೋದ್ಯೋಗಮನೆತ್ತಿಕೊಂಡು ರಣದೊಳ್ ಭೂಭಾಗಮಂ ನೆಟ್ಟನೊ
ಟ್ಟಜೆಯಿಂದಂಜಿಸಿಕೊಳ್ಳದಿರ್ಪಿರೆ ಸಮಂತಾ ಗಂಡರೀ ಗಂಡರಂ|| ೪೭

ಚಂ|| ಪುಸಿಯೆನೆ ಸಾಮಮಂ ನುಡಿದು ಭೇದಮನುಂಟೊಡತಾಗೆ ಮಾಡಿ ಛೀ
ದ್ರಿಸಲೊಳಪೊಕ್ಕು ಮಿಕ್ಕು ನೆಗೞ್ದುಗ್ರವಿರೋಗಳೆತ್ತಮೆಯ್ದೆ ಬಂ|
ಚಿಸಿ ಪೊಱಗಣ್ಗೆ ಸಯ್ದರೆನೆ ತಾವೊಳಗಂ ತವೆ ತೋಡಿ ತಿಂದು ರ
ಕ್ಕಸಿಯರ ಕಂಡ ಕುಂಬಳದ ಮಾೞ್ಕೆವೊಲಾಗಿರೆ ಮಾಡದಿರ್ಪಿರೇ|| ೪೮

ವ|| ನಾಮೆಲ್ಲಮೊಂದೆ ಗರುಡಿಯೊಳೋದಿದ ಮಾನಸರೆವೆಮ್ಮಂ ನಿಮ್ಮಡಿ ಕೆಮ್ಮನೆ ಬೞಲಿಸಲ್ವೇಡ ಬಂದು ಬಟ್ಟೆಯಿನೆ ಬಿಜಯಂಗೆಯ್ಯಿಮೆನೆ ಮುರಾಂತಕನಂತಕನಂತೆ ಮಾಮಸಕಂ ಮಸಗಿ ದುರ್ಯೋಧನನಿಂತೆಂದಂ-

ಉ|| ಸೀತೆಯ ದೂಸಱಂದೞದ ರಾವಣನಂತಿರೆ ನೀನುಮೀಗಳೀ
ಸೀತೆಯ ದೂಸಱಂದೞಯಲಾಟಿಸಿದೈ ನಿನಗಂತು ಸೀತೆಯೇ|
ಸೀತೆ ಕಡಂಗಿ ಕಾಯ್ದು ಕಡೆಗಣ್ಚಿದಳಪ್ಪೊಡೆ ಧಾತ್ರನಿಂ ತೊದ
ಳ್ವಾತಿನೊಳೇನೊ ಪಾಂಡವರ ಕೆಯ್ಯೊಳೆ ನಿನ್ನ ನಿಸೇಕಮಾಗದೇ|| ೪೯

ಆರ್ಕಡುಕೆಯ್ದು ಪಾಂಡವರೊಳಾಂತಿಱಯಲ್ ನೆರೆವನ್ನರಿಂತಿದೇ
ತರ್ಕೆ ಬಿಗುರ್ತಪೈ ನೆಲನೊಪ್ಪಿಸಿ ತಪ್ಪದೆ ಬಾೞ್ವೆನೆನ್ನದೀ|
ಯುರ್ಕಿನೊಳೆಂತು ನಿಂದು ಸೆಣಸಲ್ ಬಗೆ ಬಂದುದು ನಿನ್ನ ಮೆಯ್ಯ ನೆ
ತ್ತರ್ಕುದಿದುರ್ಕಿ ಸಾವ ಬಗೆಯಿಂ ಸೆಣಸಲ್ ಬಗೆ ಬಂದುದಾಗದೇ|| ೫೦

ಕಂ|| ಮುಳಿಯಿಸಿ ಬರ್ದುಂಕಲಾದನು
ಮೊಳನೆ ಯುಷ್ಠಿರನನಮಳರಳವೆಂಬುದು ಭೂ|
ವಳಯ ಪ್ರಸಿದ್ಧಮರಿನೃಪ
ಬಳಂಗಳವರಿಱಯೆ ಪೆಳವೆಂಬರುಮೊಳರೇ|| ೫೧

ಒಬ್ಬನೇ ಅನುಭವಿಸುವುದಕ್ಕೆ ಯೋಗ್ಯಳಾದವಳು. ಮತ್ತೊಬ್ಬರೊಡನೆ ಜೊತೆಗೂಡಿ ಇರುವವಳಲ್ಲ. ಅದು ಹೇಗೆಂದರೆ ಮೊದಲು ಕತ್ತರಿಸಿ ಹೋದ ನೂಲಿನಂತೆ ತಿರುಗಿ ಸೇರಿಸಲಾಗದುದು. ಕೆಟ್ಟು ಹೋದವರನ್ನು ಪುನ ಸ್ಥಾಪಿಸುವುದಕ್ಕೆ ನಾನು ದಡ್ಡನೇ?

೪೭. ಗೋವಳಿನಾಗಿದ್ದು ಜಯಾಕಾಂಕ್ಷೆಯಿಂದ ಕೂಡಿ ವಿರಾಟನ ಸೇವಕನಾಗಿ (ಮನುಷ್ಯನ ಆಳಾಗಿ) ಕಮಲನಾಭ, ಹರಿ, ಎನ್ನುವ ದೊಡ್ಡ ಹೆಸರನ್ನು ಹೊತ್ತಿರುವ ನೀನು ಮಂತ್ರಿಯಾಗಿರಲು ಆ ಶೂರರಾದ ಪಾಂಡವರು ಜಯೋದ್ಯೋಗವನ್ನು ಹೂಡಿ (ಯುದ್ಧದಲ್ಲಿ ಗೆಲ್ಲುವ ಕಾರ್ಯದಲ್ಲಿ ತೊಡಗಿ) ಶೂರರಾದ ನಮ್ಮನ್ನು ಪರಾಕ್ರಮದಿಂದ ಹೆದರಿಸಿ ಯುದ್ಧದಲ್ಲಿ ನೇರವಾಗಿ ಭೂಮಿಯ ಭಾಗವನ್ನು ಪೂರ್ಣವಾಗಿ ಪಡೆಯದೇ ಇರುತ್ತಾರೆಯೇ? ೪೮. ಸುಳ್ಳು ಸಾಮವನ್ನು ಹೇಳಿ, ಕೂಡಲೆ ಭೇದವನ್ನುಂಟುಮಾಡಿ, ಛಿದ್ರಿಸಲು ಒಳಹೊಕ್ಕು, ಉಗ್ರ ವಿರೋಗಳಾದ ನೀವು ಎಲ್ಲ ರೀತಿಯಿಂದಲೂ ವಂಚನೆಮಾಡಿ ರಾಕ್ಷಸಿಯರು ನೋಡಿದ ಕುಂಬಳದ ಕಾಯಿಯಂತೆ ಹೊರಗಡೆ ಮಾತ್ರ ಸರಿಯಾದವರಂತೆ ತೋರಿ ಒಳಗೆಯೆ ಕೇಡನ್ನು ಮಾಡದಿರುತ್ತೀರಾ? ವ|| ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರಾಗಿದ್ದೇವೆ. ನೀವು ನಮ್ಮನ್ನು ವೃಥಾ ಆಯಾಸಪಡಿಸಬೇಡಿ; ಬಂದ ದಾರಿಯಲ್ಲಿ ಬಿಜಯಮಾಡಿಸಿ ಎಂದನು. ಕೃಷ್ಣನು ಯಮನಂತೆ ವಿಶೇಷವಾಗಿ ಕೋಪಿಸಿಕೊಂಡು ದುರ್ಯೋಧನನಿಗೆ ಹೀಗೆಂದನು. ೪೯. ಸೀತಾದೇವಿಯ ಕಾರಣದಿಂದ ನಾಶವಾದ ರಾವಣನ ಹಾಗೆ ಈಗ ನೀನೂ ಕೂಡ ರಾಜ್ಯದ (ಭೂಮಿಯ) ಆಸೆಯಿಂದ ನಾಶವಾಗಲು ಆಶೀಸುತ್ತಿದ್ದೀಯೆ; ನಿನಗೆ ಈ ಸೀತೆ (ಭೂಮಿಯು) ಆ ಸೀತೆಯೇ ಆಗಿದ್ದಾಳೆ. (ನಾಶಕಾರಕಳು). ಉತ್ಸಾಹಿಸಿ ಕೋಪದಿಂದ ನಿನ್ನನ್ನು ಭೂಮಿಯು ತಿರಸ್ಕರಿಸುವುದಾದರೆ ಬ್ರಹ್ಮನ ಸಹಾಯದಿಂದಲೇ ಪಾಂಡವರ ಕಯ್ಯಿಂದಲೇ ನಿನಗೆ ನಿಷೇಕ (ಶಾಸ್ತಿ, ಪ್ರಸ್ತುತ) ಆಗದಿರುತ್ತದೆಯೇ? ಅಡ್ಡ ಮಾತುಗಳಿಂದಲೇನು ಪ್ರಯೋಜನ ೫೦. ಪಾಂಡವರನ್ನು ಪ್ರತಿಭಟಿಸಿ ಯುದ್ಧಮಾಡಲು ಯಾರು ಸಮರ್ಥರು? ಹೀಗೇಕೆ ಉಬ್ಬಿಹೋಗಿದ್ದೀಯೆ? ಅವರಿಗೆ ಸಲ್ಲಬೇಕಾದ ಭೂಮಿಯನ್ನು ಒಪ್ಪಿಸಿ ತಪ್ಪದೆ (ಶಾಶ್ವತವಾಗಿ) ಬದುಕುತ್ತೇನೆ ಎನ್ನದೆ ಹೀಗೆ ಅಹಂಕಾರದಿಂದ ಪ್ರತಿಭಟಿಸಿ ಸೆಣಸಲು ಹೇಗೆ ನಿನಗೆ ಮನಸ್ಸು ಬಂದಿತು? ನಿನ್ನ ಶರೀರದ ರಕ್ತ ಕುದಿದು ಉಕ್ಕಿ ಸಾಯುವ ಇಚ್ಛೆಯಿಂದಲೇ ಯುದ್ಧಮಾಡಲು ನಿನಗೆ ಮನಸ್ಸು ಬಂದಿರಬೇಕಲ್ಲವೇ? ೫೧. ಧರ್ಮರಾಜನಿಗೆ

ಚಂ|| ಗಜೆಗೊಳೆ ಭೀಮಸೇನನಿದಿರಾಂತು ಬರ್ದುಂಕುವ ವೈರಿ ಭೂಭುಜ
ಧ್ವಜಿನಿಗಳಿಲ್ಲದಲ್ಲದೆಯುಮೀ ಯುವರಾಜನ ನೆತ್ತರಂ ಕುರು|
ಧ್ವಜಿನಿಯೆ ನೋಡೆ ಪೀರ್ದು ಭವದೂರುಯುಗಂಗಳನಾಜಿರಂಗದೊಳ್
ಗಿಜಿಗಿಜಿ ಮಾಡಲೆಂದವನ ಪೂಣ್ದುದು ನಿಕ್ಕುವಮಾಗದಿರ್ಕುಮೇ|| ೫೨

ವ|| ಅದಲ್ಲದೆಯುಂ ರಾಜಸೂಯ ವ್ಯತಿಕರದೊಳ್ ದಿಗ್ವಿಜಯಂ ಗೆಯ್ದು ಲಂಕೆಯ ವಿಭೀಷಣನನೊಂದೆ ದಿವ್ಯಾಸ್ತ್ರದೊಳೆಚ್ಚು ಕಪ್ಪಂಗೊಂಡ ವಿಕ್ರಮಾರ್ಜುನನ ವಿಕ್ರಮಮುಮಂ ಕಾಪಿನ ದೇವರೊಂದು ಪೊೞ್ತುಮಗಲದ ನೂಱು ಯೋಜನದಳಮಿ ಖಾಂಡವವನಮನನಲಂ ಗೂಡಿದರಾತಿಕಾಳಾನಳನಳವುವಂ ಜವನನವಯವದೊಳ್ ಗೆಲ್ದು ಪಾರ್ವರ ಪಿಳ್ಳೆಯ ಪೋದ ಪ್ರಾಣಮಂ ತಂದ ಸಾಹಸಾಭರಣನ ಸಾಹಸಮುಮನಿಂದ್ರಕೀಲ ನಗೇಂದ್ರದೊಳಿಂದ್ರನ ಬೆಸದೊಳ್ ತಪೋವಿಘಾತಂ ಮಾಡಲೆಂದು ಬಂದ ಪುರಂದರನ ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕ ಮಳ್ಕದ ಶೌಚಾಂಜನೇಯನ ಶೌಚಮುಮಂ ದಾನವಾಪನಪ್ಪ ಮೂಕದಾನವ ಸೂಕರನನೊಂದೆ ಸೂೞಂಬಿನೊಳೆಚ್ಚು ಕೊಂದ ಪರಾಕ್ರಮಧವಳನ ಪರಾಕ್ರಮಮುಮಂ ತ್ರಿಣೇತ್ರನೊಳ್ ಕಾದಿ ಪಾಶುಪತಾಸ್ತ್ರಮಂ ಪಡೆದ ಕದನತ್ರಿಣೇತ್ರನ ಗಂಡಗರ್ವಮುಮನಿಂದ್ರಲೋಕಕ್ಕೆ ಪೋಗಿ ದೇವೇಂದ್ರನ ಪಗೆವರಪ್ಪ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರುಂ ಪಡಲ್ವಡಿಸಿದ ಪಡೆಮೆಚ್ಚೆ ಗಂಡನ ಗಂಡುಮಂ ದೇವೇಂದ್ರನೊಳರ್ಧಾಸನಮೇಱದ ಗುಣಾರ್ಣವನ ಮಹಿಮೆಯುಮಂ ಚಳುಕ್ಯಕುಳತಿಳಕನಪ್ಪ ವಿಜಯಾದಿತ್ಯಂಗೆ ಗೋವಿಂದರಾಜಂ ಮುಳಿಯೆ ತಳರದೆ ಪೆಱಗಿಕ್ಕಿ ಕಾದ ಶರಣಾಗತ ಜಳನಿಯ ಪೆಂಪುಮಂ ಗೊಜ್ಜಿಗನೆಂಬ ಸಕಲ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿಱದು ಗೆಲ್ದ ಸಾಮಂತ ಚೂಡಾಮಣಿಯ ಬೀರಮುಮನತಿವರ್ತಿಯಾಗಿ ಮಾರ್ಮಲೆವ ಚಕ್ರವರ್ತಿಯಂ ಕಿಡಿಸಿ ತನ್ನ ನಂಬಿ ಬಂದ ಬದ್ದೆಗ ದೇವಂಗೆ ಸಕಳ ಸಾಮ್ರಾಜ್ಯಮನೋರಂತು ಮಾಡಿ ನಿಱಸಿದರಿಕೇಸರಿಯ ತೋಳ್ವಲಮುಮಂ ಸಮದಗಜಘಟಾಟೋಪಂಬೆರಸು ನೆಲನದಿರೆವಂದು ತಾಗಿದ ಕಕ್ಕಲನ ತಮ್ಮನಪ್ಪ ಬಪ್ಪುವನಂಕಕಾಱನನೊಂದೆ ಮದಾಂಧಗಂಧಸಿಂಧುರದೊಳೋಡಿಸಿದ ವೈರಿಗಜಘಟಾ ವಿಘಟನನದಟುಮಂ ಪರಚಕ್ರಂಗಳನಂಜಿಸಿದ ಪರಸೈನ್ಯ ಭೈರವನ ಮೇಗಿಲ್ಲದ ಬಲ್ಲಾಳ್ತನಮುಮಂ ಕಂಡುಂ ಕೇಳ್ದುಂ ನಿನಗೆ ಸೆಣಸಲೆಂತು ಬಗೆ ಬಂದಪುದು-

ಕೋಪ ಬರುವ ಹಾಗೆ ಮಾಡಿ ಬದುಕಬಲ್ಲವನೂ ಇದ್ದಾನೆಯೇ? ಯಮಳರಾದ ನಕುಲಸಹದೇವರ ಪರಾಕ್ರಮವೆಂಬುದು ಲೋಕಪ್ರಸಿದ್ಧವಾದುದು. ಅವರು ಯುದ್ಧಮಾಡಲು, ಹೆದರೆವು ಎನ್ನುವ ಶತ್ರುಗಳೂ ಉಂಟೆ? ೫೨. ಭೀಮಸೇನನು ಗದೆಯನ್ನು ಹಿಡಿಯಲು ಪ್ರತಿಭಟಿಸಿ ಬದುಕುವ ಶತ್ರುಸೈನ್ಯವಿಲ್ಲ? ಅದೂ ಅಲ್ಲದೆ ಈ ಯುವರಾಜನಾದ ದುಶ್ಶಾಸನನ ರಕ್ತವನ್ನು ಕೌರವಸೈನ್ಯವು ನೋಡುತ್ತಿರುವ ಹಾಗೆಯೇ ಹೀರಿ ನಿನ್ನ ಎರಡು ತೊಡೆಗಳನ್ನೂ ಯುದ್ಧಭೂಮಿಯಲ್ಲಿ ಅಜ್ಜಿಗುಜ್ಜಿ ಮಾಡುತ್ತೇನೆಂದು ಅವನು ಪ್ರತಿe ಮಾಡಿದುದು ನಿಜವಾಗದೇ ಹೋಗುತ್ತದೆಯೇ? ವ|| ಅದಲ್ಲದೆ ರಾಜಸೂಯದ ಸಂದರ್ಭದಲ್ಲಿ ದಿಗ್ವಿಜಯವನ್ನು ಮಾಡಿ ಲಂಕಾಪಟ್ಟಣದ ವಿಭೀಷಣನನ್ನು ಒಂದೇ ದಿವ್ಯಾಸ್ತ್ರದಿಂದ ಹೊಡೆದು ಕಪ್ಪವನ್ನು ತೆಗೆದುಕೊಂಡ ವಿಕ್ರಮಾರ್ಜುನನ ಪರಾಕ್ರಮವನ್ನು, ರಕ್ಷಣೆಗೋಸ್ಕರ ಇದ್ದ ದೇವತೆಗಳು ಒಂದು ಹೊತ್ತೂ ಅಗಲದಿದ್ದ ನೂರು ಯೋಜನ ವಿಸ್ತಾರದ ಖಾಂಡವವನವನ್ನು ಅಗ್ನಿಗೆ ಸಮರ್ಪಿಸಿದ ಅರಾತಿಕಾಳಾನಳನ ಶಕ್ತಿಯನ್ನೂ, ಯಮನನ್ನೂ ಶ್ರಮವಿಲ್ಲದೆ ಗೆದ್ದು ಬ್ರಾಹ್ಮಣನ ಮಗನ ಹೋಗಿದ್ದ ಪ್ರಾಣವನ್ನು ತಂದ ಸಾಹಾಸಭರಣನ ಸಾಹಸವನ್ನೂ, ಇಂದ್ರಕೀಲಪರ್ವತದಲ್ಲಿ ಇಂದ್ರನ ಆeಯ ಪ್ರಕಾರ ತಪಸ್ಸಿಗೆ ವಿಘ್ನಮಾಡಬೇಕೆಂದು ಬಂದ ಇಂದ್ರನ ವೇಶ್ಯೆಯರ ಕಟಾಕ್ಷದೃಷ್ಟಿಗೂ ಅವರ ಹಿಂಸೆಗೂ ಹೆದರದ ಶೌಚಾಂಜನೇಯನ ಶುಚಿತ್ವವನ್ನೂ, ರಾಕ್ಷಾಸಾಪತಿಯಾದ ಮೂಕರಾಕ್ಷಸನೆಂಬ ಹಂದಿಯನ್ನು ಒಂದೇ ಸಲದ ಬಾಣದಲ್ಲಿ ಹೊಡೆದು ಕೊಂದ ಪರಾಕ್ರಮಧವಳನ ಪರಾಕ್ರಮವನ್ನೂ ಈಶ್ವರನಲ್ಲಿ ಕಾದಿ ಪಾಶುಪತಾಸ್ತ್ರವನ್ನು ಪಡೆದ ಕದನತ್ರಿಣೇತ್ರನ ಪೌರುಷಾಹಂಕಾರವನ್ನೂ ಇಂದ್ರಲೋಕಕ್ಕೆ ಹೋಗಿ ದೇವೇಂದ್ರನ ಶತ್ರುಗಳಾಗಿದ್ದ ನಿವಾಚಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರನ್ನು ಕೆಳಗೆ ಬೀಲುವ ಹಾಗೆ ಮಾಡಿದ ಪಡೆಮೆಚ್ಚೆಗಂಡನ ಪೌರುಷವನ್ನೂ, ದೇವೇಂದ್ರನಲ್ಲಿ ಅರ್ಧಾಸನವನ್ನು ಪಡೆದು ಗಣಾರ್ಣವನ ಮಹಿಮೆಯನ್ನೂ, ಚಾಳುಕ್ಯಕುಲತಿಲಕನಾದ ವಿಜಯಾದಿತ್ಯನಿಗೆ ಗೋವಿಂದರಾಜನು ಪ್ರತಿಭಟಿಸಲು ಅವನನ್ನು ಸಾವಕಾಶಮಾಡದೆ ಹಿಂದಕ್ಕೆ ನೂಕಿ ರಕ್ಷಿಸಿದ ಶರಣಾಗತ ಸಮುದ್ರನ ಮಹಿಮೆಯನ್ನೂ ಗೊಜ್ಜಿಗನೆಂಬ ಸಕಲಚಕ್ರವರ್ತಿಯು ಆeಮಾಡಲು ದಂಡೆತ್ತಿಬಂದ ಮಹಾಸಾಮಂತರನ್ನೆಲ್ಲ ಹಿಮ್ಮೆಟ್ಟುವಂತೆ ಹೊಡೆದು ಗೆದ್ದ ಸಾಮಂತ ಚೂಡಾಮಣಿಯ ವೀರ್ಯವನ್ನೂ, ಎಲ್ಲೆ ಮೀರಿ ಪ್ರತಿಭಟಿಸುವ ಚಕ್ರವರ್ತಿಯನ್ನು ಹಾಳುಮಾಡಿ ತನ್ನನ್ನೇ ನಂಬಿ ಬಂದ ಬದ್ದೆಗದೇವನಿಗೆ ಸಕಲಸಾಮ್ರಾಜ್ಯವನ್ನು ಏಕಪ್ರಕಾರವಾಗಿ ಮಾಡಿ ಸ್ಥಾಪಿಸಿದ ಅರಿಕೇಸರಿಯ ತೋಳ ಬಲವನ್ನು ಮದ್ದಾನೆಗಳ ಗುಂಪಿನ ಆರ್ಭಟದಿಂದ ಕೂಡಿ ಭೂಮಿಯು ನಡುಗುವಂತೆ ಬಂದು ತಾಗಿದ ಕಕ್ಕಲನ ತಮ್ಮನಾದ ಬಪ್ಪುವನೆಂಬ ಜಟ್ಟಿಯನ್ನು ಒಂದೇ ಮದ್ದಾನೆಯಿಂದ ಓಡಿಸಿದ ವೈರಿಗಜಘಟಾವಿಘಟನಪಟುವಾದ (ಶತ್ರುಗಳ ಆನೆಯ ಸಮೂಹವನ್ನು ಒಡೆದುಹಾಕುವ ಶಕ್ತಿಯನ್ನುಳ್ಳ) ಅರ್ಜುನನ ಪರಾಕ್ರಮವನ್ನೂ, ಶತ್ರುಸೈನ್ಯವನ್ನು ಹೆದರಿಸಿದ ಪರಸೈನ್ಯಭೈರವನ ಅತಿಶಯವಾದ

ಉ|| ನೆಟ್ಟನೆ ಬೂತುಗೊಳ್ವ ತೆಱದಿಂ ದಶಕಂಧರನಾಡಿ ಪಾಡಿ ನಾ
ಣ್ಗೆಟ್ಟಿರೆ ಕೊಂಡನಲ್ಲದೆ ಬರಂಗಳನೀಶ್ವರನಲ್ಲಿ ಪೇೞಮಾ|
ವೊಟ್ಟಜೆಯಿಂದೆ ಕೊಂಡನೆನುತುಂ ವಿಜಯಂ ನೆಲಕಿಕ್ಕಿ ಗಂಟಲಂ
ಮೆಟ್ಟದೆ ಕೊಂಡನೇ ಹರನ ಪಾಶುಪತಾಸ್ತ್ರಮನಿಂದ್ರಕೀಲದೊಳ್|| ೫೩

ಪೊಂಗಿ ಕಡಂಗಿ ಬೀರದೊಳ್ ಬೀಗುವ ನಿನ್ನಣುಗಾಳೆ ನೋಡೆ ನಿ
ನ್ನಂಗನೆಯರ್ ತೊವಲ್ಗೊಳೆ ಭಯಂಗೊಳೆ ಕೋಡಗಗಟ್ಟುಗಟ್ಟಿ ಚಿ|
ತ್ರಾಂಗದನುಯ್ಯೆ ನಿನ್ನನೆಡೆಮಾಡದಸುಂಗೊಳೆ ಕಾದಿ ತಂದ ವೀ
ರಂಗರಿಗಂಗೆ ನೀಂ ಮಲೆದು ನಿಲ್ವುದು ಪಾೞವಲಂ ಸುಯೋಧನಾ|| ೫೪

ಮ||ಸ್ರ|| ಗುರುವಿಲ್ಲಾ ಕರ್ಣನಿಲ್ಲಾ ಗುರುವಿನ ಮಗನಿಲ್ಲಾ ಕೃಪಾಚಾರ್ಯನಿಲ್ಲಾ
ಕುರುರಾಜಾ ನಿನ್ನ ತಮ್ಮಂದಿರೊಳಿನಿಬರೊಳಾರಿಲ್ಲ ಗಾಂಗೇಯನಿಲ್ಲಾ|
ಮರುಳೇ ಗಾಂಡೀವಿಯಾರೆಂದೆಣಿಕೆಗಳೆವೆ ಗಂಧರ್ವರುಯ್ವಂದು ನಿನ್ನಂ
ಕರುವಿಟ್ಟಂತಿರ್ದುದಿಲ್ಲಾ ನೆರೆದ ಕುರುಬಲಂ ತಂದವಂ ಪಾರ್ಥನಲ್ಲಾ|| ೫೫

ಮ|| ಬವರಂಗೆಯ್ವಮಮೋಘಮೆಂಬ ಬಗೆಯಿಂ ನೀಮೆಲ್ಲಮಾದಂ ರಣೋ
ತ್ಸವದಿಂ ನಿನ್ನೆಯೆ ಪೋದ ಗೋಗ್ರಹಣದಂದೇನಾದಿರಂತಾ ಪರಾ|
ಭವಮಂ ಚಿ ಮದಿರ್ದಿರಪ್ಪೊಡಮದೇನೇವೋದುದಿನ್ನುಂ ಗುಣಾ
ರ್ಣವನಿಂ ನಾಳೆಯೆಂ ಕೇಳದಿರ್ಪಿರೆ ಮಹಾ ಗಾಂಡೀವ ನಿರ್ಘೋಷಮಂ|| ೫೬

ಚಂ|| ಸುರಿವ ಸರಲ್ ನರಲ್ವ ಭಟರೆತ್ತಮುರುಳ್ವ ದೞಂ ಪೊರಳ್ವ ಸಿಂ
ಧುರ ಘಟೆ ಬರ್ಪ ನೆತ್ತರ ಕಡಲ್ ಕುಣಿವಟ್ಟೆಗಳಾಜಿಯೊಳ್ ಭಯಂ|
ಕರತರಮಪ್ಪಿನಂ ಪಗೆವರೊಕ್ಕಲೊಳೋವೆನಲೊರ್ವರಿಲ್ಲದಂ
ತಿರೆ ತವೆ ಕೊಲ್ಗುಮಂತುಮರಿಕೇಸರಿಗಾಂತು ಬರ್ದುಂಕಲಕ್ಕುಮೇ|| ೫೭

ವ|| ಎಂದು ಕಾಳನೀಳಮೇಘದಂತು ಮಸಗಿ ಗರ್ಜಿಸುವಸುರಕುಳವಿಷಯಕೇತುಗೆ ಫಣಿಕೇತು ಮುಳಿದು ತಳಮಳಿಸಿ ಕಣ್ಗಾಣದೆ-

ಪೌರುಷವನ್ನೂ ಕಂಡೂ ಕೇಳಿಯೂ ನಿನಗೆ ಹೋರಾಡಲು ಹೇಗೆ ಮನಸ್ಸು ಬರುತ್ತದೆ. ೫೩. ದುರ್ಯೋಧನ ! ರಾವಣನು ಸಾಮಾನ್ಯವಾದ ಬಡಪ್ರಾಣಿಯಂತೆ ಹಾಡಿ ಪಾಡಿ ಬೇಡಿ ನಾಚಿಕೆಯಾಗುವ ರೀತಿಯಲ್ಲಿ ಈಶ್ವರನಿಂದ ವರಗಳನ್ನು ಪಡೆದನಲ್ಲದೆ ತನ್ನ ಪರಾಕ್ರಮದಿಂದ ತೆಗೆದುಕೊಂಡನೆ. ಹೇಳು. ಅರ್ಜುನನಾದರೋ ಶಿವನನ್ನು ನೆಲಕ್ಕೆ ತಳ್ಳಿ ಗಂಟಲನ್ನು ಮೆಟ್ಟದೆ ಈಶ್ವರನ ಪಾಶುಪತಾಸ್ತ್ರವನ್ನು ಇಂದ್ರಕೀಲಪರ್ವತದಲ್ಲಿ ತೆಗೆದುಕೊಂಡನೆ? (ಅರ್ಜುನನು ತನ್ನ ಪರಾಕ್ರಮದಿಂದಲೇ ಈಶ್ವರನಿಂದ ಅಸ್ತ್ರವನ್ನು ಪಡೆದುದರಿಂದ ರಾವಣನಿಗಿಂತ ಇವನು ಪರಾಕ್ರಮಿ ಎಂದರ್ಥ.) ೫೪. ಕೊಬ್ಬಿ ಉತ್ಸಾಹಿಸಿ ಶೌರ್ಯದಿಂದ ಅಹಂಕಾರಪಡುವ ನಿನ್ನ ಪ್ರೀತಿಪಾತ್ರರಾದ ಯೋಧರೇ ನೋಡುತ್ತಿರಲು ನಿನ್ನ ಸ್ತ್ರೀಯರು ತಮ್ಮ ಅಪಾಯವನ್ನು ಸೂಚಿಸುವ ಚಿಗುರನ್ನು ಹಿಡಿದುಕೊಂಡು ಹೆದರಿರಲು ಚಿತ್ರಾಂಗದನೆಂಬ ಗಂಧರ್ವನು ನಿನ್ನನ್ನು ಕೋಡಗವನ್ನು ಕಟ್ಟುವಂತೆ ಕಟ್ಟಿ ತೆಗೆದುಕೊಂಡು ಹೋಗುತ್ತಿರಲು ತಡೆಮಾಡದೆ ಪ್ರಾಣವನ್ನೇ ಸೆಳೆಯುವಂತೆ ಕಾದಿ ತಂದ ವೀರನಾದ ಅರ್ಜುನನಿಗೆ ಮಲೆತು ನೀನು ಪ್ರತಿಭಟಿಸಿ ನಿಲ್ಲುವುದು ಕ್ರಮವಲ್ಲವೇ ದುರ್ಯೋಧನ? ೫೫. ನಿನ್ನನ್ನು ಗಂಧರ್ವರು ಸೆಳೆದುಕೊಂಡು ಹೋದಾಗ ದ್ರೋಣಾಚಾರ್ಯರಿಲ್ಲ, ಕರ್ಣನಿಲ್ಲ, ಅಶ್ವತ್ಥಾಮನಿಲ್ಲ, ಕೃಪಾಚಾರ್ಯನೂ ಇಲ್ಲ, ನಿನ್ನ ಇಷ್ಟು ಜನ ತಮ್ಮಂದಿರಲ್ಲಿ ಯಾರೂ ಇಲ್ಲ, ಭೀಷ್ಮನೂ ಇಲ್ಲ. ಯಾರೂ ಸಮಯಕ್ಕಾಗಲಿಲ್ಲ. ಬುದ್ಧಿಯಿಲ್ಲದವನೇ ಅರ್ಜುನನು ಯಾರೆಂದು ಕೀಳ್ಮಾಡಿ ನುಡಿಯುತ್ತಿರುವೆ? ಕುರುಸೈನ್ಯವು ಎರಕಹೊಯ್ದಂತೆ ಸ್ತಬ್ಧವಾಗಿತ್ತಲ್ಲವೆ? ನಿನ್ನನ್ನು ಬಿಡಿಸಿ ತಂದವನು ಅರ್ಜುನನಲ್ಲವೇ? ೫೬. ಉತ್ತಮ ರೀತಿಯಲ್ಲಿ ಯುದ್ಧಮಾಡೋಣ ಎಂಬ ಮನಸ್ಸಿನಿಂದ ನೀವೆಲ್ಲರೂ ವಿಶೇಷಾಸಕ್ತಿಯಿಂದ ಬಂದು ನಿನ್ನೆ ನಡೆದ ಪಶುಗಳನ್ನು ಹಿಡಿಯುವ ಸಂದರ್ಭದಲ್ಲಿ ಏನಾದಿರಿ? ಆಗುಂಟಾದ ಸೋಲನ್ನು ಚಿ ಮರೆತಿರುವಿರಾದರೆ ಏನಂತೆ? ಇನ್ನೂ ಗುಣಾರ್ಣವನಾದ ಅರ್ಜುನನಿಂದ ನಾಳೆಯೇ ಮಹಾಗಾಂಡೀವದ ಟಂಕಾರ ಶಬ್ದವನ್ನು ಕೇಳದಿರುತ್ತೀರಾ? ೫೭. ಸುರಿಯುವ ಬಾಣಗಳು, ನರಳುತ್ತಿರುವ ಯೋಧರು, ಉರುಳುತ್ತಿರುವ ಸೈನ್ಯ, ಹೊರಳುವ ಆನೆಗಳ ಸಮೂಹ, ಹರಿದು ಬರುತ್ತಿರುವ ರಕ್ತಸಮುದ್ರ, ಕುಣಿವ ತಲೆಯಿಲ್ಲದ ಮುಂಡಗಳು, ಯುದ್ಧದಲ್ಲಿ ಭಯಂಕರವಾಗುವ ಹಾಗೆ ಶತ್ರುಶಿಬಿರದಲ್ಲಿ ಓ ಎನ್ನುವುದಕ್ಕೆ ಒಬ್ಬರೂ ಇಲ್ಲದಂತೆ ಸಂಪೂರ್ಣವಾಗಿ ಕೊಲ್ಲುತ್ತಾನೆ. ಹಾಗೆ ಅರಿಕೇಸರಿಗೆ ಪ್ರತಿಭಟಿಸಿ ಬದುಕಲು ಸಾಧ್ಯವೇ? ವ|| ಎಂದು ಪ್ರಳಯಕಾಲದ ಕಾರ್ಮೋಡದ ಹಾಗೆ ರೇಗಿ

ಕಂ|| ಎೞ್ಪೋಗು ದೂತನಪ್ಪನ
ಬೆೞ್ಪನ ನುಡಿಗೇಳ್ದು ಮುಳಿಯಲಾಗದು ನೀನುಂ|
ಮೇೞ್ಪಟ್ಟು ವಿದುರನೆಂಬೀ
ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ ನುಡಿದೈ|| ೫೮

ವ|| ಎನೆ ವಿದುರನತಿಕುಪಿತಮನನಾಗಿ-

ಕಂ|| ಕಡು ಮುಳಿದು ನಿನ್ನ ತೊಡೆಗಳ
ನುಡಿವೆಡೆಯೊಳ್ ಭೀಮಸೇನನಾನಾ ಪದದೊಳ್|
ಪಿಡಿಯಲ್ಕೆಂದಿರ್ದೆನಿದಂ
ಪಿಡಿಯೆಂ ಪೋಗೆಂದು ಸಭೆಯೊಳುಡಿದಂ ಬಿಲ್ಲಂ|| ೫೯

ವ|| ಅಂತು ವಿದುರಂ ವಿಚ್ಛಿದುರಮನನಾಗಿ ಬಿಲ್ಲನುಡಿವುದುಂ ಸುಯೋಧನಂ ತನ್ನ ಬಲದ ತೋಳುಡಿದಂತಾಗಿ ಸಿಗ್ಗಾಗಿ ಬಾಳಂ ಕಿೞ್ತೊದಱ ಮನದೊಳಾದೇವದಿಂ ದೇವಕೀನಂದನನ ಮೇಲೆವಾಯ್ವುದುಂ ನಂಜಿನ ಮೇಲೆವಾಯ್ವ ನೊಳರಿನಂತುರುಳ್ತರೆ ಪಾಯ್ದು-

ಉ|| ಮೂಱಡಿ ಮಾಡಿದಂದು ನೆಲನೆಲ್ಲಮನಾ ಬಲಿಗಾದ ರೂಪಮಂ
ತೋಱದನೀ ಜಗತ್ತ್ರಯಮನೊರ್ಮೆಯೆ ನುಂಗುವ ಕಾಲ ರೂಪಮಂ|
ತೋಱದನಂತೆ ರೌದ್ರತರ ರೂಪಮನೊರ್ಮೆಯೆ ವಿಶ್ವರೂಪಮಂ
ತೋಱದನಿರ್ದರಂ ನೆಯೆ ಮೋಹಿಸಿ ವೈಷ್ಣವದಿಂ ಮುರಾಂತಕಂ|| ೬೦

ವ|| ಆಗಳ್ ಧೃತರಾಷ್ಟ್ರಂ ಬಂದು ಮುಕುಂದನನೇಕಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿದೊಡಾತಂಗೆ ವರದನಾಗಿ ದಿವ್ಯ ದೃಷ್ಟಿಯಂ ದಯೆಗೆಯ್ದು ಮುನ್ನಿನಂತೆ ಮನುಷ್ಯದೇಹಮಂ ಕೆಯ್ಕೊಂಡು ತ್ರೈಲೋಕ್ಯ ಗುರು ಗುರುತನೂಜನ ಕೆಯ್ಯಂ ಪಿಡಿದರಮನೆಯಂ ಪೊಱಮಟ್ಟು ಕಪಟ ಪ್ರಪಂಚದಿಂದಾತನುಮಂ ತನಗೆ ಮಾಡಿ ಬೀಡಿಂಗೆ ವಂದು ಕುಂತಿಗೇಕಾಂತದೊಳಿಂತೆಂದಂ-

ಚಂ|| ಗುರು ಕೃಪ ಶಲ್ಯ ಸಿಂಧುಸುತರಪ್ಪೊಡೆ ನಮ್ಮಯ ಪಕ್ಷಮೊಂದಿದಂ
ಗುರುಸುತನೀಗಳೆಮ್ಮೊಳಖಿಳಾಸ್ತ್ರ ವಿಶಾರದನಪ್ಪನುಂ ಗೆಲ|
ಲ್ಕರಿಯನುಮೊಂದಿ ಬಾರದನುಮಂಕದ ಕರ್ಣನೆ ಭೀರಮಾತನಿಂ
ದುರಿವರಿದತ್ತು ಚಾಗಮವನಿಂದೆಸೆದತ್ತು ಸಮಸ್ತ ಧಾತ್ರಿಯೊಳ್|| ೬೧

ಗರ್ಜನೆ ಮಾಡುವ ಕೃಷ್ಣನಿಗೆ ದುರ್ಯೋಧನನು ಕೋಪಿಸಿಕೊಂಡು ಕುದಿದು ಕುರುಡನಾದನು. ೫೮. “ಎದ್ದು ಹೋಗು; ದೂತನಾದವನ ದಡ್ಡಮಾತನ್ನು ಕೇಳಿ ಕೋಪಿಸಬಾರದು. ನೀನು ಮೋಸಹೋಗಿ ವಿದುರನೆಂಬ ದಾಸೀಪುತ್ರನ ಮನೆಯ ಕೂಳಿನ ಕೊಬ್ಬು ಮಾತನಾಡಿಸಲು ನೀನು ಹೇಗೆ ಮಾತನಾಡಿದ್ದೀಯೆ. (ನೀಚ ಆಹಾರದ ಪ್ರಭಾವ ಇದು ಎಂದರ್ಥ) ವ|| ಎನ್ನಲು ವಿದುರನು ವಿಶೇಷ ಕೋಪದಿಂದ ಕಿಡಿಕಿಡಿಯಾದನು. ೫೯. ಎಲವೊ ದುರ್ಯೋಧನ, ಮುಂದೆ ಭೀಮಸೇನನು ವಿಶೇಷವಾಗಿ ಕೋಪಿಸಿಕೊಂಡು ನಿನ್ನ ತೊಡೆಯನ್ನು ಒಡೆಯುವ ಸಂದರ್ಭದಲ್ಲಿ ಇದನ್ನು ಪ್ರಯೋಗಿಸಬೇಕೆಂದಿದ್ದೆ. ಈಗ ಹಿಡಿಯುವುದಿಲ್ಲ ಹೋಗು ಎಂದು ಸಭೆಯಲ್ಲಿ ಎಲ್ಲರೆದುರಿಗೂ ಬಿಲ್ಲನ್ನು ಮುರಿದು ಹಾಕಿದನು. ವ|| ಹಾಗೆ ವಿದುರನು ಭಗ್ನಮನಸ್ಕನಾಗಿ ಬಿಲ್ಲನ್ನು ಮುರಿದುಹಾಕಲು ದುರ್ಯೋಧನನಿಗೆ ತನ್ನ ಬಲತೋಳೇ ಭಿನ್ನವಾದಂತೆ ಆಯಿತು. ಅವಮಾನಿತನಾಗಿ ಒರೆಯಿಂದ ಕತ್ತಿಯನ್ನು ಸೆಳೆದು ಒದರಿ ಮನಸ್ಸಿನಲ್ಲುಂಟಾದ ಕೋಪದಿಂದ ಕೃಷ್ಣನ ಮೇಲೆ ಹಾಯಲು ವಿಷದ ಮೇಲೆ ಹಾಯುವ ನೊಣದಂತೆ ಉರುಳಿಬೀಳುವ ಹಾಗೆ ಹಾಯಲು- ೬೦. ಶ್ರೀಕೃಷ್ಣನು ತನ್ನ ವಿಷ್ಣುಮಾಯೆಯಿಂದ ಸಭೆಯಲ್ಲಿದ್ದವರನ್ನೆಲ್ಲಾ ಪೂರ್ಣವಾಗಿ ಮೂರ್ಛೆಗೊಳಿಸಿ ಭೂಮಿಯನ್ನೆಲ್ಲ ಮೂರಡಿಯಾಗಿ ಅಳೆದಾಗ ಬಲಿಚಕ್ರವರ್ತಿಗೆ ತೋರಿದ ದೊಡ್ಡ ಆಕಾರವನ್ನು ತೋರಿಸಿದನು. ಈ ಮೂರು ಲೋಕಗಳನ್ನೂ ಒಂದೇ ಸಲಕ್ಕೆ ನುಂಗುವ ಪ್ರಳಯಕಾಲದ ರೂಪವನ್ನು ತೋರಿಸಿದನು. ಹಾಗೆಯೇ ಒಂದೇಸಲಕ್ಕೆ ವಿಶ್ವರೂಪವನ್ನು ತೋರಿಸಿದನು. ವ|| ಆಗ ಧೃತರಾಷ್ಟ್ರನು ಬಂದು ನೂರಾರು ಸಾವಿರಾರು ಸ್ತೋತ್ರಗಳನ್ನು ಸ್ತುತಿಸಲು ಆತನಿಗೆ ವರಪ್ರದನಾಗಿ ದಿವ್ಯದೃಷ್ಟಿಯನ್ನು ದಯಪಾಲಿಸಿ ಮೊದಲಿನ ಮನುಷ್ಯರೂಪವನ್ನು ತಾಳಿ ಮೂರುಲೋಕದ ಗುರುವಾದ ಕೃಷ್ಣನು ಅಶ್ವತ್ಥಾಮನ ಕೈಹಿಡಿದು ಅರಮನೆಯಿಂದ ಹೊರಟು ಅವನನ್ನು ಕಪಟದಿಂದ ತನ್ನವನನ್ನಾಗಿ ಮಾಡಿಕೊಂಡು ಬೀದಿಗೆ ಬಂದು ಕುಂತೀದೇವಿಗೆ ರಹಸ್ಯವಾಗಿ ಹೀಗೆ ಹೇಳಿದನು- ೬೧. ಗುರು, ಕೃಪ, ಶಲ್ಯ, ಭೀಷ್ಮರಾದರೆ ನಮ್ಮ ಪಕ್ಷದವರೇ. ಈಗ ಅಶ್ವತ್ಥಾಮನೂ ನಮ್ಮಲ್ಲಿ ಸೇರಿದನು. ಸಮಸ್ತ ಶಾಸ್ತ್ರದಲ್ಲಿ ವಿಶಾರದನೂ ಜಯಿಸುವುದಕ್ಕೆ ಅಸಾಧ್ಯನೂ ನಮ್ಮ ಜೊತೆಯಲ್ಲಿ ಸೇರುವುದಕ್ಕೆ ಒಪ್ಪದವನೂ ಆದವನು ಪ್ರಸಿದ್ಧನಾದ ಕರ್ಣನೊಬ್ಬನೇ. ಸಮಸ್ತ ಪ್ರಪಂಚದಲ್ಲಿ ಅವನ ಶೌರ್ಯಪ್ರತಾಪವು ಬೆಂಕಿಯಂತೆ ಪ್ರಸರಿಸಿದೆ. ತ್ಯಾಗವೂ

ಉ|| ಎಂತೆನೆ ವಜ್ರಿ ವಜ್ರಕವಚಕ್ಕೆ ನಿಜೋಜ್ವಳಕುಂಡಳಕ್ಕೆ ಕೆ
ಯ್ಯಾಂತೊಡೆ ಪಾಂಡುಪುತ್ರರನೆ ಕಾದೆರೆವಂದುಗಿವಂ ದಲೆಂದಿನಂ|
ಮಂತಣದಿಂದೆ ಬಾರಿಸೆಯುಮೆಂದುದನೆನ್ನದೆ ಮೀಱ ಕೊಟ್ಟನೋ
ರಂತು ಜಸಕ್ಕೆ ನೋಂತು ಬಿಡೆ ನೇರ್ದೊಡಲೊಳ್ ತೊಡರ್ದಾ ತನುತ್ರಮಂ|| ೬೨

ಮ|| ಬರವಂ ಬೇಡಿದರ್ಗೀವ ದೇವನೆ ವಲಂ ನಾಣ್ಗೆಟ್ಟು ಬಂದೆನ್ನನಿಂ
ತೆರೆದಂ ಬರ್ದರೊಳಾನೆ ಬರ್ದನೆನುತುಂ ನೇರ್ವಲ್ಲಿ ಕೆನ್ನೆತ್ತರುಂ|
ಬಿರಿ ಕಂಡಂಗಳೆ ಬೀೞಲುಣ್ಮೆ ಮನದೊಂದಣ್ಮಿಟ್ಟಳಂ ಪೊಣ್ಮೆ ವೀ
ರರಸಕ್ಕಾಗರಮಾಯ್ತು ನೋಡೆ ಕವಚಂಗೊಂಡಂದಮಾ ಕರ್ಣನಾ|| ೬೩

ವ|| ಅಂತು ಸಹಜಕವಚ ರತ್ನಕುಂಡಲಂಗಳಂ ನೆತ್ತರ್ ಪನಪನ ಪನಿಯೆ ತಿದಿಯುಗಿವಂತುಗಿದು ಕೊಟ್ಟುದರ್ಕೆ ಮೆಚ್ಚಿ ದೇವೇಂದ್ರನಾತಂಗಮೋಘಶಕ್ತಿಯನಿತ್ತನಾತನಂ ನಾನುಮೆನ್ನ ಬಲ್ಲ ಮಾೞ್ಕೆಯಿಂ ಭೇದಿಸಿದಪ್ಪೆಂ ನೀಮುಂ ನಿಮ್ಮ ಚೊಚ್ಚಿಲ ಮಗನಪ್ಪ ಸೂರ್ಯಸೂನುವಂ ಸೂರ್ಯದಿನದಂದು ಕಂಡು ಕಾರ್ಯಸಿದ್ಧಿಯಂ ಮಾಡಿ ಬನ್ನಿಮೆಂದು ಕೊಂತಿಯಂ ಬೀೞ್ಕೊಂಡು ಪರಕೆಯಂ ಕೈಕೊಂಡು ರಥಾಂಗಧರಂ ರಥಮನೇಱ ಕರ್ಣನ ಮನೆಯ ಮುಂದನೆ ಬಂದು ಮೇಲೆ ಬಿೞ್ದೆಮ್ಮಂ ಕಿಱದಂತರಂ ಕಳಿಪಿ ಮಗುೞ್ವೆ ಬಾ ಪೋಪಮೆಂದು ತನ್ನೊಡನೆ ರಥಮನೇಱಸಿಕೊಂಡುಪೋಗಿ ಮುಂದೊಂದೆಡೆಯೊಳ್ ನಿಂದು-

ಉ|| ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್|
ಸೋದರರೆಯ್ದೆ ಮಯ್ದುನನೆನಾಂ ಪೆಱತೇಂ ಪಡೆಮಾತೊ ನಿನ್ನದೀ
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ|| ೬೪

ಕಂ|| ಗಂಗೆಗೆ ಕೆಯ್ಯೆಡೆಯೆಂದು
ತ್ತುಂಗಸ್ತನಿ ಕೊಟ್ಟು ಪೋಗೆ ಸೂತಂ ಕಂಡಾ|
ತ್ಮಾಂಗನೆಗೆ ರಾಧೆಗಿತ್ತು ಮ
ನಂಗೊಳೆ ರಾಧೇಯನೆನಿಸಿ ಸೂತಜನಾದೈ|| ೬೫

ಅವನಿಂದಲೇ ಪ್ರಕಾಶಮಾನವಾಗಿದೆ. ೬೨. ಹೇಗೆಂದರೆ ಇಂದ್ರನು ಕರ್ಣನ ವಜ್ರಕವಚವನ್ನೂ ಅವನ ಬಹುಪ್ರಕಾಶವಾದ ಕಿವಿಯಾಭರಣ ಗಳನ್ನೂ ಕೈನೀಡಿ ಯಾಚಿಸಿದಾಗ “ಪಾಂಡುಪುತ್ರರನ್ನು ರಕ್ಷಿಸುವುದಕ್ಕಾಗಿ ಇಂದ್ರನು ಬಂದು ನಿನ್ನನ್ನು ಛಿದ್ರಿಸುತ್ತಿದ್ದಾನೆ, ಕೊಡಬೇಡ ಎಂದು ಸೂರ್ಯನು ಬಂದು ಉಪದೇಶಮಾಡಿ ತಡೆದರೂ ಅವನು ಹೇಳಿದುದನ್ನು ಕೇಳದೆ ಯಶಸ್ಸಿಗಾಗಿ ಆಶೆಪಟ್ಟು ತನ್ನ ಶರೀರದಲ್ಲಿ ಅಂಟಿಕೊಂಡಿದ್ದ ಆ ವಜ್ರಕವಚವನ್ನು ಸುಲಿದುಬರುವ ಹಾಗೆ ಕತ್ತರಿಸಿ ದಾನವಾಗಿ ಕೊಟ್ಟನು. ೬೩. ಬೇಡಿದವರಿಗೆ ವರವನ್ನು ಕೊಡುವ ಇಂದ್ರದೇವನೇ ನಾಚಿಕೆಗೆಟ್ಟು ಬಂದು ನನ್ನನ್ನು ಈರೀತಿ ಬೇಡಿದನು. ಬಾಳಿದವರಲ್ಲೆಲ್ಲ ನಾನೆ ಬಾಳಿದವನು ಎಂದುಕೊಳ್ಳುತ್ತ ದೇಹದಿಂದ ಕವಚವನ್ನು ಕೆಂಪಾದ ರಕ್ತವೂ ಸೀಳಿದ ಮಾಂಸಖಂಡವೂ ಒಂದೇ ಸಮನಾಗಿ ಸುರಿಯುತ್ತಿರಲು ಮನೋದಾರ್ಢ್ಯವೂ ಅತಿಶಯವಾಗಿ ಅಭಿವೃದ್ಧಿಯಾಗುತ್ತಿರಲು ಕರ್ಣನು ಕವಚವನ್ನು ಶರೀರದಿಂದ ಕಿತ್ತ ರೀತಿ ನೋಡುವವರಿಗೆ ವೀರರಸಕ್ಕೆ ಆಗರವಾಗಿತ್ತು. ವ|| ಹಾಗೆ ಅವನಿಗೆ ಸಹಜವಾಗಿ ಹುಟ್ಟಿದ ಕವಚ ಮತ್ತು ರತ್ನಕುಂಡಲಗಳನ್ನು ರಕ್ತವು ಪನಪನ ಎಂದು ತೊಟ್ಟುತ್ತಿರಲು ಚರ್ಮವನ್ನು ಸುಲಿಯುವ ಹಾಗೆ ಸುಲಿದುಕೊಟ್ಟುದಕ್ಕೆ ಮೆಚ್ಚಿ ದೇವೇಂದ್ರನಾತನಿಗೆ ಬೆಲೆಯಿಲ್ಲದ ಶಕ್ತಾಯುಧವನ್ನು ವರವಾಗಿ ಕೊಟ್ಟಿದ್ದಾನೆ. ಆತನನ್ನು ನಾನೂ ನನಗೆ ತಿಳಿದ ಮಟ್ಟಿನ ರೀತಿಯಲ್ಲಿ ಛಿದ್ರಿಸುತ್ತೇನೆ. ನೀವೂ ನಿಮ್ಮ ಚೊಚ್ಚಲಮಗನಾದ ಸೂರ್ಯಪುತ್ರನಾದ ಕರ್ಣನನ್ನು ಭಾನುವಾರದ ದಿನ ನೋಡಿ ಕಾರ್ಯಸಿದ್ಧಿಯನ್ನು ಮಾಡಿಕೊಂಡು ಬನ್ನಿ ಎಂದು ಕುಂತಿಯನ್ನು ಕಳುಹಿಸಿಕೊಟ್ಟನು. ಅವಳ ಆಶೀರ್ವಾದವನ್ನು ಪಡೆದು ಕೃಷ್ಣನು ತೇರನ್ನು ಹತ್ತಿ ಕರ್ಣನ ಮನೆಯ ಮುಂದುಗಡೆಯೇ ಬಂದು ತಾನೇ ಮೇಲೆ ಬಿದ್ದು ‘ಕರ್ಣ! ನಮ್ಮನ್ನು ಸ್ವಲ್ಪ ದೂರ ಕಳುಹಿಸಿಕೊಟ್ಟು ಬರುವೆಯಂತೆ ಬಾ ಹೋಗೋಣ’ ಎಂದು ತನ್ನೊಡನೆ ರಥದಲ್ಲಿ ಹತ್ತಿಸಿಕೊಂಡು ಹೋಗಿ ಮುಂದೆ ಬಂದು ಒಂದು ಕಡೆಯಲ್ಲಿ ನಿಂತು ಹೇಳಿದನು. ೬೪. ಕರ್ಣ ಕೇಳು, ನಿನ್ನನ್ನು ಭೇದಿಸಲು ಹೀಗೆ ಹೇಳಿದೆನೆಂದು ನುಡಿಯದಿರು. ಆದಿಯಲ್ಲಿ ಕುಂತಿಯು ನಿನ್ನ ತಾಯಿ, ಸೂರ್ಯನು ನಿನ್ನ ತಂದೆ, ಪಾಂಡವರು ನಿನ್ನ ಸಹೋದರರು, ನಾನು ನಿನಗೆ ಮೈದುನ. ಹೆಚ್ಚು ಹೇಳುವುದೇನು? ಈ ಭೂಮಿಯೆಲ್ಲವೂ ನಿನ್ನದೇ. ಪಟ್ಟವೂ ನಿನ್ನದೇ. ನೀನಿರುವಲ್ಲಿ ಇತರರು ರಾಜರಾಗಬಲ್ಲರೇ? ೬೫. ನಿನ್ನನ್ನು ಯುವತಿಯಾದ ನಿನ್ನ ತಾಯಿಯಾದ ಕುಂತಿಯು ಗಂಗೆಗೆ ನ್ಯಾಸವೆಂದು (ರಕ್ಷಿಸುವ ಪದಾರ್ಥ) ಕೊಟ್ಟು ಹೋಗಲು ಅದನ್ನು ನೋಡಿದ ಸೂತನು ತನ್ನ

ನಿನ್ನುತ್ಪತ್ತಿಯನಿಂತೆಂ
ದೆನ್ನರುಮಣಮಯರಱವೆನಾಂ ಸಹದೇವಂ|
ಪನ್ನಗಕೇತು ದಿನೇಶಂ
ನಿನ್ನಂಬಿಕೆ ಕುಂತಿಯಿಂತಿವರ್ ನೆ ಬಲ್ಲರ್|| ೬೬

ವ|| ದುರ್ಯೋಧನಂ ನಿನ್ನನೇತಳ್ ನಂಬಿವನೆಂದೊಡೆ ನೀನುಂ ತಾನುಮೊರ್ಮೆ ಗಂಗಾನದೀತೀರದೊಳ್ ಬೇಂಟೆಯಾಡುವಲ್ಲಿ ತತ್ಸಮೀಪದ ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯಜ್ಞಾನಿಗಳಂ ಕಂಡು ಪೊಡೆವಟ್ಟಿರ್ವರುಮಂ ಪರಸಿ ನಿನಗೆ ಮುನ್ನಮೇಱಲ್ ತರಿಸಿದೊಡೆ ಸುಯೋಧನನೇವಯಿಸಿ ನಿನ್ನಂ ಪೋಗಲ್ವೇೞ್ದು-

ಉ|| ಆನಿರೆ ನೀಮಿದೇಕೆ ದಯೆಗೆಯ್ದಿರೊ ಮೀಂಗುಲಿಗಂಗೆ ಪೇೞಮೆಂ
ದಾ ನರನಾಥನಂ ತಿಳಿಪೆ ತನ್ಮುನಿ ಭೂಭುಜನೆಯ್ದೆ ನಂಬಿ ಕಾ|
ನೀನ ಸಮಂತು ಪಾಟಿಸುವೆನೊಯ್ಯನೆ ಮುಳ್ಳೊಳೆ ಮುಳ್ಳನೆಂದು ತಾ
ನೀ ನಯದಿಂದೆ ಪೆರ್ಚಿ ಪೊರೆದೞ್ಕಳಂದೊಡನುಂಡನಲ್ಲನೇ|| ೬೭

ಚಂ|| ಎನೆಯೆನೆ ಬಾಷ್ಪವಾರಿ ಪುಳಕಂಬೆರಸೊರ್ಮೆಯೆ ಪೊಣ್ಮೆ ಮುನ್ನೆ ನೀ
ವೆನಗಿದನೇಕೆ ಪೇೞರೊ ನೆಗೞ್ತೆ ಪೊಗೞ್ತೆಯನಾಂಪಿನಂ ಸುಯೋ|
ಧನನೆನಗೊಳ್ಳಿಕೆಯ್ದ ಕೃತಮಂ ಪೆಱಗಿಕ್ಕಿ ನೆಗೞ್ತೆ ಮಾಸೆ ನ
ಣ್ಪಿನ ನೆವದಿಂದೆ ಪಾಂಡವರನಾನೊಳವೊಕ್ಕೊಡೆ ನೀಮೆ ಪೇಸಿರೇ|| ೬೮

ಉ|| ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ
ಡುತ್ತಿರೆ ಲಂಬಣಂ ಪಱಯೆ ಮುತ್ತಿನ ಕೇಡನೆ ನೋಡಿ ನೋಡಿ ಬ|
ಳ್ಕುತ್ತಿರೆಯೇವಮಿಲ್ಲದಿವನಾಯ್ವುದೊ ತಪ್ಪದೆ ಪೇೞಮೆಂಬ ಭೂ
ಪೊತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ|| ೬೯

ಹೆಂಡತಿಯಾದ ರಾಧೆಗೆ ಕೊಟ್ಟುದರಿಂದ ನೀನು ರಾಧೇಯನೆನಿಸಿಕೊಂಡು ಸೂತಪುತ್ರನಾಗಿದ್ದೀಯೆ. ೬೬. ನೀನು ಹುಟ್ಟಿದ ರೀತಿ ಹೀಗೆಂದು ಯಾರಿಗೂ ಸ್ವಲ್ಪವೂ ತಿಳಿಯದು. ನಾನು, ಸಹದೇವ, ದುರ್ಯೋಧನ, ಸೂರ್ಯ, ನಿನ್ನ ತಾಯಿಯಾದ ಕುಂತಿ ಇವರು ಪೂರ್ಣವಾಗಿ ಬಲ್ಲೆವು. ವ|| ದುರ್ಯೋಧನನು ನಿನ್ನನ್ನು ಯಾವುದರಿಂದ ನಂಬಿದವನೆಂದರೆ ನೀನೂ ಆತನೂ ಒಂದು ಸಲ ಗಂಗಾತೀರದಲ್ಲಿ ಬೇಟೆಯಾಡುತ್ತಿರುವಾಗ ಸಮೀಪದಲ್ಲಿದ್ದ ತಾಪಸಾಶ್ರಮದಲ್ಲಿ ಸತ್ಯಂತಪರೆಂಬ ದಿವ್ಯಜ್ಞಾನಿಗಳನ್ನು ಕಂಡು ನಮಸ್ಕಾರಮಾಡಿದಿರಿ. ನಿಮ್ಮಿಬ್ಬರನ್ನೂ ಹರಸಿ ಅವರು ನಿನಗೆ ಮೊದಲು ಆಸನವನ್ನು ತರಿಸಿಕೊಟ್ಟರು. ದುರ್ಯೋಧನನು ಲಜ್ಜಿತನಾಗಿ ನಿನ್ನನ್ನು ಹೊರಗೆ ಹೋಗಹೇಳಿ ೬೭. ‘ನಾನಿರುವಾಗ ತಾವಿದೇಕೆ ಆ ಮೀಂಗುಲಿಗನಿಗೆ (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು-ಬೆಸ್ತ) ದಯೆಗೆಯ್ದಿರಿ’ ಎಂದು ಆ ಋಷಿಯನ್ನು ಕೇಳಿದಾಗ ಅವರು ದೊರೆಗೆ ಎಲ್ಲವನ್ನೂ ತಿಳಿಸಿದರು. ದೊರೆಯು ನಂಬಿ ಕರ್ಣ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಉಪಾಯವನ್ನು ಮಾಡುವೆನೆಂದು ನಿನ್ನನ್ನು ಈ ನಯದಿಂದ ಪೋಷಿಸುತ್ತ ಪ್ರೀತಿಯಿಂದ ನಿನ್ನೊಡನೆ ಉಂಡನಲ್ಲವೇ?” ೬೮. ಹೀಗೆಂದು ಕೃಷ್ಣನು ಹೇಳಲು ಕರ್ಣನಿಗೆ ರೋಮಾಂಚನದೊಡನೆ ಕಣ್ಣೀರು ಸುರಿಯಲಾರಂಭಿಸಿತು. ಅವನು ಕೃಷ್ಣನನ್ನು ಕುರಿತು ‘ತಾವು ಮೊದಲು ನನಗೆ ಏಕೆ ತಿಳಿಸಿದರೋ? ಪ್ರಸಿದ್ಧಿಗೂ ಹೊಗಳಿಕೆಗೂ ಪಾತ್ರವಾಗುವಷ್ಟು ಆತ್ಮವಿಶ್ವಾಸದಿಂದ ದುರ್ಯೋಧನನು ನನಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಹೊರಗಿಕ್ಕಿ ನನ್ನ ಕೀರ್ತಿ ಮಾಸಿ ಹೋಗುವ ಹಾಗೆ ನೆಂಟಿನ ನೆಪದಿಂದ ಪಾಂಡವರಲ್ಲಿ ಸೇರಿಕೊಂಡರೆ ನೀವೂ ಹೇಸುವುದಿಲ್ಲವೇ? ೬೯. ದುರ್ಯೋಧನನೂ ರಾಣಿಯಾದ ಭಾನುಮತಿಯೂ ಪಗಡೆಯಾಡಿ ಭಾನುಮತಿ ಸೋತು ಎದ್ದುಹೋಗಲು ಪಣವನ್ನು ಕೊಟ್ಟು ಹೋಗು ಎಂದು ದುರ್ಯೋಧನನು ಹಿಂಸಿಸುತ್ತಿರಲು ಮುತ್ತಿನಹಾರವು ಕಿತ್ತುಹೋಯಿತು. ತನ್ನ ಮುತ್ತಿನ ಕೇಡನ್ನೇ ನೋಡುತ್ತ ನಡುಗುತ್ತಿದ್ದ ಭಾನುಮತಿಯನ್ನು ದುರ್ಯೋಧನನು ಕರ್ಣನಿಗೆ ‘ತೋರಿಸಿ, ನಾಚಿಕೆಯಿಲ್ಲದೆ ಮುತ್ತುಗಳನ್ನು ಆಯುವುದೇ ತಪ್ಪಿಲ್ಲದೇ ಹೇಳು’ ಎಂದು ಹೇಳುವ ರಾಜಶ್ರೇಷ್ಠನಾದ ದುರ್ಯೋಧನನ್ನು ಬಿಟ್ಟು ನಿಮ್ಮಲ್ಲಿ ಸೇರಿಕೊಂಡರೆ ನಾನು ಯಾರಿಗೂ ಬೇಡದವನಾಗುತ್ತೇನಲ್ಲವೇ? ಎಂದನು. ವ|| ಕರ್ಣನು ಹೇಗೂ ತನ್ನ ಮಾತಿಗೆ ಒಪ್ಪುವುದಿಲ್ಲವೆಂಬುದನ್ನು ಸ್ಥಿರವಾಗಿ

ಈ ಪದ್ಯದಲ್ಲಿ ಕರ್ಣನು ತನಗೆ ದುರ್ಯೋಧನನಲ್ಲಿದ್ದ ಸದರವನ್ನೂ ಆಂತರ್ಯ ಮನೋಭಾವವನ್ನೂ ವಿಶದಪಡಿಸುತ್ತಾನೆ. ಇಲ್ಲಿ ಪಗಡೆ ಯಾಡುತ್ತಿರುವವರು ದುರ್ಯೋಧನ ಭಾನುಮತಿಯರು, ಕರ್ಣ ಪ್ರೇಕ್ಷಕ. ದುರ್ಯೋಧನನ ಏಕಾಂತವಾದ ಅಂತಪುರಕ್ಕೂ ಅವನಿಗೆ ಪ್ರವೇಶವುಂಟು. ರಾಜರಾಣಿಯರ ಆಟದಲ್ಲಿಯೂ ಇವನ ಮಧ್ಯಸ್ಥಿಕೆ ಇರುತ್ತಿತ್ತು ಎಂಬುದು ಸೂಕ್ತವಾದ ಅರ್ಥ. ಅದು ಬಿಟ್ಟು ಕರ್ಣನು ಭಾನುಮತಿಯೊಡನೆ ಪಗಡೆ ಯಾಟವಾಡುತ್ತಿದ್ದು ಅವಳ ಹಾರಕ್ಕೆ ಕೈ ಹಾಕಿ ಹರಿದುಹಾಕಿದ ಎಂಬುದು ಲೌಕಿಕದೃಷ್ಟಿಯಿಂದ ಹಾಸ್ಯಾಸ್ಪದವಾಗುತ್ತದೆ. ಎಷ್ಟೇ ಸದರವಿದ್ದರೂ ಸ್ನೇಹಿತ ಅಥವಾ ಕೈಕೆಳಗಿನ ಅಕಾರಿಯೊಬ್ಬನ ರಾಣಿಯ ಮುತ್ತಿನ ಹಾರಕ್ಕೆ ಕೈ ಹಾಕಿ ಹರಿಯುವುದು ಅಪಚಾರದ ಪರಮಾವ. ರಾಜರಾಣಿಯರ ಪ್ರಣಯಕಲಹ ದಲ್ಲಿಯೂ ಕರ್ಣನ ಮಧ್ಯಸ್ಥಿಕೆಯಿತ್ತೆಂಬುದು ಅವರ ಪರಸ್ಪರ ಮೈತ್ರಿಯ ಪರಾಕಾಷ್ಠತೆಯನ್ನು ವಿಶದಪಡಿಸುತ್ತದೆ.

ವ|| ಎಂಬುದುಂ ಕರ್ಣಂ ತನಗೆಂತುಮೊಡಂಬಡದುದಂ ನಿರ್ಣಯಮಾಗಱದು ಮಗುೞಲ್ವೇೞ್ದು ನಾರಾಯಣಂ ಪೋದನಿತ್ತಲಂಗ ರಾಜನುಮಾತ್ಮಾಲಯಕರ‍್ಕೆ ವಂದು ಚಿಂತಾಕ್ರಾಂತನಾಗಿ-

ಚಂ|| ಕುರುಪತಿಗಿಲ್ಲ ದೈವಬಲಮಾಜಿಗೆ ಮೇಲ್ಮಲೆಗೆಯ್ವರಾಗಳುಂ
ಗುರು ಗುರುಪುತ್ರ ಸಿಂಧುಸುತರಾಳ್ದನುಮೆನ್ನನೆ ನಚ್ಚಿ ಪೆರ್ಚಿ ಮುಂ|
ಪೊರೆದನಿದಿರ್ಚಿ ಕಾದುವರುಮೆನ್ನಯ ಸೋದರರೆಂತು ನೋಡಿ ಕೊ
ಕ್ಕರಿಸದೆ ಕೊಲ್ವೆನೆನ್ನೊಡಲನಾಂ ತವಿಪೆಂ ರಣರಂಗಭೂಮಿಯೊಳ್|| ೭೦

ಮ|| ಅಱದೆಂ ಸೋದರರೆಂದು ಪಾಂಡವರನಿನ್ನೆಂತೆನ್ನರಂ ಕೊಲ್ವೆನ
ೞ್ಕಳೆನ್ನಂ ಪೊರೆದೆಯ್ದೆ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ|
ತಱಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತ
ಳ್ತಿಱದೆನ್ನಾಳ್ದನಿವಾನೆ ಮುಂಚೆ ನಿಱಪೆಂ ಕೆಯ್ಕೊಂಡು ಕಟ್ಟಾಯಮಂ|| ೭೧

ವ|| ಎಂದು ಮುಂತಪ್ಪ ಕಜ್ಜಮಂ ತನ್ನೊಳೆ ಬಗೆದವಾರ್ಯ ವೀರ್ಯಂ ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು ಬಂದು ದುರ್ಯೋಧನನಟ್ಟಿದ ದೇವಸವಳದ ಪದಿನೆಂಟು ಕೋಟಿ ಪೊನ್ನುಮನೊಟ್ಟಿ ಬೆಟ್ಟಾಗ ಪುಂಜಿಸಿ-

ಕಂ|| ಸೋರ್ವ ವಸುಧಾರೆಯಂ ಕೆ
ಯ್ಸಾರ್ವ ನಿಧಾನಮುಮನಿೞಸಿ ತನ್ನೀವಳವಿಂ|
ಪಾರ್ವಂಗಮಳಿಪಿ ಬೇಡಿದ
ಪಾರ್ವಂಗಂ ಪಿರಿದನಿತ್ತನಂಗಮಹೀಶಂ|| ೭೨

ವ|| ಅಂತು ಚಾಗಂಗೆಯ್ದು ಜಗನ್ಮಂಗಳ ಗಂಗಾವಾರಿಯೊಳನಿವಾರಿತ ಪರಾಕ್ರಮನಘಮರ್ಷಣಪೂರ್ವಕಂ ಮಿಂದು ಕನಕಪಾತ್ರದೊಳ್ ತೆಕ್ಕನೆ ತೀವಿದ ಕನಕ ಕಮಳಂಗಳಿಂದಾದಿತ್ಯತೇಜನಾದಿತ್ಯಂಗರ್ಘ್ಯಮೆತ್ತಿ ಸೂರ್ಯಜಂ ಸೂರ್ಯಮಂತ್ರಂಗಳನೋದಿ ನೀರಂ ಸೂಸಿ ತ್ರಿಪದಕ್ಷಿಣಂಗೆಯ್ವಾಗಳ್-

ಕಂ|| ಸಂಗತ ತರಂಗಯುತೆಯಂ
ಮಂಗಳಲಕ್ಷಣೆಯನಂದು ಭೋಂಕನೆ ಕಂಡಂ|
ಗಂಗಾಂಗನೆಯಂ ಕಾಣ್ಬವೊ
ಲಂಗನೃಪಂ ಮುಂದೆ ನಿಂದ ಕೊಂತಿಯನಾಗಳ್|| ೭೩

ತಿಳಿದುಕೊಂಡು ಕೃಷ್ಣನು ಅವನನ್ನು ಹಿಂತಿರುಗಹೇಳಿ ತಾನೂ ಹೋದನು. ಈ ಕಡೆ ಕರ್ಣನು ತನ್ನ ಮನೆಗೆ ಬಂದು ದುಖದಿಂದ ಕೂಡಿ- ೭೦. ದುರ್ಯೋಧನನಿಗೆ ದೈವಬಲವಿಲ್ಲ, ದ್ರೋಣ ಅಶ್ವತ್ಥಾಮ ಭೀಷ್ಮರು ತೋರಿಕೆಯ ಯುದ್ಧವನ್ನು ಮಾಡುವವರು, ನನ್ನ ಯಜಮಾನನಾದ ದುರ್ಯೋಧನನು ನನ್ನನ್ನೇ ನಂಬಿ ಉಬ್ಬಿ ಮೊದಲು ಸಾಕಿದ್ದಾನೆ. ಯುದ್ಧಮಾಡುವವರು ನನ್ನ ಸಹೋದರರು. ತಿಳಿದು ತಿಳಿದು ಅಸಹ್ಯಪಡದೆ ಅವರನ್ನು ಹೇಗೆ ಕೊಲ್ಲಲಿ. ರಣರಂಗಭೂಮಿಯಲ್ಲಿ ನನ್ನ ಶರೀರವನ್ನೇ ನಾಶಮಾಡುತ್ತೇನೆ.

೭೧. ಪಾಂಡವರನ್ನು ಸೋದರರೆಂದು ತಿಳಿದೆನು. ಇನ್ನು ನನ್ನವರನ್ನು ಹೇಗೆ ಕೊಲ್ಲಲಿ? ಪ್ರೀತಿಯಿಂದ ಸಲಹಿ ಪೂರ್ಣವಾಗಿ ನಂಬಿದ ರಾಜನಿಗೆ ಹೇಗೆ ಯುದ್ಧದಲ್ಲಿ ತಪ್ಪಿ ನಡೆಯಲಿ. ಎರಡೂ ಸಾಧ್ಯವಿಲ್ಲ. ನಿಷ್ಕರ್ಷೆ ಮಾಡಿಕೊಂಡು ಉದ್ಧತರಾದ ಶತ್ರುಸೈನ್ಯಸಮೂಹವನ್ನು ನಾಶವಾಗುವ ಹಾಗೆ ಲೆಕ್ಕಕ್ಕೆ ಮಾತ್ರ ಹೋರಾಡಿ ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ. ವ|| ಎಂದು ಮುಂದೆ ಆಗಬೇಕಾದ ಕಾರ್ಯವನ್ನು ತನ್ನಲ್ಲಿ ನಿಷ್ಕರ್ಷೆ ಮಾಡಿಕೊಂಡನು. ಅವಾರ್ಯವೀರ್ಯನಾದ ಕರ್ಣನು ಒಂದು ಆದಿತ್ಯವಾರದ ದಿನ ಗಂಗೆಯಲ್ಲಿ ಸ್ನಾನಮಾಡಬೇಕೆಂದು ಬಂದು ದುರ್ಯೋಧನನು ಕಳುಹಿಸಿದ ದೇವಮಾನದ ಹದಿನೆಂಟು ಕೋಟಿ ಚಿನ್ನವನ್ನು ಒಟ್ಟಾಗಿ ಬೆಟ್ಟದಂತೆ ರಾಶಿಮಾಡಿದನು. ೭೨. ತಾನು ಮಾಡುವ ದಾನವು ಧಾರಾಕಾರವಾಗಿ ಸುರಿಯುವ ಸುವರ್ಣವೃಷ್ಟಿಯನ್ನೂ ಕೈವಶವಾದ ನಿಯನ್ನೂ ಕಡೆಗಣಿಸುತ್ತಿರಲು ದಕ್ಷಿಣೆಯನ್ನು ನಿರೀಕ್ಷಿಸುತ್ತಿರುವವನಿಗೂ ಆಶೆಪಟ್ಟು ಬೇಡಿದ ಬ್ರಾಹ್ಮಣರಿಗೂ ಕರ್ಣನು ಕೊಡುಗೈಯಿಂದ ದಾನಮಾಡಿದನು. ವ|| ಹಾಗೆ ತ್ಯಾಗ ಮಾಡಿ ಲೋಕಮಂಗಳ ಸ್ವರೂಪೆಯಾದ ಗಂಗಾನದಿಯಲ್ಲಿ ತಡೆಯಿಲ್ಲದ ಪರಾಕ್ರಮವುಳ್ಳ ಕರ್ಣನು ಪಾಪಪರಿಹಾರವಾದ ಮಂತ್ರೋಚ್ಚಾರಣಪೂರ್ವಕವಾಗಿ ಸ್ನಾನಮಾಡಿ ಚಿನ್ನದ ಪಾತ್ರೆಯಲ್ಲಿ ಪೂರ್ಣವಾಗಿ ತುಂಬಿದ ಚಿನ್ನದ ಕಮಲಗಳಿಂದ ಆದಿತ್ಯತೇಜನಾದ ಕರ್ಣನು ಸೂರ್ಯನಿಗೆ ಅರ್ಘ್ಯವೆತ್ತಿ ಸೂರ್ಯಮಂತ್ರವನ್ನು ಜಪಿಸಿ ಅರ್ಘ್ಯಪ್ರದಾನ ಮಾಡಿ ಮೂರುಪ್ರದಕ್ಷಿಣೆ ಮಾಡಿದನು. ೭೩. ಆಗ ಅಲೆಗಳಿಂದ ಕೂಡಿದವಳೂ ಮಂಗಳಲ ಕ್ಷಣವುಳ್ಳವಳು ಆದ ಗಂಗಾದೇವಿಯನ್ನು

ವ|| ಅಂತು ಕಂಡು ಮನದೊಳಾದೆಱಕದಿಂ ಸಾಷ್ಟಾಂಗಮೆಱಗಿ ಪೊಡೆವಟ್ಟ ನಿಜನಂದನನ ನೞ್ಕಱಂದಪ್ಪಿಕೊಂಡು ಪರಮಾಶೀರ್ವಚನಂಗಳಿಂ ಪರಸಿ-

ಕಂ|| ತೊರೆದ ಕುಚಯುಗಳವಂದಂ
ಬಿರಿವಿಡೆ ಮೊಲೆವಾಲನೞ್ಕಱಂದಂ ಮೆಯ್ಯಂ|
ಕುರಿಸೆ ಸುರಿವಶ್ರುಜಲಮು
ಬ್ದರಿಸಿ ಪೊನಲ್ ಪೊನಲಟ್ಟೆ ಜನನುತೆಗಾಗಳ್|| ೭೪

ಆಗಳೆ ಮಗನಂ ಪೆತ್ತವೊ
ಲಾಗಿ ಲತಾಲಲಿತೆ ನೊಸಲ ಕಣ್ಬೆತ್ತವೊಲಂ|
ತಾಗಡೆ ರಾಗಕ್ಕಾಗರ
ಮಾಗೆ ದಿನಾಪತನೂಜನೊಸೆದಿರ್ಪಿನೆಗಂ|| ೭೫

ವ|| ಗಂಗಾದೇವಿಯುಂ ದಿವ್ಯಮೂರ್ತಿಯಂ ಕೆಯ್ಕೊಂಡು ಬಂದು-

ಕಂ|| ಒಪ್ಪಿಸಿದೆಂ ಕೆಯ್ಯೆಡೆಯೆಂ
ದಪ್ಪೈಸಿದ ನಿನ್ನ ಮಗನನೀಗಳೆ ನಿನಗೆಂ|
ದಪ್ಪೈಸಿದ ಗಂಗೆ ಪೋಪುದು
ಮೊಪ್ಪುವ ನಿಜಬಿಂಬದೊಳಗಣಿಂದಂ ದಿನಪಂ|| ೭೬

ಪೊಱಮಟ್ಟು ಬರಲ್ ತನ್ನಡಿ
ಗೆಱಗಿದ ನಿಜಸುತನನೞ್ಕಱಂ ಪರಸಿ ಮನಂ|
ಮಱುಗಿ ರವಿ ನುಡಿದನೆನ್ನುಮ
ನುಱದೆ ಮರುಳ್ಮಗನೆ ಹರಿಗೆ ಕವಚಮನಿತ್ತೈ|| ೭೭

ನುಡಿಯೆನಿದಂ ನಿನ್ನಂಬಿಕೆ
ಪಡೆಮಾತೇಂ ಕೊಂತಿ ಹರಿಯ ಮತದಿಂ ಕಾಯ|
ಲ್ಕೊಡರಿಸಿ ಬಂದಳ್ ಸುತರಂ
ಕುಡದಿರ್ ಪುರಿಗಣೆಯನೆನಿತು ಲಲ್ಲೆ ಸಿದೊಡಂ|| ೭೮

ಎಂದರವಿಂದಪ್ರಿಯಸಖ
ನಂದಂಬರತಳಮನಡರ್ವುದುಂ ಕೆಯ್ಮುಗಿದಿಂ|
ತೆಂದಂ ಕುಂತಿಯನಬ್ಬೇಂ
ವಂದಿರ್ಪುದದೆನಗೆ ಸಯ್ಪು ಬರ್ಪಂತೀಗಳ್|| ೭೯

ಕಾಣುವ ಹಾಗೆ ಮುಂದೆ ನಿಂತಿದ್ದ ಕುಂತಿದೇವಿಯನ್ನು ಕರ್ಣನು ಥಟಕ್ಕನೆ ಕಂಡನು. ವ|| ಮನಸ್ಸಿನಲ್ಲುಂಟಾದ ಪ್ರೀತಿಯಿಂದ ಸಾಷ್ಟಾಂಗನಮಸ್ಕಾರ ಮಾಡಿದನು. ಕುಂತಿಯು ತನ್ನ ಮಗನನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಅತ್ಯುತ್ತಮವಾದ ಹರಕೆಗಳಿಂದ ಹರಸಿದಳು. ೭೪. ತೊರೆದ ಎರಡು ಮೊಲೆಗಳೂ ಆಗ ಎದೆಯ ಹಾಲನ್ನು ಧಾರಾಕಾರವಾಗಿ ಸುರಿಸಿದುವು. ಪ್ರೀತಿಯಿಂದ ಶರೀರದಲ್ಲಿ ರೋಮಾಂಚನವುಂಟಾಯಿತು. ಸಂತೋಷದಿಂದ ಹರಿಯುತ್ತಿರುವ ಕಣ್ಣೀರು ಅತ್ಯಕ ಪ್ರವಾಹವಾಗಿ ಗಂಗೆಯ ಪ್ರವಾಹವನ್ನು ಹೆಚ್ಚಿಸಿತು. ಜನರ ಸ್ತುತಿಗೆ ಪಾತ್ರಳಾದ ಆ ಕುಂತೀದೇವಿಗೆ- ೭೫. ಆಗತಾನೆ ಪುತ್ರೋತ್ಸವವಾದಂತಾಯಿತು. ಬಳ್ಳಿಯಂತೆ ಕೋಮಲವಾದ ಗಂಗಾದೇವಿಗೆ ಹಣೆಗಣ್ಣನ್ನು ಪಡೆದಷ್ಟು ಸಂತೋಷವಾಯಿತು. ಸೂರ್ಯಪುತ್ರನಾದ ಕರ್ಣನು ಸಂತೋಷಿಸುತ್ತಿದ್ದನು. ವ|| ಆ ವೇಳೆಗೆ ಸರಿಯಾಗಿ ಗಂಗಾದೇವಿಯು ದಿವ್ಯಾಕಾರವನ್ನು ತಾಳಿ ಬಂದು ೭೬. ಕುಂತಿಯನ್ನು ಕುರಿತು ‘ನನಗೆ ನ್ಯಾಸವೆಂದು ಒಪ್ಪಿಸಿದ್ದ ನಿನ್ನ ಮಗನನ್ನು ನಿನಗೆ ಈಗ ಒಪ್ಪಿಸಿದ್ದೇನೆ’ ಎಂದು ಹೇಳಿ ಗಂಗೆಯು ಅದೃಶ್ಯಳಾದಳು. ಸೂರ್ಯನು ತನ್ನ ಪ್ರಕಾಶಮಾನವಾದ ಬಿಂಬದಿಂದ ೭೭. ಹೊರಟು ಬಂದು ತನ್ನ ಪಾದಕ್ಕೆ ಭಕ್ತಿಯಿಂದ ನಮಸ್ಕಾರಮಾಡಿದ ಮಗನನ್ನು ಪ್ರೀತಿಯಿಂದ ಹರಸಿ ಮನಸ್ಸಿನಲ್ಲಿ ದುಖಪಟ್ಟು ‘ಹಿಂದೆ ನನ್ನನ್ನೂ ಲಕ್ಷ್ಯಮಾಡದೆ ಬುದ್ಧಿಯಿಲ್ಲದೆ ಮಗನೇ ಇಂದ್ರನಿಗೆ ಕವಚವನ್ನು ಕೊಟ್ಟೆ. ೭೮. ಇದನ್ನು ಈಗ ಹೇಳುತ್ತಿಲ್ಲ ; ಇಂದಿನ ಮಾತು ಬೇರೆ. ಈಗ ನಿನ್ನ ತಾಯಿಯಾದ ಕುಂತೀದೇವಿಯು ಕೃಷ್ಣನ ಸೂಚನೆಯ ಪ್ರಕಾರ ತನ್ನ ಮಕ್ಕಳ ರಕ್ಷಣೆಯ ಪ್ರಯತ್ನದಲ್ಲಿ ತೊಡಗಿ ಬಂದಿದ್ದಾಳೆ. ಎಷ್ಟು ಲಲ್ಲೆಯ (ಪ್ರೀತಿಯ) ಮಾತುಗಳನ್ನಾಡಿದರೂ ದಿವ್ಯಾಸ್ತ್ರಗಳನ್ನು ಕೊಡಬೇಡ. ೭೯. ಎಂದು ಹೇಳಿ ಸೂರ್ಯನು ಆಕಾಶಪ್ರದೇಶವನ್ನು

ಚಲಮುಂ ಚಾಗಮುಮಳವುಂ
ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೊಳ್|
ನೆಲಸಿದುವು ನಿಮ್ಮ ಕರುಣಾ
ಬಲದಿಂ ನೀವೆನ್ನನಿಂದು ಮಗನೆಂದುದಱಂ|| ೮೦

ಪಡೆದರ್ ತಾಯುಂ ತಂದೆಯು
ಮೊಡಲಂ ಪ್ರಾಣಮುಮನವರವವು ಕೆಯ್ಯೆಡೆಯಂ|
ಕುಡುವುದರಿದಾಯ್ತೆ ನೀಮೆನ
ಗೆಡೆ ಮಡಗದೆ ಬೆಸಪ ತೊೞ್ತುವೆಸನಂ ಬೆಸಸಿಂ|| ೮೧

ಎಂಬುದುಮಂಬಿಕೆ ಮಗನೆ ಮ
ನಂಬೆಳಱದೆ ನೀನುಮಿತ್ತೆಯಾನುಂ ಪೆತ್ತೆಂ|
ನಂಬಿದ ನಿನ್ನನುಜರ್ ನಿ
ನ್ನಂ ಬೆಸಕೆಯೆ ನೀನೆ ನೆಲನನಾಳ್ವುದು ಕಂದಾ|| ೮೨

ಕಂ|| ನಿನಗಪ್ಪರಸಂ ದುರ್ಯೋ
ಧನನೊಲವಂ ಮುಂದುಗೆಯ್ದು ಬೆಸಕೆಯ್ವರೆ ನಿ|
ನ್ನನುಜರೆರೞ್ದೆಸೆಗಂ ಕಿಸು
ಱನಿಸಾಗದು ಮಗನೆ ನೀನೊಡಂಬಡವೇೞ್ಕುಂ|| ೮೩

ವ|| ಎಂಬುದುಮದೆಲ್ಲಮಂ ಕೇಳ್ದು ಕರ್ಣಂ ಮುಗುಳ್ನಗೆ ನಕ್ಕು-

ಮ|| ಭಯಮಂ ಲೋಭಮುಮೆಂಬ ತಮ್ಮುತೆರಡುಂ ಪಾಪಕ್ಕೆ ಪಕ್ಕಾಗೆ ಪಾ
ೞಯನೊಕ್ಕಾಳ್ದನ ಗೆಯ್ದ ಸತ್ಕೃತಮುಮಂ ಪಿಂತಿಕ್ಕಿ ಜೋಳಕ್ಕೆ ತ|
ಪ್ಪಿಯುಮಿಂ ಬಾೞ್ವುದೆ ಪೂಣ್ದು ನಿಲ್ಲದಿಕೆಯಿಂ ಬಾೞ್ವಂತು ವಿಖ್ಯಾತ ಕೀ
ರ್ತಿಯವೋಲೀಯೊಡಲಬ್ಬೆ ಪೇೞಮೆನಗೇಂ ಕಲ್ಪಾಂತರಸ್ಥಾಯಿಯೇ|| ೮೪

ಕಂ|| ಮೀಂಗುಲಿಗನೆನಾಗಿಯುಮಣ
ಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ|
ದಂಗೆನಗೆ ಬಿಸುಡಲಕ್ಕುಮೆ
ನೀಂ ಗಳ ಪಂಬಲನೆ ಬಿಸುಡಿಮಿನ್ನೆನ್ನೆಡೆಯೊಳ್|| ೮೫

ಹತ್ತಿದನು. ಕರ್ಣನು ಕುಂತಿಗೆ ಕೈಮುಗಿದು ಹೀಗೆಂದನು: ನನಗೆ ಅದೃಷ್ಟಪ್ರಾಪ್ತಿಯಾದ ಹಾಗೆ ನೀವು ಬಂದಿರುವ ಕಾರ್ಯವಾವುದು? ೮೦. ನೀವು ತಮ್ಮ ಕರುಣೆಯ ಬಲದಿಂದ ಈಗ ನನ್ನನ್ನು ಮಗನೆಂದು ಹೇಳಿದುದರಿಂದ ನನಗೆ ಛಲವೂ ತ್ಯಾಗವೂ ಮೇಲ್ಮೆಯೂ ಪರಾಕ್ರಮವೂ ಕುಲವೂ ನನ್ನ ಶರೀರದಲ್ಲಿ ನೆಲಸಿದುವು. ೮೧. ತಾಯಿಯೂ ತಂದೆಯೂ ಮಗನ ಶರೀರವನ್ನೂ ಪ್ರಾಣವನ್ನೂ ಪಡೆದವರು, ಆದುದರಿಂದ ಅದು ಅವರಿಗೇ ಸೇರಿದುವು. ಅವರು ದಯಪಾಲಿಸಿರುವ ಅವನ್ನು ಅವರಿಗೇ ಹಿಂದಿರುಗಿ ಕೊಡುವುದು ಅಸಾಧ್ಯವೇ? ನೀವು ನನಗೆ ಸ್ವಲ್ಪವೂ ಮರೆಮಾಚದೆ ಅಪ್ಪಣೆ ಕೊಡಿಸಬೇಕೆಂದಿರುವ ಸೇವಾಕಾರ್ಯವನನು ಮರೆಮಾಚದೆ ತಿಳಿಸಿ ೮೨. ಎನ್ನಲು ತಾಯಿಯು ‘ಮಗನೆ ಮನಸ್ಸಿನಲ್ಲಿ ಹೆದರದೆ ನೀನೂ ಕೊಟ್ಟೆ ನಾನೂ ಪಡೆದಿದ್ದೇನೆ. ಕಂದಾ ನಿನ್ನನ್ನೇ ನಂಬಿರುವ ನಿನ್ನ ತಮ್ಮಂದಿರು ನಿನಗೆ ಸೇವೆ ಮಾಡುವ ಹಾಗೆ (ನಿನ್ನ ಆಜ್ಞಾಧಾರಕರಾಗಿರುವ ಹಾಗೆ) ನೀನೇ ರಾಜ್ಯವನ್ನು ಆಳು. ೮೩. ನಿನಗೆ ಪ್ರಾಪ್ತವಾದ ರಾಜ್ಯವನ್ನು ನಿನ್ನ ತಮ್ಮಂದಿರು ದುರ್ಯೋಧನನ್ನು ಮುಂದುಮಾಡಿಕೊಂಡು ಸೇವೆ ಮಾಡುವರು, ಇದರಿಂದ (ನೀನು ರಾಜನಾಗುವುದರಿಂದ) ಉಭಯಪಕ್ಷಕ್ಕೂ ಸ್ವಲ್ಪವೂ ದೋಷವುಂಟಾಗುವುದಿಲ್ಲ. ಮಗನೇ ನೀನು ಒಪ್ಪಬೇಕು’ ಎಂದಳು ವ|| ಅದನ್ನೆಲ್ಲವನ್ನು ಕರ್ಣನು ಕೇಳಿ ಹುಸಿನಗೆ ನಕ್ಕನು. ೮೪. ಭಯವೂ ಲೋಭವೂ ಇವೆರಡೂ ಪಾಪಕ್ಕೆ ಭಾಗಿಯಾಗಿರಲು ಹಿಂದಿನ ಸಂಪ್ರದಾಯ (ಕ್ರಮ)ವನ್ನು ಬಿಟ್ಟು ಸ್ವಾಮಿಯು ಮಾಡಿರುವ ಸತ್ಕಾರ್ಯಗಳನ್ನೆಲ್ಲ ಹಿಂದಕ್ಕೆ ಹಾಕಿ (ಮರೆತು) ಅನ್ನದ ಋಣಕ್ಕೆ (ಕೃತಜ್ಞತೆಗೆ) ಮೀರಿಯೂ ಬಾಳುವುದೇ? ಅಶಾಶ್ವತತೆಗೆ ಪ್ರಸಿದ್ಧವಾದ ಈ ಶರೀರವು ಪ್ರಖ್ಯಾತಕೀರ್ತಿಯು ಬಾಳುವ ಹಾಗೆ ಯುಗಯುಗಗಳಲ್ಲಿಯೂ ನಿಲ್ಲುವಂತಹುದೇ ಹೇಳಿ ತಾಯಿ. ೮೫. ಮೀನನ್ನು ಕೊಲ್ಲುವ ಸ್ವಭಾವವುಳ್ಳ ಸದ್ಗುಣವನ್ನು ಬಿಟ್ಟಿಲ್ಲ. ಸತ್ಕುಲಪ್ರಸೂತರಾದ ನಿಮ್ಮ ಮಗನಾದ ನನಗೆ (ಆ ಗುಣ

ವ|| ಎಂಬುದುಂ ಕೊಂತಿ ಭೋಂಕನೆರ್ದೆದೆದು-

ಮ|| ಅಱದೆಂ ನೆಟ್ಟನೆ ಬೆಟ್ಟನಿಂತು ನುಡಿವೈ ನೀಂ ಕಂದ ಪೋಗಿಂದೆ ಕೆ
ಟ್ಟೞದತ್ತಾಗದೆ ಸೋಮವಂಶಮೆನಗಿಂ ಬಾೞುಸೆಯೆಲ್ಲಿತ್ತೊ ಬಿ|
ಟ್ಟುೞದೆಂ ಮತ್ತಿನ ಮಕ್ಕಳಾಸೆಯುಮನಾನೆಂದಳ್ಗೆ ಶೋಕಾಗ್ನಿ ಪೊಂ
ಪುೞವೋಗುತ್ತಿರೆ ಕರ್ಣನೆಂದನಿನಿತೇಂ ಪೇೞಬ್ಬೆ ಚಿಂತಾಂತರಂ|| ೮೬

ಕಂ|| ಪಿಡಿಯೆಂ ಪುರಿಗಣೆಯಂ ನರ
ನೆಡೆಗೊಂಡೊಡಮುೞದ ನಿನ್ನ ಮಕ್ಕಳನಿನ್ನೇ|
ರ್ದೊಡಮೞಯೆಂ ಪೆರ್ಜಸಮನೆ
ಪಿಡಿದೆನ್ನನೆ ರಣದೊಳೞವೆನಿರದಡಿಯೆತ್ತಿಂ|| ೮೭

ವ|| ಎಂದು ಕೊಂತಿಯಂ ವಿಸರ್ಜಿಸಿ ಚಲದ ಚಾಗದ ಕುಲದ ನನ್ನಿಯನಾವರ್ಜಿಸಿ ರಾಧೇಯನೊಳ್ಪಿಂಗಾಧೇಯಮಾಗಿರ್ದನಿತ್ತ ಪುರುಷೋತ್ತಮನುಂ ಕತಿಪಯ ಪ್ರಯಾಣಂಗಳಿಂ ವಿರಾಟಪುರ ನಿಕಟವರ್ತಿಯಪ್ಪ ದಿವಿಜಾಪಗಾತಟದುಪವನದೊಳರಿನೃಪವನಕ್ಕುಪ ದ್ರವಕಾರಿಯಾಗಿ ನೆಲಂ ಮೂರಿವಿಟ್ಟಂತೆ ಬಿಟ್ಟಿರ್ದಜಾತಶತ್ರುವನವನತೋತ್ತಮಾಂಗನಾಗಿ ಕಂಡು-

ಮ|| ಹಿಮಕೃದ್ವಂಶಜರಪ್ಪ ಪಾಂಡುಸುತರಂ ಕೆಯ್ಕೊಂಡು ನಿನ್ನಯ್ದು ಬಾ
ಡಮನಿತ್ತು ನಡಪೆಂದು ಸಾಮಮೆನೆ ಮುಂ ಮುಂತಿಟ್ಟೊಡಾತಂ ಪರಾ|
ಕ್ರಮಮಂ ತೋಱ ಸಿಡಿಲ್ದು ಪಾಯ್ವುದುಮಸುಂಗೊಳ್ವನ್ನೆಗಂ ವಿಶ್ವರೂ
ಪಮನಾಂ ತೋಱದೆನಿಂ ಕಡಂಗಿ ರಣದೊಳ್ ನೀಂ ತೋಱು ನಿನ್ನಾರ್ಪುಮಂ|| ೮೮

ವ|| ಎಂಬನ್ನೆಗಂ ದುರ್ಯೋಧನನಟ್ಟಿದ ದೂತಂ ಸಂಜಯನೆಂಬಂ ಬಂದು ಸಕಲ ಸಾಮಂತ ಮಣಿಮಕುಟ ಮರೀಚಿ ಮಸೃಣಿತ ಚರಣಾರವಿಂದನಪ್ಪ ಧರ್ಮನಂದನನಂ ಕಂಡು-

ಉ|| ಅಟ್ಟಿದ ನಿಮ್ಮ ಪೆರ್ಗಡೆ ಬರ್ದುಂಕಿದನೆಂಬುದನಿಂದ್ರಜಾಲಮಂ
ತೊಟ್ಟನೆ ತೋಱ ಬಂದು ಬರ್ದುಕಾಡಿದನಿನ್ನಳಿಪಿಂದವಟ್ಟುವ|
ಟ್ಟಟ್ಟಿಗಳಂ ಬಸುೞ್ಪುದೆಮಗಂ ತಮಗಂ ಮುಳಿಸಿಂದಮೀಗಳ
ಟ್ಟಟ್ಟಿಗಳಪ್ಪುವೆಂದಿದನೆ ದಲ್ ನುಡಿದಟ್ಟಿದನೆಮ್ಮ ಭೂಭುಜಂ|| ೮೯

ಗಳನ್ನು) ತ್ಯಾಗಮಾಡುವುದು ಆಗುತ್ತದೆಯೇ? ಇನ್ನು ನೀವು ನನ್ನಲ್ಲಿರುವ ಹಂಬಲವನ್ನು ಬಿಸಾಡಿಬಿಡಿ. ವ|| ಎನ್ನಲು ಕುಂತಿಯು ಇದ್ದಕ್ಕಿದ್ದ ಹಾಗೆ ಎದೆಯೊಡೆದು- ೮೬. ಅಯ್ಯೋ ನಾನು ಹಾಳಾದೆ ಕಂದ, ನೀನು ನೇರವಾಗಿ ಇಷ್ಟು ಒರಟಾಗಿ ಮಾತನಾಡುತ್ತಿದ್ದೀಯೆ. ಚಂದ್ರವಂಶವು ಇಂದೇ ಕೆಟ್ಟು ನಾಶವಾಗಲಿಲ್ಲವೇ. ನನಗೂ ಇನ್ನು ಮೇಲೆ ಬದುಕುವ ಆಸೆಯೆಲ್ಲಿದೆ? ಉಳಿದ ಮಕ್ಕಳ ಆಸೆಯನ್ನು ಬಿಟ್ಟು ಬಿಟ್ಟಿದ್ದೇನೆ ಎಂದು ಹೇಳಿದ ಕುಂತೀದೇವಿಗೆ ಕರ್ಣನು ದುಖಾಗ್ನಿಯು ವೃದ್ಧಿಯಾಗುತ್ತಿರಲು ಇಷ್ಟೊಂದು ಚಿಂತೆಯೇಕೆ ತಾಯಿ, ಯೋಚಿಸಬೇಡಿ. ೮೭. ಅರ್ಜುನನು ಪ್ರತಿಭಟಿಸಿದರೂ ದಿವ್ಯಾಸ್ತ್ರವನ್ನು ಹಿಡಿಯುವುದಿಲ್ಲ. ಉಳಿದ ನಿನ್ನ ಮಕ್ಕಳು ಗಾಯಪಡಿಸಿದರೂ ಅವರನ್ನು ಕೊಲ್ಲುವುದಿಲ್ಲ. ಪ್ರಖ್ಯಾತಕೀರ್ತಿಯನ್ನೇ ಆಶ್ರಯಿಸಿ ಯುದ್ಧದಲ್ಲಿ ನನ್ನನ್ನೇ ನಾಶಮಾಡಿಕೊಳ್ಳುತ್ತೇನೆ. ಸಾವಕಾಶಮಾಡದೆ ಅಡಿಯೆತ್ತಿ (ಹೊರಡಿರಿ) ವ|| ಎಂದು ಕುಂತಿಯನ್ನು ಬಿಟ್ಟು ಕಳೆದು ಛಲ, ತ್ಯಾಗ, ಕುಲ ಮತ್ತು ಸತ್ಯವನ್ನು ಸಂಪಾದಿಸಿಕೊಂಡು ಕರ್ಣನು ಸದ್ಗುಣಕ್ಕೆ ಆಶ್ರಯವಾಗಿದ್ದನು. ಈ ಕಡೆ ಕೃಷ್ಣನು ಕೆಲವು ಪ್ರಯಾಣಗಳಿಂದ ವಿರಾಟನಗರದ ಸಮೀಪದಲ್ಲಿದ್ದ ಗಂಗಾನದಿಯ ದಡದ ಉಪವನದಲ್ಲಿ ಶತ್ರುರಾಜರೆಂಬ ಕಾಡಿದೆ ಹಿಂಸಾಕಾರಿಯಾಗಿ ಜಗತ್ತಿನ ಜನವೆಲ್ಲ ಗುಂಪುಕೂಡಿಕೊಂಡಿರುವಂತೆ ಬೀಡುಬಿಟ್ಟಿದ್ದ ಧರ್ಮರಾಜನನ್ನು ಕುರಿತು ನಮಸ್ಕಾರಪೂರ್ವಕ ಕಂಡು- ೮೮. ಸೋಮವಂಶದಲ್ಲಿ ಹುಟ್ಟಿದ ಪಾಂಡವರನ್ನು ಅಂಗೀಕಾರಮಾಡಿ (ಪುರಸ್ಕರಿಸಿ) ನಿನ್ನ ಅಯ್ದು ಹಳ್ಳಿಗಳನ್ನು ಕೊಟ್ಟು ಕಾಪಾಡು (ನಡಸು) ಎಂದು ಸಾಮೋಪಾಯವನ್ನೇ ಮುಂದುಮಾಡಿ ನುಡಿದೆ. ಅವನು ತನ್ನ ಪರಾಕ್ರಮವನ್ನೇ ಪ್ರದರ್ಶಿಸಿ ಸಿಡಿದು ಮೇಲೆ ಹಾಯ್ದ. ಅವನ ಪ್ರಾಣಗಳನ್ನೇ ಸೆಳೆದುಕೊಳ್ಳುವಂತೆ ನಾನು ವಿಶ್ವರೂಪವನ್ನು ತೋರಿದೆ. ಇನ್ನು ನೀನು ಉತ್ಸಾಹಶಾಲಿಯಾಗಿ ಯುದ್ಧದಲ್ಲಿ ನಿನ್ನ ಶಕ್ತಿಯನ್ನು ಪ್ರದರ್ಶಿಸು ವ|| ಎನ್ನುವಷ್ಟರಲ್ಲಿ ದುರ್ಯೋಧನನು ಕಳುಹಿಸಿದ ಸಂಜಯನೆಂಬ ದೂತನು ಬಂದು ಸಾಮಂತರಾಜರ ರತ್ನಕಿರೀಟದ ಕಾಂತಿಯಿಂದ ಪ್ರಕಾಶವಾದ ಪಾದಕಮಲಗಳನ್ನುಳ್ಳ ಧರ್ಮರಾಜನನ್ನು ನೋಡಿ- ೮೯. ನೀವು ಕಳುಹಿಸಿದ ಹೆಗ್ಗಡೆಯು ಇಂದ್ರಜಾಲವನ್ನು ತೋರಿ ಬದುಕಿ ಬಂದಿದ್ದಾನೆ. ಇನ್ನು ದೂತರನ್ನು ಕಳುಹಿಸುವುದನ್ನು ನಿಲ್ಲಿಸಿರಿ.

ಮ|| ಬಳ ಸಂಪನ್ನರನಾಸೆಗೆಯ್ಗೆ ಚತುರಂಗಾನೀಕಮಂ ಕೂಡಿ ಕೊ
ಳ್ಗುಳಮಂ ಗಂಡುಮನಪ್ಪುಕೆಯ್ಗೆ ಮನಮಂ ಬಲ್ಲಿತ್ತು ಮಾೞ್ಕೆಂದುಮಾ|
ನೆಳೆಯಂ ಕಾದಿದೊಡಲ್ಲದೀಯೆನಱದಿರ್ಕೆಂದಾ ಕುರುಕ್ಷೇತ್ರಮಂ
ಕಳವೇೞ್ದಟ್ಟಿದನಣ್ಮಿ ಸಾಯಿಮುೞಯಿಂ ನಿಮ್ಮೊಂದು ಬಾೞುಸೆಯಂ|| ೯೦

ವ|| ಎಂಬುದುಂ ವೃಕೋದರಂ ಮುಳಿದಾಸೋಟಿಸಿ-

ಚಂ|| ವಿಸಸನರಂಗಮಪ್ಪುದೆನಗಂ ತನಗಂ ದೊರೆ ಕಾಯ್ಪುಮೇವಮುಂ
ಪಸರಿಸಿ ಪರ್ವಿ ತನ್ನೊಳಮದೆನ್ನೊಳಮಿರ್ದುದು ಭೀಮನೆಂದೊಡಾ|
ಪೆಸರನೆ ಕೇಳ್ದು ಸೈರಿಸದ ನಿನ್ನರಸಂ ಕಲಿಯಾಗಿ ನಾಳೆ ಸೈ
ರಿಸುಗುಮೆ ವೈರಿಭೂಪ ರುರಾರ್ದ್ರ ಮದೀಯ ಗದಾಭಿಘಾತಮಂ|| ೯೧

ವ|| ಎಂಬುದುಂ ಪರಾಕ್ರಮಧವಳನಿಂತೆಂದಂ-

ಮ|| ಕಱುಪುಂ ಕಾಯ್ದುಮನುಂಟುಮಾಡಿ ನೆಲನಂ ದುರ್ಯೋಧನಂ ತಾಗಿ ತ
ಳ್ತಿಱದಂದಲ್ಲದೆ ಕೂಡನಾಜಿ ಭರಮುಂ ಸಾರ್ಚಿತ್ತದೇನೆಂದು ಮು|
ನ್ನಱುದಿಂಗಳ್ ಜಱುಚುತ್ತುಮಿರ್ಪುದೆ ರಣಕ್ಕಾರೆನ್ನರೆಂದೀಗಳೆಂ
ತಱುಯಲ್ ಬರ್ಕುಮೆ ಬರ್ಕೆ ಬಂದೊಡಱಯಲ್ಕಕ್ಕುಂ ಕುರುಕ್ಷೇತ್ರದೊಳ್|| ೯೨

ವ|| ಎಂಬುದುಂ ಯಮನಂದನನಿಂತೆಂದಂ-

ಮ||ಸ್ರ|| ಎಳೆಯಂ ದುರ್ಯೋಧನಂ ತಳ್ತಿಱಯದೆ ಕುಡೆನೆಂದಟ್ಟಿ ಕಾದಲ್ಕಮೀಗಳ್
ಕಳನಂ ಪೇೞ್ದಂ ಕುರುಕ್ಷೇತ್ರಮನೆನೆ ತಡವಿನ್ನಾವುದುಗ್ರಾಜಿಯೊಳ್ ದೋ|
ರ್ವಳದಿಂದಂ ತನ್ನ ಮೆಚ್ಚಂ ಸಲಿಸಿಯೆ ನೆಲನಂ ಕೊಳ್ವೆನಿಂ ತಳ್ವೆನೆಮ್ಮೊಳ್
ಕಳನಂ ಬೇಡೆಯ್ದೆ ಕೇಳ್ದೆಂ ಬಗೆಯನಱಯಲಾಯ್ತೇೞಮಂತೆಂದೆ ಪೇೞಂ|| ೯೩

ವ|| ಎಂದಜಾತಶತ್ರು ಶತ್ರುಪಕ್ಷಕ್ಷಯಂ ಮಾಡುವುದ್ಯೋಗಮನೆತ್ತಿಕೊಂಡು ಪ್ರಯಾಣ ಭೇರಿಯಂ ಪೊಯ್ಸಿದಾಗಳ್-

ಇನ್ನು ಮೇಲೆ ಕೋಪದಿಂದ ನಮಗೂ ನಿಮಗೂ ಅಟ್ಟಿಯಾಡುವ ಯುದ್ಧಕಾರ್ಯವು ಪ್ರಾಪ್ತವಾಗುವುದು ಎಂಬ ಈ ಸಂದೇಶವನ್ನು ಹೇಳಿ ನಮ್ಮ ರಾಜನು ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ್ದಾನೆ. ೯೦. ಬಲಸಂಪನ್ನರಾದವರನ್ನು ಕೂಡಿಕೊಳ್ಳಲಿ (ಸೇರಿಸಿಕೊಳ್ಳಲಿ); ಚತುರಂಗ ಸೈನ್ಯವನ್ನು ಕೂಡಿಸಿ ರಣರಂಗವನ್ನು ಸೇರಿ ಪರಾಕ್ರಮವನ್ನು ಅಂಗೀಕರಿಸಲಿ; ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲಿ; ನಾನು ಎಂದೂ ಯುದ್ಧಮಾಡಿದಲ್ಲದೆ ಭೂಮಿಯನ್ನು ಕೊಡುವುದಿಲ್ಲ ತಿಳಿದಿರಲಿ ಎಂದು ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ಗೊತ್ತು ಮಾಡಿ ಕಳುಹಿಸಿದ್ದಾನೆ. ಪೌರುಷಪ್ರದರ್ಶನಮಾಡಿ ಸಾಯಿರಿ, ಬಾಳುವ ಆಸೆಯನ್ನು ಬಿಡಿರಿ ವ|| ಎನ್ನಲು ಭೀಮಸೇನನು ಕೋಪಿಸಿಕೊಂಡು ಆರ್ಭಟಿಸಿ ನುಡಿದನು. ೯೧. ಯುದ್ಧರಂಗವು ನನಗೂ ದುರ್ಯೋಧನನಿಗೂ ಸಮಾನವಾದುದೇ. ನನ್ನಲ್ಲಿಯೂ ಅವನಲ್ಲಿಯೂ ಕೋಪ ಮಾತ್ಸರ್ಯಗಳು ಪ್ರಸರಿಸಿ ಅಕವಾಗಿವೆ. ಭೀಮನೆಂಬ ಹೆಸರನ್ನೇ ಕೇಳಿ ಸಹಿಸದ ನಿಮ್ಮ ರಾಜನು ಶೂರನಾಗಿ ನಾಳೆಯ ದಿನ ಶತ್ರುರಾಜರ ರಕ್ತದಿಂದ ಒದ್ದೆಯಾದ ನನ್ನ ಗದೆಯ ಪೆಟ್ಟನ್ನು ಸೈರಿಸುತ್ತಾನೆಯೇ? (ತಡೆದುಕೊಳ್ಳುತ್ತಾನೆಯೇ?) ವ|| ಎನ್ನಲು ಅರ್ಜುನನು ಹೀಗೆಂದನು ೯೨. ಕೋಪವನ್ನೂ ತಾಪವನ್ನೂ ಉಂಟುಮಾಡಿ ಪ್ರತಿಭಟಿಸಿ ಯುದ್ಧಮಾಡಿದಲ್ಲದೆ ದುರ್ಯೋಧನನು ರಾಜ್ಯವನ್ನು ಕೊಡುವುದಿಲ್ಲ. ಯುದ್ಧಭಾರವೂ ಸಮೀಪಿಸಿದೆ. ಆರು ತಿಂಗಳ ಮೊದಲಿಂದಲೂ ಅದೇನಾಗುತ್ತದೆಂದು ಹರಟುತ್ತಿರುವುದೇ? ರಣದಲ್ಲಿ ಯಾರು ಎಂಥವರು ಎಂಬುದನ್ನು ಈಗ ತಿಳಿಯುವುದು ಸಾಧ್ಯವೇ? ಕುರುಕ್ಷೇತ್ರಕ್ಕೆ ಬರಲಿ, ಬಂದರೆ ತಿಳಿಯುತ್ತದೆ ವ|| ಎನ್ನಲು ಧರ್ಮರಾಜನು ಹೀಗೆಂದನು ೯೩. ದುರ್ಯೋಧನನನ್ನು ಸಂಸಿ ಯುದ್ಧಮಾಡಿದ ಹೊರತು ಭೂಮಿಯನ್ನು ಕೊಡುವುದಿಲ್ಲ ಎಂದು ದೂತನ ಮೂಲಕ ಹೇಳಿಕಳುಹಿಸಿ ಈಗ ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ನಿಶ್ಚಯಿಸಿದ್ದೇನೆ ಎಂದ ಮೇಲೆ ಇನ್ನು ಸಾವಕಾಶವೇತಕ್ಕೆ? ಘೋರಯುದ್ಧದಲ್ಲಿ ನನ್ನ ಬಾಹುಬಲದಿಂದಲೇ ಅವನ ಆಶೆಯನ್ನು ಪೂರೈಸಿ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಇನ್ನು ಸಾವಕಾಶ ಮಾಡುವುದಿಲ್ಲ. ನಮ್ಮಲ್ಲಿ ಯುದ್ಧಮಾಡುವುದನ್ನಪೇಕ್ಷಿಸಿ ಸರಿಯಾದುದನ್ನೇ ಕೇಳಿದ್ದಾನೆ. ಅವನ ಅಭಿಪ್ರಾಯವನ್ನು ಚೆನ್ನಾಗಿ ತಿಳಿಯಲಾಯ್ತು; ಇನ್ನು ಏಳಿ; ಹಾಗೆಯೇ ಹೇಳಿ ಎಂದು ಅವನನ್ನು ಕಳುಹಿಸಿದನು. ವ|| ಧರ್ಮರಾಯನು ಶತ್ರುಪಕ್ಷವನ್ನು ನಾಶಮಾಡುವ ಕಾರ್ಯವನ್ನು

ಮ|| ದೆಸೆಯಂ ಪೊತ್ತ ಮದೇಭರಾಜಿ ದೆಸೆಗೆಟ್ಟೋಡಲ್ತಗುಳ್ಪತ್ತು ಸ
ಪ್ತ ಸಮುದ್ರಂ ಕರೆಗಣ್ಮಿ ತನ್ನವಯಂ ದಾಂಟಿತ್ತಜಾಂಡಂ ಸಿಡಿ|
ಲ್ದು ಸಿಡಿಲ್ಪೊಯ್ದೊಡೆದೊಂದು ತತ್ತಿಯವೊಲಾಯ್ತೆಂಬೊಂದು ಸಂದೇಹಮಂ
ಪೊಸತಂ ಭೂಭುವನಕ್ಕೆ ಮಾಡಿದುದು ತತ್ಸನ್ನಾಹಭೇರೀರವಂ|| ೯೪

ಕರಿಗಳ್ ಭೃಂಗಕುಳಾಕುಳೀಕೃತ ಕಟೋಪೇತಂಗಳೊಂಬತ್ತು ಸಾ
ಸಿರಮಂತೊಂದು ಗಜಕ್ಕೆ ನೂಱು ರಥಮಂತಾ ಸ್ಯಂದನಕ್ಕೊಂದಳ್|
ತುರಗಂ ನೂಱನಿತುಂ ತುರಂಗದಳಮೊಂದೊಂದರ್ಕೆ ನೂಱುಳ್ ತಗು
ಳ್ದಿರೆ ಬಲ್ಲರ್ ನಡೆ ನೋಡಿ ಕೂಡೆ ಪಡೆದತ್ತಕ್ಷೋಹಿಣೀಸಂಖ್ಯೆಯಂ|| ೯೫

ವ|| ಅಂತು ಮಾಡಿದ ಪರಿಸಂಖ್ಯೆಯೊಳೊಂದಕ್ಷೋಹಿಣೀ ಬಲಂಬರೆಸು ತಲೆಬೞವೞೆಯೆಂದಭಿಮನ್ಯುಗೆ ಕೂಸಂ ಕೊಟ್ಟ ಜಟ್ಟಿಗಂ ವಿರಾಟಂ ಶ್ವೇತನುತ್ತರಂ ಶಂಖನೆಂಬ ಮೂವರ್ ಮಕ್ಕಳುಂ ಶತಾನೀಕ ಶತದ್ಯುಮ್ನ ಶತಚಂದ್ರಂ ಮೊದಲಾಗಿ ಪನ್ನೊರ್ವರ್ ತಮ್ಮಂದಿರುಂಬೆರಸು ನೆಲನದಿರೆ ಮುಂಗೋಳೊಳ್ ನಡೆಯೆ ದ್ರೌಪದಿಯ ಕೊಟ್ಟ ನಣ್ಪುಮಂ ದ್ರೋಣನೊಳಾದ ಪರಿಭವಮುಮಂ ನೆನೆದೊಂದಕ್ಷೋಹಿಣೀ ಬಲಂಬೆರಸು ದ್ರುಪದಂ ಧೃಷ್ಚದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜ ಪುರುಕುತ್ಸು ವಿಚಿತ್ರಾದಿಗಳಪ್ಪ ತನ್ನ ಮಕ್ಕಳ್ವೆರಸು ನೆಲಂ ಮೂರಿವಿಟ್ಟಂತೆ ಬಲವಕ್ಕದೊಳ್ ನಡೆಯೆ ಸುಭದ್ರೆಯ ಕೊಟ್ಟ ನಣ್ಪಿಂಗನುಬಲಮಾಗಿ ಪುಂಡರೀಕಾಕ್ಷನ ತಮ್ಮಂ ಸಾತ್ಯಕಿ ವೃಷ್ಣಿ ಕಾಂಭೋಜಕುಳತಿಳಕರಪ್ಪ ಯಾದವರ ಕುಲದೊಡನೆಯಕ್ಷೋಹಿಣೀಪತಿ ನಾಯಕಂ ಭೂಪತಿಯೆಡವಕ್ಕದೊಳ್ ನಡೆಯೆ ಕೇಕಯ ವಿಷಯಾಶ್ವರರಪ್ಪ ಕೈಕಯರಯ್ವರುಮೊಂದಕ್ಷೋಹಿಣೀ ಬಲದೊಡನೆ ಸಿಡಿಲನುರುಳಿ ಮಾಡಿದಂತು ಪಿಂಗೋಳೊಳ್ ನಡೆಯೆ ಪಾಂಡ್ಯಂ ಶ್ರೀಜಯಸೋಮಕರೊಡನೊಂದಕ್ಷೋಹಿಣೀ ಬಲಂಬೆರಸು ಸುತ್ತಿಱದು ಬಳಸಿ ಬರೆ ಧರಣೀಂದ್ರನ ತಂಗೆಯಪ್ಪ ಕನಕಲತೆಗಂ ವಿಕ್ರಮಾರ್ಜುನಂಗಂ ಪುಟ್ಟಿದ ಮಗನಿಳಾವಂತನನಂತ ನಾಗರಾಜ ಬಲಂಬೆರಸು ನಾಗಲೋಕಮೆ ಕಿೞ್ತೆೞ್ದುಬರ್ಪಂತೆ ಬರೆ ಹಿಡಿಂಬೆಗಂ ಭೀಮಂಗಂ ಪುಟ್ಟಿದ ಮಗಂ ಘಟೋತ್ಕಚನಱುವತ್ತೆಂಟು ಕೋಟಿ ರಾಕ್ಷಸ ಬಲಂಬರೆಸು ಬರೆ ಸಾಮಂತ ಚೂಡಾಮಣಿಯ ಕೃತೋಪಕಾರಮಂ ನೆನದಂಗದರ್ಪಣನೆಂಬ ಗಂಧರ್ವಂ ನಾಲ್ಕು ಕೋಟಿ ಗಂಧರ್ವಬಲಮುಮಱುವತ್ತು ಸಾಸಿರ ಗಿಳಿಯ ಬಣ್ಣದ ಕುದುರೆಗಳುಂ ಬೆರಸು ಗಂಧರ್ವಲೋಕಮೆ ಕಿೞ್ತೆೞ್ದು ಬರ್ಪಂತೆ ಬರೆ ಮಹಾ ಪ್ರಚಂಡರುಂ ಪ್ರತಾಪಿಗಳುಮಪ್ಪ ಪಂಚಪಾಂಡವರುಮಂಕದ

ಅಂಗೀಕರಿಸಿ ಪ್ರಯಾಣಭೇರಿಯನ್ನು ಹೊಡೆಯಿಸಿದನು- ೯೪. ದಿಕ್ಕುಗಳ ಭಾರವನ್ನು ಹೊತ್ತಿರುವ ಮದದಿಂದ ಕೂಡಿದ ದಿಗ್ಗಜಗಳ ಸಮೂಹವು ದಿಕ್ಕೆಟ್ಟು ಓಡಲು ಪ್ರಾರಂಭಿಸಿದವೋ, ಏಳು ಸಮುದ್ರಗಳೂ ಮೇರೆಯನ್ನು ಮೀರಿ ತಮ್ಮ ಎಲ್ಲೆಯನ್ನು ದಾಟಿದುವೋ, ಬ್ರಹ್ಮಾಂಡವು ಸಿಡಿದು ಹೋಗಿ ಸಿಡಿಲಿನಿಂದ ಒಡೆದು ಚೂರಾದ ಒಂದು ಮೊಟ್ಟೆಯಂತಾಯಿತೋ ಎಂಬ ಒಂದು ಸಂದೇಹವನ್ನು ಆ ಭೇರಿಯು ಶಬ್ದವು ಭೂಲೋಕಕ್ಕೆಲ್ಲ ಉಂಟುಮಾಡಿತು. ೯೫. ದುಂಬಿಗಳ ಸಮೂಹದಿಂದ ಹಿಂಸಿಸಲ್ಪಟ್ಟ ಕಪೋಲಗಳನ್ನುಳ್ಳ ಒಂಬತ್ತು ಸಾವಿರ ಆನೆಗಳು, ಅಂತಹ ಒಂದು ಆನೆಗೆ ನೂರು ತೇರುಗಳು; ಆ ತೇರು ಒಂದೊಂದಕ್ಕೆ ನೂರು ಕುದುರೆಗಳು, ಅಷ್ಟು ಕುದುರೆಯ ಸೈನ್ಯದ ಒಂದೊಂದಕ್ಕೆ ನೂರಾಳು ಸೇರಿಕೊಂಡಿರಲು, ಅದು ತಿಳಿದವರ ಗಣನೆಯ ಪ್ರಕಾರ ಒಂದು ಅಕ್ಷೋಹಿಣೀ ಎಂದೆನಿಸಿತು ವ|| ಹೀಗೆ ಮಾಡಿದ ಲೆಕ್ಕದ (ಈ ಗಣನೆಗೆ ಅನುಗುಣವಾದ) ಒಂದು ಅಕ್ಷೋಹಿಣೀ ಸೈನ್ಯದಿಂದ ಕೂಡಿ ತನ್ನ ತಲೆಯನ್ನೇ ಬಳುವಳಿಯನ್ನಾಗಿ ಮಾಡಿ ಉತ್ತರನಿಗೆ ಮಗಳನ್ನು ಕೊಟ್ಟ ಶೂರನಾದ ವಿರಾಟನು, ಶ್ವೇತ, ಉತ್ತರ, ಶಂಖರೆಂಬ ಮೂರು ಮಕ್ಕಳನ್ನೂ ಶತಾನೀಕ, ಶತದ್ಯುಮ್ನ, ಶತಚಂದ್ರ ಮೊದಲಾದ ಹನ್ನೊಂದು ತಮ್ಮಂದಿರೊಡಗೂಡಿ ಭೂಮಿಯು ನಡುಗುವಂತೆ ಮುಂಭಾಗದಲ್ಲಿ ನಡೆದನು. ದ್ರೌಪದಿಯನ್ನು ಕೊಟ್ಟಿರುವ ಬಾಂಧವ್ಯವನ್ನೂ ದ್ರೋಣಾಚಾರ್ಯನಿಂದುಂಟಾದ ಅವಮಾನವನ್ನೂ ನೆನೆಸಿಕೊಂಡು ಒಂದು ಅಕ್ಷೋಹಿಣೀ ಸಮೇತನಾಗಿ ದ್ರುಪದನು ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜ, ಪುರುಕುತ್ಸು, ವಿಚಿತ್ರರೇ ಮೊದಲಾದ ತನ್ನ ಮಕ್ಕಳೊಡಗೂಡಿ ಭೂಮಿಯ ಜನವೆಲ್ಲ ಗುಂಪುಕೂಡಿದ ಹಾಗೆ ಬಲಪಾರ್ಶ್ವದಲ್ಲಿ ನಡೆದನು. ಸುಭದ್ರೆಯನ್ನು ಕೊಟ್ಟಿರುವ ನಂಟುತನಕ್ಕನುಗುಣವಾಗಿ ಶ್ರೀಕೃಷ್ಣನ ತಮ್ಮನಾದ ಸಾತ್ಯಕಿಯು ವೃಷ್ಣಿ ಕಾಂಭೋಜಕುಲತಿಲಕರಾದ ಯಾದವಕುಲದವರೊಡನೆ ಅಕ್ಷೋಹಿಣೀ ಸೈನ್ಯದ ನಾಯಕನಾಗಿ ರಾಜನ ಎಡಭಾಗದಲ್ಲಿ ನಡೆದನು. ಕೇಕಯ ದೇಶಾಶರಾದ ಕೈಕಯರೈದು ಮಂದಿಯೂ ಒಂದಕ್ಷೋಹಿಣೀ ಬಲದೊಡನೆ ಸಿಡಿಲನ್ನು ಉಂಡೆ ಮಾಡಿದ ಹಾಗೆ ಹಿಂಭಾಗದಲ್ಲಿ ನಡೆದರು. ಪಾಂಡ್ಯನು ಶ್ರೀಜಯ ಸೋಮಕರೊಡನೆ ಒಂದಕ್ಷೋಹಿಣೀ ಸೈನ್ಯಸಮೇತನಾಗಿ ಸುತ್ತಲೂ ವ್ಯಾಪಿಸಿ ಬಂದನು. ರಾಜನ ತಂಗಿಯಾದ ಕನಕಲತೆಗೂ ವಿಕ್ರಮಾರ್ಜುನನಿಗೂ ಹುಟ್ಟಿದ ಮಗನಾದ ಇಳಾವಂತನು ಸಮಸ್ತ ನಾಗರಾಜಸೈನ್ಯದೊಡನೆ ಪಾತಾಳಲೋಕವೇ ಕಿತ್ತು ಎದ್ದುಬರುವಂತೆ ಬಂದನು. ಹಿಡೆಂಬೆಗೂ ಭೀಮನಿಗೂ ಹುಟ್ಟಿದ ಘಟೋತ್ಕಚನು ಅರವತ್ತೆಂಟು ಕೋಟಿ ರಾಕ್ಷಸ ಸೈನ್ಯದೊಡಗೂಡಿ ಬಂದನು. ಅರ್ಜುನನು ಮಾಡಿದ ಉಪಕಾರವನ್ನು ನೆನೆಸಿಕೊಂಡು ಅಂಗದರ್ಪಣನೆಂಬ ಗಂಧರ್ವನು ನಾಲ್ಕು ಕೋಟಿ ಗಂಧರ್ವಸೈನ್ಯವೂ ಅರವತ್ತು ಸಾವಿರ ಗಿಳಿಯ ಬಣ್ಣದ ಕುದುರೆಗಳೂ

ಭೀಮನ್ಯುವುಂ ಕೆಲ ಕೆಲದೊಳೋಲಗಿಸುತ್ತುಂ ಬರೆ ಕೊಂತಿಯ ಮಾವನಪ್ಪ ಕೊಂತಿಭೋಜನುಂ ಸೋಮಕಂ ಬೆರಸೊಂದಕ್ಷೋಹಿಣೀ ಬಲಂಬೆರಸು ಬರೆ ಮತ್ತಂ ಪ್ರಭದ್ರೈಬಲಮುಮಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟಕ ರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕಾಂಧ್ರ ದ್ರವಿಳ ಗಜಮುಖಾಶ್ವ ಮುಖೋಷ್ಟ್ರಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣಾಶ್ವಕರ್ಣ ತುರುಷ್ಕ ಪ್ರವರ ನಾನಾದ್ವೀಪ ದೇಶಾಶ್ವರರುಂ ಪಗೆಗಂ ಪಾೞಗಂ ಪರಿಭವಕ್ಕಂ ಪೞವೆಗಂ ಪಾಗುಡಕ್ಕಂ ಪಳಬದ್ದಕ್ಕಂ ವೈವಾಹಿಕ ಸಂಬಂಧಕ್ಕಂ ಮೈತ್ರಕ್ಕಂ ಮೇರೆಗಂ ಅಟ್ಟಟ್ಟಿಗಂ ಸ್ವಾಮಿ ಭೃತ್ಯ ಸಂಬಂಧಕ್ಕಂ ದೋರ್ವಲಕ್ಕಂ ಮೈಮೆಗಂ ಮೋಕ್ಷಕ್ಕಂ ಮಹಾಸಮುದ್ರದೊಳ್ ಮಹಾನದಿಗಳ್ ಕೂಡುವಂತೇೞಕ್ಷೋಹಿಣೀ ಬಲಂ ಕೂಡಿ ನಡೆಯೆ ತನ್ನ ನಾಲ್ವರ್ ತಮ್ಮಂದಿರೊಡನೆ ಮಂಗಳವಸದನಂಗೊಂಡು ಮಂಗಳ ಪ್ರಧಾನೋಚಿತ ವಿಜಯಗಜಮನೇಱ ವಿದ್ಯೋತಮಾಗಿ ದಕ್ಷಿಣಾವರ್ತಮಪ್ಪ ಹೋಮಾಗ್ನಿಯಂ ಬಲಂಗೊಂಡು ಬಲದ ಕೋಡ ಮೇಲೆ ಕೆಯ್ಯಂ ಪೇಱ ಮುಖವಿಕ್ಷೇಪಣಂಗೆಯ್ದು ಘನಾಘನನಿನಾದದಿಂ ಬೃಂಹಿತಂಗೆಯ್ವ ವಿಜಯಗಜಮಂ ನೆಲನಂ ಪೊಕ್ಕಡಂಗಿದ ಪಗೆವರನಗುೞ್ದು ಕೊಲ್ವುದನುದಾಹರಿಸುವಂತೆ ದಕ್ಷಿಣ ಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಷಿತಂಗೆಯ್ವ ವಿಜಯಹಯಮುಂ ವಿಜಯನ ವಿಜಯಮನೆ ಸೂಚಿಸೆ-

ಮಂ|| ಎಸಗಿತ್ತಂದನುಕೂಲಮಂದಪವನಂ ಪೆಣ್ದುಂಬಿಗಳ್ ಮುತ್ತುತುಂ
ಮುಸುಱುತ್ತುಂ ಬರೆ ಬಂದುದಿಂದ್ರವನದಿಂ ಪೂದಂದಲಂಭೋ ಗ|
ರ್ಜಿಸುವಂತಾದುದು ದೇವದುಂದುಭಿ ಜಯಪ್ರಾರಂಭಮಂ ಸಾಱುವಂ
ತೆಸೆದತ್ತಚ್ಚರಿಯಪ್ಪಿನಂ ಜಯಜಯಧ್ವಾನಂ ದಿಗಂತಂಗಳೊಳ್|| ೯೬

ವ|| ಆ ಪ್ರಸ್ತಾದೊಳ್-

ಶಾ|| ವಾತ್ಯಾ ದುರ್ಧರ ಗಂಧ ಸಿಂಧುರ ಕಟ ಸ್ರೋತಸ್ಸಮುದ್ಯನ್ಮದ
ವ್ರಾತೇಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕ ಶ್ರೇಯಸ|
ಕಿಂಚಾಕಸ್ಮಿಕ ಪಾಂಸು ಪಲ್ಲವ ಜಳಸ್ಯಂದೀ ಸದಾ ಸಿಂಧುರ
ಪ್ರಾಗೇಯಂ ಪ್ರಿಯಗಳ್ಳ ಭೂಪತಿ ಚಮೂಪ್ರಸ್ಥಾನಮಾಚಕ್ಷತೇ|| ೯೭

ಕೂಡಿ ಗಂಧರ್ವಲೋಕವೇ ಕಿತ್ತು ಎದ್ದು ಬರುವ ಹಾಗೆ ಬಂದನು. ಮಹಾಪ್ರಚಂಡರೂ ಪ್ರತಾಪಿಗಳೂ ಆದ ಶ್ರುತಸೋಮಕರೇ ಮೊದಲಾದ ಪಂಚ ಉಪಪಾಂಡವರೂ ಶೂರನಾದ ಅಭಿಮನ್ಯುವೂ ಪಕ್ಕಪಕ್ಕದಲ್ಲಿ ಸೇವೆ ಮಾಡುತ್ತಿದ್ದರು. ಕುಂತಿಯ ಮಾವನಾದ ಕುಂತಿಭೋಜನು ಸೋಮಕನೊಡಗೂಡಿ ಒಂದಕ್ಷೋಹಿಣೀ ಸೈನ್ಯದ ಜೊತೆಯಲ್ಲಿ ಬಂದು ಸೇರಿದನು. ಮತ್ತು ಪ್ರಭದ್ರೈಕ ಬಲವೂ ಅಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟ ಕರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕ ಆಂಧ್ರ ದ್ರವಿಡ ಗಜಮುಖ ಅಶ್ವಮುಖ ಉಷ್ಟ್ರಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣ ಅಶ್ವಕರ್ಣ ತುರುಷ್ಕರೇ ಮುಖ್ಯರಾದ ನಾನಾದ್ವೀಪದ ಒಡೆಯರೂ ಧರ್ಮಕ್ಕೂ ಸೋಲಿಗೂ ಹಳೆಯ ಸಂಬಂಧಕ್ಕೂ ಕಪ್ಪಕಾಣಿಕೆಗೂ ಲಾಭ ಮತ್ತು ಪ್ರಯೋಜನಾದಿಗಳಿಗೂ ಮದುವೆಯ ನಂಟುತನಕ್ಕೂ ಸ್ನೇಹಕ್ಕೂ ಗಡಿಯಲ್ಲಿದ್ದುದಕ್ಕೂ ದೌತ್ಯಕ್ಕೂ ಆಳರಸರ ಸಂಬಂಧಕ್ಕೂ ತೋಳಬಲಕ್ಕೂ ಮಹಿಮೆಗೂ ಮೋಕ್ಷಕ್ಕೂ ಹೀಗೆ ನಾನಾ ಕಾರಣಕ್ಕಾಗಿ ಮಹಾಸಮುದ್ರಕ್ಕೆ ಮಹಾನದಿಗಳು ಬಂದು ಕೂಡುವಂತೆ ಏಳು ಅಕ್ಷೋಹಿಣೀ ಸೈನ್ಯಸಮೇತರಾಗಿ ಬಂದು ಸೇರಿದರು. ತನ್ನ ನಾಲ್ಕು ಜನ ತಮ್ಮಂದಿರೊಡನೆ ಮಂಗಳಾಭರಣಗಳಿಂದಲಂಕೃತನಾಗಿ ಮಂಗಳಪ್ರಧಾನವಾದ ವಿಜಯಗಜವನ್ನೇರಿ ಪ್ರಕಾಶಿಸುತ್ತ ಬಲಗಡೆಯ ಸುಳಿಯನ್ನುಳ್ಳ ಹೋಮಾಗ್ನಿಯನ್ನು ಪ್ರದಕ್ಷಿಣೆ ಮಾಡಿ ಬಲದ ಕೊಂಬಿನ ಮೇಲೆ ಸೊಂಡಿಲನ್ನಿಟ್ಟು ಮುಖವನ್ನು ಅತ್ತಿತ್ತ ಕೊಡವಿ ಗುಡುಗಿನ ಶಬ್ದದಿಂದ ಘೀಳಿಡುವ ವಿಜಯಗಜವೂ ಭೂಮಿಯನ್ನು ಪ್ರವೇಶಿಸಿ ಅಡಗಿಕೊಂಡಿರುವ ಶತ್ರುಗಳನ್ನು ಅಗೆದು ಕೊಲ್ವುದನ್ನು ಉದಾಹರಿಸುವಂತೆ ಬಲಗಾಲಿನಿಂದ ನೆಲವನ್ನು ಕೆದರಿ ಗಂಭೀರ ಧ್ವನಿಯಿಂದ ಕೆನೆಯುವ ವಿಜಯಹಯವೂ ಅರ್ಜುನನ ವಿಜಯವನ್ನೇ ಸೂಚಿಸಿದುವು. ೯೬. ಆಗ ಗಾಳಿಯು ನಿಧಾನವಾಗಿ ಹಿತಕರವಾಗಿ (ಆಪ್ಯಾಯಮಾನವಾಗಿರುವ ರೀತಿಯಲ್ಲಿ) ಬೀಸಿತು. ಹೆಣ್ಣುದುಂಬಿಗಳು ಮುತ್ತುತ್ತಲೂ ಕವಿಯುತ್ತಲೂ ಬರಲು ಇಂದ್ರವನದಿಂದ ಪುಷ್ಪವೃಷ್ಟಿಯಾಯಿತು. ಸಮುದ್ರವು ಘೋಷಿಸುವ ಹಾಗಾಯಿತು. ದಿಕ್ಕುಗಳ ಅಂಚಿನಲ್ಲಿ ಜಯ ಜಯ ಧ್ವನಿಯು ಆಶ್ಚರ್ಯವನ್ನುಂಟುಮಾಡಿದುವು. ದೇವದುಂದುಭಿರವವು ಜಯೋದ್ಯೋಗವನ್ನು ಸಾರುವಂತೆ ಮೊಳಗಿದುವು. ವ|| ಆ ಸಂದರ್ಭದಲ್ಲಿ ಬಿರುಗಾಳಿಯಿಂದ ಧರಿಸಲಸಾಧ್ಯವಾದ ಮದ್ದಾನೆಗಳ ಕಪೋಲಪ್ರದೇಶದ ಮದಧಾರೆಯನ್ನುಳ್ಳುದೂ ಹಾರುತ್ತಿರುವ ಮದೋದಕದ ಮುತ್ತುತ್ತಿರುವ ದುಂಬಿಗಳ ವೇಗವಾದ ಕುಣಿತದ ರಮಣೀಯ ನಾದದಿಂದ ಸಹಜವಾದ ಶ್ರೇಯಸ್ಸನ್ನುಳ್ಳುದೂ ಮತ್ತು ಅಕಸ್ಮಾತ್ತಾಗಿ ಎದ್ದ ಧೂಳನ್ನುಳ್ಳುದೂ ಆನೆಯ ಸೊಂಡಿಲಿನ ತುದಿಯ ನೀರಿನ ಪ್ರವಾಹದಿಂದ ಯಾವಾಗಲೂ ಹರಿಯುತ್ತಿರುವ

ವ|| ಎಂಬ ಮಂಗಳಪಾಠಕರ ಮಂಗಳ ವೃತ್ತೋಚ್ಚಾರಣೆಗಳೆಸೆಯೆ ಧರ್ಮಪುತ್ರಂ ಕುರುಕ್ಷೇತ್ರಾಭಿಮುಖನಾದಾಗಳ್-

ಚಂ|| ಧ್ವಜಮಯಮಂಬರಂ ಗಜಮಯಂ ಭುವನಂ ಪ್ರಳಯ ಪ್ರಚಂಡ ಭೂ
ಭುಜಮಯಮಷ್ಟದಿಗ್ವಳಯಮಶ್ವಮಯಂ ಜಗತೀತಳಂ ರಥ|
ವ್ರಜಮಯಮುಂ ಪದಾತಿಮಯಮುಂ ನೆಯಾದುದು ಕಾಡು ಕೋಡುಮಾರ್
ತ್ರಿಜಗದೊಳಾಂಪರೀ ಬಲಮನಿನ್ನೆನಿಸಿತ್ತು ಚತುರ್ಬಲಾರ್ಣವಂ|| ೯೮

ಎಣಿಕೆಗಳುಂಬಮುಂ ಪಿರಿದುಮಾದ ಪದಾತಿ ವರೂಥ ವಾಜಿ ವಾ
ರಣ ಬಲದಿಂದಮಿರ್ಮಡಿಸೆ ಧಾತ್ರಿಯ ಬಿಣ್ಪೆನಗೆಂದಿನಂದವ|
ಲ್ತಣಕಮಿದೆಂದು ಕಣ್ ತುಮುೞೆ ಪೆರ್ಬೆಡೆಯಿಂ ಮಣಿ ಸೂಸೆ ಬೇಸಱಂ
ತಿಣುಕಿದನಾನಲುಮ್ಮಳಿಸಿ ಶೇಷನಶೇಷಮಹೀವಿಭಾಗಮಂ|| ೯೯

ಉ|| ಏಱದ ಪೊನ್ನ ಪಣ್ಣುಗೆಯ ಪೆರ್ವಿಡಿ ಕಟ್ಟದಿರಾಗೆ ಮುಂದೆ ಬಂ
ದೇಱದ ಚೆನ್ನಗನ್ನಡಿಯ ಚೇಟಿಕೆ ಬೀಸುವ ಕುಂಚಮೆಯ್ದೆ ಮೆ|
ಯ್ದೋಱುವ ಗಾಡಿ ಕಾಂಚನದ ದಂಡದ ಸೀಗುರಿ ನೋೞ್ಪೊಡಾರುಮಂ
ಮಾ ಮನೋಜನೊಡ್ಡೆನಿಸಿದರ್ ನಡೆತಂದ ನರೇಂದ್ರಕಾಂತೆಯರ್|| ೧೦೦

ಕಂ|| ಅಂತು ತಿರುವಿಂ ಬರ್ದುಂಕಿದ
ಕಂತುವ ನನೆಗಣೆಗಳಂತೆವೋಲ್ ನಡೆತಂದರ್|
ಸಂತಸದೆ ಪೊನ್ನ ಕಳಸದ
ದಂತದ ಸಿವಿಗೆಗಳನೇಱ ಭೋಗಿಯರರೆಬರ್|| ೧೦೧

ಹರಿಣೀಪ್ಲುತಂ|| ನಡೆಯೆ ತುರಗಂ ಪೊನ್ನಾಯೋಗಂಗಳಿಂದಮರ್ದೞಯಿಂ
ಪಡೆಯೆ ನೆೞಲಂ ಚಂಚತ್ಪಿಂಛಾತಪತ್ರಮೆ ಕೂಡೆ ತ|
ಮ್ಮೊಡನೆ ಬರೆ ಬಂದೆತ್ತಂ ಪತ್ತೆಂಟು ದೇಸೆ ವಿಳಾಸದೊಳ್
ತೊಡರೆ ಚರಿತಂಬಂದರ್ ಕಣ್ಗೊಪ್ಪಿರಲ್ ವರ ಭೋಗಿಯರ್|| ೧೦೨

ಚಂ|| ಸಡಹುಡನಪ್ಪ ಕೞ್ತೆ ಕೊಡೆ ಸಂತಸದಿಂ ಪೆಱಗೇಱ ಬರ್ಪ ಕ
ನ್ನಡಿವಿಡಿದಾಕೆ ಚಿನ್ನದ ಸವಂಗಮಪೂರ್ವದ ಮೊಚ್ಚೆಯಂ ಪವ|
ಣ್ಬಡೆದ ಸುವರ್ಣ ಪಾರಿವದ ಕುಪ್ಪಸಮೊಪ್ಪೆ ಬೆಡಂಗನಾಳ್ದು ಕ
ಣ್ಗೆಡಱದೆ ಪೆಂಡವಾಸದ ವಿಳಾಸದ ಸೂಳೆಯರೊಪ್ಪಿ ತೋಱದರ್|| ೧೦೩

ನದಿಯನ್ನುಳ್ಳುದೂ ಆದ ಸೇನಾಪ್ರಯಾಣವನ್ನು ಪ್ರಿಯಗಳ್ಳನೆಂಬ ಬಿರುದುಳ್ಳ ಅರಿಕೇಸರಿರಾಜನು ಅಪೂರ್ವ ರೀತಿಯಲ್ಲಿ ನಿರೀಕ್ಷಿಸುತ್ತಿದ್ದಾನೆ. ವ|| ಎಂಬ ಅರ್ಥದಿಂದ ಕೂಡಿದ ಹೊಗಳುಭಟ್ಟರ ಮಂಗಳಶ್ಲೋಕಪಠನವು ಶೋಭಾಯಮಾನವಾಗಿರಲು ಧರ್ಮರಾಜನು ಕುರುಕ್ಷೇತ್ರಕ್ಕೆ ಅಭಿಮುಖನಾದನು. ೯೮. ಆಕಾಶವು ಬಾವುಟಗಳಿಂದ ತುಂಬಿದೆ ; ಲೋಕವೆಲ್ಲ ಆನೆಗಳಿಂದ ತುಂಬಿದೆ. ಎಂಟು ದಿಕ್ಕುಗಳ ಸಮೂಹವು ಪ್ರಳಯಕಾಲದಷ್ಟು ಭಯಂಕರರಾದ ರಾಜರಿಂದ ತುಂಬಿದೆ. ಭೂಮಂಡಲವು ಕುದುರೆಯಿಂದ ತುಂಬಿದೆ. ಕಾಡು ಕೋಡುಗಳು ರಥಗಳ ಸಮೂಹದಿಂದಲೂ ಕಾಲಾಳುಗಳ ಸಮೂಹದಿಂದಲೂ ಸಂಪೂರ್ಣವಾಗಿ ತುಂಬಿವೆ. ಮೂರುಲೋಕಗಳಲ್ಲಿ ಯಾರು ಈ ಸೈನ್ಯವನ್ನು ಪ್ರತಿಭಟಿಸುತ್ತಾರೆ ಎನ್ನುವ ಹಾಗೆ ಚತುರಂಗಸೇನಾಸಮುದ್ರವು ಎನ್ನಿಸಿತು. ೯೯. ಲೆಕ್ಕಕ್ಕೆ ಮೀರಿದುದೂ ಮಹತ್ತಾದುದೂ ಆದ ಚತುರಂಗಸೈನ್ಯದ ಭಾರದಿಂದ ಭೂಮಿಯ ಭಾರವು ಎರಡರಷ್ಟಾಗಲು ಈ ಹಿಂಸೆ ನನಗೆ ಎಂದಿನ ರೀತಿಯದಲ್ಲ ಎಂದು ಆದಿಶೇಷನು ಕಣ್ಣನ್ನು ಅರ್ಧಮುಚ್ಚಿ ದೊಡ್ಡ ಹೆಡೆಯಿಂದ ರತ್ನಗಳು ಚೆಲ್ಲುತ್ತಿರಲು ಸಮಸ್ತ ಭೂಮಂಡಲದ ಭಾರವನ್ನು ಧರಿಸಲು ತಿಣುಕಿದನು. ೧೦೦. ತಾವು ಹತ್ತಿದ ಸುವರ್ಣಾಲಂಕಾರದಿಂದ ಕೂಡಿದ ದೊಡ್ಡ ಹೆಣ್ಣಾನೆಯು ಆ ಸೈನ್ಯದೊಂದಿಗೆ ರಾಜಪತ್ನಿಯರು ವೈಭವಯುಕ್ತವಾದ ಆನೆಯನ್ನೇರಿ ಬಂದರು. ಸೌಂದರ್ಯವತಿಯರಾದ ದಾಸಿಯರು ಸುವರ್ಣಾಲಂಕೃತವಾದ ಆನೆಗಳನ್ನೇರಿ ತಾವು ಧರಿಸಿರುವ ರತ್ನಗನ್ನಡಿಗಳೂ, ಚಿನ್ನದ ಕಾವನ್ನುಳ್ಳ ಸೀಗುರಿಗಳೂ ತಮ್ಮ ಶರೀರಕಾಂತಿಯಿಂದ ಕೂಡಿ ನೋಡಿದವರು ಮಾರುಹೋಗುವಂತೆ ಆಕರ್ಷಕವಾಗಿರಲು ಮನ್ಮಥನ ಸೈನ್ಯವೆನ್ನಿಸಿ ಪ್ರಕಾಶಿಸಿದರು. ೧೦೧. ಹಾಗೆ ಬಿಲ್ಲಿನ ಹಗ್ಗದಿಂದ ತಪ್ಪಿಸಿಕೊಂಡ ಮನ್ಮಥನ ಪುಷ್ಪಬಾಣದಂತೆ ಕೆಲವರು ವಿಲಾಸಿನಿಯರು ಚಿನ್ನದ ಕಲಶವನ್ನುಳ್ಳ ದಂತದ ಪಲ್ಲಕ್ಕಿಗಳನ್ನು ಹತ್ತಿ ಸಂತೋಷದಿಂದ ಬಂದರು. ೧೦೨. ಕುದುರೆಗಳು ಚಿನ್ನದ ಅಲಂಕಾರಗಳಿಂದ ಕೂಡಿ ಸಂತೋಷದಿಂದ ನಡೆದು ಬರಲು, ಚಲಿಸುತ್ತಿರುವ ನವಿಲುಗರಿಯ ಕೊಡೆಯು ನೆರಳನ್ನುಂಟು ಮಾಡುತ್ತ ಜೊತೆಯಲ್ಲಿ ಬರಲು, ಎಲ್ಲೆಲ್ಲಿಯೂ ಹತ್ತೆಂಟು ವಿಳಾಸಗಳು ಶೋಭಾಯಮಾನವಾಗಿರಲು ಶ್ರೇಷ್ಠರಾದ ಭೋಗಸ್ತ್ರೀಯರು ಕಣ್ಣಿಗೆ ಆಕರ್ಷಕವಾಗಿರುವ ರೀತಿಯಲ್ಲಿ ಜಾಗ್ರತೆಯಾಗಿ ಬಂದರು. ೧೦೩. ಸಡಗರದಿಂದ ಕೂಡಿದ ಹೇಸರಗತ್ತೆಯ ಮೇಲೆ ಸಂತೋಷದಿಂದ ಹಿಂದೆ ಕುಳಿತು ಬರುವ

ಮ|| ನಡೆಯಲ್ಪಂದಿಱಯಲ್ಕೆ ತಕ್ಕ ತುರಂಗಂ ಭೋರೆಂದು ಬರ್ಪೊಂದೊಡಂ
ಬಡು ಬಂದೆತ್ತಿಸಿದೊಂದು ಸತ್ತಿಗೆ ಕರಂ ಮೆಯ್ವೆತ್ತು ಮುಯ್ವಾಗಮಾ|
ಗಡುಮಾರ್ಗಂ ಕುಡುತಿರ್ಪ ಕಪ್ಪುರದ ಬಂಬಲ್ದಂಬುಲಂ ರಾಗಮಂ
ಪಡೆಗೆಲ್ಲಂ ಪಡೆವನ್ನೆಗಂ ನಡೆದರಂದೆತ್ತಂ ಕೆಲರ್ ನಾಯಕರ್|| ೧೦೪

ವ|| ಮತ್ತಂ ಸಸಂಭ್ರಮ ಪ್ರಚಳಿತ ಸಮದ ಗಜ ಘಟಾ ಘಂಟಾರವಂಗಳಿಂದಂ ತುರಂಗಮಹೇಷಿತಂಗಳಿಂದಂ ಮಹಾಸಾಮಂತರ ಪದಿರ ಪಗಳಿಂದಮಗುರ್ವಾಗೆ ನಡೆವ ಬೀಡಿಂಗೆ ಬೀಡುವಿಡಲ್ ನೆಲನುಮೊಲೆಗಲ್ಗಳ್ಗೆ ಬೆಟ್ಟುಗಳುಂ ಗುಡಿಯ ಗೂಂಟಕ್ಕೆ ಬಲ್ಲಡವಿಂಗಳುಂ ದಂಡಿಗೆಗೆ ವೇಣುವನಂಗಳುಮಾನೆಗಂಬಕ್ಕೆ ಪೆರ್ಮರುಂಗಳುಮಾ ಪಡೆಗೆ ನೆಯವೆನಿಸಿ ಪಾಂಡವರೇೞಕ್ಷೋಹಿಣೀ ಬಲಂಬೆರಸೇೞುಂ ಸಮುದ್ರಂಗಳುಂ ಮೇರೆದಪ್ಪಿ ಬರ್ಪಂತಿರೆ ಬಂದು ಕಡಿತಮಿಕ್ಕಿದಂತಿರ್ದ ಸಮಚತುರಶ್ರಂ ನಾಲ್ವತ್ತೆಣ್ಗಾವುದು ಪರಿ ಪ್ರಮಾಣಮೆನಿಪ ಕುರುಕ್ಷೇತ್ರಮನೆಯ್ದೆವಂದದಱ ಪಶ್ಚಿಮ ದಿಶಾಭಾಗದೊಳ್ ಮುನ್ನೆ ಪರಶುರಾಮನೀ ಲೋಕದೊಳುಳ್ಳರಸುಮಕ್ಕಳೆಲ್ಲರುಮನಿರ್ಪತ್ತೊಂದುಸೂೞ್ವರಂ ಪೇೞೆ ಪೆಸರಿಲ್ಲದಂತೆ ಕೊಂದು ತಂದೆಯ ಪಗೆಗೆಂದಲ್ಲಿಯೆ ತಂದು ನಿಜನಿಶಿತ ಪರಶುಧಾರೆಗಳಿಂ ನೆತ್ತರ್ ಸೂಸಿ ಪಾಯೆ ಕಡಿದವರ ನೆತ್ತರ ಧಾರೆಯೊಳ್ ತೀವಿ ತನ್ನ ತಾಯಂ ನೀರಿೞಪಲುಂ ತಾನುಂ ಮಿಂದು ತನ್ನ ತಂದೆಗೆ ನೀರ್ಗುಡಲುಮೆಂದು ಮಾಡಿದ ಶಮಂತ ಪಂಚಕಂಗಳೆಂಬಯ್ದು ಪೆರ್ಮಡುಗಳ ಕೆಲದೊಳೆಡೆಯಱದು ಬೀಡಂ ಬಿಡಿಸಿ-

ಶಾ|| ವೀರಕ್ಷೇತ್ರಮಗುರ್ವಿಗಂಕದ ಕುರುಕ್ಷೇತ್ರಂ ಬಲಸ್ಥರ್ ಮಹಾ
ಕ್ರೂರಾರಾತಿಗಳೆನ್ನ ದೋರ್ವಲಗುರ್ವಿಂದಂ ತ್ರಿಲೋಕಕ್ಕೆ ಸಂ|
ಹಾರಂ ಮಾಡಿದ ಭೈರವ ಪ್ರಭುವಿನೊಂದಾಕಾರದಿಂ ವೈರಿ ಸಂ
ಹಾರಂ ಮಾಡದೆ ಮಾಣೆನೆಂದು ಹರಿಗಂ ಕೆಯ್ಕೊಂಡನುತ್ಸಾಹಮಂ|| ೧೦೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ನಮಮಾಶ್ವಾಸಂ

ಕನ್ನಡಿಯನ್ನು ಹಿಡಿದಿರುವ ದಾಸಿಯೂ ಚಿನ್ನದ ಸರಿಗೆಯ ಕವಚವೂ ಅಪೂರ್ವವಾದ ಪಾದರಕ್ಷೆಯೂ ಪ್ರಯಾಣಕ್ಕನುಗುಣವಾದ ಹೊಂಬಣ್ಣದ ಪಾರಿವಾಳದ ಬಣ್ಣದ ಕುಪ್ಪಸವೂ ಸುಂದರವಾಗಿರಲು ಬೆಡಗಿನಿಂದ ಕೂಡಿ ಕಣ್ಣಿಗೆ ಸಹ್ಯವಾದ ರೀತಿಯಲ್ಲಿ (ಹಿತವಾಗಿ) ರಾಣಿವಾಸದ ವಿಳಾಸವನ್ನುಳ್ಳ ವೇಶ್ಯಾಸ್ತ್ರೀಯರು ಚೆಲುವಿನಿಂದ ಕೂಡಿ ಕಾಣಿಸಿಕೊಂಡರು. ೧೦೪. ಯುದ್ಧಕ್ಕೆಂದು ಬಂದ ಕುದುರೆಯು ಭೋರೆಂದು ಯೋಗ್ಯವಾದ ರೀತಿಯಲ್ಲಿ ನಡೆಯಲು, ತಮಗೆ ಹಿತಕರವಾದ ರೀತಿಯಲ್ಲಿ (ಒಪ್ಪುವ ರೀತಿಯಲ್ಲಿ) ಹಿಡಿದು ಬರುತ್ತಿರುವ ಛತ್ರಿ, ಪೂರ್ಣವಾಗಿ ಪುಷ್ಟವಾಗಿ ಬೆಳೆದ ತಮ್ಮ ಭುಜಭಾಗ, ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಕೊಡುತ್ತಿರುವ ಕರ್ಪೂರ ತಾಂಬೂಲ ರಾಶಿ ಇವು ಸೈನ್ಯಕ್ಕೆಲ್ಲ ಸಂತೋಷವನ್ನುಂಟುಮಾಡುವಂತೆ ಕೆಲವು ನಾಯಕರು ಎಲ್ಲ ಕಡೆಯಲ್ಲಿಯೂ ನಡೆದರು. ವ|| ಮತ್ತು ಸಂಭ್ರಮದಿಂದ ಕೂಡಿದ ಮದ್ದಾನೆಗಳ ಗಂಟೆಗಳ ಶಬ್ದ, ಕುದುರೆಗಳ ಕೆನೆಯುವಿಕೆ, ಮಹಾಸಾಮಂತರ ಸಂಕೇತವಾದ್ಯ -ಇವು ಭಯಂಕರವಾಗಿರಲು ನಡೆಯುತ್ತಿರುವ ಸೈನ್ಯಕ್ಕೆ ತಂಗುವುದಕ್ಕೆ ನೆಲವೇ ಸಾಲದಾಯಿತು. ಒಲೆಯ ಕಲ್ಲುಗಳಿಗೆ ಪರ್ವತಗಳು ಸಾಲದಾಯಿತು, ಬಾವುಟಗಳ ಗೂಟಕ್ಕೆ (ಗೂಡಾರದ ಗೂಟಕ್ಕೆ?) ಹಿರಿಯ ಕಾಡುಗಳು ಸಾಲದಾದುವು. ಪಲಕ್ಕಿಗಳಿಗೆ ಬಿದರ ಕಾಡುಗಳು ಸಾಲದಾದುವು. ಆನೆಯನ್ನು ಕಟ್ಟುವ ಕಂಬಗಳಿಗೆ ದೊಡ್ಡ ಮರಗಳು ಸಾಲದಾದುವು ಎನ್ನಿಸಿ ಪಾಂಡವರು ಏಳಕ್ಷೋಹಿಣೀ ಸೈನ್ಯದಿಂದ ಕೂಡಿ ಏಳು ಸಮುದ್ರಗಳೂ ಎಲ್ಲೆ ಮೀರಿ ಬರುತ್ತಿರುವ ಹಾಗೆ ಒಂದು ಕಡಿತದಲ್ಲಿ (ಬಟ್ಟೆಯನ್ನು ಮಡಿಸಿ ಮಾಡಿರುವ ಪುಸ್ತಕ) ಬರೆದಂತಿದ್ದ ಚಚ್ಚೌಕವಾಗಿರುವ ನಲವತ್ತೆಂಟು ಗಾವುದ ಸುತ್ತಳತೆಯನ್ನುಳ್ಳ ಕುರುಕ್ಷೇತ್ರಕ್ಕೆ ಬಂದು ಸೇರಿದರು. ಅದರ ಪಶ್ಚಿಮ ದಿಗ್ಭಾಗದಲ್ಲಿ ಶಮಂತಪಂಚಕಗಳು. ಇವು ಪೂರ್ವಕಾಲದಲ್ಲಿ ಈ ಲೋಕದಲ್ಲಿರುವ ಅರಸುಮಕ್ಕಳನ್ನೆಲ್ಲ ಹೇಳಲು ಹೆಸರಿಲ್ಲದಂತೆ ಇಪ್ಪತ್ತೊಂದು ಸಲ ಕೊಂದು ತನ್ನ ತಂದೆಯ ಹಗೆತನಕ್ಕಾಗಿ ಅಲ್ಲಿಗೆ ತಂದು ತನ್ನ ಹರಿತವಾದ ಕೊಡಲಿಯ ಅಲಗಿನಿಂದ ರಕ್ತವು ಚೆಲ್ಲಿ ಹರಿಯುವಂತೆ ಕತ್ತರಿಸಿ ಅವರ ರಕ್ತಧಾರೆಯಿಂದ ತುಂಬಿ ತನ್ನ ತಾಯಿಗೆ ಸ್ನಾನ ಮಾಡಿಸುವುದಕ್ಕೂ ತಾನು ಸ್ನಾನ ಮಾಡಿ ತನ್ನ ತಂದೆಗೆ ತರ್ಪಣ ಕೊಡುವುದಕ್ಕೂ ಮಾಡಿದ ಅಯ್ತು ದೊಡ್ಡ ಮಡುಗಳಾದುವು. ಅವುಗಳ ಸಮೀಪದಲ್ಲಿ ಸ್ಥಳವನ್ನು ನಿಷ್ಕರ್ಷಿಸಿ ಬೀಡನ್ನು ಬಿಟ್ಟಿತು. ೧೦೫. ಪ್ರಸಿದ್ಧವಾದ ಈ ಕುರುಭೂಮಿಯು ವೀರಕ್ಷೇತ್ರವೂ ಅಹುದು, ಮಹಾಕ್ರೂರರಾದ ನನ್ನ ಶತ್ರುಗಳು ಶಕ್ತಿವಂತರು, ಬಲಿಷ್ಠರೆಂಬುದೂ ನಿಜ. ಆದರೂ (ಅವರನ್ನು) ನಾನು ನನ್ನ ತೋಳಿನ ಶಕ್ತಿಯಿಂದ ಹಿಂದೆ ಭಯಂಕರವಾಗಿ ಮೂರು ಲೋಕವನ್ನು ಸಂಹಾರಮಾಡಿದ ಭೈರವಸ್ವಾಮಿಯ ಆಕಾರವನ್ನು ತಾಳಿ ವೈರಿಸಂಹಾರ ಮಾಡದೆ ಬಿಡುವುದಿಲ್ಲ ಎಂದು ಅರ್ಜುನನು ಉತ್ಸಾಹವನ್ನು ತಾಳಿದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾ ಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಒಂಬತ್ತನೆಯ ಆಶ್ವಾಸ.
***********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ