ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-48

        ಆವೊತ್ತು ಹೊತ್ತಾರೆ ಹಳೆಮನೆ ತಿಮ್ಮಪ್ಪಹೆಗ್ಗಡೆ ಹೂವಳ್ಳಿ ಮನೆಯ ಹೆಬ್ಬಾಗಿಲು ಹೊಕ್ಕು ಜಗಲಿಗೆ ಹೋದಾಗ ವೆಂಕಟಣ್ಣ, ಕಂಬಳಿ ಹೊದ್ದುಕೊಂಡು ಮಲಗಿದ್ದವನು, ಎದ್ದು ಕುಳಿತು ಗಟ್ಟಿಯಾಗಿ ಕೂಗಿ ಹೇಳಿದನು, ಮಗಳಿಗೆ ಹೇಳುವಂತೆ: “ಚಿನ್ನೂ, ಏ ಚಿನ್ನೂ, ನಿನ್ನ ಹಳೆಮನೆ ಅಣ್ಣಯ್ಯ ಬಂದಾನೇ. ಕಾಲು ತೊಳೆಯಲಿಕ್ಕೆ ಉಂದು ಚೊಂಬು ನೀರು ತಂದಿಡೇ.”

ಚಿನ್ನಮ್ಮಗೆ ಬದಲಾಗಿ ನಾಗಕ್ಕನೆ ಒಂದು ಹಿತ್ತಾಳೆ ಚೊಂಬಿನಲ್ಲಿ ನೀರು ತಂದು ಜಗಲಿಯ ಕೆಸರ್ಹಲಗೆಯ ಮೇಲೆ ಇಟ್ಟು, ಸರಕ್ಕನೆ ಹಿಂದಿರುಗಿ ಹೋಗುತ್ತಿದ್ದಳು. ಅಷ್ಟರಲ್ಲಿ ವೆಂಕಟಣ್ಣ “ಒಂದು ಜಮಖಾನ ಹಾಸಿ, ದಿಂಬು ಹಾಕ್ತೀಯಾ ನಂಟರಿಗೆ?” ಎಂದು ಹೆಂಡತಿಯಾದವಳಿಗೆ ಗಂಡನು ಆಜ್ಞೆ ಮಾಡುವ ಠೀವಿಯಲ್ಲಿ ಹೇಳಿದನು. ಅವಳು ನವವಧು ಸಹಜವಾದ ಲಜ್ಜಾ ಭಂಗಿಯಿಂದಲೆಂಬಂತೆ ತಾನು ಕೂಡಿಕೆಯಾಗಿದ್ದ ಗಂಡನ ಅಪ್ಪಣೆಯನ್ನು ನೆರವೇರಿಸಿ ಹೋದಳು.
ತಿಮ್ಮಪ್ಪ ಕೆಸರಾಗಿದ್ದ ಕಾಲುಗಳನ್ನು ಪದ್ಧತಿಯಂತೆ ತೊಳೆದು ಕೊಂಡು, ಅದಕ್ಕಾಗಿಯೆ ಅಲ್ಲಿ ಕಡಿನ ಕೋಡಿನ  ಮೇಲೆ ಹರಡಿದ್ದ ಅಂಗವಸ್ತ್ರ ದಿಂದ ನೀರೊರೆಸಿಕೊಂಡು ಬಂದು ದಿಂಬಿಗೊರಗಿ ಜಮಖಾನದ ಮೇಲೆ ಕೆಸರ್ಹಲಗೆಯಿಂದ ಕಾಲು ಇಳಿಬಿಟ್ಟುಕೊಂಡು ಕುಳಿತನು.
“ಏನ್ ಬಾ’ಳ ಅಪ್ರೂಪಕ್ಕೆ ಬಂದ್ಬಿಟ್ಟೆ, ತಿಮ್ಮೂ, ಬಡೋರ ಮನೀಗೆ?…ನಿನ್ನ ಅಪ್ಪಯ್ಯ ಹ್ಯಾಂಗಿದಾರೆ….ನಾನೇ ಬರ್ಬೇಕು ಅಂತಾ ಮಾಡಿದ್ದೆ, ಮದೇಮನೆ ಕರಿಯಾಕೆ. ಹಾಂಗ್ಯಾರೆ, ಏನು ಮಾಡಾದು? ನನ್ನ ಕಾಲಿನ ಈ ಕುಂಟನಹುಣ್ಣು ಜಾಸ್ತಿ ಆಗಿ, ರಸಿಗೆ ಸೋರಕ್ಕೆ ಸುರುವಾತು. ಆ ಕಣ್ಣಾಪಂಡಿತನ ಔಸ್ತಿ ಹಾಕಿ ಹಾಕಿ ಸಾಕಾತು. ಈಗ ಆ ಕಮ್ಮಾರಸಾಲೆ ಪುಟ್ಟಾಚಾರಿ ಕೊಟ್ಟ ಔಸ್ತಿ ಹಾಕ್ತಾ ಇದೀನಿ. ಮೊನ್ನೆಯಿಂದ ಜರಾ ಬ್ಯಾರೆ ಬರಾಕೆ ಸುರು ಮಾಡದೆ….ನಾಲಗೆಗೆ ಅಗ್ರ ಆಗಿಬಿಟ್ಟಿದೆ….ಹೊಟ್ಟೆಗೇನೂ ಸೇರಾದಿಲ್ಲ….ಉಂಡಿದ್ದೆಲ್ಲ ವಾಂತಿ ಆಗ್ತದೆ….ಕಲ್ಲೂರು ದೇವರ ಪರ್ಸಾದಾನು ತಂದಾತು. ಏನೋ ಸನಿ ಹಿಡಿದ್ಹಾಂಗೆ ಆಗ್ಯದೆ ನಂಗೆ….” ದೀರ್ಘವಾಗಿ ನಿಟ್ಟುಸಿರುಬಿಟ್ಟು ಮುಂದುವರಿಸಿದನು. “ಆವೊತ್ತು ನಿಮ್ಮನೆ ಸುಡುಗಾಡಿನಾಗೆ….ಅದೆಲ್ಲ ನಡೀತಲ್ಲ? ಎಲ್ಲ ಪೂರೈಸಿ ಕತ್ಲೇಲಿ ಹೊಲ್ಟು ಮನೀಗೆ ಒಬ್ಬನೆ ಬರ್ತಾ ಇದ್ದೆ. ಆ ಚೌಡೀಬನದ ಹತ್ರ, ಹಾಂಗ್ಯಾರೆ ಏನು ಅಂತಾ ಹೇಳಾದು, ಏನೋ ಬಂದು ನನ್ನ ಮೈ ಮುಟ್ಟಿದ್ಹಾಂಗೆ ಆ’ತು! ಆವತ್ತಿನಿಂದ ಸುರುವಾಗ್ಯದೆ, ನೋಡು, ಈ ರ್ವಾತೆ!….”
ತಿಮ್ಮಪ್ಪಹೆಗ್ಗಡೆ ಯಾವ ಔಪಚಾರಿಕ ಪೀಠಿಕೆಯನ್ನೂ ಹಾಕಲಿಲ್ಲ. ವೆಂಕಟಚಿಕ್ಕಪ್ಪಯ್ಯನ ಸರಮಾತಿನಲ್ಲಿ ಅಡಕವಾಗಿದ್ದ ಯಾವ ಪ್ರಶ್ನೆಯನ್ನೂ  ಗಮನಿಸಿದಂತೆಯೂ ತೋರಲಿಲ್ಲ. ತಟಕ್ಕನೆ ತಾನು ಯಾವ ಉದ್ದೇಶಕ್ಕಾಗಿ ಬಂದಿದ್ದನೋ ಅದನ್ನೇ ಪ್ರಸ್ತಾಪಿಸತೊಡಗಿದನು:
“ಅಪ್ಪಯ್ಯ ಹೇಳಿ ಕಳಿಸ್ಯಾನೆ.” ಎಂದು ಸುಳ್ಳಿನಿಂದಲೆ ಪ್ರಾರಂಭಿಸಿದ್ದನು: “ನಿನಗೆ ಕಷ್ಟಕಾಲದಲ್ಲಿ ಸಾಲಗೀಲ ಕೊಟ್ಟು ಉಪಕಾರ ಮಾಡಿದ್ದಕ್ಕೆ ತಕ್ಕ ಉಪಕಾರಾನೆ ಮಾಡೀಯ ನಮಗೆ….ನಮಗೆ ಒಂದು ಮಾತು ಕೇಳದೆ ಸಿಂಬಾವಿಗೆ ಹೆಣ್ಣು ಕೊಡಾಕೆ ಹೆಂಗೆ ಒಪ್ಪಿದೆ? ನನ್ನ ತಂಗೀನ ಭರಂಬಾವಗೆ ಕೊಟ್ಟು ಅವನ ತಂಗೀನ ನಂಗೆ ತರಾದು ಅಂತಾ ಎಲ್ಲ ನಿಶ್ಚಯವಾಗಿದ್ದೂ ನೀನು ಈ ಅನ್ಯಾಯ ಮಾಡೋದೇನು?….”
ತಿಮ್ಮಪ್ಪಹೆಗ್ಗಡೇಯ ಈ ಅನಿರೀಕ್ಷಿತ ಆಕ್ರಮಣಕ್ಕೆ ವೆಂಕಟಣ್ಣ ತ್ತತ್ತರಿಸಿ ಬಾಯಿಗೆ ಬಂದದ್ದನ್ನೇ- ಮನಸ್ಸಿಗೆ ಬಂದದ್ದನ್ನಾಗಿಸಿ, ಹೇಳತೊಡಗಿದನು: “ಹಾಂಗ್ಯಾರೆ…. ಹಾಂಗ್ಯಾರೆ ನಮ್ಮ ಹೆಣ್ಣನ್ನ ನಾವು ಯಾರಿಗೆ ಬೇಕಾದ್ರೂ ಕೊಡಾಕೆ ಹಕ್ಕಿಲೇನು ನಮಗೆ? ನಾನೇನು ಅವನ್ನ ಕಾಲ್ ಕಟ್ಟಿಕೊಂಡು ನನ್ನ ಮಗಳನ್ನು ಮದುವೆ ಆಗೂ ಅಂತಾ ಕೇಳಿಕೊಳ್ಳಲಿಲ್ಲ, ಗೊತ್ತಾತೇನು? ಹಾಂಗ್ಯಾರೆ…. ಹಾಂಗ್ಯಾರೆ…. ನೀನೆ ಬೇಕಾರೆ ಕೇಳು, ಆ ಕಲ್ಲೂರು ಮಂಜಭಟ್ಟರನ್ನ. ಎಂಥಾ ಇಕ್ಕಟ್ಟಿಗೆ ನನ್ನ ಸಿಕ್ಕಿಸಿಕೊಂಡು ’ಒಲ್ಲೇ! ಒಲ್ಲೇ!’ ಅನ್ತಿದ್ದ ನನ್ನ ಮಗಳನ್ನ ನಾನೇ ಬಾಂವಿಗೆ ಹಾಕ್ಹಾಂಗೆ ಮಾಡಿದ್ರೂ ಅಂತಾ ನಿಂಗೇ ಗೊತ್ತಾಗ್ತದೆ….”
“ಕೋಣೂರು ಸಣ್ಣ ಬಾವಗೆ ಕೊಡ್ತೀನಿ ಕೊಡ್ತೀನಿ ಅಂತಾ ಇದ್ದು ಹೀಂಗ್ಯಾಕೆ ಮೋಸ ಮಾಡಬೇಕಾಗಿತ್ತು ನೀನು?”
“ಅವನಿಗೇ ಕೊಡ್ತೀನಪ್ಪಾ ಅಂದೆ….ನನ್ನ ಮನೆ ಮಠಾ ಎಲ್ಲಾ ಹೋಗದೆ ಇರೋ ಹಾಂಗೆ ಸಾಲ ತೀರ್ಸೋಕೆ ಸ್ವಲ್ಪ ದುಡ್ಡು ಕೊಡಿ ಅಂತಾನೂ ದಮ್ಮಯ್ಯಗುಡ್ಡೆ ಹಾಕ್ದೆ….ಮುಕುಂದನ ಅಣ್ಣ ಒಂದು ಕಾಸ್ನೂ ಕೊಡಾಕೆ ಆಗಾದಿಲ್ಲ ಅಂದುಬಿಟ್ಟ….” ಅಳುದನಿಯಲ್ಲಿ ಮುಂದುವರಿಸಿದನು ವೆಂಕಟಣ್ಣ “ಇನ್ನೇನು ಮಾಡ್ಲಿ? ನನ್ನ ಕರ್ಳ್ಳ ನಾನು ಕಿತ್ತುಕೊಂಡೆ, ಬ್ಯಾರೆ ಯಾವ ದಾರೀನು ತೋರ್ದೆ, ತಿಮ್ಮೂ!”
“ಈಗಲಾದ್ರೂ ಹೇಳು, ನಮ್ಮ ಹುಡುಗೀನ ಕೊಡಾಕೆ ಆಗಾದಿಲ್ಲ ಅಂತಾ….”
“ನನ್ನ ತಿಂದ್ಹಾಕೆ ಬಿಡ್ತಾರೆ ಕಣೋ! ಜಾತಿಯಿಂದ ಹೊರಗೆ ಹಾಕ್ಸಿ, ನಾಕು ಜನರ ಎದುರು ತಲೆ ಎತ್ತಿಕೊಂಡು ತಿರುಗದ ಹಾಂಗೆ ಮಾಡಿಬಿಡ್ತಾರೆ….ನನ್ನ ಮನೆ ಜಮೀನು ಎಲ್ಲ ಕಸುಕೊಂಡು, ನನ್ನ ಕಾಡಿಗೇ ಅಟ್ಟಿ ಬಿಡ್ತಾರೆ!…. ಮದುವೆ ಎಲ್ಲ ನಿಶ್ಚಯ ಆಗಿ, ದಿನಾನೂ ಗೊತ್ತಾಗಿ ಹೋಗ್ಯದೆ…. ಲಗ್ನಪತ್ರಿಕೆನೂ ಬರ್ಸಿ ಕಳಿಸಿ ಆಗ್ಯದೆ….”
ತಿಮ್ಮಪ್ಪ ಹೆಗ್ಗಡೆ ಸ್ವಲ್ಪ ಹೊತ್ತು ಏನೇನನ್ನೋ ಚಿಂತಿಸುತ್ತಾ ಮೌನವಾಗಿ ಕುಳಿತಿದ್ದನು. ವೆಂಕಟಣ್ಣನ ನಿಸ್ಸಹಾಯಕ ದುಸ್ಥಿತಿ ಅವನಿಗೆ ಚೆನ್ನಾಗಿ ತಿಳಿದಂತಾಗಿತ್ತು. ’ಈ ಲಗ್ನ ತಪ್ಪುವಂತೆ ಮಾಡುವುದಕ್ಕೆ ನೀನು ಒಪ್ಪಿಗೆ ಕೊಟ್ಟರೆ ನಾನು ಏನಾದರೂ ಮಾಡುತ್ತೇನೆ’ ಎಂದು ಕೇಳಿಬಿಡಲೇನು ಎಂದುಕೊಂಡನು ಒಮ್ಮೆ. ಮತ್ತೆ ವೆಂಕಟಣ್ಣನಂತಹ ಸ್ಥೂಲ ಬುದ್ಧಿಯ  ಮತ್ತು ಅಸ್ಥಿರ ಮನಸ್ಸಿನ ಮನುಷ್ಯಗೆ ಅಂತಹ ರಹಸ್ಯವನ್ನು ಬಿಟ್ಟುಕೊಡುವುದರಿಂದ ಕಾರ್ಯನಿರ್ವಹಣೆಗೆ ಒದಗುವ ಸಹಾಯಕ್ಕಿಂತಲೂ ಅಪಾಯವೇ ಹೆಚ್ಚು ಎಂದು ಭಾವಿಸಿ ತೆಪ್ಪಗಾದನು.
ಅವನು ಸರಕ್ಕನ್ ಎದ್ದು ನಿಂತು “ನಾನು ಹೋಗಿ ಬರ್ತೀನಿ” ಎಂದಾಗ, ವೆಂಕಟಣ್ಣ ಕುಂಟಿನ ಹುಣ್ಣಿನ ನೋವಿಗೆ ನರಳುತ್ತಾ “ಊಟದ ಹೊತ್ತಾತು; ಉಂಡುಕೊಂಡೇ ಹೋಗೋ.” ಎಂದುದನ್ನೂ ಆಲಿಸದವನಂತೆ, ಹೂವಳ್ಳಿಯಿಂದ ಹೊರಟು ಕೋಣೂರಿಗೆ ಹೋಗಿದ್ದನು.
ಈ ಸಾರಿ ತಿಮ್ಮಪ್ಪಹೆಗ್ಗಡೆ ತನ್ನ ಮನಸ್ಸಿನಲ್ಲಿದ್ದುದನ್ನು ಮುಚ್ಚುಮರೆ ಮಾಡದೆ ಮುಕುಂದಯ್ಯನ ಮುಂದೆ ಬಿಚ್ಚಿಟ್ಟನು. ಹಿಂದೊಮ್ಮೆ ಈ ಪ್ರಸ್ತಾಪವೆತ್ತಿದ್ದಾಗ ತಿಮ್ಮಪ್ಪಹೆಗ್ಗಡೆಯ ವಿಷಯದಲ್ಲಿ ನಂಬುಗೆಯಿಲ್ಲದಿದ್ದ ಮುಕುಂದಯ್ಯ ತನ್ನ ಯಾವ ಪ್ರತಿಕ್ರಿಯೆಯನ್ನೂ ತೋರಗೊಟ್ಟಿರಲಿಲ್ಲ. ಇದ್ದಕ್ಕಿದ್ದ ಹಾಗಿ ಭರಮೈಹೆಗ್ಗಡೆಯ ದ್ವಿತೀಯ ವಿವಾಹಕ್ಕೆ ಭಂಗತರುವ ತಿಮ್ಮಪ್ಪಹೆಗ್ಗಡೆಯ ಪ್ರಯತ್ನ ಅರ್ಥರಹಿತವಾಗಿ ಸಂಶಯಾಸ್ಪದವಾಗಿತ್ತು. ಆದರೆ ಈಗ ಅದು ಅರ್ಥಪೂರ್ಣವಾದುದರಿಂದ ತಿಮ್ಮಪ್ಪಹೆಗ್ಗಡೆಯ ವರ್ತನೆಯಲ್ಲಿ ವಂಚೆನೆಯಿಲ್ಲವೆಂಬುದು ಸ್ಪಷ್ಟವಾಗಿತ್ತು. ಮುಕುಂದಯ್ಯ ಮತ್ತು ಹೂವಳ್ಳಿ ಚಿನ್ನಮ್ಮನ ಮದುವೆ ಆಗಬೇಕೆಂಬುದು ಅವನ ಮುಖ್ಯ ಉದ್ದೇಶವಾಗಿರಲಿಲ್ಲ. ಈ ಮದುವೆ ನಡೆಯದಂತೆ ನೋಡಿಕೊಂಡರೆ ಅವನ ಮತ್ತು ಅವನ ತಂಗಿಯ ಮದುವೆಯ ದಾರಿ ಸರಾಗವಾಗುತ್ತದೆ ಎಂಬುದೆ ಅವನ ಪ್ರಧಾನೋದ್ದೇಶವಾಗಿತ್ತು. ತಿಮ್ಮಪ್ಪ ಹೆಗ್ಗಡೆಯ ಸ್ವಾರ್ಥ ತನ್ನ ಸ್ವಾರ್ಥಕ್ಕೆ ಸಹಕಾರಿಯಾಗಿಯೂ ಉಪಕಾರಿಯಾಗಿಯೂ ಆಗಿದ್ದುದರಿಂದ ಮುಕುಂದಯ್ಯ ಅವನನ್ನೂ ತನ್ನ ಒಳಸಂಚಿನ ವಲಯಕ್ಕೆ ಸೇರಿಸಕೊಳ್ಳಲೊಪ್ಪಿದ್ದನು.
ಆದರೆ ತಿಮ್ಮಪ್ಪ ಹೆಗ್ಗಡೆಯ ಸಂಚು ಮುಕುಂದಯ್ಯನ ಸಂಚಿನ ವಲಯದ ಮಿತಿಯಲ್ಲಿರಲು ಸಮ್ಮತಿಸದೆ, ಅದಕ್ಕೆ ಸಹಕಾರಿಯಾಗುವ ರೀತಿಯಲ್ಲಿ ತನ್ನ ವಲಯವನ್ನು ವಿಸ್ತರಿಸಿಕೊಂಡು ಮುಂದುವರಿದಿತ್ತು….
ಆ ಉದ್ದೇಶದಿಂದಲೆ ಅವನು ಸಿಂಬಾವಿಗೆ ಹೋದದ್ದು.
ಈ ಸಾರಿ ಸಿಂಬಾವಿಯಲ್ಲಿ ಕಾಣಿಸಿಕೊಂಡ ತಿಮ್ಮಪ್ಪಹೆಗ್ಗಡೆ ಹೊಸ ರೂಪ ತಾಳಿದ್ದನು. ಹಿಂದೆಲ್ಲ ಹೋಗುತ್ತಿದ್ದಂತೆ ಸಾಧಾರಣ ವೇಷದಲ್ಲಿ ಹೋಗಿರಲಿಲ್ಲ. ಭರಮೈಹೆಗ್ಗಡೆಯ ತಂಗಿ ಮೊತ್ತಮೊದಲು, ಜಗಲಿಯಲ್ಲಿ ಹಾಸಿದ್ದ ಜಮಖಾನದ ಮೇಲೆ ಮುಂಡಿಗೆಗೆ ಆನಿಸಿದ್ದ ದಿಂಬಿಗೊರಗಿ ಮಂಡಿಸಿದ್ದ, ಅವನನ್ನು ನೋಡಿದಾಗ ಯಾರೋ ಹೊಸ ನೆಂಟರೆಂದು ಬೆರಗಾಗಿ ನೋಡಿದ್ದಳು. ಅಂಗಿ, ಪಂಚೆ, ಬಚ್ಚಗಾನಿ, ಕಿವಿಯ ಹರಳೊಂಟಿ, ಕೈಯ ಚಿನ್ನದುಂಗುರ, ಇವುಗಳಿಂದ ಶೋಭಿಸುತ್ತಿದ್ದ ತಿಮ್ಮಪ್ಪಹೆಗ್ಗಡೆ ಹಳೆಮನೆಗೆ ಆಗಲೆ ಯಜಮಾನನಾಗಿದ್ದಾನೆ ಎಂಬುದನ್ನೂ ಪ್ರಕಟಿಸಿತ್ತು. ಅವನು ಕಳಚಿಟ್ಟಿದ್ದ  ಕನ್ನಡಜಿಲ್ಲೆಯ ಹೂವು ಕೂರಿಸಿದ ಮೆಟ್ಟೂ, ಮಳೆಯಲ್ಲಿ ಬಂದದ್ದರಿಂದ ಒದ್ದೆ ಸೋರುತ್ತಿದ್ದು ಬಿಚ್ಚಿಟ್ಟಿದ್ದ ಹೊಸ ಕೊಡೆಯೂ ಜಮಖಾನದ ಮೇಲೆ ತೆರೆದಿಟ್ಟಿದ್ದ ರೇಷ್ಮೆಯ ಬಣ್ಣದ ಟೋಪಿಯೂ ಆಗಿನ ಕಾಲದ ಹಳ್ಳಿಗಳಲ್ಲಿ ಈಗಿನ ಕಾಲದ ಕಾರುಗಳಿಗೆ ಸಮನಾದ ಭೋಗೈಶ್ವರ್ಯದ ಸಾಮಗ್ರಿಗಳಾಗಿದ್ದು ಬೆರಗುಗೊಳಿಸುತ್ತಿದ್ದವು! ಛೆಃ ಯಾರು ಹೇಳುತ್ತಾರೆ ತಿಮ್ಮಪ್ಪಹೆಗ್ಗಡೆ ಕೊಳಕಿನ ಕುರೂಪಿ ಎಂದು, ಈಗ?
ಹೂವಳ್ಳಿ ಹೆಣ್ಣಿನಿಂದ ಭರಮೈಹೆಗ್ಗಡೆಯನ್ನು ವಿಮುಖನನ್ನಾಗಿ ಮಾಡಲು ಈ ಸಾರಿ ತಿಮ್ಮಪ್ಪಹೆಗ್ಗಡೆ ಪ್ರಯೋಗಿಸಿದ್ದ ಅಸ್ತ್ರ ತಕ್ಕಮಟ್ಟಿಗೆ ಬ್ರಹ್ಮಾಸ್ತ್ರವೆ ಆಗಿತ್ತು: ಆ ಹೆಣ್ಣು ಹಿಂದಿನಿಂದಲೂ ಕೋಣೂರು ಮುಕುಂದಯ್ಯನೊಡನೆ ಸ್ನೇಹದಿಂದಿದ್ದು, ಇತ್ತೀಚೆಗೆ ದೇಹಸಂಬಂಧವನ್ನೂ ಸಂಪಾದಿಸಿಕೊಂಡು, ಈಗಾಗಲೆ ಒಂದ ಎರಡೊ ತಿಂಗಳೂ ಆಗಿದೆ ಎಂದೂ ಹೇಳುತ್ತಾರೆ. ಅವಳನ್ನು ಲಗ್ನವಾದರೆ ಅಪವಾದ ಅವಮಾನ ಎರಡೂ ತಪ್ಪಿದ್ದಲ್ಲ!
ಆದರೆ ಭರಮೈಹೆಗ್ಗಡೆ ಅಂತಹ ಧರ್ಮಸೂಕ್ಷ್ಮತೆಗೆ ಅಳುಕಲಿಲ್ಲ; ಹಾಗೇನಾದರೂ ಆಗಿದೆ ಎಂದು ಗೊತ್ತಾಗಿ, ಅವಳು ಮದುವೆಯಾಗಿ ಒಂಬತ್ತು ತಿಂಗಳೊಳಗಾಗಿ ಹೆತ್ತುಗಿತ್ತರೆ ಅವಳನ್ನು ಬಿಟ್ಟು, ಓಡಿಸಿ, ಜಾತಿಯಿಂದ ಬಹಿಷ್ಕಾರ ಹಾಕಿದರಾಯ್ತು, ಎಂದು ಉತ್ತರ ಹೇಳಿ ನಿಶ್ಚಿಂತರಾದರು. ಬಾಯಿಬಿಟ್ಟು ಹೇಳದಿದ್ದ  ಇನ್ನೊಂದು ವಿಚಾರ ಅವರ ಮನಸ್ಸಿನಲ್ಲಿತ್ತು: ಈಗೆಲ್ಲಿಯಾದರೂ ಒಂದುವೇಳೆ ತಾನೆ ಮದುವೆಯಾಗುವುದಿಲ್ಲ ಎಂದರೆ, ತಾನು ಜಾಮೀನಾಗಿ ನಿಂತು ಕೊಟ್ಟಿದ್ದ ಸಾಲದ ಹಣವೆಲ್ಲ ಮುಳುಗಿಹೋಗುತ್ತದೆ. ಮದುವೆಯನ್ನು ಮುರಿಯುವುದಕ್ಕೆ ತಾನೆ ಕಾರಣನಾಗುವುದರಿಂದ ಹಣ ಪಡೆಯುವ ಹಕ್ಕಿನಿಂದಲೂ ಚ್ಯುತನಾಗಬೇಕಾಗುತ್ತದೆ. ಹೆಣ್ಣು ಕೊಡುವುದಿಲ್ಲ ಎಂದು ವೆಂಕಪ್ಪನಾಯಕರೆ ಹೇಳಿ ಕರಾರನ್ನು ಮುರಿದರೆ ಆಗ ಅದರ ಹೊಣೆ ತನ್ನ ಮೇಲೆ ಬೀಳುವುದಿಲ್ಲ, ನನ್ನ ಹಣ ನನಗುಳಿಯುತ್ತದೆ. ನಾನು ಬೇರೆ ಎಲ್ಲಿಯಾದರೂ-ಹಳೆಮನೆಯ ಹೆಣ್ಣಾದರೆ ಹಳೆಮನೆಯ ಹೆಣ್ಣು-ಹೆಣ್ಣು ನೋಡಬಹುದು.
ಜಗಲಿಯಲ್ಲಿ ಮಾಡಿದ ಪ್ರಯತ್ನ ಸಫಲವಾಗದಿರಲು ತಿಮ್ಮಪ್ಪ ಹೆಗ್ಗಡೆ ಅಂತಃಪುರದ ಕಡೆಗೆ ತಿರುಗಿ, ಜಟ್ಟಕ್ಕಯ್ಯನ ಮೇಲೆ ಬೇರೊಂದು ಮೋಹನಾಸ್ತ್ರ ಪ್ರಯೋಗ ಮಾಡಿದನು: ಮುಕುಂದಯ್ಯ ಆ ಹುಡುಗಿಯನ್ನು ಮದುವೆಯಾಗದಿರುವುದಕ್ಕೆ ನಿಜವಾದ ಕಾರಣ ಬೇರೆ ಇದೆ. ಅವನಿಗೇ ಕೊಡಬೇಕೆಂದು ಆ ಹೆಣ್ಣಿನ ಜಾತಕ ನೋಡಿಸಿದಾಗ ಅದು ಗೊತ್ತಾಯಿತಂತೆ: ಅವಳಿಗೆ ವೈಧವ್ಯಯೋಗವಿದ್ದು, ಮದುವೆಯಾಗಿ ಸ್ವಲ್ಪವೆ ಕಾಲದೊಳಗಾಗಿ ವಿಧವೆಯಾಗುತ್ತಾಳೆ! ಆದ್ದರಿಂದಲೆ ಕೋಣೂರಿನವರು ಅವಳನ್ನು ತಮ್ಮ ಮನೆಗೆ ತಂದುಕೊಳ್ಳಲು ಒಪ್ಪಲಿಲ್ಲ. ಅದನ್ನೆಲ್ಲ ಮುಚ್ಚಿಟ್ಟು, ವೆಂಕಟಣ್ಣನೂ ಮಂಜಭಟ್ಟರೂ ಜಾತಕ ನೋಡಿದ ಜೋಯಿಸರನ್ನು ಒಳಗೆ ಹಾಕಿಕೊಂಡು, ಭರಂಬಾವಗೆ ಅವಳನ್ನು ಗಂಟುಹಾಕಿ, ಗಂಟು ನುಂಗಲು ಈ ಹುನಾರು ಮಾಡಿದ್ದಾರೆ!
ಜಟ್ಟಮ್ಮಗೆ ಏನೆಲ್ಲ ದ್ವೇಷಾಸೂಯೆಗಳಿದ್ದರೂ ಗಂಡನನ್ನು ಕಳೆದುಕೊಂಡು ಮುಂಡೆಯಾಗುವ ಭಯಂಕರವಾದ ಅಮಂಗಳಕ್ಕೆ ಗುರಿಯಾಗುವುದು ಬೇಕಿರಲಿಲ್ಲ. ತನ್ನ ಮೇಲಿನ ಅಕ್ಕರೆಯಿಂದ, ಆ ದನಗೋಳು ಮಳೆಯಲ್ಲಿಯೂ, ಮಾಡಲಿದ್ದ ಬೇಸಾಯದ ಕೆಲಸವನ್ನೆಲ್ಲ ಬದಿಗೊತ್ತಿ, ಅಷ್ಟುದೂರ ಕಷ್ಟಪಟ್ಟು ಕೊಂಡು ಬರುವ ತೊಂದರೆಯನ್ನೂ ಲೆಕ್ಕಿಸದೆ ಬಂದು ಈ ದುರ್ವಾರ್ತೆಯನ್ನು ತಿಳಿಸಿದ ತಮ್ಮನನ್ನು ಮನಸಾರೆ ವಂದಿಸಿದಳು. ಏನಾದರೂ ಮಾಡಿ ಈ ಲಗ್ನ ನಡೆಯದಂತೆ ಮಾಡಬೇಕೆಂದು ಬೇಡಿಕೊಂಡಳು. ಅಷ್ಟೆ ಅಲ್ಲ; ಈ ಲಗ್ನ ಮುರಿದ ಮೇಲೆ ಮಂಜಮ್ಮನನ್ನೇ ಸಿಂಬಾವಿಗೆ ತಂದುಕೊಳ್ಳುವ ಮತ್ತು ಲಕ್ಕಮ್ಮನನ್ನು ಹಳೆಮನೆಗೆ ಕೊಡುವ ಮಂಗಳಕಾರ್ಯವನ್ನೂ ಮುಗಿಸಿಬಿಡಬೇಕೆಂದು ಅಷ್ಟಲ್ಲದೆ ಹೇಳಿಕೊಂಡಳು.
ಆ ದಿನ ರಾತ್ರಿಯೂಟಕ್ಕೆ ನಂಟರು ಬಂದಿದ್ದಾರೆಂದು ತಯಾರಿಸಿದ್ದ ಕಡಬು ತುಂಡುಗಳನ್ನು ಚೆನ್ನಾಗಿ ಉಂಡು, ಕಳ್ಳುಸರಾಯಿಗಳನ್ನು ಚೆನ್ನಾಗಿ ಕುಡಿದು ಭರಮೈಹೆಗ್ಗಡೆ ತನ್ನ ಕೋಣೆಗೆ ಹೋಗಿ ಮಲಗಿದ ಮೇಲೆ ತಮ್ಮನೂ ಅಕ್ಕನೂ ಬಹಳ ಹೊತ್ತು ಮಾತಾಡಿದರು. ಲಗ್ನವನ್ನು ಹೇಗೆ ತಪ್ಪಿಸುತ್ತೇವೆ ಎಂಬ ಗುಟ್ಟನ್ನು ತಿಮ್ಮಪ್ಪಹೆಗ್ಗಡೆ ಬಿಟ್ಟುಕೊಡದಿದ್ದರೂ ಲಗ್ನವನ್ನಂತೂ ತಪ್ಪಿಸಿಯೆ ತಪ್ಪಿಸುತ್ತೇವೆ ಎಂದು ಜಟ್ಟಮ್ಮನಿಗೆ ಭರವಸೆಕೊಟ್ಟು ಅದಕ್ಕೆ ಅವಳು ಮಾತ್ರ ಯಾವ ವಿಘ್ನವನ್ನೂ ತಂದೊಡ್ಡಬಾರದೆಂದು ಎಚ್ಚರಿಸಿ, ಅವಳಿಂದ ನಡೆಯ ಬೇಕಾದ ಕಾರ್ಯಗಳ ವಿಚಾರದಲ್ಲಿಯೂ ಕೆಲವು ಸಲಹೆಯಿತ್ತನು.
ಮರುದಿನವೂ ಭಾವಿ ಮಾವನ ಮನೆಯಲ್ಲಿ ಭಾವಿ ಹೆಂಡತಿಯ ಮುಖದ ಸಕೃದ್ದರ್ಶನಗಳಿಂದ ಕೃತಾರ್ಥನಾಗಿ, ಹಗಲೂಟವನ್ನೂ ಪೂರೈಸಿ, ಸ್ವಲ್ಪ ವಿಶ್ರಮಿಸಿದ್ದು, ಮೋಡ ಕವಿದು ಮಳೆ ಜಿನುಗುತ್ತಿದ್ದರೂ ಅಪರಾಹ್ನದಲ್ಲಿಯೆ ಹಳೆಮನೆಗೆ ಹಿಂದಕ್ಕೆ ಹೊರಟಿದ್ದನು. ಹಳೆಮನೆಯ ಸಣ್ಣಬಾವ ಬಂದು, ಒಂದು ದಿನ ಉಳಿದಿದ್ದು, ಹಿಂತಿರುಗಿಹೋದ ಆ ದಿನದಿಂದ ಮೊದಲುಗೊಂಡು ಲಕ್ಕಮ್ಮನಿಗೆ ತನ್ನ ಪರವಾದ ತನ್ನ ಅತ್ತಿಗೆಯ ವರ್ತನೆಯಲ್ಲಿ ತುಂಬ ವ್ಯತ್ಯಸ್ತವಾದ ಪರಿವರ್ತನೆಯನ್ನು ಕಂಡು ಆಶ್ಚರ್ಯಮಿಶ್ರವಾದ ಸಂತೋಷವುಂಟಾಗಿತ್ತು.
ಹೂವಳ್ಳಿಯಲ್ಲಿ ಪ್ರಾರಂಭವಾಗಿ, ಕೋಣೂರಿನಲ್ಲಿ ಬೆಳೆದು, ಸಿಂಬಾವಿಯಲ್ಲಿ ಪರಿಪಕ್ವವಾಗಿದ್ದ ತನ್ನ ವ್ಯೂಹವನ್ನು ಜಯಪ್ರದವಾಗಿ ಕೊನೆಗಾಣಿಸುತ್ತೇನೆಂಬ ಹಿಗ್ಗಿನಿಂದ ಹಿಂಬರುತ್ತಿದ್ದ ತಿಮ್ಮಪ್ಪಗೆ ಹುಲಿಕಲ್ಲು ನೆತ್ತಿಯ ಇಳಿಜಾರಿನಲ್ಲಿ ಕಲ್ಲುಮಂಟಪದ ಕಡೆಗೆ ಹೋಗುತ್ತಿದ್ದವರ ಗುಂಪು-ಮುಕುಂದಯ್ಯ, ಐತ ಮತ್ತು ಗುತ್ತಿ-ಸಿಕ್ಕಿತ್ತು. ಉಡುಪಿನಿಂದ ಮದುಮಗನಂತೆ ಡೌಲಾಗಿ ಕಾಣುತ್ತಿದ್ದ ತಿಮ್ಮಪ್ಪನನ್ನು ಕಂಡು, ಮುಕುಂದಯ್ಯನಿರಲಿ, ಐತ ಗುತ್ತಿಯರು ಕೂಡ ಮುಗುಳುನಕ್ಕಿದ್ದರು: ಅಂತಹ ಅನನ್ವಯ ಎದ್ದು ಕಾಣುತ್ತಿತ್ತು, ಹಿಂದಿನ ತರುಣ ತಿಮ್ಮಪ್ಪಗೂ ಇಂದಿನ ಯುವಕ ತಿಮ್ಮಪ್ಪಹೆಗ್ಗಡೆಯವರಿಗೂ!
ಮೋಡ ದಟ್ಟಯಿಸಿತ್ತು; ಮಳೆ ಸುರಿಯುತ್ತಿತ್ತು; ಬೈಗು ಕಪ್ಪಾಗುತ್ತಿತ್ತು. ಐತ ಹಿಡಿದಿದ್ದ ಲಾಟೀನು ಬೆಳಕೋ ಆ ವರ್ಷಕಾಲದ ನಿಬಿಡಾರಣ್ಯದ ಹಳುವಿನಲ್ಲಿ ನೆಪ ಮಾತ್ರಕ್ಕೆ ಬೆಳಕಾಗಿತ್ತು. ಆದರೂ ತಿಮ್ಮಪ್ಪಹೆಗ್ಗಡೆ ಅವರ ಸಂಗಡ ಆ ಕಲ್ಲು ಮಂಟಪದ ನಿಭೃತಸ್ಥಾನಕ್ಕೆ ಹೋಗಿ ಅದನ್ನು ವಾಸಯೋಗ್ಯವನ್ನಾಗಿ ಮಾಡುವ ಸಾಹಸದಲ್ಲಿ ಅವರಿಗೆ ನೆರವಾಗಿದ್ದನು.
ತಮ್ಮ ಕೆಲಸವನ್ನೆಲ್ಲ ತಕ್ಕಮಟ್ಟಿಗೆ ಮುಗಿಸಿ ಅವರು ಹಿಂದಿರುಗಿದಾಗ ರಾತ್ರಿ ಬಹಳ ದೂರ ಸಾಗಿತ್ತು. ಗಟ್ಟದ ತಗ್ಗಿನವರ ಬಿಡಾರಗಳು ಸಮೀಪಿಸಿದಾಗ, ಐತ ತನ್ನ ಕೈಲಿದ್ದ ಲಾಟೀನನ್ನು ಗುತ್ತಿಯ ಕೈಗೆ ಕೊಟ್ಟು, ತನ್ನ ಬಿಡಾರಕ್ಕೆ ಬಂದಿದ್ದನು. ಗುತ್ತಿ ತಿಮ್ಮಪ್ಪ ಮತ್ತು ಮುಕುಂದಯ್ಯರಿಗೆ ಬೆಳಕುಹಿಡಿದು ದಾರಿತೋರುತ್ತಾ ಮುಂಬಾಲಿಸಿ, ಕೋಣೂರು ಮನೆಗೆ ಹೋಗಿ, ತಂಗಳುಂಡು, ಕಂಬಳಿ ಬಟ್ಟೆಗಳನ್ನು ಮುರುವಿನ ಒಲೆಯ ಬೆಂಕಿಯಲ್ಲಿ ಒಣಗಿಸಿಕೊಂಡು, ಐತನ ಬಿಡಾರಕ್ಕೆ ಬಂದಿದ್ದನು….
ದೊಡ್ಡಣ್ಣಹೆಗ್ಗಡೆ ಮತ್ತು ಅವರ ಧರ್ಮಪತ್ನಿ ರಂಗಮ್ಮಹೆಗ್ಗಡಿತಿ ಅವರ ಶವ ಸಂಸ್ಕಾರಾನಂತರ ಹಳೆಮನೆಯ ಹೊಲೆಗೇರಿಯಲ್ಲಿ ತಲೆಮರೆಸಿ ಕೊಂಡಿದ್ದ ಗುತ್ತಿ ಶಂಕರಹೆಗ್ಗಡೆಯವರ ಹೆಂಚಿನ ಮನೆಯಲ್ಲಿ ತನ್ನ ಸಿಂಬಾವಿ ಒಡೆಯರನ್ನು ಸಂಧಿಸಿದ್ದನಷ್ಟೆ? ಒಡೆಯರು ಅವನಿಗೆ ಕೆಲವು ಕಾಲ ದೂರ ಓಡಿಹೋಗಿ ತಲೆತಪ್ಪಿಸಿಕೊಂಡಿರು ಎಂದು ಸಲಹೆ ಕೊಟ್ಟಿದ್ದರು. ಆದರೆ ತನ್ನ ಹೆಂಡತಿ ತಿಮ್ಮಿಯನ್ನು, ತನ್ನ ಜೊತೆಗೆ ಕರೆದುಕೊಂಡು ಹೋಗಲು ಆಗದಿದ್ದರೂ, ಒಮ್ಮೆಯಾದರೂ ಹೇಗಾದರೂ ಸಂಧಿಸಿ ಅವಳಿಗೆ ಹೇಳುವುದನ್ನೆಲ್ಲ ಹೇಳಿಯಾದರೂ ಹೋಗಬೇಕೆಂದು ನಿರ್ಣಯಿಸಿ, ಯಾರಿಗೂ ಗೊತ್ತಾಗದಂತೆ ಇರುಳಿನಲ್ಲಿ ಕೋಣೂರಿಗೆ ಹೋಗಿ ಐತನನ್ನು ಕೇಳಿಕೊಂಡಿದ್ದನು, ತನಗೆ ನೆರವಾಗಬೇಕು ಎಂದು. ಐತ ಆ ವಿಚಾರವನ್ನು ಮುಕುಂದಯ್ಯನಿಗೆ ತಿಳಿಸಿದಾಗ, ಅವನು ಗುತ್ತಿಯನ್ನು ತನ್ನಲ್ಲಿಗೆ ಕರೆಯುವಂತೆ ಮಾಡಿ, ದುಡುಕಿ ಓಡಿಹೋಗಬೇಡ ಎಂದು ಅವನಿಗೆ ಧೈರ್ಯಹೇಳಿ, ಚಿನ್ನಮ್ಮನನ್ನು ಅವಳಿಗೆ ಒದಗಲಿರುವ ಸಂಕಟದಿಂದ ಪಾರುಮಾಡುವ ಉದ್ಯಮದಲ್ಲಿ ತನಗೆ ಸೇವೆ ಸಲ್ಲಿಸುವಂತೆಯೂ, ತಾನು ಅವನಿಗೆ ಪೋಲೀಸರಿಂದ ಒದಗಬಹುದಾದ ಕಷ್ಟವನ್ನು ಪರಿಹರಿಸುವುದಾಗಿಯೂ ಮಾತುಕೊಟ್ಟನು. ಹಾಗೆ ಮಾತು ಕೊಡಲು ಸಾಕಷ್ಟು ಆಧಾರ ಅವನಿಗೆ ದೇವಯ್ಯನಿಂದ ಆಗಲೆ ತಿಳಿದಿತ್ತು. ಆ ಪೋಲೀಸಿನವರನ್ನು ಕಂಪದಿಂದ ರಕ್ಷಿಸಿ, ಅವರನ್ನು ಗಾಡಿಯ ಮೇಲೆ ತೀರ್ಥಹಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾಗಲೆ ಅವರು ತಿಳಿಸಿದ್ದರು: ಅದನ್ನೆಲ್ಲ ಅಲ್ಲಿಗೆ ಕೈಬಿಡುತ್ತೇವೆ; ಕೇಸು ಮುಂದುವರಿಸಲು ಸಾಕಷ್ಟು ಆಧಾರವೆ ಇಲ್ಲ ಎಂದು.
ಹುಲಿಕಲ್ಲು ನೆತ್ತಿಯ ಕಲ್ಲುಮಂಟಪವನ್ನು ಹೂವಳ್ಳಿ ಚಿನ್ನಮ್ಮನ ಅಡಗುದಾಣವನ್ನಾಗಿ ಆರಿಸಿಕೊಳ್ಳುವುದಕ್ಕೂ ಬಹುಮಟ್ಟಿಗೆ ಗುತ್ತಿಯೆ ಕಾರಣವಾಗಿದ್ದನು. ಮೇಗರವಳ್ಳಿಯ ಕಡೆಗೆ ಹೋಗುವ ಕಾಲುದಾರಿಯ ದಿಕ್ಕಿನಿಂದ ಅದನ್ನು ಏರಲೂ ಸೇರಲೂ ಸುಖಿಯಾಗಿ ಬೆಳೆದಿದ್ದ ಹೆಣ್ಣುಮಗಳಿಗೆ ಕಷ್ಟಸಾಧ್ಯವೆಂದು ಗುತ್ತಿ ಸ್ವಲ್ಪ ಬಳಸಿನದ್ದಾದರೂ ಮತ್ತೊಂದು ಕಡಿದಲ್ಲದ ದಾರಿಯನ್ನು ಸೂಚಿಸಿದ್ದನು. ಮದುವೆಯ ದಿನಕ್ಕೆ ಮುನ್ನವೆ ತಾನೇ ಆ ದಾರಿಯನ್ನು ಯಾರಿಗೂ ಗೊತ್ತಾಗದಂತೆ ಸವರಿಕೊಡುವುದಾಗಿಯೂ ಭರವಸೆ ಕೊಟ್ಟಿದ್ದನು….
ಬೆಳಕು ಬಿಡುವುದಕ್ಕೆ ಮೊದಲೆ ಯಾರ ಕಣ್ಣಿಗೂ ಬೀಳದಂತೆ ತಾನು ಹುಲಿಕಲ್ಲು ನೆತ್ತಿಯ ಕಲ್ಲುಮಂಟಪವನ್ನು ಸೇರಿಕೊಳ್ಳಬೇಕೇಂಬುದು ಗುತ್ತಿಯ ನಿಶ್ಚಯವಾಗಿತ್ತು. ಈಗ ದೇವರೆ ನಡೆಸಿಕೊಟ್ಟಂತೆ ಅಕಸ್ಮಾತ್ತಾಗಿ ತಿಮ್ಮಿಯೂ ತನ್ನನ್ನು ಸೇರಿದುದರಿಂದ ಆ ಹೊಣೆಯ ಹೊರೆ ಇಮ್ಮಡಿಸಿತ್ತು. ರಾತ್ರಿ ಸಿಕ್ಕದಿದ್ದ ಅವಳಿಗಾಗಿ ಬೆಳಗಾದಮೇಲೆ ಪತ್ತೆ ತರದೂದು ಜೋರಾಗಿ ನಡೆಯುತ್ತದೆ ಎಂದೂ ಅವನಿಗೆ ಗೊತ್ತಿತ್ತು. ಆದ್ದರಿಂದ ಬೆಳಗಿನ ಜಾವ ಕತ್ತಲೆಯಲ್ಲಿಯೆ ಎದ್ದು ಅವಳನ್ನೂ ಕರೆದುಕೊಂಡು ಹೊರಟುಬಿಡಬೇಕೆಂದು ಗಟ್ಟಿಮನಸ್ಸು ಮಾಡಿ ಮಲಗಿದ್ದನು.ಆದರೆ ದಿನವೆಲ್ಲ ದಣಿದು ರಾತ್ರಿಯೂ ಬಹಳ ಹೊತ್ತಾದ ಮೇಲೆ ಮಲಗಿದ್ದ ಆ ನಾಲ್ವರು ಜೋಡಿ ದಂಪತಿಗಳಿಗೆ  ವರ್ಷಾಕಾಲದ ಸಹಜವಾದ ಗಾಢನಿದ್ರೆ ಹತ್ತಿತ್ತು.
ಅರಿಷಡ್ವರ್ಗಮಯವಾದ ಮನುಷ್ಯಜೀವನ ವ್ಯಾಪಾರಗಳ ಯಾವ ಅರಿವೂ ಗೊಂದಲವೂ ಇಲ್ಲದೆ, ಪೀಂಚಲು ಮೂಲೆಗೆ ತಳ್ಳಿ ಕವುಚಿ ಹಾಕಿದ್ದ ಬುಟ್ಟಿಯೊಳಗಡೆ ಹೇಟೆ ಮರಿಗಳೊಡನೆ ನಿರುಂಬಳವಾಗಿ ನಿದ್ರಿಸುತ್ತಿದ್ದ ಹುಂಜಕ್ಕೆ ಪ್ರಕೃತಿಸಹಜವಾದ ಕೊನೆಯ ಜಾವದ ಜಾಗ್ರತಿಯುಂಟಾಗಿ, ಬುಟ್ಟಿಯೊಳಗಡೆಯೆ ಕೊಕ್ಕೊಕ್ಕೋ ಎಂದು ಕೂಗಿಕೊಳ್ಳಲು ತೊಡಗದೆ ಇದ್ದಿದ್ದರೆ, ಗುತ್ತಿ ತಿಮ್ಮಿಯರ ಬದುಕಿನಲ್ಲಿ ಏನೇನು ಕಷ್ಟ ಸಂಕಟ ಪ್ರಳಯಕ್ರಾಂತಿಗಳೆ ಜರುಗುತ್ತಿದ್ದವೊ ಯಾರಿಗೆ ಗೊತ್ತು? ಆ ಪ್ರಜ್ಞೆಗೂ ಅರಿವಿಗೂ ದೂರವಾಗಿದ್ದ ಗುತ್ತಿ, ಹುಂಜನ ಪ್ರಚ್ಛನ್ನ ಉಪಕಾರಕ್ಕೆ ಕೃತಜ್ಞನಾಗುವುದಕ್ಕೆ ಬದಲಾಗಿ, ನಿದ್ರಾಭಂಗ ಮಾಡಿದುದಕ್ಕೆ ಅದನ್ನು ಶಪಿಸುತ್ತಾ ಎದ್ದು, ತಿಮ್ಮಿಯನ್ನೂ ಎಬ್ಬಿಸಿದನು, “ಇದರ ಗಂಟಲು ಕಟ್ಟಿಹೋಗಕೆ, ಏನು ಬಡುಕೊಳ್ತದೆಯೋ! ಏಳೇ, ಹೊತ್ತಾತು. ಬೆಣಕು ಬಿಡಾಕೆ ಮುಂಚೇನೆ ಹೋಗಾನ್!”
ಗುತ್ತಿ ತಿಮ್ಮಿಯರು ಎದ್ದುದನ್ನು ಅರಿತ ಪೀಂಚಲವೂ ಎದ್ದು, ಕತ್ತಲೆಯ ಮರೆಯಲ್ಲಿ ಬಿಚ್ಚಿ ತಲೆಯಡಿ ಇಟ್ಟುಕೊಂಡಿದ್ದ ಸೀರೆಯನ್ನು ಬೇಗಬೇಗನೆ ಸುತ್ತಿಕೊಂಡು, ಐತನನ್ನು ಏಳುವಂತೆ ಹೇಳಿದಳು. ಅವನು ಮಾತ್ರ ಕಂಬಳಿಯನ್ನು ಇನ್ನೂ ಬಲವಾಗಿ ಸುತ್ತಿ ಹೊದ್ದುಕೊಂಡು ಗೊಣಗಿದನಷ್ಟೆ!
ತಿಮ್ಮಿ ಪೀಂಚಲು ಕೊಟ್ಟಿದ್ದ ಸೀರೆಯನ್ನು ಬಿಚ್ಚಿಟ್ಟು, ಆರಿದ್ದ ತನ್ನ ಸೀರೆಯನ್ನೇ ಉಟ್ಟುಕೊಳ್ಳುತ್ತೇನೆ ಎಂದಾಗ,- ’ಫಕ್ಕನೆ ಯಾರಾದರೂ ನೋಡಿದರೂ ಗಟ್ಟದ ತಗ್ಗಿನವಳೆಂದು ನಿನ್ನನ್ನು ಗುರುತಿಸುವುದಿಲ್ಲ; ಅದನ್ನೆ ಉಟ್ಟುಕೊಂಡು ಹೋಗು; ನಿನ್ನ ಸೀರೆಯನ್ನೂ ತೆಗೆದುಕೊಂಡು ಹೋಗು’ ಎಂದಳು ಪೀಂಚಲು.
ಗುತ್ತಿ ಬೇಡ ಬೇಡ ಎಂದರೂ ಪೀಂಚಲು ’ಅವಳು ದಣಿದಿದ್ದಾಳೆ, ನಿನ್ನೆ ರಾತ್ರಿಯೆಲ್ಲ ಓಡಿಯಾಡಿ. ನೀನು ಗೌಡರ ಮನೆಯಲ್ಲಿ ಚೆನ್ನಾಗಿ ತಂಗಳುಂಡು ಬಂದಿದ್ದಿ!’ ಎಂದು ಬೇಗ ಬೇಗನೆ ರಾತ್ರಿ ಉಳಿದಿದ್ದ ತಂಗಳನ್ನಷ್ಟು ಬುತ್ತಿಮಾಡಿ ಕೊಟ್ಟಳು, ತಿಮ್ಮಿಯ ಕೈಗೆ.
ಕಂಬಳಿಯೊಳಗಿನಿಂದಲೆ ಐತ ತಾನು ಬೆಳಕು ಬಿಟ್ಟಮೇಲೆ ಬರುವುದಾಗಿಯೂ, ಸಾಮಾನು ತರುವುದಾಗಿಯೂ ಕೂಗಿ ಹೇಳಿದನು ಗುತ್ತಿಗೆ.
ಇರುಳೆಲ್ಲ ಹೊಯ್ದಿದ್ದ  ಮಳೆ ಬೆಳಗಿನ ಜಾವದಲ್ಲಿ ನಿಂತಿತ್ತು. ಕವಿದಿದ್ದ ಮೋಡಗಪ್ಪಿನ ಕತ್ತಲೆ ಬೆಳಗನ್ನಿದಿರು ನೋಡುವಂತಿತ್ತು. ಗುತ್ತಿ, ತಿಮ್ಮಿ ಮತ್ತು ಹುಲಿಯ ಮೂವರು ನಿಃಶಬ್ದವಾಗಿ ಹುಲಿಕಲ್ಲು ನೆತ್ತಿಯ ಕಡೆಗೆ ಕಾಡು ಹತ್ತಿ ಹೋದರು. ಬಿಡಾರದ ತಟ್ಟಿಬಾಗಿಲನ್ನು ಹಾಕಿ, ಕಟ್ಟಿ, ಪೀಂಚಲು ಮತ್ತೆ ಐತನ ಕಂಬಳಿಯೊಳಗೆ ಹೊಕ್ಕಳು.
*****


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ