ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-28

      ಅಪ್ಪಯ್ಯ ಎಲ್ಲಿಗೆ ಏಕೆ ಹೋಗಿದ್ದಾರೆ ಎಂಬುದು ಮಂಜಮ್ಮಗೆ ತಿಳಿಯದಿದ್ದರೂ ತಿಮ್ಮಪ್ಪಹೆಗ್ಗಡೆಗೆ ತಿಳಿದೆ ಇತ್ತು. ಆ ತಿಳಿವಳಿಕೆಯೆ ಅಂದು ಅವನ ಧೂರ್ತತನದ ವಿಶೇಷವಾದ ಪ್ರಕಟಣೆಗೂ ಕಾರಣವಾಗಿತ್ತು. ಮನೆಯಲ್ಲಿ ವಯಸ್ಸಾದರೂ ಯಜಮಾನರೂ ಆಗಿದ್ದ ಸುಬ್ಬಣ್ಣಹೆಗ್ಗಡೆ ಇದ್ದಿದ್ದರೆ ತಿಮ್ಮಪ್ಪ ಅತ್ತಿಗೆಯ ಮೈಮೇಲೆ ಕೈಹಾಕುವಷ್ಟು ದೂರ ಮುಂದುವರೆಯಲು ಹಿಂದೆ ಮುಂದೆ ನೋಡುತ್ತಿದ್ದನು. ತಂದೆ ಮಗನಿಗಿಂತಲೂ ಬಲಿಷ್ಠನೂ ಶಕ್ತನೂ ಆಗಿದ್ದನೆಂಬ ಕಾರಣಕ್ಕಲ್ಲ ತಿಮ್ಮಪ್ಪಹೆಗ್ಗಡೆ ಅಂಜುತ್ತಿದ್ದುದು. ತರುಣನೂ, ಸುಪುಷ್ಟನೂ, ತನ್ನ ಸುಖ ಸ್ವಾರ್ಥಗಳಿಗೆ ಅಡ್ಡಬಂದವರ ವಿಚಾರದಲ್ಲಿ ನ್ಯಾಯಾನ್ಯಾಯ ಲಕ್ಷವಿಲ್ಲದೆ ಕ್ರೂರಿಯೂ ಆಗಿದ್ದ ತಿಮ್ಮಪ್ಪ ಮನಸ್ಸು ಮಾಡಿದ್ದರೆ ಅವನ ತಂದೆಯನ್ನು ತಿರಸ್ಕರಿಸಿ ವರ್ತಿಸುವುದೇನೂ ಕಷ್ಟವಾಗುತ್ತಿರಲಿಲ್ಲ. ಆದರೆ ಚಿಕ್ಕಂದಿನಿಂದಲೂ ತಂದೆಯನ್ನು ಕಂಡರೆ ಭಯದಿಂದ ನಡೆದೂ ನಡೆದೂ ಈಗ ಭಯ ಒಂದು ರೀತಿಯ ದೈಹಿಕವ್ಯಾಪಾರವಾಗಿ ಪರಿಣಮಿಸಿತ್ತು ಅವನಿಗೆ. ತಂದೆಯಲ್ಲಿ ಅವನಿಗೆ ಗೌರವವಾಗಲಿ, ಭಕ್ತಿಯಾಗಲಿ, ಕಡೆಗೆ ದಾಕ್ಷಿಣ್ಯವಾಗಲಿ ಇತ್ತು ಎಂದಲ್ಲ, ಅವರು ಅವನನ್ನು ಚಿಕ್ಕಂದಿನಿಂದಲೂ ಒದ್ದು, ಹೊಡೆದು, ಕಿವಿ ಹಿಂಡಿ, ಒಳಶುಂಟಿ ಹಿಡಿದು, ಕೋಳದಂಡ ಹಾಕಿ, ಸಿದ್ದೆಗುಮ್ಮಮಾಡಿ, ಕತ್ತಲೆ ಕೋಣೆಯಲ್ಲಿ ಉಪವಾಸ ಕೂಡಿಹಾಕಿ ಭಯಂಕರವಾಗಿ ಪಳಗಿಸಲು ಪ್ರಯತ್ನಪಟ್ಟಿದ್ದರು. ಅದರ ಪರಿಣಾಮವಾಗಿ ತಿಮ್ಮಪ್ಪಹೆಗ್ಗಡೆ ಸರ್ಕಸ್ಸಿನ ಕ್ರೂರಪ್ರಾಣಿಗೆ ಯಜಮಾನನ ಚಾಟಿಯ ಶಬ್ದದಿಂದಲೆ ಒದಗುವ ನರವ್ಯಾಪಿಯಾದ ಅಂಧಭೀತಿಯಿಂತಹ ಒಂದು ಪುಕ್ಕಲು ಸುಬ್ಬಣ್ಣಹೆಗ್ಗಡೆಯವರ ಕೆಮ್ಮಿನಿಂದಲೊ ಉಚ್ಚಕಂಠದಿಂದಲೊ ಪ್ರಾಪ್ತಿವಾಗುತ್ತಿತ್ತು ಅಷ್ಟೆ! ಆದ್ದರಿಂದಲೆ ಅವರು ಎಷ್ಟೇ ಹೀನಾಯವಾಗಿ ಬಯ್ದರೂ (ಈಗ ಮೈಮುಟ್ಟಿ ಶಿಕ್ಷಿಸುವ ಗೋಜಿಗೆ ಹೋಗುತ್ತಿರಲಿಲ್ಲ) ಒಳಗೊಳಗೆ ಗೊಣಗಿಕೊಳ್ಳುವುದರಲ್ಲಿಯೇ ಅವನ ಪ್ರತಿಭಟನೆ ಪರ್ಯವಸಾನವಾಗುತ್ತಿತ್ತು. ಅದಕ್ಕಿಂತಲೂ ಪ್ರಬಲವಾದ ಪ್ರತಿಕ್ರಿಯೆಗೆ ಬೇಕಾಗಿದ್ದ ನೀತಿಶಕ್ತಿಯಂತೂ ವಿಷಯಲಂಪಟನಾಗಿದ್ದ ಅವನಲ್ಲಿ ಲವಲೇಶವೂ ಇರಲಿಲ್ಲ.

ಅಣ್ಣ ದೊಡ್ಡಣ್ಣ ಹೆಗ್ಗಡೆ ತಿರುಪತಿಯಲ್ಲಿ ತೀರಿಹೋದ ಎಂಬ ಸುದ್ದಿ ಬಂದಾಗ ಆಗಿನ್ನೂ ಸ್ವಲ್ಪ ಚಿಕ್ಕವನಾಗಿದ್ದ ತಿಮ್ಮಪ್ಪ ಇತರರಂತೆಯೆ ಅತ್ತಿದ್ದನು. ಅಣ್ಣ ಸತ್ತಿಲ್ಲ ಎಂಬ ಸುದ್ದಿ ಬಣದಾಗಲೂ ತಿಮ್ಮಪ್ಪ ಇತರರಂತೆಯೆ ಅವನನ್ನು ಹುಡುಕಿ ಕರೆದು ತರುವುದರಲ್ಲಿ ಆಸಕ್ತಿ ವಹಿಸಿದ್ದನು. ಅತ್ತಿಗೆಯ ಮತ್ತು ಅತ್ತಿಗೆಯ ಮಗನ ವಿಚಾರದಲ್ಲಿ ಹೆಚ್ಚಿನ ಸಹಾನುಭೂತಿ ತೋರಿಸಿದ್ದನು. ಅದರೆ ಎರಡು ಮೂರು ವರ್ಷಗಳಲ್ಲಿ ಅವನು ಬದಲಾಯಿಸಿ ಹೀಗಿದ್ದನು. ಅಣ್ಣನನ್ನು ಹುಡುಕುತ್ತೇವೆ ಎಂಬ ನೆವದಲ್ಲಿ ಅನೇಕರು ಅನೇಕ ವಿಧವಾಗಿ ಸುಬ್ಬಣ್ಣ ಹೆಗ್ಗಡೆಯವರಿಂದಲೂ ಮತ್ತು ಗುಟ್ಟಾಗಿ ರಂಗಮ್ಮನ ಕಡೆಯಿಂದಲೂ ಮನೆಯವರೆಲ್ಲರಿಗೆ ಸೇರಿದ್ದ ಐಶ್ವರ್ಯವನ್ನು ಅಪಹರಿಸುತ್ತಿದ್ದುದನ್ನು ಕಂಡು ತಿಮ್ಮಪ್ಪಹೆಗ್ಗಡೆ ಅಸಮಾಧಾನಪಟ್ಟಿದ್ದನು ಹಿತ್ತಲು ಕಡೆಯಲ್ಲಿ ಸ್ವಾರ್ಲುಮೀನು ವ್ಯಾಪಾರಕ್ಕೆಂದು ಬಂದು, ರಂಗಮ್ಮಗೆ ಸುಳ್ಳು ಸುಳ್ಳು ವಾರ್ತೆಗಳನ್ನೆಲ್ಲ ಹೇಳಿ, ಹುಸಿ ಭರವಸೆಕೊಟ್ಟು, ಚಿನ್ನದ ಬೆಳ್ಳಿಯ ಒಡವೆ ವಸ್ತುಗಳನ್ನು ಸಾಗಿಸುತ್ತಿದ್ದ ಮೇಗರವಳ್ಳಿ ಕರೀಂ ಸಾಬರಾದಿಯಾಗಿ ಹಾಲ್ವಳ್ಳಿ ಭಟ್ಟಂಗಿ ದಾಸಯ್ಯ ಮೊದಲಾದ ಭಿಕ್ಷಾವೃತ್ತಿಯ ಅಲೆಮಾರಿಗಳನ್ನೂ ಮನೆಯ ಹತ್ತಿರ ಕಂಡರೆ ತಿಮ್ಮಪ್ಪಹೆಗ್ಗಡೆ ಬಯ್ದು ಅಟ್ಟುತ್ತಿದ್ದನು. ಬರಬರುತ್ತಾ, ದೊಡ್ಡಣ್ಣ ಹೆಗ್ಗಡೆ ಹಿಂದಿರುಗುವ ಆಶೆ ದೂರ ದೂರವಾದೆಂತೆಲ್ಲ, ಅವರು ಹಿಂದಿರುಗದಿರಲಿ ಎಂಬಾಸೆ ಹತ್ತಿರ ಹತ್ತಿರವಾಗಿ, ಕಡೆಗೆ ಹೃದಯಪ್ರವೇಶಮಾಡಿ ನೆಲೆಯಾಗಿಬಿಟ್ಟಿತು. ಅದರಲ್ಲಿಯೂ ಮನೆ ಪಾಲಾಗಿ ಶಂಕರಹೆಗ್ಗಡೆ ಬೇರೆ ಹೋದಮೇಲೆ ತಿಮ್ಮಪ್ಪಹೆಗ್ಗಡೆ ತನ್ನ ಮುದಿತಂದೆಯ ತರುವಾಯ ತಾನೆ ಯಜಮಾನನಾಗುವ ಆಶೆಯೂ ಅಂಕುರಿಸಿ, ತಾನು ಸ್ವತಂತ್ರನಾಗಿ ಶಂಕರಹೆಗ್ಗಡೆಯಂತೆ ಮನೆಗೆ ಹೆಂಚು ಹೊದಿಸಿ, ಮದುವೆಯಾಗಿ ಮೆರೆಯುವ ಹೊಂಗನಸೂ ಕೈಬೀಸಿ ಕರೆಯತೊಡಗಿತ್ತು. ಬಾಯಲ್ಲಿ ಬೇರೆ ರೀತಿ ಆಡುತ್ತಿದ್ದರೂ ಅವನ ಹೃದಯದಲ್ಲಿ ಅಣ್ಣ ಹಿಂದಿರುಗುವುದು ಬೇಡವೆ ಬೇಡದ ಅನಿಷ್ಟವಾಗಿತ್ತು!
ಆದ್ದರಿಂದ ಆವೊತ್ತು ಹೊತ್ತಾರೆ ಮುಂಚೆ ಕೋಣೂರಿನಿಂದ ಬಂದ ಐಗಳು, ಪಾದ್ರಿ ಜೀವರತ್ನಯ್ಯ ಕೊಟ್ಟಿದ್ದ ಸುದ್ದಿಯ ಪ್ರಕಾರ, ದೊಡ್ಡಣ್ಣ ಹೆಗ್ಗಡೆಯನ್ನು ಮಂಡಗದ್ದೆಯ ಹತ್ತಿರ ಬೀಡುಬಿಟ್ಟಿದ್ದ ಗೋಸಾಯಿಗಳ ಗುಂಪಿನಲ್ಲಿ ಗುರುತಿಸಿದ್ದಾರಂತೆ ಎಂದು ಸುಬ್ಬಣ್ಣ ಹೆಗ್ಗಡೆಯವರಿಗೆ ತಿಳಿಸಿ, ಅವರನ್ನು ಮೇಗರಳ್ಳಿಯ ಹತ್ತಿರ ಸಿದ್ಧವಾಗುತ್ತಿದ್ದ ಮಿಶನ್ ಇಸ್ಕೂಲಿನ ಮೇಲ್ವಿಚಾರಣೆಗೆಂದು ಅಲ್ಲಿಗೆ ಬಂದಿದ್ದ ಪಾದ್ರಿಯನ್ನೆ ಕಂಡು ಮುಖಾಮುಖಿಯಾಗಿ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಪ್ರೇರಿಸಿ ಕರೆದೊಯ್ದಾಗ, ತಿಮ್ಮಪ್ಪಹೆಗ್ಗಡೆ ಯಾರೋ ತನ್ನಿಂದ ಏನನ್ನೊ ಕಸಿದುಕೊಳ್ಳಲು ಒಳಸಂಚು ನಡೆಸಿದ್ದಾರೆ ಎಂಬಂತೆ ಕನಲಿದ್ದನು. ಶುಭವಾದರೂ ಆಗಬಹುದಾಗಿದ್ದ ಆ ವಾರ್ತೆಯನ್ನು ಅತ್ತಿಗೆಗಿರಲಿ ತಂಗಿಗೂ ತಿಳಿಸದೆ ಬಿಮ್ಮಗಿದ್ದನು: ಆ ಮನಃಸ್ಥಿತಿಯೂ ಒಂದು ಪ್ರಬಲ ಪ್ರಚೋದನೆಯಾಗಿತ್ತು ಆ ಧೂರ್ತನಿಗೆ ಅತ್ತಿಗೆಯ ಮೇಲೆ ಕೈ ಮಾಡುವುದಕ್ಕೆ.
ಮೇಲುನೋಟಕ್ಕೆ ಸುಬ್ಬಣ್ಣಹೆಗ್ಗಡೆಯವರು ಅಷ್ಟೇನೂ ಮನಸ್ಸಿಗೆ ಹಾಕಿಕೊಂಡವರಂತೆ ಕಾಣಿಸದಿದ್ದರೂ ಹಿರಿಯ ಮಗನಿಗೆ ಒದಗಿದ್ದ ವಿಪತ್ತು ಅವರನ್ನು ಒಳಗೊಳಗೇ ಜರ್ಜರಿತವನ್ನಾಗಿ ಮಾಡುತ್ತಿತ್ತು. ಹುಟ್ಟಿನಿಂದಲೆ ಗಟ್ಟಿಮುಟ್ಟಾದ ಆಳಾಗಿದ್ದವರು ಈಗ ಮೂರು ನಾಲ್ಕು ವರ್ಷಗಳಲ್ಲಿ ತುಂಬಾ ಇಳಿದುಹೋಗಿದ್ದರು. ಮೈಗೆ ಸುಕ್ಕುಬಂದಿತ್ತು. ಹಿಂದೆ ಹತ್ತಾರು ಮೈಲಿ ಕಾಡು ಬೆಟ್ಟಗಳಲ್ಲಿ ನಿರಾಯಾಸವಾಗಿ ಸುತ್ತುತಿದ್ದವರು ಈಗ ಸ್ವಲ್ಪದರಲ್ಲಿಯ ದಣಿವನ್ನನುಭವಿಸಿದ್ದರು. ಇತ್ತೀಚೆಗೆ ಗದ್ದೆ ತೋಟಗಳಿಗೆ ಅನಿವಾರ್ಯವಾದಾಗ ಮಾತ್ರವಲ್ಲದೆ ಮನೆಯನ್ನೆ ಬಿಟ್ಟು ಹೊರಡುತ್ತಿರಲಿಲ್ಲ. ಹಿಂದಿನ ಬಾಯ ಅರ್ಭಟ ತುಸು ಇದ್ದಿತಾದರೂ ಅದು ಮುಪ್ಪಿನ ಹುಲಿಯ ಅಬ್ಬರದಂತೆ ನಿರ್ಬಲವಾಗಿತ್ತು. ಸೊಸೆಯ ಗೀಳಿನ ಬಾಳೂ ಅವರ ಹೃದಯವನ್ನು ಗರಗಸದಂತೆ ದಿನವೂ ಕೊಯ್ಯುತಿತ್ತು. ಜೊತೆಗೆ ತಿಮ್ಮಪ್ಪನ ನಡತೆ ಧೂರ್ತತೆ ಇದೂ ಅವರ ಆಯಸ್ಸನ್ನು ಚಿಂತೆಗೊಳಗುಮಾಡಿ ಕ್ಷೀಣಗೊಳಿಸುತ್ತಿತ್ತು. ಅವರು ಇದನ್ನೆಲ್ಲ ಸ್ವಲ್ಪವಾದರೂ ಮರೆಯುವುದಕ್ಕೇನೂ ಎಂಬಂತೆ ತಮ್ಮ ಆಸಕ್ತಿಯನ್ನು ಕೋಳಿಒಡ್ಡಿ ಕುರಿಒಡ್ಡಿ ಹಂದಿಒಡ್ಡಿಗಳ ಕಡೆ ಹರಿಸಿ, ದಿನ ನೂಕುತ್ತಿದ್ದರು.
ಐಗಳಿಂದ ವಾರ್ತೆ ತಿಳಿದೊಡನೆಯೆ ಮಂದ ಜಡಸ್ಥಿತಿಯಲ್ಲಿ ಆರೂಢವಾದಂತಿದ್ದ ಸುಬ್ಬಣ್ಣಹೆಗ್ಗಡೆಯವರ ಚೇತನಕ್ಕೆ ಹಠಾತ್ತನೆ ಪೊರೆ ಕಳಚಿದಂತಾಯಿತು: ಕೆಟ್ಟ ಕನಸು ಬಿರಿದು ಕಣ್ದೆರೆದಂತಾಯಿತು. ಅವರ ಅಳಿದುಳಿದ ಜೀವಶಕ್ತಿಯ ಚೈತನ್ಯಸಮಸ್ತವೂ ತನ್ನ ಕೊಟ್ಟ ಕೊನೆಯ ಪ್ರಯತ್ನಕ್ಕಾಗಿ ಹಾರಲು ರೆಕ್ಕೆಗೆದರಿ ಸಿದ್ಧವಾಯಿತು. ಹಿಂದೆ ಎರಡು ಮೂರು ಸಾರಿ ನಿರಾಶೆಗೊಳಗಾಗಿದ್ದರೂ ಈ ಸಾರಿಯೂ ಮಗನನ್ನು ಹಿಂದಕ್ಕೆ ಪಡೆಯುವ ಅವರ ಪ್ರತ್ಯಾಶೆ, ಅದೆ ಮೊದಲನೆಯ ಸಲವೋ ಎಂಬಷ್ಟು ಉತ್ಸಾಹದಿಂದ, ತನ್ನ ಕೊನೆಯ ಸಾಹಸಕ್ಕೆ ತನ್ನೆಲ್ಲವನ್ನೂ ಸಮರ್ಪಿಸಲು ಸಿದ್ಧರಾಗಿ ಕಂಕಣಬದ್ಧವಾಯಿತು, ಹಿಂದಿನ ಸಲಗಳಂತೆ ಗೆಲುವು ಅಥವಾ ಸೋಲು ಎಂಬ ಬುದ್ಧಿಯಿಂದಲ್ಲ, ಗೆಲುವು ಅಥವಾ ಸಾವು ಎಂದು ನಿಶ್ಚಯಿಸಿ!
“ನೀವು ಹುಲಿಕಲ್ಲು ನೆತ್ತಿಗೆ ಹತ್ತಿ ದಾಟಲಾರಿರಿ. ನೀವು ಬರುವುದೇನೂ ಬೇಡ. ನಿಮ್ಮ ಒಪ್ಪಿಗೆ ಇದ್ದರೆ ಸಾಕು…. ಆ ಗುಂಪಿನ ಯಜಮಾನ ಗೋಸಾಯಿಗೆ ಪಾದ್ರಿಯ ಕಡೆಯವರು ಸ್ವಲ್ಪ ದುಡ್ಡು ಕೊಟ್ಟು ಒಲಿಸಿಕೊಳ್ಳಬೇಕಾಯಿತಂತೆ. ಅದನ್ನೆಲ್ಲ ನಾವು ಕೊಡಬೇಕಾಗುತ್ತದೆ. ಅಲ್ಲದೆ ತೀರ್ಥಹಳ್ಳಿಯ ಜಮಾದಾರರು ಅಮಲ್ದಾರರು ಪೋಲೀಸಿನವರು ಡಾಕ್ಟರು ಅದಕ್ಕೆ ಬಹಳ ಮೆಹನತ್ತು ಮಾಡಿದ್ದಾರಂತೆ. ಅವರಿಗೂ ಸ್ವಲ್ಪ ಕೊಡಬೇಕಾಗಿ ಬರಬಹುದು” ಎಂದು ಹೇಳಿದ ಐಗಳಿಗೆ ಸುಬ್ಬಣ್ಣ ಹೆಗ್ಗಡೆ:
ಐಗಳೆ. ನನ್ನ ದೊಡ್ಡಣ್ಣ ಹೋದಮ್ಯಾಲೆ ಈ ಐದಾರು ವರ್ಷ ನಾನು ತಾಳಮದ್ದಲೆ ಪ್ರಸಂಗದಲ್ಲಿ ನೀವು ಹೇಳುತ್ತಿರಲಿಲ್ಲ ಆ ಭೀಷ್ಮಾಚಾರಿಯ ಹಾಂಗೆ ಶರಶಯ್ಯೆಯಲ್ಲಿ ಮಲಗಿದ್ದಾಗಿದೆ….” ಕೊಳಸೆರೆ ಬಿದಿದಂತಾಗಿ ಮುಂದುವರಿಯಲಾರದೆ ಸುಬ್ಬಣ್ಣ ಹೆಗ್ಗಡೆ ತುಸು ತಡೆದು ಗದ್ಗದಧ್ವನಿಯಿಂದಲೆ ಹೇಳತೊಡಗಿದರು. ಆ ಕಠೋರ ಮೈಕಟ್ಟಿನ ಗಂಭೀರ ವೃದ್ಧಮೂರ್ತಿ ಶೋಕವಶನಾಗಿ ಭಾವಾವಿಷ್ಟವಾದ ಅಭೂತಪೂರ್ವ ದೃಶ್ಯವನ್ನು ಕಂಡು ಐಗಳಿಗೆ ಅಚ್ಚರಿಬಡುದಂತಾಯಿತು. ಮೇಲಕ್ಕೆ ನಿರ್ಭಾವನಾಗಿ ನಿಷ್ಠುರನಾಗಿ ಕೃಪಣನಾಗಿ ಕಾಣುತ್ತಿದ್ದ ಆ ಮುದುಕನ ಹೃದಯದ ರಹಸ್ಯಲೋಕದ ಕ್ಷಣಿಕ ಸಂದರ್ಶನದಿಂದ ಐಗಳಿಗೆ ಆತನಲ್ಲಿ ನೈಜವಾದ ಪೂಜ್ಯಬುದ್ಧಿ ಹುಟ್ಟಿತು.
“…. ದೊಡ್ಡಣ್ಣ ಇಲ್ಲದ ಮ್ಯಾಲೆ ನಾ…. ನಾ…. ನಾ ಇದ್ದರೇನು? ಹೋ…. ಹೋ…. ಹೋದರೇನು? ಯಾರಿಗಾಗಿ ಈ ಮನೆ ಗದ್ದೆ ತ್ವಾಟ ಎಲ್ಲ? ಆ ನಾಯಿಗೇನು? (ಅವರು ಯಾರನ್ನು ನಿರ್ದೇಶಿಸುತ್ತಿದ್ದರೆ ಎಂಬುದು ಅರ್ಥವಾಯಿತು ಐಗಳಿಗೆ.) ನಂಗೇನು ಕಷ್ಟ ನಂಗೇನು ಹೊಸತಲ್ಲ. ದಿಬ್ಬ ಇಳಿದ್ದಾಂಗೆ ಸಾವಿರ ಸಲ ಹತ್ತಿ ಇಳಿದ್ದೀನಿ, ಪರಾಯದಾಗೆ….”
ಸುಬ್ಬಣ್ಣಹೆಗ್ಗಡೆ ಮೈಮೇಲೆ ಬಂದವರಂತೆ, ಅವರ ವಯಸ್ಸಿಗೆ ಸ್ವಾಭಾವಿಕವಲ್ಲವೊ ಎನ್ನುವಷ್ಟರ ಮಟ್ಟಿಗೆ ಚಟುವಟಿಕೆಯಾಗಿ, ತಮ್ಮ ಕೋಣೆಗ ಹೋಗಿ ಸ್ವಲ್ಪ ಹೊತ್ತಿನಲ್ಲಿಯೆ ಹೊರಗೆ ಬಂದರು. ತಲೆಗೆ ಮುಂಡಾಸು ಸುತ್ತಿದ್ದನು. ಒಂದು ಕಸೆಕಟ್ಟುವ ನಿಲುವಂಗಿಯನ್ನು ಮೊಳಕಾಲು ಮೀರುವಂತೆ ತೊಟ್ಟಿದ್ದರು. ಕೆಂಪಂಚಿನ ಪಂಚೆ ಕಚ್ಚೆ ಹಾಕಿದ್ದರು. ಕೈಯಲ್ಲಿ ದೊಡ್ಡದೊಂದು ಉದ್ದವಾದ ಬೆತ್ತದ ದೊಣ್ಣೆ ಹಿಡಿದಿದ್ದರು. ಅವರನ್ನು ಕಂಡ ಐಗಳಿಗೆ ಪ್ರಾಯಕಾಲದ ಸುಬ್ಬಣ್ಣಹೆಗ್ಗಡೆಯವರ ಮಸುಗು ನೆನಹು ಮರುಕೊಳಿಸಿತ್ತು.
“ಬನ್ನಿ, ಐಗಳೆ, ನಿಮ್ಮ ಹುಲಿಕಲ್ ನೆತ್ತಿ ಎಷ್ಟು ಎತ್ತರ ಆಗ್ಯದೆ? ನೋಡಾನ ಬನ್ನಿ” ಎಂದು ನಗುತ್ತಾ ತೆಣೆಯ ಮೂಲೆಯಲ್ಲಿದ್ದ ಒಂದು ಜೊತೆ ಪ್ರಾಚೀನವಾಗಿ ಒಣಗಿ ಮಡಿಚಿಕೊಂಡಿದ್ದ ಭಾರಿ ಮೆಟ್ಟುಗಳಿಗೆ ಕಾಲು ತೂರಿಸಿಕೊಂಡು ಹೊರಟರು: ಕಣ್ಣಿದ್ದು ನೋಡುವವರಿದ್ದಿದ್ದರೆ ಆ ದೃಶ್ಯ ನಿಜವಾಗಿ ಭವ್ಯ ತೋರುತ್ತಿದ್ದುದರಲ್ಲಿ ಸಂದೇಹವಿಲ್ಲ!
ಮೇಗರವಳ್ಳಿಯಲ್ಲಿ, ಅಂತಕ್ಕ ಸೆಡ್ತಿಯ ಮನೆಯಿಂದ ಮೇಲೆ ಸುಮಾರು ಎರಡು ಮೂರು ಫರ್ಲಾಂಗು ದೂರದಲ್ಲಿ, ಒಂದು ಎತ್ತರವಾದ ದಿಬ್ಬದ ಮೇಲೆ ಮಿಶನ್ ಇಸ್ಕೂಲ್ ಕಟ್ಟಡ ತಯಾರಾಗುತ್ತಿತ್ತು. ಕಟ್ಟಡ ದೊಡ್ಡದೇನೂ ಅಲ್ಲ; ಮೂರು ಅಂಕಣದ್ದು. ಎದುರು ಬದುರಾಗಿ ಎರಡು ಕಿಟಕಿ, ಒಂದೇ ಬಾಗಿಲು. ಮಣ್ಣಿನ ಗೋಡೆ ಎಬ್ಬಿಸಿ, ಕೈಹೆಂಚು ಹೊದಿಸಿದ್ದರು.
ಆಗತಾನೆ ಹಳೆಯ ತರಹದ ಕೂಲಿಮಠಗಳ ಕಾಲವೂ ಹಳೆಯ ವಿದ್ಯಾಭ್ಯಾಸ ಪದ್ಧತಿಯೂ ಮುಕ್ತಾಯಗೊಂಡು, ಆಂಗ್ಲೇಯರ ಆಡಳಿತದ ರೀತಿಯೂ ಇಂಗ್ಲೀಷಿನ ಪ್ರಭಾವವೂ ಮೊಳೆದೋರುತ್ತಿದ್ದ ಸಂಧಿಸಮಯ. ಮಲೆನಾಡಿಗೆ ಆ ಹೊಸ ಪ್ರಭಾವದ ಮುಂಬೆಳಕನ್ನು ಮೊತ್ತಮೊದಲು ತರುವುದರಲ್ಲಿ ಕ್ರೈಸ್ತಪಾದ್ರಿಗಳ ಕಾರ್ಯ ಗಣನೀಯವಾಗಿತ್ತು, ಶ್ಲಾಘನೀಯವಾಗಿತ್ತು. ತಮ್ಮ ಮತಕ್ಕೆ ಜನರನ್ನು ಸೇರಿಸಿಕೊಳ್ಳುವ ಧಾರ್ಮಿಕ ಪ್ರಯತ್ನಕ್ಕೆ ಪೀಠಿಕೆಯಾಗಿತ್ತು ಈ ಲೌಕಿಕ ಸೇವಾ ಕರ್ಮ. ಸಾಮಾನ್ಯ ಜನ ಬಹುಕಾಲದಿಂದಲೂ ಹಿಂದೂಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ಒಡ್ಡಿದ ಮೂಢಮತಾಚಾರಗಳ ಕೂಣಿಗೆ ಸಿಕ್ಕಿಬಿದ್ದಿದ್ದರು. ಅವರನ್ನು ಆ ಕೂಣಿಯಿಂದ ತಪ್ಪಿಸಿ ರಕ್ಷಿಸುವ ನೆವದಲ್ಲಿ ಕ್ರೈಸ್ತಪಾದ್ರಿಗಳು ತಮ್ಮ ಮತದ ಬಲೆಯನ್ನು ಬೀಸಿ ಅದರೊಳಕ್ಕೆ ಹಾರಿ ಬೀಳುವ ಪ್ರಾಣಿಗಳನ್ನು ಭಕ್ಷಿಸುವ ಅಥವಾ ಅವರ ರೀತಿಯಲ್ಲಿ ರಕ್ಷಿಸುವ ಅಭಿಸಂಧಿಯನ್ನಿಟ್ಟುಕೊಂಡಿದ್ದರು. ಮಂಡಗದ್ದೆಯಲ್ಲಿ ಹೆರಿಗೆ ಆಸ್ಪತ್ರೆ ಸ್ಥಾಪಿಸಿ ಸ್ಥಾಪಿಸಿದಂತೆ ತೀರ್ಥಹಳ್ಳಿ ದೇವಂಗಿ ಮೊದಲಾದೆಡೆಗಳಲ್ಲಿ ಸ್ಕೂಲುಗಳನ್ನೂ ಸ್ಥಾಪಿಸಿದ್ದರು. ಮಲೇರಿಯಾದಲ್ಲಿ ನರಳಿ ನೂರಕ್ಕೆ ತೊಂಬತ್ತೊಂತ್ತರಷ್ಟು ಬಸಿರಿ – ಬಾಣಂತಿ – ಸಾವನ್ನಪ್ಪುತ್ತಿದ್ದ ತರುಣ ವಯಸ್ಸಿನ ಮಾತೆಯರನ್ನು ಕಾಪಾಡಿ, ತಾವು ಕರುಣೆಯ ಅವತಾರವಾಗಿದ್ದ ಯೇಸುಕ್ರಿಸ್ತನ ಅನುಯಾಯಿಗಳೆಂಬುದನ್ನು ಪ್ರತ್ಯಕ್ಷ ನಿದರ್ಶದಿಂದ ತೀರಿಸಿಕೊಟ್ಟು, ಜನರ ಅನುರಾಗ ವಿಶ್ವಾಸಗಳನ್ನೂ ಕೃತಜ್ಞತೆಯನ್ನೂ ಸೂರೆಗೊಂಡು, ಅದನ್ನು ತಮ್ಮ ಮೂಲೋದ್ದೇಶ ಮತ್ತು ಮೂಲಕರ್ತವ್ಯವಾಗಿದ್ದ ಮತಾಂತರಗೊಳಿಸುವ ಕಾರ್ಯಕ್ಕೆ ಉಪಯೋಗಿಸಿಕೊಂಡರು..
ಆ ದಿನ ಆ ‘ಇಸ್ಕೂಲುಮನೆ’ಯಲ್ಲಿ ಒಂದು ಸಣ್ಣ ಗುಂಪು ನೆರೆದಿತ್ತು. ಅವರಲ್ಲಿ ಕೆಲವರು ಆ ಕಟ್ಟಡ ಕಟ್ಟುವ ಕೆಲಸದಲ್ಲಿ ಪ್ರವೃತ್ತರಾದವರು. ಒಬ್ಬಿಬ್ಬರು ಯಾವ ಕೆಲಸವೂ ಇಲ್ಲದ ಉಂಡಾಡಿ ಪ್ರೇಕ್ಷಕರು. ಅವರ ನಡುವೆ ಪಾದ್ರಿ ಜೀವರತ್ನಯ್ಯನೂ ಆ ಸ್ಕೂಲಿನ ಕಂತ್ರಾಟು ವಹಿಸಿಕೊಂಡಿದ್ದ ಕಣ್ಣಾಪಂಡಿತನೂ ಪರಿಶೀಲನೆ ನಡೆಸುತ್ತಾ ಅತ್ತಿಂದಿತ್ತ ಇತ್ತಿಂದಿತ್ತ ತಿರುಗಾಡುತ್ತಿದ್ದರು. ಕಂತ್ರಾಟುದಾರ ಕಣ್ಣಾಪಂಡಿತನ ಕೈಲಿ ಒಂದು ಅಳತೆಗೋಲೂ ದಾರದುಂಡೆಯೂ ಇದ್ದುವು. ಪಾದ್ರಿಯ ಕೈಲಿ ಒಂದು ಕೈಪುಸ್ತಕ ಸೀಸದಕಡ್ಡಿ ಇದ್ದುವು.
ಇನ್ನೂ ಪೂರ್ತಿ ಪೂರೈಸಿದ್ದ ಇಸ್ಕೂಲಿನ ಸುತ್ತಮುತ್ತ ಕಲಸಿದ್ದ ಕೆಮ್ಮಣ್ಣು ಗುಪ್ಪೆಗಳೂ, ಕತ್ತರಿಸಿದ್ದ ಬಿದಿರಿನ ಗಳುಗಳೂ, ಸೀಳಿದ್ದ ಅಡಕೆ ಮರದ ದಬ್ಬೆಗಳೂ, ಕೆತ್ತಿದ್ದ ಮರದ ಹಸಿಹಸಿ ಸಿಬುರುಗಳೂ, ಕಟ್ಟಿ ಬಿಗಿಯುವುದಕ್ಕಾಗಿ ಕಾಡಿನಿಂದ ತಂದಿದ್ದ ತರತರಹದ ಹಂಬಗಳೂ. ಕತ್ತದ ಕಿರುಮಿಣಿಯ ಉಂಡೆಗಳೂ, ಉಗುಳಿದ್ದ ಎಲೆಯಡಕೆಯ ಕೆಂಬಣ್ಣ ಮೆತ್ತಿ ನೊಣವಾಡುತ್ತಿದ್ದ ಉಂಡೆಸೆದ ಹಾಳೆಕೊಟ್ಟೆಗಳೂ ಅಸ್ತವ್ಯಸ್ತವಾಗಿ ಬಿದ್ದಿದ್ದುವು. ಹೊಸತನದ ಒಂದು ಹಸಿವಾಸನೆ ಸುತ್ತಲೂ ತುಂಬಿತ್ತು.
ಪಾದ್ರಿ ಒಂದು ಕಡೆ ನಿಂತು “ಇದು ಏನು, ಕಣ್ಣಾಪಂಡಿತರೆ? ಏಕೆ ಹೀಗೆ ಅಗೆಯಿಸಿದ್ದೀರಲ್ಲಾ?” ಎಂದರು.
“ಅತು ಅಗೆಯಿಸಿತ್ತಲ್ಲ, ಪಾತ್ರಿಗಳೆ. ರಾತ್ರಿಕತ್ತಲಲ್ಲಿ ಹಂತಿ ಉತ್ತಿತ್ತಲ್ದಾ?” ಎಂದರು ಪಂಡಿತರು, ಪಾದ್ರಿಯ ಅಜ್ಞಾನಕ್ಕೆ ಕನಿಕರದ ನಗೆ ಬೀರುತ್ತಾ.
“ಏನಂದಿರಿ?” ಪಾದ್ರಿಗೆ ಪಂಡಿತನ ಮಾತು ಅರ್ಥವಾಗಲಿಲ್ಲ.
“ ಹಂತಿ ಉತ್ತಿತ್ತು! ಹಂತಿ! ಹಂತಿ!” ಎಂದು ಒತ್ತಿ ಹೇಳಿದರು ಪಂಡಿತರು.
ತುಸು ದೂರದಲ್ಲಿದ್ದು ಅವರ ಕಡೆ ನೋಡುತ್ತಿದ್ದ ಚೀಂಕ್ರ “ಹಂದಿ ಉತ್ತಿತ್ತು ಅಂಬ್ರು ಪಂಡಿತರು!” ಎಂದು ಸ್ಪಷ್ಟಪಡಿಸಿದನು.
“ಸ್ಕೂಲಿನ ಹತ್ತಿರಕ್ಕೆ ಹಂದಿಗಳನ್ನು ಏಕೆ ಬಿಟ್ಟಿರಿ?” ಪಾದ್ರಿ ತರಾಟೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಕೇಳಿದ್ದನು.
ಪಂಡಿತನಿಗೆ ನಗೆ ತಡೆಯಲಾಗಲಿಲ್ಲ: “ಕಾಡಿನ ಹಂತಿ ಅಲ್ಲವೆ? ನಾವು ಬಿಡುವುದೇನು ಬಂತು? ದಿನವೂ ರಾತ್ರಿ ಬಂದು ಉತ್ತುತ್ತಿವೆ!” ಎಂದನು.
ಚೀಂಕ್ರ ತನ್ನ ವಿಶೇಷ ಜ್ಞಾನವನ್ನು ಮರೆಯಲು ನಡುವೆ ಬಾಯಿಹಾಕಿ, ಒಂದು ಜಾತಿಯ ಹೂವಿದ್ದ ಗಿಡವನ್ನು ತೋರಿಸಿ “ಈ ಹಂದಿಪುಟ್ಟಿನ ಗೆಡ್ಡೆ ಇದೆಯಲ್ಲಾ ಅದರ ರುಚಿಗೆ” ಎಂದು ಪಂಡಿತನಿಂದಲೂ ತನ್ನ ಕನ್ನಡ ಮೇಲು ಮೆಟ್ಟದ್ದು ಎಂಬ ಹೆಮ್ಮೆಯಿಂದ ಹೇಳಿದನು.
“ನಾನು ಹೇಳಲಿಲ್ಲವೆ ನಿಮಗೆ, ಈ ಕಾಡಿನಲ್ಲಿ ಇಸ್ಕೂಲು ಮಾಡಿದರೆ ಕಾಡು ಪ್ರಾಣಿಗಳೆ ಸೈ ಓದಲಿಕ್ಕೆ ಬರುವುದು ಎಂದು”
ಪಂಡಿತನ ವಿನೋದವನ್ನು ನಿರ್ಲಕ್ಷಿಸಿ ಪಾದ್ರಿ “ಇದೆಲ್ಲ ಏನು? ಹಿಕ್ಕೆ ಬಿದ್ದಿದೆಯಲ್ಲಾ?” ಎಂದನು.
“ಅತು ಮೊಲದ ಹಿಕ್ಕೆ ಅಲ್ಲವೊ?”
“ಸ್ಕೂಲಿನ ಹತ್ತಿರವೆ ಇಷ್ಟು ಕಾಡು ಇರುವುದು ಮಕ್ಕಳಿಗೆ ಕ್ಷೇಮವಲ್ಲ. ಕಾಡು ಕಡಿದು ಇನ್ನೂ ಸುತ್ತಲಿನ ಬಯಲನ್ನು ವಿಸ್ತರಿಸಬೇಕು.” ಪಾದ್ರಿ ಆಜ್ಞೆಮಾಡಿದನು.
“ಹೋಯ್, ಚೀಂಕ್ರ ಸೇರೆಗಾರ, ಕೇಳಿತಿಯಾ?” ಎಂದು ಪಂಡಿತ ಚೀಂಕ್ರನ ಕಡೆ ಮುಖಮಾಡಿದನು.
“ಅದಕ್ಕೇನು? ಮಾಡುವಾ. ಒಂದಿಪ್ಪತ್ತು ಮೂವತ್ತು ಆಳು ಬಿದ್ದೀತಷ್ಟೆ?”
ಪಾದ್ರಿ ದಿಗಿಲು ಬಿದ್ದವನಂತೆ ಚೀಂಕ್ರ ಕಡೆನ ನೋಡಿ  “ಅಷ್ಟು ಏಕೆ? ಅದು ಭಾರಿ ದುಬಾರಿ.” ಎಂದು ಕಿಟಕಿಯ ಕಡೆಗೂ ಮಣ್ಣಿನ ಗೊಡೆಯ ಮೇಲೆ ಹಾಕಿದ್ದ ತೊಲೆಯ ಕಡೆಗೂ ನೋಡುತ್ತಾ “ಇದು ತೇಗದ ಮರದ್ದು ತಾನೆ?” ಎಂದು ಕೇಳಿದನು.
“ಅಲ್ಲ, ಪಾತ್ರಿಗಳೆ, ಇದು ತ್ಯಾಗ ಅಲ್ಲ. ಅದಕ್ಕಿಂತ ಗಟ್ಟಿ. ಈ ಕಿಟಕಿ ನೋಡಿ. ಇತು ಹೆಬ್ಬಲಸು. ಈ ತೊಲೆ ಇತೆಯಲ್ಲಾ ಇತು ಹೊನ್ನೆ. ಎಂಥ ಕೆಂಚು ಇತೆ ಅನ್ನುತ್ತೀರಿ? ಒಂದು ವರ್ಷಕ್ಕೇನೂ ಅಡ್ಡಿ ಇಲ್ಲ….”
“ಮಳೆಗಾಲದಲ್ಲಿ ಈ ಮಣ್ಣಿನ ಗೋಡೆ ಇರಿಸಲು ಹೊಡೆದು ಬಿದ್ದುಹೋಗಬಾರದು. ಇನ್ನೇನು ಮಳೆಗಾಲ ಪ್ರಾರಂಭ ಆಗುತ್ತದೆ. ಇರಿಸಲು ತಟ್ಟಿ ಕಟ್ಟಿಸಿಬಿಡಿ….”
“ಆತಕ್ಕೇ ಕಾಣಿ, ಈ ಕಡಿಮಾಡು ಇಷ್ಟು ನೆಲಕ್ಕೆ ಮುಟ್ಟಿ ಬಗ್ಗಿಸಿತ್ತೇನೆ. ಎಂಥಾ ಅಡ್ಡಗಾಳಿ ಬೀಸಿತರೂ ಇತಕ್ಕೆ ತಗಲುವುತಿಲ್ಲ ಇರಿಸಲು. ಆತರೂ ನೀವು ಹೇಳಿತ ಮೇಲೆ, ಕಟ್ಟಿಸುತ್ತೆ ಇರಿಸಲು ತಟ್ಟೆ….”
ಹೊರಭಾಗದ ಪರಿಶೀಲನೆಯನ್ನು ಮುಗಿಸಿ, ಮಾಡಬೇಕಾದ ಟೀಕೆಗಳನ್ನು ಮಾಡಿ, ಕೊಡಬೇಕಾದ ಸಲಹೆಗಳನ್ನು ಕೊಟ್ಟು; ಪಾದ್ರಿ ಬಾಗಿಲ ಬಳಿಗೆ ಬಂದನು, ಒಳಗೆ ದಾಟಲೆಂದು. ನೋಡುತ್ತಾನೆ, ಒಳಗೆಲ್ಲ ಸೆಗಣಿ, ಕುರಿಹಿಕ್ಕೆ!
“ಇದೇನು, ಪಂಡಿತರೆ, ಸ್ಕೂಲೋ ಕೊಟ್ಟಿಗೆಯೋ?”
“ಹಾಳು ಈ ತನಾಕಾಯುವ ಮುಂಡೇ ಮಕ್ಕಳಿಂತ ಸುಕಾ ಇಲ್ಲ!” ಎಂದು ಪಂಡಿತ ಪ್ರಾರಂಭಿಸುತ್ತಿದ್ದುದನ್ನು ತಡೆದು, ಪಾದ್ರಿ ತುಂಬ ಗಂಭೀರವಾಗಿ ಉಪದೇಶ ಮಾಡಿದನು: “ಪಂಡಿತರೆ, ಕೆಟ್ಟಮಾತು ಆಡಬಾರದು. ನಮ್ಮ ಕ್ರೈಸ್ತ ಧರ್ಮದಲ್ಲಿ ಅದು ಬಹಳ ಪಾಪಕರ.”
“ಒಪ್ಪಿತೆ. ಪಾತ್ರಿಗಳೆ, ತಪ್ಪಾಯಿತು! ಆತರೆ ಏನುಮಾಡುವುತು ಹೇಳಿ? ಹೇಳಿ ಹೇಳಿ ಸಾಕಾಯಿತು ಈ ಸೂಳೆಮಕ್ಕಳಿಗೆ! ಮೊನ್ನೆ ಮಳೆ ಬಂದಿತಲ್ದಾ? ತನಾ ಕುರಿ ಎಲ್ಲ ಇತರೊಳಗೆ ನುಗ್ಗಿಸಿಬಿಟ್ಟಿತ್ತಾರೆ…. ಈ ಬಾಕಿಲಿಗೆ ಒಂದು ಸರಪಣಿ ಚಿಲಕ ಮಾಡಿಸಿ ಹಾಕುತ್ತೇನೆ. ಒಂದು ಒಳ್ಳೆ ಬೀಕ ತಂದುಕೊಟ್ಟುಬಿಡಿ. ತೀರ್ಥಹಳ್ಳಿಯಲ್ಲಿ ಆ ಕಬ್ಬಿಣದ ಸಾಬರ ಅಂಗಡಿಯಲ್ಲಿ ಸಿಕ್ಕುತ್ತದೆ. ಹಾಕಿಸಿಬಿತ್ತೇನೆ. ಆಮೇಲೆ ಈ ಲವಡಿ ಮಕ್ಕಳು ಹ್ಯಾಂಗೆ ಒಳಗೆ ತನಾ ಕುರಿ ಬಿಡುತ್ತಾರೆ? ನೋಡುವಾ!”
ಪಾದ್ರಿ ಸೆಗಣಿ ಹಿಡಿಯುದಂತೆ ಉಟ್ಟ ಪಂಚೆಯನ್ನು ಎಡಗೈಯಲ್ಲಿ ತುಸು ಎತ್ತಿ ಹಿಡಿದುಕೊಂಡು ನೆಸೆದು ನೆಸೆದು ಒಳಗೆ ದಾಟಿದನು. ಪಂಡಿತನೂ ಸಗಣಿಯನ್ನಾಗಲಿ ಕುರಿಹಿಕ್ಕೆಯನ್ನಾಗಲಿ ಲೆಕ್ಕಿಸದೆ ಹಿಂಬಾಲಿಸಿದನು. ಹೊಸದಾಗಿ ತಯಾರಿಸಿದ್ದ ಒರಟು ಒರಟಾದ ಸ್ಥೂಲಕಾಯದ ಮರದ ಕುರ್ಚಿಯೊಂದು ಎದುರು ಗೋಡೆಗೆ ಆನಿಸಿ ನಿಂತಿತ್ತು. ಎಡಬಲ ಪಕ್ಕದ ಗೋಡೆಗಳಿಗೆ ಮುಟ್ಟಿದಂತೆ ಎರಡೆರಡು ಉದ್ದನೆಯ ಕಾಲುಮಣೆಗಳಿದ್ದವು. (ಪಾದ್ರಿ ಅವನ್ನು ಬೆಂಚು ಎಂದು ಕರೆಯುತ್ತಿದ್ದನು ಅವನನ್ನು ಅನುಕರಿಸುವವರು ’ಬೆಂಚು’ ಎಂದು ಅದರ ಉಚ್ಚಾರಣೆಯನ್ನು ಸುಧಾರಿಸಿದ್ದರು!) ಮೇಜಿನ ರೂಪದ ಒಂದು ಸ್ಥೂಲಾಕೃತಿಯ ಚೌಕನೆಯ ಎತ್ತರದ ಕಾಲುಮಣೆ ಕುರ್ಚಿಯ ಮುಂದೆ ನಿಂತಿತ್ತು.
“ಕಣ್ಣುಪಂಡಿತರೆ, ಸ್ಕೂಲು ಅಂದಮೇಲೆ ಚೆನ್ನಾಗಿ ಗಾಳಿ ಬೆಳಕು ಓಡಾಡುವಂತಿರಬೇಕು. ಓದುವ ಮಕ್ಕಳ ಆರೋಗ್ಯಕ್ಕೆ ಅದು ಬಹಳ ಆವಶ್ಯಕ. ಇಲ್ಲಿ ಬೆಳಕೂ ಸಾಲದೂ, ಗಾಳಿಗೂ ದಾರಿಯಿಲ್ಲ. ಇನ್ನೂ ಎರಡು ಕಿಟಕಿ ಇಟ್ಟಿದ್ದರೆ?”
“ನಿಮಕೆ ಕೊತ್ತಿಲ್ಲ, ಪಾತ್ರಿಗಳೆ. ಇತು ಬಯಲುಸೀಮೆ ಅಲ್ಲ; ಮಲೆಸೀಮೆ. ಮಳೆ ಗಾಳಿ ಸುರು ಆಯ್ತು ಅಂದರೆ ಇದ್ದ ಕಿಟಕೀನೂ ಮುಚ್ಚಬೇಕಾಗಿತ್ತೆ….”
ಕುರ್ಚಿ ಬೆಂಚು ಮೇಜುಗಳನ್ನು ಪರಿಶೀಲಿಸಿ, ಇನ್ನೂ ಸ್ವಲ್ಪ ನಾಜೋಕಾಗಿರಬೇಕೆಂದು ಸಲಹೆ ಕೊಟ್ಟು, ಅಲ್ಲಿ ತುಂಬಿದ್ದ ಸೆಗಣಿ ಕುರಿಹಿಕ್ಕೆಯ ಮತ್ತು ಗಂಜಲದ ದುರ್ಗಂಧವನ್ನು ಸಹಿಸಲಾರದೆ, ಮೂಗಿಗೊಂದು ಕರವಸ್ತ್ರವನ್ನು ಅಡ್ಡಹಿಡಿದುಕೊಂಡು, ಪಾದ್ರಿ ಆದಷ್ಟು ಬೇಗನೆ ಹೊರಹೊರಟನು.
“ಸ್ಕೂಲಿಗೆ ಒಂದು ಬಾವಿ ತೆಗೆಸಬೇಕು, ಪಂಡಿತರೆ…. ಎಲ್ಲಿ ಬೆಟ್ಟಳ್ಳಿ ದೇವಯ್ಯಗೌಡರು ಇನ್ನೂ ಬರಲಿಲ್ಲವೆ? ಅವರ ಬೈಸಿಕಲ್ಲಿನ ಗಂಟೆ ಸದ್ದು ಆಗಲೆ ಕೇಳಿಸಿದ್ದ ಹಾಗಿತ್ತು?” ಎಂದು ಜೀವರತ್ನಯ್ಯ ಅತ್ತ ಹುಡುಕಿ ನೋಡಿದರು.
ಚೀಂಕ್ರ “ಅಂತಕ್ಕಸೆಡ್ತೀರ ಮನೀಗೆ ಹ್ವಾದ್ರು ಅಂಬಹಾಂಗೆ ಕಾಣ್ತದೆ” ಎಂದು ಎಲೆಯಡಿಕೆ ಜಗಿದು ಕೆಂಪಾಗಿದ್ದ ಹುಳುಕು ಹಲ್ಲು ಬಿಟ್ಟು ನಗುತ್ತಾ, ಪಂಡಿತರ ಕಡೆಗೆ ಇಂಗಿತವಾಗಿ ದೃಷ್ಟಿ ಬೀರಿದನು. ಅವನು ಮುಡಿದಿದ್ದ ಹೂವನ್ನು ನೋಡಿ ಪಾದ್ರಿಗೆ ನಗೆ ಬರುವ ಹಾಗಾಯಿತು.
* * *
ಹೊಸದಾಗಿ ಬೈಸಿಕಲ್ಲು ಕಲಿತು ಏರಿದ್ದ ಅಮಲು ಇನ್ನೂ ಇಳಿದಿರಲಿಲ್ಲ, ಬೆಟ್ಟಳ್ಳಿ ದೇವಯ್ಯನಿಗೆ. ರಸ್ತೆಗಳೆ ಅಪೂರ್ವವಾಗಿದ್ದ ಆ ಕಾಲದಲ್ಲಿ, ಇದ್ದ ರಸ್ತೆಗಳೂ ಕೊರಕಲು ಬಿದ್ದುಹೋಗಿದ್ದರೂ ದೇವಯ್ಯ ಎಲ್ಲ ಕಡೆಗಳಿಗೂ, ಸಿಕ್ಕಿದೆ ಅವಕಾಶ ಎಂದಿಕೊಂಡು, ಬೈಸಿಕಲ್ಲಿನಲ್ಲಿಯೆ ಸವಾರಿ ಮಾಡುತ್ತಿದ್ದನು. ತಮ್ಮ ಜಮೀನಿನಲ್ಲಿ ಆಳುಗಳು ಕೆಲಸ ಮಾಡುವುದನ್ನು ನೋಡಿಕೊಂಡು ಬರಲೂ ಬೈಸಿಕಲ್ಲಿನ ಮೇಲೆಯೆ ಹೋಗಿಬರುತ್ತಿದ್ದನು, ಅದು ಒಂದೇ ಫರ್ಲಾಂಗು ಆಗಿದ್ದರೂ ಚಿಂತೆಯಿಲ್ಲ. ಆ ಹುಮ್ಮಸ್ಸಿನಲ್ಲಿ ಕೆಲುವು ಸಾರಿ ಬೈಸಿಕಲ್ಲಿನಿಂದ ಬಿದ್ದು ಮುಖ ಮೋರೆ ಒಡೆದುಕೊಂಡಿದ್ದರೂ ಅದನ್ನು ಲಕ್ಷಿಸಿರಲಿಲ್ಲ. ಒಮ್ಮೆ ಮೋರಿಯೊಂದರಿಂದ ಅದರ ಕಲ್ಲು ಕಟ್ಟನೆಗೆ ಡಿಕ್ಕಿ ಹೊಡೆದು ಕೆಳಗೆ ಹಳ್ಳಕ್ಕೆ ಎಗರಿ ಬಿದ್ದು ಪ್ರಾಣಾಪಾಯವೂ ಆಗುವುದರಲ್ಲಿತ್ತು. ಏನಾದರೂ ಅವನಿಗೆ ಬೈಸಿಕಲ್ಲು ಸವಾರಿಯ ಷೋಕಿ ಕುದುರೆ ಸವಾರಿಯ ಷೋಕಿಗಿಂತಲೂ ಹೆಚ್ಚಾಗಿ ಅಮರಿಬಿಟ್ಟಿತ್ತು.
ಆ ಬೈಸಿಕಲ್ಲು ಪಾದ್ರಿಯಿಂದ ತನಗೆ ಬಹುಮಾನವಾಗಿ ಬಂದಿದೆ ಎಂದು ಅವನು ತಿಳಿದುಕೊಂಡಿದ್ದರೂ ಎಲ್ಲರೊಡನೆಯೂ ತಾನು ಹಣ ಕೊಟ್ಟೆ ಕೊಂಡದ್ದು ಎಂದು ಹೇಳಿದ್ದನು. ನಿಜಾಂಶ ಎರಡಕ್ಕೂ ಬೇರೆಯಾಗಿತ್ತು. ಆ ಬೈಸಿಕಲ್ಲೂ, ಅವನಿಗೆ ಪಾದ್ರಿಯಿಂದ ಬಂದಿದ್ದ ಇತರ ಅನೇಕ ಬಹುಮಾನಗಳಂತೆ, (ಉದಾಹರಣೆಗೆ, ಗೋಡೆಗೆ ತಗುಲಿಸುವ ದೊಡ್ಡ ಗಡಿಯಾರ.) ಅವನೂ ಕ್ರೈಸ್ತನಾಗಿ ಇತರರನ್ನೂ ಕ್ರೈಸ್ತಮತಕ್ಕೆ ಸೇರಿಸುವ ಸಲುವಾಗಿ ಕೊಟ್ಟಿದ್ದ ಮುಂಗಾಣಿಕೆಯಾಗಿತ್ತು. ಅದರ ಪಾದ್ರಿಗೆ ತಾನು ಏನನ್ನು ಮಾಡುತ್ತಿದ್ದೇನೆ ಎಂಬುದರ ಸ್ಪಷ್ಟ ಅರಿವು ಇತ್ತು. ತಾನು ಉಪದೇಶಿಯ ಸ್ಥಾನದಿಂದ ರೆವರೆಂಡಿನ ಪಟ್ಟಕ್ಕೆ ಏರಬೇಕಾದರೆ ಎಷ್ಟು ಜನರನ್ನು ಕಿಲಸ್ತರ ಜಾತಿಗೆ ಸೇರಿಸಬೇಕು ಎಂಬ ಪಟ್ಟಕ್ಕೆ ಅವನ ಬೊಕ್ಕಣದಲ್ಲಿ ಸದಾ ಹಸಿದು ಬಾಯ್ದೆರೆದಿತ್ತು.
ಜೀವರತ್ನಯ್ಯ ಹೇಳಿಕಳುಹಿಸಿದ್ದಂತೆ ‘ಇಸ್ಕೂಲುಮನೆ’ ನೋಡಲೆಂದು ಬೆಟ್ಟಳ್ಳಿಯಿಂದ ಬೈಸಿಕಲ್ಲು ಹತ್ತಿ ಬಂದಿದ್ದ ದೇವಯ್ಯ, ಅನಾವಶ್ಯಕವಾಗಿ ಟ್ರಿಂಟ್ರಿಂಟ್ರಿಂಟ್ರಿಂ ಗಂಟೆ ಬಾರಿಸುತ್ತ, ಅಂತಕ್ಕನ ಮನೆಯ ಉಣುಗೋಲು ತೆಗೆದು ದಾಟಿ, ಬೈಸಿಕಲ್ಲನ್ನು ಅಂಗಳಕ್ಕೆ ನೂಕಿಕೊಂಡೆ ಹೋಗಿ, ಅದನ್ನು ತೆಣೆಗೆ ವಾಲಿಸಿಟ್ಟು, ಜಗಲಿಗೆ ಹತ್ತಿ, ನೇರವಾಗಿ ಒಳಕ್ಕೆ ಹೋದನು. ಅವನ ಚಲನವಲನಗಳೆಲ್ಲ ಅವನು ಆ ಮನೆಗೂ ಮನೆಯವರಿಗೂ ಬಹುಕಾಲದಿಂದಲೂ ತುಂಬ ಪರಿಚಿತನೆಂಬುದನ್ನು ತೋರುವಂತಿತ್ತು.
ಆಗತಾನೆ ಮಿಂದು, ತಟ್ಟಿಗೋಡೆಯ ಬಚ್ಚಲು ಮನೆಯಲ್ಲಿ ಸೀರೆ ಉಟ್ಟುಕೊಳ್ಳುತ್ತಿದ್ದ ಅಂತಕ್ಕನ ಮಗಳು ಕಾವೇರಿಗೆ ಬೈಸಿಕಲ್ಲಿನ ಗಂಟೆಸದ್ದು ಕೇಳಿಸಿದೊಡನೆಯ ಮೊಗದ ಮೇಲೆ ನಗೆಯ ಮುಗುಳು ಮೂಡಿ ಮಲರಿತು. ಕನ್ನಡ ಜಿಲ್ಲೆಯ ಸೆಟ್ಟರ ಹೆಂಗಸರು ಉಡುವಂತೆ ಸೀರೆ ಉಟ್ಟುಕೊಳ್ಳುತ್ತಿದ್ದವಳು ಅಷ್ಟಕ್ಕೆ ನಿಲ್ಲಿಸಿ ಸೊಂಟಕ್ಕೆ ಸುತ್ತಿದ್ದನ್ನು ಕೈಯಲ್ಲಿ ಹಿಡಿದುಕೊಂಡೆ, ಯಾರಾದರೂ ಕಂಡಾರೊ ಎಂದು ಅತ್ತಿತ್ತ ಕಣ್ಣಟ್ಟಿ, ಸೊಂಟದ ಮೇಲಿನ ಮೈ ಬತ್ತಲೆಯಾಗಿಯೆ ಬಳಿಯಿದ್ದ ತನ್ನ ಕೋಣೆಗೆ ಓಡಿ ಹೋಗಿ ಬಾಗಿಲು ಓರೆಮಾಡಿಕೊಂಡಳು. ಆ ಕೋಣೆಯ ಅರೆಗತ್ತಲೆಯಲ್ಲಿ ಸೀರೆಯನ್ನು ಕಳಚಿಯ ಹಾಕಿ, ಬತ್ತಲೆಯ ನಿಂತು, ಮತ್ತೊಂದು ಸೀರೆಗಾಗಿ ಬಿದಿರಿಗಳುವಿನ ಮೇಲೆ ಮಡಿಚಿಟ್ಟಿದ್ದ ಸೀರೆಗಳಲ್ಲಿ ತಡಕಾಡಿ, ಒಂದನ್ನು ಗುರುತಿಸಿ ಎಳೆದಳು. ಅದನ್ನು ಬೆಳಕಂಡಿಯ ಹತ್ತಿರಕ್ಕೆ ಹಿಡಿದು, ಬೆಟ್ಟಳ್ಳಿ ದೇವಯ್ಯಗೌಡರು ಕೆಲವು ದಿನಗಳ ಹಿಂದೆ ತಂದುಕೊಟ್ಟಿದ್ದ ಹೊಸಸೀರೆ ಎಂಬುದನ್ನು ನಿಶ್ಚಯ ಮಾಡಿಕೊಂಡು, ಉಟ್ಟುಕೊಳ್ಳುತೊಡಗಿದಳು, ಗಟ್ಟದ ತೆಗ್ಗಿನವರು ಉಟ್ಟುಕೊಳ್ಳುವಂತಲ್ಲ, ಗಟ್ಟದ ಮೇಲಿನವರು ಉಟ್ಟುಕೊಳ್ಳುವಂತೆ, ಗೊಬ್ಬೆ ಸೆರಗು ಹಾಕಿ.
ಅಷ್ಟರಲ್ಲಿ ಅವಳ ತಾಯಿ ಕರೆದದ್ದು ಕೇಳಿಸಿತು:
“ಕಾವೇರೀ!”
“ಆ!”
“ಮಿಂದಾಯ್ತೇನೇ?”
“ಆಯ್ತು! ಸೀರೆ ಉಡ್ತಿದ್ದೀನಿ!”
“ನಿನ್ನ ಬೆಟ್ಟಳ್ಳಿ ಒಡೇರು ಬಂದಾರೇ! ಒಂದು ಗಳಾಸು ಕಾಪಿ ಕೊಡು, ಬಾ!” ‘ನಿನ್ನ’ ಅನ್ನುವುದನ್ನು ಅಕ್ಕರೆಯೊತ್ತಿ ಹೇಳಿದ್ದಳು ಅಂತಕ್ಕ.
“ಬಂದೆ ಅಬ್ಬೇ,”
ಸೀರೆ ಉಟ್ಟುಕೊಂಡವಳು ಬಚ್ಚಲಿಗೆ ಓಡಿ ಹಂಡೆಯಲ್ಲಿದ್ದ ನೀರಿನಲ್ಲಿ ಮುಖ ನೋಡಿಕೊಂಡು, ಹಣೆಗೆ ಕುಂಕುಮವಿಟ್ಟು, ತಲೆಯ ಕೂದಲನ್ನು ನೀವಿ, ಬೈತಲೆ ಸರಿಮಾಡಿಕೊಂಡಳು. ಹಿಂದಿನ ಸಂಜೆಯೆ ಮಾಲೆಕಟ್ಟಿ ತಣ್ಣಗಿರುವ ನೀರಿನ ಕರೆದಲ್ಲಿಗೆ, ನಿರುದ್ವಿಗ್ನೆಯಂಬಂತೆ, ಪ್ರಯತ್ನಪೂರ್ವಕವಾದ ಕೃತಕ ಸಾವಧಾನದಿಂದ ತೇಲುತ್ತಾ ಹೋದಳು, ಸಸಂಭ್ರಮವಾಗಿ.
ಮಗಳು ಆಯ್ದಿದ್ದ ಸೀರೆಯನ್ನೂ, ಉಟ್ಟಿದ್ದ ರೀತಿಯನ್ನೂ, ಬಾಚಿ ಬೈತಲೆ ತೆಗೆದಿದ್ದ ಗಟ್ಟದ ಮೇಲಣ ಶೈಲಿಯನ್ನೂ, ಮುಡಿದಿದ್ದ ಹೂವನ್ನೂ, ಬೆಳ್ಳನೆಯ ಹಣೆಯನ್ನಲಂಕರಿಸಿದ್ದ ಕುಂಕುಮಬಿಂದುವ ಸೌಂದರ್ಯ ಶೋಭೆಯನ್ನೂ ನೋಡಿ, ಮೆಚ್ಚಿ, ಅವಳ ಸಮಯೋಚಿತ ಚಾಕಚಕ್ಯತೆಯನ್ನೂ ಜಾಣ್ಮೆಯನ್ನೂ ಮನದಲ್ಲಿಯೆ ಪ್ರಶಂಸಿಸಿ, ಕಣ್ಮಿಸುಕಿನಿಂದಲೆ ಪ್ರತ್ಯೇಕವಾಗಿ ಏಕಾಂತವಾಗಿದ್ದ ಅತಿಥಿ ಸತ್ಕಾರದ ಕೂಟಡಿಯನ್ನು ನಿರ್ದೇಶಿಸಿ, ಒಂದು ಗಾಜಿನ ಲೋಟವನ್ನು ಅವಳ ಕೈಗಿತ್ತು, ಹಿಂದಿನಿಂದ ಕಾಫಿ ತರುತ್ತೆನೆ ಎಂಬುದನ್ನೂ ಸನ್ನೆಯಿಂದಲೆ ಸೂಚಿಸಿ, ಅವಳನ್ನು ಪ್ರೋತ್ಸಾಹಿಸುವ ಮುಗುಳು ನಗೆಯ ಮುಖಭಂಗಿಯನ್ನು ಪ್ರದರ್ಶಿಸುತ್ತಾ ಕಳುಹಿಸಿದಳು ತಾಯಿ.
ಹಾಸಗೆ ಸುತ್ತಿ ಇಟ್ಟಿದ್ದ ಒಂದು ಮಂಚದ ಬಳಿಯ ಕಾಲು ಮಣೆಯ ಮೇಲೆ ಕುಳಿತು ಬಾಗಿಲ ಕಡೆ ನೋಡುತ್ತಿದ್ದ ದೇವಯ್ಯ ಕಾವೇರಿಯನ್ನು ಕಂಡೊಡನೆ ತನಗಾದ ಆಶ್ಚರ್ಯವನ್ನು ಕಣ್ಣರಳಿಸಿ ಹೊರಸೂಸುತ್ತಾ “ಅಯ್ಯೋ ನಾನು ‘ಯಾರಪ್ಪಾ ಇದು ನಮ್ಮವರ ಹುಡುಗಿ?’ ಅಂದುಕೊಂಡಿದ್ದೆ! ತುಂಬಾ ಚೆನ್ನಾಗಿ ಕಾಣ್ತದೆಯೆ ನಿನಗೆ, ಸೆಟ್ಟರುಡಿಗೆಗಿಂತ ಈ ಉಡಿಗೆ! ಆ ಸೀರೇನೂ ವಯ್ನಾಗಿ ಒಪ್ತದೆ ನಿನಗೆ!” ಎಂದನು.
ಕ್ರಾಪು ಬಿಟ್ಟು ಹೊಸರೀತಿಯ ಬಟ್ಟೆ ಹಾಕಿಕೊಂಡು ಸುಪುಷ್ಟ ಸಬಲ ದೃಢಕಾಯನಾಗಿ ತನ್ನೆದುರು ಕುಳಿತಿದ್ದ ಯುವಕನ ಮೆಚ್ಚುಗೆಗೆ ಹೆಣ್ಣು ಸೋತು ಬಳಲಿದಂತಾದಳು. ನಾಚಿಕೆಯಿಂದ ಸೆರಗು ಸರಿಪಡಿಸಿಕೊಳ್ಳುತ್ತಾ ‘ನೀವು ತಂದು ಕೊಟ್ಟಿದ್ದೆ ಅಲ್ಲವೊ ಸೀರೆ?’ ಎಂಬ ಕೊರಳಿಗೆ ಬಂದಿದ್ದ ಮಾತನ್ನು ತಡೆಹಿಡಿದು “ಅವ್ವ ಕಾಪಿ ತರುತ್ತಾಳೆ…. ನನಗೆ ಗಳಾಸು ತೆಗೆದುಕೊಂಡು ಹೋಗಿ ಇಡು ಎಂದಳು.” ಬಾಲಿಕಾ ಸಹಜವೆಂಬಂತೆ ಹೇಳಿದಳು, ಅವಲ್ಪ ತೊದಲು ಹೋಗಿ ಇಡು ಎಂದಳು.” ಬಾಲಿಕಾ ಸಹಜವೆಂಬಂತೆ ಹೇಳಿದಳು, ಅವಲ್ಪ ತೊದಲು ಮಾತಿನಲ್ಲಿ.
ಲೋಟವನ್ನಿಡಲು ಸಮೀಪಿಸಿದ್ದ ಅವಳ ಎಡದ ಕೈ ಹಿಡಿದುಕೊಂಡು, ತಾನೇ ಅವಳ ಬಲಗೈಲಿದ್ದ ಲೋಟವನ್ನು ತೆಗೆದು ಬಳಿಯಿದ್ದ ಮಂಚದ ಮೇಲಿಟ್ಟು, ದೇವಯ್ಯ ಅವಳ ಬಲಗೈಯನ್ನೂ ಹಿಡಿದುಕೊಂಡನು. ಅವನಿಗಿಂತಲೊ ಅಂತೆ ಅವಳಿಗೂ ಆ ಸ್ಪರ್ಶ ಸುಖಕರವಾಗಿತ್ತಾದರೂ ಅವಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು, ಹಿಂತುರಿಗಿ ಬಾಗಿಲಕಡೆ ಕಳ್ಳನೋಟ ನೋಡುತ್ತಾ. ಆದರೆ ದೇವಯ್ಯ ತನ್ನ ಕಿರುಬೆರಳಿನಲ್ಲಿದ್ದ ಒಂದು ಚಿನ್ನದ ಉಂಗುರವನ್ನು ತೆಗೆದು ಅವಳ ನಡುಬೆರಳಿಗೆ ತೊಡಿಸಲು ತೊಡಗಿದಾಗ ಅದನ್ನು ನಾಣ್ಬೆರಗಿನಿಂದ ನೋಡುತ್ತಾ ಸುಮ್ಮನೆ ನಿಂತುಬಿಟ್ಟಳು. ಅದು ಅವನ ಕಿರುಬರಳಿನ  ಉಂಗುರವಾಗಿದ್ದರೂ, ಅವನು ತೊಡಿಸಿದ್ದ ಇವಳ ಬೆರಳು ನಡುಬೆರಳಾಗಿದ್ದರೂ, ತುಂಬಾ ಸಡಿಲವಾಗಿಯೆ ಇತ್ತು.
ದೇವಯ್ಯ ವಿನೋದವಾಗಿ “ಎಷ್ಟು ತೆಳ್ಳಗಿದ್ದೀಯೆ ನೀನು? ಸಣಕಲಿ!” ಎಂದನು.
ಕಾವೇರಿ ಉಂಗುರ ಕೆಳಗೆ ಬಿದ್ದುಹೋಗದಂತೆ ಬೆರಳನ್ನು ತುಸು ಮಡಚಿ ಕೈ ಎಳೆದು ತಪ್ಪಿಸಿಕೊಂಡು ದೂರ ನಿಂತು “ಮತ್ತೆ ನಿಮ್ಮ ಹಾಗೆ ಇರಬೇಕೇನು ಹೆಣ್ಣಾದ ನಾನು?” ಎಂದು ಅವನ ಭೀಮ ಬಲಿಷ್ಠ ಭದ್ರಕಾಯವನ್ನು ತಲೆಯಿಂದ ಕಾಲದವರೆಗೆ ನೋಡಿ ನಕ್ಕುಬಿಟ್ಟಳು. ಅವಳ ಮೆಲುದನಿ. ಅವಳ ಕುಲುಕುಲು ನಗೆ, ದೇವಯ್ಯನಿಗೆ ತಡೆಯಲಾಗಲಿಲ್ಲ. ಅವಳನ್ನು ಹಿಡಿದು ಬಿಗಿದಪ್ಪಿ ಹಿಸುಗಿಬಿಗಬೇಕು ಎನ್ನಿಸಿತು. ಅಲ್ಲದೆ ಪಾದ್ರಿಯ ಮಗಳಿಂದ ನಾಗರಿಕ ಪ್ರಣಯದ ಕುಶಲ ಕಲೆಯಲ್ಲಿ ದೀಕ್ಷೆ ಪಡೆದು ಸುಶಿಕ್ಷಿತನಾಗುತ್ತಿದ್ದ ಅವನಿಗೆ ಇನ್ನೂ ಏನೇನೂ ಮಾಡಿಬಿಡಬೇಕು ಎನ್ನಿಸಿತು. ಆದರೆ ಕಾಫಿ ಪಾತ್ರೆ ಹಿಡಿದಿದ್ದ ಅಂತಕ್ಕ ಬಾಗಿಲಲ್ಲಿ ಕಾಣಿಸಿಕೊಂಡಳು.
“ಏನು ಚೆಲ್ಲಾಟಕ್ಕೆ ಸುರುಮಾಡಿಬಿಟ್ಟಳಾ ನಿಮ್ಮ ಹತ್ತಿರ?” ಎಂದು ದೇವಯ್ಯನ ಕಡೆಯಿಂದ ಮಗಳ ಕಡೆ ತಿರುಗಿ “ಏನೆ ಅದು ನಿನ್ನ ಅಟಮಟ? ಗಳಾಸು ಇಟ್ಟು ಬಾ ಅಂತ ಕಳ್ಸಿದ್ರೆ ಆಟಕ್ಕೆ ಸುರುಮಾಡಿಬಿಟ್ಟಾ?” ಎಂದು, ಮಗಳ ಬೆರಳಲ್ಲಿದ್ದ ಉಂಗುರದ ಹೊಳಪನ್ನು ನೋಡಿ, ದೇವಯ್ಯಗೆ ಕಾಣದಂತೆ ಕಣ್ಣು ಮಿಟುಕಿಸಿದಳು.
ತನ್ನ ಪ್ರಣಯಲಘುವರ್ತನೆಯ ಮುಖಭಾವವನ್ನು ತಟಕ್ಕನೆ ಗಾಂಭೀರ್ಯದ ಚಿಪ್ಪಿನೊಳಗೆ ಎಳೆದು ಕುಳಿತಿದ್ದ ದೇವಯ್ಯ ಅತ್ಯಂತ ಭಿನ್ನ ವಿಷಯದ ತೆರೆಯೆಳೆದು, ಪ್ರಸ್ತುತ ವಿಷಯದ ದಿಕ್ಕನ್ನೆ ಬದಲಾಯಿಸಿ ಬಿಟ್ಟನು:
“ಏನು ಅಂತಕ್ಕ. ನಿನ್ನ ಮನೆ ’ಕಾಫಿಹೋಟಲ್’ ಆಗಿಬಿಟ್ಟಿದೆಯಲ್ಲಾ! ಬೋರ್ಡ ಬರೆಸಿ ಹಾಕ್ಸಿದ್ದೀಯಾ?”
“ಅಯ್ಯೋ ಎಲ್ಲ ಆ ಪಾದ್ರಿಗಳ ಕೆಲ್ಸ ಅಲ್ದಾ? ಆವೊತ್ತು ಕಾಪಿಪುಡಿ ತಂದು ಕೊಟ್ಟು ಕಾಪಿಮಾಡಾದು ತೀರಿಸಿಕೊಟ್ರು. ನಿನ್ನೆ ತೀರ್ಥಹಳ್ಳಿಯಿಂದ ಬರ್ತಾ ಕಾಗದದ ಮ್ಯಾಲೆ ಏನೋ ಬರೆದು ತಂದು ಗ್ವಾಡೆಗೆ ಆಂಟ್ಸಿದಾರೆ. ಬಂದೋರೆಲ್ಲ ನೋಡಿ ನೋಡಿ ನೆಗ್ತಾರೆ….”.
ದೇವಯ್ಯ ಕಾಫಿ ಕುಡಿಯುತ್ತಾ ಮಧ್ಯೆ ಮಧ್ಯೆ ಹೇಳಿದನು: “ಪರ್ವಾಇಲ್ಲ ನಿನ್ನ ಕಾಫಿ. ತೀರ್ಥಹಳ್ಳಿ ಹೋಟ್ಲು ಕಾಫಿಗೇನು ಬಿಟ್ಟುಕೊಡೋದಿಲ್ಲ!…. ಮೊನ್ನೆ ನಮ್ಮ ಮನೇಗಿಷ್ಟು ಕಾಫಿಪುಡಿ ತಗೊಂಡು ಹೋಗಿ ಕೊಟ್ಟಿದ್ದೆ…. ಕಾಫಿ ಅಂತಾ ಮಾಡಿದ್ರೂ, ಬಾಯಿಗೆ ಹಾಕಾಗ್ಲಿಲ್ಲ! ನಮ್ಮ ಅಪ್ಪಯ್ಯಂತೂ ಕುಡಿದವರೆ ವಾಕರಿಸಿ ವಾಂತಿ ಮಾಡಿಕೊಂಡು, ಬಾಯಿಗೆ ಬಂದಂತೆ ಬಯ್ಯುತ್ತಾ, ಕ್ಯಾಕರಿಸಿ ತುಪ್ಪಿಬಿಟ್ರು….”
ಅಂತಕ್ಕೆ ಹಿಂದಿನದೇನನೊ ಸ್ಮರಿಸಿಕೊಂಡು “ಯಾರು? ಕಲ್ಲಯ್ಯ ಒಡೇರ? ಹಿಹ್ಹಿಹ್ಹಿ!” ಎಂದು ತುಸು ನಿಂತು, ಮತ್ತೆ “ಅವರು ಈ ಕಡೆಗೇ ಬರದೆ ಎಷ್ಟೋ ವರ್ಸ ಆಯ್ತು!….” ಎಂದು ಸ್ವಲ್ಪ ದೀರ್ಘಕಾಲವೆ ದೂರ ನೋಡುತ್ತಿದ್ದು ಮತ್ತೆ “ನಿಮ್ಮ ಅವ್ವಗೂ ಕಾಪಿಗೀಪಿ ಮಾಡಿ ಗೊತ್ತಿಲ್ಲ. ಕುನ್ನೇರ್ಲು ಕುಡಿ ಕಸಾಯ, ಕೊತ್ತುಂಬ್ರಿಬೀಜದ ಕಸಾಯ, ಸೊಗದೆಬೇರಿನ ಕಸಾಯ ಮಾಡಿಕೊಟ್ಟ ಅಭ್ಯಾಸ…. ಹೌದಾಂಬ್ಹಾಂಗೆ ಮರ್ತೇ ಹೋಗಿತ್ತು! ದೇವಮ್ಮಗೆ ಹ್ಯಾಂಗಿದೆ ಈಗ? ಬಾಲೆ ಬಾಣ್ತಿ ಸುಕವಾಗಿದಾರಾ?” ಎಂದು ಕ್ಷೇಮಸಮಾಚಾರ ವಿಚಾರಿಸಿದಳು.
ದೇವಯ್ಯ ಅಂತಕ್ಕನ ಹಿಂದೆ ನಿಂತು ತನ್ನನ್ನೆ ನುಂಗುವಂತೆ ನೋಡುತ್ತಿದ್ದ ಕಾವೇರಿಯ ಕಣ್ಣಕ್ಕೆ ನೋಡುತ್ತಾ ಹೇಳಿದನು: “ಇದಾರೆ, ಸುಮಾರಾಗಿ…. ಅದಕ್ಕೋ ಒಂದಲ್ಲ ಒಂದು ರೋತೆ ಇದ್ದೇ ಇರ್ತದೆ…. ಕಲ್ಲೂರು ದೇವಸ್ಥಾನಕ್ಕೆ ಬೇರೆ ಹೋಗಬೇಕಂತೆ ಪೂಜೆ ಮಾಡಿಸಾಕೆ….!”
ದೇವಯ್ಯನ ಅಂತಸ್ಥವನ್ನು ಊಹಿಸಿದ ಅಂತಕ್ಕ “ಅವರಿಗೆ ಇನ್ನೂ ಹಸೀ ಮೈ, ಪಾಪ!…. ನೀವು ಸುಮ್ಮನೆ ಬೇಜಾರು ಮಾಡಿಕೊಂಡರೆ? ಇನ್ನೊಂದು ಐದಾರು ತಿಂಗಳು ಹೋದ್ರೆ ಎಲ್ಲ ಸರಿಹೋಗ್ತದೆ…. ಪೂರಾ ಬೇಜಾರಾದ್ರೆ ಇತ್ತಲಾಗಿ ಬಂದು ಹೋಗ್ತಾ ಇರಿ…. ಹುಡುಗೀನೂ ನೆನೀತಿರ್ತದೆ ನಿಮ್ಮನ್ನೆ!” ಎಂದಳು, ಕೊನೆಯ ವಾಕ್ಯವನ್ನು ತನಗೂ ಕೇಳಿಸಿದಷ್ಟು ಮೆಲ್ಲಗೆ ಕಿವಿಯಲ್ಲಿ ಹೇಳುವಂತೆ ಹೇಳುತ್ತಾ.
ಆದರೆ ಕಾವೇರಿಗೂ, ಅದರ ಶಬ್ದ ಕೇಳಿಸದಿದ್ದರೂ, ಅದರ ಅರ್ಥದ ಅರಿವು ಹೊಳೆದು, ಹೊರಗೆ ಓಡಿದ್ದಳು ಮತ್ತೆ ಒಳಗೆ ಬಂದು “ಚೀಂಕ್ರ ಸೇರಿಗಾರ ಬಂದಿದಾನೆ. ಪಾದ್ರಿ ನಿಮ್ಮನ್ನ ಬರಾಕೆ ಹೇಳಿ ಕಳ್ಸಿದಾರಂತೆ” ಎಂದಳು.
“ಈ ಪಾದ್ರಿ ಕೈಯಿಂದ ಬಚಾವಾಗೋದು ಹ್ಯಾಗೋ ನಂಗಿತ್ತಿಲ್ಲ “ ಎನ್ನುತ್ತಾ ದೇವಯ್ಯ ಮೇಲೆದ್ದನು.
“ನಿಮ್ಮನ್ನೂ ಕಿಲಸ್ತರ ಜಾತಿಗೆ ಸೇರಿಸ್ತಾರಂತೆ, ಎಲ್ಲರೂ ಆಡಿಕೊಳ್ತಾರೆ.” ಅಂತಕ್ಕ ಏನೋ ಆಗಬಾರದ್ದು ಆಗುತ್ತದೆಯಲ್ಲಾ ಎಂಬ ಧ್ವನಿಯಲ್ಲಿ ಹೇಳಿದಳು.
ದೇವಯ್ಯ ಕಂತ್ರಿನಗೆ ನಕ್ಕು, ಹೇಳುತ್ತಲೆ ಬಾಗಿಲು ದಾಟಿದನು: “ ಸಿಂಧುವಳ್ಳಿ ಚಿನ್ನಪ್ಪಗೌಡನ್ನ ಜಾತಿಗೆ ಸೇರಿಸಿಕೊಂಡು, ಅವನ ಹೆಂಡತೀನ ಬಾವಿಗೆ ಹಾರ್ಸಿದ್ದೇ ಸಾಕಾಗಿದೆ!…. ಇನ್ನು ನಾನೂ ಕಿಲಸ್ತರ ಜಾತಿಗೆ ಸೇರಿ….? ಯಾಕೆ ಬಿಡು, ಆಗದ ಹೋಗದ ಮಾತು!….”
ದೇವಯ್ಯ ಬೈಸಿಕಲ್ಲು ಹತ್ತಿ ಗಂಟೆ ಬಾರಿಸುತ್ತಾ ಹೋಗುವುದನ್ನೆ ಬೆರಗಾಗಿ ನೋಡುತ್ತಾ ನಿಂತಿದ್ದಳು ಕಾವೇರಿ, ಬಾಗಿಲ ಸಂದಿಯ ಮರೆಯಲ್ಲಿ.
*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ