ನನ್ನ ಪುಟಗಳು

09 ಮೇ 2018

'ಯಮನ ಸೋಲು'-ಉಪಸಂಹಾರ ದೃಶ್ಯ

ಉಪಸಂಹಾರ ದೃಶ್ಯ

ಆಕಾಶ ಮಾರ್ಗ, ಯಕ್ಷನು ಒಂದು ಮೇಘದ ಮೇಲೆ ಕುಳಿತಿರುತ್ತಾನೆ.
ಯಕ್ಷ
(ಕೆಳಗೆ ನೋಡಿ.)
ಹೋಗಬೇಡ ನಿಲ್ಲು, ಮೇಘವೇ, ಯಕ್ಷನಿಹ —
ನೆಂದರಿಯೆಯಾ? ಆಹಾ! ತೋಯದಾಸನವೆನಿತು
ಸುಖಕರ! ಯಮದೂತನೇಕಿನ್ನು ಬರಲಿಲ್ಲ?
(ಸುತ್ತ ನೋಡಿ)
ಕಾಯುವುದು ಕಾರ್ಯಸಾಧನೆಗಿಂತ ಕಷ್ಟಕರ!
ಹೊಳೆಯಲ್ಲಿ ಮುಳಮುಳುಗಿ ಎದ್ದು, ಒದ್ದಾಡಿ
ದಡವ ಸೇರಲು ಎಳಸುವವಗಿಂತ, ದಡದಲ್ಲಿ
ಕುಳಿತಾತನಂ ಹಾರೈಸುವುಬ್ಬೆಗವೆ ಮಿಗಿಲು,
ಪಾಪಪುಣ್ಯಕೆ ಸಿಕ್ಕಿ, ಹುಟ್ಟುಸಾವಿನೊಳಲೆದು,
ಸಂಸಾರಚಕ್ರದೊಳು ತಿಗುರಿಯಂದದಿ ತಿರುಗಿ
ಮುಕ್ತನಾಗಲು ಯತ್ನಿಸುವ ಭಕ್ತನಳಲನ್ನು, ೧೦
ಭಕ್ತನೆಂದಿಗೆ ತನ್ನ ಬಳಿಗೆ ಬರುವನೊ ಎಂದು
ಯುಗಯುಗಗಳಿಂದ ಹಾರೈಸುತಿಹ ಪರಮಾತ್ಮ —
ನುಬ್ಬೆಗವೆ ಮೀರಿಹುದು! — ಓಹೋ ಅಲ್ಲಿಯೇ
ಬರುತಿಹನು!
(ಯಮದೂತನು ಪ್ರವೇಶಿಸುತ್ತಾನೆ.)
ದೂತ
ಸೋಜಿಗ! ಸೋಜಿಗ, ಯಕ್ಷ.
ಹಿಂದೆಂದು ಕಾಣದಿಹ ಕೌತುಕವ ಕಂಡೆ.
ಪ್ರೇಮ ಧರ್ಮವ ಗೆದ್ದು ಬಾವುಟವ ನಭಕೆತ್ತಿ
ಹಿಡಿದುದನು ಕಂಡೆ. ಯಮನ ಸೋಲನು ಕಂಡೆ!
ಯಕ್ಷ
(ಎದ್ದು ಬಂದು)
ಏನಾಯ್ತು, ಯಮದೂತ? ಏನಾಯ್ತು!
ದೂತ
ಮೊತ್ತಮೊದಲ್‌
ಎನ್ನೀ ಬಾಳಿನಲಿ ಯಮನ ಸೋಲನು ಕಂಡೆ!
ಯಕ್ಷ
ಹಾಗಾದರಾ ನಿನ್ನ ಬಾಳ್‌ ಬಂದು ಬಹುಕಾಲ —  ೨೦
ವಾಗಿಲ್ಲ!
ದೂತ
ಅದೇಕೆ?
ಯಕ್ಷ
ಹಿಂದೆ ಇಂತಹುದೆಷ್ಟೊ
ಜರುಗಿಹುದು. ಇರಲಿ, ಈಗೇನಾಯ್ತು ಹೇಳು!
ದೂತ
ಈಗಾದುದೇನು! ಮೃತ್ಯು ಒಲ್ಮೆಗೆ ಸೋತು
ಸತ್ಯವಂತನ ಜೀವವನು ಕಷ್ಟವಾಗಿತ್ತು,
ಅಶ್ವಪತಿಸುತೆಯ ಕೈಯೊಳು, ತನ್ನ ಸೋಲನೊ —
ಪ್ಪಿಹುದಿಂದು!
ಯಕ್ಷ
ಯಮನ ಸೋಲಪವಾನವಲ್ಲ;
ಕೀರ್ತಿಕರ! ಯಮದೂತ, ನೀವೇನು ಬಲ್ಲೆ?
ಯಮನ ಪಾಶವು ಮೋಘವಾದುದೇ ಅಲ್ಲ
ಎಂದೆನಗೆ ಬೋಧಿಸಿದೆ ಆಗ. ನಿಯಮವೇ
ಪರಮಪ್ರಮಾಣವೆಂದೆಂದಿಗೂ ಅಲ್ಲವೆಂ —  ೩೦
ಬುದನೀಗ ತಿಳಿದಕೋ! ಬುದ್ಧಿಯರಿಯದ ಎಷ್ಟೊ
ತತ್ತ್ವಗಳನಾತ್ಮ ಸಿದ್ಧಿಯಿಂದರಿತಿಹುದು.
ನಿಯಮಜಾಲವ ಮೀರಿರುವ ನಿಯಮವೊಂದಿಹುದು,
ಯಮದೂತ. ನುಡಿಗೆ ನಿಲುಕದ ಬುದ್ಧಿಯರಿಯದಿಹ,
ಅತ್ಯನಿರ್ವಚನೀಯ ತತ್ತ್ವವೊಂದೀ ಸರ್ವ
ವಿಶ್ವವನು ಸರ್ವತ್ರ ತುಂಬಿ ಮರೆಯಾಗಿಹುದು.
ಆ ಪರಮ ತತ್ತ್ವ ಸ್ವರೂಪವೇ ಪ್ರೇಮ.
ಧರ್ಮನೂ ಪ್ರೇಮಕ್ಕೆ ಕಿಂಕರನು. ನಿಯಮಗಳು
ಶುದ್ಧವಹ ದಿವ್ಯಾನುರಾಗಕ್ಕೆ ಸೇವಕರು.
ಪ್ರೇಮದಿಂದಲೆ ಹೊಳೆಯಿತೀ ಮಹಾ ಬ್ರಹ್ಮಾಂಡ; ೪೦
ಪ್ರೇಮಧಾರದಿಂದಲೆ ಬಾಳುತಿಹುದು;
ಪ್ರೇಮ ವಾರಿಧಿಯಲ್ಲೆ ಕಡೆಗೈಕ್ಯವಾಗುವುದು!
ಪ್ರೇಮ ಮೂರತಿಯಾದ ಸಾವಿತ್ರಿದೇವಿಗೆ
ಯಮನು ಸೋತುದಚ್ಚರಿಯಲ್ಲ. ಬಾ, ಮಿತ್ರ,
ನಾವಿಂದು ಜಗವೆಂದು ಕಾಣದಿಹ ಪ್ರೇಮದ
ಮಹಾ ವಿಜಯವಂ ಕಂಡು ಧನ್ಯರಾಗಿಹೆವು!
ದೂತ
ಸಾವಿತ್ರಿ ಸತ್ಯವಂತರ ಕತೆಯ ಕೇಳಿದವ —
ರೆಲ್ಲರಾಗಲಿ ಧನ್ಯ!
ಯಕ್ಷ
ನೋಡಿದವರಿಗೆ ಪುಣ್ಯ!
ದೂತ
ಆಡಿದವರಿಗೆ ಭಕ್ತಿ!
ಯಕ್ಷ
ಮಾಡಿದವರಿಗೆ ಯುಕ್ತಿ!

'ಯಮನ ಸೋಲು'-ದೃಶ್ಯ-6

ದೃಶ್ಯ ೬

 (ಅರಣ್ಯದ ಮತ್ತೊಂದು ಬಾಗ. ಯಮನು ಹೋಗುತ್ತಿರುವನು.)
ಯಮ
ಪುಣ್ಯವಂತನು ನೀನು, ಸತ್ಯವಾನ್, ಸಾವಿತ್ರಿ
ಯಂಥಾ ಸತಿ ಶಿರೋಮಣಿಯ ಕೈಹಿಡಿದ ನೀಂ
ಪುಣ್ಯಶೀಲನೆ ಹೌದು. ಸದ್ದೇನು?
(ಹಿತಿರುಗಿ ನೋಡಿ)
ಸಾವಿತ್ರಿ!
(ಪ್ರವೇಶ)
ಏಕೆನ್ನನನುಸರಿಸಿ ಬರುತಿರುವೆ, ತಾಯೆ?
ಹುಟ್ಟಿದವರೆಲ್ಲರೂ ಸಾಯಲೇಬೇಕಷ್ಟೆ!
ಸಾವಿತ್ರಿ
ನಿನ್ನ ನಾನನುಸರಿಸಿ ಬರುತಿಲ್ಲ, ಯಮದೇವ,
ಪತಿಯನನುಸರಿಸಿ ಬರುತಿಹೆನು. ಹುಟ್ಟಿದವ —
ರೆಲ್ಲರೂ ಸಾಯುವುದು ಧರ್ಮವೆಂದೊರೆದೆ.
ಅಂತೆಯೇ ಸುತ್ತ ಪತಿಯರ ಹಿಂದೆ ಹೋಗುವುದು
ಪತಿವ್ರತಾ ರಮಣಿಯರ ಧರ್ಮಾ! ಒಲಿದೆದೆಗ —  ೧೦
ಳೆಂದಿಗೂ ಅಗಲಲಾರವು ಎಂದುದಿದು ವಿಶ್ವ —
ನಿಯಮ. ಅದರಿಂದ ಹಿಂಬಾಲಿಸುವೆ ಪತಿಯ.
ನಿನ್ನ ಧರ್ಮವ ನೀನು ಮಾಡು, ಹೇ ಧರ್ಮ,
ನನ್ನ ಧರ್ಮವ ನಾನು ಮಾಡುವೆನು.
ಯಮ
(ಹರ್ಷದಿಂದ)
ಸಾವಿತ್ರಿ,
ಮೆಚ್ಚಿದೆನು, ಮೆಚ್ಚಿದೆನು ನೀನಾಡಿದೀ ದಿವ್ಯ
ನುಡಿಗಳಿಗೆ. ನಿನ್ನಿನಿಯನಂ ಹೆರತು ಬೇಕಾದ
ವರಗಳು ಬೇಡು, ನೀಡುವೆನು.
ಸಾವಿತ್ರಿ
ಹೇ ಧರ್ಮ —
ಮೂರ್ತಿ, ಮೆಚ್ಚಿ ವರವೀಯುವೊಡೆ, ಬೆಳಕಳಿದ
ನನ್ನ ಮಾವನ ಕಂಗಳಿಗೆ ಮತ್ತೆ ಬೆಳಕಿಳಿದು.
ಕಣ್ಬಂದು, ನಿಚ್ಚ ಸೊಗವಾಗುವಂತೀಯೆನಗೆ
ವರವ!
ಯಮ
ತಥಾಸ್ತು! ನಿನ್ನಿ ಭಿಕ್ಷೆ ನೆರವೇರಿ
ನೀನು ಸುಖಿಯಾಗೆಲೌ, ದೇವಿ ನೀನಿನ್ನು
ಹಿಂತಿರುಗು! ಮರ್ತ್ಯುಲೊಕದ ಎಲ್ಲೆಯನು ದಾಟ
ಬೇಡ.
(ಯಮನು ಹೋಗುತ್ತಾನೆ.)
ಸಾವಿತ್ರಿ
ಹಿಂತಿರುಗುವುದು ಸತಿಗೆ ಧರ್ಮವೆ,
ಯಮದೇವ? ಧರ್ಮವಂ ಧರ್ಮದಿಂದಟ್ಟುವೆನು.
ಧರ್ಮವಂ ಧರ್ಮದಿಂ ಗೆಲ್ಲುವೆನು. ಸಾವಿತ್ರಿ
ನಾನು, ನಾನೆಂದು ವೀರ ಪಾರ್ಥಿವ ಪುತ್ರಿ.
(ತೆರುಳುತ್ತಾಳೆ.)
 

'ಯಮನ ಸೋಲು'-ದೃಶ್ಯ 8

ದೃಶ್ಯ ೮

ಯವಲೋಕದಲ್ಲೆ, ಯಮನ ಪ್ರವೇಶ.
ಯಮ
(ಸುತ್ತ ನೋಡಿ)
ಇದು ನನ್ನ ನೆಲದಲ್ಲೆ. — ನನ್ನ ದೇಶವು ಮುಂದೆ
ಕಂಗೊಳಿಪುದಲ್ಲಿ. ಮತ್ತಿದೇನಿದು ಸದ್ದು?
(ಹಿಂದೆ ನೋಡಿ)
ಸಾವಿತ್ರಿ!
(ಪ್ರವೇಶ.)
ನಾನಿನ್ನು ಸಹಿಸಲಾರೆನು, ದೇವಿ!
ಎರಡು ವರಗಳನಿತ್ತೆ. ಮತ್ತೆ ಹಿಂಬಲಿಸುವೆ.
ಪರರ ಪೀಡಿಪುದಿಂತು ಧರ್ಮವೇ, ಘನಶೀಲೆ,
ಸಾವಿತ್ರಿ?
ಸಾವಿತ್ರಿ
ಪತಿಯ ತ್ಯಜಿಪುದು ಸತಿಗೆ ಧರ್ಮವೇ,
ಯಮದೇವ? ನಾ ನಿನ್ನನುಸರಿಸುತ್ತಿಲ್ಲ.
ನೀನೆ ಎಳೆದೊಯ್ಯುತಿಹೆ. ನನ್ನ ಪತಿಯಲ್ಲಿಹುದು
ನನ್ನಾತ್ಮ! ಧರ್ಮಚ್ಯತಿಯನಿತಿಲ್ಲ ಇದರಲ್ಲಿ!
ಯಮ
ಸಾವಿತ್ರಿ, ನಿನ್ನ ಪತಿ ಸಗ್ಗಕಡರುವ ಬದಲು ೧೦
ನರಕಕಿಳಿದರೆ ನೀನು ಹಿಂದೆ ಹೋಗುವೆಯೇನು?
ಸಾವಿತ್ರಿ
ಸಂತಸದಿ ಹೋಗುವೆನು, ಯಮರಾಯ; ಹಿಗ್ಗಿ
ಆನಂದದಿಂದವನ ಗತಿಯನಪ್ಪುವೆನೆಂದು.
ಎಲ್ಲಿ ಪತಿಯಿದ್ದರದೆ ಸಗ್ಗ. ಅನುರಾಗ —
ವಿದ್ದಲ್ಲಿ ವೈಕುಂಠ. ಪ್ರೇಮವೆಲ್ಲಿರುವುದೋ
ಅಲ್ಲಿ ಕೈಲಾಸ. ಎದೆಯೊಲ್ಮೆ ಲ್ಲಿಹುದೊ
ಅಲ್ಲಿಹುದು ಮುಕ್ತಿ. ನಾಕವೆಂದರೆ ಏನು?
ನರಕವೆನಲೇನು? ನಾಕ ನರಕಗಳೆರಡ
ಸೃಜಿಸಬಲ್ಲುದು ಮನಸು.
ಯಮ
ಧನ್ಯಳಾದೌ, ದೇವಿ, ೨೦
ಸಾವಿತ್ರಿ, ನಿನ್ನ ನುಡಿಯೆ ವೇದ ಮೆಚ್ಚಿದೆನು.
ಮತ್ತೊಂದು ವರವೀಯುವೆನು, ಕೇಳು. ಮರೆಯದಿರು
ಸತ್ತ ಜೀವವು ಮತ್ತೆ ಬರುವುದಿಲ್ಲೆಂದು!
ಸಾವಿತ್ರಿ
ಮೆಚ್ಚಿ ವರವೀಯುವೊಡೆ, ಹೇ ಧರ್ಮದೇವ,
ನನ್ನ ಮಾವನ ವಂಶ ಹಾಳಾಗದಿರಲಿ;
ಅವನ ನೆಲ ಸತ್ಯವಾನನ ಸುತರ ಕೈಸೇರಲಿ,
ಎಂದು ಬೇಡುವೆನು; ನೀಡೆನಗೆ ವರವ!
ಯಮ
(ನಗುತ್ತಾ)
ತಥಾಸ್ತು! ಎಲೆ ತಾಯೆ, ನಿನ್ನೊಲುವೆ ಮೃತ್ಯುವನು
ಜಯಿಸಿತಿಂದು! ಧರ್ಮವೊಲವಿಗೆ ಮಣಿದು
ಶರಣಾಯಿತಿಂದು! ನಿಯಮವನುರಾಗಕ್ಕೆ
ಮೈಸೊತಿತಿಂದು! ಮಿರ್ತುವನು ಎದೆಯೊಲವು ೩೦
ಗೆದ್ದಿತಲೆ ತಾಯೆ! ನಿನ್ನಿನಿಯನನ್ನಿಗೋ
ಕೊಟ್ಟಿಹೆನು. ತೆರಳು, ಸುಖಿಯಾಗಿ ಬಾಳು.
ನಿನ್ನ ನಾಮವು ಜಗಕೆ ಶಕ್ತಿದಾಯಕವಾಗಿ
ಮುಂದೆಂದು ರಾಜಿಸಲಿ! ನಿನ್ನಂತೆ ಹಿಂದಾರು
ಒಲಿದಿಲ್ಲ. ಮುಂದಾರು ಒಲಿಯುವುದು ಕಷ್ಟ.
ನಿನ್ನ ಪ್ರೇಮದ ಮುಂದೆ ನನ್ನ ಶಕ್ತಿಯು ಜಳ್ಳು.
ಹೋಗಿ ಬರುವೆನು ತಾಯೆ, ಸುಖಿಯಾಗಿ ಬಾಳು.
ಯಮನ ಜಯಿಸಿದ ಕತೆಯ ಜಗಕೆಲ್ಲ ಹೇಳು.
(ಹೋಗುತ್ತಾನೆ.)
ಸಾವಿತ್ರಿ
ನಮಿಸುವೆನು, ಹೇ ಧರ್ಮ, ನೀನೀಗ ಧರ್ಮ!
ಧರ್ಮದಿಂ ಧರ್ಮವಂ ಗೆಲ್ಲುವುದೆ ಮರ್ಮ!


*************

'ಯಮನ ಸೋಲು'-ದೃಶ್ಯ 7

ದೃಶ್ಯ ೭

ಮರ್ತ್ಯಲೋಕದ ಎಲ್ಲೆಯಾಚೆ ಯಮನ ಪ್ರವೇಶ.
ಯಮ
(ಸುತ್ತಲೂ ನೋಡಿ.)
ಇದು ಮರ್ತ್ಯಜಗದೆಲ್ಲೆ. — ಸತಿಯರನು ನೋಡಿಹೆನು.
ಆದರೀ ಪರಿಯ ಸತಿಯ ನಾ ಕಂಡಿಲ್ಲ.
ಅವಳೆನ್ನ ಬಳಿಸಾರಲೇನೊ ಭಯವಾಗುವುದು!
ಸಾವಿತ್ರಿ, ಧನ್ಯಳೆಂದರೆ ನೀನೆ. — ಸದ್ದೇನು?
ಹೆಜ್ಚೆ ಸಪ್ಪಳದಂತೆ ಕೇಳುವುದು.
(ಹಿಂತುರುಗಿ ನೋಡಿ.)
ಮತ್ತೆ
ಸಾವಿತ್ರಿ! ಈಗ ಮಾಡುವುದೇನು?
(ಸಾವಿತ್ರಿಯ ಪ್ರವೇಶ.)
ಸಾವಿತ್ರಿ,
ತಾ ಏಕಿಂತು ಗೋಳುಹೊಯ್ಯುವೆ ನನ್ನ?
ಮತ್ತೇಕೆ ಬಂದೆ?
ಸಾವಿತ್ರಿ
ಧರ್ಮವಿದು, ಹೇ ಧರ್ಮ!
ಅಲ್ಲದೇ, ಹೋಗಲೆಂದೆಳಸುವೆನು; ಆದರೇಂ?
ಮನವಿನಿಯನನು ಅನುಸರಿಸುತಿಹುದು. ಹೋಗಲೊ —  ೧೦
ಲ್ಲದು ಹಿಂದೆ ಮನವನನುಸರಿಸುತಿದೆ ದೇಹ;
ಮನದ ಧರ್ಮವ ಮನವು ಮಾಡುತಿದೆ. ನನ್ನಾತ್ಮ —
ವಾಗಲೇ ನಿನ್ನ ಕೈಯಲ್ಲಿಹುದು. ಪತಿಯಾತ್ಮ —
ದರ್ಧ ಸತಿ ಎಂಬುದದು ಋತಸಿದ್ಧ. ಆತ್ಮವಿಹ
ಕಡೆ ದೇಹ ಮನಸುಗಳು ಹೋಗುವುದು ಧರ್ಮ!
ಯಮ
ನಿನ್ನ ಧರ್ಮಕೆ ಹಿಗ್ಗಿ ಮೆಚ್ಚಿದನು, ಸಾವಿತ್ರಿ;
ಬೇಕಾದ ವರವ ನೀ ಬೇಡು, ಕೈಯಲಿಹ
ಜೀವವೊಂದನು ಬಿಟ್ಟು; ನೀಡುವೆನು.
ಸಾವಿತ್ರಿ
ಹೇ ಧರ್ಮ —
ಮೂರ್ತಿ, ಮೆಚ್ಚಿ ವರವೀಯವೊಡೆ, ಮಾವನಿಗೆ ೨೦
ಕಳೆದ ಧರೆ ಅಳಿದ ಸಿರಿಗಳು ಬರಲಿ.
ಯಮ
ತಥಾಸ್ತು!
ಹಿಂತಿರುಗು, ಸಾವಿತ್ರಿ. ಜೀವವಿಹ ಮಾನವರು
ಬರಬಾರದೆನ್ನೊಡನೆ. ವರವಿತ್ತೆ, ಇನ್ನು ನಡೆ,
ಮುದ್ದು ಸುತೆ.
(ಹೋಗುತ್ತಾನೆ.)
ಸಾವಿತ್ರಿ
ಆತ್ಮವಿದ್ದೆಡೆ ಮನಸು, ದೇಹ!
ಹಿಂದಿರುಗುವುದು ಎಂತು? ಧರ್ಮದಿಂ ಗೆಲ್ಲುವೆನು
ಧರ್ಮವಂ. ಧರ್ಮದಿಂ ಧರ್ಮವಂ ಸೋಲಿಸುವೆ —
ನಿಂದು. ಸತ್ಯವಂತನ ಸತಿಯು ಸಾವಿತ್ರಿ;
ಅಶ್ವಪತಸುತೆಯು ವೀರವೀರರ ಪುತ್ರಿ
(ತೆರಳುತ್ತಾಳೆ.)
 

'ಯಮನ ಸೋಲು'-ದೃಶ್ಯ-3

ದೃಶ್ಯ ೩
(ಅದೇ ಅರಣ್ಯ. ಸಂಧ್ಯಾಕಾಲದ ಸಮಯ ಯಮದೂತ ಯಕ್ಷ ಬರುತ್ತಾರೆ.)
ದೂತ
ಬೈಗಾಗುತಿದೆ ನೋಡು. ನಮ್ಮ ಕಜ್ಜದ ಹೊತ್ತು
ಬಳಿಯಾಗುತಿದೆ, ಯಕ್ಷ.
ಯಕ್ಷ
ಮುದ್ದಾದ ಪ್ರೇಮಿಗಳು!
ಶುದ್ಧಾತ್ಮರಾಗಿಹರು!
ದೂತ
ಹೌದು. ಆದರೇಂ?
ಯಮನೂರು ದಯೆಯ ಬೀಡಲ್ಲ. ನಿಷ್ಪಕ್ಷ —
ಪಾತವಾಗಿಹ ಧರ್ಮದೂರು. ಯಮಪಾಶ ಕಂಬನಿಗೆ
ಕರಗುವಂತಹುದಲ್ಲ. ರೋದನಕೆ ಮರುಳಾಗ
ದೆಂದಿಗೂ ಸಂಖ್ಯೆಯಿಲ್ಲದ ವಿಧವೆಯರ ಕಣ್ಣ
ನೀರಿನೊಳು ನಲಿನಲಿದು ಮಜ್ಜನಂಗೈದ
ಪಾಶವದು. ಗಣನೆಯಿಲ್ಲದ ಮಾತೆಯರ ದುಃಖ
ವಾಹಿನಿಯೊಳಾಳ್ದು ಕಲ್ಲಾದ ಪಾಶವದು. ೧೦
ಕೋಟಿ ವೀರರ ರಕ್ತವಂ ಕುಡಿದು ಕೊಬ್ಬಿರುವ
ಪಾಶ. ಶತಕೋಟಿ ನೀರೆಯರ ಶಾಪಗಳ
ಸಹಿಸಿ ಪಾಷಾಣವಾಗಿಹ ಪಾಶ. ಋಷಿವರರ,
ಯೋಗಿಗಳ, ಅವತಾರಪುರುಷರನು ವಿನಯ
ಭಕ್ತಿಗಳಿಂದ ಎಳೆದೊಯ್ದ ಪಾಶವದು. ಇಂತಿರುವು
ದೀ ನೀರ ನೀರೆಯರ ಗೋಳಿಗಂಜುವುದೆ?
ಯಕ್ಷ
ಯಾರೊ ಬರುತಿಹರಲ್ಲಿ ವೃಕ್ಷಗಳ ಮರೆಯಲ್ಲಿ:
ಅಡಗೋಣ!
ದೂತ
ನಿಲ್ಲಲ್ಲಿ, ಯಕ್ಷ. ಅದೃಶ್ಯ
ರಾವುಗಳು; ಅಶ್ರುತವು ಎಮ್ಮ ನುಡಿ. ಅವರೇ
ಬರುತಿಹರು. ಅರುಗಾಗಿ ನಿಲ್ಲು. ೨೦
(ಪಕ್ಕಕ್ಕೆ ಹೋಗುತ್ತಾರೆ. ಸತ್ಯವಾನ್ ಸಾವಿತ್ರಿಯ ಕೈಹಿಡಿದು ಬರುತ್ತಾನೆ.)
ಸತ್ಯವಾನ್
ಪ್ರಯತಮೆ,ಸಂಜೆ ಸನ್ನಿಹಿತವಾಗುತಿದೆ.
ನೋಡಲ್ಲಿ, ಭಾಸ್ಕರನ ತಸ್ಕರನ ತೆರದಿಂದ
ಅಸ್ತಾಚಲದ ಶಿಖರದಲ್ಲಿಳಿದಿಳಿದು ಹೋಗು —
ತಿಹನು. ನೋಡದೋ ಸಂಜೆವೆಣ್ಣರಚಿರುವ
ಕುಂಕುಮದ ಓಕುಳಿಯ ಹೋಲುವಾ ಮುಗಿಲೊಡ್ಡು!
ಹಿಂದಕಾಗುವೆ ಏಕೆ? ಬಹಳ ಬಳಲಿದೆ ಇಂದು.
ನಾ ನಿನ್ನ ಕರೆತಂದುದೇ ತಪ್ಪು.
ಸಾವಿತ್ರಿ
(ಪ್ರಾಣೇಶ,)
ಪತಿಯ ಪದದೊಳು ನಡೆವ ಸತಿಗೆ ಬಳಲಿಕೆ ಎಲ್ಲಿ?
ಕಷ್ಟವೆ ಮಹಾಪ್ರಸಾದ ಎಂದು ತಿಳಿದಿರುವೆ
ನಾನು.
ಸತ್ಯವಾನ್
ಆ ಜಿಂಕೆಗಳ ಗುಂಪ ನೋಡಿದೆಯಾ, ೩೦
ತರಳೆ! ಅಂಜದೇ ಬೆದರದೇ ಕತ್ತೆತ್ತಿ
ನಮ್ಮನೇ ನೋಡುತಿವೆ, ನೋಡು.
ಸಾವಿತ್ರಿ
ಸತ್ಯೇಂದ್ರ,
ಪಕ್ಕದೊಳು ಹುಲಿಯಿದ್ದರದನು ಅವು ಬಲ್ಲುವೇ?
ಯಾರು ಬಲ್ಲರು? ನಾವು ಅವರ ತಿಳಿವಂತೆಯೇ
ಅವುಗಳೆಮ್ಮನು ತಿಳಿಯುವುವೊ ಏನೊ!
ಸತ್ಯವಾನ್
ಸಾವಿತ್ರಿ,
ಇದ್ದಕಿದ್ದಂತೆ ತಲೆ ತಿರುಗುತಿಹುದಲ್ಲ!
ಕಾರಣವನರಿಯೆ; ಸ್ವಲ್ಪ ಹಿಡಿದುಕೊ ನನ್ನ.
(ಸಾವಿತ್ರಿ ಹಿಡಿದುಕೊಳ್ಳುತ್ತಾಳೆ)
ಸಾವಿತ್ರಿ
(ಸ್ವಗತ)
ಹೇ ದೇವ, ಹೇ ದೇವ, ಪತಿಯ ಕಾಪಾಡು.
ನಿರ್ಗತಿಕಳಾಗಿಹೆನು.
(ಗಟ್ಟಿಯಾಗಿ)
ಸತ್ಯೇಂದ್ರ! ಸತ್ಯೇಂದ್ರ!
ಸತ್ಯವಾನ್
ತಲೆನೋವು ಹೆಚ್ಚತ್ತಲಿದೆ ರಮಣಿ; ಮಲಗುವಂ —  ೪೦
ತಾಗುತಿದೆ. ಒರಗಿಕೊಳ್ಳವೆ ಸ್ವಲ್ಪ, ಸಾವಿತ್ರಿ.
(ಸಾವಿತ್ರಿಯ ತೊಡೆಯ ಮೇಲೆ ತಲೆಯನಿಟ್ಟು ಮಲಗುತ್ತಾನೆ.)
ನಿನ್ನಂಕವೆನಗಿಂದು ತಲೆಗಿಂಬು. ನಾಚಿಕೆಯೆ,
ಸಾವಿತ್ರಿ, ನಿನಗೆ?
ಸಾವಿತ್ರಿ
ಇಲ್ಲ ಮಲಗೆನ್ನಿನಿಯ.
(ಸ್ವಗತ)
ಶಿವ ಸೀವಾ, ಮೃತ್ಯುವಿನ ಮುಂದೆಯೂ ನಾಚಿಕೆಯೆ?
(ಗಟ್ಟಿಯಾಗಿ)
ಪ್ರಿಯತಮ, ಏನಾಗುತಿದೆ ಹೇಳು.
ಸತ್ಯವಾನ್
ಏನಿಲ್ಲ,
ಗಾಢ ನಿದ್ದೆಯು ಬರುತಲಿದೆ, ರಮಣಿ,
ಸಾವಿತ್ರಿ
ಮಲಗು,
ಸತ್ಯೇಂದ್ರ.
(ಸ್ವಗತ)
ಜವನಿದ್ದೆಯಾಗದಿರಲೀ ನಿದ್ದೆ!
(ಗಟ್ಟಿಯಾಗಿ)
ನಾನು ತಲೆಯುಜ್ಜುವೆನು, ಮಲಗು.
(ಮಲಗುತ್ತಾನೆ.)
ಎಲೆ ವನಸ್ಥಗಳಿರ,
ಎಲೆ ನೀಲ ಗಗನವೇ, ಎಲೆ ತಾಯೆ ಭೂದೇವಿ,
ಕರುಣಮಯ ನಿರ್ಜರರೆ, ನನ್ನ ನೆರವಿಗೆ ಬನ್ನಿ. ೫೦
ನಿಮ್ಮ ಆಶಿರ್ವಾದಳ ತನ್ನಿ. ನನ್ನೆದೆಯ
ಜೀವದಂಬುಧಿಯಿಂದು ಬತ್ತಿಹೋಗುವ ಕಾಲ
ಬಂದಿಹುದು. ಚೈತನ್ಯಮಯರಲ್ಲವೇ ನೀವು?
ಜಡರಲ್ಲ, ಜಡರಲ್ಲ, ನಿಮಗು ವೇದನೆಯುಂಟು!
ಗೊರವಂಕವೇ, ನನ್ನ ದುಃಖವನು ಲೆಕ್ಕಿಸದೆ
ಬರಿದೆ ಹಾಡುವೆ ಏಕೆ? ಕೋಗಿಲೆಯೆ, ಮೃತ್ಯುವ —
ನ್ನೋಡಿಸುವ ಮಂತ್ರವನು ಜಪಿಸು. ಪತಿವ್ರತಾ
ಧರ್ಮವೇ, ಬಂದೆನ್ನ ಕಾಪಾಡು. ಸತ್ಯವೇ,
ಸತ್ಯವಾನನ ಸಖನೇ, ಬಾ ಬೇಗ, ಕಾಪಾಡು.
ತರು ಗುಲ್ಮ ಲತೆಗಳಿರ, ವನಗಳಿರ, ಬಂದೆನ್ನ ೬೦
ರಕ್ಷಸಿರಿ.
(ಬಿಸುಸುಯ್ದು)
ನನ್ನ ಗೋಳನು ಕಂಡು ಮರುಗುವವ —
ರಾರಿಲ್ಲ! ವಿಶ್ವವೆ ಅಲಕ್ಷದಿಂದಿಹುದು!
ಸತ್ಯೇಂದ್ರ, ಮಾತಾಡು! ಸತ್ಯವಾನ್, ಮಾತಾಡು!
ಪರಮೇಶ, ಪರಮೇಶ, ಕಾಪಾಡು, ಕಾಪಾಡು!


*************



'ಯಮನ ಸೋಲು'-ದೃಶ್ಯ-4

ದೃಶ್ಯ ೪

(ಆಕಾಶ ಮಾರ್ಗ. ಯಕ್ಷ ಯಮದೂತರ ಪ್ರವೇಶ)
ದೂತ
ನನ್ನಿಂದಸಾಧ್ಯ! ನನ್ನಿಂದಸಾಧ್ಯವದು,
ಯಕ್ಷ. ಬಿರುಗಾಳಿಯಲಿ ಸಿಕ್ಕಿ ತೂರಾಡುವಾ
ತರಗೆಲೆಯ ತೆರನಾದೆ ಹದಿಬದೆಯ ಜ್ವಾಲೆಯೊಳು
ಸಿಕ್ಕಿ. ಸಾಕಪ್ಪ! ಸಾಕಿನ್ನು ! ಜೀವರನೆನಿತೊ
ಕೊಂಡೊಯ್ದೆನಾದರೂ ಈ ಪರಿಯ ಜೀವರನು
ಕಂಡಿಲ್ಲ. ಸಾಕಪ್ಪ. ಸಾಕಿನ್ನು!
ಯಕ್ಷ
(ಏನಾಯ್ತು,)
ಯಮದೂತ, ಹೇಳಬಾರದೆ ನನ್ನ ಕೂಡೆ!
ದೂತ
ಮೂರು ಸಲ ಯತ್ನಿಸಿದೆ, ಅವಳ ಬಳಿ ಇದ್ದ
ಸತ್ಯವಾನನ ಆತ್ಮವನ್ನೆಳೆಯಲೆಂದು.
ಅವಳ ಓಜೆಯ ಉರಿಯ ಸುಳಿಯಲ್ಲಿ ಬಿದ್ದು ೧೦
ಬೆಂದು ಬಾಡಿದೆನಯ್ಯ! ನನ್ನಿಂದಸಾಧ್ಯ!
ಯಕ್ಷ
ಮತ್ತೇನು ಮಾಡಬೇಕೆಂದಿರುವೆ?
ದೂತ
ಮತ್ತೇನು?
ಯಮರಾಯನಲ್ಲಿಗೇ ಓಡುವೆನು!
ಯಕ್ಷ
ಓಡು,
ಬೇಗೋಡು! ನಾನಿಲ್ಲಿಯೇ ಕಾದು ಕುಳಿತಿರುವೆ,
ನೀ ಬರುವತನಕ. ಈ ದಿಕ್ಕಿನಲ್ಲೋಡು;
ಯಮಪುರಿಗೆ ಹತ್ತಿರ. ಬೇಗೋಡು! ಓಡು!
(ಯಮದೂತನು ಹೋದ ದಿಕ್ಕಿಗೇ ನೋಡುತ್ತಾ ನಸುನಗುತ್ತಾನೆ.)
 

'ಯಮನ ಸೋಲು'-ದೃಶ್ಯ-5

ದೃಶ್ಯ ೫

(ಅರಣ್ಯ. ಸತ್ಯವಾನನು ಸಾವಿತ್ರಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದಾನೆ; ಯಮನು ಮುಂದೆ ನಿಂತಿದ್ದಾನೆ.)
ಸಾವಿತ್ರಿ
ಭೀಕರದ ಆಕೃತಿಯೆ, ನೀನಾರು? ಯಾರು?
ಏತಕಾಗಿಲ್ಲಿಗೈತಂದಿರುವೆ? ಬೇಗ ನುಡಿ!
ತಡವಾದರೆನ್ನ ಶಾಪದ ಬೆಂಕಿ ದಹಿಸುವುದು
ನಿನ್ನ.
ಯಮ
(ಗಾಂಭೀರ್ಯದಿಂದ)
ಎಲೆ ತಾಯೆ, ತಡಮಾಡು, ತಡಮಾಡು!
ಜಗದ ಧರ್ಮಧಿಕಾರಿಯು ನಾನು. ಯಮನೆಂಬರ್
ಎನ್ನ. ನಿನ್ನಿನಿಯ ಸತ್ಯವಾನಾತ್ಮನಂ
ಕೊಂಡೊಯ್ಯಲೆಂದಿಲ್ಲಿಗೈತಂದಿಹೆನು, ದೇವಿ!
ದೂತನನ್ನಟ್ಟಿದ್ದೆ. ನಿನ್ನೋಜೆಯುರಿಯಲ್ಲಿ
ಬೆಂದು, ಪತಿಯ ಜೀವವನೊಯ್ಯಲಾರದಲೆ,
ಓಡಿ ಬಂದೆನಗೊರೆದನಮ್ಮಾ! ಅದಕಾಗಿ ೧೦
ದಿವ್ಯಾತ್ಮನಾದಿವನನೊಯ್ಯೆ ಯಮನಾದ
ಕಣ್ಣಿಟ್ಟು ಒಪ್ಪಿಸೆನಗಾತನನು. ನಿನ್ನ ಬಳಿ
ಬರಲಾರೆ, ತಾಯೆ; ದಯೆಯಿಂದ ದೂರ ಸರಿ!
ಸಾವಿತ್ರಿ
ನಮಿಸುವೆನು ಜಗದ ಧರ್ಮಾಧಿಕಾರಿಯೆ ನಿನಗೆ!
ಯಮದೇವ, ನನ್ನ ಮೇಲಿನ ಕರುಣದಿಂದ
ನನ್ನೆರೆಯನನ್ನುಳುಹಲಾರೆಯಾ ನೀನು?
ಯಮ
ಧರ್ಮವರಿತವಳು ನೀನೆಲೆ ತಾಯೆ, ಸಾವಿತ್ರಿ.
ವಿಶ್ವ ಧರ್ಮಕೆ ಎರಡು ನಾಲಗೆಗಳಿಲ್ಲ.
ವಿಶ್ವನಿಯಮಚ್ಯುತಿಯೆ ವಿಶ್ವನಾಶಕೆ ಹೇತು! ೨೦
ದೂರ ಸರಿ, ಬಿಡು ತಾಯೆ. ವಿನಯದಿಂದೊರೆಯುವೆನು!
ಸಾವಿತ್ರಿ
ಹೇ ಧರ್ಮ, ಹದಿಬದೆಯತನ, ನನ್ನಿ, ನಿಷ್ಕಾಮ
ಪ್ರೇಮ, ಪರಮೇಶಭಕ್ತಿ ಇವುಗಳಿಗಾಗಿ —
ಯಾದರೂ ಋತವು ಹೊರತನು ಒಪ್ಪಲಾರದೆ?
ಯಮ
ಇಲ್ಲ, ದೇವಿಯೆ, ಇಲ್ಲ. ಸರ್ವವೂ ವಿಶ್ವ
ಧರ್ಮದ, ಋತದ ಅಂಗಾಂಗಗಳು, ತಾಯೆ, ಧರ್ಮ —
ಬದ್ಧವಾಗಿಹುದೀ ಮಹಾವಿಶ್ವ. ಧರ್ಮಾಧಿ
ಕಾರಿಯಾದೀ ನಾನು ಕೂಡ ತರಗೆಲೆಯ
ಋತನಿಯಮದೆದುರು! ತಾಯೆ, ಮೃತ್ಯುವನು
ಜಯಸಿದವರುಂಟೆ? ಶ್ರೀರಾಮನಳಿಯನೇ? ೩೦
ಶ್ರೀಕೃಷ್ಣನಳಿಯನೇ? ಋಷಿ ವ್ಯಾಸ ವಾಲ್ಮೀಕಿ
ಮೊದಲಾದರೆಲ್ಲರೂ ಮರುಮಾತನಾಡದಲೆ
ನನ್ನೊಡನೆ ಬಂದಿಹರು. ಹಿಂದೆ ನಚಿಕೇತನೂ
ನನ್ನೊಡನೆ ವಾದಿಸಿದ. ಹುಟ್ಟಿದವರೆಲ್ಲರಿಗು
ಮರಣ ಉಂಟೇ ಉಂಟು. ಜನನ ಮರಣವನೆಳೆದು
ಕೊಂಡೇ ಬರುವುದೆಲೆ ತಾಯೆ, ಸಾವಿತ್ರಿ.
ನಿನ್ನ ಬಳಿ ಬರಲಾರೆ, ದೂರ ಸರಿ, ದೇವಿ.
ವಿನಯದಿಂದೊರೆಯುವೆನು, ಬೇಡುವೆನು!
ಸಾವಿತ್ರಿ
ಯಮದೇವ,
ನೀನಂತು ಧರ್ಮವಂ ಮೀರಲಾರೆಯದು ದಿಟ!
ಪತಿಯ ಕೂಡೆನ್ನನೂ ಕೊಂಡೊಯ್ಯಲಾರೆಯಾ?
ಪತಿಯಳಿದ ಮೇಲೆ ಸತಿಗೆ ಜೀವವೆ ಸಾವು!
ಹರ್ಷದಿಂದೈತರುವೆ ಪತಿಯೊಡನೆ. ಯಮದೇವ,
ಅದೊಂದು ವರವನು ನೀಡು!
ಯಮ
ಇಲ್ಲ; ಆಗುವುದಿಲ್ಲ!
ಕಡೆಯ ಕಾಲವು ಬರದ ನರರ ಬಳಿ ನಾ ಸುಳಿಯೆ.
ಆಯುವಿದ್ದವರನ್ನು ಕೊಂಡೊಯ್ವುದೂ, ದೇವಿ,
ಧರ್ಮಕೆ ವಿರುದ್ಧ. ಚರಮದಿನ ಬಂದೊದಗ
ದೊಂದು ಕೀಟವ ನಾನು ಕೊಂಡೊಯ್ಯಲಾರೆ.
ಸಾವಿತ್ರಿ
ಹೇ ಧರ್ಮ, ನಿನ್ನ ತರ್ಕಕೆ ಸೋತೆ. ಆದರೂ.
ಯಮದೇವ, ಬ್ರಹ್ಮಾಂಡವೆಲ್ಲವೂ ತರ್ಕಾತ್ಮ —
ವಾದುದೇ? ಚೈತನ್ಯಮಯನಾದ ಪರಮೇಶ —
ನೀ ಬರಿಯ ಯಂತ್ರಲೋಕದ ಸೃಜಿಸಿ ಸಂತೃಪ್ತಿ
ಹೊಂದುವನೆ? ನಿನ್ನ ಬುದ್ಧಿಗೆ ಮೀರಿ, ನನಗೆ
ತೋರದಿಹ, ತರ್ಕ ವಾದ ವಿವಾದಗಳಿಗೆಲ್ಲ
ಮೀರಿರುವ ಧರ್ಮವೊಂದಿರಬೇಕು, ಯಮರಾಯ,
ನಿಯಮವೊಂದಿರಬೇಕು!
ಯಮ
ಇರಬಹುದು, ದೇವಿ,
ಇರಬಹುದು. ಆದರೆನ್ನೀ ಕಾರ್ಯ ರೇಫ
ರಾಜ್ಯದ ಕಾರ್ಯವಲ್ಲ. ‘ಬಹುದು’ ರಾಜ್ಯದ ಕಾರ್ಯ —
ವಲ್ಲ. ಕರ್ಮ ರಾಜ್ಯದ ಕಾರ್ಯ. ಸಾವಿತ್ರಿ,
ವಿನಯದಿಂದೊರೆಯುವೆನು; ದೂರ ಸರಿ ತಾಯೆ!
ಸಾವಿತ್ರಿ
ಧರ್ಮಕೊಲವನು ಶರಣು ಮಾಡುವೆನು, ಯಮದೇವ. ೬೦
ಆದರಿನ್ನೊಂದ ನಾ ಕೇಳುವೆನು. ಧರ್ಮವೊಲವಿಗೆ ಶರಣು
ಎಂದು ನೀನರಿತಾಗ ನನ್ನಿನಿಯನನ್ನೆನಗೆ
ಹಿಂದಕೊಪ್ಪಿಸಬೇಕು. ನಿನ್ನಾಜ್ಞೆಯಂತಿಗೋ
ನಿಲ್ಲುವೆನು ದೂರ ಸರುದು.
(ಸಾವಿತ್ರಿ ದೂರ ಹೋಗಿ ನಿಲ್ಲುತ್ತಾಳೆ. ಯಮನು ಹೋಗಿ ಸತ್ಯವಾನನ ಜೀವವನ್ನು ಪಾಶದಿಂದ ಬಿಗಿದು ಕಟ್ಟಿ ಹೊರಡುತ್ತಾನೆ.)
ಯಮ
ಮಹಾತ್ಮಳೌ,
ಸಾವಿತ್ರಿ, ನೀನು. ನಿನ್ನಂತೆ ಮೃತ್ಯುವನು
ಕ್ಷಣಕಾಲವಾದರೂ ತಡೆಗಟ್ಟಿ ನಿಲ್ಲಿಸಿದ
ಧೀರಾತ್ಮರರೂಪ! ಹೋಗಿಬರುವೆನು, ತಾಯೆ,
ನಮಿಸುವೆನು ನಿನಗೆ!
(ಹೋಗುತ್ತಾನೆ.)
ಸಾವಿತ್ರಿ
(ದುಃಖಾತಿಶಯದಿಂದ)
ಮರುಳಾದೆನಲ್ಲಾ!
ಮೃತ್ಯುವಶಮಾಡಿದೆನೆ ನಾನೊಲಿದ ನನ್ನದೆಯ?
ಧರ್ಮಾಧಿಕಾರಿಯನು ಹಿಂಬಾಲಿಸುವೆನೀಗ. ೭೦
ಪ್ರೇಮಾನುರಾಗವು ಧರ್ಮವನು ಮೀರಿರುವು —
ದೆಂಬುದನು ಸಾಧಿಸುವೆ. ಎದೆಯೊಲವು ಋತನಿಯಮ —
ಕತೀತವೆಂಬುದನು ತೋರಿಸುವೆ; ಸಾಧಿಸುವೆ!
ಸರ್ವ ಧರ್ಮವ ಮೀರಿದೊಂದು ಧರ್ಮವದುಂಟು
ಎಂಬುದನು ಜಗಕಿಂದು ತೋರಿಸುವೆ, ಎಲೆ ಋತವೆ,
ಪ್ರೇಮದುರ್ಗದ ಮೇಲೆ ಗೆಲವಿಂದ ಹಾರುತಿಹ
ನಿನ್ನಾ ಕೇತನವ ಹೆಂಗಿಪಳು ಸಾವಿತ್ರಿ
ಇಂದು. ನಾನೆಂದು ವೀರ ಕ್ಷತ್ರಿಯ ಪುತ್ರಿ!
(ತೆರಳುತ್ತಾಳೆ.)
 

'ಯಮನ ಸೋಲು'-ದೃಶ್ಯ-1

ದೃಶ್ಯ ೧

ಆಶ್ರಮದ ಪಕ್ಕದ ಒಂದು ಎಲೆವನೆಯ ಶಿವಗುಡಿ.
ಸಾವಿತ್ರಿ ಪೂಜೆ ಧ್ಯಾನಾದಿಗಳಲಿ ತೊಡಗಿದ್ದಾಳೆ.
ಸಾವಿತ್ರಿ
ಏಳದಿರು, ಎಲೆ ಸೂರ್ಯ, ಏಳದಿರು ಇಂದು!
ಮುಂದೆ ಎಂದೆಂದಿಗೂ ಮುಳುಗಲೆಂದೇಕೆ
ಉದಯಿಸುವೆ ಇಂದು? ಕಾಲಚಕ್ರವೆ, ನಿಲ್ಲು!
ಮುಂದೆ ಎಂದೆಂದಿಗೂ ನಿಲ್ಲಲೇಂದೇಕೆ
ತಿರುಗುತಿಹೆ ನೀನು? ಸೃಷ್ಟಿಯೇ, ನಿಲ್ಲಿಲ್ಲಿ;
ಸಾಗದಿರು ಮುಂದೆ; ಹತ್ತಿರದೊಳಿದೆ ವಿಲಯ!
ಹೇ ದೇವ, ವಿಶ್ವಭಕ್ತಿಯನೆಮಗೆ ಕೊಟ್ಟಿರುವೆ;
ವಿಶ್ವದೊಲವನು ನಮ್ಮ ಹೃದಯದೊಳಗಿಟ್ಟರುವೆ;
ವಿಶ್ವಶಕ್ತಿಯನೇಕೆ ದಯಪಾಲಿಸಿಲ್ಲ? —
ಇಂದು ಆ ದಿವಸ! ಯಮರಾಯನಿನಿಯನನು ೧೦
ಕೊಂಡೊಯ್ವ ದುರ್ದಿವಸ! ಎಲೆ ಭಯಂಕರ ದಿನವೆ,
ಸೃಷ್ಟಿಜಾಲವ ಬಿಟ್ಟು ನನಗಾಗಿ ಕಳ್ಳನೊಲು
ಜಾರಬಾರದೆ, ಹಾರಿ ಹೋಗಬಾರದೆ ನೀನು!
ನಿನ್ನ ನಾನಾಗ ಪರಮೇಶನಿಗೆ ಬದಲಾಗಿ
ಪೂಜಿಸುತಲಿದ್ದೆ. ಪ್ರೇಮವೇ, ನನ್ನಂತೆ
ನೀನೂ ಅಬಲೆಯಾದೆಯಾ ಹೇಳು! ಚುಕ್ಕಿಗಳೆ,
ತೆರಳಬೇಡಿರಿ! ಚಂದ್ರ, ಮರೆಯಾಗಬೇಡ.
ಕೋಗಿಲೆಯೆ, ಕೂಗದಿರು: ಕೂಗಿಜವಗಂಟೆಯಂ
ಬಡಿಯದಿರು. ನೆನಪ ಕೊಡದಿರು ಜವಗೆ, ಇಂದು ಆ
ದುರ್ದಿವಸವೆಂದು. ವಿಸ್ಮೃತಿಯೆ, ಜವನ
ಆವರಿಸು ಹೋಗು! ಚಲಿಸದಿರಿ, ಮರ್ಮರ
ನಿನಾದವಂ ಮಾಡದಿರಿ, ಎಲೆತಳಿತ ತರುಗಳಿರ!
ನಿಮ್ಮ ಒಂದೊಂದು ಮರ್ಮರವು ಯಮರಾಯನನ್
ಇನ್ನೆಲ್ಲಿ ಎಚ್ಚರಿಸುವುವೊ ಎಂದು ಬೆದರುವೆನು.
ಬೀಸದಿರು, ಮಾರುತನೆ; ಎನಗಾಗಿ ಬೀಸದಿರು,
ಕೈ ಮುಗಿದು ಬೇಡುವೆನು.
(ಬಾಗಿಲು ತಟ್ಟುತ್ತಾರೆ.)
ಬರಬೇಡ; ಬರಬೇಡ;
ಒಳಗೆ, ಯಮದೂತ; ಶಪಿಸುವೆನು ಬರಬೇಡ!
ಪಾತಿವ್ರತ್ಯವೆ, ನಿನ್ನ ಪಂಡಿತರು ಹೊಗಳಿಹರು;
ಎಲ್ಲಿ ನಿನ್ನಾ ಶಕ್ತಿ? ಎಲ್ಲಿ ನಿನ್ನಾಮೈಮೆ?
(ಬಾಗಿಲು ಶಬ್ದ.)
ಯಾರಲ್ಲಿ?
(ಬಾಗಿಲು ತೆರೆಯುತ್ತಾಳೆ. ಸತ್ಯವಾನನ ಪ್ರವೇಶ.
ಕೈಯಲ್ಲಿ ಹೂಬುಟ್ಟಿ, ಹೆಗಲಮೇಲೆ ಕೊಡಲಿ ಇವೆ.)
ಸತ್ಯವಾನ್
ಇಲ್ಲೇನು ಮಾಡುತಿಹೆ, ಸಾವಿತ್ರಿ? ೩೦
ಸಾವಿತ್ರಿ
ತಪ್ಪಾಯ್ತು; ಕ್ಷಮಿಸೆನ್ನ ಮನದೆನ್ನ, ಪೂಜೆ ಮಾ
ಡುತಲಿದ್ದೆ. ಅದರಿಂದ ತಡವಾಯ್ತು.
ಸತ್ಯವಾನ್
ಇದಾವ ವ್ರತ!
ದಿನ ಮೂರು ಕಳೆದುವಾಗಲೆ ಪೂಜೆಯಾರಂಭ
ವಾಗಿ! ಮುಖದಲ್ಲಿ ಉದ್ವೇಗ ಚಿತ್ರಿಸಲ್ಪಟ್ಟಿಹುದು.
ಸಾವಿತ್ರಿ
ಏನಿಲ್ಲ, ಪ್ರಿಯತಮಾ. ದೇವರಾ
ರಾಧನೆಗೆ ಜಾಗರಣೆ ಮಾಡಿದೆನು. ಅದಕಾಗಿ
ಸ್ವಲ್ಪ ಆಯಾಸ. ಕುಳಿತುಕೋ ಬಾ; ನೀನೂ
ಈಶನಂ ಪೂಜಿಸುವೆಯಂತೆ.
ಸತ್ಯವಾನ್
ಪ್ರಯತಮೆ,
ನಾಳೆ ಪೂಜಿಸುವೆ. ಸಮಯವಿಲ್ಲೀಗ; ಫಲ
ಪುಷ್ಪಗಳಿಗಾಗಿ ವನಗಳಿಗೆ ಹೊರಟಿಹೆನು. ೪೦
ನೋಡು, ಕೈಯಲಿ ಬುಟ್ಟಿ! ಭುಜದ ಮೇಲ್ನೋಡು,
ಸೌದೆ ಕಡಿಯಲು ಕೊಡಲಿ!
ಸಾವಿತ್ರಿ
(ಸ್ಚಗತ)
ಸುಮ್ಮನಿರು, ನಾಲಗೆಯೆ,
ಸುಮ್ಮನಿರು.
(ಬಹಿರಂಗ)
ನಾಳೆ ಪೂಜೆಯು ನಾಳೆ; ರಮಣ,
ಪೂಜಿಸಿಂದೆನಾಗಾಗಿ. ಸತಿಪತಿಯರಿಬ್ಬರೂ
ಪೂಜಿಸಲೇಬೇಕಾದ ವ್ರತವು ಇದು.
ಸತ್ಯವಾನ್
ನಿನಿಷ್ಟ!
(ಪೂಜಿಸಲಾರಂಭಿಸುತ್ತಾನೆ.)
ಸಾವಿತ್ರಿ
(ಸ್ವಗತ)
ಎಲೆ ರಮಣ, ಈ ದಿನವೆ ಚರಮದಿನವೆಂದರಿಯೆ.
ಅಯ್ಯೋ! ಯಮನ ಪಾಶವುಕೊರಳೊಲಿರುವುದನು
ಅರಿಯದೆಯೆ ಎಷ್ಟು ಜನ ಹಿಗ್ಗುವರು! ಎಷ್ಟು ಜನ
ನುಗ್ಗುವರು ದೀಪಕೊಡುವ ಕ್ರಿಮಿಯಾಳಿಯಂತೆ!
ಸತ್ಯವಾನ್, ನಾಳೆ ಪೂಜಿಸಲಾರೆ ನೀನು; ೫೦
ಇದೆ ನಿನ್ನ ಕಡೆಯ ಪೂಜೆ. — ಇಂದೆನಿತು
ಅಂದವಾಗಿಹನೆನ್ನ ಪತಿಯು! ಈ ತೆರದ
ಸೊಬಗ ನಾನೆಂದು ನೋಡಿರಲಿಲ್ಲ! ಇಂದೆನಿತು
ಪ್ರಿಯವಾಗಿ ತೋರುವನು! ಹಿಂದೆಂದು ಸಲ್ಲಿಸದ
ಪ್ರಣಯ ಪ್ರೇಮವ ತೋರುತಿಹನು. ಅರಿಯದಲೆ
ತನಗೆ ಒದಗುವ ಗತಿಯ ಸಂತೋಷದಿಂದಿಹನು.
ಮುಂದರಿವೆ, ಹಾಳಾಗು! ಮುಂದಾಗುದನೊಂದನೂ
ಅರಿಯದವನೇ ಧನ್ಯ. ಏಲೆ ಕಾಲವೇ, ನಿನ್ನ
ಭೀಕರ ಕಾಳಗರ್ಭವ ತೋರಬೇಡ!
ಸತ್ಯವಾನ್
(ಪೂಜೆ ಮುಗಿಸಿ)
ತರಳೆ, ಸಾವಿತ್ರಿ, ಹೊರಡುವೆನು; ಹೊತ್ತಾಯ್ತು. ೬೦
ಸಾವಿತ್ರಿ
ಪ್ರಿಯನೆ, ಇಂದಿನಾರಾಧನೆಯು ಹೇಗಿತ್ತು?
ಸತ್ಯವಾನ್
ಇಂತೇಕೆ ಕೇಳುತಿಹೆ! ಎಂದಿನಂತೆಯೆ, ರಮಣಿ.
ಸಾವಿತ್ರಿ
ಎಂದಿನಂತಿರಲಾರದಿನಿಯ!
ಸತ್ಯವಾನ್
ಸಾವಿತ್ರಿ,
ಇಂದೇಕೆ ನಿನ್ನ ರೀತಿಯೆ ಬೇರೆಯಾಗಿಹುದು?
(ಸಾವಿತ್ರಿ ಬೆಚ್ಚುತ್ತಾಳೆ.)
ಬೆಚ್ಚುತಿಹೆ ಏಕೆ?
ಸಾವಿತ್ರಿ
(ಸ್ವಗತ}
ಹೃದಯವೇ, ಸಿಡಿದೊಡೆಯ
ಬೇಡ, ಮನವೇ ಶಾಂತಿಯ ಹೊಂದು.
(ಗಟ್ಟಿಯಾಗಿ)
ಹೃದಯೇಶ,
ಬನಗಳಿಗೆ ಹೊರಡುವೆಯಾ? ನನ್ನನೂ ಕರೆದೊಯ್ಯು.
ಸತ್ಯವಾನ್
(ಸಾವಿತ್ರಿಯನ್ನೇ ಎವೆಯಿಕ್ಕದೆ ನೋಡಿ. ಸ್ವಗತ.)
ಇಂದೇನು! ಇವಳ ರೀತಿಯನರಿಯಲಾರೆ.
ವನದೊಳೆನಗಶುಭವಾಗುವುದೆಂದು ಬೆದರಿಹಳೊ
ಏನೊ!
(ಯೋಚಿಸುತ್ತಾ ನಿಲ್ಲುತ್ತಾನೆ.)
ಸಾವಿತ್ರಿ
(ಅವನನ್ನು ನೋಡಿ, ಸ್ವಗತ)
ಇಂದೆನಿತು ದಿವ್ಯವಾಗಿಹನೀತನ್ ೭೦
ಎನ್ನ ಕಂಗಳಿಗೆ! ಮನಕೆನಿತು ಪೂಜ್ಯನಾ
ಗಿಹನಿಂದು! ಹೃದಯಕೆ ಪವಿತ್ರನಾಗಿಹನು!
(ಬಹಿರಂಗ)
ಸತ್ಯೇಂದ್ರ, ನಟ್ಟ ದಿಟ್ಟಿಯೊಳೇನ ನೋಡುತಿಹೆ?
ಚಿಂತಿಸುವುದೇನು? ಬನಕೆನ್ನ ಕರೆದೊಯ್ಯ
ಲಾರೆಯಾ? ಜತೆಯೊಳಾನಿದ್ದರೇಂ ತೊಂದರೆಯೆ?
ಸತ್ಯವಾನ್
ಅದಕಲ್ಲ ನೀರೆ, ಹಿಂದೆಂದು ಬರದಿದ್ದ
ನೀನು, ಇಂದೇಕೆ ವನಗಳಿಗೆ? ನನಗೆ
ಅಮಂಗಳವಾಗಬಹುದೆಂದು ಬೆದರಿಕೆಯೆ?
ಸಾವಿತ್ರಿ
(ಉದ್ವೇಗದಿಂದ)
ಹೌದು,
ಪ್ರಿಯತಮೆ; ಹೌದು ಸತ್ಯೇಂದ್ರ, ಎದೆಯನ್ನ!
ಸತ್ಯವಾನ್
ಸುಮ್ಮನಿರು, ಮುಗ್ಧೆ, ಸುಮ್ಮನಿರು; ಬೆದರದಿರು ೮೦
ಬರಿದೆ. ಇಂದೇಕೆ ಇಂತುಟಾಲೋಚಿಸುವೆ
ಹಿಂದೆಂದು ಯೋಚಿಸದ ನೀನು?
ಸಾವಿತ್ರಿ
ಸತ್ಯವಾನ್,
ಪ್ರಾಣೇಶ, ಘೋರಸ್ವಪ್ನವದೊಂದ ನೋಡಿದೆನು!
ಅತಿ ಭಯಂಕರ ಕನಸು!
ಸತ್ಯವಾನ್
ಕನಸಿನೊಳಗೇನಿಹುದು,
ನೀರೆ? ಸ್ವಪ್ನವಾದರು ಏನು?
ಸಾವಿತ್ರಿ
ಹಳಿಯದಿರು
ಕನಸೆಂದು ನೀರ. ಘೋರ ಕಾನನದಲ್ಲಿ —
ಘೋರ ಕಾನನದಲ್ಲಿ — ನಾನೊಲ್ಲೆ, ನಾನೊಲ್ಲೆ —
ದುರ್ನುಡಿ ನಾ ನುಡಿಯೆ.
ಸತ್ಯವಾನ್
ಹೇಳು, ಸಾವಿತ್ರಿ!
ಸಾವಿತ್ರಿ
ನಿನ್ನ ಕೊಂಡೊಯ್ದಂತೆ ಕನಸಾಯ್ತು, ಇನಿಯ.
ಸತ್ಯವಾನ್
ಮೊಲದೆದೆಯು ನಿನ್ನೆದೆಯು! ಅದಕಿನಿತು ಭೀತಿಯೆ? ೯೦
ಸಾವಿತ್ರಿ
ಹಾಗಲ್ಲ ಪ್ರಿಯತಮಾ! ಕೇಳೆನ್ನ —
ಸತ್ಯವಾನ್
ಅದಕಾಗಿ
ಬರುವುದಾದರೆ ಬೇಡ.
ಸಾವಿತ್ರಿ
ಅದಕಲ್ಲ; ನಿನ್ನೊಡನೆ
ಹೂವಾಯ್ದು ವನದಲ್ಲಿ ಅಡ್ಡಾಡಬೇಕೆಂದು.
ಸತ್ಯವಾನ್
ಹಾಗನ್ನು! ಅದಕಿಷ್ಟು ಅಭಿನಯವು ಬೇಕೆ?
ಸಾವಿತ್ರಿ
(ಸ್ವಗತ)
ಹೇ ದೇವ! ಪತಿಯರಿಯ ನನ್ನೆದೆಯ ತಾಪವನು.
ಸತ್ಯವಾನ್
ಹೊರಗಿರುವೆ. ಬಾ, ಬೇಗ, ಹೊತ್ತಾಯ್ತು ಹೊರಡೋಣ!
ಬರುವಾಗ ತಂದೆ ತಾಯಂದಿರಿಗೆ ಹೇಳಿ ಬಾ!
(ಕೊಡಲಿ ತೆಗೆದುಕೊಂಡು ಹೊರಡುತ್ತಾನೆ.)
ಸಾವಿತ್ರಿ
ಪರಮೇಶ, ಪಾರುಮಾಡೆನ್ನ ನೀ ದಿನದ
ಅಳಲಿಂದ! ಪತಿಯನಗಲದ ತೆರದಿ ಭಕ್ತಿಯನು,
ಶಕ್ತಿಯನು, ದೃಢತೆಯನು ನೀಡು. ಹೋರಾಡಿ ೧೦೦
ಯಾದರೂ ಮೃತ್ಯುವಿನ ಅಣಲಿಂದ ಪತಿಯನುಳು
ಹುವ ತೆರದಿ ಮಾಡು. ಹೇ ದುಷ್ಟ ವಿಧಿಯೇ,
ಎನ್ನ ರಮಣನನೆಲ್ಲಿಗೊಯ್ಯುತಿಹೆ? ನಿನ್ನ —
ತಾಳೆಲೈ ನಾಲಗೆಯೆ, ದುರ್ವಚನಕೆಡೆಗೊಟ್ಟು
ಸತ್ಯಶಕ್ತಿಯ ದಹಿಸಬೇಡ! ಹೇ ದೇವ,
ಎನ್ನಿನಿಯನೊಡನಿಂದು ನರಕವಾದರೆ ನರಕ!
ಸಗ್ಗವಾದರೆ ಸಗ್ಗ ನಾಶವಾದರೆ ನಾಶ!
ಯಮರಾಯನೊಡ್ಡುತಿಹ ಪಾಶವಾದರೆ ಪಾಶ!
(ಹೊರಡುತ್ತಾಳೆ)

*************



'ಯಮನ ಸೋಲು'-ದೃಶ್ಯ 2

ದೃಶ್ಯ ೨

(ಅರಣ್ಯ ಮಧ್ಯೆ ಸತ್ಯವಾನ್ ಸಾವಿತ್ರಿಯರು ಅಲೆಯುತ್ತ ಬರುತ್ತಾರೆ.)
ಸತ್ಯವಾನ್
ಇತ್ತ ಬಾ, ನೀರೆ , ಇತ್ತ ಬಾ; ನೋಡಿಲ್ಲೆ
ಹರಿಣಿಯಂ ಬಿಡಿಸಿದುದು ಹುಲಿಯಿಂದ. ಇನ್ನೇನು
ಬಡಮಿಗವ ಕೊಲುವುದರಲ್ಲಿತ್ತು ಆ ದುಷ್ಟ
ವ್ಯಾಘ್ರ.
ಸಾವಿತ್ರಿ
(ಸ್ವಗತ)
ಆ ಪುಣ್ಯ ನಿನ್ನನೀ ದಿನ ಬಂದು
ರಕ್ಷಿಸಲಿ.
ಸತ್ಯವಾನ್
ನೋಡಾ ತಮಾಲವೃಕ್ಷದ ಕೆಳಗೆ, ನಾನಂದು
ಕೋಗಿಲೆಯನುರಗನಿಂ ಬಿಡಿಸಿದ್ದು. ಮಧುನೃಪನ
ಹರಿಕಾರ ಯಮನ ಪರಿಚಾರನಾಗುತಲಿದ್ದ.
(ಸಾವಿತ್ರಿ ಬೆಚ್ಚಿತ್ತಾಳೆ.)
ಏಕೆ ಬೆಚ್ಚುವೆ ತರಳೆ?
ಸಾವಿತ್ರಿ
ಮುಳ್ಳು ಚುಚ್ಚಿತು, ಇನಿಯ.
(ಸತ್ಯವಾನನು ಬಗ್ಗಿ ಅಂಗಾಲನ್ನು ನೋಡುತ್ತಾನೆ.)
(
ಸ್ವಗತ)
ಕೋಗಿಲೆಯ ಪಾಲಿಸಿದ ಪುಣ್ಯವಿಂದೈತಂದು
ಪಾಲಿಸಲಿ ನಿನ್ನ!
ಸತ್ಯವಾನ್
ಮುಳ್ಳಿಲ್ಲ. ಹುಲ್ಲೆಂದು ೧೦
ತೋರುವುದು. ಏನು ಕೋಮಲ ಕಾಯವಪ್ಪಾ!
ಚೆಂದಳಿರ ನಗುತಿಹುದು ನಿನ್ನಡಿ.
(ಏಳುತ್ತಾನೆ.)
ಸಾವಿತ್ರಿ
(ಸ್ವಗತ)
ಸರಸ!
ಮೃತ್ಯುವಿನ ಬಾಯಲ್ಲಿ ಸರಸ!
ಸತ್ಯವಾನ್
ಮಾತಾಡು,
ಸಾವಿತ್ರಿ, ಮೂಕಿಯಂತಿಹೆಯಲ್ಲ. ಆಯಾಸ
ವಾಗಿದೆಯೆ? ಇಂದೇಕೆ ಖಿನ್ನಮುಖಿಯಾಗಿರುವೆ?
ವನದೊಳೆನ್ನೊಡನೆ ನಲಿಯಲೆಂದೈತಂದೆ
ಇದೆ ನಿನ್ನ ನಲ್ಮೆ?
ಸಾವಿತ್ರಿ
ಏನೊ ಯೋಚಿಸುತ್ತಿದ್ದೆ.
ಸತ್ಯವಾನ್
ಒಮ್ಮನದೊಳದನುಂಡು ನಲಿಯೋಣ, ಹೇಳು!
ಸಾವಿತ್ರಿ
ಅಂದೆನಗೆ ಸೀತಾಳಿ ದಂಡೆಗಳ ತಂದಿತ್ತು.
ದೆಲ್ಲಿಂದ?
ಸತ್ಯವಾನ್
ಇಲ್ಲಿಗದು ತುಸು ದೂರ.
ಸಾವಿತ್ರಿ
ಎಲ್ಲಿ? ೨೦
ಸತ್ಯವಾನ್
ನಾವು ಹಾದು ಬಂದಾ ನದ್ಯ ತೀರದೊಳು
ಕಾಡುಮಾವಿನ ಮರವ ತೋರಿಸಿದೆ ನೋಡು.
ಸಾವಿತ್ರಿ
ಉಂ ಹೌದು.
ಸತ್ಯವಾನ್
ಅದರ ಪಕ್ಕದ ಬಸಿರಿ ಮರದಲ್ಲಿ.
ಸೀತಾಳಿ ಹೂವುಗಳು ಬೇಕೇನು ನಿನಗೆ?
ಸಾವಿತ್ರಿ
ಬೇಕಿತ್ತು.
ಸತ್ಯವಾನ್
ಆ ಮರವ ಹತ್ತಿತರುವೆನು ನಿಲ್ಲು.
(ಹೋಗುವ ಸತ್ಯವಾನನ ಕೈಹಿಡಿದು)
ಸಾವಿತ್ರಿ
ಬೇಡ, ಬೇಡೀಗ, ಸತ್ಯೇಂದ್ರ.
ಸತ್ಯವಾನ್
ಅದೇಕೆ?
ಹಿಂದೇಕೆ ಜೋಲುತಿಹೆ, ಬಾ ರಮಣಿ. ಹೂಗಂಪು
ತುಂಬಿರುವ ತಂಗಾಳಿ, ತಂಬೆಲರು, ಬೀಸುತಿಹು —
ದಾನಂದದಿಂದ. ನೋಡಲ್ಲಿ! ಮುತ್ತುಗದ ಹೂವು
ಪ್ರಕೃತಿದೇವಿಯ ಬರವಿಗಾಗಿ ವನದೇವಿ ೩೦
ಹಿಡಿಯಿಸಿದ ಪಂಜುಗಳೊ ಎಂಬಂತೆ ರಂಜಿಸಿವೆ.
ಸಾವಿತ್ರಿ
ಬಹುದೂರ ಮಸಣದೊಳು ಉರಿವ ಸೂಡುಗಳೊ
ಎಂಬಂತೆ ತೋರುತಿವೆ.
ಸತ್ಯವಾನ್
ಅಮಂಗಲದ ನುಡಿಯೇಕೆ,
ರಮಣಿ? ಹೋಲಿಸಲು ಬೇರೇನು ಇಲ್ಲವೆ?
ಸಾವಿತ್ರಿ
(ಸ್ವಗತ)
ಹೃದಯವೇ, ದ್ರೋಹವನ್ನೆಣಿಸದಿರು ಚಿತ್ತಕ್ಕೆ.
ಮನವನೇತಕೆ ಹಿಡಿದುಕೊಡುವೆ?
(ಬಹಿರಂಗವಾಗಿ)
ಹಾಳುಬಾಯ್
ನುಡಿದೆ, ರಮಣ; ಕ್ಷಮಿಸೆನ್ನ.
ಸತ್ಯವಾನ್
ಬಿಡು, ಪ್ರಿಯೆ.
ಮನ್ನಿಸಲು ಅಪರಾಧವೇನಿಲ್ಲ. ನೋಡಲ್ಲಿ!
ಗಿಳಿವಿಂಡುಗಳು ಶಾಲಿತೆನೆಗಳನು ಚಂಚುವಿನೊ —
ಳಿಟ್ಟು ಜವದಿಂದ ಹಾರುವುದು ಕಡುರಯ್ಯ — ೪೦
ಮಾಗಿಹುದು. ಆಶ್ರಮದೊಳೀ ತೆರೆದ ನೋಟಗಳ
ನೋಡಿದ್ದೆಯೇನು? ನೋಡಲ್ಲಿ! ನೋಡಲ್ಲಿ!
ಅಲ್ಲಿ!
(ಸಾವಿತ್ರಿ ಬೆಚ್ಚುತ್ತಾಳೆ)
ಬೆಚ್ಚುತಿಹೆ ಏಕಿಂತು? ಆರಸಂಚೆ —
ಯಾವಳಿಯ ತೋರಿಸಿದೆನಷ್ಟೆ! ಇದಕಾಗಿ
ಹೇಳಿದ್ದು ನಾನು, ವನಕೆ ಬರಬೇಡೆಂದು.
ಕಾಡೆಂದರಾಯ್ತು, ಬಾಲೆಯರ ಎದೆಯು
ಮೊಲದ ಕರುಳಾಗುವುದು; ಅರಳಿಯೆಲೆಯಾಗುವುದು
ನಾನಿರಲು ಭಯವೇಕೆ, ರಮಣಿ?
ಸಾವಿತ್ರಿ
ಭಯವಿಲ್ಲ,
ನೀರ! ಭಯವಿಲ್ಲ.
(ಸ್ವಗತ)
ನಿನಗಾಗಿ ಭಯವು,
ನಿನಗಾಗಿಯುಬ್ಬೆಗವು. ನಿನಗಾಗಿ ಎದೆಯು ೫೦
ಹಾರುತಿದೆ, ರಮಣ, ನೀನರಿಯೆ.
ಸತ್ಯವಾನ್
ಸಾವಿತ್ರಿ,
ನೀರಡಿಕೆಯಾಗುತಿದೆ. ನೋಡಲ್ಲಿ, ದೂರದೊಳು
ಮೊರೆಮೊರೆದು ಹರಿಯುತಿಹ ತಿಳಿನೀರ ವಾಹಿನಿಯ
ತೀರವನು ಸೇರಿ, ನೀರ್ಕುಡಿದು, ವಿಶ್ರಮಿಸಿ
ಕೊಳ್ಳೋಣ ಬಾ, ನೀರೆ!
ಸಾವಿತ್ರಿ
(ಸ್ವಗತ)
ಮಚ್ಚರದ ನೇಸರಿದು!
ಕರುಣೆಯಿಲ್ಲದ ಕಾಲಚಕ್ರವಿದು! ಹೇ ದೇವ,
ಹೇಗಾದರೂ ಎನ್ನ ಪತಿಯ ಕಾಪಾಡು.
ಪರಮೇಶ, ಪತಿವ್ರತೆಗೆ ಪತಿಭಿಕ್ಷೆಯನು ನೀಡು!
(ತೆರೆಳುತ್ತಾರೆ.)

ಕುವೆಂಪುರವರ 'ಯಮನ ಸೋಲು'-ಪೀಠಿಕಾ ದೃಶ್ಯ

[ಯಮನಸೋಲು ಕುವೆಂಪುರವರ ವಿಶಿಷ್ಟ ಕೃತಿಗಳಲ್ಲಿ ಒಂದು. ಪುರಾಣದ ಅನೇಕ ಪ್ರಸಂಗಗಳು ಭಾರತದ ಸಾಹಿತ್ಯ ಸಾಗರದಲ್ಲಿ ಮಹಾಸರೋವರದಂತೆ ವ್ಯಾಪಿಸಿವೆ; ಜನಪ್ರಿಯತೆಗಳಿಸಿ ಮನೆಮಾತಾಗಿವೆ. ಅಂತಹವುಗಳಲ್ಲಿ ಮಹಿಳೆಯರ ಮನಮಾನಸದಲ್ಲಿ ನೆಲೆಗೊಂಡಿರುವ ಕಥೆಗಳಲ್ಲಿ ಒಂದಾಗಿರುವ ಸತ್ಯವಾನ್-ಸಾವಿತ್ರಿಯ ಕಥೆ ಭಾರತದ ಸಂಸ್ಕೃತಿಯಲ್ಲಿ ಗಂಡ ಹೆಂಡತಿಯ ನಡುವಿನ ಪವಿತ್ರ ಸಂಬಂಧ; ಪತಿಯನ್ನು ದೈವವೆಂದು ಪೂಜಿಸುವ ಮತ್ತು ಆತನಿಗಾಗಿ ಹಂಬಲಿಸುವ ಪರಿಯನ್ನು ಹೃದಯಂಗಮವಾಗಿ ಚಿತ್ರಿಸುವ ಕಥೆಯಾಗಿದೆ. ಇಂತಹ ಕಥೆಯನ್ನು ನಾಟಕರೂಪಕ್ಕೆ ಪರಿವರ್ತಿಸಿ ಅದಕ್ಕೆ ಜೀವಕಳೆ ತಂದುಕೊಟ್ಟಿರುವ ಮಹನೀಯ ಕವಿ ಕುವೆಂಪುರವರು. ಅವರು ಈ ಮಹೋತ್ತಮವಾದ ಭಾಗವನ್ನು ತಮ್ಮ ಕವಿದೃಷ್ಟಿಯಿಂದ ಮಹೋನ್ನತಗೊಳಿಸಿ ಕನ್ನಡ ಸಾಹಿತ್ಯಲೋಕಕ್ಕೆ ಕಾಣಿಕೆಯಾಗಿ ನೀಡಿದರು. 'ಯಮನ ಸೋಲು' ಅವರ ಅತ್ಯುನ್ನತ ಕೃತಿಗಳಲ್ಲಿ ಒಂದು.]

ಪುಸ್ತಕ: ಯಮನ ಸೋಲು
ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ ಮೈಸೂರು 

ಕುವೆಂಪುರವರ 'ಯಮನ ಸೋಲು'-ಪರಿವಿಡಿ