ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-30

       ಅಂತಕ್ಕ, ತನ್ನ ಮಗಳು ಕಾವೇರಿಯ ನೆರವಿನಿಂದ, ಅತ್ಯಂತ ಕಾತರೆಯಾಗಿ ಅವಸರ ಅವಸರವಾಗಿ ಜಗಲಿಯ ಮೇಲೊಂದು ಹಾಸಗೆ ತಯಾರು ಮಾಡಿದಳು.  ತನ್ನ ಬಳಿ ಇದ್ದ, ತಾನು ಅತ್ಯುತ್ತಮ ಎಂದು ಪರಿಗಣಿಸಿದ್ದ ತಡಿ ದಿಂಬು ಜಮಖಾನೆ ಜಾಡಿಗಳನ್ನೆ ಹುಡುಕಿ ಹಾಕಿದ್ದಳು. ಆದರೂ ಎಣ್ಣೆಯ ಕೊಳೆಹತ್ತಿದ್ದ ದಿಂಬಿನ ನುಣುಪುಜಿಡ್ಡೂ,, ಅಲ್ಲಲ್ಲಿ ಕಲೆಕಲೆಯಾಗಿದ್ದ ಪುರಾತನ ತಡಿಯ ಕೊಳಕುಕವುರೂ ಎದ್ದು ಕಾಣುತ್ತಿದ್ದುವು. ಅದನ್ನೆಲ್ಲ ಮುಚ್ಚಲು, ಮಗಳ ಸಲಹೆ ಮೇರೆಗೆ, ಒಂದು ಜಮಖಾನೆಯನ್ನು ಮಗ್ಗಲು ಹಾಸಿಗೆಯಂತೆ ಮೇಲ್ವಾಸಿಬಿಟ್ಟರು! ಅದೂ ಜಿಡ್ಡು ಜಿಡ್ಡಾಗಿ ಕೊಳಕಾಗಿಯೆ ಇದ್ದಿತಾದರೂ ಕೆಂಪು ಕಪ್ಪು ಪಟ್ಟೆಗಳಿದ್ದುದರಿಂದ ಕೊಳಕು ಅಷ್ಟು ಎದ್ದು ಕಾಣುವುದಿಲ್ಲ ಎಂದು ತಾಯಿ ಮಗಳಿಬ್ಬರೂ ಸಮಾಧಾನ ಪಟ್ಟುಕೊಂಡಿದ್ದರು.

ಆಮೇಲೆ ಅಂತಕ್ಕ ಮತ್ತೆ ಮತ್ತೆ ಅಂಗಳಕ್ಕೆ ಹೋಗಿ ಹೆದ್ದಾರಿಯ ಕಡೆ ನೋಡಿ ನೋಡಿ ಬಂದಳು. ಕಾಯುವುದೆ ಒಂದು ತರಹದ ದಣಿವಾಗಿ ತೋರಿ, ಕಡೆಗೆ ತೆಣೆಯ ಮೇಲೆ ಕುಕ್ಕುರುಗಾಲಲ್ಲಿಯೆ ಕುಳಿತು, ಮಗಳಿಗೆ ಹೋಗಿ ನೋಡಿಬರುವಂತೆ ಹೇಳತೊಡಗಿದಳು. ಮಗಳು ನಾಲ್ಕಾರು ಸಾರಿ ಹೋಗಿ ನೋಡಿ ಬಂದಳು. ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರನ್ನು ಹೊತ್ತ ಡೋಲಿಯಾಗಲಿ, ಆ ಕಾರ್ಯಕ್ಕಾಗಿ ಹೋಗಿದ್ದವರಾಗಲಿ ಯಾರೂ ಗೋಚರಿಸಲಿಲ್ಲ.
ಹೊತ್ತು ಕಳೆದಂತೆ ಅಂತಕ್ಕನಿಗೆ ಗಾಬರಿ ಹೆಚ್ಚಿತು. ಹೊಟ್ಟೆಯಲ್ಲಿ ಏನೋ ಸಂಕಟವಾಗತೊಡಗಿತು. ಕಾವೇರಿ ತನ್ನ ತಾಯಿಯ ಅವಸ್ಥೆಯನ್ನು ಗಮನಿಸಿ “ಯಾಕೆ, ಅಬ್ಬೆ, ಅಳುತ್ತಿದ್ದೀಯಲ್ಲಾ?” ಎಂದಳು ತುಳುವಿನಲ್ಲಿ.
ಅಂತಕ್ಕ ತುಳುವಿನಲ್ಲಿಯೆ “ಯಾರೇ ಅಳುತ್ತಿರುವುದು?” ಎಂದು ನಸುಮುನಿದ ಭಂಗಿಯಲ್ಲಿ ನಿರಾಕರಿಸಿ, ಕಣ್ಣೊರೆಸಿಕೊಂಡು ಸುಯ್ದಳು. ತನ್ನ ಭಾವದೌರ್ಬಲ್ಯವನ್ನು ಮಗಳು ಗುರುತಿಸಬಾರದಾಗಿತ್ತು ಎಂಬುದು ಅವಳ ಅಂತರಂಗವಾಗಿತ್ತು. ಮತ್ತೆ ಸುಮ್ಮನಿದ್ದವಳು ಸ್ವಲ್ಪ ಹೊತ್ತಿನ ಮೇಲೆ “ಯಾಕೆ ಇಷ್ಟು ಹೊತ್ತಾದರೂ ಯಾರೂ ಬರಲಿಲ್ಲ? ಪಾಪ! ಹಳೆಮನೆ ದೊಡ್ಡ ಒಡೆಯರಿಗೆ….” ತಡೆತಡೆದು ಅಳುದನಿಯಲ್ಲಿ ಹೇಳಿದಳು “ಏ-ನಾ-ಗಿಬಿಟ್ಟಿದೀಯೋ?”
ಅಂತಕ್ಕನ ಗಂಡ ಸುಬ್ಬಯ್ಯಶೆಟ್ಟರು ಮೇಗರವಳ್ಳಿಯ ಹತ್ತಿರವಿದ್ದು ಹಳೆಮನೆಗೆ ಸೇರಿದ್ದ ಜಮೀನನ್ನು ಒಕ್ಕಲು ಮಾಡಿಕೊಂಡಿದ್ದರು. ಅವರಿಗೆ ಕಂತ್ರಾಟು ಕೆಲಸದಿಂದಲೂ ಅನೇಕ ತೆರನಾದ ದಳ್ಳಾಳಿ ವ್ಯಾಪಾರದಿಂದಲೂ ಬರುತ್ತಿದ್ದ ಆದಾಯದ ಜೊತೆಗೆ ಇಕ್ಕಲುತನದ ಗದ್ದೆ ಬೇಸಾಯದ ಆದಾಯವೂ ಸೇರಿತ್ತು. ಸುಬ್ಬಣ್ಣಹೆಗ್ಗಡೆಯವರು ಸುಬ್ಬಯ್ಯಶೆಟ್ಟರನ್ನು ಒಡೆಯರು ಒಕ್ಕಲನ್ನು ಕಾಣುವಂತೆ ಕಾಣದೆ, ತಮ್ಮ ಆಪ್ತವರ್ಗಕ್ಕೆ ಸೇರಿದವರೆಂದು ತಿಳಿದುಕೊಂಡಿದ್ದರು. ಸೆಟ್ಟರೂ ಹೆಗ್ಗಡೆಯವರೊಡನೆ ಆಪ್ತಮಿತ್ರ ಭಾವದಿಂದ ನಡೆದುಕೊಳ್ಳುತ್ತಾ ಅವರ ಅನಧಿಕೃತ ಕಾರ್ಯದರ್ಶಿಯಂತಿದ್ದರು. ಅವರಿಬ್ಬರ ಪರಸ್ಪರ ವಿಶ್ವಾಸವನ್ನೂ ಗಾಢಸ್ನೇಹವನ್ನೂ ಕಂಡು ಕರುಬಿದ್ದ ಕೆಲವರು ಆ ಮೈತ್ರಿಗೆ ಅಶ್ಲೀಲಕಾರಣಗಳನ್ನೂ ಆರೋಪಿಸಿದ್ದರು. ಸುಮಾರು ಎಂಟು ಹತ್ತು ವರ್ಷಗಳ ಹಿಂದೆ ಸುಬ್ಬಯ್ಯಸೆಟ್ಟರು ಕಾಡಿನಲ್ಲಿ ಒಂದು ಹೆಮ್ಮರವನ್ನು ನಾಟಾ ಕಡಿಸುತ್ತಿದ್ದಾಗ (ಕಳ್ಳನಾಟ ಎಂದು ಕೆಲವರು ಆಡಿಕೊಳ್ಳುತ್ತಿದ್ದರು.) ಬೀಳುತ್ತಿದ್ದ ಮರದ ಒಂದು ಹೆಗ್ಗೊಂಬೆ ತಗುಲಿ ಅಪಘಾತವಾಗಿ ತೀರಿಕೊಂಡಿದ್ದರು. ಆಗ ಸುಬ್ಬಣ್ಣಹೆಗ್ಗಡೆಯವರು, ಅವರೂ ಬಿಗಿಮುಷ್ಟಿಯವರೆಂದೂ ಜುಗ್ಗರೆಂದೂ ನಿಂದಿಸುತ್ತಿದ್ದ ಅವರು, ಅತ್ಯಂತ ಉದಾರವಾಗಿ ವರ್ತಿಸಿ ಅಂತಕ್ಕನ ಕೃತಜ್ಞತೆಗೆ ಭಾಜನರಾಗಿದ್ದರು. ಅವರು ಮೇಗರವಳ್ಳಿಗೆ ಬಂದಾಗಲೆಲ್ಲ ಅಲ್ಲಿಯ ಕೆಳಪೇಟೆಯ ಕಾಮತರ ದಿನಮಳಿಗೆಯಲ್ಲಾಗಲಿ, ಭಟ್ಟರ ಜವಳಿ ಅಂಗಡಿಯ ಮಹಡಿಯ ಮೇಲಾಗಲಿ ಉಳಿದುಕೊಳ್ಳದೆ ಮೇಲಿನ ಮೇಗರವಳ್ಳಿಯಲ್ಲಿ ಅಂತಕ್ಕನ ಮನೆಯಲ್ಲಿಯೆ ತಂಗುತ್ತಿದ್ದರು, ಜನರ ಕುಹಕನಿಂದೆಯನ್ನು ಇನಿತೂ ಲೆಕ್ಕಿಸದೆ. ದೊಡ್ಡಣ್ಣಹೆಗ್ಗಡೆ ತಿರುಪತಿಗೆ ಹೋದ ಮೇಲೆ ಸುಬ್ಬಣ್ಣಹೆಗ್ಗಡೆಯವರು ಒಮ್ಮೆಯೂ ಮೇಗರವಳ್ಳಿಯ ಕಡೆಗೆ ಮುಖ ಹಾಕಿರಲಿಲ್ಲ. ಒಂದೆರಡು ಸಾರಿ ಅಂತಕ್ಕನೆ ತನ್ನ ಮಗಳೊಡನೆ ಹಳೆಮನೆಗೆ ಹೋಗಿ, ಅವರ ಕಾಲಿಗೆ ಅಡ್ಡಬಿದ್ದು, ಕಾಣಿಕೆ ಒಪ್ಪಿಸಿ ಬಂದಿದ್ದಳು, ಅಷ್ಟೆ. ಇಷ್ಟು ವರ್ಷಗಳ ಮೇಲೆ ಹೆಗ್ಗಡೆಯವರು ಮೇಗರವಳ್ಳಿಗೆ ಬಂದು ತನ್ನ ಅತಿಥಿಯಾಗುತ್ತಾರೆ ಎಂದು ಹಿಗ್ಗಿದ್ದ ಅಂತಕ್ಕನ ಹೃದಯಕ್ಕೆ, ಅವರಿಗೊದಗಿದ್ದ ಅಪಘಾತದ ಸುದ್ದಿ, ಸಿಡಿಲೆರಗಿದಂತಾಗಿತ್ತು. ಆದರೂ, ಅವರು ಅಸ್ವಸ್ಥರಾದರೂ ಚಿಂತೆಯಿಲ್ಲ, ಜೀವಂತವಾಗಿ ತನ್ನ ಸೇವೆ ಮತ್ತು ಶುಶ್ರೂಷೆಯನ್ನು ಸ್ವೀಕರಿಸಿದ್ದರೆ ತಾನು ಧನ್ಯೆಯಾಗುತ್ತಿದ್ದೆನಲ್ಲಾ ಎಂದು ಅಂತಕ್ಕ ಹಂಬಲಿಸುತ್ತಿದ್ದಳು.
ಮತ್ತೆ ಮತ್ತೆ ಅಂಗಳಕ್ಕಿಳಿದು ಉಣುಗೋಲಿನ ಹತ್ತಿರಕ್ಕೆ ಹೋಗಿ ಹಾದಿ ನೋಡಿ ಹಿಂದಿರುಗುತ್ತಿದ್ದ ಕಾವೇರಿ, ಒಮ್ಮೆ ಹಾಗೆ ಹಾದಿ ನೋಡಲು ಹೋದವಳು ಕೂಗಿಕೊಂಡಳು: “ಅಬ್ಬೆ, ಯಾವನೋ ಒಬ್ಬ ಓಡಿ ಓಡಿ ಬರುತ್ತಿದ್ದಾನೆ!”
ಅಂತಕ್ಕನಿಗೆ ಉದ್ವೇಗಾತಿಶಯದಿಂದ ಕಾಲು ನಡುಗುತ್ತಿದ್ದರೂ ಎದ್ದು ಮಗಳೆಡೆಗೆ ತತ್ತರಿಸುತ್ತಲೆ ಓಡಿ ನಿಂತು ನೋಡಿದಳು: “ಅಯ್ಯೊ ಬೆಪ್ಪು ಹುಡುಗಿ, ನಿನಗೆ ಗೊತ್ತಾಗಲಿಲ್ಲವೆ? ಕೋಣೂರು ಅನಂತೈಗಳಲ್ಲವೆ ಬರುತ್ತರುವವರು?” ಎಂದಳು.
ಕಾವೇರಿಯೂ ಅವರು ತುಸು ಬಳಿಸಾರಿದ ಮೇಲೆ ಗುರುತಿಸಿ “ಹೌದಂಬ್ಹಾಂಗೆ ಕಾಣ್ತದೆ, ಅಬ್ಬೆ, ಕುಂಟಿ ಕುಂಟಿ ಬರುತ್ತಾರಲ್ಲವೆ?” ಎಂದಳು.
ಅಷ್ಟರಲ್ಲಿ ಸಮೀಪಿಸಿದ ಐಗಳು, ಉಣುಗೋಲು ತೆಗೆದು ದಾಟಿ, ಉಸಿರೆಳೆಯುತ್ತಲೆ ಹೇಳಿದರು: “ಅಂತಕ್ಕ, ಆ ಪಾದ್ರಿ ಹೇಳಿದರು, ಅದೇನೋ ಹೊಸ ಪುಡಿ ಕೊಟ್ಟಿದ್ದಾರಂತಲ್ಲಾ? ಅದರದ್ದು ಕಷಾಯ ಮಾಡಿಡಬೇಕಂತೆ, ಹೆಗ್ಗಡೇರಿಗೆ ಕುಡಿಸಲಿಕ್ಕೆ.”
ಕಾಫಿ ಮಾಡಲು ಹೇಳಿದ್ದಾರೆ ಎಂದರಿತ ಅಂತಕ್ಕ “ಎಲ್ಲಿದ್ದಾರೆ ಅವರು? ಹೇಗಿದ್ದಾರೆ?” ಎಂದು ಗಾಬರಿಯಿಂದ ವಿಚಾರಿಸಿದಳು.
ಐಗಳು “ಡೋಲಿಯ ಮೇಲೆ ತರುತ್ತಿದ್ದಾರೆ. ಪಾದ್ರಿ ಕೊಟ್ಟ ಗುಳಿಗೆ ಔಷಧ ಬಹಳ ಪರಿಣಾಮಕಾರಿಯಾಯಿತು. ಈಗ ತಕ್ಕಮಟ್ಟಿಗೆ ಪ್ರಜ್ಞೆಯಲ್ಲಿದ್ದಾರೆ. ಒಂದು ಹಾಸಿಗೆ ಮಾಡಬೇಕಿತ್ತಲ್ಲಾ?” ಎಂದರು ಜಗಲಿಯ ಕಡೆ ನೋಡುತ್ತಾ.
ಆಗಲೆಯೆ ಒಳಗೆ ಅವಸರವಾಗಿ ಓಡಿಹೋಗಿದ್ದ ತಾಯಿಗೆ ಬದಲಾಗಿ ಮಗಳೆ ಉತ್ತರ ಹೇಳಿದಳು: “ಹಾಸಿಗೆ ಆಗಲೆ ತಯಾರಾಗಿದೆ, ಐಗಳೆ, ಜಗಲಿ ಮೇಲೆ.”
ತುಸು ಹೊತ್ತಿನಲ್ಲಯೆ ಡೋಲಿಯೊಡನೆ ಪಾದ್ರಿ, ದೇವಯ್ಯ ಎಲ್ಲರೂ ಬಂದರು. ಸುಬ್ಬಣ್ಣಹೆಗ್ಗಡೆಯವರನ್ನು ನಿಧಾನವಾಗಿ ಇಳಿಸಿ ಎತ್ತಿಕೊಂಡು ಹೋಗಿ ಹಾಸಗೆಯ ಮೇಲೆ ಮಲಗಿಸಿದರು. ದೇವಯ್ಯ ಅವರ ಮುಂಡಾಸವನ್ನು ಮೆಲ್ಲಗೆ ಕಳಚಿ ಜೋಪಾನವಾಗಿಡಲು ಹೇಳಿ, ಅಂತಕ್ಕನ ಕೈಗೆ ಕೊಟ್ಟನು. ನಿಲುವಂಗಿಯನ್ನು ತೆಗೆಯುವುದು ಹೇಗೆ ಎಂದು ಆಲೋಚಿಸುತ್ತಿರಲು ಪಾದ್ರಿ ’ಬೇಡ’ ಎಂದು ಸನ್ನೆಯಿಂದ ಸೂಚಿಸಿ, ಅಲ್ಲಿ ನೆರೆದಿದ್ದವರಿಗೆಲ್ಲ ಹೊರಟುಹೋಗಲು ಹೇಳಿ, ತಾನೂ ದೇವಯ್ಯನನ್ನು ಕರೆದುಕೊಂಡು ಇಸ್ಕೂಲು ಕಟ್ಟುವಲ್ಲಿಗೆ ಹೋದನು. ಹೋಗುವ ಮುನ್ನ ಅಂತಕ್ಕಗೆ ಹೆಗ್ಗಡೆಯವರನ್ನು ನೋಡಿಕೊಳ್ಳುವ ವಿಚಾರವಾಗಿ ಹೇಳಬೇಕಾದ ಎಚ್ಚರಿಕೆಗಳನ್ನೆಲ್ಲ ಹೇಳಿದನು. ಆದರೆ…?
ಎಚ್ಚತ್ತು, ಪ್ರಜ್ಞೆ ತಿಳಿದು, ಸುಬ್ಬಣ್ಣಹೆಗ್ಗಡೆ ಕಣ್ಣು ತೆರೆದು ಸುತ್ತಲೂ ನೋಟ ಹೊರಳಿಸಿದರು. ಅವರ ಕಾಲಿನ ಬುಡದಲ್ಲಿಯೆ ಕಂಬಕ್ಕೆ ಒರಗಿ ಕುಳಿತಿದ್ದ ಅಂತಕ್ಕನನ್ನು ತುಸುವೊತ್ತು ಎವೆಯಿಕ್ಕದೆ ನೋಡಿದರು. ಗುರುತು ಸಿಕ್ಕಿದ ಹೊಳಹು ಅವರ ಕಣ್ಣುಗಳಲ್ಲಿ ಮಿಂಚಿತೇನೋ?
“ಯಾರದು?” ಎಂದರು, ಸೋತ ದನಿಯಲ್ಲಿ.
“ನಾನು, ಅಯ್ಯಾ, ಅಂತಕ್ಕ.”
“ಸುಬ್ಬಣ್ಣನ ಹೆಂಡ್ತಿಯೆ?”
“ಹೌದು, ನನ್ನೊಡೆಯ.” ತನ್ನನ್ನು ತಮ್ಮ ಆಪ್ತಮಿತ್ರ ಸುಬ್ಬಯ್ಯ ಸೆಟ್ಟಿಯ ಹೆಂಡತಿ ಎಂದು ಗುರುತಿಸಿದ್ದರಲ್ಲಿ ಏನೊ ಒಂದು ಆತ್ಮೀಯತೆಯನ್ನು ಅನುಭವಿಸಿ, ಅಂತಕ್ಕ ಆಗಲೆ ಸ್ತ್ರೀ ಸಹಜವಾಗಿ ಭಾವಾವಿಷ್ಟೆಯಾಗಲಾರಂಭಿಸಿದ್ದಳು.
“ಅದಕ್ಕೇ ಮತ್ತೆ? ನಾನು ಯಾಕೋ ಅಂತಿದ್ದೆ!”
“ಏನು ಹೇಳಿದಿರಿ, ಅಯ್ಯಾ?”
“ಸುಬ್ಬಯ್ಯ ಬಂದಿದ್ದ ಈಗ! ಎಚ್ಚರಾಗಾಕೆ ಮುಂಚೆ.”
“ಕನಸು ಕಂಡಿರಾ?”
“ಅಂವ ಸತ್ತು ಇಷ್ಟು ವರ್ಷದ ಮೇಲೆ ಇವತ್ತೆ ಅವನ್ನ ಕಂಡಿದ್ದು. ನನ್ನೂ ಕರೆದ, ’ನೀವು ಬಂದುಬಿಡಿ, ಇಲ್ಲಿ ಚೆನ್ನಾಗಿದೆ’ ಅಂತಾ. ’ನಮ್ಮ ದೊಡ್ಡಣ್ಣ ತಿರುಪತಿಗೆ ಹೋದಾಂವ ಇನ್ನೂ ಬಂದೇ ಇಲ್ಲ ಕಣೋ; ಅಂವ ಬಂದಮ್ಯಾಲೆ ಬತ್ತೀನಿ?’  ಅಂದೆ…. ’ದೊಡ್ಡಣ್ಣ ಇಲ್ಲೇ ಇದಾನೆ! ಬನ್ನಿ, ತೋರಿಸ್ತೀನಿ!’ ಅಂದ. ತೋರಿಸು ಅಂತಾ ಹೇಳಿ ಅವನ ಹಿಂದೆ ಹೋದರೆ, ತೊಟ್ಟಲಾಗಿದ್ದ ಒಂದು ಬಾಲೆ ತೋರಿಸಿ ’ಇವನೆ ನಿಮ್ಮ ದೊಡ್ಡಣ್ಣ!’ ಅನ್ನೋದೇನು? ನನಗೆ ಒಂದು ತರಾ ಹೆದರಿಕೆಯಾಗಿ ಕಣ್ಣುಬಿಟ್ಟುಬಿಟ್ಟೆ!”
ಅಂತಕ್ಕ ಬಸ ಬಸ ಬಸ ಅಳತೊಡಗಿ ಹೆಗ್ಗಡೆಯವರ ಕಾಲಿಗೆ ಅಡ್ಡಬಿದ್ದು ಕೈ ಮುಗಿದುಕೊಂಡು ಹೇಳಿದಳು: “ಬ್ಯಾಡ, ನನ್ನೊಡೆಯ, ಬ್ಯಾಡ. ನೀವು ಅವರ ಮಾತು ಕೇಳಬ್ಯಾಡಿ, ನಿಮ್ಮ ದಮ್ಮಯ್ಯ ಅಂತೀನಿ. ನಮ್ಮನ್ನೆಲ್ಲ ನಡುನೀರಿನಲ್ಲಿ ಕೈಬಿಟ್ಟು ಅವರಂತೂ ಹೋಗಿಬಿಟ್ಟರು. ಈಗ ’ಇಲ್ಲಿ ಖುಷಿಯಾಗಿದೆ, ಇಲ್ಲಗೇ ಬನ್ನಿ’ ಅಂತಾ ಎಲ್ಲರ್ನೂ ಕರೆಯಾಕೆ ಸುರುಮಾಡಿದಾರೆ? ಖಂಡಿತಾ ಅವರ ಮಾತು ಕೇಳಬ್ಯಾಡಿ ನೀವು!…. ನಮ್ಮ ಗತಿ ನಾಯಿಗತಿ ಆಗ್ತದೆ, ನೀವು ಕೈಬಿಟ್ಟರೆ!”
“ಏನೋ ಕನಸು ಬಿತ್ತು! ಅದಕ್ಕೆಲ್ಲ ಅಳಾದ್ಯಾಕೆ, ಅಂತಕ್ಕ? ನಂಗೇನಾದ್ರೂ ಕುಡಿಯಾಕೆ ಕೊಡ್ತೀಯ?”
ಅಂತಕ್ಕ ಮೈಮರೆತಿದ್ದವಳು ಪಕ್ಕನೆ ಎಚ್ಚತ್ತಂತೆ “ಅಯ್ಯೋ ಒಡೆಯಾ, ನಾನೆಂಥಾ ಬಿರುಗು! ಕಾಪಿ ಮಾಡಿಟ್ಟೀನಿ. ನಿವು ಎದ್ದ ಕೂಡ್ಲೆ ಕೊಡೋಕೆ ಹೇಳಿದ್ರೂ ಆ ಪಾದ್ರಿ. ಮರೆತೇ ಹೋಗಿತ್ತು. ಎಂಥೆಂಥದೊ ಮಾತಾಡಿಬಿಟ್ಟೆ. ನಾನೊಂದು ಮೂಳೆ!” ಎಂದು ತನ್ನನ್ನು ತಾನೆ ಬೈದುಕೊಳ್ಳುತ್ತಾ ಒಳಗೆ ಹೋಗಿ ಬಿಸಿಬಿಸಿ ಕಾಫಿ ತಂದು ಕುಡಿಯಲು ಕೊಟ್ಟಳು.
ಹೆಗ್ಗಡೆ ಹಾಸಗೆಯ ಮೇಲೆ ಮೆಲ್ಲನೆ ಎದ್ದು ಕುಳಿತು. ಗಳಾಸನ್ನು ಕೈಗೆ ತೆಗೆದುಕೊಂಡು, ನೋಡಿ, ಮೂಸಿ ನೋಡಿ, ಮುಖ ಸಿಂಡರಿಸಿ, “ಇದು ಎಂಥದೇ ಕಷಾಯ?” ಎಂದರು.
“ಕಾಪಿ!” ಎಂದಳು ಅಂತಕ್ಕ, ತನ್ನ ಪ್ರಗತಿಶೀಲತೆಗೆ ತಾನೆ ನಸು ನಾಚಿದಂತೆ.
“ಎಂಥದೂಊ?” ಹಣೆ ಸುಕ್ಕಿ ಕೇಳಿದರು ಹೆಗ್ಗಡೆ.
“ಕಾಪಿ!” ಪುನರುಚ್ಚರಿಸಿದ ಅಂತಕ್ಕ ಆಗಲೆ ನಗುಮೊಗವಾಗಿದ್ದಳು.
“ಕಾಪಿ? ಹಾಂಗಂದ್ರೆ?”
“ಅದೊಂದು ತರದ ಬೀಜಾನ ಹುರಿದು, ಪುಡಿಮಾಡಿ, ಬೆಲ್ಲದನೀರು ಕುದಿಸಿ, ಹಾಕಿ, ಕಷಾಯ ಮಾಡಿ, ಅದಕ್ಕೆ ಹಾಲು ಹಾಕಿ ಮಾಡಿದ್ದು….ತೀರ್ಥಹಳ್ಳಿ ಗೀರ್ತಳ್ಳಿ ಪ್ಯಾಟೆ ಕಡೇಲೆಲ್ಲ ದಿನಾ ಹೊತಾರೆ ಕುಡಿಯಾಕೆ ಸುರುಮಾಡಿದ್ದಾರಂತೆ ಅದನ್ನ…. ಸರೀರಕ್ಕೆ ಬಾಳ ಒಳ್ಳೇದಂತೆ…. ಆ ಪಾದ್ರಿ ತಂದುಕೊಟ್ಟಿದ್ದು, ಒಡೆಯಾ. ಇಲ್ಲಿದ್ರೆ ನನಗೆಲ್ಲಿಂದ ಬರಬೇಕು ಬಡವಿಗೆ? ಆ ಪಾದ್ರಿ ಇಲ್ಲಿಗೆ ಬಂದು ಉಳಿದಾಗಲೆಲ್ಲ ಹೊತಾರೆ ಅದನ್ನೆ ಕುಡಿಯೋದು.”
ಹೆಗ್ಗಡೆ ಗಳಾಸನ್ನು ತುಟಿಗಿಟ್ಟು ಒಂದು ಸ್ವಲ್ಪ ಕುಡಿದಿದ್ದರೋ ಇಲ್ಲವೊ ಥ್ಛೂ! ಥ್ಛೂ! ಥ್ಛೂ! ಎಂದು ಹಾಸಗೆಯ ಬದಿ ಇಟ್ಟಿದ್ದ ವಾಂತಿ ಬಟ್ಟಲಿಗೆ ವಾಕರಿಸಿ ಉಗುಳಿಬಿಟ್ಟರು. “ಇದನ್ಯಾರು ಕುಡಿದಾರೇ? ಈ ಔಂಸ್ತೀನ? ಹಾಳು ಕಾಪೀನಾ ಬಿಸಾಕ!” ಎಂದು ಶಪಿಸಿ, ಗಳಾಸನ್ನು ಹಿಂದಕ್ಕೆ ಕೊಟ್ಟು, “ಬ್ಯಾರೆ ಏನಾದ್ರೂ ಇದ್ರೆ ತಬಾ. ಇಲ್ದಿದ್ರೆ ಬರೀ ನೀರನೆ ಕೊಡು!” ಎಂದು ತುಸು ಸಿಟ್ಟಾದವರಂತೆ ಮಲಗಿಬಿಟ್ಟರು.
ಅಂತಕ್ಕ ಒಳಗೆ ಹೋಗಿ ಅಕ್ಕಿಬೋಜದ ಹೆಂಡವನ್ನೂ ಸ್ವಾರ್ಲು ಮಿನಿನ ಚಟ್ನಿಯನ್ನು ತಂದುಕೊಟ್ಟ ಮೇಲೆಯೆ ಹೆಗ್ಗಡೆಯವರು ನಂಚಿಕೊಂಡು ಕುಡಿದು, ಸ್ವಲ್ಪ ಚೇತರಿಸಿಕೊಂಡಂತಾಗಿ, ಪ್ರಸನ್ನರಾದದ್ದು!
ಅವರ ದೈಹಿಕ ಸ್ಥಿತಿ ಸ್ವಲ್ಪ ಉತ್ತಮಗೊಂಡು, ಪ್ರಜ್ಞೆ ಸಾಮಾನ್ಯಕ್ಕೆ ಬಂದ ಮೇಲೆ, ನೆನಪು ಮರುಕಳಿಸಿ “ಐಗಳೆಲ್ಲಿ, ನನ್ನ ಸಂಗಡ ಬಂದವರು?” ಎಂದರು.
ಅಂತಕ್ಕ ನಡೆದದ್ದನ್ನೆಲ್ಲ ತನಗೆ ತಿಳಿದುಬಂದಂತೆ ಹೇಳಿ “ಪಾದ್ರಿಗಳು, ಕಣ್ಣಾಪಂಡಿತರು, ಬೆಟ್ಟಳ್ಳಿ ದೇವಯ್ಯಗೌಡರು ಎಲ್ಲಾ ಇಸ್ಕೂಲು ಕಟ್ಟಡದ ಹತ್ತಿರ ಹೋಗಿದ್ದಾರೆ. ಬಾಂವಿ ತೋಡಿಸಾಕೆ ಹಸರುಕಡ್ಡಿ ಹಿಡಿಸ್ತಾರಂತೆ ಐಗಳ ಕೈಲಿ. ಅದಕ್ಕೇ ಅವರನ್ನೂ ಕರಕೊಂಡು ಹೋದರು “ ಎಂದಳು.
ಐಗಳು ಎಲ್ಲಿದ್ದಾರೆ ಎಂಬುದರ ಕಡೆಗಾಗಲಿ, ಅವರು ಎಲ್ಲಿಗೆ ಏತಕ್ಕೆ ಹೋದರು ಎಂದು ಅಂತಕ್ಕ ಹೇಳಿದ ವಿವರಣೆಯ ಕಡೆಗಾಗಲಿ ಹೆಗ್ಗಡೆಯವರ ಗಮನ ಹರಿದಂತೆ ಕಾಣಿಸಲಿಲ್ಲ. ತಲೆಯನ್ನು ತಡಕಿ ನೋಡಿಕೊಂಡರು; ತಲೆದಿಂಬಿನ ಅಕ್ಕಪಕ್ಕ ನೋಡಿದರು. ಏನನ್ನೊ ಹುಡುಕುವಂತೆ.
“ಏನು ಬೇಕಾಗಿತ್ತು, ಅಯ್ಯಾ?”
ಅಂತಕ್ಕನ ಪ್ರಶ್ನೆಗೆ ಏನನ್ನೊ ನೆನೆಯುವರಂತೆ ತುಸು ತಡೆದು “ಏನೂ ಇಲ್ಲಾ…. ನನ್ನ ಮುಂಡಾಸು ಎಲ್ಲಿ ಹೋಯ್ತೋ ಏನೋ! ಕಾಡಿನಾಗೇ ಬಿಸಾಕಿ ಬಂದ್ರೋ? ತಂದ್ರೋ? ಅಂತಾ ನೋಡ್ದೆ….” ಎಂದು, ಬೆಲೆಯುಳ್ಳ ಯಾವುದನ್ನೊ ಕಳೆದುಕೊಂಡವರಂತೆ ಖಿನ್ನಮುಖಿಯಾದರು.
ಅಂತಕ್ಕ ತುಸು ಮುಗುಳು ನಗುತ್ತಾ “ಇಲ್ಲೇ ಅದೆ. ನನ್ನ ಹತ್ರಾನೆ ಕೊಟ್ಟಿದ್ದಾರೆ. ಜೋಪಾನವಾಗಿ ಇಡು ಅಂತಾ” ಎಂದು ಮಗುವನ್ನು ಸಂತೈಸುವಂತೆ ಮಾತನಾಡಿದಳು.
“ಎಲ್ಲಿ? ನೋಡಾನ! ತಗೊಂಡು ಬಾ!” ಅಂತಕ್ಕನ ಆಶ್ವಾಸನೆಯಲ್ಲಿ ನಂಬುಗೆ ಸಾಲದೆ, ಪ್ರತ್ಯಕ್ಷ ಪ್ರಮಾಣ ಬಯಸುವವರಂತೆ ಹೇಳಿದರು ಹೆಗ್ಗಡೆ.
“ಕಾವೇರೀ, ಅಯ್ಯೋರ ಮುಂಡಾಸ ಮೆಲ್ಲಗೆ ತೆಗೊಂಡು ಬರ್ತೀಯಾ?” ಅಂತಕ್ಕ ಒಳಗಿದ್ದ ಮಗಳಿಗೆ ಕೂಗಿ ಹೇಳಿದಳು.
ಕಾವೇರಿ ಮುಂಡಾಸ ಎತ್ತಿಕೊಂಡು ಬಂದಳು, ಎರಡೂ ಕೈಯಲ್ಲಿ!
“ಜ್ವಾಕೆ, ಹುಡುಗೀ, ಕೆಳಗ್ಗಿಳಗೆ ಹಾಕಿಬಿಟ್ಟೀಯಾ? ಬಿಚ್ಚಿಹೋದರೆ ಮತ್ತೆ ಕಟ್ಟಾಕೆ ಎಡು ದಿನಾನೆ ಬೇಕಾಗ್ತದೆ!” ಎಚ್ಚರಿಕೆ ಹೇಳಿದ ಹೆಗ್ಗಡೆಯವರು ಅದನ್ನು ಅಮೂಲ್ಯ ವಸ್ತುವನ್ನು ತೆಗೆದುಕೊಳ್ಳುವಂತೆ ಎರಡು ಕೈಯಲ್ಲಿಯೂ ಹಿಡಿದು ತಲೆದಿಂಬಿನ ಪಕ್ಕದಲ್ಲಿ ಜೋಕೆಯಿಂದ ಇಟ್ಟುಕೊಂಡು, ಹರ್ಷಚಿತ್ತರಾಗಿ ಕಾವೇರಿಯ ಕಡೆ ನೋಡಿ “ಇದು ಯಾರ ಈ ಹುಡುಗಿ?” ಅಂತಕ್ಕನನ್ನು ಪ್ರಶ್ನಿಸಿದರು.
“ಒಡೇರಿಗೆ ಮರತೇ ಹೋಗ್ಯದೆ…. ಅವರು ಹೋದಾಗ ಇವಳು ಮೂರು ನಾಲ್ಕು ವರ್ಷದ ಮಗು. ಇವಳು ನನ್ನ ಮಗಳು; ಕಾವೇರಿ ಅಂತಾ ಹೆಸರು.”
“ನಮ್ಮ ’ಬುಚ್ಚಿ’ ವಯಸ್ಸೆ ಇರಬೇಕು ಇವಳಿಗೆ?” ಎಂದರು ಹೆಗ್ಗಡೆ, ಕಾವೇರಿಯ ಮುಖವನ್ನೆ ಎವೆಯಿಕ್ಕದೆ ನೋಡುತ್ತಾ.
ಕಾವೇರಿ ನಾಚಿಕೊಂಡು ತಾಯಿಯ ಮರೆಗೆ ಹೋದಳು.
“ಹೌದು ಇವಳಿಗೂ ಮಂಜಮ್ಮನೋರ ವಯಸ್ಸೆ. ಎರಡು ಮೂರು ತಿಂಗಳು ಹೆಚ್ಚು ಕಡಿಮೆ ಇರಬಹುದು” ಎಂದಳು ಅಂತಕ್ಕ.
“ಮದೇಗಿದೇ ಮಾಡೋ ಯೋಚ್ನೆ ಇಲ್ಲೇನು? ಪರಾಯಕ್ಕೆ ಬಂದ ಹುಡುಗೇರನ….” ಎಂದು ಅರ್ಧಕ್ಕೆ ನಿಲ್ಲಿಸಿ ಹೆಗ್ಗಡೆಯವರು ಅಂತಕ್ಕನ ಕಣ್ಣನ್ನೆ ನೋಡಿದರು.
ಅರಿತ ಅಂತಕ್ಕ ಸುಯ್ದು “ಒಂದು ಗಂಡೇನೊ ಗೊತ್ತಾಗಿದೆ. ಆದರೆ ಆ ಹುಡುಗ ಗಟ್ಟದ ಮೇಲೆ ಇಲ್ಲೇ ಇರೋಕೆ ಒಪ್ತಾ ಇಲ್ಲಂತೆ….” ಎಂದಳು.
“ಗಟ್ಟದ ಮ್ಯಾಲೆ ಇರಾಕೆ ಆಗ್ದಿದ್ರೆ ಕೆಳಕ್ಕೆ ಹೋಗ್ಲಿ”
“ನಮ್ಮದು ಅಳಿಯ ಸಂತಾನ. ಕನ್ನಡ ಜಿಲ್ಲೆಯ ಸೆಟ್ಟರಲ್ಲಿ ಗಂಡು ತರುತ್ತಾರೆ; ಹೆಣ್ಣು ಕಳಿಸುವುದಿಲ್ಲ, ಗಟ್ಟದ ಮೇಲಿನವರ ಹಾಂಗೆ.”
“ಹೌದಲ್ಲಾ?…. ಮರೆತಿದ್ದೆ!” ಎಂದು ಗಟ್ಟಿಯಾಗಿಯೆ ನಕ್ಕು ಬಿಟ್ಟರು ಹೆಗ್ಗಡೆ.
“ಮಂಜಮ್ಮೋರ ಮದುವೆ ಇಚಾರ ಏನಾಯ್ತೊ? ಸಿಂಬಾವಿ ಹೆಗ್ಡೇರಿಗೆ ಕೊಡ್ತಾರೆ ಅಂತಾ ಸುದ್ದಿ ಹುಟ್ಟಿತ್ತು” ಪ್ರಸ್ತಾಪವೆತ್ತಿದಳು ಅಂತಕ್ಕ.
“ಅದೊಂದು ಕತೇನೆ ಆಗ್ಯದೆ ಬಿಡು! ಆ ಜಟ್ಟಕ್ಕ ನನ್ಹತ್ರ ಬಂದು ಬಾಯ್ ಬಾಯ್ ಹುಯ್ಕೊಂಡು ಬಿಡ್ತು. ಈಗ ವದಂತಿ, ಆ ಹೂವಳ್ಳಿ ಎಂಕ್ಟಣ್ಣನ ಹುಡುಗೀನ ಭರ್ಮಯ್ಯಗೆ ಕೇಳ್ತಾರಂತೆ! ಎಂಕ್ಟಣ್ಣನೂ ತನ್ನ ಸಾಲಾನೆಲ್ಲ ತೀರಿಸಿಬಿಡಾಕೆ ಭಾರಿ ಮೊತ್ತದ ತೆರಾನೆ ಕೇಳ್ಯಾರಂತೆ! ನೋಡಬೇಕು ಏನಾಗ್ತದೋ ಯವಹಾರ?....ಎಲ್ಲ ಆ ಕಲ್ಲೂರು ಸಾಹುಕಾರರ ಕೈವಾಡದಾಗೆ ನಡಿತಾ ಅದೆಯಂತೆ......"
"ಅವರ  ಕೈಗೆ ಸಿಕ್ಕರಾ ? ಆಯ್ತು ಬಿಡಿ!" ಎನ್ನುತ್ತಾ ತನಗೊದಗಿದ್ದ ಏನನ್ನೊ ನೆನಪಿಗೆ ತಮದುಕೊಂಡಳು ಅಂತಕ್ಕ. ಮತ್ತೆ ಸ್ವಲ್ಪ ತಡೆದು ಅಂಜುತ್ತಂಜುತ್ತಲೆ ಹೇಳಿದಳು:
"ನಾನೇನೊ ಇನ್ನೊಂದು ಸುದ್ದಿ ಕೇಳಿದ ಹಾಂಗಿದೆ?"
"ಯಾವ ಸುದ್ದಿ?"
"ಹೂವಳ್ಳಿ ನಾಯಕರ ಮಗಳನ್ನ ಮುಕುಂದೇಗೌಡರು ತಾವೇ ಆಗಬೇಕು ಅಂತಾ ಮಾಡಿಕೊಂಡಿದ್ರಂತೆ?...."
"ಯಾರೇ? ಕೋಣೂರು ಮುಕುಂದನಾ?"
"ಹ್ಞೂ! ಅವರಿಗೂ ಹೂವಳ್ಳಿ ಚಿನ್ನಕ್ಕಗೂ ಹುಡುಗರಾಗಿದ್ದಾಗಿನಿಂದಲೂ ಬಹಳ ಪಿರೀತಿಯಂತೆ!" ಎಮದ ಅಂತಕ್ಕ ತನ್ನ ಮಾತಿಗೆ ತಾನೆ ನಾಚಿದವಳಂತೆ ಮುಖ ತಿರುಗಿಸಿ, ಹಿಂದೆ ಪಕ್ಕದಲ್ಲಿ ನಿಂತು ಎಲ್ಲವನ್ನೂ ಕಿವಿಗೊಟ್ಟು ಆಸಕ್ತಿಯಿಂದ ಆಲಿಸುತ್ತಿದ್ದ ಮಗಳ ಕಡೆ ನೋಡಿ, ಹಲ್ಲು ಬಿಟ್ಟಳು.
ಸುಬ್ಬಣ್ಣ ಹೆಗ್ಗಡೆಯವರೂ ಕಾವೇರಿಯ ಮುಖದ ಕಡೆ ನೋಡಿ ಕಿಲ್ಅಕ್ಕನೆ ನಕ್ಕು "ಈ ಹುಡುಗರ ಆಟಾನೆಲ್ಲ ಲೆಕ್ಕಕ್ಕೆ ತಗೊಂಡ್ರೆ ಆದ್ದಾಂಗೆ ಆಯ್ತು ಬಿಡು! ಏನು ಮನೇಲಿ ಹೇಳೋರು ಕೇಳೋರು, ಹಿರೇರು ದೊಡ್ಡೋರು, ಯಾರೂ ಇಲ್ಲೇನು? ಇವರಿವರೆ ಗೊತ್ತುಮಾಡಿಕೊಳ್ಳೋಕೆ? ನಾವೇನು ಕಿಲಸ್ತರೆ? ಮದೇಗೆ ಮುಂಚೇನೆ ಮಾತುಕತೆ ಎಲ್ಲ ಮಾಡಿಕೊಂಡು ಬರಾಕೆ?" ಎಂದವರು ಅರ್ಧ ವಿನೋದಕ್ಕೆಂಬಂತೆ ನೇರವಾಗಿ ಕಾವೇರಿಯನ್ನೆ ಸಂಬೋಧಿಸಿದರು: ಏನೇ, ಹುಡುಗಿ, ನೀನೆ ಹೇಳೆ. ಮುದುಕನ ಮಾತು ಸರಿಯೋ ತಪ್ಪೊ?"
ಆಡಿದ್ದನ್ನೆಲ್ಲ ಹಿರಿಕೊಳ್ಳುವಂತೆ ಮನಸ್ಸಿಟ್ಟು ಆಲಿಸುತ್ತಿದ್ದ ಕಾವೇರಿ, ಕಿಲಸ್ತರ ಸ್ವಾತಂತ್ರ್ಯದ ವಿಚಾರವಾಗಿ ಸುಬ್ಬಣ್ಣಹೆಗ್ಗಡೆಯವರು ಮಾಡಿದ್ದ ಟೀಕೆಯನ್ನು ಕೇಳಿ, ಆಗಲೆ ತನ್ನ ಹೃದಯದಲ್ಲಿ ಆ ಪದ್ದತಿಯ ಪರವಾಗಿ ಸಹಾನುಭೂತಿಯಿಂದಿದ್ದವಳು, ತನ್ನ ಮುಖವನ್ನು ಕಂಬದ ಮರೆಯಲ್ಲಿ ಅಡಗಿಸಿಕೊಂಡು ನಿಂತಳು.
ಅಂತಕ್ಕ ಲಘುವಾಗಿ ನಗುತ್ತ "ಅವಳನ್ನು ಕೇಳಿದರೆ ಏನು ಹೇಳುತ್ತಾಳೆ? ಒಟ್ಟಾರೆ ಈಗಿನ ಕಾಲದ ಮಕ್ಕಳೆಲ್ಲ, ಹೆಣ್ಣಾಗಲಿ, ಗಂಡಾಗಲಿ, ಎಲ್ಲ ಒಂದೇ! ನಮ್ಮ ಕಾಲದಲ್ಲಿ...." ಎಂದು ಮುಂದುವರಿಸಿ, ತಾವು ಹುಡುಗರಾಗಿದ್ದ ಕಾಲದಲ್ಲಿ ಸಾಮಾಜಿಕ ನಡತೆಯಲ್ಲಿ ಎಂತಹ ಕಟ್ಟೂನಿಟ್ಟೂ ಇದ್ದುವು ಎಂಬುದನ್ನು ಹೆಗ್ಗಡೆಯವರಿಗೆ ನೆನಪುಮಾಡಿಕೊಟ್ಟಳು.
ಹೆಗ್ಗಡೆಯವರು "ಅಲ್ಲದೆ ಮತ್ತೆ?" ಎಮದು ಸಮ್ಮತಿಸಿದರೂ, ತಮ್ಮ ಪ್ರಾಯದ ಕಾಲದ ಅಸಂಯಮ ವರ್ತನೆಗಳ ನೆನಪಾಗಿ ಒಳಗೊಳಗೆ ನಗುತ್ತಿದ್ದರು. ಅವಳೂ ತನ್ನ ಮಾತಿನ ಅಸತ್ಯತೆಗೆ ತಾನೆ ನಗುತ್ತಾ ಸೆರಗಿನಿಂದ ಮುಖ ಮರೆಸಿಕೊಂಡಳು.
*******




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ