ಎದೆಗೆ ಬಿದ್ದ ಅಕ್ಷರ ಗದ್ಯಕ್ಕೆ ಪೂರಕವಾದ ಟಿಪ್ಪಣಿಗಳು
೧) ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು
ಭೂಮಿಗೆ ಬಿದ್ದ ಬೀಜ ಹೇಗಾದರೂ ಎಂದಾದರೂ ಮೊಳಕೆಯೊಡೆದು ಗಿಡವಾಗಿ ಮರವಾಗಿ ಫಲ ನೀಡುತ್ತದೆ. ಹಾಗೆಯೇ ನಮ್ಮ ಎದೆಗೆ ಬಿದ್ದ ಅಕ್ಷರ ಅಂದರೆ ನಾವು ಕಲಿತ ವಿದ್ಯೆ / ಶಿಕ್ಷಣ ಇಂದಲ್ಲ ನಾಳೆ ಯಾವ ರೀತಿಯಲ್ಲಾದರೂ ಫಲ ಕೊಟ್ಟೇ ಕೊಡುತ್ತದೆ. ಏಕೆಂದರೆ ಶಿಕ್ಷಣವೇ ಉತ್ತಮ ಜೀವನದ ಸಂಜೀವಿನಿ.
******
೨) ಕವಿ ಸಿದ್ಧಲಿಂಗಯ್ಯ
ಕವಿ ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ 'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.ಶ್ರೀಯುತರು ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಆಯ್ದಕವಿತೆಗಳು, ಅಲ್ಲೆಕುಂತವರೆ ನನ್ನ ಜನಗಳು ಮತ್ತು ಇತರ ಕವಿತೆಗಳು ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ. ಊರು-ಕೇರಿ ಎಂಬುದು ಇವರ ಆತ್ಮಕಥೆ.
ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಇವರು ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
******
೩) ಗುಡಿಮನೆ : ದೇವರ ಗುಡಿ, ಚಿಕ್ಕದಾದ ದೇವಸ್ಥಾನ, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಣ್ಣ ದೇವಾಲಯಗಳನ್ನು ಗುಡಿ ಎಂದು ಕರೆಯುವುದು ವಾಡಿಕೆ.
******
೪) ಕಾರುಣ್ಯ ಸಮತೆಯ ಬುದ್ಧ :
ಗೌತಮ ಬುದ್ಧ
ಗೌತಮ ಬುದ್ಧನು ಕರುಣೆಯ ಪ್ರತೀಕವಾಗಿದ್ದನು. ಎಲ್ಲರನ್ನೂ ಯಾವುದೇ ಭೇದವಿಲ್ಲದೆ ಪ್ರೀತಿಯಿಂದ ಕಾಣಬೇಕೆಂದು ಬೋಧಿಸಿದ ಬುದ್ಧನು ಸ್ವತಃ ಅದೇ ರೀತಿ ಬದುಕಿದನು. ಎಲ್ಲರಲ್ಲಿ ಕರುಣೆ ಮತ್ತು ಸಮಾನತೆಯನ್ನು ತೋರಬೇಕು ಎಂಬುದು ಆತನ ಬೋಧನೆಯ ಪ್ರಮುಖ ಅಂಶಗಳಲ್ಲಿ ಒಂದು. ಆದ್ದರಿಂದ ಆತನ್ನು "ಕಾರುಣ್ಯ ಸಮತೆಯ ಬುದ್ಧ" ಎನ್ನಲಾಗಿದೆ.******
೫) ಶಿವಾನುಭವ ಶಬ್ದಕೋಶ : ಇದು 'ವಚನ ಪಿತಾಮಹ' ಎಂದು ಹೆಸರಾದ ಫ.ಗು.ಹಳಕಟ್ಟಿಯವರ ಕೃತಿ. ಇದರಲ್ಲಿ ವೀರಶೈವ ಧರ್ಮಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳ ಅರ್ಥವಿವರಣೆ ಮಾಡಲಾಗಿದೆ.
ಪ್ರಮುಖವಾಗಿ ಶರಣರ ವಿಚಾರಧಾರೆಗಳು, ಅವರ ವಚನಗಳ ಆಶಯ ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ವೀರಶೈವ ಧರ್ಮ ಹಾಗೂ ವಚನ ಸಾಹಿತ್ಯದಲ್ಲಿ ಕಂಡುಬರುವ ಹಲವಾರು ಪದಗಳಿಗೆ ಅರ್ಥ ಹಾಗೂ ವಿವರಣೆಯನ್ನು ಈ ಕೃತಿಯಲ್ಲಿ ಕಾಣಬಹುದು.
***********
೬) ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು: "ನುಡಿದಂತೆ ನಡೆಯಬೇಕು" ಎಂಬುದು ಶರಣರ ವಾಣಿ, ಅಂತೆಯೇ ನಡವಳಿಕೆಯಿಂದ ಒಳ್ಳೆಯ ನುಡಿ ಅಂದರೆ ಉತ್ತಮ ಮಾತು / ವಿಚಾರ ಹುಟ್ಟಬೇಕು. ಆಗ ಮಾತ್ರ ಅದನ್ನು ನಿಜವಾದ ಅರಿವು ಅಥವಾ ತಿಳಿವಳಿಕೆ ಎನ್ನಬಹುದು. ಎಂಬುದು ದೇವನೂರರ ಅಭಿಪ್ರಾಯ.
***********
೭) ಇಷ್ಟದೈವ : ಪ್ರತಿಯೊಬ್ಬರೂ ತಮ್ಮದೇ ಆದ ದೇವರನ್ನು ಆರಾಧಿಸುತ್ತಾರೆ. ಕುಲದೇವತೆ, ಮನೆದೇವತೆ, ಗ್ರಾಮದೇವತೆ ಎನ್ನುವಂತೆ ವ್ಯಕ್ತಿಗೆ ವೈಯಕ್ತಿಕವಾಗಿ ಇಷ್ಟವಾದ ದೇವರು ಅಥವಾ ಆರಾಧ್ಯ ದೇವರನ್ನು ಇಷ್ಟದೈವ ಎನ್ನಲಾಗಿದೆ.
ಬಸವಣ್ಣನವರ ಇಷ್ಟದೈವ ' ಕೂಡಲ ಸಂಗಮ ದೇವ', ಅಕ್ಕಮಹಾದೇವಿಯ ಅಂಕಿತನಾಮ 'ಚೆನ್ನಮಲ್ಲಿಕಾರ್ಜುನ' ಕನಕದಾಸರ ಆರಾಧ್ಯದೇವರು ಕಾಗಿನೆಲೆ ಆದಿಕೇಶವ, ಪುರಂದರ ದಾಸರ ಆರಾಧ್ಯದೇವರು 'ಪುರಂದರ ವಿಠಲ'.... ಹೀಗೆ ಅವರವರದೇ ಆದ ಇಷ್ಟದೈವ ಹೊಂದಿದ್ದುದನ್ನು ಕಾಣಬಹುದು. ಸಾಮಾನ್ಯವಾಗಿ ಅವರ ಇಷ್ಟದೈವವೇ ಅವರ ವಚನಗಳ / ಕೀರ್ತನೆಗಳ ಅಂಕಿತನಾಮವಾಗಿರುತ್ತಿತ್ತು.
*********
೮) ಮನೋವೈದ್ಯರು : ಮಾನಸಿಕ ರೋಗಿಗಳಿಗೆ ಸಂಬಂಧಿಸಿದ ತಜ್ಞವೈದ್ಯರನ್ನು ಮನೋವೈದ್ಯರು ಎನ್ನುವರು. ಇವರು ವ್ಯಕ್ತಿಯ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡುತ್ತಾರೆ. ಇವರನ್ನು "ಮಾನಸಿಕ ತಜ್ಞ" ಎಂದೂ ಕರೆಯುವರು. ಆಂಗ್ಲ ಭಾಷೆಯಲ್ಲಿ "Psychiatrist" (ಸೈಕಿಯಾಟ್ರಿಸ್ಟ್) ಎಂದು ಕರೆಯುವರು.
*********
೯) ಸಮಷ್ಟಿ ಮನಸ್ಸು : ಸಮಷ್ಟಿ ಎಂದರೆ ಸಮಗ್ರ, ವಿಶಾಲ ಎಂಬ ಅರ್ಥವಿದೆ. ಇಲ್ಲಿ ಸಮಷ್ಟಿ ಮನಸ್ಸು ಎಂದರೆ ಇಡೀ ಸಮಾಜದ / ಸಮುದಾಯದ / ಇಡೀ ವಿಶ್ವದ ಜನರ ಮನಸ್ಸು ಎಂದರ್ಥ.
*********
೧೦) ಮೂರ್ಛಾವಸ್ಥೆ : ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಪ್ರಮುಖವಾಗಿ ಮೂರು ಅವಸ್ಥೆಗಳನ್ನು ಕಾಣಬಹುದು. ೧. ಜಾಗೃತಾವಸ್ಥೆ (ಸಂಪೂರ್ಣ ಎಚ್ಚರದ ಸ್ಥಿತಿ), ೨. ಅರೆ ಸುಪ್ತಾವಸ್ಥೆ (ಅರೆಬರೆ ಎಚ್ಚರದ ಅವಸ್ಥೆ)
ಮತ್ತು ೩. ಮೂರ್ಛಾವಸ್ಥೆ (ನಾವು ಎಚ್ಚರವಾಗಿದ್ಧಾಗಲೂ ನಮ್ಮ ಅರಿವಿಗೆ ಬಾರದೆ ನಮ್ಮೊಳಗೆ ಅಡಗಿರುವ ತಿಳಿವಳಿಕೆ ಅಥವಾ ಜ್ಞಾನ)