ನಡುರಾತ್ರಿಯವರೆಗೂ ಕೆರೆ, ಬಾವಿ, ಹಳ್ಳದಗುಂಡಿ, ಕಾಡುಗಳಲ್ಲಿ ಹುಡುಕಿ ತಿಮ್ಮಿಯನ್ನೆಲ್ಲಿಯೂ ಕಾಣದೆ, ನಾನಾ ಊಹೆಗಳನ್ನು ತಲೆಯಲ್ಲಿ ಹೊತ್ತು ಹಿಂದಿರುಗುತ್ತಿದ್ದರು, ಬೆಟ್ಟಳ್ಳಿಯ ಹೊಲಗೇರಿಯವರು. ತಿಮ್ಮಿ ಒಯ್ದದ್ದು ಎಂದು ಅವಳ ಅವ್ವ ಸೇಸಿ ಗುರುತಿಸಿದ್ದ ಮಡಕೆಯೊಂದೇ ಅವರಿಗೆ ಸಿಕ್ಕಿದ್ದ ಕರಿಯ ಸಾಕ್ಷಿ. ಆದರೆ ಸೇಸಿಯ ಮೈಮೇಲೆ ಬಂದಿದ್ದ ಜಕ್ಕಿಣಿ ಕೊಟ್ಟಿದ್ದ ಭರವಸೆಯನ್ನು ಕೇಳಿ ಅನೇಕರಿಗೆ ಸಮಾಧಾನವಾಗಿತ್ತು. ಆ ದೈವವಾಣಿಯಲ್ಲಿ ಅಚಲಶ್ರದ್ಧೆಯಿಟ್ಟಿದ್ದ ತಿಮ್ಮಿಯ ತಂದೆ ದೊಡ್ಡಬೀರನಿಗಂತೂ ಧೈರ್ಯವೇ ಧೈರ್ಯ! ತನ್ನ ಮಗಳನ್ನು ಜಕಿಣಿ ಅಡಗಿಸಿಟ್ಟಿದೆ; ನಾಳೆ ಬಂದೇಬರುತ್ತಾಳೆ. ಜಕಿಣಿಗೆ ಸರಿಯಾಗಿ ಹರಕೆ ಹೊತ್ತರಾಯಿತು. ಜೊತೆಗೆ ಇನ್ನೊಂದು ಸಂಕಲ್ಪವೂ ಅವನ ತಲೆಗೆ ಹೊಕ್ಕಿತ್ತು: ತಲೆ ಮೇಲೆ ತಲೆಬಿದ್ದು ಹೋದರೂ ಹೋಗಲಿ, ಕಿಲಸ್ತರ ಜಾತಿಗೆ ಸೇರುವ ಆ ಬಚ್ಚನಿಗೆ ಖಂಡಿತ ಹೆಣ್ಣು ಕೊಡುವುದಿಲ್ಲ ಎಂದು.
ಆದರೆ ಆ ಧೈರ್ಯಕ್ಕೆ ಸಮಸ್ಪರ್ಧಿಯಾಗಿದ್ದ ಒಂದು ಮಹಾಸಂಕಟ ಮಾತ್ರ ಅವನನ್ನು ಬಿಟ್ಟಿರಲಿಲ್ಲ: ತನ್ನ ಮಗಳ ಮೈಮೇಲೆ ಹಾಕಿದ್ದ ‘ನಗ’ ಮಗಳ ಜೊತೆ ಹಿಂದಿರುಗುತ್ತದೆಯೋ ಇಲ್ಲವೋ ಎಂದು. ಅದೂ ಅವರಿವರನ್ನೂ ಬೆಟ್ಟಳ್ಳಿ ಒಡೆಯರನ್ನೂ ಕಾಡಿ ಬೇಡಿ ಕಡ ತಂದದ್ದು! ಅದನ್ನು ಮತ್ತೆ ಮತ್ತೆ ಹೆಂಡತಿಯೊಡನೆ ಹೇಳಿಕೊಂಡು, ಅವಳನ್ನು ರಂಡೆ ಮುಂಡೆ ಎಂದು ಬೈಯತೊಡಗಿದ್ದನು. ಸೇಸಿ ಅಲ್ಲಿ ಇಲ್ಲಿ ಹುಡುಕಿದಂತೆ ಮಾಡಿ, ಮಡಕೆಯಲ್ಲಿ ಗಂಟುಕಟ್ಟಿಹಾಕಿದ್ದ ಆ ‘ನಗ’ ವನ್ನು ತಂದು ‘ಜಕಿಣಿ ಅದನ್ನು ಇಲ್ಲೆ ಹಾಕಿ ಹೋಗ್ಯದೆ’ ಎಂದು ಹೇಳಿದಾಗ ಅವನ ಆನಂದಕ್ಕೆ ಪಾರವೆ ಇರಲಿಲ್ಲ. ಬೈಸಿಕಲ್ಲಿನ ಪ್ರಸಂಗದಿಂದಾಗಿದ್ದ ಪೆಟ್ಟುಗಾಯಗಳ ನೋವೂ ಅವನಿಗೆ ಮರೆತುಹೋದಂತಿತ್ತು. “ಇನ್ನು ಆ ಹಾಳುಮುಂಡೆ ಬಂದರೇನು ಬಿಟ್ಟರೇನು?” ಎಂದು ಮಗಳಿಗೆ ಶಾಪ ಹಾಕಿಯೂ ಬಿಟ್ಟಿದ್ದನು: ಅವಳ ರುಣಾ ಕಡೀಲಿ!”
ಇತ್ತ ಕೇರಿಯ ಸುತ್ತಮುತ್ತ ಅವಳ ಅನ್ವೇಷಣೆ ನಡೆಯುತ್ತಿದ್ದಾಗ ತಿಮ್ಮಿ ತನ್ನ ಮುಂದೆ ಅತ್ತಿತ್ತ ಬೀಸುತ್ತಾ ಉರಿಯುತ್ತಾ ಮತ್ತೆ ಉರಿ ಆರಿ ಕೆಂಡವಾಗುತ್ತಾ ಮತ್ತೆ ಬೀಸಿದಂತೆಲ್ಲ ಹೊತ್ತಿ ಉರಿಯುತ್ತಾ ಕಗ್ಗತ್ತಲೆಯಲ್ಲಿ ಬೇಗಬೇಗನೆ ಚಲಿಸಿ ಮುಂಬರಿಯುತ್ತಿದ್ದ ದೊಂದಿಯ ಹಿಂದೆ ಅದನ್ನನುಸರಿಸಿ ಬಿರಬಿರನೆ ನಡೆಯುತ್ತಿದ್ದಳು. ತಾನು ಹೋಗುತ್ತಿದ್ದುದು ಯಾವ ದಾರಿ? ಯಾವ ಊರು? ಎಲ್ಲಿಗೆ ಹೋಗುತ್ತಿದ್ದೇನೆ? ಎಂಬುದಾವುದೂ ಅವಳಿಗೆ ಗೊತ್ತಿರಲೂ ಇಲ್ಲ, ಗೊತ್ತು ಮಾಡಿಕೊಳ್ಳುವ ಗೋಜಿಗೆ ಹೋಗಲೂ ಇಲ್ಲ. ಕಣ್ಣಿಗೂ ಏನೆಂದೂ ಕಾಣಿಸುತ್ತಲೂ ಇರಲಿಲ್ಲ, ದೊಂದಿಯ ತುದಿಯ ಬೆಂಕಿ ವಿನಾ. ಅಂದರೆ ಹಳು ದಟ್ಟವಾಗುತ್ತಿದ್ದುದು ಮೈಗೆ ಕೀಸುವ ಪೊದೆಗಳಿಂದ ಗೊತ್ತಾಗುತ್ತಿತ್ತು. ದೊಂದಿ ಒಮ್ಮೊಮ್ಮೆ ಭಗ್ಗನೆ ಉರಿದಾಗ ತಾವು ಹೋಗುತ್ತಿದ್ದ ಕಾಡು ಎತ್ತರವಾಗಿದ್ದ ಮರಗಳಿಂದ ಕಿಕ್ಕಿರಿದದ್ದೂ ಗೊತ್ತಾಗುತ್ತಿತ್ತು. ಒಮ್ಮೊಮ್ಮೆ ನೀರು ಇರುವ ತಾಣದ ಸಮೀಪದಲ್ಲಿ ಹೋಗುವಾಗ ದೊಂದಿಯ ಪ್ರತಿಬಿಂಬ ಅದರಲ್ಲಿ ಪ್ರಜ್ವಲಿಸುತ್ತಿತ್ತು; ಸರಲಿನ ಜೌಗಿನಲ್ಲಿ ದಾಟುವಾಗ ಕೆಸರು ಸಿಡಿದು ದೊಂದಿಯ ಬೆಂಕಿ ಚುಂಯ್ಗುಡುತ್ತಿತ್ತು; ಕಪ್ಪೆಗಳು ಹೆದರಿ ಹಾರಿ ದೊಂದಿಯ ಬೆಳಕು ನೀರಿನ ಅಲೆಗಳಲ್ಲಿ ಕುಣಿಯುತ್ತಿತ್ತು; ಕೆಲವೆಡೆ ಹುಳು ಹಪ್ಪಟೆಗಳು ದೊಂದಿಗೆ ಮುತ್ತಿ ಸುಟ್ಟು ಸೀದು ಚಟಪಟ ಸಿಡಿಯುತ್ತಿದ್ದವು. ಆ ಕತ್ತಲೆಗೆ ಸರಿಸಮವಾಗಿ ಅಥವಾ ಒಂದು ಕೈ ಮೇಲಾಗಿಯೇ ಕರಗಿದ್ದ ಹುಲಿಯ ಒಮ್ಮೆ ಇವಳ ಹಿಂದೆಯೂ ಒಮ್ಮೆ ದೊಂದಿ ಹಿಡಿದು ಬೀಸುತ್ತಾ ಹೋಗುತ್ತಿದ್ದ ಗುತ್ತಿಯ ಮುಂದೆಯೂ, ಒಮ್ಮೆ ಆಕಡೆ ಈಕಡೆ ಪಕ್ಕದಲ್ಲಿಯೂ ಹಳುವಿನಲ್ಲಿ ಓಡಾಡುತ್ತಿದ್ದು ತಿಮ್ಮಿಗೆ ಧೈರ್ಯವಾಗಿತ್ತು. ಅದರ ಮೈ ಆ ಕತ್ತಲೆಯಲ್ಲಿ ಏನೇನೂ ಕಾಣಿಸದೆ ಇದ್ದಿತಾದರೂ ಒಮ್ಮೊಮ್ಮೆ ದೊಂದಿಯ ಬೆಳಕಿನ ಕಡೆಗೆ ಅದು ಮೋರೆ ತಿರುಗಿಸಿದಾಗ ಅದರ ಕಣ್ಣುಗಳು ಗೋಲಿಯ ಗಾತ್ರದ ಮಿಣುಕು ಹುಳುಗಳಂತೆ ಪಳಪಳ ಹೊಳೆಯುತ್ತಿದ್ದವು. ಹುಲಿಯನ ಓಡಾಟದ ದೆಸೆಯಿಂದ ಒಮ್ಮೊಮ್ಮೆ ಯಾವುದೊ ದೊಡ್ಡ ಪ್ರಾಣಿಯೊ ಪ್ರಾಣಿಗಳೊ ಹಳು ಸದ್ದಾಗುವಂತೆ ಧಾವಿಸುತ್ತಿದ್ದುದು ತಿಮ್ಮಿಗೆ ಉಸಿರುಕಟ್ಟಿ ಉಸಿರುಬಿಡುವಂತಾಗುತ್ತಿತ್ತು. ಹೋಗುತ್ತಾ ಹೋಗುತ್ತಾ ದಾರಿ ಕಡಿದಾಗಿ ಏರತೊಡಗಿತ್ತು. ಮುಂದಿನ ದೊಂದಿಯ ಬೆಳಕು ತನ್ನ ಮುಖಕ್ಕೆ ಕೆಳಗೆ ಅಥವಾ ಸಮನಾಗಿ ನೇರವಾಗಿರದೆ ತುಂಬಾ ಎತ್ತರದಲ್ಲಿ ಹೋಗುತ್ತಿದ್ದಂತೆ ಕಾಣತೊಡಗಿತ್ತು. ಕಾಲೂ ದಣಿದು ಜಾರುವಂತಾಗುತ್ತಿತ್ತು. ಉಸಿರೆಳೆದುಕೊಳ್ಳುವ ವೇಗ ಹೆಚ್ಚಿತ್ತು. ಈಗ ಅವರು ಹೋಗುತ್ತಿದ್ದುದು ಸಮೆದ ಕಾಲು ಹಾದಿಯಲ್ಲ ಎಂಬುದು ಅವಳ ಮನಸ್ಸಿಗೆ ಬಂದಿತ್ತು. ಸಣ್ಣಪುಟ್ಟ ಮುಳ್ಳು ಚುಚ್ಚಿದಾಗಲೆಲ್ಲ ಅವಳೇ ತುಸುಬಾಗಿ ಸಾಧ್ಯವಾದವುಗಳನ್ನು ತೆಗೆದು ಬಿಸಾಡಿದ್ದಳು. ಆದರೆ ಒಂದು ಉದ್ದವಾದ ಅಂಕೋಲೆ ಮುಳ್ಳು ಚುಚ್ಚಿದಾಗ ಮಾತ್ರ ನಡೆಯಲಾರದೆ ಕುಳಿತು “ಬಾವ!” ಎಂದು ಮೆಲ್ಲಗೆ ಅಳುದನಿಯಿಂದ ಕರೆದಿದ್ದಳು. ಗುತ್ತಿ ಹಿಂದಕ್ಕೆ ಬಂದು, ದೊಂದಿಯನ್ನು ಒಂದು ಹಸಿಗಿಡಕ್ಕೆ ಆನಿಸಿಟ್ಟು, ಅದರ ಬೆಳಕಿನಲ್ಲಿ ಅವಳ ಅಂಗಾಲಿಗೆ ಆಳವಾಗಿ ಚುಚ್ಚಿದ್ದ ಮುಳ್ಳನ್ನು ಸ್ವಲ್ಪ ಬಲಪ್ರಯೋಗಮಾಡಿಯೆ ಕಿತ್ತಿದ್ದನು. ರಕ್ತವೂ ಹರಿದಿತ್ತು. ನೋವು ಚೆನ್ನಾಗಿಯೆ ಆಗಿತ್ತು. ಆಮೇಲೆ ಅಂಗಾಲಿನ ಆ ಭಾಗವನ್ನು ಆದಷ್ಟು ಪ್ರಯತ್ನಪೂರ್ವಕವಾಗಿ ನೆಲಕ್ಕೆ ಊರದಂತೆ ನಡೆದಿದ್ದಳು.
ಹಾಗೆ ಕುಂಟಿ ಕುಂಟಿ ಗುತ್ತಿಯ ಹಿಂದೆ ಗುಡ್ಡ ಹತ್ತುತ್ತಿದ್ದಾಗಲೆ ನೆತ್ತರು ಹೆಪ್ಪುಗಟ್ಟುವಂತಹ ಆ ರುದ್ರ ಘಟನೆ ನಡೆದದ್ದು:
ಅದೇ ಸಮಯದಲ್ಲಿ, ಐತ ಪೀಂಚಲು ಇಬ್ಬರೂ ಅವರ ಬಿಡಾರದಲ್ಲಿ ಊಟ ಮುಗಿಸಿ ಈತನ ಬತ್ತಲೆ ಮೈಗೆ ಪೀಂಚಲು ತೆಂಗೆನೆಣ್ಣೆ ನೀವುತ್ತಿದ್ದದ್ದು: ಇದ್ದಕ್ಕಿದ್ದಹಾಗೆ ಹೆಬ್ಬುಲಿಯ ಆರ್ಭಟೆ ಕಂದರಾದ್ರಿವಿಲಿನಗಳನ್ನೆಲ್ಲ ಆಲೋಡಿಸಿತ್ತು; ದೊಡ್ಡಿನ ಹಿಂಡು ಭೂಮಿಯನ್ನೆಲ್ಲ ಗುಡುಗಿಸುವಂತೆ ಓಡಿದ ಸದ್ದಾಗಿತ್ತು! ಐತ ಕಮ್ಮಾರಸಾಲೆಯಲ್ಲಿ ದೊಂದಿ ಹೊತ್ತಿಸಿಕೊಂಡು ಸಿಂಬಾವಿಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಗುತ್ತಿಯನ್ನು ನೆನೆದು, ಅವನ ಸುರಕ್ಷತೆಗೆ ಕಾತರನಾಗಿ ಪೀಂಚಲುವಿಗೆ ಹೇಳಿದ್ದನು: “ಏನಿರಬೇಕು ಅವನ ಎದೆ? ಆ ಹುಲಿಕಲ್ನೆತ್ತಿ, ಬೆತ್ತದಸರ, ಎಲ್ಲಾ ದಾಟಿಕೊಂಡು ಹೋಗಬೇಕಲ್ಲಾ!” ಎಂದು.
ತಟಕ್ಕನೆ ನಿಂತನು ಗುತ್ತಿ. ಕಿವಿಗೊಟ್ಟನು. ಹುಬ್ಬು ನಿಮಿರಿತು. ಹಣೆ ಬಿತ್ತರಿಸಿತು. ಉಸಿರು ಒಮ್ಮೆಗೆ ನುಗ್ಗಿ ಶ್ವಾಸಕೋಶ ಹಿಗ್ಗಿ ತುಂಬಿತು ಕ್ಷಣಾರ್ಧದಲ್ಲಿ ಗ್ರಹಿಸಿತ್ತು ಅವನ ಬೇಟೆಗಾರ ಮನಸ್ಸು, ನಡೆಯುತ್ತಿದ್ದುದು ಏನು ಎಂದು. ತೆಕ್ಕನೆ ತಿರುಗಿ, ಜೀವ ಹಾರಿಹೋಯಿತೋ ಎಂಬಂತೆ ಹೆದರಿ ಹೌವ್ವನೆ ಹಾರಿ ತನ್ನನ್ನು ಒತ್ತಿ ನಿಂತಿದ್ದ ತಿಮ್ಮಿಯನ್ನು ಬಳಿಯಿದ್ದ ಒಂದು ಹೆಮ್ಮರದ ಬುಡಕ್ಕೆ ಎಳೆದು ನಿಲ್ಲಿಸಿ, ಅವಳಿಗೆ ಅಡ್ಡಲಾಗಿ ನಿಂತು, ಕೈಯಲ್ಲಿದ್ದ ದೊಂದಿಯನ್ನು ಬೀಸುತ್ತಲೆ, ಉಜ್ವಲಗೊಳಿಸಿದನು. ದೊಂದಿಯ ತುದಿಯ ಅಗ್ನಿಜ್ವಾಲೆ ಆ ಕತ್ತಲೆಯಲ್ಲಿ ಅಲಾತಚಕ್ರದಂತೆ ಹಿಂದಕ್ಕೂ ಮುಂದಕ್ಕೂ ಬೆಂಕಿಗೆರೆ ಎಳೆಯುತ್ತಿತ್ತು. ಅವರಿಬ್ಬರೂ ಹಿಂಬದಿಯ ರಕ್ಷೆಯಾಗಿತ್ತು ಆ ಪ್ರಕಾಂಡ ವೃಕ್ಷದ ದಿಂಡು. ಮುಂದುಗಡೆ ರಕ್ಷೆಯಾಗಿತ್ತು, ಬೀಸುತ್ತಿದ್ದ ದೊಂದಿಯ ಹಿಲಾಲು: ಹುಲಿಯಾಗಲಿ ಹಂದಿಯಾಗಲಿ ಕರಡಿಯಾಗಲಿ ದೊಡ್ಡೆ ಆಗಲಿ ಉರಿಯುವ ಬೆಳಕಿಗೆ ಅಂಜಿ ಅದರ ಬಳಿಸಾರುವುದಿಲ್ಲ – ಎಂಬುದು ಗುತ್ತಿಗೆ ಚೆನ್ನಾಗಿ ಗೊತ್ತಿತ್ತು: ಆ ಧೈರ್ಯದಿಂದಲೆ ಅವನು ತಿಮ್ಮಿಗೆ ‘ಹೆದರಬೇಡ, ಹಂದದೆ ಸುಮ್ಮನೆ ನಿಂತುಕೊ’ ಎಂದು ಎಚ್ಚರಿಕೆ ಹೇಳಿದ್ದನು.
ಕಾಡಿನಲ್ಲಿ ಹೆಬ್ಬುಲಿಯ ಅಬ್ಬರವನ್ನು ಹತ್ತಿರದಿಂದ ಕೇಳಿದವರಿಗೆ ಮಾತ್ರ ಗೊತ್ತು, ಗಿಡ ಮರ ಕಾಡು ಬೆಟ್ಟ ನೆಲ ಎಲ್ಲ ನಡುಗುತ್ತವೆ ಎಂಬುದರ ಅರ್ಥ! ತಿಮ್ಮಿಯೇನೊ ಹೆದರಿಯೆ ಸತ್ತು, ತೊಳ್ಳೆ ನಡುಗುತ್ತಾ, ನಿಲ್ಲಲೂ ಆರದೆ, ಮರದಬುಡಕ್ಕೆ ಒತ್ತಿ ಕುಸಿದು ಕೂತಿದ್ದಳು. ಆದರೆ ಗುತ್ತಿಗೆ ಎದೆನಡುಕವೇನೂ ಇರಲಿಲ್ಲ. ಆ ಅಪಾಯ ಒಂದೆರಡು ನಿಮಿಷಗಳಲ್ಲಿಯೆ ಬಂದ ದಾರಿ ಹಿಡಿದು ಹೋಗುತ್ತದೆ ಎಂಬುದರಲ್ಲಿ ಅವನಿಗೆ ಸಂದೇಹವೂ ಇರಲಿಲ್ಲ; ಆದ್ದರಿಂದ ಅವನೇನೂ ನಡುಗುತ್ತಿಲಿಲ್ಲ. ಕಾಡು ಭೂಮಿ ಬೆಟ್ಟ ಬಂಡೆಗಳೆಲ್ಲ ನಡುಗುತ್ತಿದ್ದುದಕ್ಕೆ ಅವನ ನಡುಕದ ಕಾರಣ ಇನಿತೂ ಇರಲಿಲ್ಲ, ಅವೇ ನಿಜವಾಗಿಯೂ ನಡುಗುತ್ತಿದ್ದುವು. ಅಲ್ಲಿ ಹೆದರಿಕೊಳ್ಳುವುದಕ್ಕೆ ಯಾವ ಸಚೇತನ ಜೀವಿಯೂ ಇರದೆ ಇದ್ದಿದ್ದರೂ ಆ ಪ್ರಕಂಪನ ವ್ಯಾಪಾರ ಭೌತಮಾತ್ರವಾಗಿಯೂ ನಡೆಯುತ್ತಿತ್ತು:
ಹಾಗಿತ್ತು ಆ ಹೆಬ್ಬುಲಿಯ ಆರ್ಭಟ!
ಅದಕ್ಕೆ ಸಮಸ್ಪರ್ಧಿಯಾಗಿ, ನಿಮಿಷಾರ್ಧದಲ್ಲಿಯೆ ಮೊಳಗಿಬಂದಿತ್ತು, ದೊಡ್ಡಿನ ಹಿಂಡು ನುಗ್ಗಿ ಧಾವಿಸಿಬರುತ್ತಿದ್ದ ಮಹಾಸದ್ದು, ಸಣ್ಣ ಪುಟ್ಟ ಮರ ಗಿಡ ಹಳುಗಳೆಲ್ಲ ನುಚ್ಚುನುರಿಯಾಗಿ ನೆಲಸಮವಾಗುವಂತೆ. ಹತ್ತಿರದಲ್ಲಿಯೇ ಸಿಡಿಲು ಬಡಿದಿದ್ದರೆ ಆಗಬಹುದಾದ ಅನುಭವವಾಗಿತ್ತು ಗುತ್ತಿಗೂ! ಹತ್ತೋ ಇಪ್ಪತ್ತೋ ಎಷ್ಟೋ ಕಾಡುಕೋಣ ಕಾಡೆಮ್ಮೆಗಳು ದಿಡು ದಿಡು ಎಂದು ಇವರು ಆಶ್ರಯಿಸಿ ನಿಂತಿದ್ದ ಹೆಮ್ಮರದ ದಿಕ್ಕಿಗೆ ಮಲೆಯ ನೆತ್ತಿಯಿಂದ ಕೆಳಕ್ಕೆ ಧಾವಿಸಿ ಬರುತ್ತಿದ್ದಂತೆ ತೋರಿತು. ಗುತ್ತಿಯ ನಾಯಿ, ಹುಲಿಯ, ಪ್ರಾರಂಭದಲ್ಲಿ ಒಂದೆರಡು ಸೊಲ್ಲು ಬೊಗುಳಿ ಕಾಡಿನೊಳಕ್ಕೆ ನುಗ್ಗಿ ಹೋದದ್ದು, ಮತ್ತೆ ಹಿಂದಕ್ಕೆ ಓಡಿ ಬಂದು ಗುತ್ತಿಯ ಮುಂದೆಯೆ ನಿಂತು ಸದ್ದು ಬರುತ್ತಿದ್ದ ದಿಕ್ಕಿನಕಡೆಗೆ ಮೊಗಮಾಡಿ ಬೊಗುಳತೊಡಗಿತ್ತು. ಆದರೆ ಆ ಹೆಬ್ಬುಲಿಯ ಕೂಗಿನ ಮತ್ತು ದೊಡ್ಡುಗಳ ನುಗ್ಗಿನ ಭಯಂಕರ ರಾವದ ಇದಿರು ನಾಯಿಯ ಬೊಗಳು ನಗಣ್ಯವಾಗಿಬಿಟ್ಟಿತು.
ಬಂತು! ಬಂತು! ಅದೊ ಹತ್ತಿರಕ್ಕೆ ಬರುತ್ತಿವೆ! ಕಣ್ಣಿಗೇನೂ ಕಾಣಿಸದು. ಬೀಸುತ್ತಿದ್ದ ದೊಂದಿಯ ಕೆಂಬಳಕಿನಲ್ಲಿ ಅದೊಂದೇ ನಯನೇಂದ್ರಿಯ ವಿಷಯವಾಗಿತ್ತು. ಇನ್ನು ಕರ್ಣೇಂದ್ರಿಯ? ಅದೂ ತನ್ನ ಅಳವಿಗೆ ಮೀರಿದ್ದ ಸಿಡಿಲು ಸದ್ದಿನ ಮಹಾ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು, ಮುರ್ಛೆಹೋದಂತಿತ್ತು.
ದೊಡ್ಡಿನ ಹಿಂಡು ನುಗ್ಗುವ ರಭಸಕ್ಕೆ ಸಿಡಿಲು ಕಲ್ಲು ಮಣ್ಣು ಇವರು ನಿಂತಿದ್ದೆಡೆಗೆ ಹಾರಿಬರತೊಡಗಿತು. ಅವುಗಳ ವೇಗದಿಂದ ಉದ್ಭವವಾದ ಗಾಳಿಯೂ ಬಳಿ ಸಾರಿದಂತೆ ಅನುಭವ! ಗುತ್ತಿ, ನರ ಬಿಗಿದು, ಕಾಲಗಲಿಸಿ ದೃಢವಾಗಿ ನಿಂತು, ಒಂದೇ ಸಮನೆ ದೊಂದಿಯನ್ನು ಬೀಸತೊಡಗಿದ್ದನು! ನುಗ್ಗಿ ಬರುತ್ತಿದ್ದ ಪ್ರಾಣಿಗಳಿಗೆ ಅದು ಹೇಗೆ ಕಾನಿಸಿತೋ ಆ ಕತ್ತಲಲ್ಲಿ? ಇದ್ದಕ್ಕಿದ್ದಹಾಗೆ, ಗುತ್ತಿಯ ದೊಂದಿಯ ಜ್ವಾಲೆ ಪ್ರತಿಫಲಿಸಿತೆಂದು ತೋರುತ್ತದೆ, ಹಳುವಿನ ನಡುನಡುವೆ ಹಲವಾರು ಹೆಗ್ಗಣ್ಣು ಫಳಫಳಫಳನೆ ಹೊಳೆದಂತಾಗಿ, ಒಡನೆಯೆ, ಬೆಂಕಿ ಬೆದರಿ ಅವು ದಿಕ್ಕು ಬದಲಾಯಿಸಿದ್ದರಿಂದ, ಮಾಯವಾಗಿದ್ದುವು. ಸದ್ದುಹೊಳೆ ಬೇರೆ ದಿಕ್ಕಿಗೆ ಹರಿಯತೊಡಗಿ, ಬರಬರುತ್ತಾ ಕ್ಷೀಣವಾಗಿ, ಮೂರು ನಾಲ್ಕು ನಿಮಿಷಗಳಲ್ಲಿ ಕಾಡು, ಅತ್ಯಂತ ಅಸ್ವಾಭಾವಿಕವೊ ಎಂಬಂತೆ, ಗಾಢವಾಗಿ ನಿಃಶಬ್ದವಾಗಿಬಿಟ್ಟಿತ್ತು. ಹುಲಿಯನ ನಾಲಗೆಯೂ ಅದರ ಗಂಟಲಿನಲ್ಲಿ ಹುದುಗಿ ಮೌನವಾಗಿತ್ತು. ನಡೆದ ಘಟನೆಯ ಭೀಷಣ ಭವ್ಯಾನುಭವಕ್ಕೆ ಸ್ತಂಭೀಭೂತವಾದಂತೆ!
ಹೆದೆಯೇರಿದ ಬಿಲ್ಲಿನಂತೆ ಬಿಗಿದುನಿಂತಿದ್ದ ಮೈಯನ್ನು ಸಡಿಲಿಸಿ, ಶ್ವಾಸಕೋಶ ತುಂಬುವಂತೆ ದೀರ್ಘವಾಗಿ ಉಸಿರೆಳೆದು ಬಿಡುತ್ತಾ, ಗುತ್ತಿ ತಿಮ್ಮಿಯ ಯೋಗಕ್ಷೇಮ ಪರಿಶೀಲನೆಗೆ ತಿರುಗಿದನು. ಅವಳು ಮರದ ಬುಡದಲ್ಲಿ ಮುದ್ದೆಯಾಗಿ ಕೂತಿದ್ದಳು. ಕರೆದರೆ ಮಾತಾಡಲಿಲ್ಲ. ಪಿಳಪಿಳನೆ ಕಣ್ಣುಬಿಟ್ಟು ಅವನ ಕಡೆಗೆ ನೋಡುತ್ತಿದ್ದಳು. ಭೀತಿಮೂಕೆಯಾಗಿದ್ದ ಅವಳಿಗೆ ಮಾತು ನಿಂತುಹೋಗಿತ್ತು. “ಹೆದರಬ್ಯಾಡೆ, ಏಳು, ಬೇಗ ಹೋಗಾನ” ಎಂದು ಮೆಲ್ಲನೆ ಎತ್ತಿ ನಿಲ್ಲಿಸಿದನು. ಅವಳ ಕಾಲುನಡುಕ ಇನ್ನೂ ನಿಂತಿರಲಿಲ್ಲ; ತಾನು ಹಿಡಿದಿದ್ದ ಬುತ್ತಿ ಇರುವ ಗಂಟನ್ನು ಮಾತ್ರ ಭದ್ರವಾಗಿ ಎದೆಗೆ ಅವುಚಿಕೊಂಡಿದ್ದಳು. ಅವಳನ್ನು ನಡೆಸಿಕೊಂಡು ನಿಧಾನವಾಗಿ ಗುಡ್ಡವೇರಿದನು.
ಸ್ವಲ್ಪದೂರ ಹೋದಮೇಲೆ ಗುಡ್ಡದ ಕಡಿಪು ಕಡಿಮಾಯಾಗ ತೊಡಗಿ, ಕಡೆಗೆ ಸಮತಟ್ಟಾಗುತ್ತಾ ಬಂದಿತು. ಇನ್ನೂ ಸ್ವಲ್ಪ ಮುಂದೆ ಹೋದಮೇಲೆ ಮರಗಳೂ ವಿರಳವಾಗಿ, ಹಳು ಹಕ್ಕಲಾದಂತೆ ತೋರಿ, ಕಡೆಗೆ ಬಂಡೆಯ ಹಾಸುಗಲ್ಲಿನ ಮೇಲೆ ನಿಂತಾಗ ನೆತ್ತಿಯ ಮೇಲೆ ಆಕಾಶವು ಕಾಣಿಸತೊಡಗಿತು. ಚುಕ್ಕಿ ಕಿಕ್ಕಿರಿದು, ಕಾಡಿನ ಒಳಗಿದ್ದ ಕಗ್ಗತ್ತಲೆಗೆ ಬದಲಾಗಿ ನಕ್ಷತ್ರ ಕಾಂತಿಯ ಮಬ್ಬುಗತ್ತಲೆ ಹಬ್ಬ, ವಸ್ತುಗಳ ಬಹಿರಾಕಾರಗಳೂ ಮಂಜು ಮಂಜಾಗಿ ಕಾಣಿಸುತ್ತಿದ್ದುವು. ಅವರು ನಿಂತಿದ್ದ ಎತ್ತರಕ್ಕೆ ದಿಗಂತವು ಸುತ್ತಲೂ ವಿಸ್ತಾರವಾಗಿ ಹಿಂದಕ್ಕೆ ಸರಿದು, ದೂರದೂರದ ಪರ್ವತಶ್ರೇಣಿಗಳ ಮಷೀಮಯ ರೂಪಗಳಲ್ಲಿ ಕೊನೆಗೊಂಡಿತ್ತು.
“ಇದೇ ಹುಲಿಕಲ್ಲು ನೆತ್ತಿ ಕಣೇ!” ಎಂದನು ಗುತ್ತಿ.
ತಿಮ್ಮಿ ಮಾತಾಡಲಿಲ್ಲ. ಅವಳು ಒಂದು ಬಂಡೆಯ ಮೇಲೆ ವಿಶ್ರಮಿಸಿಕೊಳ್ಳುವಂತೆ ಕುಳಿತಿದ್ದಳು. ಕೇರಿಯಿಂದ ಹೊರಡುವಾಗ ಅವಳಿಗಿದ್ದ ಪ್ರಣಯೋತ್ಸಾಹದ ಸಾಹಸವೆಲ್ಲ ಉಡುಗಿಹೋಗಿತ್ತು. ಇಷ್ಟು ಹೊತ್ತಿಗೆ ಬಿಡಾರದಲ್ಲಿ ಅವ್ವನ ಮಗ್ಗುಲಲ್ಲಿ ಸುಖವಾಗಿ ನಿದ್ದೆ ಮಾಡುತ್ತಾ ಮಲಗಿರುತ್ತಿದ್ದೆನಲ್ಲಾ ಎನ್ನಿಸಿ ಅವಳ ಮನಸ್ಸಿನಲ್ಲಿ ಪಶ್ಚಾತಾಪ ಮೂಡತೊಡಗಿತ್ತು. ಅವಳು ಹೊರಟಾಗ ಈ ಕಾಡು, ಹಳು, ಬೆಟ್ಟ, ಪಯಣದ ದಣಿವು, ಹುಲಿ, ದೊಡ್ಡು, ಪ್ರಾಣಕ್ಕೆ ಒದಗಲಿದ್ದ ಭಯ ಇವುಗಳನ್ನೆಲ್ಲ ನಿರೀಕ್ಷಿಸಿರಲಿಲ್ಲ. ನೆಟ್ಟಗೆ ಸಿಂಬಾವಿಗೆ ಹೋಗಿ, ಅಲ್ಲಿಯ ಕೇರಿಯಲ್ಲಿ ಅತ್ತೆ ಮಾವಂದಿರೊಡನೆ ಇದ್ದುಬಿಡುತ್ತೇನೆ ಎಂದು ಊಹಿಸಿದ್ದಳು.
“ಏನೆ ಪೂರಾ ಸಾಕಾಗಿ ಹೋಯ್ತೇನೆ?” ಗುತ್ತಿ ಅವಳ ಸ್ಥಿತಿಯನ್ನು ಕಂಡು ಸ್ವಲ್ಪ ಚಿಂತೆಯಿಂದಲೆ ಕೇಳಿದನು.
“ಇನ್ನೆಷ್ಟು ದೂರ ಅದೆ ಸಿಂಬಾವಿ?” ದಣಿದ ದನಿಯಿಂದ ತಿಮ್ಮಿ ಕೇಳಿದಳು.
“ಸುಮಾರು ದೂರ ಅದೆ.”
“ನಮ್ಮ ಮನೀಗೇ ಹೋಗಾನ.”
ಗುತ್ತಿಗೆ ದಿಗ್ಭ್ರಾಂತಿ. ಅವಳು ಹೇಳಿದ್ದನ್ನು ನಂಬಲಾರದೆ ಹೋದನು. ಅವಳು ಹೇಳಿದುದರ ಅರ್ಥ ಹಾಗಾರಲಿಕ್ಕಿಲ್ಲ ಎಂದು ಆಶಿಸಿ “ಏನು?” ಎಂದು ಪ್ರಶ್ನಿಸಿ ಉತ್ತರಕ್ಕೆ ಕಾತರನಾಗಿ ಕಿವಿಗೊಟ್ಟಿದ್ದನು.
“ನಮ್ಮ ಮನೀಗೇ ಹೋಗಾನ!” ಪುನರುಚ್ಚರಿಸಿದ್ದಳು ತಿಮ್ಮಿ, ಈ ಸಾರಿ ತುಸು ಅಳುದನಿಯಿಂದ.
“ಮನೀಗೆ ಅಂದ್ರೆ? ನಿಮ್ಮ ಕೇರಿಗಾ?”
“ಹ್ಞೂ!”
“ಹೋದ್ರೆ ನಿನ್ನ ಅಪ್ಪ ಕೊಚ್ಚಿಹಾಕ್ತಾನೆ.”
“ಕೇರಿಹತ್ರ ಬಿಟ್ಟುಹೋಗಿಬಿಡು ನೀನು. ನಾ ಬಿಡಾರಕ್ಕೆ ಹೋಗಿ ಅವ್ವನ್ನ ಕರೆದೆಬ್ಬಿಸ್ತೀನಿ….”
“ಎಲ್ಲಿಗೆ ಹೋಗಿದ್ದೆ ಅಂತ ಕೇಳೀದ್ರೆ ನಿನ್ನಪ್ಪ?”
“ದೆಯ್ಯ ಅಡಗಿಸಿತ್ತು ಅಂತಾ ಹೇಳ್ತೀನಿ.”
“ನಂಬತಾರೇನೆ?”
“ಅವತ್ತೊಂದು ಸಲ ಹಾಂಗೆ ಹೇಳಿದ್ದೆ; ನೆಂಬಿದ್ರು.”
“ಓಡಿಹೋಗಿದ್ದೇನೆ? ಯಾರ ಜೋತೇಲೆ? ಯಾಕೇ? ಯಾವಾಗ್ಲೆ?” ಗುತ್ತಿಯ ಪ್ರಶ್ನೆಗಳಲ್ಲಿ ಸಂಶಯ, ಮಾತ್ಸರ್ಯ, ಕೋಪಚ್ಛಾಯೆ ಎಲ್ಲ ಇದ್ದುವು.
ಆದರೆ ತಿಮ್ಮಿ ಮಾತಾಡಲೆ ಇಲ್ಲ. ಗುತ್ತಿ ಸ್ವಲ್ಪಹೊತ್ತು ಉತ್ತರಕ್ಕಾಗಿ ಕಾದು, ಮತ್ತೆ ನಿರ್ಣಾಯಕವಾಗಿ ಹೇಳಿದನು: “ಈಗ ಹಿಂದಕ್ಕೆ ಹೋಗಾದು ಬಂದಿದ್ದಕ್ಕಿಂತಲೂ ಕಷ್ಟ. ಮುಂದಕ್ಕೆ ಹೋಗಾದು ಬ್ಯಾಡ. ಈಗ್ಲೆ ನಿಂಗೆ ಸಾಕಾಗದೆ. ನಾಳೆ ಹೊತಾರೆ ಯಾವುದೋ ಯೇಚ್ನೆ ಮಾಡಾನ. ಈಗ ಏಳು, ಬಾ, ಹೇಳ್ತೀನಿ.”
ತಿಮ್ಮಿ ಎದ್ದು ಹಿಂಬಾಲಿಸಿದಳು. ಗುತ್ತಿ ಸ್ವಲ್ಪ ಹೊತ್ತಿನಲ್ಲಿಯೆ, ದೊಡ್ಡಬೇಟೆಯಲ್ಲಿ ಹಳು ನುಗ್ಗಿದಾಗಲೆಲ್ಲ ಅವನು ಕಾಣುತ್ತಿದ್ದ ಒಂದು ಪಾಳು ಗುಡಿಯ ಮಂಟಪಕ್ಕೆ ಬಂದನು. ಅದು ಹುಲಿಕಲ್ಲು ನೆತ್ತಿಯ ದಕ್ಷಿಣಭುಜದಲ್ಲಿದ್ದ ಒಂದು ಕಲ್ಲು ಕಟ್ಟಡವಾಗಿತ್ತು. ನಗರ ಸಂಸ್ಥಾನದ ಶಿವಪ್ಪನಾಯಕನ ಕಾಲದಲ್ಲಿಯೊ ದುರ್ಗದ ಪಾಳೆಯಗಾರರ ಕಾಲದಲ್ಲಿಯೊ ಅದು ಕಾವಲು ಮಂಟಪವಾಗಿತ್ತು ಎಂದು ಹೇಳುತ್ತಿದ್ದರು. ಈಗ ಅದರ ಸುತ್ತ ಹಳು ಬೆಳೆದು ಹುಲಿಕಲ್ಲು ನೆತ್ತಿಯ ಕಾಲುದಾರಿಯಲ್ಲಿ ತಿರುಗಾಡುವವರ ಊಹೆಗೂ ಅತೀತವಾಗುವಷ್ಟರ ಮಟ್ಟಿಗೆ ಅಗೋಚರವಾಗಿತ್ತು. ಬೇಟೆಯಲ್ಲಿ ಹಳುನುಗ್ಗುವವರಿಗೆ ಮಾತ್ರವೆ ಅದರ ಇರವು ಗೊತ್ತಾಗಲು ಸಾಧ್ಯವಾಗಿತ್ತು. ಬಿಲ್ಲಿನವರೂ ಕೂಡ ಅದರ ವಿಚಾರ ಕೇಳಿದ್ದರೆ ಹೊರತೂ ಕಂಡಿರಲಿಲ್ಲ.
ಮಂಟಪದ ಹತ್ತಿರ ಬಿದ್ದಿದ್ದ ಮರದ ಒಣಗು ಹರೆಗಳನ್ನು ಒಟ್ಟುಹಾಕಿ ದೊಂದಿಯಿಂದ ಬೆಂಕಿ ಹೊತ್ತಿಸಿದನು. ಆ ಬೆಂಕಿಯ ಬೆಳಕು ಮಂಟಪದ ಒಳಗಡೆಯನ್ನೂ ಮುಟ್ಟುತ್ತಿತ್ತು. ತರಗು, ಹುಲ್ಲು, ಕಸಕಡ್ಡಿ, ಕಾಡುಪ್ರಾಣಿಗಳ ಹಿಕ್ಕೆ, ಸೆಗಣಿ, ಒಂದೆರಡು ಕಡೆ ಕಲ್ಲುಬಿರುಕಿನಲ್ಲಿ ಹುಟ್ಟಿಕೊಂಡಿದ್ದ ಯಾವುದೊ ಜಾತಿಯ ಕಾಡುಗಿಗ ಎಲ್ಲ ಆ ಬೆಳಕಿನಲ್ಲಿ ಕಾಣಿಸಿಕೊಂಡುವು. ಆದರೆ ಗುತ್ತಿಗೆ ಗೊತ್ತಿದ್ದ ಪ್ರತೀತಿಯಂತೆ ಅಲ್ಲಿ ಹುಲಿ ಮಲಗಿರಲಿಲ್ಲ ಹಾವು ಗೀವು ಇದ್ದಾವು ಎಂದು ದೊಣ್ಣೆ ಆಡಿಸಿ ನೋಡಿದನು. ಒಂದು ಇಲಿ ಮಾತ್ರ ಎದ್ದು ಹೊರಗೆ ಓಡಿತು. ತಮಗೆ ಮಲಗುವುದಕ್ಕೆ ಎಂದು ಸ್ವಲ್ಪ ಸ್ಥಳವನ್ನು ಇಬ್ಬರೂ ಸೇರಿ ಗುಡುಸಿಕೊಂಡರು.
ಆಗಲೆ ಅರ್ಧ ರಾತ್ರಿಯ ಮೇಲೆ ಹೊತ್ತಾಗಿತ್ತು. ತಿಮ್ಮಿಗೆ ಕಣ್ಣು ಕುಗುರುಹತ್ತಿತ್ತು. ಹಸಿವು ಬೇರೆ. ಆದರೆ ಹಸಿವಿಗಿಂತಲೂ ಹೆಚ್ಚಾಗಿ ಬಾಯಾರಿಕೆ. ಊಟಕ್ಕೇನೊ ಬುತ್ತಿಯಿತ್ತು. ಆದರೆ ಈ ಗಿರಿನೆತ್ತಿಯಲ್ಲಿ ನೀರು? ಎಲ್ಲಿ ಸಿಕ್ಕುತ್ತದೆ? ನೀರನ್ನು ತರುವುದಕ್ಕಾದರೂ ಪಾತ್ರೆ?
ತುಟಿಯನ್ನು ನಾಲಗೆಯಿಂದ ಸವರಿಕೊಳ್ಳುತ್ತಾ ಕುಗ್ಗಿದ ದನಿಯಲ್ಲಿ ತಿಮ್ಮಿ “ನಂಗೆ ಬಾಳ ಆಕರ ಆಗ್ಯದೆ” ಎಂದಳು.
ಗುತ್ತಿ ಸ್ವಲ್ಪ ಹೊತ್ತು ಆಲೋಚಿಸುವಂತೆ ನಿಂತು “ಇಲ್ಲಿ ಎಲ್ಲೋ ಒಂದು ದೊಣೆ ಇದ್ಹಾಂಗಿತ್ತಪ್ಪಾ? ಆವೊತ್ತು ಹಳು ನುಗ್ಗಿ ಆಕರ ಬಂದಾಗ ನೀರು ಕುಡಿದಿದ್ದು. ನೋಡ್ಕೊಂಡು ಬತ್ತೀನಿ. ನೀ ಏನು ಹೆದರಿಕೊ ಬ್ಯಾಡ. ಬೆಂಕಿ ಉರಿತಿದ್ರೆ ಅದರ ಹತ್ರ ಜೀಂವಾದಿ ಯಾವುದೂ ಬರಾದಿಲ್ಲ. ಹುಲಿಯನ್ನ ಇಲ್ಲೆ ಕೂರಿಸಿಕೊ” ಎಂದು ದೊಂದಿ ಬೀಸುತ್ತಾ ಕೆಳಗೆ ಹೋದನು. ತಿಮ್ಮಿ ಹುಲಿಯನ್ನು ಹತ್ತಿರಕ್ಕೆ ಕರೆದು ತಲೆ ಸವರತೊಡಗಿದಳು, ಅದರ ಕೊರಳನ್ನು ತಬ್ಬಿಹಿಡಿದು, ಪ್ರೀತಿಯಿಂದೇನಲ್ಲ, ಗುತ್ತಿಯ ಹಿಂದೆ ಓಡಿಹೋಗದೆ ತನ್ನೆಡೆಯೇ ಇರಲಿ ಎಂದು.
ಅಲ್ಲಿಯೆ ತುಸು ಕೆಳಗೆ ಹಾಸುಬಂಡೆಯ ಮಧ್ಯೆ, ನಿಸರ್ಗವೆ ತೋಡಿದ್ದ ಬಾವಿಯಂತೆ ಇದ್ದ ಕಲ್ಲು ಹೊಂಡದಲ್ಲಿ ತಿಳಿಯಾಗಿದ್ದ ನೀರನ್ನು ಗುತ್ತಿ ಬೆಟ್ಟಬಾಳೆಯ ಎಲೆಯಲ್ಲಿ ಮಾಡಿದ ದೊನ್ನೆಯಲ್ಲಿ ಎತ್ತಿ ತಂದನು. ತಿಮ್ಮಿ ಅದನ್ನೆಲ್ಲ ಒಂದೆ ಏಟಿಗೆ ಕುಡಿದುಬಿಟ್ಟಳು. ನೀರು ಕುಡಿದ ಮೇಲೆ ಅವಳಿಗೆ ಜೀವ ಬಂದಂತಾಗಿ ಸ್ವಲ್ಪ ಚಟುವಟಿಕೆಯಾದಳು.
ತಿಮ್ಮಿಯೆ ಬುತ್ತಿ ಬಿಚ್ಚಿದಳು. ಇಬ್ಬರೂ ಉಂಡು, ತಮ್ಮ ಬಾಯಿಕಡೆಗೆ ನೋಡುತ್ತಲೆ ಕುಳಿತಿದ್ದ ಹುಲಿಯನಿಗೂ ಒಂದಷ್ಟು ಹಾಕಿದರು. ಊಟಮಾಡಿದ ಮೇಲೆ ಇಬ್ಬರೂ ದೊಣೆಯ ಬಳಿಗೆ ಇಳಿದುಹೋಗಿ, ಕೈ ಬಾಯಿ ತೊಳೆದುಕೊಂಡು ನೀರನ್ನು ಚೆನ್ನಾಗಿ ಕುಡಿದರು. ಹುಲಿಯನೂ ಲೊಚಗುಟ್ಟುತ್ತಾ ಸುಮಾರು ಹೊತ್ತು ನೀರು ನೆಕ್ಕಿತ್ತು! ತಿಮ್ಮಿ ಅಂತಹ ಊಟವನ್ನು ಅವಳ ಜೀವಮಾನದಲ್ಲಿಯೆ ಮಾಡಿರಲಿಲ್ಲ: ಅಷ್ಟು ಹಿತವಾಗಿತ್ತು, ರುಚಿಯಾಗಿತ್ತು, ಅವಳ ಅವ್ವ ಕಟ್ಟಿ ಕೊಟ್ಟಿದ್ದ ಆ ಬುತ್ತಿ, ಆ ಗಿರಿನೆತ್ತಿಯಲ್ಲಿ!
ಇಬ್ಬರೂ ನಾಯಿಯೊಡನೆ ಮಂಟಪಕ್ಕೆ ಹಿಂದಿರುಗಿ ಹತ್ತಿ ಬಂದರು. ಗುತ್ತಿ ಉರಿಯುತ್ತಿದ್ದ ಬೆಂಕಿಗೆ ಮತ್ತಷ್ಟು ಕುಂಟೆ ಕಟ್ಟಿಗೆ ಹಾಕಿದನು, ಬೆಳಗಿನ ಜಾವದವರೆಗೂ ಅದು ಉರಿಯಲಿ ಎಂದು. ಏಕೆಂದರೆ ಆ ಬೆಂಕಿಯೆ ಅವರಿಗೆ ಧೈರ್ಯವೂ ರಕ್ಷೆಯೂ ಆಗಿತ್ತು, ಆ ಭಯಂಕರ ಅಡವಿಯಲ್ಲಿ.
ತಿಮ್ಮಿ ಮಂಟಪದಲ್ಲಿ ಗುಡಿಸಿದ್ದ ಜಾಗದಲ್ಲಿ ಮಲಗಲು ಹವಣಿಸುತ್ತಿದ್ದಳು. ಅವಳ ಹೃದಯದಲ್ಲಿ ತಟಕ್ಕನೆ ತನ್ನ ಹೆಣ್ಣುತನದ ನಾಣು ಎಚ್ಚರಗೊಂಡು ಅತ್ತ ಇತ್ತ ನೋಡತೊಡಗಿದಳು. ಬೆಂಕಿಗೆ ಕಟ್ಟಿಗೆ ಹಾಕುತಿದ್ದ ಗುತ್ತಿ “ಅಲ್ಲೇ ನನ್ನ ಕಂಬಳಿ ಹಾಸಿಕೊಂಡು ಮನಿಕ್ಕೊಳ್ಳೆ” ಎಂದನು.
ಅವಳು ಬರುವಾಗ ಬುತ್ತಿ ತಂದಿದ್ದಳೆ ಹೊರತು ಕಂಬಳಿ ತಂದಿರಲಿಲ್ಲ. ಅವನ ಕಂಬಳಿಯನ್ನು ತಾನು ಹಾಸಿಕೊಂಡರೆ ಅವನು ಕಲ್ಲಿನಮೇಲೆ ಮಲಗಬೇಕಾಗುತ್ತದೆ. ಇಲ್ಲದಿದ್ದರೆ? ಅವನೆಲ್ಲಿಯಾದರೂ ತನ್ನ ಮಗ್ಗುಲಲ್ಲಿಯೆ ಮಲಗಿಬಿಟ್ಟರೆ, ಕಂಬಳಿ ತನ್ನದೆಂದು? ತಿಮ್ಮಿಯ ತಲೆಯಲ್ಲಿ ಏನೇನೋ ಸುಳಿಯಿತು. ಅವಳೆಂದಳು ದಾಕ್ಷಿಣ್ಯದ ಮೆಲುದನಿಯಲ್ಲಿ “ಕಂಬಳಿ ಬ್ಯಾಡ. ಅವ್ವ ಕೊಟ್ಟ ಗಂಟಿನಲ್ಲಿ ಒಂದು ಸೀರೆ ಅದೆ. ಅದೇ ಸಾಕು” ಎಂದಳು.
“ನೋಡೂ…. ಬೆಳಗಿನ ಜಾವ ಪೂರಾ ಚಳಿ ಆಗ್ತದೆ. ಕಾರಣ ಬಿದ್ದರೂ ಬೀಳಬೈದು. ಶೀತಾಗೀತಾ ಆಗಿ, ಜರಾಗಿರಾ ಬಂದ್ರೆ ನನ್ನ ಮಾತಿಲ್ಲ. ಆಮ್ಯಾಲೆ ನಿನ್ನವ್ವ ನನ್ನ ಬೈತದೆ….” ಗುತ್ತಿ ಒಳಗೊಳಗೆ ಮುಗುಳುನಗುತ್ತಿದ್ದನು.
“ನಿಂಗೆ ಬ್ಯಾಡೇನು ಕಂಬಳಿ?”
“ಬೇಕು.”
“ಮತ್ತೆ? ಇಬ್ಬರೂ ಒಂದೇ ಕಂಬಳೀಲಿ ಹ್ಯಾಂಗೆ ಮನಗಾದು?”
“ಇಬ್ರೆ ಸೈಯಾ? ಮೂರು ಜನ ಬೇಕಾದರೂ ಮನಗಬೈದು. ಅದೇನು ಚಿಟ್ಟಗಂಬಳಿ ಅಂತಾ ಮಾಡೀಯಾ? ಹೆಗ್ಗಂಬಳಿ! ಬೇಕಾದರೆ ಬಿಚ್ಚಿ ಹಾಸಿ ನೋಡು.”
“ನಾ ಒಲ್ಲೆ ನಿನ್ನ ಜತೆ ಮನಗಾಕೆ!”
“ಅಲ್ಲೇ, ತಿಮ್ಮೀ, ನೀ ನನ್ನ ಮದೇ ಆದ ಮ್ಯಾಲೆ ಮಗ್ಲಾಗೆ ಮನಗ್ತೀಯೋ ಇಲ್ಲೋ….”
“ಏ ನಿಂಗೇನು ನಾಚಿಗೇನೆ ಇಲ್ಲಾ? ಭಂಡ ಮಾತು ಆಡ್ತೀಯಲ್ಲಾ! ನಾಳೆ ಅತ್ತೆಮ್ಮನ ಹತ್ರ ಹೇಳ್ದೇ ಇದ್ದರೆ ಕೇಳು!”
“ಗಂಡನ ಮಾತು ಹೆಂಡ್ತೀಗೆ ಭಂಡಮಾತೇನೇ?…. ಮನೀಗೆ ಹೋಗಾನ ಅಂತಿದ್ದೀ? ಆಗ್ಲೆ ಅತ್ತೆಮ್ಮಗೆ ಹೇಳ್ತೀನಿ ಅಂತಿಯಲ್ಲಾ? ನೀ ಮಾ ಹುನಾರಿನ ಹುಡುಗಿ ಕಣೇ!”
ತಿಮ್ಮಿ ಮುನಿಸಿಕೊಂಡವಳಂತೆ ಮುಖ ತಿರುಗಿಸಿ, ಕಲ್ಲು ನೆಲದ ಮೇಲೆಯೆ ಮುದುರಿಕೊಂಡು ಮಲಗಿಬಿಟ್ಟಳು, ಗುತ್ತಿಯ ಕಂಬಳಿಯನ್ನೂ ಅದು ಇದ್ದಲ್ಲಿಂದ ತುಸುದೂರಕ್ಕೆ ತಳ್ಳಿ. ಗುತ್ತಿ ಬೆಂಕಿಮಾಡಿ, ತಿಮ್ಮಿಯ ಬಳಿಗೆ ಬಂದು ನೋಡುತ್ತಾನೆ: ಅವಳಿಗೆ ಆಗಲೆ ಗಾಢ ನಿದ್ರೆ ಬಂದಿದೆ!
ಗುತ್ತಿ ತನ್ನ ಹೆಗ್ಗಂಬಳಿಯನ್ನು ಅವಳಿಗೆ ಮುಟ್ಟ ಮುಟ್ಟ ಹರಡಿ ಹಾಸಿದನು. ಈ ಕಡೆಯ ತುದಿಯಲ್ಲಿ, ಬೆಳಿಗ್ಗೆ ಚಳಿಯಾದರೆ ಹೊದ್ದುಕೊಳ್ಳುವಷ್ಟು ಕಂಬಳಿಯನ್ನು ಬಿಟ್ಟುಕೊಂಡು, ಅವಳಿಗೆ ದೂರವಾಗಿಯೆ ಮಲಗಿದನು, ಆದರೆ ಅವಳಿಗೆ ಚಳಿಯಾದರೆ ಅವಳೂ ಕಂಬಳಿಯ ಮೇಲೆ ಮಲಗಿ ಹೊದ್ದುಕೊಳ್ಳಲು ಸಾಲುವಷ್ಟು ಭಾಗ ಬಿಡುವಾಗಿಯೆ ಇತ್ತು.
ಹುಲಿಯನೂ ಅಲ್ಲಿಯೆ ಅವರ ಕಾಲುದಿಸಿ ಮಲಗಿಕೊಂಡಿತ್ತು.
ಬೆಳಗಿನ ಜಾವ ತಿಮ್ಮಿಗೆ ಎಚ್ಚರವಾದಾಗ ನೋಡುತ್ತಾಳೆ, ತಾನು ಗುತ್ತಿಯ ಮೈಗೆ ಮೈಯೊತ್ತಿ ಮಲಗಿದ್ದಾಳೆ! ಕಂಬಳಿ ಅವರಿಬ್ಬರನ್ನೂ ಬಲವಾಗಿ ಸುತ್ತುಹಾಕಿದೆ! ತನ್ನ ಬೆನ್ನಿಗೆ ಗುತ್ತಿಯ ಎದೆಯ ಬಿಸುಪು ಮುಟ್ಟಿ, ಆ ಗುಡ್ಡದ ನೆತ್ತಿಯ ಕುಳಿರ್ಗಾಳಿಯ ಚಳಿಯಲ್ಲಿ ಅತ್ಯಂತ ಸುಖಕರವಾಗಿದೆ! ಆದರೂ ಗುತ್ತಿಗೆ ಎಚ್ಚರವಾಗುವುದಕ್ಕೆ ಮೊದಲೆ, ಆ ನಾಣ್ಪಟ್ಟಿನಿಂದ ಪಾರಾಗಿ, ದೂರ ಮಲಗುತ್ತೇನೆ ಎಂದು ಅವಳು ಪ್ರಯತ್ನಿಸುವುದಕ್ಕೂ ಸಾಧ್ಯವಾಗದಂತೆ ಅವನ ತೋಳು ಅವಳ ಎದೆಯ ಮೇಲಿಂದ ಇಳಿದು ಬಲವಾಗಿ ಬಗಿದಂತಿದೆ! ಅವನು ಉಸಿರಾಡುವುದನ್ನೂ ನಿಶ್ಚಲವಾಗಿರುವುದನ್ನೂ ನೋಡಿದರೆ ಅವನಿಗೆ ನಿದ್ದೆ ಬಂದ ಹಾಗಿದೆ. ಆದರೆ ತನ್ನನ್ನು ಅಪ್ಪಿದ್ದ ಆ ತೋಳಿನ ಬಿಗಿಕಟ್ಟು ನಿದ್ದೆಗೆ ಸಾಧ್ಯವೆ? ಎಂದು ಶಂಕೆಗೆ ಎಡೆಕೊಡುವಂತಿದೆ! ಅವಳಿಗೆ ಎಚ್ಚರವಾದ ಮೊದಲಲ್ಲಿ ಆ ಬಿಗಿಯಪ್ಪುಗೆಯಿಂದ ತಪ್ಪಿಸಿಕೊಳ್ಳಬೇಕೆಂದಿದ್ದ ಮನಸ್ಸು, ಆ ತೋಳಿನ ಬಂಧನದಿಂದ ಪಾರಾಗುವ ಪ್ರಯತ್ನವೇ ಅವನನ್ನು ಎಚ್ಚರಗೊಳಿಸಿ ತಾನಿದ್ದ ಲಜ್ಜಾಕರ ಸ್ಥಿತಿಯನ್ನು ಬಹಿರಂಗಪಡಿಸಬಹುದೆಂಬ ತರುವಾಯದ ಭೀತಿಗೆ ಸಿಕ್ಕಿ, ತಟಸ್ಥವಾಯಿತು. ಕಣ್ಣು ಬಿಟ್ಟು ನೋಡಿದಳು: ಕತ್ತಲೆ, ಕಾಡು; ಏನೇನೊ ಅಪರಿಚಿತ ಶಬ್ದಗಳು; ಬೆಂಕಿಯ ಉರಿ ಆರಿ, ಕೆಂಡವೆ ಕೆಂಪಾಗಿ ಕಾಣುತ್ತಿದೆ. ಹುಲಿಯ ಅಲ್ಲಯೆ ಕುಳಿತು ತನ್ನ ಹಿಂಗಾಲಿನಿಂದ ಕುತ್ತಿಗೆ ತುರಿಸಿಕೊಳ್ಳುತ್ತಿರುವುದು ಬೆಂಕಿಗೆ ಎದುರಾಗಿ ಮಷೀಚಿತ್ರದಂತೆ ಕಾಣುತ್ತಿದೆ. ತಿಮ್ಮಿ ಮತ್ತಷ್ಟು ಬಲವಾಗಿ ಗುತ್ತಿಯ ಮೈಗೆ ತನ್ನ ಬೆನ್ನೊತ್ತಿ ಹೊಕ್ಕು ಮಲಗಿಬಿಟ್ಟಳು.
ಆದರೆ ಅವಳಿಗೆ ನಿದ್ದೆ ಬರಲಿಲ್ಲ; ರಾತ್ರಿ ಮಲಗುವಾಗ ಅವನ ಕಂಬಳಿಯನ್ನು ದೂರಕ್ಕೆ ತಳ್ಳಿ ಮಲಗಿದ್ದೆನಲ್ಲಾ? ಅದು ಹೇಗೆ ಹೀಗೆ ಮಲಗುವಂತಾಯಿತು? ನಿದ್ದೆಗಣ್ಣಿನಲ್ಲಿ ನಾನೇ ಹೊರಳಿ ಹೀಗೆ ಮಲಗಿಬಿಟ್ಟೆನೋ ಅಥವಾ ಭಾವನೆ ನನ್ನನ್ನು ಎಳೆದು ಹೀಗೆ ಮಲಗಿಸಿಕೊಂಡನೊ? ಚಳಿಗೆ ಶೀತವಾಗದಿರಲಿ ಎಂದು! ಇಂತೆಲ್ಲ ಆಲೋಚಿಸುತ್ತಿದ್ದಾಗಲೆ ಅವಳ ಮೈಗೆ ಏನೋ ಸವಿ ಏರತೊಡಗಿತ್ತು!
ತಿಮ್ಮಿ ಶಂಕಿಸದಂತೆ ಗುತ್ತಿ ಅವಳನ್ನು ಎಳೆದು ಮಲಗಿಸಿಕೊಂಡಿರಲಿಲ್ಲ. ರಾತ್ರಿ ಒಂದು ಸಾರಿ ಅವನಿಗೆ ಹುಲಿಯನ ಬೊಗುಳುವಿಕೆಯಿಂದ ಎಚ್ಚರವಾಗಿದ್ದಾಗ ಎದ್ದು ಬೆಂಕಿಗಷ್ಟು ಕಟ್ಟಿಗೆ ಹಾಕಿ ಮಲಗುತ್ತಿದ್ದನು. ಆಗ ತಿಮ್ಮಿ ನಿದ್ದೆಯಲ್ಲಿಯೆ ‘ಅವ್ವಾ! ಅವ್ವಾ!’ ಎಂದು ಕರೆದದ್ದು ಕೇಳಿಸಿತು. ಆಗತಾನೆ ಬೆಳಗಿನ ಜಾವದ ಕಾಡಿನ ಚಳಿಗಾಳಿ ಬೀಸತೊಡಗಿತ್ತು. ಆ ಚಳಿಗೆ ತಿಮ್ಮಿ ಮೈಯನ್ನೆಲ್ಲ ಮುದುರಿಸಿ ಮುದ್ದೆಮಾಡಿಕೊಂಡು ಮಲಗಿಕೊಳ್ಳುತ್ತಿದ್ದಳು, ಉಟ್ಟಿದ್ದ ಸೀರೆಯನ್ನೆ ಹೊದೆಯಲೆಂಬಂತೆ ಎಳೆದುಕೊಳ್ಳುತ್ತಾ. ಗುತ್ತಿ ‘ಇತ್ತಿತ್ತಾ ಬಾರೆ, ಕಂಬಳಿ ಹೊದ್ದುಕೊಂಡು ಮನಗಿಕೊಳ್ಳೆ!’ ಎಂದು ಹೇಳಲು, ಅವಳು ನಿದ್ದೆಗಣ್ಣಿನಲ್ಲಿಯೆ, ಅನೈಚ್ಚಿಕವಾಗಿ ಎಂಬಂತೆ, ಗುತ್ತಿಯ ಹತ್ತಿರಕ್ಕೆ ಸರಿದಿದ್ದಳು. ಗುತ್ತಿ ಅವಳಿಗೂ ತನಗೂ ಒಟ್ಟಿಗೆ ಕಂಬಳಿಯನ್ನು ಸುತ್ತಿ ಹೊದಿಸಿಕೊಂಡಿದ್ದನು. ಅವನಿಗೂ ಮೈಗೆ ಬೆಚ್ಚಗಾದದ್ದಕ್ಕಿಂತಲೂ ಮನಸ್ಸಿಗೆ ನೊಚ್ಚಗಾಗಿ, ಇಬ್ಬರೂ ಸವಿನಿದ್ದೆ ಮಾಡಿದ್ದರು.
ಆದರೆ ಬೆಳಗಿನ ಜಾವ ತಿಮ್ಮಿಗೆ ಎಚ್ಚರವಾಗಿ ಅವಳು ತಾನಿದ್ದ ಸ್ಥಿತಿಗೆ ಮೊದಲು ಅಚ್ಚರಿಪಟ್ಟು, ಆಮೇಲೆ ಸೊಗಂಬಟ್ಟು, ಕಡೆಗೆ ಗುತ್ತಿಯ ಮೈಗೆ ಮತ್ತಷ್ಟು ಒತ್ತಿ ಹೊಕ್ಕು ಮಲಗಿದಾಗ, ಅವನಿಗೆ ಎಚ್ಚರವಾಗಿ, ಅವಳನ್ನು ಮತ್ತಷ್ಟು ಬಿಗಿದಪ್ಪಿ, ನಿದ್ರಿಸುತ್ತಿದ್ದಂತೆ ನಟಿಸಿದ್ದನು! ಸ್ವಲ್ಪ ಹೊತ್ತಿನಲ್ಲಿಯೆ, ತನ್ನ ಮೈಸೋಂಕಿನಿಂದ ಅವಳ ಮೈಗೆ ಹೇಗೆ ಸವಿ ಏರತೊಡಗಿತ್ತೋ ಹಾಗೆಯೆ ಆಗತೊಡಗಿತ್ತು ಗುತ್ತಗೂ! ಇಬ್ಬರಿಗೂ ಅದೇನು ಮೊತ್ತಮೊದಲನೆಯದೂ ಆಗಿರಲಿಲ್ಲ, ಹೊಚ್ಚಹೊಸದೂ ಆಗಿರಲಿಲ್ಲ, ಅಂತಹ ರಹಸ್ಯಾನುಭವ! ಪರಸ್ಪರವಾಗಿ ಮಾತ್ರ ಹಾಗಿತ್ತು, ಅಷ್ಟೆ.
ತಿಮ್ಮಿ ತನ್ನ ಸಿಂಬಾವಿ ಬಾವನೂ ಹಿಂದೊಮ್ಮೆ, – ತಮ್ಮ ಕೇರಿಯವನೆ ಆಗಿ ಈಗ ತನ್ನನ್ನು ಮದುವೆಯಾಗಲಿದ್ದ, – ಆ ಬಚ್ಚಬಾವ ತನಗೆ ಮಾಡಿದ್ದಂತೆಯೆ ಮಾಡಬಹುದು ಎಂದು ನಿರೀಕ್ಷಿಸುತ್ತಿದ್ದಳು. ಹಾಗೆಯೆ ಗುತ್ತಿ ಒಮ್ಮೆ ತಾನು ಹಳೆಮನೆಯ ತಮ್ಮವರ ಕೇರಿಗೆ ನಂಟನೊಬ್ಬನ ಮದುವೆಗಾಗಿ ಹೋಗಿ ನಾಲ್ಕುದಿನ ತಳವಾರ ಸುಣ್ಣನ ಬಿಡಾರದಲ್ಲಿದ್ದಾಗ ಅವನ ಹಿರಿಯ ಮಗಳು, ಈಗಲೂ ಅವಿವಾಹಿತೆಯೆ ಆಗಿ ಉಳಿದಿರುವ ಪುಟ್ಟಿ, ತನ್ನನ್ನು ಒಂದು ದಿನ ಬೈಗುಗಪ್ಪಿನಲ್ಲಿ ಒಡೆಯರ ಕಣದ ಹುಲ್ಲು ಬನಬೆಯ ಹಿಂದೆ ಮರೆಗೆ ಕರೆದುಕೊಂಡು ಹೋಗಿ ಮಾಡಿದ್ದಂತೆಯೆ ತಿಮ್ಮಿಯೂ ಮಾಡಬಹುದು ಎಂದು ಹಾರೈಸುತ್ತಿದ್ದನು. ಆದರೆ ಅವರಿಬ್ಬರಲ್ಲಿ ಯಾರೊಬ್ಬರಿಗೂ ತಾನೆ ಮೊದಲು ಮುಂದುವರಿಯಲಾಗದ ಸಂಕೋಚವೊಂದು ಅವರನ್ನು ಪ್ರಣಯದ ಶಿಖರಕ್ಕೇರಿದಂತೆ ತಡೆದಿತ್ತು. ಅವಳು ಒತ್ತುತ್ತಿದ್ದ ರೀತಿ, ಅವನು ಅಪ್ಪುತ್ತಿದ್ದ ಬಿಗಿತ, ಎರಡೂ ಅವರನ್ನು ಪ್ರಣಯಗಿರಿಯ ಪ್ರತ್ಯಂತ ಭೂಮಿಯವರೆಗೂ ಕೊಂಡೊಯ್ದಿದ್ದುವು. ಹುಲಿಯ ಅಲ್ಲಿರದಿದ್ದರೆ ಇನ್ನು ಕೆಲವೇ ನಿಮಿಷಗಳಲ್ಲಿ ರತಿಮನ್ಮಥರು ಅವರನ್ನು ನಿಧುವನದ ಶಿಖರಾನುಭವಕ್ಕೂ ಒಯ್ಯುತ್ತಿದ್ದರೊ ಏನೊ?
ಇದ್ದಕಿದ್ದ ಹಾಗೆ ಯಾವುದೋ ಘಾತುಕ ಪ್ರಾಣಿ ತನ್ನ ಮೇಲೆ ನೆಗೆದ ರಭಸಕ್ಕೆಂಬಂತೆ ಹುಲಿಯ ಕಂಯ್ಕ್ ಎಂದು ಕೂಗಿದ್ದು ಕೇಳಿಸಿತು. ನಾಯಿಗೂ ಆ ಪ್ರಾಣಿಗೂ ಬಲವಾದ ಹೋರಾಟ ನಡೆಯುವಂತೆ ಸದ್ದಾಯಿತು. ಒಂದರ ಮೇಲೆ ಒಂದು ಬಿದ್ದು, ಒಂದನ್ನೊಂದು ಕೊಲ್ಲುವ ಪ್ರಯತ್ನದಲ್ಲಿ ಎರಡೂ ಗುಡ್ಡದ ಇಳಿಜಾರಿನಲ್ಲಿ ಕೆಳಗೆ ಕೆಳಗೆ ಉರುಳುತ್ತಾ ಹೋದಂತಾಯಿತು.
ಗುತ್ತಿಗೆ ಕ್ಷಣಾರ್ಧದಲ್ಲಿ ಗೊತ್ತಾಯಿತು, ಕುರ್ಕ ನಾಯಿಯ ಮೇಲೆ ಬಿದ್ದಿದೆ ಎಂದು ತಟಕ್ಕನೆ ಎದ್ದು “ಹಿಡಿ, ಹುಲಿಯ! ಹಿಡಿ!” ಎಂದು ಗಟ್ಟಿಯಾಗಿ ಕೂಗುತ್ತಾ, ಒಂದು ಹೆಗ್ಗೊಳ್ಳಿಯನ್ನೆತ್ತಿ ಬೀಸುತ್ತಾ, ಸದ್ದಾಗುತ್ತಿದ್ದ ಕಡೆಗೆ ಧಾವಿಸಿದನು. ಇವನ ಕೂಗು ಕೇಳಿಸಿಯೋ ನಾಯಿಯ ಬಲಕ್ಕೆ ಸೋತು ಹೆದರಿಯೋ ಕುರ್ಕ ಓಡುತ್ತಿರುವುದನ್ನೂ ನಾಯಿ ಅಟ್ಟುತ್ತಿರುವುದನ್ನೂ ಕಂಡು, ಗುತ್ತಿ ನಾಯಿಯನ್ನು ಅದರ ಹೆಸರು ಹಿಡಿದು ಕೂಗಿ ಗದರಿಸಿ ಬಳಿಗೆ ಕರೆದನು. ನಾಯಿಯನ್ನು ಹಿಡಿಯುವ ಆ ಜಾತಿಯ ಚಿರತೆ, ನಾಯಿ ತನ್ನನ್ನು ಅಟ್ಟುವಂತೆ ಮಾಡಿ, ಅದನ್ನು ಇತರ ನಾಯಿಗಳಿಂದಲೂ ಮನುಷ್ಯರಿಂದಲೂ ದೂರಕ್ಕೆ ಸೆಳೆದು ಪ್ರತ್ಯೇಕಿಸಿ, ಅದು ಒಂಟಿಯಾದಾಗ ಅದರ ಮೇಲೆ ಬಿದ್ದು ಕೊಲ್ಲುವ ಉಪಾಯ ಹೂಡುತ್ತದೆ ಎಂಬುದು ಗುತ್ತಿಗೆ ಗೊತ್ತಿದ್ದುದರಿಂದಲೆ ಹುಲಿಯ ಕುರ್ಕವನ್ನು ಬೆಂಬತ್ತಿ ಅಟ್ಟೆ ಹಳುವಿಗೆ ಹೋಗದಂತೆ ತಡೆದಿದ್ದನು.
ನಾಯಿ ನಾಲಗೆ ಇಳಿಬಿಟ್ಟುಕೊಂಡು ಏದುತ್ತಾ ಉಸಿರೆಳೆಯುತ್ತಾ ಬಳಿಗೆ ಬಂತು. ಗುತ್ತಿ ಅಭೀಮಾನಕ್ಕೂ ವಿಶ್ವಾಸಕ್ಕೂ ಅದರ ತಲೆಯನ್ನು ಸವರಿದನು. ಅವನ ಕೈ ಅದರ ಕುತ್ತಿಗೆಯ ಮೇಲೆ ಹೋದಾಗ ಏನೋ ವದ್ದ ಮುಟ್ಟಿದಂತಾಯಿತು. ಗುಡ್ಡ ಹತ್ತಿ ಅವರಿಬ್ಬರೂ ಬೆಂಕಿಯ ಬಳಿಗೆ ಬಂದಾಗ, ಬೆಂಕಿಗೆ ಒಣಗಿದ್ದ ಹರೆಗಳನ್ನು ಹಾಕುತ್ತಾ ನಿಂತಿದ್ದ ತಿಮ್ಮಿ “ಅಯ್ಯೋ ಬಾವ, ಇದೇನು ನೆತ್ತರ!” ಎಂದು ಹೌಹಾರಿದಳು. ಬೆಂಕಿಯ ಬೆಳಕಿನಲ್ಲಿ ಗುತ್ತಿಯ ಕೈಯೂ ನಾಯಿಯ ಮೈಯೂ ರಕ್ತಮಯವಾಗಿದ್ದ ಭಯಂಕರ ದೃಶ್ಯ ಕಾಣಿಸಿತ್ತು.
“ಹಾಳು ಕುರ್ಕ! ಹಡಬೇಗೆ ಹುಟ್ಟಿದ್ದು! ನಾಯಿ ಮೈನೆಲ್ಲ ಗಿಬರಿ ಗಾಯಮಾಡಿ ಬಿಟ್ಟಿದೆ!…. ಅದಕ್ಕೂ ಸಮಾ ಮಾಡ್ತು ಅಂತ ಕಾಣ್ತದೆ ಹುಲಿಯ? ಸತ್ನೋ ಕೆಟ್ನೋ ಅಂತಾ ಹೇತ್ಕೊಂಡು ಓಡ್ತಿತ್ತು, ಹಹ್ಹಹ್ಹ!” ಎಂದು ಜಯಾಟ್ಟಹಾಸಗೈದು ಗುತ್ತಿ ಹುಲಿಯನನ್ನು ಹೊಗಳಿ, ಅದರ ಗಾಯಗಳಿಗೆ ಬಿಸಿಬಿಸಿ ಬೂದಿ ಹಾಕಿ ಮದ್ದು ಮಾಡತೊಡಗಿದನು.
ಎಂತಹ ರತಿಭಾವದ ಕಿಬ್ಬಿಯಂಚಿನ ರಸಸ್ಥಲದಿಂದ ಅದೆಂತಹ ಭಯಂಕರ ಕರುಣ ಬೀಭತ್ಸಗಳ ಕಣಿವೆಗೆ ಹುಲಿಯನ ಅದ್ಭುತ ಸಾಹಸ ತಮ್ಮಿಬ್ಬರನ್ನೂ ತಂದಿತ್ತು ಎಂಬುದನ್ನು ಅವರಿಬ್ಬರೂ, – ಮದ್ದು ಮಾಡಿ ಶುಶ್ರೂಷೆ ಮಾಡುತ್ತಿದ್ದ ಗುತ್ತಿಯಾಗಲಿ, ಆ ಕಾರ್ಯದಲ್ಲಿ ಅವನಿಗೆ ಅನುಕಂಪನೆಯಿಂದ ನೆರವಾಗುತ್ತಿದ್ದ ತಿಮ್ಮಿಯಾಗಲಿ, – ಪರ್ಯಾಲೋಚಿಸುವ ಸ್ಥಿತಿಯಲ್ಲಿರಲಿಲ್ಲ, ತರುವಾಯವಾದರೂ ಅವರಿಬ್ಬರೂ, ಪರಸ್ಪರ ಒಳಸಂಚಿನಿಂದಲೊ ಎಂಬಂತೆ, ಅದನ್ನು ಪ್ರಸ್ತಾಪಿಸಲೂ ಇಲ್ಲ. ಆದರೆ ಆಗಾಗ್ಗೆ ಒಂದು ಕಣ್ಣಿನ ಮಿಂಚೊ, ಒಂದು ಮುಗುಳು ನಗೆಯ ತುಟಿಗೊಂಕಿನ ಹೊಂಚೊ, ಅವರಿಬ್ಬರ ಸಂಚಿನ ಅಂಚಿನಿಂದ ಇಣಿಕಿ ಇಬ್ಬರಿಗೂ ಅದರ ಸವಿಸೊಗದ ನೆನಪು ಮರುಕಳಿಸುವಂತೆ ಆಗುತ್ತಿತ್ತು.
“ಓ ಹೊತಾರೆ ಆಗ್ತಾ ಇದೆ!” ನಸುಗೆಂಪು ಏರುತ್ತಿದ್ದ ಮೂಡುಬಾನೆಡೆಗೆ ಕಣ್ಣಾಗಿ ಸಂತೋಷಕ್ಕೆ ಕೂಗಿಕೊಂಡಳು ತಿಮ್ಮಿ.
ಗುತ್ತಿ ತಿರುಗಿನೋಡಿ, ತುಸುವೊತ್ತಿನ ಹಿಂದೆ ಮೂಡಿ ಸ್ವಲ್ಪ ಮಾತ್ರವೆ ಮೇಲೆ ಏರಿದ್ದ ಅಮಾವಾಸ್ಯೆಗೆ ಮುನ್ನಿನ ಕಮಾನಿನಾಕಾರದ ಹೊಗೆಗೆಂಪಿನ ಕ್ಷೀಣಚಂದ್ರನನ್ನು ಗಮನಿಸಿ “ಏ ಅದು ತಿಂಗಳು ಕಣೇ!” ಎಂದನು.
“ಅದನ್ನಲ್ಲ ನಾ ಹೇಳಿದ್ದು. ಅಲ್ಲಿ ನೋಡು, ಓ ಅಲ್ಲಿ, ಆ ಗುಡ್ಡದ ಹಿಂದಿನ ಗುಡ್ಡದ ನೆತ್ತಿಸಾಲಿನ ಮ್ಯಾಲೆ, ಆಕಾಸ ಹೆಂಗೆ ಕೆಂಪಾಗ್ತಾ ಅದೆ!” ಅವರಿದ್ದ ಶಿಖರದೆತ್ತರದಿಂದ ಕಾಣುತ್ತಿದ್ದು, ಶ್ರೇಣಿಶ್ರೇಣಿಯಾಗಿ ಪೂರ್ವ ದಿಗಂತದವರೆಗೂ ಹಬ್ಬಿದ್ದ ಅರಣ್ಯಾವೃತ ಪರ್ವತ ಪಂಕ್ತಿಗಳ ಕಡೆ ಕೈ ತೋರಿಸಿದ್ದಳು ತಿಮ್ಮಿ.
“ಹೌದೇ ಸೈ!…. ಅಲ್ಲಿ ಕೇಳಿದ್ಯಾ? ಕಾಜಾಣಾನೂ ಸಿಳ್ಳಿಹಾಕಾಕಿ ಸುರು ಮಾಡಿದುವಲ್ಲಾ!” ಕತ್ತಲೆಯಿಂದ ಮೆಲ್ಲಮೆಲ್ಲನೆ ಬೆಳಕಿಗೆ ಹೊಮ್ಮುತ್ತಿದ್ದ ಕಾಡುಗಳಿಂದ ಅಲ್ಲೊಂದು ಇಲ್ಲೊಂದು ಸಿಳ್ಳುಲಿ ನೀರವತಾ ತಂತಿಯನ್ನು ಮೀಟಿದಂತೆ ಕೇಳಿ ಬರುತ್ತಿತ್ತು.
“ಬೆಳಕು ಬಿಡ್ತಲ್ಲಾ? ಹಂಗಾರೆ ಇನ್ನು ಹೊಲ್ಡಾನಾ?” ಎಂದು ತಿಮ್ಮಿ ಆಗಲೆ ತುಸು ಬಣ್ಣಗೆಡುತ್ತಿದ್ದ ಬೆಂಕಿಯ ಕಡೆ ನೋಡುತ್ತಾ ಕೇಳಿದಳು.
“ಎಲ್ಲಿಗೇ?” ಗುತ್ತಿಯ ಪ್ರಶ್ನೆ.
“ಮಾವನ ಮನೀಗೆ” ತಿಮ್ಮಿಯ ಉತ್ತರ.
“ಯಾರ ಮಾವನ ಮನೀಗೆ?”
“ನನ್ನ ಮಾವನ ಮನೀಗೆ!”
“ನನ್ನ ಮಾವನ ಮನಿಗೇನೋ ಅಂತಾ ಮಾಡಿದ್ದೆ….”
“ನಿನ್ನ ಮಾವನ ಮನೀಗೆ ಹೋದ್ರೆ ಆಗ್ತದೆ ನಿಂಗೆ, ಚೆನ್ನಾಗಿ, ಮದ್ವೆ!”
“ಅಲೆಲೆಲೆಲೇ ಹುಡುಗೀ! ಒಂದು ರಾತ್ರೀಲೆ ಏಟು ಬದಲಾಯಿಸಿಬಿಟ್ಟೇ? ನಿನ್ನೆ ನೀನೇ ಅಲ್ಲೇನೆ ಹೇಳಿದ್ದೂ, ಮನೀಗೆ ಹೋಗಾನ ಅಂತಾ?”
“ಹೇಳಿದ್ದೆ…. ನಿನ್ನೆ!”
ಇವರಿಬ್ಬರೂ ರಾತ್ರಿಯ ಮಧುರಾನುಭವ ನೆನಪು ಹೊಮ್ಮಿ ನಕ್ಕುಬಿಟ್ಟರು.
ಅಷ್ಟರಲ್ಲಿ ವಸ್ತುಗಳೆಲ್ಲ ಸ್ಪಷ್ಟವಾಗಿ ಕಾಣುವಷ್ಟು ಬೆಳಗಾಗಿತ್ತು.
ತಿಮ್ಮಿ ಮಲೆಯ ಕಣಿವೆಗಳ ಕಡೆ ಕಣ್ಣು ಹಾಯಿಸಿ, ಕಣ್ಣರಳಿಸಿ, ಹಿಗ್ಗಿ, ವಿಸ್ಮಯದಿಂದ ಕೂಗಿಕೊಂಡಳು “ಅಯ್ಯೋ ಅಯ್ಯೋ ಅಯ್ಯೋ! ಅದೇನು ಬಾವ, ಅದೂ? ನೊರೆ, ನೊರೆ, ನೊರೆ, ಹಾಲು! ಕಡ್ಳು ನಿಂತ್ಹಾಂಗೆ ಅದೆಯಲ್ಲಾ?”
“ಕಾವಣ ಕಣೇ, ಕಣಿವೆ ಕಾಡನೆಲ್ಲ ಮುಚ್ಚಿಬಿಟ್ಟಿದೆ.”
“ಏನು ಚೆಂದಾಗಿ ಕಾಣ್ತದೆ, ಬಾವ! ನಾನು ನೋಡೇ ಇರ್ಲಿಲ್ಲ.”
“ಕೆಳೂಗೆ ಬಿಡಾರದಾಗೇ ಕೂತುಕೊಂಡಿದ್ರೆ ಹೆಂಗೆ ಕಾಣ್ತದೆ ಇದೆಲ್ಲ? ನೋಡಿದ್ಯಾ? ನನ್ನ ಜೊತೆ ಬಂದಿದ್ದಕ್ಕೆ ಏನೇನೆಲ್ಲ ಕಂಡ್ತು ನಿಂಗೆ?” ಹಂಗಿಸಿದ್ದನು ಗುತ್ತಿ.
“ಹ್ಞೂ ಕಂಡ್ತು? ನಿನ್ನೆ ಕೊಂದೇ ಹಾಕಿದ್ದಿ, ದೊಡ್ಡಿನ ಕಾಲಿಗೆ ಸಿಕ್ಸಿ!” ತುಟಿ ಊದಿಸಿ ಮೂದಲಿಸಿದಳು ತಿಮ್ಮಿ.
“ಮತ್ತೇನು ಕುದ್ರೆ ಮ್ಯಾಲೆ ಕೂರಸಿ ಕರ್ಕೊಂಡು ಹೋಗ್ತಾರೆ ಅಂತ ಮಾಡಿದ್ಯೇನೋ – ಮದುವಳಿಗೀನ?”
“ಕುದ್ರೆ ಮ್ಯಾಲೆ ಕೂತ್ರೆ, ಕುದ್ರೆ ಕಾಲ್ ಜತೇಲೆ ನಿನ್ನ ಕಾಲ್ನೂ ಮುರಿದು ಹಾಕ್ತಾರೆ, ನಮ್ಮ ವಡೇರ ಕಡೇರು…. ಹಳೆಪೈಕದೋರಿಗೇ ದಂಡಿಗೆ ಕುದ್ರೆ ಹತ್ತಬಾರದು ಅಂತ ಮಾಡ್ಯಾರಂತೆ.”
“ಹತ್ತಿಸ್ತಾರಂತಲ್ಲಾ ಕುದ್ರೆ ಮ್ಯಾಲೆ, ಅವರ ಮಗನ ಮದುವೇಲಿ, ಲಕ್ಕುಂದದ ಸೇಸನಾಯ್ಕರು!”
ಇಬ್ಬರೂ ಪರಿಚಿತರಾರಿಗೂ ಕಾಣಿಸದಂತೆ ಕಾಡಿನ ಒಳದಾರಿಯಲ್ಲಿ ಹೊರಡಲು ಸಿದ್ಧರಾಗಿ ಇಳಿಯತೊಡಗಿದ್ದರು. ಹತ್ತಿಪ್ಪತ್ತು ಮಾರು ಹೋಗುವುದರಲ್ಲಿಯೆ ತಿಮ್ಮಿ ಮತ್ತೆ ಅದ್ಭುತ ದರ್ಶನವಾದಂತೆ ಕೂಗಿಕೊಂಡಳು, ಗುತ್ತಿಗೆ ದಿಗಿಲಾಗುವಂತೆ. “ಅಯ್ಯೊ ಅಯ್ಯೊ ಅಯ್ಯೊ! ಬಾವ, ಬಾವ, ಬಾವ! ಅಲ್ನೋಡು, ಅಲ್ನೋಡು, ಅಲ್ನೋಡು!…” ಮುಂದೆ ಮಾತು ನಿಂತು, ಕೈಮುಗಿದುಕೊಂಡು ಭಾವಪರವಶಳಾಗಿ ನಿಂತುಬಿಟ್ಟಳು.
ಪೂರ್ವ ದಿಗಂತದಿಂದ ಕೆಂಡದುಂಡೆಯಾಗಿ ಕಿರಣವಿಲ್ಲದ ಸೂರ್ಯ ಮೇಲೇಳುತ್ತಿದ್ದನು. ಕಣಿವೆಗಳನ್ನು ತುಂಬಿದ್ದ ಆ ಮಂಜಿನ ನೊರೆನೊರೆಯ ಸಮುದ್ರ, ಹಸುರು ದ್ವೀಪಗಳಂತೆ ನಡುನಡುವೆ ತಲೆಯೆತ್ತಿದ್ದ ಮಲೆನೆತ್ತಿಗಳು. ಮುಡು ಬಾನಿನಲ್ಲಿ ಸಾಗುತ್ತಿದ್ದ ಆ ಮೋಡಗಳ ವರ್ಣಲೀಲೆ, ಇವುಗಳ ಸುವಿಸ್ತೃತ ಭಿತ್ತಿವೇದಿಕೆಯಲ್ಲಿ ಆವಿರ್ಭವಿಸುತ್ತಿದ್ದ ಆ ಚೈತ್ರರವಿಯ ಸೌಂದರ್ಯವು ತಿಮ್ಮಿಯಂತಹಗಳಿಗೂ ಹೃದಯದಲ್ಲಿ ಭೂಮಾನುಭೂತಿ ಸಂಚಾರವಾಗುವಂತೆ ಮಾಡಿತ್ತು.
“ಅಃ, ಬಾವ, ನಮ್ಮ ಬಿಡಾರ ಇಲ್ಲೇ ಇದ್ದಿದ್ರೆ?” ಎಂದು ಮಾತ್ರ ಹೇಳಲು ಶಕ್ತವಾಗಿತ್ತು ಅವಳಿಗೆ ತಿಳಿದಿದ್ದ ಭಾಷೆ, ಅವಳ ಚೇತನದ ಅನುಭವದ ಅಭಿವ್ಯಕ್ತಿಗೆ ಪ್ರತೀಕವಾಗಿ.
ಮೂಡುತ್ತಿದ್ದ ದಿನಸ್ವಾಮಿಗೆ ಕೈ ಮುಗಿಯುತ್ತಾ ನಕ್ಕು ಹೇಳಿದನು ಗುತ್ತಿ: ನಿಮ್ಮ ಬಿಡಾರ ಇಲ್ಲೇ ಇದ್ದಿದ್ರಾ? ನಿನ್ನ ಮಗ್ಗಲಾಗೆ ಮನಗ್ತಿತ್ತು… ಹುಲಿ!”
“ಹುಲಿ ಏನು ನಿನ್ನ ಹಾಂಗಲ್ಲ! ಅದ್ಕೂ ಮಾನಮರ್ವಾದೆ ಅದೆ!” ಗುತ್ತಿ ತತ್ತರಿಸುವಂತೆ ಉತ್ತರ ಬಿಗಿದಿದ್ದಳು ತಿಮ್ಮಿ.
ರಾತ್ರಿ ನಡೆದದ್ದನ್ನು ಜ್ಞಾಪಿಸಿಕೊಂಡು ಇಬ್ಬರೂ ಗಟ್ಟಿಯಾಗಿ ನಗಾಡಿದರು.
“ನೋಡಾಕೆ ಬೆಪ್ಪಿ ಇದ್ದಾಂಗೆ ಇದ್ದೀಯ! ಏನು ಜಾಣ ಮಾತು ಕಲ್ತುಬಿಟ್ಟೀಯೆ ನೀನು?” ಎನ್ನುತ್ತಾ ಗುತ್ತಿ ಸರಸರನೆ ಕಾಲು ಹಾಕತೊಡಗಿದನು.
ಗಾಯಗೊಂಡಿದ್ದ ಹುಲಿಯ ಅವರಿಂದ ದೂರ ಹೋಗದೆ, ಅವರೊಡನೆಯೆ ಮೆಲ್ಲಗೆ ಕುಂಟಿ ನಡೆಯುತ್ತಿತ್ತು. “ಹಾಳು ಕುರ್ಕನ ಉಗುರು! ನಂಜಾಗಿಬಿಡ್ತದೆಯೋ ಏನೊ ನಾಯಿಗೆ? ಬಿಡಾರಕ್ಕೆ ಹೋದಮ್ಯಾಲೆ ಕಾಡುಜೀರಿಗೆ ಅರಸಿನ ಅರೆದು ಹಚ್ಚಬೇಕು?” ಎಂದು ಕೊಂಡನು ಗುತ್ತಿ ಮನಸ್ಸಿನಲ್ಲಿಯೆ, ನಾಯಿಯ ಸೋತ ನಡೆಯನ್ನು ನೋಡಿ.
ಇಬ್ಬರೂ ಕಾಡಿನ ದಾರಿಯಲ್ಲಿ ತುಸುದೂರ ನಡೆದಿದ್ದರು. ಗುತ್ತಿ ತಿಮ್ಮಿಯ ಜಾಣ್ಮಾತನ್ನು ಮೆಲುಕು ಹಾಕಿ ಕಿಸಕ್ಕನೆ ನಕ್ಕನು. ಅದೇ ಸಮಯಕ್ಕೆ ಸರಿಯಾಗಿ ತಿಮ್ಮಿ ಎಡವಿದ್ದಳು: “ನಾ ಎಡಗಿದ್ರೆ ನಿಂಗೆ ತಮಾಸೆ! ನಾ ನಿನ್ನ ಜತೆ ಬಂದದ್ದೆ ತಪ್ಪು!” ಎಂದಳು.
ಬಂದದ್ದು ಬರಿಯ ಅವಳಿಚ್ಛೆಯಿಂದಲ್ಲ ಎಂಬುದನ್ನು ಅವಳಿಗೆ ತೋರಿಸಿ ಅವಳನ್ನು ಕೆಣಕಿ ಪೀಡಿಸುವ ಉದ್ದೇಶದಿಂದ ಗುತ್ತಿ:
“ಇಲ್ಲಿ ನೋಡ್ದೇನು, ಇಲ್ಲಿ, ಏನದೆ ಅಂತಾ?” ಎಂದು ತನ್ನ ಎಡದ ತೋಳನ್ನು ಚಾಚಿ ಅದಕ್ಕೆ ಕಟ್ಟಿದ್ದ ತಾಯಿತಿ ತೋರಿಸುತ್ತಾ ಹಂಗಿಸಿದನು “ಕಣ್ಣಾಪಂಡಿತರು ಕೊಟ್ಟಿದ್ದು ಕಣೇ, ಅಂತ್ರ! ಎಂಥಾ ಒಲ್ಲೆ ಅನ್ನೋ ಹೆಣ್ಣನ್ನಾದ್ರೂ ಒಲಿಯೋ ಹಾಂಗೆ ಮಾಡ್ತದಂತೆ. ಅಲ್ಲದಿದ್ರೆ ನನ್ನ ಸಂಗಡ ನೀ ಇಷ್ಟು ಸುಲಭಕ್ಕೆ ಓಡಿ ಬರ್ತಿದ್ಯಾ? ಚುಟಿಗಿ ಹಾಕಿ ಕರದ್ರೆ ನಾಯಿ ಬರಾಹಂಗೆ?”
“ನಿಂಗೊಬ್ಬನಿಗೇ ಅಂತಾ ಮಾಡಿಯೇನೊ? ಅವನಿಗೂ ಕೊಟ್ಟಾರೆ ಅವರು!” ಎಂದಳು ತಿಮ್ಮಿ. ತಿರಸ್ಕಾರದ ಧ್ವನಿಯಿಂದ, ತುಸು ರಾಗವಾಗಿ.
“ಯಾರಿಗೇ?” ಬೆಚ್ಚಿ ಕೇಳಿದನು ಗುತ್ತಿ, ಸ್ವಲ್ಪ ಅಪ್ರತಿಭನಾದಂತೆ.
“ಯಾರಿಗೆ? ಅವನಿಗೇ! ಆ ಬಚ್ಚಗೆ!” ಗೆದ್ದ ದನಿಯಿಂದ ಹೇಳಿದಳು, ಸೋತವನಿಗೆಂಬಂತೆ.
“ಅವನಿಗೂ ಹೀಂಗೇ ಅಂತ್ರಾ ಕೊಟ್ಟಾರಾ? ಕಣ್ಣಾಪಂಡಿತ್ರು?” ಬೆಪ್ಪಾಗಿತ್ತು ಗುತ್ತಿಯ ದನಿ.
“ಹ್ಞೂ ಮತ್ತೆ! ನಿನ್ನ್ಹಾಂಗೇ ಅವನೂ ತೋರಿಸಿದ್ದ ನಂಗೆ!”
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ