ನನ್ನ ಪುಟಗಳು

27 ಏಪ್ರಿಲ್ 2018

ಮಲೆನಾಡಿನ ಚಿತ್ರಗಳು : ರಾಮರಾವಣರ ಯುದ್ಧ

ರಾಮರಾವಣರ ಯುದ್ಧ
ಬೈಗಿನಿಂದ ಬೆಳಗಾಗುವವರಗೂ ಪೆರಡೂರು ಮೇಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಸಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ‘ಕಾಳಗ’ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಕರಿಸುವುದೊಂದು ಹುಚ್ಚಷ್ಟೆ! ಅದರಂತೆಯೆ ನಾವೆಲ್ಲ – ನಾನು, ತಿಮ್ಮು, ಮಾನು, ಓಬು, ಎಂಕ್ಟು, ವಾಸು, ದಾನಿ, ರಾಜಿ – ಆ ದಿನ ರಾಮರಾವಣರ ‘ಕಾಳಗ’ ಆಡಬೇಕೆಂದು ಮಸಲತ್ತು ಮಾಡಿದೆವು. ಹುಡುಗರ ಲೋಕದಲ್ಲಿ ಯೋಚನೆ ಮಾಡಿದ್ದೆಲ್ಲ ಆಗಿಯೇ ಆಗುತ್ತದೆ. ಕಾಫಿ ಉಪ್ಪಿಟ್ಟುಗಳನ್ನು ಬೇಗಬೇಗ ಹೊಟ್ಟೆಗೆ ಸುರಿದುಕೊಂಡು, ಮನೆಯ ಹೊರ ಅಂಗಳಕ್ಕೆ ಹೊರಟೆವು. ಅಮ್ಮ, ಚಿಕ್ಕಮ್ಮ, ಅಕ್ಕಯ್ಯ ಇವರೆಲ್ಲ “ರಾತ್ರಿ ನಿದ್ದೆಗೆಟ್ಟಿದ್ದೀರಿ. ಮಲಗಿಕೊಳ್ಳಿ” ಎಂದು ಬಯ್ದರು. ದೊಡ್ವರು ಹುಡುಗರನ್ನು ತಮ್ಮಂತೆಯೆ ಎಂದು ಭಾವಿಸುವುದು ಶುದ್ಧ ತಪ್ಪು. ಅವರಿಗೆ ಆಯಾಸವಾಗಿದ್ದರೆ ನಮಗೂ ಆಯಾಸವೇ? ನಮ್ಮ ರಾಮರಾವಣರ ಯುದ್ಧದ ಮುಂದೆ ಅವರ ನಿದ್ದೆಯೇ? ಅವರ ಮಾತನ್ನು ಕಸದ ಮೂಲೆಗೆ ಒತ್ತಿ, ಹೊರ ಅಂಗಳಕ್ಕೆ ಓಡಿದೆವು. ಒಬ್ಬರನ್ನೊಬ್ಬರು ಆತುರದಿಂದ ಹುರಿದುಂಬಿಸುತ್ತ, ಕೇಕೆಹಾಕುತ್ತ ನುಗ್ಗಿದೆವು. ರಾಜಿ ಹೊಸಲನ್ನು ಎಡವಿದ್ದವಳು, ಮೆಲ್ಲನೆ ಎದ್ದು, ಸುತ್ತಲೂ ನೋಡಿ, ಯಾರೂ ನೋಡದೆ ಇದ್ದುದರಿಂದ ಪದ್ಧತಿಯಂತೆ ಬಿಕ್ಕಿ ಬಿಕ್ಕಿ ಆಳುವುದನ್ನು ತಡೆದು ಗುಂಪನ್ನು ಸೇರಿಕೊಂಡಳು.

ಹೊತ್ತಾರೆಯ ಹೊತ್ತು ಮಲೆನಾಡಿನ ಹಸುರಾದ ಬೆಟ್ಟಗಳ ತುದಿಯಿಂದ ಎಳೆಬಿಸಿಲನ್ನು ಚಿಮುಕಿಸುತ್ತಿತ್ತು. ಹೊರ ಅಂಗಳದಲ್ಲಿದ್ದ ದೊಡ್ಡ ಬಸಿರಿಮರದಲ್ಲಿಯೂ ಹುಣಿಸೆಮರದಲ್ಲಿಯೂ ಹಕ್ಕಿಗಳ ಹಿಂಡು ಚಿಲಿಪಿಲಿಗುಟ್ಟುತ್ತಿತ್ತು. ಹಸುಳೆಬಿಸಿಲು ತುಳು ದಟ್ಟವಾದ ತಳಿರ ನಡುವೆ ನುಗ್ಗಿ ಬರುತ್ತಿದ್ದುದರಿಂದ ಮರದ ನೆರಳು ಬಲೆಬಲೆಯಾಗಿತ್ತು. ಆ ಬಲೆನೆರಳೆ ನಮ್ಮ ‘ರಂಗಸ್ಥಳ’ವಾಯಿತು. ಈಗ ನಮ್ಮ ಮನೆಗೆ ಹೋಗಿ ನೋಡಿದರೆ ಆ ಹುಣಿಸೆಮರವೂ ಮಾಯವಾಗಿದೆ, ಆ ಬಸರಿ ಮರವೂ ಮಾಯವಾಗಿದೆ. ಜೊತೆಗೆ ಅಂದು ನನ್ನೊಡನೆ ಭಾಗವತರಾಟವಾಡಿದ ಸೋದರ ಸೋದರಿಯರೂ ಅನಂತ ವಿಶ್ವದಲ್ಲಿ ಅಡಗಿ ಮಾಯವಾಗಿದ್ದಾರೆ. ಅಂದಿನ ಜನ, ಅಂದಿನ ಮನ, ಅಂದಿನ ಧನ ಎಲ್ಲವೂ ಅಂತರ್ಧಾನವಾದಂತಿವೆ. ‘ಹಾಳೂರು’ ಆಗದಿದ್ದರೂ ಅದರ ನೆನಪು ತರುವಂತಿದೆ. ಕಾಲದ ಮಹಿಮೆ! ‘ಕಾಲೋಸ್ಮಿ ಲೋಕಕ್ಷಯಕೃತ್’ ಎಂದು ಶ್ರೀಕೃಷ್ಣ ಹೇಳಿಲ್ಲವೆ? ‘ಕಾಲಾಯತಸ್ಮೈ ನಮಃ’ – ಆ ಕಾಲವೊಂದಿತ್ತು!

ಆ ಕಾಲವೊಂದಿತ್ತು! ದಿವ್ಯ ತಾನಾಗಿತ್ತು! ಬಾಲ್ಯವಾಗಿತ್ತು!
ಮಣ್ಣು ಹೊನ್ನಾಗಿ, ಕಲ್ಲೆ ಹೂವಾಗಿ, ನೀರಮೃತವಾಗಿ,
ಮನೆ ಮೇರುವಾಗಿ, ಕವಿಶೈಲ ತಾನೆ ಕೈಲಾಸವಾಗಿ,
ಕಾಡೆ ನಂದನವಾಗಿ, ನೆಲವ ನಾಕವ ನಗುವ ಕಾಲವೊಂದಿತ್ತು!
ಆ ಕಾಲವೊಂದಿತ್ತು! ದಿವ್ಯ ತಾನಾಗಿತ್ತು! ಬಾಲ್ಯವಾಗಿತ್ತು!

ನಾನು ಮಾತ್ರ ನನ್ನ ತಾತ ಮುತ್ತಾತರನ್ನಾದರೂ ಮರೆತೇನು! ಆದರೆ ಆ ಹುಣಿಸೆಮರ ಬಸಿರಿಮರಗಳನ್ನು ಮಾತ್ರ ಎಂದೆಂದಿಗೂ ಮರೆಯಲಾರೆ. ಆ ಬಸಿರಿಮರ ಹೋದುದೇ ನನಗೊಂದು ದೊಡ್ಡ ಸೋಜಿಗ! ಮಹಾ ಸಮಸ್ಯೆ! ಅಂದು ನಾವು ಆ ಬಸಿರಿಮರದ ರಾಕ್ಷಸಗಾತ್ರವನ್ನು ಕಂಡು, ಅದನ್ನು ಕಡಿಯಲು ಯಾರಿಂದಲೂ ಸಾಧ್ಯವಿಲ್ಲ, ತೋಟದಾಚೆಯ ಭೂತನಿಂದಲೂ ಸಾಧ್ಯವಿಲ್ಲ ಎಂದು ಯೋಚಿಸಿ ಹಿಗ್ಗುತಿದ್ದೆವು. ಆದರೆ ವಿಧಿವಿಲಾಸ! ಅಂದು ಅಸಾಧ್ಯವೆಂದು ತೋರಿದುದು ಇಂದು ಸಾಧ್ಯವಾಗಿದೆ. ಅಂದು ಸಾಧ್ಯವಾದುದು ಮಾತ್ರ ಇಂದು ಅಸಾಧ್ಯವಾಗಿ ಪರಿಣಮಿಸಿದೆ!

ಆ ಹುಣಿಸೆಮರ ಬಸಿರಿಮರಗಳ ಅಡಿಯಲ್ಲಿ ಎಷ್ಟು ಸೊಗಸಾದ ಪ್ರಾತಃಕಾಲಗಳನ್ನು ಕಳೆದಿದ್ದೇವೆ! ಎಷ್ಟು ಸಾರಿ ನಮ್ಮ ಜೀವನದ ಭವಿಷ್ಯದ ಬಲೆಯನ್ನು ನಾವರಿಯದಂತೆಯೆ ನೆಯ್ದಿದ್ದೇವೆ! ಎಷ್ಟು ಸಾರಿ ಹೊಂಬಿಸಿಲಿನಲ್ಲಿ ನೆಲದ ಮೇಲೆ ಉದ್ದವಾಗಿ ಮಲಗಿದ್ದ ನಮ್ಮ ನೆಳಲನ್ನು ಅಳೆದಿದ್ದೇನೆ! ಪೂರಯಿಸದಿದ್ದುದಂತಿರಲಿ! ಎಷ್ಟು ಸಾರಿ ಒಬ್ಬರೊಬ್ಬರ ನೆಳಲಿನ ತಲೆಗಳನ್ನು ತುಳಿದು ಜಗಳವಾಡಿದ್ದೇವೆ! ಆಹಾ, ಆ ಇಂಪಾದ ಸನ್ನಿವೇಶಗಳನ್ನು ನೆನೆದುಕೊಂಡರೆ, “ಬಾಲ್ಯವೇ ಹೋದೆಯಾ!” ಎಂದು ಎದೆ ಒಳಗೊಳಗೆ ರೋದಿಸಿ ಮರುಗದಿರುವುದಿಲ್ಲ.

ಬಸಿರಿಮರದ ನೆಳಲಿನ ‘ರಂಗಸ್ಥಳ’ವನ್ನು ಸೇರಿದ ಮೇಲೆ ರಾಮರಾವಣರ ಯುದ್ಧಕ್ಕೆ ಮುನ್ನುಡಿಯ ರೂಪವಾದ ಸಂಭಾಷಣೆ ಪ್ರಾರಂಭವಾಯಿತು. ಮೊದಲು ಯಾರು ಯಾರು ಯಾವ ಯಾವ ಪಾತ್ರಗಳನ್ನು ವಹಿಸಬೇಕೆಂಬ ಪ್ರಬಲವಾದ ಚರ್ಚೆ ನಡೆಯಿತು.

ತಿಮ್ಮು “ನಾನು ರಾಮನ ‘ಪಾರ್ಟ್‌’ ಹಾಕುತ್ತೇನೆ” ಎಂದು ಹಟ ಹಿಡಿದ. ಓಬು (ಸ್ವಲ್ಪ ಕಿಲಾಡಿ) ತಿಮ್ಮು ಹೇಳಿದ್ದು ಕೇಳಿ “ಚೋಟುದ್ದ ಇದಾನೆ ಇವನಿಗೆ ರಾಮನ ವೇಷವಂತೆ!” ಎಂದ.

ಎಂಕ್ಟು ಅದನ್ನು ಸಮ್ಮತಿಸಿ “ಹೌದೊ, ತಿಮ್ಮಣ್ಣಯ್ಯ, ನಿನ್ನ ಭಾಗವತರಾಟದಲ್ಲಿ ರಾಮನ ವೇಷ ಹಾಕಿದ್ದವನು ಭೀಮನ ಹಾಂಗಿದ್ದ” ಎಂದ.

ರಾಮ ವೇಷದ ಹಕ್ಕು ನಿರ್ಣಯವಾಗುವ ಮುನ್ನವೇ, ವಾಸು ತಾನು ಲಕ್ಷ್ಮಣನಾಗುತ್ತೇನೆ ಎಂದ. ಓಬು ಮತ್ತೆ “ಒಂದು ಮಣ ತೂಕಾನೂ ಇಲ್ಲ. ಲಕ್ಷಮಣ ಆಗ್ತಾನಂತೆ! ನೀನು ಹನುಮಂತದ ಪಾರ್ಟಿಗೆ ಲಾಯಖ್ಖು! ನಿನ್ನ ಮುಖಾನೂ ಹಾಂಗೇ ಇದೆ ಕಣೊ” ಎಂದ.

ವಾಸುವಿಗೆ ಎಂದೂ ಬರದ ಸಿಟ್ಟು ಬಂದು ಓಬುವನ್ನು ಹೊಡೆಯಲು ಹೋದ. ಆದರೆ ವಾಸುವಿನ ಸಿಟ್ಟಿಗಿಂತ ಓಬುವಿನ ರಟ್ಟೆಯೇ ಬಲವಾಗಿತ್ತು; ಪೆಟ್ಟು ಬೀಳಲು ಸಿಟ್ಟು ಓಡಿತು.

ಅಷ್ಟರಲ್ಲಿ ನಾನು (ಸುಮ್ಮನಿರಬೇಕೋ ಇಲ್ಲವೋ) ರಾಜಿಯನ್ನು ಕುರಿತು “ರಾಜಿ, ನೀನು ಲಂಕಿಣಿಯ ಪಾರ್ಟು ಹಾಕೇ” ಎಂದು ತಡೆಯಲಾರದೆ ನಕ್ಕುಬಿಟ್ಟೆ. ರಾಜಿ ತನಗೆ ಲಂಕಿಣಿಯ ವೇಷ ಬೇಡವೆಂದು ಹೇಳುವ ಸಿಟ್ಟಿನ ರಭಸದಲ್ಲಿ ಸಾಕ್ಷಾತ್ ಲಂಕಿಣೀಯೇ ಆಗಿಬಿಟ್ಟು ಬಾಯಿಗೆ ಬಂದಂತೆ ನನ್ನ ಮೇಲೆ ಬೈಗುಳದ ಮಳೆಗರೆದಳು.

ಮಾನು (ಕುಚೇಷ್ಟೆಯ ಹುಡುಗ) ರಾಜಿಯನ್ನು ಮತ್ತೂ ಕಣಕಬೇಕೆಂಬು ಯೋಚಿಸಿ ಒಂದು ವಿಧವಾದ ಅಣಕಿಸುವ ದನಿಯಿಂದ “ಓಹೋ, ಮತ್ತೇನು ನಿನಗೆ ಸೀತೆಯ ಪಾರ್ಟು ಕೊಡ್ತಾರೆ ಎಂದು ಹಾರೈಸಿಕೊಂಡಿದ್ದೆಯಾ? ಏನಪ್ಪಾ. ಈ ಹುಡುಗಿಯರಿಗೆ ಈಗಾಗಲೇ ಗಂಡರ ಯೋಚನೆ” ಎಂದ.

ಸೀತೆಯ ವೇಷವನ್ನು ಬಯಸಿದ ರಾಜಿಯ ಮುಖ ಆಗಲೇ ಹನುಮಂತನ ಮುಖವಾಗುತ್ತ ಇತ್ತು. ಅಷ್ಟರಲ್ಲಿ ಓಬು “ಅವಳ ಮುಖವಾದರೂ ಚೆನ್ನಾಗಿದೆಯೇ? ತಿಮ್ಮು, ನೀನೆ ಹೇಳೋ. ಅವಳ ಮುಖ ಯಾರ ವೇಷಕ್ಕೆ ಲಾಯಖ್ಖಾದುದೆಂದು” ಎಂದು ಹೇಳಿ ಕುಣಿಕುಣಿದು ನಕ್ಕ.

ತಿಮ್ಮು ಅವಳ ಮುಖದ ಕಡೆಗೆ ಸ್ವಲ್ಪ ಹೊತ್ತು ನಿಟ್ಟಿಸಿ ನೋಡಿದ. ರಾಜಿ ಮುಖ ಮುಚ್ಚಿಕೊಂಡಳು. ಆದರೂ ತಿಮ್ಮು ಓಬುವಿನ ಕಡೆಗೆ ತಿರುಗಿ “ಅಲ್ಲೋ ಓಬು, ನೀನು ಯಾವ ವೇಷ ಹಾಕ್ತೀಯೋ ಆ ವೇಷದ ತಂಗಿ ಪಾರ್ಟಿಗೆ ರಾಜಿಯೇ ಸರಿ” ಎಂದ.

ಎಲ್ಲರೂ ಗೊಳ್ಳೆಂದು ಕೈಚಪ್ಪಾಳೆ ಹೊಡೆದು ನಕ್ಕರು. ಓಬುವಿಗೆ ಮುಖ ಭಂಗವಾಯಿತು. ರಾಜಿಗೂ ಮುಯ್ಯಿತೀರಿಸಿಕೊಂಡ ಹಾಗಾಗಿ ಸಮಾಧಾನವಾಯಿತು. ಕಡೆಗೆ ಎಲ್ಲರೂ ಸೇರಿ ಮಾನುವೇ ರಾಮನ ಪಾರ್ಟು ಹಾಕುವುದು. ಎಂದು ನಿರ್ಣಯಿಸಿದೆವು. ದಾನಿಯೇ ಸೀತೆಯ ಪಾರ್ಟು ಹಾಕಬಹುದೆಂದು ಕೆಲವರು ಸೂಚನೆ ಕೊಟ್ಟರು. ಆದರೆ ನನಗೇಕೋ ಅದು ಸರಿಬೀಳಲಿಲ್ಲ. ದಾನಿಗೆ ಮಾನು ಕಕ್ಕ, ದಾನಿ ಮಾನುಗೆ ಮಗಳಾದ ಹಾಗಾಯಿತು. ಹಾಗೆಂದ ಮೇಲೆ ಮಾನು ರಾಮನ ವೇಷ ಹಾಕಿದರೆ ದಾನಿ ಸೀತೆ ವೇಷ ಹಾಕುವುದು ನನಗೆ ಸರಿ ಬೀಳಲಿಲ್ಲ. ಕಡೆಗೆ ಓಬು ಒಂದು ಸಮಾಧಾನ ಹೇಳಿದ : ಆಟದ ರಾಮ, ಆಟದ ಸೀತೆ; ಆದ್ದರಿಂದ ಪರವಾ ಇಲ್ಲೆಂದು. ನನಗೂ ಅವನ ಸಿದ್ಧಾಂತ ಮನಸ್ಸಿಗೆ ಒಪ್ಪಿತು ಹುಂ ಎಂದೆ.

ಕಡೆಗೆ ಅತ್ತ ಬಿದ್ದು ಇತ್ತ ಬಿದ್ದು ರಾವಣನ ಪಾರ್ಟು ನನ್ನ ಮೇಲೆ ಬಿತ್ತು ನನಗೆ ಹೇಗಾದರೂ ರಾವಣನ ವೇಷ ಬಿಟ್ಟುಬಿಡಬೇಕೆಂದು ಆಸೆ. ಆದ್ದರಿಂದ ನನಗೆ ಒಂಬತ್ತು ತಲೆ ತಂದುಕೊಟ್ಟ ಹೊರತೂ ನಾನು ರಾವಣನಾಗುವುದೇ ಇಲ್ಲ ಎಂದು ಹಟಹಿಡಿದುಬಿಟ್ಟೆ. ಸೂತ್ರಧಾರನಾದ ಮಾನುವಂತೂ ಕಂಗೆಟ್ಟು ಹೋದ. ದಾನಿಗೂ ತುಂಬಾ ಉದ್ವೇಗ ತನ್ನ ಸೀತೆಯ ಪಾರ್ಟು ರಾವಣನಿಲ್ಲದೆ ಎಲ್ಲಿ ನಿಂತು ಹೋಗುವುದೋ ಎಂದು.

ಓಬು ರಾವಣನಿಗೆ ಹತ್ತುತಲೆ ಇರಲೇ ಇಲ್ಲವೆಂದು ಸಾಧಿಸಲು ಬಹಳ ಪ್ರಯತ್ನಪಟ್ಟ. ನಾನು ಅವನಿಗೆ ಬಿಟ್ಟು ಕೊಡುವೆನೇ?

“ಕಣ್ಣಿಂಗಿ ಹೋಗಿತ್ತೇನೊ ನಿನಗೆ? ನಿನ್ನೆ ಭಾಗವತರಾಟದಲ್ಲಿ ರಾವಣನಿಗೆ ಹತ್ತುತಲೆ ಇರಲಿಲ್ಲವೇನೋ?” ಎಂದು ಕೋಪದಿಂದ ನುಡಿದೆ.

ಅಷ್ಟು ಹೊತ್ತಿಗೆ, ನನ್ನ ದುರದೃಷ್ಟಕ್ಕೆ ಸರಿಯಾಗಿ, ಹಿಂದಿನ ರಾತ್ರಿ ರಾವಣನ ವೇಷ ಹಾಕಿದ್ದ ಸೀನಪ್ಪಯ್ಯನವರು ದೂರದಲ್ಲಿ ಹೋಗುತ್ತಿದ್ದರು. ಓಬು ಅವರನ್ನು ಕಂಡು “ನೋಡಿ, ಎಲ್ಲಾ ನೊಡಿ, ನಿನ್ನೆ ಸೀನಪ್ಪಯ್ಯನವರೆ ರಾವಣನಾಗಿದ್ದದ್ದು. ಅವರಿಗೆ ಹತ್ತುತಲೆ ಇದೆಯೆ? ಒಂದೂ ಪೂರ್ತಿಯಾಗಲ್ಲ” ಎಂದ.

ವಾಸ್ತುವವಾಗಿಯೂ ಸೀನಪ್ಪಯ್ಯನವರಿಗೆ ಒಂದು ತಲೆಯೂ ಪೂರ್ತಿಯಾಗಿರಲಿಲ್ಲ. ಏನೋ ಆಗಿ ಸ್ವಲ್ಪ ಮುಕ್ಕಾಗಿತ್ತು. ನನಗಂತೂ ಪೇಚಾಟಕ್ಕೆ ಬಂತು. ಓಬುವಿನ ಪ್ರತ್ಯಕ್ಷ ಪ್ರಮಾಣದ ಮುಂದೆ ನನ್ನಾಟ ನಡೆಯದೆ ಹೋಯಿತು. ರಾವಣನಾಗಲು ಒಪ್ಪಿಕೊಂಡೆ.

ನನಗೆ ರಾವಣನ ವೇಷ ಕೊಡಲು ಮುಖ್ಯಕಾರಣನಾದ ಓಬುವಿನ ಮೇಲೆ ರಚ್ಚಿಟ್ಟು ಮುಯ್ಯಿತೀರಿಸಿದೆ. ಅದು ಹೇಗೆನ್ನುವಿರೋ? ಓಬು ಹನುಮಂತನಾದರೆ ನಾನು ರಾವಣನಾಗುವ. ಇಲ್ಲದಿದ್ದರೆ ಇಲ್ಲವೆಂದು ಹಟಹಿಡಿದೆ. ಅದರ ಒಳಗುಟ್ಟು ಬೇರೆ. ಏನು ಅನ್ನುತ್ತೀರೋ! ಓಬು ಹನುಮಂತನಾದರೆ ರಾವಣನ ಮೇಲೆ ಯುದ್ಧಕ್ಕೆ ಹೋಗುತ್ತಾನೆ. ಆಗ ನನಗೆ ಅವನನ್ನು ಹೊಡೆಯಲು ಒಂದು ಸುಸಮಯ ದೊರಕುತ್ತದೆ ಎಂದು.

ಓಬು ಹನುಮಂತನಾದ. (ಹೊಸದಾಗೇನೂ ಆಗಲಿಲ್ಲ!) ಬಲಾತ್ಕಾರದಿಂದ ರಾಜಿಗೆ ಲಂಕಿಣೆ ಪಾರ್ಟು ಕೊಟ್ಟೆವು. ನಮ್ಮದೆಲ್ಲಾ ಒಂದೇ ಮದ್ದು; ರಾಜಿ ಲಂಕಿಣಿ ಪಾರ್ಟು ವಹಿಸಿಕೊಂಡರೆ ನಮ್ಮ ಜೊತೆ ಸೇರಿಸಿಕೊಳ್ಳುತ್ತೇವೆ; ಇಲ್ಲದಿದ್ದರೆ ಅವಳ ಸಂಗ ಬಿಟ್ಟುಬಿಡುತ್ತೇವೆ ಎಂದು ಎಲ್ಲರೂ ಹೇಳಿಬಿಟ್ಟೆವು. ಹುಡುಗರ ಭಾಗಕ್ಕೆ ಸಂಗ ಬಿಡುವುದೆಂದರೆ ಗಡಿಪಾರು ಮಾಡಿಸಿಕೊಳ್ಳುವುದಕ್ಕಿಂತಲೂ ಕಠಿಣತರವಾದ ಶಿಕ್ಷೆ. ರಾಜಿ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡಳು; ಲಂಕಿಣಿಯಾದಳು.

ರಾಮನ ಪಾರ್ಟಾಯಿತು; ಸೀತೆಯ ಪಾರ್ಟಾಯಿತು; ಹನುಮಂತ ರಾವಣರ ಪಾರ್ಟುಗಳೂ ಆದುವು. ಲಂಕಿಣಿಯೂ ಸಿಕ್ಕಿದ ಹಾಗಾಯಿತು. ನಾನು ರಾವಣ: ಮಾನು ರಾಮ; ದಾನಿ; ಸೀತೆ; ಓಬು ಹನುಮಂತ; ರಾಜಿ ಲಂಕಿಣಿ; ಇನ್ನು ಉಳಿದವರು ಯಾರು?

ಆಗ ನಮಗೆ ವಾಲ್ಮೀಕಿ ರಾಮಾಯಣವೇ ಪ್ರಮಾಣ ಗ್ರಂಥವಾಗಿರಲಿಲ್ಲ. ಬೇಕಾದರೆ ನಮ್ಮದೇ ಒಂದು ಹೊಸ ರಾಮಾಯಣವನ್ನು ರಚಿಸುತ್ತಿದ್ದವು. ಏಕೆ ರಚಿಸಬಾರದು? ಕೋಟ್ಯಂತರ ರಾಮಾಯಣಗಳಿದ್ದುವಂತೆ. ನಮ್ಮ ರಾಮಾಯಣ ಕಳೆದುಹೋದ ರಾಮಾಯಣಗಳಲ್ಲಿ ಒಂದು!

ರಾಮಾಯಣದಲ್ಲಿ ನ್ಯಾಯವಾಗಿ ಭೀಮ ಬರುವುದಿಲ್ಲ. ಆದರೂ ಚೋಟುದ್ದ ವಾಸು ಭೀಮನಾಗುತ್ತೇನೆ ಎಂದು ಹಟಹಿಡಿದ. ನಾವು ಎಷ್ಟೆಷ್ಟೋ ಹೇಳಿದೆವು. ರಾಮಾಯಣ ಭೀಮಾಯಣವಲ್ಲವೆಂದು. ಆದರೇನು ಮಾಡುವುದು? ಅವನಿಗೆ ಭೀಮನ ಪಾರ್ಟು ಎಂದರೆ ಬಹಳ ಖುಷಿ. ಎಂದೋ ಒಂದುಸಾರಿ ಭಾಗವತರಾಟದಲ್ಲಿ ಭೀಮ ಮಂಡಕ್ಕಿ (ಪುರಿ) ಕಡಲೆ ಮುಕ್ಕುತ್ತಿದ್ದುದನ್ನು ನೋಡಿಬಿಟ್ಟಿದ್ದ. ಭೀಮನ ವೇಷ ಹಾಕಿದಾಗಲೆಲ್ಲ ಕಡಲೆ ಮಂಡಕ್ಕಿ ಸಿಕ್ಕುವು ದೆಂದು ಅವನ ಮಹದಾಕಾಂಕ್ಷೆ; ಆಡುವುದು ರಾಮಾಯಣವಾಗಲಿ. ಶಾಕುಂತಲವಾಗಲಿ, ಚಂದ್ರಹಾಸವಾಗಲಿ, ಮತ್ತೇನೇ ಆಗಲಿ, ವಾಸುವಂತೂ ಭೀಮನ ಪಾರ್ಟು ಹಾಕಲೇಬೇಕು!

ನಮಗೆಲ್ಲ ಒಳ್ಳೆ ರಗಳೆಗೆ ಇಟ್ಟುಕೊಂಡಿತು, ಭೀಮನನ್ನು ರಾಮ ರಾವಣರ ಯುದ್ಧದಲ್ಲಿ ಹೇಗೆ ತರುವುದು ಎಂದು. ರಾಮಾಯಣದಲ್ಲಿ ಭೀಮ ಬರುವುದಿಲ್ಲ ಎಂದರೆ ವಾಸು ಕೇಳಲಿಲ್ಲ; ಅಷ್ಟಕ್ಕೇ ನಿಲ್ಲದೆ ಬಂದೇ ಬರುತ್ತದೆ ಎಂದೂ ಸಾಧಿಸಿಬಿಟ್ಟ. ನಮ್ಮಲ್ಲಿ ಯಾರೂ ರಾಮಾಯಣ ಓದಿರಲಿಲ್ಲ; ನಾವು ಆಡಿದ್ದೆ ರಾಮಾಯಣ! ಆದ್ದರಿಂದ ವಾಸು ಹೇಳಿದ್ದೇ ರಾಮಾಯಣವಾಗಬೇಕಾಗಿ ಬಂತು. ಸರಿ, ಅಭಿನವ ವಾಲ್ಮೀಕಿಯಾದ ಅವನನ್ನೇ ಕೇಳಿದೆವು – ರಾಮಾಯಣದಲ್ಲಿ ಭೀಮನ ವೇಷ ತರುವುದು ಹೇಗೆ ಎಂದು. ಅವನೂ ಸ್ವಲ್ಪ ಯೋಚಿಸಿದ. ಹೊಸಕವಿತೆ ಬರೆಯಬೇಕಾದರೆ ಪಾಪ, ಆವೇಶ ಬರಬೇಕಷ್ಟೆ! ಕಡೆಗೂ ಆವೇಶ ಬಂತು: ರಾಮ ರಾವಣರಿಬ್ಬರು ಯುದ್ಧಕ್ಕೆ ಹೊರಡುವ ಮುಂಚೆ ಭೀಮಪೂಜೆ ಮಾಡಿ, ಬೇಕು ಬೇಕಾದ ಭಕ್ಷ್ಯಭೋಜ್ಯಗಳನ್ನು ನಿವೇದಿಸಬೇಕೆಂದು ವಾಸು ಸಲಹೆ ಕೊಟ್ಟು.

ಅಯ್ಯೋ ಅವನ ಮಸಣ; ಭಕ್ಷ್ಯ ಭೋಜ್ಯವೆಂದರೇನು? ಮಂಡಕ್ಕಿ, ಕಡಲೆ! ಅಂತೂ ಅಭಿನವ ವಾಲ್ಮೀಕಿಗಳು ಹೇಳುವಾಗ, ಅಲ್ಲ ಎನ್ನುವುದಕ್ಕಾದೀತೆ? ಹುಂ ಎಂದು ಸಮ್ಮತ ಕೂಟ್ಟುಬಿಟ್ಟೆವು. ಇನ್ನು ಉಳಿದವರು ಎಂಕ್ಟು, ತಿಮ್ಮು; ಅವರಿಗೆ ಪಾರ್ಟು ಕೊಡದಿದ್ದರೆ ಅವರೇನೂ ಸುಮ್ಮನಿರುವುದಿಲ್ಲ. ರಾಮಾಯಣವನ್ನೆ ನಿಲ್ಲಿಸಿಯೂ ಬಿಡಬಹುದು ಎಂಬ ಭಯ ಬೇರೆ. ಎಂಕ್ಟು ವಿಭೀಷಣನಾದ; ತಿಮ್ಮು ಕುಂಭಕರ್ಣನಾದ (ತನ್ನ ಸ್ವಭಾವಕ್ಕೆ ತಕ್ಕಂತೆ!) ಅಂತೂ ರಾಮಾಯಣದಲ್ಲಿರುವ ಪಾತ್ರಗಳಿಗೆ ನಮ್ಮ ಪಾತ್ರಗಳನ್ನು ಜೋಡಿಸುವುದಕ್ಕೆ ಬಲದಾಗಿ, ನಮ್ಮ ನಮ್ಮ ಮನಸ್ಸಿಗೆ ಬಂದ ಪಾತ್ರಗಳನ್ನು ಆರಿಸಿಕೊಂಡು ಹೊಸ ರಾಮಯಣ ಮಾಡಿದೆವು.

ರಾಮರಾವಣರು ಯುದ್ಧಕ್ಕೆ ಹೊರಡುವ ಮುನ್ನ “ಭೀಮ ಪೂಜೆ”ಗೆ ಆರಂಭವಾಯಿತು. ವಾಸು (ನಮ್ಮ ಗಾಳಿ ಭೀಮ) ಹುಣಿಸೆಯ ಮರದ ಬೇರಿನ ಮೇಲೆ ಕಲ್ಲಿನ ಮೂರ್ತಿಯಾಗಿ ಕುಳಿತುಕೊಂಡ. ರಾಮರಾವಣರು ಇಬ್ಬರೂ ಒಟ್ಟಿಗೆ ಬಂದು ಪೂಜೆ ಮಾಡಬೇಕೋ ಅಥವಾ ಬೇರೆಬೇರೆಯಾಗಿ ಬಂದು ಪೂಜೆ ಮಾಡಬೇಕೋ ಎಂದು ಅಭಿನವ ವಾಲ್ಮೀಕಿಯನ್ನು ಕೇಳಿದೆವು. ಭೀಮನಾಗಿದ್ದ ವಾಸು “ಬೇರೆ ಬೇರೆಯಾಗಿಯೇ ಬಂದು ಪೂಜೆ ಮಾಡಬೇಕು” ಎಂದು ಅಪ್ಪಣೆ ಮಾಡಿದ. ಇಬ್ಬರೂ ಒಟ್ಟಿಗೆ ಬಂದು ಪೂಜೆ ಮಾಡಿದರೆ ನೈವೇದ್ಯ ಎಲ್ಲಿ ಕಡಿಮೆಯಾಗುವುದೋ ಎಂದು ಅವನಿಗೆ ದೊಡ್ಡ ಭಯ. ಪೂಜೆಗೆ ಮೊದಲು ರಾಮ ಬರಬೇಕೋ? ರಾವಣ ಬರಬೇಕೋ ಎಂದು ಕೇಳಿದೆವು. ವಾಸುವಿಗೆ ಸ್ವಲ್ಪ ರಗಳೆಗಿಟ್ಟುಕೊಂಡಿತು, ಹಾಗೆಯೇ ಯೋಚನೆ ಮಾಡಿ “ರಾವಣನೇ ಮೊದಲು ಬರಲಿ” ಎಂದ. ವನವಾಸದಲ್ಲಿದ್ದ ರಾಮನಿಗೆ ಹೆಚ್ಚಾದ ತಿಂಡಿಯ ಪದಾರ್ಥಗಳು ಸಿಕ್ಕುವುದಾದರೂ ಹೇಗೆ? ಲಂಕಾಧಿಪತಿಯಾದ ರಾವಣನಾದರೋ ರಾಕ್ಷಸ. ದೊಡ್ಡ ಹೊಟ್ಟೆ, ದೊಡ್ಡ ಕೈ, ದೊಡ್ಡ ತಟ್ಟೆ! ಆದ್ದರಿಂದ ತಿಂಡಿ ಹೆಚ್ಚಾಗಿ ಸಿಕ್ಕುವುದೆಂದು ಯೋಚಿಸಿದ.

ವಾಸುವಿನ ಅಂತರಂಗವನ್ನು ಅರಿತ ಓಬು ಅಪಾಯ ಹುಡುಕಿದ. ನಾನೇ ರಾವಣನಾಗಿದ್ದೆನಷ್ಟೆ? ನನ್ನ ಕಿವಿಯ ಹತ್ತಿರಬಂದು ಪಿಸುಮಾತಿನಲ್ಲಿ ಒಂದೆರಡು ಕಟ್ಟಿರುವೆ, ಗೊದ್ದ, ಗೆದ್ದಲು, ಮಿಡತೆ, ಕುಂಬಾರ್ತಿ ಹುಳ ಇವುಗಳನ್ನು ನೈವೇದ್ಯಕ್ಕೆ ತೆಗೆದುಕೊಂಡು ಹೋಗುವಂತೆ ಹೇಳಿದ. ಏಕೆಂದರೆ ರಾವಣ ಮಾಂಸಾಹಾರಿಯಷ್ಟೆ! ಉಪಾಯವನ್ನು ಸೂಚಿಸಿದ ಓಬುವೇ ಹುಳುಗಳನ್ನೂ “ಸಪ್ಲೈ” ಮಾಡಿದ. ರಾವಣನಾಗಿದ್ದ ನಾನು ಹುಳುಗಳನ್ನು ಎಲೆಯಲ್ಲಿ ಮುಚ್ಚಿಕೊಂಡು ಹೋಗಿ ಭೀಮದೇವರ ಎದುರು ನಿಂತೆ. ಅದು ರಾವಣ ಮಾಡುವ ಪೂಜೆಯಾಗಿದ್ದರೂ ಹನುಮಂತನಾದ ಓಬು ಹತ್ತಿರದಲ್ಲಿಯೆ ನಿಂತಿದ್ದ.

ಅವನು ಭೀಮನಾಗಿದ್ದ ವಾಸುವಿಗೆ “ದೇವರು ಯಾವಾಗಲೂ ಕಣ್ಣು ಮುಚ್ಚಿಕೊಂಡೇ ಇರಬೇಕು” ಎಂದನು.

ವಾಸು ಕಣ್ಣು ಮುಚ್ಚಿಕೊಂಡ. ರಾವಣನ ‘ಪೂಜೆ’ಗೆ ಪ್ರಾರಂಭವಾಯಿತು. ನೈವೇದ್ಯವನ್ನು ದೇವರ ಮುಂದಿಟ್ಟ. ದೇವರಿಗೆ ತಿನ್ನುವಂತೆಯೂ ಹೇಳಿದ. ವಾಸು ಕಣ್ಣು ಮುಚ್ಚಿಕೊಂಡೆ ಇದ್ದ. ನಮಗೆಲ್ಲ ಅಳ್ಳಬರಿಯುವ ನಗು. ಆದರೂ ಎರಡು ಕೈಗಳಿಂದಲೂ ಬಾಯಿ ಮುಚ್ಚಿ ಹಿಡಿದುಕೊಂಡಿದ್ದೆವು. ಭೀಮದೇವನು ನೈವೇದ್ಯಕ್ಕೆ ಕೈ ಹಾಕಿದನು. ಕಣ್ಣುಮುಚ್ಚಿಕೊಂಡಿದ್ದ ಅವನ ಚಿತ್ತಭಿತ್ತಿಯಲ್ಲಿ ತನ್ನ ಮುಂದೆ ಮಂಡಕ್ಕಿಯ ರಾಶಿಯೇ ತೋರಿಬಹುದು! ಅವನ ಸಂತೋಷಕ್ಕೆ ಪಾರವೇ ಇಲ್ಲ!

ಓಬು ಇರುವೆಗಳನ್ನು ಸರಿಯಾಗಿ ಕೊಂದಿರಲಿಲ್ಲ. ಒಂದು ಮಿಡತೆಗೂ ಅರೆ ಜೀವವಿತ್ತು. ಭೀಮದೇವರಿಗೆ ತಕ್ಕ ನಯವೇದ್ಯ! ವಾಸು ಕೈಯಿಟ್ಟನೋ ಇಲ್ಲವೋ ನೋವು ಸಿಟ್ಟುಗಳಿಂದ ಒದ್ದಾಡುತ್ತಿದ್ದ ಕಟ್ಟಿರುವೆಯೊಂದು ಕಡಿಯಿತು! ಅನಾಹುತವೋ ಅನಾಹುತ! ವಾಸು ಎಲ್ಲಿ ಯಾರೂ ನಿಜವಾದ ಭೀಮನೇ ಆಗಿದ್ದ ಪಕ್ಷದಲ್ಲಿ ನಮಗೆಲ್ಲ ಏನು ಪರಿಣಾಮವಾಗುತ್ತಿತೊ ದೇವರಿಗೆ ಗೊತ್ತು! ಸ್ವಲ್ಪ ಊಹಿಸಿದರೆ ರಾಮರಾವಣರ ಯುದ್ಧವೇ ನಡೆಯುತ್ತಿರಲಿಲ್ಲ ಎನ್ನಬಹುದು. ವಾಸು ಕಿಟ್ಟನೆ ಕಿರಿಚಿಕೊಂಡು, ಕೋವಿಯ ಮದ್ದಿಗೆ ಕಿಡಿ ಬಿದ್ದಂತೆ ಎದ್ದುನಿಂತ! ಓಬು ಬರಿಯ ಹೈಲು; ಯಾವಾಗ ಹೇಗೆ ನಡೆದುಕೊಳ್ಳಬೇಕೆಂದು ಅವನಿಗೆ ತಿಳಿಯದು. ವಾಸುವನ್ನು ಸಂಭೋದಿಸಿ “ಭೀಮದೇವರೇ, ಕಲ್ಲಾದ ದೇವರು ಅಲ್ಲಾಡಬಾರದು. ಕೂತುಕೊಳ್ಳಿ! ಕೂತುಕೊಳ್ಳಿ!” ಎಂದು ಕೂಗಿಕೊಂಡು ನಗಲಾರಂಭಿಸಿದನು. ಭೀಮ ಗೊಳೋ ಎಂದು ಅಳಲಾರಂಭಿಸಿದ. ದಾನಿ ಸೀತೆಯಾಗಿದ್ದವಳು ಸೀತೆತನವನ್ನು ಬಿಟ್ಟು ಓಡಿಬಂದು ಭೀಮನ ಬಾಯಿ ಮುಚ್ಚಿಹಿಡಿದು, ಅಳಬೇಡ ಎಂದು ಎಷ್ಟು ಹೇಳಿಕೊಂಡರೂ ಭೀಮ ಬೇರೆ ಕೇಳಲಿಲ್ಲ. ಭೀಮಗರ್ಜನೆ ಅಂತರಿಕ್ಷಕ್ಕೂ ಏರಿತು. ಇಂದ್ರನಿಗೆ ಗಾಬರಿಯಾಗಬಹುದು! ರಾಮನಾಗಿದ್ದ ಮಾನುವೂ ಓಡಿಬಂದು ಭೀಮನನ್ನು ಸಂತೈಸಿದ. ರಾಜಿ ಮಾನುವಿಗೆ “ನೀನೆಂಥ ರಾಮನೋ? ಕಟ್ಟಿರುವೆ ಕಡಿದದ್ದನ್ನೂ ಕೂಡ ಫಕ್ಕನೆ ಗುಣಮಾಡಲಾರ!” ಎಂದು ಹೇಳಿ “ವಾಸಣ್ಣಯ್ಯಾ, ಅಳಬೇಡ” ಎಂದು ಸಂತವಿಟ್ಟಳು. ಅವನೇನೋ ಬೊಬ್ಬೆ ಹಾಕಿದ! ಭೀಮನ ಕೂಗಿಗೆ ತಡೆಯುಂಟೆ? ಆಕಾಶಕ್ಕೆ ಮುಟ್ಟಿದ ಭೀಮನ ಕೂಗು ಅಡುಗೆಮನೆಗೆ ಮುಟ್ಟುವುದೊಂದು ದೊಡ್ಡ ಮಾತೇ? ಚಿಕ್ಕಮ್ಮ ಗಾಬರಿಯಿಂದ, ಕೈಲಿ ಹಿಡಿದು ಕೊಂಡಿದ್ದ ಒಗ್ಗರಣೆ ಸೌಟನ್ನು ಹಿಡಿದುಕೊಂಡೇ ಹೊರ ಅಂಗಳಕ್ಕೆ ಬಂದರು. ಬಿಸಿಬಿಸಿಯಾದ ಸಾರಿಗೆ ಅದ್ದಿದ್ದ ಸೌಟಿನಿಂದ ಇನ್ನೂ ಹಬೆಯಾಡುತ್ತಿತ್ತು. ಪಾಪ, ಅವರಿಗೆ ನಮ್ಮ ರಾಮಾಯಣದ ಪೂರ್ವೋತ್ತರವೇನು ಗೊತ್ತು? “ಕುಶಾಲು ಹೋಗಿ ಅಸಾಲಾಯಿತು!” ಆಟಕ್ಕೆ ಬದಲು ಆಟಮಟವಾಯಿತು! ರಾವಣನಾದ ನನ್ನನ್ನು ರಾಮ ಹೊಡೆಯುವ ಬದಲು ಚಿಕ್ಕಮ್ಮ ಗುದ್ದಿದ್ದರು. ಬಿಕ್ಕಿಬಿಕ್ಕಿ ಆಳುತ್ತಿದ್ದ ಅಭಿನವ ವಾಲ್ಮೀಕಿಯನ್ನು ಚಿಕ್ಕಮ್ಮ ಅಡುಗೆ ಮನೆಗೆ ಎಳೆದುಕೊಂಡು ಹೋದರು: ಅಲ್ಲಿ ಸರಿಯಾದ “ಭೀಮಪೂಜೆ” ಯಾಗಿರಬೇಕು!

ಭೀಮ ಹೋದರೆ ರಾಮಾಯಣ ನಿಲ್ಲುವುದೇ? ನಾವೇನೋ ರಾಮರಾವಣರ ಯುದ್ಧ ಮಾಡಿಯೇಬಿಡಬೇಕೆಂದು ಹಟಸಾಧಿಸಿದವು. ಆಟ ಪ್ರಾರಂಭವಾಯಿತು. ಎಲ್ಲಿ? ಲಂಕೆಯಲ್ಲಲ್ಲ! ಬಲೆಬಲೆಯಾದ ತಣ್ಣೆಳಲಲ್ಲಿ! ಭೀಮಪೂಜೋಪಾಖ್ಯಾನ ಕೊನೆಗಂಡ ಮೇಲೆ ಸೇತು ಬಂಧನವಾಯಿತು. ಸೇತುಬಂಧನಕ್ಕೆ ರಾವಣ, ಕುಂಭಕರ್ಣ, ಲಂಕಿಣಿ ಎಲ್ಲರೂ ಸಹಾಯ ಮಾಡಿದರು! ಸಮಯಕ್ಕೆ ತಕ್ಕಹಾಗೆ ರಾಮ ಮೊದಲಾದವರು ಮಂಗಗಳಾದರು. ಹನುಮಂತನಾದ ಓಬು ಸಣ್ಣ ಸಣ್ಣ ಪುಡಿಗಲ್ಲುಗಳನ್ನು ತರುತ್ತಿದ್ದುದನ್ನು ಕಂಡು ನಾನು “ನೀನೆಂಥಾ ಹನುಮಂತನಪ್ಪ! ವಡೆಗಳಂಥ ಕಲ್ಲು ತರುತ್ತಿದ್ದೀಯಲ್ಲ!” ಎಂದೆ.

ಹನುಮಂತ ಕೈಲಾಸಪರ್ವತವನ್ನು ಎತ್ತಲು ಹೋಗಿ ಕೈ ಸಿಕ್ಕಿಸಿಕೊಂಡದ್ದನ್ನು (ನಮ್ಮ ರಾಮಾಯಣದ ಪ್ರಕಾರ) ಅಭಿನಯಿಸಲೇಬೇಕೆಂದು ತಿಮ್ಮು ಹಟ ಹಿಡಿದ. ಸದ್ಯಕ್ಕೆ ಅವನೇ ಶಿವನಾದ. ಲಂಕಿಣಿಯಾಗಿದ್ದ ರಾಜಿ ಪಾರ್ವತಿಯಾದಳು. ಶಿವ ಪಾರ್ವತಿ ಇಬ್ಬರೂ ಮನೆಕಟ್ಟುವುದಕ್ಕೆ ಹೊಸದಾಗಿ ತಂದು ಹಾಕಿದ್ದ ಕಲ್ಲುಚಪ್ಪಡಿಗಳ ಮೇಲೆ ಕುಳಿತರು. ಕಲ್ಲುಚಪ್ಪಡಿಯೆ ಕೈಲಾಸವಾಯಿತು. ಹನುಮಂತ ಕೈಲಾಸದ ಬಳಿಗೆ ಹೋಗಿ ಅದನ್ನು ಎತ್ತುವಂತೆ ನಟಿಸಿ ಸಂದಿಯೊಳಗೆ ಕೈಯಿಟ್ಟನು. ಶಿವ ಕೈಲಾಸವನ್ನು ಕಾಲು ಬೆರಳಿನಿಂದ ಒತ್ತಬೇಕಷ್ಟೆ! ಹಾಗೆಯೆ ತಿಮ್ಮು ಹಾಸರೆಯನ್ನು ಬಲವಾಗಿ ಒತ್ತಿ ಹಿಡಿದನು. ಓಬುವಿಗೆ ಅತಿ ನೋವಾಗಿ ‘ರಾಮ ರಾಮ! ರಾಮ ರಾಮ!’ ಎನ್ನುತ್ತಿದ್ದವನು ಇದ್ದಕ್ಕಿದ್ದ ಹಾಗೆ ಸ್ವರ ಬದಲಾಯಿಸಿ “ತಿಮ್ಮು! ತಿಮ್ಮು! ಕೈ! ಕೈ!!” ಎಂದು ಕೂಗಿಕೊಂಡನು. ಬೆರಳಿನ ಚರ್ಮ ಸುಲಿದುಹೋಯಿತು. ಆದರೂ ಶಿವ ಕೈಲಾಸವನ್ನು ಇನ್ನೂ ಬಲವಾಗಿ ಒತ್ತಿದನು. ಹನುಮನ ಕೂಗು ನಟನೆಯೆಂದೇ ಭಾವಿಸಿ ತಿಮ್ಮು ಇನ್ನೂ ಬಲವಾಗಿ ಅದುಮಿದನು. ಓಬು ಗೊಳೋ ಎಂದು ಅತ್ತನು. ಕಣ್ಣಿನಲ್ಲಿ ನೀರೂ ಜಲಜಲನೆ ಉಕ್ಕಿ ಹರಿಯಿತು. ಬಳಿಯಲ್ಲಿ ನಿಂತಿದ್ದ ನಾವೆಲ್ಲರೂ ಅವನ ಅಭಿನಯ ಕೌಶಲವನ್ನು ನೋಡಿ ಮೆಚ್ಚಿದೆವು. ಅಷ್ಟು ಸಹಜವಾಗಿ ಅಳಲು ಯಾವ ನಟಶ್ರೇಷ್ಠನಿಂದಾದರೂ ಸಾಧ್ಯವಾಗುವುದೇ?

ದೇವರ ಕೃಪೆಯಿಂದ ನಮ್ಮ ರಾಮಾಯಣದಲ್ಲಿ ಕೈಲಾಸದಡಿಯಲ್ಲಿ ಕೈ ಸಿಕ್ಕಿ ಕೂಗಿದವನು ಹನುಮಂತ; ರಾವಣನಲ್ಲ! ಎಲ್ಲಿಯಾದರೂ ರಾವಣನಾಗಿದ್ದ ಪಕ್ಷದಲ್ಲಿ ಈ ಕತೆ ಬರೆಯುವುದಕ್ಕೂ ನನಗೆ ಕೈ ಬೆರಳು ಇರುತ್ತಿರಲಿಲ್ಲ; ನನ್ನ ಅದೃಷ್ಟ ಚೆನ್ನಾಗಿತ್ತು.

ಓಬು ಕೂಗಿದ, ತಿಮ್ಮು ಅದುಮಿದ; ಹನುಮ ಅರಚಿದ, ಶಿವ ಒತ್ತಿದ. ನಿಂತ ನಾವೆಲ್ಲ ನಟನೆಗೆ ಬಹಳ ಹಿಗ್ಗಿದೆವು! ನಮ್ಮ ಪುಣ್ಯಕ್ಕೆ ಸರಿಯಾಗಿ, ರಾಮಾಯಣದಲ್ಲಿ ಗಲ್ಲಿಗೆ ಹಾಕುವ ಪದ್ಧತಿ ಇರಲಿಲ್ಲವೆಂದು ತೋರುತ್ತದೆ. ಅದು ಎಲ್ಲಿಯಾದರೂ ಇದ್ದಿದ್ದರೆ ನಮ್ಮಲ್ಲಿ ಯಾವನಾದರೂ ಒಬ್ಬನ ಗತಿ ಮುಗಿಯುತ್ತಿತ್ತು. ಯಾವನಾದರೂ ಏಕೆ? ನನ್ನ ಗತಿಯೇ ಪೂರೈಸುತ್ತಿತ್ತು. ಏಕೆನ್ನುವಿರೋ? ನಾನು ರಾವಣ. ಈಗಿನ ಕಾಲದಲ್ಲಿ ಸೋತ ರಾಜರನ್ನು ಗಲ್ಲಿಗೆ ಹಾಕುವುದೇ ಧರ್ಮವಷ್ಟೆ! ಹಾಗೆಯೇ ರಾವಣನನ್ನು ಗೆದ್ದ ರಾಮನು ಸುಮ್ಮನೆ ಇರುತ್ತಿದ್ದನೇ? ರಾವಣನನ್ನು ಗಲ್ಲಿಗೆ ಹಾಕಿಸಿಯೇ ಬಿಡುತ್ತಿದ್ದ. ಅಂದರೆ ನನ್ನ ವ್ಯಾಪಾರ ಮುಗಿಯುತ್ತಿತ್ತು!

ಓಬುವಿನ ಕೂಗು ಕೇಳಿ ಅಲ್ಲೆಲ್ಲಿಯೋ ಬಳಿಯಿದ್ದ ಕಕ್ಕಯ್ಯ ಓಡಿ ಬಂದರು. ಬಂದವರು ದೂರನಿಂತು “ಏನ್ರೋ ಅದು, ಗಲಾಟೆ? ಎಂದರು. “ತಿಮ್ಮು ಚಪ್ಪಡಿಕಲ್ಲನ್ನು ಬಲವಾಗಿ ಅದುಮುತ್ತ “ಏನೂ ಇಲ್ಲ, ಕಕ್ಕಯ್ಯ! ರಾಮಾಯಣ ಆಡ್ತೇವೆ! ಹನುಮಂತನ ಕೈ ಕೈಲಾಸದಡಿ ಸಿಕ್ಕಿಕೊಂಡಿದೆ: ಶಿವ ಅಮುಕುತ್ತ ಇದ್ದಾನೆ” ಎಂದನು. ಓಬು ಮಾತ್ರ “ಅಯ್ಯಯ್ಯೋ! ಅಣ್ಣಯ್ಯ ಸತ್ತೇ! ಸತ್ತೇ!” ಎಂದು ಕೂಗಿಕೊಂಡನು.

ಕಕ್ಕಯ್ಯ ಓಡಿಬಂದು ಕೈಲಾಸದ ಮೇಲೆ ಕುಳಿತು ದರ್ಬಾರು ಮಾಡುತ್ತಿದ್ದ ಶಿವ ಪಾರ್ವತಿಯರಿಬ್ಬರನ್ನೂ ಈಚೆಗೆ ಎಳೆದು ಹಾಕಿ, ಕೈಲಾಸವನ್ನು ಎತ್ತಿದರು: ಓಬು ಕೈ ಎಳೆದುಕೊಂಡ. ಚರ್ಮ ಸುಲಿದು ಕೈಬೆರಳೆಲ್ಲ ರಕ್ತಮಯವಾಗಿತ್ತು. ಕಕ್ಕಯ್ಯ ಎಲ್ಲರಿಗೂ ಹುಣಿಸೆಯ ಬರಲಿನಿಂದ ಎರಡೆರಡು ‘ಚಡಿ ಕೊಟ್ಟು’ ಹನುಮಂತನ ಕೈಗೆ ಔಷಧಿ ಮಾಡಲು ಅವನನ್ನು ಎಳೆದುಕೊಂಡು ಹೋದರು. ಚಳಿಗಾಲ! ಪ್ರಾತಃಕಾಲ! ಹುಣಿಸೆಯ ಬರಲಿನ ಪೆಟ್ಟು! ನೀವೇ ಊಹಿಸಿಕೊಳ್ಳಿ!

ರಾಮರಾವಣರ ಯುದ್ಧ ಇಷ್ಟಕ್ಕೆ ಪೂರೈಸಲಿಲ್ಲ. ನಾನು ಮಾನುವನ್ನು ಕುರಿತು “ನೀನೆಂಥ ರಾಮನೋ! ಕೈಲಾಗದ ರಾಮ! ನಿನ್ನ ಭಕ್ತ ಹನುಮಂತ ಒರಲಿದರೆ ನೀನು ಬಂದು ಬಿಡಿಸಬೇಕೋ ಬೇಡವೋ? ಕಲ್ಲು ನಿಂತಂತೆ ನಿಂತುಕೊಂಡು ನೋಡ್ತಾ ಇದ್ದೆ! ನಿನ್ನ ದೆಸೆಯಿಂದ ಭಾಗವತರಾಟ ಆಡದಿದ್ದ ಹಾಗೂ ಆಯಿತು!” ಎಂದೆ – ಪೆಟ್ಟು ಬಿದ್ದ ಸಿಟ್ಟಿನಿಂದ.

ಮಾನುಗೆ ಸಿಟ್ಟು ಬಂತು. ಮೈಮೇಲೆ ಬಿದ್ದ. ನನಗೂ ಅವನಿಗೂ ಹೊಡೆದಾಟವಾಯಿತು. ನ್ಯಾಯವಾಗಿ ಕತೆಯಂತೆ ನೋಡಿದರೆ ರಾವಣ ಸೋಲಬೇಕು. ವಾಸ್ತವವಾಗಿ ನಾನೇ ಬಲವಾಗಿದ್ದೆ; ರಾಮ ಬಿದ್ದ; ರಾವಣ ಗೆದ್ದ; ಕೆಳಗೆ ಬಿದ್ದ ಮಾನುವಿನ ಮೇಲೆ ನಾನು ಬಲವಾಗಿ ಜಗ್ಗಿಸಿ ಕೂತುಕೊಂಡೆ; ಅವನು ಅಳಅಳುತ್ತ “ಲೋ ಪುಟ್ಟು, ನಾನು ರಾಮ ಕಣೋ! ನೀನು ರಾವಣ ಕಣೋ! ಬಿಡೋ, ನನ್ನ ಮೇಲೆ ನೀನು ಕೂತುಕೊಳ್ಳಬಾರದು!” ಎಂದ.

ನಾನು ಇನ್ನೂ ಬಲವಾಗಿ ಜಗ್ಗಿಸಿ “ಹೋಗೋ ನಿನ್ನ ರಾಮಾಯಣಕ್ಕೆ ಬೆಂಕಿಹಾಕ! ನನ್ನ ರಾಮಾಯಣದಲ್ಲಿ ನಾನೇ ಗೆದ್ದಿದ್ದು” ಎಂದ.

ಕೆಳಗೆ ಬಿದ್ದ ರಾಮನನ್ನು ಬಿಡಿಸಿಕೊಳ್ಳಲು ಲಂಕಿಣಿ, ಸೀತೆ, ಲಕ್ಷ್ಮಣ, ಕುಂಭಕರ್ಣ, ವಿಭೀಷಣ ಎಲ್ಲರೂ ಬಂದರು. ಆದರೂ ನಾನು ಬೇರೆ ಜಗ್ಗಲಿಲ್ಲ. ಕಡೆಗೆ ಕುಂಭಕರ್ಣ ಓಡಿಹೋಗಿ ನಮ್ಮಾಳು ಲಿಂಗನನ್ನು ಕರೆತಂದ. ಅವನು ರಾವಣನನ್ನು ಹಿಡಿದೆಳೆದು ರಾಮನನ್ನು ಬಿಡಿಸಿದೆ. ಸದ್ಯಕ್ಕೆ ರಾವಣವಧೆಗೆ ಬದಲಾಗಿ ರಾಮವಧೆ ಆಗಲಿಲ್ಲ! ಅಂದು ನಾವಾಡಿದ ಹೊಸ ರಾಮಾಯಣದ ಪ್ರಕಾರ, ರಾಮರಾವಣರ ಯುದ್ಧದಲ್ಲಿ ರಾಮನೇ ಸೋಲುತ್ತಾನೆ! ಭೀಮನು ಕಟ್ಟಿರುವೆ ಕೈಲಿ ಕಡಿಸಿಕೊಂಡು ಹೋಗುತ್ತಾನೆ. ಹನುಮಂತನು ಕೈಲಾಸದ ಕೆಳಗೆ ಕೈ ಚರ್ಮ ಸುಲಿಸಿಕೊಳ್ಳುತ್ತಾನೆ! ರಾಮ ಬಿದ್ದ! ರಾವಣ ಗೆದ್ದ! – ಇದೇ ನಮ್ಮ ‘ರಾಮರಾವಣರ ಯುದ್ದ!’
***********




ಮಲೆನಾಡಿನ ಚಿತ್ರಗಳು : ಕತೆಗಾರ ಮಂಜಣ್ಣ

ಕತೆಗಾರ ಮಂಜಣ್ಣ
ಮಂಜಣ್ಣ ನಮ್ಮ ಮನೆಯ ಆಳು; ಬಹಳ ಹಳೆಯ ಮನುಷ್ಯ; ಅಂದರೆ ಸುಮಾರು ಅರವತ್ತು ವರ್ಷ. ಅವನ ಮುಖದ ತುಂಬ ಬಿಳಿಯ ಗಡ್ಡ ಮೀಸೆ. ತಲೆಯ ತುಂಬ ಹಣ್ಣು ಹಣ್ಣು ಕುದಲು. ಅವನ ಗಡ್ಡವೇನು ಮಲೆನಾಡಿನ ಗಿರಿಗಳ ಮೇಲೆ ನಿಬಿಡವಾಗಿ ಬೆಳೆವ ತರುನಿಕದರಂತೆ ಉದ್ದವಾಗಿ ನೀಳವಾಗಿರಲಿಲ್ಲ. ಬಯಲು ಸೀಮೆಯ ಗುಡ್ಡಗಳಲ್ಲಿ ಬೆಳೆಯುವ ವಿರಳವಾದ ಪೊದೆಗಳಂತೆ ಇತ್ತು. ಸುಲಭವಾಗಿ ಹೇಳುವುದಾದರೆ ಇಲಿ ತರಿದಂತೆ ಇತ್ತು.

ಅದಕ್ಕೊಂದು ಕಾರಣ ಇದೆ. ನಮ್ಮ ಮಂಜಣ್ಣ ಕ್ಷೌರಿಕರೊಡನೆ ಅಸಹಕಾರ ಮಾಡಿದ್ದ. ವಪನವೆಮದರೆ ಅವನಿಗೆ ನಮ್ಮೆಲ್ಲರಿಗಿರುವಂತೆ ಒಂದು ವೈಭವವಾಗಿರಲಿಲ್ಲ. ಅವನಿಗೆ ಕುಡುಗೋಲೇ ಮುಂಡನದ ಕೈದು! ಗಡ್ಡ ಉದ್ದವಾದ ಕೂಡಲೆ ಅದರ ತುದಿಯನ್ನು ಒಟ್ಟುಗೂಡಿಸಿ ಮಸೆದು ಹರಿತಮಾಡಿದ ಕುಡುಗೋಲಿನಿಂದ ಚರಚರನೆ ಕೊಯ್ಯುತ್ತಿದ್ದ ಬೆಳೆದು ಹಣ್ಣಾಗಿ ನಿಂತ ಬತ್ತದ ಪೈರನ್ನು ಸವರಿ ರಾಶಿ ಮಾಡುವಂತೆ! ಈಗ ಅದನ್ನು ಯೋಚಿಸಿಕೊಂಡರೆ ನಗು ಬರುತ್ತದೆ; ಆಗ ಬರುತ್ತಿರಲಿಲ್ಲ.

ಮಂಜಣ್ಣನ ಕರ್ಮಾಚರಣೆಗಳು ಕೂಡ ದೀರ್ಘವಾಗಿದ್ದುವು. ಅವನು ಸ್ನಾನ ಮಾಡುವುದು ಒಂದು ಗಂಟೆ. ಅದಾದಮೇಲೆ ಬಾವಿಯ ಹಾಸುಗಲ್ಲಿನ ಮೇಲೆ ಬೆತ್ತದಿಂದ ಹೆಣೆದು ಮಾಡಿದ ನಾಮದ ಪೆಟ್ಟಿಗೆಯೊಂದನ್ನು ಬಿಚ್ಚಿಟ್ಟು ಕುಳಿತುಕೊಳ್ಳುವನು. ಅದರೊಳಗಿಂದ, ಒಡೆದು ಹಾಳಾದ ಆರುಕಾಸಿನ ಅಗಲದ ಕನ್ನಡಿ, ನಾಮದ ಕಡ್ಡಿ, ಬಿಳಿಯನಾಮ, ಕೆಂಪುನಾಮ, ಒಣಗಿದ ತುಳಸಿಯ ದಳ ಇವೇ ಮೊದಲಾದುವು ಒಂದಾದ ಮೇಲೊಂದು ಮೆಲ್ಲನೆ ಮೂಡುತ್ತಿದ್ದುವು. ಆಮೇಲೆ ನಾಮಗಳು ನೆಟ್ಟಗಾಗಲು ಪ್ರಾರಂಭ! ಹಣೆಯಮೇಲೆ ಮೂರು, ಎದೆಯ ನಡುವೆ ಮೂರು, ನಾಭಿಯ ಬಳಿ ಮೂರು, ಬೆನ್ನಿಗೆ ಒಂದು. ಬಾಕಿ ಸರಿಯಾಗಿ ನೆನಪಿಲ್ಲ.

ಮಂಜಣ್ಣನೆಂದರೆ ನಮಗೆಲ್ಲ ಪ್ರಾಣ; ಏಕೆಂದರೆ ನಮಗೆಲ್ಲ ಅವನೇ ಕತೆಗಾರ! ಆ ವೃದ್ಧಮೂರ್ತಿಯನ್ನು ನೋಡಿದ ಕೂಡಲೆ ಹುಡುಗರಾದ ನಮಗೆ ಅವನು ನಮಗೆ ಆಳು ಎಂಬುದು ಮರೆತುಹೋಗಿ, ಅವನಲ್ಲಿ ಗುರುಭಾವ ಉಂಟಾಗುತ್ತಿತ್ತು! ಲವಕುಶರಿಗೆ ವಾಲ್ಮೀಕಿಯನ್ನು ಕಂಡರೆ ಯಾವ ಭಾವ ಉಂಟಾಗುತ್ತಿತ್ತೋ ಆ ಭಾವ. ಆದರೇನು? ನಮಗೆ ಗುರು, ನಮ್ಮ ಹಿರಿಯರಿಗೆ ಆಳು! ಅವನೂ ದಿನವೂ ಎಲ್ಲರಂತೆ ಕೆಲಸಕ್ಕೆ ಹೋಗಬೇಕಾಗಿತ್ತು. ನಾನು ಒಂದೊಂದು ಸಾರಿ ಹೀಗೆಂದು ಯೋಚಿಸುತ್ತಿದ್ದೆ: ನಾನ ಯಜಮಾನನಾದರೆ ಮಂಜಣ್ಣನಿಗೆ ಕತೆ ಹೇಳುವ ಕೆಲಸವೊಂದನ್ನೇ ಕೊಡುವೆನೆಂದು! ಮುಗ್ಧಾಲೋಚನ!. ನಾನು ಏಳೆಂಟು ವರ್ಷದ ಹುಡುಗ; ಮಂಜಣ್ಣ ಅರುವತ್ತು ವರ್ಷದ ಮುದುಕ! ನಾನು ಯಜಮಾನನಾಗುವತನಕ ಅವನು ಬದುಕಿರುವನೆ? ಹೌದು, ಆಗ ಇರುವನೆಂದೇ ಭಾವಿಸಿದ್ದೆ!

ಹೊತ್ತು ಎಷ್ಟು ಬೇಗ ಮುಳುಗುವುದೋ ಎಂದು ನಾವೆಲ್ಲಾ ಹಾರೈಕಿಯಿಂದ ಎದುರುನೋಡುತ್ತಾ ಇದ್ದೆವು. ಏಕೆಂದರೆ ಕತ್ತಲಾಗಲು ಮಂಜಣ್ಣ ನಮಗೆ ಕತೆ ಹೇಳುತ್ತಿದ್ದ. ಮಂಜಣ್ಣವೆಂದರೆ ನಿಜವಾಗಿಯೂ ‘ಕಥಾಸರಿತ್ಸಾಗರ’. ಅವೆಲ್ಲಾ ಅವನ ಕತೆಗೋ? ಅಥವಾ ಅನ್ಯರಿಂದ ಕಲಿತವುಗಳೋ ಏನೋ? ನಮಗೆ ತಿಳಿಯದು. ಅವನನ್ನೇ ಕೇಳಿದ್ದರೆ ಹೇಳುತ್ತಿದ್ದನೋ ಏನೋ? ಆದರೆ ಅಂದು ನಾವು ‘ಸ್ವಂತ’ ಮತ್ತು ‘ಅನ್ಯ’ ಇವುಗಳ ಪ್ರಭೇದಗಳು ಉಂಟೆಂದು ಕೂಡ ಭಾವಿಸಿರಲಿಲ್ಲ. ಕತೆಗಂತೂ ಅವನು ಕಲ್ಪವೃಕ್ಷವೇ ಸರಿ! “ಮಂಜಣ್ಣ ಕತೆ ಹೇಳೊ” ಎಂದು ಹೇಳುವುದೆ ತಡ ಕತೆಯ ಪ್ರವಾಹ ಹಲ್ಲಿಲ್ಲದ ಅವನ ಮುದಿಬಾಯಿಂದ ಹೊರಸೂಸುತ್ತಿತ್ತು. ನಾವೆಲ್ಲ ಒಂದೇ ಮನಸ್ಸಿನಿಂದ ಕತೆ ಕೇಳುತ್ತಾ ಕುಳಿತುಬಿಡುತ್ತಿದ್ದೆವು.

ಮೇಲೆ ಹೇಳಿದಂಥಾ ಒಂದು ದಿನ ಕತ್ತಲಾಗುತ್ತಿತ್ತು. ಮುಂಗಾರು ಮಳೆ ಬೇಸರವನ್ನುಂಟುಮಾಡುವಂತೆ ಜಿರ್ರೆಂದು ಸುರಿಯುತ್ತಿತ್ತು. ನಾನು ಕಿಟ್ಟು ಇಬ್ಬರೂ ಮುರಬೇಯಿಸುವ ಒಲೆಯ ಬಳಿ ಚಳಿ ಕಾಯಿಸುತ್ತಾ ಕುಳಿತಿದ್ದೆವು. ದೊಡ್ಡ ಒಲೆಯ ಬೆಂಕಿಯ ಪ್ರಕಾಶ ದೇದೀಪ್ಯಮಾನವಾಗಿತ್ತು. ವಾಸು ಸೀತೆ ಇಬ್ಬರನ್ನೂ ಹಲಸಿನ ಬಿತ್ತ ತರುವುದಕ್ಕೆ ಕಳಿಸಿದ್ದೆವು. ಹಲಸಿನ ಬಿತ್ತಗಳ ಸವಾರಿ ಬಂತು. ಎಲ್ಲರೂ ಸೇರಿ ಅವುಗಳನ್ನು ಕಚ್ಚಿ ಕಚ್ಚಿ ಕೆಳಗಿಟ್ಟೆವು. ಏಕೆಂದರೆ ಕಚ್ಚಿ ಗಾಯಮಾಡಿ ಒಲೆಗೆ ಹಾಕದಿದ್ದರೆ ಅವು ಸಿಡಿಯುವುವು ಎಂಬ ಭಯ! ಹೆಚ್ಚೇನು? ನಮ್ಮ ಪಾಲಿಗೆ ಅದೊಂದು ದೊಡ್ಡ ನಂಬಿಕೆಯೆ ಆಗಿತ್ತು. ಬಿತ್ತಗಳನ್ನು ಇನ್ನೂ ಒಲೆಗೆ ಹಾಕಿರಲಿಲ್ಲ. ದಹನ ಸಂಸ್ಕಾರ ಮುಗಿಯುವುದಕ್ಕೆ ಮುಂಚೆಯೆ ನಮ್ಮ ಅಪ್ಪಯ್ಯ, ಚಿಕ್ಕಪ್ಪಯ್ಯ ಇವರ ಮಾತು ಕೇಳಿಸಿತು. ಬೀಜಗಳನ್ನೆಲ್ಲಾ ಹುದುಗಿಸಿಟ್ಟು ಏನೂ ತಿಳಿಯದವರಂತೆ ಕುಳಿತೆವು. ಸ್ವಲ್ಪ ಹೊತ್ತಿಗೆ ಮುಂಚೆ ಒಬ್ಬನನ್ನು ಕೊಲೆಮಾಡಿ ಸುಲಿಗೆ ಮಾಡಲು ಸಿದ್ಧರಾಗಿದ್ದ ಠಕ್ಕರಂತೆ ಗುಂಪು ಸೇರಿ ಕುಳಿತಿದ್ದ ನಾವು ಈಗ ವನಗಳಲ್ಲಿ ವಿಕಸಿತವಾಗಿ ತಲೆದೂಗಿ ನಲಿನಲಿವ ಮುಗ್ಧ ಕುಸುಮಗಳಂತೆ ನಟಿಸಿ ಕುಳಿತೆವು.

ಎಲ್ಲರೂ ಬಂದರು. ಗದ್ದೆಯ ಕೆಲಸಕ್ಕೆ ಹೋಗಿದ್ದ ಸಿದ್ದ, ಪುಟ್ಟ ಇವರು ಬಂದು “ಒಂದೀಟು ಜಾಗ ಬಿಡಿ, ಅಯ್ಯ! ಮಳೇಲಿ ನೆಂದು ಬಂದೀವಿ. ಒಂದೀಟು ಚಳಿ ಕಾಸ್ಗೊಂಡು ಹೋಗ್ತೀವಿ” ಎಂದರು. ನಾವೆಲ್ಲರೂ ಒಟ್ಟಿಗೆ “ಜಾಗ ಇಲ್ಲ, ಹೋಗ್ರೋ! ನಮಗೂ ಚಳಿ” ಎಂದೆವು. ನಾವು ಮನೆಯಲ್ಲಿಯೆ ಇದ್ದವರು, ಅವರು ಗದ್ದೆಗಳಿಗೆ ಹೋಗಿ ಮಳೆಯಲ್ಲಿ ತೊಯ್ದು ಬಳಲಿ ಬಂದವರು! ಸ್ವಲ್ಪ ಹೊತ್ತಿನಮೇಲೆ ಮಂಜಣ್ಣನೂ ಬಂದ. ಬಂದವನು “ಜಾಗ ಬಿಡಿ” ಎಂದು ಕೇಳಲೇ ಇಲ್ಲ. ಬರಬರುತ್ತಾ ಕತೆ ಹೇಳುತ್ತಲೇ ಬಂದ. ನಾವೆಲ್ಲ ಅವನ ಕಡೆ ತಿರುಗಿದೆವು.

“ಒಂದೂರಿನಲ್ಲಿ ಒಬ್ಬನಿದ್ದ” ಎಂದು ಪ್ರಾರಂಭಿಸಿದನು. ನಮ್ಮ ಆನಂದಕ್ಕೆ ಪಾರವೆ ಇಲ್ಲದ ಹಾಗಾಯಿತು. ನಾವು ನಾಲ್ವರೂ ಒಟ್ಟಿಗೆ “ಆಮೇಲೆ” ಎಂದೆವು.

“ಅವನೊಂದು ಕುಂಬಳ ಬೀಳು ನಟ್ಟಿದ್ದ.”

ನಾನು ‘ಹುಂ’ ಎಂದೆ. ಏಕೆಂದರೆ ‘ಹುಂ ಗುಟ್ಟು’ವರಿಲ್ಲದ ಕತೆಗೆ ಮುಂದೆ ಸಾಗಲು ಕಾಲೇ ಬರುತ್ತಿರಲಿಲ್ಲ.

“ಅದರಲ್ಲೊಂದು ಹೂ ಬಿಟ್ಟಿತು.”

“ಹುಂ! ಹುಂ!”

“ಆಮೇಲೆ ಒಂದು ಮಿಡಿಯಾಯ್ತು”

ಈ ಸಾರಿ ನಾನೂ ಕಿಟ್ಟೂ ಇಬ್ಬರೂ ಹೊಂಗುಟ್ಟಿದೆವು.

“ಆ ಮಿಡಿ ಒಂದಿಷ್ಟು ದೊಡ್ಡಾಯ್ತು” ಹೀಗೆಂದು ಮಂಜಣ್ಣ ತನ್ನ ಎರಡು ಕೈಗಳಿಂದ ಮಿಡಿಯ ಗಾತ್ರವನ್ನು ತೋರಿಸುವಂತೆ ನಟಿಸುತ್ತಾ ನನಗೂ ಕಿಟ್ಟುಗೂ ಮದ್ಯೆ ಇದ್ದ ಸ್ವಲ್ಪ ಸ್ಥಳದಲ್ಲಿ ಕೈಯಿಟ್ಟ.

ನಾವು “ಹುಂ” ಎಂದೆವು.

“ಸ್ವಲ್ಪ ದಿವಸ ಆದಮೇಲೆ, ಇಷ್ಟು ದೊಡ್ಡಾಯ್ತು” ಎಂದು ಕೈಗಳನ್ನು ಇನ್ನೂ ಅಗಲಿಸಿದನು.

ಮತ್ತೆ “ಹುಂ” ಎಂದೆವು.

“ಆಮೇಲೆ ಇಷ್ಟು ದೊಡ್ಡಾಯ್ತು” ಎಂದು ಇನ್ನೂ ಕೈಗಳನ್ನು ಅಗಲಿಸಲು ಪ್ರಯತ್ನಪಟ್ಟ. ಆದರೆ ನಾನೂ ಕಿಟ್ಟೂ ಇಬ್ಬರೂ ಕಲ್ಲಿನಂತೆ ಕೂತಿದ್ದೆವು.

ಮಂಜಣ್ಣ “ಸ್ವಲ್ಪ ಜಾಗ ಬಿಡಿ, ಕತೆ ಹೇಳಿ ತೋರಿಸುವುದಕ್ಕೆ ಆಗುವುದಿಲ್ಲ” ಎಂದ, ನಾವೂ ಸರಿದೆವು.

ಒಂದು ಕುಂಬಳಕಾಯಿ ಎಷ್ಟು ಕಡಿಮೆ ಅಂದರೂ ಒಂದು ಅಡಿಯಷ್ಟಾದರೂ ದಪ್ಪ ಬೆಳೆಯುತ್ತದೆ. ನಿಜವಾದ ಕುಂಬಳಕಾಯಿಯೆ ಒಂದು ಅಡಿ ಬೆಳೆದ ಮೇಲೆ ಕತೆಯ ಕುಂಬಳಕಾಯನ್ನು ಕೇಳಬೇಕೆ? ಎಷ್ಟು ಬೆಳೆಯಿತೆಂದರೂ ಹೂಂ ಗುಡಲೇಬೇಕು. ಆದರೆ ಮಂಜಣ್ಣನ ಕತೆಯ ಕುಂಬಳಕಾಯಿ ಹೆಚ್ಚು ದಪ್ಪ ಬೆಳೆಯಲಿಲ್ಲ. ಅವನಿಗೆ ಕೂರುವುದಕ್ಕೆ ಎಷ್ಟು ಜಾಗ ಬೇಕಿತ್ತೋ ಅಷ್ಟು ದೊಡ್ಡದಾಗಿ ಬೆಳೆಯಿತು. ಮಂಜಣ್ಣ ಇದ್ದಕಿದ್ದ ಹಾಗೆಯೆ ಬೆಂಕಿ ಕಾಯಿಸುತ್ತಾ ಕುಳಿತೇಬಿಟ್ಟ. ಕೆಟ್ಟವರೇ ನಾನು, ಕಿಟ್ಟು!

ಎಲ್ಲರೂ ನಗಲಾರಂಭಿಸಿದರು. ನಮ್ಮಿಬ್ಬರಿಗೂ ಅವಮಾನವಾದಂತಾಗಿ ಅಳು ಬಂದಿತು. ಆದರೆ ಸಹಿಸಲಾರದ ನಗು ಅಳುವನ್ನು ಮೀರಿ ಹೊರ ಹೊರಟಿತು. ಮತ್ತೆ ಏನೇನೋ ಪ್ರಯತ್ನ ಮಾಡಿ ಸ್ಥಳ ಸಂಪಾದನೆ ಮಾಡಿದೆವು. ಆದರೆ ಬಹಳ ಇಕ್ಕಟ್ಟಾಗಿತ್ತು.

ಸ್ವಲ್ಪ ಹೊತ್ತಾದಮೇಲೆ ಕಿಟ್ಟು “ಆಮೇಲೆ?” ಎಂದ. ನಾವೆಲ್ಲರೂ “ಹೌದು! ಹೌದು! ಮರೆತಿದ್ದೆವು. ಆಮೇಲೆ?” ಎಂದೆವು. ಮಂಜಣ್ಣ ಮೌನಿಯಾಗಿದ್ದ. ನಸುನಗುತ್ತಿದ್ದನೋ ಏನೊ? ಆ ಗಡ್ಡಗಳ ದಾಂಧಲೆಯಲ್ಲಿ ನಮಗೆ ಗೊತ್ತಾಗಲೇ ಇಲ್ಲ.

ಕಿಟ್ಟು ಪುನಃ “ಆಮೇಲೆ?” ಎಂದ. ಮಂಜಣ್ಣ ಮಾತಾಡಲೇ ಇಲ್ಲ. ತರುವಾಯ ಕಿಟ್ಟು ಅವನ ಗಡ್ಡವನ್ನು ಮೆಲ್ಲನೆ ಹಿಡಿದುಕೊಂಡು ಅಲ್ಲಾಡಿಸುತ್ತಾ “ಆಮೇಲೆ” ಎಂದ.

ಮಂಜಣ್ಣ ಮತ್ತೂ ಮಾತಾಡಲಿಲ್ಲ. ಕಿಟ್ಟುಗೆ ಒಂದು ವಿಧವಾದ ಸಿಟ್ಟು ಬಂತು. ಗಡ್ಡವನ್ನು ಬಲವಾಗಿ ಹಿಡಿದು ಜಗ್ಗಿಸುತ್ತಾ “ಆಮೇಲೆ?” ಎಂದು ಗರ್ಜಿಸಿದ. ಮಂಜಣ್ಣನಿಗೆ ತುಂಬಾ ಯಾತನೆಯಾಯಿತು.

“ಅಯ್ಯೋ! ಹೇಳ್ತೀನಪ್ಪಾ” ಎಂದು ಗಟ್ಟಿಯಾಗಿ ರೋದನಧ್ವನಿಯಿಂದ ಕೂಗಿಕೊಂಡ. ಪಾಪ. ಮುದುಕನಿಗೆ ಬಹಳ ನೋವಾಗಿರಬೇಕು. ನಮ್ಮ ಮನಸ್ಸೆಲ್ಲಾ ಕರಗಿ ನೀರಾಗಿಹೋಯಿತು.

“ಮಂಜಣ್ಣ! ಮಂಜಣ್ಣ!” ಎಂದೆವು. ನಮಗೆ ವ್ಯಸನ ಗಾಬರಿಗಳು ಒಂದೇ ಬಾರಿ ಉಂಟಾದುವು. ಕಿಟ್ಟು ಅಳಲಾರಂಭಿಸಿದ. ಪೆಟ್ಟೆಲ್ಲಾ ಮಂಜಣ್ಣಗೆ ನೋವೆಲ್ಲಾ ಕಿಟ್ಟಣ್ಣನಿಗೆ ಎನ್ನುವಹಾಗೆ. ಮಂಜಣ್ಣ ಕಿಟ್ಟುವನ್ನು ಪ್ರೀತಿಪೂರ್ವಕವಾದ ಮಾತುಗಳಿಂದ ಸಮಾಧಾನಗೊಳಿಸಿದ. ಆದರೂ ಕಿಟ್ಟು ನೀರವವಾಗಿ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದ.

ನಾನು “ಮಂಜಣ್ಣಾ ಆಮೇಲೇನಾಯ್ತೋ? ಹೇಳೋ!” ಎಂದೆ.

“ತಿಂದ” ಎಂದನು. ಕತೆ ಪೂರೈಸಿತೆಂದು ನಮ್ಮ ಮನಸ್ಸೆಲ್ಲಾ ಶಾಂತವಾಯಿತು. ಕಿಟ್ಟು ಅಳುವನ್ನು ನಿಲ್ಲಿಸಿದ್ದರೂ ಖಿನ್ನನಾಗಿಯೆ ಇದ್ದ.

ಇನ್ನೊಂದು ಕತೆ ಕೇಳಬೇಕೆಂದು ನಮಗೆಲ್ಲ ಕುತೂಹಲ. ನಮಗೇನು ಅಂಥಾ ಕತೆ, ಇಂಥಾ ಕತೆ, ಹಾಗಿರಬೇಕು, ಹೀಗಿರಬೇಕು. ಎಂಬ ಭಾವನೆಯೆ ಇರಲಿಲ್ಲ. ಅಂತೂ ಕತೆಯಾದರೆ ಸರಿ. ಅನೇಕಸಾರಿ ಮಂಜಣ್ಣ ನಮ್ಮ ಕಾಟ ತಡೆಯಲಾರದೆ ಎಂತೆಂಥಾ ಕತೆಗಳನ್ನೋ ಹೇಳಿಬಿಟ್ಟಿದ್ದಾನೆ. ಒಂದು ದಿನ ‘ಕತೆ ಹೇಳು’ ಎಂದು ಕಾಡಿಸಿದೆವು. ಅವನು ಹೇಳಿದ್ದು ಈ ಕತೆ –

“ಒಂದೂರಿನಲ್ಲಿ ಒಬ್ಬನಿದ್ದ. ಅವನು ಊಟಕ್ಕೆ ಕೂತಿದ್ದ. ಸ್ವಲ್ಪ ಹೊತ್ತಾದ ಮೇಲೆ ಊಟ ಆಯ್ತು. ಬಳ್ಳೆ ಬಿಟ್ಟೆದ್ದ. ಆಮೇಲೆ ನೆಗೆದುಬಿದ್ದ!” ಇದೂ ನಮಗೊಂದು ಕತೆ. ಪ್ರಪಂಚದಲ್ಲೆಲ್ಲಾ ನಮ್ಮಂಥವರೇ ಇದ್ದಿದ್ದರ ಕಥೆಗಾರರಿಗೆ ಎಷ್ಟು ಸುಲಭವಾಗುತ್ತಿತ್ತು! ಮತ್ತೊಂದು ದಿನ ಇನ್ನೊಂದು ಕತೆ:

“ಒಂದೂರಿನಲ್ಲಿ ಒಬ್ಬಳಿದ್ದಳು. ಅವಳು ಬಾವಿಗೆ ನೀರು ಸೇದುವುದಕ್ಕೆ ಹೋದಳು. ಹಗ್ಗ ತುಂಡಾಗಿ ಕೊಡ ನೀರಿಗೆ ಬಿತ್ತು.” ‘ಹೂಂ’ ಎನ್ನುವುದೊಂದು ಬ್ರಹ್ಮನಿಯಮವಷ್ಟೆ? ನಾವೂ ‘ಹೂಂ’ ಗುಡಲು ಬದ್ಧರಾಗಿದ್ದೆವು.

ಇಷ್ಟು ಹೇಳಿದವನು – ನಾವು ‘ಹೂಂ’ ಎನ್ನಲು, ‘ಹೂಂ’, ಎಂದರೆ ಕೊಡ ಮೇಲೆ ಬರ್ತದೆಯೇ?” ಎಂದ.

“ಇಲ್ಲ” ಎಂದೆವು.

“ಇಲ್ಲ ಅಂದರೆ ಬರ್ತದೆಯೇ?”

“ಇಲ್ಲಾ!” ಎಂದು ಗಟ್ಟಿಯಾಗಿ ಕೂಗಿದೆವು.

“ಇಲ್ಲಾ!! ಎಂದರೆ ಬರ್ತದೆಯೇ?” ಎಂದು ನಕ್ಕನು.

ನಾವು ಅಳುವರಂತೆ ನಟಿಸಲು “ಅತ್ತರೆ ಬರ್ತದೆಯೆ?” ಎಂದ.

“ಅಯ್ಯೋ!” ಎಂದು ಕೂಗಿದೆವು. “ಅಯ್ಯೊ! ಎಂದರೆ ಬರ್ತದೆಯೆ?” ಎಂದ. ಮೌನವಾದರೆ ಇವನೇನು ಮಾಡುವನೆಂದು ಸುಮ್ಮನಾಗಲು “ಸುಮ್ಮನೆ ಕುಳಿತರೆ ಬರ್ತದೆಯೆ?” ಎಂದ. ಹೀಗೆಲ್ಲಾ ಮಾಡಿ ನಮ್ಮನ್ನು ಪೀಡಿಸುವನು.

ಆ ದಿನವೂ ಮಂಜಣ್ಣನಿಂದ ಒಂದು ಕತೆ ಕೇಳಬೇಕೆಂದು ನಮಗೆಲ್ಲಾ ತುಂಬಾ ಆಸೆ, ಆದರೆ ಅವನನ್ನು ಬಲಾತ್ಕರಿಸುವ ಅಧಿಕಾರವನ್ನು ಕಿಟ್ಟನ ದೆಸೆಯಿಂದ ಕಳಕೊಂಡುಬಿಟ್ಟಿದ್ದೆವು. ಕಡೆಗೆ ಮಂಜಣ್ಣನನ್ನು ಬೇಡಿಕೊಂಡೆವು. ಭಗೀರಥ ಪ್ರಯತ್ನ ಮಾಡಿ ಅಂತೂ ಅವನನ್ನು ಒಪ್ಪಿಸಿದೆವು. ಅಂದರೆ ಭಗೀರಥನ ಪ್ರಯತ್ನಕ್ಕಿಂತಲೂ ನಮ್ಮದೇ ಅತಿಶಯವಾದುದರಿಂದ ಅವನ ಪ್ರಯತ್ನವನ್ನೇ ನಮ್ಮದಕ್ಕೆ ಹೋಲಿಸುವುದೆ ಸರಿಯಾದುದೆಂದು ನನ್ನ ಮನಸ್ಸಿಗೆ ತೋರುತ್ತದೆ. ಅದು ಹೇಗಾದರೂ ಇರಲಿ. ಅಂತೂ ಮಂಜಣ್ಣ ಕತೆ ಹೇಳಲು ಒಪ್ಪಿಕೊಂಡ.

ಇನ್ನೇನು ಮಂಜಣ್ಣ ಕತೆ ಹೇಳಲು ಪ್ರಾರಂಭಿಸಬೇಕು. ಗಂಟಲನ್ನೂ ಸರಿ ಮಾಡಿಕೊಂಡ. “ಒಂದೂರಿನಲ್ಲಿ” ಎಂದಿದ್ದ. ಅಷ್ಟರಲ್ಲಿ (ನಮ್ಮ ಗ್ರಹಚಾರ!) ಚಿಕ್ಕಮ್ಮ ಬಂದು ನಮ್ಮನ್ನೆಲ್ಲಾ ಊಟಕ್ಕೆ ಕರೆದರು. ನಮ್ಮ ಎದೆಗೆ ಸಿಡಿಲುಬಡಿದಂತಾಯಿತು. ಮನಸ್ಸಿನಲ್ಲಿಯೆ “ಈ ಕಾಳು ಊಟಕ್ಕೆ ಬೆಂಕಿ ಹಾಕ!” ಎಂದಂದುಕೊಂಡೆವು. ನಮಗೆ ಈಗಿನ ಬುದ್ಧಿ ಆಗ ಇದ್ದಿದ್ದರೆ “ಊಟದ ಹಾವಳಿ” ಎಂಬ ಒಂದು ದೊಡ್ಡ ಗ್ರಂಥವನ್ನೆ ಬರೆದು ಮುದ್ರಿಸಿ ಪುಕ್ಕಟೆಯಾಗಿಯೆ ಹಂಚಿ ಬಿಡುತ್ತಿದ್ದೆವು. ಅಂತೂ ಮಾರಿಯ ಹರಕೆಗೆ ಹೋಗುವ ಕುರಿಗಳಂತೆ ಅಡುಗೆಮನೆಗೆ ಹೋದೆವು. ಹೋದುದೂ ಹೆದರಿಕೆಯಿಂದ ಹೊರತೂ ಹಸಿವೆಯಿಂದ ಅಲ್ಲವೇ ಅಲ್ಲ. ಅನ್ನವನ್ನು ಗಬಗಬನೆ ತಿಂದು ಬಂದೇಬಿಟ್ಟೆವು. ಬಂದವರು ಎಲ್ಲರೂ ಕತೆಗಾರ ಮಂಜಣ್ಣನ ಸುತ್ತಲೂ ಕುಳಿತೆವು: ವರವನ್ನು ದಯಪಾಲಿಸುವೆನೆಂದು ಪ್ರತ್ಯಕ್ಷನಾದ ಶ್ರೀಮನ್ನಾರಾಯಣನ ಮುಂದೆ ಮೊಳಕಾಲೂರಿ ಕುಳಿತುಕೊಳ್ಳುವ ಭಕ್ತರಂತೆ!

ಕಷ್ಟಗಳು ಬಂದರೆ ಪರಂಪರೆಯಾಗಿ ಬರುತ್ತವೆ ಎಂಬುದೇನೊ ಖಂಡಿತ ವಾಗಿಯೂ ಸುಳ್ಳು ಮಾತಲ್ಲ. ಅದು ಚೆನ್ನಾಗಿ ನಮ್ಮ ಅನುಭವಕ್ಕೆ ಬಂದ ಸಂಗತಿ. ಎಡರು ಎನ್ನೇನೂ ಇಲ್ಲ. ಮಂಜಣ್ಣನನ್ನು ಊಟಕ್ಕೆ ಕರೆದರು. ಅವನಿದ್ದಾಗ ನಾವಿಲ್ಲ; ನಾವಿದ್ದಾಗ ಅವನಿಲ್ಲ – ಹಲ್ಲಿದ್ದಾಗ ಕಡಲೆಯಿಲ್ಲ; ಕಡಲೆಯಿದ್ದಾಗ ಹಲ್ಲಿಲ್ಲ ಎಂಬ ಗಾದೆಯಂತೆ. ಮಂಜಣ್ಣ ಊಟಕ್ಕೆ ಹೊರಟ. “ಮಂಜಣ್ಣ ಬೇಗ ಬಾ” ಎಂದೆವು. ನಮ್ಮ ದನಿ ಕನಿಕರಣೀಯವಾಗಿತ್ತು. ಆದರೆ ಒಂದು ವಿಚಾರ ಮಾತ್ರ ನಮಗಾಗಿಗೂ ಬಗೆಹರಿಯಲಿಲ್ಲ. ಯಾವುದೆಂದರೆ : ನಾವಂತೂ ಊಟಕ್ಕೆ ಹೋಗಿದಿದ್ದರೆ ಏಟು ಬೀಳುತ್ತಿತ್ತೆಂದು ಹೆದರಿ ಹೋದೆವು; ಮಂಜಣ್ಣ “ಒಲ್ಲೆ” ಎಂದಿದ್ದರೆ ಅವನನ್ನು ಯಾರು ಹೊಡೆಯುತ್ತಿದ್ದರು? ಕತೆ ಹೇಳಬಹುದಾಗಿತ್ತಲ್ಲಾ? ಎಂಬುದು. ಮಂಜಣ್ಣ ಮುದುಕ, ನಾವು ಹುಡುಗರು ಎಂಬುದು ನಮಗೆ ತಿಳಿದಿರಲಿಲ್ಲ. ಕತೆ ಕೇಳುವುದು ನಮಗೆ ಸಂತೋಷಕರವಾಗಿದ್ದರೂ ಹೇಳುವ ಅವನಿಗೆ ಸ್ವಲ್ಪವೂ ಹಾಗಿರಲಿಲ್ಲ ಎಂಬುದು ನಮಗೆ ಗೊತ್ತೇ ಇರಲಿಲ್ಲ. ಅವನು ಕೆಲಸ ಮಾಡಿ ದಣಿದು ಹಸಿದು ಬಂದ ಬಡವನೆಂಬುದೂ ಮರೆತೇ ಹೋಗಿತ್ತು.

ಮಂಜಣ್ಣ ಊಟಮಾಡಿಕೊಂಡು ಬಂದ. ಎಲೆಯಡಕೆಯ ಚೀಲವನ್ನು ಬಿಚ್ಚಿ ಚೆನ್ನಾಗಿ ಧೋರಣೆಯಿಂದ ಸಾವಕಾಶವಾಗಿ ಎಲೆ ಹಾಕಿಕೊಂಡ. ನಾವು ಮಾತ್ರ ಮನದಲ್ಲಿ “ಇವನೇಕೆ ಇಷ್ಟು ತಡಮಾಡುವನು? ನಮ್ಮಂತ ಚುರುಕಾಗಿಲ್ಲವಲ್ಲಾ” ಎಂದುಕೊಳ್ಳುತ್ತಿದ್ದೆವು. ಆಹಾ! ಮುದಿತನ ನಮ್ಮನ್ನು ಕೂಡ ಅದೇ ಗತಿಗೆ ತಂದಿಡುವುದೆಂಬುದು ನಮಗೆ ತಿಳಿಯದೆ ಇದ್ದುದು ನಮ್ಮ ಸುಕೃತಕ್ಕೆಂದೇ ಹೇಳಬೇಕು.

ಅಂತೂ ಕತೆ ಕಡೆಗೆ ಪ್ರಾರಂಭವಾಯಿತು. ಮುಂಗಾರುಮಳೆ ಮಲೆನಾಡಿನ ದಟ್ಟವಾದ ಅರಣ್ಯದಿಂದಾವೃತವಾದ ಗಿರಿಗಳ ಮೇಲೆ ಬಿಡುವಿಲ್ಲದೆ ನಿರಂತರವಾಗಿ ಜಿರ್ರೆಂದು ಸುರಿಯುತ್ತಲೇ ಇತ್ತು. ಮನೆಯ ಮುಂದುಗಡೆ ಇರುವ ತೋಟದಲ್ಲಿ ಬಾಳೆಯ ಎಲೆಯ ಮೇಲೆ ಹನಿಗಳು ಬಿದ್ದು ಪಟಪಟವೆಂಬ ಮ್ಲಾನರವವನ್ನುಂಟು ಮಾಡುತ್ತಿದ್ದುವು. ನಿಶೆ ಭೀಕರವಾಗಿ ಕೈವಲ್ಯಶೂನ್ಯತೆಯ ಗಭೀರತೆಯನ್ನು ಮನಸ್ಸಿಗೆ ತರುವಂತಿತ್ತು. ಅಂದು ಆ ರಾತ್ರಿ ಆ ಗಳಿಗೆಯಲ್ಲಿ, ಸರ್ವ ಸೃಷ್ಟಿಯೂ ಉತ್ಪತ್ತಿಯಾದುದು – ನಾವು ಕತೆ ಕೇಳಲೆಂದು, ಮಂಜಣ್ಣ ಕತೆ ಹೇಳಲೆಂದು, ನಮ್ಮ ಮನಸ್ಸಿಗೆ ತೋರಿತು. ನಮ್ಮ ಹೊರಗಡೆ ಲೋಕವಿದೆ ಎಂಬುದನ್ನು ಮರೆತಿದ್ದೆವು. ಜಗತ್ತಿನಲ್ಲಿ ನಮ್ಮದಲ್ಲದ ಇತರ ಮಹಾ ಕಾರ್ಯಗಳು ನಡೆಯುತ್ತಿವೆ ಎಂಬುದನ್ನೂ ಮರೆತಿದ್ದೆವು, ಆಹ! ಅದು ಎಂತಹ ದಿವ್ಯವಿಸ್ಮೃತಿ! ಮೋಕ್ಷ ಎಂದರೆ ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಭಾವನೆ ಉಂಟಾಗಬಹುದು. ನನ್ನ ಆ ಮುದ್ದು ಮೋಕ್ಷದ ದರ್ಶನಚಿತ್ರ ಎಂದರೆ ಇದು: ಬ್ರಹ್ಮಾಂಡ! ಮನಸ್ಸು ಲಯವಾದ ಮಸಗುಬ್ರಹ್ಮಾಂಡ! ಅದರ ಸ್ವಪ್ನ ಗಭೀರವಾದ ಕೇಂದ್ರ ಸ್ಥಾನ! ರವಿಯಲ್ಲ; ಶಶಿಯಿಲ್ಲ; ತಾರಕೆಗಳಿಲ್ಲ! ನೀಲ ಮೇಘಾಂಧಕಾರ! ಮಳೆ ನಿರಂತರವಾಗಿ ಸದಾ ಸುರಿಯುತ್ತಿದೆ. ಅದೊಂದು ಮಹಾ ಏಕಾಂತ! ಅಲ್ಲಿ, ಆ ರಹಸ್ಯವಾದ ಬ್ರಹ್ಮಕೇಂದ್ರದಲ್ಲಿ, ಒಂದು ಮುರ ಬೇಯಿಸುವ ಒಲೆ! ಅದರ‍್ಲಿ ಸರ್ವದಾ ಝಗಿಸುವ ಬೆಂಕಿ! ಅದರ ಬಳಿ ನಾವು – ನಾನು, ಕಿಟ್ಟು, ಮಂಜಣ್ಣ, ವಾಸು, ಸೀತೆ ಇಷ್ಟೇ ಜನರು ಚಳಿ ಕಾಯಿಸುತ್ತಾ ಕುಳಿತಿರುವೆವು. ವೃದ್ಧಮೂರ್ತಿ ಮುಸುಕಾದ ಆ ಬೆಂಕಿಯ ಬೆಳಕಿನಲ್ಲಿ ಕತೆ ಹೇಳುತ್ತಿರುವನು – ಎಂದಿಗೂ ಮುಗಿಯದ ಕತೆ! ನಾವು ಏಕಾಗ್ರಚಿತ್ತರಾಗಿ ಆತನ ಮುಖದ ಕಡೆ ನೋಡುತ್ತಾ ಕತೆ ಕೇಳುತ್ತಲೇ ಇರುವೆವು – ಎಂದಿಗೂ ಮುಗಿಯದ ಕತೆ!

ಮುಂದಿನ ಭಾಗ : http://kannadadeevige.blogspot.com/p/blog-page_87.html   ರಾಮರಾವಣರ ಯುದ್ಧ




***********

ಮಲೆನಾಡಿನ ಚಿತ್ರಗಳು : ಜೇನು ಬೇಟೆ

ಜೇನು ಬೇಟೆ
ಚೈತ್ರಮಾಸದ ಪ್ರಾತಃಕಾಲದ ವಾಯುಮಂಡಲ ಸ್ಫಟಿಕದಂತೆ ನಿರ್ಮಲವಾಗಿತ್ತು. ನಮ್ಮ ಮನೆಯ ಮುಂದುಗಡೆ ಕೊಬ್ಬಿ ನಳನಳಿಸಿ ದಟ್ಟವಾಗಿ ಬೆಳೆದ ಕಾಡುತುಂಬಿದ ಬೆಟ್ಟದ ಸಾಲಿನ ನೆತ್ತಿಯ ಹಿಂದುಗಡೆಯಲ್ಲಿ ಅರುಣರಾಗ ನಿಮಿಷ ನಿಮಿಷಕ್ಕೂ ಹೊರೆಯೇರುತ್ತಿತ್ತು. ಸುತ್ತಮುತ್ತಲೂ ಮರಗಳಿಂದಲೂ ಪೊದೆಗಳಿಂದಲೂ ನೂರಾರು ಪಕ್ಷಿಗಳ ಮಂಗಲ ಮಂಜುಲಗಾನ ತೇಲಿಬಂದು ಹೃದಯ ಸಮುದ್ರದಲ್ಲಿ ಹರ್ಷತರಂಗಗಳನ್ನೆಬ್ಬಿಸಿತ್ತು. ನಾನು ನಮ್ಮ ಮನೆಯ ಉಪ್ಪರಿಗೆಯ ಮೇಲೆ ಪೂರ್ವಮುಖವಾಗಿ ಕುಳಿತು ರನ್ನನ ವೀರಕೌರವನ ವಿಚಾರವಾಗಿ ಯೋಚಿಸುತ್ತಿದ್ದೆ. ನೋಡುತ್ತಿದ್ದ ಹಾಗೆಯೆ ಬಾಲಸೂರ್ಯನ ಕೋಮಲಕಿರಣಗಳು ಗಿರಿಶಿಖರದಿಂದ ಹಸುರು ಬನಗಳ ಮೇಲೆ ಓರೆಯಾಗಿ ಕೆಳಗಿಳಿದು ಬಂದು ನನ್ನ ಮುಖವನ್ನು ತಮ್ಮ ಹೊಂಬೆಳಕಿನಿಂದ ಮೀಯಿಸಿದವು; ಕಣ್ಣನ್ನು ಸೊಗದ ನೀರಿನಿಂದ ತೋಯಿಸಿದುವು. ಹಸುಳೆಬಿಸಿಲಿನ ಮುದ್ದು ಮುತ್ತಿನ ಮಿದುಬಿಸಿ ಅರೋಗದೃಢಕಾಯವಾಗಿದ್ದ ನನ್ನ ದೇಹಸಮಸ್ತವನ್ನೂ ನವಚೇತನದ ಮಿಂಚಿನಿಂದ ನಡುಗಿಸಿತು. ನಿರ್ನಿಮಿತ್ತವಾಗಿ ಮುಗುಳುನಗೆಯೊಂದು ನನ್ನ ಮೊಗದ ಮೇಲೆ ನಲಿದಾಡಿತು. ಜೀವನವೂ ಜಗತ್ತೂ ಸುಖಮುದ್ರಿತವಾದಂತೆ ತೋರಿತು. ಅಡಕೆತೋಟದ ನಡುವೆ ಬಾಳೆ ಎಲೆಗಳಮೇಲೆ ರಮಣೀಯವಾಗಿ ಕುಣಿಕುಣಿಯುತ್ತಿದ್ದ ಹಸುರುಗಟ್ಟಿದ ಬಿಸಿಲುಕೋಲುಗಳು ನನ್ನ ಅನುಭವವನ್ನೆ ಸಮರ್ಥಿಸುವಂತೆ ತೋರುತ್ತಿತ್ತು.

ಅಷ್ಟು ಹೊತ್ತಿಗೆ ಪುಟ್ಟಣ್ಣ ಬಂದು “ಜೇನುಕೀಳಲು ಹೋಗೋಣ” ಎಂದನು.

ನಾನು ಧ್ಯಾನನಿದ್ರೆಯಿಂದ ತಟಕ್ಕನೆ ಎಚ್ಚತ್ತು ಅವನ ಕಡೆ ನೋಡಿದೆ. ಅವನ ಮುಖ ನಗುತ್ತಿತ್ತು; ಹೊಸ ಸಾಹಸದ ಹುರುಪು ಕಣ್ಣುಗಳಲ್ಲಿ ಮಿಂಚಿತ್ತು. ನನಗೆ ಹಿಂದಿನ ದಿನ ಸಾಯಂಕಾಲ ನಾವು ಮಾಡಿದ ನಿರ್ಣಯದ ನೆನಪಾಗಿ ಹಿಗ್ಗಿದೆ.

“ಎಷ್ಟು ದೂರ?” ಎಂದೆ.

“ಹೆಚ್ಚು ದೂರ ಇಲ್ಲ; ಇಲ್ಲೇ ಬಹಳ ಸಮೀಪ” ಎಂದನು. ಆಮೇಲೆ ಅವನ ‘ಸಮೀಪ’ದ ಅರ್ಥ ನನಗೆ ಚೆನ್ನಾಗಿ ಅನುಭವಕ್ಕೆ ಬಂತು.

ಅಷ್ಟರಲ್ಲಿಯೆ ನನ್ನ ಮಿತ್ರರಾದ ಹೆಗ್ಗಡೆಯವರೂ ಏಣಿಯ ಮೆಟ್ಟಲುಗಳನ್ನು ಕಿರಚಿಕೊಳ್ಳುವಂತೆ ಮಾಡುತ್ತಾ ಮೇಲೆ ಬಂದು “ಹೋಗೋಣ? ಏಳಿ!” ಎಂದರು. ರನ್ನನವೀರ ಕೌರವನನ್ನು ಗದಾಯುದ್ಧದಲ್ಲಿಯೆ ಮುಚ್ಚಿಟ್ಟು ಅವಸರದಿಂದ ಮೇಲೆದ್ದ. ಬೇಟೆಯುಡುಪು ಹಾಕಿಕೊಂಡು, ಕೋವಿಗಳನ್ನು ಹೆಗಲಿಗೇರಿಸಿ, ಹೆಬ್ಬಾಗಿಲಿಂದ ಹೊರಬಿದ್ದೆವು.

ಹೊರಟವನು ನಾವು ಒಟ್ಟು ಐದು ಮಂದಿ; ನಾನು, ಪುಟ್ಟಣ್ಣ, ಹೆಗ್ಗಡೆಯವರು, ಇಬ್ರಾಹಿ, ಹಳೆಪೈಕದ ಪುಟ್ಟ. ಇಬ್ರಾಹಿ ನಮ್ಮ ಮನೆಯಲ್ಲಿ ಕಲ್ಲು ಕಟ್ಟಣೆ ಕೆಲಸ ಮಾಡುತ್ತಿದ್ದ ಸಾಬರಹುಡುಗ. ಇವೊತ್ತು ಭಾನುವಾರವಾದ್ದರಿಂದ ಅವನ ಹಿರಿಯವರೆಲ್ಲ ಕೊಪ್ಪದ ಸಂತೆಗೆ ಹೋಗಿದ್ದರು. ಇಬ್ರಾಹಿಗೆ ಸ್ವಾತಂತ್ರ್ಯದ ಹಬ್ಬ! ನಾವು ಕಾಡಿಗೆ ಹೊರಡಲು ಅವನೂ ಹೊರಟ. ಅವನ ಕೈಯಲ್ಲಿ ಒಂದು ಕೈಗೊಡಲಿ ಹೊರಿಸಿದೆವು. ಹಳೆಪೈಕದ ಪುಟ್ಟ ನಮ್ಮ ಒಕ್ಕಲು. ಅವನು ಒಂದು ಜೇಡನು ಕಂಡಿದ್ದ. ಅದನ್ನು ತೋರಿಸಲೆಂದೇ ಅವನು ನಮ್ಮ ಜೊತೆಗೆ ಬಂದದ್ದು. ಅವನ ತಲೆಯ ಮೇಲೆ ಜೇನು ತುಂಬಲು ಬೇಕಾಗಿದ್ದ ಒಂದು ಬೋಗುಣಿ ಹೇರಿದೆವು. ಇನ್ನು ಹೆಗ್ಗಡೆಯವರು ಯಾರೆಂದು ನಿಮಗೆ ಕುತೂಹಲ ಹುಟ್ಟಬಹುದು. ಬಹು ಸಂಕ್ಷೇಪವಾಗಿ ಹೇಳುವುದಾದರೆ, ಅವರು ನಮ್ಮ ಮನೆಯಲ್ಲಿ ಕರಣಿಕರಾಗಿದ್ದರು. ಇನ್ನು ಪುಟ್ಟಣ್ಣ! ಅವನ ಕತೆ ದೊಡ್ಡದು. ಇನ್ನಾವಾಗಲಾದರೂ ಸಮಯ ಬಿದ್ದಾಗ ಪ್ರಸ್ತಾಪಿಸುತ್ತೇನೆ. ಆದರೆ ಈಗಿನ ಸಂದರ್ಭಕ್ಕೆ ಅಗತ್ಯವಾಗಿ ಬೇಕಾಗಿರುವ ಒಂದೇ ಒಂದು ಮಾತು ಹೇಳುತ್ತೇನೆ: ಅವನೊಬ್ಬ ಕೆಚ್ಚೆದೆಯ ಕಡುಗಲಿ ಬೇಟೆಗಾರ!

ನಾವೆಲ್ಲರೂ ಹೆಬ್ಬಾಗಿಲು ದಾಟಿ ಹೊರ ಅಂಗಳಕ್ಕೆ ಹೋಗಲು, ಪುಟ್ಟಣ್ಣ ಸಿಳ್ಳು ಹಾಕಿ ನಾಯಿಗಳನ್ನು ಕರೆದ. ಎಲ್ಲವೂ ಓಡಿಬಂದು ಕಾಡಿಗೆ ಹೋಗುವ ಸಂತೋಷದಿಂದ ನಮ್ಮ ಮೈಮೇಲೆ ಹಾರಿ ನೆಗೆದು ಕುಣಿದು ಬಾಲವಲ್ಲಾಡಿಸಿ ಬೊಗಳುತ್ತ ಗಲಾಟೆ ಎಬ್ಬಿಸಿದುವು. ಡೈಮಂಡನ್ನು ಮಾತ್ರ ಪುಟ್ಟಣ್ಣ ಹೆದರಿಸಿ ಹಿಂದಕ್ಕೆ ಅಟ್ಟಿದನು. ಏಕೆಂದರೆ, ಹಿಂದಿನ ದಿನದ ಬೇಟೆಯಲ್ಲಿ ಅದನ್ನು ಕಾಡು ಹಂದಿಯೊಂದು ಕೋರೆಯಿಂದ ತಿವಿದು ಪೂರಾ ಗಾಯಮಾಡಿತ್ತು. ಆ ನಾಯಿಯಂತೂ ಹಿಂದಕ್ಕುಳಿದು ಖಿನ್ನಮುಖದಿಂದ ನಾವು ಹೋಗುವುದನ್ನೇ ನಿರ್ನಿವೇಷವಾಗಿ ನೋಡುತ್ತಿತ್ತು.

ನಮ್ಮ ಗದ್ದೆ, ಹಡಗಿನ ಮಕ್ಕಿಯ ಗಡಬಡೆಹಳ್ಳ, ಅಲ್ಲಿಂದ ಮೇಲೆ ಕಲ್ಲು ಕೊಡಿಗೆಯ ಬಳಿಯ ಸರ್ಕಾರಿ ರಸ್ತೆ, ಎಲ್ಲವನ್ನೂ ಬೇಗಬೇಗನೆ ಹಿಂದೆ ಬಿಟ್ಟು ಕಾಡು ಹತ್ತಿದೆವು. ದಾರಿಯಲ್ಲಿ ಹರಟೆಗಳಿಗೇನೂ ಬಡತನವಿರಲಿಲ್ಲ. ಪುಟ್ಟಣ್ಣ ಹಿಂದಿನ ದಿನದ ಬೇಟೆಯಲ್ಲಿ ಸದಿಸೆಟ್ಟಿ ಬಹು ಸುಲಭದಲ್ಲಿ ಹಂದಿಯೊಂದನ್ನು ಹೊಡೆಯದೆ ಬಿಟ್ಟ ವಿಚಾರವನ್ನು ವರ್ಣಿಸಿ ವರ್ಣಿಸಿ ವಿಷಾದಪಟ್ಟನು. ಹಳೆ ಪೈಕದ ಪುಟ್ಟ ಬರ್ಲಹರೆ ಕಾನಿಗೆ ಮಿಗಹಂದಿಗಳು ಬಂದ ಸುದ್ದಿ ತೆಗೆದು ಅರ್ಧ ಗಂಟೆ ಉಪನ್ಯಾಸ ಮಾಡಿದ. ಮಧ್ಯೆಮಧ್ಯೆ ದಾರಿಯಲ್ಲಿ (ದಾರಿಯೆಂದರೆ ದಾರಿಯಲ್ಲ ; ನಾವು ಹೋಗುತ್ತಿದ್ದುದೇ ದಾರಿ!) ಪುಟ್ಟಣ್ಣ ಅಲ್ಲಲ್ಲಿ ನಿಂತು ಅರಣ್ಯದ ಸುಪ್ರಸಿದ್ಧ ಐತಿಹಾಸಿಕ ಸ್ಥಳಗಳನ್ನು ತೋರಿಸದ. ಒಂದೆಡೆ ಜಟ್ಟಿನ ಮಕ್ಕಿ ಸುಬ್ಬಯ್ಯಗೌಡರು ಹುಲಿ ಬಿಟ್ಟ ಸ್ಥಳವೆಂದು ತೋರಿದ. ಅವರು ಕೂತಿದ್ದ ಮರದ ಹರೆಯನ್ನೂ ಹುಲಿ ಬಂದ ಮಾರ್ಗವನ್ನೂ ಹುಲಿ ಕುಳಿತ ಜಾಗವನ್ನೂ ಎಲ್ಲಾ ತೋರಿಸಿ, ಅವುಗಳ ಮೇಲೆ ವ್ಯಾಖ್ಯಾನ ಟೀಕೆಗಳನ್ನೂ ಮಾಡಿಬಿಟ್ಟ. ಮತ್ತೊಂದೆಡೆ ತಾನೇ ಒಂದು ದೊಡ್ಡ ಹಂದಿ ಹೊಡೆದ ಸ್ಥಳವೆಂದು ತೋರಿದ. ಅವನು ಕೂತಿದ್ದ ಮರದ ಬುಡವನ್ನೂ ಹಂದಿ ಅರಣ್ಯದಲ್ಲಿ ಬಂದ ದಿಕ್ಕನ್ನೂ ಗುರುತುಹಚ್ಚಿ ತೋರಿದಮೇಲೆ, ತಾನು ಮೊದಲನೆಯ ಗುಂಡು ಹಾರಿಸಿದ ಜಾಗವನ್ನೂ ಎರಡನೆಯ ಈಡುಹೊಡೆದ ಸ್ಥಳವನ್ನೂ ತೋರಿಸಿದ. ಹೀಗೆ ಹರಟೆ ಹೊಡೆಯುತ್ತ, ನೇರಿಲಹಣ್ಣು, ಮಾವಿನ ಹಣ್ಣು, ಕಲ್ಲು ಸಂಪಿಗೆಹಣ್ಣು ಮೊದಲಾದುವುಗಳನ್ನು ಮನಸ್ಸು ಬಂದಂತೆ ತಿನ್ನುತ್ತ ಮುಂದೆಮುಂದೆ ಜವದಿಂದ ಸಾಗಿದೆವು. ನಾಯಿಗಳಂತೂ ಅವಿಶ್ರಾಂತ ಸಾಹಸದಿಂದ ಕಾಡನ್ನೆಲ್ಲ ಹುಡುಕುತ್ತ ಬರುತ್ತಿದ್ದುವು.

ಸಹ್ಯಾದ್ರಿಗಳ ಚೈತ್ರಮಾಸದ ಅರಣ್ಯ ನಮ್ಮೆಲ್ಲರ ಹೃದಯಗಳಲ್ಲಿಯೂ ಶಾಂತಿ ಸಂತೋಷಗಳ ಚಿಲುಮೆ ಚಿಮ್ಮುವಂತೆ ಮಾಡಿತ್ತು. ನಾನು ತಿಳಿದು ಆನಂದಪಡುತ್ತಿದ್ದೆ; ನನ್ನ ಜೊತೆಯವರು ತಿಳಿಯದೆ ಆನಂದಪಡುತ್ತಿದ್ದರು. ಎತ್ತ ನೋಡಿದರೂ ಕಣ್ಣಿಗೆ ತಣ್ಣಗಿದ್ದ ಹಸುರಿನ ಸಾಗರ ಮೇಲೇರುತ್ತಿದ್ದ ಸೂರ್ಯನ ಉರಿಜೀವವನ್ನು ಆರಿಸಿಬಿಟ್ಟಿತ್ತು. ಸಾಂದ್ರ ತರುಸಮೂಹದ ಮಧ್ಯೆ ಮೆಲ್ಲಗೆ ಬೀಸುತ್ತಿದ್ದ ತಂಗಾಳಿ ಬಿಜ್ಜಣವಿಕ್ಕುತ್ತಿತ್ತು. ನಾನು ಮೆಲ್ಲಮೆಲ್ಲನೆ ಹಾಡಲಾರಂಭಿಸಿದೆ. ಆ ವನದ ನೀರವತೆಯಲ್ಲಿ ತುಂಬಿ ತುಳುಕುವಮತೆ ಹೊರಹೊಮ್ಮುತ್ತಿದ್ದ ನನ್ನ ದನಿಗೆ ನಾನೇ ಮಾರುಹೋದೆ. ಜೊತೆಯವರೂ ಮಾತನ್ನೆಲ್ಲ ನಿಲ್ಲಿಸಿ ಆಲಿಸುತ್ತ ಬರುತ್ತಿದ್ದರು. ಹಠಾತ್ತಾಗಿ ನಾಯಿ ಕೂಗಿದುವು! ಪುಟ್ಟಣ್ಣ ಬಲಕ್ಕೆ ಓಡಿದ. ಹೆಗ್ಗಡೆಯವರು ಎಡಗಡೆಗೆ ನುಗ್ಗಿದರು. ನಾನೂ ಕೋವಿಯನ್ನು ತಟಕ್ಕನೆ ಸಿದ್ಧಮಾಡಿಕೊಂಡು ನಡುವೆ ನುಗ್ಗಿದೆ. ಪುಟ್ಟಣ್ಣ, ಹೆಗ್ಗಡೆ ಇಬ್ಬರೂ ಕಣ್ಮರೆಯಾದರು. ಇಬ್ರಾಹಿ, ಹಳೆಪೈಕದ ಪುಟ್ಟ ಹಿಂದೆಯೇ ನಿಂತುಬಿಟ್ಟಿದ್ದರು. ಅಷ್ಟರಲ್ಲಿ ಪುಟ್ಟಣ್ಣ “ಢಂ! ಢಂ” ಎಂದು ಎರಡು ಗುಂಡು ಹಾರಿಸಿ “ಹಂದಿ ಹಂದಿ” ಎಂದು ಕೂಗಿದನು. ನನ್ನ ಎದೆಯಲ್ಲಿ ನೆತ್ತರು ಬೇಗ ಬೇಗ ನುಗ್ಗಹತ್ತಿತು. ನೋಡುತ್ತಿದ್ದ ಹಾಗೆಯೆ ಹಂದಿಯೊಂದು ಹೂಂಕರಿಸುತ್ತ ನನ್ನೆದುರು ನುಗ್ಗಿತು, ಅತಿ ವೇಗದಿಂದ! ಮರದ ಮರೆಯಲ್ಲಿ ನಿಂತು ಒಂದು ಗುಂಡುಹಾರಿಸಿದೆ. ಮತ್ತೊಂದು ಗುಂಡು ಹೊಡೆಯಲೆಂದು ಕೋವಿಯ ಕುದುರೆಯನ್ನು ಎತ್ತಿ ಬಿಲ್ಲು ಎಳೆದೆ. ಆದರೆ ಎಡಗಡೆ ನಳಿಗೆಗೆ ಹಾಕಿದ್ದ ತೋಟಾದ ಕೇಪು ಕೆಟ್ಟಿತ್ತು. ಗುಂಡು ಹಾರಲೆ ಇಲ್ಲ, ಹಂದಿ ಪಲಾಯನ ಮಾಡಿತು. ನಾಯಿಗಳು ಅದರ ಹಿಂದೆ ಬೊಗಳುತ್ತ ಓಡಿದುವು…

ಹೆಗ್ಗಡೆಯವರು, ಪುಟ್ಟ, ಇಬ್ರಾಹಿ ಎಲ್ಲರೂ ನಮ್ಮಿಬ್ಬರನ್ನೂ ಒಳ್ಳೆಯ ಗುರಿಗಾರರೆಂದು ಹಾಸ್ಯಮಾಡಿದರು.

ಪುಟ್ಟ ಕಂಡ ಜೇನನ್ನು ಸಮೀಪಿಸಿದೆವು; ಅವನು ಮಾತ್ರ ನಿರಾಶೆಯಿಂದ “ಓಹೋ, ಜೇನು ಗರಕುಬಿದ್ದು ಬಿಟ್ಟುಹೋಗ್ಯದೆ” ಎಂದನು. ಹಿಂದಿನ ದಿನದ ಕಾಳ್ಕಿಚ್ಚು ಮರದ ಬುಡದ ಹುತ್ತದಲ್ಲಿದ್ದ ತುಡುವೆಜೇನಿಗೆ ಹೊಗೆ ಹಾಕಿ ಓಡಿಸಿಬಿಟ್ಟಿತ್ತು.

ನಿರಾಶೆಯಿಂದ ಹಿಂತಿರುಗಿ, ಪುಟ್ಟಣ್ಣ ಕಂಡ ಜೇನಿಗಾಗಿ ಹೊರಟೆವು. ಇನ್ನೊಂದು ಕಾಲುಗಂಟೆಯಲ್ಲಿಯೆ ಅಲ್ಲಿಗೆ ಹೋಗಿ ಸೇರಿದೆವು. ಅಲ್ಲಿ ಕಾಡುಬೆಂಕಿ ಬಿದ್ದಿರಲಿಲ್ಲ! ಜೇನೂ ಇತ್ತು! ಜೇನುಹುಳುಗಳು ಒಂದೊಂದಾಗಿ ಹುತ್ತದೊಳಗೆ ಹೋಗಿಬರುತ್ತಿದ್ದುದನ್ನು ಕಂಡು ನಾನಂತೂ ಹಿಗ್ಗಿದೆ. ಇಬ್ರಾಹಿ ಆನಂದಾತಿಶಯದಿಂದ ಹಲ್ಲುತೆರೆದು ಬಾಯಿ ಅರಳಿಸಿದ್ದ.

ಪುಟ್ಟಣ್ಣ ಹುಳುಗಳನ್ನು ಪರೀಕ್ಷಿಸಿನೋಡಿ “ಕರಿತುಡುವೆಯಪ್ಪಾ! ಕೀಳಲು ಬಹುಕಷ್ಟ! ನನ್ನಿಂದಾಗದು!” ಎಂದನು.

ಜೇನಿನಲ್ಲಿ, ಹೆಜ್ಜೇನು, ತುಡುವೆ, ಕೋಲುಜೇನು, ನಸರಿ ಎಂಬ ಪ್ರಭೇದಗಳುಂಟು. ತುಡುವೆಯಲ್ಲಿ ಕರಿ, ಬಿಳಿ ಎಂಬ ಎರಡು ಜಾತಿ. ಇವುಗಳ ತುಪ್ಪವೆಲ್ಲ ತಿನ್ನಲು ಮಧುರವಾದರೂ ಅವುಗಳ ಕಡಿತ, ಕಾಟ, ರುಚಿ, ಗುಣ ಇವುಗಳಲ್ಲಿ ವ್ಯತ್ಯಾಸವಿದೆ. ಹೆಜ್ಜೇನನ್ನು ಪ್ರಾಯಶಃ ಎಲ್ಲರೂ ನೋಡಿದ್ದಾರೆ. ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಸೌಧಗಳಲ್ಲಿ ಕರ‍್ರಗೆ ನೇತಾಡುವುವು. ಮಲೆನಾಡಿನಲ್ಲಿ ದೊಡ್ಡ ದೊಡ್ಡ ಮರಗಳ ಶಾಖೆಗಳಿಂದ ಹಲ್ಲೆಗಳು ನೇತುಬೀಳುತ್ತವೆ. ಅವನ್ನು ಕೀಳಬೇಕಾದರೆ ಅಥವಾ ಕೊಯ್ಯಬೇಕಾದರೆ ಜೇನು ಕಟ್ಟಿರುವ ಕೊಂಬೆಗೆ ನೇರವಾಗಿ ಕೆಳಭಾಗದಲ್ಲಿ ನೆಲದಮೇಲೆ ಬೆಂಕಿಹಾಕಿ, ಬೆಂಕಿಗೆ ಹಸುರೆಲೆಗಳನ್ನು ಒಟ್ಟಿ ಹೊಗೆಮಾಡುತ್ತಾರೆ. ಆ ಧೂಮಪಾನವನ್ನು ಸಹಿಸಲಾರದ ಮಧುಪಗಳು ಹಲ್ಲೆಯನ್ನು ಬಿಟ್ಟು ದೂರ ಹೋಗುತ್ತವೆ. ಆಗ ಮರವನ್ನು ಹತ್ತಿ ಹಗ್ಗಕೆಟ್ಟಿದ ಬೋಗುಣಿಗೆ ಅದನ್ನು ಕೊಯ್ದು ಹಾಕಿ ಮೆಲ್ಲಗೆ ಇಳಿಸುತ್ತಾರೆ. ಒಂದು ಜೇನಿಗೆ ಒಂದೇ ಹಲ್ಲೆ ಇರುತ್ತದೆ. ಆದರೆ ಬಹಳ ದೊಡ್ಡದು. ಹೆಜ್ಜೇನುಹುಳು ಕಡಿದರೆ ತುಂಬಾ ಯಾತನೆ. ಎಷ್ಟೋ ಜನರೂ ಪ್ರಾಣಿಗಳೂ ಅವುಗಳ ಕೈಗೆ ಸಿಕ್ಕಿ ಪ್ರಾಣಬಿಟ್ಟಿದ್ದಾರೆ. ಆದ್ದರಿಂದಲೆ ಹೆಜ್ಜೇನನ್ನು ಸಾಧಾರಣವಾಗಿ ಹಗಲು ಕೀಳುವುದಿಲ್ಲ.

ತುಡುವೆ, ಕೋಲುಜೇನು ಇವುಗಳನ್ನು ನೋಡಲು ಬಹಳ ಜನರಿಗೆ ಅವಕಾಶವಿಲ್ಲ. ಕೋಲುಜೇನು ಬಹಳ ಸಾಧುವಾದದು. ಇದರ ಗೂಡು, ದೊಡ್ಡದು ಎಂದರೆ, ಚೆನ್ನಾಗಿ ಬೆಳೆದ ಚಕ್ಕೋತದ ಕಾಯಿಯಷ್ಟು ದಪ್ಪವಿರುತ್ತದೆ. ಇದರಲ್ಲಿಯೂ ಒಂದು ಜೇನಿಗೆ ಒಂದೇ ಹಲ್ಲೆ. ಹಲ್ಲೆ ಪೊದೆಗಳಲ್ಲಿ ಸಣ್ಣ ಕೋಲುಗಳಿಂದ ನೇತುಬಿದ್ದಿರುತ್ತದೆ. ನನಗಿನ್ನೂ ನೆನಪಿದೆ: ನಾವು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಾಗ ಒಂದು ದಿನ ಕುಶಾವತಿ ನದಿಗೆ ಈಜಲು ಹೋಗಿದ್ದೆವು. ಅದರ ತೀರದಲ್ಲಿ ಒಂದು ನೆಕ್ಕಿಯ ಹೊದೆಯಲ್ಲಿ ಬಡಪಾಯಿ ಕೋಲುಜೇನು ಕಟ್ಟಿತ್ತು. ಆಗ ನಮಗೆ ಅದು ಸಾಧುವಾದ ಜೇನೆಂಬುದು ಗೊತ್ತಿರಲಿಲ್ಲ. ಹುಳುಗಳನ್ನು ಓಡಿಸಲು ದೊಡ್ಡ ಬೆಂಕಿ ಹಾಕಿದೆವು. ಒಂದು ಹುಳುವೂ ಹಾರಿಹೋಗಲಿಲ್ಲ! ನಮ್ಮ ಮನಸ್ಸಿಗೆ ಅದು ಬಹಳ ಹಠಮಾರಿ ಜೇನೆಂದು ತೋರಿ ಮತ್ತೂ ದೊಡ್ಡದಾಗಿ ಬೆಂಕಿ ಮಾಡಿದೆವು. ಆದರೂ ಒಂದು ಹುಳುವೂ ಹಾರಲಿಲ್ಲ! ನಮಗೆಲ್ಲಾ ಆಶ್ಚರ್ಯವಾಗಿ ಬೆಂಕಿ ಆರಿಸಿ ನೋಡಿದಾಗ ಹುಳುಗಳೂ ಇರಲಿಲ್ಲ. ಹಲ್ಲೆಯೂ ಇರಲಿಲ್ಲ! ಜೇನು ಕಟ್ಟಿದ್ದ ಗುರುತೇ ಇರಲಿಲ್ಲ! ನಿಜಾಂಶವೇನೆಂದರೆ, ಬೆಂಕಿಯ ಜ್ವಾಲೆ ಮಿತಿಮೀರಿ ಹುಳುಗಳೆಲ್ಲವೂ ಹಾರುವ ಮೊದಲೇ ಸತ್ತು ಉರಿದು ಬೂದಿಯಾಗಿಹೋಗಿದ್ದುವು! ಹಲ್ಲೆಯೂ ಕರಗಿ ಹೋಗಿತ್ತು! ಅಂತೂ ನಮ್ಮ ಅತ್ಯಾಶೆಗೆ ಸರಿಯಾದ ಫಲ ಸಿಕ್ಕಿತು!

ಪಾಠಕನು ಕಾಡುನಾಡಿನ ಹಳ್ಳಿಯವನಾಗಿದ್ದರೆ ಆತನಿಗೆ ನಸರಿಯ ಪರಿಚಯ ಚೆನ್ನಾಗಿರುತ್ತದೆ. ಪುರದ ಪಾಠಕನೇ, ನೀನು ಎಂದಾದರೂ ಮಿಠಾಯಿ ಅಂಗಡಿಗಳಿಗೆ ಹೋಗಿದ್ದೀಯಾ? ಈ ಪ್ರಶ್ನೆಯೆ ಅನಾವಶ್ಯಕ! ಕಾಫಿ ಹೋಟಲು, ಮಿಠಾಯಿ ಅಂಗಡಿಗಳಿಗೆ ಹೋಗದಿದ್ದ ಪಟ್ಟಣೆಗನುಂಟೆ? ಒಂದು ವೇಳೆ ಇದ್ದರೆ, ಅವನನ್ನು ಪಟ್ಟಣಿಗ, ನಾಗರಿಕ ಎಂದು ಕರೆಯುವುದು ಉಪಚಾರಕ್ಕೆಂದೇ ಹೇಳಬೇಕು.

ಮಿಠಾಯಿರಾಶಿಗೆ ಸಾವಿರಾರು ಸಣ್ಣ ಹುಳುಗಳು ಬಂದು ಮುತ್ತಿರುತ್ತವೆ. ನಿನಗೆ ನೊಣಗಳ ಗುರುತು ಚೆನ್ನಾಗಿದೆಯಷ್ಟೆ! ಅವುಗಳನ್ನು ಬಿಟ್ಟರೆ ಅಲ್ಲಿರುವ ಮತ್ತೊಂದು ಬಗೆಯ ಹುಳುಗಳೇ ನಸರಿಹುಳುಗಳು. ಅವು ಕಚ್ಚುವುದಿಲ್ಲ, ಕಡಿಯುವುದಿಲ್ಲ. ತುಂಬಾ ಕೀಟಲೆ ಕೊಡುತ್ತವೆ. ಕಿವಿಗೆ ನುಗ್ಗುತ್ತವೆ. ತಲೆ ಕೂದಲು ತುಂಬಾ ಮಂಗಮುಷ್ಟಿ ಹಿಡಿದು ಕಚ್ಚಿಕೊಳ್ಳುತ್ತವೆ. ಇದನ್ನು ಕೇಳಿ ನಸರಿತುಪ್ಪ ಸುಲಭಸಾಧ್ಯವೆಂದು ತಿಳಿಯಬಾರದು. ಅದು ಗೂಡುಮಾಡುವುದು ಮರದ ಪೊಟರೆ, ಮನೆಯ ಗೋಡೆಯ ಟೊಳ್ಳಿರುವ ಬಿರುಕು, ಬೊಂಬು ಇಂತಹ ಜಾಗಗಳ್ಲಿ. ಅದರ ಮರಿಗಳನ್ನು ತಂದಿಟ್ಟು ಕೊಡಗಳಲ್ಲಿಯೂ ತುಪ್ಪಮಾಡಿಸಬಹುದು. ಇದರ ತುಪ್ಪ ಬಹಳ ರುಚಿ. ಹೆಚ್ಚಾಗಿ ತಿನ್ನಲೂ ಬಹುದು. ಔಷಧಿಗಳಿಗೂ ಉಪಯೋಗಿಸುತ್ತಾರೆ.

ಒಂದುಸಾರಿ ನಸರಿ, ಶ್ರೀಕಂಠ ಇವರಿಬ್ಬರ ದೆಸೆಯಿಂದ ನನಗೆ ಸ್ಕೂಲು ಬಿಡಲು ಕಾಲ ಬಂದಿತ್ತು. ಪರೀಕ್ಷೆ ಸಮೀಪಿಸಿದ ಸಮಯ. ಸ್ಕೂಲಿನ ಬೋಳು ಮಹಡಿಯ ಮೇಲೆ ಹತ್ತಿ ಹೆಡ್ಮಾಸ್ಟರ ಆಫೀಸಿನ ಮೇಲುಗಡೆಯೇ ಓದುತ್ತಿದ್ದೆವು. ಗೋಡೆಯೊಳಗೆ ಒಂದು ನಸರಿಗೂಡು ಇತ್ತು. ಮೂರು ದಿನಗಳ ತನಕ ಶ್ರೀಕಂಠ ನಸರಿಹುಳುಗಳನ್ನು ನೊಣಗಳೆಂದೇ ತಿಳಿದಿದ್ದನು. ಗ್ರಹಚಾರಹಿಡಿದ ನಾನು ಒಂದು ದಿನ ನಿಜಸ್ಥಿತಿ ತಿಳಿಸಿದೆ. ಶ್ರೀಕಂಠ ನಸರಿ ಕೀಳೋ ಎಂದು ಹಠಿಹಿಡಿದ. ನಾನೆಷ್ಟೋ ಹೇಳಿದೆ, “ಹೆಡ್ಮಾಸ್ಟರ ಆಫೀಸಿದೆಯಪ್ಪಾ ಕೆಳಗೆ, ಬೇಡ; ಪರೀಕ್ಷೆಯ ಸಮಯ, ಸರ್ಕಾರೀ ಕಟ್ಟಡ! ಕಿತ್ತರೆ ನಮ್ಮ ಮಾನ ಉಳಿಯುವುದಿಲ್ಲ” ಎಂದು. ಮರುದಿನ ಅವನೊಬ್ಬನೇ ಬಂದು ಕಿತ್ತೇಬಿಟ್ಟ! ಕಿತ್ತೂಕಿತ್ತ; ಆಮೇಲೆ ಜುಲ್ಮಾನೆಯನ್ನೂ ಕೊಟ್ಟ! ಅವನ ದೆಸೆಯಿಂದ ಹೆಡ್ಮಾಸ್ಟರು ನನಗೂ ‘ಸ್ವಲ್ಪ’ ಬೈದರು! ಅದುವರೆಗೂ ಅವರ ಮುಂದೆ ಮೆಹನತ್ತಿನಿಂದ ಇರುತ್ತಿದ್ದ ನನಗೆ ಅವರ ಬೈಗಳೇ ಜುಲ್ಮಾನೆಗಿಂತ ಹೆಚ್ಚಾಯಿತು. ಶ್ರೀಕಂಠನನ್ನು ಕೇಡಿ ರಿಜಿಸ್ಟರಿಗೂ ದಾಖಲೆ ಮಾಡಿದರೆಂದು ತೋರುತ್ತದೆ. ನನಗೆ ಸರಿಯಾಗಿ ನೆನಪಿಲ್ಲ. ಈ ಸಂಗತಿ ಆಗ ನಮ್ಮ ಇಸ್ಕೂಲಿನಲ್ಲೆಲ್ಲ “ನಸರಿ ಕೇಸು” ಎಂದು ಪ್ರಸಿದ್ಧವಾಗಿತ್ತು!

ಬಿಳಿತುಡುವೆ ಕರಿತುಡುವೆಗಿಂತ ಸ್ವಲ್ಪ ಸಾಧು. ಮರಗಳಲ್ಲಿ ಸಣ್ಣ ತೂತು ಇರುವ ಪೊಟರೆ ಗೆದ್ದಲಿಲ್ಲದ ಹುತ್ತ ಇಂಥಾ ಅಂತರಂಗದ ಸ್ಥಳಗಳಲ್ಲಿಯೆ ತುಡುವೆ ಜೇನು ಗೂಡುಮಾಡುವುದು. ಕೋಲುಜೇನು, ಹೆಜ್ಜೇನು ಇವುಗಳಂತೆ ಇದು ಎಂದಿಗೂ ಬಹಿರಂಗವಾಗಿರುವುದೆ ಇಲ್ಲ. ಇದರಲ್ಲಿ ಒಂದೊಂದು ಜೇನಿಗೆ ಆರು ಏಳು ಹಲ್ಲೆಗಳ ತನಕ ಇರುತ್ತವೆ. ಇದರ ಹಲ್ಲೆಗಳನ್ನು ಹೆಜ್ಜೇನು ಹಲ್ಲೆಗಳಿಗೆ ಹೋಲಿಸಿದರೆ ಬಹು ಸಣ್ಣ. ಈ ಜಾತಿ ಜೇನುಹುಳು ಹೆಜ್ಜೇನು ಹುಳುವಿಗಿಂತ ಚಿಕ್ಕದು. ಕೋಲುಜೇನು ಹುಳುವಿಗಿಂತ ದೊಡ್ಡದು. ಸಾಕು; ನಾನೇನು ಪ್ರಾಣಿ ಶಾಸ್ತ್ರಜ್ಞನಲ್ಲ. ಪ್ರಬಂಧಕಾರನಿಗೆ ಶಾಸ್ತ್ರಕಾರನ ಹಕ್ಕೂ ಇಲ್ಲ. ಅದೂ ಅಲ್ಲದೆ ನೀವೆಲ್ಲ ಆಕಳಿಸುತ್ತಿದ್ದೀರಿ!

ನಮ್ಮ ಬಂದೂಕಗಳನ್ನೆಲ್ಲ ಒಂದು ದೊಡ್ಡ ಮರದ ಬುಡಕ್ಕೆ ಒರಗಿಸಿದೆವು. ನಾನು ಪುಟ್ಟಣ್ಣ ಇಬ್ಬರೂ ಜೇನು ಕಟ್ಟಿದ್ದ ಹುತ್ತದಿಂದ ದೂರ ಹೋಗಿ ಕುಳಿತೆವು! ನಮ್ಮಿಬ್ಬರಿಗೂ ಜೇನುಹುಳುಗಳೆಂದರೆ ಸ್ವಲ್ಪ ಎದೆಯಲ್ಲಿ ಹಾಗೆ ಹಾಗೆ! ಹಳೆಪೈಕದ ಪುಟ್ಟ ಕಾಡುಮೆಣಸಿನ ಎಲೆಗಳನ್ನು ಚೆನ್ನಾಗಿ ಅಗಿದು, ಅದರ ರಸವನ್ನು ಹುತ್ತದ ತೂತಿಗೆ ಉಗಿದು, ಆ ತೂತಿನೊಳಕ್ಕೆ ಬುಸ್‌ಬುಸ್ ಎಂದು ಉಸಿರೂದತೊಡಗಿದನು. ತುಡುವೆಜೇನು ಕೀಳಲು ಇದೊಂದು ಉಪಾಯ. ಮೆಣಸಿನ ಎಲೆ, ಬೆಳ್ಳುಳ್ಳಿ ಮುಂತಾದ “ಘಾಟು” ಇರುವ ಪದಾರ್ಥಗಳನ್ನು ಅಗಿದು ತೂತಿನೊಳಕ್ಕೆ ಉಗಿದು ಗಾಳಿ ಊದುತ್ತಾರೆ. ಜೇನುಹುಳುಗಳಿಗೆ ತಲೆತಿರುಗಿ (ಒಂದೊಂದು ಸಾರಿ ಉಸುರೂದುವವನಿಗೂ ಹಾಗಾಗುವುದುಂಟು!) ಹಲ್ಲೆಗಳನ್ನೆಲ್ಲ ಬಿಟ್ಟು ದೂರ ಸರಿಯುತ್ತವೆ. ಆಗ ತೂತನ್ನು ಅಗಲಮಾಡಿ ಹಲ್ಲೆಗಳನ್ನು ತೆಗೆಯುತ್ತಾರೆ.

ಪುಟ್ಟನ ಉಪಾಯಕ್ಕೆ ಕರಿತುಡುವ ಬಗ್ಗಲಿಲ್ಲ. ನಾಲ್ಕೈದು ಹುಳುಗಳೂ ಅವನಿಗೆ ಹೊಡೆದುವು. ಕಾಲಿಗೆ ಬುದ್ಧಿ ಹೇಳಿದ. ಆಗ ಜೇನುಕೀಳುವುದರಲ್ಲಿ ಪ್ರವೀಣರಾದ ಹೆಗ್ಗಡೆಯವರು ತಮ್ಮ ಜೇಬಿನಲ್ಲಿದ್ದ ಬೆಳ್ಳುಳ್ಳಿಯನ್ನು ತೆಗೆದು, ಚೆನ್ನಾಗಿ ಅಗಿದು, ಮುಂದಿನ ಕ್ರಮ ಜರುಗಿಸಿದರು. ಆದರೂ ಹುಳುಗಳು ಮತ್ತೂ ರೋಷದಿಂದ ನುಗ್ಗಿಬಂದು ಮೂಗು ಕಣ್ಣು ತುಟಿ ಕೆನ್ನೆ ಎಲ್ಲ ಕಡೆಗೂ ಹೊಡೆಯಲಾರಂಭಿಸಿದುವು! ಪಾಪ! ವೀರರಾದರೂ ಎಷ್ಟೆಂದು ತಾಳಿಯಾರು? ನಾವಿಬ್ಬರೂ ಕುಳಿತಕಡೆಗೆ ಓಡಿಬಂದರು. ಹುಳುಗಳೂ ಅವರನ್ನು ಹಿಂಬಾಲಿಸಿದುವು. ಪುಟ್ಟಣ್ಣ ಅಬ್ಬರಿಸಿ ಕೂಗಿ ಓಡಿದನು. (ಸ್ವಲ್ಪ ಹಾಸ್ಯಕ್ಕಾಗಿಯೇ ಇರಬಹುದು!) ನಾನೂ ಅವನ ಹಿಂದೆ ಓಡಿದೆ. (ಹಾಸ್ಯಕ್ಕಲ್ಲ!) ಓಡಿಹೋದವನು ಒಂದು ಕಡಿದಾದ ಬಂಡೆಯ ಮೇಲೆ ಕುಳಿತನು. ನಾನೂ ಕುಳಿತೆ. ಕುಳಿತವನು ಕೆಳಗೆ ಬಾಗಿ ನೋಡಿದೆ. ಸುಮಾರು ಮೂವತ್ತು ನಾಲ್ವತ್ತು ಅಡಿಗಳಷ್ಟು ಎತ್ತರವಾಗಿತ್ತು.

“ಪುಟ್ಟಣ್ಣ, ಕೆಳಗಿಳಿಯೋಣ” ಎಂದೆ. ಇಬ್ಬರೂ ಚತುಷ್ಪಾದಿಗಳಾಗಿ ಜಾಗರೂಕತೆಯಿಂದ ಇಳಿದೆವು. ನೋಡುವಾಗ ಬಂಡೆಯ ಸಂದುಗಳಲ್ಲಿ ಏಳೆಂಟು ಕಣೆಹಂದಿಯ ಗುದ್ದು (ಗುಹೆ)ಗಳು ಕಂಡುಬಂದುವು. ಉದ್ದವಾದ ಕಣೆಗಳು ಗುದ್ದಿನ ಬಾಯಿಯಲ್ಲಿ ಬಿದ್ದಿದ್ದುವು. ಮುಳ್ಳುಹಂದಿಗಳು ಹಿಂದೆ ಮುಂದೆ ತಿರುಗಿ ತಿರುಗಿ ನೆಲವೆಲ್ಲ ಸಮೆದುಹೋಗಿತ್ತು. ಉದ್ವೇಗದಿಂದ ಗುದ್ದುಗಳನ್ನು ಪರೀಕ್ಷಿಸುತ್ತಿದ್ದೆವು. ಅಷ್ಟರಲ್ಲಿಯೆ ಹೆಗ್ಗಡೆಯವರು ಕರೆದರು. ಮನಸ್ಸಿಲ್ಲದ ಮನಸ್ಸಿನಿಂದ ಬಂಡೆಗಳನ್ನೇರಿ ಮೇಲೆ ಬಂದೆವು.

ಹೆಗ್ಗಡೆಯವರ ಮುಖವೆಲ್ಲ ಊದಿಹೋಗಿತ್ತು. “ಈಗೇನು ಮಾಡೋದು?” ಎಂದರು. ಪುಟ್ಟಣ್ಣ “ಸಾಮ, ದಾನ, ಭೇದ ಎಲ್ಲಾ ಪೂರೈಸಿತು. ಇನ್ನು ದಂಡ. ಹಾಕಿ ಬೆಂಕೀನ!” ಎಂದು ತನ್ನ ಜೇಬಿನಲ್ಲಿದ್ದ ಬೆಂಕಿಪೆಟ್ಟಿಗೆಯನ್ನು ತೆಗೆದು ಅವರ ಕೈಗೆ ಕೊಟ್ಟನು.

ಆಮೇಲೆ ಬೆಂಕಿ ಮಾಡಿ ಹೊಗೆಮಾಡಿದರು. ಪಾಪ! ಎಷ್ಟೋ ಹುಳುಗಳು ಸತ್ತುವು! “ಅದರಂತಹುದೆಷ್ಟೂ ಆಗಲೆ ಬೇಕಲ್ಲ ಲೋಕಪ್ರಸಿದ್ಧಿಯ ಜಯದಲಿ!” ನಮ್ಮ ಬೆಂಕಿಯ ಮುಂದೆ ಹುಳುಗಳಾಟ ಏನು ಸಾಗೀತು? ನಾವೇ ಜಯಿಸಿದೆವು. ಲೂಟಿಗೆ ಪ್ರಾರಂಭವಾಯಿತು. ಅದುವರೆಗೂ ಪತ್ತೆಯಿಲ್ಲದೆ ದೂರ ಅಡಗಿದ್ದ ಇಬ್ರಾಹಿ ಬಾಯಿತೆರೆದುಕೊಂಡು ಓಡಿಬಂದ. ಹೆಗ್ಗಡೆಯವರು ಐದಾರು ಹಲ್ಲೆಗಳನ್ನು ಕಿತ್ತು ಬೋಗುಣಿಗೆ ಹಾಕಿದರು. ನಮಗೆಲ್ಲಾ ಹರುಷದ ಹಬ್ಬ! ಎಷ್ಟುಹೊತ್ತಿಗೆ ಜೇನು ಬಾಯಿಗೆ ಬೀಳುವುದೋ ಎಂದು ಕಾತರಿಸಿದ್ದೆವು.

ಜೇನು ತಿನ್ನುವ ಮೊದಲು ನಾನು “ಜೈ ಭಗವಾನ್ ರಾಮಕೃಷ್ಣ” ಎಂದು ಇಬ್ರಾಹಿಯ ಕಡೆ ತಿರುಗಿ “ಲೋ, ಇಬ್ರಾಹಿ, ನಿಮ್ಮ ದೇವರ ನೆನೆಯೋ ಜೇನು ತಿನ್ನುವುದಕ್ಕೆ ಮುಂಚೆ. ಅಲ್ಲಾ ಹೋ ಅಕ್ಬರ್‌!” ಎಂದೆ. ಇಬ್ರಾಹಿ “ನಮ್ಮ ದೇವರು ಬೇರೆ, ನಿಮ್ಮ ದೇವರು ಬೇರೆಯೋ?” ಎಂದ. ಮುಂದೇನು ಸಂಭಾಷಣೆ ನಡೆಯುತ್ತಿತ್ತೋ ಗೊತ್ತಿಲ್ಲ. ಹಠಾತ್ತಾಗಿ ಟೈಗರು ರೋಜಿಯನ್ನು ಕಚ್ಚಿ ಮುರಿಯಲು ಪ್ರಾರಂಭಿಸಿ ದೊಡ್ಡ ದಾಂದಲೆ ಎಬ್ಬಿಸಿತು. ಪುಟ್ಟಣ್ಣ ದೊಡ್ಡದೊಂದು “ಲೊಟ” ತೆಗೆದುಕೊಂಡು ಏಳೆಂಟು ಕಡಬು ಹೇರಿ ಜಗಳ ನಿಲ್ಲಿಸಿದ. ಜಗಳಕ್ಕೆ ಕಾರಣ ಹಳೆಪೈಕದ ಪುಟ್ಟ ಜೇನು ತಿಂದು ಮೇಣ ಎಸೆದುದೇ!

ಇಬ್ರಾಹಿ ಊದಿ ವಿಕಾರವಾಗಿದ್ದ ಹೆಗ್ಗಡೆಯವರ ಮುಖ ನೋಡಿ ಅಳ್ಳೆ ಹಿಡಿದು ನಕ್ಕ. ಪುಟ್ಟಣ್ಣ “ಯಾರಾದರೂ ಕೇಳಿದರೆ ಒಳ್ಳೇ ಹವದ ಕಾಡಿಗೆ ಹೋಗಿದ್ದೆ. ಸ್ವಲ್ಪ ಪುಷ್ಟಿಯಾಗಿ ಬಂದಿದ್ದೇನೆ ಎಂದುಬಿಡಿ” ಎಂದನು. ಎಲ್ಲರೊಡನೆ ಹೆಗ್ಗಡೆಯವರೂ ನಕ್ಕರು. ಅವರ ಮುಖ ಮತ್ತಷ್ಟು ವಿಕಾರವಾಯಿತು. ಮತ್ತೆ ಎಲ್ಲರೂ ನಗೆಗಡಲಲ್ಲಿ ಮುಳುಗಿ ಹೋದರು. ನಾಯಿಗಳೆಲ್ಲ ಸುತ್ತ ಕುಳಿತು ನಮ್ಮನ್ನೇ ದುರುದುರು ನೋಡುತ್ತಿದ್ದುವು. ಕೆಲವು ಜೇನು ಹುಳುಗಳು ಜೇನುತುಪ್ಪದಲ್ಲಿ ಬಿದ್ದು ರೆಕ್ಕೆ ತೊಯ್ದು ಒದ್ದಾಡುತ್ತ ಹರಿಯುತ್ತಿದ್ದುವು. ಕಾಡು ಮೌನವಾಗಿತ್ತು. ಹೊತ್ತು ನೆತ್ತಿಗೇರಿತ್ತು. ಬನಗತ್ತಲೆ ಗಾಢವಾಗಿತ್ತು.

ಜೇನುತುಪ್ಪ ತಿನ್ನಲು ಸವಿಯಾಗಿತ್ತೆಂದು ಹೇಳಿದರೆ, ಓದಿದವರೆಲ್ಲ “ಹೌದೇ? ನಿಜವಾಗಿಯೂ?” ಎನ್ನದಿರುವುದಿಲ್ಲ. ಚೆನ್ನಾಗಿ ಮಾಗಿದ ಕೊಡಗಿನ ಕಿತ್ತಿಳೆಹಣ್ಣಿನ ತೊಳೆಯನ್ನು ಸಿಗಿದರೆ ಒಳಗಡೆ ಯಾವ ಬಣ್ಣ ಕಂಗೊಳಿಸುತ್ತದೆಯೋ ಅದೇ ಬಣ್ಣವಿತ್ತು ಜೇನು ಹಲ್ಲೆಗಳಿಗೆ! ಜೇನುತುಪ್ಪವನ್ನೇನೋ ತಿಂದು ನಮಗೆಲ್ಲ ಸಂತೋಷವಾಯಿತು. ಆದರೆ ಒಂದು ವಿಷಾದದ ವಿಷಯ. ಅದೇನೆಂದರೆ, ಆಸೆಗೆ ತಕ್ಕಹಾಗೆ ತುಪ್ಪ ತಿನ್ನಲು ಆಗಲಿಲ್ಲ. ತುಪ್ಪ ಕಡಿಮೆಯಾಗಿತ್ತು ಎಂದಲ್ಲ; ಜೇನು ಯಥೇಚ್ಛವಾಗಿತ್ತು. ಮನೆಗೂ ಮುಕ್ಕಾಲು ಬೋಗುಣಿ ತುಂಬಾ ತೆಗೆದುಕೊಂಡು ಹೋದೆವು. ಆದರೆ ಸ್ವಲ್ಪ ತಿನ್ನುವುದರೊಳಗಾಗಿ ನನಗಂತೂ ಅದರ ಅತಿ ಮಾಧುರ್ಯ ಮುಖ ಮುರಿದುಬಿಟ್ಟಿತು. “ಆಸೆ ಭೀಮ, ಸಾಮರ್ಥ್ಯ ಸುಧಾಮ!” ಹೀಗಾಗಿ ಬಿಟ್ಟಿತು ನನ್ನ ಗತಿ! ಅವರೆಲ್ಲ ಹೊಡೆದೇ ಹೊಡೆದರ ಕಂಠಪೂರ್ತಿಯಾಗಿ!

 ಮುಂದಿನ ಭಾಗ : http://kannadadeevige.blogspot.com/p/blog-page_87.html   ಕತೆಗಾರ ಮಂಜಣ್ಣ




*********

ಮಲೆನಾಡಿನ ಚಿತ್ರಗಳು : ಮಲೆನಾಡಿನ ಗೋಪಾಲಕರು

ಮಲೆನಾಡಿನ ಗೋಪಾಲಕರು
ಮಲೆನಾಡಿನ ಗೋಪಾಲಕರು ದಿಟ್ಟರು; ಕೆಚ್ಚೆದೆಯಾಳುಗಳು! ಅಲ್ಲದೆ ಕಷ್ಟಸಹಿಷ್ಣುಗಳು. ಗಿರಿವನಗಳಲ್ಲಿ ಮಳೆಬಿಸಿಲೆನ್ನದೆ ಅಲೆದು ಅಲೆದು ಗಟ್ಟಿ ಮುಟ್ಟಾಗಿರುವರು. ಅವರ ಉಡುಪೆಂದರೆ, ಮೊಳಕಾಲು ಮೀರದ ಕೊಳಕಾದ ಪಂಚೆ ಒಂದು, ಯಾರಾದರೂ ಪುಣ್ಯಾತ್ಮರು ಧರ್ಮಮಾಡಿದ ಹರಕು ಅಂಗಿ ಒಂದು! ಇಷ್ಟೇ ಹೊರತು ಮತ್ತೇನೂ ಇಲ್ಲ. ಕಂಬಳಿಯೊಂದು ಮಾತ್ರ, ಹರಕಾಗಲಿ ಒಳ್ಳೆಯದಾಗಲಿ, ಇದ್ದೇ ಇರುತ್ತದೆ. ಸೊಂಟಕ್ಕೆ ಒಡ್ಯಾಣವೆಂಬ ದಟ್ಟಿಯನ್ನು ಬಿಗಿಯುತ್ತಾರೆ. ಒಡ್ಯಾಣ ಅವರ ಸ್ವಂತ ತಯಾರಿ. ಅದಕ್ಕೆ ಹಿಂಭಾಗದಲ್ಲಿ ಒಂದು ಕಬ್ಬಿಣದ ಕೊಂಡಿಯನ್ನಿಡುವರು. ಆ ಕೊಂಡಿಯಲ್ಲಿ ಅವರು ಸದಾ ತಮ್ಮ ಕೆಲಸದ ಕತ್ತಿ (ಖಡ್ಗವಲ್ಲ) ಯನ್ನು ಸಿಕ್ಕಿಸಿಕೊಂಡೇ ಇರುತ್ತಾರೆ. ಅದಿಲ್ಲದೆ ಅವರು ಹೊರಗೆ ಹೊರಡುವುದೇ ಇಲ್ಲ. ಬಣ್ಣದಲ್ಲಿ ಅವರು ‘ಸ್ವಲ್ಪ’ ಕಪ್ಪು. ಮೊರಡಾದ ಅವರ ದೇಹ ಅವರ ಜೀವನದ ಕಾಠಿನ್ಯವನ್ನು ತೋರ್ಪಡಿಸುವುದು. ಆಧರೂ ಅವರು ನಡೆನುಡಿಗಳಲ್ಲಿ ಬಹಳ ವಿನಯರು, ಗರ್ವವಿಲ್ಲ. ಅತ್ಯಾಶೆಯಿಲ್ಲದೆ, ಬಂದುದನ್ನು ತಿಂದುಂಡು ಸುಖದಲ್ಲಿ ಕಾಲ ಕಳೆಯುವವರಲ್ಲದೆ, ಹಾಳು ವ್ಯಾಜ್ಯಗಳಿಗೆ ಕೈ ಹಾಕುವುದಿಲ್ಲ. ಅವರ ಜೀವನದ ಮಹಿಮೆ ಬ್ರಹ್ಮನಿಗೆ ತಿಳಿಯುವುದಲ್ಲದೆ ಬೇರೆ ಯಾರಿಗೂ ಚೆನ್ನಾಗಿ ಗೊತ್ತಾಗುವುದಿಲ್ಲ. ಅಂಥಾ ಸೌಜನ್ಯ ಅವರಿಗೆ ಗೋವುಗಳ ಸಹವಾಸದಿಂದ ಬಂದಿದೆಯೋ ಏನೋ ಗೊತ್ತಾಗುವುದಿಲ್ಲ!

ಅವರು ದಿನದಿನವೂ ಬೆಳಗ್ಗೆ ಎದ್ದು ಗಂಜಿಯುಡು, ಹಾಲುಕರೆದ ಮೇಲೆ ತುರುಗಳನ್ನೆಲ್ಲಾ ಮೇಯಿಸಲು ಹೊಡೆದುಕೊಂಡು ಹೋಗುವರು. ಪುನಃ ಅವರು ಹಿಂತಿರುಗುವುದ ಸುಮಾರು ಸಾಯಂಕಾಲು ಐದು ಗಂಟೆಗೆ. ಅಷ್ಟು ಹೊತ್ತಿನವರಗೆ ದನಗಳನ್ನು ಹುಲ್ಲು ಹುಲುಸಾಗಿರುವ ಜಾಗಗಳಿಗೆಲ್ಲಾ ಹೊಡೆದುಕೊಂಡು ಹೋಗಿ ಚೆನ್ನಾಗಿ ಮೇಯಿಸುವರು. ಬೇಸಗೆಯಲ್ಲಾದರೆ ನಡುಹಗಲಿನಲ್ಲಿ ಗೋವುಗಳನ್ನೆಲ್ಲ ನೆರಳಿರುವ ತಂಪಾದ ಕಡೆಗೆ ‘ಅಟ್ಟಿಕೊಂಡು ಹೋಗಿ ಬಿಡುವರು. ಅಲ್ಲಿ ಅವುಗಳೆಲ್ಲ ಸ್ವಲ್ಪ ಹೊತ್ತು ಮಲಗಿ ಮೆಲುಕು ಹಾಕುತ್ತಾ ವಿಶ್ರಮಿಸಿಕೊಳ್ಳುತ್ತವೆ. ಹೀಗೆ ವಿಶ್ರಮಿಸಿಕೊಳ್ಳುವ ಸ್ಥಳ ದಿನ ದಿನವೂ ಬದಲಾಯಿಸಲ್ಪಡುವುದಿಲ್ಲ. ಅದೊಂದು ವಂಶ ಪಾರಂಪರ್ಯವಾಗಿ ಬಂದ ಗೊತ್ತಾದ ಸ್ಥಳ. ಅದಕ್ಕೆ ಗೋಪಾಲರು ತಮ್ಮ ಪರಿಭಾಷೆಯಲ್ಲಿ “ತರುಬುಗುಣಿ” ಎಂದು ಕರೆಯುತ್ತಾರೆ. ಇಂಥಾ ‘ತರುಬುಗುಣಿ’ಯನ್ನು ನೋಡಿದ ಕೂಡಲೆ ಎಂದು ಕರೆಯುತ್ತಾರೆ. ಇಂಥಾ ‘ತರುಬುಗುಣಿ’ಯನ್ನು ನೋಡಿದ ಕೂಡಲೆ ತಿಳಿದುಕೊಳ್ಳಬಹುದು; ಏಕೆಂದರೆ ಅಲ್ಲಿ ಒಂದು ಹಸುರು ಎಸಳಾದರೂ ಹುಟ್ಟಿರುವುದಿಲ್ಲ. ದನಗಳ ಗುಂಪು ಎಷ್ಟೊ ವರ್ಷಗಳಿಂದ ಮಲಗಿ ಮಲಗಿ ಆ ನೆಲ ಕಾಲುದಾರಿಯಂತೆ ಸಂಪೂರ್ಣವಾಗಿ ಸಮೆದಿರುತ್ತದೆ.

ಗೋವುಗಳು ‘ತರುಬುಗುಣಿ’ಯಲ್ಲಿ ವಿಶ್ರಮಿಸಿಕೊಳ್ಳುತ್ತಿರುವಾಗ ಗೋಪಾಲಕರು ತಮ್ಮ ಸಾಂಪ್ರದಾಯಿಕ ಕಾರ್ಯಗಳನ್ನೆಸಗುತ್ತಾರೆ. (ಮಲೆನಾಡಿನ ಅರಣ್ಯಗಳಲ್ಲಿ ಹಣ್ಣು ಹಂಪಲುಗಳಿಗೇನು ಬರಗಾಲವಿಲ್ಲ. ಒಂದು ಋತುವಿನಲ್ಲಿ ಒಂದೊಂದು ಬಗೆಯ ಫಲವಿದ್ದೇ ಇರುತ್ತದೆ. ಹಲಸಿನ ಹಣ್ಣು ಪ್ರಾಮುಖ್ಯವಾದುದು. ಅದು ಸಮೃದ್ಧಿಯಾಗಿ ಬೆಳೆಯುವುದು. ಎಲ್ಲಿ ನೋಡಿದರೂ ಹಲಸಿನಮರಗಳೆ! ಮುಂಗಾರುಮಳೆಗೆ ಸ್ವಲ್ಪ ಮುಂಚೆಯೆ ಹಲಸಿನಫಲ ಪ್ರಾರಂಭವಾಗುತ್ತದೆ. ಅದಕ್ಕಿಂತಲೂ ಮುನ್ನ ಕಲ್ಲುಸಂಪಗೆ ಹಣ್ಣು, ಬೆಮ್ಮಾರಲ ಹಣ್ಣು, ಕಾಡುಮಾವಿನ ಹಣ್ಣು ಇವೇ ಮೊದಲಾದುವು ಸಿಕ್ಕುತ್ತವೆ.) ಒಬ್ಬನು ಮರಹತ್ತಿ ಚೆನ್ನಾಗಿ ಬೆಳೆದ ಅಥವಾ ಹಣ್ಣಾದ ಹಲಸಿನ ಕಾಯನ್ನು ಕೆಡಹುವನು. ಎಲ್ಲರೂ ಸೇರಿ ಮರದ ನೆರಳಿನಲ್ಲಿ ತಮ್ಮ ತಮ್ಮ ಕಂಬಳಿಗಳನ್ನು ಹಸುರಿನ ಮೇಲೆ ಹಾಸಿ ಕುಳಿತುಕೊಳ್ಳುವರು. ಒಡ್ಯಾಣದಲ್ಲಿರುವ ಕತ್ತಿಯಿಂದ ಹಲಸಿನಕಾಯನ್ನು ಕೆತ್ತಿ ಅಥವಾ ಕೊಯ್ದು ಎಲ್ಲರೂ ಸಾವಕಾಶವಾಗಿ ತಿನ್ನುವರು. ತಿಂದಾದ ಮೇಲೆ ಕೊಳಲೂದುವರು.

ಕೊಳಲು ಪ್ರತಿಯೊಬ್ಬ ದನಗಾಹಿಯ ಪರಮಗೆಳೆಯ! ಅದಿಲ್ಲದಿದ್ದರೆ ದನಕಾಯುವ ಪದವಿಗೆ ಗೌರವ ಕಡಮೆ. ಆ ಕಾಡಿನ ಮಧ್ಯೆ ಕೊಳಲಗಾನ ಎಷ್ಟು ಇಂಪಾಗಿ ಕೇಳಿಬರುವುದೆಂದರೆ, ಅದನ್ನು ಆಲಿಸಿದವನಿಗೇ ಗೊತ್ತು!

ನಮ್ಮೂರಿನಲ್ಲಿ ‘ಹಿರಗೆ’ ಎಂಬ ದನ ಕಾಯುವವನಿದ್ದಾನೆ. ಅವನ ನಿಜವಾದ ಹೆಸರು ಹಿರಿಯಣ್ಣ ಎಂದು. ಅದರ ಮೇಲುಜಾತಿಯವರು ಕೀಳು ಜಾತಿಯವರನ್ನು ‘ಹಿರಿಯಣ್ಣ’ ಎಂದು ಕರೆಯಲು ಸಂಕೋಚಪಟ್ಟು ‘ಹಿರಗ’, ‘ಹಿರಗ’, ಎಂದು ಕರೆಯುತ್ತಾರೆ. ಅವನು ದನಕಾಯುವವರಿಗೆಲ್ಲಾ ಮಾದರಿ, ಮಾರ್ಗದರ್ಶಿ. ಅವನ ದಿನಚರ್ಯೆಯೆಲ್ಲಾ ಇತರ ಗೋಪಾಲಕರಂತೆಯೇ. ಅವನೂ ಬೆಳಗ್ಗೆ ಎದ್ದು ದನಗಳನ್ನು ಅಟ್ಟಿಕೊಂಡು ಹೋಗಿ ಸಾಯಂಕಾಲ ಕೊಟ್ಟಿಗೆಗೆ ಹೊಡೆದುಕೊಂಡು ಬರುವನು. ಆದರೆ ಅವನಲ್ಲಿ ಒಂದು ವಿಧವಾದ ಓಜಸ್ಸಿದೆ. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕೊಳಲೂದುವುದರಲ್ಲಿ ಆತನ ಸಮಾನರಿಲ್ಲವೆಂದೇನೋ ಪಕ್ಕದ ಹಳ್ಳಿಗಳಲ್ಲೆಲ್ಲಾ ಪ್ರಸಿದ್ಧಿಯಾಗಿದೆ. ಅದಕ್ಕೆ ನಾನೂ ಒಂದು ಸಾಕ್ಷಿ! ನಾನು ಏಕಾಂಗಿಯಾಗಿ ವನಗಳಲ್ಲಿ ಸಂಚರಿಸುತ್ತಿರುವಾಗ ದೂರದಿಂದ ನಲಿನಲಿದು ಇಂಪಾಗಿ ಮನ ಮೋಹಿಸಿ ಬರುವ ಆತನ ವೆಣುನಾದವನ್ನು ನಿಸ್ಪಂದನಾಗಿ ನಿಂತು ಏಕಾಗ್ರ ಚಿತ್ತದಿಂದ ಎಷ್ಟೋ ಸಾರಿ ಆಲಿಸಿರುವೆನು. ಪಟ್ಟಣಗಳಲ್ಲಿ ಸಂಗೀತಶಾಸ್ತ್ರದಲ್ಲಿ ಕೋವಿದರೆನ್ನಿಸಿಕೊಂಡಿರುವವರು ಹಣ ಸಂಪಾದನೆಗಾಗಿ ನಡೆಯಿಸುವ ಸಂಗೀತಕಛೇರಿಗಳಿಗೆ ರೂಪಾಯಿಗಳನ್ನು ಕೊಟ್ಟು ಹೋಗಿ ಕೊಳಲನ್ನು ಕೇಳಿರುವೆನು! ಆದರೆ ಅವರ ವೇಣುನಾದ ಹಿರಗನ ಕೊಳಲಗಾನದಂತೆ ನನ್ನನ್ನು ಮನಮೋಹಿಸಿಲ್ಲ; ಮೈಮರೆಯಿಸಿಲ್ಲ. ಹೃದಯವನ್ನು ತಳಮಳಗೊಳಿಸಿಲ್ಲ! ಭಾವಪರವಶನನ್ನಾಗಿ ಮಾಡಿಲ್ಲ; ಆನಂದ ಬಾಷ್ಪಗಳನ್ನು ಸುರಿಸಿಲ್ಲ – ಹಿನ್ನೆಲೆಯ ಪ್ರಭಾವವೂ ಕಾರಣವಾಗಿರಬಹುದು ಅದಕ್ಕೆ.

ಹಿರಗನನ್ನು ದೊಡ್ಡವರು ಆದರಿಸುವುದಂತೂ ಇರಲಿ. ಮಕ್ಕಳಿಗೆ ಅವನಲ್ಲಿ ಇಲ್ಲದ ಸಲಿಗೆ. ಬೆಳಗ್ಗೆ ಹಿರಗ ‘ದನಬಿಡ’ಲು ಬಂದನೆಂದರೆ ಸರಿ ಹುಡುಗರೆಲ್ಲ ಅವನನ್ನು ಮುತ್ತಿಕೊಳ್ಳುತ್ತಾರೆ. ಮೇಲುಜಾತಿಯವರು ಕೀಳುಜಾತಿಯವರನ್ನು ಮುಟ್ಟಬಾರದೆಂಬ ನಿಯಮವಿದ್ದರೂ ಹುಡುಗರು ಅದನ್ನು ಉಲ್ಲಂಘಿಸದೆ ಬಿಡುವುದಿಲ್ಲ. ದೇವರ ರಾಜ್ಯದವರಾದ ಮಕ್ಕಳು ಸೈತಾನನ ಅನುಯಾಯಿಗಳಾದ ದೊಡ್ಡವರ ಮತಭೇವನ್ನೇನೆಂದು ಬಲ್ಲರು? ಮಕ್ಕಳಿಗೆ ಪ್ರೇಮವೆ ಜಾತಿಯನ್ನು ನಿರ್ಣಯಿಸುವ ಸಾಧನ. ಯಾರು ಹೆಚ್ಚಾಗಿ ತಮ್ಮನ್ನು ಪ್ರೀತಿಸುತ್ತಾರೆಯೊ ಅವರೆ ಉತ್ತಮ ಜಾತಿಯವರು. ಯಾರು ಹೆಚ್ಚಾಗಿ ತಮ್ಮನ್ನು ಪ್ರೀತಿಸುವುದಿಲ್ಲವೊ ಅವರೆ ಅಧಮಜಾತಿಯವರು! ‘ಹಿರಗ’ನಿಗೂ ಹುಡುಗರನ್ನು ಕಂಡರೆ ಬಲು ಪ್ರೀತಿ. ಅವನು ಯಾವುದಾದರೂ ಒಂದು ಹೊಸ ಕರುವಿಗೆ ನಾಮಕರಣಮಾಡಬೇಕಾದರೆ ಮಕ್ಕಳನ್ನೆ ಕೇಳುತ್ತಾನೆ. ಅವರು ಹೇಳಿದ ಹೆಸರನ್ನೆ ಆ ಕರುವಿಗೆ ಇಡುತ್ತಾನೆ. ಮಕ್ಕಳೂ ಅವನಿಗೆ ಅನೇಕ ಕೆಲಸಗಳನ್ನು ಹಚ್ಚುತ್ತಿದ್ದರು. ಒಬ್ಬನು “ಹಿರಗಾ, ನನಗೊಂದು ಕೊಳಲುಬೇಕು”; ಮತ್ತೊಬ್ಬನು “ನನಗೊಂದು ಬುಗುರಿ”; ಇನ್ನೊಬ್ಬನು “ನನಗೊಂದಿಷ್ಟು ಕಲ್ಲುಸಂಪಗೆಹಣ್ಣು!” ಮಗದೊಬ್ಬನು “ನನಗೊಂದು ಪೆಟ್ಲು” (“ಪೆಟ್ಳು” ಎಂದರೆ ಸುಣ್ಣ ರಂಧ್ರವುಳ್ಳ ಬಿದಿರಿನಿಂದ ಮಾಡಿದ ಒಂದು ಆಟದ ಕೋವಿ. ಸಣ್ಣ ತೂತುಳ್ಳ ಸುಮಾರು ಒಂದಂಗುಲ ದಪ್ಪದ ಬಿದಿರನ್ನುಒಂದು ಗೇಣುದ್ದ ಕಡಿದು ಅದಕ್ಕೊಂದು ‘ಗಜ’ವನ್ನು ಮಾಡುವರು. ಗಜವೆಂದರೆ ಅದೇ ಬಿದಿರಿನ ತುಂಡನ್ನು ಎರಡಂಗುಲ ಕಡಿದು ಅದಕ್ಕೆ ಒಂದು ಗೇಣು ಎರಡಂಗುಲದುದ್ದ, ಬಿದಿರಿನ ರಂಧ್ರದ ಗಾತ್ರವುಳ್ಳ, ಬಲವಾದ ಕಡ್ಡಿಯೊಂದನ್ನು ಜೋಡಿಸುವರು. ಉದ್ದವಾದ ಬಿದಿರಿನ ತೂತಿನಲ್ಲಿ ಒಂದು ಅರಮರಲಕಾಯಿಯನ್ನಾಗಲಿ ಜುಮ್ಮನಕಾಯಿಯನ್ನಾಗಲಿ ಇಟ್ಟು ‘ಗಜ’ದಿಂದ ನೂಕುತ್ತಾರೆ. ಆ ಕಾಯಿ ಬಂದು ಅದರ ಅಗ್ರಭಾಗದಲ್ಲಿ ಗಾಳಿಯಾಡದಂತೆ ಬಿಗಿದುನಿಲ್ಲುತ್ತದೆ. ಹಾಗೆಯೆ ಗಜವನ್ನು ಹಿಂದಕ್ಕೆ ಎಳೆದು ರಂಧ್ರಕ್ಕೆ ಮತ್ತೊಂದು ಬಿಗಿಯಾದ ಕಾಯನ್ನು ಹಾಕಿ ಗಜದಿಂದ ನೂಕಿದರೆ ಒಳಗಿನ ಗಾಳಿಯ ಒತ್ತಡದಿಂದ ಅಗ್ರಭಾಗದ ಕಾಯಿ ಹಾರಿ ‘ಟಾಪ್‌’ ಎಂಬ ದೊಡ್ಡ ಶಬ್ದವಾಗುವುದು. ಈ ಯಂತ್ರಕ್ಕೆ ‘ಪೆಟ್ಳು’ ಎಂದು ಹೆಸರು) ಮತ್ತೊಬ್ಬನು “ಹಿರಗಾ, ಬಿಲ್ಲು ಮರೆತೀಯೊ?”; ಹೆಣ್ಣುಮಕ್ಕಳಾದರೆ “ಹಿರಗಾ, ಸೀತಾಳಿದಂಡೆ ಹೂ ತಗೊಂಡು ಬಾರೊ” “ಕೇದಗೆ ಹೂ ಮರೆಯಬೇಡೊ” – ಹೀಗೆ ಎಲ್ಲರೂ ಒಂದೊಂದು ಕೆಲಸ ಹೇಳುತ್ತಾರೆ. ಅವನಂತೂ ಒಂದಕ್ಕೂ ‘ಇಲ್ಲ’ ಎನ್ನುವುದೇ ಇಲ್ಲ. ಎಲ್ಲದಕ್ಕೂ ‘ಹೂಂ’ ಎನ್ನುವನು. ಅವನ ಕೈಯಲ್ಲಾದ ಮಟ್ಟಿಗೂ ತಂದುಕೊಡುವನು. ಅಂತೂ ಪ್ರತಿದಿನ ಸಾಯಂಕಾಲ ಒಬ್ಬರಲ್ಲ ಒಬ್ಬರಿಂದ ಅವನಿಗೆ ಬೈಗುಳ ತಪ್ಪುವುದಿಲ್ಲ.

‘ಹಿರಗ’ನಿಗೊಂದು ನಾಯಿಯಿದೆ; ಅವನು ಅದರ ಬಾಲ ಕಡಿದಿದ್ದಾನೆ. ಯಾರಾದರೂ ಅದು ಎಂಥಾ ನಾಯಿ ಎಂದರೆ ಹಿರಗ ಸ್ವಲ್ಪವೂ ಸಂಕೋಚ ಪಡದೆ ಧೈರ್ಯವಾಗಿ “ಚೀನಿನಾಯಿ” ಎನ್ನುತ್ತಾನೆ. ನಿಜವಾಗಿಯೂ ಅದೇನೊ ಕಂತ್ರಿನಾಯಿಯೆ. ಅವನು ಮಾತ್ರ ಅದು ಜಾತಿ ನಾಯಿಯೇ ಹೌದೆಂಬ ಹುಸು ನಂಬಿಕೆಯನ್ನಿಟ್ಟುಕೊಂಡಿದ್ದಾನೆ. ಬಾಲ ಕಡಿದ ನಾಯಿಗಳೆಲ್ಲಾ ‘ಚೀನಿನಾಯಿ’ಗಳೇ ಆಗುತ್ತವೆಂದು ಆತನ ಸಿದ್ಧಾಂತ. ಇದು ಅವನೊಬ್ಬನ ನಂಬಿಕೆಯೆ ಅಲ್ಲ. ಹೆಚ್ಚು ಕಡಮೆ ನಮ್ಮೂರು ಮತ್ತು ಅದರ ಸುತ್ತಮುತ್ತಲಿನ ಊರಿನವರ ಅಭಿಪ್ರಾಯವೆಲ್ಲಾ ಹಾಗೆಯೆ ಇದೆ. ಹೀಗಾಗಲು ಒಂದು ಕಾರಣವುಂಟು. ಮೊದಮೊದಲು ಬೆಂಗಳೂರಿನಿಂದ ಜಾತಿ ನಾಯಿಗಳನ್ನು ತಂದಾಗ ಅವುಗಳೊಂದಕ್ಕೂ ಬಾಲವೆ ಇರಲಿಲ್ಲ! ಅಂದರೆ ಬಾಲವೆ ಸ್ವಾಭಾವಿಕವಾಗಿ ಇರಲಿಲ್ಲವೆಂದಲ್ಲ; ಕತ್ತರಿಸಿತ್ತು ಎಂದರ್ಥ! ಹೀಗೆ ಪಟ್ಟಣಗಳಿಂದ ನಾಯಿಗಳನ್ನು ಕೊಂಡುಕೊಂಡು ಬರುವವರೆಲ್ಲ ಬಾಲ ಕಡಿದ ನಾಯಿಗಳನ್ನೆ ವಿಶೇಷವಾಗಿ ತರುತ್ತಿದ್ದುದರಿಂದ ಸಾಮಾನ್ಯ ಜನರಲ್ಲಿ ಬಾಲಕಡಿದ ನಾಯಿಗಳೆಲ್ಲ ಜಾತಿನಾಯಿಗಳಾಗುವುವೆಂಬ ಹುಸಿನಂಬಿಕೆಯುಂಟಾಯಿತು. ಎಲ್ಲರಿಗೂ ‘ಚೀನಿನಾಯಿ’ಗಳನ್ನು ಇಡಬೇಕೆಂಬ ಕುತೂಹಲವುಂಟಾದುದರಿಂದ ನಮ್ಮೂರ ನಾಯಿಬಾಲಗಳಿಗೆ ಕಾಲಬಂದಿತು. ಪ್ರತಿಯೊಬ್ಬರೂ ತಮ್ಮ ತಮ್ಮ ನಾಯಿಗಳ ಬಾಲಗಳನ್ನು ತುಂಡುಮಾಡಲಾರಂಭಿಸಿದರು. ಈ ತಿಳಿಗೇಡಿತನದ ಅಭ್ಯಾಸ ಹರಡಿ ಎಷ್ಟರಮಟ್ಟಿಗೆ ಮುಂದುವರಿಯಿತೆಂದರೆ, ಕೆಲದಿನಗಳಲ್ಲಿ ನಮ್ಮ ಪ್ರಾಂತದಲ್ಲಿ ಬಾಲವಿರುವ ನಾಯಿಯೆಂದರ ಕೌತುಕವಾಗಿಯೂ ಪರಿಣಮಿಸಿತು. ಇದೇನೋ ಹಳ್ಳಿಯ ಬೆಪ್ಪುತನವಾಯಿತು! ಪುರಜನರ ಮರುಳಾದವನ್ನೇನೆಂದು ಹೇಳಬೇಕು? ಮೊದಮೊದಲು ವಿದ್ಯಾವಂತರಾದ ಕೆಲವರು ಪಾಶ್ಚಾತ್ಯರ ಉಡುಪು ತೊಟ್ಟಿದ್ದನ್ನು ಕಂಡು, ಆಮೇಲೆ ಪಾಶ್ಚಾತ್ಯರಂತೆ ಪೋಷಾಕು ಹಾಕಿಕೊಂಡವರೆಲ್ಲ ನಾಗರಿಕರೆಂಬ ಭಾವನೆ ಪಟ್ಟಣಿಗರಲ್ಲಿ ಹುಟ್ಟಿ ಅನರ್ಥಕಾರಿಯಾಗಲಿಲ್ಲವೆ? ಹಾಗೆಯೆ ಹಳ್ಳಿಯವರು ಬಾಲ ಕಡಿದ ನಾಯಿಗಳ ವಿಚಾರವಾಗಿ ಮೋಸಹೋದರು.

ಹಿರಗನ ನಾಯಿಯಂತೂ ಪೂರಾ ಕಂತ್ರಿ! ಬಾಲವಿದ್ದಿದ್ದರಾದರೂ ಸ್ವಲ್ಪ ನೋಡಲು ಲಕ್ಷಣವಾಗಿಯಾದರೂ ಇರುತ್ತಿತ್ತು. ಬಾಲವಿಲ್ಲದೆ ಅದು ನೋಡುವುದಕ್ಕೆ ಅತಿವಿಕಾರವಾಗಿದ್ದಿತು. ಅದರಲ್ಲಿಯೂ ನಮ್ಮೂರಿನವರಿಗೆ ಬಾಲಕಡಿಯುವುದಕ್ಕೆ ಅಳತೆ ಪ್ರಮಾಣಗಳು ಒಂದೂ ಇಲ್ಲ. ಕೆಲವು ನಾಯಿಗಳ ಬಾಲವನ್ನು ನೋಡಿ ನಾನು ಎಷ್ಟೋ ಸಾರಿ ಅಳ್ಳೆ ಹಿಡಿಯುವವರೆಗೂ ನಕ್ಕುಬಿಟ್ಟಿದ್ದೇನೆ. ಕೆಲವು ನಾಯಿಗಳಿಗೆ ಬಾಲವಿತ್ತೆಂದೋ ಗೊತ್ತಾಗುವುದಿಲ್ಲ. ಅಷ್ಟು ಬುಡಕ್ಕೆ ಸರಿಯಾಗಿ ಕಡಿಯುತ್ತಾರೆ. ಕೆಲವು ನಾಯಿಗಳಿಗೆ ಬಾಲ ಕಡಿದಿರುವರೆಂದೇ ತಿಳಿದಿರುವುದಿಲ್ಲ. ಅಷ್ಟು ಸ್ವಲ್ಪವೇ ಕಡಿಯುತ್ತಾರೆ. ಈಚೀಚೆಗೆ ಬಾಲಕಡಿಯುವುದು ತಿಳಿಗೇಡಿತನವೆಂದು ತಿಳದಮೇಲೆ ಕೆಲವು ಅಪಹಾಸ್ಯಕ್ಕೀಡಾಗಲಾರದ ನಿಪುಣರು ತಮ್ಮದೇ ಒಂದು ನೂತನ ಉಪಪತ್ತಿಯನ್ನು ಕೊಟ್ಟು ಒಂದು ನೂತನ ಸಿದ್ಧಾಂತವನ್ನು ಪ್ರಚುರಪಡಿಸಿರುತ್ತಾರೆ. ಅದೇನೆಂದರೆ, ಬಾಲಕಡಿದ ನಾಯಿಗಳು ಚೆನ್ನಾಗಿ ಓಡುವುವಂತೆ, ಬಾಲವಿದ್ದರೆ ಅವುಗಳಿಗೆ ಒಂದು ವಿಧವಾದ ಅಡಚಣೆಯಾಗುವುದಂತೆ. ಇದನ್ನು ಸಾಧಿಸಲಿಕ್ಕೆ ಅವರು ಕೊಡುವ ಉಪಮಾನ ಯಾವುದೆಂದರೆ, ಎತ್ತಿಗೆ ಕಟ್ಟುವ ಲಾಳ! ನಾಯಿಯ ಬಾಲಕ್ಕೂ ಎತ್ತಿನ ಲಾಳಕ್ಕೂ ಇರುವ ಸಂಬಂಧ – ಪ್ರಾಸ ವಿನಾ – ನನ್ನ ಅಲ್ಪ ಬುದ್ಧಿಗೆ ಅತೀತವಾಗಿದೆ!

ಹಿರಗ ಬಾಲ ಕಡಿದು ಚೀನಿಯನ್ನಾಗಿ ಮಾಡಿದ ತನ್ನ ಕಂತ್ರಿನಾಯಿಗೆ ಇಂಗ್ಲೀಷು ಹೆಸರಿಡಬೇಕೆಂದು ಯಾರನ್ನೋ ಕೇಳಿದನಂತೆ. ಅದಕ್ಕೆ ಅವರು ‘ರಾಸ್ಕಲ್’ (Rasca) ಎಂದು ಹೆಸರಿಡು ಎಂದರಂತೆ. ಈಗ ಆ ಹೆಸರು ಯಾವ ಯಾವ ಅವಸ್ಥೆಗಳನ್ನೆಲ್ಲಾ ದಾಟಿ ‘ರಾಸಿಕಲ್ಲು’ ಎಂದಾಗಿದೆ. ಮುಂದೆ ಅದರ ಪರಿಣಾಮವೇನಾಗುವುದೊ ಬಲ್ಲವರಾರು? ನಾಯಿ ಸಾಕಿದ ಪ್ರತಿಯೊಬ್ಬರಿಗೂ ಇಂಗ್ಲೀಷು ಹೆಸರಿನ ಹುಚ್ಚು. ನಿರಕ್ಷ ಕುಕ್ಷಿ ಕೂಡ ತನ್ನ ನಾಯಿಗಳಿಗೆ ‘ಟೈಗರ್’ ‘ಡೈಮಂಡ್’ ‘ನೆಟ್ಲ್‌’ ‘ರುಬೀ’ ‘ರೋಸ್’ ಎಂದು ಹೆಸರಿಡುತ್ತಾನೆ. ‘ಹಂಡ’ ‘ಕೆಂಪ’ ಮೊದಲಾದ ಹಳ್ಳಿಯ ಹೆಸರುಗಳು ಯಾರ ಮನಸ್ಸಿಗೂ ಬರುವುದಿಲ್ಲ. ಈ ತೆರದ ಹುಚ್ಚಿಗೆ ಆಸ್ಪತ್ರೆಯಾದರೂ ಇರುವುದೆಲ್ಲಿ?

ಹಿರಗ ದನಕಾಯಲು ಹೋಗುತ್ತಾ ಈ ನಾಯಿಯನ್ನು ಸಂಗಡ ಕರೆದುಕೊಂಡು ಹೋಗುವನು. ಅದು ಯಾವಾಗಲೂ ಅವನನ್ನು ಕಾಡಿನಲ್ಲಿಯೆ ಬಿಟ್ಟು ಮನೆಗೆ ಪರಾರಿಯಾಗುವುದಿಲ್ಲ. ಕಂತ್ರಿನಾಯಿಯಾದರೂ ಚುರುಕಾಗಿದೆ. ಕೆಲವರಿಗೆ ನಾಡನಾಯಿಗಳೆಂದರೆ ಬಹು ಅಲಕ್ಷ, ತಿರಸ್ಕಾರ! ದುಡ್ಡು ಕೊಟ್ಟು ಬಂದ ಚೀನಿ ನಾಯಿಗಳೆಂದರೆ ಅತ್ಯಾದರ! ಇದೊಂದು ಮೂರ್ಖತನದ ದುರಾಗ್ರಹ! ಪಟ್ಟಣಗಳಿಂದ ತಂದ ಕೆಲಸಕ್ಕೆ ಬಾರದ ಚಂದದ ಜಾತಿನಾಯಿಗಳನ್ನು ಎಷ್ಟೋ ನೋಡಿದ್ದೇನೆ. ಕಾಡೆಂದರೆ ಅವುಗಳಿಗೆ ಪುರಜನರಿಗಿರುವಂತೆಯೆ ಮಹಾಭಯ. ಬಂದೂಕಿನ ಶಬ್ದವೆಂದರೆ ಅವಕ್ಕೆ ಜೀವವೆ ಹಾರುವುದು! ಪ್ರಾಣ ನೆತ್ತಿಗೇರುವುದು! ನಾಡನಾಯಿಗಳಾದರೊ ಕಾಡಿಗೆ ಸ್ವಲ್ಪವೂ ಭಯಪಡುವುದಿಲ್ಲ. ಕೋವಿಯ ಗುಂಡು ಹಾರಿದಲ್ಲಿಗೆ ಹೋಗಿ ಹಾಜರಾಗುತ್ತವೆ. ಆದರೂ ಅವುಗಳನ್ನು ಅಲ್ಲಗಳೆಯುವುದು ಮುಖನೋಡಿ ಮಣೆಕೊಡುವಂತೆ ಶುದ್ಧ ಮೂರ್ಖತನ! ಜಾತಿನಾಯಿಗಳ ಡೌಲಿಗೆ ನಾವೇಕೆ ಮೋಹಪಡಬೇಕು? ಅವು ಪುರದ ರಾಜಬೀದಿಗಳಲ್ಲಿ ಸಾಯಂಕಾಲ ಸಂಚಾರ ಹೊರಡುವ ಸೊಗಸುಗಾರ ಪುಟ್ಟಸ್ವಾಮಿಗಳ ಸಂಗಡ ಬೀದಿಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುತ್ತಾ ಹೆಣ್ಣು ನಾಯಿಗಳನ್ನು (ಒಡೆಯನ ಗುಣವೆ ಅಳಿಗೂ ಅಲ್ಲವೆ?) ಗೊತ್ತು ಹಚ್ಚುತ್ತಾ ಅಡ್ಡಾಡಲು ಅರ್ಹವಾದುವೆ ಹೊರತು, ಮಲೆನಾಡಿನ ಘೋರಾರಣ್ಯಗಳಲ್ಲಿರುವ ಉಗ್ರ ಜಂತುಗಳನ್ನು ಬೇಟೆಯಾಡಬಲ್ಲುವೆ? ಇರಲಿ; ನಾಡನಾಯಿಗಳೇನು ನೋಡುವುದಕ್ಕೆ ಅಂದವಾಗಿರುವುದಿಲ್ಲವೆ? ಕೆಲವಂತೂ ಜಾತಿನಾಯಿಗಳನ್ನು ರೂಪದಲ್ಲಿ ಮೀರಿಸುತ್ತವೆ. ಹಾಗೆಂದ ಮೇಲೆ ಜಾತಿನಾಯಿಗಳ ಗುಣಪ್ರಶಂಸೆ ದುರಾಗ್ರಹಜನಿತವಾದುದೆಂದೇ ಹೇಳಬೇಕು.

ಹಿರಗನ ನಾಯಿ ತುಂಬಾ ಧೈರ್ಯಶಾಲಿ. ಅವನೇ ಅದರ ಸಾಹಸ ಕೃತ್ಯಗಳನ್ನು ವರ್ಣಿಸುವನು. ನನಗೂ ಒಂದು ದಿನ ಅದರ ವಿಚಾರ ಹೇಳಿದನು. ನನಗೇನೋ ಅವನ ವರ್ಣನೆಯಲ್ಲಿ ಉತ್ಪೇಕ್ಷೆಯಿದೆಯೆಂದು ಗೊತ್ತಾದರೂ ಅವನ ಮನಸ್ಸು ನೋಯಿಸಬಾರದೆಂದು ನಾನೂ ಅವನ ನಾಯಿಯನ್ನು ಮತ್ತಷ್ಟು ಹೊಗಳಿದೆ! ಅವನೂ ಪಕ್ಕದಲ್ಲಿಯೆ ನಿಂತಿದ್ದ ತನ್ನ ಮೋಟು ಬಾಲದ ‘ಚೀನಿ’ಯನ್ನು ತಲೆತಟ್ಟಿ ಮುದ್ದಿಸಿದನು.

ಇದುವರೆಗೆ ಹೇಳಿದುದನ್ನೆಲ್ಲಾ ಆಲಿಸಿದ ವಾಚಕ ಮಹಾಶಯನು ಗೋಪಾಲಕರ ಜೀವನ ಅತಿಸುಖಕರವಾದುದೆಂದು ಊಹಿಸಿರಬಹುದು. ಜೀವನದ ಎಲ್ಲಾ ಮಾರ್ಗಗಳಲ್ಲಿಯೂ ಹಳ್ಳ ದಿಣ್ಣೆ ಕಲ್ಲು ಮುಳ್ಳುಗಳಿರುವಂತೆ ಗೋಪಾಲಕರ ಜೀವನದಲ್ಲಿಯೂ ಇದೆ. ಇದುವರೆಗೆ ಅವರ ಬಾಲಿನ ಶುಕ್ಲಪಕ್ಷವನ್ನು ನೋಡಿದೆವು. ಇನ್ನು ಕೃಷ್ಣಪಕ್ಷವನ್ನು ಸ್ವಲ್ಪ ನೋಡೋಣ! ಮಾದರಿ ಗೋಪಾಲಕನಾದ ಹಿರಗನ ಜೀವನವನ್ನೇ ತೆಗೆದುಕೊಂಡರೆ ಸಕಲವೂ ವಿಶದವಾಗುತ್ತದೆ.

ಹಿರಗನ ಜೀವನ ತುಂಬಾ ಉದ್ವೇಗಪೂರ್ಣವಾದುದು. ಏಕೆಂದರೆ ಊರಿನವರ ನಿಂದೆ ಅವನಿಗೆ ತಪ್ಪುವುದೇ ಇಲ್ಲ. ತುಂಟದನಗಳು ಹಿಂಡಿನಿಂದ ತಪ್ಪಿಸಿಕೊಂಡು ಹೋಗಿ ಯಾರ ಗದ್ದೆತೋಟಗಳಿಗಾದರೂ ನುಗ್ಗಿ ಲೂಟಿ ಮಾಡುವುವು. ಅಂಥ ಪೋಲಿಜಾನುವಾರುಗಳನ್ನು ಕೊಟ್ಟಿಗೆಗೆ ಅಟ್ಟಿಕೊಂಡು ಬರುವುದು, ಭೀಮ ಪುರಷಾಮೃಗವನ್ನು ತಂದುದಕ್ಕಿಂತಲೂ ಹೆಚ್ಚಾದ ಸಾಹಸಕೃತ್ಯ! ಎಷ್ಟೋ ಸಾರಿ ಅಟ್ಟಿಅಟ್ಟಿ ಸೋತು ಹಿರಗ ಮಕ್ಕಳಂತೆ ಅತ್ತುಬಿಟ್ಟಿದ್ದಾನೆ. ಅದರಲ್ಲಿಯೂ ಮಳೆಗಾಲವಾದರಂತೂ ದನ ಕಾಯುವವರ ಗೋಳು ಕೇಳುವವರೇ ಇಲ್ಲ. ಹೀಗೆ ತಪ್ಪು ಮಾಡಿದ ದನಗಳಿಗೆ ಗೋಪಾಲಕರ ಕಾನೂನಿನಂತೆ ತಪ್ಪಿಗೆ ತಕ್ಕ ಶಿಕ್ಷೆಯಿರುವುದು. ತುಂಬ ತುಂಟದನವಾದರೆ ಅದರ ಕೊರಳಿಗೂ ಮುಂಗಾಲಿಗೂ ಒಟ್ಟು ಒಂದು ಒಂದೂವರೆ ಮೊಳದುದ್ದ ನೇಣನ್ನು ಬಿಗಿದು ಕಟ್ಟುವರು. ಹೀಗೆ ಮಾಡುವುದರಿಂದ ಅದಕ್ಕೆ ಚುರುಕಾಗಿ ಓಡಲು ಆಗುವುದೆ ಇಲ್ಲ. ಕೊರಳನ್ನು ಯಾವಾಗಲೂ ಬಗ್ಗಿಸಿಕೊಂಡೆ ಇರಬೇಕಾಗುವುದು. ಅದಕ್ಕಿಂತಲೂ ಸ್ವಲ್ಪ ಕಡಮೆ ತುಂಟದನಕ್ಕೆ ಕುಂಟೆ ಕಟ್ಟುವರು: ಒಂದು ನಾಲ್ಕೈದು ಅಡಿ ಉದ್ದವಾದ ಸುಮಾರು ಒಂಬತ್ತು ಅಂಗುಲ ಅಡ್ಡಳತೆಯುಳ್ಳ ಬಲು ಭಾರವಾದ ಮರದ ಕೊರಡೊಂದನ್ನು ಹುರಿಯ ಮೂಲಕ ಕುತ್ತಿಗೆಗೆ ಕಟ್ಟುವರು. ಕೊರಡಿನ ಒಂದು ತುದಿ ಸದಾ ನೆಲದ ಮೇಲೆ ಎಳೆಯುತ್ತಿರುತ್ತದೆ. ಇನ್ನೂ ಸ್ವಲ್ಪ ಸಾಧುವಾದ ದನಕ್ಕೆ ದೊಂಟೆ ಕಟ್ಟುವರು. (ದೊಂಟೆಯೆಂದರೆ ಬಿದಿರಿನಗಂಟೆ) ಆ ದೊಂಟೆ ಅದು ಹೋದೆಡೆಯೆಲ್ಲಾ ಶಬ್ದಮಾಡುತ್ತಾ ಹೋಗುವುದು. ಆ ಶಬ್ದ ಸಹಾಯದಿಂದ ಗೋಪಾಲಕರು ದನವನ್ನು ಕಂಡು ಹಿಡಿಯುವರು. ಆ ಶಿಕ್ಷೆಗಳು ಕ್ರೂರವಾದುವುಗಳೆಂದು ತೋರಬಹುದು. ನನಗೂ ಹಾಗೆಯೆ ತೋರಿ ಹಿರಗನಿಗೆ ಹೇಳಿದೆ; ಅವನೂ ಪಶ್ಚಾತ್ತಾಪಪಟ್ಟು ಬೇರೆ ದಾರಿ ತೋರಿಸುವಂತೆ ಕೇಳಿದನು. ಬೇರೆ ದಾರಿಯೆ ನನಗೆ ಬಗೆಹರಿಯಲಿಲ್ಲ. ರಾಜಕಾರ್ಯದಲ್ಲಿ ಕೆಲವು ಶಿಕ್ಷೆಗಳು ಕ್ರೂರವೆಂದು ತಿಳಿದರೂ ಬೇರೆ ಉಪಾಯವಿಲ್ಲದೆ ಅವುಗಳನ್ನೆ ಪ್ರಯೋಗಿಸುವಂತೆ ಹಿರಗನೂ ಸಂಪ್ರದಾಯವನ್ನೆ ಅನುಸರಿಸುತ್ತಿದ್ದಾನೆ.

ಮಲೆನಾಡಿನ ಮಳೆ ಜಿರ್ರೆಂದು ಸುರಿಯುವ ದಿನಗಳಲ್ಲಿ ದನಕಾಯುವವರ ಗತಿ ನಿರ್ಗತಿ! ಅವರು ಕಂಬಳಿಕೊಪ್ಪೆ ಹಾಕಿಕೊಂಡು ಗುಡ್ಡದಿಂದ ಗುಡ್ಡಕ್ಕೆ ಹೋಗಬೇಕು. ದಿನವೆಲ್ಲಾ ನೀರಿನಲ್ಲಿಯೆ ನಡೆಯಬೇಕು. ಕುಳಿತುಕೊಳ್ಳುವುದೂ ಕೂಡ ಕಷ್ಟವೆ! ಅದರ ಮಧ್ಯೆ ಪತ್ತೆಯಿಲ್ಲದೆ ರಕ್ತಹೀರುವ ಜಿಗಣೆಗಳ ಕಾಟ! ಆ ಭೀಕರವಾದ ಅಡವಿಗಳ ಸೊಳ್ಳೆಗಳ ಕಡಿತ! ಪ್ರಚಂಡ ಮಾರುತನೊಂದು ಕಡೆ ಇಡೀ ಅರಣ್ಯಗಳನ್ನೇ ಅಲ್ಲೋಲಕಲ್ಲೋಲ ಮಾಡುತ್ತ ಆರ್ಭಟಿಸುವನು. ಒಂದು ಕಡೆ ಉಕ್ಕಿಹರಿಯುವ ತೊರೆಗಳ ಭೋರಾಟ. ಪಾಪ! ಇಂಥಾ ಸಮಯದಲ್ಲಿ ಗೋಪಾಲಕರ ಕೊಳಲು ಎಲ್ಲಿ ಅಡಗುವುದೋ ಏನೋ! ಆ ಮಳೆ, ಆ ಚಳಿ, ಆ ಗಾಳಿಯ ಆರ್ಭಟ, ಆ ನೀರಿನ ಭೋರಾಟ ಇವು ಅವರ ಎದೆಯ ಮೇಲೆ ಭಾರವಾಗಿ ಕುಣಿಯುತ್ತವೆ. ಅವರಿಗೆ ಬಟ್ಟೆಯಾದರೂ ಇದೆಯೇ? ಮೊಳಕಾಲವರೆಗಿನ ಕೊಳಕಾದ ಪಂಚೆ, ಹರಕು ಅಂಗಿ, ಇವೆ ಗತಿ! ಇದನ್ನೆಲಾ ಸಹಿಸಿಕೊಂಡು ಅವರು ತಮ್ಮ ಗುಡಿಸಲುಗಳಿಗೆ ಚಗಟೆಗಿಡ ಬಾಗಿಲುಮುಚ್ಚುವ ಹೊತ್ತಿಗೆ (ಸೂರ್ಯನು ಮುಳುಗಿದ ಕೂಡಲೆ ಚಗಟೆಗಿಡದ ಎಲೆಗಳು ಮುಚ್ಚಿಕೊಳ್ಳುತ್ತವೆ. ಮಳೆಗಾಲದಲ್ಲಿ ಸೂರ್ಯನನ್ನು ಅಲ್ಲಿ ಕಾಣುವುದೇ ಅಪರೂಪ. ಆದ್ದರಿಂದ ಕೆಲಸಗಾರರು ಹೊತ್ತುಮುಳುಗುವುದನ್ನು ಚಗಟೆ ಗಿಡದ ಎಲೆಗಳು ಮುಚ್ಚುವುದರಿಂದ ತಿಳಿಯುವರು.) ಸರಿಯಾಗಿ ಬಂದು ಒಲೆಯ ಹತ್ತಿರ ಹೋಗಿ ಚಳಿಕಾಯಿಸಿಕೊಳ್ಳುವರು. ಆಗ ಅವರಿಗೆ ಒಲೆಯ ಬೆಂಕಿಯೆಂದರೆ ಸ್ವರ್ಗಸದೃಶ! ಇಷ್ಟಾದರೂ ಅವರಿಗೆ ಸುಖವುಂಟೋ? ದಿನ ಬೆಳಗಾಯಿತೆಂದರೆ ಹುಲಿಗಳ ಹಾವಳಿ. ಇಂದೇನು? ‘ಕಾಳಿ’ ದನ ಇಲ್ಲ! ಇಂದೇನು ಗಂಗೆ ಕರು ಇಲ್ಲ! ಹುಡುಕುವವರಾರು? ಗೋಪಾಲಕರೇ! ಸರಿ; ಹುಡುಕಿ ಹುಡುಕಿ ಎಲ್ಲಿಯಾದರೂ ಹುಲಿಹಿಡಿದ ಸ್ಥಳವನ್ನು ಕಂಡುಹಿಡಿದು ಉಸ್ಸೆಂದು ಹಿಂತಿರುಗಿ ಬಂದು ಒಡೆಯರಿಗೆ ಹೇಳುವರು. ಸರಿ, ತಿಳಿಸುವುದೇ ತಡ, ಬೈಗುಳದ ಮಳೆಯೇ ಅವರ ಮೈಮೇಲೆ ಸುರಿಯುವುದು. ಅವರಂತೂ ಬೈಸಿಕೊಂಡು ಮೊಂಡರಾಗಿ ಹೋಗಿದ್ದಾರೆ. ಇದೀಗ ಗೋಪಾಲಕರ ಬಾಳಿನ ಕೃಷ್ಣಪಕ್ಷದ ಚಿತ್ರ! ಅವರ ಬಾಳಿನ ಕೃಷ್ಣಪಕ್ಷ ಶುಕ್ಲಪಕ್ಷಕ್ಕೇನೂ ಕಡಮೆಯಾಗುವುದಿಲ್ಲ!

ಇನ್ನೊಂದು ಸತ್ಯಾಂಶವಿದೆ. ಅದನ್ನು ಹೇಳಲಿಷ್ಟವಿಲ್ಲದಿದ್ದರೂ ಹೇಳಬೇಕಾಗಿದೆ. ಊರಿದ್ದಲ್ಲಿ ಹೊಲಗೇರಿ ಎಂಬಂತೆ ಇವರಲ್ಲಿಯೂ ಠಕ್ಕರೂ ಮೋಸಗಾರರೂ ಅಪರೂಪವಾಗಿಯಾದರೂ ಇದ್ದಾರೆ. ಕೆಲವರು ಕಾಲ್ನಡೆಗಳು ಕಳೆದು ಹೋದರೆ ತಿಳಿಸುವುದೇ ಇಲ್ಲ. ಒಂದು ದಿನ ಒಬ್ಬ ದುಷ್ಟನಾದ ದನಗಾಹಿಯ ಸಂಗತಿಯನ್ನು ಕೇಳಿ ತುಂಬಾ ವಿಷಾದಪಟ್ಟೆ. ಅವನು ಕಾಡಿನಲ್ಲಿ ಒಂದೆರಡು ಎಕಿರೆ ಜಾಗಕ್ಕೆ ಮುಳ್ಳಿನ ಬಲವಾದ ಒಡ್ಡನ್ನು ಹಾಕಿ ಒಂದು ಸ್ವಂತ ದೊಡ್ಡಿಯನ್ನು ಮಾಡಿಟ್ಟುಕೊಂಡಿದ್ದನಂತೆ. ಕೊಟ್ಟಿಗೆಯಿಂದ ಹಸಿದ ಜಾನುವಾರುಗಳನ್ನು ಅವನು ನೆಟ್ಟಗೆ ಆ ಅರಣ್ಯದ ದೊಡ್ಡಿಗೆ ಅಟ್ಟಿಕೊಂಡು ಹೋಗಿ ಅಲ್ಲಿ ಕೂಡಿಹಾಕಿ ತನ್ನ ಕೆಲಸದ ಮೇಲೆ ಹೋಗುತ್ತಿದ್ದು, ಸಾಯಂಕಾಲಕ್ಕೆ ಸರಿಯಾಗಿ ಅಲ್ಲಿಂದ ಮನೆಗೆ ಅಟ್ಟಿಕೊಂಡು ಬರುತ್ತಿದ್ದನಂತೆ. ಪಾಪ! ಬಾಯಿಲ್ಲದೆ ಆ ಪ್ರಾಣಿಗಳು ಹಸಿವೆಯಿಂದ ‘ಅಂಬಾ! ಅಂಬಾ’ ಎಂದು ಕೂಗುಕೊಳ್ಳುತ್ತಿದ್ದರೆ ಇವನು ಅವುಗಳನ್ನು ಗದರಿಸಿ ಹೊಡೆಯುತ್ತಿದ್ದನಂತೆ. ದನಗಳೆಲ್ಲಾ ದಿನದಿನಕ್ಕೂ ಬತ್ತಿ ಬಡವಾಗುತ್ತಿದ್ದುದನ್ನು ನೋಡಿ ಮನೆಯ ಯಜಮಾನ ಒಂದು ದಿನ ಗೋಪಾಲಕನನ್ನು ಗುಟ್ಟಾಗಿ ಹಿಂಬಾಲಿಸಿದನಂತೆ. ಆಗ ಎಲ್ಲಾ ರಹಸ್ಯವೂ ಗೊತ್ತಾಗಿ ದನ ಕಾಯುವವನನ್ನು ಚೆನ್ನಾಗಿ ಹೊಡೆದು ಅಟ್ಟಿದನಂತೆ. ಹೀಗೆಯೆ ಗೋಪಾಲಕರಲ್ಲಿಯೂ ಕೂಡ ತೈಮೂರರು ಸಿಕ್ಕಿಯೇ ಸಿಕ್ಕುವರು.

ದನಕಾಯುವವರ ಜೀವನ ಏಕದೇಶೀಯವಾಗಿಲ್ಲ. ಪ್ರಪಂಚದ ಇತರ ಜೀವಗಳಂತೆ ಅವರ ಜೀವನವೂ ಸುಖದುಃಖಮಿಶ್ರವಾದುದಾಗಿದೆ. ಬಹು ಶಾಖೆಯುಳ್ಳದ್ದಾಗಿದೆ. ಅವರೂ ಒಳ್ಳೆಯವರಾಗಿರಬಹುದು; ಕೆಟ್ಟವರಾಗಿರಬಹುದು! ಮಹಾತ್ಮರಾಗಿರಬಹುದು; ಹೀನಾತ್ಮರಾಗಿರಬಹುದು! ಅವರ ಜೀವನ ತನ್ನದೇ ಒಂದು ಪ್ರಪಂಚವನ್ನು ಕಲ್ಪಿಸಿಕೊಂಡಿದೆ. ಜೀವನದ ಮಹಾಮಾರ್ಗಗಳಲ್ಲಿ ಅವರ ಮಾರ್ಗವೂ ಒಂದು. ಜಗತ್ತಿನ ಮಹಾಪದವಿಗಳಲ್ಲಿ ಅವರ ಪದವಿಯೂ ಒಂದು!

 ಮುಂದಿನ ಭಾಗ : http://kannadadeevige.blogspot.com/p/blog-page_87.html   ಜೇನು ಬೇಟೆ
************



ಮಲೆನಾಡಿನ ಚಿತ್ರಗಳು : ಅಣ್ಣಪ್ಪನ ರೇಷ್ಮೆ ಕಾಯಿಲೆ

ಅಣ್ಣಪ್ಪನ ರೇಷ್ಮೆ ಕಾಯಿಲೆ
ಬೇಸಗೆಯ ನಡುಹಗಲು. ಬಿಸಿಯ ಬಿಸಿಲು ಹಸುರು ಮಲೆಗಳ ಮೇಲೆ ಹುಲುಸಾಗಿ ಮಲಗಿತ್ತು. ಹೆಗ್ಗೋಟೆಯ ಹೆಗ್ಗೋಡೆಗಳಂತೆ ಸುತ್ತಲೂ ಎತ್ತರವಾಗಿ ಎದ್ದ ಗಿರಿಗಳಿಂದ ಸಂಕುಚಿತವಾದಂತೆ ತೋರುತ್ತಿದ್ದ ತಿಳಿಯಾಳದ ಬಾನಿನಲ್ಲಿ ಬೂರುಗದರಳೆಯಂತಿದ್ದ ತುಂಡುಮೋಡಗಳು ಸೋಮಾರಿಯ ಮೆದುಳಿನಲ್ಲಿ ಅಲೆದಾಡುವ ಕನಸುಗಳಂತೆ ತೇಲುತ್ತಿದ್ದುವು. ಹಕ್ಕಿಗಳು ಬಿಸಿಲಿನ ಬೇಗೆಗೆ ಬಸವಳಿದು ಮರಗಳಲ್ಲಿ ಮರೆಯಾಗಿ ಕನವರಿಸುವುವೋ ಎಂಬಂತೆ ಕಿಚಿಮಿಚಿ ಮಾಡುತ್ತಿದ್ದುವು. ಎಲ್ಲಿಯೋ ಒಂದು ಮರಕುಟಿಗನ ಹಕ್ಕಿ ಮಾತ್ರ ಅಡವಿಯ ಬಡಗಿಯಂತೆ ಕೊಟ್‌ಕೊಟ್ ಸದ್ದು ಮಾಡುತ್ತಿತ್ತು. ನಾನು ಊಟ ಮುಗಿಸಿಕೊಂಡು ನಮ್ಮ ಮನೆಯ ಉಪ್ಪರಿಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹವಣಿಸುತ್ತಿದ್ದೆ. ಗಿ – ನನ್ನೊಡನೆ ಇದ್ದರು. ಅಷ್ಟರಲ್ಲಿ ಮಾಯ ಓಡಿಬಂದು ಕಣ್ಣಿನಲ್ಲಿ ನೀರು ಸುರಿಸುತ್ತ “ಅಣ್ಣಪ್ಪನಿಗೆ ಕಾಯಿಲೆ ಜೋರಾಗಿದೆ, ಉಳಿಯುವಂತಿಲ್ಲ. ನಿಮ್ಮನ್ನು ಬರಹೇಳಿದ” ಎಂದನು. ನಾನು, ಗಿ – ಇಬ್ಬರೂ ಉದ್ವೇಗದಿಂದ ಎದ್ದೆವು. ಪ್ರಕೃತಿ ಮಾತ್ರ ನಿಶ್ಚಿಂತ ಉದಾಸೀನವಾಗಿತ್ತು.

ಮಾಯ ಅಣ್ಣಪ್ಪನ ತಮ್ಮ. ಅಣ್ಣಪ್ಪ ನಮ್ಮ ಒಕ್ಕಲು. ಬಹಳ ವಿನೋದಶೀಲ ಅವನದು. ಸತ್ಯವಂತ, ಪ್ರಾಮಾಣಿಕ. ನಮ್ಮ ಹಿರಿಯರ ಕಾಲದಿಂದಲೂ ನಮ್ಮ ಗದ್ದೆಮಾಡಿಕೊಂಡು ಗುತ್ತಿಗೆಯನ್ನು ಸಲ್ಲಿಸುತ್ತ ಯೋಗ್ಯನಾಗಿದ್ದ ಮನುಷ್ಯ. ಅವನದು ಯಾವಾಗಲೂ ನಗುಮುಖ. ಸಾಮಾನ್ಯವಾಗಿ ಬಡವರಲ್ಲಿ, ಅದರಲ್ಲಿಯೂ ಮಲೆನಾಡಿನ ಸಾಹುಕಾರರ ಗಾಣಕ್ಕೆ ಸಿಕ್ಕಿಬದ್ದಿರುವ ಬಡವರಲ್ಲಿ ಸುಲಭವಲ್ಲದ ನಗುಮುಖ. ನನಗಿನ್ನೂ ನೆನಪಿದೆ. ಅವನೊಂದು ದಿನ ಏನನ್ನೋ ಕಡೆಯುವ ಕೆಲಸದಲ್ಲಿದ್ದ, ಅವನಿಗ ಸಹಾಯವಾಗಿದ್ದವನು ಒಬ್ಬ ಚಿಕ್ಕ ಹುಡುಗ. ಬಹಳಹೊತ್ತು ಕೆಲಸ ಮಾಡಬೇಕಾದ್ದರಿಂದ ಹುಡುಗನ ಉತ್ಸಾಹ ಬತ್ತುವ ಸ್ಥಿತಿಗೆ ಬರಲು, ಅಣ್ಣಪ್ಪ ಕತೆ ಹೇಳಲು ತೊಡಗಿದ. ಹುಡುಗನ ಕೈ ಚುರುಕಾಯಿತು. ನಾನು ಮರೆಯಲ್ಲಿದ್ದು ಆ ಕತೆಯನ್ನು ಆಲಿಸಿ ಬಹಳ ನಕ್ಕು ಬಿಟ್ಟೆ. ಆ ಕಥೆ ಮತ್ತಿಂತೆಂದೊಡೆ –

ಒಂದೂರಿನಲ್ಲಿ ಒಬ್ಬನು ರಾತ್ರಿ ಮಲಗಿದ್ದಾಗ ಒಂದು ಓಡುಹುಳು ಅವನ ಕಿವಿಯೊಳಗೆ ನುಗ್ಗಿತಂತೆ. ಅದು ಕಿವಿಯನ್ನು ಕೊರೆದು ಕೊರೆದು ತಲೆಯನ್ನು ಪ್ರವೇಶಿಸಿತು. ಅಲ್ಲಿ ಅದಾಗಲೆ ಗಬ್ಬವಾಗಿದ್ದುದರಿಂದ, ಮರಿಹಾಕಿ, ಸಂಸಾರ ಹೂಡಿತು. ತಾಯಿ ಮರಿಗಳಿಗೆ ಅವನ ಮೆದುಳೇ ಆಹಾರವಾಯಿತು. ಹೀಗೆ ಆ ಮರಿಗಳು ತಲೆಯ ತಿರುಳನ್ನು ತಿಂದು ತಿಂದು ಕಡೆಗೆ ಬರಿಯ ತಲೆಯೋಡು ಮಾತ್ರ ಉಳಿಯಿತು. ಆದರೂ ಆ ಮನುಷ್ಯ ಎಂದಿನಂತೆ ಕೆಲಸ ಮಾಡುತ್ತಿದ್ದನಂತೆ. ಒಂದು ದಿನ ಒಬ್ಬ ಪೊಲೀಸಿನವನು ಅಲ್ಲಿಗೆ ಬಂದು ಅವನನ್ನು ಕೂಗಿದನಂತೆ. ಆ ಮನುಷ್ಯ ಏನೋ ಕೆಲಸದ ಮೇಲಿದ್ದುದರಿಂದ ಬೇಗನೆ ಬರಲಾಗಲಿಲ್ಲ. ಪೊಲೀಸು ಮಹಾಶಯನಿಗೆ ಕೋಪಬಂದು ಗಟ್ಟಿಯಾಗಿ ರೇಗಿ ಕೂಗಲು ಆ ಮನುಷ್ಯ ಭೀತಿಯಿಂದ ಹೊರಗೆ ಬಂದನಂತೆ. ಅವನು ಹೊರಗೆ ಬರಲು ಪೊಲೀಸಿನವನು “ಏನೋ! ಏಕೆ ಬರಲಿಲ್ಲವೋ ನಾನು ಕರೆದ ಕೂಡಲೆ?” ಎಂದು ಕೆನ್ನೆಗೆ ಬಲವಾಗಿ ಹೊಡೆದನಂತೆ. ಹೊಡೆಯಲು, ತಿರುಳಿಲ್ಲದ ಕರಟದಂತಿದ್ದ ಆ ತಲೆಬುರುಡೆ ದೇಹದ ಮೇಲಿಂದ ಉರುಳಿಬಿದ್ದು ಒಡೆದೇ ಹೋಯಿತಂತೆ!

ಈ ಕತೆಯನ್ನು ಕೇಳುತ್ತಿದ್ದ ಹುಡುಗ ಬಿಲ್ಲುಂಬೆರಗಾಗಿ ಬಾಯಿ ತೆರೆದು ಕಣ್ಣರಳಿಸಿ ಅಣ್ಣಪ್ಪನ ಮುಖವನ್ನೇ ನೋಡುತ್ತಿದ್ದ. ಸ್ವಲ್ಪ ಹೊತ್ತಾದ ಮೇಲೆ ಆ ಹುಡುಗ “ನಿಜವಾಗಿಯೂ ನಡೆದುದು ಹೌದೇನೊ, ಅಣ್ಣಪ್ಪಾ?” ಎಂದ. ಅಣ್ಣಪ್ಪ ತಾನೇ ಈ ಕೇಸು ವಿಚಾರಣೆಯಾದಾಗ ಸಾಕ್ಷಿ ಹೇಳಿದ್ದೆ ಎಂದನು. ಹುಡುಗ ಸುಮ್ಮನಾದ. ನಾನು ನಗುತ್ತ ಹೊರಟುಹೋದೆ. ಅಣ್ಣಪ್ಪ ಕತೆಗಾರ ಹೌದೋ ಅಲ್ಲವೋ ತಿಳಿಯದು ನನಗೆ; ನಗೆಗಾರನೆಂಬುದೇನೋ ನಿರ್ವಿವಾದವಾದುದು.

ಅಣ್ಣಪ್ಪನ ಗುಡಿಸಲಿಗೂ ನಮ್ಮ ಮನೆಗೂ ಸುಮಾರು ನಾಲ್ಕು ಫರ್ಲಾಂಗುಗಳು ದೂರವಿರಬಹುದು. ನಾನು, ಗಿ – ಆ ಉರಿಬಿಸಿಲಲ್ಲಿ ಹೊರಟೆವು. ನಮ್ಮ ಕೂಡೆ ಮಾಯನೂ ಖಿನ್ನವದನನಾಗಿ ಬರುತ್ತಿದ್ದನು. ಅವನೊಡನೆ ಕಾಯಿಲೆಯ ವಿವರಣೆ ಏನೆಂದು ಕೇಳಿದೆವು.

“ಎರಡು ವಾರದಿಂದ ನೆಲಹಿಡಿದಿದ್ದಾನೆ. ಎಲುಬು ಚರ್ಮ ಎರಡೆ ಇದೆ. ಆಗಾಗ ಬಾಯಲ್ಲಿ ರಕ್ತಕಾರುತ್ತಾನೆ. ಮೇಲುಸಿರೆಳೆಯುತ್ತಿದ್ದಾನೆ” ಎಂದು ವ್ಯಸನಸೂಚಕವಾದ ಸ್ವರದಿಂದ ಹೇಳಿದ.

“ಔಷಧಿ ಏನು ಮಾಡಿದಿರಿ?”

“ಚೌಡಿಯ ಕಾಟ ಎಂದರು. ಭಟ್ಟರ ಹತ್ತಿರ ನಿಮಿತ್ತ ಕೇಳಿಸಿದ್ದಾಯಿತು. ಭಸ್ಮ ಕೊಟ್ಟರು; ಅದನ್ನು ತಿನ್ನಿಸಿದೆವು. ಆಮೇಲೆ ಪಂಜರೊಳ್ಳಿ ದೆವ್ವಕ್ಕೆ ಕೋಳಿ ಕೊಟ್ಟೆವು” ಎಂದು ಪ್ರಾರಂಭಿಸಿದನು. ನನಗೆ ರೇಗಿತು.

“ಔಷಧಿ ಏನು ಮಾಡಿದ್ದೀರಿ”? ಎಂದು ಕೇಳಿದರೆ, ‘ಚೌಡಿ, ಭಟ್ಟ, ಭಸ್ಮ, ಕೋಳಿ!’ – ಅಯ್ಯೋ ಮುಟ್ಟಾಳ! ಕಾಯಿಲೆಗೆ ಭಷಧಿ ಕೊಡಬಾರದೇನೋ” ಎಂದೆ.

“ಔಷಧಿಯನ್ನೂ ಕೊಟ್ಟರು” ಎಂದನು.

“ಯಾರು?” ಎಂದೆ.

“ನೆರೆಮನೆ ಮಂಜಣ್ಣ” ಎಂದನು.

ನನಗೆ ಇನ್ನೂ ಸಿಟ್ಟುಬಂದಿತು. ಮಲೆನಾಡಿನಲ್ಲಿ ‘ನನಗೆ ನಾನೇ ವೈದ್ಯನಾಗಿಬಿಟ್ಟೆ!’ ಎಂದುಕೊಂಡು ಔಷಧಿಕೊಟ್ಟು ಅನೇಕ ರೋಗಿಗಳನ್ನು ವೈಕುಂಠಧಾಮಕ್ಕೆ ಕಳುಹಿಸುವವರು ಬಹಳ ಮಂದಿ ಇದ್ದಾರೆ. ಜನಗಳು ಕಾಯಿಲೆಯಾದರೆ ಮೊದಲು ದೆವ್ವಕ್ಕೆ ಹೇಳಿಕೊಳ್ಳುತ್ತಾರೆ. ಆಮೇಲೆ ಸರ್ವಜ್ಞಮೂರ್ತಿಗಳಾದ ಭಟ್ಟರು, ಶಾಸ್ತ್ರಿಗಳು ಮುಂತಾದವರೊಡನೆ ನಿಮಿತ್ತ ಕೇಳಿಸಿ, ಅವರು ಕೊಟ್ಟ ಬೂದಿಯನ್ನು ಹಚ್ಚುತ್ತಾರೆ ಅಥವಾ ತಿನ್ನಿಸುತ್ತಾರೆ. ತರುವಾಯ ತನಗೆ ತಾನೆ ವೈದ್ಯನಾಗಿಬಿಟ್ಟ ಯವನೋ ಒಬ್ಬನಿಂದ ಏನೋ ಔಷಧಿ ಕೊಡಿಸುತ್ತಾರೆ. ಕಡೆಯಲ್ಲಿ ರೋಗಿ ಅಪರಿಹಾರ್ಯವಾದ ದುರವಸ್ಥೆಗಿಳಿದ ಮೇಲೆ ಆಸ್ಪತ್ರೆಗೆ ಓಡುತ್ತಾರೆ. ಡಾಕ್ಟರು ಏನಾದರೂ ಔಷಧಿ ಕೊಟ್ಟರೆ ಅದನ್ನು ಕುಡಿಸುತ್ತಾ, ತಮಗೆ ತಿಳಿದ ಮದ್ದುಗಳನ್ನೂ ತಿನ್ನಿಸುತ್ತಾ, ದೆವ್ವಭೂತಗಳಿಗೆ ಹರಕೆ ಒಪ್ಪಿಸುತ್ತಾ, ಸಾಕಾದಷ್ಟು ಅಪಥ್ಯಮಾಡುತ್ತಾ, ಅದೃಷ್ಟವಶದಿಂದ ರೋಗಿ ಬದುಕಿದರೆ, ಅದನ್ನು ಭಟ್ಟರ ಭಸ್ಮಕ್ಕೂ ದೆವ್ವದ ಕೃಪೆಗೂ ಆರೋಪಿಸಿ, ರೋಗಿ ಸತ್ತರೆ ಅದನ್ನು ಆಸ್ಪತ್ರೆ ಡಾಕ್ಟರ ಔಷಧಿಗೆ ಆರೋಪಿಸಿ, ತಮ್ಮ ಅನುಭವದ ಜ್ಞಾನಭಂಡಾರವನ್ನು ಇತರರಿಗೂ ಹಂಚುತ್ತಾರೆ. ಹೀಗೆ ಅವಿವೇಕ ನಾಚಿಕೆಮುಳ್ಳಿನಂತೆ ಬೆಳೆಯುತ್ತ ಹೋಗುತ್ತದೆ.

ನಾವು ಅಣ್ಣಪ್ಪನ ಗುಡಿಸಲನ್ನು ಸೇರಿದೆವು. ಕಿರುಜಗಲಿಯ ಕೆಸರುಹಲಗೆಯ ಮೇಲೆ ತೊಗಲು ಅಂಟಿದ ಎಲುಬಿನ ಗೂಡಿನಂತೆ ಅಣ್ಣಪ್ಪ ಮುದ್ದೆಯಾಗಿ ಮುದುರಿಕೊಂಡು ಕೂತಿದ್ದ! ಮೈಮೇಲೆ ಬಟ್ಟೆಯಿಲ್ಲ. ಒಂದು ಚಿಂದಿ ಕಂಬಳಿ ಅವನಿಗೆ ಸ್ವಲ್ಪ ದೂರದಲ್ಲಿ ಮುದುರಿಬಿದ್ದಿತ್ತು. ತಲೆಕೂದಲು ಕೆದರಿ ವಿಕಾರವಾಗಿತ್ತು. ನನ್ನನ್ನು ನೋಡಿದ ಕೂಡಲೆ ಕೈ ಮುಗಿದು ಬಿಕ್ಕಿ ಬಿಕ್ಕಿ ಅಳಲು ತೊಡಗಿದ. ಅವನಿಗೆ ಮಾತಾಡಲು ಉಸಿರೇ ಇರಲಿಲ್ಲ. ನೋಟಿ ಭಯಾನಕವಾಗಿತ್ತು. ನನಗೆ ನಮ್ಮ ದೇಶದ ದಾರಿದ್ರ್ಯವೇ ಮೂರ್ತಿಮತ್ತಾಗಿ ನನ್ನೆದುರು ಬಂದಂತಾಯಿತು. ಹೊಟ್ಟೆಯ ಅಳಲನ್ನು ಹಾಗೆಯೆ ತಿಂದುಕೊಂಡು ಕೆಸರುಹಲಗೆಯ ಮೇಲೆ ಕುಳಿತುಕೊಳ್ಳಲು ಹವಣಿಸುತ್ತಿದ್ದೆ. ಅಷ್ಟರಲ್ಲಿ ಅಣ್ಣಪ್ಪ ಪಾತಾಳ ಧ್ವನಿಯಿಂದ “ಅಯ್ಯಾ, ಮೇಲೆ ಕುಳಿತುಕೊಳ್ಳಿ” ಎಂದು ಅಲ್ಲಿದ್ದ ಒಂದು ಮೊರಡಾದ ಕಾಲುಮಣಿಯನ್ನು ತೋರಿಸಿದ. ನಾನು ಅದರ ಮೇಲೆ ಕುಳಿತುಕೊಂಡೆ. ಸ್ವಲ್ಪಹೊತ್ತು ಮಾತಾಡಲು ಬಾಯೇ ಬರಲಿಲ್ಲ.

ಲೋಕರೂಢಿಯ ದೃಷ್ಟಿಯಿಂದ ಎಷ್ಟೇ ಅಲ್ಪವಾದುದಾಗಲಿ ಎಷ್ಟೇ ಮಹತ್ತಾದುದಾಗಲಿ ಪ್ರತಿಯೊಂದು ವಸ್ತುವನ್ನೂ ಪ್ರತಿಯೊಂದು ಸನ್ನಿವೇಶವನ್ನೂ ವಿರಾಟ್ ದೃಷ್ಟಿಯಿಂದ ನೋಡಲೆಳಸುವುದು ನನಗೊಂದು ಹುಚ್ಚು. ಹಾಗೆ ನೋಡಿದರೆ ಅಲ್ಪತ್ವಮಹತ್ವಗಳೆಲ್ಲ ಮಾಯವಾಗಿ ಸಮತ್ವ ಮೂಡುತ್ತದೆ; ಮ್ಮ ಅಹಂಕಾರವೂ ತಗ್ಗಿ, ಅಣುವಿನಿಂದ ಹಿಡಿದು ಆಕಾಶದವರೆಗೂ, ಅಜ್ಞಾತವಾದ ಇರುವೆಯಿಂದ ಜಗದ್ವಿಖ್ಯಾತನಾದ ಮಹಾತ್ಮನವರೆಗೂ ಎಲ್ಲರೂ ಎಲ್ಲವೂ ಮಹಿಮಾಮಯವಾಗಿ, ಅನಿರ್ವಚನೀಯವಾದ, ಅಪಾರವಾದ ವಿಶ್ವವ್ಯೂಹದಲ್ಲಿ ಸರ್ವಸಮತ್ವದ ಮತ್ತು ಸರ್ವಮಹತ್ವದ ಅನುಭವವುಂಟಾಗಿ, ಹೃದಯದಲ್ಲಿ ನಿಶ್ಚಲತೆಯೂ ಆನಂದವೂ ಶಾಂತಿಯೂ ಮೈದೋರುತ್ತವೆ. ಪ್ರತಿಯೊಂದು ವಸ್ತುವಿನ ಪೂರ್ಣ ಪ್ರಯೋಜನ ವ್ಯಕ್ತವಾಗುವುದು ಅಂತಹ ವಿರಾಟ್ ದೃಷ್ಟಿಯಿಂದಲೆ. ಸೃಷ್ಟಿಯೆಲ್ಲವೂ ಒಂದು ಮಹಾಜಾಲದಂತೆ ಎಂದೂ ಪ್ರತಿಯೊಂದು ವಸ್ತುವೂ ಜಡವಾಗಿರಲಿ ಚೇತನವಾಗಿರಲಿ ಪರಸ್ಪರೋಪಜೀವಿಯೆಂದೂ ಅನೇಕ ಶತಮಾನಗಳ ಹಿಂದೆ ಮೃತ್ಯು ಮುಖಿಯಾಗಿದ್ದ ರಾವಣನ ಆರ್ತನಾದ ನಾಳೆ ಸಾಯಲಿರುವ ನೊಣವೊಂದರ ರೋದನಕ್ಕೂ ನಾಳೆ ಅರಳಲಿರುವ ಕುಸುಮವೊಂದರ ಸೌಂದರ್ಯಕ್ಕೂ ಹೇಗೋ ಸಂಬಂಧಪಟ್ಟಿದೆಯೆಂದೂ ನನ್ನ ದೃಢವಾದ ನಂಬುಗೆ. ಆದ್ದರಿಂದ ಬಣ್ಣ ಬಣ್ಣದ ಸಣ್ಣ ಹಕ್ಕಿಯೊಂದು ಯಾರೂ ಕಾಣದಂತೆ ಮಲೆನಾಡಿನ ಕಾಡಿನ ಒಂದು ಮರದಲ್ಲಿ ಕುಳಿತು ಪ್ರಾತಃಕಾಲದ ಸ್ವರ್ಣೋತ್ಸವದಲ್ಲಿ ಇಂಪಾಗಿ ಗಾನಗೈಯುತ್ತಿದ್ದರೆ ನಾನು ಆ ಸನ್ನಿವೇಶವನ್ನು ಸರ್ವಕಾಲ ಸರ್ವದೇಶರಚಿತವಾದ ವಿರಾಟ್ ರಂಗದ ಭಿತ್ತಿಯಲ್ಲಿಟ್ಟು ನೋಡಿ ಕೇಳಿ ನಲಿಯುತ್ತೇನೆ. ಹಾಗೆ ಮಾಡುವುದರಿಂದ ಸನ್ನಿವೇಶದ ಮಹತ್ವ ನೂರ್ಮಡಿಯಾಗುತ್ತದೆ. ಅದು ಜಗತ್ತಿನಲ್ಲಿ ನಡೆಯುವ ಮತ್ತಾವ ಮಹದ್ವ್ಯಾಪಾರಕ್ಕೂ ಕೀಳಾಗುವುದಿಲ್ಲ. ಬ್ರಹ್ಮವ್ಯೂಹದಲ್ಲಿ ಷೇಯ್ಸ್‌ಪಿಯರಿನ ನಾಟಕ ರಚನೆ ಎಷ್ಟು ಮುಖ್ಯವೊ, ಮೊನ್ನೆ ನಡೆದ ಘೋರಯುದ್ಧ ಎಷ್ಟು ಅನಿವಾರ್ಯವೋ, ಅದೂ ಅಷ್ಟೇ ಮುಖ್ಯ. ಅಷ್ಟೇ ಅನಿವಾರ್ಯ ಎಂಬುದು ತನ್ನ ನಂಬುಗೆ. ಭುವನ ಕವಿಯ ಭವ್ಯಸ್ವರಮೇಲದಲ್ಲಿ ರನ್ನ ಒಂದು ಲಲಿತರಾಗವಾದರೆ ಗೂಬೆ ಕೂಡ ಒಂದು ಕೀಚುದನಿ!

ಅಣ್ಣಪ್ಪನ ಗುಡಿಸಲಿನಲ್ಲಿ ಕಾಲುಮಣಿಯ ಮೇಲೆ ಕುಳಿತು ಇಂತಹ ಸ್ವಪ್ನ ಸಮುದ್ರದಲ್ಲಿ ತೇಲತೊಡಗಿದನು. ಆ ಬಡವನ ರೋಗದ ವಿಷಮಾವಸ್ಥೆ ಭರತ ಖಂಡದ ಸ್ವಾತಂತ್ರ್ಯ ಸಂಗ್ರಾಮದಂತೆಯೆ ಮುಖ್ಯವಾಗಿ ಕಂಡಿತು. ಹೊರಗೆ ನೋಡಿದ. ಮಲೆನಾಡಿನ ಹೆಬ್ಬನ ಹೆಬ್ಬೆಟ್ಟಗಳು ಸಾಲುಸಾಲಾಗಿ ಅನಂತವಾಗಿ ಹಬ್ಬಿದ್ದುವು. ಆ ಪರ್ಣಸಮುದ್ರದ ತರಂಗಗಳ ಮೇಲೆ ನಡುಹಗಲಿನ ಉರಿಬಿಸಿಲು ಪಸರಿಸಿತ್ತು. ಮೇಲೆ, ಅನಂತವಾಗಿದ್ದರೂ ಸಾಂತವಾಗಿ ಕಾಣುತ್ತಿದ್ದ ನೀಲಾಕಾಶದಲ್ಲಿ ಅನೇಕ ಕೋಟಿ ಮೈಲಿಗಳ ದೂರದಲ್ಲಿ ಸೂರ್ಯ ಹೊಳೆಯುತ್ತಿದ್ದನು. ಗುಡಿಸಲಿನ ಕೊಳಕಾದ ಅಂಗಳದಲ್ಲಿ ತಿಪ್ಪೆಯ ಮೇಲೆ ಹೇಂಟೆಯೊಂದು ಮಣ್ಣನ್ನು ಕೆದರಿ ಕೆದರಿ ತನ್ನ ಹೂಮರಿಗಳಿಗೆ ತಿಂಡಿ ತಿನ್ನಿಸುತ್ತಿತ್ತು: ಹುಳು ಹಪ್ಪಣೆಗಳನ್ನು! ತನ್ನ ಯಜಮಾನನ ರೋಗದ ವಿಚಾರ ಅದಕ್ಕೆ ಗೊತ್ತಾದಂತೆ ತೋರಲಿಲ್ಲ! ಕಂತ್ರಿನಾಯಿಯೊಂದು ಅಲ್ಲಿಯೇ ಪಕ್ಕದಲ್ಲಿ ಮಲಗಿ ಮೈಮೇಲೆ ಕುಳಿತು ಪೀಡಿಸುವ ನೊಣಗಳನ್ನು ಬಾಯಿಹಾಕಿ ಅಟ್ಟಿಕೊಳ್ಳುತ್ತಿತ್ತು. ಎದುರುಗಡೆ ಗದ್ದೆಯ ಬಯಲಿನಲ್ಲಿ ಕೆಲವು ಕಾಲ್ನಡೆಗಳು ಮೇಯುತ್ತಿದ್ದುವು. ಕಾಲದ ಆಳದಲ್ಲಿ ಮುಳುಗಿ ದೇಶದ ವಿಸ್ತಾರದಲ್ಲಿ ಸಂಚರಿಸಿದೆ. ಪುನಃ ವಿರಾಟ್ ರಂಗದ ಭಿತ್ತಿಯಲ್ಲಿ ಅಣ್ಣಪ್ಪನ ರೇಷ್ಟೆ ಕಾಯಿಲೆಯನ್ನು ಚಿತ್ರಿಸಿದೆ – ಸಿಂಧುವಿನಲ್ಲಿ ಒಂದು ಬಿಂದು! ಈ ವಿಚಿತ್ರಸೃಷ್ಟಿಯ ಉದ್ದೇಶ, ಸುಖದುಃಖಗಳ ಅರ್ಥ, ಆ ಬಡವನೂ ಲೋಕರೂಢಿಯ ದೃಷ್ಟಿಗೆ ಅಲ್ಪನೂ ಆದ ಅಣ್ಣಪ್ಪನ ಜನ್ಮ ಜೀವಿತಗಳ ಉದ್ದೇಶ, ಅರ್ಥ: – ಏನೇನೋ ನೂರು, ಸಾವಿರ, ಲಕ್ಷ, ಕೋಟಿ ಭಾವನೆಗಳು ‘ದರ್ಶನ’ದಲ್ಲಿ ಮಿಂಚಿದುವು. ನನಗೊಂದೂ ಬಗೆಹರಿಯಲಿಲ್ಲ. ನಮ್ರನಾದೆ; ದೀನನಾದೆ; ನಿಟ್ಟುಸಿರುಬಿಟ್ಟು ಮುಂದಿನ ಕರ್ತವ್ಯಕ್ಕೆ ಸಿದ್ಧನಾದೆ.

ಬತ್ತಲೆ ಕೂತಿದ್ದ ಅಣ್ಣಪ್ಪ! ಅವನು ಕೂತಿದ್ದ ಎಂಬುದನ್ನು ಕೇಳಿ ನೀವು ಕಾಯಿಲೆ ಅಷ್ಟೇನೂ ಜೋರಾಗಿರಲಿಲ್ಲ ಎಂದು ತಿಳಿದುಬಿಟ್ಟೀರಿ. ಆಸ್ಪತ್ರೆಯಲ್ಲಾದರೆ ಅಂತಹ ರೋಗಿಯನ್ನು ಸ್ವಲ್ಪ ಅಲುಗಾಡಲೂ ಕೂಡ ಬಿಡರು. ಅವನನ್ನು ನೋಡಿದರೆ ಶ್ಮಶಾನಕ್ಕೆ ತಾನೇ ಹೊರಡಲು ಸಿದ್ಧನಾಗಿ ಕುಳಿತಂತೆ ತೋರುತ್ತಿತ್ತು. ನಾನು ಮಾಯನ ಕಡೆ ತಿರುಗಿ “ಇದೇನೋ ಇದು? ಅವನಿಗೆ ಮಲಗಲು ಹಾಸಿಗೆ ಇಲ್ಲವೇನೋ?” ಎಂದೆ. ಮಾಯ “ಹಾಸಿಗೆ ಬೇಡ ಎಂದ. ಬಹಳ ಉರಿಯಂತೆ” ಎಂದು ಅಲ್ಲಿ ಬಿದ್ದಿದ್ದ ಚಿಂದಿಕಂಬಳಿಯನ್ನೇ ಹಾಸಿದನು. ನಾನು ಅಣ್ಣಪ್ಪನಿಗೆ ಮಲಗಲು ಹೇಳಿದೆ. ಅವನು ಪುನಃ ಅದೇ ಪ್ರೇತವಾಣಿಯೋ ಎಂಬಂತಿರುವ ಪಾತಾಳಸ್ವರದಿಂದ “ಅಯ್ಯಾ, ನಾನು ಸಾಯುತ್ತೇನೆ. ನನ್ನ ಸಾಲಕ್ಕೆ ನನ್ನ ಮನೆಯ ದನ ಕರು ಪಾತ್ರೆ ಎಲ್ಲದರ ಪಟ್ಟಿಯನ್ನು ತೆಗೆದುಕೊಳ್ಳಿ” ಎಂದನು. ನನಗೆ ಎದೆಯಿರಿದಂತಾಯಿತು. “ಅದೆಲ್ಲಾ ಹಾಗಿರಲಿ! ನೀನು ಮಲಗಿಕೋ ಮೊದಲು” ಎಂದು ಗದರಿ ಹೇಳಿದೆ. ನನ್ನ ಬಲಾತ್ಕಾರಕ್ಕೆ ಮಲಗಿಕೊಂಡ. ಅವನು ಮಲಗಿಕೊಂಡ ರೀತಿಯನ್ನು ನೋಡಿದರೆ, ಮಲಗುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಸಂಪೂರ್ಣವಾಗಿ ಹತಾಶನಾದಂತೆ ತೋರಿತು.

ನಾನು ಅವನ ಕಾಯಿಲೆಯ ಪ್ರಸ್ತಾಪವನ್ನು ತೆಗೆದರೆ ಅವನು ಸಾಲದ ಮಾತನ್ನೇ ತೆಗೆಯುತ್ತಿದ್ದನು. “ಅಯ್ಯಾ, ನನ್ನ ಋಣ ತೀರಿದ್ದನ್ನು ನೋಡಿ ಸುಖವಾಗಿ ಸಾಯುತ್ತೇನೆ. ನನ್ನ ದನ ಕರು ಪಾತ್ರೆ ಎಲ್ಲ ಪಟ್ಟಿಮಾಡಿ” ಎಂಬುದೇ ಅವನ ಪಲ್ಲವಿಯಾಯಿತು. ಗಿ – ಯವರು ಬಹಳವಾಗಿ ಹೇಳಿದರು, ಸಾಲದ ಚಿಂತೆ ಬೇಡ ಎಂದು. ನಾನೂ ಹೇಳಿದೆ “ನೀನು ಸಾಯುವುದಿಲ್ಲ: ಏನೂ ಇಲ್ಲ. ಸುಮ್ಮನೆ ಮಲಗಿಕೋ. ಡಾಕ್ಟರಿಗೆ ನಾನೇ ಕಾಗದ ಬರೆದು ಔಷಧಿ ತರಿಸಿ ಕೊಡುತ್ತೇನೆ” ಎಂದೆ. ನನ್ನ ಮಾತಿನ ಎರಡನೆಯ ಅಂಶವನ್ನು ನಂಬಿದನೇ ಹೊರತು ಮೊದಲನೆಯ ಭಾಗದಲ್ಲಿ ಅವನಿಗೆ ನಂಬುಗೆ ಇದ್ದಂತೆ ತೋರಲಿಲ್ಲ. ಕಡೆಗೆ ಅವನ ಕಾಟವನ್ನು ತಡೆಯಲಾರದೆ ಗಿ – ಯವರಿಗೆ ಹೇಳಿದೆ “ಒಂದು ಪಟ್ಟಿಮಾಡಿ” ಎಂದು. ಅವರೂ ಪಟ್ಟಿಯನ್ನು ಬರೆಯುವಂತೆ ನಟಿಸಿದರು. ನಡು ನಡುವೆ ಅಣ್ಣಪ್ಪ ಮಾತನಾಡಲು ಯತ್ನಿಸಿದನು. ನಾನು ರೇಗಿದಂತೆ ನಟಿಸಿ ಅವನು ಸುಮ್ಮನೆ ಮಲಗುವಂತೆ ಮಾಡಿದೆ. ಒಂದು ಬಟ್ಟೆಯನ್ನೂ ಹೊದಿಸುವಂತೆ ಮಾಡಿದೆ. ಏಕೆಂದರೆ ಅವನಿಗೆ ಬಂದಿದ್ದುದು ನ್ಯೂಮೋನಿಯಾ ಕಾಯಿಲೆ. ಅವನಿಗಿದ್ದ ಕಷ್ಟಸಹಿಷ್ಣುತೆ ಇಲ್ಲದಿದ್ದರೆ ಅವನಾಗಲೆ ಹಣವಾಗಿರಬೇಕಿತ್ತು. ಹಳ್ಳಿಗರಿಗೆ ಕಾಯಿಲೆಗಳಿಗಿರುವ ಜಾತಿ ಭೇದ ತಿಳಿಯದು. ಅವರಿಗೆ ನ್ಯೂಮೋನಿಯಾ ಆಗಲಿ, ಟೈಫಾಯ್ಡ್ ಆಗಲಿ, ಮಲೇರಿಯಾ ಆಗಲಿ, ಏನೇ ಆಗಲಿ, ಎಲ್ಲವೂ ಬರಿಯ ಕಾಯಿಲೆ. ನ್ಯೂಮೋನಿಯಾವನ್ನು ರೇಷ್ಮೆ ಕಾಯಿಲೆ ಎಂದು ಅವರಲ್ಲಿ ತಿಳಿದವರು ಕರೆಯುತ್ತಾರೆ. ಬಹುಶಃ “ಶ್ಲೇಷ್ಠಜ್ವರ” “ರೇಷ್ಮೆ ಕಾಯಿಲೆ” ಆಗಿರಬೇಕೆಂದು ತೋರುತ್ತದೆ.

ಪಟ್ಟಿಬರೆಯುವ ನಾಟಕವನ್ನು ಪೂರೈಸಿ ಅವನಿಗೆ ಧೈರ್ಯ ಹೇಳಿ, ಬುದ್ಧಿ ಹೇಳಿದೆವು. ಅವನು ಏಳದಂತೆ ನೋಡಿಕೊಳ್ಳಬೇಕೆಂದು ಮಾಯನಿಗೆ ಹೇಳಿದೆವು. ಕಡೆಗೆ ಡಾಕ್ಟರಿಗೊಂದು ವಿಶದವಾದ ಕಾಗದ ಬರೆದು ಒಬ್ಬ ಆಳನ್ನು ಔಷಧಿಗೆಂದು ಕಳುಹಿಸಿದೆವು. ಸಾಯಂಕಾಲ ಪುನಃ ಬಂದು ನೋಡುತ್ತೇವೆ ಎಂದು ಹೇಳಿ ಹೊರಟೆವು. ದಾರಿಯಲ್ಲಿ ಬರುತ್ತಾ ಅಣ್ಣಪ್ಪನಿಗಾಗಿ ಮನಸ್ಸಿನಲ್ಲಿಯೆ ನಮ್ರನಾಗಿ ಭಗವಂತನನ್ನು ಪ್ರಾರ್ಥಿಸಿದೆ. ಮನೆಗೆ ಬಂದ ಮೇಲೆ ರೋಗಿಯ ಪಥ್ಯಕ್ಕಾಗಿ ಕೆಲವು ಪದಾರ್ಥಗಳನ್ನು ಕಳುಹಿಸಿದೆವು.

ಸಾಯಂಕಾಲ ರೋಗಿಯನ್ನು ನೋಡಲು ಹೋದೆವು!

   ಮುಂದಿನ ಭಾಗ : http://kannadadeevige.blogspot.com/p/blog-page_87.html   ಮಲೆನಾಡಿನ ಗೋಪಾಲಕರು


**********

ಮಲೆನಾಡಿನ ಚಿತ್ರಗಳು : ತೋಟದಾಚೆಯ ಭೂತ

ತೋಟದಾಚೆಯ ಭೂತ
ಪಾಠಕ, ನೀನು ಎಲ್ಲಿಯಾದರೂ ನಮ್ಮ ಮನೆಯವನಾಗಿದ್ದರೆ (ಅದೃಷ್ಟವಶದಿಂದ ಆಗಿಲ್ಲ) ಈ ಪ್ರಬಂಧದ ನಾಮಾಂಕಿತವನ್ನು ಓದಿ ನಗುವ ಬದಲು ಅದನ್ನು ಭಯಭಕ್ತಿಗಳಿಂದ ಪೂಜಿಸುತ್ತಿದ್ದೆ. ಈಗಲಾದರೂ ನಗಬೇಡ. ಖಂಡಿತ ನಗಬೇಡ. ತೋಟದಾಚೆಯ ಭೂತದ ಮಹಿಮೆ ಸಾಮಾನ್ಯವೆಂದು ತಿಳಿಯಬೇಡ. ಉಡುಪಿ ಕೃಷ್ಣ, ತಿರುಪತಿ ವೆಂಕಟರಮಣ ಮೊದಲಾದವರೆಲ್ಲರೂ ಒಬ್ಬರ ತಲೆಯ ಮೇಲೊಬ್ಬರು ಹತ್ತಿಕೊಂಡು ಬಂದರೂ ನಮ್ಮ ತೋಟದಾಚೆಯ ಭೂತದ ಮೊಳಕಾಲಿಗೆ ಮುಟ್ಟುವುದಿಲ್ಲ. ನಿನಗೆ ಪುಣ್ಯವಿಲ್ಲ. ನಮ್ಮ ಅಜ್ಜಮ್ಮನ ಉಪದೇಶ ಕೇಳುವುದಕ್ಕೆ! ನಿನಗೆ ಅವರ ಉಪನ್ಯಾಸ ಕೇಳುವ ಸುಕೃತ ಇದ್ದಿದ್ದರೆ, ಭೂತದ ಮಹಿಮೆ ಚೆನ್ನಾಗಿ ಗೊತ್ತಾಗುತ್ತಿತ್ತು. ನನಗಂತೂ ಈ ಜನ್ಮದಲ್ಲಿ ದೇವರು ಕೊಟ್ಟಿದ್ದು ಅಜ್ಜಮ್ಮನ ಉಪದೇಶ ಕೇಳುವ ಸೌಭಾಗ್ಯ ಒಂದೇ ಎಂದು ಭಾವಿಸಿದ್ದೇನೆ! ಈ ಪ್ರಬಂಧ ನನ್ನ ಸ್ವಂತ ಪ್ರತಿಭೆಯ ಫಲವಲ್ಲ, ನಮ್ಮ ಅಜ್ಜಿಯ ಉಪನ್ಯಾಸಮಾಲೆಯಿಂದ ಸಂಗ್ರಹಿಸಿದ್ದು. ಈ ಅನುವಾದಕ್ಕೆ ಎಂದೆಂದಿಗೂ ಮೂಲಗ್ರಂಥದ ವೈಭವ, ಮೈಸಿರಿ, ಓಜಸ್ಸು, ಸರಳತೆ ಈ ಮಹಾ ಗುಣಗಳು ಬರುವುದಿಲ್ಲವೆಂದು ನಾನು ಬಲ್ಲೆ. ಅಷ್ಟೇ ಅಲ್ಲದೆ ಎಲ್ಲಕ್ಕೂ ಬಹುಮುಖ್ಯವಾದ ನಮ್ಮ ಅಜ್ಜಿಯ ಪವಿತ್ರ ವ್ಯಕ್ತಿತ್ವ ಇದರಲ್ಲಿ ಬಿಟ್ಟುಹೋಗಿರುವುದು. ಆದರೂ ಗಲಭೆ ಮಾಡದೆ ದೇಶಾಭಿವೃದ್ಧಿಗೆ ಶ್ರಮಪಡುತ್ತಿರುವ ನಮ್ಮ ಅಜ್ಜಿಯ ಅನುಭವ, ಪ್ರತಿಭೆ ಇವುಗಳನ್ನು ಪಾಠಕರಿಗೆ ಪರಿಚಯ ಮಾಡಿಕೊಡಬೇಕೆಂಬ ಕುತೂಹಲದಿಂದ ಈ ಮಹಾ ಕೆಲಸಕ್ಕೆ ಕೈಹಾಕಿದ್ದೇನೆ. ನಮ್ಮ ಅಜ್ಜಿಯ ಆಶೀರ್ವಾದಬಲದಿಂದ ಕಾರ್ಯ ಸಾಂಗವಾಗಿ ನೆರವೇರುವುದರಲ್ಲಿ ಸಂದೇಹವಿಲ್ಲ.

ಪಾಠಕನೆ, ಎಲ್ಲರೂ ‘ದೇವರ ಕೃಪೆಯಿಂದ’ ಎಂದು ಬರೆಯುತ್ತಾರೆ. ನಾನು ಮಾತ್ರ ‘ಅಜ್ಜಿಯ ಆಶೀರ್ವಾದಬಲದಿಂದ’ ಎಂದು ಬರೆದುದಕ್ಕೆ ಆಶ್ಚರ್ಯ ಪಡೆಬೇಡ. ಈಗಿನ ಕಾಲದಲ್ಲಿ ದೇವರು ಎಂದರೆ ನಮಗೆಲ್ಲಾ ಬೇಸರ. ಶತಮಾನಗಳಿಂದಲೂ ದೇವರು ದೇವರು ಎಂದು ಬಡುಕೊಂಡು ಮನಸ್ಸಿಗೆ ಜಿಡ್ಡುಹತ್ತಿಹೋಗಿದೆ. ಉದಾಹರಣೆಗಾಗಿ ನಾನು ಐದುವರ್ಷಗಳಿಂದ “ದೇವರಾಣೆ” ಹಾಕವುದನ್ನು ಬಿಟ್ಟು “ಸೈತಾನ ಆಣೆ” ಹಾಕುತ್ತಿದ್ದೇನೆ! ಕೊಟ್ಟ ಭಾಷೆ ತಪ್ಪುವುದರಲ್ಲಿ ಮೊದಲಿಗಿಂತಲೂ ಈಗ ಎಷ್ಟೋ ಪ್ರವೀಣನಾಗಿದ್ದೇನೆ ಎಂದು ಎಲ್ಲರೂ ಹೇಳುತ್ತಾರೆ! ನನಗೆ ಮೊದಲಿಗಿಂತಲೂ ಹೆಚ್ಚಾಗಿಯೆ ಮಂಗಳವಾಗಿದೆಎಂದು ಹೇಳಬೇಕು. ಅದೂ ಅಲ್ಲದೆ ಅಜ್ಜಿಯ ಆಶೀರ್ವಾದವೇನು ಅವರಷ್ಟು ಬಲಹೀನವೆಂದು ತಿಳಿಯಬೇಡ. ಅವರ ಆಶೀರ್ವಾದ ಬಲದಿಂದಲೇ ತೀರ್ಥಹಳ್ಳಿಗೆ ಹೋಗಿಬಂದೆ. ಅದು ಗೊತ್ತಾದುದು ಹೇಗೆಂದರೆ, ಆ ದಿನ ಅನ್ನ ಬಲವೇ ಇಲ್ಲದೆ ತನ್ನ ಬಲವೇ ಅಡಗಿತ್ತು! ಊಟವೇ ಸಿಕ್ಕಲಿಲ್ಲ. ಒಂಬತ್ತು ಮೈಲಿ ಹೋಗಿ ಬಂದದ್ದು ಅವರ ಆಶೀರ್ವಾದಬಲದಿಂದಲೆ! ಒಂದು ಸಾರಿ ಮನೆಗೆ ಬಂದ ಬುಡಬುಡುಕೆಯವನ್ನು ಓಡಿಸಿ, ಅವನು ಕೊಟ್ಟ ಶಾಪಗಳನ್ನೆಲ್ಲಾ ಜೈಸಿದೆ. ಅವರ ಆಶೀರ್ವಾದ ಬಲದಿಂದಲೆ ಒಂದಾವರ್ತಿ ಇಪ್ಪತ್ತು ರೊಟ್ಟಿಗಳನ್ನು ತಿನ್ನುತ್ತೇನೆಂದು ಜೂಜು ಕಟ್ಟಿ ಜೀವದಿಂದ ಬಚಾವಾಗಿ ಬಂದೆ. ಆವೊತ್ತು ನನ್ನ ಗತಿ ಮುಗಿಯಿತೆಂದೇ ತಿಳಿದಿದ್ದೆ. ನ್ನನ ಮುಂದೆ ಇಪ್ಪತ್ತು ರೊಟ್ಟಿಗಳ ದೊಡ್ಡ ರಾಶಿ ಹಾಕಿ, ಕೇಳಿದಷ್ಟು ತುಪ್ಪಹಾಕಿ, ಬಲಗಡೆ ಇಬ್ಬರು ಎಡಗಡೆ ಇಬ್ಬರು ಕುಳಿತುಬಿಟ್ಟರು, ತೋಟದಾಚೆ ಭೂತದ ದೂತರೋ ಎನ್ನುವ ಹಾಗೆ ಕಾಡು, ಓಬು, ಸುಬ್ಬು, ತಿಮ್ಮು! ನಾನೂ ಆ ದಿವಸದವರೆಗೂ ಇಪ್ಪತ್ತು ರೊಟ್ಟಿ ಎಂದರೆ ಎಷ್ಟಾಗುವುದೆಂಬುದನ್ನು ಗ್ರಹಿಸಿಯೇ ಇರಲಿಲ್ಲ. ನಿರಾಯಾಸವಾಗಿ ಮುಕ್ಕಿ ಎದ್ದುಬಿಡಬಹುದೆಂದು ತಿಳಿದಿದ್ದೆ. ಆದರೆ ಕಲ್ಪನಾ ರಾಜ್ಯದಿಂದ ಕಾರ್ಯರಂಗಕ್ಕೆ ಬರಲು ಎದೆ ಹಾರಿಯೇ ಹೋಯಿತು. ಒಂದು ರೊಟ್ಟಿ ಪೂರೈಸಿ ಇನ್ನರ್ಧ ತಿನ್ನುವುದರೊಳಗಾಗಿ ಹೊಟ್ಟೆ ತುಂಬಿ ಮನದಲ್ಲಿಯೇ ಕೆಟ್ಟೆನಲ್ಲಾ ಎಂದುಕೊಂಡೆ. ಎರಡನೆಯದರಲ್ಲಿ ಉಳಿದರ್ಧವನ್ನು ಹೇಗೋ ಮಾಡಿ ಬಲಾತ್ಕಾರದಿಂದ ಗಂಟಲ ಕೆಳಕ್ಕೆ ನೂಕಿದೆ. ಮೂರನೆಯದರಲ್ಲಿ ಒಂದು ತುಂಡನ್ನು ತೆಗೆದು ತುಪ್ಪದಲ್ಲಿ ಅದ್ದಿ ಬಾಯಲ್ಲಿ ಹಾಕಿದ್ದೆ. ಅಷ್ಟರಲ್ಲಿ ಜಠರ ಅಪರಾಧಿಯಾದ ಎರಡನೆಯದನ್ನು ನಿರಪರಾಧಿಯಾದ ಒಂದನೆಯದರ ಸಮೇತ ತನ್ನ ರಾಜ್ಯದಿಂದ ಗಡೀಪಾರು ಮಾಡಿಬಿಟ್ಟಿತು. ಅಂದು ನನ್ನ ದುರವಸ್ಥೆಯನ್ನು ನೋಡಿ ಅಜ್ಜಮ್ಮ, ಪಹರೆಯವರನ್ನು ಚೆನ್ನಾಗಿ ಬೈದು, ನನ್ನನ್ನು ಜೂಜಿನ ಕಟ್ಟೆಯಿಂದ ಬಿಡಿಸಿದರು. ಇವೇ ಮೊದಲಾದ ಅನುಭವಗಳಿಂದ ಅಜ್ಜಿಯ ಆಶೀರ್ವಾದ ಒಂದರಲ್ಲಿ ನನಗೆ ಪೂರಾ ನಂಬಿಕೆ ಹುಟ್ಟಿದೆ. ಇವೆಲ್ಲಾ ಉಪವಿಷಯಗಳಾಯಿತು. ಇನ್ನು ಮುಖ್ಯ ವಿಷಯಕ್ಕೆ.

ಮಸಲ, ನಾನು ಒಬ್ಬ ದೊಡ್ಡ ಪ್ರಬಂಧಕಾರನೆಂದು ಇಟ್ಟುಕೋ! ಆಗುವುದಿಲ್ಲ. ನನಗೆ ಗೊತ್ತು; ಆದರೂ ಮಾತಿಗೆ ಇಟ್ಟುಕೋ! ಮಸಲ, ಈ ಪ್ರಬಂಧ ಬಹು ಸುಪ್ರಸಿದ್ಧವಾಯಿತೆಂದು ಇಟ್ಟುಕೋ! ಅದೂ ಸಂದೇಹವೇ! ಪರವಾ ಇಲ್ಲ, ಇಟ್ಟುಕೋ! ಮಸಲ, ನೀನು ಇದನ್ನು ಓದಿದೆಯೆಂದು ಇಟ್ಟುಕೋ! ನೀನು ಓದುವುದೂ ನನಗೆ ಗೊತ್ತು ! ಆದರೂ ಇಟ್ಟುಕೋ ! ಸದ್ಯಕ್ಕೆ ಎಲ್ಲಾ ‘ಮಸಲ’ವಷ್ಟೆ? ಮುಸಲವಲ್ಲ; ಮುಸಲವಾದರೆ ಕಷ್ಟ. ಅದನ್ನು ಹೊರುವುದು! ಮಸಲ, ನಿನಗೆ ತೋಟದಾಚೆಯ ಭೂತವನ್ನು ನೋಡಲೇಬೇಕೆಂದು ಚಪಲಹುಟ್ಟಿತು ಅಂತ ಇಟ್ಟುಕೋ! ಮಸಲ, ನಿನ್ನ ಹತ್ತಿರ ರೈಲು ಮೋಟಾರುಗಳ ಛಾರ್ಜು ಕೊಡಲು ದುಡ್ಡಿತ್ತು ಎಂತ ಎಟ್ಟುಕೋ! ನನಗೆ ಗೊತ್ತು, ಅದಕ್ಕೆ ಸ್ವಲ್ಪ ಅಭಾವ ಈಗಿನ ಕಾಲದಲ್ಲಿ; ಆದರೆ ನಾನು ಹೇಳಿದ್ದು ಮಸಲದ ದುಡ್ಡು. ಅದು ಎಲ್ಲರ ಹತ್ತಿರವೂ ಸಾಧಾರಣವಾಗಿ ಇದ್ದೇ ಇರುತ್ತದೆ. ಮಸಲ, ಮೇಲೆ ಹೇಳಿದ ನಿಬಂಧನೆಗಳೆಲ್ಲಾ ನಮ್ಮ ಅಜ್ಜಿಯ ಆಶೀರ್ವಾದಬಲದಿಂದ ಕೈಗೂಡಿದುವೆಂದು ಇಟ್ಟುಕೋ! ಇಷ್ಟೆಲ್ಲವನ್ನೂ ಕಳೆಯದೆ ದುರ್ವ್ಯಯ ಮಾಡದೆ ಇಟ್ಟುಕೊಂಡರೆ ನೀನು ನಮ್ಮ ಮನೆಗೆ ಬರುವೆ ಎಂದು ಇಟ್ಟುಕೊಳ್ಳೋಣ.

ನೀನು ನಮ್ಮ ಮನೆಗೆ ಬಂದಾಗ ನಾನೇ (ಪುಣ್ಯವಶದಿಂದ ಕಾಡಿಗೆ ಹೋಗದೆ ಮನೆಯಲ್ಲಿದ್ದರೆ) ನಿನ್ನ ಜೊತೆ ತೋಟದಾಚೆಯ ಭೂತದ ಬಳಿಗೆ ‘ನಾನೇ’ ಖುದ್ದು ಬರುತ್ತೇನೆ. ನಮ್ಮ ಮನೆಯ ಮುಂಭಾಗದಲ್ಲಿಯೆ ಅಡಕೆ ತೋಟ ಉಂಟು, ಬಾಳೆ ತೋಟವೂ ಅದರಲ್ಲಿಯೆ ಅಡಕವಾಗಿದೆ. ಬೇಸಗೆಯಲ್ಲಿ ಅಡಕೆ ಮರಗಳ ಬುಡಗಳಿಗೆ ನೆರಳುಬಂದು ತಂಪಾಗಲೆಂದು ಅಡಕೆತೋಟಗಳಲ್ಲಿ ಬಾಳೆ ಗಿಡಗಳನ್ನು ನಿಬಿಡವಾಗಿ ಬೆಳೆಯಿಸುತ್ತಾರೆ. ಅದೂ ಅಲ್ಲದೆ, ಬಾಳೆಯ ಮರದ ಗಡ್ಡೆಗಳು ಸ್ವಾಭಾವಿಕವಾಗಿ ಜಲಮಯವಾಗಿರುವುದರಿಂದ ಅಡಿಕೆ ಮರದ ಬುಡಗಳಿಗೆ ತೇವವೂ ದೊರಕಿ ದಂತಾಗುತ್ತದೆ. ತೋಟವನ್ನು ದಾಟಿದರೆ ಓರೆಯಾಗಿ ಬೆಟ್ಟವನ್ನಡರಿರುವ ದಟ್ಟಡವಿಯ ಸೆರಗಿಗೆ ಬರುತ್ತೇವೆ. ಅಲ್ಲಿ ಮರಗಳು ಪೊದೆಗಳು ವಿರಳವಾಗಿರುತ್ತವೆ. ತೋಟದ ಅಂಚಿನಲ್ಲಿ ಮಾತ್ರ ದಟ್ಟವಾಗಿ ಬೆಳೆದ ಒಂದು ಮರಗಳ ಗುಂಪು ಕಂಡುಬರುತ್ತದೆ. ಆ ತೋಪೇ ನಮ್ಮ “ಭೂತರಾಯನ ಬನ.” ಅಲ್ಲಿಗೆ ಹೋಗಿ ನೋಡಿದರೆ ವಿಶೇಷವೇನೂ ತೋರುವುದಿಲ್ಲ. ಒಂದು ದೊಡ್ಡ ರಂಜದ ಮರದ ಬುಡದಲ್ಲಿ ಒಂದು ಕಾಡು ಕಲ್ಲು ಕಂಡುಬರುತ್ತದೆ. “ಮರದ ಬುಡದ ಕಾಡು ಕಲ್ಲು” ಎಂದರೆ ಭೂತ ರಾಯನ ಬಂಗಲೆಯ ವರ್ಣನೆ ಮುಗಿಯುತ್ತದೆ!

ಭೂತರಾಯನ ಪ್ರತಿನಿಧಿಯಾದ ಆ ಕಾಡುಕಲ್ಲಿಗೆ ಪ್ರತಿವರ್ಷವೂ ಹರಕೆ ಸಲ್ಲುವುದು. ಆಗ ಅನೇಕ ಕುರಿಕೋಳಿಗಳ ಬಲಿಯಾಗುವುದು, ಭೂತಕ್ಕೆ ಬಲಿ ಎಂದರೆ ಬಹಳ ವಿಶ್ವಾಸದಂತೆ. ಊರಿನವರೆಲ್ಲಾ, ಕನ್ನಡ ಜಿಲ್ಲೆಯಿಂದ ಬಂದ ಕೂಲಿಯಳುಗಳೂ ಸೇರಿ, ಅದಕ್ಕೆ ಪರಮಭಕ್ತರು. ದನಕರುಗಳಿಗೆ ರೋಗಬಂದರೆ ಒಂದು ಕೋಳಿಯನ್ನೋ ಅಥವಾ ಒಂದು ತೆಂಗಿನಕಾಯಿಯನ್ನೋ ಅಥವಾ ಮೂರು ಕಾಸನ್ನೋ ರೋಗಿಯಾದ ಪ್ರಾಣಿಗೆ ಪ್ರದಕ್ಷಿಣೆ ಬರಿಸಿ, ಭೂತರಾಯನಿಗೆ “ಹೇಳಿಕೊಂಡು” ಮುಡುಪು ಕಟ್ಟುವರು. ರೋಗಕ್ಕೆ ಅನೇಕ ಔಷಧಗಳನ್ನು ಕೊಡುವರು. ಔಷಧದಿಂದ ರೋಗ ಗುಣವಾದರೂ ಕೀರ್ತಿಯೆಲ್ಲಾ ಭೂತರಾಯನಿಗೆ.

ಉದಾಹರಣೆಗಾಗಿ ನಡೆದ ಒಂದು ಸಂಗತಿ ಹೇಳುತ್ತೇನೆ. ಒಂದು ದಿನ ಸಂಜೆಯ ಸಮಯ. ನಾನು ಉಪ್ಪರಿಗೆಯ ಮೇಲೆ ಶ್ರೀಯುತ ಲೋಕಮಾನ್ಯ ಬಾಲಗಂಗಾಧರ ತಿಲಕರವರ “ಗೀತಾರಹಸ್ಯ” ಓದುತ್ತಾ ಕುಳಿತಿದ್ದೆ, ಅಲ್ಲಿಯೆ ಸಮೀಪದಲ್ಲಿ ಬೇಟೆಗಾರ ಪುಟ್ಟಣ್ಣ ತೋಟಾ ಕೋವಿಗಳನ್ನು ಕಳಚಿ ನಳಿಗೆಗಳನ್ನೆಲ್ಲಾ ಚೆನ್ನಾಗಿ ಉಜ್ಜಿ ಎಣ್ಣೆ ಹಚ್ಚುತ್ತಿದ್ದ. ಹಠಾತ್ತಾಗಿ ನಮ್ಮ ಬಾಣಸಿಗ ಭೀಮ (ಅವನ ನಿಜವಾದ ಹೆಸರು ನಂಜ ಎಂದು; ಅವನ ಹೊಟ್ಟೆಬಾಕತನ ನೋಡಿ ಹಾಗೆಂದು ಅಡ್ಡ ಹೆಸರಿಟ್ಟೆವು) ಏದುತ್ತಾ ಓಡಿ ಬಂದು “ಒಂದು ಎಮ್ಮೆಕರು ಸಾಯಲಿಕ್ಕಾಗಿದೆ; ಬಿದ್ದು ಒದ್ದುಕೊಳ್ಳುತ್ತಿದೆ!” ಎಂದು ಬಹಳ ಕಕ್ಕುಲತೆಯಿಂದ ನುಡಿದ. ನಾನು ಪುಟ್ಟಣ್ಣ ಕೊಟ್ಟಿಗೆಗೆ ಓಡಿದೆವು. ಬಡಪ್ರಾಣಿಯ ಹೊಟ್ಟೆ ಊದಿತ್ತು. ಬಾಯಲ್ಲಿ ನೊರೆ ಬೀಳುತ್ತಿತ್ತು. ಕಣ್ಣು ಹರಳುಗಳು ಎವೆಯ ಒಳಗಾಗಿದ್ದುವು. ಅದರ ಸ್ಥಿತಿ ಶೋಚನೀಯವಾಗಿತ್ತು. ಅಲ್ಲಿಗೆ ಬಂದ ನಮ್ಮ ದೊಡ್ಡಮ್ಮನವರು “ಇದು ಭೂತರಾಯನ ಚೇಷ್ಟೆ, ಒಂದು ಕಾಯಿ ಸುಳಿದಿಟ್ಟು ಹೇಳಿಕೊಳ್ಳಿ” ಎಂದರು. ಪುಟ್ಟಣ್ಣ ಕರುವಿನ ಬೆನ್ನಮೇಲಿದ್ದ ಕೂದಲು ಹಿಡಿದೆಳೆದು ಅದರ ಮುಸುಡಿಯನ್ನು ತನ್ನ ಮೂಗಿನಬಳಿ ಇಟ್ಟುನೋಡಿ “ಇದು ಮತ್ತೇನೂ ಅಲ್ಲ, ಬಳ್ಳಿ ಮುಟ್ಟಿದ್ದು” ಎಂದು ಗುಡ್ಡದ ಕಡೆ ಓಡಿ ಹೋದ. ಬಳ್ಳಿ ಮುಟ್ಟಿದದು ಎಂದರೆ ಹಾವು ಕಡಿಯುವುದು ಎಂದರ್ಥ! ಹಾವು ಕಡಿದಿದೆ ಎಂದು ಹೇಳುವುದು ಅಮಂಗಳಕರವೆಂಬ ಭೀತಿಯಿಂದ “ಬಳ್ಳಿ ಮುಟ್ಟಿದೆ” ಎನ್ನುತ್ತಾರೆ. ಪುಟ್ಟಣ್ಣ ಗುಡ್ಡದಿಂದ ಔಷಧ ತರುವಷ್ಟರಲ್ಲಿ ನಂಜ ಒಳಗಿನಿಂದ ಒಂದು ತೆಂಗಿನಕಾಯಿ ತಂದು ಅದನ್ನು ಕರುವಿಗೆ ‘ಸುಳಿದು’ (ಪ್ರದಕ್ಷಿಣೆಬರಿಸಿ), “ಭೂತರಾಯ, ಏನಿದ್ದರೂ ಇದರ ಮೇಲೆಯೇ ನಿಲ್ಲಲಿ! ಏನು ಮುಟ್ಟು ಚಿಟ್ಟು ಆಗಿದರೂ ಎಲ್ಲಾ ಹರಕೆಯ ದಿನ ಭಟ್ಟರಿಂದ ಶುದ್ಧಿ ಮಾಡಿಸುತ್ತೇವೆ” ಎಂದು ತೋಟದ ದಿಕ್ಕಿಗೆ ಕೈಮುಗಿದು ಮುಡುಪು ಕಟ್ಟಿದನು. ನಿಂತಿದ್ದವರೆಲ್ಲರೂ “ಈಗ ಕರು ಸ್ವಲ್ಪ ಒದ್ದಾಟ ಕಮ್ಮಿ ಮಾಡಿತು. ಭೂತರಾಯನ ಚೇಷ್ಟೆಯೇ ಹೌದು!” ಎಂದು ಒಬ್ಬರ ಮಾತನ್ನು ಒಬ್ಬರು ಸಮರ್ಥಿಸಿದರು. ಸುಮ್ಮನೆ ನಿಂತಿದ್ದ ನಾನು ನಗುವನ್ನು ತಡೆಯಲಾರದೆ “ಹೌದು ಹೌದು, ಭೂತರಾಯನ ಚೇಷ್ಟೆಯೇ! ಔಷಧಿ ಮಾಡದೆ ಇನ್ನೊಂದು ತೆಂಗಿನಕಾಯಿಯನ್ನು ಮುಡುಪು ಕಟ್ಟಿದರೆ ಬಹುಶಃ ಒದ್ದಾಟವೇ ನಿಲ್ಲಬಹುದು” ಎಂದ.

ಅಷ್ಟರಲ್ಲಿ ಪುಟ್ಟಣ್ಣ ಬಾಯಿಯಲ್ಲಿ ಏನನ್ನೋ ಅಗಿಯುತ್ತಾ ಬಂದು ಅದನ್ನು ಕರುವಿನ ನಾಸಿಕದ್ವಾರದೊಳಗೂ ಕಣ್ಣಿನೊಳಗೂ ಉಗಿದು, ಬಾಲವನ್ನು ಎಳೆದು ಬೆನ್ನೆಲುಬನ್ನು ಚೆನ್ನಾಗಿ ನೀಳಮಾಡಿ ನೀವಿದನು. ಕರು ಐದು ನಿಮಿಷದೊಳಗಾಗಿ ಎದ್ದು ನಿಂತಿತು. ಎಲ್ಲರೂ ಭೂತರಾಯನ ಶಕ್ತಿಯನ್ನೇ ಕುರಿತು ಸಂಭಾಷಣೆ ಮಾಡುತ್ತಾ ತೆರಳಿದರು. ಪುಟ್ಟಣ್ಣನ ಔಷಧವನ್ನು ಮಾತ್ರ ಮರೆತುಬಿಟ್ಟರು; ಅದು ಅವರ ಮೆದುಳಿಗೆ ಹತ್ತಲಿಲ್ಲ. ಎಲ್ಲರೂ ಹೊರಟು ಹೋದಮೇಲೆ ಪುಟ್ಟಣ್ಣನನ್ನು ಕುರಿತು “ಅದೇನು ಎಲೆಯೋ ನೀನು ಅಗಿಯುತ್ತಾ ಬಂದದ್ದು?” ಎಂದು ಕೇಳಿದೆ. ಅದಕ್ಕೆ ಅವನು “ಔಷಧದ ಹೆಸರು ಯಾವಾಗಲೂ ಹೇಳಬಾರದು. ಹೇಳಿದರೆ ಅದರ ಶಕ್ತಿಯೇ ಹೋಗಿಬಿಡುತ್ತದೆ” ಎಂದನು.

ನಮ್ಮ ಭೂತರಾಯನಿಗೆ ಈಗ ಇರುವ ಶಕ್ತಿಗಿಂತಲೂ ಹಿಂದೆ ಇದ್ದ ಶಕ್ತಿ ಅತಿಶಯವಂತೆ. ಬಹುಶಃ ಆಧುನಿಕರೆಲ್ಲಾ ಪ್ರಾಚೀನರಿಗಿಂತ ಹೇಗೆ ಹೀನತರ ಸ್ಥಿತಿಯಲ್ಲಿ ಇದ್ದಾರೆಯೋ ಹಾಗೆಯೆ ಭೂತರಾಯನ ಆಧುನಿಕ ಮಹಿಮೆ ಪ್ರಾಚೀನಮಹಿಮೆಗಿಂತ ನಿಕೃಷ್ಟಗತಿಗೆ ಇಳಿದಿರಬಹುದೆಂದು ತೋರುತ್ತದೆ. ಪಾಪ! ಕಲಿರಾಯನ ನಿರಂಕುಶಪ್ರಭುತ್ವದಿಂದ ನಮ್ಮ ಭೂತರಾಯನಿಗೂ ಕೂಡ ಉಳಿಗತಿ ಇಲ್ಲ.

ಭೂತರಾಯನಿಗೆ ಇದ್ದ ಇಂದಿನ ಶಕ್ತಿಮಹಿಮೆಗಳನ್ನು ದೃಷ್ಟಾಂತ ಪಡಿಸಲು, ಅಜ್ಜಮ್ಮ ಬಹು ಸ್ವಾರಸ್ಯವಾದ ಕಥೆಗಳನ್ನು ಹೇಳುತ್ತಿದ್ದರು. ನಮ್ಮ ಕಣ ಮನೆಯಿಂದ ಸುಮಾರು ಒಂದುವರೆ ಫರ್ಲಾಂಗು ದೂರದಲ್ಲಿದೆ. ಸುಗ್ಗಿ ಕಾಲದಲ್ಲಿ ಪೈರನ್ನು ಒಕ್ಕಿದ ತರುವಾಯ ತೂರಿದ ಬತ್ತವನ್ನು ಅಲ್ಲಿಯೆ ರಾಶಿಮಾಡಿ ಇಟ್ಟು ಮನೆಗೆ ಬರುತ್ತಾರೆ. ಬೆಳಗ್ಗೆ ಅದನ್ನು ಹೊತ್ತು ಕಣಜಕ್ಕೆ ಸುರಿಯುತ್ತಾರೆ. ಇದು ಬಹುಕಾಲದಿಂದಲೂ ನಡೆದುಬಂದ ವಾಡಿಕೆ. ಒಂದು ದಿನ ರಾತ್ರಿ ಕೆಲವು ಜನ ಕಳ್ಳರು ಬಂದು ಬತ್ತವನ್ನು ಕಳಲೆಳಸಿದರಂತೆ. ಅವರು ಕೆಲವು ಮೂಟೆಗಳಿಗೆ ಬತ್ತ ತುಂಬಿದ್ದರಂತೆ; ಇಬ್ಬರು ಬತ್ತ ಅಳೆಯುತ್ತಿದ್ದರಂತೆ; ಕೆಲವರು ಮೂಟೆ ತೆಗೆದು ಬೆನ್ನಮೇಲೆ ಹಾಕಿಕೊಂಡಿದ್ದರಂತೆ; ಬೆಳಗಾಗುವವರೆಗೂ ಅವರೆಲ್ಲರೂ ಹಾಗೆಯೆ ನಿಷ್ಪಂದವಾಗಿ ನಿಂತು ಬಿಟ್ಟಿದ್ದರಂತೆ! ಕಡೆಗೆ ನಮ್ಮ ಅಜ್ಜಯ್ಯ ಹೋಗಿ ಭೂತರಾಯನಿಗೆ ಹೇಳಿಕೊಳ್ಳಲು ಮಂತ್ರಮುಗ್ಧರಾದ ಅವರಿಗೆ ವಿಮೋಚನೆಯಾಯಿತಂತೆ! ಆಮೇಲೆ ಕಳ್ಳರನ್ನು ಚೆನ್ನಾಗಿ ಬೆನ್ನು ಮುರಿಯುವಂತೆ ಹೊಡೆದು ಅಟ್ಟಿದರಂತೆ!

ಮತ್ತೊಂದು ಸಾರಿ ನಮ್ಮ ಮನೆಯಲ್ಲಿ ಯಾರಿಗೋ “ಅಮ್ಮ” (ಸಿಡುಬು) ಎದ್ದಿತ್ತಂತೆ. ಆಗ ಎಲ್ಲರೂ ಮನೆಬಿಟ್ಟು ಬೇರೆ ಕಡೆ ಇದ್ದರಂತೆ. ಆಗ ತೋಟಕ್ಕೆ ಭೂತರಾಯನೇ ಕಾವಲಿರಬೇಕೆಂದು ಅಜ್ಜಯ್ಯ ಹೇಳಿಕೊಂಡಿದ್ದರಂತೆ. ತೋಟದಲ್ಲಿ ವೀಳ್ಯದೆಲೆ ಹಂಬು ಬಹಳ ಇದ್ದುವಂತೆ. ಯಾವನೋ ಕಳ್ಳ ಎಲೆ ಕೊಯ್ಯಲು ಅಡಕೆಮರ ಹತ್ತಿ ಭೂತದಿಂದ ತಡೆಯಲ್ಪಟ್ಟವನಾಗಿ ಮೂರು ದಿನ ಅಲ್ಲಿಯೇ ಇದ್ದು. ಕಡೆಗೆ ಅಜ್ಜಯ್ಯನಿಂದ ಬದುಕಿದನಂತೆ! ಹೀಗೆಯೆ ಮತ್ತೊಂದು ಸಾರಿ ಮನೆಯನ್ನು ಕೊಳ್ಳೆ ಹೊಡೆಯಲು ದರೋಡೆಕಾರರು ಬಂದಾಗ ಭೂತ ಮನೆಯ ಸುತ್ತಲೂ ತನ್ನ ಮಾಯೆಯಿಂದ ಸಾವಿರಾರೇಕೆ ಲಕ್ಷಾಂತರ ಪಂಜುಗಳನ್ನಿರಿಸಿ ದರೋಡೆಕಾರರಿಗೆ ಅರಿಗಳು ಅಮಿತವಾಗಿರುವರೆಂಬ ಭ್ರಾಂತಿಯನ್ನು ಹುಟ್ಟಿಸಿ ಅವರನ್ನು ಹೆದರಿಸಿ ಓಡಿಸಿತಂತೆ. ಇಷ್ಟಾದರೂ ಮನೆಯವರೆಲ್ಲ ಗಾಢನಿದ್ರೆಯಲ್ಲಿದ್ದುದರಿಂದ ಒಬ್ಬರಿಗೂ ನಡೆದ ಸಂಗತಿ ಗೊತ್ತೇ ಆಗಲಿಲ್ಲವಂತೆ! ಅನಂತರ ಗೊತ್ತಾದುದು ಹೇಗೋ ಆ ಶಿವನೇ ಬಲ್ಲ.

ಮೊದಲು ಸತ್ಯದ ಕಾಲವಾಗಿದ್ದಾಗ ದಿನವೂ ಭೂತರಾಯ ಮನೆಯ ಸುತ್ತ ಪಹರೆ ನೋಡಿಕೊಂಡು ಹೋಗುತ್ತಿದ್ದನಂತೆ. ತನ್ನ ಕಬ್ಬಿಣದ ದೊಣ್ಣೆಯಿಂದ ಹೆಬ್ಬಾಗಿಲಿಗೆ ಹೊಡೆದು ಅಜ್ಜಯ್ಯನನ್ನು ಮಾತಾಡಿಸುತ್ತಿದ್ದನಂತೆ. “ಇದೇ ಭೂತರಾಯ ಕಬ್ಬಿಣದ ದೊಣ್ಣೆ ಕುಟ್ಟುತ್ತಿದ್ದ ಬಂಡೆ” ಎಂದು ಈಗಲೂ ತೋಟದಲ್ಲಿರುವ ಒಂದು ಅರೆಯನ್ನು ತೋರಿಸುತ್ತಾರೆ. ಕೆಲವರು ಆ ಅರೆಯಲ್ಲಿರುವ ಒರಳು ಭೂತರಾಯ ದೊಣ್ಣೆ ಬಡಿದೇ ಆದುದೆಂದು ಹೇಳುತ್ತಾರೆ. ಉಳಿದವರು ಅದನ್ನು ಖಂಡಿಸಿ ಅದು “ಕಲ್ಲುಕುಟಿಗ” ನೆಂಬ ಮತ್ತೊಂದು ದೆವ್ವದ ಕಾರ್ಯವೆಂದು ಸಾಧಿಸುತ್ತಾರೆ. ಈ ವಿವಾದ ಅನಾದಿಯಾದುದು. ಅದರ ಸ್ವಭಾವ ನೋಡಿದರೆ ಅನಂತವಾದುದ್ದು ಎಂದೂ ಹೇಳಿಬಿಡಬಹುದು. ಹಳ್ಳಿಯ ವಿದ್ವಾಂಸರುಗಳು ವಾಕ್ಕಲಹಕ್ಕೆ ತೊಡಗಿದರೆ ತೀರ್ಮಾನದ ಬಾಬತ್ತೇ ಇಲ್ಲ. ನಿರ್ಣಯದ ಮಾತಂತೂ ಕೇಳಲೇಬಾರದು. (ನಗರದವರು?)

ಒಂದು ಸಾರಿ ಅಜ್ಜಮ್ಮ ರಾತ್ರಿ ಕೊಟ್ಟಿಗೆಗೆ ಹೋಗಿಬರುವಾಗ ಬಾವಿ ಕಟ್ಟೆಯ ಮೇಲೆ ಭೂತರಾಯ ಶ್ವೇತಾಂಬರಧಾರಿಯಾಗಿ “ಆಕಾಶಕ್ಕೂ ಭೂಮಿಗೂ” ಒಂದಾಗಿ ನಿಂತಿದ್ದನಂತೆ. ಧೈರ್ಯಶಾಲಿಗಳಾದ ಅಜ್ಜಮ್ಮನವರೂ ಕೂಡ ಎದೆಹಾರಿ ಮೂರ್ಛೆಹೋದರಂತೆ.

ಪಾಠಕಮಹಾಶಯ, ಇಷ್ಟರಲ್ಲಿಯೆ ನಿನಗೆ ಭೂತದ ಮಹಿಮೆ ಗೊತ್ತಾಗಿರಬಹುದು; “ತೋಟದಾಚೆಯ ಭೂತ” ಅಸಾಧಾರಣವಾದುದು ಎಂಬ ಸತ್ಯವನ್ನು ಈ ಪ್ರಬಂಧ ನಿನಗೆ ಚೆನ್ನಾಗಿ ಮನಗಾಣಿಸಿರದಿದ್ದರೆ ಅದು ಪ್ರಬಂಧದ ತಪ್ಪಲ್ಲ; ನಿನ್ನ ತಪ್ಪು. ನೀನು ಅತಿ ನವೀನವಾಗಿದ್ದೀಯೆ! ಅತ್ಯಾಧುನಿಕನು ಸದಾ ಸಂಶಯಾತ್ಯನು. ಆದರೆ ಎಚ್ಚರಿಕೆ! “ಸಂಶಯಾತ್ಮಾ ವಿನಶ್ಯತಿ.”

ನಾನೂ ನೀನೂ ನಂಬದಿದ್ರೂ ಹಳ್ಳಿಯಲ್ಲಿ ಪ್ರತಿಯೊಬ್ಬನೂ ಭೂತದ ಮಹಿಮೆಯಲ್ಲಿ ನಮ್ಮಿಂದ ಗ್ರಹಿಸಲಸದಳವಾದ ನಂಬಿಕೆ ಇಟ್ಟಿದ್ದಾನೆ. ಭೂತದ ವಿಷಯವಾದ ಕತೆಗಳು ನಿಜವಾಗಿ ನಡೆದವೆಂದೇ ಅವನ ಬಲವಾದ ನಂಬಿಕೆ. ಹೆಚ್ಚೇನು? ಈ ನಂಬಿಕೆಯ ಮೇಲೆಯೆ ಅವನು ಜೀವಿಸುತ್ತಾನೆ. ನಿನಗೂ ನನಗೂ ಭೂತವೆಂದರೆ ಮಾತಿನ ಮಟ್ಟಿಗೆಷ್ಟೋ ಅಷ್ಟೆ! ನಮಗೆ ಅದೊಂದು ಪರಿಹಾಸ್ಯಮಾಡಿ ನಗಬಹುದಾದ ತೃಣವಿಷಯ. ಆದರೆ ಹಳ್ಳಿಯವನ ಜೀವನದಲ್ಲಿ ಭೂತ ಎಂದೆಂದಿಗೂ ಅಗಲಿಸಕೂಡದ ನಿತ್ಯವಾಗಿರುವ ಚಿರಾಂಶವಾಗಿದೆ. ಆದ್ದರಿಂದ, ಪಾಠಕಮಹಾಶಯ, ಹಳ್ಳಿಯವನು ಮೂಢನೆಂದು ತಿರಸ್ಕರಿಸಬೇಡ. ಮುಕ್ಕಾಲುಪಾಲು ಜಗತ್ತನ್ನು ಮೌಢ್ಯವೇ ಕಾಪಾಡುತ್ತಿರುವುದು. ಮುಕ್ಕಾಲು ಪಾಲು ಜಗತ್ತಿಗೆ ಮೌಢ್ಯವೇ ಆನಂದವಾಗಿರುವುದು. 
ಜ್ಞಾನದೇವತೆಯೊಲಿಯದಾತನ ಮಧುರಮೌಢ್ಯವ ಹರಸಲಿ:
ಜ್ಞಾನಕೆಳಸಿ ತ್ರಿಶಂಕುವಾಗದ ತೆರದೊಳಾತನನಿರಿಸಲಿ!
*********


ಮಲೆನಾಡಿನ ಚಿತ್ರಗಳು : ಮನೆಯ ಶಾಲೆಯ ಐಗಳ ಮಾಲೆ

ಮನೆಯ ಶಾಲೆಯ ಐಗಳ ಮಾಲೆ
ನಾವು ತೀರ್ಥಹಳ್ಳಿಯ “ಸರ್ಕಾರೀ ಇಸ್ಕೂಲಿ”ಗೆ ಸೇರುವುದಕ್ಕಿಂತ ಮುಂಚೆ ಮನೆಮಹಡಿ ಕಾಲೇಜಿನಲ್ಲಿಯೆ ಪಾಂಡಿತ್ಯ ಸಂಪಾದನೆ ಮಾಡುತ್ತಿದ್ದುದು. ನಾವು ಅಂದರೆ ಯಾರು? ಸುಬ್ಬ, ಕಾಡು, ಓಬು, ತಿಮ್ಮು, ನಾನು. ಇವು ಮನೆಯ ಮುದ್ದಿನ ಹೆಸರುಗಳು. ಇವೇ ಸಂಪೂರ್ಣ ವಿಕಾಸ ಹೊಂದಿದರೆ, ಅಂದರೆ ವಸಂತ ಋತು ಹಿಡಿದುಕೊಂಡರೆ, ಸುಬ್ಬಯ್ಯ, ಕಾಡಣ್ಣ, ಓಬಯ್ಯ, ತಿಮ್ಮಯ್ಯ ಎಂದಾಗುವುವು. ‘ನಾನು’ ಮಾತ್ರ ‘ನಾನಯ್ಯ’ವಾಗುವುದಿಲ್ಲ. ಆದರೆ ಈ ಅರಳಿದ ದೊಡ್ಡ ಹೆಸರುಗಳು ಸ್ಕೂಲು ರಿಜಿಸ್ಟರುಗಳಿಗೂ ವಿವಾಹ ಪತ್ರಿಕೆಗಳಿಗೂ ಜೈಲುವಾರಂಟುಗಳಿಗೂ ಯೋಗ್ಯವಾದುವೆ ಹೊರತು ಬಡಪ್ರಬಂಧಗಳಿಗೆ ಯೋಗ್ಯವಾದುವಲ್ಲ ಎಂದು ನನ್ನ (ಜೀವಮಾನದಲ್ಲಿ ನನಗಿರುವ ಒಂದೇ!) ಮಹಾಭಿಪ್ರಾಯ.

ನಮ್ಮ ಮೊದಲನೆಯ ಐಗಳ ನಾಮಧೇನು ನನಗೆ ಮರೆತು ಹೋಗಿದೆ. ಮನಸ್ಸಿನ ದಿಗಂತದಲ್ಲಿ ಸ್ಮೃತಿ ಎಷ್ಟು ಅಲೆದಲೆದು ಅರಸಿದರೂ ಅವರ ಹೆಸರೇ ಅದಕ್ಕೆ ಸಿಕ್ಕುವುದಿಲ್ಲ. ಅಷ್ಟು ಪ್ರಾಮುಖ್ಯವಾದ ಹೆಸರು! ಅಂದರೆ ಇಷ್ಟು ಮಾತ್ರ ಚೆನ್ನಾಗಿ ಜ್ಞಾಪಕವಿದೆ. ಅವರು ಪಾತಾಳಲೋಕದವರು; ಅಂದರೆ ಕನ್ನಡಜಿಲ್ಲೆಯಿಂದ ಬಂದವರು ಎಂದರ್ಥ. ನಮ್ಮ ಕಡೆ ಕನ್ನಡಜಿಲ್ಲೆಯನ್ನು ಪಾತಾಳಲೋಕವೆಂದೂ, ಅಲ್ಲಿಂದ ಘಟ್ಟಹತ್ತಿ ಬರುವವರನ್ನೆಲ್ಲಾ ಪಾತಾಳಲೋಕದವರೆಂದೂ ಕರೆಯುವ ವಾಡಿಕೆ. ಈ ಹೆಸರು ಅವರಿಗೇಕೆ ಬಂತೆಂದರೆ, ಕನ್ನಡಜಿಲ್ಲೆಯಿಂದ ಕೂಲಿಯಾಳುಗಳನ್ನು ಮಲೆನಾಡಿಗೆ ಕರೆತುರವ ಸೇರೇಗಾರರು (ಮೇಸ್ತ್ರಿಗಳು) ಪ್ರಾಮಾಣಿಕತೆಯ ಪರಮಾವಧಿಯನ್ನು ಮುಟ್ಟಿದ ಆದರ್ಶಪ್ರಾಯರು! ಮರುವರ್ಷ ಕೂಲಿಯಾಳುಗಳನ್ನು ತರಲು ಮಲೆನಾಡಿನ ರೈತರು ಅವರಿಗೆ ಮುಂಗಡವಾಗಿ ಕೊಡುವ ಹಣಕ್ಕೆ ಯಾವಾಗಲೂ ಲೋಪವೇ! ಆದ್ದರಿಂದಲೆ ರೈತರು ಕನ್ನಡಜಿಲ್ಲೆಯವರನ್ನು ಮೋಸಗಾರರೆನ್ನುವ ಬದಲು ಪಾತಾಳಲೋಕದವರು ಎನ್ನುವುದು.

ನಮ್ಮ ಐಗಳು ವಿದ್ಯಾವಂತರಾಗಿದ್ದರಂತೆ. ಕಾಗದ ಬರೆಯುವುದಕ್ಕೆ ಕೂಡ ಬರುತ್ತಿತ್ತಂತೆ. ಅವರು ಯಾವಾಗಲೂ ಉಪ್ಪರಿಗೆ ಮೇಲಿನ ಮಳಿಗೆಯೊಳಗೆ ಮಲಗಿಯೇ ಇರುತ್ತಿದ್ದರು. ಈಗಾದರೆ ಶುದ್ಧಸೋಮಾರಿ ಎಂದುಬಿಡುತ್ತಿದ್ದೆವು; ಆಗ ನಮಗೆಲ್ಲಾ ಅವರನ್ನು ಕಂಡರೆ ತುಂಬಾ ‘ಗೌರವ’. ಹುಲಿ ಕಂಡಾಗ ಗೋವಿಗಿರುವ ‘ಗೌರವ’. ಅದೂ ಅಲ್ಲದೆ ಜ್ಞಾನದ ಪರಮಾವಧಿಯನ್ನು ಸೇರಿದ ನಮ್ಮ ಐಗಳಿಗೆ ಮಲಗುವುದೇ ಕರ್ತವ್ಯ ಎಂದು ಭಾವಿಸಿದ್ದ ನಮಗೆ ಅವರ ನಡತೆಯಲ್ಲಿ ಕುಂದೇನೂ ಕಂಡುಬರಲಿಲ್ಲ. ಅದೂ ಅಲ್ಲದೆ ಅವರ ಈ ತೆರನಾದ ದುರಭ್ಯಾಸ – ತಪ್ಪಾಯ್ತು! – ಒಳ್ಳೆಯ ಅಭ್ಯಾಸದಿಂದ ನಮಗೂ ಸ್ವಲ್ಪ ಉಪಯೋಗವಾಗುತ್ತಿತ್ತು.

ಉಪಯೋಗವೇನೂ ದೊಡ್ಡದಲ್ಲ. ಆದರೂ ಮಹತ್ತಾದದ್ದು. ಮಳಿಗೆಯ ಈಚೆಗೆ ನಾವು ಬರೆಯುವ ಶಾಲೆ – ನಮ್ಮ ಐಗಳ ಉಪನ್ಯಾಸ ಮಂದಿರ! ಆಗೇನು ಈಗಿನ ಹಾಗೆ ಸ್ಲೇಟು ಕಾಗದ ಮುಂತಾದ ಪರದೇಶದ ವಸ್ತುಗಳ ಮೇಲೆ ಬರೆಯುವ “ಕೆಟ್ಟ ಚಾಳಿ” ಇರಲಿಲ್ಲ. ದೇಶಾಭಿಮಾನ ಉಕ್ಕಿಹರಿಯುವ ಕಾಲ. ಆದ್ದರಿಂದಲೆ ನಾವೂ ಕೂಡ ಸ್ವದೇಶದ ವಸ್ತುವಾದ ಮರಳ ಮೇಲೆಯೆ ಅಕ್ಷರಾಭ್ಯಾಸ ಮಾಡಿದೆವು. (ಜೊತೆಗೆ ಗುರು ನಿಂದೆ ಮಾಡುವುದನ್ನೂ ಸ್ವಲ್ಪ ಅಭ್ಯಾಸ ಮಾಡಿದ್ದೆವು.)

ಒಬ್ಬೊಬ್ಬರಿಗೆ ಒಂದೊಂದು ಕಡೆ ಮರಳಿನ ಸ್ಲೇಟು! ನಮ್ಮ ಐಗಳು ಅ, ಆ, ಇ, ಈ, ಉ, ಊ, ಬರೆದುಕೊಟ್ಟು, ತಿದ್ದುವಾಗ ಕೈಬೆರಳುಗಳನ್ನು ಜೋಡಿಸುವ ರೀತಿಯನ್ನು ಕಾರ್ಯತಃ ತೋರಿಸಿಕೊಟ್ಟು, ಮರಳ ಮೇಲಿಟ್ಟು ಅದುಮಿ, ತಿಕ್ಕಿ, ಕಣ್ಣೀರುಬರಿಸಿ, ಎರಡು ಪೆಟ್ಟು ಕೊಟ್ಟು, ಚೆನ್ನಾಗಿ ಕೈತಿದ್ದಲು ಅಪ್ಪಣೆ ಕೊಟ್ಟು, ಮಳಿಗೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗುತ್ತಿದ್ದರು. ಇಷ್ಟೆಲ್ಲವನ್ನೂ ಅರೆನಿದ್ದೆಯಲ್ಲಿಯೇ ಮಾಡುತ್ತಿದ್ದರೋ ಏನೋ ಎಂದು ಈಗ ಸಂಶಯವಾಗುತ್ತದೆ.

ಒಂದು ದಿವಸ ಬೆಳಿಗ್ಗೆ, ಐಗಳ ಅಕ್ಷರಾಭ್ಯಾಸದ ಶಿಕ್ಷೆಗಳನ್ನೆಲ್ಲಾ ವಿಧಿಸಿ ಎಂದಿನಂತೆ ಕೋಣೆಗೆ ಹೋಗಿ ಮಲಗಿದರು. ಕಣ್ಣೀರು ಕರೆಯುತ್ತಾ, ಕೂದಲು ಕೆರೆಯುತ್ತಾ, ಮರಳಲ್ಲಿ ಬರೆಯುತ್ತಾ, ಬರೆದಿದ್ದನ್ನು ಮರೆಯುತ್ತಾ, ಕುಳಿತಿದ್ದ ಸುಬ್ಬು – ಅವನೇ ನಮ್ಮ ಮುಖಂಡ – ನಮ್ಮ ಕಡೆ ನೋಡಿ, ಕಣ್ಣು ಮಿಸುಕಿ ಸನ್ನೆ ಮಾಡಿದನು. ಸನ್ನೆಯ ಅರ್ಥ ಎಲ್ಲರಿಗೂ ಕರತಲಾಮಲಕವಾಗಿದ್ದಿತು. ನಾನುಮೆಲ್ಲಗೆ ತುದಿಗಾಲಿನಲ್ಲಿ ಶಬ್ದ ಮಾಡದಂತೆ ಎದ್ದುಹೋಗಿ ಮಳಿಗೆಬಾಗಿಲ ತೂತಿನಲ್ಲಿ ಒಳಗೆ ಇಣಿಕಿ ನೋಡಿದೆ. ಐಗಳು ಸಪ್ತಮ ಲೋಕದಲ್ಲಿ ಪಾಠ ಹೇಳುತ್ತಿದ್ದರು. ಗೊರಕೆ ಚೆನ್ನಾಗಿ ಕೇಳಿಸಿತು. ಹಿಂತಿರುಗಿ ಸನ್ನೇಮಾಡಿದೆ. ಎಲ್ಲರೂ ಮೆಲ್ಲಗೆ ಏಣಿಗಂಡಿ ಸೇರಿದೆವು. ಆ ಹಾಳು ಏಣಿ ಮೆಟ್ಟಲುಗಳು ಇಳಿಯುವಾಗ ಗಡ ಗಡ ಶಬ್ದ ಮಾಡುತ್ತಿದ್ದುವು! ಒಬ್ಬೊಬ್ಬರಾಗಿ, ಮೆಟ್ಟಲುಗಳು ಕಿರಿಚದ ರೀತಿಯಲ್ಲಿ ಇಳಿದೆವು. ಓಬುಇಳಿಯುವಾಗ ಮಾತ್ರ ಒಂದು ಮೆಟ್ಟಲು ಶಬ್ದಮಾಡಿತು. ಆದರೆ ಐಗಳು ದೇವರ ಕೃಪೆಯಿಂದ ಗಾಢನಿದ್ರೆಯಲ್ಲಿದ್ದರು. ಎಲ್ಲಾ ಇಳಿದ ಮೇಲೆ ಬಚ್ಚಿಟ್ಟಿದ್ದ ‘ನಾಗರಬಕ್ಕೆ’ ಹಲಸಿನ ಹಣ್ಣು ಪೂರೈಸಲೋಸ್ಕರ ಗಾಡಿಕೊಟ್ಟಿಗೆಗೆ ದಾಳಿಯಿಟ್ಟೆವು.

ನಾವು ಎರಡನೆಯ ತರಗತಿಗೆ ಬರುವಷ್ಟರಲ್ಲಿಯೆ ಸುಮಾರು ಹತ್ತು ಹದಿನೈದು ಜನ ಐಗಳ ಗುಂಪು ಬಂದುಹೋಗಿತ್ತು! ನಮ್ಮ ಉಪ್ಪರಿಗೆ ಕಾಲೇಜೇನು ಸಾಮಾನ್ಯವಾದುದೆ? ಅದರ ಪ್ರತಿಭಾಶಾಲಿಗಳಾದ ವಿದ್ಯಾರ್ಥಿಗಳು ನಾವೇನು ಪ್ರಾಕೃತರೆ? ಮೊದಲನೆಯ ಐಗಳು ಓಡಿಹೋದ ಮೇಲೆ ಮತ್ತೊಬ್ಬರು ಬಂದರು. ಸಾಧಾರವಾಗಿ ಐಗಳೆಲ್ಲಾ ಹೇಳದೆ ಕೇಳದೆ ಓಡಿ ಹೋಗುತ್ತಿದ್ದುದೆ ವಾಡಿಕೆ. ಎರಡನೆ ಐಗಳ ಹೆಸರು ಮಂಜಪ್ಪ ಐಗಳು ಅಂತ. ಸ್ವಲ್ಪ ಮುದುಕರು. ಅಂದರೆ ದೇವರ ದಯೆಯಿಂದ ಇನ್ನೂ ಅರವತ್ತು ವರ್ಷ ಆಗಿರಲಿಲ್ಲ. ಏಕೆಂದರೆ “ಅರವತ್ತು ವರ್ಷಕ್ಕೆ ಅರೆಮರಳು” ಎಂಬ ಗಾದೆ ಬಹು ಜನರ ವಿಷಯದಲ್ಲಿ ಸುಳ್ಳಾಗುವುದಿಲ್ಲ. ಮಂಜಪ್ಪ ಐಗಳು ನಮ್ಮ ಉಪ್ಪರಿಗೆ ಕಾಲೇಜಿಗೆ ಪ್ರೊಫೆಸರಾಗಿ ಬಂದವರು ಪುನಃ ಊರುಮುಖ ನೋಡಲೆ ಇಲ್ಲ. ನಮ್ಮ ಮನೆಯಲ್ಲಿಯೆ ರೇಷ್ಮೆ ಕಾಯಿಲೆಯಾಗಿ ಸತ್ತರು. ಅವರಿಗೆ ಕಾಯಿಲೆಯಾಗಿದ್ದಾಗ ನಮಗೆಲ್ಲಾ ರಜ. ಕಾಯಿಲೆ ಎಲ್ಲಿ ಬೇಗ ಗುಣವಾಗಿ ಬಿಡುವುದೊ ಎಂದು ನಮಗೆಲ್ಲಾ ಒಳಗೊಳಗೆ ಭಯ! ಇಂಥ ದುರಾಲೋಚನೆ ಬಹಳ ಪಾಪಕರವೆಂದು ಈಗ ತೋರುತ್ತದೆ. ಆಗ ಪಾಪದ ಆಲೋಚನೆಯೆ ತಲೆದೋರಿರಲಿಲ್ಲ: ನಮಗೆ ಮಂಜಪ್ಪ ಐಗಳ ಮೇಲೆ ಹೊಟ್ಟೆಕಿಚ್ಚು ಇರಲಿಲ್ಲ. ನಮಗೆ ಬೇಕಾಗಿದ್ದುದ ರಜ! ಐಗಳಿದ್ದರೆ ಸಜ; ಐಗಳೆದ್ದರೆ ರಜ! ಕಾಯಿಲೆ ಬಿದ್ದು ಹದಿನೈದು ದಿನಗಳೊಳಗಾಗಿ ಐಗಳು ಎದ್ದೇಬಿಟ್ಟರು. ಅವರ ಮರಣದಿಂದ ನಮಗೆಲ್ಲ ದುಃಖವಾಗದೆ ಇರಲಿಲ್ಲ.

ಒಂದು ದಿನ ಸಾಯಂಕಾಲ. ನಾವೆಲ್ಲಾ ಕಣದಲ್ಲಿ ಲಗ್ಗೆ ಆಟ ಆಡುತ್ತಿದ್ದೆವು. ನಮ್ಮ ತಂದೆ ಎಲ್ಲಿಗೋ ಹೊರಗೆ ಹೋಗಿದ್ದವರು ಬಂದರು. ಅವರ ಜೊತೆಗೆ ಇನ್ನೊಬ್ಬ ಹೊಸಬರನ್ನು ತಂದರು. ಯಾರೇ ಆಗಲಿ ಹೊಸಬರು ಮನೆಗೆ ಬಂದರೆ ನಮಗೆಲ್ಲಾ ದಿಗಿಲು! ಮತ್ತೊಬ್ಬ ಐಗಳು ಬಂದರೋ ಏನೋ ಎಂದು! ಒಂದು ದಿನ ಮನೆಗೆ ಒಬ್ಬ ಹೊಸ ಕೂಲಿಯಾಳು ಬಂದನು. ಅವನನ್ನು ಕಂಡು ತಿಮ್ಮು, ಅವನೇ ಐಗಳು ಎಂದು ಭಾವಿಸಿ, (ಐಗಳಿಗೂ ಆಳುಗಳಿಗೂ ಹೆಚ್ಚೇನೂ ಭೇಧವಿರುತ್ತಿರಲಿಲ್ಲ) ಒಂದು ಕತ್ತಲೆ ಕೋಣೆಯೊಳಗೆ ಬಾಗಿಲು ಹಾಕಿಕೊಂಡು ಅಡಗಿಬಿಟ್ಟಿದ್ದನು. ಅವನನ್ನು ಹುಡುಕುವುದೆ ಕಷ್ಟವಾಯ್ತು!

ಲಗ್ಗೆ ಆಟ ಬಹಳ ಜೋರಿಗೇರಿದ್ದಿತು. ಆಟದ ಯೋಚನೆ ಹೊರತು ಬೇರೆ ಯಾವುದೂ ನಮ್ಮ ತಲೆಯಲ್ಲಿರಲಿಲ್ಲ. ನಮ್ಮ ಮನಸ್ಸಿಗೆ ಲಗ್ಗೆ ಆಟ ಒಂದೇ ಜಗತ್ತಿನ ವ್ಯಾಪಾರವೆಂದು ತೋರಿದ್ದಿತು. ಅಷ್ಟು ಹೊತ್ತಿಗೆ ಹೊಸ ಐಗಳು ಬಂದಿದ್ದಾರೆ ಎಂಬ ಭೀಕರವಾರ್ತೆ ಬಂದು ಮುಟ್ಟಿತು. ನಮ್ಮ ಎದೆಗೆ ಸಿಡಿಲು ಬಡಿದಂತಾಯಿತು. ಕ್ಷಣಮಾತ್ರದಲ್ಲಿ ಅದುವರೆಗೆ ನಾವಿದ್ದ ಲೀಲಾ ಪ್ರಪಂಚ ಒಡೆದು ಚೂರಾಗಿ ಪ್ರಳಯದಲ್ಲಿ ಮುಳುಗಿಹೋಯಿತು! ಇದುವರೆಗೆ ರಜ, ನಾಳೆಯಿಂದ ಸಜ, ಉಪ್ಪರಿಗೆ ಜೈಲಿನಲ್ಲಿ! ತಿಮ್ಮು ಬಿಕ್ಕಿಬಿಕ್ಕಿ ಅತ್ತೇಬಿಟ್ಟನು. ಆಗ ನಮಗಾದ ದುಃಖವನ್ನು ಅಳೆಯುವವರಾರು? ಉಲ್ಲಾಸದಿಂದ ರಂಜಿಸುತ್ತಿದ್ದ ಮುಖ ಮಂಡಲಗಳು ಕಳೆಯಿಲ್ಲದಾಗಿ ಕಪ್ಪಗಾದುವು. ನಮ್ಮ ಗತಿ ಮುಗಿಯಿತೆಂದು ತಿಳಿದು ಹೊಸ ಐಗಳ ‘ಹಾಳುಮೋರೆ’ ನೋಡಲು ಮನೆಯೊಲಗೆ ಮೆಲ್ಲಗೆ ಜಾರಿದೆವು.

ಹೊಸ ಐಗಳ ಹೆಸರು ನಾಗಪ್ಪಶೆಟ್ಟಿ. ಅವರೂರು ಉಡುಪಿಯಂತೆ. ನಮ್ಮ ತಂದೆ ಅಲ್ಲಿಗೆ ಹೋದಾಗ ನಾಗಪ್ಪ ಶೆಟ್ಟರ ‘ಸುಖನಿವಾಸ’ದಲ್ಲಿಯೆ ಊಟ ತಿಂಡಿ ಎಲ್ಲಾ ಮಾಡಿದ್ದರಂತೆ. ಈಗ ಹೋಟಲು ಪಾಪರಾಗಿ, ‘ಶೆಟ್ಟರು ಐಗಳು ಕೆಲಸಕ್ಕೆ ಬಂದಿದ್ದರು! ನಾಗಪ್ಪಶೆಟ್ಟರ ಐಗಳತನ ಐದು ದಿವಸ ನಡೆಯಿತು. ಆರನೆಯ ದಿನ ಭಾನುವಾರ ಸಂತೆಗೆ ಹೋಗಿ ಬರುತ್ತೇನೆಂದು ಹೇಳಿ ಕೊಪ್ಪಕ್ಕೆ ಹೋದರು. ಹೋದವರು ಬರದಿದ್ದರೆ ಸಾಕಲ್ಲಾ ಎಂದು ನಾವೆಲ್ಲಾ ತೋಟದಾಚೆ ಭೂತನಿಗೆ ಹೇಳಿಕೊಂಡು, ಬಾಳೆತೋಟಕ್ಕೆ ಹೋಗಿ ಚೆನ್ನಾಗಿ ಬೆಳೆದ ಒಂದು ಕರಿಬಾಳೆ ಗೊನೆಗೆ ಎಳೆ (ಮುಡುಪು) ಕಟ್ಟಿದೆವು.

ಸೋಮವಾರವಾಯಿತು. ಐಗಳು ಬರಲೇ ಇಲ್ಲ. ಮಂಗಳವಾರವೂ ಕಳೆಯಿತು. ಐಗಳ ಮೋರೆಯೇ ಇಲ್ಲ. ಬುಧವಾರವೂ ಆಯಿತು; ಐಗಳು ಓಡಿ ಹೋದರೆಂದು ನಿರ್ಣಯವೂ ಆಯಿತು. ನಮ್ಮ ಹಾರೈಕೆಯೂ ಕೈಗೂಡಿತು. ಐಗಳು ಓಡಿಹೋದ ಸಮಾಚಾರವನ್ನು ಕೇಳಿ ನಾವೆಲ್ಲಾ ಹಿಗ್ಗಿ ಹಿಗ್ಗಿ ಕುಣಿದೆವು. ಮತ್ತೆ ಎಂದಿನಂತೆ ಉಲ್ಲಾಸದಿಂದ ಜೀವಿಸತೊಡಗಿದೆವು.

ಆದರೆ ಭೂತನಿಗೆ ಕಟ್ಟಿದ ಮುಡುಪನ್ನು ಮಾತ್ರ ಸಲ್ಲಿಸಲೆ ಇಲ್ಲ. ಸುಬ್ಬು ಚೆನ್ನಾಗಿ ಬೆಳೆದ ಕರಿಬಾಳೆಗೊನೆಯನ್ನು ನೋಡಿ “ಅಯ್ಯೋ, ಹೋಗ್ರೊ, ಭೂತಕ್ಕೆ ಯಾರು ಕೊಡುತ್ತಾರೆ, ಇಷ್ಟು ಚೆನ್ನಾಗಿ ಬೆಳೆದ ಗೊನೆಯನ್ನು? ಇದನ್ನು ನಾವೇ ಲಗಾಯಿಸಿಬಿಡೋಣ ಹಣ್ಣುಮಾಡಿಕೊಂಡು. ಭೂತಕ್ಕೆ ಬೇಕಾದರೆ ಇನ್ನೊಂದು ಗೊನೆಗೆ ಎಳೆಕಟ್ಟಿದರಾಯಿತು” ಎಂದನು. ತೋಟದಲ್ಲಿದ್ದ ಇನ್ನೊಂದು ಚಿಗುರು ಬಾಳೆಗೊನೆಗೆ ಎಳೆಕಟ್ಟಿದೆವು. ಎಳೆಕಟ್ಟುವುದೇನು ಬಹು ಸುಲಭ ಬಾಳೆಯ ಮರದಿಂದ ಒಣಗಿ ಜೋಲುಬಿದ್ದ ಎಲೆಗಳನ್ನು ಒಟ್ಟುಗೂಡಿಸಿ ಮರಕ್ಕೆ ದಟ್ಟಿ ಸುತ್ತಿದರಾಯಿತು! ಹೀಗೆಯೆ ಮರದಿಂದ ಮರಕ್ಕೆ ದಟ್ಟಿ ಬಿಗಿದೆವೆ ಹೊರತು, ಭೂತಕ್ಕೆ ಹರಕೆ ಒಪ್ಪಿಸಲೆ ಇಲ್ಲ. ಕರುಣಾಶಾಲಿಯಾದ ಭೂತ ಹುಡುಗರು ಎಂದು ಸುಮ್ಮನಾಯಿತೆಂದು ತೋರುತ್ತದೆ. ಅಥವಾ ಸುಬ್ಬು ಹೇಳಿದಹಾಗೆ ಕೈಯಲ್ಲಾಗಲಿಲ್ಲವೊ ಏನೊ, ಯಾರಿಗೆ ಗೊತ್ತು?

ಮುಮ್ಮಡಿ ಐಗಳು ಓಡಿಹೋಗಿ ನಾಲ್ವಡಿ ಐಗಳು ಬರುವಷ್ಟರಲ್ಲಿ ಮೂರು ತಿಂಗಳಾದುವು. ಈಅಂತರದಲ್ಲಿ ನಮ್ಮ ‘ಅಟಮಟ’ ಅತಿಯಾಯಿತು. ಮನೆಯಲ್ಲಿ ನಮ್ಮ ಕಿರುಕುಳ ತಡೆಯಲಾರದೆ ಹೋದರು. ನಮ್ಮ ಲೂಟಿಯೂ ಪುಂಡಾಟವೂ ಮಿತಿಮೀರಿದುವು.

ಸುಬ್ಬು, ಕಾಡು ಇಬ್ಬರಿಗೂ ನಶ್ಯಹಾಕುವ ಅಭ್ಯಾಸ. ದಿನವೂ ಅಜ್ಜಯ್ಯನ ಡಬ್ಬಿಯಿಂದ ನಶ್ಯ ಕುದಿಯುತ್ತಿದ್ದರು. ನಮ್ಮ ಅಜ್ಜಯ್ಯ ಹಾಕುತ್ತಿದ್ದುದು ಮಡ್ಡಿ ನಶ್ಯ ಅಂದರೆ ಉಂಡೆನಶ್ಯ. ಮಂಗಳೂರು, ಮದ್ರಾಸು ಈ ಊರುಗಳ ಪುಡಿನಶ್ಯವಲ್ಲ. ಅವರು ಸುಣ್ಣ, ಬೆಣ್ಣೆ ಎಲ್ಲಾ ಹಾಕಿ, ತಿಕ್ಕಿ, ನಶ್ಯದ ‘ಚುಟ್ಟ’ (ಚುಟಿಗೆ)ಗಳನ್ನು ಸಿದ್ಧಪಡಿಸಿ, ದಂತದ ಡಬ್ಬಿಯಲ್ಲಿ ಇಟ್ಟುಹೋಗುತ್ತಿದ್ದರು. ಆಗ ಇವರು ಮೆಲ್ಲಗೆ ಹೋಗಿ ಡಬ್ಬಿಯಿಂದ ಎರಡು ಮೂರು ‘ಚುಟ್ಟು’ಗಳನ್ನು ಹಾರಿಸಿಬಿಡುತ್ತಿದ್ದರು. ಅಜ್ಜಯ್ಯ ಮುದುಕರು. ಅಷ್ಟೇನು ಪರೀಕ್ಷೆ ಮಾಡಿ, ಲೆಕ್ಕ ನೋಡುತ್ತಿರಲಿಲ್ಲ. ಆದ್ದರಿಂದಲೇ ಕಳ್ಳರೂ ಸಿಕ್ಕಿಬೀಳುತ್ತಿರಲಿಲ್ಲ.

ಒಂದು ದಿವಸ ನಮಗೆ ಯಾರಿಗೂ ತಿಳಿಯದಂತೆ ಅಜ್ಜಯ್ಯನ ನಶ್ಯದ ಡಬ್ಬಿಯನ್ನೇ ಮಡ್ಡಿನಶ್ಯ ಸಮೇತ ಎಗರಿಸಿಬಿಟ್ಟರು. ಗುಲ್ಲು ಹಬ್ಬಿತು. ನಮ್ಮನ್ನೆಲ್ಲಾ ಕರೆದು ವಿಚಾರಣೆ ಮಾಡಿದರು. ನಾವೆಲ್ಲಾ “ನಮಗೆ ಗೊತ್ತೇ ಇಲ್ಲ” ಎಂದೆವು. ಕಾಡು, ಸುಬ್ಬು ಇಬ್ಬರೂ “ದೇವರಾಣೆಗೂ ತೆಗೆಯಲಿಲ್ಲ” ಎಂದುಬಿಟ್ಟರು. ಯಾರೋ ಆಳುಗಳು ಕದ್ದುಕೊಂಡಿರಬಹುದು ಎಂದು ನಮ್ಮನ್ನು ಪೊಲೀಸರು ವಿಚಾರಣೆಗೆ (ಅಂದರೆ ಹೊಡೆದು ಬಡಿದು ವಿಚಾರಿಸುವುದು) ಗುರಿ ಮಾಡಲಿಲ್ಲ. ಸುಬ್ಬು, ಕಾಡು ಇಬ್ಬರೂ ಮನದಲ್ಲಿಯೆ ಗೆದ್ದೆವಲ್ಲಾ ಎಂದು ಹಿಗ್ಗಿದರು. ಆಮೇಲೆ ನಮಗೆ ನಿಜಸ್ಥಿತಿಯನ್ನು ಗುಟ್ಟಾಗಿ ತಿಳಿಸಿದರು. ನಶ್ಯದ ಡಬ್ಬಿಯನ್ನು ತೋಟದ ಬಾಳೆ ಗಡ್ಡೆಯ ಬುಡದಲ್ಲಿ ಹುಗಿದು ಇಟ್ಟಿದ್ದರು. ಬೇಕಾದಾಗ ಯಾರೂ ಕಾಣದಂತೆ ಹೋಗಿ ನಶ್ಯ ತರುತ್ತಿದ್ದರು. ನಾನು ಸುಬ್ಬುವನ್ನು ಕುರಿತು “ಅಲ್ಲೋ ಸುಬ್ಬು, ‘ದೇವರಾಣೆಗೂ ಕದಿಯಲಿಲ್ಲ’ ಎಂದೆಯಲ್ಲೊ!” ಎಂದೆ; ಅದಕ್ಕೆ ಅವನು ಎಂದಿನಂತೆ ನಾಸ್ತಿಕನಾಗಿ “ಹೋಗೊ, ದೇವರಂತೆ, ಆಣೆಯಂತೆ. ಅದರಲ್ಲೆಲ್ಲಾ ಏನಿದೆಯೋ?” ಎಂದನು.

ಮತ್ತೊಂದು ದಿವಸ ಓಬು, ಒಳಗಿನ ಉಪ್ಪರಿಗೆಯಲ್ಲಿ ನಮಗೆಲ್ಲರಿಗೂ ಎಂದು ಬೆಲ್ಲ ಕದಿಯುತ್ತಿದ್ದವನು ಸಿಕ್ಕಿಬಿದ್ದ. ಆದರೆ ನಮ್ಮ ಪುಣ್ಯವಶದಿಂದಲೊ, ಅಥವಾ ದೇವರ ದಯದಿಂದಲೊ, ಅವನು ಆ ಪುಕಾರಿಗೆ ನಮ್ಮನ್ನೆಲ್ಲಾ ಸಿಕ್ಕಿಸಲಿಲ್ಲ. ಬೆನ್ನಮೇಲೆ ಒಂದಷ್ಟು ಕಡುಬು ಬಿದ್ದುವು. ಎಲ್ಲವನ್ನೂ ವೀರನಂತೆ ಸಹಿಸಿಯೆ ಬಿಟ್ಟ!

ಇನ್ನೊಂದು ದಿವಸ ನಾನು ಹಲಸಿನಮರ ಹತ್ತಿ ಕಾಲುತಪ್ಪಿ ಬಿದ್ದು ಮುಖ ಮೋರೆ ಒಡೆದುಕೊಂಡೆ. ಅದು ನನ್ನ ಅಜಾರಗಾರೂಕತೆಯಿಂದ ಆಗಲಿಲ್ಲ. ಆ ದೆವ್ವ ಹಲಸಿನಕಾಯಿಯಿಂದ ಆಗಿದ್ದು ತೊಟ್ಟು ಮುರಿಯಲು ನನ್ನ ಕಡೆಗೇ ಉರುಳಿ ಮೈಮೇಲೆ ಬಿದ್ದುಬಿಟ್ಟಿತು. ಭಾರ ತಡೆಯಲಾರದೆ ಕೆಳಗೆ ಬಿದ್ದೆ; ಹಲಸಿನ ಕಾಯಿಯೂ ನನ್ನನ್ನು ಹಿಂಬಾಲಿಸಿತು. ಆದರೆ ಮೈಮೇಲೆ ಬೀಳಲಿಲ್ಲ. ಬಿದ್ದಿದ್ದರೆ ನನ್ನ ಗತಿ ಮುಗಿಯುತ್ತಿತ್ತು.

ಹೀಗಾಗಿ ನಮ್ಮ ಹಾವಳಿ ತಡೆಯಲಾರದೆ, ಹುಡುಕಿ ಹುಡುಕಿ ಒಬ್ಬ ಐಗಳನ್ನು ತಂದರು. ಇವರು ಸ್ವಲ್ಪ ಸುಧಾರಿಸಿದವರಾದ್ದರಿಂದ ನಮಗೆಲ್ಲಾ “ಸಿಲೇಟು”, “ಸಿಲೇಟು ಕಡ್ಡಿ”ಗಳ ದರ್ಶನ ಮಾಡಿಸಿದರು. ಜೊತೆಗೆ ನಾವು ಎಂದೂ ಕಾಣದ ಬೀಡಿಗಳ ದರ್ಶನವನ್ನೂ ಮಾಡಿಸಿದರು. ಜೊತೆಗೆ ನಾವು ಎಂದೂ ಕಾಣದ ಬೀಡಿಗಳ ದರ್ಶನವನ್ನೂ ಮಾಡಿಸಿದರು! ಅವರು ಸೇದಿ ಬಿಸಾಡಿದ ಬೀಡಿತುಂಡುಗಳನ್ನು ನಾವು ಕ್ರಮೇಣ ಶೇಖರಿಸತೊಡಗಿದೆವು. ಅವರು ಅಕ್ಷರಗಳ ಜೊತೆಗೆ ಅಂಕಿಗಳನ್ನೂ ಹೇಳಿಕೊಟ್ಟರು; ನಶ್ಯಹಾಕುವುದರ ಜೊತೆಗೆ ಬೀಡಿಸೇದುವುದನ್ನೂ ಕಲಿಸಿಬಿಟ್ಟರು! ಒಂದು ದಿವಸ ಮಧ್ಯಾಹ್ನ, ಶೇಖರಿಸಿದ್ದ ಬಿಡಿತುಂಡುಗಳನ್ನೆಲ್ಲಾ ಸ್ನಾನದ ಮನೆಗೆ ತೆಗೆದುಕೊಂಡು ಹೋಗಿ ಹೊತ್ತಿಸಿ ಸೇದಿದೆವು. “ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗುತ್ತದೆ.” ಹೊಗೆ ಶ್ವಾಸಕೋಶಕ್ಕೆ ಹೋಗಿ ಎಲ್ಲರೂ ಗಟ್ಟಿಯಾಗಿ ಕೆಮ್ಮಲಾರಂಭಿಸಿದೆವು. ನಮ್ಮ ಕೆಮ್ಮುಗಳ ಆರ್ಭಟವನ್ನು ಆಲಿಸಿ, ಇದೇನು ಅವಾಂತರವೆಂದು ನೋಡಲು ನಮ್ಮ ಚಿಕ್ಕಯ್ಯ ಸ್ನಾನದ ಮನೆಗೆ ಬಂದರು. ಬೀಡಿ ತುಂಡುಗಳನ್ನೆಲ್ಲಾ ಒಲೆಗೆ ಹಾಕಿದರು. ನಮಗೆಲ್ಲಾ ಸರಿಯಾದ ಮರ್ಯಾದೆ ಆಯಿತು. ಐಗಳಿಗೂ ಆಯಿತೆಂದು ತೋರುತ್ತದೆ!

ನಮ್ಮ ನಾಲ್ವಡಿ ಐಗಳು ಬಹಳ ಗಟ್ಟಿಗರಾಗಿದ್ದರು. ರಾಮಾಯಣ ಭಾರತ ಚೆನ್ನಾಗಿ ಓದುತ್ತಿದ್ದರು; ಯಕ್ಷಗಾನ ಹಾಡುತ್ತಿದ್ದರು; “ಪ್ರಸಂಗ” ಮಾಡುತ್ತಿದ್ದರು; ಸಾರಾಯಿ ಕುಡಿಯುತ್ತಿದ್ದರು; ಜೂಜಾಡುತ್ತಿದ್ದರು. ನಮ್ಮ ಉಪ್ಪರಿಗೆ ಕಾಲೇಜಿನ ಯೋಗ್ಯತೆಗೆ ಅವರು ಮೀರಿದ್ದರಾದುದರಿಂದ ಅವರಿಗೆ ಬಹುಬೇಗ ರ್ಪೆರ್ಷ ಇಲ್ಲದೆ ರಿಟೈರಾಯಿತು.

ಹೀಗೆಯೆ ಕೆಲವು ಮಂದಿ ಐಗಳು ಬಂದುಹೋದರು. ನಮ್ಮ ವಿದ್ಯಾಭ್ಯಾಸ ಸಾಂಗವಾಗಿ ಸಾಗುತ್ತಿತ್ತು. ಕಡೆಗೆ ಮಂಗಳುರಿನಿಂದ ಆನಂದರಾಯರೆಂಬುವರು ಐಗಳಾಗಿ ಬಂದರು. ಅವರು ನವೀನ ವಿದ್ಯಾಭ್ಯಾಸ ಮಾಡಿದವರಾಗಿದ್ದರು. ಜಾತಿಯಲ್ಲಿ “ರೋಮನ್ ಕ್ಯಾಥೋಲಿಕ್” ರಾಗಿದ್ದರು. ಅವರೇ ನಮಗೆ “ಮೇಷ್ಟರು, ಸಾರ‍್” ಎಂಬ ಎರಡು ಪವಿತ್ರವಾದ ಇಂಗ್ಲೀಷು ಶಬ್ದಗಳನ್ನು ಉಪದೇಶಿಸಿ ನಮ್ಮನ್ನು ಆಧುನಿಕರನ್ನಾಗಿ ಮಾಡಿದ ಪುಣ್ಯಾತ್ಮರು! ಅವರು ಬಂದ ಮೇಲೆ ಐಗಳೆಲ್ಲಾ ಮೇಷ್ಟರಾದರು! ನಾವೆಲ್ಲಾ ಮ್ಲೇಚ್ಛರಾದೆವು. (?) ಅಂತೂ ಅವರನ್ನು ನಮ್ಮನಮ್ಮೊಳಗೆ ಮಾತಾಡಿಕೊಳ್ಳುವಾಗ ಮೇಷ್ಟೈಗಳು” ಎಂದೇ ಕರೆಯುತ್ತಿದ್ದೆವು. ಪ್ರಾಚೀನ ಆಧುನಿಕ ಎರಡೂ ಕೈಕೈ ಹಿಡಿದುಕೊಂಡೆ ಹೋಗಬೇಕಿಷ್ಟೆ? ಆ ನಿಯಮದ ಪ್ರಕಾರ “ಮೇಷ್ಟೈಗಳು” ಎಂಬುದು ತಪ್ಪಾಗುವುದೂ ಇಲ್ಲ; ಹಾಸ್ಯಾಸ್ಪದವಾಗುವುದೂ ಇಲ್ಲ.

ಆನಂದರಾಯರು ಭಗೀರಥ ಪ್ರಯತ್ನಮಾಡಿ ನಮಗೆಲ್ಲಾ ಪುಸ್ತಕಗಳ ಮುಖ ಸಂದರ್ಶನಮಾಡಿಸಿದರು. ಇಂಗ್ಲೀಷು ಅಕ್ಷರಮಾಲೆಯನ್ನು ಕಲಿಸಿದರು. ಇವರು ಇಂದಿನ ಐಗಳಂತೆ ಕಲ್ಲೆದೆಯ ಸೈತಾನರಾಗಿರಲಿಲ್ಲ. ಯದ್ವಾತದ್ವಾ ಹೊಡೆಯುತ್ತಿರಲಿಲ್ಲ. ಕಂಡಾಬಟ್ಟೆ ಬೈಯ್ಯುತ್ತಿರಲಿಲ್ಲ. ಇವರೇ ಮೊದಲು ನಮಗೆ ವಿದ್ಯಾಭ್ಯಾಸದಲ್ಲಿ ಆದರ, ಉತ್ಸಾಹ ಕುತೂಹಲ ಇವುಗಳನ್ನು ಹುಟ್ಟಿಸಿದ ಪ್ರಥಮ ಗುರುಗಳು. ಗಣಿತ ಹೇಳಿಕೊಟ್ಟರು. ಕಾಪೀಪುಸ್ತಕ ಕೊಂಡುಕೊಟ್ಟರು. ಆನಂದರಾಯರಲ್ಲಿ ನಮಗೆ ಆದರ ಹುಟ್ಟುವುದಕ್ಕೆ ಇನ್ನೊಂದು ಕಾರಣವುಂಟು. ಅದೇನೆಂದರೆ, ಅವರು ಪ್ರತಿದಿನವೂ ನಮಗೆ “ಯವನ ಯಾಮೀನಿಕಥೆ”ಗಳನ್ನು ಓದಿ ಹೇಳುತ್ತಿದ್ದರು. “ಯವನ ಯಾಮೀನಿ ಕಥೆ” ಗಳೆಂದರೆ ಆನಂದರಾಯರ ಬೈಬಲು! ಹಗಲೂ ರಾತ್ರಿ ಅವನ್ನು ಓದುತ್ತಿದ್ದರು. ಅವರಲ್ಲಿ ಇನ್ನೇನು ನವೀನತೆ ಇದ್ದಿತೆಂದರೆ ಅವರ “ಕ್ರಾಪು”. ನಾವು “ಹಳ್ಳಿಗಮಾರ” ಗಳಾಗಿದ್ದೆವು. “ಕ್ರಾಪು” ಕಂಡೂ ಇರಲಿಲ್ಲ, ಕೇಳಿಯೂ ಇರಲಿಲ್ಲ! ನಾವೆಲ್ಲ ಆಗ ಜುಟ್ಟಿನ ಜೆಟ್ಟಿಗಳಾಗಿದ್ದೆವು. ಜುಟ್ಟು ಕತ್ತರಿಸುವುದು ಪ್ರಾಯಶ್ಚಿತವೇ ಇಲ್ಲದ ಪಾಪದ ಕಾರ್ಯವೆಂದು ನಮ್ಮೂರಿನವರ ಭಾವನೆಯಾಗಿತ್ತು. “ಕ್ರಾಪು” ಬಿಟ್ಟವನು “ಕ್ರೈಸ್ತ”ನಾದನೆಂದು ತಿಳಿದಿದ್ದರು. ಈಗ ಮಾತ್ರ ಕ್ರಾಪಿನ ಪ್ರಭಾವ ಹೆಚ್ಚಿ ನಮ್ಮೂರಿನಲ್ಲಿ ಜುಟ್ಟಿಗೇ ಅಭಾವ!

ತಮ್ಮೂರಿನಲ್ಲೇನೋ ಕಷ್ಟಪ್ರಾಪ್ತಿ ಆದ್ದರಿಂದ ಆನಂದರಾಯರು ಮಂಗಳೂರಿಗೆ ಹೊರಟುಹೋದರು. ನಮಗೆ ಪುನಃ ರಜಾದಿನಗಳು ಬಂದುವು. ಆದರೆ ಈಗ ಹಿಂದಿನಂತೆ ರಜದಲ್ಲಿ ಅಷ್ಟುಅಭಿಲಾಷೆ ಇರಲಿಲ್ಲ. ಕೆಲವು ದಿನಗಳೊಳಗಾಗಿ ಬೆಂಗಳೂರಿನಲ್ಲಿ ಓದುತ್ತಿದ್ದ ನಮ್ಮ ಕಕ್ಕಯ್ಯ ಮತ್ತು ಅಣ್ಣಯ್ಯ ಇಬ್ಬರೂ ಬೇಸಿಗೆ ರಜಾಕ್ಕೆ ಮನೆಗೆ ಬಂದರು. ಅವರು ಬರುವಾಗ ಜೊತೆಯಲ್ಲಿ ವ್ಯಾಸರಾಯರೆಂಬುದವರನ್ನು ಕರೆತಂದರು. ಅವರು ಜಾತಿಯಲ್ಲಿ ಬ್ರಾಹ್ಮಣರಾಗಿದ್ದರು. ಅತಿ ಸಾಧುಗಳು. ತತ್ತ್ವಶಾಸ್ತ್ರದಲ್ಲಿ ಎಂ.ಎ. “ಡಿಗ್ರಿ” ಪಡೆದಿದ್ದರು. ಅಷ್ಟು ದೊಡ್ಡ ವಿದ್ವಾಮಸರು ನಮ್ಮ ಉಪ್ಪರಿಗೆ ಕಾಲೇಜಿಗೆ ಏಕೆ ಬಂದರೆಂಬ ರಹಸ್ಯ ಗೊತ್ತಾಗಲಿಲ್ಲ. ಎಲ್ಲಾ ಕೇಳಿ ತಿಳಿಯುವಾಗ ಅವರಿಗೆ ಸ್ವಲ್ಪ ಎಳಹುಚ್ಚು ಎಂದು ತಿಳಿಯಬಂದಿತು. “ಅತಿ ವಿದ್ಯೆ ಓದಿದರೆ ಅರೆ ಮರುಳಾಗುವರು” ಎಂಬ ನಮ್ಮೂರಿನವರಿಗಿದ್ದ ನಂಬಿಕೆ ಬಲವಾಗಿ ಬೇರೂರಿತು.

ವ್ಯಾಸರಾಯರು ನಿಜವಾಗಿಯೂ ಅರೆಮರುಳಾಗಿದ್ದರೆಂಬುದು ಮಾತ್ರ ಸಂದೇಹಾಸ್ಪದವಾದ ನಿರ್ಣಯ. ಪಾಯ, ತತ್ತ್ವಶಾಸ್ತ್ರವನ್ನು ಚೆನ್ನಾಗಿ ಓದಿ ಗ್ರಹಿಸಿದ್ದ ಅವರ ಆಚರಣೆ “ಹಳ್ಳಿಗಮಾರರಿಗೆ” ಹುಚ್ಚಿನಂತೆ ತೋರಿರಬಹುದು. ಹುಚ್ಚರೋ ಮರುಳರೋ ಏನೇ ಆಗಿರಲಿ ಅವರ ಸ್ಮರಣೆ ನನಗೆ ಈಗಲೂ ಆನಂದದಾಯಕ. ಅವರ ನೆನಪಾಯಿತೆಂದರೆ, ನನಗೆ ಏನೋ ಒಂದು ವಿಧವಾದ ಸಂತೋಷ; ಎದೆ ಭಕ್ತಿರಸ ಮಿಶ್ರವಾದ ಆದರದಿಂದ ಹಿಗ್ಗುತ್ತದೆ.

ಹುಚ್ಚೋ, ಮರುಳೋ, ಅಂತೂ ವ್ಯಾಸರಾಯರು ನಮಗೆ ಮೇಷ್ಟರಾದರು. ಅವರ ಐಗಳತನದಲ್ಲಿ ಆಡಿಕೆಗೂ ಓದಿಕೆಗೂ ಭೇದವೇ ತೋರಲಿಲ್ಲ. ಅವರಲ್ಲಿ ನಮಗೆ ಅತಿ ಸಲಿಗೆ; ಅವರೊಡನೆ ಯಾವಾಗಲೂ ನಮಗೆ ಹರಟೆ, ಆಟ; ಪಾಠದ ಮಾತೇ ಇಲ್ಲ. ತತ್ತ್ವಶಾಸ್ತ್ರದಲ್ಲಿ ಎಂ.ಎ. ಡಿಗ್ರಿ ಪಡೆದ ಆದರ್ಶಜೀವಿಯನ್ನು, ಒಂದನೇ ಎರಡನೇ ತರಗತಿಯಲ್ಲಿ ಒದ್ದಾಡುವ ಹಳ್ಳಿ ಹುಡುಗರಿಗೆ ಪಾಠ ಹೇಳಲು ಬಿಟ್ಟರೆ ಏನು ಪಾಠ ಹೇಳಿಯಾನು? ವ್ಯಾಸರಾಯರು ಸಿಗರೇಟು ಸೇದುತ್ತಿದ್ದರು. ನಾವು ತುಂಡುಗಳನ್ನು ಆಯ್ದು ಸೇದಿದೆವು. ಅವರಂತೂ ನಾವು ತುಂಡುಗಳನ್ನು ಆಯುವುದನ್ನು ಕಂಡರೂ ನಕ್ಕುಬಿಟ್ಟು ಸುಮ್ಮನಿರುತ್ತಿದ್ದರು. ನಮಗಂತೂ ಹಾರುವ ಮಂಗಕ್ಕೆ ಏಣಿ ಹಾಕಿಕೊಟ್ಟಂತಾಯಿತು! ಮೇಷ್ಟರು ದೊಡ್ಡ ದೊಡ್ಡ ಕೊಬ್ಬಿ ಬೊಜ್ಜು ಬೆಳೆದ ಗ್ರಂಥಗಳನ್ನು ಓದುತ್ತಾ ತಲ್ಲೀನರಾಗಿ ಬಿಡುತ್ತಿದ್ದರು. ಉಪ್ಪರಿಗೆಯಲ್ಲಿ ನಾವು ಮಾಡಿದ್ದೇ ಮಾಟ, ಆಡಿದ್ದೇ ಆಟ! ಹೆಚ್ಚೇನು? ವ್ಯಾಸರಾಯರ ಕಾಲದಲ್ಲಿ ಮಹಡಿಯ ಕಾಲೇಜೇ ಆಟದ ರಂಗವಾಯಿತು.! ಆಟವೇ ಪಾಠವಾಯಿತು! “ವ್ಯಾಸರಾಯರೇ ಯಾವಾಗಲೂ ಮೇಷ್ಟರಾಗಿರಲ್ಲಪ್ಪ” ಎಂದು ದಿನವೂ ನಾವು ದೇವರನ್ನು ಬೇಡುತ್ತಿದ್ದೆವು. ಈಗಲೂ ಕೂಡ ವ್ಯಾಸರಾಯರನ್ನು ಗುರುಗಳಾಗಿ ತೆಗೆದುಕೊಳ್ಳಲು ಸಿದ್ದನಾಗಿದ್ದೇನೆ. ಅದರಲ್ಲಿ ನನ್ನ ಗೌರವಕ್ಕೇನೂ ಕುಂದಿಲ್ಲ. ವ್ಯಾರಾಯರು ಎಲ್ಲಿಯೇ ಇರಲಿ, ಬದುಕಿರಲಿ, ಸತ್ತಿರಲಿ, ಇಹದಲ್ಲಿರಲಿ, ಪರದಲ್ಲಿರಲಿ, ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಭಕ್ತಿಯಿಂದ ನಿವೇದಿಸುತ್ತೇನೆ. ಅವರು ಮಹನೀಯರು, ಜ್ಞಾನಿಗಳು, ಋಷಿಗಳು! ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ಎಂಬಂತೆ “ಹಳ್ಳಿಗಮಾರರು” ವ್ಯಾಸರಾಯರ ಮಹಿಮೆ ಘನಶೀಲಗಳನ್ನು ಅರಿಯದೆ ಅವರನ್ನು ಅರೆಮರುಳರ ಗುಂಪಿಗೆ ಸೇರಿಸಿದ್ದರು. ಪಾಠಕಮಹಾಶಯ ಇಲ್ಲಿಗೆ ಐಗಳ ಮಾಲೆ ಮುಗಿಸುತ್ತೇನೆ. ನಿಮಗೂ ಬೇಸರವಾಗಿರಬಹುದು. ಒಂದು ವೇಳೆ ನಿಮಗಾಗದಿದ್ದರೂ ನನಗಾಗಿದೆ! ನಮಸ್ಕಾರ!

  ಮುಂದಿನ ಭಾಗ : http://kannadadeevige.blogspot.cmo/p/blog-page_87.html  ತೋಟದಾಚೆಯ ಭೂತ


*********

ಮಲೆನಾಡಿನ ಚಿತ್ರಗಳು : ಪುಟ್ಟಾಚಾರಿಯ ಕಾಡುಕೋಳಿ

ಪುಟ್ಟಾಚಾರಿಯ ಕಾಡುಕೋಳಿ
ಪುಟ್ಟಾಚಾರಿಯನ್ನು ನಾವು ನೋಡಿದ್ದೆ. ಎಷ್ಟೋ ಸಾರಿ ಅವನೊಡನೆ ಹರಟೆ ಹೊಡೆದಿದ್ದೆ. ಚಿಕ್ಕವನಾಗಿದ್ದ ನನಗೆ ಅವನ ಹರಟೆಗಳು ರಾಮಾಯಣ ಮಹಾಭಾರತಗಳಂತೆಯೆ ಮನೋಹರವಾಗಿದ್ದುವು. ಅವನ ಹರಟೆ ಎಂದರೆ ಕಾಡು ಹರಟೆಗಳಲ್ಲ; ಕಾಡಿನ ಹರಟೆಗಳು. ನಮ್ಮೂರಿನಲ್ಲಿ ಅವನೊಬ್ಬ ದೊಡ್ಡ ಬೇಟೆಗಾರನಾಗಿದ್ದ. ಅವನದು ನುರಿತ ಕೈ. ಇಟ್ಟ ಗುರಿ ತಪ್ಪುತ್ತಿರಲಿಲ್ಲ. ಪ್ರಾಣಿ ಎಷ್ಟ ವೇಗವಾಗಿ ಹಳುವಿನ ನಡುನಡುವೆ ಮಿಂಚಿ ಬಂದರೂ ಪುಟ್ಟಾಚಾರಿಯ ಕಂಡಿ ಅದರ ಭಾಗಕ್ಕೆ ಸಾವಿನೂರಿಗೆ ಹೆಬ್ಬಾಗಿಲಾಗಿಯೆಬಿಡುತ್ತಿತ್ತು. ಪುಟ್ಟಾಚಾರಿಯ ಈಡು ಎಂದರೆ ಎಲ್ಲಿರಗೂ ಭರವಸೆ. ಒಂದು ವೇಳೆ ಅವನು ಹುಸಿಯಿಡು ಹೊಡೆದರೂ ಅವನನ್ನು ಯಾರೂ ಅಸಡ್ಡೆ ಮಾಡುತ್ತಿರಲಿಲ್ಲ. “ಪ್ರಾಣಿಯ ಸುಕೃತ ಚೆನ್ನಾಗಿತ್ತು” ಎಂದು ಹೇಳಿ. ಗುಂಡು ತಪ್ಪಿದ್ದಕ್ಕೆ ಆಶ್ಚರ್ಯಪಡುತ್ತಿದ್ದರೆ ಹೊರತು ಅವನನ್ನು ದೂರುತ್ತಿರಲಿಲ್ಲ.

ನನಗಿನ್ನೂ ತೆಳ್ಳಗೆ ನೀಳವಾಗಿದ್ದ ಅವನ ಆಕೃತಿ ಕಣ್ಣಿಗೆ ಕಟ್ಟಿದಂತಿದೆ. ಆ ಜಿಡ್ಡುಜಿಡ್ಡಾಗಿರುತ್ತಿದ್ದ ಅವನ ಹಾಸನದ ಟೋಪಿ; ಕೊಳೆಯಿಂದ ಹೊಳೆಯುತ್ತಿದ್ದ, ನೀರು ಬಿದ್ದರೆ ಹೀರದೆ ಸಿಡಿಯುತ್ತಿದ್ದ ಅವನ ಹರಕಲು ಅಂಗಿ; ಯಾವಾಗಲೂ ಮೊಳಕಾಲಿನ ಮೇಗಡೆಗೇ ಇರುತ್ತಿದ್ದ ಅವನ ಸೊಂಟದ ಪಂಚೆ; ಎಡಭುಜದಿಂದ ಬಲಪಕ್ಕೆಯ ಮೇಲೆ ನೇತಾಡುತ್ತಿದ್ದ ಅವನ ಕೋವಿಯ ಚೀಲ; ನಡೆದಾಗ ಅದರೊಳಗೆ ಕಣಿಕಣಿಗುಟ್ಟುತ್ತಿದ್ದ ಈಡಿನ ಸಾಮಾನುಗಳು; ಮಾತಾಡಿದರೆ ಹೊರಹೊರಡುತ್ತಿದ್ದ ಕವರ್ಗ ಪಂಚಮಾಕ್ಷರದ ಧ್ವನಿ; ಆ ಹಳೆಯ ಟೊಪ್ಪಿಗೆಯಿಂದ ನಿರ್ಲಕ್ಷವಾಗಿ ಹೊರಟಿರುತ್ತಿದ್ದ ಎಣ್ಣೆಕಾಣದ ಕೆದರುಗೂದಲು; ಮಲೆನಾಡಿನ ಪದ್ಧತಿಯಂತೆ ಕಿವಿಗಳಲ್ಲಿ ಮಿರುಗುತ್ತಿದ್ದ ಲೋಹದ ಒಂಟಿಗಳು; ಚಪ್ಪಟೆಯಾದ ಮೊರಡು ಮುಖ, ನೀಳವಲ್ಲದ ಮೂಗು; ಅವಿತುಕೊಂಡಿದ್ದರೂ ಕಾಂತಿಯಿಂದ ತೀಕ್ಷ್ಣವಾಗಿದ್ದ ಕಣ್ಣುಗಳು! ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ ಆ ನಮ್ಮೂರ ಕಮ್ಮಾರ ಬೇಟೆಗಾರನ ಚಿತ್ರ!

ಅವನು ಕಬ್ಬಿಣದ ಕೆಲಸದವನು. ನಾನು ಎಷ್ಟೋ ಸಾರಿ ಅವನ ಕಮ್ಮಾರ ಸಾಲೆಗೆ ಹೋಗಿ, ಅವನು ಕಬ್ಬಿಣ ಕಾಸಿ ಬಡಿದಾಗ ಹಾರುತ್ತಿದ್ದ ಕೆಂಗೆದರುಗಿಡಿಗಳನ್ನು ನೋಡಿ ದೂರದೂರ ಓಡಿಹೋಗಿ ನೆಗೆದಾಡಿ ಕೈ ಚಪ್ಪಾಳೆ ಹೊಡೆದು ಕುಣಿಯುತ್ತಿದ್ದೆ. ಕಬ್ಬಿಣವನ್ನು ಕೂಡ ನೀರುಮಾಡಿ ಬಡಿಯುತ್ತಿದ್ದುದರಿಂದ ನನಗೆ ಅವನಲ್ಲಿ ಏನೋ ಒಂದು ವಿಧವಾದ ಗೌರವವಿತ್ತು. ನನ್ನ ಜೀವಿತಯಾತ್ರೆಯಲ್ಲಿ ಪುಟ್ಟಾಚಾರಿಯಂತಹ ಇನ್ನೆಷ್ಟೋ ಜನರು ಕಣ್ಣೆದುರು ಬಂದು ಹೋಗಿದ್ದಾರೆ. ಆದರೆ ಅನೇಕರನ್ನು ಮರೆತುಬಿಟ್ಟಿದ್ದೇನೆ. ಪುಟ್ಟಾಚಾರಿಯನ್ನು ಮಾತ್ರ ಮರೆತಿಲ್ಲ. ಅವನ ವ್ಯಕ್ತಿತ್ವದಲ್ಲಿ ಏನೋ ಒಂದು ವಿಶೇಷವಿತ್ತೆಂದು ತೋರುತ್ತದೆ. ಅವನು ತನ್ನ ಅರಣ್ಯ ಸಾಹಸಗಳನ್ನು ಕುರಿತು ಕತೆ ಹೇಳಲು ತೊಡಗಿದನೆಂದರೆ ಹುಡುಗರಾದ ನಾವಂತೂ ಇರಲಿ, ದೊಡ್ಡವರಾದವರೂ ಕೂಡ ಕಣ್ದೆರದು ಕೇಳುತ್ತಿದ್ದರು. ಅವನ ವಾಣಿಯಲ್ಲಿ ಅದೇನೋ ಒಂದು ಆಕರ್ಷಣಶಕ್ತಿಯಿತ್ತೆಂದು ತೋರುತ್ತದೆ.

ಅವನು ಸತ್ತು ಹತ್ತು ಹನ್ನೆರಡು ವರುಷಗಳಾಗಿ ಹೋದುವು. ಅನೇಕರಂತೆ ಅವನೂ ಸತ್ತುಹೋದನು. ಆ ಬಡವನ ಮರಣ ಪತ್ರಿಕೆಗಳ ಶ್ರೀಮಂತ ದೃಷ್ಟಿಗೆ ಬೀಳಲಿಲ್ಲ. ನಮ್ಮೂರಿನವರು ಕೂಡ ಅವನು ಸತ್ತ ತರುವಾಯ ಕೆಲವು ದಿನಗಳು ಮಾತ್ರ ಅವನ ವಿಚಾರ ಮಾತಾಡುತ್ತಿದ್ದರು. ಆಮೇಲೆ ಜಗತ್ತಿನ ಇತರ ವ್ಯಾಪಾರಗಳ ಪ್ರವಾಹ ಮನೋರಾಜ್ಯದಲ್ಲಿ ಹರಿದುಬಂದುದರಿಂದ ಆ ಬಡವ ಸುಪ್ತಚಿತ್ತದ ವೈತರಣೀನದಿಯಲ್ಲಿ ಮುಳುಗಿಹೋದನು. ಹೋದವರೆಲ್ಲ ಕಂಡಿರುವ, ಇರುವವರಾರೂ ಕಾಣದ, ಹೋಗುವರೆಲ್ಲ ಕಾಣುವ, ಮೇರೆಯನ್ನೇ ಕಾಣದ, ಮಾಯೆಯ ಕಡಲಿಗೆ ತೃಣದಂತೆ ತೇಲಿಹೋದನು.

ಪುಟ್ಟಾಚಾರಿಯ ಅಂತ್ಯ ಅತ್ಯಂತ ಶೋಚನೀಯವಾಗಿತ್ತು. ಯಾವನ ಇಚ್ಚಿಗೆ ಕಬ್ಬಿಣವೂ ತಲೆಬಾಗುತ್ತಿತ್ತೋ ಅಂತಹನು ಅಣಬೆಯಂತೆ ಹುಳು ತಿಂದು ಕೊಳೆತು ತೀರಿಕೊಂಡನು. ಹೊಟ್ಟೆಯಲ್ಲಿ ಏನೋ ಒಂದು ಬಾವೆದ್ದು ಬಹಳ ಕಾಲ ನರಳಿದನು. ಆ ಕಾಡಿನಲ್ಲಿ ಡಾಕ್ಟರುಗಳಿರಲಿಲ್ಲ. ಹಳ್ಳಿಯ ವೈದ್ಯರು ಊಹೆಯ ಮೇಲೆ ಮದ್ದು ಕೊಟ್ಟರು. ರೋಗಿಯು ಚರ್ಮಮಾತ್ರ ಆವೃತವಾದ ಅಸ್ಥಿಪಂಜರವಾದನು. ನೋಡಿಕೊಳ್ಳುವುದಕ್ಕೆ ಹೆಂಡಿರು ಮಕ್ಕಳು ಯಾರೂ ಇರಲಿಲ್ಲ. ಅವನು ಏಕಾಂಗಿಯಾಗಿದ್ದನು. ಎಲ್ಲರನ್ನೂ ಕಳೆದುಕೊಂಡಿದ್ದನು. ಇತರರು ಶುಶ್ರೂಷೆ ಮಾಡಿದರು, ದನಕರುಗಳಿಗೆ ಮಾಡುವಂತೆ. ಅವರ ಸುಶ್ರೂಷೆಯಲ್ಲಿ ನಿಷ್ಕಾಮಕರ್ಮ ಚೆನ್ನಾಗಿ ತೋರುತ್ತಿತ್ತು. ಮಳೆಗಾಲದಲ್ಲಿ ಒಂದು ದಿನ ಪ್ರಕೃತಿಯೆಲ್ಲ ಘೋರವಿಷಣ್ಣವಾಗಿದ್ದ ಸಮಯದಲ್ಲಿ ಜಗನ್ಮಾತೆ ಪುಟ್ಟಾಚಾರಿಯನ್ನು ತಬ್ಬಲಿಭೂಮಿಯಿಂದ ಎತ್ತಿಕೊಂಡು ಹೋದಳು. ಅನೇಕರು ಶಾಸ್ತ್ರಕ್ಕಾಗಿ ಶೋಕವನ್ನು ನಟಿಸಿದರು. ಒಬ್ಬರೂ ಕಣ್ಣೀರು ಸುರಿಸಲಿಲ್ಲ. ಜಡಿಮಳೆ ಮಾತ್ರ ಹೋಗ ಎಂದು ಸುರಿಯುತ್ತಿತ್ತು.

ಅವನು ತೀರಿಹೋದ ಮೇಲೆ ಜನರು ಏನೇನೋ ಮಾತಾಡಿಕೊಂಡರು. ಅವನು ಗೋಹತ್ಯ ಮಾಡಿದ ಪಾಪಕ್ಕಾಗಿಯೆ ಆ ರೀತಿ ಕೊಳೆತು ಸತ್ತನು ಎಂದರು. ಅವನು ಎಷ್ಟೋ ಕಾಡುಪ್ರಾಣಿಗಳನ್ನು ಕೊಂದಿದ್ದನು. ಮಾಂಸಾಹಾರಿಗಳಾದ ನಮ್ಮೂರಿನವರು ಅದನ್ನು ಪಾಪವೆಂದು ಪರಿಗಣಿಸಲಿಲ್ಲ. “ಕೊಂದ ಪಾಪ ತಿಂದ ಪರಿಹಾರ!” ಎಂದು ಧರ್ಮಶಾಸ್ತ್ರವಿಎಯಂತೆ. ಆದರೆ ಪುಟ್ಟಾಚಾರಿ ಪ್ರಮಾದದಿಂದ ಎರಡು ಗಾಡಿಯೆತ್ತುಗಳನ್ನು ಗುಂಡು ಹೊಡೆದು ಕೊಂದಿದ್ದನು. ಆ ಪಾಪದಿಂದಲೇ ಅವನು ಹಾಗೆ ಸತ್ತನೆಂದು ಜನರು ನಿರ್ಣಯಿಸಿದರು.

ಅವನು ಮಾಡಿದ ಗೋಹತ್ಯೆಯ ಉಪಾಖ್ಯಾನವನ್ನು ನಿಮಗೆ ಸಂಕ್ಷೇಪವಾಗಿ ಹೇಳಿಬಿಡುತ್ತೇನೆ.

ಪುಟ್ಟಾಚಾರಿ ಒಂದು ದಿನ ತಿಂಗಳು ಬೆಳಕಿನ ರಾತ್ರಿಯಲ್ಲಿ ನಡುಗಾಡಿನಲ್ಲಿದ್ದ ಒಂದು ಹಣ್ಣಿನ ಮರಕ್ಕೆ ಮರಸಿಗೆ ಹೋದನು. ಆ ಹಣ್ಣಿನ ಮರಕ್ಕೆ ಕಡವೆಗಳು ಬರುತ್ತಿದ್ದವು. ನಡುರಾತ್ರಿಯಲ್ಲಿ ಅವನು ನಿದ್ದೆಗೆಟ್ಟು ತಲೆ ಸರಿಯಿಲ್ಲದೆ ಅರೆ ಎಚ್ಚತ್ತು ಕುಳಿತಿದ್ದಾಗ ಪಕ್ಕದ ಊರಿನ ಶೇಷಣ್ಣನ ಗಾಡಿಯೆತ್ತುಗಳೆರಡು ಮೇಯುತ್ತ ಮೇಯುತ್ತ ಅರಣ್ಯ ಮಧ್ಯದಲ್ಲಿದ್ದ ಆ ಹಣ್ಣಿನ ಮರಕ್ಕೆ ಬಂದುವು. ಮೊದಲು ಒಂದು ಎತ್ತು ಬಂತು. ಆ ಹುಳುವಿನಲ್ಲಿ, ಆ ಮಾಯಕಾರಿಯಾದ ನೆರಳುನೆರಳಾದ ಬೆಳ್ದಿಂಗಳಲ್ಲಿ ಪುಟ್ಟಾಚಾರಿಯ ಕಣ್ಣಿಗೆ ಕಡವೆಯೇ ಬಂದಂತಾಯಿತು. ಒಂದು ಗುಂಡು ಹೊಡೆದನು. ಪ್ರಾಣಿ ಬಿತ್ತು. ಪುಟ್ಟಾಚಾರಿ ಮರದ ಅಟ್ಟಣೆಯ ಮೇಲೆಯೇ ತನ್ನ ಕೇಪಿನ ಕೋವಿಗೆ ಈಡು ತುಂಬಿ ಕೆಳಗಿಳಿಯಬೇಕು ಎನ್ನುವಷ್ಟರಲ್ಲಿ ಮತ್ತೊಂದು ಎತ್ತೂ ಬಂದಿತು. ಕಡವೆ ಬಿತ್ತೆಂದು ಹಿಗ್ಗಿಹೋಗಿದ್ದ ಅವನಿಗೆ ಸಾಕಾದಷ್ಟು ವಿವೇಕವಿರಲಿಲ್ಲ. ಮತ್ತೊಂದು ಕಡವೆ ಬಂತೆಂದು ತಿಳಿದು ಅದಕ್ಕೂ ಒಂದು ಗುಂಡು ಹೊಡೆದನು. ಅದೂಬಿತ್ತು. ಬೇಟೆಗಾರ ಪರಮ ಸಂತೋಷದಿಂದ ಮರಸಿನಿಂದ ಇಳಿದುಹೋಗಿ ನೋಡಿದನು. ಬಹಳ ಗೋಳಾಡಿ ಕಣ್ಣೀರು ಸುರಿದನು. ಬಸವಣ್ಣನನ್ನು ಕೊಂದೆನಲ್ಲಾ ಎಂದು ಅತಿಯಾಗಿ ಪಶ್ಚಾತ್ತಾಪಟ್ಟನು. ಪಶ್ಚಾತ್ತಾಪವೇ ಸರ್ವೋತ್ತಮವಾದ ಪ್ರಾಯಶ್ಚಿತ್ತ ಎಂದು ಹೇಳಿದ ಯೇಸುಕ್ರಿಸ್ತನ ವಾಕ್ಯ ಸತ್ಯವಾದರೆ ಪುಟ್ಟಾಚಾರಿ ಗಂಗಾಸ್ನಾನ ಮಾಡಿದನೆಂದೇ ಭಾವಿಸಬೇಡವೆ? ಜನಗಳು ಅವನನ್ನು ಬಾಯಿಗೆ ಬಂದಂತೆ ಬಯ್ದರು. ಊರ ಪಟೇಲರು ಶೇಷಣ್ಣನಿಗೆ ಅವನಿಂದ ದಂಡ ಕೊಡಿಸಿದರು. ಆದರೂ ಜನರ ಬಾಯಿ ನಿಲ್ಲಲಿಲ್ಲ. “ನಿನಗೆ ದುರ್ಮರಣವಾಗುತ್ತೆ; ನೀನು ಕೊಳತೇ ಸತ್ತು ಹೋಗುವೆ” ಎಂದೆಲ್ಲ ಪುಟ್ಟಾಚಾರಿಗೆ ಹೇಳಿದರು. ಪಾಪ, ಅವನಿಗೂ ಮೂಢ ಭಕ್ತಿ! ನಂಬಿದನು! ಬಹುಶಃ ಅವನ ನಂಬಿಕೆಯೇ ಅವನನ್ನು ಕಡೆಗಾಲದಲ್ಲಿ ಪೀಡಿಸಿತೆಂದು ತೋರುತ್ತದೆ. ಸಾವಿರಾರು ಪ್ರಾಣಿಗಳನ್ನು ನಿರ್ಲಕ್ಷವಾಗಿ ಸುಟ್ಟು ಹಾಕುತ್ತಿದ್ದ ಅವನು ಗೋಹತ್ಯೆಯಿಂದಲೇ ಮಹಾ ಪಾಪ ಎಂದುನಂಬಿಬಿಟ್ಟನು. ಅವನು ಭಗವದ್ಗೀತೆ ಓದಿರಲಿಲ್ಲ.

ಅಂತೂ ಪುಟ್ಟಾಚಾರಿ ಕಡೆಗಾಲದಲ್ಲಿ ದಿಕ್ಕಿಲ್ಲದೆ ನರಳಿ ನರಳಿ ಮನೆಗೆ ಹೋದನು. ಜನರು ಅವನು ಮಾಡಿದ ಒಂದೇ ಒಂದು ಪಾಪವನ್ನು ನೆನಪಿನಲ್ಲಿ ಇಟ್ಟುಕೊಂಡರೆ ಹೊರತು, ಪುಣ್ಯಕಾರ್ಯಗಳೆಲ್ಲ ಮರತೇ ಬಿಟ್ಟರು. ಅವನು ಎಷ್ಟು ಹುಲಿಗಳನ್ನು ಹೊಡೆದು ಕೊಂದಿದ್ದ! ಒಂದುಹುಲಿಯನ್ನು ಕೊಂದರೆ ಕಡೆಯ ಪಕ್ಷ ಐವತ್ತು ಗೋವುಗಳನ್ನು ಕಾಪಾಡಿದಂತಾಗಲಿಲ್ಲವೆ? ಎರಡು ಗೋವುಗಳನ್ನು ಕೊಂದ ಪಾಪವೆಲ್ಲಿ? ನಾಲ್ಕೈದು ಹುಲಿಗಳನ್ನು ಕೊಂದ ಪುಣ್ಯವೆಲ್ಲಿ? ದೇವರು ಎಂತಹ ಕೋಮಟಿಯಾದೂ ಕೂಡ, ಅವನ ತಕ್ಕಡಿ ಎಷ್ಟುಕೃತ್ರಿಮವಾಗಿದ್ದರೂ ಕೂಡ, ಪುಣ್ಯದ ಭಾಗ ಪಾಪಕ್ಕಿಂತ ನೂರೈವತ್ತರಷ್ಟು ಮಿಗಿಲಾಗುವುದಿಲ್ಲವೆ? ನೀವೇ ಆಲೋಚಿಸಿ ನೋಡಿ!

ಏನೇನೋ ಮಾತನಾಡುತ್ತ ರಮಣೀಯವಾಗಿರುವ ಪುಟ್ಟಾಚಾರಿಯ ಕಾಡುಕೋಳಿ ಬೇಟೆಯ ವಿಚಾರ ಹೇಳಲು ಹೋಗಿ ಶೋಚನೀಯವಾಗಿರುವು ಅವನ ಅಂತ್ಯದ ವಿಚಾರ ಹೇಳುತ್ತ ಕುಳಿತುಬಿಟ್ಟೆ. ದಯವಿಟ್ಟು ಕ್ಷಮಿಸಿಬಿಡಿ. ನನ್ನ ಹೊಟ್ಟೆಯಲ್ಲಿ ಏನೊ ಮರುಕ ಉತ್ಪತ್ತಿಯಾಯಿತು; ಅದಕ್ಕೋಸ್ಕರ ಅದನ್ನೆಲ್ಲಾ ಹೇಳಿದ್ದು. ನನಗೆ ಒಂದೊಂದು ಸಾರಿ, ಮನುಷ್ಯ ಮನುಷ್ಯನಿಗೆ ಮಾಡುವ ಅನ್ಯಾಯವನ್ನು ಯೋಚಿಸಿಕೊಂಡರೆ ಕೋಪ ಕಣ್ಣೀರು ಎಲ್ಲಾ ಒಟ್ಟಿಗೆ ಬರುತ್ತವೆ. ಅದಕ್ಕೇ ಸಿಟ್ಟಿನಿಂದ “ತಬ್ಬಲಿಭೂಮಿ” ಎಂದು ಹೇಳಿದ್ದು.

ಮರೆತುಬಿಡಿ. ದಯವಿಟ್ಟು ಮೇಲೆ ಹೇಳಿದ್ದನ್ನೆಲ್ಲ ಮರೆತುಬಿಡಿ. ಇನ್ನು ಪುಟ್ಟಾಚಾರಿಯ ಕಾಡುಕೋಳಿ ಬೇಟೆಯ ವಿಚಾರ! ಇದ್ರೇನ್ರಿ? ದುಃಖ ಮುಖ ಮುದ್ರೆಯಿಂದ ಕುಳಿತುಬಿಟ್ಟಿದೀರಿ! ಇಂಥದನ್ನೆಲ್ಲ ಮನಸ್ಸಿಗೆ ಬಹಳವಾಗಿ ಹಚ್ಚಿಕೊಂಡರೆ ಬದುಕುವುದು ಹೇಗೆ? ಮರೆಯಬೇಕು, ಸ್ವಾಮಿ! ಮರೆಯುವುದೇ ಮಾನವನಿಗೆ ಮದ್ದು! ಈಶ್ವರನು ಸ್ವರ್ಗದಲ್ಲಿ ಕಣ್ಣುಮುಚ್ಚಿಕೊಂಡು ಕುಳಿತಿದ್ದಾನೆ! ನಾವು ಭೂಮಿಯಲ್ಲಿ ಕಣ್ಣುಮುಚ್ಚಿಕೊಂಡೇ ಕಾಲ ನೂಕಬೇಕಾದರೆ! ಅಕಸ್ಮಾತ್ತಾಗಿ ಕಣ್ದೆರೆದಾಗ ಆಗುತ್ತೆ ನರಕದರ್ಶನ! ಆಗ ಫಕ್ಕನೆ ಕಣ್ಣು ಮುಚ್ಚಿಕೊಂಡರಾಯ್ತು! ಅದೇ ಸ್ವರ್ಗ! ಮತ್ತಿನ್ನೇನು ಸ್ವಾಮಿ? ಬೆಳಕೇ ನರಕ, ಕತ್ತಲೆಯೇ ನಾಕ! ಹೋಗಲಿ, ಬೆನ್ನು ತಟ್ಟಿಕೊಂಡು ಹುಷಾರಾಗಿ! ಎಲ್ಲಿ? ಸ್ವಲ್ಪ ನಕ್ಕುಬಿಡಿ! ಹಾಗೆ!! ಅದೀಗ ತತ್ತ್ವಜ್ಞಾನಿಯ ಲಕ್ಷಣ!!!

ಪುಟ್ಟಾಚಾರಿ ಬೆಳಗ್ಗೆ ನಸುಕು ಹರಿಯುವುದರಲ್ಲಿಯೆ ಎದ್ದು ಕಮ್ಮಾರ ಸಾಲೆಯಲ್ಲಿ ಕೆಲಸಕ್ಕೆ ಶುರುಮಾಡಿದ್ದನು. ಮಾಡಬೇಕಾದ ಕೆಲಸಗಳೂ ವಿಪರೀತವಾಗಿದ್ದುವು. ತಿದಿಯನ್ನು ಸರಿಮಾಡಿ, ಇದ್ದಲನ್ನು ಕುಲುಮೆಗೆ ಹಾಕಿ ಬೆಂಕಿ ಹೊತ್ತಿಸಿದನು. ಬೇಕಾದ ಸಾಮಾನುಗಳನ್ನೆಲ್ಲ ಹತ್ತಿರ ರಾಶಿ ಹಾಕಿಕೊಂಡು ಅಡಿಗಲ್ಲಿಗೆ ಎದುರಾಗಿ ಕುಳಿತನು. ಅಷ್ಟರಲ್ಲಿ ಕಾಡಿನಲ್ಲಿ ಕಾಡುಕೋಳಿಗಳು ಕೂಗುವ ನೀಳ್ದನಿಯನ್ನುಕೇಳಿ ಅವನ ಮನಸ್ಸು ಅತ್ತಕಡೆ ಎಳೆಯಲಾರಂಭಿಸಿತು. ಅವನು ಹುಟ್ಟಕಮ್ಮಾರನಾಗಿದ್ದರೂ ಕಬ್ಬಿಣದ ಕೆಲಸಕ್ಕಿಂತ ಬೇಟೆಯ ಕಾಡಿನ ಕೆಲಸದಲ್ಲಿಯೆ ಅವನಿಗೆ ಮಮತೆ ಹೆಚ್ಚು. ಒಲೆಗೆ ಸ್ವಲ್ಪ ನೀರು ಚಿಮುಕಿಸಿ, ಸಾಮಾನುಗಳನ್ನೆಲ್ಲ ಹಿಂದಕ್ಕಿಟ್ಟು, ಕೋವಿ ತೆಗೆದುಕೊಂಡು ಹೊರಟನು. ಅವನ ಕಾಲು ಕಟ್ಟಿಹಾಕಿದ್ದ ಜೂಜಿನ ಕುದುರೆಯ ಕಾಲಾಗಿದ್ದುವು. ಬೇಗಬೇಗನೆ ಕಾಡುಕೋಳಿಗಳ ಆಹ್ವಾನವಾಣಿಯನ್ನು ಕೇಳುತ್ತ ಅಡವಿಯೊಳಗೆ ಹೋಗುತ್ತಿದ್ದನು. ಹಿಂದೆ ಯಾರೊ ಕೂಗಿದಂತಾಯ್ತು! ಆಚಾರಿ ತಿರುಗಿದನು. ನೋಡುತ್ತಾನೆ, ಯಜಮಾನರು! ರಾಮಣ್ಣಗೌಡರು ಸ್ವಲ್ಪ ವ್ಯಂಗ್ಯವಾಣಿಯಿಂದ ” ಆಚಾರ್ಯರ ಸವಾರ ಎಲ್ಲಿಗೆ ಹೊರಟಿತು?” ಎಂದರು. ಕದಿಯುವಾಗಲೆ ಪೊಲೀಸಿನವರ ಕೈಗೆ ಸಿಕ್ಕಿ ಬಿದ್ದ ಕಳ್ಳನಾದನು ಪುಟ್ಟಾಚಾರಿ! ಗೌಡರ ಧ್ವನಿಯಲ್ಲಿ ಕೋಪವಿದೆ ಎಂದು ಗೊತ್ತಾಯಿತು. ನಿಸ್ಸಹಾಯಕ ಮಂದಸ್ಮಿತವನ್ನು ಬೀರಿ ಪುಟ್ಟಾಚಾರಿ “ಎಲ್ಲಿಗೂ ಇಲ್ಲ; ಕಾಡಿನ ಕಡೆ ಹೋಗಿಬರುತ್ತೇನೆ” ಎಂದನು. “ನಿನ್ನ ದೆಸೆಯಿಂದ ಸುಖವಿಲ್ಲ! ನೇಗಿಲ್ಲ ಕುಳಗಳಾಗಲಿಲ್ಲ; ಕತ್ತಿಗಳಾಗಿಲ್ಲ. ಹಾರೆ ಗುದ್ದಲಿಯಂತೂ ಒಂದು ತಿಂಗಳಿಂದ ಅಲ್ಲಿಯೆ ಬಿದ್ದಿವೆ. ಒರಲೆ ಕೈಲಿ ತಿನ್ನಿಸುತ್ತೀಯೊ ಏನೊ ಗೊತ್ತಿಲ್ಲ!! ದಿನ ಬೆಳಗಾದರೆ ಕೋವಿ, ಮರಸು, ಷಿಕಾರಿ! ನೀನು ಹೀಗೆ ಮಾಡಿದರೆ ಕೋವಿ ಕಸಿದಿಟ್ಟುಬಿಡುತ್ತೇನೆ” ಎಂದರು. ಪುಟ್ಟಾಚಾರಿ ಹಲ್ಲುಹಲ್ಲು ಬಿಡುತ್ತ ಮೆಲ್ಲಗೆ ಕಾಡಿಗೆ ಜಾರಿದನು. ಗೌಡರೂ ಗೊಣಗುತ್ತ ಸುಮ್ಮನಾದರು. ಅವರಿಗೆ ಸಂತೋಷವಾಗದೆ ಇರಲಿಲ್ಲ. ಏಕೆಂದರೆ ಪುಟ್ಟಾಚಾರಿ ಕಾಡಿಗೆ ಹೋದರೆ ಏನಾದರೊಂದು “ಪಕಾರ” ವಾಗದಿರುವುದಿಲ್ಲ. ಪಕಾರವೆಂದರೆ ಪಲ್ಯಕ್ಕೆ, ಅದರಲ್ಲಿಯೂ ಮಾಂಸದ ಪಲ್ಯಕ್ಕೆ, ಸೂಚನೆಯ ಹೆಸರು! ಮಾಂಸಾಹಾರಿಗಳಲ್ಲದ ಬ್ರಾಹ್ಮಣರು ಯಾರಾದರೂ ಜೊತೆಯಲ್ಲಿದ್ದರೆ ‘ಪಕಾರ’ ವೆಂಬ ಸಂಕೇತ ಶಬ್ದವನ್ನು ತಮ್ಮ ತಮ್ಮಲ್ಲಿಯೆ ಉಪಯೋಗಿಸಿಕೊಳ್ಳುತ್ತಾರೆ.

ಪುಟ್ಟಾಚಾರಿ ಕಾಡಿಗೇರಿದನು. ಕಾನುಬಾಗಿಲಿನಿಂದ ಮ್ಯಾರರ ಗುಡಿ ಹೊಂಡದ ಮಾರ್ಗವಾಗಿ ಕೆಮ್ಮಣ್ಣುಬ್ಬಿನ ಓರೆಯನ್ನು ಹಾದು ಬಿಳುಗಲ್ಲು ತುಂಡು ನೆತ್ತಿಗೆ ಹೊರಟನು. ಆಗಲೆ ಸುಮಾರು ನಾಲ್ಕೈದು ಮೈಲಿಗಳ ಅರಣ್ಯ ಪೂರೈಸಿತ್ತು. ಹಾಳು ಕಾಡುಕೋಳಿಗಳು ಕೂಗುತ್ತಿದ್ದುವೆ ಹೊರತು ಕಣ್ಣಿಗೆ ಕಾಣುತ್ತಿರಲಿಲ್ಲ. ಬೇಗ ಮರೆಯಾಗಿ ತಪ್ಪಿಸಿಕೊಂಡುವು. ಆಚಾರಿಗೆ ರೇಗಿಹೋಯಿತು. ಒಂದು ಕಡೆ ಕುಳಿತು ಒಂದು ತೆಳುವಾದ ಚಿಗುರೆಲೆಯನ್ನು ಎರಡು ಹೆಬ್ಬೆರಳುಗಳ ನಡುವೆ ಇಟ್ಟುಕೊಂಡು ಹುಂಜದಂತೆ ಕೇಕೆ ಹಾಕಿದನು; ಹೇಂಟೆ ಬರಲಿಲ್ಲ. ಹೇಂಟೆ ಹುಂಜವನ್ನು ಕರೆಯುವಂತೆ ಕೂಗಿದನು. ಹುಂಜವಾವುದೂ ಬರಲಿಲ್ಲ. ವಸಂತಮಾಸವಾಗಿದ್ದರೂ ಪ್ರಾತಃ ಕಾಲವಾಗಿದ್ದುದರಿಂದ ಅವುಗಳಿಗೆ ಕಾಮನ ಕಾಟವಿರಲಿಲ್ಲ ಎಂದು ತೋರುತ್ತದೆ. ಹೊಟ್ಟೆಯ ಕಾಟವೆ ಹೆಚ್ಚಾಗಿದ್ದುದರಿಂದ ಮೇವು ಹುಡುಕುತ್ತಿದ್ದುವೆ ಹೊರತು ಆಚಾರಿಯ ಮೋಹದ ವಾಣಿಗೆ ಮರುಳಾಗಿ ಮಾಯದ ಬಲೆಗೆ ಬೀಳಿಲಿಲ್ಲ.

ಆಚಾರಿಗೆ ಇನ್ನೂ ರೇಗು ಹೆಚ್ಚಾಯಿತು. ಅದರಲ್ಲಿಯೂ ಬೇಟೆಯಾಗದೆ ಬರುಗೈಯಲ್ಲಿ ಹಿಂತಿರುಗಿದರೆ ಗೌಡರು ಮತ್ತೂ ಕೋಪಗೊಳ್ಳುವರು! ಏನಾದರೂ ಮಾಡಿ ಏನನ್ನಾದರೂ ಹೊಡೆದುಕೊಂಡೇ ಹೋಗಬೇಕೆಂದು ದೃಢನಿಶ್ಚಯ ಮಾಡಿಕೊಂಡನು. ಅಷ್ಟರಲ್ಲಿ ಬಿಳುಗಲ್ಲುತುಂಡಿನ ನೆತ್ತಿಯ ಕಾಡಿನಲ್ಲಿ ಒಂದು ಹುಂಜ ಕೇಕೆ ಹಾಕಿತು. ಆಚಾರಿ ಅದನ್ನು ಕೊಂದೇ ಬಿಡುತ್ತೇನೆ ಎಂದು ಶಪಥ ಹಾಕಿಕೊಂಡು ಕೆರಳಿ ಮೇಲೇರಿದನು. ಎತ್ತುಬೀಳು, ಕೆಂಜಿಗೆಮುಳ್ಳು, ಬಳ್ಳಿತುರಚಿ ಯಾವುದನ್ನೂ ಲಕ್ಷ್ಯಮಾಡದೆ ನಡೆದನು. ಅಷ್ಟು ಹೊತ್ತಿಗೆ ಕೋಳಿ ಕೂಗು ನಿಲ್ಲಿಸಿತ್ತು. ದರಿದ್ರ ಜಂತು ಅಲ್ಲೆ ಎಲ್ಲಿಯೋ ಇರಬೇಕೆಂದು ಭಾವಿಸಿ ಆಚಾರಿ ಧಾವಿಸಿದನು.

ಅರಣ್ಯ ಇಳಿಜಾರಾಗಿತ್ತು. ಆಚಾರಿ ಕೆಳಗಿನಿಂದ ಮೇಲೇರುತ್ತಿದ್ದನು. ಹೋಗುತ್ತ ದೂರದಲ್ಲಿ ಏನನ್ನೊ ಕಂಡು ನಿಂತನು. ಮೇಲೆ ಕಾಡಿನ ಮಧ್ಯದಲ್ಲಿ ಒಂದೆರಡು ಮಾರು ಅಗಲ ಬಯಲಾಗಿತ್ತು. ಹುಲ್ಲು ಎದೆಯೆತ್ತರ ಬೆಳೆದಿತ್ತು. ಆ ಹುಲ್ಲಿನ ಮೇಲೆ ಒಂಬತ್ತು ಗಂಟೆಯ ಬಿಸಿಲು ಬಿದ್ದಿತ್ತು. ಅಲ್ಲಿ ಹೆಣ್ಣು ಹೆಬ್ಬುಲಿಯೊಂದು ತನ್ನ ಮರಿಗಳೊಡನೆ ಎಳಬಿಸಿಲಿನಲ್ಲಿ ಮಲಗಿ ಚೆಲ್ಲಾಟವಾಡುತ್ತಿತ್ತು. ಹುಲಿಯ ಬಾಲದ ತುದಿ ಮಾತ್ರ ಬೆಳೆದ ಹುಲ್ಲಿನ ಮೇಲೆ ಬಂದು ಬಿಸಿಲಿನಲ್ಲಿ ಕುಣಿದಾಡುತ್ತಿತ್ತು. ಅದನ್ನು ಆಚಾರಿ ಕಾಡುಕೋಳಿಯ ನೇಲುಪುಕ್ಕದ ನೀಳ್ಗರಿಗಳೆಂದು ನಿರ್ಧರಿಸಿದನು. ಕಾಡುಕೋಳಿಯ ಹುಂಜದ ಪುಕ್ಕದಲ್ಲಿ ಇತರ ಎಲ್ಲ ಗರಿಗಳಿಗಿಂತಲೂ ಉದ್ದವಾಗಿ ಎರಡು ಗರಿಗಳು ಮಾತ್ರ ಬಿಂಕದಿಂದ ಕೊಂಕಿ ತಲೆಯೆತ್ತಿಕೊಂಡಿರುತ್ತವೆ. ಅಂತೂ ಕೆರಳಿದ್ದ ಆಚಾರಿಯ ಕಂಗಳಿಗೆ ಕಾಡುಕೋಳಿಯ ನೀಳ್ಗರಿಗಳಂತೆ ತೋರಿತು ಹುಲಿಯ ತುದಿಬಾಲ. ಶುದ್ಧಪೆಚ್ಚು! ಸ್ವಲ್ಪ ಯೋಚನೆ ಮಾಡಿದ್ದರೆ ಸತ್ಯ ಹೊಳೆಯುತ್ತಿತ್ತು. ಎದೆಯೆತ್ತರ ಬೆಳೆದ ಹುಲ್ಲಿನಲ್ಲಿ ಕಾಡುಕೋಳಿಗಳಿದ್ದರೆ ಎಷ್ಟುದ್ದ ಪುಕ್ಕವಾದರೂ ಹುಲ್ಲಿನ ಮೇಲೆ ಕಾಣುವುದಾದರೂ ಹೇಗೆ? ಕುಣಿಯುವ ನವಿಲಿನ ಪುಕ್ಕವಾದರೂ ಕಾಣುವುದಿಲ್ಲ! ಅಂತೂ ಆಚಾರಿ ಕಾಡುಕೋಳಿ ತನ್ನ ಬಗಲಿಗೆ ಬಿತ್ತೆಂದು ತಿಳಿದು ಹಿಗ್ಗಿದನು. ಅದಕ್ಕೆ ಕಾಣಿಸಿಕೊಳ್ಳಬಾರದೆಂದು ನೆಲದವರೆಗೂ ಹಬ್ಬಿ ಬಾಗಿ ಹಳುವಿನಲ್ಲಿ ತೂರತೊಡಗಿದನು. ಆದಷ್ಟು ಸಮೀಪಕ್ಕೆ ಹೋಗಿ ಮೆಲ್ಲಗೆ ಎದ್ದು ನಿಂತು ಸುಡಬೇಕೆಂದು ನಿಶ್ಚಯಿಸಿ ಬಹಳ ಕಷ್ಟಪಟ್ಟು ಮೆಲ್ಲಮೆಲ್ಲಗೆ ಮುಂದುವರಿದನು.

ಅತ್ತ ತಾಯಿಹುಲಿ ತನ್ನ ಹಸುಳೆಗಳೊಡನೆ ಹಸುಳೆಬಿಸಿಲಿನಲ್ಲಿ ಮುದ್ದಾಟ ವಾಡುತ್ತಿತ್ತು. ಮರಿಗಳು ಒಂದರ ಮೇಲೊಂದು ನೆಗೆದು ತಾಯಿಯ ಸುತ್ತಲೂ ಕುಣಿದಾಡುತ್ತ, ಕೆಲವು ಸಾರಿ ಅಮ್ಮನ ಮೈ ಮೇಲೆ ಹಾರಿ ಕುಳಿತುಕೊಂಡು ಪಲ್ಗಿರಿಯುತ್ತ, ಚರ್ಮವನ್ನು ಆಟಕ್ಕೆ ಕಚ್ಚಿ ಎಳೆಯುತ್ತ, ನಡುನಡುವೆ ಕೆಸ್‌ಪುಸ್ ಎನ್ನುತ್ತ ಚೆಲ್ಲಾಟವಾಡುತ್ತಿದ್ದುವು. ತಾಯಿಹುಲಿ ಮರಿಗಳನ್ನು ಮುಂಗಾಲ್ಗಳಿಂದ (ಹುಲಿಯ ಮುಂದಿನ ಎರಡು ಕಾಲ್ಗಳನ್ನು ಕೈಗಳೆಂದು ಕರೆಯುತ್ತಾರೆ.) ನೂಕಿ ಕೆಡಹುತ್ತ, ಬಾಯ್ದೆರೆದು, ಬಾಯ್ದೆರೆದ ಮರಿಗಳ ದವಡೆಯನ್ನು ಕುಡಿಯುವಂತೆ ನಟಿಸುತ್ತ, ಬಿಸಿನಲ್ಲಿ ತನ್ನ ಬಣ್ಣಬಣ್ಣದ ನುಣ್ ನವರಿನ ಲಾಂಗೂಲವನ್ನು ಎತ್ತಿ ಆಡಿಸುತ್ತಿತ್ತು. ಹೀಗೆ ಆಟದಲ್ಲಿ ತಲ್ಲೀನವಾದ, ತನ್ನ ಮಕ್ಕಳೊಡನೆ ತನ್ನ ಹುಲಿತನವನ್ನು ಬಿಟ್ಟು ಬರಿಯ ತಾಯಿ ಮಾತ್ರವಾಗಿದ್ದ ಆ ಹೆಬ್ಬುಲಿ ದೂರದಲ್ಲಿ ಏನೊ ಸರಸರ ಸದ್ದಾಗುತ್ತಿದ್ದುದನ್ನು ಆಲಿಸಿ ಇದ್ದಕ್ಕಿದ್ದ ಹಾಗೆ ಆಟದ ಭಾವವನ್ನು ತೆಗೆದೊಗೆದು ಹಿಂಗಾಲ್ಗಳ ಮೇಲೆ ಕುಳಿತು ಮುಂಗಾಲ್ಗಳನ್ನು ನೀಳವಾಗಿ ಊರಿಕೊಂಡು ನಿಮಿರಿ ನಿಂತು ಅನಂತವಾದ ಅರಣ್ಯಪ್ರದೇಶವನ್ನು ಅನ್ವೇಷಕ ದೃಷ್ಟಿಯಿಂದ ಪರೀಕ್ಷಿಸತೊಡಗಿತು. ಮರಿಗಳು ಆಟವನ್ನು ನಿಲ್ಲಿಸಿ ತಾಯಿಯ ಹೊಟ್ಟೆಯಡಿ ಮೌನವಾಗಿ ಹುದುಗಿದುವು. ದೂರದಲ್ಲಿ ಹುಲ್ಲು ಬೆಳೆದಿದ್ದ ಹಳು ಮೆಲ್ಲಗೆ ಅಲ್ಲಾಡುತ್ತಿದ್ದುದು ಹುಲಿಯ ಕಣ್ಣಿಗೆ ಬಿತ್ತು. ಹುಲ್ಲಿನ ಅಲ್ಲಾಟ ತನ್ನ ಕಡೆಗೇ ಬರುತ್ತಿದ್ದುದೂ ಗೊತ್ತಾಯಿತು. ಹೆಬ್ಬುಲಿ ಮೀಸೆಯನ್ನು ಹುರಿಮಾಡಿಕೊಂಡು ಉಗ್ರದೃಷ್ಟಿಯಿಂದ ನೋಡತೊಡಗಿತು.

ಪುಟ್ಟಾಚಾರಿ ನೆಲಕ್ಕೆ ಹಬ್ಬಿಕೊಂಡೇ ಮೆಲ್ಲಗೆ ಬರುತ್ತಿದ್ದನು. ಆದಷ್ಟು ಸಮೀಪಕ್ಕೆ ಹೋದರೆ ಕೋಳಿಗೆ ಚೆನ್ನಾಗಿ ಗುರಿ ತಗುಲಿಸಬಹುದೆಂದು ಬಗೆದು ತಲೆಯೆತ್ತಿ ನೋಡದೆ ಬಗ್ಗಿ ಬಗ್ಗಿ ನಡೆದು ಅವನಿಗೆ ಆಯಾಸವಾಗಿತ್ತು. ಇಷ್ಟು ದೂರ ಬಂದದ್ದು ಸಾಕೆಂದು ಭಾವಿಸಿ ನೆಲದಮೇಲೆ ಮಂಡಿಯೂರಿ ಕುಳಿತು, ಕೋವಿಯನ್ನು ಸಿದ್ದಪಡಿಸಿದನು. ಹುಲಿ ತಲೆಯೆತ್ತಿ ನೋಡುತ್ತಿತ್ತು. ಅದರ ತಲೆ ಮಾತ್ರ ಹುಲ್ಲಿನ ಮೇಲಿತ್ತು. ಅದಕ್ಕೂ ಕೂಡ ಪ್ರಾಣಿ ಇಂಥಾದ್ದೆಂದು ಗೊತ್ತಾಗಲಿಲ್ಲ. ಮನುಷ್ಯನೆಂದು ಗೊತ್ತಾಗಿದ್ದರೆ ಮೊದಲೇ ಮರಿಗಳನ್ನು ಕಟ್ಟಿಕೊಂಡು ಓಡಿಹೋಗುತ್ತಿತ್ತು. ನಮಗೆ ಹುಲಿಯನ್ನು ಕಂಡರೆ ಹೇಗೆ ಭಯವೊ ಹಾಗೆಯೆ ಹುಲಿಗೆ ನಮ್ಮನ್ನು ಕಂಡರೆ ಭಯ.

ಆಚಾರಿ ಕಾಡುಕೋಳಿ ಅಲ್ಲಿಯೇ ಮೇಯುತ್ತಿರಬೇಕೆಂದು ಭಾವಿಸಿ, ಕೋವಿಯನ್ನು ಹಾರಿಸಲು ಹವಣಿಸಿ ಹಿಡಿದುಕೊಂಡು, ಎಲ್ಲಿ ಕೋಳಿಗೆ ತಾನು ಕಂಡುಬಿಡುವೆನೋ ಎಂಬ ಭಯದಿಂದ ಮೆಲ್ಲಗೆ ತಲೆಯನ್ನು ನಿಕ್ಕುಳಿಸಿಕೊಂಡು ಅರ್ಧ ಎದ್ದುನಿಂತು ನೋಡಿದನು: ಕೋಳಿಗೆ ಬದಲಾಗಿ ಬಣ್ಣ ಬಣ್ಣದ, ಕಣ್ಣು ಕಣ್ನಿನ, ನಿಂತ ಮೀಸೆಯ, ನಿಮಿರ್ದ ಕಿವಿಗಳ, ಚಿಲಿದ ಹಲ್ಗಳ, ಹೆಬ್ಬುಲಿಯ ಹೆಮ್ಮಂಡೆ! ಆಚಾರಿಗೆ ಹುಲಿಯ ಕಣ್ಗಳು ಬಂದು ತನ್ನ ಕಣ್ಗಳಿಗೆ ತಿವಿದಂತಾಯಿತು. ಮನುಷ್ಯ ಅಷ್ಟು ಸಮೀಪ ತನ್ನ ಕೆಳಗಡೆ ಇರುವುದನ್ನು ಕಂಡು ತುಸು ಬೆಚ್ಚಿದ ಹುಲಿ ಸರಿಯಾಗಿ ನಾಲ್ಕು ಕಾಲುಗಳ ಮೇಲೆಯೂ ಧೀರವಾಗಿ ಎದ್ದುನಿಂತು ಗುರ್ರೆಂದಿತು. ಆಚಾರಿಗೆ ನೆತ್ತರು ನಾಡಿಗಳಲ್ಲಿ ಹೆಪ್ಪುಗಟ್ಟಿದಂತಾಯ್ತು. ಬೇಟೆಯ ಅನುಭವ ಅವನಿಗೆ ಚೆನ್ನಾಗಿತ್ತು. ಹುಲಿಯ ರೀತಿನೀತಿಗಳು ಅವನಿಗೆ ಅಪರಿಚಿತವಾದುವಾಗಿರಲಿಲ್ಲ. ಒಂದುಕ್ಷಣದಲ್ಲಿಯೆ ಹುಲಿ “ಮರಿಹುಲಿ” ಎಂದು ತಿಳಿದನು. ಮರಿಗಳು ಕೆಸ್ ಪುಸ್ ಎನ್ನುತ್ತಿದ್ದುದೂ ಅವನಿಗೆ ಕೇಳಿಸತು. ಸಂದರ್ಭ ಅತ್ಯಂತ ಅಪಾಯಕರವಾಗಿತ್ತು. ಯಾವಾಗ ಹುಲಿ ಎದ್ದು ನಿಂತು ಮೈಮೇಲೆ ನೆಗೆಯುವಂತೆ ನಟಿಸಿತೋ ಆಗಲೇ ಆಚಾರಿಯೂ ಕೋವಿಯನ್ನು ಸಿದ್ಧವಾಗಿ ಹಿಡಿದುಕೊಂಡು ನೆಟ್ಟಗೆ ಎದ್ದುನಿಂತೇಬಿಟ್ಟನು. ಒಂದು ವೇಳೆ ಹುಲಿ ಮೇಲೆ ಬಿದ್ದರೆ ಸುಮ್ಮನೆ ಸಾಯುವುದಕ್ಕಿಂತ ಅದಕ್ಕೂ ಒಂದು ಗುಂಡು ತಗುಲಿಸಿಯೇ ಸಾಯುವೆನೆಂದು ನಿಶ್ಚಯಿಸಿ ನಿಂತನು. ಒಬ್ಬರನ್ನೊಬ್ಬರು ನೋಡುತ್ತ ನಿಂತರು.

ಇಬ್ಬರಿಗೂ ಪ್ರಾಣಸಂಕಟ. ಹುಲಿಗೆ ಮರಿಗಳ ಮೇಲಿನ ಮಮತೆ. ಆಚಾರಿಗೆ ಮನೆಯ ಮೇಲಿನ ಮಮತೆ. ಬಹುಶಃ ಮರಿಗಳಿಲ್ಲದಿದ್ದರೆ ಹುಲಿ ಆಚಾರಿ ತಲೆಯೆತ್ತಿ ನೋಡುವಷ್ಟರಲ್ಲಿಯೆ ಕಂಡು ಮಿಂಚಿ ಕಣ್ಮರೆಯಾಗಿ ಬಿಡುತ್ತಿತ್ತು. ಇಬ್ಬರಿಗೂ ಕಷ್ಟವಿರಲಿಲ್ಲ. ಈಗ ಮರಿಗಳನ್ನು ಬಿಟ್ಟು ಹುಲಿ ಏನೇ ಆಗಲಿ ಓಡುವುದಿಲ್ಲ. ಆಚಾರಿಗೆ ಈಡು ಹೊಡೆಯುವುದಕ್ಕೂ ಭಯ! ಹಿಂತಿರುಗುವುದಕ್ಕೂ ಭಯ! ಆಚಾರಿ ಹುಲಿ ಹಾರಿದರೆ ಹೊಡೆಯೋಣವೆಂದು ನಿಂತನು. ಹುಲಿ ಆಚಾರಿ ಮುಂದೆ ಹೆಜ್ಜೆಯಿಟ್ಟರೆ ಮೇಲೆ ಬೀಳುವುದು ಎಂದು ನಿಂತಿತು. ಇಬ್ಬರಿಗೂ ಮುಂದೇನು ಮಾಡಬೇಕೋ ಗೊತ್ತಾಗಲಿಲ್ಲ.

ಕಡೆಗೆ ಆಚಾರಿ ಒಂದು ಉಪಾಯ ಹೂಡಿದನು. ಹುಲಿಗೆ ಗೊತ್ತಾಗದಂತೆ ಹತ್ತು ಕ್ಷಣಕ್ಕೊಂದು ಹೆಜ್ಜೆಯಂತೆ ಹಿಂದುಹಿಂದಕ್ಕೆ ಮೆಲ್ಲಗೆ ಚಲಿಸತೊಡಗಿದನು. ಅವನ ದೃಷ್ಟಿ ಹುಲಿಯ ಮೇಲೆ ಇತ್ತು. ಕೈಗಳೆರಡೂ ಯಾವಾಗ ಬೇಕೆಂದರೆ ಆಗ ಈಡು ಹಾರಿಸಲು ಸಿದ್ಧವಾಗಿಯೆ ಇದ್ದುವು. ಇಳಿಜಾರಾದ ಮೊರಡುಗುಡ್ಡವನ್ನು ಆ ಹಳುವಿನಲ್ಲಿ ಹಿಮ್ಮೊಗವಾಗಿಇಳಿಯುವುದು ಒಂದು ದೊಡ್ಡ ಸಾಹಸವೆ ಸರಿ! ಆಚಾರಿ ಎರಡು ಹೆಜ್ಜೆ ಹಿಮ್ಮೆಟ್ಟುವನು. ಸ್ವಲ್ಪ ನಿಂತು ವಿಶ್ರಮಿಸಿಕೊಳ್ಳುವನು. ಹೀಗೆ ಮೆಲ್ಲಗೆ ಸರಿದನು. ಹುಲಿಗೆ ಮೊದಲು ಮೊದಲು ಅವನು ಸರಿದುದು ಗೊತ್ತಾಗಲಿಲ್ಲ. ಕಡೆಗೆ ಗೊತ್ತಾಯಿತೆಂದು ತೋರುತ್ತದೆ. ಏಕೆಂದರೆ ಆಚಾರಿ ಹಿಂದೆ ಹೋದಂತೆಲ್ಲ ಹುಲ್ಲಿನ ಮೇಲ್ಭಾಗದಲ್ಲಿರುತ್ತಿದ್ದ ಅವನ ದೇಹ ಕಡಮೆಯಾಗುತ್ತ ಬಂತು. ಹುಲಿ ತನ್ನ ಕತ್ತನ್ನು ನೀಳವಾಗಿ ನಿಕ್ಕುಳಿಸುತ್ತಿತ್ತು. ಒಂದು ಸಾರಿ ಹುಲಿ ಮೇಲೆ ಹಾರುವಂತೆ ಸಂಚು ತೋರಿತು. ಆಚಾರಿ ಕೋವಿಯ ಕುದುರೆಯನ್ನು ಸದ್ದುಮಾಡದೆ ಎಳೆದನು. ಆದರೆ ಹುಲಿ ಹಾರಲಿಲ್ಲ. ಗುರ್ರೆಂದು ಅಲ್ಲಿಯೆ ನಿಂತಿತು. ಅದಕ್ಕೂ ಹಾಳುಮನುಷ್ಯ ತೊಲಗಿದರೆ ಸಾಕಾಗಿತ್ತು. ಆಚಾರಿ ಪುನಃ ಕುದುರೆಯನ್ನು ಕೆಳಗಿಳಿಸಿ ತನ್ನ ಕಾರ್ಯಕ್ಕೆ ಕೈಹಾಕಿದನು. ಬಿಸಿಲೇರುತ್ತಿತ್ತು.

ಆಚಾರಿ ಎರಡು ಗಂಟೆಯ ಹೊತ್ತು ಹೀಗೆ ಹಿಂದಕ್ಕೆ ನಡೆದು ಸ್ವಲ್ಪ ಮರೆಮರೆಯಾದ ಜಾಗಕ್ಕೆ ಬಂದನು. ಹುಲಿ ಇನ್ನೂ ನೋಡುತ್ತಲೇ ಇತ್ತು. ಇನ್ನೂ ಸ್ವಲ್ಪ ದೂರ ಹಾಗೆಯೇ ಹೋಗಿ ಹುಲಿಗೆ ಈಡು ಹೊಡೆಯುವೆನೆಂದು ಆಚಾರಿ ನಿರ್ಧರಿಸಿದನು. ಮತ್ತೆ ಸ್ವಲ್ಪ ಅಳುಕಿದನು. ಏಕೆಂದರೆ ಅವನು ಕೋವಿಗೆ ತುಂಬಿದ್ದುದು ಸಣ್ಣ ಚರೆಯ ಈಡು; ಕಾಡುಕೋಳಿಗೆಂದು. ಆ ಈಡು ಹುಲಿಯ ರೋಮಕ್ಕೂ ಸಾಲದು, ಸುಮ್ಮನೆ ಅದನ್ನು ಕೆಣಕಿ ಮೈಮೇಲೆ ಹಾಕಿಕೊಂಡರೆ ಅನಾಹುತವಾಗುವುದೆಂದು ಅವನು ಅಳುಕಿದ್ದು.

ನಡೆಯುತ್ತ ನಡೆಯುತ್ತ ಆಚಾರಿ ದೂರ ಹೋದನು. ಕಡೆಗೆ ಒಂದು ಬೆದುರುಗುಂಡು ಹೊಡೆಯುವೆನೆಂದು ಬಗೆದು, ನೋಡಿದನು. ಹುಲಿ ತನ್ನ ಮರಿಗಳೊಡನೆ ಮಾಯವಾಗಿತ್ತು. ಆಚಾರಿ ನಿಟ್ಟುಸಿರೆಳೆದನು. ಆದರೆ ಅವನಿಗೆ ಬಹಳ ವ್ಯಸನವಾಯಿತು, ಕೋವಿಗೆ ಗುಂಡು ಹಾಕಿರಲಿಲ್ಲವೆಂದು. ಚರೆಯಲ್ಲದೆ ಗುಂಡು ಹಾಕಿದ್ದರೆ ಅವನು ಹುಲಿಯನ್ನು ಮೊದಲು ಎದುರುಗೊಂಡ ಸ್ಥಳದಲ್ಲಿಯೆ ಧೈರ್ಯವಾಗಿ ಸುಡುತ್ತಿದ್ದನು. ಹಿಂದೆ ಹಾಗೆಯೆ ಹುಲಿಗಳನ್ನು ಹೊಡೆದಿದ್ದನು. ಅವನ ಗುರಿ ಇಟ್ಟಲ್ಲಿಗೆ ತಪ್ಪದೆ ಬೀಳುತ್ತಿತು. ಹುಲಿಯ ಹಣೆಗೆ ಸರಿಯಾಗಿ ಗುಂಡುತಗುಲಿಸಿದ್ದರೆ ಅದು ಅತಿತ್ತ ಅಲ್ಲಾಡದೆ ಬೀಳುತ್ತಿತ್ತು. ಅವನಿಗೂ ಗೌಡರಿಂದ ದೊಡ್ಡ ಶಿಫಾರಸು ದೊರಕುತ್ತಿತ್ತು. ಒಳ್ಳೆಯ ಸಂದರ್ಭ ಕೈತಪ್ಪಿ ಹೋಯಿತಲ್ಲಾ ಎಂದು ಮರುಗಿ ಆಯಾಸಗೊಂಡು ಮನೆಯ ಕಡೆ ತಿರುಗಿದನು.

ಕಾಡುಕೋಳಿಯಂತೂ ಸಿಕ್ಕಲೆ ಇಲ್ಲ. ಅದಕ್ಕೆ ಬದಲಾಗಿ ಸಾಹಸ ಕಥೆಯೊಂದನ್ನು ತೆಗೆದುಕೊಂಡುಹೋದನು. ಗೌಡರು ಅವನು ಬರುಗೈಯಲ್ಲಿ ಬಂದುದಕ್ಕಾಗಿ ಬಯ್ದರು. ಕಥೆಯನ್ನು ಕೇಳಿದ ಇತರರು ಅಸಡ್ಡೆ ಮಾಡಿದರು. ಯಾರೂ ಹೊಗಳಲಿಲ್ಲ. ಹುಲಿಯನ್ನು ಕೊಂದಿದ್ದರೆ ಎಲ್ಲಾ ಹೊಗಳುತ್ತಿದ್ದರು. ಇಂತಹ ಕಥೆಗಳನ್ನು ದಿನದಿನವೂ ಕೇಳುವ ಮೆಲನಾಡಿಗರಿಗೆ ಪುಟ್ಟಾಚಾರಿಯ ಸಾಹಸ ಬಹು ಸಾಮಾನ್ಯವಾಗಿ ತೋರಿತು! ಆದರೆ ಅವನು ಮಾತ್ರ ತಾಳ್ಮೆ ತೋರದೆ, ಸ್ವಲ್ಪ ಅವಿವೇಕಮಾಡಿದ್ದರೆ ಊರಿನವರಿಗೆಲ್ಲ ಫಜೀತಿಗೆ ಬರುತ್ತಿತ್ತು. ಕೋರ್ಟು, ಪೊಲೀಸು ಮೊದಲಾದ ಭಯಂಕರ ವ್ಯಾಪಾರಗಳಿಗೆ ಸಿಕ್ಕಬೇಕಾಗುತ್ತಿತ್ತು.

ಅವನು ಇತರರಿಗೆ ಆ ಕಥೆಯನ್ನು ಹೇಳುತ್ತಿದ್ದಾಗ ಹುಡುಗನಾಗಿದ್ದ ನಾನೂ ಕೇಳಿದ್ದೆ. ಈಗ ಅವನು ಸತ್ತು ಹನ್ನೆರಡು ವರ್ಷಗಳಾಯಿತು. ಆದರೂ ಅವನೂ ಅವನ ಕಥೆಯೂ ನನ್ನ ನೆನಪಿನಿಂದ ಅಳಿಸಿ ಹೋಗಿಲ್ಲ. ತಾನು ಸತ್ತು ಹತ್ತು ಹನ್ನೆರಡು ವರ್ಷಗಳಾದ ಮೇಲೆ ತನ್ನ ಅನೇಕ ಸಾಹಸಗಳಲ್ಲಿ ಒಂದಾದ ಈ ಸಾಹಸ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಪ್ರಸಿದ್ಧಿಗೆ ಬರುವುದೆಂದು ಪುಟ್ಟಾಚಾರಿಗೆ ಆಗಲೇ ಗೊತ್ತಿದ್ದರೆ! ಸ್ವಲ್ಪ ಹೆಮ್ಮೆಯಿಂದ ಸಾಯುತ್ತಿದ್ದನು ಎನ್ನುವಿರಾ? ಇಲ್ಲ; ಇಂದಿಗೂ ಇಲ್ಲ. ಮಹಾತ್ಮರಲ್ಲಿಯೂ ಇರುವ ಯಶೋಭಿಲಾಷೆ ಎಂಬ ಕಟ್ಟಕಡೆಯ ದೌರ್ಬಲ್ಯಪಿಶಾಚಿ ಅವನಿಗೆ ಹಿಡಿದಿರಲಿಲ್ಲ. ಯಾರೂ ಅರಿಯದ ವೀರರ ಗುಂಪಿಗೆ ಸೇರಿದವನವನು. ಮೌನವಾಗಿ ಬಂದು ಮೌನವಾಗಿ ಹೋಗುವರವರು. ಹರತಾಳ ಮಾಡಬೇಕೆಂಬ ವಿದ್ಯಾರ್ಥಿಗಳಿಗೆ ಅಂಥವರಿಂದ ಸ್ವಲ್ಪವೂ ಪ್ರಯೋಜನವಿಲ್ಲ.
  ಮುಂದಿನ ಭಾಗ : http://kannadadeevige.blogspot.com/p/blog-page_87.html ಮನೆಯ ಶಾಲೆಯ ಐಗಳ ಮಾಲೆ
 ***********