ಹದಿನೈದನೆಯ ಶತಮಾನದ ಅಂತ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ. ಪೂರ್ವಾಶ್ರಮದ ಹೆಸರು ಭೂವರಾಹ.
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ"
ವಾದಿರಾಜರು ಬ್ರಾಹ್ಮಣ ಮನೆತನಕ್ಕೆ ಸೇರಿದವರು. ತಮ್ಮ ಪಾಂಡಿತ್ಯದಿಂದಾಗಿ ವಿಜಯನಗರ ಅರಸರಿಂದ ಸನ್ಮಾನಿಸಲ್ಪಟ್ಟಿದ್ದರು. "ಕುಡುಮ" ಎಂದು ಕರೆಯಲಾಗುತ್ತಿದ್ದ ಕ್ಷೇತ್ರವನ್ನು ಧರ್ಮಸ್ಥಳವೆಂದು ಹೆಸರಿಸಿದವರು ವಾದಿರಾಜರು.
- ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಲೇಖನ
ವಾದಿರಾಜರು ಕನ್ನಡ ಹರಿದಾಸ ಸಾಹಿತ್ಯದ ಧೀಮಂತ ಶ್ರೇಷ್ಠರು. ಉಡುಪಿಯ ಶ್ರೀಕೃಷ್ಣನ ಪೂಜಾ ಪರಿಸರದಲ್ಲಿ ಕನ್ನಡದ ಸರಳ ಸುಂದರ ಕೀರ್ತನೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಸಮರ್ಥವಾಗಿ ಪ್ರಾರಂಭಿಸಿದ ಪ್ರವರ್ತಕ ಮನೀಷಿಗಳು ವಾದಿರಾಜರು. ಭಗವಂತನ ದಶಾವತಾರದ ವರ್ಣನೆಯನ್ನು ವೈವಿಧ್ಯಪೂರ್ಣವಾಗಿ ವಿಶಿಷ್ಟಶೈಲಿಯಲ್ಲಿ ಬಿತ್ತರಿಸುವ ವಾದಿರಾಜರ ಕೃತಿಗಳ ಚಮತ್ಕಾರ ಅಪೂರ್ವ. ಲೀಲಾಜಾಲವಾಗಿ ಹೊಸ ಬೀಸಿನಲ್ಲಿ ಸುಂದರ ಸಮನೋಹರವಾಗಿ ಕಾವ್ಯಕಲೆಯನ್ನು ಅವರು ಅರಳಿಸುವ ಪರಿ ಅನನ್ಯ.
ಪುರಂದರದಾಸರು, ವ್ಯಾಸರಾಜರು, ಕನಕದಾಸರು ಮುಂತಾದವರ ಸಮಕಾಲೀನರಾಗಿದ್ದು ಉಡುಪಿಯ ಶ್ರೀಕೃಷ್ಣನ ಸೇವೆಯಲ್ಲಿ ಪರಿವ್ರಾಜಕರಾಗಿ ಪರಮ ಪೂಜ್ಯರೆನಿಸಿದರು. ತಾವಿದ್ದ ಪರಿಸರದಲ್ಲೆಲ್ಲಾ ಧಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿ ದಾರ್ಶನಿಕ ಧೃವತಾರೆಗಳೆನಿಸಿದರು. ಉಪಾಸ್ಯಮೂರ್ತಿ ಹಯಗ್ರೀವ ದೇವರ ಮಹಿಮಾತಿಶಯಗಳನ್ನು ಕಂಡು 'ಹಯವದನ' ಅಂಕಿತದಿಂದ ಸಹಸ್ರ ಸಹಸ್ರ ಕೀರ್ತನೆಗಳನ್ನು ಕನ್ನಡ ಜನರ, ಭಗವದ್ಭಕ್ತರ ಒಡಲಿಗೆ ಹಾಕಿದ ಪುಣ್ಯಪುರುಷರು ಶ್ರೀ ವಾದಿರಾಜರು.
ದಿವ್ಯಭಾವಗೀತೆಯ ಸಂಚಾರಿ
ದಾಸ-ವ್ಯಾಸ ಪರಂಪರೆಗಳ ಅದ್ಭುತ ಪ್ರತಿಭೆ ಪಾಂಡಿತ್ಯಗಳ ಮಹಾನ್ ಪ್ರತೀಕವಾಗಿದ್ದ ವಾದಿರಾಜರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಕೀರ್ತನೆ ಹಾಗೂ ಪಾಡ್ದನಗಳನ್ನು ಜನಸಾಮಾನ್ಯರ ಆತ್ಮೋದ್ಧಾರಕ್ಕಾಗಿ ರಚಿಸಿ, ತಾವೇ ಅವನ್ನು ಹಾಡಿ, ಹಾಡಿಸಿ, ಶತಮಾನಗಳ ಕಾಲ ಜನಸಮುದಾಯವನ್ನು ತಣಿಸುತ್ತಿರುವ ಯತಿಶ್ರೇಷ್ಠರು. ಇವರ ಸುಳಾದಿ, ಉಗಾಭೋಗ, ದೇವರನಾಮಗಳು ದಿವ್ಯಭಾವಗೀತೆಯ ಸೊಬಗಿನಲ್ಲಿ ಸಂಚಾರಿಯಾಗುತ್ತವೆ. ತತ್ವಭೋದಕ ದಿವ್ಯಾಮೃತವಾಗಿ ಅವು ಪರಿಣಮಿಸಿವೆ. ತಪಸ್ಸು, ವಿದ್ಯೆ, ವಿರಕ್ತಿ, ಭಗವದ್ಭಕ್ತಿ, ಹಾಗೂ ವಾತ್ಸಲ್ಯಗಳಿಂದ ಯತಿಶ್ರೇಷ್ಠರೆನ್ನಿಸಿದ ವಾದಿರಾಜರು ಕನ್ನಡ ಸಂಸ್ಕೃತಿಗೆ, ಸಾಹಿತ್ಯ ಸಂಗೀತಗಳಿಗೆ, ದರ್ಶನಕ್ಕೆ, ಸಮಾಜದ ಸಂಘಟನೆಗೆ, ಸದಾಚಾರದ ಸಾಮೂಹಿಕ ಪುನರುದ್ದೀಪನಕ್ಕೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯ.
ದಶಾವತಾರದ ಕಲ್ಪನೆ
ಸಾಮಾಜಿಕ ಪ್ರಜ್ಞೆ ಹಾಗೂ ಸಮಾಜದ ಬಗೆ ಅಪಾರ ಕಳಕಳಿಯನ್ನು ತಮ್ಮ ಕೃತಿಗಳಿಂದ, ಕಾರ್ಯಗಳಿಂದ ಮೆರೆದಿರುವ ವಾದಿರಾಜರು ವಾಸ್ತವ ಪ್ರಜ್ಞೆಯೆಡೆಗೆ ಜನರನ್ನು ಕರೆದೊಯ್ಯುವುದರಲ್ಲಿ ನಿಷ್ಣಾತರು. ಭಗವನ್ನಾಮಸ್ಮರಣೆ ಮನುಷ್ಯನಿಗೆ ಉತ್ತಮ ಹಿನ್ನೆಲೆಯನ್ನು ನಿರ್ಮಿಸಬಲ್ಲುದೆಂದು ಹೇಳಿ 'ಪ್ರಾತಃಕಾಲದಲ್ಲೆದ್ದು ಪಾರ್ಥಸಾರಥಿಯನು ಪ್ರೀತೀಲಿ ನೆನೆದರೆ ಪ್ರೀತನಾಗುವ ಹರಿ, ಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ' ಎಂಬ ಸಂದೇಶ ನೀಡಿದವರು. ಅವರ ದಶಾವತಾರ ವರ್ಣನೆಗಳಂತೂ ಭಗವಂತನ ಹತ್ತವತಾರಗಳ ಮುತ್ತಿನ ಮಣಿಹಾರ. ದಶಾವತಾರದ ಕಾವ್ಯರಚನೆಗೆ ಕೈಯಿಟ್ಟೊಡನೆಯೇ ಸ್ವಾದಿಯ ವಾದಿರಾಜರು ಮೈಮರೆಯುತ್ತಾರೆ. ಕಾವ್ಯಸರಸ್ವತಿ ಗೆಜ್ಜೆ ಕಟ್ಟಿಕೊಂಡು ಅವರ ಭಾವಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನರ್ತಿಸುವ ನಾದವೈಖರಿ ಅಸಾಧಾರಣ.
ಸಂಸ್ಕೃತಿಯ ಪುನರುತ್ಥಾನ
ವೈದಿಕ ಸಂಸ್ಕೃತಿಯ ಪುನರುತ್ಥಾನದಲ್ಲಿ ವಾದಿರಾಜರ ಪಾತ್ರ ಬಹಳ ಹಿರಿದು. ತತ್ವಜ್ಞಾನದ ಪ್ರಸಾರ. ವೈಷ್ಣವ ಸಿದ್ಧಾಂತದ ಪ್ರಬಲ ಪ್ರತಿಷ್ಠಾಪನೆಯಲ್ಲಿ ಅದ್ಭುತ ಕ್ರಿಯಾಶಕ್ತಿಯಾದವರು ವಾದಿರಾಜರು. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ನಿಶ್ಚಿತ ತತ್ವಜ್ಞಾನಗಳ ತ್ರಿವೇಣಿ ಸಂಗಮವಾಗಿದ್ದ ವಾದಿರಾಜರಿಗೆ ರಾಜ ಮಹಾರಾಜರುಗಳೇ ನಾ ಮುಂದು ತಾ ಮುಂದು ಎಂದು ಬಂದು ಸೇವೆ ಮಾಡುತ್ತಿದ್ದರು. ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವ. ವಾದಿರಾಜರನ್ನು ಅನೇಕ ಸಾಮ್ರಾಟ ಸಾಮಂತರುಗಳು ಪ್ರಸಂಗಾಭರಣತೀರ್ಥ, ಷಡ್ದರ್ಶನ ಷಣ್ಮುಖ, ಸರ್ವಜ್ಞಕಲ್ಪ, ಕವಿಕುಲತಿಲಕ ಮುಂತಾದ ಮಹತ್ವದ ಪ್ರಶಸ್ತಿ ಗೌರವಗಳನ್ನು ನೀಡಿ ಗೌರವಿಸಿದರು. ಗೋವೆಯ ದೈವಜ್ಞ ಬ್ರಾಹ್ಮಣರನ್ನು ಅವರ ಸ್ವರೂಪ ಗ್ರಹಿಸಿ ಮುದ್ರಾಧಾರಣೆ ಮಾಡಿ ಚಕ್ರಾಂಕನ ನೀಡಿ ಮಾಧ್ವ ತತ್ವಜ್ಞಾನದ ಮುಮುಕ್ಷ ುಗಳಾಗುವಂತೆ ಅವರನ್ನು ಅನುಗ್ರಹಿಸಿದರು. ಧರ್ಮಸ್ಥಳ ಮುಂತಾದೆಡೆಗಳಲ್ಲಿ ಈಶ್ವರನನ್ನು ಅರ್ಚಿಸಿ ಪ್ರತಿಷ್ಠಾಪನೆ ಮಾಡಿದ ಇವರ ಸಾಧನೆಯು ವೈಷ್ಣವರು ಶಿವದ್ವೇಷಿಗಳೆಂಬ ಭ್ರಮೆಯನ್ನು ಸಂಪೂರ್ಣ ನಿವಾರಿಸಿತು. ಇವರು ಪಾಠ ಪ್ರವಚನಗಳನ್ನು ನಿರಂತರ ನಡೆಸಿ ಸಿದ್ಧಾಂತ ಪರಂಪರೆಯನ್ನು ಮುಂದುವರೆಸಬಲ್ಲ ಅನೇಕ ಶಿಷ್ಯರನ್ನು ಅರಳಿಸಿದರು. ಇವರ ಸೋದರರೂ ಆನಂತರ ಭಂಡಾರಕೇರಿ ಪೀಠವನ್ನಲಂಕರಿಸಿದವರೂ, ಇವರ ಯುಕ್ತಿಮಲ್ಲಿಕಾ ಗ್ರಂಥಕ್ಕೆ ಟೀಕೆ ಬರೆದವರೂ ಆದ ಸುರೋತ್ತಮತೀರ್ಥರು; ಇವರ ರುಕ್ಮಿಣೀಶವಿಜಯ, ತೀರ್ಥಪ್ರಬಂಧಗಳಿಗೆ ಉತ್ಕೃಷ್ಟ ವ್ಯಾಖ್ಯಾನಗಳನ್ನು ಬರೆದಿರುವ ನಾರಾಯಣಾಚಾರ್ಯರು; ಇವರ ಜೀವನಚರಿತ್ರೆಯನ್ನು ಹೃದಯಂಗಮವಾಗಿ ಚಿತ್ರಿಸಿರುವ ವೃತ್ತರತ್ನ ಸಂಗ್ರಹಕಾರ ರಘುನಾಥಾಚಾರ್ಯರೂ ಈ ಪರಂಪರೆಯಲ್ಲಿ ಪಲ್ಲವಿಸಿದರು.
ಕನಕದಾಸರ ಅಭಿಮಾನ
ಕನಕದಾಸರಿಗೆ ವಾದಿರಾಜರ ಮೇಲೆ, ವಾದಿರಾಜರಿಗೆ ಕನಕದಾಸರ ಮೇಲೆ ವಿಶೇಷ ಅಭಿಮಾನ. ಕನಕದಾಸರು ತಮ್ಮ ಮೋಹನತರಂಗಿಣಿಯಲ್ಲಿ ತಾನೂ 'ತ್ರಿವಿಕ್ರಮದಾಸರ ದಾಸ' ಎಂದು ಅವರನ್ನು ಸ್ತುತಿಸಿದ್ದಾರೆ. ಅನ್ಯಜಾತಿಯವರಾದರೂ ಹರಿದಾಸರಾಗಿದ್ದ ಕನಕದಾಸರ ಮೇಲೆ ತೋರಿದ ಅಭಿಮಾನ, ಸಂಸ್ಕೃತ ಬಾರದ ಸಾಮಾನ್ಯರಿಗಾಗಿ ತುಳುವಿನಲ್ಲಿ ದಶಾವತಾರ ರಚಿಸಿದ ಔದಾರ್ಯ, ವಾದಿರಾಜರ ಘನತೆಗೆ ದ್ಯೋತಕ. ವಾದಿರಾಜರು ಕನ್ನಡಹರಿದಾಸಸಾಹಿತ್ಯದ ಸವ್ಯಸಾಚಿಗಳು. ಸೊಬಗು, ಲಾಲಿತ್ಯ, ವೇದಾಂತ ಭಾವಗಳ, ಸಾಮಾಜಿಕ ತತ್ವಗಳ ಅಪೂರ್ವ ಕೃತಿಗಳನ್ನು ಅವರು ನೀಡಿದ್ದಾರೆ. ವೈಕುಂಠವರ್ಣನೆ,ಲಕ್ಷ್ಮೀಶೋಭಾನೆ,ಸ್ವಪ್ನಪದ, ಗುಂಡಕ್ರಿಯೆ, ತತ್ವಸುವ್ವಾಲಿ, ಭ್ರಮರಗೀತೆ, ನಾರದಕೊರವಂಜಿ ಮುಂತಾದ ಕೃತಿಗಳು ಅವರ ಲೋಕಾನುಭವಕ್ಕೆ, ಅನುಭಾವಕ್ಕೆ, ಸಾಹಿತ್ಯ ಸಾಮರ್ಥ್ಯಗಳಿಗೆ ನಿಚ್ಚಳವಾದ ನಿದರ್ಶನವಾಗಿವೆ.
ಪೂಜಾಪದ್ಧತಿಯಲ್ಲಿ ಸುಧಾರಣೆ
ವಾದಿರಾಜರು ಉಡುಪಿಯ ಕೃಷ್ಣನ ಪೂಜಾಪದ್ಧತಿಯಲ್ಲಿ ಸುಧಾರಣೆಯನ್ನು ತಂದರು. ಎರಡು ತಿಂಗಳ ಪೂಜಾಪದ್ಧತಿಯನ್ನು ಎರಡು ವರ್ಷಗಳ ಪರ್ಯಾಯ ಪದ್ಧತಿಯನ್ನಾಗಿ ಪುನವ್ರ್ಯವಸ್ಥೆ ಮಾಡಿದರು. ಅಷ್ಟಮಠಗಳಿಗೆ ಅರಸರುಗಳ ಸಹಕಾರದಿಂದ ಉತ್ತಮ ಭೂಸ್ಥಿತಿಗಳನ್ನೇರ್ಪಡಿಸಿದರು. ತಮ್ಮ ಕನ್ನಡದ ಹಾಡು 'ಲಕುಮಿನಾರಾಯಣ ಜಯ ಲಕುಮಿನಾರಾಯಣ'ವನ್ನು ಎಲ್ಲರೂ ಯತಿಗಳ ಸಹಿತವಾಗಿ ಪ್ರತಿರಾತ್ರಿಯ ಪೂಜಾಕಾಲದಲ್ಲಿ ಭಜನ ರೀತಿಯಿಂದ ಹಾಡುತ್ತಾ ತಾಳ ಬಾರಿಸುತ್ತಾ, ನರ್ತನಸೇವೆಯ ಹೊಸ ಭಜನ ಸಂಪ್ರದಾಯವೊಂದನ್ನು ಬಳಕೆಗೆ ತಂದರು. ಪೂರ್ಚುಗೀಸರ ಮತಾಂತರ ಉಪಟಳ ತಾಳದೇ ಕರಾವಳೀ ಕನ್ನಡದ ಕಡೆಗೆ ಬಂದು ನೆಲೆಸಿದ್ದ ಗೋವಾ ಜನರ ಸ್ವರೂಪಗತವಾಗಿದ್ದ ಬ್ರಾಹ್ಮಣಸಂಸ್ಕಾರವನ್ನು ಗ್ರಹಣ ಮಾಡಿದ ವಾದಿರಾಜರು ಅವರಿಗೆಲ್ಲಾ ಚಕ್ರಾಂಕನದ ಮೂಲಕ ಭಾಗವತ ಧರ್ಮದ ದೀಕ್ಷೆ ನೀಡಿ ತಮ್ಮ ಮಠದ ಮುಖ್ಯ ಶಿಷ್ಯರನ್ನಾಗಿ ಪರಿಗಣಿಸಿದರು. ಅದೇ ಮೇರೆಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಕೆಲವು ಸಾರಸ್ವತರಿಗೆ ಮಾಧ್ವಮತ ದೀಕ್ಷೆ ಕೊಟ್ಟು ಪುರಸ್ಕರಿಸಿದರು.
ಕುಡುಮ ಎಂದು ಕರೆಯುತ್ತಿದ್ದ ತೀರ್ಥಕ್ಷೇತ್ರವನ್ನು ವಾದಿರಾಜರು 'ಧರ್ಮಸ್ಥಳ' ಎಂದು ಹೆಸರಿಟ್ಟು ಅಲ್ಲಿ ಆಗ ಮಂಜುನಾಥನ ಪ್ರತಿಷ್ಠಾಪನೆಯ ಕಾರ್ಯ ನೆರವೇರಿಸಿದರು. ಸಕಲ ಹರಿದಾಸರಿಂದಲೂ ವಾಯುಪದಾರ್ಹ ಋುಜುಗಣಸ್ತರೆಂದೇ ಕೊಂಡಾಡಲ್ಪಟ್ಟ ವಾದಿರಾಜರು ಬದರಿಕಾಶ್ರಮಕ್ಕೆ ಹೋಗಿ ತ್ರಿವಿಕ್ರಮೂರ್ತಿಯನ್ನು ಪಡೆದು ಭೂತರಾಜರ ಮೂಲಕ ಪುಣ್ಯಕ್ಷೇತ್ರ ಸ್ವಾದಿಯಲ್ಲಿ ಅದನ್ನು ಪ್ರತಿಷ್ಠಾಪಿಸಿದರು.
ಕನ್ನಡ ಯಶೋಡಿಂಡಿಮ
ಕಲಿಯುಗದಲ್ಲಿ ಭಗವಂತನನ್ನು ಕಂಡು ಆತ್ಮಾನುಭವವನ್ನು ಉಂಡ ಕೆಲವೇ ಪ್ರಭಾವಿಗಳಾದ ಅನುಭಾವಿಗಳಲ್ಲಿ ಅಗ್ರಗಣ್ಯರು ವಾದಿರಾಜರು. ವಾದಿರಾಜರ ಬದುಕೇ ಚತುರ್ಮುಖ ಬ್ರಹ್ಮನಂತೆ. ಅವರು ಸರ್ವಸಂಗ ಪರಿತ್ಯಾಗ ಮಾಡಿದ ಪರಿವ್ರಾಹಕ ಪ್ರಭುಗಳಾದರೂ ರಾಜರೆಂದೇ ವಿಖ್ಯಾತರಾಗಿದ್ದಾರೆ. ಸದ್ಗ್ರಂಥ - ಉದ್ಗ್ರಂಥಗಳನ್ನು ರಚಿಸಿ ದರ್ಶನ ಜಗತ್ತಿನ ಗೌರೀಶಂಕರವೆನ್ನಿಸಿಕೊಂಡರೂ, ಮಾಘನ ಶಿಶುಪಾಲವಧವನ್ನು ಮೀರಿಸುವ ರಸಕಾರಂಜಿ ರುಕ್ಮಿಣೀಶ ವಿಜಯವನ್ನು ರಚಿಸಿ ಕವಿರಾಜರೂ ಆಗಿದ್ದಾರೆ. ಅವರ ಅಶ್ವಧಾಟಿಯಂತೂ ಕಾವ್ಯದಲ್ಲಿ ಹೆಜ್ಜೆಹೆಜ್ಜೆಗೂ ಕುಣಿಯುತ್ತಾ ಪ್ರಾಸಾಲಂಕಾರಗಳ ಕಿಂಕಿಣಿನಾದವನ್ನು ನಿನದಿಸುತ್ತದೆ. ಭಾವದ ರಿಂಗಣಗುಣಿತಕ್ಕೆ ತಾಳಹಾಕಿ ರಸಮೇಳ ನಿರ್ಮಿಸಿರುವ ಅವರ ರುಕ್ಮಿಣೀಶವಿಜಯ ಕಲ್ಪನಾ ಸೌಂದರ್ಯಕ್ಕೊಂದು ಸುಂದರ ದೃಷ್ಟಾಂತ. ರುಕ್ಮಿಣೀಶವಿಜಯದ 'ಕುಂಡಲೀಕೃತ ಮನೋರಮರಾಮಾ, ಖಂಡಿತಾನನ ಸರೋರುಹಧಾಮಾ, ಗಂಡಚುಂಬನ ಕುತೂಹಲಕಾಮಾ|| ಶಂಭ್ವಾದ್ಯೈಃ ಪರಿಷೇವಿತಾಂ ಸುವಸನಾಂ ಜಾಂಬೂನದಾಲಂಕೃತಾಂ ಅಂಬಾಂ ತಾಂ ಪ್ರಣತೋಸ್ಮಿ ಕೃಷ್ಣರಮಣೀಂ ಲಂಬಾಲಕಾಂ ರುಕ್ಮಿಣೀಂ' ಎನ್ನುವ ಪದಪುಂಜಗಳಲ್ಲಿ, ಶಬ್ದಕುಂಜಗಳಲ್ಲಿ ಪುಟಿಯುವ ರಸಾಕಾರಂಜಿಯನ್ನು ಕಂಡು ಪುಣೆಯ ವಿದ್ವಜ್ಜನರು ವಿಸ್ಮಯಗೊಂಡಿದ್ದೇನೂ ಆಶ್ಚರ್ಯವೇನಲ್ಲ. ತಮ್ಮ ಕೃತಿಕೌಶಲ್ಯದಿಂದ ಹೊರನಾಡಿನಲ್ಲಿಯೂ ಕನ್ನಡಿಗರ ವಿಜಯಧ್ವಜವನ್ನು ಹಿಡಿದೆತ್ತಿ ಯಶೋಡಿಂಡಿಮವನ್ನು ಮೊಳಗಿಸಿದ ರಾಜರೆಂದರೆ ವಾದಿರಾಜರೊಬ್ಬರೇ.
ಸರಳತೆಯ ಸಾಕ್ಷಾತ್ಕಾರ
ಶಾಸ್ತ್ರೀಯ ಸಾಹಿತ್ಯದ ಇತಿಹಾಸದಲ್ಲಿ ಮುಖ್ಯ ಮೈಲಿಗಲ್ಲಾಗಿರುವ 'ಯುಕ್ತಿಮಲ್ಲಿಕಾ' ವಾದಿರಾಜರ ಶಾಸ್ತ್ರಪ್ರಭುತ್ವ ಹಾಗೂ ಸಾಹಿತ್ಯಪಟುತ್ವಗಳ ಎತ್ತರ - ಬಿತ್ತರಗಳನ್ನು ದಿಟ್ಟವಾಗಿ ಮೂಡಿಸುವ ಕೃತಿ. ಶ್ರೀಮನ್ನ್ಯಾಯಸುಧಾ ಹಾಗೂ ತತ್ವಪ್ರಕಾಶಿಕಾ ಕೃತಿಗಳಿಗೆ ವಾದಿರಾಜರು ಬರೆದಿರುವ 'ಗುರ್ವರ್ಥದೀಪಿಕೆ' ಎಂಬ ಟೀಕಾಗ್ರಂಥ ವೇದಾಂತಸಾರದ ರಹಸ್ಯಗಳನ್ನೆಲ್ಲಾ, ಸುಧಾ ಪ್ರಮೇಯಗಳನ್ನೆಲ್ಲಾ ಸಂಪೂರ್ಣ ತಿಳಿಸಿಕೊಡುವ ಸುಂದರ ಗ್ರಂಥ. ಅನಂದತೀರ್ಥರ ಜ್ಞಾನ ದಿಗಂತಗಳಿಗೆ ಹಿಡಿದಿಟ್ಟ ಕನ್ನಡಿಯಂತೆ ಕಂಗೊಳಿಸುತ್ತಿರುವ ವಾದಿರಾಜರ 'ಮಹಾಭಾರತ ತಾತ್ಪರ್ಯನಿರ್ಣಯ'ದ ಟಿಪ್ಪಣಿ ಸರಳತೆಯ ಸಾಕ್ಷಾತ್ಕಾರ. ವಾದಿರಾಜರ ವೇದವೇದಾಂತಗಳ ವಿಕ್ರಮದ ಬೌದ್ಧಿಕ ಹಿರಿಮೆಗೆ ಹಾಗೂ ಅವರ ವಾದಕೌಶಲ್ಯ ವಾಗ್ವೈಖರೀ, ವಿಷಯವಿನ್ಯಾಸಪಾಟವಗಳಿಗೆ ನಿತ್ಯನಿದರ್ಶನವೆನ್ನಿಸುವಂತಹ ಕೃತಿಗಳು - 'ಸರಸಭಾರತೀವಿಲಾಸ' ಹಾಗು 'ತೀರ್ಥಪ್ರಬಂಧ'.
ವಾದಿರಾಜರು ಪ್ರಯಾಗದಲ್ಲಿರುವ ಬ್ರಹ್ಮದೇವರ ಸಂಧ್ಯಾಮಂಟಪದಲ್ಲಿ ಧ್ಯಾನಪುಳಕಿತಮೂರ್ತಿಗಳಾಗಿ ಮೈಮರೆತು ಕುಳಿತಿದ್ದಾಗ ವೇದವ್ಯಾಸದೇವರೇ ಅವರಿಗೆ ದರ್ಶನವಿತ್ತು ವಾದಿರಾಜರ ತಾಯಿ ಹರಿಸಿಕೊಂಡಿದ್ದ ಲಕ್ಷಾಲಂಕಾರವನ್ನು ಹೇಳಿ, ಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು ಅರ್ಪಿಸಿದರೆ ಆ ಹರಕೆ ತೀರಿದಂತಾಗುವುದೆಂದು ನುಡಿದರು. ಆಗ ವಾದಿರಾಜರು ವ್ಯಾಸಭಾರತದ ಹಿನ್ನೆಲೆಯಲ್ಲಿ ಕೋಶಗಳನ್ನು ತಮ್ಮದೇ ಆದ ನಿರೂಪಣ ನೈಪುಣ್ಯದಿಂದ 'ಲಕ್ಷಾಲಂಕಾರ'ವಾಗಿ ರಚಿಸಿ ಸಮರ್ಪಣ ಮಾಡಿದ ವಾದಿರಾಜರು ಪ್ರಾತಃಸ್ಮರಣೀಯರಾಗಿದ್ದಾರೆ.