ತೋಂಟದ ಸಿದ್ಧಲಿಂಗಯತಿ
ಇವರ ಕಾಲ: ಸು.ಕ್ರಿ.ಶ.೧೪೭೦
ಆಸ್ಥಾನ: ವಿಜಯನಗರದ ರಾಜನಾದ ವಿರೂಪಾಕ್ಷ (೧೪೬೭ – ೧೪೭೮)
ಕೃತಿ: ಷಟ್ಸ್ಥಲ ಜ್ಞಾನಾಮೃತ ಸಾರ
ಸಿದ್ಧಲಿಂಗ
ಯತಿಗಳು ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿನ ಸಮೀಪದ ಹರದನ ಹಳ್ಳಿಯಲ್ಲಿ ಜನಿಸಿದರು. ಇವರು ಗೋಸಲ
ಚೆನ್ನಬಸವಸ್ವಾಮಿಗಳ ಶಿಷ್ಯರಾಗಿದ್ದರು. ಕಗ್ಗೆರೆಯ ಸಮೀಪದಲ್ಲಿರುವ ನಾಗಿಣೀ ನದಿಯ ತೀರದಲ್ಲಿ ತೋಂಟದೊಳಗೆ ಬಹಳ ಕಾಲ ಶಿವಯೋಗದಲ್ಲಿ ಇದ್ದುದರಿಂದ ಇವರಿಗೆ ‘ತೋಂಟದ’ ಎಂಬ ವಿಶೇಷಣವು ರೂಢಿಯಾಗಿ ಬಂದಿದೆ. ಇವರು ಕುಣಿಗಳಿಗೆ ಸಮೀಪದಲ್ಲಿರುವ ಎಡೆಯೂರಲ್ಲಿ ಸಮಾಧಿಯನ್ನು ಹೊಂದಿದರು. ಈ ಊರಿನಲ್ಲಿ ಇವರ ಜ್ಞಾಪಕಾರ್ಥವಾಗಿ ಕಟ್ಟಿಸಿದ ಸಿದ್ಧಲಿಂಗೇಶ್ವರವೆಂಬ ಒಂದು ದೇವಸ್ಥಾನವು ಈಗಲೂ ಇದೆ. ಇವರು ವೀರಶೈವರಲ್ಲಿ ಪ್ರಸಿದ್ಧವಾದ ಗುರು. ಇವರ ಚರಿತ್ರೆಯನ್ನು ಕುರಿತು ಹಲವು ಗ್ರಂಥಗಳು ಹುಟ್ಟಿವೆ. ಇವುಗಳಲ್ಲಿ ಇವರು ನಿರಂಜನ ಗಣೇಶ್ವರನ ಅಪರಾವತಾರವೆಂದು ಹೇಳಿದೆ. ಮೇಲೆ ಹೇಳಿದ ಸಿದ್ಧಲಿಂಗೇಶ್ವರ ದೇವಸ್ಥಾನದ ಪ್ರಕಾರದಲ್ಲಿ ಸುಮಾರು ೧೫೦೦ರಲ್ಲಿ ಬರೆದ ಒಂದು ಶಿಲಾಶಾಸನವಿದೆ.” ಎಂದು ಕವಿ ಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಸಿದ್ಧಲಿಂಗಯತಿಯು “ವಿಜಯನಗರದ ರಾಜನಾದ ವಿರೂಪಾಕ್ಷನ (೧೪೬೭ – ೧೪೭೮)ಕಾಲದಲ್ಲಿದ್ದಂತೆ ವಿರೂಪಾಕ್ಷ ಪಂಡಿತನ ೧೫೮೪ ಚನ್ನಬಸವ ಪುರಾಣದಿಂದ ಊಹಿಸಬಹುದಾಗಿದೆ. ಇವರ ಕಾಲವು ಸುಮಾರು ೧೪೭೦ ಆಗಬಹುದು”
ಇವರು “ಷಟಸ್ಥಲ ಬ್ರಹ್ಮಿ”ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ೭೦೧ ವಚನಗಳನ್ನು ಷಟ್ಸ್ಥಲ ವಿಭಾಗ ಕ್ರಮದಲ್ಲಿ ರಚಿಸಿದ್ದಾರೆ. ಇವರ ವಚನಗಳು ಸತ್ವಯುತವಾಗಿವೆ. ಅಲ್ಲದೆ ಬೆಡಗಿನ ವಚನಗಳನ್ನೂ ರಚಿಸಿದ್ದಾರೆ. ಇವರ ಶಿಷ್ಯರಾದ ಘನಲಿಂಗಿದೇವರು ಇವರನ್ನು “ತೋಂಟದ ಅಲ್ಲಮ” ಎಂದು ಕರೆದಿದ್ದಾರೆ.
“ತೋಂಟದ ಅಲ್ಲಮರು” ಎಂಬುದಕ್ಕೆ ಕಾರಣವಿದೆ. ೧೨ ನೇ ಶತಮಾನದಲ್ಲಿ ಹುಟ್ಟಿದ್ದ ಅನುಭವ ಮಂಟಪ ಅಲ್ಲಮರು ಹೊರಟುಹೋದನಂತರ ಅನುಭವ ಮಂಟಪ ಶೂನ್ಯವಾಯಿತು. ಯಾರೂ ಆ ಸ್ಥಾನವನ್ನು ತುಂಬಲಿಲ್ಲ. (ಇದರ ವಿವರವನ್ನು ತಿಳಿಯಬಯಸುವವರು ಡಾ. ಎಮ್. ಎಮ್. ಕಲಬುರ್ಗಿಯವರ “ಮಾರ್ಗ” ಭಾಗ ೪ ರ “ಅನುಭವ ಮಂಟಪದ ಹುಟ್ಟು ಮರುಹುಟ್ಟು” ಎಂಬ ಲೇಖನವನ್ನು ಓದಬಹುದು.
ಅವರು ಹೇಳುತ್ತಾರೆ:
“.....ಅನುಭವ ಮಂಟಪದ ಪರಿಕಲ್ಪನೆ ಹದಿನೈದನೆ ಶತಮಾನದವರೆಗೂ ಪುನಃ ಆಕಾರ ಪಡೆಯಲೆ ಇಲ್ಲ. ಇಂತಹ ಸಂದರ್ಭದಲ್ಲಿ ಹದಿನಾರನೆಯ ಶತಮಾನದ ಮಧ್ಯದಲ್ಲಿ ತೋಂಟದ ಸಿದ್ಧಲಿಂಗ ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ಪೀಠವೇರಿದ. ಇವನನ್ನು “ತೋಂಟದ ಅಲ್ಲಮ” “ದ್ವಿತಿಯ ಅಲ್ಲಮ”ನೆಂದು ತರುವಾಯದವರು ಕರೆದದ್ದು. ಅಲ್ಲಮನ ಬಳಿಕ ದ್ವಿತಿಯ ವ್ಯಕ್ತಿಯಾಗಿ ಪೀಠವೇರಿದನೆಂಬುದಕ್ಕೆ ಆಧಾರವಾಗಿ ನಿಲ್ಲುತ್ತದೆ.
“ಸಿದ್ಧಲಿಂಗ ಸಾಂಗತ್ಯ” ಬರೆದ ಹೇರಂಬಕವಿಯು ಇವನು ಹರದನ ಹಳ್ಳಿಯ ಹರದನ ಮಗನೆಂದುಹೇಳಿದ್ದಾನೆ. ಇತ್ತೀಚೆಗೆ ಲಭ್ಯವಾದ ಷಟ್ಸ್ಥಲ ಶಿವಾಯಣ ಕೃತಿಯಲ್ಲಿ ಈತನ ತಂದೆ ತಾಯಿಗಳು ಮಲ್ಲಿಕಾರ್ಜುನ ಶೆಟ್ಟಿ, ಜ್ಞಾನಾಂಬೆ ಎಂದು ಹೇಳಲಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವೈಶ್ಯ, ಶೂದ್ರರು ಶ್ರಮಿಕ ವರ್ಗ, ಬ್ರಾಹ್ಮಣ ಕ್ಷತ್ರಿಯರು ಪೋಷಕ ವರ್ಗ. ಬಸವಣ್ಣ ಈ ಶ್ರಮಿಕ ವರ್ಗವನ್ನು ಬೆಂಬಲವಾಗಿಟ್ಟುಕೊಂಡು ಆ ಪೋಷಕ ವರ್ಗದ ವಿರುದ್ಧ ಹೋರಾಡಿದ. ಹೀಗಾಗಿ ಆ ಕಾಲದಿಂದಲೂ ಬಸವ ಸಿದ್ಧಾಂತದ ಅಂದರೆ ಅನುಭವ ಮಂಟಪ ಸಂಸ್ಕೃತಿಯ ನಿಷ್ಠಾವಂತ ಅನುಯಾಯಿಗಳಾಗಿದ್ದ ವರ್ತಕ ಸಮಾಜದ ತೋಂಟದಾರ್ಯರ ಆ ಸಂಸ್ಕೃತಿಯನ್ನು ಮರುಸ್ಥಾಪಿಸಲು ಮುಂದೆ ಬಂದರೆಂಬುವುದು ಶರಣರ ಪರಂಪರೆಯ ದ್ವಿತಿಯ ಘಟಕದ ನಾಯಕ ವ್ಯಕ್ತಿಗಳಾದರೆಂಬುವುದು ಅವಶ್ಯ ಗಮನಿಸಬೇಕಾದ ಸಂಗತಿಯಾಗಿದೆ. ಹೀಗೆ ನಾಯಕ ವ್ಯಕ್ತಿಯಾಗಿ ಈತನು ಅನುಭವ ಮಂಟಪವನ್ನು ಮೂರು ಬಗೆಗಳಲ್ಲಿ ಪುನರುಜ್ಜೀವನಗೊಳಿಸಿದನು.
೧. ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಗೋಷ್ಠಿ ಗೊಗ್ಗಯ್ಯನ ಹೊಲದಲ್ಲಿ, ಮುಕ್ತಾಯಕನ ಮನೆಯಲ್ಲಿ, ಸೊಲ್ಲಾಪುರದ ಕೆರೆಯ ತೀರದಲ್ಲಿ, ಜರುಗಿದ ಸಾಧ್ಯತೆ ಇದ್ದರೂ ಅದರ ಬಹು ಪಾಲು ಕೇದ್ರೀಕೃತಗೊಂಡದ್ದು ಕಲ್ಯಾಣಮಂಟಪದಲ್ಲಿ. ಬಹುಶಃ ಕಲ್ಯಾಣದ ಬೀದಿಯಲ್ಲಿ, ನುಲಿಯ್ಯ ಚಂದಯ್ಯನ ಹುಲ್ಲುಗೊಯ್ಯುವ ಹೊಲದಲ್ಲಿ, ಮಡಿವಾಳ ಮಾಚಿದೇವ ಬಟ್ಟೆ
ತೊಳೆಯುವ ಕೆರೆಯ ತೀರದಲ್ಲಿ ಆಯ್ದಕ್ಕಿ ಮಾರಯ್ಯನ ಮನೆಯಲ್ಲಿ ಹೀಗೆ ಕಲ್ಯಾಣದ ಪರಿಸರದಲ್ಲಿ ಗೋಷ್ಠಿಗಳು ನದೆದಿದ್ದಿರಬಹುದಾದರೂ ಬಸವಣ್ಣನ ಮಹಾಮನೆಯಲ್ಲಿ ಜರುಗಿದುದೇ ಹೆಚ್ಚು. ಹೀಗೆ ಕಲ್ಯಾಣಕ್ಕೆ ಸೀಮಿತವಾಗಿದ್ದ ಅನುಭವ ಮಂಟಪವನ್ನು ತೋಂಟದಾರ್ಯರು ತಾವು ಚರಿಸಿದ ಬೇರೆ ಬೆರೆ ಗ್ರಾಮ ಪಟ್ಟಣಗಳಿಗೂ ಚರಿಸುವಂತೆ ಮಾಡಿದರು. ಮಹಾಬಳೇಶ್ವರ, ಕಂಗೆರೆ, ಚಿತ್ರಕಾಯಪುರ, ಹೆಬ್ಬೂರು, ತುಮಕೂರು, ದೇವರಾಯ ಪಟ್ಟಣ, ಹೊಳಲುಗುಂದ, ಎಡೆಯೂರು...................... ಈ ಗ್ರಾಮಗಳಲ್ಲಿ ಅನುಭವ ಮಂಟಪದ ಸಂಕಥನ ಜರಗುವಂತೆ ಮಾಡಿದರು.
೨. ಹೀಗೆ ತಾವೊಬ್ಬರೆ ಅನುಭವ ಮಂಟಪದ ವ್ಯಕ್ತಿರೂಪವಾಗಿ, ಪರ್ಯಟನ ಪೂರೈಸದೆ ಏಳುನೂರು ಜನ ವಿರಕ್ತರನ್ನು ಸಿದ್ಧ ಪಡಿಸಿ ಇವರೆಲ್ಲ ಅನುಭವ ಮಂಟಪವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಿದರು. ಬಹುಶಃ ಹನ್ನೆರಡನೆ ಶತಮಾನದಲ್ಲಿ ಅಲ್ಲಮ ಪ್ರಭುಮಾತ್ರ ವಿರಕ್ತನಾಗಿದ್ದನು. ಈಗ ಅನುಭವ ಮಂಟಪ ಸಂದೇಶವನ್ನು ದಿಕ್ಕು ದಿಕ್ಕಿಗೂ ಮುಟ್ಟಿಸಲು ಏಳುನೂರು ಜನರ ವಿರಕ್ತ ಪಡೆಯನ್ನು ತೋಂಟದಾರ್ಯರು, ಪರಿಣಾಮಕಾರಿಯಾಗಿ ಬಳಸಿದರು. ಇವರಲ್ಲಿ , ಸಪ್ಪೇದೇವರು, ಬೋಳ ಬಸವರಾಜ ದೇವರು, ಉಪ್ಪಿನ ಹಳ್ಳಿ ಸ್ವಾಮಿಗಳು, ಗುಮ್ಮಳಾಪುರ ಸಿದ್ಧಲಿಂಗ, ಪಟ್ಟಣದ ದೇವರು, ಶೀಲವಂತ ದೇವರು, ಘನಲಿಂಗಿ, ಸುತ್ತೂರು ಸಿದ್ಧಮಲ್ಲೇಶ, ಬತ್ತಲೆಯ ದೇಶಿಕ, ಹುಚ್ಚ ಪರ್ವತೇಶ , ಕಂಕಣದ ದೇವರು, ರಾಚವೀಟಿಯ ದೇವರು, ಗುರು ಚಂದ್ರಶೇಖರ, ದೊಡ್ಡ ಸಿದ್ಧೇಶ, ಸಿದ್ಧಲಿಂಗೇಶ್ವರ, ಮಳೆಯ ದೇವ, ಕೊಡಗಿನಹಳ್ಳಿಯಾರ್ಯ............... ಇವರೆ ಮೊದಲಾದ ಏಳನೂರು ಜನರಿಂದಾಗಿ ಸಂಚಾರಿ ಅನುಭವ ಮಂಟಪ ಅರ್ಥ ಪಡೆಯಿತು.
ಈ ಸಮಕಾಲೀನರನ್ನು ಬಿಟ್ಟರೂ ಇವರ ಶಿಷ್ಯ ಪ್ರಶಿಷ್ಯ ಪರಂಪರೆಯವರೂ ಅನುಭವ ಮಂಟಪ ಸಂಸ್ಕೃತಿಯನ್ನು ಇತಿಹಾಸದುದ್ದಕ್ಕೂ ಹಳ್ಳಿ ಹಳ್ಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಇವರಲ್ಲಿ ತೋಂಟದಾರ್ಯರ ಪರಂಪರೆಯವರಂತೂ ತಮ್ಮ ಕರ್ತವ್ಯವೆಂಬಂತೆ ಈ ಹೊಣೆಯನ್ನು ಶತಮಾನದಿಂದ ಶತಮಾನಕ್ಕೆ ಮುನ್ನಡೆಸಿದರು................ ಇವರಲ್ಲಿ ಕಟ್ಟಿಗೆಹಳ್ಳಿ ಸಿದ್ಧಲಿಂಗರು ಸಂಸಾರವನ್ನು ಬಿಟ್ಟು ಹರಪನಹಳ್ಳಿಯಲ್ಲಿ ನಿಂತು ಚೀಲಾಳಪ್ರಭುವನ್ನು ಉತ್ತರಾಧಿಕಾರಿ ಮಾಡಿಕೊಳ್ಳಲು ಅವರ ಶಿಷ್ಯರಲ್ಲಿ ಕೆಲವರು ಸಿಟ್ಟಿಗೆದ್ದು ಬೇರೆ ಸಮಯವ ಮಾಡಿಕೊಂಡರು, ಎಂಬ ವಿಷಯ ಈ ಕೃತಿಯಲ್ಲಿ ಬರುತ್ತದೆ. ಅದೇನೇ ಇದ್ದರೂ ಈ ಚೀಲಾಳಸ್ವಾಮಿ ಹರಪನ ಹಳ್ಳಿಯ ಗುಡ್ಡದ ಓರೆಯಲ್ಲಿ ಮಠ ಕಟ್ಟಿಸಿ ಅನುಭವ ಮಂಟಪ ಸ್ಥಾಪಿಸಿದ ವಿಷಯ ದಾಖಲಾಗಿದೆ............... ಇದರಿಂದಾಗಿ ತೋಂಟದಾರ್ಯರು ಮತ್ತೆ ಆರಂಭಿಸಿದ ಅನುಭವ ಮಂಟಪ ಸಂಚಾರವನ್ನು ಬಿಟ್ಟು ಸ್ಥಗಿತಗೊಂಡಿತು......... ಹದಿನಾರನೆಯ ಶತಮಾನದಲ್ಲಿ ಅನುಭವ ಮಂಟಪಕ್ಕೆ ಚಲನಶೀಲತೆ ನೀಡಿದುದು. ಅದು ವ್ಯಾಪಕವಾಗಿ ಹರಡಲು ಕಾರಣವಾದುದು ತೋಂಟದಾರ್ಯರ ದೊಡ್ದ ಸಾಧನೆಯಾಗಿದೆ.
೩. ಈ ಅನುಭವ ಮಂಟಪವನ್ನು “ಶೂನ್ಯಸಂಪಾದನೆ” ಹೆಸರಿನಲ್ಲಿ ಗ್ರಂಥಸ್ಥ ಗೊಳಿಸಲು ಶಿಷ್ಯರಿಗೆ ಪ್ರೇರಣೆ ನೀಡಿದುದು,................ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಮೂರನ್ನು ರೂಪಿಸಿದವರು ತೋಂಟದಾರ್ಯರ ಶಿಷ್ಯ ಪರಂಪರೆಯ “ ಹಲಗೆದೇವ (?) ಗುಮ್ಮಳಾಪುರ ಸಿದ್ಧಲಿಂಗ, ಗೂಳೂರು ಸಿದ್ಧವೀರಣ್ಣ. ಮೇಲೆ ಹೇಳಿದಂತೆ ಅನುಭವ ಮಂಟಪ ಸಂಸ್ಕೃತಿಯನ್ನು ತನ್ನ ಪರಂಪರೆಯ ವಿರಕ್ತ ವ್ಯಕ್ತಿಗಳಿಗೆ ಬದಲು ಗ್ರಂಥಗಳ ಮೂಲಕ ಪ್ರಸಾರಮಾಡಿಸಿದ್ದ ವಿನೂತನ ಉಪಕ್ರಮವಿದು. ............
ಒಟ್ಟಾರೆ ತೋಂಟದ ಸಿದ್ಧಲಿಂಗ ಶಿವಯೋಗಿಯ ಜನನದ ಉದ್ದೇಶ ಅನುಭವ ಮಂಟಪವನ್ನು ಪುನರುಜ್ಜೀವನಗೊಳಸುವುದು
ಮತ್ತು ಅದನ್ನು ವ್ಯಕ್ತಿ ಮಾಧ್ಯಮ, ಗ್ರಂಥ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದೇ ಆಗಿದೆ.”
****ಮಾಹಿತಿ ಕೃಪೆ: Vachana a week blog ಮತ್ತು ಕಣಜ****