ನನ್ನ ಪುಟಗಳು

02 ಮಾರ್ಚ್ 2026

'ವಸಂತನ ಆಗಮನ ಚೈತ್ರ ಹಬ್ಬಗಳ ಸಮ್ಮಿಲನ'

 ಲೇಖನ :- ವಸಂತನ  ಆಗಮನ ಚೈತ್ರ ಹಬ್ಬಗಳ ಸಮ್ಮಿಲನ

✍️ಪ್ರಿಯಾ ಪ್ರಾಣೇಶ  ಹರಿದಾಸ




ನಮ್ಮ ಭಾರತದಲ್ಲಿ  ಆಚರಿಸುವ  ಪ್ರತಿ ಹಬ್ಬದ ಹಿಂದೆ ಶೃತಿ ಸ್ಮೃತಿಗಳ  ಹಿನ್ನಲೆ ಇರುವುದರ
ಜೊತೆ ವೈಜ್ಞಾನಿಕ ಹಿನ್ನಲೆಯೂ ಸೇರಿದೆ.

ವೈಜ್ನಾನಿಕವಾಗಿ ತಿಥಿ,ಪಕ್ಷ,ಮಾಸ,ಋತು, ಸಂವತ್ಸರ  ಎಲ್ಲವನ್ನೂ ನಮ್ಮ ಪೂರ್ವಜರು ಶತಶತಮಾನಗಳ ಹಿಂದೆಯೇ…. ಲೆಕ್ಕ ಹಾಕಿ ಪಂಚಾಂಗವನ್ನು ತಯಾರಿಸಿ ನಮಗೆ  ಕೊಟ್ಟಿದ್ದಾರೆ. ಜ್ಞಾನದದಿಂದ ವಿಜ್ಞಾನ  ಹುಟ್ಟಿದೆ ಎಂದು ನಾವುಗಳು ತಿಳಿಯಬೇಕು.
ಅವರು ಹಾಕಿಕೊಟ್ಟ ಅಧ್ಭುತ ವೈಜ್ನಾನಿಕ ದೂರದೃಷ್ಟಿ  ಪ್ರಬುದ್ಧತೆ ಒಪ್ಪಿಕೊಳ್ಳಬೇಕು.

ರಾವಣನ ವಧೆಯಾದ ನಂತರ ಅಯೋಧ್ಯೆಗೆ ಆಗಮಿಸಿದ ಶ್ರೀರಾಮಚಂದ್ರ ಯುಗಾದಿ ದಿನ ನೂತನ ರಾಜ್ಯಭಾರಸೂತ್ರವನ್ನು ವಹಿಸಿಕೊಂಡನಂತೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದುದಾಗಿತ್ತು. ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು

ಪೂರ್ಣಿಮೆಯ ದಿನ ಚಂದ್ರನು ಯಾವ ನಕ್ಷತ್ರದೊಂದಿಗೆ ಇರುತ್ತಾನೆಯೋ ಅದನ್ನನುಸರಿಸಿ ಆ ತಿಂಗಳನ್ನು ಹೆಸರಿಸುತ್ತಾರೆ. ಯಾವ ಪೂರ್ಣಿಮೆಯ ದಿನ ಚಂದ್ರನು ಚಿತ್ರಾ ನಕ್ಷತ್ರದೊಡನೆ ಇರುತ್ತಾನೋ ಅದು ಚೈತ್ರಮಾಸ. ಆದ್ದರಿಂದಲೇ ಆ ಪೂರ್ಣಿಮೆಯನ್ನು
‘ಚಿತ್ರಾ ಪೂರ್ಣಿಮೆ’ ಎನ್ನುತ್ತಾರೆ.

ಇದೊಂದು ಶುಭಮಾಸ ಚೈತ್ರಮಾಸ ಉತ್ತರಾಯಣದಲ್ಲಿ ಬರುತ್ತದೆ. ಆಯನಗಳಲ್ಲಿ ಉತ್ತರಾಯಣ ಶ್ರೇಷ್ಠ. ಭಗವದ್ಗೀತೆಯಲ್ಲೂ ಇದನ್ನು ಶ್ರೀಕೃಷ್ಣ ಪ್ರಶಂಸಿಸಿದ್ದಾನೆ.


ಭಗವಂತ ಅಣುತೃಣಾದಿಗಳನ್ನು ಸೃಷ್ಟಿಸಬೇಕಾದರೆ, ಸೃಷ್ಟಿಯಲ್ಲಿರುವಂತಹುದೆ ಮಾನವಕುಲದಲ್ಲಿ ತಂದನು. ಅಂದರೆ ಸೃಷ್ಟಿಯಲ್ಲಿನ ಬದಲಾವಣೆ ಪ್ರತಿ ಮಾಸದ ಋತುಮಾನದತಕ್ಕಂತೆ ನಾವು ಕಾಣಬಹುದು. ಹಾಗೇ  ನಮ್ಮ  ಜೀವನದಲ್ಲಿ  ಕಾಣಬಹುದು. ಯುಗಾದಿ ಹಬ್ಬ ದೇವರ  ಪೂಜೆ ಮಾಡಿ ಭಕ್ಷ್ಯ ಭೋಜ್ಯ , ಬೇವು ಬೆಲ್ಲ  ನೈವೇದ್ಯ ತೋರಿಸಿ ಸ್ವೀಕರಿಸಬೇಕು.

ಮಾಸದ ಪ್ರಮುಖ ಹಬ್ಬಗಳು

ಯುಗಾದಿ, ಶ್ವೇತ ವರಾಹ ಕಲ್ಪಾರಂಭ
(ಶುಕ್ಲ ಪಾಡ್ಯ )
ಶ್ರೀ ರಾಮ ನವಮಿ (ಶುಕ್ಲ ನವಮಿ)
ಕಾಮದಾ ಏಕಾದಶಿ (ಶುಕ್ಲ ಏಕಾದಶಿ)
ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ)
ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
ವರಾಹ ಜಯಂತಿ (ಕೃಷ್ಣ ತ್ರಯೋದಶಿ


ಮೊದಲ ವರ್ಷರಂಭವಾಗುವುದೇ "ಯುಗಾದಿ" ಹಬ್ಬದಲ್ಲಿ ಮನೆಯನ್ನು ತಳಿರು ತೋರಣಗಳಿಂದ ಶೃಂಗರಿಸಬೇಕು.
ಅಭ್ಯಂಗನಸ್ನಾನ ಮಾಡಬೇಕು.
ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಶರೀರದ ಸರ್ವಾವಯವಗಳಿಗೂ ಎಣ್ಣೆ ಹಚ್ಚಿ ಮಾಡುವ ಸ್ನಾನವನ್ನು "ಅಭ್ಯಂಗಸ್ನಾನವೆನ್ನುವರು".
ಅಭ್ಯಂಗಸ್ನಾನದಿಂದ ರಜತಮೋಗುಣಗಳ ನಾಶವಾಗಿ ಸಾತ್ವಿಕಗುಣ ಬೆಳೆಯುತ್ತದೆ ಶಾಸ್ತ್ರಗಳು ಹೇಳುತ್ತವೆ.

ಇನ್ನು ಅಂದು ದೇವರ ಪೂಜೆ ಮಾಡುವುದು , ದೇವಸ್ಥಾನಗಳಿಗೆ ಹೋಗುವುದು, ಗುರುಹಿರಿಯರ ಆಶೀರ್ವಾದ ಪಡೆಯುವುದು. ಭಕ್ಷ್ಯ ಭೋಜನ ಮತ್ತು ಬೇವು ಬೆಲ್ಲ ಎಲ್ಲವನ್ನು ದೇವರಿಗೆ  ನೈವೀದ್ಯೆ ತೋರಿಸಿ ನಾವುಗಳು ಸ್ವೀಕಾರ ಮಾಡುವಾಗ

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| - ಪ್ರಾರ್ಥಿಸಬೇಕು.

ಬೇವು ಬೆಲ್ಲಕ್ಕೆ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖವಿದೆ.. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಈ ಮಾತೇ  ಈ ಸ್ತೋತ್ರದಲ್ಲಿ ಹೇಳಲಾಗಿದೆ

ಉತ್ತರ ಕರ್ನಾಟಕದ ಹಬ್ಬಗಳಲ್ಲಿ   ಯುಗಾದಿ ಮುಗಿದ ನಂತರ ತೃತೀಯ(ತದಿಗೆ) ಅಂದರೆ ಮೂರನೇ ದಿನ.ಚೈತ್ರ ಗೌರಿ ವಿಶೇಷವೇನೆಂದರೆ, ಗೌರಿಯ ಹಿತ್ತಾಳೆ, ಕಂಚು ಅಥವಾ ಮರದ ಪ್ರತಿಮೆಯ ಜೋಕಾಲಿಯಲ್ಲಿರುವ  ಗೌರಿಯನ್ನು ಪೂಜಿಸುವುದು.

ಗೌರಿಗೆ ಹಸಿರು ಖಣದ ಸೀರೆ ಉಡಿಸಿ, ಮಾಂಗಲ್ಯ, ಮುತ್ತಿನ ಸರ, ಗಾಜಿನ ಬಳೆ  ಅಲಂಕಾರ ಮಾಡಿ ಪ್ರತಿಷ್ಟಾಪಿಸುವುದು ಜೊತೆಗೆ ಗಂಗೆಯನ್ನು ಪ್ರತಿಷ್ಟಾಪಿಸಬೇಕು ಹಾಗು ಮಣ್ಣಿನ ಕೊಂತಿ  ಮಾಡಿ ಕೂರಿಸುವುದು. ಗೋಧಿ ಅಥವಾ ಹಸಿರು ಬೆಳೆ ಸಸಿ ಹಾಕಿರುತ್ತಾರೆ.

ಗಂಧ ಹರಿದ್ರ ಕುಂಕುಮ ಗೆಜ್ಜೆ ವಸ್ತ್ರ ಹೂಗಳಿಂದ  ಪೂಜೆ ಮಾಡಿ ಅನ್ನ ಪಾಯಸ  ನೇವಿದ್ಯೆ ತೋರಿಸಿ ಸಾಯಂಕಾಲ ಮತ್ತೊಮೆ ಕೋಸಂಬರಿ ಮತ್ತು ಪಾನಕ  ನೈವೀದ್ಯೆ ತೋರಿಸಬೇಕು.

ಸುಹಾಸಿನಿಯರನ್ನು ಮನೆಗೆ ಕರೆದು, ಅರಿಶಿಣ ಕುಂಕುಮ, ಹೂವು, ಎಲೆ ಅಡಿಕೆ ಊಡಿ ತುಂಬುವುದು.ಜೊತೆಗೆ ಕೋಸಂಬರಿ ಪಾನಕ ಕೊಡುವ ಪದ್ಧತಿ.

ಹಿರಿಯರಿಂದ ತಿಳಿದು ಬಂದ  ಕೆಥೆ ಎಂದರೆ, ಪಾರ್ವತಿ ದೇವಿಯು ಚೈತ್ರ ಮಾಸ ಒಂದು ತಿಂಗಳು ತನ್ನ ಎರಡು ಮಕ್ಕಳಾದ ಗಣೇಶ ಹಾಗು ಷಣ್ಮುಖನನ್ನು  ಕರೆದುಕೊಂಡು  ತವರುಮನೆಗೆ ಬಂದು ಸುಖವಾಗಿ ಕಾಲ ಕಳೆಯುತ್ತಾಳೆ.  ಅಕ್ಷಯ ತೃತೀಯಾದಂದು ಪೂಜೆ ಕೊನೆಗೊಳ್ಳಿಸುವುದು. ಆ ದಿನ ಭಕ್ತರ ಭಕ್ತಿಗೆ ಮೆಚ್ಚಿ, ಧನ ಧನ್ಯ ಸಮೃದ್ಧಿ, ಜ್ಞಾನ ಭಕ್ತಿ ವೈರಾಗ್ಯ ಅಕ್ಷಯವಾಗಲಿ ಎಂದು ಆಶೀರ್ವಾದ ಕೊಟ್ಟು, ತನ್ನ ಪತಿಯಾದ ಶಿವನ ಮನೆಗೆ ಹಿಂದಿರುಗುತ್ತಾಳೆ.

ಹಾಗೇ ಹೊಸದಾಗಿ ಮದುವೆಯಾದ ಮದುಮಗಳ ಕಡೆಯಿಂದ ಚೈತ್ರ ಗೌರಿ ಪೂಜೆ ಮಾಡಿ, ಸುಹಾಸಿನಿಯರನ್ನು ಮನೆಗೆ ಕರೆದು ಕಾಲು ತೊಳೆದು, ಅರಿಶಿನ ಕುಂಕುಮ, ಗಂಧ, ಹೂವು ಎಲೆ ಅಡಿಕೆ ಕೊಡಿಸಿ ಬಂದ  ಮುತ್ತೈದೆಯರಿಗೆ  ಊಡಿ ತುಂಬಿಸುತ್ತಾರೆ. ಹಾಗು ಕೋಸಂಬರಿ ಪಾನಕ ಕೊಡುತ್ತಾರೆ.

ಇನ್ನು ರಾಮನವಮಿಯಂದು
ಶ್ರೀ ರಾಮಚಂದ್ರನು ಚೈತ್ರ ಶು|| ನವಮಿ ಮಧ್ಯಾಹ್ನ ಸರಿಯಾಗಿ 12 ಘಂಟೆಗೆ ಅವತರಿಸಿದರೆ ಚೈತ್ರ ಹುಣ್ಣಿಮೆ ಸೂರ್ಯೋದಯಕ್ಕೆ ಸರಿಯಾಗಿ ಹನುಮಂತನ ಅವತಾರವಾಗುತ್ತದೆ. ಈ ವೇಳೆಗೆ ಭಕ್ತರೆಲ್ಲರೂ ಸ್ನಾನ ಮಾಡಿ ಮಡಿಯಿಂದ ದೇವರನ್ನು ತೊಟ್ಟಿಲಲ್ಲಿ ಹಾಕಿ ಆರತಿ ಮಾಡಿ ವಿವಿಧ ವಾದ್ಯ ವೈಭವಗಳೊಂದಿಗೆ ಆಚರಿಸುತ್ತಾರೆ.

ಶ್ರೀರಾಮಚಂದ್ರನು ಪರಮಾತ್ಮನೇ ಆದರೂ ಸಾಮಾನ್ಯ ವೀರ ಪುರುಷನಂತೆ ಧರೆಯ  ಜನರ  ಜೀವನದಲ್ಲಿ ಬರುವ ಕಷ್ಟ ಸುಖವನ್ನು ಎದುರಿಸುವ ರೀತಿ ನೀತಿಗಳನ್ನು ತಾನು ಎದುರಿಸಿ ಸಮಾಜಕ್ಕೆ ತೋರಿಸಿದ್ದಾನೆ.

ಅದರಂತೆ ರಾಮದೂತನಾದ ಹನುಮಂತ ದೇವರ ಉತ್ಸವವು ದೇಶಾದ್ಯಂತ ವಿಜೃಂಬಣೆಯಿಂದ  ನಡೆಯುತ್ತದೆ.
ಹನುಮಂತ ದೇವರನ್ನು ಸೂರ್ಯೋದಯಕ್ಕೆ ಸರಿಯಾಗಿ ತೊಟ್ಟಿಲಲ್ಲಿ ಹಾಕಿ ಆರಾಧಿಸುವರು.

ಪಾನಕ ಕುಡಿಯಲು ಮತ್ತು ಕೋಸಂಬರಿ ತಿಂದಾಗ ದೇಹದ  ಆರೋಗ್ಯಕ್ಕೆ ಒಳ್ಳೆಯದು.ತುಂಬಾ ರುಚಿ ಹಾಗು ಬೇಸಿಗೆಗೆ ಒಳ್ಳೆಯ  ಸ್ವಾದಿಷ್ಟ ಇರುತ್ತದೆ. ಇದರಲ್ಲಿ 'ಸಿ ' ಜೀವನ ಸತ್ವ ಹೆರಳವಾಗಿ ಇರುತ್ತದೆ, ಕ್ಯಾಲ್ಸಿಯಂ ಹಾಗು ಮೆಗ್ನೀಷಿಯಂ ಕೂಡ ಇರುತ್ತದೆ. ಬೇಸಿಗೆಯಲ್ಲಿ ಉಷ್ಣವಾಗದಂತೆ ನೋಡಿಕೊಳ್ಳುತ್ತದೆ, ಜೊತೆಗೆ ನೆಗಡಿ ಕೆಮ್ಮು, ಅಲರ್ಜಿ ಹಾಗು ನಿರ್ಜಲೀಕರಣವಾಗದಂತೆ ತಡೆಯುತ್ತದೆ.

ನಮ್ಮ ಸಂಪ್ರದಾಯಗಳು ಸಾಮಾಜಿಕ ಹಾಗು ವೈಜ್ಞಾನಿಕ ತಳಹದಿಯ ಮೇಲೆ ಬೆಳೆದು ಬಂದಿವೆ, ನೆರೆಹೊರೆಯವರನ್ನು, ಭೇಟಿಯಾಗಲು ಇದೊಂದು ಸದಾವಕಾಶ,  ಸಮರಸದಿಂದ ಇರುವುದೇ ಈ ಹಬ್ಬಗಳ ಪ್ರಮುಖ ಉದ್ದೇಶಗಳಲ್ಲಿ ಒಂದು. 

ನಮ್ಮ ನಮ್ಮ ಭಾರತ ಸಂಸ್ಕೃತಿಯ ಆಚರಣೆಯಲ್ಲಿನ ಪ್ರತಿ ಹಬ್ಬವು ನಮಗೆ ಒಂದೊಂದು ಪಾಠ ಪಾಠ ಹೇಳುತ್ತದೆ.
ನಾವುಗಳೆಲ್ಲರೂ ಹಬ್ಬಗಳ ಮಹತ್ವ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಹೋಗೋಣ

✍️ಪ್ರಿಯಾ ಪ್ರಾಣೇಶ  ಹರಿದಾಸ

10 ಜನವರಿ 2026

SSLC_result_analysis_Software

ಹೊಸ ಮಾದರಿ (ಶೇ.33 ಕ್ಕೆ ಉತ್ತೀರ್ಣ)
 ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ತಂತ್ರಾಂಶ 
(Version: 20260110)
[ಎಷ್ಟು ಅಂಕಗಳಿಗೆ ಬೇಕಾದರೂ ಇದೇ ತಂತ್ರಾಂಶದಲ್ಲಿ ವಿಶ್ಲೇಷಣೆ ಮಾಡಬಹುದು.
ಈ ಒಂದೇ ತಂತ್ರಾಂಶದಲ್ಲಿ 750 ವಿದ್ಯಾರ್ಥಿಗಳು, 4 ಮಾಧ್ಯಮಗಳು (ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು) ಹಾಗೂ 10 ವಿಭಾಗಗಳ (A - J) ಮಾಹಿತಿ ವಿಶ್ಲೇಷಣೆ ಮಾಡಬಹುದು.]
ಕೊನೆಯದಾಗಿ ನವೀಕರಿಸಿದ ದಿನಾಂಕ : 10-01-2026
-----------------------
ಹಳೆ ಮಾದರಿ
ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ತಂತ್ರಾಂಶ 
(Version: 20250508)
[ಎಷ್ಟು ಅಂಕಗಳಿಗೆ ಬೇಕಾದರೂ ಇದೇ ತಂತ್ರಾಂಶದಲ್ಲಿ ವಿಶ್ಲೇಷಣೆ ಮಾಡಬಹುದು.
ಈ ಒಂದೇ ತಂತ್ರಾಂಶದಲ್ಲಿ 750 ವಿದ್ಯಾರ್ಥಿಗಳು, 4 ಮಾಧ್ಯಮಗಳು (ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು) ಹಾಗೂ 10 ವಿಭಾಗಗಳ (A - J) ಮಾಹಿತಿ ವಿಶ್ಲೇಷಣೆ ಮಾಡಬಹುದು.]
ಕೊನೆಯದಾಗಿ ನವೀಕರಿಸಿದ ದಿನಾಂಕ : 08-05-2025
ಈ ಕೆಳಗಿನ ವೀಡಿಯೋದಲ್ಲಿ ಈ ತಂತ್ರಾಂಶವನ್ನು ಬಳಸುವ ಕ್ರಮವನ್ನು ನೋಡಿರಿ.
**************
ಈ ಕೆಳಗಿನ ಸೂಚನೆಗಳನ್ನು ಓದಿ
HOME / ಮುಖಪುಟದಲ್ಲಿ ಈ ಕೆಳಗಿನ ಮಾಹಿತಿ ನಮೂದಿಸಿ.
* ಶಾಲೆಯ ಹೆಸರು &  ಮುಖ್ಯಶಿಕ್ಷಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಪರೀಕ್ಷೆಯ ವರ್ಷ &  ಭಾಷಾ ವಿಷಯಗಳನ್ನು ನಮೂದಿಸಿ.
* ಆಂತರಿಕ ಅಂಕ ಇದೆಯೇ? (YES ಅಥವಾ NO ನಮೂದಿಸಿ) (ಖಾಲಿ ಬಿಡಬಾರದು)
* ಕಡ್ಡಾಯವಾಗಿ ಪ್ರತಿ ವಿಷಯದ ಗರಿಷ್ಠ ಅಂಕ ನಮೂದಿಸಿ.
HOME / ಮುಖಪುಟದಲ್ಲಿ ಈ ಕೆಳಗಿನ ಬಟನ್ ಕ್ಲಿಕ್ ಮಾಡಿ ಮಾಹಿತಿ ನಮೂದಿಸಿ.
1. ವಿದ್ಯಾರ್ಥಿಗಳ ಹೆಸರು ಹಾಗೂ ಲಿಂಗ & ಜಾತಿ ಸಂಕೇತಗಳನ್ನು ನಮೂದಿಸಿ.
(ಮುಖಪುಟದಲ್ಲಿರುವ "ವಿದ್ಯಾರ್ಥಿಗಳ ಹೆಸರು/ಲಿಂಗ/ಜಾತಿ ನಮೂದಿಸಲು ಇಲ್ಲಿ ಕ್ಲಿಕ್‌ಮಾಡಿ" ಎಂಬ ಬಟನ್ ಮೂಲಕ)
       ಸೂಚನೆ : ಇನ್ನು ಯಾವುದೇ ಪುಟದಲ್ಲಿ ವಿದ್ಯಾರ್ಥಿಗಳ ಮಾಹಿತಿ ನಮೂದಿಸಲು ಅವಕಾಶವಿಲ್ಲ)
2. ಎಲ್ಲಾ ವಿಷಯಗಳ ಲಿಖಿತ ಮತ್ತು ಆಂತರಿಕ ಅಂಕಗಳನ್ನು ನಮೂದಿಸಿ.
(ಮುಖಪುಟದಲ್ಲಿರುವ "ಪ್ರತಿ ವಿಷಯದ ಅಂಕಗಳನ್ನು ನಮೂದಿಸಿ/ತಿದ್ದುಪಡಿಮಾಡಿ" ಎಂಬ ಬಟನ್ ಮೂಲಕ)
    ಸೂಚನೆ:  ಅಂಕಗಳಲ್ಲಿ ಯಾವುದೇ ತಿದ್ದುಪಡಿ ಮಾಡಲು ಅದೇ ಬಟನ್ ಬಳಸಿ . ಅಲ್ಲಿ ನಮೂದಿಸಿದ ಅಂಕಗಳು ಸ್ವಯಂಚಾಲಿತವಾಗಿ ವಿಶ್ಲೇಷಣೆಗೆ ಬಳಕೆಯಾಗುತ್ತವೆ.(ಇನ್ನೆಲ್ಲೂ ಅಂಕಗಳನ್ನು ನಮೂದಿಸಲು ಅಥವಾ ತಿದ್ದುಪಡಿಮಾಡಲು ಅವಕಾಶವಿರುವುದಿಲ್ಲ)
3. ನಿಮಗೆ ಬೇಕಾದ ಮಾಧ್ಯಮ ಮತ್ತು ವಿಭಾಗದ ಮಾಹಿತಿ ನಮೂದು. (ಮೇಲಿನ ಎರಡು ಹಂತದ ಮಾಹಿತಿಗಳನ್ನು ನಮೂದಿಸಿದ ನಂತರ)
           ಮುಖಪುಟದಲ್ಲಿರುವ "(Print/Output Section)" ನಲ್ಲಿ  ನಿಮಗೆ ಬೇಕಾದ ಮಾಧ್ಯಮ ಮತ್ತು ವಿಭಾಗದ Code ನಮೂದಿಸಿದಾಗ ವಿಭಾಗ  ಹಾಗೂ ಮಾಧ್ಯಮದ ಮಾಹಿತಿ ಸಿದ್ಧವಾಗುತ್ತದೆ.
        ಸೂಚನೆ:  ಬೇರೆ ವಿಭಾಗ ಹಾಗೂ ಮಾಧ್ಯಮದ ಮಾಹಿತಿಯನ್ನು ಪಡೆಯಬೇಕಾದಲ್ಲಿ HOME ನಲ್ಲಿ Code ಬದಲಾಯಿಸಿ ಪಡೆಯಿರಿ.
ಇತರೆ ಸೂಚನೆಗಳು
* ಯಾವುದೇ ವಿಷಯದ ಪುಟದಿಂದ ಮುಖಪುಟಕ್ಕೆ ಹಿಂದಿರುಗಲು HOME, ವಿಷಯದ ಪುಟಕ್ಕೆ ಹಿಂದಿರುಗಲು BACK ಬಟನ್ ಕ್ಲಿಕ್‌ಮಾಡಿ.
* ಈ ತಂತ್ರಾಂಶವನ್ನು ಗರಿಷ್ಟ 750 ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲಾಗಿದೆ.
* ಈಗಾಗಲೇ ಉದಾಹರಣೆಗಾಗಿ ನಮೂದಿಸಿರುವ ಮಾಹಿತಿಯನ್ನು ಅಳಿಸಿ ನಂತರ ಮಾಹಿತಿ ನಮೂದಿಸಿ
* ನಿಮ್ಮ ಶಾಲೆಯ ವಿದ್ಯಾರ್ಥಿಗಳ ಹೆಸರು ಮತ್ತಿತರೆ ಮಾಹಿತಿ ನಮೂದಿಸುವ ಮೊದಲು ಎಷ್ಟು ವಿದ್ಯಾರ್ಥಿಗಳಿರುವರೋ ಅಷ್ಟು ಕ್ರಮಸಂಖ್ಯೆಯನ್ನು ನಮೂದಿಸಿ. (ಪ್ರತಿ ಕ್ರಮ ಸಂಖ್ಯೆ ನಮೂದಿಸಿದ ನಂತರ ಒಂದು ಹೊಸ ಸಾಲು ಸೃಷ್ಟಿಯಾಗುತ್ತದೆ.)
* ಯಾವುದೇ ನಮೂದನ್ನು ಯಾವುದೇ ಕಾರಣಕ್ಕೂ CUT-Paste ಮಾಡಬೇಡಿ.
* ಯಾವುದೇ ಪುಟಕ್ಕೆ ಭೇಟಿನೀಟಿದ ಕೂಡಲೇ ಪ್ರತಿ ಸಲ Refresh ಅನ್ನು ಕ್ಲಿಕ್ ಮಾಡಿ.
* ಮಾಹಿತಿ ನಮೂದಿಸುವಾಗ ಅಲ್ಲಿ ನೀಡಲಾಗಿರುವ ಸೂಚನೆಗಳನ್ನು ಗಮನವಿಟ್ಟು ಓದಿದ ನಂತರ ಮಾಹಿತಿ ನಮೂದಿಸಿ.
******ಮಹೇಶ ಎಸ್, ಕನ್ನಡ ದೀವಿಗೆ******

01 ಜನವರಿ 2026

ಸೊಡರು - ಎಸ್.ಎಸ್.ಎಲ್.ಸಿ. ಕನ್ನಡ ಸರಳ ಕಲಿಕಾ ಹಾಳೆಗಳು(2025-26)(ಪಾಸಿಂಗ್ ಪ್ಯಾಕೇಜ್) Kannada Passing Package

ಮುನ್ನುಡಿ
ಪ್ರಿಯ ವಿದ್ಯಾರ್ಥಿಗಳೇ ಹಾಗೂ ಶಿಕ್ಷಕ ಮಿತ್ರರೇ,
    ಡೌನ್‌ಲೋಡ್ ಮಾಡುವ ಮುನ್ನ ತಪ್ಪದೇ ಈ ಲೇಖನವನ್ನು ಒಮ್ಮೆ ಓದಿ.
    ಎಸ್.ಎಸ್.ಎಲ್.ಸಿ. ಕನ್ನಡ ಕಲಿಕಾ ಹಾಳೆಗಳನ್ನು (ಪಾಸಿಂಗ್ ಪ್ಯಾಕೇಜ್) ಹೊಂದಿರುವ 'ಸೊಡರು' ಸಿದ್ಧವಾಗಿವೆ. ಕಾರ್ಡುಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ನನ್ನ ಈ ಮನದಾಳದ ಮಾತುಗಳನ್ನು ಒಮ್ಮೆ ಓದಿ. ಇದು ನಿಮ್ಮ ಮನದಾಳದ ಮಾತೂ ಆಗಿರಬಹುದು ಎಂದು ನಾನು ಭಾವಿಸುತ್ತೇನೆ.
    ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಇಂದು ಹತ್ತು-ಹಲವು ಕಾರಣಗಳಿಂದಾಗಿ ಮಹತ್ವದ ವಿಷಯವಾಗಿ ಪರಿಣಮಿಸಿರುವುದು ನಮಗೆಲ್ಲ ಈಗಾಗಲೇ ವೇದ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ಶಾಲೆಯ ಫಲಿತಾಂಶದ ದೃಷ್ಟಿಯಿಂದ  ಅಷ್ಟೇ ಅಲ್ಲದೇ ಕೆಲವರ ಪ್ರತಿಷ್ಠೆಯ ದೃಷ್ಟಿಯಿಂದ ಎಸ್.ಎಸ್.ಎಲ್.ಸಿ. ಕನ್ನಡ  ಫಲಿತಾಂಶ ಎಂಬ 'ಬೆದರುಬೊಂಬೆ' ಇಂದು ದೈತ್ಯಾಕಾರವಾಗಿ ಬೆಳೆದು ನಿಂತಿದ್ದು; ಯಾವ ಪರೀಕ್ಷೆಗಳಿಗೂ ಇಲ್ಲದ ಭವ್ಯತೆಯನ್ನು ತಾನು ಪಡೆದುಕೊಂಡಿದೆ; ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಶಿಕ್ಷಕರು, ಪಾಲಕರು ಅಲ್ಲದೆ ಈ ಶೈಕ್ಷಣಿಕ ವ್ಯಾಪ್ತಿಗೆ ಒಳಪಡುವ ಹಲವು ಅಧಿಕಾರಿಗಳ ನಿದ್ದೆಗೆಡಿಸಿದೆ.
     ತರಬೇತಿಗಳಲ್ಲಿ, ಕಾರ್ಯಾಗಾರಗಳಲ್ಲಿ 'ಗುಣಾತ್ಮಕ ಶಿಕ್ಷಣ'ದ ಮಂತ್ರ ಪಠಿಸುವ; ಉದ್ದುದ್ದ ಭಾಷಣ ಮಾಡುವ ಅನೇಕರು ದುರದೃಷ್ಟವಶಾತ್ ಇಂದು ಮೂರು ಗಂಟೆಗಳಲ್ಲಿ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ 'ಪರಿಮಾಣಾತ್ಮಕ' ಪರೀಕ್ಷಾ ಪದ್ಧತಿಗೆ ಜೋತು ಬಿದ್ದಿದ್ದು "ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. ಅಂಕಗಳಿಕೆ.... ಎಸ್.ಎಸ್.ಎಲ್.ಸಿ. ಅಂಕಗಳಿಕೆ....." ಎಂದು ಹುಯಿಲೆಬ್ಬಿಸಿದ್ದಾರೆ. ಆ ಮೂಲಕ "ಅಂಕಗಳಿಕೆಯೇ ನಮ್ಮ ಶಿಕ್ಷಣದ ಗುರಿ" ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.
    ಪ್ರಪಂಚದ ಯಾವುದಾದರೂ ಮೂಲೆಯಲ್ಲಿ 'ತಳಪಾಯ' ಇಲ್ಲದ ಅಥವಾ 'ತಳಪಾಯ' ಇದ್ದರೂ 'ಭದ್ರವಾದ ತಳಪಾಯ' ಇಲ್ಲದ ನೆಲದ ಮೇಲೆ 'ದೊಡ್ಡ ಕಟ್ಟಡ' ನಿರ್ಮಾಣ ಮಾಡುವ 'ಇಂಜಿನಿಯರ್' ನೋಡಿದ್ದೀರಾ...! ಅಂತಹ  'ಇಂಜಿನಿಯರ್' ಏನಾದರೂ ಇದ್ದಲ್ಲಿ ಅದು 'ಕರ್ನಾಟಕದ ಸರ್ಕಾರಿ ಪ್ರೌಢಶಾಲೆ'ಗಳಲ್ಲಿ...!! 
    "ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇಕಡ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸರಿಯಾಗಿ ಓದುವ, ಬರೆಯುವ, ಲೆಕ್ಕಮಾಡುವ ಸಾಮಾನ್ಯ ಸಾಮರ್ಥ್ಯವೂ ಇಲ್ಲ" ಎಂದು ಗೋಳಾಡುತ್ತಿರುವ ಶಿಕ್ಷಕರ ಅಳಲು ಕೇವಲ 'ಅರಣ್ಯ ರೋಧನ'ವಾಗಿದೆ.
    ಏಳೆಂಟು ವರ್ಷ ಏನೂ ಕಲಿಯದೇ ಬಂದ ಶೇಕಡ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ; ಒಂದು ತಿಂಗಳ ಸೇತುಬಂಧ, ನಂತರದ ಕೆಲವು ತಿಂಗಳುಗಳಲ್ಲಿ ನಿಗದಿಪಡಿಸಲಾದ ಪಠ್ಯಬೋಧನೆಯ ನಡುವೆ ಸಮಯ ಹೊಂದಿಸಿಕೊಂಡರೆ ದೊರೆಯುವ ಕೆಲವೇ ಕೆಲವು ಅವಧಿಗಳಲ್ಲಿ ಮಾಡಬಹುದಾದ ಪರಿಹಾರ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ಮೇಲೆ ತರಬೇಕೆಂದು ಶಿಕ್ಷಕರು ದಿನನಿತ್ಯ ಹೆಣಗಾಡುತ್ತಿದ್ದಾರೆ. ಕಟ್ಟಪ್ಪಣೆ ಮಾಡುವವರು ವಸ್ತುಸ್ಥಿತಿಯನ್ನು ಅರಿತಿರುವರೇ? ಅರಿತಿದ್ದೂ ಹೀಗೆ ಆಜ್ಞೆ ಮಾಡುತ್ತಿರುವರೇ? ಎಂಬ ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ.
    ಎಲ್ಲಿಯವರೆಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿ ಮೇಲ್ಮಟ್ಟದ ತರಗತಿಗೆ ಬಂದ ನಂತರ "ಅಂಕಗಳಿಕೆ"ಯ ಹುಯಿಲೆಬ್ಬಿಸುವ ಬದಲು ತಳಮಟ್ಟದಿಂದ ಸರಿಪಡಿಸುವ ಬಗ್ಗೆ ಚಿಂತನೆ ಮಾಡುವುದಿಲ್ಲವೋ..... ಮೇಲ್ಮಟ್ಟದ ವಿದ್ಯಾರ್ಥಿ ಕನಿಷ್ಠ ಅಂಕಗಳಿಸದಿರಲು ಅವನಿಗೆ ತಳಮಟ್ಟದಲ್ಲಿ ಸರಿಯಾದ ಬುನಾದಿ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಬುಡಮಟ್ಟದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ 'ಧೈರ್ಯ' ತೋರುವುದಿಲ್ಲವೋ.... ಅಲ್ಲಿಯವರೆಗೆ ಈ ಸಮಸ್ಯೆಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಕ್ಕೆ, ಶಿಕ್ಷಕರ ಮೇಲೆ ಹೇರಲಾಗುತ್ತಿರುವ ಒತ್ತಡಕ್ಕೆ ಕೊನೆ ಎಂಬುದಿಲ್ಲ.
   ದಿನನಿತ್ಯ 'ದೊಡ್ಡವರ ಆಜ್ಞೆ', 'ನಿಯಮಗಳ ಸಂಕೋಲೆ', 'ಕಡತಗಳ ಸಾಗರ'ದಲ್ಲಿ ಶಿಕ್ಷಕರು ಹೈರಾಣಾಗಿದ್ದಾರೆ; ಕೆಲವರಂತು ಇಂತಹ ಒತ್ತಡಗಳಿಂದಾಗಿ ಮಾನಸಿಕ ನೆಮ್ಮದಿ/ಆರೋಗ್ಯ ಕಳೆದುಕೊಂಡಿದ್ದಾರೆ. 
ಅಲ್ಲವೇ ಮತ್ತೆ....!! ತಳಪಾಯವಿಲ್ಲದ ನೆಲದ ಮೇಲೆ ಸೌಧ ನಿರ್ಮಿಸುವುದೆಂದರೆ....!! ಸಾಮಾನ್ಯದ ಮಾತಾಯಿತೇ...!!
    ಅದೇನೇ ಇರಲಿ, ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ 'ಅಂಕಗಳಿಕೆ' ಯ ಕಡೆ ನಮ್ಮೆಲ್ಲರ ಚಿತ್ತವಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು 'ಉತ್ತೀರ್ಣರಾಗುವಂತೆ ಮಾಡುವ' ಆದ್ಯಕರ್ತವ್ಯ ನಮ್ಮದಾಗಿದೆ. ಎಲ್ಲ ಒತ್ತಡಗಳನ್ನು ಹಗುರಾಗಿಸಿಕೊಂಡು; ಯಾವ ಯಾವ ವಿಧಾನಗಳ ಮೂಲಕ ವಿದ್ಯಾರ್ಥಿಗಳಿಗೆ ಅವರು ಉತ್ತೀರ್ಣರಾಗಲು ಬೇಕಾಗುವ ಅಂಕಗಳಿಕೆಗೆ ಮಾರ್ಗದರ್ಶನ ಮಾಡಬೇಕು ಎಂಬುದರ ಕಡೆ ನಮ್ಮ ಪ್ರಯತ್ನವಿರಬೇಕು.
    ಈ ನಿಟ್ಟಿನಲ್ಲಿ 'ಸೊಡರು' ಎಂಬ ಕಲಿಕಾ ಹಾಳೆಗಳನ್ನು 2023-24 ರ ಪಠ್ಯವನ್ನಾಧರಿಸಿ ಪರಿಷ್ಕರಣೆ  ಮಾಡಲಾಗಿದ್ದು, ಅದನ್ನು 'ಕನ್ನಡ ದೀವಿಗೆ'ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ.
    ಅಲ್ಲದೆ 560 ಬಹು ಆಯ್ಕೆ ಪ್ರಶ್ನೆಗಳು ಮತ್ತು 400 ಸಂಬಂಧೀಕರಿಸಿ ಬರೆಯುವ ಪ್ರಶ್ನೆಗಳನ್ನೊಳಗೊಂಡ ‘ಪ್ರಶ್ನಾ ದೀವಿಗೆ’ ಎಂಬ ಪ್ರಶ್ನಾಕೋಠಿಯನ್ನು ನೀಡುತ್ತಿದ್ದೇನೆ. ಇವನ್ನೆಲ್ಲಾ  A4 ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ ಬಳಸಿಕೊಳ್ಳಬಹುದಾಗಿದೆ. 
       ಶುಭ ಹಾರೈಕೆಗಳೊಂದಿಗೆ,
                                            - ಎಸ್.ಮಹೇಶ್. 'ಕನ್ನಡ ದೀವಿಗೆ'




***************