ರಸಧಾರೆ – 221
ಅರೆಗಳಿಗೆಯನುಭವವೆ = ಅರೆಗಳಿಗೆಯ+ಅನುಭವವೆ//ಪರಿಪಕ್ವಗೊಳಿಸದೇನದು = ಪರಿಪಕ್ವ + ಗೊಳಿಸದೇನು + ಅದು//ತನಿಪುಗಳಿನಾತ್ಮ= ತಣಿಪುಗಲಿನ್+ ಆತ್ಮ// ಸಂಸ್ಕಾರಗಳನೆಸೆಪ = ಸಂಸ್ಕಾರಗಳನು+ ಎಸೆಪ//ಪುಸಿಯನ್ನುವೆಯಾ = ಪುಸಿ+ ಎನ್ನುವೆಯಾ? ತನಿಪು = ಶೀತಲ //ಎಸೆಪ = ಎಸಗುವ//ಪುಸಿ = ಹುಸಿ, ಸುಳ್ಳು.
ಜೀವನದಲ್ಲಿ ಒಂದು ಅರೆಗಳಿಗೆಯಲ್ಲಿ ಆಗುವ ಅನುಭವವು ನಮ್ಮ ಮನಸ್ಸನ್ನು ಕರಿಗಿಸದೆ? ನಮ್ಮಲ್ಲಿ ಹರಿಯುವ ಜೀವರಸವನ್ನು ಪರಿಪಕ್ವಗೊಳಿಸದೇನುಅದು? ಉರಿ ಮತ್ತು ಶೀತಲತೆಗಳು ಆತ್ಮವನ್ನು ಸಂಸ್ಕರಿಸುವ ಆ ತಿರುಳನ್ನು, ಸತ್ವವನ್ನು ಹುಸಿಯನ್ನುತೀಯಾ ನೀನು? ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು.
ನಮಗೆ ನಮ್ಮ ನಮ್ಮ ಜೀವನದಲ್ಲಿ ಸಾವಿರಾರು ಅನುಭವಗಳಾಗುತ್ತವೆ. ಸಾಮಾನ್ಯ ಎಲ್ಲವೂ ಸಾದಾರಣ ಅನುಭವಗಳಾಗಿರುತ್ತವೆ. ಆದರೆ ಬೆರಳೆಣಿಕೆಯಷ್ಟು ಅನುಭವಗಳು ನಮ್ಮನ್ನು ತೀವ್ರ ಚಿಂತನೆಗೆ ಒಳಪಡಿಸುತ್ತದೆ. ನಮ್ಮ ಮನಸ್ಸು ಬುದ್ಧಿಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಈ ಪರಿಣಾಮ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಲವಾರು ರಸಗಳ ಉತ್ಪತ್ತಿಯ ಪರಿಮಾಣ ಮತ್ತು ಪ್ರಮಾಣದ ಮೇಲೆ ಪ್ರಭಾವ ಬೀರುತ್ತದೆ. ನಾವು ಯೋಚಿಸುವ ರೀತಿಯಲ್ಲಿ ಒಂದು ಮಹತ್ತರ ಬದಲಾವಣೆಗೆ ಅನುವು ಮಾಡಿಕೊಡುತ್ತದೆ.ಆ ಅನುಭವದ, ಅದರಿಂದ ನಮ್ಮಲ್ಲಿ ಮೂಡಿದ ವಿಚಾರದ, ಮತ್ತು ಆ ವಿಚಾರಗಳು ನಮ್ಮ ಮನಸ್ಸು ಬುದ್ಧಿಗಳ ಮೇಲೆ ಮಾಡುವ ಪರಿಣಾಮದಿಂದ ನಾವು ಪಕ್ವವಾಗುತ್ತೇವೆ. ಇದನ್ನೇ ಮಾನ್ಯ ಗುಂಡಪ್ಪನವರು “ಪರಿಪಕ್ವಗೊಳಿಸದೇನದು ಜೀವರಸವ” ಎಂದಿದ್ದಾರೆ.
“ಉರಿ ತನಿಪುಗಳಿನಾತ್ಮ ಸಂಸ್ಕಾರಗಳನೆಸೆಪ” ಎಂದರೆ ನಮ್ಮ ಜೀವನದಲ್ಲಿ ನಾವು ಅನುಭವಿಸುವಕಷ್ಟ ಮತ್ತು ಸುಖಗಳು ನಮ್ಮನ್ನು ಪಕ್ವವನ್ನಾಗಿಸಿ ಆತ್ಮ ಸಂಸ್ಕಾರಕ್ಕ್ಕೆ ದಾರಿಯಾಗುತ್ತದೆ ಎಂದು ಅರ್ಥ. ನೋಡಿ ಕೆಲವರ ಜೀವನದಲ್ಲಿ ಈ ಕಷ್ಟ ಸುಖಗಳ ಅನುಭವ ಒಂದು ಬಾರಿಯಾಗಬಹುದು. ಕೆಲವರ ಜೀವನದಲ್ಲಿ ಒಂದಕ್ಕಿಂತ ಹೆಚ್ಚುಬಾರಿ ಆಗಬಹುದು. ಕೆಲವರ ಜೀವನ ಒಂದು ಬೃಹಚ್ಚಕ್ರದ ( roller coaster ride ) ಆಟವಾಗಿರಬಹುದು, ಮತ್ತೂಕೆಲವರಿಗೆ ಇಡೀ ಜೀವನವೇಒಂದು ಸುಖದ ಸುಪ್ಪತ್ತಿಗೆಯಾಗಿರಬಹುದು. ಆದರೆ ಯಾರು ಯಾವುದರಿಂದ ಸುಖಪಡುತ್ತಾರೆ ಅಥವಾ ದುಃಖಪದುತ್ತಾರೆ ಎನ್ನವುದು ಅವರವರ ಸ್ವಭಾವದ ಮೇಲೆ ಅಧಾರಪಟ್ಟಿರುತ್ತದೆ. ಕೆಲವರಿಗೆ ಹಣದಲ್ಲಿ ಸುಖ ಕೆಲವರಿಗೆ ಗುಣದಲ್ಲಿ ಸುಖ.
ಆದರೆ ನಮ್ಮ ಸನಾತನದ ಪ್ರಕಾರ ಪ್ರತೀ ಜೀವಿಯೂ ತನ್ನಪೂರ್ವ ಕರ್ಮವನ್ನಾಧಾರಿಸಿಕಷ್ಟ ಸುಖಗಳನ್ನು ಅನುಭವಿಸುತ್ತಿರುತ್ತಾನೆ. ಹೀಗೆ ಕಷ್ಟ ಸುಖಗಳನ್ನು ಅನುಭವಿಸುವಾಗ, ಸಂಸ್ಕಾರವೂ ಉತ್ತಮವಾಗಿ ಈ ಕಷ್ಟ ಸುಖಗಳ ಅನುಭವದಿಂದ ಮುಕ್ತನಾಗಿ, ಒಂದು ನಿರ್ಲಿಪ್ತಭಾವ ಬಂದರೆ ಮನುಷ್ಯ ಆನಂದವನ್ನು ಅನುಭವಿಸಬಹುದು. ಜೀವನಕ್ಕೆ ಅಂಟಿಕೊಂಡಿದ್ದರೆ ಸುಖ ಅಥವಾ ದುಃಖ. ಅಂಟದೆ ಇದ್ದರೆ ಸುಖ ದುಃಖಗಳ ಭಾವದಿಂದ ಮೇಲೇರಿ ಒಂದು ಮುಕ್ತವಾದ ಮತ್ತು ಆನಂದದ ಅನುಭವ ಪಡೆಯಬಹುದು.
ರಸಧಾರೆ – 222
ಅವಾವ ದಿಕ್ಕಿನೊಳಮಾವಗಂ ಬೆದಕಿ
ಜೀವ ಪರಿಧಾವಿಪವೊಲ್ ಆಗಿಪಂತರ್ವೃತ್ತಿ
ಭಾವುಕದ ನೆಲೆಯ ಕರೆ – ಮಂಕುತಿಮ್ಮ
ಒಳಿತೆಂದು = ಒಳಿತು ಎಂದು // ಸೊಗವೆಂದು = ಸೊಗ+ ಎಂದು // ಅವಾವ = ಆವ + ಆವ // ದಿಕ್ಕಿನೊಳಮಾವಗಂ = ದಿಕ್ಕಿನೊಳಂ + ಆವಗಂ// ಪರಿಧಾವಿಪವೊಲ್= ಪರಿಧಾವಿಪ+ ಒಲ್// ಆಗಿಪಂತರ್ವೃತ್ತಿ = ಆಗಿಪ + ಅಂತರ್ವೃತ್ತಿ. ಆವುದೋ= ಯಾವುದೋ// ಸೊಗವೆಂದು = ಸೊಗಸು ಎಂದು// ಆವಗಂ = ಯಾವಾಗಲೂ, ಸದಾಕಾಲ//ಪರಿಧಾವಿಪವೊಲ್ = ಓಡುವಂತೆ // ಆಗಿಪ = ಮಾಡುವ// ಅಂತರ್ವೃತ್ತಿ. = ಅಂತರಂಗದ ಭಾವ.
ಯಾವುದೋ ಒಳ್ಳೆಯದೆಂದು ಮತ್ಯಾವುದೋ ಸೊಗಸೆಂದು ಬೇರೆ ಬೇರೆ ದಿಕ್ಕಿನಲ್ಲಿ ಸದಾಕಾಲ ಹುಡುಕುತ್ತಾ ಓಡುವಂತೆ ಮಾಡುವ ನಮ್ಮ ಅಂತರ್ಯಕ್ಕೆ ಇಂಬುನೀಡುವುದು ನಮ್ಮ ನಮ್ಮ ಭಾವನೆಯ ಕೂಗು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಮನುಷ್ಯನೂ ಸೇರಿದಂತೆ, ಪ್ರತೀ ಪ್ರಾಣಿಯೂ, ತನಗೆ ಯಾವುದು ಒಳಿತೆನಿಸುತ್ತದೋ, ತನಗೆ ಯಾವುದು ಸೊಗಸೆನಿಸುತ್ತದೋ ಅದನ್ನೇ ಪಡೆಯಲು ಹುಡುಕುತ್ತದೆ. ಹೀಗೆ ಹುಡುಕಲು ಮನಸ್ಸು ಬುದ್ಧಿಗಳನ್ನು ಪ್ರೇರೇಪಿಸಿ ಹಲವಾರು ದಿಕ್ಕುಗಳಲ್ಲಿ ಅದನ್ನು ಓಡಿಸುವುದು ಪ್ರತೀ ಪ್ರಾಣಿಯ ಅಂತರಂಗದ ಭಾವ. ಈ ಅಂತರಂಗದ ಭಾವಕ್ಕೆ ಆಯಾಯಾ ವ್ಯಕ್ತಿಯ ಪರಿಸರ, ವಿದ್ಯೆ, ಸಂಸ್ಕಾರಗಳು ಕಾರಣವಾಗುತ್ತವೆ. ಹುಟ್ಟಿನಿಂದ ಸಾವಿನ ತನಕ ಎಲ್ಲರಿಗೂ ಏನೋ ಬೇಕು, ಯಾವುದೋ ಬೇಕೋ ಅವುಗಳನ್ನು ಪಡೆಯಲು ಎಂದಿಗೂ ನಿಲ್ಲದ ಬಯಕೆಗಳ ಸರಮಾಲೆ.
ಒಂದು ವ್ಯಕ್ತಿಯ ಮನದಲ್ಲಿ ಒಂದು ಬಯಕೆ ಹೇಗೆ ಉಂಟಾಗುತ್ತದೆ ಎನ್ನುವುದಕ್ಕೆ ಮಾನ್ಯ ಗುಂಡಪ್ಪನವರು ಸುಂದರವಾದ ವಿಶ್ಲೇಷಣೆ ನೀಡಿದ್ದಾರೆ ಈ ಕಗ್ಗದಲ್ಲಿ. ಇಂದ್ರಿಯಗಳ ಮೂಲಕ ಒಂದು ವಸ್ತು , ವ್ಯಕ್ತಿ ಅಥವಾ ವಿಷಯದ ಪರಿಚಯವಾಗುತ್ತದೆ. ಅಂತರ್ಯದಲ್ಲಿ ಇದು ಇಂತಹ ವಸ್ತು, ಇದು ಒಳ್ಳೆಯದು ಒಂದು ಸೊಗಸಾದದ್ದು ಎನ್ನುವ ವಿಶ್ಲೇಷಣೆ ನಡೆಯುತ್ತದೆ. ನಂತರ ಅದನ್ನು ಹೊಂದುವ ಬಯಕೆ ಉಂಟಾಗುತ್ತದೆ. ನಂತರ ಅದನ್ನು ಪಡೆಯಲು ನಾನಾ ದಿಕ್ಕಿನಲ್ಲಿ ನಮ್ಮ ಓಟ ನಡೆಯುತ್ತದೆ. ಸಿಕ್ಕರೆ ಸಂತೋಷ ಸಿಗದಿದ್ದರೆ ಅಸಂತೋಷ. ” ದ್ರುಷ್ಯಮಾಣೆ ಭವೇತ್ ಪ್ರೀತಿ:” ಎಂದರೆ ವಸ್ತುಗಳನ್ನು ನೋಡಿದರೆ ಅವುಗಳನ್ನು ಪಡೆಯ ಬೇಕೆಂಬ ಆಸೆ ಮನದಲ್ಲುಂಟಾಗುತ್ತದೆ.
ಬಯಕೆ ಉಂಟಾಗುವುದು ಬಹಳ ಸಹಜ ಗುಣ. ನಮ್ಮ ಅಸ್ತಿತ್ವಕ್ಕೆ ಅದು ಪೂರಕವಾಗಿರುತ್ತದೆ. ಆದರೆ ಆ ಅಸ್ಥಿತ್ವ ಸುಂದರವಾಗಿರಬೇಕು, ಶಾಂತವಾಗಿರಬೇಕು ಆನಂದದಿಂದಿರಬೇಕು ಎಂದಾಗ ನಮ್ಮ ಬಯಕೆಗಳೂ ಸಹ ಹಾಗೆ ಇರಬೇಕಲ್ಲವೇ. ನಾವು ಏನನ್ನು ಬಯಸುತ್ತೀವೋ ಅದನ್ನು ಪಡೆದರೆ, ಅದರಿಂದುಂಟಾಗುವ ಪರಿಣಾಮಗಳನ್ನು ನಾವೇ ಅನುಭವಿಸಬೇಕಲ್ಲವೇ. ಹಾಗಾಗಿ ಬಯಸುವಾಗ ಬಹಳ ಜಾಗರೂಕರಾಗಿರಬೇಕು.
ರಸಧಾರೆ -ಕಗ್ಗ – 223
ತಡಕಿಮೂಸುತಶುನಕನಲೆದಾಡುವಂತೆ
ಬಡಜಗವನೊಳಿತಕೆಂದತ್ತಿತ್ತ ಪುಡುಕಿಸುವ
ಬೆಡಗು ಶಿವನೊಡವೆಯದೊ – ಮಂಕುತಿಮ್ಮ
ಒಡೆಯನಾವೆಡೆ = ಒಡಯನು+ಆವ+ಎಡೆ//ಸಾರ್ದನೆಂದು = ಸಾರ್ದನು+ ಎಂದು//ಶುನಕನಲೆದಾಡುವಂತೆ = ಶುನಕವು + ಅಲೆದಾಡುವಂತೆ// ಬಡಜಗವನೊಳಿತಕೆಂದತ್ತಿತ್ತಶಿವನೊಡವೆಯದೊ = ಬಡ+ ಜಗವನು+ ಒಳಿತಕೆ+ಎಂದು+ಅತ್ತಿಂದಿತ್ತ//ಶಿವನೊಡವೆಯದೊ = ಶಿವನ +ಒಡವೆಯು+ ಅದೊ ಸಾರ್ದನೆಂದು = ಹೋದನೆಂದು/ಪದವಾಸನೆಯ = ಕಾಲವಾಸನೆ/ಶುನಕ+ನಾಯಿ/ಪುಡುಕಿಸುವ = ಹುಡುಕಿಸುವ/ ಬೆಡಗು = ಆಕರ್ಶಣೀಯವಾದದು.
ತನ್ನ ಒಡೆಯ ಎತ್ತ ಹೋದನೆಂದು ಅವನ ಕಾಲ ವಾಸನೆಯನ್ನು ಮೂಸುತ್ತಾ ಅಲೆಯುವ ನಾಯಿಯಂತೆ, ಈ ಜಗತ್ತಿನಲ್ಲಿ ತನಗೆ ಒಳಿತಾವುದು ಎಂದುನಾವುಹುಡುಕುವಂತೆ ಮಾಡುವ ಈ ಲೋಕಮಾಯೆಯೇ ಆ ಪರಶಿವನ ಅಲಂಕಾರದ ಒಡವೆಯೋ ಎಂದು ಒಂದು ಉದ್ಘಾರವನ್ನು ತೆಗೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
“ಬಡಜಗವ” ಎನ್ನುವ ಪದವನ್ನು ಶ್ರೀ ಗುಂಡಪ್ಪನವರು ಬಹಳ ಸುಂದರವಾಗಿ ಉಪಯೋಗಿಸಿದ್ದಾರೆ. ಜಗತ್ತು ಸಕಲ ಸಂಪತ್ತಿನಿಂದ ಕೂಡಿದ್ದರೂ “ಬಡಜಗವ” ಎಂದುಪದಪ್ರಯೋಗ ಮಾಡಿದ್ದಾರೆ. ಎಲ್ಲವೂ ಇದೆ, ಇರುವುದೆಲ್ಲವೂ ಸುಂದರವಾಗಿದೆ. ಆದರೂ ಏನೋ ಹುಡುಕಾಟ, ಏನೋ ಕೊರತೆಗಳ ಅನುಭವಿಸುವ, ಇಷ್ಟಿದ್ದರೆ ಇನ್ನೂ ಆಸೆಪಡುವ ಮತ್ತು ಬೇಕೆನ್ನುವ ನಮ್ಮಂತಹ ” ಬಡ” ಜನರಿಂದ ತುಂಬಿದ ಈ ಲೋಕ ” ಬಡಜಗತ್ತು” ಅಲ್ಲದೆ ಮತ್ತೇನು ಹೇಳಿ ವಾಚಕರೆ.
ನಮ್ಮದೆಲ್ಲ ತೃಪ್ತಿಯೇ ಇಲ್ಲದ ಜೀವನ. ಎಷ್ಟಿದ್ದರೂ ಸಾಲದ. ಏನಿದ್ದರೂ ಸಾಲದು. ನಾಯಿ ವಾಸನೆ ಹಿಡಿದು ಮೂಸುತ್ತಾ ಸದಾ ಏನನ್ನೋ ಕೆದಕಿ ಹುಡುಕುವಂತೆ ನಮ್ಮ ಬಾಳುಗಳಿವೆ ಎಂದರೆ ತಪ್ಪಾಗಲಾರದು. ನಮ್ಮ ಆಸೆಗಳ ಸರಮಾಲೆಗಳಿಗೆ ಕೊನೆಯೇ ಇಲ್ಲ. ಅನಾದಿಕಾಲದಿಂದ ಸಮಾಜವನ್ನು ಒಂದು ಸರಿದಾರಿಗೆ ತರಬೇಕೆಂದು ಪ್ರಯತ್ನಪಟ್ಟ ಸಂತರೆಲ್ಲಾ ಪ್ರತಿಪಾದಿಸಿದ್ದು ” ಆಸೆಯೇ (ದುರಾಸೆಯೂ ಸೇರಿ) ದುಃಖಕ್ಕೆ ಮೂಲ” ಎಂದು.
ಪುಸ್ತಕದಲ್ಲಿಓದುತ್ತೇವೆ, ಪ್ರವಚನ ಕೇಳುತ್ತವೆ. ಕೆಲ ಕ್ಷಣ ನಮಗೆ ” ಹೌದಲ್ಲ, ಇದೇ ಸರಿ” ಎಂದು ಅನಿಸಿದರೂ, ಮರುಕ್ಷಣವೇ ನಾಯಿ ಬಾಲದಂತೆ ನಮ್ಮ ಬುದ್ಧಿ ಮತ್ತೇನನ್ನೋ ಹುಡುಕುತ್ತದೆ. ಇದು ಜಗತ್ತಿನ ಮೇಲೆ ಮಾಯಾ ಪ್ರಭಾವ. ಈ ಮಾಯೆ ಎನ್ನುವ ವಸ್ತು ಇಲ್ಲದಿದ್ದಿದರೆ ಈ ಜಗತ್ತಿನ ರೂಪ ರೇಷೆಗಳೇ ಬೇರೆಯಾಗಿರುತ್ತಿತ್ತು, ಅಲ್ಲವೇ? ಹಾಗಾಗಿ ಈ ಜಗದ್ವ್ಯಾಪಾರವನ್ನು ನಡೆಸಿಲಿಕ್ಕಾಗಿಯೇ ಆ ಪರಮಾತ್ಮ ಈ ಮಾಯೆಯನ್ನೂ ಸೃಷ್ಟಿಸಿ, ನಮ್ಮನ್ನೂ ಸೃಷ್ಟಿಸಿ, ನಮ್ಮಿಬ್ಬರ ನಡುವೆಒಂದು ಬಾಂಧವ್ಯವನ್ನು ಇಟ್ಟು, ನಾಟಕವಾಡಿಸುತ್ತಿದ್ದಾನೆ.
ರಸಧಾರೆ -224
ಬೆದಕುತಿರುವುದು ಲೋಕಸೊಗದಿರವನೆಳಸಿ
ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ
ಮುದಗಳಮಿತದ ನಿಧಿಗೆ – ಮಂಕುತಿಮ್ಮ
ಬೆದಕುತಿರುವುದು = ಬೆದಕುತ+ ಇರುವುದು //ಸೊಗದಿರವನೆಳಸಿ = ಸೊಗದ + ಇರವನು + ಎಳಸಿ //ಸುಖಧ್ಯಾನದೂಟೆಯೆ = ಸುಖ+ ಧ್ಯಾನದ+ಊಟೆಯ//ಮುದಗಳಮಿತದ = ಮುದಗಳ+ ಅಮಿತದ ಊಟೆಯ = ಒರತೆ, ಚಿಲುಮೆ//ಮುದಗಳ = ಸುಖಗಳ.
ಮನುಷ್ಯರ ಹೃದಯಗಳಲ್ಲಿ ಮಿತಿಯಿಲ್ಲದಸುಖಗಳಆಸೆಯ ಒರತೆ ಅಥವಾ ಊಟೆ ಬತ್ತುವುದೇ ಇಲ್ಲ. ಸದಾಕಾಲಮನಸ್ಸು “ಅದು ಬೇಕು ಇದು ಬೇಕು ಮತ್ತೊಂದು ಬೇಕು” ಎಂದು ಮತ್ತು ಅದು “ಎಲ್ಲಿ ಸಿಗುತ್ತದೆ” ಎಂದು ಹುಡುಕಾಡುತ್ತಲೇಇರುತ್ತದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈಕಗ್ಗದಲ್ಲಿ.
ಎಂದಿಗೂ, ಸದಾಕಾಲ ಆನಂದದಿಂದ ಇರಬೇಕೆನ್ನುವುದೇ ಮನುಷ್ಯನ ಆಸೆ. ಆದರೆ ಆನಂದವೆಂದರೇನು ಎನ್ನುವುದು ಯಾರಿಗೂ ಅರ್ಥವಾಗಿಲ್ಲ. ಯಾವುದರಿಂದ ತನಗೆ ಆನಂದ ಸಿಗುತ್ತದೆ ಎಂದೂ ಅರಿತಿಲ್ಲ. ಇದರೋಳಗೋ, ಅದರೊಳಗೋ, ಮತ್ಯಾವುದರಳೋಗೋ ಗೊತ್ತಿಲ್ಲ. ಹಾಗಾಗಿ, ಗುಂಡಪ್ಪನವರು ಹೇಳುವಂತೆ”ಬೆದಕುತಿರುವುದುಲೋಕಸೊಗದಿರವನೆಳಸಿ”. ಇಡೀ ಲೋಕದ ಜನ ಆ ಸೊಗಸು, ಆನಂದಕ್ಕೆ ಕಾರಣವಾದ ವಸ್ತು ಎಲ್ಲಿದೆ ಎಂದು ಹುಡುಕುತ್ತಲೇ ಇರುತ್ತಾರೆ.
ಒಂದು ವಸ್ತುವನ್ನೋ ವಿಷಯವನ್ನೋ ಅಥವಾ ವ್ಯಕ್ತಿಯನ್ನೂ ಕಂಡಾಗ ಮೇಲ್ನೋಟಕ್ಕೆ ಪರಿಚಯವಾದಾಗ, ಅದರ ಸಂಗ ಮಾಡುವ ಬಯಕೆ ಉಂಟಾಗಬಹುದು. ಆ ಬಯಕೆ ಗುಂಡಪ್ಪನವರು ಹೇಳುವಂತೆ “ಹೃದಯಗುಹೆಯಾ ಸುಖಧ್ಯಾನದೂಟೆಯೆ ಸಾಕ್ಷಿ ” ಹೃದಯಾಂತರಾಳದಲಿ ಒಸರುತ್ತದೆ. ಹಾಗೆ ಬಯಸಿದ್ದನ್ನು ಪಡೆಯಲು ಪ್ರಯತ್ನ ನಡೆಯುತ್ತದೆ.ಪ್ರಯತ್ನ ಫಲಕಾರಿಯಾದರೆ ” ಹಾ ಇದರಿಂದ ನನಗೆ ಆನಂದ” ಎನ್ನುವ ಭಾವ ಮನದಲ್ಲಿ ಮೂಡುತ್ತದೆ. ಹಾಗೆ ಮೂಡಿದ ಭಾವ ಕ್ಷಣಕಾಲ ಇದ್ದು ಮಾಯವಾಗುತ್ತದೆ. ಮತ್ತೆ ಮತ್ತೊಂದು ಬಯಕೆ ಒಸರುತ್ತದೆ, ಮತ್ತದೇ ಪ್ರಯತ್ನ. ಇದನ್ನೇ ಮಾನ್ಯ ಗುಂಡಪ್ಪನವರು ” ಮುದಗಳಮಿತದ ನಿಧಿಗೆ” ಎನ್ನುತ್ತಾರೆ. ಮಿತಿಯೇ ಇಲ್ಲದ ಬಯಕೆಗಳ ಸರಮಾಲೆಯನ್ನು ಹೊತ್ತು ಜೀವನ ಸಾಗಿಸುವಈ ನರಪ್ರಾಣಿಯ ಬಯಕೆಗಳು ತೀರುವುದೆಂತು?
ಈ ಬಯಕೆಗಳಿಂದ ವಾಂಛೆ ತೀರಬಹುದು, ಆದರೆ ಸತ್ಯವಾದ ಆನಂದ ಎಂದಿಗೂ ಸಿಗುವುದಿಲ್ಲ ಎಂದುಮನುಷ್ಯನಿಗೆ ಎಂದು ಸತ್ಯವಾಗಿಅರ್ಥವಾಗುತ್ತದೆಯೋ, ಹಾಗೆ ಅರ್ಥವಾದ ವಿಷಯಎಂದುದೃಢವಾಗಿಮನದಲ್ಲಿ ಬೇರೂರುತ್ತದೆಯೋ, ಹಾಗೆ ಬೇರೂರಿದ ವಿಷಯವನ್ನು ಮನುಷ್ಯ ಎಂದು ತನ್ನ ಸ್ವಾಭಾವವಾಗಿಸಿಕೊಳ್ಳುತ್ತಾನೋ, ಅಂದು ಅವನು ಈ ಬಯಕೆಗಳ ಜಪಮಣಿಮಾಲೆಯನ್ನು ಕಿತ್ತೊಗೆದು, ಸತ್ಯವಾದ, ನಿಜವಾದ ಮತ್ತು ಶಾಶ್ವತವಾದ ಆನಂದವನ್ನು ಪಡೆಯುತ್ತಾನೆ. ಅಂತಹ ಪ್ರಯತ್ನವನ್ನು ನಾವೂ ಮಾಡೋಣವೆ?
ರಸಧಾರೆ – 225
ತೆರೆಯಂತೆ ವಿಶ್ವಸತ್ವದ ಲಹರಿ ನಮ್ಮ
ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ
ಭರಿಸುತಿರುವುದು ಬಾಳ – ಮಂಕುತಿಮ್ಮ
ಶರಧಿಯೊಳಗಣ = ಶರಧಿ + ಒಳಗಣ// ವಸ್ತುಗಳನಳಚಿ = ವಸ್ತುಗಳನು + ಅಳಚಿ// ಹೊರಗೊಳಗುಗಳಲಿ = ಹೊರಗೆ+ ಒಳಗುಗಳಲಿ ಶರಧಿ = ಸಾಗರ// ಅಳಚಿ = ಕೇರಿ
ಸಮುದ್ರದೊಳಗಿರುವ ವಸ್ತುಗಳನ್ನು ಕೇರಿ ಜಾಲಿಸುವ ಸಾಗರದ ತೆರೆಗಳಂತೆ, ಈ ಜಗತ್ತಿನ ಸೃಷ್ಟಿಯ ತತ್ವಗಳು ನಮ್ಮ ಒಳಗು ಹೊರಗುಗಳಲ್ಲಿ ತುಂಬಿ ಹರಿಯುತ್ತಾ ನಮ್ಮ ಜೀವನವನ್ನು ಭರಿಸುತ್ತಿದೆ ಎಂದು ಪ್ರಸ್ತಾಪಮಾಡುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಮ್ಮ ಭಾವನೆಗಳೂ ಸಹ ಈ ಸಮುದ್ರದ ಅಲೆಗಳಿಗಿಂತ ಯಾವ ರೀತಿಯಲ್ಲೂ ಭಿನ್ನವಲ್ಲ . ಪ್ರತೀ ಪ್ರಾಣಿಯ ಮನದಲ್ಲೂ ಭಾವನೆಯ ಅಲೆಗಳು ಏಳುತ್ತಲೇ ಇರುತ್ತವೆ. ಈ ಎಲ್ಲ ಭಾವನೆಗಳಿಗೆ ಹಲವಾರು ಕಾರಣಗಳಿರುತ್ತವೆ. ಅನುವಂಶಿಕ ಗುಣಗಳು, ನಮ್ಮ ಪರಿಸರ, ನಾವಿರುವ ಸಮಾಜ, ನಾವು ಕಲಿತ ವಿದ್ಯೆ, ನಮ್ಮ ಸ್ನೇಹಿತರ ವೃತ್ತ, ನಮ್ಮ ಬಂಧು ಬಳಗ, ಹೀಗೆ ನಮ್ಮ ಸುತ್ತಲಿರುವ ಎಲ್ಲವೂ ನಮ್ಮ ಮೇಲೆ ಪ್ರಭಾವ ಬೀರಿ “ಹೊರಗೊಳಗುಗಳಲಿ ಸಂತತ ನೆರೆದು ಹರಿಯುತ್ತ” ಎಂದು ಮಾನ್ಯ ಗುಂಡಪ್ಪನವರು ಹೇಳುವಂತೆ ನಮ್ಮ ಹೊರ ನಡತೆ ಮತ್ತು ನಮ್ಮ ಅಂತರ್ಯದಲ್ಲಿ ನಡೆಯುವ ಭಾವ ಮಂಥನಕ್ಕೂ ಕಾರಣವಾಗುತ್ತದೆ. ಈ ಎಲ್ಲ ಭಾವಗಳನ್ನೂ ಧರಿಸಿ ನಾವು, ಸಮಯಕ್ಕೆ ಸರಿಯಾಗಿ ಅವುಗಳನ್ನು ಸಮುದ್ರದ ತೆರೆಗಳಂತೆ ಪ್ರಕಟಿಸುತ್ತಿರುತ್ತೇವೆ.
ಇವೆಲ್ಲವೂ ನಮಗೆ ಪರತತ್ವದಿಂದ ನಿರ್ಮಿತವಾದ ಈ ವಿಶ್ವತತ್ವದಿಂದಲೇ ಸಿಗುತ್ತದೆಯಾದ್ದರಿಂದ, ಆ ಪರತತ್ವಕ್ಕೂ ನಮ್ಮ ಈ ವಿಶ್ವತತ್ವಕ್ಕೂ ನಿಕಟ ಸಂಬಂಧವಿರುತ್ತದೆ. ಈ ಜಗತ್ತಿನ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡು ಪ್ರಭಾವಿತವಾಗಿರುತ್ತದೆ. ಆದರೆ ನಮ್ಮ ಅರಿವಿಗೆ ಅದು ಬರುವುದೇ ಇಲ್ಲ. ಸದಾಕಾಲ ನಾವು ನಮ್ಮದೇ ಬಲದಿಂದ ” ನಾವಾಗಿದ್ದೇವೆ ” ಎಂದುಕೊಳ್ಳುತ್ತಿರುತ್ತೇವೆ. ನಮಗೆ ನಮ್ಮ ‘ಅಹಂಕಾರವು’ ಈ ಪರತತ್ವದ ಮತ್ತು ವಿಶ್ವತತ್ವದಿಂದ ನಮ್ಮ ಮೇಲೆ ಆಗುವ ಪ್ರತಿಘಳಿಗೆಯ ಪ್ರಭಾವವನ್ನು ಅರಿತುಕೊಳ್ಳಲು ಬಿಡುವುದಿಲ್ಲ ಅರಿವಿಗೆ ಬಂದರೂ ಒಪ್ಪಿಕೊಳ್ಳುವುದಿಲ್ಲ ಮತ್ತು ಒಪ್ಪಿಕೊಂಡರೂ ಅಳವಡಿಸಿಕೊಳ್ಳುವುದಿಲ್ಲ. “ಭರಿಸುತಿರುವುದು ಬಾಳ ” ಎಂಬ ಈ ಕಗ್ಗದ ಉಕ್ತಿಯಂತೆ ಈ ಭಾವಗಳು ನಮ್ಮ ಬಾಳನ್ನು ಭರಿಸುತ್ತಿದ್ದರೂ ನಾವು ಅಜ್ಞಾನದಿಂದ ಎಲ್ಲವನ್ನೂ ನಾವೇ ಮಾಡುತ್ತಿದ್ದೇವೆ ಎಂದು ಕೊಳ್ಳುತ್ತೇವೆ. ಬಹುಶಃ ನಾವು ಈ ಪರತತ್ವದ ಮತ್ತು ವಿಶ್ವತತ್ವದ ಪ್ರಭಾವವನ್ನು ಒಪ್ಪಿಕೊಂಡರೆ ನಮ್ಮ ಭಾವಗಳು ತೆರೆಗಳಿಲ್ಲದ ಸಾಗರದಂತೆ ಶಾಂತವಾಗಿ ಆನಂದದ ಅನುಭವವಾಗಬಹುದು.
ರಸಧಾರೆ – 226
ಪೊಸಬನಂಗೆಯ್ದು ದೈವಿಕಸತ್ವಮವನುಂ
ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ
ಬೆಸಸುತಿಹುದೇಗಳುಂ – ಮಂಕುತಿಮ್ಮ
ಉಸಿರವೊಲನುಕ್ಷಣಂ = ಉಸಿರ+ಒಲು+ಅನುಕ್ಷಣಂ// ಪುರುಶನೊಳವೊಗುತವನ = ಪುರುಷನ+ಒಳ+ಒಗುತ +ಅವನ // ದೈವಿಕಸತ್ವಮವನುಂ = ದೈವಿಕಸತ್ವವಂ + ಅವನುಂ// ಬೆಸಸುತಿಹುದೇಗಳುಂ = ಬೆಸಸುತಿಹುದು+ ಏಗಳುಂ ಬೆಸಸುತಿಹುದು= ಬೆಸೆಯುತಿಹುದು // ಏಗಳುಂ = ಯಾವಾಗಲೂ
ಉಸಿರು ನಮ್ಮ ದೇಹದೊಳಕ್ಕೆ ಹೊಕ್ಕು, ನಮಗೆ ಪ್ರತಿ ಉಸಿರಾಟದಲ್ಲೂ ಒಂದು ಹೊಸತನವನ್ನು ನೀಡುವಂತೆ ಆ ಪರಮಾತ್ಮ ತತ್ವವು ಮನುಷ್ಯನ ಒಳಹೊಕ್ಕು ಅವನಿಗೆ ಹೊಸತನವನ್ನು ನೀಡಿ ಲೋಕಕ್ಕೆ ಹೊಸತನವನ್ನು ನೀಡಲು ದುಡಿಯುವಂತೆ ಪ್ರೇರೇಪಿಸುತ್ತದೆ. ಈ ರೀತಿಯ ಪರಸ್ಪರ ಬೆಸುಗೆ ಪರಮಾತ್ಮ ತತ್ವಕ್ಕೂ ಮನುಷ್ಯನಿಗೂ ಸದಾಕಾಲ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಒಂದು ಉಸಿರು ನಮ್ಮೊಳಗೆ ಹೋಗಿ ಹೊರಬಂದರೆ ನಮಗೆ ಮತ್ತೊಂದು ಹೊಸತನ. ಒಳಗೆ ಹೋದ ಉಸಿರು ಹೊರಬರೆದೆ ಇದ್ದರೆ ಅಥವಾ ಹೊರಗೆ ಬಂದ ಉಸಿರು ಮತ್ತೆ ಒಳಗೆ ಹೋಗದಿದ್ದರೆ ನಮ್ಮ ಅಸ್ತಿತ್ವವೇ ಕೊನೆಯಾಗುತ್ತದೆ, ಅಲ್ಲವೇ? ಹಾಗಾಗಿ ನಮ್ಮ ಪ್ರತಿಕ್ಷಣದ ಬದುಕು ಈ ಉಸಿರಿನ ಮೇಲೆಯೇ ನಿಂತಿದೆ. ಆದರೆ ಆ ಉಸಿರನ್ನು ಎಳೆದುಕೊಳ್ಳುವ ಅಥವಾ ಹೊರಹಾಕುವ ” ಉಚ್ವಾಸ- ನಿಶ್ವಾಸ” ಗಳಿಗೆ ಕಾರಣವಾದ ದೈವೀ ಶಕ್ತಿಯೇ ನಮ್ಮೊಳಗೆ ಪ್ರತಿಕ್ಷಣವೂ ಹೊಸತನವನ್ನು ತುಂಬಿ ನಮ್ಮನ್ನು ಕಾರ್ಯೋನ್ಮುಖರನ್ನಾಗಿಸಿ, ಕ್ರಿಯಾಶೀಲರನ್ನಾಗಿಸಿ ಈ ಜಗತ್ತಿಗೆ ಹೊಸತಾಗಿ ಏನಾದರೂ ನೀಡುವ ಶಕ್ತಿಯನ್ನೂ ಸಹಃ ನೀಡಿದೆ ಅಲ್ಲವೇ?
“ಪುರುಷ” ಎಂದರೆ “ಪುರೇ ಶೇತಿ ಇತಿ ಪುರುಷಃ” ಎಂದು ಅರ್ಥ. ಅಂದರೆ ನವರಂದ್ರಗಳಿಂದಾದ ಶರೀರವನ್ನು( ಪುರವನ್ನು) ಧಾರಣೆಮಾಡುವುದು ಎಂದು ಅರ್ಥ. ಇದೇ ಅರ್ಥದಲ್ಲಿ” ಪುರಂದರ ” ಎನ್ನುವ ಪದವೂ ಸಹ ಪ್ರಯೋಗದಲ್ಲುಂಟು. ಎಂದರೆ ಈ ದೇಹವನ್ನು ದರಿಸಿರುವುದು ಎಂದು ಅರ್ಥ. ಈ ದೇಹವನ್ನು ಧರಿಸಿರುವುದು ಪರಮಾತ್ಮ ಸ್ವರೂಪವಾದ ಆತ್ಮ. ಹಾಗಾಗಿ ದೇವರ ಹಲವಾರು ಹೆಸರುಗಳಲ್ಲಿ “ಪುರಂದರ” ಎನ್ನುವುದೂ ಒಂದು.
ಹಾಗಾಗಿ ಪ್ರತೀ ಪ್ರಾಣಿಯನ್ನೂ ಈ ಜಗತ್ತಿನಲ್ಲಿ ಕ್ರಿಯಾಶೀಲತೆಯಿಂದ ಸಕ್ರಿಯವಾಗಿ ಈ ಜಗತ್ತಿಗೆ ಏನಾದರೂ ಕೊಡುವಂತೆ ಮಾಡುವುದು ಕೇವಲ, ಗುಂಡಪ್ಪನವರು ಹೇಳಿದಂತೆ” ದೈವಿಕಸತ್ವಮವನುಂ ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ” ಈ ಆತ್ಮ ಶಕ್ತಿಯೇ. ನಾವು ನಮ್ಮ ಆತ್ಮ ಶಕ್ತಿಯನ್ನು ಸ್ವಪ್ರಯತ್ನದಿಂದ ಎಷ್ಟು ಎಷ್ಟು ಹೆಚ್ಚಿಸಿಕೊಂಡರೆ ನಾವು ಅಷ್ಟು ಹೆಚ್ಚು ಹೆಚ್ಚು ಈ ಜಗತ್ತಿಗೆ ನೀಡಬಹುದು ಮತ್ತು ನಮ್ಮ ಹೊಸತನ
ರಸಧಾರೆ – 227
ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ
ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ್ಲ
ಧನ್ಯತೆಯ ಬೆದಕಾಟ-ಮಂಕುತಿಮ್ಮ
ಪೂರ್ಣತೆಯನನ್ಯೂನತೆಯ = ಪೂರ್ಣತೆಯನು + ಅನೂನ್ಯತೆಯ // ನೂತ್ನತೆ = ಹೊಸತನ// ಅನೂನ್ಯತೆ = ಕುಂದಿಲ್ಲದ್ದು // ಬೆದಕಾಟ = ಹುಡುಕಾಟ.
ಹೊಸತನವನ್ನು ಪೂರ್ಣತೆಯನ್ನು ಕುಂದಿಲ್ಲದ್ದನ್ನು ಗಳಿಸುವ ಪ್ರಯತ್ನವೇ ಪುರುಷನ ಪ್ರಗತಿಯ ಪ್ರತೀಕ. ಪ್ರಕೃತಿಯನ್ನು ಆರಾಧಿಸುವುದು, ವಿಜ್ಞಾನ, ಕಲೆ, ಕಾವ್ಯ, ಸಾಹಿತ್ಯ, ಸಂಗೀತ ಮುಂತಾದ ವಿದ್ಯೆಗಳೆಲ್ಲವೂ ಮನುಷ್ಯ ಪರಿಪೂರ್ಣತೆಯಡೆಗೆ ನಡೆಯಲು ಬೇಕಾದ ಸಾಧನಗಳು ಮತ್ತು ಅವುಗಳ ಮೂಲಕವೇ ಪರಿಪೂರ್ಣತೆಯ ಸಾಧನೆ ಸಾಧ್ಯವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಮಾಡಿದ್ದಾರೆ.
ಪೂರ್ಣತೆಯಂದರೆ, ಸಂಪೂರ್ಣ ಮತ್ತು ಅಂತಿಮ ಸತ್ಯವನ್ನು ಅರಿಯುವುದು. ಅಂದರೆ ಪರತತ್ವವನ್ನು ಅರಿಯುವುದು. ಅದನ್ನು ಅರಿಯಲು ಈ ವಿಶ್ವತತ್ವದ ಮೂಲಕವೇ ಕಲಿಯಬೇಕು. ತೈತ್ತರೀಯ ಉಪನಿಷತ್ತಿನಲ್ಲಿ ” ತಪಸಾ ಬ್ರಹ್ಮ ವಿಜಿಜ್ಞಾಸಸ್ವ” ಎಂದು ಹೇಳಲ್ಪಟ್ಟಿದೆ. ಅರ್ಥಾತ್ ” ತಪಸ್ಸಿನಿಂದಲೇ ಬ್ರಹ್ಮನನ್ನು ಅರಿತುಕೊಳ್ಳಬೇಕು ” ಎಂದು. ವಾಚಕರೆ, ತಪಸ್ಸೆಂದರೆ ಕೇವಲ ಕಾಡಿನಲ್ಲಿ ಕುಳಿತು ಕಣ್ಣು ಮುಚ್ಚಿ ಅಂತರ್ಯದಲ್ಲಿ ಪರಬ್ರಹ್ಮನನ್ನು ದ್ಯಾನ ಮಾಡುವುದಷ್ಟೇ ಅಲ್ಲ. ಬ್ರಹ್ಮನನ್ನು ಏಕೆ ಈ ಜಗತ್ತಿನಲ್ಲಿರುವ ಯಾವುದೇ ವಿದ್ಯೆಯನ್ನು ಪೂರ್ಣತಯಾ ಕಲಿಯಬೇಕೆಂದರೆ ತಪಸ್ಸನ್ನು ಮಾಡಬೇಕು. ” ತಪ ” ಎಂದರೆ ಅಜ್ಞಾನವನ್ನು ಹೋಗಲಾಡಿಸಿಕೊಂಡು ಜ್ಞಾನವನ್ನು ಉದ್ದೀಪನಗೊಳಿಸುವುದು. ತಪನ ಎಂದರೆ ದಾಹ ಎಂದರ್ಥ. ಜ್ಞಾನ ದಾಹದಿಂದ ಅರಿಯುವ ತೀವ್ರವಾದ ಆಸ್ಥೆಗೂ ತಪಸ್ಸೆಂದೇ ಹೇಳಬಹುದು. ಬೇರೆ ಬೇರೆ ವಿದ್ಯೆಗಳ ಸಾದಕರೆಲ್ಲರೂ ಅವರವರ ಕ್ಷೇತ್ರದಲ್ಲಿಯೇ ಮಾಡುವ ತಪಸ್ಸಿನಂತಹ ಸಾಧನೆಯಲ್ಲಿ ಪರಿಪೂರ್ಣತೆಯನ್ನು, ಪರತತ್ವವನ್ನು, ಪರಮಾತ್ಮನನ್ನು ಕಂಡುಕೊಂಡಿದ್ದಾರೆ.
ಒಬ್ಬ ಕಲಾವಿದ, ಒಬ್ಬ ವಿಜ್ಞಾನಿ, ಒಬ್ಬ ಕವಿ, ಒಬ್ಬ ವೈದ್ಯ, ಒಬ್ಬ ಉಪಾದ್ಯಾಯ ಹೀಗೆ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಾಗ ಮತ್ತು ತಮ್ಮ ಕೆಲಸದಲ್ಲಿ ಪರಿಪೂರ್ಣ ಫಲಿತಾಂಶವನ್ನು ಪಡೆಯಲು, ತಪಸ್ಸಿನಂತ ಪ್ರಯತ್ನ ಮಾಡಿದಾಗ ಆ ಪರತತ್ವದ ಅನುಭವವನ್ನೇ ಪಡೆಯುತ್ತಾರೆ. ಉದಾಹರಣೆಗೆ ಒಬ್ಬ ಸಂಗೀತಗಾರ, ಒಂದು ರಾಗವನ್ನು ಪರಿಪೂರ್ಣವಾಗಿ ಸಿದ್ದಿಸಿಕೊಳ್ಳಬೇಕಾದರೆ ತಪಸ್ಸಿನಂಥ ಅಭ್ಯಾಸ ಮಾಡಬೇಕು. ಒಬ್ಬ ಗೃಹಿಣಿ ತಾನು ಹುಟ್ಟಿದ ಮನೆಯಿಂದ ಹೊರಬಂದು ಮತ್ತೊಂದು ಮನೆಯನ್ನು ತನ್ನದಾಗಿಸಿಕೊಂಡು ಅಲ್ಲಿರುವವರನ್ನೆಲ್ಲ ತನ್ನವರರನ್ನಾಗಿಸಿಕೊಂಡು ಮನೆಯ ಎಲ್ಲರ ಅಭ್ಯುದಯಕ್ಕೆ ಹೋರಾಡುವುದು ಮತ್ತು ಆ ಹೋರಾಟದಲ್ಲಿ ಯಶಸ್ಸನ್ನು ಪಡೆಯುವುದೂ ಸಹ ಒಂದು ತಪಸ್ಸಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರು ” ಪೂರ್ಣತೆಯವನ್ಯೂನತೆಯ ಗಳಿಪ ಯತ್ನಮೇ ಪೌರುಷ ಪ್ರಗತಿ” ಎಂದಿದ್ದಾರೆ . ಯಾವ ಕುಂದೂ ಅಥವಾ ಕೊರತೆ ಇಲ್ಲದೆ ಯಾವುದೇ ಕ್ಷೇತ್ರದಲ್ಲಿ ಪರಿಪೂರ್ಣತೆಯನ್ನು ಪಡೆಯುವುದೆಂದರೆ ಪರಬ್ರಹ್ಮನನ್ನೇ ಅನುಭವಕ್ಕೆ ತಂದುಕೊಂಡಂತೆಯೆ ಆಗುತ್ತದೆ. ವಾಚಕರೆ ನಾವೂ ಸಹ ನಮ್ಮ ನಮ್ಮ ಕ್ಷೇತ್ರದಲ್ಲಿ ತಪಸ್ಸಿನಂತಹ ತೀವ್ರ ಸಾಧನೆಯನ್ನು ಮಾಡಿದರೆ, ಪೂರ್ಣತ್ವವನ್ನು ಪಡೆದು, ಬ್ರಹ್ಮಾನಂದವನ್ನು ಪಡೆಯಬಹುದು.
ರಸಧಾರೆ – 228
ಗತಿಯನರಸುತ ನಡೆಯೆ ಪೌರುಷಪ್ರಗತಿ
ಮತಿ ನೀತಿ ಶಾಸ್ತ್ರಗಳು ರಾಜ್ಯಸಂಧಾನಗಳು
ಮತಿಯ ಕಿಂಚಿದ್ವಿಜಯ – ಮಂಕುತಿಮ್ಮ
ಗತಿಯನರಸುತ = ಗತಿಯನು+ಅರಸುತ // ಕಿಂಚಿದ್ವಿಜಯ = ಕಿಂಚಿತ್ತು + ವಿಜಯ, ಮತಿಯು= ಬುದ್ಧಿಯು // ನವನವಾಂಶಗಳ = ಹೊಸಹೊಸ ಅಂಶಗಳ// ಗತಿಯನರಸುತ = ದಿಕ್ಕುದಿಕ್ಕುಗಳಲ್ಲಿ ಹುಡುಕುತ್ತಾ // ಕಿಂಚಿತ್ತು=ಸ್ವಲ್ಪಮಾತ್ರ.
ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಹೊಸ ಹೊಸ ವಿಚಾರಗಳನ್ನು ಹೊಸಹೊಸ ವಿಷಯ ವಸ್ತುಗಳನ್ನು ಹುಡುಕಲು ಉಪಯೋಗಿಸಿ ನಡೆದರೆ ಪುರುಷ ಪ್ರಗತಿ . ಆ ರೀತಿಯ ಪ್ರಯತ್ನದಲ್ಲಿ ಲಭಿಸಿದ ಅಲ್ಪಮಾತ್ರ ವಿಜಯವೇ ವಿಜ್ಞಾನ, ನೀತಿ ಶಾಸ್ತ್ರಗಳು, ಅವನು ಕಟ್ಟಿದ ರಾಜ್ಯಗಳು ಮುಂತಾದವುಗಳು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುತ್ತಾರೆ.
ಪ್ರತಿದಿನವೂ ಏನಾದರೂ ಹೊಸದನ್ನು ಹುಡುಕುವ ಅಥವಾ ಮಾಡುವ ಬೆದಕಾಟದ ಪ್ರಾಣಿ ನಮ್ಮ ಮನುಷ್ಯ. ಜಗತ್ತಿನ ಸೃಷ್ಟಿಯಲ್ಲಿರುವ ಸಕಲ ಪ್ರಾಣಿಗಳಲ್ಲಿ ಮನುಷ್ಯನೊಬ್ಬನೇ ಅಲ್ಲವೇ ಅತ್ಯಧಿಕ ಬುದ್ಧಿಶಕ್ತಿಯ ಪ್ರಾಣಿ. ತಾನು ಕಾಣುವ ಪ್ರತಿಯೊಂದರಲ್ಲೂ ಏನಾದರೊಂದು ಹೊಸತನ್ನು ಹುಡುಕುವ ಇವನ ಪ್ರಯತ್ನ ಅನಾದಿ ಕಾಲದಿಂದಲೂ ನಡೆಯುತ್ತಲೇ ಇದೆ . ಸುತ್ತು ಪರಿಸರದಲ್ಲಿ ಇರುವ ಎಲ್ಲವನ್ನೂ ಕೆದಕಿ ” ಹೊಸತೇನಾದರೂ ಸಿಗುವುದೋ ಅಥವಾ ಸಿಕ್ಕದ್ದರಲ್ಲಿ ಹೊಸತೇನಾದರೂ ಮಾಡಬಹುದೇ” ಎಂದು ನೋಡುತ್ತಲೇ ಇರುತ್ತಾನೆ.
ಇಂತಹ ಹುಡುಕಾಟದಲ್ಲೇ ಮನುಷ್ಯ ಕಂಡುಕೊಂಡದ್ದು ಅಪರಿಮಿತವಾದ ಲೋಕ ಜ್ಞಾನ. ಈ ಸೃಷ್ಟಿಯಲ್ಲಿ ಎಷ್ಟು ವಿಷಯಗಳಿವೆಯೋ, ಎಲ್ಲದರಲ್ಲೂ ಇವನ ಹುಡುಕಾಟ, ಹೊಸತನದ ಅವಿಷ್ಕಾರದ ದಾಹ ನಿರಂತರ. ಈ ಜಗತ್ತಿನಲ್ಲಿ ಇವನ ಅಸ್ಥಿತ್ವದಷ್ಟೇ ಹಳೆಯದು ಇವನ ಬೆದಕಾಟದ ಚರಿತ್ರೆ. ಇದರ ಫಲವೇ ನಮ್ಮ ದೇಶದಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು, ವೈದ್ಯ ಶಾಸ್ತ್ರ, ಜ್ಯೋತಿಷ್ಯ, ಜ್ಯೋತಿರ್ಶಾಸ್ತ್ರ, ಅರ್ಥಶಾಸ್ತ್ರ , ನೀತಿ ಸಂಹಿತೆಗಳು, ರಾಜಕೀಯ ಶಾಸ್ತ್ರದಂತಹ ಅಪರಿಮಿತ ಜ್ಞಾನ ಭಂಡಾರ ಲಭ್ಯವಿದೆ. ಇಂತಹ ಪ್ರಯತ್ನ ಮನುಷ್ಯನಿಂದ ಇದು ಜಗತ್ತಿನಾದ್ಯಂತ ನಡೆದಿದೆ ಇವುಗಳ ಬಲದ ಮೇಲೆ ದೇಶಗಳನ್ನು ರಾಜ್ಯಗಳನ್ನು ಕಟ್ಟಿಕೊಂಡ. ಇವೆಲ್ಲ ಇವನ ಪ್ರಗತಿಯ ಪ್ರತೀಕ. ಅದರೂ ಗುಂಡಪ್ಪನವರು ” ಮತಿಯ ಕಿಂಚಿದ್ವಿಜಯ ” ಎಂದು ಈ ಕಗ್ಗದಲ್ಲಿ ಹೇಳಿದ್ದಾರೆ.
ರಸಧಾರೆ – 229
ಪರಿಯುತಿರ್ಪುದು ಪುರುಷಚೈತನ್ಯಲಹರಿ
ಅರಿಯದದು ನಿಲುಗಡೆಯ ತೊರೆಯದದು ಚಲಗತಿಯ
ಪರಬೊಮ್ಮನುಯ್ಯಲದು – ಮಂಕುತಿಮ್ಮ
ತೆರೆಯಸಾಲ್ಗಳೇಳುತ=ತೆರೆಯ+ಸಾಲುಗಳು+ಏಳುತ // ಪರಿಯುತಿರ್ಪುದು = ಪರಿಯುತ+ಇರ್ಪುದು // ಅರಿಯದದು=ಅರಿಯದು+ಅದು// ತೊರೆಯದದು = ತೊರೆಯದು+ಅದು// ಪರಬೊಮ್ಮನುಯ್ಯಲದು= ಪರಬೊಮ್ಮನ +ಉಯ್ಯಲ +ಅದು . ಪರಿಯುತ = ಹರಿಯುತ // ಪರಬೊಮ್ಮನ = ಪರಬ್ರಹ್ಮನ //ಉಯ್ಯಲ = ಉಯ್ಯಾಲೆ
ಪುರುಷ ಚೈತನ್ಯ, ನದಿಯ ತೆರೆಯಂತೆ ಏಳುತ್ತಾ ಬೀಳುತ್ತಾ ಹರಿಯುತ್ತಿದೆ. ಅದಕ್ಕೆ ತನ್ನ ನಿಲುವೆಲ್ಲಿ ಎಂದು ಗೊತ್ತಿಲ್ಲ. ಅದು ತನ್ನ ಚಲನೆಯ ಗತಿಯೂ ಗೊತ್ತಿಲ್ಲ. ಈ ಜಗತ್ತಿನಲ್ಲಿ ಹರಿಯುವ ಪರಮ ಚೈತನ್ಯದ ಚಲನೆ ಆ ಪರಮಾತ್ಮನ ಉಯ್ಯಾಲೆಯಂತಿದೆ ಎಂದು ಬಹಳ ಗಹನ ತತ್ವದ ಪ್ರತಿಪಾದನೆಯನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ .
ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ ಆ ಪರಮ ಚೈತನ್ಯವೇ ಕಾರಣ ಎಂದು ಒಪ್ಪಿಕೊಂಡಾಗಿದೆ. ಅದು ಮಾನವರ ಪರಿಭಾಷೆಯಲ್ಲಿ ಉತ್ಕ್ರುಷ್ಟವಾಗಿಯೂ, ಕೆಟ್ಟದ್ದಾಗಿಯೂ, ಉಗ್ರವಾಗಿಯೂ, ಶಾಂತವಾಗಿಯೂ, ಅಂದವಾಗಿಯೂ , ಕುರೂಪವಾಗಿಯೂ ಹೀಗೆ ಹಲವಾರುಬಗೆಗಳಲ್ಲಿ ಪ್ರಕಟವಾಗುತ್ತದೆ. ನದಿಯ ತೆರೆಗಳಂತೆ ಮೇಲೇಳುತ್ತಾ ಕೆಳಬೀಳುತ್ತಾ ಇರುತ್ತದೆ. ಅದರ ಗುಣಗಳನ್ನು ಅನುಭವಿಸುವುದು ನಮ್ಮ ಭಾವವಷ್ಟೇ. ಈ ಭಾವವೇ ಬದಲಾಗುತ್ತಾ ಇಡೀ ಜಗತ್ತನ್ನು ವೈವಿಧ್ಯಮಯವಾಗಿ ಕಾಣುವ ಪರಿಪಾಟ ನಮ್ಮ ಮಾನವನಿಗೆ. ಇದಕ್ಕೆ ಒಂದು ಆದಿಯೂ ಇಲ್ಲ ಅಥವಾ ಒಂದು ಅಂತ್ಯವೂ ಇಲ್ಲ. ಹುಟ್ಟಿದಾರಭ್ಯ ಸಾಯುವತಕ ನಮ್ಮ ಮನಸ್ಸುಗಳಲ್ಲಿ ಈ ರೀತಿಯ ಭಾವಗಳ ತೆರೆಗಳು ಏಳುತ್ತಲೇ ಇರುತ್ತವೆ.
“ಆದರೆ ಈ ಭಾವಗಳು ನಮ್ಮ ಭಾವಗಳೇ?” ಎಂದು ಯೋಚಿಸಿದಾಗ ನಮ್ಮ ಅರಿವಿಗೆ ಬರುವುದು ಹೀಗೆ.ಈ ಜಗತ್ತೆಲ್ಲವೂ ಆ ಪರಮಾತ್ಮನಿಂದಲೇ ವ್ಯಾಪಕವಾಗಿ ಆವೃತವಾಗಿದೆ ಎನ್ನುವುದನ್ನು ನಿಸ್ಸಂಶಯವಾಗಿ ಒಪ್ಪಿಕೊಂಡರೆ ತಾನೇ ಸೃಷ್ಟಿಮಾಡಿದ ನಮ್ಮ ದೇಹ ಮನಸ್ಸು ಬುದ್ಧಿಗಳಂತಹ ಉಪಕರಣಗಳನ್ನು ಉಪಯೋಗಿಸಿಕೊಂಡು, ತಾನೇ ಈ ಭಾವಗಳನ್ನು ಅನುಭವಿಸುತ್ತಾ ಆನಂದಿಸುತ್ತಾ ಒಂದು ಉಯ್ಯಾಲೆಯಂತಹ ಆಟವನ್ನು ಆಡುತ್ತಿದ್ದಾನೆ ಆ ಪರಮಾತ್ಮ. ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿಧ್ಯಮಾನವೂ ಅವನಾಟವೆಂದು ಒಪ್ಪಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಬೇಕು. ಆಧ್ಯಾತ್ಮಿಕ ಔನ್ನತ್ಯದ ಸ್ಥರದಲ್ಲಿ ಈ ಪರಮಾತ್ಮ ತತ್ವ ಸ್ಥಿರವಾಗುತ್ತದೆ. ಎಲ್ಲಿಯ ತನಕ ನಾವು ನಮ್ಮ ದೇಹ ಮನಸ್ಸು ಬುದ್ಧಿಗಳೊಂದಿಗೆ ನಮ್ಮನ್ನು ಗುರುತಿಸಿ ಕೊಳ್ಳುತ್ತೇವೆಯೋ ಅಲ್ಲಿಯತನಕ ನಮಗೆ ಸತ್ಯದ, ಸತ್ವದ ಮತ್ತು ತತ್ವದ ದರ್ಶನವಾಗುವುದಿಲ್ಲ. ಅಂತಹ ಪ್ರಾಕೃತಭಾವದಿಂದ ನಾವು ಮೇಲೇರಲು ಪ್ರಯತ್ನ ಪಡಬೇಕು. ಪಟ್ಟರೆ ಹಂತ ಹಂತವಾಗಿ ಸಾಧನೆಯಿಂದ ಔನ್ನತ್ಯವನ್ನು ಸಾಧಿಸಬಹುದು.
ರಸಧಾರೆ- 230
ತೆರೆ ಬೀಳುವುದು ಕರ್ಮವಿಧಿಯಿದಿರು ಪರಿಯೆ
ತೆರೆಯನಾನುತೆ ತಗ್ಗು, ತಗ್ಗುನಾನುತಲಿ ತೆರೆ
ತೆರೆತಗ್ಗುಗಳಿನೆ ತೊರೆ – ಮಂಕುತಿಮ್ಮ
ತೆರೆಯೇಳುವುದು = ತೆರೆಯು+ ಏಳುವುದು// ಕರ್ಮವಿಧಿಯಿದಿರು = ಕರ್ಮ+ ವಿಧಿಯ+ ಎದಿರು//ತೆರೆಯನಾನುತೆ= ತೆರೆಯನು + ಆನುತೆ// ತಗ್ಗುನಾನುತಲಿ = ತಗ್ಗನು + ಆನುತಲಿ, ಆನುತೆ= ಅನುಗುಣವಾಗಿ, ಹೊಂದಿಕೊಂಡಂತೆ //ತೆರೆಯೇಳುವುದು = ಭಾವ ಲಹರಿ ಏಳುವುದು.
ಮನುಷ್ಯನ ಮನಸ್ಸಿನಲ್ಲಿ ಆ ಪರಮಾತ್ಮ ತತ್ವ ತುಂಬಿದಾಗ ಒಂದು ಆಧ್ಯಾತ್ಮಿಕ ಭಾವ ಉನ್ನತವಾಗಿರುತ್ತದೆ. ಆದರೆ ಬದುಕಿನ ಕೆಲಸಕಾರ್ಯಗಳಲ್ಲಿ ಮಗ್ನರಾದಾಗ ಆ ಭಾವ ಮರೆಯಾಗಿ ನಾವು ಮತ್ತೆ ಪ್ರಾಪಂಚಿಕ ವಿಷಯಗಳಲ್ಲಿ ಬೀಳುತ್ತೇವೆ. ಮತ್ತೆ ಆ ಪಾರಮಾರ್ಥಿಕ ಭಾವ ಮನದಲ್ಲಿ ತುಂಬಿಕೊಂಡಾಗ ಮತ್ತೆ ಮೇಲೇಳುತ್ತೇವೆ ಹೀಗೆ ಏಳುತ್ತಾ ಬೀಳುತ್ತಾ ಸಾಗುವುದೇ ಜೀವನದ ಪ್ರಯಾಣ ಎಂದು ಒಂದು ಸುವಿಚಾರವನ್ನು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಆಕಾಶದಿಂದ ಬಿದ್ದ ಒಂದೊಂದು ಮಳೆಯ ಹನಿಯೂ ತನ್ನ ಗಮ್ಯವಾದ ಸಾಗರವನ್ನು ಸೇರಲು ಬೇರೆ ಹನಿಗಳೊಂದಿಗೆ ಕೂಡಿ ಒಂದು ಝರಿಯಾಗಿ ತೊರೆಯಾಗಿ ನದಿಯಾಗಿ ಹರಿಯುತ್ತದೆ. ಹಾಗೆ ಹಾರಿಯುವಾಗ, ಹಳ್ಳಗಳಲ್ಲಿ ಬಿದ್ದು ಮತ್ತೆ ಮೇಲೇರಿ ಮತ್ತೆ ತೊರೆಯಾಗಿ ಹೇಗಾದರೂ ಸರಿ ಸಮುದ್ರವನ್ನು ಸೇರುವ ತನ್ನ ಪ್ರಯತ್ನವನ್ನು ಮುಂದುವರೆಸುವಂತೆ ಆತ್ಮವೂ ಸಹ ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಹವಣಿಸುವಾಗ ಆಧ್ಯಾತ್ಮಿಕ ಭಾವ ಬರುತ್ತದೆ. ಆದರೆ ಈ ಜಗತ್ತಿನಲ್ಲಿ ಹುಟ್ಟಿದಮೇಲೆ ಬದುಕಿನ ಹೋರಾಟದಲ್ಲಿ ಆ ಭಾವ ಆಗಾಗ ಅಭಾವವಾಗಿಬಿಡಬಹುದು. ಹಾಗಾದಾಗ ಮತ್ತೆ ಜೀವನದ ಜಂಜಾಟದಲ್ಲಿ ಬೀಳಬಹುದು. ಹೋರಾಟದ ತೀವ್ರತೆ ಕಡಿಮೆಯಾದಾಗ ಮತ್ತೆ ಆ ಪಾರಮಾರ್ಥಿಕ ಭಾವ ಅಧಿಕವಾಗಬಹುದು. ಒಂದು ಹಾವುಏಣಿಯಾಟದಂತೆ, ಮೇಲೆ ಹೋಗಿ, ಕೆಳಗೆ ಇದ್ದು ಮತ್ತೆ ಮೇಲೆ ಹೋಗುವ ಮತ್ತೆ ಬೀಳುವ ಪರಿಪಾಟ ನಡೆದೇ ಇರುತ್ತದೆ ಎನ್ನುವುದೇ ಈ ಕಗ್ಗದ ಹೂರಣ.
ಆಧ್ಯಾತ್ಮದ ಭಾವ ಬಂದು ಬಿಟ್ಟರೆ ಬದುಕಿನ ಅಂಟು ಬಿಡುತ್ತದೆ. ಬದುಕಿನ ಅಂಟು ಬಿಟ್ಟರೆ ಅಧ್ಯಾತ್ಮ ಅಧಿಕವಾಗುತ್ತದೆ. ಇದು ” ಮದುವೆಯಾಗದ ಹೊರತು ಹುಚ್ಚು ಬಿಡದು: ಹುಚ್ಚು ಬಿಡದ ಹೊರತು ಮದುವೆಯಾಗದು ” ಎನ್ನುವಂತೆ ಇದೆ. ನಾವು ಏನು ಮಾಡಬೇಕೆಂದರೆ ಬದುಕಿನ ಜಂಜಾಟವನ್ನೂ ಅರಿಯಬೇಕು ಪರಮಾರ್ಥವನ್ನೂ ಅರಿಯಬೇಕು. ಇವೆರಡರ ಪ್ರಯೋಜನವನ್ನು ಅರಿಯಬೇಕು. ನಮಗೆ ಪರಮಾರ್ಥದ ಹಿತವು ಅರ್ಥವಾಗಬೇಕು.ಅದನ್ನು ಹಿಡಿದುಕೊಳ್ಳಬೇಕು. ಆಗ ನಮ್ಮ ಜೀವನದಿಯ ಪ್ರಯಾಣ ಹಳ್ಳವಿಲ್ಲದ ಮತ್ತು ಹಳ್ಳದಲ್ಲಿ ಬೀಳದ ಪ್ರಯಾಣವಾಗುತ್ತದೆ. ವಾಚಕರೆ, ನಮಗೆ ಯಾವುದುಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗೆ ಉಂಟಲ್ಲವೇ?
ರಸಧಾರೆ – 231
ಮುಂದೆ ತಾನೇಳುವುದು ಬೇರೆ ಗಾತ್ರದಲಿ
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ
ಮುಂದಹುದು ಬೆರಗೊಂದೆ – ಮಂಕುತಿಮ್ಮ
ಇಂದೆದ್ದ= ಇಂದು + ಎದ್ದ// ಮರುವಗಲು = ಮರು+ ಹಗಲು// ತಾನೇಳುವುದು = ತಾನು + ಏಳುವುದು// ನಾಳೆಗಳನೆಲ್ಲವ = ನಾಳೆಗಳನು+ಎಲ್ಲವ// ಮುಂದಹುದು = ಮುಂದು+ ಅಹುದು .
ಇಂದು ಎದ್ದ ತೆರೆ ಬೀಳುವುದು ಮತ್ತೆ ಮರುದಿವಸ ಇನ್ನೊಂದು ತೆರೆ ಬೇರೆ ಗಾತ್ರದಲಿ ಏಳುವುದು. ಹಾಗೆ ಇಂದು ನಾಳೆಗಳ ಬೇರೆ ಬೇರೆ ಗಾತ್ರದ ತೆರೆಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಹಿಂದೆ ನಮಗೆ ಒಂದು ವಿಶಾಲವಾದ ಕಡಲು ಕಾಣುವಂತೆ, ನಮ್ಮ ಮನಸ್ಸುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ, ರೂಪದಲ್ಲಿ, ಗಾತ್ರದಲ್ಲಿ ಮತ್ತು ಬೇರೆ ಸಮಯದಲ್ಲಿ, ಬೇರೆ ಬೇರೆ ಕಾರಣಗಳಿಗೆ ಎಂದ್ದಂತಹ ಪರತತ್ವದ ಭಾವಗಳನ್ನೆಲ್ಲ ಒಟ್ಟು ಮಾಡಿದರೆ ನಮಗೆ ಆ ಪರತತ್ವದಿಂದ ಪ್ರತಿರೂಪವಾದ ಪರಮಾತ್ಮನ ಅರಿವು ಮೂಡುತ್ತದೆ ಎಂದು ಒಂದು ಗಹನವಾದ ವಿಚಾರವನ್ನು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರು ಮಂಡಿಸಿದ್ದಾರೆ.
ನಮ್ಮ ಮನಸ್ಸುಗಳಲ್ಲಿ, ಶ್ರದ್ಧೆಯಿಂದಲೋ,ಭಕ್ತಿಯಿಂದಲೋ,ಭಯದಿಂದಲೋ, ಸಂಪ್ರದಾಯದ ಪಾಲನೆ ಮಾಡುವಾಗಲೋ, ಗುಂಪಿನಲ್ಲಿ ಒಂದಾಗಿಯೋ ಆ ದೇವರ ಧ್ಯಾನ ಉಂಟಾಗಬಹುದು. ಕೆಲವು ಬಾರಿ ಅದು ಸುಮ್ಮನೆ ಬಂದುಹೋಗುವ ಭಾವವಿರಬಹುದು ಅಥವಾ ತೀವ್ರತೆಯಿಂದ ಕೂಡಿದ ಚಿಂತನೆಯಾಗಿರಬಹುದು. ಕ್ಷಣಿಕವಾದ ಭಾವವಾಗಿರಬಹುದು ಅಥವಾ ಧೀರ್ಘ ಧ್ಯಾನದ ಸ್ಥಿತಿಯಾಗಿರಬಹುದು. ಹೀಗೆ ಬಂದುಹೋಗುವ ಭಾವಗಳು ನಮ್ಮಲ್ಲಿ ಸ್ಥಾಯೀ ರೂಪದಲ್ಲಿ ಇರುವುದಿಲ್ಲ. ಅದಕ್ಕೆ ಕಾರಣ ನಾವಿರುವ ಜಗತ್ತಿನ ಇಂದ್ರಿಯ ಜನ್ಯವಾದ ಸೆಳೆತಗಳು ನಮ್ಮನ್ನು ಮತ್ತೆ ಮತ್ತೆ ಸೆಳೆದು ಈ ಜಗತ್ತಿನ ಆಕರ್ಷಣೆಗೆ ತಳ್ಳುತ್ತದೆ, ಅಲ್ಲವೇ? ಒಂದು ಕಡೆ ಜಗತ್ತಿನ ಮತ್ತು ಜಗತ್ಸಂಬಂಧವಾದ ಚಿಂತನೆಗಳು, ಮತ್ತೊಂದು ಕಡೆ ಜಗತ್ತಿನ ಸೃಷ್ಟಿಕರ್ತನಾದ, ಸರ್ವಕಾರಕನಾದ, ಸರ್ವನಿಯಾಮಕನಾದ, ಸರ್ವವ್ಯಾಪಕನಾದ ಆ ಪರಮ ಚೈತನ್ಯದ ಚಿಂತೆ, ಪ್ರಮಾಣ ಮತ್ತು ಪರಿಮಾಣ ಬೇಧವಿದ್ದರೂ ಭಾವಗಳೆರಡೂ ನಮ್ಮಲ್ಲಿ ಬಂದು ಹೋಗುತ್ತವೆ.
ಪ್ರತಿಯೊಬ್ಬರಲ್ಲೂ ಪ್ರಮಾಣ ಭೇದವಿದ್ದರೂ ಹೀಗೆ ಬಂದು ಹೋಗುವ ಈ ಭಕ್ತಿಯ ಅಥವಾ ಧ್ಯಾನದ ಭಾವಗಳನ್ನು ಒಂದು ಕಡೆ ಕೇಂದ್ರೀಕರಿಸಿದರೆ ಅಥವಾ ಒಟ್ಟು ಸೇರಿಸಿದರೆ ಅವರವರ ಮಟ್ಟಿಗೆ ಅವರವರು ಏನು ಮತ್ತು ಎಷ್ಟು ಕಾಣಲು ಸಾಧ್ಯವೋ ಅಷ್ಟರ ಸಮಗ್ರ ಚಿತ್ರಣ ನಮಗೆ ಕಾಣುತ್ತದೆ. ಕಡಲ ತೀರದಲ್ಲಿ ನಿಂತು ನೋಡಿದರೆ ನಮಗೆ ಕಡಲ ವೈಶಾಲ್ಯ ಕಾಣುತ್ತದೆ. ಆದರೆ ನಾವು ನೋಡುವುದು ನಮ್ಮ ದೃಷ್ಟಿ ಎಷ್ಟು ನೋಡಬಹುದೋ ಅಷ್ಟು ಮಾತ್ರ. ಅದಕ್ಕೂ ಆಚೆ ಕಡಲಿಲ್ಲವೇ ? ನಮ್ಮ ದೃಷ್ಟಿ ಹೆಚ್ಚಾದರೆ ನಮಗೆ ಇನ್ನೂ ವಿಶಾಲವಾಗಿ ಕಾಣುತ್ತದೆ.
ಹಾಗೆಯೇ ನಮ್ಮ ನಮ್ಮ ಕ್ಷಮತೆಗೆ ಅನುಸಾರವಾಗಿ ನಾವು ಆ ಪರಮಾತ್ಮ ತತ್ವವನ್ನು ಭಾವಿಸುತ್ತೇವೆ ಮತ್ತು ಅನುಭವಿಸುತ್ತೇವೆ. ನಮ್ಮ ಮಟ್ಟಿಗೆ ಅದು ನಮ್ಮ ಅನುಭವ. ಹೆಚ್ಚು ಭಾವಿಸಿದರೆ ಹೆಚ್ಚು ಮತ್ತು ವಿಶಾಲವಾದ ಅನುಭವ ಆಗುತ್ತದೆ. ನಾವು ನಮ್ಮ ” ನೋಡುವ ಕ್ಷಮತೆಯನ್ನು” ಹೆಚ್ಚಿಸಿಕೊಂಡರೆ ನಮ್ಮ ಭಾವನೆಯೂ ಹೆಚ್ಚಾಗಿ ಪರಮಾತ್ಮ ತತ್ವದ ಮತ್ತು ಸತ್ವದ ಭಾವ ಮತ್ತು ಅನುಭವವೂ ಹೆಚ್ಚಾಗುತ್ತದೆ. ನಮ್ಮ ದೃಷ್ಟಿಯನ್ನು ವಿಶಾಲವಾಗಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸೃಷ್ಟಿಯ ಹಿಂದಿರುವ ಆ ಪರಮ ಚೇತನದ ಸಮಗ್ರ ಚಿತ್ರವನ್ನು ಕಾಣುವ ಪ್ರಯತ್ನ ಮಾಡಬೇಕು. ಅಂತಹ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?
ರಸಧಾರೆ – 232
ಹಾಲೊಡೆಯೆ ಕಡೆದದನು ತಕ್ರವಾಗಿಪುದು
ಹಾಳ ಹಾಳಾಗಿಪುದು ಹಳದ ಹೊಸದಾಗಿಪುದು
ಬಾಳಿಗಿದೆ ಚಿರಧರ್ಮ – ಮಂಕುತಿಮ್ಮ.
ಹಾಲೊಡೆಯೆ = ಹಾಲು + ಒಡೆಯೆ//ಕಡೆದದನು = ಕಡೆದು + ಅದನು //ಹಾಳಾಗಿಪುದು = ಹಾಳು + ಆಗಿಪುದು // ಹೊಸದಾಗಿಪುದು = ಹೊಸತು+ಆಗಿಪುದು ಬಾಳಿಗಿದೆ = ಬಾಳಿಗೆ + ಇದೆ ತಕ್ರ = ಮಜ್ಜಿಗೆ.
ಬೀಳುವುದನ್ನು ಎತ್ತಿ ನಿಲ್ಲಿಸುವುದು, ಬಿದ್ದುದ್ದನ್ನು ಕಟ್ಟಿ ನಿಲ್ಲಿಸುವುದು, ಹಾಲು ಒಡೆದರೆ( ಮೊಸರಾದರೆ) ಅದನ್ನು ಕಡೆದು ಮಜ್ಜಿಗೆಯನ್ನಾಗಿಸುವುದು, ಯಾವುದಾರೂ ವಸ್ತು ಹಾಳಾದರೆ ಹಾಗೆಯೇ ಬಿಡುವುದು, ಹಳತನ್ನು ಹೊಸದಾಗಿಸುವುದು, ಮುಂತಾದ ಕೆಲಸಗಳನ್ನು ಮಾಡುವುದೇ ಮಾನವನ ಬಾಳಿಗೆ ಶಾಶ್ವತ ಧರ್ಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಧರ್ಮವೆಂದರೆ ಸ್ವಭಾವ. ಈ ಜಗತ್ತಿನಲ್ಲಿ ಸೃಷ್ಟಿಯಾದ ಪ್ರತಿ ವಸ್ತುವಿಗೂ, ಪ್ರತಿ ಪ್ರಾಣಿಗೂ ಒಂದೊಂದು ಭಿನ್ನವಾದ ಸ್ವಭಾವ ಎಂದರೆ, ಧರ್ಮವಿದೆ. ಮನುಷ್ಯನಿಗೆ ಮಾನವನಾಗಿರುವುದೇ ಸ್ವಭಾವ. ಆದರೆ ನಮ್ಮ ಮಾನವ ಮಾನವತೆಯನ್ನು ಬೆಳಗುವ ಜೊತೆಗೆ ತನ್ನ ಕಾರ್ಯಕ್ಷೇತ್ರಕ್ಕೆ ಸಾವಿರಾರು ಆಯಾಮಗಳನ್ನು ಸೇರಿಸಿಕೊಂಡಿದ್ದಾನೆ. ಇದರ ಪ್ರತಿಫಲವೇ ಅನ್ಯ ಯಾವ ಪ್ರಾಣಿಗೂ ಇಲ್ಲದ ಕಾರ್ಯ ಕ್ಷಮತೆ ಇವನದು. ಹೊಸ ಹೊಸ ವಸ್ತು ವಿಷಯಗಳನ್ನು ಕಂಡು ಹಿಡಿದುಕೊಳ್ಳುವುದು, ಅದು ಹಳತಾದರೆ ಹೊಸ ಹೊಸ ವಸ್ತುಗಳನು ಸೃಜಿಸುವುದು. ಇರುವ ವಸ್ತು ಹಾಳಾದರೆ ಸರಿಪಡಿಸುವುದು. ಯಾವುದಾದರೂ ವಸ್ತುವಿನ ರೂಪ ಕೆಟ್ಟರೆ, ಹೊಸ ರೂಪ ಕೊಡುವುದು, ಹೀಗೆ ಪ್ರತಿ ವಸ್ತುವನ್ನೂ ತನ್ನ ಉಪಯೋಗಕ್ಕೆ ತಂದುಕೊಳ್ಳುವುದು ಮಾನವನ ಸಹಜ ಗುಣ, ಹಾಗಾಗೇ ಮಾನ್ಯ ಗುಂಡಪ್ಪನವರು ಹೇಳುವ ಹಾಗೆ,” ಬಾಳಿಗಿದೆ ಚಿರಧರ್ಮ”. ಮಾನವನಿಗೆ ಇದು ನಿರಂತರ ಧರ್ಮ.
ವಾಚಕರೆ, ಈ ವಿಚಾರ ಎಲ್ಲರಗೂ ಗೊತ್ತಿರುವ ವಿಚಾರವೇ. ಇದರಲ್ಲಿ ಹೊಸತೇನೂ ಇಲ್ಲ. ಆದರೆ ಇಂತಹ ಅದ್ಭುತ ಶಕ್ತಿಯನ್ನು ಆ ಪರಮಾತ್ಮನಿಂದ ಪಡೆದ ಈ ಮನುಷ್ಯ ಇಡೀ ಜಗತ್ತಿನಲ್ಲಿ ಹೊಸತನ್ನು ಸೃಷ್ಟಿಮಾಡುವ ಭರದಲ್ಲಿ, ಮನುಕುಲಕ್ಕೆ ಮಾರಕವಾದ ವಸ್ತುಗಳನ್ನು ಹೇರಳವಾಗಿ ಸೃಷ್ಟಿಮಾಡಿಬಿಟ್ಟಿದ್ದಾನೆ. ಇನ್ನೂ ಮಾಡುತ್ತಲೇ ಇದ್ದಾನೆ. ಇವನು ಸೃಜಿಸಿದಾಗ ಇವನ ಉದ್ದೇಶ್ಯವೇನೋ ಇರುತ್ತದೆ. ಆದರೆ ಇವನ ಆವಿಷ್ಕಾರದ ಉಪಯೋಗ ದುರ್ಜನರ ಕೈಯಲ್ಲಿ ಬಿದ್ದು, ಜಗತ್ತಿನ ಜನರ ಬದುಕಿಕೆ ಮಾರಕವಾಗಿದೆ. ಇದರಿಂದ ಅನಾಹುತ ಖಂಡಿತ. ” ಬಸ್ಮಾಸುರನ ಕೈಯಲ್ಲಿ “ಬೂದಿಯಾಗಿಸುವ ವರ”ವನ್ನು ಕೊಟ್ಟಹಾಗೆ”. ಇಂತಹ ಬಸ್ಮಾಸುರರು ನಮ್ಮಾ ನಿಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಅವರು ತಮ್ಮ ಕೆಲಸದ “ದುರ್ಭಾರ”ದಲ್ಲಿ ತಾವೇ ನಾಶವಾಗುವ ಮುಂಚೆ ಜಗತ್ತಿಗೆ ಸಾಕಷ್ಟು ನಷ್ಟ ಮಾಡೇ ಹೋಗುತ್ತಾರೆ. ನಾವು ನಮ್ಮ ಪರಿಧಿಯೊಳಗಿನ ಸಮಾಜವನ್ನು ಸೂಕ್ತ ಮತ್ತು ಸುಮುಖವಾಗಿಸಿಕೊಂಡರೆ ಒಳಿತಲ್ಲವೇ ?
ರಸಧಾರೆ – 233
ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ
ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು?
ನಿಷ್ಠುರಪ್ರಿಯರವರು – ಮಂಕುತಿಮ್ಮ
ನೂರಿಹವು = ನೂರು + ಇಹವು// ನೆಟ್ಟಗಿಪೆನ್ = ನೆಟ್ಟಗೆ+ಇಪೆನ್ // ಇಷ್ಟಗಳನನ್ಯೋನ್ಯವವರೇಕೆ = ಇಷ್ಟಗಳನ+ಅನ್ಯೋನ್ಯವ+ಅವರು+ಏಕೆ// ಬಗೆದಿರರು = ಬಗೆದು+ ಇರರು// ನಿಷ್ಠುರಪ್ರಿಯರವರು = ನಿಷ್ಠುರ+ಪ್ರಿಯರು+ಅವರು
ಸೊಟ್ಟುಗಳು = ನೇರವಲ್ಲದ್ದು// ನೆಟ್ಟಗಿಪೆನ್ = ನೆಟ್ಟಗಾಗಿಸುತ್ತೇನೆ// ಅನ್ಯೋನ್ಯವ = ಅನ್ಯೋನ್ಯತೆಯ// ನಿಷ್ಠುರಪ್ರಿಯರವರು = ನಿಷ್ಠುರ ಕಟ್ಟಿಕೊಳ್ಳಲು ಬಯಸುವವರು.
ಈ ಜಗತ್ತಿನ ಸೃಷ್ಟಿಯ ವಿಧಾನದಲ್ಲಿ ನೂರಾರು ಸೊಟ್ಟುಗಳು ಅಂದರೆ ಅಂಕು ಡೊಂಕುಗಳು ಇವೆ. ಅದನ್ನು ನೆರವಾಗಿಸಬೇಕೆನ್ನುವುದೇ ಮಾನವನ ಸದಾಕಾಲದ ಇಚ್ಛೆ. ಮನುಷ್ಯರು ಪರಸ್ಪರ ಇಚ್ಛೆಗಳನ್ನು ಅರಿಯಲು ವಿಫಲರಾಗುತ್ತಾರೆ . ಆದರೆ ಜಗತ್ತಿನ ಸೊಟ್ಟಗಳನ್ನು ಸರಿಪಡಿಸಲು ಮನುಷ್ಯ ಮಾಡುವ ಪ್ರಯತ್ನದಲ್ಲಿ ತಾನೂ ನಿಷ್ಠುರನಾಗಿ, ಅನ್ಯರೊಡನೆ ಹಗೆತನವನ್ನು ಕಟ್ಟಿಕೊಳ್ಳುತ್ತಾನೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಪರಮಾತ್ಮನ ಸೃಷ್ಟಿಯ ವಿಧಾನಕ್ಕೆ ಆ ಪರಮಾತ್ಮನದೇ ಒಂದು ಕಾರಣವಿದೆ. ತನಗೆ ಹೇಗೆ ಬೇಕೋ ಹಾಗೆ ತನ್ನ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾನೆ. ಆದರೆ ಮನುಷ್ಯ ” ಈ ಜಗತ್ತು ನನಗಾಗಿ ಸೃಷ್ಟಿಸಲ್ಪಟ್ಟಿದೆ ” ಎಂದು ದುರ್ಭಾವದಿಂದ ” ಈ ಜಗತ್ತಿನಲ್ಲಿರುವುದೆಲ್ಲವೂ ತನ್ನ ಉಪಯೋಗಕ್ಕಾಗಿ, ತನ್ನ ಪ್ರಯೋಜನಕ್ಕಾಗಿ ಸೃಷ್ಟಿಸಲ್ಪಟ್ಟಿದೆ” ಎಂದು ಯೋಚಿಸುತ್ತಾನೆ. ಹೀಗೆ ಯೋಚಿಸುವಾಗ ಯಾವುದಾದರೂ ವಿಷಯ ಅಥವಾ ವಸ್ತು ಇವನ ಇಂದ್ರಿಯ ಪ್ರಚೋದಿತ ಇಷ್ಟ ಅಥವಾ ಅಪೇಕ್ಷೆಗೆ ಅನುಗುಣವಾಗಿ ಇಲ್ಲದಿದ್ದರೆ, ” ಇದು ಸರಿಯಿಲ್ಲ” ” ಅದು ಸರಿಯಿಲ್ಲ” ಎಂದು ಪರಮಾತ್ಮನ ಸೃಷ್ಟಿಗೇ ವ್ಯಾಖ್ಯಾನ ಬರೆಯುವ ” ಕುಚೇಷ್ಟೆ “ಯನ್ನು ಮಾಡುತ್ತಾನೆ. ನೈಸರ್ಗಿಕ ವಿಧಾನಗಳನ್ನು ತನ್ನ ಬುದ್ಧಿಶಕ್ತಿಯಿಂದ ತಿದ್ದಲು, ಬದಲಾಯಿಸಲು ಪ್ರಯತ್ನಪಡುತ್ತಾನೆ. ಉದಾಹರಣೆಗೆ ” ಜೆನೆಟಿಕ್ ಇಂಜಿನಿಯರಿಂಗ್ ” ಎನ್ನುವ ವಿಜ್ಞಾನದ ವಿಷಯದಿಂದ ಹಲವಾರು ಸ್ವಾಭಾವಿಕ ಗಿಡ, ಮರ, ಹೂ, ಹಣ್ಣು, ಪ್ರಾಣಿಗಳನ್ನೂ ಇವನೇ ತನಗಿಷ್ಟಬಂದಂತೆ ಬದಲಾಯಿಸಿ ಅಹಂಕಾರದ ನಗೆ ನಗುತ್ತಾನೆ.” ಕ್ಲೋನಿಂಗ್” ಎಂಬ ವಿಧಾನದಿಂದ ಮನುಷ್ಯನನ್ನೇ ನಕಲು ಮಾಡಲು ಪ್ರಯತ್ನಿಸಿದ್ದಾನೆ. ಇದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ, ಮನುಷ್ಯ ಮಾತ್ರ ಪರಮಾತ್ಮನ ಸೃಷ್ಟಿಯನ್ನು ತಿದ್ದಲು ಪ್ರಯತ್ನಪಡುತ್ತಿದ್ದಾನೆ. ಇವನು ಯೋಚನೆ ಮಾಡುವುದೇ ” ಸೊಟ್ಟ”!!! ಹಾಗಾಗಿ ಇವನಿಗೆ ಎಲ್ಲವೂ ಸೊಟ್ಟಗೆ ಕಾಣುತ್ತದೆ. ನೋಡುವ ಪರಿಯ ದೋಷವಲ್ಲದೆ ಮತ್ತೇನು?
ಇನ್ನು ಪರಸ್ಪರ ಅನ್ಯೋನ್ಯತೆಯ ವಿಚಾರದಲ್ಲಿ ಗುಂಡಪ್ಪನವರು ಹೇಳಿರುವ “ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು” ವಿಷಯವನ್ನು ನೋಡೋಣ. “ಎರಡು ವ್ಯಕ್ತಿಗಳು ಸೇರಿದರೆ ಮೂರು ಅಭಿಪ್ರಾಯವಿರುತ್ತದೆ” ಎನ್ನುವ ಮಾತು ಸರ್ವವಿಧಿತ. ಒಬ್ಬರ ವಿಚಾರ, ನಡತೆ, ಅಭಿಪ್ರಾಯ ಮತ್ತೊಬ್ಬರಿಗೆ ಸಂಪೂರ್ಣವಾಗಿ ಹಿಡಿಸುವುದೇ ಇಲ್ಲ. ಎಲ್ಲೋ ಒಂದು ಭೇದವಿರುತ್ತದೆ ” ತಾನು ಹೇಳುವುದೇ ಸರಿ” ಎಂದು ಪ್ರತಿಪಾದಿಸಿ ತನ್ನ ಮತವನ್ನು ಮತ್ತು ಅಭಿಮತವನ್ನು
ದೃಪಡಿಸಬೇಕೆಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಹಾಗೆ ತಮ್ಮ ಮತವನ್ನು ಮತ್ತೊಬ್ಬರ ಮೇಲೆ ಹೇರುವ ಪ್ರಯತ್ನದಲ್ಲಿ ಹಲವರಲ್ಲಿ ನಿಷ್ಠುರವನ್ನು ಕಟ್ಟಿಕೊಳ್ಳುತ್ತಾರೆ ನಮ್ಮ ಮಾನವರು . ಇದಕ್ಕೆ ಕಾರಣವೇ “ಅಹಂಕಾರ”. ಈ ಅಹಂಕಾರದ ಕಾರಣದಿಂದ, “ನಾನು ಹೇಳಿದ್ದು ಸರಿ. ನಾನು ಹೇಳಿದ್ದು ಉತ್ತಮ. ಎಲ್ಲರೂ ನನ್ನ ವಿಚಾರವನ್ನು ಒಪ್ಪಿಕೊಳ್ಳಬೇಕು. ಅನ್ಯರ ವಿಚಾರ ಮತ್ತು ಅಭಿಪ್ರಾಯ ಉತ್ತಮವಲ್ಲ. ಅದನ್ನು ನಾನು ಗೌರವಿಸಬೇಕಿಲ್ಲ” ಎನ್ನುವಂಥಾ ಹತ್ತು ಹಲವಾರು ದುರ್ಭಾವಗಳು ಇವನಲ್ಲಿ ಬೇರೂರಿಬಿಟ್ಟಿದೆ. ಇದೇ ಕಾರಣದಿಂದ ಇವನ ಬದುಕು ಇವನ ಸುಖಜೀವನಕ್ಕೆ ಮಾರಕವಾದ, ಕೋಪ, ದ್ವೇಷ, ಅಸೂಯೆಗಳಂತಹ ವಿಷಯಗ\ಳಿಂದ ತುಂಬಿಹೋಗಿವೆ.
ಇಂತಹ ದುರ್ಭಾವಗಳನ್ನು ಬಿಟ್ಟುಅನ್ಯರ ಅಭಿಪ್ರಾಯಕ್ಕೂ ಗೌರವನೀಡುತ್ತಾ, ” ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು —ಸರ್ವಜ್ಞ” ಎಂಬ ಸರ್ವಜ್ಞ ವಚನದಂತೆ ಇದ್ದರ ಪರಮಾತ್ಮನ ಸೃಷ್ಟಿಯನ್ನು ಅಭಿನಂದಿಸಿದ ಹಾಗೆ ಅಲ್ಲವೇ ? ಅಂತಹ ಮನಃಸ್ಥಿತಿಯಲ್ಲಿ ನಮಗೆ ಯಾವುದೂ ಸೊಟ್ಟಗೆ ಕಾಣದೆ, ಎಲ್ಲರನ್ನೂ ಗೌರವಿಸುವ ಮತ್ತು ಯಾರನ್ನೂ ದ್ವೇಷಿಸದ ಮನೋಭಾವ ಬೆಳೆದೀತು!!!!!!
ರಸಧಾರೆ – 234
ಬೆನ್ನೊಳೊಂದೆದೆಯೊಳೊಂದಿರಲು ಸುಕರವಲ?
ಅನ್ಯಾಯ ವಿಕಟಗಳೆನಿತೋ ಸೃಷ್ಟಿಕ್ರಮದಿ
ಸೊನ್ನೆ ಜನವಾಕ್ಕಲ್ಲಿ – ಮಂಕುತಿಮ್ಮ
ಕಣ್ಣೆರಡದೇಕೆರಡುವೊಂದೆ = ಕಣ್ಣು+ಎರಡು+ಅದೇಕೆ+ಎರಡು+ಒಂದೆ // ಪಕ್ಕದೊಳೇಕೆ= ಪಕ್ಕದೊಳು + ಏಕೆ // ಬೆನ್ನೊಳೊಂದೆದೆಯೊಳೊಂದಿರಲು=ಬೆನ್ನೊಳು + ಎದೆಯಲಿ+ಒಂದು ಇರಲು// ವಿಕಟಗಳೆನಿತೋ=ವಿಕಟಗಳು+ ಎನಿತೋ//ಜನವಾಕ್ಕಲ್ಲಿ = ಜನ+ ವಾಕ್ಕು+ಅಲ್ಲಿ // ಸುಕರವಲ = ಸುಲಭವಲ // ಜನವಾಕ್ಕು= ಜನರ ಅಭಿಮತ.
ನಮಗೆ ಎರಡು ಕಣ್ಣುಗಳು ಇವೆ. ಅವರೆಡೂ ಮುಖದಲ್ಲಿ ಪಕ್ಕ ಪಕ್ಕದಲ್ಲಿ ಇವೆ. ಅದು ಏಕೆ ಹಾಗಿದೆ? ಮುಖದಲ್ಲಿ ಒಂದು ಬೆನ್ನಲ್ಲಿ ಒಂದು ಇದ್ದಿದ್ದಿದ್ದರೆ ಸುಲಭವಾಗಿ ಹಿಂದೆ ಮುಂದೆ ಎರಡೂ ಕಡೆ ನೋಡಲು ಆಗುತ್ತಿತ್ತಲ್ಲ, ಎಂದು ಚಿತ್ರವಿಚಿತ್ರವಾಗಿ ಮನುಷ್ಯ ಯೋಚಿಸುತ್ತಾನೆ. ಆದರೆ ಹೀಗೆ ಸೃಷ್ಟಿಕ್ರಮದಲ್ಲಿ ಎಷ್ಟೋ ವಿಚಿತ್ರಗಳು ಇವೆ. ಈ ರೀತಿಯ ಸೃಷ್ಟಿಯ ವಿಚಿತ್ರಗಳನ್ನು ಪ್ರಶ್ನಿಸುವ ಅಧಿಕಾರ ಮನುಷ್ಯನಿಗೆ ಇಲ್ಲ ಎಂಬ ಮಾನ್ಯ ಗುಂಡಪ್ಪನವರ ಭಾವವೇ ಈ ಕಗ್ಗದ ಹೂರಣ.
ತನ್ನ ಸುತ್ತಲೂ ಇರುವ ಜಗತ್ತನ್ನು, ಒಂದೇ ಬಾರಿ ನೋಡಲು, ಮುಖದಲ್ಲಿ ಒಂದು, ಬೆನ್ನಲ್ಲಿ ಒಂದು ಕಣ್ಣು ಇದ್ದಿದ್ದರೆ ಸುಲಭವಾಗಿರುತ್ತಿತ್ತಲ್ಲವೇ?ಎಂದು ಯೋಚಿಸುವ ಮನುಷ್ಯರು ಹಲವರು. ಆದರೆ ಹಾಗೆ ಇದ್ದಿದ್ದರೆ ಮತ್ತೇನು ತೊಂದರೆಗಳಾಗುತ್ತಿತ್ತೋ ಏನೋ ಯಾರಿಗೆ ಗೊತ್ತು. ಬಹುಶಃ ಎದುರಿನಲ್ಲಿರುವ ವಸ್ತುವನ್ನು ನೋಡಲು ಕತ್ತನ್ನು ತಿರುಗಿಸಿ ತಿರುಗಿಸಿ ಗೋಣು ಮುರಿಯುತ್ತಿತ್ತೋ ಏನೋ? ಅಷ್ಟೇ ಅಲ್ಲದೆ ಈ ಕಣ್ಣುಗಳು ರುಂಡದಲ್ಲಿರುವುದರಿಂದ ಮತ್ತು ಬೇರೆ ಎಲ್ಲಾ ಅಂಗಗಳಿಗೂ ಸೂಕ್ತವಾದ ಸಂಪರ್ಕದೊಡನೆ ಇರುವುದರಿಂದ, ಹಾಗೇನಾದರೂ ಕಣ್ಣು ಹಿಂದೊಂದು, ಮುಂದೊಂದು ಇದ್ದಿದ್ದರೆ, ಬಹುಶಃ ಬೇರೆಲ್ಲಾ ಅಂಗಗಳ ವಿನ್ಯಾಸವನ್ನು ಮತ್ತು ಜೋಡಣಾ ಕ್ರಮವನ್ನು ಬದಲಾಯಿಸಬೇಕಿತ್ತು ಇದು ಪರಮಾತ್ಮನ ಸೃಷ್ಟಿ. ಅದಕ್ಕೊಂದು ಕ್ರಮವಿದೆ ನಮಗೆ ಅರ್ಥವಾಗದಂಥಹ ಕ್ರಮವಿದೆ. ಈ ಜಗತ್ತಿನ ಪ್ರತೀ ಸೃಷ್ಟಿಗೂ ಒಂದು ಸಮರ್ಪಕವಾದ ಕಾರಣ ಮತ್ತು ಉದ್ದೇಶ್ಯವಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ.
"ಅನ್ಯಾಯ ವಿಕಟಗಳೆನಿತೋ ಸೃಷ್ಟಿಕ್ರಮದಿ " ಎಂದು ಸೃಷ್ಟಿಯಲ್ಲಿ ಇರುವ ವಿಚಿತ್ರಗಳನ್ನು ಉಲ್ಲೇಖಿಸಿದ್ದ ಮಾನ್ಯ ಗುಂಡಪ್ಪನವರು, ಅದರ ಹಿಂದೆಯೇ "ಸೊನ್ನೆ ಜನವಾಕ್ಕಲ್ಲಿ" ಎಂದೂ ಹೇಳುತ್ತಾರೆ. ಎಂದರೆ ಈ ಸೃಷ್ಟಿಯ ಎಷ್ಟೋ ವಿಷಯಗಳು, ಮನುಷ್ಯ ತನಗೆ ಹೇಗೆ ಬೇಕೋ ಹಾಗೆ ಇಲ್ಲವೆಂದೂ, ಆ ಪರಮಾತ್ಮನ ಸೃಷ್ಟಿಯಲ್ಲೇ ಒಂದು ಅನ್ಯಾಯವಿದೆಯಂದೂ ಅಂದುಕೊಳ್ಳುತ್ತಾನೆ. ಅದಕ್ಕೆ ಕಾರಣವೇನೆಂದರೆ ಇವನು ಎಲ್ಲವೂ ತನ್ನ ಇಚ್ಚೆಗನುಸಾರವಾಗಿ ತನ್ನ ಪ್ರಯೋಜನಕ್ಕೆ ಸರಿಯಾಗುವಂತೆ ಇರಬೇಕು ಎಂದು ಅಂದುಕೊಳ್ಳುತ್ತಾನೆ. ಹಾಗಾಗಿ "ಇರುವುದು ಸರಿಯಿಲ್ಲ" ಎಂದುಕೊಳ್ಳುತ್ತಾನೆ. ಇವನ ಯೋಚನೆಯೇ ಅನ್ಯಾಯವೆಂದು ಅವನಿಗೆ ಅರಿವಾಗುವುದೇ ಇಲ್ಲ. ಪರಮಾತ್ಮನ ಸೃಷ್ಟಿಯೆಲ್ಲವೂ ಸಮರ್ಪಕವಾಗೇ ಇದೆ. ಪ್ರತಿಯೊಂದನ್ನೂ ಬಹಳ ಸೂಕ್ತವಾಗೆ ನಿರ್ಮಿಸಿದ್ದಾನೆ ಆ ಪರಮಾತ್ಮ. ಇದರಲ್ಲಿ ಎಲ್ಲೂ ಒಂದೇ ಒಂದು ಲೋಪವೂ ಇಲ್ಲ. ಈ ಜಗತ್ತಿನ ಪ್ರತಿವಸ್ತುವನ್ನೂ ಒಂದಕ್ಕೊಂದಕ್ಕೆ ಪೂರಕವಾಗಿ ಸೃಷ್ಟಿಸಿದ್ದಾನೆ. ಅವನ ಈ ಸೃಷ್ಟಿಯಲ್ಲಿ ಯಾವುದೇ ದೋಷವನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಹಾಗೇನಾದರೂ ದೋಷಕಂಡರೆ ಅದು ನೋಡುವವರ ದೃಷ್ಟಿಯ ದೋಷವಲ್ಲದೆ ಮತ್ತೇನು. ಇವನಿಗೆ ಪರಮಾತ್ಮನ ಜಗದ್ಸೃಷ್ಟಿಯ ವಿಷಯದಲ್ಲಿ ಚಕಾರವೆತ್ತಲು ಯಾವ ಅಧಿಕಾರವೂ ಇಲ್ಲ, ಅಲ್ಲವೇ?
ರಸಧಾರೆ – 235
ಮರಳಿ ತಾಂ ಪಡೆಯಳೇನ್ ಅವನಿನರ್ಧವನು
ಧರಣಿಗೀ ನಮ್ಮೊಡಲು ಹುಯ್ಗಡುಬು ತಪ್ಪಲೆಯೋ
ಪರಮೇಷ್ಠಿ ಯುಕ್ತಿಯದು – ಮಂಕುತಿಮ್ಮ
ಪುಷ್ಟಿಯಿತ್ತೊಡೇ೦ = ಪುಷ್ಟಿ + ಯಿತ್ತೊಡೆ + ಏಂ // ಪಡೆಯಳೇನ್ = ಪಡೆಯಳ+ ಏನ್ // ಅವನಿನರ್ಧವನು = ಅವನಿನ+ಅರ್ಧವನು // ಧರಣಿಗೀ = ಧರಣಿಗೆ + ಈ // ಪುಷ್ಟಿಯಿತ್ತೊಡೇ೦ = ಶಕ್ತಿ ಕೊಟ್ಟರೇನು// ಪಡೆಯಳೇನ್ = ಪಡೆಯುವುದಿಲ್ಲವೇನು// ಅವನಿನ+ ಅವನ// ಹುಯ್ಗಡುಬು = ಆವಿ ಅಥವಾ ಹಬೆಯಿಂದ ತಯಾರಾದ ಇಡ್ಲಿ// ತಪ್ಪಲೆಯೋ = ಪಾತ್ರೆಯೋ, ಪರಮೇಷ್ಠಿ= ಸೃಷ್ಟಿಕರ್ತ.
ನಮ್ಮ ಭೂಮಿ ತಾಯಿ ಈ ಸೃಷ್ಟಿಯಲ್ಲಿರುವ ಎಲ್ಲ ಪ್ರಾಣಿಗಳಿಗೂ ಪುಷ್ಟಿಕರವಾದ ಆಹಾರವನ್ನು ಇತ್ತು, ಇತ್ತುದರ ಅರ್ಧವನ್ನು ಮತ್ತೆ ಪಡೆದು ಬಿಡುತ್ತಾಳೆ. "ತನಗೆ ಬೇಕಾದ್ದನ್ನು ನಮ್ಮಲ್ಲಿ ಬೇಯಿಸಿಕೊಳ್ಳಲಿಕ್ಕೆ ನಮ್ಮ ದೇಹವನ್ನೇನಾದರೂ ಹಬೆಯಿಂದ ಮಾಡುವ ಇಡ್ಲಿ ಪಾತ್ರೆಯಂತೆ ಸೃಷ್ಟಿಕರ್ತ ಉಪಯೋಗಿಸುತ್ತಾನೋ?" ಎಂದು ಒಂದು ಪ್ರಶೆಯನ್ನು ಕೇಳಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
ಒಂದು ಮರದಲ್ಲಿ ಚಿಗುರು, ಹೂ, ಕಾಯಿ, ಹಣ್ಣು ಮತ್ತು ಬೀಜ ಉತ್ಪತ್ತಿಯಾಗಬೇಕಾದರೆ, ಆ ಮರ ತನ್ನ ಬೇರುಗಳ ಮೂಲಕ ಧರೆಯಿಂದ ಸತ್ವವನ್ನು ಹೀರಿಕೊಳ್ಳುತ್ತದೆ. ಆ ಮರದ ಎಲೆಗಳನ್ನು ಶರದೃತುವಿನಲ್ಲಿ ಉದುರುವಂತೆ ಮಾಡಿ, ಅವು ಮತ್ತೆ ಗೊಬ್ಬರದ ರೂಪದಲ್ಲಿ ಭೂಮಿಗೆ ಸತ್ವವಾಗುವುದರ ಮೂಲಕ, ಭೂಮಿ, ಎಲೆಗಳಿಗೆ ತಾನಿತ್ತ ಸತ್ವದ ಅರ್ದವನ್ನು ತಾನೇ ಪಡೆದು ಮತ್ತೆ ತನ್ನಲ್ಲಿ ಆ ಮರಕ್ಕೆ ಸಾರವನ್ನು ನೀಡುವ ಕ್ಷಮತೆಯನ್ನು ಬೆಳೆಸಿಕೊಳ್ಳುತ್ತದೆ.
ಸಮುದ್ರದ ನೀರು ತನ್ನ ಸತ್ವವನ್ನು ಆವಿಯ ರೂಪದಲ್ಲಿ ಗಗನಕ್ಕೆ ಕಳುಹಿಸಿ ಎಲ್ಲವನ್ನೂ ನೀರ ರೂಪದಲ್ಲಿ ಧರಣಿಗೆ ಸುರಿಸಿ ಅರ್ದದಷ್ಟನ್ನು ಧರಣಿಯ ಎಲ್ಲ ಗಿಡ ಮರಗಳಿಗೆ, ಪ್ರಾಣಿಪಕ್ಷಿಗಳಿಗೆ, ಕ್ರಿಮಿ ಕೀಟಗಳಿಗೆ ಉಣಬಡಿಸಿ ಮತ್ತರ್ದದಷ್ಟನ್ನು, ನದೀ ರೂಪದಲ್ಲಿ ತನ್ನ ಒಡಲಿಗೇ ಸೇರಿಸಿಕೊಳ್ಳುತ್ತದೆಯಲ್ಲವೇ? ಅದೇ ರೀತಿ ಭೂಮಿಯಲ್ಲಿ, ಅದರ ಸಾರವನ್ನು ಹೀರಿ, ಬೆಳೆಯುವ ಹಲವಾರು ಹೂ ಹಣ್ಣು ಕಾಯಿ,ಸೊಪ್ಪು ಮುಂತಾದವುಗಳೆಲ್ಲವೂ ಪ್ರಾಣಿಗಳ ದೇಹವನ್ನು ಆಹಾರದ ರೂಪದಲ್ಲಿ ಸೇರಿ, ಪಚನವಾಗಿ ಸತ್ವವನ್ನು ಮತ್ತು ಶಕ್ತಿಯನ್ನೂ ಆ ದೇಹಗಳಿಗೆ ನೀಡುತ್ತದೆ. ಹಾಗೆ ದೇಹಗಳ ಸೇರಿದ ಆಹಾರದ ಅನುಪಯುಕ್ತ ಭಾಗವು ತ್ಯಾಜ್ಯವಾಗಿ ಮತ್ತೆ ಧರಣಿಗೆ ಸೇರಿ ತ್ತದೆ ಭೂಸತ್ವವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಅಲ್ಲವೇ
ಹೀಗೆ ಪ್ರಕೃತಿ ತನಗೆ ಹೇಗೆ ಬೇಕೋ ಹಾಗೆ, ಏನು ಬೇಕೋ ಅದನ್ನು ಪಡೆದುಕೊಳ್ಳಲು ಒಂದು ಕ್ರಮವನ್ನು ನಿಯಮಿಸಿಕೊಂಡಿದೆ. ಇದು ಸೃಷ್ಟಿಕರ್ತನ ವೈಜ್ಞಾನಿಕ ಪ್ರಕ್ರಿಯೆ. ನಾವು" ನಾನು ತಿನ್ನುತ್ತೇನೆ" ಎಂದು ಹೇಳಿಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಈ ದೇಹವನ್ನು ಧಾರಣೆ ಮಾಡಿದ ಆತ್ಮಗಳ ಸಮಗ್ರ ರೂಪವಾದ ಆ ಪರಮಾತ್ಮನು ತನಗೆ ಬೇಕಾದ್ದನ್ನು, ಬೇಕಾದ್ದಷ್ಟನ್ನು ಬೇಕಾದ ಕಡೆಯಿಂದ ತೆಗೆದುಕೊಳ್ಳುವ ಒಂದು ವ್ಯವಸ್ಥೆಯನ್ನು ತಾನೇ ಸೃಷ್ಟಿಸಿಕೊಂಡು, ಆ ವ್ಯವಸ್ತೆಯಲ್ಲಿ ಅದನ್ನು ತಾನೇ ನಡೆಸುತ್ತಾ, ಆನಂದದಿಂದ ಅನುಭವಿಸುತ್ತಿದ್ದಾನೆ.
ಹಾಗಾಗಿ ಸತ್ವವನ್ನು ಕೊಡುವಿಕೆ ಮತ್ತು ಪಡೆದುಕೊಳ್ಳುವಿಕೆಯ, ಈ ನೈಸರ್ಗಿಕ ಮತ್ತು ವೈಜ್ಞಾನಿಕ ಚಕ್ರವನ್ನು ಪರಮಾತ್ಮ ಸೃಷ್ಟಿಸಿ, ಎಲ್ಲವೂ ಸಮರ್ಪಕವಾಗಿರುವಂತೆ ಮಾಡಿ ತಾನೇ ಅದರೊಳಗೆ ಇದ್ದು ಅನುಭವಿಸುತ್ತಿದ್ದಾನೆ. ನಾವೆಲ್ಲಾ ಅವನ ಈ ಪ್ರಕ್ರಿಯೆಗೆ ನಿಮಿತ್ತಮಾತ್ರರು. ನಾವೆಲ್ಲಾ ಉಪಕರಣಗಳು ಅಷ್ಟೇ. ನಾವೂ ಈ ಚಕ್ರದ ಒಂದು ಭಾಗವಾಗಿದ್ದೇವೆ ಎಂದು, ಪರಮಾತ್ಮನಿಗೆ ತುಂಬು ಹೃದಯದ ಕೃತಜ್ಞತೆಯನ್ನು ತೋರಬೇಕು.
ರಸಧಾರೆ – 236
ನರಜಾತಿ ಮಿಕ್ಕ ಜಾತಿಗಳಿಂದ ಬೇರೆ
ನರರೋಳೋರೊರ್ವನುಂ ತಾನೊಂದು ಬೇರೆ ಜಗ
ಬೆರಕೆ ಸಾಮ್ಯಾಸಾಮ್ಯ – ಮಂಕುತಿಮ್ಮ
ನರರೋಳೋರೊರ್ವನುಂ=ನರರ+ಒಳು + ಓರೋರ್ವನು//ಸಾಮ್ಯಾಸಾಮ್ಯ= ಸಾಮ್ಯ+ಅಸಾಮ್ಯ
ಗಿಡಗಳ ಜಾತಿ, ಪಕ್ಷಿಗಳ ಜಾತಿ, ಪ್ರಾಣಿಗಳ ಜಾತಿಗಳು ನೂರಾರು ಇವೆ ಆದರೆ ಮನುಷ್ಯ ಜಾತಿ ಇವೆಲ್ಲಕ್ಕಿಂತ ಭಿನ್ನ. ಪ್ರತಿಯೊಬ್ಬ ಮನುಷ್ಯನೂ ಒಂದು ಜಗದಂತೆ ಇದ್ದಾನೆ. ಇವನು ಸಾಮ್ಯದ ಮತ್ತು ಅಸಾಮ್ಯದ ಬೆರಕೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
ಗಿಡಮರಗಳ, ಪಕ್ಷಿಗಳ, ಜಲಚರಗಳ, ಕ್ರಿಮಿ, ಕೀಟಗಳ ಮತ್ತು ಪ್ರಾಣಿಗಳ ಪ್ರಭೇಧಗಳು ಸಾವಿರಾರು ಉಂಟು. ಒಂದೊಂದಕ್ಕೆ ಒಂದೊಂದು ವೈಚಿತ್ರ್ಯವನ್ನಿಟ್ಟು, ಆ ಪರಮಾತ್ಮ ಈ ಜಗತ್ತನ್ನು ನಯನ ಮನೋಹರವಾಗಿ ಮಾಡಿದ್ದಾನೆ. ಎಷ್ಟೊಂದು ವಿಧಗಳು, ಪ್ರಭೇಧಗಳು, ಬಣ್ಣಗಳು, ಆಕಾರಗಳು. ಆಹಾ! ಅವನೊಬ್ಬ ಅದ್ಭುತ ಕಲಾವಿದ ಎನ್ನಲಿಕ್ಕೆ ಸಂದೇಹವೇ ಇಲ್ಲ. ಪ್ರಕೃತಿಯ ದರ್ಯವನ್ನು ಅತ್ಯದ್ಭುತವಾಗಿ ನಿರ್ಮಿಸಿ ಚೇತನದ ರೂಪದಲ್ಲಿ ಸೃಷ್ಟಿಯ ಎಲ್ಲದರಲ್ಲೂ ತಾನು ನುಸುಳಿ ಅವುಗಳ ವೈವಿಧ್ಯತೆಯನ್ನು ತಾನೂ ಅನುಭವಿಸುತ್ತಾ ಆನಂದದಿಂದಿದ್ದಾನೆ.
ಈ ಎಲ್ಲ ಸೃಷ್ಟಿಯಲ್ಲಿ ಮನುಷ್ಯ ಮಾತ್ರ ಮಿಕ್ಕ ಎಲ್ಲದಕ್ಕಿಂತ ಭಿನ್ನ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಇಲ್ಲಿ ನಾವು ನೋಡಬೇಕಾದ ಅಂಶವೆಂದರೆ ಪ್ರತಿ ಜೀವಿಗೂ ” ನಾಲ್ಕು ಅಂಶಗಳಲ್ಲಿ” ಸಾಮ್ಯ ಉಂಟು. ಒಂದು-ದೇಹ,
ಎರಡು -ಮನಸ್ಸು, ಮೂರು – ಬುದ್ಧಿ, ನಾಲ್ಕು – ಜೀವ ಅಥವಾ ಚೇತನ. ದೇಹದ ಆಕಾರ, ಮನಸ್ಸು ಬುದ್ಧಿಗಳ ವಿಕಾಸದಲ್ಲಿ ವ್ಯತ್ಯಾಸ. ಆತ್ಮದಲ್ಲಿ ಸಂಪೂರ್ಣ ಸಾಮ್ಯ. ಅನ್ಯ ಜೀವಿಗಳಿಗೂ ಮನುಷ್ಯನಿಗೂ ವ್ಯತ್ಯಾಸವೇನೆಂದರೆ, ಬೇರೆಲ್ಲ ಜೀವಿಗಳೂ ಭೂಮಿಗೆ ಸಮಾನಾಂತರವಾಗಿದ್ದರೆ( parallel) ಮನುಷ್ಯ ಮಾತ್ರ ಲಂಬವಾಗಿದ್ದಾನೆ (Perpendicular). ಅನ್ಯಪ್ರಾಣಿಗಳಿಗಿಂತ ಮನಸ್ಸು ಬುದ್ಧಿಗಳ ವಿಕಾಸದಲ್ಲಿ ಬಹಳ ಮುಂದಿದ್ದಾನೆ. ಇವನ ಆಲೋಚನೆಗಳೆಲ್ಲ ಊರ್ಧ್ವಮುಖವಾಗಿವೆ. ಮೂಲ ಸೃಷ್ಟಿಯನ್ನು ಬಿಟ್ಟರೆ ಇಲ್ಲಿರುವುದೆಲ್ಲ, ಅಂದರೆ, ಮಾತು, ಭಾಷೆ, ಕಲೆ ಸಂಗೀತ, ಸಾಹಿತ್ಯ ಮುಂತಾದವುಗಳೆಲ್ಲ, ಈ ನಮ್ಮ ಮನುಷ್ಯನ ಸೃಷ್ಟಿಯೇ ಅಲ್ಲವೇ?
“ನರರೋಳೋರೊರ್ವನುಂ ತಾನೊಂದು ಬೇರೆ ಜಗ” ಎಂದು ಗುಂಡಪ್ಪನವರು ಈ ಕಗ್ಗದಲ್ಲಿ ಹೇಳಿದ ಹಾಗೆ, ಪ್ರತಿ ಮಾನವನೂ ಒಂದೊಂದು ಭಿನ್ನ ವ್ಯಕ್ತಿತ್ವವನ್ನು ಹೊತ್ತೆ ಈ ಜಗಕ್ಕೆ ಬರುತ್ತಾನೆ. ಪ್ರತಿಯೊಬ್ಬನ ಯೋಚನೆಯೂ ಭಿನ್ನ, ಪ್ರತಿಯೊಬ್ಬನ ಕ್ರಿಯಾಶೀಲತೆಯೂ ಭಿನ್ನ. ಹಲವರು ಅತಿಕ್ರಿಯಾಶೀಲರು, ಹಲವರು ಸೋಂಬೇರಿಗಳು. ಆದರೆ ಹೆಚ್ಚು ಪ್ರತಿಶತ ಜನರ ಹುಟ್ಟು, ಜೀವನ ಮತ್ತು ಅಂತ್ಯ ಗಣನೆಗೆ ಬರದೆ, ಅವರ ಚರಿತ್ರೆ ದಾಖಲಾಗದೆಯೇ ಮುಗಿಯುತ್ತದೆ. ಕೇವಲ ಕೆಲವರು ತಮ್ಮ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳಿಂದ ಜಗದ್ವಿಖ್ಯಾತರಾಗುತ್ತಾರೆ .
ಈ ರೀತ್ತಿಯ ವಿಕಾಸದ ಹಲವಾರು ಹಂತಗಳಲ್ಲಿರುವ ಸೃಷ್ಟಿಯ ಒಂದೊಂದು ಪ್ರಭೇಧವೂ ಕೆಲವುಕಡೆ ಸಾಮ್ಯತೆಯನ್ನೂ ಕೆಲವುಕಡೆ ಸಾಮ್ಯತೆ ಇಲ್ಲದೆ ಭಿನ್ನವಾಗಿಯೂ ಇರುವುದೇ ಈ ಸೃಷ್ಟಿ. ಇದೆಲ್ಲ ಆ ಪರಮಾತ್ಮನ ಅದ್ಭುತ ಕಲಾತ್ಮಕ ಕೃತಿ. ಇಂತಹ ಜಗದಲ್ಲಿ ನಾವಿದ್ದೇವೆ ಎನ್ನುವುದೇ ಸಮಾಧಾನ. ಇದನ್ನು ಕಾಪಾಡುವ ಹೊಣೆ, ಕ್ರಿಯಾಶೀಲತೆಯಿಂದ ಕೂಡಿದ ಬುದ್ಧಿವಂತಿಕೆಯ ಮಾನವರದು ಅಲ್ಲವೇ?
ಜಲವೊಂದೆ, ಸಿಹಿಯುಪ್ಪು ಜವುಗೂಟೆ ಬೇರೆ
ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ
ಹಲವುಮೊಂದುಂ ಸಾಜ – ಮಂಕುತಿಮ್ಮ.
ನೆಲವೊಂದೆ = ನೆಲವು + ಒಂದೆ// ಮರಳೆರೆ =ಮರಳು+ಎರೆ//ಜಲವೊಂದೆ= ಜಲವು+ ಒಂದೆ// ಜವುಗೂಟೆ = ಜವುಗು+ ಊಟೆ//ಕುಲವೊಂದರೊಳೆ = ಕುಲವು+ಒಂದರೊಳೆ //ಹಲವುಮೊಂದುಂ = ಹಲವುಂ + ಒಂದುಂ// ಎರೆ+ ಫಲವತ್ತಾದ ಭೂಮಿ// ಜವುಗೂಟೆ = ನೀರ ಒರತೆ // ಸಾಜ = ಸಾಜ.
ಮಾನ್ಯಗುಂಡಪ್ಪನವರು ಈ ಕಗ್ಗದಲ್ಲಿ ಜಗತ್ತಿನ ವೈವಿಧ್ಯತೆಯ ಒಂದು ಆಯಾಮವನ್ನು ನಮಗೆ ಪರಿಚಯ ಮಾಡುತ್ತಾರೆ. ಇಲ್ಲಿ ನೆಲವೊಂದೆ ಆದರೂ ಅದನ್ನು ಹೊಲ, ಗದ್ದೆ, ತೋಟ ಎಂದು ಅಲ್ಲಿನ ಮಣ್ಣಿನ ಗುಣ, ನೀರಿನ ಅನುಕೂಲ. ಮತ್ತು ನೀರಿನ ಗುಣದ ಆಧಾರದಮೇಲೆ ವಿಂಗಡಿಸುತ್ತಾರೆ. ಒಂದೇ ನೆಲವಾದರೂ ಒಂದೇ ರೀತಿಯ ವಾತಾವರಣವಿದ್ದರೂ, ಅಲ್ಲಿ ಬೆಳೆಯುವ ಬೆಳೆಗಳ ಮತ್ತು ಗಿಡಗಳ ವೈವಿಧ್ಯತೆ ಬಹಳ ಅದ್ಭುತ. ಇದು ಸೃಷ್ಟಿಯ ವೈವಿಧ್ಯತೆ. ಒಂದೇ ನೆಲ, ಒಂದೇ ಜಲ ಮತ್ತು ಒಂದೇ ವಾತಾವರಣವನ್ನು ಹಂಚಿಕೊಂಡರೂ ಒಂದು ಮಾವು ಮತ್ತೊಂದು ಬೇವು. ಇದೇ ರೀತಿ ಒಂದೇ ನೆಲವನ್ನು ಹಂಚಿಕೊಂಡ, ಒಂದೇ ನೀರನ್ನು ಕುಡಿವ, ಒಂದೇ ಗಾಳಿಯನ್ನು ಸೇವಿಸುವ ಮನುಷ್ಯ ಮನುಷ್ಯರಲ್ಲಿ ಎಷ್ಟೊಂದು ಬೇಧ ಎಂಬ ವಿಚಾರವನ್ನು ಸುಂದರವಾಗಿ ಪ್ರಸ್ತಾಪಮಾಡಿದ್ದಾರೆ ಮಾನ್ಯ ಡಿ .ವಿ. ಜಿ ಯವರು
ನಮ್ಮ ಮಾನವರ ವಿಚಾರವನ್ನು ತೆಗೆದುಕೊಳ್ಳೋಣ. ಒಂದು ತಾಯಿಯ ಗರ್ಭವನ್ನು ಹಂಚಿಕೊಂಡು ಜನಿಸಿದ ಮಕ್ಕಳಲ್ಲಿ ಎಷ್ಟೊಂದು ಬೇಧ. ಬಣ್ಣದಲ್ಲಿ, ಆಕಾರದಲ್ಲಿ, ರೂಪದಲ್ಲಿ, ಬುದ್ಧಿಯಲ್ಲಿ, ಸಂಸ್ಕಾರಗಳಲ್ಲಿ ಒಬ್ಬರಿದ್ದಂತೆ ಒಬ್ಬರಿಲ್ಲದಿರುವುದು ಬಹಳ ಸ್ವಾಭಾವಿಕ.ಮಕ್ಕಳಾಗಿರುವಾಗ ಒಂದೇ ರೀತಿ ಕಂಡರೂ ಬೆಳೆಬೆಳೆಯುತ್ತಾ ಭಿನ್ನವಾಗಿ ಬಿಡುತ್ತಾರೆ. ಅದಕ್ಕೆ ಅವರರವರ ಬೆಳೆಯುವ ವಾತಾವರಣ, ಅವರಿಗೆ ಸಿಗುವ ವಿದ್ಯೆ, ಸ್ನೇಹಿತರ ಮತ್ತು ಬಂಧುಗಳ ಗುಂಪು ಹೀಗೆ ಹತ್ತು ಹಲವಾರು ವಿಷಯಗಳ ಪ್ರಭಾವವೇ ಕಾರಣ. ಇದೂ ಕೂಡ ಸಹಜವೇ.
ಆದರೆ ಮನುಷ್ಯನಿಗೆ ಮಾತ್ರ ತನ್ನ ಗುಣಗಳನ್ನು ಉತ್ತಮಗೊಳಿಸಿಕೊಳ್ಳಲು, ಸು-ಸಂಸ್ಕಾರಗಳನ್ನು ಪಡೆದುಕೊಳ್ಳಲು, ಚಿಂತನೆ ಮತ್ತು ಆಲೋಚನೆಗಳಿಂದ ತನ್ನ ಮತ್ತ ಇತರರ ಜೀವನವನ್ನು ಸುಂದರವಾಗಿಸಲು ಸಾಧ್ಯವಿದೆ. ವೈವಿಧ್ಯತೆ ಸಹಜವಾದರೂ ಸಾಮ್ಯತೆಯನ್ನು ತರುವ ಸಾಧ್ಯತೆ ಇದೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕ್ಷಮತೆ ಇರುವುದು ಕೇವಲ ಮಾನವನಿಗೆ. ಅನ್ಯ ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ. ಮಾನವನಬಳಿ ತನ್ನ ಮತ್ತು ಇತರರ ಜೀವನವನ್ನು ತನ್ಮೂಲಕ ಒಟ್ಟು ಸಮುದಾಯವನ್ನು ಸುಂದರವನ್ನಾಗಿಸಲು ಇವನ ಬಳಿ ವೇದ, ಉಪನಿಷತ್ತು, ಪುರಾಣ, ಇತಿಹಾಸ, ಸಾಹಿತ್ಯ, ಕಲೆ ಮುಂತಾದ ಸಾಮಗ್ರಿಗಳು ಸಾಕಷ್ಟು ಇವೆ. ಆದರೆ ಇಂದಿನ ಮಾನವ ಅವುಗಳನ್ನೆಲ್ಲ ಬಿಟ್ಟು ಕೇವಲ ದನದಾಹದಿಂದ, ಸ್ವಾರ್ಥದಿಂದ ಸ್ವಾಭಾವಿಕವಾಗಿರುವ ಸಾಮ್ಯತೆಯನ್ನೂ ಸಹ ಹಾಳುಗೆಡವಿ, ಬೇಧಗಳನ್ನು ಅಧಿಕಗೊಳಿಸಿ ಇಡೀ ಜಗತ್ತನ್ನೇ ವಿನಾಶದ ಅಂಚಿಗೆ ಕೊಂಡು ಹೋಗುತ್ತಿದ್ದಾನೆ.
ವಾಚಕರೆ ನಮ್ಮ ನಮ್ಮ ವೃತ್ತದಲ್ಲಿ ನಾವು ಸಾಧ್ಯವಾದ ಮಟ್ಟಿಗೆ ಸಹಜತೆಯಿಂದ " ಸಂ ಗಚ್ಚತ್ವಂ,ಸಂ ವದತ್ವಂ" ಎನ್ನುವ ರೀತಿಯಲ್ಲಿ ನಮ್ಮ ನಮ್ಮಲ್ಲಿರುವ ಕೃತಕ ಬೇಧಗಳನ್ನು ತೊರೆದರೆ ಬಾಳು ಸುಂದರವಾದೀತು. ಅಂತಹ ಪ್ರಯತ್ನವನ್ನು ಎಲ್ಲರೂ ಮಾಡಬೇಕು.
ರಸಧಾರೆ – 238
ತನುವಂಗಗಳೊಳೊಂದು ರೂಪ ಗುಣ ಬೇರೆ
ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವಿಂ
ತನುವೇಕದೊಳ್ ಬಹಳ – ಮಂಕುತಿಮ್ಮ
ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ = ಮನುಜಕುಲ + ಒಂದು +ಒಬ್ಬನು+ಇನೊಬ್ಬನಂತೆ + ಇಲ್ಲ // ತನುವಂಗಗಳೊಳೊಂದು = ತನು+ ಅಂಗಗಳು+ಒಂದು // ಮನದೊಳೊಬ್ಬೊಬ್ಬನೊಂದೊಂದು = ಮನದೊಳು+ಒಬ್ಬಬ್ಬನದು+ಒಂದೊಂದು// ಪ್ರಪಂಚವಿಂತನುವೇಕದೊಳ್ = ಪ್ರಪಂಚವು+ ಇಂತು+ಅನುವು+ಏಕದೊಳ್ // ಅನುವು+ ಅನೇಕವು//
ಮನುಷ್ಯರಲ್ಲಿ ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ದೇಹದ ಅಂಗಾಂಗಗಳೆಲ್ಲ ಒಂದೇ ರೀತಿ ಇದ್ದರೂ ರೂಪ ಬೇರೆ ಮತ್ತು ಗುಣಗಳೂ ಬೇರೆ ಬೇರೆ. ಮನದೊಳಗೆ ಪ್ರತಿಯೊಬ್ಬನದೂ ಒಂದೊಂದು ವಿಚಾರ. ಅದೇ ಒಂದು ಬೇರೆ ಪ್ರಪಂಚವಿದ್ದಂತೆ. ಇಡೀ ಜಗತ್ತೇ ಅನೇಕತೆಯಲ್ಲಿ ಏಕತೆಯ ರೂಪ ಎಂದು ಅನೇಕತೆಯಲ್ಲಿ ಏಕತೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಮನುಷ್ಯಕುಲದಲ್ಲಿ ಒಬ್ಬರಿದ್ದಂತೆ ಮತ್ತೊಬ್ಬರಿರುವುದಿಲ್ಲ. ಎಲ್ಲರಿಗೂ ಅವೇ ಕೈ ಕಾಲುಗಳು, ಕಣ್ಣು ಮೂಗುಗಳಿದ್ದರೂ, ಪ್ರತಿಯೊಬ್ಬರ ರೂಪ, ಅಕಾರ, ಬಣ್ಣ ಬೇರೆ ಬೇರೆ ಅಲ್ಲವೇ? ಇದು ಬಾಹ್ಯ ವ್ಯತ್ಯಾಸಗಳು. ಆಂತರಿಕವಾಗಿ ಗುಣ ವ್ಯತ್ಯಾಸವು ಅತ್ಯಧಿಕ. ಹೊರ ರೂಪದಲ್ಲಿ ಎಷ್ಟು ಭಿನ್ನತೆ ಉಂಟೋ ಅದರ ಸಾವಿರ ಪಟ್ಟು ಆಂತರಿಕ ಗುಣ ವ್ಯತ್ಯಾಸವುಂಟು. ಈ ಜಗತ್ತಿನಲ್ಲಿರುವ ಬೇರೆ ಬೇರೆ ಪ್ರದೇಶದಲ್ಲಿರುವ ಜನರಲ್ಲಿ ಸ್ವಭಾವದ ಗುಣದ ರೂಪದ ವ್ಯತ್ಯಯಗಳು ಆಯಾ ಪ್ರದೇಶದ ವಾತಾವರಣ, ಅಲ್ಲಿನ ಸಾಮಾಜಿಕ ಬೆಳವಣಿಗೆ, ಸಂಸ್ಕೃತಿಯ ವಿಕಾಸ ಮುಂತಾದವುಗಳ ಮೇಲೆ ನಿರ್ಭರವಾಗಿರುತ್ತದೆ. ನೋಡಲು ಒಂದೇ ರೀತಿ ಕಂಡರೂ ವ್ಯಕ್ತಿ ವ್ಯಕ್ತಿಗಳಲ್ಲಿ ವಿಪರೀತವಾದ ವ್ಯತ್ಯಾಸಗಳು ಇರುತ್ತವೆ. ಇವೆಲ್ಲ ಬಾಹ್ಯ ಮತ್ತು ರೂಪ ಅಥವಾ ಶಾರೀರಿಕ ವಿಷಯಗಳಿಗೆ ಅನ್ವಯವಾಗುವಂಥಾ ವಿಚಾರಗಳು.
ಇನ್ನು ಮಾನಸಿಕ ಮತ್ತು ಭೌದ್ಧಿಕ ವಿಚಾರಗಳನ್ನು ನೋಡಿದರೆ, ರೂಪದಲ್ಲಾದರೂ ಸಾಮ್ಯ ಇರುವ ವ್ಯಕ್ತಿಗಳು ಸಿಗಬಹುದು. ಆದರೆ ಸ್ವಭಾವ ಸಾಮ್ಯತೆ ಇರುವ ವ್ಯಕ್ತಿಗಳು ಸಿಗುವುದೇ ಇಲ್ಲ. ಏಕೆಂದರೆ ಒಬ್ಬಬ್ಬ ವ್ಯಕ್ತಿಯೂ ಭಿನ್ನ ವಿಚಾರಗಳ, ಯೋಚನೆಗಳ ಮತ್ತು ಆಲೋಚನೆಗಳ ಒಂದು ಬೃಹತ್ ದ್ವೀಪ. ರೂಪ ಸೌಂದರ್ಯವಿದ್ದವರಲ್ಲಿ ಭಾವ ಸೌಂದರ್ಯವಿಲ್ಲದಿರಬಹುದು. ರೂಪವಿಲ್ಲದಿರುವವರಲ್ಲಿ ಸುಂದರ ಮನಸ್ಸು ಇರಬಹುದು. ರೂಪಕ್ಕೂ ಮನಸ್ಸಿನ ಸುಂದರತೆಗೂ ಯಾವ ಸಂಬಂಧವೂ ಇಲ್ಲ ಅಲ್ಲವೇ? ಆದರೆ ಪ್ರತಿಯೊಬ್ಬರ ವಿಚಾರವೂ ಭಿನ್ನ ಭಿನ್ನ. ಪ್ರೀತಿಯ, ಸ್ನೇಹದ, ಕರುಣೆಯ, ಕೋಪದ, ದ್ವೇಷದ, ಮೋಸದ, ಕ್ರೌರ್ಯದ, ಅನುಕಂಪ ಮುಂತಾದ ಭಾವಗಳ ಸಮಗ್ರ ರೂಪವೇ ಎಲ್ಲ ಮಾನವರ ಮನಸ್ಸೂ. ಅದೇ ಒಂದು ಲೋಕ. ಲೋಕದಲ್ಲಿ ಇರುವ ಭಿನ್ನತೆಯು ಪ್ರತಿಮಾನವರಲ್ಲೂ ಪ್ರತಿಬಿಂಬಿಸುತ್ತದೆ ಮತ್ತು ಮಾನವರ ಮನಸ್ಸಿನ ಭಾವಗಳು ಲೋಕದಲ್ಲಿ ಪ್ರತಿಬಿಂಬಿಸುತ್ತದೆ. ಇದು ಪರಸ್ಪರ.
ನಮ್ಮ ಮನಸ್ಸುಗಲ್ಲಿ ಎಷ್ಟು ಶುದ್ಧವಿಚಾರಗಳಿದ್ದರೆ ಅವನ್ನು ನಾವು ಜಗತ್ತಿಗೆ ಹಾಗೇ ಬಿಂಬಿಸಬಹುದು. ಅಂದರೆ ಅನೇಕದಿಂದ ಕೂಡಿದ ಒಟ್ಟು ಸಮುದಾಯದ ಸಂಸ್ಕಾರಗಳು ಮತ್ತು ಸಂಸ್ಕೃತಿ, ಆ ಸಮುದಾಯದಲ್ಲಿರುವ ಜನರ ವೈಯಕ್ತಿಕ ಸಂಸ್ಕಾರ ಮತ್ತು ಸಂಸ್ಕೃತಿಗಳ ಮೇಲೆ ನಿರ್ಭರವಾಗಿರುತ್ತದೆ. ನಾವು ನಮ್ಮ ಸಮಾಜ ಉತ್ತಮವಾಗಿರಬೇಕೆಂದು ಆಶಿಸಿದರೆ ಮೊದಲು ನಾವು ನಮ್ಮ ಆಂತರಿಕ ಶುದ್ಧತೆಯನ್ನು ಸಾಧಿಸಬೇಕು ಮತ್ತು ಆ ಶುದ್ಧತೆಯನ್ನು ಸಮಾಜಕ್ಕೆ ಬಿಂಬಿಸಬೇಕು. ಆಗ ಇಡೀ ಸಮುದಾಯವೇ ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ ಅಂತಹ ಪ್ರಯತ್ನವನ್ನು ನಾವೂ ಮಾಡೋಣವೆ.?
ರಸಧಾರೆ – 239
ಕ್ಷಮೆಯುಮವಳೊಳಗಿಲ್ಲ,ಕರ್ಮದಂತೆ ಫಲ
ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತೆ
ನಮಗವಳ್ ಪ್ರಸ್ಪರ್ಧಿ – ಮಂಕುತಿಮ್ಮ
ಸಮವಿಲ್ಲ = ಸಮವು+ ಇಲ್ಲ // ಕ್ಷಮೆಯುಮವಳೊಳಗಿಲ್ಲ = ಕ್ಷಮೆಯುಂ + ಅವಳೊಳಗೆ+ಇಲ್ಲ// ನೀಮಾಗಿಸಿರಿ =ನೀಮ+ಆಗಿಸಿರಿ// ನೋಳ್ಪೆನಾನೆನುತೆ = ನೋಳ್ಪೆ +ನಾನು+ ಎನುತೆ// ನಮಗವಳ್= ನಮಗೆ+ ಅವಳ್// ನೀಮ = ನಿಯಮ // ನೋಳ್ಪೆ = ನೋಡುತ್ತೇನೆ// ಪ್ರಸ್ಪರ್ಧಿ = ಪ್ರತಿಸ್ಪರ್ಧಿ
ಅಸಮತೆಯೇ ಸೃಷ್ಟಿಯ ಗುಣ. ಹಾಗಾಗಿ ಸೃಷ್ಟಿ ಸಮವಿಲ್ಲ ಅಥವಾ ಸೃಷ್ಟಿಯಲ್ಲಿ ಸಮಾನತೆ ಇಲ್ಲ. ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಂತೆ ಇಲ್ಲ. ಪ್ರತಿಯೊಬ್ಬನೂ ಅವನವನ ಕರ್ಮಾನುಸಾರವಾಗಿ ತನ್ನ ಕರ್ಮಫಲವನ್ನು ಅನುಭವಿಸುತ್ತಾನೆ. ಹಾಗೇನಾದರೂ ನಾವೇನಾದರೂಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತೇನೆಂದು ಸೃಷ್ಟಿಗೆ ಒಂದು ಸ್ಪರ್ಧೆಯನ್ನು ಕೊಟ್ಟರೆ, ಸೃಷ್ಟಿಯೇ ನಮಗೆ ಪ್ರತಿಸ್ಪರ್ಧಿಯಾಗುತ್ತದೆ ಎಂದು ಮಾನ್ಯ ಗುಂಡಪ್ಪನವರು ನಮಗೆ ಅರುಹುತ್ತಾರೆ ಈ ಕಗ್ಗದಲ್ಲಿ.
ಈ ಜಗತ್ತು ಒಂದೇ ರೀತಿಯಲ್ಲಿ ಇಲ್ಲ. ಕೋಟ್ಯಾಂತರ ಭಿನ್ನತೆಗಳ ಒಟ್ಟು ಸಮೂಹವೇ ಈ ಜಗತ್ತು. ರೂಪ ಭಿನ್ನತೆಯಿಂದ ಸೃಷ್ಟಿಯಲ್ಲಿ ಕೋಟಿ ಕೋಟಿ ಭಿನ್ನತೆಗಳನ್ನು ನಾವು ನೋಡುತ್ತೇವೆ. ಆದರೆ ಒಂದೊಂದು ರೂಪದಲ್ಲೂ ಆಂತರಿಕ, ಭಾವ, ಯೋಚನೆ, ಆಲೋಚನೆ, ಗುಣ, ಸ್ವಭಾವ ಮುಂತಾದವುಗಳ ಅಪಾರ ಭಿನ್ನತೆ ನಮಗೆ ಗೋಚರವಾಗುತ್ತದೆ. "ಏಕ" ನಾಗಿದ್ದ ತಾನು "ಬಹಳ" ವಾಗಿ ಪ್ರಕಟವಾಗಬೇಕು ಎಂದು ಪ್ರಕೃತಿಯ ರೂಪವನ್ನು ಹೊತ್ತು, ಪರಮಾತ್ಮನೇ ಪ್ರಕಟವಾದಮೇಲೆ, ಇಲ್ಲಿ ಭಿನ್ನತೆಯು ಸಹಜವಲ್ಲವೇ? ಈ ರೀತಿಯ ಭಿನ್ನತೆಯನ್ನೆಲ್ಲ ಸೇರಿಸಿ ಮಾನ್ಯ ಗುಂಡಪ್ಪನವರು " ಸಮವಿಲ್ಲ ಸೃಷ್ಟಿಯಲಿ ನರನಂತೆ ನರನಿಲ್ಲ " ಎಂದಿದ್ದಾರೆ. ಪ್ರಾಣಿಗಳು ಪಕ್ಷಿಗಳು ಗಿಡಗಳು, ಮರಗಳು ಹೂಗಳು ಹಣ್ಣುಗಳು ಕೀಟಗಳು, ಕಲ್ಲು ಗುಡ್ಡಗಳು, ಪಂಚ ಭೂತಗಳು ಹೀಗೆ ಎಲ್ಲದರಲ್ಲೂ ಆ ಪರಮಾತ್ಮನೇ, ಪ್ರಕಟವಾಗಿದ್ದಾನೆ. ಅಷ್ಟೇ ಆಲ್ಲ, ಪ್ರಕೃತಿಯ ಸಹಾಯದಿಂದ ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತಿದ್ದಾನೆ. ಏಕತೆಯೂ ಅವನೇ. ಭಿನ್ನತೆಯೂ ಅವನೇ. ತನ್ನದೇ ಆದಂತ ಒಂದು ನಿಯಮವನ್ನು ಸೃಷ್ಟಿಸಿಕೊಂಡಿದ್ದಾನೆ. ಅದನ್ನು ಪ್ರಶ್ನಿಸಲು ನಮಗೆ ಅಧಿಕಾರವೂ ಇಲ್ಲ ಯೋಗ್ಯತೆಯೂ ಇಲ್ಲ.
ನಮ್ಮನ್ನೂ ಸೇರಿಸಿ ಈ ಜಗತ್ತಿನಲ್ಲಿರುವುದೆಲ್ಲ ಪ್ರಕೃತಿಯ ನಿಯಮಗಳಿಗೆ ಅಧೀನರಾಗಿ ಬಾಳಬೇಕು. ಇದಕ್ಕೆ ಯಾವರೀತಿಯ ರಿಯಾಯತಿಯೂ ಇಲ್ಲ. ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅನುಭವಿಸಬೇಕು. ಕರ್ಮಫಲವೆಂದರೆ, ಒಂದು ಕ್ರಿಯೆಗೆ ಒಂದು ಪ್ರತಿಕ್ರಿಯೆ. ಇದು ಕರ್ಮ ಫಲ. ನಾವು ಎಂದೋ ಮಾಡಿದ ಕ್ರಿಯೆಯ ಪ್ರತಿಫಲ ಅಂದೇ ಸಿಕ್ಕಿರಬಹುದು, ಇಂದು ಸಿಗಬಹುದು ಅಥವಾ ಎಂದೋ ಸಿಗಬಹುದು. ಇದು ಬ್ರಹ್ಮ(ಸೃಷ್ಟಿಯ) ರಹಸ್ಯ. ನಮಗೆ ಸುಲಭದಲ್ಲಿ ಅರ್ಥವಾಗದು.
ಹಾಗೆ ನಾವು ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಹೋದರೆ ಪ್ರಕೃತಿಯೇ ನಮ್ಮನ್ನು ತನ್ನ ದಾರಿಗೆ ಕೊಂಡು ಹೋಗುತ್ತದೆ ಉದಾ:ಎಷ್ಟು ಆಹಾರ ತಿನ್ನಬೇಕೋ ಅಷ್ಟೇ ತಿಂದರೆ, ಅದು ಪ್ರಕೃತಿ. ಅಧಿಕವಾಗಿ ತಿಂದರೆ ಅದು ವಿಕೃತಿ. ಆಗ ಹೊಟ್ಟೆ ನೋವಾಗುತ್ತದೆ. ಹಸಿವಾಗುವುದಿಲ್ಲ, ಏನೂ ತಿನ್ನಲು ಮನಸಾಗುವುದಿಲ್ಲ. ದೇಹ ತನ್ನ ಪ್ರಕೃತಿಯನ್ನು ತಾನೇ ಸರಿಪಡಿಸಿಕೊಳ್ಳುತ್ತದೆ. ಏಕೆಂದರೆ ನಾವೆಲ್ಲಾ ಪ್ರಕೃತಿ ಸೃಷ್ಟಿಸಿದ ಯಂತ್ರ ಮಾನವರು ( Robots) ನಾವು ಯಂತ್ರಗಳಾದರೆ, ಪ್ರಕೃತಿ ನಮ್ಮ " ನಿಯಂತ್ರಕ". ನಾವು ಪ್ರಕೃತಿಯ ವಿರುದ್ಧವಾಗಿ ಹೋದರೆ ಅದು ನಮಗೆ ಪ್ರತಿಸ್ಪರ್ಧಿಯಾಗಿ ತನ್ನ ದಾರಿಗೆ ನಮ್ಮನ್ನು ಎಳೆದುಕೊಳ್ಳುತ್ತದೆ. ಸಾಧ್ಯವಾಗದಿದ್ದರೆ ನಮ್ಮನ್ನು ನಾಶಮಾಡಿ ತನ್ನ ನಿಯಮವು ಸುಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ. ಮನುಷ್ಯ, ಪ್ರಕೃತಿಯ ವಿರುದ್ಧವಾಗಿ ನಡೆದಾಗ ಆಗುವ ವಿಕೋಪಗಳು ಎಲ್ಲರಿಗೂ ತಿಳಿದ ವಿಷಯವೇ. ಹಾಗಾಗಿ ನಾವು ಪ್ರಕೃತಿಯ ನಿಯಮಗಿಳಿಗನುಸಾರವಾಗಿ ಬಾಳಿದರೆ ಜೀವನ, ಇಲ್ಲದಿದ್ದರೆ ನಾಶ.
ರಸಧಾರೆ – 240
ಕರಧರ್ಮಕುಚಿತವಾ ಹೆಚ್ಚು ಕಡಿಮೆಗಳು
ಪುರುಳ ಪಿಡಿವುದೆ ಬೆರಳ್ಗಳೆಲ್ಲಮೊಂದುದ್ದಮಿರೆ
ಸರಿಯಹುದು ಕಾರ್ಯದಲಿ ಮಂಕುತಿಮ್ಮ.
ನೋಡುವುಗಳೊಂದರಂತೊಂದಿಲ್ಲ = ನೋಡು+ಅವುಗಳು +ಒಂದರಂತೆ+ಒಂದಿಲ್ಲ // ಕರಧರ್ಮಕುಚಿತವಾ = ಕರ+ ಧರ್ಮಕೆ+ಉಚಿತವೂ+ಆ // ಬೆರಳ್ಗಳೆಲ್ಲಮೊಂದುದ್ದಮಿರೆ =ಬೆರಳ್ಗಳು +ಎಲ್ಲಂ +ಒಂದು+ಉದ್ದಂ+ಇರೆ// ಸರಿಯಹುದು = ಸರಿ +ಅಹುದು // ಕರಧರ್ಮಕೆ= ಕೈಗಳು ಮಾಡಬೇಕಾದ ಕೆಲಸಕ್ಕೆ// ಪುರುಳ = ವಸ್ತುವನ್ನು//ಪಿಡಿವುದೆ = ಹಿಡಿಯುವುದೇ//
ನಮ್ಮ ಕೈ ಬೆರಳುಗಳು ಒಂದೇ ಉದ್ದವಿಲ್ಲ. ಕೈಗಳು ಮಾಡಬೇಕಾದ ಕೆಲಸಕಾರ್ಯಗಳಿಗೆ ಅವುಗಳ ಉದ್ದದಲ್ಲಿರುವ ಹೆಚ್ಚು ಕಡಿಮೆಗಳು ಸರಿಯಾಗೇ ಇದೆ. ಹಾಗೇನಾದರೂ ಎಲ್ಲ ಬೆರಳುಗಳೂ ಒಂದೇ ಉದ್ದ ಇದ್ದಿದ್ದಿದ್ದರೆ, ನಾವು ಕೈಬೆರಳುಗಳಿಂದ ಯಾವ ವಸ್ತುವನ್ನಾದರೂ ಹಿಡಿಯಲು ಆಗುತ್ತಿತ್ತೇ? ಹಾಗಾಗಿ ಈ ಅಸಮತೆಯು ಕೈಗಳ ಕೆಲಸ ಕಾರ್ಯಗಳಿಗೆ ಸರಿಯಾಗೇ ಇದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಹೌದಲ್ಲವೇ ನಮ್ಮ ಕೈ ಬೆರೆಳುಗಳೇನಾದರೂ ಒಂದೇ ಉದ್ದದ್ದಾಗಿದ್ದಿದ್ದರೆ ಎಷ್ಟೊಂದು ಅಸಹಜವಾಗಿದ್ದು, ನಮ್ಮ ಕೈಯಲ್ಲಿ ಮಾಡಬೇಕಾದ ಕೆಲಸಗಳಿಗೆ ತೊಂದರೆ ಆಗುತ್ತಿರುತ್ತಿತ್ತಲ್ಲವೇ? ಹಾಗಾಗಿ ಜಗತ್ಸೃಷ್ಟಿಯಲ್ಲಿ ಯಾವ ಲೋಪವೂ ಇಲ್ಲ . ಎಲ್ಲವೂ ಸಮರ್ಪಕವಾಗೆ ಇದೆ. ಅಷ್ಟೇ ಆಲ್ಲ ಈ ಜಗತ್ತಿನಲ್ಲಿರುವ ಎಲ್ಲ ಅಸಮತೆಗಳು, ಸಮತೆಗಳು, ಆಕಾರ, ರೂಪ, ವರ್ಣ, ಗುಣ, ಬೇಧಗಳನ್ನು ಸೃಷ್ಟಿಸುವಾಗ ಆ ಪರಮಾತ್ಮ, ಸಕಾರಣವಾಗೇ, ಎಲ್ಲವನ್ನೂ ತನಗೆ ಹೇಗೆ ಬೇಕೋ ಹಾಗೆ ಸೃಷ್ಟಿಸಿಕೊಂಡು ಎಲ್ಲದರಲ್ಲೂ ತಾನೇ ಇದ್ದುಕೊಂಡು ಎಲ್ಲ ಚಿತ್ರ ವಿಚಿತ್ರ ರೂಪಗಳನ್ನೂ ಮತ್ತು ಎಲ್ಲ ವೈವಿಧ್ಯಮಯ ಗುಣಗಳನ್ನೂ ತಾನೇ ಅನುಭವಿಸುತ್ತಾ ಆನಂದದಿಂದ ಇದ್ದಾನೆ ಎನ್ನುವುದನ್ನು ನಾವು ಈಗಾಗಲೇ ಮನಗಂಡಿದ್ದೇವೆ.
ವಾಚಕರೆ, ನೋಡಿ ಈ ಜಗತ್ತಿನಲ್ಲಿರುವ ಎಲ್ಲ ಮನುಷ್ಯರು,ಪ್ರಾಣಿಗಳು, ಕ್ರಿಮಿ ಕೀಟಗಳು, ನಭೋಚರಗಳು , ಜಲಚರಗಳು, ಗಿಡ ಮರಗಳು, ಹೂಗಳು, ಹಣ್ಣುಗಳು ಎಲ್ಲವೂ ಒಂದೇ ರೂಪ, ಆಕಾರ, ಬಣ್ಣ, ವಾಸನೆ, ರುಚಿಯ,ಬುದ್ಧಿಗಳ, ಮನಸ್ಸಿನದಾಗಿದ್ದಿದ್ದರೆ, ಏಕತಾನತೆಯಿಂದ ನಮಗೆ ಈ ಜಗತ್ತು ಬೇಸರವಾಗುತ್ತಿತ್ತು. ಹಾಗಾಗಿಗೆ ಈ ವೈವಿಧ್ಯತೆ. ನಾವೂ ಸಹ ಈ ವೈವಿಧ್ಯತೆಯ ಒಂದು ಅಂಗವಲ್ಲವೇ. ಜಗತ್ತನ್ನು ಸೃಷ್ಟಿಸಿದ ಆ ಪರಮಾತ್ಮನಿಗೆ ಧನ್ಯವಾದವನ್ನು ಅರುಹೋಣ, ಅಭಿನಂದಿಸೋಣ, ಆನಂದಿಸೋಣ..