‘ಹೊಡ್ತಾ ಅಂದ್ರೆ ಎಂಥಾ ಹೊಡ್ತಾ ಅಂತೀಯ? ಹೊನ್ನಳ್ಳಿ ಹೊಡ್ತಾ!’ ‘ಹಾಕ್ಬೇಕು ಅವನಿಗೆ ಹೊನ್ನಳ್ಳಿ ಹೊಡ್ತಾ!’ ಮಲೆನಾಡಿಗರ ಮಾತುಕತೆಗಳಲ್ಲಿ ಈ ‘ಹೊನ್ನಳ್ಳಿಹೊಡ್ತ’ದ ಪದಪ್ರಯೋಗವನ್ನು ಮತ್ತೆ ಮತ್ತೆ ಕೇಳಬಹುದಿತ್ತು ಈ ಶತಮಾನದ ಆದಿಭಾಗದಲ್ಲಿ. ಈಗಲೂ ಹಳಬರ ಬಾಯಲ್ಲಿ ಆಗಾಗ ‘ಹೊನ್ನಳ್ಳಿ ಹೊಡೆತ’ ಬರುವುದುಂಟು. ಆದರೆ ಈಗ ಆ ಪದವನ್ನು ಉಪಯೋಗಿಸುವವರಿಗೆ ಅದರ ಮೂಲ ಏನು ಎಂದಾಗಲಿ, ಹೊಡೆತಕ್ಕೆ ಏಕೆ ‘ಹೊನ್ನಳ್ಳಿ’ ವಿಶೇಷಣವಾಗಿದೆ ಎಂದಾಗಲಿ ಗೊತ್ತಿರಲಾರದು. ಅಂತೂ ಏನೊ ಒಮದು ಬಲವಾದ ಪೆಟ್ಟು, ಹೊಡೆತ, ರಕ್ತಕಾರಿಕೊಳ್ಳುವಂತಹ ಹೊಡೆತ, ಕೈಕಾಲು ಮುರಿದುಬೀಳುವಂತಹ ಹೊಡೆತ ಎಂಬರ್ಥದಲ್ಲಿ ಅದನ್ನು ಸುಮ್ಮನೆ ಉಪಯೋಗಿಸುತ್ತಾರೆ. “ರುಸ್ತುಂ ಹೊಡೆತ” ಎನ್ನುವುದಿಲ್ಲವೆ ಹಾಗೆ!
ಆದರೆ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಆಗುಂಬೆ, ಮೇಗರವಳ್ಳಿ, ತೀರ್ಥಹಳ್ಳಿ, ಮುತ್ತೂರು, ಮುಂಡಾಕಾರು, ಮಂಡಗದ್ದೆ ಮುಂತಾದ ಕಡೆಯ ಮಲೆನಾಡಿನ ಹಳ್ಳಿಗರಿಗೆ ಎಲ್ಲರಿಗೂ “ಹೊನ್ನಳ್ಳಿ ಹೊಡ್ತ” ದ ಅರ್ಥ ಚೆನ್ನಾಗಿಯೆ ಗೊತ್ತಿತ್ತು. ಹಲವರಿಗೆ – ಅದರಲ್ಲೂ ಬಡ ಬಗ್ಗರಿಗೆ – ಅರ್ಥ ಮಾತ್ರವಲ್ಲ ಅದರ ರುಚಿಯೂ ಗೊತ್ತಾಗಿತ್ತು; ಕೆಲವರು ಅದರ ಸಾಕ್ಷಾತ್ಕಾರದ ಸ್ವಾನುಭವಕ್ಕೆ ತುತ್ತಾಗಿ ಸಮಾಧಿಸ್ಥರಾಗಿಯೂ ಇದ್ದರು.
ಹೊನ್ನಳ್ಳಿ ಹೊಡೆತದ ಮೂಲ ಪ್ರಪಿತಾಮಹರೆಂದರೆ ಕಲ್ಲೂರು ಸಾಹುಕಾರ ಮಂಜಭಟ್ಟರು. ಗಟ್ಟದ ಕೆಳಗಣಿಂದ ಪಂಚಪಾತ್ರೆ ಪಾಣಿಪಂಚೆಯೊಡನೆ ಪೂಜಾರಿಯಾಗಿ ಮೇಲೆ ಬಂದವರು ಸ್ವಸಾಮರ್ಥ್ಯದಿಂದಲೂ, ನೈಪುಣ್ಯದಿಂದಲೂ, “ಪುಣ್ಯ”ದಿಂದಲೂ, ಶ್ರೀಮಂತರೂ ಜಮೀನುದಾರರೂ ಆದರು. ಸಾಲ ಕೊಟ್ಟೋ, ಸಾಲ ಕೊಟ್ಟಂತೆ ಬರೆಯಿಸಿಕೊಂಡೋ, ಅಕ್ಷರ ಬಂದವರಿಂದ ರುಜು ಹಾಕಿಸಿಕೊಂಡೋ, ಅಕ್ಷರ ಬಾರದವರಿಂದ ಹೆಬ್ಬೆಟ್ಟೊತ್ತಿಸಿಕೊಂಡೋ ಎಲ್ಲರ ಭಯ ಗೌರವಗಳಿಗೆ ಪಾತ್ರರಾಗಿ ಸುಪ್ರಸಿದ್ಧರಾದರು. ಆದರೆ ದಂಡಶಕ್ತಿ ಇಲ್ಲದಿದ್ದರೆ ಲಕ್ಷ್ಮಿಯನ್ನುಳಿಸಿಕೊಳ್ಳುವುದು ಕಷ್ಟ ಎಂಬುದು ಅವರಿಗೆ ಬೇಗನೆ ಅನುಭವಕ್ಕೆ ಬಂತು. ಲಕ್ಷ್ಮಿಯ ಸ್ವರೂಪವೆ ಹಾಗೆ: ಸ್ವಲ್ಪ ಕಷ್ಟಸಾಧ್ಯವಾದರೂ ಗಳಿಸಿಕೊಳ್ಳಬಹುದು: ಆದರೆ ಉಳಿಸಿಕೊಳ್ಳುವುದು ಮಾತ್ರ ದುಷ್ಟಸಾಧ್ಯವೆ!
ವ್ಯಕ್ತಿಯಾಗಿ ಮಂಜಬಟ್ಟರಿಗೆ ದೈಹಿಕವಾಗಿ ಆ ಶಕ್ತಿಯಿರಲಿಲ್ಲ. ಆದ್ದರಿಂದ ಅವರು ಆಗ ಹೊನ್ನಳ್ಳಿ ಎಂದೇ ಹೆಸರು ಪಡೆದಿದ್ದ ಹೊನ್ನಾಳಿಯಿಂದ ಕೆಲವು ಉಂಡಾಡಿಗಳಾದ ಪುಂಡ ಸಾಬರನ್ನು, ಮೇಗರವಳ್ಳಿಯ ಕರಿಮೀನು ಸಾಬು ಮತ್ತು ಅವನ ತಮ್ಮ ಪುಡೀ ಸಾಬು ಇವರ ಮುಖಾಂತರವಾಗಿ ಕರೆಸಿ ಅವರನ್ನು ‘ವಸೂಲಿ ಸಾಬರು’ ಆಗಿ ನಿಯಮಿಸಿಕೊಂಡರು. ಊರು ಮನೆಯವರನ್ನು ಆ ಕೆಲಸಕ್ಕೆ ಗೊತ್ತು ಮಾಡಿಕೊಂಡರೆ ಅವರು ನಿರ್ದಾಕ್ಷಿಣ್ಯವಾಗಿ ವರ್ತಿಸುವುದು ಸಾಧ್ಯವಿಲ್ಲ. ತಲತಲಾಂತರದಿಂದ ಗುರುತು ಪರಿಚಯ ಇರುವವರನ್ನೂ, ದೂರವೊ ಹತ್ತಿರವೊ ಆದ ಸಂಬಂಧಿಗಳನ್ನೂ, ಹಿಂದೆ ಪ್ರತಿಷ್ಟಿತರಾಗಿ ತಮಗೆ ನೆರವಾಗಿದ್ದು ತಮ್ಮ ಗೌರವಕ್ಕೂ ಪಾತ್ರರಾಗಿದ್ದು ಈಗ ಅವನತಿಗಿಳಿದಿದ್ದವರನ್ನೂ ದಯೆ ದಾಕ್ಷಿಣ್ಯಗಳಿಲ್ಲದೆ, ಮುಖ ಮೋರೆ ನೋಡದೆ, ಸ್ಥಾನಮಾನಗಳೊಂದನ್ನು ಗಣನೆಗೆ ತಾರದೆ ‘ವಸೂಲಿ’ ಕೆಲಸ ಮಾಡಬೇಕಾದರೆ ಸ್ಥಳದಿಂದಲೂ ಜಾತಿಮತಗಳಿಂದಲೂ ದೂರವಾಗಿರುವ ಸಾಬರೆ ಅದಕ್ಕೆ ತಕ್ಕವರೆಂದು ನಿರ್ಣಯಿಸಿತ್ತು ಭಟ್ಟರ ರಾಜಕೀಯ ಅರ್ಥಶಾಸ್ತ್ರಪ್ರತಿಭೆ!
ಹೀಗೆ ಹೊನ್ನಾಳಿಯಿಂದ ಬಂದು ಮೇಗರವಳ್ಳಿಯಲ್ಲಿ ಶಿಬಿರ ಸ್ಥಾಪನೆ ಮಾಡಿದ ಸಾಬರ ತಂಡವು ತನಗೆ ಅನುಕೂಲವಾದ ನಿಷ್ಪಕ್ಷಪಾತ ಮಾರ್ಗವನ್ನೆ ಅನುಸರಿಸಿತ್ತು. ದುಡ್ಡು ಕೊಟ್ಟವರಿಗೆಲ್ಲ ಅವರು ವಸೂಲಿ ಸಾಬರಾಗಿ ಸೇವೆ ಸಲ್ಲಿಸತೊಡಗಿದರು. ಶ್ರೀಮಂತರಾಗಿದ್ದು ಒಕ್ಕಲುಗಳಿಗೂ ಇತರರಿಗೂ ಸಾಲ ಕೊಟ್ಟಿದ್ದವರೆಲ್ಲ – ಬೆಟ್ಟಳ್ಳಿ ಕಲ್ಲಯ್ಯಗೌಡರು, ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು, ಸಿಂಬಾವಿ ಭರಮೈ ಹೆಗ್ಗಡೆಯವರು, ಲಕ್ಕುಂದದ ಹಳೆಪೈಕದ ಸೇಸನಾಯಕರು ಮೊದಲಾದವರೆಲ್ಲ – ತಮ್ಮ ತಮ್ಮ ದಡೂತಿಗೆ ತಕ್ಕಂತೆ ದುಡ್ಡಿಗೋ ಬತ್ತಕ್ಕೋ ಅಡಕೆಗೋ ವಸೂಲಿ ಸಾಬರ ಸೇವೆಯನ್ನು ಪಡೆಯತೊಡಗಿದರು. ಆ ಸೇವೆಯ ಪರಿಣಾಮವಾಗಿಯೆ ಹುಟ್ಟಿಕೊಂಡಿತು ಆ ನಾಣ್ಣುಡಿ: “ ಹೊನ್ನಳ್ಳಿಯ ಹೊಡ್ತ. “ಹೊನ್ನಾಳಿಯಿಂದ ಬಂದಿದ್ದ ಸಾಬರ ಹೊಡೆತ = ಅಂದರೆ ಹೊನ್ನಾಳಿಯ ಹೊಡೆತ – ಅಂದರೆ ಅದರ ಗ್ರಾಮದಯ ರೂಪ “ಹೊನ್ನಾಳ್ಳಿಹೊಡ್ತಾ!”
ಆ ‘ಹೊನ್ನಳ್ಳಿ ಹೊಡ್ತ’ದಿಂದ, ಹಿಂದೆ ಪ್ರತಿಷ್ಠಿತವಾಗಿದ್ದು ಈಗ ಅವನತ ಸ್ಥಿತಿಗಿಳಿದಿದ್ದ ಮನೆತನದ ಹೂವಳ್ಳಿ ವೆಂಕಪ್ಪನಾಯಕರಂತಹರಿಗೂ ತಪ್ಪಿಸಿಕೊಳ್ಳಲಾಗಿರಲಿಲ್ಲ.
ಆ ಸಾಬರ ತಂಡದಲ್ಲಿ ಐದು ಹೆಸರುಗಳು ಎಲ್ಲ ಹಳ್ಳಿಗರಿಗೂ ತಿಳಿದಿತ್ತು: ಕರಿಮೀನುಸಾಬು, ಪುಡೀಸಾಬು, ಅಜ್ಜೀಸಾಬು, ಲುಂಗೀಸಾಬು, ಇಜಾರಸಾಬು. ಕರೀಂ ತದ್ಭವವಾಗಿ ಕರಿಮೀನು ಆಗಿದ್ದ ಹೆಸರಿನವರು ಮೇಗರವಳ್ಳಿಯಲ್ಲಿ ಒಂದು ಅಂಗಡಿ ಇಟ್ಟು ನೆಲೆಸಿದ್ದ ಮಾಪಿಳ್ಳೆ. ಅವನ ತಮ್ಮ ಮಂಗಳೂರು ನಶ್ಯ ತಯಾರಿಸಿ ಮಾರುತ್ತಿದ್ದವನಾದ್ದರಿಂದ ಅವನನ್ನು ಪುಡೀಸಾಬು ಎಂದೇ ಕರೆಯುತ್ತಿದ್ದರು. ಆಗುಂಬೆಯ ಘಾಟಿಯ ಕಾಡುದಾರಿಯಲ್ಲಿ ಆಗುತ್ತಿದ್ದ ಕೊಲೆ ದರೋಡೆಗಳಲ್ಲಿ ಅವನ ಪಾಲೂ ಇದ್ದಿತೆಂದು ಕೆಲವರು ಆಡಿಕೊಳ್ಳುತ್ತಿದ್ದರು. ಎತ್ತರವಾಗಿ ದಾಂಡಿಗನಾಗಿ ಕ್ರೂರಿಯಾಗಿ ಕಾಣುತ್ತಿದ್ದ ಇಜಾರದ ಸಾಬುವಿಗೆ ಅವನು ಹಾಕಿಕೊಳ್ಳುತ್ತಿದ್ದ ದೊಗಳೆ ಷರಾಯಿಯಿಂದಲೆ ಆ ಹೆಸರು ಬಂದಿತ್ತು. ಇನ್ನು ಕುಳ್ಳಾಗಿ ಗುಜ್ಜಾಗಿದ್ದ ಸಿಂಡಮೂಗಿನ ಸಾಬು ಯಾವಾಗಲೂ ಸಣ್ಣ ಸಣ್ಣ ಚೌಕದ ಕಣ್ಣಿನ ಕೆಂಗಪ್ಪಿನ ಪಂಚೆಯನ್ನು ಸೊಂಟಕ್ಕೆ ಸುತ್ತಿರುತ್ತಿದ್ದರಿಂದ ಅವನಿಗೆ ‘ಲುಂಗೀಸಾಬು’ ಎಂದು ಹೆಸರು ಬಂದಿತ್ತು. ತೆಳ್ಳಗೆ ಕರಗಿದ್ದು ಹೋತದ ಗಡ್ಡ ಬಿಟ್ಟಿದ್ದವನ ನಿಜವಾದ ಹೆಸರು ‘ಅಜೀಜ್’ ಎಂದು. ಆದರೆ ಅದರ ಉಚ್ಚಾರಣೆ ಹಳ್ಳಿಗರ ಬಾಯಲ್ಲಿ ‘ಅಜ್ಜೀಸಾಬು’ ಎಂದೇ ಆಗಿಹೋಗಿತ್ತು. ಕೊನೆಯ ಮೂವರು ಕನ್ನಡಿಗರು.
ಹೂವಳ್ಳಿಯಲ್ಲಿ ದೆಯ್ಯದ ಹರಕೆಯಾದ ಮರುದಿವಸವಲ್ಲ ಅದರ ಮರುದಿವಸ ವೆಂಕಟಣ್ಣ ಮನೆಯ ಅಂಗಳದಲ್ಲಿ, ತುಳಸಿಕಟ್ಟೆ ದೇವರಿಗೆ ತುಸು ಹತ್ತಿರದಲ್ಲಿಯೆ, ಕಂಬಳಿ ಹಾಕಿಕೊಂಡು ಅದರ ಮೇಲೆ ಕೂತು, ಕೊಟ್ಟೆಕಡ್ಡಿ ಹೆರೆಯುತ್ತಿದ್ದನು. ಹೊತ್ತು ಸುಮಾರು ಬೆಳಿಗ್ಗೆ ಎಂಟು ಎಂಟೂವರೆ ಗಂಟೆಯಾಗಿರಬಹುದು. ಅವನ ಗಮನವೆಲ್ಲ ಸಂಪೂರ್ಣವಾಗಿ ತಾನು ಮಾಡುತ್ತಿದ್ದ ಕೆಲಸದ ಮೇಲೆ ಕೇಂದ್ರೀಕೃತವಾಗಿದ್ದಂತೆ ತೋರುತ್ತಿತ್ತು. ಆದರೆ ನಿಜಾಂಶ, ಅವನ ಮನಸ್ಸು ಸಂಪೂರ್ಣವಾಗಿ ಅನ್ಯವಿಷಯಾಕ್ರಾಂತವಾಗಿತ್ತು. ಎಷ್ಟೋ ವರ್ಷಗಳಿಂದ ಪ್ರತಿವರ್ಷವೂ ಮಾಡುತ್ತಿದ್ದ ಆ ಕೆಲಸವನ್ನು ಅವನ ಕೈಯೂ ಕಣ್ಣೂ ಸ್ವಯಂಚಾಲಿತ ಯಂತ್ರದಂತೆ ನಿರ್ಮನಸ್ಕವಾಗಿಯೆ ಮಾಡುತ್ತಿದ್ದವು. ಸಾಮಾನ್ಯವಾಗಿ ವೆಂಕಟಣ್ಣ ಅಂತರ್ಮುಖಿಯೆ ಅಲ್ಲ; ವಿಶೇಷವಾಗಿಯೂ ಅಲ್ಲ ಎಂದು ಹೇಳಿಬಿಡಬಹುದಾದಷ್ಟು ಬಹಿರ್ಮುಖ ಸ್ಥೂಲವ್ಯಾಪಾರಗಳಲ್ಲಿಯೆ ಅವನ ಮನಸ್ಸು ಓಡಾಡುತ್ತಿದ್ದುದು ರೂಢಿ. ಅಷ್ಟೆ ಅಲ್ಲ; ಅವನ ದೇಹದಂತೆಯೆ ಅವನ ಮನಸ್ಸೂ, ತತ್ವಶಾಸ್ತ್ರ ರೀತಿಯಲ್ಲಿ ನಿಸರ್ಗ ಸಹಜವಾಗಿ ಸೂಕ್ಷ್ಮ ಎಂಬ ವಿಶೇಷಣಕ್ಕೆ ಪಾತ್ರವಾಗಿದ್ದಿತೇ ಹೊರತು, ಅದಕ್ಕೆ ವ್ಯವಹಾರಸಾಧ್ಯವಾದ ಕ್ಷೇತ್ರದೃಷ್ಟಿಯಿಂದ ಅದರ ಲಕ್ಷಣನಿರ್ಣಯ ಮಾಡುವುದಾದರೆ, ಅದೂ ಸ್ಥೂಲವೆ ಆಗಿತ್ತು. ಆದರೆ ಹಿಂದಿನ ರಾತ್ರಿ, ಅಂದರೆ, ದೆಯ್ಯದ ಹರಕೆಯಾದ ಮಧುರರಾತ್ರಿಯ ಮರುದಿನದ ರಾತ್ರಿ, ನಡೆದ ಒಂದು ಘಟನೆಯಿಂದಾಗಿ ಅವನ ಮನಸ್ಸು ಒಂದು ಅಸಹ್ಯ ವೇದನೆಯ ಉಸುಬಿನಲ್ಲಿ ಸಿಕ್ಕಿಬಿಟ್ಟಿತ್ತು. ಆ ವೇದನೆ ಎಷ್ಟು ಅಸಹ್ಯವಾಗಿತ್ತೆಂದರೆ, ಇಂದ್ರಿಯಸುಖದ ಎಂತಹ ಅಸಹ್ಯದಲ್ಲಿಯೂ ಅಲಕ್ಷವಾಗಿ ವಿಹರಿಸಿ ಆಸ್ವಾದಿಸಿ ಆನಂದಪಡುವುದನ್ನೂ ಬಹುಕಾಲದಿಂದ ಅಭ್ಯಾಸ ಮಾಡಿಕೊಂಡಿದ್ದ ಅವನ ರೂಕ್ಷಸ್ಥೂಲ ಮನಸ್ಸನ್ನೂ ಸೂಕ್ಷ್ಮವಾಗಿ ಮಾಡಿ, ಅವನು ಚಿಂತಕ್ರಾಂತನಾಗುವಂತೆ ಮಾಡಿಬಿಟ್ಟಿತ್ತು ಅದು….!
ದೆಯ್ಯದ ಹರಕೆ ನಡೆದ ರಾತ್ರಿ ನಾಗತ್ತೆಯ ವಾಮೋಪಾಯದಿಂದ ವೆಂಕಟಣ್ಣ ನಾಗಕ್ಕನ ಮಗ್ಗುಲಲ್ಲಿ ಮಲಗಿ, ಸುಖಾನುಭವ ಮಾಡಿ, ನಾಗತ್ತೆಯ ಬಲಾತ್ಕಾರದಿಂದಲೆಂಬಂತೆ ನಾಗಕ್ಕನ ಇನ್ನೂ ಮೈತಿಳಿಯುವ ಮುನ್ನವೇ ಎದ್ದು ಕೋಣೆಯಿಂದ ಹೊರಗೆ ಬಂದಿದ್ದನು. ಮರುರಾತ್ರಿಯೂ ಅದೇ ನಾಟಕ ಪುನರಭಿನಯವಾಗುವಂತೆ ಏರ್ಪಾಡಾಗಿತ್ತು. ಆದರೆ ಮುಖ್ಯ ಪಾತ್ರವೇ ಕಥಾ ಸಂವಿಧಾನಕ್ಕೆ ತಕ್ಕಂತೆ ಸಹಕರಿಸಿರಲಿಲ್ಲ. ನಾಗಕ್ಕ ಆ ದಿನ ಕಳ್ಳನ್ನಾಗಲಿ ಹೆಂಡವನ್ನಾಗಲಿ ಕುಡಿಯುತ್ತಿದ್ದಂತೆ ನಟಿಸಿದ್ದಳೆ ವಿನಾ ಕುಡಿದಿರಲಿಲ್ಲ. ಅವಳೂ ಚಿನ್ನಮ್ಮನೂ ಸೀಗೆಕಾಯಿ ಹರಕಲು ಹೋದಾಗ ಅವರಿಬ್ಬರಲ್ಲಿ ನಡೆದಿದ್ದ ಸಂವಾದದ ಪರಿಣಾಮವಾಗಿ ಅವಳು ಎಚ್ಚರ ವಹಿಸಿದ್ದಳು. ಚಿನ್ನಮ್ಮ ನಾಗಕ್ಕನಿಗಾದ ಅನುಭವ ‘ಕನಸು’ ಎಂದು ತೀರ್ಪು ಕೊಟ್ಟಿದ್ದಳು. ಆದರೆ ನಾಗಕ್ಕನಿಗೆ ಅದು ಯಾವುದೋ ರೀತಿಯಲ್ಲಿ ಹೇಗೋ ನಿಜವಾಗಿ ನಡೆದದ್ದು ಎಂಬುದರಲ್ಲಿ ಆಲೋಚಿಸಿದಷ್ಟೂ ಹೆಚ್ಚು ಹೆಚ್ಚಾಗಿ ವಿಶ್ವಾಸ ಹುಟ್ಟತೊಡಗಿ ಅದನ್ನು ಮರುರಾತ್ರೆ ಪರೀಕ್ಷಿಸಲು ಗಟ್ಟಿ ಮನಸ್ಸು ಮಾಡಿದ್ದಳು.
ಕಳೆದ ರಾತ್ರಿಯಂತೆ ನಾಗಕ್ಕ ನಾಗತ್ತೆಯೊಡನೆ ಹೋಗಿ ಅದೇ ಕೋಣೆಯಲ್ಲಿ ಅದೇ ಹಾಸಗೆಯ ಮೇಲೆ ಅದೇ ಕ್ರಮದಲ್ಲಿ ಮಲಗಿದ್ದಳು. ಈ ಸಾರಿ ನಾಗಕ್ಕನೆ ಬಾಗಿಲನ್ನು ಭದ್ರಪಡಿಸಿದ್ದಳು, ತಾಳಹಾಕಿ. ನಾಗತ್ತೆ ಹಣತೆ ಆರಿಸಿ ಮಲಗಿದಳು. ಬತ್ತಿ ಕುಡಿಯ ಕನರುವಾಸನೆಯೂ ನಾಗಕ್ಕನ ಮೂಗಿಗೆ ಬಂದು ತುಸುಹೊತ್ತಿನಲ್ಲಿಯೆ ಇಲ್ಲವಾಗಿ ಹೋಯಿತು. ಕಣ್ಣುಬಿಟ್ಟುಕೊಂಡೆ ಮಲಗಿದ್ದ ಅವಳಿಗೆ ಆ ಕಗ್ಗತ್ತಲೆ ಸ್ಥೂಲತೆಯನ್ನು ಬಿಟ್ಟುಕೊಟ್ಟಿದ್ದ ಕಗ್ಗಲ್ಲಾಗಿತ್ತು.
ಸ್ವಲ್ಪ ಹೊತ್ತಾದ ಮೇಲೆ ನಾಗತ್ತೆ ‘ನಾಗೂ! ನಾಗೂ!’ ಎಂದು ಮೆಲ್ಲಗೆ ಕರೆದಳು.
ಮೆಲ್ಲಗೆ ಮೈಮುಟ್ಟಿ ಮತ್ತೆ ಕರೆದಳು.
ನಾಗಕ್ಕನಿಂದ ಉತ್ತರವಾಗಲಿ ಏನೊಂದು ಪ್ರತಿಕ್ರಿಯೆಯಾಗಲಿ ತೀರಿಬರಲಿಲ್ಲ.
ಹೋದ ಇರುಳು ತನ್ನ ಉದ್ದೇಶ ಸಾಧನೆಯಲ್ಲಿ ಸದ್ದುಗದ್ದಲವಿಲ್ಲದೆ ಜಯಶೀಲಳಾಗಿದ್ದ ನಾಗತ್ತೆ ಈ ಇರುಳೂ ತನ್ನ ವಿಶೇಷ ಪ್ರಯತ್ನವೇನೂ ಬೇಕಾಗದೆಯೆ ಎಲ್ಲ ಸುಸೂತ್ರವಾಗಿ ನಡೆದು ಹೋಗುತ್ತದೆ ಎಂಬ ಧೈರ್ಯದಲ್ಲಿ ತಾನು ಕುಡಿದು ತಿನ್ನುವ ವಿಚಾರದಲ್ಲಿ ನಿನ್ನೆಗಿಂತಲೂ ಸ್ವಲ್ಪ ಧಾರಾಳವಾಗಿಯೆ ವರ್ತಿಸಿದ್ದಳು. ಅಲ್ಲದೆ ವೆಂಕಟಣ್ಣನೊಡನೆ ಲೈಂಗಿಕ ಸಂಬಂಧಾನುಭವ ಪಡೆದಿದ್ದ ನಾಗಕ್ಕ ಯಾವ ವಿಶೇಷವರ್ತನೆಯನ್ನೂ ಪ್ರದರ್ಶಿಸದೆ ಮೌನವಾಗಿ ಗೆಲುವಾಗಿಯೆ ಇದ್ದುದನ್ನು ಕಂಡು ಅವಳು ತನ್ನ ಸೊಸೆಗೂ ಅದು ಇಷ್ಟಸುಖದ ವಿಷಯವೆ ಆಗಿರಬೇಕು ಎಂದು ನಿರ್ಣಯಿಸಿದ್ದಳು. ಇಲ್ಲದಿದ್ದರೆ, ಹಿಂದೆ, ಕೆಲವು ಸಲ, ಇದಕ್ಕಿಂತಲೂ ಎಷ್ಟೇ ಪಾಲು ಕಡಿಮೆಯ ಲೈಂಗಿಕ ಲಘುಪ್ರಸಂಗಗಳಲ್ಲಿ ಕೂಡ, ಅವಳು ಕಟುವಾಗಿ ಗುಲ್ಲೆಬ್ಬಿಸಿದ್ದಂತೆ ಹುಯ್ಯಲಿಸದೆ ಇರುತ್ತಿದ್ದಳೇ? ಮೌನವೇ ಸಮ್ಮತಿಯ ಲಕ್ಷಣವೆಂದು ಅವಳು ಭಾವಿಸಿ, ತನ್ನ ಸೊಸೆ ವೆಂಕಟಣ್ಣನೊಡನೆ ಕೂಡಿಕೆಯಾಗುವ ಒಪ್ಪಂದಕ್ಕೆ ಪರಾಕಾಷ್ಠತೆಯ ಸ್ವರೂಪದ ಮುದ್ರೆಯನ್ನೊತ್ತಿಸಿಕೊಂಡು ಬಿಟ್ಟಿದ್ದಾಳೆಂದು ನಿಶ್ಚಿಂತೆಯಾಗಿದ್ದಳು.
ವೆಂಕಟಣ್ಣನೂ ಹೊರಗೆ ಕೆಲಸದಮೇಲೆ ಹೋಗಿದ್ದು, ಕತ್ತಲೆಯಾಗಿ ಬಹಳ ಹೊತ್ತಾದಮೇಲೆ ಕಳ್ಳುಗೊತ್ತಿನಿಂದ ಹಿಂತಿರುಗಿದ್ದನಾದ್ದರಿಂದ, ಅವನೂ ಇಂದು ನಿನ್ನೆಯ ಹಾಗೆ ಅವಸರವಾಗಿ ಬೇಗ ಬರುವುದಿಲ್ಲವೆಂದೂ ನಂಬಿದ್ದಳು. ಆದ್ದರಿಂದಲೆ ಸೊಸೆ ನಿದ್ರಿಸುತ್ತಿದ್ದಾಳೆಂದು ತಿಳಿದ ಮೇಲೆ ಅವಳೂ ಅನುದ್ವಿಗ್ನಚಿತ್ತೆಯಾಗಿ ಚೆನ್ನಾಗಿಯೆ ನಿದ್ದೆ ಮಾಡಿದಳು.
ಆದರೆ ನಾಗಕ್ಕ ಕಣ್ಣು ಮುಚ್ಚಿಯೂ ಇರಲಿಲ್ಲ. ಕಗ್ಗತ್ತಲೆಯನ್ನೆ ನೋಡುತ್ತಾ ಮಲಗಿದ್ದಳು. ಉದ್ವೇಗದಿಂದ ಅವಳ ಮೈ ಬೆವರುತ್ತಿತ್ತು. ಆದಷ್ಟು ಪ್ರಯತ್ನದಿಂದ ಉಸಿರಾಟ ಜೋರಾಗಿ ಕೇಳಿಸದಂತೆ ತಡೆದು ತಡೆದು ಮೆಲ್ಲಗೆ ಉಸಿರಾಡುತ್ತಿದ್ದಳು. ಅವಳಿಗೆ ಏನು ನಡೆಯಬಹುದೊ ಏನು ನಡೆಯುತ್ತದೆಯೊ ಎಂಬ ವಿಚಾರದಲ್ಲಿ ಅನಿಶ್ಚಯತೆ. ಹಿಂದಿನ ರಾತ್ರಿ ಬಂದಂತೆ ಕನಸಿನಲ್ಲಿಯೆ ಗಂಡ ಬರುತ್ತಾನೆಯೋ? ಅಥವಾ ನಿಜವಾಗಿಯೆ ಬಂದುಬಿಡುತ್ತಾನೆಯೋ? ಅಥವಾ ನಿಜವಾಗಿಯೆ ಬಂದು ಬಿಟ್ಟರೆ? ಹಿಂದಿನ ರಾತ್ರಿಯಾದರೂ ತನಗೆ ನಿದ್ದೆ ಬಂದಿತ್ತು. ಆದ್ದರಿಂದ ಗಾಬರಿಯಾಗಿರಲಿಲ್ಲ. ಈಗ ಎಚ್ಚತ್ತಿದ್ದೇನೆ! ಸತ್ತುಹೋದವನು ಹೇಗೆ ಬರುತ್ತಾನೋ? ದೆವ್ವವಾಗಿ ಬಂದರೆ ಏನು ಗತಿ? ನಾಗಕ್ಕನಿಗೆ ದೆವ್ವದ ರೂಪ ಆಕಾರಗಳ ವಿಚಾರವಾಗಿ ಏನೂ ಗೊತ್ತಿಲ್ಲದಿದ್ದರೂ ಅವಳು ತುಂಬಾ ಹೆದರಿಕೊಂಡಳು. ನೆನೆದಂತೆಲ್ಲ ಉದ್ವೇಗ, ಭಯ, ನಿರೀಕ್ಷೆ, ಸಂತೋಷವೆನ್ನಲು ಬಾರದ ಏನೋ ಒಂದು ತರಹದ ಹಿಗ್ಗು ಹೆಚ್ಚಾಗಿ ಮೈ ಮತ್ತೂ ಬೆವರಿತು; ಉಸಿರಾಟ ಹೆಚ್ಚಾಯಿತು. ದೇಹಬಾಧೆ ತೀರಿಸಿಕೊಳ್ಳಲು ಹೊರಗೆ ಹೋಗಬೇಕು ಎನ್ನಿಸಿತು. ಆದರೆ ಏಳುವುದು ಹೇಗೆ? ಏಳುವುದಕ್ಕೂ ಏನೋ ಅಂಜಿಕೆ. ಮೆಲ್ಲಗೆ ಅತ್ತೇ ಅತ್ತೇ ಎಂದು ಕರೆದಳು. ಆದರೆ ಅವಳೂ ಗಾಢ ನಿದ್ರೆಯಲ್ಲಿದ್ದಂತೆ ತೋರಿತು.
ಉದ್ವೇಗದ ಸಮಯದಲ್ಲಿ ಆಗುವ ಶಾರೀರಿಕ ವ್ಯಾಪಾರಗಳ ಫಲವಾಗಿ ಅವಳಿಗೆ ಹೊರಗೆ ಹೋಗಬೇಕಾಗಿಯೆ ಬಂತು. ಅವಶ್ಯಕತೆ ಮಿತಿಮೀರಲು, ಕತ್ತಲೆಯ ಭಯವನ್ನು ಉತ್ತರಿಸಿ, ಬರಿಯ ಒಡಲಿನ ಕೆಚ್ಚೆ ಅವಳನ್ನು ಏಳುವಂತೆ ಮಾಡಿತು. ಎದ್ದು ಕುಳಿತಳು; ನಿಂತಳು; ಕೈಚಾಚಿ ತಡವುತ್ತಾ ಬಾಗಿಲೆಡೆಗೆ ಸಾರಿ, ತಾಳ ತೆಗೆದು ತೆರೆದಳು. ಹೊರಗೆ ಜಗಲಿಯಲ್ಲಿ ಮತ್ತು ಅದಕ್ಕೂ ಕೆಳಗೆ ಅಂಗಳದಲ್ಲಿ ಕತ್ತಲೆ ಬರಬರುತ್ತಾ ಕಡಿಮೆಯಾಗಿ ಕಣ್ಣಿಗೆ ವಸ್ತುಗಳ ನೇಸಲು ಗೊತ್ತಾಗುವಂತಿತ್ತು.
ಮೆಲ್ಲಗೆ ಹೊಸಲು ದಾಟಿ, ಸದ್ದಾಗದಂತೆ ಬಾಗಿಲು ಮುಚ್ಚಿಕೊಂಡು ಜಗಲಿಯಿಂದ ಇಳಿದು ಅಂಗಳಕ್ಕೆ ಹೋಗಿ ಮರೆಯಾದಳು.
ಸ್ವಲ್ಪ ಹೊತ್ತಿನಮೇಲೆ ಹಿಂತಿರುಗಿದಳು. ಹೊರಗಡೆಯ ಗಾಳಿಯ ತಂಪಿಗೆ ಅವಳ ಮೈ ಶಾಂತವಾಗಿತ್ತು. ಸ್ವೇದ ಉದ್ವೇಗ ಎಲ್ಲ ಅಡಗಿತ್ತು. ಅದ್ಯಕ್ಕೆ ಲೋಕದಲ್ಲಿ ಯಾವ ವಿಶೇಷತೆಯೂ ನಡೆಯುವಂತೆ ತೋರುತ್ತಿರಲಿಲ್ಲ. ಅತೀಂದ್ರಿಯ ವ್ಯಾಪಾರದ ಭಯಮಿಶ್ರಿತ ಪ್ರತೀಕ್ಷೆಯನ್ನು ಸಾಧಾರಣತೆಯ ಅನುದ್ವೇಗಪರಿಸ್ಥಿತಿ ಶಮನಗೊಳಿಸಿತ್ತು. ಅಂಗಳ ದಾಟಿ ಜಗಲಿಗೆ ಹತ್ತಿ, ತಾನು ಮುಚ್ಚಿ ಬಂದಿದ್ದ ಕದವನ್ನು ಮೆಲ್ಲಗೆ ತಳ್ಳಿದಳು, ತೆರೆದೆ ತೆರೆಯುತ್ತದೆ ಎಂಬ ಸುನಿಶ್ಚಿತ ಶ್ರದ್ಧೆಯಿಂದ. ಆದರೆ ಅದು ತೆರೆದುಕೊಳ್ಳಲಿಲ್ಲ! ತುಸು ಬಲವಾಗಿ ತಳ್ಳಿದಳು. ಇಲ್ಲ! ನೂಕಿದಳು. ಆದರೂ ಮುಚ್ಚಿಯೆ ಇತ್ತು!
ಇದ್ದಕ್ಕಿದ್ದಂತೆ ಅವಳ ಚಿತ್ತ ಸಾಧಾರಣತೆಯ ಅನುದ್ವೇಗದ ಪರಿಸ್ಥಿತಿಯಿಂದ ಅದ್ಭುತಾನುಭವದ ಸ್ಥಿತಿಗೆ ನೆಗೆದುಬಿಟ್ಟಿತು! ತನ್ನ ಗಂಡನ ಪ್ರೇತ ತಾನು ಹೊರಗೆ ಹೋಗಿದ್ದ ಸಮಯದಲ್ಲಿ ಒಳಹೊಕ್ಕು ತಾಳ ಹಾಕಿಕೊಂಡಿತೇ? ಹಾಗಾದರೆ ನಿನ್ನೆ ತನಗಾದಂತೆ…. ಅವಳ ಆಲೋಚನೆ ಕೀಲುತಪ್ಪತೊಡಗಿತು…. ಅತ್ತೆ ಮಲಗಿದ್ದಾಳೆ? ಅಯ್ಯೊ, ಏನು ಅಚಾತುರ್ಯ! ಏನು ಅವಿವೇಕವಾಯಿತು ತನ್ನಿಂದ! ಎಂತಾ ಅಪರಾಧ? ಅತ್ತೆಗಾದರೂ ಎಚ್ಚರವಾಗುವುದಿಲ್ಲವೆ? ನಾಗಕ್ಕನಿಗೆ ಕಾಲು ನಡುತೊಡಗಿತು. ಮುಂದೇನು ಮಾಡಬೇಕೋ ಹೊಳೆಯಲಿಲ್ಲ. ಕುಸಿದು ಕುಳಿತಳು. ಕೂಗಿಕೊಳ್ಳೋಣವೆನ್ನಿಸಿತ್ತು. ಅದೂ ಸಾಧ್ಯವಾಗಲಿಲ್ಲ. ಇದೇನು ನಿಜವೋ? ಕನಸೋ? ಕಡೆಗೆ ಇದೂ ನಿನ್ನೆಯಂತಹ ಒಂದು ಸ್ವಪ್ನವೋ ಏನೊ? ನಿನ್ನೆ ಸ್ವಪ್ನದಲ್ಲಿ ನಿಜದಂತೆ ಕಂಡು, ಇಂದು ನಿಜದಲ್ಲಿಯೆ ಸ್ವಪ್ನದಂತೆ ಕಾಣುತ್ತಿದೆಯೊ? ನಾಗಕ್ಕ ಕುಳಿತಲ್ಲಿಯೆ ನಿಜವನ್ನು ಮುಟ್ಟಿ ಗೊತ್ತು ಹಚ್ಚಲು ಕೈನೀಡಿ ತಡವಿ ನೆಲ ಹೊಸ್ತಿಲು ಗೋಡೆಗಳನ್ನು ಮುಟ್ಟಿದಳು. ಛೆ! ಇದು ನಿಜವೆ! ಮನೆಯೆಲ್ಲ ಕಾಣಿಸುತ್ತಿದೆ! ಜಗಲಿ, ಅಂಗಳ, ಜಗಲಿಯ ಮುಂಡಿಗೆಗೆ ಕೀಲಿಸಿದ್ದ ದೊಡ್ಡಿನ ಕೋಡೂ ಸಹ ಕಾಣುತ್ತಿದೆ! – ಚಿನ್ನಮ್ಮ ಮಲಗಿದ್ದಲ್ಲಿಗೆ ಹೋಗಲೆ? ಇವತ್ತು. ನಿನ್ನೆ ಅವರಿಬ್ಬರೂ ಒಪ್ಪಂದ ಮಾಡಿಕೊಂಡಿದ್ದಂತೆ. ನಾಗಕ್ಕ ಚಿನ್ನಮ್ಮನ ಕೋಣೆಯಲ್ಲಿ ಅವಳ ಜೊತೆ ಮಲಗಿರುತ್ತಿದ್ದಳು. ಆದರೆ ಚಿನ್ನಮ್ಮಗೆ ಇದ್ದಕ್ಕಿದ್ದ ಹಾಗೆ ಮೈ ಬಿಸಿಯಾಗಿ ಜ್ವರ ಬಂದಿದ್ದರಿಂದ ಅವಳು ಅಜ್ಜಿಯೊಡನೆಯೆ ಮಲಗಬೇಕಾಗಿ ಬಂತು. ಈ ನಡುರಾತ್ರಿ ಅಲ್ಲಿಗೆ ಹೋಗುವುದಾದರೂ ಹೇಗೆ? ಹೋದರೂ ಅಜ್ಜಿಯನ್ನೆಬ್ಬಿಸಿಲೆ ಬೇಕಾಗುತ್ತದೆ. ಅವಳು ಕೇಳಿದರೆ ಏನೆಂದು ಹೇಳುವುದು? ನಾಗಕ್ಕ ತನಗರಿವಿಲ್ಲದೆಯೆ ಅಳತೊಡಗಿದ್ದಳು. ತಾನೆಂತಹ ದೌರ್ಭಾಗ್ಯೆ? ನನ್ನಷ್ಟಕ್ಕೆ ನಾನು ಸುಮ್ಮನಿರುವುದಕ್ಕೂ ಬಿಡುವುದಿಲ್ಲವಲ್ಲಾ ವಿಧಿ? ಅದೆಂತಹ ವಿಷಯ ಸಂಕಟದಲ್ಲಿ ಸಿಕ್ಕಿಸಿಬಿಟ್ಟಿದೆ, ನನ್ನನ್ನು? ಕೆರೆ ಬಾವಿ ಅಲ್ಲದೆ ಬೇರೆ ಗತಿಯೆ ಇಲ್ಲವೆ ನನಗೆ?…. ಎಷ್ಟು ಹೊತ್ತು ಕೂತಿದ್ದಳೊ ಆ ಬಾಗಿಲೆಡೆ? ನಾಗಕ್ಕಗೆ ಗೊತ್ತಾಗಲಿಲ್ಲ.
ತಟಕ್ಕನೆ ಬಾಗಿಲು ತಾಳ ತೆಗೆದ ಸದ್ದಾಯಿತು. ಕದವೋ ತೆರೆಯಿತು. ಅತ್ತೆಯೆ ಬಂದಳೆಂದು ನಾಗಕ್ಕ ನೋಡುತ್ತಾಳೆ: ಆ ಮಸಗುಗತ್ತಲೆಯಲ್ಲಿಯೂ ಸ್ಪಷ್ಟವಾಗಿ ಗೊತ್ತಾಯಿತು, ಉಟ್ಟಿದ್ದು ಸೀರೆಯಲ್ಲ ಪಂಚೆ ಎಂದು!
ಸೊಂಟಕ್ಕೆ ಸುತ್ತಿದ್ದ ಪಂಚೆಯಲ್ಲದೆ ಮತ್ತೇನೂ ಮೈಮೇಲಿಲ್ಲದ ಆ ವ್ಯಕ್ತಿ ಮುದುರಿ ಕುಳಿತಿದ್ದ ನಾಗಕ್ಕನ ಬಳಿ ನಿಂತು “ಯಾರದು?” ಎಂದಿತು.
ಚಿನ್ನಮ್ಮನ ಅಪ್ಪಯ್ಯನ ಧ್ವನಿ!
ಪ್ರಜ್ಞೆ ತಪ್ಪಿ ಕುಳಿತಲ್ಲಿಯೆ ನೆಲದ ಮೇಲೆ ಬಿದ್ದುಬಿಟ್ಟಳು ನಾಗಕ್ಕ!….
ರಾತ್ರಿ ನಡೆದದ್ದನ್ನೆಲ್ಲಾ ನೆನೆಯುತ್ತಾ ಯಾಂತ್ರಿಕವಾಗಿ ಕೊಟ್ಟೆಕಡ್ಡಿ ಹೆರೆಯುತ್ತಾ ಕುಳಿತಿದ್ದ ವೆಂಕಟಣ್ಣನಿಗೆ ಲುಂಗೀ ಸಾಬು ಬಂದದ್ದು ಗೊತ್ತಾಗಲಿಲ್ಲ. ನಾಯಿಗಳು ಗಟ್ಟಿಯಾಗಿ ಬೊಬ್ಬೆಹಾಕಿದ ಮೇಲೆಯೆ ತಲೆಯೆತ್ತಿದ್ದನು.
“ಸಲಾಂ ಬರ್ತದೆ ನಾಯಕರಿಗೆ!” ಕುಳ್ಳಾಗಿದ್ದರೂ ಸುಪುಷ್ಟನಾಗಿದ್ದುದರಿಂದ ಗುಜ್ಜಾಗಿ ತೋರುತ್ತಿದ್ದ ಆ ಚಪ್ಪಟೆ ಮೂಗಿನ ಸಾಬಿ, ನಸು ಸೊಂಟ ಬಗ್ಗಿಸಿದಂತೆ ಮುಂಬಾಗಿ, ಒಕ್ಕಯ್ ನಮಸ್ಕಾರ ಮಾಡಿದನು. ಬನೀನು ಹಾಕಿ, ಕೆಂಗಪ್ಪಿನ ಬಣ್ಣದ ಕಣ್ಣುಕಣ್ಣಿನ ಲುಂಗಿ ಉಟ್ಟಿದ್ದ ಅವನು ನುಣ್ಣಗೆ ಬೋಳಿಸಿದ್ದ ತಲೆಯ ಬೋಡಿಗೆ ಒಂದು ಕೆಂಗಪ್ಪಿನ ಎಲೆವಸ್ತ್ರ ಸುತ್ತಿದ್ದನು. ಆದರೂ ಆ ವಸ್ತ್ರ ನೆತ್ತಿಯನ್ನು ಸುತ್ತು ಹಾಕಿತ್ತೆ ಹೊರತು ಮುಚ್ಚಿರಲಿಲ್ಲವಾದ್ದರಿಂದ ಎಣ್ಣೆ ಹಾಕಿದಂತೆ ಮಿರುಗುತ್ತಿದ್ದ ಮಂಡೆಯ ಬೋಡು ಕಾಣಿಸುತ್ತಲೆ ಇತ್ತು
ವೆಂಕಟಣ್ಣ ಮುಖ ನಿರ್ಭಾವವಾಗಿಯೆ ಇದ್ದಿತಾದರೂ, ಸಂಪ್ರದಾಯಬದ್ದವಾಗಿ ಎಂಬಂತೆ, ಪೊದೆಮೀಸೆಯ ಕೆಳಗೆ, ತುಟಿ ನಗೆಯ ಕವಾತು ಮಾಡಿತಷ್ಟೆ! ಅವನ ಮೈಯ ಇತರ ಭಾಗಗಳು ಯಾವುವೂ ಅಲುಗಾಡಲಿಲ್ಲ. ಕೈಯೂ ಕಟ್ಟಿ ಹೆರೆಯುವ ಕೆಲಸ ನಿಲ್ಲಿಸಲಿಲ್ಲ. ಸಾಬಿಯ ಸಲಾಂಇಗೆ ಯಾವ ಪ್ರತಿನಮಸ್ಕಾರದ ಮರ್ಯಾದೆಯ ಸೂಚನೆಯನ್ನೂ ತೋರಲಿಲ್ಲ. ಬಂದವನಿಗೆ ‘ಕೂತುಕೊ’ ಎಂದು ಹೇಳಲಿಲ್ಲ.
ಲುಂಗೀಸಾಬು ಸ್ವಲ್ಪ ಹೊತ್ತು ನಿಂತಿದ್ದು ತಾನಾಗಿಯೆ ಮೆಲ್ಲಗೆ ನೆಲಕ್ಕೆ ಅಂಡೂರಿದನು, ತಾನು ಕೂರಲಿದ್ದ ಜಾಗದಲ್ಲಿ ಬಿದ್ದಿದ್ದ ಬಿದಿರಿನ ಕೀಸುಗಳನ್ನು ಕರಲಕ್ಕೆ ಸರಿಸಿಕೊಂಡು.
ವೆಂಕಟಣ್ಣ ಮತ್ತೆ ಮೊದಲಿನಂತೆ ಕಡ್ಡಿ ಕೆತ್ತತೊಡಗಿದನು. ಅವನ ಮನಸ್ಸಿನಲ್ಲಿದ್ದ ಚಿಂತೆಯೂ ಮುಂದುವರೆಯಿತು ಮತ್ತೆ:
ನಡೆದಿದ್ದ ನಿಜಸ್ಥಿತಿ, ಅದರಲ್ಲಿ ಪಾತ್ರಧಾರಿಗಳಾಗಿದ್ದ ಆ ಮೂವರಿಗಿಲ್ಲದೆ, ಬೇರೆ ಯಾರಿಗೂ ಗೊತ್ತಾಗದಂತೆ ಕಥೆ ಹುಟ್ಟಿಸಿದ್ದರು: ರಾತ್ರಿ ನಾಗಕ್ಕ ಬಯಲಕಡೆಗೆ ಹೋಗಬೇಕಾಗಿ ಬಂದು, ತಾನೊಬ್ಬಳೆ ಹೊಂತಿರುಗುತ್ತಿದ್ದಾಗ ಏನೋ ಬೆಳ್ಳಿಗೆ ನಿಂತಹಾಗೆ ಕಾಣಿಸಿದ್ದರಿಂದ ಹೆದರಿ ಪ್ರಜ್ಞೆತಪ್ಪಿ ಬಿದ್ದು ಬಿಟ್ಟಳು ಎಂದೂ; ಸದ್ದು ಕೇಳಿ ಎದ್ದು ಬಂದಿದ್ದ ವೆಂಕಟಣ್ಣ ನಾಗತ್ತೆಯರು ಮುಖಕ್ಕೆ ತಣ್ಣೀರು ಎರಚಿ, ಗಾಳಿ ಬೀಸಿ, ದೆಯ್ಯಕ್ಕೆ ಒಂದು ಕೋಳಿ ಸುಳಿದುಬಿಟ್ಟು, ಮತ್ತೆ ಹಾಸಿಗೆಗೊಯ್ದು ಉಪಚರಿಸಿದರೆಂದೂ! ಆದರೆ ನಿಜವಾದ ನಿಜ ಏನು ಎಂದು ವೆಂಕಟಣ್ಣನಿಗೂ ಅರ್ಥವಾಗಿರಲಿಲ್ಲ! ನಡೆದದ್ದು ಅಚಾತುರ್ಯವೋ ಅಥವಾ ಚಾತುರ್ಯವೊ? ಎಂಬುದರಲ್ಲಿಯೂ ಅವನಿಗೆ ಸಂಶಯ ಉಂಟಾಗಿತ್ತು. ನಾಗತ್ತೆಯ ಮರೆಬಾಳಿನ ವಿಚಾರವಾಗಿ ಏನೇನೋ ಕೇಳಿದ್ದನು. ಆದರೆ ಕಳೆದ ರಾತ್ರಿ ನಡೆದಮಟ್ಟದ ಅಸಹ್ಯಕ್ಕೂ ಅದು ಏರಿತ್ತೆಂಬುದು ಅವನಿಗೆ ಅದುವರೆಗೂ ಊಹಾತೀತವಾಗಿತ್ತು. ಇದೇ ರೀತಿಯ ಅಚಾತುರ್ಯಪ್ರಯೋಗದ ಚಾತುರ್ಯವನ್ನು ಅವಳು ಯಾರ ಯಾರ ಮೇಲೆ ನಡೆಸಿ ಏನೇನು ಮಾಡಿರಲಿಕ್ಕಿಲ್ಲ? ಸೊಸೆಯ ಕ್ಷೇಮವನ್ನು ನೆವವಾಗಿಟ್ಟುಕೊಂಡು ತನ್ನ ಕೀಳುಗೀಳಿನ ಕೂಣಿ ಹಾಕಿಕೊಂಡು ಕುಳಿತಿದ್ದಾಳಲ್ಲವೆ ಅವಳು? – ನೆನೆದಂತೆಲ್ಲ ನಡೆದದ್ದು ತುಂಬ ಅಸಹ್ಯವಾಗಿ ತೋರಿ, ತನ್ನ ಭಾವಬೀಭತ್ಸದ ಗದ್ಗದವನ್ನು ಮುಚ್ಚಿಕೊಳ್ಳಲು ವೆಂಕಟಣ್ಣ ಕೆಮ್ಮಿ ಕ್ಯಾಕರಿಸಿ ಪಕ್ಕಕ್ಕೆ ತುಪ್ಪಿದನು.
ತಲೆಯೆತ್ತಿ ಸಾಬಿಯನ್ನು ನೇರವಾಗಿ ನೋಡುತ್ತಾ “ಏನು ಬಂತು ಇಷ್ಟು ದೂರ, ಸಾಬರ ಸವಾರಿ?” – ತುಸು ವ್ಯಂಗ್ಯವಾಗಿಯೆ ಇತ್ತು ಆ ಪ್ರಶ್ನೆಯ ಧ್ವನಿ.
ವೆಂಕಟಪ್ಪನಾಯಕರ ಬಹಿರ್ವಿನಯದ ಹಿಂದೆ ಅಡಗಿದ್ದ ಧೂರ್ತಲಕ್ಷಣದ ವರಾಹ ಬಲಿಷ್ಠತೆಯನ್ನು ತಕ್ಕಮಟ್ಟಿಗೆ ಸವಿದೆ ಅರಿತಿದ್ದ ಲುಂಗೀ ಸಾಬು ದೇಶಾವರದ ನಗೆ ನಕ್ಕು “ಸಾಹುಕಾರರು ತಮ್ಮನ್ನು ಕರಕೊಂಡೆ ಬರಬೇಕು ಎಂದು ಹೇಳಿಕಳಿಸಿದ್ದಾರೆ” ಎಂದನು.
“ಯಾಕಂತೆ?” ವೆಂಕಟಣ್ಣನ ನಿಡುಸರದಲ್ಲಿ ಪ್ರತಿಭಟನೆ ಇಣುಕುತ್ತಿತ್ತು.
“ಯಾಕೋ? ನನಗೆ ಗೊತ್ತಿಲ್ಲ. ನಮಗೆಲ್ಲ ಹೇಳುತಾರೇನು?”
“ಹಾಗಾಂದರೆ, ಯಾಕೆ ಅಂತಾ ಕೇಳಿಕೊಂಡು ಬಾ, ಹೋಗು.”
ನಾಲ್ಕಾರು ಮೈಲಿ ಗುಡ್ಡಕಾಡು ಹತ್ತಿ ಇಳಿದು ಬಂದಿದ್ದವನಿಗೆ ವೆಂಕಟಣ್ಣ ಹಾಗೆ ತಣ್ಣಗೆ ಹೇಳಿದುದನ್ನು ಕೇಳಿ ಒಳಗೊಳಗೆ ಮೈ ಉರಿದುಹೋಯಿತು. ಆದರೆ ಏನು ಮಾಡುತ್ತಾನೆ? ಅವನು ಒಬ್ಬನೆ ಬಂದಿದ್ದಾನೆ! ಎದುರು ಕುಳಿತಿರುವ ವ್ಯಕ್ತಿಯ ಮುಖ ಮೀಸೆ ಮೈಕಟ್ಟುಗಳೂ ಎಚ್ಚರಿಕೆ ಹೇಳುವಂಥವುಗಳೆ! ಬಟ್ಟೆ ಬರೆಯಲ್ಲೇನೊ ಲುಂಗೀಸಾಬುವೆ ವೆಂಕಟಣ್ಣನಿಗಿಂತಲೂ ಜೋರಾಗಿ ಕಾಣುತ್ತಿದ್ದರೂ ಸೊಂಟದಪಂಚೆ ವಿನಾ ಬತ್ತಲೆಯಾಗಿಯೆ ಕುಳಿತಿದ್ದ ವೆಂಕಟಣ್ಣ ಗ್ರಾಮೀಣನಂತೆ ತೋರುತ್ತಿದ್ದರೂ, ವೆಂಕಟಣ್ಣ ಯಜಮಾನನಾಗಿದ್ದ ಆ ಹೂವಳ್ಳಿಯ ಹಳೆಯ ಮನೆ ಅಲ್ಲಲ್ಲಿ ಶಿಥಿಲವಾಗಿದ್ದರೂ ತನ್ನ ಬೃಹದಾಕಾರದಿಂದಲೂ ಭಾರಿ ಮುಂಡಿಗೆಗಳಿಂದಲೂ ಮಜಭೂತಾದ ತೊಲೆ ನಾಗಂದಿಗೆ ಹೆಬ್ಬಾಗಿಲುಗಳಿಂದಲೂ ಲುಂಗೀಸಾಬುಗೆ ತನ್ನ ಎದುರಿಗಿರುವ ವ್ಯಕ್ತಿ ದೊಡ್ಡ ದಂಡನಾಯಕನ ವಂಶಕ್ಕೆ ಸೇರಿ, ಆ ಲಕ್ಷಣಗಳಿಗೆ ಬಹಿರಂಗವಾಗಿಯೂ ಆ ಗುಣಗಳಿಗೆ ಅಂತರಂಗವಾಗಿಯೂ ನಿಧಿಯೂ ಪ್ರತಿನಿಧಿಯೂ ಆಗಿದ್ದಾನೆ ಎಂಬುದನ್ನು ಮರೆಯದಂತೆ ಮಾಡಿತ್ತು.
ಅಲ್ಲದೆ…. ಸಾಬುಗೆ ನಾಯಕರ ಇನ್ನೊಂದು ಅನುಭವವೂ ಆಗಿತ್ತು. ಆವೊತ್ತು, ಸುಮಾರು ಐದಾರು ತಿಂಗಳ ಹಿಂದೆ, ಒಂದು ವರುಷಕ್ಕೆ ಹತ್ತಿರಹತ್ತಿರವೆ ಆಗೊ ಇದ್ದರೂ ಇರಬಹುದು, ಕಮ್ಮಾರ ಸಾಲೆಯಲ್ಲಿ ಒಂದು ಸಂಗತಿ ನಡೆದಿತ್ತು. ಆಗಿನ್ನೂ ವೆಂಕಟಣ್ಣನ ಕಾಲಿಗೆ ಕುಂಟನ ಹುಣ್ಣು ಆಗಿರಲಿಲ್ಲ.
ಕಲ್ಲೂರು ಸಾಹುಕಾರ ಮಂಜಭಟ್ಟರಲ್ಲಿ ಕರಣಿಕರಾಗಿದ್ದ (ಗುಮಾಸ್ತರು ಎಂದೂ ಕರೆಯುತ್ತಿದ್ದರು) ಕಿಟ್ಟೈತಾಳರ ಕಟ್ಟಾಣತಿಯಂತೆ ಇಜಾರದಸಾಬು, ಲುಂಗೀಸಾಬು ಮತ್ತು ಅಜ್ಜೀಸಾಬು ಮೂವರೂ ವಸೂಲಿಗೆ ಹೊರಟಿದ್ದರಂತೆ. ಏಕೆಂದರೆ ಎಷ್ಟೋ ಸಾರಿ ಅವರು ಯಾರ ಆಣತಿಯೂ ಇಲ್ಲದೆ ತಮ್ಮ ಸ್ವಂತ ಇಚ್ಚೆಯ ಪ್ರಕಾರ ತಮ್ಮ ಸ್ವಂತ ಪ್ರಯೋಜನಕ್ಕಾಗಿಯೂ ವಸೂಲಿಬೇಟೆಗೆ ಹೊರಡುತ್ತಿದ್ದುದುಂಟು. ಹಾಗೆ ಅವರು ಅನಧಿಕೃತವಾಗಿ ಲೂಟಿಗೆ ಹೊರಟಾಗಲೂ ಅಧಿಕೃತವಾಗಿಯೆ ವಸೂಲಿಗೆ ಬಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು. ಕೆಲವು ಸಾಲದ ಕುಳಗಳು ಆ ಸಾಬರ ಪುಂಡಾಟಿಕೆಗೆಗೆ ಹೆದರಿ ಲಂಚದ ರೂಪದಲ್ಲಿ ಅವರಿಗೆ ಅಡಕೆ ಬಾಳೇಕಾಯಿ ಅಕ್ಕಿ ಮೆಣಸಿನಕಾಯಿ ಮುಂತಾದವುಗಳನ್ನು ತೆತ್ತು, ಬೀಸುವ ದೊಣ್ಣೆ ತಪ್ಪಿದರೆ ಸಾಕು ಎಂದು, ಅವರನ್ನು ಸಮಾಧಾನಪಡಿಸಿ ಕಳಿಸುತ್ತಿದ್ದರು. ಆ ರುಚಿ ತಲೆಗೆ ಹತ್ತಿ ಇವರು ಮೂವರು ಪದೇ ಪದೇ ಅದೇ ಕಸುಬಿಗೆ ಕೈಹಾಕುತ್ತಿದ್ದರು. ಅವೊತ್ತು ಇವರು ಮೂವರೂ ಸಂಜೆ ಹೊತ್ತಿಗೆ ಕಮ್ಮಾರಸಾಲೆಯ ಕಳ್ಳಂಗಡಿಯ ಬಳಿಗೆ ಬಂದಾಗ ಕೊಳ್ಳೆ ಹೊಡೆದದ್ದನ್ನೆಲ್ಲ ತುಂಬಿಕೊಂಡೆ ಬಂದಿದ್ದರು. ಅಜ್ಜೀಸಾಬಿಯ ಕುದುರೆತಟ್ಟಿನ ಬೆನ್ನಮೇಲೆ ದುರ್ನಾತದ ಚರ್ಮಗಳಿಂದ ತುಂಬಿದ್ದ ಚೀಲವಿತ್ತು. ಹೊಲೆಯರಿಂದ ಸುಲಿದಿದ್ದ ದನದ ಚರ್ಮಗಳು ಮತ್ತು ದೆಯ್ಯದ ಹರಕೆಗಳಲ್ಲಿ ಹಬ್ಬಗಳಲ್ಲಿ ಇತರ ಮೇಲುಜಾತಿಯವರು ಕಡಿದಿದ್ದ ಕುರಿಯ ಚರ್ಮಗಳು! ಲುಂಗೀಸಾಬಿಯ ಹಸಿಬೆ ಚೀಲದಲ್ಲಿ ಹಿತ್ತಿಲಕಡೆಯ ಬಾಗಿಲಲ್ಲಿ ಸ್ವಾರ್ಲಮೀನು ಮಾರುವ ನೆವದಿಂದ ಅದರ ಬೆಲೆಗೆ ನಾಲ್ಕೈದು ಮಡಿಯ ಬೆಲೆಯ ಕದರಡಕೆ ಮೆಣಸಿನ ಕಾಳುಗಳನ್ನು ಮನೆಯ ಹೆಗ್ಗಡಿತಮ್ಮನವರುಗಳಿಂದ ಸುಲಿದದ್ದೆಲ್ಲ ಭರ್ತಿಯಾಗಿತ್ತು! ಇಜಾರದ ಸಾಬಿಯ ಪಾಟೀಚೀಲದಲ್ಲಿ ಸಾಲದ ಕುಳಗಳಿಂದ ಲಂಚದ ರೂಪದಲ್ಲಿ ಪಡೆದಿದ್ದ ಸ್ವಂತಸ್ವತ್ತು ತುಂಬಿತ್ತು!
ಮೂವರು ಕಳ್ಳನ್ನೊ ಹೆಂಡವನ್ನೊ ಸಾರಾಯಿಯನ್ನೊ ಕುಡಿದು ಸುಮ್ಮನೆ ತಮ್ಮ ಮನೆಯ ಕಡೆಗೆ ಹೋಗಬಹುದಿತ್ತು. ಆದರೆ ಸಾಬರು ತಮ್ಮ ದೌಲತ್ತು ತೋರಿಸಲು ಹೋಗಿ ಏಟು ತಿಂದಿದ್ದರು, ಮುಖ್ಯವಾಗಿ ವೆಂಕಟಪ್ಪನಾಯಕರ ಕೈಯಲ್ಲಿ!.
ಇಜಾರದ ಸಾಬು ಪುಟ್ಟಾಚಾರಿಯ ಕೈಲಿ ಕೆಲವು ಚಾಕು ಚೂರಿಗಳನ್ನು, ಅಳತೆ ಆಕಾರಗಳನ್ನು ಕೊಟ್ಟು, ತನಗೆ ಬೇಕಾದ ರೀತಿಯಲ್ಲಿ ತಯಾರು ಮಾಡಿಸಿಕೊಂಡಿದ್ದನು. ಅವುಗಳ ಉಪಯೋಗದ ವಿಚಾರದಲ್ಲಿ ನಾನಾ ವದಂತಿಗಳು ಹುಟ್ಟಿದ್ದುವು. ಆಗುಂಬೆ ಘಾಟಿನಲ್ಲಿ ಆಗುತ್ತಿದ್ದ ಸುಲಿಗೆ ಕೊಲೆಗಳಲ್ಲಿ ಪುಟ್ಟಾಚಾರಿ ಮಾಡಿಕೊಟ್ಟಿದ್ದ ಆಯುಧಗಳೂ ಪ್ರಯೋಗವಾಗುತ್ತಿದ್ದುವು ಎಂದು ಗಾಳಿಸುದ್ದಿ ಹಬ್ಬತ್ತು. ಆಚಾರಿಯೆ ಅದಕ್ಕೆ ಕಾರಣ ಎಂದು ಆರೋಪಿಸಿದ ಸಾಬೂಗೂ ಅವನಿಗೂ ಅದರ ವಿಚಾರದಲ್ಲಿ ಮಾತಿಗೆ ಮಾತು ಮಸೆದು ಅವರಿಬ್ಬರಲ್ಲಿಯೂ ಮನಸ್ತಾಪ ಉಂಟಾಗಿತ್ತು. ಅಲ್ಲದೆ ಅವುಗಳ ತಯಾರಿಕೆಗಾಗಿ ಕೊಡಬೇಕಾಗಿದ್ದ ರುಸುಮನ್ನೂ ಇಜಾರದಸಾಬು ಕೊಟ್ಟಿರಲಿಲ್ಲ. ಕೇಳಿದರೆ ‘ಪುಡೀಸಾಬುಗಾಗಿಯೆ ಅವುಗಳನ್ನು ಮಡಿಸಿದ್ದು; ಅವನನ್ನೆ ಕೇಳು’ ಎನ್ನುತ್ತಿದ್ದನು. ಪುಡೀಸಾಬುವನ್ನು ಕೇಲಿದಾಗ ಅವನು ‘ನನಗೂ ಅದಕ್ಕೂ ಏನೂ ಸಂಬಂಧವಿಲ್ಲ’ ಎನ್ನುತ್ತಿದ್ದನು. ಅದರ ಮೇಲಿನ ರಚ್ಚಿಗಾಗಿ ಇಜಾರದಸಾಬು ‘ಸಾಹುಕಾರ ಮಂಜಭಟ್ಟರಿಗೆ ಮಾಡಿಕೊಡಬೇಕಾಗಿದ್ದ ಕತ್ತಿ, ಕುಳ, ಅಡಕೆ ಸುಲಿಯುವ ಮೆಟ್ಟುಗತ್ತಿ, ಕುಡುಗೋಲು ಇವುಗಳನ್ನು ಪುಟ್ಟಾಚಾರಿ ಏಕೆ ಇನ್ನೂ ಕೊಟ್ಟಿಲ್ಲ? ವಿಚಾರಿಸಲು ಕಿಟ್ಟ ಊತಾಳರು ಹೇಳಿಕಳಿಸಿದ್ದಾರೆ’ ಎಮದು ಜೋರು ಮಾಡಿದನು.
“ನೀನು ಯಾವನೋ ಕೇಳೋಕೆ? ಹೋಗಿ ಹೇಳು ನಿನ್ನ ಐತಾಳರಿಗೆ, ನಾನು ಮಾಡಿ ಕೊಡಾದಿಲ್ಲ ಅಂತಾ!” ಪುಟ್ಟಾಚಾರಿ ಬೇಕೆಂತೆಲೆ ಮೂಗು ಮುರಿಯುವಂತೆ ಮಾತಾಡಿದ್ದನು.
“ನಾನು ಯಾವನು ಅಂದರೆ, ನಿನ್ನ ಜುಟ್ಟು ಹಿಡಿದು ಎಳೆದುಕೊಂಡು ಹೋಗುವ ವಸೂಲಿ ಸಾಹೇಬ!”
“ಸಾಹೇಬನಂತೆ ಸಾಹೇಬ! ದನಾ ತಿನ್ನಾ ಮುಂಡೆಗಂಡ ನಿನಗೆಷ್ಟೊ ದೌಲತ್ತು?”
“ಏನು ಗಂಡ ಗಿಂಡ ಅಂತೀಯ, ಬಾನ್ಚಿತ್ ಬೋಳೀಮಗನೆ? ಹಲ್ಲು ಉದುರಿಸಿ ಬಿಟ್ಟೇನು ಹುಷಾರ್!”
“ಚೆಲ್ಲಣದಾಗಿ ಹೇತುಕೊಳ್ಳಾಹಾಂಗೆ ಮಾಡ್ತೀನಿ ನೋಡು ನಿನಗೆ, ಸೂಪರ್ ಸೂಳೆ ಮಗನೆ!” ಪುಟ್ಟಾಚಾರಿ ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಸುತ್ತಿಗೆಯೊಡನೆ ಮೇಲೆದ್ದನು.
“ಸೂವರ್ ಗೀವರ್ ಅಂತೀಯೇನೋ, ಮಾದರ್ಚತ್? ನಿನ್ನ ಜಾತೀನೆಲ್ಲ ಕೆಡಿಸಿ ಬಿಡ್ತೀನಿ ನೋಡು ಮೊಖಕ್ಕೆ ಉಗಿದು!…. ಹ್ಯಾಕ್ ಥೂ!” ಇಜಾರದ ಸಾಬಿ ಪುಟ್ಟಾಚಾರಿಯ ಕಡೆಗೆ ಉಗಿದುಬಿಟ್ಟನು.
ಪುಟ್ಟಾಚಾರಿ ತನ್ನ ಕೈಲಿದ್ದ ಸುತ್ತಿಗೆಯಿಂದ ಸಾಬಿಯ ಮುಖ ಮೈ ನೋಡದೆ ಬೀಸಿದನು. ದಾಂಡಿಗ ಸಾಬಿ ಹಿಂದಕ್ಕೆ ಸರಿದುದರಿಂದ ಅವನು ರಕ್ಷಣೆಗಾಗಿ ಚಾಚಿದ್ದ ಕೈಗೆ ಮಾತ್ರ ಪೆಟ್ಟು ತಗುಲಿತು. ಕೆಚ್ಚಿನಲ್ಲಿ ಗಟ್ಟಿಗನಾಗಿದ್ದರು ಆಳುತನದಲ್ಲಿ ಸಣಕಲಾಗಿದ್ದ ಪುಟ್ಟಾಚಾರಿಯ ಮೇಲೆ ಸಾಬಿ ನುಗ್ಗಿದ ರಭಸಕ್ಕೆ ಆಚಾರಿ ಕಬ್ಬಿಣದ ಸಾಮಾನುಗಳ ರಾಶಿಯ ಮೇಲೆ ಬಿದ್ದು ‘ದುಣ್ಣ ಮುಂಡೆಗಂಡ, ನಿನ್ನ ಎದೆಗೆ ರಣಹೊಡಿಯ’ ಎಂದು ಬೈಯುತ್ತಾ ಏಳಲು ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲಿ ಕಳ್ಳಂಗಡಿಯ ಕಡೆಯಿಂದ ಕೂಗಾಟವನ್ನು ಕೇಳಿ ಓಡಿ ಬಂದಿದ್ದ ಹೂವಳ್ಳಿ ವೆಂಕಟಣ್ಣ ಇಜಾರದ ಸಾಬಿಯ ರಟ್ಟೆಯನ್ನು ಬಲವಾಗಿ ಹಿಡಿದುಬಿಟ್ಟನು. ಅವನು ಆಚಾರಿಯ ಕಡೆಗೆ ಮುಂಬರಿಯದಂತೆ. ಇಜಾರದ ಸಾಬಿಯ ಸಹಾಯಕ್ಕೆ ನುಗ್ಗಿ ಬಂದ ಲುಂಗೀಸಾಬಿ ಅಲ್ಲಿಯೇ ಬಿದ್ದಿದ್ದ ಒಂದು ಕಬ್ಬಿಣದ ತುಂಡಿನಿಂದ ವೆಂಕಟಣ್ಣನ ತೋಳಿಗೆ ಹೊಡೆಯಲು ಹವಣಿಸುವಷ್ಟರಲ್ಲಿ ವೆಂಕಟಣ್ಣ ಅವನನ್ನು ಝಾಡಿಸಿ ಒದೆದ ಹೊಡೆತಕ್ಕೆ ಲುಂಗೀಸಾಬಿ ಒಂದು ಉರುಳು ಉರುಳಿ, ಅಲ್ಲಿ ಹಳಿಕಟ್ಟಲು ತಂದಿಟ್ಟಿದ್ದ ಒಂದು ಗಾಡಿಚಕ್ರಕ್ಕೆ ಡಿಕ್ಕಿ ಹೊಡೆದು, ಅದನ್ನು ಮೈಮೇಲೆ ಬೀಳಿಸಿಕೊಂಡನು. ಅಷ್ಟರಲ್ಲಿ ಬಲಿಷ್ಠನೂ ಭೀಮಕಾಯನೂ ಆಗಿದ್ದ ಇಜಾರದ ಸಾಬಿ ವೆಂಕಟಣ್ಣನ ಕಡೆಗೆ ತಿರುಗಿ, ತನ್ನ ರಟ್ಟೆಯನ್ನು ಅವನ ಹಿಡಿತದಿಂದ ಬಿಡಿಸಿಕೊಳ್ಳಲು ಪ್ರಯತ್ನಪಟ್ಟನು. ಆದರೆ ತಾರುಣ್ಯದಲ್ಲಿ ಗರಡಿಸಾಧನೆ ಮಾಡಿ, ಕತ್ತಿವರಸೆ, ದೊಣ್ಣೆಕಾಳಗ, ಮಲ್ಲಯುದ್ಧ ಮೊದಲಾದವುಗಳಲ್ಲಿ ಹೆಸರು ಪಡೆದಿದ್ದ ವೆಂಕಪ್ಪನಾಯಕನ ಬಲಿಷ್ಠತೆ ಮತ್ತು ಭೀಮಕಾಯತ್ವದ ಮುಂದೆ ಅವನ ಆಟ ನಡೆಯಲಿಲ್ಲ. ಅಷ್ಟೇ ಅಲ್ಲ, ಒಂದೇ ನಿಮಿಷದಲ್ಲಿ ಇಜಾರದ ಸಾಬುವನ್ನು ನೆಲಕ್ಕೆ ಬೀಳಿಸಿ, ಅವನ ಹಿಂಗೈಮುರಿಕಟ್ಟಿಯೂ ಆಗಿತ್ತು! ಅಜ್ಜೀಸಾಬಿ ಗಡ್ಡ ಕಿತ್ತುಕೊಳ್ಳುತ್ತಾ ಬಂದು ದಮ್ಮಯ್ಯಗುಡ್ಡೆಹಾಕಿ ಬಿಡಿಸಿಕೊಳ್ಳದಿದ್ದರೆ ಏನೇನಾಗುತ್ತಿತ್ತೊ?….
ಅದೆಲ್ಲ ಇನ್ನೂ ಮನಸ್ಸಿನಲ್ಲಿ ಹಸಿಯಾಗಿಯೆ ಇರುವಂತೆ ತೋರುತ್ತಿದ್ದ ಆ ಘಟನೆಯ ಬಿಸಿನೆನಪು ಲುಂಗಿಸಾಬುವನ್ನು ಮಾತಿನಲ್ಲಿಯೂ ನಡತೆಯಲ್ಲಿಯೂ ಎಚ್ಚರಿಕೆಯಿಂದಿರುವಿಕೆ ಮಾಡಿತ್ತು. ಇತರರ ಮುಂದೆ ವರ್ತಿಸುವಂತೆ ಈ ಅಲಘುವ್ಯಕ್ತಿಯೊಡನೆ ವ್ಯವಹರಿಸುವುದು ತರವಲ್ಲ ಎಂದು ನಿಶ್ಚಯಿಸಿ, ಅಷ್ಟು ದೂರದಿಂದ ನಡೆದುಬಂದಿದ್ದ ತನ್ನ ದಣಿವಿಗೆ ಏನಾದರೂ ಸ್ವಂತಕ್ಕಾಗಿ ಪಡಿ ಪಡೆಯುವ ಉದ್ದೇಶದಿಂದ ಸುಳ್ಳುದೈನ್ಯವನ್ನು ಪ್ರದರ್ಶಿಸುತ್ತಾ ಹುಸಿವಿನಯದಿಂದ ಬೇಡಿದನು ಲುಂಗಿಸಾಬು:
“ಒಂದು ಬಾಳೆಯ ಗೊನೆ ಆದರೂ ಕೊಡ್ತೀರಾ, ನಾಯಕರೆ?”
ಆ ಪುಂಡರ ಲಂಚಲೂಟಿಯ ವಿಚಾರವನ್ನೆಲ್ಲ ಚೆನ್ನಾಗಿ ತಿಳಿದಿದ್ದ ವೆಂಕಟಣ್ಣ ಕತ್ತೆತ್ತಿ ನೋಡದೆ ಹುಸಿನಗುತ್ತಾ “ಯಾಕೆ? ಬಾಳೆಗೊನೆ ತರಾಕೆ ಹೇಳಿದರೇನು ನಿನ್ನ ಸಾಹುಕಾರರು?” ಎಂದು ಸಿಂಬಳ ಸುರಿದು ಎಸೆದು, ತಾನು ಕುಳಿತಿದ್ದ ಕಂಬಳಿಯ ಸೆರಗಿನಿಂದಲೆ ಬಗ್ಗಿ ಮೂಗು ಒರೆಸಿಕೊಂಡನು.
“ಇವನ ಮೈ ನೋಡಿದರೆ ಇಷ್ಟು ದೊಡ್ಡು; ಮೀಸೆಯೋ ಮಹಾ ಮೀಸೆ; ಮನೆಯೂ ದೊಡ್ದದೆ; ಆದರೆ ಮನಸ್ಸು ಮಾತ್ರ ಬಹಳ ಸಣ್ಣ: ಕೂತಲ್ಲೆ ಕ್ಯಾಕರಿಸಿ ತುಪ್ಪುತ್ತಾನೆ; ಸಿಂಬಳ ಸುರಿದು ಕಂಬಳಿಗೇ ಒರಸುತ್ತಾನೆ!” ಎಂದೆಲ್ಲ ಒಳಗೊಳಗೆ ಅಂದುಕೊಂಡ ಲುಂಗಿಸಾಬು “ಸಾಹುಕಾರರು ಯಾಕೆ ಹೇಳುತ್ತಾರೆ? ಅವರಿಗೇನು ಬಾಳೆಕೊನೆಗೆ ಬರಗಾಲವೆ? ನಿಮ್ಮವರ ತೋಟಗಳೆಲ್ಲ ಅವರವೇ ಅಲ್ಲವೆ? ನೀವು ಕೊಡುವ ಬಾಳೆಕೊನೆಯೂ ಅವರದ್ದೇ ಆಗುತ್ತದೆ!” ಎಂದು ವೆಂಕಟಪ್ಪನಾಯಕರ ಗದ್ದೆ ತೋಟಗಳೆಲ್ಲ ಮಂಜಭಟ್ಟರ ಸಾಲಕ್ಕೆ ಈಡಾಗಿರುವುದನ್ನು ವ್ಯಂಗ್ಯವಾಗಿ ಮೂದಲಿಸುವಂತೆ ಮಾತಾಡಿದ್ದನು.
“ಮತ್ತೆ? ನಿನ್ನ ಅಪ್ಪ ನಟ್ಟು ಬೆಳೆಸಿದ್ದು ಅಂತಾ ಮಾಡಿದೀಯಾ? ಬಿಟ್ಟಿ ಕೊಡುವುದಕ್ಕೆ ನಿನಗೆ? ಬಾಳೆಕೊನೆ?” ವೆಂಕಟಣ್ಣ ರೇಗಿ ನುಡಿದನು.
“ನನ್ನ ಅಪ್ಪ ಯಾಕೆ ನಿಮ್ಮ ಮನೆಯಲ್ಲಿ ಮಲಗುವುದಕ್ಕೆ ಬರುತ್ತಾನೆ?” ಸಾಬಿಯ ಮಾತಿನ ಅಶ್ಲೀಲದ ಧ್ವನಿ ಮುಂದುವರೆಯಿತು “ನಿಮ್ಮ ಅಪ್ಪನೆ ನೆಟ್ಟು ಬೆಳೆಸಿದ್ದು ಇರಬೇಕು ಅಲ್ಲವೆ?”
ಕೊಟ್ಟೆಕಡ್ಡಿ ಹೆರೆಯುತ್ತಿದ್ದ ವೆಂಕಟಣ್ಣ ಕತ್ತಿಯೊಂದಿಗೆ ಸರಕ್ಕನೆ ಎದ್ದನು. ಕೂತಿದ್ದ ಸಾಬು ಚಂಗನೆ ನೆಗೆದದ್ದು ಹೆಬ್ಬಾಗಿಲ ಕಡೆಗೆ ನುಗ್ಗುವ ಅವಸರದಲ್ಲಿ ಒಂದು ಕಂಬಕ್ಕೆ ಢಿಕ್ಕಿ ಹೊಡೆದು ಧಾತುಹಾರಿ ಕೆಳಗೆ ಬಿದ್ದನು! ಹಣೆ ಒಡೆದು ನೆತ್ತರು ಸುರಿಯತೊಡಗಿತ್ತು!
“ನಾ ಗಟ್ಟಿಯಾಗಿ ಕೆಮ್ಮಿದ್ರೇ ಇವನಿಗೆ ಲುಂಗಿ ಒದ್ದೆ ಆಗ್ತದೆ! ಮತ್ತೆ ಪಟ್ಟಂಗ ಹೊಡೀತಾನೆ, ಪಟಿಂಗ, ಬಾಯಿಗೆ ಬಂದ್ಹಾಂಗೆ, ಲಂಗು ಲಗಾಮು ಇಲ್ದೆ! ನೀಚ ಲೌಡೀಮಗಾ!” ವೆಂಕಟಣ್ಣ ತನಗೆ ತಾನೆ ಹೇಳಿಕೊಂಡನು ನಕ್ಕು.
ತಣ್ಣೀರೆರಚಿ ಗಾಳಿ ಬೀಸಲು ಲುಂಗಿಸಾಬು ಮೈ ತಿಳಿದೆದ್ದನು. ಒಣ ಸೆಗಣಿಪುಡಿ ಹಾಕಿ ಗಾಯದ ರಕ್ತ ನಿಲ್ಲಿಸಿದ ಮೇಲೆ ಹಣೆಗೊಂದು ಕೊಟ್ಟ ಬಟ್ಟೆ ಕಟ್ಟಿಕೊಂಡು, ಹೆಬ್ಬಾಗಿಲು ದಾಟಿ ಮೆಟ್ಟಿಳಿದು ಹೋದನು. ಆದರೆ ತನಗಾಗಿದ್ದ ಹಣೆಗಾಯದ ಸಾಕ್ಷಿಯಿಂದ ತನಗೊದಗಿದ್ದ ಅವಮಾನಕ್ಕೆ ತಕ್ಕ ಪ್ರತೀಕಾರ ಮಾಡುವ ಸಲುವಾಗಿ, ಅವನು ತನ್ನ ಮೇಲೆ ಅದೆಂತಹ ದೂರು ಹೇಳಿ, ತನ್ನನ್ನು ಎಂತೆಂತಹ ಕಷ್ಟಪರಂಪರೆಗಳಿಗೆ ಸಿಕ್ಕಿಸಲಿದ್ದಾನೆ ಎಂಬುದನ್ನು ವೆಂಕಟಣ್ಣ ಆಗ ಹೇಗೆ ತಾನೆ ಅರಿತಾನು?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ