ನನ್ನ ಪುಟಗಳು

23 ಮೇ 2018

ಶ್ರೀರಾಮಾಯಣ ದ‍ರ್ಶನಂ, ಅಯೋಧ್ಯಾ ಸಂಪುಟಂ: ಸಂಚಿಕೆ 11- ಪಂಚವಟಿಯ ಪರ್ಣಕುಟಿ

ಸಂಚಿಕೆ 11 – ಪಂಚವಟಿಯ ಪರ್ಣಕುಟಿ
ಮಹಾಟವಿಯ ವಟವರ ಶಿರಾಗ್ರದೊಳಿರೆ ಜಟಾಯು
ನೋಡಿದನ್, ಬಿಸಿಲು ನೆಳಲಿನ ರಂಗವಲ್ಲಿಯಿಂ
ರಾಜಿಸುವ ಪಸುರುವುಲ್ಲಿನ ಪಚ್ಚೆಯೊಳ್ನೆಲದೆ
ಸೊಬಗು ಕಣ್ಗೊಳಿಪರಂ, ಮೂವರಂ ಮನುಜರಂ,
ಪಂಚವಟ್ಯಭಿಮುಖಿಗಳಂ. ಬೃಹದ್ ಗಾತ್ರದಾ
ಭೀಮವಿಕ್ರಮ ವಿಹಂಗೇಂದ್ರನಂ ವೀಕ್ಷಿಸುತೆ
ಶಂಕೆ ಪುಟ್ಟಿತು ನಿಶಾಚರರೊಂದು ಛದ್ಮನೆಯ
ಭಯಕೆ. ಪೇಳ್, ಪಕ್ಷಿ, ನೀನಾರೆಂದು ಕೇಳಲ್
ಜಟಾಯು ನುಡಿದನು ಮಧುರವಾಕ್ಯಂಗಳಂ : “ವತ್ಸ, ನಾಂ
ನಿನಗನ್ಯನಲ್ಲಯ್ಯ ; ಪಿತೃಸಖಂ ! ಸಂಪಾತಿ ತಾಂ        ೧೦
ಪಿರಿಯಣ್ಣನೆನಗೆ. ಪೆಸರಿಂದಾಂ ಜಟಾಯುವೆಂ.
ದುಷ್ಟ ರಾಕ್ಷಸ ಸೇವಿತಂ ಈ ದುರ್ಗಕಾನನಂ.
ನಿಮಗಾಂ ಸಹಾಯನೆಂ ನೀನನುಮತಿಯನೀಯೆ.”
ಪ್ರಿಯ ವಾಕ್ಯಮಂ ಕೇಳಿದೊಡನೆಯೆ ಮುದಂ ಮೊಳೆತು
ಮೂವರುಂ ನಮಿಸಿದರು ದಶರಥಸ್ನೇಹಿತಗೆ,
ಆ ಶ್ಯೇನಿಪುತ್ರಂಗೆ. ಮತ್ತಾತನುಂ ಕೂಡೆ
ಕಾವಲೈತರೆ ಮುಗಿಲವಟ್ಟೆಯ ಬೇಹಿನಾಳಾಗಿ,
ಬಟ್ಟೆವಿಡಿದರ್ ಪಂಚವಟಿಗೆ, ಗೋದಾವರಿಯ
ತಟಿಗೆ.
“ಕಂಗೊಳಿಸುತಿದೆ ಇದೊ ಮುಂದೆ, ಸೌಮಿತ್ರಿ,
ಆ ಅಗಸ್ತ್ಯನ ವರ್ಣನೆಯ ಮನೋಹರಂ ವನಂ.            ೨೦
ಏಂ ಶಾನ್ತಿ ಸಾಮ್ರಾಜ್ಯವಾಳುತಿದೆ ನೋಡು, ಪ್ರಿಯೆ !
ಚಿತ್ರಕೂಟದ ಸೊಬಗಿಗಿರ್ಮಡಿ ಸೊಬಗಿದಲ್ತೆ ?
ಪಿಂತಾವಗಂ ನಾಂ ಪಡೆಯದೊಂದು ಸೊಗಮಿಲ್ಲಿ
ಕಾಯ್ದೆಮಗೆ ಬಯಸಿದಪ್ಪುದು ಸುಖಾಗಮನಮಂ :
ತರುಚಾಮರದ ಕರದ ತೋಳ್‌ವೀಸಿ, ಕಾಣ್, ಕರೆಯುತಿದೆ
ಗಿರಿ. ಸೂಸಿ ಪೂವಲಿಯನಾಹ್ವಾನಗೈವಳಿದೊ ಈ
ವಿಪಿನರಾಜೇಶ್ವರಿ. ತರಂಗ ಮಂಜುಳ ರುತಿಯ
ವಾಣಿಯಿಂದೆಮಗೆ ಸುಸ್ವಾಗತವನುಲಿವಳದೊ
ಚಂಚಲಾಂಚಲ ಗತಿಯ ಗೋದಾವರಿ !”
“ಅದೊ ಅಲ್ಲಿ,
ವೈಡೂರ್ಯಗಳೆ ರಾಸಿಗೊಂಡಂತೆ, ದಡಂಮುಚ್ಚಿ         ೩೦
ಪಸುರ್ಮುಡಿದು ಸಾಲ್ಗೊಂಡಿಹವು ಹೊಂಗೆ !”
“ಪಡಿನೆಳಲ್,
ಕನ್ನಡಿವಿಡಿದ ತೆರದಿನೆಸೆಯಲ್ಕೆ, ಆಃ ಕಾಣ್ಬುದದೊ
ಗರಿಗರಿಯೆಲೆಯ ಬಿದಿರ ಮೆಳೆಚವರಿ !”
“ಅದೊ ನವಿಲ್ ;
ಹೊಳೆಯ ನೀರಿಗೆ ಬಾಗಿದೊಂದು ಕೊಂಬೆಯ ಮೇಲೆ
ಕುಳಿತೀಂಟುತಿಹುದೆಂತು !”
“ಅಗೊಗೊ ನೀರ್ವಕ್ಕಿಗಳ್ ;
ಏಂ ಕ್ರೀಡೆಯಿಂಚರಂ !”
“ಏನೆತ್ತರದ ಸಾಲಮಿದು !
ಕಣ್ಣೆತ್ತಿ ನೋಡಿ ಪೂರೈಸಲಾರದೆ ಕೊರಲ್
ದಣಿಯುತಿದೆ !”
“ನೋಡು ವಲ್ಮೀಕ ಗೋಪುರಮಿದಂ :”
“ಕೈಯ ಬಿಲ್ಲನ್ನೆತ್ತಿದೊಡಮದರ ಕೊಪ್ಪಿಗುಂ
ನೆತ್ತಿ ನಿಲುಕದು ಹುತ್ತದಾ !”
“ಅತ್ತ ನೋಡತ್ತಲ್ :          ೪೦
ಕಳಿತ ಪಣ್ಮಳೆಗರೆದು ನೆಲಂ ಕೆಸರೇಳುತಿದೆ
ಸೋರ್ದ ರಸಕೆ.”
“ಏನಮಂಗಳಮೊ ? ಕಾಲ್ ಜಾರುತಿದೆ
ನನಗೆ !” ಮೈಥಿಲಿ ತನ್ನೊಳಗೆ ತಾನೆ ಗೊಣಗುತಿರೆ,
ಬಳಿಗೆ ಬಾರದೆ ದೂರ ಸಾರದೆ ಕುರಂಗಶಿಶು
ಸುಳಿದಡಗಿದುದ ಕಂಡಳೆಂದಳ್ ಮನಃಪ್ರಿಯಗೆ :
“ಈ ತಾಣಮೆಲೆವನೆಗೆ ನಲ್ದಾಣಮೇ ದಿಟಂ
ಸಾಧುಮೃಗದೀ ಸ್ಥಲಂ ತಾನೇಗಳುಂ ಸಾಧು !”
“ನಿನಗೆ ಕಾಲ್ದಣಿದೆಡೆಯೆ ನಮಗಕ್ಕುಮಾಶ್ರಮಂ !”
ಅತ್ತಿಗೆಯನಂತಣಕವಾಡಿದಣ್ಣಗೆ ಲಕ್ಷ್ಮಣಂ :
“ಮುನ್ನಿಸೆನ್ನಂ, ಜೀಯ. ದೇವಿಯರೆಣಿಕೆ ನನ್ನಿ.  ೫೦
ಬಿತ್ತರಂ ಈ ನೋಟಮೀ ಪೀಠಮೆತ್ತರಂ ;
ವನ ರಾಮಣೀಯಕಂ, ಜಲ ರಾಮಣೀಯಕಂ,
ಪುಷ್ಪ ಫಲ ಮೂಲ ವಿಪುಲಂ. ಮೇಣ್ ಕ್ಷೇಮಸಂವೇದಿ :
ನಾತಿದೂರಂ ನಾತಿನಿಕಟಮದೊ ಕಾಳ್ಮಿಗಂ
ಸುಳಿಯುತಿವೆ ಮನಮೋಹಕಂ. ನಿನಗೆ ಬಗೆಯೊಪ್ಪೆ
ರಚಿಸುವೆನನುತ್ತಮಂ ಪರ್ನಕುಟಿಯಂ.” “ನಿಮಗೆ
ರುಚಿಸಿದುದೆ ನನಗೆ ಪಥ್ಯಂ. ಬನ್ನಿ, ನಾಮೆಲ್ಲರುಂ
ಕೂಡಿ ಕಟ್ಟುವಮದಂ ಪರ್ಣಪಾಥೇಯಮಂ !”
ಬನ್ನಿಗಂಬವ ಹೂಡಿ, ಬಿದಿರಗಳು ತೊಲೆಮಾಡಿ            ೬೦
ಹುಲ್ಲೆಲೆಗಳಂ ಹೊದಿಸಿ, ಹೆಡಗೆವಳ್ಳಿಯ ಸೀಳಿ
ಸಲಕಂ ಬಿಗಿದು ಕಟ್ಟಿ, ಹಂಬು ಬೆತ್ತವ ಕಡಿದು,
ಸಿಗಿದು, ತಟ್ಟಿಯ ಹೆಣೆದು, ತಡಿಕೆ ಗೋಡೆಯನಿಟ್ಟು,
ಬೆಳಕಂಡಿಯಂ ಬಿಟ್ಟು ಹುತ್ತದೆರೆಯಂ ಮೆತ್ತಿ,
ಕಣೆ ನೆಯ್ದ ಬಾಗಿಲಂ ಬಲಿದು, ಸುತ್ತೆತ್ತಲುಂ
ಮುಳ್ಳೊಡ್ಡನಡಕಿ, ಮೇಣ್ ತಡಬೆಯುಣುಗೋಲ್ಗಳಂ
ಪೂಡಿ, ವಿರಚಿಸಿದರಾಶ್ರಮವನತಿಶ್ಲಾಘ್ಯಮಂ
ವನಭೋಗ್ಯಮಂ !
ಪರ್ಣಶಾಲೆಗೆ ಸಮೀಪಮಾ
ನಿಮ್ನದೊಳ್ ದೃಷ್ಟಿಸೀಮೆಗೆ ಸಲಿಲನೇಮಿಯಂ
ಸೃಷ್ಟಿಸುತ್ತನವರತಯಾತ್ರೆಯಂ ಪರಿದಿರ್ದ
ಗೋದಾವರಿಯ ತೆರದಿ ಪರಿದಿರಲ್ ಕಾಲನದಿ,            ೭೦
ಬತ್ತಿಯುರಿಯಲ್ಕೆಣ್ಣೆ ಬತ್ತುವಂದದಿ ಬತ್ತಿ,
ಹತ್ತೆಸಾರುತ್ತಿರ್ದುದಯ್ ವನವಾಸದವಧಿ.
ಹೆಚ್ಚಿದುದು ಮನೆನೆನಹು ; ಮೇಣಯೋಧ್ಯೆಯ ಕುರಿತ
ಮಾತು ಮಿಗಿಲಾದುದು ; ಏನುತ್ತಮಂ ಕಂಡರದು
ಮನಕೆ ತಂದುದು ಉಪಮೆಯೋಲನ್ಯ ಚಿತ್ರಮಂ :
“ಗೋದಾವರಿಯ ಜಲಂ ರುಚಿರ ನಿರ್ಮಲವಲಾ ?”
“ಸರಯೂ ಸಲಿಲದಂತೆ !” “ಈ ತಾವರೆಯ ಹೂವು
ನೋಡೆನಿತು ಚೆಲ್ವು,” “ನೀನಂದು ಗಂಗಾನದಿಗೆ
ಮೀಯೆ ಹೋದಂದು ತಂದಲರಿನೋಲಿಹುದಿದರ
ಸೊಂಪು !” “ಕೇಳದೊ, ಕೊಂಚೆವಿಂಡುಲಿಯುತಿದೆ.” “ಅಹಾ !     ೮೦
ನಮ್ಮರಮನೆಯ ತೋಂಟದೊಳ್ ಕುಳಿತು ನಲಿವಂದು
ಈ ತೆರನ ದನಿಹನಿಯ ಸೋನೆಗಿಂತುಟಿ ವಲಂ
ಕಿವಿ ತಣಿದೆವಲ್ತೆ ?” “ನೋಡಾ ಮರದ ತಳಿತೆಸೆವ
ಪೆಂಪು.” “ಅಯೋಧ್ಯಾ ಪುರದ್ವಾರದೆಡೆಯಿರ್ಪ ತರುವುಂ
ಈ ಶರತ್ ಸಮಯದೊಳಗಿಂತೆ ಶೋಭಿಪುದಲಾ !” -
ಇಂತೆಲ್ಲಮುಂ ಪ್ರತೀಕಂಗೊಳ್ಳಲೊರ್ದಿನಂ
ಹೊಳೆಯ ನುಣ್ಮಳಲ ಬೆಣ್ಣೆಯ ದಿಣ್ಣೆಮೇಲಿರ್ದು,
ಸೀತೆ ತಾಂ ಪತಿ ಮೈದುನರ ಕೂಡೆ ಮಾತಾಡುತಿರೆ,
ಕಂಡು, ತೋರಿದಳಾಗಸದ ನೀಲಿಗೆದುರಾಗಿ
ಬೂರುಗದರಳೆರಾಸಿ ಹಂತಿಗೊಂಡೊಪ್ಪಿರ್ದ    ೯೦
ತೆರದ ಶರದದ ಮುಗಿಲ ಬೆಳ್ಪಿನೊಡ್ಡಂ. “ನಮ್ಮ
ನಾಡಿನಾ ಹಸುರು ಹಬ್ಬಿದ ಬಯಲಮೇಲಿಂತೆ
ರೊಪ್ಪವಪ್ಪುವು ಬೆಳ್ಳಿಯುಣ್ಣೆಯ ಕುರಿಯ ಹಿಂಡಂ.”
ಸೌಮಿತ್ರಿಯೆನೆ ರಾಮನೆಂದನ್ : “ಅಗ್ನಿಕ್ರಿಯಾ
ಚಿಹ್ನೆಯಿದು ಶರದೃತುಗೆ. ಪ್ರೇತಭೂಮಿಯೊಳಿಂತು
ಶ್ವೇತಭಸ್ಮವೆ ರಾಸಿಹಬ್ಬಿದೆ ಶರನ್ಮೇಘೌಘ
ವೇಷದಲಿ ! ಇನ್ನೇನದಿಂದೊ ನಾಳೆಯೊ ನೆಲಕೆ
ಮಂಜಾಗಿ ಬೀಳೆ, ಮೊದಲಹುದು ಹೇಮಂತಋತು !”
ಎಂದ ರಘನಂದನನ ಮುಖಭೀಷ್ಮತೆಗೆ ಸೀತೆ
ಬೆಚ್ಚುತಿರೆ “ತಂದೆಯಂ ನೆನೆದಿರ್ದೆನದರಿಂದೆ  ೧೦೦
ಆ ಉಪಮೆ !” ಎಂದು ಸಂತೈಸುತಿರೆ ಭಾರ್ಯೆಯಂ,
ಕೆಂಪೆರಚಿದುದು ಬೈಗು ಆ ಮುಗಿಲ ಮೊತ್ತಕ್ಕೆ.
ಮೌನಗೌರವದಿಂದ ನೋಡುತಿರಲಾ ಚಿತಾ
ಪ್ರತಿಕೃತಿಯ ಚಿತ್ರಂ ವಿಚಿತ್ರತರಮಾದುದಯ್
ತಾಳ್ದು ನಾನಾಕೃತಿಗಳಂ: ಕಪಿಯಾಯಿತೆನ್ನುತಿರೆ,
ಪುಲಿಯಾಯ್ತು ! ಪುಲಿಯೆನ್ನುತಿರೆ ಕರಡಿಯಾಯ್ತು. ಕಾಣ್
ಕರಡಿಯೆಂಬನಿತರೊಳೆ ಭೀಮರಾಕ್ಷಸನಾಯ್ತು !
ಕಳ್ತಲೆಯ ಮರ್ಬಿನಲಿ ದುಶ್ಶಕುನ ಭೀಕರದ
ಮೇಘದೈತ್ಯಾಕೃತಿಗೆ ಕಂಪಿಸುತವನಿಜಾತೆ
ಕಣ್ದೆರುಹೆ, ಗೋಚರಿಸಿತಾಯು ತನ್ನೆಡೆಗಿಳಿದು  ೧೧೦
ಬರ್ಪಂತೆ ಬಂದಾ ಜಟಾಯು ಧೈರ್ಯಾಕೃತಿ.
ನಭಃಪರ್ಯಟನದಿಂದಮಿಳಿದ ಪಕ್ಷೀಂದ್ರನಂ
ಸಖನನುತ್ಸಾಹದಿಂ ಸ್ವಾಗತಿಸಿ, ಕುಶಲಮಂ
ಕೇಳ್ದೊಸೆದು ನುಡಿಸಿ, ಸಂತೋಷದಿಂದೆಲ್ಲರುಂ
ಮೇಲೆಳ್ದು ತೆರಳ್ದರೆಲೆವನೆಗೆ….
ಕಳೆದತ್ತೊಂದು
ವಾರಂ. ಸಾರ್ತಂದುದಿನದಿನಂ. ಇನೋದಯಕೆ
ಮುನ್ನ ಮೈಥಿಲಿ ಪನ್ನಗುಡಿಯ ಕಣೆಯೆಲೆವಾಗಿಲಂ
ತೆರೆದು ನೋಡಿದಳಹಾ ! ಬೆಚ್ಚಿದಚ್ಚರಿವೆರಸಿ
ಮತ್ತೆ ನೋಡಿದಳು : ಕಂಡಳೆ ಜಗತ್ ಶೂನ್ಯತಾ
ದೃಶ್ಯಮಂ ? ಕೂಗಿ ಕರೆದಳ್ ಮಲಗಿದಿನಿಯನಂ.         ೧೨೦
ತೋರಿದಳ್ ಬೇಗವೇಗೆಳ್ದು ಬಂದಾತಂಗೆ
ಒಡವೆ ಝಣಿರೆನೆ ಕೈಯ ಬೀಸಿ. ಪ್ರಕೃತಿಪ್ರಿಯಂ
ನೋಡಿದನು ಸೃಷ್ಟಿಯ ಅಭಾವವನೆ ಚಿತ್ರಿಸಿದವೋಲ್
ನೀಹಾರ ರಚಿತಮಾ ಹೇಮಂತ ಮಂಜುಕಲೆಯಂ :
ಗಿಡವಿಲ್ಲ, ಮರವಿಲ್ಲ ; ಮಲೆಯಿಲ್ಲ, ಕಾಡಿಲ್ಲ ;
ನೆಲವಿಲ್ಲ ; ಬಾನಿಲ್ಲ ; ಬಿಳಿಯ ಬಣ್ಣವನುಳಿದು
ನೋಟಕೇನೊಂದಿಲ್ಲ. ಬೆಳ್ಪೊಂದೆ ಜಗವೆಲ್ಲಮುಂ !
ಕಡಲ ಕಡೆಹದೊಳುದಿಸಿ, ಮಂಥನದ ರಭಸಕ್ಕೆ
ಸಿಡಿದು, ತುಂತುರು ತುಂತುರಾಗಿ, ನಾನಾ ದೆಸೆಗೆ
ಪರ್ವಿದಾ ಕೇಂದ್ರಾತಿಗಾಮೃತಂ ಪರ್ವತದ ಮೇಣ್       ೧೩೦
ಫಣಿಯ, ಮೇಣಸುರಾಮರಾಕಾರದಿಂ ಪ್ರವಹಿಸಿತೊ
ಶೀಕರ ತುಷಾರದೋಲೆಂಬಂತೆ ಬಿಳಿಮಂಜು ತಾಂ
ರೌಪ್ಯಧೂಳಿಯ ಸಾಂದ್ರ ಧೌತಧವಳವನೆರಚಿ
ಮುಚ್ಚಿ ಮುಸುಕಿದುದು ಗಿರಿವನ ಭುವನಮಂ. ಮೇಣ್ ಮಳಲೆ
ಹೊಗೆಯಾಯ್ತೊ, ನೊರೆಯೆ ಇಬ್ಬನಿಯಾಯ್ತೊ ತಾನೆಂಬ
ಕಡಲಾಗೆ ದಟ್ಟಿತೈಕಿಲ್ ಸೋನೆ, ಬಳಿಯಿರ್ದುಮಾ
ಬಳಸಿರ್ದ ಮುಳ್ಳಿನೊಡ್ಡುಂ ಮಂಜಿನೊಳ್ ಮಸುಳೆ,
ತೆಪ್ಪವಾದುದು ತೇಲ್ದುದವರಾಶ್ರಮಂ ! ಮತ್ತೆ,
ನೋಡುತಿರೆಯಿರೆ, ಕೊಡಹಿದರಳೆ ಪಸರಿಸುತುರ್ಬಿ
ಪರ್ಬುವೋಲೊಯ್ಯನೆ ಪಳಂಚುತಲೆದಾ ಹಿಮಂ          ೧೪೦
ತಬ್ಬಿತೆಲೆವನೆಯನಂತೆಯೆ ತುಂಬಿತೊಳಗುಮಂ
ತೆರೆವಾಗಿಲಿಂದೆ ಬೆಳಕಂಡಿಯಿಂದೊಳವೊಕ್ಕು,
ಲೆಕ್ಕಿಸದೆ ಮಡದಿಯೊಡನೆಯೆ ಕಾಪುಗೊಂಡಿರ್ದ
ದಿನಕರ ಕುಲದ ಕಲಿ ಕುಮಾರನಂ !
“ಮೈದುನಂ
ಪೊಳೆಗೆ ಪೋದವನಿನ್ನುಮೈತರನೆ !” “ದಟ್ಟೈಸಿ
ಹಿಟ್ಟಿಳಿಯುವೈಕಿಲೊಳ್ ಬಟ್ಟೆದಪ್ಪಿದನೊ ? ಮೇಣ್ ….”
“ಏನೊ ಸದ್ದಾಗುತಿಹುದಾಲಿಸಿಂ.”
ಕಿವಿಗೊಟ್ಟು,
ತಡಬೆಯಿರ್ದೆಡೆಗೆ ಕಣ್ಣಾಲಿಯಾಗಿರೆ, ಸುಳಿದು
ಗೆಣ್ಟರಿಂ ಬಳಿಗೆ ಸಾರ್ತಂದುದಾಳ್ವರಿಜೊಂದು,
ಮಿದುಳ್‌ಬಿಳಿಯ ಮಂಜುವಗೆಯಿಂ ಮೂಡಿ ಬಂದುದೆನೆ ೧೫೦
ಬೆಳ್‌ಗನಸು. ಇರ್ಪಿಂದೆ ನಾರುಡೆ ತೊಯ್ದು, ಕೇಶಮಂ
ಮೀಸೆಯಂ ರಜತರಜಸಮ ಹಿಮಕಣಂ ಪತ್ತಿ
ಬೆಳ್ಪೆಸೆಯೆ ಮೈದೋರಿದುದು ಮೈದುನನ ಮೂರ್ತಿ :
“ಏನು ಮಂಜಿದೊ ಕಾಣೆ ! ಕಣ್ದಪ್ಪಿದತ್ತೆನಗುಮಾ
ನಿತ್ಯಪರಿಚಿತ ಪಥಂ : ಗೋದಾವರಿಯನರಸಿ
ತೊಳಲುವಂತಾಯ್ತಲಾ ! ಕಡೆಗೆ, ಕೊಂಚೆಗಳುಲಿಯ
ಮತ್ತೆ ಸಾರಸ ರುತಿಯ ಕೈಮರವನಾಲಿಸುತೆ
ತೊರೆಯ ದಡಕೈದಿದೆನ್ ಕಾಲೂಹೆಯಿಂ ! ಪುಳಿನ
ಶೈತ್ಯದಿಂದಮೆ ಸಲಿಲ ಶಿಶಿರತೆಯನನುಭವಿಸಿ
ಮಿಂದೆನಿಲ್ಲಾ ಚಳಿಗೆ ಸೆಡೆತು ! ಈ ಮರ್ಬಿನೊಳ್         ೧೬೦
ಬಟ್ಟೆಗೆಡುವುದೆ ದಿಟಂ ಪೊಳೆವೊನಲ್‌ಗುಂ ! ಹು ಹು ಹು !”
ನಡುನಡುಗಿ ನಡೆದನೊಲೆಯೆಡೆಗೆ, ಮುದುಗಿದ ಮೆಯ್ಯ
ಲಕ್ಷ್ಮಣಂ.
ಪೊಳ್ತಿನಿತನಂತರಂ ಪೊಳ್ತೇರೆ,
ಪೊಳ್ತರೆಯ ಕದಿರುಗಳಿಟ್ಟಣಿಸಿದೈಕಿಲಿಗೆ
ಗೊಟ್ಟಿಗಾಳೆಗವಾಗಿ, ಸೋಲ್ತ ಮಂಜಿನ ಸೇನೆ
ಸಾಂದ್ರತೆಯನುಳಿದು, ವಿರಳತೆಯಾಂತುಮೊಳಸೋರ್ದು
ಚೆದರಿ, ದಳದಳವಾಗಿ, ಗಿರಿಶಿಖರ ಸೀಮೆಯಿಂ
ಮೆಲ್ಲನೆ ಪೆಡಂಮೆಟ್ಟಿ ಸರಿಯತೊಡಗಿತು ಸಾನು
ನಿಮ್ನತೆಗೆ. ತೂಲಸಮ ಪೀಯೂಷ ಕೋಶದಿಂ
ಕೇಶ ತನುತರ ತಂತುವನ್ನೆಳೆದು ಕುಶಲದಿಂ   ೧೭೦
ನೆಯ್ದಮೃತ ಕೌಶೇಯ ಯವನಿಕಾಚ್ಛಾದಿತಂ
ಮೆರೆದಿರೆ ಮನೋಹರಾಸ್ಪಷ್ಟ ಕಾನನ ಭೂಮಿ,
ಹೊಳೆಗಾಗಿ ಹೊರಹೊಂಟನಾಶ್ರಮವನಿನಕುಲಂ
ಸೀತಾ ಸಮೇತಂ. ಸಲಿಲ ಕಲಶಮಂ ಪಿಡಿದು
ಜೊತೆ ನಡೆದನೂರ್ಮಿಳೇಶಂ.
ಪಟ್ ಟಪಟ್ಟ್ ಎಂದು
ಹಿಮಸಿಕ್ತ ಪತ್ರದಿಂ ಬಿಳ್ದುವು ತುಹಿನಬಿಂದು,
ತೋರ ಮಳೆಹನಿಗಳೋಲ್. ತೂರಿ ಬಂದೆಳವಿಸಿಲ್
ಕೋಲುಕೋಲಾಗಿ ಕಾಡಿನ ನಡುವೆ ಚೆಲ್ವಾಯ್ತು,
ಛಾಯೆಮಾಯೆಯ ಸೃಜಿಸಿ. ನಿಡು ಬೆಳೆದ ಮರನೆಳಲ್
ನಸುನೀಲಿಯಾಗಿ ಮಂಜಿನ ಮೆಯ್ಗೆ ಚಿತ್ತಾರಮಂ          ೧೮೦
ಕಂಡರಿಸಿದತ್ತು. ಮೂಡಿದುವು ಮಳೆಬಿಲ್ಗಳುಂ
ತಾಮಲ್ಲಲ್ಲಿ. ಋತದ ಕಲ್ಪಿತಮಿಳಿದು ನನಸಾಗೆ
ಪೊರಮಟ್ಟುಮರ್ಧಮಾರ್ಗದೊಳೆಂತೊ ನಿಂದವೋಲ್
ಇಂಬಾದಳಾ ತುಹಿನ ತನುವಸನೆ, ತನ್ವಂಗಿ,
ಸಸ್ಯಶಾಲಿನಿ ಪೃಥಿವಿ !
“ನೋಡು, ಮೈಥಿಲಿ, ಅಲ್ಲಿ !
ಪನಿ ತಳ್ತ ಶಾದ್ವಲ ಶ್ಯಾಮವೇದಿಕೆಯಲ್ಲಿ
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವಾ ಹಿಮದ ಬಿಂದು ! ಜ್ವಲಿಸುತಿದೆ
ನೋಡೆಂತು ಬಣ್ಣದೆಣ್ಣೆಯ ಹಣತೆ ಸೊಡರಂತೆ
ಸಪ್ತರಾಗೋಜ್ವಲಂ ! ಸರ್ವಸೃಷ್ಟಿಯ ದೃಷ್ಟಿ ತಾಂ         ೧೯೦
ಸೆರೆಯಾಗಲೊಪ್ಪಿರುವುದಾ ಹನಿಯ ಹೃದಯದಾ
ಪುಟ್ಟ ಜೋತಿಯಲಿ ! ದೇವರ ಮುಖದ ದರ್ಶನಕೆ
ಸಾಲದೇನಾ ಹನಿಯ ಕಿರುದರ್ಪಣಂ ? ನಿಲ್ಲಿಮ್ ; ಆ
ಇರ್ಬನಿಯ ಕಿಡಿಗುಡಿಯೊಳಾರಾಧನೆಯನೆಸಗಿ
ಮುಂಬರಿಯುವಂ !”
“ದೇವಿ, ಹೇಮಂತಮಿಷ್ಟಋತು
ತಾನೈಸೆ ! ದೂರಸೂರ್ಯನೆ ಚಂದ್ರನಾತಪಮೆ
ಕೌಮುದಿ. ಸುಖಾಸ್ಪದಂ ಹಿತಕರಂ ಶೀತಲಂ
ಮಧ್ಯಾಹ್ನಮುಂ. ಸುಭಗನಗ್ನಿ. ದುರ್ಭಗಮೈಸೆ
ನೆಳಲ್ ನೀರ್‌ಗಳೆರಡುಂ ….” “ಐಕಿಲಿರ್ಪಿಂ ತೊಯ್ದ
ಪೊನ್ದೆನೆಯ ಮುಡಿವೊರೆಗೆ ಬಾಗಿ ಶೋಭಿಪವಲ್ತೆ          ೨೦೦
ಗದ್ದೆಗಳಯೋಧ್ಯೆಯೊಳ್ !” “ಕಾಣಿಮಾ ಕಾಡಾನೆ
ಜೊಂಡುವುಲ್ಗೆಳಸಿ ಸೊಂಡಿಲ ನೀಡಿ, ಮತ್ತೊಡನೆ
ಕರ್ಚ್ಚುವೈಕಿಲ್ ಕುಳಿರ್‌ಗಳುಕಿ ಸೆಡೆಯುತೆ, ಬಾಯ್ಗೆ
ಪುಗಿಸುತಿದೆ ರಿಕ್ತಹಸ್ತವನುಸಿರ ಬಿಸುಪಿಂಗೆ
ಬಯಸಿ !” “ಸರಯೂ ನದಿಯೊಳವಗಾಹನಂ ಗೆಯ್ಯೆ
ನೋಂತ ಭರತನದೆಂತೊ ಈವೊತ್ತಿನೀ ಚಳಿಗೆ
ಮನದಂದಪಂ !” “ಜಿತೇಂದ್ರಿಯನಾತಗಾ ವ್ರತಂ
ಅಪ್ರಿಯಮೆ ?” “ಧರ್ಮಜ್ಞನಾತನಾ ಕೈಕಯೀ
ಕ್ರೂರದರ್ಶಿನಿಯ ಗರ್ಭದಿನೆಂತುಟುದಿಸಿದನೊ
ಸೋಜಿಗಂ !” “ಸೌಮಿತ್ರಿ, ನಿಂದಿಸದಿರಂಬೆಯಂ.         ೨೧೦
ನುಡಿಯುವೊಡೆ ನುತಿಸು ತಮ್ಮನ ಗುಣಗಣಂಗಳಂ.
ಈ ಪ್ರಕೃತಿಸೌಂದರ್ಯಮೆಮಗೆ ಪೇಸುವುದಲ್ತೆ
ನಿಂದಾ ರತರ್ಗೆ ! ನೋಡದೊ ಮಲೆಯ ನೆತ್ತಿಯಿಂ
ಹಿಂಜರಿದ ಮಂಜೆಂತು ಓಡುತಿದೆ ಆ ಹೊಳೆಯ
ಹರಿವ ಹೊನಲಿನ ಕಣಿವೆವಟ್ಟೆಯೊಳ್ ! ನೀರ್ವಕ್ಕಿಗಳ್
ಕೀರ್ತಿಸುತ್ತಿವೆ ಮೂಡುನೇಸರಂ. ಬಿಸಿಯುಸಿರಾವಿ
ಮರ್ಬುಗೈದೊಂದು ಮುಕುರಂಬೋಲೆ ಮಲಿನಮದೊ ಕಾಣ್
ತಪನ ಬಿಂಬಂ. ಮಗ್ನಮೆಂಬವೋಲಸ್ಫುಟಂ
ಸುಸ್ಥಿರಮಪುಷ್ಪ ವನರಾಜಿಗಳ್. ಅದೊ ನದಿಯ ನೀರ್
ಮಿರುಗಿತಿದೆ ಪಾದರಸದೊಲ್, ಪ್ರತಿಕೃತಿಸಿ ದಿವಾ        ೨೨೦
ಕೀರ್ತಿಯಂ !”
ಮಿಂದು ನಾರ್ಮಡಿಯುಟ್ಟು ಹಿಂದಿರುಗಿ
ಬರ್ಪಾಗಳಗ್ರಜಂ ಜಲಪೂರ್ಣಕಲಶಮಂ
ಪೊತ್ತು ನಡೆದಿರ್ದವರಜಂಗೆ : “ನಾಮಿಲ್ಲಿಂದೆ
ಪಿಂತೆ ಮರುಳುವ ಪೊಳ್ತು ಸನಿಹಮಾದುದು, ತಮ್ಮ.
ನಾಳೆ ನಾಡಿದರೊಳಗೆ ಮಂಗಳ ಮುಹೂರ್ತಮಂ
ಪಾರ್ದು ಪೊರಮಟ್ಟರವಧಿಯ ಕೊನೆಗೆ, ಭರತಂಗೆ
ಪೂಣ್ಕೆನುಡಿಗೊಟ್ಟಂತೆ, ಮುಟ್ಟುವೆವಯೋಧ್ಯೆಯಂ.
ಬಂದ ಮಾರ್ಗಂಬಿಡಿದು ಋಷಿವರ್ಯರಂ ಕಂಡು,
ವಂದಿಸಿ ನುಡಿಸಿ ಮುಂದೆ ತೆರಳುವಂ.”
ದಾರಿಯೆಡೆ
ಹೊಮ್ಮಿದೆಳಹೊಂಬಿಸಿಲ್ ಬಿಳ್ದೊಂದು ಬಿದಿರ್ಮೆಳೆಯ   ೨೩೦
ತುದಿಗಣೆಯೊಳಿರ್ದೊಂದು ಕಾಮಳ್ಳಿಗಳ ಹಿಂಡು
ಹಾರಿದುದು ಗುಂಪುಲಿಯನೆಸೆದು. ಆ ದನಿಯಿಂಪೆ,
ಹೆಪ್ಪುಗಟ್ಟುತ್ತೈಕಿಲಿಗೆ, ಹನಿಹನಿಯವೋಲೆ
ಹೊಳೆವ ಮುತ್ತಿನಮಳೆಯ ಸೂಸಿತೆನೆ, ಗರಿಗರಿಯೆಲೆಯ
ಹಿಮಮಣಿಗಳುದುರಿದುವು ಸೀತಾ ಶಿರೋರುಹಕೆ.
“ದೇವಿಯರನಭಿನಂದಿಸುತ್ತಿಹಳರಣ್ಯಸಖಿ !”
“ಅಲ್ತಲ್ತು. ತಂಗಿ ಊರ್ಮಿಳೆಯ ಕಣ್ಣೀರುಗಳ್, ಮುನ್
ಬರ್ಪ ಸೊಗಕುರ್ಕಿ, ಮುಂಗಾಣ್ಕೆಗಳನರ್ಪಿಸಿಹವೈ
ಪ್ರಾಣೇಶ್ವರನ ಚರಣತಲಕೆ !” “ಏಂ ಜಾಣ್ಮೆನುಡಿ !”
ಎನುತೆ ನಾಣ್ಚಿದ ಲಕ್ಷ್ಮಣಂ, ಮತ್ತೆ : “ಅಣ್ಣಯ್ಯ, ೨೪೦
ನಿಮ್ಮ ಪಟ್ಟಾಭಿಷೇಕಕ್ಕೆ ಇಂತುಟೆ ವಲಂ
ಮುತ್ತಿನ ಮಳೆಗಳಕ್ಕೆ ಎಂದು ಪರಸಿದಳಲ್ತೆ
ಸರ್ವಮಂಗಳೆ, ಜಗಜ್ಜನನಿ !” “ತಾತ್ಪರ್ಯಮಂ
ಪೇಳ್ವೆಯಾದೊಡಮೇಕೊ ತಳ್ಳಂಕಗೊಳ್ಳುತಿದೆ
ಮನ್ಮನಂ ! ಲೋಕದನುಭವಮಿಂತೆ : ಗುರಿ ಬಳಿಗೆ
ಸಾರಿ ಬರೆ, ಪೆರ್ಚಿದಪುದೆರ್ದೆಯ ಕುದಿದಾಟಮುಂ !”
ಮುಂದೆ ನುಡಿದೋರ್ದರಿಲ್ಲೊರ್ವರುಂ. ತಂತಮ್ಮ
ಚಿತ್ತ ಚಿಂತೆಯ ಭಾರಮಂ ಪೊತ್ತ ಮೌನದಿಂ
ಪೊಕ್ಕರಾ ನಿರ್ಜನ ಜನಸ್ಥಾನದಾ ಕುಟಿಗೆ.
ಪೂರಯಿಸಿ ಪೂರ್ವಾಹ್ನ ಕರ್ಮಂಗಳಂ, ಭುಜಿಸಿ           ೨೫೦
ವನಜನ್ಯ ಪಲಫಲಂಗಳನೆಲೆವನೆಯ ಹೊರಗೆ
ಲಘುಕುಟ್ಟಿಮಸ್ಥಳದಿ ವಿಶ್ರಮಿಸಿಕೊಳ್ಳುತಿರೆ,
ರಘುಕುಲರೆಡೆಗೆ ಬಂದುದಾ ಜನಸ್ಥಾನಕ್ಕೆ
ಸುತ್ತಣ ತಪೋವನದೊಳಲ್ಲಲ್ಲಿ ನೆಲೆಸಿರ್ದ
ಕಿತ್ತಡಿಗಳೊಂದು ಕೂಟಂ :
“ಅಶುಭವಾರ್ತೆಯಂ
ಪೊತ್ತು ತಂದೆವೊ ನಿನಗೆ, ಶುಭದರ್ಶಿ. ನೀನಿಲ್ಲಿ
ನಿಂದ ಮೊದಲಿಂದಮಿಂದಿನವರೆಗೆ ನಮಗಾಯ್ತು
ನೆಮ್ಮದಿಯ ಬಾಳ್ಕೆ. ಮೊನ್ನೆಯ ಸಂಜೆ, ಬೇರ್ಗಳಂ
ತರವೋದ ನಮ್ಮವರನಾರೊ ಮಾಯಾವಿಗಳ್,
ಪೆಣ್ವರಿಜುವೊತ್ತವರ್, ತಿಣ್ಣನೆ ಬಡಿದರಲ್ತೆ !      ೨೬೦
ರಕ್ಕಸರ ಪೆರ್‌ತಂಡವೊಂದಿತ್ತೀಚೆಗಿತ್ತಣ್ಗೆ
ನುರ್ಗ್ಗುತಿರ್ಪಾಶಂಕೆಯೆಮಗೆ. ಪಿಂತಿರುಗಿ ನೀಂ
ಪೋಪೆಯಪ್ಪೊಡೆ, ಕೆಲದಿನಂಗಳಿಲ್ಲಿಯೆ ತಳುವಿ,
ಪೃಥಿವಿಪತಿ, ನಿನ್ನ ಬಿಲ್ಲಿನ ಜೇವೊಡೆಯ ದನಿಯ
ದುರ್ದಮ್ಯರಕ್ಷಣೆಯನೆಮಗಿತ್ತು ತೆರಳಯ್ಯ !”
ಅಭಯವಚನವನಿತ್ತು ಕಳುಹಿದನ್ ಬೆದರಿದಾ
ಜಡೆವೊತ್ತರಂ. ಕಳವಳವನುಳಿದು ತಮ್ಮನಂ
ಬೆಸಸಿದನ್ : “ಸೌಮಿತ್ರಿ, ಸುತ್ತಣ ಅರಣ್ಯಮಂ
ಸುತ್ತಿ ಬಾ …. ಬೆನ್ಗಿರಲಿ ಋಷಿ ಅಗಸ್ತ್ಯನ ಕೊಟ್ಟ
ಶರಧಿ…. ಶರಭಂಗಮುನಿಯಿತ್ತ ಕೋದಂಡಮಂ          ೨೭೦
ಕೈಕೊಂಡು ನಡೆ…. ಮತ್ತೆ ಮೊದಲಾಗುವಂತೆವೋಲ್
ತೋರುತಿಹುದೆಮ್ಮ ಕಾಂತಾರ ಕಷ್ಟಂ !” ಸುಯ್‌ಸುಯ್ದು
ನುಡಿದಣ್ಣನಾಭೀಳ ಮುಖಮುದ್ರೆಯಂ ಕಂಡು
ಬೆಕ್ಕಸವಡುತೆ ಲಕ್ಷ್ಮಣಂ ಪೋದನಾಜ್ಞೆಯಂ
ಮೇಣಂತೆ ಪೊತ್ತು ಕೋದಂಡಮಂ.
ಕಾಡನಲೆದಾ
ಬೇಹುಕಾರಂ ಬಳಲಿ, ಬೈಗುದಂಪೆಲರ್ಗೆಳಸಿ
ಸೊಗಸಿ, ಮಲೆದಲೆಗೋಡಿನೊಂದರೆಯ ತುದಿಗೇರಿ
ಕುಳಿತು ವಿಶ್ರಮಿಸಿಕೊಳುತಿರ್ದೂರ್ಮಿಳಾಪ್ರಿಯಂ
ಬೆರಗಾದನೊಂದದ್ಭುತವನನುಭವಿಸಿ : ಕಿವಿಗೆ
ಜೇನಿಳಿದುದೊಂದು ಬಹುದೂರಗೇಯಂ ! ಮತ್ತೆ          ೨೮೦
ತುಂಬಿತು ವಿಪುಷ್ಟವನರಾಜಿಯಂ ಪರಿಮಳಂ
ಹೇಮಂತದಾ ! ಅಂತೆ ಮೇಣ್ ಕಣ್ಗೊಳಿಸಿತಚ್ಚರಿಯ
ಸುರಚಾಪ ವರ್ಣಜಾಲಂ ಬೈಗಿನಾಕಾಶಮಂ
ಬಾಸಣಿಸುತದ್ರಿವನ ಪೃಥ್ವಿಯನಲಂಕರಿಸಿ !
ಏನಿದೇನೆಂದು ನೋಡುತಿರೆ, ದಕ್ಷಿಣ ದಿಶಾ
ವಾಯುಪಥಮಂ ನಡೆವ ರಥವೋ ಎನಲ್ಕೊಂದು
ಬಣ್ಣ ಬಣ್ಣದ ಮುಗಿಲ್, ಮಳೆಬಿಲ್ಲ ತೇರಿನೊಲ್,
ಬಳಿಸಾರ್ದುದೊಯ್ಯನೆ ತೇಲಿತೇಲಿ. ಬಳಿಬಳಿಗೆ
ಸಾರಿ ಬರೆವರೆ ಮುಗಿಲತೇರು, ನೆರೆಯೇರ್ದುದಾ
ಹೊನಲಿಂಚರಂ; ಕಮ್ಪುಮುಕ್ಕಿತುಜ್ವಲವಾಯ್ತು            ೨೯೦
ಮಂಜು ಸಂಧ್ಯೆಯ ಕಾನ್ತಿಯುಂ. ನೋಡುತಿರ್ದಂತೆ
ಗಂಧಮಂ ಗಾನಮಂ ಸೋನೆ ಸೂಸುತ್ತಮಾ
ವರ್ಣಮಯ ಮೇಘಮಿಳಿದುದು ಜನಸ್ಥಾನದಾ
ಕಾಡುಕಣಿವೆಯೊಳಿರ್ದವರ ಪರ್ಣಕುಟಿಯಿರ್ದ
ದಿಕ್ಕಿನಲಿ : ಹಬ್ಬಿ ತುಂತುರ್ ಮಂಜು, ಮರ್ಬ್ಬಾಯ್ತು
ತುಹಿನರ್ತು ಸಂಧ್ಯೆ ! ಕಳವಳಗೊಂಡು ಲಕ್ಷ್ಮಣಂ
ಬೇಗಬೇಗನೆ ಇಳಿದನಾ ಅಚಲಚೂಡಮಂ
ತ್ಯಜಿಸಿ.
ಕೌತುಕದಿ ಸೀತಾರಾಮರೀಕ್ಷಿಸಿರೆ,
ಮಂಜಿನೊಲ್ ಪಸರಿಸಿದ ಮುಗಿಲ ತೇರಿಂದೊಂದು
ಮೂಡಿದುದು ಮಂಜುಮ ಸ್ತ್ರೀಮೂರ್ತಿ. ಒಯ್ಯನೆಯೆ,    ೩೦೦
ನಯ ವಿನಯಮೊಯ್ಯಾರ ಸಂಸ್ಕೃತಿಗಳೊಂದಾಗಿ
ಮೆಯ್ವೆತ್ತವೊಲ್ ಬಂದಳಾ ವಿಯಚ್ಚರ ಯೋಷೆ,
ಪಜ್ಜೆಗೆಜ್ಜೆಗಳುಲಿಯ ಬಿಂಕಂ ಬಲೆಯ ಬೀಸೆ :
“ಸುಸ್ವಾಗತಂ ನಿನಗೆ, ಕೋಸಲೇಶ್ವರ. ನಮ್ಮ
ದಕ್ಷಿಣಾವನಿಗೆಮಗೆ ನೀನತಿಥಿ. ಚಂದ್ರನಖಿ ನಾಂ;
ಲಂಕೇಶ್ವರನ ಭಗಿನಿಯೆಂ !” ಕಳವಳಿಸಿ ಸೀತೆ
ಕಂಡಳಿನಿಯನ ಕಣ್ಣ ಭಾವಮಂ. ರಾವಣನ
ನಾಮಶ್ರವಣ ಮಾತ್ರದಿಂ ತನ್ನ ಮನಕೆಂತು
ತೋರ್ದುದೊ ಭಯಾನಕಂ, ತನ್ನ ರಮಣಂಗಂತೆ
ಮೊಗದೊಳೆಸೆದುದು ಮಚ್ಚರದ ಕಿಚ್ಚು. ತುಟಿಗೊಂಕಿ     ೩೧೦
ಬೀಸಿದನ್ ನುಡಿಗತ್ತಿಯಂ : “ರಾವಣನ ತಂಗೆ,
ತಳುವಿ ಬಂದೆಯಲಾ ಸುಖಾಗಮನಮಂ ಬಯಸೆ !
ನಾಳೆಯೋ ನಾಡಿದೋ ಬೀಳ್ಕೊಂಡಪೆವು ನಿಮ್ಮ
ಈ ಅಡವಿ ಪೊಡವಿಯಂ. ಅಯ್ಯೊ, ಆತಿಥ್ಯಮಂ
ಸವಿವ ಸೌಭಾಗ್ಯಮೆನಗಿಲ್ಲಾಯ್ತಲಾ !” ನಕ್ಕು
ಮಾರ್ನುಡಿದಳಿಂತಾ ದನುಜನನುಜೆ : “ಹೊಣೆ ನಮತು,
ನಂಟರ ಮನೆಗೆ ಹೋಗುವನ್ನೆಗಂ ; ಹೋದಂದು
ನಾವವರ ಸೆರೆಯಲ್ತೆ ಬಿರ್ದ್ದನಿಕ್ಕುವವರೆಗೆ,
ಮೇಣವರೆ ಬೀಳುಕೊಡುವನ್ನೆಗಂ ? ನೀಮೆಂತು
ಪಿಂತಿರುಗುವಿರಿ ಬಿರ್ದ್ದನುಣ್ಣದೆಯೆ ನಾಮಿಕ್ಕುವಾ ?       ೩೨೦
ನಿಮಗುಮದು ತಗದು ; ನಮಗಪಕೀರ್ತಿ !” “ವಿಚಿತ್ರಮೀ
ದಾಕ್ಷಿಣಾತಿಥ್ಯಂ ಬಲಾತ್ಕಾರ ಸತ್ಕಾರಂ !”
“ದಿಟದೊಲ್ಮೆ ಹಠವಾದಿ. ಔಪಚಾರಿಕಮಲ್ತು, ಕೇಳ್,
ರಾಕ್ಷಸಕುಲದ ಛಲದ ದೃಢನಿಶ್ಚಲ ಪ್ರೀತಿ.
ಊಟದೊಳ್ ಕದನದಾಟದೊಳಂತೆ ಬೇಟದೊಳ್
ಬಲನಿಷ್ಠೆಯೆಮ್ಮ ಸಲ್ಲಕ್ಷಣಂ ! ಮಾಳ್ಪುದಂ
ರಸಪೂರ್ಣಮೆನೆ ರಾಗಪೂರ್ವಕಮಾಗಿ ಮಾಳ್ಪುದದೆ
ನಮಗೆ ನಲ್ ! ಕೋಸಲೇಶ್ವರ, ನಮ್ಮ ಪ್ರೇಮಮಂ
ತಣಿಯುಣದೆ ನೀಂ ಪಿಂತಿರುಗಿ ಪೋಪುದಸದಳಂ !”
“ಬಿರ್ದ್ದಿನೌತಣಮೇಕೆ ? ಮೇಣರಸು ಸೊಗಮೇಕೆ ?       ೩೩೦
ನಾಡಿನೊಳವೆಲ್ಲಮಂ ತೊರೆದು, ನೋಂಪಿಗೆ ನೋಂತು
ಕಾಡನಲೆವೆಮಗೆ ?” “ಮೈತ್ರಿಯೆ ಕೊಡುಗೆಯಾಗುವೊಡೆ
ನೋಂಪಿಗದರಿಂ ಕೇಡೆ ?” “ಉಂಟೆ ? ನೋಂಪಿಯ ಮುಡಿಗೆ
ಹಗೆತನವನಳಿಸುತಕ್ಕರೆಯನುಕ್ಕಿಸಲಿಕಾಂ
ತೊರೆದು ದೊರೆಗದ್ದುಗೆಯನಿಲ್ಲಿಗೈತಂದೆನೈಸೆ !”
“ನಿನ್ನವೋಲಾನುಮದನರಸಿ ಬಂದಿಹೆನಿಂದು
ನಿನ್ನೆಡೆಗೆ, ಕೇಳ್, ಸರಸಿ. ನೀಂ ಕರುಣಿ, ಧರ್ಮಮತಿ,
ದಾನರುಚಿ. ನಾಥನಿಲ್ಲದ ತರುಣಿಯಾಂ. ನನ್ನ ಬಾಳ್
ಬರಿಯ ಪಾಳ್. ಮಡಿದನೆನ್ನಾಣ್ಮನೆನ್ನಣ್ಣನಿಂ   ೩೪೦
ತನ್ನ ಕಿರುವರೆಯದೊಳ್. ಪಾತಾಳಯುದ್ಧದೊಳ್
ತೊಡಗಿರ್ದರಿರ್ವರುಂ. ಕಳ್ತಲೆಯ ಕುರುಡಿಂದೆ
ಒರ್ವರೊರ್ವರನರಿಗೆ ಗೆತ್ತು ಪುರುಡಿಸಿ ಕಾದಿದರ್.
ಗಂಡನಳಿದನ್ ಗಂಡುಗಲಿ ರಾವಣನ ಕೈಯ
ಕೈದುವಲಿಯಾಗಿ. ನಾನಂದಿನಿಂದೀವರೆಗೆ
ಮಳೆಯ ನೀರ್ಗಾಣದೆಯೆ ಬಂಜರಾದೊಳ್ನೆಲದ
ಪಾಂಗಿಂದೆ ಬರ್ದುಕುತಿಹೆನೆಂತೊ ರಿಕ್ತತೆಗತ್ತು
ಸತ್ತು ಬೇಸತ್ತು. ನನ್ನೆರ್ದೆಯ ನೀರಸದಿಳೆಗೆ ನೀಂ
ಮಳೆಯಾಗಿ ಕರೆಯಯ್ಯ, ಹೊಳೆಯಾಗಿ ಹರಿಯಯ್ಯ ;
ಹಚ್ಚನೆಯ ಹಸುರು ಪಯಿರಿನ ಬೆಳೆಯ ಸಿರಿಯಾಗಿ       ೩೫೦
ಬಾರಯ್ಯ. ಕಲ್ಪತರು ನೀನಲ್ತೆ ಬೇಳ್ಪರಿಗೆ ?”
ಮಿಂಚಿನಂಚಿನ ಮೋಡದೊಲ್ ಬಳಿಗೆ ಬರ್ಪಳಂ,
ಮೇಘಾಂಗಿಯಂ, ಪರ್ವತಂಬೋಲ್ ತಡೆದು : “ಅನಾರ್ಯೆ,
ನೀನನ್ಯಭಾರ್ಯೆ ! ರಾಕ್ಷಸ ವಿವಾಹಕ್ರಮಂ, ಕೇಳ್,
ನಮಗಸಹ್ಯಂ !” ರಾಮನಿಂತು ಕಿರುನಗೆವೆರಸಿ
ನುಡಿದು, ತನ್ನರಸಿಯಂ ನೋಡಿ, ಕಣ್ಣರಿತಂತೆ
ಪರಿಹಾಸ್ಯಮನನಾಗಿ ಚಂದ್ರನಖಿಯಂ ಕುರಿತು,
“ಪತ್ನಿಯಿಹಳೆನಗಿವಳ್; ಪ್ರಿಯೆಯುಂ ವಲಂ; ಮೇಣ್
ಚೆಲ್ವಿಗೇನಲ್ಲಿ ಕೊರೆಯಿಲ್ಲ ! ತುಂಬಿಹ ಹೊಡೆಗೆ
ಸೇರದಮೃತಾನ್ನಮುಂ” “ಒಪ್ಪಿದೆನ್. ಈ ಸತಿಗೆ          ೩೬೦
ಹೆಗಲೆಣೆಯನಾಂ ಕಂಡೆನಿಲ್ಲ. ನನ್ನತ್ತಿಗೆಯ
ರೂಪಿರ್ಪುದಿದಕೆ ಹೊಯಿಕೈಯಪ್ಪುದಾದೊಡಂ
ಗುಣಕೆ ಮಚ್ಚರಮೇಕೆ ? – ಸಿಹಿಗೆಂತು ರುಚಿಯಿಹುದೊ
ಕಹಿಗುಮಂತೆಯೆ ಬೇರೆ ರುಚಿಯಿರದೆ ? ಭೋಜನದ
ರಸಿಕಂಗೆ ಬೇರೆ ಬೇರೆಯ ರುಚಿಯ ರಸಗಳೊಳ್
ಭೇದಭಾವಮದೇಕೆ ? ನಿಮ್ಮುತ್ತರದ ರತಿಯ
ಸಾತ್ವಿಕ ರಸದ ಜೊತೆಗೆ ನಮ್ಮ ದಕ್ಷಿಣ ರತಿಯ
ರಾಜಸವನನುಭವಿಸಿ ನೋಳ್ಪೊಡೆ ಕಳಂಕಮೇಂ
ರಾಜ ರಸಿಕತೆಗೆ ?” ನಗೆಗೊಂಕಿನಾ ಚಂದ್ರನಖಿ
ಹೂವಿನಾಕೃತಿವೆತ್ತ ಹಾವಿನಂದದಿ ನಿಂತು       ೩೭೦
ಹೆಡೆ ನಲಿಯುತಿರೆ, ಹುಬ್ಬುಗಂಟಿಕ್ಕಿದನ್ ಮೈಥಿಲಿಯ
ಮನದನ್ನನಿಂತು : “ನಿಲ್, ನುಡಿಯದಿರ್ ಪೊಲ್ಲಮಂ.
ಸಾಲ್ಗುಮೀ ಪಾಣ್ಬೆಜಾಣ್. ನೀನೆತ್ತಣಿಂದರಿವೆ,
ಸಿತಗೆ, ಹದಿಬದೆತನದ ನಿರ್ಮಲಾನಂದಮಂ ?
ಹದಿಬದೆಗೆ ತೋರ್ದಪುದು ತನ್ನಿನಿಯನೊರ್ವನೊಳೆ
ಸರ್ವ ಮನುಜರ, ಮತ್ತೆ ಸರ್ವಲೋಕದ ಸರ್ವ
ವೈವಿಧ್ಯಮುಂ. ಪ್ರೇಮನಿಷ್ಠೆಯ ಪತಿಗುಮಂತೆ
ತನ್ನ ಸತಿಯೊಳೆ ತೋರ್ದಪುದು ಸರ್ವ ಲಲನೆಯರ
ಸರ್ವಶೃಂಗಾರಮುಂ ! ಲಂಕೇಶ್ವರನ ತಂಗೆ
ನೀನಾಗಿಯುಂ ನುಡಿವೆ ನಾಡಾಡಿ ಬೆಲೆವೆಣ್ಗಳುಂ          ೩೮೦
ನಾಣ್ಣುವಳಿನುಡಿಗಳಂ ; ಸೋಜಿಗಂ !…. ಇಹಳಿಲ್ಲಿ
ಮರ್ಯಾದೆವೆಣ್, ಜನಕ ರಾಜರ್ಷಿಯ ಕುಮಾರ್ತೆ.
ಮಾತು ಸಾಕಿಲ್ಲಿರದೆ ನಡೆ, ಸಹೋದರ ಲಕ್ಷ್ಮಣಂ
ಬರ್ಪನಿತರೊಳ್. ಬಂದೊಡಪ್ಪುದು ನಿನಗೆ ತಗುವವೊಲ್
ಮದುವೆ ಮರಿಯಾದೆ !”
ದೂರದಿ ಕಂಡುದಾ ಮೂರ್ತಿ
ಬೈಗು ಮರ್ಬಿನ ಮಂಜಿನೊಳ್. ಬೇಗಮೈತಂದು,
ಶಂಕೆಯಿಂ ದಿಟ್ಟಿಸಿದನಾಪಾದ ಮಸ್ತಕಂ,
ಕುಡುದಿಂಗಳಂತೆವೋಲ್ ನಿಂದಾ ನವಾಂಗಿಯಂ.
ಪುಲಕಿಸಿತು ತನು ಚಂದ್ರನಖಿಗೆ, ರಾಜಸ ಗುಣದಿ
ತನಗೆಣೆಯೆ ದೊರೆತಂತೆ; ಮೇಣ್ ಸತಿಯಿಲ್ಲದಾತಂಗೆ   ೩೯೦
ರತಿಯಾಗುವಾಸೆಗೆ ಮನಂ ಮಿಂಚಿತೆಂಬಂತೆ !
ಹೆಣ್ಣಿನಿಂದಣ್ಣಂಗೆ ಕಣ್ದಿರುಹಿ ನೋಡಲ್ಕೆ
ನಗೆಗೂಡಿ ಬಣ್ಣಿಸಿದನಾತನಾ ನಡೆದನಿತುಮಂ.
ಕೇಳ್ದು ಕಿಚ್ಚುರಿದೆದ್ದು “ತೊಲಗೆಲೆ ನಿಶಾಚರಿಯೆ !”
ಎನುತೆ ತೋಳಂ ಬಾಣಸಹಿತಮಂ ಬೀಸುತಿರೆ
ಕೆತ್ತಿತು ಪ್ರಮಾದದಿಂ ರಕ್ಕಸಿಯ ಮೋರೆಯಂ,
ನೆತ್ತರ್ವೆರಸಿ ಕೋಪವುಕ್ಕಲ್ಕೆ. – ತೆಕ್ಕನೆಯೆ
ಶೂರ್ಪನಖಿಯಾದಳಾ ಚಂದ್ರನಖಿ : ಗುರ್ವಿತ್ತು
ಭೀಷಣಾಕೃತಿ. ಭೀತಿ ಜೊಂಪಿಸಿತು ಸೀತೆಯಂ,
ಮೋಹದಿಂದಾಕೆಗೊದಗಿದ ಮೋಹನಾಕೃತಿಗೆ ೪೦೦
ವೈರದಿಂ ವೈರೂಪ್ಯಮಾದುದೆನೆ, ನಖಚಯಂ
ಮೊರದವೋಲಗುರ್ವಾದುವಾ ಸ್ವೈರ ರಾಕ್ಷಸಿಗೆ.
ಕಾಮರೂಪಿಣಿ ಭೀಮ ಭೀಕರಾಕಾರಮಂ
ತಾಳ್ದುದೆ ತಡಂ, ಕೆತ್ತಿದುದು ಲಕ್ಷ್ಮಣನ ಕತ್ತಿ
ಮಾಯಾವಿನಿಯ ಮೋರೆಯಂ, ಮೂಗರಿಯುವಂತೆ,
ಸಿಡಿದಳಂಬರಕೊಡನೆ ವರ್ಷಾಭ್ರವೇಷದಿಂ
ರೋಷರವದಿಂದಶನಿಘೋಷದಿಂ, ನೆಲಂ ನಡುಗಿ
ಗುಡುಗೆ ಗಿರಿಗಹ್ವರಂ !
ತುಂಬಿದತ್ತೊಯ್ಯನೆಯೆ
ಪಂಚವಟಿಧಾತ್ರಿಯಂ ಹೇಮಂತರಾತ್ರಿಯಾ
ಶ್ರೀಮಂತ ಶಾಂತಿ. ಸೀತಾಕಾಂತನಂತರದಿ   ೪೧೦
ಘೂರ್ಣಿಸಿತ್ತೊಂದನತಿದೂರಂ ಮನಃಕ್ರಾಂತಿ !



********

ಶ್ರೀರಾಮಾಯಣ ದ‍ರ್ಶನಂ, ಅಯೋಧ್ಯಾ ಸಂಪುಟಂ: ಸಂಚಿಕೆ 10- ಅತ್ರಿಯಿಂದಗಸ್ತ್ಯಂಗೆ

ಸಂಚಿಕೆ 10 – ಅತ್ರಿಯಿಂದಗಸ್ತ್ಯಂಗೆ
ಅತ್ರಿಮುನಿಯಾಶ್ರಮಕ್ಕಾರತಿಯನೆತ್ತಿತ್ತು
ರವಿಯ ಹೊಂದಳಿಗೆಯಿಂದೋಕುಳಿಯನೆರಚುವಾ
ತ್ರೇತಾ ವಿಪಿನಸಂಧ್ಯೆ. ಕೀರ್ತನಂಗೈದಿರ್ದುದಾ
ಆಶ್ರಮ ದ್ರುಮಶಿಖರ ನೀಡ ನಿಕಟಾಭಿಮುಖ
ಕಲಕಲ ತುಮುಲ ಪಕ್ಷಿಗಾನಂ. ಪವಿತ್ರಸತಿ,
ಅನಸೂಯೆ, ಸೃಷ್ಟಿಗೌರಿಯ ಕಲಾಪೂಜೆಯಂ
ಧ್ಯಾನಿಸುತ್ತಾನಂದ ಶಾಂತಿಯಿಂದಿರೆ, “ಮಹಾ
ಮುನಿಸತಿಯೆ, ಕೃಪೆದೋರೆಮಗೆ ನಿನ್ನ ಮಕ್ಕಳಿಗೆ !”
ಎಂಬ ದನಿಗೇಳ್ದತ್ತಕಡೆ ತಿರುಗಿದಳ್. ಮುದುಕಿ
ಕಣ್‌ ಕೀಲಿಸೀಕ್ಷಿಸಿರೆ ಗುರುತನರಿಯಲ್, “ರಾಮನಾಂ    ೧೦
ಸೀತೆಯಿವಳೆನ್ನ ಸತಿ, ಲಕ್ಷ್ಮಣನೀತನೆನಗೆ
ಸಹೋದರಂ !” ಎನುತೆ ತನ್ನಂ ತಾನೆ ಪರಿಚಯಿಸಿ,
ಮಣಿಯೆ ಮುಂಬರಿದಾತನಂ, ಕಿರುಗೈದ ಕಣ್ಗಳಿಂ
ಕಿರಿಹಿಡಿದು ದಿಟ್ಟಿಸುತ್ತಾ ಶಿಥಿಲೆಯಾ ವಲಿತೆ
ಆ ಸ್ಥವಿರೆ ಮೇಲೆಳ್ದಳತ್ರಿಭಾರ್ಯೆ, ಪಿಂತೊರ್ಮೆ
ತನ್ನಯ ತಪೋಮಹಿಮೆಯಿಂದೆ ಬರಗಾಲಮಂ
ತಡೆಗಟ್ಟಿ, ಶೀರ್ಣವಾರಿಯ ಜಾಹ್ನವಿಗೆ ಸಲಿಲ
ಸಂಪೂರ್ಣತೆಯನೆಸಗಿ, ಮೇಣೀರೈದಿರುಳ್ಗಳಂ
ದೇವಕಾರ್ಯನಿಮಿತ್ತಮೊಂದಿರುಳ್ಮಾಡಿದಾ
ಪಾಂಡುರ ಜರಾ ಮೂರ್ಧಜೆಯ ವೇಪಮಾನಮಾ        ೨೦
ವ್ರತಗೇಹಮಂ ದೇಹಮಂ ಪಿಡಿನೊಯ್ಯನೆಯೆ
ರಾಮಚಂದ್ರಂ. ವಂದಿಸಲ್ಕನಿಬರುಂ ಆರೈ,
ಆ ನಮಸ್ಕಾರ್ಯೆ, ಪರಸಿದಳತ್ರಿಋಷಿಭಾರ್ಯೆ
ಕಣ್‌ ತೊಯ್ಯೆ ಸೊಗಸಿ.
“ಬಾ ಕಂದ, ರಘುರಾಮಾರ್ಯ ;
ಬಾ ಮಗಳೆ, ವೈದೇಹಿ ; ಬಾರ, ಲಕ್ಷ್ಮಣದೇವ ;
ನಿಮ್ಮನತಿಥಿಗಳಾಗಿ ಪಡೆದ ನಮ್ಮಾಶ್ರಮಕೆ
ಬಾಳ್ ಪಣ್ತುದಿಂದು. ನೋಡದೊ, ಸಂಜೆ ನನ್ನವೊಲೆ
ರಾಮಾನುರಾಗದಿಂದುಜ್ವಲಿಸುತಸ್ತಗಿರಿಯಾ
ಪರ್ಣಶಾಲೆಗೆ ಪುಗಲ್ಕುಜ್ಜುಗಂಗೈಯುತಿದೆ !
ನೋಡಲ್ಲಿ : ಮಂದೈಪ ಕಳ್ತಲೆಯ ಮರ್ಬಿನೊಳ್           ೩೦
ಸ್ವಲ್ಪಪರ್ಣದ ಮಹೀರುಹಮುಂ ನಿರೀಕ್ಷಣೆಗೆ
ತೋರ್ಪುದು ಘನೀಭೂತಮಾಗಿ. ಆ ಬಂದರದೊ
ಸ್ನಾನಾರ್ದ್ರ ಸಲಿಲಸಂಪ್ಲುತ ವಲ್ಕಲರ್, ಕಲಶ
ಸಂಲಗ್ನ ಕರರಾ ತಪಸ್ವಿಗಳ್, ನದಿಯಿಂದೆ
ತಂತಮ್ಮ ಪರ್ಣಾಲಯಕ್ಕೆ. ಆ ಬಂದನದೊ
ಪತಿದೇವನಾತನೆ ಮಹರ್ಷಿ, ಭಗವಾನ್ ಅತ್ರಿ !”
ನಿರ್ವಿಕಲ್ಪ ಸಮಾಧಿಯೊಂದನಿರ್ವಚನೀಯ
ಮೌನಮಂ ಕರುವಿಟ್ಟ ಶಾಂತಿಯ ನಿಜಾಕೃತಿಯೊ
ಪೇಳೆನಲ್ಕೈತಂದನಾ ಸನಾತನ ಯೋಗಿ,
ಪ್ರತ್ಯಕ್ಷ ಪ್ರಾಚೀನತಾ ಪ್ರತಿಮನಾದೊಡಂ       ೪೦
ನವ್ಯ ಕಾಲತ್ರಯ ಜ್ಞಾನಿ. ಮಣಿದೆಳೆಯರಂ
ಪರಸಿದನು ಮಂತ್ರಿಸುತೆ ಓಂ ಶಾಂತಿಯಂ. ನುಡಿಸಿ
ನಲ್ಮೆಯಿಂ ಕರೆದೊಯ್ದನೆಲೆವನೆಗೆ.
ಭರತನಂ
ಬೀಳ್ಕೊಂಡನಂತರಂ, ರಾವಣ ಸಹೋದರನ
ಖರನಲೆಗೆ ಮುನಿಗಣಂ ಚಿತ್ರಾದ್ರಿಯಂ ತ್ಯಜಿಸೆ,
ಕಹಿನೆನಹಿಗವಚತ್ತು ರಾಮಚಂದ್ರನುಮದಂ
ಕಳೆದು ಬಂದಾ ಸುದ್ದಿಯಂ ಕೇಳಿದತ್ರಿಋಷಿ
ನೋಡಿದನು ತನ್ನ ಮಡದಿಯ ಮೊಗವನಾಕೆಯುಂ
ಸೀತೆಯ ದೆಸೆಗೆ ನೋಡಿ ಸುಯ್ದಳೆರ್ದೆಗರಗಿ. “ಹಾ,
ವಿಧಿಯ ಕೃತಿಕೌಶಲಕವಧಿಯಿಹುದೆ ?” ಎಂದೆನುತೆ      ೫೦
ತನಗೆ ತಾನಾಡಿಕೊಂಡಾ ಮುನಿ ಧರಾತ್ಮಜೆಯ
ಪತಿಗೆ, “ಶಿಲ್ಪಿಯ ನಿಶಿತ ಟಂಕದ ಮೊನೆಯ ಕಠಿನ
ಶಿಕ್ಷೆಗಲ್ಲದೆ ಪೊಣ್ಮುವುದೆ ಕಲಾಪೂರ್ಣಮಹ
ದೇವತಾ ವಿಗ್ರಹಂ ?” ಎನುತನ್ಯವಿಷಯಮಂ
ನುಡಿದೊಡಗಿದನ್ ದಂಡಕಾರಣ್ಯದಾ ಮತ್ತೆ
ರಾಕ್ಷಸೋಪದ್ರವದ ಕಷ್ಟಕಥೆಯಂ. ಕೇಳ್ದ
ರಾಮನ ಮನದಿ ಸಾಹಸಂ ಕುತೂಹಲಿಯಾಗಿ
ಹೆದೆಯೇರಿದತ್ತು ; ಲಕ್ಷ್ಮಣನ ಕೆಚ್ಚಿಗೆ ನಖಂ
ಮೂಡಿ, ಪರಚಿದತ್ತಾಶ್ರಮ ಮನದ ಮೃದುತನದ
ಮೆಲ್ಮೆತ್ತೆಯಂ ; ಭೀಮಕಾಂತತೆಗೆ ಪುಲಕಿಸುತೆ            ೬೦
ಕಂಪಿಸಿದಳಾ ಸೀತೆ. ಕಂಡದಂ ಮುನಿಪತ್ನಿ
ಜನಕಸುತೆಯಂ ಬಿಗಿದು ತಕ್ಕೈಸಿ, ಮುಂದೊದಗಿ
ಬರಲಿರ್ಪ ಕಡುಪಿಗಿಂದೆಯೆ ಮಂತ್ರವರ್ಮಮಂ
ತೊಡಿಪವೊಲ್, ಪೇಳ್ದಳುಪದೇಶಮಂ ಪತಿವ್ರತಾ
ಪ್ರೇಮ ಮಹಿಮಾ ಶಕ್ತಿಯಂ. ಮೇಣ್ ಪ್ರೀತಿದಾನಮಂ
ಪೂವೊಂದನಿತ್ತಳಾಕೆಗೆ ಮಾನಸಿಕ ಸೃಷ್ಟಿಯಂ,
ಆಶೀರ್ವದಿಸಿ ರಕ್ಷಾಕವಚವೀವಂತೆವೋಲ್.
ಅತ್ತ ಮುನಿಯಂದೆ ಲಕ್ಷ್ಮಣ ರಾಮರರಿಯುತಿರೆ
ಮುಂದಿರ್ದ ಮಾರ್ಗದ ಮಹಾರಣ್ಯಗಹನಮಂ,
ಆಶ್ರಮಸ್ಥಳಗಳನ್ ಮೇಣನಾರ್ಯರ ಮತ್ತೆ     ೭೦
ದಸ್ಯು ಕೈರಾತ ರುಧಿರಾಶನಪ್ರಿಯತೆಯಂ,
ಕೇಳ್ದಳಿತ್ತನಸೂಯೆ ಮಧುರಭಾಷಿಣಿ ಜನಕ
ಜಾತೆಯ ವದನದಿಂ ಸ್ವಯಂವರದ ವೃತ್ತಮಂ,
ವನವಾಸ ಕಾರಣಕಥೆಯನಂತೆ ಭರತನಾ
ಭ್ರಾತೃಭಕ್ತಿಯ ತಪೋನಿಷ್ಠೆಯಂ. ಅನ್ನೆಗಂ
ಕಾರ್ತಿಕಾಭ್ರದೊಳುದಿಸಿ ಬಂದನು ಸುಧಾಕರಂ
ಪರ್ಣಕುಟಿಯಾ ಕುಟಜಪರ್ಣಂಗಳೆಡೆಯಿಂದೆ
ರೌಪ್ಯಧಾರಾವೃಷ್ಟಿಯಂ ಸೂಸಿ, ಕಣ್ಮನಕೆ
ಮಾಯೆಯಂ ಬೀಸಿ. ಕಾಲಂ ನುಂಗಿ ನೊಣೆದಿರ್ದ
ತನ್ನೆಳವೆಯಂ ಮತ್ತೆ ಕಾಣ್ಬ ಮೋಹಕೆ ಮುಪ್ಪು ೮೦
ಕಾತರಿಸಿತೆನೆ, ಅತ್ರಿಸತಿ ಸೀತೆಯಂ ತನ್ನ
ಕೈಗಳಿಂ ಕೈಗೈದು ನೋಡಿ, ಮನದಣಿ ಮೆಚ್ಚಿ,
ಕೊಂಡಾಡಿ, ಪರಸಿ ಕಳುಹಿದಳಾಕೆಯಂ ತನ್ನ
ರಾಮಾಭಿರಾಮ ಶಯ್ಯಾತಲಕ್ಕೆ.
ಕಳೆದರಯ್
ಅತ್ರಿ ಅನಸೂಯಾ ಪವಿತ್ರ ಸನ್ನಿಧಿಯೊಳಾ
ಋಷಿರಜನಿಯಂ. ಉಷಾ ಮುಖದ ಕಿತ್ತಿಳೆಗೆಂಪು
ಮಾರ್ಪೊಳೆವ ಪೊಳೆಯ ನೀರಂ ಮಿಂದು, ಮುನಿಗಣಂ
ಬೆರೆಸಿ ಹುತವಹ ಕಾರ್ಯಮಂ ಗೆಯ್ದು, ಕಂಪಿಡಿದ
ಪೊಗೆಗಾಳಿಯೋಲೆಳ್ದು ಬೀಳ್ಕೊಂಡರನಿಬರಂ
ವಾಚಂ ಯಮಿಗಳಂ. ಅರಣ್ಯಗೋಚರರೊರೆಯೆ           ೯೦
ಪಣ್ಪಲಂ ಪೂಗಳ್ಗೆ ತಾಂ ದಿನದಿನಂ ನಡೆದು
ಸಮೆದ ಬನವಟ್ಟೆಯಂ ; ಜರೆಯ ಬೀಳ್ಕೊಳುವಂತೆ
ಜವ್ವನಂ, ನರೆಯನುಳಿವಂತೆ ಹರಯಂ, ಮತ್ತೆ
ಸಾಹಸಂ ಶಾಂತಿಯನಗಲ್ವವೋಲ್ ಸೀತೆಯುಂ
ರಾಮನುಂ ಸೌಮಿತ್ರಿಯುಂ ಬಿಟ್ಟು ಮುನಿಗಳಂ
ಪೊಕ್ಕರಯ್ ದುರ್ಗಮದ ದಂಡಕಾರಣ್ಯಮಂ,
ಪೊಗುವಂತಿನಂ ಸಾಂದ್ರ ವರ್ಷಾಭ್ರಗಹ್ವರಕೆ.
ಪುಲಕಿಸಿತು ನಿಶ್ಶಬ್ದ ರುಂದ್ರ ದಂಡಕ ವನಂ
ಕೂಡೆ ಪುಲಕಿಸುವಂತೆ ಲಂಕಾ ಲಲಾಟಸ್ಥ
ರಾವಣ ವಿಧಿಯ ಮನಂ. ಕಂಪಿಸಿತು ಕಾಯಲತೆ          ೧೦೦
ದಂಡಕಾರಣ್ಯ ದೈತ್ಯತೆಯನವಲೋಕಿಸುತೆ
ಭೂಸುತೆಗೆ. ಕಾಂತಾರ ಭೀಷಣಭ್ರುಕುಟಿಯಂ
ಪ್ರತಿಭಟನಮಂ ಕಂಡು ಕಣ್ಪೆಳರಿ ಲಕ್ಷ್ಮಣಂ
ನೋಡಿದನ್ ರಘುರಾಮನಂ ಧೈರ್ಯಭೀಮನಂ :
ಚಂಡಕರ ತೇಜಸ್ವಿ ಕೋದಂಡಧರನಾಗಿ
ನಡೆಯುತಿರ್ದನ್ ಧೀರ ಗಮನದಿಂ, ದೃಢತೆ ತಾಂ
ಮೈವೆತ್ತವೋಲ್ ಭಯಂಕರಂ ವಿಪುಲ ವಪು
ರಾಮಚಂದ್ರಂ.
ಪಕ್ಷಿ ನಿಷ್ಕೂಜಿತಂ. ನೀರವಂ,
ಝಿಲ್ಲಿಕಾ ನಾದ ಘರ್ಘರ ಘೋರ ಕರ್ಕಶಂ.
ತರು ಬೃಹದ್ಬಾಹುಕೃಷ್ಣಂ ಬಿಸಿಲ ಕಂಸನಂ      ೧೧೦
ಕೊರಳೊತ್ತಿ ಗೋಣ್ಮುರಿಯೆ ಗತಿಸಿದಾತಪ ಶವಂ
ಛಾಯೆಯೋಲುರುಳ್ದುದೆನೆ ಪರ್ವಿದ ವನಾಂಧತಾ
ಭಯ ಭೈರವಂ :-ಪುಗುತ್ತಾ ವಿಪಿನ ಮಧ್ಯಮಂ
ಪೋಗುತಿರೆಯಿರೆ, ಕೂಡೆ ತಾನೆಳ್ದುದೊಂದದ್ಭುತಂ
ಧ್ವನಿ, ಪೊಯ್ದವೋಲಶನಿ. ನಡುಗೆ ವನಗಿರಿಯವನಿ,
ಪತಿಯಂ ಪಿಡಿದಳವನಿಜಾತೆ ಬೆಬ್ಬಳಿಸಿ. ತರು
ಮೂಲಾಗ್ರಮಳ್ಳಾಡಿದತ್ತು ; ಲಟಕಟಿಸಿತ್ತು
ಬಣಗು ಪಳು ; ವೇಗ ಸಂಜಾತ ವಾತಂ ಬೀಸಿ
ಕಸುಗಾಯಿ ಹಸಿಯೆಲೆಗಳುದುರಿ ಬಡಿದುವು ನೆಲಕೆ,
ಮುಗಿಲ್ಗವಣೆಯಾಲಿಕಲ್ಮಳೆಯಂತೆವೋಲ್. ನೋಡೆ,     ೧೨೦
ಗಿರಿಯ ಶೃಂಗವೆ ನಡೆದು ಬರ್ಪಂತೆ, ದಂಡಕಾ
ವಿಪಿನದ ವಿಪತ್ತೆ ವಪುವೆತ್ತಂತೆ, ಬಂದುದಯ್
ಹೆಗ್ಗಣ್ಣ ಹೆಬ್ಬಾಯ ಹೇರೊಡಲ ರಕ್ಕಸನ
ಬೀಭತ್ಸ ಛಾಯೆಯ ಭೀಮ ಭೀತಿ ! ಪತ್ತೆಂಟು
ಸಿಂಹ ಕಾಳ್ಕೋಣ ಪೆರ್ಬುಲಿ ಜಿಂಕೆ ಮದ್ದಾನೆ
ಚರ್ಮಂಗಳಿಂ ಸಮೆದ ಚಿತ್ರಸೂತ್ರ ವಿಚಿತ್ರಮಂ
ವಸ್ತ್ರಜಾಲವನುಟ್ಟ ಕಾರ್ಗಪ್ಪು ಮೆಯ್ಕಿಂದೆ,
ತೆಂಗಿನ ಮರದ ತೆರನ ನೀಳ ತೋಳ್ ತುದಿಯಲ್ಲಿ,
ಕೌಂಗಿನುನ್ನತ ಶೂಲದುಗ್ರಾಗ್ರಮಿರಿದೆತ್ತಿ
ಚುರ್ಚಿ ಕೋದಿರ್ದೆರಡು ಬಿಸಿಯ ನೆತ್ತರ್ಬಸಿವ  ೧೩೦
ಕೋರೆ ಪೆರ್ಬಂದಿಗಳ್ ಕೂಗುತೊದ್ದಾಡುತಿರೆ
ತೂಗಿ ತೊನೆಯುತ್ತಿರ್ದ ಭೀಕರದ ಕರದಿಂದೆ
ಬಂದನು ವಿರಾಧನತಿ ವಿಷಮ ವಿಷಮೃತ್ಯುವೋಲ್
ಭರದಿಂದೆ. ತುಡುಕಿ ಜನಕಜೆಯಡಿಯನೆತ್ತಿದನ್
ಸೀಗೆಮುಳ್‌ಮೆಳೆಯಂತೆ ಹೊದೆಹೊದೆ ಕೆದರ್ದವನ
ಮುಳ್ಮುಡಿಗೆ, ಶಾಪಹತನಾ ಪಾಪನಾಶಿನಿಗೆ
ಚೈತನ್ಯರೂಪಿಣಿಗೆ ಶಕ್ತಿಮಾತೆಗೆ ನಮಿಸುವೋಲ್ !
ಭೋರ್ಗರೆದನಿಂತೆಂದು ಮತ್ತೆ :
“ಜವ್ವನದೊಡನೆ,
ಜಟೆಯೊಡನೆ, ಕಪಟ ವಲ್ಕಲದೊಡನೆ, ಸಟೆಯೊಡನೆ,
ಪ್ರಮದೆಯೀ ಪೆಣ್ಣೊಡನೆ ಕ್ಷೀಣಜೀವಿತರಾಗಿ     ೧೪೦
ಬಂದಿರಯ್ ನೀಮೆನಗಶನಮಾಗಿ ! ಜವ್ವನಕೆ
ಜಟೆಯೇಕೆ ? ನಾರುಡೆಗೆ ನಾರಿಯಿವಳೇಕೆ ? ಈ
ನಟ ತಪಸ್ಸೇಕೆ ಶರ ಚಾಪಾಸಿ ವೀರರಿಗೆ ?
ಭಾರ್ಯೆಯಹಳೆನಗೀ ವರಾರೋಹೆ ! ಬಾಳ್ವಾಸೆ
ನಿಮಗಿರಲ್ಕೋಡಿ ಬರ್ದುಕಿಂ !” ಎನುತೆ ಶೂಲದಿಂ
ಗುರಿಯಿಡುತ್ತಿರೆ, ಮೂರ್ಛೆವೋದತ್ತಿಗೆಯ ನೋಡಿ
ಸೌಮಿತ್ರಿ “ಅಗ್ರಜನೆ, ದೀರ್ಘದರ್ಶಿನಿ ದಿಟಂ
ಆ ಕೈಕೆ !” ಎಂದಾರ್ಭಟಿಸಿ ಬಾಣಮಂ ಪೂಡಿ
ರಯವನೆಚ್ಚನ್ ರಾಕ್ಷಸಾಕೃತಿಗೆ. ಕೀಸಿದಾ
ಕೂರಂಬುಗಳಿಗೊಂದಿನಿತೆ ಘಾಸಿಯಾಗುತ್ತೆ    ೧೫೦
ಪಿಶಿತಾಶನುರಿದೆದ್ದನ್. ಇಳುಹಿದನಿಳಾತಳಕೆ
ಮಸ್ತಕದಿ ಧರಿಸಿದ ಧರಾತ್ಮಜೆಯನ್. ಎತ್ತಿದನ್
ಮಿತ್ತುಕೋರೆಯ ಕೈದುವಂ, ವಿಷಮ ಶೂಲಮಂ.
ಮುಂಬರಿದನದ್ರಿವೋಲ್ ರಾಮಲಕ್ಷ್ಮಣರೆಡೆಗೆ
ಯಮದೃಢಗಮನದಿಂದೆ. “ಕಮಠ ಖರ್ಪರ ಸಮಂ
ರಕ್ಕಸನ ಮೆಯ್. ರೂಕ್ಷನಿಗೆ ಕಣ್ಗಳಲ್ಲದೆಯೆ
ಬೇರೆ ಗುರಿ ಸಲ್ಲದಯ್.” ರಾಮನೆನೆ ಲಕ್ಷ್ಮಣಂ
ಗರಿಯ ರೆಕ್ಕೆಯ ಗರುಡವೇಗದ ಸರಳನೆಚ್ಚನ್,
ಕುರುಡುಗೈದನ್ ವಿರಾಧನ ಕಣ್ಗಳಂ ಬಸಿದು
ತೋಡಿ. ಕೋಪಕೆ, ಕಣ್ಣಳಿಯಲಂಧರೋಷದಿಂ ೧೬೦
ತೋಳ್ಗಳಂ ಬೀಸಿ, ಪಳುವಂ ಗುಡಿಸಿದನು ಸೋಸಿ
ರಾಕ್ಷಸಂ. ತಡವಿ ತುಡುಕಿದನಿರ್ವರಂ ಮೃತ್ಯುಮಯ
ಮುಷ್ಟಿಯೊಳ್. ಪೊತ್ತೋಡಿದಂ ಮಿಗಗಳಂ ಕಚ್ಚಿ
ಕೊಂಡುಯ್ವ ವ್ಯಾಘ್ರನೋಲಂತೆ. ಸೀತಾಕಾಂತೆ
ನೋಡಿ ನಡನಡ ನಡುಗಿ ಹಿಂಬಾಲಿಸೋಡಿದಳ್ :
“ಓ ವಿಧಿಯೆ, ರಕ್ಷಿಸಯ್ ! ರಕ್ಷಿಸೋ ರಕ್ಷಿಸಯ್
ದಶರಥೇಂದ್ರ ಪ್ರಿಯ ಕುಮಾರರಂ ! ಕೈಮುಗಿದು
ಬೇಡುವೆನೊ, ರಾಕ್ಷಸೋತ್ತಮ, ನನ್ನನಾದೊಡಂ
ನೀಡುವೆನೊ, ಬಿಡೊ ರಾಮಚಂದ್ರನಂ, ಕಾಪಿಡಯ್
ಊರ್ಮಿಳಾ ಪ್ರಾಣೇಶನಂ !” ರಾಮಖಡ್ಗಕೆ ಮತ್ತೆ         ೧೭೦
ಲಕ್ಷ್ಮಣಾಸಿಗೆ ಬಿಳ್ದುವಸುರ ಬಾಹುದ್ವಯಂ
ದೊಪ್ಪ ದೊಪ್ಪನೆ ; ಕೂಡೆ ಪಳುವರಚೆ ಕೆಡೆದುದಾ
ದೈತ್ಯನೊಡಲೊಂದು ಹೆಗ್ಗುಡ್ಡದೋಲ್. ಕಾಡ ಪಳು
ಕೆಸರೇಳೆ ಹೆಪ್ಪುಗಟ್ಟಿದುದು ನೆತ್ತರ್ ವೊನಲ್.
ಬೀಭತ್ಸದಿಂದೆಯುಂ ಸೌಂದರ್ಯಮುದ್ಭವಿಪಂತೆ
ಮೈದೋರ್ದನಮೃತಮಯ ಗಂಧರ್ವನೊರ್ವನಾ
ಮೃತದೇಹದಿಂದೆ : “ಜಯ, ಜಯ, ಹೇ ಮಹಾಪುರುಷ !
ಮನ್ನಿಸೆನ್ನಂ ; ನಾಂ ಕುಬೇರನಾಳ್ ತುಂಬುರಂ.
ರಂಭೆಯ ನಿಮಿತ್ತಮೊಳಗಾದೆನೀ ಶಾಪಕ್ಕೆ.
ಶಾಪಮೋಚನೆ ಗೈದಿರೆನಗೆ. ವಂದನೆ ನಿಮಗೆ.            ೧೮೦
ದಂಡಕಾರಣ್ಯಮಿದು ಭೀರುಗೆ ಭಯಂಕರಂ ;
ರಸಿಕ ಧೀರಗೆ ಕಲಾಶಂಕರಂ : ನನ್ನಂತೆವೋಲ್ !
ಮುಂಬರಿಯಿಮೆರಡು ಗಾವುದ ದೂರದಾಚೆಯೊಳ್
ಶರಭಂಗ ಋಷ್ಯಾಶ್ರಮಂ. ನಮಿಪೆನಿದೊ ಪೋಪೆನಾಂ.
ಸೊಗಮಕ್ಕೆ, ಗೆಲಮಕ್ಕೆ, ತುದಿಗೆ ಮಂಗಳಮಕ್ಕೆ !”
ಗಂಧರ್ವನಾದನಂತರ್ಧಾನಮಿಂತೆಂದು
ಪರಸಿ. ಸೂಚಿತ ಪಥಂಬಿಡಿದು, ಬನದಿಂ ಬನಕೆ
ಬೇಗವೇಗಂ ನಡೆದು, ಬೈಗುವೊಳ್ತಿನ ಕಡೆಗೆ
ಸಾರ್ತಂದರಾಶ್ರಮಕೆ ಶರಭಂಗನಾ. ದಸ್ಯು
ಹಿಂಸೆಗೆ ಸಿಲುಕಿ, ಮರಣ ಮುಖನಾಗಿ, ಮಾತಳಿದು      ೧೯೦
ಮಲಗಿರ್ದ ಚರ್ಮಾಸ್ಥಿಮಾತ್ರನಂ ಕರುಣಕರ
ಗಾತ್ರನಂ ಶರಭಂಗನಂ ಕಂಡು ಮರುಗಿದುದು
ರಾಮನಾತ್ಮಂ ; ಕೋಪದೌರ್ವಾನಳಂ ಜ್ವಲಿಸಿ
ನೀಡಿದತ್ತರಸಿದತ್ತೇಳು ನಾಲಗೆಗಳಂ
ರಕ್ಕಸರ ಮೈಬೇಳ್ವೆಯಂ. ಕೇಳ್ದನನಿತುಮಂ
ದುಷ್ಟದಾನವ ಧೂರ್ತತೆಯ ಕಥೆಯನಾರ್ಯರಾ
ವ್ಯಥೆಯನತಿ ಕಷ್ಟಮಂ. ರಕ್ಷೆಯಂ ಬೇಡಿದಾ
ಯತಿಗಳಿಗಭಯವಿತ್ತನಿಂತೆಂದು :
“ಪೂಜ್ಯರಿರೆ,
ತನ್ನ ಕಜ್ಜಕೆ ಬಂದನಡವಿಗೆಂದರಿಯದಿರಿ.
ತಂದೆಯಾಣತಿ ನೆವಂ. ದಿಟಮೊರೆವೆನಾಲಿಸಿಂ.           ೨೦೦
ಭೀಮಕರ್ಮಿಗಳಾರ್ಯವೈರಿಗಳ್ ಅನಾತ್ಮರಂ
ಋಷಿಕಂಟಕರನಿರಿವುದೆನ್ನಯ ಮನಂ. ನಿಜಕೆ
ನಾಥರೀ ಪೃಥಿವಿಗಿನಕುಲರಲ್ತೆ ? ಪ್ರಜೆಗಳಂ
ಪಾಲಿಪುದವರ ಪರಮ ಕುಲಧರ್ಮವೆನೆ, ನಿಮ್ಮ
ರಕ್ಷೆಗೋಸುಗಮೆನಗೆ ದುಷ್ಟಶಿಕ್ಷಣಮರಂ.”
ಕೆಲದಿನದನಂತರಂ ತೀರ್ದ ಶಾಂತಾತ್ಮಂಗೆ
ಶರಭಂಗ ಋಷಿಗಪರಕರ್ಮಂಗಳಂ ರಚಿಸಿ,
ಕಂಗೆಟ್ಟ ಕಿತ್ತಡಿಗಳಿಗೆ ಧೈರ್ಯಮಂ ಪೇಳ್ದು
ಪೊರಮಟ್ಟರಲ್ಲಿಂ ಸುತೀಕ್ಷ್ಣಋಷ್ಯಾಶ್ರಮಕ್ಕೆ.
ಒಡನೊಡನೆ ಬಂದ ವೈಖಾನಸರನೊಡಗೂಡಿ,           ೨೧೦
ಮಲೆಯ ಪಳುವಟ್ಟೆಯಂ ಕೊಂಡು ನಡೆತರೆ ಮುಂದೆ
ಮೂಡಿದತ್ತೊಂದು ಶೈಲಂ ವಿಪುಲಮದ್ಭುತಂ,
ಕಾರ ಮೊದಲೊಳ್ ಬಾನ ಕರೆಯಿಂದಣಂ ತೋರಿ
ಮೆಲ್ಲನೊಯ್ಯನೆ ಭೀಮಗಾತ್ರಕ್ಕುರ್ಬಿ ಬೆಳೆದು
ಗಗನ ಶಿಖರಕ್ಕೇರ್ವ ಮೇಘಗೋಪುರದಂತೆ
ನೀಲೋನ್ನತಂ ಮಹಾ. ಪೊಕ್ಕದರ ತಳ್ಪಲಂ
ಬಹುಪುಷ್ಪಪೂರ್ಣ ಫಲಕುಜಕೀರ್ಣಮಟವಿಯಂ
ಕಂಡರು ಸುತೀಕ್ಷ್ಣನಾಶ್ರಮವನೇಕಾಂತಮಂ
ಭಯಕಾಂತಮಂ. ನಮಿಸಿದರು ತಪೋರುದ್ರಂಗೆ,
ಚಿತ್ರಕೂಟಕೆ ರಾಮನೈತಂದ ವಾರ್ತೆಯಂ     ೨೨೦
ಕೇಳ್ದಂದಿನಿಂದಾತನಂ ಪ್ರತೀಕ್ಷಿಸುತಿರ್ದ
ಕೆಂಜೆಡೆಯ ಕಿತ್ತಡಿಗೆ. ಋಷಿಸಂಗ ಮಂಗಲದಿಂ
ತಿಂಗಳೊಂದಂ ನಿಂದು, ಕೋಳ್ಮಿಗಗಳಟ್ಟುಳಿಯ
ಕೊಂದು, ಸುತ್ತಣ ಮಲೆಯ ಸೀಮೆಯಂ ಮೇಣಲ್ಲಲ್ಲಿ
ಸಿಂಗರಿಸಿ ಪರ್ವಿದ ತಪೋವನ ಸಮೂಹಮಂ
ಆರ್ಯಾಶ್ರಮಂಗಳಂ ನೋಡುವಾಶೆಗೆ ಮುನಿಯ
ಹರಕೆಯ ಹಿತಾಶಂಸೆಯಂ ಪಡೆಯುತಲ್ಲಿಂದೆ
ಪೊರಮಟ್ಟರವರು ಯಾತ್ರಿಕ ಮುನಿಗಣಂವೆರಸಿ,
ಮೊದಲ ಮಳೆ ಮೀಯಿಸಿದ ಮಲೆಯನಾಡಿನ ಸಿರಿಯ
ಚೆಲುವನೀಂಟಲ್ಕಲೆವ ಕಲೆ ನೋಂತ ಕಬ್ಬಿಗನ            ೨೩೦
ಕಣ್ದಿಟ್ಟಿಯಂತೆ. ಐತರೆ ಮುಂದೆ, ಏನೆಂಬೆ ?
ಅಕ್ಷಿಗೌತಣವಾಯ್ತು ; ಹೂವಾಯ್ತು ; ಜೇನಾಯ್ತು ;
ಪಕ್ಷಿಯಿಂಚರವಾಯಿತಿನಿಯಳಪ್ಪುಗೆಯಾಯ್ತು ;
ಪುಣ್ಯಸಲಿಲಪ್ರಸನ್ನತೆಯಾಯಿತಾ ನೆಲಂ :
ವನದೇವಿಯೋಲಗವೊ, ಜಲದೇವಿಯಾಲಯವೊ,
ಸೌಂದರ್ಯಲಕ್ಷ್ಮಿ ನಿರತಂ ಕ್ರೀಡಿಪುಯ್ಯಲೆಯೊ,
ಇಂದ್ರಧನುರಿಂದ್ರಿಯಗಳಿಂದ್ರನಾಡುಂಬೊಲವೊ,
ರತಿಮದನರೋಕುಳಿಯ ಶೃಂಗಾರಮಂಟಪವೊ,
ರಸಋಷಿಗಳಾನಂದ ನಂದನವೊ, ಮಂದಿರವೊ
ಚಂದ್ರ ಚೈತ್ರರಿಗೆಂಬವೋಲಪ್ಪುತಾತ್ಮಮಂ     ೨೪೦
ಶೈಲ ಕಂದರ ವಿಪಿನ ವೈಭವದಿನೆಸೆದುದಾ
ತೆರೆತೆರೆಯಲೆವ ಮಲೆಯಸೀಮೆ ! ಆ ಸೊಬಗಿಗೆರ್ದೆ
ಸೋಲ್ದುರ್ಕ್ಕಿದತ್ತು ಸೀತೆಗೆ ಮೈತ್ರಿ. ಸ್ವಾಮಿಯಂ
ಪ್ರೇಮದಿಂ ನೋಡಿ ನುಡಿದಳ್ ನಗೆಮುಗುಳ್ಮಲರೆ
ನಯದಿಂದೆ :
“ಬಗೆಯೊಂದು ಶಂಕೆಯನರುಹಿದಪೆನಾಂ,
ಹೃದಯಪ್ರಿಯ, ಬಾಲಭಾಷಿತನಾದರದಿಂದೆ
ಕೇಳಿ ಕರುಣಿಪುದೆನಗೆ : ಋಷಿಗಳ್ಗೆ ನುಡಿಗೊಟ್ಟೆಯಯ್ ;
ರಾಕ್ಷಸ ವಧೆಗೆ ಪೂಣ್ದೆಯಯ್ ; ವೈರಮಂ ವ್ರತವಾಂತೆಯಯ್,
ಹೇ ಸ್ನೇಹನಿಧಿ ! ಒರ್ವನನ್ಯಾಯಿಯಾದೊಡೇಂ
ಸರ್ವರಾಕ್ಷಸರೆಂತು ಸಂಹಾರಕರ್ಹರಯ್ ?    ೨೫೦
ಕ್ಷಾತ್ರಕೇಂ ಕ್ರೌರ್ಯಂ ಕಿರೀಟಮೇ ?”
“ದರಹಸಿತೆ,
ರಾಜಋಷಿ ಜನಕಸುತೆ, ಆ ತಂದೆಯ ಮಗಳ್ಗೆ
ತಕ್ಕುದನೆ ನುಡಿದೆ. ವಿಶ್ವಪ್ರೇಮ ಸಿದ್ಧನಿಂ
ಪಡೆದಿರ್ಪ ಕರುಣೆಯನ್ನೊರೆಯುತಿಹೆಯಾದೊಡಂ,
ಪೂಜ್ಯಮಹುದಾದೊಡಾ ತತ್ವಂ ಪೂರ್ಣದರ್ಶನಕೆ
ಪೊರ್ದದಿರ್ಪುದು, ಸರಳೆ, ಸಾತ್ವಿಕವ್ರತಿಗಳ್ಗೆ
ಸಂಕಟವನೊಡರಿಸುವರೆನ್ನ ಬಾಣಕ್ಕೆ ಬಲಿ.
ಬಾಣಮೊಂದೆಯೆ ಚುರ್ಚಿ ಕೊಲ್ದುದಾದೊಡಮದಕೆ
ಬಿಲ್ಲು ಹೆದೆ ಕೊಪ್ಪು ಕೈಯನಿತುಮುಂ ನೆರಮಾಗಿ
ಕೊಲೆಗೆ ಹೊಣೆಯಪ್ಪುವಂತೆಯೆ ದುಷ್ಟಘಾತುಕಂ          ೨೬೦
ತಾನೊರ್ವ ರಕ್ಕಸನಾದರೇನವಗೆ ಬೆಂಬಲಂ
ಸರ್ವ ರಾಕ್ಷಸರಲ್ತೆ ? ಕೃತಿ ಏಕಮಾದೊಡಂ
ಮಾಳ್ಪಾತನಿರ್ಪ ಸೀಮೆಯ ಜನದ ಸಂಸ್ಕೃತಿಗೆ
ಕುರುಪಲ್ತೆ ತಾಂ? ಆರ್ಯ ಸಂಸ್ಕೃತಿಯ ಸುಕೃತಮಂ
ರೂಕ್ಷರೀತಿಯೊಳಡ್ಡಗಟ್ಟುವೀ ರಾಕ್ಷಸರ
ಗಾಮ್ಪತನಮಂ ಮುರಿಯಲಾಂ ಪೂಣ್ದೆನಿನ್ನದಂ,
ಆ ನುಡಿಯ ಸಿಡಿಲಂ, ತಡೆವರಿಹರೆ ? ಶರಭಂಗ
ಋಷಿಗಾದ ಗತಿಯೆ ಮುನಿಗಳಿಗೆಲ್ಲಮಪ್ಪುದೌ,
ಮಿಥಿಳೇಂದ್ರ ಸಂಜಾತೆ, ಬತ್ತಳಿಕೆಯಂ ಬಿಟ್ಟು
ನಾಂ ಕಮಂಡಲುವಿಡಯೆ ! ಶರಧಿ ಮೇಖಲೆಯಾದ      ೨೭೦
ಪೃಥಿವೀಶ ಭರತೇಂದ್ರನಾರ್ಯರಕ್ಷಾವ್ರತಂ.
ಪ್ರತಿನಿಧಿಗಳವಗೆ ನಾಂ. ಕರ್ತವ್ಯವೆಮಗಾಯ್ತು
ಋಷಿ ರಕ್ಷಣಂ. ಇಷ್ಟಮುಂ ಮತ್ತೆ ನಿಷ್ಠೆಯುಂ
ಗೋಷ್ಠಿಗೊಂಡೊರೆಯುತಿಹವೀ ದಸ್ಯುಹನನಮಂ !”
ಪತಿಯ ದೃಢವಾಣಿಯಂ ವಾದಮಂ ಕೇಳ್ದು ಸತಿ
ಪೇಳ್ದಳಿನಿತಂಜಿದೋಲಿಂತು : “ತೊದಲಾಗುತಿದೆ
ನನ್ನ ನಾಲಗೆ ನಿನ್ನ ದನಿಗೇಳ್ದು, ಮನದನ್ನ,
ಪುಣ್ಯಾಶ್ರಮಂಗಳಂ ನೆವವೊಡ್ಡುತೈತಂದು
ತಮ್ಮ ನೆಲಮಂ ಸುಲಿಯುತೊಯ್ಯನೆ ವಸತಿಗೈದು,
ದಿನದಿನಕೆ ತಮ್ಮನೊತ್ತುವರಾರ್ಯರಾದೊಡಂ            ೨೮೦
ದಸ್ಯುಗಳೆ ದಿಟಮಲ್ತೆ ?”
“ತಿಮಿರಕ್ಕೆ ರವಿ ದಸ್ಯು.
ಜ್ಞಾನಮಜ್ಞಾನಕ್ಕೆ ದಸ್ಯು. ಮಾಯೆಯನಳಿಸಿ
ಮನುಜಹೃದಯವನಾಕ್ರಮಿಸುತಾತ್ಮಮಂ ತನ್ನ
ಕೃಪೆಗುಯ್ವ ಪರಮಾತ್ಮನುಂ ದಸ್ಯು. ನಾಂ ನಿನಗೆ
ನೀನೆನಗೆ ದಸ್ಯು. ಕೇಳಂತೆವೋಲಾರ್ಯರುಂ
ದಸ್ಯುಗಳ್ ದಂಡಕಾರಣ್ಯ ದಕ್ಷಿಣ ಜನದ
ನಯಕೆ. ಪಿರಿತನಕೆ ಮಣಿವುದೆ ಕಿರಿಯ ಸಂಸ್ಕೃತಿಗೆ
ಮೇಲ್ಮೆ. ಪುಣ್ಯಂ ವಿಪತ್ತಿನ ತೆರದಿನೋರೊರ್ಮೆ
ದೈತ್ಯನೋಲಾಕ್ರಮಿಪುದಾತ್ಮಮಂ ಜನತೆಯಂ
ನಾಡೂರ್ಗಳಂ, ಕೃಪಾಬಾಹು ನೀಡಲ್ಕದರ     ೨೯೦
ನೆಳಲಲ್ತೆ ಪೇಳ್ ರಾಹು !”
ಮಥಿಸುತೆ ಮನದಿ ವಚನಮಂ
ಪತಿದೇವನಾ, ಮುಂದೆ ಗಮಿಸಿದಳು ವೈದೇಹಿ
ಬೆಟ್ಟ ಕೆರೆ ಕಾಡು ಹೊಳೆ ಮಿಗವಕ್ಕಿ ಹಂದಿ ಹುಲಿ
ತರತರದ ನೋಟಮಂ ಬೆದರುಮಿಗದೋಟಮಂ
ಕೌತುಕದ ಕೂಟಮಂ ಕಣ್ಗೆ ತಣಿವಿಲ್ಲವೆನೆ
ಕಂಡು, ಬಣ್ಣಿಸಿ, ಸವಿದು, ತೋರಿ, ನಡೆದಿರಲಿಂತು,
ಕಂತು ಕೂರ್ತಾತ್ಮರತಿಯೊಡನೆ ಈಸಾಡಲ್ಕೆ
ರಾಗಮಗ್ಗಲಿಸಿತೆನೆ, ಸಂಜೆ ಓಕುಳಿಗೈದ
ಸಲಿಲ ಸುಂದರ ಯೋಜನಾಯತ ತಟಾಕಮಂ
ಕಂಡರೆದುರಿನಲಿ. ಏಕಾಂತತಾ ವೈಣಿಕಂ       ೩೦೦
ಮಿಡಿವನೊ ವಿಯದ್ವಿಪಂಚಿಕೆಯ ನಿಶ್ಶಬ್ದತಾ
ತಂತ್ರಿಯನೆನಲ್ಕೆ, ಬಂದತ್ತಲೆದು ಸುಶ್ರುತಿಯ
ಗೀತ ವಾದಿತ್ರ ಮಧುಮಧುರ ಘೋಷಂ. “ನೋಡೆ
ಸುತ್ತಣೀ ವನದೇಶಮೆತ್ತಲುಂ ನಿರ್ಜನಂ.
ವಾದಿತ್ರ ನಿಸ್ವನಮ್ ಇದೆತ್ತಣಿಂ ಬಂದಪುದೊ ?
ಸೋಜಿಗಂ !” ಎಂದೆಲ್ಲರಾ ಕಿವಿಸವಿಯ ದನಿಗೆ
ಮಾರುವೋಗಿರೆ, ಧರ್ಮಭೃತನೆಂಬ ಸಹಚರಂ
ಮುನಿ :
“ಈ ಸರೋವರಂ, ಇಕ್ಷ್ವಾಕುಕುಲಮಣಿಯೆ,
ಪಂಚಾಪ್ಸರಂ. ಮಾಂಡಕರ್ಣಿಯ ಮಹಾಮುನಿಯ
ಭೋಗಮಂದಿರಮಿರ್ಪುದಿದರಂತರಂಗದೊಳ್.           ೩೧೦
ಆತನುಗ್ರ ತಪಸೈಗತಿಭೀತರಾಗುತಾ
ತ್ರಿದಶರಟ್ಟಿದರೈದು ಮಿಂಚುಮೆಯ್ ಪೆಣ್ಗಳಂ.
ಭೋಗವಶನಾದನಯ್ ಯೋಗಿ. ಗೃಹಮಂ ರಚಿಸಿ
ಕಾಣ್ಬೇ ತಟಾಕ ತೀರ್ಥದ ಮಧ್ಯೆ, ಯೋಗದಿಂ
ಚಿರಯುವಕನಾಗಿ ಪಂಚಾಪ್ಸರೆಯರಂ ಕೂಡಿ
ಸುಖಿಸುತಿರುವನು ಕಣಾ. ಪೊಣ್ಮಿದಪುದಲ್ಲಿಂದೆ
ಈ ಗೀತವಾದಿತ್ರ ಮೇಳಗಾನಂ.”
ಬೈಗುಬಾನ್
ಕಿತ್ತಿಳೆರಂಗನುಳಿಯೆ, ಕತ್ತಲೆಯ ನೇರಿಳೆಯ
ಪಣ್ಗಪ್ಪು ಕಣ್ಮುಸುಗುತಿಳಿತರೆ ತಿರೆಯನಪ್ಪಿ,     ೩೨೦
ಗೋಚರಿಸಿತೊಂದಾರ್ಯವಸತಿ. ಇಂಗುದಿಯೆಣ್ಣೆ
ಜೀವದಾನಂಗೈದ ವಲ್ಕಲದ ಬತ್ತಿಯಂ
ಪೊತ್ತುತುರಿದಾ ಸೊಡರ ಬೆಳಗಿನೊಳ್ ಸಾದರದ
ಸತ್ಕಾರಮಾದುದು ಅತಿಥಿಗಳಿಗೆ. ತಿಂಗಳಂ
ತಂಗುತಾಯೆಡೆ, ಮತ್ತೆ ಮುಂದಣಾಶ್ರಮಕೈದಿ
ತಿಂಗಳಾರಂ ಕಳೆಯುತಲ್ಲಿಂದೆ ಮುಂಬರಿದು
ಆಶ್ರಮದಿನಾಶ್ರಮಕ್ಕೈದಿದರು, ಒಂದೊಂದು
ಎಡೆಯೊಳುಂ ಪಲವಾರು ತಿಂಗಳ್ಗಳಂ, ಮತ್ತೆ
ಒಮ್ಮೊಮ್ಮೆ ವರ್ಷಮಂ, ಕಳೆದು.
ಇಂತಿಂತಿಂತು
ಪತ್ತು ಸೂಳಿಳೆ ನೇಸರಂ ಸುತ್ತುವರಿದತ್ತು.
ಅಂತೆಯೆ ಇಳಾತ್ಮಜೆ ಇನಕುಲಾತ್ಮಜನ ಅಡಿಯ         ೩೩೦
ಪಜ್ಜೆವಟ್ಟೆಯ ನಡೆಯೆ, ತರಳೆಯತನಂ ಪಣ್ತು
ತುಂಬಿದುದು ಮೈಗೆ ಮಹಿಳಾ ಮಹದ್‌ಗೌರವಂ,
ಮೇಣಂತೆ ನಡೆನುಡಿಗೆ ಬಗೆಗೆ, ದಿನದಿನ ಚರಿಸೆ
ಕಲ್ಲುಮುಳ್ಳಿಡಿದ ಪಳುವಟ್ಟೆಯುಂ ಸಮೆಸಮೆದು
ನುಣ್ಣಿತಪ್ಪುದೆನಲ್ಕೆ ಸೀತೆ, ಜನಕ ಕುಮಾರ್ತೆ,
ಋಷಿಸಂಗದಿಂ ತಪಸ್ವಿನಿಯಪ್ಪುದಚ್ಚರಿಯೆ ?
ದಶರಥನ ಸೂನುಗಳ್ಗೀರೈದು ಬರಿಸದಾ
ಸಾಹಸದ ರಸಯಾತ್ರೆಯಾದುದಕ್ಷಯಪಾತ್ರೆ
ವೀರ ಸುಂದರ ವಿವಿಧ ಭಾವಾನುಭವಗಳಿಗೆ,
ಒರ್ದಿನಂ ಸಂಜೆ, ಪಡುವಲ್ ಪಣೆಯಮೇಲೆ, ಪನಿ        ೩೪೦
ಕಿಡಿಯಾದ ಮಾಳ್ಕೆಯಿಂ, ತಳತಳಿಸುತಿರೆ ಬೆಳ್ಳಿ,
ದಣಿದು ಕೋಳ್ಮಿಗವೇಂಟೆಯೊಳ್ ಮಲೆಯ ತಲೆಯಿಂದೆ
ತಳ್ಪಲಿನೆಲೆಯಮನೆಗೆ ಬರುತಲಿರ್ದಗ್ರಜಂ
ಊರ್ಮಿಳಾವಲ್ಲಭನ ಬೆಮರ್ದ ಮೊಗಮಂ ಕಂಡು
ಕನಿಕರಂಗೊಂಡು ಸುಯ್ದನು, ತನ್ನ ಮಡದಿಯಂ
ಬೆಚ್ಚನೆಯ ನೀರ್ವಿಡಿದು ಪತಿಸೇವೆಗಣಿಯಾಗಿ
ಪರ್ಣಶಾಲೆಯ ಬಾಗಿಲೊಳೆ ಕಾಯುತಿರ್ಪಳಂ
ನೆನೆದು. ಬೆಮರಿನ ಮರೆಯೊಳೊಂದು ಕಂಬನಿ ಹೊಂಚಿ
ಸಮಯಮಂ ಕಾಯುತಿರೆ ತಮ್ಮಂಗೊರೆದನಿಂತು :
“ವನವಾಸದವಧಿ ಕೊನೆಸಾರುತಿದೆ, ಸೌಮಿತ್ರಿ ;          ೩೫೦
ಮನೆಯ ನೆನೆದೊಮ್ಮೊಮ್ಮೆ ಬಯಕೆ ಬಾಯಾರುತಿದೆ ;
ಸರಯೂ ಜಲವನೀಂಟಲಾಶೆ ಸೊಂಡಿಲನೆಳೆದು
ಚಾಚುತಿದೆ ! ಕೋಸಲಕೆ ಕಿರಿದಲ್ಲದಿರ್ದೊಡಂ
ಮತ್ತೆ ಕೀಳಲ್ಲದಿರ್ದೊಡಮೀ ವಿಪಿನ ಧರಾ
ಸಾಮ್ರಾಜ್ಯಮಗಲಿಕೆಯನನುಭವಿಸುತಿದೆ ಮನಂ
ತಾಯ್ನಾಡಿನಾ. ವರ್ಷಮಿನ್ನೆರಡು ತೀರ್ವಿನಂ
ಸೇರ್ದಪೆವಯೋಧ್ಯೆಯಂ. ಆ ಪೊಳ್ತಿನನ್ನೆಗಂ
ಸತ್ಸಂಗಮೆಯೆ ಮಂಗಳಂ ತಪಂ !”
ನುಡಿದನನುಜಂ
ತನ್ನಗ್ರಜಾತನ ಕೊರಳ ಖಿನ್ನತೆಯ ತವಿಸಿ :
“ಚರಿಸಿದೆವು ನಾವೆನಿತೊ ಋಷ್ಯಾಶ್ರಮಂಗಳಂ.          ೩೬೦
ಕಂಡೆವೆನಿತೆನಿತೊ ಕಿತ್ತಡಿಗಳಂ. ಮೇಣಂತೆ
ಕೇಳ್ದೆವೀಂಟಿದೆವೆನಿತೊ ತತ್ವಪೀಯೂಷಮಂ.
ಚಿತ್ತಕೆತ್ತರವಾಯಿತೆದೆಗೆ ಬಿತ್ತರವಾಯ್ತು ;
ದೊರೆಕೊಂಡುದಾತ್ಮಪ್ರಸನ್ನತೆ. ವಸಿಷ್ಠಗುರು
ಮತ್ತೆ ವಿಶ್ವಾಮಿತ್ರದೇವರಿರ್ವರುಮಿತ್ತ
ಕಲ್ಪಿಗೆ ಕಿರೀಟಮಾದತ್ತು. ವಿಪಿನಾಯನಂ,
ಹೇ ಆರ್ಯ, ನಿನ್ನ ಸಂಗದಿನಂತೆ ದೇವಿಯರ
ಸೇವೆಯಿಂ ನನ್ನಾತ್ಮಕೊಂದಮೃತ ಕೃಪೆಯಾಯ್ತು !”
“ಆರ್ಯವಸತಿಗಳನೇಕಮಂ ಕಂಡೆವಾದೊಡಂ
ಕಂಡೆವಿಲ್ಲಾಮ್ ಅಗಸ್ತ್ಯಋಷ್ಯಾಶ್ರಮವನಿನ್ನುಂ.            ೩೭೦
ಬಡಗಣಿಂ ತೆಂಕಣ್ಗೆ ಮೊತ್ತಮೊದಲೈತಂದ
ಮುನಿಯಾರ್ಯನಾತನ್. ಅತಿ ದಕ್ಷಿಣದೊಳಿಹುದಂತೆ
ದಿವ್ಯಾಶ್ರಮಂ. ನಾಳೆ ಪೊರಮಡುವಮಿಲ್ಲಿಂದೆ
ತೆಂಕಣಕೆ. ಸೌಮಿತ್ರಿ, ಆ ಮುನಿಯ ಮಹಿಮೆಯಂ
ಕೀರ್ತಿಸುವ ಕಥೆಯೊಂದನರುಹಿದಪೆನಾಲಿಸಾ !”
ಬೆಳ್ಳಿ ಮುಳುಗಿತ್ತು ; ಕತ್ತಲೆ ಮುಚ್ಚಿ ಮುಸುಗಿತ್ತು ;
ಮಿನುಗುತಿರ್ದುವು ಮಲರಿ ಬಾನ್ನೆಲದೊಳರಿಲ ಹೂ.
ಕಾಡುದಾರಿಯೊಳಿಳಿಯುತಿರೆ, ರಾಮನೊರೆಯುತಿರೆ,
ಕೇಳ್ದನಾ ಲಕ್ಷ್ಮಣಂ ಕಿವಿನಿಮಿರ್ದು :
“ಇರ್ದರಯ್
ಮುನ್ನಿರ್ವರಿಲ್ವಲಂ ವಾತಾಪಿಗಳ್, ಪೆಸರ್ವೆತ್ತ ೩೮೦
ರಾಕ್ಷಸ ಸಹೋದರರ್ : ನೀತಿಯಿಂ ರಾಕ್ಷಸರ್ ;
ಪ್ರೀತಿಯಿಂ ಸೋದರರ್. ಭೀಮಕರ್ಮಿಗಳವರ್
ಮಾಯಾವಿಗಳ್, ಕಾಮರೂಪಿಗಳ್. ಇಲ್ವಲಂ
ಬ್ರಾಹ್ಮಣನ ವೇಷದಿಂ, ಶ್ರಾದ್ಧಮಂ ನೆವವೇಳ್ದು,
ಪಿಂಡಕೆ ನಿಮಂತ್ರಿಸುವನಾರ್ಯರಂ. ವಾತಾಪಿ ತಾಂ
ಮೇಷರೂಪವನಾಂತು ತಮ್ಮ ಮನೆಯಂಗಣದಿ
ಸೊಪ್ಪು ಮೇಯುತ್ತಿಹನ್, ಕಟ್ಟುಗೊಂಡವನೋಲೆ
ನಟಿಸಿ. ಹೋಂತದ ಗಾತ್ರಮಂ ಕಾಣುತುಬ್ಬುವರ್
ಅತಿಥಿಗಳ್ ! ಶುದ್ಧ ಸಂಸ್ಕೃತವಾಡುತಿಲ್ವಲಂ
ಮಂತ್ರಪೂರ್ವಕವಾಗಿ ಸುಲಿಯುವನು ಚರ್ಮಮಂ;      ೩೯೦
ಬಿಡಿಸಿ ಬೀವಂ ಕುಯ್ಯುವನು ಮಾಂಸಮಂ. ಶಂಕೆ
ಪುಟ್ಟದಭ್ಯಾಗತರ್ ಪಿಂಡಮಂ ತಣಿವುಂಡು
ತೇಗುವರ್, ಬೆಂದ ಬಾಡಿನ ಕೂಳರಗಲೆಂದು.
ಅನ್ನೆಗಂ ಸಂಸ್ಕೃತವನಾಡುತಿರ್ದಿಲ್ವಲಂ
ತೆಕ್ಕನೆ ಪಿಶಾಚಿ ನುಡಿಯಿಂದೆ ದುರ್ಮಂತ್ರಮಂ
ಕಾಕು ಹಾಕುತೆ ಕೂಗಿ ಕರೆಯುವನ್ ತಮ್ಮನಂ :
‘ವಾತಾಪಿ ಹೊರಗೆ ಬಾ !’ ಕೇಳ್ದು, ಒಡನೆಯೆ ಹೊಟ್ಟೆ
ಕಂಪಿಸುವುದತಿಥಿದೇವರಿಗೆ, ಮೇಕೆಯ ಗೊರಸೊ
ಕೊಂಬೊ ತಿವಿದಂತಾಗಿ, ಕರುಳರಚಿದಂತಾಗಿ
ಪಾರ್ವರೆದ್ದೆದ್ದು ಕುಣಿದಾಡುತಿರಲಾ ಇಲ್ವಲಂ   ೪೦೦
‘ಹೊರಗೆ ಬಾ ! ಹೊರಗೆ ಬಾ ! ಬಾ ಹೊರಗೆ !’ ಎಂದೆಂದು
ಕೂಗುವನ್ ವಾತಾಪಿಯಂ, ಗುಳ್ಳೆಯೊಡೆವಂತೆ
ಹೊಡೆ ಬಿರಿದಪುದು ಪಿಂಡವುಂಡರಿಗೆ….ಆಃ ….ಇನಿತು ನಿಲ್,
ಸೌಮಿತ್ರಿ, ಮುಳ್ ಮುದ್ದಿಸಿದೆ ಮತ್ ಪಾದಪದ್ಮಮಂ !
ಕೀಳಲನುಗೈದಪೆನ್.”
ತಡೆಯಲಾರದೆ ಕಥೆಗೆ
ನಗುತಿರ್ದ ಲಕ್ಷ್ಮಣಂ ನೆರವಾದನಣ್ಣಂಗೆ,
ಪಾದಪದ್ಮವ ಮುದ್ದಿಸಿದ ಮುಳ್ಗೆ ಮುಗುಳ್ನಗುತೆ :
“ಏನ್ ಕತ್ತಲೆಯೊ, ಕಾಡಿಗೆಯನೊತ್ತುತಿದೆ ಕಣ್ಗೆ !”
“ಆಲಿಸಾ ! ವನಮೌನಮಿದೆನಿತ್ತು ಭೀಕರಂ,
ಪುಲಿನಿದ್ದೆಯೋಲ್ !….ಧೂರ್ತರೀ ತೆರದಿನಾರ್ಯರಂ   ೪೧೦
ಕೊಲುತಿರ್ದರ್. ಅಂತೆಯೆ ಅಗಸ್ತ್ಯನಂ ತೀರ್ಚಲ್ಕೆ
ಕರೆದರೌತಣಕೆ. ಮೇಕೆಯ ತೆರನ ತಮ್ಮನಂ
ಕಡಿದು ಬೇಯಿಸುತಿಲ್ವಲಂ ಬಡಿಸಿದನು ಮುನಿಗೆ,
ಅಗ್ನಿಗಾಜ್ಯಾಹುತಿಯನಿತ್ತದಂ ಮತ್ತೊಮ್ಮೆ
ಪಡೆಯಲಾಸಿಪ ಗಾಂಪನಾದನಾ ರಾಕ್ಷಸಂ.
‘ಹೊರಗೆ ಬಾ, ವಾತಾಪಿ !’ ಎಂದೆನಿತ್ತೊರಲ್ದೊಡಂ
ಬರಲಿಲ್ಲವನ್ : ‘ಜೀರ್ಣಿಸಿಹುದೆನ್ನ ಜಠರಾಗ್ನಿ !
ನಿನ್ನ ಕರೆಗಿನ್ನೆತ್ತಣಿಂ ಬರ್ಪನಯ್ ?’ ಎನುತೆ
ಮುನಿ ನಗಲ್ಕಾತನನಳಿಸಲೆಂದು ಮೇಲ್ವಾಯ್ದು
ರಕ್ಕಸನುರಿದು ಬೂದಿಯಾದನಾ ತೇಜದಿಂ     ೪೨೦
ಋಷಿದೇವನಾ !”
ತೆರಳ್ದರಲ್ಲಿಂದೆ ಮರುಪಗಲ್.
ದಾರಿಯೊಳಗಸ್ತ್ಯನ ಸಹೋದರನ ಕಣ್ಗೊಳಿಪ
ದಿವ್ಯಾಶ್ರಮಂಬೊಕ್ಕು, ಮುಂದಣ ಮಾರ್ಗಮಂ ತಿಳಿದು,
ಪಯಣಗೈದರ್ ದಕ್ಷಿಣಾರಣ್ಯ ನಿಬಿಡತೆಗೆ
ನುರ್ಗ್ಗಿ. ಬರೆವರೆ, ನಿಬಿಡಮಾದುದು ಅಡವಿ ; ಅದ್ರಿ
ಕಡಿದಾದುದೆತ್ತರಂ ನಿಡಿದಾದುದಾಳಮುಂ
ತಾನಾಯ್ತಲಾ ಅದ್ಭುತಂ. ತರಂಗಿಣಿಯ ಮೊರೆ
ಗುಹ್ಯಮಾದುದು ಭೀತಿಯಿಂ ; ಹಕ್ಕಿಗಳ ಕೊರಳ
ಸರದಿಂಪು ಹದುಗಿದುದು ಹೆದರಿ. ಬನವೂಗಳುಂ
ಕಂಪನಡಗಿಸುತವಿತುಕೊಂಡುವೆಲೆಯಾಶ್ರಯಕೆ          ೪೩೦
ತಮ್ಮ ಸರ್ವಸ್ವಮಂ ತ್ಯಜಿಸಿ. ಓಡಾಡಿತಯ್
ಕರ್ನೆಳಲ ಮೆಯ್ಯ ನಿಶ್ಶಬ್ದತೆಯ ಸುಯ್ಯುಸಿರ
ಭೀತಿಭೂತಂ !
ಸೇರ್ದರಾಭೀಳ ಘೋರದಾ
ಕಾಂತಾರದಂತಮಂ. ರಮ್ಯಮಾಯ್ತಾ ಮುಂದೆ
ಆಶ್ರಮವಗಸ್ತ್ಯನಾ. ಬಾಳೆದೋಂಟಗಳಿಂದೆ
ತೆಂಗುದೋಂಟಗಳಿಂದೆ ಮೇಣಡಕೆ ಏಲಕ್ಕಿ
ಕಬ್ಬುದೋಂಟಗಳಿಂದೆ ಹಬ್ಬಿದಾ ನೋಟಮಂ
ಕಂಡುಬ್ಬುದುದು ಮನಂ ರಾಮಂಗೆ, ಲಕ್ಷ್ಮಣಗೆ,
ಮತ್ತೆ ಮೈಥಿಲಿಗೆ. ಕಾರಣಪುರುಷನಾತನಂ
ಕಂಡೊಡನೆ ಗುರುತಿಸಿದನತಿಥಿಯನಗಸ್ತ್ಯಮುನಿ          ೪೪೦
ದೇವ ಸೀತಾನಾಥನಂ. ಮಣಿದ ಮೂವರಂ
ಪರಸಿದನ್, ಸತ್ಕರಿಸಿದನ್ ಧನ್ಯಮಾಯ್ತೆಂದು
ತನ್ನಾಶ್ರಮಂ. ಕೆಲಕಾಲಮಲ್ಲಿ ಗುರುವರನ
ಸನ್ನಿಧಿಯೊಳಿರ್ದು, ತೆಂಕಣನಾಡ ಸೊಬಗಂ
ಸವಿದುಮರಿತುಮಲ್ಲಿಂದೆ ಮುಂದೆ ತೆರಳಲ್ಕೆಳಸಿ
ಬೇಡಿದನಗಸ್ತ್ಯನಂ, ಮುಂದಣವಧಿಯ ವನದ
ವಾಸಮಂ ಕಳೆಯೆ ನೆಮ್ಮದಿಯ ನಲ್ದಾಣಮೊಂದಂ
ಕೃಪೆಯಿಂ ಬೆಸಸಿಮೆಂದು. ಜಾನಿಸಿದನಂತರಂ
ಕಿರುನಗೆಯ ಮೊಗದ ಕಿತ್ತಡಿ ನುಡಿದನಿಂತೆಂದು :
“ದಂಡಕಾರಣ್ಯದೀ ಕಂಟಕದ ಬೀಡಿನೊಳ್      ೪೫೦
ನೆಮ್ಮದಿಯ ಮಾತೇಕೆ, ಪೇಳ್, ಕ್ಷತ್ರಿಯ ಧನುರ್ಧರಗೆ
ನಿನಗೆ ? ಬಗೆಗೆಡ್ಡಮಾಗಿರ್ಪೊಂದು ತಾಣಮಿದೆ :
ನಾತಿದೂರಂ ಶ್ಲಾಘನೀಯಮಾ ಪಂಚವಟಿ ;
ಬಹುಮೃಗ ಮನೋಹರಂ, ಬಹುಪಕ್ಷಿ ಮಂಜುಳಂ,
ನಿತ್ಯಪುಷ್ಪಿತ ವನ ಸುಶೋಭಿತ ತಟಾನ್ವಿತಾ
ಸಲಿಲ ಗದ್ಗದ ನಿನದೆ ಆ ಪುಣ್ಯ ಗೋದಾವರಿಯ
ಸಂಗದಿಂದತಿಮಂಗಳಂ. ರಾಜಯೋಗ್ಯಮುಂ
ಮತ್ತೆ ಋಷಿಯೋಗ್ಯಮುಂ ಸ್ಥಳಮದು ಮಹತ್‌ಕಥಾ
ಕಾರಣಂ ತಾನಪ್ಪುದದು ದಿಟಂ ನಿಮ್ಮಿಂದೆ,
ರಘುನಂದನಾ. ದ್ವಿಯೋಜನ ದೂರಮೀಯೆಡೆಗೆ          ೪೬೦
ನಿಕಟಮಾಗಿದೆ ಪಂಚವಟಿ. ಕಾಣ್ಬುದದೊ ಅಲ್ಲಿ
ಓ ಆ ಮಧೂಕ ವನಂ. ಅದನುತ್ತರಿಸೆ ಮುಂದೆ
ಗೋಚರಿಪುದೊಂದು ನ್ಯಗ್ರೋಧ ಭೂರುಹಂ. ಅದಂ
ಮೀರಿ ನಡೆಯುತ್ತೊಂದು ತೆಮರನೇರಲ್ಕೊಡಂ
ತೋರಿದಪುದೊಂದೆತ್ತರದ ಕಾಡಿಡಿದ ಮಲೆಯ
ನೆತ್ತಿ. ಆ ಗಿರಿಚರಣ ತಲಮೆ ತಾಂ ಪಂಚವಟಿ !
ದಾಶರಥಿ, ಶರಧಿಯಾಗಲಿ ನಿನ್ನ ಸಾಹಸಂ.
ಸಾರ್ಥಕಂ ಗೆಯ್ ನನ್ನ ಕೊಟ್ಟಾ ಧನುರ್ಬಾಣಮಂ,
ದಿವ್ಯ ತೂಣೀರಮಂ. ನೆರವಾಗು, ಸೌಮಿತ್ರಿ,
ನಿನ್ನಣ್ಣದೇವಂಗೆ. ಮಗಳೆ, ಸೀತಾದೇವಿ,         ೪೭೦
ನಿನ್ನಳಲ ಲೆಕ್ಕಿಸದೆ ಪತಿ ಹಿತಂಕರಿಯಾಗು;
ಲೋಕ ಶಂಕರಿಯಾಗು; ಮೇಣ್ ಯಮ ಭಯಂಕರಿಯಾಗು
ಲೋಕ ಮೂರಕೆ ಶೋಕವಾಗಿಹ ನಿಶಾಚರರ
ನಿಷ್ಠುರ ನೀಚಕುಲಕೆ !”
ಪರಸುತಿರೆ, ಕೊರಳ ಸೆರೆ
ಬಿಗಿದು ಗದ್ಗದವಾಯ್ತು ಮುನಿಗೆ ; ಕಣ್ಬನಿಯುಕ್ಕಿ
ಪರಿದಿರೆ, ಜನಕಜಾತೆಯನೆ ನೋಡುತಳ್ತನಾ
ಸೂರ್ಯವರ್ಚಸ್ವಿ ! ನಮಿಸುತೆ ಪೂಜ್ಯ ಋಷಿಪದಕೆ
ಬೀಳುಕೊಂಡರು ಮೂವರುಂ ಪಂಚವಟಿಗಾಗಿ.





************

ಶ್ರೀರಾಮಾಯಣ ದ‍ರ್ಶನಂ, ಅಯೋಧ್ಯಾ ಸಂಪುಟಂ: ಸಂಚಿಕೆ 9- ಪಾದುಕಾ ಕಿರೀಟಿ

ಸಂಚಿಕೆ 9 – ಪಾದುಕಾ ಕಿರೀಟಿ
“ಮೈಥಿಲಿ, ಗಿರೀಂದ್ರನಾಸ್ಥಾನದಂತೆಸೆಯುವೀ
ಕಾನನಶ್ರೀಯನಿದೊ, ನೋಡು, ಹಬ್ಬಿಹುದೆಂತು,
ಪ್ರಾತಃಸಮಯ ಸೂರ್ಯರಶ್ಮಿಸೂತ್ರಂಗಳಿಂ
ಕಯ್ಗಯ್ದ ಕಾನ್ತಿವಸನವನಾಂತು, ನೋಳ್ಪರ್ಗೆ
ರತಿ ಸಂಜನಿಸುವಂತು. ಕೇಳಾಲಿಸದೊ, ಭದ್ರೆ,
ರೋಮಹರ್ಷಣಕರಂ, ಮಂಜುಳ ಮನೋಹರಂ,
ಸಹೃದಯ ಸುಪೂಜಿತಂ ಬಹು ವಿಹಂಗಮ ತುಮುಲ
ರತ ಕೂಜಿತಂ ! ತೇಲುತಿದೆ ಗರಿಹಗುರಮಾಗಿ
ಪರ್ಣವರ್ಣಾರ್ಣವದ ವಿಸ್ತೀರ್ಣದೊಳ್ ಮನಂ
ಪೂವಾಗಿ, ತಳಿರಾಗಿ, ಬಿಳಿದಾಗಿ, ಕೆಂಪಾಗಿ,    ೧೦
ಪಸುರಾಗಿ, ಪಳದಿ ನೀಲಿಗಳಾಗಿ, ತನಗೆ ತಾಂ
ರಂಗುರಂಗಿನೊಳಲೆವ ತರತರದಲೆಗಳಾಗಿ.
ಮರೆಯುತಿದೆ ಮನ್ಮನಮಯೋಧ್ಯೆಯಂ; ಮರೆಯುತಿದೆ
ಪುಟ್ಟಿದಿಳೆಯಂ ಬಿಟ್ಟ ದುಃಖಮಂ; ಮರೆಯುತಿದೆ
ಪುಟ್ಟುಗೆಳೆಯರನುಳಿದಳಲ ಬೇಗೆಯಂ. ಕಾಂತೆ,
ನೀಂ ಬಳಿಯಿರಲ್ಕೆ ಕಾಂತಾರಮಿದು ನಿನ್ನುಮಂ
ಮೀರ್ದಪುದು ಚೆಲ್ವಿನೊಳ್. ದಿಟಕೆ ಮಚ್ಚರಮೇಕೆ ?
ನೋಡು ಅದೊ, ಪೊಳೆಯುತಿಹುದೆಂತುಟೆಳಬಿಸಿಲೊಳಾ
ಮಲೆಯ ಮಂಡೆಯ ಬಂಡೆಯಾಗಿರ್ಪ ರತ್ನಶಿಲೆ !
ವಾರಿಧಾರಾ ಕೇಸರಂಗಳಂ ಕೆದರುತದೊ ಕೇಳ್          ೨೦
ಸಿಂಹಗರ್ಜನೆಯುಡುಗೆ ಘೋಷಿಸುತ್ತಿಹುದರ್ಬ್ಬಿ
ಧುಮ್ಮಿಕ್ಕಿ, ಬಾ, ರಮಣಿ, ನೋಳ್ಪಮಾ ದೃಶ್ಯಮಂ,
ಭೀಷ್ಮ ಸಂಮ್ಮೋಹಮಂ, ಕಣಿವೆಗಿಳಿದದರಡಿಗೆ
ಸಾರ್ದು ! ಕಮನೀಯಳಲ್ತೆ ಭಯಂಕರಾ ಪ್ರಕೃತಿ ?”
ತೇಜಸ್ವಿ ರಾಮಚಂದ್ರಂ ಚಂದ್ರಚಾರುಮುಖಿ
ಲಾವಣ್ಯವತಿಗೆ, ಸೀತಾ ಸತಿಗೆ, ತೋರುತ್ತೆ
ಚಿತ್ರಶೈಲದ ವಿಪಿನ ವಿಭವಮಂ ಬರಬರಲ್
ಮುಂದೆ ಮೆರೆದತ್ತು ಮಂದಾಕಿನಿಯ ಕರ್ವೊನಲ್,
ಕಣ್ಗಪ್ಪು ನೀರಾಯ್ತೊ, ಬಾನ್ನೀಲಿ ತೊರೆಯಾಯ್ತೊ,
ಗಿರಿವನ ಶ್ಯಾಮಲತೆ ಸೋರಿ ಕಣಿವೆಯ ಸೇರಿ ೩೦
ವಾರಿರೂಪಿಂದೆ ಪರಿದಪ್ಪುದೆಂಬಂತೆವೋಲ್.
ದೃಶ್ಯ ಸೌಂದರ್ಯದಿಂದುದ್ದೀಪನಂಗೊಂಡು
ಗಿರಿವನಪ್ರಿಯ ಜನಕಜಾಪ್ರಿಯಂ ನಲ್ಲೆಯಂ
ನುಡಿಸಿದನು ಚುಬುಕಾಗ್ರಮಂ ಮುಟ್ಟಿ ಮುದ್ದಾಡಿ,
ಗಾನಗೈಯುವ ಮುನ್ನಮೊಯ್ಯನೆಯೆ ವೈಣಿಕಂ
ಬೀಣೆಯಂ ಮಿಡಿವವೋಲ್ : “ಜೇನ್ದಿಂಗಳೊಂದಾಯ್ತು
ನಾವಿಲ್ಲಿಗೈತಂದು, ಕೇಳ್ ಚೆನ್ನೆ, ಮನದನ್ನೆ.
ತಿಂಗಳೊಂದಾದೊಡಂ, ಜತೆಗೂಡಿ ನಲಿದಾಡಿ
ರಾಜಧಾನಿಯೊಳೆಮ್ಮ ಬಾಳ್ದುದು ಇನ್ನೊರ್ಮೆ
ಬಾಳ್ವಾಸೆ ಮೂಡುತಿದೆ ಮನಕೆ, ಮಂದಾಕಿನಿಯ         ೪೦
ನೋಟದಿಂ : ಒಲವು ಬಳಿಯಿರೆ ಚೆಲುವು ಬೇಟಮಂ
ಕೊನರಿಸುವುದಲ್ತೆ ? ನಿನ್ನಂತೆವೋಲ್ ಚೆಲ್ವೆಯೀ
ಸ್ರೋತಸ್ವಿನೀ. ನೀರಸೀರೆಯ ತೆರೆಯ ನಿರಿ ಮೆರೆವ
ತೊರೆನೀರೆಯೀಕೆಯಂ ಕಂಡು ಕರುಬದಿರೆನ್ನ
ಮಾವನ ಮುದ್ದುಮಗಳೆ !”
“ಕರುಬೇತಕೆರ್ದೆಯನ್ನ ?
ಪೊಳೆಯ ಕನ್ನಡಿಯೊಳಗೆ ನಾನೆ ಮಾರ್ಪೊಳೆಯಲದೆ
ನಿನಗೆ ಬೆಮೆಯೀಯುತಿದೆ ! ನಾನಲ್ಲದನ್ಯರಂ
ಕಾಣಬಲ್ಲನೆ ನನ್ನ ರಾಮಚಂದ್ರಂ ಪ್ರಕೃತಿ
ಲೋಕದಲಿ ?” ಮಡದಿಯಾ ನುಡಿ ಕಿವಿಗೆ ಜೇನಾಗೆ
ತೂಣಗೊಂಡುದು ರಘುಜಹೃದಯಂ ರತೋತ್ಸವಕೆ      ೫೦
ನಿಮಿರಿ.
“ನೋಡದೊ, ನಿತಂಬಿನಿ, ತೊರೆಯ ನಡುವಣಾ
ನಿನ್ನ ಮೈಬಣ್ಣದ ಪುಳಿನಪುಂಜದೆಡೆಯಲ್ಲಿ
ಬೆಳ್ದಾವರೆಯ ಬೆಳ್ಪು ಕನ್ನೈದಿಲೆಯ ಕರ್ಪು
ಕೆಂದಾವರೆಯ ಕೆಂಪುಗಳ್ ಬಣ್ಣಬಣ್ಣಂ ಕೋದು
ಬಾಸಿಂಗಮಂ ನೆಯ್ದವೋಲೆಸೆಯುವಾ ರಾಸಿ
ಹೂ ಹಸೆಯಮೇಲೆ ನಿನ್ನೆರ್ದೆಗಳೋಲಂತವಳಿ
ಜಕ್ಕವಕ್ಕಿಗಳೆಂತು ಕೊಕ್ಕು ಕೊಕ್ಕಂ ಮುಟ್ಟೆ
ಮುದ್ದಾಡಿ, ಮುದ್ದಿನಿಂಚರಗೈದು ಲಲ್ಲೆಯಿಂ
ಮಾತಾಡಿ, ತೋರುತಿವೆ ಸಾರುತಿವೆ ಬೀರುತಿವೆ
ರತಿಕೇಳಿಯಾಸಕ್ತಿಯಂ ! ನಾಣ್ಚದಿರ್, ನಲ್ಲೆ ;   ೬೦
ನಿನ್ನ ನಾಚಿಕೆಯರ್ಥವೇನೆಂಬುದನ್ ಬಲ್ಲೆ.
ಬಾ, ನೀರೆ, ನೀರ್ಗಿಳಿದು ನೀರಾಟವಾಡುವಂ.
ನೋಡಲ್ಲಿ : ಹಳದಿಗೆಂಪಿನ ಹೂವಿನೆಸಳುದುರಿ
ಹೊಳೆಯ ಓಕುಳಿಯಾಡೆ ಕರೆಯುತಿದೆ. ಬಾ, ರಮಣಿ,
ನಾಮಲ್ಲಿಗೈದುವಂ ಸವಿಯೆ ನಲ್‌ಮೀಹಮಂ, ಬಾ.”
ನೀರಿಗಿಳಿದರು ರಾಮಸೀತೆಯರು. ಕಣ್ಣಾಯ್ತು
ಶೈಲಕಾನನಪೃಥಿವಿ ತಾನಾ ಸ್ನಾನದರ್ಶನಕೆ :
ಮಹಿಮೆ ತಾಂ ಮಾಳ್ಪುದನಿತುಂ ಮಹತ್‌ಕಲೆಯಲ್ತೆ !
ಮುಳುಗಿದರ್; ಮೂಡಿದರ್; ಸರಸಕ್ಕೆ ಕಾಡಿದರ್;
ಬಯಸಿ ನಿಡುನೋಡಿದರ್ ; ಬೆನ್ನಟ್ಟುತೋಡಿದರ್;        ೭೦
ಸುಖಖನಿಯ ತೋಡಿದರ್; ನೀರಾಟವಾಡಿದರ್ :
ಹೃದಯ ಮಧುವನದಿ ಸುಧೆ ಹರಿವಂತೆ ಮಾಡಿದರೊ
ರಾಗರತಿ ಮಿಗುವ ಮಾನಸ ಭೋಗ ಯೋಗಿಗಳ್
ಸಂಯಮಿಗಳಾ ದೇವ ದಂಪತಿಗಳಿರ್ವರುಂ
ನಗಮೇಖಲಾ ನಿಮ್ನಗೆಯ ತಣ್ಪುತೀರ್ಥದೊಳ್
ಮನದಣಿಯೆ ಮಿನ್ದು ! ಘೋರಾಟವಿಯ ದೂರದಿಂ,
ಗಿರಿಭುಜ ಪ್ರತ್ಯಂತದಿಂ, ಕರೆದ ಲಕ್ಷ್ಮಣನ
ಕೊರಳುಲಿಯನಾಲಿಸಿದನಂತರಂ, ನಡುಬಾನ್ಗೆ
ಪಗಲೇರ್ದುದು ಭೋಂಕನೆಯೆ ತಿಳಿಯುತೆಳ್ಚರ್ತು,
ಸಲಿಲಕೇಳೀನಿರತರಾ ಇರ್ವರುಂ ಚೆಚ್ಚರಿಂ     ೮೦
ದಡಕಡರಿದರ್. ನಾರುಡೆಯನುಟ್ಟು, ಸುಖಮನದಿಂದೆ
ಗಿರಿಯೇರಿದರ್ ಲೆಕ್ಕಿಸದೆ ತನುವಿನಾಯಾಸಮಂ.
“ತಮ್ಮನದೊ ಕಾಯುತಿರ್ಪನ್ ನಿಡಿದು ಪೊಳ್ತಿಂದೆ,
ಮರಗಳಿಡುಕುರ್ ನಡುವಣಾ ಕಲ್ಲರೆಯ ಮೇಲೆ.
ನಲ್ಲುಣಿಸುಗಳನಟ್ಟು ತಂದಿಹನ್. ಬಾ, ಅಣುಗಿ,
ಬೇಗ ಬಾ. ನಿನ್ನ ದೆಸೆಯಿಂದೆನಿತು ತಡವಾಯ್ತೊ ?
ತಮ್ಮನೇನೆಂದಪನ್ !”
“ಆಃ ! ಜಾಣ್ಣುಡಿದಿರಲ್ತೆ?
ತಳುವಿದುದಕಾನೆ ಕಾರಣಮಪ್ಪೆನಾದೊಡಂ
ನನ್ನಿಂದೆ ತಡಮಾಯಿತೆಂಬುದದು ದಿಟಮೆ, ಪೇಳ್,
ಸತ್ಯನಿಧಿ ?” ಎನುತೆ ಕಡೆಗಣ್ಣೆಸೆದ ತಿರೆಮಗಳ            ೯೦
ತಾತ್ಪರ್ಯಮಂ ತಿಳಿಯುತೆಳನಗೆ ಸುಳಿಸಿ ದಾಶರಥಿ :
“ತರ್ಕಸಿಂಹಿಣೆ, ಸಾಲ್ಗುಮೀ ಜಾಣ್ಮೆ ; ಬೇಗ ಬಾ !”
ಎನುತೋಡುತಡರಿದನ್ ಲಕ್ಷ್ಮಣನೆಡೆಗೆ. ದೇವಿಯುಂ
ಪಿಂತಣಿಂದೇದುತೈತರೆ, ಸುಮಿತ್ರಾತ್ಮಜಂ :
“ಅತ್ತಿಗೆಯನೇಕಿಂತು ದಣಿಸುವಿರಿ, ಅಣ್ಣಯ್ಯ,
ಕಾಡು ಕೊರಕಲನಲೆಸಿ ?” ಎನೆ, ಸೀತೆ “ಮೈದುನನೆ,
ನೆಳಲಿಗೇನ್ ನಡೆವವನ ತೊಂದರೆಯೆ?” ಎಂದೊಡನೆ
ಗಂಡನ ಕಡೆಗೆ ತಿರುಗಿ, ಸಿಡುಕುಮೋರೆಯ ಮಾಡಿ,
ನೆಲಗುಡುಗಿನಂತಾಡಿದಳ್ : “ಗಂಡು ಬರಿಹೊಟ್ಟೆ !
ಕೂಳಿರ್ಪೆಡೆಗೆ ಹರಣ ಹೋದುದನ್ ಲೆಕ್ಕಿಸದೆ  ೧೦೦
ಹಾರಿ ನುಗ್ಗಿದಪುದೇಂ ನಾಣ್ಗೇಡೊ !”
“ಚೆನ್ನರಸಿ,
ನೋಡಿಲ್ಲಿ :” ರಾಮನೆಂದನು ತೋರಿ, “ನೋಡಿಲ್ಲಿ !
ಮುನಿಸನೆಲ್ಲವನಳಿಸುವಿನಿದಾದ ಹೊಸತು ಜೇನ್
ಹೊಳೆಯುತಿಹುದೆಂತೆಲೆಯ ದೊನ್ನೆಯಲಿ ! ಇದೊ ನೋಡು :
ಹೊಸ ಹಾಲು, ಹೊಸ ಹಣ್ಣು, ಹೊಸ ಕಂದಮೂಲಗಳ್ !
ಮೃದು ಪಲಾನ್ನವಿದೊ ಕಮ್ಮಗೆ ಮೂಗನೊಲಿಸುತಿದೆ;
ಮನವನೆಳೆಯುತಿದೆ ಭೋಜನ ಭೋಗಕೆಳಸಿ. ಕೊಳ್,
ಮುಗ್ಧೆ, ಕುಡಿ ಮೊದಲೊಳೀ ದುಗ್ಧಮಂ. ತರುವಾಯ
ತಿನಲೀವೆನೀ ಹೊಚ್ಚ ಹೊಸ ಹಣ್ಗಳಂ….”
ಭೋಂಕನೆಯೆ
ಬೆದರಿ ನಿಂದಳ್ ಸೀತೆ : ಧಾವಿಸಿತ್ತತಿ ಜವದಿ   ೧೧೦
ಕಡವೆ ಹಿಂಡೊಂದು ಕಣಿವೆಯೊಳನತಿ ದೂರದಲಿ !
ಲೆಕ್ಕಿಸದೆ ಹೆಚ್ಚೇನನವರು ಮತ್ತುಣತೊಡಗಿರಲ್
ಕಿರುವೊತ್ತಿನೊಳೆ, ಮತ್ತೆ ಕಾಡುಹಂದಿಗಳೊಂದು
ತಂಡವೋಡಿತು ನುಗ್ಗಿ ಹೂಂಕರಿಸಿ ! ಬೆಕ್ಕಸದಿ
ಸೋಜಿಗಂಬಡುತಿರ್ದರನಿತರೊಳ್ ಮತ್ತೊಂದು
ಮಿಗವಿಂಡು ಬೆದರಿ ನುಗ್ಗುತ್ತೋಡಿ ಮರೆಯಾಯ್ತು !
“ಏನಿದಿಂತೇಕೆ ಜಂತುಗಳಿಂದು ಕೆಟ್ಟೋಡುತಿವೆ ;
ಹಳುನುಗ್ಗಿ ಬೇಂಟೆಗಾರರ್ ಸೋವಿದಡವಿಯಂ
ತೊರೆದೋಡುವಂತೆ ?” ಎನೆ ರಾಮನೆಂದಳು ಸೀತೆ,
“ಕಾಣಲ್ಲಿ, ಪ್ರಾಣೇಶ, ಹೇರಾನೆಗಳ ಹಿಂಡು !”  ೧೨೦
ಕಂಡು ಲಕ್ಷ್ಮಣನೆಂದನಿನಿತಳುಕಿ “ಅಣ್ಣಯ್ಯ,
ಧಾವಿಸುತ್ತಿಹವೆಂತು ಪರ್ವತಾಗ್ರದಿನಯ್ಯೊ
ಬಂಡೆಗಳುರುಳುವಂತೆ ! ದೇವಿಯರಿಗೋಸುಗಂ
ಪರ್ಣಕುಟಿಯೆಡೆಗೆ ನಡೆವಂ !” ಮೂವರಲ್ಲಿಂದೆ
ಬೇಗಬೇಗನೆ ನಡೆದರಾ ಕ್ಷೇಮದೆಲೆವನೆಯ
ತಾಣಕ್ಕೆ : ತುಡುಕಿದುದು ಲಕ್ಷ್ಮಣನ ಕೈ ಧನುರ್
ಬಾಣಂಗಳಂ ! ನೋಳ್ಪನಿತರೊಳ್ ನಡುಗಿದತ್ತಡವಿ
ಸಿಂಹ ಘರ್ಜನೆಯಿಂದೆ, ವ್ಯಾಘ್ರನಾರ್ಭಟೆಯಿಂದೆ,
ಗಜದ ಘೀಂಕೃತಿಯಿಂದೆ, ಸೂಕರಂಗಳ ಘೋರ
ಹೂಂಕಾರದಿಂದೆ ! ಸೋದರನ ಕೋದಂಡದಿಂ            ೧೩೦
ಸಿಡಿಲೆಳ್ದ ಸಿಂಜಿನಿಯ ಠಂಕಾರಮಂ ನಿಲಿಸಿ
ಸನ್ನೆಗೈಯಿಂದೆ, ಕಿವಿಗೊಟ್ಟಾ ರಘೂದ್ವಹಂ
ಕಣ್ಣಾಲಿಯಾಗಿ ನಿಟ್ಟಿಸಿ ನುಡಿದನಿಂತೆಂದು :
“ನೆಲನಡುಗೊ ? ಬಾನ್ಗುಡುಗೊ ? ಕೇಳದೊ ಮಹಾಸ್ವನಂ
ಮೊಳಗುತಿದೆ, ದೂರದ ಸಮುದ್ರಘೋಷಮೆನಲ್ಕೆ.
ಹತ್ತೆ ಸಾರುತಿಹುದದೊ ಮತ್ತೆ ಮತ್ತುರ್ಬಿತೆನೆ,
ತುಮುಲ ಭೀಮಸ್ತನಿತಮತಿ ಭೈರವಂ ರವಂ !
ದಸ್ಯುಕೈರಾತ ಘೋಷವೊ ? ರಕ್ಕಸರ ರಣದ
ದೈತ್ಯಕೋಲಾಹಲವೊ ? ಕಾಣೆನೇನೆಂಬುದಂ.
ಕಾಣದೊ, ಗಗನಕೇಳುವಾ ಧೂಳಿ ಗಾಳಿಯಲಿ ೧೪೦
ಹಬ್ಬುತಿದೆ; ಬೆಟ್ಟವೆರಡರ ನಡುವೆ ಕಣಿವೆಯಂ
ಮುಸುಗಿ ತಬ್ಬುತಿದೆ. ಕಾರಣವನರಿ, ಸೋದರನೆ,
ಕಾಣ್ಬೆಳ್ತರವನೇರ್ದು.”
ಏರಿದನು ಸೌಮಿತ್ರಿ.
ಸಂತ್ವರಿತ ಮಾನಸಂ, ಪ್ರೋದ್ದೀಪ್ತತೇಜಸಂ,
ವಿರಳ ಪರ್ಣದ್ರುಮದ ಪುಷ್ಪಿತ ಶರೀರದಾ
ಸ್ವರ್ಗಚುಂಬಿತ ಸಾಲದುನ್ನತ ಶಿರದ ಕರದ
ಗೋಪುರಕೆ. ಪಕ್ಷಿರಾಜನ ತೀಕ್ಷ್ಣದಕ್ಷಿಯೋಲ್
ನೋಡಿದನು ಕಣ್ಣಟ್ಟಿ ದಿಗ್ದೇಶಮಂ. ನೋಡಿ,
ಮೂಡಣಿಂ ಬಡಗಣ್ಗೆ ಮೊಗಮಾಗೆ, ಕಚ್ಚೆದೆಯ
ಕಲಿ ಬೆಚ್ಚಿದನ್; ಕಂಡನಮಿತ ದಲ ಪದದಲನಮಂ,      ೧೫೦
ಸಮುದ್ಭೂತ ರೇಣುಪ್ರವಾಹಮಂ. ಕಾತರದಿ
ಕೂಗಿ ಹೇಳಿದನತ್ತ ನಟ್ಟ ದಿಟ್ಟಿಯನಿತ್ತ
ಹೊರಳಿಸದೆ : “ಆರಿಸಗ್ನಿಯನಣ್ಣ ಶೀಘ್ರದಿ !
ಗುಹಾಂತರದಿ ದೇವಿಯಂ ಬೈತಿಟ್ಟು ಬಾ ! ಜವದಿ
ತೊಡು ಕವಚಮಂ ! ಚಾಪಮಂ ಪಿಡಿ ! ನಿಷಂಗದಿಂ
ತೆಗೆ, ನಿಶಿತ ನಾರಾಚ ಮೃತ್ಯುವಂ !” “ಏನ್ ? ಏನ್ ?”
“ಏನೆ ? ಬರುತಿದೆ ಸೇನೆ : ಕಾಲಾಳು ಹೇರಾನೆ
ತೇರು ಕುದುರೆಯ ಮಾರಿಬೇನೆ ! ವೈರಿಯೆ ದಿಟಂ;
ಸಾರುತಿದೆ ಕೈದುಗಳ ಕಾಂತಿ. ನುಗ್ಗುತಿಹರದೊ
ರಾವುತರ್ ಮಾವುತರ್ ಲಗ್ಗೆಗೊಳ್ವಂತೆ. ಹಾ,  ೧೬೦
ತಡೆ ತಡೆ, ಅದೇನದಾ ಕೋವಿದಾರಧ್ವಜಂ !
ಆರ್ಯ, ಸಂದೇಹಮಣಮಿಲ್ಲಯ್; ಮಹೋನ್ನತಂ
ಭೀಮಕಾಯಂ ವಿಟಪಿಯಗ್ರದಿ ತೂಗಿ ಬರ್ಪುದದೊ
ರವಿಕುಲದ ಕೇತನಂ, ಮಂಗಳ ನಿಕೇತನಂ,
ನಿತ್ಯಪರಿಚಿತ ಕೋವಿದಾರಧ್ವಜಂ !-
“ಅಯ್ಯೊ,
ಕೇಡು ಬಂದತ್ತಾರ್ಯ ! ತಿಳಿದೆನಿದರರ್ಥಮಂ
ಮೇಣೆಮ್ಮನರ್ಥಮಂ : ಪೂರ್ವಾಪಕಾರಿಯಾ
ರಾಜ್ಯಕಾಮುಕೆ ಕೈಕಯೀಸುತಂ ದುಷ್ಟಮತಿ
ಬಂದನಾ ಭರತಂ ದುರುದ್ದೇಶದಿಂ, ತನ್ನ
ರಾಜ್ಯಮಂ ನಿಷ್ಕಂಟಕಂಗೆಯ್ಯಲೋಸುಗಂ,    ೧೭೦
ತಳುವಿದೊಡೆ ಕೇಡೆಮಗೆ, ಬೇಗದಿಂದೀ ಗಿರಿಯ
ದುರ್ಗಪ್ರದೇಶವೊಂದಂ ಸೇರ್ದು, ರಕ್ಷೆಗಾಂ
ಯುದ್ಧಕಣಿಯಾಗುವಂ…. ಹಸ್ತಿಭಗ್ನದ್ರುಮಕೆ
ಸಮನಪ್ಪನಿಂದವನ್, ಮತ್ತವನ ಸೇನೆಯುಂ !”
ಕುಟಜ ಕೂಟದಿನಿಳಿದು ಧುಮ್ಮಿಕ್ಕಿದನು ಧರೆಗೆ
ಸೌಮಿತ್ರಿ ತಾನುಳ್ಕೆಯೋಲ್.
“ತಾಳ್ಮೆ, ವತ್ಸಾ, ತಾಳ್ಮೆ ;
ದುಡುಕದಿರ್, ಭರತದೇವಂ ಪ್ರಾಜ್ಞನವನಿಪತಿ ;
ಮರೆಯದಿರ್. ಪ್ರಜೆಗಳಾಮೆಂಬುದಂ ನೆನೆ. ಹಿಂಸೆ
ಸಲ್ಲದಯ್, ನನ್ನಿಗಾಗಿಯೆ ನೆಲನನಿತ್ತೆಮಗೆ.
ಭರತನಂ ಕೊಂದರಪವಾದವಲ್ಲದೆ ಬೇರೆ       ೧೮೦
ಫಲವುಂಟೆ ? ನಿನ್ನವೋಲೆನಗಾತನುಂ ಪ್ರಿಯಂ.
ನೆಲದ ಸಿರಿ ತಾನ್ ಒಲುಮೆಗೋಸುಗವಲ್ತೆ ? ಕೊಂದದಂ
ಸಿರಿಗರಸರಾಗೆ ಮರುಭೂಮಿಯೊಡೆತನಮಲ್ತೆ ?
ಸಾಗರಾಂಬರೆ ಪೃಥ್ವಿಯೆನ್ನಯ ಪರಾಕ್ರಮಕೆ
ದುರ್ಲಭಳೆ? ಪ್ರಾಣಕಿಂ ಪ್ರಿಯತರಮೆನಗೆ ಧರ್ಮಂ.
ಕ್ರೋಧಮೂರ್ಛಿತನಾಗುತಾರೋಪಣಂ ಗೆಯ್ವೆ ನೀಂ
ಭ್ರಾತೃವತ್ಸಲ ಭರತನಿಗೆ ದುರಭಿಸಂಧಿಯಂ.
ನಿನಗಾತನಾವಗಂ ನುಡಿದುದಿಲ್ಲಹಿತಮಂ.
ಧರ್ಮಶೀಲಂಗೇಕೆ ನಿಂದೆ ? – ಬಂದಿಹನೇನೊ
ನೆಲವನೊಪ್ಪಿಸಲೆಮಗೆ ? ಮೇಣೆಮ್ಮನೂರಿಂಗೆ ೧೯೦
ಮರಳಿಸಲ್ ಕರೆದುತಂದನೊ ತಂದೆಯಂ ? ಮತ್ತೆ
ಮೈಥಿಲಿಯನತ್ಯಂತ ಸುಖಸೇವಿನಿಯನೆಂತೊ
ಕಾನನಕ್ಲೇಶದಿಂದೊಯ್ಯಲೈತಂದಿಹನೊ ? -
ನೋಡು, ವಾಹಿನಿಮುಖದೊಳೆಮ್ಮಯ್ಯನೊಲಿದಾನೆ
ರಾಜಗಾಂಭೀರ್ಯದಿಂದೆಂತು ಶತ್ರುಂಜಯಂ
ಬರುತಲಿದೆ ! ಸೌಮಿತ್ರಿ, ತೋರದೇತಕೊ ಏನೊ
ಲೋಕಪೂಜಿತ ದೇವ ದಶರಥ ಸಿತಾತಪತ್ರಂ !
ಮನಕೇನೊ ಸಂಭವಿಸುತಿದೆ ಸಂಶಯಂ…. ಭದ್ರೆ,
ಕೈಮುಗಿವಮಿಲ್ಲಿಂದೆ ಪಿತೃಪದ ಪಯೋರುಹಕೆ.
ವತ್ಸ ಲಕ್ಷ್ಮಣ, ಅಯ್ಯೊ ಹನಿ ತುಂಬುತಿದೆ ಕಣ್ಗೆ; ೨೦೦
ಕಾರಣವನರಿಯೆನೇತಕೊ ಕಂಠಕೊದಗುತಿದೆ
ಶಿಶುಗದ್ಗದಂ : ತಾಯಿತಂದೆಯರನಿನ್ನೊರ್ಮೆ
ಕಾಣ್ಬೆವೆಂಬುಲ್ಲಾಸಮದೆ ದಿಟಂ ಕಾರಣಂ !”
ಮೌನಿಯಾದನು ರಾಮನಿಂತೆಂದು. ಲಕ್ಷ್ಮಣಂ
ಲಜ್ಜಾವಿಷಾದಮಂ ತುಳಿದಿಕ್ಕಿ, ಮೋದದಿಂ
ಕಣ್ಣಾದನತ್ತಣ್ಗೆ. ಪತಿಯ ಕೆಲದಲಿ ಸೀತೆ
ನಿಂತು ನೋಡಿದಳಾತನಾತ್ಮದನುಕಂಪನಕೆ
ಪ್ರತಿಕಂಪಿಸುವ ವೀಣೆಯುಜ್ವಲ ತಂತ್ರಿಯಂತೆ.
ತೋರೆನಗೆ, ಗುರುವೆ, ಮುಂದಣ ಕಥಾಲೋಕಮಂ,
ದಶರಥಾತ್ಮಜ ಮಹಾಶೋಕಮಂ. ಪೇಳೆನಗೆ ೨೧೦
ಚಿತ್ರಕೂಟಕೆ ಭರತನಾಗಮನ ವಾರ್ತೆಯಂ,
ರಾಮಚರಣಕ್ಷೇತ್ರಯಾತ್ರೆಯಂ : – ನಗರಮಂ
ಪರ್ವಿದುದೊ ಭರತದೇವಂ, ಭ್ರಾತೃವತ್ಸಲಂ,
ಪೊಡವಿ ಪಟ್ಟವನೊಲ್ಲದೆಯೆ ರಾಮಚಂದ್ರನಂ
ಮರಳಿಸಿ ಪುರಕೆ ಮರಳಿ ಕರೆತರಲರಣ್ಯಮಂ
ನಡೆವನೆಂಬಾ ಶುಭಂ. ನಾ ಮುಂದೆ ತಾ ಮುಂದೆ
ಎಂದು ಸಂದಣಿಸಿತೈ ಮಂದಿ ಭರತನ ಹಿಂದೆ
ದಂಡುಗೊಂಡಂತೆ. ನಡೆಗೊಂಡುದಿಂತುಟಯೋಧ್ಯೆ.
ದಟ್ಟಡವಿಯೊಳ್ ಬಟ್ಟೆಯಂ ಕೊರೆಯುತಂ, ಕಟ್ಟಿ
ಕೆರೆ ಕಟ್ಟೆ ಬಾವಿಯಂ ಬೆಟ್ಟಿತು ನೆಲದೊಳಿರ್ಪು  ೨೨೦
ಪುಟ್ಟುವಂತೆಸಗುತಂ, ಪಳ್ಳಕೊಳ್ಳಂಗಳಿಗೆ
ಸೇತುಗಟ್ಟುತೆ ದಾಂಟಿ ನಡೆಯುತಂ, ಕ್ರಮದಿಂದೆ
ಪಯಣ ಪಯಣಂಗೊಟ್ಟು ಬೀಡು ಬೀಡಂ ಬಿಟ್ಟು,
ರವಿಕುಲದ ನಾಗರಿಕತೆಯೆ ವಿಪಿನದೇಶಮಂ
ವಿಕ್ರಮದೊಳಾಕ್ರಮಿಸಿತೆನೆ, ಪರಿದುದು ಅಯೋಧ್ಯೆ,
ದುಃಖಿ ಭರತನ ಹಿಂದೆಯುಕ್ಕಿ ನೂಂಕುತೆ ಮುಂದೆ
ರಾಮಚಂದ್ರೋನ್ಮಾದದಿಂದೆ ! ಗುಹನಂ ಬೆರಸಿ,
ಜಾಹ್ನವಿಯನುತ್ತರಿಸಿ, ಋಷಿ ಭರದ್ವಾಜಂಗೆ
ಪಿರಿಯತಿಥಿಯಾಗಿ ನಿಂದಾತನಂ, ಜತೆಗೂಡಿ
ವಿಪಿನಸರಣಿಯನೊರೆಯುತೈತಂದನಂ, ಬೀಳ್ಕೊಂಡು ೨೩೦
ನಡೆಯೆ ಭರತಂ, ಕರೆದು ಮೆರೆದುದಾ ಚಿತ್ರಕೂಟಂ,
ನೀಲಮೇಘಶ್ಯಾಮ ರಘುರಾಮ ಸಂಗದಿಂ
ಘನವಿಪಿನ ರೋಮ ತನು ನೀಲಿಮೆಯೆ ತಾಂ ಘನಿತು
ನಿಂದಂತೆವೋಲ್. ದೊರೆಯ ಮನವರಿತು ಜನಸೇನೆ,
ಮಂತ್ರಾಜ್ಞೆಯಿಂ ಮೊರೆಗಡಲ್ ಮೋನವಪ್ಪಂತೆ,
ನಿಶ್ಶಬ್ದವಾದುದಯ್ : ಪೂಜ್ಯ ಸಾನ್ನಿಧ್ಯಮಿರೆ
ಚಂಚಲತೆಯುಂ ಸುಸ್ಥಿರತೆಯಪ್ಪುದಚ್ಚರಿಯೆ ?
ಭಾವದಿಂ ಭರತಂಗೆ ಮಾತು ತೊದಲಾಯ್ತಂತೆ
ನಡುಗು ಮೊದಲಾಯ್ತೊಡಲಿಗಂತೆ ಕೊರಲಿಗೆ ದೀನ
ಗದ್ಗದಂ ತೊಡಗಿದುದು. ಸಕಲರಂ ನಿಲವೇಳ್ದು,            ೨೪೦
ಬಿಯದರರಸಂ ಗುಹನನಂತೆ ಶತ್ರುಘ್ನನಂ
ಮೇಣಾ ಸುಮಂತ್ರನಂ ತನ್ನೊಡನೆ ಬರವೇಳ್ದು,
ಚೀರವಲ್ಕಲವುಟ್ಟು ಜಡೆವೊತ್ತ ದೀನಮುಖಿ,
ತಾರುಣ್ಯಕಡಿಯಿಡುವ ಕೌಮಾರಮೂರ್ತಿಯಾ
ಬಾಲಋಷಿ ಕಾಡನೇರಿದನು ರಾಮಾಶ್ರಮಕೆ,
ಮಾತೃವಕ್ಷವನರಸುತರ್ಭಕನಡರುವಂತೆ.
ನಡುವಗಲ ಸುಡುಬಿಸಿಲ್ಗೆಲೆಗೊಡೆಯನೊಟ್ಟಯ್ಸಿ
ನೆಳಲ ಕುತ್ತುರೊಲಿರ್ದ ಪಳುವದೊಳ್ ನಡೆದಿರಲ್,
ಕಾಣಿಸಿತ್ತಂಬರದ ಬೆಳ್ಮುಗಿಲ್ಗಿದಿರೆಳ್ದ
ಧೂಮವಿನ್ಯಾಸದಗ್ನಿಧ್ವಜಂ ನಿಕಟದಾ            ೨೫೦
ಗಿರಿತಟದಟವಿಯಿಂದೆ : ಬಯಕೆ ಬಾವುಟವೆತ್ತಿ
ಕರೆದಪುದೊ? ಪಿರಿಯ ಪಿತೃಕೃಪೆ ಪರಕೆಗೈಯಲ್ಕೆ
ಕೈವೀಸಿದಪುದೊ? ರಾಮನನರಸುತೈತಂದು
ತನ್ನೊಡಲನುರಿಗೆ ಬೇಳ್ದಾ ದೇವಿ ಮಂಥರೆಯ
ಪುಣ್ಯಾಂತರಾತ್ಮಪ್ರಣಯಲಕ್ಷ್ಮಿ ಭರತಂಗದೇಂ
ಕೌಸಲೆಯ ಕುವರನೆಡೆಯಂ ಪೊಗೆವೆರಳ್ ನೀಡಿ
ಸುಟ್ಟಿದೋರ್ದಪಳೊ? ಎನೆ ಕಂಡುದಾ ಕರ್ವಟ್ಟೆ
ಹೊಗೆಯ ಹಳವಿಗೆಯನಾ. ನಲ್ ಮೂಡಿ ಮುಂಬರಿಯೆ
ಮುಟ್ಟಿ ಬಂದುದು ಮುಂದೆ ಮಂದಾಕಿನಿಯ ತುಂಬು
ನೀರ್‌ದಾರಿ, ಕಟ್ಟಲಾಳ್ಗಳ್ ಕಟ್ಟಿಗೆಯನೊಟ್ಟಿ,   ೨೬೦
ತೇಲ್ದುದೋಡಂ ದಡಕೆ ಆ ಕಡೆಯಾ. ನಾವೆಯೊಳ್
ನಿಂದ ಭರತಂ ಧೂಮಲೇಖೆಯನೆ ನೋಡುತಂ
ತನ್ನೊಳಗೆ ತಾನ್ : “ಆರ ವದನಾರವಿಂದಮಂ
ನೋಡಿ, ಮಕರಂದಮಂ ಹೀರಿ, ಜನ ನಯನಾಳಿ
ತೃಪ್ತಿಯರಿಯವೊ ಅದನ್ನೊಸೆದು ನೋಳ್ಪನ್ನೆಗಂ
ಶಾಂತಿಯಿಲ್ಲೆನಗೆ. ಮತ್ತಾರ ಮಂಜುಳ ಮಧುರ
ಕಂಠದ ವಿಪಂಚಿಕಾ ನಾದಮಂ ಸವಿಸವಿದು
ಕಿವಿತಣಿಯವೋ ಅದನ್ನಾಲಿಪನ್ನೆಗಮಣಂ
ಶಾಂತಿಯಿಲ್ಲೆನಗೆ. ಮೇಣಾರಡಿಯ ನೈದಿಲೆಯ
ನೀಲಸಾನ್ನಿಧ್ಯದೊಳ್ ತೇಲಿ ತೇಂಕಾಡುವಾ   ೨೭೦
ಸೊಗಸಿಗುಳಿದೆಲ್ಲ ಸೊಗಮಂ ಬಿಟ್ಟು ಬೀಸಾಡಿ
ಬಂದಳೊ ವಸುಂಧರಾನಂದನೆ ಅದಂ ಪಿಡಿದು
ಮುಡಿಯೊತ್ತುವನ್ನೆಗಂ ಶಾಂತಿಯಿಲ್ಲೆನಗೆ. ದೊರೆ
ಪಿರಿಯಂಗೆ ತಿರೆಯಿತ್ತು ಪೊರೆಯಿಳಿಸುವನ್ನೆಗಂ
ಕುಸಿದು ಕುಗ್ಗಿದ ಬಾಳ್ಗೆ ಶಾಂತಿಯಿಲ್ಲೆನಗೆ.” ಇಂತು
ಧೂಮ ಪ್ರತೀಕದಿಂ ರಾಮನಂ ಭಾವಿಸಿರೆ
ಬಂದು ಮುಟ್ಟಿತ್ತೋಡಮಾ ಪಾರಮಂ, ಶೈಲ
ಚರಣತಲ ವನಸೀಮೆಯಂ : ನಮಿಸಿದನು ಮುಟ್ಟಿ
ಮೃತ್ತಿಕೆಯನಾ ರಾಮ ಚರಣ ಸ್ಪರ್ಶ ಪೂಜ್ಯಮಂ.
“ಶತ್ರುಘ್ನ, ಇದೆ ತಾಣಮಿರವೇಳ್ಕುಮದೊ ಅಲ್ಲಿ            ೨೮೦
ತೋರ್ಪುದಾ ಮನುಜ ಸಂಚಾರ ಸೂಚಕ ಚಿಹ್ನೆ :
ಕಾಡುಬೆರಣಿಯನಾರೊ ರಾಸಿಗೈದಿಹರಲ್ತೆ
ಚಳಿಗೋಸುಗಂ?” ಭರತನೆನೆ, ಗುಹಂ, ಕರಿಮೆಯ್ಯ
ಭೀಮಗಾತ್ರಂ, ಕಾಡನಿನ್ನೊಂದು ತನಗೆ ಪಿರಿ
ಮೆಯ್ಯಾಗಿ ತಿಳಿದವಂ : “ದಿಟಮಯ್ಯ ; ದಿಟಮೂಹೆ.
ಒಂದೇತಕೆನ್ನ ಕಣ್ಣಿಗೆ ಕಾಣ್ಬವೆನಿತೆನಿತೊ
ನರ ಕರ ಚರಣ ಚಿಹ್ನೆಗಳ್. ನೋಡಿಮಾ ಮುರಿದ ಹರೆ
ಸಾಲ್ಗೊಂಡು ಬಿದ್ದಿಹವು ಹೊದೆಹೊದೆಯೆಡೆಯೆ ಹಾದಿ
ಗುರುತಾಗಿ. ಕಾಣಿಮಾಳ್ಪಜ್ಜೆ, ತೊಯ್ದಾ ನೆಲದಿ….
ನಿಡುವುಲ್ಗಳಿರ್ಕಡೆಗೆ ಬಾಗಿರ್ಪವಾ ಪದಂ        ೨೯೦
ಮೃಗಪದಕ್ರಮವಲ್ತು…. ನೋಡಿಮಾ ಬಣಗು ಪೊದೆ.
ಸಹಜ ಮೃತಿಯಲ್ತಾರೊ ಬುಡಗಡಿದರದನೇಕೊ,
ನಿನ್ನೆ, ತಪ್ಪಿತೊ ಮೊನ್ನೆ. ಓ ಈಗಳರಿವಾಯ್ತು :
ಹೊದೆಯ ಮೊದಲೊಳಗಿರ್ದ ನೂಲೆಯ ಗೆಣಸಿಗಾಗಿ
ಬಳ್ಳಿಗಳನಗೆದು ತೆಗೆದಿರ್ಪರದೊ ಕೆಮ್ಮಣ್ಣು
ಬಳಿಯೊಳೆಯೆ ರಾಸಿ ಬಿದ್ದಿದೆ ! ನೋಡಿ ಓ ಅಲ್ಲಿ
ಬಿದಿರುಮೆಳೆಯೆಡೆ ಹುತ್ತಕೊತ್ತಿದೆ ಸವುದೆಗಟ್ಟು….
ಬಟ್ಟೆಯರಿಯಲದೊ ಕುಶಚೀರಗಳನಲ್ಲಲ್ಲಿ
ಕಟ್ಟಿಹರು, ಕೊಂಬೆ ಕೊಂಬೆಗೆ, ಕಣ್ಣ ಕುರುಹಾಗಿ….
ಇದೊ ಇಲ್ಲಿ ಹೂಗೊಯ್ದು ಹೋಹಾಗಳುದುರಿದಾ          ೩೦೦
ಒಂದು ಹೂವಲ್ತೆರಡು ಮೂರು ನಾಲ್ಕೈದಾರು !
ಚೆಲ್ಲಿ ಹೋಗಿಹರಯ್ಯೊ !…. ಇತ್ತಲಿತ್ತಲ್ ಬನ್ನಿ ;
ಅತ್ತ ಸರು, ಅತ್ತ ದರಿ. ಕಾಣಿರಿದೊ, ಇದೆ ಹಾದಿ
ಬಳಿಯಿರ್ಪುದಾಶ್ರಮಂ ! ಕಂಪಿಂದೆ ಬೇಂಟೆನಾಯ್
ಮಿಗದಿರ್ಕೆಯರಿವಂತೆ ಅರಿತೆ ನಾನ್ ! ಅದೊ ಅಲ್ಲಿ,
ಆ ಎಳ್ತರದೊಳಾರೊ ಹೊಳೆದವೋಲಾಯ್ತೆನಗೆ !
ಭ್ರಾಂತಿಯೇಂ ? ಭ್ರಾಂತಿಯಿನ್ನೆಲ್ಲಿಯದು ? ಶಿವಶಿವಾ
ಅಗೊ ಅಲ್ಲಿ, ಅಗೊ ದೇವ ರಾಮಚಂದ್ರಂ ! ಅಲ್ಲಿ
ಕಾಣಿರೇಂ ? ದೇವಿ ಸೀತಾಮಾತೆ ! ಅದೊ ಅಲ್ಲೆ,
ದೇವ ಸೌಮಿತ್ರಿ !”
ಕಂಡನ್ ; ನೋಡಿದನ್ ; ನುಗ್ಗಿ        ೩೧೦
ಮುಂದೋಡಿದನ್ ಭರತನುನ್ಮಾದವೇರ್ದನೊಲ್,
ಬೆಟ್ಟ ತಲೆಕೆಳಗಾಗಲುರುಳ್ವಂತೆವೋಲದರ
ತುಂಗ ಶೃಂಗಕ್ಕೆ ! ಅಣ್ಣಯ್ಯ ಓ ಎಂದೊಂದೆ
ಸೊಲ್ಲೊರಲ್ದಡಿಯನೆಯ್ದುವ ಮುನ್ನಮೆ ಸಡಿಲ್ದು
ದೊಪ್ಪನೆ ಕೆಡೆದನಿಳೆಗೆ, ತನ್ನ ಭಾರಕೆ ತಾನೆ
ಬೇರು ಬಳಲಿದ ತರುಣತರು ಬೀಳುವಂತೆ : ಹಾ,
ಪ್ರಿಯ ವಿಯೋಗದ ನೋವಿಗೆಣೆಯುಂಟೆ ? ಕಬ್ಬುನಂ
ಕರಗಿದಪುದಲರವೊಲ್ ಬಾಡುವುದು ವಜ್ರಮುಂ.
ಇಷ್ಟವಿರಹಕೆ ಮಿಗಿಲ್ ಸಂಕಟದ ಶಿಕ್ಷೆಯಂ
ಸೃಜಿಸಬಲ್ಲನೆ ನರಕ ಶಿಕ್ಷಾಚಾರ್ಯನಾದೊಡಂ ?         ೩೨೦
ಮಣಿವುದು ಮಹಾ ಶೈಲಮುಂ ತಾಂ ಲತಾಂಘ್ರಿಗೆ
ಶಿರಂಬಾಗಿ, ಬೇರೆ ಕೋರೆಗಳೇಕೆ ನರಕದಾ
ವ್ಯಾಘ್ರಂಗೆ, ನರಹೃದಯ ರಕ್ತಮಾಂಸವನೀಂಟಿ
ತಿಂದು ತೇಗುವ ನಾಶದೌತಣಕೆ ?
ಹಿರಿಯನಿಗೆ,
ಕಿರಿಯರಿಗೆ, ದೂರದಿಂದಲೆ ಮಣಿದನೆಂಬಂತೆ
ಮೂವರಿಗೆ, ಭರತಂ ಯುಗಾಂತ ಭಾಸ್ಕರ ಸಮಂ
ದೀನಂ ವಿವರ್ಣವದನಂ ಕೃಶಂ ದಿಂಡುರುಳೆ,
ಪ್ರಸ್ವಿನ್ನ ಚೀರ ವಲ್ಕಲ ಜಟಾ ಜಟಿಲನಂ
ಕಷ್ಟದಿಂ ಗುರುತಿಸಿ ಮಹಾಕಾಶ ಸಂಕಾಶನಾ
ನೀಲೋತ್ಪಲ ನಿಭಾಂಗನಾ ರಾಮಚಂದ್ರಂ ಕೂಡೆ        ೩೩೦
ಬಿಡದೋಡಿ ಬಂದು ಪಿಡಿದೆತ್ತಿದನ್ ; ಸುಯ್ಯೆರ್ದೆಗೆ
ತಮ್ಮನಂ ಬಿಗಿದಪ್ಪುತೊತ್ತಿದನ್ ; ಮಂಡೆಯಂ
ಮುಂಡಾಡಿ ಪಣೆಗೆ ಮುತ್ತೊತ್ತಿದನ್. ಗದ್ಗದಿಸಿ
ಗುಬ್ಬಳಿಸಿದನೆನಲ್ಕೆ ನುಡಿಸಿದನ್, ಸಂಗಮಿಸೆ
ತನ್ನ ಕಣ್‌ಗಂಗೆ ತಮ್ಮನ ಕಣ್ಣ ಜಗುನೆಯಂ :
“ಏನಿದೇನವರಜನೆ ? ತಂದೆಗಸುಖವೆ ? ನೆಲಕೆ
ಕಂಟಕವೆ ? ನೆಮ್ಮದಿಯ ಕೇಡೆ ತಾಯಂದಿರಿಗೆ ?
ಬಾಧೆಯೇನಾದುದೇನೆಮ್ಮ ಕೋಸಲ ಜನಕೆ ?
ಚೀರವಸನವಿದೇಕೆ ? ಜಟೆಯೇಕೆ ? ಮುಖವೇಕೆ
ಕಳೆಗುಂದಿಹುದು ? ಮಲಿನಮಯ ಕೃಶತೆಯೇಕೀ ಮೆಯ್ಗೆ ?         ೩೪೦
ಅಯ್ಯೊ ಈ ದುರ್ದರ್ಶ ಸಂಕಟಾಕೃತಿಯೇಕೆ ?
ನಿನಗೇಕೆ ? ಏಕೆ ಹೇಳಯ್ಯ, ಓ ಸೋದರನೆ,
ನನ್ನುಸಿರ ಸೋದರನೆ ?” ಕುದಿದಪ್ಪಿದಣ್ಣನಾ
ತೋಳ್ತಳ್ಕೆ ತಾಯ ಮಡಿಲಾದುದೆನೆ ಭರತಂ
ಬಳಲ್ದ ಶಿಶು ನೋವಂ ಮರೆತು ನೆಮ್ಮದಿಯನರಿತು
ಮುಗ್ಧ ನಿದ್ರಾಮುದ್ರೆಯಪ್ಪಂತೆ, ಜನಕಜಾ
ರಮಣ ಧೀರೋದಾತ್ತ ವಕ್ಷವಾರ್ಧಿಯ ನೀಲ
ನಾವೆಯೊಳ್ ತೇಲಿದನು ಶಾಂತಿಯ ತುರೀಯಕೆ !
ಮೈಮರೆತ ತಮ್ಮನಂ ಕರುಣೆಯಕ್ಕರೆಯುಕ್ಕಿ
ಮೇಲೆತ್ತುತಾ ರಾಮನೆಲೆವನೆಗೆ ನಡೆದನಯ್, ೩೫೦
ಸೀತೆ ಸೌಮಿತ್ರಿ ಶತ್ರುಘ್ನ ಗುಹರೊಡನೊಡನೆ
ನೆರವಾಗಿ ನಡೆಯೆ :
ದೇವಾಸುರರ ಮಂದರದ ಮೇಣ್
ವಾಸುಕಿಯ ಮಥನ ದೈತ್ಯತೆಗೆಂತು ಮುನ್ನೊಮ್ಮೆ
ತಾನುಕ್ಕಿತಂತೆ, ಭೂ ಜರಠ ಜಠರಾಂತರದ
ಪಲ್ಲಟದ ಪರಿಣಾಮದಿಂದಂ ಪ್ರಕೋಪಿಸುತೆ
ಭೋರ್ಗುದಿದು ಮೇಲ್ವಾಯ್ವುದಟ್ಲಾಂಟಿಕಾಂಭೋಧಿ
ಪೆಸಿಫಿಕಂಬುಧಿಯೊಡನೆ ಢಿಕ್ಕಿ ಹೊಡೆದುಕ್ಕಿ. ಆ
ಕಡಲೆರಡರೊಡಲೊಡಲ ನೀರವ್ವಳಿಕೆಗಡಿಯೆ
ಮೇಲಾದವೋಲೋಕರಿಪುದದ್ರಿಸಮ ಊರ್ಮಿ
ಮಾಲಾ ಭಯಂಕರ ಸಮುದ್ರಂ, ತಿಮಿಂಗಿಲಂ ೩೬೦
ತೃಣದ ಕಣವಾಯಿತೆಂಬಂತೆ. ಪೊರಪೊಣ್ಮುತ್ತೆ
ಗೋಚರಿಪುದೊಂದ್ಧುತಂ ದ್ವೀಪಖಂಡಮದೊ
ಸಸ್ಯಹೀನಂ ಪ್ರಾಣರಹಿತಂ. ಸಮುದ್ರಾಂಬೆ ತಾಂ
ದ್ವೀಪ ಪ್ರಸವವೇದೆಯಿಂದೊಯ್ಯನುತ್ತರಿಸಿ
ನೋಳ್ಪಳಾ ತನ್ನ ಪೊಸ ಪೆತ್ತ ಸಿಸುದೀವಿಯಂ,
ತಾಯ್ಮಳಲ ಬರುನೆಲದ ಬತ್ತಲೆಯ ಬೇಸರದ
ನಿರ್ಜೀವಿಯಂ. ಸುಯ್ದು ಮರುಗಿದಪಳಲೆಯಳ್ಳೆ
ತಿದಿಯೊತ್ತಿದೋಲೇಳುಬೀಳಾಗೆ ಮೋಹವಶೆ
ಮುದ್ದಾಡುವಳ್ ತರಂಗಮ ಪರಿಷ್ವಂಗದಿಂ,
ಫೇನ ಮೃದು ಚುಂಬನೋಚ್ಛ್ವಾಸದಿಂ, ತನ್ನುಸಿರ          ೩೭೦
ಚೇತನವನಾ ದ್ವೀಪವತ್ಸನ ದೇಹಕೆಳ್ಚರಿಸೆ
ನೋಂತು, ಸಂವತ್ಸರಗಳಾ ತಪೋದೀಪಕ್ಕೆ
ತಮ್ಮ ಜೀವನ ತೈಲಮಂ ಧಾರೆಯೀಯುತ್ತೆ
ಹರಿಯುವುವು ಕಾಲದಾಚೆಯ ನಿತ್ಯತೆಯ ನಿಧಿಗೆ,
ಬ್ರಹ್ಮಸನ್ನಿಧಿಗೆ. ಇಂತು ಯುಗಶತಂ ಗತವಾಗೆ,
ಕಡಲಮ್ಮನಾ ನೋಂಪಿ ಕೈಗೂಡಿದಪುದಹಾ
ದೀವಿಯೊಡಲೊಳಗುಸಿರ್ ಮಿಂಚು ಸಂಚರಿಸಿ ! ಅದೊ
ಹೊಮ್ಮಿದಾ ಸಸ್ಯದೈಸಿರಿ ಪಸುರ್ ಚಿಮ್ಮುತಿದೆ
ತನ್ನ ಸೃಷ್ಟಿಗೆ ತಾನೆ ಬೆರಗಾಗಿ ! ತುಂಬಡವಿ
ಕಳಕಳಿಸಿ ಮೆರೆಯುತಿದೆ ದೀವಿಯೊಡಲಂ ಮುಚ್ಚಿ         ೩೮೦
ಸಿಂಗರಿಸಿ. ಕಣ್ದೆರೆದರೇನಂತೆ, ಜೀವಕ್ಕೆ
ಬಾಯ್ದೆರೆಯದಿನ್ನುಮೆಂತೆನೆ, ಹಕ್ಕಿಮಿಗಗಳ್ಗೆ
ಹುಟ್ಟು ಮೂಡಿಲ್ಲದುದರಿಂದೆಸೆವುದಾ ದೀವಿ
ಮೂಗುವಟ್ಟಂತೆವೋಲ್.
ಶಿಶಿರೋಪಚಾರಕ್ಕೆ
ಕಣ್ದೆರೆದನಾ ಭರತನಣ್ಣನಾಲಿಂಗನದ
ನೀಲದೋಲದೊಳೊಂದು ನುಡಿಮೊಳೆಯದೆಳಹಸುಳೆ.
ಬೆಸಗೊಳೆ ನುಡಿಯಲಾರದಳುವಣುಗದಮ್ಮನಾ
ಮೌನಮುಖ ದೈನ್ಯದೊಳ್ ಸುಳಿಯೆ ಛಾಯಾಮೃತ್ಯು
ಛಾಯೆ, ಕಂಪಿಸಿ ಕಂಡು ದಾಶರಥಿ ನೋಡಲ್ಕೆ
ಶತ್ರುಘ್ನನಂ, ಆತನುಂ ಮೋರೆಯನಿಳಿಕೆಗೆಯ್ಯೆ,           ೩೯೦
ಮಂತ್ರಿಯ ಕಡೆಗೆ ತಿರುಗಲಾತನುಂ ಗದ್ಗದಿಸೆ,
ರಾಮನಿಂಗಿತವರಿತು ತುಟಿದೆರೆದನಾ ಗುಹಂ
ವಾರ್ತಾಕಠೋರಮಂ, ಪಿತೃದೇವ ಮರಣಮಂ,
ಭರತ ಸಂತಾಪಮಂ, ವ್ರತಮಂ, ಪ್ರತಿಜ್ಞೆಯಂ
ವನಚರ ಸಹಜ ವಚನ ಕಾರ್ಪಣ್ಯದಿಂದಂತೆ
ಭಾವಮಯ ರಚನೆಯೌದಾರ್ಯದಿಂ : ಧೀರನೆದೆ
ಧಿಗಿಲೆಂದುದವನಿಜೆಗೆ ಕಣ್ಗತ್ತಲಾದತ್ತು ;
ಚಳಿಗೆ ಮೆಯ್ ನಡುಗಿದತ್ತಂತೆ ಬೆಮರ್ದುದು ಸೆಕೆಗೆ
ಕದಡಿತು ಮನಂ ; ಬೆದರಿತಾತ್ಮಂ ; ರಘೂದ್ವಹಂ
ಸುಯ್ದೊರಗಿದನ್ ಗುಹನ ತೋಳ್ಗಳಿಗೆ. ಬಂಡೆಯಿಂ        ೪೦೦
ಬನದ ತೊರೆ ಸೋರ್ದುದೆನೆ ಕಣ್ಮುಚ್ಚಿದೆವೆಗಳಿಂ
ಸ್ರವಿಸಿದತ್ತಶ್ರು ಶೋಕದ ಸಿಂಧುಶುಕ್ತಿಯಿಂ
ನಿಶ್ಶಬ್ದತಾ ಬಿಂದು ಮುಕ್ತಾಫಲಗಳುಕ್ಕಿ
ಸುರಿವಂತೆ. ಮೈತಿಳಿದೊಡಂ ರಾಮನನುಜಂಗೆ
“ತಂದೆ ಹೋದನೆ, ತಮ್ಮ, ಸೌಮಿತ್ರಿ ?” ಎನುತೆನುತೆ
ಮೈಥಿಲಿಯ ಮೊಗನೋಡಿ ಸುಯ್ದು ಕುಸಿದನು ಮತ್ತೆ
ವಿಸ್ಮೃತಿಗೆ. ಶೋಕಾಗ್ನಿಯುರಿಯ ಹೊಯ್ಲಿಗೆ ಸಿಲ್ಕಿ
ಸಿಡಿಮಿಡಿಗೊಳುತಲಿರ್ದನಂ ಭರತನಪ್ಪಿದಂ ;
ನುಡಿದನೆಂತಾನುಂ ಸಮಾಧಾನಮಂ. ಪೇಳ್ದ
ಮಾತಿನರ್ಥಕ್ಕಲ್ತು, ತಮ್ಮನೊಲ್ಮೆಯ ದನಿಯ ೪೧೦
ಸುಪ್ರೀತಿಗೆರ್ದೆಯ ಕುದಿಹಂ ತವಿದುದಣ್ಣಂಗೆ :
“ಏಳ್, ಅಯ್ಯಗೆಳ್‌ನೀರೀಯಲಣ್ಣದೇವನೆ ಏಳು !”
ತಮ್ಮನೆಂದೊಳ್ನುಡಿಗೆ ಮಂತ್ರಶಾನ್ತನ ತೆರದಿ
ಮೇಲೆಳ್ದನಮೃತತ್ವದರಿವಾದನೋಲ್.
ಮಂತ್ರಿ
ಕಯ್ಯಾಂತು ಕರೆದೊಯ್ದನಿಳಿಸಿದನು ರಘುಜರಂ
ಮಂದಾಕಿನಿಯ ಪುಣ್ಯತೀರ್ಥಕ್ಕೆ. ನದೀದೇವಿ
ಮೊರೆಯಿಂದೆ ಲಲ್ಲಯ್ಸಿ, ತೆರೆಯಿಂದೆ ಸಂತಯ್ಸಿ
ಪರಿದಳು ಚಿರಶ್ಯಾಮಲಾರಣ್ಯಗಳ ಮಧ್ಯೆ,
ತುಂಬಿ ! ಕರ್ದಮ ರಹಿತ ತಟನಿಕಟ ವಾರಿಯಂ
ಮಿಂದರುದಕಂಗೊಟ್ಟರಯ್ಯಂಗೆ : “ಪಿತೃದೇವ,            ೪೨೦
ಕೊಳ್ಳಿದಂ ಕುಸುಮ ಸುಂದರ ಸದಾ ರಮಣೀಯ,
ಶೀತಲ ಸುಗಂಧಮಯ, ಮಂದಾಕಿನಿಯ ದಿವ್ಯ
ತೀರ್ಥಮಂ. ವಿಮಲ ತೋಯಮಿದು, ನೃಪಶಾರ್ದೂಲ,
ಪಿತೃಲೋಕದೊಳಗಕ್ಕೆ ನಿನಗಕ್ಷಯಂ.” ಶ್ರದ್ಧೆ ತಾಂ
ಸಪ್ರಾಣವಾಗುವೋಲಮೃತ ತರ್ಪಣವಿತ್ತು
ತೀರಕೇರ್ದನ್ ಸಹೋದರ ಸಹಿತ ತೇಜಸ್ವಿ ; ಮೇಣ್
ಬದರಿಯ ಫಲಂಬೆರಸಿದಿಂಗುಳದ ಹಿಂಡಿಯಂ
ದರ್ಭಾಸ್ತರದೊಳಿಟ್ಟು ಪಿಂಡವಿತ್ತನ್ : “ತಂದೆ,
ತಾನುಂಬುದೇನಿಹುದೊ ತನ್ನಿಷ್ಟದೇವತೆಗೆ
ತಾನದೆ ನಿವೇದನಂ. ನಮ್ಮುಣಿಸನೆಯೆ ನಿನಗೆ
ಕೊಡುವೆವಡವಿಯ ಬಡತನದ ಬಿರ್ದ್ದನೊಪ್ಪಿಸಿಕೊ,       ೪೩೦
ಪೂಜ್ಯ ಹೇ ಕೋಸಲಾಧೀಶ.”
ತದನಂತರಂ
ಏರಿದರ್ ದುಃಖಿಗಳ್ ಪರ್ಣಕುಟಿಯಿರ್ದೆಡೆಗೆ,
ರಮ್ಯ ಸಾನು ಮಹೀಧರೋನ್ನತಿಗೆ. ಅನಿತರೊಳ್
ಗುರು ವಸಿಷ್ಠಂವೆರಸಿ ಪರಜನರ್, ಪರಿಜನರ್,
ಗುರುಜನರ್, ಕೌಸಲೆ ಸುಮಿತ್ರೆಯರ್ ಮೇಣ್ ಕೈಕೆ
ಮೊದಲಪ್ಪ ಮಾತೆಯರ್, ಮಹಿಳೆಯರ್, ಕಾಲ್‌ನಡೆದೆ
ಬಂದರಲ್ಲಿಗೆ ; ಕಂಡು ರಾಮನಿರವಂ ಸುಯ್ದು
ಗೋಳಿಟ್ಟರಿನ್ನೊಂದು ಪರಿದುದೆನೆ ಮಂದಾಕಿನಿ.
ಮಿಂದನು ರಘೂದ್ವಹಂ ಮತ್ತೊಮ್ಮೆ, ಹೃದಯದಿಂ        ೪೪೦
ಹೊಮ್ಮಿಹರಿದಾ ಕಣ್ಣ ಹೊಳೆಯಲ್ಲಿ. ಶೋಕಿಸುತೆ
ಕೌಸಲ್ಯೆಯಡಿಗೆರಗಲಾ ಬೆಂದೆದೆಯ ತಾಯಿ,
ಮಲಿನ ವಸನದ ಮಲಿನ ವದನದ ಕರುಣಮೂರ್ತಿ,
ಬಿಕ್ಕಿ ಬಿಕ್ಕಳುತಳುತೆ ತಬ್ಬಿದಳ್ ಕಂದನಂ,
ಪೋದಾಸೆ ಬರ್ಪಾಸೆಯಂ ತಬ್ಬುವೋಲ್. ಅಂತೆ
ನಮಿಸಿದರ್ ಸೌಮಿತ್ರಿಯುಂ ಜನಕಜಾತೆಯುಂ.
ಪಿರಿಯ ತಾಯಾತನಂ ಪರಸಿ, ಸೊಸೆಯಂ ನೋಡಿ
ಮುಂಡಾಡಿ ಗೋಳಿಟ್ಟಳರಸುಕುವರಿಯ ಗತಿಗೆ.
ರಘುಜಂ ಸುಮಿತ್ರೆಗಭಿವಂದಿಸಿ, ಹುಡುಕಿ ನೋಡಿ,
ದೂರದೊಳ್ ತಲೆಬಾಗಿ ನಿಂದ ಪಶ್ಚಾತ್ತಾಪ    ೪೫೦
ಶೋಕ ಭಾರಾಕ್ರಾಂತ ಗಾತ್ರೆಯಂ, ಕೈಕೆಯಂ,
ಕಿರಿಯಮ್ಮನಂ ಭರತನಂಬೆಯಂ ಕಂಡೊಡನೆ
ಬಳಿಗೆಯ್ದಿದನ್ ಕರುಣಿ. ಪಾಪಿಯಂ ಬೆಂಬಿಡದೆ
ಹಿಂಬಾಲಿಸಟ್ಟಿ ಹಿಡಿಯುವ ಕೃಪಾಕೇತುವೋಲ್
ಮುಟ್ಟಿಹಿಡಿದನು ಪಾದಯುಗ್ಮಮಂ. ಕೆಡೆದಳಾ
ಕೇಕಯ ನೃಪಕುಮಾರಿ ರಾಮಾಂಘ್ರಿಗಂಘ್ರಿಪಂ
ಸಗ್ಗದಗ್ಗಿಯ ಹೊಯ್ಲಿನುರುಬೆಗೆ ಸಿಡಿಲ್ದುರುಳಿ
ಬೀಳ್ವಂತೆ. ಪಿಡಿದೆತ್ತಿದನು ರಾಮನಾಕೆಯಂ,
ಭಕ್ತನಾತ್ಮವನೆತ್ತುವಂತೆ ಭಗವತ್‌ಪ್ರೀತಿ.
ದಿವ್ಯಮಾ ಪ್ರೇಮಹಸ್ತಸ್ಪರ್ಶಕಾ ಕೈಕೆ ತಾಂ     ೪೬೦
ಕಂಡಳೇನನೊ ? ಶಾಂತವಾದಳ್ ! ಮಗನನೆಕ್ಕಟಿ
ಸನ್ನೆಗಣ್ಣಿಂ ಕರೆದು, ರಾಮ ಯತಿ ರೂಪಮಂ
ನಿಡಿದುನೋಡಿ ಕೈಮುಗಿದಳಲ್ಲಿ ಕಂಡವರೆಲ್ಲ
ಬೆರಗು ಬಿಲ್ಲಾಗೆ. ಮಾತೆಯ ಮೌನವೀಣೆಯನೆ
ಮಿಡಿವನೆಂಬೋಲ್ ಭರತನಾಡಿದನ್, ತೋಡಿದನ್
ತನ್ನೆದೆಯ ಭಾವಾಭಿಲಾಷೆಯ ಸರೋವನಂ
ಕೋಡಿವರಿಯಲ್ಕೆ. ಕೇಳ್ದಾ ವನೌಕಸರಿಗೆರ್ದೆ
ಮರುಗಿದತ್ತಂತೆ ನಲಿದತ್ತು, ದಾರುಣ ಕಥೆಗೆ
ಮೇಣಾ ಕಥನ ಕಲೆಯ ರಮ್ಯತೆಗೆ.
ಋಷಿಗೋಷ್ಠಿ
ಮೌನಮಿರೆ, ಜನಸಮೂಹಂ ಮೂಕಮಿರೆ, ಗಗನ         ೪೭೦
ನೀಲ ನಯನಂ ಸಾಕ್ಷಿಯಾಗಿರೆ, ಗಿರಿಶ್ರೇಣಿ
ಕೇಳುತಿರೆ, ವನಪಂಕ್ತಿಯಾಲಿಸಿರೆ, ನಲಿಯಲಾ
ತ್ರಿಭುವನಂ ಭರತನೊರೆದನು ವಚನವೇದಮಂ ;
ರಾಮನಾಲೈಸಿದನು ಲೋಕ ರೋಮಾಂಚಕರ
ವಾಣಿಯಿಂ ಭವಿಸಿದಾ ಧರ್ಮದಾಮೋದಮಂ !
ತಾನಯೋಧ್ಯೆಯನುಳಿದ ದಿನದಿಂ ಮೊದಲ್ಮಾಡಿ
ಚಿತ್ರಕೂಟಕೆ ಭರತನಾಗಮನದಾ ವರೆಗೆ
ಕತೆಗೇಳ್ದನಶ್ರುವಿಗಳಿತ ಕಮಲ ಲೋಚನಂ,
ನಡುನಡುವೆ ನಿಡುಸುಯ್ದುಸುಯ್ದು. ಮಾರುತ್ತರದ
ಪನಿಮಳೆಗೆ ಜನಮನ ನಿರೀಕ್ಷಣಾ ಚಾತಕಂ    ೪೮೦
ತುದಿವೆರಳ ಮೇಲೆ ಕೊರಳೆತ್ತಿ ನಿಂತಿರೆ, ಮೌನಿ
ರಾಮನ ಮನಂ ಮಗ್ನಮಾದತ್ತು ಚಿಂತಾಬ್ಧಿ
ತಲಕೆ. ಪಿತೃವಾಕ್ಯ ಪರಿಪಾಲನಾ ನಿಗಳದಿಂ
ಧರ್ಮದಾಲಾನಕ್ಕೆ ಕಟ್ಟುಗೊಂಡಿನಕುಲನ
ಧೈರ್ಯದೈರಾವತಂ ಹೋರಾಡುತಿರ್ದುದಂ
ಕಾಣುತೆ ಗುರು ವಸಿಷ್ಠನಾಡಿದನ್, ಮಾವುತಂ
ತೋತ್ರದಿ ತಿವಿಯುವಂತೆ : “ನೆನೆ ನೈಜಧರ್ಮಮಂ
ಜನ್ಮದುದ್ದೇಶಮಂ, ತಪನಕುಲ ನೃಪಸೂನು.
ಕೆಡಿಸುವೆಯೊ ಕಾಡೊಳಲೆದಾಯುಃಪ್ರಯಾಣಮಂ ?
ಲೋಕದುದ್ಧಾರಕ್ಕೆ ಮೇಣಾತ್ಮ ಸಂಸ್ಕೃತಿಗೆ     ೪೯೦
ನೈವೇದ್ಯವಾಗುವೆಯೊ ? ನೆನೆ !” ಶಿಷ್ಯನಾತ್ಮಮಂ
ಪೊಕ್ಕುದಾಚಾರ್ಯನಾ ವಾಗಿಂಗಿತಂ. ಸ್ವಪ್ರಜ್ಞೆ
ಪ್ರೋಜ್ವಲಿಸಿದತ್ತಸ್ಥಿರತೆ ಮಾಣ್ದುದಾತ್ಮದೊಳ್
ಮೂಡಿದತ್ತದ್ಭುತಂ ವಜ್ರಸುಸ್ಥಿತ ದೃಢತೆ.
ತಿರುಗಿದುದು ಬಿದಿಯ ಮೊನೆಯಂಕುಶದ ತಿವಿತಕ್ಕೆ
ರಾವಣಾರಿಯ ಮನದ ಮದಕರಿ ಅಯೋಧ್ಯೆಯಿಂ
ತೆಂಕಣಕ್ಕೆಸೆವ ಲಂಕೆಯ ಲಲಾಟದ ಲಿಪಿಗೆ
ಕಾಲಕಪಿಯಾಗಿ. ತಾಯಂದಿರುಂ ಗುರುಗಳುಂ,
ಪರಿಜನಪ್ರಜೆಗಳುಂ, ನೆರೆದಿರ್ದ ಋಷಿಗಳುಂ,
ಬಾಲಋಷಿ ಭರತನುಂ ಕೇಳುತಿರೆ, ಋತದರ್ಶಿ ತಾಂ    ೫೦೦
ನುಡಿದನಪ್ರತಿವಾದ ವೇದಮಂ, ಸಮಹೃದಯ
ಸಂವೇದ್ಯಮಂ :
“ಧನ್ಯನಾಂ ನಿಮ್ಮ ಕರುಣಶಿಶು.
ಪೂಜ್ಯರಾಶೀರ್ವಾದ ಹಸ್ತದೋಲದಿ ಸದಾ
ಸುಕ್ಷೇಮಿ; ಕಲಿ, ಬಲಿ, ಸುಖಿ ನಿರಂತರಂ; ಮತ್ತೆ
ಧರ್ಮ ಸಂಪ್ರೇಮಿ. ಪಿತೃದೇವನಾ ದೈನ್ಯಮಂ
ದುಃಖಮಂ ನಿಧನಮಂ ಕೇಳ್ದೆನ್ನ ರಿಕ್ತಮತಿ
ತತ್ತರಿಸಿತಾದೊಡಂ, ಮಾತೃ ಶೋಕಾಗ್ನಿಯಂ
ಮುಟ್ಟಿದೆದೆ ಬೇಯುತಿಹುದಾದೊಡಂ, ಪ್ರಜೆಗಳೀ
ಪ್ರೀತಿಗಾತ್ಮಂ ಅಯೋಧ್ಯಾ ನಗರದತ್ತಣ್ಗೆ
ತೇಲುತಿಹುದಾದೊಡಂ, ಸರ್ವಕೆ ಮಿಗಿಲೆನಲ್ಕೆ ೫೧೦
ಭರತ ಬಂಧುಪ್ರೇಮ ಫಣಿ ನನ್ನ ಸರ್ವಮಂ
ಬಿಗಿದೊತ್ತಿ ಸುತ್ತಿ ನುಂಗುತ್ತಿರ್ಪುದಾದೊಡಂ,
ಪಿತೃವಾಕ್ಯ ಪರಿಪಾಲನಾರ್ಥಮಾಂ ವನವಾಸಿ
ಪದಿನಾಲ್ಕು ಬರಿಸಂಬರಂ. ತಂದೆ ತೀರ್ದೊಡೇಂ
ತೀರ್ದುದೆ ತಂದೆಯಾಜ್ಞೆ ? ತಂದೆಗಿಂ ಪೆರ್‌ತಂದೆ ದಲ್
ಧರ್ಮಂ ; ಚಿರಂಜೀವಿ ಮೇಣ್ ! ವಿಧಿಯ ನಿಯತಿಯ ಪವಿಯ
ಘಾತಕೆ ಸಿಲುಕಿ ತಂದೆ ನನ್ನನಡವಿಗೆ ನೊಂದು
ಕಳುಹಿ ಬೆಂದುರಿದಳಿದನೈಸಲೆ ? ಜಿತೇಂದ್ರಿಯಂ
ತಾನಂತೆಸಗುವೋಲೆಸಗಿದತ್ತಾ ವಜ್ರವಿಧಿ !
ಕುಬ್ಜೆ ಮಂಥರೆ ಬರಿಯ ಹುಲುನೆವಂ : ಮೂಡುವುದೆ     ೫೨೦
ಲೋಕ ಲಾವಣ್ಯನಿಧಿ ಮಾತೆ ಕೈಕೆಯ ಮನದಿ
ಕುಚರ ಬುದ್ಧಿಯ ಕುರೂಪಂ ? ಪೊಣ್ಮುವುದೆ ವಿಕೃತಿ
ಸೌಂದರ್ಯದಿಂ ? ಚೆಲ್ವಿನಭಿಲಾಷೆ ತಾನೇಗಳುಂ
ಚೆಲ್ವಿಂಗೆ ತಾಯ್. ಧರ್ಮದೇವತಾ ಕ್ರೌರ್ಯಕ್ಕೆ
ಕರುಣೆಯಲ್ಲದೆ ಬೇರೆ ಗುರಿಯಿಹುದೆ ? ಕಿರಿಯ ತಾಯ್
ನಿಯತಿ ಹಸ್ತದೊಳೊಂದು ಕೈದು ತಾಂ. ಕೀರ್ತಿಯಂ
ಮೇಣ್ ಜನಪ್ರೀತಿಯಂ ತೆತ್ತಾಕೆ ತಾಂ ಧನ್ಯೆ,
ದೇವ ಸನ್ಮಾನ್ಯೆ : ಮೆರೆವುದೆ ತುದಿಯೊಳಾ ನನ್ನಿ !
ಕಜ್ಜಮಾವುದಕಾಗಿ ನೀಗಿದನೊ ತಂದೆಯಸುವಂ,
ತನ್ನ ತೇಜವನೆಲ್ಲ ತಾನೀಡಾಡಿದಳೊ ತಾಯಿ,            ೫೩೦
ದೇವದೇವತೆಗಳಾ ವ್ಯೂಹ ಸಂಯೋಜನೆಗೆ
ಬನ್ನಮೆನ್ನಿಂದಾಗದಯ್. ಕೇಳ್, ಸಹೋದರನೆ :
ರಾಮನೀ ಪೂಣ್ಕೆ ದಲ್ ಸುಸ್ಥಿರಂ ಮೇರುವೋಲ್ !”
ಘೋಷಿಸಲ್ ಗೋಪುರಾಗ್ರದ ಗುಡಿಯ ಹೆಗ್ಗಂಟೆ,
ಆ ಲೌಹ ಭೀಮನಾದಂ ವಾಯುಮಂಡಲಕೆ
ಕಂಪ್ರನವನಿತ್ತುರ್ವಿ ಕೊರ್ವುತೊಯ್ಯನೆಯೆಂತು
ನಿಶ್ಶಬ್ದತಾ ಲೀನವಹುದೊ ಆ ಮಾಳ್ಕೆಯಿಂ
ನಿಂದುದಾ ಮಂದ್ರಗಂಭೀರ ಮೇಘಧ್ವನಿಯ
ಧೀರ ಸೀತಾನಾಥ ಭಾಷಣಂ. ಕಂದರದ
ದೂರದಿಂದೇರಿ ಬಂದತ್ತು ಮಂದಾಕಿನಿಯ      ೫೪೦
ಮೊರೆ. ಭಂಗಿಸಿತು ಭರತನಳುವ ಸುಯ್ಯುಸಿರೊಂದೆ
ಆ ವನ್ಯನೀರವತೆಯಂ, ಮತ್ತೆ ಮೌನಮಂ
ಜನಸಂಘದಾ.
“ಮುನ್ನಮೊರೆದನಿಲ್ಲವೆ ನಿನಗೆ
ಜಾಬಾಲಿ ? ರವಿಯನಸ್ತಾದ್ರಿಯಿಂ ಮೂಡೆಂದು
ಪೀಡಿಪೊಲೆ ಕಾಡಿಸುತ್ತಿಹೆ ರಾಮಚಂದ್ರನಂ,
ಭರತೇಂದ್ರ. ವಿಶ್ವಶಕ್ತಿಸ್ಫೂರ್ತನೀತನುಂ
ತಿಳಿಯೆ ವಿಶ್ವವ್ಯಕ್ತಿ. ಶುಕ್ತಿಕೆ ಸಮುದ್ರಮಂ
ಒಳಕೊಳ್ವುದೇನ್ ? ಕೋಸಲಾಕಾಶವಿಸ್ತಾರಮೀ
ರಾಮನಾತ್ಮದ ವಿರಾಟ್ ಪಕ್ಷ ವಿಸ್ಫಾಲನೆಗೆ
ಸಾಲದಲ್ಪಂ. ಅನಂತಾಕಾಶಯಾತ್ರಿ, ಕೇಳ್,   ೫೫೦
ರಾಮನಿಚ್ಛಾ ವೈನತೇಯಂ. ಅನಂತಮಂ
ಸಾಂತದಲ್ಪಕ್ಕೆಳೆವ ಸಾಹಸಂ ಸಾಲ್ಗುಮಿನ್. ಏಳ್,
ಶೋಕಮಂ ಬಿಟ್ಟೆನ್ನ ಪೇಳ್ವುದಂ ಗೆಯ್. ಮುಂದೆ
ತಾನಪ್ಪುದೊಳ್ಪು, ಕೇಳ್, ಲೋಕಕೆ, ನಿನಗೆ, ಕೋಸಲಕೆ.”
ಸಂತೈಸಿದನ್ ಗುರುವಸಿಷ್ಠನೆಂತಾದೊಡಂ
ಇಂತಿಂತುಟಾ ಕೈಕೆಯ ಕುಮಾರನಂ. ಇಭಂ
ದಂತದಿಂದಿರಿದೊಡಂ ಸೊಂಡಿಲಿಂದಪ್ಪಿತೆನೆ,
ರಾಮನುಂ ನುಡಿಪನೆಯಿನಿರಿದೊಡಂ ತೋಳ್ಗಳಿಂ
ತಬ್ಬಿದನ್ ತಾವಿರ್ವರೊಂದೆಂದು ತೋರ್ಪಂತೆ,
ಮತ್ತೆ ಗುರುವಾಕ್ಯದೊಳ್ ಶ್ರದ್ಧೆ ಸಂಭವಿಪಂತೆ ೫೬೦
ಸೋದರಗೆ. ಮೇಲೆ ಮುನಿಯಾದೇಶಮಂ ವರಿಸಿ,
ರಾಮಪಾದ ಸ್ಪರ್ಶ ಮಹಿಮಾನ್ವಿತಂಗಳಂ
ದಿವ್ಯಪಾದುಕೆಗಳಂ, ದೇವನಡಿ ದೇವಂಗೆ
ಪಡಿಯೆನುತೆ, ಮುಡಿಗೇರಿಸುತ್ತೆ ಭರತಂ :
“ಆಲಿಸಿಂ,
ಅಮರರಿರ ಗಗನ ಗಿರಿ ನದಿ ವನಸ್ಥಳಗಳಿರ,
ಮುನಿಗಳಿರ, ಆಚಾರ್ಯರಿರ, ಧರ್ಮದೇವರಿರ,
ಮಾತೃದೇವತೆಗಳಿರ, ಪರಿಜನ ಪ್ರಜೆಗಳಿರ,
ಪೂಜ್ಯ ಪಾದುಕೆಗಳಂ ಪೂಜ್ಯಪಾದಂ ಗೆತ್ತು
ಸಿಂಹಾಸನದೊಳಿಟ್ಟು ಪೂಜಿಸುವೆನಾಂ. ಸೇವೆ
ಭ್ರಾತೃದೇವಂಗೆಂದು ತಿರೆವೊಲಪೊರೆಯನಾನುವೆಂ     ೫೭೦
ಸಂವತ್ಸರ ಚತುರ್ದಶಂ ಬರಂ. ಮರುದಿನಂ,
ದೊರೆಕೊಳ್ಳದಿರಲೆನಗೆ ಶ್ರೀರಾಮದರ್ಶನಂ,
ಬೆಂಕೆಗೊಡಲಂ ನಿವೇದಿಪೆನಣ್ಣದೇವನಂ
ಸಂದರ್ಶಿಸಲ್ಕಾತ್ಮ ಲೋಕದಲಿ. ಅನ್ನೆಗಂ
ವ್ರತಿಯಾಂ ಜಟಾವಲ್ಕಲಾನ್ವಿತಂ. ನಿಚ್ಚಮುಂ
ರಾಮಾಭ್ಯುದಯ ತಪೋಮಗ್ನನಪ್ಪೆನಗೆ ನೀಂ
ಕರುಣಿಸಿಂ. ಪರಕೆಗೆಯ್ಯಿಂ !”
ಮಿಂಚಿತಾ ರಾತ್ರಿ
ಚಿತ್ರಕೂಟದೊಳವನಿಜಾರಮಣ ಸನ್ನಿಧಿಯ
ಶಾಂತಿಯಲಿ. ಕಟ್ಟುವನೊ ಕೃಪೆಯ ಪಾಥೇಯಮಂ
ಪದಿನಾಲ್ಕು ವರುಷದಾ ನಗರವನವಾಸದಾ   ೫೮೦
ದೀರ್ಘತರಯಾತ್ರೆಗೆನೆ, ಕೈಕೆಯ ತನೂಭವಂ
ತೊಯ್ಯುತಿರೆ ರಾಮಸಂಗದ ಸೊದೆಯ ಸೋನೆಯೊಳ್,
ಪ್ರಾಣಮಯ ಪೃಥಿವಿಯಾ ನವಜೀವನವ್ರತಕೆ
ಜೀವನ ನವೀನ ಚೇತನ ತೀರ್ಥಮೆರೆಯಲ್ಕೆ
ಕುಂಕುಮ ಕನಕ ನವ್ಯ ನವರತ್ನಕಾಂತಿಯಿಂ
ತೀವಿ ಮಿನುಗುವ ಕನತ್ಕಲಶಮಂ ಕೈಲಾಂತು
ಮೂಡುವೆಟ್ಟಿನ ಕೋಡನೊಯ್ಯನೆಯೆ ಏರಿದಳೊ
ಚಿರ ನೂತನಾ ಸೃಷ್ಟಿಲಕ್ಷ್ಮಿಯೆನೆ, ರತುನ ರವಿ
ರುಚಿಸಿದನು ಕೋಟೀರ ಕೋಟಿ ಕಿರಣ ಕಿರೀಟಿ
ತಾನಾಗಿ. ಪೊರಮಟ್ಟನಾ ಚಿತ್ರಶೈಲದಿಂ       ೫೯೦
ಭರತೇಂದ್ರನುಂ ರಾಜನಗರಾಭಿಮುಖನಾಗಿ,
ಪೂಜ್ಯಪಾದನ ಪೂಜ್ಯಪಾದುಕಾ ಕೋಟೀರ
ತೇಜದಿಂ ಸಮ್ರಾಜನಾಗಿ. ಸುಯ್ಪನಿವೆರಸಿ
ಬೀಳ್ಕೊಂಡರೊರ್ವರೊರ್ವರನಳಲ್ ವೆಂಕೆಯಿಂ
ದಹಿಸಿ. ಗೋತ್ರಸ್ಕಂಧಮಂ ಮೆಟ್ಟಿ ಕಣ್ದಿಟ್ಟಿ
ಮುಟ್ಟುವನ್ನೆಗಮಟ್ಟಿ ನೋಡುತಿರೆ ಸೌಮಿತ್ರಿ ಮೇಣ್
ರಾಮಸೀತೆಯರೊಡನೆ ನಿಂದ ಮುನಿಸಂಕುಲಂ,
ಭರತವಾಹಿನಿ ದಾಂಟಿದತ್ತು ಮಂದಾಕಿನಿಯ
ವಾಹಮಂ; ಘೋಷಮೊಯ್ಯನೆ ನಿಂದುದಾಲಿಸಿರೆ;
ಮೇಣ್ ಕಣ್ಗೆ ಮರೆಯಾಯ್ತು ಸೈನ್ಯಧೂಳೀ ಪಥಂ,         ೬೦೦
ಬೆಟ್ಟಸಾಲ್ಗಳ ನಡುವೆ ಕಣಿವೆವಟ್ಟೆಯ ಕೊನೆಯ
ದಿಗ್ದೂರಮಂ ಮರ್ಬುಗೈದು.
ಋಷ್ಯಾಶ್ರಮಂ
ಬಳಿಗೆವರೆ, ಗುರು ಭರದ್ವಾಜನಡಿಗಳಿಗೆರಗಿ,
ನಡೆದುದಂ ಬಿನ್ನಯ್ಸಿ, ಪರಕೆಯಂ ಕೈಕೊಂಡು,
ಮುಂಬರಿದು, ಸೂರ್ಯತನಯೆಯನುತ್ತರಿಸಿ, ಮತ್ತೆ
ದಾಂಟಿ ಸುರನಿಮ್ನಗೆಯನಾ ಶೃಂಗಿಬೇರಮಂ
ಪೊಕ್ಕು, ಗುಹನಾತಿಥ್ಯಮಂ ಗ್ರಹಿಸುತಾತನಿಂ
ಬೀಳ್ಕೊಳುತ್ತಲ್ಲಿಂದೆ ಮುಂದೆ ನಡೆದುದು ಯಾತ್ರೆ
ಕೋಸಲಕೆ.
ಹಾ ! ಭಾಗ್ಯಹೀನ ದೀನ ಅಯೋಧ್ಯೆ,
ನಿನಗುಂ ಅರಣ್ಯಗತಿಯಾಯ್ತಲಾ ರಾಮನಾ    ೬೧೦
ವನವಾಸದಿಂ, ದಶರಥನ ನಿಧನದಿಂ ಮೇಣ್
ಭರತನಾ ಪರಿತ್ಯಾಗದಿಂ ! ಶ್ರೇಷ್ಠರಿಲ್ಲದಿರೆ,
ಏನಿರ್ದರೇನಂತೆ, ಮಸಣಮಾ ಪತ್ತನಂ
ತತ್ತ್ವ ವಿದ್ಯಾ ಕಲಾ ಸಂಗೀತ ಸಾಹಿತ್ಯ
ಸಕಲ ಸಂಸ್ಕೃತಿಗೆ. ಬಿತ್ತರದ ಬೀದಿಗಳೆರಡು
ಕೆಲದಿ ಮುಗಿಲಂ ಮುಟ್ಟಿ ಮೆರೆದೊಡೇಂ ಸ್ಪರ್ಧೆಯಾ
ಪ್ರಾಸಾದ ಪಂಕ್ತಿ ? ರಂಜಿಸಿದೊಡೇಂ ರಜನಿಯಂ
ಪಗಲುಗೈದಾಗಸದ ಚುಕ್ಕಿಗಳನೇಳಿಸುತೆ
ಕಿಕ್ಕಿರಿದು ಕಣ್ಬೆರಗುಗೊಳಿಸಿ ಗೊಂಚಲ್ಗೊಂಡು
ಉರಿವ ವಿದ್ಯುದ್ದೀಪ ರಾಜಿ ? ಬಣ್ಣದ ಬುಗ್ಗೆ       ೬೨೦
ಕಣ್ಗೆ ಕಾಮನ ಬಿಲ್ಗಳಂಗನೆಯರಾಟವೆನೆ
ಸಾಲ್ಗೊಂಡು ವಿವಿಧಗತಿಯಾ ಕಲಾಕೃತಿಯಿಂದೆ
ರಂಗುರಂಗಿನ ತೋಂಟರಂಗದಿ ಮನಂಗೊಳಿಸಿ
ಕುಣಿದೊಡೇಂ ? ಪ್ರಾಸಛಂದಃಪೂರ್ಣಮಪ್ಪುದೇಂ
ಪುರುಷಾರ್ಥ ಶಾಶ್ವತದ ರಾಸಲೀಲಾ ಬೃಂದೆ ?
ಜನಮನೋಮಂದಿರದ ಸುಸ್ವಪ್ನಗೋಪುರದ
ಕಲಶಂ ನಭಶ್ಚುಂಬಿಯಾಗದಿರೆ, ಋಷಿಹೃದಯ
ಮಂಗಳಾರತಿ ಬಾಳಿನಂಧತೆಯನಳಿಸದಿರೆ,
ಕವಿಕೃತಿಯ ವರ್ಣಗಾನಂ ಮಹನ್‌ನಿತ್ಯತಾ
ಸ್ವರ್ಣಸುಂದರ ಇಂದ್ರಿಯಾತೀತ ನಂದನದಿ   ೬೩೦
ನವರಸಾಪ್ಸರಿಯರಂ ನರ್ತನಂಗೈಸದಿರೆ, ಪೇಳ್,
ಏನಿರ್ದುಮೇನ್ ಅನಾಗರಿಕತಾ ಶ್ರೀ, ದಿಟಂ
ಮಸಣಮಾ ಪತ್ತನಮಯೋಧ್ಯೆ ತಾನಾದೊಡಂ !
ಪ್ರೇತವನಮಂ ಪುಗುವನೇಂ ಪೂಜ್ಯಪಾದುಕಾ
ಚೇತನಂ ? ಪಾಳ್ಮಸಗಿದಾ ದುಃಸ್ಮೃತಿಯ ನಿಧಿಗೆ
ಬೆನ್ದಿರುಹಿ, ಬಳಿಯ ನಂದಿಗ್ರಾಮಕೈತಂದು,
ಪಾದುಕಾ ಪಟ್ಟಾಭಿಷೇಕಮಂ ಗೆಯ್ದವುಗಳನೆ
ಪೂಜ್ಯಾಗ್ರಜಂ ಗೆತ್ತು, ರಾಜ್ಯಭಾರವ್ರತದಿ
ನಿಂದನಯ್ ಭರತನನಿಶಂ ಶ್ರೀರಾಮ ಸುಕ್ಷೇಮ
ಚಿಂತನಾ ಪ್ರಾರ್ಥನೆಗೆ ತೆತ್ತು ತನ್ನಾತ್ಮಮಂ.   ೬೪೦





*************

ಶ್ರೀರಾಮಾಯಣ ದ‍ರ್ಶನಂ, ಅಯೋಧ್ಯಾ ಸಂಪುಟಂ: ಸಂಚಿಕೆ 8- ಕುಣಿದಳುರಿಯ ಊರ್ವಶಿ

ಸಂಚಿಕೆ 8 – ಕುಣಿದಳುರಿಯ ಉರ್ವಶಿ !
ವಾಣಿ, ಓ ಪ್ರಾಣವೀಣಾಪಾಣಿ, ಕವಿಯೆರ್ದೆಯ
ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ
ಹೃದಯಮಂ; ನಡಸೆನ್ನ ಈ ಮಹಾಕಾವ್ಯಮಂ,
ತಾಯಿ ಕಂದನ ಕೈಯನಾನುತೆ ನಡೆಯಿಪಂತೆ.
ಬೇಡುತಿಹೆನಡಿಗಡಿಗೆ ನಿನ್ನಡಿಗೆ ಮುಡಿಚಾಚಿ :
ತಿಳಿಯದವರಾಡಿಕೊಳಲತಿಯೆಂದು ! ಬಲ್ಲೆನಾಂ
ಮುಂದಿರುವ ಯಾತ್ರೆಯ ಮಹದ್ದೂರಮಂ, ಬೃಹದ್
ಭಾರಮಂ, ರುಂದ್ರ ಪಾರಾವಾರಮಂ : ಹಸುಳೆ
ಹೆಗ್ಗಾಡಿಗಳುಕುವೋಲಳುಕಿದಸುಶಿಸು ಹೆದರಿ
ಬೇಡುತಿದೆ ನಿನ್ನನಡಿಗಡಿಗಿಂತು, ಓ ತಾಯೆ !- ೧೦
ರಣದ ಸಾಹಸಕಥೆಯ ಬಣ್ಣನೆಗೆ ಬಡತನವೆ ಹೇಳ್ ?
ಹೇರಳಂ ! ದಿನದಿನದ ಸಾಧಾರಣದ ಶಾಂತ
ಸರಳ ಜೀವಿತದ ವರ್ಣನೆಯೆ ವಿರಳಂ. ನಾನದನೆ
ಕೈಕೊಂಡೆಸಗಲೆಳಸುವೆಂ; ಪರಕೆಯಿರಲೆನಗೆ
ನಿನ್ನಮೃತ ವರದ ಕರದಾ, ದೇವಿ ಓ ಶಾರದಾ !
ಕೊಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ
ದೀನರಿಗೆ ? ನನ್ನೀ ಕೃತಿಯನೋದುವಾತ್ಮರಾ
ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ,
ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ ! ೨೦
ತುಂಬಿದತ್ತೊಯ್ಯನೊಯ್ಯನೆ, ಕಣಿವೆಯಾಳಮಂ
ಮೇಣಗಲಮಂ, ಪಶ್ಚಿಮ ಶಿಖರಿ ಛಾಯೆ. ಯಾಮಿನಿಯ
ಸೀರೆಯಂಚಿನ ಸೆರಗು ಮುಸುಗಿದತ್ತಡವಿಯಂ
ಚಿತ್ರಕೂಟಾದ್ರಿಯಾ. ಗೂಡಿಗೋಡಿತು ಹಕ್ಕಿ;
ಹಕ್ಕೆಗೋಡಿತು ಮಿಗಂ. ಮೌನವಾಂತುದು ನಗಂ
ವಜ್ರರೋಮ ಮಹರ್ಷಿಯಾ ಧ್ಯಾನಗೌರವಕೆನಲ್.
ಮುಚ್ಚಲ್ಕೆ ಯೋಗೀಂದ್ರನಾ ಬಹಿರ್ ನಯನೇಂದ್ರಿಯಂ
ಬಿಚ್ಚುವಂದದೊಳಾತ್ಮದಕ್ಷಿಗಳ್ ಕೋಟ್ಯನುಕೋಟಿ,
ಹಗಲ ಕಣ್ಣದು ಮುಚ್ಚಲಿರುಳ ಕಣ್ಣುಗಳರಳುವೊಲ್,
ರಾಜಿಸಿದುವರಿಲ ಕಿಡಿಗಳ್ ಬಾನ್ ಪಟದೊಳಿಣುಕಿ        ೩೦
ಮಿಣುಕಿ. ಶಿಷ್ಯರನವರವರ ಪರ್ಣಕುಟಿಗಳ್ಗೆ
ಕಳುಹಿ, ತನ್ನಾಶ್ರಮದ ಮುಂದೆ ಬಂಡೆಯನೇರ್ದು
ಪದ್ಮಾಸನವನಿಕ್ಕಿ ಕುಳಿತಾ ವಜ್ರರೋಮಂ
ನೋಡುತಿರೆ ಕಣ್ಬೊಲದ ಕಂದರದ ಕಾಂತಾರ
ವಿನ್ಯಾಸಮಂ, ಕಂಡನೊಂದಿದಿರೆಳ್ದ ಗಿರಿ ಶಿರದಿ,
ಸಂಜೆ ಬಾನ್ಗೆದುರಾಗಿ, ಕೆತ್ತಿದೋಲಂತಿರ್ದ
ಮೂರು ನರರೂಪಿ ಮಸಿಯಾಕೃತಿಗಳಂ. ನೋಡಿ,
ಸಿಂಹಾಕೃತಿಯ ಮಹಾ ರೂಕ್ಷ ಶೈಲೋಪಮಂ
ಭೀಮಕಾಯಂ ಕಠಿನ ಗಂಭೀರನಾ ಯೋಗಿ,
ಕೌತುಕಂಬಟ್ಟರುಂ ವಿಸ್ಮಯಕ್ಕೆಡೆಗೊಡದೆ,     ೪೦
ಮಗ್ನನಾದಂ ಧ್ಯಾನದದ್ವೈತ ನಗ್ನತೆಗೆ !
ವಜ್ರರೋಮನ ಚಿತ್ತವಜ್ರದ ಮಹಿಮೆಗಳ್ಕುತಾ
ವ್ರತಿಯ ಕೈಂಕರ್ಯಮಂ ನೋಂತಿರ್ದ ವ್ಯಾಘ್ರಮುಂ
ಧ್ಯಾನಸ್ಥಮುನಿಯ ಪಕ್ಕದೊಳರೆಯ ಮೇಲಿರ್ದು
ನೋಡುತಿರೆಯಿರೆ ಬೈಗುಮರ್ಬು ತೀವುತ್ತಿರ್ದ
ದೃಶ್ಯವಿಸ್ತೀರ್ಣಮಂ, ಕಂಡುದೇನನೊ ! ನಗಂ
ಶತಗುಹಾಧ್ವನಿಗಳಂ ಪ್ರತಿಘರ್ಜಿಪೋಲಂತೆ,
ನೀರವ ಮಹಾರಣ್ಯಮನುರಣಿತಮಪ್ಪಂತೆ,
ಕುಳ್ತ ಬಂಡೆಯುಮದುರಿ ಕಂಪಿಸುವಂತೆ, ಕೇಳ್ದರೆದೆ
ಹೆಪ್ಪುಗಡುವಂತೆ ಘರ್ಜಿಸಿದುದಾ ಅದ್ವೈತಿ ತಾಂ          ೫೦
ದ್ವೈತಿಯಪ್ಪಂತೆ ! ಕಣ್ದೆರೆದ ಮುನಿ ಕೈಯೆತ್ತಿ
ತಟ್ಟಿ ತಲೆಯಂ ಸವರಿ ಬೋಳೈಸೆ, ಆ ಪ್ರಾಣಿ
ಕಂಠಘೋಷವನಕ್ಷಿರೋಷದಿಂ ತೋರ್ಪುದೆನೆ
ನೋಡುತಿರೆ, ಅತ್ತ ಕಣ್ಣಾದವಗೆ ಕಾಣಿಸಿತು
ಸೀತಾ ತೃತೀಯ ರಾಮಾಕೃತಿಯ ಧೀರಗಮನಂ.
ಪುಲಿ ಪುಲಿಯನರಿವಂತೆ, ಪುಲಿಯವೊಲೆ ಸಿದ್ಧನುಂ
ಪ್ರೀತಿಯಿಂದತಿಥಿಗಳನರಿತುಮುಪಚರಿಸಿಯುಂ
ಕಳೆದನಿರುಳಂ. ಮರುದಿನಂ ತಪೋವನ ಜನದ
ತನುಮನ ಸಹಾಯದಿಂ ಕಟ್ಟಿದನು ಸೌಮಿತ್ರಿ,
ಮಲೆಯ ಬಿರುಮಳೆಗಾಳಿಗಳಿಗೆ ಮಲೆತುಳಿವಂತೆ,        ೬೦
ಪರ್ಣಶಾಲೆಯನೊಂದನೆತ್ತರದೊಳಾ ಗಿರಿಯ
ದರ್ಶನಸ್ಥಾನಮುಂ ದೂರವಿಸ್ತಾರದಾ
ದೃಶ್ಯದಾಸ್ಥಾನದಧ್ಯಕ್ಷತಾ ಸ್ಥಾನಮುಂ
ತಾನೆನಿಪ ಗಿರಿಭುಜಸ್ಥಾನದಲಿ. ಅನಂತರಂ
ದೇವರಿಗೆ, ಗೃಹದೇವತೆಗೆ, ಚಿತ್ರಕೂಟ ಗಿರಿ
ದೇವನಿಗೆ, ಕಾಂತಾರದಧಿದೇವಿಯರಿಗೆ, ರವಿ
ಗಗನದಭಿಮಾನಿಗಳಿಗಖಿಲ ಪಿತೃಋಷಿಗಳಿಗೆ
ವಾಸ್ತುಕರ್ಮಾದಿ ಬಲಿ ಶಾಂತಿ ಕರ್ಮಂಗಳಂ
ನೆಗಳ್ದಾ ಜಿತೇಂದ್ರಿಯರ್ ಮರಬಳ್ಳಿಯೋರಣದ
ಹೂ ತಳಿರ್ ತೋರಣದ ದೇವಸುಖಕಾರಣದ  ೭೦
ಸುಪವಿತ್ರ ಪತ್ರವೇಶ್ಮಂ ಬೊಕ್ಕರಾತ್ಮಮಂ
ಪುಗುವ ಪುಣ್ಯಂಗಳೋಲ್.
ಅರಮನೆಯೊಳಿಹುದೇನೊ ?
ಅರಸುತನಮೆದೆಯೊಳಿರೆ ಕಾಡರಮನೆಗೆ ಕೀಳೆ ?
ರಸವಿಲ್ಲದಿಹ ಬಾಳಿಗರಮನೆಯೆ ಮರುಭೂಮಿ.
ರಸಿಕಂಗಡವಿ ಸಗ್ಗಕಿಂ ಮಿಗಿಲ್ ಸೊಗಸಲ್ತೆ,
ಜೊತೆಯಿರಲ್ಕೊಲಿದ ಪೆಣ್, ಮೇಣ್ ಕಾಣ್ಬ ಕಬ್ಬಗಣ್ ?
ಕಣ್ಣುಪೆಣ್ಣುಗಳೆರಡುಮಂ ಪಡೆದ ರಾಮಂಗೆ
ಎಲೆವನೆಯೆ ಕಲೆಯ ಮನೆಯಾಯ್ತು ; ವಿಪಿನಾಂಗಣಂ
ರಸತಪೋರಂಗಕೆಣೆಯಾಯ್ತು. ದಿನಂಗಳೆದಂತೆ          ೮೦
ಮೊದಮೊದಲ್ ಪರಕೀಯಮಪರಿಚಿತಮಾಗಿರ್ದ
ಗಿರಿವನಂ ಪರಿಚಯದಿನಾತ್ಮೀಯ ಭಾವಮಂ
ತಳೆದುದು ಸಲಿಗೆವೆತ್ತು ; ಅಂದು ಕಲ್ಲಾಗಿರ್ದ್ದ
ಕಲ್ಲೀಗಳಾದುದಯ್ ನೆನಹಿಗೆ ನಿಕೇತನಂ.
ಹಿಂದೆ ಬರಿ ಮರವಾದುದಿಂದವರ ಬಾಳ್ಗೊಂದು
ಸಂಕೇತವಾಯ್ತು. ಬಂದುದು ಆ ಕಾಡಿನೊಳ್
ಬರಿ ಬಳ್ಳಿಯಾಗಿರ್ದುದಿಂದು ತಮ್ಮೆಲೆವನೆಯ
ಮುಂದಣಂಗಣದಂಚಿನಲ್ಲಿ ತಮ್ಮೆರ್ದೆಬಾಳ್ಗೆ
ನಿತ್ಯಸಾಕ್ಷಿಗೆ ನಿಂದದೊಂದು ಕೇತನವಾಯ್ತು.
ಅಪ್ರಮುಖ ವಸ್ತುಗಳ್ಗಲ್ಪತ್ವಮಳಿದುದಯ್
ಅನುಭವದ ಘನಮಹಿಮೆಯಿಂ. ಭಾವ ಪರಿವೇಷಮಂ    ೯೦
ಪಡೆದು, ಜಡವೇಷಮಂ ಪಿಂಗಿದಾವೇಶದಿಂ
ಪ್ರಾಣಮಯಮಾಗಿ ಮೇಣರ್ಥಮಯಮಾಗಿ ಕೇಳ್
ಸ್ಮೃತಿಕೋಶವಾದುವಯ್ ಆ ಒಂದೊಂದು ವಸ್ತುವುಂ
ತೊರೆದಚಿದ್ಭಾವಮಂ.
ಆ ಕಲ್ ಬರಿಯ ಕಲ್ಲಾಗಿ
ಕೆಡೆದಿರ್ದುದಲ್ಲಿ ಯುಗಯುಗಗಳಿಂ. ಸೀತೆ ತಾಂ
ಕಂಡಾ ಮೊದಲ್ ಕಲ್ಲಲ್ಲದೇನುಮಾಗಿರಲಿಲ್ಲ.
ಒರ್‌ದಿನಂ ಪರ್ಣ ಶಾಲೆಯ ಮುಂದೆ ಪತಿಯೊಡನೆ
ಮಾತಾಡುತತ್ತ ನೋಡಿದಳಯ್ಯೊ ಸೋಜಿಗಂ !
ಆ ಕಲ್ಗದೇನೊ ಆಕೃತಿ ಬಂದವೋಲ್ ತೋರಿ,
ಬೆರಗಾಗಿ ತೋರ್ದಳಿನಿಯಂಗಾತನುಂ ಕಂಡು            ೧೦೦
ಕೌತುಕಂಬಟ್ಟನಿರ್ವರುಮದಕೆ ಪೆಸರಿಟ್ಟು
ಕರೆಯತೊಡಗಿದರಂದಿನಿಂ ‘ಕಲ್ದವಸಿ’ ಎಂದು.
ಮತ್ತೊರ್‌ದಿನಂ, ಬೈಗುಗಪ್ಪಿಳಿಯುತಿರೆ, ಸೀತೆ
ಮರ್ಬಿನೊಳ್ ಕಂಡಳಾರನೊ ಕಲ್ಲ ನೆತ್ತಿಯೊಳ್;
ಪಣತೆಸೊಡರೊಳ್ ತಾನಗಂ ಓದುತಿರ್ದಿನಿಯನಂ
ಕರೆದು ತೋರಿದಳು ಹೆದರೆದೆಯ ಹೆಣ್. ರಾಮನುಂ
ಸೋಜಿಗಂಬಡುತೆ ಗುರುತಿಸೆ ನೋಡಿದನ್. ಕೂಡೆ
ಶೋಕ ಮುಖಭಂಗಿಯಿಂದಶ್ರುಲೋಚನನಾಗಿ
ನಿಡುಸುಯ್ದನೆರ್ದೆನೊಂದನೋಲ್. ಸೀತೆಗರಿವಾಯ್ತು
ತೆಕ್ಕನಾ ಕಲ್ಲ ನೆತ್ತಿಯ ಮೂರ್ತಿ ತಾನಾರೆಂದು ;          ೧೧೦
ಸೌದೆಯಂ ಪೊತ್ತು ತಂದಲ್ಲಿ ವಿಶ್ರಮಿಸಿರ್ದನಾ
ಊರ್ಮಿಳಾ ವಲ್ಲಭನದೈಸೆ ! ನೆನೆದಾಕೆಯಂ
ಬೇಯುತಿರುವನೆ ? ಬೇಡುವನೆ ದೇವರಂ ತನ್ನ
ಸತಿಗಾಗಿ ? ಸುಯ್ದರ್ ಕೃತಜ್ಞತಾಭಾರದಿಂ
ದಂಪತಿಗಳಿರ್ವರುಂ. ಮಾತನುಳಿದಳ್ ಸೀತೆ.
ಭಗವನ್‌ಮೌನಿ ರಾಮನಲ್ಲಿಂದೆ ತಮ್ಮನಂ
ನುಡಿಸಲೆಂದೈದಿದನ್ ‘ಕಲ್ದವಸಿ’ಯೆಡೆಗೆ. ಆ
ಸಂಜೆಯಿಂದಾ ಬಂಡೆ, ಕಲ್ದವಸಿ, ಊರ್ಮಿಳೆಗೆ
ಮೇಣವಳ ಸಂಯಮಕೆ ಪಡಿಮೆಯಾದುದು; ಮತ್ತೆ
ಗುರುವಾದುದೆಚ್ಚರಿಕೆಯಾದುದೈ ಸತಿಗೆ ಮೇಣ್           ೧೨೦
ಪತಿಗೆ,
ಪರ್ಣಶಾಲೆಯ ಪೂರ್ವದ ಗವಾಕ್ಷದಿಂ
ಕಾಣುತಿಹುದದೊ ನೀಲದೂರಕ್ಕೆ ಮೃದುಲಮೆನೆ
ತೋರ್ಪ ಶಿಖರೇಶ್ವರಂ. ಸೀತೆಯ ಮನಕೆ, ಮತ್ತೆ
ರಾಮನ ಮನಕೆ, ಮತ್ತೆ ಲಕ್ಷ್ಮಣ ಮನಕೆ ಬೇರೆ
ಬೇರೆನಿತೆನಿತೊ ಗುಹ್ಯ ಭಾವಲೋಕಂಗಳಂ
ಸೃಷ್ಟಿಸಿಹುದದರಿಂದಮವರವರ ದೃಷ್ಟಿಗದು
ಮೆರೆಯುತಿದೆ ಬೇರೆ ಬೇರೆಯ ರಸಕೆ ನಿಧಿಯಾಗಿ,
ವಿಧಿಯಚಲ ಸಾನ್ನಿಧ್ಯಮಾಗಿ : ಜನಕಜೆಯಡುಗೆ
ಮಾಡುತಿರಲತ್ತಣಿಂದೇಳ್ವನಾ ಉದಯರವಿ !  ೧೩೦
ಅಡುಗೆಯ ಮನೆಯ ಹೊಗೆಯ ನೀಲಿಗೆಳನೇಸರಾ
ಬಿಸಿಲ್‌ಪಸುಳೆ ತನ್ನ ನಳಿದೋಳ ಕಯ್‌ವೆರಳ್ಗಳಂ
ಕೋಲು ಕೋಲನೆ ಬೀಸುತೋಲಾಟವಾಡಿ ಬರೆ,
ಪಾಕ ಕಾರ್ಯವನುಳಿವಳೈ ದೇವಿ, ಸವಿಯಲಾ
ಸೊಗಮುಕ್ಕುವಾ ಕಣ್ಗಳೊಸಗೆಯಂ. ಮತ್ತೊರ್ಮೆ
ಬೆಣ್ಣೆ ಬಣ್ಣದ ನುಣ್ಣನುಣ್ಣೆಮುಗಿಲೈತಂದು
ಬೆಟ್ಟನೆತ್ತಿಯನಪ್ಪುತಾಲಿಂಗನದ ಸುಖಕೆ
ಪರವಶತೆವೆತ್ತು ನಿಂದಿರೆ ನಿಶ್ಚಲಂ, ತರಳೆ
ಗಗನದೌನ್ನತ್ಯಕೇರ್ದಾ ಶಿಖರಮೌಳಿಯಂ
ರಾಜರ್ಷಿ ಜನಕರಾಜಂ ಗೆತ್ತು, ತೆಕ್ಕನೆಯೆ
ತಂದೆಯನಿದಿರ್‌ಗೊಂಡವೋಲಾಗಿ, ಮಣಿದಳಾ           ೧೪೦
ಭವ್ಯಮುದ್ರೆಯ ರಜತಕೇಶಾದ್ರಿದೇವಂಗೆ.
ಮಗುದೊಂದಿರುಳ್ ಧರಣಿಪುತ್ರಿ ಪತಿ ಮೈದುನರ
ಕೂಡೆ, ಶಶಿಮೌಳಿಯೆಂಬೀರೈದು ವತ್ಸರದ,
ಚಂಚಲ ವಿನೋದಶೀಲದ, ಲಲಿತರೂಪದ
ಋಷಿಕುಮಾರನಾಶ್ರಮದ ಗೋವನಟ್ಟುತ ಬಂದು,
ತನ್ನೊಡನೆ ಗಳಪಿ, ತಾನಿತ್ತುಣಿಸನೊಲಿದುಂಡು,
ಬೇಡವೆನೆಯುಂ ಬಿಡದೆ ತನ್ನೊಡನೆ ಮುಸುರೆಯಂ
ತಿಕ್ಕಿ, ಕಯ್ ಮೆಯ್ ಮೋರೆ ಮಸಿಯಾಗಿ ಹೋದುದಂ
ಹೇಳುತಿರ್ದಳ್ ಭಾವವಶಳಾಗಿ, ಮತಿಭೂಮನಾ
ಶ್ರೀರಾಮನುದ್ದಾಮನಾ ವೀರಲಕ್ಷ್ಮಣನುಮಾ   ೧೫೦
ಅಲ್ಪಮಂ ಕೇಳುತಿರ್ದರ್ ಮಹೋಲ್ಲಾಸದಿಂ,
ನಡುನಡುವೆ ನಗುತಳ್ಳೆಬಿರಿವಂತೆ. ಮುದ್ದುಗತೆ
ಮಗಿವ ಮುನ್ನಮೆ, ಕಿಟಕಿಯಾಚೆಯಾ ಕವಿದಿರ್ದ
ಕಗ್ಗತ್ತಲೊಳ್, ಜ್ವಾಲೆ ಮೆರೆದುದು ಮನೋಹರಂ
ಶಿಖರೇಶ್ವರನ ಶಿರದಿ. ರಾತ್ರಿಯಾಕಾಶದಾ
ತಾರಾ ಸಹಸ್ರಾಕ್ಷನೋಲಗದಿ ನರ್ತಿಸುವ
ಉರಿಯ ಉರ್ವಶಿಯೆನಲ್ಕಾ ಕಾಡುಗಿರ್ಚ್ಚೆಸೆಯೆ,
ನಿಟ್ಟಿಸಿದರಾ ಚೆಲ್ವನೆಳಮಕ್ಕಳೋಲಂತೆ
ಬಾಯ್ದೆರೆದ ಬೆಳ್ಳಚ್ಚರಿಗೆ ಮನಂ ಮಾರ್ವೋದವೋಲ್ !
ಹೊರತೇನೊ ಹಾಸ್ಯರಸಮಖಿಲ ರಸನಿಧಿ ಚಂದ್ರ         ೧೬೦
ಸದೃಶಂಗೆ ? ಒಂದು ದಿನಮಿನನುದಯದಲಿ ತರಳೆ,
ಸೀತೆ, ರವಿಕರ ಕಾಂತ ಕಾಂತಾರದಂತರದಿ
ನಲವಿಂದಿಳಿದು ಬಂದು, ವೇಗಗಾಮಿನಿ ಸಲಿಲ
ಯೌವನಾ ಮಾಲ್ಯವತಿಯಲ್ಲಿ ಋಷಿಸತಿಯರಂ
ಕಂಡು, ವಂದಿಸಿ, ನುಡಿಸಿ, ಸಂತೋಷದಿಂ ಮಿಂದು,
ಬೆಳ್ನಾರುಡೆಯ ತೆಳ್ಮಡಿಯನುಟ್ಟು, ಮುಗುಳಲರ್
ಪೆಣ್ಣಾಯ್ತೊ ಪೆಣ್ಣೆ ಮುಗುಳಲರಾಯ್ತೊ ಹೇಳೆಂದಡವಿ
ಸೋಜಿಗಂಬಡುತಿರಲ್ ತಮ್ಮೆಲೆವನೆಗೆ ಮರಳ್ದ್
ಏರಿ ನಡೆದಡುಗೆ ತೊಡಗಿದಳು. ಪಸಿ ಸೌದೆಯಿಂ
ಪೊಗೆಯಲ್ಲದುರಿದೋರಲೊಲ್ಲದಿರೆ, ಧರಣಿಸುತೆ           ೧೭೦
ಮುಳಿದೊಲೆಯ ಮೋರೆಯಂ ತಿವಿದು ಕಟ್ಟಿಗೆಯಿಂದೆ,
ಕಣ್ಣೊರಸಿ, ಮೂಗೊರಸಿ, ಮೊಗಮೆಲ್ಲ ಮಸಿಯಾಗೆ,
ಮಿಂದುಟ್ಟ ಮಡಿ ಮಾಸೆ, ಸಿಗ್ಗೇರ್ದು ಸಿಡುಕುತಿರೆ,
ವಜ್ರರೋಮಾಶ್ರಮದಿನಧ್ಯಯನಮಂ ಮುಗಿಸಿ
ರಾಮನೈತಂದನಲ್ಲಿಗೆ ಕರೆದನರ್ಧಾಂಗಿಯಂ,
ಕಾಣದಿರೆ. ಹೊಗೆಯ ಹೊಟ್ಟೆಯೊಳಿರ್ದು ಓಕೊಂಡಳಂ
ಕುರಿತು ಬಿನದಕೆ : ಪಸಿದೆನ್ ಆನುಣಲ್‌ವೇಳ್ಕುಮೆನೆ ;
ಮಡದಿ : ಪಸಿಸೌದೆಯಿಂದಡುಗೆಯೆಂತಪ್ಪುದಯ್ ?
ಪೊಗೆಯನುಣಿಮೆನೆ ; ರಾಮನಾಕೆಯಂ ಬಳಿಸಾರ್ದು,
ಮಸಿಯಿಡಿದು ನಲ್ಮೊಗಂ ಮುಸುಡಿಯವತಾರಮಂ     ೧೮೦
ತಾಳ್ದಿರ್ದುದಂ ಕಂಡು, ನಗೆ ತಡೆಯಲಾರದೆಯೆ
ಹೊರಗೆ ಬಂದಳ್ಳೆ ಬಿರಿವಿರಿಯೆ ನಗೆ ತೊಡಗಿದನ್.
ಬಂದ ಲಕ್ಷ್ಮಣನಣ್ಣನಾ ಪರಿಗೆ ಬೆರಗಾಗಲಾ
ರಾಮನೆಂದನ್ : “ನೋಡು, ನಡೆ ಒಳಗೆ, ಅತ್ತಿಗೆಗೆ
ಬದಲೊರ್ವ ವಾನರಿಯ …..” ಎಂದರ್ಧ ವಾಕ್ಯದೊಳೆ
ಗಹಗಹಿಸಿ ನಗುತಿರೆ, ಸುಮಿತ್ರಾತ್ಮಜಂ ನಡೆದು
ನೋಡಿದನ್ : ನಗಲಿಲ್ಲವನ್ ! ನಗೆಗೆ ಮೀರಿರ್ದುದಾ
ಧೂಮದೃಶ್ಯಂ ! “ಕ್ಷಮಿಸಿಮೆನ್ನಂ, ಪಸಿಯ ಸೌದೆಯಂ
ತಂದೆನಪರಾಧಿಯಂ.” ಎನುತ್ತೊಣಗು ಪುಳ್ಳಿಯಂ
ತಂದಡಕಿ, ಸತಿಯಂ ನೆನೆಯುತೂದಿದನ್. ಅಗ್ನಿ          ೧೯೦
ಧಗ್ಗನೆಯೆ ಚಿಮ್ಮಿದನ್ ಧೂಮತನುವಿಂ ಬುಗ್ಗೆಯೋಲ್,
ಚಿಮ್ಮಿದುದು ಸಂತೋಷಕಾಂತಿ ಚಿಂತಾಮ್ಲಾನ
ಮೈಥಿಲಿಯ ಮುಖಪದ್ಮದಿಂ !
ಕೊಂದ ಕತದಿಂದೇಂ
ಪೆರ್ಮನಾದನೆ ರಾಮನಾ ಮಾತನುಳಿ : ಪಗೆಯೆ ?
ತೆಗೆತೆಗೆ ! ಪೆರ್ಮೆಗೊಲ್ಮೆಯೆ ಚಿಹ್ನೆ. ಮಹತ್ತಿಗೇಂ
ಬೆಲೆಯೆ ಪೇಳ್ ಕೊಲೆ ? ದೈತ್ಯನಂ ಗೆಲಿದ ಕಾರಣಕಲ್ತು,
ತನ್ನ ದಯಿತೆಯನೊಲಿದ ಕಾರಣಕೆ, ಗುರು ಕಣಾ
ರಾಮಚಂದ್ರಂ. ಕೋಲಾಹಲದ ರುಚಿಯ ಮೋಹಕ್ಕೆ
ಮರುಳಾದ ಮಾನವರ್ ರಾವಣನ ಕೊಲೆಗಾಗಿ            ೨೦೦
ರಾಮನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ
ತಾನೇಕೆ ? ಮಣಿಯುವೆನು ರಾಮನಡಿದಾವರೆಗೆ :
ದಶಶಿರನ ವಧೆಗಾಗಿಯಲ್ತು ; ಮಂದಾಕಿನಿಯ
ತಿಳಿವೊನಲ ಮೀಯುತಿರಲೊರ್‌ದಿನಂ ತಾಂ ಕಂಡ
ದೃಶ್ಯಸೌಂದರ್ಯದಿಂದಾತ್ಮದರ್ಶನಕೇರ್ದ
ರಸಸಮಾಧಿಯ ಮಹಿಮೆಗಾಗಿ !
ಮೈದೋರಿದನ್,
ರಮಣೀಯ ಪೂರ್ವಗಿರಿವನರಮಾ ರಮಣನೆನೆ,
ಉದಯರವಿ. ಗಿರಿವನಪ್ರಿಯರಾಮನಾ ಪ್ರಕೃತಿ
ಪೂಜಾಸುಖದ ರಸಕ್ಕೋತು, ತಾನೊರ್ವನೆಯೆ,
ಹೊಂಬಿಸಲು ಚುಂಬನದ ಹಸುರು ಕಾಡಿನ ನಡುವೆ
ಪಿಕಳಾರ ಕಾಜಾಣ ಕಾಮಳ್ಳಿ ಕೋಗಿಲೆಯ      ೨೧೦
ಗಿಳಿಯ ಕೊರಲಿನ ದನಿಯ ಜೇನೀಂಟುತೈತಂದು
ನೋಡಿದನ್, ಮಂದಾಕಿನಿಯ ಸಿರಿಯ ಕಣ್‌ಸೆಳೆಯ
ಪೊನ್‌ನೋಟಮಂ : ತುಂಬಿ ಪರಿದುದು ಶುಭಜಲದ ರಮ್ಯ
ನದಿ, ತಾಯಿ ಕೌಸಲ್ಯೆಯಂತೆ, ರಾಮನ ಮನಕೆ
ಮಗುತನವನೊಡರಿಸುತೆ. ಮಾತೃದರ್ಶನ ದೀಪ್ತ
ಪ್ರೀತಿಗೌರವದಿಂದೆ ಕೈಮುಗಿದು ನಡೆದನಾ
ಪೂಜ್ಯೆ ಮಂದಾಕಿನಿಯ ಮಳಲೊಟ್ಟಿಲೊಳ್ದೊಡೆಯ
ತೊಟ್ಟಿಲಿಗೆ. ಕಣ್ಗೆ ಮುತ್ತಿಟ್ಟುದಿರ್ಕೆಲದಲ್ಲಿ
ತಾಯಕ್ಕರೆಯ ಸಕ್ಕರೆಯ ಪುಂಜಗೊಂಡಂತೆವೋಲ್
ಚಿತ್ರಮಯ ಧವಳಿಮ ಪುಳಿನರಾಶಿ. ತೀರರುಹ            ೨೨೦
ಫಲಪುಷ್ಪ ಭಾರಾವನತ ತರುಲತಾ ಶ್ರೇಣಿ ತಾಂ
ಮಣಿನಿಕಾಶೋದಕ ನದೀವಕ್ಷದರ್ಪಣದಿ
ಮಾರ್ಪೊಳೆವವೊಲ್ ಬಾಗಿ, ಕುಸುಮವೃಷ್ಟಿಯ ಸೂಸಿ,
ಸಿಂಗರಿಸಿದುದು ವೀಚಿವೀಚಿಯಂ, ತೆರೆತೆರೆಯ
ಕಯ್ಗಯ್ದು ಬಾಚಿದೋಲೆಸೆದಾ ಮನೋಹರದ
ಶರವೇಣಿಯಂ. ಕೊಂಬೆಗೈಗಳಿಂ ಪೂವಲಿಯ
ಚೆಲ್ಲಿ, ನಾನಾವರ್ಣ ಸ್ವರ್ಣಶೃಂಗಾರದಿಂ
ಮೆರೆದು, ಗಾಳಿಗೆ ತೊನೆದು, ಹಕ್ಕಿಯಿಂಚರದುಲಿಯೆ
ಕಾಲ್ಗೆಜ್ಜೆ ಕಿಂಕಿಣಿಯವೋಲಾಗೆ ನರ್ತಿಸುವ
ತರುತಿಲೋತ್ತಮೆ ಸೃಷ್ಟಿಸಿದಳಿಂದ್ರಲೋಕಮಂ            ೨೩೦
ಚಿತ್ರಕೂಟದೊಳೆ ಆ ರಸಋಷಿ ರಘೂದ್ವಹಂಗೆ.
ಮೆಯ್ಯೊಳ್ ಪರಿವ ನೆತ್ತರೆಲ್ಲಂ ಮಿಂಚುವೊನಲಾಗೆ
ಸವಿಯುತಾ ಬೆಳಗಿನೈಸಿರಿಯನಿಳಿದನ್ ನೀರ್ಗೆ
ಮೀಹಕ್ಕೆ. ಬಂಡೆಬಂಡೆಯ ನಡುವಣನವರತ
ಜಲಗದ್ಗದ ಶ್ರುತಿಗೆ ಉಪನಿಷತ್ತಿನ ಶ್ರುತಿಯ
ಮಂತ್ರಘೋಷಂ ಬೆರಸಿ ನೀರಾಡಿದನ್, ಪೃಥ್ವಿ
ಕಂಡು ಪುಲಕಂಗೊಂಡು ನಲಿಯೆ. ಮಿಂದಿರಲಿಂತು,
ಕಣ್ಗೆ ಪೊಕ್ಕನೆ ಪೊದಳ್ದುದೆನೆ ಚೆಲ್ವಿನ ಬುಗ್ಗೆ,
ಕಾಣ್ಕೆವೊಲದಂಚಿಂದೆ, ಬಾನ್ಮುಡಿಯ ಪೊಳೆಯಡಿಯ
ಬೆಟ್ಟದಡವಿಯ ತಡಿಯ ಚಿತ್ರಭಿತ್ತಿಯಿನುಣ್ಮಿ     ೨೪೦
ಹಾರುತೊಯ್ಯನೆ ತೇಲಿಬಂದತ್ತು ಸಾಲ್ಗೊಂಡು,
ಪಾಲ್‌ಬೆಳ್ಳನೆಯ ಬೆಣ್ಣೆನುಣ್ಪಿನೊರ್ ಬರೆಪಮೆನೆ,
ಬೆಳ್ವಕ್ಕಿಪಂತಿ. ನೋಡಿದನು ರಸವಶನಾಗುತಾ
ದಾಶರಥಿ. ನೋಡುತಿರೆ, ತಾನೆ ಹೊಳೆಯಾದಂತೆ,
ತಾನಡವಿಯಾದಂತೆ, ತಾನೆ ಗಿರಿಯಾದಂತೆ,
ತಾನೆ ಬಾನಾದಂತೆ, ತಾನೆಲ್ಲಮಾದಂತೆ,
ಮೇಣೆಲ್ಲಮುಂ ತನ್ನೊಳಧ್ಯಾತ್ಮಮಾದಂತೆ
ಭೂಮಾನುಭೂತಿಯಿಂ ಮೈಮರೆದನಾ ರಸಸಿದ್ಧಿ,
ಪೇಳ್, ರಾಮನಧ್ಯಾತ್ಮಮಂ ಸಕಲಲೋಕಕ್ಕೆ ಸಾರ್ವ
ಭವ್ಯ ಭಗವತ್ ಸಾಕ್ಷಿಯೈಸಲೆ ಕಿರೀಟೋನ್ನತಂ !         ೨೫೦






******************

ಶ್ರೀರಾಮಾಯಣ ದ‍ರ್ಶನಂ, ಅಯೋಧ್ಯಾ ಸಂಪುಟಂ: ಸಂಚಿಕೆ 7- ಚಿತ್ರಕೂಟಕೆ

ಸಂಚಿಕೆ 7 – ಚಿತ್ರಕೂಟಕೆ
ಕೈಕೆ ಭರತಗಿರ್ಮಡಿಯ ಕಾತರತೆ, ಕೇಳ್, ಕವಿಗೆ
ಗಿರಿವನಪ್ರಿಯ ರಾಮ ಸಂದರ್ಶನಂ ಗೈಯೆ
ಕಾನನಾಂತರದಿ : ಕರೆತರಲಲ್ತು ಸಾಕೇತ
ಪುರಿಗೆ. ಮರಳಿಸಲಲ್ತು ಮಣಿಮಕುಟ ಧಾರಣೆಗೆ.
ಸೌಮಿತ್ರಿಯೋಲಂತೆ ರಾಮಸೀತಾ ಪುಣ್ಯ
ಸಂಗ ಮಂಗಲ ತುಂಗ ಶೃಂಗ ವನರಂಗಮಂ
ಚರಿಸಲಾನುತ್ಕಂಠಿತಂ ! ಮಲೆಯ ನಾಡೆನಗೆ
ತಾಯಿಮನೆ. ಕಾಡು ದೇವರ ಬೀಡು. ಗಿರಿಯ ಮುಡಿ
ಶಿವನ ಗುಡಿ. ಬನವೆಣ್ಣೆ ಮೊದಲಿನಾ ಮನದನ್ನೆ.
ಕವಿ ರಾಮಚಂದ್ರನೀ ಸೀತಾ ಕಲಾಕಾಂತೆ      ೧೦
ನಿತ್ಯವನವಾಸಿಯದರಿಂದಮೀ ಕಬ್ಬಿಗಂ
ಗಿರಿವನ ಪ್ರೇಮ ಸಾದೃಶ್ಯದಿಂ ಸಮರಸಂ
ಸಮಹೃದಯಿ ರಾಮರಸಋಷಿಗೆ. ವನದೇಶಮಂ
ಸವಿದಪೆನ್ ಸೀತಾರಮಣನೊಡನೆ. ತೊಳತೊಳಲಿ
ಮೆಯ್ಯ ಮರೆದಪೆನೀಂಟಿ ಕಾನನಾವೇಶಮಂ.
ದೊರೆವಂತೆವೋಲ್ ಹೃದಯಜಿಹ್ವೆಗೆ ರಸದ ಮಧುತೃಪ್ತಿ
ಕೈಕೊಂಡಪೆನ್ ಪ್ರಕೃತಿಯಾತ್ರೆಯಂ. ರಮಣನಿರೆ
ಕಲೆಯ ವಧು ತಾನಯ್ದೆ. ಪುಣ್ಯಾತ್ಮ ರಾಮನಿರೆ
ಸೀತೆಯೊಲ್ ಪೂಜ್ಯ ಮಂಗಳೆಯೆನ್ನ ಕೃತಿಕನ್ಯೆ !
ರೆಂಕೆಗೆ ರಥಧ ಹಂಗೆ ? ಪಥಋಣವೆ ಕಲ್ಪನೆಗೆ ?           ೨೦
ಕಾವ್ಯಯಾತ್ರೆಗೆ ತೇರುಕುದುರೆಯ ನೆರಂ ಬೇಕೆ ?
ಧರೆಯ ನಿಮ್ನೋನ್ನತಂಗಳ ತಡಬೆಯೇನೊಳದೆ
ಪ್ರತಿಭೆಯ ವಿಮಾನ ಯಾನಕ್ಕೆ ? ಪರಿವಾರದಾ
ಸಂಸಾರ ಭಾರ ಬಂಧನವಿಹುದೆ ದುರ್ದಮ್ಯ,
ನಿಸ್ಸೀಮ, ವಿಶ್ವಸಂಚರ ಶಕ್ತಿಯುಕ್ತ, ಕವಿ
ವೈನತೇಯನ ಮಹಾ ಪಕ್ಷ ವಿಸ್ಫಾಲನೆಗೆ ?
ಕವಿ ವಿಹಂಗಮಗಲ್ತು ; ಭರತಾದಿಗಳಿಗಿರ್ಕೆ
ರಥ ಪಥ ತುರಂಗ ವಾರಣ ಋಣಂ. ಬರಲವರ್
ಪಿಂಬಡಿಂ. ಮುನ್ನಮಾನೈದುವೆನ್ : ರಮಣೀಯ
ವೃಕ್ಷ ಸಂಕುಲ ವಸನ ಶೋಭೆಯಿಂ, ಕಮನೀಯ          ೩೦
ಕುಸುಮ ಕಿಸಲಯರಾಜಿ ರಾರಾಜಿಸುವ ದಿವ್ಯ
ಸೌಂದರ್ಯದಿಂ, ಕೋಟಿ ಪಕ್ಷಿ ಕಲಕಲ ತುಮುಲ
ಮಾಧುರ್ಯದಿಂ, ಪುಣ್ಯಗಣ್ಯ ಮಂದಾಕಿನಿಯ
ವಾಹಿನಿಯ ಕಂದರ ಕ್ರೀಡಾ ವಿಲೋಲತೆಯ
ನೀಲ ಲೀಲಾಶೀಲ ಸಲಿಲ ಕಲ್ಲೋಲದಿಂ,
ಶ್ರೀರಾಮ ಪರ್ಣಶಾಲಾ ಪೂಜ್ಯ ಸನ್ನಿಧಿಯ
ಸಂಗದಿಂ ಮಹಿಮೆಗಾಸ್ಪದಮಾಗಿ ಮೆರೆಯುವಾ
ಚಿತ್ರಕೂಟಾದ್ರಿಯದೊ ಕಣ್ಗೊಳಿಸುತಿಹುದಲ್ಲಿ,
ಮೇಘಮುದ್ರಿತ ಮಹಾ ಶೃಂಗ ಶಿವಲಿಂಗದೋಲ್,
ಸರ್ವೇಂದ್ರಿಯಂಗಳಿಗೆ ಮತ್ತೆ ಕವಿಯಾತ್ಮಕ್ಕೆ   ೪೦
ಮಧುರ ಮಧುಖನಿಯವೋಲ್ ಮತ್ತೆ ರಸಧುನಿಯವೋಲ್ !
“ಕ್ಷೇಮದಿಂ ಮರಳ್ವಂತೆ ಪ್ರೇಮದಿಂ ಪರಕೆಗೈ.
ಕಾಯಿ ಜೀವೇಶನಂ ಕರುಣೆಯಿಂದೋವಿ, ಓ
ತಾಯೆ. ಪಿಂತಿರುಗಿ ಬಂದಾಮೇಲೆ ನಿನಗೀವೆನೌ
ಮಾಂಸಭೂತೌದನ ಸುರಾಘಟ ಸಹಸ್ರದಾ
ನಿರ್ದುಷ್ಟ ಪುಷ್ಟ ಸಂತುಷ್ಟ ನೈವೇದ್ಯಮಂ
ನಿನಗಿಷ್ಟಮಂ, ದೇವಿ. ಕೈಮುಗಿದೆನಿದೊ, ಗಂಗೆ !”
ಇಂತಾ ತರಂಗಿಣಿಗೆ ಬಿನ್ನೈಸುತಿರೆ ಸೀತೆ,
ಸಾರೆಬರೆ ದಕ್ಷಿಣ ಸಿಕತ ತಟ ವಿಪಿನಪಂಕ್ತಿ,
ಜಹ್ನುಜಾತೆಯನುತ್ತರಿಸಿ, ನಾವೆಯಿಂದಿಳಿದು,  ೫೦
ಬೀಳ್ಕೊಂಡು ಗುಹನಂ ನಿಷಾಧಪತಿಯಂ ; ಪಿಂತೆ
ಸೋದರನಿರಲ್ಕೆ, ನಡುವೆ ಬರೆ ಸತಿ, ತಾಂ ಮುಂತೆ
ನಡೆಗೊಂಡನಡವಿ ಕೀಳ್ವಟ್ಟೆಯೊಳಿಳಾತ್ಮಜಾ
ವಲ್ಲಭಂ, ನೀಲ ನೀರದ ವಿಪುಲ ವಪುವಾಗಿ,
ಭೀಷಣ ದನುಷ್ಪಾಣಿಯಾಗಿ. ಮಲೆತುದು ಮುಂದೆ
ಗಿರಿಗಹ್ವರ ಭ್ರೂಭ್ರುಕುಟಿಯಂತೆ, ಕರ್ಕಶಂ,
ಭೈರವಂ, ಜನಸಂಗಹೀನಂ ಮಹದ್ವನಂ,
ಪಂತಿದೇರನ ಸೊಸೆಯ ಕಣ್ಗೆದೆಗಳರ್‌ಕೆಯಂ
ಬೀರ್ದು. ಜನಕಜೆ ಸುತ್ತಲುಂ ಬೆಚ್ಚಿ ನೋಡುತಂ,
ಮತ್ತೆಯೆರೆಯನ ಬೆನ್ನ ತುಂಬು ಬತ್ತಳಿಕೆಯಂ  ೬೦
ಕಂಡಳುಕನೀಡಾಡುತಂ ; ರಘೂದ್ವಹನೆರ್ದೆಯ
ಪಣ್ಣಾಗಲಿರ್ಪೊಂದು ಸಿರಿಯ ಪೂಗನಸಿಂದು
ತನ್ನಿಷ್ಟದಾದರ್ಶಮಂ ಪೂಜಿಸೋಲೈಸಿ
ಬೆಂಬಾಲಿಪುದೊ, ಲಕ್ಷ್ಮಣನ ಧರ್ಮವಾತ್ಸಲ್ಯ ತಾಂ,
ಪೇಳ್, ದಾರಿದೋರುತ್ತವನ ಮುಂದೆ ನಡೆದಪುದೊ
ಎಂಬವೋಲ್ ಸಾಗಿದಳು ಹಜ್ಜೆ ಹಜ್ಜೆಯನಿಟ್ಟು
ದಟ್ಟಪಳುವದ ಪಸುರ್ ನೆಳಲೊಳ್, ರಸಾವೇಶಂ
ಇಳಿದ ಸಮಯದ ಕವಿಯ ರಚನೆಯ ಉದಾಸೀನತಾ
ವೇಗದಲಿ. ಬಗೆವುಗದವೋಲ್ ಬಟ್ಟೆಯ ಬಳಲ್ಕೆ,
ರಘುನಂದನಂ ಸತಿಗೆ ನಾನಾ ವಿಚಿತ್ರಂಗಳಂ, ೭೦
ತರು ಸುಮ ವಿಹಂಗಮ ಮೃಗಂಗಳಂ, ತೋರುತ್ತೆ
ವರ್ಣಿಸುತೆ ವಿವರಿಸುತೆ ನಡೆಯುತಿರಲೇರ್ದತ್ತು
ಪೊತ್ತು ಬಾನ್ನೆತ್ತಿಗೆ. ವಿದೇಹರಾಜನ ಕುವರಿ
ದಣಿದು ಸುಯ್ದಳು ಢಗೆಗೆ ಮೈಸುರ್ಕಿ. ಕೆಂಪೇರ್ದ
ಮೊಗಸಿರಿಗೆ ಪಣೆಯ ಮೇಲ್ ಮೂಡಿತು ಪನಿಯ ಪಂತಿ.
ನಾಂದಂಟಿದತ್ತು ಮುಂಗುರುಳೋಳಿ, ಬೆಳ್‌ಮೆಯ್ಗೆ
ಕಾಡುಗಣ್ದಿಟ್ಟಿ ಸೋಂಕದ ತೆರದಿ, ಕರ್ಮಸಿಯ
ಗೆರೆಯ ಚಿತ್ತಾರಮಂ ಮೆತ್ತಿಬರೆದೋಲ್. ಮನಂ
ಕರಗಿ ಹರಿದುದು ಕಣ್ಗಳಲಿ ರಾಮಚಂದ್ರಂಗೆ.
ನಿರುಪಮ ಬಲಾನ್ವಿತಂ ಲಕ್ಷ್ಮಣಗೆ ನಿರ್ಬಲತೆ   ೮೦
ಮೈದೋರಿದುದು ಕಾಣುತಾ ಕರುಣಕರ ದೃಶ್ಯಮಂ.
ದಾರಿಯೆಡೆ ರಾಮನೊಟ್ಟಿದ ತರಗೆಲೆಯ ಮೇಲೆ
ಸೀತೆ ದೊಪ್ಪನೆ ಕುಳಿತ್ತುಸ್ಸೆನುತ್ತೊರಗಿದಳ್
ಮರಕೆ. ಮುಚ್ಚಿದುವಕ್ಷಿ ತಾಳಲಾರದ ಸೇವೆಯಿಂ,
ಪೇಳೆಳ್ಚರಳ್ದುದೊ ಮುರ್ಚ್ಚೆಗೆಂಬಂತೆ. ಕೆಚ್ಚೆದೆಯ
ಬೀರರಿರ್ವರುಮಿಚ್ಚೆಗೆಟ್ಟು ಮರವಟ್ಟರೆನೆ
ಕುಲ್ತರೆದೆ ತಣ್ತು ! ನೀರಳ್ಕೆಯಂ ಸನ್ನೆಯಿಂ
ಸೂಚಿಸಿ ತರಳೆ ನರಳೆ, ಬೇಗದಿಂದೋಡಿದನ್
ಊರ್ಮಿಳಾ ಸ್ವಾಮಿ, ಪಳುವಂ ನುಗ್ಗಿ, ದರಿಯಿಳಿದು,
ಸರುವಿಂಗೆ. ತಳಿರ ತೊಂಗಲ ಬಿಜ್ಜಣಿಕೆಯಿಕ್ಕಿ   ೯೦
ಮೆಲ್ಗಾಳಿವೀಸಿ ದಾಶರಥಿ ಸವಿಮಾತಿನಿಂ
ತನ್ನಾ ತಳೋದರಿಯನೋವಿದನ್. ಅನಿತರೊಳ್
ದೊನ್ನೆಗೈದೆಲೆಯೊಳಗೆ ಮೈದುನಂ ತಂದೀಯೆ
ತಣ್ಣಿರನೀಂಟಿ ಸೊಗಸಿದಳು ಶುಶ್ರೂಷೆಗಾ
ರಾಮನೆರ್ದೆಯನ್ನೆ. ಮೇಲಲ್ಲಿಂದೆ ನಡೆದರಾ
ಮೆಲ್ಲನೊಯ್ಯನೆ ಮೂವರುಂ. ಮೆರೆದುದನ್ನೆಗಂ
ವನರಮ್ಯಗಿರಿಪಂಕ್ತಿಯಿಂದೆ ಪರಿವೃತಮಾಗಿ,
ರವಿಕರೋಜ್ವಲ ಸಲಿಲ ಚಂಚಲತೆಯಿಂ ಮಿಂಚಿ,
ರಾಜೀವ ರಾಜಿಯಿಂ ರಾಜಿಪ ಸರೋವರಂ
ಮುಂದೆ. ಕಯ್ ಕಾಲ್ ಮೊಗಂ ತೊಳೆದರುಂಡರ್ ಗುಹನ         ೧೦೦
ಕೊಟ್ಟ ಬುತ್ತಿಯನಾಸರಂಗಳೆಯೆ ಮಲಗಿದರ್
ತೀರದೆಳಗರುಕೆ ಹಾಸಿನೊಳಲ್ಲಿ, ಕರಿನೆಳಲ
ಹಿರಿಕೊಡೆವಿಡಿದ ಹೆಮ್ಮರದ ಬುಡದಲ್ಲಿ, ತಿರೆತಾಯ
ತಣ್ಪು ಮಡಿಲಲ್ಲಿ. ತಾವರೆಹೂವಿನೆಸಳ್‌ಗಳಂ
ಕೆದರಿ, ಪೊನ್ನಿರಿಯೊಳಗಣಾಮೋದಮಂ ಸೂರೆ
ಮಾಳ್ಪಾ ಸರಸವಾಡಿ, ನರುಗಂಪುವೊರೆವೊತ್ತು
ಮಂದಮಂದಂ ತೀಡುವೆಳವೆಲರುಸಿರನೊಲ್ದು
ಬೀಸಿದಳ್ ; ಹಿಂಡುಹಿಂಡಾಗಿ ಬಂಡುಣಲೆಂದು
ತೇರುಗೊಂಡಲರ ಸಂತೆಗೆ ನೆರೆದು, ಮೊರೆದುಲಿವ
ನಸರಿ ಮೇಣ್ ತುಡುವೆ ಮೇಣ್ ಹೆಜ್ಜೇನ್ನೊಣಂ ಮೇಣ್   ೧೧೦
ಅಲರ್ವಕ್ಕಿಗಳ್ ಮತ್ತೆ ಕೊಂಚೆಯಂಚೆಗಳಿಮ್ಟು
ಜೋಗುಳವನುಲಿದಾಡಿದಳ್ ; ತೀರಮಂ ತಟ್ಟಿ
ತೆರೆಗೈಗಳಿಂದೆ, ಚಪ್ಪಳೆಯಿಕ್ಕಿದಳ್ ; ಮುದ್ದಾಡಿ
ತೂಗಿದಳ್ ನಿದ್ದೆದೊಟ್ಟಿಲೊಳಿಟ್ಟು ಆ ಮೂವರಂ
ಶ್ರೀಮಂತರಂ ಆ ಸರೋವರ ಶ್ರೀ.
ಜೀರ್ದುಂಬಿಗಳ್
ಚೀರಿಡಲ್ ತೊಡಗಿದುವು. ದಟ್ಟಯ್ಸಿದುದು ಮರ್ಬ್ಬು
ಕಾಡನೊಯ್ಯನೆ ನುಂಗಿ. ಬೈಗಾದುದಾ ಪಗಲ್.
ಇಳಿದುದೈ ಕಾಳಸರ್ಪಿಣಿಯಂತೆ ಕರ್ಪಿರುಳ್.
ಮರದಲೆಗಳೆಲೆಗೊಡೆಯ ನಡುನಡುವೆ ತಾರೆಗಳ್
ಮಿಣುಮಿಣುಕಿಣಕಿ ತೋರಿ ಮರೆಯಾದುವಿನ್ನೊಮ್ಮೆ      ೧೨೦
ಬೇರೊಂದು ತಾಣದೊಳ್ ಮಿನುಗಿದುವು, ಮಿಣುಕಿಣಕಿ
ಮರಳಿ ಮರೆಯಾಗಿ. ಚುಕ್ಕಿಗಳನಣಕಿಸಿ ಮಿನುಗಿ
ಮೆರೆದುವಯ್ ಮಿಂಚುಂಬಳದ ಸೇನೆ, ಕಳ್ತಲೆಗೆ
ಕೋಟಿಕೋಟಿಯ ಕಿಡಿಯ ರೋಮಾಂಚನವನಿತ್ತು,
ಮತ್ತೆ ನೋಳ್ಪರಿಗೆ. ಪಗಲಿನ ಜಗದ ಸದ್ದಳಿದು
ಶವವಾಯ್ತು ನಿಃಶಬ್ದಂ. ಓರೊರ್ಮೆ ನೀರವದ
ಕಗ್ಗಲ್ಲಿಗುಳಿಯೇಟನೊದೆವವೊಲ್ ದೆವ್ವದನಿ ‘ಗೂ’
ಕೂಗಿದುದು ಗೂಬೆ. ಮೇಣೋರೊರ್ಮೆ ಜಾನಕಿಗೆ
ಜೀವ ಜೊಂಪಿಸುವಂತೆ, ಸದ್ದು ಹದ್ದುಗಳೆರಗಿ
ಶರ್ವರಿಯ ಸತ್ತ ಸದ್ದಿಲಿಮೆಯ್ಯ ಮಾಂಸಮಂ  ೧೩೦
ಮುದ್ದೆಮುದ್ದೆಯೆ ಕಿತ್ತೆಳೆಯುವಂತೆ, ಕೇಳ್ದುವಯ್
ಕೋಳ್ಮಿಗಗಳೂಳ್.
ನಟ್ಟನಡುರಾತ್ರಿ ಸೌಮಿತ್ರಿಯಂ
ಕರೆದನಣ್ಣಂ :
“ತಮ್ಮ, ಪಿಂತಿರುಗಯೋಧ್ಯೆಗೀ
ರಾತ್ರಿಯಂ ಕಳೆದು. ಊರ್ಮಿಳೆ ನಿನ್ನನೆಯೆ ಕರೆದು
ಗೋಳಾಡುತಿರ್ಪಂತೆ ಕಂಡೆ ಕನಸಂ.”
“ಅಣ್ಣ,
ಕಾಂತೆ ಊರ್ಮಿಳೆ ತಪಸ್ವಿನಿ. ನಿನ್ನೊಡನೆ ಬರುವ
ಮುನ್ನಮಾಕೆಯ ಕೃಪೆಯನಾಂತೆ ಬಂದೆನ್. ನಿನಗೆ
ಚಿಂತೆಯಿನಿತಾ ದೆಸೆಗೆ ಬೇಡಯ್.”
ಸುಮಿತ್ರಾತ್ಮಜಂ
ರಾಮನಿಂಗಿತವರಿತು ಶೋಕಗದ್ಗದನಾಗಿ
ಪಿಡಿದನಣ್ಣನ ಪಾದಮಂ. ದಿಂಡುರುಳ್ದನು ನೆಲಕೆ          ೧೪೦
ಮರುಮಾತಿಗೆಡೆಯಿಲ್ಲದೊಂದು ಮಾರುತ್ತರದ
ಬಡಿಗೆ ಬೀಳ್ವಂತೆ : “ನೀನಿಲ್ಲದೆಂತತ್ತಿಗೆಗೆ
ಬಾಳಿಲ್ಲವೋ ಅಂತೆ ನನ್ನ ಬಾಳಾದೊಡಂ
ನಿನ್ನನುಳಿದಂದು ನೀರಂ ಪಳಿದ ಮೀನಂತೆವೊಲ್
ಗಳಿಗೆಗಳಿದಪುದಣ್ಣ ! ತಂದೆ ತಾಯಂದಿರಂ
ನೋಳ್ಪ ಮಾತಿರಲಿ, ಪುಗಲೊಲ್ಲೆನಾಂ ಸಗ್ಗಮಂ,
ನೀನಿರದೆ ಮುಂದೆ !”
ಆ ಪುಣ್ಯರಾತ್ರಿಯೆ ಕಣಾ,
ಋಷಿ ಭರದ್ವಾಜಂ ಸಮಾಧಿಯೊಳಿರಲ್, ಸ್ವರ್‌ಜ್ಯೋತಿ
ಪೃಥಿವಿಗವತರಿಸಿ ತನ್ನಾಶ್ರಮಂ ಪುಗುತಿರ್ಪುದಂ
ಕಾಣುತಾನಂದದಿಂ ಹಾರೀತನಂ ಶಿಷ್ಯನಂ     ೧೫೦
ಕರೆದು :
“ನಾಳೆಯೆ ಬರ್ಪನತಿಥಿ ನಾರಾಯಣಂ,
ಹಾರೀತ ! ಧನ್ಯಮಾಯ್ತೆಮ್ಮಾಶ್ರಮಂ; ಮತ್ತೆ
ಪುರುಷೋತ್ತಮಾಗಮನದಿಂ ಪರಮ ಪುರುಷಾರ್ಥಮುಂ
ಸಿದ್ಧಿಸಿತು ತಪಕೆ ! ನೀನವನ ಸುಸ್ವಾಗತಕೆ
ನಮ್ಮೀ ತಪೋವನವನಣಿಗೆಯ್ದು, ಪಿರಿಯತಿಥಿಯಂ
ನಾಳೆ ಬೆಳಗಿಂ ಬಿಡಿದು ಬೈಗು ಬರ್ಪನ್ನೆಗಂ
ಕಾಯ್ದಿದಿರ್‌ಗೊಂಡು ಪೂಜಿಸಿ ಕರೆದು ತಾ ಪೂಜ್ಯನಂ !”
ಬೆಳಗಾದುದೇಂ ಪೇಳ್ವುದಾಶ್ರಮದ ಶಾಂತಿಯಂ :
ಭ್ರಾಂತಿರಹಿತಾನಂದಶೀಲ ಕಾನನ ಶಾಂತಿಯಂ ;
ಆದರ್ಶಸಾಧನೆಯ ಹರ್ಷದುಜ್ಜ್ವಲ ಶಾಂತಿಯಂ ;        ೧೬೦
ಚಿಂತೆಗೆ ಅತೀತಮಪ್ಪಾ ಸೃಷ್ಟಿಯ ರಹಸ್ಯಮಂ
ಚಿಂತಿಸುವ, ಚರ್ಚಿಸುವ, ಸಿದ್ಧಾಂತಗೊಳಿಸಿಯುಂ
ಸಂದೇಹಗೊಂಡದಂ ಮತ್ತೊಂದರಿಂ ತಿದ್ದಿ,
ಮತ್ತೆ ಮುರಿದದನೆ ಮಗುದೊಂದರಿಂ ತಿದ್ದಿ, ಮೇಣ್
ತತ್ತರಿಸುವನ್ನೆಗಂ ಬುದ್ಧಿ ಜಿಜ್ಞಾಸಿಸುತೆ
ಮುನ್ನಡೆವ ಸಾಹಸದ ಮಂಥನ ಮನಶ್ಶಾಂತಿಯಂ !
ಸೋತು ಗೆಲ್ಲುವ ಮತ್ತೆ ಗೆಲಿದು ಸೋಲುವ ಶಾಂತಿಯಂ !
ಧ್ಯಾನ ಜಪತಪ ಶಾಂತಿಯಂ ! ಹೋಮ ಧೂಮದ ಮತ್ತೆ
ಸಾಮಗಾನದ ವೇದ ಘೋಷದ ಚಿರ ಪವಿತ್ರತಾ
ಶಾಂತಿಯೆ ನಮೋ ನಿನಗೆ, ಓ ಋಷ್ಯಾಶ್ರಮದ ಶಾಂತಿ !            ೧೭೦
ಚಿಮ್ಮಿ ನೆಗೆಯುವ ಪೊನ್ನಚುಕ್ಕಿಯ ಕುರಂಗ ಶಿಶುಗಳ್
ನಲಿಯುತಿವೆ ಹರಿಣಚರಣಕ್ಷುಣ್ಣ ಶಾದ್ವಲದ
ಪಚ್ಚೆಸೊಂಪಿನ ವೇದಿಕೆಯನೇರ್ದು. ಹಸುರು ಹೂ
ಹಣ್ಣು ಕಾಯ್‌ವೊತ್ತ ತರುಗಳಲಿ ಶತಶತ ವಿವಿಧ
ಪಕ್ಷಿಚಿತ್ರಸ್ವನಂ ವರ್ಣವರ್ಣಸ್ವರ್ಣಮಯ
ರಂಗವಲ್ಲಿಯನಿಕ್ಕುತಿದೆ ಕರ್ಣಚೈತ್ರನಾ
ಪರ್ಣಶಾಲೆಯಲಿ. ಕೊಡಗೆಚ್ಚಲಾಕಳ್ ನೆಳಲ
ತಂಪಿನೊಳ್ ಮೇಯುತಿದೆ. ಮಲಗಿರ್ಪುದಿನ್ನೊಂದು.
ಮುದ್ದುಕರುವಂ ನೆಕ್ಕಿ ಜೊಲ್ಲಕ್ಕರೆಯ ಸೂಸಿ
ಸೊಗಸುತಿಹುದೊಂದು. ಗೂಳಿಯದೊಂದು ಕೋಡಾಡಿ ೧೮೦
ಕೆಮ್ಮಣ್ಣುವುತ್ತಮಂ, ಮೆತ್ತಿಕೊಂಡಿದೆ ಮೊಗಕೆ ಮೇಣ್
ಕೊಂಬುಗಳ್ಗೆಲ್ಲಮೋಕುಳಿ ರಂಗು, ಕೋತಿಗಳ್
ತರಿತರಿದು ನೆಲಕೆಸೆವ ಪಣ್ಗಳಂ ಮೆಲ್ಲುತಿವೆ
ಮೊಲವಿಂಡು. ಪಾತಿಪಾತಿಯ ಕಾಲುವೆಯ ಪರಿವ
ನೀರ್ಗೆ ಕೊಕ್ಕಿಟ್ಟೊಡನೆ ಬಾನ್ಗೆ ಮೊಗಮೆತ್ತುತಂ,
ಮತ್ತೆ ಮತ್ತಂತೆಸಗಿ ವಾರಿಪಾನಾಸಕ್ತಿ ತಾಂ
ಮೂರ್ತಿಗೊಂಡಂತೆ ಕಣ್ಗೆಡ್ಡಮಾದಾ ನವಿಲ್
ನೀಳ್ದ ಪೀಲಿಯ ಚವರಿಯಿಂದಮದೊ ಗುಡಿಸುತಿದೆ
ಹತ್ತಿ ಹಸರಿದ ಹಸುರ ಮೆತ್ತೆಯಂ. ಅದೊ ಅಲ್ಲಿ :
ಹರಿಣಿಯ ಕೊರಳನಪ್ಪಿ ಪಿಡಿದು, ಸರಸಕೆ ಜೋಲ್ದು,       ೧೯೦
ಮಿಗತಾಯಿಗಳ್ಕರಿಂ ಪಾಲುಕ್ಕುವೋಲ್ ಕಾಡಿ
ಪೀಡಿಸುವ ಮುನಿಬಾಲಕಂ ! ಏಣ ಶಾಬಮಂ
ಪುಟ್ಟ ತೋಳಿಂದಪ್ಪಿ ಸುತ್ತಿ ಪೊತ್ತದರ ತಾಯ್
ಹೋರಿಗೋಡುಗಳಿಂದೆ ಮೆಯ್ಯ ಕಂಡೂತಿಯಂ
ತೀರ್ಚಿಕೊಳುತಿರ್ಪ ತಾಣಕೆ ನಡೆದು, ಕೆಚ್ಚಲಂ
ಬಾಯ್ಗಿತ್ತು, ಪೀಯೂಷಪಾನದಾನದ ಸುಖದ
ಪುಣ್ಯಕ್ಕೆ ನೋಂತಿರುವನದೊ ಮತ್ತದೊರ್ವನಾ
ತರುಣ ತಾಪಸತನೂಜಂ. ಗೋಮಯಂ ಬಳಿದು,
ಶೇಷಾಂಶಮಂ ಕರತಲದೊಳಾಂತು, ಇಂಗುದಿಯ
ಮರದ ಬುಡಕದನೆಸೆಯೆ ಬಂದಾ ಮುನಿಯ ಪತ್ನಿ        ೨೦೦
ತುಳ್ಕಿದಳ್ಕರೆಗಳ್ದು ನಿಂದು ನೋಡುತಿಹಳದೊ
ಮಿಗವರಿಗಳೊಡನಾಡುವೆಳಮಕ್ಕಳಂ !
ದುಮುಕುತಿದೆ
ಆ ತಪೋವನದ ನೇಮಿಯೊಳೊಂದು ನಿರ್ಝರಿಣಿ
ತೆರೆಯ ತಾಂಡವವಾಡಿ, ನೊರೆಜಡೆಯನೆಣ್ದೆಸೆಗೆ
ಬೀಸಾಡಿ, ಮೊರೆಯ ಡಮರುಗ ಘೋಷದೋಂಕೃತಿಗೆ
ಪರ್ವತಾರಣ್ಯಮಂ ಪ್ರತಿನಾದಿತಂ ಮಾಡಿ.
ನಿಂದಿಹವು ಮುಗಿಲೊಡನೆ ಪರ್ಚಿ ಘನ ತರುಕುಲಂ
ಕಿಕ್ಕಿರಿಯುತಿಕ್ಕೆಲದೊಳುಂ. ನೆಳಲ ಕಳ್ತಲಿಂ
ಕರ್ಪುಗೊಂಡಿಹುದಿರ್ಪುಗೊಂಡ ಸೂರ್ಯಾತಪಂ.
ಜಲಶಿಲಾವೇಶದಾ ಧ್ವಾನದಿಂ ಫೇನದಿಂ        ೨೧೦
ನಟರಾಜ ನಾಟ್ಯಮಂ ನಟಿಪ ನಿರ್ಝರ ರೂಪಿ
ಧೂರ್ಜಟಿಯೆ ನರರೂಪಮಂ ತಾಳ್ದಿದನೆನಲ್ಕೆ
ಬ್ರಹ್ಮಸಂಲಗ್ನಮನನೊರ್ವ ತೇಜಸ್ವಿ ಋಷಿ
ಧ್ಯಾನಸ್ಥನಾಗಿರ್ದನಾ ಗಿರಿ ತರಂಗಿಣಿಯ
ನಾಭಿಯಿಂದುದ್ಭವಿಸಿದಂತಿರ್ದರೆಯ ಶಿರದಿ :
ಹೇ ವಿಶ್ವೇಶ ಮಾಯೆ, ನೀನೀಶ್ವರ ಮಹಚ್ಛಾಯೆ.
ಸೃಷ್ಟಿಯಿದು ನಿನ್ನೆರ್ದೆಯ ಪಾಲ್‌ಪಸುಳೆ, ಓ ತಾಯೆ.
ನಿನ್ನ ಸೌಂದರ್ಯ ಸಾನ್ನಿಧ್ಯಮಿರೆ, ಓ ಪ್ರಕೃತಿ,
ಮಿಂಚಿದಪುದಿಂದ್ರಿಯಮತೀಂದ್ರಿಯಕೆ. ಜಡಜಗಂ
ತೋರಿದಪುದಂತರಾತ್ಮದ ಸಿರಿಗೆ ಹೊರಮೊಗಂ          ೨೨೦
ತಾನಾಗಿ. ಲಯವಹುದು ಚಿತ್ತಚಂಚಲ ವಿಕೃತಿ
ರಸದ ಮಿಂಚಿನ ಮೀಹದಿಂಪಿನಲಿ. ದೊರೆಕೊಳ್ವ
ತನ್ಮಯತೆಯಿಂ ಹೃದಯದಿಂಗಡಲ್ಗಲೆ ನಲಿಸಿ
ಮೈದೋರ್ಪುದಾ ಸಚ್ಚಿದಾನಂದ ಶಾಂತಿ ಶಶಿ.
ಮೃಣ್ಮಯಂ ಮಾಸಿ, ನನೆಕೊನೆಯೇರಿ ಚಿನ್ಮಯಂ,
ಧ್ಯಾನಿಸುವ ಕವಿಮನಂ ಗಾಯತ್ರಿಯನ್ನೇರ್ದು
ಭೂರ್ಭುವಸ್ಸುವಗಳಂ ತುಂಬಿ ತುಳುಕುತೆ ಮೀರ್ದು
ಭೋಗಿಸುವುದಾ ಬ್ರಹ್ಮ ಹೃದಯ ಮಧುವಂ ಪೀರ್ದು
ಯೋಗಲಯ ನಿದ್ರಾ ಸಮಾಧಿಯೊಳ್ ತಾನಾರ್ದು !
ಹೇ ಪ್ರಕೃತಿ, ಎಲ್ಲಮಿರ್ದೇನಿಲ್ಲದಾ ಅಲ್ಲಿ, ಮೇಣ್            ೨೩೦
ಸರ್ವಮಿರ್ಪಾ ಸರ್ವಶೂನ್ಯತಾ ಸಂಪೂರ್ಣದಲಿ
ನಿನ್ನ ಕೃಪೆಯಿಲ್ಲದಿರೆ ಪೇಳ್ ಪುರುಷದರ್ಶನವೆಲ್ಲಿ ?
ಬ್ರಹ್ಮಚರ್ಯದ ಸಂಯಮದ ತಪಕೆ ವೇದ್ಯಮಾ
ದಿವ್ಯದರ್ಶನದಿಂದಮವತರಿಸಿದನ್ ಯೋಗಿ,
ವ್ಯೋಮಾಂಡಮಂ ಚರಿಸಿ ಮೆಲ್ಲನೊಯ್ಯನೆ ನೆಲಕೆ
ವಿದ್ಯುದ್ವಿಮಾನವಿಳಿವಂತೆ. ಕಣ್ಣೆವೆದೆರೆಯೆ ಹಾ
ಚೆಲ್ವಿನಿಳೆಗೇನೊ ಚೆಲುವಿರ್ಮಡಿಸಿದೋಲಾಯ್ತು !
ಕಾನ್ತಾರ ಕಾನ್ತೆಗಾವುದೊ ದಿವ್ಯಯೌವನಂ
ಮೈದೋರಿದತ್ತು. ಹೊಮ್ಮಿತ್ತು ತೊರೆಯ ಮೊರೆಯಿಂದೆ
ದೇವತಾಹ್ವಾನದ ಸುಖಾಗಮ ಕವನ ಗೀತೆ.
ಹಕ್ಕಿ ತೆಕ್ಕನೆ ಹಾಡಿದುವು ವೃಂದ ಛಂದದಿಂ,
ಗಗನದಿಂ ಧುಮ್ಮಿಕ್ಕಿತೆನೆ ಗಾನ ಶಿವಗಂಗೆ.
ನರ್ತಿಸಿದುವೈ ಮಿಗಂ ! ತನ್ನಾತ್ಮ ರಸ ಸುಖಕೆ
ಲೋಕಮೆ ರಸಂಬಡೆವುದೆಂದಾ ಋಷಿತಪಸ್ವಿ
ಮಂದಹಸಿತಂ ನೋಡುತಿರೆ, ನಾನ್ದ ಕಂಗಳಿಗೆ
ಗೋಚರಿಸಿತೊಂದದ್ಭುತಂ : ಅನತಿ ದೂರದೊಳ್,
ಕಣ್ಬೊಲದ ಕಾನನದ ಪಳುವದೊಳ್, ತನ್ನೆರ್ದೆಯ
ರಸ ಸುಖಮೆ ಹೆಪ್ಪುಗೊಂಡಾಳಾಯ್ತೊ, ಜಾನದೊಳ್
ತಾಂ ಕಂಡ ಕಾಣ್ಮೆಗೆ ಮನುಷ್ಯತೆ ಲಭಿಸಿದತ್ತೊ,
ತನ್ನ ಚಿಂತಾ ಬ್ರಹ್ಮವಸ್ತು ಸುಕೃತದ ಸೆರೆಗೆ      ೨೫೦
ಸಿಲ್ಕಿ ತನ್ನೆಡೆಗೆ ನಡೆತಂದಪ್ಪುದೆಂಬಂತೆವೋಲ್
ದೃಷ್ಟಿತೃಷೆಗಮೃತಮಂ ಕರೆಯುತ್ತೆ ಕಂಗೊಳಿಸಿ
ಬಂದುದಾ ಸೀತಾ ತೃತೀಯಂ ರಘೂದ್ವಹನ
ನೀಲ ಮಂಗಳ ಮನೋಹರ ದೇವವಿಗ್ರಹಂ !
ಬೈಗಾಗುತಿರ್ದೊಡಂ, ಬೆಳಗೆ ಮೈದೋರ್ದವೊಲ್,
ನಲಿದುದು ತಪೋವನಂ, ಮುಚ್ಚಿ ಕೈಮುಗಿದಿರ್ದ
ಪದ್ಮಿನಿಯ ಹೃದಯಮಲರಿದುದೊಡನೆ. ಮರನೆಳಲ್
ಮಾಯವಾದುದು : ಆತ್ಮಕಾಂತಿಗಪ್ರಾಕೃತಕೆ
ಪೇಳೆಲ್ಲಿಯದು ಛಾಯೆ ? ಮಹಿಮೆ ಮಹಿಮೆಗೆ ಪೆರತೆ ?
ಹಾರೀತನಾರೀತನೆನದೆ ಆ ತೇಜಸ್ವಿಯಂ      ೨೬೦
ಕಂಡೊಡನೆ ಗುರುತಿಸುತೆ ಮೇಲೆಳ್ದಿದಿರ್‌ವೋಗಿ
ಮುಗಿದನು ನಮಸ್ಕಾರಮಂ, ಸುಖಾಗಮನಮಂ
ನುಡಿದನ್ : “ಮಹಾಮಹಿಮ, ಗುರು ಭರದ್ವಾಜಂಗೆ
ಶಿಷ್ಯನಾಂ, ಪಿರಿಯತಿಥಿಯೊರ್ವನಿಂದೀಯೆಡೆಗೆ
ಬರ್ಪನಾತಂಗೆ ಸತ್ಕರಿಪುದೆಂದೆನಗಾಜ್ಞೆ”.
“ನೀನೆಮಗೆ ಪಿರಿಯನಯ್, ಗುರುವೆ. ಆಶೀರ್ವದಿಸಿ,
ತುಳಿಲಾಳ್ಗಳೆಮ್ಮ ತುಳಿಲಂ ಕೊಳ್ವುದದೆ ಕೃಪೆ !”
ಎನುತ್ತವಂ ಕಾಲ್ಗೆರಗುವನಿತರೊಳ್ ಪಿಡಿದಪ್ಪಿದನ್
ಜಡೆವೊತ್ತ ಕಿತ್ತಡಿ : “ವಯಸ್ಸಿಗೇಂ ಪಿರಿತನಮೆ ?
ನಿನ್ನ ಪೆರ್ಮೆಗೆ ವಂದಿ ನಿನ್ನಾತ್ಮದೋಜೆ; ಮೇಣ್           ೨೭೦
ನಿನ್ನ ತೇಜಕೆ ಸಾಕ್ಷಿ ನಿನ್ನಕ್ಷಿ, ಕಮಲಾಕ್ಷ !
ಗುರು ಭರದ್ವಾಜನಿಂದಿನ ತೆರನನೀಕ್ಷಿಸಿದ
ನನಗೆ ಮೆಯ್ ಗುಡಿಗಟ್ಟಿದತ್ತು. ತಾನಿನ್ನೆಗಂ
ಸಾಧಿಸಿದ ಸಾಧನ ತಪಃಫಲಮೆ ಬಂದಪುದೊ
ಎಂಬುವೋಲಾನಂದದಾವೇಶದಿಂ ತನ್ನನೆಯೆ
ತಾಂ ಮರೆತು, ನೋಂಪಿಯುಪವಾಸಮಂ ಕೈಕೊಂಡು,
ನಿನ್ನನೆ ನಿರೀಕ್ಷಿಸುತಲಿಹನಯ್ಯ. ಬಾರಯ್ಯ,
ಪಿರಿಯತಿಥಿ !” ಎನುತೆ ಋಷಿ, ತನ್ನೆರ್ದೆಯ ದೇಗುಲಕೆ
ತನ್ನ ದೇವರನೊಯ್ವ ಭಕ್ತನಂದದಿ, ಬಾಗಿ
ಮುಂಬರಿಯಲಾ ಮೂವರುಂ ನಡೆದರೊಡನೊಡನೆ     ೨೮೦
ಕಣ್ಣಾಯಿತಾಶ್ರಮಕ್ಕಾಶ್ರಮವೆ : ಜಿಂಕೆ ತಾಯ್
ಗರಿಕೆಬಾಯಾಗಿ, ಕಿವಿಯೆತ್ತಿ, ಕಣ್ಗಳನರಳಿ
ನಿಂದತ್ತು. ಜಿಂಕೆಮರಿ ತಾಯ್ಗೆಚ್ಚಲಿನ ಮೆತ್ತೆ
ಬೆಚ್ಚಗಪ್ಪಂತೆ ಮೊಗಮೊತ್ತಿ, ಪಾಲಂ ಸೂಸಿ,
ನಿಷ್ಪಂದಮಿರ್ದುದಯ್ ಮರೆತಮೃತದೂಟಮಂ.
ಮೂಲಮಂ ಮುಂಗಾಲ್ಗಳಿಂ ಕೆದರಿ, ಶಿಖರಮಂ
ಮುರಿದು ಶೃಂಗಾಗ್ರದಿಂ, ಕೋಡಾಟದೊಳ್ ತೊಡಗಿ
ಪುತ್ತಿಗೆ ಗುಟುರ್ ಮಲೆತು, ಕೆಮ್ಮಣ್ಣು ಮೆಯ್ಯಾಗಿ
ಮೆರೆದಿರ್ದ ಗೂಳಿ ಕೆಮ್ಮನೆ ನಿಂದುದಚ್ಚರಿಗೆನಲ್,
ಬೆಚ್ಚು ಮೆಚ್ಚುಗಳಿರ್ಕುಳದ ನಡುವೆ. ಬಾಲಕಂ  ೨೯೦
ಮರಿಮಿಗವನೇರಲೊಂದಡಿ ನೆಗಹಿ ಬೆನ್ಗಿಟ್ಟು,
ಬರೆದಂತೆ ನಿಂದನಯ್, ನೋಟದೊಳೆ ಚಿತ್ತಂ
ಸಮರ್ಪಣಂ ಬಡೆದವೋಲ್
ಕೈಮುಗಿದು ಪುಗಲೊಡಂ
ಮುನಿತಿಲಕನೆಲೆವನೆಗೆ, ದಾಶರಥಿಗಂದೊಮ್ಮೆ
ಗೌತಮ ಸತಿಯ ಶಾಪವಿಮೋಚನದ ಸಮಯದೊಳ್
ತೂಣಗೊಂಡಂತಾಯ್ತು. ಸೀತೆ ಲಕ್ಷ್ಮಣರೊಡನೆ
ಮೈಚಾಚಿ ನಮಿಸಿದನ್, ನಾಗರಿಕ ಮಾನವರ
ಮರ್ಯಾದೆಯಂತೆ : ಏನಿದು ಭರದ್ವಾಜಂಗೆ ?
ವಿಸ್ಮೃತಿಯೊ, ಸ್ವಸ್ಮೃತಿಯೊ ? ಬಿಟ್ಟ ಕಣ್, ತೆರೆದ ಬಾಯ್ ;
ಮೂಕನೊಲ್ ಮಂಡಿಸಿಹನಜಿನಾಸನದ ಮೇಲೆ           ೩೦೦
ಕಡೆದಿಟ್ಟ ಕಲ್‌ಪಡಿಮೆಯೋಲ್ ! ಭಾವ ವಶನಾಗಿ
ನಟ್ಟಾಲಿಯಾಗಿ ರಾಮನ ನೀಲಗಾತ್ರಮಂ
ನಿಟ್ಟಿಸುತೆ, ಭಕ್ತಿ ಬಾಷ್ಪಾರ್ಘ್ಯಾಭಿಷೇಕದಿಂ
ಮೌನ ಮಂತ್ರದ ಮಹಾ ಮಾನಸಿಕ ಪೂಜೆಯಂ
ಗೈದಿರ್ದನಂ ಕಂಡಾ ತಪೋಜ್ಜ್ವಲಿತ ತೇಜನಂ,
ಕಣ್ಣರಳಿ ನೋಡಿದನು ಸೌಮಿತ್ರಿ ತನ್ನಣ್ಣನಂ !
ಧ್ಯಾನಮಯ ಗಂಭೀರ ಭಂಗಿಯಿಂ ಭಾವದಿಂ
ಮೇಲೆಳ್ದ ಮುನಿವರೇಣ್ಯಂ ತರುಣ ರಾಮನಂ
ಇಂಗಿತದಿ ಸೆಳೆದೊಯ್ದನೊಳಗಣ ತಪದ ಕುಟಿಗೆ,
ಮತ್ತೆ ಬೆಂಗಡೆಗೆಲೆದೆರೆಯನೆಳೆದು ಬಾಗಿಲಂ   ೩೧೦
ಮುಚ್ಚಿದನ್, ಬೆರಗಾಗಿ ನೋಡುತಿರಲನಿಬರುಂ,
ತುಸುವೊಳ್ತನಂತರಂ, ಪೂಜೆಮನೆಯಿಂ ಮರಳಿದರ್
ಸಾಮಾನ್ಯರೋಲಿರ್ವರುಂ : ತನ್ನ ವೃತ್ತಾಂತಮಂ
ಪೇಳುತಿರ್ದನ್ ದಾಶರಥಿ. ಪಂಚವತ್ಸರದ
ಪಸುಳೆ ಪರದೇಶದಿಂ ಮರಳಿದಣ್ಣನ ದನಿಗೆ
ಕಿವಿಗೊಡುವವೋಲ್ ಕೇಳುತಿರ್ದನ್ ಯತೀಶ್ವರಂ
ರಾಮಕಥೆಯಂ !
ಮಗಳೆ ಮನೆಸೇರ್ದಳೆನೆ ಮುನಿಯ ಸತಿ
ನೆಲಮಗಳನುಪಚರಿಸಿದಳ್. ಬಿಸಿಮಜ್ಜನಂಗೆಯ್ಸಿ
ನಾರುಮಡಿಯುಡಿಸಿದಳ್. ನೊರೆವಾಲು ತನಿವಣ್ಗಳಿಂ
ತಣಿಸಿದಳ್. ಮಿಕ್ಕಕ್ಕರೆಗೆ ಪಣತೆ ಸೊಡರಂ ಪಿಡಿದು      ೩೨೦
ನೋಡಿದಳಯೋನಿಜೆಯ ದೇವವಂದಿತ ರೂಪಮಂ !
ಎಲೆಮನೆಯ ಮಕ್ಕಳಿಗೊ ? ಪೊಸತೊರ್ವಳಕ್ಕನೆಯೆ
ಸಿಕ್ಕಿದಂತಾಯ್ತು. ನಿದ್ದೆಯನೊಲ್ಲದೆದ್ದೆದ್ದು
ಗಳಿಪಿದರ್ ಗುರುಲಘುವನೊಂದನುಂ ಲೆಕ್ಕಿಸದೆ
ನಟ್ಟಿರುಳುರುಳ್ವನ್ನೆಗಂ. ಜನಕಜಾತೆಯುಂ
ಬಟ್ಟಿವರ್ಪಾಗಳ್ ತಿರಿದು ಮಡಿಲೊಳಿಟ್ಟಿರ್ದ
ಪಣ್‌ಪೂಗಳಂ ಕೊಟ್ಟು, ಮೃಗಚರ್ಮದಿಂ ಸಮೆದ
ತನ್ನ ಕೈಪೆಟ್ಟಿಯಂ ತೆರೆದಯೋಧ್ಯೆಯ ಸಿರಿಗೆ
ರಚಿಸಿದಳ್ ಕಿರಿದೊಂದು ಬೆಳಕಂಡಿಯಂ !
ದೂರದಿಂ
ಬಂದುದು ತಪೋವನಕೆ ಗಂಗೆಯಮುನೆಯರುಲಿವ      ೩೩೦
ಪುಣ್ಯಘೋಷಂ, ಪ್ರಯಾಗ ಕ್ಷೇತ್ರ ತೀರ್ಥೋದ್ಭವಂ.
ದಿವ್ಯದ್ರವನ್ತಿಗಳ್ ಕೂಡುವ ಮಹದ್‌ಧ್ವನಿಯ
ಜೋಗುಳವನಾಲಿಸುತೆ ನಿದ್ರಿಸಿದರಿನವಂಶಜರ್
ತೊಟ್ಟಿಲೊಳ್ ನೀರವ ತಪೋವನದಾ. ಮುನಿವರಂ
ಮರುದಿನಂ ಪ್ರತ್ಯುಷೆಗೆ ಕರೆದೊಯ್ದನವರಿರ್ವರಂ
ಕೂಡಲಿಯ ದರ್ಶನಕೆ. ರಾಮಲಕ್ಷ್ಮಣರದಂ
ಭಾವವಶರಾಗಿ ಕಣ್ಣೆವೆಯಿಕ್ಕದೆಯೆ ನೋಡಿದರ್.
ನೋಡಿ ಮಣಿದರ್. ರುದ್ರರಮಣೀಯಮಾದುದಾ
ಸಂಗಮಂ ಕಡಲವೊಲ್, ಕಡೆಯಿಲ್ಲವೆಂಬವೊಲ್,
ಕಡೆದವೋಲ್. ಸಲಿಲ ವೈಶಾಲ್ಯದಿಂ, ಭೋರ್ಗರೆವ      ೩೪೦
ಘೋಷದಿಂ, ಫೇನವೀಚಿಯ ಭೀಷ್ಮತಾಂಡವದ
ಸಂಮ್ಮೋಹದಿಂ ಕಾಣದಂಬುಧಿಯೆ ತೋಳ್‌ನೀಡಿ
ಸನ್ನೆಗೈವೀಸಿ ಕರೆದಂತಾಯ್ತು ರಾಮಂಗೆ,
ತನ್ನಾತ್ಮದತಿದೂರದಾ ಪಾರದಿಂ.
“ಇದೆ ಕಣಾ
ದಿವ್ಯತೀರ್ಥಂ ಪ್ರಯಾಗಂ. ಇಲ್ಲಿ ಕಳೆ ನಮ್ಮೊಡನೆ
ವನವಾಸ ಕಾಲಮಂ.” ರಾಮನೆಂದನ್ ಋಷಿಗೆ :
“ಗುರುವರ, ವಿವಿಕ್ತಮಿದು ರಮಣೀಯಮಪ್ಪೊಡಂ
ಸಾಕೇತಕತಿ ಸಮೀಪಾಶ್ರಮಂ. ತಿಳಿದೊಡನೆ
ಗುಂಪಾಗಿ ಬರ್ಪರಂ ಪ್ರಜೆಗಳಂ ಮಿತ್ರರಂ
ದರ್ಶನ ಕುತೂಹಲಿಗಳಂ ತಡೆಯಲಾಗುವುದೆ?           ೩೫೦
ಜನಪದಕೆ ದೂರಾಗಿ, ಜನಕೆ ದುರ್ಗಮವಾಗಿ,
ಮೇಣೆಮ್ಮ ಜೀವನಕೆ ದುಷ್ಪಮಲ್ಲದುದಾಗಿ,
ಸುಖಯೋಗ್ಯೆ ಜನಕಜೆಯ ಸುಖಕರ್ಹಮಾದೊಂದು
ಮತ್ತೊಂದು ತಾವನಾಲೋಚಿಸೆಮಗರುಹು; ನೀಂ
ವನಲೋಕ ಸಂಚಾರಿ !” ತನ್ನ ನೆನಹಿನ ನಿಧಿಗೆ
ಕೈಯಿಕ್ಕಿ ಹುಡುಕಿದನೊ? ವಿಧಿಮನವನರಸಿದನೊ ?
ಮುಂದಿರ್ದ ಗಿಡದ ಹೂವೊಂದರೊಳ್ ಕಣ್ ನಟ್ಟ
ಮುನಿ ತಲೆಯನೆತ್ತಿದನ್ : “ಆಲಿಸಾದೊಡೆ, ವತ್ಸ,
ಇಲ್ಲಿಗೀರೈದು ಹರಿದಾರಿ ದೂರದೊಳೊಂದು
ತಾನಿರ್ಪುದು ನಗಂ. ಪೆಸರದಕೆ ಕೇಳ್ ಚಿತ್ರಕೂಟಂ.”    ೩೬೦
ಕೇಳ್ದರೆದೆ ಸೊಗಸುವೋಲ್ ಋಷಿ ರಸಾವೇಶದಿಂ
ಬಣ್ಣಿಸಲ್ಕೊಪ್ಪಿ ರಘುಜಂ, ಚಿತ್ರಕೂಟಕ್ಕೆ
ಪಯಣಮಂ ತರಿಸಂದು, ಸೀತೆ ಲಕ್ಷ್ಮಣರೊಡನೆ
ಬೀಳ್ಕೊಂಡನಾಶ್ರಮಸ್ನೇಹಮಯ ವಲಯಮಂ
ಬಾಷ್ಪಲೋಚನನಾಗಿ. ಸಂಗಮಂ ಬಳಿಸಾರೆ,
ಋಷಿ ಪೇಳ್ದ ತೆರದಿಂದೆ, ತುಸು ಪಡುವಲಕ್ಕೊಲೆದು,
ಯಮುನಾ ನದಿಯ ತಟದ ಸಮೆದ ಕೀಳ್ವಟ್ಟೆಯಂ
ಪಿಡಿದು ನಡೆತರೆ, ದಾಂಟುದಾಣದಾ ಬಿರುವೊನಲ್
ಕಾಲ್ಗಡ್ಡಮಾಗಿ ಕಣ್ಗೆಡ್ಡಮಾದುದೊ ಮುಂದೆ
ಕಾಳಿಂದಿಯಾ. ಮುರಿದ ಪೆರ್ಮರಗಳಿಂ ತಂದ ೩೭೦
ಕಾಷ್ಠೌಘಮಂ ಹರಡಿ, ಒಣಬಿದಿರನೋಳಿಯಿಂ
ಮೇಲೆ ಸಾಲಿಟ್ಟು, ಬೆತ್ತದ ಬಳ್ಳಿಮಿಣಿಗಳಿಂ
ಬಿಗಿ ಹೆಣೆದು ಕಟ್ಟಿ ರಚಿಸಿದರೊಂದು ತೆಪ್ಪಮಂ,
ಮೈಥಿಲಿಯ ನೆರಮಂ ನಿರಾಕರಿಸದೆ. ಲಕ್ಷ್ಮಣಂ
ಚಿಗುರೆಲೆಯನೊಟ್ಟಿ ಮಣೆಯಂ ಮಾಡೆ, ಲಲನೆಯಂ,
ಮೊಗಕೆ ನಾಣ್ಗೆಂಪೇರುತಿರ್ದ್ದಳಂ ಪಿಡಿದೆತ್ತಿ
ಕುಳ್ಳಿರಿಸಿದನು ರಾಮಚಂದ್ರಂ, ಉದಿಸೆ ಲಜ್ಜಾಸಂಧ್ಯೆ
ತನ್ನ ಮುಖದಿಶೆಯ ನೀಲಿಮೆಯೊಳುಂ. ಪಿಟಕಮಂ
ವಸನ ಭೂಷಣ ನಿಚಯಮನ್ನಾಯುಧಂಗಳಂ
ಪ್ಲವದೊಳಿಟ್ಟೇರಿದನ್ ದಾಶರಥಿ. ಲಕ್ಷ್ಮಣನದಂ            ೩೮೦
ದಡದೆಡೆಯ ತೆಳ್ಳೆ ನಿಲ್‌ನೀರಿಂದೆ ಹರಿನೀರ್ಗೆ
ನೂಂಕಿದನ್ ನೀಳ್ಗಳುಗಳಿಂ. ಬಿರುನಡೆಯ, ತೆರೆಯುಡೆಯ,
ಪೊಸತು ತೆಂಗಾಯ್‌ತುರಿಯ ಬಿಳಿಯ ಮುದ್ದೆಯ ನೊರೆಯ,
ಜಲಘೋಷದಾವೇಶದಿನಸುತಾ ಸ್ರೋತದೊಳ್
ತೇಲಿದುದು ಚಿಮ್ಮಿದತ್ತೋಡಿದತ್ತಾ ಪ್ಲವಂ
ಜಲತರಂಗ ತುರಂಗಗಳನೇರಿದೋಲಂತೆ,
ಸೀತೆಯ ಹೃದಯಕೊಂದು ರಮಣೀಯ ಭೀಷಣತೆ
ಬಿತ್ತೆ ಸುಖಭೀತಿಯಂ. ದಕ್ಷಿಣ ತಟಂ ಮುಟ್ಟಲಾ
ಉಡುಪದಿಂದಿಳಿದು ಯಮುನಾ ವನಂ ಬೊಕ್ಕರಾ
ಶೀತಲ ಶ್ಯಾಮ ಸೌಂದರ್ಯಮಂ. ಮೃಗಪಕ್ಷಿ  ೩೯೦
ಸುಮ ಸಮೂಹದ ವಿವಿಧ ಚೈತ್ರ ವೈಚಿತ್ರ್ಯಮಂ
ಸವಿಯುತೆಯ್ದಿದರೆರಡು ಹರಿದಾರಿ ದಾರಿಯಂ.
ಬೇಂಟೆಯಾಡಿದರಲ್ಲಿ ಮೇಧ್ಯಂಗಳಂ ಮೃಗಗಳಂ.
ಭೋಜನಂಗೈದೊರಗಿದರ್ ನದೀ ವಪ್ರದಾ
ಸಮತಲದೊಳೊಂದು ಶಾದ್ವಲದಿ. ಆ ನವರಾತ್ರಿ,
ನಿಃಶಬ್ದತೆಯ ತೊಟ್ಟಿಲೊಳ್ ನದಿಯ ಮೊರೆಸಿಸುವನ್
ಇಟ್ಟು ತೂಗಿದವೋಲೆ, ತೂಗಿದುದು ಮೂವರಂ
ನಿದ್ರಾ ಸಮಾಧಿಗೆ. ವಿಹಂಗ ಮಂಗಲ ಸಂಘ
ಕಂಠ ವೀಣಾವಾಣಿ ರಾಮನನ್ನೆಳ್ಚರಿಸೆ,
ಲಕ್ಷ್ಮಣನನೆಳ್ಬಿಸಿದನಾತನುಂ ತಂದ್ರಿಯಂ      ೪೦೦
ಬಿಟ್ಟೇಳಲನಿಬರುಂ ತೊರೆಯ ಶಿವಸಲಿಲದೊಳ್
ಮೊಗಂದೊಳೆದು ಮುಂಬರಿದರಾ ಚಿತ್ರಕೂಟಕ್ಕೆ.
ಬಿದಿರುಮೆಳೆಯಲಿ ಕಳಲೆಗಳನಿಳ್ದು ಲರಿಲರಿಲ್
ಲರಿಲೆಂದು ಮುರಿದು ತಿನುತಿರ್ದಾನೆ : ನೆನೆಯದಂ ;
ಚಿತ್ರಿಸಿಕೊ ! ಮರವಲುಗಿ ಪಣ್‌ವೆರಸಿ ಕಾಯ್ಗಳುಂ
ಕೆಡೆಯುವೋಲ್, ಕೊಂಬೆಯಿಂ ನೆಗೆದು ಕೊಂಬೆಗೆ ಹಾರಿ
ಕೀರುತೋಡುವ ಬಣ್ಣಗಪಿವಿಂಡು : ನೆನೆಯದಂ ;
ಚಿತ್ರಿಸಿಕೊ ! ಹೂದಿಂಗಳೈತರಲ್ಕೊಸಗೆಯಿಂ
ಬನದೇವಿ ದೀಪೋತ್ಸವಂಗೈವಳೆಂಬಂತೆ
ಮೊಗ್ಗುಗೊಳ್ಳಿಗಳಿಂದೆ ಪೊಂಜಿನುರಿವೂವಿಂದೆ  ೪೧೦
ರಂಜಿಸುವ ಮುತ್ತುಗದ ಮರಗಳಂ : ನೆನೆ, ಮನವೆ ;
ಚಿತ್ರಿಸಿಕೊ ! ಬೆಟ್ಟಮಂಡೆಯ ಬಂಡೆಹಣೆಯಿಂದೆ
ಚಾಚಿದಾ ಕಲ್ಗೋಡಿನಿಂ, ಮತ್ತೆ ಹೆಮ್ಮರದ
ಹೆಗ್ಗೋಡಿನಿಂ, ನೇಲ್ದು, ತುಪ್ಪದ ಹೊರೆಗೆ ಜೋಲ್ದ
ಹೆಡಗೆಯೊಡಲಿನ ಹುಟ್ಟಿಹೆಜ್ಜೇನ್ಗಳಂ : ನೆನೆದು
ಸವಿ, ಮನವೆ; ಚಿತ್ರಿಸಿಕೊ ! ನೆತ್ತಿಯಿಂ ಪರಿತಂದು
ಕಿಬ್ಬಿಗುರುಳ್ವಬ್ಬಿ ಬೆಳ್ಳಂಗೆಡೆವ ಚುಂಚಿಯಾ
ನೀರ್‌ಬೀಳಮಂ : ನೆನೆ ನವಿರ್ ನಿಮಿರಿ ! – ಅದೊ ಅಲ್ಲಿ,
ಕಣ್‌ತುಂಬೆ ಕಾಣುತಿದೆ ಚಿತ್ರಕೂಟಂ ! ಶಿವಾ,
ಸೊಗಸು ನೋಟಂ ! ವಿಪಿನಶಿವ ಜಟಾಜೂಟಂ !         ೪೨೦
ಮೆಯ್ಮರೆತು ಕಂಡರಾ ದೃಶ್ಯದೇವೇಂದ್ರನಂ
ಮೆಯ್ಯೆಲ್ಲ ಕಣ್ಣಾಗಿ, ಕಣ್ಣಾರುಮೊಂದಾಗಿ,
ಕಣ್ಣೊಂದುಮಿಲ್ಲದಾತ್ಮಾನಂದ ರಸವಾಗಿ :
ಅಂತಹೀನ ಮಹಾಂತ ಸಂತತಮವಿಶ್ರಾಂತ
ಜಲಧಿಯ ಬೃಹನ್ನೀಲಿಮಾ ವಿರಾಡ್‌ರಂಗದೊಳ್
ತೆರೆಯನಟ್ಟುವ ತೆರೆಯನಟ್ಟುವ ತೆರೆಯ ತೆರದಿಂ
ಗಿರಿಯನಟ್ಟುವ ಗಿರಿಯನಟ್ಟುವ ಗಿರಿಯ ಪಂಕ್ತಿಗಳ್
ಪರ್ವಿದುವು ದಿಟ್ಟಿ ಹೋಹನ್ನೆಗಂ ಮೇಣ್ ಕಣ್ಣಲೆದು
ಸೋಲ್ವನ್ನೆಗಂ. ಸಾಂದ್ರ ರೋಮರಾಜಿಯ ರುಂದ್ರ
ಚರ್ಮದೊಂದತಿಪೂರ್ವ ಭೂ ಬೃಹಜ್ಜಂತುವೆನೆ            ೪೩೦
ಹಬ್ಬಿ ಹಸರಿಸಿತುಬ್ಬಿತಡವಿ ದಟ್ಟಯ್ಸಿದಾ
ದಿಟ್ಟ ಮಲೆಪೊಡವಿ. ಮಂದಾಕಿನಿಯ ಪೆರ್ವೊನಲ್
ಗಿರಿಗೆ ಮೇಖಲೆಯಾಗಿ ಕಂದರದ ಸೀಮೆಯಂ
ಸಿಂಗರಿಸಿದತ್ತು. ಕಿರುವೊನಲ ತೊರೆ ಮಾಲ್ಯವತಿ
ತಾನದ್ರಿಶಿರದಿಂ ರಜತರೇಖೆಯೋಲಿಳಿದು
ಕಂಗೊಳಿಸಿದತ್ತು, ಚಿನ್ನದ ಜನ್ನಿವಾರಮೆನೆ
ತಳತಳಿಸಿ, ಸಾಯಂ ಸಮೀಪ ದಿವಸೇಶ್ವರನ
ಕನಕಕಾಂತಿಯಲಿ. ಆ ಶೈಲ ಭೈರವ ಋಷಿಗೆ
ದರ್ಶನದಿನಾವೇಶವಶರಾದ ಮೂವರುಂ
ಕೈಮುಗಿದರರ್ಪಿಸಿದರಧ್ಯಾತ್ಮ ನೈವೇದ್ಯಮಂ !           ೪೪೦





**************