ನನ್ನ ಪುಟಗಳು

09 ಜನವರಿ 2021

ಬಡವ ನಾನು

ಚಿಕ್ಕ ಗಾತ್ರದ ಬಾವಿ ನಾನು
ಸಣ್ಣ ಹರಿವಿನ ಝರಿಯು ಅಲ್ಲಿ
ಎತ್ತಿದಷ್ಟು ನೀರು ಹರಿದು ಬರದು
ನಿರಾಸೆಯ ಬದುಕಿನ ಬಾವಿ ನನ್ನದು

ಜಿಟಿಜಿಟಿ ಮಳೆಯ ಹನಿಯು ನಾನು
ಕೆರೆ ಕುಂಟೆ ಬಾವಿ ತುಂಬಲಾರೆನು ಒಮ್ಮೆಲೆ
ದೊಡ್ಡ ಹನಿಯ ಮಳೆಯಂತೆ, ಆದರೂ
ತಂಪು ಮಾಡುವೆ ಇಳೆಯನು ದೊಡ್ಡ ಮಳೆಯಂತೆ

ಗುಬ್ಬಿ ಗೂಡಿನ ಹುಲ್ಲು ಕಡ್ಡಿ ನಾನು
ಇಟ್ಟಿಗೆಯಂಥ ಶಕ್ತಿ ನನ್ನಲಿಲ್ಲವಾದರೂ
ಚಳಿ ಮಳೆ ಬಿಸಿಲಿನಲ್ಲಿ ಆಸರೆಯಾಗುವೆ
ನನ್ನ ನಂಬಿ ಕುಳಿತ ಒಲವಿನ ಹಕ್ಕಿಗೆ

ಬಡವ ನಾನು, ಸಿರಿಯು ನನ್ನಲಿಲ್ಲ
ಮೆರೆಯುವ ಭಾಗ್ಯವೂ ನನ್ನದಿಲ್ಲ
ಹರಿದು ಬರುವ ಸಿರಿನದಿಯೊಳಗೆ
ದೋಣಿ ಸಾಗಿಸುವ ಕಳ್ಳ ಬಯಕೆಯೂ ನನಗಿಲ್ಲ

  - ಸೂರ‍್ಯಕಾಂತ್ ಮಗದುಮ್
A/P -Mangasuli, tq - Kagawad, dist- belagavi

 

 

ಬಿಸುಲು

(ಕುವೆಂಪು ಅವರ ಹಸುರು ಕವಿತೆಯ ಪ್ರೇರಣೆಯಿಂದ ಈ ರಚನೆ. ಅವರಲ್ಲಿ ಕ್ಷಮೆಯನ್ನು ಕೊರುತ್ತಾ)

ಬೇಸಿಗೆಯ ಸುಡುಬಿಸಿಲಿನ
ಈ ಬಿಸಿಲ! ನಾಡಿನಲಿ
ಬೆಂದುದೋ ಕವಿ ಮೈಯು
ಬೆಂಕಿಯ ಬಿಸಿಲಿನಲಿ

ಕಡುಬಿಸುಲು ಸುಡುಬಿಸುಲು
ಉರಿ ಉರಿವ ಬಿಸಿಲು
ಸುಡುವ ನೆಲ ಸುಡುವ ಗಾಳಿ
ಸುಡುತಿಹವು ಮಡಕೆಯ ನೀರು

ವೈಶಾಖದ ಈ ಶಾಖಕ್ಕೆ
ಮೊಟ್ಟೆಯಾಯಿತು ಆಮ್ಲೇಟ್ಟು
ತಗೋ ತಿನ್ನು ಒರೆಸಿಕೋ ಮುಸುಡಿ
ಮೈಯೆಲ್ಲ ಬೆವರೋ ಬೆವರು

ಅದೋ ನೋಡು ಮರೀಚಿಕೆ
ಬಾಡಿಹೋಯ್ತು ಹುಲ್ಲುಗರೀಕೆ
ಬಿಸಿಲಿನ ಈ ದಹನಕೆ
ಸುಲಿತಾದೋ ಮೈ ಚರ್ಮ

ಹೊಸಹೂವು ಕರುಕಾಯ್ತು
ಗಾಳಿಯೂ ಕಳದೇ ಹೋಯ್ತು!
ಉಸುರುಸಿರಿಗೆ ಹಿಡಿಶಾಪ
ಹಾಕೋದೆ ಸೂರ್ಯನಿಗೆ

ಬಿಸುಲತ್ತಲ್ ಬಿಸುಲಿತ್ತಲ್
ಬಿಸುಲೆತ್ತಲ್ ಈ ಬಯಲಿನಲಿ
ಸಿಡಿದ್ಹೋತು ಉಷ್ಣತಾಮಾಪಕ
ಅಳೆದಳೆದು ಈ ಕ್ರೂರ ಬಿಸಿಲನ್ನು

   - ಲಕ್ಷ್ಮಣ ಬಾದಾಮಿ
    ಸರಕಾರಿ ಪ್ರೌಢಶಾಲೆ ಕುರುಕುಂದ
   ತಾ. ಸಿರವಾರ ಜಿ. ರಾಯಚೂರು

ಎತ್ತ ಸಾಗುತ್ತಿದ್ದೇವೆ.....????

ಎತ್ತ ಸಾಗುತಿರುವುದೋ ಹೆತ್ತವರಾಗಿ ನಮ್ಮ ಚಿತ್ತ,
ಹೆಣೆದಿರುವೆವು ನಮ್ಮ ಜೀವನವನ್ನು ಮಕ್ಕಳ ಸುತ್ತ,
ಅತಿ ಪ್ರೀತಿ ವ್ಯಾಮೋಹ ಕೊಂಡೊಯುತಿದೆ ಅವನತಿಯತ್ತ
ತಳ್ಳುತಿರುವೆವೇನೋ ಮಕ್ಕಳ ಭವಿಷ್ಯ ಅತಂತ್ರದತ್ತ.....

ದೇವರ ನೀಡಿದ ಮಕ್ಕಳವು,ನಮ್ಮ ಮೂಲಕ ಹುಟ್ಟಿವೆ,
ದೈವಾತ್ಮಗಳು ಅವು, ನಮ್ಮ ಮಡಿಲನು ಸೇರಿವೆ,
ಪೋಷಕರಾಗಿ ಆಯ್ಕೆಯಾಗಿರುವೆವು, ಆ ಪುಟ್ಟ ಜೀವಿಗಳಿಗೆ,
ಮಾರ್ಗದರ್ಶರಾಗಬೇಕು, ಮುಂಬರುವ ನಾಗರಕರಿಗೆ....

ನಮ್ಮ ಮೂಲಕ ಬಂದಾಕ್ಷಣ, ನಾವು ಅವರ ಅಧಿಕಾರಿಗಳಲ್ಲ,
ನಮ್ಮ ಆಸೆ ಆಕಾಂಕ್ಷೆ ಹೇರಲು, ಅವರು ನಮ್ಮ ಸೇವಕರಲ್ಲ,
ನಮ್ಮ ಪ್ರೀತಿ ಪ್ರದರ್ಶನಕ್ಕೆ,ಅವರು ಗಾಳದ ಮೀನುಗಳಲ್ಲ,
ನಮ್ಮ ಅತೀ ನಿರೀಕ್ಷೆಗೆ, ಅವರು ಹೊಣೆಗಾರರಲ್ಲ....

ದೇವರು ಆಯ್ಕೆ ಮಾಡಿದ, ಆಪ್ತ ಸಹಾಯಕರು ನಾವು,
ಸನ್ಮಾರ್ಗದಲ್ಲಿ ನಡೆಸಲು, ದಾರಿ ದೀಪಗಳು ನಾವು,
ಸ್ನೇಹ ಸಂಭಂದಗಳ ಅರಿವನ್ನು ತುಂಬುವ, ಪ್ರೀತಿಯ ಪೋಷಕರು ನಾವು,
ಬಲಿವವರೆಗೆ ಬದುಕನು ಕಲಿಸುವ, ದಿವ್ಯ ದರ್ಶಕರು ನಾವು...

ತಪ್ಪು ಮಾಡುತ್ತಿದ್ದೇವೆನೋ, ಹೆತ್ತವರಾಗಿ ನಾವು,
ಕಷ್ಟ ಸುಖಗಳ ಮಿಶ್ರಣ ನೀಡದೆ, ಎಡವುತ್ತಿದ್ದೇವೆ ನಾವು,
ನೋವು ನಲಿವುಗಳ ಅಂತರ ತಿಳಿಸದೇ, ಹಾರುತ್ತಿದ್ದೇವೆ ನಾವು,
ಉಜ್ವಲ ಬದುಕನು ನೀಡುತ್ತಿದ್ದೇವೆಂಬ, ಬ್ರಮೆಯಲಿದ್ದೇವೆ ನಾವು......

ಅತಿಯಾದ ಪ್ರೀತಿ ಪಡೆದವರು, ನೋವು ಸಹಿಸಲಾರರು,
ಅನಾವಶ್ಯಕ ವಸ್ತುಗಳ ಪಡೆದವರು, ಅವಶ್ಯಕತೆ ಅರಿಯಲಾರರು,
ಕಷ್ಟನಷ್ಟಗಳರಿವಿರದವರು, ಜೀವನ ಎದುರಿಸಲಾರರು,
ಕೆರೆಯ ಕಪ್ಪೆಯಂತೆ ಜೀವನದಿಂದ, ಬದುಕಲು ಬವಣೆ ಪಡುವರು...

ಎಚೆತ್ತುಕೊಳ್ಳಬೇಕು ಬೇಗ, ಹೆತ್ತವರಾಗಿ ನಾವು,
ಜಗದ ನಿಯಮದಂತೆ ಬೆಳೆಯಲು ಬಿಟ್ಟು, ಜೊತೆಗಿರಬೇಕು ನಾವು,
ಎಡವಿದಾಗ ಕೈನೀಡಬೇಕು, ಕೊಡವಿ ಎದ್ದಾಗ ಬೆನ್ತಟ್ಟಬೇಕು,
ಸಾರ್ಥಕತೆಯಿಂದ ಬದುಕಲು ಕಳಿಸಿ, ಹೆಮ್ಮೆಯ ಹೆತ್ತವರಾಗಬೇಕು....

- ಡಾ ಜಯಲಕ್ಷ್ಮಿ ನಾಯಿಕ್
ವಿನೋಬನಗರ ವೃತ್ತ ಸಾಗರ

ಗುರು

ಅಕ್ಷರ ಕಲಿಸುವವರೆ ಟೀಚರ್
ಮಕ್ಕಳೆ ಅವರ ಪ್ಯೂಚರ್
ಜ್ಞಾನವ ಬೆಳೆಸುವವರೆ ಲೆಕ್ಚರ್
ಯುವಕರೆ ದೇಶದ ಖದರ್ ,,,,,

ಕೆಡಸದಿರಿ ದುಷ್ಟರೆ ದೇಶದ ವ್ಯವಸ್ಥೆ
ಆಗ ಸರಿಹೊಂದುವದು ಅವ್ಯವಸ್ಥೆ
ಪ್ರಾರಂಭಿಸಿ ನಿಮ್ಮ ಪ್ರಯತ್ನದ ವಿಶಿಷ್ಟತೆ
ಆಗಾಗುವದು ದೇಶದ ಶ್ರೇಷ್ಠತೆ,,,

ಗುರು ನಮ್ಮ ತಂದೆ
ಗುರು ನಮ್ಮ ತಾಯಿ
ಗುರು ನಮ್ಮ ದೇವ
ಗುರು ನಮ್ಮ ಭಾವ,,,,

ರಚನೆ:
ಸಂತೋಷ. ಜಿ.ರೇವಡಿಹಾಳ
ಧಾರವಾಡ (ಇಟಿಗಟ್ಟಿ)
8497846015

 

 

ತಿರುಕರು

ಆ ಊರು, ಈ ಊರು, ಉರೂರು ನಮ್ಮ ವಾಸ
ನಿಲ್ದಾಣ ಮರದಡಿಯ ಬೆಂಚುಗಳೇ ನಮ್ಮ ನಿವಾಸ.
        
ಅಲ್ಲಲ್ಲಿ ಹಾಸಿರುವ ಕಲ್ಮಂಚಗಳು
ಅದುವೆ ನಮ್ಮಯ ತಲೆದಿಂಬು, ತೂಗುಮಂಚ.

ಆಗೊಮ್ಮೆ ಈಗೊಮ್ಮೆ ಬೀಸುವುದು ಗಾಳಿ
ನಮಗದುವೆ ಹವಾನಿಯಂತ್ರಿತ ತಂಗಾಳಿ

ಅವರಿವರು ನೀಡುವ ಬಿಲ್ಲೆಗಳೇ
ನಮ್ಮ ಊಟದ ಬಿಲ್ಲುಗಳು.

ಸುತ್ತ ತಿರುತಿರುಗಿ ಸುಸ್ತಾಗಲು
ಅಲ್ಲಿರುವ  ವನಸಿರಿಯೆ ವಿಶ್ರಾಂತಿಗೃಹವು.

ದಾರಿಯಲಿ ಹಾಸಿರುವ ಹಸಿರು ಉದ್ಯಾನವೇ
ಹೆಮ್ಮೆಯ ನಮ್ಮ ಪ್ರವಾಸಿ ತಾಣಗಳು.

ಹತ್ತಿಳಿವ ಬಸ್ಸುಗಳು, ಅಲೆದಾಟದಿ ಸಿಗುವ
ಅಂಗಡಿ,ಗುಡಿ,ಮಹಡಿಗಳೇ
ನಮ್ಮ ನಿತ್ಯ ಕಾಯಕದ ಮೂಲಗಳು.

ತಿರುಕರೆಂದು ತಲೆತಿರುಗಿಸಿ ಹೋಗದಿರಿ
ನಾವು ನಿಮ್ಮಂತೆ ಮನುಜರೆಂಬುದ ಮರೆಯದಿರಿ.

   - ಭಾರತಿ ಭಂಡಾರಿ, ಬೆಂಗಳೂರು.



ಹನಿಗವನಗಳು

(೧)

ಮಸೀದಿ
ಮಠ
ಮಂದಿರಗಳಿಗೆ ಭೇದಭಾವದ ಸೊಂಕು
ಮನುಜನ ನಾಲ್ಗೆಯಿಂದಲೆ ಅಂಟಿದೆ.ಬರಿ
ಮತಗಳಿಗಾಗಿ
ಮತಿಹೀನ ರಾಗುವ
ಮಂತ್ರಿಗಳು
ಮನುಜಮತದ ಅರಿವಿನ
ಮಾತು
ಮರೆತು
‌ಮಾನಹೀನರಾಗಿ
ಮಾನವೀಯತೆ ಇಲ್ಲದೆ
ಮನಬಂದಂತೆ ಆಳ್ವರು
ಮನುಷ್ಯತ್ವ ಕೊಂದು

 (೨)

ನಿನಗಾಗಿ
ನಾ ನಿಂದು
ಬಾನಿಗೆ ಬೆವರ ಗಂಬಳಿ
ಹೊದ್ದಿಸಿರುವೆ ಆದರು
ತಿಳಿಯಾಗಿಲ್ಲ
ತಿಳಿ ಗೆಳತಿ
ಚಳಿಗಾಳಿಗೆ
ಉಕ್ಕುವ ಹುಚ್ಚು
ಆಸೆಯು
ಹೆಚ್ಚಾಗಿದೆ.
ಒಮ್ಮೆಯಾದರೂ
ತಪ್ಪಿದ್ದರು ತಬ್ಬಿಕೊ
ತುಸು ಬಿಸಿಯಾದರು ಆದಿತು.

ಮೈಗೋರಿಯುವ ಚಳಿಗೆ
ನಿನ್ನ ಬಿಸಿ ಉಸಿರ
ತೋಳಪ್ಪುಗೆಗೆ
ನಿನ್ನ ಬಳಸುವ ಕೈಗಳಿಗೆ ಗರಿ ಬಿಚ್ಚಿ ನಿಂದಿವೆ
 

-ನಾಗರಾಜ ದೊಡನೆ
ಬಿಜಾಪುರ
ತಾ||ಮುದ್ದೇಬಿಹಾಳ 

 

 

ಯಶಸ್ವಿನ ಹೆಜ್ಜೆ

ಓ ನನ್ನ ಮುದ್ದು ಮಕ್ಕಳೆ
ಒಂಬತ್ತು ಮೆಟ್ಟಿಲು ಹತ್ತಿದವರೆ
ಸುಗಮವಾಗಿ ಸಾಗಲಿ
ನೀವು ಇಡುವ ಹೆಜ್ಜೆಗುರುತುಗಳು
ತಂದೆ ತಾಯಿಯರು ಕಾಯುತ್ತಿರುವರು
ನಿಮ್ಮ ಯಶಸ್ವಿನ ಹೆಜ್ಜೆ ಗುರುತಿಗಾಗಿ
ಶಿಕ್ಷಕರು ನೋಡಲು ಹಂಬಲಿಸುವರು
ನೀಮ್ಮ ಹತ್ತರ ಹೆಜ್ಜೆ ಗುರುತನ್ನು
ಕನ್ನಡದ ವಣ೯ಮಾಲೆಗಳನ್ನು ತಿಳಿದುಕೊ
ಸುಂದರವಾದ ಅಂಕಗಳನ್ನು ಗಳಿಸಿಕೊ
ಇಂಗ್ಲಿಷ್ ಒರಟ ಅಂತ ತಿಳಿಯ ಬೇಡಿ ಇಪ್ಪತ್ತಾರು ಅಕ್ಷರಗಳ ಚಂದದ ಮಾಲೆ ಮಾಡು ಅಂಕ ಗಳಿಸಿಕೊ
ವಿಜ್ಞಾನದಲ್ಲಿ ತಂತ್ರಜ್ಞಾನಗಳ ಚಿತ್ರ ಬಿಡಿಸು
ಯಶಸ್ವಿಯಾಗಿ ಭವಿಷ್ಯದ ಅಂಕಗಳನ್ನು ಗಳಿಸಿಕೊ
ಸುಂದರವಾದ ಭಾರತ ನಕ್ಷೆ ಬಿಡಿಸು
ಸಮಾಜದಲ್ಲಿ ವಿಸ್ಮಯಕಾರಿ ಅಂಕ ಗಳಿಸು
ಹಿಂದಿ ಭಾಷೆಯನ್ನು ದಿಟ್ಟಿಸಿ ನೋಡಬೇಡ
ಅಂದದ ಗೆರೆಗಳನ್ನು ಹಾಕು ಅಂಕ ಗಳಿಸು
ಆ ಕಡೆ ಈ ಕಡೆ ಚಂದದ ಚುಕ್ಕಿಗಳನ್ನು ಹಾಕುತ್ತಾ
ಆ ಚುಕ್ಕಿಗೆ ಈ ಚುಕ್ಕಿ ಸೇರಿಸಿ ಗಣಿತ ದಲ್ಲಿ ಅದ್ಬುತ ಅಂಕ ಗಳಿಸು
ಸಮಾಜದಲ್ಲಿ ಕಿರಿಕಿರಿಗೆ ಕಿವಿ ಕೋಡದೆ
ನನ್ನದು ನಿನ್ನದು ಎಂದು ಭಾವ ತೋರದೆ
ಯಶಸ್ವಿನ ಮೆಟ್ಟಿಲುಗಳನ್ನು ಜಾರುತ್ತಿರುವರನ್ನು
ಒಬ್ಬರೊಬ್ಬರಗೆ ಕೈ ಹಿಡಿದು ಯಶಸ್ಸು ಆಗೋಣಾ

-ಶಿವಕುಮಾರ್ ಅಜ್ಜಪ್ಪ ತಳವಾರ್
ಚಿಕ್ಕನರಗುಂದ

ಶ್ರೀಮಂತರ ಸಂಗ್ರಾಮ

ಓಡುವವರು ಓಡುವವರು ಓಡುತ್ತಲೇ ಇರುವವರು
ಜೀವನ ಸಂಗ್ರಾಮ ವೆಂಬ ಓಟದ ಸ್ಪರ್ಧೆಯಲ್ಲಿ
ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುವ ರಭಸದಲ್ಲಿ ಬಡವರ ಕೈಲಾಗದವರ
 ತುಳಿಯುತ್ತಾ ಹಿಂಸಿ ಸುತ್ತ ಸುತ್ತಮುತ್ತಲಿನ
 ಪರಿಸರ ಹಾಳು ಮಾಡುತ್ತಾ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುವ ರಭಸವನ್ನು ಹೆಚ್ಚಿಸುವರು ಓಡುವ ರಭಸದ
 ಜೊತೆಗೆ ಹಿಂದೆ ಬಂದಂತಹ ಹೆಜ್ಜೆಗಳನ್ನು
 ಹಿಂದೆ ಸಹಾಯ ಮಾಡಿದವರ ನೋಡಿಯೂ ನೋಡದೆ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುವ ರಭಸದಲ್ಲಿ ಈ ಸ್ನೇಹಿತರ ಬಂಧುಗಳನ್ನು
 ಜೊತೆಯಲ್ಲೇ ಕರೆದೊಯ್ಯದೆ ಸಹಾಯ ಮಾಡದೆ
 ತನ್ನಂತೆ ಓಡುವವರ ಸ್ನೇಹ ಬಂಧುತ್ವ ಬೆಳೆಸುತ್ತಾ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುತ್ತಾ ಓಡುತ್ತಾ ಪಕ್ಕದಲ್ಲಿ ಇರುವಂತಹ ಜನರನ್ನು
 ಸ್ಪರ್ಧೆಗೆ ಇಳಿಸುವವರು ಅವರನ್ನು ಸ್ಪರ್ಧೆಯಲ್ಲಿ
 ಕುಂಟು ವಂತೆ  ತೊಂದರೆ ನೀಡುತ್ತಾ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಟದಲ್ಲಿ ಕಲ್ಲು ಮುಳ್ಳುಗಳಿಂದ   ಕಷ್ಟಗಳು
 ಬಂದಾಗ ಬಡವರನ್ನು ಕಲ್ಲು ಮುಳ್ಳುಗಳ ಮೇಲಾಗಿ ಅದು
ತಮಗೆ ತಿಳಿಯದೆಂದು ಅವರಾರೂ ತಿಳಿಯಲೆಂದು ಅವರ ಮೇಲೆ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಟದಲ್ಲಿ ಎಲ್ಲಿಯ ತನಕ ಓಡಿ ಯಾರು
 ಬಿಸಿ ರಕ್ತ ತಣ್ಣಗಾಗುವ ತನಕ ಮಿತ್ರರು ಶತ್ರುವಾಗುವ
ತನಕ ಹಣದ ಮಗುವು  ಇಳಿಯುವ ತನಕ
 ಓಡುವವರು ಓಡುವವರು ಕೊನೆಯಿಲ್ಲದ ತನಕ

ಓಡುತ್ತಾ ಓಡುತ್ತಾ ಒಂದೊಮ್ಮೆ ಕುಸಿದು ಬಿದ್ದವರು
 ಮತ್ತೊಮ್ಮೆ ಹೇಳಲಾಗದೆ ಜಗದ ಸಂಬಂಧವನ್ನು
 ಕಡಿದುಕೊಂಡು ಮತ್ತೆ ಬಾರದ ಲೋಕಕ್ಕೆ ಹೋಗುವರು ಎಂದು
 ಆಗ ಜನರು ಎನ್ನುವವರು ಇದುವೇ ಜೀವನ ಸಂಗ್ರಾಮ

ಈ ಸಂಗ್ರಾಮ ಜಗದಲ್ಲಿ ಒಬ್ಬರದಲ್ಲ ಎಲ್ಲಾ ಶ್ರೀಮಂತ ರಾಕ್ಷಸ ರದ್ದುಇವನ
ನಂತರ ಮತ್ತೊಬ್ಬ ಮಗದೊಬ್ಬ ಸ್ಪರ್ಧೆ ಇಳಿಯುತ್ತಾ ಬುದ್ಧಿ ಕಲಿಯದೆ
 ಓಡುವವರು ಓಡುವವರು ಕೊನೆಯಿಲ್ಲದ
 ತನಕ ಮತ್ತೆ ಬಾರದ ಕಡೆಗೆ ಮತ್ತೆ ಬರಲು ಕಡೆಗೆ

-ಮಧು ಎಂ
ತಿಪಟೂರು

ಜಂಗಮವಾಣಿ

ಏನ ಚಂದ ಐಯಿತಿ ಎಪ್ಪಾ ಇದು
ನೋಡಿದರೆ ಯಾರು ಬಿಡುವುದಿಲ್ಲ
ತರುತನ ಇವರಿಗೆ ಸಮಾಧಾನ ಇಲ್ಲಾ
ಊಟ ಬಿಟ್ಟರೆ ಚಿಂತೆ ಇಲ್ಲಾ ತರುವರು
ಚಾಜ೯ ಇಲ್ಲಾ ನನ್ನ ಜಂಗಮವಾಣಿ
ಪದೇ ಪದೇ ಕರೆ ಬರುತಾವು
ಹೇಳಿದರು ಕೆಳವರು ಇಲ್ಲಾ ಎಪ್ಪಾ
ಇದೊಂದು ಮಾಯವಾದ ತಲೆ೯ ಇದು
ದೂರವಿದ್ದ ಸಂಬಂಧವನ್ನು ಕೂಡಿಸುತ್ತೆ
ಕೂಡಿ ಇದ್ದ ಸಂಬಂಧವನ್ನು ದೂರ ಮಾಡುತ್ತೆ
ಏನಪ್ಪಾ ಇದರ ಲೀಲೆ ಬಲ್ಲವರು ಯಾರ
ಒಬ್ಬರೊಬ್ಬರಗೆ ಬಿಟ್ಟು ಇರಲಾರರು
ಬಿಟ್ಟು ಹೋದರು ನೆನಪು ಆಗುವುದು
ಮಾತನಾಡದಿದ್ದರೆ ಕೋಪಗೋಳ್ಳುವುದು
ಏನ ಐಯಿತಿ ಅಂತಹದು ಇದರಲ್ಲಿ
ಬಲ್ಲವರು ಯಾರೊ ಎಪ್ಪಾ ಇದರ ಲೀಲೆ
ಮಕ್ಕಳು ಬಿದ್ದರೂ ಅದರ ಗುಂಗಿನಲ್ಲಿ
ಹುಟ್ಟಿದ ಕೂಸು ಹಲೋ ಎಂದಿತು
ಮಗುವಿಗೆ ಇದು ಆಟದ ಸಾಮಗ್ರಿ ಆಯಿತು
ಫೋನ್ ನೋಡಿ ಅಳುವ ಮಗು
ಸಮಾಧಾನ ವಾಗುವುದಾಯಿತು.
ಬಡತನ ಇದ್ದರು ಬೇಕು
ಸಿರಿತನ ಇದ್ದರು ಬೇಕು
ಹೋಟ್ಟೆಗೆ ಕೂಳು ಇಲ್ಲದಿದ್ದರು ಬೇಕು
ಏನ ಎಪ್ಪಾ ಇದರ ಲೀಲೆ ಬಲ್ಲವರು ಯಾರ.
 

ರಚನೆ : ಸೂರಿ
(ಶಿವರಾಜಕುಮಾರ ಅಜ್ಜಪ್ಪ ತಳವಾರ) 

ಕನ್ನಡ ಕನ್ನಡ ಹಾ ಸವಿಗನ್ನಡ

ಕನ್ನಡ ಕನ್ನಡ ಹಾ ಸವಿಗನ್ನಡ
ಕಿವಿಗದು ಇಂಚರ ಈ ತಿಳಿಗನ್ನಡ//

ಪಂಪ.ರನ್ನ,ಕುಮಾರವ್ಯಾಸರು ಬಳಸಿದ ಹಳಗನ್ನಡ
ವಚನದಿ,ರಗಳೆ,ಕಂದ ವೃತ್ತಗಳಲಿ ಇರುವ ನಡುಗನ್ನಡ
ಪುರಂದರ ಕನಕರು ವ್ಯಾಸತೀರ್ಥರು ಬಳಸಿದ ಕನ್ನಡ
ಕುವೆಂಪು,ಬೆಂದ್ರೆ ಕಾರಂತ ಮಾಸ್ತಿಯವರ ಆಧುನಿಕ ಕನ್ನಡ....!

ಅಕ್ಕರೆ ನುಡಿಯ ಸಕ್ಕರೆ ಸವಿಗನ್ನಡ
ಶ್ರೇಷ್ಠ ಪದಕೋಶ ಪದಗುಚ್ಚಗಳಿರುವ ಸಿರಿಕನ್ನಡ
ಕಾದಂಬರಿ,ನಾಟಕ,ಕಥೆ,ಪುರಾಣಗಳಲ್ಲಿ ಪ್ರಸಿದ್ದಿ ಈ ಕನ್ನಡ
ಪಂಪ.ಜ್ಞಾನಪೀಠ,ಸಾಹಿತ್ಯ ಅಕಾಡೆಮಿ ಪಡೆದ ಹೊಸಗನ್ನಡ.....!

ಸ್ವತಂತ್ರ ಲಿಪಿ ಇರುವ ಭಾಷೆ ಕನ್ನಡ
ಸಾವಿರ ವರ್ಷ ಐತಿಹಾಸಿಕ ಹಿನ್ನೆಲೆಯಿರುವ ಕನ್ನಡ
ಈ ಶ್ರೀಗಂಧದ ನಾಡಿನ ಚೆಲುವ ಸೊಗಸಿನ ಕನ್ನಡ
ಅಕ್ಷರಕೆ ಲಕ್ಷ್ಯವರಹ ಬೆಲೆ ಇರುವ ನಮ್ಮ ಭಾಷೆ ಕನ್ನಡ....!

ರಚನೆ :ಶಂಕರಾನಂದ ಹೆಬ್ಬಾಳ
ಕೆ ಎಚ್ ಡಿ ಸಿ ನೇಕಾರ ಕಾಲೂನಿ ಇಲಕಲ್ಲ ತಾ.ಇಲಕಲ್ಲ ಜಿ.ಬಾಗಲಕೋಟ 

ಬದುಕು ಭರವಸೆಗಳ ತೂಗು ತಕ್ಕಡಿ

 ಬದುಕು ಭರವಸೆಗಳ ತೂಗು ತಕ್ಕಡಿ
ಹತಾಶೆ ನೂರು !
ಸಿಕ್ಕದ್ದು ಎಷ್ಟೋ.. ಸಿಗದಿದ್ದು ಎಷ್ಟೋ...
ಆದರೂ ಜೀವಿಸುವ ಆಸೆ ಎಲ್ಲರಲೂ
ಪಯಣ ನಡೆದಷ್ಟೂ ಅನುಭವ ಸಾವಿರ
ಇರಬಹುದು ಆಲ್ಲವೇ ?
ಹಗಲು ಗನಸಿನ ಹುಚ್ಚುತನ
ಬಹು ವಿಸ್ತಾರ ಮುಗಿಯದ ಆವಿಷ್ಕಾರ
ನನ್ನದೆನ್ನುವ ಅದೆಷ್ಟೋ ಅಭಿಮಾನ
ಸಹಿಸಿದ ನೂರಾರು ಅಪಮಾನ

ನಂಬಿಕೆಗಳು ಹುಸಿಯಾಗಿ ನಂಬಿದವರೇ
ಕೊರಳಿಗೆ ಉರುಳಾಗಬಹುದೇ
ಇಟ್ಟ ಹೆಜ್ಜೆಗೆ ಗುರುತು ಕಾಣದಾದರೆ
ಬದುಕಿನ ದಾರಿ ಕಕ್ಕಾವಿಕ್ಕಿ
ಕಣ್ಣಿದ್ದರೂ ಕುರುಡನಂತೆ ತಡಕಾಡಿ
ಹೆಣ್ಣು ,ಹೊನ್ನು ,ಮಣ್ಣಿನ ಹುಡುಕಾಟ
ಮನುಕುಲವೇ ಮರೆಯಾಗುವವರೆಗೆ
ಏಕಾಂಗಿಯಾಗಿ ಪಯಣ
ಯಾರು ಬರಲಾರರು ಮುಗಿದ ಬದುಕಿನ ಜೊತೆಗೆ
ಬಂದರೂ ಬರಬಹುದೇ ಮಸಣದವರಗೆ
ಮತ್ತೆ ನೆನಪಿನ ಹಾಯಿ ಬದುಕಿನ ಸಾಗರಕೆ
ತೇಲಿ ಬಿಟ್ಟಂತೆ
ಬಣ್ಣ ಮಾಸಿದಮೇಲೆ ಬದುಕು ನೂರಾರು ಪುಟ ಬರೆಯುವವನಾರೊ ಓದುವವನಾರೊ
ದೇವರ ಆಟದಲಿ ನಾನೂ ನೀನೂ ಎಲ್ಲರೂ ಒಂದೇ .....

ರಚನೆ

ಮಂಜುನಾಥ ಟಿ ಜಿ
ತರಿಧಾಳು ಉಪನ್ಯಾಸಕರು

ಧರೆಯು ಸುಡುತಿದೆ

ಧರೆಯು ಸುಡುತಿದೆ
ಜ್ವರವು ಹೆಚ್ಹಿದೆ
ವರುಷ ವರುಷದಿ೦ದೀಚೆಗೆ

ವಿಷವ ಕಾರಲು
ನಭಕೆ ಮನುಜನು
ನದಿಯು ಸಾಗರದೊಡಲಿಗೆ

ಪ್ರಾಣಿ ಪಕ್ಷಿಯ
ಸ೦ಕುಲವಳಿದಿದೆ
ಕಾಡ ಕಡಿಯುವ ಕೃತ್ಯಕೆ

ರವಿಯ ತೀಕ್ಷ್ಣದ
ಕಿರಣ ತಡೆಯಲು
ಬಾನ ಪದರವು ಸೂತಿದೆ

ಭುವಿಯ ಧ್ರುವದೀ
ಮ೦ಜು ಕರಗಿದೆ
ಶಾ೦ತ ಸಾಗರ ಉಕ್ಕಿದೆ

ನೆರೆಯು ಬ೦ದಿದೆ
ನಾಡು ಕೊಚ್ಚಿದೆ
ಧರೆಯ ಸೆರಗದು ಜಾರಿದೆ

ವರುಣ ಕೃಪೆಯದು
ಕಡಿಮೆಯಾಗಿದೆ
ಜಲದ ಕ್ಷಾಮವು ಹೆಚ್ಚಿದೆ

ಜಲದ ಜಗಳವು
ರಾಜ್ಯ ದೇಶದ
ನಿತ್ಯ ರಗಳೆಯು ಆಗಿದೆ

ಹಸಿರು ಧರೆಯನು
ನನ್ನ ಮಗಳಿಗೆ
ಮಾಘ ಮಾಸದಿ ತೊರಿದೆ

ನೊಡಬಹುದೇ
ಬೆ೦ಕಿಯು೦ಡೆಯನೆಲ್ಲ
ಮಾಸದಿ ನಮ್ಮ ಮು೦ದಿನ ಪೀಳಿಗೆ

ಧರೆಯನುಳಿಸುವ
ಪುಣ್ಯ ಕಾರ್ಯದಿ
ಅಳಿಲ ಸೇವೆಯು ಬೇಕಿದೆ

- ಶ್ರೀನಿವಾಸ ಪ್ರಸಾದ್
ವೈಟ್ ಫೀಲ್ಡ್, ಬೆಂಗಳೂರು

ಮನುಜನಾಗೋ ಮನುಜ ನೀನು

ಕಷ್ಟ ನಷ್ಟ ನೀರ ಮೇಲಿನ ಗುಳ್ಳೆ ಕಣಣ್ಣ.
ಹಂಗ್ ಬಂದು ಹಿಂಗ್ ಹೋಗೊ ಅತಿಥಿ ತಿಳಿಯಣ್ಣ.
ಬಾಡ್ಗೆ ಮನೆಯಿಂದ ಒಂದಿನ ಹೋಗೊದೇಯಣ್ಣ.
ನೀನು ತಂದಿರೋದೆನು ಇಲ್ಲಿ ಚಿಂತೆ ಬಿಡಣ್ಣ.

ಸಾವು ನೋವು ಯಾರೀಗಿಲ್ಲ ಹುಡುಕಿ ನೋಡಣ್ಣ.
ಸಾವೇ ಇಲ್ಲದ ಮನೆಯಾ ಸಾಸ್ವೆ ಸೀಕ್ಕೊದಿಲ್ಲಣ್ಣ.
ನಾಕ ನರಕ ಮೇಲೆಲ್ಲಿಲ್ಲ ಇಲ್ಲೆ ನೋಡಣ್ಣ.
ಇದ್ದಷ್ಟದಿನ ಚೆಂದಾಗ್ಬಾಳದ್ರೆ ಹೋಗೊದೆನಣ್ಣ

ಜಾತಿ ಜಾತಿ ಅಂತ  ಜಾತಿ ಜಗಳ ಯಾಕಣ್ಣ
ಎಲ್ಲ ಜಾತಿ ಮೂಲಬೇರು ಒಂದೇ ನೋಡಣ್ಣ
ಅಣ್ಣ ತಮ್ಮನಂತೆ ಕೂಡಿ ಬಾಳಬೇಕಣ್ಣ.
ಆಗ ನಿನ್ನ ಬಾಳು ಅರಳೊ ಹೂವು ಕಣಣ್ಣ.

ಬುದ್ಧ ಹೇಳಿದ ಶಾಂತಿ ಮಾರ್ಗ ಹಿಡಿದು ನೋಡಣ್ಣ.
ಗಾಂಧಿ ತಾತನ ಅಂಹಿಸೆಯ ಅಸ್ತ್ರ ಪಡಿಯಣ್ಣ.
ಕನಕ ಬಸವ ಪುರಂದರ ತತ್ವ ಅರಿಯಣ್ಣ.
ಮಾನವತೆ ಶ್ರೇಷ್ಠವದು ಪಡೆದು ತೀರಣ್ಣ.

 - ಮಾರುತಿ ಬೆಂಡ್ಲಗಟ್ಟಿ    
ಹಳೂರ ಓಣಿ, ಮುಂಡಗೋಡ
ತಾ-ಮುಂಡಗೋಡ.
ಜಿ-ಉತ್ತರ ಕನ್ನಡ.
ಪಿನ್ ಕೋಡ್-581349

ದೀವಿಗೆಯ ಬೆಳಕಲ್ಲಿ ಅರಳಿದ ಪ್ರೀತಿ

 ಭಾರ್ಗವನಿಗೆ ಹೆಣ್ಣು ನಿಶ್ಚವಾಗಿದೆ. ಹೆಣ್ಣು ಪರವೂರಿನವಳು, ಭಾರ್ಗವನ ಊರಿನಿಂದ ಬಹಳ ದೂರವೆನಿಲ್ಲ ಭಾರ್ಗವನಿಗೆ ತಕ್ಕಂತೆ ಲಕ್ಷಣವಾದ ಹುಡುಗಿ.ಹೆಸರು ಸುಮಂಗಲ ಹೆಸರಿಗೆ ತಕ್ಕಂತೆ ಗುಣವಂತೆ, ಶೀಲವಂತೆ ,ಸಧ್ಗುಣ ಸಂಪನ್ನೆ. ನಯನಾಜುಕು ,ತಳಕುಬಳಕು ಎನನ್ನು ಅರಿಯದ ಹುಡುಗಿ ಹಳ್ಳಿಯ ಹುಡುಗಿ ಓದಲು ಬರೆಯಲು ಬಲ್ಲವಳು. ಭಾರ್ಗವ ಸರ್ಕಾರಿ ಕೆಲಸದಲ್ಲಿ ತನ್ನೂರಿನ ತಾಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಹೆಣ್ಣನ್ನು ನೋಡಿದ ತಕ್ಷಣಕ್ಕೆ ಒಪ್ಪಿಕೊಂಡ. ಸ್ವಲ್ಪ ಓದಿಕೊಂಡವಳು, ಲಕ್ಷಣವಾಗಿದ್ದಾಳೆ ,ಅವನು ಅಂದುಕೊಂಡದಕ್ಕಿಂತ  ಸುಂದರವಾಗಿದ್ದಳು, ಮನೆತನದಲ್ಲು ಚೆನ್ನಾಗಿದ್ದರು. ಹೆಣ್ಣು ನಿಶ್ಚಯವಾದ ಒಂದೊ ಎರಡೋ ತಿಂಗಳಿಗೆ ದೀಪಾವಳಿ ಹಬ್ಬ ಬಂದಿತ್ತು. ಹೋಸದಾಗಿ ಮಗಳಿಗೆ ಗಂಡು ನಿಶ್ಚಯವಾದರೆ ದೀಪಾವಳಿಯಂದು ಭಾವಿ ಅಳಿಯನ್ನು ಕರೆದು ಉಪಚರಿಸುವುದು ವಾಡಿಕೆ. "ಭೋರೆಯ ನೀರು " ಎಂಬ ಶಾಸ್ತ್ರವನ್ನು ಮಾಡಲಾಗುತ್ತದೆ. ಅಂದರೆ ಅಳಿಯ ದೀಪಾವಳಿಯ ಹಿಂದಿನ ದಿನ ಮಾಮನ ಮನೆಗೆ ಅಳಿಯ ಹೋಗಿ ಸ್ನಾನ ಮಾಡಿಕೊಂಡು ಮಡಿಬಟ್ಟೆ ಧರಿಸಬೇಕೆಂಬುದು ವಾಡಿಕೆ. ಅದರೊಟ್ಟಿಗೆ ಅವರವರ ಶಕ್ತಿಗೆ ತಕ್ಕಂತೆ ಅಳಿಯನಿಗೆ ಉಡುಗೊರೆಯ ರೂಪದಲ್ಲಿ ಬೆಳ್ಳಿ ಇಲ್ಲವೆ ಬಂಗಾರವನ್ನು ಕೋಡುತ್ತಾರೆ. ಭಾರ್ಗವನಿಗೆ ದೀಪಾವಳಿಯ ಹಬ್ಬಕ್ಕೆ ವಿಶೇಷ ಆಮಂತ್ರಣ ಬಂದಿತ್ತು. ಭಾವಿ ಪತ್ನಿಯ ಮುಖ ದರ್ಶನ ಸರಸ ,ಸಲುಗೆಯ ಆಸೆ ಉಮ್ಮಡಿಸಿ ಬಂದಿತ್ತು ,ಒಬ್ಬೊಬ್ಬನೆ ನಾಚಹತ್ತಿದ. ಈ ಮೊದಲು ಇದಾವ ಶಾಸ್ತ್ರ ,ಬೀಗರ ಮನೆಯ ಅನುಭವ ಇಲ್ಲದವನು ಮುಜುಗರದೊಂದಿಗೆ ಚಿಂತಿಸಲು ಶುರು ಮಾಡಿದ. ಹೇಗಪ್ಪ ಹೋಗೊದು ,ಅಲ್ಲಿ ಹೇಗೆ ನಡೆದುಕೊಳ್ಳಬೇಕು ರೀತಿ ರಿವಾಜು ಒಂದರ ತಳಮೇಲು ಅರಿಯೆನಲ್ಲ ಎಂದು ಚಿಂತಿಸಿದ. ಹೀಗೆ ಮಾಡಿದರೆ ಹೇಗೆ ನನ್ನ ಸ್ನೇಹಿತ ಜನಾರ್ಧನನ್ನು ನನ್ನೊಟ್ಟಿಗೆ ಕರೆದ್ಯೊದರೆ ನನಗೂ ಒಂದು ದೈರ್ಯಯಿರುವುದು ಎಂದು ಯೋಚಿಸಿದ. ಹೇಗೂ ಅವನು ನನ್ನೊಟ್ಟಿಗೆ ನನ್ನ ಕಛೇರಿಯಲ್ಲೆ ಕೆಲಸ ಮಾಡುವವನು ,ನನ್ನ ಪ್ರಾಣ ಸ್ನೇಹಿತ. ಅವನಿಗೆ ನನ್ನೊಟ್ಟಿಗೆ ರಜೆ ಇದೆಯಲ್ಲ ಎಂದು ಅವನನ್ನು ಕರೇದ. ಮೊದ ಮೊದಲು ಜನಾರ್ಧನ ಇಲ್ಲಪ್ಪ ನಿನ್ನ ಮದುವೆ ,ನಿನ್ನ ಬೀಗರು ನಾನು ಹೇಗೆ ಬರಲು ಸಾಧ್ಯ ಎಂದವನು ಇವನ ಒತ್ತಾಯ ಒತ್ತಾಸೆಗೆ ಮಣಿದು ಹೋಗಲು ಸಿದ್ಧನಾದ. ಜನಾರ್ಧನ ಮತ್ತು ಭಾರ್ಗವರಿಬ್ಬರು ಬೈಕ್ ಎರಿ ಬೀಗರ ಮನೆಯನ್ನು ತಲುಪಿದರು. ತಲುಪುವಷ್ಟೊತ್ತಿಗೆ ಸಂಜೆಯಾಗಿತ್ತು. ಬೀಗರ ಮನೆಯವರು ಇವರನ್ನು ಆದರದಿಂದ ಸ್ವಾಗತಿಸಿದರು. ಉಭಯಕುಶಲೋಪರಿ ಎಲ್ಲವು ಆದವು. ಸುಮಂಗಲನನ್ನು ಕಂಡವನೆ  ಭಾರ್ಗವ ಸಂತೋಷದಲ್ಲಿ ಹಿಗ್ಗಿದ.ಅವಳನ್ನು ಕಾಣುವ ತವಕದಲ್ಲಿ ಓಡೊಡಿ ಬಂದಿದ್ದು ಸಾರ್ಥಕವಾಯಿತೆನಿಸಿ ಅವಳನ್ನು ಕಂಡವನೆ ನಾಚಿದ, ಅವಳು ಭಾರ್ಗವನನ್ನು ಕಂಡವಳೆ ಉಪಚರಿಸಿ ಓಡಿ ಹೋಗಿ ಬಾಗಿಲ ಸಂಧಿಯಿಂದ ಇಣುಕಿ ನೋಡಿ ಲಜ್ಜೆಯಿಂದ  ನುಲಿದಳು. ಸುಮಂಗಲಳಿಗೊಬ್ಬಳು ತರಲೆ ತಂಗಿಯಿದ್ದಳು. ತರಲೆ ತಲೆಹರಟೆ ,ಶುಧ್ದ ತಲಹರಟೆ. ಒಂದು ದಿನ ಒಬ್ಬ ಪೂಜಾರಿ ಅವಸರವಸರವಾಗಿ ಸೈಕಲ್ ಏರಿ ದೇವರ ಪೂಜೆಗೆಂದು ತಡಬಡಿಸಿ ಹೋಗುತ್ತಿದ್ದ. ಈ ತರಲೆ ಏನು ಮಾಡಬೇಕು ಗೊತ್ತೆ ಆ ಪೂಜಾರಪ್ಪನ ತಡೆದು ವಿಳಾಸ ಕೇಳುವ ರೀತಿ ಮಾತನಾಡಿಸಿ ಎಲ್ಲ ಸ್ನೇಹಿತೆಯರೊಂದಿಗೆ ಅವನ ಪಂಚೆ ಕಸಿದುಕೊಂಡು ಅವನನ್ನಾ ಪೇಚಿಗಿಡು ಮಾಡಿದ್ದರು. ಸುಮಂಗಲನಿಗೆ ತದ್ವಿರುದ್ಧವಾದ ಗುಣದವಳು. ಕೆಟ್ಟವಳಲ್ಲ ನಯ ನಾಜುಕು ಕಡಿಮೆ, ಗಂಡುಬೀರಿ ಅನ್ನಿ.      ಇವಳ ಈ ಗುಣವೆಲ್ಲ ಮನೆಯವರಿಗೆ ಚೆನ್ನಾಗಿಯೆ ಗೊತ್ತಿತ್ತು ,ಮೊದಲೆ ಅವರಮ್ಮ ಸುಮಾಳಿಗೆ ತಾಕೀತು ಮಾಡಿಬಿಟ್ಟಿದ್ದರು. ಬಂದವರ ಮುಂದೆ ಕಪಿಚೆಷ್ಟೆ ಮಾಡಿ ನಮ್ಮ ಮರ್ಯಾದೆ ಕಳಿಬೇಡ ಅಂದಿದ್ದರು. ಇವಳೊ ಸುದ್ಧ ತರಲೆ ,ಬೇರೆಯವರಿಗೆ ತಮಾಷೆ ಮಾಡಿ ಮಜಾ ತೋಗೊಳೊ ಕಪಿ ಮುಂಡಡೆ. ಭಾರ್ಗವ ಮತ್ತು ಜನಾರ್ದನ ಇಬ್ಬರು ಬೀಗರ ಆಮಂತ್ರಣದಂತೆ ಬಂದು ಸೇರಿದ್ದರು. ಒಳಗಿಂದಲೆ ಅವರಿಬ್ಬರನ್ನು ನೋಡಿದವಳೆ ಇವರಿಗೆ ಹೇಗಾದರು ಗೊಳ್ಯೋಕ್ಕೊಬೇಕು ಅನಿಸಿ, ಅಕ್ಕ ಬಲಿಕಾ ಬಕರಾ ಬಂದಿದಾವೆ ನೋಡು ಇವಾಗ ಎನು ಮಾಡ್ತಿನಿ ಅಂತಾ ಅವಳ ಹತ್ತಿರ ಹೇಳಿದಳು. ಅಕ್ಕ ಇವಳನ್ನು ಕಣ್ಣು ದೊಡ್ಡದು ಮಾಡಿ ನೋಡಿದವಳೆ ಲೆ ಕೋತಿ ಇವರನ್ನಾದರು ಬೀಡೆ ಮಾರಾಯ್ತಿ ಅಂದಳು. ಬೀಡ್ತಿನಿ ಬಿಡ್ತಿನಿ ಸ್ವಲ್ಪ ರುಚಿ ತೋರಿಸಿ ಬಿಡ್ತಿನಿ ಅಂದಳು. ಇವಳ ಸ್ವಭಾವ ಅವಳ ಅಕ್ಕನಿಗೆ ಚೆನ್ನಾಗೆ ತಿಳಿದಿದ್ದರಿಂದ ಇವಳಿಗೆ ಎನೆ ಹೇಳಿದರು ಅಷ್ಟೆ ಅವಳ ಹಠ ಬೀಡುವವಳಲ್ಲ ಎಂದು ಸುಮ್ಮನಾದಳು. ಹೋರಗೆ ಹೋದವಳೆ ಭಾವ ಹೇಗಿದ್ದಿರಿ ಎಂದು ಮಾತನಾಡಿಸಿ.ಜನಾರ್ಧನಿಗೆ ಇವರು ಯಾರು ಭಾವ ಮೊದಲು ನೋಡಿಯೆ ಇಲ್ಲವಲ್ಲ ಎಂದಳು. ಇವನು ನನ್ನ ಸ್ನೇಹಿತ ನನ್ನೊಟ್ಟಿಗೆ ಕೆಲಸ ಮಾಡುತ್ತಾನೆ ಎಂದ. ನೋಡಲು ಚೆನ್ನಾಗಿದ್ದ ಜನಾರ್ಧನ ಓಳ್ಳೆ ಮೈಕಟ್ಟು, ಕಾಂತಿಯ ಮುಖಕ್ಕೆ ಕನ್ನಡ ಹೊಂದುವಂತೆ ಇದ್ದ. ಕನ್ನಡಕದಲ್ಲಿ ಸುಂದರವಾಗಿ ಕಾಣುತ್ತಿದ್ದ. ಸುಮಾ ಭಾವನಿಗೆ ಕಾಡಿಸುವುದು ಬೇಡ. ಈ ಬಲಿಕಾ ಬಕ್ರಾ ನ ಕಾಡಿಸಿದರೆ ಹೇಗಿರುತ್ತೆ ಎಂದು ಯೋಚಿಸಿ ಒಳಗೆ ಹೋದವಳೆ. ತಿಂಡಿ ಎಲ್ಲ ತಂದು ತಗೋಳಿ ಭಾವ ಎಂದಳು. ಭಾರ್ಗವ ಬೇಡ ಎಂದರು ಕೇಳದೆ ತಗೋಳಿ ನಿವು ಇನ್ನು ಮುಂದೆ ಬರುವುದು ಇದ್ದೆ ಇದೆ ,ಆದರೆ ಇವರು ಬರಬೇಕಲ್ಲ ನೀವು ಹೀಗೆ ಹೇಳಿದರೆ ಅವರು ಮುಜುಗರ ಪಡುವುದಿಲ್ಲವೆ ಎಂದು ತಿಂಡಿ ತಂದು ಇಟ್ಟಳು. ತಿಂಡಿ ತಟ್ಟೆ ತೆಗೆದುಕೊಳ್ಳುವಾಗ ಭಾವ ,ಭಾವ ಇದು ಅವರಿಗೆ ಇದು ನಿಮಗೆ ಎಂದು ತಟ್ಟೆ ಬದಲಿಸಿ ಕೊಟ್ಟಳು. ಕಪಿ ಅವಳು ಎನು ಮಾಡಿಯಾಳು ಊಹಿಸಿಕೊಂಡರಾ. ಜನಾರ್ಧನನಿಗೆ ಉಪ್ಪು ಹೆಚ್ಚಿಗೆಯೆ ಹಾಕಿ ಕೊಟ್ಟಿದ್ದಳು. ಪಾಪಾ ಜನ್ನಿ ಭಾರ್ಗವನ ಮುಖ ನೋಡಿ ಸುಮ್ಮನೆ ಹೊಟ್ಟೆಗಿಳಿಸಿದ. ಅವಳು ಇವ ಮುಖ ಕಿವುಚುವುದ ನೋಡಿ ,ನಗುತ್ತಿದ್ದಳು. ಜನ್ನಿ ಕಥೆ ಬೇಡ ಹೇಳಿ. ಎನು ಮಾಡಲಾಗದೆ ಸುಮ್ಮನೆ ತಿಂದ. ಇಷ್ಟಕ್ಕೆ ಬೇಡಬೇಕಲ್ಲ ಇವಳು. ತಿಂಡಿ ತಿಂದ ತಕ್ಷಣ ಓಡಿ ಹೋಗಿ  ಕಾಫಿ ತಂದಳು. ಜನ್ನಿ ಈ ಸಾರಿ ಅವಳು ಕೋಡುದನ್ನು ಕುಡಿಯುವುದು ಬೇಡ. ಭಾರ್ಗವನಿಗು ಇವಳ ಚೆಷ್ಟೆ ತಿಳಿಯಲಿ ಎಂದು ಭಾರ್ಗವನಿಗೆ ಕೊಟ್ಟ ಕಾಫಿ ಲೋಟ ತೆಗೆದುಕೊಂಡ. ತಲೆಹರಟೆಗೆ ಇದು ಚೆನ್ನಾಗಿ ಗೋತ್ತಿದ್ದರಿಂದ ಮೊದಲೆ ಭಾರ್ಗವನಿಗೆ ಖಾರದ ಕಾಫಿ ಕೊಟ್ಟಿದ್ದಳು, ಆದರೆ ಅದನ್ನು ಜನ್ನಿ ಕಿತ್ತುಕೊಂಡು ಕುಡಿದ. ಮತ್ತೆ ಅವನ ಪಾಲಿಗೆ ಖಾರದ ಕಾಫಿ ಸೀಗಬೇಕೆ. ಜನ್ನಿಗೆ ಈಗ ಅರ್ಥವಾಯಿತು ಇವಳು ಬೇಕಂತಲೆ ಇದನ್ನು ಮಾಡುತ್ತೀರುವಳೆಂದು. ಮಾಡುತ್ತೆನೆ ನಿನಗೆ ,ನನಗೆ ಖಾರದ ಕಾಫಿ ಕೋಡುತ್ತಿಯಾ ಎಂದು ಮನಸಿನಲ್ಲೆ ಕೋಪ ತೋರಿಸಿದ. ರಾತ್ರಿ ಊಟದ ಸಮಯವಾಯಿತು. ಸುಮಂಗಲ ಮತ್ತು ಅವರಮ್ಮ ಇಬ್ಬರಿಗು ಉಪಚರಿಸಿದ ಕಾರಣ ಜನಾರ್ಧನ ಕಪಿಯಿಂದ ಉಳಿದ ಇಲ್ಲವಾದರೆ ಇನ್ನೆನನ್ನೊ ಮಾಡುವಳಿದ್ದಳೋ ತಲೆಹರಟೆ. ಇಷ್ಟಕ್ಕೆ ನಿಟ್ಟುಸಿರು ಬಿಟ್ಟು ಸಮಾಧಾನದಿಂದ ಊಟ ಮಾಡಿದ ಜನ್ನಿ. ರಾತ್ರಿ ನಡೇದ ವಿಷಯವನ್ನೆಲ್ಲ ಭಾರ್ಗವನಿಗೆ ತಿಳಿಸಿದ. ಭಾರ್ಗವ ಅವನಿಗೆ ಸ್ವಾರಿ ಕಣೋ ತಪ್ಪುತಿಳಿಬೇಡ್ವೊ ,ಅವಳಿಗೆ ಸ್ವಲ್ಪ ತಿರುವು ಸಡಿಲ ಅಂದರೆ ಲೂಸು ಅಂತ ಮ್ಯಾನೇಜ್ ಮಾಡಿದ. ರಾತ್ರಿ ಕಳೆದು ಬೆಳಗಾಯಿತು ಇಬ್ಬರು ಎದ್ದು ನಿತ್ಯ ಕರ್ಮ ಮುಗಿಸಿದರು. ಭಾವಿ ಮದುಮಗ ಶಾಸ್ತ್ರದ ಪ್ರಕಾರ ಸ್ನಾನ ಮುಗಿಸಿ ಹೋರಬಂದು ಮಡಿಬಟ್ಟೆ ಧರಿಸಿದ. ಇನ್ನು ಜನ್ನಿ ಸರದಿ ಎಲ್ಲಾದರು ಎಡವಟ್ಟು ಇದಾಳಾ ಎಂದು ನೋಡಿ ಸ್ನಾನದ ಮನೆ ಹೊಕ್ಕ. ಅವನು ಹುಡುಕುತ್ತಿರುವುದು ಇವಳು ಕಂಡು ನಗುತ್ತ ,ನಿನಗೆ ರಾತ್ರಿ ಕೊಟ್ಟಿರೊ ಕರೆಂಟ್ ಶಾಕ್ ಕಡಿಮೆಯಾಯಿತು ಮತ್ತೆ ಕೋಡುವೆ ಎಂದು ನಿರ್ಧರಿಸಿದಳು. ಅವನು ಸ್ನಾನದ ಮನೆ ಹೊಕ್ಕಿದ ತಕ್ಷಣ , ಕಾಲ ಗೆಜ್ಜೆ ತೆಗೆದಿಟ್ಟು ಅವನನ್ನು ಹಿಂಬಾಲಿಸಿ ಗಂಡಸಿನ ಧ್ವನಿಯಲ್ಲಿ ಅವಳ ಅಣ್ಣನ ಹಾಗೆ, ಜನಾರ್ಧನರವರೆ ಸೀಗೆ ಕಾಯಿ ತಲೆಗೆ ಓಳ್ಳೆದು ತಗೋಳಿ ಎಂದಳು. ಅವನು ತಿರುಗಿ ಕೂತು ಸ್ನಾನ ಮಾಡುತ್ತಿದ್ದರಿಂದ ಇವಳೆ ಎನ್ನುವುದು ಗೊತ್ತಾಗಲಿಲ್ಲ. ಇಟ್ಟು ಬೀಡಿ ಎಂದ . ಇವಳು ಸರಿ ಸರಿ ಎಂದು ಇಟ್ಟಳು. ಪಾಪದ ಪಾಪಿ ಜನ್ನಿ ಹಳೆ ಕನ್ನಡ ಸಾಂಗ್ ಹೇಳತಾ ಸೀಗೆ ಪುಡಿ ಅಂತಾ ತಿಳಿದು. ಕೆಂಪು ಖಾರದ ಪುಡಿ,ಹಸಿಮೆಣಸಿನ ಚೆಟ್ನಿನಾ ಮೈಗೆ ,ಕಣ್ಣಿಗೆಲ್ಲಾ ಹಚ್ಚಕೊಂಡು ಬೀಡೊದೆ. ಆಮೇಲೆ ನೋಡಿ ಪಜೀತಿ ಹಾಡು ಅಷ್ಟೆ ಅಲ್ಲ ಕುಣಿತಾ ಹಾಕೋಕೆ ಶುರು ಮಾಡದಾ. ಇವಳು ಇವನ ಪಜೀತಿ ಕಂಡು ಜೋರಾಗಿ ನಗುತ್ತ ನಿಂತಳು. ಮುಚ್ಚಿದ ಕಣ್ಣಲ್ಲೆ ,, ರೀ ಪ್ಲಿಸ್ ರೀ ನೀರು ಕೋಡಿ ಅಂದ. ಅವಳು ಇಲ್ಲ ನಿನ್ನ ಅವತಾರ ಚೆನ್ನಾಗಿದೆ ಎಂದು ನಗುತ್ತಾ ನಿಂತಳು. ಕಣ್ಣುರಿ ಸಂಕಟ ನೋಡಿ ,ಇವಳು ನೀರು ಕೊಡುವ ಹಾಗೆ ಕಾಣಿಸಲಿಲ್ಲ. ಕಣ್ಣು ಮುಚ್ಚೆ ಅವಳನ್ನು ಹುಡುಕಿದ. ಇವಳೊ ಘಾಟಿ ಸೀಗಬೇಕಲ್ಲ ,ಸತಾಯಿಸಿದಳು. ನೀರಿನ ಬಕೇಟ್ ಕೈಲಿ ಹಿಡಿದು ಗೋಳಾಡಿಸಿದಳು. ಕಣ್ಣುರಿ ತಾಳದೆ ಅವಳನ್ನು ಹುಡುಕಿದ, ಒಮ್ಮೆಲೆ ಸೊಂಟ ಕೈಗೆ ಸಿಕ್ಕಿತು. ಇವಳಿಗೆ ಒಮ್ಮೆಲೆ ನಾಚಿಕೆ ಲಜ್ಜೆ ಉಂಬಳಿಸಿ ಓಡಿ ಹೋಗಲು ಪ್ರಯತ್ನಿಸಿದಳು. ಬಚ್ಚಲಿನ ಜಾರಿಕೆಗೆ ಜಾರಿ ದೊಪ್ಪೆಂದು ಅವನ ಎದೆಯ ಮೇಲೆ ಬಿದ್ದಳು. ಅವನಿಗು ಇದು ಹಿತವೆನಿಸಿತು. ಸ್ವಲ್ಪ ಹೊತ್ತು ಇಬ್ಬರು ಅದೆ ಭಂಗಿಯಲ್ಲಿದ್ದರು. ಖಾರದ ಉರಿಯಲ್ಲು ಇವಳ ಆಲಿಂಗನ ಮುದನೀಡುತ್ತಿತ್ತು. ಒಮ್ಮೆಲೆ ಎಚ್ಚೆತ್ತ ಜನ್ನಿ ಉರಿ ಉರಿ ಎಂದ. ಅವಳು ಸಹ ಎಚ್ಚೆತ್ತು ನಾಚಿಕೆಯಿಂದ ಸುತ್ತಣ ತಿರುಗಿ ನೋಡಿದವಳೆ ಅವರಿಬ್ಬರು ಇದ್ದ ಪರಿಸ್ಥಿತಿ ನೋಡಿ ಮತ್ತೆ ನಾಚಿ. ತಾನೆ ಕಣ್ಣಿಗೆ ನೀರು ಹಾಕಿದಳು. ಅವನು ಮೆಲ್ಲನೆ ಕಣ್ಣು ಬಿಟ್ಟಾಗ ಎನಾಯಿತೊ ಅವಳಿಗೆ ಅವನನ್ನು ಪದೆ ಪದೆ ತಿರುಗಿ ನೋಡುತ್ತ ನಾಚಿಕೆಯಿಂದ ಮನೆಯೊಳಗೆ ಓಡಿದಳು. ಅವನಿಗು ಅವಳದೆ ಗುಂಗು ಹಿಡಿದಿತ್ತು ,ಅವಳ ಸೊಂಟಕ್ಕೆ ಕೈ ಹಾಕಿದ್ದನ್ನು ನೆನೆದು ನಾಚಿ ಬೇಗ ಬೇಗ ಸ್ನಾನ ಮುಗಿಸಿ ಹೋರಗೆ ನಡೆದ. ನಡೆದ ವಿಷಯ ಯಾವುದನ್ನು ಭಾರ್ಗವನಿಗೆ ತಿಳಿಸದೆ ಸುಮ್ಮನಾದ. ಇಬ್ಬರ ತಿಂಡಿಯು ಮುಗಿಯಿತು, ಹಬ್ಬಕ್ಕೆ ತರ ತಲನಾದ ಖಾದ್ಯಗಳನ್ನು ಮಾಡಿದ್ದರು, ಇಬ್ಬರು ಚೆನ್ನಾಗೆ ಸವಿದರು. ಸುಮಾ ಆ ದಿನ ನಾಚಿಕೆಯಿಂದ ಲೆ ಅಕ್ಕ ಸೀರೆ ಉಡಿಸೆ ಎಂದಳು. ಈ ಗಂಡುಬಿರಿನಾ ಹೀಗೆ ಕೇಳ್ತಿರೊದು ! ಅಂತಾ ಆಶ್ಟರ್ಯದಿಂದ ಹುಬ್ಬೆರಿಸಿದಳು ಸುಮಂಗಲಾ. ಇವಳು ದೀಪಾವಳಿ ಅಲ್ವೆನೆ ಉಡಿಸೆ ಎಂದು ಪಿಡಿಸಿ ಸೀರೆಯುಟ್ಟು ಹೋರಗೆ ಬಂದಳು. ಎಲ್ಲರು ಇವಳ ವೇಷ ನೋಡಿ ಬಾಯ್ಬಿಟ್ಟರು. ಆದರೆ ಜನ್ನಿಗೆ ಇದರ ಒಳರ್ಥ ಚೇನ್ನಾಗೆ ಗೊತ್ತಿತ್ತು. ಅವಳು ಇವನ್ನು ನೋಡಿ ನಾಚೊದು ,ಓಡೊದು ಕೈಗೆ  ಸೀಗದೆ ಪೀಡಿಸೋದು ಮಾಡೋಕೆ ಶುರು ಮಾಡಿದಳು. ಸಂಜೆ ಹೊತ್ತು ಎಲ್ಲರು ದೀಪಾ ಹಚ್ಚಿ ಹಬ್ಬ ಆಚರಿಸ್ತಾ ಇದ್ದರು. ಭಾರ್ಗವ ಭಾವಿ ಹೆಂಡತಿಯಾಗೊಳ ಜೋತೆ ದೀಪಾ ಹಚ್ತಾಯಿದ್ರೆ .ಜನ್ನಿ ಸುಮ್ನೆ ಕೂತಿದ್ದ. ಸುಮಾ ಅವನ ಕರೆದು ಬನ್ನಿ ನಾನು ದೀಪಕ್ಕೆ ಎಣ್ಣೆ ಹಾಕ್ತಿನಿ ನೀವು ಅವನೆಲ್ಲ ಹೊತ್ತಿಸಿ ಎಂದು ಕರೆದಳು. ಇಬ್ಬರು ಒಬ್ಬರಿಗೊಬ್ಬರು ಸೋತೆ ಹೋಗಿದ್ದರು. ಅದು ಪ್ರೀತಿ ಎಂದು ಇಬ್ಬರಿಗು ಅರಿವಾಗಿದ್ದು ದೀಪ ಹಚ್ಚುವಾಗ. ದೀವಿಗೆಗೆ ಎಣ್ಣೆ ಹಾಕುತ್ತಿದ್ಧ ಸುಮಾಳ ಎರಡು ಕೈ ಎಣ್ಣೆ ಮುಳುಗಿದ್ದವು. ಬೇಕಂತಲೆ ಹೋರಗೆ ದೀಪ ಹಚ್ಚದೆ ನಡುಮನೆಯಲ್ಲಿ ದೀಪ ಹಚ್ಚಲು ಬಂದಳು ,ಅವಳ ಉದ್ಧೇಶ ಏಕಾಂತದಲ್ಲಿ ಇಬ್ಬರು ಮಾತನಾಡುವುದಿರಬೇಕು. ದೀಪಕ್ಕೆ ಎಣ್ಣೆ ಹಾಕುತ್ತಿದ್ದವಳ ಸೀರೆಯ ನೇರಿಗೆ ಜಾರಿ ಹೋಯಿತು. ಮೊದಲೆ ಸೀರೆಯುಡಲು ಬರುವುದಿಲ್ಲ, ಎರಡು ಕೈ ಎಣ್ಣೆ ಮುಳುಗಿವೆ ,ಸೀರೆ ಎಣ್ಣೆ ತಾಗಿಸಿದರೆ ಅಕ್ಕನ ಕೈಯಲ್ಲಿ ಸಹಸ್ರನಾಮ ಖಂಡಿತಾ ತಪ್ಪಲ್ಲ. ದೀಪ ಹಚ್ಚುತ್ತಿದ್ದ ಜನ್ನಿಗೆ ಇದರ ಪರಿವೆ ಇರಲಿಲ್ಲ,ಒಂದು ದೀಪವನ್ನು ಕೈಯಲ್ಲಿ ಹೀಡಿದು ಉಳಿದ ದೀಪಗಳನ್ನು ಅಂಟಿಸುತ್ತಿದ್ದ. ಅಷ್ಟರಲ್ಲೆ ಕರೆಂಟ್ ಹೋಗಬೇಕೆ, ದೀಪವನ್ನು ಅವಳ ಮುಂದೆ ಮಾಡಿ ಹಿಡಿದವನೆ ದೀಪದ ಬೆಳಕಿಗೆ ಅವಳ ಮುಖವನ್ನು ಕಂಡ. ಅವಳ ಮುಖದ ಕಳವಳ ಕಂಡ ಎನಾಯಿತೆಂದು ದೀಪದ ಬೆಳಕಿನಲ್ಲಿ ಸನ್ನೆ ಮಾಡಿದ . ಸುಮಾ ಕೆಳಗೆ ನೋಡು ನನ್ನ ಕೈಯೆಲ್ಲ ಎಣ್ಣೆ ಮುಳುಗಿದೆ ಎಂದಳು. ಅವನು ಅಷ್ಟೆತಾನೆ ಎಂದು ಹಿಡಿದ ದೀಪವನ್ನು ಅವಳ ಕೈಗೆ ಕೊಟ್ಟು ಸೀರೆಯ ನೆರಿಗೆಗಳನ್ನು ಮುಡಿಚಿ ಸೊಂಟಕ್ಕೆ ಸಿಕ್ಕಿಸಿದ. ಅವಳು ಒಮ್ಮೆಲೆ ಪುಳಕಗೊಂಡವಳಂತೆ ಅವನನ್ನು ತಬ್ಬಿಹಿಡಿದಳು. ಅವನು ಅವಳ ಬಾಹುಬಂಧನದಲ್ಲಿ ಒಂದಾದ. ಮುಂದೆ ಎಲ್ಲರನ್ನು ಒಪ್ಪಿಸಿ ಭಾರ್ಗವನ ಮದುವೆ ಮಹೂರ್ತದಲ್ಲೆ ಸಮಾ ಮತ್ತು ಜನಾರ್ಧನ. ಸುಮಂಗಲಾ ಮತ್ತು ಭಾರ್ಗವ ಮದ್ವೆಯಾದರು.

ಮಾರುತಿ ಬೆಂಡ್ಲಗಟ್ಟಿ
ಹಳೂರ ಓಣಿ ಮುಂಡಗೋಡ, 
ತಾ-ಮುಂಡಗೋಡ. ಜಿ
-ಉತ್ತರ ಕನ್ನಡ. ಪಿನ್ ಕೊಡ್-581349 

ಬಿಸಿಲ ಧಗೆ

ಅಯ್ಯೋ, ಬೆಂಕಿ ಉಗುಳುತಿದೆ
ತಾಳಲಾರೆ ಉರಿಯ ಧಗೆ |
ಕಾಡಲು ಬಂದೆಯಾ ಹೀಗೆ
ಬೆಂಕಿ ಕೆಂಡದ ಬೇಸಿಗೆ ||

ಪ್ರಖರತೆ ಹೊತ್ತು ಬೆಳಕಾಯ್ತು
ಹಗಲೇ ದುಸ್ತರವಾಯ್ತು |
ಗಾಳಿ ಇಲ್ಲ, ಬಿಸಿಲೇ ಎಲ್ಲ
ಕಾಲ ಕಳೆಯದಾಯ್ತು ||

ಹಗಲ ನೋವೆ ಸಂಜೆ ನೆನಪು
ಬಿಸಿಲ ಧಗೆಗೆ ನೊಂದೆನು |
ವಿದ್ಯುತ್ ಕಡಿತ, ಹುಳುಗಳ ಕಾಟ
ಶಪಿಸಿದೆ ಬೇಸಿಗೆಯನು ನಾನು ||

ಧಾರಾಕಾರ ಬೆವರ ಧಾರೆ
ಹರಿಯುತಿದೆ ಮೈಯಲ್ಲಿ |
ತೋಯ್ದ ಬಟ್ಟೆ ಹಸಿ ಮುದ್ದೆ
ತೆಗೆದು ಹಾಕಬೇಕೆಲ್ಲಿ ||

ಹೊರಗೆ ಹೋಗದಾಗದು
ಒಳಗೆ ತುಂಬಿದೆ ಧಗೆ |
ಎಪ್ರಿಲ್, ಮೇ ಅಯ್ಯೊ, ಅಯ್ಯೋ
ಶಿವನೇ ಕಳಿಸು ಗಂಗೆ ||

ಮ.ಕೃ.ಮೇಗಾಡಿ, ೯೮೪೪೦೮೮೧೩೩