ನನ್ನ ಪುಟಗಳು

30 ಏಪ್ರಿಲ್ 2016

ಕನ್ನಡ ಭಾಷಾ ಚರಿತ್ರೆ .kannada-bhasha-charithre

ಭಾಷೆ ಎನ್ನುವುದು ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಇಂದು ವೈಜ್ಞಾನಿಕವಾಗಿ ತಿಳಿದು ಬಂದಿದ್ದರೂ ಮಾನವನ ಭಾಷೆಯು ಬೇರೆ ಯಾವುದೇ ಜೀವ ಸಮುದಾಯದ ಭಾಷೆಗಿಂತ ವಿಶೇಷವಾಗಿರುವುದು, ಸಂಕೀರ್ಣವಾಗಿರುವಂತಹುದು ಹಾಗೂ ವಿಭಿನ್ನವಾಗಿರುವಂತಹುದು.  ಯಾಕೆಂದರೆ ಬೇರೆ ಯಾವ ಪ್ರಾಣಿಗಳು ಮಾನವನ ಹಾಗೆ ಕ್ಲಿಷ್ಠಕರ ಭಾವನೆ, ವಿಷಯಗಳನ್ನೂ ಪರಸ್ಪರ ಸಂವಹನ ಮಾಡಲು ಸಾಧ್ಯವಾಗುವುದಿಲ್ಲ. ಪ್ರಖ್ಯಾತ ಪಾಶ್ಚಾತ್ಯ ಭಾಷಾ ಶಾಸ್ತ್ರಜ್ಞನಾದ ನೋಮ್ ಚೋಮಸ್ಕಿಯು ಹೀಗೆ ಹೇಳುತ್ತಾನೆ.  ಮಾನವನ ಭಾಷೆ ಹಾಗೂ ಅದನ್ನು ಕಲಿಯುವ ಸಾಮರ್ಥ್ಯ ಬೇರೆ ಪ್ರಾಣಿ ಸಂಕುಲಕ್ಕಿಂತ ಬಿನ್ನವಾದುದು ಹಾಗೂ ವಿಶಿಷ್ಟವಾದುದು. ಮಾನವನು ತನ್ನ ಪರಿಸರದಿಂದ ಸುಲಭವಾಗಿ ಭಾಷೆಯನ್ನೂ ಕಲಿಯಬಲ್ಲ. ಉದಾಹರಣೆಗೆ ಮಗುವು ತನ್ನ ಪರಿಸರವನ್ನು ಅನುಕರಿಸುತ್ತಾ ಕೇಳುತ್ತಾ ಯಾವುದೇ ಭಾಷೆಯನ್ನೂ ಸುಲಭವಾಗಿ ಕಲಿಯಬಲ್ಲದು. ಅಲ್ಲದೆ ಮಾನವನು ಒಂದಕ್ಕಿಂತ ಹೆಚ್ಚು ಭಾಷೆಯನ್ನೂ ಕಲಿತು ಉಪಯೋಗಿಸಬಲ್ಲ. ಅಲ್ಲದೆ ಅತ್ಯಂತ ದಡ್ಡ ಮಾನವನು ಕೂಡ ಯಾವುದದರೊಂದು ಭಾಷೆಯನ್ನು ಕಲಿತು ಸುಲಲಿತವಾಗಿ ಉಪಯೋಗಿಸಬಲ್ಲ. ಆದರೆ ಇದು ಇನ್ನ್ಯಾವುದೇ ಅತ್ಯಂತ ಬುದ್ದಿವಂತ ಪ್ರಾಣಿಗಳಿಂದ ಸಾಧ್ಯವಿಲ್ಲ.

ಅಲ್ಲದೆ ಮಾನವನು ಒಂದೆ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಯನ್ನೂ ತಿಳಿದಿರಬಲ್ಲ ಹಾಗೂ ಉಪಯೋಗಿಸಬಲ್ಲ. ಈ ಕಾರಣದಿಂದ ಮಾನವನ ಭಾಷೆ ಎನ್ನುವುದು ಬಹಳ ವಿಶಿಷ್ಟವಾಗಿರುವಂತಹುದು. ಹಾಗೆ ನೋಡಿದಲ್ಲಿ ಮಾನವನ್ ವಿಕಾಸ ಕ್ರಮದಲ್ಲಿ ಇದೊಂದು ಅತ್ಯಂತ ಪ್ರಮುಖ ಅನ್ವೇಷನೆಯೇ ಹೌಧು. ಈ ಭಾಷೆಯಿಂದ ಇಂದು ಮಾನವನಲ್ಲಿ ಸಾಮಾಜಿಕ ಜೀವನ, ಅಭಿವೃದ್ಧಿ ಹಾಗೂ ಪ್ರಗತಿ ಸಾಧ್ಯವಾಗಿರುವುದು. ಕೇವಲ ಸಂಪರ್ಕ ಮತ್ತು ಸಂವಹನವಲ್ಲದೆ ನಮ್ಮ ಸಂಸ್ಕೃತಿಯವಾಹಕ. ಆದುದರಿಂದಲೇ ಈ ಭಾಷೆ ಎನ್ನುವುದು ಮಾನವನಿಗೆ ಮುಖ್ಯವಾಗಿರುವುದು.

ಈ ಸತ್ಯ ಎನ್ನುವುದು ಎಲ್ಲರಿಗೂ ಎಲ್ಲ ಸಮಯದಲ್ಲೂ ಗೊತ್ತಿದ್ದೂ, ನಮ್ಮ ಪುರಾತನ ಕಾಲದಿಂದಲೂ ಮಾತನ್ನು ಹಾಗೂ ಭಾಷೆಯನ್ನು ಸರಸ್ವತಿದೇವಿಗೆ ಹೋಲಿಸಲಾಗುತ್ತಿತ್ತು.  ವಾಗ್ದೇವಿ  ಎನ್ನುವ ದೇವತೆ ಎಂದರೆ ವಾಕ್ ಶಕ್ತಿಯನ್ನುಪ್ರತಿನಿಧಿಸುವ ದೇವತೆಯಾಗಿಯೇ ಪೂಜಿಸಲಾಗುತ್ತಿತ್ತು. ನಮ್ಮ ಪುರಾತನ ಅಲಂಕಾರಿಕನಾದ ದಂಡಿಯು ಅದನ್ನು ತುಂಬಾ ಸೊಗಸಾಗಿ ಹೇಳುತ್ತಾನೆ. ಅವನು ಹೇಳುವಂತೆ ಭಾಷೆ ಎನ್ನುವುದು ಮಾತೆಂಬ ಜ್ಯೋತಿ ಬೆಳಗದೆ ಇದ್ದರೆ ತ್ರಿಲೋಕವೆಲ್ಲಾ ಅಜ್ಞಾನದ ಅಂಧಾಕಾರದಲ್ಲಿ ಇರುತ್ತಿತ್ತು.( ಇದಂ ಮಧಂ ತಮಃ……… ಜ್ಯೋತಿರಾ ಸಂಸಾರನ್ನ ದೀಪ್ಯತೆ). ಹೀಗೆ ಭಾಷೆ ಎನ್ನುವುದು ದೈವದತ್ತವೆಂದು ಮೊದಲಿಗೆ ಭಾವಿಸಲಾಗಿತ್ತು.

ಕನ್ನಡದ ಹಾಗೂ ಕರ್ನಾಟಕದ ಮಹಾತ್ಮರು ಮತ್ತು ಹೆಮ್ಮೆಯ ಪುತ್ರರಾದ ಸರ್ವಜ್ಞ ಹಾಗೂ ಬಸವಣ್ಣವರು ಕೂಡ ತಮ್ಮ ವಚನಗಳಲ್ಲಿ ಪ್ರಾಸಂಗಿಕವಾಗಿ ಭಾಷೆಯ ಮಹತ್ವವನ್ನು ಸಾರಿದ್ದಾರೆ. ಸರ್ವಜ್ಞರವರು ಭಾಷೆಯನ್ನೂ ಮಾಣಿಕ್ಯಕ್ಕೆ ಹೋಲಿಸಿದರೆ, ಬಸವಣ್ಣನವರು ಮಾತನ್ನೇ ಜ್ಯೋತಿರ್ಲಿಂಗ ಎಂದರು.

ಈ ಸತ್ಯವನ್ನು ತಿಳಿಯುವುದಕ್ಕೆ ವೇದ ವ್ಯಾಕರಣಗಳನ್ನು ಓದುವ ಅಗತ್ಯವಿಲ್ಲ, ಸಾಮಾನ್ಯ ಜನರಿಂದ ಸಾಮಾನ್ಯ ಜನರಿಗಾಗಿ ಸೃಷ್ಟಿಗೊಂಡಿರುವ ಜಾನಪದದಲ್ಲೂ ಸುಂದರವಾಗಿ ಹೇಳಲ್ಪಟ್ಟಿದ್ದೆ. ಮಾತು ಬಲ್ಲವವನಿಗೆ ಜಗಳವಿಲ್ಲ, ಮಾತು ಆಡಿದರೆ ಆಯ್ತು, ಮುತ್ತು ಹೊಡೆದರೆ ಹೋಯ್ತು, ಮಾತು ಮಾಣಿಕ್ಯದಂತೆ ಎಂಬ ಜಾನಪದ ನುಡಿಗಳು ಮಾತು ಹಾಗೂ ಭಾಷೆಯ ಮಹತ್ವವನ್ನು ಸಾರಿ ಸಾರಿ ಹೇಳುತ್ತವೆ.

ಇದು ಕೇವಲ ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ಮಾತ್ರವಲ್ಲ ಪಾಶ್ಚಾತ್ಯರಲ್ಲೂ ಕೂಡ ಕಾಣಬಹುದು. ಪ್ರಸಿದ್ಧ ಭಾಷಾಶಾಸ್ತ್ರಜ್ಞನಾದ ನೋಮ್ ಚೋಮೊಸ್ಕಿಯೂ ಭಾಷೆಯ ಬಗ್ಗೆ ಸಾಕಷ್ಟು ಅಧ್ಯಯನವನ್ನು ಮಾಡಿದ್ದರೆ.

ಇಷ್ಟು ಮುಖ್ಯವಾದ ಭಾಷೆಯ ಕುರಿತು ಈಗಾಗಲೇ ಸಾಕಷ್ಟು ಅಧ್ಯಯನ ವಿಶ್ವದಾದ್ಯಂತ ನಡೆದಿದ್ದು, ಇಂದು ಹಲವಾರು ಭಾಷಾ ಪಂಡಿತರು ಪ್ರಪಂಚದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಾಷೆಯನ್ನು ಗುರುತಿಸಿದ್ದಾರೆ.ಈ ಸಂಖ್ಯೆಯ ಬಗ್ಗೆ ಪಂಡಿತರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು  ಹೊಂದಿದ್ದರು, ಸುಮಾರು ಮೂರೂ ಸಾವಿರ ಸಂಖ್ಯೆಯಲ್ಲಿ ಭಾಷೆಯನ್ನು ಗುರುತಿಸಲಾಗಿದೆ.

ಈ ಭಾಷೆಯನ್ನು ವ್ಯಾಖ್ಯಾನಿಸುವ ಪ್ರಯತ್ನವನ್ನು ಭಾರತೀಯ ಅಲಂಕಾರಿಕರಲ್ಲದೇ ಹಲವು ಪಾಶ್ಚಾತ್ಯರು ಕೂಡ ಮಾಡಿದ್ದರೆ. ಮೊದಲಲ್ಲಿ ಭಾಷೆ ಎನ್ನುವುದು ದೈವದತ್ತವಾದುದು, ನಿಸರ್ಗದತ್ತವಾದುದು ಹಾಗೂ ವಂಶ ವಾಹಿನಿ ಎಂದು ಭಾವಿಸಲಾಗಿತ್ತು. ಆದರೆ ಈಗ ಇದು ಸಾಮಾಜಿಕತೆಯಿಂದ ಹಾಗೂ ಕಲಿಕೆಯಿಂದ ಬರುವಂತಹುದು ಎಂದು ಸಾಬೀತಾಗಿದೆ.

ಮಾರ್ಟಿ ಎಂಬಾತ ಒಂದು ಚಿತ್ತ ಸ್ಥಿತಿಯನ್ನು ಉದ್ದೇಶದಿಂದ ಕೂಡಿದ ಧ್ವನಿಗಳ ಉಚ್ಚಾರದಿಂದ ವ್ಯಕ್ತಪಡಿಸುವುದೇ ಭಾಷೆ ಎನ್ನುತ್ತಾನೆ.

ಎಡ್ವರ್ಡ್ ಸಫೀರ್ ಎಂಬಾತನು ನಮ್ಮ ವಿಚಾರಗಳನ್ನು, ಭಾವನೆಗಳನ್ನು ಹಾಗೂ ಅಪೇಕ್ಷೆಗಳನ್ನು ಸಂವಹನ ಮಾಡಲೆಂದು ಇರುವ ಸ್ವಭಾವ ಸಿದ್ಧವಲ್ಲದ ಹಾಗೂ ಮಾನವನಿಗೆ ಮಾತ್ರ ಸೀಮಿತವಾದ ಸ್ವಪ್ರೇರಿತ ಉಚ್ಚಾರಿತ ಸಂಕೇತಗಳ ವ್ಯವಸ್ಥೆಯೇ ಭಾಷೆ.

ಇದನ್ನೇ ಸ್ಟುರ್ಟ್ ವಾಂಟ್ ಎಂಬಾತನು ಮೇಲಿನ ವ್ಯಾಖ್ಯಾನವನ್ನು ಕ್ರೋಡೀಕರಿಸಿ ಹೀಗೆ ಹೇಳುತ್ತಾನೆ. ಭಾಷೆ ಎನ್ನುವುದು ಯಾದೃಚ್ಚಿಕ್ಕವಾದ ಮೌಖಿಕ ಧ್ವನಿ ಸಂಕೇತಗಳನ್ನು ಹೊಂದಿದ ವ್ಯವಸ್ಥೆಯಾಗಿದ್ಧು, ಸಮಾಜದ ಸದಸ್ಯರ ಕ್ರಿಯೆ ಮತ್ತು ಪ್ರಕ್ರಿಯೆಗಳು ಇದರಿಂದ ಸಾಧ್ಯ್ಯವಾಗಿದೆ ಇವರುಗಳ ಅನುಸಾರ ಭಾಷೆ ಎನ್ನುವುದು ಮಾನವನಿಗೆ ಮಾತ್ರ ಸೀಮಿತ ವಾದ, ಒಬ್ಬ ವ್ಯಕ್ತಿಯು ತನ್ನ ಭಾವನೆ, ಆಸೆ, ವಿಷಯ ಹಾಗೂ ಸಂದರ್ಭವನ್ನು ಮತ್ತೊಬ್ಬರಿಗೆ ಅರ್ಥೈಸಲು ಬಳಸುವ ಸಂಪರ್ಕ ಮತ್ತು ಸಂವಹನ ಸಾಧನ. ಭಾಷೆ ಎನ್ನುವುದು ಯಾಧೃಚ್ಛಿಕ ಧ್ವನಿ ಸಂಕೇತಗಳ ವ್ಯವಸ್ಥೆ, ಇದರಿಂದ ಮಾನವ ಜೀವಿ ಪರಸ್ಪರ ಸಹಕರಿಸುತ್ತದೆ.

ಈ ವ್ಯಾಖ್ಯಾನ ಭಾಷೆಯನ್ನು ಯಶಸ್ವಿಯಾಗಿ ವಿವರಿಸುವ ಯತ್ನ ಮಾಡಿದೆ ಎಂದರೆ ತಪ್ಪಲ್ಲ.

ಮೇಲಿನ ವ್ಯಾಖ್ಯಾನವನ್ನು ನಾವು ಕೆಳಕಂಡಂತೆ ಅರ್ಥ್ಯೆಸಬಹುದು.

೧. ಭಾಷೆ ಎನ್ನುವುದು ಒಂದು ವ್ಯವಸ್ಥೆ – ವ್ಯವಸ್ಥೆ ಇಲ್ಲದಿದ್ದರೆ ಅದು ಸಾರ್ವತ್ರಿಕ ಸಂವಹನ ಸಾಧನವಾಗುವುದಿಲ್ಲ. ಇದರಲ್ಲಿ ಧ್ವನಿ, ಧ್ವನಿಮಾ, ಆಕೃತಿಮಾ, ಪದ, ಪದಪುಂಜ, ವಾಕ್ಯಖಂಡಗಳು ವ್ಯವಸ್ಥಿತವಾಗಿರಬೇಕು. ಈ ಎಲ್ಲ ಘಟಕಗಳು ವ್ಯವಸ್ಥಿತ ಹೊಂದಾಣಿಕೆಯಲ್ಲಿದ್ದಾರೆ ಮಾತ್ರ ಭಾಷೆಯು ಗ್ರಾಹ್ಯವಾಗುವುದು.

ಉದಾ – ಬ್ + ಅ + ಲ್ + ಎ = ಇಲ್ಲಿ ಯಾವುದೇ ಘಟಕದ ಸ್ಥಾನಪಲ್ಲಟ ಸಾಧ್ಯವಿಲ್ಲ

ಹಾಗೆಯೇ  ನಾಮಪದ ಅಥವಾ ಸರ್ವನಾಮದ ನಂತರವೇ ಬಹುವಚನ ಪ್ರತ್ಯಯಗಳು ಬರಬೇಕು.(ರಾಮಾ+ನು, ಮರ+ಗಳನ್ನು, ಇವು ಉಲ್ಟಾ ಆದರೆ ಯಾರಿಗೂ ಅರ್ಥ ಆಗುವುದಿಲ್ಲ.

ಹಾಗೆಯೆ ಕನ್ನಡದಲ್ಲಿ ರಾಮನು ರಾವಣನನ್ನು ಕೋಂದನು. ಇಲ್ಲಿ ಕರ್ತೃ ಮೊದಲಿಗೆ ನಂತರ ಕರ್ಮ ಹಾಗೂ ಕ್ರಿಯಾ ಪದಗಳು ಬಂದಿವೆ.. ಆದರೆ ಇಂಗ್ಲೀಷ್ ನಲ್ಲಿ ravana killed by Rama ಎಂದಿದ್ದು ಇದರಲ್ಲಿ ನಮ್ಮ ವ್ಯಾಕರಣ ವ್ಯವಸ್ಥೆ ಇಲ್ಲದಿದ್ದರು, ಆ ಭಾಷೆಯ ಜಾಯಮಾನದ. ವ್ಯಾಕರಣ ಪದ್ಧತಿಗನುಸಾರವಾಗಿ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ.)

ಒಟ್ಟಿನಲ್ಲಿ ಸಂಪರ್ಕ ಹಾಗೂ ಸಂಸರ್ಗವು ವ್ಯವಸ್ಥೆ ಹಾಗೂ ಕ್ರಮಬದ್ಧತೆಯಿಂದ ಮಾತ್ರ ಸಾಧ್ಯ.
೨. ಸಂಕೇತಗಳ ವ್ಯವಸ್ಥೆ- ಸಂಕೇತಗಳು ಹಲವು ಬಗೆ. ದೃಶ್ಯ ಸಂಕೇತ ಹಾಗೂ ಧ್ವನಿ ಸಂಕೇತ. ಒಂದೊಂದು ಧ್ವನಿಯು ಒಂದೊಂದು ಅರ್ಥವನ್ನು ನೀಡುತ್ತದೆ.ಈ ಸಂಕೇತಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಮೂಲಕ ಎರಡು ಜೀವಿಗಳೂ ಸಹಕರಿಸಿ ಸಾಮಾಜಿಕತೆಯನ್ನು ಸಾಧಿಸುತ್ತವೆ. ಈ ಸಂಕೇತಗಳು ವ್ಯವಸ್ಥಿತವಾಗಿದ್ದರೆ ಮಾತ್ರ ಅದು ಸಂವಹನಕ್ಕೆ ಸೂಕ್ತವಾಗುತ್ತದೆ.ಉದಾ- ದೃಶ್ಯ್ ಸಂಕೇತವಾದ ಕೆಂಪು ದೀಪ ಅಂದರೆ ಅಪಾಯ ಅಥವಾ ನಿಲ್ಲಿಸಬೇಕು ಎನ್ನುವುದು ವ್ಯವಸ್ಥಿತವಾಗಿ ಅದರ ಬಳಕೆಗೆ ಒಳಪಡುವ ಜನರು ಅರಿತಿದ್ದರೆ ಮಾತ್ರ ಅದರ ಉಪಯೋಗ, ಇಲ್ಲದಿದ್ದರೆ ಅದರಿಂದ ಅಪಾಯವಾಗುವ ಸಾಧ್ಯತೆಯೇ ಹೆಚ್ಚು.
೩. ಧ್ವನಿ ಸಂಕೇತಗಳ ವ್ಯವಸ್ಥೆ – ಈಗಾಗಲೆ ನಮಗೆ ಎರಡು ಬಗೆಯ ಸಂಕೇತಗಳ ಅರಿವಾಗಿದೆ. ಮಾನವನು ತನ್ನ ವಿಕಾಸ ಕ್ರಮದಲ್ಲಿ ಈ ಎರಡು ಸಂಕೇತಗಳನ್ನು ನಿಸರ್ಗವನ್ನು ಅನುಸರಿಸುತ್ತಾ, ಕಲಿಯುತ್ತಾರೆ ಬೆಳೆದಿದ್ದಾನೆ. ದೃಶ್ಯ ಸಂಕೇತವು ಬಣ್ಣ, ಕೈಸನ್ನೆ, ಚಿತ್ರ ಮತ್ತು ಲಿಪಿಯನ್ನು ಒಳಗೊಂಡಿದೆ. ನಾವು ಬರೆಯುವ ಭಾಷೆಯ ಲಿಪಿಯು ದೃಶ್ಯ ಸಂಕೇತವು. ಆದರೆ ಯಾವುದೇ ಭಾಷೆಗೆ ಲಿಪಿಯು ಮುಖ್ಯವಾಗಿದ್ದರೂ ಅದು ಭಾಷೆಗೆ ತಳಪಾಯವಲ್ಲ. ಯಾಕೆಂದರೆ ಹಲವು ಭಾಷೆಗೆ ತನ್ನದೇ ಆದ ಲಿಪಿಯಿಲ್ಲದ. ಉದಾಹರಣೆಗೆ ನಮ್ಮ ಹತ್ತಿರದ ತುಳು ಭಾಷೆ. ಇಂತಹ ಭಾಷೆಯನ್ನು ಕ್ಷುಲ್ಲಕ ಭಾಷೆ’ ಎಂದು ಕರೆಯುತ್ತಾರೆ.( ಈ ಕ್ಷುಲ್ಲಕ ಎನ್ನುವುದು ಹೀನ ಅರ್ಥದಲ್ಲಿ ಉಪಯೋಗಿಸಿಲ್ಲ) ಅಲ್ಲದೆ ಅನಕ್ಷರಸ್ಥರು ಲಿಪಿಯನ್ನು ಬರೆಯಲು ಹಾಗೂ ಓದಲು ಬರುವುದಿಲ್ಲ ಆದರೆ ಭಾಷೆಯನ್ನು ಬಹಳ ಸೊಗಸಾಗಿ ಉಪಯೊಗಿಸಬಲ್ಲರು. ಹಾಗೂ ಮಕ್ಕಳು ಮೊದಲು ಮಾತನಾಡುವುದನ್ನು ಕಲಿಯುತ್ತಾರೆ ಆಮೇಲೆ ಲಿಪಿಯ ಬರೆಯಲು ಮತ್ತು ಓದಲು ಕಲಿಯುತ್ತಾರೆ. ಆದುದರಿಂದ ಭಾಷೆಯು ಮುಖ್ಯವಾಗಿ ಧ್ವನಿ ಸಂಕೇತಗಳ ವ್ಯವಸ್ಥೆ. ಲಿಪಿ ಎನ್ನುವುದು ಈ ಧ್ವನಿ ಸಂಕೇತವನ್ನು ಹಿಡಿದಿಡುವ ಸಾಧನ.

ಇದನ್ನು ಸ್ಪೋಟಕವಾದದಲ್ಲಿ ಹೀಗೆ ವಿವರಿಸಲಾಗಿದೆ. ಧ್ವನಿ ಒಂದರ ಒಂದು ಕಿವಿಯಲ್ಲಿ  ಬಿದ್ದು ಕೊನೆಯ ಧ್ವನಿ ಕಿವಿ ಮೇಲೆ ಬಿದ್ದಾಗ ಅರ್ಥವೂ ಸ್ಪೋಟಗೊಳ್ಳುತ್ತದೆ.
೪. ಯಾದೃಚ್ಛಿಕ ಧ್ವನಿ ಸಂಕೇತಗಳ ವ್ಯವಸ್ಥೆ- ಇಲ್ಲಿ ಯಾದೃಚ್ಛಿಕತೆ ಅಂದರೆ ಭಾಷೆಯಲ್ಲಿ ಯಾವುದೇ ಧ್ವನಿ ಸಂಕೇತವು ಅದು ಸೂಚಿಸುವ ವಸ್ತು, ವಿಷಯ,ಸಂದರ್ಭಗಳ ನಡುವೆ ಯಾವುದೇ ಅಂತರಿಕ ಸಂಬಂಧವಿರುವುದಿಲ್ಲ. ಆ ವಸ್ತು ಹಾಗೂ ಅದು ಸೂಚಿಸುವ ಪದದ ಅರ್ಥ ಆ ಭಾಷಾ ಕ್ಷೇತ್ರದಲ್ಲಿ ರೂಢಿಯಿಂದ ಬರುತ್ತದೆ.  ಯಾವುದೇ ಒಂದು ವಸ್ತುವನ್ನು ಒಂದು ನಿರ್ದಿಷ್ಟ ಧ್ವನಿ ಸಂಕೇತದಿಂದ ಗುರುತಿಸಲು  ಸಾಧ್ಯವಿಲ್ಲ. ಈ ಭಾಷಾ ಸಂಕೇತಗಳು ಅನುಕೂಲತ್ಮಕವಾಗಿರುತ್ತದೆ. ಉದಾಹರಣೆಗೆ – ನೀರು ಎನ್ನುವುದು ವಸ್ತು ಎಲ್ಲಾ ಕಡೆ ಒಂದೇ ಆಗಿರುತ್ತದೆ. ಆದರೆ ಅದನ್ನ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಧ್ವನಿ ಸಂಕೇತಗಳ ಮೂಲಕ ಗುರುತಿಸಲಾಗುತ್ತಿದೆ. ಹಿಂದಿಯಲ್ಲಿ ಪಾನಿ, ವಾಟರ್ ಎಂದು ಕರೆಯಲಾಗುತ್ತದೆ. ಇದು ರೂಢಿಯಿಂದ ಬರುತ್ತದೆ.
೫. ಸಾಮಾಜಿಕ ಜೀವನದ ಸಾಧ್ಯತೆ- ಮೇಲಿನ ನಾಲ್ಕು ಅಂಶ ಭಾಷೆಯ ಸ್ವರೂಪ ತಿಳಿಸಿದರೆ, ಈ ಅಂಶವು ಭಾಷೆಯ ಉದ್ದೇಶ, ಸಾರ್ಥಕತೆಯನ್ನು ತೋರುತ್ತದೆ. ಭಾಷೆಯ ಮೂಲಕ ಪರಸ್ಪರ ಸಂವಹನ ಸಾಧ್ಯವಾಗುತ್ತದೆ.ಅದರಿಂದ ಸಾಮಾಜಿಕ ಜೀವನ ಸಾಧ್ಯವಾಗಿದೆ. ಭಾಷೆ ಹಾಗೂ ಸಮಾಜದ ನಡುವೆ ಅಂತರಿಕ ಸಂಬಂಧ ವಿದ್ದು, ತಮ್ಮ ಅಸ್ತಿತ್ವಕ್ಕೆ ಪರಸ್ಪರ ಅವಲಂಬಿತವಾಗಿದೆ. ಸಮಾಜದಲ್ಲಿ ಭಾಷೆಯನ್ನು ಬಳಸುವ ಭಾಷಿಕರು ಇರಲೇಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಆ ಭಾಷೆಯು ಕಣ್ಮರೆಯಾಗುತ್ತದೆ. ಸಂಸ್ಕೃತವು ಇಂದು ಬಳಕೆಯಿಲ್ಲದೆ ಮೃತ ಭಾಷೆಯಾಗಿದೆ.

ಅಲ್ಲದೆ ಈ ಭಾಷೆಯ ಅಧ್ಯಯನದಲ್ಲಿ ಈ ಭಾಷೆಯ ಲಕ್ಷಣಗಳನ್ನು ಹಲವಾರು ಶಾಸ್ತ್ರಜ್ಞರು ಗುರುತಿಸಿದ್ದಾರೆ. ಹಾಕೆಟ್ ಎಂಬಾತನು ಭಾಷೆಯಲ್ಲಿ ಪ್ರಮುಖವಾಗಿ ೭ ಲಕ್ಷಣಗಳನ್ನು ಗುರುತಿಸಿದ್ದಾನೆ.

೧.ದ್ವಿವಿಧತೆ,೨.ಉತ್ಪಾದಕತೆ ೩. ಯಾದ್ರುಚ್ಚಿಕ್ಕತೆ ೪. ವಿಶಿಷ್ಟ ಪ್ರಾವಿಣ್ಯತೆ ೫. ಪರಸ್ಪರ ವಿನಿಮಯತೆ ೬. ಸ್ಥಾನ ಪಲ್ಲಟತೆ/ ಪರ್ಯಾಯ ಬಳಕೆ,  ೭.ಸಂಸ್ಕೃತಿವಾಹಕತೆ

೧.ದ್ವಿವಿಧತೆ :  (DUALITY)  ಯಾವುದೇ ಭಾಷೆಯು ಎರಡುಸ್ತರಗಳಲ್ಲಿ ಬಳಕೆಯಾಗುತ್ತದೆ.

1. ಧ್ವನಿಮಾ  (PHONEME) ಇದೊಂದು ಅರ್ಥವಿಲ್ಲದ ಘಟಕ ಆದರೆ ಭಾಷೆಯ ಮೂಲ ಘಟಕ. . ಶಬ್ದಕ್ಕೆ ಬಾಹ್ಯ ರೂಪವನ್ನು ನೀಡುವಂತಹುದು. ಭಾಷೆಯಲ್ಲ್ಲಿ ಉಪಯೋಗಿಸಲ್ಪಡುವ ಅಕ್ಷರಗಳೇ ಧ್ವನಿಮಾ.  ಇದು ಸಾಹಿತ್ಯದಲ್ಲಿ ಸಾಹಿತಿಗೆ ಅಭಿವ್ಯಕ್ತಿಯನ್ನು ನೀಡುವಂಹದು

2. ಆಕೃತಿಮಾ (MORPHENE) ಭಾಷೆಯ ಅರ್ಥಪೂರ್ಣಘಟಕ. ಇದು ಧ್ವನಿಮಾಗಳ ಅರ್ಥಪೂರ್ಣ ಹೊಂದಾಣಿಕೆಯ ವ್ಯವಸ್ಥೆ. ಇದು ಭಾಷೆಗೆ ಅಂತಃಸ್ವರೂಪವನ್ನು ನೀಡುತ್ತದೆ. ಧ್ವನಿಮಾ ಅಭಿವ್ಯಕ್ತಿಯ ಸಾಧನವಾದರೆ, ಆಕೃತಿಮಾ ಭಾಷೆಯ ಆಶಯದ ರೂಪಾವಾಗುತ್ತದೆ.

ಹೀಗೆ ಭಾಷೆಯಲ್ಲಿ  ಎರಡು ಮುಖಗಳನ್ನು ಕಾಣಬಹುದು. ಒಂದು ಬಾಹ್ಯ ರೂಪವಾದ್ರೆ ಇನ್ನೊಂದು ಅಂತಃ ಸ್ವರೂಪ, ಒಂದು ಅಭಿವ್ಯಕ್ತಿಯಾದರೆ ಮತ್ತೊಂದು ಆಶಯ. ಇವುಗಳು ನಾಣ್ಯದ ಎರಡು ಮುಖವಿದ್ದಂತೆ. ಭಾರತೀಯ ವಾಗ್ಮಯದಲ್ಲಿಯೇ ಮಹೋನ್ನತನಾದ ಕಾಳಿದಾಸನು ಈ ವಾಗರ್ಥದ ಸಂಬಂದವನ್ನು ಪಾರ್ವತಿ ಪರಮೇಶ್ವರರ ಅರ್ಧಾನಾರೀಶ್ವರ ಸಂಬಂದದಂತೆ ಅವಿನಾಭಾವ ಸಂಬಂದ ಎನ್ನುತ್ತಾನೆ.

೨. ಉತ್ಪಾದಕತೆ ( PRODUCTIVITY ) ಕಾಲ ಕಾಲಕ್ಕೆ ಹೊಸ ಹೊಸ ವಿಚಾರಗಳು, ವಸ್ತುಗಳು ಹಾಗೂ ಸಂದರ್ಭಗಳು ಅವಿಷ್ಕಾರವಾಗುತ್ತಿರುತ್ತವೆ. ಇಂತಹ ಹೊಸತುಗಳನ್ನು ಗುರುತಿಸಲು ಹೊಸ ಪದಗಳ, ಧ್ವನಿ ಸಂಕೆತಗಳ ಸೃಷ್ಟಿಯು ಅಗತ್ಯವಾಗುತ್ತದೆ. ಯಾವುದೇ ಜೀವಂತ ಭಾಷೆಯು ತನ್ನ ರಚನಾಂಗಗಳನ್ನು ತಿರುಚಿ, ಹೊರಳಿಸಿ ಧ್ವನಿ ಸಂಕೇತದ ಹೊಸ ಸಾಧ್ಯತೆಯನ್ನು ಸಾಧಿಸುವುದರ ಮೂಲಕವೋ, ಅಥವಾ ಪರಬಾಷೆಯ ಅನುವಾದ/ ರೂಪಾಂತರದ ಮೂಲಕವೋ ಹೊಸತನ್ನು ಗುರುತಿಸುವ ಸಾಧ್ಯತೆಯನ್ನು ಕಂಡುಕೊಳ್ಳುತ್ತದೆ. ಆ ಪದವು ಮುಂಚೆ ಇಲ್ಲದ್ದಿರಬಹುದು. ಉದಾಹರಣೆಗೆ : ಗಣಕಯಂತ್ರ, ತಂತ್ರಾಂಶ, ತಂತ್ರಜ್ಞಾನ, ಅಂತರ್ಜಾಲ, ಕಾಲುಚೀಲ ಹೀಗೆ ಹಲವು.

೩. ಯಾದ್ರುಚ್ಚಿಕತೆ (  ARBITRARINESS)  ಯಾವುದೇ ವಸ್ತು, ವಿಷಯ, ಜೀವ, ಸಂದರ್ಭಗಳಿಗೂ ಹಾಗೂ ಅವುಗಳನ್ನು ನಿರ್ದೇಶಿಸುವ ಶಬ್ದಕ್ಕೂಯಾವುದೇ ಬಗೆಯ ಅಂತರಿಕ ನೇರ ಸಂಬಂದವಿರುವುದಿಲ್ಲ.  ಆ ಭಾಷೆಗಳಲ್ಲಿ ಅರ್ಥವೂ ರೂಢಿಗತವಾಗಿ ಬರುತ್ತದೆ. ವಿಶ್ವದಾದ್ಯಂತ  ಸಾರ್ವತ್ರಿಕವಾಗಿ ವಸ್ತು ಒಂದೇ ಆದರು, ಅದರ ರಚನೇ ಒಂದೆ ತೆರನಾಗಿದ್ದರುಅದನ್ನು ಗುರುತಿಸುವ ಪದಗಳು ಭಾಷೆಯಿಂದ ಭಾಷೆಗೆ ಬೇರೆಯೇ ಆಗಿರುತ್ತದೆ.

೪. ವಿಶಿಷ್ಟ ಪ್ರಾವಿಣ್ಯತೆ (SPECIALIZATION )  ಪ್ರತಿಯೊಂದು ಭಾಷೆ ನಿರ್ದಿಷ್ಟವಾದ, ನಿಖರವಾದ ರಾಚನಿಕ ವಿನ್ಯಾಸವನ್ನು ಹೊಂದಿದೆ. ರಚನೆ ಮತ್ತು ಅರ್ಥಾಭಿವ್ಯಕ್ತಿಯ ದೃಷ್ಟಿಯಿಂದ ಭಾಷೆಗೆ ವಿಶಿಷ್ಟ ಕ್ರಮ ಪದ್ಧತಿ  ಇರುತ್ತದೆ.ಭಾಶಿಕನು ತನ್ನ ಭಾಷಾ ಕ್ಷೇತ್ರದ ಪರಿಮಿತಿಯೊಳಗೆ ಮಾತನಾದುವವನಾಗಿ, ಕೇಳುಗನಾಗಿ ಆತ ತನ್ನ ಭಾಷೆಯನ್ನೂ ಸೊಗಸಾಗಿ ಬಳಸುವ ವಿಶಿಷ್ಟ ಜ್ಞಾನವನ್ನು ಪಡೆದಿದ್ದು, ವಿಶೇಷ ಪ್ರಾವಿನ್ಯತೆಯನ್ನು ಗಳಿಸಿರುತ್ತಾನೆ. ನಿರಕ್ಷರನಿಗು ಭಾಷಾ ಬಳಕೆ ಇಂಥ ಜ್ಞಾನ ಪಡೆದಿದ್ದು ಭಾಷೆಯನ್ನೂ ವಿಶಿಷ್ಟ ರೂಪದಲ್ಲಿ ಬಳಸುವಂತವನಾಗಿರುತ್ತಾನೆ. ಉದಾಹರಣೆಗೆ: ನುಡಿಗಟ್ಟುಗಳು (IDIOMS). ಕೆಲವೊಮ್ಮೆ ಉಕ್ತವಾದ ಮಾತಿಗೂ , ಕ್ರಿಯೆಗೂ  ಹಾಗು ಅದೂ ನಿರ್ದೇಶಿಸುವ ಅರ್ಥಕ್ಕೂ ನೇರ ಸಂಬಂಧವಿಲ್ಲದಿದ್ದರೂ ರೂಡಿಯಿಂದ ಅದು ಅರ್ಥವಾಗುತ್ತದೆ. ಇದನ್ನು ಉಪಯೋಗಿಸುವ ವಿಶಿಷ್ಟ ಪ್ರಾವಿಣ್ಯತೆಯನ್ನು ಆ ಭಾಷಾ ಕ್ಷೇತ್ರದ ಭಾಷಿಕನು ಗಳಿಸಿರುತ್ತಾನೆ.

೫. ಪರಸ್ಪರ ವಿನಿಮಯತೆ (INTERCHANGEABILITY)  ಒಂದು ಭಾಷೆಯನ್ನೂ ಬಳಸುವವರಲ್ಲಿ ಆ ಭಾಷಾ ಚೌಕಟ್ಟಿನಲ್ಲಿಯೇ ಪರಸ್ಪರ ಒಡನಾಟ ಮತ್ತು ವ್ಯವಹಾರ ಸಾಧ್ಯ. ಒಬ್ಬ ಭಾಷಿಕನಿಗೆ ಆ ಭಾಷೆಯನ್ನೂ ಬಲ್ಲ ಮತ್ತೋರ್ವ ಭಾಷಿಕನು ಅರ್ಥಪೂರ್ಣವಾಗಿ ಪ್ರತಿಕ್ರಿಯಿಸಬಲ್ಲ. ಉದಾಹರಣೆಗೆ  ವಡೆ ಎಂದರೆ ಏನು ಅಂತ ಆ ಭಾಷಾ ಚೌಕಟ್ಟಿನಲ್ಲಿರುವವರಿಗೆ ಮಾತ್ರ ಗೊತ್ತಿರುತ್ತದೆ.  ಹಾಗೆಯೇ ನಮ್ಮ ಮಂಡ್ಯದ ಕಡೆ ಮಾಂಸದ ಊಟವನ್ನು ಬಾಡೂಟ ಎನ್ನುತ್ತೇವೆ. ಇದು ಬೇರೆಯವರಿಗೆ ಬಾಡು ಅಂದರೆ ಏನು ಅಂತ ಗೊತ್ತೇ ಇರುವುದಿಲ್ಲ.  ಆದುದರಿಂದ ಒಬ್ಬ ಭಾಶಿಕನು ಭಾಷೆಯ ಸಂಕೇತಗಳನ್ನು ಸ್ವೀಕರಿಸುವ ಮತ್ತು ಪ್ರಸಾರ ಮಾಡುವ ಪರಸ್ಪರ ವಿನಿಮಯ ಸಾಮರ್ಥ್ಯವನ್ನು ಯಾವುದೇ ಭಾಷಾ ಸಮಾಜದ ವ್ಯಕ್ತಿಗಳು ಹೊಂದಿರುತ್ತಾರೆ.

೬.ಸ್ಥಾನ ಪಲ್ಲಟತೆ/ಪರ್ಯಾಯ ಬಳಕೆ (DISPLACEMENT )  ಉಲ್ಲೇಖಗೊಂಡ ವ್ಯಕ್ತಿ, ವಸ್ತು,ಸಂಗತಿ ಈಗ ಇಲ್ಲದಿರಬಹುದು. ಆದರೆ ಆ ಮೂಲಕ ಪರೋಕ್ಷ  ಸೂಚನೆ ನಿಡುವ ಸಾಧ್ಯತೆಭಾಷೆಗಿದೆ. ಆ ಸಂದಂರ್ಭ ಅಥವಾ ವಸ್ತು ಕಣ್ಣೆದರು ಇಲ್ಲದಿದ್ದಾಗ್ಯು ನಾವದನ್ನು ಭಾಷೆಯ ಮೂಲಕ ಅಭಿವ್ಯಕ್ತಿಸಬಲ್ಲೆವು ಹಾಗೂ ಅರ್ಥ ಮಾಡಿಕೊಲ್ಲಬಲ್ಲೆವು. ಉದಾಹರಣೆಗೆ: ನರಕ, ಸ್ವರ್ಗ, ಲಕ್ಷ್ಮಣ ರೇಖೆ, ಇನ್ನೀತರ ಅಮೂರ್ತವಾದ ವಸ್ತುಗಳು.

೭. ಸಂಸ್ಕೃತಿ ವಾಹಕತೆ ( CULTURAL  TRANSMISSION )  ಭಾಷೆಯೂ ಒಬ್ಬ ವ್ಯಕ್ತಿಯ,ಒಂದು ಜನಾಂಗದ, ತಲೆಮಾರಿನ ಅಥವಾ ಪ್ರದೇಶದ ಜ್ಞಾನ, ಅನುಭವ ಹಾಗೂ ಸಂಸ್ಕೃತಿಯನ್ನು ಮತ್ತೊಂದು ಜನಾಂಗಕ್ಕೆ, ತಲೆಮಾರಿಗೆ, ಪ್ರದೇಶಕ್ಕೆ, ಅಥವಾ ವ್ಯಕ್ತಿಗೆ ಪ್ರಸರಣ ಮಾಡುವ ಮುಖ್ಯ ಸಾಧನವಾಗಿದೆ.

ಹಾಕೆಟ್ ಗುರುತಿಸಿರುವ ಮೇಲಿನ 7 ಭಾಷೆಯ ಲಕ್ಷಣಗಳನ್ನೂ ಅಲ್ಲದೆ ಕೆಳಕಂಡ ಲಕ್ಷಣಗಳನ್ನು ನಾವು ಗುರುತಿಸಬಹುದು.

    ಭಾಷೆ ಆಡುವವನ ಆಸ್ತಿ, ಇದು ಪರಿಸರದಿಂದ ಕಲಿಕೆ.
    ಭಾಷೆ ಒಂದು ಸಾಮಾಜಿಕ ಕ್ರಿಯೆ. ಭಾಷೆಯ ಅಳಿವು ಉಳಿವು ಆ ಸಮಾಜವನ್ನು ಅವಲಂಬಿಸಿರುತ್ತದೆ.
    ಭಾಷೆ ನಿತ್ಯ ಪರಿವರ್ತನ ಶೀಲ
    ಭಾಷೆಗೆ ತನ್ನದೇ ಆದ ಇತಿಹಾಸ, ಸಂಸ್ಕೃತಿ ಇರುತ್ತದೆ.

ಈ ಮೇಲಿನ ಲಕ್ಷಣಗಳಲ್ಲದೆ ಭಾಷೆ ಹಾಗೂ ಸಮಾಜದ ನಡುವಿನ ಪರಸ್ಪರ ಸಂಬಂಧ.

ಇಷ್ಟು ಸಂಖ್ಯೆಯ ಭಾಷೆಯನ್ನು ಅಧ್ಯಯನದ ಅನುಕೂಲಕ್ಕಾಗಿ ವರ್ಗೀಕರಣ ಮಾಡಬೇಕಾಗಿದ್ದು, ಭಾಷಾ ಶಾಸ್ತ್ರಜ್ಞರು ಹಲವು ಬಗೆಯಲ್ಲಿ ವರ್ಗೀಕರಿಸಿರುತ್ತಾರೆ.

ಸ್ಥೂಲವಾಗಿ ನಾವು ಭಾಷೆಯನ್ನೂ ಜೀವಂತ ಭಾಷೆ (ಬಲ್ಕೆಯಲ್ಲಿರುವುವುದು)ಮತ್ತ್ತು ಮೃತ ಭಾಷೆ (ಸಾಮಾನ್ಯರ ಬಳಕೆಯಿಂದ ಮಾಯವಾಗಿರುವ) , ಅಥವಾ ಶಿಷ್ಟ ಭಾಷೆ (ಲಿಪಿ ಇರುವುದು) ಮತ್ತು ಕ್ಷುಲ್ಲಕ ( ಲಿಪಿ ಇಲ್ಲದ) ಭಾಷೆಯೆಂದು ಬೇಧವನ್ನು ಮಾಡಬಹುದು.

ಜಗತ್ತಿನಲ್ಲಿ ಸುಮಾರು ೩೦೦೦ ದಿಂದ ೧೨ ಸಾವಿರ ಭಾಷೆಗಳು ಇರಬೇಕೆಂದ ಅಂದಾಜು ಮಾಡಲಾಗಿದೆ.

ಡಾ।। ಕೆ.ಕೆಂಪೇಗೌಡರು ತಮ್ಮ ” ಭಾಷೆ ಮತ್ತು ಭಾಷಾ ವಿಜ್ಞಾನ”ಕೃತಿಯಲ್ಲಿ ಸುಮಾರು ೧೦೦೦೦ ಭಾಷೆಗಲಿರಬೇಕೆಂದು ಅಂದಾಜಿಸಿದ್ದಾರೆ.

ಡಾ।। ಸಂಗಮೇಶ ಸಮದತ್ತಿಮತ RQVARU ತಮ್ಮ ” ದ್ರಾವಿಡ ಭಾಷಾ ವ್ಯಾಸಾಂಗದಲ್ಲಿ ” ಸುಮಾರು ೧೨೦೦೦ ಭಾಷೆಗಳಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಸುಮಾರು ೩೦೦೦ ದಿಂದ ೫೦೦೦ ರದವರೆಗೆ ಭಾಷೆಗಳ ಸಂಖ್ಯೆ ಇರಬೇಕೆಂಬುದು ಎಲ್ಲರ ಸಹಮತ.

ಈ ಭಾಷೆಗಳನ್ನು ಭೌಗೋಳಿಕ, ಜನಾಂಗಿಕ,ರಚನಾತ್ಮಕ, ಹಾಗೂ ವಾಂಶಿಕ ಆಧಾರದ ಮೇಲೆ ವರ್ಗಿಕರಿಸಲಾಗಿದೆ.

ಭೂ ಖಂಡಗಳ, ದೇಶ ಮತ್ತು ಪ್ರದೇಶಗಳ ಆಧಾರದ ಮೇಲೆ. ಭೌಗೋಳಿಕ ವರ್ಗೀಕರಣ

– ಇದು ಅಸಮಂಜಸ ಮತ್ತು ಅವೈಜ್ಞಾನಿಕ ವರ್ಗೀಕರಣ

– ಒಂದೇ ಪ್ರದೇಶದಲ್ಲಿ ಹಲವು ಬಿನ್ನ ಭಾಷೆಗಳು ಬಿನ್ನ ಅಂತರಿಕ ಸ್ವರೂಪಗಳಿಂದ ಕೂಡಿರಬಹುದು

– ವಲಸೆಗಳು

ಜನಾಂಗಿಕ ವರ್ಗೀಕರಣ –  ಜಾತಿ, ಧರ್ಮ, ಜನಾಂಗ, ಮತ್ತು ಸಮಾಜದ ಆಧಾರದ ಮೇಲೆ\

– ಇದು ಅಸಮರ್ಪಕ ವರ್ಗೀಕರಣ

– ಯಾಕೆಂದರೆ ಒಂದೆ ಜನಾಂಗದವರು ಹಲವು ಭಾಷೆಗಳನ್ನು ಉಪಯೋಗಿಸುತ್ತಾರೆ. ಉದಾರಹಣೆಗೆ ಭಾರತದಲ್ಲಿ ಒಂದೆ ಸಮುದಾಯದವರು ಬೇರೆ ಬೇರೆ ಭಾಷೆಯ ಬಳಕೆ

ರಾಚನಿಕ ವರ್ಗೀಕರಣ : ಭಾಷೆಯ ಧ್ವನಿ, ಪದ, ವ್ಯಾಕರಣ, ವಾಕ್ಯ ರಚನೆ ಆಧಾರದ ಮೇಲೆ ವರ್ಗಿಕರಿಸಲಾಗಿದೆ. ಎದು ಭಾಷೆಯ ರಚನೆಯ ಸ್ವರೂಪದ ಆಧಾರದ ಮೇರೆಗೆ.

ಇದರಲ್ಲಿ ಐದು ಉಪಗುಂಪುಗಳನ್ನೂ ಗುರುತಿಸಬಹುದು. ೧. ವಿವಿಕ್ತ ಭಾಷಾ ವರ್ಗ 2. ಅಂಟು ಭಾಷಾ ವರ್ಗ, ೩. ಪ್ರಾತ್ಯಾಯಿಕ ಭಾಷಾ ವರ್ಗ ೪. ಬಹು ಪದಯುಕ್ತ ಭಾಷಾ ವರ್ಗ, ೬.ಅಂತರ್ಗರ್ಮಕ ಭಾಷಾ ವರ್ಗ. ಮೊದಲಲ್ಲಿ ಈ ವರ್ಗೀಕರಣಕ್ಕೆ ಮಾನ್ಯತೆ ಕೊಡಲಾಯಿತು.

ಆದರೆ ಜಗತ್ತಿನ ಎಲ್ಲ ಭಾಷೆಗಳನ್ನು ಮೇಲಿನ ಐದು ಗುಂಪುಗಳಲ್ಲಿ ಅಳವಡಿಕೆ ಅಸಾಧ್ಯವಾಯಿತು. ಅಲ್ಲದೆ ಹಲವು ಭಾಷೆಗಳಲ್ಲಿ ಒಂದಕ್ಕಿಂತ ಹೆಚ್ಚು ವರ್ಗಗಳ ಗುಣಲಕ್ಷಣಗಳು ಕಂಡು ಬಂದು ಗೊಂದಲಕ್ಕಿಡು ಮಾಡಿದ ಕಾರಣ ಈ ವರ್ಗೀಕರಣವನ್ನು ಬಿಡಲಾಯಿತು.

ವಾಂಶಿಕ ವರ್ಗೀಕರಣ – ಇದು ಬೇರೆ ವರ್ಗೀಕರಣಕ್ಕಿಂತ ಹೆಚ್ಚು ಸಮರ್ಪಕ, ಸೂಕ್ತ ಹಾಗೂ ಉಪಯುಕ್ತ. ಇದರ ಅನುಸಾರ ಅನೇಕ ಭಾಷೆಗಳು ಒಂದೆ ಮೂಲದಿಂದ ರುಪುಗೊಂಡು ಕ್ರಮೇಣ ಪ್ರತ್ಯೇಕ ಕವಾಲುಗಳಾಗಿ ಭಿನ್ನಭಿನ್ನ ಭಾಷೆಗಳಾಗಿ ಅಸ್ತಿತ್ವ ಪಡೆದುಕೊಳ್ಳುತ್ತವೆ.

ಒಂದು ಭಾಷೆಯನ್ನಾಡುವ ಸಮುದಾಯದ ಸಣ್ಣ ಗುಂಪೊಂದು ಯಾವುದೋ ಕಾರಣಕ್ಕೆ ಬೇರೆಡೆ ನೆಲೆಸಿದಾಗ, ಭೌಗೋಳಿಕ, ಸಾಮಾಜಿಕ, ರಾಜಕೀಯ ಕಾರಣಗಳಿಂದಾಗಿ ಪರಸ್ಪರ ಸಂಪರ್ಕ ಕಡಿದು ಹೋದರೆ, ಕಾಲ ಕ್ರಮೇಣ ಒಂದೆ ಭಾಷೆಯಾದರೂ ಅವುಗಳ ನಡುವೆ ವ್ಯತ್ಯಾಸ ಉಂಟಾಗುತ್ತದೆ;

– ವ್ಯತ್ಯಾಸಗಳು ಕಡಿಮೆ ಇದ್ದು ಹೋಲಿಕೆ ಜಾಸ್ತಿ ಇದ್ದಾಗ = ಉಪಭಾಷೆ

– ವ್ಯತ್ಯಾಸಗಳು ಜಾಸ್ತಿಆಗಿ ಹೋಲಿಕೆ ಕಡಿಮೆ ಆದಾಗ = ಸ್ವತಂತ್ರ ಭಾಷೆ ( ಸ್ವತಂತ್ರವಾದರೂ ಮೂಲ ಭಾಷೆಗೆ ಸಂಬಂಧಿಸಿದಂತೆ ಭಾಹ್ಯ ಮತ್ತು ಅಂತರಿಕ್ ರಚನೆಗಳಲ್ಲಿ ಹೋಲಿಕೆ ಇದ್ದೆ ಇರುತ್ತದೆ. ಹೇಗೆಂದರೆ ಅಣ್ಣತಮ್ಮಂದಿರು ಬೇರೆಯೇ ಆದರೂ ಗುಣ ಮತ್ತು ರೂಪದಲ್ಲಿ ಸ್ವಲ್ಪ ಹೋಲಿಕೆ ಇದ್ದಂತೆ). ಹೀಗೆಯೇ ಹೋಲಿಕೆ ಇರುವ ಭಾಷೆಗಳನ್ನು ಒಂದು ಭಾಷಾ ಪರಿವಾರಕ್ಕೆ ಸೇರಿಸಲಾಗುತ್ತದೆ. ಈ ಹೋಲಿಕೆಗಳು ಆ ಭಾಷೆಗಳ ಮೂಲಭೂತ ಅವಶ್ಯಕ ಶಬ್ದಗಳಾದ ದೇಹಾಂಗಗಳು, ಸಂಬಂಧಸೂಚಕ, ಸಂಖ್ಯಾವಾಚಕ, ಆಹಾರ ಪದಾರ್ಥಗಳು ಮುಂತಾದವುಗಳಲ್ಲಿ ಕಂಡುಬರುತ್ತದೆ.

ಈ ವರ್ಗೀಕರಣದಲ್ಲಿ ಭಾಷೆಗಳ ಸೋದರ ಸಂಬಂದವನ್ನು ಹಾಗೂ ಮೂಲವನ್ನು ಗುರುತಿಸಬಹುದು. ಅಲ್ಲದೆ ಮಾನವ ಕುಲದ ವಲಸೆಯ ಹೆಜ್ಜೆಯನ್ನು ಗುರುತಿಸಲು ಕೂಡ ಸಹಾಯ ಮಾಡುತ್ತದೆ.

ಈ ವಾಂಶಿಕ ವರ್ಗೀಕರಣದಲ್ಲಿ ಹಲವು ಭಾಷ ಪರಿವಾರಗಳನ್ನು ಗುರುತಿಸಲಾಗಿದೆ. ಥಾಮಸ್ ಗ್ರೆ ಮತ್ತು ಹಂಬೂಲ್ -೧೪, ಪ್ಯಾಟ್ರಿಡ್ಜ್ – ೧೦ ಮತ್ತು ಅಮೆರಿಕಾದ ಇಂಡಿಯಾನ ವಿಶ್ವವಿದ್ಯಾಲಯದ ಭಾಷಾ ಶಾಸ್ತ್ರವಿಭಾಗ – 7 ಭಾಷಾ ಪರಿವಾರಗಳನ್ನು ಗುರುತಿಸಿದೆ. ನಿದರ್ಶನಕ್ಕಾಗಿ ಕೆಲವು ಕೆಳಕಂಡಂತೆ.

    ಆಫ್ರೋ-ಏಷ್ಯಾಟಿಕ್ ಭಾಷಾ ವರ್ಗ – ಹೀಬ್ರೋ,ಅರೇಬಿಕ್, ಈಜಿಪ್ತಿಯನ್ ಇತ್ಯಾದಿ
    ಸೈನೋ – ಟಿಬೆಟಿಯನ್ನ – ಚೀನಿ,ಬರ್ಮನ್,ಟಿಬೆಟಿಯನ್
    ಆಲ್ಟ್ಎಯಿಕ್
    ಇಂಡೋ-ಯುರೋಪಿಯನ್ ( ಅತಿ ದೊಡ್ಡ ಭಾಷ ವರ್ಗ)
        ಜರ್ಮಾನಿಕ್, ರೋಮನ್,ಕೆಲ್ಟಿಕ್ ಭಾಷೆಗಳು
        ಇಂಡೋ-ಆರ್ಯನ್ ಭಾಷೆಗಳು
    ದ್ರಾವಿಡ ಭಾಷಾ ಪರಿವಾರ

ಇದರಲ್ಲಿ ಇಂಡೋಆರ್ಯನ್ ಬಾಷಾವರ್ಗಕ್ಕೆ ಹಾಗೂ ದ್ರಾವಿಡ ಬಾಷಾವರ್ಗಕ್ಕೆ ಸೇರಿದ ಭಾಷೆಗಳು ನಮಗೆ ಪ್ರಮುಖವಾಗುತ್ತದೆ. ಇಂಡೋ ಆರ್ಯನ್ ಭಾಷೆಗೆ ಸೇರಿದ್ದವು ಸಂಸ್ಕೃತ, ಹಾಗೂ ಸಂಸ್ಕೃತಜನಿತ ಭಾಷೆಗಳು. ಇವು ಹಿಂದಿ, ಬೆಂಗಾಲಿ, ಮರಾಠಿ ಮುಂತಾದವುಗಳಾದರೆ, ಕನ್ನಡ,ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಗಳು ದ್ರಾವಿಡ ಭಾಷಾವರ್ಗಕ್ಕೆ ಸೇರಿರುವ ಭಾಷೆಗಳು.

ದ್ರಾವಿಡ ಭಾಷಾ ಪರಿವಾರದಲ್ಲಿ ೧೫೩ ಭಾಷೆಗಳಿವೆ

ಹೀಗೆ ಇಂಡೊ ಆರ್ಯನ್ ಭಾಷೆಗಳಿಂದ ಬೇರೆಯೇ ಅಸ್ತಿತ್ವವನ್ನು ಹೋಂದಿರುವ ದ್ರಾವಿಡ ಭಾಷೆಗಳು ಇಂದು ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಹಿಂದೆ ಈ ದ್ರಾವಿಡ ಭಾಷೆಗಳು ಭಾರತದಾದ್ಯಂತ ಹರಡಿತ್ತು ಎಂಬುದಕ್ಕೆ ಹಲವು ಸಾಕ್ಷ್ಯ ಗಳಿವೆ. ಈಗಲೂ ಮಧ್ಯ ಭಾರತದಲ್ಲಿ ಹಾಗೂ ಇಂದಿನ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ದ್ರಾವಿಡ ಮೂಲದಿಂದ ರೂಪಿತಗೋಂಡ ಭಾಷೆಗಳನ್ನು ಭಾಷಾವಿಜ್ಞಾನಿ ಗಳು ಗುರುತ್ತಿಸಿದ್ದಾರೆ. ಆದರೆ ಈಗ ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಇಂದಿನ ಪಾಕಿಸ್ತಾನದ ಬಲುಚಿಸ್ತಾನದಲ್ಲಿ ಕಂಡುಬರುವ ಬ್ರಾಹುಈ ಭಾಷೆಯ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದುದು.  ಇಂದಿನ ಉತ್ತರ ಭಾರತದಲ್ಲಿ ಕುರುಖ್, ಮಾಲ್ತೊ ಭಾಷೆಗಳು ದ್ರಾವಿಡ ಗುಂಪಿಗೆ ಸೇರಿದವು.

ಮಧ್ಯ ಭಾರತದಲ್ಲಿ -ಕುಈ, ಕುವಿ, ಪೆಂಗೂ, ಕೊಲಾಮಿ, ಕೊಂಡ, ಪರ್ಜಿ ಮುಂತಾದವುಗಳು

ದಕ್ಷಿಣ ಭಾರತದಲ್ಲಿನ ಕನ್ನಡ, ತಮಿಳು, ತೆಲುಗು, ಮಲಯಾಳಂ,ತುಳು, ತೊದ,ಬಡಗ, ಕೊಡವ, ಇತ್ಯಾದಿ ಇವುಗಳು ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಭಾಷೆಗಳು.

ಡಾ|। ರಾಬರ್ಟ್ ಕಾಲ್ಡ್ ವೆಲ್- ದ್ರಾವಿಡ ಭಾಷೆಯನ್ನೂ ಅಧ್ಯಯನವನ್ನು ಮಾಡಿದ ಪ್ರಥಮರು ಎಂದರೆ ತಪ್ಪಲ್ಲ. ಇವರು ೧೨ ದ್ರಾವಿಡ ಭಾಷೆಗಳನ್ನು ಗುರುತಿಸಿದ್ದರು.

ರಾಬರ್ಟ್ ಅಲ್ಲದೆ ಹಲವರು ನಂತರದಲ್ಲಿ ದ್ರಾವಿಡ ಭಾಷೆಯನ್ನೂ ಅಧ್ಯಯನವನ್ನು ನಡೆಸಿದ್ದರು.

ಇವರುಗಳು ದ್ರಾವಿಡ ಭಾಷೆಗೆ ಸಹಸ್ರಾರು ವರುಷಗಳ ಇತಿಹಾಸವನ್ನು ಗುರುತಿಸಿದ್ದರು. ದ್ರಾವಿಡರು ಭಾರತ ಖಂಡದ ಮೂಲ ನಿವಾಸಿಗಳು ಹಾಗೂ ಆರ್ಯರು ನಂತರ ಬಂದವರು ಎಂದು ವಾದಿಸಿದ್ದರು. ಕೆಲವರು ಹರಪ್ಪ ಮೊಹೆಂಜದಾರು ನಾಗರಿಕತೆಯ ಭಾಷೆಯು ದ್ರಾವಿಡದ್ದೇ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ  ಆ ನಾಗರಿಕತೆಯ ಲಿಪಿಯೂ ಇನ್ನು ಬಿಡಿಸಲಾಗದ ಗಂಟು ಆಗಿರುವುದರಿಂದ ಈ ಅಭಿಪ್ರಾಯವನ್ನು ಸಧ್ಯಕ್ಕೆ ಒಪ್ಪಲಾಗುವುದಿಲ್ಲ.

ಅದೇನೇ ಇದ್ದರೂ ಇಂದು ದ್ರಾವಿಡ ಭಾಷೆಗಳು ಕೇವಲ ಭಾರತದಲ್ಲದೆ ವಿಶ್ವ ಮಟ್ಟದಲ್ಲಿಯೇ ಪ್ರಮುಖ ಭಾಷೆಗಳಾಗಿವೆ. ೨೦ ಕೋಟಿಗೂ ಹೆಚ್ಚು ಜನರು ಎಂದು ದ್ರಾವಿಡ ಭಾಷೆಯನ್ನೂ ಬಳಸುತ್ತಾರೆ. ಇಂದು ಪ್ರಮುಖವಾಗಿ ದಕ್ಷಿಣ ಭಾರತದಲ್ಲ್ಲಿ ಉಪಯೋಗಿಸಲ್ಪಟ್ಟರು, ದ್ರಾವಿಡ ಭಾಷೆಯನ್ನೂ ಮಾತನ್ನಾಡುವವರು ಇಂದು ವಿಶ್ವದಾದ್ಯಂತ ಹರಡಿದ್ದಾರೆ. ಆದುದರಿಂದಲೇ ಇಂದು ಪ್ರಮುಖ ಸಾಫ್ಟ್ ವೇರ್ ಹಾಗೂ ಇಲೆಕ್ಟ್ರಾನಿಕ್ ತಂತ್ರಾಂಶಗಳಲ್ಲಿ ದ್ರಾವಿಡ ಭಾಷೆಯ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಇಂದು ದೇಶದಾದ್ಯಂತ ಮಾನ್ಯತೆ ನೀಡಿರುವ ಅಭಿಜಾತ ಭಾಷೆ ಅಥವಾ ಶಾಸ್ತ್ರೀಯ ಭಾಷೆಗಳಲ್ಲಿ ದ್ರಾವಿಡ ಭಾಷೆಗಳೇ ಸಿಂಹಪಾಲು ಪಡೆದಿವೆ. ಪ್ರಮುಖ ದ್ರಾವಿಡ ಭಾಷೆಗಳು ಇಂದು ಶಾಸ್ತ್ರೀಯ ಭಾಷೆಗಳೆಂದು ಮಾನ್ಯತೆ ಪಡೆದಿವೆ.

ಮುಂಚೆ ಕನ್ನಡ ಹಾಗು ಇತರ ದ್ರಾವಿಡ ಭಾಷೆಗಳನ್ನು ಸಂಸ್ಕೃತದ ಮೂಲದಿಂದ ಜನಿತಗೊಂಡ ಭಾಷೆಗಳೆಂದು ತಿಳಿಯಲಾಗಿತ್ತು. ಯಾಕೆಂದರೆ ಕೆಲವು ದ್ರಾವಿಡ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಭಾರೀ ಪ್ರಮಾಣದಲ್ಲಿಯೇ ಕಂಡು ಬರುತ್ತದೆ. ನಮ್ಮ ಕನ್ನಡ ಭಾಷೆ ಹಾಗೂ ಸಾಹಿತ್ಯದ ರೂಪ ಮತ್ತು ವಸ್ತುವೀನ ಮೇಲೆ ಸಂಸ್ಕೃತದ ದತ್ತ ಪ್ರಭಾವವನ್ನು ಕಾಣಬಹುದು. ಇದು ಒಂದು ರೀತಿಯಲ್ಲಿ ಸಂಸ್ಕೃತದಿಂದ ದೊರೆತ ಕೊಡುಗೆ ಎಂದರೆ ತಪ್ಪಲ್ಲ.

ಈಗ ಕನ್ನಡ ಹಾಗೂ ಸಂಸ್ಕೃತ ಬಾಷೆಗಳು ಬೇರೆ ಬೇರೆ ಮೂಲದಿಂದ ಸೃಷ್ಟಿಗೊಂದವು ಎಂದು ಸಾಕ್ಷ್ಯಧಾರಿತಗಳ ಮೂಲಕ ನಿರೂಪಿತಗೊಂಡಿವೆ. ಇದನ್ನು ಮೊಟ್ಟ ಮೊದಲ ಬಾರಿಗೆ ಹೇಳಿದ್ದು ಸರ್ ಪ್ರಾನ್ಸಿಸ್ ವೈಟ್ ಎಲ್ಲಿಸ್. ನಂತರದಲ್ಲಿ ರಾಸ್ ಮಾಸ್ಕ್ ರಾಸ್ ಮತ್ತು ರಾಬರ್ಟ್ ಕಾಲ್ಡ್ ವೆಲ್

ಕನ್ನಡ ಅಥವಾ ದ್ರಾವಿಡ ಭಾಷೆಗಳು ಸಂಸ್ಕೃತ ಅಥವಾ ಇಂಡೋ ಆರ್ಯನ್ ಭಾಷೆಗಳಿಗಿಂತ ಹೇಗೆ ಭಿನ್ನ ಎಂಬುದು ನಾವು ಧ್ವನಿಮಾ, ಆಕೃತಿಮಾ ನೆಲೆ ಮತ್ತು ವಾಕ್ಯ ವಿನ್ಯಾಸದ ನೆಲೆಗಳಲ್ಲಿ ಕಂಡುಕೊಳ್ಳಬಹುದು.

ಧ್ವನಿಮಾ ನೆಲೆ : ಅಕ್ಷರಗಳು, ಅರ್ಥವಿಲ್ಲದ ಘಟಕ ಆದರೆ ಅರ್ಥ ಕೆಡಿಸಬಹುದು.

ಉದಾಹರಣೆಗೆ:-

೧.ಸ್ವರ

ಸಂಸ್ಕೃತದಲ್ಲಿ ಎ, ಒ ಎಂಬ ಹ್ರಸ್ವಸ್ವರಗಳಿಲ್ಲ,

ಸಂಸ್ಕೃತದ ಋ, ಐ ಮತ್ತು ಔ ಮೂಲ ದ್ರಾವಿದದಲ್ಲಿಲ್ಲ, ನಂತರ ಸ್ವಿಕರಿಸಿದ್ದು

2.ಯೋಗವಾಹಕ : ಕನ್ನಡದಲ್ಲಿ ಅಂ ಎಂಬ ಒಂದು ಯೋಗವಾಹಕವಿದೆ. ಸಂಸ್ಕೃತದಲ್ಲಿ ಬಿಂದು (ಅಂ), ವಿಸರ್ಗ (ಅಹ)(ಅ:) ಅಲ್ಲದೆ ಇನ್ನು ಎರಡು ಒಟ್ಟು ನಾಲ್ಕಿದೆ.

೩. ವರ್ಗೀಯ ವ್ಯಂಜನ

ಟ, ಠ, ಡ, ಢ, ಣ ದ್ರಾವಿಡದ ವಿಶಿಷ್ಟ ಧ್ವನಿಮಾಗಳು

ಈ ಬಗೆಯ ದ್ವನಿಮಾಗಳು ಬಹಳಷ್ಟು ಇಂಡೋ ಆರ್ಯನ್ ಭಾಷೆಗಳಲ್ಲಿ ಇಂದಿಗೂ ಇಲ್ಲ. ಸಂಸ್ಕೃತದಲ್ಲಿ ಇದು ಕಂಡು ಬರುತ್ತದೆ. ಇದು ದ್ರಾವಿಡದ ಪ್ರಭಾವದಿಂದ ಇರಬೇಕು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ದ್ರಾವಿದದಲ್ಲಿ ಮಹಾಪ್ರಾಣ ಅಕ್ಷರಗಳಾದ ಖ, ಛ, ಥ, ಫ,ಘ, ಝ, ಧ ಭ  ಮೂಲದಲ್ಲಿ ಇಲ್ಲ.

೪. ಅವರ್ಗೀಯ ವ್ಯಂಜನಗಳು :ದ್ರಾವಿಡದಲ್ಲಿ ಳ ಎಂಬ ದ್ವನಿಮಾ ಇದೆ. ಅಲ್ಲದೆ ಹಳಗನ್ನಡದಲ್ಲಿ ವಿಶಿಷ್ಟ ಬಗೆಯ ಳ ಮತ್ತು ರ ದ್ವನಿಮಾಗಳು ಇವೆ. ಈಗ ಈ ಧ್ವನಿಮಾಗಳನ್ನೂ ಉಪಯೋಗಿಸದೇ ಮರೆಯಲಾಗಿದೆ.

ಳ ಕುರಿತು ಕೇಶಿರಾಜನು ತನ್ನ “ಶಬ್ದಮಣಿದರ್ಪಣ”ದಲ್ಲಿ ಕನ್ನಡದ ಅಸಾಧಾರಣ ಲಕ್ಷಣಗಳನ್ನು ವಿವರಿಸುತ್ತಾ ಹಳಗನ್ನಡದ ಳ ಮತ್ತು ರ ಹಾಗೂ ಳ ಕುರಿತು ಪ್ರಸ್ತಾಪಿಸುತ್ತೇನೆ. ಮ’ಳೆ’ ಹಾಗೂ ಬಿ’ಳೆ’ಗಳಲ್ಲಿಯ ಳ ಅಚ್ಚ ಕನ್ನಡದ್ದು ಎನ್ನುತ್ತಾನೆ.

ಕನ್ನಡದಲ್ಲಿ ‘ಸ’ ಒಂದೆ ಇತ್ತು, ‘ ಶ, ಷ, ಹ ‘- ಸಂಸ್ಕೃತದ್ದು.

ದ್ರಾವಿಡದಲ್ಲಿ ‘ಲ’ ಕಾರ ಮತ್ತು ಅ ‘ರ’ ಕಾರದಿಂದ ಪದ ಆರಂಭವಾಗುವುದಿಲ್ಲ, ಕನ್ನಡದಲ್ಲಿ ಸಂಸ್ಕೃತದ ಪದ ಸ್ವಿಕ್ರುತಿಗೊಂಡಾಗ ಅದನ್ನು ಸ್ವರ ಸೇರಿಸಿ ಉಪಯೋಗಿಸಲಾಗುತ್ತದೆ. ಉದಾಹರಣೆಗೆ: ರಾಜನ್ಎನ್ನುವುದು ಅರಜನ್ ಆಗಿ ನಂತರದಲ್ಲಿ ಅರಸನ್ ಅನಂತರದಲ್ಲಿ ಅರಸ.

ಪದಾರಂಭಾದಲ್ಲಿ ದ್ವಿತ್ವಾಕ್ಷರವಿದ್ದಾಗ ಅದಕ್ಕೆ ಸ್ವರ ಸೇರಿಸಲಾಗುವುದು. ಸ್ಕೂಲ್ ಎನ್ನುವುದು ಇಸ್ಕೂಲ್. ಇದು ಶಿಷ್ಟ ಕನ್ನಡದಲ್ಲಿ ಕಾಣದೇ ಇದ್ದರೂ, ಗ್ರಾಮಾಂತರ ಕನ್ನಡದಲ್ಲಿ ಕಾಣಸಿಗುತ್ತದೆ.

ಅಷ್ಟೇ ಅಲ್ಲದೇ ವ್ಯಾಕರಣದಲ್ಲೂ ಸಾಕಷ್ಟು ಭಿನ್ನತೆಯನ್ನು ಕಾಣಬಹುದು.

ವಚನ : ದ್ರಾವಿಡದಲ್ಲಿ 2 ವಚನಗಳಿವೆ. ಆದರೆ ಸಂಸ್ಕೃತದಲ್ಲಿ ೩ ವಚನಗಳಿವೆ. ಏಕವಚನ, ಬಹುವಚನವಲ್ಲದೆ ದ್ವಿ ವಚನವೆಂಬ ಮತ್ತೊಂದು ವಚನವಿದೆ. ಇದನ್ನು ಕೇಶಿರಾಜನು ತನ್ನ ಶಬ್ದಮಣಿದರ್ಪಣದಲ್ಲಿ ದ್ವಿವಚನವ ಕುರಿತು “ಕನ್ನಡದಿ ಉಚಿತಂ ಬರ್ಕುದಿ” ಎನ್ನುತ್ತಾನೆ. ಇದು ಸಂಸ್ಕೃತದ ಪ್ರಭಾವದಿಂದ ಎಂದು ಕಾಣುತ್ತದೆ.ನಮ್ಮಲ್ಲಿ ಎರಡೇ ಬಗೆಯ ವಚನಗಳಿದ್ದರೆ, ಸಂಸ್ಕೃತದಲ್ಲಿ ಮೂರು ವಚನಗಳಿದ್ದು, ದ್ವೀವಚನವು ಮೂರನೆಯ ವಚನವಾಗಿದೆ
ಕನ್ನಡ ದಲ್ಲಿ ಲಿಂಗಪ್ರಭೇಧವು ಅರ್ಥಾನುಸಾರಿಯಾಗಿದ್ದರೆ, ಸಂಸ್ಕೃತದಲ್ಲಿ ಅದು ಪದದನುಸಾರಿ. .
ಕನ್ನಡದಲ್ಲಿ ಸಂಬಂಧ ವಾಚಕವು ಸಂಬಂಧವಲ್ಲದೆ ವಯೋಮಾನವನ್ನೂ ಕೂಡ ಸೂಚಿಸುತ್ತದೆ. ಉದಾಹರಣೆ- ಅಕ್ಕ, ತಂಗಿ, ದೊಡ್ಡಪ್ಪ, ಚಿಕ್ಕಮ್ಮ. ಅದೇ ಸಂಸ್ಕೃತ ಜನಿತ ಭಾಷೆಯಲ್ಲಿ ಉಪಯೋಗಿಸಲ್ಪಡುವ ಸಹೋದರ, ಅಥವಾ ಇಂಗ್ಲಿಷಿನ ಅಂಕಲ್, ಆಂಟ್ ಇವುಗಳು ಕೇವಲ ಸಂಬಂಧ ಸೂಚಕ ಪದಗಳಾಗಿವೆ.
ಕನ್ನಡದಲ್ಲಿ ವ್ಯಕ್ತಿ ಹಾಗೂ ವ್ಯಕ್ತಿಯೇತರ ಸಂಖ್ಯಾಸೂಚಕ ಪದಗಳಿವೆ. ಉದಾಹರಣೆಗೆ ಒಬ್ಬ ಹಾಗೂ ಒಂದು. ಆದರೆ ಸಂಸ್ಕೃತದಲ್ಲಿ ಒಂದೇ ಬಗೆಯ ಸಂಖ್ಯಾಸೂಚಕ ಪದವಿದೆ.

ಅಷ್ಟೇ ಅಲ್ಲದೇ ನಮ್ಮಲ್ಲಿ ಕರ್ಮಿಣಿ ಪ್ರಯೋಗ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆದರೆ ಇಂಡೋ ಆರ್ಯರ ಭಾಷೆಯಲ್ಲಿ ಅಂದರೆ ಸಂಸ್ಕೃತ. ಇಂಗ್ಲೀಷ್ ನಲ್ಲಿ ಕರ್ಮಿಣಿ ಪ್ರಯೋಗ ಸಾಮಾನ್ಯ. ಉದಾಹರಣೆಗೆ ಕನ್ನಡದಲ್ಲಿ “ರಾಮನು ಮಾವಿನಕಾಯಿ ಯನ್ನು ತಿಂದನು ” ಆದರೆ ಅಲ್ಲಿ ಮಾವಿನಕಾಯಿ ರಾಮನಿಂದ ತಿನ್ನಲ್ಪಟ್ಟಿತ್ತು ಎಂಬುದಾಗಿರುತ್ತದೆ.

ನಿಷೇದಾರ್ಥಗಳು : ದ್ರಾವಿಡದಲ್ಲಿ ಪ್ರತ್ಯೇಕವಾದ ನಿಷೇದಾರ್ಥ ಪದಗಳಿವೆ. ಅಲ್ಲ ಮತ್ತು ಇಲ್ಲ. ಆದರೆ ಇದು ಸಂಸ್ಕೃತದಲ್ಲಿ ಇಲ್ಲ.

ಕ್ರಿಯಾಪದ : ದ್ರಾವಿಡದಲ್ಲಿ ಕ್ರಿಯಾಧಾತುಗಳಲ್ಲಿ ಕೆಲವನ್ನು ನಾಮಪದಾಗಳಾಗಿಯೂ ಬಳಸುತ್ತೇವೆ. ಉದಾಹರಣೆಗೆ : ನಡೆ, ನುಡಿ,ಹೊಳೆ,ಬೆಳೆ, ಹಾಡು, ಕಟ್ಟು, ಮೆಟ್ಟು ಹೀಗೆ.

ರಾಬರ್ಟ್ ಕಾಲ್ಡ್ ವೆಲ್ ” ದ್ರಾವಿಡದಲ್ಲಿ ಕ್ರಿಯಾಪದಗಳೆ ಇಲ್ಲ ಎಂದು ಹೇಳುವಷ್ಟು ಕ್ರಿಯಾಪದದ ಬಳಕೆ ಕಡಿಮೆ ಎನ್ನುತ್ತಾರೆ. ಕನ್ನಡ ಮೊದಲ ಉಪಲಬ್ದ ಗದ್ಯ ” ವಡ್ದರಾಧನೆ”ಯಲ್ಲಿ ಈ ಮಾದರಿಯನ್ನು ಕಾಣಬಹುದು.

ಹಾಗೆಯೇ ಸಂಸ್ಕ್ರ್ತದಲ್ಲಿ ತರತಮ ಬಳಕೆ ಇದೆ. ಕನ್ನಡದಲ್ಲಿ ಸುಂದರ, ತುಂಬಾ ಸುಂದರ, ಅತಿ ಸುಂದರ ಎನ್ನುವುದನ್ನು ಸಂಸ್ಕೃತದಲ್ಲಿ ಸುಂದರ,ಸುಂದರತರ, ಸುಂದರತಮ ಎನ್ನುತ್ತಾರೆ. ಹಾಗೆಯೇ  ಇಂಗ್ಲೀಷ್ ನಲ್ಲಿ  GOOD ,BETTER ಅಂಡ್ BEST

ಹೀಗೆ ಹಲವು ಭಿನ್ನತೆಗಳನ್ನುದ್ರಾವಿಡ ಮತ್ತು ಸಂಸ್ಕೃತದ ನಡುವೆ ಕಾಣಬಹುದು.

ಹಾಗೆಂದ ಮಾತ್ರಕ್ಕೆ ದ್ರಾವಿಡ ಭಾಷೆಗಳೆಲ್ಲಾ ಒಂದೇ ಅಲ್ಲಾ.  ಅವುಗಳ ನಡುವೆಯೂ ಬಹಳಷ್ಟು ಬಿನ್ನತೆಯನ್ನು ನಾವು ಕಾಣಬಹದು. ಆದರೆಒಂದೇ ಮೂಲದಿಂದ. ರೂಪುಗೊಂಡ ಬೇರೆ ಬೇರೆ ಭಾಷೆಗಳಲ್ಲಿ ಅದರ ಮೂಲಭೂತ ಚೌಕಟ್ಟಿನಲ್ಲಿ ಒಂದು ಬಗೆಯ ಸಾಮ್ಯತೆಯನ್ನು ಕಾಣಬಹುದು.ಸಾಮಾನ್ಯವಾಗಿ ಆಹಾರ, ಸಂಬಂಧ, ದೇಹದ ಭಾಗ ಹಾಗೂ ಇನ್ನಿತರ ಮಾನವನ ಮೂಲಭೂತ ಅಗತ್ಯಗಳನ್ನು ಸೂಚಿಸುವ ಪದಗಳಲ್ಲಿ ನಾವು ಈ ಸಾಮ್ಯತೆಯನ್ನು ಕಾಣಬಹುದು.
ಉದಾಹರಣೆಗೆ ಅಮ್ಮ, ಕಣ್ಣು, ಒಂದು, ಎರಡು, ತಿನ್ನು ಹಲವು ಪದಗಳ ಮೂಲಕ ದ್ರಾವಿಡ ದ ಬೇರೆಬೇರೆ ಭಾಷೆಗಳಾದ ಕನ್ನಡ, ತಮಿಳು, ತೆಲುಗ ಹೀಗೆ ು ಹಾಗೂ ಮಲಯಾಳಂ ಗಳ್ಳಲ್ಲಿ ಸಾಮ್ಯತೆಯನ್ನು ಗುರುತಿಸುವ ಪ್ರಯತ್ನ ನಡೆದಿದೆ.
ಮೇಲ್ಕಂಡ ದಕ್ಷಿಣ ಭಾರತ ಭಾಷೆಗಳು ಮೂಲ ದ್ರಾವಿಡ ದಿಂದ ತಮ್ಮ ಹುಟ್ಟನ್ನು ಪಡೆದುಕೊಂಡಿದೆ. ನಮ್ಮ ಕನ್ನಡವು ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾಗಿದ್ದು, ಇಂದು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದುಕೊಂಡಿದೆ. ತನ್ನ ಐತಿಹಾಸಿಕತೆಯಿಂದ ಹಾಗೂ ಅಪಾರವಾದ ಸಾಹಿತ್ಯ ಸಂಪತ್ತಿನಿಂದ ಕೇವಲ ಭಾರತೀಯ ಸಾಹಿತ್ಯದಲ್ಲಿ ಮಾತ್ರವಲ್ಲ ವಿಶ್ವದ ಸಾಹಿತ್ಯ ಲೋಕದಲ್ಲಿಯೇ ತನ್ನ ವಿಶಿಷ್ಟ ವಾದ ಛಾಪನ್ನು ಒತ್ತಿದೆ.
ಇಂತಹ ಮಹತ್ವವನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಗೋವಿಂದ ಪೈ ಹಾಗೂ ಡಿ.ಎಲ್.ನರಸಿಂಹಾಚಾರ್ಯರು ಕನ್ನಡದ ಐತಿಹಾಸಿಕತೆಯನ್ನು ಗುರುತಿಸುವಲ್ಲಿ ಪ್ರಯತ್ನಿಸಿದ ಮೊದಲ ಪ್ರಮುಖರು. ಇವರುಗಳು ಕ್ರಿಸ್ತಪೂರ್ವ ಕಾಲದ ಅಶೋಕ ಚಕ್ರವರ್ತಿಯ ಇಂದಿನ ಕರ್ನಾಟಕದ ಗಡಿಭಾಗದಲ್ಲಿರುವ ಶಿಲಾಶಾಸನದಲ್ಲಿ ಕಂಡುಬರುವ ‘ಇಸಿಲ’ ಎಂಬ ಪದ ಕನ್ನಡದ್ದು ಎಂದು ವಾದಿಸುತ್ತಾರೆ, ನಂತರದ ಶಾತವಾಹನ ಕಾಲದ ಕೃತಿಯಲ್ಲಿ ಕನ್ನಡದ ಪದಗಳನ್ನು ಗುರುತಿಸಿ ಕನ್ನಡ ಭಾಷೆಯ ಐತಿಹಾಸಿಕತೆಯನ್ನು ಕ್ರಿಸ್ತಪೂರ್ವ ಕಾಲಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದರೆ. ಈಜಿಪ್ಟ್‌ನ ಅಕ್ಸರಿಂಕಸ್ ನಲ್ಲಿ ದೊರೆತ ಪಾಪಿರೈ ಎನ್ನುವ ತಾಳೆಗರಿಯಲ್ಲಿ ಸಿಕ್ಕಿದ ಗ್ರೀಕ್ ಪ್ರಹಸನದಲ್ಲಿ ಕನ್ನಡದ ಅಸ್ತಿತ್ವವನ್ನು ಗುರುತಿಸಲು ಸಾಹಸ ಮಾಡಿದ್ದಾರೆ. ಅದರಲ್ಲಿ ಪುರಾತನ ಗ್ರೀಕ್ ಕನ್ಯೆಯೊಬ್ಬಳು ನಮ್ಮ ದೇಶದ ಕರಾವಳಿಯ ರಾಜನನ್ನು ಮದುವೆಯಾಗಿ ಬಾಳುವ ಕಥೆಯಿದೆ. ಅದರಲ್ಲಿನ ಹಲವು ಪದಗಳು ಕನ್ನಡ ಪದಗಳೆಂದು ಹಾಗೂ ಕರ್ನಾಟಕದ ಹಲವು ಸ್ಥಳಗಳ ಹೆಸರೆಂದು ಸಾಕ್ಷ್ಯಗಳ ಮೂಲಕ ನಿರೂಪಿಸುವ ಯತ್ನವನ್ನು ಮಾಡಿದ್ದರೆ. ಆದರೆ ಇವರುಗಳ ವಾದಗಳ ಬಗ್ಗೆ ನಮ್ಮ ಭಾಷೆಯ ತಜ್ಞರಲ್ಲಿ ಒಮ್ಮತವಿಲ್ಲವೆಂದು ಕಾಣುತ್ತದೆ.
ಆದರೆ ೫ ನೇ ಶತಮಾನದ ಹಲ್ಮಿಡಿ ಶಾಸನವೂ ನಿರ್ವಿವಾದವಾಗಿ ಕನ್ನಡದ ಅಸ್ತಿತ್ವವನ್ನು ಸಾರುವ ಸಾಕ್ಷಿಯಾಗಿದೆ. ಈ ಶಾಸನದಲ್ಲಿ ಸಂಸ್ಕೃತವು ಪ್ರಮುಖವಾಗಿದ್ದರೂ ಒಟ್ಟು ಹದಿನಾರು ಸಾಲಿನಲ್ಲಿ ಕೊನೆಯ ಎರಡು ಸಾಲುಗಳು ಕನ್ನಡದಾಗಿದೆ. ಸುಮಾರು ೪೫೦ ನೇ ಇಸವಿಯಲ್ಲಿ ಅಂದಿನ ಪ್ರಬಲ ಆಡಳಿತ. ಹಾಗೂ ಸಾಹಿತ್ಯಿಕ ಭಾಷೆಯಾಗಿದ್ದ ಸಂಸ್ಕೃತದೊಂದಿಗೆ ಪೈಪೋಟಿಯನ್ನು ನಡೆಸಿ ನೆಲೆನಿಲ್ಲುವ ಪ್ರಯತ್ನವನ್ನು ಕನ್ನಡ ಭಾಷೆಯು ಮಾಡುತ್ತಿರುವುದು ನಾವು ಕಾಣಬಹುದು.ಯಾವುದೇ ಭಾಷೆಯು ಆಡಳಿತ ಹಾಗೂ ಸಾಹಿತ್ಯಿಕ ಭಾಷೆಯಾಗಿ ನೆಲೆನಿಲ್ಲುವ ಮುನ್ನ ಸುಮಾರು ಶತಮಾನಗಳ ಕಾಲ ಆಡು ಭಾಷೆಯಾಗಿ ಸಾಮಾನ್ಯ ಜನರ ಮಾತಿನಲ್ಲಿ ಹಾಗೂ ಮನಸ್ಸಿನಲ್ಲಿ ನಿಂತಿರಲೇಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಕನ್ನಡ ಭಾಷೆಯು ಕ್ರಿಸ್ತಪೂರ್ವ ಸಮಯದಿಂದಲೇ ತನ್ನ ಅಸ್ತಿತ್ವವನ್ನು ಸಾಧಿಸಿರಬೇಕು.

ಇಂತಹ ಪುರಾತತ್ವ ವನ್ನು ಹೊಂದಿರುವ ನಮ್ಮ ಕನ್ನಡದ ಹುಟ್ಟು, ವಿಕಾಸನದ ಹಾಗೂ ಬೆಳವಣಿಗೆಯನ್ನು ಕೇವಲ ಕನ್ನಡದವರಲ್ಲದೆ ಹಲವು ಪಾಶ್ಚಾತ್ಯ ಇಂಗ್ಲೀಷರು ಕೂಡ ಅಧ್ಯಯನವನ್ನು ಮಾಡಿದ್ದಾರೆ. ಬಿ.ಏಲ್.ರೈಸ್ ಮತ್ತು ಕಿಟಲ್ ನಂತಹ ಪುಣ್ಯಾತ್ಮರು ಕೂಡ ಕನ್ನಡ ಅಧ್ಯಯನಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದ್ದರೆ.
ಕನ್ನಡ ಪದದ ಉಗಮದ ಕುರಿತು ಸಾಕಷ್ಟು ಚರ್ಚೆ ಈಗಾಗಲೆ ನಡೆದಿದೆ.ಈ ಪದವು ಮೊದಲಲ್ಲಿ ಭಾಷಾ ಸೂಚಕವಾಗಿ ಹಾಗೂ ಸ್ಥಳಸೂಚಕವಾಗಿಯೂ ಉಪಯೋಗಿಸಲ್ಪಡುತ್ತಿತ್ತು. ೯ನೇ ಶತಮಾನದಲ್ಲಿ ರಚಿತವಾದ ಕನ್ನಡದ ಮೊದಲ ಉಪಲಬ್ಧ ಕೃತಿಯಾದ ಕವಿರಾಜಮಾರ್ಗದಲ್ಲಿ “ಕಾವೇರಿಯಿಂದಮಾ ಗೋದಾವರಿವರೆಮಿರ್ದಾ ನಾಡದಾ ಕನ್ನಡದೊಳ್ ಭಾವಿಸಿದಾ ಜನಪದಂ” ಎಂಬ ಶ್ರೀ ವಿಜಯ ಕವಿಯ ಮಾತಿನಲ್ಲಿ ಕನ್ನಡ ಪದವು ಪ್ರದೇಶ ಸೂಚಕ ಪದವಾಗಿ ಉಪಯೋಗಿಸಲಾಗಿದೆ. ಅಲ್ಲದೆ ಅಂಡಯ್ಯನು “ಕನ್ನಡಮೆನಿಪ್ಪಾ ನಾಡು ಚೆಲುವಾಯ್ತು”ಎನ್ನುತ್ತಾನೆ.ಆದುದರಿಂದ ಕನ್ನಡ ಪದವು ಕರುನಾಡು, ಕನ್ನಾಡು, ಕರ್ಣಾಟ, ಕರ್ನಾಟಕ ಈ ಯಾವುದಾದರೂ ಪದಗಳಿಂದ ನಿಷ್ಪತ್ತಿ ಯಾಗಿರಬಹುದೆಂದು ಭಾಷಾವಿಜ್ಞಾನಿ ಗಳು ಅಭಿಪ್ರಾಯವನ್ನು ಪಟ್ಟಿದ್ದಾರೆ.
ಹಾಗೆ ನೋಡಿದಲ್ಲಿ ಕರ್ಣಾಟ ಎಂಬ ಪದವು ವಿಶ್ವ ಸಾಹಿತ್ಯದಲ್ಲಿ ಅತ್ಯಂತ ಪುರಾತನ ಹಾಗೂ ಬೃಹತ್ ಕೃತಿಯಾದ ಕ್ರಿಸ್ತಪೂರ್ವ ಕಾಲದ ಮಹಾಭಾರತದ ಭೀಷ್ಮಪರ್ವದಲ್ಲಿಯೇ ಪ್ರಸ್ತಾಪಿಸಲಾಗಿದೆ. ಅಲ್ಲದೆ ಆನಂತರದ ಮಾರ್ಕೆಂಡಯಾನ ಪುರಾಣದಲ್ಲಿ ಕೂಡ ಪ್ರಸ್ತಾಪಿಸಲಾಗಿದೆ. ಸುಮಾರು ೨ನೇ ಶತಮಾನದ ಶಿಲಾಪ್ಪಾದಿಕಾರಂ ಕೃತಿಯಲ್ಲಿ ಚೇರ ರಾಜನು ನೀಲಗಿರಿಯಲ್ಲಿ ಕರುನಾರ್ ಚೆಲುವೆಯರ್ ಆಡಿದ ನೃತ್ಯವನ್ನು ಸವಿದ ಉಲ್ಲೇಖವಿದ್ದು, ಇದರಿಂದ ಆ ಸಮಯದಲ್ಲಿಯೇ ಕರುನಾಡು ಎಂಬ ಪ್ರದೇಶವಿದ್ದು, ಆ ಪ್ರದೇಶದಲ್ಲಿ ಬಳಸ್ಪಡುವ ಭಾಷೆಯು ಕನ್ನಡವಾಗಿದ್ದು, ಇದು ಕರುನಾಡು ಎಂಬ ಪದದಿಂದ ನಿಷ್ಪತ್ತಿ ಆಗಿರಬೇಕೆಂದು ಭಾವಿಸಲಾಗಿದೆ.
ಕರುನಾಡು ಹಾಗೂ ಕರ್ನಾಟಕ ಎಂಬ ಹೆಸರಿನ ಉಗಮದ ಕುರಿತು ಕೂಡ ಸಾಕಷ್ಟು ಚರ್ಚೆ ನಡೆದಿದೆ. ಕರ್ ಅಥವಾ ಕರು ಎನ್ನುವುದು ಪ್ರದೇಶದ ಭೌಗೋಳಿಕ ವಿಶಿಷ್ಟತೆಯ ಆಧಾರದ ಮೇಲೆ ಹೆಸರು ಬಂದಿರಬಹುದಾಗಿದೆ. ಕರ್ನಾಟಕದ ಪ್ರದೇಶವು ಎತ್ತರವಾದ ಭೂ ಪ್ರದೇಶದಲ್ಲಿ ಇದ್ದು ಹಾಗೂ ಕಪ್ಪು ಹಾಗೂ ಫಲವತ್ತಾದ ಮಣ್ಣನ್ನು ಹೊಂದಿರುವುದರಿಂದ ಇದಕ್ಕೆ ಕರು ನಾಡು ಎಂಬ ಹೆಸರು ಬಂದಿದೆ ಎಂದು ಕೆಲವು ಪರಿಣಿತರು ಅಭಿಪ್ರಾಯ ಪಡುತ್ತಾರೆ. ಆರ್. ನರಸಿಂಹಚಾರ್ ರವರು ಈ ಕನ್ನಡ ಎಂಬದು ಕಮ್ಮಿತ್ತು ನಾಡು ಎಂಬ ಪದದಿಂದ ಬಂದಿರಬಹುದೆಂದು ವಾದಿಸುತ್ತಾರೆ. ಕರ್ನಾಟಕವು ಗಂಧದ ಮರಕ್ಕೆ ಹಾಗೂ ಅದರ ಸುವಾಸನೆಗೆ ಪ್ರಸಿಧ್ದಿಯಾಗಿದ್ದರಿಂದ ಇದು ಕಮ್ಮಿತ್ತು ನಾಡು ಎಂದಾಗಿತ್ತು ಮುಂಚೆ ಇದೆ ನಂತರದಲ್ಲಿ ಕನ್ನಡ ಎಂದಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಕರುನಾಡಿನ ಭಾಷೆಯು ಕನ್ನಡ ಸಾವಿರಾರು ವರ್ಷಗಳ ಇತಿಹಾಸವಿದ್ದು, ಈ ಭಾಷೆಯ ವಿಕಾಸವನ್ನು, ಬೆಳವಣಿಗೆಯನ್ನು ಗುರುತಿಸುವ ಪ್ರಯತ್ನವನ್ನು ಪಾಶ್ಚ್ಯಾತರಿಂದಲೇ ಶುರುವಾಗಿದೆ ಎನ್ನಬಹುದು. ಯಾವುದೇ ಭಾಷೆಯು ನಿರಂತರವಾಗಿ ಬೆಳವಣಿಗೆಯನ್ನು ಸಾಧಿಸಿದರೆ ಮಾತ್ರ ಜೀವಂತ ವಾಗಿರಲು ಸಾಧ್ಯವಿದೆ. ಈ ಬೆಳವಣಿಗೆಯನ್ನು ನಾವು ದಿನ ನಿತ್ಯ ಜೀವನದಲ್ಲಿ ಗುರುತಿಸಲು ಆಗುವುದಿಲ್ಲ. ಒಂದು ಕಾಲಘಟ್ಟದ ಭಾಷೆಯನ್ನು ಮತ್ತೋಂದು ಕಾಲಘಟ್ಟದ ಭಾಷೆಯೊಡನೆ ಹೋಲಿಸಿದಾಗ ಈ ಬೆಳವಣಿಗೆಯನ್ನು ನಾವು ಗುರುತಿಸಬಹುದು.

ಬಿ.ಎಲ್.ರೈಸ್ ಕನ್ನಡದ ಬೆಳವಣಿಗೆಯನ್ನು ಈ ಕೆಳಕಂಡಂತೆ ಗುರುತಿಸಿದ್ದಾರೆ.
೧. ಪೂರ್ವದ ಹಳಗನ್ನಡ
೨. ಹಳಗನ್ನಡ
೩. ಹೊಸಕನ್ನಡ

ಇವರು ಪೂರ್ವಹಳಗನ್ನಡವನ್ನು ಗುರುತಿದ್ದರೆ, ನಡುಗನ್ನಡ ಅಥವಾ ಮಧ್ಯ ಕಾಲೀನ ಕನ್ನಡ ವನ್ನು ಬಿಟ್ಟಿದ್ದಾರೆ.

ಆನಂತರದಲ್ಲಿ ಆಧುನಿಕ ಕನ್ನಡ ಕಾಲದಲ್ಲಿ ಮೊತ್ತಮೊದಲ ಕನ್ನಡ ನಿಘಂಟು ರಚಿಸಿದ ಕಿಟೆಲ್ ರವರು ಭಾಷೆಯ ಬೆಳವಣಿಗೆಯನ್ನು ಹೀಗೆ ಗುರುತಿಸಿದ್ದಾರೆ.
೧. ಹಳಗನ್ನಡ —ಕ್ರಿ.ಶ. ೬ ರಿಂದ ೧೨೫೦
೨. ನಡುಗನ್ನಡ  — ಕ್ರಿ.ಶ. ೧೨೫೦ ರಿಂದ ೧೫೦೦
೩.ಹೊಸ ಕನ್ನಡ — ಕ್ರಿ.ಶ. ೧೫೦೦ರ ನಂತರದ್ದು

ಇವರು ನಡುಗನ್ನಡ ವನ್ನು ಗುರುತಿಸಿ ಪೂರ್ವದ ಹಳಗನ್ನಡವನ್ನು ಬಿಟ್ಟಿದ್ದಾರೆ.

ಆನಂತರದಲ್ಲಿ ಆರ್. ನರಸಿಂಹಾಚಾರ್ ರವರು ಮೇಲಿನ ಇಬ್ಬರು ಗಣ್ಯರಿಗೆ ಗೌರವ ನೀಡುವಂತೆ ಇವರಿಬ್ಬರ ಅಭಿಪ್ರಾಯವನ್ನು ಸೇರಿಸಿ ಕೆಳಕಂಡಂತೆ ಕನ್ನಡ ಬೆಳವಣಿಗೆಯನ್ನು ಗುರುತಿಸಿದ್ದಾರೆ.
೧. ಪೂರ್ವದ ಹಳಗನ್ನಡ – ೯ನೇ ಶತಮಾನದ ಹಿಂದಿನದು
೨. ಹಳಗನ್ನಡ- ೯ ರಿಂದ ೧೨ ನೇ ಶತಮಾನದವರೆಗೆ
೩. ನಡುಗನ್ನಡ- ೧೨ ರಿಂದ ೧೫ ಶತಮಾನದವರೆಗೆ
೪. ಹೊಸ ಕನ್ನಡ – ೧೫ ನೇ ಶತಮಾನದಿಂದೀಚೆಗೆ

ಈ ಪೂರ್ವ ಹಳಗನ್ನಡದ ಬಗ್ಗೆ ಮೊದಲಲ್ಲಿ ಗೊಂದಲವಿತ್ತು. ಆದರೆ ಕನ್ನಡದ ಕಣ್ವ ಬಿ.ಎಂ.ಶ್ರೀ ಕಂಠಯ್ಯನವರು ಸಾಕ್ಷ್ಯಗಳ ಮೂಲಕ ಅದರ ಅಸ್ತಿತ್ವವನ್ನು ಸಾರಿದ್ದಾರೆ. ನಾವು ತಿಳಿದಂತೆ , ಕನ್ನಡದ ಮೊದಲ ಉಪಲಬ್ಧ ಕಾವ್ಯವಾದ ಕವಿರಾಜಮಾರ್ಗ ದಲ್ಲಿ ಉಪಯೋಗಿಸಲ್ಪಟ್ಟ ಭಾಷೆಯೇ ಹಳಗನ್ನಡ ವಾಗಿದ್ದು, ಅದರಲ್ಲಿಯೇ ಪಳಗನ್ನಡ ಎಂಬ ಪದದ ಬಳಕೆಯನ್ನು ಕಾಣಬಹುದು. ಅಂದರೆ ಕವಿರಾಜಮಾರ್ಗ ಕೃತಿಯ ರಚನೆಯ ಸಮಯಕ್ಕಿಂತ ಹಿಂದಿನ ಭಾಷೆಯನ್ನು ಇದು ಸೂಚಿಸುತ್ತದೆ. ಈ ಸಂಗತಿಯನ್ನು ಎತ್ತಿ ಹಿಡಿದು ಬಿ.ಎಂ.ಶ್ರೀ ಯವರು ಪೂರ್ವದ ಹಳಗನ್ನಡದ ಅಸ್ತಿತ್ವವನ್ನು ಸಾರಿದ್ದಾರೆ. ಅಲ್ಲದೆ ಕೆಲವು ವ್ಯಾಕರಣದ ಅಂಶವನ್ನು ತೋರಿದ್ದಾರೆ.

ಅಲ್ಲದೆ ಇನ್ನಿತರ ಕನ್ನಡದ ಕೈಪಿಡಿಗಾರರು ಬೇರೆಬೇರೆ ಕಾಲಘಟ್ಟದ ಕನ್ನಡದ ವ್ಯತ್ಯಾಸವನ್ನು ಸಾಹಿತ್ಯವಿಕಾಸದೊಂದಿಗೆ ತುಲಾನಾತ್ಮಕವಾಗಿ ವಿವರಿಸಿದ್ದಾರೆ.

ಹಳಗನ್ನಡವು ಓದುಗಬ್ಬದ ಭಾಷೆ — ಚಂಪೂ ಕಾವ್ಯ

ನಡುಗನ್ನಡವು ಹಾಡುಗಬ್ಬದ ಭಾಷೆ  — ಷಟ್ಪದಿ ಕಾವ್ಯ

ಜ್ಞಾನ ಪೀಠ ಪುರಸ್ಕೃತ  ಮಾಸ್ತಿ ವೆಂಕಟೇಶಅಯ್ಯಂಗಾರರವರು ಕನ್ನಡದ ಬೆಳವಣಿಗೆಯ ಅವಸ್ಥಾಭೇದವನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಅಂತಹ ಮಹತ್ವವಾದ ಬದಲಾವಣೆಗಳು ಕನ್ನಡದಲ್ಲಿ ಕಂಡುಬಂದಿಲ್ಲವಾದುದರಿಂದ ಇಂತಹ ಭಿನ್ನತೆಯನ್ನು ಗುರುತಿಸುವ ಅಗತ್ಯವಿಲ್ಲ ಎನ್ನುತ್ತಾರೆ.

ರಂ.ಶ್ರೀ. ಮುಗುಳಿಯವರು ಕನ್ನಡದಲ್ಲಿ ಪ್ರಮುಖವಾಗಿ ಎರಡೇ ಹಂತ ಇರುವುದು. ಅದು ಹಳಗನ್ನಡ ಹಾಗೂ ಹೊಸಕನ್ನಡ. ಅವರ ಪ್ರಕಾರ ಪೂರ್ವ ಹಳಗನ್ನಡ ಹಾಗೂ ನಡುಗನ್ನಡ ಕೇವಲ ಸಂಕ್ರಮಣ ಕಾಲ ಎನ್ನುತ್ತಾರೆ.
ಈ ಬೆಳವಣಿಗೆಯು ಎಲ್ಲಾ ಭಾಷೆಗಳಿಗೂ ಅತ್ಯಗತ್ಯ. ಹೇಗೆ ನಿಂತ ನೀರು ಕೋಳೆಯುತ್ತದೆಯೊ ಹಾಗೆಯೇ ಬೆಳೆಯದ ಭಾಷೆಯು ತನ್ನ ಅಸ್ತಿತ್ವಕ್ಕೆ ಸಂಚಕಾರ ತಂದುಕೊಳ್ಳುತ್ತದೆ. ಜೀವಂತ ಭಾಷೆಯು ಹರಿಯುವ ನದಿಯಂತೆ ತನ್ನ ಪಥದಲ್ಲಿ ಹಳೆಯದನ್ನು ಬಿಟ್ಟುಬಿಡುತ್ತಾ ಹೊಸಹೊಸದನ್ನು ಒಳಗೊಳ್ಳುತ್ತಾ ನಿತ್ಯ ಸುಂದರ ಹಾಗೂ ಶುಭ್ರವಾಗಿ ಹರಿಯುತ್ತದೆಯೋ ಹಾಗೆಯೆ ಭಾಷೆಯು ಕೂಡಾ. ಬದಲಾದ ಸಮಯ, ಸಂಗತಿ, ಸಮಸ್ಯೆ, ಸಹವಾಸ ಹಾಗೆ ಅಗತ್ಯಕ್ಕನುಸಾರವಾಗಿ ತನ್ನ ನಿಘಂಟಿಗೆ ಹೊಸ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳುತ್ತಾ ಅಥವಾ ಪರಭಾಷೆ ಯಿಂದ ಪಡೆದುಕೊಳ್ಳುತ್ತಾ ಭಾಷೆಯು ತನ್ನ ಜೀವಂತಿಕೆಯನ್ನು ಸಾಧಿಸಬೇಕಾಗಿದೆ. ಇಲ್ಲದಿದ್ದರೆ ಆ ಭಾಷೆಯು ಮೃತ ಭಾಶೆಯಾಗುತ್ತದೆ. ಅಪಾರವಾದ ಸಾಹಿತ್ಯ ಸಂಪತ್ತನ್ನು ಹೊಂದಿರುವ ಸಂಸ್ಕೃತ, ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಈ ಬದಲಾವಣೆಗೆ ತಮ್ಮನ್ನು ತೆರೆದುಕೊಳ್ಳದೆ ಬೆಳವಣಿಗೆಯನ್ನು ಕಾಣದೆ ಜನರ ಮನಸ್ಸು ಹಾಗೂ ಮಾತಿನಿಂದ ದೂರವಾಗಿ ಮೃತ ಭಾಷೆಯಾಗುತ್ತಿವೆ.

ಕನ್ನಡವೂ ನಿತ್ಯ ಪರಿವರ್ತನ ಶೀಲ. ಇದು ಹಿಂದಿಗಿಂತಲೂ ಬಹಳ ವೇಗವಾಗಿ ಬದಲಾಗುತ್ತಿದೆ. ಪ್ರಸ್ತುತ ಕನ್ನಡವು ಒಂದು ರೀತಿಯಲ್ಲಿ ಸಂಕ್ರಮಣ ಸ್ಥಿತಿಯಲ್ಲಿ ಇದೆ ಎನ್ನಬಹುದು. ವಸಾಹತು, ಸ್ವಾತಂತ್ರ್ಯ ಸಂಗ್ರಾಮ, ಪಾಶ್ಚತ್ಯಿಕರಣ, ಜಾಗತಿಕತೆ, ಸಂಪರ್ಕ ಕ್ರಾಂತಿ ಕನ್ನಡ ಅಲ್ಲದೆ ಪ್ರತಿಯೊಂದು ಭಾಷೆಯ ಮೇಲೆ ಗಾಡವಾದ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ೨೦ನೇ ಶತಮಾನದ ಕನ್ನಡವನ್ನು ನವ ಕನ್ನಡ ಎಂದು ಕರೆದು ಹೊಸ ಅವಸ್ಥಾನವನ್ನು ಗುರುತಿಸುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ.

ಆದುದರಿಂದ ಬದಲಾವಣೆ ಎನ್ನುವುದು ಭಾಷೆಗೆ ಅಗತ್ಯ. ಇಂತಹ ಬದಲಾವಣೆ ಅಂತರಿಕ ಹಾಗೂ ಬಾಹ್ಯ ಕಾರಣಗಳಿಂದಲೂ ಆಗುತ್ತದೆ. ಇವುಗಳನ್ನು ನಂತರದಲ್ಲ ದೀರ್ಘವಾಗಿ ಚರ್ಚಿಸುತ್ತೇನೆ. ಅಂತರಿಕ ಬದಲಾವಣೆಯಲ್ಲಿ ಪ್ರಮುಖವಾಗಿ ಕಂಡುಬರುವ ಅಂಶವೆಂದರೆ ಉಚ್ಚಾರಣೆ ವ್ಯತ್ಯಾಸ. ಇದು ಒಮ್ಮೊಮ್ಮೆ ಹೆಚ್ಚಾಗಿ ಬೇರೆಯೇ ಭಾಶೆಯಂಬಂತೆ ತೋರುತ್ತದೆ.

ಒಂದು ಭಾಷಾ ಕ್ಷೇತ್ರದಲ್ಲಿ ಓಂದೇ ಭಾಷೆಯನ್ನು ಆಡುವ ಸಮುದಾಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಭಾಷೆಯ ಬಳಕೆಯಲ್ಲಿ ವ್ಯತ್ಯಾಸ ಇದ್ದು ಅದನ್ನು ವ್ಯಕ್ತಿ ಭಾಷೆ ಎನ್ನುತ್ತಾರೆ. ಇದು ಸೂಕ್ಷ್ಮ ವ್ಯತ್ಯಾಸವಾಗಿದ್ದು  ಮೇಲ್ನೋಟಕ್ಕೆ ಕಂಡುಬರುವುದಿಲ್ಲ.  ಪರಸ್ಪರ ಹೆಚ್ಚು ಸಂಪರ್ಕ ಹಾಗೂ ಸಂವಹನ ಹೊಂದಿರುವ  ಒಂದು ಸಮುದಾಯದ ಲ್ಲಿ ಈ ವ್ಯಕ್ತಿಭಾಷೆಯು ಹೆಚ್ಚು ಸಾಮ್ಯತೆಯನ್ನು ಹೊಂದಿ ರುತ್ತದೆ. ಬೇರೆ ಬೇರೆ ಸಮುದಾಯಗಳ ವ್ಯಕ್ತಿ ಭಾಷೆಗಳ ನಡುವೆ ಹೆಚ್ಚು ಭಿನ್ನತೆಯನ್ನು ಕಾಣಬಹುದು.ಈ ಸಮುದಾಯಗಳ ನಡುವೆ ಸಂಪರ್ಕ ಹಾಗೂ ಸಂವಹನ ಕಡಿಮೆಯಾದಂತೆ  ಬಿನ್ನತೆಯು ಹೆಚ್ಚಾಗಿ ಈ ವ್ಯಕ್ತಿ ಭಾಷೆಗಳೇ ಬೇರೆ ಭಾಷೆಗಳಂತೆ ತೋರುತ್ತದೆ. ಹೀಗೆಯೆ ಉಪಭಾಷೆಗಳು ಸೃಷ್ಟಿಗೊಳ್ಳುತ್ತವೆ. ಈ ವ್ಯತ್ಯಾಸಗಳು ಹಾಗೂ ಭಿನ್ನತೆಗಳು ಹೆಚ್ಚಾದಾಗ ಮೂಲದಿಂದ ಬೇರೆಯೇ ಆದ ಭಾಷೆಯು ರೂಪುಗೊಳ್ಳುತ್ತದೆ.

ಉಪಭಾಷೆಗಳು ಮೂಲ ಭಾಷೆಯನ್ನೇ ಆಧರಿಸಿದ್ದು, ಪದ ಬಳಕೆಯೆಲ್ಲೋ, ಉಚ್ಚಾರಣೆಯಲ್ಲೋ ಅಥವಾ ಅನ್ಯ ಭಾಷೆಯ ಪ್ರಭಾವದಿಂದಲೋ ಸ್ವಲ್ಪ ಭಿನ್ನತೆಯನ್ನು ಹೊಂದಿರುತ್ತದೆ. ಒಂದು ಭಾಷಾ ಕ್ಷೇತ್ರವು ವಿಸ್ತಾರದಲ್ಲಿ  ವಿಶಾಲವಾಗಿದ್ದು ಒಂದು ಮೂಲೆಯ ಜನರಿಗೂ ಇನ್ನೋಂದು ಮೂಲೆಯ ಜನರಿಗೂ ಸಂಪರ್ಕ ದುರ್ಲಭವಾಗಿ ಕೊಡೂಕೋಳ್ಳೂವಿಕೆ ಕಡಿಮೆಯಾದಾಗ ಉಪಭಾಷೆಗಳು ರೂಪುಗೊಳ್ಳಲು ಕಾರಣವಾಗುತ್ತದೆ. ಅಲ್ಲದೆ ಭೌಗೋಳಿಕ, ರಾಜಕೀಯ ಹಾಗು ಸಾಂಸ್ಕೃತಿಕ ಕಾರಣಗಳು ಕೂಡ ಉಪಭಾಷೆಗಳ ಸೃಷ್ಟಿಗೆ ಕಾರಣವಾಗುತ್ತದೆ.

ಭೌಗೋಳಿಕ ಅಂದರೆ ಈಗಾಗಲೇ ತಿಳಿದಂತೆ ವಿಸ್ತಾರವಾದ ಭಾಷಾಕ್ಷೇತ್ರ, ಸಮುದ್ರ, ನದಿ,ಬೆಟ್ಟಸಾಲುಗಳ ಮತ್ತು ಕಾಡು ಅಡೆತಡೆಗಳು ಕೂಡ ಸಂಪರ್ಕವನ್ನು ಹಾಗೂ ಸಂವಹನವನ್ನು ಕಡಿಮೆ ಮಾಡಿ ಉಪಭಾಷೆಯ ಸೃಷ್ಟಿಗೆ ಕಾರಣವಾಗುತ್ತದೆ. ಇದು ನಾವು ಮಂಗಳೂರಿನ ಭಾಷೆಯನ್ನೂ ನೋಡಿದಾಗ ತಿಳಿಯುತ್ತದೆ.

ಹಾಗೆಯೇ ರಾಜಕೀಯ ಕಾರಣಗಳು ಕೂಡ. ಒಂದು ಭಾಷೆಯ ಪ್ರದೇಶವು ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟಾಗ ಆ ಆಡಳಿತಭಾಷೆಯ ಪ್ರಭಾವಕ್ಕೆ ಒಳಗಾಗಿ ಅಲ್ಲಿನ ಭಾಷೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಉದಾಹರಣೆಗೆ ಕನ್ನಡ ಮಾತನಾಡುವ ಪ್ರದೇಶಗಳು ಮರಾಠಿ, ಉರ್ದು ಹಾಗೂ ತಮಿಳು ಬಾಷೆಗಳ ಪ್ರಬಾವಕ್ಕೆ ಹೀಗೆಯೇ ಒಳಪಟ್ಟಿದೆ.

ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರಣಗಳು- ಕನ್ನಡವೂ ಸಾಂಸ್ಕೃತಿಕವಾಗಿ ಸಂಸ್ಕೃತದಿಂದ ಅದರ ಸಾಹಿತ್ಯ ಭಂಡಾರದಿಂದ ಪ್ರಭಾವಿತಗೊಂಡಿದೆ. ಹಾಗೆಯೇ ಗಡಿ ಪ್ರದೇಶಗಳು ಕೊಡುಕೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಅನ್ಯ ಭಾಷೆಯ ಪ್ರಭಾವಕ್ಕೆ ಒಳಪಡುವುದು ಸಾಮಾನ್ಯ. ಅಲ್ಲದೆ ಒಂದೆ ಸಮುದಾಯದ ಜನರು ಪರಸ್ಪರ ಸಂವಹನ ನಡೆಸುತ್ತಾ ಬೇರೆ ಸಮುದಾಯದೊಂದಿಗೆ ಸಂಪರ್ಕ ಕಡಿಮೆಗೊಂಡಾಗಲು ಆ ಸಮುದಾಯದ ಭಾಷೆಯೇ ಬೇರೆ ಉಪಭಾಷೆಯಾಗಿ ರೂಪುಗೊಳ್ಳುತ್ತದೆ.

ಕನ್ನಡದಲ್ಲಿಯೂ ಈ ಉಪಭಾಷೆಗಳನ್ನು ಕಾಣಬಹುದಾಗಿದೆ. ಕನ್ನಡದಲ್ಲಿ ಪ್ರಮುಖವಾಗಿ ನಾಲ್ಕು ಉಪಭಾಷೆಗಳನ್ನು ನಾವು ಕಾಣಬಹುದು.

೧.ಗುಲ್ಬರ್ಗಾ ಕನ್ನಡ

೨. ಧಾರವಾಡ ಕನ್ನಡ

೩. ಮಂಗಳೂರು ಕನ್ನಡ

೪. ಮೈಸೂರು ಕನ್ನಡ

ಗುಲ್ಬರ್ಗಾ ಕನ್ನಡವನ್ನು ಕಲ್ಯಾಣ ಕನ್ನಡವೆಂದು ಕರೆಯಬೇಕೆಂದು ಡಾ|। ಚಿದಾನಂದ  ಮೂರ್ತಿಯವರು ಒತ್ತಾಯ ಮಾಡಿದ್ದಾರೆ. ಈ ಕನ್ನಡವು ಗುಲಬರ್ಗಾ, ಬೀದರ್ಕ, ರಾಯಚೂರು, ಬಿಜಾಪುರ ಭಾಗಗಳಲ್ಲಿ ಬಳಕೆಯಲ್ಲಿದೆ.ಕನ್ನಡದ ಶ್ರೇಷ್ಠ ಕವಿಗಳಾದ ಪಂಪ, ಪೊನ್ನ, ಕುಮಾರವ್ಯಾಸರ ಕೃತಿಗಳು ಈ ಪ್ರದೇಶದಿಂದ ಮೂಡಿಬಂದಿರುತ್ತವೆ. ಇಲ್ಲಿ ತಿರುಳ್ಗನ್ನಡದ ಸಾಧಿತ ರೂಪಗಳು ರೂಡಿಯಲ್ಲಿದೆ. ಈ ಕನ್ನಡವೂ ಅಧ್ಯಯನಕ್ಕೆ ಯೋಗ್ಯವಾದುದು.

ಗುಲ್ಬರ್ಗಾ ಪ್ರದೇಶವು ಬಹಳ ಕಾಲ ಬಹಮನಿ ರಾಜರ ಆಡಳಿತ ಹಾಗೂ ನಿಜಾಮರ ಆಡಳಿತಕ್ಕೆ ಒಳಪಟ್ಟ ಕಾರಣ ಇಲ್ಲಿನ ಕನ್ನಡದ ಮೇಲೆ ಪರ್ಷಿಯನ್ ಹಾಗೂ ಉರ್ದುವಿನ ಪ್ರಭಾವವನ್ನು ಕಾಣಬಹುದು. ಪಹಲೇ, ಅವಾಜ್,ದೌಡ್, ಉದ್ರಿ(ಸಾಲ), ಜರ(ಸ್ವಲ್ಪ)

ಅಲ್ಲದೆ ಇಲ್ಲಿನ ಕನ್ನಡದಲ್ಲಿ ವಿಶಿಷ್ಟವಾದ ಪದ ಬಳಕೆ ಮತ್ತು ಉಚ್ಚಾರಣೆಯನ್ನು ಕಾಣಬಹುದು. ಹಲವು ಕಡೆ ಮುರಾಕ್ಷರದ ಪದಗಳು ಸಂಕುಚಿತಗೊಂಡು ಎರಡನೇ ಅಕ್ಷರ ಲೋಪವಾಗಿ ಎರಡಾಕ್ಷರದ ಪದಗಳಾಗಿವೆ. ಉದಾಹರಣೆಗೆ : ಹಗಲು ಎನ್ನುವುದು ಹಗ್ಲ, ಬಾಗಿಲು= ಬಾಗ್ಲ, ಹೆಂಡತಿ=ಹೆಣ್ತಿ ಇತ್ಯಾದಿ.

ಕೊನೆಯಲ್ಲಿ ‘ಹ’ಕಾರ ಉಚ್ಚಾರಣೆ ಕಂಡು ಬರುತ್ತದೆ. ಕಲ್ಲು ಎನ್ನುವುದು ಕಲ್ಹ, ಊರಹ.

ಅಲ್ಪಪ್ರಾಣಾಕ್ಷಾರಗಳು ಮಹಾಪ್ರಾಣಗಳಾಗುತ್ತದೆ. ಟೈಮ್ ಎನ್ನವುದು ಠೇಂ, ಕಬ್ಬು=ಖಬ್ಬು

ಯಿಂದ ಎನ್ನವುದು ಲಿಂದ ಎಂದು ಉಪಯೋಗಿಸಲಾಗುತ್ತದೆ. ಮನೆಯಿಂದ ಎನ್ನುವುದು ಮನೆಲಿಂದ

ಕ್ರಿಯಾಧಾತುಗಳಿಗೆ = ರೀ, ಅಮು ಕೊನೆಯಲ್ಲಿ ಜೋಡಣೆ ಮಾಡಲಾಗುತ್ತದೆ. ಮಾಡೋಣ ಎನ್ನುವುದು ಮಾಡಾರಿ, ಮಾಡೋಣ ಎನ್ನುವುದು ಮಾಡೋಮು ಇತ್ಯಾದಿ.

ಕವಿರಾಜಮಾರ್ಗದಲ್ಲಿ ಉತ್ತರ ಮಾರ್ಗ ಹಾಗೂ ದಕ್ಷಿಣ ಮಾರ್ಗ ಎರಡು ಪ್ರಾಂತ ಭೇದಗಳನ್ನು ಗುರುತಿಸಿದೆ. ‘ಕಾವ್ಯಾವಲೋಕನ’ಬರೆದ ನಾಗವರ್ಮನು ಹಾಗೂ ‘ಶಬ್ದಾನುಶಾಸನ’ಬರೆದ ಭಟ್ಟಾಕಳಂಕ ನು ವೈವಿದ್ಯತೆಯ ಆಧಾರದ ಮೇಲೆ ಈ ಪ್ರಾಂತಭೇದಗಳನ್ನು ಒಪ್ಪುತ್ತಾರೆ. ಇದನ್ನು ನಾವು ಇಲ್ಲಿ ಗುರುತಿಸಬಹುದು.

ನೋಡುವೆನ್, ಬೇಡುವೆನ್ ಎಂಬುದು ಉತ್ತರಮಾರ್ಗದಲ್ಲಿದ್ದರೆ, ದಕ್ಷಿಣಮಾರ್ಗದಲ್ಲಿ ನೋಳ್ಪೆನ್, ಬೆಳ್ವೆನ್ ಎಂದಾಗಿರುತ್ತದೆ.

ಧಾರವಾಡ ಕನ್ನಡವೂ ಸ್ವತಂತ್ರಪೂರ್ವ ಮರಾಥಿ ಆಡಳಿತಗಾರರ ಹಾಗು ಬ್ರಿಟಿಷ್ ಮುಂಬೈ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ಕಾರಣ ಮರಾಟಿಯ ಪ್ರಭಾವಕ್ಕೆ ಒಳಪಟ್ಟಿದೆ.

ಇಲ್ಲಿ ಸಾಮಾನ್ಯ ಕನ್ನಡದ ಎ ಕಾರದಿಂದ ಕೊನೆಗೊಳ್ಳುವ ಪದಗಳು ಇವರ ಮಾತಿನ ಬಳಕೆಯಲ್ಲಿ ಇ ಕಾರದಿಂದ ಕೊನೆಗೊಳ್ಳುತ್ತವೆ. ಉದಾಹರಣೆಗೆ ಮನೆ ಎನ್ನುವುದು ಮನಿ ಆದರೆ ಶಾಲೆ ಎನ್ನುವುದು ಸಾಲಿ ಅಥವಾ ಶಾಲಿ ಆಗುತ್ತದೆ.

ಹಾಗೆಯೇ ಉ ಕಾರವು ಅ ಕಾರವಾಗಿ ಬದಲಾಗುತ್ತದೆ. ಕಾಲೇಜು ಎನ್ನುವುದು ಕಾಲೇಜ, ಹೋಟೆಲ್ ಎನ್ನುವುದು ಹೋಟೆಲ ಆಗುತ್ತದೆ.

ಅಲ್ಲದೆ ಹತ್ತಿದೆ ಎಂಬ ಪದವನ್ನು ಕ್ರಿಯಾ ಪದಗಳೊಂದಿಗೆ ಹಲವು ಕಡೆ ಉಪಯೋಗಿಸಲಾಗುತ್ತದೆ.

ಏನು ಮಾಡೋಕೆ ಹತ್ತಿದೆ, ನೋಡ್ಯಾಕ ಹತ್ತಿದೆ ಹೀಗೆ ಹತ್ತಿದೆ ಎಂಬ ಪದದ ಬಳಕೆಯಾಗುತ್ತದೆ.

ವರೆಗೆ ಎಂಬ ಪದದ ಬದಲು ಮಟಾ ಎಂಬ ಪದವು ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ: ಎಲ್ಲಿ ಮಟಾ ಬಂತು ಕೆಲಸ ?

ಧಾರವಾಡ ಕನ್ನಡವನ್ನು ಕಿತ್ತೂರು ಕನ್ನಡವೆಂದು ಕರೆಯಬೇಕೆಂದು ಹಲವರು ಅಭಿಪ್ರಾಯ ಪಡುತ್ತಾರೆ.

ಮಂಗಳೂರು ಕನ್ನಡವೂ ಭೌಗೋಲಿಕ ಕಾರಣಗಳಿಂದ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಇಲ್ಲಿನ ಭಾಷೆಯ ಉಚ್ಚಾರಣೆಯೇ ವಿಶೇಷವಾದುದು. ಮಂಗಳೂರು ಕನ್ನಡದ  ಭಾಷೆಯ ಬಳಕೆ ಗ್ರಂಥಸ್ಥ ರೂಪದಲ್ಲಿರುತ್ತದೆ. ಉಚ್ಚಾರಣೆಯಲ್ಲಿ ನಾಸಿಕತೆ ಹೆಚ್ಚು. ಅಲ್ಲದೆ ತನ್ನದೇ ಆದ ಹೊಸ ಪದಗಳನು ರೂಡಿಸಿಕೊಂಡಿದ್ದೆ. ತರಕಾರಿಗೆ ಹಸಿರುವಾಣಿ, ಸಂಜೆಗೆ ಬೈಸಾರೆ, ಚರ್ಚಿಗೆ ಇಗರ್ಜಿ ಎಂಬ ಪದಗಳ ಬಳಕೆಯನ್ನು ನಾವು ಕಾಣಬಹುದು.

ಕೊಂಕಣಿ ಅಥವಾ ತುಳುವಿನ ಪ್ರಭಾವದಿಂದ ಮತ್ತೆ ಮತ್ತೇ, ಮಾರಾಯ್ರೇ ಎಂಬ ಪದಗಳ ಬಳಕೆಯೂ ಸ್ವಲ್ಪ ಜಾಸ್ತಿಎನ್ನುವಷ್ಟು ಬಳಕೆಯಲ್ಲಿದೆ.

ಮೈಸೂರು ಕನ್ನಡ – ಇದು ಹೆಚ್ಚಾಗಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಪ್ರಚಲಿತವಾಗಿರುವಂತಹದು. ಮೈಸೂರು ಕನ್ನಡದ ಗ್ರಾಮ್ಯಭಾಷೆ ಹೆಚ್ಚ್ಚು ಜನಪದ ಸಮೀಪದಲ್ಲಿರುವಂತಹುದು.

ಇಲ್ಲಿ ಸಾಮನ್ಯವಾಗಿ ಕ್ರಿಯಾ ಪದಗಳೊಂದಿಗೆ ಏಳಿ ಎಂಬ ಪದವನ್ನು ಉಪಯೋಗಿಸಲಾಗುತ್ತದೆ.

ಉದಾಹರಣೆಗೆ: ಮಾಡ್ತೀನಿ ಏಳಿ ನೋಡ್ತೀನಿ ಏಳಿ

ಅಲ್ಲದೆ ಹ ಕಾರ ಅ ಕಾರ ವಾಗುತ್ತದೆ. ಹಾಲು ಎನ್ನುವುದು ಆಲು ಆಗುತ್ತದೆ.

ಅದೇ ರೀತಿಯಲ್ಲಿ ಒ ಕಾರವು ಅ ಕಾರವು ಹಾಗುತ್ತದೆ ಹಲವು ಕಡೆಯಲ್ಲಿ : ಉದಾಹರಣೆಗೆ ಮೊಸರು ಎನ್ನುವುದು ಮಸರು, ಮೋಡ ಎನ್ನುವುದು ಮಾಡ ಹೀಗೆ.

ಹೀಗೆ ಕನ್ನಡ ಭಾಷೆಯಲ್ಲಿ ಹಲವು ಉಪಭಾಷೆಗಳಿದ್ದು ಇದು ಇಲ್ಲಿನ ಭಿನ್ನತೆಯನ್ನು ತೋರುವುದಿಲ್ಲ. ಅದರ ಬದಲು ನಮ್ಮಲಿನ ವ್ಯೆವಿದ್ಯತೆಯನ್ನು ತೋರುತ್ತದೆ. ಹೀಗೆ ಹಲವು ಉಪಭಾಷೆಗಲಿದ್ದರು ಇವುಗಳ ನಡುವೆ ಏಕತೆಯನ್ನು ಹಾಗು ಸಾಮ್ಯತೆಯನ್ನು ತರುವುದು ನಾವು ನೀವು ಉಪಯೋಗಿಸುವ  ಪ್ರಮಾಣಿಕೃತ——– ಕನ್ನಡ. ಎಲ್ಲವನ್ನು ಒಳಗೊಂಡಂತಹ ಕನ್ನಡವಿದು.

ದಿನ ನಿತ್ಯ ನಾವು ಉಪಯೋಗಿಸುವ ಸಾಮಾನ್ಯ ಕನ್ನಡ ತನ್ನ ಒಡಲಲ್ಲಿ ಕೇವಲ ಇಷ್ಟೇ ಭಂಡಾರವನ್ನು ಇಟ್ಟುಕೊಂಡಿಲ್ಲ. ಇದರ ಸಾಹಿತ್ಯ ಸಂಪತ್ತನ್ನು ಅಗೆಯುತ್ತ ಹೋದಂತೆ ಅಕ್ಷಯ ಪಾತ್ರೆಯಂತೆ ನಿಧಿಯು ಉಕ್ಕುತ್ತಲೇ ಇರುತ್ತದೆ.

***ಮಾಹಿತಿ ಕೃಪೆ: ಲೋಹಿತ್***