ನನ್ನ ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-40

    “ಇದೇ ಏನೋ ಕಲ್ಲೂರು?” ಅದೇ ಮೊದಲನೆಯ ಸಾರಿ ಸಲ್ಲಿಗೆ ಬರುತ್ತಿದ್ದ ತಿಮ್ಮು ಊರಿನ ಬೀದಿಯಲ್ಲಿ ಚಲಿಸುತ್ತಿದ್ದ ಗಾಡಿಯ ಹಿಂಭಾಗದಲ್ಲಿ ತನ್ನೊಡನೆ ಕುಳಿತು ಇಣಿಕಿಣಿಕಿ ಅಕ್ಕಪಕ್ಕದ ಮನೆಗಳನ್ನೂ ಅಲ್ಲಿ ಕಾಣಬರುತ್ತಿದ್ದ ಹುಡುಗರು ಮಕ್ಕಳ ಚಲನವಲನಗಳನ್ನೂ ಗ್ರಾಮೀಣ ಕುತೂಹಲದಿಂದ ವೀಕ್ಷಿಸುತ್ತಿದ್ದ ತನ್ನ ಗೆಳೆಯರನ್ನು ಕೇಳಿದನು.

“ಹೌದು ಕಣೋ! ನೋಡು, ಅದೇ ಹೊಳೆದಂಡೇಲಿ ಕಾಣ್ತಾ ಇದೆಯಲ್ಲಾ? ದೊಡ್ಡಮನೆ? ಅರ್ಧ ಮಂಗಳೂರು ಹೆಂಚು, ಅರ್ಧ ಓಡುಹೆಂಚು ಹೊದಿಸಿದ್ದು? ಅದೇ ಕಲ್ಲೂರು ಸಾಹುಕಾರರು ಮಂಜಭಟ್ಟರ ಮನೆ ಕಣೋ!” ಉಳಿದ ಇಬ್ಬರಿಗಿಂತಲೂ ವಯಸ್ಸಿನಲ್ಲಿ ಹಿರಿಯನಾಗಿ, ಹಿಂದೆ ಒಂದೆರಡು ಸಾರಿ, ತನ್ನ ಅಪ್ಪಯ್ಯ ಬೆಟ್ಟಳ್ಳಿ ಕಲ್ಲಯ್ಯಗೌಡರೊಡನೆ, ಅಲ್ಲಿಗೆ ಬಂದಿದ್ದು ಸ್ಥಳಪರಿಚಯ ಪಡೆದಿದ್ದ ಕಾಡು ಹೇಳಿ, ಮತ್ತೆ ಮುಂದುವರಿದನು: “ಅಪ್ಪಯ್ಯನ ಸಂಗಡ ಒಂದು ಸಾರಿ ಕಲ್ಲೂರು ತೇರಿಗೆ ಬಂದಿದ್ದೆ ಕಣೋ. ಆಗ ಆ ಭಟ್ಟರ ಮನೇಲೇ ಊಟ ಮಾಡಿದ್ದು ನಾವು. ಹೋಳಿಗೆ ಪಾಯಸ ಏನೇನೋ ಇಕ್ಕಿದ್ರು ಕಣೋ! ಆದರೆ, ಮನೆ ಒಳಗೆ ಬಳ್ಳೆಹಾಕಿರಲಿಲ್ಲ; ಹೊರಂಗಳದ ತೆಣೆ ಮೂಲೇಲಿ ಹಾಕಿದ್ರೋ ಅಪ್ಪಯ್ಯನೇ ನನ್ನ ಬಳ್ಳೇನೂ ಎತ್ತಹಾಕಿ, ಅವರೇ ಅಲ್ಲೆಲ್ಲಾ ಗ್ವಾಮಯಾನೂ ಹಾಕಿದ್ರು! ನಂಗೆ ಇಸ್ಸಿ ಅನ್ನಿಸಿಬಿಟ್ಟಿತ್ತು!…  ಇನ್ನು ಎಂದೆಂದಿಗೂ ಅವರ ಮನೇಲಿ ಊಟ ಮಾಡಬಾರದು ಅಂತಾ ಮಾಡಿಬಿಟ್ಟೀನಿ!”
ಇನ್ನೂ ಏನೇನು ಹೇಳುತ್ತಿದ್ದನೊ ಕಾಡು? ಅಷ್ಟರಲ್ಲಿ ಅವನ ಅವ್ವ ದೊಡ್ಡಮ್ಮ ಹೆಗ್ಗಡತಿಯವರು “ಸಾಕು ಬಿಡೋ, ಮತ್ತೇನು ಬಿರಾಂಬ್ರ ಮನೇಲಿ ಗೌಡರನ್ನು ಒಳಗೆ ಕೂರಿಸಿ ಇಕ್ತಾರೆ ಅಂತಾ ಮಾಡಿಯೇನು? ನಮ್ಮನೇಲಿ, ಆ ಕಿಲಸ್ತರ ಉಪದೇಶಿ ಬರತಾನಲ್ಲ, ಅವನ್ನ ಒಳಗೆ ಕೂರಿಸಿ ಊಟ ಹಾಕ್ತಿಂವೇನು? ಹಂಗೇನೆ ಬಿರಾಂಬರ ಮನೇಲಿ ನಮ್ಮನ್ನೆಲ್ಲ ಹೊರಗೇ ಕೂರಿಸಿ ಇಕ್ತಾರೆ” ಎಂದು ಬ್ರಾಹ್ಮಣ ಸಮರ್ಥನೆ ಮಾಡಿದರು.
“ಆದ್ರೆ? ದೇವಣ್ಣಯ್ಯ ಉಪದೇಶಿ ಜೊತೇಲೇ ಕೂತು ಉಣ್ತಾನಲ್ಲಾ? ಹಂಗೇ ಆ ಭಟ್ಟರ ಮಗ ಯಾಕೆ ಕೂರಬಾರದಾಗಿತ್ತು. ಉಣ್ಣಾಕೆ ನಮ್ಮ ಜೊತೇಲಿ?” ಪ್ರತಿಭಟಿಸಿತ್ತು ಕಾಡಣ್ಣನ ತರ್ಕವಾಣಿ.
“ನಿನ್ನ ದೇವಣ್ಣಯ್ಯ ಜಾತಿಗೀತಿ ಎಲ್ಲಾ ಬಿಟ್ಟಾಗದೆ! ಬೇಕಾದ್ರೆ ಹೊಲೇರು ಹಟ್ಟರ ಸಂಗಡಾನೂ ಉಣ್ತಾನೆ!” ಎಂದು ಸಿಡುಕಿ, ದೊಡ್ಡಮ್ಮ ಸುಮ್ಮನಾದರು. ಅಷ್ಟರಲ್ಲಿ ಗಾಡಿ ದೇವಸ್ಥಾನದ ಬಳಿಯ ದೊಡ್ಡ ಅರಳಿ ಕಟ್ಟೆಯ ಬುಡದಲ್ಲಿ, ವಾಡಿಕೆಯಂತೆ, ನಿಂತಿತು. ಹುಡುಗರೆಲ್ಲ ಸಸಂಭ್ರಮದಿಂದ, ಬಚ್ಚ ಎತ್ತಿರ ಕೊರಳು ಬಿಚ್ಚಿ ಮೂಕಿಯನ್ನು ನೆಲಕ್ಕೆ ಮುಟ್ಟಿಸುವ ಮುನ್ನವೆ, ಹಿಂದುಗಡೆಯಿಂದ ಹಾರಿಬಿಟ್ಟರು!
ಬೆಟ್ಟಳ್ಳಿಯ ಕಮಾನುಗಾಡಿ ಬಂದದ್ದನ್ನು ಗಮನಿಸಿದ ಜೋಯಿಸರು ಬಂದರು ವಿಚಾರಿಸಿದರು, ಮಡಿ ಕೆಡದಂತೆ ಆದಷ್ಟು ದೂರದಲ್ಲಿಯೆ ನಿಂತು, ಪುಣ್ಯವಶಾತ್ ಅವರಿಗೆ ಗಾಡಿ ಹೊಡೆಯುತ್ತಿದ್ದ ಬಚ್ಚ ಹೊಲೆಯರವನು ಎಂದು ಗೊತ್ತಾಗಲಿಲ್ಲ!
ಬೆಟ್ಟಳ್ಳಿ ಕಲ್ಲಯ್ಯಗೌಡರು ಬಂದಿಲ್ಲ; ಬದಲಾಗಿ, ಅವರ ದೊಡ್ಡಮಗ ದೇವಯ್ಯಗೌಡರು ಬಂದಿದ್ದಾರೆ ಎಂಬುದನ್ನು ಕೇಳಿದ ಜೋಯಿಸರ ಮುಖ ಮಂಡಲ ತುಸು ನಿಸ್ತೇಜವಾಯಿತು. ಬ್ರಾಹ್ಮಣರಿಗೆ ತೊರಿಸಬೇಕಾಗಿದ್ದ ಗೌರವದಲ್ಲಿಯೂ ಅವರಿಗೆ ನೀಡಬೇಕಾಗಿದ್ದ ದಾನದಕ್ಷಿಣೆಗಳ ವಿಚಾರದಲ್ಲಿಯೂ ತಮ್ಮ ಸಂಪ್ರದಾಯ ಬದ್ಧತೆಯಿಂದಲೂ ನಿಷ್ಠೆಯಿಂದಲೂ ಔದಾರ್ಯದಿಂದಲೂ ವಿಪ್ರಪೂಜಾಧುರಂಧರ ಎಂದು ಕಲ್ಲೂರಿನ ಹಾರುವರಲ್ಲಿ ಕೀರ್ತಿ ಪಡೆದಿದ್ದ ಕಲ್ಲಯ್ಯಗೌಡರು ಬರದಿದ್ದುದು ಅಪಾರ ನಷ್ಟದ ಬಾಬತ್ತಾಗಿತ್ತು, ಪುಜಾರಿಗಳಾಗಿದ್ದ ಭಟ್ಟರಿಗೂ ಜೋಯಿಸರಿಗೂ, ಜೊತೆಗೆ, ಹಾರುವರ ವಿಚಾರದಲ್ಲಿ ಪಾದ್ರಿಗಳೊಡನೆ ಸೇರಿಕೊಂಡು, ಕೆಟ್ಟ ಅಭಿಪ್ರಾಯವನ್ನು ಸಂಪಾದಿಸಿ, ಅವರನ್ನು ತಿರಸ್ಕಾರದಿಂದಲೂ ದ್ವೇಷದಿಂದಲೂ ಕಾಣುತ್ತಿದ್ದಾನೆ ಎಂಬ ದೇವಯ್ಯನ ‘ಅಪಕೀರ್ತಿ’ ಜನಿವಾರದವರಲ್ಲಿ ತಕ್ಕಮಟ್ಟಿಗೆ ಹಬ್ಬಿಬಿಟ್ಟಿತ್ತು.
ಆದರೂ ದೇವಯ್ಯಗೌಡರನ್ನು ಕಂಡು, ಅವರ ಮನೆಯವರು ಮಾಡಿಸುತ್ತಿದ್ದ ಸತ್ಯನಾರಾಯಣದ ಪೂಜೆಯ ಸಂಬಂಧವಾಗಿ ಮಾತಾಡುವುದು ಒಳ್ಳೆಯದೆಂದು ಭಾವಿಸಿದ ಜೋಯಿಸರು “ಎಲ್ಲಿದ್ದಾರೆ, ದೇವಯ್ಯಗೌಡರು? ಅವರನ್ನು ಕಾಣಬೇಕಿತ್ತಲ್ಲಾ” ಎಂದಾಗ.
ಕಾಡು “ಅಣ್ಣಯ್ಯ ಇನ್ನೂ ಬಂದಿಲ್ಲ, ಭಟ್ಟರೆ. ಹ-ಹ-ಹ” ಎಂದು ಹಂದಿ ಹಸಿಗೆ ಮಾಡಿಸುತ್ತಿದ್ದ ಸ್ವಾರಸ್ಯ ವಿಚಾರವನ್ನು ತಿಳಿಸಬೇಕೋ ಬೇಡವೊ ಎಂದು ತಡೆದು ತಡೆದು ಹವಣಿಸುತ್ತಿದ್ದುದನ್ನು ಅರಿತ ಬಚ್ಚ, ಆಗಲಿದ್ದ ಅಚಾತುರ್ಯವನ್ನು ತಪ್ಪಿಸುವ ನೈಪುಣ್ಯ ಪ್ರದರ್ಶನ ಮಾಡಿ “ಹಲಸಿನ ಹಣ್ಣು ಕುಯಿಸುತ್ತಾ ಇದ್ದರು, ದೇವಯ್ಯೋರು; ನಿಮಗೆ ಕೊಡಾಕೆ ಅಂತಾ ಕಾಣ್ತದೆ. ಇನ್ನೇನು ಬಂದು ಬಿಡುತ್ತಾರೆ, ಬೈಸಿಕಲ್ ಮ್ಯಾಲೆ!” ಎಂದನು. ಅತ್ತ, ಅದೇ ಸಮಯದಲ್ಲಿ, ದೇವಯ್ಯಗೌಡರು ಹಸಿಗೆಯಾಗಿದ್ದ ಆ ಕಾಡು ಹಂದಿಯ ಹುರಿದ ಮಾಂಸದ “ಉಪ್ಪು ತುಂಡ”ನ್ನು ಬಾಯಿ ತುಂಬ ಹಾಕಿಕೊಂಡು ಜಗಿದು ತಿನ್ನುತ್ತಾ, ದೇವರ ಕಾರ್ಯಕ್ಕೆ ಹೋಗುತ್ತಿದ್ದುದರಿಂದ ಅದನ್ನು ತಿನ್ನಲು ನಿರಾಕರಿಸಿದ್ದ ಮುಕುಂದಯ್ಯನನ್ನು ಪರಿಹಾಸ್ಯ ಮಾಡುತ್ತಾ ಇದ್ದ ಸತ್ಯ ಸಂಗತಿಯನ್ನರಿಯದೆ ಜೋಯಿಸರು ತುಂಬ ಆಸ್ತಿಕಭಾವದಿಂದ ಹೇಳಿ ಹಿಂತಿರುಗಿದರು: “ಸತ್ಯ ನಾರಾಯಣ ಪೂಜೆಗೆ ಎಲ್ಲ ಸಿದ್ಧವಾಗಿದೆ. ಹೆಗ್ಗಡತಿ ಅಮ್ಮನವರಿಗೂ ತಿಳಿಸಿಬಿಡು, ಎಲ್ಲರೂ ಹೊಳೆಯಲ್ಲಿ ಕೈಕಾಲು ಮುಖ ತೊಳೆದುಕೊಂಡು ದೇವಸ್ಥಾನಕ್ಕೆ ಬರಲಿ.”
ತಮ್ಮ ಹಳ್ಳಿಯನ್ನು ‘ಊರು’ ಎಂದಾಗಲಿ ‘ಹಳ್ಳಿ’ ಎಂದಾಗಲಿ ಕರೆಯದ ‘ಮನೆ’ ಎಂದೇ ಕರೆದು, ದೊಡ್ಡದಾದರೂ ಒಂದೊಂದೇ ಬಿಡಿಯಾಗಿದ್ದ ಮನೆಯಲ್ಲಿ ವಾಸಿಸಿ ರೂಢಿಯಾಗಿದ್ದ ಧರ್ಮು ತಿಮ್ಮು ಅವರಿಗೆ ಇಪ್ಪತ್ತೊ ಮೂವತ್ತೊ ಹೆಂಚಿನ ಮನೆಗಳೂ ಸೋಗೆಯ ಮತ್ತು ಹುಲ್ಲಿನ ಗುಡಿಸಲು ಮನೆಗಳೂ ಒಟ್ಟಿಗಿದ್ದು, ಅವುಗಳ ನಡುವೆ ಹಾದುಹೋಗಿದ್ದ ಒಂದು ತೇರುಬೀದಿಯೂ ಇದ್ದ ಕಲ್ಲೂರು, ‘ಪೇಟೆ’ಯಾಗಿ, ಸಾಕಷ್ಟು ವಿಸ್ಮಯ ಗೌರವಾಸ್ಪದವಾಗಿಯೆ ಇತ್ತು. ಅವರಿಬ್ಬರಿಗಿಂತಲೂ ಮೊದಲೇ ಆ ಊರಿನ ತೇರಿಗೆ ಬಂದು ಹೋಗಿದ್ದ ಕಾಡು ಸರ್ವಜ್ಞ ಮಾರ್ಗದರ್ಶಿಯಾಗಿಬಿಟ್ಟನು!
ಕೈಕಾಲು ಮುಖ ತೊಳೆದುಕೊಳ್ಳುವುದಕ್ಕೆ ಎಲ್ಲರೂ ಅಲ್ಲಲ್ಲಿ ಧರಿಸಿ ಹಾಳಾಗಿದ್ದ ಮೆಟ್ಟಲುಗಳನ್ನು ಇಳಿಯುತ್ತಿದ್ದಾಗ ತನ್ನ ಅಮ್ಮನ “ಏ, ಬದಿಗೆ ನಿಂತುಕೊಳ್ರೋ, ಮಡಿಯಮ್ಮ ಬರ್ತಿದ್ದಾರೆ!” ಎಂಬ ಅಜ್ಞಾಧ್ವನಿಯನ್ನು ಕೇಳಿ, ಕಾಡು ತನ್ನ ಗೆಳೆಯರಿಬ್ಬರನ್ನೂ ಪಕ್ಕಕ್ಕೆ ಎಳೆದುಕೊಂಡು ನಿಂತನು. ಕೆಂಪು ಸೀರೆಯುಟ್ಟು, ನುಣ್ಣಗೆ ಬೋಳಿಸಿದ ಮಂಡೆಗೆ ಸೆರಗು ಮುಚ್ಚಿ, ಕೈಯಲ್ಲೊಂದು ಚೆನ್ನಾಗಿ ಬೆಳಗಿ ಪಳಪಳ ಹೊಳೆಯುತ್ತಿದ್ದ ತಾಮ್ರದ ತಂಬಿಗೆ ಹಿಡಿದು ಬರುತ್ತಿದ್ದ ಹೆಂಗಸೊಬ್ಬಳನ್ನು ಕಂಡು ತಿಮ್ಮು ಕೇಳಿದನು “ಯಾರೋ ಅದು?” ತಮ್ಮ ಮನೆಯಲ್ಲಿ ಎಲ್ಲರೂ ಗೌರವ ತೋರಿಸುತ್ತಿದ್ದ ತನ್ನ ಅಜ್ಜಮ್ಮನೂ ಕೂಡ ಅವಳಿಗಾಗಿ ಪಕ್ಕಕ್ಕೆ ಸರಿದು ದಾರಿಬಿಡುವಷ್ಟು ಭಯ ಭಕ್ತಿ ಗೌರವಾಸ್ಪದಳಾದ ಆ ಹೆಂಗಸು ಬಹಳ ದೊಡ್ಡ ವ್ಯಕ್ತಿಯೆ ಆಗಿರಬೇಕೆಂದು ಅವನ ಭಾವನೆ. ಆದರೆ ‘ಸರ್ವಜ್ಞ ಮಾರ್ಗದರ್ಶಿ’ ಪ್ರತ್ಯುತ್ತರ ಕೊಡದೆ, ಅರ್ಧ ಭೀತಿಯಿಂದಲೊ ಎಂಬಂತೆ, ಮೆಟ್ಟಲನ್ನು ಎಣಿಸುತ್ತಿರುವಳೊ ಎಂಬಷ್ಟು ನಿಧಾನವಾಗಿ ಹತ್ತಿ ಹತ್ತಿ ಬರುತ್ತಿದ್ದ ಆ ಬೃಹದಾಕಾರದ, ಸ್ಥೂಲಕಾಯದ, ಉಗ್ರವದನದ ಸ್ತ್ರೀಯನ್ನು ಸುಮ್ಮನೆ ನೋಡುತ್ತಿದ್ದನು. ಅವಳು ಹತ್ತಿರ ಬಂದಾಗ, ತುಟಿಯನ್ನೆತ್ತಿಕೊಂಡು ಉಬ್ಬಿ ಹೊರಟ ಒಂದು ಕೋರೆ ಹಲ್ಲೂ, ಪಕ್ಕದ ಎರಡು ಮೂರು ಹಲ್ಲು ಬಿದ್ದುಹೋಗಿ ಉಬ್ಬಿದ್ದ ಅಸುಡೂ ನೋಡುವುದಕ್ಕೆ ಹೆದರಿಕೆ ಹುಟ್ಟಿಸುವಂತಿದ್ದುವು.
ಮತ್ತೆ ಕೇಳಿದನು ತಿಮ್ಮು ಮೆಲ್ಲಗೆ “ಯಾರೋ ಅದೂ? ಗಂಡಸೋ? ಹೆಂಗಸೋ?”
“ಹೆಂಗಸು ಕಣೋ! ಬೋಳುಹಾರ್ತಿ!…. ಅವಳ ಕಡೇನೇ ನೋಡಬ್ಯಾಡೋ, ಬಯ್ತಾಳಂತೆ” ಎಂದನು ಕಾಡು. ಆದಷ್ಟು ಮೆಲ್ಲಗೆ.
ಆದರೆ ಸಮೀಪಿಸಿದ್ದ ಆ ಬ್ರಾಹ್ಮಣ ವಿಧವೆಗೆ ಅದು ಕೇಳಿಸಿತೆಂದು ತೋರುತ್ತದೆ. ಅವರ ಕಡೆ ದುರುದುರುದುರು ಕಣ್ಣು ಬಿಟ್ಟು, ಬಾಯಲ್ಲಿ ಏನೋ ಶಾಪಹಾಕುತ್ತಾ, ಏದುತ್ತಾ ಮೇಲಕ್ಕೆ ಏರಿ ಮೆಟ್ಟಿಲು ಹತ್ತಿ ಹೋದಳು.
“ಹಾಂಗಂದ್ರೆ?” ತಿಮ್ಮ ಮತ್ತೆ ಪ್ರಶ್ನಿಸಿದನು, ಅವಳು ದೂರ ಹೋದ ಮೇಲೆ.
“ಬೋಳಮ್ಮ ಕಣೋ…. ಬೋಳು ಮುಂಡೆ!”
“ಛೆ! ಯಾಕೊ ಬಯ್ತೀಯಾ?”
“ಏ, ಬಯ್ಯದಲ್ಲ ಕಣೋ; ಬ್ರಾಂಬ್ರಲ್ಲಿ ಗಂಡ ಸತ್ತ ಮುಂಡೇರಿಗೆ ಮಂಡೆ ಬೋಳಿಸ್ತಾರೆ, ಅದ್ಕೇ ‘ಬೋಳುಮುಂಡೆ’ ಅನ್ನಾದು!” ಮಾತಾಡುತ್ತಲೆ ಎಲ್ಲರ ಜೊತೆ ಇವರೂ ಹೊಳೆಗೆ ಇಳಿದರು.
ಧರ್ಮು ಏನೊಂದನ್ನೂ ಮಾತನಾಡದೆ ಚಿಂತಾಗ್ರಸ್ತನಾಗಿ ಮೆಲ್ಲಗೆ ಮೆಟ್ಟಲು ಇಳಿಯುತ್ತಿದ್ದನು. ಕಾಡು ‘ಬೋಳುಹಾರ್ತಿ’ ಎನ್ನುವುದಕ್ಕೆ ಕೊಟ್ಟ ವಿವರಣೆಯನ್ನು ಕೇಳಿ ಅವನಿಗೆ ಗುಂಡು ತನ್ನೆದೆಗೇ ತಗುಲಿದಂತೆ ಆಗಿತ್ತು. ತಿರುಪತಿಗೆ ಹೋಗಿದ್ದ ತನ್ನ ಅಪ್ಪಯ್ಯ ಸತ್ತಿದ್ದರೆ, ಅಥವಾ ಸತ್ತರೆ, ತನ್ನ ಅವ್ವನೂ ಹೀಗೆಯೆ ಮಂಡೆಬೋಳಿಸಿಕೊಂಡು ಕೆಂಪು ಸೀರೆ ಉಟ್ಟುಕೊಂಡು ವಿಕಾರವಾಗುತ್ತಾಳೆಯೊ ಏನೊ ಎಂಬೊಂದು ಮಹಾ ಸಂಕಟಕರ ಭೀತಿ ಅವನ ಹೃದಯದಲ್ಲಿ ಸಂಚರಿಸತೊಡಗಿತ್ತು. ಮುಂದೆ ಹೆಂಗಸರ ಜೊತೆ ತಂಗಿಯ ಮಗು ಚೆಲುವಯ್ಯನನ್ನು ಎತ್ತಿಕೊಂಡು ಮೆಟ್ಟಿಲಿಳಿಯುತ್ತಿದ್ದ ತನ್ನ ಮಾತೃಮೂರ್ತಿಯನ್ನು ನೋಡಿದನು. ಅವನಿಗೆ ಎದೆ ಕರಗಿದಂತಾಯ್ತು.
ಹೆದರಿ ಹೆದರಿ ಪ್ರಶ್ನಿಸಿದನು “ಕಾಡಣ್ಣಯ್ಯ, ನಮ್ಮಲ್ಲಿಯೂ ಹೀಂಗೆ ಮಾಡ್ತಾರೇನೋ, ಗಂಡ ಸತ್ತರೆ?”
“ಥೂಥೂಥೂ! ಎಂಥಾ ಮಾತಾಡ್ತೀಯೋ? ನಮ್ಮಲ್ಲಿ ಯಾರಿಗೂ ಹೀಂಗೆ ಮಾಡಾದಿಲ್ಲೊ! ಬ್ರಾಂಬ್ರ ಜಾತೀಲಿ ಮಾತ್ರ ಹಂಗೆ ಮಾಡಾದು.”
“ಸದ್ಯ ನಾನೂ ನನ್ನವ್ವನೂ ಬಿರಾಂಬ್ರಜಾತೀಲಿ ಹುಟ್ಟದೆ ಗೌಡರ ಜಾತೀಲಿ ಹುಟ್ಟಿದ್ದೀವಲ್ಲಾ!” ಮನಸ್ಸಿನಲ್ಲಿಯೆ ಅಂದುಕೊಂಡು ಧರ್ಮು ಹೊಳೆಯ ಅಂಚಿನ ತೆಳ್ಳೆ ನೀರಿಗಿಳಿದನು.
ಹೊಳೆಯಿಂದ ಮೇಲಕ್ಕೆ ಬರುತ್ತಿದ್ದಾಗ ಬಂಡೆಗಳೆಡೆ ದುರ್ವಾಸನೆ ಬರುತ್ತಿರಲು ತಿಮ್ಮು ಮೂಗು ಮುಚ್ಚಿಕೊಂಡನು; “ಈ ಊರಿನ ಹಾರುವರೆಲ್ಲ ಇಲ್ಲೆ….” ಮೂವರೂ ಅಸಹ್ಯ ಸೂಚಕ ಧ್ವನಿಮಾಡುತ್ತಾ ಆ ಸ್ಥಳದಿಂದ ಬೇಗನೆ ದೂರ ಹೋಗಲು ಓಡಿ ಓಡಿ ಮೆಟ್ಟಲೇರಿದರು.
ದೊಡ್ಡಮ್ಮ ಹೆಗ್ಗಡಿತಿಯವರ ಗಂಭೀರವಾದ ಮುಂದಾಳುತನದಲ್ಲಿ ಎಲ್ಲರೂ ದೇವಸ್ಥಾನದ ಒಳಾಂಗಣಕ್ಕೆ ಹೋದರು. ಕಾಡು ಮಾತ್ರ ತನ್ನ ಗೆಳೆಯರ ಬಟ್ಟೆ ಹಿಡಿದೆಳೆಯುವ ಸಂಕೇತಮಾಡಿ, ಅವರನ್ನು ಹಿಂದುಳಿಯುವಂತೆ ಮಾಡಿದನು. ದೇವರ ಪೂಜೆಗೆ ಆದಷ್ಟು ಬೇಗನೆ ಹೋಗಿ, ತನ್ನ ತಾಯಿಗೂ ತನಗೂ ಮಂಗಳವಾಗುವಂತೆ ಪ್ರಾರ್ಥಿಸಿಕೊಳ್ಳಲು ಆತುರದಿಂದಿದ್ದ ಧರ್ಮು “ಯಾಕೋ? ಅಜ್ಜಮ್ಮ ಬಯ್ತಾರೆ; ಬೇಗ ಹೋಗೋಣೋ” ಎಂದನು.
“ಇನ್ನೂ ಸುಮಾರು ಹೊತ್ತಿದೆಯೋ ಪೂಜೆಗೆ. ಗಂಟೆ ಜಾಗಟೆ ಎಲ್ಲ ಬಾರಿಸ್ತಾರಲ್ಲಾ? ಆವಾಗ ಓಡಿದರಾಯ್ತು. ನಿಮಗೆ ರಥದ ಕೊಟ್ಟಿಗೆ ತೋರಿಸ್ತೀನಿ ಬನ್ನಿ. ರಥಾನೂ ಇರ್ತದೆ. ದೊಡ್ಡ ಗಾಲಿಯ ತೇರು ಕಣೋ!”
ರಥದ ಕೊಟ್ಟಿಗೆಗೆ ಹೋಗಿ ಮೂವರೂ ವಿಸ್ಮಯದಿಂದ ಅದರ ಬೃಹದಾಕಾರದ ಗಾಲಿಗಳನ್ನು ನೋಡುತ್ತಿದ್ದಾಗ, ಕಾಡು ರಥೋತ್ಸವದಲ್ಲಿ ತೇರನ್ನು ಹೇಗೆ ಸಿಂಗರಿಸುತ್ತಾರೆ, ಹೇಗೆ ಎಳೆಯುತ್ತಾರೆ, ಮಿಣಿ ಕಟ್ಟುವುದು ಹೇಗೆ – ಎಂಬೆಲ್ಲ ತನ್ನ ಅನುಭವಗಳನ್ನು ವಿವರಿಸುತ್ತಿರಲು, ತಿಮ್ಮು ಹಿಗ್ಗಿ ಕೂಗಿಯೆಬಿಟ್ಟನು: “ಅಲ್ಲಿ ನೋಡೋ! ಅಲ್ಲಿ ನೋಡೋ! ಅವೆಂಥಾ ಹಕ್ಕಿಯೊ? ಎಷ್ಟೊಂದು ಇವೆಯೋ?”
“ಅವು ಪಾರಿವಾಳ ಕಣೋ. ಇಲ್ಲೇ ಅವು ಗೂಡುಕಟ್ಟಿ ಮರೀನೂ ಮಾಡ್ತವೆ.”
“ಅವನ್ನ ಹೊಡಕೊಂಡು ತಿನ್ನಾದಿಲ್ಲೇನೋ… “
“ದೇವರ ಹಕ್ಕಿ, ದೇವರ ಮೀನು ಇವನ್ನ ತಿನ್ತಾರೇನೋ ಯಾರಾದ್ರೂ? ಅದರಲ್ಲೂ ಇಲ್ಲಿ ಇರೋರೆಲ್ಲಾ ಹೆಚ್ಚಾಗಿ ಹಾರುವರೆ.”
“ಇದೇನೋ ಇಷ್ಟೊಂದು ಕಾಗೆ? ಹಿಂಡು ಹಿಂಡು? ನಮ್ಮ ಮನೆ ಹತ್ರ ಹುಡುಕಿದ್ರೂ ಕಾಣಾಕೆ ಸಿಗಾದು ಅಪರೂಪ.”
“ಹಾರ್ ಮಕ್ಕಳು ಇದ್ದಲ್ಲೇ ಹಾಂಗೆ ಕಣೋ! ಕಾಗೆ, ನಾಯಿ ಹಿಂಡು ಹಿಂಡೇ ಇರ್ತವೆ. ಚೆಂದಾಗಿ ತಿಂದು ಬಿಸಾಡ್ತಾರೆ ನೋಡು, ಅದಕ್ಕೇ!”
ಕಾಡು ತಿಮ್ಮು ಅವರ ಕೊನೆಮೊದಲಿಲ್ಲವೆಂಬಂತೆ ಸಾಗುತ್ತಿದ್ದ ಮಾತಿನ ಕಡೆಗೆ ಧರ್ಮು ಅಷ್ಟೇನೂ ಹೆಚ್ಚು ಗಮನ ಕೊಟ್ಟಂತೆ ಕಾಣುತ್ತಿರಲಿಲ್ಲ. ಅವನ ಮನಸ್ಸೆಲ್ಲ ದೇವಸ್ಥಾನದ ಕಡೆಗೇ ಇತ್ತು. ಒಂದೆರಡು ಸಾರಿ ಅವನಿಗೆ ಗಂಟೆಯೊ ಜಾಗಟೆಯೂ ಬಾರಿಸಿದಂತೆ ಕೇಳಿಸಿತ್ತು. ಆದರೆ ಕಾಡು “ನಿಂಗೇನೋ ಕಿವಿ ಒಳಗೇ ಯಾರೋ ಗಂಟೆ ಜಾಗಟೆ ಬಾರಿಸ್ತಾರೆ ಅಂತಾ ಕಾಣ್ತಾದೆ!” ಎಂದು ಹಾಸ್ಯ ಮಾಡಿದ್ದನು. ಆದರೆ ಧರ್ಮು ಮತ್ತೆ ಮತ್ತೆ ಎಚ್ಚರಿಸುತ್ತಲೆ ಇದ್ದುದರಿಂದ ಮೂವರೂ ದೇವಸ್ಥಾನದೊಳಕ್ಕೆ ಯಾರ ಗಮನಕ್ಕೂ ಬೀಳಬಾರದೆಂದು ಮೆಲ್ಲಗೆ ನುಸುಳಿ ನಡೆದರು.
ಕಲ್ಲನ್ನೆ ಹಾಸಿ, ಕಲ್ಲನ್ನೆ ಹೊದಿಸಿ, ಕಲ್ಲಿನ ಕಂಬಗಳ ಮೇಲೆಯೆ ನಿಂತಿದ್ದ ಆ ಗುಡಿಯ ನಿರ್ಮಲವಾಗಿದ್ದ ಒಳಾಂಗಣ ಹೂವು ಗಂಧ ಧೂಪ ಇವುಗಳ ಮಿಶ್ರಪರಿಮಳದಿಂದ ಮನಸ್ಸಿಗೆ ಪವಿತ್ರ ಭಾವನೆಯನ್ನು ತರುತ್ತಿತ್ತು. ಆ ಕಂಭಗಳಲ್ಲಿ ಆ ಬೋದಿಗೆಗಳಲ್ಲಿ ಕಲ್ಲಿನ ಕೆತ್ತನೆಯ ಕೆಲಸ ಕುತೂಹಲಕಾರಿಯಾಗಿತ್ತಾದರೂ ಬೆಕ್ಕಸಪಡುವಂಥಾದ್ದೇನೂ ಇರಲಿಲ್ಲ, ಹುಡುಗರ ಭಾಗಕ್ಕೆ. ಏಕೆಂದರೆ ಅವರ ಮನೆಯ ಜಗಲಿಯ ದೊಡ್ಡ ದೊಡ್ಡ ಮಂಡಿಗೆಗಳೇ ಚಿತ್ರಕರ್ಮದಲ್ಲಿ ಆ ಕಲ್ಲುಕಂಭಗಳಿಗಿಂತಲೂ ಮೇಲುಮಟ್ಟದ್ದಾಗಿದ್ದುವು.
ಜಗಲಿಯಂತೆ ಎತ್ತರವಾಗಿದ್ದ ಅಂಗಣದ ಮೇಲುಭಾಗದಲ್ಲಿ ಬ್ರಾಹ್ಮಣ ಮುತ್ತೈದೆಯರು ಕುಳಿತಿದ್ದರು. ಕೆಳಗಿನ ಅಂಗಳದಲ್ಲಿ ಶೂದ್ರವರ್ಗದವರು ಎಂದರೆ ಬೆಟ್ಟಳ್ಳಿ ಕೋಣೂರು ಹಳೆಮನೆಯ ಹೆಂಗಸರು ಗುಂಪು ಕೂಡಿದ್ದರು. ಗಾಡಿ ಹತ್ತಲೊಲ್ಲದೆ ದಾರಿಯಲ್ಲಿ ಬಿಟ್ಟು ಬಂದಿದ್ದ ರಾಮುವೂ ತನ್ನ ತಾಯಿಯ ಪಕ್ಕದಲ್ಲಿ ಕುಳಿತಿದ್ದವನು, ಪ್ರವೇಶಿಸಿದ ಈ ಮೂವರನ್ನೂ ಕಂಡೊಡನೆ, ಸನ್ನಿವೇಶದ ಗಾಂಭೀರ್ಯವನ್ನು ಒಂದಿನಿತೂ ಗಮನಿಸದೆ “ಓ! ಧರ್ಮಣ್ಣಯ್ಯ ತಿಮ್ಮಭಾವ ಎಲ್ಲಾ ಬಂದ್ರಲ್ಲಾ!” ಎಂದು ಗಟ್ಟಿಯಾಗಿ ತಮ್ಮ ಹಳ್ಳಿಯ ಮನೆಯಲ್ಲಿ ಕೂಗುವಂತೆ ಕೂಗಿ ಕರೆಯುತ್ತಾ ಎದ್ದು ಓಡಿ ಬಂದು, ಅವರನ್ನು ಸ್ವಾಗತಿಸಿ, ತನ್ನ ಹಳ್ಳಿಗತನದಿಂದ ಎಲ್ಲರ, ವಿಶೇಷವಾಗಿ ಬ್ರಾಹ್ಮಣ ಮಹಿಳಾವರ್ಗದ ಮುಚ್ಚುನಗೆಗೆ ಪಕ್ಕಾಗಿದ್ದನು! ಶೂದ್ರವರ್ಗದ ಸ್ತ್ರೀಯರು ಮುಸುಗುನಗೆ ನಟಿಸಿದ್ದರೂ ತಮ್ಮವನಾದ ಹುಡುಗನೊಬ್ಬನ ಅಸಭ್ಯ ಅಥವಾ ಗ್ರಾಮ್ಯವರ್ತನೆಗಾಗಿ ಅವಮಾನಿತರಾಗಿದ್ದರು!
ಬ್ರಾಹ್ಮಣ ಗಂಡಸರಿಗೆ ಸಮೀಪವಾಗಿ, ಆದರೆ ಕೆಳ ಅಂಗಳದಲ್ಲಿ, ಕೆಲವೇ ಶೂದ್ರರೊಡನೆ ಕುಳಿತಿದ್ದ ಪಟ್ಟೆನಾಮದ ಹೆಂಚಿನ ಮನೆಯ ಶಂಕರಪ್ಪ ಹೆಗ್ಗಡೆಯವರು ಹೆಗ್ಗನ್ಣು ಬಿಟ್ಟು ಮಗನನ್ನು ಗದರಿಸಿದರು. ಧರ್ಮು ಜನರ ಕಣ್ಣಿನಿಂದ ಆದಷ್ಟು ಬೇಗನೆ ತಪ್ಪಿಸಿಕೊಳ್ಳಲೆಂಬಂತೆ, ರಾಮುವ ಕೈಹಿಡಿದುಕೊಂಡೇ ಬೇಗಬೇಗನೆ ಹೋಗಿ, ತನ್ನ ತಾಯಿಯ ಹತ್ತಿರ ಹುದುಗುವವನಂತೆ ಕುಳಿತನು. ಕಾಡು ತಿಮ್ಮು ಇಬ್ಬರೂ ದುರದಲ್ಲಿಯೆ ಒಂದು ಕಲ್ಲು ಕಂಬಕ್ಕೆ ಒರಗಿ ನಿಂತು ಎಲ್ಲವನ್ನೂ ನೋಡತೊಡಗಿದರು, ತಾವು ಯಾವುದನ್ನೂ ಲಕ್ಷಿಸುವವರಲ್ಲ ಎಂಬಂತೆ ಸೆಟೆದುನಿಂತು.
ತನ್ನ ತಾಯಿ ಮುಂತಾದವರ ಗೊಬ್ಬೆ ಸೆರಗಿನ ಮಲೆನಾಡಿನ ಉಡಿಗೆಯನ್ನೇ ನೋಡಿ ಅಭ್ಯಾಸವಾಗಿದ್ದ ತಿಮ್ಮುಗೆ ಹಾರುವರ ಹೆಂಗಸರ ಉಡುಗೆಯ ರೀತಿ ವಿನೋದಕರವಾಗಿತ್ತು. ಅದರಲ್ಲಿಯೂ ಕಚ್ಚೆ ಹಾಕಿದಂತೆ ಸೀರೆ ಉಟ್ಟಿದ್ದವರನ್ನು ನೋಡಿ ಅವನಿಗೆ ನಗೆ ತಡೆಯಲಾಗಲಿಲ್ಲ: “ಏನೋ, ಕಾಡಣ್ಣಯ್ಯ, ಗಂಡಸರ ಹಾಂಗೆ ಕಚ್ಚೆ ಹಾಕಿಲ್ಲಾರಲ್ಲೋ ಥೂ!” ಎಂದು ಪಿಸುಗುಟ್ಟಿದ್ದನು. ಅದೊಂದು ತರದ ಬಿರಾಂಬರ ಉಡಿಗೆ ಕಣೋ!” ಎಂದು ವಿವರಿಸಿದ್ದನು ಕಾಡು. ತಿಮ್ಮುಗೆ ಉಡಿಗೆ ತೊಡಿಗೆಯಲ್ಲಾಗಲಿ ರೂಪದಲ್ಲಾಗಲಿ ಬಣ್ಣದಲ್ಲಾಗಲಿ ತನ್ನ ಹಳೆಮನೆ ಅತ್ತೆಮ್ಮ ಬೆಟ್ಟಳ್ಳಿ ಅತ್ತೆಮ್ಮ ಮುಂತಾದವರ ಮುಂದೆ ಯಾವ “ಹಾರ್ತಿ”ಯೂ “ಚೆಂದ” ಕಾಣಿಸಲಿಲ್ಲ.
ಇವರು ನೋಡುತ್ತಿದ್ದಂತೆಯೆ ಒಬ್ಬಳು ಬ್ರಾಹ್ಮಣ ಯುವತಿ, ಒಳ್ಳೆಯ ಸೀರೆಯನ್ನುಟ್ಟು ಅಲಂಕಾರವಾಗಿದ್ದಳು, ಮತ್ತೊಬ್ಬಳು ಬ್ರಾಹ್ಮಣ ತರುಣಿಯನ್ನು ನೋಡುವುದಕ್ಕೆ ಬೆಳ್ಳಗೆ ತೆಳ್ಳಗೆ ಲಕ್ಷಣವಾಗಿದ್ದರೂ ತುಂಬ ಕೃಶಳಾಗಿದ್ದು ಟೊಂಕ ತಿರುಪಿದಂತೆ ಕಾಲು ಹಾಕಿ ಕುಂಟುತ್ತಿದ್ದಳು-ಕೈ ಆಪುಕೊಟ್ಟು ಮೆಲ್ಲಗೆ ನಡೆಸಿಕೊಂಡು ಬಂದು ಬ್ರಾಹ್ಮಣ ಮಹಿಳೆಯರ ನಡುವೆ ಕೂರಿಸಿ, ತಾನೂ ಅವಳ ಪಕ್ಕದಲ್ಲಿ ರಕ್ಷಕಳೆಂಬಂತೆ ಕೂತಳು. ಅಲ್ಲಿ ನೆರೆದಿದ್ದ ಗಂಡಸರ ಮತ್ತು ಹೆಂಗಸರ ದೃಷ್ಟಿಯೆಲ್ಲ ಅವಳ ಕಡೆ ನೆಟ್ಟಿತ್ತು. ಕೆಲವರು ತಮ್ಮತಮ್ಮಲ್ಲಿಯೆ ಪಿಸುಪಿಸು ಮಾತನಾಡಿಕೊಂಡರು; ಕೆಲವರು ಕಿಸಕ್ಕನೆ ಮೆಲುನಗೆ ನಕ್ಕಿದ್ದೂ ಕೇಳಿಸಿತು.
ನೋಡುವುದಕ್ಕೆ ಸುಂದರವಾಗಿದ್ದರೂ ಕಾಯಿಲೆ ಹಿಡಿದವಳಂತೆ ಬಿಳಿಚಿ ಕೃಶವಾಗಿದ್ದು ಕುಂಟುತ್ತಾ ಬಂದಿದ್ದ ಆ ತರುಣಿಯನ್ನು ನೋಡಿ, ತನ್ನ ಹುಟ್ಟುಗುಣವಾದ ಸೌಂದರ್ಯ ಪಕ್ಷಪಾತವನ್ನಾಗಲೆ ಪ್ರದರ್ಶಿಸತೊಡಗಿದ್ದ ತಿಮ್ಮು, ಸಂಕಟಮುಖಿಯಾಗಿ, ಸರ್ವಜ್ಞ ಮಾರ್ಗದರ್ಶಿಯ ಸ್ಥಾನಕ್ಕೆ ಸ್ವಯಂ ಪಟ್ಟಕಟ್ಟಿಸಿಕೊಂಡಿದ್ದ ಕಾಡುವನ್ನು ಕುರಿತು “ಅದು ಯಾರೋ ಆ ಹೆಂಗಸು? ಪಾಪ! ಏನಾಗಿದೆಯೋ ಅವಳಿಗೆ? ಎಷ್ಟು ಚೆನ್ನಾಗಿದ್ದಾರೆ ಅಲ್ಲಾ? ನೋಡಕ್ಕೆ ಹೂವಳ್ಳಿ ಚಿನ್ನಕ್ಕನ ಹಾಂಗೆ ಕಾಣ್ತಾರೆ” ಎಂದನು.
ಕಾಡು ತನ್ನ ತಾಯಿ ದೊಡ್ಡಮ್ಮ ಹೆಗ್ಗಡಿತಿಯವರು ಕೂತಿದ್ದಲ್ಲಿಗೆ ಓಡಿಹೋಗಿ, ಅವರೊಡನೆಯೂ ದೇವಮ್ಮ ರಂಗಮ್ಮ ಧರ್ಮು ಅವರೊಡನೆಯೂ ಏನೇನೋ ಪಿಸು ಮಾತಾಡುತ್ತಿದ್ದು, ತಜ್ಞನಾದ ಸಂತೋಷದಿಂದ ಹಿಂದಿರುಗಿ ಬಂದು ಹೇಳಿದನು: “ಅವರು ಮಂಜಭಟ್ಟರ ಸೊಸೆ ಅಂತೆ ಕಣೋ! ಅವರನ್ನೆ ಅಂತೆ, ಅತ್ತೆ ಮಾವ ಸೇರಿಕೊಂಡು ಹೊಡೆದೂ ಬಡಿದೂ ಕಾಲು ತಿರುವಿ ಹಾಕಿದ್ದು! ಆಗ ಒಂದು ಸಾರಿ ಒಬ್ಬ ಒಳಗೆ ಬಂದು ಅವರ ಇವರ ಹತ್ರ ಏನೇನೋ ಕಿವಿಮಾತು ಆಡಿ ಹೊರಗೆ ಹೋದ ನೋಡು, ಬಚ್ಚಗಾನಿ ಉಟ್ಕುಂಡು ಚಿನ್ನದ ರುದ್ರಾಕ್ಷೀನ ಕೊರಳಿಗೆ ಹಾಕಿಕೊಂಡಿದ್ನಲ್ಲಾ? ನಮ್ಮ ದೇವಣ್ಣಯ್ಯನ ಹಾಂಗೆ ಚೆಂದಾಗಿದ್ದನಲ್ಲೋ?…  ಅವನೇ ಅಂತೆ ಅವರ ಗಂಡ! ನಾರಾಯಣಭಟ್ಟ ಅಂತೆ ಕಣೋ ಅವನ ಹೆಸರು…  ಅಂವ ಇವರನ್ನ ಬಿಟ್ಟು ಕಿಟ್ಟ ಐತಾಳನ ಹೆಂಡ್ತಿ ಇಟ್ಟುಕೊಂಡಿದ್ದಾನಂತೆ…. ಯಾರಂತೀಯಾ? ನೋಡಲ್ಲೇ ಅವರ ಹತ್ರಾನೆ ಕೂತಿದ್ದಾಳಲ್ಲಾ, ಸಿಂಗಾರ ಮಾಡಿಕೊಂಡು, ಗಟ್ಟದ ತಗ್ಗಿನವರರಾಂಗೆ ತಲೆಚಾಚಿ ಕೊಂಡಿದೆಯಲ್ಲಾ ಅವಳೇ!…
“ಅವರನ್ನ ಕೈಹಿಡಿದು ನಡೆಸಿಕೊಂಡು ಬಂದಳಲ್ಲಾ ಅವಳೆ ಏನೋ?”
“ಹ್ಞೂ ಕಣೋ!”
ಅಷ್ಟರಲ್ಲಿ ನೆರೆದಿದ್ದವರೆಲ್ಲ ಗುಡಿಯ ಹೆಬ್ಬಾಗಿಲ ಕಡೆ ದೃಷ್ಟಿಯಾಗಿ ಏನೊ ಗುಜುಗುಜು ಹಬ್ಬಿತು. ನೋಡುತ್ತಿದ್ದ ಹಾಗೆ ಜೋಯಿಸರ ಸಂಗಡ ದೇವಯ್ಯ, ಮುಕುಂದಯ್ಯ ಪ್ರವೇಶಿಸಿದರು.
ಕೆದರು ಕ್ರಾಪಿನ ತಲೆ, ಹರಳೊಂಟೆ ಹೊಳೆವ ಕಿವಿ, ಕರಿಯ ಕುಡಿಮಾಸೆ, ಹೊನ್ನುಂಗುರದ ಬೆರಳು, ನಶ್ಯದ ಬಣ್ಣದ ಕೋಟು, ಬಿಳಪಲ್ಲಿನಕಚ್ಚೆಪಂಚೆ, ಹೆಗಲ ಮೇಲಿದ್ದ ಹೊಸ ತೋಟಾಕೋವಿ, ಎತ್ತರದ ಬಲಿಷಠ ಭಂಗಿ, ಕ್ರೈಸ್ತಪಾದ್ರಿಗಳ ಮೂಲಕ ಆಗತಾನೆ ಮಲ್ಲಗೆ ಪ್ರವೇಶಿಸುತ್ತಿದ್ದ ನವನಾಗರಿಕತೆಯ ಸ್ಥೂಲರುಚಿಯ ಲಕ್ಷಣಗಳಿಂದ ಸಮನ್ವಿತರಾಗಿದ್ದ ದೇವಯ್ಯ ಗೌಡರನ್ನು ನೋಡಿ ನೆರೆದಿದ್ದವರೆಲ್ಲರೂ, ಹೆಂಗಸರು, ಗಂಡಸರು, ಎಲ್ಲರೂ ಬೆರಗಾದರು; ಕೆಲವರು ಕರುಬೂ ತಲೆಹಾಕಿತ್ತು; ಹಲವರಲ್ಲಿ, ಬ್ರಾಹ್ಮಣ ದ್ವೇಷಿಯೆಂದು ಹೆಸರಾಗಿದ್ದ ಅವನ ಮೇಲೆ, ತಿರಸ್ಕಾರ ಭಾವವೂ ಸುಳಿಯದಿರಲಿಲ್ಲ.
ಅವನ ಪಕ್ಕದಲ್ಲಿದ್ದು, ಒಂದು ಸಾಧಾರಣ ಕೋಟು ಹಾಕಿಕೊಂಡು, ಕಟ್ಟಿದ್ದ ಜುಟ್ಟು ಹಿಂದುಗಡೆ ಕಾಣಿಸುವಂತೆ ತಲೆಗೊಂದು ತೋಪಿಯಿಟ್ಟು, ಅಡ್ಡಪಂಚೆಯುಟ್ಟಿದ್ದ ತರುಣ ಮುಕುಂದಯ್ಯನನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ.
ನಾರಾಯಣಭಟ್ಟನ ಹೆಂಡತಿಯ ಪಕ್ಕದಲ್ಲಿ ಕುಳಿತಿದ್ದ ಐತಾಳನ ಹೆಂಡತಿಯಂತೂ, ತನ್ನ ತೋಟಾಕೋವಿಯನ್ನು ಒಂದು ಮೂಲೆಯಲ್ಲಿ ಕಲ್ಲು ಕಂಭಕ್ಕೆ ಒರಗಿಸಿಟ್ಟು, ಮುಕುಂದಯ್ಯನನ್ನು ಹಿಂಬಾಲಿಸಿ, ಶೂದ್ರ ಗಂಡಸರು ಕುಳಿತಿದ್ದೆಡೆಡಗೆ ನಡೆದು ದೇವಯ್ಯ ಅವರ ನಡುವೆ ಕುಳಿತುಕೊಳ್ಳುವವರೆಗೂ ಅವನತ್ತ ಇಟ್ಟಿದ್ದ ದೃಷ್ಟಿಯನ್ನು ಇತ್ತ ತಿರುಗಿಸಿರಲಿಲ್ಲ. ಆಮೇಲೆಯೂ ಏನಾದರೋಂದು ನೆವ ಮಾಡಿಕೊಂಡು ಮತ್ತೆ ಮತ್ತೆ ಅವನತ್ತ ಕಣ್ಣು ಹಾಕುತ್ತಲೆ ಇದ್ದ್ಳು. ಒಮ್ಮೆ ಹಾರುವ ಗಂಡಸರ ನಡುವೆ ಕುಳಿತಿದ್ದ ನಾರಾಯಣಭಟ್ಟನು ಎದ್ದು ದೇವಯ್ಯನ ಪಕ್ಕದಲ್ಲಿ ತುದಿಗಾಲಿನ ಮೇಲೆಯೆ ಕುಳಿತು ಸಂಭಾಷಿಸುತ್ತಿದ್ದಾಗಲಂತೂ ಅವರಿಬ್ಬರಿಗಿದ್ದ ತಾರತಮ್ಯವನ್ನು ಚೆನ್ನಾಗಿ ಗಮನಿಸಿದ್ದಳು; ‘ನಾರಾಯಣಭಟ್ಟನೂ ದೇವಯ್ಯನ ಹಾಗೆ ಕ್ರಾಪು ಬಿಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?’ ಎಂದುಕೊಂಡಿದ್ದಳು ಅವಳು.
ಪೂಜೆ ಪ್ರಾರಂಭವಾಗುವುದಕ್ಕೆ ಸ್ವಲ್ಪ ಮುಂಚೆ, ತಮ್ಮನ್ನು ಹಿಂಬಾಲಿಸುತ್ತಿದ್ದ ಕರಣಿಕ ಕಿಟ್ಟಿ ಐತಾಳನೊಡನೆ, ಕಲ್ಲೂರಿನಲೆಲ್ಲ ಅತ್ಯಂತ ಶ್ರೀಮಂತರೂ ಗಣ್ಯರೂ ದಕ್ಷರೂ ಎನ್ನಿಸಿಕೊಂಡಿದ್ದ ಮಂಜಭಟ್ಟರೆ ಸಾಕ್ಷಾತ್ತಾಗಿ ಹಾಜರಾದರು. ಉತ್ತರದಲ್ಲಿ ಸಿಪಾಯಿ ದಂಗೆ ನಡೆಯುತ್ತಿದ್ದ ಕಾಲದಲ್ಲಿ ಹುಡುಗರಾಗಿದ್ದ ಅವರು ದಕ್ಷಿಣಕನ್ನಡಜಿಲ್ಲೆಯಿಂದ ಬರಿ ಕೈ ಬೀಸಿಕೊಂಡು ಬಂದಿದ್ದು ಕಲ್ಲೂರಿನ ದೇವಸ್ಥಾನದಲ್ಲಿ ಪೂಜಾರಿಯಾಗಿ ನಿಂತು, ಭಗವಂತನ ವಿಶೇಷಾನುಗ್ರಹದಿಂದ ಪ್ರಭಾವಶಾಲಿಯಾಗಿ ಶ್ರೀಮಂತ ಸ್ಥಿತಿಗೆ ಏರಿದ್ದರು. ದೇವರ ಆ ಉಪಕಾರವನ್ನು ನಿತ್ಯವೂ ಸ್ಮರಿಸಿ ಕೃತಜ್ಞತೆ ಸಲ್ಲಿಸಲೊ ಎಂಬಂತೆ ಅವರು ಅನಿವಾರ್ಯವೊದಗಿದಾಗ ಹೊರತು ಉಳಿದೆಲ್ಲ ದಿನಗಳಲ್ಲಿಯೂ ತಪಪ್ದೆ ಗುಡಿಗೆ ಬಂದು ದರ್ಶನ ಕೊಟ್ಟೂ ಪಡೆದೂ ಹೋಗುತ್ತಿದ್ದುದು ವಾಡಿಕೆ. ದೇವರು ಅವರೊಡನೆ ಗೃಹಕೃತ್ಯದ ಸಮಸ್ಯೆಗಳ ವಿಚಾರವಾಗಿ ಒಮ್ಮೊಮ್ಮೆ ಸಂವಾದ ನಡೆಸುತ್ತಿದ್ದನೆಂದೂ ಜನರು ಹೇಳುತ್ತಿದ್ದರು! ವಿವಾದಗಳನ್ನೂ ಮಂಜಭಟ್ಟರ ಮುಖೇನ ಇತ್ಯರ್ಥಪಡಿಸುತ್ತಿದ್ದನಂತೆ! ಹಾಗೆ ಇತ್ಯರ್ಥವಾಗಿದ್ದ ಎಷ್ಟೋ ವಿವಾದಗಳು ಮಂಜಭಟ್ಟರಿಗೇ ಸಂಬಂಧಪಟ್ಟವುಗಳಾಗಿ ಇರುತ್ತಿದ್ದುದರಿಂದ ಅವರು ಬಹುಬೇಗನೆ ಪುಣ್ಯವಂತರಾಗಿದ್ದರು!
ಸುಮಾರು ಎಪ್ಪತ್ತು ಎಪ್ಪತ್ತೈದರ ಅವರು ಅಷ್ಟೆನೂ ಎತ್ತರವಾಗಿರದೆ ತುಂಬ ದಪ್ಪವಾಗಿದ್ದರು. ಸುಪ್ರಸಿದ್ಧವಾಗಿದ್ದ ಅವರ ಜುಗ್ಗುತನ ಉಟ್ಟ ಬಟ್ಟೆಬರೆಗಳಲ್ಲಿ ತೋರುತ್ತಿದ್ದರೂ ಊಟ ತಿಂಡಿ ಪಳಾರಗಳವರೆಗೆ ಅದು ವ್ಯಾಪಿಸಿರಲಿಲ್ಲವೆಂಬುದನ್ನು ಅವರ ಸುಪುಷ್ಟಕಾಯ ಸಾರುತ್ತಿತ್ತು. ಕೊಳಕಾಗಿದ್ದ ಒಂದು ಮಡಿ ಪಾಣಿಪಂಚೆಯನ್ನು ಮೊಳಕಾಲಿನವರೆಗೆ ಕಚ್ಚಿ ಹಾಕಿದ್ದು, ಅವರ ಡೊಳ್ಳು ಹೊಟ್ಟೆಯೂ ನರೆತ ಕೂದಲು ತುಂಬಿದ್ದ ವಕ್ಷಸ್ಥಲವೂ ಜನಿವಾರ ವಿನಾ ಬತ್ತಲೆಯಾಗಿದ್ದುವು.
ಅವರು ಪ್ರವೇಶಿಸಿದೊಡನೆ ಅಲ್ಲಿ ನರೆದಿದ್ದವರ ಮಾತುಕತೆಯೆಲ್ಲ ನಂತು ನಿಃಶಬ್ದವಾಯ್ತು; ಗರ್ಭಗುಡಿಯಲ್ಲಿ ಜೋಯಿಸರು ಮೃದುಸ್ವರದಲ್ಲಿ ಹೇಳಿಕೊಡುತ್ತಿದ್ದ ಮಂತ್ರಘೋಷವೂ ಅಸ್ಪಷ್ಟ ಮಧುರವಾಗಿ ಕೇಳಿಸತೊಡಗಿತು. ಮೂಲೆಯಲ್ಲಿ ಕಣ್ಣು ಸೆಳೆಯುವಂತೆ ನಿಂತಿದ್ದ ತೋಟಾ ಕೋವಿಯನ್ನು ದುರುದುರನೆ ನೋಡಿ “ಯಾರದ್ದೊ ಅದು?” ಎಂದು ಐತಾಳನ್ನು ಕೇಳಿದರು. “ಬೆಟ್ಟಳ್ಳಿ ದೇವಯ್ಯಗೌಡರದ್ದು.” ಎಂದು ಐತಾಳ ಪಿಸುದನಿಯಲ್ಲಿಯೆ ಉತ್ತರಿಸಲು, ಮಂಜಭಟ್ಟರು ನೇರವಾಗಿ, ಆದರೆ ಅತ್ಯಂತ ಸಾವಾಕಾಶವಾಗಿ, ದೇವಯ್ಯ ಕುಳಿತಿದ್ದೆಡೆಗೆ ಚಲಿಸಿದರು. ಅವರು ಸಮೀಪಿಸುತ್ತಿರುವುದನ್ನು ಕಂಡು ಮುಕುಂದಯ್ಯ ಎದ್ದುನಿಂತು ಕೈಮುಗುದನು. ಆದರೆ ದೇವಯ್ಯ ಪದ್ಮಾಸನ ಹಾಕಿ ಕುಳಿತಿದ್ದವನು ಹಾಗೆಯೆ “ನಮಸ್ಕಾರ ಸಾಹುಕಾರರಿಗೆ!” ಎಂದೆನೆಷ್ಟೆ.
ಅದನ್ನು ಚೆನ್ನಾಗಿ ಗಮನಿಸಿದ ಮಂಜಭಟ್ಟರು ತಮ್ಮ ಅಸಮಾಧಾನವನ್ನು ಒಂದಿನಿಂತೂ ಹೊರಗೆಡಹದೆ ಹುಸಿನಗು ನಗುತ್ತಾ ಮೂದಲಿಕೆಯ ದನಿಯಿಂದ “ಓಹೋಹೋ! ಏನು ದ್ಯಾವಣ್ಣನ ಸವಾರಿ ದೇವಸ್ಥಾನದವರೆಗೂ ಚಿತ್ರೈಸಿದೆಯೆಲ್ಲಾ!…. ಕಲ್ಲಯ್ಯ ಬಂದಿಲ್ಲೇನೋ? ಹುಷಾರಾಗಿದ್ದಾನಷ್ಟೆ?” ಎಂದರು.
ಬ್ರಾಹ್ಮಣರಾದ ಅವರು ಶೂದ್ರನಾದ ತನ್ನನ್ನು ‘ದೇವಯ್ಯ’ ಎಂದು ಸಂಬೋಧಿಸುವುದಕ್ಕೆ ಬದಲಾಗಿ, ತಮ್ಮ ಮೇಲುತನವನ್ನೂ ಹೆಚ್ಚುಗಾರಿಕೆಯನ್ನೂ ತಿಕ್ಕಿ ಉಜ್ಜಿ ತನ್ನ ಮನಸ್ಸಿಗೆ ತರುವ ಉದ್ದೇಶದಿಂದಲೆ ಕೀಳುಜನರನ್ನು ಕರೆಯುವ ರೀತಿಯಲ್ಲಿ ‘ದ್ಯಾವಣ್ಣ’ ಎಂದುದನ್ನೂ, ಆ ಪ್ರಾಂತದಲ್ಲೆಲ್ಲ ದೊಡ್ಡ ಮನುಷ್ಯರೆಂದು ಸಂಭಾವಿರಾಗಿದ್ದು ಹೆಚ್ಚು ಕಡಮೆ ಅವರಷ್ಟೆ ವಯಸ್ಕರಾಗಿದ್ದು ತನ್ನ ತಂದೆಯನ್ನೂ ಗೌರವಸೂಚಕ ಬಹುವಚನದಿಂದ ‘ಕಲ್ಲಯ್ಯಗೌಡರು’ ‘ಹುಷಾರಾಗಿದ್ದಾರೆಯೆ?’ ಎನ್ನದೆ ‘ಕಲ್ಲಯ್ಯ’ ‘ಹುಷಾರಾಗಿದ್ದಾನೆ?’ ಎಂದು ಏಕವಚನದಿಂದಲೆ ಮಾತನಾಡಿಸಿದುದನ್ನೂ ಗಮನಿಸಿದ ದೇವಯ್ಯನ ಆತ್ಮಗೌರವ ಸೆಟೆದು ನಿಂತು, ‘ಸುಳ್ಳಾದರೂ ಚಿಂತೆಯಿಲ್ಲ ಈ ಹಾರುವನಿಗೆ ಸರಿಯಾಗಿಯೆ ಉತ್ತರ ಹೇಳುತ್ತೇನೆ’ ಎಂದು ನಿಶ್ಚಯಿಸಿ ಲಘುವಾಗಿ ನಗುತ್ತಾ ಹೇಳಿದನು; “ಯಾರು? ಹಳೇಪೈಕದ ಕಲ್ಲನಾ? ಅಂವ ಕಳ್ಳಬಗನಿ ಕಳ್ಳು ಇಳಿಸಾಕೆ ಕಾಡಿಗೆ ಹೋಗಿರಬೇಕು!”
“ಅಲ್ಲ, ಮಾರಾಯಾ; ‘ನಿನ್ನ ಅಪ್ಪಯ್ಯ ಕಲ್ಲಯ್ಯಗೌಡರು ಹುಷಾರಾಗಿದ್ದಾರೆಯೆ?’ ಅಂತ ಕೇಳಿದ್ದು…. ಏನೋ ನಾವು ಹುಡುಗರಾಗಿದ್ದಾಗಿನಿಂದ ನಮ್ಮಿಬ್ಬರದ್ದೂ ಪರಿಚಯ; ಏಕವಚನದಲ್ಲೇ ಮಾತಾಡಿಸೋದು ರೂಢಿಯಾಗಿ ಬಿಟ್ಟಿದೆ. ಈಗಿನ ಹುಡುಗರಿಗೆ ಅದೆಲ್ಲಾ ಹಿಡಿಸೋದಿಲ್ಲ, ಅರ್ಥವಾಗೋದಿಲ್ಲಾ. ಅವಮಾನವಾಯ್ತು ಅಂತಾ ತಿಳಿಕೋತಾರೆ….” ಸ್ವಲ್ಪ ಅಪ್ರತಿಭರಾದ ಮಂಜಭಟ್ಟರು ಕ್ಷಮಾಯಾಚನೆಯ ಭಂಗಿಯಲ್ಲಿ ಹೇಳಿದ್ದರೂ ದೇವಯ್ಯ ತನ್ನ ಮುನ್ನಿನ ಸಂಕಲ್ಪವನ್ನು ಕೈಬಿಡದೆ ಮುಂದುವರಿದನು;
“ಅಪ್ಪಯ್ಯನಾ?…. ನಾನು ಏನೋ ಅಂತಿದ್ದೆ!…. ತಪ್ಪಾಯ್ತು!…. ಅವರೂ ಮೇಗರೊಳ್ಳಿ ಮಿಷನ್ ಸ್ಕೂಲಿಗೆ ಹೋದರು. ರೆವರೆಂಡ್ ಲೇಕಹಿಲ್ ದೊಡ್ಡ ಪಾದ್ರಿ ಬರ್ತಾರಂತೆ, ಉಪದೇಶಿ ಜೀವರತ್ನಯ್ಯ ಹೇಳಿದ್ದರು. ‘ಬ್ರಾಹ್ಮಣ ಕೂಣಿಯಲ್ಲಿ ಶೂದ್ರಮೀನು’ ಅಂತಾ ಹರಿಕಥೆ ಮಾಡ್ತಾರಂತೆ….” ಅಷ್ಟರಲ್ಲಿ….
ಗಂಟೆ ಜಾಗಟೆ ಸದ್ದಾಗಿ ಪೂಜೆ ಪ್ರಾರಂಭವಾಗುವ ಸೂಚನೆಯ ತಮಗೊಂದು ಸದವಕಾಶ ನೆವವಾಯಿತೆಂಬಂತೆ ಮಂಜಭಟ್ಟರು ನಿರ್ದಾಕ್ಷಿಣ್ಯವಾಗಿ ಸಟಕ್ಕನೆ ತಿರುಗಿ ಬ್ರಾಹ್ಮಣ ಸಮುದಾಯದತ್ತ ನಡೆದು ಗರ್ಭಗುಡಿ ಪ್ರವೇಶಮಾಡಿದರು.
ಪೂಜೆಯ ಶಾಸ್ತ್ರವೆಲ್ಲ ಪೂರೈಸಿ, ಬ್ರಾಹ್ಮಣ ಮಹನೀಯರ ಮತ್ತು ಮಹಿಳೆಯರ ನಡುವೆ ಮಂಗಳಾರತಿಯ ತಟ್ಟೆ ಸಂಚರಿಸಿ, ತೀರ್ಥಪ್ರಸಾದಗಳ ವಿನಿಯೋಗವಾದ ಮೇಲೆ, ಶೂದ್ರಸಮುದಾಯಕ್ಕೆ ಅದರ ಪ್ರಯೋಗವಾಗುತ್ತಿತ್ತು. ಮಂಗಳಾರತಿ ತನ್ನ ಸಮೀಪಕ್ಕೆ ಬಂದೊಡನೆ, ಚೆಲುವಯ್ಯನನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತಿದ್ದ ರಂಗಮ್ಮಗೆ ಮೈಮೇಲೆ ಬಂದ ಹಾಗೆ ಆಗಿ ಸ್ವಚ್ಛವಾದ ಸಾಹಿತ್ಯ ಭಾಷೆಯಲ್ಲಿ ಎಂಬಂತೆ ಗದ್ಗದವರಿಸಿ ಪ್ರಾರ್ಥಿಸತೊಡಗಿದಳು; ಅವಳ ದೃಷ್ಟಿ ಒಮ್ಮೆ ಗರ್ಭಗುಡಿಯ ಕಡೆಗೂ ಒಮ್ಮೆ ತೊಡೆಯ ಮೇಲಿದ್ದ ತಂಗಿಯ ಮಗನ ಕಡೆಗೂ ಹೊರಳಿದಂತಾಗಿ, ನೋಡುವವರಿಗೆ ಒಮ್ಮೆ ಅವಳು ದೇವರನ್ನು ಸಂಬೋಧಿಸುವಂತೆ ತೋರಿದರೆ, ಮತ್ತೊಮ್ಮೆ ಚೆಲುವಯ್ಯನನ್ನು ಕುರಿತು ಹೇಳುತಿದ್‌ಆಳೆಯೋ ಎನ್ನಿಸುವಂತಿತ್ತು. “ಏನಂತೆ?” “ಯಾಕಂತೆ?” “ಅಳುತ್ತಾಳಲ್ಲಾ ಯಾಕೆ?” “ಏನು ಹೇಳುತ್ತಿದ್ದಾಳೆ?” “ಯಾರು ಅದು?” ಎಂಬ ಗುಜುಗುಜು ಪ್ರಶ್ನೆಗಳೆದ್ದಂತೆಯೆ “ಅವಳು ಹುಚ್ಚು ಹೆಗ್ಗಡ್ತಿಯಂತೆ!” “ತಿರುಪತಿಗೆ ಹೋಗಿ ಸತ್ತು ಹೋದ ಹೆಗ್ಗಡೆಯ ಹೆಂಡ್ತಿಯಂತೆ!” “ಏಳೆಂಟು ವರ್ಷಗಳಿಂದ, ಪಾಪ, ದುಃಖದಲ್ಲಿ ನವೆದೂ ನವೆದೂ ಬುದ್ದಿಯೆ ಕೆಟ್ಟಿದೆಯಂತೆ!” “ಏನೂ ಇಲ್ಲ; ಅವಳಿಗೆ ಆಗಾಗ್ಗೆ ಹೀಗೆ ಮೈಮೇಲೆ ಬರುವುದು ವಾಡಿಕೆಯಂತೆ!” “ಅವಳ ತೊಡೆಯ ಮೇಲಿರುವ ಕೂಸನ್ನಾದರೂ ಎತ್ತಿಕೊಳ್ಳಬಾರದೇ? ಹುಚ್ಚಿನ ಭರದಲ್ಲಿ ಏನಾದರೂ ಮಾಡಿಬಿಟ್ಟರೆ ಅದಕ್ಕೆ?” “ಹೌದು, ಅದನ್ನೇ ನೋಡುತ್ತಿದೆ ಆಗಾಗ್ಗೆ!” “ಅರೆ! ಎಂಥ ಗ್ರಂಥಭಾಷೆಯಲ್ಲಿ ಹೇಳುತ್ತಿದ್ದಾಳೆ!” “ಯಾವ ಜನ್ಮದಲ್ಲಿ ಏನಾಗಿದ್ದಳೋ ಏನು ಕಲಿತಿದ್ದಳೋ ಯಾರಿಗೆ ಗೊತ್ತು?” “ಅಯ್ಯೋ! ನಾನೆ ಕಂಡಿದ್ದುಂಟು: ಒಂದು ಸೆಟ್ಟರ ಹೆಂಗಸು ಉಡುಪಿಯಲ್ಲಿ ಮೈಮೇಲೆ ಬಂದಾಗ ಸಂಸ್ಕೃತದಲ್ಲಿ ಶ್ಲೋಕ ಹೇಳಿತ್ತಲ್ಲಾ?” ಎಂಬ ನಾನಾ ರೀತಿಯ ಪ್ರಶ್ನೆಗಳೂ ಉತ್ತರಗಳೂ ವ್ಯಾಖ್ಯಾನಗಳೂ ಎದ್ದುವು. ಆದರೆ ರಂಗಮ್ಮನ ಆರ್ತವಾಣಿಯ ಅರ್ಥ ಮತ್ತು ಅದರ ಭಾವತೀಕ್ಷ್ಣತೆ ತನ್ನ ತಾಯಿಯ ಪಕ್ಕದಲ್ಲಿಯೆ ಕುಳಿತು ಕಂಬನಿಗರೆದು ಆಲಿಸುತ್ತಿದ್ದ ಧರ್ಮುವಿಗಾದಷ್ಟು ಮತ್ತಾರಿಗೂ ಆಗಲಿಲ್ಲ.
ತಾಯಿ ಕೈಮುಗಿದುಕೊಂಡು ಕಣ್ಣೀರು ಸುರಿಸುತ್ತಾ ಹೇಳುತ್ತಿದ್ದಳು; “ಸ್ವಾಮೀ, ನಾನೇನು ತಪ್ಪು ಮಾಡಿದೆ? ನನಗೇಕೆ ಈ ಶಿಕ್ಷೆಕೊಟ್ಟೆ? ನಿನ್ನ ದರ್ಶನಕ್ಕೆ ಬಂದ ನನ್ನ ಸ್ವಾಮಿಯನ್ನೇಕೆ ಅಪಹರಿಸಿಬಿಟ್ಟೆ? ನನ್ನ ಕಂದನನ್ನೇಕೆ ಅನಾಥನನ್ನಾಗಿ ಮಾಡಿಬಿಟ್ಟೆ? ಎಷ್ಟು ವರುಷವಾಯ್ತು, ನನ್ನ ಜೀವಕ್ಕೆ ಬೆಂಕಿಯಿಟ್ಟು? ಇನ್ನೂ ಉರಿಯುತ್ತಿದೆಯಲ್ಲಾ ಆ ಸೂಡು! ನಿನ್ನ ಕರುಣಾಜಲದಿಂದ ಅದನ್ನು ನಂದಿಸಬಾರದೇ, ಸ್ವಾಮಿ, ಪರಮಾತ್ಮಾ, ಲೋಕೈಕನಾಥಾ, ಕರುಣಾಸಿಂಧೂ?….” ಇದ್ದಕ್ಕಿದ್ದ ಹಾಗೆ ಗರ್ಭಗುಡಿಯ ಕಡೆಗಿದ್ದ ದೃಷ್ಟಿಯನ್ನು ತೊಡೆಯ ಮೇಲಿದ್ದ ಚೆಲುವಯ್ಯನ ಕಡೆಗೆ ತಿರುಗಿಸಿ, ಬಹುವಚನದಿಂದ ಸಂಭೋದಿಸತೊಡಗಿದಳು; “ಸ್ವಾಮೀ, ನನ್ನನ್ನಲ್ಲಿಯೇ ಬಿಟ್ಟು ಇಲ್ಲಿಗೇಕೆ ಬಂದಿರಿ ನೀವೊಬ್ಬರೆ? ಜನ್ಮಜನ್ಮಗಳಲ್ಲಿ ಕೈಹಿಡಿದು ಕಾಪಾಡಿದ ನೀವು ಈ ಜನ್ಮದಲ್ಲೆಕೆ ಹೀಗೆ ಮಾಡಿದಿರಿ? ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಬರಬಾರದಾಗಿತ್ತೇ? ನಿಮ್ಮ ಮನಸ್ಸು ಮುರಿಯುವಂಥ ಕೆಲಸ, ಸ್ವಾಮೀ, ನಾನೇನು ಮಾಡಿದೆ? ಹಗಲಿರುಳೂ ಇಂದು ಬರುತ್ತೀರಿ, ನಾಳೆ ಬರುತ್ತೀರಿ, ಆಗ ಬರುತ್ತೀರಿ, ಈಗ ಬರುತ್ತೀರಿ ಎಂದು ಅನ್ನ ನೀರು ಬಿಟ್ಟು, ಕಣ್ಣೀರಿನಲ್ಲಿ ಮಿಂದು, ಸಂಕಟಗಳಲ್ಲಿ ಬೆಂದು, ಎಂಟು ಹತ್ತು ವರ್ಷಗಳ ಆದುವಲ್ಲಾ, ಸ್ವಾಮೀ, ಸ್ವಾಮೀ, ಸ್ವಾಮೀ, ನಿಮ್ಮ ಪಾದ ಹಿಡಿದುಕೊಂಡಿದ್ದೇನೆ, ಸ್ವಾಮೀ, ಕೈಬಿಡಬೇಡಿ, ಬಿಡಬೇಡಿ, ನಾನಿನ್ನು ತಡೆಯಲಾರೆ!”
ಇದ್ದಕ್ಕಿದ್ದ ಹಾಗೆ ತನ್ನ ಅವ್ವ ತನ್ನ ತೊಡೆಯ ಮೇಲಿದ್ದ ಶಿಶು ಚೆಲುವಯ್ಯನ ಎರಡು ಪಾದಗಳನ್ನು ತನ್ನೆರಡು ಕೈಗಳಿಂದ ಹಿಡಿದುಕೊಂಡಿರುವುದನ್ನು ಕಂಡ ಧರ್ಮು ಬೆಟ್ಟಳ್ಳಿ ಚಿಕ್ಕಮ್ಮಗೆ “ಚಿಗಮ್ಮಾ ಚಿಗಮ್ಮಾ! ತಮ್ಮನ್ನ ಕರಕೋ! ತಮ್ಮನ್ನ ಕರಕೋ! ಅಂವ ಅಳ್ತಾನೆ!” ಎಂದು ಗಾಬರಿಯಿಂದಲೆ ಕೆಳದನಿಯಲ್ಲಿ ಕೂಗಿ ಹೇಳಿದನು. ಅಷ್ಟರಲ್ಲಿ ಮೊದಲಿನಿಂದಲೂ ತುಸು ಕಳವಳದಲ್ಲಿಯೆ ಇದ್ದ ದೇವಮ್ಮನೂ ತನ್ನ ಅಕ್ಕನ ಕೈಗಳು ತನ್ನ ಮಗನ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದನ್ನು ಗಮನಿಸಿದಳು. ತಟಕ್ಕನೆ ಮಗುವನ್ನು ಅಕ್ಕನ ತೊಡೆಯ ಮೇಲಿಂದ ಎತ್ತಿಕೊಳ್ಳುವ ಮನಸ್ಸಿದ್ದರೂ ಹಾಗೆ ಮಾಡುವುದು ಚೆನ್ನಾಗಿರುತ್ತದೆಯೋ? ಇಲ್ಲವೂ? ಅಕ್ಕನ ವಿಚಾರದಲ್ಲಿ ಚಡಪಡಿಸುತ್ತಿದ್ದವಳು, ಧರ್ಮು ಕೂಗಿದೊಡನೆ, ಅಳತೊಡಗಿದ್ದ ಮಗುವನ್ನು ಅಪಾಯದಿಂದ ರಕ್ಷಿಸುವಂತೆ ಎತ್ತಿಕೊಂಡೆಬಿಟ್ಟಳು.
ಅದನ್ನು ಕಂಡ ರಂಗಮ್ಮ ಮಾತನಾಡುವುದನ್ನೂ ಅಳುವುದನ್ನೂ ನಿಲ್ಲಿಸಿ, ಮುಗುಳು ನಗುತ್ತಾ, ನಿಟ್ಟುಸಿರೆಳೆದು, ಫಕ್ಕನೆ ಎಚ್ಚರಗೊಂಡವಳಂತೆ ತನ್ನನ್ನು ತಾನು ಹಿಡಿತದಲ್ಲಿಟ್ಟುಕೊಂಡು, ಮೌನವಾಗಿ ಕಣ್ಣುಮುಚ್ಚಿ ಕುಳಿತು ಬಿಟ್ಟಳು.
ನೆರೆದಿದ್ದವರೆಲ್ಲರೂ ಯಾವುದೊ ಒಂದು ಅರ್ಥವಾಗದ ಅತೀಂದ್ರಿಯ ಭೀಷೆಯಿಂದ ಪಾರಾದವರಂತೆ ದೀರ್ಘವಾಗಿ ಸುಯ್ದು, ಸತ್ಯನಾರಾಯಣ ವ್ರತದ ಕಥೆಯನ್ನು ಹೇಳಲು ಸಿದ್ಧವಾಗುತ್ತಿದ್ದ ಜೋಯಿಸರ ಪೀಠದ ಕಡೆಗೆ ಮುಖಮಾಡಿ ಕುಳಿತರು.
ಜೋಯಿಸರು ಪುರಾಣ ಪ್ರಾರಂಭಾವಾದ ಸ್ವಲ್ಪ ಹೊತ್ತಿನಲ್ಲಿಯೆ ನೆರೆದಿದ್ದವರಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಶ್ರೋತಭಕ್ತರ ಗಮನ ಸೆಳೆಯಬಾರದೆಂದು ಆದಷ್ಟು ಪ್ರಯತ್ನದಿಂದ ಮೆಲ್ಲಗೆ ಎದ್ದು ಹೊರಗೆ ಜುಗುಣತೊಡಗಿದರು. ದೇವಯ್ಯನೂ ಮುಕುಂದಯ್ಯನ ಕಿವಿಯಲ್ಲಿ “ಈ ಅಜ್ಜಿ ಪುರಾಣ ಯಾರು ಕೇಳ್ತಾರೊ? ಕೂತುಕೂತು ಕಾಲೆಲ್ಲ ಮರಗಟ್ಟಿ ಹೋಗಿದೆ.” ಎಂದು ಹೇಳಿ, ಎದ್ದು ಮೂಲೆಯಲ್ಲಿ ಒರಗಿಸಿದ್ದ ತೋಟಾ ಕೋವಿಯನ್ನು ಗಾಡಿಯಲ್ಲಿ ಇಡುವ ಸಲುವಾಗಿ ತೆಗೆದುಕೊಂಡು, ಹೊರಗೆ ಹೋದನು. ಅತ್ತ ಇತ್ತ ನೋಡಿ ಮುಕುಂದಯ್ಯನೂ ಅವನನ್ನು ಹಿಂಬಾಲಿಸಿದನು.
ಇವರಿಬ್ಬರು ಗಾಡಿ ಬಿಟ್ಟಿದ್ದ ಅರಳಿಕಟ್ಟೆಯ ಬಳಿಗೆ ಹೋಗುವಷ್ಟರಲ್ಲಿ ಶ್ರೋತೃಭಕ್ತರ ಏಕಾಗ್ರತೆಗೆ ಒಂದಿನಿಂತೂ ಭಂಗಬಾರದಂತೆ ಅವರ ಗಮನವನ್ನು ಒಂದು ಸ್ವಲ್ಪವೂ ಸೆಳೆಯದ ಧರ್ಮಶ್ರವಣರಂಗದಿಂದ ಇವರಿಗಿಂತ ಮೊದಲೇ ಪಾರಾಗಿ ಬಂದಿದ್ದ ಧರ್ಮು ಕಾಡು ತಿಮ್ಮು ಮೂವರೂ ಹೊಳೆಯ ಕಡೆಯಿಂದ ಓಡಿ ಬರುತ್ತಿದ್ದುದು ಕಾಣಿಸಿತು.
“ನೀವೇನು ಹೊಳೇಲಿ ಆಟ ಆಡಾಕೆ ಬಂದಿದ್ದೇನ್ರೋ? ದೇವರ ಕಥೆ ಕೇಳಾದುಬಿಟ್ಟು ಯಾಕ್ರೋ ಬಂದ್ರಿ?” ಎಂದು ಮುದುಕಯ್ಯ ಸ್ವಲ್ಪ ವಿನೋದಕ್ಕಾಗಿ ಗದರಿಸಿದನು.
“ಮತ್ತೆ ನೀವೂ ಬಂದೀರಲ್ಲಾ? ನೀವ್ಯಾಕೆ ಹರಿಕಥೆ ಕೇಳೋದು ಬಿಟ್ಟು ಬಂದೀರಿ?” ಎಂದು ಪ್ರತಿಯಾಗಿ ಅಣಕಿಸಿದನು ಕಾಡು.
“ಸತ್ಯನಾರಾಯಣ ಕಥೆ ಕೇಳದಿದ್ದವರಿಗೆ ಹಾರುವರು ಊಟ ಹಾಕಾದಿಲ್ಲ.” ಮುಕುಂದಯ್ಯ ಪರಿಹಾಸ್ಯ ಮಾಡಿದನು.
“ಹಾಂಗಾರೆ ನಿಮಗೂ ಹಾಕಾದಿಲ್ಲ!” ತಿಮ್ಮ ಪಡಿನುಡಿದನು.
“ನಮಗೇನು ಆ ಹಾರುವರ ಸೀಊಟ ಬೇಕಾಗಿಲ್ಲ. ನಾವು ಹಂದೀ ಉಪ್ಪು ತುಂಡು ಸಮ್‌ನಾಗಿ ಹೊಟ್ಟೆಮೀರಿ ಹೊಡಕೊಂಡೇ ಬಂದೀವಿ!” ತೋಟಾಕೋವಿಯನ್ನು ಗಾಡಿಯೊಳಗಿಡಲು ಬಚ್ಚನಿಗೆ ಕೊಡುತ್ತಾ ಮೂದಲಿಸಿದನು. ದೇವಯ್ಯ, “ನನಗೆ ಗೊತ್ತೇ ಇತ್ತು. ಜೋಯಿಸರ ಅಜ್ಜೀಕಥೇ ಎಲ್ಲಾ ಮುಗಿದು, ಆ ಹಾರುವರಿಗೆಲ್ಲಾ ಮೊದಲು ಸಂತರ್ಪಣೆ ಮಾಡಿಸಿ, ಆಮೇಲೆ ಉಳಿದಿದ್ದ ಅವರ ಎಂಜಲು ಪಂಜಲು ಎಲ್ಲಾ ನಮಗೆ ಹಾಕಬೇಕಾದ್ರೆ ಇವತ್ತು ನಾಲ್ಕು ಗಂಟೇನ ಆಗ್ತದೆಯೋ? ಐದಾದ್ರೂ ಆಯ್ತೇ!…. ಅಷ್ಟು ಹೊತ್ತಿನ ತನಕಾ ನಿಮ್ಮ ಹೊಟ್ಟೆಹುಳ ಎಲ್ಲಾ ನಿಗರಬಡ್ಡೆ ಕಂಡಿರ್ತವೆ!”
“ನಮ್ಮ ಹೊಟ್ಟೇನು ತುಂಬಿದೆ. ನಮಗೂ ಸಿಗ್ತು!” ಎಂದನು ಧರ್ಮು, ದೇವಯ್ಯನ ಮೂದಲಿಕೆಯನ್ನು ಮೂದಲಿಸಿ.
“ಯಾರು ಕೊಟ್ರೋ? ಏನು ತಿಂದಿರೋ? ನಿಮ್ಮ ದೆಸೆಯಿಂದ ಆಗಾದಿಲ್ಲ!” ಮುಕುಂದಯ್ಯ ಬೆರಗಾಗಿ ಪ್ರಶ್ನಿಸಿದನು.
ಧರ್ಮು ಹೊಳೆಯ ದಂಡೆಯಲ್ಲಿ ಕೆಳಗಡೆ ತುಸು ದೂರದಲ್ಲಿದ್ದ ಒಂದು ಕಲ್ಲುಮಂಟಪದ ಕಡೆಗೆ ಕೈತೋರಿಸುತ್ತಾ “ಅಲ್ಲೊಬ್ಬ ಸನ್ನೇಸಿ ಗಡ್ಡದಯ್ಯ ಇದಾನಲ್ಲಾ ಅಂವ ಕೊಟ್ಟದ್ದು. ಏಂಥೆಂಥ ಹಣ್ಣು ಕೊಟ್ಟ? ನಾವಿದೂವರೆಗೂ ತಿಂದೇ ಇರಲಿಲ್ಲ, ಕಂಡೇ ಇರಲಿಲ್ಲ, ಅಂಥಂಥಾ ಹಣ್ಣು ಕೊಟ್ಟ!” ಎಂದು ಇನ್ನೂ ಮುಂದುವರಿಯುವದರಲ್ಲಿದ್ದನು.
“ಸುಳ್ಳೋ? ಬದ್ದೋ?” ಮುದುಕಯ್ಯ ನಡುವೆ ಕೇಳಿದನು.
ಧರ್ಮುವನ್ನು ಸಮರ್ಥಿಸುವ ಆತುರದ ದನಿಯಲ್ಲಿ ತಿಮ್ಮು “ಹೌದು, ಚಿಕ್ಕಯ್ಯಾ, ಹೌದು! ಜೋಳಿಗೆಗೆ ಕೈಹಾಕ್ದ, ತೆಗೆದುಕೊಟ್ಟ! ಜೋಳಿಗೆಗೆ ಕೈಹಾಕ್ದ, ತಗದಕೊಟ್ಟ!….ನಮಗೆಲ್ಲ ನಕ್ಕು ನ್ಕ್ಕು ಸಾಕಾಗುವ ಹಾಂಗೆ ಏನೇನೋ ತಮಾಸೆ ಮಾಡಿದ, ಹೇಳಿದ!…. ಬೇಕಾದರೆ ಮೂಸಿನೋಡು ನನ್ನ ಕೈನ.” ಎಂದು ಮುಕುಂದಯ್ಯನ ಮೂಗಿನ ಬಳಿಗೆ ಕೈಚಾಚಿದನು. ಅವರಾರೂ ಕೈ ಬಾಯಿ ತೊಳೆಯುವ ಗೋಜಿಗೆ ಹೋಗಿರಲಿಲ್ಲ; ಅಂಗಿ ಪಂಚೆಗಳ ಮೇಲೆ ಆ ಕೆಲಸ ನಿರ್ವಹಿಸಿದ್ದವು.
ಮೂಗಿಗೆ ಬಂದ ಹಣ್ಣಿನ ವಾಸನೆಗೆ ಮುಂಕುದಯ್ಯ ದಂಗು ಬಡಿದು ನಿಂತನು. ಹುಡುಗರು ಡೋಂಗೀ ಬಿಡುತ್ತಿದ್ದಾರೆಯೊ ಏನೋ ನೋಡಬೇಕೆಂದು ದೇವಯ್ಯ ಅವರೆಲ್ಲರ ಕೈಗಳನ್ನೂ ಮೂಸಿ ಮೂಸಿ ಹುಬ್ಬೇರಿಸಿ ಕಣ್ಣರಳಿಸಿ ಬೆರಗಾದನು.
ಕಲ್ಲೂರು ಗಡ್ಡದಯ್ಯನ ಪ್ರಸಿದ್ಧಿ ಕೋಣೂರು ಬೆಟ್ಟಳ್ಳಿಗಳಿಗೇನು ಗೊತ್ತಿರದ ವಿಚಾರವಾಗಿರಲಿಲ್ಲ. ಆದರೆ ಉಪದೇಶಿ ಜೀವರತ್ನಯ್ಯ ‘ನಮ್ಮ ಯೇಸುಸ್ವಾಮಿ ಎಂಥಂಥ ಅಧ್ಭುತ ಮಾಡಿ ತೋರಿಸಿದ್ದಾರೆ! ಅವರ ಮುಂದೆ ಇದೆಲ್ಲ ಏನು ಮಹಾ? ಹಾವಾಡಿಗರು, ದೊಂಬರು, ಯಕ್ಷಿಣಿಗಾರರು ಎಲ್ಲರೂ ಮಾಡಿ ತೋರಿಸ್ತಾರೆ!’ ಎಂದು ಅಪಹಾಸ್ಯ ಮಾಡಿದ್ದನಾದ್ದರಿಂದ ದೇವಯ್ಯ ಅದನ್ನು ಲಘುವಾಗಿ ಭಾವಿಸಿ ತಿರಸ್ಕರಿಸಿದನು. ಮುಕುಂದಯ್ಯನಿಗೆ ಸಾಧುಸನ್ಯಾಸಿಗಳ ವಿಷಯದಲ್ಲಿ ಹೆಚ್ಚು ಗೌರವಭಾವನೆಯಿದ್ದರೂ ಅವರಲ್ಲಿ ಮಂತ್ರ ಮಾಟ ಮಾಡುವ ಮೋಸಗಾರರೂ ಇರುತ್ತಾರೆಂದು ಐಗಳು ಅನಂತಯ್ಯನಿಂದ ತಿಳಿದಿದ್ದನಾದ್ದರಿಂದ ಆ ವಿಷಯದಲ್ಲಿ ತಾನೆ ಮುಂದುವರಿದು ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. ಆದರೆ ಇತ್ತೀಚಿಗೆ, ಹೂವಳ್ಳಿ ಚಿನ್ನಮ್ಮನ ಸಂಬಂಧದಲ್ಲಿ ತಾನು ಸಂಕಟಕ್ಕೆ ಸಿಕ್ಕಿಕೊಂಡ ಮೇಲೆ, ಕೈನೋಡಿಯೋ ಜಾತಕ ನೋಡಿಯೋ ಅಥವಾ ದಿವ್ಯದೃಷ್ಟಿಯಿಂದಲೋ ಭವಿಷ್ಯ ಹೇಳಬಲ್ಲ ಶಕ್ತಿಯುಂಟೆಂದು ಜನ ಹೇಳುತ್ತಿದ್ದ ಕಲ್ಲೂರ ಗಡ್ಡದಯ್ಯನ ಬಳಿಗೆ ಹೋಗಬೇಕೆಂದು ಮನಸ್ಸು ಅವನಲ್ಲಿ ಅಂಕುರಿಸಿತ್ತು. ಬೆಟ್ಟಬೆಳ್ಳಿಯವರು ಸತ್ಯನಾರಾಯಣವ್ರತಕ್ಕೆ ಕಲ್ಲೂರು ದೇವಸ್ಥಾನಕ್ಕೆ ಹೋಗುತ್ತಾರೆಂದು ತಿಳಿದುಬಂದಾಗ ತಾನೂ ಜೊತೆಗೂಡುತ್ತೇನೆಂದು ಅವನು ದೇವಯ್ಯನಿಗೆ ಹೇಳಿಕಳುಹಿಸಿದುದಕ್ಕೆ ಮುಖ್ಯಪ್ರೇರಣೆ ಗಡ್ಡದಯ್ಯನನ್ನು ನೋಡುವ ಮತ್ತು ಕೇಳುವ ಅವಕಾಶ ದೊರಕಬಹುದೆಂಬುದರಿಂದಲೇ ಒದಗಿತ್ತು. ಆದ್ದರಿಂದಲೆ ಅವನು ದೇವಯ್ಯನನ್ನೂ ಪುಸಲಾಯಿಸಿ ಕರೆದುಕೊಂಡು ಆ ಗಡ್ಡದಯ್ಯನಿದ್ದ ಕಲ್ಲುಮಂಟಪಕ್ಕೆ ಹೋದದ್ದು.
*****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ