ನನ್ನ ಪುಟಗಳು

09 ಡಿಸೆಂಬರ್ 2017

8ನೇ ತರಗತಿ ಜೀವನ ದರ್ಶನ:- ದಾಸರ ಪರಿಚಯ ಮತ್ತು ಪದ್ಯದ ಸಾರಾಂಶ


*ಜೀವನ ದರ್ಶನ*

ಜೀವನ ದರ್ಶನ ಪದ್ಯಭಾಗದಲ್ಲಿ ಶ್ರೀಪಾದರಾಜರು, ಗೋಪಾಲದಾಸರು ಮತ್ತು ವಿಜಯದಾಸರ ಕೀರ್ತನೆಗಳಿವೆ.
ಶ್ರೀಪಾದರಾಜರ ಪರಿಚಯ
 ಪ್ರಕೃತ "ಭಕ್ತಿಬೇಕು ವಿರಕ್ತಿಬೇಕು....." ಎಂಬ ಕೀರ್ತನೆಯನ್ನು ಡಾ.ಜಿ.ವರದರಾಜರಾವ್ ಅವರು ಸಂಪಾದಿಸಿರುವ ’ಶ್ರೀಪಾದರಾಜರ ಕೃತಿಗಳು’ ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಶ್ರೀಪಾದರಾಜರು (ಚಿತ್ರ ಕೃಪೆ: ಕನ್ನಡ ಒನ್ ಇಂಡಿಯಾ)

ಕಾಲ: ೧೪೦೪ ರಿಂದ ೧೫೦೨
ಶ್ರೀಪಾದರಾಜರ ಜನ್ಮ ಸ್ಥಳ : ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು.
ಮೂಲ ಹೆಸರು : ಲಕ್ಷ್ಮೀನಾರಾಯಣ.
ತಂದೆಯ :  ಶೇಷಗಿರಿಯಪ್ಪ. ತಾಯಿ : ಗಿರಿಯಮ್ಮ.

ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ.
ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
  • ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
  • ಭೂಷಣಕೆ ಭೂಷಣ
  • ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
*******
ಗೋಪಾಲದಾಸರು
https://guroraghavendra.files.wordpress.com/2011/06/gopaladasaru-e1310738234872.jpg
ಇವರ ಕಾಲ ಕ್ರಿ.ಶ. ೧೭೨೧. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ  ಮೊಸರುಕಲ್ಲಿನಲ್ಲಿ ಜನಿಸಿದರು.
ತಂದೆ ಮುರಾರಿ, ತಾಯಿ ವೆಂಕಮ್ಮ, ಗುರುಗಳು ವಿಜಯದಾಸರು.
ಇವರದು ಸಾಮಾನ್ಯವಾದ ರೈತ ಕುಟುಂಬ.
ಇವರ ಮೊದಲ ಹೆಸರು ಬಾಗಣ್ಣ. 
ತುಂಬಾ ಬಡತನದಲ್ಲಿದ್ದ ಇವರು ಜೋತಿಷ್ಯವನ್ನು ಹೇಳುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು.
ಇವರ ಅಂಕಿತನಾಮ  'ಗೋಪಾಲವಿಠಲ'. ಇವರ ೯೬ ಕೀರ್ತನೆಗಳು, ೭೦ ಸುಳಾದಿಗಳು, ೨೧ ಉಗಾಭೋಗಗಳು ಉಪಲಬ್ದವಾಗಿವೆ.



ಮತ್ತಷ್ಟು ಪರಿಚಯ:
            ಹರಿದಾಸ ಸಾಹಿತ್ಯ ಶ್ರೀ ಪಾದರಾಜರಿಂದ ಮೊದಲಾಗಿ ವ್ಯಾಸರಾಯರು ವಾದಿರಾಜರುಗಳಿಂದ ಉಳಿದು ಬೆಳೆದು ಪುರಂದರ ಹಾಗೂ ಕನಕದಾಸರುಗಳಿಂದ ಉನ್ನತಿಯನ್ನು ಕಂಡು ನಂತರ ಕೆಲಕಾಲ ಅಜ್ಞಾತವಾಸವನನುಭವಿಸಿತು. ಮುಂದೆ ನೂರಾರು ವರ್ಷಗಳ ನಂತರ ಶ್ರೀ ರಾಘವೇಂದ್ರಸ್ವಾಮಿಗಳ ನೇತೃತ್ವದಲ್ಲಿ ಪುನಃ ದಾಸಕೂಟವೂ ಪ್ರಾರಂಭವಾಯಿತು. ಅವರ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮುಂತಾದವರು ಬೆಳಕಿಗೆ ಬಂದರು. ಹೀಗೆ ದಾಸ ಸಾಹಿತ್ಯದ ಮರುಹುಟ್ಟು, ಬೆಳವಣಿಗೆಗೆ ಕಾರಣರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ರಚನೆಗಳು ವಿಜಯದಾಸರಿಂದ ಪ್ರಾರಂಭವಾಯಿತು ಎನ್ನಲಾಗಿದೆ.
           ಹೀಗೆ ರಾಯರ ಪ್ರಭಾವದಿಂದ ಪ್ರಸಿದ್ಧಿ ಪಡೆದ ವಿಜಯದಾಸರ ಪ್ರಮುಖ ಶಿಷ್ಯರು ಶ್ರೀ ಗೋಪಾಲದಾಸರು. ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರೆಂದರೆ ಭಾಗಣ್ಣ. ಭಾಗಣ್ಣ ಗಾಯತ್ರಿ ಮಂತ್ರ ಸಾಧನೆ ಮಾಡಿ ಜನರಿಗೆ ಭವಿಷ್ಯ ಹೇಳಿ ತನ್ನ ಜೀವನ ಸಾಗಿಸುತ್ತಿದ್ದರು . ಆ ಕಾಲದಲ್ಲಿ ಅವರು ವೆಂಕಟಕೃಷ್ಣ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು. ಆಗ ವೆಂಕಟೇಶನ ಭಕ್ತರೂ ಹಾಗೂ ಪುರಂದರದಾಸರ ಶಿಷ್ಯರೂ ಆದ ವಿಜಯದಾಸರು ಭಾಗಣ್ಣನನ್ನು ಭೇಟಿಯಾದರು. ಅವರಿಂದ ‘ಗೋಪಾಲವಿಠಲ’ ಎಂಬ ಅಂಕಿತವನ್ನು ಪಡೆದು ಭಾಗಣ್ಣ ಅಂದಿನಿಂದ ಗೋಪಾಲದಾಸರೆಂಬ ಹೆಸರಿಗೆ ಪಾತ್ರರಾದರು. ಸಾಮಾನ್ಯವಾಗಿ ಗುರುಗಳು ತಮ್ಮ ಶಿಷ್ಯನಿಗೆ ಅಂಕಿತವನ್ನು ಕೊಡುವಾಗ ಅಂಕಿತಪದವೊಂದನ್ನು ರಚಿಸುತ್ತಾರೆ. ಅದು ಹೊಸ ಶಿಷ್ಯನ ಅಂಕಿತದಿಂದ ಪ್ರಾರಂಭವಾಗಿ ಗುರುಗಳ ಅಂಕಿತದೊಂದಿಗೆ ಕೊನೆಗೊಳ್ಳುತ್ತದೆ. ಗೋಪಾಲದಾಸರಿಗೆ ಸಂಬಂಧಪಟ್ಟ ವಿಜಯದಾಸರು ರಚಿಸಿದ ಅಂಕಿತ ಪದ ಹೀಗಿದೆ
.
ಗೋಪಾಲವಿಠಲ ನಿನ್ನ ಪೂಜೆಮಾಡುವೆನು
ಕಾಪಾಡೊ ಈ ಮಾತನು ||ಪ||


ಅಪಾರ ಜನುಮದಲಿಡಿವನಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಿಡು ||ಅ.ಪ||


ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ
ಮಂಕು ಜನುಮಜನುಮದಲಿದ್ದ
ಪಂಕವಾರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು
ಸಂಕಟಗಳಟ್ಟಿ ದಾರಿಗೆ ವೆಂಕಟಕೃಷ್ಣನು ನೀನೆ
ವಿಜಯವಿಠಲ ಎಂದು
ಅಂಕುರವ ಪಲ್ಲೈಸಿ ಫಲಪ್ರಾಪ್ತಿಯಾಗಲೋ||


ಅಂಕಿತ ಪಡೆದಬಳಿಕ ಗೋಪಾಲದಾಸರು ‘ಗೋಪಾಲವಿಠಲ’ ಅಂಕಿತದಿಂದ ಕೃತಿರಚನೆ ತೊಡಗಿದರು. ನಂತರ ಇವರು ತಾವೇ ತಮ್ಮ ತಮ್ಮಂದಿರಿಗೆ ವರದಗೋಪಾಲವಿಠಲ (ಸೀನಪ್ಪದಾಸರು), ಗುರುಗೋಪಾಲವಿಠಲ (ದಾಸಪ್ಪದಾಸರು), ತಂದೆಗೋಪಾಲವಿಠಲ (ರಂಗಪ್ಪದಾಸರು) – ಎಂಬ ಅಂಕಿತನಾಮಗಳನ್ನು ಕೊಟ್ಟರು.

ಒಮ್ಮೆ ಉತ್ತರಾಧಿಮಠದ ಮಠಾಧಿಪತಿಗಳಾದ ಶ್ರೀ ಸತ್ಯಬೋಧರು ಈ ಅಣ್ಣ ತಮ್ಮಂದಿರನ್ನು ಪರೀಕ್ಷಿಸಲು ಮೂವರು ಸೋದರರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಮೂವರೂ ಕೂಡಿ ಒಂದೇ ಪದವನ್ನು ರಚಿಸುವಂತೆ ಆಜ್ಞಾಪಿಸಿದರು. ಆಗ ‘ಮಾರ ಮದಘನ ಸಮೀರ‘ ಎಂಬ ಕೃತಿಯ ಪಲ್ಲವಿ, ಅನುಪಲ್ಲವಿ ಹಾಗೂ ಮೂರನೆಯ ಚರಣವನ್ನು ಗೋಪಾಲದಾಸರು, ಒಂದು ಮತ್ತು ಎರಡನೆಯೆ ಚರಣಗಳನ್ನು ಸೀನಪ್ಪದಾಸರು ಹಾಗೂ ದಾಸಪ್ಪದಾಸರೂ ರಚಿಸಿದರು. ಈ ಸೋದರರ ಅಪರೋಕ್ಷ ಜ್ಞಾನವನ್ನು ಕಂಡ ಮಠಾಧಿಪತಿಗಳು, “ನೀವು ಮೂವರೂ ನಮ್ಮ ಮಠಕ್ಕೆ ಕಾಮದೇನು, ಕಲ್ಪವೃಕ್ಷ, ಚಿಂತಾಮಣಿಗಳಂತೆ ಇರುವಿರಿ” ಎಂದು ಕೊಂಡಾಡಿದರು.

ಅನಂತರ ಉಡುಪಿಯ ಕೃಷ್ಣನ ದರ್ಶನಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮಂಡಗದ್ದೆಯ ಭೀಮ ಎಂಬ ದರೋಡೆಕೋರನನ್ನು ಸನ್ಮಾರ್ಗಕ್ಕೆ ತಂದು ಉದ್ಧರಿಸಿದರೆಂಬ ಖ್ಯಾತಿ ಅವರಿಗೆ ಇದೆ. ಉತ್ತನೂರಿನಲ್ಲಿ ಶ್ರೀನಿವಾಸಾಚಾರ್ಯರೆಂಬುವರ (ಭಾವಿ ಜಗನ್ನಾಥ ದಾಸರು) ಬಳಿ ಬಂದರು. ಅವರು ಹೊಟ್ಟೆನೋವಿನಿಂದ ನರಳುತ್ತಿದ್ದುದನ್ನು ನೋಡಿ ಅವರಿಗೆ ಎರಡು ಜೋಳದ ರೊಟ್ಟಿಗಳನ್ನು ಪ್ರಸಾದವೆಂದು ಕೊಟ್ಟರು. ಅದನ್ನು ತಿಂದ ಶ್ರೀನಿವಾಸಾಚಾರ್ಯರಿಗೆ ಹೊಟ್ಟೆನೋವು ತಕ್ಷಣ ಮಾಯವಾಯಿತಂತೆ.

ಪ್ರತಿವರ್ಷದಂತೆ ಗೋಪಾಲದಾಸರು ತಿರುಪತಿಯ ಬ್ರಹ್ಮೋತ್ಸವಕ್ಕೆ ಹೊರಟಾಗ ಶ್ರೀನಿವಾಸಾಚಾರ್ಯರೂ ಅವರ ಜೊತೆಯಲ್ಲಿ ಹೊರಟರು. ಕಾಲುನಡಿಗೆಯಲ್ಲೇ ಬೆಟ್ಟ ಹತ್ತಿದ ಪರಿಣಾಮವಾಗಿ ಶ್ರೀನಿವಾಸಾಚಾರ್ಯರು ಸುಸ್ತಾಗಿ ಸಾಯುವ ಸ್ಥಿತಿಗೆ ಬಂದಾಗ ಗೋಪಾಲದಾಸರು ಗುರುಗಳಾದ ವಿಜಯದಾಸರನ್ನು ನೆನೆದು ಅವರ ಆದೇಶದ ಮೇರೆಗೆ ಧನ್ವಂತ್ರಿಯ ಸ್ತೋತ್ರ ಮಾಡಿ ತಮ್ಮ ಆಯಸ್ಸಿನಲ್ಲಿ ನಲವತ್ತು ವರ್ಷಗಳನ್ನು ಶ್ರೀನಿವಾಸಾಚಾರ್ಯರಿಗೆ ದಾನ ಮಾಡಿದರೆಂದು ಪ್ರತೀತಿ. ಈ ಪ್ರಸಂಗವನ್ನು ರಂಗಪ್ಪ ದಾಸರು ಹೀಗೆ ವರ್ಣಿಸಿದ್ದಾರೆ,

“ಕುಂಡಲಾಗಿರಿಯಲ್ಲಿ ವಿಪ್ರನು ಕಂಡು ವಿಜಯದಾಸರ ದಂಡ ನಮನವ ಮಾಡಿ
ಕೇಳ್ದನುದ್ದಂಡ ಕ್ಷಯರೋಗ ಕಳಿತ್ವರಾ ಹರುಷದಿಂದುತ್ತುನೂರು ಸೇರಲುಪರಿ
ಹರಾಗುವದೆಂದನು ಬರಲು ಭಕ್ರಯವೊಳಗೆ ನಾಲ್ವತ್ತೋರುಷ ಆಯುವನಿತ್ತನು.”


ಜಗನ್ನಾಥದಾಸರು ತಮ್ಮ ರೋಗ ವಾಸಿಯಾದದ್ದು, ಅಪಮೃತ್ಯು ಪರಿಹಾರವಾದದ್ದು ಗೋಪಾಲದಾಸರ ಅನುಗ್ರಹದಿಂದಲೇ ಎಂಬ ಅಚಲ ವಿಶ್ವಾಸವನ್ನು ತಮ್ಮ ಕೀರ್ತನೆಯೊಂದರಲ್ಲಿ ವ್ಯಕ್ತಪಡಿಸಿದ್ದಾರೆ.

ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನು ನಿಶ್ಚಯ ||ಪ||
ಘೋರವ್ಯಾಧಿಗಳ ನೋಡಿ
ಭೂರಿಕರುಣವ ಮಾಡಿ
ತೋರಿದರಿವರೇ ಉದ್ಧಾರಕರೆಂದಂದದಿ
ನಾರಭ್ಯ ತವಪಾದ ಸೇರಿದೆ ಸಲಹೆಂದು ||೧||
ಅಪಮೃತ್ಯುವನು ಪರಿದೆ ಎನ್ನೊಳಗಿದ್ದ
ಅಪರಾಧಗಳ ಮರೆದೆ
ಚಪಲಚಿತ್ತನಿಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದ ||೨||


ಕೇವಲ ನಲವತ್ತು ವರುಷಗಳ ಜೀವಿಸಿದ ಗೋಪಾಲದಾಸರು ತಮ್ಮ ಅಲ್ಪ ಜೀವಿತಾವಧಿಯಲ್ಲೇ ಅನೇಕ ರಚನೆಗಳನ್ನು ರಚಿಸಿದರು. ಅವರು ದೈವಾದೀನರಾದಾಗ ಅವರ ತಮ್ಮ ವರದಗೋಪಾಲವಿಠಲರು ತಮ್ಮ ಅಣ್ಣನ ಬಗ್ಗೆ “ಅಣ್ಣ ಭಾಗಣ್ಣ ನೀ ಕಣ್ಣಿಗೆ ಮರೆಯಾಗಿ ಪುಣ್ಯಲೋಕವ ಸೇರಿದೆಯಾ” ಎಂಬ ಕೀರ್ತನೆಯನ್ನು ರಚಿಸಿದ್ದಾರೆ. ಹಾಗೂ “ಲೇಸಾಗಿ ಭಜಿಸುವೆ ಗೋಪಾಲದಾಸರ” ಎನ್ನುವ ತಮ್ಮ ಇನ್ನೊಂದು ಕೃತಿಯಲ್ಲಿ ಗೋಪಾಲದಾಸರ ಜನನ, ವಿಜಯದಾಸರಲ್ಲಿ ಅವರ ಶಿಷ್ಯತ್ವ, ತೀರ್ಥಯಾತ್ರೆಯ ವೈಭವ, ಪದಗಳ ರಚನೆ ಮುಂತಾದವುಗಳನ್ನು ವಿವರಿಸಿದ್ದಾರೆ.

[ಆಧಾರ:- ಡಾ. ಟಿ.ಎನ್. ನಾಗರತ್ನ ಅವರು ಸಂಪಾದಿಸಿರುವ ಶ್ರೀ ಗೋಪಾಲದಾಸರ ಕೃತಿಗಳು ]
*******

ವಿಜಯ ದಾಸರ ಪರಿಚಯ
 
ಇವರ ಕಾಲ ಕ್ರಿ.ಶ. ಸುಮಾರು (೧೬೮೨ - ೧೭೫೫)
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೇಕನಪರಿವಿಯಲ್ಲಿ ಜನಿಸಿದರು.
ಮೊದಲಿನ ಹೆಸರು ದಾಸಪ್ಪ.
ತಂದೆ ಶ್ರೀನಿವಾಸ ತಾಯಿ ಕೂಸಮ್ಮ ದಂಪತಿಗಳ ಮಗನೇ ವಿಜಯದಾಸರು.
ತುಂಬಾ ಬಡತನವನ್ನು ಅನುಭವಿಸುತ್ತಿದ್ದ ಕುಟುಂಬ ಇವರದು.
ಕಾಶಿಯಲ್ಲಿ ನಾಲ್ಕುವರ್ಷಗಳು ಸಂಸ್ಕೃತ ಅಧ್ಯಯನ ಮಾಡುತ್ತಾರೆ.
ಪುರಂದರದಾಸರು ಇವರಿಗೆ ದೀಕ್ಷೆಯಿತ್ತ ಗುರುಗಳು.
ಇವರ ಅಂಕಿತನಾಮ ವಿಜಯವಿಠಲ.

ಮತ್ತಷ್ಟು ಮಾಹಿತಿ:-
         ವಿಜಯದಾಸರು ಹರಿದಾಸ ಕೂಟದಲ್ಲಿ 18ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ಇವರು ಕರ್ನಾಟಕದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೇಕಲಪರಿ ಎಂಬ ಗ್ರಾಮದವರು. ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ 1683ರಲ್ಲಿ ಜನಿಸಿದರು. ಇವರ ಮೊದಲಿನ ಹೆಸರು ದಾಸಪ್ಪ. ಬಡತನದ ಬೇಗೆಯಲ್ಲಿ ಬೆಂದ ಇವರನ್ನು 'ಕೂಸಿ ಮಗ ದಾಸ' ಎಂದು ಹಗುರವಾಗಿ ಹೀಯಾಳಿಸಿ ಜನ ಕರೆಯುತ್ತಿದ್ದರು. ಈ ಅವಮಾನ ಮತ್ತು ಬಡತನದ ಬೇಗೆ ಸಹಿಸಲಾರದೇ ಚಿಕ್ಕ ವಯಸ್ಸಿನಲ್ಲಿಯೇ ದೇಶಾಂತರ ಹೊರಟು ಕಾಶಿ ಕ್ಷೇತ್ರಕ್ಕೆ ಬಂದರು. ಅಲ್ಲಿ ಹಲವಾರು ಸಾಧು ಸಂತರ ಸತ್ಸಹವಾಸ ಮಾಡಿ, ಪವಿತ್ರ ಗಂಗಾಸ್ನಾನ ಮಾಡುತ್ತಾ ವಿರಾಗಿಯಾಗಿ ಜೀವನ ಸಾಗಿಸುತ್ತಿದ್ದರು. ನಾಲ್ಕು ವರುಷಗಳ ನಂತರ ಸ್ವಂತ ಊರಿಗೆ ಮರಳಿದರು. ಅಲ್ಲಿ ಅವರಿಗೆ ಅರಳಮ್ಮ ಎಂಬುವರೊಡನೆ ವಿವಾಹವಾಯಿತು. ಅಲ್ಲಿ 16 ವರ್ಷಗಳ ಕಾಲ ಸಾಂಸಾರಿಕ ಬದುಕು ನಡೆಸಿದರು. ನಂತರ ತಮ್ಮ 32ನೇ ವಯಸ್ಸಿನಲ್ಲಿ ಈ ಜೀವನದ ಜಂಜಾಟಗಳನ್ನು ಸಹಿಸಲಾರದೇ ಮತ್ತೆ ಕಾಶಿ ಕ್ಷೇತ್ರಕ್ಕೆ ಹಿಂದಿರುಗಿದರು. ಗಯಾದಲ್ಲಿ ಹೆತ್ತವರ ಶ್ರಾದ್ಧ ಮಾಡಿ ಪಿತೃ ಋಣ ತೀರಿಸಿ ಸಾಧು ಸಂತರೊಂದಿಗೆ ಓಡಾಡುತ್ತಾ ನಿಷ್ಠೆಯಿಂದ ತಪಸ್ಸನ್ನಾಚರಿಸಿದರು. ಒಮ್ಮೆ ಇವರಿಗೆ ಸ್ವಪ್ನದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು ದರ್ಶನ ನೀಡಿ, ಶ್ರೀ ವೇದವ್ಯಾಸರ ದರ್ಶನ ಮಾಡಿಸಿ “ವಿಜಯ” ಎಂಬ ಬೀಜಾಕ್ಷರವನ್ನು ಬರೆದು ಅನುಗ್ರಹಿಸಿದಂತಾಯಿತು. ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದ ಆಕ್ಷಣವೇ ಇವರಲ್ಲಿ ಜ್ಞಾನ ಪ್ರಕಾಶವಾಯಿತು. ಗುರುಗಳ ಅನುಗ್ರಹದಿಂದ “ವಿಜಾಯದಾಸ”ರಾದ ಅವರು ಆಡಿದ ಪ್ರತಿ ಮಾತು ಹಾಡಾಗಿ ಹರಿಯಿತು. ಆಗ ಅವರ ರಚನೆಯೊಂದು ಹೀಗಿದೆ,

ಅಂತರಂಗದ ಕದವು ತೆರೆಯಿತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೋ ಎನಗೆ|| |ಅಂತರಂಗದ|
ಸ್ವಮೂರ್ತಿಗಳ ಮಧ್ಯೆ ಸಚ್ಚಿದಾನಂದೈಕ ರವಿಧರೆಯರಿಂದಲಾಗಿಂಗಿತ್ವತಿ
ಕಮಲಾ ಜಾಜಿಗಳಿಂದ ಸ್ತುತಿಸಿಕೊಳ್ಳುತ ಹೃದಯ
ಕಮಲದ ಒಳಗಿರುವ ವಿಜಯವಿಠಲನ ಕಂಡೆ|| |ಅಂತರಂಗದ||

ಹೀಗೆ ಪುರಂದರ ದಾಸರ ಅನುಗ್ರಹದಿಂದಲೇ ವಾಗ್ಗೇಯಕಾರ ಸಾಮರ್ಥ್ಯವನ್ನು ಪಡೆದು , ಪುರಂದರ ದಾಸರನ್ನೇ ತಮ್ಮ ಮಾನಸಿಕ ಗುರುವಾಗಿ ಸ್ವೀಕರಿಸಿದವರು ಶ್ರೀ ವಿಜಯದಾಸರು. ಇವರ ಅಮೂಲ್ಯವಾದ ರಚನೆಗಳಿಂದಲೇ ಪುರಂದರ ದಾಸರ ಜೀವನವನ್ನು ಚಿತ್ರಿಸಲು ಸಾಧ್ಯವಾಯಿತು. ಇವರು ವಿಜಯ ವಿಠಲ ಎಂಬ ಅಂಕಿತದೊಡನೆ 25,000 ಕೃತಿಗಳನ್ನು ರಚಿಸಿ ಪುರಂದರರ 4,75,000 ರಚನೆಗಳನ್ನು 5,00,000ಕ್ಕೆ ಪೂರ್ಣಮಾಡಿದರೆಂದು ಪ್ರತೀತಿ ಇದೆ. ಇವರದ್ದು ಸುಮಾರು 1200 ರಚನೆಗಳ ಮಾತ್ರ ದೊರಕಿವೆ. ಅವುಗಳಲ್ಲಿ ಉಗಾಭೋಗಗಳು 70 ಆದರೆ ಸುಳಾದಿಗಳ ಸಂಖ್ಯೆ 580. ಹೀಗಾಗಿ ಇವರನ್ನು ಸುಳಾದಿ ವಿಜಯದಾಸರು ಎಂದು ಜನ ಗುರುತಿಸುತ್ತಿದ್ದರು. ಕಂಕಣಾಕಾರ ಸುಳಾದಿ, ಹಬ್ಬದ ಸುಳಾದಿ, ಹರಿದಾಸ ಲಕ್ಷಣ ಸುಳಾದಿ, ಶ್ರೀ ಕೃಷ್ಣ ಮಹಿಮೆಗಳನ್ನು ತಿಳಿಸುವ ಸುಳಾದಿ ಮುಂತಾದ ವಿಷಯಾಧಾರಿತ ಸುಳಾದಿಗಳನ್ನು ಹಾಡಿದ್ದಾರೆ. ವೇದ ಉಪನಿಷತ್ತಿನ ಸಾರವನ್ನೆಲ್ಲ ತಮ್ಮ ರಚನೆಗಳಲ್ಲಿ ಇಳಿಸಿದ್ದಾರೆ.
ಶ್ರೀ ಕೃಷ್ಣ ಪರಮಾತ್ಮನೆಂದರೆ ಅಪಾರ ಭಕ್ತಿ. ಅವನನ್ನು ಮುಟ್ಟಿ ಭಜಿಸುವ ಸೌಭಾಗ್ಯಕ್ಕಾಗಿ ಕೃಷ್ಣನನ್ನು ಹಾಡಿ ಕೊಂಡಾಡಿದರು.

ಕೃಷ್ಣಾ... ಕೃಷ್ಣಾ….
ಭಕ್ತಜನಪಾಲಕ
ಭಕ್ತಿ ಸುಖದಾಯಕ
ಮುಕ್ತೀಶ ದೀನಬಂಧು|| ||ಕೃಷ್ಣ||
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ|
ಸತ್ಯವತಿ ಸುತನೇ ಕಾಯೋ ಕೃಷ್ಣಾ ಕೃಷ್ಣಾ||ಭಕ್ತ||
ಆನಂದ ತೀರ್ಥಮುನಿಯ ದ್ಯಾನಿಪರ ಸಂಘ
ಆನಂದದಲಿ ನಿಲ್ಲಿಸೋ ಕೃಷ್ಣಾ ಕೃಷ್ಣಾ
ದೀನ ಗಣ ಮಂದಾರ ನೀನೆಂದು ನಂಬಿದೆನೋ
ಸಾನುರಾಗದಿ ಕಾಯೋ ಕೃಷ್ಣಾ ಕೃಷ್ಣಾ|| ಭಕ್ತ||
ಕೆಟ್ಟ ಜನರ ಸಂಘ ಇಷ್ಟು ದಿನವು ಮಾಡಿ
ನಷ್ಟವಾಗಿ ಪೋದೆನೋ ಕೃಷ್ಣಾ ಕೃಷ್ಣಾ
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ
ಇಷ್ಟಗಳ ಎನಗೆ ಕೊಡಿಸೋ ಕೃಷ್ಣಾ ಕೃಷ್ಣಾ||ಭಕ್ತ||
 
ವಿಜಯದಾಸರು ಪವಾಡ ಪುರುಷರಾಗಿ ಮೆರೆದ ದಂತಕಥೆಗಳು ಅನೇಕ ಇವೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ನೋಡೋಣ
ಒಮ್ಮೆ ತಿರುಪತಿ ತಿರುಮಲೆಯಲ್ಲಿ ರಥೋತ್ಸವ. ಜನಜಂಗುಳಿಯೆಲ್ಲ ರಥದ ಮುಂದೆ ಕಿಕ್ಕಿರಿದಿದೆ. ಪೂಜೆ ಪುನಸ್ಕಾರಗಳಲ್ಲಾ ನಡೆಯುತ್ತಿದೆ. ಗೋವಿಂದ ನಾಮಸ್ಮರಣೆ ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಂತರ ಭಕ್ತರೆಲ್ಲಾ ಸೇರಿ ರಥವನ್ನೆಳೆಯಲು ಪ್ರಾರಂಭಿಸಿದರು. ಆದರೆ ರಥದ ಚಕ್ರ ಒಂದರ್ಧ ಇಂಚಿನಷ್ಟೂ ಅಳ್ಳಾಡಲಿಲ್ಲ. ಜನಗಳಿಗೆ ಆಶ್ಚರ್ಯ. ತುಂಬಿದ ಜನರೆಲ್ಲಾ ರಥಕ್ಕೆ ಕಟ್ಟಿದ ಹಗ್ಗವನ್ನು ತಮ್ಮ ಶಕ್ತಿ ಮೀರಿ ಎಳೆಯುತ್ತಿದ್ದಾರೆ . ಕೊನೆಗೆ ಆನೆಗಳ ಕೈಯಲ್ಲಿ ಎಳೆಸಿದರೂ ರಥ ಜರುಗಲಿಲ್ಲ. ಆಗ ಯಾರೋ, “ಅಯ್ಯೋ ವಿಜಯದಾಸರು ಇಲ್ಲಿಲ್ಲ. ಅದಕ್ಕೆ ರಥ ಮುಂದೆ ಚಲಿಸುತ್ತಿಲ್ಲ.” ಎಂದು ಕೂಗಿದರು. ಆಗ ವಿಜಯದಾಸರನ್ನು ಹುಡುಕಿ ಕರೆತರಲು ಕೆಲವರು ಹೋದರಂತೆ. ಅವರನ್ನು ಅಲ್ಲಿ ಇಲ್ಲಿ ಹುಡುಕಿ ಅಂತೂ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿ ಕಂಡರು. ದೇವರ ಮುಂದೆ ಕುಳಿತು ಗೋವಿಂದನ ನಾಮಸ್ಮರಣೆಯಲ್ಲಿ ತಲ್ಲೀನರಾಗಿ ಹೋಗಿದ್ದರು ವಿಜಯದಾಸರು. ಅಲ್ಲಿ ಬಂದ ಜನ ಮೂಕವಿಸ್ಮಿತರಾಗಿ ಅಲ್ಲೇ ನಿಂತರು. ನಂತರ ಅವರನ್ನು ರಥ ಚಲಿಸುವಂತೆ ಮಾಡಬೇಕೆಂದು ಕೇಳಿಕೊಂಡರು. ಆಗ ಅವರು ರಥದ ಬಳಿ ಬಂದು “ಸಾಗಿಬಾರಯ್ಯಾ ಭವರೋಗ ವೈದ್ಯ” ಎಂದು ಕೂಗಿ ಕರೆದರಂತೆ. ಆಗ ರಚಿಸಿದ ಅವರ ರಚನೆ ಒಂದು ಹೀಗೆ ಇದೆ.

ಬಾಬಾ ಭಕುತರ ಹೃದಯ ಮಂದಿರ
ಬಾಬಾ ಜಗದೋದ್ಧಾರ
ಬಾಬಾ ವೆಂಕಟಾಚಲವಿಹಾರ
ಬಾಬಾ ಅನೇಕಾವತಾರ ನೀ ರಘುರಾ||ಬಾಬಾ||
ಧಕ್ಷ ಕಮಲಾಕ್ಷ ರಾಕ್ಷಸಕುಲಚಿತ್ತ
ಲಕ್ಷ್ಮಣಾಗ್ರಜ ಲಕ್ಷ್ಮಿ ವಾಸ್ನಾ
ಪಕ್ಷಿ ವಾಹನಾ ಪೂರ್ಣ ಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವಪರ ಅಕ್ಷಯವಂತ
ಶುಕ್ಲಾಂಬರಧರ ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೆರ ತಕ್ಷಣದಲಿ ತಂದ
ಅಕ್ಕರ ಪುರುಷ ಗೋವಿಂದ||ಬಾಬಾ||
ಬಂಗಾರ ರಥದೊಳು ಶೃಂಗಾರ ಪಾದ ಶ್ರೀ
ಮಂಗಳಾಂಗ ಕಾಳಿಂಗ ರಂಗ ನರಸಿಂಗ
ಅಂಗಾ ಸಜ್ಜನಕ ಸಾರಂಗ ರಥಾಂಗಪಾಣಿ
ಸಂಗನಿಸಂಗಮ ತಂದ ವಿಹಂಗ
ಪ್ರಬಂಧ ನಾಯಕ ಪರಿಪಾಲ,
ಸಂಗೀತ ಲೋಲ, ಗೋಪಾಂಗನೆಯರ
ಅಂತರಂಗ ಸಂತಾಪವಿದೂರ||ಬಾಬಾ||
ಭಕ್ತಾವತಾರದ ದೊರೆಯೇ ಹರಿಯೇ
ಧನ ಸಿರಿಯೇ ನಾನು ಮತ್ತೊಬ್ಬರನು ಹೀಗೆ ಕಾಣೆ
ನೃತ್ತರ ಸಂಗಡ ಓಡಾಡುವ ದೊರೆಯೇ
ಬೆನ್ನ ಹತ್ತಿ ಆಡುವ ಮರಿಯೇ
ಚಿತ್ತದೊಲ್ಲಭನಮ್ಮ ವಿಜಯ ವಿಠಲರೇ
ಯತ್ನ ನೋಡಲು ನಿನಗೆ ಸರಿಯೇ
ಅತ್ತಿತ್ತ ಹೋಗದೇ ಇತ್ತ ಬಾರಯ್ಯಾ
ಬೆನ್ಹತ್ತಿ ವೆಂಕಟ ದೊರೆಯೇ||ಬಾಬಾ||

 
ವಿಜಯದಾಸರು ಬೇಡಿದ ಮೇಲೆ ಇನ್ನು ರಥ ನಿಲ್ಲುವುದುಂಟೇ! ಕೂಡಿದ್ದ ಜನರ ಹರ್ಷೋದ್ಗಾರದೊಂದಿಗೆ ರಥ ಚಲಿಸಿಯೇ ಬಿಟ್ಟಿತು. ಹೀಗೆ ಅವರ ಅನೇಕ ಪವಾಡಗಳ ಬಗ್ಗೆ ಕಥೆಗಳು ಇವೆ. ಅವರ ಶಿಷ್ಯರಾದ ಶ್ರೀ ಮೋಹನದಾಸರಿಗೆ ಜೀವದಾನ ಮಾಡಿದ್ದು, ನೀರಡಿಕೆಯಿಂದ ಬಳಲುತ್ತಿದ್ದ ಕತ್ತೆಗೆ ತಮ್ಮ ಸ್ನಾನಕ್ಕೆಂದು ಇಟ್ಟುಕೊಂಡಿದ್ದ ನೀರನ್ನು ಕುಡಿಸಿ ನಂತರ ಚಿಲುಮೆಯಲ್ಲಿ ನೀರು ಬರುವಂತೆ ಮಾಡಿ ಆಹ್ನಿಕಗಳನ್ನು ಪೂರೈಸಿದುದು, ತನ್ನ ಪರಮಾಪ್ತ ಗೆಳೆಯರಾದ ಕೇಶವರಾಯರ ಮಗನನ್ನು ಬದುಕಿಸಿ ಅವರನ್ನು ಪುತ್ರ ಶೋಕದಿಂದ ಪಾರು ಮಾಡಿದುದು, ಹೀಗೆ ಹತ್ತು ಹಲವಾರು.
ಸಮಾಜದಿಂದ ಬಹಿಷ್ಕೃತಳಾದ ಶ್ರೀಮಂತ ಮಹಿಳೆಯ ಆತಿಥ್ಯ ಸ್ವೀಕರಿಸಿ, ಆಕೆಯ ಶವ ಸಂಸ್ಕಾರಗಳನ್ನು ತಾನೇ ನಿಂತು ಮಾಡಿದರು. ಇಂತಹಾ ಅನೇಕ ಬಗೆಗಳ ಜನಸೇವೆಯನ್ನೂ ಮಾಡಿದ್ದಾರೆ.

ಒಟ್ಟಿನಲ್ಲಿ ಹರಿದಾಸ ಸಾಹಿತ್ಯ ಚರಿತ್ರೆಯಲ್ಲಿ ಶ್ರೀ ವಿಜಯದಾಸರ ಕಾಲ ವಿಶೇಷ ಮಹತ್ವವನ್ನು ಪಡೆದಿದೆ. ಇವರು ತಮ್ಮ ಶಾಸ್ತ್ರ ಗರ್ಭಿತವಾದ ಸುಳಾದಿಗಳಲ್ಲಿ ಸ್ವಧರ್ಮ ನಿಷ್ಠೆಯನ್ನು ತೋರಿಸಿದ್ದಾರೆ. ಇವರ ರಚನೆಗಳಲ್ಲಿ ಮಾನವನ ನಿತ್ಯ ಜೀವನದ ಬಗ್ಗೆ ವಿಶ್ಲೇಷಣೆ ಇದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಾದಿಗಳ ವಸ್ತು ವಿಷಯಗಳ ಬಗ್ಗೆ ಉಲ್ಲೇಖಗಳಿವೆ. ಭಗವಂತನ ಲೀಲಾ ವಿನೋದಗಳ ಬಗ್ಗೆ ವೈವಿಧ್ಯಮಯ ಚಿತ್ರಣಗಳಿವೆ. ಇವರ ಇಬ್ಬರು ಪ್ರಮುಖ ಶಿಷ್ಯರು ಎಂದರೆ ದಾಸಪರಂಪರೆಯನ್ನು ಬೆಳೆಸಿದ ಮೋಹನದಾಸರು ಹಾಗೂ ಗೋಪಾಲದಾಸರು. ಇವರು 1755ರಲ್ಲಿ ದೇಹತ್ಯಾಗ ಮಾಡಿದರು.

ಪದ್ಯಭಾಗದ ಸಾರಾಂಶ
ಶ್ರೀಪಾದರಾಜರ ಕೀರ್ತನೆ
ಈ ಕೀರ್ತನೆಯಲ್ಲಿ ಶ್ರೀಪಾದರಾಜರು ಮುಕ್ತಿಯನ್ನು ಬಯಸುವವರಿಗೆ ವಾತಾವರಣ ಹೇಗೆ ಅನುಕೂಲವಾಗಿರಬೇಕು ಎಂದು ತಿಳಿಸಿದ್ದಾರೆ. ಇವರ ಕೀರ್ತನೆಗಳಲ್ಲಿ ಆತ್ಮಶೋಧನೆ, ಭಗವಂತನ ಆರಾಧನೆ, ದ್ವೆ ತತತ್ತ್ವ ಪ್ರತಿಪಾದನೆ ಮತ್ತು ಲೋಕನೀತಿ, ನೀತಿಬೋಧನೆಗಳು ಅಡಕವಾಗಿವೆ.

ಭಕ್ತಿ ಬೇಕು ವಿರಕ್ತಿ ಬೇಕು ಸರ್ವ
ಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ       // ಪ //
ಮುಕ್ತಿಯನ್ನು ಬಯಸುವವನಿಗೆ ಭಕ್ತಿ, ವಿರಕ್ತಿ ಮತ್ತು ಭೌತಿಕ, ಬೌದ್ಧಿಕ, ಆಧ್ಯಾತ್ಮಿಕ ಮುಂತಾದ ಸರ್ವಶಕ್ತಿಗಳೂ ಬೇಕು.
ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕು
ಮತಿವಂತನಾಗಬೇಕು ಮತ ಒಂದಾಗಬೇಕು   // ೧ //
ಅರ್ಥಮಾಡಿಕೊಂಡು ನಡೆಯುವ, ಒಮ್ಮತದ ಅಭಿಪ್ರಾಯವಿರುವ ಅನುಕೂಲವಾದ ಹೆಂಡತಿ, ಬುದ್ಧಿವಂತನೂ
ಗುಣವಂತನೂ ಆದ ಮಗ ಇರಬೇಕು. ||||
ಜಪದ ಜಾಣುವೆ ಬೇಕು ತಪದ ನೇಮವೆ ಬೇಕು
ಉಪವಾಸ ವ್ರತ ಬೇಕು ಉಪಶಾಂತವಿರಬೇಕು            // ೨ //
ನಿಷ್ಠೆಯಿಂದ ಕೂಡಿದ ಜಪ-ತಪ-ನೇಮಗಳನ್ನು ಮಾಡಬೇಕು. ಉಪವಾಸ ವ್ರತ ಮಾಡುವ ಮತ್ತು ನೆಮ್ಮದಿ-ಸಮಾಧಾನಗಳನ್ನು ಹೊಂದಿರಬೇಕು.

ಸುಸಂಗ ಹಿಡಿಯಲೆಬೇಕು ದುಸ್ಸಂಗ ಬಿಡಬೇಕು
ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು         // ೩ //  
ಸಜ್ಜನರ ಸಂಗ ಮಾಡಬೇಕು. ದುರ್ಜನರ ಸಂಗವನ್ನು ಬಿಡಬೇಕು. ದೇವರನ್ನು ಭಕ್ತಿ-ನಂಬಿಕೆಗಳಿಂದ ನೆನೆಯಬೇಕು.
      
ಗೋಪಾಲದಾಸರ ಕೀರ್ತನೆ
ಗೋಪಾಲದಾಸರು ಈ ಕೀರ್ತನೆಯಲ್ಲಿ- ದೇವರು ಭಕ್ತ ಪರಾಧೀನ. ಅನಾಥರಕ್ಷಕ. ಭಕ್ತರು ಅಚಲವಾದ ದೃಢಭಕ್ತಿಯಿಂದ ಮೊರೆಯಿಟ್ಟರೆ ಅವರ ಸಂಕಷ್ಟಗಳನ್ನು        ಪರಿಹರಿಸುತ್ತಾನೆ. ಪಾತಕಗಳನ್ನು ಮಾಡಿದರು ಸಹ ಪ್ರೀತಿಯಿಂದ ಕರೆದರೆ ಬಂದು ಸಂಕಷ್ಟಗಳನ್ನು ನಿವಾರಿಸುವ ಗುಣ ಈ ಪರಮಾತ್ಮನದು. ಆದುದರಿಂದ ಆ ಭಗವಂತನ್ನು ಹೃದಯಕಮಲದಲ್ಲ್ಲಿಟ್ಟು ಆರಾಧಿಸಬೇಕು. ನಂಬಿಕೆಟ್ಟವರಿಲ್ಲ. ನಂಬಿಕೆ, ಪ್ರೀತಿ, ದೃಢಸಂಕಲ್ಪಗಳು ಸದಾ ಅಚಲವಾಗಿರಬೇಕು ಎಂದು ಹೇಳಿದ್ದಾರೆ.

ಈತನೀಗ ನಮ್ಮ ದೇವನು                                                        ಪ.
ಪ್ರೀತಿಯಿಂದಲಿ ಸ್ಮರಿಸುವವರ | ಪಾತಕಗಳ ಪರಿಹರಿಪ                        ಅ.ಪ
ನಮ್ಮ ಈ ದೇವರು ಯಾರು ಪ್ರಿತಿಯಿಂದ ತನ್ನನ್ನು ಸ್ಮರಿಸುವರೋ ಅವರ ಪಾಪಗಳನ್ನು ಪರಿಹರಿಸಿ ಕಾಪಾಡುತ್ತಾನೆ.

ಅಕ್ರೂರನ ಪ್ರೀತನೀತ | ಶಂಖಚಕ್ರ ಧರಿಸಿದಾತ
ನಕ್ರಬಾಧೆಯ ತರಿದು ತನ್ನ | ಭಕ್ತರನ್ನು ಕಾಯಿದಾತ     // ೧ //
ಕಂಸನ ಅಷ್ಟಮಂತ್ರಿಗಳಲ್ಲಿ ಒಬ್ಬನಾದ ಅಕ್ರೂರ ಕೃಷ್ಣನ ಪ್ರೀತಿಯ ಗೆಳೆಯ. ಶಂಖ-ಚಕ್ರಗಳನ್ನು ಧರಿಸಿದವನು. ಮೊಸಳೆಯನ್ನು ಕೊಂದು ಅದರಿಂದ ಭಾದಿತರಾದ ತನ್ನ ಭಕ್ತರನ್ನು ಕಾಪಾಡಿದನು.

ಅಜಮಿಳನ ಸಲಹಿದಾತ | ವ್ರಜದಗೋವು ಕಾಯಿದಾತ
ಭಜಿಸುವವರ ಬಿಡನು ಪ್ರೀತ | ತ್ರಿಜಗದೊಳಗೆ ಮೆರವದಾತ      // ೨ //
ಅಜಮಿಳ ಎಂಬ ಪಾಪಿ ಕೊನೆಗಾಲದಲ್ಲಿ ನಾರಾಯಣ ಎಂದು ಕೂಗಿದಾಗ ಅವನ ಪಾಪಗಳನ್ನೆಲ್ಲ ಪರಿಹರಿಸಿದನು. ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋವುಗಳನ್ನೂ ಯದುಕುಲವನ್ನೂ ಸಂರಕ್ಷಿಸಿದನು. ಮೂರು ಲೋಕಗಳಲ್ಲೂ ಮೆರೆಯುತ್ತಾ ತನ್ನನ್ನು ಜಪಿಸುವ(ಭಜಿಸುವ) ಭಕ್ತರನ್ನು ಬಿಡದೆ ಕಾಪಾಡುವವನು.

ಸಕಲ ಗುಣ ಪೂರ್ಣನೀತ | ಸಕಲ ದೋಷ ದೂರನೀತ
ಸಕಲಾನಂದ ಪೂರ್ಣನೀತ | ಭಕುತಿ ಮಂತ್ರಕೊಲಿವದಾತ       // ೩ //
ಸಕಲ ಗುಣಗಳಿಂದ ಪರಿಪೂರ್ಣನೂ ಸಕಲ ದೋಷಗಳಿಂದ ದೂರ ಇರುವವನೂ ಸಕಲ ಆನಂದವನ್ನು ಹೊಂದಿರುವವನೂ ಭಕ್ತರ ಮಂತ್ರಕ್ಕೆ (ಸ್ತುತಿಗೆ) ಒಲಿಯುವವನೂ ಆಗಿದ್ದಾನೆ.

ಅನಾಥ ಬಾಂಧವನೀತ | ಅನಾದಿ ಕಾಲದವನಾತ
ಅನಾದಿ ಮೊರೆಯ ಕೇಳಿ | ಆ ನಿಮಿಷದೊಳು ಒದಗಿದಾತ          // ೪ //
ದಿಕ್ಕಿಲ್ಲದ ಅನಾಥರ ಬಂಧುವಾಗಿದ್ದಾನೆ. ಹುಟ್ಟು-ಸಾವುಗಳಿಲ್ಲದ, ಆದಿ-ಅಂತ್ಯಗಳಿಲ್ಲದವನು. ಕಷ್ಟದಲ್ಲಿದ್ದ ಭಕ್ತರ ಮೊರೆಯನ್ನು ಕೇಳಿದ ಕೂಡಲೆ ಬಂದು ಕಾಪಾಡಿದವನು.

ಕಮಲಮುಖಿಯ ರಮಣನೀತ | ಕಮಲಾಸನಜನಕನೀತ
ಕಮಲಾಕ್ಷ ಗೋಪಾಲವಿಠಲ ಹೃತ್ | ಕಮಲದೊಳು ನಿಲುವದಾತ. // ೫ //
ಇವನು ಕಮಲದಂತೆ ಸುಂದರವಾದ ಮುಖ ಹೊಂದಿರುವ ಲಕ್ಷ್ಮೀಯ ಒಡೆಯನಾದವನು. ಕಮಲಾಸನನಾದ ಬ್ರಹ್ಮನ ತಂದೆಯಾಗಿದ್ದಾನೆ. ಕಮಲದಂತ ಕಣ್ಣುಗಳನ್ನು ಹೊಂದಿರುವ ಈತ ಭಕ್ತರ ಹೃದಯ ಕಮಲದಲ್ಲಿ ನೆಲೆಸುತ್ತಾನೆ.

ವಿಜಯದಾಸರ ಕೀರ್ತನೆ
ಮುಕ್ತಿಗಳಿಸುವಲ್ಲಿ ಮಾನವನ ಜನ್ಮದ ಸಾರ್ಥಕತೆ ಇದೆ. ಈ ಭೂಲೋಕದ ಜನ್ಮಾಂತರಗಳಿಂದ ಮುಕ್ತನಾಗಲು ಸದಾ ಹರಿ ನಾಮಸ್ಮರಣೆ ಮಾಡಬೇಕು. ಅಚಲವಾದ ದೃಢ ಭಕ್ತಿಯಿಂದ ದೈವ ಸಾಕ್ಷಾತ್ಕಾರವಾಗುತ್ತದೆ. ಭಕ್ತಿ-ಭಕ್ತ ಒಂದಾದಾಗ ಮಾತ್ರ ಮುಕ್ತಿ ಸಾಧ್ಯವೆಂಬುದನ್ನು ವಿಜಯದಾಸರು ಈ ಕೀರ್ತನೆಯ ಮೂಲಕ ದೇವರಲ್ಲಿ ನಿವೇದಿಸಿಕೊಂಡಿದ್ದಾರೆ.

ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ         ಪ.
ನಾದಮೂರ್ತಿ ಮೋದದಿಂದ ನಿನ್ನ ಪಾದ ಭಜಿಸುವೆ       ಅ.ಪ
ಶ್ರೀಹರಿಯೇ, ನಾದ ಮೂರ್ತಿಯೇ, ನೀನು ಸದಾ ನನ್ನ ಹೃದಯದಲ್ಲಿ ವಾಸಮಾಡು. ನಿನ್ನ ಪಾದವನ್ನು ಬಹಳ (ಮೋದದಿಂದ) ಆನಂದದಿಂದ ಭಜಿಸುತ್ತಾ ಪೂಜಿಸುತ್ತೇನೆ.

ಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ | ಧ್ಯಾನದಿಂದ ಭಜಿಸುವೆ        // ೧ //
ಶ್ರೀಹರಿಯೇ, ನನ್ನ ಜ್ಞಾನ ಎಂಬ ನವರತ್ನ ಮಂಟಪದ ಮಧ್ಯದಲ್ಲಿ ನಾದಲೋಲನಾದ ನಿನ್ನನ್ನು ಕುಳ್ಳಿರಿಸಿ, ಧ್ಯಾನ-ಭಕ್ತಿಗಳಿಂದ ಭಜಿಸುತ್ತಾ ಪೂಜಿಸುತ್ತೇನೆ.

ಭಕ್ತಿರಸವೆಂಬ ಮುತ್ತು ಮಾ | ಣಿಕ್ಯದ ಹರಿವಾಣದಿ
ಮುಕ್ತನಾಗಬೇಕುಯೆಂದು ಮುತ್ತಿನಾರತಿ ಎತ್ತುವೆ          // ೨ //
ಶ್ರೀಹರಿಯೇ, ಭಕ್ತಿರಸ ಎಂಬ ಮುತ್ತು, ಮಾಣಿಕ್ಯಗಳು ತುಂಬಿದ ಹರಿವಾಣದಲ್ಲಿ(ತಟ್ಟೆಯಲ್ಲಿ) ಮುಕ್ತಿಪಡೆದು ಮುಕ್ತನಾಗಬೇಕೆಂದು ಮುತ್ತಿನ ಆರತಿಯನ್ನು ನಿನಗೆ ಎತ್ತುತ್ತೇನೆ.

ನಿನ್ನ ನಾಮ ಬಿಡುವನಲ್ಲ | ಎನ್ನ ನೀನು ಬಿಡಲು ಸಲ್ಲ
ಘನ ಮಹಿಮ ವಿಜಯವಿಠಲ ಕೇಳೊ ನಿನ್ನ ಭಕ್ತರ ಸೊಲ್ಲ            // ೩ //
ಶ್ರೀಹರಿಯೇ, ನಾನು ನಿನ್ನ ನಾಮವನ್ನು ಬಿಡುವವನಲ್ಲ. ಆದ್ದರಿಂದ ನನ್ನನ್ನು ನೀನು ಬಿಡುವುದು ಸರಿಯಲ್ಲ. ಘನ ಮಹಿಮಾನ್ವಿತನಾದ ವಿಜಯ ವಿಠಲನೇ ಈ ನಿನ್ನ ಭಕ್ತರ ಮೊರೆಯನ್ನು ಕೇಳು.


******* 




9ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ-7-ಊರುಭಂಗ

28 ನವೆಂಬರ್ 2017

ಬದುಕಿನ ಬವಣೆ - ರಂಗನಾಥ್ ಎನ್

ಪ್ರಾಚೀನತೆ ನಶಿಸಿದೆ ಮೌಲ್ಯಗಳು ಕಣ್ಮರೆಯಾಗಿವೆ,
ಮಾನವ ತನ್ನ ತನವನ್ನು ಮರೆತ್ತಿದ್ದಾನೆ,
ಅಧರ್ಮ ತಾಂಡವಾಡುತ್ತಿದೆ ಮೂಢನಂಬಿಕೆಯ ನೆಲದಲ್ಲಿ,
ಜಾತಿಯವಾದ ಹೆಚ್ಚುತ್ತಲಿದೆ ಸಂಸ್ಕಾರ ನಶಿಸಿದೆ,
ಆಚಾರ-ವಿಚಾರ ಆಧುನಿಕತೆಯ ನೆರಳಲ್ಲಿ ಮೂಲೆಗುಂಪು ಆಗಿದೆ,
ಮಾನವ ಅನಾಚಾರದಿಂದ ವರ್ತಿಸುವಂತಾಗಿದೆ.
*****
ನನಗೆ ಜನ್ಮ ಕೊಟ್ಟು ಮರುಜನ್ಮ ಪಡೆದವಳು ನೀ ಅಮ್ಮ 
ಅತ್ತಾಗ ಲಾಲಿ ಹಾಡಿ‌ ನೀ ಮಲಗಿಸಿದವಳು ನೀ ಅಮ್ಮ 
ವಾತ್ಸಲ್ಯ,ಮಮತೆ,ಪ್ರೀತಿ.ನನಗಾಗಿ ಧಾರೆ ಎರೆದವಳು ನೀ ಅಮ್ಮ. 
ಅಕ್ಷರ ಜ್ಞಾನವ ತುಂಬಿದವಳು ನೀ ಅಮ್ಮ 
ದುಃಖದಲ್ಲಿ ಸಂತೈಸಿದವಳು ನೀ ಅಮ್ಮ 
ಹಸಿದಾಗ ಉಣಬಡಿಸಿದವಳು ನೀ ಅಮ್ಮ 
ನಾ ನಕ್ಕಾಗ ನಿನ್ನ ನೋವು ಮರೆತು ನಕ್ಕವಳು ನೀ ಅಮ್ಮ.
               
                    ರಚನೆ :- ರಂಗನಾಥ ಎನ್
                              ಕನ್ನಡ ಭಾಷಾ ಶಿಕ್ಷಕರು
                              ಗುರುಬಸಮ್ಮ ವಿ.ಚಿಗಟೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ
                              ದಾವಣಗೆರೆ

23 ನವೆಂಬರ್ 2017

8ನೇ ತರಗತಿ ಪ್ರಥಮಭಾಷೆ ಕನ್ನಡ ಪದ್ಯ-6 ಸೋಮೇಶ್ವರ ಶತಕ

9ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯ-4-ಬಲಿಯನಿತ್ತೊಡೆ ಮುನಿವೆಂ

9ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯ-5-ಹೇಮಂತ (ಪ್ರಶ್ನೋತ್ತರ ವೀಕ್ಷಣೆ)

9ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ-5-ಪ್ರಜಾನಿಷ್ಟೆ

9ನೇ ತರಗತಿ ಪ್ರಥಮ ಭಾಷೆ ಕನ್ನಡ ಗದ್ಯ-5-ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್

8ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯ-5-ವಚನಾಮೃತ

8ನೇ ತರಗತಿ ಪ್ರಥಮ ಭಾಷೆ ಕನ್ನಡ ಪದ್ಯ-ಭರವಸೆ

04 ನವೆಂಬರ್ 2017

ಅಕ್ಷರ ಜಾತ್ರೆ

ಸುಖನಿದ್ರೆಯೊಳು ನಿದ್ರಿಸುತಿರಲು ನಸುಕಿನ ಕನಸೊಳು
 ಅಕ್ಷರ ಜಾತ್ರೆಯಲಿ ತಾಯಿ ಭುವನೇಶ್ವರಿಯ ನುಡಿತೇರು
ವೈಭವದೋಳು ಭರದಿಂ ಸಾಗುತ್ತಿತ್ತು//1//

ನುಡಿತೇರನೆಳೆಯುವಾಸೆಯಿಂದ ಕರಚಾಚಿದೆನಾನಾಗ
 ಎನ್ನೊಳಮನಸು ಕೇಳಿತು
 ಶ್ರೀವಿಜಯ ಬಸವ ಮುದ್ದಣ್ಣ ಕುವೆಂಪು ಬರಗೂರರಂತೆ
ಆರ ತರದಿ ನೀ ಎಳೆವೆಯೆಂದು?
ಶ್ರೀವಿಜಯನೆಂತೆಳೆಯಲು ಅಮೋಘವರ್ಷನ ಆಶ್ರಯವಿಲ್ಲ
 ಬಸವರೆಂತೆಳೆಯಲು ಶರಣರ ಸಂಗವಿಲ್ಲ
ಮುದ್ದಣ್ಣರಂತೆಳೆಯಲು ಮನೋರಮೆಯಂತ ಮಡದಿಯಿಲ್ಲ
ಕುವೆಂಪುರಂತೆಳೆಯಲು ವಿಶ್ವ ಬ್ರಾತೃತ್ವವಿಲ್ಲ
ಇನ್ನು ಬರಗೂರರಂತೆಳೆಯಲು ಬಂಡಾಯದ ಗುಂಡಿಗೆ ಎನಗಿಲ್ಲ
ನುಡಿತೇರನೆಳೆವಶಕ್ತಿ ಎನಗಿಲ್ಲ//2 ॥

ಅಷ್ಟಭುಜಗಳಿಗೊಂದರಂತೆ
ಅಷ್ಟಜ್ಞಾನಪೀಠಗಳಿಂದ ಶೋಭಿಸುತ್ತಿರುವ
ಕನ್ನಡಾಂಬೆಯ ಭವ್ಯ ಮೂರ್ತಿಗೆ ಪೂಜಿಪಲೊರಟಾಗ
ಮತ್ತೆ ಎನ ಒಳ ಮನಸೇ ಕೇಳಿತು
ಪಂಪ ಕೇಶಿರಾಜ ನಾಗವರ್ಮ ಕುಮಾರವ್ಯಾಸ
ಆರ ತೆರದಿ ನೀ ಪೂಜಿಪೆಯೆಂದು ಪಂಪನ ತೆರದಿ ಪೂಜಿಪಲು ನಾ ಕವಿಯು ಅಲ್ಲ
ಕಲಿಯೂ ಅಲ್ಲ ಕೇಶಿರಾಜನ ತೆರದಿ ಸ್ವರಾಭಿಷೇಕ ಮಾಡಲು ವ್ಯಾಕರಣ ತಿಳಿದಿಲ್ಲ
ನಾಗವರ್ಮನ ತೆರದಿ ಛಂದೋಮಾಲೆಯಾಕಲು ನಿಯಮಗಳು ಗೊತ್ತಿಲ್ಲ
ಕುಮಾರವ್ಯಾಸನಂತೆ ಹಾಡಿ ಹೊಗಳಲು ಗಾಯನಕಲೆ ತಿಳಿದಿಲ್ಲ//3//

ತೃಣಸಮಾನ ಜ್ಞಾನ ತುಂಬಿಹ
ಎನಮಸ್ತಿಷ್ಕದೊಳು ಸರ್ವಜ್ಞನಂತೆ
ನಿನ ಮೂರ್ತಿಗೆ ಪೂಜಿಪ ಪುಣ್ಯ ಎನಗಿಲ್ಲವೆಂದು ಕೊರಗುತಿರಲು
ನೆರೆದಿದ್ದ ಜನಸ್ತೊಮ ಜೈಕಾರವಾಕಿದಾಗ
ಕನಸೆಂಬುದ ಮರೆತು ಎನಗರಿಯದೆ ನಾ ಕೂಗಿದ್ದೆ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ//4//

ರಚನೆ:- ಕಾಂತರಾಜು ಬುಕ್ಕಪಟ್ಟಣ 
ಪ.ಪ್ರಾ.ಶಿಕ್ಷಕ 
ಉ.ಸ.ಹಿ.ಪ್ರಾ.ಪಾಠಶಾಲೆ, ಮಧ್ಯವೆಂಕಟಾಪುರ 
ಕೊರಟಗೆರೆ ತಾ. ಮಧುಗಿರಿ ಶೈ.ಜಿಲ್ಲೆ


*********

ಮಾನವ ಕೃತ್ಯ

ಮೂಡಣದಿ ಬಾನು ರಂಗೇರುತಿರುವಾಗ
ಅರುಣನ ದರ್ಶನವು ಸೂರ್ಯನ ಜೊತೆಗಾಗ
ಜಗವೆಲ್ಲ ಎಚ್ಚೆತ್ತು ಚೈತನ್ಯ ಮೂಡುವುದು
ಬರಿಗಣ್ಣಿಗಿದುವೆ ಬರಿಯ ಬೆಳಕಾಗಿಹುದು ||ಪ||

ಮೌನದಿಂ ಜೀವಿಗಳು ಎಚ್ಚತ್ತುಕೊಂಡಿರಲು
ಪಕ್ಷಿಗಳ ಇಂಚರವು ಸುಪ್ರಭಾತವಾಗಿರಲು
ಮಾನವನ ದಿನಚರಿಯು ಮನದಿ ಬುಗಿಲೆದ್ದಿಹುದು
ಇಗೋ ನೋಡಿ ಈಗ ಸೂರ್ಯೋದಯವಾಗಿಹುದು ||1||

ರಾತ್ರಿ ಮೌನದಿ ಕಳೆದು ಚೀರಾಟದೆಡೆಗಳಲಿ
ಸಿಲುಕಿಹುದು ಈ ಜಗವು ಮತ್ತೆ ಗಲಭೆಯಲಿ
ಮಾನವನ ಕೃತ್ಯಕಿದು ಕೊನೆಯಿಲ್ಲದಿಂದಿಲ್ಲ
ಪಕ್ಷಿಗಳ ಜೀವನವು ಇದಕು ಲೇಸು ಸಲ್ಲ ||2||

ಕರ್ತೃ:-
ಚರಣ್ ರಾಜ್ ಯಡಾಡಿ
8904502305
ಶಾನುಭೋಗರಬೆಟ್ಟು ಯಡಾಡಿ ಮತ್ಯಾಡಿ ಅಂಚೆ
 ಕುಂದಾಪುರ ತಾಲೂಕು 
ಉಡುಪಿ ಜಿಲ್ಲೆ 576222
charanrajk.30@gmail.com 


*****

02 ನವೆಂಬರ್ 2017

10ನೆಯ ತರಗತಿ ಪಠ್ಯಪೂರಕ ಅಧ್ಯಯನ -5-ಜನಪದ ಒಗಟುಗಳು (Notes)

10ನೆಯ ತರಗತಿ ಪಠ್ಯಪೂರಕ ಅಧ್ಯಯನ - 4-ಮೃಗ ಮತ್ತು ಸುಂದರಿ (Notes)

10ನೆಯ ತರಗತಿ ಪಠ್ಯಪೂರಕ ಅಧ್ಯಯನ -3-ಭಗತ್‌ಸಿಂಗ್ (Notes)

10ನೆಯ ತರಗತಿ ಪಠ್ಯಪೂರಕ ಅಧ್ಯಯನ -4-ವಸಂತ ಮುಖ ತೋರಲಿಲ್ಲ (Notes)

೧೦ನೆಯ ತರಗತಿ ಪಠ್ಯಪೂರಕ ಅಧ್ಯಯನ -1-ಸ್ವಾಮಿ ವಿವೇಕಾನಂದರ ಚಿಂತನೆಗಳು (Notes)

01 ನವೆಂಬರ್ 2017

8ನೆಯ ತರಗತಿ ಪದ್ಯ- 2 - ಸಣ್ಣ ಸಂಗತಿ

ಪ್ರಸ್ತುತ ಪದ್ಯಭಾಗವನ್ನು ಕೆ.ಎಸ್.ನರಸಿಂಹಸ್ವಾಮಿಯವರ ‘ಇರುವಂತಿಗೆ’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಕೆ.ಎಸ್.ನರಸಿಂಹಸ್ವಾಮಿಯವರ ಪರಿಚಯ
ಕೆಎಸ್‌ನರಸಿಂಹಸ್ವಾಮಿಯವರ ಪೂರ್ಣಹೆಸರು: ‘ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ’,
ಇವರ ಕಾಲ: ಜನನ: ಜನವರಿ ೨೬, ೧೯೧೫            ನಿಧನ: ಡಿಸೆಂಬರ್ ೨೭, ೨೦೦೩
ಸ್ಥಳ: ಇವರು ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. 
ವಿದ್ಯಾಭ್ಯಾಸ: ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು. ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು. 
      ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ.
        ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. 
ಅನುವಾದಿತ ಕೃತಿಗಳು: ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು 
ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು
೧೯೩೩ - ಕಬ್ಬಿಗನ ಕೂಗು ಮೊದಲ ಕವನ.
೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ.
೧೯೪೩- ದೇವರಾಜ್ ಬಹದ್ದೂರ್ ಬಹುಮಾನ.
೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ,
೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ
೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .
೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.
೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ .
೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ.
೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.
೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .
೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.
೧೯೯೬- ಮಾಸ್ತಿ ಪ್ರಶಸ್ತಿ .
೧೯೯೭- ಪಂಪ ಪ್ರಶಸ್ತಿ .
೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.
೨೦೦೦- ಗೊರೂರು ಪ್ರಶಸ್ತಿ .
ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಮುಖ ಕೃತಿಗಳು
ಕವನ ಸಂಕಲನಗಳು
೧೯೪೫- ಐರಾವತ
೧೯೪೭- ದೀಪದ ಮಲ್ಲಿ
೧೯೪೯- ಉಂಗುರ
೧೯೫೪- ಇರುವಂತಿಗೆ
೧೯೫೮- ಶಿಲಾಲತೆ
೧೯೬೦- ಮನೆಯಿಂದ ಮನೆಗೆ
೧೯೭೯- ತೆರೆದ ಬಾಗಿಲು
೧೯೮೯- ನವ ಪಲ್ಲವ
೧೯೯೩- ದುಂಡುಮಲ್ಲಿಗೆ
೧೯೯೯- ನವಿಲದನಿ
೨೦೦೦- ಸಂಜೆ ಹಾಡು
೨೦೦೧- ಕೈಮರದ ನೆಳಲಲ್ಲಿ
೨೦೦೨- ಎದೆ ತುಂಬ ನಕ್ಷತ್ರ
೨೦೦೩- ಮೌನದಲಿ ಮಾತ ಹುಡುಕುತ್ತ
೨೦೦೩- ದೀಪ ಸಾಲಿನ ನಡುವೆ
೨೦೦೩- ಮಲ್ಲಿಗೆಯ ಮಾಲೆ
೨೦೦೩- ಹಾಡು-ಹಸೆ

ಗದ್ಯ
ಮಾರಿಯ ಕಲ್ಲು
ದಮಯಂತಿ
ಉಪವನ
ಅನುವಾದ
ಮೋಹನಮಾಲೆ
ನನ್ನ ಕನಸಿನ ಭಾರತ
ಸುಬ್ರಹ್ಮಣ್ಯ ಭಾ
ರತಿ
ಪುಷ್ಕಿನ್ ಕವಿತೆಗಳು
ರಾಬರ್ಟ್ ಬರ್ನ್ಸ್ ಪ್ರೇಮಗೀತೆಗಳು

ಶ್ರೀಯುತರ ಕವನಗಳನ್ನು ಓದಲು http://kannadadeevige.blogspot.com/p/blog-page_87.html ಇಲ್ಲಿ ಕ್ಲಿಕ್ ಮಾಡಿ

****************

ಸಣ್ಣ ಸಂಗತಿ ಕವನದ ಭಾವಾರ್ಥದ ವಿಮರ್ಶೆ


ನರಸಿಂಹಸ್ವಾಮಿಯವರ ಪುಟ್ಟ ಕವಿತೆ `ಸಣ್ಣಸಂಗತಿ’. ಅದು ಸಾಹಿತ್ಯ ವಿಮರ್ಶೆಯಲ್ಲಿ ಶ್ರೇಷ್ಠ ಕವನವೆಂದೇನೂ ಚರ್ಚೆಗೊಳಗಾಗಿಲ್ಲ. ಆದರೆ ಮತ್ತೆಮತ್ತೆ ಕಾಡುತ್ತದೆ. ಅದರ ವಸ್ತು ತಾಯೊಬ್ಬಳ ದುಡಿತ. ಅಲ್ಲೊಂದು ಸನ್ನಿವೇಶವಿದೆ: ನಡುರಾತ್ರಿ. ಕುಟುಂಬದ ಸಮಸ್ತ ಸದಸ್ಯರೂ ಗಾಢನಿದ್ದೆಯಲ್ಲಿದ್ದಾರೆ. ಅವರಲ್ಲಿ ಎಳೆಗೂಸಿನ ತಾಯಿಯೂ ಸೇರಿದ್ದಾಳೆ. ಆಕೆಯ ಮಂಚದ ಪಕ್ಕದಲ್ಲಿರುವ ತೊಟ್ಟಿಲಲ್ಲಿ ಕೂಸಿದೆ. ಅದು ಗಾಳಿಯಲ್ಲಿ ಕಾಲು ಅಲುಗಿಸುತ್ತ ಹೊದಿಕೆಯನ್ನು ಕಿತ್ತೆಸೆಯುತ್ತಿದೆ. ಎಲ್ಲರಂತೆ ಆಕೆಯೂ ನಿದ್ದೆಯಲ್ಲಿ ಮುಳುಗಿರುವಳು. ಆದರೆ ಅವಳ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುತ್ತಿದೆ.
`ನಿದ್ದೆ ಎಚ್ಚರಗಳಲಿ ಪೊರೆವ ಕೈಯನ್ನು ತನ್ನ ಕಂದನಿಗಾಗಿ ದುಡಿಯಲು ಬಿಟ್ಟಿರುವ ತಾಯ್ದುಡಿತದ ಪ್ರೇರಣೆ ಯಾವುದು? ಲೋಕದ ಸಮಸ್ತ ತಾಯಂದಿರಲ್ಲೂ ಯುಗಾಂತರಗಳಿಂದ ಸಂತಾನ ಕಾಪಿಡಲು ನಿರತವಾಗಿರುವ ಸುಪ್ತ ಕಾಳಜಿಯೇ? ಲೋಕದಲ್ಲಿ ಸಂಭವಿಸುವ ಯುದ್ಧ, ಪ್ರವಾಹ, ಭೂಕಂಪ, ವಿಮಾನಾಪಘಾತ, ರಾಜಕೀಯ ಬದಲಾವಣೆ, ಸುನಾಮಿ ಮುಂತಾದ ನಿಸರ್ಗಕೃತ ಹಾಗೂ ಮಾನವ ನಿರ್ಮಿತ ವಿದ್ಯಮಾನಗಳನ್ನೆಲ್ಲ `ಬೃಹತ್ಎನ್ನುವುದಾದರೆ, ಅವುಗಳ ಮುಂದೆ ಸಂಗತಿ `ಸಣ್ಣ'ದು. ಆದರೆ ನಿಜವಾಗಿ ಸಣ್ಣದೇ? ಇದು ಕವಿತೆ ಹುಟ್ಟಿಸುತ್ತಿರುವ ಬೆರಗು ಮತ್ತು ಪ್ರಶ್ನೆ. ಇಂತಹ `ಸಣ್ಣ'ಸಂಗತಿಗಳನ್ನು ಗಮನಿಸಲಾಗದೆ ಹುಟ್ಟಿರುವ ದೊಡ್ಡ ಬರೆಹಗಳು ಲೋಕದಲ್ಲಿ ಬಹುಶಃ ಇಲ್ಲ. ಟಾಲ್ಸ್ಟಾಯ್, ಕುವೆಂಪು, ವೈಕಂ, ಪ್ರೇಮಚಂದ್, ದೇವನೂರ ಇವರ ಬರೆಹ ಶ್ರೇಷ್ಠ ಮತ್ತು ಮಾನವೀಯ ಆಗಿರುವುದು ಇಂತಹ `ಕಿರು' ಸಂಗತಿಗಳನ್ನು ಒಳಗೊಳ್ಳುವುದರಿಂದ; ಓದುಗರ ಸಂವೇದನೆಯನ್ನು ಸೂಕ್ಷ್ಮವಾಗಿಸುವ ಪರಿಯಿಂದ.
`ಮಲೆಗಳಲ್ಲಿ ಮದುಮಗಳುಕಾದಂಬರಿಯ ಆರಂಭದಲ್ಲಿ ಬರುವ ಪ್ರಸ್ತಾವನ ರೂಪದ ಹೇಳಿಕೆ ನೆನಪಾಗುತ್ತಿದೆ: `ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ; ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ’. ಇದು ಲೋಕದ ಸಮಸ್ತವನ್ನು ಹಿರಿದು ಕಿರಿದೆನ್ನದೆ ಸಮಾನ ಮಹತ್ವದಿಂದ ನೋಡುವ ತತ್ವ; ಇನ್ನೊಂದು ಬಗೆಯಲ್ಲಿ ಸಮಾಜವಾದಿ ದರ್ಶನ ಕೂಡ. ಅಂತಸ್ತು ಅಧಿಕಾರ ಜಾತಿ ಸಂಪತ್ತು ಇತ್ಯಾದಿ ಕಾರಣಗಳಿಂದ ಕೆಲವರನ್ನು ಗಣ್ಯರೆಂದೂ ಕೆಲವರನ್ನು ಸಣ್ಣವರೆಂದೂ ತಾರತಮ್ಯ ಮಾಡುವ ಮನೋಭಾವ ಸಮಾಜದಲ್ಲಿದೆ. ಮನೋಭಾವಕ್ಕೆ ಕೆಲವು ಸಂಗತಿ `ದೊಡ್ಡ' `ಮಹತ್ವ' ಅನಿಸಿದರೆ, ಕೆಲವು `ಸಣ್ಣ' `ಕ್ಷುದ್ರ' ಎನಿಸುತ್ತವೆ. ತಾರತಮ್ಯವನ್ನು ಮೀರಿ ಲೋಕವನ್ನು ಗ್ರಹಿಸಲು ಸಾಧ್ಯವಾದರೆ, ಹೊಸನೋಟಗಳು ಕಾಣಬಹುದು. ಲೋಕವು ತನ್ನ ಪ್ರತಿಷ್ಠಿತ ಧೋರಣೆಯಿಂದ ನೋಡಲು ನಿರಾಕರಿಸಿದ, ನೂರಾರು ಜೀವಂತ ಸನ್ನಿವೇಶಗಳು ಗೋಚರಿಸಬಹುದು. ಆಗ ಅವನ್ನು ಪ್ರೀತಿ ಅಚ್ಚರಿ ಕುತೂಹಲಗಳಿಂದ ನೋಡುತ್ತ ಅಲ್ಲಿರುವ ಚೈತನ್ಯ ಗುರುತಿಸಲು ಸಾಧ್ಯವಾಗುತ್ತದೆ. ಅವು ನಮ್ಮ ಅರಿವು ಮತ್ತು ಸಂವೇದನೆಗಳನ್ನು ನಮಗೆ ಅರಿವಿಲ್ಲದೆಯೇ ಬದಲಿಸಬಲ್ಲವು.  
ಕುವೆಂಪು ದೊರೆ ರಾಮನ ಮೇಲೆ `ಮಹಾಕಾವ್ಯ' ಬರೆದರು. ಬಗ್ಗೆ ಅವರಿಗೆ  ಸ್ವಯಂ ಅಭಿಮಾನವಿತ್ತು. ಆದರೆ ವಾಸ್ತವವಾಗಿ ಅವರು ನಮ್ಮ ಮಹತ್ವದ ಲೇಖಕರಾಗಿರುವುದು `ಸಾಮಾನ್ಯ'ರೆಂದು ಕರೆಯುವ, ಚರಿತ್ರೆಯಿಲ್ಲದ ಮನುಷ್ಯರನ್ನು ಕುರಿತು ಬರೆದ ಪರ್ಯಾಯ ಚರಿತ್ರೆಯಿಂದ; ಗೊಬ್ಬರ ಪುಟ್ಟಹಕ್ಕಿ ಹೀರೇಹೂವು ಇತ್ಯಾದಿ ವಸ್ತುಗಳ ಮೇಲೆ ಬರೆದ ಕವಿತೆಗಳಿಂದ. ಮಲತಾಯಿಯ ಕಾಟಕ್ಕೆ ಸಿಲುಕಿದ ಪುಟ್ಟ ಹುಡುಗಿ, ಮನೆಗೆ ಬಾರದ ದನ ಹುಡುಕುತ್ತ ಕತ್ತಲಲ್ಲಿ ಹೋಗಿ ಸಂಕಟಪಡುವ `ನಾಗಿ' ಕವನವನ್ನು ಓದುವಾಗ, ಈಗಲೂ ನನ್ನ ಕಣ್ಣಂಚಿಗೆ ನೀರು ಬಂದು ನಿಲ್ಲುತ್ತವೆ. ನಾಯಿ ಕೋಳಿ ಮಕ್ಕಳು ಹೆಂಗಸರು ದಲಿತರು ಅವರ ಗದ್ಯಕಥನದ ಪ್ರಮುಖ ಪಾತ್ರಗಳು; ಹೆಚ್ಚಿನವರು `ಯಾರೂ ಅರಿಯದ ವೀರರು. ಇದು ಅವರ ಕತೆಯೊಂದರ ಹೆಸರು ಕೂಡ. `ಇಂದಿರಾಬಾಯಿ' `ಮರಳಿಮಣ್ಣಿಗೆ' `ಒಡಲಾಳ' ಇವೆಲ್ಲ ಯಾರೂ ಅರಿಯದ ವೀರರ ಮೇಲೆ ಹುಟ್ಟಿದ ಕಥನಗಳೇ. ಕೆಎಸ್ ಅವರ ಕವನದ ತಾಯಿ ಕೂಡ ಇಂತಹ ಒಬ್ಬ ವೀರಳೇ.
ಲೋಕದೃಷ್ಟಿಯಲ್ಲಿ ಬೃಹತ್ ಮಹತ್ ಎನ್ನಲಾಗುವ ಸಂಗತಿಗಳನ್ನು ಗಮನಿಸುವುದು ದೋಷವಲ್ಲ. ಆದರೆ ಅದೊಂದೇ ನೋಡುಗರ ಚಿಂತನೆಯನ್ನೊ ಸೃಷ್ಟಿಯಾದ ಕಲೆಯನ್ನೊ ಮಹತ್ವಗೊಳಿಸುವುದಿಲ್ಲ; `ಸಾಮಾನ್ಯ' ಎನಿಸಿಕೊಂಡಿದ್ದನ್ನು ನೋಡುವುದರ, ಅದರ ಬಗ್ಗೆ ಚಿಂತಿಸುವುದರ ಅನುಭವವೇ ಬೇರೆ. `ಭವ್ಯತೆ' ಪರಿಕಲ್ಪನೆಯ ಮೇಲೆ ಚರ್ಚಿಸುತ್ತ ಚಿಂತಕ ಬ್ರಾಡ್ಲೆ, ಆಗಸಕ್ಕೆ ಚಾಚಿದ ಚರ್ಚಿನ ಶಿಖರ ಮಾತ್ರವಲ್ಲ, ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ತಾಯಿಹಕ್ಕಿ ನಾಯಿಯೊಂದಿಗೆ ಮಾಡುವ ಹೋರಾಟವೂ ಭವ್ಯವೆಂದು ಕರೆಯುತ್ತಾನೆ. ಕನ್ನಡದ ಎಲ್ಲ ಸಂವೇದನಶೀಲ ಲೇಖಕರಿಗೆ ಸಂಗತಿ ತಿಳಿದಿತ್ತು.
ಸಂಗತಿಯು ಬರೆಹಕ್ಕೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ದಾರ್ಶನಿಕರಿಗೂ ರಾಜಕೀಯ ನಾಯಕರಿಗೂ ಸಂಬಂಧಪಟ್ಟಿದ್ದು. ಬುದ್ಧ ಲೋಕಗುರು ಆಗಿದ್ದು, ಸಾಮ್ರಾಟರ ಜತೆ ಮಾಡಿದ ಸಂವಾದದಿಂದಲ್ಲ. ಮಗುಸತ್ತ ತಾಯೊಬ್ಬಳ ದುಗುಡವನ್ನು ಸಾವಿಲ್ಲದ ಮನೆಯ ಸಾಸಿವೆಯನ್ನು ತರಲು ಹೇಳುವ ಮೂಲಕ; ಚಾಂಡಾಲಕನ್ಯೆಯ ಕೈನೀರನ್ನು ಕುಡಿದೊ ವೇಶ್ಯೆಯೊಬ್ಬಳ ಆತಿಥ್ಯ ಸ್ವೀಕರಿಸಿ ಅವರಲ್ಲಿ ಹೊಸಬಾಳಿನ ಭರವಸೆ ಮೂಡಿಸುವ ಮೂಲಕ. ಅವನು ರೋಗಿ, ಶವ, ಭಿಕ್ಷುಕರನ್ನು ಕಂಡು ಲೋಕದ ದುಃಖಕ್ಕೆ ಪರಿಹಾರ ಕಾಣಲು ಮನೆಬಿಟ್ಟು ಹೋಗಿದ್ದು, ಕಟ್ಟುಕತೆ ಇರಬಹುದು; ಆದರೆ ಇದು ಪರೋಕ್ಷವಾಗಿ ಬುದ್ಧನ ನೋಟದ ವಿಶಿಷ್ಟತೆ ಮತ್ತು ಹೃದಯವಂತಿಕೆಯನ್ನು ಕುರಿತು ಜನರ ಕಲ್ಪನೆಯನ್ನು ಸಹ ಸೂಚಿಸುತ್ತಿದೆ. ಮಹತ್ತೆನ್ನುವುದು ಕಿರಿದುಗಳಿಂದಲೇ ರೂಪುಗೊಳ್ಳುತ್ತದೆ ಎಂಬ ಅರಿವು ಇಲ್ಲಿನದು. ಕೀಳಿಂಗೆ ಹಯನು ಕರೆಯುತ್ತದೆ ಎಂದು ಶರಣರು ರೂಪಕಾತ್ಮಕವಾಗಿ ಇದೇ ತಥ್ಯವನ್ನು ಹೇಳಿದರು. ಗಾಂಧಿಯವರ ನೋಟ ಮತ್ತು ಕ್ರಿಯೆಗಳಲ್ಲೂ ತಥ್ಯವಿತ್ತು. ಉಪ್ಪು ಚರಕಗಳು ಲೋಕದ ಕಣ್ಣಲ್ಲಿ `ಸಣ್ಣ' ವಸ್ತುಗಳು. ಆದರೆ ಅವುಗಳ ಮೂಲಕ ದೇಶದಲ್ಲಿ ಹೊಸ ರಾಜಕೀಯ-ಸಾಮಾಜಿಕ ಪ್ರಜ್ಞೆಯನ್ನು ಅವರು ಕಟ್ಟಿದರು; ರಾಜಕಾರಣವನ್ನು ಆಧ್ಯಾತ್ಮೀಕರಿಸಿ ಸಂಚಲನ ಮೂಡಿಸಿದರು. `ಸಣ್ಣ' ವಿಷಯಗಳಿಗೂ ಗಮನಕೊಡುವ ಅವರ ಗುಣ ಅಟೆನ್ಬರೊ ಸಿನಿಮಾದಲ್ಲಿಯೂ ಇದೆ. ಅದು ನೆಹರೂ ಹಾಗೂ ಪಟೇಲರು ರಾಜಕೀಯ ಮಹತ್ವದ ಸಮಸ್ಯೆಯನ್ನು ಚರ್ಚಿಸಲು ಆಶ್ರಮಕ್ಕೆ ಬಂದಿರುವ ಸನ್ನಿವೇಶ. ಗಾಂಧೀಜಿ ಅವರಿಬ್ಬರ  ಜತೆ ಮಾಡುತ್ತಿದ್ದ ಚರ್ಚೆಯನ್ನು ತಟ್ಟನೆ ನಿಲ್ಲಿಸಿ, ಮುರಿದ ಕಾಲಿನ ಮೇಕೆಯೊಂದರ ಶುಶ್ರೂಶೆಗೆ ತೊಡಗಿಬಿಡುತ್ತಾರೆ. ಘಟನೆ ನಾಟಕೀಯವಾಗಿದೆ ಮತ್ತು ಮಾರ್ಮಿಕವಾಗಿದೆ.
ನರಸಿಂಹಸ್ವಾಮಿ ಕವನದಲ್ಲಿ ಹಾಲೂಡಿಸುವ ತಾಯಿ ಕೂಸಿನ ಕಾಳಜಿ ಮಾಡಿದರೆ, ಇಲ್ಲಿ ಗಾಂಧಿ ತನಗೆ ಹಾಲೂಡುವ ಪ್ರಾಣಿಯ ಕಾಳಜಿ ಮಾಡುವರು. ದೇಶ ನಡೆಸುವ ಹೊಣೆ ಹೊರಲು ಸಿದ್ಧವಾಗುತ್ತಿರುವ ಇಬ್ಬರು ನಾಯಕರಿಗೆ ದೇಶಕಟ್ಟುವ ಪರಿಯನ್ನು ಮೂಲಕ ಸೂಚಿಸುವರು. `ಚಿಕ್ಕ' ಸಂಗತಿಗಳಿಗೆ ಗಮನ ಹರಿಸುವುದು ಡೆಮಾಕ್ರಸಿಯ ತಳತತ್ವವೂ ಹೌದು. ಸ್ಮಾಲ್ `ಬೂಟಿಫುಲ್' ಮಾತ್ರವಲ್ಲ, ಗ್ರೇಟ್ ಕೂಡ. `ಸಣ್ಣ' ಶಬ್ದವು ಸಣ್ಣತನದಲ್ಲಿ ನೇತ್ಯಾತ್ಮಕವಾಗಿರಬಹುದು. ಆದರದು ವಿರಾಟ್ ತತ್ವದರ್ಶನದ ಜೀವಾಳ.  
ನರಸಿಂಹಸ್ವಾಮಿ ಕವನದ ತಾಯ ಚಿತ್ರವು ನನ್ನನ್ನು ಕಾಡುತ್ತಿರಲು ಬಾಲ್ಯದ ನೆನಪುಗಳೂ ಕಾರಣವಿರಬೇಕು. ರಾತ್ರಿ ಊಟದ ಹೊತ್ತಲ್ಲಿ ಅಮ್ಮ ನಮ್ಮನ್ನು ಎದುರು  ಕೂರಿಸಿಕೊಂಡು, ಸಂಗೀತಗೋಷ್ಠಿಯಲ್ಲಿ ಕಲಾವಿದನು ಹಲವು ವಾದ್ಯಗಳ ನಡುವೆ ಕೂತಂತೆ ಅಡುಗೆಯ ಪಾತ್ರೆಗಳನ್ನು ಸುತ್ತ ಇಟ್ಟುಕೊಂಡು, ಎಲ್ಲರ ತಟ್ಟೆಗಳ ಮೇಲೆ ಹಕ್ಕಿಗಣ್ಣನ್ನಿಟ್ಟು, ನಮ್ಮ ಹಸಿವು ಇಷ್ಟಾನಿಷ್ಟಗಳನ್ನು ಗಮನಿಸಿ ಬಡಿಸುತ್ತ, ತಾನೂ ಬಡಿಸಿಕೊಂಡು ಉಣ್ಣುತ್ತಿದ್ದಳು. ನಾವೆಲ್ಲ ಮಲಗಿದ ಬಳಿಕವೂ ಎಚ್ಚರವಾಗಿದ್ದು  ಹೊದಿಕೆ ಸರಿಪಡಿಸುತ್ತ, ಸರಿದ ದಿಂಬನ್ನು ತಲೆಗೆ ಕೊಡುತ್ತ, ಹೋಗಿಬರುವ ತಿಗಣೆಗಳನ್ನು ಹೊಸಕಿ ಹಾಕುತ್ತ, ನಿಶಾಚರಿಯಂತೆ ವರ್ತಿಸುತ್ತಿದ್ದಳು. ನಿತ್ಯವೂ ಸಂಭವಿಸುತ್ತಿದ್ದ   ಬಡಿಸುವ ಮತ್ತು ಮಲಗಿಸುತ್ತಿದ್ದ ಪರಿ ಎಷ್ಟು ಜೀವಪರವಾಗಿತ್ತು ಎಂದು ಈಗ ಹೊಳೆಯುತ್ತಿದೆ.
ಲೋಕದ ಅದೆಷ್ಟು ಮನೆಗಳಲ್ಲಿ ಇಂತಹ ತಾಯ್ಜೀವಗಳು ಉಳಿದವರ ಹದುಳಕ್ಕೆ ದುಡಿಯುತ್ತಿವೆಯೊ? ತಾಯ್ತನದ ಕಾಳಜಿ ತಂದೆ, ಮಡದಿ, ಗಂಡ, ಸ್ನೇಹಿತರು ಕೂಡ ಮಾಡಬಲ್ಲರು. ಲೋಕಚಿಂತಕರ ಇಂತಹದೇ ಕಾಳಜಿ, ಚಿಂತನೆ ಮತ್ತು ಕ್ರಿಯೆಗಳು ಸಮಾಜವನ್ನು ಕಟ್ಟಿವೆ. ಕುದ್ಮಲ್ ರಂಗರಾವ್, ಗೋದಾವರಿ ಪುರುಳೇಕರ್, ಜ್ಯೋತಿಬಾ, ಅಂಬೇಡ್ಕರ್, ಕುವೆಂಪು, ನಾರಾಯಣಗುರು ಇವರು ಸಮಾಜಕ್ಕೆ ನೆಮ್ಮದಿಯ ಬದುಕನ್ನು ರೂಪಿಸಲು ಹೆಣಗಿದವರು. ಅದಕ್ಕಾಗಿ ಲೋಕದಿಂದ ಕಷ್ಟ ಅಪಮಾನ ಎದುರಿಸಿದವರು. ಅವರ ತಾಯ್ತನ ಹೆತ್ತಮ್ಮನಿಗಿಂತ ಹಿರಿದು. ತನ್ನ ಮಕ್ಕಳಿಗೆ ತಾಯಿಯಾಗುವುದಕ್ಕಿಂತ ಲೋಕದ ಮಕ್ಕಳಿಗೆ ತಾಯಿಯಾಗುವುದು `ದೊಡ್ಡ'  ಸಂಗತಿ.
ಗಾತ್ರಸೂಚಕವಾದ `ಸಣ್ಣ' `ದೊಡ್ಡ' ಎಂಬ ಎದುರಾಳಿ ಅಂಶಗಳು ಒಂದು ಹಂತದವರೆಗೆ ವಾಸ್ತವ. ಆದರೆ ಸಣ್ಣದು ದೊಡ್ಡದಾಗುವ ದೊಡ್ಡದು ಸಣ್ಣದಾಗುವ, ಎರಡೂ ಸೇರಿ ಮತ್ತೊಂದಾಗುವ ಪ್ರಕ್ರಿಯೆ ಲೋಕದಲ್ಲಿ ನಡೆಯುತ್ತಲೇ ಇರುತ್ತದೆ. ಸಮತೆಯ ದರ್ಶನವುಳ್ಳ ಎಲ್ಲರೂ ತಮ್ಮ ಆಲೋಚನೆ ಮತ್ತು ಕಾರ್ಯದ ಮುಖೇನ ಇದನ್ನು ಕಾಣಿಸುತ್ತ ಬಂದಿದ್ದಾರೆ. ಇಂತಹ ಗಹನ ದರ್ಶನವನ್ನು ನರಸಿಂಹಸ್ವಾಮಿ ಕವನದ ತಾಯಿ ತನ್ನ ಸಹಜ ದೈನಿಕ ಚಟುವಟಿಕೆಯ ಮೂಲಕ ಪ್ರಕಟಿಸುತ್ತಿರುವಳು. ಹೀಗಾಗಿಯೇ ಅವಳ ಹೊದಿಕೆ ಸರಿಪಡಿಸುವಿಕೆ, ಲೌಕಿಕವಾಗಿದ್ದರೂ ಲೋಕೋತ್ತರ  ಕಾಯಕವೂ ಆಗಿದೆ. ಕ್ರಿಯೆ ತನ್ನ ಪ್ರಮಾಣದಲ್ಲಿ ಸಾಮಾನ್ಯ ಎನಿಸುತ್ತಿದ್ದರೂ ಪರಿಣಾಮದಲ್ಲಿ ಅಸಾಮಾನ್ಯ. ಆಗಸದಲ್ಲಿ ರೂಪುಗೊಂಡ ಕಾರ್ಮುಗಿಲು ಮಳೆಸುರಿಸಿ, ನೀರನ್ನು ನೆಲವು ಕುಡಿದು, ಅದು ಬಿಸಿಲಿಗೆ ಆವಿಯಾಗಿ ಗಾಳಿಯಲ್ಲಿ ಸೇರಿ, ತಂಪುಕ್ಷಣದಲ್ಲಿ ಜಲಬಿಂದುವಾಗಿ ನೆಲಕ್ಕಿಳಿಯುತ್ತದೆ. ನೀರು ಮಾಡುವ  ದ್ಯಾವಾಪೃಥಿವಿಯ ವಿರಾಟ್ ಸಂಚಾರಕಥನವನ್ನು, ಹುಲ್ಲಿನೆಸಳ ತುದಿಯಲ್ಲಿ ವಜ್ರದ ಹರಳಿನಂತೆ ಕೂತಿರುವ ಇಬ್ಬನಿಯ ಪುಟ್ಟಹನಿ ಹೇಳುತ್ತಿರುತ್ತದೆ. ಇದೇನು ಸಣ್ಣ ಸಂಗತಿಯೇ?


*******ಕೃಪೆ: Whatsapp********