ನನ್ನ ಪುಟಗಳು

28 ಅಕ್ಟೋಬರ್ 2015

೧೭.ಕುಮಾರ ವಾಲ್ಮೀಕಿ

ಕುಮಾರ ವಾಲ್ಮೀಕಿ
ಈತನ ನಿಜವಾದ ಹೆಸರು: ನರಹರಿ
ಈತನ ಕಾಲ: ಕ್ರಿ.ಶ.ಸು. ೧೫೦೦
ಈತನ ಕೃತಿ: ‘ತೊರವೆ ರಾಮಾಯಣ’
ಈತನ ಸ್ಥಳ: ವಿಜಾಪುರ ಜಿಲ್ಲೆಯ ತೊರವೆ ಗ್ರಾಮ. ಅಲ್ಲಿನ ದೇವರಾದ ನರಸಿಂಹನ ಅಂಕಿತದಲ್ಲಿ ಕಾವ್ಯರಚನೆ ಮಾಡಿದ್ದಾನೆ.
ಈತನಿಗಿದ್ದ ಬಿರುದು: ಕವಿರಾಜ ಹಂಸ
ಈತ ಬರೆದ “ತೊರವೆ ರಾಮಾಯಣ”ವು ಜನಪ್ರಿಯವಾದ ನಡುಗನ್ನಡ ಕಾವ್ಯವಾಗಿದೆ.  ಕುಮಾರವ್ಯಾಸ ನಂತೆ ಈತ ಸಹ ಭಾಮಿನಿ ಷಟ್ಪದಿಯಲ್ಲಿ ರಚಿಸಿರುತ್ತಾನೆ. ಇದು ಎರಡು ಸಂಪುಟಗಳ ಬೃಹತ್ಕಾವ್ಯ.

ವಾಲ್ಮೀಕಿ ರಾಮಾಯಣದ ಕಥೆಯನ್ನು ಅಂದಗೆಡದಂತೆ ಮೊತ್ತ ಮೊದಲಬಾರಿಗೆ ಕನ್ನಡಕ್ಕೆ ಕೊಟ್ಟ ಕೀರ್ತಿ ತೊರವೆಯ ನರಹರಿಗೆ ಅರ್ಥಾತ್ ಕುಮಾರವಾಲ್ಮೀಕಿಗೆ ಸೇರಿದ್ದು. ನಿರೂಪಣೆ ಮತ್ತು ದೃಷ್ಟಿಗಳಲ್ಲಿ ನಾರಣಪ್ಪನ ಸಂಪ್ರದಾಯಕ್ಕೆ ಸೇರಿದವನು ನರಹರಿ. ರಾಮಾವತಾರದ ಮಹತ್ವವನ್ನು ಸಾರಿ ರಾಮಭಕ್ತಿಯ ತರಂಗಿಣಿಯಲ್ಲಿ ಆಸ್ತಿಕರನ್ನು ಮೀಯಿಸುವುದೇ ಅವನ ಪರಮ ಗುರಿ. ನಾರಣಪ್ಪನ ಭಾಷಾ ಸಾಮರ್ಥ್ಯವಾಗಲೀ ರೂಪಕ ವೈಭವವಾಗಲೀ ಕಲ್ಪನೋಜ್ವಲತೆಯಾಗಲೀ ಅವನಿಗಿಲ್ಲ. ಜನಮನಸ್ಸಿಗೆ ತಾಕುವಂತೆ ಸರಳವಾಗಿ ನಿರರ್ಗಳವಾಗಿ ಕಥೆ ಹೇಳುವುದೇ ಅವನ ಉದ್ದೇಶ. ರಾಮವ್ಯಕ್ತಿತ್ವಕ್ಕೆ ತನ್ನನ್ನು ಅರ್ಪಿಸಿಕೊಂಡದ್ದರಿಂದ ಕಾವ್ಯದಲ್ಲಿ ತಲೆ ದೋರುವ ರಾಮಚಾರಿತ್ರ್ಯದ ಕೆಲವು ವಿರೋಧಾಭಾಸಗಳ ಬಗ್ಗೆ ಆತ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ದೇವರಾದುದರಿಂದ ಆತನ ಕಾರ್ಯಗಳೆಲ್ಲ ದೋಷರಹಿತವೆಂದೇ ಅವನ ಭಾವನೆ. ಆದ್ದರಿಂದ ಬುದ್ದಿಜನ್ಯವಾದ ಜಿಜ್ಞಾಸೆಗಳಿಗೆ ಇಲ್ಲಿ ಎಡೆಯೇ ಇಲ್ಲ. ಮೂಲಕಥೆಯನ್ನು ಅಗತ್ಯವಾದೆಡೆ ಹಿಗ್ಗಿಸಿ, ಅನಗತ್ಯವಾದೆಡೆ ಸಂಕ್ಷಿಪ್ತಗೊಳಿಸುವುದು ಶ್ರೇಷ್ಠ ಕವಿಯ ಸಲ್ಲಕ್ಷಣಗಳಲ್ಲಿ ಒಂದು. ಆದರೆ ಕುಮಾರವಾಲ್ಮೀಕಿ ವಾಲ್ಮೀಕಿಯ ಕಥಾಸಂವಿಧಾನವನ್ನು ಅತ್ಯಂತ ಅಗತ್ಯವೂ ರೋಚಕವೂ ಆದ ಎಡೆಗಳಲ್ಲೇ ಕುಗ್ಗಿಸಿ, ಅನಗತ್ಯವೂ ಅನಾಕರ್ಷಕವೂ ಆದೆಡೆಗಳಲ್ಲೆ ಹಿಗ್ಗಿಸಿ ಕಾವ್ಯಕ್ಕೆ ಬೊಜ್ಜು ಹೆಚ್ಚಿಸಿದ್ದಾನೆ. ವಾಲ್ಮೀಕಿಯಲ್ಲಿ ಬಾಲಕಾಂಡ ಅತ್ಯಂತ ಚಿಕ್ಕದು. ಆದರೆ ನರಹರಿ ಅದನ್ನು ಸುಮಾರು ಎರಡರಷ್ಟು ಗಾತ್ರಕ್ಕೆ ಉಬ್ಬಿಸಿ ನೀರಸಗೊಳಿಸಿದ್ದಾನೆ. ಹಾಗೆಯೇ ಅತ್ಯಂತ ಪ್ರಭಾವಕಾರಿಯೂ ಮಾನವೀಯತೆಯ ಅಂತ ರಾಳದ ಪ್ರಬಲ ಅನಿಕೆಗಳ ಕ್ರಿಯೆಗಳ ಜ್ವಲಂತ ಸಮರ್ಥ ಚಿತ್ರಣವಿರುವ ಅಯೋಧ್ಯಾ ಕಾಂಡವನ್ನು ಅನುಚಿತವಾಗಿ ಹ್ರಸ್ವಗೊಳಿಸಿಬಿಟ್ಟಿದ್ದಾನೆ. ಯುದ್ಧಕಾಂಡವಂತೂ ಸಹನಾತೀತ ವಾಗಿ ಅಕ್ಷಮ್ಯವಾಗಿ ಲಂಬಿತವಾಗಿದೆ, ನಿಸ್ಸಾರವಾಗಿದೆ. ಸಂವಾದಗಳ ಮೂಲಕ ವಾಲ್ಮೀಕಿಯ ಪಾತ್ರಗಳಲ್ಲಿ ವ್ಯಕ್ತಗೊಳ್ಳುವ ಜೀವನ ಸಂಘರ್ಷ ಇಲ್ಲಿ ತೀರಾ ಸಪ್ಪೆಯಾಗಿದೆ. ಇಡೀ ಕೃತಿ ರಾಮಮಹಿಮಾಮಯವಾಗಿದ್ದು, ಸರಳ ನಿರೂಪಣೆಯಿಂದಾಗಿ ಸಾಮಾನ್ಯ ಜನಪ್ರಿಯತೆಯನ್ನು ಪಡೆಯಿತೆಂಬುದನ್ನು ಬಿಟ್ಟರೆ, ಇದರ ಕೊರತೆಗಳ ಪಟ್ಟಿಯನ್ನು ಹೀಗೇ ಬೆಳೆಸುತ್ತ ಹೋಗ ಬಹುದು.


ತೊರವೆ ರಾಮಾಯಣದ ಗದ್ಯಾನುವಾದವನ್ನು ಕೆ.ಎಸ್.ಕೃಷ್ಣಮೂರ್ತಿಯವರು ಮಾಡಿದ್ದಾರೆ

********ವಿಮರ್ಶೆ ಕೃಪೆ: ಕಣಜ*********


@ 

೧೬.ಚತುರ್ಮುಖ ಬೊಮ್ಮರಸ


ಚತುರ್ಮುಖ ಬೊಮ್ಮರಸ 
ಈತನ ಕಾಲ: ಕ್ರಿ.ಶ.ಸು. ೧೫೦೦
ಈತ ವೀರಶೈವ ಕವಿ
ಈತನ ಕೃತಿ: ‘ರೇವಣಸಿದ್ಧೇಶ್ವರ ಪುರಾಣ’.  ಇದು ವಾರ್ಧಕಷಟ್ಪದಿಯಲ್ಲಿ ರಚಿತವಾಗಿದೆ.
ಇವನು ಕನ್ನಡವು ಸಂಸ್ಕತ ಭಾಷೆಯೊಂದಿಗೆ ಮೇಳೈಸಿ ಕೆಂಪುರತ್ನದಂತೆ, ಪಚ್ಛ ಕರ್ಪೂರದಂತೆ, ಶ್ರೀ ಗಂಧದ ಕಂಪನ್ನೊಳಗೊಂಡ ಕನ್ನಡ ಕಾವ್ಯವನ್ನು ಅತಿ ಬೆಡಗಿನಿಂದ ಹೇಳುತ್ತಾನೆ.

***********

27 ಅಕ್ಟೋಬರ್ 2015

೧೫.ತೆರಕಣಾಂಬಿ ಬೊಮ್ಮರಸ

ತೆರಕಣಾಂಬಿ ಬೊಮ್ಮರಸ
ಈತನ ಕಾಲ: ಕ್ರಿ.ಶ.ಸು.೧೪೮೫. ಈತ ಜೈನ ಕವಿ.
ಈತನ ಕೃತಿಗಳು: ಸನತ್ಕುಮಾರ ಚರಿತೆ ಮತ್ತು ಜೀವಂಧರ ಸಾಂಗತ್ಯ

ಸನತ್ಕುಮಾರ ಚರಿತೆಯು ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದ್ದು ವಡ್ಡಾರಾಧನೆಯಲ್ಲಿ ಬರುವ ಸನತ್ಕುಮಾರ ಎಂಬ ಚಕ್ರವರ್ತಿಯ ನೋಂಪಿಯ ಕಥೆಯಾಗಿದೆ. 
ಜೀವಂಧರ ಸಾಂಗತ್ಯ ವು ಸಾಂಗತ್ಯ ಛಂದಸ್ಸಿನಲ್ಲಿ ರಚಿತವಾಗಿದೆ. ಇದು ಭಾಸ್ಕರ ಕವಿ ಭಾಮಿನೀಷಟ್ಪದಿಯಲ್ಲಿ ರಚಿಸಿರುವ ಜೀವಂಧರ ಚರಿತೆ ಕೃತಿಯ ಆಧಾರದಿಂದ ರಚಿತವಾಗಿದೆ. ಇದು ಜೀವಂಧರ ಎಂಬ ರಾಜನ ಕಥೆ.
*************************

ಜೀವಂಧರನ ಕಥೆಯನ್ನೊಳಗೊಂಡ, ಈ ವರೆಗೆ ದೊರೆತ ಗ್ರಂಥಗಳು ಕೆಳಗಿ ನಂತಿವೆ:
(೧) ಜೀವಂಧರನ ಚರಿತೆ : ಮೇಲೆ ಉಲ್ಲೇಖಿತವಾದ ಗುಣಭಧ್ರಾಚಾರ್ಯರ ಉತ್ತರ ಪುರಾಣದಲ್ಲಿ ಬಂದಿರುವ ಕಥೆ. ಇದು ಸಂಸ್ಕೃತದಲ್ಲಿದೆ.
(೨) ಜೀವಂಧರ ಚರಿತೆ : ಕ್ರಿ. ಶ. ೯೬೫ ರಲ್ಲಿ ಪುಷ್ಪದಂತನಿಂದ ಅಪಭ್ರಂಶದಲ್ಲಿ ರಚಿತವಾದ ಮಹಾಪುರಾಣದಲ್ಲಿ ಬಂದಿರುವ ಜೀವಂಧರನ ಚರಿತ್ರೆ.
(೩) ಗದ್ಯ ಚಿಂತಾಮಣಿ : ಇದು ಅಲಂಕಾರಯುಕ್ತ ಸಂಸ್ಕೃತದಲ್ಲಿ ಒಡೆಯದೇವ ವಾದೀಭಸಿಂಹನಿಂದ ರಚಿತವಾದ ಗದ್ಯಗ್ರಂಥ (೧೧ನೆಯ ಶತಮಾನ).
(೪) ಕ್ಷತ್ರ ಚೂಡಾಮಣಿ : ಇದೂ ಸಹ ವಾದೀಭಸಿಂಹನಿಂದ ಸಂಸ್ಕೃತದಲ್ಲಿ ಅನುಷ್ಟುಬ್ ಪದ್ಯಗಳಲ್ಲಿ ರಚಿತವಾದ ಗ್ರಂಥ. (೧೧ನೆಯ ಶತಮಾನ).
(೫) ಜೀವಂಧರ ಚಂಪೂ : ಇದು ಚಂಪೂರೂಪದಲ್ಲಿ ಬರೆದ ಸಂಸ್ಕೃತ ಗ್ರಂಥ, ಇದನ್ನು ಹರಿಚಂದ್ರ ಎಂಬ ಮಹಾಕವಿ ರಚಿಸಿದ್ದಾನೆ. (೧೧ನೆಯ ಶತಮಾನ).
(೬) ಜೀವಂಧರ ಚರಿತ್ರ : ಶುಭಚಂದ್ರ ಎಂಬ ಕವಿಯಿಂದ ಸಂಸ್ಕೃತದಲ್ಲಿ ರಚಿತವಾದ ಗ್ರಂಥ.
(೭) ಜೀವಕ ಚಿಂತಾಮಣಿ : ತಮಿಳು ಸಾಹಿತ್ಯದ ಐದು ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿತವಾದ ಈ ಗ್ರಂಥವು ತಮಿಳು ಭಾಷೆಯಲ್ಲಿ ತಿರುತಕ್ಕ ದೇವರ್ ಎಂಬವನಿಂದ ರಚಿತವಾದ ಗ್ರಂಥ. ಇದಕ್ಕೆ ನಚ್ಚಿನಾರ್ ಕಿನಿಯಾರ್ ಎಂಬವನಿಂದ ಉತ್ತಮ ಟೀಕೆಯೂ ಇದೆ. (೧೦ – ೧೧ನೆಯ ಶತಮಾನ)
(೮) ಜೀವಂಧರ ಚರಿತೆ : ಬಹುಶಃ ಅಪಭ್ರಂಶದಲ್ಲಿರುವ ಜೀವಂಧರ ಕಥೆಯನ್ನೊಳಗೊಂಡಿರುವ ಗ್ರಂಥ. ಇದನ್ನು ರಯಿಧು ಎಂಬ ಕವಿ ಕ್ರಿ.ಶ. ೧೪೩೯ ರ ಸುಮಾರಿಗೆ ಬರೆದಿದ್ದಾನೆ.
(೯) ಜೀವಂಧರ ಚರಿತೆ : ಭಾಸ್ಕರ ಕವಿಯಿಂದ ಕನ್ನಡದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಪ್ರಸ್ತುತ ಗ್ರಂಥ.
(೧೦) ಜೀವಂಧರ ಸಾಂಗತ್ಯ : ಕನ್ನಡದಲ್ಲಿ ಕವಿ ತೆರಕಣಾಂಬಿ ಬೊಮ್ಮರಸನಿಂದ ಸಾಂಗತ್ಯದಲ್ಲಿ ರಚಿತವಾದ ಗ್ರಂಥ. (ಸು. ಕ್ರಿ. ಶ. ೧೪೮೫, ಭಾಸ್ಕರ ಕವಿಯಿಂದ ಈ ಕವಿ ಪ್ರಭಾವಿತನಾಗಿರಬಹುದೆಂದು ಅನ್ನಿಸುತ್ತದೆ. ಆದರೂ ಆತನಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿವೆ.)
(೧೧) ಜೀವಂಧರ ಷಟ್ಪದಿ : ಕೋಟೇಶ್ವರನೆಂಬ ಕವಿಯಿಂದ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಕನ್ನಡ ಗ್ರಂಥ. ಇದು ಅಪೂರ್ಣವಿದೆ. (ಸು. ಕ್ರಿ.ಶ. ೧೫೦೦).
(೧೨) ಜೀವಂಧರ ಚರಿತೆ : ಬ್ರಹ್ಮಕವಿ ಎಂಬವನಿಂದ ಸಾಂಗತ್ಯದಲ್ಲಿ ರಚಿತವಾದ ಕನ್ನಡ ಗ್ರಂಥ. ಇದರ ವಿವರ ತಿಳಿಯುವದಿಲ್ಲ.
(೧೩) ಜೀವಂಧರ ರಾಸ : ಬ್ರಹ್ಮಜಿನದಾಸ ಎಂಬ ಕವಿಯಿಂದ ಗುಜರಾತಿಯಲ್ಲಿ ರಚಿತವಾದ ಗ್ರಂಥ (೧೫ನೆಯ ಶತಮಾನ)
(೧೪) ಜೀವಂಧರ ಪುರಾಣ : ಜಿನಸಾಗರ ಎಂಬವರಿಂದ ಮರಾಠಿಯಲ್ಲಿ ರಚಿತವಾದ ಗ್ರಂಥ. (ಗುಜರಾತಿ ಗ್ರಂಥದ ಆಧಾರದ ಮೇಲೆ ರಚಿತವಾದ ಈ ಗ್ರಂಥ ೧೮ನೇ ಶತಮಾನದ್ದು.)
(೧೫) ‘ಜೀವಂಧರ ನಾಟಕ’ ಎನ್ನುವ ಗ್ರಂಥವೂ ಇದೆಯೆಂದು ಪ್ರತೀತಿ. ಆದರೆ ಗ್ರಂಥ ಸಿಕ್ಕಿಲ್ಲ.[2]
(೧೬) ಜೀವಂಧರ ಚರಿತೆ : ಕೂಡಲಗಿರಿಯಾಚಾರ್ಯ ಎಂಬ ಕವಿಯಿಂದ ಕನ್ನಡದಲ್ಲಿ ರಚಿತವಾದ ಗ್ರಂಥ. (೧೯ನೆಯ ಶತಮಾನ).[3]
ಮೇಲಿನ ಗ್ರಂಥಗಳಲ್ಲಿ ಕನ್ನಡ ಗ್ರಂಥಗಳೇ ಐದು ಇವೆಯೆಂಬುದನ್ನು ಲಕ್ಷಿಸಿದರೆ, ಕನ್ನಡ ನಾಡಿನಲ್ಲಿ ಜೀವಂಧರನ ಚರಿತ್ರೆಯು ಎಷ್ಟು ಜನಪ್ರಿಯವಾಗಿರಬೇಕೆಂಬುದರ ಕಲ್ಪನೆ ಬರುವಂತಿದೆ. ಇಂತಹ ಒಂದು ಪುಣ್ಯ ಚರಿತ್ರೆಯನ್ನು ಕನ್ನಡ ಜನತೆಗೆ ಮೊಟ್ಟ ಮೊದಲಿಗೆ ಒದಗಿಸಿದ ಶ್ರೇಯಸ್ಸು ಕವಿ ಭಾಸ್ಕರನಿಗೆ ಸಲ್ಲುತ್ತದೆ.

*****ಕೃತಿಗಳ ಮಾಹಿತಿ ಕೃಪೆ: ಕಣಜ******

೧೪.ಸ್ವತಂತ್ರ ಸಿದ್ಧಲಿಂಗೇಶ್ವರ

ಸ್ವತಂತ್ರ ಸಿದ್ಧಲಿಂಗೇಶ್ವರ
ಅಂಕಿತ: ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ
ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ ವಚನಕಾರ. 

ಕಾಲ:  ೧೬ನೇಯ ಶತಮಾತದ ಉತ್ತರಾರ್ಧ. 
ಸ್ಥಳ: ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಕಾಪನಹಳ್ಳಿ. 
ಅಚರ ಸಮೀಪದ 'ಗಜರಾಜಗಿರಿ' ಈತನ ಶಿವಯೋಗ ಸಾಧನೆಯ ಸ್ಥಾನ. ಅಲ್ಲಿಯೇ ಐಕ್ಯ. 
ಸದ್ಯ ಈತನ ೪೩೦ ವಚನಗಳು ದೊರೆತಿವೆ. 'ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರ' ಎಂಬುದು ಅಂಕಿತ. 
ಜಂಗಮರಗಳೆ, ಮುಕ್ತ್ಯಾಂಗನಾ ಕಂಠಮಾಲೆ ಎಂಬ ಕೃತಿಗಳನ್ನು ರಚಿಸಿದ್ದಾನೆ. 
ಆರು ಸ್ಥಲಗಳಲ್ಲಿ ಹಂಚಿಕೊಂಡಿರುವ ಈತನ ವಚನಗಳಲ್ಲಿ ಷಟ್-ಸ್ಥಲ ತತ್ವ ನಿರೂಪಣೆ ಮುಖ್ಯ ವಸ್ತುವಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಸಕ್ರಮವಾಗಿ ತತ್ವ ಪ್ರತಿಪಾದನೆ ಮಾಡಿದ್ದಾನೆ.

ಹಾವಾಡಿಗ ಹಾವನಾಡಿಸುವಲ್ಲಿ, ತನ್ನ ಕಾಯ್ದುಕೊಂಡು,
ಹಾವನಾಡಿಸುವಂತೆ,
ಆವ ಮಾತನಾಡಿದಡೂ, ತನ್ನ ಕಾಯ್ದು ಆಡಬೇಕು.
ಅದೆಂತೆಂದಡೆ,
ತನ್ನ ವಚನವೆ ತನಗೆ ಹಗೆಯಹುದಾಗಿ.
ಅನ್ನಿಗರಿಂದ ಬಂದಿತ್ತೆನ್ನಬೇಡ.
ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಹಗೆಯು ಕೆಳೆಯು ತನ್ನ ವಚನವೇ, ಬೇರಿಲ್ಲ. ||


 ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ.
ದೇವರುದೇವರೆಂದರೇನು? ಒಮ್ಮರ ದೇವರೇ?
ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ,
ಉಳಿದವರೆಲ್ಲ ದೇವರೆ?
ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ.
ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ.
ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ
ನಿಂದೆಗೊಳಗಾದ.
ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ.
ಸೂರ್ಯ ದೇವರೆಂಬಿರೇ? ಸೂರ್ಯ ಕುಷ್ಠರೋಗದಿಂದ ಭ್ರಷ್ಟಾದ.
ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ.
'ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ'
ಎಂದುದಾಗಿ,
ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ
ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.||


ಮಹಾದೇವಿಯಕ್ಕ ಬಸವಣ್ಣ ಮೊದಲಾದ ವಚನಕಾರರಿಂದ ಪ್ರಭಾವಿತನಾಗಿದ್ದಾನೆ. ಬಸವಣ್ಣ, ಮಡಿವಾಳ ಮಾಚಿದೇವ, ಚನ್ನ ಬಸವಣ್ಣ, ಪ್ರಭುದೇವ, ಅಜಗಣ್ಣ ಇವರೆಲ್ಲ ತನಗೆ ಷಡುಸ್ಥಲವನ್ನಿತ್ತರೆಂದು ಹೇಳಿರುವನು. ನಿರೂಪಣೆಗೆ ಒಳ್ಳೆಯ ದೃಷ್ಟಾಂತಗಳನ್ನು ಬಳಸಿಕೊಳ್ಳುವುದರಿಂದ ವಚನಗಳು ಕಾವ್ಯಕಮನೀಯತೆಯಿಂದ ಕಂಗೊಳಿಸುತ್ತವೆ.

**********ಕೃಪೆ:lingayatreligion.com************

20 ಅಕ್ಟೋಬರ್ 2015

೧೩.ಗುಬ್ಬಿಯ ಮಲ್ಲಣ್ಣ

ಗುಬ್ಬಿಯ ಮಲ್ಲಣ್ಣ (ಮಲ್ಲಣಾರ್ಯ ಅಲ್ಲ)
ಕಾಲ: ಕ್ರಿ.ಶ.ಸು.೧೪೭೫
ಕೃತಿಗಳು: ಗಣಭಾಷ್ಯ ರತ್ನಮಾಲೆ, ವಾತುಲ ತಂತ್ರ ಟೀಕೆ
ಈತ ಲಕ್ಕಣ್ಣ ದಂಡೇಶನ ಹಿರಿಯ ಸಮಕಾಲೀನ.

ಗುಬ್ಬಿಯ ಮಲ್ಲಣ್ಣನು ‘ಗಣಭಾಷಿತ ರತ್ನಮಾಲೆ’ ಯನ್ನು ಸಂಕಲಿಸಿ ಅದರಲ್ಲಿ ನೂರೊಂದು ಸ್ಥಲಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದರೂ ಅವನ ಸ್ಥಲವ್ಯವಸ್ಥೆ ಮುಂದಿನವರಿಗೆ ಒಪ್ಪಿಗೆಯಾದಂತೆ ಕಾಣದು. ಎಂತಲೆ ಹುಲಿಗೆರೆಯ ಮಹಲಿಂಗದೇವ ಮತ್ತು ಅವನ ಪರಂಪರೆಯವರು ಬೇರೊಂದು ರೀತಿಯ ನೂರೊಂದು ಸ್ಥಲಗಳ ವ್ಯವಸ್ಥೆ ಮಾಡಿ ಅವಕ್ಕೆ ಸೈದ್ಧಾಂತಿಕ ಮನ್ನಣೆಗಳಿಸುವಲ್ಲಿ ಯಶಸ್ವಿಯಾದರು. ವಿಜಯನಗರದವರು ಹೆಚ್ಚಾಗಿ ಕಾವ್ಯಗಳನ್ನು ರಚಿಸುವುದರತ್ತ ಗಮನ ಹರಿಸಿದರು. 

೧೬ನೇ ಶತಮಾನಕ್ಕೆ ಹಿಂದೆ ಗುಬ್ಬಿಯನ್ನು ಅಮರಗೊಂಡ ಎಂದು ಕರೆಯುತ್ತಿದ್ದರು. ಕವಿ ಮಲ್ಲಣಾರ್ಯ ಇಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಒಮ್ಮೆ ಪುರಾಣವನ್ನು ಹೇಳುತ್ತಿದ್ದ ಕಾಲದಲ್ಲಿ, ಎರಡು ಗುಬ್ಬಿ ಹಕ್ಕಿಗಳು ಅಲ್ಲಿಗೆ ಬಂದು ಪುರಾಣವನ್ನು ಕೇಳಿ ಮಂಗಳಕಾರ್ಯದ ನಂತರ, ಅಲ್ಲಿಯೇ ಬಿದ್ದು ಮರಣಹೊಂದಿದವು. ತನ್ನ ಯೋಗದೃಷ್ಟಿಯಿಂದ ಗುಬ್ಬಿಹಕ್ಕಿಗಳ ಪೂರ್ವಜನ್ಮವೃತ್ತಾಂತವನ್ನು ತಿಳಿದು, ಕವಿಯು ಅಲ್ಲಿಯೇ ಸಮಾಧಿ ಮಾಡಿದ. ಈ ಪವಾಡದ ಕಾರಣದಿಂದ ಅಮರಗೊಂಡ ಎಂಬ ಊರು ಮುಂದೆ ಗುಬ್ಬಿ ಎಂದು ಹೆಸರಾಯಿತೆಂದು ತಿಳಿದುಬಂದಿದೆ.

***************

@

೧೨.ತೋಂಟದ ಸಿದ್ಧಲಿಂಗಯತಿ

 ತೋಂಟದ ಸಿದ್ಧಲಿಂಗಯತಿ
ಇವರ ಕಾಲ: ಸು.ಕ್ರಿ.ಶ.೧೪೭೦
ಆಸ್ಥಾನ: ವಿಜಯನಗರದ ರಾಜನಾದ ವಿರೂಪಾಕ್ಷ (೧೪೬೭ – ೧೪೭೮)
ಕೃತಿ: ಷಟ್ಸ್ಥಲ ಜ್ಞಾನಾಮೃತ ಸಾರ

        ಸಿದ್ಧಲಿಂಗ ಯತಿಗಳು ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿನ ಸಮೀಪದ ಹರದನ ಹಳ್ಳಿಯಲ್ಲಿ ಜನಿಸಿದರು. ಇವರು ಗೋಸಲ ಚೆನ್ನಬಸವಸ್ವಾಮಿಗಳ ಶಿಷ್ಯರಾಗಿದ್ದರು.  ಕಗ್ಗೆರೆಯ ಸಮೀಪದಲ್ಲಿರುವ ನಾಗಿಣೀ ನದಿಯ ತೀರದಲ್ಲಿ ತೋಂಟದೊಳಗೆ ಬಹಳ ಕಾಲ ಶಿವಯೋಗದಲ್ಲಿ ಇದ್ದುದರಿಂದ ಇವರಿಗೆ ‘ತೋಂಟದ’ ಎಂಬ ವಿಶೇಷಣವು ರೂಢಿಯಾಗಿ ಬಂದಿದೆ. ಇವರು ಕುಣಿಗಳಿಗೆ ಸಮೀಪದಲ್ಲಿರುವ ಎಡೆಯೂರಲ್ಲಿ ಸಮಾಧಿಯನ್ನು ಹೊಂದಿದರು. ಈ ಊರಿನಲ್ಲಿ ಇವರ ಜ್ಞಾಪಕಾರ್ಥವಾಗಿ ಕಟ್ಟಿಸಿದ ಸಿದ್ಧಲಿಂಗೇಶ್ವರವೆಂಬ ಒಂದು ದೇವಸ್ಥಾನವು ಈಗಲೂ ಇದೆ. ಇವರು ವೀರಶೈವರಲ್ಲಿ ಪ್ರಸಿದ್ಧವಾದ ಗುರು. ಇವರ ಚರಿತ್ರೆಯನ್ನು ಕುರಿತು ಹಲವು ಗ್ರಂಥಗಳು ಹುಟ್ಟಿವೆ. ಇವುಗಳಲ್ಲಿ ಇವರು ನಿರಂಜನ ಗಣೇಶ್ವರನ ಅಪರಾವತಾರವೆಂದು ಹೇಳಿದೆ. ಮೇಲೆ ಹೇಳಿದ ಸಿದ್ಧಲಿಂಗೇಶ್ವರ ದೇವಸ್ಥಾನದ ಪ್ರಕಾರದಲ್ಲಿ ಸುಮಾರು ೧೫೦೦ರಲ್ಲಿ ಬರೆದ ಒಂದು ಶಿಲಾಶಾಸನವಿದೆ.” ಎಂದು ಕವಿ ಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಸಿದ್ಧಲಿಂಗಯತಿಯು “ವಿಜಯನಗರದ ರಾಜನಾದ ವಿರೂಪಾಕ್ಷನ (೧೪೬೭ – ೧೪೭೮)ಕಾಲದಲ್ಲಿದ್ದಂತೆ ವಿರೂಪಾಕ್ಷ ಪಂಡಿತನ ೧೫೮೪ ಚನ್ನಬಸವ ಪುರಾಣದಿಂದ ಊಹಿಸಬಹುದಾಗಿದೆ. ಇವರ ಕಾಲವು ಸುಮಾರು ೧೪೭೦ ಆಗಬಹುದು”
         ಇವರು “ಷಟಸ್ಥಲ ಬ್ರಹ್ಮಿ”ಗಳೆಂದು ಹೆಸರುವಾಸಿಯಾಗಿದ್ದಾರೆ. ಇವರು ೭೦೧ ವಚನಗಳನ್ನು ಷಟ್ಸ್ಥಲ ವಿಭಾಗ ಕ್ರಮದಲ್ಲಿ ರಚಿಸಿದ್ದಾರೆ. ಇವರ ವಚನಗಳು ಸತ್ವಯುತವಾಗಿವೆ. ಅಲ್ಲದೆ ಬೆಡಗಿನ ವಚನಗಳನ್ನೂ ರಚಿಸಿದ್ದಾರೆ. ಇವರ ಶಿಷ್ಯರಾದ ಘನಲಿಂಗಿದೇವರು ಇವರನ್ನು “ತೋಂಟದ ಅಲ್ಲಮ” ಎಂದು ಕರೆದಿದ್ದಾರೆ.
         “ತೋಂಟದ ಅಲ್ಲಮರು” ಎಂಬುದಕ್ಕೆ ಕಾರಣವಿದೆ. ೧೨ ನೇ ಶತಮಾನದಲ್ಲಿ ಹುಟ್ಟಿದ್ದ ಅನುಭವ ಮಂಟಪ ಅಲ್ಲಮರು ಹೊರಟುಹೋದನಂತರ ಅನುಭವ ಮಂಟಪ ಶೂನ್ಯವಾಯಿತು. ಯಾರೂ ಆ ಸ್ಥಾನವನ್ನು ತುಂಬಲಿಲ್ಲ. (ಇದರ ವಿವರವನ್ನು ತಿಳಿಯಬಯಸುವವರು ಡಾ. ಎಮ್. ಎಮ್. ಕಲಬುರ್ಗಿಯವರ “ಮಾರ್ಗ” ಭಾಗ ೪ ರ “ಅನುಭವ ಮಂಟಪದ ಹುಟ್ಟು ಮರುಹುಟ್ಟು” ಎಂಬ ಲೇಖನವನ್ನು ಓದಬಹುದು.
ಅವರು ಹೇಳುತ್ತಾರೆ:
       “.....ಅನುಭವ ಮಂಟಪದ ಪರಿಕಲ್ಪನೆ ಹದಿನೈದನೆ ಶತಮಾನದವರೆಗೂ ಪುನಃ ಆಕಾರ ಪಡೆಯಲೆ ಇಲ್ಲ. ಇಂತಹ ಸಂದರ್ಭದಲ್ಲಿ ಹದಿನಾರನೆಯ ಶತಮಾನದ ಮಧ್ಯದಲ್ಲಿ ತೋಂಟದ ಸಿದ್ಧಲಿಂಗ ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ಪೀಠವೇರಿದ. ಇವನನ್ನು “ತೋಂಟದ ಅಲ್ಲಮ” “ದ್ವಿತಿಯ ಅಲ್ಲಮ”ನೆಂದು ತರುವಾಯದವರು ಕರೆದದ್ದು. ಅಲ್ಲಮನ ಬಳಿಕ ದ್ವಿತಿಯ ವ್ಯಕ್ತಿಯಾಗಿ ಪೀಠವೇರಿದನೆಂಬುದಕ್ಕೆ ಆಧಾರವಾಗಿ ನಿಲ್ಲುತ್ತದೆ.
        “ಸಿದ್ಧಲಿಂಗ ಸಾಂಗತ್ಯ” ಬರೆದ ಹೇರಂಬಕವಿಯು ಇವನು ಹರದನ ಹಳ್ಳಿಯ ಹರದನ ಮಗನೆಂದುಹೇಳಿದ್ದಾನೆ. ಇತ್ತೀಚೆಗೆ ಲಭ್ಯವಾದ ಷಟ್ಸ್ಥಲ ಶಿವಾಯಣ ಕೃತಿಯಲ್ಲಿ ಈತನ ತಂದೆ ತಾಯಿಗಳು ಮಲ್ಲಿಕಾರ್ಜುನ ಶೆಟ್ಟಿ, ಜ್ಞಾನಾಂಬೆ ಎಂದು ಹೇಳಲಾಗಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವೈಶ್ಯ, ಶೂದ್ರರು ಶ್ರಮಿಕ ವರ್ಗ, ಬ್ರಾಹ್ಮಣ ಕ್ಷತ್ರಿಯರು ಪೋಷಕ ವರ್ಗ. ಬಸವಣ್ಣ ಈ ಶ್ರಮಿಕ ವರ್ಗವನ್ನು ಬೆಂಬಲವಾಗಿಟ್ಟುಕೊಂಡು ಆ ಪೋಷಕ ವರ್ಗದ ವಿರುದ್ಧ ಹೋರಾಡಿದ. ಹೀಗಾಗಿ ಆ ಕಾಲದಿಂದಲೂ ಬಸವ ಸಿದ್ಧಾಂತದ ಅಂದರೆ ಅನುಭವ ಮಂಟಪ ಸಂಸ್ಕೃತಿಯ ನಿಷ್ಠಾವಂತ ಅನುಯಾಯಿಗಳಾಗಿದ್ದ ವರ್ತಕ ಸಮಾಜದ ತೋಂಟದಾರ್ಯರ ಆ ಸಂಸ್ಕೃತಿಯನ್ನು ಮರುಸ್ಥಾಪಿಸಲು ಮುಂದೆ ಬಂದರೆಂಬುವುದು ಶರಣರ ಪರಂಪರೆಯ ದ್ವಿತಿಯ ಘಟಕದ ನಾಯಕ ವ್ಯಕ್ತಿಗಳಾದರೆಂಬುವುದು ಅವಶ್ಯ ಗಮನಿಸಬೇಕಾದ ಸಂಗತಿಯಾಗಿದೆ. ಹೀಗೆ ನಾಯಕ ವ್ಯಕ್ತಿಯಾಗಿ ಈತನು ಅನುಭವ ಮಂಟಪವನ್ನು ಮೂರು ಬಗೆಗಳಲ್ಲಿ ಪುನರುಜ್ಜೀವನಗೊಳಿಸಿದನು.

     ೧. ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಗೋಷ್ಠಿ ಗೊಗ್ಗಯ್ಯನ ಹೊಲದಲ್ಲಿ, ಮುಕ್ತಾಯಕನ ಮನೆಯಲ್ಲಿ, ಸೊಲ್ಲಾಪುರದ ಕೆರೆಯ ತೀರದಲ್ಲಿ, ಜರುಗಿದ ಸಾಧ್ಯತೆ ಇದ್ದರೂ ಅದರ ಬಹು ಪಾಲು ಕೇದ್ರೀಕೃತಗೊಂಡದ್ದು ಕಲ್ಯಾಣಮಂಟಪದಲ್ಲಿ. ಬಹುಶಃ ಕಲ್ಯಾಣದ ಬೀದಿಯಲ್ಲಿ, ನುಲಿಯ್ಯ ಚಂದಯ್ಯನ ಹುಲ್ಲುಗೊಯ್ಯುವ ಹೊಲದಲ್ಲಿ, ಮಡಿವಾಳ ಮಾಚಿದೇವ ಬಟ್ಟೆ
    ತೊಳೆಯುವ ಕೆರೆಯ ತೀರದಲ್ಲಿ ಆಯ್ದಕ್ಕಿ ಮಾರಯ್ಯನ ಮನೆಯಲ್ಲಿ ಹೀಗೆ ಕಲ್ಯಾಣದ ಪರಿಸರದಲ್ಲಿ ಗೋಷ್ಠಿಗಳು ನದೆದಿದ್ದಿರಬಹುದಾದರೂ ಬಸವಣ್ಣನ ಮಹಾಮನೆಯಲ್ಲಿ ಜರುಗಿದುದೇ ಹೆಚ್ಚು. ಹೀಗೆ ಕಲ್ಯಾಣಕ್ಕೆ ಸೀಮಿತವಾಗಿದ್ದ ಅನುಭವ ಮಂಟಪವನ್ನು ತೋಂಟದಾರ್ಯರು ತಾವು ಚರಿಸಿದ ಬೇರೆ ಬೆರೆ ಗ್ರಾಮ ಪಟ್ಟಣಗಳಿಗೂ ಚರಿಸುವಂತೆ ಮಾಡಿದರು. ಮಹಾಬಳೇಶ್ವರ, ಕಂಗೆರೆ, ಚಿತ್ರಕಾಯಪುರ, ಹೆಬ್ಬೂರು, ತುಮಕೂರು, ದೇವರಾಯ ಪಟ್ಟಣ, ಹೊಳಲುಗುಂದ, ಎಡೆಯೂರು...................... ಈ ಗ್ರಾಮಗಳಲ್ಲಿ ಅನುಭವ ಮಂಟಪದ ಸಂಕಥನ ಜರಗುವಂತೆ ಮಾಡಿದರು.

        ೨. ಹೀಗೆ ತಾವೊಬ್ಬರೆ ಅನುಭವ ಮಂಟಪದ ವ್ಯಕ್ತಿರೂಪವಾಗಿ, ಪರ್ಯಟನ ಪೂರೈಸದೆ ಏಳುನೂರು ಜನ ವಿರಕ್ತರನ್ನು ಸಿದ್ಧ ಪಡಿಸಿ ಇವರೆಲ್ಲ ಅನುಭವ ಮಂಟಪವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಿದರು. ಬಹುಶಃ ಹನ್ನೆರಡನೆ ಶತಮಾನದಲ್ಲಿ ಅಲ್ಲಮ ಪ್ರಭುಮಾತ್ರ ವಿರಕ್ತನಾಗಿದ್ದನು. ಈಗ ಅನುಭವ ಮಂಟಪ ಸಂದೇಶವನ್ನು ದಿಕ್ಕು ದಿಕ್ಕಿಗೂ ಮುಟ್ಟಿಸಲು ಏಳುನೂರು ಜನರ ವಿರಕ್ತ ಪಡೆಯನ್ನು ತೋಂಟದಾರ್ಯರು, ಪರಿಣಾಮಕಾರಿಯಾಗಿ ಬಳಸಿದರು. ಇವರಲ್ಲಿ , ಸಪ್ಪೇದೇವರು, ಬೋಳ ಬಸವರಾಜ ದೇವರು, ಉಪ್ಪಿನ ಹಳ್ಳಿ ಸ್ವಾಮಿಗಳು, ಗುಮ್ಮಳಾಪುರ ಸಿದ್ಧಲಿಂಗ, ಪಟ್ಟಣದ ದೇವರು, ಶೀಲವಂತ ದೇವರು, ಘನಲಿಂಗಿ, ಸುತ್ತೂರು ಸಿದ್ಧಮಲ್ಲೇಶ, ಬತ್ತಲೆಯ ದೇಶಿಕ, ಹುಚ್ಚ ಪರ್ವತೇಶ , ಕಂಕಣದ ದೇವರು, ರಾಚವೀಟಿಯ ದೇವರು, ಗುರು ಚಂದ್ರಶೇಖರ, ದೊಡ್ಡ ಸಿದ್ಧೇಶ, ಸಿದ್ಧಲಿಂಗೇಶ್ವರ, ಮಳೆಯ ದೇವ, ಕೊಡಗಿನಹಳ್ಳಿಯಾರ್ಯ............... ಇವರೆ ಮೊದಲಾದ ಏಳನೂರು ಜನರಿಂದಾಗಿ ಸಂಚಾರಿ ಅನುಭವ ಮಂಟಪ ಅರ್ಥ ಪಡೆಯಿತು.
      ಈ ಸಮಕಾಲೀನರನ್ನು ಬಿಟ್ಟರೂ ಇವರ ಶಿಷ್ಯ ಪ್ರಶಿಷ್ಯ ಪರಂಪರೆಯವರೂ ಅನುಭವ ಮಂಟಪ ಸಂಸ್ಕೃತಿಯನ್ನು ಇತಿಹಾಸದುದ್ದಕ್ಕೂ ಹಳ್ಳಿ ಹಳ್ಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಇವರಲ್ಲಿ ತೋಂಟದಾರ್ಯರ ಪರಂಪರೆಯವರಂತೂ ತಮ್ಮ ಕರ್ತವ್ಯವೆಂಬಂತೆ ಈ ಹೊಣೆಯನ್ನು ಶತಮಾನದಿಂದ ಶತಮಾನಕ್ಕೆ ಮುನ್ನಡೆಸಿದರು................ ಇವರಲ್ಲಿ ಕಟ್ಟಿಗೆಹಳ್ಳಿ ಸಿದ್ಧಲಿಂಗರು ಸಂಸಾರವನ್ನು ಬಿಟ್ಟು ಹರಪನಹಳ್ಳಿಯಲ್ಲಿ ನಿಂತು ಚೀಲಾಳಪ್ರಭುವನ್ನು ಉತ್ತರಾಧಿಕಾರಿ ಮಾಡಿಕೊಳ್ಳಲು ಅವರ ಶಿಷ್ಯರಲ್ಲಿ ಕೆಲವರು ಸಿಟ್ಟಿಗೆದ್ದು ಬೇರೆ ಸಮಯವ ಮಾಡಿಕೊಂಡರು, ಎಂಬ ವಿಷಯ ಈ ಕೃತಿಯಲ್ಲಿ ಬರುತ್ತದೆ. ಅದೇನೇ ಇದ್ದರೂ ಈ ಚೀಲಾಳಸ್ವಾಮಿ ಹರಪನ ಹಳ್ಳಿಯ ಗುಡ್ಡದ ಓರೆಯಲ್ಲಿ ಮಠ ಕಟ್ಟಿಸಿ ಅನುಭವ ಮಂಟಪ ಸ್ಥಾಪಿಸಿದ ವಿಷಯ ದಾಖಲಾಗಿದೆ............... ಇದರಿಂದಾಗಿ ತೋಂಟದಾರ್ಯರು ಮತ್ತೆ ಆರಂಭಿಸಿದ ಅನುಭವ ಮಂಟಪ ಸಂಚಾರವನ್ನು ಬಿಟ್ಟು ಸ್ಥಗಿತಗೊಂಡಿತು......... ಹದಿನಾರನೆಯ ಶತಮಾನದಲ್ಲಿ ಅನುಭವ ಮಂಟಪಕ್ಕೆ ಚಲನಶೀಲತೆ ನೀಡಿದುದು. ಅದು ವ್ಯಾಪಕವಾಗಿ ಹರಡಲು ಕಾರಣವಾದುದು ತೋಂಟದಾರ್ಯರ ದೊಡ್ದ ಸಾಧನೆಯಾಗಿದೆ.
    ೩. ಈ ಅನುಭವ ಮಂಟಪವನ್ನು “ಶೂನ್ಯಸಂಪಾದನೆ” ಹೆಸರಿನಲ್ಲಿ ಗ್ರಂಥಸ್ಥ ಗೊಳಿಸಲು ಶಿಷ್ಯರಿಗೆ ಪ್ರೇರಣೆ ನೀಡಿದುದು,................ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಮೂರನ್ನು ರೂಪಿಸಿದವರು ತೋಂಟದಾರ್ಯರ ಶಿಷ್ಯ ಪರಂಪರೆಯ “ ಹಲಗೆದೇವ (?) ಗುಮ್ಮಳಾಪುರ ಸಿದ್ಧಲಿಂಗ, ಗೂಳೂರು ಸಿದ್ಧವೀರಣ್ಣ. ಮೇಲೆ ಹೇಳಿದಂತೆ ಅನುಭವ ಮಂಟಪ ಸಂಸ್ಕೃತಿಯನ್ನು ತನ್ನ ಪರಂಪರೆಯ ವಿರಕ್ತ ವ್ಯಕ್ತಿಗಳಿಗೆ ಬದಲು ಗ್ರಂಥಗಳ ಮೂಲಕ ಪ್ರಸಾರಮಾಡಿಸಿದ್ದ ವಿನೂತನ ಉಪಕ್ರಮವಿದು. ............

ಒಟ್ಟಾರೆ ತೋಂಟದ ಸಿದ್ಧಲಿಂಗ ಶಿವಯೋಗಿಯ ಜನನದ ಉದ್ದೇಶ ಅನುಭವ ಮಂಟಪವನ್ನು ಪುನರುಜ್ಜೀವನಗೊಳಸುವುದು
ಮತ್ತು ಅದನ್ನು ವ್ಯಕ್ತಿ ಮಾಧ್ಯಮ, ಗ್ರಂಥ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದೇ ಆಗಿದೆ.” 

****ಮಾಹಿತಿ ಕೃಪೆ: Vachana a week blog ಮತ್ತು ಕಣಜ****


೧೧.ಬೊಮ್ಮರಸ (ಸೌಂದರ ಪುರಾಣದ ಕರ್ತೃ)

ಬೊಮ್ಮರಸ 
ರಂ.ಶ್ರೀ.ಮುಗಳಿಯವರ ಕನ್ನಡ ಸಾಹಿತ್ಯಚರಿತ್ರೆಯ ಪ್ರಕಾರ ಇಬ್ಬರು ಬೊಮ್ಮರಸರು ಇರುವಂತೆ ತೋರುತ್ತದೆ.
ಅದರಲ್ಲಿ ಸೌಂದರಪುರಾಣ ಎಂಬ ವಾರ್ಧಕ ಷಟ್ಪದಿಯಲ್ಲಿ ಬರೆದಿರುವ ಬೊಮ್ಮರಸನೇ ಮೊದಲಿಗ.

ಈ ಮೊದಲನೇ ಬೊಮ್ಮರಸನ ಕಾಲ: ಸು.ಕ್ರಿ.ಶ. ೧೪೫೦, ವಿಜಯಣ್ಣನ ಸಮಕಾಲೀನ. ಈತ ವೀರಶೈವ ಕವಿ.
ಈತನ ಕೃತಿ: ಸೌಂದರಪುರಾಣ. ಇದು ವಾರ್ಧಕಷಟ್ಪದಿಯಲ್ಲಿ ರಚಿತವಾದ ಕೃತಿಯಾಗಿದೆ. ಈತ

(ಇನ್ನೊಬ್ಬ ತೆರಕಣಾಂಬಿ ಬೊಮ್ಮರಸ)

*******

೧೦.ವಿಜಯಣ್ಣ

ವಿಜಯಣ್ಣ
ಈತನ ಕಾಲ: ಸು.ಕ್ರಿ.ಶ. ೧೪೫೦, ಜೈನಕವಿ
ಆಶ್ರಯ: ದೇವರಾಜ
ಈತನ ಕೃತಿ: ದ್ವಾದಶಾನುಪ್ರೇಕ್ಷೆ 

ದ್ವಾದಶಾನುಪ್ರೇಕ್ಷೆ ಯು ಪ್ರಮುಖವಾಗಿ ಸಾಂಗತ್ಯ ಕೃತಿಯಾಗಿದ್ದು ಕೆಲವು ಕಂದ ವೃತ್ತಗಳನ್ನೂ ಬಳಸಲಾಗಿದೆ.

೦೯.ಕಲ್ಯಾಣಕೀರ್ತಿ

ಕಲ್ಯಾಣಕೀರ್ತಿ
ಈತನ ಕಾಲ: ಸು.೧೪೩೯, ಈತ ಜೈನಕವಿ.
ಈತನ ಕೃತಿಗಳು:
ಜ್ಞಾನಚಂದ್ರಾಭ್ಯುದಯ, ನಾಗಕುಮಾರಚರಿತೆ, ಕಾಮನಕಥೆ, ಚಿನ್ಮಯಚಿಂತಾಮಣಿ, ಅನುಪ್ರೇಕ್ಷೆ, ಜಿನಸ್ತುತಿ ತತ್ತ್ವಭೇದಾಷ್ಟಕ ಎಂಬ ಕನ್ನಡ ಕೃತಿಗಳು ಹಾಗೂ
ಜಿನಯಜ್ಞಫಲೋದಯ, ಯಶೋಧರಚರಿತೆ ಎಂಬ ಸಂಸ್ಕೃತ ಕೃತಿಗಳು.
ಸಿದ್ಧರಾಶಿ ಎಂಬ ಗ್ರಂಥವನ್ನೂ ಈತ ಬರೆದಿರುವಂತೆ ತೋರುತ್ತದೆ ಎಂದು ಕವಿಚರಿತೆಕಾರರು ಹೇಳಿದ್ದಾರೆ. ಆದರೆ ಇದು ಬೇರೊಂದು ಗ್ರಂಥವಾಗಿರದೆ ಮೇಲೆ ಹೇಳಿದ ಅನುಪ್ರೇಕ್ಷೆಗೆ ಇರುವ ಮತ್ತೊಂದು ಹೆಸರಾಗಿದೆ.
ಈತ ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದ ಮಠಾಧೀಶರಾಗಿದ್ದ ಲಲಿತಕೀರ್ತಿಗಳ ಶಿಷ್ಯನೆಂದು ತಿಳಿದುಬರುತ್ತದೆ.

ಜ್ಞಾನಚಂದ್ರಾಭ್ಯುದಯಕ್ಕೆ ಜ್ಞಾನಚಂದ್ರೋದಯ ಎಂಬ ಹೆಸರೂ ಕಂಡುಬರುತ್ತದೆ. ಇದನ್ನು ಶಕನೃಪದ ರತಿಲೋಕ (೧೩೬೨) ಸಂಖ್ಯೆಯಿಂ ವಿಧಿತ ಸಿದ್ಧಾರ್ಥಿ ವರ್ಷದಲ್ಲಿ ಎಂದರೆ ೧೪೩೯ರಲ್ಲಿ ಬರೆದಂತೆ ತಿಳಿಯುತ್ತದೆ. ವಿವಿಧ ಷಟ್ಪದಿಗಳನ್ನೊಳಗೊಂಡ, ೯೦೮ ಪದ್ಯಗಳನ್ನುಳ್ಳ ಈ ಕಾವ್ಯ ಜ್ಞಾನಚಂದ್ರನೆಂಬ ರಾಜ ತಪಸ್ಸು ಮಾಡಿ ಮುಕ್ತಿಯನ್ನು ಪಡೆದ ಕಥೆಯಿಂದ ಕೂಡಿದೆ.

ನಾಗಕುಮಾರ ಚರಿತೆ ಮುಖ್ಯವಾಗಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ (೧೪೪೨), ಜೊತೆಗೆ ಕಂದವೃತ್ತಗಳೂ ಬಳಕೆಯಾಗಿವೆ. ಇದಕ್ಕೆ ಫಣಿಕುಮಾರಚರಿತೆಯೆಂದೂ ಹೆಸರಿದೆ. ಇದು ೫ ಸಂಧಿಗಳನ್ನೂ ೫ ಪದ್ಯಗಳನ್ನೂ ಒಳಗೊಂಡಿದೆ.

ಕಾಮನಕಥೆ ಸಾಂಗತ್ಯದಲ್ಲಿ ರಚಿತವಾಗಿದೆ. ಇದರಲ್ಲಿ ೪ ಸಂಧಿಗಳೂ ೩೩೧ ಪದ್ಯಗಳೂ ಇವೆ. ಅಲ್ಲಲ್ಲಿ ಕಂದ, ಷಟ್ಪದಿ, ವಚನಗಳೂ ಬರುವುದುಂಟು. ಇದನ್ನು ಲಲಿತಕೀರ್ತಿಯ ಶಿಷ್ಯನಾದ ತುಳುವ ದೇಶದ ದೊರೆ ಭೈರವಸುತ ಪಾಂಡರಾಯನ ಇಷ್ಟಾನುಸಾರವಾಗಿ ಬರೆದಂತೆ ಕವಿ ಹೇಳಿಕೊಂಡಿದ್ದಾನೆ. ಕೃತಿ ಜೈನಮತಾನುಸಾರವಾಗಿ ಮನ್ಮಥಕಥಾ ನಿರೂಪಣೆಯನ್ನೊಳಗೊಂಡಿದೆ.

ಚಿನ್ಮಯಚಿಂತಾಮಣಿ ಮಾತ್ರಾವಿನ್ಯಾಸದ ಛಂದಸ್ಸಿನಿಂದ ಕೂಡಿದ್ದು ಒಟ್ಟು ೧೦೫ ಪದ್ಯಗಳನ್ನೊಳಗೊಂಡಿದೆ. ಇದರಲ್ಲಿ ತತ್ತ್ವನಿರೂಪಣೆ ಅಡಕವಾಗಿದೆ. ಗ್ರಂಥದ ಕೊನೆಯಲ್ಲಿ ಪ್ರಣಿಹಿತ ಚಿನ್ಮಯಚಿಂತಾಮಣಿಯಿದು ಕಲ್ಯಾಣಕೀರ್ತಿ ಸೌಖ್ಯಾಸ್ಪದಮಂ ಮಣಿಯದೆ ಜಯಿಸಲಿ ಜಗದೊಳು ಗುಣಿಜನಗಳಿಗಿತ್ತು ಚಾರುಮುಕ್ತಿ ಶ್ರೀಯಂ ಎಂಬ ಒಂದು ಕಂದಪದ್ಯವಿದೆ.

ಅನುಪ್ರೇಕ್ಷೆ ಅಥವಾ ಸಿದ್ಧರಾಶಿಯಲ್ಲಿ ೭೪ ಪದ್ಯಗಳಿವೆ. ಇದರಲ್ಲಿ ಕೊಂಡಕುಂದಾಚಾರ್ಯರ ಗಾಹೆಯ ಅರ್ಥವನ್ನು ವರ್ಣಿಸುವುದಾಗಿಯೂ ಪನ್ನೆರಡುನುಪ್ರೇಕ್ಷೆ ಚೆನ್ನಕನ್ನಡದಿಂದವೆ ಬಾಲಕರಿಗೆ ತಿಳಿಯುವಂತೆ ಹೇಳುವುದಾಗಿಯೂ ಕವಿ ಹೇಳಿಕೊಂಡಿದ್ದಾನೆ. ಜಿನಸ್ತುತಿ ೨೭ ಕಂದ ಪದ್ಯಗಳನ್ನುಳ್ಳ ಚಿಕ್ಕ ಕೃತಿ. ಜಿನ ಮಹಿಮೆಯ ವರ್ಣನೆಯಿಂದ ಕೂಡಿದೆ. ತತ್ತ್ವಭೇದಾಷ್ಮಕ ೯ ಮಲ್ಲಿಕಾಮಾಲಾವೃತ್ತಗಳಲ್ಲಿ ಜೈನತತ್ತ್ವವನ್ನು ನಿರೂಪಿಸುವ ಒಂದು ಅಷ್ಟಕ ಗ್ರಂಥ.

************

೦೮.ಚಂದ್ರಕವಿ

ಚಂದ್ರಕವಿ
ಈತನ ಕಾಲ: ಸು.ಕ್ರಿ.ಶ. ೧೪೩೦
ಈತ ವೀರಶೈವ ಕವಿಯಾಗಿದ್ದು ಪ್ರೌಢದೇವರಾಯನ ಆಸ್ಥಾನದಲ್ಲಿದ್ದನು.
ಈತಮ ಕೃತಿಗಳು ಎರಡು: ೧. ವಿರೂಪಾಕ್ಷಾಸ್ಥಾನ   ಮತ್ತು  ೨. ಗುರುಮೂರ್ತಿಶಂಕರ ಶತಕ

ವಿರೂಪಾಕ್ಷಾಸ್ಥಾನವು ಹಂಪೆಯ ವಿರೂಪಾಕ್ಷನನ್ನು ಕುರಿತದ್ದಾಗಿದೆ. ಇದು ಒಂದು ಚಂಪೂ ಕೃತಿಯಾಗಿದ್ದು ಇದರಲ್ಲಿ ಹಲವು ಚರಿತ್ರಾಂಶಗಳು ದೊರೆಯುತ್ತವೆ.
ಪಂಪಾ ಕ್ಷೇತ್ರಕ್ಕೆ (ಹಂಪಿ) ದಕ್ಷಿಣ ದ್ವಾರ ಎನ್ನುವ ಈ ಪ್ರದೇಶದಲ್ಲಿ ಜಾಂಬವಂತನು ಜಿತೇಂದ್ರಿಯಾಗಿ ಹತ್ತು ವರ್ಷಗಳ ಕಾಲ ತಪ್ಪಸ್ಸನ್ನಾಚರಿಸಿ ಪಂಪಾ ವಿರೂಪಾಕ್ಷನ ಕರುಣೆ ಪ್ರಾಪ್ತನಾದ ಪ್ರತೀತಿ ಇದೆ. ಎಂಬ ವಿಷಯ ಈ ಕೃತಿಯಿಂದ ತಿಳಿದುಬರುತ್ತದೆ.

ಗುರುಮೂರ್ತಿಶತಕವು ಒಂದು ಶತಕ ಸಾಹಿತ್ಯ ಕೃತಿಯಾಗಿದ್ದು ವೃತಗಳಲ್ಲಿ ರಚಿತವಾಗಿದೆ.

*************

೦೭.ಗುರುಬಸವ

ಗುರುಬಸವ
ಈತನ ಕಾಲ:  ಕ್ರಿ.ಶ.ಸು. ೧೪೩೦
ಆಶ್ರಯದಾತ: ವಿಜಯನಗರದ ಪ್ರೌಢದೇವರಾಯ
ವೀರಶೈವ ಕವಿಯಾದ ಈತ ಹಲವಾರು ಕೃತಿಗಳನ್ನು ಬರೆದಿದ್ದಾನೆ.

ಈತನ ಕೃತಿಗಳು:
೧. ಶಿವಯೋಗಾಂಗ ಭೂಷಣ (ಪರಿವರ್ಧಿನೀ ಷಟ್ಪದಿ)
೨. ಸದ್ಗುರು ರಹಸ್ಯ (ಭಾಮಿನೀ ಷಟ್ಪದಿ)
೩. ಕಲ್ಯಾಣೇಶ್ವರ (ಪರಿವರ್ಧಿನೀ ಷಟ್ಪದಿ)
೪. ಸ್ವರೂಪಾಮೃತ (ಭಾಮಿನೀ ಷಟ್ಪದಿ)
೫. ವೃಷಭಗೀತೆ (ಭೋಗಷಟ್ಪದಿ)
೬. ಅವಧೂತಗೀತೆ (ಚೌಪದಿ)
೭. ಮನೋವಿಜಯ ಕಾವ್ಯ (ಕುಸುಮ ಷಟ್ಪದಿ) 

************

೦೬.ಚಾಮರಸ

ಚಾಮರಸ
ಈತನು ಹದಿನೈದನೆಯ ಶತಮಾನದ ಆದಿಭಾಗದಲ್ಲಿ ಅಂದರೆ ಸು.ಕ್ರಿಶ.೧೪೩೦ರಲ್ಲಿ ಜೀವಿಸಿದ್ದ ಕವಿ.  
ಈತನ ಕೃತಿ: ‘ಪ್ರಭುಲಿಂಗ ಲೀಲೆ’ ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯ.

      ಈ ಕಾವ್ಯವು ನಾಲ್ಕು ಭಾಷೆಗಳಿಗೆ ಅನುವಾದವಾಗಿದೆಯೆಂದರೆ ಇದರ ಮಹತ್ವವನ್ನು ಅರಿಯಬಹುದು. ಪಿಡುಪರ್ತಿ ಬಸವ ಕವಿಯು ಇದನ್ನು ಚಂಪೂ ರೂಪದಲ್ಲಿ, ಪಿಡುಪರ್ತಿ ಸೋಮನಾಥನು ದ್ವಿಪದಿಯಲ್ಲಿ ತೆಲುಗಿಗೆ ಅನುವಾದಿಸಿದ್ದಾರೆ. ತಿರುವಣ್ಣಾಮಲೈ ಶಿವಪ್ರಕಾಶ ಸ್ವಾಮಿಯು ತಮಿಳಿಗೆ, ಬ್ರಹ್ಮದಾಸನು ಮರಾಠಿಗೆ ಅನುವಾದಿಸಿದ್ದಾರೆ. ಈ ಕಾವ್ಯವು ಸಂಸ್ಕೃತ ಭಾಷೆಗೂ ಸಹ ಭಾಷಾಂತರವಾಗಿದೆ.

   ಭಾಷೆ, ದೇಶ, ಗಡಿಗಳನ್ನು ಮೀರಿ ಬಹುಜನರ ಮಾನ್ಯತೆಗೆ ಪಾತ್ರವಾದ ಶ್ರೇಷ್ಠ ಕೃತಿ ಚಾಮರಸನ ಪ್ರಭುಲಿಂಗಲೀಲೆ. ಅಲ್ಲಮಪ್ರಭುವನ್ನು ಕುರಿತು ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಕೃತಿ. ಪ್ರಭುಲಿಂಗಲೀಲೆಯಲ್ಲಿ ಸಂಕೇತ, ಪ್ರತಿಮೆಗಳನ್ನು, ಗಂಭೀರಕರಿಸಿಕೊಂಡು ಅಲ್ಲಮಪ್ರಭುವಿನ ಕಥಾನಕದ ಜತೆಗೆ ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ, ಮುಕ್ತಾಯಕ್ಕ, ಗೊಗ್ಗಯ್ಯ, ಗೋರಕ್ಷ ಮುಂತಾದವರ ಕಥಾನಕಗಳೂ ಬೆಸೆದುಕೊಂಡು ಬರುತ್ತದೆ.


*************

೦೫.ಮಗ್ಗೆಯ ಮಾಯಿದೇವ

ಮಗ್ಗೆಯ ಮಾಯಿದೇವ
      ಈತನು ಕ್ರಿ.ಶ.೧೪೩೦ರ ಸುಮಾರಿಗೆ ಜೀವಿಸಿದ್ದನು.
ಹುಟ್ಟಿದ ಊರು: ಮಲಪ್ರಭಾ ನದಿ ದಂಡೆಯ ಐಪುರ ಕ್ಷೇತ್ರ[ಹುನಗುಂದ ತಾಲೂಕಿನ ಹಿರೇಮಾಗಿ (ಮಗ್ಗೆ)]
ಇವನ ತಂದೆ: ಸಂಗಮೇಶ್ವರ.
ಐಒಳೆ (ಐಪುರಿ) ಯ ಶ್ರೀ ಸಂಗಮೇಶ್ವರ ಗುರುವಿನಲ್ಲಿ ಈತನು ಅಧ್ಯಯನ ಮಾಡಿದ.
ವಿಜಯನಗರ ಈತನ ಕಾರ್ಯ ಭೂಮಿಯಾಯಿತು.
 ಅನುಭವ ಸೂತ್ರ, ಶಿವ ಸೂತ್ರ  -ಇವು ಈತನ ಸಂಸ್ಕೃತ ಗ್ರಂಥಗಳು.
 ಶಿವಾಧವ ಶತಕ, ಶಿವಾವಲ್ಲಭ ಶತಕ, ಐಪುರೀಶ್ವರ ಶತಕ  -ಈ ಮೂರು ಶತಕಗಳು ಲಭ್ಯವಾಗಿವೆ.
 ಪ್ರಭುನೀತಿ, ಏಕೋತ್ತರ ಶತಸ್ಥಲ ಷಟ್ಪದಿ, ಷಟ್ಸ್ಥಲ ಗದ್ಯ, ಶತಕತ್ರಯ  -ಈ ಕೃತಿಗಳು ಲಭ್ಯವಾಗಿಲ್ಲ. 

          ಬಸವ ಯುಗದಲ್ಲಿ ಹೆದ್ದೊರೆಯಾಗಿ ಹರಿದಿದ್ದ ತತ್ವಸಿದ್ಧಾಂತದ ವಚನ ವಾಹಿನಿ ಕೆಲಕಾಲ ಗುಪ್ತಗಾಮಿನಿಯಾಗಿ ಪ್ರವಹಿಸಿ ವಿಜಯನಗರದ ಇಮ್ಮಡಿ ಪ್ರೌಢರಾಯನ ಕಾಲದಲ್ಲಿ ಮತ್ತೆ ಬೃಹದ್ರೂಪ ತಾಳಿ ಹೊರಹೊಮ್ಮಿತು. ವೀರಶೈವ ಸಾಹಿತ್ಯದ ವಸಂತಕಾಲ ಮತ್ತೆ ಮೂಡಿ ಬಂದಿತು. ನೂರೊಂದು ವಿರಕ್ತರು ಕಾಣಿಸಿಕೊಂಡರು. ಅವರೆಲ್ಲ ಅನುಭಾವಿಗಳು ನಿಜ. ಆದರೆ ಎಲ್ಲರೂ ಸಾಹಿತ್ಯ ಸೃಷ್ಟಿಸಿದವರಲ್ಲ. ಸಾಹಿತ್ಯ ಸೃಷ್ಟಿಸಿದ ಪ್ರಮುಖರಲ್ಲಿ ಒಬ್ಬ ಮಗ್ಗೆಯ ಮಾಯಿದೇವ.

ಪರರಾರ್ತನ್ನವರಾರ್ ವಿವೇಕಿಸೆ ? ನಿಜಸ್ತ್ರೀ ಪುತ್ರ ಮಿತ್ರರ್ ಸ್ವಕೀ
ಯರೇ ? ಮಿಕ್ಕಾದವರನ್ಯರೇ ತನಗೆ ? ನಾನೇನೆಂಬೆನಿಂತಪ್ಪ ಮೂರ್ಖರನ್ ……….


ತನ್ನ ದೇಹಾದಿ ಕರಣಗಳೇ ತನಗೆ ಅನ್ಯವಾಗಿರುವಾಗ ಉಳಿದವರು ತನಗೆ ಅನ್ಯರೆಂದು ಹೇಳುವುದು ಮೂರ್ಖತನವಲ್ಲವೇ ? ಎಂದು ವಿವೇಕವನ್ನು ಎಚ್ಚರಿಸುವ ಜ್ಞಾನಿ ಈ ಮಗ್ಗೆ ಮಾಯಿದೇವ.

“ನಾನು – ನನ್ನದು, ನಾನು ಮಾಡುವವ ಎನ್ನುವಲ್ಲಿ ದುಃಖದ ಉಗಮ ನೀನು ನಿನ್ನದು, ನಿನ್ನ ಕೃತಿ ಎಂಬಲ್ಲಿ ಸುಖದ ಸೆಲೆ. ಈ ನಿರಹಂಭಾವ ನಿರಹಂಕೃತಿ ಕ್ರಿಯೆ ನೆಲೆಗೊಂಡರೆ ಇನ್ನಾವ ಜಪ ತಪ ಯೋಗ ಯಾಗಗಳೂ ಬೇಕಿಲ್ಲ ಎಂಬ ಮಾಯಿದೇವನ ಮಾತುಗಳು ಆತನು ಅದೆಂಥ ಅನುಭಾವಿ, ದಾರ್ಶನಿಕನಾಗಿದ್ದ ನೆಂಬುದಕ್ಕೆ ಸಾಕ್ಷಿ.

ಪಾಪ ಪುಣ್ಯ, ಸುಖ ದುಃಖ, ಸ್ವರ್ಗ ನರಕಗಳ ಸ್ವರೂಪ ವಿವೇಚಿಸುತ್ತ ವ್ಯಕ್ತಿಯೊಬ್ಬ ಪುಣ್ಯಾಪೇಕ್ಷೆ ಉಳ್ಳವನಾಗಿದ್ದರೆ ಈ ಎಲ್ಲ ದ್ವಂದ್ವಗಳು ಕ್ರಮವಾಗಿ ಸಂಭವಿಸುವವು. ಆದ್ದರಿಂದ ಫಲಾಪೇಕ್ಷೆಯ ಪುಣ್ಯಮಾಡಿರುವದೇ ಪಾಪದ ಪರಿಹಾರ. ಎಂಥ ತರ್ಕಬದ್ಧ ವಿಚಾರ ! ಮಾಯಿದೇವನ ವೈಚಾರಿಕ ಮಟ್ಟ ಅದೆಷ್ಟು ಎತ್ತರದ್ದು !

ಮಾಯಿದೇವ ಸಕಲ ಶಾಸ್ತ್ರಪಾರಂಗತ. ಉಭಯ ಭಾಷಾಕೋವಿದ ರಾಜಪೂಜಿತ, ವೀರಶೈವ ತತ್ವಸಿದ್ಧಾಂತ ಕುರಿತು ಗಂಭೀರ ಚಿಂತನೆ ನಡೆಸಿದ ದಾರ್ಶನಿಕ, ಶಿವಾನುಭವಿ, ಷಟಸ್ಥಲ ನಿರ್ಣಾಯಕ.
 
*******ಮಾಹಿತಿ ಕೃಪೆ: ನಮ್ಮಹುನಗುಂದ, ವಿಕಿಪೀಡಿಯಾ********

೦೪.ಲಕ್ಕಣ ದಂಡೇಶ

 ಲಕ್ಕಣ ದಂಡೇಶ
ಈತನ ಕಾಲ: ಕ್ರಿ.ಶ.೧೪೨೫
ಆಶ್ರಯ : ಈತನು ಪ್ರೌಢ ದೇವರಾಯನ ಮಹಾ ದಂಡನಾಯಕನಾಗಿದ್ದನು.
ಕೃತಿ - ಶಿವತತ್ವ ಚಿಂತಾಮಣಿ,

ಶಿವತತ್ವ ಚಿಂತಾಮಣಿ:
ಇದು ವಾರ್ಧಕ ಷಟ್ಪದಿಯಲ್ಲಿದೆ. ೫೫ ಸಂಧಿಗಳನ್ನು ಹೊಂದಿದ್ದು ಸುಮಾರು ಎರಡು ಸಾವಿರಕ್ಕೂ ಅಧಿಕ ವಾರ್ಧಕ ಷಟ್ಪದಿಗಳಿಂದ ಕೂಡಿದೆ.
ಇದು ವೀರಶೈವ ಧರ್ಮಕ್ಕೆ ಸಂಬಂಧಿಸಿದ ಕೃತಿಯಾಗಿದ್ದು ಹಲವಾರು ತಾತ್ವಿಕ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡಿರುವ ಬೃಹತ್ ಕೃತಿಯಾಗಿದೆ.

ಇದು ಒಂದು ವಿಧದಲ್ಲಿ ವೀರಶೈವ ವಿಶ್ವಕೋಶವಾಗಿದೆ.

ಇದಲ್ಲದೆ ಲಕ್ಕಣ ದಂಡೇಶ ಕನ್ನಡದ ಚಿಣ್ಣರಿಗೆ ಬರೆದಂತಿರುವ ಪತ್ರಗುಚ್ಛ ‘ಲಕ್ಕಣ್ಣ ದಂಡೇಶನ ಓಲೆಗಳು’ ನಾಡಿನ ಗತವೈಭವವನ್ನು ಬಿಂಬಿಸಿ ಕನ್ನಡಿಗರಲ್ಲಿ ದೇಶಪ್ರೇಮವನ್ನೂ, ಸ್ವಾಭಿಮಾನವನ್ನೂ ಬಡಿದೆಬ್ಬಿಸುವಂತಿವೆ.

*****

೦೩.ಭಾಸ್ಕರ


ಭಾಸ್ಕರ
ಈತನ ಕಾಲ ಕ್ರಿ.ಶ. ೧೪೨೪
ಅನಂತಪುರ ಜಿಲ್ಲೆಯ ಪೆನಗೊಂಡೆ ಇವನ ಊರು ಎಂದು ಪಂಡಿತರ ಅನಿಸಿಕೆ.
ವಿಶ್ವಾಮಿತ್ರ ಗೋತ್ರದ ಬಸವಾಂಕನ ಮಗ, ಜೈನಬ್ರಾಹ್ಮಣ ಕವಿ
ಕೃತಿಗಳು :
ಜೀವಂಧರ ಚರಿತೆ -ಇವನು ಭಾಮೀನಿ ಷಟ್ಪದಿಯಲ್ಲಿ ಬರೆದ ಕಾವ್ಯ.
ಇದು ಜೀವಂಧರ ಎಂಬ ರಾಜನ ಕಥೆ. ಸಂಸ್ಕೃತದಲ್ಲಿ ವಾದೀಭಸಿಂಹಸೂರಿ ಬರೆದಿರುವ ಜೀವಂಧರ ಚರಿತ್ರೆಯ ಕನ್ನಡ ಅನುವಾದ.
ನೇಮಿಚಂದ್ರ, ಗುಣವರ್ಮ, ನಾಗವರ್ಮ, ಪೊನ್ನ, ಅಗ್ಗಳ, ಗಜಾಂಕುಶ ಮೊದಲಾದ ಪೂರ್ವ ಕವಿಗಳನ್ನು ತನ್ನ ಕಾವ್ಯದಲ್ಲಿ ಹೊಗಳಿದ್ದಾನೆ.

ಈತನಿಗೆ ’ವಾಣೀವದನದರ್ಪಣ’ ಎಂಬುದು ಇವನ ಬಿರುದಿತ್ತು


ಭಾಸ್ಕರ ಕವಿಕೃತ-ಜೀವಂಧರ ಚರಿತೆ ಕುರಿತು
 - ಲೇಖನ ಕೃಪೆ: ‘ಭಾಸ್ಕರ ಕವಿಕೃತ-ಜೀವಂಧರ ಚರಿತೆ’ ಆರ್.ಸಿ.ಹಿರೇಮಠ


      ಭಾಸ್ಕರ ಕವಿಯ ‘ಜೀವಂಧರ ಚರಿತೆ’ ಕನ್ನಡ ಸಾಹಿತ್ಯದ ಉತ್ತಮ ಕೃತಿಗಳಲ್ಲಿ ಒಂದು. ಕಾವ್ಯಧರ್ಮ ಮತ್ತು ಧರ್ಮ ಎರಡರ ದೃಷ್ಟಿಯಿಂದಲೂ ಜೀವಂಧರ ಚರಿತೆ ವೈಶಿಷ್ಟ್ಯಪೂರ್ಣವಾಗಿದೆ. ಮಹಾವೀರ ಸ್ವಾಮಿ ಕೃತಿಪತಿ. ಆ ಸ್ವಾಮಿಯ ಸನ್ನಿಧಾನದಲ್ಲಿದ್ದ ಗೌತಮ ಗಣಧರರಿಂದ ಜೀವಂಧರ ಚರಿತೆ ಲೋಕಕ್ಕೆ ಪ್ರಕಟವಾಗಿದೆ. ಕಾವ್ಯದ ತುಂಬ ಬರುವ ಘಟನೆಗಳು, ವರ್ಣನೆಗಳು ಕವಿಯ ಶಕ್ತಿಯನ್ನು ಪ್ರಕಟಿಸುತ್ತವೆ. ಕೇವಲ ಜೈನ ಮತದ ದೃಷ್ಟಿಯಿಂದ ಮಾತ್ರವಲ್ಲ, ಕನ್ನಡ ಸಾಹಿತ್ಯದ ದೃಷ್ಟಿಯಿಂದಲೂ, ಉತ್ತಮೋತ್ತಮ ಗುಣಗಳನ್ನು ಒಳಗೊಂಡಿರುವ ಜೀವಂಧರ ಚರಿತೆಯನ್ನು ಕನ್ನಡ ಸಾಹಿತ್ಯ ಸಹೃದಯರಿಗೆ ಅರ್ಪಿಸಲು ಸಂತೋಷವೆನ್ನಿಸುತ್ತದೆ.

    ತೀರ್ಥಂಕರರು, ಚಕ್ರವರ್ತಿಗಳು, ಬಲದೇವ, ವಾಸುದೇವ ಮುಂತಾದ ಶಲಾಕಾ ಪುರುಷರು ತಮ್ಮ ತಪಸ್ಸಿನ ಬಲದಿಂದ ಪರಮ ಸಿದ್ಧಿಯನ್ನು ಪಡೆದುದು ಲೋಕ ಪ್ರಸಿದ್ಧವಾಗಿದೆ. ಅದರಂತೆ ಸಾಮಾನ್ಯ ಜೀವಿಗಳೂ ಸಹ, ತಮ್ಮ ಕರ್ಮದ ಫಲವನ್ನು ಅನುಭವಿಸಿ ಅದರ ನಿರ್ಜರೆಯಿಂದ ಮೋಕ್ಷ ಸಂಪಾದನೆ ಮಾಡಿದ ಕಥೆಗಳೂ ಉಂಟು. ಒಂದು ದೃಷ್ಟಿಯಿಂದ ಇಂತಹ ಕಥೆಗಳು ಜನ ಸಾಮಾನ್ಯರ ದೃಷ್ಟಿಯಿಂದ ಅತಿ ಮಹತ್ವವಾದುವು. ಜೀವಂಧರ ಚರಿತೆ, ಯಶೋಧರ ಚರಿತೆ ಮುಂತಾದುವು. ಈ ಸಾಲಿನಲ್ಲಿ ನಿಲ್ಲುತ್ತವೆ. ಜೀವಂಧರ ಚರಿತೆಯಲ್ಲಿ ಕರ್ಮದ ಕೈವಾಡ ಬೃಹದ್ ರೂಪ ತಾಳಿ ನಿಂತಿದೆ. ತನ್ಮೂಲಕವಾಗಿ ಜೀವಂಧರ ಚರಿತೆ ಸಹಸ್ರಾರು ಜನರಿಗೆ ಅತ್ಯಂತ ಪ್ರಿಯಕರ ಕಥೆಯಾಗಿದೆ. ಆದುದಿರಂದಲೇ ಜೀವಂಧರ ಚರಿತೆ ಪ್ರಾಚೀನ ಭಾರತದ ವಿವಿಧ ಸಾಹಿತ್ಯಗಳಲ್ಲಿ ಮೈದೋರಿ ನಿಂತಿದೆ. ಕನ್ನಡ ಸಾಹಿತ್ಯದಲ್ಲಿ ಜೀವಂಧರ ಚಿರಿತೆಯನ್ನು ಹೇಳುವ ನಾಲ್ಕೆಂಟು ಗ್ರಂಥಗಳು ಪ್ರಕಟವಾಗಿದ್ದರೂ ಭಾಸ್ಕರ ಕವಿಯ ಜೀವಂಧರ ಚರಿತೆ, ಶೈಲಿ, ವಸ್ತುವಿನ್ಯಾಸ ಮುಂತಾದುವುಗಳ ದೃಷ್ಟಿಯಿಂದ ಅತ್ಯಂತ ಮೇಲ್ಮಟ್ಟದಲ್ಲಿ ನಿಂತಿದೆ. ಕನ್ನಡ ನಾಡಿನಲ್ಲಿ ಜೀವಂಧರ ಚರಿತೆ ಜನ ಜೀವಾಳವಾಗಿ, ಅವರ ಜೀವನವನ್ನು ಹಸನುಗೊಳಿಸಿರುವುದು ಗಮನಾರ್ಹವಾಗಿದೆ. ಭಾಸ್ಕರ ಕವಿಯ ಜೀವಂಧರ ಚರಿತೆ ಈ ಕಾರ್ಯವನ್ನು ಮೊಟ್ಟಮೊದಲು ಮಾಡಿರುವುದು ಇನ್ನೂ ಗಮನಾರ್ಹ!

     ಭಾಸ್ಕರ ಕವಿಯ ಭಾಮಿನೀ ಷಟ್ಪದಿ ತನ್ನ ಲಯ, ಗತಿ ಇವುಗಳ ಮೂಲಕ ವೈಶಿಷ್ಟ್ಯ ಪೂರ್ಣವಾಗಿದೆ. ಭಾಮಿನೀ ಷಟ್ಪದಿಯಲ್ಲಿ ಒಳ್ಳೆ ಪಳಗಿದ ಕವಿಗಳೆನಿಸಿದ ಕುಮಾರವ್ಯಾಸ, ಚಾಮರಸರ ಶೈಲಿಗೆ ಹೊಯ್‌ ಕೈ ಎನಿಸುವ ಪದ್ಯಗಳು ಜೀವಂಧರ ಚರಿತೆಯಲ್ಲಿ ಬಂದಿರುವುದನ್ನು ಗಮನಿಸಬೇಕು. ಹಲವಾರು ಈ ಶೈಲಿಯ ಸಾಮ್ಯ ದೃಷ್ಟಿಯಿಂದ ಭಾಸ್ಕರ ಕವಿಯು ಕುಮಾರವ್ಯಾಸನ ಅನಂತರ ಬಂದಿರಬೇಕೆಂದು ಆತನ ಅನುಕರಣ ಮಾಡಿರುವನೆಂದು ಊಹಿಸಿರುವರು. ಇದು ವಸ್ತು ಸ್ಥಿತಿಗೆ ಸರಿಯಾಗಿ ತೋರುವುದಿಲ್ಲ. ಭಾಸ್ಕರನು ಸಮರ್ಥನಾದ ಕವಿ. ಆತನ ಪ್ರಾಸಾದಿತ ವಾಣಿಯಲ್ಲಿ ಕುಮಾರವ್ಯಾಸ, ಚಾಮರಸರಂತಹ ಭಾಮಿನಿ ಷಟ್ಪದಿಗಳು ಝೇಂಕರಿಸಿದರೆ ಆತನು ಅವರ ನಂತರವೇ ಬಂದಿರಬೇಕೆಂದು ಊಹಿಸುವ ಕಾರಣವಿಲ್ಲ. ಮುಂದಿನ ಕವಿ ಎಂತಹ ದೊಡ್ಡವನಿದ್ದರೂ ತನ್ನ ಹಿಂದಿನ ಸಾಹಿತ್ಯ ಆತನಲ್ಲಿ ಅಡಗಿರುವ, ಕರಗಿರುವ ಸಂಭವವಿದೆ. ಭಾಸ್ಕರನು ಕ್ರಿ.ಶ. ೧೪೨೪ರ ಹೊತ್ತಿಗೆ ಜೀವಿಸಿದ್ದನೆಂಬುದು ಸೂರ್ಯಪ್ರಕಾಶದಷ್ಟು ಸತ್ಯ.
******

೦೨.ದೇವರಾಜ

ದೇವರಾಜ 
ಈತನ ಕಾಲ: ಕ್ರಿ.ಶ.ಸು. 1410
ತಂದೆ: ಕಂಪ
ಈತನು ವಿಜಯನಗರ ರಾಜ ವಂಶೀಯ. ಬುಕ್ಕೃಆಯನ ಮೊಮ್ಮಗನಿರಬಹುದೆಂದು ಊಹಿಸಲಾಗಿದೆ.
ಈತನ ಪ್ರಮುಖ ಕೃತಿಗಳು: ಸೊಬಗಿನ ಸೋನೆ,  ಅಮರುಕ

ಸೊಬಗಿನ ಸೋನೆ: 
ಈ ಕೃತಿಯು ಸಾಂಗತ್ಯ ಛಂದಸ್ಸಿನಲ್ಲಿ ರಚಿತವಾಗಿದೆ. ಇದು ಉಪಲಬ್ಧವಿರುವ ಕನ್ನಡದ ಮೊಟ್ಟ ಮೊದಲನೆಯ ಸಾಂಗತ್ಯ ಕೃತಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಸೊಬಗಿನ ಸೋನೆಯು ಸುರಭಾವತಿ ಮತ್ತಿತರ ಏಳು ಕಥೆಗಳ ಸಂಗ್ರಹವಾಗಿದೆ. ಕೃತಿಯಲ್ಲಿ ಸಂಪ್ರದಾಯದಂತೆ ಅಷ್ಟಾದಶ ವರ್ಣನೆಗಳನ್ನು ಮಾಡಲಾಗಿದೆ. ಕವಿಯ ಕವಿತಾಶಕ್ತಿಯು ಉತ್ತಮವಾಗಿದೆ.
  
ಉದಾಹರಣೆಗೆ:
 ಪುಳಕಿಸಿ ಮುತ್ತುಗಳಿಂ ರಾಗಿಸಿ ಕೆಂಬ
 ವಳವಳ್ಳಿಯಿಂ ನೊರೆಯಿಂ ನಕ್ಕು |
 ವಳಿಗೈಯಿಂ ತೞ್ಕೈಸಲುರ್ವುವೊಲಬ್ಧಿ
 ಬಳೆವುದು ತಿಂಗಳೊಗೆಯಲಾಗ ||
 
ಅಮರುಕ : 
ಇದು ಒಂದು ಶತಕ ಸಾಹಿತ್ಯ ಕೃತಿಯಾಗಿದೆ.
ಎಂಟನೇ ಶತಮಾನದಲ್ಲಿದ್ದ ಹಂಸಾನಂದಿ ಎಂಬ ಸಂಸ್ಕೃತ ಕವಿಯ ಅಮರುಕ ಕೃತಿಯ ಭಾಷಾಂತರವಾಗಿದೆ.
ಈ ಕೃತಿಯು ಪರಿವರ್ಧಿನೀ ಷಟ್ಪದಿಯಲ್ಲಿದೆ. ಕವಿ ದೇವರಾಜನು ಪೂರ್ವ ಕವಿಗಳಲ್ಲಿ ವಾಲ್ಮೀಕಿ, ಕಾಳಿದಾಸ, ಬಾಣರನ್ನು ಸ್ಮರಿಸಿದ್ದಾನೆ.
********

*

14 ಅಕ್ಟೋಬರ್ 2015

೦೧-ಕುಮಾರವ್ಯಾಸ

ಕುಮಾರವ್ಯಾಸ
 

ಕುಮಾರವ್ಯಾಸನ ಕಾಲ: ಕ್ರಿ.ಶ. ೧೩೫೦-೧೪೦೦
ಸ್ಥಳ : ಗದುಗಿನ ಕೋಳಿವಾಡ (ಈಗಿನ ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ)
ಆರಾಧ್ಯದೈವ: ಗದುಗಿನ ವೀರನಾರಾಯಣ
ಕೃತಿ: ‘ಕರ್ಣಾಟಭಾರತ ಕಥಾಮಂಜರಿ’ ಇದಕ್ಕೆ ಕನ್ನಡಭಾರತ, ಗದುಗಿನ ಭಾರತ ಎಂಬ ಹೆಸರುಗಳೂ ಇವೆ.

ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಕುಮಾರವ್ಯಾಸನ ಕಾಲದ ಬಗ್ಗೆ ಚರ್ಚೆ

  • ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ.
  • ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣಕವಿ. ಇವನ ಕಾಲ ಸುಮಾರು ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ.
  • ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ.
  • ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ.
  • ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ.. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ.
  • ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ.
  • ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ).
  • ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ.
  • ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು.

ಕುಮಾರವ್ಯಾಸನ ಊರು

ಹುಟ್ಟೂರು ಈಗಿನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳೀವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ.

ವಂಶಾವಳಿ

ಈ ವಂಶಾವಳಿಯಂತೆ, ವೀರನಾರಾಯನೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ > ಗಾಮುಂಡ > ಗೌಡ ಎಂದು ನಿರ್ಣಯಿಸಿದ್ದಾರೆ. ಆನವ್ಮತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.
  • ವಂಶಾವಳಿ :
  • ||ಶ್ರೀ ವೀರನಾರಾಯಣ ಪ್ರಸನ್ನಃ||
  • ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ.
  • ೨.ತಿರುಮಲಯ್ಯ.
  • ೩. ಲಕ್ಕರಸಯ್ಯ.
  • ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ?
  • ೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ
  • ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ

ಕೃತಿಗಳು

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.
ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:
  • “ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!)
  • “ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ)
  • “ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ)
  • “ಅರಿವಿನ ಸೆರಗು ಹಾರಿತು”
ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃ‍ಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;
ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:
ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!
  • ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ.

ಪ್ರಭಾವ

ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.

“ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ವೀರನಾರಾಯಣನ ಕಿಂಕರಗೆ”
 
“ವೀರನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು
ಚಾರು ಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ”

ಕುಮಾರವ್ಯಾಸನ ಮಂಡಿಗೆಗಳು
ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಕೆಲವು ಒಗಟು ಪದ್ಯಗಳನ್ನು ಬಳಸಿದ್ದಾನೆ. ಅವಕ್ಕೆ ಮಂಡಿಗೆಗಳೆಂದು(೧) ಕರೆಯುತ್ತಾರೆ ಅವು ವ್ಯಾಖ್ಯಾನ ಮಾಡುವವರಿಲ್ಲದಿದ್ದರೆ ಅರ್ಥವಾಗುವುದು ಕಷ್ಟ. 
ಕುಮಾರವ್ಯಾಸನ 'ಮಂಡಿಗೆ' ಗಳು -ಅಥವಾ ಒಗಟು ಪದ್ಯಗಳು ; ಕುಮಾರವ್ಯಾಸ ಭಾರತದಲ್ಲಿ ಅನೇಕ ಮಂಡಿಗೆಗಳು ಅಥವಾ ಒಗಟು ಪದ್ಯಗಳಿವೆ. ಅವಕ್ಕೆ ಅರಿತ ವ್ಯಾಖ್ಯಾನ ಕಾರರಿಲ್ಲದಿದ್ದರೆ ಅರ್ಥ ವಾಗುವುದುಕಷ್ಟ. : ಉದಾಹರಣೆಗೆ :-
ಪದ್ಯ :-
ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ |
ಕಾದಿ ಗೆಲಿದನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ||


ಪದ ವಿಂಗಡನೆ :
ವೇದ ಪುರುಷನ ಸುತನ ಸುತನ ಸ
ಹೋದರನ ಮೊಮ್ಮಗನ ಮಗನ ತಳೋದರಿಯ
ಮಾತುಳನ ರೂಪನನು ಅತುಳ ಭುಜ ಬಲದಿ
ಕಾದಿ ಗೆಲಿದನ ಅಣ್ಣನ ಅವ್ವೆಯ
ನಾದಿನಿಯ ಜಠರದಲಿ ಜನಿಸಿದ
ಅನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ

- ಅರ್ಥ:-
ವೇದ ಪುರುಷನ -ನಾರಾಯಣನ ; ಸುತನ -ಬ್ರಹ್ಮನ ;
ಸುತನ -ನಾರದನ ; ಸಹೋದರನ - ಮರೀಚಿಯ ;
ಹೆಮ್ಮಗನ - ಇಂದ್ರನ (ಮರೀಚಿಯ ಮೊಮ್ಮಗ)

(ಬ್ರಹ್ಮನ ಮಗ ಮರೀಚಿ, ಮರೀಚಿಯ ಮಗ ಕಶ್ಯಪ -ಅವನ ಮಗ ಇಂದ್ರ )

ಮಗನ - ಅರ್ಜುನನ ; (ಇಂದ್ರನ ಮಗ-ಅರ್ಜುನ)
ತಳೋದರಿಯ - ಸುಭದ್ರೆಯ : ಮಾತುಳನ -ಮಾವನ ಕಂಸನ
(ಎಂದರೆ ಸುಭದ್ರೆಯ ತಾಯಿ ದೇವಕಿ -ದೇವಕಿಯ ತಂದೆ ದೇವಕ,
ದೇವಕನ ಅಣ್ಣ ಉಗ್ರಸೇನ , ಉಗ್ರಸೇನನ ಮಗ ಕಂಸ ;
ಆದ್ದರಿಂದ ದೇವಕಿಗೆ ಕಂಸ ಅಣ್ಣ -ದೊಡ್ಡಪ್ಪನ ಮಗ ;
ಸುಭದ್ರೆಗೆ ದೇವಕಿಯ ಅಣ್ಣ ಕಂಸ ಸೋದರಮಾವ ; )
ರೂಪನನು - ಕಂಸನಿಗೆ ಸರಿಸಮಾನನು - ಜರಾಸಂಧನನ್ನು ;
ಅತುಳ ಭುಜ ಬಲದಿ - ಅಸಾಧಾರಣ ಭುಜ ಬಲದಿಂದ ;
ಕಾದಿ ಗೆಲಿದನ - ಯುದ್ಧ ಮಾಡಿ ಗೆದ್ದವನ -ಭೀಮನ  ; ಅಣ್ಣನ -ಯುಧಿಷ್ಠಿರನ ;
ಅವ್ವೆಯ - ತಾಯಿಯ ಎಂದರೆ ಕುಂತಿಯ ; ನಾದಿನಿಯ - ದೇವಕಿಯ
(ಕುಂತಿಯ ತಮ್ಮ ವಸುದೇವ , ತಮ್ಮನ ಹೆಂಡತಿ - ನಾದಿನಿ-
ನಾದಿನಿಯು -ವಸುದೇವನ ಪತ್ನಿ ದೇವಕಿ) ;
ನಾದಿನಿಯ ಜಠರದಲಿ ಜನಿಸಿದ -
ದೇವಕಿಯ ಗರ್ಭದಲ್ಲಿ ಜನಿಸಿದ ;
ಅನಾದಿ ಮೂರುತಿ -ಆದಿ ಇಲ್ಲದ ದೇವ ;(ಕೃಷ್ಣ )
ಸಲಹೊ - ಕಾಪಾಡು ; ಗದುಗಿನ ವೀರನಾರಯಣ -
ಗದುಗಿನ ದೇವಾಲಯದಲ್ಲಿರುವ - ವೀರ ನಾರಾಯಣ .

ಪದ್ಯ ೨
ಒಂದರಿಂದೆರಡಹುದನರಿ ಮೂ
ರಂದವನು ತಿಳಿ ನಾಲ್ಕರಲಿ ಮನ
ಗುಂದದಿರೈದರಲಿ ವರ್ಜಿಪುದಾರೇಳರಲಿ |
ಒಂದಿಸದಿರೆಂಟನು ವಿಚಾರಿಸಿ
ಮುಂದುವರಿದೊಂಭತ್ತರಲಿ ಮನ
ಗುಂದಿಸದೀರೈದರಲಿ ಭೂಪಾಲ ಕೇಳೆಂದ||

 
ಪದ ವಿಂಗಡಣೆ :
ಒಂದರಿಂದ ಎರಡು ಅಹುದನು ಅರಿ, ಮೂರು ಅಂದವನು ತಿಳಿ,
ನಾಲ್ಕರಲಿ ಮನ , ಕುಂದದಿರು, ಐದರಲಿ , ವರ್ಜಿಪುದು
ಆರು ಏಳರಲಿ ಒಂದಿಸದಿರು, ಎಂಟನು ವಿಚಾರಿಸಿ ,
ಮುಂದುವರಿದು ಒಂಭತ್ತರಲಿ, ಮನ ಕುಂದಿಸದಿರು ಈರು ಐದರಲಿ,
ಭುಪಾಲ ಕೇಳು ಎಂದ.

ಅರ್ಥ:
ಒಂದರಿಂದ - ಮೂಲ ಚೈತನ್ಯವಾದ ಆ ಪರಬ್ರಹ್ಮ ದಿಂದ ;
ಎರಡು ಅಹುದನು ಅರಿ - ಪರಮಾತ್ಮ ಜೀವಾತ್ಮ ವಾಗಿ
ಈ ಮಾನವ ಸೃಷ್ಟಿಯಾಗಿರುವುದನ್ನು ತಿಳಿ ;
ಮೂರು ಅಂದವನು ತಿಳಿ - ಈ ಜಗತ್ತಿನ ನಡವಳಿಕೆಗೆ ಸತ್ವ, ರಜ,,ತಮ,
ಈ ಮೂರು ಗಣ ತ್ರಯಗಳು ಕಾರಣವೆಂಬುದನ್ನು ತಿಳಿದುಕೋ ;
ನಾಲ್ಕರಲಿ ಮನ - ಧರ್ಮ,ಅರ್ಥ, ಕಾಮ, ಮೋಕ್ಷ ಈನಾಲ್ಕರಲ್ಲೂ ಮನಸ್ಸಿರಲಿ,
ಅವನ್ನು ಸಾಧಿಸಬೇಕೆಂಬ ಗುರಿ ಇರಲಿ ;
ಕುಂದದಿರು, ಐದರಲಿ - ಪಂಚೇಂದ್ರಿಗಳಿಗೆ (ನೇತ್ರಗಳು, ನಾಸಿಕ, ಶ್ರೋತೃ/ ಕಿವಿ , ಜಿಹ್ವಾ/ನಾಲಿಗೆ, ತ್ವಕ್ / ಚರ್ಮ) ;
ವರ್ಜಿಪುದು -ಇವುಗಳಿಗೆ ವಶನಾಗಬೆಡ ;
ಆರು ಏಳರಲಿ -ಅರಿಷಡ್ವರ್ಗಗಳನ್ನೂ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಮತ್ತು ಸಪ್ತ ವ್ಯಸನ ಗಳಾದ ಸ್ತ್ರೀ,ಅಕ್ಷ, ಮೃಗಯೆ, ಪಾನ, ವಾಕ್ಪಾರುಷ್ಯ , ಅರ್ಥದೂಷಣೆ , ದಂಡಪಾರುಷ್ಯ -ಇವುಗಳಿಂದ ; ಒಂದಿಸದಿರು - ದೂರವಿರು, ;
ಎಂಟನು ವಿಚಾರಿಸಿ - ಅಷ್ಠಾಂಗ ಯೋಗವನ್ನು ಅರಿತು (ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ,ಧಾರಣ, ಸಮಾಧಿ) ;
ಮುಂದುವರಿದು ಒಂಭತ್ತರಲಿ - ನವ ವಿಧ ಭಕ್ತಿಯಲ್ಲಿ (ಶ್ರವಣ, ಸ್ಮರಣ, ಕ್ಭಿರ್ತನ, ವಂದನ, ಅರ್ಚನ, ಪಾದ ಸೇವನ, ಸಖ್ಯ, ದಾಸ್ಯ, ಆತ್ಮ ನಿವೇದನ) ಮನಸ್ಸನ್ನಿಡು (ಮುಂದುವರಿ) ;
ಮನ ಕುಂದಿಸದಿರು ಈರು ಐದರಲಿ, (ಎರಡು+ಐದು=ಹತ್ತು) ; ಇವುಗಳ ಜೊತೆಯಲ್ಲಿ ಕ್ಷಮೆ, ಮಾರ್ದವತೆ, ಆರ್ಜವ (ಪ್ರಾಮಣಿಕತೆ), ಶೌಚ, ಸತ್ಯ,ಸಂಯಮ, ತಪಸ್ಸು (ಶುದ್ಧ ಚಿಂತನೆ), ತ್ಯಾಗ, ಪರದ್ರವ್ಯದಲ್ಲಿ ಅನಪೇಕ್ಷೆ, ಬ್ರಹ್ಮಚರ್ಯ ಈ ಹತ್ತು ಸಾಮಾನ್ಯ ಧರ್ಮಗಳನ್ನು ;
ಮನ ಕುಂದದಿರು -ಬಿಡದೆ ಅನುಸರಿಸು
ಭೂಪಾಲ ಕೇಳು ಎಂದ.
ಈ ಪದ್ಯಕ್ಕೆ ರಾಜನೀತಿಗೆ ಅನುಗುಣವಾಗಿ ಬೇರೊಂದು ಬಗೆಯ ಅರ್ಥವನ್ನೂ ಹೇಳುತ್ತಾರೆ

ಪದ್ಯ ೨ರ ಅರ್ಥ- ರಾಜ ನೀತಿಯ ಪ್ರಕಾರ

ಒಂದರಿಂದ -ಬುದ್ಧಿ ಅಥವಾ ವಿವೇಕದಿಂದ,
ಎರಡನು -ಕರ್ತವ್ಯ ಮತ್ತು ಅಕರ್ತವ್ಯಗಳನ್ನು
ಅರಿ -ವಿಚಾರ ಮಾಡು,
ಮೂರು ಅಂದವನು ತಿಳಿ - ಸತ್ರುಗಳು ಯಾರು, ಮಿತ್ರರು ಯಾರು , ಉದಾಸೀನರು ಯಾರುಎಂಬುದನ್ನು ಅರಿತು,
ನಾಲ್ಕರಲಿ - ಸಾಮ, ದಾನ, ಬೇಧ, ದಂಡ ವೆಂಬ ಚತುರೋಪಾಯಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸು,
ಮನಗುಂದದಿರು ಐದರಲಿ - ಪಂಚೇಂದ್ರಿಗಳಿಗೆ ವಶನಾಗ ಬೇಡ,
ಆರನು - ಸಂಧಿ, ವಿಗ್ರಹ, ಯಾನ, ಆಸನ, ದ್ವೈದೀ ಭಾವ, ಸಮಾಶ್ರಯ, ಎಂಬ ರಾಜನೀತಿಯನ್ನು ಸಮಯಾನುಸಾರ ಉಪಯೋಗಿಸಿ,
ವರ್ಜಿಪುದು ಏಳರಲಿ - ಸ್ತ್ರೀ , ಜೂಜು , ಬೇಟೆ, ಮದ್ಯ, ಕಠೋರ ವಚನ, ಕ್ರೂರ ದಂಡನೆ, ದುಂದುಗಾರಿಕೆ, ಈ ಸಪ್ತ ವ್ಯಸನ ಗಳಿಂದ ದೂರವಿರು.
ಹೀಗೆ ಮನಸ್ಸನು ಹಿಡಿತದಲ್ಲಿ ಇಟ್ಟುಕೊಂಡು,
ಅಷ್ಟಾಂಗ ಯೋಗವನ್ನು ಸಾಧನೆ ಮಾಡಿ, ನವ ವಿಧ ಭಕ್ತಿಯನ್ನು ರೂಡಿಸಿಕೊಂಡು, ದಶ ಧರ್ಮಗಳನ್ನು ಪಾಲಿಸು, ಇದರಿಂದ ಮಾನಸಿಕ ನೆಮ್ಮದಿ ದೊರಕುವುದು.
 ****************

ಕುಮಾರವ್ಯಾಸ ಕಂಬ
 ******************
ಮಾಹಿತಿ ಕೃಪೆ: ವಿಕಿಪೀಡಿಯಾ 
******************

ನಡುಗನ್ನಡದ ಕವಿಗಳು (ಕುಮಾರವ್ಯಾಸ ಯುಗ)




ಕವಿ-ಸಾಹಿತಿಗಳ ಪರಿಚಯ
ನಡುಗನ್ನಡದ ಕವಿಗಳು (ಕುಮಾರವ್ಯಾಸ ಯುಗ)
ಕ್ರ. ಸಂ.
ಹೆಸರು
೩೬
ವಿರೂಪಾಕ್ಷಪಂಡಿತ
೩೭
ಭಟ್ಟಾಕಳಂಕ
೩೮
ಗೋವಿಂದವೈದ್ಯ(ಭಾರತಿನಂಜ)
೩೯
ಗೋಪಕವಿ(ಗೋವಿಂದ)
೪೦
ನಾಗರಸ
೪೧
ಷಡಕ್ಷರದೇವ
೪೨
ಚಿಕ್ಕದೇವರಾಜ
೪೩
ತಿರುಮಲಾರ್ಯ
೪೪
ಚಿಕ್ಕುಪಾಧ್ಯಾಯ
೪೫
ಮಹಲಿಂಗರಂಗ
೪೬
ಸಿಂಗರಾರ್ಯ
೪೭
ಸಂಚಿಹೊನ್ನಮ್ಮ
೪೮
ಚಿದಾನಂದಾವಧೂತ
೪೯
ಹೆಳವನಕಟ್ಟೆ ಗಿರಿಯಮ್ಮ
೫೦
ಲಿಂಗಣ್ಣ
೫೧
ಜಗನ್ನಾಥದಾಸ
೫೨
ದೇವಚಂದ್ರ
೫೩
ಮುಮ್ಮಡಿ ಕೃಷ್ಣರಾಜ
೫೪
ಕೆಂಪುನಾರಾಯಣ
೫೫
ಅಳಿಯಲಿಂಗರಾಜ