ನನ್ನ ಪುಟಗಳು

09 ಮೇ 2018

'ಯಮನ ಸೋಲು'-ಉಪಸಂಹಾರ ದೃಶ್ಯ

ಉಪಸಂಹಾರ ದೃಶ್ಯ

ಆಕಾಶ ಮಾರ್ಗ, ಯಕ್ಷನು ಒಂದು ಮೇಘದ ಮೇಲೆ ಕುಳಿತಿರುತ್ತಾನೆ.
ಯಕ್ಷ
(ಕೆಳಗೆ ನೋಡಿ.)
ಹೋಗಬೇಡ ನಿಲ್ಲು, ಮೇಘವೇ, ಯಕ್ಷನಿಹ —
ನೆಂದರಿಯೆಯಾ? ಆಹಾ! ತೋಯದಾಸನವೆನಿತು
ಸುಖಕರ! ಯಮದೂತನೇಕಿನ್ನು ಬರಲಿಲ್ಲ?
(ಸುತ್ತ ನೋಡಿ)
ಕಾಯುವುದು ಕಾರ್ಯಸಾಧನೆಗಿಂತ ಕಷ್ಟಕರ!
ಹೊಳೆಯಲ್ಲಿ ಮುಳಮುಳುಗಿ ಎದ್ದು, ಒದ್ದಾಡಿ
ದಡವ ಸೇರಲು ಎಳಸುವವಗಿಂತ, ದಡದಲ್ಲಿ
ಕುಳಿತಾತನಂ ಹಾರೈಸುವುಬ್ಬೆಗವೆ ಮಿಗಿಲು,
ಪಾಪಪುಣ್ಯಕೆ ಸಿಕ್ಕಿ, ಹುಟ್ಟುಸಾವಿನೊಳಲೆದು,
ಸಂಸಾರಚಕ್ರದೊಳು ತಿಗುರಿಯಂದದಿ ತಿರುಗಿ
ಮುಕ್ತನಾಗಲು ಯತ್ನಿಸುವ ಭಕ್ತನಳಲನ್ನು, ೧೦
ಭಕ್ತನೆಂದಿಗೆ ತನ್ನ ಬಳಿಗೆ ಬರುವನೊ ಎಂದು
ಯುಗಯುಗಗಳಿಂದ ಹಾರೈಸುತಿಹ ಪರಮಾತ್ಮ —
ನುಬ್ಬೆಗವೆ ಮೀರಿಹುದು! — ಓಹೋ ಅಲ್ಲಿಯೇ
ಬರುತಿಹನು!
(ಯಮದೂತನು ಪ್ರವೇಶಿಸುತ್ತಾನೆ.)
ದೂತ
ಸೋಜಿಗ! ಸೋಜಿಗ, ಯಕ್ಷ.
ಹಿಂದೆಂದು ಕಾಣದಿಹ ಕೌತುಕವ ಕಂಡೆ.
ಪ್ರೇಮ ಧರ್ಮವ ಗೆದ್ದು ಬಾವುಟವ ನಭಕೆತ್ತಿ
ಹಿಡಿದುದನು ಕಂಡೆ. ಯಮನ ಸೋಲನು ಕಂಡೆ!
ಯಕ್ಷ
(ಎದ್ದು ಬಂದು)
ಏನಾಯ್ತು, ಯಮದೂತ? ಏನಾಯ್ತು!
ದೂತ
ಮೊತ್ತಮೊದಲ್‌
ಎನ್ನೀ ಬಾಳಿನಲಿ ಯಮನ ಸೋಲನು ಕಂಡೆ!
ಯಕ್ಷ
ಹಾಗಾದರಾ ನಿನ್ನ ಬಾಳ್‌ ಬಂದು ಬಹುಕಾಲ —  ೨೦
ವಾಗಿಲ್ಲ!
ದೂತ
ಅದೇಕೆ?
ಯಕ್ಷ
ಹಿಂದೆ ಇಂತಹುದೆಷ್ಟೊ
ಜರುಗಿಹುದು. ಇರಲಿ, ಈಗೇನಾಯ್ತು ಹೇಳು!
ದೂತ
ಈಗಾದುದೇನು! ಮೃತ್ಯು ಒಲ್ಮೆಗೆ ಸೋತು
ಸತ್ಯವಂತನ ಜೀವವನು ಕಷ್ಟವಾಗಿತ್ತು,
ಅಶ್ವಪತಿಸುತೆಯ ಕೈಯೊಳು, ತನ್ನ ಸೋಲನೊ —
ಪ್ಪಿಹುದಿಂದು!
ಯಕ್ಷ
ಯಮನ ಸೋಲಪವಾನವಲ್ಲ;
ಕೀರ್ತಿಕರ! ಯಮದೂತ, ನೀವೇನು ಬಲ್ಲೆ?
ಯಮನ ಪಾಶವು ಮೋಘವಾದುದೇ ಅಲ್ಲ
ಎಂದೆನಗೆ ಬೋಧಿಸಿದೆ ಆಗ. ನಿಯಮವೇ
ಪರಮಪ್ರಮಾಣವೆಂದೆಂದಿಗೂ ಅಲ್ಲವೆಂ —  ೩೦
ಬುದನೀಗ ತಿಳಿದಕೋ! ಬುದ್ಧಿಯರಿಯದ ಎಷ್ಟೊ
ತತ್ತ್ವಗಳನಾತ್ಮ ಸಿದ್ಧಿಯಿಂದರಿತಿಹುದು.
ನಿಯಮಜಾಲವ ಮೀರಿರುವ ನಿಯಮವೊಂದಿಹುದು,
ಯಮದೂತ. ನುಡಿಗೆ ನಿಲುಕದ ಬುದ್ಧಿಯರಿಯದಿಹ,
ಅತ್ಯನಿರ್ವಚನೀಯ ತತ್ತ್ವವೊಂದೀ ಸರ್ವ
ವಿಶ್ವವನು ಸರ್ವತ್ರ ತುಂಬಿ ಮರೆಯಾಗಿಹುದು.
ಆ ಪರಮ ತತ್ತ್ವ ಸ್ವರೂಪವೇ ಪ್ರೇಮ.
ಧರ್ಮನೂ ಪ್ರೇಮಕ್ಕೆ ಕಿಂಕರನು. ನಿಯಮಗಳು
ಶುದ್ಧವಹ ದಿವ್ಯಾನುರಾಗಕ್ಕೆ ಸೇವಕರು.
ಪ್ರೇಮದಿಂದಲೆ ಹೊಳೆಯಿತೀ ಮಹಾ ಬ್ರಹ್ಮಾಂಡ; ೪೦
ಪ್ರೇಮಧಾರದಿಂದಲೆ ಬಾಳುತಿಹುದು;
ಪ್ರೇಮ ವಾರಿಧಿಯಲ್ಲೆ ಕಡೆಗೈಕ್ಯವಾಗುವುದು!
ಪ್ರೇಮ ಮೂರತಿಯಾದ ಸಾವಿತ್ರಿದೇವಿಗೆ
ಯಮನು ಸೋತುದಚ್ಚರಿಯಲ್ಲ. ಬಾ, ಮಿತ್ರ,
ನಾವಿಂದು ಜಗವೆಂದು ಕಾಣದಿಹ ಪ್ರೇಮದ
ಮಹಾ ವಿಜಯವಂ ಕಂಡು ಧನ್ಯರಾಗಿಹೆವು!
ದೂತ
ಸಾವಿತ್ರಿ ಸತ್ಯವಂತರ ಕತೆಯ ಕೇಳಿದವ —
ರೆಲ್ಲರಾಗಲಿ ಧನ್ಯ!
ಯಕ್ಷ
ನೋಡಿದವರಿಗೆ ಪುಣ್ಯ!
ದೂತ
ಆಡಿದವರಿಗೆ ಭಕ್ತಿ!
ಯಕ್ಷ
ಮಾಡಿದವರಿಗೆ ಯುಕ್ತಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ