ನನ್ನ ಪುಟಗಳು

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 8 - ನಿನ್ನಮಗಳಲ್ತೆನ್ನವಳ್ ಅನಲೆ !



ಅನಲಾ ಕುಮಾರಿಗಗ್ರಜನ ಅಸ್ವಸ್ಥತೆಯ
ಸುದ್ದಿಯಂ ತಿಳುಹಿ, ದೊಡ್ಡಯ್ಯಂಗೆ ಶುಶ್ರೂಷೆಯಂ
ದೊಡ್ಡಮ್ಮನೊಡನೆಸಗಲವಳನಲ್ಲಿಗೆ ಕಳುಹಿ,
ಇರುಳೆಲ್ಲಮಾಳೋಚಿಸುತ್ತೆ ಮುಂಬಟ್ಟೆಯಂ,
ಹೊತ್ತರೆಯನಿದಿರುನೋಡುತ್ತೆ ಪೂರ್ವಾಚಲದ
ನೆತ್ತಿಯಂದದಿ ತವಕಿಸಿರ್ದಾ ವಿಭೀಷಣಂ
ಮಥಿಸಿ ನಿಚ್ಚಯಿಸುತ್ತೆ ತನ್ನ ಮತಮಂ, ಮತ್ತೆ
ರಾಕ್ಷಸಕುಲದ ರಕ್ಷಣೆಗೆ ಮೇಣ್ ಸಹೋದರನ
ಹಿತಕೆ ತಾಂ ಮುಂ ಪಿಡಿಯಲಿರ್ಪ್ಪ ಸತ್‌ಪಥಮುಮಂ;
ಕಾಣ್ಬುದೆ ತಡಂ ಬೆಳ್ಳಿ, ಕೇಳ್ವುದೆ ತಡಂ ‘ಮೊದಲ ೧೦
ಪಕ್ಕಿ, ಪೊರಮಟ್ಟನಯ್ ತನ್ನ ಧವಳ ಗೃಹದಿಂ
ರಾಕ್ಷಸೇಂದ್ರನ ರತುನ ಸೌಧಕ್ಕೆ. ಇರ್ದುದಾ
ಗೋಪುರ ಚಯಾನ್ವಿತ ನೃಪೇಂದ್ರ ವೇಶ್ಮಂ, ಮಹಾ
ಗಿರಿಚೂಡದೊಲ್ ಘೋರ ಚಾರು, ವಿಕ್ರಮ ರುಂದ್ರ
ವೃಶ್ಚಿಕರೋಮನಾ ಭೀಮವಪು ದೌವಾರಿಕನ
ಕೈಮುಗಿಹಮಂ ಮುಗುಳುನಗೆಯಿಂದಮಾದರಿಸಿ,
ಮತ್ತ ಮಾತಂಗ ನಿಃಶ್ವಾಸ ಮಾರುತ ಚಲಿತ
ಪುಷ್ಪ ಪರಿಮಳ ತರುಲತೋದ್ಯಾನ ಪಥದಿಂ
ಪ್ರವೇಶಿಸಿದವನವರಜಂ ಅಗ್ರಜ ದಶಗ್ರೀವ
ಚಂಡಿಕಾಧ್ವಜ ಗರ್ವಿತ ಮಹದ್ ಬೃಹದ್‌ಗೃಹಕೆ! ೨೦
ತಿಳಿದು ಚರರಿಂ ತಂದೆಯೈತಂದುದಂ, ಜವದಿ
ನಡೆತಂದಳನಲೆ. ಮಗಳ ಮೊಗದುಬ್ಬೇಗಮಂ
ಸಂವೀಕ್ಷಿಸುತೆ, ಸುರ್ಕ್ಕು ತೆರೆಯೇರ್ದ ಪುರ್ಬ್ಬಿನ
ವಿಭೀಷಣಂ ಬೆಸಗೊಂಡನಗ್ರಜಾತಕ್ಷೇಮ
ಕಾತರ ವಜಃಪ್ರಶ್ನಂಗಳಂ. ಬೆದರ್ದಳೆನೆ
ರಾಕ್ಷಸ ರಾಜನರಮನೆಯ ಶಬ್ದ ಶೂನ್ಯತೆಯ
ನಕ್ರ ನಿದ್ರೆಗೆ ತರಲ್ ಭಂಗಮಂ, ತುಡುಕಿದಳ್,
ಪಿಡಿದಳಯ್ಯನ ಕಯ್ಯನುಸಿರದೇನೊಂದುಮಂ;
ಕಿವಿಗರಿದೆನಲ್ ಪರ್ಚುತುಯ್ದಳಾತನನಗಂ
ವೃದ್ಧವರ್ಯನವಿಂಧ್ಯನಿರ್ದೆಡೆಗೆ. ಮಗುಮೊದಲ್ ೩೦
ಕೈಕಸಿಯ ಕಂದನಂ ಮುಂಡಾಡಿದಾ ಸಲುಗೆ
ದೈತ್ಯೇಂದ್ರಗಿನ್ನುಂ ಬೆಸುಗೆಯಾಗಿರ್ದವನ್,
ಮುಪ್ಪರಿವು ತಾಳ್ಮೆ ಮುಪ್ಪುರಿಗೊಂಡ ಬೆಳ್ನವಿರ
ಪೂಜ್ಯನನಲೆಯ ಬೊಪ್ಪನಂ ಕಂಡೊಡನೆ, ಸುಯ್ದು,
ತೂಲ ಪೀಠದಿನೆಳ್ದು, ತಳ್ಕಯ್ಸಿದನ್, ಅಜ್ಜನಾ
ಭಾವ ವೇಗಕ್ಕೆ ಬೆರಗಾಗಿ ಸರಮಾ ಧವಂ
ಅಣ್ಣನೆಂತಿಹನೆಂದು ಬೆಸಗೊಳಲ್, ನೀನಾತನಂ
ಕಾಣ್ಬುದೊಳಿತಲ್ತೆನಲ್, ಏಕೆನಲ್, ನೇರಮಂ
ಪೇಳಲಳುಕುತ್ತೆ ಪೋದಿರುಳೊಳಾತಂಗಿನಿತುಮುಂ
ನಿದ್ದೆಯಿಲ್ಲೆಂದನಾ ಬಾಳ್‌ಪಣ್ತವಂ. ಕೆಮ್ಮನೆಯೆ
ಕುಳ್ತೆರಳ್ ಮೂರ್ ಚಣಂ ಮತ್ತಮನಲೆಯ ಪಿತೃ ೪೦
ಅವಿಂಧ್ಯಂಗೆ : “ಎಂತಿರ್ಪನೀಗಳ್?”
ಮಲಗಿಹನ್.”
ನಿದ್ರಿಪನೆ?” “ನಿದ್ರಿಸಿಪ್ಪೊಡಮಲ್ಲಿಯಂ ನಿದ್ದೆಯ
ಕುಳುಂಪೆಯಂ ಕಲಂಕುತಿರ್ಪುದು ಮತ್ತೆಮತ್ತೆಯುಂ
ಮತ್ತ ಚಾಗ್ರದ್‌ವಾರಣಂ!” “ಬಟ್ಟೆದೋರ್ ಆಯೆಡೆಗೆ.”
ಎನುತ್ತೆಳ್ದ ದಶಶಿರಾವರಜನಂ ತಡೆದಾ
ಅವಿಂಧ್ಯನಂ ಲೆಕ್ಕಿಸದೆ, ತನಗೆ ಕೈವೀಸಿದಾ
ಪಿತನ ಮುಖಮುದ್ರೆಯ ಗುರುತ್ವಮಂ ಕಂಡಳ್ಕಿ,
ವಿನಯ ಗೌರವದಿ ಕೊಂಡೊಯ್ದಳವನಂ, ರಾಣಿ
ಮುಂಡೋದರಿಯ ಪ್ರೇಮ ಕೈಂಕರ್ಯ ಭೇಷಜದ ೫೦
ಮಂತ್ರದಿಂ ಮುಗ್ಧತೆಯನಾಂತ ತಾತ್ಕಾಲಿಕದ
ಅಂತಸ್ಥಿತಿಯ ಲಂಕೇಶ ಪರ್ಯಂಕದೆಡೆಗೆ, ಕೇಳ್,
ಪೆಣ್ಮಕ್ಕಳಿಲ್ಲದ ದಶಗ್ರೀವನೆರ್ದೆಯಳ್ಕರೆಯ
ಅರಗಿಳಿಯ ಹರಣಮಂ ಹೊರೆವ ಹಂಜರಮೆನಲ್
ಚೆಲ್ವುಕಣಿಯಾಗಿರ್ದ ಆ ತನ್ನ ಮಗಳನಲೆ.
ನಮಸ್ಕರಿಸುತ್ತಮಾ ನಮಸ್ಕರಿಸಿದತ್ತಿಗೆಗೆ;
ದಿಗ್ದಂತಿ ದಂತ ರಚನೆಯ ರತ್ನರಮಣೀಯ
ಭವ್ಯಮಂಚದ ಭೀಮವಿಸ್ತಾರಮಂ ತುಂಬಿ
ಹಬ್ಬಿ, ಮಲಗಿರ್ದೊಡಂ ತನ್ನ ಲೋಕಾಕ್ರಮಣ
ವಿಕ್ರಮವ ಬಿಡನೆಂಬವೋಲದನ್ನಾಕ್ರಮಿಸಿ, ೬೦
ಮುಖಮುದ್ರೆಯಿಂದೆ ನಿದ್ರಾರುದ್ರನೆಂಬಂತೆ,
ಸುಯ್ದಿರ್ದ ರಾಕ್ಷಸಾಧೀಶನಂ ನಿಟ್ಟಿಸುತೆ,
ಹೊಂಗೆತ್ತನೆಯ ಬೆತ್ತದಾಸನದೊಳೊಯ್ಯನೆಯೆ
ತಳ್ತು ಕುಳ್ತನ್ ವಿಭೀಷಣಂ. ಕ್ಷಣಂ, ಕ್ಷಣಂ, ಕ್ಷಣಂ,
ಕಾಲಪುರಷಗೆ ಕಾಲೆ ಹೆಳವಾಯ್ತೆನಲ್, ಕುಂಟಿ
ಹನಿಯುತಿರ್ದುವು ಹೊರಳೀ, ಯುಗಂ ಯುಗಂ ಯುಗಂಗಳ್
ಪರಳ್ವಂತೆವೋಲ್ ದಶಗ್ರೀವನುಸಿರ್ಗಲ್ಲದೆಯೆ
ಬೇರೆ ಸಪ್ಪುಳಕಿಲ್ಲಿ ಕಿಚ್ಚಿಹುದೆ ಕಾಲಿಡಲೆನಲ್
ಹೆಪ್ಪಾಯ್ತು ಹೊತ್ತಿನ ಹೊನಲ್!
ಧೂಪ ಕುಂಡದಿಂ ೭೦
ಪೊಣ್ಮೆ ಕಕ್ಷೆಯನೆಲ್ಲ ತುಂಬಿರ್ದ ಪರಿಮಳಂ
ಹಗುರಗೈಯ್ದತ್ತಿನಿತು ರವಶವದ ಭಾರಮಂ.
ಗೆಂಟರಿಂದೈತರುತ್ತಿರ್ದ ಪಟ್ಟದಾನೆಯ
ಕಂಠ ಘಂಟಾಸ್ವನಂ ಪರಿಹರಿಸುತಿರ್ದುದಯ್
ಜನ ಶೂನ್ಯತಾ ಭಾವಮಂ, ತನ್ನ ಸಂಗದಿಂ
ಪ್ರಕಟಿಸುತ್ತನ್ಯ ಸಾನ್ನಿಧ್ಯಮಂ. ಅನಿತುಂ
ಮನೋಭೂಮಿ ನೇಮಿ ರಾಜ್ಯಪ್ರಜೆಗಳಾದೊಡಂ
ಕೇಂದ್ರಂ ಧಶಗ್ರೀವಾಸ್ಯಮಾತ್ರಮಾದಾ
ವಿಭೀಷಣಪ್ರಜ್ಞೆ ತಾಂ ಪ್ರೇಕ್ಷಿಸುತ್ತಿರ್ದುದಾ
ವದನ ವೇದೀ ಪ್ರವೇಶಂಗೆಯ್ದು ಕೆಲವೊಳ್ತು
ಕುಣಿಯುತ್ತೆ ಮತ್ತೆ ಚಿತ್ತದ ಗುಪ್ತ ನೇಪಥ್ಯ ೮೦
ಪಾತಾಳಮಂ ಪುಗುವ ದುಃಸ್ವಪ್ನ ಶೈಲೂಷ
ನಾಟಂಗಳಂ, ನೋಡುತಿರ್ದಿರ್ದಂತೆ ಮುಖಂ
ಸುರ್ಕ್ಕಿ, ಸೆಡೆತುದು ಪುರ್ಬ್ಬು. ಮಸುಳಿತೆನೆ ದರ್ಪಾರ್ಚಿ,
ಸೋತು ಜೋಲ್ದುದು ಮೀಸೆಯ ನಿಮಿರ್ಕೆ. ತುಟಿಗಳ್
ವಿಕಂಪಿಸಿದುವಚ್ಚರಿಯೆನಲ್ ಭಯಂಗೊಂಡಂತೆ
ರೋಮರೋಮದಿನೊಳ್ಕಿದುದು ಬೆಮರ್. ಪೆರೋಡಲ್
ನಡುಗೆ, ತೆರೆತೆರೆಯಾಯ್ತು ಪೊರೆಯ ತೆರೆ ಮಂಚದಾ.
ಪಿಂತೆಂದುಮಣ್ಣದೊಳ್ ಕಂಡರಿಯದಾ ಸ್ಥಿತಿಯ
ಕರುಣಾರಸಕೆ ಕರಗುತಿರಲನಲೆಯಯ್ಯಂ:
ತುಳುಂಕಿದುವಶ್ರುವಾರಿ; ದೈತ್ಯಚಕ್ರೇಶ್ವರಂ ೯೦
ನಿದ್ದೆಯೊಳಳಲ್‌ತೊಡಗಿದನ್, ಪೆಸುಳೆವೋಲಂತೆ,
ಸರ್ವಲೋಕ ಭಯಂಕರನ್ ಆ ಮಹೆಂದ್ರಾರಿ!
ಭೋಂಕನೆಯೆ ಕಣ್ ತೆರೆದನಾವೇಕ್ಷಿಸಿದನಿಲ್ಲ
ಸೋದರನ ಸಾಮೀಪ್ಯಮಂ. ಕಾಣಲನಲಾ
ಕುಮಾರಿ, ಕಿರುನಗೆಯಿಂದೆ ನಾಣ್ಗೆ ತೆರೆಮರೆಯೊಡ್ಡಿ,
ಭಾವಗೋಪನಕೆಳಸಿ ಸುರವೈರಿ ಕರೆದನ್
ಮೃದಸ್ವರದಿ : “ಅನಲಾ!” ಬಾಗಿದಳ್ ಮೊಗದೆಸೆಗೆ;
ತಳ್ಳಿದಳ್ ತೂಗಿ ಹಿಂದಕೆ, ಮುಂಬರಿದ ತನ್ನ
ನಿಡುಜಡೆಯ ಕಾಳಾಹಿಯಂ; ಓ ಕೊಂಡಳೊಂದು
ಕೋಕಿಲೆಯೆನಲ್. “ಇರ್ಪೆಯೇನಿಲ್ಲಿ?” “ದೊಡ್ಡಯ್ಯ?” ೧೦೦
ಕೇಳಿದಳ್ ಗ್ರಹಿಸಲಾರದೆ ಪ್ರಶ್ನಭಾವಮಂ.
ಏನಿಲ್ಲ! ನೀನೆನ್ನನಗಲಿದೋಲೆನಗೊಂದು
ಕನಸಾದುದಕ್ಕ!” ನಕ್ಕನಾದೊಡಮವನ ಕಣ್,
ಪುಸಿವೋದ ದುಕ್ಕದಾನಂದಕುಕ್ಕಿದುವೆನಲ್,
ತೆಕ್ಕನೊಳ್ಕಿದುವಶ್ರು ತೀರ್ಥಮಂ. “ನಿದ್ದೆಗೆಯ್,
ದೊಡ್ಡಯ್ಯ, ನಾನೆಲ್ಲಿಗೂ ತೆರಳ್ದೆನಿಲ್ಲೀಯೆಡೆಯೆ
ಇರ್ದಪೆನ್.” “ದಿಡವೊರೆದೆ, ಅಕ್ಕ, ಆರ್ ತೊರೆದೊಡಂ
ನೀನೆನ್ನನುಳಿವಳಲ್ತು!” ಚವರಿ ಗಾಳಿಗೆ ಮರಳಿ
ಮುಚ್ಚಿದನೆವೆಯನಸುರಪತಿ. ಮಯನ ಮಗಳವನ
ಹೊದ್ದುದಂ ತಿದ್ದಿದಳ್. ನೋಡಿದಳನಲೆ ತನ್ನ ೧೧೦
ತಂದೆ ಕುಳ್ತೆಡೆಗಿಂಗಿತಾಕ್ಷಿ. ಬಿಸುಸುಯ್ಯತ್ತೆ,
ನೊಂದು, ತನ್ನೊಳಗೆ ತಾಂ ಬೆಂದನು ವಿಭೀಷಣಂ.
ಮತ್ತೆ ತೆಕ್ಕನೆ ತೆರೆಯುತೆವೆಗಳಂ, ಬಿಕ್ಕಳಿಸಿ
ಬೆಸಗೊಂಡನಕ್ಕರೆಸುಳಿಗೆ ಸಿಕ್ಕ ರಕ್ಕಸಂ :
ಅಕ್ಕ, ನಿನ್ನಯ್ಯನೆಂಮ್ಮಂ ಬಿಡಲ್?” “ಬಿಡುವನೇನ್
ನಿನ್ನನ್? ಒಡಹುಟ್ಟಿದವನೆನ್ನ ಪಡೆದಯ್ಯನ್?”
ನೀನೆ ನೋಡುವೆ, ಅಕ್ಕ, ತೊರೆದಪನ್!” “ದೊಡ್ಡಯ್ಯ,
ತೆಗೆ ಈ ತೊದಲ್ ನುಡಿಗಳನ್! ಬಿಡುವನೆಂದೇಕೆ
ಕೆಮ್ಮನೆಯೆ ಶಂಕಿಪ್ಪೆ? ಕಾಣ್, ನಟ್ಟು ಕುಳ್ತಿಹನ್,
ಈ ಬಳಿಯೆ, ನಿನ್ನಿಡೆಯೆ, ಇಂದು ಪೊಳ್ತರೆಯಿಂದೆ!” ೧೨೦
ಎನುತೆ ಕೈತೋರ್ದನಲೆಯಿಂ ಸಹೋದರನೆಡೆಗೆ
ದಿಟ್ಟಿಯಂ ಹೊರಳಿಸಿದಸುರರಾಜನಾನನದ
ಭಾವ ಪರಿವರ್ತನೆಗೆ ಹಮ್ಮೈಸಿದರು ಅನಲೆ ಮೇಣ್
ಮಂಡೋದರಿಯರಿರ್ವರುಂ, ನಟ್ಟು ನಿಲ್ಲುತೆ
ಮರಂಬಟ್ಟರೋಲ್!
ತನ್ನ ಮೃದುಹೃದಯದೊಂದು
ದೌರ್ಬಲ್ಯಮಂ, ಗುಪ್ತಮಂ, ಕಳ್ದಡಗಿ ಕಾಣ್ಬನಂ
ಕಾಣ್ಬ ಕಲಿಯಾತ್ಮದಮೃತಂ ಕಾಳಕೂಟಕ್ಕೆ
ತಿರುಗೊವೊಲ್ ಕ್ರೂರವಾಯ್ತಾ ಕರ್ಬುರೇಂದ್ರನ
ಭುಗಿಲ್ ಕೋಪ ಕರ್ಕೋಟಕಂ : “ಬಿಟ್ಟರಾರೆನ್ನ
ಬಳಿಗೀ ಕುಲದ್ರೋಹಿಯಂ, ಶತ್ರುಮಿತ್ರನಂ, ೧೩೦
ಗೃಹವೈರಿಯಂ, ಗರುಂಕೆ ಮುಸುಂಕಿ ಕಣ್ಗೊಳಿಪ
ವಂಚನೆಯ ಶಿಥಿಲ ಮಲಕೂಪಮಂ? . . . . ಅವುಂಧ್ಯಾರ್ಯ!”
ಕೂಗಿದನು ದಶಕಂಠನಾ ಬಿರುದ ಸಾರ್ಥಕತೆ
ಸರ್ವ ವಿಶ್ರುತಮಾಗೆ. “ಕರೆ ಅವಿಂಧ್ಯನ, ಅನಲೆ!”
ಎಂದಾರ್ದನನಿತರೊಳೆ ಬಂದಾತನಂ ಕಂಡು,
ನೀಮೆಲ್ಲರೆನ್ನ ಕೊಲೆಗೊಳಸಂಚನೊಡ್ಡಿ ಈ
ರಾಜ ವಿದ್ರೋಹಿಯಂ ರಾಜನರಮನೆಗಿಂತು
ಪುಗಿಸಿರ್ಪಿರಲ್ತೆ!” ತೆರೆ ತೆರೆ ನಡುಗೆ ಬೆಳ್‌ನವಿರ್,
ಕೈಮುಗಿದು ಮುದಿಯನ್ “ಮಹಾ ಪ್ರಭೂ, ಬಂದವನ್
ಪೌಲಸ್ತ್ಯಜಂ, ಕೈಕಸೆಯ ಕುವರನವರಜಂ ೧೪೦
ಕುಂಭಕರ್ಣಂಗೆ; ಮೇಣ್ ದೈತ್ಯ ಚಕ್ರೇಶ್ವರಗೆ,
ನಿನಗೆ, ತಮ್ಮನ್; ತಪಂಗೈದು, ಸದ್ದರ್ಮಮಂ
ತನ್ನ ಜೀವಿತಕೊಂದು ಜೀವಾತುವೆನೆ ಪಡೆದ
ಸತ್ತ್ವ ತೇಜಂ; ಬ್ರಹ್ಮವರದಿಂ ಚಿರಂಜೀವಿ
ಅಗ್ರಜಕ್ಷೇಮ ಕಾತರನಾಗಿ ಬಂದೀತನನ್
ತಡೆವುದಶುಭಂ, ದೇವ; ಸೈಪಿನಂತಿಪ್ಪನನ್,
ಮೇಣನಲೆಯೀ ಬೊಪ್ಪನನ್.”
ಕೇಳ್ದು, ಕಣ್‌ನಟ್ಟು,
ಸುಯ್ದನಸುರಂ. ಮತ್ತೆ. ಮಂಡೋದರಿಯನೊಮ್ಮೆ.
ಬಳಿ ಬಾಗಿ ನಿಂದುಳುತ್ತಿರ್ದು ಅನಲೆಯನೊಮ್ಮೆ
ನೋಡಿದನೆರ್ದೆಯ ಮರುಕಮುಕ್ಕಲ್ಕೆ. ಬಿರುಕೊಡೆದು ೧೫೦
ಸೀಳಾಗಲಿಪ್ಪ ತನ್ನಾತ್ಮದಿಕ್ಕುಳದಲ್ಲಿ
ಸಿಲ್ಕಿ ಲಿವಿಲಿವಿಯೊದ್ದುಕೊಳುತಿರ್ದ ಕುದಿಬಗೆಯ
ರಾವಣಂ ತೆಕ್ಕನೆದ್ದನ್; ಪಿಡಿದು ಬರಸೆಳೆದು
ತಕ್ಕಯ್ಸಿ, ಸಂತೈಸಿ, ಮುದ್ದಾಡಿದನ್ ತನ್ನ ಆ
ಪ್ರೀತಿಪುತ್ಥಳಿಯನಲೆಯಂ : “ಅಳದಿರಳದಿರೌ,
ಅಕ್ಕ! ಸಾವಪ್ಪೊಡಂ ನನಗೆ. ನಿನಗೆಸಗನಾಂ
ನೋವಪ್ಪುದಂ!” ಎನಂತೆ, ತನ್ನ ಸಜ್ಜೆಗೆ ಸೆಳೆದು
ಕುಳ್ಳಿರಿಸಿ, ತಾನವಳ ಮೆಯ್ಯೊತ್ತಿನೊಳೆ ಕುಳಿತು,
ಮೌನದಿಂದೆಲ್ಲಮಂ ನೋಡುತಿರ್ದನುಜನಂ
ಕುರಿತು ಶಾಂತಧ್ವನಿಯ ದನುಜೇಶ್ವರಂ : “ಅನಲೆ ೧೬೦
ನಿನ್ನ ಮಗಳಲ್ತೆನ್ನವಳ್! ಇವಳೆನ್ನ ಕಾಪಿಡುವ
ದೇವಿ!” ಅಗ್ರಜಾತ್ಮೋದ್ಧಾರಮಂ ಭಾವಿಸುತೆ
ಆ ಪುಣ್ಯಮೆನಗಕ್ಕೆ!” ಎಂದನು ವಿಭೀಷಣಂ.
ತಿಳಿನಗೆಯ ಸುಳಿ ಸುಳಿದುದಲ್ಲಿರ್ದರೆಲ್ಲರ
ಮೊಗಂಗಳೊಳ್; ನಗೆವೆಳಗಿಗುದ್ಭವಿಸಿದತ್ತಲ್ಲಿ
ಮೈತ್ರಿಯ ನೆಳಲ್.
ಪುಣ್ಯಪ್ರಚೋದಿಯೆನಗಿದೊಂದೆ
ಸೌಂದರ್ಯಮನಲೆಯೀ ಮುದ್ದು ಚೆಲ್ವು!” ಎಂದಾ
ದಶಗ್ರೀವ ಚಿಂತೆ ಅಂತರ್ಮುಖತೆಯಾಂತಿರಲ್,
ತಾಯ್ ಸುರಮೆ ಗಂಧರ್ವಕನ್ಯೆ, ತಂದೆಯುಮಂತೆ
ಸತ್ತ್ವನಿಧಿ! ಕುವರಿಯಿಂತಿರ್ಪುದೇಂ ಸೋಜಿಗಮೆ?” ೧೭೦
ಎಂದವಿಂಧ್ಯಂ, ತನ್ನೊಳಗೆ ತಾನ್ “ಮಗಳ್ ನಿನಗೆ
ಪುಟ್ಟಿರ್ದಳಿರ್ಪೊಡೆಲ್ಲಿಯದೆಮಗೆ ಮೇಣೆಮ್ಮ
ಲಂಗೆಗೀ ತೋರ್ಪ ದುರ್ಮಂಗಳಂ? ಪೆಣ್ಗಳಂ
ಪೆತ್ತು ಪಡೆಯದ ರುಜೆಗೆ ಪೊತ್ತಾದೊಡಂ ಪಡೆವ,
ಭೇಷಜಮೆ ರೋಗಕಾರಣಮಾಗಿ ನಿನ್ನತುಲ
ಪುರಷಕಾರದ ತೇಜಮಂ ತುತ್ತುಗೊಳ್ಳುತಿದೆ!”
ಎನುತಿರಲ್, ಕಂಡುದು ವಿಭೀಷಣನ ಕಣ್‌ಸನ್ನೆ :
ತೆರಳಿದನು ಮೆಲ್ಲನಲ್ಲಿಂ.
ಮನ್ನಿಸೆನ್ನನ್,
ಮಹೇಂದ್ರಾರಿ. ನಿನ್ನೆ ನಾನಾಡಿದುದೆ ನಿನ್ನೀ
ಮನಃಸ್ಥಿತಿಗೆ ಕಾರಣಂ ತಾನಪ್ಪೊಡದು ದಿಟಂ ೧೮೦
ನಿಷ್ಕಾರಣಂ. ನಿನ್ನಭ್ಯುದಯಮಲ್ಲದೆನಗೆನ್ನ
ನಾಲಗೆಗೆ ಬೇರಿಲ್ಲ ಗುರಿ. ಸವಿಯನೊರೆಯದಿರೆ
ಶತ್ರು ಎಂಬರೆ ತಿಳಿದವರ್? ಈ ಜ್ವರಭ್ರಾಂತಿ
ತೊಲಗೆ, ಸಾವಧಾನದಿ ಮಥಿಸಿ ನನ್ನೆಂದುದಂ,
ನಿರ್ಣಯಿಸು ಮುಂಬಟ್ಟೆಯಂ, ಬಾಳ್ವ ಬಟ್ಟೆಯಂ.”
ಒಯ್ಯನೆ ಅನೈಚ್ಛಿಕವೆನಲ್ಕೆ, ಸಡಿಲ್ದುದು ತಳ್ಕೆ
ಸಹೋದರನ ಸುತೆಯ ತುನವಿಂ. ಅಂತರಂಗದೊಳುಳ್ಕೆ
ಉರಿವವೋಲಾಯ್ತಸುರನಾ. ಹುಬ್ಬುಗಂಟಿಕ್ಕಿ
ತಮ್ಮಂಗೆ : “ಸಮನಿಸಿದೆ ಸಮರಂ. ಸಮುದ್ರಮಂ
ದಾಂಟೆ ಹರುವಂ ನೆನೆಯುತಿಪ್ಪನ್ ಮಹಾವೈರಿ. ೧೯೦
ತಿಲಮಂ ತುಲಾದಂಡಕೇರಿಪ ಕಲೆಗಿದಲ್ತು
ಪೊಳ್ತು. ನೀಂ ಮಹಾಕಲಿ. ನಿನಗೆ ಬಾಣಗಳೆಲ್ಲ
ಬ್ರಹ್ಮಾಸ್ತ್ರಗಳ್. ಕುಲವನಂತೆಯೆ ದೇಶಮಂ
ಸಲಹುವುದು ಕಲಿತನಕೆ ಸಲ್ಲಕ್ಷಣಂ. ನಿನಗೆ
ಮನವಿರಲ್ ನೆರವಾಗು, ಇರದಿರಲ್, ಇರದಿರಲ್,”
ತಳುವಿದನೆರಳ್ ಚಣಂ ತರಿಸಲ್ವನಂತೆವೋಲ್,
ಮತ್ತೆ ದೃಢವಾಣಿಯಿಂ “ರಾಜಶಾಸನವಿರ್ಪೊಡಂ,
ಸೋದರನ ಕೊಲೆಗೆ ಕಾರಣಮಪ್ಪ ದುರ್ಯಶಕೆ
ಪೇಸುವೆನ್, . . . . .ಮನಮಿರಲ್ ನೆರವಾಗು. ಇರದಿರಲ್
ಲಂಕೆಯನುಳಿದು ಪೋಗು. ಅನ್ಯ ವಾದಕ್ಕಿಲ್ಲಿ ೨೦೦
ಕೇಳಿನಿತುಮನುವಿಲ್ಲ . . . . . ನನ್ನ ಮಾರ್ಗಂ ನನಗೆ;
ನಿನ್ನದು ನಿನಗೆ!” “ಕಟ್ಟಕಡೆ ನಿರ್ಣಯವೊ?” “ಕೊಟ್ಟ
ಕೊನೆ ನಿರ್ಣಯಂ!” “ನಿನಗೊಳ್ಳಿತಕ್ಕೆ! ಸದ್ಬುದ್ಧಿ
ಬರ್ಕೆ! ತಂದೆಯ ತಪದ ಮೈಮೆಯಿಂದಪ್ಪೊಡಂ
ನಿನ್ನಾತ್ಮಕುದ್ಧಾರಮಿರ್ಕೆ! ಪೋಪೆನಿಲ್ಲಿಂದೆ,
ಬೀಳ್ಕೊಡಿಮ್?” “ಎತ್ತಣ್ಗೆ?” “ಅನಿಶ್ಚಿತಂ.” “ಕಡಲಾಚೆ
ದಡದೆಡೆಗೊ?” “ಏನರ್ಥಮದಕೆ?” “ಅರಿದಿದೆ ನಿನಗೆ;
ನೀಂ ಪೇಳಲಕ್ಕುಮಯ್!” “ನೀನಿನಿತು ಕೀಳ್‌ಮನನ್
ಎಂದರಿದೆನಿಲ್ಲಿನ್ನೆಗಂ!” “ಪರಸ್ಪರಮಲ್ತೆ ಪೇಳ್
ಆ ಅರಿವು!” “ನಮಸ್ಕಾರ!” ಎಂದೆದ್ದು ನಡೆದಿರೆ ೨೧೦
ವಿಭೀಷಣಂ, ಮೇಲೆಳ್ದಳನಲೆ. ಕಂಡಾಕೆಯಂ
ತೆಕ್ಕನೆಳ್ಚತ್ತನೊಲ್ ರಾವಣಂ : “ಆಜ್ಞೆಯಿಂ
ಸಾಧ್ಯಮಪ್ಪೊಡಮಿದನ್ ಬೇಡುವೆನ್. ಅನಲೆಯಂ
ಕೊಂಡೊಯ್ದು, ಸುಕುಮಾರಿಯಂ ಕಠಿನಕೊಡ್ಡದಿರ್.”
ಮನ್ನಿಸೆನ್ನನ್; ತಂದೆಯೊಡವೋಗಿ, ಧರ್ಮಮನ್
ಸೇವಿಪೆನ್.” ಎಂದನಲೆಗೆಂದನ್ ದಶಾನನಂ,
ಇಲ್ಲಿರ್ದ್ದೆ ಧರ್ಮಕ್ಕೆ ಸೇವೆಗೆಯ್!” “ಧರ್ಮಮಂ
ಪೊರಗಟ್ಟೆ ಸೇವಿಪುದೆಂತು?” ಪರಿಹಾಸ್ಯಕೆನೆ,
ಅಸುರನಾಕೆಯ ಕಯ್ಯನಾಂತು : “ನನ್ನನ್ನರಂ
ನಿನ್ನನ್ನರುಳಿಯೆ, ಧರ್ಮಮುದ್ಧಾರಮಾದಪುದೆ? ೨೨೦
ನಿನ್ನಯ್ಯಗಿಂ ಮಿಗಿಲ್ ನೀನ್ ವೇಳ್ಕುಮೆನಗಲ್ತೆ?”
ಬೊಪ್ಪನಪ್ಪಣೆಯೆನಗೆ ಬಟ್ಟೆ.” ಎನುತ್ತಾ ತರಳೆ
ನಿಂತಿರಲ್ ಪಿತೃಚರಣಮೂಲಮಂ ನಿಟ್ಟಿಸಿ.
ವಿಭೀಷಣಂ : ಪರಿಯಯ್ಯನೆಂಬುದೆ ದಿಟಂ, ಮಗಳೆ,
ನೀನಿರಲ್ ವೇಳ್ಕುಮದೆ ನೀತಿ.” “ತೊರೆವೆನೆ ನಿನ್ನ
ಸಾನ್ನಿಧ್ಯಮಂ?” “ನಿನಗೆ ತಡೆಯುಂಟೆ, ಪೇಳಕ್ಕ?
ನಿನ್ನಯ್ಯನೆಲ್ಲಿರ್ದೊಡಲ್ಲಿಗೆ, ಏಗಳಾದೊಡಂ,
ಪೋಗಿ ಬರಲನುಮತಿಯನಂತೆಯೆ ವಿಮಾನಮನ್
ಪುಷ್ಪಕವನೀವೆನ್!” ಎನುತ್ತವಳ ಬಳಿ ನಿಂದ
ದಶಶಿರನ ಆ ದೈನ್ಯದೊಳ್ ದನುಜನುದ್ಧಾರಕರ ೨೩೦
ಭಾವಬೀಜವ ಕಂಡು ಹರ್ಷಿಸಿ ವಿಭೀಷಣಂ
ಬೀಳ್ಕೊಟ್ಟನಣ್ಣನರಮನೆಯ ಪೆರ್ಬಾಗಿಲಂ!





*********************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ