ಲಂಕಾ ಸಂಪುಟಂ: ಸಂಚಿಕೆ 2 - ವನಮಂ ಪೊಕ್ಕನಶೋಕಂ
ಅಶೋಕವನಮಿರ್ಪ ತಾಣವನರಸಿ ತೊಳತೊಳಲಿ
ಚರಿಸಿ, ಕಾಣದೆಲ್ಲಿಯುಮಯೋನಿಜೆಯ ನೆಲೆಯಂ,
ಶಿಶಿರ ನಿಶಿಯವಸಾನದಾಸನ್ನತೆಯ ವೆತೆಗೆ
ಹೊತ್ತಿ, ಹನುಮನ ಚಿಂತೆ ಚಿತೆಯಾಯ್ತು. ಕಿಡಿಕಿಡಿಯೆ
ಮೂಡು ಬಾನೊಳ್ ಮೂಡಿ ಹೆಡೆಯೆತ್ತಿದಾ ರಾಶಿ
ವೃಶ್ಚಿಕಂ ಮಸುಳಿದುದು ಹೊಗೆಮಂಜಿನೈಕಿಲಿನ
ಸೋನೆಯಲಿ. ಪಥ ಪಥದೊಳಲ್ಲಿಯಿಲ್ಲುಳಿದಿರ್ದ
ದೀಪರಾಜಿಗಳೆಲ್ಲ, ಬಿಂದುರೂಪದ ತಮ್ಮ
ಕಾಂತಿಕೇಂದ್ರವನುಳಿದು, ಪರಿವೇಷನೇಮಿಯನೆ
ಮುಸುಗಿಟ್ಟು ನಿಂದುವು, ಹಿಮಾಸಾರ ಸಾಂದ್ರತೆಗೆ ೧೦
ನಿಸ್ತೇಜಮಾಗಿ. ಮಾಗಿಯ ಮಂಜು ಲಂಕೆಯಂ
ಸುತ್ತಿದುದು, ಮುತ್ತಿದುದು, ಲಗ್ಗೆನುಗ್ಗೊಳವೊಕ್ಕು
ನೊಣೆದು ನುಂಗಿದುದಖಿಲ ದೃಗ್ವಿಷಯಮಂ. ಭಟರ್,
ವೃಶ್ಚಿಕರೋಮನಿತ್ತ ಲಂಕೇಶನಾಜ್ಞೆಯಂ
ಪೊತ್ತು ನಗರವನೆಲ್ಲ ಸೋಸುತರಸುತ್ತಿರ್ದ
ಶಸ್ತ್ರಾಸ್ತ್ರ ಸಜ್ಜಿತ ಭಯಂಕರ ಭಟರ್,
ತಮ್ಮ
ಕಟಿಯ ಖಡ್ಗದ ಖಣತ್ಕಾರಂಗಳಿಂ ಮತ್ತೆ
ಕಾವಲೆಳ್ಚರ್ವುಲಿವ ತುತ್ತುರಿಯ ದನಿಗಳಿಂ
ಬೆರ್ಚ್ಚಿಸಿದರನ್ಯರವ ಶೂನ್ಯದಾ ನಿಶ್ಯಬ್ದ
ನಿಶೆಯ ಹೈಮ ವೃದ್ಧಾಪ್ಯಮಂ. ಇಚ್ಛಾರೂಪಿ ೨೦
ಆಂಜನೇಯಂ ಒರ್ಮೆ ಕಣ್ಣಾದನಿನ್ನೊರ್ಮೆ
ಕಿವಿಯಾದನಾಲಿಸಿದನಾಲೈಸಿದನ್ ; ಹೊಂಚಿ
ಪರಿಶೀಲಿಸಿಸುತ್ತೊಯ್ಯನೊಯ್ಯನೆಯೆ ಮುಂಬೊಕ್ಕು
ಏರ್ದನ್ ತ್ರಿಕೂಟಾಚಲ ನಿತಂಬಮೆನಲುರ್ಬ್ಬಿ
ರತಿಯಿಂಪನೆರ್ದೆಗೊಳಿಸುತಿರ್ದ ಜಗತಿಯ ಪೆಸರ
ಕೆಮ್ಮಣ್ವೆಟ್ಟಮಂ, ಅಶೋಕವನಿಕಾ ಮಧ್ಯೆ
ಕಡಲ ದಡಕನತಿ ದೂರಸ್ಥಮಂ. ಸಾಗರದ
ಘೋಷಮುಂ ಕಿವಿಗೆ ಬರೆ ಶೋಕಮುಕ್ಕಿತು ಮನಕೆ
ನೆನವಾಗಲಾ ಕಪಿಬಲ ನಿರೀಕ್ಷೆ, ಮೇಣಂತೆ
ಸುಗ್ರೀವ ರಾಮರುತ್ಕಟ ಘೋರ ಸಂಕಟದ ೩೦
ಕಿಷ್ಕಿಂಧೆಯಾಶಂಕೆ, ಮೇಣ್ ದೇವಿಯಾ ಅನಿರ್
ವಚನೀಯ ದುಃಖನಾರಕತೆ :
“ತೆರೆಮೊರೆಯಲ್ತು ;
ಇದು ಅಗಲ್ಕೆಯ ಕಡಲ ಕರುಳ ನೋವಿನ ಕರೆಯ
ನರಳಲ್ತೆ ? ದೇವಿ ಸೀತೆಯ ಕಂಠಮೂಕತೆಗೆ
ಪ್ರತಿಮೆಯೋಲ್ ಪ್ರತಿನಿಧಿಯವೋಲುಲಿಯುತಿದೆ ಈ
ಸರಿತ್ಪತಿಯ ವ್ಯಾಕುಲ ಸಲಿಲ ಜಿಹ್ವೆ. ಕೋಪವೋ
ಕನಿಕರವೊ ? ಮೂಕಲಿಕೆಯೋ ಮುನಿಸೊ ? ಅಥವಾ
ರಹಸ್ಯವನೊರೆದು ಪ್ರಚೋದಿಸುವ ಸಂಕೇತವೋ ?
ಹೇ ಅಂಬುನಿಧಿ, ನಿನ್ನನುತ್ತರಿಸಿ ಬಂದೆನ್ನ
ಸಾಹಸಂ ಸಫಲಮಪ್ಪಂತೆನಗೆ ಕರುಣಿಸಯ್ ೪೦
ಸೂರ್ಯದೇವನ ಕುಲದ ಸೂರ್ಯನ ಸತೀಮಣಿಯ
ಪುಣ್ಯಸಾಕ್ಷಾತ್ಕಾರಮಂ. ವನಮಶೋಕಮಂ
ಕಾಣಿನಿನ್ನುಂ. ಶ್ರವಣಮುಖದಿಂದಮಾ ವಾರ್ತೆ
ಬುದ್ಧಿಗೋಚರಮಾದೊಡಂ ಸಿದ್ಧಿಗೋಚರಂ
ತಾನಾದಳಿಲ್ಲಮಿನ್ನುಂ ದೇವಿ, ಚರಿಸಿದೆನ್ ;
ಅರಸಿದೆನ್ ; ಸೋವಿದೆನ್ ಪತ್ತನ ಸಮಸ್ತಮಂ ;
ಕಂಡೆನದ್ಭುತ ದೃಶ್ಯ ಬಹುಳಂಗಳನ್ ; ಅರಿದೆನ್
ಮಹಾವ್ಯಕ್ತಿಗಳ ಬಲಾಬಲ ಸೂಕ್ಷ್ಮ ಪರಿಚಯ
ಮಹದ್ವಿಷಯಮನ್ ; ಕಂಡೆನಖಿಲ ಗೌಣಂಗಳಂ,
ಕಂಡೆನಿಲ್ಲೊಂದನಾ ಪ್ರಾಧಾನ್ಯಮಂ.
ಕಣ್ಗೆ ೫೦
ಕಾಯುತಿಹ ಚೆಲ್ವಿನೋಲಂಧತೆಗೆ ರೋಸುತಿದೆ
ರಜನೀಶ್ರಮಂ. ಹೇ ಅನಂತತಾ ಪ್ರತಿರೂಪಿ,
ಓ ಶರಧಿ, ಬೋಧಿಸೆನ್ನೀ ಮಂಜು ಮುಸುಗಿರ್ಪ
ನಿಶೆಯವೋಲಿಹ ಮತಿಗೆ ಮಿಸುನಿವೆಳಗಿನ ಉಷೆಯ
ಮುಂಗಾಣ್ಗೆಯಂ ! ಹತಳಿರಲಿ, ಮೃತಳಿರಲಿ; ಮತ್ತೆ
ಬರ್ದುಕುವ ತಪದ ತೀವ್ರತೆಗೆ ತವಿದು
ಸುಕ್ಕಿರಲಿ ;
ಎಲ್ಲಿರಲಿ, ಎಂತಿರಲಿ, ಕಂಡೆನಲ್ಲದೆ ನನ್ನ ಆ
ಸುವ್ರತಾ ಭಗಿನಿಯಂ ಬಿಡೆನೀ ದಶಗ್ರೀವ
ಸೀಮೆಯಂ.”
ಅಂತು ತನ್ನೊಳಗೆ ತಾಂ ಮುಂದನ್
ಆಲೋಚಿಸುತೆ ನಿಶ್ಚಲಂ ನಿಂದ ಹನುಮನ
ಕಿವಿಗೆ ೬೦
ಭೋಂಕನೆಯೆರಗಿದತ್ತು ಜಗತಿ ಶೈಲವನಡರಿ
ಪುಡುಕಿ ಬರ್ಪಿರುಳ ಕಾವಲ್ಪಡೆಯ ನೈಶಚರ
ಸೈನಿಕರ ಸಕ್ರಮದ ಸಮುದಾಯ ಪದಹತಿಯ
ಲೌಹ ಘೋಷಂ. ನಿಮಿರಿ ನಿಂದಾಲಿಸಿದನಾ
ನಿಮಿಷ ನಿಮಿಷಕೆ ಬಳಿಗೆ ಬಳಿಸಾರುತಿರ್ದುದಂ.
ಸಾರೆ ಬರೆವರೆ ಲೋಹರವಮಂ ಮೀರಿ ತೂರಿ
ಕೇಳಿ ಬಂದತ್ತವರ ಸಂಭಾಷಣೆಯ ದನಿಯ
ಕರ್ಣಾಮೃತಂ :
“ದೇವಿಯಂ ಲಂಕಿಣಿಯನೆಮ್ಮ
ನಗರ ರಕ್ಷಾಲಕ್ಷ್ಮಿಯಂ ಗೆಲ್ದು ಲಂಕೆಯಂ
ಪೊಕ್ಕಿರ್ಪನೆನೆ, ದಿಟಂ, ಸಾಮಾನ್ಯನಲ್ಲನಾ ೭೦
ಮಾಯಾಸಮರ್ಥಂ !”
“ಇನ್ನೆಗಮಾ ತ್ರಿಶೂಲಮಂ
ಇದಿರ್ಚಿ ಬರ್ದುಕಿದರಿಲ್ಲ. ಭೇದಿಸಿಹನೆಂತುಂ
ಅಭೇದ್ಯಮಂ ! ಮುರಿದಿಹುದೆ ಶುಲದ ಬೃಹದ್ಬಲಂ,
ನಕ್ಷತ್ರನೇತ್ರ ?”
“ಅಲ್ತಲ್ತು. ಕೊಂಕಿಹುದದರ
ಋಜುತೆ !”
“ದೇವಿಯ ಮುಖಂ ಲಂಕೆಗೆ ವಿಮುಖಮಾಯ್ತೆ ?”
“ವಿಮುಖಮಾಗಿಹುದೊಂದೆಯಲ್ತು. ತೇಜಂಗೆಟ್ಟು
ಜಡತೆಯಾಂತಿರ್ಪುದಯ್ ! ನೋಡವೇಳ್ಕುಂ ;
ಬರಿದೆ
ಬಣ್ಣಿಸಿದರದು ಬಗೆಗೆ ಬಾರದಯ್.”
“ನಮ್ಮ ದೊರೆ
ತಂದನೇತಕ್ಕೊ ಆ ಪೆಣ್ಮಾರಿಯಂ ?”
“ನೀನ್
ಕಂಡುದಿಲ್ಲಾಕೆಯಂ ! ಮೀಯದುಣ್ಣದೆ ಉಡದೆ ೮೦
ಮಸುಳ್ದಿರ್ದೊಡಂ ಮಹಾಮಹಿಳೆಯಂ ನೋಳ್ಪೆ,
ಬಾ,
ದೂರದಿಂ ತೋರ್ಪೆನಾಕೆಯನ್. ಎಮ್ಮನೆಡೆಗೊಳ್ವ
ಕಾವಲಿನ ಬಟ್ಟೆಯೆಡೆ ಇರ್ಪುದಾಕೆಯ ಸೆರೆಯ
ತೃಣಕುಟೀರಂ.”
“ದುಶ್ಯಕುನಮಯಂ ಈ ರಾತ್ರಿ !”
“ಕಾಣ್, ಬಾ, ಅದೊಂದಾದೊಡಂ ನಿನಗೆ ಲಭಿಪುದೈ
ಶುಭದರ್ಶನಂ !”
ಇಂತು ಸಂವಚಿಸುತಾ ದಳಂ
ಪಿಟ್ಟುಮಂಜಿನ ದಟ್ಟ ಕಣ್ಕಟ್ಟಿನೊಳ್ ಮುಂದೆ
ಪರಿದತ್ತು. ವಾಣಿಮಾತ್ರರ್ ಭಟರನನುಸರಿಸಿ
ಹಿಂಬಾಲಿಸಿದನನಿಲಜಂ ತನ್ನ ಸುಕೃತಕ್ಕೆ
ಕೈಮುಗಿಯುತಾ.
ತನ್ನನರಸುತಿರ್ದವರಿಂದೆ ೯೦
ತಾನರಸುತಿರ್ದರಸಿಯಿರ್ದರಸ ತೃಣಕುಟಿಯ
ಕುಟ್ಟಿಮಸ್ಥಾನಮಂ ತಿಳಿಯುತನಿಲಾತ್ಮಜಂ,
ಪತ್ತಿರಿರ್ದೆತ್ತರದ ಮರದ ನೆತ್ತಿಗೆ ಪತ್ತಿ,
ತನ್ನ ಹೊತ್ತಂ ಹೊಂಚಿ ಕಾದುಕುಳಿತನೊ ಹೊನ್ನ
ಹೊತ್ತರೆಗೆ !…. ಆನಂದದಾವೇಶಕೆಂಬವೋಲ್
ಜುಮ್ಮೆಂದು ಪುಲಕಿಸಿತು ತನು. ತುರೀಯಮನುಭವಂ
ಕೈಸಾರ್ದುದೆನೆ ಚಿತ್ತವೃತ್ತಿಯ ನಿರೋಧದಿಂ,
ಸವಿದು ಕೃತಕೃತ್ಯತೆಯ ಮೃತ್ಯುಮಾಧುರ್ಯಮಂ,
ಜೋಂಪಿಸುತೆ ನಿದ್ದೆಗದ್ದುದು ಚೇತನಂ. ಆಶ್ರು,
ಸಂತೋಷ ತೀಕ್ಷ್ಣತೆಯ ನಿಷ್ಪೀಡನೆಗೆ
ಬಿಡದೆ ೧೦೦
ಆತ್ಮೇಕ್ಷು ಸೋರ್ವ ಅನವರತ ರಸಧಾರೆಯೋಲ್,
ತೊರೆಯೊಳ್ಕಿದುದು ಹನುಮನಕ್ಷಿಯ ಕೃತಜ್ಞತಾ
ಶತಪತ್ರದಿಂ. ಸ್ವೇದಮಯಮಾದುದಾ ದೇಹ
ವಜ್ರಂ, ಕುಳಿರ್ಕೋಳ್ಪ ಮಾಗಿಯಿರುಳಿನ ತುದಿಯ
ಮೂಗು ಮುರಿವಂತೆ. ಸಂತೋಷಮಲ್ಲದೆ ಬೇರೆ
ಭಾವಕಿನಿತೆಡೆಯಿಲ್ಲದಾಯ್ತಾ ಮರುತ್ಸುತನ
ಚಿತ್ತದ ಘನಸಮಾಧಿ !
ಕಳೆದುವು ಮುಹೂರ್ತಗಳ್.
ಪರವಶತೆ ಮಾಣ್ದುದು. ಮರಳ್ದುದು ಮನಂ ಮತ್ತೆ
ಬುದ್ಧಿಸ್ಥಿತಿಯ ಕರ್ಮರಂಗಕ್ಕೆ. ಮರದ ತುದಿ
ಹರೆಯ ಮೇಲಿರ್ದು ಕಿವಿಯಾದನ್, ಕುಟೀರದಿಂ ೧೧೦
ಪೊಣ್ಮುತಿರ್ದೊಂದೊಂದು ರವಕೆ ರೋಮಾಂಚನವೆ
ತನ್ನ ಭಕ್ತಿಯ ತುಳಿಲ್ಗಾಣ್ಕೆಯಪ್ಪಂತೆವೋಲ್.
ತನಗೊಳಗೆ ಹುಗಲಿಲ್ಲದಾ ಕಾರಣದಿ ನಿದ್ದೆ ತಾಂ
ಸಡ್ಡೆಗೆಡದೆಯೆ ಪೊರಗೆ ಬಾಗಿಲಂ ಕಾಯ್ವವೋಲ್,
ಮುದ್ರಿಸಿತ್ತಾ ಪರ್ಣಶಾಲೆಯಂ ಸುಯ್ಯುಸಿರ
ಸದ್ದಿಲಿತನಂ. ಗುಡಿಯೊಳಗೆ ನರಳುತಿರ್ದುದೆನೆ
ಜಾಗರಣೆ, ಈಗಳಾಗಳೆ ಪೊಣ್ಮಿಯೇರ್ದತ್ತು
ಅಬಲೆಯ ಕೊರಳ ಅಬಲರೋದನಂ. ಅನಿಲಜಂ
ಎನಿತು ಕಿವಿಗೊಟ್ಟಡಂ ಆ ನಾದಮರ್ಥಮಯ
ವಾಗ್ರೂಪಮಂ ಧರಿಸಲಾರದೆ ಸೋಲ್ತು, ಕಡಲ ೧೨೦
ತೆರೆಕರೆಯ ಮೊರೆಯವೋಲಾಯ್ತು. ನಾನಾ ಚಿಂತೆ,
ದೇವ ದಾನವರಂತೆ, ಮಥಿಸಿತು ಸಮುದ್ರಮಂ
ಮರುತಜನ ಮನದಾ: “ನನ್ನುದ್ಯಮಕೆ ಗುರಿಯಿದುವೆ
ದಿಟವೆ ? ಕಾಣ್ಬೆನೆ ಜನಕಜಾತೆಯಂ, ಸೀತೆಯಂ,
ರಾಮದಯಿತೆಯನಿಲ್ಲಿ ? ಸಾಗರೋಲ್ಲಂಘನಂ
ಸಾರ್ಥಮಪ್ಪುದೆಯಿಲ್ಲಿ ? ಸುಗ್ರೀವನಾತ್ಮಕ್ಕೆ
ತೃಪ್ತಿಯಪ್ಪುದೆ ? ರಾಮನಾತ್ಮಕ್ಕೆ ನಾರಕತೆ
ತಪ್ಪುವುದೆ ? ಕಪಿಬಲದ ಭಾರದಿಂದೇದುವ
ಮಹೇಂದ್ರಾದ್ರಿಯಂಚಿತ ಸಮುದ್ರವೇಲಾ ವಿಷಮ
ಉದ್ಗ್ರೀವತೆಗೆ ಫಲಂ ದೊರೆಕೊಳ್ಳುವುದೆ
ಇಲ್ಲಿ ? ೧೩೦
ನನ್ನ ವಕ್ಷದ ವಜ್ರದೇವಾಲಯದೊಳಿರ್ಪ
ಶ್ರೀಮುದ್ರಿಕೆಗೆ ತನ್ನ ಪರಿಚಿತ ಮನೋಹರಿಯ
ಮುಖಚಂದ್ರಮಂ ಪುನರ್ಬಿಂಬಿಸುವ ಪೂಜೆಯಂ
ಸಲ್ಲಿಸುವ ಸೈಪಿಲ್ಲಿ ಸಿದ್ಧಿಸುವುದೇ ನನಗೆ
ಧನ್ಯಂಗೆ ?…. ದುರುಳ ದಾನವ ದುರಾಶೆಯ ಬಲೆಯ
ಸೆರೆಯ ಸಂಕಟದಲ್ಲಿ ಬೇಯುವ ಪತಂಗದೋಲ್
ನಮೆವ ಸತಿಗಿಲ್ಲಿ ಗಡ ದೊರೆಕೊಳ್ಗೆ ತನ್ನಿನಿಯ
ದಾಶರಥಿಯಿತ್ತ ಸಂದೇಶ ಧೈರ್ಯಂ ! ಮತ್ತೆ,
(ಪಲ್ಗಚ್ಚಿ ಪದಪದವನೊತ್ತಿ ಪೇಳ್ದನ್ !) ಮತ್ತೆ,
ಧೂರ್ತಲಂಕೇಶ್ವರನ ಪಾಪದಿಂಧನಕಿಲ್ಲಿ ೧೪೦
ಕಿಚ್ಚಿಕ್ಕುವೆನ್ ! (ಮೌನಮಿರ್ದೊಂದಿನಿತು
ಪೊಳ್ತು)
ಎಂತೆನಗೆ ಪ್ರತ್ಯಕ್ಷಮಪ್ಪಳೋ ಆ ದೇವಿ ?
ಎಂತು ಗುರುತಿಸುವೆನೋ ಆ ಪೂಜ್ಯೆಯಂ ?
ಎಂತು
ಮೈದೋರ್ದಪೆನ್ ? ಎಹಂಗೆ ನುಡಿಸುವೆನ್ ? ಬೆಚ್ಚದೋಲ್,
ಶಂಕಿಸದವೋಲ್, ಪೆರರ್ ತಿಳಿಯದೋಲ್, ಮೆಚ್ಚುವೋಲ್,
ಮೇಣ್ ಒಳ್ಪಿನಿಚ್ಚೆಗೆಂತುಂ ಗೆಲ್ಲಮಪ್ಪವೋಲ್
ವರ್ತಿಪೆನೆಹಂಗೆ ?…. ಚಿಂತೆಗೆ ಪೊಳೆವುದಲ್ತು. ಆ
ಆ ಕ್ಷಣಂ ಪ್ರತಿಭಾನಮೆಂತು ನಡೆಪುದೊ ಅಂತೆ
ನಡೆದಪೆನ್. ಪ್ರಾಕೃತಕೆ ಬುದ್ಧಿ; ಅಪ್ರಾಕೃತಕೆ,
ಭೂಮಕೆ, ಅನಲ್ಪಕೆ, ಮಹತ್ತಿಗೆಂತುಂ ಪ್ರತಿಭೆ ೧೫೦
ಗುರುವಲ್ತೆ ?”
ವಾಯುಜಂ ಕಾದು ಕುಳಿತಿರಲಿಂತು
ತರಿಸಂದು, ಗಿರಿಯ ನೆತ್ತಿಯನುಳಿಯುತೊಯ್ಯನೆಯೆ
ಕಣಿವೆಗಿಳಿಯಲ್ ತೊಡಗಿದುದು ಮಂಜು. ತಿಳಿಗೊಂಡ
ಬಾನೆಡೆಯ ಪಡುವಲೊಳ್ ಮಿನುಗಿದುವರಿಲ್ ಮರಳಿ
ಅರಳಿ. ಮೇಣ್, ಮೂಡಲ ಮನೋಧ್ಯಾನನೇಮಿಯೊಳ್,
ಸೂರ್ಯೋದಯದ ಸುದೂರಸ್ಮೃತಿಯವೊಲ್, ಲಸತ್
ಗೋಚರಿಸುತಿರ್ದುದು ಉಷಃಸ್ಮಿತಂ. ಇರಲಿರಲ್,
ಆ ಪ್ರಾತಃಪೂರ್ವ ಪ್ರತ್ಯುಷೆಯ ನಿಶ್ಯಬ್ದತೆಗೆ
ಸಿಳ್ಳಿರಿಯೆ ತೊಡಗಿದತ್ತೊಂದು ಮಡಿವಳವಕ್ಕಿ,
ಬಳಿಯಿರ್ದ ಪಾರಿವಾಳದ ಮರದ ಎಲೆಯಿರದ ೧೬೦
ಹೂತ ಹರೆಯಿಂದೆ. ಮತ್ತೊಂದು ಮಾರುಲಿಯಿತ್ತು
ಹಾಡಿದುದು ಗೋರಂಟಿಯಿಂದೆ. ಮುತ್ತುಗವೇರಿ
ಕರೆದುದಿನ್ನೊಂದವರ ಒಡನಾಡಿ. ಬಕುಳದಿಂ
ಮಗುದೊಂದು ಬಾಯ್ದೆರೆದುದನಿಬರಂ ತನ್ನೆಡೆಗೆ
ಸೆಳೆಗೊಳ್ವವೋಲ್. ದನಿಯ ಹಾಸುಹೊಕ್ಕುಗಳಿಂದೆ
ನೇಯುತಿರಲುಲಿಯ ಬಲೆಯಂ ಮಡಿವಳಂಗಳ್,
ಅದೂರದಿಂದಾಲಾಪನೆಗೆ ಮೊದಲ್ಗೆಯ್ದುದೊರ್
ಖಂಜನಂ. ಹಿಂಬಾಲಿಸಿದುವದಂ ಒಂದೆರಳ್
ಮೂರ್ ನಾಲ್ಕುಮೈದಾರ್ಗಳೇಳೇಂಟುಗಳ್, ಇಲ್ಲಿ
ಬಿದಿರ ತುದಿಯಿಂದಲ್ಲಿ
ನಂದಿಮರದಿಂದಿತ್ತ ೧೭೦
ತೆಂಗುಗರಿಯಿಂದತ್ತ ಕೌಂಗುದಲೆಯಿಂದೆತ್ತ
ಕಿವಿಯಿತ್ತೊಡತ್ತಣಿಂದೆ, ಒಯ್ಯನೊಯ್ಯನೆಯೆ
ತುಂಬುದಿಂಗಳ ಕನಕಬಿಂಬಕ್ಕೆ, ಪೊನ್ತನಂ
ಬಾಡಿ, ಮೂಡಿದುದು ಬೆಳ್ಳಿಯತನಂ. ಬೆಣ್ಣೆವೂ
ಬಣ್ಣಮಂ ಕಣ್ಣರಿವವೊಲ್ ಮೊದಲ್, ನಸು ನಸುಕು;
ತರ್ವಾಯ ಮುತ್ತುಗದ ಪಾರಿವಾಳದ ಮರದ
ಹೂಗೆಂಪನರಿಪವೊಲ್, ಮುಂಬೆಳಕು ; ಅನಂತರಂ
ಪಳದಿ ನೀಲಿಗಳಂ ಪ್ರದರ್ಶಿಸುವ ಬೆಳ್ವೆಳಗು ;
ತರತರದ ತೆರೆತೆರೆಯ ಬೆಳಕಿನಾ ದಿನದ ಶಿಶು
ತಿಪ್ಪತಿಪ್ಪನೆ
ಪಜ್ಜೆವಜ್ಜೆಯಿಡುತೈತಂದು ೧೮೦
ಉದಯಾಚಲದ ತೊಡೆಯೇರ್ದುಷೆಯ ಮಡಿಲೊಳಗೆ
ತನ್ನ ತಾವರೆಗೆಂಪಿನೆಳಮೆಯ್ಯನಿಟ್ಟುದೆನೆ
ಹೊಗರಾಂತುದುದಯ ವದನಂ. ಮೂಡಲೆತ್ತಿದಾ
ಉಷೆಯ ಆರತಿಗೆ ಮಂಗಳಗಾನಮಂ ಪಾಡಿ
ಸೇಸೆಯಂ ತಳಿವಂತೆ, ಲಕ್ಷಪಲ್ಲವಿಯುಲಿವ
ಪಕ್ಷಿಯಕ್ಷತೆಯೆರಚಿದಳು ಅಶೋಕವನಿಕಾ
ಲಕ್ಷ್ಮಿ : ಗಿಳಿವಿಂಡುಗಳ್, ಕಾಮಳ್ಳಿವಿಂಡುಗಳ್,
ಪಿಕಳಾರವಿಂಡುಗಳ್ ಗೂಡು ಗೊತ್ತುಗಳಿಂದೆ
ಮುಕ್ತಕಂಠಗಳಾಗಿ ಮುಕ್ತಪಕ್ಷಗಳಾಗಿ
ಗುಂಪುಗುಂಪೆದ್ದು ಹಾರಾಡಿದುವು, ಹರ್ಷದಿಂ, ೧೯೦
ಧ್ವನಿಚಾರು ವರ್ಷದಿಂ, ಆಲಿಸಿದರಾತ್ಮಗಳ್
ತೊಪ್ಪನೆ ತೊಯ್ವವೋಲ್. ನಿಮಿರ್ದುದು ನವಿರ್,
ಮೆಯ್ಗೆ
ಹನುಮನಾ ! ಸಿದ್ಧಹಸ್ತವನೊತ್ತಿದತ್ತಾಶೆ
ಹೃದಯದೊಳ್. ತುಂಬಿದತ್ತುಸಿರ ಕೋಶಂ ಮಲರ
ಕಂಪಿಡಿದ ತಂಬೆಲರ ಪೂರೈಕೆಯಿಂ. ಕಣ್ಣರಳಿ
ನೋಡಿದನು, ಬೆಳೆವ ಎಳವೆಳಗಿನೊಳ್, ಹಿಮವಗಲಿ
ತಾನಿರ್ದ ಗುಡ್ಡನೆತ್ತಿಯ ತೋಂಟನೋಟಮಂ.
ಚಿತ್ರಕರ್ಮದ ರತ್ನಕಂಬಳಿಯವೋಲಂತೆ
ರಂಗುರಂಗಿನ ಓಕುಳಿಯನೆರಚಿದುದು ಬಗೆಗೆ
ಆ ಅಶೋಕೋದ್ಯಾನ ಕಲೆಯ ಲೋಕಂ.
ಮುತ್ತುಗಳ್ ೨೦೦
ರಾಸಿ ಸುರಿವಂತೆ ನೀರ್ಬೀಳಗಳ್ ಬೆಳ್ಳಿಯೋಲ್
ಬೆಳ್ಳಂಗೆಡೆದು ಪರಿದುವಲ್ಲಲ್ಲಿ. ಪಸುರುವುಲ್,
ಪಚ್ಚೆರೋಮಾಂಚನಂ ತಾನೆಂಬಿನಂ, ಮುಚ್ಚಿ
ಅಲಂಕರಿಸಿದುದು ಪೃಥ್ವಿಯಂ. ರೋಮಮಯ ಧರೆಯ
ಕೋಮಲ ತೃಣಾಜಿನಕೆ ತೊಡಿಸಿದ ಪರಲ್ಗಳೆನೆ,
ಕಾಮಧನುಕಾಂತಿಯಿಂ ಪೊಳೆವ ಕಲ್ಬಂಡೆಗಳ್
ಕಂಡರಣೆಗೊಂಡಿರ್ದುವಲ್ಲಲ್ಲಿ. ನಡುನಡುವೆ,
ಹಳದಿಗೆಂಪಿನ ಹೊಯಿಗೆ ಹೊಯ್ದ ಬನಬೀದಿಗಳ
ದೀರ್ಘ ವಂಕಿಮ ವೃತ್ತ ಚಿತ್ರರೇಖಾಶೈಲಿ
ಚೆಲ್ವಾಯ್ತು, ಚಿನ್ನರನ್ನರಂಗೋಲಿಯೋಲ್, ಎಲ್ಲ ೨೧೦
ಚೆಲ್ವಿಂಗೆ ಮುಡಿಯಾಗಿ, ಮರುತಜನ ಕಣ್ಗುರಿಗೆ
ಗುಡಿಯಾಗಿ, ಕಡಲ ನೀರ್ನಡೆಗೆ ನಿಲ್ಗಡಿಯಾಗಿ,
ಮಾರುತಿಯ ನಿಃಶ್ರೇಯಕೊಂದು ಮುನ್ನುಡಿಯಾಗಿ
ಕುಳ್ತುದೆಲೆವನೆವಕ್ಕಿ, ತನ್ನ ಬೆಚ್ಚನೆ ಗರಿಯ
ರೆಕ್ಕೆತಿಪ್ಪುಳೊಳಿಕ್ಕಿ ರಕ್ಷಿಪ್ಪವೋಲ್
ದುಃಖಿ
ಭೂಜಾತೆಯಂ !
“ಕಾಣೆನಾರುಮನ್. ಆದೊಡಂ
ಪೊದೆ ಪುಳಿಲ್ ತೆರೆತೆರೆಯ ಮರಮರದ ಮರೆಯಲ್ಲಿ
ಕಾವಲಿರ್ಪುದನರಿತು ಪರ್ಚುವೋಲದುರುತಿದೆ
ನನ್ನ ಹೃದಯಂ. ನಂಬುಗೆಯ ನಟಿಸಿ, ದೇವಿಯಂ
ವಂಚಿಸಿ ವಶಕೆ ತಾರಲಿಂತು ನಾರೀ ಹೃದಯ ೨೨೦
ಚೌರ್ಯನಿಪುಣಂ ಗೆಯ್ದ ಮಾಟಮೆ ದಿಟಂ. ನನ್ನ
ಬಂದ ಬೇಹಿನ ಕಜ್ಷಮೆಂತುಂ ಬಯಲ್ದವೋಲ್
ಹೊತ್ತ ಹಾರುತ್ತಿಲ್ಲೆ ಕಾಯ್ದಪೆನ್, ಈ ಬೃಹದ್
ಬಾಹುಶಾಖೆಯ ಶಿಂಶುಪದ ಪತ್ರ ಸಾಂದ್ರತೆಯ
ನೀರಂಧ್ರ ರಕ್ಷೆಯಲಿ. ಬಂದೆ ಬರುವಳ್ ದೇವಿ
ಈಯೆಡೆಗೆ. ಬದುಕಿರ್ದರಿಲ್ಲಿರ್ದರೀಯೆಡೆಗೆ
ಬರದಿರಳ್ ಗಿರಿವನಪ್ರಿಯರಾಮನರ್ಧಾಂಗಿ,
ಆ ವಿಪಿನ ಸಂಚಾರ ಕುಶಲೆ. ಬಂದೆ ಬರ್ಪ್ಪಳ್
ಧ್ರುವಂ : ಪಂಙ್ಕ್ತಿರಮ್ಯಮೀ
ದ್ರುಮಚಾರುಗೋಷ್ಠಿ ;
ದುಮುಕುತಿಹುದಿಲ್ಲಿ ಶಿವಜಲದ
ಗಿರಿನಿರ್ಝರಿಣಿ. ೨೩೦
ಹೇಮಕೃತ ನೇಮಿಯಿಂ ಶೋಭಿಸುವ ಶಾದ್ವಲದ
ಮಧ್ಯೆ ವಿವಿಧಾಕೃತಿಯ, ಪರಮ ಶೀತಲ ಜಲದ,
ಕಂಗೊಳಿಸುತಿದೆ ಕನಕ ಸೋಪಾನ ದೀರ್ಘಿಕೆಯ
ದ್ರವರೂಪಿದರ್ಪಣಕೆ ರಚಿಸಿದಂಚೆಂಬಿನಂ
ಮುಕ್ತಾಸಿಕತ ಶೋಭೆ ; ಚಂಪಕಂ, ಚಂದನಂ,
ನಾಗಚಂಪಕಮಂತೆ ಬಕುಳಂ ; ಸಮೀರಣನ ಮೇಣ್
ಸಹಯೋಗ ಶಾಂತಿ. ಬಂದೆ ಬರ್ಪ್ಪಳ್, ಧ್ರುವಂ, ದೇವಿ,
ಪಾರ್ಥಿವೇಂದ್ರನ ಪತ್ನಿ, ಬದುಕಿರ್ದೊಡೀ ಶಾಂತ
ಮೇಣ್ ಕಾಂತ ಕುಂಜದೈಕಾಂತಕೆ !”
ಮನಂ ಪೊಂಗೆ
ಧ್ಯಾನ ನೈವೇದ್ಯಮಂ ನೀಡಿ ಕಪಿಕುಲಯೋಗಿ ೨೪೦
ವಿಶ್ವದೇವರ್ಕಳಿಗೆ, ಶಿವಶಕ್ತಿಗಳಿಗೆ ಮೇಣ್
ಅಂತರ್ಯಾಮಿ ಸಚ್ಚಿಂತೆಗಳಿಗೆ ಕಯ್ಮುಗಿದು
ಬೇಡಿದನ್ ಮತ್ತೆ : “ಹೇ ಕಲ್ಯಾಣಕೃತಿಗೆಯ್ವ
ಪುಣ್ಯಸನ್ಮತಿಗಳಿರ, ಕಲ್ಲವೊಲ್ ಮರದವೊಲ್
ಜಡದವೊಲ್ ಜೀವದೊಲ್ ಖಗದಂತೆ ಮೃಗದಂತೆ
ಗಾಳಿ ಬೆಂಕಿಗಳಂತೆ ಮನಸೆಂದು ಕನಸೆಂದು
ಚರವೆಂದಚರವೆಂದು ವಿವಿಧರೂಪಿಗಳಾಗಿ
ವಿವಿಧ ಕರ್ಮವ ನಟಿಪ ನಿಯತಿಯ ನಟರ್ಕಳಿರ,
ಧರ್ಮದ ಭಟರ್ಕಳಿರ, ಸಂಕಲ್ಪಿಸಿಮ್ ಜಯಕೆ
ಸೌಜನ್ಯದಾ. ನಿಮ್ಮ ಸಂಕಲ್ಪಮೇ ತನ್ನ ೨೫೦
ಋತರಥಕೆ ಕಲ್ಪಿಪುದು ಹೆದ್ದಾರಿಯಂ ; ತಿದ್ದಿ
ನಡೆಯಿಪುದು ಘಟನೆಗಳ ಗಾಲಿಯಂ. ನಿಮ್ಮಿಚ್ಛೆ
ನೆರಮಾದೊಡೊಂದೆಲೆಯ ಬೀಳುವಿಕೆಯೊಂದುಲಿಯ
ಕೇಳುವಿಕೆ ದಶಶಿರನ ಮನವಿಮಾನದ ಗತಿಯ
ಬದಲಿಸದೆ ? ನಾನ್ ಕಂಡ ಮಂಡೋದರಿಯ ಪತಿಯ
ಕಾಮಕಾತರತೆಯಂ ಶಿವದೆಡೆಗೆ ಕದಲಿಸದೆ ?
ಹದಿಬದೆಯ ಕೊಲ್ಲದೋಲ್ ಬಲದಿಂದೆ ಗೆಲ್ಲದೋಲ್
ಬಿರಿಯನಿಕ್ಕದೆ, ಚಿತ್ತಸರ್ಪದ ಕುವರ್ತನೆಯ
ವಿಷಯದ ಹಲ್ಲಿಗೆ ಗರುಡಮಣಿಯಾಗಿ ?”
ಅನಿತರೊಳ್,
ಕುಳಿರಪನಿ ಮಿರಿಮಿರುಗುವೆಲೆಗಳ ಬಿದಿರ್ಮೆಳೆಯ ೨೬೦
ಕೊನೆಗಣೆಯ ನೆತ್ತಿಯಂ ಪತ್ತಿ, ಮೂಡಲ ಕಡೆಗೆ
ಮೊಗಂಮಾಡಿ, ತಿಪ್ಪುಳ್ಗರಿಗಳಂ ಕೆದರ್ಬಿರ್ಚ್ಚಿ
ಕುಳಿತ ಪಕ್ಕಿಗಳೆದೆಗೆ ಬೆಚ್ಚನೆಯೊಲವನೊತ್ತಿ
ನೆರೆದುದು ಸುಸಿಲ್ವಿಸಿಲ್. ನೊರೆಗಡಲವೊಲ್
ಮಂಜು
ಲಂಕಾಪುರದ ಧರೆಯ ನಿಮ್ನಪ್ರದೇಶಂಗಳಂ
ಮುಸುಗಿ ಪರ್ವಿರೆ, ಶಿಖರಗಳ್, ದ್ವೀಪಖಂಡಗಳ್
ತೇಲ್ವಂತೆವೊಲ್, ಭವ್ಯಮಿದಿರೆದ್ದುವಲ್ಲಲ್ಲಿ
ಪರ್ವತ ಜಟಾಜೂಟಗಳ್ ಆ ತ್ರಿಕೂಟಗಳ್ !
ಇದ್ದಕಿದ್ದಂತೆ, ಇಂದ್ರಿಯಂಗಳ ವಿನಿಮಯವೊ ? ಮೇಣ್
ನಿಯತಿ ವಿಪರೀತತೆಯ ಫಲವೊ ? ಮರುತಜ ಮನದ ೨೭೦
ಕೋರಿಕೆಯ ಮಾಧುರ್ಯಮದೆ ಬಹಿರ್ಲೋಕದೊಳ್
ಭವಿಸಿದುದೊ ? ಮೇಣ್ ಕಣ್ಣನೋಟಮೆ ಕರ್ಣಸುಂದರಂ
ತಾನಾದುದೋ ? ಎನಲ್, ತೇಲಿ ಬಂದುದು ಕಿವಿಗೆ
ತಂತಿಯಿಂಚರದೈಂದ್ರಜಾಲಿಕಂ ! ಮೊದಮೊದಲ್
ಕೇಳ್ದತ್ತು ದೂರಧ್ವನಿಯ ಮಂದ್ರತಾನದಿಂ ;
ಆಲಿಸಿರೆಯಿರೆ ಸನಿಹಮಿಪ್ಪವೊಲ್ ನರ್ತಿಸಿತು
ಸುತ್ತಣಿಂದಿತ್ತಣಿಂದತ್ತಣಿಂದೆತ್ತಣಿಂ,
ಗಾನವಿದ್ಯಾಧರಂ ವಾಯುಜಂ ಬೆಬ್ಬಳಿಸಿ
ಬೆರಗಾಗುವಂತೆ, ಅಕ್ಕಜಮಿಂಪಿನೊಡನೆ ಮೇಣ್
ಆಶ್ಚರ್ಯಮಾನಂದದೊಡನೆ ಹೊಯ್ಕಯ್ಯಾಗೆ ೨೮೦
ಸೊಗಸಿತಾ ತಾನ ತಾನ ಸ್ವನದ ಸಂತಾನ :
ಬೇರ್ಗಳಿಂ ಮರಮೆಯ್ಗೆ ರಸಮೇರ್ವ ಛಂದಸ್ಸೊ ?
ವಿವಿಧ ವರ್ಣಂಗಳಿಂ ವಿವಿಧ ಪರ್ಣಂಗಳಿಂ
ಗಾಳಿಬೆಳಕಂ ಪೀರ್ವ ಪ್ರಕೃತಿ ಪ್ರಾಣಾಯಾಮ
ಯೋಗದೋಜಸ್ಸೊ ? ತುಹಿನಕಣಗಳ್ ದಿನಕರ
ಮರೀಚಿಯಂ ಪ್ರತಿಕೃತಿಸಿ ರಂಜಿಪ ಲಯಕ್ರಮವೊ ?
ಚೇತನಾಕಾಂಕ್ಷಿ ಜಡದಂತರಂಗದ ತಪದ
ವಿದ್ಯುದಣುಗಳ ರಣದ ಜಯಗಾಥ ಪಲ್ಲವಿಯೊ ?
ಜಾನಕಯ ಜೀವ ಜಾಡ್ಯಕೆ ಕಾಮ ಕೌಶಲಿ
ದಶಗ್ರೀವನನುದಿನಂ ಪ್ರಾಭಾತವೇಳೆಯೊಳ್ ೨೯೦
ನೀಡುವ ನಿನಾದಸುಖ ಭೇಷಜವೊ ? ರತಿಕಲಾ
ಸಂಗೀತದಿಂಗಿತವೊ ? – ರಸಸುಖಾಕಸ್ಮಿಕಕೆ
ಕಿವಿಸೋಲ್ತನನಿಲಜಂ : ಲೋಕದೋಲವ ತೂಗಿ
ತೊನೆದುದಾ ತಾನ ತಾನ ಸ್ವನದ ಸಂತಾನ !
********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ