ಅಜ್ಜಯ್ಯನ ಅಭ್ಯಂಜನ
ಮಲೆನಾಡಿನ ಜೀವನವನ್ನು ಸಾಮಾನ್ಯವಾಗಿ ನಿರುದ್ವಿಗ್ನ ಎಂದು ಕರೆಯಬಹುದು.
ನಗರಗಳಲ್ಲಿರುವಂತೆ ದ್ರುತಪದಸಂಚಾರವಿಲ್ಲ; ಮೋಟಾರು ಮೊದಲಾದ ಆತುರದ ಯಾನಗಳ
ಗಡಿಬಿಡಿಯಿಲ್ಲ; ಸಿನಿಮಾ ನಾಟಕಶಾಲೆಗಳ ಉದ್ವೇಗವಿಲ್ಲ; ಚಿತ್ರವಿಚಿತ್ರವಾದ ವರ್ತಮಾನ
ಸಂಕುಲದಿಂದ ಸಮಾಚ್ಛನ್ನವಾಗಿ ಶಾಂತಿ ಭಂಗಕಾರಿಗಳಾಗಿರುವ ಚಿತ್ರಗುಪ್ತನ ದಪ್ತರದಂತಿರುವ
ಪತ್ರಿಕೆಗಳ ಗಲಭೆಯಂತೂ ಬಹಳಮಟ್ಟಿಗೆ ಸೊನ್ನೆ. ಸಾಯಂಕಾಲದಲ್ಲಿ ದಿನದ ಬೇಸರವನ್ನು
ಪರಿಹರಿಸಿಕೊಳ್ಳಲೆಂದು ಉಪನ್ಯಾಸಮಂದಿರಗಳಿಗೆ ಹೋಗಿ ನೀರಸವಾದ ಭಾಷಣಗಳನ್ನು
ಪರಿಹರಿಸಿಕೊಳ್ಳಲೆಂದು ಉಪನ್ಯಾಸಮಂದಿರಗಳಿಗೆ ಹೋಗಿ ನೀರಸವಾದ ಭಾಷಣಗಳನ್ನು ಕೇಳಿ
ಬೇಜಾರಿಗೆ ಬದಲಾಗಿ ಅಶಾಂತಿಯನ್ನು ತುಂಬಿಕೊಂಡು ಗೊಣಗುತ್ತ ಹಿಂತಿರುಗುವ ಪ್ರಸಂಗಗಳಂತೂ
ಒದಗುವುದೇ ಇಲ್ಲ. ಅಲ್ಲಿರುವುದು ಕೇವಲ ಶಾಂತಿ; ವನ್ಯವಾದರೂ ಅನಾಗರಿಕವಲ್ಲದ ಶಾಂತಿ.
ಸುತ್ತ ನೋಡಿದರೆ ಮಾಲೆಮಾಲೆಯಾದ ಮಲೆಗಳು, ದಟ್ಟವಾದ ಕಾಡುಗಳು; ಅಲ್ಲಿ ಮೌನವನ್ನೇ
ಮಲಗಿಸುವ ಜೋಗುಳದಂತಿರುವ ಹಕ್ಕಿಗಳ ಸವಿದನಿ. ಮೇಲೆ ತಲೆಯೆತ್ತಿ ನೋಡಿದರೆ ಆಕಾಶ,
ನೀಲಾಕಾಶ; ಅನಂತ, ಅಪಾರ, ಪ್ರಶಾಂತ, ಅಲ್ಲಿ ಸುತ್ತವ ಬೆಳ್ಮುಗಿಲಿನ ತುಂಡುಗಳೂ ಕೂಡ
ಮೆಲ್ಲಗೆ ಚಲಿಸುತ್ತ ಜಗತ್ತನ್ನು ಸ್ವಪ್ನದಿಂದ ಹೊದಿಸುವಂತೆ ತೋರುತ್ತವೆ. ದಾರಿಯಲ್ಲಿ
ತೊರೆಗಳೇನೋ ಬಂಡೆಯಿಂದ ಇಳಿದು ಜಾರಿ ಹರಿಯುತ್ತಿರುತ್ತವೆ. ಆದರೆ ಹರಿದಾಟದಲ್ಲಿರುವುದು
ತತ್ತ್ವಜ್ಞನ ಔದಾಸೀನ್ಯ; ಯೋಗಿಯ ನಿಷ್ಕಾಮಕರ್ಮ. ಜನಗಳ ನಿತ್ಯಜೀವನದಲ್ಲಿ ಹಲಕೆಲವು
ಕ್ಷುದ್ರ ಕ್ಷುದ್ರ ಉದ್ವೇಗಗಳಿರಬಹುದು; ಬಂಡಸಂಸಾರದ ಸಾಲದ ಶೂಲೆ; ಮನೆಯಲ್ಲಿ ಮಗುವಿಗೆ
ಜ್ವರ; ಒಂದು ಎತ್ತನ್ನು ಹುಲಿ ಹಿಡಿದುದರಿಂದ ಈ ಸಾರಿ ಉಳಲು ಒಂದು ಎತ್ತು ಸಾಲದು;
ಮಳೆಗಾಲಕ್ಕೆ ಬೇಕಾದ ಕಟ್ಟಿಗೆ ಇನ್ನೂ ಮನೆಗೆ ಬಂದಿಲ್ಲ; ಕೋರ್ಟಿನಲ್ಲಿ ಕೇಸು;
ದನಕರುಗಳಿಗೆ ಜಕ್ಕಿಣಿಯ ಕಾಟ – ಇತ್ಯಾದಿ. ಇಂತಹ ಶಾಂತಿ ಪ್ರಪಂಚದಲ್ಲಿಯೂ ಕ್ರಾಂತಿಕಾಲಗಳಿವೆ. ಜನನ ಸಮಯದಲ್ಲಿ ಮರಣಸಮಯದಲ್ಲಿ, ವಿವಾಹಕಾಲದಲ್ಲಿ, ಬೇಟೆಯಲ್ಲಿ ಮನೆಯ ಜನಗಳೆಲ್ಲ ತುಂಬ ಚಟುವಟಿಕೆಯಿಂದಿರುತ್ತಾರೆ. ಪೋಲೀಸರ ಕಾಟ, ಜಮಾಬಂದಿಯ ಊಟ ಇವುಗಳನ್ನು ಉತ್ಕ್ರಾಂತಿಗಳ ಗುಂಪಿಗೆ ಸೇರಿಸಬಹುದು. ಇವುಗಳ ವಿಚಾರವಾಗಿ ಮುಂದೆ ಹೇಳುತ್ತೇನೆ. ಮೇಲೆ ಹೇಳಿದ ವಿಷಯಗಳನ್ನು ಬಿಟ್ಟರೆ ಇನ್ನೊಂದು ಕ್ರಾಂತಿವಿಷಯವಿದೆ. ಅದು ಯಾವುದೆಂದು ಊಹಿಸಬಲ್ಲಿರೇನು? ಇಲ್ಲ; ನಿಮ್ಮಿಂದಾಗುವುದಿಲ್ಲ. ನೀವು ಬಯಲುಸೀಮೆಯವರು. ಐದೇ ನಿಮಿಷದಲ್ಲಿ ಸ್ನಾನಮಾಡಿ ಎರಡೇ ನಿಮಿಷದಲ್ಲಿ ಊಟ ಮಾಡುವ ಜಾತಿಗೆ ಸೇರಿದವರು! ಹೋಗಲಿ, ನೀವು ಊಹಿಸಲಾಗದಿದ್ದರೆ ನಾನೇ ಹೇಳಿಬಿಡುತ್ತೇನೆ – ಅಭ್ಯಂಜನ! ಬೆರಗಾಗಬೇಡಿ. ನಿಮಗೆ ಗೊತ್ತಿಲ್ಲ. ಮಲೆನಾಡಿನಲ್ಲಿ ಅಭ್ಯಂಜನ ವೆಂದರೆ ಮಹಾಕಾರ್ಯ. ಅಭ್ಯಂಜನದ ದಿನ ಯಾರು ಸಾಯುತ್ತಾರೆ? ಯಾರು ಉಳಿಯುತ್ತಾರೆ? ಯಾರು ಮೂರ್ಛೆ ಬೀಳುತ್ತಾರೆ? ಹೇಳುವುದೇ ಕಷ್ಟ. ಆ ದಿನ ಮನೆಯಲ್ಲಿ ಗಲಭೆಯೋ ಗಲಭೆ!
ನಾನು ಚಿಕ್ಕವನಾಗಿದ್ದಾಗ – ಏಕೆಂದರೆ ಈಗ ನಾಗರಿಕತೆ ಬಂದುದರಿಂದ ಹಿಂದಿನ ಆಚಾರಗಳೆಲ್ಲ ಪರಿವರ್ತನೆಯಾಗಿ ಹೋಗಿವೆ – ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಯಲ್ಲಿ ‘ಅಭ್ಯಂಗ’ ಎಂದರೆ ನಮಗೆಲ್ಲ ಜನನ, ಮರಣ, ವಿವಾಹ, ಪೋಲೀಸರ ಕಾಟ, ಜಮಾಬಂದಿ ಎಲ್ಲವೂ ಒಟ್ಟಿಗೆ ಬಂದ ಹಾಗೆ ಅನುಭವವಾಗುತ್ತಿತ್ತು. ನಾವಾಗ ವಿದ್ಯಾರ್ಥಿಗಳಷ್ಟೆ? ಐಗಳು ನಮ್ಮ ಮನೆಯಲ್ಲಿಯೆ ಕೂಲಿಕೆಲಸ ಮಾಡುತ್ತಿದ್ದರು. ನಮಗೆ ಅವರು ಮೇಷ್ಟ್ರರಾದರೂ ನಮ್ಮ ಹಿರಿಯರಿಗೆ ಅವರು ಕೂಲಿಯಾಳು. ಐಗಳು ನಮಗೆ ಅ ಆ ಇ ಈ ಹೇಳಿಕೊಡುವುದರ ಜೊತೆಗೆ ಎಣ್ಣೆ ಹಚ್ಚುವುದು, ಸ್ನಾನ ಮಾಡಿಸುವುದು; ಸಮಯಬಿದ್ದರೆ ಬಟ್ಟೆ ಒಗೆದುಕೊಡುವುದು; ಪ್ರಸಂಗ ಒದಗಿದರೆ ಗುಡಿಸುವುದು; ಸನ್ನಿವೇಶ ಪ್ರಾಪ್ತವಾದರೆ ಯಜಮಾನರ ಕೂಸನ್ನು ಆಡಿಸುವುದು; ಅವರ ವೃತ್ತಿಯಲ್ಲಿ ಅದೂ ಒಂದು ಭಾಗವಾಗಿದ್ದುದರಿಂದ – ಆಳುಲೆಕ್ಕ ಇಡುವುದು; ಪುಣ್ಯ ಕಾರ್ಯವಾದ್ದರಿಂದ ದೇವರಪೂಜೆ ಮಾಡುವುದು; ಇತ್ಯಾದಿ ಇತ್ಯಾದಿ ಚಿಲ್ಲರೆ ಕೆಲಸಗಳನ್ನು ಸಾಂಗವಾಗಿ ನೆರವೇರಿಸುತ್ತಿದ್ದರು. ನಮಗೆ ಭಾನುವಾರ ರಜಾ; ಜೊತೆಗೆ ಅಭ್ಯಂಜನದ ಸಜಾ. ಆ ದಿನ ಎಲ್ಲಿಯಾದರೂ ತಿರುಗಾಡಿ, ಹಣ್ಣು ಗಿಣ್ಣು ಕಿತ್ತು, ಮರ ಗಿರ ಹತ್ತಿ, ಕಲ್ಲು ಗಿಲ್ಲು ಹೊಡೆದು, ತಲೆಗಿಲೆ ಒಡೆದು, ಏನಾದರೂ ಒಂದು ಸಾಹಸ ಗೀಹಸ ಮಾಡಿ ಬೇಜಾರು ಕಳೆದುಕೊಳ್ಳೋಣ ಎಂದರೆ, ಹಾಳು ಅಭ್ಯಂಜನ ಬಂದು ನಮಗೆಲ್ಲ ಬಹಳ ತೊಂದರೆಯಾಗುತ್ತಿತ್ತು. ಬೆಳಗಿನ ಆರು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಎಣ್ಣೆ ಸ್ನಾನದ ತೀರ್ಥಯಾತ್ರ! ಅದೇನು ಒಬ್ಬರೇ? ಇಬ್ಬರೇ? ಮನೆಯ ಮಂದಿಗೆಲ್ಲ ‘ಅಭ್ಯಂಗ’!
ಅದರಲ್ಲಿಯೂ ನಮ್ಮ ಅಜ್ಜಯ್ಯನ ಅಭ್ಯಂಗವೇ ಅರ್ಧದಿನವನ್ನು ಆಪೋಶನ ಮಾಡತ್ತಿತ್ತು. ಅವರು ವಯಸ್ಸಾದವರು, ದೇವರಲ್ಲಿ ಬಹಳ ಭಕ್ತಿ; ಕಳ್ಳನ್ನು ಬಹಳ ಮಿತವರಿತು ತೀರ್ಥದಂತೆ ಪಾನಮಾಡುತ್ತಿದ್ದರು. ಅನ್ನಕ್ಕಿಂತಲೂ ಅಭ್ಯಂಜನವೇ ಶ್ರೇಷ್ಠ ಎನ್ನುವುದು ಅವರ ಧ್ಯೇಯೋಕ್ತಿಯಾಗಿತ್ತು. ಅಭ್ಯಂಜನ ಮಾಡಿ ಮಾಡಿ ದೇಹ ಸ್ವಲ್ಪ ಸ್ಥೂಲತೆಯ ಕಡೆಗೆ ಒಲೆದಿತ್ತು. ವಾರಕ್ಕೊಂದು ಅಭ್ಯಂಜನ ಮಾಡುತ್ತಿದ್ದರೆ ಅಮೃತತ್ವ ಲಭಿಸುವುದೆಂದು ಅವರು ತಿಳಿದಿದ್ದಂತೆ ತೋರುತ್ತದೆ. ಆದರೆ ಪಾಪ, ಕೆಲವು ವರುಷಗಳ ಹಿಂದೆ ಅವರು ತೀರಿ ಕೊಂಡೇಬಿಟ್ಟರು. ಅವರು ಸ್ವರ್ಗಕ್ಕೆ ಹೋದರು ಎಂದು ನಾನು ತಿಳಿದಿದ್ದೇನೆ. ಅಲ್ಲೇನು ಕಡಮೆ! ಎಣ್ಣೆ, ಸೀಗೆಕಾಯಿ, ನೀರು, ಬೆಂಕಿ ಬೇಕಾದಷ್ಟಿವೆ! ಅಪ್ಸರಿಯರೂ ಮಂದೆಮಂದೆ ಇದ್ದಾರೆ. ಅಭ್ಯಂಜನ ಮಾಡಿದ್ದೆ ಮಾಡಿದ್ದು! ಅವರೇನು ಸ್ವರ್ಗದಲ್ಲಿ ದಿನಕ್ಕೆ ಇಪ್ಪತ್ತುನಾಲ್ಕುಸಾರಿ ಅಭ್ಯಂಜನ ಮಾಡುತ್ತಾರೋ ಏನೋ! ಮಾಡಲಿ, ಪಾಪ, ಬೇಕಾದಷ್ಟು ಮಾಡಲಿ! ಮಾನವನ ಈಶ್ವರ ಪ್ರೇಮಕ್ಕೆ ಅಷ್ಟಾದರೂ ಪ್ರತಿಫಲ ಬೇಡವೇ! ಒಂದಿಷ್ಟು ಅಭ್ಯಂಜನವನ್ನೂ ಕೊಡಲಾರದ ದೇವರು ಅಮೃತತ್ವವನ್ನು ಕೊಡಬಲ್ಲನೆ?
ನಮ್ಮ ಮನೆಯಲ್ಲಿ ಸ್ನಾನದ ಇಲಾಖೆಯ ಪ್ರತ್ಯೇಕವಾಗಿತ್ತು – ಯಾರಿಗೋ ಸಂಬಳ ಕೊಡಬೇಕೆಂದು ಇಲಾಖೆ ನಿರ್ಮಿತವಾಗಿರಲಿಲ್ಲ, ಪರಂಪರೆಯಿಂದ ಬಂದುದು. ಮಾಮೂಲನ್ನು ತಪ್ಪದೆ ನಡೆಯುತ್ತಿದ್ದ ನಮ್ಮವರು, ಬರುವ ಆದಾಯ ತನ್ನ ಮಾಮೂಲನ್ನು ತಪ್ಪಿನಡೆದರೂ ಅಭ್ಯಂಜನದ ಮಾಮೂಲನ್ನು ಮಾತ್ರ ಬಿಟ್ಟಿರಲಿಲ್ಲ. ‘ಬಚ್ಚಲುಮನೆ’ಯೇ ಬೇರೆ. ಇದೇನು? ಕಣ್ಣು ಕಣ್ಣು ಬಿಡುತ್ತಿದ್ದೀರಿ? ನಾನು ಮೊನ್ನೆ ಹೇಳಿದ್ದನ್ನು ಮರೆತಂದಿದೆ! ನೀವು ಹೀಗೆಲ್ಲ ಮರೆತರೆ ನನ್ನ ಹರಟೆ ತುಂಡುಗಡಿದು ಹೋಗುತ್ತದೆ. ನಮ್ಮ ಕಡೆ ಸ್ನಾನದ ಮನೆಗೆ ‘ಬಚ್ಚಲು’ ಎಂದು ಕರೆಯುತ್ತಾರೆ. ಬಚ್ಚಲಿನಲ್ಲಿ ಒಂದು ದೊಡ್ಡ ಒಲೆ. ಕಬ್ಬಿಣವನ್ನು ಬೇಕಾದರೂ ಕರಗಿಸಬಹುದು ಅದರಲ್ಲಿ. ಆ ಒಲೆಯ ಬಾಯಿ ಮೂರು ಅಡಿ ಎತ್ತರ ಮೂರು ಅಡಿ ಅಗಲ. ಒಲೆಯ ಮೇಲೆ ಎರಡು ದೊಡ್ಡ ಹಂಡೆಗಳನ್ನು ಹೂಳಿರುತ್ತಾರೆ. ಅವುಗಳನ್ನು ತೂತುಬೀಳುವವರೆಗೂ ತೆಗೆಯುವಂತಿಲ್ಲ. ಹೊರಗೆ ತೆಗೆಯಬೇಕಾದರೆ ಅರ್ಧ ಒಲೆಯನ್ನೆ ಕೀಳಬೇಕು. ಆ ಹಂಡೆಗಳ ತುಂಬಾ ನೀರುಹಾಕಿ ಕಾಯಿಸುತ್ತಾರೆ ನೋಡಿ, ತಕಪಕ ತಕಪಕ ಕುದಿಯುವವರೆಗೆ! ಅಕ್ಕಿ ಹಾಕಿದರೆ ತಕ್ಷಣ ಅನ್ನ ಆಗಿಹೋಗುತ್ತೆ. ಆ ಒಲೆಯ ಬೆಂಕಿಯೆ ಮೂರು ನಾಲ್ಕು ಹೆಣಗಳನ್ನು ಆರೇಳು ನಿಮಿಷಗಳಲ್ಲಿ ಸುಟ್ಟು ಬೂದಿಮಾಡಿಬಿಡಬಹುದು! ಕಟ್ಟಿಗೆಗೇನು ಮಲೆನಾಡಿನಲ್ಲಿ! ನಾನು ನೀವೂ ಇಬ್ಬರೇ ಹೊರಟರೆ ಹತ್ತೆ ನಿಮಿಷಗಳ ಒಳಗೆ ಏನು ಕಡಮೆ ಎಂದರೂ ಒಂದು ಗಾಡಿ ಕಟ್ಟಿಗೆ ಒಟ್ಟು ಮಾಡಬಹುದು. ಸಣ್ಣ ಕಡ್ಡಿಗಳನ್ನಲ್ಲ; ಮೈಸೂರಿನ ಬೀದಿಯ ಸಾಲುಮರಗಳಲ್ಲಿ ಕತ್ತಿದೋಟಿಯಿಂದ ಕ್ಷಯರೋಗ ಹಿಡಿದ ಗಿಡಗಳ ತುದಿಯ ಕೊಂಬೆಗಳನ್ನು ಮುರಿದು ತೆಗೆದುಕೊಂಡು ಹೋಗುತ್ತಾರಲ್ಲಾ, ಅಂಥಾ ಕಡ್ಡಿಗಳನ್ನಲ್ಲ; ದೊಡ್ಡ ದೊಡ್ಡ ಕುಂಟೆಗಳನ್ನ! ನಮ್ಮ ಬಚ್ಚಲು ಮನೆಯ ಬೆಂಕಿ ಎಂದರೆ ಏನೆಂದು ತಿಳಿದಿದ್ದೀರಿ, ಸ್ವಾಮಿ? ಬಡಬಾಗ್ನಿಯ ಮರಿ! ಸಾಕ್ಷಾತ್ ಬಡಬಾಗ್ನಿಯ ಮರಿ!
ಭಾನುವಾರ ಅಭ್ಯಂಜನ ಎಂದರೆ ಅರ್ಧಡಬ್ಬ ಹರಳೆಣ್ಣೆ, ಎರಡು ಬುತ್ತಿ ಸೀಗೆಪುಡಿ ಮನೆಲೆಕ್ಕಕ್ಕೆ ಖರ್ಚು. ನಾವು ಏಳೆಂಟು ಜನ ಹುಡುಗರು ನಮ್ಮ ಮನೆಯ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು. ನಮ್ಮ ಪ್ರಿನ್ಸಿಪಾಲರೆ ನಮ್ಮಲ್ಲಿ ಎಣ್ಣೆ ಸವರಿಕೊಳ್ಳುವುದಕ್ಕೂ ಬರದ ಅಂಡರ‍್ ಗ್ರಾಜುಯೇಟ್‌ಗಳಿಗೆ ಎಣ್ಣೆ ಹಚ್ಚುವುದು ಉಪಾಧ್ಯಾಯರು ವಿದ್ಯಾರ್ಥಿಗಳು ಎಂದರೆ ಹಾಗಿರಬೇಕು. ಏನು ಮೈತ್ರಿ! ಏನು ಸೇವೆ? ಎಷ್ಟು ಕರುಣೆ! ಈಗ ಎಲ್ಲೆಲ್ಲಿಯೂ ವಿದ್ಯಾರ್ಥಿಗಳಿಗೂ ಉಪಾಧ್ಯಾಯರುಗಳಿಗೂ ಸಂಬಂಧಹೋಯಿತು ಎಂದು ಕೂಗಿಕೊಳ್ಳುತ್ತಿದ್ದಾರೆ. ನಮ್ಮ ಮನೆಯ ವಿಶ್ವವಿದ್ಯಾನಿಲಯವನ್ನು ಉದಾಹರಣೆಯಾಗಿಟ್ಟುಕೊಂಡರೆ ನಮ್ಮ ಈ ಸನಾತನ ಪುರಾತನ ಪವಿತ್ರ ಪುಣ್ಯಭೂಮಿಯಾದ ಭಾರತವರ್ಷದ ಮಾತಂತಿರಲಿ, ಸಮಗ್ರ ಜಗತ್ತಿಗೇ ಕ್ಷೇಮ ಉಂಟಾಗುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ! ನಗಬೇಡಿ, ಸ್ವಾಮಿ, ನಗಬೇಡಿ! ನನ್ನ ಮಾತಿನ ಅಂತರರ್ಥವನ್ನು ಗ್ರಹಿಸಿ ನೋಡಿ. ಆಗ ವಿಷಯ ಗೊತ್ತಾಗುತ್ತದೆ. – ಹುಡುಗರ ಜೊತೆಗೆ ದೊಡ್ಡವರು; ಅಪ್ಪಯ್ಯ, ಚಿಕ್ಕಪ್ಪಯ್ಯ, ಸಣ್ಣ ಚಿಕ್ಕಯ್ಯ, ದೊಡ್ಡ ಕಕ್ಕಯ್ಯ, ಅಣ್ಣಯ್ಯ, ಅಜ್ಜಯ್ಯ ಇತ್ಯಾದಿ! ಎರಡು ಆಳುಗಳಿಗೆ ಎಣ್ಣೆ ತಿಕ್ಕೀ ತಿಕ್ಕೀ ಸಾಕಾಗಿ ಹೋಗಬೇಕು. ಎಷ್ಟೋ ಸಾರಿ ಅವರು ಮರುದಿನವೇ ಜ್ವರ ಬಂದು ಹಾಸಿಗೆ ಹಿಡಿದಿದ್ದಾರೆ ಅಂದರೆ! ಇನ್ನೆರಡು ಆಳುಗಳು ನೀರು ಸರಿಮಾಡುವುದು.
ಹಾಗೆಂದರೆ ಏನು ಅನ್ನುವಿರೋ? ಹೇಳುತ್ತೇನೆ! ಲಾಲಿಸಬೇಕು! ಎರಡು ಹಂಡೆಗಳಲ್ಲಿ ನೀರು ಕುದಿಯುವುದು ಒತ್ತಟ್ಟಿಗಿರಲಿ. ಅದು ನೀರಿನ ಉಗ್ರಾಣವಾಯ್ತು. ಅಲ್ಲಿಂದ ನೀರನ್ನು ತೆಗೆದು, ಬೇರೆ ಕಡಾಯಿಗಳಿಗೆ ಹಾಕಿ, ತಣ್ಣೀರು ಬೆರಸಿ ಹದಮಾಡುವರು. ನೀರು ಬೆರೆಸಲು ಒಂದು ದೊಡ್ಡ ಅಗಲವಾದ ಬಾಯಿ ಇರುವ ಕಡಾಯಿ; ಅಲ್ಲದೆ ಒಂದು ದೋಣಿ, ಸುಮಾರು ಹನ್ನೆರಡು ಹದಿಮೂರು ಅಡಿಗಳಷ್ಟು ಉದ್ದದ್ದು. ಆ ದೋಣಿ ಏಕೆ ಅನ್ನುವಿರೋ? ಎಣ್ಣೆ ಹಚ್ಚಿಕೊಂಡು ಮೈ ಚೆನ್ನಾಗಿ ನೆನೆದ ಮೇಲೆ ಅದರಲ್ಲಿ ಮಲಗಿಕೊಳ್ಳುವುದು ಅಭ್ಯಂಜನ ಒಂದು ಮುಖ್ಯವಾದ ಅಂಗ. ಆ ನೀರು ಬಿಸಿಬಿಸಿಯಾಗಿರುವುದು. ಅದನ್ನು ಬಿಸಿನೀರು ಎಂದರೆ ತಪ್ಪಾಗಬಹುದು. ಸುಡುನೀರು ಎನ್ನುವುದೇ ಉತ್ತಮ ಮತ್ತು ಸತ್ಯಕ್ಕೆ ಹೆಚ್ಚು ಸಮೀಪ. ಅಭ್ಯಂಜನದಲ್ಲಿ ಬಿಸಿ ನೀರನ್ನು ಉಪಯೋಗಿಸುವುದೇ ಇಲ್ಲ; ಎಲ್ಲ ಸುಡುನೀರೆ! ಎಷ್ಟೋ ಸಾರಿ ಹುಡುಗರನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗಿ ಅದರಲ್ಲಿ ಅದ್ದಿದಾಗ ಅವರು ಕಿಟ್ಟನೆ ಕಿರಿಚಿಕೊಂಡು ಕೆಳಗೆ ಹಾರಿ ಕಲ್ಲಿನ ಮೇಲೆ ಬಿದ್ದು ಗಾಯವಾಗಿದೆ ಅಂದರೆ! ಇಷ್ಟೊಂದು ವಿಧವಿಧವಾದ ಪಾತ್ರೆಗಳಿಗೆ ನೀರು ಹಾಕುವುದು ಇಬ್ಬರಾಳುಗಳಿಗೆ ಸಾಕು ಸಾಕಾಗಿ ಹೋಗುತ್ತದೆ.
ಅತ್ತ ಆಳುಗಳು ಅಭ್ಯಂಜನದ ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧ ಮಾಡುತ್ತಿರಲು, ಇತ್ತ ಪಾತ್ರದಾರರು ಎಣ್ಣೆ ಹಚ್ಚಿಕೊಳ್ಳುತ್ತಿರುವುದೊಂದು ಸುಮನೋಹರ ದೃಶ್ಯ. ಮಸಿಯಲ್ಲಲ್ಲ, ಹರಳೆಣ್ಣೆಯಲ್ಲಿ ಅದನ್ನು ಬರೆದರೂ ಆ ವರ್ಣನೆ ಸರಿಯಾಗಿ ಆವಿರ್ಭವಿಸುವುದು ಅಸಾಧ್ಯ. ಪ್ರಿನ್ಸಿಪಾಲರಾದ ನಮ್ಮ ಐಗಳು ಕಿರಿಯರಿಯರಿಗೆ ಎಣ್ಣೆ ಹಚ್ಚಿ ಹಚ್ಚಿ ಬಿಡುತ್ತಿರುವರು. ಅದೊಂದು ದೊಡ್ಡ ಗೋಳು. ತಿಮ್ಮು ಎಣ್ಣೆ ಹಚ್ಚಿಸಿಕೊಳ್ಳುತ್ತಾ ಕಿಟ್ಟನೆ ಕೂಗಿ ಕೊಂಡನು. ಏಕೆ ಎಂದರೆ, ಮೊನ್ನೆ ಮಾವಿನ ಮರದಿಂದ ಕೆಳಗೆ ಹಾರಿದಾಗ ಬಿದ್ದು ಗಾಯವಾಗಿದ್ದನ್ನು ಯಾರಿಗೂ ಹೇಳದೆ ಮುಚ್ಚಿಟ್ಟಿದ್ದನು. ಐಗಳು ಅದನ್ನು ಅರಿಯದೆ ಕುದುರೆಗೆ ಮಾಲೀಸು ಮಾಡುವಂತೆ ಎಣ್ಣೆ ತಿಕ್ಕಿಯೆ ತಿಕ್ಕಿದರು. ಹಾಗೆ ಮಾಡುವಾಗ ಕೀತುಹೋದ ಗಾಯ. ಹಿಸಿದುಕೊಂಡು ಇದ್ದಕ್ಕಿದ್ದಂತೆ ದೃಗ್ಗೋಚರವಾಯ್ತು. ಅಂತೂ ಗಾಯದ ನೋವಿಗೋ, ಗುಟ್ಟು ಬಯಲಾಯಿತಲ್ಲಾ ಎಂದೋ ಗೊಳೋ ಎಂದು ಅಳುತ್ತಿದ್ದಾನೆ. ಅವನನ್ನು ಸಮಾಧಾನಮಾಡಿದ್ದೇ ತಡ, ವಾಸು ಕೂಗುತ್ತಿದ್ದಾನೆ. ಏನು? ತಲೆಗೆ ಹಾಕಿದ ಎಣ್ಣೆ ಶಿವನ ತಲೆಯ ಜಡೆಗಳಿಂದ ಹೊರಟ ಶ್ರೀಮದ್ ಗಂಗೆಯಂತೆ ಮೆಲ್ಲನೆ ಕೇಶರಾಶಿಗಳಿಂದ ಉಚ್ಚಳಿಸಿ ಲಲಾಟದ ಮಾರ್ಗವಾಗಿ ಭೂಮಧ್ಯೆ ಇಳಿದು ಕಮಲನಯನಗಳನ್ನು ಪ್ರವೇಶಿಸಿಬಿಟ್ಟಿತು! ನೆಗೆನೆಗೆದು ಬಿದ್ದು ಬಿದ್ದು ಕಿರಿಚಿಕೊಳ್ಳುತ್ತಿದ್ದಾನೆ. ಸರಿ; ಐಗಳು ಓಬುಗೆ ಎಣ್ಣೆ ಹಚ್ಚುವುದನ್ನು ನಿಲ್ಲಿಸಿ ವಾಸುವಿನ “ರಿಲೀಫ್ ವರ್ಕ್”ಗೆ ಹೊರಟರು. ಬಟ್ಟೆಯಿಂದ ಕಣ್ಣು ಜಜ್ಜಿ ಹೋಗುವಂತೆ ಒರಸಿದ್ದಾಯಿತು. ಆದರೆ ಆ ಗಲಾಟೆಯಲ್ಲಿ ತಲೆಯಲ್ಲಿದ್ದ ಕಜ್ಜಿಯ ಜ್ಞಾಪಕವೇ ಅವರಿಗಾಗಲಿಲ್ಲ. ಅದನ್ನು ಎಡಗೈಯಿಂದ ಬಲವಾಗಿ ಅದುಮಿದ್ದರಿಂದ ಅವನು ಮತ್ತೂ ಕುಣಿದು ಕೂಗತೊಡಗಿದನು. ಅಲ್ಲಿ ನೋಡಿ! ಅಲ್ಲಿ ನೋಡಿ! ಮಾನು ಎಣ್ಣೆಯ ಕುಡಿಕೆಯನ್ನೇ ಮಗುಚಿ ಹಾಕಿದನು! ಅವನಿಗೂ ಭೂದೇವಿಗೂ ಸ್ಪರ್ಧೆ ತೊಡಗಿದೆ. ಭೂದೇವಿ ತೈಲವನ್ನು ಪಾನಮಾಡಲು ಯತ್ನಿಸುತ್ತಿದ್ದಾಳೆ; ಮಾನು ಆದಷ್ಟನ್ನು ಬಳಿದು ಬಳಿದು ಮೈಗೆ ಬಳಿಯುತ್ತಿದ್ದಾನೆ. ಆ ಭರದಲ್ಲಿ ಮಣ್ಣೆಲ್ಲಾ ಮೈಗಾಗಿ ಹೋಗಿದೆ! ಈ ಅನಾಹುತವನ್ನು ನೋಡಿದ ಚಿಕ್ಕಯ್ಯ ರೇಗಿ ಎದ್ದು ಮಾನುಗೆ ದಿಡ್ ಎಂದು ಒಂದು ಗುದ್ದು ಕೊಟ್ಟರು. ಅವನು ಮೌನವಾಗಿ ರೋದಿಸುತ್ತ ಮೂಲೆ ಸೇರಿ ಪೊರಕೆಯಾಗಿ ಬಿಟ್ಟನು. ಹುಡುಗರ ಗುಂಪಿನಲ್ಲಿ ಹೀಗೆ ಘಟನೆಗಳ ಮೇಲೆ ಘಟನೆಗಳು ಪ್ರಾಪ್ತವಾಗುತ್ತಿರಲಾಗಿ ದೊಡ್ಡವರ ಮೈಗೆ ಆಳುಗಳು ಎಣ್ಣೆ ಉಜ್ಜುತ್ತಿದ್ದಾರೆ. ಕೆಲವರು ಗರಡಿಯಲ್ಲಿ ಕಸರತ್ತು ಮಾಡುವರಂತೆ ಹುಂ ಉಸ್ ಹುಂ ಉಸ್ ಎನ್ನುತ್ತಿದ್ದಾರೆ. ಅಜ್ಜಯ್ಯ ದೂರದಲ್ಲಿ ಕುಳಿತು ಎಣ್ಣೆ ಉಜ್ಜಿಸಿಕೊಳ್ಳುತ್ತಿದ್ದಾರೆ. ಅವರ ಮೈಯೆಲ್ಲ ತೈಲಮಯ. ಆಳು ತಲೆಗೆ ಎಣ್ಣೆ ಹಾಕಿ ಪಟ್ ಪಟ್ ಎಂದು ಮದ್ದಲೆ ಬಡಿಯುವಂತೆ ಬಿಡುವಿಲ್ಲದೆ ಬಡಿಯುತ್ತಿದ್ದಾನೆ. ಆ ಏಟಿಗೆ ಅಭ್ಯಾಸವಿಲ್ಲದವರಾಗಿದ್ದರೆ ಮೆದುಳು ಕದಡಿ ಹೋಗುತ್ತಿದ್ದರು. ಆದರೆ ಅಜ್ಜಯ್ಯ ಅಚಲದಂತೆ ಧೀರವಾಗಿ ಕುಳಿತಿದ್ದಾರೆ.
ಈ ಮಧ್ಯೆ ಅವರು ಎಣ್ಣೆಹಚ್ಚಿಕೊಳ್ಳುವುದನ್ನು ಪ್ರಾರಂಭಿಸುವಾಗ ಮಾಡುವ ಕರ್ಮಕ್ರಿಯೆಗಳನ್ನು ಹೇಳಿದರೆ ಅಪ್ರಕೃತವಾಗದು. ಅಲ್ಲಿ ನೋಡಿ! ಅವರ ಮುಂದೆ ನೆಲದ ಮೇಲೆ ಬೆರಳಿನಿಂದಿಟ್ಟ ಏಳು ಎಣ್ಣೆಯ ಚುಕ್ಕಿಗಳಿವೆ? ಅವು ಅಶ್ವತ್ಥಾಮ ಹನುಮಂತ ಮೊದಲಾದ ಪುರಾಣ ಪ್ರಸಿದ್ಧರಾದ ಸಪ್ತ ಚೀರಂಜೀವಿಗಳ ಸ್ಮಾರಕತೈಲಬಿಂದುಗಳು. ಅದಾದ ಮೇಲೆ ಅವರು ಏನೇನೋ ಬಾಯಲ್ಲಿ ಮಟಗುಟ್ಟುತ್ತ ಬಂಗಾಳದ ವೈಷ್ಣವರು ನಾಮಗಳನ್ನು ಬಳಿದು ಕೊಳ್ಳುವಂತೆ ಎದೆ, ಹೊಟ್ಟೆ, ತೋಳು, ಬೆನ್ನು ಕೊಡುವರು. ಈ ಪ್ರಾರಂಭೋತ್ಸವವನ್ನು ನಾವು ಬಹಳ ಭಯ ಭಕ್ತಿಗಳಿಂದ ದೇವರಿಗೆ ಮಾಡುವ ಮಂಗಳಾರತಿಯನ್ನು ನೋಡುವಂತೆ ನೋಡುತ್ತಿದ್ದೆವು.
ಇಷ್ಟು ಹೊತ್ತಿಗೆ ದೊಡ್ಡ ಬೋಗುಣಿಯಲ್ಲಿ ಪಾನಕ ಸಿದ್ಧವಾಗುವುದು. ಎಣ್ಣೆ ಹಚ್ಚಿ ಆಯಾಸಪಟ್ಟವರಿಗಲ್ಲ; ಹಚ್ಚಿಸಿಕೊಂಡು ಆಯಾಸಪಟ್ಟವರಿಗೆ. ಅಲ್ಲದೆ ಅಭ್ಯಂಜನದ ನಡುವೆ ಬಿಸಿನೀರು ಮಿಂದು ಶಕ್ತಿಗುಂದಿದವರಿಗೂ ಪಾನಕ ಕೊಟ್ಟು ಪುನಃ ಸಶೇಷವಾದ ಸ್ನಾವನ್ನು ಪೂರ್ತಿಯಾಗಿ ಪೂರೈಸಲು ಶಕ್ತಿಬರುವಂತೆ ಮಾಡುವುದು ರೂಢಿಯಾಗಿತ್ತು. ಅಷ್ಟು ಬಿಸಿಬಿಸಿಯಾದ ಸುಡುನೀರನ್ನು ಹೇಗೆ ಮೀಯುತ್ತಿದ್ದೆವೋ ನಾನರಿಯೆ. ಈಗ ಅದನ್ನು ನೆನದರೆ ಸಾಕು ನನಗೆ ಬೆವರು ಬರುವ ಹಾಗೆ ಆಗುತ್ತದೆ! ಆ ಬಿಸಿನೀರಿನ ದೋಣಿಯಲ್ಲಿ ಅರ್ಧಗಂಟೆ ಮಲಗಿ ಅಲ್ಲಿಂದ ಕೆಳಗೆ ಇಳಿಯಲು ಶಕ್ತಿಸಾಲದೆ ಇತರರ ಸಹಾಯದಿಂದ ಕೆಳಗಿಳಿದರೆ, ಕೂಡಲೆ ಕಡಾಯಿಯಲ್ಲಿ ಸಿದ್ಧವಾಗಿದ್ದ ಸುಡುನೀರನ್ನು ತಲೆಯ ಮೇಲೆ ರಫ್ ರಫ್ ಎಂದು ಹಾಕುವರು. ಶಿಥಿಲವಾಗಿದ್ದ ಜೀವ ಮತ್ತೂ ಶಿಥಿಲವಾಗಿ ನಿಲ್ಲಲಾರದೆ ಕೊಣದ ಕಲ್ಲಿನ ಮೇಲೆ ಕುಳಿತರೆ, ಒಬ್ಬರಲ್ಲ ಇಬ್ಬರು ಸೀಗೆಯಿಂದ ಮೈಯುಜ್ಜಲು ತೊಡಗುವರು. ಅವರ ತಿಕ್ಕಾಟ ಎಳೆದಾಟದಲ್ಲಿ ಮೂರ್ಛೆ ಬರುವಷ್ಟಾಗುವದು. ಆಮೇಲೆ ತಲೆಯಲ್ಲಿದ್ದ ಹರಳೆಣ್ಣೆ ಸಂಪೂರ್ಣವಾಗಿ ಹೋಗುವಂತೆ ತಲೆಯುಜ್ಜುವರು. ಆ ಸಮಯದಲ್ಲಿ ಅಳದೆ ಇರುವ ಹುಡುಗರೇ ಇಲ್ಲ. ಕಣ್ಣನ್ನು ಎಷ್ಟು ಬಲವಾಗಿ ಮುಚ್ಚಿದರೂ ಸೀಗೆಯ ನೀರು ಹೇಗಾದರೂ ಮಾಡಿ ಒಳಗೆ ನುಗ್ಗಿಯೇ ನುಗ್ಗುವುದು. ಸ್ನಾನ ಮುಗಿಯುವಷ್ಟರಲ್ಲಿ ಮೈಯೆಲ್ಲ ಹಣ್ಣಾಗಿ ಹುಣ್ಣಾಗಿ ಕಣ್ಣಿನಂತೆಯೇ ಕೆಂಪಾಗಿ, ನಿಲ್ಲಲಾರದಷ್ಟು ಶಕ್ತಿಗುಂದದೆ ಇದ್ದರೆ ಅದು ನಿಜವಾದ ಅಭ್ಯಂಜನ ಅಲ್ಲವೇ ಅಲ್ಲ ಎಂದು ನಮ್ಮವರ ನಂಬುಗೆ. ಸ್ನಾನ ಮುಗಿಯಿತು. ಐಗಳು ಹುಡುಗನನ್ನು ಮೆಲ್ಲನೆ ಕೈಹಿಡಿದು ನಡೆಯಿಸಿಕೊಂಡು ಹೋಗಿ ಸಿದ್ಧವಾಗಿದ್ದ ಹಾಸಗೆಯ ಮೇಲೆ ಮಲಗಿಸುವರು. ಚೆನ್ನಾಗಿ ಬೆವರಲಿ ಎಂದು ಶಾಲು, ಕಂಬಳಿ, ರಗ್ಗು ಎಲ್ಲವನ್ನೂ ಮುಖ ಮುಚ್ಚಿ ಹೊದಿಸುವರು. ಒಳಗೆ ಪ್ರಾಣಿ ಬೆವತೂ ಹಾಸಿಗೆಯೆಲ್ಲ ತೊಯ್ದು ಹೋಗುತ್ತದೆ. ಹೀಗೆ ಹುಡುಗರನ್ನು ಒಬ್ಬೊಬ್ಬರನ್ನಾಗಿ ಹಣ್ಣು ಹಣ್ಣು ಮಾಡಿ ಹಾಸಗೆಗೆ ತಳ್ಳಿದ ಮೇಲೆ ದೊಡ್ಡವರ ಸ್ನಾನ ಪ್ರಾರಂಭವಾಗುತ್ತದೆ. ಕಡೆಯಲ್ಲಿ ನಮ್ಮ ಅಜ್ಜಯ್ಯನವರ ಅಭ್ಯಂಜನ. ಎಲ್ಲರಿಗೂ ಹೆದರಿಕೆ!
ಅಜ್ಜಯ್ಯಗೆ ಎಲ್ಲರಿಗಿಂತಲೂ ಹೆಚ್ಚು ಬಿಸಿಯಾದ ನೀರು ಬೇಕು. ಅವರು ಮೀಯುವ ನೀರಿಗೆ ನಾವು ಕೈಯಿಟ್ಟರೆ ಫಕ್ಕನೆ ಹೊರಗೆ ಎಳೆದುಕೊಳ್ಳುವಂತಾಗುತ್ತಿತ್ತು. ಅಭ್ಯಂಜನದ ಕಾಲದಲ್ಲಿ ಅವರು ಎರಡು ಮೂರುಸಾರಿ ಯಾರಾದರೂ ಮೂರ್ಛೆಹೋಗದೆ ಇರುತ್ತಿರಲಿಲ್ಲ. ಅಷ್ಟೊಂದು ಬಿಸಿಯಾದ ನೀರನ್ನು ಮಿಂದರೆ ಯಾರಿಗೆ ತಾನೆ ಮೂರ್ಛೆಬರುವುದಿಲ್ಲ? – ಅದರಲ್ಲಿಯೂ ಸ್ವಲ್ಪ ವಯಸ್ಸು ಹೋದವರು. ಅವರು ದೋಣಿಯಲ್ಲಿ ದೀರ್ಘಕಾಲ ಮಲಗುವರು. ಏಳುವಾಗ ಒಂದು ಲೋಟ ಪಾನಕ ಕುಡಿಯುವರು. ಆಮೇಲೆ ಕೊಣದಲ್ಲಿ ಕುಳಿತು ತಲೆಯ ಮೇಲೆ ಸುಡುನೀರು ಹಾಕಿಸಿಕೊಳ್ಳುವರು. ಒಬ್ಬರಲ್ಲ ಇಬ್ಬರು, ಚೊಂಬುಗಳಲ್ಲಿ ಕಡಾಯಿಯಿಂದ ಮೊಗೆಮೊಗೆದು ಎಡೆ ಬಿಡದೆ ನೀರನ್ನು ಎತ್ತರದಿಂದಲೆ ರಫ್ ರಫ್ ಎಂದು ನೆತ್ತಿಗೆ ಹೊಡೆಯುವರು. ಈ ದ್ವಿತೀಯ ಕರ್ಮವಾದ ಮೇಲೆ ಒಂದು ಲೋಟ ಪಾನಕ ಖರ್ಚಾಗುತಿತ್ತು. ಆಮೇಲೆ ಆಳುಗಳು ಮೈಕೈಗಳನ್ನೂ ತಲೆಯನ್ನೂ ಸೀಗೆಯಿಂದ ಗಸಗಸ ಉಜ್ಜುವರು. ಪುನಃ ಸುಡುನೀರು ಜಲಪಾತದಂತೆ ತಲೆಯ ಮೇಲೆ ಬೀಳುತ್ತಿತ್ತು. ಇಷ್ಟುಹೊತ್ತಿಗೆ ಮೂರ್ಛೆಹೋಗಿ ಕೊಣದ ಕಲ್ಲಿನ ಮೇಲೆ ಮಲಗಿಬಿಡುತ್ತಿದ್ದರು. ಆಗ ಹಾಹಾಕಾರವೆದ್ದು ಜನಗಳು ಹಿಂದೆಮುಂದೆ ಓಡಾಟ ಮಾಡುವುದೇ ಕಾರ್ಯದಕ್ಷತೆಯ ಚಿಹ್ನೆ ಎಂದು ತಿಳಿದುಕೊಂಡಂತೆ ತೋರುತ್ತಿತ್ತು. ಒಳಗಿನಿಂದ ಅಜ್ಜಮ್ಮ ಬರುತ್ತಿದ್ದರು. ಕೆಲವರು ಪಾನಕ ಕುಡಿಸುವರು; ಕೆಲವರು ತಣ್ಣೀರನ್ನು ತಲೆಗೆ ತಟ್ಟುವರು; ಕೆಲವರು ಗಾಳಿಬೀಸುವರು; ಕೆಲವರು ತೋಟದಾಚೆಯ ಭೂತರಾಯನಿಗೆ ಅಡ್ಡಬಿದ್ದು ಅಜ್ಜಯ್ಯನನ್ನು ಸಂರಕ್ಷಿಸುವಂತೆ ಅಂಗಲಾಚಿ ಬೇಡುವರು. ಅಂತೂ ಸ್ವಲ್ಪ ಹೊತ್ತಿಗೆ ಅಜ್ಜಯ್ಯನ ಮೂರ್ಛೆಕೊನೆಗಂಡು ‘ಅಮ್ಮಯ್ಯ’ ‘ನಾಯಾರಣ’ ಮೊದಲಾದ ಶಬ್ದಗಳು ಅವರು ಬಾಯಿಂದ ಹೊರಬಿದ್ದು ಎಲ್ಲರಿಗೂ ಧೈರ್ಯವನ್ನುಂಟುಮಾಡುತ್ತಿದ್ದುವು. ಸರಿ; ಮತ್ತೆ ಜಳಕ, ಮತ್ತೆ ಮೂರ್ಛೆ! ಹೀಗಾಗಿ ಕೊನೆಗೆ ಸ್ನಾನ ಕೊನೆಗಾಣುವುದು. ಅವರಿಗೆ ನೀರೆರೆವವರು ಕೈಗಳನ್ನು ಆಗಾಗ ತಣ್ಣೀರಿನಲ್ಲಿ ಅದ್ದಿ ತಂಪುಮಾಡಿಕೊಂಡರೂ ಆ ಬಿಸಿನೀರಿನ ತಾಪ ಶಮನವಾಗುತ್ತಿರಲಿಲ್ಲ; ಅಷ್ಟು ಬಿಸಿ ಅವರು ಮೀಯುವ ನೀರು! ಅಜ್ಜಯ್ಯನ ಸ್ನಾನ ಕೊನೆಗಾಣುವಾಗ ಅವರು ಗಂಗೆ ಯಮುನೆ ಮೊದಲಾದ ಪುಣ್ಯ ನದಿಗಳ ಹೆಸರಿನ ಪಟ್ಟಿಯೊಂದನ್ನು ಗಟ್ಟಿಯಾಗಿ ಉಚ್ಚರಿಸಿ ನಾಲ್ಕು ದಿಕ್ಕುಗಳಿಗೂ ಕೈಮುಗಿಯುತ್ತಿದ್ದರು. ಇಬ್ಬರು ಎರಡು ಕೈಗಳನ್ನೂ ಹಿಡಿದು ಹಾಸಗೆಗೆ ಕರೆದೊಯ್ಯುತ್ತಿದ್ದರು. ಹೋಗುವಾಗ ಅವರ ಮೈ ಹೊಗೆಯಾಡುವಂತೆ ಕಾಣುತ್ತಿತ್ತು. ಅಲ್ಲಿ ಸಿದ್ಧವಾಗಿದ್ದ ಕಂಬಳಿ ಮೊದಲಾದುವುಗಳನ್ನು ಮೈ ತುಂಬಾ ಹೊದೆದುಕೊಂಡು ಮಲಗಿ ಬೆವರಿಸಿಕೊಳ್ಳುತ್ತಿದ್ದರು. ಅವರು ಆದಿನ ರಾತ್ರಿ ಊಟ ಮಾಡುತ್ತಿರಲಿಲ್ಲ. ಬರಿಯ ಹಾಲನ್ನೆ ಕುಡಿದು ಮಲಗಿಬಿಡುವರು.
ಅವರ ಕಾಲ ಮುಗಿದುಹೋಯಿತು. ಅವರೊಡನೆ ಆ ಅಭ್ಯಂಜನದ ಮಹೋತ್ಸವವೂ ಮರೆತುಹೋಯಿತು.
*******
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ