ನನ್ನ ಪುಟಗಳು

23 ಜುಲೈ 2018

ಶ್ರೀ ಸಂಪುಟಂ: ಸಂಚಿಕೆ 6 - ಶ್ರೀರಾಮ ರಾವಣ ಚಿತ್ತಪಶ್ರೀ

ದುಂಡು ನೆರೆದುದು, ಲಂಕೆಯಾಡುಂಬೊಲದ ಬಯಲ
ಪಿರಿಯ ಬಿತರದೊಡಲ್‌ಮೇರೆಯರಿಯದೆ ತುಂಬಿ
ಸಿಡಿವುದೆನೆ, ಹೇರಡವಿಯಂತೆ, ಸಾಗರದಂತೆ,
ಕಿಕ್ಕಿರಿದು, ಭೋರ್ಗರೆದು, ಮಿಂಚಿ, ರಾವಣ ಮೂಲ
ಬಲದಾ: ಮಹೋದರಂ! ಸುಪ್ತಘ್ನಂ! ಮಕರಾಕ್ಷಂ!
ರಾಹುರೋಷಂ! ಸೂರ್ಯಶತ್ರು! ಶೋಣಿತಾಕ್ಷಂ !
ಬ್ರಹ್ಮಾಕ್ಷ ಮೇಣಗ್ನಿಕೇತು! ಪೆಸರಾಂತವರ್,
ಪೆಸರುಳಿಸಿಕೊಂಡವರ್, ದಶಶಿರ ಮಹಾ ಚಮೂ
ಸ್ವಾಮಿಗಳ್‌, ತಂತಮ್ಮ ದಳಸಮಸ್ತಂ ಬೆರಸಿ,
ಸಾವು ಬದುಕಿನ ಕೊನೆಯ ರಣಘೋರಕಣಿಯಾಗಿ                    ೧೦
ತಳಿಸಿರ್ದರಗ್ರ ಪಂಕ್ತಿಯೊಳಲ್ಲಿ, ಅಲ್ಲಲ್ಲಿ,
ದಶಗ್ರೀವ ರಾಕ್ಷಸ ನರೇಂದ್ರನಾಗಮನದ
ವಿಲಂಬನಕೆ ಖುರಪುಟಧ್ವಾನ ಚಟುಲ ರಥಾಶ್ವ
ಹೇಷಾರವವ್ಯಗ್ರಮನರಾಗಿ,
ಅತ್ತಲಾ
ಪುಲಸ್ತ್ಯಜಂ, ಪುತ್ರವ್ಯಸನ ಕರ್ಶಿತಂ, ತನ್ನ
ಹೃದಯರಂಗದ ರಣದ ತುಮುಲಮಂ ರಣವಸ್ತ್ರ
ಭೂಷಣಗಳಿಂದ ಮರೆಸಿದನ್‌; ಕಣ್ಮನಂಗೊಳಿಪವೊಲ್‌
ತೊಟ್ಟನುಟ್ಟನ್‌ಜ್ವಲಿಸುವಗ್ನಿವರ್ಣಂಗಳಂ;
ನೂಂಕಿ ನೈರಾಶ್ಯ ಮೇಘಂಗಳಂ, ಧೈರ್ಯ ರವಿ
ರಶ್ಮಿ ಕೋಟಿಯ ಕರೆವ ಸೂರ್ಯಪ್ರತೀಕಾಶ    ೨೦
ಭೀಮದರ್ಶನ ವಿಗ್ರಹಂ, ವಾದ್ಯಘೋಷಗಳ್‌
ಬಳಸಿ ಸುತ್ತುಂ ಮೊಳಗುತೈತರಲ್‌, ಪೊರಮಟ್ಟು
ಬಂದು ಕಂಡನು ತನ್ನ ಮೂಲಬಲ ಸಾಗರದ
ಪಾರ ರಾಹಿತ್ಯಮಂ.  ಭ್ರಾಂತಿಯೋ? ಮಾಯೇಯೋ?
ಏನೆರ್ದೆಯ ಕಿರ್ಚಂ ಕೆರಳ್ಚುವಾ ಬಲಮೊ ಪೇಳ್‌
ಬಹುಸಂಖ್ಯೆಯೊಳ್‌!-ಬೇರೆವೇರೆ ಓರೊರ್ವರನೆ
ಶಿಕ್ಷಿಸೆ ಭಯಂಗೊಳಿಪನಲ್ಲದಿರೆ ನರಕಂ
ಜವಂಗುಳಿವುದೇನಲ್ಲಿ ನರರಂ ನೆರೆಯಲೀಯೆ?-
ಬಗೆಯಿಂ ಜಗುಳ್ದುದು ಮನೋವ್ಯಥೆ; ಅಪೂರ್ವಮೆನೆ
ವೀರ ಸಹಜಾವೇಶಮೊಳ್ಕಿದುದು; ದಳ್ಳುರಿದುದು        ೩೦
ರಜೋ ಕ್ಷಾತ್ರತೇಜಂ ನಿಶಾಚರೇಶ್ವರಗೆ. ಮೇಣ್‌
ಮಸಗಿದುದು ಪಡೆಗಡಲುಮಂತೆ ನೃಪಚಂದ್ರನಂ
ಕಂಡು ತನ್ನೊಡೆಯನಂ. ಚೀರಿದುವು ನಿಸ್ಸಾಳ;
ಮೊಳಗಿದುವು ಭೇರಿ; ಬಹುಕೋಟಿಕಂಠ ನಿನಾದ
ಘೋರ ಘೋಷಣಭೀಷ್ಮವಾಯ್ತು ಲಂಕಾಧರಣಿ;
ಮೇರುಸಮ ಹೇಮವೇದಿಯ ತುಂಗ ಶಿಖರಕ್ಕೆ
ಕೋಡು ಮೂಡುವ ತೆರೆದೊಳದನೇರಿ ನಿಂದನೈ
ದಾನವೇಂದ್ರಂ. ನೋಡಿದನು ಕಣ್ಗೆ ಡೊಳ್ಳುರ್ಬ್ಬೆ;
ನೋಡಿದನು ಬಗೆ ಮೇರೆಮೀರೆ; ನೋಡಿದನುಸಿರ್
ದಿಗ್ದಿಗಂತಸ್ಥಾಯಿಯಾಗೆ; ಗಜರಾಜಿಗಳ್‌;      ೪೦
ವಾಜಿಗಳ್‌; ರಥಗಳ್‌; ಖರೋಷ್ಟ್ರಗಳ್‌; ಪತ್ತಿಗಳ್‌;
ಪ್ರಾಸ ಪಟ್ಟಸ ಪರಿಘ ಶರ ಖಡ್ಗ ಪರಶುಗಳ್‌;
ತೋಮರಂಗಳ್‌; ನಿಮಿರ್ದ್ದ ಗದೆಗಳ್‌; ಶೂಲಗಳ್‌;
ಭಿಂಡಿಪಾಲ ಶತಘ್ನಿಗಳ್‌; ಯಷ್ಟಿಗಳ್‌; ಚಕ್ರಗಳ್‌;
ವೈರಿ ಧೈರ್ಯಸ್ಖಲನ ಭೀಕರಂ ತಾನಾಗಿ
ಜೃಂಭಿಸಿದುದಾ ಮಹಾ ರಾಕ್ಷಸ ಚಮೂ ಸಮುದ್ರಂ.
ದಿಟ್ಟಿ ಹೋಹನ್ನೆಗಂ ಮತ್ತೆ ಸೋಲ್ವನ್ನೆಗಂ
ನೋಡಿ, ಪರಿತೋಷ ಮಿಗೆ, ಸಂಬೋಧಿಸಿದನಿಂತು
ತನ್ನನೀಕಾಂಭೋಧಿಯಂ :
“ಭಾರಮಿದೆ ಕಾರ್ಯಗುರು!
ದೀರ್ಘ ಭಾಷಣಕಿಂದು ತೆರಪಿಲ್ಲ, ಮನಮಿಲ್ಲ,   ೫೦
ನಿಮಗೆ ಮೇಣೆನಗೆ, ನಾಂ ಪೇಳ್ವುದೊಂದಿರ್ಪುದೀ
ನಿಮ್ಮ ಕೈಕೊಳ್ವಾಜಿ ಸಂಬಂಧಿ. ಕೇಳಿಮಾ
ವಜ್ರ ಕವಚೋಪಮ ಸುವಾರ್ತೆಯಂ.  ಇಂದೆಮ್ಮ
ಲಂಕೆಯಿದೆ ಗಾಯಗೊಂಡೆಕ್ಕಲನವೋಲ್‌. ಇಲ್ಲಿ
ದೀರ್ಘ ಭಾಷಣಕಿಂದು ತೆರಪಿಲ್ಲ, ಮನಮಿಲ್ಲ,
ನಿಮಗೆ ಮೇಣೆನಗೆ, ನಾಂ ಪೇಳ್ವುದೊಂದಿರ್ಪುದೀ
ನಿಮ್ಮ ಕೈಕೊಳ್ವಾಜಿ ಸಂಬಂಧಿ. ಕೇಳಿಮಾ
ವಜ್ರ ಕವಚೋಪಮ ಸುವಾರ್ತೆಯಂ. ಇಂದೆಮ್ಮ
ಲಂಕೆಯಿದೆ ಗಾಯಗೊಂಡೆಕ್ಕಲನವೋಲ್‌. ಇಲ್ಲಿ
ನೆರೆದಿರ್ಪುದೆಮ್ಮಾಯ್ದ ಮೂಲಬಲ ಸರ್ವಮುಂ.
ವಾನರಧ್ವಜಿನಿಗಿನ್ನಾವ ಗತಿ ಕಾಯ್ದಿಹುದೊ.
ಪುದುಗಿಸಿದೆ ಕಾಲಗರ್ಭಂ. ವರುಷ ಸಾಸಿರದ
ಘೋರ ತಪದಿಂ ಮೆಚ್ಚಿಸಿದೆನಾಂ ಸ್ವಯಭುವಂ.
ದಿವ್ಯ ವರಗಳನೆನಿತೊ ಪಡೆದಿಹೆನ್‌, ಶರಣೆನಗೆ
ಮಂತ್ರಶಕ್ತಿಗಳೆನಿತೊ. ದೇವ ದಾನವ ಗರುಡ  ೬೦
ಗಂಧರ್ವ ಯಕ್ಷ ಕಿನ್ನರ ಸುರಾಸುರರೆನಗೆ
ಮರಣ ಕಾರಣಮಾಗಲರಿಯರ್. ಕಪಿಧ್ವಜರ್
ವಾನರರೆನಗೆ ನರರ್ ಮಿಳ್ತುವಂ ತಂದಪರೆ?
ಅದಂತಿರೈ. ಬೊಮ್ಮನಿತ್ತಾ ವರಂಗಳೊಳ್‌ವರಂ
ನನಗಿರ್ಪುದೊಂದದ್ಭುತಂ ವರಂ. ಆ ವರದ
ಮಹಿಮೆಯಿಂದಾಂ ನಿಮ್ಮೊಳೋರೊರ್ವರೊಳುಮಿರ್ದು.
ಶತ್ರುವಿಗಸಂಖ್ಯ ರಾವಣರೆ ದಳಂಗೊಂಡವೋಲ್‌
ತೋರ್ದು, ತೋಳೊಂದೆ ನೂರಾಗೆ, ಸಾಸಿರಮಾಗೆ,
ನಿಮ್ಮ ದುರ್ದಮ ಬಲಕೆ ವರ ಮಹಚ್ಛಕ್ತಿಯಂ
ಬೆಂಬಲಗುಡುವೆನಿಂದು. ನಿಮ್ಮೊಳೋರೊರ್ವನುಂ,      ೭೦
ಕಲುದುರೆಯಾಳಕ್ಕೆ, ತೇರಾಳಕ್ಕೆ, ಕಾಲಾಳಕ್ಕೆ
ಮೇಣಾನೆಯಾಳಕ್ಕೆ, ನಿಮ್ಮೊಳೋರೊರ್ವನುಂ
ಕಾಳೆಗಂಗುಡುವನೀ ಲಂಕಾಧಿಪತಿಯಂತೆ
ಪೊಂಕಂಗಿಡದ ಬಿಂಕದಿಂ. ಗಂಧಮಾದನನೊ,
ಆಂಜನೇಯನೊ, ನಳನೊ, ಜಾಂಬವನೊ, ವಾಲಿಯ
ತನೂಭವನೊ, ಆರಾದರಕ್ಕೆ ತೃಣಕೆಣೆ ನಮ್ಮ
ಯಃಕಶ್ಚಿತರ್ಗಿಂದು! ಇಂದ್ರಜಿತು ಸಂದೊಡೇಂ?
ಅತಿಕಾಯನಳಿದೊಡೇಂ? ಕಲಿ ಕುಂಭಕರ್ಣನ
ಕಳೇಬರಂ ಕಳದಲಿ ಕಳಲ್ಡೊಡೇಂ? ಧೂಮ್ರಾಕ್ಷ
ವಜ್ರದಂಷ್ಟ್ರರ್ ಬಿಳ್ಡೊಡೇಂ? ಮಹಾಪಾರ್ಶ್ವಂ, ೮೦
ಪ್ರಹಸ್ತಂ, ಚಮೂಪತಿಗಳಸು ತೆತ್ತೊಡೇಂ? ಲಂಕೆ
ತಾನಕ್ಷಯ ನಿಕೇತನಂ ಯುದ್ಧಸಿದ್ಧರಿಗೆ!
ರಾವಣರ್ ನೀವಿಂದು! ಇಂದು ಈ ಸೇನೆಯಲಿ
ಬಿಂದುವುಂ ಸಿಂಧು! ನಡೆಯಿಂ ರಣಕೆ! ನಡೆಯಿಂ
ದಶಗ್ರೀವ ವಿಜಯಲಕ್ಷ್ಮಿಯ ತೋಳ್ಗಳುಯ್ಯಲೆಗ!”
ಏನೆಂಬೆನಾಕಾಶಕೇರ್ದ ಜಯಘೋಷಮಂ!
ಕರತಾಡನೋದ್ದಾಮ ರಾವಮಂ! ತರತರದ
ರಣವಾದ್ಯ ರುದ್ರ ಮಾರ್ಧುಮ್ಯಂ! ಫೂರ್ಮಿಸಿತೊ
ರುಂದ್ರ ನಾದಾಬ್ಧಿ! ಫೀಂಕರಿಸಿದುವು ಹೇರಾನೆ;
ಕೆನೆದುವಶ್ವತತಿ; ಚೀತ್ಕರಿಸಿದುವು ರಥ ಚಕ್ರ   ೯೦
ಪಂಕ್ತಿ; ಧರೆ ಕಂಪಿಸಲ್‌, ಕೋಂಟೆವಾಗಿಲ್ಗಳಿಂ
ಪೊರಮಟ್ಟುದೈ ರಾವಣನ ಮೂಲಬಲವಾರ್ಧಿ,
ವಾನರೌರ್ವಾನಲನ ನಂದಿಸುವ ನಿಶ್ಚಯದ
ದೃಢಧೀರ ಕಟು ಪಟು ಗಮನದಿಂದೆ!
ಅತ್ತಲಾ
ತೆರೆ ತೆರೆ ತೆರಳ್ದುದದ್ಭುತ ಪೃತನೆ. ಪಿಂತಣ
ಪತಾಕಿನಿಯ ಪಂಕ್ತಿಪಂಕ್ತಿಯ ವೈಜಯಂತಿಗಳ್‌
ಮರೆಯಾದುವೆದ್ದ ಧೂಳಿಯ ಸಾಂದ್ರ ಯವನಿಕೆಯ
ಹಿಂದೆ, ಭಾವಿಸುತದು. ತನ್ನ ಬಹುರೂಪಗಳೆ
ಕಜ್ಜಮೊಂದಕೆ ಸಜ್ಜುಗೊಂಡಾ ವರೂಥಿನಿಯ
ವಿಭವಮಂ, ವೀರ್ಯಮಂ, ಶಕ್ತಿ ಬಲ ಧೈರ್ಯಮಂ,      ೧೦೦
ಮೂಡಿದುದು ಮುಖಕೆ ಮಂದಸ್ಮಿತಂ ದಶಮುಖಕೆ.
ಕಿಡುವ ಮುನ್ನಂ ಸೊಡರ್ ಕುಡಿಯುಜ್ವಲಿಸುವ ಂತೆ
ತೆಕ್ಕನುಕ್ಕಿದುದೆರ್ದೆಗೆ ಮೈಥಿಲಿಯ ಮೆಯ್ಯಾಸೆ,
ಮರೆಸಿ ಮುನ್ನಿನ ಮನೋರಥದ ಪಥಪಥ್ಯಮಂ.
“ಮತ್ತೊಮ್ಮೆ ನೋಳ್ಪೆನಾಕೆಯ ಹೃದಯದಾಳಮಂ.,
ಮತ್ತಂ ಪರೀಕ್ಷಿಸುವೆನಾಕೆಯ ಪತಿವ್ರತಾ
ಸತ್ವಮಂ.” ಎಂಬ ನೆವಮಂ ಕಾರಣಂತೆತ್ತು,
ಮಾಯೆಯಿಕ್ಕಿದ ಮೂಗುದಾರದ ನಿಶಾಚರಂ
ಸ್ವಾತಂತ್ಯ್ರ ವಿಭ್ರಮೆಯ ವಿಧಿತಂತ್ರ ಪಶುವಿನೊಲ್‌
ತಿರುಗಿದನಶೋಕವನಿಕಾ ಯಾಗಮಂಟಪದ
ಭೋಗಯೂಪದ ಬಳಿಯ ಶಾದ್ವಲ ಸದೃಶ ಸತೀ
ರೂಪ ದರ್ಶನಕೆ. ಪೋದುದೆ ತಡಂ ಸೀತಾ
ಕುಟೀರಮಿರ್ದ್ದೆ ಳ್ತರದ ತಾಣಕೆ, ಅದೇನಾಯ್ತೊ ?
ತುಂಬಿದುದು ಶಮೆ ರಾಕ್ಷಸಾತ್ಮಮಂ. ಯುದ್ಧಮಂ
ಮರೆತ ಚೇತನಕೊದಗಿದುದು ಶುದ್ಧ ಬುದ್ಧಿಯ
ಮನಶ್ಯಾಂತಿ. ಕೇಳಿದುದು ಕಿವಿಗೆ, ಬಹುಕಾಲದಿಂ
ತಾನಾಲಿಸದ ಪಕ್ಷಿಯಿಂಚರಂ! ಕಂಡುದು
ಕಡಲ್‌ನೀಲಿ! ತನ್ನ ತಿಳಿಯಾಳದಿಂ, ಕದಡು ಬಗೆ
ತಿಳಿವಂತೆ, ಬಾನ್‌ತೊಳೆದುದಾತ್ಮಮಂ! ಸಾಹಸಕೆ
ಬೇರೆ ದಾರಿಗಳಿರುವುದನು ತೋರುವೋಲಂತೆ           ೧೨೦
ಮೆರೆದುದು ದಿಗಂತ ವಿಶ್ರಾಂತ, ಗಿರಿ ಕಂದರ
ತರಂಗಿತ, ವನಶ್ರೇಣಿ೧ ನಿಡುಪೊಲ್ತನಿಮಿಷಾರಿ
ತನ್ನ ಸಿರಿಯಂ ನಗುವ ಲೋಕ ಸೌಂದರ್ಯಮಂ
ನೋಡಿದನು ನಿರ್ನಿಮೇಷಂ. ಮತ್ತಮೆಳ್ಚರ‍್ತು,
ಸುಯ್ದು, ತನ್ನಂ ತಾನೆ ಪರಿಹಾಸಗೈವಂತೆ:
“ನಿಚ್ಚಮುಂ ಕಣ್ಗೀ ಸಮುದ್ರ ಸಾನ್ನಿಧ್ಯಮಿರೆ;
ನಿತ್ಯಂ ನಭೋ ಶುಭಾಶೀರ್ವಾದ ಹಸ್ತಮಿರೆ
ನೆತ್ತಿಯೊಳ್‌; ಸುತ್ತುಂ ವನಾದ್ರಿಗಳ್‌ಸ್ನೇಹಮಂ
ಧೈರ್ಯಮಂ ನೀಡುತಿರೆ, ಧೃತಿಗಮೃತದೀಕ್ಷೆಯೋಲ್‌:
ರಾಮಸತಿ ತಾನಿರ್ಕೆ. ಸಾಮಾನ್ಯೆಯಾದೊಡಂ            ೧೩೦
ಪತಿತೆಯಪ್ಪಳೆ ಪೇಳ್‌ಪತಿವ್ರತಾನಿಷ್ಠೆಯಿಂ.
ಜಾಣ್ಮರುಳೆ ಓ ಕೋಣಪ ಕಿರೀಟಿ?”
ಇಂತೆಂದು
ತನ್ನ ತಾನಣಕಿಸುವವೋಲಾಡಿ, ನಡೆದನಯ್‌
ಮಂಡೋದರೀಪ್ರಿಯಂ ಭೂಮಿಜಾತೆಯ ಭವ್ಯ
ಸನ್ನಿಧಿಗೆ. ದೇವಿಯಂ ಸೆರೆಯಿಟ್ಟ ಕೋಡುಗಲ್‌
ಗೆಂಟರಿರೆ ನಿಂದನಸುರಂ; ಬೆಚ್ಚಿದನ್‌; ನಟ್ಟ
ದಿಟ್ಟಿಯಿಂದಾ ಕಡೆಯ ನೋಡಿ, ಸನಿಹದೊಳಿರ್ದ
ಕಂಚುಕಿಗೆ ಕೈದೋರಿದನ್‌: “ಓಡು, ನಡೆ! ನೋಡಲ್ಲಿ!
ಅದೇನಗ್ನಿ? ಪರ್ಣಕುಟಿಗೇಂ ಪೊತ್ತಿಹುದೆ ಬೆಂಕೆ?
ಬೂದಿಯಾದಳೆ ಮೇದಿನಿಯ ಮಗಳ್‌? ಕೆಟ್ಟುದೆ            ೧೪೦
ಮಹತ್ಕಾರ್ಯಮೆನಗೆ? ಇವಳಿನ್ನೊರ್ವ ವೇದವತಿ
ತಾನಾದಳೇನ್, ತುತ್ತತುದಿಗೆ? ರಾವಣನಾಶೆ
ಮಣ್ಣಾಯ್ತೆ? ಇಂದುವರೆಗೆನ್ನ ಕೈಕೊಂಡೆಲ್ಲ
ಸಾಧನೆಗೆ ಶೂನ್ಯಮಾದುದೆ ಫಲಂ?-ನೋಳ್ಪೆಯೇನ್‌?
ಕಣ್‌ಕುರುಡೆ ನಿನಗೆ? ಕಾಣದೆ ಆ ಮಹಾಜ್ವಾಲೆ”
ಬೆಳ್ಪನೊಲ್‌ನೋಡಿ ಸುತ್ತುಂ, ಕಾಣದೇನುಮಂ
ಕೈಮುಗಿದನಾಳ್‌: “ಪ್ರಭೂ, ಪರ್ಣಕುಟಿಯಲ್ಲದೆಯೆ
ಕಾಣದೇನುಂ!” ಮರಳಿ ಕಣ್‌ಕೀಲಿಸಾ ಕಡೆಗೆ
ಕೇಳ್ದನಸುರಂ: “ಕಾಣಿಸದೆ ಬೆಂಕೆ?” ಕಣ್ಬೆಸೆದು
ನೋಡಿ ಕಂಚುಕಿ ಪೇಳ್ದನಿನ್ನೊಮ್ಮೆ: “ಕಾಣೆನಾಂ!”        ೧೫೦
ಸುಯ್ದನೆವೆಯಿಕ್ಕದೆಯೆ ನಿಂದು ಕಂಡನದೊಂದು
ತನಗೆ ಮಾತ್ರಮೆ ದಿಟದ ಕಣ್ಮಾಯೆಯಂ: ಬೆಮರ್
ಪನಿಕುಳ್ತುದಾನನದಿ. ಒಂದೊಂದನೊತ್ತರಿಸಿ
ಮೈದೋರಿದುವು ಸುಯ್ಲುಗಳ್‌. ಸುರ್ಕ್ಕುಗೊಂಡುದು
ಮೊಗಂ. ಬುದ್ದಿಯೆ ವಿಕಾರಂಗೊಂಡವೊಲ್‌ತೋರ್ದನಾ
ಕಲಂಚುಕಿಗೆ ಲಂಕಾನೃಪಂ. “ಕಾಣಿಸದೆ ನಿನಗೆ?”
ಮತ್ತೊಮ್ಮ ಶಂಕೆಯಿಂ ಕೇಳ್ದ ಲಂಕೆಯ ದೊರೆಗೆ.
ಕಿಂಕರನೊರೆದನಂಜಿ: “ಕಾಣದೇನುಂ, ಪ್ರಭೂ
ಶಾಂತಿಯಿಂದಿರ್ಪಾ ಕುಟೀರಂ ವಿನಾ. ಕ್ಷಮಿಸೆನ್ನ
ದೃಷ್ಟಿ ದೌರ್ಬಲ್ಯಂ.” ನಕ್ಕನಾ ರಕ್ಕಸನ್‌         ೧೬೦
ತನಗೆ ತಾನಾಡಿದನ್‌: “ಆ ನಿನ್ನ ದುರ್ಬಲತೆ
ನನ್ನ ಕರುಬಿಗೆ ಕಾರಣಂ!”
ಪರ್ಣಶಾಲೆಯಂ
ಪೊತ್ತಿರ್ದುದೊಂದದ್ಭುತ ಚಿತಾಗ್ನಿ. ಕಂಡನಾ
ಕೆಂಡದುರಿ ನಡುವೆ ಕುಣಿದಿರ್ದ ರಣಚಂಡಿಯಂ!
ಮಡಿದ ಲಂಕಾ ವೀರ ಶತ ರುಂಡಮಾಲೆಯಂ
ತೊಟ್ಟಿರ್ದ್ಧಳುಟ್ಟಿರ್ದ್ದಳಾ ಮುಂಡಂಗಳಂ ನೆಯ್ದು
ಕೈಗಯ್ದ ಕಟಿವಸ್ತ್ರಮಂ! ನೋಡುತಿರೆ ನೃಪಂ,
ಗುರುತಿಸಿದನವುಗಳಂ: ಕುಂಭಕರ್ಣನ ಶಿರದ
ಪಕ್ಕದೊಳೆ ಕಂಡು ರಕ್ತಾರ್ದ್ರ ಭೀಕರಮಾದ
ತನ್ನ ಪಂದಲೆಯಂ ದಶಾನನಂ ಹಮ್ಮೈಸಿ      ೧೭೦
ಕಣ್ಮುಚ್ಚಿದನ್‌!… ತಂದೆನೇ ಸುಂದರಿಯ ರೂಪದೀ
ಸೀತಾ ಶ್ಮಶಾನಕಾಳಿಯನೆಂದು ತನ್ನೊಳಗೆ
ತಾಂ ನೊಂದು, ಮುರಿದು ತಿರುಗಿದನಸುರನರಮನೆಗೆ!
ತ್ರಿಜಟೆ ಕಂಡಳ್‌ದೈತ್ಯನೈತಂದುದಂ, ಮೇಣ್‌ಬಳಿಗೆ
ಬಾರದೆಯೆ ದೂರದಿಂದೆಯೆ ಪೆಡಂಬೋದುದಂ.
ಪೇಳ್ದಳವನಿಜೆಗೆ. ಗಂಭೀರ ಮುಖದರ್ಪದಿಂ
ಧ್ಯಾನಸ್ಥೆ ಸೀತೆ: “ಫಲಿಸಿತನಲಾ ಪ್ರಾರ್ಥನಂ.
ಬಾರನಿನ್‌ಬಳಿಗವನ್‌ಈ ಜನ್ಮದೊಳ್‌! ತ್ರಿಜಟೆ.
ಕಡಿದುದಾತನ ಸೂತ್ರಮಾಯೆ. ಪಟವಾಡಿಪಳ್‌
ಜೀವಗಳನಂಬೆ, ಆದ್ಯಾಶಕ್ತಿ. ಕಾಲವಶಿಯಿನ್‌  ೧೮೦
ರಾಕ್ಷಸನ ಬಾಳ್ಪಟಂ. ಮುಕ್ತಿ ಮಾಯೆಯೊಲ್‌
ಪೀಡಿಸಿ ಮುಮುಕ್ಷುಗಳನೆಳೆಯುವುದು ತನ್ನೆಡೆಗೆ,
ರಾಕ್ಷಸೋತ್ತಮ ಸಖೀ, ಸುಲಭಪಥದಿಂ ಮತ್ತೆ
ಶೀಘ್ರದಿಂ!” ಧ್ವನಿಶಕ್ತಿಗಚ್ಚರಿವಡುತೆ ತ್ರಿಜಟೆ
ಕೇಳಿದಳ್‌: “ನೀನಾರ್, ಮಹಾತಾಯಿ? ಹೆದರುತಿದೆ
ಬಗೆ, ನಿನ್ನ ಸಾನ್ನಿಧ್ಯ ಭೀಷ್ಮಪ್ರಭಾವದಿಂ!
ನೀನೆ ನೀಂ ಪೇಳ್ದ ಆದ್ಯಾಶಕ್ತಿ! ನಾಂ ಮೂರ್ಖೆ,
ಮಾತಾಯಿ,  ನಿನಗಿದೊ ನಮಸ್ಕಾರ! ಸಾಸಿರ
ನಮಸ್ಕಾರ!”
ಅಡಿಗೆರಗಿದಾ ತ್ರಿಜಟೆಯಂ, ಮುಡಿಯ
ನೇವರಿಸಿ, ಹರಸಿದಳ್‌ತಾಯಿ, ಸೀತಾದೇವಿ,   ೧೯೦
ಸಾಂತ್ವನ ವಚನ ಸುಧಾವೃಷ್ಟಿಯಂ ಸೂಸಿ:
“ಪೇಳ್‌,
ಅಸುರಸಖಿ, ನಿನಗೇತಕೀ ಭಾವಗದ್ಗದಂ?
ನಾಂ ಜನಕಸುತೆ; ಧರಣಿಜಾತೆ: ರಘುರಾಮ ಸತಿ!
ನನ್ನವಳ್‌ನೀಂ. ನಿನಗೆ ತಲ್ಲಣಂ ತಗದಣಂ,
ಕೆಳದಿ. ನಿನಗೊಂದನೊರೆದಪೆನನಗೊದಗಿದೊಂದು
ನವ್ಯ ಸಾಕ್ಷಾತ್ಕಾರಮಂ. ಆವುದಾಗಲಿ ನೆಪಂ
ಫಲದಾಯಕಂ ತಪಂ. ನನಗೆ, ರಘುನಾಥಂಗೆ.
ಮೇಣ್‌ರಾಕ್ಷಸೇಂದ್ರಂಗೆ ಮೂವರ್ಗಮವರವರ
ಕರ್ಮಾನುಸಾರಿ ಜನ್ಮೋದ್ದೇಶ ಸಾಧನೆಗೆ
ಮೇಣಾತ್ಮ ವಿಕಸನದ ಪರಿಣಾಮ ಸಿದ್ಧಿಗೆ        ೨೦೦
ಸಹಾಯಮಾದುದು ಮಂಥರೆಯ ಮೂಲದ ಈ ಬೃಹದ್‌
ದುರ್ಘಟನೆ. ಇನ್ನೆನಿತು ಜೀವರಿಗೆ ತಂತಮ್ಮ
ಕರ್ಮಕ್ಷಯಕೆ ಮತ್ತೆ ಧರ್ಮಾಭ್ಯುದಯಕಿದು
ನಿಮಿತ್ತಮಾದುದೊ ಪೇಳ್ವರಾರ್!”
“ನಾನುಮೊರ್ವಳಾ
ಜೀವರ್ಕಳೊಳ್‌: ನಾಂ ಕೃತಜ್ಞೆ ಲಂಕೇಶ್ವರಗೆ!
ನಿನ್ನ ಸೇವಾ ಭಾಗ್ಯಮೆನಗಾದುದಾತನಿಂ.
ನಾನೆಲ್ಲಿ! ನೀನೆಲ್ಲಿ? ಲಂಕಾ ಅಯೋಧ್ಯಾಂತರಂ!
ಲಭಿಸುತಿರ್ದುದೆ ನನಗೆ ನಿನ್ನ ದರ್ಶನಮಾ
ದಶಗ್ರೀವ ಸಾಹಸ ವಿನಾ?”
“ತಿಳಿವುದಂತ್ಯದೊಳ್‌,
ತ್ರಿಜಟೆ, ಆ ಪರಮ ಸತ್ಯಂ, ನನಗುಮಂದದು  ೨೧೦
ಅಗೋಚರಂ; ಇಂದಾತ್ಮಗೋಚರಂ. ನಾನಿಂದು
ಅಂದಿನವಳಲ್ಲ. ರಾಮಧ್ಯಾನ ಮಹಿಮೆಯ
ನಿರಂತರ ತಪಸ್ಯೆಯಿಂ ನನಗಲೌಕಿಕ ಸಿದ್ಧಿ
ತನಗೆ ತಾನಾಯ್ತು. ರಾಮನನರಿತೆನಾತ್ಮದಿಂ.
ತನ್ನ ನಿತ್ಯವಿಭೂತಿಯಿಂ ಪರಬ್ರಹ್ಮನೆಯೆ
ತಾನ್‌: ಸರ್ವಸೃಷ್ಟಿ ಮೇಣ್‌ಲೀಲಾ ವಿಭೂತಿಯುಂ.
ತಾನ್‌, ರಾಮಮಯಮೀ ಸಮಸ್ತ ಲೋಕಂ. ಸಖೀ,
ನಿನ್ನಂಥೆ ನಾನುಮಾ ಮಯನ ಮಗಳಾಣ್ಮಂಗೆ
ಕೃತಜ್ಞೆ ದಲ್‌! ರಾವಣಂಗೊಳ್ಳಿತಕ್ಕುಂ, ಋತದ
ರೀತಿಯಿಂ!….”
ತೆಕ್ಕೆನಂತರ್ಮುಖತೆವೆತ್ತಳಾ          ೨೨೦
ದೇವಿ.. ಮಾಣ್ದುದು ಮಾತು. ಬೆದರುಗಣ್ಣಾಗುತ್ತೆ
ನಿಟ್ಟಿಸಿದಳೇನನೊ ಸುದೂರವನಗಂಗೊಳ್ವವೋಲ್‌.
ಸೋದ್ವಿಗ್ನೆಯಾಗಿ ಪೇಳ್ದಳ್‌; “ತ್ರಿಜಟೆ, ತಾ ಬೇಗ
ಪುಷ್ಟತೀರ್ಥಂಗಳಂ! ಪೂಜಿಸಲ್‌ವೇಳ್ಕುಮೀ
ರಾಮಾಂಗುಳೀಯಮಂ. ಸ್ವಾಮಿ ಕೈಕೊಂಡಿಹನ್‌
ದುರ್ಧರ ಮಹತ್ಕಾರ್ಯಮಂ. ಸಿಲ್ಕಿದೆ ಕಪಿಧ್ವಜಿನಿ
ಕೀನಾರ ದಂಷ್ಟ್ರೋಪಮದ ವಿಪದ್‌ವಿಪಿನಾಗ್ನಿ
ಮಧ್ಯೆ. ಪ್ಲವಗಪತಿಗಳ್‌ಪತಂಗೋಪಮಂ ಆ
ರಾವಣಾಗ್ನಿಗೆ ನುರ್ಗ್ಗಿ ಬೇಳುತಿರ್ಪರು ಸಮರ
ದೇವತೆಗೆ ತಮ್ಮಸುಗಳಂ. ಪೂಜೆ ತಾಂ ಶಕ್ತಿ.                          ೨೩೦
ನಾಥಂಗೆ ನೆರಮಪ್ಪೆನಾತನಂ ಪೂಜಿಸಿ
ನಿವೇದಿಸುವೆನಾತ್ಮಬಲಮಂ!” ತ್ರಿಜಟೆಗೇನೊಂದು
ತಾತ್ಪರ್ಯಮಾಗದಿರ್ದೊಡಮವಳ್‌ಬೆಸಸಿದೊಲ್‌
ಪೂಜೆಗಣಿಮಾಡಿದಳ್‌ಪೂ ನೀರ್ಗಳಂ
ಓಡಿ
ಬೇಡಿದನಬುಜಭವನಂ ಶಚೀ ಜೀವತೇಶ್ವರಂ:
“ಓಂ ನಮೋ ಪ್ರಲಯ ಸರ್ಗಸ್ಥಿತಿಯ ಕಾರಣನೆ!
ಓಂ ನಮೋ ವ್ಯಕ್ತ ಜಗದವ್ಯಕ್ತ ಮೂರ್ತಿಯೆ,
ಜಗದ್ಗುರುವೆ, ಸರ್ವಲೋಕಪ್ರಭುವೆ, ವಿಭುವೆ, ಮೇಣ್‌
ಹರಿಹರಾತ್ಮಕನೆ! ನಿನಗರಿಯದಿರ್ದುದುಮುಂಟೆ?
ಕೇಳಾದೊಡಂ ಪೇಳ್ವೆನೆಮ್ಮ ಲೋಕವ್ಯಥೆಯೆ  ೨೪೦
ಕಥೆಯನೊಂದಂ. ಗುರುವೆ, ನೀನಿತ್ತ ವರಿದಿಂದೆ
ಕಪಿಸೇನೆ ಬಯಲಾಯ್ತು! ವಿಘ್ನಮೊದಗಿದೆ ರಾಮ
ಲೀಲಾವತಾರ ಕಾರ್ಯಕೆ . ರಾವಣಂ ತನ್ನ
ಮೂಲ ಬಲದೊಳ್‌ನಿನ್ನ ಕೊಟ್ಟ ಬಹುರೂಪಿಣೀ
ವಿದ್ಯೆಯಿಂ ವ್ಯಾಪಿಸಿ , ಕುಳುಂಪೆಯಂ ಕಾಡಾನೆ
ಕೆಸರೇಳೆ ಕದಡುವಂದದಿ, ರುಧಿರ ಪಂಕದೊಳ್‌
ನರ್ತಿಸಿರ್ಪಂ ಮೃತ್ಯು ನಾಟ್ಯಮಂ. ಸಾಮಾನ್ಯ
ಕಪಿಯೋಧರಿರ್ಕ್ಕೆ, ವಾನರ ಮಹಾನಾಯಕರೆ
ಕೆಡೆದರವನಿಗೆ, ಗತಿಸಿದನು ಗಂಧಮಾದನಂ.
ಕಲಿ ಗವಯನುರುಳಿದನ್‌. ದಿಗ್ಗಜೋಪಮ ಗಜಂ        ೨೫೦
ಮರಣದಿಂ ಸರಿದನಯ್‌ತುಡುಕಿ ಕೈಯಲಿ ತನ್ನ
ಹರಣಮಂ. ಬಳಲಿ ಬಿಳ್ದನು ನಳಂ. ಮಿಡುಕುತಿದೆ
ಕೊರಳೊಳಸು ಜಾಂಬವಗೆ. ಗದಗದಿಸುತಂಗದಂ
ಹೆದರೊಲ್ಲದೆ ಹೆದರುತೋಡಿದನ್‌. ಅವರಿವರ
ಮಾತೇಕೆ? ಒಂದನಾಡಿದರೆಲ್ಲವೊರೆದಂಥೆ:
ಪರಮೇಷ್ಠಿ, ಕೇಳ್‌, ಹಿಂಜರಿದನೈಸೆ, ರಾಮಂಗೆ
ಮೊರೆಯಿಡಲ್‌, ಅಂಜರಿಯದಾಂಜನೇಯಂ,
ಪ್ರಭಂಜನ ಭವಂ, ಮೇಣ್‌ಚಿರಂಜೀವಿ!”
ಇಂತಾ
ದಿವೌಕಸರ ದೇವಂ ಹಿರಣ್ಯಗರ್ಭಂಗೊರೆಯೆ.
ಕೇಳ್ದಾ ಪಿತಾಮಹಂ ಶರಧಿ ಗಂಭೀರಮೆನೆ                              ೨೬೦
ನುಡಿದನಂಬುದ ವಾಣಿಯಿಂ. ತಗುಳ್ದಪುದೆ ಪೇಳ್‌
ಆಸ್ವಾದಿಸುವ ಸೂತ್ರಧರ ಕವಿಗೆ?
“ಸುರಮುಖ್ಯ,”
ತನ್ನಚ್ಛಿಯಂ ನಿರೂಪಿಸಿದನಾ ಋತಚಿತ್‌
ಸ್ವರೂಪಿ “ನಡೆವುದನಿತುಂ ನಡೆಯಬೇಕಾದುದೆ
ವಲಂ. ತಿಳಿಯದೆಯೆ ಕೊಟ್ಟುದಲ್ತಾ ವರಂ; ತಪ್ಪಿ
ಕೊಟ್ಟುದುಂ ತಾನಲ್ತು. ಪರಮ ಪ್ರಯೋಜನಂ
ಪೂರ್ಣಚಿದ್ಗೋಚರಂ. ನನ್ನಿಚ್ಛೆಯೊಪ್ಪದೆ
ತೃಣಂ ಚಲಿಸದಾಂ ತಂತ್ರಮಖಿಲ ಲೋಕಕೆ, ತಂತ್ರಿ,
ಮೇಣ್‌ಸರ್ವತಂತ್ರಸ್ವತಂತ್ರಿ, ಪರಮೇಚ್ಛೆ ನಾಂ;         ೨೭೦
ಮೇಣಖಿಳ ಜೀವರಾಶಿಗಳಿಚ್ಚೆಗಾನಿಚ್ಛೆ,
ರಾವಣೇಚ್ಛೆಗಮಂತೆ ರಾಮೇಚ್ಛೆಗುಂ! ತಿಳಿ,
ಸಹಸ್ರಾಕ್ಷ, ಲೀಲಾ ರಹಸ್ಯಮಂ; ರಾವಣಗೆ
ರಾವಣತ್ವಂ ತವಿಯದೆಯೆ ಸಮನಿಪುದದೆಂತು
ರಾಮತತ್ತ್ವಂ? ತನ್ನ ಲೀಲಾವತಾರಮಂ
ಅವಿದ್ಯೆಯಿಂದೆಳ್ಚರಿಸಲೋಸುಗಂ, ಕೇಳ್‌ಜಿಷ್ಣು,
ತನ್ನ ವಿದ್ಯಾಶಕ್ತಿ ಯೋಗಮಾಯೆಗೆ ಬೆಸಸಿ
ರಾಮನೆಡೆಗಾಗಳೆ ಕಳುಹಿದನ್‌ಮಹಾವಿಷ್ಣು.
ನಡೆ, ನೋಡು ಮುಂದಪ್ಪುದಂ; ತಳ್ವಲೀಯೆಡೆಯ
ಚ್ಯುತನಪ್ಪೆ ನೀನಾ ಅಚ್ಯುತ ಮಹದ್‌ದೃಶ್ಯದಿಂ!”        ೨೮೦
ಚಂಡಕರ ಕಿರಣಮಂ ಪ್ರತಿಬಿಂಬಿಸುವ ತನ್ನ
ರುಂದ್ರ ಕೋದಂಡಮಂ ನೆಮ್ಮಿ, ದೋರ್ದಂಡ ಕಲಿ,
ಅಪ್ರಾಕೃತಮೆನಲ್ಕಪೂರ್ವ ಗಾತ್ರಂಬೆತ್ತ
ನೀಲ ಭೀಮೋನ್ನತಂ, ಕುಟಿಲ ಕೃಷ್ಣಶತ್ರು
ಕಠಿನಾನನಂ ಮಲೆಯ ಹೆಗಲೇರ್ದನಂದದಿಂ
ನಿಂದನೊಂದೆಳ್ತರದಿ ರಾಮಚಂದ್ರಂ. ಲಂಕೆ
ಕಿಷ್ಕಿಂಧೆಗಳ ವಿಪುಲ ಸೇನಾ ಮಹಾದ್ರಿಗಳ್‌
ಸಾಗರ ಭಯಂಕರಂ ತಾಗುವದ್ಭುತ ಕಲಾ
ರಣರಸದ ಸಂಗ್ರಾಮ ಸಂವೀಕ್ಷಣಾಸಕ್ತಿ
ತಾಂ ದಿವ್ಯಭವ್ಗಯ ವಿಗ್ರಹವಾದವೋಲಂತೆ   ೨೯೦
ಭಗ್ನ ಗದೆವೆರಸಿ, ಛಿದ್ರಿತ ತನುತ್ರಂ ವೆರಸಿ
ವಜ್ರತನುವುಂ ಜಜ್ಜರಿತವಾಗಲುದ್ವಿಗ್ನ
ಚಿತ್ತದಿಂ ಯುದ್ಧಧರೆಯಂ ತ್ಯಜಿಸಿ ಬಂದಾ
ಮರುತ್ಸುತಂ, ಪುಡುಕಿ ಕಾಣದೆಯೆ ಸುಗ್ರೀವನಂ,
ಪುಡುಕಿ ಕಾಣದೆ ರಾಜನಂಗರಕ್ಷಕ ದಳಮುಮಂ
ಪುಡುಕಿ ಕಂಡನು ರಾಮಭದ್ರನಂ, ದೂರದೊಳ್‌
ನಿಂದುಂ, ತಟಸ್ಥನೊಲ್‌ತೋರ್ದುಂ, ರಣಪ್ರಳಯ
ಕರ್ಮದೊಳ್‌ಪೂರ್ಣದೀಕ್ಷೆಯನಾಂತನೋಲಿರ್ದ
ರಣರುದ್ರನಂ. ನಿರ್ನಿಮಿಷ ಪಕ್ಷ್ಮ ನೇತ್ರನಂ,
ಸು ಮಹತ್‌ಕ್ರಿಯಾವೇಗ ನಿಷ್ಟಂದ ಗಾತ್ರನಂ,  ೩೦೦
ಚಿತ್ತಪಸ್‌ಸೂಕ್ಷ್ಮಕರ್ಮದ ಯೋಗ ಲಕ್ಷ್ಮದ
ವಿರಾಡ್‌ವರ್ಷ್ಮನಂ ಕಂಡನಾ ಜಗತ್‌ಪ್ರಾಣಜಂ
ಸ್ವಯಂ ಯೋಗಿ! ತನ್ನಸ್ಥಿರತೆಗೆ ತಾಂ ನಾಣ್ಚಿದನ್‌,
ಸ್ಥಿರಾತ್ಮಜಾ ವಲ್ಲಭ ಸ್ಥೈರ್ಯಮಂ ಕಂಡು.
ಸಾನ್ನಿಧ್ಯ ಮಾತ್ರದಿಂ ಪರಿದುದುಬ್ಬೆಗಮೆರ್ದೆಗೆ
ಮೂಡಿದುದು ಧೀರಪ್ರಶಾಂತಿ. ಪಿಂತೇಗಳುಂ
ತಾನರಿಯದಿರ್ದೊಂದು ಭಕ್ತಿಭಾವಂ ತು ಳುಕಿ,
ತನ್ನಿಚ್ಛೆಗಿಂ ಶತಾಧಿಕ ಬಲದ ವಿರಾಟ್ ಕ್ರತು
ಬಲಾತ್ಕರಿಸಿತೆನೆ ತನ್ನೊಳಾಶೆಯೋಲುದ್ಭವಿಸಿ,
ದಿಂಡುರುಳಿದನು ರಾಮಪದತಲಕೆ! ಅನ್ಯರಾರ್           ೩೧೦
ಕಾಣ್ಬರಾ ಆಂಜನೇಯಂ ಕಂಡುದಂ? ಕಂಡಾ
ತುರೀಯಮಂ ಪೇಳಲಾತನುಮೇಂ ಸಮರ್ಥನೆ
ಮನೋತೀತಮಂ? ಅನುಭವಾದ್ಭುತಕೆ ಗದ್ಗದಿಸಿ:
“ಇದೇನಿದೇನ್‌, ದಾಶರಥಿ? ನೀನೆನ್ನನಿನ್ನೆಗಂ
ವಂಚಿಸಿದೆಯೇಕೆ? ನೀನಾರೆಂಬ ನನ್ನಿಯಂ
ಮರೆಮಾಡಿ. ನರನವೋಲತ್ತು, ಗೋಳಾಡಿ ಮೇಣ್‌
ಬೇಡಿ, ನಾಟಕವಾಡಿದಯ್‌, ಸರ್ವ ಶಕ್ತನುಂ
ಸಕಲ ವೇತ್ತನುಮಾಗಿ ನಮ್ಮಭ್ಯುದಯಕೆಮ್ಮ
ಬಲದ ಭಿಕ್ಷೆಯ ಬೇಡಿದಯ್‌! ವೀತ ವಿಘ್ನಂ
ಮಹಾವಿಘ್ನಗಳನೊಡ್ಡಿಕೊಂಡಯ್‌, ಪ್ರಚೋದಿಸಲ್‌      ೩೨೦
ಬದ್ಧಾತ್ಮರೊಳ್‌ ಭಗ್ನಾವರಣಚಿದ್ಯೋಗಮಂ!”
ಜ್ಞೇಯಮ್ಲದ ನಿತ್ಯದಿಂ ಲೀಲೆಗಳಿವಂತೆ
ದುರ್ ಜ್ಞೇಯನೊಯ್ಯನಂತರ್ಮುಖತೆಯಿಂ ಬಹಿರ್
ಮುಖಿಯಾಗಿ, ತನಗೆರಗಿದಂಜನೆಯ ಕಂದಂಗೆ;
“ಏಳ್‌, ಮಹಾವೀರ, ನೀನಲ್ಲದನ್ಯರ್ಗಿದು
ಅಗೋಚರಂ. ನಿನಗೊರ್ವನಿಗೆ ಮಾತ್ರಮಲ್ಲಯ್‌,
ಪ್ರಸುಪ್ತಮಾಗಿರ್ದುದಿನ್ನೆಗಮೆನಗುಮೀ ನನ್ನ
ದಿವ್ಯ ಗುಹ್ಯ ಸ್ವರೂಪಂ! ನಿನ್ನವೋಲಾನುಂ
ಸುವಿಸ್ಮಿತನೆ ದಲ್‌! ಸಿದ್ಧಿ ಕಾಲಾನುವಶಿ ಕಣಾ
ಲೀಲಾ ಜಗದೊಳದಾರ್ಗಾದೊಡಂ.  ನನಗಿದೆ ೩೩೦
ತಪಸ್ಯೆಯಾದುದು. ಮಂಥರೆಯೊ? ರಾವಣನೊ? ಬರಿ
ನಿಮಿತ್ತಮಾತ್ರರ್೧ ನನಗವರ್ ಮೇಣವರ್ಗೆ ನಾಂ!
ಈ ಆಗುತಿಹ ಸೋಲ್ಗೆ ಗದಗದಿಸದಿರ್; ಕೊಲೆಗೆ
ಕರಗದಿರ್. ನಾಣ್ಚದಿರ್ ನಿನಗಾದ ಭಂಗಕ್ಕೆ;
ಮಾನನಿಧಿ. ಇಂದು ನಿನಗೀ ಭಂಗವಾಗದಿರೆ,
ಅತ್ಯಂತ ಅಂತರಾತ್ಮನ ಅಹಂ ಮುರಿಯದಿರೆ,
ನಿನಗಾಗುತಿರ್ದುದೇನೀ ಮಹದ್ದರ್ಶನಂ?
ನೆನೆ ಇದನ್‌, ಮರೆ ಅದನ್‌! ಅಧಿಕಾರಿ ನೀನದಕೆ
ವಿಧಿ ತಂದುದಾ ನೆವದೊಳೀಯೆಡೆಗೆ ನಿನ್ನೊರ್ವನಂ.
ನರಚೇತನಕ್ಕೆ ಮೇಣ್‌ನಾರಾಯಣತ್ವಕ್ಕೆ, ಕೇಳ್‌,        ೩೪೦
ಚಿತ್‌ಸೇತುವುಂ ಪ್ರಾಣಪ್ರಣಾಲಮುಂ ನೀನಲ್ತೆ
ಪಾರಿಣಾಮಕ ನಾಮರೂಪನಿಸರ್ಗ ಸಹಯೋಗಿ?
ಮತ್ತಮಾ ನಿಮಿತ್ತಮೆ ವಿರಾಟ್‌ಚಿರ ಚಿರಂಜೀವಿ!-
ಆರಿಲ್ಲಮೀ ಎಡೆಯೊಳನಿಬರುಂ ಪೋದರಾ
ಸಂಗರಕೆ! ಅನಧಿಕಾರಿಗೆ ಇದಂ ಪೇಳದಿರ್.
ಪೇಳ್ದೊಡಮವಂಗುದಿಸದಯ್‌ಶ್ರದ್ಧೆ. ನೀನೆನ್ನ
ಅಂತರಂಗದ ಸಖಂ, ನೋಡುತಿರು ಲೀಲೆಯಂ
ವಿಜ್ಞಾತಮವಿಜಾನತಾಮೆಂಬುವುಪನಿಷದ್‌
ವಿಜ್ಞಾನಿಯೋಲ್‌!
“ರಾವಣನಿಂದು ತನಗಿರ್ದೊಂದು
ಬ್ರಹ್ಮವರ ವೀರ್ಯದಿಂ ಮೂಲ ಬಲಮಂ ನೆರಪಿ           ೩೫೦
ಕಳುಹಿದನ್‌, ತಾನೆ, ಬಹು ರೂಪಿ, ಸರ್ವರೊಳಿರ್ದು
ಕರ್ಮವಶವಾದೆಮ್ಮ ವಾನರ ಧ್ವಜಿನಿಯಂ
ತೊತ್ತಳದುಳಿಯುತಿರ್ಪ್ಪನಂತಕನವೋಲ್‌. ಅದನ್‌
ತಡೆಯಲನ್ಯರರ್ಗರಿದು, ಪವಮಾನತನಯ, ಕೇಳ್‌,
ನಿನಗಾದೊಡಂ! ಇದು ರಹಸ್ಯಮಾಲಿಸು: ನಾನೆ
ಆ ರಾವಣನ ಮೂಲಬಲ ಶಕ್ತಿ! ನನ್ನ್ ಅಸತ್‌
ಶಕ್ತಿಯಂ ಗೆಲಲರಿದು ನನಗಲ್ಲದಿತರರಿಗೆ.
ಕಾಣು, ಬಾ, ಚಿತ್ತಪಸ್‌ಶಕ್ತಿಯ ಅಲೌಕಿಕ
ವಿಧಾನಮಂ. ನಿನಗುಮನುಭವಮಿರ್ಪುದದರಿಂದೆ
ಆ ಉದ್ಯಮದೊಳೆನಗೆ ಸಹೋದ್ಯೋಗಿಯಾಗು, ಬಾ!   ೩೬೦
ನಾನೆ ಅವನಲ್ಲದಿರೆ ಆ ದಶಗ್ರೀವಂಗದೇನ್‌
ಸೀತೆಯನ್ನೊಲಿವುದುಂ ಮೇಣವಳನುಯ್ವುದಂ,
ಪೇಳ್‌, ಮೊರ್ಗ್ಗೆ?”
ಇಂತೆನುತ್ತೊಂದೆರಳ್‌ಪಜ್ಜೆಯಂ
ಮುಂತಿಟ್ಟು ಬೆಸಸಿದನು ಜಳಧರಧ್ವಾನದಿಂ
ಪ್ರಕೃತಿಗಾ ಪುರುಷೋತ್ತಮಂ ಯೋಗಮಾಯೆಗೇಂ
ಪ್ರತಿಭಾನ ದಾರಿದ್ರ್ಯಮೇನಾಜ್ಞೆಯೊಂದಾಗಲ್‌
ಋತಪ್ರಭುವಿನಾ: ಕಂಡನಾಂಜನೇಯಂ ಸಕಲ
ಸಂಗ್ರಾಮಮಂ, ಏಕವೀಕ್ಷಣದಿ! ಕಂಡುದೊರ್ಮೊದಲೆ
ರಣ ಸಮಷ್ಟಿಯುಮಂತೆ ಸೂಕ್ಷ್ಮ ವಿವರ ವ್ಯಷ್ಟಿಯುಂ
ತಾಂ ಬೇರೆಯಾಗಿರ್ದುಮೋರೊರ್ವರೊಳ್‌ಸೇರ್ದು      ೩೭೦
ದೃಷ್ಟಿಸಿದನಖಿಲಮಂ, ವ್ಯಕ್ತಿತ್ವಮಂ ಮೀರ್ದು,
ಸಾರ್ದು ಸರ್ವತ್ವಮಂ.
ಪ್ಲವಗ ಲಾಂಛನ ವೀರ
ದಧಿಮುಖನ ಧೀರ ದಳದಲಿ ರಾವಣನ ಮೂಲ
ಬಲಕಿದಿರ್ ಕಾಳೆಗಂಗೊಟ್ಟು ಕೆಡೆದುದು ಮಂದಿ
ಕಡಿದಡವಿಯೋಲ್‌. ಮಿತ್ರರಾ ವಹ್ಮಿರಂಹರುಂ
ಸಾಮಾನ್ಯ ಸೈನಿಕರಸಾಮಾನ್ಯ ತೇಜದಿಂ
ಕಾದಿದರ್: ನುರ್ಗ್ಗಿ ಬಂದಶ್ವಮಂ ಹೊಡೆ ಬಿರಿಯೆ
ಬಡಿದು ಕೊಂದರು. ಹಸ್ತಿ ಮೇಲ್ವಾಯೆ ಗುಂಡಿಟ್ಟು
ಜರ್ಜಿದರದರ ಮಂಡೆಯಂ. ರಥಂ ಮುಂಬರಿಯೆ
ಮುರಿದರು ರಥಾಂಗಮಂ ಬಲ್ಗದಾ ಮುಷ್ಟಿಯಿಂ.          ೩೮೦
ಬಿಲ್ ಕೋಯೆ, ಖಡ್ಗಕೆ ಖಡ್ಗಮಿರಿಯೆ, ಮೇಣ್‌
ಪಗೆಯ ನೆತ್ತರ್ ತೊರೆಗಳವರ ನೆತ್ತರ್ ವೊಳೆಗೆ
ಸಂಗಮಿಸಲುಪನದಿಗಳೋಲ್‌, ನೆಲದಿ ಮೇಣ್‌ನಭದಿ.
ವಿವಿಧಾಸ್ತ್ರ ಶಸ್ತ್ರ ವಿದ್ಯಾ ಕದನಕೋವಿದರ್
ತೊರೆದು ಹರಣದ ಹಂಗನೆಂದಿಗಿಂ ಮಿಗಿಲೆನಲ್‌
ಇಂದು ಹೋರಿದರಾದರೇನೇಕಿಂತು ತಮ್ಮವರ
ಕಯ್‌ಸೋಲುತಿದೆ? ವಹ್ನಿ ಕೇಳಿದನು ತನ್ನೆಡೆಯ,
ಸೆಣಸಿದಾಳಂ ಕರುಳ್‌ಚೆಲ್ಲೆ ಕತ್ತಿಯಿನೊತ್ತಿ
ಕೊಂದು, ನಿಂದಿರ್ದ ಕುಳ್ಳೊಡಲನಂ ರಂಹನಂ.
‘ಸೋಲೊಮ್ಮೆ ಗೆಲುವೊಮ್ಮೆ, ಗೆಲ್ವೆಣ್ಣಿಗದೆ ಹೆಮ್ಮೆ!’       ೩೯೦
ರಂಹನೆನುತಿರೆ, ಮತ್ತಮಿಮ್ಮಡಿಯ ರೋಷದಿಂ
ಬಾನ್‌ಬಿರಿವ ಘೋಷದಿಂ ನುಗ್ಗಿದುದಸುರಸೇನೆ.
ಶಸ್ತ್ರಾಸ್ತ್ರ ಮೃತ್ಯು ನರ್ತನವನೇನೆಂಬೆನಾ
ವಹ್ನಿ ರಂಹರ್ಗೆ ಕಣ್‌ಕಳ್ತಲಿಸಿದುದು; ಬಲಂ
ಬತ್ತಿದುದು; ಬತ್ತಳಿಕೆ ಬರಿದಾಯ್ತು; ಮುರಿದುದೈ
ಕತ್ತಿ; ;ಚಿತ್ತದ ದೃಢತೆ ಹಿಂಗಿತು; ವಿಕಂಪಿಸಿತು
ಜಂಘೆ; ತಡೆ ತಡೆದೊಡಂ, ತಡೆಗಡಿದು ತಡೆಗಳಂ,
ತಡೆಯದೆಯೆ ತಳ್ಳಿದುದು, ನೂಂಕಿದುದು, ಮೇಲ್ವಾಯ್ದು
ಮುಂದೊತ್ತಿದುದು ದೈತ್ಯ ಸೇನಾಬ್ಧಿ, ಕಂಡನು ವಹ್ನಿ
ಸರಿಸರಿದು ಬೊಬ್ಬೆಯಬ್ಬರಿಸೋಡುತಿಹ ಮಿತ್ರ            ೪೦೦
ದಳದಳಗಳಂ! ನಿಲ್ಲಲೆಳಸಿ, ನಿಲಲಾರದೆಯೆ,
ಹಿಂದು ಹಿಂದಕೆ ಸರಿದು ಕೂಗಿದನು ರಂಹನಂ
ಪ್ರಾಣಮಿತ್ರಕ್ಷೇಮ ಕಾತರ ಂ. ಜಗುಳ್ವಚಲಮಂ
ಹಿನ್ನೂಂಕಲೆಳಸುವ ವನವರಾಹನೋಲಂತೆ
ಇಟ್ಟ ಹೆಜ್ಜೆಯ ಕಿತ್ತು ಹಿಮ್ಮೆಟ್ಟಲೊಲ್ಲದೆಯೆ
ಸಿಂಹಹೃದಯಂ ರಂಹನಿರೆ, ದನುಜದಾವಾಗ್ನಿ
ಸುತ್ತಿ ಮುತ್ತಿದುದವಂ ಕೆಡೆದನವನಿಗೆ ವಹ್ನಿ
ನೋಡುತಿರೆ. ಏರ್ವಡೆದುರುಳ್ದ ಕೆಳೆಯನನೆತ್ತಿ
ರಕ್ಷಿಸುವೆನೆಂದು ಮುನ್ನುಗ್ಗಿದನ್‌. ಕುಬ್ಜನಂ
ಮೇಲೆತ್ತಿದನ್‌ದೀರ್ಘದೇಹಿ. ಕೌಂಕುಳಲಿರುಕಿ   ೪೧೦
ಪಿಂತಿರುಗುತೋಡುತಿರ್ದಾತನಂ ಬೆಂಬತ್ತಿ
ಬರುತಿರ್ದರಾ ಭೀಮ ದಾನವರೆತ್ತಿ ತೋಳ್ಗಳಂ.
ಮೊಲವನಟ್ಟುವ ಸೀಳುನಾಯಿಗಳವೋಲ್‌.
ತನ್ನ
ಗೆಳೆಯನ ದೆಸೆಗೆ ಹೆದರಿ ಹಿಂಜರಿಯುತಿರ್ದನಂ,
ಕೆದರಿ ಕೆಟ್ಟೋಡುತಿರ್ದಿತರರಂ ಸೇರ್ದನಂ,
ವಹ್ನಿಯಂ ಗುರಿಗೆಯ್ದುದಾಂಜನೇಯನ ಕಣ್‌;
ಮನಂ ಮನವನರಿತುದು; ರಘೂದ್ವಹಂ ಬೆಸಸಿದುದೆ
ನೆವಮಾಯ್ತೆನಲ್‌; “ವಹ್ನಿ, ಬಿಸುಡೆನ್ನ ದೇಹಮಂ.
ಇಂದೊ ನಾಳೆಯೊ ಸಾವೆನಾಂ. ಓಡಿ ಬರ್ದುಕುವುದೆ?
ಸುಡಲಿ ಆ ಬಾಳ್ಕೆಯಂ, ಬಿಸುಡುಲ. ಬಿಸುಡೆನ್ನೊಡಲ    ೪೨೦
ಭಾರಮಂ. ತಾರದಿರ್ ಸ್ವಾಮಿಕಾರ್ಯಕಲೆ ವಿಘ್ನಮಂ.
ಕೊಳೆತೊಡೇಂ ನನ್ನೊಡಲ್‌? ರಾಮಕಾರ್‌ಯಂ ಗೆಲ್ಗೆ!
ಅಂದು ನಾಮಿರ್ವರುಂ ಕಡಲ ತೀರದೊಳವನ
ಕಂಡು ಸಂಭಾವಿಸಿದೆವದೆ ನಮಗೆ ಸಾರ್ಥಕಂ
ಈ ಜನ್ಮ ಸಫಲತೆಗೆ! ತೊರೆ ಈ ಕಳೇಬರದ
ಭಾರಮಂ. ಕೈದುಗೊಳ್‌! ತಿರುಗು! ತಿವಿ! ಕೂಗಿ ಕರೆ
ಓಡುವವರಂ…..ವಹ್ನಿ, ಇದೊ ನನ್ನದುಂಗುರಂ.
ನೀಂ ಬರ್ದುಕಿ ಪಿಂತಿರುಗಿದರೆ……”
ತೆಕ್ಕನೆಯೆ ವಹ್ನಿ
ಮಿತ್ರನಂ ಬಿಗಿದಪ್ಪಿದನ್‌; ನೆಲಕ್ಕೊಯ್ಯನೆಯೆ
ಇಳುಹಿದನ್‌; ಕೊನೆಯ ನೋಟದ ಕಾಣ್ಕೆಯಂ ಸಲಿಸಿ.   ೪೩೦
ಕೈದುಗೊಂಡನ್‌; ತಿರುಗಿದನ್‌; ಕರೆದನಾರ್ದನ್‌
ರಣಧ್ವನಿಗಳಂ! ಮತ್ತೆ ಕಂಡನಿಲ್ಲನಿಲಜಂ
ವಹ್ನಿಯಂ; ವಹ್ನಿಗೆ ಬದಲ್‌ಗೋಪುರೋನ್ನತಂ
ನಿಂದುದು ವಿಯದ್‌ವಿಗ್ರಹಂ ರಾಮಚಂದ್ರಮನಾ!
ಕಂಡನಾ ಪಾಂಗೆಯೆ ಕಪಿಧ್ವಜಿನಿಯನಿತುಮಂ,
ವಾನರ ವಪುತ್ವಮಂ ತೊರೆದು ರಾಮಾಕೃತಿಗೆ
ನಗೆದುದಂ! ನೆಗೆದುದಂತೆಯೆ ರಾವಣಾಕೃತಿಗೆ
ರಾಕ್ಷಸ ಚಮೂ! ಕೋಟಿ ಕೋಟಿ ರಾವಣರಿದಿರ್
ಕೋಟಿ ಕೋಟಿಯೆ ರಾಮರಿದಿರಾದುದಂ ನೋಡಿ
ಧುಮುಕಿದುದು ಹನುಮತನುವಿನ ಧಮನಿ ಧಮನಿಯಲಿ                        ೪೪೦
ರೋಮ ರೋಮ ರಸಾಸ್ವಾದನಾ ವಿದ್ಯುತ್ತಪ ಓ
ನಿರ್ಝರಿಣಿ!
ಹಿಂಜರಿಯುತಿರ್ದ ಪಡೆ ಬಾನ್‌ಬಿರಿಯೆ,
ಗಿರಿ ಜರಿಯೆ, ಸುರಗಣಂ ದೂರದೂರಕೆ ಹಿಂಜಿ
ಹರಿಯೆ, ಬೊಬ್ಬಿರಿದಾರ್ದು ಮುನ್ನುರ್ಗ್ಗಿದುದು ಶತ್ರು
ತತ್ತರಿಸೆ: ಅನುರಣನಕಟವಿ ಕಂಪಿಸುವಂತೆ
ಘೀಂಕರಿಸಿ, ಪಣೆ ಪೆಣೆದು ಕೋಡುಗಳುಡಿದು, ಸೆಣಸಿ
ಕಾದುವ ವನೇಭಂಗಳೋಲ್‌-ಒಮ್ಮೆ ರಾವಣ
ಚಮೂಹಸ್ತಿ ಮತ್ತೊಮ್ಮೆ ರಾಘವ ಚಮೂದಂತಿ
ಒಂದನೊಂದೊತ್ತಿದುವು; ತಿಣುಕದಿರ್ಪನೆ ಪೇಳ್‌?
ದಿಟಂ ತಿಣುಕಿದನೊಫಣಿರಾಯನಾ ರಾಮಾಯಣದ      ೪೫೦
ಭಾರಕೆಂಬಂತೆ! ಪ್ರತಿಕೃತಿಸಿ ವರ್ಣಿಸಲಳವೆ
ಅಪ್ರಾಕೃತಾಪ್ರತಿಮ ಜಟಿಲ ಮೇಣ್‌ಭೂಮಮಂ?
ಪ್ರತಿಮಾ ವಿಧಾನದಿಂ ಪ್ರಯತ್ನಿಸಿ ಕವಿಪ್ರತಿಭೆ
ಸೋಲ್ತು ಬಗೆಕದಡಿದುದಕಿದೊ ಮುಂದೆ ಹರಡಿವೆ
ವಿಚಿತ್ರಗಳ್‌ಬಿಡಿಚಿತ್ರಗಳ್‌, ಗಡಿಬಿಡಿಗೆ ತಾಮೆ
ಪಡಿಮೆಗಳೆನಲ್‌: ಸಂಚರಿಸಿದುವು ಮಿಂಚುಫಣಿಗಳ್‌!
ಗುಡುಗಿದುದು ಮೇರುಗರ್ಭ ಂ! ತೆರೆಮಸಗಿದಬ್ಧಿ
ಒಳೆದುದಹಿಭೂಷಣನ ಭಾಳಾಕ್ಷಿಯಂ! ತೂಗಿ
ತುಹಿನಾದ್ರಿ, ತೊನೆದುವು ಶಿಖರ ಪಂಕ್ತಿ! ಲಯ ಸಮಯ
ತಾಂಡವ ಪ್ರಳಯ ನಾಟ್ಯಾಶಂಕಿಗಳ್‌ ಕುದಿದು         ೪೬೦
ಘೀಂಕರಿಸಿ ಗದಗದಿಸಿದುವು ಚಕಿತ ದಿಗುದಂತಿ!



*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ