ನನ್ನ ಪುಟಗಳು

02 ಅಕ್ಟೋಬರ್ 2015

ಶಾಂತಿನಾಥ

ಶಾಂತಿನಾಥ
ಈತನ ಕಾಲ: ಕ್ರಿ.ಶ.ಸು. ೧೦೭೦
ಈತನ ಕೃತಿ : ಸುಕುಮಾರ ಚರಿತ (ಚಂಪೂಕಾವ್ಯ)
ಆಶ್ರಯದಾತ: ಬನವಸೆ ೧೨೦೦೦ ಕ್ಕೆ ಅಧಿಕಪತಿಯೂ, ಮಹಾಮಂಡಲೇಶ್ವರನೂ ಆಗಿದ್ದ ಲಕ್ಷ್ಮಣ ರಾಜನೇ (ಲಕ್ಷ್ಮನೃಪ) ಶಾಂತಿನಾಥನಿಗೆ ಆಶ್ರಯಕೊಟ್ಟ ದೊರೆ.
ಮತ್ತಷ್ಟು ವಿಷಯಗಳು
 [ಮಾಹಿತಿ ಕೃಪೆ - ಬೊಂಬಾಳ, ಡಾ. ಕಮಲಾ ಹಂಪನಾ]

ಕನ್ನಡ ಸಾಹಿತ್ಯಕ್ಕೆ ಹನ್ನೊಂದನೆಯ ಶತಮಾನದಲ್ಲಿ ಮುಸುಕಿದ್ದ ಮಬ್ಬಿನ ತೆರೆಯನ್ನು ಓಸರಿಸಿ ತನ್ನ ಪ್ರತಿಭೆಯ ನಂದಾದೀವಿಗೆಯನ್ನು ಹಚ್ಚಿ ಹೆಚ್ಚು ಬೆಳಕನ್ನು ಕನ್ನಡದ ವಾಙ್ಮಯದ ಮೇಲೆ ಚೆಲ್ಲಿದ ಹಿರಿಯ ಕವಿ ಶಾಂತಿನಾಥ. ಏಕೆಂದರೆ ಶಾಂತಿನಾಥ ಕವಿಯ ಕೃತಿ ಪ್ರಕಟನಗೊಳ್ಳುವವರೆಗೂ ಕನ್ನಡ ಸಾಹಿತ್ಯದಲ್ಲಿ ಹನ್ನೊಂದನೆಯ ಶತಮಾನ ಬರಡುಗಾಲವೆಂಬ ಅಪಖ್ಯಾತಿಗೆ ಪಕ್ಕಾಗಿತ್ತು. ಆದರೆ ಸುಕುಮಾರ ಚರಿತೆ ಅಚ್ಚಾಗಿ ಕಾವ್ಯ ವಿಮರ್ಶಕರ ಹಾಗೂ ವಿದ್ವಾಂಸರ ಗಮನಕ್ಕೆ ಬಂದ ಮೇಲೆ ಶಾಂತಿನಾಥನ ಕವಿತಾ ಸಾಮರ್ಥ್ಯವನ್ನು ಮೆಚ್ಚಿ ತಲೆದೂಗಿ ಶಾಂತಿನಾಥನು ಹನ್ನೊಂದನೆಯ ಶತಮಾನಕ್ಕೆ ಜೀವಕಳೆ ತುಂಬಿದ ಕವಿಯೆಂದು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಕನ್ನಡದಲ್ಲಿ ಬಹುಮಂದಿ ಕವಿಗಳಲ್ಲಿ ಕಾಣುವ ಕೊರತೆಯೆಂದರೆ ಕಾವ್ಯದ ಸಮಗ್ರತೆಗೆ ಬೇಕಾದ ಏಕಾಗ್ರತೆಯ ಅಭಾವ. ಕೇವಲ ಕೆಲವೇ ಸಮರ್ಥ ಕವಿಗಳು ಪಂಪ, ರನ್ನ, ಜನ್ನ, ಆಂಡಯ್ಯನಂಥವರು – ಈ ಬಗೆಯ ದೋಷವನ್ನು ತಪ್ಪಿಸಿ, ಕವಿಯ ಸಾಮರ್ಥ್ಯ ಸಮರ್ಥವಾದ ರೀತಿಯಲ್ಲಿ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಶಾಂತಿನಾಥನೂ ಆ ಆದರ್ಶದ ಜಾಡಿನಲ್ಲಿ ನಡೆದ ಧೀಶಕ್ತಿಯ ಪ್ರೌಢ ಕವಿ.
ಸುಕುಮಾರ ಚರಿತೆಯೆಂಬ ಈ ಹಿರಿಯ ಕಾವ್ಯ ಈ ಕವಿಯ ರಚನೆ. ವಿದ್ವಜ್ಜನರಿಂದ-
            ಸಹಜಕವಿ ಚತುರಕವಿ ನಿ
            ಸ್ಸಹಾಯಕವಿ ಸುಕವಿ ಸುಕರಕವಿ ಮಿಥ್ಯಾತ್ವ
            ಪ್ರಹರಕವಿ ಸುಭಗಕವಿ ನುತ
            ಮಹಾಕವೀಂದ್ರಂ ಸರಸ್ವತೀ ಮುಖ ಮುಕುರಂ.”
-ಎಂಬ ಸಹಜ ಪ್ರಶಂಸೆಗೆ ಮಾನ್ಯನಾದವನು. ಪಂಪ-ರನ್ನರು ಹೇಳಿಕೊಂಡಂತೆ ಶಾಂತಿನಾಥನೂ ತನ್ನ ಗ್ರಂಥ – ಶಾಸನಗಳಲ್ಲಿ ಜೀವನ ವಿಚಾರವಾಗಿ ಕೆಲವು ವಿವರಗಳನ್ನು ತಿಳಿಸಿದ್ದಾನೆ. ಶಾಂತಿನಾಥನ ತಂದೆ ಜಿನ ಸಮಯಕ್ಕೆ ಸೇರಿದ ಗೋವಿಂದ ರಾಜ. ಗುರು ವರ್ಧಮಾನ ಯತಿಗಳು. ವಾಗ್ಭೂಷಣನಾದ ರೇವಣ, ಕವಿಯ ತಮ್ಮ; ಕರ್ಣಪಾರ್ಯ ಹಿರಿಯ ಅಣ್ಣ.
           ಜನಕಂ ಶ್ರೀ ಜೈನಭಾಸ್ವತ್ ಕ್ರಮಯುಗಲ ಸರೋಜಾತ ಭೃಂಗಂ ವಿಶಿಷ್ಟೇ
            ಷ್ಟನಿದಾನಂ ಸತ್ಯ ರತ್ನಾಕರನೆನಿಸಿದ ಗೋವಿಂದರಾಜಂ ಮುನೀಂದ್ರಾ
            ಭಿನುತ ಶ್ರೀ ವರ್ಧಮಾನ ಬ್ರತಿಪತಿಗಳುಪಾಧ್ಯಾಯರಾರ್ಹಂತ್ಯ ಧರ್ಮಂ
            ತನಗಾರ್ಮಂ ಭೂಷೆ ರತ್ನತ್ರಯಮೆನೆ ನೆಗೞ್ದಂ ಧಾತ್ರಿಯೊಳ್ ಶಾಂತಿನಾಥಂ
ತನ್ನ ತಂದೆಯ ದೈವನಿಷ್ಠೆಯನ್ನೂ, ಧರ್ಮಶ್ರದ್ಧೆಯನ್ನೂ ತನ್ನ ಆಚಾರ್ಯರ ಮಹತ್ತನ್ನೂ ತಿಳಿಸುವುದರ ಜೊತೆಗೆ ಶಾಂತಿನಾಥನು ಸ್ವತಃ ತಾನು ಹೇಗೆ ಧರ್ಮಾನುರಾಗಿ ಯಾಗಿದ್ದಾನೆಂಬುದನ್ನು ಹೇಳಿಕೊಂಡಿದ್ದಾನೆ. ಅವನಿಗೆ ಮೋಕ್ಷ ಮಾರ್ಗವನ್ನು ತೋರುವ ರತ್ನತ್ರಯಗಳೇ ಅಲಂಕಾರವಗಿವೆಯಂತೆ. ಶಾಂತಿನಾಥನಿಗೆ ತನ್ನ ಜಿನಮತ – ಜೈನಧರ್ಮದಲ್ಲಿ ಅಪಾರ ಶ್ರದ್ಧೆ, ಅನಂತ ಗೌರವ, ಅಮಿತವಾದ ಆಸಕ್ತಿ, ಅತೀವವಾದ ಅನುರಾಗ. ತನ್ನ ಸ್ವಧರ್ಮವಾದ ಜಿನಧರ್ಮವೇ ಪರಮ ಧರ್ಮವೆಂಬ ನಂಬಿಕೆ. ಅಲ್ಲದೆ ಜಿನಮತವೇ ಉದಾತ್ತ ಮತವೆಂದೂ, ಜಿನತತ್ತ್ವವೇ ಪರಮ ತತ್ತ್ವವೆಂದೂ, ಜಿನಮಾರ್ಗವೇ ಸ್ವೈರಮಾರ್ಗವೆಂದೂ ಶಾಂತಿನಾಥನ ಅಚಲವಾದ ವಿಶ್ವಾಸ.
ಸುಕವೀಂದ್ರರೂ, ವಿನೇಯಜನರೂ ‘ಈ ಸುಕುಮಾರ ಚರಿತದೊಳ್ ನೋೞ್ಕೆ ಕಾವ್ಯಧರ್ಮಮುಮನಮಳ ಜಿನಧರ್ಮಮುಮಂ’ ಎಂದು ಮಹಾಕವಿ ಪಂಪನಂತೆ ಶಾಂತಿನಾಥ ಕವಿಯೂ ತನ್ನ ಕಾವ್ಯಾರಂಭದಲ್ಲೇ ಉದ್ಘೋಷಿಸಿದ್ದಾನೆ. ಶಾಂತಿನಾಥ ಕವಿಯ ಈ ಸದಾಶಯ ವಿಮರ್ಶೆಯ ದೃಷ್ಟಿಯಿಂದ ಸಮೀಕ್ಷಿಸಿದಾಗಲೂ ಬಹುಮಟ್ಟಿಗೆ ನೆರವೇರಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕಾವ್ಯ ಪಾಕದಲ್ಲಿ ಧರ್ಮ ಪ್ರತ್ಯೇಕವಾಗಿ ಒಡೆದು ನಿಲ್ಲದೆ ಸಮಪಾಕವಾಗಿ ಸೇರಿದೆ. ಶಾಂತಿನಾಥನು ಕಾವ್ಯಧರ್ಮದ ಮಹತ್ವವನ್ನೂ, ಜೈನಧರ್ಮದ ಮಹಿಮೆಯನ್ನೂ ಸುಕುಮಾರ ಚರಿತೆಯ ರಸಪಾಕದಲ್ಲಿ ಹದವಾಗಿ ಒಂದುಗೂಡಿಸಿದ್ದಾನೆ.
ರತ್ನತ್ರಯರೂ, ಜಿನಸಮಯದೀಪಕರೂ, ಮಹಾಕವಿಗಳೂ ಆದ ಪಂಪ ಪೊನ್ನ ರನ್ನರು ಶುದ್ಧವಾಗಿ ಸಿದ್ಧಪಡಿಸಿದ ಕಾವ್ಯ ಮಾರ್ಗದಲ್ಲಿ ತಮ್ಮ ಭಕ್ತಿಯ ಪುಷ್ಪಾಂಜಲಿಯನ್ನು ಸಮರ್ಪಿಸಿ ವಿನಮ್ರ ಶಿಷ್ಯರಾಗಿ ಹಿಂಬಾಲಿಸಿದ ಹಲವು ಕನ್ನಡ ಕವಿಗಳಲ್ಲಿ ಶಾಂತಿನಾಥ ಅತ್ಯಂತ ಗಮನಾರ್ಹವಾದ ಹಿರಿಯ ಕವಿ. ಕನ್ನಡದ ಪ್ರಸಿದ್ಧ ಕವಿಗಳಲ್ಲಿ ಕೆಲವರು ಕಾವ್ಯಗಳನ್ನು ರಚಿಸುವುದರ ಜೊತೆಗೆ ಶಾಸನಗಳನ್ನೂ ರಚಿಸಿದ್ದಾರೆ. ರನ್ನ-ಜನ್ನ ಮೊದಲಾದ ಕವಿಗಳು ಈ ಸಾಲಿಗೆ ಸೇರಿದವರು. ಶಾಂತಿನಾಥ ಕವಿಯೂ ಈ ಸುಕುಮಾರ ಚರಿತೆ ಕಾವ್ಯವಲ್ಲದೆ ಶಾಸನಗಳನ್ನು ಬರೆದಿರುವಂತೆ ತಿಳಿದುಬರುತ್ತದೆ. ಶಿಕಾರಿಪುರದ ೧೩೬ನೆಯ ಶಾಸನ ಕನ್ನಡದಲ್ಲಿ ಸಿಗುವ ಕಾವ್ಯಮಯವಾದ ಶಾಸನಗಳಲ್ಲೊಂದು. ಸುಮಾರು ಐವತ್ತು ಪದ್ಯಗಳನ್ನೊಳಗೊಂಡ ಚಂಪೂಶೈಲಿಯ ಆ ಶಾಸನದ ಶೈಲಿ ಮತ್ತು ಪದ್ಯಗಳು ಸುಕುಮಾರ ಚರಿತೆ ಕಾವ್ಯದ ಶೈಲಿ ಮತ್ತು ಪದ್ಯಗಳೊಡನೆ ಅತ್ಯಂತ ನಿಕಟ ಸಂಬಂಧ ಸಾದೃಶ್ಯ ಹೊಂದಿವೆ. ಅಲ್ಲದೆ ಸುಕುಮಾರ ಚರಿತೆ ಕಾವ್ಯದ ಅನೇಕ ಪದ್ಯಗಳು ಯಾವ ಬದಲಾವಣೆಯೂ ಇಲ್ಲದೆ ಶಿಕಾರಿಪುರದ ಶಾಸನದಲ್ಲಿ ಸೇರಿ ಹೋಗಿವೆ. ಆ ಶಾಸನ ಶಾಂತಿನಾಥ ಕವಿಯಿಂದಲೇ ರಚಿತವಾದುದೆಂದು ನಿಸ್ಸಂದೇಹವಾಗಿ ಹೇಳಬಹುದು. ಆಚಾರ್ಯ ಶ್ರೀ ದೊ.ಲ. ನರಸಿಂಹಾಚಾರ್ಯರು ಈ ವಿಚಾರದಲ್ಲಿ ಸಂಶೋಧನೆ ನಡೆಸಿ ಆ ಶಾಸನ ಶಾಂತಿನಾಥ ಕವಿಯಿಂದಲೇ ರಚಿತವಾಗಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಹಲವು ಆಧಾರಗಳಿಂದ ಅವರ ಅಭಿಪ್ರಾಯ ಮಾನ್ಯವಾಗಿದೆ.
ಶಾಂತಿನಾಥನಿಗೆ ಜಿನಮತಾಂಭೋಜಿನೀ ರಾಜಹಂಸ, ಚತುರ ಕವಿ, ಸರಸ್ವತೀ ಮುಖಮುಕುರ – ಮೊದಲಾದ ಅನೇಕ ಬಿರುದುಗಳಿದ್ದವು. ಇವನ ಸ್ವಸಾಮರ್ಥ್ಯದಿಂದ ಕಾವ್ಯರಚನಾ ಶಕ್ತಿಯನ್ನು ಗಳಿಸಿಕೊಂಡಂತೆ ಕಾಣುತ್ತದೆ. ಕಾವ್ಯಾರಂಭದಲ್ಲಿ ಆತನು ಸ್ಮರಿಸಿರುವ ಅನೇಕ ಕನ್ನಡ-ಸಂಸ್ಕೃತ ಕವಿಗಳ ಸ್ತುತಿಯನ್ನು ನೋಡಿದರೆ ಶಾಂತಿನಾಥನು ಪ್ರಾಚೀನ ಕಾವ್ಯಗಳನ್ನು ಸತತವಾಗಿ ಅಭ್ಯಾಸ ಮಾಡಿದಂತೆ ಕಾಣುತ್ತದೆ. ಅವನ ಸುಕುಮಾರ ಚರಿತೆಯ ಶೈಲಿಯನ್ನು ನೋಡಿದರೆ ಸಂಸ್ಕೃತದಲ್ಲಿ ಆತನಿಗೆ ಅಗಾಧವಾದ ಪಾಂಡಿತ್ಯವಿದ್ದಿತೆಂಬುದು ತಿಳಿದುಬರುತ್ತದೆ. ಆದುದರಿಂದ ಶಾಂತಿನಾಥನು ಉಭಯ ಭಾಷಾ ಪಂಡಿತನಾಗಿದ್ದನು. ಅಲ್ಲದೆ ಪ್ರಾಕೃತ ಭಾಷೆಯ ಅಲ್ಪಸ್ವಲ್ಪ ಪರಿಚಯವೂ ಇದ್ದಂತೆ ತೋರುತ್ತದೆ. ಶಾಂತಿನಾಥನು ಜೈನಾಗಮಗಳನ್ನೂ ಶಾಸ್ತ್ರಗ್ರಂಥಗಳನ್ನೂ ವಿಪುಲವಾಗಿ ಅಭ್ಯಾಸ ಮಾಡಿದ್ದಾನೆ.
ಜಿನ ಮಾರ್ಗಂ ಸ್ವೈರಮಾರ್ಗಂ ಜಿನಮತಮೆ ಮತಂ ಜೈನಧರ್ಮಂ ಸ್ವಧರ್ಮಂ
            ಜಿನತತ್ವಂ ಸೂಕ್ತತತ್ವಂ ಜಿನಚರಿತಮೆ ನಿರ್ಣೀತ ಚಾರಿತ್ರಮಾದ
            ತ್ತೆನಸುಂ ವಿದ್ವಜ್ಜನಂ ಬಣ್ಣಿಸೆ ನೆಗೞ್ದುದಱೆಂದೀತನತ್ಯಂತ ವಿದ್ವ
            ಜ್ಜನಸಂದೋಹಪ್ರಣೂತಂ ಪರಮ ಜಿನಮತಾಂಭೋಜಿನೀ ರಾಜಹಂಸಂ”
ಶಾಸ್ತ್ರಗ್ರಂಥ ಕರ್ತೃಗಳನ್ನೂ ಬಹುವಾಗಿ ಸುತ್ತಿಸಿದ್ದಾನೆ. ಕವಿಯ ಗುರುಪರಂಪರೆಯನ್ನು ಕಂಡರೆ ಎಂಥವರಿಗೂ ಬೆರಗು ಮೂಡುತ್ತದೆ. ಕನ್ನಡದಲ್ಲಿ ದೀರ್ಘವಾದ ಗುರುಪರಂಪರೆಯನ್ನು ನಿರ್ದೇಶಿಸಿರುವ ಕವಿಗಳಲ್ಲಿ ಶಾಂತಿನಾಥ ಮತ್ತು ಶಿಶುಮಾಯಣ ಕವಿಗಳು ಅಗ್ರಗಣ್ಯರೆಂದು ಕಾಣುತ್ತದೆ. ಶಾಂತಿನಾಥನು ಹೇಳುವ ಗುರುಗಳಲ್ಲಿ ಕೆಲವರ ಹೆಸರುಗಳು ನಗರದ ೫೭, ೫೮ನೆಯ ಶಾಸನಗಳಲ್ಲೂ, ಶಿಕಾರಿಪುರದ ೧೩೬ನೆಯ ಶಾಸನದಲ್ಲೂ, ಶ್ರವಣಬೆಳಗೊಳದ ೧೧೭ ಮತ್ತು ೩೫೧ ನೆಯ ಶಾಸನಗಳಲ್ಲೂ ಉಲ್ಲೇಖವಾಗಿರುವುದು ಗಮನಾರ್ಹ.
ಶಾಂತಿನಾಥ ಕವಿ ಸುಕುಮಾರ ಚರಿತೆಯಲ್ಲಿ ತನಗೆ ಆಶ್ರಯ ಕೊಟ್ಟ ರಾಜನ ಹೆಸರನ್ನೇ ಸ್ಮರಿಸಿಲ್ಲ.
            ಕೃತಿ ಕೇಳ್ದ ಭವ್ಯನಿವಹಕ್ಕೆ ಚಮತ್ಕೃತಿ ಮೆಚ್ಚುವೊಂಗೆ ಪು
            ಣ್ಯಾಕೃತಿ ಭಾರತೀಸತಿಗೆ ಮಾಡಿದಳಂಕೃತಿ ಪುಷ್ಪಚಾಪ ಬಾ
            ಣಾಕೃತಿ ಬಾಜಿಪೊಂಗೆ ಮುಕುರಾಕೃತಿ ಭಾವಿಸುಬೊಂಗಗಾಧ ಬೋ
            ಧಾಕೃತಿಯೆಂದೊಡಾರ್ಗಮಿದನಂತೆನಲುಂತೆನಲೆಂತು ತೀರ್ಗುಮೋ ||”
ಮತೀಯ ಕಾವ್ಯ ಪವಿತ್ರವಾದುದು. ಜಿನನ ಮಹಿಮೆಯನ್ನು ಕೊಂಡಾಡುವ ನಿರ್ಮಲ ಚರಿತೆ, ಆದುದರಿಂದ ಧರ್ಮಗ್ರಂಥದಲ್ಲಿ ಅನ್ಯಧರ್ಮಕ್ಕೆ ಸೇರಿದ ರಾಜನನ್ನು ಸ್ತುತಿಸುವುದು ಸಾಧುವಲ್ಲವೆಂದು ಕವಿ ಭಾವಿಸಿ ದೊರೆಯ ಹೆಸರನ್ನು ಕೈಬಿಟ್ಟಿದ್ದಾನೆಂದು ಊಹಿಸಬಹುದು. ಆದರೆ ಶಾಂತಿನಾಥನು ಈ ಕಾವ್ಯ ರಚಿಸಿದ ಕಾಲದಲ್ಲಿ ಯಾವ ರಾಜಾಶ್ರಯವೂ ಅವನಿಗೆ ದೊರೆತಿರಲಿಲ್ಲವೆಂದು ಹೇಳುವುದು ಸಮಂಜಸವಾಗಿ ಕಾಣುತ್ತದೆ.
ಕವಿಯ ಆಶ್ರಯದಾತ, ಕಾಲ ವಿಚಾರ
ಬನವಸೆ ೧೨೦೦೦ ಕ್ಕೆ ಅಧಿಕಪತಿಯೂ, ಮಹಾಮಂಡಲೇಶ್ವರನೂ ಆಗಿದ್ದ ಲಕ್ಷ್ಮಣ ರಾಜನೇ (ಲಕ್ಷ್ಮನೃಪ) ಶಾಂತಿನಾಥನಿಗೆ ಆಶ್ರಯಕೊಟ್ಟ ದೊರೆ. ಚಲದಂಕರಾಮ, ರಾಯಗಂಡ ಗೋಪಾಲ ನೃಪ, ಮಂಡಲಿಕ ತ್ರಿಣೇತ್ರ-ಇತ್ಯಾದಿ ಬಿರುದಾಂಕಿತನಾದ ಈ ಲಕ್ಷ್ಮನೃಪನು ಚಾಳುಕ್ಯ ಚಕ್ರವರ್ತಿಗಳಾದ ತ್ರೈಲೋಕ್ಯಮಲ್ಲ ಸೋಮೇಶ್ವರ ಮತ್ತು ಭುವನೈಕಮಲ್ಲ ಸೋಮೇಶ್ವರರ ಕಾಲದಲ್ಲಿ, ಅಂದರೆ ೧೦೪೮-೧೦೭೬ರ ಅವಧಿಯಲ್ಲಿ ಪರಾಕ್ರಮಿಯಾಗಿದ್ದು ಚಕ್ರವರ್ತಿಗಳ ವಿಶ್ವಾಸಕ್ಕೆ ಪಾತ್ರನಾಗಿದ್ದನು. ಲಕ್ಷ್ಮನೃಪನ ರಾಜಭಕ್ತಿಯಿಂದ ಸುಪ್ರೀತರಾದ ಚಕ್ರವರ್ತಿಗಳು ಆನೆ ಕುದುರೆಗಳೊಡನೆ ಬನವಾಸಿ ಪ್ರಾಂತ್ಯವನ್ನು ಬಹುಮಾನವಾಗಿ ಕೊಟ್ಟರು. ಲಕ್ಷ್ಮಣರಾಜನು ಕ್ರಿ.ಶ. ೧೦೬೫-೧೦೬೯ರವರೆಗೂ ಈ ಬನವಸೆ ಪ್ರಾಂತವನ್ನು ಆಳಿದಂತೆ ಶಾಸನಗಳ ಆಧಾರದಿಂದ ಗೊತ್ತಾಗುತ್ತದೆ.
ಲಕ್ಷ್ಮಣ ರಾಜನ ಆಡಳಿತದ ಅವಧಿಯಲ್ಲಿ ಶಾಂತಿನಾಥನಿಗೆ ಉನ್ನತವಾದ ಸ್ಥಾನಮಾನಗಳು ಲಭಿಸಿದವು. ಬಹುಶಃ ಸುಕುಮಾರ ಚರಿತೆಯ ರಚನೆಯ ಬಳಿಕ ಅದರ ಕೀರ್ತಿಯನ್ನು ಕರ್ಣಾಕರ್ಣಿಕೆಯಿಂದ ಕೇಳಿದ ದೊರೆ ಶಾಂತಿನಾಥನನ್ನು ತನ್ನ ಆಸ್ಥಾನಕ್ಕೆ ಕರೆಸಿರಬಹುದು. ಇದು ಏನೇ ಇರಲಿ, ಲಕ್ಷ್ಮನೃಪನು ಶಾಂತಿನಾಥನನ್ನು ಅರ್ಥಾಧಿಕಾರಿ ಯನ್ನಾಗಿಯೂ, ಮಂತ್ರ ನಿಧನನಾಗಿಯೂ ನಿಯಮಿಸಿದ್ದನು. ರಾಜಕಾರ್ಯ ಧುರಂಧರನಾದ ಶಾಂತಿನಾಥನು ಆ ರಾಜ್ಯ ಸಮುದ್ಧರಣನೂ ಆಗಿದ್ದನು. ರಾಜ್ಯದ ರಾಜಧಾನಿಯಾದ ಬಳಿ ಗ್ರಾಮದಲ್ಲಿ ದೊರೆಯ ಅನುಮತಿಯನ್ನು ಪಡೆದು ಶಾಂತಿನಾಥನು ಶಾಂತಿ ತೀರ್ಥಂಕರರ ಬಸದಿಯನ್ನು ನಿರ್ಮಿಸಿದನು. ಆ ಬಸದಿಯ ಬಾಗಿಲಲ್ಲಿ ನಿರ್ಮಿತವಾದ ಶಿಲಾಶಾಸನವೇ ಶಿಕಾರಿಪುರದ ೧೩೬ನೆಯ ಶಾಸನವಿರಬಹುದೆಂದು ವಿದ್ವಾಂಸರ ಊಹೆ. ಶಾಂತಿನಾಥನು ಮುಕ್ತಕಂಠದಿಂದ ರಾಜನನ್ನು ಸ್ತುತಿಸಿರುವ ಆ ಶಾಸನದ ಕಾಲ ಕ್ರಿ.ಶ. ೧೦೬೮. ಲಕ್ಷ್ಮಣ ರಾಜನು ಬನವಸೆ ಪ್ರಾಂತ್ಯಕ್ಕೆ ಮಹಾಮಂಡಲೇಶ್ವರನಾದ್ದು ಕ್ರಿ.ಶ. ೧೦೬೬ರಲ್ಲಿ. ಸುಕುಮಾರ ಚರಿತೆ ಅದಕ್ಕಿಂತಲೂ ಮುಂಚೆ ಅಂದರೇ ಕ್ರಿ.ಶ. ೧೦೬೨ರಲ್ಲಿ ರಚಿತವಾಗಿರಬೇಕು.
ವಿಮರ್ಶೆ
ಸುಕುಮಾರಸ್ವಾಮಿಯ ಕತೆ ಕನ್ನಡ ಕಥಾ ಸಾಹಿತ್ಯದಲ್ಲಷ್ಟೇ ಅಲ್ಲ, ಭಾರತೀಯ ಕಥಾ ಸಾಹಿತ್ಯದಲ್ಲೇ ಉತ್ಕೃಷ್ಟ ಕಥಾರತ್ನ. ಜೈನ ಕಥಾ ಸಾಹಿತ್ಯದಲ್ಲಂತೂ ಇದು ಅತ್ಯಂತ ಜನಪ್ರಿಯವಾದ ಕತೆ. ವಿಶ್ವದ ಶ್ರೇಷ್ಠ ಕತೆಗಳ ಸಾಲಿಗೆ ಸೇರುವ ಇಂಥ ಉದಾತ್ತ ಕತೆಯೊಂದನ್ನು ಆರಿಸಿಕೊಂಡು ಸುಮಾರು ಒಂದು ಸಾವಿರ ಪದ್ಯಗಳ ಚಂಪೂ ಕಾವ್ಯವನ್ನು ಬರೆಯುವುದರ ಮೂಲಕ ಶಾಂತಿನಾಥ ಕವಿ ತನ್ನ ಮೇಲ್ಮಟ್ಟದ ಜಾಣ್ಮೆಯನ್ನು ತೋರಿಸಿದ್ದಾನೆ. ಏಕೆಂದರೆ ಜೈನನಾದ ಶಾಂತಿನಾಥನಿಗೆ ಜಿನಧರ್ಮದ ಮಹತ್ವವನ್ನು ಬಿತ್ತರಿಸಿ ಅದರ ಔನ್ನತ್ಯವನ್ನು ಲೋಕಕ್ಕೆ ಸಾರಿ ಹೇಳುವ ಇನ್ನೂ ಅನೇಕ ಕತೆಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳುವ ಸ್ವಾತಂತ್ರ್ಯವಿತ್ತು. ಉದಾಹರಣೆಗೆ ನೋಂಪಿಯ ಕತೆಗಳಿದ್ದವು. ಪಂಚತಂತ್ರದ ಕತೆಗಳಿದ್ದವು. ಶಾಂತಿನಾಥ ಮನಸ್ಸು ಮಾಡಿದ್ದರೆ ತನ್ನ ಕಾವ್ಯಕ್ಕೆ ಎಲ್ಲಿಂದ ಬೇಕಿದ್ದರೂ ವಿಪುಲವಾದ ವಸ್ತುವನ್ನು ಹುಡುಕಿ ತರಬಹುದಿತ್ತು. ಅಥವಾ ಅಂಥದನ್ನು ಸ್ವಂತವಾಗಿ ಸ್ವತಂತ್ರವಾಗಿ ಅವನ ಪ್ರತಿಭೆ ಸೃಷ್ಟಿಸಬಹುದಿತ್ತು. ಅವನ ತೀಕ್ಷ್ಣಮತಿಗೆ, ವಾಙ್ಮಯದ ಅಗಾಧ ಪರಿಚಯವುಳ್ಳ ಅವನ ಚುರುಕು ಬುದ್ಧಿಗೆ ಅದೇನೂ ಕಷ್ಟವಾಗಿರಲಿಲ್ಲ.
ಆದರೆ ಶಾಂತಿನಾಥ ಕೇವಲ ನಿಪುಣ ಕವಿ ಮಾತ್ರವಲ್ಲದೆ ಕಲಾ ಕುಶಲನೂ, ರಸಾರ್ದ್ರ ಹೃದಯನೂ ಆಗಿದ್ದನು. ಅವನಲ್ಲಿ ಬುದ್ಧಿವಂತಿಕೆಗಿಂತಲೂ ಮಿಗಿಲಾದ ಕಲಾವಂತಿಕೆ ಇತ್ತು. ಕಲಾವಂತಿಕೆಗಿಂತಲೂ ಹೆಚ್ಚಿನ ಹೃದಯವಂತಿಕೆಯಿತ್ತು. ಆದುದರಿಂದ ಶಾಂತಿನಾಥನಿಗೆ ಕೇವಲ ಮತೀಯ ಮಡಿವಂತಿಕೆಯನ್ನು ತೋರುವ ಆಡಂಬರದ ಶ್ರೀಮಂತಿಕೆ ಅಷ್ಟಾಗಿ ಹಿಡಿಸಲಿಲ್ಲ. ತನ್ನ ಕಲಾ ಕೌಶಲ, ರಸಿಕತೆ ಮತ್ತು ಪಳಗಿದ ಶೈಲಿಗಳನ್ನು ಯಥಾವತ್ತಾಗಿ ಪ್ರದರ್ಶಿಸಲು ಸಹಕಾರಿಯಾಗಬಲ್ಲ ಕತೆ ಶಾಂತಿನಾಥನಿಗೆ ಬೇಕಿತ್ತು. ಅಂಥ ಕತೆ ಈ ಸುಕುಮಾರಸ್ವಾಮಿಯ ಕತೆಯೆಂಧು ಕವಿಗೆ ಬಹುವಾಗಿ ಹಿಡಿಸಿತೆಂದು ಕಾಣುತ್ತದೆ.
ಸುಕುಮಾರಸ್ವಾಮಿಯ ಮೂಲ ಕಥೆಯನ್ನು – ಸಂಸ್ಕೃತವೋ, ಪ್ರಾಕೃತವೋ, ಕನ್ನಡವೋ ಎಲ್ಲದರ ರಸಪಾಕವೋ – ಮತ್ತೆ ಮತ್ತೆ ಓದಿ ಮನಸಾರೆ ಮೆಚ್ಚಿ ಅದನ್ನು ಕಾವ್ಯದ, ಪದ್ಯದ, ಚಂಪುವಿನ ರೂಪದಲ್ಲಿ ಇಳಿಸಬೇಕೆಂದು ಅವನು ತೀರ್ಮಾನಿಸಿರಬೇಕು. ತನ್ನ ಧರ್ಮದ ಉದಾತ್ತ ತತ್ವಗಳ, ಪಂಚಾಣುವ್ರತಗಳ ಮಹಿಮೆ ಭವ್ಯತೆಗಳನ್ನು ಲೋಕಕ್ಕೆ ತಿಳಿಯಹೇಳಲು ಈ ಕಥೆಯೇ ತಕ್ಕ ಪ್ರಣಾಲಿಕೆಯೆಂದು ಅವನಿಗೆ ಅನ್ನಿಸಿದ್ದರೆ ಅತಿಶಯವಲ್ಲ. ಬಹುಶಃ ಶಾಂತಿನಾಥನು ವಡ್ಡಾರಾಧನೆ ಗದ್ಯಗ್ರಂಥವನ್ನೇ, ಕಥಾ ಸಂಕಲನವನ್ನೇ ಓದಿರಬೇಕು; ಅದರ ಮೊದಲನೆಯ ಕತೆಗೆ ಮಾರುಹೋಗಿರಬೇಕು. ಅಲ್ಲದೆ ಹರಿಷೇಣನ ಬೃಹತ್ಕಥಾಕೋಶದಲ್ಲಿ ಬರುವ ೨೬೦ ಶ್ಲೋಕಗಳ ಅವಂತಿ ಸುಕುಮಾರನ ಕತೆಯನ್ನೂ ಓದಿರಬಹುದು. ಶಾಂತಿನಾಥನ “ಸುಕುಮಾರ ಚರಿತೆ”ಗೆ ಮೂಲ ವಡ್ಡಾರಾಧನೆಯ ಮೊದಲ ಕತೆಯಾದ ಸುಕುಮಾರಸ್ವಾಮಿಯ ಕತೆ. ಇಲ್ಲಿ ಮತ್ತೊಂದು ಸ್ವಾರಸ್ಯವನ್ನೂ ಗಮನಿಸಬೇಕು. ಶಾಂತಿನಾಥ ಕವಿ ಇಡೀ ವಡ್ಡಾರಾಧನೆ ಕೃತಿಯನ್ನೇ ಅಭ್ಯಾಸ ಮಾಡಿದ್ದಾನೆಂದು ಸೂಕ್ಷ್ಮ ಪರಿಶೀಲನೆಗೆ ಸ್ಪಷ್ಟವಾಗಿ ಕಾಣುತ್ತದೆ. ಏಕೆಂದರೆ ಅವನು ತನ್ನ ಕಾವ್ಯದಲ್ಲಿ ವಡ್ಡಾರಾಧನೆಯ ಸುಕುಮಾರ ಸ್ವಾಮಿಯ ಕತೆಯೊಂದನ್ನೇ ಆರಿಸಿಕೊಂಡಿದ್ದರೂ ಇತರ ಕೆಲವು ಕತೆಗಳಿಂದಲೂ ಅಲ್ಲಲ್ಲಿ ಕೆಲವು ಅಂಶಗಳನ್ನೂ, ಸೂಚನೆಗಳನ್ನೂ ಸ್ವೀಕರಿಸುವುದು ಗೋಚರಿಸುತ್ತದೆ.
ವಡ್ಡಾರಾಧನೆಯ ಸುಕುಮಾರಸ್ವಾಮಿ ಕತೆಯಲ್ಲಿ ಸೂರದತ್ತ, ಯಶೋಭದ್ರೆಯರಿಗೆ ಸುಕುಮಾರನೆಂಬುವನು ಮಗನಾಗಿ ಹುಟ್ಟುವನು. ಅನಂತರ ಸೂರದತ್ತನು ಮಗನಿಗೆ “ಸೆಟ್ಟಿವಟ್ಟಂ ಗಟ್ಟಿ ತಪಂಬಟ್ಟಂ,” (ಪುಟ ೨೫) ಎಂಬ ವಿವರಣೆಗೆ ಬರುತ್ತದೆ. ಸೂರದತ್ತ ತಪಸ್ಸಿಗೆ ಹೊರಟಾಗ ಮಡದಿಯಾದ ಯಶೋಭದ್ರೆಗಾದ ಪರಿಣಾಮವೇನೆಂಬುದಾಗಲೀ, ಸೂರದತ್ತ ಯಶೋಭದ್ರೆಯರಿಗೆ ಸುಕುಮಾರನು ಜನಿಸಿದ ಬಗ್ಗೆ ಪೂರ್ವಕತೆಯನ್ನಾಗಲೀ ತಿಳಿಸಿಲ್ಲ. ಆದರೆ ಶಾಂತಿನಾಥನ ಕಾವ್ಯದಲ್ಲಿ ಆ ಪ್ರಕರಣ ವಿಸ್ತರಣಗೊಂಡಿದೆ. ಮಾರ್ಪಾಡು ಹೊಂದಿದೆ. ಕಾವ್ಯದ ಚೆಲುವಿನೊಡನೆ ಸಹಜತೆಯ ಸ್ಪರ್ಶ ಪಡೆದು ಕತೆ ಮತ್ತೂ ಚಿತ್ತಾಕರ್ಷಕವಾಗಿದೆ. ಅವನ ಕಾವ್ಯದಲ್ಲಿ ಯಶೋಭದ್ರೆಗೆ ಬಹುಕಾಲ ಮಕ್ಕಳಾಗದೆ ಮಮ್ಮಲ ಮರುಗಿ ಕಂದಿ ಕುಂದಿ ಬಸವಳಿದು ಬಾಡುವಳು. ಹೀಗಿರುವಾಗ ಒಮ್ಮೆ ಅಭಿನಂದನ ಮುನೀಂದ್ರರು ಬಂದಾಗ ಅವರನ್ನು ಕಂಡು ‘ತನಗೆ ಪುತ್ರ ಸಂಜನನ ಉಂಟೆ?” ಎಂದು ಬೆಸಗೊಳ್ಳುವಳು. ಆಗ ಆ ಯತಿಗಳು ನಿಜಾವಧಿ ಬೋಧಮಂ ಪ್ರಯೋಗಿಸಿ ನೋಡಿ.
            ಅನತಿಶಯ ಗರ್ಭಸುಖಿ ಸುಜ
            ನಿಧಾನಂ ಬಾಳದಿನಕರ ಪ್ರತಿಮಾನಂ
            ಜಿನಧರ್ಮನಿರತನೋರ್ವಂ
            ತನೂಭವಂ ನಿನಗೆ ಪುಟ್ಟುಗುಂ ಪುಟ್ಟಲೊಡಂ
            “ಪುತ್ರಮುಖಾಬ್ಜಾಲೋಕನ
            ಮಾತ್ರದೊಳಂ ಪಿತೃ ತಪಕ್ಕೆ ಪೋಕುಂ ಚಿತ್ರಂ
            ಪುತ್ರಂ ಮುಮುಕ್ಷುದರ್ಶನ
            ಮಾತ್ರದ ಜಿನದೀಕ್ಷೆಯಂ ದಿಟಂ ಕೈಕೊಳ್ಗುಂ
ಎಂದು ಅಪ್ಪಣೆ ಕೊಡಿಸಿದರಂತೆ. ಆಗ ಅವಳಿಗೆ ಏಕ ಕಾಲದಲ್ಲಿ “ಹರ್ಷವಿಷಾದಮಾದ ಮೇನೊದ ವಿದುವೋ”! (೯-೧೧೨) – ಎಂದು ಶಾಂತಿನಾಥ ತಿಳಿಸಿದ್ದಾನೆ.
ಹೀಗೆ ಇಲ್ಲಿ ಶಾಂತಿನಾಥನು ವಡ್ಡಾರಾಧನೆಯ ಕಥೆಗಿಂತ ತನ್ನ ಕಾವ್ಯದಲ್ಲಿ ಕೊಂಚ ಬೇರೆಯಾಗಿ ಮಾಡಿಕೊಂಡ ಬದಲಾವಣೆಗೂ ಮೂಲ, ವಡ್ಡಾರಾಧನೆಯ ಇನ್ನೊಂದು ಕಥೆಯಾದ ಸುಕೌಶಲ ಕಥೆಯಲ್ಲಿದೆ. ಆ ಕಥೆಯಲ್ಲಿ ಜಯಾವತಿ ಎಂಬಾಕೆ, ತನಗೆ ಮಕ್ಕಳು ಬೇಕೆಂದು ಪ್ರಾರ್ಥಿಸುತ್ತಿರುವಾಗ ಒಂದು ದಿನ ಒಬ್ಬ ಮುನಿ ಬರಲು ಅವರನ್ನು ಕಂಡು “ಇಂತೆಂದು ಬೆಡಗೊಂಡಳ್ ಭಟಾರಾ ಎನಗೆ ಮಕ್ಕಳುಕ್ಕುಮೋ ಆಗದೋ” ಎಂದು ಬೆಸಗೊಂಡೊಡೆ ಭಟಾರರಿಂತೆಂಧರ್ “ವಿಭವವೈಶ್ವರ್ಯ ರೂಪಕಾಂತಿ ಸೌಭಾಗ್ಯದಿ ಗುಣಂಗಳಿಂದಂ ಸಿದ್ಧಾರ್ಥನಿಂದಗ್ಗಳಂ ಕುಲತಿಲಕನಪ್ಪ ಮಗನಂ ಪೆಱುವಯ್ ಪೆತ್ತಾಗಳೆಂತು ಪುಣ್ಣಮಿಯಂದಿನ ಚಂದ್ರನಂ ಕಂಡಾಗಳಾದಿತ್ಯಸ್ತಮಾನಕ್ಕೆ ಸಲ್ಲುವಂತೆ ಮಗನಂ ಕಂಡಾಗಳೆ ನಿನ್ನ ಭರ್ತಾರನುಂ ತಪಂಬಡುಗುಮಾರಿಸಿಯರಂ ಕಂಡಾಗಳೆ ಮಗನುಂ ತಪಂಬಡಗುಮೆಂದು ಭಟಾರರ್ ಪೇೞ್ದು ಪೋದರಿತ್ತ ಜಯಾವತಿಗೆ ಹರ್ಷ ವಿಷಾದಂಗಳೆರಡುಮೊರ್ಮೊದಲಾಗೆ ಕಾಲಂಸಲೆ” (ಪುಟ ೪೩) ಎಂಬ ವಿವರಣೆಯಿದೆ. ಹಿಂದೆ ಉದಾಹರಿಸಿದ ಶಾಂತಿನಾಥನ ಮಾತುಗಳಿಗೆ ಇದೇ ಮೂಲವೆಂದು ನಿಚ್ಚಳವಾಗಿ ತಿಳಿಯುತ್ತದೆ. ಇಂಥ ಭಾಗಗಳ ಸೇರುವಿಕೆಯಿಂದ ಶಾಂತಿನಾಥನ ಕಾವ್ಯದಲ್ಲಿ ಭಾವ ಹಾಗೂ ರಸಗಳ ಅಭಿವ್ಯಕ್ತಿಗೆ ಅಧಿಕವಾಗಿ ಅವಕಾಶ ದೊರಕಿರುವುದಲ್ಲದೆ ಇಡೀ ಕತೆಗೆ ವಾಸ್ತವಿಕತೆಯ ಚೆಲುವು ಬಂದಿದೆ. “ಇವನ್ನೆಲ್ಲಾ ಪರಿಭಾವಿಸಿದರೆ ಕತೆಯ ರಚನೆಯಲ್ಲಿ ಕವಿಗೆ ನಿಷ್ಕೃಷ್ಟವಾದ ಉದ್ದೇಶವಿದೆಯೆಂದೂ ಅದರ ಮೈಯಲ್ಲಿ ಬೀಳೇಳುಗಳ ಆರೋಹಣ ಕ್ರಮದ ಸುರೇಖೆಯಿದೆಯೆಂದೂ, ಜಿನಧರ್ಮಸಾರ ಜೀವ ಜಾಲಕ್ಕೆಲ್ಲ ಅನ್ವಯಿಸುವ ವಿಶಾಲತೆಯನ್ನು ಪಡೆದು ಸೂಕ್ಷ್ಮರೂಪದಲ್ಲಿ ಕಾವ್ಯಾಂತರ್ಗತವಾಹಿನಿಯಾಗಿದೆಯೆಂದೂ ಮನವರಿಕೆಯಾಗುತ್ತದೆ” – (ಆಚಾರ್ಯ ಶ್ರೀ ಡಿ.ಎಲ್.ಎನ್. ಮುನ್ನುಡಿ, ಪುಟ ೫೮)
ವಡ್ಡಾರಾಧನೆಯ ಮೂವತ್ತು ಪುಟಗಳಲ್ಲಿರುವ ಸುಕುಮಾರ ಸ್ವಾಮಿಯ ಕತೆಯನ್ನು ಶಾಂತಿನಾಥ ಕವಿ ಸುಮಾರು ಒಂದು ಸಾವಿರ ಪದ್ಯಗಳಲ್ಲಿ ಹರಡಿದ್ದಾನೆ. ಹೀಗೆ ಹಿಂಜಿದರೂ ಅದರ ಮೂಲ ಸೌಂದರ್ಯ ಮಾಸಿಲ್ಲ. ಬದಲು ಅಲ್ಲಲ್ಲಿ ಅದರ ಚೆಲುವು ಹೆಚ್ಚಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಮುಳಕತೆಯ ಸತ್ತ್ವ ಮತ್ತು ಶಾಂತಿನಾಥನ ಪ್ರತಿಭಾ ಸಾಮರ್ಥ್ಯ. ಕಥೆಯನ್ನು ಅವಲಂಬಿಸಿದರೂ ಅದರ ಸತ್ವವೇನೂ ಕಡಿಮೆಯಾಗದಂತೆ, ಜಾಳು ಜಾಳಾಗದಂತೆ, ಪೇಲವವಾಗದಂತೆ ಕವಿ ಶಾಂತಿನಾಥ ತನ್ನ ಕಾವ್ಯ ನಿರ್ಮಾಣಶಕ್ತಿಯಿಂದ ಅತ್ಯಂತ ನಿರರ್ಗಳವಾಗಿ ನಡೆಸಿಕೊಂಡು ಹೋಗಿದ್ದಾನೆ. ತಾನು ಹೊಸದಾಗಿ ಸೃಷ್ಟಿಸಿಕೊಂಡ ಸನ್ನಿವೇಶಗಳಲ್ಲಿ ಸೂಚಿಸಿರುವ ಸಂವಿಧಾನ ಕೌಶಲದಿಂದ ತನ್ನ ವಿಮರ್ಶನ ಶಕ್ತಿಯನ್ನೂ, ರಮಣೀಯವಾಗಿ ರೂಪುಗೊಂಡಿರುವ ವರ್ಣನಾ ಭಾಗಗಳಲ್ಲಿ ನವೀನವಾದ ಕಲ್ಪನಾ ಸಾಮರ್ಥ್ಯವನ್ನೂ ಶಾಂತಿನಾಥ ಪ್ರದರ್ಶಿಸಿದ್ದಾನೆ.
ಹೀಗೆ ಉತ್ಕೃಷ್ಟ ಕಾವ್ಯಧರ್ಮದ ಗುಣಗಳನ್ನು ಕತೆಯಲ್ಲಿ ಕೂಡಿಸುವುದನ್ನು ಅವನು ಮರೆಯಲಿಲ್ಲ. ಶಾಂತಿನಾಥನಿಗಿಂತಲೂ ಹಿಂದಿನ ಜೈನಕವಿಗಳು ಜಿನಧರ್ಮ ಪ್ರಚಾರಕ್ಕೆಂದು ಅನೇಕ ಪುರಾಣ ಕಾವ್ಯಗಳನ್ನು ರಚಿಸಿದ್ದರು. ಆದರೆ ಅವರೆಲ್ಲರೂ ವಿಶೇಷವಾಗಿ ತೀರ್ಥಂಕರರ ಚರಿತೆಯನ್ನೇ ಕಾವ್ಯವಸ್ತುವನ್ನಾಗಿ ಆರಿಸಿಕೊಂಡಿದ್ದರು. ಅದರ ಪರಿಣಾಮವಾಗಿ ಪಂಪ, ಪೊನ್ನ, ರನ್ನರ ಕಾವ್ಯಗಳು ಒಂದೇ ಎರಕದಲ್ಲಿ ಹೊಯ್ದ ಬೇರೆ ಬೇರೆ ಧಾತುಗಳಂತೆ ಅವುಗಳಲ್ಲೆಲ್ಲಾ ಪಂಚಕಲ್ಯಾಣವೇ ಮೊದಲಾದ ಪುರಾಣ ಗುಣಗಳು ಕಡ್ಡಾಯವಾಗಿ ಕಾಣಿಸಿಕೊಂಡು ಹೆಚ್ಚಿನ ವೈವಿಧ್ಯ ತಪ್ಪಿಹೋಯಿತು. ಈ ಸಮಯದಲ್ಲಿ ಶಾಂತಿನಾಥ ಪ್ರತ್ಯೇಕ ದಾರಿ ಹಿಡಿದು ತನ್ನತನವನ್ನು ತೋರಿದನು. ಹಾಗೆ ನೋಡಿದರೆ ಕನ್ನಡ ಕವಿಗಣದಲ್ಲಿ ಶಾಂತಿನಾಥ ಮತ್ತು ರತ್ನಾಕರ ಕವಿಗಳಿಬ್ಬರೇ ಸ್ವತಂತ್ರ ಮಾರ್ಗವನ್ನು ಹಿಡಿದ ಧೀಮಂತರಾದ ಹಿರಿಯ ಕವಿಗಳೆನ್ನಬಹುದು. ದಾರಿ ಬೇರೆಯಾದರೂ ಗುರಿಯೇನೋ ಒಂದೆ ಸಂಸಾರ ಸಾಗರದ ಮೇಲಿದ್ದರೂ ಧರ್ಮದ ದೋಣಿಯಲ್ಲಿ ಕುಳಿತು ರತ್ನತ್ರಯಗಳ ಹುಟ್ಟು ಹಾಕುತ್ತಾ ಮುಕ್ತಿಯ ದಡವನ್ನು ಸುರಕ್ಷಿತವಾಗಿ, ಸುಲಭವಾಗಿ, ಸಂತೋಷವಾಗಿ ತಲುಪುವುದು.
ವಡ್ಡಾರಾಧನೆಯ ಸುಕುಮಾರಸ್ವಾಮಿಯ ಕಥೆಯಲ್ಲಿ ಬರುವ ಬಂಟ ವೈನಾಕನ ಹಾಗೂ ಅಜ್ಜಿ ಗಂಭೀರೆಯ ಉಪಕತೆಗಳನ್ನು ಶಾಂತಿನಾಥ ತನ್ನ ಕಾವ್ಯದಲ್ಲಿ ಬಿಡುವುದರಮೂಲಕ ತನ್ನ ಕಾವ್ಯ ಪ್ರಜ್ಞೆ ಔಚಿತ್ಯವನ್ನು ತೋರಿದ್ದಾನೆ. ವೈನಾಕನ ಕತೆಯನ್ನು ಒಂದು ಸ್ವಯಂಪೂರ್ಣ ಇಲ್ಲವೇ ಸಂಪೂರ್ಣ ಕತೆ ಎನ್ನುವುದಕ್ಕಿಂತ ಅದೊಂದು ಅಸಂಪೂರ್ಣ ಅಕಲಾತ್ಮಕ ಕತೆಯೆಂದು ಕರೆದರೆ ಉಚಿತವಾದೀತು. ಏಕೆಂದರೆ ವೈನಾಕನ ಹೆಂಡತಿ ಕೂಗಾಡಿದ ಮೇಲೆ ಮುಂದೆ ಕತೆ ಹೇಗೆ ಸಾಗಿತು ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಅದಕ್ಕೆ ಉತ್ತರ ಸಿಗದೆ ಕತೆ ಒಮ್ಮೆಲೆ ದಾಟಿಕೊಂಡು ದಾಪುಗಾಲಿಂದ ಮುಂದೆ ಹೋಗುತ್ತದೆ. ಇದರಿಂದ ಓದುಗರ ಮನಸ್ಸಿಗೆ ನಿರಾಶೆ ಆಗುತ್ತದೆ.
ಇದೇ ರೀತಿ ಅಜ್ಜಿ ಗಂಭೀರೆಯ ಪಾತ್ರದಲ್ಲಿ ಆಸಕ್ತಿ ಮೂಡಿದರೂ ವಡ್ಡಾರಾಧನೆಯ ಕರ್ತೃ ಎಡವಿದ್ದಾನೆಂದೇ ಹೇಳಬೇಕಾಗುತ್ತದೆ. ವೈನಾಕನ ಕತೆಗಿಂತ ಇದು ಕಲಾತ್ಮಕವಾಗಿ ಬಂದಿದೆ, ನಿಜ. ಆದರೆ ಇದರಲ್ಲಿ ಬರುವ ಸನ್ನಿವೇಶಗಳಲ್ಲಿಯಾಗಲೀ ಆ ಗಂಭೀರೆಯ ಪಾತ್ರದಲ್ಲಿಯಾಗಲೀ ಘನತೆ ಮೂಡುವುದಿಲ್ಲ. ಅಜ್ಜಿಯ ಹೆಸರು ಗಂಭೀರೆಯಾದರೂ ಅವಳಲ್ಲಿ ಗಾಂಭೀರ್ಯಕ್ಕಿಂತ ಘಾಟಿತನವೇ ಹೆಚ್ಚಾಗಿ ಕಾಣುತ್ತದೆ. ಈ ದೃಷ್ಟಿಯಿಂದ ಶಾಂತಿನಾಥ ಕವಿ ವಡ್ಡಾರಾಧನೆಯ ಮೇಲಿನೆರಡು ಉಪಕತೆಗಳನ್ನು ನಿರ್ಲಕ್ಷಿಸಿರುವುದು ಸೂಕ್ತ. ವಡ್ಡಾರಾಧನೆಯ ಇದೇ ಸುಕುಮಾರ ಸ್ವಾಮಿಯ ಕತೆಯಲ್ಲಿ ಬರುವ ಎರಡು ಬೇರೆ ಬೇರೆ ಪಾತ್ರಗಳಿಗೆ ಒಂದೇ ಹೆಸರಿದೆ. ಒಂದೇ ಹೆಸರಿನ ಇಬ್ಬರು ಒಂದೇ ಕತೆಯಲ್ಲಿ ಬರಬಾರದೆಂದಲ್ಲ. ಆದರೆ ಅದು ಓದುಗರನ್ನು ಗೊಂದಲದಲ್ಲಿ ಕೆಡವಿಸುವ ಸಾಧ್ಯತೆಯಿದೆ. ಅಗ್ನಿಭೂತಿ ವಾಯುಭೂತಿಯರ ತಂದೆಯ ಹೆಸರು ಸೋಮಶರ್ಮ ಎಂದಿದೆ; ಮುಂದೆ ನಾಗಶ್ರೀಯ ತಂದೆಯ ಹೆಸರೂ ಸೋಮಶರ್ಮ ಎಂದೇ ಇದೆ. ಆದರೆ ಶಾಂತಿನಾಥ ನಾಗಶ್ರೀಯ ತಂದೆಗೆ ನಾಗಶರ್ಮ ಎನ್ನುವ ಬೇರೆಯ ಹೆಸರನ್ನು ಕೊಡುವುದರ ಮೂಲಕ ಈ ತೊಡಕನ್ನು ಬಿಡಿಸಿದ್ದಾನೆ.
“ಮೂಲದ ಕತೆಯಲ್ಲಿನ ಕೆಲವು ಅಪ್ರಸಕ್ತವಾದ ಭಾಗಗಳನ್ನು ಶಾಂತಿನಾಥನು ಬಿಟ್ಟಿರುವುದು ಕಥಾಸರಣಿಯಲ್ಲಿ ದೊಡ್ಡ ತೊಡಕನ್ನು ಪರಿಹರಿಸಿದಂತಾಗಿದೆ; ಕತೆಯ ಓಟ ಸುಗಮವಾಗಿದೆ…ಅವನ ವಿಮರ್ಶನಶಕ್ತಿಗೂ, ಔಚಿತ್ಯಜ್ಞಾನಕ್ಕೂ ಸಾಕ್ಷಿಯಾಗಿದೆ… ಕತೆ ಹೇಳುವಾಗ ಕೆಲವು ನವೀನ ಸನ್ನಿವೇಶಗಳನ್ನು ತಂದಿರುವುದು ಶಾಂತಿನಾಥನ ಸಂವಿಧಾನ ಕೌಶಲವನ್ನು ವ್ಯಕ್ತಪಡಿಸುತ್ತವೆ.” (ಪ್ರೊ|| ಡಿ.ಎಲ್.ಎನ್.) ಬಾಣನ ಸಂಸ್ಕೃತ ಗದ್ಯಗ್ರಂಥವಾದ ಕಾದಂಬರಿಯ ರಸಗಂಗೆಯನ್ನು ಕವಿ ನಾಗವರ್ಮ ಕನ್ನಡದಲ್ಲಿ ಚಂಪೂಕಾವ್ಯದ ಕಾಲುವೆಯ ಮೂಲಕ ಹರಿಸಿದ ಸುಮಾರು ಎಪ್ಪತ್ತು ವರ್ಷಗಳಲ್ಲೇ ಶಾಂತಿನಾಥ ಗದ್ಯದಲ್ಲಿದ್ದ – ಕನ್ನಡದ್ದೇ ಆದ ಕತೆಯೊಂದನ್ನು ಚಂಪೂರೂಪದಲ್ಲಿ ರಮಣೀಯವಾಗಿ ಪ್ರತಿಪಾದಿಸಿದ್ದಾನೆ, ಪರಿವರ್ತಿಸಿದ್ದಾನೆ. ಶಾಂತಿನಾಥನ ಬಳಿಕ ನೂರೈವತ್ತು ವರ್ಷಗಳಾದ ಮೇಲೆ ಬಂದ ಜನ್ನ ಮಹಾಕವಿ ಸಂಸ್ಕೃತ ವಾದಿರಾಜನ ಕಾವ್ಯವನ್ನು ಕನ್ನಡದಲ್ಲಿ ಯಶೋಧರ ಚರಿತೆಯಾಗಿ ಭಟ್ಟಿಯಿಳಿಸಿದನು. ಹೀಗೆ ಕನ್ನಡ ಸಾಹಿತ್ಯದಲ್ಲಿ ಪರಿವರ್ತನ ಹಾಗೂ ಭಾಷಾಂತರ ಕಾರ್ಯಗಳು ಕಾಲಕಾಲಕ್ಕೆ ಯಥೋಚಿತವಾಗಿ ನಡೆದಿರುವುದನ್ನು ನಾವು ಗಮನಿಸಬಹುದು.
ಸುಕುಮಾರ ಚರಿತೆಯೆಂಬ ಈ ಕಾವ್ಯ ಧಾರ್ಮಿಕ ಆವರಣದ ಚೌಕಟ್ಟಿನಲ್ಲಿ ಕಂಗೊಳಿಸುವ ಸುರಮ್ಯ ನಂದನವನ. ಇಲ್ಲಿ ಸೂಸುವ ತಂಗಾಳಿಯಲ್ಲೂ ಧರ್ಮದ ಸುವಾಸನೆಯೇ ಘಮಘಮಿಸುತ್ತದೆ. ಅದು ಸುವಾಸನಾಯುಕ್ತವಾಗಿದ್ದು ಎಲ್ಲರಿಗೂ ತುಂಬ ಹಿತವೂ, ಚಿತ್ತಾಹ್ಲಾದರವೂ ಆಗಿದೆ. ಈ ಕಾವ್ಯೋದ್ಯಾನದಲ್ಲಿ ಕರ್ಮದ ಕೊಳೆಯನ್ನು ಕಳೆದುಕೊಂಡು ಶುಭ್ರವಾಗಿ ಶೋಭಿಸುತ್ತಾ ಬಳುಕುವ ಬಳ್ಳಿಗಳೂ, ನಿರ್ಮಲವಾಗಿ ತೂಗಾಡುವ ಹೂಗೊಂಚಲುಗಳೂ ನಯನ ಮನಮೋಹಕವಾಗಿವೆ.
ಸುಕುಮಾರ ಚರಿತೆಯಲ್ಲಿ ಕರ್ಮದ ಕಲ್ಲು ಕಟ್ಟಿಕೊಂಡು ಕೆಳಕ್ಕೆ ಕುಸಿಯುವ, ನರಕದೊಳಕ್ಕೆ ಧುಮ್ಮಿಕ್ಕುವ ಪಾತ್ರಗಳೂ, ಧರ್ಮದ ತೆಪ್ಪದಲ್ಲಿ ತೇಲಿಹೋಗುವ, ಮುಕ್ತಿಯನ್ನೈದುವ ಪಾತ್ರಗಳೂ ಮನಂಬುಗುವಂತೆ ನಿರೂಪಗೊಂಡಿವೆ. “ತತ್ತ್ವಕ್ಕೆ ಕವಿತೆಯ ಅವಲಂಬನ ದೊರೆತರೆ ಅದು ತನ್ನ ಶುಷ್ಕತೆಯನ್ನು ನೀಗಿಕೊಂಡು ಶುಚಿಯಾಗುತ್ತದೆ. ಕವಿತೆಗೆ ಮತಧರ್ಮದ ಅವಲಂಬನೆ ಅವಶ್ಯಕವಲ್ಲವಾದರೂ ಅದು ಇದ್ದಾಗ ಕವಿತೆ ಸಾರತರವಾಗುತ್ತದೆ. ಏಕೆಂದರೆ ಕಾವ್ಯವು ಆನಂದದಾಯಿಯಷ್ಟೇ ಅಲ್ಲ; ಆತ್ಮವಿಕಾಸಕಾರಿಯೂ ಹೌದು. ಆತ್ಮ ಪರಿಪಾಕವನ್ನು ಉಂಟುಮಾಡುವುದೇ ಸಕಲ ಧರ್ಮಗಳ ಸಾರಭೂತವಾದ ಉದ್ದೇಶವಾಗಿರುವುದರಿಂದ ಇಲ್ಲಿ ಕಾವ್ಯಕ್ಕೂ, ಧರ್ಮಕ್ಕೂ ಸ್ನೇಹ ಸಂಬಂಧವೇರ್ಪಡುತ್ತದೆ. ಸರ್ವಕಾಲದ ಸರ್ವಜನರಿಗೂ ಸಾಧಾರಣವಾದ ಜೀವನ ಸತ್ಯದ ದರ್ಶನಾನುಭವಗಳನ್ನು ದೊರಕಿಸುವುದು ಕಾವ್ಯದ ಪರಮೋದ್ದೇಶವಾಗಿರುವುದರಿಂದ ಅದರಲ್ಲಿ ಮೈದೋರುವ ಧರ್ಮಕ್ಕೂ ಸರ್ವ ಸಾಧಾರಣತ್ವವು ಪ್ರಾಪ್ತವಾಗಿರಬೇಕು. ವೈಯಕ್ತಿಕ ಧರ್ಮ ಸಮಸ್ತ ಮಾನವ ಧರ್ಮವಾಗಿ ಕಾವ್ಯದಲ್ಲಿ ನೆಲಸಿದಾಗ ಅದು ರಸ ರುಚಿಗಳನ್ನು ಧರಿಸಿ ಕಾವ್ಯಕ್ಕೆ ಪ್ರೇರಕವಾಗುತದೆ. ಕಾವ್ಯದಲ್ಲಿ ಧರ್ಮವು ಕರಗಿ ಅನುಭವ ರಸನೆಗೆ ಮಾತ್ರ ಅದರ ಇರವು ವೇದ್ಯವಾಗುವಂತಿರಬೇಕು. ಧರ್ಮವು ತನ್ನ ಪೃಥಕ್ ಭಾವವನ್ನು ಮರೆತು ಕಂಡೂ ಕಾಣದಂತೆ ಗೌಣವಾಗಿರಬೇಕು. ಕಾವ್ಯದಲ್ಲಿ ಧರ್ಮಕ್ಕಿರುವ ಸ್ಥಾನವಿದು. ಈ ದೃಷ್ಟಿಯಿಂದ ನೋಡಿದರೆ ಶಾಂತಿನಾಥನ ವೈಯಕ್ತಿಕ ಜಿನಧರ್ಮ ಅವನ ಕಾವ್ಯದಲ್ಲಿ ಸಕಲ ಮಾನವ ಸಾಧಾರಣ ಧರ್ಮವನ್ನು ತಳೆದು ಅದನ್ನು ನಡೆಸುವ ಸೂಕ್ಷ್ಮಶಕ್ತಿಯಾಗಿರುವುದು ತಿಳಿಯುತ್ತದೆ; ಅಲ್ಲಿ ಧರ್ಮಕ್ಕೆ ರಸತ್ವ ಉಂಟಾಗುತ್ತದೆ.” (ಪ್ರೊ|| ಡಿ.ಎಲ್.ಎನ್.) ಶ್ರೇಷ್ಠ ವಿಮರ್ಶಕರ ಈ ಮಾನದಂಡದಿಂದ ಅಳೆದರೆ ಶಾಂತಿನಾಥನ ಕಾವ್ಯ ಯಶಸ್ವಿಯಾದ ಉನ್ನತಮಟ್ಟದ ಕಾವ್ಯವಾಗಿ ಪರಿಶೋಭಿಸುತ್ತದೆ. ಇಲ್ಲಿ ಕವಿಯ ವೈಯಕ್ತಿಕ ಧರ್ಮ ಸಮಸ್ತ ಮಾನವ ಧರ್ಮವಾಗಿ ಪರಿಣಮಿಸಿದೆ.
*******

*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ