ನನ್ನ ಪುಟಗಳು

01 ಅಕ್ಟೋಬರ್ 2015

ಗುಣವರ್ಮ

ಗುಣವರ್ಮ
          ‘ಪುಷ್ಪದಂತ ಪುರಾಣ’ ಮತ್ತು ‘ಚಂದ್ರನಾಥಾಷ್ಪಕ’ಗಳ ಕರ್ತೃ. ಕವಿ ತನ್ನ ಕೃತಿರಚನೆಯ ಕಾಲದ ಬಗೆಗೆ ತನ್ನ ಬರೆಹಗಳಲ್ಲೆಲ್ಲೂ ನೇರವಾದ ನಿರ್ದೇಶವನ್ನು ಮಾಡಿಲ್ಲ. ಆದರೆ ಈತ 13ನೆಯ ಶತಮಾನದ ಪುರ್ವಭಾಗದಲ್ಲಿ ಜೀವಿಸಿದ್ದನೆಂಬುದಕ್ಕೆ ಆಧಾರಗಳುಂಟು. 13ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿದ್ದ ಜನ್ನನನ್ನು ಈತ ಸ್ಮರಿಸಿರುವುದರಿಂದಲೂ 13ನೆಯ ಶತಮಾನದ ಮಧ್ಯಭಾಗದಲ್ಲಿದ್ದ ಮಲ್ಲಿಕಾರ್ಜುನ ತನ್ನ ಸೂಕ್ತಿಸುಧಾರ್ಣವದಲ್ಲಿ ಈತನ ಪದ್ಯಗಳನ್ನು ಉದ್ಧರಿಸಿರುವುದರಿಂದಲೂ ಈತನ ಕಾಲ 13ನೆಯ ಶತಮಾನದ ಪುರ್ವಭಾಗವೆಂದು ನಿಸ್ಸಂದೇಹವಾಗಿ ಹೇಳಬಹುದು. ಈತ ತನ್ನ ಪುಷ್ಪದಂತ ಪುರಾಣದಲ್ಲಿ ಆದರಪುರ್ವಕವಾಗಿ ಹೆಸರಿಸಿದ ಗುರು ಮುನಿಚಂದ್ರ ಹಾಗೂ ಪೋಷಕ ಶಾಂತಿವರ್ಮನ ಹೆಸರುಗಳು ಪ್ರ.ಶ. 1229ರಲ್ಲಿ ರಚಿತವಾದ ಸೌಂದತ್ತಿಯ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿವೆ. ಈ ಸಂಗತಿಯೂ ಮೇಲೆ ಸೂಚಿಸಿದ ಕಾಲನಿರ್ಣಯಕ್ಕೆ ಪುಷ್ಟಿ ಕೊಡುತ್ತದೆ.

       ಪುಷ್ಪದಂತ ಪುರಾಣ ಜೈನ ಸಂಪ್ರದಾಯದಂತೆ ರಚಿತವಾದ ಪುರಾಣಕಾವ್ಯ; ಚಂಪುಕೃತಿ. ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಒಂಬತ್ತನೆಯವನಾದ ಪುಷ್ಪದಂತನ ಚರಿತ್ರೆ ಈ ಪುರಾಣಕಾವ್ಯದ ಕಥಾವಸ್ತು. ಈ ಕಥಾವಸ್ತು ಗಾತ್ರದಲ್ಲಿ ಕಿರಿದು. ಆದರೆ ಕಥಾನಾಯಕ ಉನ್ನತನೆಂಬ ಕಾರಣದಿಂದ ಕವಿ ಅದನ್ನು ವಿಸ್ತರಿಸಿ 14 ಆಶ್ವಾಸಗಳಾಗಿ ವಿಸ್ತರಿಸಿದ್ದಾನೆ; ಪೋಷಕನೂ ನಾಡಪ್ರಭುವೂ ಆಗಿದ್ದ ಶಾಂತಿವರ್ಮನಿಗೆ ಅದನ್ನು ವಿನಯಪುರ್ವಕ ಸಮರ್ಪಿಸಿದ್ದಾನೆ. ಗ್ರಂಥದ ಆರಂಭದಲ್ಲಿ ಕೊಂಡ ಕುಂದಾಚಾರ್ಯ ನಿಂದ ಹಿಡಿದು ಸ್ವಗುರುವಾದ ಮುನಿಚಂದ್ರನವರೆಗಿನ ತನ್ನ ಗುರುಪರಂಪರೆಯನ್ನು ಅರುಹಿದ್ದಾನೆ. ಪುರ್ವದಲ್ಲಿ ಕೃತಿರಚನೆ ಮಾಡಿದಂತೆ ತಿಳಿದುಬಂದ ಸಮಂತಭದ್ರ, ಪುಜ್ಯಪಾದ, ಕವಿಪರಮೇಷ್ಠಿಗಳ ಹೆಸರುಗಳು ಈ ಗುರುಪರಂಪರೆಯಲ್ಲಿ ಸಮಾವೇಶ ವಾಗಿರುವುದು ಗಮನಾರ್ಹವಾಗಿದೆ. ಪುರ್ವದ ಕವಿಗಳಲ್ಲಿ ಪಂಪ, ಪೊನ್ನ, ರನ್ನ, ನಾಗಮರ್ಮ, ನಾಗಚಂದ್ರ, ನೇಮಿಚಂದ್ರರನ್ನು ಮಾತ್ರವಲ್ಲದೆ ಹೆಚ್ಚು ಕಡಿಮೆ ಸಮಕಾಲೀನನಾಗಿರಬಹುದಾದ ಜನ್ನ ಕವಿಯನ್ನೂ ಸ್ಮರಿಸಿದ್ದಾನೆ.

         ಗುಣವರ್ಮನ ಕಾವ್ಯಬಂಧ ಪ್ರೌಢವಾಗಿದೆ; ಪ್ರಾಸಬದ್ಧವಾಗಿದೆ. ಭಾಷಾಸರಣಿ ತಿಳಿಗನ್ನಡವನ್ನು ಹಿತವಾಗಿ ಒಳಗೊಂಡಿದೆ. ಮೃದುಪದಗತಿಯಲ್ಲಿ ಸುರುಚಿರ ಅರ್ಥವೂ ಅಲ್ಲಲ್ಲಿ ಸೂಸಿದೆ. ಪ್ರಕೃತಿವರ್ಣನೆ ಋತುವರ್ಣನೆಗಳು ಮನೋಹರವಾಗಿವೆ. 13ನೆಯ ಶತಮಾನದ ಹೊತ್ತಿಗಾಗಲೆ ಇಳಿಮುಖವಾಗಿದ್ದ ಚಂಪು ಶೈಲಿಯನ್ನು ಮತ್ತೆ ಸಮರ್ಥವಾಗಿ ಕೈಗೆತ್ತಿಕೊಂಡ ಕೀರ್ತಿ ಗುಣವರ್ಮನಿಗೆ ಸಲ್ಲುತ್ತದೆ.

           ಚಂದ್ರನಾಥಾಷ್ಪಕದಲ್ಲಿ ಮಹಾಸ್ರಗ್ಧರಾವೃತ್ತದಲ್ಲಿ ರಚಿತವಾದ ಸ್ತುತಿಪದ್ಯಗಳಿವೆ. ಕೊಲ್ಹಾಪುರದ ತ್ರಿಭುವನತಿಲಕ ಜಿನಾಲಯದ ಚಂದ್ರನಾಥನಲ್ಲಿ ಕವಿ ತಳೆದ ಭಕ್ತಿ ಅವುಗಳಲ್ಲಿ ಅಭಿವ್ಯಕ್ತವಾಗಿದೆ. ಚಂದ್ರನಾಥಾಷ್ಟಕದ ಪ್ರತಿ ಪದ್ಯದ ಕೊನೆಯಲ್ಲೂ ಚಂದ್ರನಾಥನ ಹೆಸರು ಬಂದಿದೆಯಲ್ಲದೆ ಎಂಟು ಪದ್ಯಗಳ ಕೊನೆಯಲ್ಲಿ ಬರುವ ಒಂಬತ್ತನೆಯ ಪದ್ಯ ‘...ಮಾಱ್ಕಿ ಭವ್ಯರ್ಗೆ ಸೌಖ್ಯಾವಹಮಂ ಕೊಲ್ಹಾಪುರಶ್ರೀ ತ್ರಿಭುವನಾಲಂಕೃತಂ ಚಂದ್ರನಾಥಂ’ ಎಂದು ಕೊನೆಗೊಳ್ಳುತ್ತದೆ.

2 ಕಾಮೆಂಟ್‌ಗಳು: