ನನ್ನ ಪುಟಗಳು

02 ಅಕ್ಟೋಬರ್ 2015

ನಾಗಚಂದ್ರ

ನಾಗಚಂದ್ರ
ನಾಗಚಂದ್ರನು ಕ್ರಿ.ಶ.೧೧೦೦ರಲ್ಲಿ ಇದ್ದಿರಬಹುದಾದ ಪ್ರಸಿದ್ಧ ಕವಿ.
ಇವನಿಗೆ ಅಭಿನವ ಪಂಪ ಎಂಬ ಬಿರುದು ಇದೆ.
ಇವನು ರಾಮಚಂದ್ರ ಚರಿತ ಪುರಾಣ ಮತ್ತು ಮಲ್ಲಿನಾಥ ಪುರಾಣ ಎಂಬ ಎರಡು ಚಂಪೂ ಕಾವ್ಯಗಳನ್ನು ರಚಿಸಿದ್ದಾನೆ. ರಾಮಚಂದ್ರ ಪುರಾಣಕ್ಕೆ ಪಂಪರಾಮಾಯಣವೆಂದೂ ಕರೆಯುತ್ತಾರೆ.
ಕ್ರಿ ಶ ೧೧ ನೆಯ ಶತಮಾನದ ಕೊನೆ ಮತ್ತು ೧೨ ನೆಯ ಶತಮಾನದ ಆದಿಯಲ್ಲಿ ಜೀವಿಸಿದ್ದ ನಾಗಚಂದ್ರ ವಿಜಯಪುರ(ಈಗಿನ ಬಿಜಾಪುರ) ಪ್ರಾಂತ್ಯದಲ್ಲಿ ಬದುಕಿದನೆಂದು ಊಹೆ.

ಜೈನ ಮತದ ನಿಷ್ಠ ಅನುಯಾಯಿಯಾಗಿದ್ದ ಈತನ ಗುರುಪರಂಪರೆಯಲ್ಲಿ ಮುಖ್ಯರು ಬಾಲಚಂದ್ರ ಮೇಘಚಂದ್ರಯತಿಗಳು. ಪಂಪ, ಪೊನ್ನ, ರನ್ನರಂತೆಯೇ ಈತನು ಎರಡು ಮಹಾಕಾವ್ಯಗಳನ್ನು ರಚಿಸಿದ್ದಾನೆ.
ಪಂಪನ ಮೇಲಿನ ಅಭಿಮಾನದಿಂದ ತನ್ನನ್ನು ಅಭಿನವ ಪಂಪ ಎಂದು ಕರೆದುಕೊಂಡ ಈ ಕವಿಯು ಮುಖ್ಯವಾಗಿ ಭಕ್ತಿ ವೈರಾಗ್ಯಗಳನ್ನು ಕೇಂದ್ರೀಕರಿಸಿ ಕಾವ್ಯಗಳನ್ನು ರಚಿಸಿದ್ದಾನೆ.
'ಭಾರತಿ ಕರ್ಣಪೂರ', 'ಕವಿತಾ ಮನೋಹರ', 'ಸಾಹಿತ್ಯ ವಿದ್ಯಾಧರ','ಜನಸ್ಥಾನರತ್ನಪ್ರದೀಪ','ಸೂಕ್ತಿ ಮುಕ್ತಾ ವಸಂತ' ಮೊದಲಾದ ಬಿರುದುಗಳು ಈತನಿಗಿದ್ದವು.
 ಜಿನಮುನಿತನಯ, ಜಿನಾಕ್ಷರಮಾಲೆ ಎಂಬ ಗೃಂಥಗಳನ್ನೂ ಈತ ರಚಿಸಿದ್ದನೆಂಬ ಉಲ್ಲೇಖವಿದೆ. ಆದರೆ ಅವು ಉಪಲಬ್ಧವಿಲ್ಲ.

ತಾನೂ ಪಂಪನಂತೆಯೇ ಲಲಿತವಾದ ಶೈಲಿಯಲ್ಲಿ ಕಾವ್ಯ ಬರೆದನೆಂಬ ಅಭಿಮಾನದಿಂದ ಅಭಿನವಪಂಪ ಎಂಬ ಕಾವ್ಯನಾಮವನ್ನು ಇಟ್ಟುಕೊಂಡಿದ್ದಾನೆ.
ಆದ್ದರಿಂದಲೇ ಈತ ಬರೆದ ರಾಮಚಂದ್ರ ಚರಿತ ಪುರಾಣವನ್ನು ಪಂಪರಾಮಾಯಣ ಎಂದೂ ಕರೆಯಲಾಗಿದೆ.
ಪಂಪರಾಮಾಯಣವು ಜೈನ ರಾಮಾಯಣ.
ವಾಲ್ಮೀಕಿ ರಾಮಾಯಣಕ್ಕೂ ನಾಗಚಂದ್ರನ ರಾಮಾಯಣಕ್ಕೂ ಹಲವಾರು ವ್ಯತ್ಯಾಸಗಳಿವೆ.
ಪಂಪರಾಮಾಯಣದಲ್ಲಿ ದಶರಥನ ಪುತ್ರಕಾಮೇಷ್ಟಿ ಮೊದಲಾದ ಯಜ್ಞಗಳ ಪ್ರಸ್ತಾಪವಾಗಲಿ, ವಿಶ್ವಾಮಿತ್ರ, ವಾಲ್ಮೀಕಿ, ವಸಿಷ್ಠ ಮೊದಲಾದ ಋಷಿಗಳ ಪ್ರಸ್ತಾಪವಾಗಲಿ ಇಲ್ಲ.
  • ಇಲ್ಲಿನ ಹನುಮಂತ ವಿಮಾನದಲ್ಲಿ ಕುಳಿತು ಸಮುದ್ರ ದಾಟುವನೇ ಹೊರತು ಹಾರುವುದಿಲ್ಲ.
  • ರಾವಣನನ್ನು ಕೊಲ್ಲುವವನು ಲಕ್ಷ್ಮಣ, ರಾಮನಲ್ಲ.
  • ಈ ರಾಮಾಯಣದಲ್ಲಿ ವಾಲಿಯು ವೈರಾಗ್ಯದಿಂದ ಸಂನ್ಯಾಸಿ ಆಗಿರುವನು.
  • ವಾಲಿ ರಾಮನಿಂದ ಹತನಾಗುವ ಪ್ರಸಂಗವೇ ಇಲ್ಲ.
  • ಸುಗ್ರೀವನಿಗೆ ಹಿಂಸೆ ಕೊಟ್ಟವನು ಮಾಯಾಸುಗ್ರೀವನೇ ಹೊರತು ವಾಲಿಯಲ್ಲ.
  • ಜನಸ್ಥಾನದಲ್ಲಿ ಸೀತೆಯು ಲಕ್ಷ್ಮಣನನ್ನು ನಿಂದಿಸುವ ಪ್ರಸಂಗವೂ ಇದರಲ್ಲಿಲ್ಲ
    ಎಲ್ಲ ವ್ಯತ್ಯಾಸಗಳಿಗೂ ಮುಖ್ಯವಾದದ್ದೆಂದರೆ ರಾವಣನ ಪಾತ್ರರಚನೆ. ನಾಗಚಂದ್ರನ ರಾವಣ ಬಹಳ ಯೋಗ್ಯ, ಧರ್ಮಪರ.  ಧರ್ಮಪರ. ನಳಕೂಬರನ ರಾಜಧಾನಿ ದುರ್ಲಂಘ್ಯಪುರವನ್ನು ರಾವಣನು ಮುತ್ತಿದಾಗ ಅವನಲ್ಲಿ ಬಹು ಕಾಲದಿಂದ ಮೋಹಗೊಂಡಿದ್ದ ನಳಕೂಬರನ ಹೆಂಡತಿಯು ಅವನಲ್ಲಿಗೆ ದೂತಿಯನ್ನು ಕಳುಹಿಸುತ್ತಾಳೆ. ರಾವಣನು ಪುರ ಪ್ರವೇಶಕ್ಕೆ ಅವಳಿಂದ ಅವಕಾಶವನ್ನು ಕಲ್ಪಿಸಿಕೊಂಡರೂ ಅವಳಲ್ಲಿ ಕಾಮಪರವಶನಾಗದೆ;
ರಹಸ್ಯದಿಂದಾಕೆಯಂ ಕರೆದು, ನೀನ್ ವಿಶುದ್ಧಕುಲದ ಕುಶಧ್ವ
ಜಂಗಂ ಮಧುಕಾಂತೆಗಂ ಪುಟ್ಟಿದುದರಿಂ ನಿಜಕುಲಾಚಾರಮಂ
ಬಗೆದು ಶೀಲಪರಿಪಾಲನಮಂ ಮಾಳ್ಪುದು, ಅಂತಲ್ಲದೆಯುಂ
ನೀನೆನಗೆ ವಿದ್ಯೋಪದೇಶಂಗೆಯ್ದುದರಿಂ ಗುರುವಾದೆ, ಪೆರ
ತೇನುಮಂ ಬಗೆಯದೆ ನಳಕೂಬರನೊಳ್ ಕೂಡಿ ಸುಖಮಿರು
     ಎಂದು ಆಕೆಗೆ ಧರ್ಮೋಪದೇಶ ಮಾಡಿ ನಳಕೂಬರನಲ್ಲಿಗೆ ಕಳುಹಿಸಿ ಅವನ ರಾಜ್ಯವನ್ನು ಹಿಂತಿರುಗಿ ಕೊಟ್ಟುಬಿಡುತ್ತಾನೆ. ಜಿತೇಂದ್ರಿಯ ರಾವಣನು ಬರಸಿಡಿಲ ಬಳಿವಿಡಿದು ಪೊಳೆವ ಕುಡು ಮಿಂಚಿನಂತೆ ಬಲಭದ್ರನ ಕೆಲದೊಳಿರ್ದ ಸೀತೆಯಂ ಕಂಡು ಚಂಚಲಗೊಳ್ಳುವನು. ತನ್ನ ಪರಾಂಗನಾವಿರತಿ ವ್ರತವನ್ನು ಮರೆಯುವನು.
ಬಲೆ ದೃಷ್ಟಿಗೆ ವಜ್ರದ ಸಂ
ಕಲೆ ಹೃದಯಕ್ಕೆನಿಪ ರೂಪವತಿ ಜಾನಕಿ ಕ
ನ್ಬೊಲದೊಳಿರೆ ಪದ್ಮಪತ್ರದ
ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ ||
    ದುರ್ಮೋಹದಿಂದ ರಾವಣನು ಆಪ್ತರ ಹಿತೋಕ್ತಿಗಳನ್ನು ಅಲ್ಲಗಳೆದು ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಸೆರೆಯಲ್ಲಿಡುವನು. ಆದರೆ ಸೀತೆ ಅವನಿಗೆ ಒಲಿಯಲಿಲ್ಲ. ರಾವಣ ಸೀತೆಯನ್ನು ಹೆದರಿಸುತ್ತಾ ಇಗೋ ಬಹುರೂಪಿಣೀ ವಿದ್ಯೆಯು ನನಗೆ ವಶವಾಯಿತು. ಇನ್ನು ನನ್ನನ್ನು ಪ್ರತಿಭಟಿಸಬಲ್ಲ ಶತ್ರುಪಕ್ಷವಿಲ್ಲ. ನಿನ್ನ ನೆಚ್ಚಿನ ರಾಮನ ಯೋಚನೆಯನ್ನು ಬಿಡು ಎನ್ನುವನು. ಭಯಗೊಂಡ ಸೀತೆಯು ರಾಮನ ಪ್ರಾಣಾಪಹರಣ ಮಾತ್ರ ಮಾಡಬೇಡ ಎಂದು ಪ್ರಾರ್ಥಿಸುತ್ತಾ ಮೂರ್ಛೆ ಬೀಳುವಳು. ಇದನ್ನು ಕಂಡ ರಾವಣ ತನ್ನ ಕ್ರೂರ ಕರ್ಮಕ್ಕೆ ಪಶ್ಚಾತ್ತಾಪಪಡುವನು. ಸೀತೆಯ ವಿಷಯದಲ್ಲಿ ದಯೆಯು ಅಂಕುರಿಸಿ ದುಃಖಿಸುವನು. ದುರ್ದೈವದಿಂದ ಅವನ ದುರಭಿಮಾನವೇ ಪ್ರಬಲವಾಗಿ ರಾಮನನ್ನು ಸೆರೆಹಿಡಿದು ತಂದು ಅವನಿಗೆ ಸೀತೆಯನ್ನೊಪ್ಪಿಸಬೇಕೇ ಹೊರತು ಈಗಲೇ ಸೀತೆಯನ್ನು ಅವನ ಬಳಿಗೆ ಕಳುಹಿಸಬಾರದೆಂದು ನಿಶ್ಚಯಿಸುವನು. ಆದರೆ ಈ ನಿಶ್ಚಯವನ್ನು ಸಾಧಿಸುವುದಕ್ಕಾಗದೆ ಅವನು ಯುದ್ಧಭೂಮಿಯಲ್ಲಿ ಸಾಯುವನು. ಈ ದುರಂತರಾವಣನ ಚಿತ್ರವು ಪಂಪರಾಮಾಯಣಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಉಂಟುಮಾಡಿದೆ.