ನನ್ನ ಪುಟಗಳು

07 ಮಾರ್ಚ್ 2022

ವಡ್ಡಾರಾಧನೆ-ವೃಷಭಸೇನ ಭಟ್ಟಾರರ ಕಥೆ | Vaddaradhane-Vrishabhasena-bhattarara-kathe

 ವೃಷಭಸೇನ ಭಟ್ಟಾರರ ಕಥೆಯಂ ಪೇೞ್ವೆಂ :

ಗಾಹೆ || ಉಣ್ಹಂ ವಾದಂ ಉಣ್ಹಂ ಸಿಳಾತಳಂ ಆದವಂ ಚ ಅತಿ ಉಣ್ಹಂ
ಸಹಿ ಊಣ ಉಸಹಸೇಣೋ ಪಡಿವಣ್ಣೋ ಉತ್ತಮಂ ಅಟ್ಠಂ ||

*ಉಣ್ಹಂ ವಾದಂ – ಬಿಸಿದಪ್ಪ ಗಾಳಿಯುಮಂ, ಉಣ್ಹಂ – ಬಿಸಿದಪ್ಪುದಂ, ಸಿಳಾತಳಂ – ಯೋಗ ಪೀಠದ ಸಿಲೆಯ ಮೇಗುಮಂ, ಅದವಂ ಚ – ಬಿಸಿಲುಮಂ, ಅತಿ ಉಣ್ಹಂ – ಆದಂ ಬಿಸಿದಪ್ಪುದಂ, ಸಹಿಊಣ – ಲೇಸಾಗಿ ಸೈರಿಸಿ, ಊಸಹಸೇಣೋ – ವೃಷಭಸೇನರೆಂಬ ಮುನಿ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯುಂ*

    ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳವಂತಿಯೆಂಬುದು ನಾಡಲ್ಲಿ ಉಜ್ಜೇನಿಯೆಂಬುದು ಪೊೞಲದನಾಳ್ವೊಂ ಪ್ರದ್ಯೋತನೆಂಬರಸನಾತನ ಮಹಾದೇವಿ ಜ್ಯೋತಿರ್ಮಾಲೆಯೆಂಬೊಳಂತವರ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಮರಸಂ ಕಾಡಾನೆಯಂ ಪಿಡಿಯಲ್ವೇಡಿಯಾನೆಯನೇಱ ಅಡವಿಗೆವೋದೊಡದು ಮದವಿಹ್ವಳಿತನಾಗಿ ಮೆಯ್ಯಱಯದೆ ದಿಶಾಪಟ್ಟಂಗೊಂಡೊಂದೆಸೆಗೆ ಕೊಂಡೋಡಿ ದಂಡಕಾರಣ್ಯಮಪ್ಪಡವಿಯ ನಡುವೆ ತನ್ನ ಬೇಗದಿಂ ಪರಿಯೆ ನಾಡೆಯಂತರಂಬೋದೊಡೊಂದು ಮರದಡ್ಡ ಬಿರ್ದ ಕೊಂಬಂ ಕಂಡರಸಂ ಪಿಡಿದು ನೇಲ್ದಿರ್ದೊಡಾನೆಯುಂ ಪೆಱತೊಂದು ದೆಸೆಗೆವೋಯ್ತಂತರಸನುಂ ಮರದಿಂದಿೞದು ನಾಡ ಬಟ್ಟೆಯೊಳ್ ತಗುಳ್ದು ಅಡವಿಯಂ ಪೊಱಮಟ್ಟು ಬಂದೊಂದು

    ವೃಷಭಸೇನ ಋಷಿಗಳ ಕಥೆಯನ್ನು ಹೇಳುವೆನು : (ವೃಷಭಸೇನರೆಂಬ ಋಷಿ ಬಿಸಿಯಾದ ಗಾಳಿಯನ್ನೂ ಬಿಸಿಯಾದ ಯೋಗಪೀಠ ಶಿಲೆಯ ಮೇಲಿನ ಭಾಗವನ್ನೂ ಅತ್ಯಂತ ಉಷ್ಣವಾಗಿರುವ ಬಿಸಿಲನ್ನೂ ಚೆನ್ನಾಗಿ ಸಹಿಸಿ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳ ಆರಾಧನೆಯನ್ನು ಮಾಡಿದರು.) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಅವಂತಿ ಎಂಬ ನಾಡಿನಲ್ಲಿ ಉಜ್ಜೈನಿ ಎಂಬ ಪಟ್ಟಣವಿದೆ. ಅದನ್ನು ಪ್ರದ್ಯೋತನೆಂಬ ರಾಜನು ಆಳುತ್ತಿದ್ದನು. ಅವನ ರಾಣಿ ಜ್ಯೋತಿರ್ಮಾಲೆ ಎಂಬುವಳು. ಅಂತು ಅವರು ತಮ್ಮ ಪ್ರೀತಿಯ ವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಕಾಲ ಕಳೆಯುತ್ತಿದ್ದರು. ಹೀಗಿರಲು ಆಮೇಲೆ ಒಂದು ದಿವಸ ರಾಜನು ಕಾಡಾನೆಯನ್ನು ಹಿಡಿಯುವುದಕ್ಕಾಗಿ ಆನೆಯ ಮೇಲೇರಿಕೊಂಡು ಕಾಡಿಗೆ ಹೊರಟನು. ಅದು ಸೊಕ್ಕೇರಿದುದಾಗಿ ಮೈಮೇಲೆ ಎಚ್ಚರವಿಲ್ಲದೆ ಯಾವುದೋ ದಿಕ್ಕಿಗೆ ಓಡುತ್ತ ಹೋಯಿತು. ಒಂದು ದಿಕ್ಕಿನ ಕಡೆಗೆ ಓಡುತ್ತ ತನ್ನ ವೇಗದಿಂದ ದಂಡಕಾರಣ್ಯ ಎಂಬ ಕಾಡಿನ ನಡುವೆ ತೆರಳಿತು. ಮತ್ತೆಯು ದೂರಕ್ಕೆ ಅದು ಹೋಗುತ್ತಿರಲು ಒಂದು ಮರದ ಅಡ್ಡಕ್ಕೆ ಚಾಚಿದ್ದ ಅದರ ಕೊಂಬೆಯನ್ನು ರಾಜನು ಕಂಡು ಅದನ್ನು ಹಿಡಿದು ನೇತಾಡಿದನು. ಆನೆ ಬೇರೊಂದು ದಿಕ್ಕಿಗೆ ಹೋಯಿತು. ಅಂತೂ ರಾಜನು ಮರದಿಂದ ಇಳಿದು ನಾಡಿನ ದಾರಿಯನ್ನು ಹಿಡಿದು ಆ ಕಾಡಿನಿಂದ ಹೊರಟು ಖೇಡ ಎಂಬ ಒಂದು ಊರಿಗೆ ಹೋದನು. ಆ

    ಖೇಡಮೆಂಬೂರನೆಯ್ದಿಯದಱ ಸಾರೆಯೊಂದು ಕೆಯ್ಯುಂಟದಱ ಸಾರೆಯೊಳ್ ಬಾವಿಯುಂಟದಱ ತಡಿಯೊಳ್ ಬಂದು ಕುಳ್ಳಿರ್ದು ಪಸಿವಿನಿಂದಂ ತೃಷೆಯಿಂದಂ ಪಥಶ್ರಮದಿಂದಾದಮಾನುಂ ಸೇದೆಗೆಟ್ಟು ಬಂಬಳಬಾಡಿರ್ಪನ್ನೆಗಂ ಅವೂರ ಗಾವುಂಡಂ ಜಿನವಾದಿಕನೆಂಬೊನಾತನ ಗಾವುಂಡಿ ಜಿನಮತಿಯೆಂಬೊಳಾಯಿರ್ವರ್ಗ್ಗಂ ಮಗಳ್ ಜಿನದತ್ತೆಯೆಂಬೊಳತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯುಮೆಂದಿವನೊಡೆಯೊಳ್ ನೀರಂ ತರಲ್ಕೆಂದು ಬಾವಿಗೆ ಪೋದಾಕೆಯುಂ ಕಂಡರಸನೆಲೆ ಕೂಸೆ ನೀರಂ ಕುಡಿಯಲೆಱೆಯಾ ಎಂದೊಡಂತೆಗೆಯ್ವೆನೆಂದಾತನ ರೂಪುಂ ಗಾಡಿಯುಂ ತೇಜಮುಂ ಲಾವಣ್ಯಮುಮಂ ಕಂಡಾಟಿಸಿ ನೀರಂ ಸೇದಿಕೊಂಡು ಬಂದು ಕುಡಿಯಲೆಱೆಯೆ ಕುಡಿಯೆಕುಡಿಯೆ ಕರಗದ ದಾರೆಯನುಗಿದುಕೊಂಡೊಡರಸನಾಕೆಯ ಮೊಗಮಂ ನೋಡಿ ನಕ್ಕೇಕೆ ಕಾಡುವೌ ಕೂಸೆ ಕಾಡದೆ ಕುಡಿಯಲೆಱೆಯಾ ಎಂದೊಡಾಕೆಯುಂ ಕುಡಿಯಲ್ಕೆಱೆದು ತನ್ನ ಮನೆಗೆ ವೋಗಿ ತನ್ನಂ ತಂದೆಗಿಂತೆಂದಳಮ್ಮಾ ಊರ ಪೊಱಗಣ ಬಾವಿಯೊಳೊರ್ವಂ ಮಹಾಪುರಷಂ ಬಂದಿರ್ದೊನಾತನಂ ನೀಮೊಡಗೊಂಡು ಮನೆಗೆ ಬನ್ನಿಮೆಂದೊಡಂತೆಗೆಯ್ವೆನೆಂದಾತನುಂ ಪೋಗಿಯೊಡಗೊಂಡು ಬಂದಾತನ ಶ್ರಮಂ ಪೋಗೆ ದಿವ್ಯಮಪ್ಪಾಹಾರಮನೂಡಿರ್ದನ್ ಅನ್ನೆಗಮರಸನಡಿವಜ್ಜೆಯಂ ನೋಡುತ್ತಂ ಪೆಱಗಣಿಂದಂ ತಂತ್ರಮೆಲ್ಲಂ ಬಂದರಸನಿಲ್ಲಿಗೆವಂದೊನೆಯೆಂದೂರೊಳಗೆಲ್ಲಮಱಸಿ ಬೆಸಗೊಂಡವರರಸನಂ ಕಂಡೆಱಗಿ

    ಊರಿನ ಸಮೀಪ ಒಂದು ಗದ್ದೆಯಿತ್ತು. ಅದರ ಹತ್ತಿರ ಒಂದು ಬಾವಿಯಿತ್ತು. ಅದರ ಕಟ್ಟೆಯಲ್ಲಿ ಬಂದು ಕುಳಿತು, ಹಸಿವಿನಿಂದಲೂ ಬಾಯಾರಿಕೆಯಿಂದಲೂ ದಾರಿ ನಡೆದ ಶ್ರಮದಿಂದಲೂ ಬಹಳವಾದ ಆಯಾಸದಿಂದ ಅತಿಯಾಗಿ ಬಾಡಿಹೋಗಿದ್ದನು. ಆ ಸಂದರ್ಭದಲ್ಲಿ …. ಆ ಊರಿನಲ್ಲಿ ಜಿನವಾದಿಕನೆಂಬ ಗೌಡನಿದ್ದನು. ಅವನ ಗೌಡತಿ ಜಿನಮತಿಯೆಂಬವಳು. ಆ ಇಬ್ಬರಿಗೂ ಜಿನದತ್ತೆ ಎಂಬ ಮಗಳಿದ್ದಳು. ಅವಳು ಅತ್ಯಂತ ರೂಪ – ಲಾವಣ್ಯ – ಸೌಭಾಗ್ಯ – ಕಾಂತಿಗಳಿಂದ ಕೂಡಿದವಳಾಗಿದ್ದಳು. ನೀರನ್ನು ತರುವುದಕ್ಕಾಗಿ ಬಾವಿಗೆ ಹೋದಂತಹ ಆಕೆಯನ್ನು ರಾಜನು ಕಂಡು – “ಎಲೈ ಕನ್ಯೆಯೇ ಕುಡಿಯುವುದಕ್ಕೆ ನೀರನ್ನು ಹೊಯ್ಯು” ಎಂದನು. ‘ಹಾಗೆಯೇ ಮಾಡುವೆನು’ – ಎಂದು ಆಕೆ ರಾಜನ ರೂಪವನ್ನೂ ಸೌಂದರ್ಯವನ್ನೂ ಕಾಂತಿ ಲಾವಣ್ಯಗಳನ್ನೂ ಕಂಡು ಪ್ರೀತಿಸಿ ಬಾವಿಯಿಂದ ನೀರನ್ನು ಸೇದಿಕೊಂಡು ಬಂದು ಕುಡಿಯುವುದಕ್ಕಾಗಿ ಹೊಯ್ದಳು. ಕುಡಿಯುತ್ತ ಇದ್ದ ಹಾಗೆ ಕೊಡದ ನೀರ ಧಾರೆಯನ್ನು ನಿಲ್ಲಿಸಲು, ರಾಜನು ಅವಳ ಮುಖವನ್ನು ನೋಡಿ ನಕ್ಕು – “ಯಾಕೆ ಮಗು ತೊಂದರೆಪಡಿಸುತ್ತೀ ? ತೊಂದರೆಪಡಿಸದೆ ಕುಡಿಯಲು ಎರೆ” ಎಂದು ಹೇಳಲು, ಆಕೆ ಕುಡಿಯಲಿಕ್ಕೆ ನೀರನ್ನು ಹೊಯ್ದು, ತನ್ನ ಮನೆಗೆ ಹೋಗಿ ತನ್ನ ತಂದೆಗೆ ಹೀಗೆಂದಳು – “ ಅಪ್ಪಾ, ಊರ ಹೊರಗಿನ ಬಾವಿಯ ಬಳಿ ಒಬ್ಬ ಮಹಾಪುರುಷನು ಬಂದಿದ್ದಾನೆ. ಆತನನ್ನು ನೀವು ಮನೆಗೆ ಕರೆದುಕೊಂಡು ಬನ್ನಿ.” ಹೀಗೆನ್ನಲು ಜಿನವಾದಿಕನು ‘ಹಾಗೆಯೇ ಮಾಡುವೆನು’ ಎಂದುಕೊಂಡು ಅಲ್ಲಿಗೆ ಹೋಗಿ ಅರಸನನ್ನು ಒಟ್ಟಿಗೆ ಕರೆತಂದು ಅವನ ಶ್ರಮ ಪರಿಹಾರವಾಗುವಂತೆ ದಿವ್ಯವಾದ ಆಹಾರವನ್ನು ಉಣಲು ಕೊಟ್ಟಿದ್ದನು. ಅಷ್ಟರಲ್ಲಿ ರಾಜನ ಪಾದಚಿಹ್ನೆಗಳನ್ನು ನೋಡುತ್ತ ಹಿಂದಿನಿಂದ ಸೈನ್ಯವೆಲ್ಲ ಬರುತ್ತ “ರಾಜನು ಇಲ್ಲಿಗೆ ಬಂದನೆ? ” ಎಂದು ಊರಿನಲ್ಲೆಲ್ಲ ಹುಡುಕುತ್ತ ಕೇಳುತ್ತ ಬಂದು, ಅವರು ರಾಜನನ್ನು ಕಂಡರು. ರಾಜನಿಗೆ ನಮಿಸಿ ಸಾಷ್ಟಾಂಗ ವಂದಿಸುವುದನ್ನೂ ಜೀಯಾ, ಅನುಗ್ರಹಿಸಬೇಕು

    ಪೊಡೆವಡುವುದುಮಂ ಜೀಯ ಮಹಾಪ್ರಸಾದವೆಂಬುದುಮಂ ಗಾವುಂಡು ಕಂಡೆಲೆ ಈತನರಸನೆಂದಱದಗ್ಗಳಂ ಪ್ರತಿಪತ್ತಿಯುಂ ಗೌರವಮುಮಂ ಮಾಡಿದೊಡರಸಂ ತನ್ನ ಪೆರ್ಗಡೆಗಳಿಂದಂ ಕೂಸಂ ಬೇಡಿ ಪೆತ್ತು ಮದುವೆನಿಂದಾಕೆಗೆ ಮಹಾದೇವಿವಟ್ಟಂಗಟ್ಟಿ ತನ್ನ ಪೊೞಲ್ಗೆ ವೋಗಿ ಕರುಮಾಡಮಂ ಬಳಸಿಯುಮಿರ್ದಂತಃಪುರದೊಳಗೊಂದೊಳ್ಳಿತಪ್ಪ ಮಾಡಮಂ ಕೊಟ್ಟಿರಿಸಿ ಎಲ್ಲಾ ಅರಸಿಯರ್ಕಳುಮ ನುೞದು ಜಿನದತ್ತೆಗಾಸಕ್ತನಾಗಿ ಪಲಕಾಲಮಾಕೆಯೊಳಿಷ್ಟ ವಿಷಯ ಕಾಮಭೋಗಂಗಳನನು ಭವಿಸುತ್ತಿರ್ಪನ್ನೆಗಮೊಂದು ದಿವಸಮಡವಿಯ ಸೊರ್ಕಿದಾನೆ ಗಣಿಯಾನೆಗಳ್ವೆರಸು ಒಂದು ಬಾರಿಯಂ ಪೊಕ್ಕೊಡೆ ಪಿರಿದುಂ ಕಳಕಳಮಾಗಿ ಅರಸಂಗಱಪಿದೊಡರಸನುಂ ಕೇಳ್ದು ತುರಿಪದಿಂ ಪೊಱಮಟ್ಟು ಕಾಡಾನೆಯಂ ಕಟ್ಟಿಸಲೆಂದು ಬಾರಿಗೆವೋದೊನಾ ಪ್ರಸ್ತಾವದೊಳ್ ಜಿನದತ್ತೆ ಪಸದನಂಗೊಂಡಿರ್ದಾಕೆ ಎನ್ನಂ ಬಿಸುಟ್ಟರಸಂ ಪೋದೊನೆಂದು ಮುಳಿದು ನುಡಿವುದುಮರಸನಾಕೆಯನೊಡಗೊಂಡು ಪೋಗದುದಂ ಕಂಡರಸಿಯರ್ಕಳ್ಗೆಲ್ಲಂ ಸಂತೋಷಮಾಗಿ ಇನ್ನೆಮಗಮರಸಂ ಸೂೞುಂ ಪಾೞಯುಮನೀಗುಮೆಂದು ರಾಗಿಸಿ ನುಡಿವ ಮಾತುಗಳಂ ಜಿನದತ್ತೆ ಕೇಳ್ದು ಕಿನಿಸಿ ಇನ್ನಾತನೆನಗೆ ಬಾೞ್ತೆಯಲ್ಲನೆಂದು ತನ್ನ ಮಾಡದಿಂ ಪೊಱಮಟ್ಟು ಪೆಱತೊಂದು ಪ್ರಾಸಾದದೊಳ್ ಪೋಗಿರ್ದೊಳ್

    ಎಂದು ಹೇಳುತ್ತಿರುವುದನ್ನೂ ಗೌಡನು ಕಂಡು “ಎಲಾ! ಈತನು ರಾಜನು! ” ಎಂದು ತಿಳಿದು ಅವನಿಗೆ ಹೆಚ್ಚಿನ ಸತ್ಕಾರವನ್ನೂ ಮರ್ಯಾದೆಯನ್ನೂ ಮಾಡಿದನು. ರಾಜನು ತನ್ನ ಹೆಗ್ಗಡೆಗಳ ಮೂಲಕ ಕನ್ಯೆಯನ್ನು ಕೇಳಿ, ಪಡೆದು ಮದುವೆಯಾದನು. ಅವಳಿಗೆ ಪಟ್ಟದ ರಾಣಿಯ ಪದವಿಯನ್ನು ಕೊಟ್ಟು, ತನ್ನ ಪಟ್ಟಣಕ್ಕೆ ತೆರಳಿದನು. ಅಲ್ಲಿ ರಾಣೀವಾಸ ಗೃಹಗಳಿಂದ ಅವರಿಸಿದ ಒಂದು ಉಪ್ಪರಿಗೆಮನೆಯನ್ನು ಅವಳಿಗೆ ಕೊಟ್ಟು ಅವಳನ್ನು ಅಲ್ಲಿ ಇರುವಂತೆ ಮಾಡಿದನು. ರಾಜನು ತನ್ನ ಎಲ್ಲಾ ರಾಣಿಯರನ್ನೂ ಬಿಟ್ಟು ಜಿನದತ್ತೆಯ ಮೇಲೆ ಆಸಕ್ತನಾಗಿ ಹಲವು ಕಾಲದವರೆಗೆ ಆಕೆಯಲ್ಲಿ ಇಷ್ಟವಾದ ಕಾಮಸುಖಗಳನ್ನು ಅನುಭವಿಸುತ್ತ ಇದ್ದನು. ಹೀಗಿರಲು ಒಂದು ದಿವಸ ಕಾಡಿನ ಒಂದು ಸೊಕ್ಕಾನೆ ತನ್ನ ಗುಂಪಿನ ಆನೆಗೊಳೊಂದಿಗೆ ಬಂದು ಆನೆಗಳನ್ನು ಹಿಡಿಯುವ ಲಕ್ಕಡಿ ಕೋಟೆಯನ್ನು ಹೊಕ್ಕಿತು. ಆಗ ಬಹಳ ಕೋಲಾಹಲವಾಯಿತು. ರಾಜನಿಗೆ ತಿಳಿಸಲು, ರಾಜನು ಕೇಳಿ ತ್ವರೆಯಾಗಿ ಹೊರಟು ಕಾಡಾನೆಯನ್ನು ಬಂಸುವುದಕ್ಕಾಗಿ ಬಾರಿಗೆ ಹೋದನು. ಆ ಸಂದರ್ಭದಲ್ಲಿ ಜಿನದತ್ತೆ ಅಲಂಕೃತಳಾಗಿದ್ದವಳು, “ ನನ್ನನ್ನು ಬಿಟ್ಟು ರಾಜನು ಹೋದನು” ಎಂದು ಕೋಪಿಸಿ ನುಡಿದಳು. ರಾಜನು ಅವಳನ್ನು ಕೂಡಿಕೊಂಡು ಹೋಗದುದನ್ನು ಕಂಡು ರಾಣಿಯರಿಗೆಲ್ಲ ಸಂತೋಷವಾಯಿತು. “ಇನ್ನು ರಾಜನು ನಮಗೂ ಸರದಿ ಪ್ರಕಾರದ ಭೋಗಾವಕಾಶವನ್ನು ಕೊಡುವನು” ಎಂದು ಆನಂದಗೊಂಡು ನುಡಿಯುವ ಮಾತನ್ನು ಜಿನದತ್ತೆ ಕೇಳಿ ಸಿಟ್ಟಾದಳು. “ಆತನು (ರಾಜನು) ಇನ್ನು ನನಗೆ ಪ್ರಯೋಜನನಲ್ಲ” ಎಂದು ಹೇಳಿಕೊಂಡು ತನ್ನ ಮನೆಯಿಂದ ಹೊರಟಳು. ಬೇರೊಂದು ಅರಮನೆಗೆ ಹೋಗಿ ಅಲ್ಲಿ ವಾಸಮಾಡಿದಳು. ಅಷ್ಟರಲ್ಲಿ ಇತ್ತ ರಾಜನು ಆನೆಯನ್ನು ಬಂಸಿ ಜಿನದತ್ತೆಯ ಭವನಕ್ಕೆ ಬಂದನು. ಅಲ್ಲಿ ರಾಣಿ ಕಾಣಿಸಲಿಲ್ಲ. ಆಕೆ ಎಲ್ಲಿದ್ದಾಳೆಂದು ಕೇಳಿದನು. ಆಗ ಒಬ್ಬನು

    ಅನ್ನೆಗಮಿತ್ತರಸನಾನೆಯಂ ಕಟ್ಟಿಸಿ ಜಿನದತ್ತೆಯ ಮಾಡಕ್ಕೆ ವೋಗಿ ಅರಸಿಯಂ ಕಾಣದೆಲ್ಲಿರ್ದಳೆಂದು ಬೆಸಗೊಂಡೊಡೊರ್ವನಿಂತೆಂದಂ ನೀಮೊಡಗೊಂಡು ಪೋದಿರಿಲ್ಲೆಂದರಸಿ ಮುಳಿದು ಪುರುಷವ್ರತಮಂ ಕೊಂಡು ತಪಸ್ವಿನಿಯಾಗಿ ಪೆಱತೊಂದು ಮಾಡದೊಳಿರ್ದೊಳೆಂದು ಪೇೞ್ದೊಡಾ ಮಾತನರಸಂ ಕೇಳ್ದಾದಮಾನುಂ ಮುಳಿದಿಂತಪ್ಪ ವ್ರತಮುಂ ತಪಮುಮೆನ್ನಲ್ಲಿ ಕೂಡದೆಂದು ನುಡಿದಾಕೆಯಂ ಬೆಳ್ಕಾಡೊಳ್ ಮಸಣದೊಳ್ ಕಂಡು ಪೋಗಿಕ್ಕಿಮೆಂದಾಳ್ಗಳ್ಗೆ ಬೆಸನಂ ಪೇೞ್ದೊಡವರುಮಂತೆ ಗೆಯ್ವೆಮೆಂದರಸಿಯನೊಡಗೊಂಡು ಪೋಗಿ ಮಸಣದೊಳೊಂಬತ್ತುತಿಂಗಳ ಗರ್ಭಿಣಿಯಂ ಪೊತ್ತು ಪೋಗಿಯಾಕೆಯನಲ್ಲಿಕ್ಕಿ ಇಂತೆಂದರಬ್ಬಾ ಎಮಗೇನುಂ ದೋಪಮುಂ ಪಾಪಮುಮಿಲ್ಲ ಕ್ಷಮಿಯಿಸಿ ಮರಸನ ಬೆಸದೊಳ್ ತಂದಿಕ್ಕಿದೆಮೆಂದು ನುಡಿದು ಪೋದರನ್ನೆಗಮಾ ಇರುಳೊಳರಸಿ ಬೆಸಲೆಯಾಗಿ ಮಗನಂ ಪೆತ್ತೊಳ್ ಇತ್ತರಸನುಮಾ ಇರುಳೊಳ್ ಶ್ವೇತವೃಷಭನಂ ಕನಸಿನೊಳ್ ಕಂಡು ಪೊೞ್ತಱನೋಲಗದೊಳ್ ಆಸ್ಥಾನದ ನಡುವೆ ಸಿಂಹಾಸನಮಸ್ತಕಸ್ಥಿತನಾಗಿ ತನ್ನ ಕಂಡ ಕನಸಂ ಮಂತ್ರಿಗೆ ಪೇೞ್ದೊಡೆ ಮಂತ್ರಿಯುಮಿಂತೆಂದು ಕನಸಿನ ಫಲಮನರಸಂಗೆ ಪೇೞ್ದಂ ದೇವಾ ನಿಮಗಿಂದು ಪುತ್ರಲಾಭಮಾದುದೆಂದು ಪೇೞ್ದೊಡದಂ ಕೇಳ್ದರಸಿಯರ್ಕಳೊಳಗಾರ್ವೆಸಲೆಯಾಗಿ ಮಗನಂ ಪೆತ್ತಳೆಂದಾರಯ್ದು ಬನ್ನಿಮೆಂದು ಪಡಿಯಱರ್ಗೆ ಬೆಸವೇೞ್ದೊಡವರ್ ರಾಣಿವಾಸಕ್ಕೆ ಪೋಗಿ

    ಹೀಗೆ ಹೇಳಿದನು – “ನೀವು ಒಟ್ಟಿಗೆ ಕರೆದುಕೊಂಡು ಹೋಗಲಿಲ್ಲವೆಂದು ರಾಣಿ ಜಿನದತ್ತೆ ಕೋಪಗೊಂಡು ಬ್ರಹ್ಮಚಾರಣೀ ವ್ರತ ಕೈಕೊಂಡು ತಪಸ್ವಿನಿಯಾಗಿ ಬೇರೆ ಒಂದು ಅರಮನೆಯಲ್ಲಿದ್ದಾಳೆ” ಹೀಗೆ ಹೇಳಿದಾಗ, ಆ ಮಾತನ್ನು ರಾಜನು ಕೇಳಿ ಅತ್ಯಂತ ಕೋಪಾವಿಷ್ಟನಾದನು. “ಇಂತಹ ವ್ರತವೂ ತಪಸ್ಸೂ ನನ್ನಲ್ಲಿ ನಡೆಯದು” ಎಂದು ಹೇಳಿ “ಆಕೆಯನ್ನು ನಿರ್ಜನವಾದ ಕಾಡಿನಲ್ಲಿ ಸುಡುಗಾಡಿನಲ್ಲಿ ಕೊಂಡುಹೋಗಿ ಇರಿಸಿ” ಎಂದು ಆಳುಗಳಿಗೆ ಆಜ್ಞೆಮಾಡಿದನು. ಅವರು “ಹಾಗೆಯೇ ಮಾಡುವೆವು” ಎಂದು ಜಿನದತ್ತೆಯನ್ನು ಒಟ್ಟಿಗೆ ಕರೆದುಕೊಂಡೊಯ್ದರು. ಒಂಬತ್ತು ತಿಂಗಳ ಬಸುರಿಯಾದ ಆಕೆಯನ್ನು ಹೊತ್ತುಕೊಂಡು ಅಲ್ಲಿಗೆ ಹೋಗಿ ಇಳಿಸಿ ಹೀಗೆ ಹೇಳಿದರು – “ಅಮ್ಮಾ ನಮಗೇನೂ ದೋಷವಾಗಲೀ ಪಾಪವಾಗಲೀ ಇದರಲ್ಲಿಲ್ಲ, ಕ್ಷಮೆ ಕೊಡಿ. ಅರಸನ ಅಪ್ಪಣೆಯ ಪ್ರಕಾರ ನಿಮ್ಮನ್ನು ಇಲ್ಲಿಗೆ ತಂದುಬಿಟ್ಟಿದ್ದೇವೆ”. ಹೀಗೆ ನುಡಿದು ಅವರು ಹೋದರು. ಅದೇ ರಾತ್ರಿಯಲ್ಲಿ ಅರಸಿಗೆ ಪ್ರಸವವಾಯಿತು. ಆಕೆ ಮಗನನ್ನು ಹೆತ್ತಳು. ಇತ್ತ ರಾಜನು ಅದೇ ರಾತ್ರಿಯಲ್ಲಿ ಕನಸಿನಲ್ಲಿ ಬಿಳಿಯ ಎತ್ತನ್ನು ಕಂಡನು. ಪ್ರಾತಃಕಾಲದ ರಾಜಸಭೆಯಲ್ಲಿ ಆಸ್ಥಾನದ ನಡುವೆ ಇದ್ದ ಸಿಂಹಾಸನದ ಮೇಲೆ ಕುಳಿತವನಾಗಿ ತಾನು ಕಂಡ ಕನಸನ್ನು ಮಂತ್ರಿಗೆ ತಿಳಿಸಿದನು. ಆಗ ಮಂತ್ರಿ ರಾಜನಿಗೆ ಕನಸಿನ ಫಲವನ್ನು ಈ ರೀತಿಯಾಗಿ ಹೇಳಿದನು – “ದೇವಾ, ನಿಮಗೆ ಇಂದು ಗಂಡುಮಗು ಲಾಭವಾಗಿದೆ” – ಎಂದು ಹೇಳಿದಾಗ ರಾಜನು ಕೇಳಿ, ತನ್ನ ರಾಣಿಯರಲ್ಲಿ ಯಾರು ಪ್ರಸವಗೊಂಡು ಮಗನನ್ನು ಹೆತ್ತಿದ್ದಾಳೆಯೆಂದು ವಿಚಾರಿಸಿ ಬನ್ನಿ – ಎಂದು ಬಾಗಿಲು ಕಾಯುವ ಸೇವಕರಿಗೆ ಆಜ್ಞೆಮಾಡಿದನು. ಅವರು ರಾಜನ ಅಂತಃಪುರಕ್ಕೆ ಹೋಗಿ ರಾಣಿರರೆಲ್ಲರನ್ನೂ ಬೇರೆಬೇರೆಯಾಗಿ “ ನಿಮಗೆ ಮಗನು

    ಅರಸಿಯರ್ಕಳೆಲ್ಲರುಮಂ ಬೇಱೆವೇಱೆ ಮಗಂ ಪುಟ್ಟಿದನೆ ಎಂದು ಬೆಸಗೊಂಡೊಡವರ್ಗಳನಿಬರು ಮಿಂತೆಂದರೆಮಗೆ ಸೌಭಾಗ್ಯಮಿಲ್ಲದವರ್ಗೆ ಭರ್ತಾರನ ದೆಸೆಯಿಂದಪ್ಪ ಸೂೞುಂ ಪಾೞಯುಮಿಲ್ಲದೊರ್ಗೆ ಬಸಿಱುಂ ಮಗನುಮೆಂತಕ್ಕುಂ ನೀಮಾರಾನುಂ ಸೌಭಾಗ್ಯಮುಳ್ಳೊರಲ್ಲಿ ಬಸಿಱುಂ ಮಗನುಮನಾರಯ್ಯಿಮೆಮ್ಮಲ್ಲಿ ಏನನಾರಯ್ವಿರೆಂದು ನುಡಿದೊಡವರ್ಗ್ಗಳುಂ ಶ್ಮಶಾನಕ್ಕೆ ಪೋಗಿ ಜಿನದತ್ತೆ ಬೆಸಲೆಯಾಗಿ ಮಗನಂ ಪೆತ್ತಿರ್ದೊಳಂ ಕಂಡರಸಂಗೆ ಪೋಗಿ ಇಂತೆಂದರ್ ದೇವಾ ಶ್ಮಶಾನದೊಳ್ ಜಿನದತ್ತೆಯರಸಿ ಬೆಸಲೆಯಾಗಿ ಮಗನಂ ಪೆತ್ತಿರ್ದಳೆಂದು ಪೇೞ್ದೊಡದಂ ಕೇಳ್ದರಸಂ ಕೂಸುಮನರಸಿಯುಮನೊಡಗೊಂಡು ಬನ್ನಿಮೆಂದು ತರಿಸಿ ಮುನ್ನಿನಂದದೊಳಿರಿಸಿ ಕನಸಿನೊಳ್ ವೃಷಭನಂ ಕಂಡುದಱಂದಾ ಕೂಸಿಂಗೆ ವೃಷಭಸೇನನೆಂದು ಪೆಸರನಿಟ್ಟರಸಿಯಂ ದಾನಸನ್ಮಾನಾದಿಗಳಿಂ ಪೂಜಿಸಿಯಾಕೆಯೊಳಿಪ್ಪ ವಿಷಯ ಕಾಮಭೋಗಂಗಳನನುಭವಿಸುತ್ತಮಿರೆ ವೃಷಭಸೇನ ಕುಮಾರನುಮೆಂಟು ವರುಷದ ಪ್ರಾಯದಾತನಾಗಿರ್ಪ್ಪನ್ನೆಗಮೊಂದು ದಿವಸಮರಸಂ ತಪಂಬಡುವ ಬಗೆಯಿಂದಂ ವೃಷಭಸೇನ ಕುಮಾರಂಗಿಂತೆಂದಂ ಮಗನೆ ನಿನಗೆ ಪಟ್ಟಂಗಟ್ಟಲೆ ಬಗದಪ್ಪೆನೆಂದೊಡಾತನಿಂತೆಂದನಯ್ಯಾ ಎನಗೆ ನೀಮುಂ ರಾಜ್ಯಪಟ್ಟಂಗಟ್ಪಿದಪಿರೊ ಮೋಕ್ಷಪಟ್ಟಂಗಟ್ಟಿದಪಿರೊ ಎಂದು ತಂದೆಯಂ ಬೆಸಗೊಂಡೊಡೆ

    ಹುಟ್ಟಿದನೆ ? ” ಎಂದು ಕೇಳಿದರು. ಆಗ ಅವರಲ್ಲಿ ಎಲ್ಲರೂ ಹೀಗೆ ಹೇಳಿದರು – “ನಾವು ಪುಣ್ಯವಿಲ್ಲದವರು. ಗಂಡನ ಕಡೆಯಿಂದ ಒದಗತಕ್ಕ ಸರದಿ ಪ್ರಕಾರದ ಸುಖಭೋಗಗಳಿಲ್ಲದವರು. ಅಂತಹ ನಮಗೆ ಗರ್ಭವೂ ಪುತ್ರೋತ್ಪತ್ತಿಯೂ ಆಗುವುದು ಹೇಗೆ? ಯಾರಾದರೂ ಪುಣ್ಯವುಳ್ಳವರಿದ್ದರೆ ಅವರಲ್ಲಿ ಬಸರಾದವರನ್ನೂ ಮಗನನ್ನು ಪಡೆದವರನ್ನೂ ನೀವು ವಿಚಾರಿಸಿರಿ. ನಮ್ಮಲ್ಲಿ ನೀವು ಏನು ಕೇಳುತ್ತಿದ್ದೀರಿ?” ಈ ರೀತಿಯಾಗಿ ಹೇಳಲು, ಅವರು ಶ್ಮಶಾನಕ್ಕೆ ಹೋದಾಗ ಜಿನದತ್ತೆ ಪ್ರಸವಿಸಿ ಗಂಡುಮಗುವನ್ನು ಪಡೆದುದನ್ನು ಕಂಡರು. ಕೂಡಲೇ ರಾಜನ ಬಳಿಗೆ ಹೋಗಿ ಹೀಗೆಂದರು – “ದೇವಾ ನಿಮ್ಮ ರಾಣಿಯಾದ ಜಿನದತ್ತೆಗೆ ಹೆರಿಗೆಯಾಗಿ ಮಗನನ್ನು ಪಡೆದಿದ್ದಾಳೆ” ಎಂದು ಹೇಳಿದಾಗ ರಾಜನು ಅದನ್ನು ಕೇಳಿ “ಮಗುವನ್ನೂ ರಾಣಿಯನ್ನೂ ಒಟ್ಟಿಗೆ ಕರೆದುಕೊಂಡು ಬನ್ನಿ” ಎಂದು ಹೇಳಿ, ಅವರಿಬ್ಬರನ್ನೂ ಕರೆತರಿಸಿದನು. ಹಿಂದಿನ ರೀತಿಯಲ್ಲೇ ಜಿನದತ್ತೆಯನ್ನು ಇರಿಸಿದನು. ಕನಸಿನಲ್ಲಿ ಎತ್ತನ್ನು ಕಂಡುದರಿಂದ ಆ ಮಗುವಿಗೆ ವೃಷಭಸೇನನೆಂದು ಹೆಸರಿಟ್ಟು ರಾಣಿಯಾದ ಜಿನದತ್ತೆಯನ್ನು ದಾನ ಸನ್ಮಾನ ಮುಂತಾದವುಗಳಿಂದ ಸತ್ಕರಿಸಿ ಆಕೆಯೊಡನೆ ಇಷ್ಟವಾದ ವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಇದ್ದನು. ಹೀಗಿರಲು, ವೃಷಭಸೇನನು ಎಂಟು ವರ್ಷ ಪ್ರಾಯದವನಾಗಿ ಇರುತ್ತಿದ್ದಾಗ ಒಂದು ದಿವಸ ರಾಜನು ತಪಸ್ಸನ್ನು ಆಚರಿಸುವ ಮನೋಭಾವದಿಂದ ವೃಷಭಸೇನ ಕುಮಾರನಿಗೆ ಹೀಗೆಂದನು. “ಮಗನೇ, ನಿನಗೆ ಪಟ್ಟಗಟ್ಟಬೇಕೆಂದು ಭಾವಿಸಿರುತ್ತೇನೆ. ” ಆಗ ಅವನು – “ಅಪ್ಪಾ, ನನಗೆ ನೀವು ರಾಜ್ಯದ ಪಟ್ಟವನ್ನು ಕಟ್ಟುತ್ತಿದ್ದೀರೋ ಮೋಕ್ಷದ ಪಟ್ಟವನ್ನು ಕಟ್ಟುತ್ತಿದ್ದೀರೋ? ಎಂದು ತಂದೆಯನ್ನು ಕೇಳಿದನು. ಅದಕ್ಕೆ ಅವನು “ಮಗನೆ ನಿನಗೆ ಮನುಷ್ಯರ ರಾಜ್ಯಪಟ್ಟವನ್ನುಕಟ್ಟುತ್ತಿದ್ದೇನೆ” ಎಂದನು. ಅದಕ್ಕೆ ಆತನು – “ದೇವಾ ರಾಜ್ಯದ ಪಟ್ಟಗಟ್ಟುವಿಕೆಯೂ ಮೋಕ್ಷಸುಖದ ರಾಜ್ಯಪಟ್ಟವನ್ನು ತಪಸ್ಸುಮಾಡುವವನಿಗೆ ಕಟ್ಟುವುದು ಪದ್ಧತಿ”

  ಮಗನೆ ನಿನಗೆ ಮನುಷ್ಯರಾಜ್ಯ ಪಟ್ಟಂಗಟ್ಟಿದಪ್ಪೆನೆಂಬುದುಂ ದೇವಾ ರಾಜ್ಯಪಟ್ಟಬಂಧನಮುಂ ಮೋಕ್ಷ ಸುಖರಾಜ್ಯಪಟ್ಟಬಂಧನಮುಮೆಂತೆನೆ ಮೋಕ್ಷಸುಖರಾಜ್ಯಪಟ್ಟಮಂ ತಪಂಗೆಯ್ವೊಂಗೆ ಕಟ್ಟುವುದೆಂದೊಡಂತಪ್ಪೊಡೆ ಮನುಷ್ಯರಾಜ್ಯಪಟ್ಟಮನೊಲ್ಲೆನೆನಗೆ ಮೋಕ್ಷರಾಜ್ಯಪಟ್ಟಂಗಟ್ಟಿಮೆಂದು ನುಡಿದೊಡರಸನೆಂದಂ ಮನಗೆ ನೀನಿನ್ನ್ನುಂ ಕೂಸನೈ ಬಾಲವದ್ಧೆಯನ್ನೆಗಂ ಬಳೆದರಸುಗೆಯ್ದಿಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತಂ ಬೞಕ್ಕೆ ಪಶ್ಚಾತ್ಕಾಲದೊಳ್ ತಪಂಬಡುವುದೆಂದೊಡೆ ಕುಮಾರನಿಂತೆಂದನನ್ನೆಗಂ ಸಾವರೊ ಬಾೞ್ವರೊ ಎಂತಱಯಲಕ್ಕುಂ ಮನುಷ್ಯರ ಬಾೞುಂ

ಕಂದ || ಪನಿಪುಲ್ಲ ಮುಗಿಲ ಸಂಜೆಯ
ಕನಸಿನ ಸುರಧನುವ ನೆಗೆದ ನೊರೆಗಳ ತೆಱನಂ
ತನಿತುಂ ನಿಲ್ಲವು ಬಗೆವೊಡೆ
ಮನುಜರ ಯೌವನಮುಮರ್ಥಮುಂ ಬಾಱ್ಕೆಗಳುಂ ||

ಶ್ಲೋಕ|| ಭೋಗಸ್ತ*ಷ್ಣಾಗ್ನಿ ಸಂವೃದ್ಧ್ಯೆ ದೀಪನೀಯೋ ವನೋಪಮಃ
ಏಭಿಃ ಸ್ತ್ರೀವೃದ್ಧತೃಷ್ಣಾಗ್ನಿ ಶಾಂತ್ಯೈ ಚಿಂತ್ಯಮಿಹಾಪರಂ ||

ಗಾಹೆ || ಸಣ್ಹಂ ವಾ ಬದರಂ ತಂ ಮಜ್ಜಂ ವಿಮುತ್ತಾಣ ಮುತ್ತಿಪಹಂ
ಅಮಿಸಾಮಂ (?) ಭೋಗ ಸುಹಲೋಹವಿರದೋ ಮೊಕ್ಖೇಮದಿಂ ಕುಜ್ಜಾ

ಆರ್ಯೆ || ಯದ್ಯಪಿ ನಿಷೇವ್ಯಮಾಣಾ ಮನುಸ್ಸಂತುಷ್ಟಕಾರಕಾ ವಿಷಯಾಃ
ಕಿಂಪಾಕ ಫಲಾಶನವದ್ಭವಂತಿ ಪಶ್ಚಾದತಿದುರಂತಾಃ

    ಎಂಬುದಱಂ ಭೋಗಂಗಳುಂ ಕಿಂಪಾಕಫಳದೊಳೋರನ್ನವದು ಕಾರಣದಿಂ ರಾಜ್ಯದೊಳಪ್ಪ ಭೋಗಸುಖಂಗಳನೊಲ್ಲೆಂ ಜಾತಿಜರಾಮರಣಗಳಿಂದಪ್ಪ ಬಾಧೆಯಿನಗಲ್ದ ಶಾಶ್ವತಮಪ್ಪ ಮೋಕ್ಷ

    ಎನ್ನಲು, ಕುಮಾರನು – “ಹಾಗಾದರೆ ನಾನು ಮನುಷ್ಯರ ರಾಜ್ಯಪಟ್ಟವನ್ನು ಒಲ್ಲೆನು. ನನಗೆ ಮೋಕ್ಷರಾಜ್ಯದ ಪಟ್ಟವನ್ನು ಕಟ್ಟಿರಿ” ಎಂದು ಹೇಳಿದನು. ಆಗ ರಾಜನು – ಮಗನೆ, ನೀನಿನ್ನೂ ಮಗುವಾಗಿರುವೆ. ನವಯೌವನನಾಗುವವರೆಗೆ ಬೆಳೆದು ರಾಜ್ಯಭಾರ ಮಾಡಿ ಇಷ್ಟ ವಿಷಯದ ಕಾಮಸುಖಗಳನ್ನು ಅನುಭವಿಸಿದ ನಂತರ ಮತ್ತಿನ ಕಾಲದಲ್ಲಿ ತಪಸ್ಸು ಮಾಡಬಹುದು” ಎಂದನು ಆಗ ಕುಮಾರನು ಹೀಗೆಂದನು – “ಆಗ ಸಾಯುತ್ತಾರೊ ಬದುಕಿರುತ್ತಾರೊ ಹೇಗೆ ತಿಳಿಯಲಿಕ್ಕಾಗುತ್ತದೆ ? *ಮನುಷ್ಯ ಜೀವನ, ಯೌವನ, ಧನ – ಇವು ಹುಲ್ಲಿನ ಮೇಲೇ ನಿಂತ ಹನಿಯಂತೆ, ಮುಗಿಲಂತೆ ಸಂಜೆಹೊತ್ತಿನಂತೆ, ಕನಸಿನಂತೆ, ಮಳೆಬಿಲ್ಲಿನಂತೆ, ಮೇಲೆದ್ದ ನೀರುಗುಳ್ಳೆಗಳಂತೆ, ಕ್ಷಣಿಕವಾಗಿವೆ. ಯೋಚಿಸಿದರೆ ಅಂತು ಅಷ್ಟು ಹೊತ್ತೂ ನಿಂತಿರಲಾರವು.* *ಭೋಗವೆಂಬುದು ಆಶೆಯೆಂಬ ಅಗ್ನಿಯನ್ನು ಹೆಚ್ಚಿಸುವುದಕ್ಕಿಂತ ಸುಡುತ್ತಿರುವ ಕಾಡಿನಂತಿರುವುದು ಹೆಣ್ಣಿನಿಂದ ಹೆಚ್ಚುತ್ತಿರುವ ಭೋಗಲಾಲಸೆಯೆಂಬ ಬೆಂಕಿಯ ಶಮನಕ್ಕಾಗಿ ಇಹಪರ ಗತಿಗಳು ಆಲೋಚಿಸತಕ್ಕವಾಗಿವೆ.* ಮುಕ್ಕಿಪಥದಲ್ಲಿ ಚಿಕ್ಕದಾಗಲಿ ದೊಡ್ಡದಾಗಲಿ – ಎಲ್ಲ ಸಂಬಂಧಗಳನ್ನು ತೊರೆದು ಸಂತತವಾಗಿ ಭೋಗಸುಖ ಲೋಭಗಳಲ್ಲಿ ಆಸಕ್ತಿಯಿಲ್ಲದವನಾಗಿ ಮೋಕ್ಷದಲ್ಲಿ ಮನಸ್ಸನ್ನು ಮಾಡಬೇಕು. ಮನಸ್ಸಿಗೆ ಸಂತೃಪ್ತಿಯುಂಟುಮಾಡುವ ವಸ್ತುಗಳು

    ಸುಖಮನೆ ಬೇೞ್ಪೆನೆಂದು. ತಱಸಂದು ನುಡಿದೊಡರಸಂ ಜ್ಯೋತಿರ್ಮಾಲೆಯೆಂಬರಸಿಯ ಮಗಂ ವಸುಪಾಳನೆಂಬೊಂಗೆ ರಾಜ್ಯಪಟ್ಟಂಗಟ್ಟಿ ತಂದೆಮಕ್ಕಳಿರ್ವರುಮೆಲ್ಲರೊಳಂ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹ ಪರಿತ್ಯಾಗಂಗೆಯ್ದು ಗುಣಧರರೆಂಬಾಚಾರ್ಯರ ಪಕ್ಕದೆ ದೀಕ್ಷೆಯಂ ಕೈಕೊಂಡು ಪನ್ನೆರಡು ವರುಷಂ ಬರೆಗಂ ಗುರುಗಳನಗಲದಿರ್ದಾಗಮಂಗಳೆಲ್ಲಮಂ ಕಲ್ತು ಭಟಾರರಂ ಬೆಸಗೊಂಡವರನುಮತದಿಂ ವೃಷಭಸೇನ ಮುನಿಯುಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರ್ ವತ್ಸೆಯೆಂಬುದು ನಾಡೊಳ್ ಕೌಶಂಬಿಯೆಂಬ ಪೊೞಲ್ಗೆವಂದಱ ಸಾರೆ ಉದಯಾವತ ಪರ್ವತಮೆಂಬ ಪರ್ವತಮುಂಟದಱ ಮೇಗೆ ವೃಷಭಸೇನ ಭಟಾರರ್ ನಾಲ್ಕು ತಿಂಗಳುಮಾತಪಸ್ಥಿತ ಯೋಗಮಂ ಕೈಕೊಂಡು ದಿವಸಕ್ಕಂ ಕಲ್ನಿಲೆನಿಲೆ ಪೊೞಲವರ್ಗಳ್ ಕಂಡನಿಬರುಂ ಶ್ರಾವಕಭಕ್ತರುಂ ಬೆಸಕೆಯ್ವರುಮಾದರ್ ಮತ್ತಾ ಪೊೞಲೊಳ್ ಬುದ್ಧಜನೆಂಬೊನುಪಾಸಕನಾತಂ ಋಷಿಯರೊಳಪ್ಪ ಮಾತ್ಸರ್ಯಂ ಕಾರಣಮಾಗಿ ಭಟಾರರ್ ಚರಿಗೆವೋದರನ್ನೆಗಂ ಪಿಂದೆ ಪಾಪಕರ್ಮಂ ಯೋಗಶಿಲೆಯ ಮೇಗುಮಂ ಕೆೞಗುಮಂ ಬಳಸಿಯುಂ ಪಲವುಂ ಪಿರಿಯವುಮಪ್ಪ ತಱಯ ಪುಳ್ಳಿಗಳಂ ಕಡಿದೊಟ್ಟಿ ಕಿಚ್ಚನಿಕ್ಕಿ ಸುಟ್ಟು ಕಿಚ್ಚಿನ ಬಣ್ಣದಂತಾಗಿ ಸಿಲೆಯಂ ಮಾಡಿ ಕೆಂಡಂಗಳನೊಂದು ಕೆಲಂ ಸಾರ್ಚಿ ಪೋದನನ್ನೆಗಂ ಭಟಾರರ್ ಚರಿಗೆ ವೋಗಿ ಬರ್ಪೊರ್ ಧಗದ್ಧಗಿಸುತ್ತಿರ್ದ ಕಿಚ್ಚನ

    ಸೇವಿಸಲ್ಪಡುವವಾದರೂ, ಅವು ಆಮೆಲೆ ವಿಷಮಯವಾದ ಕಿಂಪಾಕಮರದ ಹಣ್ಣುಗಳನ್ನು ತಿಂದಂತೆ ಬಹಳ ದುಷ್ಪರಿಣಾಮವನ್ನು (ಪ್ರಾಣ ಹಾನಿಯನ್ನು) ಉಂಟು ಮಾಡುತ್ತವೆ. ಹೀಗೆನ್ನುವುದರಿಂದ, ಸುಖಗಳು ಕಿಂಪಾಕದ ಹಣ್ಣಿಗೆ ಸಮಾನವಾಗಿವೆ. ಆ ಕಾರಣದಿಂದ ರಾಜ್ಯಾಕಾರದಲ್ಲಿ ಉಂಟಾಗುವ ಸುಖಾನುಭವಗಳನ್ನು ನಾನೊಲ್ಲೆನು. ಹುಟ್ಟು – ಮುಪ್ಪು – ಸಾವುಗಳಿಂದಾಗುವ ತೊಂದರೆಯಿಂದ ಅಗಲಿದ (ದೂರವಾದ) ಚಿರಸ್ಥಾಯಿಯಾದಂತಹ ಮುಕ್ತಿಸುಖವನ್ನೇ ಬೇಡುವೆನು” – ಎಂದು ನಿರ್ಧಾರಮಾಡಿ ನುಡಿದನು. ಪ್ರದ್ಯೋತರಾಜನು ಜ್ಯೋತಿರ್ಮಾಲೆ ಎಂಬ ರಾಣಿಯ ಮಗನಾದ ವಸುಪಾಳನೆಂಬವನಿಗೆ ರಾಜ್ಯಪಟ್ಟವನ್ನು ಕಟ್ಟಿದನು. ತಂದೆ ಮಕ್ಕಳಿಬ್ಬರೂ ಮಾಯಾಶಲ್ಯ, ಮಿಥ್ಯಾಶಲ್ಯ, ನಿದಾನಶಲ್ಯ ಎಂಬ ಶಲ್ಯಗಳನ್ನು ತೊರೆದು, ಬಾಹ್ಯ ಮತ್ತು ಆಂತರಿಕ ಪರಿಗ್ರಹಗಳನ್ನು ತ್ಯಾಗಮಾಡಿ ಗುಣಧರರೆಂಬ ಆಚಾರ್ಯರ ಬಳಿಯಲ್ಲಿ ದೀಕ್ಷೆಯನ್ನು ಸ್ವೀಕರಿಸಿದರು. ಹನ್ನೆರಡು ವರ್ಷಗಳವರೆಗೆ ಗುರುಗಳ ಜೊತೆಯಲ್ಲಿಯೇ ಇದ್ದು ಶಾಸ್ತ್ರಗಳನ್ನೆಲ್ಲ ಅಭ್ಯಾಸಮಾಡಿದರು. ವೃಷಭಸೇನ ಮುನಿಗಳು ಗುಣಧರ ಭಟಾರರನ್ನು ಕೇಳಿ, ಅವರ ಅನುಮತಿ ಪಡೆದು, ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖ ಎಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಬರತಕ್ಕವರು ವತ್ಸೆಯೆಂಬ ನಾಡಿನಲ್ಲಿರುವ ಕೌಶಂಬಿ ಎಂಬ ಪಟ್ಟಣಕ್ಕೆ ಬಂದರು. ಆ ಪಟ್ಟಣದ ಹತ್ತಿರ ಉದಯಾವತವೆಂಬ ಪರ್ವತವಿದೆ. ಅದರ ಮೇಲೆ ವೃಷಭಸೇನ ಮುನಿಗಳು ನಾಲ್ಕುತಿಂಗಳ ಕಾಲ ಆತಪಸ್ಥಿತಯೋಗವನ್ನು (ಬಿಸಿಲಿನಲ್ಲಿ ನಿಂತು ಮಾಡುವ ತಪಸ್ಸನ್ನು) ಕೈಕೊಂಡರು. ಪ್ರತಿದಿನವೂ ಕಲ್ಲು ನಿಂತಂತೆ ನಿಲ್ಲುತ್ತಿದ್ದರು. ಪಟ್ಟಣಿಗರೂ ಅಲ್ಲಿದ್ದ ಎಲ್ಲಾ ಶ್ರಾವಕಭಕ್ತರೂ ಅವರ ಸೇವೆ ಮಾಡುತ್ತ ಇರುವವರಾದರು. ಆ ಪಟ್ಟಣದಲ್ಲಿ ಬುದ್ಧಜನೆಂಬ ಒಬ್ಬ ಗೃಹಸ್ಥನು ಇದ್ದನು. ಋಷಿಗಳ ಮೇಲಿನ ದ್ವೇಷವೇ ಕಾರಣವಾಗಿ, ಋಷಿಗಳು ಭಿಕ್ಷೆಗೆ ಹೋದ ವೇಳೆಗೆ,

    ಬಣ್ಣದಂತಪ್ಪ ಕೆಚ್ಚನಾಗಿರ್ದ ಸಿಲೆಯಂ ಕಂಡೆಮಗಿನಿತೆಯಾಯುಷ್ಯಮೆಂದಱದು ಕ್ರಿಯೆಗೆಯ್ದು ಚತುರ್ವಿಧಮಪ್ಪಾಹಾರಮುಂ ಶರೀರಮುಮಂ ಜಾವಜ್ಜೀವಂ ತೊಱೆದು ಕಾಯ್ದಿರ್ದ ಯೋಗಪೀಠಮನೇಱ ಕಾಯೋತ್ಸರ್ಗಂಗೆಯ್ದು ಜ್ಯೇಷ್ಠಮಾಸದ ಬಿಸಿಲುಂ ಝಳಮುಂ ಬೆಂಕೆಯುಂ ಕಿಚ್ಚುಮಂ ಸೈರಿಸಿ ನೀರೊಳಗಿರ್ಪಂತಿರ್ದು ಶುಕ್ಲಧ್ಯಾನಮಂ ಧ್ಯಾನಿಸಿ ಎಂಟು ಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದರ್ ಮತ್ತೆ ಪ್ರದ್ಯೋತನೆಂಬ ಋಷಿ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗದೊಳ್ ಪುಟ್ಟಿದಂ ಮತ್ತಂ ಪೆಱರುಮಾರಾನುಂ ಸಹಜರತ್ನತ್ರಯಮನಾರಾಸುತ್ತಿರ್ದ ಭವ್ಯರ್ಕಳ್ ವೃಷಭಸೇನ ಭಟಾರರಂ ಮನದೊಳ್ ಬಗೆದು ಝಳಮಂ ಬೆಂಕೆಯುಮಂ ದಾಹಮುಷ್ಣಮುಂ ಶೀತಮುಂ ವಾತಮುಂ ಬೇನೆಯುಂ ಪಸಿವುಂ ನೀರೞ್ಕೆ ಮೊದಲಾಗೊಡೆಯವಿರ್ಪತ್ತೆರಡು ಪರೀಷಹಂಗಳಂ ಸೈರಿಸಿ ಶುಭಪರಿಣಾಮದಿಂ ಸಮ್ಯಗ್ದರ್ಶನ ಜ್ಞಾನಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

    ಹಿಂದೆ ಪಾಪಕೃತ್ಯಮಾಡಿದವನಾದ ಅವನು ಋಷಿಗಳ ಯೋಗಶಿಲೆಯ ಮೇಲೆಯೂ ಕೆಳಗೆಯೂ ಸುತ್ತಲೂ ಹಲವು ದೊಡ್ಡ ತರಿಯ ಮರದ ಸೌದೆಗಳನ್ನು ಕಡಿದು ತಂದು ರಾಶಿಹಾಕಿ. ಬೆಂಕಿಕೊಟ್ಟು ಸುಟ್ಟು, ಶಿಲೆಯನ್ನು ಬೆಂಕಿಯ ಬಣ್ಣದ ಹಾಗೆ ಆಗುವಂತೆ ಮಾಡಿ, ಕೆಂಡಗಳನ್ನೆಲ್ಲ ಮಗ್ಗುಲಿಗೆ ಸೇರಿಸಿ ಹೋದನು. ಅಷ್ಟರಲ್ಲಿ ವೃಷಭಸೇನ ಮುನಿಗಳು ಭಿಕ್ಷೆಗೆ ಹೋಗಿ ಬರತಕ್ಕವರು ಧಗಧಗಿಸುತ್ತಿದ್ದ ಬೆಂಕಿಯ ಬಣ್ಣದ ಹಾಗೆ ಕೆಂಪಾಗಿದ್ದ ಶಿಲೆಯನ್ನು ಕಂಡರು. ತಮಗೆ ಅಷ್ಟೇ ಆಯುಷ್ಯವಿರುವುದೆಂಬುದನ್ನು ತಿಳಿದು ಪಂಚನಮಸ್ಕಾರಾದಿ ಕ್ರಿಯೆಗಳನ್ನು ಮಾಡಿ, ನಾಲ್ಕು ವಿಧದ ಆಹಾರವನ್ನೂ ಶರೀರವನ್ನೂ ಜೀವವಿರುವವರೆಗೂ ಬಿಡಲು ನಿಶ್ಚಯಿಸಿ ಕಾದು ಕೆಂಪಾಗಿದ್ದ ಯೋಗದ ಶಿಲಾಪೀಠವನ್ನೇರಿ ದೇಹತ್ಯಾಗ ಮಾಡಿದರು. ಜೇಷ್ಠಮಾಸದ ಬಿಸಿಲನ್ನೂ ಜಳವನ್ನೂ ಸೆಖೆಯನ್ನೂ ಬೆಂಕಿಯನ್ನೂ ಸಹಿಸಿ ನೀರಿನೊಳಗೆ ಇರುವಂತಿದ್ದು, ಶುಕ್ಲಧ್ಯಾನ ಮಾಡಿ, ಎಂಟು ಕರ್ಮಗಳನ್ನೂ ನಾಶಮಾಡಿ ಮೋಕ್ಷಕ್ಕೆ ಹೋದರು. ಆಮೇಲೆ ಪ್ರದ್ಯೋತ ಋಷಿ ಸಮ್ಯಗ್ದರ್ಶನ – ಸಮ್ಯಗ್ಜ್ಞಾನ – ಸಮ್ಯಕ್ ಚಾರಿತ್ರಗಳನ್ನು ಆಚರಿಸಿ ಸ್ವರ್ಗದಲ್ಲಿ ಹುಟ್ಟಿದನು. ಬೇರೆ ಯಾರೇ ಆಗಲಿ, ಸಹಜವಾಗಿ ರತ್ನತ್ರಯವನ್ನು ಆಚರಿಸತಕ್ಕ ಭವ್ಯಜನರು ವೃಷಭಸೇನ ಮುನಿಗಳನ್ನು ತಮ್ಮ ಮನಸ್ಸಿನಲ್ಲಿ ಭಾವಿಸಿಕೊಂಡು – ಝಳ, ಬೆಂಕಿ, ಸುಡುವಿಕೆ, ಉಷ್ಣ, ಶೀತ, ಗಾಳಿ, ನೋವು, ಹಸಿವು, ಬಾಯಾರಿಕೆ – ಮುಂತಾಗಿರುವ ಇಪ್ಪತ್ತೆರಡು ವಿಧದ ಪರೀಷಹಗಳನ್ನು ಸಹಿಸಿ, ಶುಭಪರಿಣಾಮದಿಂದ ಸಮ್ಯಗ್ ದರ್ಶನ – – ಜ್ಞಾನ – ಚಾರಿತ್ರಗಳನ್ನು ಸಾಧನೆಮಾಡಿ, ಸ್ವರ್ಗ – ಮೋಕ್ಷ ಸುಖಗಳನ್ನು ಪಡೆಯುವಂತಾಗಲಿ !

*****ಕೃಪೆ: ಕಣಜ****

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ