ನನ್ನ ಪುಟಗಳು

21 ಮಾರ್ಚ್ 2022

ವಡ್ಡಾರಾಧನೆ- ಚಾಣಾಕ್ಯರಿಸಿಯ ಕಥೆ | Vaddaradhane-Chanakya-risiya-kathe

 ಚಾಣಾಕ್ಯರಿಸಿಯ ಕಥೆಯಂ ಪೇೞ್ವೆಂ :

ಗಾಹೆ || ಗೊಟ್ಠೇ ಪಾಓವಗದೋ ಸುಬಂಧುಣಾ ಗೊಬ್ಬರೇ ಪಳಿವಿದಹ್ಮಿ
ದಜ್ಝಂತೋ ಚಾಣಕ್ಕೋ ಪವಣ್ಣೋ ಉತ್ತಮಂ ಅಟ್ಠಂ ||

*ಗೊಟ್ಠೇ – ತುಱುಪಟ್ಟಿಯೊಳ್, ಪಾಓವಗದೋ – ಪ್ರಾಯೋಪಗಮನಕ್ಕೆ ಸಂದೊನಾಗಿ, ಸುಬಂಧುಣಾ – ಸುಬಂಧುವೆಂಬೊಂ ಮಂತ್ರಿಯಿಂದಂ, ಗೊಬ್ಬರೇ – ಗೊಬ್ಬರದೊಳ್, ಪಳಿವಿದಹ್ಮಿ – ಉರಿಪೆ ಪಟ್ಟುದಾದೊಡೆ, ದಜ್ಝಂತೋ – ಬೇಯುತ್ತಿರ್ದೊನಾಗಿಯುಂ, ಚಾಣಕ್ಕೋ – ಚಾಣಾಕ್ಯನೆಂಬ ರಿಸಿ, ಪಡಿವಣ್ಣೋ ಉತ್ತಮಂ ಅಟ್ಠಂ – ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯಂ ಪೊರ್ದಿದೊಂ*

ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಪಾಟಳೀಪುತ್ರಮೆಂಬುದು ಪೊೞಲದನಾಳ್ವೊಂ ನಂದವಂಶದೊಂ ಪದ್ಮನೆಂಬೊನರಸನಾತನ ಮಹಾದೇವಿ ಸುಂದರಿಯೆಂಬೊಳಾಯಿರ್ವರ್ಗಂ ಮಗಂ ಮಹಾಪದ್ಮನೆಂಬೊಂ ಮಂತ್ರಿ ಕಾಪಿಯೆಂಬೊ ನಾತಂಗೆರಡನೆಯ ಪೆಸರ್ ವಿಶ್ವಸೇನನೆಂಬುದಂತವರ್ಗಳಿಷ್ಟವಿಷಯ ಕಾಮಭೋಗಂಗಳನನು ಭವಿಸುತ್ತಿರೆಯಿರೆ ಮತ್ತೊಂದು ದಿವಸಂ ಕಾಪಿಯೆಂಬ ಮಂತ್ರಿ ಸುಂದರಿಮಹಾದೇವಿಗೆ ಕಣ್ವೇಟಂಗೊಂಡು ಅರಸನಂ ಕೊಂದರಸಿಯೊಳ್ ಬಾಱ್ವೆನೆಂಬ ಬಗೆಯಿಂದಂ ಪರಚಕ್ರದರಸುಗಳಂ ಪದ್ಮನ ಮೇಗೇೞ್ವಂತಿರೆ ಮಾಡಿಯರಸನನಿಂತೆಂದಂ ದೇವಾ ನಿಮ್ಮ ಸಾರಮಪ್ಪ ದ್ರವ್ಯಮನಾರುಮೞಯದಲ್ಲಿ ಮಡಗಿ ನಾಮುಚ್ಚವಿಗ್ರಹದೊಳ್ ನಿಂದು ಕಾದುವಮೆಂದು ಪೇೞ್ದು ದ್ರವ್ಯಮನಿಡುವ ಪ್ರದೇಶಮಂ ತೋರ್ಪ ನೆವದಿಂದರಸನಂ ಬಯ್ಗಿರುಳಿನ ಜಾವದಾಗಳ್ ಉದ್ಯಾನವನಕ್ಕೊಡಗೊಂಡು ಪೋಗಿ ಗುಂಡಿತಪ್ಪುದೊಂದು

ಚಾಣಾಕ್ಯ ಋಷಿಯ ಕಥೆಯನ್ನು ಹೇಳುವೆನು ಚಾಣಾಕ್ಯನೆಂಬ ಋಷಿ ಆಕಳ ಹಟ್ಟಿಯಲ್ಲಿ ಪ್ರಾಯೋಪಗಮನಕ್ಕೆ ಸಂದವನಾಗಿ ಸುಬಂಧುವೆಂಬ ಮಂತ್ರಿಯಿಂದ ಬೆರಣಿಯಲ್ಲಿ ಉರಿಸಲ್ಪಟ್ಟು ಬೇಯುತ್ತ ಶ್ರೇಷ್ಠ ದರ್ಶನ ಜ್ಞಾನ ಚಾರಿತ್ರಗಳ ಆರಾಧನೆಯನ್ನು ಮಾಡಿದನು. ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆ ಎಂಬ ನಾಡಿನಲ್ಲಿ ಪಾಟಲೀಪುತ್ರವೆಂಬ ಪಟ್ಟಣವುಂಟು. ಅದನ್ನು ನಂದವಂಶದವನಾದ ಪದ್ಮನೆಂಬ ಅರಸನು ಆಳುತ್ತಿದ್ದನು. ಅವನ ಮಹಾರಾಣಿ ಸುಂದರಿ ಎಂಬವಳು. ಅ ಇಬ್ಬರಿಗೂ ಮಹಾಪದ್ಮನೆಂಬವನು ಮಗನು. ಕಾಪಿ ಎಂಬವನು ಮಂತ್ರಿ. ಕಾಪಿಗೆ ಎರಡನೆಯ ಹೆಸರು ವಿಶ್ವಸೇನನೆಂದು. ಅಂತು ಅವರು ಇಷ್ಟ ವಿಷಯಗಳಾದ ಕಾಮಸುಖಗಳನ್ನು ಅನುಭವಿಸುತ್ತ ಇದ್ದರು. ಅನಂತರ, ಒಂದು ದಿವಸ ಕಾಪಿ ಎಂಬ ಮಂತ್ರಿ ಸುಂದರಿ ಮಹಾದೇವಿಯನ್ನು ನೋಡಿ ಮೋಹಿತನಾಗಿ ಅರಸನನ್ನು ಕೊಂದು ಅರಸಿಯೊಂದಿಗೆ ಬಾಳುವೆನೆಂಬ ಭಾವನೆಯಿಂದ, ಶತ್ರುರಾಜ್ಯದ ರಾಜರನ್ನು ಪದ್ಮನ ಮೇಲೆ ದಂಡೆತ್ತಿ ಬರುವಂತೆ ಮಾಡಿದನು. ರಾಜನೊಡನೆ ಹೀಗೆ ಹೇಳಿದನು – *ದೇವಾ, ನಿಮ್ಮ ಬೆಲೆಬಾಳುವ ವಸ್ತುಗಳನ್ನು ಯಾರೂ ತಿಳಿಯದ ಕಡೆಯಲ್ಲಿ ಇಟ್ಟು ನಾವು ಭಾರೀ ಯುದ್ದದಲ್ಲಿ ನಿಂದು ಕಾದಾಡೋಣ*. ಹೀಗೆ ಹೇಳಿ, ಅಮೂಲ್ಯವಸ್ತುಗಳನ್ನು ಬಚ್ಚಿಡುವ

ನಾಡು ಕೆಸಱನೊಡೆಯ ಪೞವಾವಿಯ ತಡಿಯೊಳಿಱದು ಕೊಂದು ಬಾವಿಯೊಳ್ ನೂಂಕಿ ದೆಸೆಗಳಂ ನೋೞ್ಪನನ್ನೆಗಂ ಮರನ ಮೇಗಿರ್ದು ಪೂಗೊಯ್ಜ ವಸಂತಕನೆಂಬ ಮಾಲೆಗಾಱನರಸನ ಸಾವಂ ಕಂಡು ತನಗಂಜಿ ಪಾಯ್ದೋಡುವ ಭರದಿಂ ಮರದಲುಗುವ ಕೊಂಬಂ ಕಂಡಾದಮಾನುಂ ಭಯಸ್ಥನಾಗಿ ವಿಶ್ವಸೇನನಿಂತೆಂದಂ

ಶ್ಲೋಕ || ಯೇನೇಯಂ ಕಂಪಿತಾ ಶಾಖಾ ವಾನರೇಣ ನರೇಣ ವಾ
ಅಪಿ ವರ್ಷ ಸಹಸ್ರಾಂತಾತ್ ಮದ್ದೋಷಂ ಕಥಯಿಷ್ಯತಿ ||

ಎಂದಿಂತು ಹೃದಯ ಸಂತಾಪ ಪರನಾಗಿ ತನ್ನ ಮನೆಗೆ ವೋಗಿ ನೇಸರ್ಮೂಡಿದೊಡೆ ಸಾಮಂತ ಮಹಾಸಾಮಂತರ್ಕಳೊಡನೆ ಅರಮನೆಯ ಓಲಗಕ್ಕೆ ಪೋಗಿ ಎಲ್ಲಾ ವೋಳಿಯುಮಱಸಿಯಱಸಿಯರಸನಂ ಕಾಣದೆ ಕೃತಕದುಃಖಮನಾದಮಾನುಂ ಗೆಯ್ದು ಕೆಲದಿವಸಮಂತಿರ್ದು ಮತ್ತೆ ಪ್ರಶಸ್ತ ದಿನ ವಾರ ನಕ್ಷತ್ರ ಮುಹೂರ್ತದೊಳ್ ಮಹಾಪದ್ಮಂಗೆ ರಾಜ್ಯಾಭಿಷೇಕಂಗೆಯ್ದು ಪಟ್ಟಂಗಟ್ಟಿ ಸುವ್ರತೆಯೆಂಬರಸಿಗೆ ಮಹಾದೇವಿ ಪಟ್ಟಂಗಟ್ಟಿ ಸುಂದರಿ ಮಹಾದೇವಿಯೊಡನೆ ಮಱೆವಾೞುತ್ತಿರ್ಕುಮಿಂತು ಪಲಕಾಲಂ ಸಲೆ ಮತ್ತೊಂದು ದಿವಸಂ ಮಹಾಪದ್ಮನಿಂತೆಂದು ಬಗೆದನೆನ್ನ ತಂದೆಯ ಸಾವನಿನಿತೊಂದು ಮಹಾನಗರದೊಳ್ ಆವನೊರ್ವನಱಯದಿರ್ಕುಮೆ ಆತನನಾರಯ್ವೆನೆಂದರಮನೆಯಂ ಪೊಱಮಟ್ಟು

ಸ್ಥಳವನ್ನು ತೋರಿಸುವ ನೆವದಿಂದ ರಾಜನನ್ನು ಮುಂಜಾನೆಯ ಹೊತ್ತಿನಲ್ಲಿ ಉದ್ಯಾನವನಕ್ಕೆ ಒಡಗೂಡಿಕೊಂಡು ಹೋದನು. ಅಲ್ಲಿ ಆಳವಾಗಿರುವ ಮತ್ತು ಬಹಳ ಕೆಸರನ್ನುಳ್ಳ ಹಳೆಯ ಬಾವಿಯ ದಡದಲ್ಲಿ ತಿವಿದು ಕೊಂದು ಬಾವಿಗೆ ನೂಕಿದನು. ಆಮೇಲೆ ದಿಕ್ಕುಗಳ ಕಡೆಗೆ ನೋಡುತ್ತಿದ್ದನು. ಆ ವೇಳೆಗೆ ಮರದ ಮೇಲಿದ್ದು ಹೂವನ್ನು ಕೊಯ್ಯುವ ವಸಂತಕನೆಂಬ ಮಾಲೆಗಾರನು ಅರಸನ ಮರಣವನ್ನು ಕಂಡು, ವಿಶ್ವಸೇನನಿಗೆ ಹೆದರಿ ಹಾರಿ ಓಡುವ ಭರದಲ್ಲಿ ಮರದ ಕೊಂಬೆ ಅಲುಗಾಡಿತು. ಅದನ್ನು ಕಂಡು ಬಹಳವಾಗಿ ಹೆದರಿದವನಾಗಿ ವಿಶ್ವಸೇನನು ಹೀಗೆಂದನು – ಯಾವ ಕಪಿಯಿಂದ ಅಥವಾ ಮನುಷ್ಯನಿಂದ ಈ ಮರದ ಕೊಂಬೆ ಅಲುಗಾಡಿತೋ ಅದು ಸಾವಿರ ವರ್ಷಗಳ ಕೊನೆಯವರೆಗಾದರೂ ನನ್ನ ಅಪರಾಧವನ್ನು ಹೇಳುತ್ತದೆ. ಎಂದೀ ರೀತಿಯಾಗಿ ಮನಸ್ಸಿನಲ್ಲಿ ದುಃಖವಶನಾಗಿ ತನ್ನ ಮನೆಗೆ ಹೋದನು. ಸೂರ್ಯೋದಯವಾದೊಡನೆ ಸಾಮಂತರು ಮಹಾಸಾಮಂತರುಗಳೊಂದಿಗೆ ಅರಮನೆಯ ರಾಜಸಭೆಗೆ ಹೋದನು. ರಾಜನನ್ನು ಎಲ್ಲಾ ಸಾಲುಗಳಲ್ಲಿಯೂ ಹುಡುಕಿ ಹುಡುಕಿ ಕಾಣದೆ, ಅತಿಶಯವಾಗಿ ಕೃತಕಶೋಕವನ್ನು ಪ್ರದರ್ಶಿಸಿದನು. ಕೆಲವು ದಿವಸ ಹಾಗೆಯೇ ಇದ್ದು ಆಮೇಲೆ ಪ್ರಶಸ್ತವೆನಿಸಿದ ದಿನ, ವಾರ, ನಕ್ಷತ್ರ ಮುಹೂರ್ತದಲ್ಲಿ ಮಹಾಪದ್ಮನಿಗೆ ರಾಜ್ಯಾಭಿಷೇಕಮಾಡಿ ರಾಜ್ಯಪಟ್ಟವನ್ನು ಕಟ್ಟಿ ಸುವ್ರತೆ ಎಂಬ ರಾಣಿಗೆ ಪಟ್ಟದ ರಾಣಿಯ ಸ್ಥಾನವನ್ನು ಕೊಟ್ಟು ವಿಶ್ವಸೇನನ ಸುಂದರಿ ಮಹಾದೇವಿಯೊಂದಿಗೆ *ಲ*ಲ*ಲ್ಭ ಸಂಬಂಧವಿಟ್ಟು ಬಾಳುತ್ತಿದ್ದನು. ಹೀಗೆ ಹಲವು ಕಾಲ ಕಳೆಯಿತು. ಒಂದು ದಿವಸ ಮಹಾಪದ್ಮನು ಈ ರೀತಿಯಾಗಿ ಯೋಚಿಸಿದನು – *ಇಷ್ಟೊಂದು ದೊಡ್ಡದಾದ ನಗರದಲ್ಲಿ ನನ್ನ ತಂದೆಯ ಮರಣದ ವಿಚಾರವನ್ನು ಯಾವನೊಬ್ಬನೂ ತಿಳಿಯದೆ ಇರಬಹುದೇ !

ಪೋಗಿ ನಟ್ಟನಡುವಿರುಳ್ ಮಣಿಖೇಟಕಮನುರದೊಳಮರ್ಚಿ ಕಿೞ್ತ ಬಾಳ್ವೆರಸು ಮನೆಮನೆಯ ಜನಂಗಳ ನುಡಿಯಂ ಕೇಳುತ್ತಮಂತೆ ಪೋಪನ್ನೆಗಂ ವಸಂತಕನೆಂಬ ಮಾಲೆಗಾಱನ ಮನೆಯನೆಯ್ದಿ ನುಡಿಯಂ ಕೇಳಲಿರ್ದನನ್ನೆಗಂ ಆತಂ ವನಮಾಳೆಯೆಂಬ ತನ್ನ ಪೆಂಡತಿಯ ವಿಯೋಗದಿಂ ಕಡುದುಃಖದಿಂದಂ ಪೇೞ್ದುದಂ ಸಾಭಿಪ್ರಾಯ ಸಂಬಂಧಮಪ್ಪ ವಚನಮಂ ಕೇಳ್ದನದೆಂತೆನೆ

ಶ್ಲೋಕ || ನೀಲೋತ್ಪಲದಳ ಶ್ಯಾಮೇ ಬಾಲೇ ನಿ ಲಸರೋರುಹೇ
ದಹ್ಯೇ – ಹಂ ತ್ವದ್ಗುಣೈರ್ಭದ್ರೇ ವಿಶ್ವಂ ಶಾಖೇನ ಕಂಪಿತಾ (?) ||

ಈ ವಾಕ್ಯಾರ್ಥಮಂ ಕೇಳ್ದರಸನರಮನೆಗೆ ವೋಗಿ ನೇಸರ್ಮೂಡೆ ಸಭಾಮಂಟಪದೊಳ್ ಸಿಂಹಾಸನಾಸೀನನಾಗಿ ಸಾಮಂತ ಮಹಾಸಾಮಂತರ್ಕಳಿಂ ಪರಿವೇಷ್ಟಿತನಾಗಿರ್ದ್ದು ಮಾಲೆಗಾಱಂಗೆ ಬೞಯಟ್ಟಿ ಬರಿಸಿ ಎಮ್ಮರಸನಂ ಕೊಂದವನಂ ನೀನಱವೆಯಂಜದೆ ಪೇೞಲ್ಲದಿರ್ದೊಡೆ ನಿನ್ನಂ ಕೊಲಿಸಿದಪ್ಪೆನೆಂದೊಡೆ ಭಯದಿಂ ಪಿಡಿಪೆತ್ತುಮಾತನಿಂತೆಂದು ಪೇೞ್ದಂ ದೇವಾ ಬಯ್ಗಿರುಳಿನ ಜಾವದಾಗಳ್ ವಿಶ್ವಸೇನನೆಂಬ ಮಂತ್ರಿಯರಸನನುದ್ಯಾನವನಕ್ಕೊಡಗೊಂಡು ಪೋಗಿ ಬಾವಿಯ ತಡಿಯೊಳಿರ್ದಿಱದು ಕೊಂದು ಬಾವಿಯೊಳ್ ನೂಂಕುವುದಂ ಮರನನೇಱ ಪೂಗೊಯ್ಯತಿರ್ದಾಂ ಕಂಡಿತ್ತಾನುಮೆನ್ನುಮಂ ಕೊಲ್ಗುಮೆಂದು ಭಯದಿಂ ಪಾಯ್ದೋಡಿ ಕೆಟ್ಟೆನಿದೆನ್ನ ಕಂಡ ವೃತ್ತಾಂತಮೆಂದಾಗಳಾತಂಗೆ ಮೆಚ್ಚಿ ಬಿಚ್ಚಳಿಸಿ ತನ್ನಂಗಚಿತ್ತಮುಮಂ ಕೆಲವು ಬಾೞುಮಂ ಕೊಟ್ಟಾತನಂ ಸಂತಸಂಬಡಿಸಿ ಮಂತ್ರಿಯ

ತಿಳಿದವನು ಯಾವನಿದ್ದಾನೆಂದು ವಿಚಾರಿಸುವೆನು' ಎಂದು ಅರಮನೆಯಿಂದ ಹೊರಟನು. ಮಧ್ಯರಾತ್ರಿಯಲ್ಲಿ ರತ್ನಖಚಿತವಾದ ಗುರಾಣಿಯನ್ನು ಎದೆಯಲ್ಲಿ ಸೇರಿಸಿಟ್ಟುಕೊಂಡು ಒರೆಯಿಂದ ಹೊರತೆಗೆದ ಖಡ್ಗದೊಂದಿಗೆ ಇದ್ದು, ಮನೆಮನೆಯ ಜನರ ಮಾತುಗಳನ್ನು ಕೇಳುತ್ತ ಹಾಗೆಯೇ ಹೋಗುವಾಗ ವಸಂತಕನೆಂಬ ಮಾಲೆಗಾರನ ಮನೆಯ ಕಡೆಗೆ ಹೋಗಿ ಮಾತುಗಳನ್ನು ಕೇಳುವುದರಲ್ಲಿದ್ದನು. ಅಷ್ಟರಲ್ಲಿ ವಸಂತಕನು ವನಮಾಲೆ ಎಂಬ ತನ್ನ ಹೆಂಡತಿಯ ಅಗಲಿಕೆಯಿಂದ (ಸಾವಿನಿಂದ) ಉಂಟಾದ ಬಹಳ ದುಃಖದಿಂದ ಹೇಳಿದಂತಹ ವಿಶೇಷಾರ್ಥದ ಸಂಬಂಧವುಳ್ಳ ಮಾತನ್ನು ಕೇಳಿದನು. ಅದು ಹೇಗೆಂದರೆ – ಕನ್ನೆಯ್ದಿಲೆಯ ಎಸಳಿನಂತೆ ಶ್ಯಾಮಲವಾಗಿರುವವಳೇ, ನೀಲಿಬಣ್ಣದ ತಾವರೆಯೇ, ಬಾಲೆಯೇ, ಮಂಗಳಾಂಗಿಯೇ, ನಿನ್ನ ಗುಣಗಳಿಂದಾಗಿ ನಾನು ಸಂತಾಪಗೊಳ್ಳುತ್ತಿದ್ದೇನೆ, ಪ್ರಪಂಚವು (ವಿಶ್ವಸೇನನು) ಮರದ ಕೊಂಬೆಯಿಂದ ನಡುಕಗೊಂಡಿದೆ (ನಡುಕಗೊಂಡನು). ಈ ವಾಕ್ಯಾರ್ಥವನ್ನು ಕೇಳಿ ಮಹಾಪದ್ಮನು ಅರಮನೆಗೆ ಹೋಗಿ ಸೂರ್ಯೊದಯವಾದೊಡನೆ ಸಭಾಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತು ಸಾಮಂತ ಮಹಾಸಾಮಂತರಿಂದ ಸುತ್ತುವರಿದವನಾಗಿದ್ದು ಮಾಲೆಗಾರನ ಬಳಿಗೆ ದೂತರನ್ನು ಕಳುಹಿಸಿ, ಅವನನ್ನು ಬರಿಸಿದನು. *ನಮ್ಮ ರಾಜನನ್ನು ಯಾರು ಕೊಂದರೆಂದು ನೀನು ತಿಳಿದಿರುವೆ, ಹೆದರದೆ ಹೇಳು. ಅಲ್ಲವಾದರೆ ನಿನ್ನನ್ನು ಕೊಲ್ಲಿಸುತ್ತೇನೆ – ಎಂದು ಹೇಳಿದನು. ಮಾಲೆಗಾರನು ಭಯಗ್ರಸ್ತನಾಗಿ ಈ ರೀತಿಯಾಗಿ ಮಾತನ್ನು ಹೇಳಿದನು – *ದೇವಾ, ಮುಂಜಾನೆಯ ಹೊತ್ತಿನಲ್ಲಿ ವಿಶ್ವಸೇನನೆಂಬ ಮಂತ್ರಿಯು ಅರಸನನ್ನು ಉದ್ಯಾನವನಕ್ಕೆ ಒಡಗೂಡಿಕೊಂಡು ಹೋಗಿ ಬಾವಿಯ ದಡದಲ್ಲಿದ್ದು ತಿವಿದು ಕೊಂದು ಬಾವಿಗೆ ನೂಕಿದ್ದಾನೆ. ಮರ ಹತ್ತಿ

ಪೊಲ್ಲಮೆಯನೆಲ್ಲರ್ಗಱಯೆ ಪೇೞತನ ಪುತ್ರ ಮಿತ್ರ ಕಳತ್ರ ಸ್ವಜನ ಬಾಂಧವ ಸಹಿತಂ ಕೊಲಿಸಲ್ಬಗೆದೊಡೆ ಸಾಮಂತಾದಿಗಳ್ ಬಾರಿಸಿದೊಡನಿಬರುಮಂ ನೆಲಮನೆಯೊಳಿಕ್ಕಿ ಮಲ್ಲಲ್ ಪುಗುವನಿತು ಬಾಗಿಲಂ ಮಾಡಿ ಪ್ರತಿದಿನಕ್ಕೊಂದು ಮಲ್ಲಲ ಕೂೞುಮನೊಂದು ಮೊಗಪೆ ನೀರುಮಂ ನೆಲಮನೆಯೊಳಗಣ್ಗೆ ನೀಡಿದೊಡನಿಬರುಂ ಪಚ್ಚುಗೊಂಡುಣ್ಭರಿಂತು ಪಲದಿವಸಂಗಳ್ ಸಲೆ ಮತ್ತೊಂದು ದಿವಸಂ ಕಾಪಿ ತನ್ನವರನಿಂತೆಂದಂ ನಾಮಿನಿಬರುಂ ಸಾವರುಮಲ್ಲ ಬಾೞ್ವರುಮಲ್ಲೆಮ್ಮೊಳಾವನೊರ್ವಂ ನಮ್ಮ ಪಗೆಯನಿಱಯಲುಂ ನಂದನ ವಂಶಮಂ ನಿರ್ಮೂಲಂ ಮಾಡಿ ಕಿಡಿಸಲುಮಾರ್ಕುಮಾತನೀ ಮಲ್ಲಲ ಕೂೞನುಣ್ಗೆಂದೊಡೆ ಕಾಪಿಯ ಮಗಂ ಸುಬಂಧುವೆಂಬೊನಾತನಿಂತೆಂದಂ ನಮ್ಮ ಪಗೆಯ ನಿಱಯಲುಂ ನಂದನ ವಂಶಮಂ ನಿರ್ಮೂಳಿಸಲಾನಾರ್ಪೆನೆಂದು ಪೂಣ್ದೊಡಾತನನುಣಲ್ವೇ ಉೞದವರೆಲ್ಲಮುಣ್ಣಪಟ್ಟು ಸತ್ತರ್ ಸುಬಂಧುವೊರ್ವನುಂಡು ಬರ್ದೊನ್ ಇಂತು ಮೂಱುವರ್ಷಂ ಪೋದಿಂ ಬೞಕ್ಕೆ ಮತ್ತಿತ್ತ ಪ್ರತ್ಯಂತವಾಸಿಗಳಪ್ಪರಸುಗಳ್ ಮಸಗಿದೊಡೆ ಮಂತ್ರಿಯ ಗುಣಮಂ ನೆನೆದು ಬೆಸಗೊಂಡಂ ಮಲ್ಲಲ

ಹೂಗೊಯ್ಯುತ್ತಿದ್ದ ನಾನು ಅದನ್ನು ಕಂಡು ಎಲ್ಲಿಯಾದರೂ ನನ್ನನ್ನೂ ಕೊಲ್ಲುವನು ಎಂದು ಹೆದರಿಕೆಯಿಂದ ಹಾರಿ ಓಡಿ ತಪ್ಪಿಸಿಕೊಂಡೆನು. ಇದು ನಾನು ಕಂಡ ಸಂಗತಿ* ಎಂದು ಹೇಳಿದನು. ಹಾಗೆ ಹೇಳಿದ ಮಾಲೆಗಾರನಿಗೆ ರಾಜನು ಮೆಚ್ಚಿ, ವಿಶೇಷವಾಗಿ ಹೊಗಳಿ, ಸ್ವತಃ ಧರಿಸಿದ ಆಭರಣ ವಸ್ತ್ರಾದಿಗಳನ್ನೂ ಕೆಲವು ಕ್ಷೇತ್ರ (ಜಮೀನು)ಗಳನ್ನೂ ಕೊಟ್ಟು ಅವನನ್ನು ಸಂತೋಷಗೊಳಿಸಿದನು. ಮಂತ್ರಿಯ ದುಷ್ಟಕೃತ್ಯವನ್ನು ಎಲ್ಲರೂ ತಿಲಿಯುವಂತೆ ಹೇಳಿ ಅವನ ಮಕ್ಕಳು, ಗೆಳೆಯರು, ಹೆಂಡಿರು, ಸ್ವಜನರು, ಬಂಧುಗಳು ಸಮೇತವಾಗಿ ಅವನನ್ನು ಕೊಲ್ಲಬೇಕೆಂದು ಯೋಚಿಸಿದನು. ಆಗ ಸಾಮಂತಾದಿಗಳು ತಡೆಯಲು, ಅವರನ್ನೆಲ್ಲ ನೆಲಮನೆಯಲ್ಲಿರಿಸಿದನು. ಒಂದು ಮಣ್ಣಿನ ಮುಚ್ಚಳ (ಶ್ರಾವೆ) ಹೋಗುವಷ್ಟು ದೊಡ್ಡ ಬಾಗಿಲನ್ನು ಮಾಡಿ, ಪ್ರತಿದಿನಕ್ಕೆ ಒಂದು ಶ್ರಾವೆ ತುಂಬ ಅನ್ನವನ್ನೂ ಒಂದು ಮೊಗೆ (ಮಣ್ಣಿನ ಕುಡಿಕೆ) ನೀರನ್ನೂ ಆ ನೆಲಮನೆಯೊಳಕ್ಕೆ ಕೊಡುವಂತೆ ಮಾಡಿದನು. ಹಾಗೆ ಕೊಟ್ಟದ್ದನ್ನು ಅವರು ಅಷ್ಡು ಮಂದಿ ಪಾಲುಮಾಡಿದೊಂಡು ಉಣ್ಣುತ್ತಿದ್ದರು. ಹೀಗೆಯೇ ಹಲವು ದಿವಸಗಳು ಕಳೆದವು. ಆಮೇಲೆ ಒಂದು ದಿವಸ ಕಾಪಿ ತನ್ನವರೊಡನೆ ಹೀಗೆಂದನು – *ನಾವು ಇಷ್ಟೊಂದು ಮಂದಿಯೂ ಸಾಯುವವರೂ ಅಲ್ಲ ಬದುಕುವವರೂ ಅಲ್ಲ. ನಮ್ಮಲ್ಲಿ ಯಾವನೊಬ್ಬನು ನಮ್ಮ ವಿರೋಯನ್ನು ಘಾತಿಸಲೂ ನಂದನ ವಂಶವನ್ನು ನಿರ್ಮೂಲ ಮಾಡಿ ನಾಶಗೊಳಿಸಲೂ ಸಮರ್ಥನಾಗುವನೋ ಅವನು ಈ ಶ್ರಾವೆ (ಮುಚ್ಚಳ) ಅನ್ನವನ್ನು ಉಣ್ಣಲಿ.* ಈ ಮಾತಿಗೆ ಕಾಪಿಯ ಮಗನಾದ ಸುಬಂಧುವೆಂಬಾತನು, *ನಮ್ಮ ಶತ್ರುವನ್ನು ಘಾತಿಸಲೂ ನಂದನ ವಂಶವನ್ನು ನಿರ್ಮೂಲನ ಮಾಡಲೂ ನಾನು ಸಮರ್ಥನಾಗುವೆನು* ಎಂದು ಶಪಥ ಮಾಡಿದನು. ಕಾಪಿಯು ಅವನನ್ನು ಉಣ್ಣಲು ಹೇಳಿದನು. ಉಳಿದವರೆಲ್ಲ ಉಣ್ಣದೆ ಮಲಗಿ ಸತ್ತರು. ಸುಬಂಧುವೊಬ್ಬನು ಮಾತ್ರ ಊಟಮಾಡಿ ಬದುಕಿದನು. ಹೀಗೆ ಮೂರುವರ್ಷಗಳು ಕಳೆದವು. ಆಮೇಲೆ ಇತ್ತ ರಾಜ್ಯದ ಎಲ್ಲೆಗಳಲ್ಲಿ ವಾಸಮಾಡುವ ರಾಜರು ಕೆರಳಿ ಮೇಲೆ ಬಿದ್ದರು. ಆಗ ರಾಜನು ಮಂತ್ರಿಯ ಶೌರ್ಯಗುಣವನ್ನು ನೆನೆದು,

ಕೂೞನಾರಾನುಮಿನ್ನುಮುಣ್ಬರೊಳರೆ ಎಂದು ಬೆಸಗೊಂಡೊಡೊಳರೆಂದು ಪೇೞ್ದೊಡೆ ಸುಬಂಧುವಂ ನೆಲಮನೆಯಿಂ ತೆಗೆಯಿಸಿ ಸನ್ಮಾನದಾನಂಗಳಿಂದಾತನಂ ಸತ್ಯರಿಸಿ ಕ್ಷಮೆಗೊಳಿಸಿ ಮಂತ್ರಿಪದಮಂ ಕೊಟ್ಟನಾತನಂ ಪರಚಕ್ರಮಂ ಮಸಗಲೀಯದೆ ತನ್ನ ಬುದ್ಧಿಕ್ರಮದಿಂ ಪೂರ್ಮಕ್ರಮದೊಳ್ ನಿಱಸಿದೊಡರಸನಾತಂಗಾದಮಾನುಮೊಸೆದು ತಂದೆಯ ಬಾೞಂದಗ್ಗಳ ಬಾೞಮೆಯಂ ಮಾಡಿದಂ ಮತ್ತೆರಡನೆಯ ಮಂತ್ರಿ ಶಕಟಾಳನೆಂಬೊನಾತನ ಮಗಳ್ ನಂದವತಿಯೆಂಬೊಳಾಕೆಯಂ ಸುಬಂಧು ಮದುವೆನಿಂದು ಪ್ರಧಾನಮಂತ್ರಿಯಾಗಿ ಇಷ್ಬವಿಷಯ ಕಾಮಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತಿತ್ತ ಮಗಧೆಯೆಂಬ ನಾಡೊಳ್ ಶಾಲ್ಮಲಿಯಿಂಬಗ್ರಹಾರದೊಳ್ ಸೋಮಶರ್ಮನೆಂಬ ಪಾರ್ವಂಗಂ ಕಪಿಳೆಯೆಂಬ ಪಾರ್ವಂತಿಗಂ ಮಗಂ ನಾಲ್ಕುದಾಡೆವೆರಸು ಪುಟ್ಟಿದೊಡಾತಂಗೆ ತಾಯುಂ ತಂದೆಯುಂ ಚಾಣಾಕ್ಯನೆಂಬ ಪೆಸರನಿಟ್ಟರ್ ಮತ್ತೆ ದಾಡೆವೆರಸು ಪುಟ್ಟಿದನೆಂಬುದಂ ನೈಮಿತ್ತಿಕಂ ಶ್ರಾವಕಂ ವಸಂತಕನೆಂಬೊಂ ಕೇಳ್ದಿಂತೆಂದಾದೇಶಂಗೆಯ್ದಂ

ಶ್ಲೋಕ ||  ಚಾಣಾಕ್ಯಶ್ಚತುರ್ದಂಷ್ಟ್ರೋ ಹ್ಯೇಷೋ ನಂದಾನ್ವಯಕ್ಷಯಃ
ರಾಜೋ ವಾ ರಾಜಮರ್ತ್ಯೋ ವಾ ಭವಿಷ್ಯತಿ  ಸಂಶಯಃ ||

ಎಂದಾದೇಶಂಗೆಯ್ದುದಂ ಚಾಣಕ್ಯನ ತಂದೆ ಕೇಳ್ದು ಕೈಸಾಣೆಗಳಿಂದಂ ನಾಲ್ಕುಂ ದಾಡೆಗಳನುರ್ದಿಸಿ ಕಳೆದು ಮಟ್ಟಂ ಮಾಡಿದೊಂ ಮತ್ತಂ ಚಾಣಾಕ್ಯನುಂ ಬಳೆದು ನಾಲ್ಕುವೇದಮುಮಾಱಂಗಮುಂ

`ಶ್ರಾವೆಯಲ್ಲಿ ಕೊಡುತ್ತಿದ್ದ ಅನ್ನವನ್ನು ಉಣ್ಣುತ್ತ ಬದುಕಿರುವವರು ಯಾರಾದರೂ ಇನ್ನೂ ಇರುವರೆ? – ಎಂದು ಕೇಳಿದನು. ’ಇರುವರು’ ಎಂದು ಹೇಳಲು, ಸುಬಂಧುವನ್ನು ನೆಲಮನೆಯಿಂದ ತೆಗೆಯಿಸಿ ಸನ್ಮಾನ ದಾನಗಳಿಂದ ಅವನನ್ನು ಸತ್ಕರಿಸಿ ಕ್ಷಮೆಗೊಳಿಸಿ, ಅವನಿಗೆ ಮಂತ್ರಿಪದವಿಯನ್ನು ಕೊಟ್ಟನು. ಸುಬಂಧು ಶತ್ರುರಾಜ್ಯಗಳು ಉದ್ರಿಕ್ತವಾಗಲು ಬಿಡದೆ, ತನ್ನ ಬುದ್ಧಿಪ್ರಯೋಗದಿಂದ ಅವನ್ನು ಹಿಂದಿನ ರೀತಿಯಲ್ಲಿಯೇ ನಿಲ್ಲಿಸಿದನು. ಅರಸನು ಅವನ ಮೇಲೆ ಬಹಳವಾಗಿ ಪ್ರೀತಿಸಿ, ಅವನ ತಂದೆಯ ವೃತ್ತಿಗಿಂತ ಅತಿಶಯವಾದ ವೃತ್ತಿಯನ್ನು ಅವನಿಗೆ ಮಾಡಿಕೊಟ್ಟನು. ಅನಂತರ, ಎರಡನೆಯ ಮಂತ್ರಿಯಾದ ಶಕಟಾಳನೆಂಬವನ ಮಗಳಾದ ನಂದವತಿ ಎಂಬವಳನ್ನು ಸುಬಂಧು ಮದುವೆಯಾಗಿ ಪ್ರಧಾನಮಂತ್ರಿಯಾಗಿ ಇಷ್ಟವಾದ ಕಾಮಸುಖಗಳನ್ನು ಅನುಭವಿಸುತ್ತ ಇರಲು ಹಲವುಕಾಲ ಕಳೆಯಿತು. ಅನಂತರ, ಇತ್ತ ಮಗಧೆ ಎಂಬ ನಾಡಿನಲ್ಲಿ ಶಾಲ್ಮಲಿ ಎಂಬ ಅಗ್ರಹಾರದಲ್ಲಿ ಸೋಮಶರ್ಮನೆಂಬ ಬ್ರಾಹ್ಮಣನಿಗೂ ಕಪಿಳೆ ಎಂಬ ಬ್ರಾಹ್ಮಣಿತಿಗೂ ನಾಲ್ಕು ದಾಡೆ ಹಲ್ಲುಗಲೊಂದಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ ತಾಯಿತಂದೆಗಳು ಚಾಣಾಕ್ಯನೆಂದು ಹೆಸರಿಟ್ಟರು. ದಾಡೆಗಳೊಂದಿಗೆ ಮಗನು ಹುಟ್ಟಿದನೆಂಬುದನ್ನು ಜ್ಯೋತಿಷ್ಯನಾದ ಶ್ರಾವಕನಾದ ವಸಂತಕನೆಂಬವನು ಕೇಳಿ ಈ ರೀತಿಯಾಗಿ ಭವಿಷ್ಯ ಹೇಳಿದನು – (ನಾಲ್ಕು ದಾಡಿಹಲ್ಲುಗಳುಳ್ಳ ಆ ಚಾಣಾಕ್ಯನಾದ ಇವನು ನಂದವಂಶಕ್ಕೆ ನಾಶಕಾರಿಯಾದವನು, ಅಲ್ಲವೆ ? ಇವನು ರಾಜನಾಗಲಿ, ರಾಜನನ್ನು ಕೊಲ್ಲುವವನಾಗಲಿ (ಅಥವಾ ಮಂತ್ರಿಯಾಗಲಿ) ಆಗುತ್ತಾನೆ, ಸಂದೇಹವಿಲ್ಲ. ಹೀಗೆ ಭವಿಷ್ಯ ಹೇಳಿದುದನ್ನು ಚಾಣಾಕ್ಯನ ತಂದೆ ಸೋಮಶರ್ಮನು ಕೇಳಿ ಕೈಸಾಣೆಗಳಿಂದ ನಾಲ್ಕು ದಾಡೆಗಳನ್ನೂ ಉಜ್ಜಿಸಿ ತೆಗೆದು

ಪದಿನೆಂಟು ಧರ್ಮಶಾಸ್ತ್ರಂಗಳುಂ ಮೀಮಾಂಸಾ ವ್ಯಾಕರಣಂ ಪ್ರಮಾಣಂ ಛಂದಮಲಂಕಾರಂ ನಿಘಂಟು ಕಾವ್ಯನಾಟಕಂ ಶಾಲಿಹೋತ್ರಂ ವೈದ್ಯ ಸಾಮುದ್ರಿಕಂ ನೀತಿಶಾಸ್ತ್ರರಂ ಮೊದಲಾಗೊಡೆಯ ಶಾಸ್ತ್ರಂಗಳೆಲ್ಲಮಂ ಕಲ್ತು ಋಷಿಯರ ಪಕ್ಕದ ಧರ್ಮಮಂ ಕೇಳ್ದು ಶ್ರಾವಕ ವ್ರತಂಗಳಂ ಕೈಕೊಂಡು ಸವ್ಮ್ಯಗ್ದೃಷ್ಟಿಯಾಗಿ ಪಲಕಾಲಂ ಸಲೆ ಮತ್ತೆ ಪಾಟಳೀಪುತ್ರಪುರಕ್ಕೆ ಪೋದೊಡಾತನ ಪಾಂಡಿತ್ಯಮುಂ ಸಮ್ಯಗ್ದೃಷ್ಟಯಪ್ಪುದುಮಂ ಭವ್ಯಾಕಾರಮುಮಂ ಶಕಟಾಳಂ ಕಂಡು ತನ್ನು ಕಿಱಯ ಮಗಳಂ ಯಶೋಮತಿಯೆಂಬೊಳಂ ಕೊಟ್ಟನಾತನುಮಾಕೆಯಂ ಮದುವೆ ನಿಂದು ಸುಖದಿಂ ಕಾಲಂ ಸಲೆ ಮತ್ತೊಂದು ದಿವಸಂ ಶೋಣೆಯೆಂಬ ತೊಱೆಯ ತಡಿಯೊಳ್ ತನ್ನ ಕಾಲಂ ದರ್ಭಾಂಕುರಂ ನೆತ್ತರ್ವರೆ ಕೊಂಡೊಡೆ ಮುಳಿದದನಗುೞ್ದು ಸುಡುವೊನಂ ಸುಬಂಧು ಕಂಡು ತತ್ಸಂಬಂಧಮೆಲ್ಲಮಂ ಬೆಸಗೊಂಡೊಡೆ ಸ್ವವೈರಿ ವಿಧ್ವಂಸನಂ ಗೆಯ್ದಪ್ಪೆನೆಂದಱಯೆ ಪೇೞ್ದೊಡೆ ಸುಬಂಧು ಮುನ್ನಾದೇಶಮಂ ಕೇಳ್ದನಪ್ಪುದಱಂದಿಂತೆಂದಂ

ಶ್ಲೋಕ ||  ಚಾಣಾಕ್ಯಶ್ಚತುರ್ದಂಷ್ಟೋಹ್ಯೇಷೋ ನಂದಾನ್ವಯಕ್ಷಯಃ
ರಾಜೋ ವಾ ರಾಜಮರ್ತ್ಯೋ ವಾ ಭವಿಷ್ಯತಿ  ಸಂಶಯಃ ||

ಎಂಬ ಶ್ಲೋಕಾರ್ಥಮಂ ಮನದೊಳ್ ಬಗೆದು ಸಖಾಯನಂ ಪೆತ್ತೆನೆಂದೊಸೆದುಮಾತನ ಬುದ್ಧಿಯಂ ಪರೀಕ್ಷಿಸಲ್ವೇಡಿ ಭಟ್ಟಿಮಂಡಪದೊಳೀ ಶ್ಲೋಕಮಂ ಬರೆದು ಪೋದಂ

ಮಟ್ಟಮಾಡಿದನು. ಆಮೇಲೆ ಚಾಣಾಕ್ಯನು ದೊಡ್ಡವನಾಗಿ ನಾಲ್ಕು ವೇದಗಳು, ಆರು ವೇದಾಂಗಗಳು, ಹದಿನೆಂಟು ಧರ್ಮಶಾಸ್ತ್ರಗಳು, ಮೀಮಾಂಸೆ, ವ್ಯಾಕರಣ, ಪ್ರಮಾಣಶಾಸ್ತ್ರ, ಛಂದಸ್ಸು, ಅಲಂಕಾರ, ನಿಘಂಟು, ಕಾವ್ಯ, ನಾಟಕ, ಶಾಲಿಹೋತ್ರ, ವೈದ್ಯ, ಸಾಮುದ್ರಿಕ, ನೀತಿಶಾಸ್ತ್ರ – ಮೊದಲಾಗುಳ್ಳ ಶಾಸ್ತ್ರಗಳೆಲ್ಲವನ್ನೂ ಕಲಿತು ಋಷಿಗಳ ಬಳಿಯಲ್ಲಿ ಧರ್ಮವನ್ನು ಕೇಳಿ ಶ್ರಾವಕವ್ರತಗಳನ್ನು ಸ್ವೀಕರಿಸಿ ಸರಿಯಾದ ವಿಚಾರದೃಷ್ಟಿಯುಳ್ಳವನಾದನು. ಹೀಗೆ ಹಲವು ಕಾಲ ಕಳೆಯಿತು. ಆಮೇಲೆ ಅವನು ಪಾಟಲೀಪುತ್ರ ಪಟ್ಟಣಕ್ಕೆ ಹೋದನು. ಅವನ ಪಾಂಡಿತ್ಯವನ್ನೂ ಸರಿಯಾದ ವಿಚಾರದೃಷ್ಟಿಯುಳ್ಳವನಾದುದನ್ನೂ ಉದಾತ್ತವಾದ ರೂಪವನ್ನೂ ಶಕಟಾಳನು ಕಂಡು ತನ್ನ ಚಿಕ್ಕ ಮಗಳಾದ ಯಶೋಮತಿ ಎಂಬವಳನ್ನು ಅವನಿಗೆ ಕೊಟ್ಟನು. ಚಾಣಾಕ್ಯನು ಆಕೆಯನ್ನು ಮದುವೆಯಾಗಿ, ಸುಖದಿಂದ ಕಾಲ ಕಳೆಯುತ್ತಿದ್ದನು. ಅನಂತರ, ಒಂದು ದಿವಸ ಶೋಣೆಯೆಂಬ ನದಿಯ ತೀರದಲ್ಲಿ ಚಾಣಾಕ್ಯನ ಕಾಲನ್ನು ಒಂದು ಎಳೆಯ ದರ್ಭೆ ಚುಚ್ಚಿ ರಕ್ತ ಸುರಿಯಿತು. ಆಗ ಅವನು ಕೋಪಗೊಂಡು ಅದನ್ನು ಕಿತ್ತು ಸುಟ್ಟು ಹಾಕಿದನು. ಇದನ್ನು ಸುಬಂಧು ಕಂಡು ಅದರ ಸಂಬಂಧವನ್ನಲ್ಲ ಕೇಳಿದಾಗ, ಚಾಣಾಕ್ಯನು ತನ್ನ ವ್ಶೆರಿಯನ್ನು ನಾಶಮಾಡುತ್ತೇನೆ – ಎಂದು ತಿಳಿಯುವ ಹಾಗೆ ಹೇಳಲು ಸುಬಂಧು ಹಿಂದೆ ಭವಿಷ್ಯವನ್ನು ಕೇಳಿದ್ದನಾದುದರಿಂದ ಹೀಗೆಂದನು – (ನಾಲ್ಕು ದಾಡೆಹಲ್ಲುಳ್ಳವನೂ ನಂದವಂಶನಾಶಕನೂ ಆದ ಆ ಚಾಣಾಕ್ಯನು ಇವನು. ರಾಜ ಅಥವಾ ಮಂತ್ರಿಯಾಗುವನು, ಸಂದೇಹವಿಲ್ಲ. ಈ ಶ್ಲೋಕದ ಅರ್ಥವನ್ನು ಮನಸ್ಸಿನಲ್ಲಿ ಭಾವಿಸಿ, ’ಸ್ನೇಹಿತನನ್ನು ಪಡೆದೆನು’ ಎಂದು ಸಂತೋಷಪಟ್ಟನು. ಅವನ ಬುದ್ಧಿಶಕ್ತಿಯನ್ನು ಪರೀಕ್ಷಿಸಬೇಕೆಂದು ರಾಜನ ಸಭಾಮಂದಿರದಲ್ಲಿ ಈ ಕೆಳಗಿನ ಒಂದು ಶ್ಲೋಕವನ್ನು ಬರೆದು ಹೋದನು. ರಾಜನೀತಿಶಾಸ್ತ್ರದಲ್ಲಿ ಪಾರಂಗತರಾದವರಿಂದ, ಸಾವಿರಾರು ಶಕ್ತಿಗಳಿಂದ,

ಶ್ಲೋಕ || ಶಕ್ಯಾ ಶಕ್ತಿಸಹಸ್ರೇಣ ನೀತಿಶಾಸ್ತ್ರ ವಿಶಾರದೈ:
ವ್ಯವಸಾಯ ದ್ವಿತೀಯೇನ ಕೃತ್ಸ್ನಾ ಜೇತುಂ ವಸುಂಧರಾ ||

ಈ ಬರೆದ ಶ್ಲೋಕಮಂ ಚಾಣಾಕ್ಯನೊಂದು ದಿವಸಂ ಕಂಡಿದು ನೀತಿಶಾಸ್ತ್ರದ ಬಲ್ಮೆಯಲ್ತೆಂದದಂ ಸೀಂಟಿ ತಾನಿಂತೆಂದು ಬರೆದಂ

ಶ್ಲೋಕ || ಶಕ್ಯಾಹ್ಯೇಕಶರೀರೇಣ ನೀತಿಶಾಸ್ತ್ರ ವಿಶಾರದೈಃ
ವ್ಯವಸಾಯ ದ್ವಿತೀಯೇನ ಕೃತ್ಸಾ ಜೇತುಂ ವಸುಂಧರಾ * ||

ಅದಂ ಸುಬಂಧು ಕಂಡು ಇದನಾರ್ವರೆದರೆಂದು ಬೆಸಗೊಂಡೊಡೆ ಚಾಣಕ್ಯಂ ಬರೆದನೆಂದು ಪೇೞ್ದೊಡೆಯದಂ ಕೇಳ್ದಿದರ್ಕನುಸಾರಿಯಪ್ಪ ಬುದ್ಧಿಯುಂಟೆಂದು ಮನದೊಳ್ ಬಗೆದೊಂದು ದಿವಸಂ ತನ್ನ ಮಗಳಾ ಚೋಳಂಗಿಯೊಳ್ ಸ್ವಜನ ಬಾಂಧವಜನ ಪರಿಜನರ್ಕಳೆಲ್ಲರುಮಂ ಬರಿಸಿ ದಿವ್ಯಾಹಾರಂಗಳನೂಡಿ ವಸ್ತ್ರಾದ್ಯಾಭರಣಂಗಳಿಂ ಪೂಜಿಸಿ ಚಾಣಾಕ್ಯಂಗಂ ಯಶೋಮತಿಗಂದಿರ್ವರ್ಗಂ ನಿಶ್ರಾವಮಂ ತನ್ನ ಭಾರ್ಯೆಯಪ್ಪ ನಂದವತಿಯ ಕೆಯ್ಯೊಳಟ್ಟದೊಡೆ ಆಕೆಯುಂ ಕೊಂಡು ಪೋಗಿ ನಿಮಗಿರ್ವಗ್ಗಂ ನಿಶ್ರಾವಮೆಂದು ಪೇೞ್ದು’ಯಶೋಮತಿಗೆ ಕೊಟ್ಟು ಪೋದೊಡೆ ಚಾಣಾಕ್ಯಂ

ಉದ್ಯಮವನ್ನು ಎರಡನೆಯದಾಗಿ ಉಳ್ಳವರಿಂದ, ಪೂರ್ಣವಾಗಿ ಭೂಮಿಯನ್ನು ಗೆಲ್ಲಲು ಸಾಧ್ಯ. ಈ ಬರೆದ ಶ್ಲೋಕವನ್ನು ಚಾಣಾಕ್ಯನು ಒಂದು ದಿವಸ ಕಂಡನು. ಇದು ರಾಜನೀತಿಶಾಸ್ತ್ರದ ಪ್ರೌಢಿಮೆಯೇನೂ ಅಲ್ಲ – ಎಂದು ಅವನು ಅದನ್ನು ಒರಸಿ, ಈ ರೀತಿಯಾಗಿ ಬರೆದನು – ರಾಜನೀತಿ ಪಾರಂಗತನಾದವನಿಂದ ಒಬ್ಬ ವ್ಯಕ್ತಿಯಿಂದ, ಉದ್ಯಮವನ್ನು ಎರಡನೆಯದಾಗಿ ಉಳ್ಳವನಿಂದ ಪೂರ್ಣವಾಗಿ ಭೂಮಿಯನ್ನು ಗೆಲ್ಲಲು ಸಾಧ್ಯ. ಅದನ್ನು ಸುಬಂಧು ಕಂಡು ಇದನ್ನು ಯಾರು ಬರೆದರು? – ಎಂದು ಕೇಳಿದನು. ’ಚಾಣಾಕ್ಯನು ಬರೆದನು’ ಎಂದು ಹೇಳಿದರು. ಅದನ್ನು ಕೇಳಿ – ಹೀಗೆ ಬರೆಯಬೇಕಾದರೆ ಇದಕ್ಕೆ ಅನುಗುಣವಾದ ಬುದ್ಧಿಯೂ ಆತನಿಗೆ ಇರಬೇಕು – ಎಂದು ಸುಬಂಧು ಭಾವಿಸಿದನು. ಒಂದು ದಿವಸ ತನ್ನ ಮಗಳ ರವಿಕೆ ಶಾಸ್ತ್ರದ ಸಮಾರಂಭದಲ್ಲಿ ಸುಬಂಧು ತನ್ನ ಜನ್ನರನ್ನೂ ಬಂಧುಗಳನ್ನೂ ಪರಿಜನರನ್ನೂ ಬರಮಾಡಿ, ಅವರಿಗೆಲ್ಲ ಶ್ರೇಷ್ಠವಾದ ಭೋಜನವನ್ನು ಕೊಟ್ಟು ವಸ್ತ್ರ ಆದಿಯಾಗಿ ಆಭರಣಗಳಿಂದ ಅವರನ್ನು ಪೂಜಿಸಿ (ಸತ್ಕರಿಸಿ)ದನು. ಚಾಣಾಕ್ಯನಿಗೆ ಯಶೋiತಿಗೆ ಎಂದಿಬ್ಬರಿಗೂ ಅನ್ನದ ಗಂಜಿಯ ಕೆನೆಯನ್ನು ತನ್ನ ಮಡದಿಯಾದ ನಂದವತಿಯ ಕೈಯಲ್ಲಿ ಕಳುಹಿಸಿದನು. ಆಕೆ ತೆಗೆದುಕೊಂಡು ಹೋಗಿ *ನಿಮಗಿಬ್ಬರಿಗೂ ಗಂಜಿಯ ಕೆನೆಯಿದೆ* ಎಂದು ಹೇಳಿ, ಅದನ್ನು ಯಶೋಮತಿಗೆ ಕೊಟ್ಟು ಹೋದಳು. ಆಗ ಚಾಣಾಕ್ಯನು ತನ್ನ ಮನಸ್ಸಿನಲ್ಲಿ ಹೀಗೆ ಭಾವಿಸಿದನು – *ಲೋಕದಲ್ಲಿ ಬಡತನ ಹೊರತಾಗಿ ದುಃಖಕರವಾದುದು ಯಾವುದೊಂದೂ ಇಲ್ಲ. ಬಡತನವೇ

ಇಂಥದೇ ಶ್ಲೋಕವು ಹರಿಷೇಣನ ಬೃಹತ್ಕಥಾಕೋಶದಲ್ಲಿಯೂ ಇದೆ (೧೪೨ – ೩೭)

ನರೇಣೇಕಶರೀರೇಣ ನಯಶಾಸ್ತ್ರಯುತೇನ 
ವ್ಯವಸಾಯೇನ ಯುಕ್ತೇನ ಜೇತಂ ಶಕ್ಯಾವಸುಂಧರಾ ||

ಮನದೊಳಿಂತೆಂದು ಬಗೆದಂ ಲೋಕದೊಳ್ ದಾರಿದ್ರ ದಿಂ ಬಿಟ್ಟು ಕಷ್ಟತಿಕೆಯೊಂದುಮಿಲ್ಲ ಅದುವೆ ಲೋಕದೊಳ್ ಮಹಾಪಾತಕಮೆಂತುಮಿಂತೆಂಬುದಲ್ತೆ

ವೃತ್ತ || ಸಂಗಂ ನೈವ ಹಿ ಕಶ್ಚಿದೇವ ಕುರುತೇ ನಾ ಭಾಷತೇ ಬಾಂಧವಾತ್
ಸಂಪ್ರಾಪ್ತೇ ಗೃಹಮುತ್ಸವೇ – ಪಿ ಗೃಹಿಭಿಃ ಸಾಮಾನ್ಯಮಾಲೋಕ್ಯತೇ
ದೂರಾದೇವ ಮಹಾಜನಃ ಪರಿಹರತ್ಯಲ್ಪಚ್ಛದಂ ಲಜ್ಜಯಾ
ಮನ್ಯೇ ನಿರ್ಧನತಾ ಪ್ರಕಾಶಮಪರಂ ಕಷ್ಟಂ ಮಹಾಪಾತಕಂ ||

ಅದಱಂ ದ್ರವ್ಯಾರ್ಜನೆಗೆಯ್ವೆನೆಂಬಭಿಪ್ರಾಯದಿಂದಿರ್ಪಾತನಂ ಸುಬಂಧು ಕೇಳ್ವಱದೊಂದು ದಿವಸಂ ಚಾಣಾಕ್ಯನಂ ಕಂಡಿಂತೆಂದಂ ನಿಮಗೆ ದಾರಿದ್ರ್ಯಮೋಕ್ಷಮಕ್ಕುಂ ಷಪ್ಟಿಗ್ರಾಮ ಸಮನ್ವಿತಮಪ್ಪ ಅಗ್ರಾಸನಮನರಸನಂ ಬೇಡಿಕೊಂಡೊಡೆ ಸುಖದಿಂ ಬಾೞರೆನೆ ಆತನುಮಂತೆಗೆಯ್ವೆನೆಂದರಸನಂ ಕಂಡುಪಶ್ಲೋಕಿಸಿಯಗ್ರಾಸನಮಂ ಬೇಡಿಕೊಂಡೊಡರಸನುಂ ಮೆಚ್ಚಿ ಕೊಟ್ಟನಿಂತಗ್ರಾಸನಮನುಣುತ್ತ ಮಱುವತ್ತು ಬಾಡಮನಾಳುತ್ತಂ ಸುಖಸಂಕಥಾವಿನೋದದಿಂ ಕಾಲಂ ಸಲೆ ಮತ್ತೊಂದು ದಿವಸಂ ಸುಬಂಧು ಮಹಾಪದ್ಮನಂ ಕಿಡಿಸುವ ಬಗೆಯಿಂದಂ ನಂದನ ಕ್ರಮಾಗತರಪ್ಪ ಬ್ರಾಹ್ಮಣರ್ಕಳನಿಂತೆಂದಂ ನಿಮ್ಮೀ ಪದಮೆಂಬುದು ನಂದಮಹಾರಾಜಂ ವಿಜಯಂ ನಂದನಂ ಸುನಂದನಂ ನಂದಿವರ್ಧನಂ ನಂದಂ ಶ್ರೀನಂದನಂ ಪದ್ಮಂ ಮಹಾಪದ್ಮನೆಂದಿಂತು ಒಂಬತ್ತು ತಲೆವರೆಗಂ ಕ್ರಮಾಗತಂ ನಿಮಗೆ

ಲೋಕದಲ್ಲಿ ಮಹಾಪಾಪವು. ಹೇಗಿದ್ದರೂ ನೀತಿ ಹೀಗೆನ್ನುವುದಲ್ಲವೆ ? – ಬಡವನ ಸ್ನೇಹವನ್ನು ಯಾರೂ ಮಾಡುವುದಿಲ್ಲ. ವಿಶೇಷ ಸಮಾರಂಭದಲ್ಲಿ ಇತರರ ಮನೆಗೆ ಹೋದಾಗ ಆ ಮನೆಯವರು ಸಾಮಾನ್ಯನನ್ನಾಗಿ ನೋಡುತ್ತಾರೆ. ಅಲ್ಪವಾದ ಉಡುಪುಳ್ಳವನಾದ ಬಡವನನ್ನು ಕಂಡ ಮಹಾಜನರು ನಾಚಿಕೆಯಿಂದ ದೂರದಿಂದಲೇ ತೊಲಗಿಸಿಬಿಡುತ್ತಾರೆ. ಬಡತನವನ್ನು ಪ್ರಕಾಶಪಡಿಸುವುದು ಎಣೆಯಿಲ್ಲದ ದುಃಖವು ಮತ್ತು ಮಹಾಪಾಪವೆಂದು ಭಾವಿಸುತ್ತೇನೆ. ಆದುದರಿಂದ ಹಣಸಂಪಾದನೆಯನ್ನು ಮಾಡುವೆನು – ಎಂಬ ಅಭಿಪ್ರಾಯದಿಂದ ಇರತಕ್ಕ ಅವನ ವಿಷಯವಾಗಿ ಸಂಬಂಧು ಕೇಳಿ ತಿಳಿದು ಒಂದು ದಿವಸ ಚಾಣಾಕ್ಯನನ್ನು ಕಂಡು ಹೀಗೆಂದನು – *ನಿಮಗೆ ಬಡತನದಿಂದ ಬಿಡುಗಡೆಯಾಗುವುದು. ನೀವು ಅರುವತ್ತು ಗ್ರಾಮಗಳಿಂದ ಕೂಡಿದ ಬ್ರಾಹ್ಮಣವೃತ್ತಿಯನ್ನು ಅರಸನನ್ನು ಬೇಡಿ ಪಡೆದುಕೊಂಡರೆ, ಸುಖದಿಂದ ಬಾಳುವಿರಿ* ಎಂದು ಹೇಳಿದನು. ಚಾಣಾಕ್ಯನು ’ಹಾಗೆಯೇ ಮಾಡುವೆನು’ ಎಂದುಕೊಂಡು, ರಾಜನನ್ನು ಕಂಡು ಸ್ತುತಿಮಾಡಿ ಬ್ರಾಹ್ಮಣವೃತ್ತಿಯನ್ನು ಬೇಡಿದನು. ರಾಜನು ಮೆಚ್ಚಿ ಅದನ್ನು ಕೊಟ್ಟನು. ಹೀಗೆ ಚಾಣಾಕ್ಯನು ಬ್ರಾಹ್ಮಣವೃತ್ತಿಯನ್ನು ಅನುಭವಿಸುತ್ತ ಅರುವತ್ತು ಗ್ರಾಮಗಳಿಗೆ ಅಪತಿಯಾಗಿ ಸುಖ ಸಂಕಥೆಗಳ ವಿನೋದದಿಂದ ಕಾಲವನ್ನು ಕಳೆಯುತ್ತದ್ದನು. ಆಮೇಲೆ ಒಂದು ದಿವಸ ಸುಬಂಧು ಮಹಾಪದ್ಮನನ್ನು ನಾಶಮಾಡುವ ಯೋಚನೆಯಿಂದ ಮಕ್ಕಳ ಕಟ್ಟಿನಿಂದ ಬಂದಿರತಕ್ಕ ಬ್ರಾಹ್ಮಣರನ್ನು ಕುರಿತು ಹೀಗೆ ಹೇಳಿದನು – *ನಿಮ್ಮ ಈ ಪದವಿಯೆಂಬುದು ಅನುಕ್ರಮವಾಗಿ ನಂದಮಹಾರಾಜ, ವಿಜಯ, ನಂದನ, ಸುನಂದನ, ನಂದಿವರ್ಧನ, ನಂದ, ಶ್ರೀನಂದನ, ಪದ್ಮ, ಮಹಾಪದ್ಮ – ಎಂದೀ ರೀತಿಯಾಗಿ ಒಂಬತ್ತು ತಲೆಗಳವರೆಗೆ ಬಂದಿದೆ. ಹೀಗೆ ಬಂದಿರತಕ್ಕ ಅಗ್ರಹಾರ (ಬ್ರಾಹ್ಮಣರಿಗೆ ಬಿಟ್ಟ ದತ್ತಿಯ ಗ್ರಾಮವನ್ನು

ಬಂದಗ್ರಹಾರಮಂ ಪೆಱರ್ ಕೊಂಡು ಬಾೞುತ್ತಿರೆ ನಿಮಗೆ ಕೆಮ್ಮನೆ ನೋಡುತ್ತಿರ್ಪುದೇಂ ಕಾರಣಂ ಪಾೞಯೆಂದೊಡವರ್ಗಳಿಂತೆಂದರ್ ನಿಮ್ಮ ಬಲದಿಂದಮಾಮೆಮ್ಮ ಪದಮಂ ಪಡೆವೆಮೆಂದೊಡೆ ಅಂತೆಗೆಯ್ಯಿಮೆಂದೊಡವರುಮರಸಂಗಿಂತೆಂದು ಬಿನ್ನಪ್ಪಂಗೆಯ್ದರ್ ಮಹಾರಾಜಾ ಕುಲಕ್ರಮಾಗತರೆಮುಂ ನಿಮ್ಮ ಪ್ರಸಾದದಿಂ ಬಾೞ್ವೆಮುಂ ಕ್ರಮದಿಂ ಬಂದುದೆಮ್ಮ ಪದಮಂ ನಿಮಗೆ ಕಿಡಿಸಲಾಗದೆಂದಾಗಳ್ ಸುಬಂಧುವಿಂತೆಂದಂ ಕ್ಷತ್ರಿಯರ್ಗೆ ಪೂರ್ವಕ್ರಮಾಗತಮಂ ಕಿಡಿಸದೆ ಸಲಿಪುದೆ ಧರ್ಮಮೆಂದೊಡರಸ ನಗ್ರಾಸನದಿಂ ಚಾಣಾಕ್ಯನಂ ಪಿಂಗಿಸೆಂದೊಡಂತೆಗೆಯ್ವೆನೆಂದು ಪೋಗಿಯಗ್ರಾಸನದೊಳುಣಲೆಂದು ಬಂದು ಮಣೆಯನೇಱರ್ದೊನನಿಂತೆಂದಂ ನಿಮಗಾದಮಾನುಂ ಮುಳಿದರಸನಿಂತೆಂದಂ ಮದವಿಹ್ವಳೆಯರಪ್ಪ ವೇಶ್ಯಾಂಗನಾಸಕ್ತ ವಿಟಜನನಿವಾಸಿ ಎನ್ನಗ್ರಾಸನಮನುಣಲ್ಕೆ ಯೋಗ್ಯನಲ್ಲದಱಂದಾತನನಟ್ಟಿಕಳೆಯಿ ಮೆಂದಟ್ಟಿದನೆಂದು ಪೇೞ್ದು ಪಡಿಯಱನಿಂದಮೆೞೆಯಿಸಿ ಪೆಡತಲೆಯಂ ಪಿಡಿದು ನೂಂಕುತ್ತಮರಮನೆಯಿಂದಂ ಪೊಱಮಡಿಸಿಯಟ್ಟೆ ಕಳೆದೊಡಾದಮಾನುಂ ಮುಳಿದಿಂತೆಂದಂ

ಬೇರೆಯವರು ಪಡೆದು ಬಾಳುತ್ತಿದ್ದರೆ ಅದನ್ನು ನೋಡಿದೊಂಡು ಸಮ್ಮನೆ ಇರುತ್ತಿರುವುದು ಯಾವ ಧರ್ಮ (ಸರಿಯಾದ ಕ್ರಮ)?* ಎಂದು ಹೇಳಿದಾಗ ಅವರು ಹೀಗೆಂದರು – *ನಿಮ್ಮ ಬಲದಿಂದ ನಾವು ನಮ್ಮ ಪದವಿಯನ್ನು ಪಡೆಯುವೆವು*. ಹೀಗೆ ಹೇಳಿದಾಗ ’ಹಾಗೆಯೇ ಮಾಡಿ’ ಎಂದು ಸುಬಂಧುವು ಹೇಳಿದನು. ಆ ಬ್ರಾಹ್ಮಣರು ಆಗ ರಾಜನಿಗೆ ಹೀಗೆ ವಿಙಪನೆ ಮಾಡಿದರು – *ಎಲೈ ಮಹಾರಾಜನೇ, ನಾವು ಕುಲಪರಂಪರೆಯಿಂದ ಬಂದವರಾಗಿದ್ದೇವೆ; ಮತ್ತು ಬಾಳುವೆ ನಡೆಸುವವರಾಗಿದ್ದೇವೆ. ಅಲ್ಲದೆ, ಅನುಕ್ರಮದಿಂದ ಬಂದಿರುವ ನಮ್ಮ ಪದವಿಯನ್ನು (ಸ್ಥಿತಿಯನ್ನು) ನೀವು ಕೆಡಿಸಬಾರದು.* ಆಗ ಸುಬಂಧು ಹೀಗೆ ಹೇಳಿದನು – *ಪೂರ್ವದಿಂದಲೇ ಪರಂಪರೆವಿಡಿದು ಬಂದ ಅಕಾರವನ್ನು ಕೆಡಿಸದೆ ಸಲ್ಲಿಸುವುದೇ ಕ್ಷತ್ರಿಯರ ಧರ್ಮ* ಎಂದನು. ಆಗ ಮಹಾಪದ್ಮರಾಜನು – ಚಾಣಾಕ್ಯನನ್ನು ಅವನ ದತ್ತಿಯ ಗ್ರಾಮಗಳ ಅಕಾರದಿಂದ ತೊಲಗಿಸು – ಎಂದು ಆಜ್ಞೆ ಮಾಡಿದನು. *ಹಾಗೆಯೆ ಮಾಡುವೆನು* ಎಂದುಕೊಂಡು ಸುಬಂಧು ಹೋದನು. ಆಗ ಚಾಣಾಕ್ಯನು ತನ್ನ ದತ್ತಿಯ ಗ್ರಾಮಗಳ ಅಕಾರದಲ್ಲಿದ್ದುಕೊಂಡು, ಊಟಮಾಡುವುದಕ್ಕಾಗಿ ಬಂದು ಮಣೆಯ ಮೇಲೆ ಕುಳಿತಿದ್ದನು. ಆಗ ಅವನೊಡನೆ ಸುಬಂಧು ಹೀಗೆ ಹೇಳಿದನು – *ಅರಸನು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡು ಹೀಗೆಂದಿರುವನು – ಸೊಕ್ಕಿನಿಂದ ಕದಡಿದವರಾದ ಸೂಳೆಹೆಣ್ಣುಗಳಲ್ಲಿ ಆಸಕ್ತರಾಗಿರುವ ವಿಟಜನರೊಂದಿಗೆ ವಾಸಮಾಡುವವನು (ಚಾಣಾಕ್ಯನು) ನಾನು ಕೊಟ್ಟ ಬ್ರಾಹ್ಮಣವೃತ್ತಿಯನ್ನು (ದತ್ತಿ ಭೂಮಿಯನ್ನು) ಅನುಭವಿಸಲಿಕ್ಕೆ ಯೋಗ್ಯನಲ್ಲ! ಆದುದರಿಂದ ಅವನನ್ನು ಓಡಿಸಿ ಕಳೆದು ಬಿಡಿ – ಎಂದು ಹೇಳಿ ನನ್ನನ್ನು ಕಳುಹಿಸಿರುತ್ತಾನೆ* ಹೀಗೆ ಹೇಳಿ ಸುಬಂಧುವು ಬಾಗಿಲು ಕಾಯುವವನಿಂದಲೇ ಚಾಣಾಕ್ಯನನ್ನು ಎಳೆಯಿಸಿದನು. ಅವನ ಹಿಂದಲೆಯನ್ನು ಹಿಡಿದು ತಳ್ಳುತ್ತ, ಅರಮನೆಯಿಚಿದ ಹೊರಡಿಸಿ ಅಟ್ಟಿಬಟ್ಟನು. ಆಗ ಚಾಣಾಕ್ಯನು ಕೋಪಿಸಿ ಹೀಗೆಂದನು. – ನಂದನನ್ನು ನಂದನಲ್ಲದವನನ್ನಾಗಿ ಮಾಡುವೆನು (ಅಂದರೆ ನಾಶಮಾಡುವೆನು) 

    ನಂದನನಂದನಾಗೆ ಮಾಡುವೆಂ ಸುಬಂಧುವನಬಂಧು ಮಾಡುವೆನೆಂದು ಪ್ರತಿಜ್ಞೆಗೆಯ್ದು ಪೊೞಲಿಂ ಪೊಱಮಟ್ಟು ಪೋಗಿ ಪನ್ನೆರಡು ವರುಷದೊಳಗೆ ಮಹಾಪದ್ಮನಂ ಕಿಡಿಸಿದಲ್ಲದೆ ಕಾಸೆಗಳಂ ಕಳೆಯನೆಂದು ಜಾದಿನ ಸೇಲೆಗಳನುಟ್ಟು ಭಗವಂತ ವೇಷಮಂ ಕೈಕೊಂಡು ಮಹೋದಕಮೆಂಬ ಪೊೞಲ್ಗೆ ವೋಗಿ ಅಲ್ಲಿರ್ದಂ ಅನ್ನೆಗಮಾ ಪೊೞಲನಾಳ್ವೊಂ ಮಯೂರವಂಶದರಸಂ ಕುಮುದನೆಂಬೊನಾತನ ಮಹಾದೇವಿ ಮಂದೆಯೆಂಬೊಳಾಕೆಗೆ ಗರ್ಭಮಾಗಿ ಚಂದ್ರನಂ ನುಂಗುವ ಬಯಕೆಯಾಗಿ ಬಡವಾದೊಡರಸಂ ಬೆಸಗೊಂಡಾಕೆಯ ಬಯಕೆಯಂ ತೀರ್ಚಲಾಱದೆ ಚಿಂತಾಕುಳಿತನಾಗಿರ್ಪಿನಮದಂ ಚಾಣಾಕ್ಯಂ ಕೇಳ್ದು ಅರಸನಂ ಕಂಡಾನರಸಿಯ ಬಯಕೆಯಂ ನೆರಪುವೆನಾಯರಸಿಗೆ ಪುಟ್ಟಿದ ಕೂಸನೆನಗೀಯಲಾರ್ಪೊಡೆಂದೊಡರಸನೀವೆನೆಂದೊಡರಸಿಯುಮಂ ನನ್ನಿಗೊಂಡಾಱುಮಱಯದಂತಿರೆ ನೃಪತಿಯ ಪ್ರಾಸಾದದ ಶಿಖರದ ಮಧ್ಯಪ್ರದೇಶಮಂ ಬಾದಣದಂತಿರೆ ಛಿದ್ರಂ ಮಾಡಿ ಚಂದ್ರನಿರುಳ್ ಮಧ್ಯಾಹ್ನಮಪ್ಪ ಪೊೞ್ತಱೊಳಾ ಛಿದ್ರಕ್ಕಭಿಮುಖಮಾಗೆ ಪಿರಿದೊಂದು ಕಾಜಿನ ಬಟ್ಟಲೊಳ್ ಕಮ್ಮಿತಪ್ಪ ನೀರಂ ತೀವಿ ಚಂದ್ರಬಿಂಬಮಂ ನೀರೊಳ್ ಕಾಣ್ಬಂತಿರೆ ಮಾಡಿಯರಸಿಯಂ ತೃಷ್ಣಾಭಿವೃದ್ಧಿಯ ಪ್ಪಾಹಾರಮನೂಡೆ ನೀರಡಸಿದೊಡೆ ಚಾಣಾಕ್ಯನಿಂತೆಂದಂ ಮಂತ್ರದಿಂದಾಹ್ವಾನಂಗೆಯ್ದು ತಂದೆ ಚಂದ್ರನಂ

    ಸುಬಂಧುವನ್ನು ಬಂಧುವಲ್ಲದವನನ್ನಾಗಿ ಮಾಡುವೆನು (ಅಂದರೆ, ನಿಸ್ಸಹಾಯಕಸ್ಥಿತಿಯಲ್ಲಿ ಇರುವಂತೆ ಮಾಡುವೆನು') ಹೀಗೆ ಪ್ರತಿಜ್ಞೆಮಾಡಿ ಪಟ್ಟಣದಿಂದ ಹೊರಟು ಹೋದನು. 'ಹನ್ನೆರಡು ವರ್ಷದೊಳಗಾಗಿ ಮಹಾಪದ್ಮನನ್ನು ನಾಶಮಾಡದೆ ಕಚ್ಚೆಯನ್ನೇ ತೆಗೆಯೆನು' ಎಂದುಕೊಂಡು ಕಾವಿಬಣ್ಣದ ವಸ್ತ್ರಗಳನ್ನು ಧರಿಸಿ ಸಂನ್ಯಾಸಿಯ ವೇಷವನ್ನು ತಾಳಿ ಮಹೋದಕ ಎಂಬ ಪಟ್ಟಣಕ್ಕೆ, ಹೋಗಿ ಅಲ್ಲಿದ್ದನು. ಆ ವೇಳೆಗೆ ಆ ಪಟ್ಟಣವನ್ನು ಮಯೂರವಂಶದವನಾದ ಕುಮುದನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಮಂದೆಯೆಂಬವಳು. ಆಕೆ ಗರ್ಭಿಣಿಯಾಗಿ ಅವಳಿಗೆ ಚಂದ್ರನನ್ನು ನುಂಗಬೇಕೆಂಬ ಬಸುರಿ ಬಯಕೆ ಉಂಟಾಯಿತು. ಈ ಬಯಕೆಯಿಂದಲೇ ಆಕೆ ಬಡವಾಗಲು, ರಾಜನು ಕೇಳಿ, ಆಕೆಯ ಬಯಕೆಯನ್ನು ತೀರಿಸಲಾರದೆ ಚಿಂತೆಯಿಂದ ಕದಡಿದ ಮನಸ್ಸಿನವನಾದನು. ಹೀಗಿರಲು ಅದನ್ನು ಚಾಣಾಕ್ಯನು ಕೇಳಿ, ರಾಜನನ್ನು ಕಂಡು 'ಆ ರಾಣಿಗೆ ಹುಟ್ಟಿದ ಮಗುವನ್ನು ನನಗೆ ಕೊಡುವುದಾದರೆ, ನಾನು ರಾಣಿಯ ಬಯಕೆಯನ್ನು ಈಡೇರಿಸುವೆನು' ಎಂದು ಹೇಳಿದನು. ಆಗ ರಾಜನು ’ಮಗುವನ್ನು ಕೊಡುವೆನು’ ಎನ್ನಲು, ರಾಣಿಯ ಒಪ್ಪಿಗೆಯ ಶಪಥವನ್ನು ತೆಗೆದುಕೊಂಡನು. ಚಾಣಾಕ್ಯನು ಆಮೇಲೆ ಅರಮನೆಯ ತುದಿಯ ಭಾಗದ ಮಧ್ಯದ ಸ್ತಳವನ್ನು ಗವಾಕ್ಷದ ಹಾಗೆ ರಂಧ್ರಮಾಡಿ, ರಾತ್ರಿ ಚಂದ್ರನು ನಡುನೆತ್ತಿಯ ಮೇಲೆ ಬರುವ ಹೊತ್ತಿನಲ್ಲಿ ಆ ರಂಧ್ರಕ್ಕೆ ಎದುರಾಗಿ ದೊಡ್ಡದಾದ ಒಂದು ಗಾಜಿನ ಬಟ್ಟಲಲ್ಲಿ ಸುಗಂಧಯುಕ್ತವಾದ ನೀರನ್ನು ತುಂಬಿ ಆ xಲಿರಿನಲ್ಲಿ ಚಂದ್ರಬಿಂಬವು ಕಾಣುವಂತೆ ಮಾಡಿದನು. ರಾಣಿಗೆ ಬಾಯಾರಿಕೆ ಹೆಚ್ಚಾಗತಕ್ಕ ಆಹಾರವನ್ನು ಉಣಿಸಿ, ಆಕೆಗೆ ಬಾಯಾರಿಕೆಯಾದಾಗ ಚಾಣಾಕ್ಯನು ಹೀಗೆಂದನು – 'ನಾನು ಮಂತ್ರದ ಮೂಲಕ ಚಂದ್ರನನ್ನು ಕರೆದು ತಂದಿರುತ್ತೇನೆ, ನುಂಗು ಬಾ' ಎಂದು ರಾಣಿಯ

    ನುಂಗು ಬಾಯೆಂದರಸಿಯಂ ಕಣ್ಣಂ ಕಟ್ಟಿಯೊಡಗೊಂಡು ಪೋಗಿ ಕಣ್ಣ ಕಟ್ಟಂ ಬಿಟ್ಟು ಚಂದ್ರನಂ ನುಂಗೆಂದು ತೋಱದೊಡಾಕೆಯುಂ ಕಂಡು ರಾಗಿಸಿಯಾ ನೀರಂ ಕುಡಿದು ಬಯಕೆ ನೆಱೆದತ್ತು ಮತ್ತಂ ಕೆಲವು ದಿವಸದಿಂ ನವಮಾಸಂ ನೆಱೆದು ಬೆಸಲೆಯಾದ ಕೂಸಂ ದಾದಿಯನಿಟ್ಟು ಚಾಣಾಕ್ಯಂಗೆ ಕೊಟ್ಟರಾತನುಂ ಚಂದ್ರಭುಕ್ತನೆಂದು ಪೆಸರನಿಟ್ಟು ಬಾಯ್ವೆಣ್ಣೆಯೊಡನೆ ಕೆಱಕಿಱದೆ ನಂಜನೂಡಿ ಬಱಕೆ ಬಳೆದೊಡಾಹಾರದೊಳೂಡಲ್ ತಗುಳ್ದೊಂ ಮತ್ತೆ ಪದಿನಾಱನೆಯ ಬರಿಸಮಾದಂದು ಸಾಮಂತರ್ಕಳ್ಗಮಲ್ಲಿಯ ಮಂತ್ರಿಯರ್ಕಳ್ಗಮರಸು ಮಕ್ಕಳ್ಗಂ ತಳವಱರ್ಕಳ್ಗಮಿಂತೆಂದು ನುಡಿದೊಂ ಚಂದ್ರಭುಕ್ತಂಗೆ ಪೃಥ್ವಿಯೆಲ್ಲಮನಾಳ್ವ ಲಕ್ಷಣಂಗಳೊಳವು ಈತಂಗರಸುಮಾಡಿದಪ್ಟೆಂ ನಿಮಗೆಲ್ಲಮಿಲ್ಲಿಯ ಬಾೞಂ ಪದಿರ್ಮಡಿ ಬಾೞಂ ಮಾಡುವೆನೆಂದು ಬೋಸಿಯೊಡಗೊಂಡು ಪೋಗಿ ಮತ್ತಂ ಪೆಱರುಮಂ ನೆರಪಿ ಪಿರಿದು ತಂತ್ರಮಂ ಮಾಡಿ ಶ್ರೀಪರ್ವತದ ಮೇಗನಿಬರುಮನಿರಿಸಿ ತಾನೊರ್ವನೆ ಪೋಗಿ ಪೊನ್ನಂ ಮಾೞ್ಪ ಬಗೆಯಿಂದಂ ಮರ್ದುಗಳನಱಸೆ ಸುತ್ತಂ ತೊೞಲ್ವನನ್ನೆಗಂ ಪರ್ವತದ ತೞ್ಪಲೊಳಾದ ಮಾನುಂ ಗುಂಡಿತಪ್ಪ ರಸದ ಬಾವಿಯಂ ಮೊಡೆನಾರ್ಪುದಂ ಕಂಡು ಮುಚ್ಚಿದ ಶಿಲೆಯಂ ಕಳೆದು ನೋೞ್ಪನನ್ನೆಗಮದಱೊಳೊರ್ವಂ ಬಾೞುತ್ತಿರ್ದ ಪುರುಷನಂ ಕಂಡು ನೀನೇಕಿಲ್ಲಿ ಪೊಕ್ಕಿರ್ದೆಯೆಂದು ಬೆಸಗೊಂಡೊಡಾತನೆಂದನೊರ್ವ ರಸವಾದಕನೆಂಬ ಬಚ್ಚುವನೀ ಬಾವಿಯೊಳಗಿೞದು ನೀನೀ ರಸಮಂ ಮೊಗೆದು ಕೊಟ್ಟೊಡದಱೊಳ್ ಮಾಡಿದ ಪೊನ್ನುಂ ನಿನಗಮೆನಗಂ ಸಮಭಾಗಮಕ್ಕುಮೆಂದೊಡಾಂ ಪೊನ್ನ ಲೋಭದಿಂದಂ ಬಾವಿಯಂ ಪೊಕ್ಕು ರಸಮಂ ಸೋರೆಯಿಂ ತೀವಿ ಬೇೞ್ಪನಿತುಮಂ

    ಕಣ್ಣಿಗೆ ಬಟ್ಟೆ, ಕಟ್ಟಿ, ಕರೆದುಗೊಂಡು ಹೋದನು. ಬಟ್ಟಲ ಬಳಿಯಲ್ಲಿ ಕಣ್ಣಿನ ಕಟ್ಟನ್ನು ಬಿಡಿಸಿದನು. “ಚಂದ್ರನನ್ನು ನುಂಗು" ಎಂದು ಬಟ್ಟಲಲ್ಲಿ ಚಂದ್ರನನ್ನು ತೋರಿಸಲು ಆಕೆ ಕಂಡು ಸಂತೋಷಪಟ್ಟು ನೀರನ್ನು ಕುಡಿದಳು. ಅವಳ ಬಯಕೆ ನೆರವೇರಿತು. ಆಮೇಲೆ ಕೆಲವು ದಿವಸಗಳಿಗೆ ಆಕೆಯ ಗರ್ಭಕ್ಕೆ ಒಂಬತ್ತು ತಿಂಗಳು ತುಂಬಿ ಪ್ರಸವವಾಯಿತು. ಹಾಗೆ ಹೆತ್ತ ಮಗುವನ್ನು ನೋಡಲು ದಾದಿಯನ್ನು ನೇಮಿಸಿ ಚಾಣಾಕ್ಯನಿಗೆ ಕೊಟ್ಟರು. ಅವನು ಮಗುವಿಗೆ ಚಂದ್ರಭುಕ್ತನೆಂದು ಹೆಸರಿಟ್ಟು ತನ್ನಿಸುವ ಬೆಣ್ಣೆಯೊಡನೆ ಕೊಂಚ ಕೊಂಚವಾಗಿಯೇ ಲವನ್ನು ತಿನ್ನಿಸಿ, ಆಮೇಲೆ ದೊಡ್ಡವನಾದಾಗ ಆಹಾರದೊಂದಿಗೆ ಸ್ವಲ್ಪ ಸ್ವಲ್ಪ ವಿಷವನ್ನು ತಿನ್ನಿಸಲು ತೊಡಗಿದನು. ಆಮೇಲೆ ಹದಿನಾರನೆಯ ವರ್ಷ ವಯಸ್ಸಾದಾಗ ಸಾಮಂತರುಗಳಿಗೂ ಅಲ್ಲಿಯ ಮಂತ್ರಿಗಳಿಗೂ ರಾಜಕುಮಾರರಿಗೂ ನಗರರಕ್ಷಕರಿಗೂ ಈ ರೀತಿಯಾಗಿ ಹೇಳಿದನು – “ಚಂದ್ರಭುಕ್ತನಿಗೆ ಭೂಮಿಯನ್ನೆಲ್ಲ ಆಳುವ ಲಕ್ಷಣಗಳಿವೆ. ಈತನನ್ನು ರಾಜನಾಗಿ ಮಾಡುತ್ತೇನೆ* – ನಿಮಗೆಲ್ಲ ಇಲ್ಲಿಯ ಜೀವಿತಕ್ಕಿಂತ ಹತ್ತರಷ್ಟು ಮಿಗಿಲಾದ ಜೀವಿಕೆಯನ್ನು ಮಾಡುವೆನು* – ಎಂದು ಬೋಸಿ ಅವರನ್ನು ಕೂಡಿಕೊಂಡು ಹೋದನು. ಆಮೇಲೆ ಬೇರೆಯವರನ್ನೂ ಒಟ್ಟುಗೂಡಿಸಿ ದೊಡ್ಡ ಸೈನ್ಯವನ್ನು ಸಿದ್ಧಗೊಳಿಸಿದನು. ಅವರನ್ನೆಲ್ಲ ಶ್ರೀಪರ್ವತದ ಮೇಲೆ ನಿಲ್ಲಿಸಿದನು. ತಾನೊಬ್ಬನೆ ಹೋಗಿ ಚಿನ್ನವನ್ನು ಮಾಡಬೇಕೆಂಬ ಮನಸ್ಸಿನಿಂದ ಮೂಲಿಕೆ ಮದ್ದುಗಳನ್ನು ಹುಡುಕುತ್ತ ಸುತ್ತಲೂ ಅಲೆದಾಡುತ್ತಿದ್ದನು. ಆ ಸಂದರ್ಭದಲ್ಲಿ ಪರ್ವತದ ತಪ್ಪಲಿನಲ್ಲಿ ತುಂಬಾ ಆಳವಾಗಿರುವ ಸಿದ್ಧರಸದ (ಮುಟ್ಟಿದ್ದನೆಲ್ಲ ಚಿನ್ನವಾಗಿ ಮಾಡುವ ರಸದ) ಬಾವಿಯನ್ನು ಕಂಡನು. ಅದು ಹುಳಿಮಜ್ಜಿಗೆಯಂತೆ ನಾತ ಬಡಿಯುತ್ತಿತ್ತು. (ಹಳಸಿದ ಮಾಂಸದ ನಾತವುಳ್ಳುದಾಗಿತ್ತು).

    ಮೊಗೆದು ಕೊಟ್ಟೊಡಾತನೆನ್ನಂ ತೆಗೆಯದೆ ಪೋದನಂತೆ ಮುನ್ನಂ ಪಲಂಬರುಮನೀ ಮಾರ್ಗದಿಂ ಬಾವಿಯೊಳಗೆ ಪುಗಿಸಿ ರಸಮಂ ಕೊಂಡವರಂ ತೆಗೆಯದೆ ಕೊಂದನೆಂದು ಪೇೞ್ದೊಡಾಂ ನಿನ್ನಂ ತೆಗೆದು ಬಾೞಪ್ಪೆನೆನಗೆ ರಸಮಂ ಮೊಗೆದು ಕುಡೆಂದು ನಿಡುನೇಣಂ ಪಲವುಂ ಸೋರೆಗಳುಮಂ ತಂದು ತೀವಿಸಿ ಕೊಂಡಾತನಮಂ ತೆಗೆದು ರಸಂ ತಿಂದ ಮೆಯ್ಗೆ ತಕ್ಕ ಪ್ರತೀಕಾರದ ಮರ್ದುಗಳಂ ಮಾಡಿಯಾತನಂ ಬಾೞಸಿ ಕೞಪಿದಂ ಮತ್ತಾ ರಸದಿಂದೆನಿತಾನುಂ ಪೊನ್ನ ರಾಶಿಯಂ ಮಾಡಿ ಇಂತೆಂದನಾರೊರ್ವರೊಂದು ಪೇಱು ಮಣ್ಣಂ ಶ್ರೀಪರ್ವತದ ಮೇಗೊಟ್ಟುವರವರ್ಗೊಂದು ಪೇಱು ಪೊನ್ನಂ ಕುಡುವೆನೆಂದಾ ನಾಡೊಳ್ ಘೋಷಣೆಯಂ ಪೊಯ್ಸಿದೊಡದಂ ಕೇಳ್ದೊರ್ವನೊಕ್ಕಲಿಗನೊಂದು ಪೇಱು ಮಣ್ಣಂ ತಂದು ಶ್ರೀಪರ್ವತದ ಮೇಗೊಟ್ಟಿದೊಡಾತಂಗೊಂದು ಪೇಱು ಪೊನ್ನಂ ಕೊಟ್ಟೊಡದಂ ಕೇಳ್ದಾ ನಾಡೊಕ್ಕಲಿಗರೆಲ್ಲಂ ಮಣ್ಣ ಪೇಱಂ ತಂದು ಶ್ರೀಪರ್ವತದ ಮೇಗೆ ಬಳಸಿಯುಂ ಪಿರಿದುಂ ರಾಶಿಯಾಗೊಟ್ಟಿ ಚಾಣಾಕ್ಯನಂ ಪೊನ್ನಂ ಬೇಡಿದೊಡಿಂತೆಂದಂ ನಿಮ್ಮ ತರವೇಳ್ದೊರಾರೆಮಗೊಂದು

    ಅದನ್ನು ಕಂಡು, ಮುಚ್ಚಿದ ಶಿಲೆಯನ್ನು ತೆಗೆದು ಹಾಕಿ ನೋಡಿದನು. ಆಗ ಅದರಲ್ಲಿ ಬದುಕಿದ್ದ ಒಬ್ಬ ಮನುಷ್ಯನನ್ನು ಕಂಡು, “ನೀನು ಇಲ್ಲಿ ಯಾಕೆ ಹೊಕ್ಕಿದ್ದೆ?* ಎಂದು ಕೇಳಿದಾಗ ಆತನು ಹೀಗೆ ಹೇಳಿದನು – “ರಸವಾದಕನೆಂಬ ಒಬ್ಬ ಸಂನ್ಯಾಸಿಯು ನನ್ನೊಡನೆ – ಈ ಬಾವಿಯೊಳಗಿಳಿದು ನೀನು ಈ ರಸವನ್ನು ಮೊಗೆದು ಕೊಟ್ಟರೆ ಅದರ ಸಹಾಯದಿಂದ ಮಾಡಿದ ಚಿನ್ನವು ನಿನಗೂ ನನಗೂ ಸಮವಾದ ಪಾಲಾಗುವುದು – ಎಂದನು. ಆಗ ನಾನು ಚಿನ್ನದ ದುರಾಶೆಯಿಂದ ಬಾವಿಗಿಳಿದು ರಸವನ್ನು ಸೋರೆಬುರುಡೆಯಲ್ಲಿ ತುಂಬಿಸಿ ಬೇಕಾದಷ್ಟನ್ನು ಮೊಗೆದು ಕೊಟ್ಟೆನು. ಆಮೇಲೆ ಅವನು ನನ್ನನ್ನು ಮೇಲೆ ತೆಗೆಯದೆ ಹೋದನು, ಹಾಗೆಯೇ ಹಿಂದೆಯೂ ಹಲವರನ್ನು ಈ ರೀತಿಯಿಂದ ಬಾವಿಯೊಳಗಿಳಿಸಿ ರಸವನ್ನು ತೆಗೆದುಕೊಂಡು, ಮತ್ತೆ ಅವರನ್ನು ತೆಗೆಯದೆ ಕೊಂದಿದ್ದಾನೆ * ಎಂದು ಹೇಳಿದನು. “ನಾನು ನಿನ್ನನ್ನು ತೆಗೆದು ಬದುಕಿಸುತ್ತೇನೆ. ನನಗೆ ರಸವನ್ನು ಮೊಗೆದು ಕೊಟಲ* ಎಂದು ಚಾಣಾಕ್ಯನು ಉದ್ದವಾದ ಹಗ್ಗವನ್ನೂ ಹಲವು ಸೋರೆಬುರುಡೆಗಳನ್ನೂ ತಂದು ಸಿದ್ಧರಸವನ್ನು ತುಂಬಿಸಿಕೊಂಡನು. ಆತನನ್ನು ಬಾವಿಯಿಂದ ಮೇಲೆತ್ತಿ, ಸಿದ್ಧರಸವು ಕೊರೆದು ಗಾಸಿಮಾಡಿದ ಶರೀರಕ್ಕೆ ಯೋಗ್ಯವಾದ ಪರಿಹಾರ ಕೊಡತಕ್ಕ ಔಷಗಳನ್ನು ಮಾಡಿ, ಅವನನ್ನು ಬದುಕಿಸಿ ಕಳುಹಿಸಿದನು. ಆಮೇಲೆ ಆ ಸಿದ್ಧರಸದಿಂದ ಎಷ್ಟೋ ಚಿನ್ನದ ರಾಶಿಯನ್ನು ಮಾಡಿ, ಹೀಗೆ ಹೇಳಿದನು – “ಯಾರೊಬ್ಬರು ಒಂದು ಹೇರು ಮಣ್ಣನ್ನು ಶ್ರೀಪರ್ವತದ ಮೇಲೆ ತಂದು ರಾಶಿಹಾಕುವರೋ ಅವರಿಗೆ ಒಂದು ಹೇರು ಚಿನ್ನವನ್ನು ಕೊಡುವೆನು.* ಈ ರೀತಿಯಾಗಿ ಆ ನಾಡಿನಲ್ಲಿ ಡಂಗುರವನ್ನು ಹೊಡೆಯಿಸಿದನು. ಅದನ್ನು ಕೇಳಿ, ಒಬ್ಬ ಒಕ್ಕಲಿಗನು ಒಂದು ಹೇರು ಮಣ್ಣನ್ನು ತಂದು ಶ್ರೀಪರ್ವತದ ಮೇಲೆ ರಾಶಿ ಹಾಕಿದನು. ಚಾಣಾಕ್ಯನು ಅವನಿಗೆ ಒಂದು ಹೇರು ಚಿನ್ನವನ್ನು ಕೊಟ್ಟನು. ಅದನ್ನು ಕೇಳಿದ ಆ ನಾಡಿನ ಒಕ್ಕಲಿUರೆಲ್ಲರೂ ಮಣ್ಣಿನ ಹೊರೆಗಳನ್ನು ತಂದು ಶ್ರೀಪರ್ವತದ ಮೇಲೆ ಸುತ್ತುಲೂ ದೊಡ್ಡ ರಾಶಿಯಾಗಿ ಹಾಕಿ, ಚಾಣಾಕ್ಯನೊಡನೆ – ಚಿನ್ನವನ್ನು ಕೊಡು ಎಂದು ಕೇಳಿದರು. ಆಗ ಚಾಣಾಕ್ಯನು – “ನಿಮ್ಮನ್ನು ಮಣ್ಣು ತರಲು ಹೇಳಿದವರು ಯಾರು?

    ಪೇಱು ಮಣ್ಣು ಬಾೞ್ತೆಯಾಗೆ ತರಿಸಿಕೊಂಡೆವೀಯುೞದ ಮಣ್ಣೆಮಗೆ ಬಾೞ್ತೆಯಲ್ತು ನಿಮ್ಮ ನಿಮ್ಮ ತಂದ ಮಣ್ಣಂ ಕೊಂಡು ಪೋಗಿಮೆಂದೊಡವರ್ಗಳ್ ನಿರಾಶೆಯಾಗಿ ಬಿಸುಟ್ಟು ಪೋದರ್ ಮತ್ತಾ ಮಣ್ಣಿಂದಂ ಬಳಸಿಯುಂ ಕೋಂಟೆಯಂ ಮಾಡಿ ಮಾಟ ಕೂಟ ಪ್ರಾಸಾದ ಸಹಿತಂ ಪೊೞಲಂ ಮಾಡಿ ಪೊನ್ನಂ ಕೊಟ್ಟು ಪಲವುಂ ಕುದುರೆಗಳುಮಂ ಕಟ್ಟಿಯಾಳ್ಗಳ್ಗೆ ಕೊಟ್ಟು ಪಿರಿದುಂ ತಂತ್ರಮಂ ಮಾಡಿ ಚಂದ್ರಭುಕ್ತನನೊಡಗೊಂಡು ಪೋಗಿ ಮಹಾಪದ್ಮನ ಮೇಗೆರ್ದಾತನೊಳ್ ಕಾದಿ ಕಾಳೆಗಮಂ ಸೋಲ್ತೋಡಿ ಬರ್ದುಂಕಿ ಮತ್ತಂ ತಂತ್ರಮಂ ಮಾಡಿ ವರುಷ ವರುಷಕ್ಕಂ ಪೋಗಿ ಕಾದಿ ಸೋಲ್ತು ಬರ್ಕುಂ ಮತ್ತೊರ್ಮೆ ಮೇಲೆೞ್ದು ಬವರಮಂ ಕಾದಿ ಸೋಲ್ವ ಕಾಳೆಗಮನೞದು ಚಂದ್ರಭುಕ್ತನಂ ಪೋಗಲ್ವೇೞ್ದು ತಾನುಂ ನೀಡುಂ ಬೇಗಂ ಕಾದಿ ಕಾಳೆಗಮಂ ಸೋಲ್ತು ಕೊಳ್ಗುಳದೊಳಗಿರ್ದಾಗಳ್ ಪೋಗಲ್ ಪಾಂಗಿಲ್ಲದೆ ಸಾರೆಯೊಂದು ತಾಮರೆಗೆಱೆಯುಂಟದಂ ಪೊಕ್ಕು ನೆರವಿಯೆಲ್ಲಂ ಪೋಪನ್ನೆಗಮಿರ್ದು ಇರುಳ್ ಪೊಱಮಟ್ಟು ಪಾಟಳೀಪುತ್ರಮಂ ಪೊಕ್ಕು ಪಸಿದು ಸಾಲಿಗರ ಮನೆಯಂ ಪೊಕ್ಕು ಸಾಲಿಗರ ಬಿರ್ದ್ದಿಯನುಣಲ್ವೇಡಿದೊಡಾಕೆಯುಂ ಕುಳ್ಳಿರು ಮಗನೆಯೆಂದೇಱಲಿಕ್ಕಿ ಕುಳ್ಳಿರಿಸಿ ಕಂಚನಿಟ್ಟು ಬಿಸಿಯಂಬಲಿಯಂ ಬಡ್ಡಿಸಿದೊಡಾತನುಂ ಪಸಿದಲಂಪಿನಿಂದಂ ಬಸಿಯಂಬಲಿಯಂ ಬಾಯೊಳಿಟ್ಟಾಗಳ್ ಕಯ್ಯುಂ ಬಾಯುಂ ಬೆಂದೊಡೆ ಮೆಯ್ಯನದಿರ್ದು ಕೈಯಂ ಬಿದಿರ್ದವನಂ

 ನಮಗೆ ಒಂದು ಹೊರೆ ಮಣ್ಣು ಉಪಯೋಗಕ್ಕೆ ಬೇಕಾಯಿತೆಂದು ತರಿಸಿಕೊಂಡಿದ್ದೇವೆ. ಈ ಉಳಿದ ಮಣ್ಣು ನಮಗೆ ಉಪಯೋಗವಿಲ್ಲ. ನೀವು ನೀವು ತಂದ ಮಣ್ಣನ್ನು ತೆಗೆದುಕೊಂದು ಹೋಗಿ* ಎಂದು ಹೇಳಿದನು. ಆಗ ಅವರು ನಿರಾಶೆಗೊಂಡು ಮಣ್ಣನ್ನು ಅಲ್ಲೇ ಬಿಸಾಡಿ ಹೋದರು. ಅನಂತರ ಆ ಮಣ್ಣಿನಿಂದ ಶ್ರೀಪರ್ವತದ ಸುತ್ತಲೂ ಕೋಟೆಯನ್ನು ಮಾಡಿ, ಮಾಟ – ಕೂಟ – ಅರಮನೆಗಳ ಸಮೇತವಾಗಿ ಪಟ್ಟಣವನ್ನು ನಿರ್ಮಿಸಿ, ಚಿನ್ನವನ್ನು ಕೊಟ್ಟು ಹಲವು ಕುದುರೆಗಳನ್ನೂ ತಂದು ಕಟ್ಟಿ ಹಾಕಿ, ಭಟರಿಗೆ ಕೊಟ್ಟು ದೊಡ್ಡ ಸೈನ್ಯವನ್ನು ಸಿದ್ಧಮಾಡಿದನು. ಚಂದ್ರಭುಕ್ತನನ್ನು ಕೂಡಿಕೊಂಡು ಹೋಗಿ ಮಹಾಪದ್ಮನ ಮೇಲೆ ದಾಳಿಯಿಟ್ಟನು. ಅವನೊಂದಿಗೆ ಕಾದಾಡಿ ಯುದ್ಧದಲ್ಲಿ ಸೋತು ಓಡಿಹೋಗೆ, ಬದುಕಿಕೊಂಡು ಪುನಃ ಸೈನ್ಯವನ್ನು ಸಿದ್ಧಗೊಳಿಸಿ ಪ್ರತಿವರ್ಷವೂ ಹೋಗಿ ಕಾದಾಡಿ ಸೋತು ಬರುತ್ತಿದ್ದನು. ಹೀಗೆ ಮತ್ತೊಮ್ಮೆ ಮೇಲೆದ್ದು ಹೋರಾಡಿ ಸೋಲತಕ್ಕ ಯುದ್ಧ ಪರಿಸ್ಥಿತಿಯನ್ನರಿತು ಚಾಣಾಕ್ಯನು ಚಂದ್ರಭುಕ್ತನನ್ನು ಹೋಗಲಿಕ್ಕೆ ಹೇಳಿ ತಾನು ಬಹಳ ಹೊತ್ತು ಯುದ್ಧ ಮಾಡಿ ಸೋತು, ಯುದ್ಧರಂಗದಲ್ಲಿ ಇದ್ದಾಗ ಹೋಗಲು ಅವಕಾಶವಿಲ್ಲದೆ ಸಮೀಪದಲ್ಲೇ ಇದ್ದ ಒಂದು ತಾವರೆಯ ಕೆರೆಗೆ ಹೋದನು. ಸೈನ್ಯಸಮೂಹವೆಲ್ಲವೂ ಹೋಗುವವರೆಗೆ ಅಲ್ಲೇ ಇದ್ದನು. ರಾತ್ರಿಯಲ್ಲಿ ಅಲ್ಲಿಂದ ಹೊರಟನು. ಪಾಟಲೀಪುತ್ರ ನಗರವನ್ನು ಹೊಕ್ಕು ಹಸಿದವನಾಗಿ ನೇಕಾರರ ಮನೆಗೆ ಪ್ರವೇಶಿಸಿ ಅಲ್ಲಿದ್ದ ನೇಕಾರರ ಮುದುಕಿಯನ್ನು ಕುರಿತು ‘ಅವ್ವಾ ಹಸಿದಿದ್ದೇನೆ, ಊಟವನ್ನು ಬಡಿಸು’ ಎಂದು ಽಲಿmಓಶಿಲಿಟಲತಿಲ. ಆಗ ಆಕೆ ‘ಮಗನೇ, ಕುಳಿತುಕೋ’ ಎಂದು ಹೇಳಿ, ಕುಳಿತುಕೊಳ್ಳಲು ಮಣೆ ಹಾಕಿ ಅವನನ್ನು ಕುಳ್ಳಿರಿಸಿದಳು. ಆಮೇಲೆ ಕಂಚಿನ ತಟ್ಟೆಯಿಟ್ಟು ಬಿಸಿಯಾದ ಅಂಬಲಿ (ಗಂಜಿ)ಯನ್ನು ಬಡಿಸಿದಳು. ಚಾಣಾಕ್ಯನು ಹಸಿದವನಾಗಿದ್ದು ಸಂತೋಷದಿಂದ ಆ ಬಿಸಿಗಂಜಿಯನ್ನು ಬಾಯಿಗಿಟ್ಟಾಗ ಅವನ ಕೈಯೂ ಬಾಯೂ ಬೆಂದುಹೋದವು. 

    ಬಿರ್ದಿ ಕಂಡು ನಕ್ಕಿಂತೆಂದಳ್ ಈ ಲೋಕದೊಳ್ ಮೂವರ್ ಮೂರ್ಖರಂ ಕಂಡೆನೆಂದೊಡೆ ಚಾಣಾಕ್ಯನವರಾರಬ್ಬಾಯೆಂದು ಬೆಸಗೊಂಡೊಡಾಕೆಯೆಂದಳ್ ನೀನುಂ ನಂದನುಂ ಚಾಣಾಕ್ಯನುಮೆಂದು ಪೇೞ್ದೊಡಾತನೆಂತು ಮೂರ್ಖನೆಂದು ಬೆಸಗೊಂಡೊಡೆ ಮಗನೆ ಬುದ್ಧಿಯೊಡೆಯೊನ್ ಬಿಸಿಯಂಬಲಿಯಂ ಕಂಚಿನ ಕಡೆ ಕಡೆಯೊಲ್ ಕಿಱಕಿಱದನೆ ಆಱಸುತ್ತಮುಣ್ಗುಂ ನೀನಂತುಣಲಱಯದುದಱಂ ಮೂರ್ಖನೆನೆ ನಂದನೇಂ ಮೂರ್ಖನೆಂದೊಡೆ ನಂದನೆಂದೊಡಂ ಮಹಾಪದ್ಮನೆಂದೊಡಮೊರ್ವನ ಪೆಸರೆ ಆತಂ ತನ್ನ ಕೊಟ್ಟ ದಾನಮಂ ಕುಡದುದಱಂ ಪಗೆಗೊಂಡು ಪೋಪನಂ ತನ್ನಾರ್ಪಂದೆ ಕೊಲ್ಲುದುದಱಂದಂ ನಂದಂ ಮೂರ್ಖಂ ಚಾಣಾಕ್ಯನೆಂತು ಮೂರ್ಖನೆಂದೊಡಿಂತೆಂದಳ್ ಚಾಣಾಕ್ಯನಂ ತನ್ನ ಮುಳಿಸನೆ ನೋೞ್ಕುಂ ಕಜ್ಜಮನಱಯಂ ಮೂಲತಂತ್ರಮನೊಡೆಯನುಂ ಕ್ಷತ್ರಿಯನುಮಲ್ಲಂ ಪೃಥ್ವೀಶ್ವರನೊಡನೆ ಕಾದಲ್ ಬರ್ಕುಮಾತಂಗೆ ಬುದ್ಧಿಯುಳ್ಳೊಡೆ ತನ್ನ ಪಗೆವನ ನಾಡಂ ಕಿಡಿಸುವುದು ಪ್ರತಿಪಕ್ಷಮಂ ತನಗೆ ಮಾಡುವುದು ಸಾಮಂತ ಮಹಾಸಾಮಂತರ್ಕಳಂ ದ್ರವ್ಯಮಂ ಕೊಟ್ಟು ಭೇದಿಸುವುದು ತತ್ಸಂಬಂಗಳಂ ಪ್ರತಿಪಕ್ಷದಿಂದಂ ಕಿಡಿಸುವುದುಮಿಂತು ಮಾಡಿದೊಡೆ ನೃಪತಿಯೊರ್ವನೆಯುೞಗುಮಾಗಳ್ ತನ್ನ ಬಗೆದ

    ಆಗ ಅವನು ಮೈಯನ್ನು ಅಲುಗಾಡಿಸುವುದನ್ನೂ ಕೈ ಕೊಡುವುವುದನ್ನೂ ಮುದುಕಿ ಕಂಡು ನಕ್ಕು ಹೀಗೆ ಹೇಳಿದಳು. ‘ಈ ಲೋಕದಲ್ಲಿ ಮೂರು ಮಂದಿ ಮೂರ್ಖರನ್ನು (ತಿಳಿಗೇಡಿಗಳನ್ನು) ಕಂಡಿದ್ದೇನೆ’ – ಎಂದಾಗ ಚಾಣಾಕ್ಯನು ‘ಅವರು ಯಾರು ತಾಯೇ? ’ ಎಂದು ಪ್ರಶ್ನಿಸಿದನು. ಅದಕ್ಕೆ ಮುದುಕಿಯು ‘ನೀನೂ ನಂದನೂ ಚಾಣಾಕ್ಯನೂ’ ಎಂದು ಮೂವರನ್ನು ಸೂಚಿಸಿದಳು. ಆಗ ಚಾಣಾಕ್ಯನು “ನಾನು ಹೇಗೆ ಮೂರ್ಖನು?” ಎಂದು ಕೇಳಿದಾಗ ಅವಳು – ‘ಮಗನೆ ಬುದ್ಧಿಯುಳ್ಳವನು ಬಿಸಿಯಾದ ಅಂಬಲಿಯನ್ನು ತಟ್ಟೆಯ ಕಡೆಕಡೆಯಲ್ಲಿ ಸ್ವಲ್ಪ ಸ್ವಲ್ಪವನ್ನೇ ತಣಿಸಿಕೊಳ್ಳುತ್ತ ಊಟ ಮಾಡುತ್ತಾನೆ. ನಿನಗೆ ಹಾಗೆ ಊಟ ಮಾಡಲು ತಿಳಿಯದಿರುವುದರಿಂದ ನೀನು ಮೂರ್ಖನು” ಎಂದಳು. “ನಂದನು ಹೇಗೆ ತಾನೇ ಮೂರ್ಖನು?' ಎಂದು ಕೇಳಿದಾಗ ಮುದುಕಿಯು “ನಂದನೆಂದರೂ ಮಹಾಪದ್ಮನೆಂದರೂ ಒಬ್ಬನ ಹೆಸರೇ ಆಗಿರುತ್ತದೆ. ಆತನು ತಾನು ಕೊಟ್ಟ ದಾನವನ್ನು ಕೊಡದುದರಿಂದ (ದತ್ತಾಪಹಾರ ಮಾಡಿದ್ದರಿಂದ) ಮತ್ತು ದ್ವೇಷವನ್ನಿಟ್ಟುಕೊಂಡು ಹೋಗತಕ್ಕವನನ್ನು ತಾನು ಸಮರ್ಥನಾಗಿರುವಾಗಲೇ ಕೊಲ್ಲದುದರಿಂದ ನಂದನು ಮೂರ್ಖನು” ಎಂದು ಹೇಳಿದಳು. “ಚಾಣಾಕ್ಯನು ಹೇಗೆ ಮೂರ್ಖನು?' ಎಂದಾಗ ಹೀಗೆಂದಳು – “ಚಾಣಾಕ್ಯನು ಕೋಪವನ್ನು ಮಾತ್ರ ನೋಡುತ್ತಾನೆ, ಕಾರ್ಯವನ್ನು ತಿಳಿಯನು. ಮೂಲಸೈನ್ಯವುಳ್ಳವನೂ ಅಲ್ಲ, ಕ್ಷತ್ರಿಯನೂ ಅಲ್ಲ. ಆದರೆ ಮಹಾರಾಜನೊಂದಿಗೆ ಕಾದಾಡಲು ಬರುತ್ತಾನೆ. ಅವನಿಗೆ ಬುದ್ಧಿಯಿದ್ದರೆ, ತನ್ನ ಶತ್ರುವಿನ ರಾಜ್ಯವನ್ನು ನಾಶಪಡಿಸುತ್ತಿದ್ದನು. ತನ್ನ ವಿರೋಧಪಕ್ಷದವರನ್ನು ತನ್ನವರನ್ನಾಗಿ ಮಾಡುತ್ತಿದ್ದನು. ಸಾಮಂತ ಮಹಾಸಾಮಂತರಿಗೆಲ್ಲ ಹಣವನ್ನು ಕೊಟ್ಟು ಭೇದೋಪಾಯವನ್ನು ಮಾಡುತ್ತಿದ್ದನು. ಹೀಗೆ ಮಾಡಿದ್ದರೆ ರಾಜನೊಬ್ಬನೇ ಉಳಿಯುತ್ತಿದ್ದನು. ಆಗ ತಾನು ಬಾವಿಸಿದ ಕಾರ್ಯವು ಕೈಗೊಡುತ್ತಿತ್ತು.' ಹೀಗೆ ಮುದುಕಿ ಹೇಳಿದಾಗ ಚಾಣಾಕ್ಯನು – “ಅವ್ವಾ, ನೀವು ಹೇಳಿದ ಹಾಗೆಯೆ ಮಾಡತಕ್ಕುದು' ಎಂದು ಹೇಳಿದನು. 

    ಕಾರ್ಯಸಿದ್ಧಯಕ್ಕುಮೆಂದೊಡಬ್ಬಾ ನಿಮ್ಮ ಪೇೞ್ದಂತುಟೆ ಕಜ್ಜಮೆಂದುಂಡು ಪೊಱಮಟ್ಟು ಶ್ರೀಪರ್ವತಕ್ಕೆ ಪೋಗಿ ಪಿರಿದು ತಂತ್ರಮಂ ಮಾಡಿ ಸಾಲಿಗರ ಬಿರ್ದಿಯ ಪೇೞ್ದಂತೆ ನಂದನ ನಾಡಂ ಕಿಡಿಸಿ ಸಾಮಂತ ಮಹಾಸಾಮಂತರ್ಕಳಂ ದ್ರವ್ಯದಿಂ ಭೇದಿಸಿ ತತ್ಪ್ರತಿಪಕ್ಷಮಂ ತನ್ನಂತೆ ಮಾಡಿ ತತ್ಸಂಬಂಗಳಂ ಪ್ರತಿಪಕ್ಷದಿಂದಂ ಕಿಡಿಸಿ ನಂದನೊರ್ವನೆ ಉೞದಾಗಳ್ ಚಂದ್ರಭುಕ್ತಂ ಬೆರಸು ಸಮಸ್ತಬಲಮೆಲ್ಲಮಂ ಕೂಡಿಕೊಂಡು ಮೇಲೆರ್ದು ಕಾದುವಾಗಳ್ ಮಹಾಪದ್ಮನ ಸಾಮಂತ ಮಹಾಸಾಮಂತರೊಡ್ಡಣಮನೊಡ್ಡಿ ರ್ದೊರಂ ಕಾದವೇೞ್ದೊಡಂ ಕಾದಲೊಲ್ಲದೆ ಕೆಮ್ಮಗಿರೆ ಮಹಾಪದ್ಮಂ ಭೇದಕ್ಕೆ ಪಡೆ ಸಂದು ದೆಂಬುದನಱದಂಜಿಯಾರುಮಱಯದಂತಿರೆ ಓಡಿ ಕೆಟ್ಟಂ ಮತ್ತಿತ್ತ ಸುಬಂಧು ಪಿರಿದು ಬೇಗಂ ಕಾಳಿಗಮಂ ಕಾದಿ ಸೋಲ್ತೊಡಾತನಂ ಪಿಡಿದು ಕಟ್ಟಿ ಸಂಕಲೆಯನಿಕ್ಕಿ ಸೆಱೆಯೊಳಿಟ್ಟಂ ಮತ್ತೆ ಚಾಣಾಕ್ಯಂ ಕಾಳಿಗಮಂ ಗೆಲ್ದು ಪಾಟಳೀಪುತ್ರಮಂ ಪೊಕ್ಕು ಮಹಾಪದ್ಮನರಸಿಯರ್ಕಳ್ಗಂ ಭಂಡಾರಕ್ಕಂ ಕಾಪನಿಟ್ಟು ಪೊೞಲ ಪ್ರಜೆಯಂ ಸಂತೈಸಿ ಮತ್ತಂ ಪ್ರಶಸ್ತ ದಿನ ವಾರ ನಕ್ಷತ್ರ ಮುಹೂರ್ತದೊಳ್ ಚಂದ್ರಭುಕ್ತಂಗೆ ರಾಜ್ಯಾಭಿಷೇಕಂಗೆಯ್ದು ಪಟ್ಟಂಗಟ್ಟಿ ಮಹಾಪದ್ಮನರಸಿ ಚಂದ್ರಮತಿ ಮಹಾದೇವಿಯಂ ಚಂದ್ರಭುಕ್ತಂಗೆ ಮಹಾದೇವಿ ಮಾಡಿ ಮತ್ತೆ ನಂದನ ಭಂಡಾರದೊಳಂ ತಮ್ಮ ಭಂಡಾರದೊಳಂ ದ್ರವ್ಯಮಿಲ್ಲದುದನಱದು ಪಾಟಳೀಪುತ್ರದ ಪ್ರಜೆಗಳಂ ನಾಡ ಪ್ರಜೆಗಳಂ ಬೞಯಟ್ಟಿ

    ಅವನು ಊಟ ಮಾಡಿ ಹೊರಟು ಶ್ರೀಪರ್ವತಕ್ಕೆ ಹೋಗಿ ದೊಡ್ಡಸೈನ್ಯವನ್ನು ಸಿದ್ಧಮಾಡಿದನು. ನೇಕಾರರ ಮುದುಕಿ ಹೇಳಿದ ಹಾಗೆ ನಂದನ ರಾಜ್ಯವನ್ನು ಕೆಡಿಸಿದನು. ಸಾಮಂತ ಮಹಾಸಾಮಂತರನ್ನು ಹಣ ಕೊಟ್ಟು ಬೇರ್ಪಡಿಸಿದನು. ಶತ್ರುಪಕ್ಷದವರನ್ನು ತನ್ನ ವಶ ಮಾಡಿಕೊಂಡನು. ಅವರ ಸಂಬಂಧದವರನ್ನು ಶತ್ರುಪಕ್ಷದವರಿಂದಲೇ ನಾಶಗೊಳಿಸಿದನು. ನಂದನೊಬ್ಬನೆ ಉಳಿದಾಗ ಚಂದ್ರಭುಕ್ತನನ್ನು ಕೂಡಿಕೊಂಡು, ಸಕಲಸೈನ್ಯಸಮೇತನಾಗಿ ದಾಳಿಮಾಡಿ ಯುದ್ಧಮಾಡುವ ಸಂದರ್ಭದಲ್ಲಿ, ಎದುರಿಗೆ ಸೈನ್ಯವನ್ನು ನಿಲ್ಲಿಸಿ ಕಾದಲು ಅಣಿಯಾಗಿದ್ದ ಮಹಾಪದ್ಮನ ಸಾಮಂತ ಮಹಾಸಾಮಂತರಿಗೆ ಕಾದಾಡಲು ಆಜ್ಞೆ ಬಂದರೂ ಅವರು ಕಾದಾಡಲೊಪ್ಪದೆ ಸುಮ್ಮನಿದ್ದರು. ತನ್ನ ಸೈನ್ಯವು ಭೇದೋಪಾಯಕ್ಕೆ ಒಳಗಾಯಿತೆಂದು ಮಹಾಪದ್ಮನು ತಿಳಿದು ಹೆದರಿ, ಯಾರೂ ತಿಳಿಯದ ಹೇಗೆ ಓಡಿ ಕೇಡನ್ನು ಹೊಂದಿದನು. ಅನಂತರ, ಇತ್ತ ಸುಬಂಧು ಬಹಳ ಹೊತ್ತು ಯುದ್ಧವನ್ನು ಮಾಡಿ ಸೋತನು. ಚಾಣಾಕ್ಯನು ಅವನನ್ನು ಹಿಡಿದು ಬಂಸಿ ಸಂಕೋಲೆ ತೊಡಿಸಿ, ಸೆರೆಮನೆಯಲ್ಲಿಟ್ಟನು. ಆಮೇಲೆ ಚಾಣಾಕ್ಯನು ಯುದ್ಧದಲ್ಲಿ ಜಯವನ್ನು ಗಳಿಸಿ, ಪಾಟಳೀಪುತ್ರನಗರವನ್ನು ಹೊಕ್ಕು ಮಹಾಪದ್ಮನ ರಾಣಿಯರಿಗೂ ಭಂಡಾರಕ್ಕೂ ಕಾವಲನ್ನಿಟ್ಟನು. ಪಟ್ಟಣದ ಪ್ರಜೆಗಳನ್ನೆಲ್ಲ ಸಮಾಧಾನಪಡಿಸಿದನು. ಆಮೇಲೆ ಮಂಗಳಕರವಾದ ದಿನ, ವಾರ, ನಕ್ಷತ್ರ, ಮುಹೂರ್ತದಲ್ಲಿ ಚಂದ್ರಭುಕ್ತನಿಗೆ ರಾಜ್ಯಾಭಿಷೇಕವನ್ನು ಮಾಡಿ ಪಟ್ಟಗಟ್ಟಿದನು. ಮಹಾಪದ್ಮನ ರಾಣಿಯಾದ ಚಂದ್ರಮತಿ ಮಹಾದೇವಿಯನ್ನು ಚಂದ್ರಭುಕ್ತನಿಗೆ ಮಹಾರಾಣಿಯಾಗಿ ಮಾಡಿದನು. ಅನಂತರ, ನಂದನ ಕೋಶಾಗಾರದಲ್ಲಾಗಲೀ ತನ್ನ ಕೋಶಾಗಾರದಲ್ಲಾದಲೀ ಹಣವಿಲ್ಲದುದನ್ನು ತಿಳಿದು ಪಾಟಳೀಪುತ್ರದ ಪ್ರಜೆಗಳನ್ನೂ ನಾಡಿನ ಪ್ರಜೆಗಳನ್ನೂ ದೂತರನ್ನು ಕಳುಹಿಸಿ ಬರಮಾಡಿ, 

    ಬರಿಸಿಯವರ್ಗೆಲ್ಲಮುಣಿಸಂ ಮಾಡಿ ಸೊರ್ಕಪ್ಪಾಹಾರಮನೂಡಿ ನಿಮ್ಮ ನಿಮ್ಮ ದ್ರವ್ಯಂಗಳಿರ್ದೆಡೆಯಂ ತೋಱಮೆಂದು ಬೆಸಗೊಂಡೊಡವರ್ಗಲ್ ಸೊರ್ಕಿ ಮೆಯ್ಯಱಯದನಿಬರುಂ ತಂತಮ್ಮ ದ್ರವ್ಯದೆಡೆಗಳಂ ತೋಱ ಪೇೞ್ದು ಕೊಟ್ಟರಿಂತನೇಕಸಹಸ್ರಕೋಟಿದ್ರವ್ಯಮಂ ಚಾಣಾಕ್ಯಂ ಪಡೆದು ಚಂದ್ರಭುಕ್ತಂಗೆ ತೋಱ ಭಂಡಾರಮಂ ತೀವಿಯರಮನೆ ಮುಂದಣಂಗಳದೊಳ್ ಇಂತೆಂದು ಪೇೞ್ದೂಡಿದಂ ಪನ್ನೆರಡು ವರ್ಷದಿಂದಂ ನಂದನ ವಂಶಮಂ ನಿರ್ಮೂಲಂ ಮಾಡಿ ಕಿಡಿಸುವೆನೆಂದೆನ್ನ ಪೂಣ್ದ ಪ್ರತಿಜ್ಞೆ ನೆಱೆದತ್ತು ಮತ್ತೆನಗೆ ಜಾದಿನೊಳೂಡಿದವರೆಡು ವಸ್ತ್ರಮೊಳವು ಪೊನ್ನ ಗುಂಡಿಗೆಯುಮುಂಟು ಮೂಱುದಂಡಮುಮೊಳವು ಮಗಧೆನಾಡ ದ್ರವ್ಯಮೆಲ್ಲಮಂ ತಂದು ಭಂಡಾರಮಂ ತೀವಿದೆಂ ಗುಣವಿಶೇಷಮನಱವರಸನುಮೆನಗೆ ಬಸಮಾದಂ ಪೊಡೆ ಪಱೆಯನೆಂದು ಪಱೆಯಂ ಪೊಯ್ಸಿಯೊಸೆದು ರಾಗಿಸಿ ತ್ರಿದಂಡಮನೆತ್ತಿ ಸೊರ್ಕಿದ ಪ್ರಜೆವೆರಸು ಲಟಹದಿಂದಾಡಿದೊಂ ಮತ್ತಂ ಶ್ರೀಪರ್ವತದೊಳಿರ್ದ ತನ್ನ ಪಾರ್ವಂತಿ ಯಶೋಮತಿಗೆ ಬೞಯಟ್ಟಿ ಬರಿಸಿಯಾಕೆಯೊಡನೆ ಭೋಗೋಪಭೋಗಂಗಳನನು ಭವಿಸುತ್ತಂ ಸಾಮಂತ ಮಹಾಸಾಮಂತರ್ಕಳ್ಗಂ ಜೀವಿತಂಗೆಯ್ದು ತಳವರ್ಗಮುಮಂ ಸಂತವಿಸಿ ಮಗಧವಿಷಯಮನಾಳುತ್ತಮಿಷ್ಟವಿಷಯಕಾಮಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತಂ ಚಂದ್ರಮತಿ ಮಹಾದೇವಿಗೆ ಗರ್ಭಮಾಗಿಯೊಂದು ದಿವಸಂ ರಥಮನೇಱದೊಡಾ ರಥದ ಚಕ್ರದ

    ಅವರಿಗೆಲ್ಲ ಭೋಜನವನ್ನು ಸಿದ್ಧಪಡಿಸಿ ಸೊಕ್ಕನ್ನು ಉಂಟುಮಾಡುವ ಆಹಾರವನ್ನು ಕೊಟ್ಟು ನಿಮ್ಮ ನಿಮ್ಮ ದ್ರವ್ಯಗಳು ಎಲ್ಲಿವೆಯೆಂಬುದನ್ನು ತೋರಿಸಿರಿ ಎಂದು ಅವರನ್ನು ಕೇಳಿದನು. ಆಗ ಅವರು ಸೊಕ್ಕೇರಿ ಮೈಮೇಲೆ ಎಚ್ಚರವಿಲ್ಲದವರಾಗಿ ಅವರೆಲ್ಲರೂ ತಮ್ಮ ತಮ್ಮ ಹಣವಿರುವ ಸ್ಥಳಗಳನ್ನು ತೋರಿಸಿ, ಹೇಳಿ, ಕೊಟ್ಟುಬಿಟ್ಟರು. ಹೀಗೆ ಅನೇಕ ಸಾವಿರ ಕೋಟಿ ಧನವನ್ನು ಚಾಣಾಕ್ಯನು ಪ್ರಜೆಗಳಿಂದಲೇ ಪಡೆದು ಚಂದ್ರಭುಕ್ತನಿಗೆ ತೋರಿಸಿ, ಭಂಡಾರವನ್ನು ಹಣದಿಂದ ತುಂಬಿಸಿ ಅರಮನೆಯ ಮುಂದುಗಡೆ ಇರತಕ್ಕ ಅಂಗಣದಲ್ಲಿ ಈ ರೀತಿಯಾಗಿ ಹೇಳುತ್ತ ಕುಣಿದಾಡಿದನು. “ಹನ್ನೆರಡು ವರ್ಷಗಳಲ್ಲಿ ನಂದನ ವಂಶವನ್ನು ಬೇರಿಲ್ಲದಂತೆ ಕಿತ್ತು ನಾಶಮಾಡುವೆನೆಂದು ಪ್ರತಿಜ್ಞೆ ಮಾಡಿದ್ದೆನು. ಆ ಪ್ರತಿಜ್ಞೆ ಈಗ ಈಡೇರಿತು. ಇನ್ನು ನನಗೆ ಕಾವಿಯನ್ನು ಬಳಿದಿರುವ ಎರಡು gಗಳಿವೆ. ಚಿನ್ನದ ಕಮಂಡಲು (ಜಲಪಾತ್ರೆ) ಇದೆ. ಮೂರು ಕೋಲುಗಳನ್ನು ಒಟ್ಟಿಗೆ ಕಟ್ಟಿರುವ ತ್ರಿದಂಡವಿದೆ. ಮಗಧನಾಡಿನ ಧನವನ್ನೆಲ್ಲ ತಂದು ರಾಜಭಂಡಾರವನ್ನು ಭರ್ತಿಮಾಡಿದ್ದೇನೆ. ವಿಶೇಷವಾದ ಗುಣವನ್ನು ತಿಳಿಯತಕ್ಕ ರಾಜನೂ ನನಗೆ ವಶವಾಗಿದ್ದಾನೆ. ಹರೆ (ತಂಬಟೆ)ಯನ್ನು ಬಾರಿಸು* – ಎಂದು ಹರೆಯನ್ನು ಹೊಡೆಯಿಸಿದನು. ಸಂತೋಷಗೊಂಡು ಪ್ರೀತಿಪಟ್ಟು ತನ್ನ ತ್ರಿದಂಡವನ್ನು ಎತ್ತಿಕೊಂಡು ವಿಜಯದ ಸೊಕ್ಕೇರಿದ ತನ್ನ ಪ್ರಜೆಗಳೊಂದಿಗೆ ರಮ್ಯವಾಗಿ ನರ್ತನಮಾಡಿದನು. ಆಮೇಲೆ ಶ್ರೀಪರ್ವತದಲ್ಲಿದ್ದ ತನ್ನ ಪತ್ನಿಯಾದ ಯಶೋಮತಿಯ ಬಳಿಗೆ ದೂತರನ್ನು ಕಳುಹಿಸಿ ಆಕೆಯನ್ನು ಬರಮಾಡಿದನು. ಆಕೆಯೊಂದಿಗೆ ಅನೇಕ ವಿಧದ ಸುಖಗಳನ್ನು ಅನುಭವಿಸುತ್ತ ಸಾಮಂತರಿಗೂ ಮಹಾಸಾಮಂತರಿಗೂ ಜೀವನೋಪಾಯದ ವ್ಯವಸ್ಥೆಯನ್ನು ಮಾಡಿದನು. ನಗರ ರಕ್ಷಕರ ವರ್ಗವನ್ನು ಸಮಾಧಾನಪಡಿಸಿ ಮಗಧದ ನಾಡನ್ನು ಆಳುತ್ತ ಪ್ರಿಯವಿಷಯದ ಬಯಸಿದ ಸುಖಗಳನ್ನೆಲ್ಲ ಅನುಭವಿಸುತ್ತ ಹೀಗೆಯೇ ಹಲವು ಕಾಲಕಳೆಯಿತು. ಅನಂತರ ಚಂದ್ರಮತಿ ಮಹಾರಾಣಿ ಗರ್ಭಿಣಿಯಾದಳು. 

    ಪತ್ತುಂ ಕದಿರ್ಗಳ್ ನೆಲದೊಳರ್ದುದಂ ಚಾಣಾಕ್ಯ ಕಂಡೀ ಚಂದ್ರಭುಕ್ತಂ ಮೊದಲಾಗಿ ಪೃಥ್ವಿಯನೇಕಚ್ಛತ್ರಚ್ಛಾಯೆಯಿಂ ದಶಮಯೂರರ್ಕ್ಕಳಾಳ್ವರೆಂದಾದೇಶಂಗೆಯ್ದಂ ಮತ್ತೆ ಕೆಲವು ದಿವಸದಿಂ ಚಂದ್ರಮತಿ ಮಹಾದೇವಿಗೆ ನವಮಾಸಂ ನೆಱೆದೊಂದು ದಿವಸಮರಸಂ ನಂಜಿನೊಳ್ ಬೆರಸಿದಾಹಾರಮನುಣ್ಬಾಗಳ್ ಪಕ್ಕದಿರ್ದರಸಿಗೆ ಅರಸನೊಡನುಣ್ಬ ಬಯಕೆಯಾದೊಡೆ ಬಾಳಂ ಕಿಳ್ತು ನಿಮಿರ್ದು ಪಕ್ಕದಿರ್ದ ಚಾಣಾಕ್ಯನ ದೃಷ್ಟಿಯಂ ಬಂಚಿಸಿ ಪ್ರಚ್ಚನ್ನದಿಂದಂ ತನ್ನ ಕೆಯ್ಯ ತುತ್ತನರಸನಂ ವಿಷಮಿಶ್ರಮೆಂದಱಯದೆ ಕೊಟ್ಟನದನಾಕೆ ಬಾಯೊಳಿಟ್ಟಾಗಳೆ ಚಾಣಾಕ್ಯಂ ಕಂಡು ತಲೆಯಂ ಪೋಗಿಱದು ಬಸಿಱಂ ಪೊೞ್ದು ಕೂಸಂ ಪೊಱಮಡಿಸುವುದಂ ಕಂಡು ಹಾ ಅಯ್ಯೋ ಎನ್ನ ಚಂದ್ರಮತಿ ಮಹಾದೇವಿ ಎನ್ನ ನಲ್ಲಳೆಯೆಂದು ಪ್ರಳಾಪಂಗೆಯ್ದು ದುಃಖಾಕ್ರಾಂತನಾಗಿ ತದ್ವಿಯೋಗದಿಂ ಚಂದ್ರಭುಕ್ತಂ ಪ್ರಾಣಪರಿತ್ಯಾಗಂಗೆಯ್ದು ಮತ್ತಾ ಕೂಸಿನ ತಲೆಯೊಳಿನಿಸಾನುಂ ವಿಷಬಿಂದು ಪನಿತುದಱಂದಾತಂಗೆ ಬಿಂದುಸಾಗರನೆಂದು ಪೆಸರನಿಟ್ಟು ಪಟ್ಟಂಗಟ್ಟಿ ಕೂಸಂ ತೋಱಯರಸುಗೆಯ್ಯುತ್ತಂ ಕಾಲಂ ಸಲೆ ಮತ್ತೆ ಬಿಂದುಸಾಗರಂ ನವಯೌವನನಾದಂದು ಚಾಣಾಕ್ಯಂಗೆ ಸಂಸಾರಶರೀರ ಭೋಗಂಗಳೊಳಾದಂ ವೈರಾಗ್ಯಮಾಗಿ ತಪಂಬಡುವ ಬಗೆಯಾಗಿ ಸುಬಂಧುವಂ ಸೆಱೆಯಿಂ ಬಿಡಿಸಿ ವರಿಸಿ ಕ್ಷಮೆಗೊಳಿಸಿ

    ಆಕೆ ಒಂದು ದಿವಸ ರಥದಲ್ಲಿ ಕುಳಿತಿರಲು ಆ ರಥದ ಗಾಲಿಯ ಹತ್ತೂ ಅರಕಾಲುಗಳು ನೆಲದಲ್ಲಿ ಹೂತುಹೋದವು. ಇವನ್ನು ಚಾಣಾಕ್ಯನು ಕಂಡು “ಈ ಚಂದ್ರಭುಕ್ತನಿಗೆ ಪ್ರಾರಂಭವಾಗಿ ಹತ್ತು ಮಂದಿ ಮೌರ್ಯರಾಜರು ಈ ಭೂಮಂಡಲವನ್ನು ಏಕಚ್ಛತ್ರದ ನೆರಳಿಗೆ ಒಳಗುಮಾಡಿ ಆಳುವರು* ಎಂದು ಭವಿಷ್ಯವನ್ನು ಹೇಳಿದನು. ಆಮೇಲೆ ಕೆಲವು ದಿವಸಗಳಲ್ಲಿ ಚಂದ್ರಮತಿ ಮಹಾರಾಣಿಗೆ ಒಂಬತ್ತು ತಿಂಗಳು ತುಂಬಿ ಅದೊಂದು ದಿವಸ, ರಾಜನು ವಿಷದಲ್ಲಿ ಮಿಶ್ರಮಾಡಿದ ಆಹಾರವನ್ನು ಉಣ್ಣುತ್ತಿದ್ದನು. ಆಗ ಪಕ್ಕದಲ್ಲಿದ್ದ ರಾಣಿಗೆ ರಾಜನೊಡನೆ ಊಟಮಾಡುವ ಬಯಕೆಯುಂಟಾಯಿತು. ಸಮೀಪದಲ್ಲಿಯೇ ಕತ್ತಿಯನ್ನು ಹಿರಿದು ಮೇಲಕ್ಕೆ ಚಾಚಿಕೊಂಡು ಚಾಣಾಕ್ಯನಿದ್ದನು. ರಾಜನು ಚಾಣಾಕ್ಯನಿಗೆ ತಿಳಿಯದ ಹಾಗೆ ಮರೆಯಾಗಿದ್ದು, ತನ್ನ ಕೈಯಲ್ಲಿದ್ದ ತುತ್ತನ್ನು ವಿಷದಿಂದ ಬೆರಸಿದುದೆಂಬುದನ್ನು ತಿಳಿಯದೆ, ರಾಣಿಗೆ ಕೊಟ್ಟನು. ಅದನ್ನು ಆಕೆ ಬಾಯಲ್ಲಿಟ್ಟಳು. ಆಗ ಅದನ್ನು ಚಾಣಾಕ್ಯನು ಕಂಡು, ತಲೆ ಕತ್ತರಿಸಿ ಹೋಗುವಂತೆ ಹೊಡೆದು, ಹೊಟ್ಟೆಯನ್ನು ಸೀಳಿ, ಹೊಟ್ಟೆಯೊಳಗಿದ್ದ ಮಗುವನ್ನು ಹೊರಗೆ ಹಾಕಿದನು. ಇದನ್ನು ಕಂಡು ಚಂದ್ರಭುಕ್ತನು “ಆಹಾ, ಅಯ್ಯೊ ! ನನ್ನ ಚಂದ್ರಮತಿ ಮಹಾರಾಣಿಯೇ, ನನ್ನ ಪ್ರೀತಿಯವಳೇ* ಎಂದು ಶೋಕಿಸುತ್ತ, ವ್ಯಸನದಿಂದ ಕೂಡಿದವನಾಗಿ, ಆಕೆಯ ಅಗಲಿಕೆಯಿಂದ ಪ್ರಾಣಬಿಟ್ಟನು. ಅನಂತರ ಆ ಮಗುವಿನ ತಲೆಯ ಮೇಲೆ ಕೊಂಚವಾಗಿ ವಿಷದ ಬಿಂದುಗಳು ಹನಿ ಹನಿಯಾಗಿ ಬಿದ್ದುದರಿಂದ ಆ ಮಗುವಿಗೆ ಬಿಂದುಸಾಗರನೆಂದು ಹೆಸರನ್ನಿಟ್ಟು ಪಟ್ಟಾಭಿಷೇಕ ಮಾಡಿ, ಚಾಣಾಕ್ಯನು ಆ ಮಗುವನ್ನು ತೋರಿಸಿಕೊಂಡು, ರಾಜ್ಯಭಾರ ಮಾಡುತ್ತಾ ಇದ್ದನು. ಹೀಗೆಯೇ ಕಾಲ ಕಳೆಯುತ್ತಿದ್ದಿತು. ಅನಂತರ, ಬಿಂದುಸಾಗರನು ಹೊಸ ಜವ್ವನಿಗನಾದನು. ಆಗ ಚಾಣಾಕ್ಯನಿಗೆ ಸಂಸಾರದಲ್ಲಿಯೂ ಶರೀರದ ಸುಖಗಳಲ್ಲಿಯೂ ಅತಿಯಾದ ವೈರಾಗ್ಯವುಂಟಾಗಿ ತಪಸ್ಸುಮಾಡುವ ಮನಸ್ಸಾಯಿತು. ಸುಬಂಧುವನ್ನು ಸೆರೆಯಿಂದ ಬಿಡಿಸಿ ಬರಮಾಡಿಕೊಂಡು ಅವನಿಗೆ ಕ್ಷಮೆಯನ್ನು ನೀಡಿ ಸನ್ನಾನದಿಂದಲೂ ದಾನಾದಿಗಳಿಂದಲೂ ಸತ್ಕಾರಮಾಡಿ, 

    ಸನ್ಯಾನದಾನಾದಿಗಳಿಂದಾತನಂ ಪೂಜಿಸಿ ಬಿಂದುಸಾಗರಂಗೆ ಮಂತ್ರಿ ಮಾಡಿಯರಸನಂ ಬೆಸಂಗೊಂಡೊಂಡಬಡಿಸಿಯೆಲ್ಲರುಮಂ ಕ್ಷಮೆಗೊಳಿಸಿ ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ಮತಿವರರೆಂಬಾಚಾರ್ಯರ ಪಕ್ಕದೆ ತಪಂಬಟ್ಟಾಗಮಮೆಲ್ಲಮಂ ಕಲ್ತಾಚಾರ್ಯರಾಗಿ ಪಲಂಬರ್ ಶಿಷ್ಯರ್ಕಳಂ ಮಾಡಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಪಲಕಾಲಮುಗ್ರೋಗ್ರ ತಪಶ್ಚರಣಂಗೆಯ್ದು ಮತ್ತೆ ಪಾಟಳೀಪುತ್ರದ ಸಾರೆ ಸೋಣೆಯೆಂಬ ತೊಱೆಯ ತಡಿಯ ತುಱಪಟ್ಟಿಯೊಳ್ ವಿಹಾರಿಸುತ್ತಂ ಬಂದಿರ್ದರಾ ಬರವಂ ಸುಬಂಧು ಕೇಳ್ದು ಮಹಾಪದ್ಮನ ರಾಜ್ಯಮಂ ಕೊಂಡುದುಮಂ ತನ್ನಂ ಸಂಕಲೆಯೊಳಿಟ್ಟು ಸೆಱೆಗೆಯ್ದು ಪಲಕಾಲಂ ನಮೆಯಿಸಿದ ಪಗೆಯುಮಂ ನೆನೆದು ಸಂಜೆವೊೞ್ತೂದಾಗಲ್ ಬಂದಿಸುವ ನೆವದಿಂದಂ ಪಿರಿದುಮರ್ಚನೆಯಂ ಕೊಂಡು ಪೋಗಿ ಚಾಣಾಕ್ಯಋಷಿಯರ್ ಮೊದಲಾಗೊಡೆಯ ಋಡಿಯರ್ಕಳನರ್ಚಿಸಿ ಗುರುಪರಿವಿಡಿಯಿಂದಂ ಬಂದಿಸಿ ಪಿರಿದು ಬೇಗಂ ಚಾಣಾಕ್ಯರಿಸಿಯೊಡನೆ ಗೋಷ್ಠಿಯಿರ್ದು ಪೋಪಾಗಳ್ ತನ್ನವರ್ಗ್ಗೆಂದಂ ಮಾಗಿಯ ದಿವಸಂ ರಿಸಿಯರ್ಕಳ್ ಸೀತದೊಳ್ ಸೆಡೆಗುಂ ಸೇದೆಗೆಡುವರದಱಂ ಬಳಸಿಯುಂ ಪಿರಿದುಂ ಗೊಬ್ಬರಮನೊಟ್ಟಿಮೆಂದು ಪಕ್ಕದಿರ್ದೊಟ್ಟಿಸಿ ಬಳಸಿಯುಂ ಕಿಚ್ಚಂ ತಗುಳ್ಚಲ್ವೇೞ್ದು

    ಅವನನ್ನು ಬಿಂದುಸಾಗರನಿಗೆ ಮಂತ್ರಿಯಾಗಿ ಮಾಡಿದನು. ಆಮೇಲೆ ಅರಸನನ್ನು ಕೇಳಿ ಅವನು ಒಪ್ಪುವಂತೆ ಮಾಡಿ, ಎಲ್ಲರಿಗೂ ಕ್ಷಮೆಯನ್ನಿತ್ತು ಬಾಹ್ಯ ಮತ್ತು ಅಭ್ಯಂತರ ಎಂಬ ಭೇದಗಳುಳ್ಳ ಪರಿಗ್ರಹಗಳನ್ನು ಬಿಟ್ಟು ಮತಿವರರೆಂಬ ಆಚಾರ್ಯರ ಬಳಿಯಲ್ಲಿ ತಪಸ್ಸಿಗೆ ಉಪದೇಶವನ್ನು ಪಡೆದನು. ಶಾಸ್ತ್ರಗಳೆಲ್ಲವನ್ನೂ ಕಲಿತು ಆಚಾರ್ಯರಾಗಿ ಅವರು ಹಲವು ಮಂದಿ ಶಿಷ್ಯರುಗಳನ್ನು ನಿರ್ಮಾಣಮಾಡಿದರು. ಅನಂತರ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂಭಾಗಗಳಲ್ಲಿ ಸಂಚಾರಮಾಡುತ್ತ ಹಲವು ಕಾಲ ಅತ್ಯಂತ ಕಠಿನವಾದ ತಪಸ್ಸನ್ನು ಆಚರಿಸಿ ಆಮೇಲೆ ಪಾಟಳೀಪುತ್ರದ ಸಮೀಪ ಸೋಣೆ ಎಂಬ ನದಿಯ ದಡದಲ್ಲಿರುವ ಆಕಳ ಹಟ್ಟಿಗೆ ಸಂಚಾರ ಮಾಡಿಕೊಂಡು ಬಂದು ಅಲ್ಲಿದ್ದರು. ಆ ಬರವನ್ನು ಸುಬಂಧು ಕೇಳಿ, ಚಾಣಾಕ್ಯನು ಮಹಾಪದ್ಮನ ರಾಜ್ಯವನ್ನು ತೆಗೆದುಕೊಂಡದ್ದನ್ನೂ ತನ್ನನ್ನು ಸಂಕಲೆಯಲ್ಲಿ ಬಂಸಿ ಸೆರೆಮನೆಯಲ್ಲಿಟ್ಟು ಹಲವು ಕಾಲ ಯಾತನೆಪಡಿಸಿದ ಶತ್ರುತ್ವವನ್ನೂ ನೆನೆದು, ಸಂಜೆಯ ಸಮಯವಾದಾಗ ನಮಸ್ಕಾರ ಮಾಡುವ ನೆವದಿಂದ ಹೆಚ್ಚಿನ ಪೋಜಾದ್ರವ್ಯಗಳನ್ನು ತೆಗೆದುಕೊಂಡು ಹೋದನು. ಚಾಣಾಕ್ಯ ಋಷಿಗಳು ಮೊದಲಾಗುಳ್ಳ ಋಷಿಗಳನ್ನು ಪೋಜಿಸಿ ಗುರುಗೌರವಾನುಕ್ರಮದಿಂದ ವಂದಿಸಿ ಬಹಳ ಹೊತ್ತು ಚಾಣಾಕ್ಯ ಋಷಿಯೊಡನೆ ಕೂಟದಲ್ಲಿದ್ದು, ಹೋಗುವಾಗ ತನ್ನವರೊಡನೆ ಹೀಗೆಂದನು – “ಚಳಿಗಾಲದ ದಿವಸದಲ್ಲಿ ಋಷಿಗಳು ಶೀತದಲ್ಲಿ ಮುದುಡಿಕೊಳ್ಳುವರು. ಆಯಾಸಗೊಂಡು ಕೆಡುವರು. ಆದುದರಿಂದ ಸುತ್ತಲೂ ಹೆಚ್ಚು ಕಾಡುಬೆರಣಿಯನ್ನು ರಾಶಿಹಾಕಿರಿ*, ಹೀಗೆ ಹೇಳಿ ಹತ್ತಿರದಲ್ಲಿದ್ದು ರಾಶಿ ಹಾಕಿಸಿ, ಸುತ್ತಲೂ ಬೆಂಕಿಯನ್ನು ಹೊತ್ತಿಸುವಂತೆ ನೇಮಿಸಿ ಪಟ್ಟಣಕ್ಕೆ ಹೋದನು. ಅನಂತರ ಆ ಬೆರಣಿಯ ಬೆಂಕಿ ಸುತ್ತಲೂ ಆವರಿಸಿ ತಮ್ಮನ್ನು ಸುಡಲು ತೊಡಗಿತು. ಆಗ ಚಾಣಾಕ

ಪೊೞಲ್ಗೆ ಪೋದಂ ಮತ್ತೆ ಗೊಬ್ಬರದ ಕಿಚ್ಚು ಬಳಸಿಯುಂ ತಮ್ಮಂ ಸುಡೆ ಚಾಣಾಕ್ಯ ಋಷಿಯರ್ ಮೊದಲಾಗೊಡೆಯ ರಿಸಿಯರ್ಕಳೆಲ್ಲಂ

ಗಾಹೆ || ಛಿಜ್ಜಉ ಭಿಜ್ಜಉ ಜಾಉ ಖಉ ಜೋ ಇಯ ಏಹು ಸರೀರು
ಅಪ್ಹಾ ಭಾವಹಿ ಣಿಮ್ಮಲಉ ಜೇಂ ಪಾವಹಿ ಭವತೀರು ||

ಖಮ್ಮಾಮಿ ಸವ್ವಜೀವಾಣಂ ಸವ್ವೇ ಜೀವಾ ಖಮಂತು ಮೇ
ಮೆತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣಚಿ ||

ಎಂದಿಂತು ಕ್ಷಮೆಯಂ ಭಾವಿಸಿ ಚತುರ್ವಿಧಮಪ್ಪಾಹಾರಶರೀರಮುಮಂ ತೊಱೆದಿಂಗಿಣೀಮರಣದಿಂ ಶುಭಪರಿಣಾಮದೊಳ್ ಕೂಡಿ, ಮಿಕ್ಕ ರತ್ನತ್ರಯಮನಾರಾಸಿ ಸನತ್ಕುಮಾರಕಲ್ಪದೊಳ್ ಸರ್ವಾರ್ಥಮೆಂಬ ವಿಮಾನದೊಳ್ ಚಾಣಾಕ್ಯ ರಿಸಿಯರ್ ಪುಟ್ಟಿದರ್ ಮತ್ತುೞದ ಋಷಿಯರ್ಕಳೆಲ್ಲಂ ಸೌಧರ್ಮಕಲ್ಪಂ ಮೊದಲಾಗೊಡೆಯ ಕಲ್ಪಂಗಳೊಳ್ ಪುಟ್ಟಿದರ್ ಮತ್ತೆ ಪೆಱರುಂ ಸಂನ್ಯಸನಂಗೆಯ್ದಿರ್ದ ಕ್ಷಪಣಕರುಂ ಚಾಣಾಕ್ಯರಿಸಿಯರಂ ಮನದೊಳ್ ಬಗೆದು ಚತುರ್ವಿಧಮಪ್ಪುಪಸರ್ಗಮುಮಂ ಪಸಿವುಂ ನೀರೞ್ಕೆ ಮೊದಲಾಗೊಡೆಯ ಇಪ್ಪತ್ತೆರಡು ಪರೀಷಹಂಗಳಂ ವ್ಯಾಗಳೊಳಪ್ಪ ವೇದನೆಗಳುಮಂ ಸೈರಿಸಿ ಶುಭಪರಿಣಾಮದಿಂ ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳನಾರಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

ಋಷಿಗಳು ಮೊದಲಾಗುಳ್ಳ ಋಷಿಗಳೆಲ್ಲರೂ ಈ ರೀತಿ ಹೇಳಿಕೊಂಡರು – ಈ ಶರೀರವು ಕತ್ತರಿಸಲ್ಪಡಲಿ, ಸೀಳಲ್ಪಡಲಿ, ಅಥವಾ ನಾಶವಾಗಲಿ ಎಲೈ ಯೋಗಿಯೇ, ಯಾವುದರಿಂದ ಸಂಸಾರ ಸಮುದ್ರದ ಆಚೆಯ ತೀರವನ್ನು ಪಡೆಯುವೆವೋ, ಆ ನಿರ್ಮಲನಾದ ಆತ್ಮನನ್ನು ಧ್ಯಾನಮಾಡು. ನಾನು ಎಲ್ಲ ಜೀವಗಳನ್ನು ಕ್ಷಮಿಸುತ್ತೇನೆ. ಎಲ್ಲ ಜೀವಗಳೂ ನನ್ನನ್ನು ಕ್ಷಮಿಸಲಿ. ಸರ್ವಭೂತಗಳಲ್ಲಿಯೂ ನನಗೆ ಮೈತ್ರಿಯಿದೆ. ನನಗೆ ವೈರವು ಎಲ್ಲಿಯೂ ಇಲ್ಲ. ಈ ರೀತಿ ಹೇಳಿ ಕ್ಷಮೆಯನ್ನು ಯೋಚಿಸಿ, ನಾಲ್ಕುವಿಧದ ಆಹಾರದ ಶರೀರವನ್ನು ತೊರೆದು ಇಂಗಿಣೀಮರಣದಿಂದ ಶುಭವಾದ ಪರಿಣಾಮದಲ್ಲಿ ಕೂಡಿ ಶ್ರೇಷ್ಠವಾದ ರತ್ನತ್ರಯವನ್ನು ಆರಾಸಿ ಸನತ್ಕುಮಾರ ಎಂಬ ಸ್ವರ್ಗದಲ್ಲಿ ಸರ್ವಾರ್ಥವೆಂಬ ಏಳು ಅಂತಸ್ತಿನ ಅರಮನೆಯಲ್ಲಿ ಚಾಣಾಕ್ಯ ಋಷಿಗಳು ಹುಟ್ಟಿದರು. ಆಮೇಲೆ ಉಳಿದ ಋಷಿಗಳೆಲ್ಲರೂ ಸೌಧರ್ಮಕಲ್ಪವೇ ಮೊದಲಾಗುಳ್ಳ ಸ್ವರ್ಗಗಳಲ್ಲಿ ಹುಟ್ಟಿದರು. ಅನಂತರ, ಸಂನ್ಯಾಸವನ್ನು ಹಿಡಿದ ಎತರ ಜೈನ ಯತಿಗಳು ಕೂಡ, ಚಾಣಾಕ್ಯ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ನಾಲ್ಕು ವಿಧಗಳಾದ ಉಪಸರ್ಗವನ್ನೂ ಹಸಿವು ಬಾಯಾರಿಕೆ ಮೊದಲಾಗಿ ಉಳ್ಳ ಇಪ್ಪತ್ತೆರಡು ಬಗೆಯ ಪರೀಷಹಗಳನ್ನೂ ರೋಗಗಳು ಬಂದು ಉಂಟಾಗುವ ನೋವುಗಳನ್ನೂ ಸಹಿಸಿಕೊಂಡು ಶುಭಕರವಾದ ಪರಿಣಾಮದಿಂದ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ರತ್ನತ್ರಯವನ್ನು ಆರಾಸಿ, ಸ್ವರ್ಗ – ಮೋಕ್ಷ ಸುಖಗಳಿಗೆ ಹೋಗಲಿ !

*****ಕೃಪೆ: ಕಣಜ****



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ