ಆರಾಧಣಂ ಪವಣ್ಣೋ ಝಾಣೇಣ ಅವಂತಿ ಸುಕುಮಾರೋ ||
*ಭಲ್ಲುಕ್ಕಿಯೇಣ – ಮುನ್ನಿನ ಜನ್ನಾಂತರದತ್ತಿಗೆಯಪ್ಪ, ಪೆಣ್ಣರಿಯಿಂದಂ, ಣಿಚ್ಚಂ ಖಜ್ಜಂತೋಮೂಱುದಿವಸಂ ನಿರಂತರಮಿರುಳುಂ ಪಗಲುಂ ತಿನೆಪಡುತಿರ್ದೊನಾಗಿಯುಂ, ಘೋರ ವೇದಣಠ್ಠೋಪಿ – ಕಡಿದಪ್ಪ ವೇದನೆಯಿಂದಂ ಬೞ*ದೊನಾಗಿಯೂ, ಆರಾಧಣಂ – ಸಮ್ಯಗ್ದರ್ಶನ ಜ್ಞಾನ ಚಾರಿತ್ರಾತ್ಮಕಮಪ್ಪಾರಾಧನೆಯಂ, ಝಾಣೇಣ – ಉತ್ತಮ ಧ್ಯಾನದಿಂದಂ, ಅವಂತಿ ಸುಕುಮಾರೋ – ಆವಂತಿಯೆಂಬ ಸುಕುಮಾರಸ್ವಾಮಿ, ಪವಣ್ಣೋ – ಪೊರ್ದಿದೊಂ* ಅದೆಂತೆಂದೊಡೆ
ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ವತ್ಸೆಯೆಂಬುದು ನಾಡಲ್ಲಿ ಕೌಸಂಬಿಯೆಂಬುದು ಪೊೞಲದನಾಳ್ವೊನತಿಬಳನೆಂಬರಸನಾತನ ಮಹಾದೇವಿ ಮನೋಹರಿಯೆಂಬೊಳ್ ಪೆಸರ್ಗೆ ತಕ್ಕಂತೆ ನೋಡಿದರೆಲ್ಲರ ಕಣ್ಣಾಲಿಗೆ ಸೊಗಯಿಸುವಳ್ ಸತ್ಯಶೌಚಾಚಾರಂಗಳಿಂ ಕೊಡಿದೊಳ್ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡಯಳಂತವರ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆ ಮತ್ತಾ ಅರಸನ ಮಂತ್ರಿ ಸೋಮಶರ್ಮನೆಂಬೊನಾತನ ಭಾರ್ಯೆ ಕಾಶ್ಯಪಿಯೆಂಬೊಳ್ – ಇರ್ವರ್ಗಂ ಮಕ್ಕಳಗ್ನಿಭೂತಿ ವಾಯುಭೂತಿಯೆಂಬವರ್ಗಳ್ ತಾಯ್ ತಂದೆವಿರ ಕೇಳ್ಪಿಯಂ ಗೆಯ್ಯದಾ ವೇದಂ ಮೊದಲಾಗೊಡೆಯ ಶಾಸ್ತ್ರಂಗಳನೋದದೆ ತಂದೆ ಪಡೆದ ಕಸವರಮಂ ಬಿಯಂಗೆಯ್ಯುತ್ತುಂ ಸಪ್ತವ್ಯಸನಾಭಿಭೂತರಾಗಿ ನೆಗೞುತ್ತಿರೆಯಿರೆ ಪಲಕಾಲದಿಂ ತಂದೆ ಕೞೆದೊಡೆ ಸೋಮಶರ್ಮಂಗೆ ಮಕ್ಕಳೊಳರಿಲ್ಲೆಂದರಸಂ ಬೆಸಗೊಂಡೊಡೊಳರೆಂದು ಪೇೞ್ದೊಡವರ್ಗೆ ಬೞೆಯಟ್ಟಿವರಿಸಿ ಮಜ್ಜನದೊಳ್ ಮಿಸಿಸಿ ಉಡಿಸಿ ತುಡಿಸಿಯೂಡಿ ತಂಬುಲಂಗೊಟ್ಟುಬ್ಬೆಗಂಬಡದಿರಿ ಮೆಂದು ನುಡಿದವರ್ಗ್ಗಳ ದು:ಖಮನಾಱ*ಸಿ ಬೀಡಿಂಗೆ ಪೋಗಲ್ವೇೞ್ದು ಕೆಲವು ದಿವಸದಿಂ ಬೞೆಯಟ್ಟಿ ವರಿಸಿ ನೀವಾ ವೋದುಗಳಂ ಬಲ್ಲಿರೆಂದಿರ್ವರುಮಂ ಬೆಸಗೊಂಡೊಡವರ್ಗ್ಗಳ್ ತಲೆಯಂ ಬಾಗಿ ಮೞುಮಾತುಗುಡದೆ ಕಣ್ಣ ನೀರಂ ತೀವಿ ನೆಲನಂ ಬರೆಯುತ್ತಿರೆ
* ಅವಂತಿ ಸುಕುಮಾರ ಎಂತಲೂ ಹೆಸರುಳ್ಳ ಸುಕುಮಾರಸ್ವಾಮಿಯನ್ನು ಹಿಂದಿನ ಜನ್ಮಾಂತರದಲ್ಲಿ ಅತ್ತಿಗೆಯಾಗಿದ್ದ ಹೆಣ್ಣುನರಿ ಎಡೆಬಿಡದೆ ಮೂರುದಿವಸ ಇರಳೂ ಹಗಲೂ ಕಚ್ಚಿ ತಿನ್ನುತ್ತಿತ್ತು. ಈ ಕಠಿಣವಾದ ನೋವಿನಿಂದ ಸತ್ತವನಾದರೂ ಶ್ರೇಷ್ಠವಾದ ಧ್ಯಾನದಿಂದ ಅವನು ಸಮ್ಯಗ್ದರ್ಶನ ಸಮ್ಯಗ್ eಜ್ಞಾನ ಸಮ್ಯಕ್ ಚಾರಿತ್ರ ಎಂಬ ರತ್ನತ್ರಯಗಳಿಂದ ಕೂಡಿದ ಆರಾಧನೆಯನ್ನು ನಡೆಸಿದನು.* ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ವತ್ಸೆ ಎಂಬ ನಾಡಿದ್ದಿತು. . ಆ ನಾಡಿನ ಪಟ್ಟಣ ಕೌಸಂಬಿ. ಅದನ್ನು ಅತಿಬಳನೆಂಬ ಅರಸನು ಆಳುತ್ತಿದ್ದನು. ಅವನ ಪಟ್ಟದ ರಾಣಿಯ ಹೆಸರು ಮನೋಹರಿ. ಆಕೆ ಹೆಸರಿಗೆ ತಕ್ಕಂತೆ ನೋಡಿದವರೆಲ್ಲರ ಕಣ್ಣಿಗೂ ಚೆಲುವೆಯಾಗಿದ್ದಳು. ಸತ್ಯ – ಶುಚಿತ್ವ – ಸದಾಚಾರಗಳಿಂದ ಕೂಡಿದ್ದಳು, ಅತ್ಯಂತ ರೂಪ – ಸೌಂದರ್ಯದಿಂದಲೂ ಸೌಭಾಗ್ಯ, ಕಾಂತಿ ಹಾವ, ಭಾವ, ವಿಲಾಸ, ವಿಭ್ರಮಗಳನ್ನು ಉಳ್ಳವಳಾಗಿದ್ದಳು. ಆಂತು ಅವರಿಬ್ಬರು ತಮ್ಮ ಪ್ರೀತಿಯ ವಿಷಯದ ಸುಖಗಳನ್ನು ಅನುಭವಿಸುತ್ತಾ ಇದ್ದರು. ಆ ಅರಸನ ಮಂತ್ರಿ ಸೋಮಶರ್ಮನು. ಆತನ ಹೆಂಡತಿ ಕಾಶ್ಯಪಿಯೆಂಬವಳು. ಈ ಇಬ್ಬರಿಗೆ ಅಗ್ನಿಭೂತಿ ವಾಯುಭೂತಿ ಎಂಬಿಬ್ಬರು ಮಕ್ಕಳು. ಇವರು ತಂದೆತಾಯಿಗಳ ಮಾತನ್ನೇ ಕೇಳುತ್ತಿರಲಿಲ್ಲ. ವೇದ ಮುಂತಾದ ಯಾವ ಶಾಸ್ತ್ರಗಳನ್ನೂ ಓದಲಿಲ್ಲ. ತಂದೆ ಸಂಪಾದಿಸಿದ ಸಂಪತ್ತನ್ನೆಲ್ಲ ವೆಚ್ಚಮಾಡುತ್ತ ಬೇಟೆ, ಜೂಜು, ಮಾಂಸಸೇವನೆ, ಮದ್ಯಪಾನ, ವೇಶ್ಯಾಗಮನ, ಕಳ್ಳತನ, ದುರ್ವಾಕ್ಯ – ಎಂಬ ಏಳು ಬಗೆಯ ಕೆಟ್ಟ ಚಟಗಳಿಗೆ ಬಲಿಯಾಗಿ ನಡೆಯುತ್ತಿದ್ದರು. ಹೀಗೆ ಹಲವು ಕಾಲ ಕಳೆಯಿತು. ತಂದೆ ಸೋಮಶರ್ಮನು ತೀರಿಹೋದನು. ಅತಿಬಳ ಮಹಾರಾಜನು ಸೋಮಶರ್ಮನಿಗೆ ಮಕ್ಕಳಿದ್ದಾರೋ ಇಲ್ಲವೋ ಎಂದು ವಿಚಾರಿಸಿದನು ; ಇದ್ದಾರೆಂದು ತಿಳಿದು, ಒಡನೆ ದೂತರನ್ನು ಕಳುಹಿಸಿ ಅವರಿಬ್ಬರನ್ನೂ ಬರಿಸಿದನು. ಅವರಿಗೆ ಪೂರ್ಣಸ್ನಾನ ಮಾಡಿಸಿ, ಬಟ್ಟೆಯುಡಿಸಿ, ತಕ್ಕ ಭೂಷಣಗಳನ್ನು ಕೊಡಿಸಿ, ಊಟಮಾಡಿಸಿದನು, ತಾಂಬೂಲ ಕೊಟ್ಟು ‘ನೀವು ದುಃಖ ಪಡದಿರಿ”’ ಎಂದು ಹೇಳಿ ಅವರ ವ್ಯಸನವನ್ನು ನಿವಾರಿಸಿ, ತಮ್ಮ ಮನೆಗೆ ಕಳುಹಿಸಿ ಕೊಟ್ಟನು. ಕೆಲವು ದಿನಗಳ ನಂತರ ರಾಜನು ಪುನಃ ದೂತರನ್ನು ಕಳುಹಿಸಿ ಅವರನ್ನು ಬರಮಾಡಿದನು. “ ನೀವು ಯಾವ ವಿದ್ಯೆಗಳನ್ನು ಬಲ್ಲರಿ?*’ ಎಂದು ಇಬ್ಬರನ್ನೂ ಕೇಳಿದನು. ಆಗ ಅವರು ತಲೆಬಗ್ಗಿಸಿದರು ; ಪ್ರತ್ಯುತ್ತರ ಕೊಡಲಿಲ್ಲ. ಕಣ್ಣೀರನ್ನು ತುಂಬಿ ನಾಚಿಕೆಯಿಂದ ನೆಲದ ಮೇಲೆ ಕಾಲ ಬೆರಳಿನಿಂದ ಗೀರತೊಡಗಿದರು.
ಸಭೆಯೊಳಿರ್ದ್ದವರ್ಗ್ಗಳೆಲ್ಲಂ – ಇವರ್ ಮೂರ್ಖರೇನುಮೋದುಗಳನಱ*ಯರ್ ಸಪ್ತವ್ಯಸನಾಭಿಭೂತರೆಂದರಸಂಗೆ ಪೇೞ್ದೊಡರಸನವರ್ಗಳನಟ್ಟಿ ಕಳೆದವರ ದಾಯಿಗಂ ಶಾಸ್ತ್ರಂಗಳಂ ಬಲ್ಲೊಂಗಂ ಮಂತ್ರಿಪದವಿಯಂ ಬಾೞುಮಂ ಪ್ರತಿಪತ್ತಿಯುಮಂ ಕೊಟ್ಟುದಂ ಕೇಳ್ದಿರ್ವರುಮುಬ್ಬೆಗಂಬಟ್ಟು ವೈರಾಗ್ಯಪರಾಯಣರಾಗಿ ಕಪ್ಪಡಮುಟ್ಟು ಬೈಕಂದಿರಿದಿನ್ನಪ್ಪೊಡವೋದುವಮೆಂದು ತಾಯ್ಗೆ ನುಡಿದೊಡಂತಪ್ಪೊಡೆ ಮಕ್ಕಳಿರಾ ಮಗಧೆಯೆಂಬುದು ನಾಡಲ್ಲಿ ರಾಜಗೃಹಮೆಂಬುದು ಪೊೞಲದನಾಳ್ವೊಂ ಸುಬಲನೆಂಬರಸನಾತನ ಮಹಾದೇವಿ ಸುಪ್ರಭೆಯೆಂಬೊಳವರ್ಗ್ಗೆ ಮಂತ್ರಿಯೆಮ್ಮಣ್ಣಂ ಸೂರ್ಯಮಿತ್ರನೆಂಬೊಂ ಎಲ್ಲಾ ಓದುಗಳುಮಂ ಬಲ್ಲೊನಾತಂ ನಿಮ್ಮನೋದಿಸಿ ಯೋಗ್ಯರಂ ಮಾಡುವಂತಿರೆ ನಿರೂಪಿಸಿ ಕಲ್ಪಿಸಿಯೋಲೆಯಂ ಬರೆಯಿಸಿ ನಿಮ್ಮ ಕಯ್ಯೊಳಟ್ಟಿದಪೆಂ ನೀಮುಂ ಪೋಗಿ ನಿಮ್ಮ ಮಾವನ ಪಕ್ಕದೊಳೋದಿಮೆಂದೋಲೆಯಂ ಬರೆಯಿಸಿ ಕೊಟ್ಟೊಡವರ್ಗ್ಗಳುಂ ತಾಯಂ ಬೀೞ್ಕೊಂಡು ಕತಿಪಯ ದಿವಸಂಗಳಿಂ ರಾಜ ಗೃಹಮನೆಯ್ದಿ ಸೂರ್ಯಮಿತ್ರನ ಮನೆಯಂ ಬೆಸಗೊಂಡು ಪೋಗಿ ಕಂಡೋಲೆಯನಿಕ್ಕಿದೊಡೆ ಸೂರ್ಯಮಿತ್ರನೆಲ್ಲಿಂ ಬಂದಿರಾರೋಲೆಯೆಂದು ಬೆಸಗೊಂಡೊಡೆ – – ಕೌಸಂಬಿಯಿಂ ಬಂದೆವು ನಿಮ್ಮ ತಂಗೆಯಪ್ಪ ಕಾಸ್ಯಪಿಯಟ್ಟಿ ದೋಲೆಯೆಂದೊಡೋಲೆಯಂ ಬಾಜಿಸಿ ನೋಡಿ ಸೋಮಶರ್ಮಂ ಕೞೆದುದುಮಂ ಮಂತ್ರಿಪದವಿ ಪೆಱರ್ಗ್ಗಾದುದುಮಂ ಮಕ್ಕಳ್ ಸಪ್ತವ್ಯಸನಾಭಿಭೂತಾರಾಗಿ ಬಾೞ*ಂ ಕೆಟ್ಟುದುಮಂ ಶಾಸ್ತ್ರಜ್ಞರುಂ ಬುದ್ಧಿಯೊಡೆಯರುಂ ಯೋಗ್ಯರುಮಪ್ಪಂತು ಮಾಡಿಮೆಂದು ಮಕ್ಕಳಂ ತನಗೆ ನಿರೂಪಿಸಿಯಟ್ಟಿದುದುಮನಿಂತಿವೆಲ್ಲಂ ಬಾಜಿಸಿ ನೋಡಿ – ಇವಂದಿರ್ಗ್ಗೆ ಪಸರಂಗೊಟ್ಟೆನಪ್ಪೊಡೆ ಮುನ್ನಿನಂತುರ್ಕಿ ಕಿಡುವರೆಂದು ಮನದೆ ಬಗೆದಗ್ನಿಭೂತಿ ವಾಯುಭೂತಿಗಳ್ಗಿಂತೆಂದಂ – ಕಾಸ್ಯಪಿಯೆಂಬೊಳೆನಗೆ ತಂಗೆಯಿಲ್ಲ ಸೋಮಶರ್ಮನೆಂಬೊಂ ಮಯದುನನುಮಿಲ್ಲ ಸೂರ್ಯಮಿತ್ರನೆಂಬ ಪೆಸರನಗುಂಟು ನಿಮ್ಮ ಮಾವನಪ್ಪ ಸೂರ್ಯಮಿತ್ರನಲ್ಲೆನೆಂದವರ್ಗ್ಗೆ ನುಡಿದುಂ ಮತ್ತಮಿಂತೆಂದಂ ನೀಮಾರ್ಗ್ಗಾರಾದೊಡಮೇಂ ವಿದ್ಯಾರ್ಥಿಗಳಾಗಿಯೋದಂ ಕಲ್ವೆಮೆಂಬೞ್ತೆಯೊಳ್ ಬಂದಿರಪ್ಪೊಡೆ ಬೈಕಂದಿರಿದು ಕಪ್ಪಡಮುಟ್ಟಿರುಳುಂ ಪಗಲುಮಲಸದೆ ನಿರ್ಬಂಧದಿಂದೋದಲಾರ್ಪೊಡೆ ನಿಮ್ಮನೋದಿಸಲಕ್ಕುಮೆಂದೊಡವರ್ಗಳುಮಿಂ ದಯೆಗೆಯ್ಯಿಂ ಮಹಾಪ್ರಸಾದಮೆಂದು ಪೊಡೆಮಟ್ಟು
ಆಗ ಸಭೆಯಲ್ಲದ್ದವರೆಲ್ಲರೂ ರಾಜನಿಗೆ ಹೀಗೆಂದರು – “ಇವರು ತಿಳಿಗೇಡಿಗಳು. ವಿದ್ಯೆಗಳೇನನ್ನೂ ತಿಳಿಯರು. ಸಪ್ತವ್ಯಸನಗಳ ಬಾಧೆಗೆ ಒಳಗಾದವರು* ಆಗ ರಾಜನು ಅವರನ್ನು ಅಲ್ಲಿಂದ ಓಡಿಸಿಬಿಟ್ಟನು. ಅವರ ದಾಯಾದಿಯಾಗಿದ್ದು ಶಾಸ್ತ್ರಗಳನ್ನೆಲ್ಲಾ ತಿಳಿದವನಾದ ಒಬ್ಬನಿಗೆ ಮಂತ್ರಿ ಪದವಿಯನ್ನೂ ಜೀವಿಕೆಯನ್ನೂ ಗೌರವವನ್ನೂ ಕೊಟ್ಟನು. ಈ ಸಂಗತಿಯನ್ನು ಅಗ್ನಿಭೂತಿ ವಾಯುಭೂತಿ ಇಬ್ಬರೂ ಕೇಳಿ ವ್ಯಸನಪಟ್ಟರು. ಅವರು ವೈರಾಗ್ಯದಿಂದ ಹರಕು ಬಟ್ಟೆಯನ್ನುಟ್ಟು, ಭಿಕ್ಷೆ ಬೇಡಿಕೊಂಡಾದರೂ ಇನ್ನಾದರೂ ಓದೋಣ ಎಂದುಕೊಂಡು, ತಮ್ಮ ತಾಯಿಗೆ ಈ ಸಂಗತಿಯನ್ನು ತಿಳಿಸಿದರು. ಆಗ ಕಾಶ್ಯಪಿ ಅವರೊಡನೆ ಹೀಗೆ ಹೇಳಿದಳು – “ಮಕ್ಕಳೇ, ಮಗಧೆ ಎಂಬ ನಾಡಿನಲ್ಲಿ ರಾಜಗೃಹ ಎಂಬ ಪಟ್ಟಣವಿದೆ. ಅದನ್ನು ಸುಬಲನೆಂಬ ರಾಜನು ಆಳುತ್ತಿರುವನು. ಅವರ ರಾಣಿ ಸುಪ್ರಭೆ. ಅವರಿಗೆ ಮಂತ್ತಿಯಾಗಿರುವ ಸೂರ್ಯಮಿತ್ರ ನನ್ನಣ್ಣ. ಅವನು ಎಲ್ಲ ವಿದ್ಯೆಗಳನ್ನೂ ಬಲ್ಲವನು. ಆತನು ನಿಮ್ಮನ್ನು ಓದಿಸಿ ಯೋಗ್ಯರನ್ನಾಗಿ ಮಾಡಲು ಹೇಳಿ ತಿಳಿಸಿ ಪತ್ರ ಬರೆಯಿಸಿ ನಿಮ್ಮ ಕೈಯಲ್ಲಿ ಕಳುಹಿಸುತ್ತೇನೆ. ನೀವು ಹೋಗಿ ನಿಮ್ಮ ಮಾವನ ಬಳಿಯಿದ್ದು ವಿದ್ಯೆ ಕಲಿಯಿರಿ*. ಹೀಗೆಂದು ಆಕೆ ಪತ್ರ ಬರೆಸಿ ಕೊಟ್ಟಳು. ಅವರಿಬ್ಬರೂ ತಾಯಿಯನ್ನು ಬೀಳ್ಕೊಂಡರು. ಕೆಲವು ದಿವಸಗಳಲ್ಲಿ ರಾಜಗೃಹಕ್ಕೆ ಬಂದರು. ಅಲ್ಲಿ ಕೇಳಿಕೊಂಡು ಸೂರ್ಯಮಿತ್ರನ ಮನೆಗೆ ಹೋದರು. ಅವನನ್ನು ಕಂಡು ಪತ್ರವನ್ನು ಕೊಟ್ಟರು. ಆಗ ಸೂರ್ಯಮಿತ್ರನು “ನೀವು ಎಲ್ಲಿಂದ ಬಂದಿರಿ ? ಯಾರ ಪತ್ರವಿದು ? * ಎಂದು ಕೇಳಿದನು. ಅದಕ್ಕೆ ಇವರು “ನಾವು ಕೌಸಂಬಿಯಿಂದ ಬಂದೆವು. ಈ ಪತ್ರವನ್ನು ನಿಮ್ಮ ತಂಗಿ ಕಾಶ್ಯಪಿ ಕಳುಹಿಸಿದಳು* ಎಂದರು. ಸೂರ್ಯಮಿತ್ರನು ಆ ಪತ್ರವನ್ನು ಓದಿ ನೋಡಿದನು. ಸೋಮಶರ್ಮನು ತೀರಿಹೋದುದು, ಮಂತ್ರಿಪದವಿ ಬೇರೆಯವರಿಗೆ ಆದುದು, ಮಕ್ಕಳು ಕೆಟ್ಟ ಚಟಗಳಿಗೆ ಬಲಿಬಿದ್ದು ಜೀವನೋಪಾಯವನ್ನೇ ಕಳೆದುಕೊಂಡುದು, ಇವರನ್ನು ಶಾಸ್ತ್ರಜ್ಞರೂ ಬುದ್ದಿವಂತರೂ ಯೋಗ್ಯರೂ ಆಗುವಂತೆ ಮಾಡಬೇಕೆಂದು ಸೂಚಿಸಿ ಮಕ್ಕಳನ್ನು ತನ್ನ ಬಳಿಗೆ ಕಾಶ್ಯಪಿ ಕಳುಹಿಸಿದುದು ಹೀಗೆ ಇವೆಲ್ಲವನ್ನೂ ಓದಿ ನೋಡಿದನು. ನಾನು ಇವರಿಗೆ ಸಲುಗೆ ಕೊಟ್ಟೆನಾದರೆ ಇವರು ಹಿಂದಿನಂತೆ ಗರ್ವಿಷ್ಠರಾಗಿ ಹಾಳಾಗುವರು – ಎಂದು ಮನಸ್ಸಿನಲ್ಲಿ ಯೋಚಿಸಿದನು. ಅಗ್ನಿಭೂತಿ ವಾಯುಭೂತಿಗಳಿಗೆ ಮತ್ತೆ ಹೀಗೆದನು – “ನನಗೆ ಕಾಶ್ಯಪಿ ಎಂಬ ತಂಗಿಯಿಲ್ಲ. ಸೋಮಶರ್ಮ ಎಂಬ ಹೆಸರುಳ್ಳ ಭಾವಮೈದುನನೂ ಇಲ್ಲ. ನನಗೆ ಸೂರ್ಯಮಿತ್ತನೆಂಬ ಹೆಸರಿದೆ. ನಿಮ್ಮ ಮಾವನಾಗಿರುವ ಸೂರ್ಯಮಿತ್ರ ನಾನಲ್ಲ*. ಮತ್ತೆ ಹೀಗೆಂದನು – “ನೀವು ಯಾರ ಮಕ್ಕಳಾದರೇನು ? ಯಾರಾದರೇನು ? ವಿದ್ಯಾರ್ಥಿಗಳಾಗಿ ವಿದ್ಯೆ ಕಲಿವ ಪ್ರೀತಿಯಿಂದ ಬಂದಿದ್ದೀರಾದರೆ ಅಡ್ಡಿಯಿಲ್ಲ. ಭಿಕ್ಷಾಟನೆ ಮಾಡಿ ಹರಕುಬಟ್ಟೆಯುಟ್ಟು ಇರುಳೂ ಹಗಲೂ ಆಲಸ್ಯಗೊಳ್ಳದೆ ನಿಯಮಕ್ಕೆ ಅನುಸಾರವಾಗಿ ಕಲಿಯಲು ನೀವು ಸಾಧ್ಯತೆಯುಳ್ಳವರಾದರೆ ನಿಮಗೆ ವಿದ್ಯೆ ಕಲಿಸಬಹುದು*. ಆಗ ಅವರು “ಇನ್ನು ದಯೆಮಾಡಿ. ಅನುಗ್ರಹವಿದು* ಎಂದು ನುಡಿದು ಸಾಷ್ಟಾಂಗ ವಂದಿಸಿದರು.
ಹರ್ಷಚಿತ್ತರಾಗಿ ಒಳ್ಳಿತಪ್ಪ ದಿವಸ ವಾರ ವಿದ್ಯಾನಕ್ಷತ್ರದಂದು ತಮ್ಮನುಕೂಲದೊಳೋಜರ್ಗ್ಗೆಱಗಿ ಪೊಡೆವಟ್ಟು ವಿದ್ಯಾಪ್ರಾರಂಭಂಗೆಯ್ದರ್ ಸೂರ್ಯಮಿತ್ರನುಮವರನಿರುಳುಂ ಪಗಲುಂ ನಿರಂತರಂ ನಿರ್ಬಂಧದೊಂದೋದಿಸಿ ಏೞೆಂಟು ವರುಷದಿಂದೊಳಗೆ ನಾಲ್ಕು ವೇದಮುಮಾಱಂಗಮಂ ಪದಿನೆಂಟು ಧರ್ಮಶಾಸ್ತ್ರಂಗಳುಂ ಮೀಮಾಂಸಾ ನ್ಯಾಯವಿಸ್ತರಂ ವ್ಯಾಕರಣಂ ಪ್ರಮಾಣಂ ಛಂದಮಲಂಕಾರಂ ನಿಘಂಟು ಕಾವ್ಯನಾಟಕಂಗಳುಂ ಚಾಣಕ್ಯಂ ಸಾಮುದ್ರಿಕಂ ಶಾಲಿಹೋತ್ರಂ ಪಾಳಕಾವ್ಯಂ ಹಾನಿತಂ ಚರಕಮಶ್ಚಿನ್ಲೀಮತಂ ಬಾಹಲಂ ಸುಸ್ರುತಂ ಕ್ಷಾರಪಾನೀಯಂ ಮೊದಲಾಗೊಡೆಯೆ ನರವೈದ್ಯಂಗಳುಂ ಜ್ಯೋತಿಷಂ ಮಂತ್ರವಾದಂ ಮೊದಲಾಗೊಡೆಯ ಶಾಸ್ತ್ರಂಗಳೆಲ್ಲಮಂ ನೆಱೆಯೆ ಕಲ್ಲಿಸಿ ಯೋಗ್ಯರ್ ಮಾಡಿದೊಡವರ್ ನಿಮ್ಮ ಪ್ರಸಾದದಿಂದೆಲ್ಲಾ ಶಾಸ್ತ್ರಮಂ ಕಲ್ತು ಪಂಡಿತರೆಮಾದೆಮೆಂದಾದಮಾನು ಮೊಸೆದುಮಿನ್ನೆಮ್ಮ ನಾೞ್ಗೆ ಪೋದಪೆಮೆಂದೋಜರ್ಗೆಱಗಿ ಪೊಡೆವಟ್ಟು ಬೀೞ್ಕೊಂಡಾಗಳೋಜರೆಂದರ್ – ನೀಮೆಮ್ಮ ತಂಗೆಯ ಮಕ್ಕಳಿರ್ ಸೋದರಳಿಯಂದಿರಪ್ಪಿರ್ ನಿಮಗಾಂ ಪಸರಂಗೊಟ್ಟೆನಿಲ್ಲೇಕೆಂದೊಡೆ ಮುನ್ನಿನಂತೆ ತಂದೆಯಲ್ಲಿಯುರ್ಕ್ಕಿ ಕೆಟ್ಟಂತಿರಿಲ್ಲಿಯುಮೆತ್ತಾನುಮುರ್ಕ್ಕಿ ಕಿಡುವಿರೆಂದಾಂ ನಿಮ್ಮಂ ಯೋಗ್ಯರಂ ಮಾಡುವ ಕಾರಣಮಾಗಿ ನಿಮಗೆ ಪಸರಂಗೊಟ್ಟೆನಿಲ್ಲಿದರ್ಕ್ಕೆ ಮುಳಿಯದಿರಿಂ ಕ್ಷಮಿಯಿಸಿಮೆಂದುಡಲುಂ ತುಡಲುಂ ಸಂಬಳಮುಮಂ ಕೊಟ್ಟು ಕೞೆಪಿದಾಗಳ್ – ಪಿರಿಯಾತನಗ್ನಿಭೂತಿಯೆಂಭೊಂ ಮಾವನೆಮಗೆ ಪಸರಂಗುಡದಿರ್ವರುಮಂ ಯೋಗ್ಯರು ಮಾಡಿದನೆಂದುಪಕಾರಮಂ ಮನದೆ ಬಗೆದಾದಮಾನುಂ ಸಂತೋಷಂಬಟ್ಟಂ ಕಿೞೆಯಾತಂ ವಾಯುಭೂತಿ ಸೂರ್ಯಮಿತ್ರಂ ಗೆಯ್ದುದೆಲ್ಲಮಪಕಾರಮೆಂದು ಬಗೆದೆಂದಪ್ಪೊಡಮೆಮ್ಮೆ ಮಾವಂ ಬೈಕಂದಿರಿದು ತಂದ ಕೂೞ್ಗೆ ನೆರಮೆಣ್ಣೆಯನಕ್ಕುಪ್ಪನಕ್ಕೆ ಕೞೆಯನಕ್ಕೆಂದಪ್ಪೊಡಮಿಕ್ಕಿಯುಮೆಱೆಯಿಸಿಯುಮಱೆಯಂ ಕೆಱೆಗೆವೋಗಿ ಮೀವಾಗಳ್ ತಲೆಯಂ ಪೂಸಲೆಣ್ಣೆಯನಪ್ಪೊಡಮೆಱೆಯಿಸಿಯಱೆಯಂ ತಾಂ ದಿವ್ಯಮಪ್ಪಾಹಾರಂಗಳಂ ದೆವಸದೆವಸಕ್ಕಂ ಪಲಂಬರ್ ನಟರ್ಕ್ಕಳುಂ ಆಳ್ಗಳುಂ ಬೆರಸುಣ್ಗುಂ ಪರ್ವದಿವಸದೊಳಪ್ಪೊಡಮೆಂದಾನುಮಿವರ್ಗ್ಗುಣಲಿಕ್ಕಿಮೆಂದಱೆಯಂ ಪಂಚಮಹಾಪಾತಕನೆಮ್ಮನೇೞೆಂಟು ವರುಷಂಬರಂ ಪಗೆವರಂ ಬಗೆವಂತೆ ದಂಡಿಸಿದನೆಂದು ಮನದೊಳ್ ಮುಳಿಸಂ ಪೊಱಮಟ್ಟು ಪೋದನ್
ಮನಸ್ಸಿನಲ್ಲಿ ಸಂತೋಷಪಟ್ಟರು. ಒಳ್ಳೆಯ ದಿನ ವಿದ್ಯಾರಂಭಕ್ಕೆ ಯೋಗ್ಯವಾದ ನಕ್ಷತ್ರದಂದು ತಮಗೆ ಅನುಕೂಲವೆನಿಸಿದಂದು ಉಪಾಧ್ಯಾಯರಿಗೆ ನಮಸ್ಕರಿಸಿ, ಸಾಷ್ಠಾಂಗ ವಂದಿಸಿ ಅವರು ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಸೂರ್ಯಮಿತ್ರನು ಅವರನ್ನು ಇರುಳೂ ಹಗಲೂ ಎಡೆಬಿಡದೆ ಕಟ್ಟುನಿಟ್ಟಿನಿಂದ ಓದಿಸಿದನು. ಏಳೆಂಟು ವರ್ಷಗಳೊಳಗೆ ನಾಲ್ಕು ವೇದಗಳನ್ನೂ ವೇದದ ಆರು ಅಂಗಗಳಾದ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷಗಳನ್ನೂ ಹದಿನೆಂಟು ಧರ್ಮಶಾಸಗಳನ್ನೂ ಕಲಿಸಿದನು. ಮೀಮಾಂಸೆ, ತರ್ಕಶಾಸ್ತ್ರ, ವ್ಯಾಕರಣ, ಪ್ರಮಾಣ, ಛಂದಸ್ಸು, ಅಲಂಕಾರ ಶಾಸ್ತ್ರ, ಶಬ್ದಕೋಶ, ಕಾವ್ಯ ನಾಟಕಗಳು, ಕೌಟಿಲ್ಯನ ಅರ್ಥಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ಶಾಲಿಹೋತ್ರ ಋಷಿಯ ಅಶ್ವಶಾಸ್ತ್ರ, ಪಾಳಕಾಪ್ಯ ಋಷಿ ಪ್ರಣೀತವಾದ ಗಜಶಾಸ್ತ್ರ, ಹಾನಿತ ಎಂಬ ವೈದ್ಯಶಾಸ್ತ್ರ, ಚರಕ ಅಶ್ವಿನೀ ಮತ ಎಂಬ ವೈದ್ಯಗ್ರಂಥಗಳು, ವಾಗ್ಬಟನ ಅಷ್ಟಾಂಗ ಹೃದಯ, ಸುಶ್ರುತಗ್ರಂಥ, ಬಿಡುಲವಣ ಅಥವಾ ಕೃಷ್ಣಲವಣದ ಪಾನಕ್ಕೆ ಸಂಬಂಸಿದ ವೈದ್ಯ ಮುಂತಾದ ಮನುಷ್ಯ ವ್ಶೆದ್ಯಗಳನ್ನೂ ಕಲಿಸಿದನು. ಜ್ಯೋತಿಷ, ಮಂತ್ರವಾದ ಮುಂತಾದ ಎಲ್ಲ ಶಾಸ್ತ್ರಗಳನ್ನೂ ಪೂರ್ಣವಾಗಿ ಕಲಿಸಿ ಅವರನ್ನು ಯೋಗ್ಯರಾಗಿ ಮಾಡಿದನು. “ತಮ್ಮ ಅನುಗ್ರಹದಿಂದ ನಾವು ಎಲ್ಲಾ ಶಾಸ್ತ್ರ್ರಗಳನ್ನು ಕಲಿತು ವಿದ್ವಾಂಸರಾದೆವು. ಎಂದು ಅವರು ಹೇಳಿ ಅತ್ಯಂತ ಸಂತೋಷವನ್ನು ವ್ಯಕ್ತಪಡಿಸಿದರು. “ಇನ್ನು ನಾವು ನಮ್ಮ ನಾಡಿಗೆ ತೆರಳುವೆವು* ಎಂದು ಗುರುಗಳಿಗೆರಗಿ, ಸಾಷ್ಟಾಂಗ ವಂದಿಸಿ, ಹೋಗಲು ಹೊರಟರು. ಆಗ ಸೂರ್ಯಮಿತ್ರನು ಹೀಗೆಂದನು – “ನೀವು ನನ್ನ ತಂಗಿಯ ಮಕ್ಕಳು. ನನಗೆ ಸೋದರ ಅಳಿಯಂದಿರಾಗಿರುವಿರಿ. ನಿಮಗೆ ನಾನು ಸಲುಗೆಯನ್ನು ಕೊಡಲಿಲ್ಲ. ಏಕೆಂದರೆ, ನೀವು ಹಿಂದೆ ನಿಮ್ಮ ತಂದೆ ಕೊಟ್ಟ ಸಲುಗೆಯಿಂದ ಉನ್ಮತ್ತರಾಗಿ ಕೆಟ್ಟುಹೋದಿರಿ. ಇಲ್ಲಿ ಕೂಡ ಎಲ್ಲಿಯಾದರೂ ಸೊಕ್ಕಿ ಕೆಟ್ಟುಹೋಗುವಿರೆಂದು ಭಾವಿಸಿ, ನಾನು ನಿಮ್ಮನ್ನು ಯೋಗ್ಯರನ್ನಾಗಿ ಮಾಡುವ ಉದ್ದೇಶದ ಕಾರಣದಿಂದ ಸಲುಗೆ ಕೊಡಲಿಲ್ಲ. ಇದಕ್ಕೆ ನೀವು ಸಿಟ್ಟಾಗಬಾರದು. ನನ್ನ ತಪ್ಪನ್ನು ಕ್ಷಮಿಸಿರಿ*. ಸೂರ್ಯಮಿತ್ರನು ಹೀಗೆ ಅವರಿಗೆ ವಸ್ತ್ರ ಆಭರಣಗಳನ್ನು ಕೊಟ್ಟನು. ಪ್ರಯಾಣಕ್ಕೆ ಬೇಕಾಗುವ ಬುತ್ತಿಯನ್ನು ಕೊಟ್ಟು ಕಳುಹಿಸುವ ಸಂದರ್ಭದಲ್ಲಿ ಹಿರಿಯನಾದ ಅಗ್ನಿಭೂತಿ ಎಂಬುವನು “ಮಾವನು ನಮಗೆ ಸಲುಗೆ ಕೊಡದೆ ಇಬ್ಬರನ್ನೂ ಯೋಗ್ಯರನ್ನಾಗಿ ಮಾಡಿದನು* – ಎಂದು ಉಪಕಾರವನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ಅತ್ಯಂತ ಸಂತೋಷಪಟ್ಟನು. ಕಿರಿಯವನಾದ ವಾಯುಭೂತಿ ತಮಗೆ ಸೂರ್ಯಮಿತ್ರನು ಮಾಡಿದುದೆಲ್ಲವೂ ಅಪಕಾರವೆಂದೇ ಬಗೆದನು ‘ನಾವು ಭಿಕ್ಷೆ ಬೇಡಿ ಅಲೆದಾಡಿ ತಂದ ಅನ್ನಕ್ಕೆ ಸೇರಿಸಲು ಎಣ್ಣೆಯನ್ನಾಗಲೀ ಉಪ್ಪನ್ನಾಗಲೀ ಮಜ್ಜಿಗೆಯನ್ನಾಗಲೀ ನಮ್ಮ ಮಾವ ನಮಗೆ ಎಂದಿಗೂ ಕೊಡಲೂ ಇಲ್ಲ, ಕೊಡಿಸಲೂ ಇಲ್ಲ. ಕೆರೆಗೆ ಹೋಗಿ ಸ್ನಾನ ಮಾಡುವ ಸಂದರ್ಭದಲ್ಲಿ ತಲೆಗೆ ಹಚ್ಚಲು ಎಣ್ಣೆಯನ್ನಾದರೂ ಹೊಯಿಸಿದವನಲ್ಲ. ತಾನಾದರೋ ದಿವ್ಯವಾದ ಆಹಾರಗಳನ್ನು ಪ್ರತಿದಿನವೂ ಹಲವರು ನಂಟರನ್ನೂ ಆಳುಗಳನ್ನು ಕೂಡಿಕೊಂಡು ಉಣ್ಣುತ್ತಿದ್ದನು. ಹಬ್ಬದ ದಿವಸದಲ್ಲಾದರೂ ’ಇವರಿಗೆ ಊಟ ಹಾಕಿ’ ಎಂದಾದರೂ ಇವನು ಹೇಳಿದವನಲ್ಲ . ಇವನು ಪಂಚಮಹಾಪಾಪ ಮಾಡಿದವನು. ನಮ್ಮಿಬ್ಬರನ್ನೂ ಏಳೆಂಟು ವರ್ಷಗಳವರೆಗೆ ಶತ್ರುಗಳೆಂದು ಭಾವಿಸಿದಂತೆ ದಂಡಿಸಿದ್ದಾನೆ* – ಹೀಗೆ ವಾಯುಭೂತಿ ಮನಸ್ಸಿನಲ್ಲಿ ಕ್ರೋಧಭಾವವನ್ನಿಟ್ಟುಕೊಂಡು ಸಾಷ್ಠಾಂಗ ವಂದಿಸಿ ಹೊರಟುಹೋದನು.
ಅಂತಿರ್ವರುಂ ಪೋಗಿ ಕತಿಪಯ ದಿವಸಗಳಿಂ ಕೌಶಂಬಿಯನೆಯ್ದಿ ತಮ್ಮ ಮನೆಯಂ ಪೊಕ್ಕು ತಾಯಂ ಕಂಡು ತುೞೆಲ್ಗೆಯ್ದು ಪಂಡಿತರಾಗಿ ಬಂದುದು ಪೇೞ್ದು ಮಿಂದುಂಡು ವಿಶ್ರಮಿಸಿಯೊಳ್ಳಿತಪ್ಪ ದಿವಸವಾರ ನಕ್ಷತ್ರದೊಳತಿಬಲ ಮಹಾರಾಜನಂ ಕಂಡಿರ್ವರುಂ ಬೇಱೆಬೇಱುಪಶ್ಲೋಕಿಸಿ ಕ್ರಿಯಾಸಂಬಂಧದಿಂದಂ ವಖ್ಖಾಣಿಸಿ ತಮ್ಮ ಪಂಡಿತಿಕ್ಕೆಯನಱೆಪಿದೊಡೆ ಸಭೆಯೊಳಿರ್ದ ಪಂಡಿತಜನಮೆಲ್ಲಂ ಮೆಚ್ಚಿ ಬಿಚ್ಚಳಿಸಿ ಪೊಗಱ್ದೊಡರಸಂ ಸಂತುಷ್ಟಚಿತ್ತನಾಗಿ ಒಸೆದು ನಿಮ್ಮ ತಂದೆಯ ಮಂತ್ರಿಪದಮಂ ಬಾೞುಮಂ ಕೈಕೊಳ್ಳಿಮೆಂದು ಕೊಟ್ಟೊಡೆ ಮಹಾಪ್ರಸಾದಮೆಂದೆಱಗಿ ಪೊಡೆವಟ್ಟು ಕೈಕೊಂಡು ಸುಖದೊಳ್ ಬಾೞುತ್ತಂ ಪಲಂಬರ್ ಪಂಡಿತರ್ಕ್ಕಳ್ಗೋದುಗಳಂ ವಖ್ಖಾಣಿಸುತ್ತಂ ಲೋಕದೊಳರಮನೆಯೊಳಂ ಪೂಜ್ಯರಾಗಿ ಸುಖಸಂಕಥಾ ವಿನೋದದಿಂ ಕಾಲಂ ಸಲೆ ಮತ್ತಿತ್ತ ರಾಜಗೃಹದೊಳ್ ಸೂರ್ಯಮಿತ್ರಂ ಸುಬಲ ಮಹಾರಾಜನ ತೊಟ್ಟನರ್ಘ್ಯಮಪ್ಪ ಮಾಣಿಕ್ಯದುಂಗುರಮಂ ಕಳೆದು ತನಗೆ ತುಡಲ್ಕೆಂದು ಕೊಟ್ಟೊಡೊಂದು ದಿವಸಂ ಸಂಜೆವಾರಿಸಲೆಂದು ಪೋದಲ್ಲಿ ಆದಿತ್ಯಂಗಿದಿರಂ ನೀರಂ ಸೂಸುವಾಗಳ್ ಬೆರಲಿಂದಮುರ್ಚಿ ನೀರ್ವೆರಸು ಸೂಸಿ ತಾವರೆಯೊಳುಂಗುರಂ ಬಿೞ್ದತ್ತು ತಾನುಂ ನೋಡದೆ ಬಗೆಯದೆ ಕೆಮ್ಮನೆ ಕಿಱೆದಂತರಮಂ ಪೋಗಿ ಕೈಯಂ ನೋಡಿ ಬೆರಲುಂಗುರಮಂ ಕಾಣದೆಲ್ಲಿ ಕೆಟ್ಟಿತ್ತೆಂದು ಪ್ರಮಾಣಮಱೆಯದೆ ಮಲ್ಮಲಂ ಮಱುಗುತ್ತಂಜಿ ದೆಸೆಗಳಂ ನೋೞ್ಪನ್ನೆಗಂ ದೂರಾಂತರದೊಳಿರ್ದ್ದ ಸುಧರ್ಮರೆಂಬಾಚಾರ್ಯರಂ ದಿವ್ಯಜ್ಞಾನಿಗಳಂ ಕಂಡಿವರೇನಾನುಮಂ ಬಲ್ಲೊರಪ್ಪೊಡೆ ಬೆಸಗೊಂಡು ನೋೞ್ಪೆನೆಂದು ಪೋಗಿ ಭಟ್ಟಾರರಂ ಕಂಡು ಪಕ್ಕದೊಳಿರ್ದ್ದಾಗಳ್ ಈತಂ ಭವ್ಯನೆಂದಱದು – ಏನಯ್ಯ ಅರಸರ ವಾರಕದ ಮಾಣಿಕದುಂಗುರಮಂ ಕಿಡಿಸಿ ಬಂದಿರೆ ಎಂದಾಗಳೆಱಗಿ ಪೊಡೆವಟ್ಟಂತಱೆವ ರೊಳರೆ ಎಂದು.
ಅಂತು ಅವರಿಬ್ಬರೂ ಹೋಗಿ ಕೆಲವು ದಿನಗಳಲ್ಲಿ ಕೌಸಂಬಿಗೆ ಬಂದರು. ತಮ್ಮ ಮನೆಗೆ ಹೊಕ್ಕು ತಾಯಿಯನ್ನು ಕಂಡು ವಂದಿಸಿದರು. ತಾವು ವಿದ್ವಾಂಸರಾಗಿ ಬಂದುದನ್ನು ತಿಳಿಸಿದರು. ಸ್ನಾನಮಾಡಿ, ಊಟಮಾಡಿ, ವಿಶ್ರಾಂತಿ ತೆಗೆದುಕೊಂಡರು. ಒಳ್ಳೆಯ ದಿನ ವಾರ ನಕ್ಷತ್ರ ಮುಹೂರ್ತದಲ್ಲಿ ಅತಿಬಲ ಮಹಾರಾಜನಲ್ಲಿಗೆ ಬಂದು ಅವನನ್ನು ಕಂಡು ಬೇರೆ ಬೇರೆಯಾಗಿ ಸ್ತುತಿ ರಚನೆ ಮಾಡಿದರು. ಅವನ್ನು ಕ್ರಿಯೆ – ಕಾರಕಗಳ ಸಂಬಂಧಪೂರ್ವಕ ವ್ಯಾಕರಣಶುದ್ಧವಾಗಿ ವ್ಯಾಖ್ಯಾನಮಾಡಿ, ತಮ್ಮ ಪಾಂಡಿತ್ಯವನ್ನು ಪ್ರಕಟಿಸಿದರು. ಆಗ ರಾಜಸಭೆಯಲ್ಲಿ ಪಂಡಿತರೆಲ್ಲರೂ ಮೆಚ್ಚಿ ಹಿರಿದಾಗಿ ಹೊಗಳಿದರು. ರಾಜನು ಮನಸ್ಸಿನಲ್ಲಿ ಸಂತೋಷಗೊಂಡು ಪ್ರೀತಿ ತಾಳಿದನು. “ನಿಮ್ಮ ತಂದೆಯ ಮಂತ್ರಿಸ್ಥಾನವನ್ನೂ ಜೀವಿಕೆಯನ್ನೂ ಸ್ವೀಕರಿಸಿ* – ಎಂದು ಅವರಿಗೆ ಕೊಟ್ಟನು. ‘ದೊಡ್ಡ ಅನುಗ್ರಹವಿದು’ – ಎಂದುಕೊಂಡು ಅವರು ನಮಸ್ಕರಿಸಿ, ರಾಜನಿತ್ತುದನ್ನು ಸ್ವೀಕರಿಸಿದರು. ಸುಖವಾಗಿ ಬಾಳುತ್ತ, ಅವರು ಹಲವಾರು ವಿದ್ವಾಂಸರಿಗೆ ವಿದ್ಯೆಗಳನ್ನು ವಿವರಣೆ ಮಾಡುತ್ತ ಲೋಕದಲ್ಲಿಯೂ ಅರಮನೆಯಲ್ಲಿಯೂ ಪೂಜ್ಯರಾದರು. ಸುಖಸಂಕಥಾ ವಿನೋದದಿಂದ ಹೀಗೆಯೇ ಕಾಲ ಕಳೆಯುತ್ತಿತ್ತು. ಇತ್ತ ರಾಜಗೃಹದಲ್ಲಿ ಸೂರ್ಯಮಿತ್ರನಿಗೆ ಸುಬಲ ಮಹಾರಾಜನು ತಾನು ತೊಟ್ಟ ಅಮೂಲ್ಯವಾದ ಮಾಣಿಕ್ಯದ ಉಂಗುರವನ್ನು ತೆಗೆದು, ಒಮ್ಮೆ ತೊಡಲು ಕೊಟ್ಟನು. ಸೂರ್ಯಮಿತ್ರನು ಒಂದು ದಿವಸ ಸೂರ್ಯನಿಗೆ ಸಂಧ್ಯಾಕಾಲದ ಅರ್ಘ್ಯಕೊಡಲು ಹೋದನು. ಸೂರ್ಯನಿಗೆ ಅಭಿಮುಖವಾಗಿ ಅರ್ಘ್ಯವನ್ನು ಕೊಡುವಾಗ ಆ ಉಂಗುರ ಅವನ ಬೆರಳಿನಿಂದ ಹೊರಗೆ ಬಂದು ಅರ್ಘ್ಯದ ನೀರಿನೊಂದಿಗೆ ತಾವರೆಯ ಕೆರೆಯಲ್ಲಿ ಬಿದ್ದಿತು. ಅವನು ಅದನ್ನು ನೋಡಲಿಲ್ಲ, ಭಾವಿಸಲಿಲ್ಲ, ಸುಮ್ಮನೆ ಸ್ವಲ್ಪ ದೂರ ಹೋದನು. ಕೈಯನ್ನು ನೋಡಿದಾಗ ಬೆರಳಿನ ಉಂಗುರವನ್ನು ಕಾಣದೆ, ಎಲ್ಲಿ ಬಿದ್ದು ಹೋಯಿತೋ ಎಂದುಕೊಂಡನು. ಅದು ಕಾಣೆಯಾಗಲು ಕಾರಣವನ್ನು ತಿಳಿಯದೆ ಬಹಳ ವ್ಯಥೆಪಟ್ಟನು. ಭಯಗೊಂಡವನಾಗಿ ದಿಕ್ಕುಗಳನ್ನು ನೋಡಿದನು. ಹಾಗೆ ನೋಡುವಾಗ ದೂರದ ಒಂದು ಸ್ಥಳದಲ್ಲಿ ಇದ್ದ ದಿವ್ಯಜ್ಞಾನಿಗಳಾದ ಸುಧರ್ಮರೆಂಬ ಆಚಾರ್ಯರನ್ನು ಕಂಡನು. ‘ಇವರು ಏನಾದರೂ ತಿಳಿದಿದ್ದರೆ, ಕೇಳಿ ನೋಡುವೆನು* ಎಂದು ಹೋಗಿ ಆ ಮುನಿಗಳ ಪಕ್ಕದಲ್ಲಿ ಇದ್ದನು. ಆಗ ಸುಧರ್ಮಾಚಾರ್ಯರು ಈತನು ಭವ್ಯ, ಧರ್ಮ ವಿಚಾರವನ್ನು ಕೇಳಲು ಅರ್ಹನೆಂದು ತಿಳಿದು ಏನಯ್ಯಾ ಅರಸರು ಇಟ್ಟುಕೊಳ್ಳಲು ಕೊಟ್ಟ ಮಾಣಿಕ್ಯದ ಉಂಗುರವನ್ನು ಕಳೆದುಕೊಂಡು ಬಂದಿರೇ ? – ಎಂದರು. ಆಗ
ಪೊಗೞ್ದೆರ್ದ್ದಿಂತು ಬೆಸಗೊಂಡಂ – ಭಟ್ಟಾರಾ ಬೆಸಸಿಮಾವುಂಗುರಮಂ ಕಾಣಲಕ್ಕುಮೆ ಎಂದಂಗೆ ಭಟಾರರ್ ಕಾಣಲಕ್ಕುಮೆಂದ ನಿನ್ನೆ ನೀನಾದಿತ್ಯಂಗೆ ನೀರಂ ಸೂಸಿ ಪೊಡೆಮಡುವಾಗಳಾ ನೀರ್ವೆರಸು ಸೂಸಿ ತಾಮರೆಗೆಱೆಯೊಳಗೆ ಮೞುಗಿರ್ದ್ದ ಮುಗುಳಮೇಗೆ ತಗುಳ್ದಿರ್ದುದು ನಾಳೆ ನೇಸಱು ಮೂಡುವಾಗಳ್ ನೀರಿಂದಂ ಮೇಗೆ ನೆಗೆದಿರ್ದ್ದುಂಗುರಮಂ ಕಾಣಲಕ್ಕುಮೆಂದೊಡೆ ಸಂತೋಷಂಬಟ್ಟು ಪೊಡೆಮಟ್ಟು ಪೋಗಿ ಕೊಳಕ್ಕೆ ಮಾನಸರಂ ಕಾಪಿಟ್ಟು ಮಱುದಿವಸಂ ಸಂಜೆಯೊಳ್ ಬಂದು ನೋೞ್ಟುನ್ನೆಗಂ ತಾವರೆಯ ಮುಗುಳ ಮೇಲೆ ತಗುಳ್ದಿರ್ದ್ದುಂಗುರಮಂ ಕಂಡು ಕೊಂಡರಸಂಗೊಪ್ಪಿಸಿ ತುರಿಪದಿಂದರಮನೆಯಂ ಪೊಱಮಟ್ಟು ಪೋಗಿ ಮನದೊಳಿಂತೆಂದು ಬಗೆದನೀ ಲೋಕದೊಳಿರ್ದ ಸೂಕ್ಷ್ಮಾಂತರಿತ ದೂರ ಪದಾರ್ಥ ವಸ್ತುಗಳೆಲ್ಲಮನಱೆವಂತಪ್ಟೀ ಸವಣನ ಜೋಯಿಸಮನೆಂತಪ್ಪೊಡಂ ಕ್ಷಪಣಕನಂ ಮಿಥ್ಯಾವಿನಯದಿಂದಿಳಿಸಿ ಕಲ್ವೆನೆಂಬುದೊಂದು ಬುದ್ದಿಯಿಂದಂ ಮನೆಗೆ ಬಂದು ಸುದೇವಿಯಿಂಬ ತನ್ನ ಪಾರ್ವಂತಿಗೆ ಸ್ವಾಭಿಪ್ರಾಯಮೆಲ್ಲಮಂ ಪೇೞ್ದು ಜ್ಯೋತಿಷನಿಮಿತ್ತಂ ಮನೆಯಂ ಪೊಱಮಟ್ಟು ಸುಧರ್ಮಾಚಾರ್ಯರಲ್ಲಿಗೆ ಪೋಗಿ ಪೊಡೆವಟ್ಟು ಭಟ್ಟಾರಾ ನಿಮ್ಮ ಪಕ್ಕದೆ ಜ್ಯೋತಿಷಮಂ ಕಲ್ವೆನೆಂಬುದೊಂದುೞ್ತೆಯಿಂ ಬಂದೆನೆನ್ನಂ ಜ್ಯೋತಿಷಮಂ ಕಲ್ಪಪ್ಪುದೆಂದೊಡೆ ಭಟಾರರೆಂದರ್
ಸೂರ್ಯಮಿತ್ರನು ಅವರಿಗೆ ಸಾಷ್ಠಾಂಗವಂದಿಸಿ ಹೀಗೆ ತಿಳಿದವರು ಇರುವರೆ ? – ಎಂದು ಹೊಗಳಿ, ಹೀಗೆ ಕೇಳಿದನು – ಪೂಜ್ಯರೇ ಆ ಉಂಗುರವನ್ನು ಕಾಣಲು ಸಾಧ್ಯವೇ? ತಿಳಿಸಿರಿ’. ಅದಕ್ಕೆ ಯತಿಗಳು – ‘ಕಾಣಲು ಸಾಧ್ಯವಿದೆ’ ಎಂದರು. ‘ನಿನ್ನೆ ನೀನು ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ಸಾಷ್ಠಾಂಗ ವಂದಿಸುವಾಗ ಆ ನೀರಿನೊಂದಿಗೆ ಉಂಗುರ ಕೆಳಗೆ ಬಿದ್ದು ತಾವರೆ ಕೆರೆಯೊಳಗೆ ಮುಳುಗಿದ್ದ ಮುಗುಳಿನ ಮೇಲೆ ಸಿಕ್ಕಿಕೊಂಡಿದೆ. ನಾಳೆ ಸೂರ್ಯೋದಯದ ವೇಳೆಗೆ ಆ ಉಂಗುರವು ನೀರಿನಿಂದ ಮೇಲಕ್ಕೆ ಎದ್ದುಕೊಂಡು ಕಾಣಿಸುವುದು’ ಎಂದರು. ಆಗ ಸೂರ್ಯಮಿತ್ರನು ಸಂತೋಷದಿಂದ ಪೊಡಮಟ್ಟು ತೆರಳಿದನು. ಸರೋವರಕ್ಕೆ ಆಳುಗಳನ್ನು ಕಾವಲಿರಿಸಿ, ಮರುದಿನ ಬೆಳಿಗ್ಗೆ ನೋಡಲು ಬಂದನು. ಆಗ ತಾವರೆಯ ಮುಗುಳಿನ ಮೇಲೆ ಸಿಕ್ಕಿಕೊಂಡಿದ್ದ ಉಂಗುರನ್ನು ಕಂಡನು. ಅದನ್ನು ತೆಗೆದುಕೊಂಡು ಸುಬಲ ಮಹಾರಾಜನಿಗೆ ಒಪ್ಪಿಸಿ ಬೇಗನೆ ಅರಮನೆಯಿಂದ ಹೊರಟಹೋದನು. ಅವನು ತನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿದನು. ಈ ಲೋಕದಲ್ಲಿರುವ ಚಿಕ್ಕದಾದ, ಗುಪ್ತವಾದ, ಹಾಗೂ ದೂರದಲ್ಲಿದ್ದ ಪದಾರ್ಥಗಳನ್ನು ಅಥವಾ ವಸ್ತುಗಳೆಲ್ಲವನ್ನೂ ತಿಳಿಯುವಂತಹ ಈ ಜೈನ ಸಂನ್ಯಾಸಿಯ ಜ್ಯೋತಿಷವಿದ್ಯೆಯನ್ನು ಹೇಗಾದರೂ ಕಲಿಯುವೆನು. ಈ ಸನ್ನಾಸಿಯನ್ನು ಕಪಟ ನಮ್ರತೆಯಿಂದ ಒಲಿಸಿ ಕಲಿಯುವೆನು – ಎಂಬ ಒಂದು ಬುದ್ದಿಯಿಂದ ಮನೆಗೆ ಬಂದನು. ಸುದೇವಿ ಎಂಬ ತನ್ನ ಹೆಂಡತಿಗೆ ತನ್ನ ಅಭಿಪ್ರಾಯವೆಲ್ಲವನ್ನೂ ತಿಳಿಸಿದನು. ಜ್ಯೋತಿಷ್ಯವನ್ನು ಕಲಿಯುವ ಕಾರಣದಿಂದ ಮನೆಯಿಂದ ಹೊರಟು ಸುಧರ್ಮಾಚಾರ್ಯರಲ್ಲಿಗೆ ಹೋದನು. ಅವರಿಗೆ ಸಾಷ್ಟಾಂಗವಂದನೆ ಮಾಡಿ – “ಪೂಜ್ಯರೇ, ನಿಮ್ಮ ಬಳಿಯಲ್ಲಿ ಜ್ಯೋತಿಷವನ್ನು ಕಲಿಯಬೇಕೆಂಬ ಒಂದು ಪ್ರೀತಿಯಿಂದ ನಾನು ಬಂದಿದ್ದೇನೆ. ನನಗೆ ಜ್ಯೋತಿಷವನ್ನು ಕಲಿಸುವುದು* ಎಂದು ಹೇಳಿದನು.
ತಮ್ಮಾ ಎಮ್ಮ ಜೋಯಿಸಮೆಂತಪ್ಪ ರೂಪಿನ ಋಷಿಯರ್ಗಲ್ಲದೆ ಪೇೞಲುಂ ಕಲಲುಮಾಗದೆಂದೊಡೆಅಂತಪ್ಪ ದೀಕ್ಷೆಯಂ ದಯೆಗೆಯ್ಯಿಮೆಂದು ಬೇಡಿದೊಡೊಳ್ಳಿತಪ್ಪ ಮುಹೂರ್ತದೊಳ್ ದೀಕ್ಷೆಯಂ ಕೊಟ್ಟು ಪಂಚಮಹಾ ವತ್ರಂಗಳನೇಱೆಸಿ ಪಡಿಕಮಣಂ ಪೇೞ್ದ ತದನಂತರಮಿನ್ ಕಲ್ಪಿಸಿಮೆಂದೊಡೆ ನಮಸ್ಕಾರಂಗಳುಮಾಳೋಚನೆಗಳಂ ನಿಯಮಮುಮನೋದಿದೊಡಲ್ಲದೆ ಪೇೞಲಾಗದೆಂದೊಡೆಲ್ಲಮಂ ಬೇಗವೇಗಂ ಪಾಠಂಗೊಂಡು ಭಟ್ಟಾರಾ ಇನ್ ಪೇೞೆಮೆನೆ ಭಟ್ಟಾರರೆಂದರ್ ತ್ರಿಷಷ್ಠಿ ಶಲಾಕಾ ಪುರುಷರ್ಕಳ ಚರಿತಂಗಳುಮನಾಚಾರಮಾರಾಧನೆ ಮೊದಲಾಗೊಡೆಯ ಚರಣ ಗ್ರಂಥಂಗಳುಮಂ ಲೋಗಾಣಿ ಸಂಗಾಣಿ ಮೊದಲಾಗೊಡೆಯ ಕರಣಗ್ರಂಥಗಳುಮನಿವೆಲ್ಲಮಂ ಕಲ್ತೊಡಲ್ಲದೆ ಪೇೞಲಾಗದೆಂದೊಡೆ ಸೂರ್ಯಮಿತ್ರಂ ಪಂಡಿತನಪ್ಪುದಱೆಂದವೆಲ್ಲಮಂ ಕಿಱೆದೆ ಕಾಲದಿಂದೋದಿ ಕಲ್ತು ಭಟ್ಟಾರಾ ನಿಮ್ಮ ಪೇೞ್ದೋದುಗಳೆಲ್ಲಮಂ ಗ್ರಂಥಾರ್ಥಸ್ವರೂಪದಿಂದೋದಿ ಕಲ್ತೆಂ ಇನ್ ಜ್ಯೋತಿಷಮಂ ವಖ್ಖಾಣಿಸಿಮೆಂದೊಂಗೆ ಭಟ್ಟಾರರೆಂದರ್ ಇನ್ನೋಂದಕಾರಮುಂಟು ದ್ರವ್ಯಾನುಯೋಗಮೆಂಬುದಂ ಕೇಳ್ದ ಬೞೆಕ್ಕೆ ಜ್ಯೋತಿಷಶಾಸ್ತ್ರಮಂ ವಖ್ಖಾಣಿಸುವೆನೆಂದೊಡೆ ಮನದೊಳಾದಮಾನುಮೊಸೆದೊಂದಕಾರಮೆಂಬುದೆನಗೇಮುಟ್ಟೀಗಳೆ ಕಲ್ವೆನೆಂದು ಬಗೆದು
ಆಗ ಭಟಾರರು ಹೀಗೆಂದರು – “ತಮ್ಮಾ ನಮ್ಮಜ್ಯೋತಿಷ ವಿದ್ಯೆಯನ್ನು ನಮ್ಮ ಹಾಗೆಯೇ ಇರುವ ಋಷಿಗಳಿಗಲ್ಲದೆ ಹೇಳಬಾರದು, ಕಲಿಯಲೂ ಬಾರದು*. ಹೀಗೆನ್ನಲು ಸೂರ್ಯಮಿತ್ರನು “ಅಂತಹ ದೀಕ್ಷೆಯನ್ನು ದಯಪಾಲಿಸಿರಿ* ಎಂದು ಬೇಡಿದನು. ಆಚಾರ್ಯರು ಒಳ್ಳೆಯ ಮುಹೂರ್ತದಲ್ಲಿ ದೀಕ್ಷೆಯನ್ನು ಕೊಟ್ಟರು. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹಗಳೆಂಬ ಐದು ಬಗೆಯ ಮಹಾವ್ರತಗಳನ್ನು ಅನುಷ್ಠಾನ ಮಾಡಿಸಿದರು. ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು ಹೇಳಿಸಿದರು. ಅನಂತರ ಸೂರ್ಯಮಿತ್ರನು “ಇನ್ನು ಕಲಿಸಿರಿ ಎಂದನು. ಅದಕ್ಕೆ ಆಚಾರ್ಯರು “ಪಂಚನಮಸ್ಕಾರಗಳನ್ನೂ ಪ್ರಾಯಶ್ಚಿತ್ತಕ್ಕೆ ಮುಂದೆ ತನ್ನ ದೋಷಗಳನ್ನು ಗುರುವಿಗೆ ತಿಳಿಸುವ ಆಚರಣೆಯನ್ನೂ ಪ್ರತಿಜ್ಞೆಯನ್ನೂ ಆಚರಿಸಿದಲ್ಲದೆ, ಹೇಳಿ ಕೊಡಲಾಗುವುದಿಲ್ಲ* ಎಂದರು. ಸೂರ್ಯಮಿತ್ರನು ಬೇಗ ಬೇಗನೆ ಅವೆಲ್ಲವನ್ನೂ ಪಾಠ ಹೇಳಿಸಿಕೊಂಡ ಮೇಲೆ “ಪೂಜ್ಯರೇ, ಇನ್ನು ಹೇಳಿ* ಎಂದನು.ಆಗ ಆಚಾರ್ಯರು “ಅರುವತ್ತಮೂರು ಮಂದಿ ಶಲಾಕಾಪುರುಷರ ಚರಿತ್ರೆಗಳನ್ನು ಆಚಾರ ಆರಾಧನೆ ಮಾಡಲಾಗಿರುವ ಚರಣ ಗ್ರಂಥ (ಜೈನ ಶ್ರಾವಕರ ಮತ್ತು ಯತಿಗಳ ಆಚಾರಗಳನ್ನು ನಿರೂಪಿಸುವ ಗ್ರಂಥ) ಗಳನ್ನು ಲೋಗಾಣಿ (ಲೋಕಾಕಾರವನ್ನು ನಿರೂಪಿಸುವ ಗ್ರಂಥಗಳು) ಸಂಗಾಣಿ (ಸಪ್ತ ಪದಾರ್ಥಗಳ ಸ್ವರೂಪವನ್ನು ತಿಳಿಸುವ ಗ್ರಂಥಗಳು) ಮುಂತಾದ ಕರಣಗ್ರಂಥಗಳನ್ನು – ಇವೆಲ್ಲವನ್ನೂ ಕಲಿತಲ್ಲದೆ, ಹೇಳಿ ಕೊಡಲಿಕ್ಕಾಗದು* ಎಂದರು. ಸೂರ್ಯಮಿತ್ರನು ಪಂಡಿತನಾದುದರಿಂದ ಅವೆಲ್ಲವನ್ನೂ ಸ್ವಲ್ಪವೇ ಕಾಲದಲ್ಲಿ ಓದಿ ಕಲಿತನು. “ಪೂಜ್ಯರೇ, ನೀವು ಹೇಳಿಕೊಟ್ಟ ವಿದ್ಯೆಗಳೆಲ್ಲವನ್ನೂ ಗ್ರ್ರಂಥದ ಅರ್ಥಸ್ವರೂಪದಿಂದಲೇ ಓದಿ ಕಲಿತೆನು. ಇನ್ನೂ ಜ್ಯೋತಿಷವನ್ನು ವ್ಯಾಖ್ಯಾನಿಸಿರಿ* ಎಂದನು. ಆಗ ಅವನಿಗೆ ಆಚಾರ್ಯರು ಹೀಗೆಂದರು – “ಇನ್ನೊಂದು ಅರ್ಹತೆ ಉಳಿದಿದೆ. ಅದಕ್ಕೆ ದ್ರವ್ಯಾನುಯೋಗವೆಂದು ಹೆಸರು. ಅದನ್ನು ತಿಳಿದುಕೊಂಡ ನಂತರ ಜ್ಯೋತಿಷ ಶಾಸ್ತ್ರವನ್ನು ವ್ಯಾಖ್ಯಾನಿಸುವೆನು* – ಹೀಗೆನ್ನಲು, ಸೂರ್ಯಮಿತ್ರನು ಮನಸ್ಸಿನಲ್ಲಿ ಬಹಳ ಸಂತೋಷಪಟ್ಟನು – ಇನ್ನುಳಿದ ಒಂದು ಅರ್ಹತೆಯೆಂಬುದು ನನಗೆ ಏನು ಮಹಾ ! ಈಗಲೇ ಕಲಿಯುವೆನು ಎಂದು ಭಾವಿಸಿಕೊಂಡನು.
ಒಳ್ಳಿತಪ್ಪ ದಿವಸ ವಾರ ನಕ್ಷತ್ರ ಮುಹೂರ್ತದೊಳ್ ಸಿದ್ದಾಂತಮಂ ತೊಡಗಿಸೆ ಎಂತಂತೆ ಕೇಳ್ಗುಮಂತಂತೆ ಮಿಥ್ಯಾತ್ವಮಿನಿಸಿನಿಸು ಪಿಂಗೆ ಬಂಧಂ ಬಂಧಕಾರಣಂ ಮೋಕ್ಷಂ ಮೋಕ್ಷಕಾರಣಮಾ ಎರಡಱ ಫಲಮುಮೆಂದಿಂತು ಸಿದ್ದಾಂತದೊಳ್ ಪೇೞ್ದ ವಸ್ತುಗಳೆಲ್ಲಮಂ ಕೇಳ್ದು ಜೀವಾಜೀವ ಪುಣ್ಯಪಾಪಾಸ್ರವ ಸಂವರ ನಿರ್ಜರ ಬಂಧ ಮೋಕ್ಷಮೆಂದಿಂತು ನವಪದಾರ್ಥಂಗಳುಂ ಪಂಚಾಸ್ತಿಕಾಯ ಷಡ್ದ್ರವ್ಯಂಗಳುಮೆಂಬಿವಱೊಳಾದಮಾನುಮಱೆತಮುಂ ಕುಶಲಿಕೆಯುಂ ನಂಬುಗೆಯುಮಾಗಿ ಅರ್ಹದ್ಭಟ್ಟಾರಕರ ಸಿದ್ಧಸ್ವರೂಪಮಂ ಗುಣಂಗಳುಮೆನಱೆದು ಶಂಕಾದ್ಯಷ್ಪಮಲಂಗಳುಮೆಂಟು ಮದಂಗಳುಂ ಮೂಱುಮೂಢಮುಮಾಱನಾಯತನ ಸೇವೆಗಳುಮೆಂದಿಂತು ಇಪ್ಪತ್ತೈದು ದೋಷಂಗಳಿಂದಗಲ್ದ ಸಮ್ಯಕ್ಷಮನೊಡೆಯನಾಗಿ ಸಂಸಾರ ಭೋಗ ವೈರಾಗ್ಯ ವರಾಯಣನುಮಾಗಿ ಎಮ್ಮುಕ್ಕೆವ ತಪದಿಂದಮನಂತ ಸುಖಕ್ಕೆ ಕಾರಣಮಪ್ಪ ಸನ್ನಾರ್ಗಮಂ ಪೆತ್ತೆನೆಂದತ್ಯಂತ ಹರ್ಷಚಿತ್ತನಾಗಿ ಗುರುಗಳ್ಗೆ ತಮ್ಮುಕ್ಕೆವದಿಂ ತಪಂಬಟ್ಟುದನಾಳೋಚಿಸಿ ಪ್ರಾಯಶ್ಚಿತ್ತಂಗೊಂಡು ಪಡಿಕಮಣಂಗೆಯ್ದು ಪರಮಾರ್ಥಯತಿವರರಾಗಿ ಪನ್ನೆರಡು ವರ್ಷಂಬರಂ ಗುರುಗಳನಗಲದೆ ತಪಂಗೆಯ್ದಾಚಾರ್ಯರಾಗಿ ಗುರುಗಳನುಮತದಿಂದೇಕವಿಹಾರಿಯಾಗಿ – ಗ್ರಾಮೇ – ಕರಾತ್ರಂ ನಗರೇ ಪಂಚರಾತ್ರಮಟವ್ಯಾಂ ದಶರಾತ್ರಮೆಂಬೀ ತೆಱದಿಂದಂ ಗ್ರಾಮ
ಅನಂತರ ಒಳ್ಳೆಯ ದಿವಸ ವಾರ ನಕ್ಷತ್ರ ಮುಹೂರ್ತದಲ್ಲಿ ಭಟ್ಟಾರರು ಸಿದ್ದಾಂತವನ್ನು ಉಪದೇಶಿಸಲು ಪ್ರಾರಂಭ ಮಾಡಿದರು. ಸೂರ್ಯಮಿತ್ರನು ಸಿದ್ದಾಂತವನ್ನು ಕೇಳಿದಂತೆಲ್ಲ ಅಜ್ಞಾನವು (ಅಪನಂಬಿಕೆ) ಸ್ವಲ್ಪ ಸ್ವಲ್ಪವಾಗಿ ಹಿಂಗತೊಡಗಿತು. ಬಂಧವು ಬಂಧನಕ್ಕೆ ಕಾರಣವೆಂದೂ ಮೋಕ್ಷವು ಮೋಕ್ಷಕ್ಕೆ ಕಾರಣವೆಂತಲೂ ಆ ಎರಡರ ಪರಿಣಾಮವನ್ನೂ ಸಿದ್ಧಾಂತದಲ್ಲಿ ಹೇಳಿದ ವಿಚಾರವೆಲ್ಲವನ್ನೂ ಕೇಳಿಕೊಂಡನು. ಜೀವ, ಅಜೀವ, ಪುಣ್ಯ, ಪಾಪ, ಆಸ್ರವ, ಸುಂದರ, ನಿರ್ಜರ, ಬಂಧ, ಮೋಕ್ಷ ಎಂದು ಈ ರೀತಿಯಾದ ನವಪದಾರ್ಥಗಳು, ಪಂಚಾಸ್ತಿಕಾಯ ಷಡ್ದ್ರವ್ಯಗಳು – ಎಂಬವುಗಳಲ್ಲಿ ಹೆಚ್ಚಿನ ತಿಳುವಳಿಕೆಯೂ ಪ್ರಾವೀoವೂ ವಿ**ಸವೂ ಅವನಲ್ಲಿ ಉಂಟಾದವು. ಜೈನ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು, ಸಂಶಯವೇ ತೀರ್ಥಂಕರರ ಸಿದ್ಧಸ್ವರೂಪವನ್ನೂ ಗುಣಗಳನ್ನೂ ತಿಳಿದುಕೊಂಡನು. ಸಂಶಯವೇ ಮೊದಲಾದ ಎಂಟು ಬಗೆಯ ಆನಾಯತನ ಸೇವೆಗಳು – ಎಂಬೀ ರೀತಿಯ ಇಪ್ಪತ್ತೈದು – ದೋಷಗಳಿಂದ ದೂರವಾದ ತತ್ತ್ವಜ್ಞಾನವುಳ್ಳವನಾದನು. ಸಂಸಾರಿಕ ಸುಖದಲ್ಲಿ ವೈರಾಗ್ಯವನ್ನು ತಾಳಿದನು, ‘ನನ್ನ ಕಪಟದ ತಪಸ್ಸಿನಿಂದ ಅಂತ್ಯವಿಲ್ಲದ ಸುಖಕ್ಕೆ ಕಾರಣವಾಗಿರುವ ಒಳ್ಳೆಯ ದಾರಿಯನ್ನು ಪಡೆದುಕೊಂಡೆನು’ – ಎಂದು ಅತ್ಯಂತ ಸಂತೋಷಮನಸ್ಕನಾದನು. ತಾನು ಕಪಟದಿಂದ ತಪಸ್ಸನ್ನು ಆಚರಿಸಿದ ಸಂಗತಿಯನ್ನು ಗುರುಗಳ ವಿಚಾರಕ್ಕೆ ತಂದು ಪ್ರಾಯಶ್ಚಿತ್ತ ಮಾಡಿಕೊಂಡು ಪಡಿಕಮಣ (ಪ್ರಾಯಶ್ಚಿತ್ತ) ವಿಯನ್ನು ನೆರವೇರಿಸಿ, ನಿಜವಾದ ಯತಿಗಾಗಿ ಹನ್ನೆರಡು ವರ್ಷಗಳವರೆಗೆ ಗುರುಗಳ ಒಟ್ಟಿಗಿದ್ದು ತಪ್ಪಸ್ಸನ್ನು ಮಾಡಿ ‘ಆಚಾರ್ಯರು’ ಎನಿಸಿದನು. ಅನಂತರ ಸೂರ್ಯಮಿತ್ರಾಚಾರ್ಯರು ಗುರುಗಳಿಂದ ಒಪ್ಪಿಗೆ ಪಡೆದು, ಏಕವಿಹಾರಿ (ಪರಿವ್ರಾಜಕ ಒಬ್ಬನೇ ಸಂಚರಿಸುವವ) ಆಗಿ, ಹಳ್ಳಿಯಲ್ಲಿ ಒಂದು ರಾತ್ರಿಯಿದ್ದರೆ, ನಗರದಲ್ಲಿ ಐದು ರಾತ್ರಿ, ಕಾಡಿನಲ್ಲಿ ಹತ್ತು ರಾತ್ರಿ ಎಂಬೀ ರೀತಿಯಲ್ಲಿ ಸಂಚರಿಸುತ್ತ ಬಂದರು.
ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತುಂ ಕೌಶಂಬಿಗೆ ವಂದುದಯಾವತ ಪರ್ವತದೊಳ್ಸಿದ್ದಕ್ಷೇತ್ರಗಳೆಲ್ಲಮಂ ಬಂದಿಸಿ ತೀಥೋಪವಾಸಂಗೆಯ್ದು ಭೈಕ್ಷಕ್ಕೆಂದು ಕೌಶಂಬಿನಗರಮಂ ಪೊಕ್ಕು ಕಿಱುಮನೆ ಪೆರ್ಮನೆಯೆನ್ನದುಣಲ್ತಕ್ಕ ಮನೆಗಳಂ ಚರಿಗೆದೊೞಲುತ್ತಮಗ್ನಿಭೂತಿ ಬ್ರಾಹ್ಮಣನ ಮನೆಯಂ ಪೊಕ್ಕೊಡಾತನುಂ ಕಂಡಿದಿರಂ ಪರಿತಂದಾದಮಾನಂ ಭಕ್ತಿಯಿಂದಂ ನಿಱೆಸಿ ಕಾಲಂ ಕರ್ಚಿ ಪಡಿಹಹಮುಚ್ಚಂ ಠಾಣಮೆಂದೀಮೊಂಬತ್ತು ತೆಱದಿಂದಂ ಪುಣ್ಯಮಂ ಕೈಕೊಂಡು ಶ್ರದ್ಧೆ ಮೊದಲಾಗೊಡೆಯ ಏೞುಂ ಗುಣಂಗಳಿಂ ಕೂಡಿ ಪ್ರಾಸುಕಮಪ್ಪಾಹಾರಮನಾದಮಾನುಂ ಭಕ್ತಿಯಿಂದಂ ಬಡ್ಡಿಸೆಯುಂಡಿನ್ ಬೞೆಕ್ಕಕ್ಷಯ ದಾನಮೆಂದು ಪರಸಿ ಪೋಪಾಗಳ್ ಭಟ್ಟಾರಾ ನಿಮ್ಮ ಕಿಱೆಯ ಗುಡ್ಡನಂ ಪರಸಿ ಪೋಗಲ್ವೇೞ್ಕುಮೆಂದು ವಾಯುಭೂತಿಯ ಮನೆಗೊಡಗೊಂಡು ಪೋದೊಡೆ
ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ* ಸುತಾಡುತ್ತ ಕೌಶಂಬಿಗೆ ಬಂದರು. ಉದಯಾವತ ಪರ್ವತದಲ್ಲಿರುವ ಸಿದ್ಧಕ್ಷೇತ್ರಗಳಿಗೆ ಹೋಗಿ ಅಲ್ಲಿ ನಮಸ್ಕರಿಸಿ, ತೀರ್ಥವನ್ನು ಮಾತ್ರ ಸೇವಿಸುವ ಉಪವಾಸ ಮಾಡಿ ಭಿಕ್ಷೆಗಾಗಿ ಕಾಶಂಬಿನಗರವನ್ನು ಹೊಕ್ಕರು. ಅಲ್ಲಿ ಚಿಕ್ಕ ಮನೆ ದೊಡ್ಡಮನೆ ಎಂಬ ತಾರತಮ್ಯವಿಲ್ಲದೆ ಉಣಲು ತಕ್ಕುದಾದ ಮನೆಗಳಲ್ಲಿ ಭಿಕ್ಷಕ್ಕಾಗಿ ಸುತಾಡುತ್ತ ಅಗ್ನಿಭೂತಿ ಬ್ರಾಹ್ಮಣನ ಮನೆಯನ್ನು ಪ್ರವೇಶಿಸಿದರು. ಆತನು ಕಂಡು ಎದುರಿಗೆ ಓಡಿಬಂದು ಅಂತ್ಯಂತ ಭಕ್ತಿಯಿಂದ ವ್ಯವಸ್ಥೆಮಾಡಿ, ಕಾಲನ್ನು ತೊಳೆದು ‘ಉನ್ನತ ಆಸನದಲ್ಲಿ ಕುಳ್ಳಿರಿ’ ಎಂದು ನುಡಿದನು. ಒಂಬತ್ತು ವಿಧದ ಸತ್ಕಾರಗಳಿಂದ ಪುಣ್ಯವನ್ನು ಪಡೆದನು, ಶ್ರದ್ಧೆ, ಭಕ್ತಿ ಮುಂತಾದ ಏಳು ಗುಣಗಳಿಂದ ಕೂಡಿದವನಾಗಿ ಪರಿಶುದ್ದವಾದ ಆಹಾರವನ್ನು ಅತ್ಯಂತ ಭಕ್ತಿಯಿಂದ ಬಡಿಸಿದನು. ಸೂರ್ಯಮಿತ್ರ ಆಚಾರ್ಯರು ಊಟ ಮಾಡಿ ‘ದಾನ ಅಕ್ಷಯವಾಗಲಿ’ ಎಂದು ಆಶೀರ್ವದಿಸಿದರು. ಅವರು ಹೋಗುವಾಗ ಅಗ್ನಿಭೂತಿ – “ಪೂಜ್ಯರೇ, ನಿಮ್ಮ ಕಿರಿಯ ಶಿಷ್ಯನನ್ನೂ ಹರಸಿ ಹೋಗಿರಿ* ಎಂದು ನುಡಿದು, ಅವರನ್ನು ವಾಯುಭೂತಿಯ ಮನೆಗೆ ಕರೆದುಕೊಂಡು ಹೋದನು.
[ಅರ್ಥ: ಗ್ರಾಮ – ನೂರಕ್ಕೆ ಕಡಮೆಯಿಲ್ಲದೆ ಐನೂರಕ್ಕೆ ಹೆಚ್ಚಾಗದೆ ಕೃಷಿಕ ಕುಟುಂಬಗಳು ನೆಲಸಿರುವ ಹಳ್ಳಿ, ನಗರ – ರಾಜಧಾನಿ, ಖೇಡ – ಎತ್ತರವಾದ ಕೋಟೆಯುಳ್ಳ ಊರು, ಖರ್ವಡ – ಚಿಕ್ಕ ಸುತ್ತುಗೋಡೆಯಿರುವ ಊರು, ಮಡಂಬ – ದೂರಸ್ಥಲ ಸೀಮಾಂತದ ಪುರ, ಪತ್ತನ – ಬಂಡಿ ಅಥವಾ ನಾವೆಗಳಲ್ಲಿ ಹೋಗಿ ಸೇರಬಹುದಾದ ಪುರ, ದ್ರೋಣಾಮುಖ – ಜಲಸ್ಥಲ ಮಾರ್ಗಗಳುಳ್ಳ ಪುರ.]
ಆತನುಂ ಪಿರಿಯ ಲೋಹಾಸನಮೇಱೆ ಪಲಂಬರ ಪಾರ್ವರ್ಗ್ಗೆ ವಖ್ಖಾಣಿಸುತ್ತಿರ್ದ ಮಾನಗರ್ವದಿದಿರಂ ಬಂದು ಬಂದಿಸದಿರ್ದ್ದೊನಂ ಅಗ್ನಿಭೂತಿ ಪೋಗಿ ವಾಯುಭೂತಿಯ ಕೈಯಂ ಪಿಡಿದೆನ್ಗುಂ ಭಟ್ಟಾರರ್ ನಮಗೆ ಸ್ವಾಮಿಗಳ್ ಭಟ್ಟಾರರ ಪ್ರಸಾದದಿಂದಂ ನಮಗಿನಿವಿರಿದು ಶ್ರೀಯುಂ ಸಂಪತ್ತುಂ ವಿಭವಮುಮಾದುದಱೆಂದಮೆೞ್ದು ಪೋಗಿ ಭಟ್ಟಾರರಂ ವಂದಿಸೆಂದೊಡವನಿಂತೆಂದಂ – ಇದೇನೊಳ್ಳಿದರ್ಗ್ಗೆನ್ನಂ ಪೊಡೆವಡಿಸಿದಪ್ಪೈ ಪೇೞೆಂದುಮಶುಚಿಗಳ್ ಮಲಗ್ರಸ್ತರೆಂದಪ್ಪೊಡಂ ಮಿಂದಱೆಯದವರಿವರ ಕಾಲ್ಗೆಱಗುವೆಂ ಗಡಮೆಂದು ಪಾರ್ವರ ಸಭೆಯ ನಡುವಿರ್ದ್ದು ಕನಿಷ್ಠ ನಿಷ್ಠುರವಚನಂಗಳಿಂ ನಾನಾ ಪ್ರಕಾರದಿಂ ನುಡಿದು ಪೊಲ್ಲದಂ ಪೇೞ್ದಟ್ಟಿ ಕಳೆಯೆ ಅಗ್ನಿಭೂತಿಯೆಂದಂ – ಕೊಯ್ತಲೆಯಧಮಾ ನೀಚಾ ಸ್ವಾಮಿಯನಿಂತೆಂಬಾ ಎಂದವನಂ ಬಯ್ದೊಡೆ ಭಟ್ಟಾರರೆನ್ಗುಂ –
ಜೋ ಸಮಭಾವ ಇ ಪೆಚ್ಚ ಇ ಸೋ ಸಮಣೋ ಸೋಯ ಪವ್ವಯಿಓ ||
ಸಂತಾಪಿತೋ – ಸ್ಮಿ ನ ತು ಮೇ ಹೃತಮುತ್ತಮಾಂಗಂ
ಪ್ರಾಣಾ ಹೃತಾಃ ಮಮ ಪರೈರ್ನ ತು ಮೇ ಸಮಾಃ
ಇತ್ಯಾತ್ಮಚಿಂತನ ಪರಂಪರಯಾ ಕ್ಷಮೇತ
ಎಂದಿಂತು ಕ್ಷಮೆಯಂ ಭಾವಿಸಿದರ್ ಅಗ್ನಿಭೂತಿಯಂ ಭಟ್ಟಾರರೊಡನುದಯಾವತ ಪರ್ವತಕ್ಕೆ ಪೋಗಿ ಇಂತೆಂದಂ – ಭಟ್ಟಾರಾ ನಿಮ್ಮಂ ಪಂಚಮಹಾಪಾತಕನ ಮನೆಗೊಡಗೊಂಡು ಪೋಗಿ ಬಯ್ಸಿದೆನದನಾತಂ ಬಯ್ದೊನಲ್ಲನಾಂ ಬಯ್ದೆನೀಯಪರಾಧಕ್ಕೆನಗೆ ಕ್ಷಮಿಯಿಸುವುದೀ
ಆಗ ವಾಯುಭೂತಿ ದೊಡ್ಡದಾದ ಒಂದು ಲೋಹಾಸನದಲ್ಲಿ ಕುಳಿತಿದ್ದನು. ಹಲವು ಮಂದಿ ಬ್ರಾಹ್ಮಣರಿಗೆ ವ್ಯಾಖ್ಯಾನ ಮಾಡುತ್ತಿದ್ದೇನೆಂಬ ಮಾನಗರ್ವದಿಂದ ಕೂಡಿದ್ದನು. ಅವನು ಸೂರ್ಯಮಿತ್ರಚಾರ್ಯರ ಎದುರಿಗೆ ಬಂದು ವಂದಿಸದೆ ಇದ್ದನು. ಅವನ ಬಳಿಗೆ ಅಗ್ನಿಭೂತಿ ಬಂದು ಅವನ ಕೈಯನ್ನು ಹಿಡಿದು ಹೀಗೆಂದನು – “ಈ ಯತಿಗಳು ನಮಗೆ ಸ್ವಾಮಿಗಳು. ಇವರ ಅನುಗ್ರಹದಿಂದ ನಮಗೆ ಇಷ್ಟೋಂದು ಹಿರಿದಾದ ತೇಜಸ್ಸೂ ಐಶ್ವರ್ಯವೂ ವೈಭವವೂ ಉಂಟಾಗಿವೆ. ಆದುದರಿಂದ ಎದ್ದು ಹೋಗಿ ಪೂಜ್ಯರನ್ನು ನಮಸ್ಕರಿಸು* ಎಂದು ನುಡಿಯಲು, ವಾಯುಭೂತಿ ಹೀಗೆಂದನು – “ಇದೇನು ? ಒಳ್ಳೆಯವರಿಗೆ ನನ್ನಿಂದ ನಮಸ್ಕಾರ ಮಾಡಿಸುತ್ತಿದ್ದೀಯಪ್ಪಾ! ಹೇಳು. ಇವರು ಎಂದಿಗೂ *ಅಶುಚಿಯಾಗಿರುವವರು , ಮಲ ಹಿಡಿದವರು, ಎಂದಾದರೂ ಸ್ನಾನ ಮಾಡಿ ಅರಿಯದವರು ! ಇವರ ಕಾಲಿಗೆ ನಾನು ವಂದಿಸುವೆನು, ಅಲ್ಲವೆ? * ಎಂದು ಬ್ರಾಹ್ಮಣರ ಸಭೆಯ ನಡುವೆ ಇದ್ದುಕೊಂಡು ಅತ್ಯಂತ ಕೀಳಾದ ಕಠನವಾದ ಮಾತುಗಳಿಂದ ಹಲವು ರೀತಿಗಳಿಂದ ತುಚ್ಛೀಕರಿಸಿ ನುಡಿದು, *ಹೇಳಬಾರದ ಕೆಟ್ಟ ಮಾತುಗಳನ್ನಾಡಿ, ಅವರನ್ನು ತಿರಸ್ಕರಿಸಿದನು. ಆಗ ಅಗ್ನಿಭೂತಿ “ತಲೆಹೋಕನಾದ ಆಧಮನೇ ನೀಚನೇ, ಸ್ವಾಮಿಯನ್ನು ಹೀಗೆನ್ನುವೆಯಾ? * ಎಂದು ಅವನನ್ನು ಬೈದನು. ಆಗ ಭಟ್ಟಾರರು ಹೀಗೆಂದರು. – “ನಿಂದಿಸುವವನನ್ನೂ ಹೊಗಳುವವನ್ನೂ ಶತ್ರುವನ್ನೂ ಮಿತ್ರನನ್ನೂ ಹಾಗೆಯೇ ಸುಖ ದುಃಖವನ್ನೂ ಯಾವನು ಸಮಭಾವದಿಂದ ಭಾವಿಸುವನೋ ಮತ್ತು ನೋಡುವನೋ ಅವನು ಸವಣನು (ಜೈನಯತಿ) ಅವನೇ ಪರಿವ್ರಾಜಕನು. ವಾಯುಭೂತಿ ನನ್ನನ್ನು ಮಾತುಗಳಿಂದ ನಿಂದಿಸಿದ್ದಾನಲ್ಲದೆ ಹೊಡೆದಿಲ್ಲ. ದುಃಖಕ್ಕೆ ಈಡು ಮಾಡಿದ್ದಾನಲ್ಲದೆ ನನ್ನ ತಲೆಯನ್ನು ಕತ್ತರಿಸಿಕೊಂಡು ಹೋಗಿಲ್ಲ. ನನ್ನ ಪ್ರಾಣಗಳು ಇತರರಿಂದ ಅಪಹರಿಸ್ಪಟ್ಟಿವೆ, ಆದರೆ ನನ್ನ ಧ್ಯಾನಸ್ಥಿತಿ ಉಳಿದಿದೆ. ಈ ರೀತಿಯ ಆತ್ಮಚಿಂತನೆಗಳನ್ನು ಅನುಕ್ರಮವಾಗಿ ಮಾಡುತ್ತ, ಅವನನ್ನು ಕ್ಷಮಿಸಬೇಕು* ಎಂದು ಸೂರ್ಯಮಿತ್ರ ಯತಿಗಳು ಅವನನ್ನು ಕ್ಷಮಿಸಿದರು.
ಬಯ್ಸಿದ ಆ ಪಾಪಮಿಂತಲ್ಲದೆ ಪಿಂಗದೆನಗೆ ದೀಕ್ಷೆಯಂ ದಯೆಗೆಯ್ದಿಮೆಂದು ಕೀಱೆ ಬೇಡಿದೊಡೆ ಭಟ್ಟಾರರೊಳ್ಳಿ ತಷ್ಟ ಮುಹೂರ್ತದೊಳ್ ದೀಕ್ಷೆಯಂ ಕೊಟ್ಟೊಡಾತನುಂ ತಪಂಬಟ್ಟು ಕ್ರಿಯೆಗಳೆಲ್ಲಮಂ ಕಲ್ತು ಆಗಮಂಗಳನೋದುತ್ತುಂ ತಮ್ಮ ಗುರುಗಳೊಡನೆ ವಿಹಾರಿಸುತ್ತಿರ್ದ್ದಂ ಇತ್ತಲಗ್ನಿಭೂತಿಯ ಪಾರ್ವಂತಿ ಸೋಮದತ್ತೆಯೆಂಬೊಳ್ ತನ್ನೊಂದು ಸಲ್ಗೆಯಿಂದಮೞಲಿಂದಂ ವಾಯುಭೂತಿಯನಿಂತೆಂದಳ್ – ಸೂರ್ಯಮಿತ್ರ ಭಟ್ಟಾರಕರ್ ಮುನ್ ಬ್ರಾಹ್ಮಣರ್ ನಿಮ್ಮ ಸೋದರಮಾವಂಗಳೀಗಳ್ ಮಹಾ ತಪೋಧನರ್ ಗುಣವಂತರಪ್ಪರ್ ನಿಮ್ಮ ಮನೆಗೆ ವಂದೊಡೆ ಮಣಿಯಿಂದೆರ್ದ್ದಿದಿರಂ ಪೋಗಿ ಪೊಡಿವಟ್ಟಿರಿಲ್ಲೀ ಬಾೞುಂ ಸಂಪತ್ತುಂ ಶ್ರೀಯುಮೆಂಬುದವರ ಪ್ರಸಾದಿಂದಮಾದುದಂತಪ್ಪ ಮಹಾಋಷಿಯರಂ ನಿಮಗೆ ಪೞೆಯಲುಂ ಬಯ್ಯಲು ತಿರಸ್ಕರಿಸಿ ನುಡಿಯಲುಮಕ್ಕುಮೆ ಅಧಮರ ಪೊಲ್ಲಮಾನಸರ ದುರ್ಜನರ ಜಾರಜಾತರ ವಿಜಾತಿಗಳ್ಗೆ ಯೋಗ್ಯಮಪ್ಪಯೋಗ್ಯಮಂ ಗೆಯ್ದಿ ರೆಂದು ಪಾರ್ವರ ಸಭೆಯ ನಡುವೆ ನುಡಿದೊಡೆ ವಾಯುಭೂತಿಯುಂ ಮುಳಿದು ಬಯ್ದು ಜಡಿದು ಕಾಲಿಂದಂ ತಲೆಯನೊದೆದು ಮನೆಯೊಳುಳ್ಳುದೆಲ್ಲಮಂ ಕವರ್ದುಕೊಂಡು ನಿಮ್ಮ ಸವಣನಾಗಿರ್ದ್ದಾಣ್ಯನ ಪೋದಲ್ಲಿಗೆ ಪೋಗೆಂದಟ್ಟಿ ಕಳೆದೊಡೆ
ಅಗ್ನಿಭೂತಿ ಅವರೊಡನೆ ಉದಯಾವತ ಎಂಬ ಪರ್ವತಕ್ಕೆ ತೆರಳಿದನು. ಅಲ್ಲಿ ಅವರೊಡನೆ ಹೀಗೆಂದನು “ಪೂಜ್ಯರೇ, ನಿಮ್ಮನ್ನು ನಾನು ಪಂಚಮಹಾಪಾತಕನಾದ ವಾಯುಭೂತಿಯ ಮನೆಗೆ ಕರೆದುಕೊಂಡು ಹೋಗಿ ಅವನಿಂದ ಬಯ್ಯಿಸಿದೆನು. ಆದ್ದರಿಂದ ಬೈದುದು ಅವನಲ್ಲ, ನಾನೇ ಬೈದೆನು. ನನ್ನ ಈ ತಪ್ಪನ್ನು ಕ್ಷಮಿಸಬೇಕು. ಈ ಬೈಸಿದ ಪಾಪಪರಿಹಾರಕ್ಕೆ ಬೇರೆ ಮಾರ್ಗವಿಲ್ಲ. ನನಗೆ ದೀಕ್ಷೆಯನ್ನು ದಯಾಪಾಲಿಸಿರಿ* ಎಂದು ಕೂಗಿ ಬೇಡಿದನು. ಸೂರ್ಯಮಿತ್ರಭಟಾರರು ಒಳ್ಳೆಯ ಮೂಹೂರ್ತದಲ್ಲಿ ಅವನಿಗೆ ದೀಕ್ಷೆಯನ್ನಿತ್ತರು. ಅಗ್ನಿಭೂತಿ ತಪವನ್ನೆಸಗಿ ಯತಿಗಳ ಆಚರಣೆಗಳೆಲ್ಲವನ್ನೂ ಕಲಿತು ಶಾಸ್ತ್ರಗಳನ್ನೆಲ್ಲ ಕಲಿಯುತ್ತ ತನ್ನ ಗುರುಗಳೊಂದಿಗೆ ಸಂಚರಿಸಿದ್ದನು. ಇತ್ತ ಅಗ್ನಿಭೂತಿ ಬ್ರಾಹ್ಮಣನ ಹೆಂಡತಿಯಾದ ಸೋಮದತ್ತೆ ಎಂಬುವಳು ತನ್ನ ಒಂದು ಸಲುಗೆಯಿಂದಲೂ ಅಳಲಿನಿಂದಲೂ ವಾಯುಭೂತಿಯನ್ನು ಕುರಿತು ಹೀಗೆಂದಳು “ಸೂರ್ಯಮಿತ್ರಯತಿಗಳು ಮೊದಲೇ ಬ್ರಾಹಣರು, ನಿಮ್ಮ ಸೋದರಮಾವನವರು. ಈಗ ಅವರು ಮಹಾತಪಸ್ಸೇ ಐಶ್ಚರ್ಯವಾಗಿ ಉಳ್ಳವರು, ಒಳ್ಳೆಯ ಗುಣವಂತರೂ ಆಗಿದ್ದಾರೆ. ಅವರು ನಿಮ್ಮ ಮನೆಗೆ ಬಂದಾಗ ನೀವು ನಿಮ್ಮ ಪೀಠದಿಂದ ಎದ್ದು ಎದುರುಗೊಂಡು ಸಾಷ್ಠಾಂಗವಂದನೆ ಮಾಡಲಿಲ್ಲ. ಈ ಜೀವನೋಪಾಯವೂ ಐಶ್ಚರ್ಯವೂ ತೇಜಸ್ಸು ಅವರ ಅನುಗ್ರಹದಿಂದ ಆಗಿವೆ. ಅಂತಹ ಮರ್ಹಷಿಗಳನ್ನು ಹಳಿಯಲೂ ಬೈಯಲೂ ತುಚ್ಚೀಕರಿಸಿ ನುಡಿಯಲೂ ನಿಮಗೆ ಯುಕ್ತವೇ? ಅಧಮರೂ ಕೆಟ್ಟ ಮನುಷ್ಯರೂ ದುಷ್ಟರೂ ಹಾದರಕ್ಕೆ ಹುಟ್ಟಿದವರೂ ಕುಲಗೆಟ್ಟವರೂ ಆದ ವ್ಯಕ್ತಿಗಳಿಗೆ ಯೋಗ್ಯವೆನಿಸುವ ಅಯೋಗ್ಯ ವರ್ತನೆಯನ್ನು ಮಾಡಿದಿರಿ* – ಹೀಗೆ ಬ್ರಾಹಣರ ಸಭೆಯ ನಡುವೆ ಆಕೆ *ಹೇಳಿದಳು. ಆಗ ವಾಯುಭೂತಿ ಸಿಟ್ಟಾಗಿ, ಬೈದು, ಗದರಿಸಿ, ತನ್ನ ಕಾಲಿನಿಂದ ಅವಳ ತಲೆಯನ್ನು ಒದೆದನು. ಅವಳ ಮನೆಯಲ್ಲಿದ್ದುದೆಲ್ಲವನ್ನೂ ಸುಲಿದು, ‘ನಿನ್ನ ಜೈನಯತಿಯಾದ ಗಂಡನು ಹೋದಲ್ಲಿಗೆ ನಡೆ’ ಎಂದು ಹೊರಪಡಿಸಿದನು.
ಆಕೆಯುಂ ಮುಳಿದು ಕ್ರೋಧಾಗ್ನಿ ಪೆರ್ಚೆ ದುರಾತ್ಮಾ ಎನ್ನನೊದೆದ ನಿನ್ನ ಕಾಲ್ಗಳಂ ಜನ್ನಾಂತರದೊಳಂ ನಾಯುಂ ನರಿಯುಮಾಗಿಯಪೊಡಂ ಕೊಂದು ಮಕ್ಕಳ್ವೆರಸು ತಿಂಬೆನಕ್ಕೆಂದು ನಿದಾನಂಗೆಯ್ದ್ದು ಮನೆಯಿಂದಂ ಮಕ್ಕಳ್ವೆರಸು ಪೊಱಮಟ್ಟು ಪೋಗಿ ಕೆಲವು ಕಾಲದಿಂ ಬೞೆಕ್ಕೆ ಸತ್ತು ತಾನುಂ ಮಕ್ಕಳುಂ ಸಂಸಾರದೊಳ್ ತಿರಿಯು ತ್ತಿರ್ದ್ದರ್. ಇತ್ತ ವಾಯುಭೂತಿಯುಮತಿಮಾನ ಗರ್ವದಿಂದಂ ಋಷಿಯರಂ ಪರಿಭವಿಸಿ ಬಯ್ದು ನುಡಿದು ಜಿನಧರ್ಮಮಂ ಪೞೆದ ಪಾಪದ ಫಲದಿಂದಮೇಱುಂ ದಿವಸದಿಂದೊಳಗೌದುಂಬರಕುಷ್ಠಮಾಗಿ ಪುೞೆತು ನಮೆದು ಸತ್ತು ಕೌಸಂಬಿಯೆಂಬ ಪೊೞಲೊಳ್ ಮಿಳಿದು ಬಿದಿರ ಮೇಗೇಱೆಯಾಕಾಶದೊಳಾಡುವ ವಿದ್ಯಾಧರ ಲಂಗಿಗರ ಮನೆಯೊಳ್ ಪೆಣ್ಗತ್ತೆಯಾಗಿ ಪುಟ್ಟಿ ಪಿರಿಯವಪ್ಪ ಪುಱೆಗಳಂ ಪೊತ್ತು ಪೋಗಿ ಬೆನ್ನೊಳ್ ನಾಳಿ ಬಿರ್ದ್ದು ಕಱಮೆಯಾಗಿ ಪುೞೆತು ನಮೆದು ಸತ್ತು ಮತ್ತಮಾ ಪೊೞಲೊಳ್ ಪೇಪಂದಿಯಾಗಿ ಪುಟ್ಟಿ ಸತ್ತು ಮತ್ತಾ ಮಗಧೆಯೆಂಬುದುಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲಲ್ಲಿ ಪೆಣ್ಣಾಯಾಗಿ ಮಾದೆಗರ ಮನೆಯೊಳ್ ಪುಟ್ಟಿ ಸತ್ತು ಮಲ್ಲಮಾ ಪೊೞಲೊಳ್ ಮಾದೆಗರ್ಗೆ ಪ್ರಧಾನನಪ್ಪ ನೀಳನೆಂಬ ಮಾದೆಗಂಗಂ ಕೇಶಿಯೆಂಬ ಮಾದೆಗಿಗಂ ಮಗಳ್ ದುರೂಪೆ ದುರ್ವರ್ಣೆ ದುರ್ಗಂಧೆ ದುಸ್ಸ್ಯರೆ ಪುಟ್ಟುಂಗುರುಡಿ ಪೊಲತಿಯಾಗಿ ಪುಟ್ಟಿ ವ್ಯಾಪೀಡಿತೆ ಕ್ಷುಧಾಗ್ನಿಯಿಂ ಬೞ್ದೆದೊಳೊಂದು ದಿವಸಮುದ್ಯಾನವನಕ್ಕೆ ಪೋಗಿ ನೇಱೆಲ ಪಣ್ಗಳಂ ತಡವರಿಸಿಯಾಯ್ದಾಯ್ದು ತಿನ್ನುತ್ತಿರ್ಪಳ್
ಆಗ ಸೋಮದತ್ತೆಯೂ ಕೋಪಗೊಂಡು, ಸಿಟ್ಟೆಂಬ ಬೆಂಕಿ ಹೆಚ್ಚಾಗಲೂ ಹೀಗೆಂದಳು – ಎಲೈ ದುಷ್ಠನೇ, ನನ್ನನ್ನು ಒದೆದ ನಿನ್ನನ್ನು ನಾನು ಮುಂದಿನ ಜನ್ಮದಲ್ಲಿಯಾದರೂ ನಾಯಿ ಅಥವಾ ನರಿಯಾಗಿಯಾದರೂ ಹುಟ್ಟಿಬಂದೂ, ಕೊಂದು, ನನ್ನ ಮಕ್ಕಳೊಂದಿಗೆ ನಿನ್ನ ಕಾಲುಗಳನ್ನು ತಿನ್ನುವಂತೆ ಆಗಲಿ – ಎಂದು ಪ್ರತಿಜ್ಞೆ ಮಾಡಿದಳು. ಆಕೆ ಮನೆಯಿಂದ ಮಕ್ಕಳೊಡನೆ ಹೊರಟು ಹೋದಳು. ಕೆಲವು ಕಾಲಾನಂತರ ಸತ್ತು ತಾನೂ ಮಕ್ಕಳೂ ಸಂಸಾರದಲ್ಲಿ ಸುತ್ತುತ್ತಿದ್ದರು. ಇತ್ತ ವಾಯೂಭೂತಿ ಅತಿಯಾದ ಉದ್ಧಟತನದ ಗರ್ವದಿಂದ ಋಷಿಗಳನ್ನು ತಿರಸ್ಕರಿಸಿ ಬೈದು ಮಾತಾಡಿ, ಜೈನಧರ್ಮವನ್ನು ನಿಂದಿಸಿದ ಪಾಪದ ಪರಿಣಾಮವಾಗಿ ಏಳು ದಿವಸಗಳೊಳಗಾಗಿ ಔದುಂಬರಕುಷ್ಠರೋಗಕ್ಕೆ ತುತ್ತಾದನು. ಹುಳುಗಳು ಉಂಟಾಗಿ ಯಾತನೆಪಟ್ಟು ಸತ್ತು ಕೌಸಂಬಿ ಎಂಬ ಪಟ್ಟಣದಲ್ಲಿ ಹಗ್ಗ ಕಟ್ಟಿದ ಬಿದಿರ ಗಣೆಯ ಮೇಲೆ ಆಡುವ ವಿದ್ಯೆಯನ್ನು ತೋರಿಸುವ ಡೊಂಬರ ಮನೆಯಲ್ಲಿ ಹೆಣ್ಣು ಕತ್ತೆಯಾಗಿ ಹುಟ್ಟಿದನು. ಆ ಕತ್ತೆ ದೊಡ್ಡ ದೊಡ್ಡ ಹೊರೆಗಳನ್ನು ಹೊತ್ತುಕೊಂಡು ಹೋಗಿ, ಬೆನ್ನಿನಲ್ಲಿ ನಾಳಿಹುಣ್ಣು ಉಂಟಾಗಿ, ಆ ಹುಣ್ಣು ಬಲಿತು ಹುಳುವಾಗಿ ಯಾತನೆಗೊಂಡು ಸತ್ತಿತು. ಅದು ಮತ್ತೆ ಆ ಪಟ್ಟಣದಲ್ಲಿ ಹೇಲು ತಿನ್ನುವ ಹಂದಿಯಾಗಿ ಹುಟ್ಟಿ ಸತ್ತು ಹೋದನಂತರ ಮಗಧೆ ಎಂಬ ನಾಡಿನಲ್ಲಿರುವ ಚಂಪಾನಗರ ಎಂಬ ಪಟ್ಟಣದಲ್ಲಿ ಮಾದಿಗರ ಮನೆಯಲ್ಲಿ ಒಂದು ಹೆಣ್ಣು ನಾಯಿಯಾಗಿ ಹುಟ್ಟಿತ್ತು. ಆನಾಯಿ ಸತ್ತು ಅನಂತರದಲ್ಲಿ ಅದೇ ಪಟ್ಟಣದಲ್ಲಿ ಮಾದಿಗರಿಗೆಲ್ಲ ಮುಖ್ಯಸ್ಥನಾದ ನೀಳನೆಂಬ ಮಾದಿಗನಿಗೂ ಕೇಶಿಯೆಂಬ ಮಾದಿಗಿತಿಗೂ ಮಗಳಾಗಿ ಹುಟ್ಟಿತು. ಆಕೆ ಕುರೂಪೆಯೂ ಕೆಟ್ಟಬಣ್ಣದವಳೂ ದುರ್ವಾಸನೆಯುಳ್ಳವಳೂ ಕೆಟ್ಟಸ್ವರವುಳ್ಳವಳೂ ಹುಟ್ಟುಕುರುಡಿಯೂ ಹೊಲತಿಯೂ ಆಗಿ ಹುಟ್ಟಿ ರೋಗದಿಂದ ಪೀಡಿತೆಯಾಗಿ ಹೊಟ್ಟೆಗೆ ಗತಿಯಿಲ್ಲದೆ ಹಸಿವೆಂಬ ಬೆಂಕಿಯಿಂದ ಬಳಲುತ್ತ, ಬದುಕಿದ್ದಳು. ಆಕೆ ಒಂದು ದಿವಸ ಉದ್ಯಾನವನಕ್ಕೆ ಹೋಗಿ ಅಲ್ಲಿ ನೇರಳೆ ಹಣ್ಣುಗಳನ್ನು ಕೈಯಿಂದ ತಡವರಿಸಿ ಹೆಕ್ಕುತ್ತ ತಿನುತ್ನ್ತಿದ್ದಳು.
ಅನ್ನೆಗಮಿತ್ತ ಸೂರ್ಯಮಿತ್ರಾಚಾರ್ಯರುಮಗ್ನಿಭೂತಿಮುನಿಯುಂ ಗ್ರಾಮ ನಗರ ಖೇಡ ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಂಗಳಂ ವಿಹಾರಿಸುತ್ತುಂ ಚಂಪಾನಗರಮನೆಯ್ದಿ ವಾಸುಪೂಜ್ಯಭಟ್ಟಾರರ ನಿಸಿದ್ದಿಗೆ ಸಂದ ತೀರ್ಥಸ್ಥಾನಮನಾದಮಾನುಂ ಶುದ್ದ ಪರಿಣಾಮದಿಂದಂ ವಂದಿಸುತ್ತಿರ್ದ್ದ ಸೂರ್ಯಮಿತ್ರಾಚಾರ್ಯರ್ಗ್ಗವಜ್ಞಾನಂ ಪುಟ್ಟಿತ್ತು ಮತ್ತೆ ಬಹಿರುದ್ದಾನದೊಳ್ ಸಂಬರನಾಗಠಾಣದೊಳ್ ಬಂದಿರ್ದ್ದರಂದಿನ ದಿವಸಂ ಸೂರ್ಯಮಿತ್ರಾಚಾರ್ಯರುಪವಾಸಂ ಗೆಯ್ದಿರ್ದ್ದರಗ್ನಿಭೂತಿಮುನಿಯುಂ ಭೈಕ್ಷಾನಿಮಿತ್ತಂ ಚೆರಿಗೆವೊಗುತ್ತವೆಡೆಯೊಳುದ್ಯಾನವನದೊಳ್ ನೇಱೆಲ ಮರದ ಕೆೞಗೆ ನೇಱೆಲ ಪಣ್ಗಳಂ ತಡವರಿಸಿ ಆಯ್ದಾಯ್ದು ತಿನ್ದ ಜಾತ್ಯಂಧೆಯಪ್ಪ ಪೊಲೆಯರ ಕೂಸಂ ಕಂಡತ್ಯಂತ ಸ್ನೇಹವಾಗಿ ಪರವಸದಿಂದಂ ಕಣ್ಣೀರ್ಗಳಂ ಸೂಸಿಯೆಯ್ತಂದು ಮನ್ಯುಮಿಕ್ಕು ಕರುಣದಿಂದೆ ಕುಂಚದ ಕೋಲೊಳ್ ಪರೆದಿರ್ದ ಪಣ್ಗಳಂ ಕೂಸಿನ ಮುಂದೆ ಸಾರ್ಚುತ್ತುಂ ನೀಡುಂ ಬೇಗಮಿರ್ದ್ದಿದೇಂ ಪಾಪದ ಫಲವೊ ಎಂದು ಸಂಸಾರ ನಿವೇಗಮಾಗೆಯಂದಿನ ದಿವಸಮಲಾಭಂ ಮಾಡಿ ತಮ್ಮಾವಾಸಕ್ಕೆ ಪೋದೊಡೆ ಭಟ್ಟಾರರೆಂದರ್ – ಏನು ಲಾಭಮಾದುದೆ ಎಂದು ಬೆಸಗೊಂಡೊಡೆ ಭಟ್ಟಾರರ್ಗ್ಗಿಂತೆಂದು ಪೇೞ್ದರ್ – ಚರಿಗೆವುಗುತ್ತವೊಂದೆಡೆಯೊಳುದ್ಯಾನದೊಳ್ ನೇರಲ ಮರದ ಕೆೞಗೆ ತಡವರಿಸಿ ನೇಱೆಲ ಪಣ್ಗಳಂ ತಿನ್ದ ಜಾತ್ಯಂಧೆಯಪ್ಪ ಪೊಲೆಯರ ಕೂಸಂ ಕಂಡಾದಮಾನುಂ ಸ್ನೇಹವಾಗಿ ಕರುಣದಿಂದಂ ಮನ್ಯು ಮಿಕ್ಕು ಪರವಸದಿಂದಂ
ಆ ವೇಳೆಗೆ ಇತ್ತ ಸೂರ್ಯಮಿತ್ರಾಚಾರ್ಯರೂ ಅಗ್ನಿಭೂತಿ ಋಷಿಯೂ ಗ್ರಾಮ ನಗರ ಖೇಡ ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳನ್ನು ಸಂಚರಿಸುತ್ತ ಚಂಪಾನಗರಕ್ಕೆ ಬಂದರು. ಅಲ್ಲಿ ವಾಸುಪೂಜ್ಯ ಯತಿಗಳ ಸಮಾಗಾಗಿ ಸಂದ ತೀರ್ಥಕ್ಷೇತ್ರವನ್ನು ಅತ್ಯಂತ ಪರಿಶುದ್ದವಾದ ಭಕ್ತಿಯಿಂದ ವಂದಿಸುತ್ತಿದ್ದ ಸೂರ್ಯಮಿತ್ರಾಚಾರ್ಯರಿಗೆ ಅವಜ್ಞಾನವುಂಟಾಯಿತು. ಅನಂತರ ಅವರು ಪಟ್ಟಣದ ಹೊರಗಿನ ಉದ್ದಾನದಲ್ಲಿದ್ದ ಶಂಬರ ಎಂಬ ಹೆಸರಿನ ನಾಗಾಲಯದಲ್ಲಿ ಬಂದು ಸೇರಿದ್ದರು. ಆ ದಿವಸ ಅವರು ಉಪವಾಸ ಮಾಡಿದ್ದರು. ಅಗ್ನಿಭೂತಿಮುನಿ ಭಿಕ್ಷೆಗಾಗಿ ಸಂಚಾರ ಮಾಡುತ್ತ, ನಡುವೆ ಉದ್ಯಾನದಲ್ಲಿ ನೇರಳೆ ಮರದ ಕೆಳಗೆ ನೇರಳೆ ಹಣ್ಣುಗಳನ್ನು ಕೈಯಿಂದ ತಡವರಿಸಿ ಆಯ್ದುಕೊಳ್ಳುತ್ತ ತಿನ್ನುವ ಹುಟ್ಟುಕುರುಡಿಯಾದ ಹೊಲತಿ ಕೂಸನ್ನು ಕಂಡು ಅತ್ಯಂತ ಪ್ರೀತಿಯುಂಟಾಗಿ ಮೈಮರೆಯುತ್ತ, ಕಣ್ಣೀರನ್ನು ಸುರಿಸಿಕೊಂಡು ಬಳಿಗೆ ಬಂದರು. ಅವರಿಗೆ ದುಃಖ ಹೆಚ್ಚಾಯಿತು. ಕರುಣೆ ತಾಳಿ ಅವರು ಅಲ್ಲಿ ಹರಡಿ ಬಿದ್ದಿದ್ದ ಹಣ್ಣುಗಳನ್ನು ನವಿಲು ಗರಿಯ ಕಟ್ಟಿನ ಕೋಲಿನಿಂದ ಆಕೂಸಿನ ಮುಂದಕ್ಕೆ ತಳ್ಳುತ್ತ ಬಹಳ ಹೊತ್ತು ಅಲ್ಲೇ ಇದ್ದು ‘ಇದು ಯಾವ ಪಾಪದ ಫಲವೋ’ ಎಂದು ಸಂಸಾರದಲ್ಲಿ ವಿರಕ್ತಿ ತಾಳಿದರು. ಆ ದಿನ ಭಿಕ್ಷವೇ ಇಲ್ಲದಂತೆ ಆಚರಿಸಿ ತನ್ನ ವಾಸಸ್ಥಳಕ್ಕೆ ತೆರಳಿದರು. ಆಗ ಸೂರ್ಯಮಿತ್ರ ಯತಿಗಳು – “ಏನು, ಭಿಕ್ಷೆ ಇಲ್ಲದಾಯಿತೆ ?” ಎಂದು ಕೇಳಲು ಭಟಾರರಿಗೆ ಅಗ್ನಿಭೂತಿಯತಿಗಳು ಹೀಗೆಂದರು – “ನಾನು ಭಿಕ್ಷೆಗಾಗಿ ಸಂಚರಿಸುತ್ತ ಒಂದೆಡೆ ಉದ್ಯಾನವನದಲ್ಲಿ ನೇರಳೆ ಮರದ ಕೆಳಗೆ ಹರಡಿದ್ದ ನೇರಳೆ ಹಣ್ಣುಗಳನ್ನು ತಿನ್ನುತ್ತಿದ್ದ ಹುಟ್ಟುಗುರುಡಿಯಾಗಿದ್ದ ಹೊಲೆಯರ ಹೆಂಗಸೊಬ್ಬಳನ್ನು ಕಂಡೆನು. ಆಗ ಅತ್ಯಂತ ಪ್ರೀತಿಯುಂಟಾಗಿ ವ್ಯಸನದಿಂದ ಮರುಕ ಹೆಚ್ಚಾಗಿ ಬೇರೆಲ್ಲವನ್ನೂ ಮರೆತೆನು.
ಕಣ್ಣೀರ್ಗಳ್ ಬಂದು ನೀಡುಂ ಬೇಗಮಿರ್ದ್ದು ನೋಡಿ ಅಹೋವಿಧಾತ್ರಾ ಸಂಸಾರಮೆಂದು ಮುಟ್ಟುಪಡಂ ಮಾಡಿ ಬಂದೆನೆನೆ ಭಟ್ಟಾರರೆಂದರ್ – ಆ ಕೂಸೆಂಬುದು ನಿಮ್ಮ ತಮ್ಮನಪ್ಪ ವಾಯ್ನುಭೂತಿಯ ಜೀವಮನೆ ಅದೆಂತು ಭಟ್ಟಾರಾ ಎಂದು ಬೆಸಗೊಂಡೊಡೆ ಭಟ್ಟಾರರಿಂತೆಂದು ಪೇೞ್ದರ್ – ವಾಯುಭೂತಿ ತನ್ನೊಂದು ಮಾನಗರ್ವದಿಂದೆಮ್ಮಂ ಪೞೆದು ನಮೆದು ಸತ್ತಾ ಪೊೞಲೊಳೆ ಲಂಗಿಗರ ಮನೆಯೊಳ್ ಪೆಣ್ಗತ್ತೆಯಾಗಿ ಪುಟ್ಟಿ ನಮೆದು ಸತ್ತು ಪೇಪಂದಿಯಾಗಿ ಪುಟ್ಟಿ ಸತ್ತು ಪೆಣ್ಣಾಯಾಗಿ ಪುಟ್ಟಿ ಸತ್ತೀಗಳ್ ಜಾತ್ಯಂಧೆ ಪೊಯರ ಮಗಳಾಗಿ ಪುಟ್ಟಿದಳದಱೆಂ ಮುನ್ನಿನ ಸ್ನೇಹಂ ಕಾರಣಮಾಗಿ ಕೂಸಿನ ಮೇಗೆ ನಿಮಗೆ ಕೂರ್ಮೆಯಾದುದೆನೆ – ಭಟ್ಟಾರಾಂ ಅದೇ ಭವ್ಯಜೀವನೋ ಅಭವ್ಯಜೀವನೋ ಎಂದು ಬೆಸಗೊಂಡೊಡೆ ಭವ್ಯಜೀವಂ ನಿಮ್ಮ ಪೇೞೆ ಬ್ರತಂಗಳಂ ಕೈಕೊಳ್ಗುಮೆಂದೊಡೆ ಭಟ್ಟಾರರನುಮತದಿಂದಗ್ನಿಭೂತಿ ಋಷಿಯರ್ ಪೋಗಿ ತಮ್ಮ ಮುನ್ನಿನ ಜನ್ಮಾಂತರ ಸಂಬಂಧಮುಮಂ ಋಷಿಯರಂ ಏಳಿದು ನುಡಿದ ಪಾಪದ ಫಲದಿಂದೆಯ್ದಿದ ಭವಂಗಳ ದುಃಖಂಗಳುಮನಾ ಕೂಸೊಂಗಱೆವಂತು ತಿಳಿಯೆ ಪೇೞ್ದು ಮತ್ತಮಿಂತೆಂದರ್ ಮುನ್ನೆ ನೀನೀ ಭವದಿಂ ತೊಟ್ಟಯ್ದನೆಯ ಭವದೊಳ್ ವಾಯುಭೂತಿಯಪ್ಪಂದು ಮಾನಗರ್ವದಿಂ ಋಷಿಯರಂ ಬಯ್ದ ಪಾಪದ ಫಲದಿಂದಿಂತಪ್ಪ ದುಃಖಂಗಳನೆಯ್ದಿದೆ ಇನ್ ಮತ್ತಂ ಮಧುಮದ್ಯಮಾಂಸಂಗಳಂ ಭಕ್ಷಿಸಿ ತಿರಿಕ ಮನುಷ್ಯ ಭವಂಗಳೊಳಪ್ಪ ದುಃಖಂಗಳನಂತನಂತಕಾಲಮನುಭವಿಸಿ ನೀಡಱೆಂದೆತ್ತಾನುಮಲ್ಲದೆ ಮನುಷ್ಯಭವಮಂ ಪೆಱದು ಪೆತ್ತೊಡಮಿಂತಾಗಿ ಪುಟ್ಟುಗುಂ
ಕಣ್ಣೀರು ಸುರಿಯಿತು. ಬಹಳ ಹೊತ್ತು ಅಲ್ಲಿದ್ದು, ಅಯ್ಯೋ ವಿಯೇ, ಈ ಸಂಸಾರವೇ! ಎಂದು ಭಿಕ್ಷೆಯೆತ್ತುವುದನ್ನೇ ಬಿಟ್ಟು ಬಂದೆನು*. ಹೀಗೆನ್ನಲು ಸೂರ್ಯಮಿತ್ರಯತಿಗಳು “ಆ ಹೆಂಗಸು ನಿಮ್ಮ ತಮ್ಮನಾದ ವಾಯುಭೂತಿಯ ಜೀವ* ಎಂದರು. ‘ಪೂಜ್ಯರೇ, ಅದು ಹೇಗೆ? ’ ಎಂದು ಕೇಳಿದಾಗ ಯತಿಗಳು ಹೀಗೆ ಹೇಳಿದರು – “ವಾಯುಭೂತಿ ತನ್ನದೊಂದು ಔದ್ಧತ್ಯದ ಗರ್ವದಿಂದ ನಮ್ಮನ್ನು ಹಳಿದು ಬೈದು ನುಡಿದ ಪಾಪದ ಪರಿಣಾಮವಾಗಿ ಏಳುದಿವಸದೊಳಗೆ ಔದುಂಬರ ಕುಷ್ಠರೋಗಕ್ಕೆ ಗುರಿಯಾಗಿ ಹುಳುವಾಗಿ ಯಾತನೆಪಟ್ಟು ಸತ್ತನು. ಮತ್ತೆ ಹೇಲುಹಂದಿಯಾಗಿ ಹುಟ್ಟಿ ಸತ್ತು ಹೆಣ್ಣು ಕತ್ತೆಯಾಗಿ ಹುಟ್ಟಿ ಸತ್ತು ಈಗ ಹುಟ್ಟುಗುರುಡಿಯಾಗಿ ಹೊಲೆಯರ ಮಗಳಾಗಿ ಆಕೆ ಹುಟ್ಟಿದ್ದಾಳೆ. ಆದುದರಿಂದ ಹಿಂದಿನ ಪ್ರೀತಿಯೇ ಕಾರಣವಾಗಿ ನಿಮಗೆ ಆ ಕೂಸಿನ ಮೇಲೆ ಪ್ರೀತಿಯುಂಟಾಯಿತು*. ಆಗ ಅಗ್ನಿಭೂತಿ ಮುನಿಗಳು – ಪೂಜ್ಯರೆ, ಅದೇನು ಭವ್ಯ (ಮೋಕ್ಷಕ್ಕೆ ಅರ್ಹವಾದ) ಜೀವನೋ ? ಅಭವ್ಯ ಜೀವನೋ ? – ಎಂದು ಕೇಳಿದರು. “ಅದು ಭವ್ಯಜೀವನವಾಗಿದೆ. ನೀವು ಉಪದೇಶ ಮಾಡಿದರೆ ಆಕೆ ವ್ರತಗಳನ್ನು ಸ್ವೀಕರಿಸುವಳು* ಎಂದು ಸೂರ್ಯಮಿತ್ರಾಚಾರ್ಯರು ಹೇಳಿದರು. ಅವರ ಅನುಮತಿ ಪಡೆದು ಅಗ್ನಿಭೂತಿ ಋಷಿಗಳು ಹೋಗಿ ತಮ್ಮ ಹಿಂದಿನ ಜನ್ನಾಂತರದ ಸಂಬಂಧವನ್ನೂ ಸೂರ್ಯಮಿತ್ರಋಷಿಗಳನ್ನು ತಿರಸ್ಕಾರದಿಂದ ಕೆಟ್ಟ ಮಾತಾಡಿದ ಪಾಪದ ಪರಿಣಾಮವಾಗಿ ಉಂಟಾದ ಜನ್ಮಗಳ ದುಃಖಗಳನ್ನೂ ಆ ಹೆಂಗಸಿಗೆ ಗೊತ್ತಾಗುವಂತೆ ತಿಳಿಸಿ ಆಮೇಲೆ ಹೀಗೆಂದರು – ನೀನು ಈ ಜನ್ಮದಿಂದ ಹಿಂದಿನ ಐದನೆಯ ಜನ್ಮದಲ್ಲಿ ವಾಯುಭೂತಿಯಾಗಿದ್ದಾಗ ಔದ್ಧತ್ಯಗರ್ವದಿಂದ ಋಷಿಗಳನ್ನು ನಿಂದಿಸಿದ ಪಾಪದ ಫಲದಿಂದ ಇಂತಹ ದುಃಖಗಳನ್ನು ಹೊಂದಿರುವೆ. ಅಲ್ಲದೆ, ಜೇನು – ಹೆಂಡ – ಮಾಂಸಗಳನ್ನು ಸೇವಿಸಿ ತಿರ್ಯಕ್ಕು – ಮನುಷ್ಯ ಜನಗಳಲ್ಲಿ ಒದಗುವ ದುಃಖಗಳನ್ನು ಹಾಗೆಯೇ ಕೊನೆಯಿಲ್ಲದಷ್ಟು ಕಾಲವೂ ಅನುಭವಿಸಿ, ದೀರ್ಘಕಾಲದ ನಂತರವೂ ಮನುಷ್ಯಜನ್ಮ ಪ್ರಾಪ್ತವಾಗದು. ಒಂದು ವೇಳೆ ಮನುಷ್ಯ ಜನ್ಮ ದೊರೆತರೂ ಹೀಗೆ (ಹುಟ್ಟುಗುರುಡಿ – ದುರ್ಗಂಧೆ – ದುಸ್ವರೆ ಇತ್ಯಾದಿಯಾಗಿ) ಹುಟ್ಟಬೇಕಾಗುವುದು.
ಕ್ಷುತ್ತ*ಷ್ಣಾಪೀಡಿತತ್ವಂ ವಿರಸ ವಿಕಳತಾಂ ವ್ಯಾತಾಂ ಚಾಬಲತ್ವಂ
ಹೀನತ್ವಂ ಪ್ರೇಷಣತ್ವಂ ಲಘುತರಮರಣಂ ಶೋಕ ಕಾಂಕ್ಷಾಲಯತ್ವಂ
ಮಾಂಸಾಶೀ ಪ್ರಾಣಘಾತೀಹ್ಯನುಭವತಿ ಚಿರಂ ಪ್ರಾಪ್ಯ ಮಾನುಷ್ಯ ಜನ್ಮಂ ||
ವಾಮನ ಪಂಗ್ವಂಧ ಕುಬ್ಜ ಖಂಜ ಕರಾಲಾಃ
ಜಡ ಬರ ಮೂಕ ಕೃಶ ರೋ
ಮಶ ವಕ್ರ ನಿಬಿಡಾಳಿಸ್ತೆ (?) ||
ಸಂಸ್ಥೂಲ ದೀರ್ಘ ಕೃಶರೋಮಶ ರೂಕ್ಷರೂಪಾಃ
ಕುಷ್ಠರ್ದಿತಾಃ ಕೃಪಣ ವಾಮನ ಪಾಮನಾಶ್ಚ
ಪಾಪೇನ ಪೂರ್ವಚರಿತೇನ ನರಾ ಭವನ್ತಿ ||
ಅಂತಹ ಜೀವವು ಮನುಷ್ಯ ಜನ್ಮವನ್ನು ಪಡೆದು ವಿಕಾರ ರೂಪ, ಭಾಗ್ಯಹೀನತೆ, ಕೆಟ್ಟಬುದ್ದಿ, ಕೇಡಿಗತನ, ನೀಚಸ್ವಭಾವ, ಕೆಟ್ಟಜಾತಿ, ಹಸಿವು, ಬಾಯಾರಿಕೆಗಳಿಂದ ಪೀಡಿತವಾಗಿರುವುದು, ರಸಹೀನವಾದ ಮನೋದುಃಖಗಳು, ರೋಗ, ಶಕ್ತಿಹೀನತೆ, ಕೊರತೆ, ಅನ್ಯರ ಆಳುತನ, ಬರೇ ಹಗುರವಾದ ಸಾವು, ದುಃಖ, ದುರಾಶೆಗಳಿಗೆ ಆಶ್ರಯವಾಗಿರುವುದು, ಮಾಂಸಸೇವನೆ, ಜೀವಹಿಂಸೆ – ಇವನ್ನೆಲ್ಲ ಗಳಸಿಕೊಂಡು ಬಹುಕಾಲ ಇವನ್ನು ಅನುಭವಿಸಿಕೊಂಡು ಇರಬೇಕಾಗುವುದಲ್ಲವೆ? ಪಾಪದಿಂದಲೇ ಕುಳ್ಳರಾಗಿ, ಕೈಕಾಲಿಲ್ಲದವರಾಗಿ, ಕುರುಡರಾಗಿ, ಗಿಡ್ಡರಾಗಿ, ಕುಂಟರಾಗಿ, ಭಯಂಕರರಾಗಿ,ದಡ್ಡರಾಗಿ, ಕಿವುಡರಾಗಿ, ಮೂಕರಾಗಿ, ಕ್ಷೀಣರಾಗಿ, ಮೈಮೇಲೆಲ್ಲ ಕೂದಲುಳ್ಳವರಾಗಿ, ಡೊಂಕುಳ್ಳವರಾಗಿ – ಹುಟ್ಟುತ್ತಾರಲ್ಲವೆ? ಮನುಷ್ಯರು ಹಿಂದೆ ಮಾಡಿದ ಪಾಪಕರ್ಮದಿಂದ ಉಬ್ಬುಹಲ್ಲುಳ್ಳವರು, ಕುಬ್ಜರು, ಮೋಟುಗೈಯವರು, ಹಾದರಕ್ಕೆ ಹುಟ್ಟಿದವರು, ಒಂದೇ ಕಣ್ಣಿನವರು, ತುಂಬಾದಪ್ಪವಾದವರು, ಉಗ್ರವಾಗಿರುವರು, ಕೃಶವಾಗಿರುವವರು ಕಾಡುಗೂದಲುಳ್ಳವರು, ಒರಟುರೂಪದವರು, ಕುಷ್ಠರೋಗಪೀಡಿತರು, ಜಿಪುಣರು, ಕುಳ್ಳರು, ಚರ್ಮರೋಗ ಪೀಡಿತರು ಆಗಿ ಹುಟ್ಟುತ್ತಾರೆ. ಅಹಿಂಸೆ ಮೊದಲಾದ ವ್ರತಗಳನ್ನು ಆಚರಿಸದವನು – ನೀಚಕುಲೋತ್ಪನ್ನನು ಗೌರವ ಕಡಮೆಯಾದವನು, ತಿರಸ್ಕಾರಕ್ಕೆ ಗುರಿಯಾದ ವೈಭವವುಳ್ಳವನು, ಕೇಡಿಗನು, ಪಾಪಕೃತ್ಯವೆಸಗಿದವನು, ಕೊಳಕನು, ಕೆಟ್ಟನಾತವುಳ್ಳ್ಳವನು, ಮಂದಬುದ್ದಿಯವನು, ಕಿವುಡನು, ಹೆಳವನು, ಮೂಕ, ನಾಚಿಕೆಯಿಲ್ಲದವ, ಜಾರ, ಹೇಡಿ, ಅತ್ಯಾಶೆಯುಳ್ಳವ, ಕೆಟ್ಟವ, ಕಪಟ ಮನದವ,
ಮಲಿನಂ ದುರ್ಗಂಧಗಂಧಂ ಜಡಮತಿ ಕಿವುಡಂ ಪಂಗು ಮೂಕು … ತಂ ನಾ
ಣಿಲಿ ಪಾಣ್ದಂ ಪಂದೆ ಲೋಭಂ ಖಳನಳಿಕಮನಂ ವಂಚಕಂ ನಿತ್ಯರೋಗಾ
ಕುಲನೆಂಬೀ ನಾಮ ನಾಮಾವಳಿಗೆ ನಿಳಯನಕ್ಕುಂ ವ್ರತವ್ರಾತಹೀನಂ ||
ಇಂತು ಪೂರ್ವಕೃತ ಪಾಪದ ಫಲದಿಂದಂ ವ್ರತಂಗಳಂ ಕೈಕೊಂಡೞೆದುದೞೆಂದಂ ಮನುಷ್ಯಜನ್ಮದೊಳ್ ಪುಟ್ಟಿಯಂ ದುಃಖಗಳನೆಯು ಗುಂ ಜೀವಂ ಮತ್ತೆ ಧರ್ಮದ ಫಲದಿಂದಂ
ವೃತ || ಶ್ರೀವಕ್ಷಶ್ಚಾರುರೂಪಂ ಕುಲ ಬಲ ವಿನಯಂ ಖ್ಯಾ ತಿ ದೀರ್ಘಾಯುಷತ್ವಂ
ಪೂಜಾಂ ದೇವಾಸುರೇಂದ್ರೈಃ ಸುರನರವನಿತಾ ಪ್ರೀತಿಮಷ್ಟಾಂಗ ಭೋಗಂ
ಸ್ವರ್ಗೇ ಮರ್ತ್ಯೇ ಲಭಂತೇ ದ್ಯುತಿ ಮತಿ ಪಟುತಾಂ ರಾಜರಾಜಶ್ರೀಯಂಚ
ಸೌಭಾಗ್ಯಂ ಪೂಜ್ಯವಾಕ್ಯಂ ಜಗತಿ ಮಧು ಸುರಾ ಮಾಂಸ ಸೇವಾನಿವೃತ್ತಾಃ ||
ಆರ್ಯೆ || ಪುಣ್ಯಾದುತ್ಪಾದ್ಯಂತೆ ಜೀವಾ ವಿಖ್ಯಾತ ವಿಪುಲ ವಂಶೇಷ್ವೇಕೇ
ದ್ಯುತಿ ಮತಿ ಧೃತಿ ಕಾಂತಿ ಶ್ರೀ ಹ್ರೀ ರೂಪಾರೋಗ್ಯ ಸತ್ವಬಲ ಸಂಪನ್ನಾಃ
ಆಜ್ಞಾ ಯಶೋ ಧೃತಿ ಮತಿ ದ್ಯುತಿ ಕಾಂತಿ ಲಕ್ಷ್ಮೀ
ಶೌರ್ಯ ಪ್ರತಾಪ ಪರಿವಾರ ಧನೋಪಭೋಗಾಃ
ತೇ ಲೋಕವೇದ ಸಮಯೇಷು ಸುನಿಶ್ಚಯೇನ
ಪುಣೋದಯೇನ ಸುಲಭಾ ಇತಿ ವರ್ಣಯಂತಿ ||
ಮೋಸಗಾರ ಯಾವಾಗಲೂ ರೋಗಿ, – ಎಂಬೀ ನಾಮಾವಗಳಿಗೆ ಆಶ್ರಯಸ್ಥಾನವಾಗುತ್ತಾನೆ. ಈ ರೀತಿಯಾಗಿ ಹಿಂದೆ ಮಾಡಿದ ಪಾಪದ ಪರಿಣಾಮವಾಗಿ ವ್ರತಗಳನ್ನು ಸ್ವೀಕರಿಸಿ ಸತ್ತುದರಿಂದ ಮನುಷ್ಯ ಜನ್ಮದಲ್ಲಿ ಬಂದರೂ ಜೀವನು ದುಃಖಗಳನ್ನು ಹೊಂದುವನು. ಆಮೇಲೆ ಧರ್ಮಾಚರಣೆಯಿಂದ ಏನಾಗುವುದೆಂದರೆ – ಲೋಕದಲ್ಲಿ ಜೇನು, ಮದ್ಯ, ಮಾಂಸಗಳನ್ನು ತಿನ್ನದೆ ಬಿಟ್ಟವರು – ಸಂಪದ್ಯುಕ್ತವಾದ ಎದೆ, ಮನೋಹರವಾದ ರೂಪ, ಕುಲ – ಬಲ – ವಿನಯಗಳು, ಕೀರ್ತಿ, ದೀರ್ಘಾಯುಷ್ಯ, ಇಂದ್ರನಿಂದಲೂ ರಾಕ್ಷಸರಾಜರಿಂದಲೂ ಪೂಜೆ, ದೇವತಾಸ್ತ್ರೀಯರ ಪ್ರೇಮ, ಅನ್ನ – ನೀರು, ತಾಂಬೂಲ, ಪುಷ್ಪ, ಚಂದನ, ವಸ್ತ್ರ, ಶಯ್ಯೆ, ಅಲಂಕಾರ ಎಂಬ ಎಂಟು ಬಗೆಯ ಸುಖ, ಕಾಂತಿಯುಕ್ತವಾದ ಬುದ್ದಿಶಕ್ತಿ, ಕುಬೇರನ ಐಶ್ವರ್ಯ, ಸಂಪತ್ತು, ಗೌರವಯುಕ್ತವಾದ ಮಾತು – ಇವನ್ನು ಸ್ವರ್ಗ ಮರ್ತ್ಯಗಳೆರಡರಲ್ಲಿಯೂ ಪಡೆಯುವರು. ಮನುಷ್ಯರು ಪುಣ್ಯ ಸಂಪಾ ನೆಯಿಂದಲೇ ಪ್ರಸಿದ್ದವೂ ವಿಸ್ತಾರವೂ ಆಗಿರುವ ವಂಶಗಳಲ್ಲಿ ಒಂದರಲ್ಲಿ, ಪ್ರಕಾಶಯುಕ್ತವಾದ ಬುದ್ದಿಯಿಂದಲೂ ಸ್ಥಿರತೆಯಿಂದಲೂ ತೇಜಸ್ಸಿನಿಂದಲೂ ಐಶ್ವರ್ಯದಿಂದಲೂ ಲಜ್ಜಾಗುಣದಿಂದಲೂ ಆಕಾರ ಆರೋಗ್ಯ ಸತ್ವಗುಣ ಶಕ್ತಿಗಳಿಂದಲೂ ಕೂಡಿದವರಾಗಿ ಹುಟ್ಟುತ್ತಾರೆ. ಲಾಕಿಕ ವೈದಿಕ ಸಂಪ್ರದಾಯಗಳಲ್ಲಿ ಆಜ್ಞೆಮಾಡುವ ಅಕಾರವೂ ಕೀರ್ತಿಯೂ ಸ್ಥಿರಬುದ್ದಿಯೂ ಬುದ್ದಿಪ್ರಕಾಶವೂ ತೇಜಸ್ಸೂ ಐಶ್ವರ್ಯವೂ ಪರಾಕ್ರಮ ಪ್ರತಾಪಗಳೂ ಸೇವಕರು ಐಶ್ವರ್ಯ ಮುಂತಾದ ಸುಖಗಳೂ ಅತ್ಯಂತ ನಿಶ್ಚಯವಾದ ಪುಣ್ಯದ ಏಳಿಗೆಯಿಂದ ಸುಲಭವಾಗಿ ದೊರೆಯುವುವು ಎಂದು ವರ್ಣಿಸುತ್ತಾರೆ.
ದಸ ಆಟ್ಠ ದೋಸರಹಿ ಓ ಸೋದೇವೋ ಣತ್ಥಿ ಸಂದೇಹೋ ||
ಎಂದಿಂತು ಪದಿನೆಂಟು ದೋಷಂಗಳನಿಲ್ಲದೊಂ ದೇವನಂತಪ್ಪ ದೇವನ ಪೇೞ್ದುದಾಗಮ ಮೆಂಬುದಕ್ಕುಮಾ ಆಗಮಂ ಪೇೞ್ದಂತು ಬಾಹ್ಯಾಭ್ಯಂತರ ಪರಿಗ್ರಹಂಗಳೆಲ್ಲಮಂ ತೊಱೆದು ದ್ವಾದಶವಿಧಮಪ್ಪ ತಪದೊಳ್ ನೆಗೞ್ದು ಆಯ್ದುಮಿಂದ್ರಿಯಂಗಳಂ ಗೆಲ್ದು ಪಸಿವುಂ ನೀರೞ್ಕೆ ಮೊದಲಾಗೊಡೆಯ ಇಪ್ಪತ್ತೆರಡು ಪರೀಷಹಂಗಳಂ ಸೈರಿಸಿ ಯಮ ನಿಯಮ ಸ್ವಾಧ್ಯಾಯ ಧ್ಯಾನಾನುಷ್ಠಾನ ನಿರತರಾಗಿ ತಪಂಗೆಯ್ದ ಋಷಿಯರ್ಕಳ್ ತಪೋಧನರು ಕೊಲ್ಲದುದೆ ಧರ್ಮಮೆಂದಿಂತು ನಂಬಿ ವ್ರತಂಗಳಂ ಕೈಕೊಂಡು ನೆಗೞ್ವುದು ಧರ್ಮಮೆಂಬುದಕ್ಕುಂ – ಎಂದಗ್ನಿಭೂತಿರಿಸಿಯರ್ ತಿಳಿಯೆ ಧರ್ಮಮಂ ಪೇೞ್ದೊಡೆರ್ದೆಯೊಳ್ ಮೆಲ್ಲಿದಳಾಗಿ ತನ್ನ ಭವಾಂತರಂಗಳಂ ಧರ್ಮಮುಮಂ ಕೇಳ್ದಱೆದು ಸಂಸಾರ ಶರೀರ ವೈರಾಗ್ಯಮಾದಮಾನುಂ ಪೆರ್ಚೆ ತನ್ನಂ ತಾನೆ ಪೞೆದು ನಿಂದಿಸಿ ಪಾಪಕ್ಕಂಜಿ ಅಣುವ್ರತಂ ಮೊದಲಗೊಡೆಯ ಶ್ರಾವಕಬ್ರತಂಗಳಂ ಕೈಕೊಂಡಾಗಳ್ ಭಟ್ಟಾರರುಂ ದೃಢವ್ರತೆಯಾಗು ಕರ್ಮಕ್ಷಯಮಕ್ಕೆಂದು ಪರಸಿ ತಮ್ಮಾವಾಸಕ್ಕೆ ಪೋದರ್
ಧರ್ಮದಿಂದ ಶ್ರೇಷ್ಠಳಾದ ಸ್ತ್ರೀ, ಮನೆ, ವಾಹನಗಳು, ನೃತ್ಯಗಳು, ಐಶ್ವರ್ಯ, ಚಿನ್ನ, ಬೆಳ್ಳಿ, ರತ್ನ, ಒಳ್ಳೆಯ ರಥಗಳು, ಬಹಳ ಸುಂದರವೂ ಎತ್ತರವೂ ಆಗಿ ಮದಜಲದಿಂದ ಬೀಗಿದ ಆನೆಗಳು, ಸೇವಕರು – ಈ ಎಲ್ಲವೂ ದೊರೆಯುತ್ತವೆ. ಹೀಗೆ ಧರ್ಮದ ಫಲದಿಂದ ಜೀವವು ಸ್ವರ್ಗ ಮರ್ತ್ಯಗಳ ಸುಖವನ್ನು ಅನುಭವಿಸಿದ ಮೇಲೆ ಮೋಕ್ಷದ ಸುಖವನ್ನು ಪಡೆಯುವುದು. ಇನ್ನು ಆ ಧರ್ಮವೆಂಬುದು ಹೇಗೆಂದರೆ – ಎಲ್ಲಿ ದಯೆ ಇದೆಯೋ ಅದು ಧರ್ಮವು ಮತ್ತು ಎಲ್ಲಿ ಇಂದ್ರಿಯನಿಗ್ರಹವಿದೆಯೋ ಅದು ಕೂಡ ಧರ್ಮವು. ಹದಿನೆಂಟು ದೋಷಗಳಿಲ್ಲದವನು ದೇವನು. ಇದರಲ್ಲಿ ಸಂಶಯವಿಲ್ಲ. ಈ ರೀತಿಯಾಗಿ ಹಸಿವು, ಬಾಯಾರಿಕೆ, ಹೆದರಿಕೆ, ಹಗೆತನ, ಪ್ರೀತಿ, ಮೋಹ, ಚಿಂತೆ, ಮುಪ್ಪು, ರೋಗ, ಮರಣ, ಬೆವರು, ಖೇದ, ಮದ, ರತಿ, ಆಶ್ಚರ್ಯ, ಜನನ, ನಿದ್ರೆ, ವಿಷಾದ ಎಂಬೀ ಹದಿನೆಂಟು ದೋಷಗಳಿಲ್ಲದವನು ದೇವನು. ಅಂತಹ ದೇವನು ಹೇಳಿದುದು ಶಾಸ್ತ್ರವೆನಿಸುವುದು. ಆ ಶಾಸ್ತ್ರ ಹೇಳಿದಂತೆ ಬಾಹ್ಯ ಮತ್ತು ಆಭ್ಯಂತರ ಎಂಬ ಪರಿಗ್ರಹಗಳೆಲ್ಲವನ್ನೂ ಬಿಟ್ಟು ಹನ್ನೆರೆಡು ತೆರನಾದ ತಪ್ಪಸ್ಸಿನಲ್ಲಿ ಪ್ರಖ್ಯಾತನಾಗಿ ಪಂಚೇಂದ್ರಿಯಗಳನ್ನು ಗೆದ್ದು ಹಸಿವು ಬಾಯಾರಿಕೆ ಮುಂತಾದ ಇಪ್ಪತ್ತೆರಡು ಪರೀಷಹಗಳನ್ನು ಸಹಿಸಿ, ಯಮ, ನಿಯಮ, ಸ್ವಾಧ್ಯಾಯ, ಧ್ಯಾನಗಳ ಆಚರಣೆಯಲ್ಲಿ ತತ್ಪರರಾಗಿ ತಪಸ್ಸನ್ನು ಮಾಡುವ ಋಷಿಗಳು ತಪಸ್ಸೇ ಐಶ್ವರ್ಯವಾಗಿರುವವರು. ಕೊಲ್ಲದಿರುವುದೇ ಧರ್ಮ – ಹೀಗೆ ನಂಬಿಕೊಂಡು ವ್ರತಗಳನ್ನು ಸ್ವೀಕರಿಸಿ ಆಚರಿಸುವುದು ಧರ್ಮವು. ಎಂದು ಅಗ್ನಿಭೂತಿಋಷಿ ಆಕೆ ತಿಳಿಯುವಂತೆ ಧರ್ಮವನ್ನು ತಿಳಿಸಿದನು. ಆಗ ಅವಳು ಹೃದಯದಲ್ಲಿ ಮೃದುತ್ವವನ್ನು ತಾಳಿ, ತನ್ನ ಜನ್ಮಾಂತರಗಳನ್ನೂ ಧರ್ಮವನ್ನೂ ಕೇಳಿ ತಿಳಿದುಕೊಂಡು, ಸಂಸಾರದಲ್ಲಿಯೂ ತನ್ನ ಶರೀರದಲ್ಲಿಯೂ ಅತ್ಯಂತ ವೈರಾಗ್ಯಭಾವವು ಹೆಚ್ಚಾಗಲು, ತನ್ನನ್ನು ತಾನೇ ನಿಂದಿಸಿಕೊಂಡು ಪಾಪಕ್ಕೆ ಹೆದರಿ ಅಣುವ್ರತವೇ ಮೊದಲಾದ ಶ್ರಾವಕ ವ್ರತಗಳನ್ನು ಮಾಡಿದಳು. ಅವಳಿಗೆ ಭಟ್ಟಾರರು ಕರ್ಮಕ್ಷಯವಾಗಬೇಕಾದರೆ ದೃಢವ್ರತೆಯಾಗು ಎಂದು ಅರಸಿ ತಮ್ಮ ವಾಸಕ್ಕೆ ಹೋದರು.
ಇತ್ತ ಜಾತ್ಯಂಧೆಯಪ್ಪ ಕೂಸುಮಹಿಂಸಾದಿ ವ್ರತಗಳಂ ಮೇಲ್ಕೊಂಡು ತನ್ನ ಮನೆಗೆ ಪೋಪಾಗಳ್ ಆನ್ನೆಗಂ ಎಡೆಯೆಳರಸನ ಪುರೋಹಿತಂ ಸೋಮಶರ್ಮನೆಂಬೊಂ ತನ್ನ ಪರಿವಾರಂ ಬೆರಸು ಮಹಾವಿಭೂತಿ ವಿಸ್ತಾರದಿಂದಿಂ ಪಿರಿದು ಪೂಜೆಯಂ ಕೊಂಡು ಮಕ್ಕಳಂ ಬೇಡಿ ಸಂಬರನಾಗಠಾಣಕ್ಕೆ ಪರಕೆಗುಡಲ್ ಪೋಪುದಂ ತನ್ನೊಡವೋಪ ಪೊಲೆಯರ ಕೂಸುಗಳ್ ಕಂಡು ತನಗೆ ವ್ಯಾವರ್ಣಿಸಿ ಪೇೞೆ ಕೇಳ್ದದಱೊಳ್ ಮನಮಿಟ್ಟುಮವರ್ಗ್ಗೆ ಸತ್ತು ಪುಟ್ಟುವೆನಕ್ಕೆಂದು ಭೋಗಾಸಕ್ತೆಯಾಗಿ ನಿದಾನಂಗೆಯ್ದು ಮನೆಗೆವೋಗಿ ಇರ್ಪನ್ನೆಗಮಾಯಿರುಳೊಳೆ ಪಾವು ಕೊಳೆ ಸತ್ತು ಚಂಪಾನಗರಮನಾಳ್ವೊಂ ಚಂದ್ರವಾಹನನೆಂಬೊನರಸನಾತನ ಮಹಾದೇವಿ ಚಂದ್ರಮತಿಯೆಂಬೊಳವರ ಪುರೋಹಿತಂ ಸೋಮಶರ್ಮನೆಂಬೊಂ ಭಟ್ಟನಾತನ ಪಾರ್ವಂತಿ ತ್ರಿವೇದಿಯೆಂಬೊಳಾಯಿರ್ವರ್ಗ್ಗಂ ನಾಗಶ್ರೀಯೆಂಬೊಳ್ ಮಗಳಾಗಿ ಪುಟ್ಟಿದೊಳತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯನೊಡೆಯಳ್ ಜನಂಗಳ್ಗೆಲ್ಲಮಾದಮಾನುಂ ಸೊಗಯಿಸುವಳ್ ನಾಗರ್ಗೆ ಪರಸಿ ಪೆತ್ತರಪ್ಪುದಱೆಂ ನಾಗಶ್ರೀಯೆಂದು ಪೆಸರನಿಟ್ಟರ್ ಮತ್ತಿತ್ತ ಸೂರ್ಯಮಿತ್ರಾಚಾರ್ಯರ್ ಅಗ್ನಿಭೂತಿ ಋಷಿಯರುಮಂತಿರ್ವರುಂ ಚಂಪಾನಗರಮಂ ಪೊಱಮಟ್ಟು ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತುಂ ಏಳೆಂಟು ಬರಿಸದಿಂ ಮಗುೞ್ದು ಚಂಪಾನಗರಕ್ಕೆ ಬಂದು ಪೊಱವೊೞಲೊಳುದ್ಯಾನವನದೊಳ್ ಕಂಬಳನಾಗಂ ಶಂಬರನಾಗಂ ಪಂಗುನಾಗಮೆಂದೀ ಪೆಸರನೊಡೆಯ ಮುನ್ನಿರ್ದ ನಾಗಠಾಣದೊಳ್ ಬಂದಿರ್ದ್ದರ್
ಅನ್ನೆಗಂ ನಾಗಶ್ರೀಯುಂ ಪಂಚಮಿಯಂದು ಮಂತ್ರಿಯರ್ಕ್ಕಳ ಪೆರ್ಗ್ಗಡೆಗಳ ರಾಜಶ್ರೇಷ್ಟಿಯರ ಪ್ರಧಾನರಪ್ಪ ನಿಯೋಗಿಗಳ ಪಲರುಂ ಪೆಣ್ಣೂಸುಗಳೊರಸು ಪಿರಿದುಮರ್ಚನೆಯಂ ಕೊಂಡು ನಾಗಠಾಣಕ್ಕೆ ಪೋಗಿ ನಾಗರನರ್ಚಿಸಿ ಪೊಡೆವಟ್ಟು ಸೂರ್ಯಮಿತ್ರಾಚಾರ್ಯರುಮಗ್ನಿಭೂತಿರಿಷಿಯರುಮಂ ಕಂಡು ಜಾತಿಸ್ಮರೆಯಾಗಿ ತನ್ನ ಮುನ್ನಿನ ಪೊಲತಿಯಾಗಿ ಪುಟ್ಟಿದ ಭವಮನದು ಭಟ್ಟಾರರ ಕಾಲ್ಲೆರಗಿ ಪೊಡೆವಟ್ಟು ಕುಳ್ಳಿರ್ದಾಗಳಾ ಕೂಸಂ ಕಂಡ ಅಗ್ನಿಭೂತಿ ರಿಷಿಯರ್ಗತಿ ಸ್ನೇಹವಾಗಿ ತಮ್ಮ ಗುರುಗಳಂ ಸೂರ್ಯಮಿತ್ರಾಚಾರ್ಯರ ನಿಂತೆಂದು ಬೆಸಗೊಂಡರ್ ಭಟಾರಾ ಈ ಕೂಸಿನ ಮೇಗಮಗಾದಮಾನುಂ ಮೋಹಮಾದುದರ್ಕ್ಕೆ ಕಾರಣವೇನೆಂದು ಬೆಸಗೊಂಡೊಡೆ ಭಟಾರರವಧಿಜ್ಞಾನಮಂ ಪ್ರಯೋಗಿಸಿ ಇಂತೆಂದು ಪೇೞ್ದರ್ ಈ ಕೂಸೆಂಬುದು ನಿಮ್ಮ ತಮ್ಮನಪ್ಪ ವಾಯುಭೂತಿಯ ಜೀವನಭಿಮಾನಂ ಕಾರಣಮಾಗಿ ಎಮ್ಮನುಳಿದೆ ಪರಿಭವಿಸಿ ಬಾಯ್ದೆ ವಂದುದನೆ ಪೊಲ್ಲ ಬಯ್ಯುಳಂ ಬಯ್ದುಮಾ ಪಾಪದ ಫಲದಿಂದಮೇೞು ದಿವಸದಿಂದೊಳಗೌದುಂಬರಕುಷ್ಠಮಾಗಿ ಪುೞಿತು ನಮೆದು ಸತ್ತು ಕೌಶಂಬಿಯೊಳ್ ಲಂಕಿಗರ ಮನೆಯೊಳ್ ಪೆಣ್ಣತ್ತೆಯಾಗಿ ಪಿರಿಯ ಪೊಱೆಗಳಂ ಪೊತ್ತು ಬೆನ್ನೊಳ್ ಕಱಮೆಯಾಗಿ ನಾಳಿವಿರ್ದು ಪುೞಿತು ನವೆದು ಸತ್ತು ಪೇಪಂದಿಯಾಗಿ ಪುಟ್ಟಿ ಸತ್ತು ಪೆಣ್ನಾಯಿಯಾಗಿ ಪುಟ್ಟಿ ಸತ್ತು ಮತ್ತೀ ಚಂಪಾನಗರದೊಳ್ ಮಾದೆಂಗರ್ಗೆ ಪ್ರಧಾನನಪ್ಪ ನೀಳನೆಂಬ ಮಾದೆಗಂಗಂ ಕೇಶಿಯೆಂಬ ಮಾದೆಂಗಿಗಂ ದುರೂಪ ದುರ್ಗಂಧೆ ದುಸ್ವರೆ ದುರ್ವರ್ಣೆ ಜಾತ್ಯಂಧೆ ಪೊಲೆಯರ್ಗ್ಗೆ ಮಗಳಾಗಿ ಪುಟ್ಟಿ ನೀವು ಪ್ರತಿಬೋಧಿಸಿ ಬ್ರತಂಗಳಂ ಕೈಕೊಂಡು ನಿದಾನಂ ಗೆಯ್ದು ಪಾವು ಕೊಳೆ ಸತ್ತು ಪುರೋಹಿತಂ ಸೋಮಶರ‍್ಮಂಗಂ ತ್ರಿವೇದಿಗಂ ಪುಟ್ಟಿದ ನಾಗಶ್ರೀಯೆಂಬೊಳ್ ಮಗಳಾದಳದಱಿಂ ನಿಮಗೀ ಕೂಸಿನ ಮೇಗತಿ ಸ್ನೇಹಮಾದುದೆಂದು ಪೇೞ್ದುದೆಲ್ಲಮಂ ನಾಗಶ್ರೀ ಕೇಳ್ದು ಕೞಿದಯ್ದು ಭವಂಗಳುಂ ತನಗೆ ಪ್ರತ್ಯಕ್ಷಮಾದಂತಱಿದು ಭಟಾರರ ಕಾಲ್ಲೆಱಗಿ ಪೊಡೆವಟ್ಟು ಧರ್ಮಮಂ ಬೆಸಗೊಂಡು ಕೇಳ್ದಣುವ್ರತಂ ಮೊದಲಾಗೊಡೆಯ ಶ್ರಾವಕಬ್ರತಂಗಳಂ ಸಮ್ಯಕ್ತಪೂರ್ವಕಂ ಕೈಕೊಂಡು ಬಂದಿಸಿ ಮನೆಗೆ ಪೋಪಾಗಳ್ ಭಟ್ಟಾರರೆಂದರ್
ಮಗಳೆ ಎಮ್ಮ ಕೊಟ್ಟ ಬ್ರತಂಗಳಂ ನಿಮ್ಮಮ್ಮಂ ಬಿಸುಡಲ್ವೇೞ್ದನಮ್ಮೊಡೆ ಪೆಱಉಳಿ ಬಿಸುಡದಿರಮ್ಮಲ್ಲಿಗೆ ವಂದೆಮ್ಮ ಕೊಟ್ಟ ಬ್ರತಂಗಳನೆಮಗೊಪ್ಪಿಸುವುದೆನೆ ಕೇಳ್ದಂತೆ ಗೆಯ್ವೆನೆಂದು ಮನೆಗೆ ವೋಗಲೊಡನೆಯ ಕೂಸುಗಳ್ ಸೋಮಶರ‍್ಮ ಭಟ್ಟಂಗೆ ನಿಮ್ಮ ಮಗಳ್ ರಿಷಿಯರ ಪಕ್ಕದ ಶ್ರಾವಕ ಬ್ರತಂಗಳಂ ಕೈಕೊಂಡು ವಂದಳೆಂದಡೆ ಭಟ್ಟಂ ಕೇಳ್ದು
ಮಗಳೆ ನಾಗಶ್ರೀ ನಾಮುಂ ಪಾರ್ವರಮುಂ ಲೋಕಕ್ಕೆಲ್ಲಮಗ್ಗಳಂ ಲೋಕದಿಂ ಪೂಜಿತರಮುಮೆಮ್ಮಿಂದಗ್ಗಳಂ ಪೆಱರಿಲ್ಲಱಿಂದಂ ಸವಣರ ಧರ್ಮಮಂ ನಮಗೆ ಕೊಳಲಾಗ [ದು] ಬಿಸುಡು ಮಗಳೇ ಎನೆ ನಾಗಶ್ರೀ ಎಂದಳೆಮ್ಮ ವ್ರತಂಗಳಂ ಕೊಟ್ಟ ರಿಷಿಯರ್ಗೆ ಪೋಗಿಯೊಪ್ಪಿಸಿ ಬಿಸುೞ್ವೆನೆನೆಯಂತೆಗೆಯ್ಯೆಂದು ಮಗಳ ಕೈಯಂ ಪಿಡಿದಿರ್ವ್ವರುಂ ರಿಷಿಯರಲ್ಲಿಗೆ ಬ್ರತಂಗಳನೊಪ್ಪಿಸಲೆಂದು ಪೋಪನ್ನೆಗಾವೆಡೆಯೊಳ್ ಬಟ್ಟೆಯೊಳೊರ್ವನಂ ಪೆಡಂಗಯ್ಯುಡಿಯ ಕಟ್ಟಿಯೊಂದವಗುಟ್ಟಿ ಪೋಲ ಜನಂಗಳು ಮುಸುಱಿಕೊಂಡು ನೋಡುತ್ತಮೊಡನೆ ಬರೆ ನೂಕುತ್ತುಂ ಕೊಲಲುಯ್ವ ಪುರುಷನಂ ಯೌವನನಂ ತೇಜಸ್ವಿಯಂ ಕಂಡು ನಾಗಶ್ರೀ
ಬ್ರಾಹ್ಮಣ ಅರಣ ಸೂತ್ರಂ ಮೊದಲಾಗೊಡೆಯವನೋದಿ ಋಗ್ಯಜುಸ್ಸಾಮಾಥರ್ವಣ ವೇದಂಗಳಂ ಸ್ವರವರ್ಣಭೇದದಿಂದಂ ಮಂತ್ರಸಹಿತ ಪಾಳಿ ಪದಕ್ರಮ ಜಟೆ ಭೇದದಿಂದಂ ಶತಸೂತ್ರಂ ಮೊದಲಾಗೆಲ್ಲಮಂ ಯಥಾಕ್ರಮದಿಂದುಚ್ಚರಿಸಿ ಪದಿನೆಂಟು ಪುರಾಣಂಗಳುಂ ಪದಿನೆಂಟು ಧರ್ಮಸಂಹತಿಗಳುಂ ಮೀಮಾಂಸಾ ನ್ಯಾಯಸೂತ್ರಮಿವೆಲ್ಲಮನೋದಿ ಕ್ರಿಯಾಕಾರಕ ಸಂಬಂಧದಿಂದೆಲ್ಲಮಂ ವಕ್ಖಾನಿಸಿ ತೋಱದೊಡರಸಂ ಮೊದಲಾಗಿ ನೆರೆದ ನೆರವಿಯುಂ ಪಂಡಿತರ್ಕ್ಕಳೆಲ್ಲಂ ವಿಸ್ಮಯಂಬಟ್ಟು ಪೊಗೞ್ದು ಮತ್ತಮರಸನಿಂತೆಂದನೀ ಕೂಸಿನಿತು ಶಾಸ್ತ್ರಂಗಳನೆಂತು ಕಲ್ತಳೆಂತು ಭಟಾರಾ ಇದನಱಯೆ ಬೆಸಸಿಮೆನೆ ಸೂರ್ಯಮಿತ್ರ ಭಟ್ಟಾರರಿಂತೆಂದರ್ ಈಯಿರ್ದ್ದ ರಿಸಿಯರ ಸಹೋದರಂ ವಾಯುಭೂತಿಯೆಂಬೊ – ನಾನಾಮೋದಿಸಿದೆಮೆಮ್ಮೊಳಪ್ಪ ಮಾನಕಷಾಯಂ ಕಾರಣಮಾಗಿ ಸತ್ತು ಬೆಳ್ಗತ್ತೆಯುಂ ಪೇಪಂದಿಯುಂ ನಾಯುಂ ಪೊಲೆಯರ ಕೂಸುಮಾಗಿ ರಿಸಿಯರ ಪ್ರಬೋಧನೆಯಿಂದಂ ಬ್ರತಂಗಳಂ ಕೈಕೊಂಡೀಗಳ್ ನಾಗಶ್ರೀಯಾದಳೆಂದು ಮುನ್ನಿನ ಭವದ ಸಂಬಂಧಮೆಲ್ಲಮಂ ಸವಿಸ್ತರಂ ಪೇೞ್ದು ಮತ್ತಮಿಂತೆಂದರ್ ಮಿಥ್ಯಾತ್ವ ಸಂಯಮ ಕಷಾಯ ಯೋಗಂ ಕಾರಣಮಾಗಿ ಜೀವಂಗಳ್ ಸಂಸಾರಸಮುದ್ರದೊಳ್ ತೊೞಲ್ಗುಮೆಂದು ಸವಿಸ್ತರಂ ಧರ್ಮಮಂ ಪೇೞೆ ಕೇಳ್ದು ಚಂದ್ರವಾಹನನೆಂಬರಸಂಗೆ ವೈರಾಗ್ಯಂ ಪುಟ್ಟಿ ಮಗಂಗರಸುಗೊಟ್ಟು ಪಲಂಬರರಸು ಮಕ್ಕಳ್ವೆರಸುಭಟ್ಟಾರರ ಪಕ್ಕದೆ ತಪಂಬಟ್ಟಂ ಕೆಲರ್ ಶ್ರಾವಕವ್ರತಂಗಳಂ ಕೆಲಂಬರ್ ಸಮ್ಯಕ್ಷಮಂ ಕೈಕೊಂಡರಾಗಳಾ
ಸೂತ್ರ ಮುಂತಾಗಿರುವವನ್ನೂ ಹೇಳಿದಳು, ಋಗ್ವೇದ ಯಜುರ್ವೇದ ಸಾಮವೇದ ಅಥರ್ವವೇದಗಳನ್ನೂ ಸ್ವರಗಳ ಮತ್ತು ವರ್ಣಗಳ ಭೇದದಿಂದ ಮಂತ್ರ ಸಮೇತವಾಗಿ ಪಾಳಿ – ಪದಕ್ರಮ – ಜಟೆ ಮುಂತಾದ ವೇದಪಠನದ ರೀತಿಯಲ್ಲಿ ಶತಸೂತ್ರ ಮುಂತಾಗಿ ಎಲ್ಲವನ್ನೂ ಸರಿಯಾದ ಕ್ರಮದಿಂದ ಉಚ್ಚಾರಣೆ ಮಾಡಿದಳು. ಹದಿನೆಂಟು ಪುರಾಣಗಳು, ಹದಿನೆಂಟು ಧರ್ಮಶಾಸ್ತ್ರಸಂಗ್ರಹಗಳು, ಮೀಮಾಂಸೆ, ನ್ಯಾಯಸೂತ್ರ ಇವೆಲ್ಲವನ್ನೂ ಹೇಳಿ, ಕ್ರಿಯಾಪದ ಕಾರಕಪದಗಳ ಸಂಬಂಧ ಸರಿಯಾಗಿರುವಂತೆ ಎಲ್ಲವನ್ನೂ ವ್ಯಾಖ್ಯಾನಮಾಡಿ ತೋರಿಸಿದಳು. ಆಗ ರಾಜನೂ, ನೆರೆದ ಜನರೂ, ವಿದ್ವಾಂಸರೂ ಎಲ್ಲರೂ ಆಶ್ಚರ್ಯಪಟ್ಟು ಹೊಗಳಿದರು. ಆ ಮೇಲೆ ರಾಜನು ಹೀಗೆಂದನು. “ಈ ಕನ್ಯೆ ಇಷ್ಟೊಂದು ಶಾಸ್ತ್ರಗಳನ್ನು ಹೇಗೆ ಕಲಿತುಕೊಂಡಳು? ಋಷಿಗಳೇ, ಇದನ್ನು ನನಗೆ ತಿಳಿಯುವಂತೆ ಅಪ್ಪಣೆಮಾಡಿ* ಎನ್ನಲು, ಸೂರ್ಯಮಿತ್ರ ಋಷಿಗಳು ಹೀಗೆಂದರು “ಇದೇ ಇಲ್ಲಿರುವ ಅಗ್ನಿಭೂತಿ ಋಷಿಗಳ ಸಹೋದರ ವಾಯುಭೂತಿಯೆಂಬವನಿಗೆ ನಾವಿ ವಿದ್ಯೆ ಕಲಿಸಿದ್ದೆವು. ನಮ್ಮ ಮೇಲೆ ಅವನು ತಾಳಿದ ಗರ್ವ ಕೋಪಗಳ ಕಾರಣದಿಂದ ಸತ್ತು ಬಿಳಿಕತ್ತೆ, ಹೇಲುಹಂದಿ, ನಾಯಿ, ಹೊಲೆಯರ ಕನ್ಯೆಯಾಗಿ ಹುಟ್ಟಿಬಂದು, ಋಷಿಗಳ ಉಪದೇಶದಿಂದ ವ್ರತಗಳನ್ನು ಸ್ವೀಕರಿಸಿ, ಈಗ ನಾಗಶ್ರೀಯಾದಳು* ಹೀಗೆ ಹಿಂದಿನ ಜನ್ಮದ ಸಂಬಂಧವೆಲ್ಲವನ್ನೂ ವಿಸ್ತಾರವಾಗಿ ತಿಳಿಸಿ ಮತ್ತೆ ಹೀಗೆಂದನು “ಜೀವಗಳು ಮಿಥ್ಯಾತ್ವ, ಸಂಯಮವಿಲ್ಲದಿರುವುದು, ಗರ್ವಕೋಪಾದಿಗಳ ಕಾರಣದಿಂದ ಸಂಸಾರವೆಂಬ ಸಮುದ್ರದಲ್ಲಿ ಸುತ್ತಾಡುವವು. * ಹೀಗೆಂದು ವಿಸ್ತಾರವಾಗಿ ಧರ್ಮದ ರಹಸ್ಯವನ್ನು ಹೇಳಲು ಕೇಳಿದ ಚಂದ್ರವಾಹನ ರಾಜನಿಗೆ ವೈರಾಗ್ಯವುಂಟಾಯಿತು. ಅವನು ತನ್ನ ಮಗನಿಗೆ ಅರಸುತನವನ್ನು ಕೊಟ್ಟು ಹಲವು ಮಂದಿ ರಾಜಕುಮಾರರೊಂದಿಗೆ ಋಷಿಗಳ ಸಮೀಪದಲ್ಲಿದ್ದು ತಪವನ್ನೆಸಗಿದನು. ಕೆಲವರು ಶ್ರಾವಕವ್ರತಗಳನ್ನೂ ಕೆಲವರು ಸಮ್ಯಗ್ದರ್ಶನ ಸಮ್ಯಗ್ಜ್ಞಾನ ಸಮ್ಯಕ್ಚಾರಿತ್ರಗಳನ್ನು ಪಡೆದುಕೊಂಡರು.
ಸೋಮಶರ್ಮಭಟ್ಟಂ ರಿಸಿಯರೊಳಾದ ಮಾನಗರ್ವದ ದೋಷದಿಂದೆಯ್ದಿದ ದುಃಖಂಗಳಂ ಕೇಳ್ದಱದಾ ಭಟ್ಟಾರರ ಪಕ್ಕದೆ ತಪಂಬಟ್ಟಂ ನಾಗಶ್ರೀಯುಂ ನಾಗಶ್ರೀಯ ತಾಯ್ ತ್ರಿವೇದಿಯುಂ ಬ್ರಹ್ಮಿಲೆಯೆಂಬ ಕಂತಿಯರ ಪಕ್ಕದೆ ತಪಂಬಟ್ಟರ್ ಮತ್ತೆ ಸೂರ್ಯಮಿತ್ರ ಭಟ್ಟಾರರಗ್ನಿಭೂತಿ ಭಟ್ಟಾರರುಮಿರ್ವರುಂ ಪಲಕಾಲಂ ತಪಂಗೆಯ್ದು ಅಗ್ರಮಂದಿರವೆಂಬ ಪರ್ವತದೊಳ್ ಮೋಕ್ಷವನೆಯ್ದಿದರ್ ಮತ್ತಂ ಸೋಮಶರ್ಮರಿಸಿಯರುಮುಗ್ರೋಗ್ರ ತಪಶ್ಚರಣಂಗೆಯ್ದು ಸನ್ಯಸನವಿಯಿಂದಂ ಮುಡಿಪಿ ಅಚ್ಚುತಕಲ್ಪದೊಳಿರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊಂ ಸಾಮಾನಿಕದೇವನಾಗಿ ಪುಟ್ಟಿದೊಂ ಮತ್ತೆ ನಾಗಶ್ರೀಯುಂ ಭುಕ್ತ ಪ್ರತ್ಯಾಖ್ಯಾನವಿಯಂ ರತ್ನತ್ರಯಮಂ ಸಾಸಿ ಅಚ್ಯುತಕಲ್ಪದೊಳ್ ದೇವನಾಗಿ ಪುಟ್ಟಿದೊಳ್ ಮತ್ತಾ ಸ್ವರ್ಗದೊಳ್ ತ್ರಿವೇದಿಯಂ ನಾಗಶ್ರೀ ಎನಗೆ ಜನ್ಮಾಂತಕರದೊಳಪ್ಪೊಡಂ ಮಗನಕ್ಕೆಂದು ನಿದಾನಂಗೆಯ್ದು ಮುಡಿಪಿ ದೇವನಾದೊಳಿಂತಾ ಯಿರ್ವರುಂ ಇರ್ಪ್ಪತ್ತೆರಡು ಸಾಗರೋಪಮಾಯುಷ್ಯಮನೊಡೆಯೊರಾಗಿ ದೇವರಾಗಿ ಪುಟ್ಟಿದರ್ ಮತ್ತಂ ಸೋಮಶರ್ಮನಪ್ಪ ದೇವಂ ಪಲಕಾಲಂ ದೇವಲೋಕದ ಭೋಗಮನನುಭವಿಸಿ ಬಂದಿಲ್ಲ ಈ ಜಂಬೂದ್ವೀಪದ ದಕ್ಷಿಣ ಭರತದೊಳವಂತಿಯೆಂಬುದು ನಾಡುಜ್ಜೇಶನಿಯೆಂಬುದು ಪೊೞಲಲ್ಲಿ ಇಂದ್ರದತ್ತನೆಂಬೊಂ ಪರದನಾತನ ಭಾರ್ಯೆ ಗುಣಮತಿಯೆಂಬೊಳಾಯಿವರ್ಗ್ಗಂ ಸೂರದತ್ತನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಮಾ ಪೊೞಲೊಳ್ ಮೂವತ್ತೆರಡು ಕೋಟಿ ಕಸವರಮನೊಡೆಯೊಂ ಸುಭದ್ರನೆಂಬೊಂ ಸೆಟ್ಟಿಯಾತನ
ಆ ಸಂದರ್ಭದಲ್ಲಿ ಸೋಮಶರ್ಮಭಟ್ಟನು ಋಷಿಗಳ ಮೇಲೆ ಉಂಟಾದ ಗರ್ವಕ್ರೋಧಗಳ ತಪ್ಪಿನಿಂದ ಉಂಟಾಗತಕ್ಕ ದುಃಖಗಳನ್ನು ಕೇಳಿ ತಿಳಿದು ಆ ಋಷಿಗಳ ಪಕ್ಕದಲ್ಲಿ ತಪ್ಪಸ್ಸನ್ನು ಮಾಡಿದನು. ನಾಗಶ್ರೀಯೂ ಅವಳ ತಾಯಿಯಾದ ತ್ರಿವೇದಿಯೂ ಬ್ರಹ್ಮಿಲೆ ಎಂಬ ಜೈನ ಸಂನ್ಯಾಸಿನಿಯ ಬಳಿಯಲ್ಲಿ ತಪಸ್ಸನ್ನು ಮಾಡಿದರು. ಸೂರ್ಯಮಿತ್ರ ಋಷಿಗಳು ಅಗ್ನಿಭೂತಿ ಋಷಿಗಳು ಇವರಿಬ್ಬರೂ ಹಲವು ವರ್ಷಗಳ ಕಾಲ ತಪಸ್ಸನ್ನು ಮಾಡಿ ಅಗ್ರಮಂದಿರವೆಂಬ ಬೆಟ್ಟದಲ್ಲಿ ಮೋಕ್ಷಕ್ಕೆ ಹೋದರು. ಆ ಮೇಲೆ ಸೋಮಶರ್ಮ ಋಷಿಯು ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ ಸನ್ಯಸನ ವಿಯಿಂದ ಸತ್ತು ಅಚ್ಯುತ ಎಂಬ ಹೆಸರಿನ ಸ್ವರ್ಗದಲ್ಲಿ ಇಪ್ಪತ್ತೆರಡು ಸಾಗರಕ್ಕೆ ಸಮಾನವಾದ ಆಯುಷ್ಯವನ್ನು ಉಳ್ಳ ಸಾಮಾನಿಕದೇವನಾಗಿ ಹುಟ್ಟಿದನು. ಮತ್ತೆ ನಾಗಶ್ರೀಯು ಕ್ರಮದಿಂದ ಆಹಾರ ಪಾನೀಯಗಳನ್ನು ತ್ಯಾಗಮಾಡುವ ‘ಭುಕ್ತ ಪ್ರತ್ಯಾಖ್ಯಾನ’ ಎಂಬ ವ್ರತನಿಯಮದಿಂದ ಸಮ್ಯಗ್ದರ್ಶನ ಚಾರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಅಚ್ಚುತಕಲ್ಪದಲ್ಲಿ ದೇವತೆಯಾಗಿ ಹುಟ್ಟಿದಳು. ಮತ್ತು ಆ ಸ್ವರ್ಗದಲ್ಲಿ ತ್ರಿವೇದಿಯು ನನಗೆ ಬೇರೆ ಜನ್ಮದಲ್ಲಿಯಾದರೂ ನಾಗಶ್ರೀಯು ಮಗನಾಗಿ ಜನಿಸಲಿ ಎಂದು ಸಂಕಲ್ಪಿಸಿ ಸತ್ತು ದೇವಳಾದಳು. ಹೀಗೆ ಆ ಇಬ್ಬರೂ ಇಪ್ಪತ್ತೆರಡು ಸಾಗರಕ್ಕೆ ಸಮಾನವಾಗುವ ಆಯುಷ್ಯವುಳ್ಳವರಾಗಿ ದೇವರುಗಳಾಗಿ ಜನಿಸಿದರು. ಅನಂತರ ಸೋಮಶರ್ಮನಾಗಿದ್ದ ದೆವನು ಹಲವು ಕಾಲದವರೆಗೆ ದೇವಲೋಕದ ಸುಖವನ್ನು ಅನುಭವಿಸಿದ ನಂತರ ಭೂಲೋಕದಲ್ಲಿ ಜನಿಸಿದನು. ಈ ಜಂಬೂದ್ವೀಪದ ದಕ್ಷಿಣ ಭರತಭೂಮಿಯಲ್ಲಿ ಅವಂತಿಯೆಂಬ ನಾಡಿದೆ. ಅಲ್ಲಿ ಉಜ್ಜೇನಿಯೆಂಬ ಪಟ್ಟಣದಲ್ಲಿ ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣಮತಿ ಎಂಬುವಳು ಆ ಇಬ್ಬರಿಗೂ ಸೂರದತ್ತನೆಂಬ ಮಗನಾಗಿ (ಸೋಮಶರ್ಮನಾಗಿದ್ದ ದೇವನು) ಹುಟ್ಟಿದನು. ಅದಲ್ಲದೆ ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನನ್ನುಳ್ಳ ಸುಭದ್ರನೆಂಬ ಸೆಟ್ಟಯಿದ್ದನು.
ಭಾರ್ಯೆ ಸರ್ವಯಶಿಯೆಂಬೊಳಾಯಿರ್ವರ್ಗ್ಗಂ ತ್ರಿವೇದಿಯಪ್ಪ ದೇವಂ ಬಂದು ಯಶೋಭದ್ರೆಯೆಂಬೊಳ್ ಮಗಳಾಗಿ ಪುಟ್ಟಿದೊಳಾ ತ್ರಿವೇದಿ ತಪಶ್ಚರಣದ ಫಲದಿಂದಂ ದೇವತ್ವಮನೆಯ್ದಿಯುಂ ನಿದಾನಂ ಕಾರಣಮಾಗಿ ಮಿಥ್ಯಾತ್ವಕ್ಕೆ ಸಂದು ಸ್ತ್ರೀತ್ವಮನೆಯ್ದಿದಳಾ ಯಶೋಭದ್ರೆಯಂ ಸೂರದತ್ತಂಗೆ ಕೊಟ್ಟೊರಾಯಿರ್ವರ್ಗ್ಗಂ ನಾಗಶ್ರೀಯಪ್ಪ ದೇವಂ ಬಂದು ಸುಕುಮಾರಸ್ವಾಮಿಯೆಂಬೊಂ ಮಗನಾಗಿ ಪುಟ್ಟಿದನಾತನ ಪುಟ್ಟಿದಂದೆ ವೈರಾಗ್ಯಂ ಕಾರಣಮಾಗಿ ಸೂರದತ್ತಸೆಟ್ಟಿ ಸುಕುಮಾರಸ್ವಾಮಿಗೆ ಸೆಟ್ಟಿವಟ್ಟಂಗಟ್ಟಿ ತಪಂಬಟ್ಟಂ ಸುಕುಮಾರಸ್ವಾಮಿಯುಂ ಯೌವನನಾಗಿ ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದಂ ಕೂಡಿದೊನಾತಂಗೆ ಮೂವತ್ತೆರಡು ಬಳ್ಳಿಮಾಡಂಗಳತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವ ವಿಲಾಸ ವಿಭ್ರಮಂಗಳನೊಡೆಯ ದೇವಗಣಿಕೆಯರನೆ ಪೋಲ್ವ ಮೂವತ್ತಿರ್ವರ್ ದಿವ್ಯಸ್ತ್ರೀಯರ್ಕಳ್ ಮೂವತ್ತೆರಡು ನಾಟಕಂಗಳ್ ಮೂವತ್ತರಡು ಕೋಟಿ ಕಸವರಮುಂ ಪಂಚರತ್ನಂಗಳೆಂಬಿನಿತಱೊಳಂ ಕೂಡಿ ಭೋಗೋಪಭೋಗ ಸುಖಂಗಳನನುಭವಿಸುತ್ತುಮಿರೆ ಮತ್ತೊಂದು ದಿವಸಮೊರ್ವ ನೈಮಿತ್ತಿಕನಿಂತೆಂದಾದೇಶಂಗೆಯ್ದನೀ ಸುಕುಮಾರಸ್ವಾಮಿ ಆವುದೊಂದು ಕಾಲದೊಳ್ ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮೆಂದೊಡಾ ಮಾತಂ ತಾಯ್ ಕೇಳ್ದು ತನ್ನ ಮನೆಯಂ ರಿಸಿಯರಂ ಪುಗಲೀಯದಂತು ಬಾಗಿಲ ಕಾಪಿನ ಕಲ್ಪಿಸಿದೊಳಂತು ಕಾಲಂ ಸಲೆ ದಿವಸಂ ರತ್ನದ್ವೀಪದಿಂದೊರ್ವ
ಅವನ ಹೆಂಡತಿ ಸರ್ವಯಶಿಯೆಂಬವಳು. ಆ ಇಬ್ಬರಿಗೆ ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು ಜನಿಸಿದಳು. ಆ ತ್ರಿವೇದಿ ತನ್ನ ತಪಸ್ಸನ ಆಚರಣೆಯ ಫಲದಿಂದ ದೇವತ್ವವನ್ನು ಪಡೆದರೂ ತನ್ನ ಸಂಕಲ್ಪದ ಕಾರಣದಿಂದ ಮಿಥ್ಯಾತ್ವಕ್ಕೆ ಒಳಗಾಗಿ ಹೆಣ್ಣುತನವನ್ನು ಹೊಂದಿದ್ದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ ಇಬ್ಬರಿಗೂ ನಾಗಶ್ರೀಯಾಗಿದ್ದ ದೇವನು ಬಂದು ಸುಕುಮಾರಸ್ವಾಮಿಯೆಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು. ಸುಕುಮಾರಸ್ವಾಮಿಯೆಂಬ ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮುವತ್ತೆರಡು ಲತಾಗೃಹಗಳೂ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿ ದೇವತಾಸ್ತ್ರೀಯನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರಿಯರೂ ಇದ್ದರು, ಮೂವತ್ತೆರಡು ಬಗೆಯ ನಾಟ್ಯಗಳು, ಮೂವತ್ತೆರಡು ಕೋಟಿ ಹೊನ್ನು, ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳಿಂದ ಕೂಡಿ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು. ಮತ್ತೊಂದು ದಿನ ಒಬ್ಬ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು ಹೇಳಿದನು. ‘ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ ತೆರಳುವನು’ ಹೀಗೆಂದ ಮಾತನ್ನು ತಾಯಿ ಯಶೋಭದ್ರೆ ಕೇಳಿ ತನ್ನ ಮನೆಗೆ ಋಷಿಗಳನ್ನು ಪ್ರವೇಶಿಸಲು ಬಿಡದ ಹಾಗೆ ಬಾಗಿಲು ಕಾಯುವವರಿಗೆ ಅಜ್ಞೆ ಮಾಡಿದಳು. ಹಾಗೆಯೇ ಕಾಲ ಕಳೆಯಿತು. ಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ
ಪರದಂ ಸರ್ವರತ್ನಕಂಬಳಂಗಳಂ ಲಕ್ಷದೀನಾರಂಗಳ್ ಬೆಲೆಯಪ್ಪುವನುಜ್ಜೇನಿಗೆ ಮಾಱಲ್ ಕೊಂಡುಬಂದೊನಾ ಪೊೞಲನಾಳ್ವೊಂ ವೃಷಭಾಂಕನೆಂಬೊನರಸಂಗಂ ಜ್ಯೋತಿರ್ಮಾಲೆಯೆಂಬ ಮಹಾದೇವಿಗಮಿಂತಿರ್ವರ್ಗ್ಗಂ ತೋಱದೊಡೆ ಅವಱ ಬೆಲೆಯಂ ಬೆಸಗೊಂಡೊಡೆ ಲಕ್ಷ ದೀನಾಗಂಗಳ್ ಬೆಲೆಯೆಂದು ಪೇೞ್ದೊಡೆ ಕೊಳಲಾಱದರಸಂ ಪೋಗಲ್ವೇನಂತು ಪೊೞಲೊಳಗೆಲ್ಲಂ ತೋಱ ಯಾರುಂ ಕೊಳಲಾಱದಿರ್ದ್ದೊಡೆ ರತ್ನಕಂಬಳಂಗಳಂ ಕೊಂಡು ಪೋಗಿ ಯಶೋಭದ್ರೆಗೆ ತೋಱದೊಡೆ ಲಕ್ಷದೀನಾರಂಗಳಂ ಕೊಟ್ಟು ರತ್ನಕಂಬಳಂಗಳಂ ಕೊಂಡೊರೊಂದರಱೊಳಂ ನಾಲ್ಕು ಖಂಡಮಾಗೆ ಮೂವತ್ತೆರಡು ಖಂಡಂಗಳಂ ಮಾಡಿ ಮೂವತ್ತಿರ್ವರ್ ಸೊಸೆವಿರ್ಕಳ್ಗೆ ಪಚ್ಚುಗೊಟ್ಟೊಡವರುಂ ತಂತಮ್ಮ ಕೆರ್ಪುಗಳೊಳ್ ತಗುಳ್ಚಿದರೆಂಬ ಮಾತನರಸಂ ಕೇಳ್ದು ಚೋದ್ಯಂಬಟ್ಟವರ ವಿಭೂತಿಯಂ ನೋೞ್ಪೆನೆಂದು ಮನೆಗೆವರ್ಪುದಂ ಯಶೋಭದ್ರೆ ಕೇಳ್ದರಸರ್ ಬರ್ಪ ಬಟ್ಟೆಯೊಳೆಲ್ಲಂ ಪಂಚರತ್ನಂಗಳಂ ರಂಗವಲ್ಲಿಯನಿಕ್ಕಿ ನೇತ್ರವಟ್ಟು ದುಕೂಲ ಚೀನಾದಿ ದಿವ್ಯವಸ್ತ್ರಂಗಳಂ ಪಾಸಿ ಮಣಿಭದ್ರಮಪ್ಪ ಹೇಮ ಮುಕ್ತಾಹಾರಂಗಳಿಂ ತೋರಣಂಗಟ್ಟಿಸಿಯರಸರ ಬರವಂ ಪಾರುತ್ತಿರೆ ನೃಪತಿಯುಂ ಬಂದು ಸುರೇಂದ್ರಭವನೋಪಮಮಪ್ಪ ಪ್ರಾಸಾದಮಂ ಪೊಕ್ಕು ವಿಸ್ಮಯಚಿತ್ತನಾಗಿ ಸುರಲೋಕಂಬೊಕ್ಕ ಪುಣ್ಯವಂತಂಬೊಲಾಗಳ್ ಮಹಾವಿಭೂತಿಯಿಂ ಶಯ್ಯಾತಳದೊಳಿರ್ದು ಸುಕುಮಾರನೆಲ್ಲಿದನೆಂದು ಬೆಸಗೊಂಡೊಡೆ
ವರ್ತಕನು ಲಕ್ಷದೀನಾರ (ಚಿನ್ನದ ನಾಣ್ಯ)ಗಳ ಬೆಲೆ ಬಾಳತಕ್ಕ ಎಲ್ಲಾ ರತ್ನಗಳಿಂದ ಕೂಡಿದ ಕಂಬಳಿಗಳನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದನು. ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜನಿಗೂ ಜ್ಯೋತಿರ್ಮಾಲೆಯೆಂಬ ಮಹಾರಾಣಿಗೂ ಹೀಗೆ ಇಬ್ಬರಿಗೂ ರತ್ನ ಕಂಬಳಿಗಳನ್ನು ತೋರಿಸಲು, ಅದರ ಬೆಲೆಯೇನೆಂದು ಕೇಳಿದಾಗ ಲಕ್ಷದೀನಾರಗಳೆಂದು ಹೇಳಿದನು. ರಾಜನು ಅವನ್ನು ಕ್ರಯಕ್ಕೆ ಕೊಳ್ಳಲಾರದೆ ಆ ವರ್ತಕನನ್ನು ಹೋಗಲು ಹೇಳಿದನು. ಅಂತೂ ಪಟ್ಟಣದಲ್ಲೆಲ್ಲಾ ತೋರಿಸಿದರೂ ಯಾರೂ ಕೊಂಡುಕೊಳ್ಳಲಾರದೆ ಇದ್ದಾಗ ಆ ರತ್ನಕಂಬಳಿಗಳನ್ನು ಕೊಂಡುಹೋಗಿ ಯಶೋಭದ್ರೆಗೆ ತೋರಿಸಿದಾಗ, ಆಕೆ ಲಕ್ಷದೀನಾರಗಳನ್ನು ಕೊಟ್ಟು ಅವನ್ನು ಕೊಂಡಳು. ಆಮೇಲೆ ಅವುಗಳಲ್ಲಿ ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಮಾಡಿ ಒಟ್ಟು ಮೂವತ್ತೆರಡು ತುಂಡುಗಳನ್ನು ಮಾಡಿ ತನ್ನ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ತುಂಡುಗಳನ್ನು ತಮತಮ್ಮ ಪಾದುಕೆಗಳಿಗೆ ಸಿಕ್ಕಿಸಿದರು. ಈ ಸಂಗತಿಯನ್ನು ರಾಜನು ಕೇಳಿ ಆಶ್ಚರ್ಯಪಟ್ಟು ಅವರ ವೈಭವವನ್ನು ನೋಡುವೆನೆಂದು ಸುಕುಮಾರಸ್ವಾಮಿಯ ಮನೆಗೆ ಬರುತ್ತಿದ್ದನು. ರಾಜರು ಬರುವುದನ್ನು ಯಶೋಭದ್ರೆ ಕೇಳಿ, ರಾಜರು ಬರುವ ದಾರಿಯಲ್ಲೆಲ್ಲ ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಎಂಬ ಐದು ಬಗೆಯ ರತ್ನಗಳಿಂದ ರಂಗೋಲೆ ಹಾಕಿಸಿದಳು. ನೇತ್ರ, ಪಟ್ಟು, ದುಕೂಲ, ಚೀನ – ಎಂಬ ಬಗೆಬಗೆಯ ರೇಷ್ಮೆಯ ದಿವ್ವವಾದ ಬಟ್ಟೆಗಳನ್ನು ಹಾಸಿದಳು.ರತ್ನಗಳಿಂದ ಚೆಲುವಾದ ಚಿನ್ನದ ಮುತ್ತಿನ ಸರಗಳಿಂದತೋರಣ ಕಟ್ಟಿದಳು. ರಾಜನ ಆಗಮನವನ್ನು ಎದುರು ನೋಡುತ್ತಿರಲು ರಾಜನು ಬಂದು, ಇಂದ್ರನ ಅರಮನೆಯನ್ನು ಹೋಲುವ ಉಪ್ಪರಿಗೆ ಮನೆಯನ್ನು ಪ್ರವೇಶಿಸಿದನು. ಆಗ ರಾಜನು ಅಚ್ಚರಿಗೊಂಡವನಾಗಿ ದೇವಲೋಕವನ್ನು ಪ್ರವೇಶಿಸಿದ ಪುಣ್ಯಶಾಲಿಯಂತೆ ಮಹಾ ವೈಭವದಿಂದ ಹಾಸಿಗೆಯ ಮೇಲೆ ಕುಳಿತು, ‘ಸುಕುಮಾರನು ಎಲ್ಲಿದ್ದಾನೆ ? ’ ಎಂದು ಕೇಳಿದನು.
ಸ್ವಾಮಿ ಆತಂ ಕರಂ ಸಾದು ನಿಮ್ಮ ಬರಮನಱಯಂ ಪ್ರಾಸಾದದ ಮೇಗಣ ನೆಲೆಯೊಳಿರ್ದನೆಂದೊಡರಸಂ ಬೞಯನಟ್ಟಿಮೆನೆ ತಾಯ್ ಪೋಗಿ ಮಗನೆ ಅರಸರ್ವಂದರ್ ಬಾ ಪೋಪಮೆನೆ ಅರಸರೆಂಬೊರಾರೆನೆ ತಾಯೆಂದಳ್ ನಮ್ಮನಾಳ್ರ್ವೆರೆಂದೊಡೆ ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು ತಾಯ ವಚನಮಂ ಮಾರ್ಕೊಳಲಾಱದೆ ಬರ್ಪೊನಂ ನರೇಶ್ವರಂ ಕಂಡು ಕಣ್ಣೆತ್ತ ಫಲಮನಿಂದು ಪೆತ್ತೆನೆಂದು ಪ್ರತ್ಯಕ್ಷ ಕಾಮದೇವನನಪ್ಪಿಕೊಳ್ವಂತಪ್ಪಿಕೊಂಡು ದಿವ್ಯ ಶಯ್ಯಾತಳದ ಮೇಗೊಡನಿರಿಸಿದಾಗಳ್ ಸ್ವಜನ ಪರಿಜನಂಗಳ್ ಸಿದ್ಧಾರ್ಥಂಗಳಂ ಮಾಂಗಲ್ಯಮೆಂದಿರ್ವರ್ಗ್ಗಂ ಸೇಸೆಯನಿಕ್ಕಲಾಗಳಾ ಸಿದ್ದಾರ್ಥಂಗಳ್ ಸುಕುಮಾರಸ್ವಾಮಿಯಾಸನಮನೊತ್ತೆ ಕಟಿವಮನಲುಗಿಸುವುದುಮಂ ಸೊಡರಂ ನೋಡಿದಾಗಳ್ ಕಣ್ಣೀರ್ಗಳ್ ಸುರಿವುದುಮಂ ಕಂಡೀಗಳೀತಂಗೆ ಬ್ಯಾದಿಗಳೆಂದು ಬಗೆದಿರ್ಪ್ಪಿನಂ ಮಜ್ಜನಕ್ಕೆೞ್ತನ್ನಿಮೆಂದೊಡತೆಗೆಯ್ವೆಮೆಂದು ಮಜ್ಜನಂಗೊಂಡಮರಸನ್ನಿಭ ಮಣಿಕುಟ್ಟಿಮಮಪ್ಪ ಬಾವಿಯಂ ಪೊಕ್ಕು ಮಿಂದಲ್ಲಿಯನರ್ಘ್ಯಮಪ್ಪ ತನ್ನ ಬೆರಲ ಮಾಣಿಕದುಂಗುರಂ ಬಿೞ್ಪುದನಱಸಲ್ವೇಡಿ ಛಿದ್ರಕದ್ವಾರದ ತೂಂತನುರ್ಚಿ ನೀರಂ ಕಳೆದಾಗಳಿಂದ್ರನ ಭಂಡಾರಂ ತೆಱೆದಂತಪ್ಪ ಲೇಸಪ್ಪ ನಾನಾಮಣಿಯ ವಿಚಿತ್ರ ಭೂಷಣಂಗಳಂ ಪಲವುಮಂ ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿರ್ಪನ್ನೆಗಮಾರೋಗಿಸಲೆೞ್ತನ್ನಿ ಮೆಂದಾಗಳ್
ಅದಕ್ಕೆ ಉತ್ತರವಾಗಿ “ಸ್ವಾಮಿ, ಅವನು ಬಹಳ ಸಾಧು, ನೀವು ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ* ಎಂದು ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ ಎಂದನು. ಆಗ ತಾಯಿ ಯಶೋಭದ್ರೆ ಹೋಗಿ “ಮಗನೇ, ರಾಜರು ಬಂದಿದ್ದಾರೆ ಬಾ, ಹೋಗೋಣ* ಎಂದಳು. ಆಗ ಸುಕುಮಾರನು “ರಾಜರೆಂದರೆ ಯಾರು ? * ಎಂದು ಕೇಳಲು, ತಾಯಿಯು “ನಮ್ಮನ್ನು ಆಳುವವರು* ಎಂದಾಗ ಸುಕುಮಾರನು “ನಮ್ಮನ್ನು ಆಳುವವರೂ ಇರುವರೆ ? * ಎನ್ನುತ್ತ ಆಶ್ಚರ್ಯಪಟ್ಟನು. ತಾಯಿಯ ಮಾತನ್ನು ವಿರೋಸಲಾರದೆ ಬಂದನು. ಅವನನ್ನು ರಾಜನು ಕಂಡು “ಕಣ್ಣನ್ನು ಪಡೆದದ್ದು ಇಂದು ಸಫಲವಾಯಿತು* ಎಂದುಕೊಂಡುಪ್ರತ್ಯಕ್ಷವಾಗಿ ಮನ್ಮಥನನ್ನೇ ಅಪ್ಪಿಕೊಳ್ಳುವಂತೆ ಅವನನ್ನು ಅಪ್ಪಿಕೊಂಡು ಶ್ರೇಷ್ಠವಾದ ಆ ಹಾಸಿಗೆಯ ಮೇಲೆ ತನ್ನ ಜೊತೆಯಲ್ಲಿ ಕುಳ್ಳಿರಿಸಿದನು. ಆಗ ಸ್ವಜನರೂ ಸೇವಕರೂ ಬಿಳಿ ಸಾಸವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆಕಾಳುಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದುದರಿಂದ ಸೊಂಟ ಅಲ್ಲಾಡಿಸಿದುದನ್ನೂ ದೀಪ ನೋಡಿದಾಗ ಕಣ್ನೀರು ಸುರಿವುದನ್ನೂ ಕಂಡು ಈತನಿಗೆ ರೋಗಗಳಿವೆಯಂದು ಭಾವಿಸಿಕೊಂಡಿದ್ದನು. ಅಷ್ಟರಲ್ಲಿ ‘ಸ್ನಾನಕ್ಕೆ ಏಳಿ, ಬನ್ನಿ’ ಎನ್ನಲು ‘ಹಾಗೆಯೇ ಮಾಡುವೆವು’ ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ ದೇವಲೋಕದ್ದಕ್ಕೆ ಸಮಾನವಾದ ರತ್ನಮಯವಾದ ನೆಲಗಟ್ಟುಳ್ಳ ಕೆರೆಗೆ ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಿನಲ್ಲಿದ್ದ ಅಮೂಲ್ಯವಾದ ಉಂಗುರ ಬಿದ್ದು ಹೋಗಲು, ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ ಖಜಾನೆಯನ್ನೇ ತೆರೆದ ರೀತಿಯಲ್ಲಿ ಶ್ರೇಷ್ಟವಾದ ಬಗೆಬಗೆಯ ರತ್ನಗಳ ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಬಹಳ ಆಶ್ಚರ್ಯಪಟ್ಟವನಾಗಿ ನೋಡುತ್ತದ್ದನು. ಅಷ್ಷರಲ್ಲಿ ರಾಜನನ್ನು ಸುಕುಮಾರನನ್ನೂ ‘ಊಟಕ್ಕೆ ಬನ್ನಿರಿ’ ಎಂದು ಕರೆಯಲು
ಪರಿಯಣದ ಮೊದಲೊಳ್ ಸುಕುಮಾರುಂ ಬರೆಸು ನಾನಾಪ್ರಕಾರದಿನಿಯವಪ್ಪುಣಿಸುಗಳನುಣುತ್ತಂ ಸುಕುಮಾರಸ್ವಾಮಿ ಆರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗು ಮದಂ ನೋಡಿ ಇದುವುಮೊಂದು ಕುತ್ತಂ ಆಹಾರದ ಮೇಗರುಚಿಯೆಂದು ಬಗದುಣಿಸು ಸಮೆದ ಬೞಕ್ಕೆ ಗಂಧ ತಾಂಬೂಲ ಮಾಲ್ಯ ವಸ್ತ್ರಾಭರಣಂಗಳಂ ತಂದು ಕೊಟ್ಟಾಗವಂ ತೊಟ್ಟುಟ್ಟು ಪಸದನಂಗೊಂಡು ಸುಖಸಂಕಥಾವಿನೋದದಿಂದಿರ್ದೊಡೆ ಯಶೋಭದ್ರೆಯನರಸನಿಂತೆಂದು ಬೆಸಗೊಂಡನಬ್ಬಾ ಎಮ್ಮ ತಮ್ಮನ ಕಟಿಪ್ರದೇಶದ ರೋಗಕ್ಕಂ ಕಣ್ಣನೀರ್ ಬರ್ಪುದರ್ಕಂ ಅರುಚಿಗಮೇಕೆ ಮರ್ದಂ ಮಾಡಿಸಿದಿರಿಲ್ಲೆನೆ ದೇವಾ ಆತಂಗಿವು ಕುತ್ತಮಲ್ಲವು ಸೇಸೆಯಿಕ್ಕಿದ ಸರುಸಪಂಗಳೊತ್ತೆ ಸೈರಿಸಲಾಱಂ ಮತ್ತೆ ಅವ ಕಾಲಮುಂ ಮಾಣಿಕದ ಬೆಳಗಿನೊಳಿರ್ಪುದಱಂದು ಸೊಡರ ಬೆಳಗಿಂಗೆ ಸೈರಿಸದೆ ಕಣ್ಣ ನೀರ್ ಬರ್ಕುಂ ಮತ್ತಂ ಕಮಳ ನೀಳೋತ್ಪಳದೊಳ್ ವಾಸಿಸಿದಕ್ಕಿಯೊಳ್ ಕೂೞಂ ನುಂಗುಗುಮುೞದ ಕೂೞನುಗುೞ್ಗುಮದಱಂದೀತಂಗೀಯವಸ್ಥೆಗಳಾದುವೆನೆ ಕೇಳ್ದು ವಿಸ್ಮಯಂಬಟ್ಟು ಈತನ ಕ್ಷಣಮಾತ್ರದ ಭೋಗಕ್ಕಂ ಸುಖಕ್ಕಂ ಎಮ್ಮೆಲ್ಲಾ ಕಾಲಮರಸುತನಂ ಗೆಯ್ವಲ್ಲಿಯೊಳಪ್ಪ ಭೋಗೋಪಭೊಗಂಗಳ್ ದೊರೆಯಲ್ಲವದಱಂದೀ
ರಾಜನು ಸುಕುಮಾರನೊಂದಿಗೆ ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ ಸವಿಯಾದ ಆಹಾರವನ್ನು ಉಣ್ಣುತ್ತ ಇರಲು, ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು, ಇನ್ನುಳಿದ ಅ ರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ “ಇದು ಒಂದು ಬಗೆಯ ರೋಗ, ಊಟದ ಮೇಲೆ ರುಚಿಯಿಲ್ಲದುದು* ಎಂದು ಭಾವಿಸಿಕೊಂಡನು. ಊಟವಾದ ನಂತರ ಗಂಧ, ತಾಂಬೂಲ, ಹೂಮಾಲೆ, ಉಡಿಗೆ, ತೊಡಿಗೆಗಳನ್ನು ತಂದು ಕೊಡಲು, ಅವನ್ನು ತೊಟ್ಟು ಉಟ್ಟು ಅಲಂಕಾರ ಮಾಡಿಕೊಂಡು ಸಂತೋಷದ ಮಾತುಗಳ ವಿನೋದದಿಂದ ಇದ್ದರು. ಆಗ ಅರಸನು ಯಶೋಭದ್ರೆಯನ್ನು ಕುರಿತು ಹೀಗೆ ಪ್ರಶ್ನಿಸಿದನು: “ಅಮ್ಮಾ ನನ್ನ ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಯುವುದಕ್ಕೂ ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ? * ಎಂದು ಕೇಳಿದಾಗ ಆಕೆ “ಒಡೆಯರೆ, ಅವನಿಗೆ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿ ಸಾಸವೆಗಳು ಒತ್ತಿದುದರಿಂದ ಸಹಿಸದಾದನು. ಅಲ್ಲದೆ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ ಅವನು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನು ನುಂಗುತ್ತಿದ್ದನು. ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ* ಎಂದು ಹೇಳಿದಳು. ಅರಸನು ಇದನ್ನು ಕೇಳಿ ಆಶ್ಚರ್ಯಪಟ್ಟನು. “ಈತನು ಒಂದು ಕ್ಷಣದ ಭೋಗಕ್ಕೂ ಸುಖಕ್ಕೂ ನನ್ನ ಎಲ್ಲಾ ಕಾಲವೂ ಅರಸುತನ ನಡೆಸಿದಾಗ ಉಂಟಾದ ಭೋಗ – ಉಪಭೋಗಗಳು ಸಮಾನವಾಗವು.
ಲೋಕದೊಳೀತನೆ ಪರಮಾರ್ಥಂ ಸುಖಿಯೆಂದೊಸೆದರಸನವಂತಿ ಸುಕುಮಾರನೆಂದು ಪೆಸರನಿಟ್ಟಂ ಯಶೋಭದ್ರೆಯುಮರಸಮನನನೇಕ ವಸ್ತುವಾಹನಂಗಳಿಂದಂ ಪೂಜಿಸಿ ಕೞಪಿದೊಳಿಂತು ಸುಕುಮಾರಸ್ವಾಮಿಗೆ ಸುಖದಿಂದಂ ಕಾಲಂ ಸಲೆ ಮತ್ತೊಂದು ದಿವಸಂ ಯಶೋಭದ್ರೆಯ ಭ್ರಾತರರಪ್ಪ ದಯಾಭದ್ರರೆಂಬ ರಿಸಿಯರ್ ಮುನ್ನಮವರ ಪಕ್ಕದೆ ಸೂರದತ್ತಂ ಧರ್ಮಂ ಕೇಳ್ದು ವೈರಾಗ್ಯಮಾಗಿ ಪುತ್ರಮುಖಂಗಂಡು ತಪಂಬಟ್ಟೊನಾತನ ಮಗನುಂ ರಿಸಿಯರಂ ಕಂಡಾಗಳೆ ತಪಂಬಡುಗುಮೆಂಬುದಂ ಮುನ್ನೆ ನೈಮಿತ್ತಿಕರಾದೇಶಂಗೆಯ್ದಿರ್ದರ್ ಮತ್ತಂ ದಯಾಭದ್ರರೆಂಬ ರಿಸಿಯರ್ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪ ದಿವ್ಯಜ್ಞಾನಿಗಳ್ ಸುಕುಮಾರಸ್ವಾಮಿಗೆ ನಾಲ್ಕುತಿಂಗಳುಮೈದುದಿವಸಮಾಯುಷ್ಯಪ್ರಮಾಣ ಮನಱದುಪಕಾರಾರ್ಥಮುಜ್ಜೇನಿಗೆ ವಂದು ಸುಕುಮಾರಸ್ವಾಮಿಯ ಮಾಡದ ಪೆಱಗಣ ನಂದನ ವನದೊಳಗಣ ಜಿನಾಲಯದೊಳಾಷಾಢ ಮಾಸದ ಚತುರ್ದಶಿಯ ದಿವಸದಂದು ಪಱವೊೞ್ತು ಬಂದು ಜೋಗುಗೊಂಡಿರ್ದರನ್ನೆಗಂ ವನಪಾಲಕರ್ ಪೋಗಿ ಯಶೋಭದ್ರೆಗೆ ರಿಸಿಯರ ಬರವಂ ಪೇೞ್ದೊಡಾಕೆಯುಂ ಬಂದು ದೇವರುಮಂ ರಿಸಿಯರುಮಂ ಬಂದಿಸಿ ಭಟ್ಟಾರಾ ನೀಮಿಲ್ಲಿಗೇಕೆ ಬಂದಿರಿಲ್ಲಿಂದಂ ಪೊಱವೊೞಲೊಳ್ ಪೆಱವುೞ ಬಸದಿಯಿಲ್ಲಾ ಎಂದೊಡೆ
ಆದುದರಿಂದ ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ* ಎಂದು ಪ್ರೀತಿಗೊಂಡವನಾಗಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು. ಯಶೋಭದ್ರೆ ರಾಜನನ್ನು ಹಲವಾರು ವಿಧದ ವಸ್ತುಗಳಿಂದಲೂ ವಾಹನಗಳಿಂದಲೂ ಸತ್ಕರಿಸಿ ಕಳುಹಿಸಿದಳು. ಹೀಗೆ ಸುಕುಮಾರಸ್ವಾಮಿಗೆ ಕಾಲವು ಸುಖಮಯವಾಗಿ ಸಾಗುತ್ತಿತ್ತು. ಅನಂತರ ಒಂದು ದಿವಸ ಯಶೋಭದ್ರೆಯ ಸಹೋದರರಾದ ದಯಾಭದ್ರರೆಂಬ ಋಷಿಗಳು ಉಜ್ಜಯಿನಿಗೆ ಬಂದರು. ಹಿಂದೆ ಅವರ ಬಳಿಯಲ್ಲಿದ್ದು ಸೂರದತ್ತನು (ಸುಕುಮಾರನ ತಂದೆ) ಧರ್ಮಶ್ರವಣ ಮಾಡಿ, ವೈರಾಗ್ಯ ತಾಳಿ, ಮಗನು ಹುಟ್ಟಿದೊಡನೆ ತಪಸ್ಸಿಗೆ ತೆರಳಿದ್ದನು. ಆತನ ಮಗನಾದ ಸುಕುಮಾರನೂ ಋಷಿಗಳನ್ನು ಕಂಡ ಕೂಡಲೇ ತಪಸ್ಸಿಗೆ ತೆರಳುವನೆಂಬುದನ್ನು ಹಿಂದೆಯೇ, ಜ್ಯೋತಿಷ್ಯ ತಿಳಿದವರು ತಿಳಿಸಿದರು. ಆಮೇಲೆ ದಯಾಭದ್ರರೆಂಬ ಋಷಿಗಳು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪತ್ತನ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ, ದಿವ್ಯಜ್ಞಾನಿಗಳಾದ ಅವರು ಸುಕುಮಾರಸ್ವಾಮಿಗೆ ನಾಲ್ಕು ತಿಂಗಳು ಐದು ದಿವಸ ಮಾತ್ರ ಆಯುಷ್ಯವಿರುವುದನ್ನು ತಿಳಿದು ಉಪಕಾರ ಮಾಡುವುದಕ್ಕಾಗಿಯೇ ಉಜ್ಜಯಿನಿಗೆ ಬಂದರು. ಹಾಗೆ ಬಂದು ಸುಕುಮಾರಸ್ವಾಮಿಯ ಮನೆಯ ಹಿಂದಣ ಉದ್ಯಾನದೊಳಗಿರುವ ಜಿನಾಲಯದಲ್ಲಿ ಅಷಾಢಮಾಸದ ಚತುದರ್ಶಿಯ ದಿವಸ ಸಂಜೆ (ಹರೆ ಬಾರಿಸುವ ಹೊತ್ತು) ಬಂದು ಯೋಗಸ್ಥರಾಗಿದ್ದರು. ಅಷ್ಟರಲ್ಲಿ ಉದ್ಯಾನಪಾಲಕರು ಹೋಗಿ, ಋಷಿಗಳು ಬಂದ ಸಂಗತಿಯನ್ನು ಯಶೋಭದ್ರೆಗೆ ತಿಳಿಸಿದರು. ಆಕೆ ಬಂದು ಜಿನೇಂದ್ರರನ್ನೂ ಋಷಿಗಳನ್ನೂ ವಂದಿಸಿ ಋಷಿಗಳೊಡನೆ – “ಸ್ವಾಮೀ, ನೀವು ಈ ಸ್ಥಳಕ್ಕೆ ಯಾಕೆ ಬಂದಿರಿ? ಇಲ್ಲಿಗಿಂತ ಈ ಪಟ್ಟಣದ ಹೊರಗೆ ಬೇರೆ ಕಡೆ ಜಿನದೇವಾಲಯವಿರಲಿಲ್ಲವೆ? * ಎಂದು ಕೇಳಿದಳು.
ಭಟ್ಟಾರರೆಂದರಬ್ಬಾ ನಿಡುವಯಣಂ ಬಂದು ಸೇದಗೆಟ್ಟೆಂತಾನುಮಿಲ್ಲಿಗೆಯಾಸತ್ತು ಜೋಗಿನ ಪೊೞ್ತಱೊಳೆಯ್ದಿ ಬಂದು ಜೋಗುಗೊಂಡಿರ್ದೆಮೆತ್ತಲುಂ ಪೋಗಲಾಗದೆನೆ ಅಂತಪ್ಪೊಡೆ ಭಟಾರಾ ನಿಮ್ಮನೊಂದಂ ಬೇಡಿಕಪ್ಪೆಂ ನಾಲ್ಕುತಿಂಗಳುಮೇನುಮನೋದದೆ ಮೋನಂಗೊಂಡು ಬಸದಿಯಂಗಳದೊಳ್ ನಡಪಾಡ ದೊಳಗಣಡಂಗಿರ್ದು ಜೋಗು ನೆಱೆದಂದು ಬಿಜಯಂಗೆಯ್ಯಿಮೆಂದೊಡಂತೆಗೆಯ್ವೆಮೆಂದು ಭಟಾರರಿರ್ದರ್ ಮತ್ತಿತ್ತಲ್ ಸುಕುಮಾರಸ್ವಾಮಿಯುಂ ಸರ್ವತೋಭದ್ರಮೆಂಬುತ್ತುಂಗ ವಿಚಿತ್ರಮಾಗಿರ್ದ ಪ್ರಾಸಾದದ ಮೇಗೇೞನೆಯ ನೆಲೆಯೊಳೆ ಕಾರ್ತಿಕಮಾಸದ ಪುಣ್ಣಮಿಯಂದು ಸುಖದಿಂದೆ ಲುಂದಿರ್ದನನ್ನೆಗಮಿತ್ತ ದುಯಾಭದ್ರ ಭಟಾರರ್ಗ್ಗೆ ಜೋಗು ನೆಱೆದು ಯಶೋಭದ್ರೆಯ ಬೇಡಿದ ಮೋನದ ದಿವಸದ ಪ್ರಮಾಣಾವಸಾನದೊಳ್ ಬೈಗಿರುಳಿನ ಪಂಚಮಹಾಶಬ್ದದ ಪೊೞ್ತಱೊಳ್ ತ್ರಿಲೋಕಪ್ರಜ್ಞಪ್ರಿಯೆಂಬುದಂ ಮೃದು ಮಧುರ ಗಂಭೀರ ಸ್ವರದಿಂ ಭಟಾರರ್ ಪರಿವಿಡಿಗೆಯ್ದಾಗಳ್ ಆಧೋಲೋಕ ತಿರ್ಯಗ್ಲೋಕಂಗಳಿರ್ದ ಸ್ವರೂಪಮಂ ಪ್ರಮಾಣಮುಮನೋದಿ ಊರ್ಧ್ವಲೋಕವ್ಯಾವರ್ಣನೆಯಂ ಪೇೞ್ದೂಗಳಚ್ಯುತಕಲ್ಪದ ಪದ್ಮಗುಲ್ಮ ವಿಮಾನಮಂ ವ್ಯಾವರ್ಣಿಸುವುದಂ ಸುಕುಮಾರಸ್ವಾಮಿ ಕೇಳ್ದು ಜಾತಿಸ್ಮರನಾಗಿಯಾನಿಲ್ಲಿ ಪುಟ್ಟಿದ್ದೇನೆಂಬುದನಱದು ಅಹೋ ಸುರಲೋಕಮೆಂಬಮೃತಸಮುದ್ರದ ನೀರೆಲ್ಲಮಂ ಕುಡಿದು ತಣಿಯದನೀ ಮನುಷ್ಯಭವದ ಸುಖಮೆಂಬ
ಆಗ ಋಷಿಗಳು “ಅವ್ವಾ, ನಾವು ಬಹಳ ದೂರದಿಂದ ಪ್ರಯಾಣ ಮಾಡಿಕೊಂಡು ಬಂದುದರಿಂದ ಬಹಳ ಬಳಲಿದ್ದೇವೆ. ಹೇಗಾದರೂ ಈ ಸ್ಥಳಕ್ಕೆ ಆಯಾಸಗೊಂಡು ಯೋಗಾಭ್ಯಾಸದ ಹೊತ್ತಿಗೆ ಬಂದು ತಲುಪಿ ಯೋಗಮಗ್ನರಾಗಿದ್ದೇವೆ. ಇಲ್ಲಿಂದ ಎಲ್ಲಿಗೂ ಹೋಗಲಾಗದು* ಎಂದು ಹೇಳಿದಳು. ಆಗ ಆಕೆ – “ಹಾಗಿದ್ದರೆ ಪೂಜ್ಯರೇ, ನಿಮ್ಮಲ್ಲಿ ಒಂದನ್ನು ನಾನು ಬೇಡಿಕೊಳ್ಳುತ್ತೇನೆ. ನೀವು ನಾಲ್ಕು ತಿಂಗಳು ಏನನ್ನೂ ಪಠಿಸದೆ, ಮೌನವ್ರತ ತಾಳಿ, ಜಿನಾಲಯದ ಅಂಗಳದಲ್ಲಿ ಅಡ್ಡಾಡದೆ ಒಳಗೆಯೇ ಅಡಗಿದ್ದು ತಪಸ್ಸು ಕೊನೆಗೊಂಡಾಗ ನಿಮ್ಮ ಪ್ರಯಾಣ ಬೆಳೆಸಿರಿ* ಎಂದಳು. “ಹಾಗೆಯೇ ಮಾಡುವೆವು* ಎಂದು ನುಡಿದು ಋಷಿಗಳಿದ್ದರು. ಆಮೇಲೆ ಇತ್ತ ಸುಕುಮಾರಸ್ವಾಮಿ ಸರ್ವತೋಭದ್ರವೆಂಬ ಅತ್ಯಂತ ಎತ್ತರವಾದ ಮತ್ತು ವಿಶೇಷ ಆಶ್ಚರ್ಯಕರವಾದ ಉಪ್ಪರಿಗೆಯ ಮನೆಯ ಮೇಲೆ ಏಳನೆಯ ಅಂತಸ್ತಿನಲ್ಲಿ ಕಾರ್ತಿಕಮಾಸದ ಹುಣ್ಣಿಮೆಯಂದು ಸುಖವಾಗಿ ಮಲಗಿದ್ದನು. ಅದೇ ಸಮಯಕ್ಕೆ ಈ ಕಡೆಯಲ್ಲಿ ದಯಾಭದ್ರಮುನಿಗಳ ತಪಸ್ಸು ಪೂರ್ಣವಾಯಿತು. ಯಶೋಭದ್ರೆ ಪ್ರಾರ್ಥಿಸಿಕೊಂಡ ಮೌನ ದಿವಸದ ಅವ ಕೊನೆಗೊಂಡಿತು. ಅಂದಿನ ರಾತ್ರಿಯೆ ಕೊನೆಯ ವೇಳೆ (ಮುಂಜಾವದಲ್ಲಿ) ಶೃಂಗ, ತಮಟೆ, ಶಂಖ, ಭೇರಿ, ಜಯಘಂಟೆ – ಎಂಬ ಐದು ಬಗೆಯ ವಾದ್ಯಗಳ ಬಾಜನೆಯ ಸಮಯದಲ್ಲಿ ಋಷಿಗಳು ಮೂರುಲೋಕಗಳ ಆಕಾರಾದಿಗಳನ್ನು ನಿರೂಪಿಸುವ ಶಾಸ್ತ್ರವನ್ನು ಮೆಲ್ಪು ಇಂಪು ಗುಣ್ಪುಳ್ಳ ಸ್ವರದಿಂದ ಅನುಕ್ರಮವಾಗಿ ಪಠನ ಮಾಡಿದರು. ಕೆಳಗಿನ ಲೋಕ, ಮೃಗಪಕ್ಷಿ(ತಿರ್ಯಕ್) ಲೋಕಗಳು ಇರುವ ಸ್ವರೂಪವನ್ನೂ ಅವುಗಳ ಪ್ರಮಾಣವನ್ನೂ ಪಠಸಿದರು. ಅನಂತರ ಮೇಲಿನ ಲೋಕದ ವರ್ಣನೆಯನ್ನು ಹೇಳಿ, ಮತ್ತೆ ಅಚ್ಯುತಕಲ್ಪದ ‘ಪದ್ಮ ಗುಲ್ಮ’ ಎಂಬ ಮಹಾಭವವನ್ನು ವರ್ಣನೆ ಮಾಡಿದರು. ಇದೆಲ್ಲವನ್ನೂ ಸುಕುಮಾರಸ್ವಾಮಿ ಕೇಳಿದನು. ಆಗ ಅವನಿಗೆ ಪೂರ್ವ ಜನ್ಮಸ್ಮರಣೆಯುಂಟಾಯಿತು. ತಾನೀಗ ಇಲ್ಲಿ ಹುಟ್ಟಿದ್ದೇನೆ – ಎಂಬುದನ್ನು ಅವನು ತಿಳಿದುಕೊಂಡನು. “ಆಹಾ, ನಾನು ದೇವಲೋಕವೆಂಬ ಸುಧಾಸಮುದ್ರದ ನೀರನ್ನೆಲ್ಲ ಕುಡಿದೂ ತೃಪ್ತಿಗೊಳ್ಳದೆ ಈ ಮನುಷ್ಯಜನ್ಮದ ಸುಖವೆಂಬ
ಪುಲ್ವನಿಯೊಳ್ ಸಿಲ್ಕಿ ಶಿವಸುಖಮನೆಯ್ದಿಸುವ ಸಚ್ಚಾರಿತ್ರದಿಂ ಬೞದೆನೆಂದು ತನ್ನಂ ತಾಂ ನಿಂದಿಸುತ್ತಂ ಮಂಚದಿಂದಿಳಿದು ಮಾಡದೊಳಗಿರ್ದ ವಸ್ತ್ರಂಗಳಂ ತೆಗೆದುಕೊಂಡು ಪ್ರಾಸಾದದ ಪೆಱಗಣ ಗವಾಕ್ಷಜಾಳದೊಳ್ ಕಟ್ಟಿಕೊಂಡೊಂದೊಂದಱ ತುದಿಯೊಳೊಂದೊಂದು ವಸ್ತ್ರಮಂ ತಗುೞ ಪಿಡಿದಿೞದು ಜಿನಾಲಯಮನೆಯ್ದಿ ದೇವರ್ಗೆ ನಮಸ್ಕಾರಂಗೆಯ್ದು ದಯಾಭದ್ರಭಟಾರರ್ಗೆಱಗಿ ಪೊಡೆವಟ್ಟು ದೀಕ್ಷೆಯಂ ಪ್ರಸಾದಂಗೆಯ್ದೆನ್ನಂ ಸಂಸಾರಾರ್ಣವದತ್ತಣಿಂದೆತ್ತಿಮೆಂದೊಂಗೆ ಭಟಾರರ್ ಮೂಱು ದಿವಸಂ ನಿನಗಾಯಷ್ಯಮೆಂದೊಡೀಗಳೀ ನಿಸ್ಸಾರಮಪ್ಪ ದೇಹದಿಂ ಸಾರಮಪ್ಪ ತಪಮಂ ಕೈಕೊಂಡು ಪಲಕಾಲಂ ನೆಗೞಲ್ ಪೆತ್ತೆನಿಲ್ಲ ನಿಸ್ಸಾರಮಪ್ಪ ಭೋಗದೊಳ್ ಸಿಲ್ಕಿ ಅಮೇಧ್ಯದೊಳ್ ಕ್ರೀಡಿಸುವ ಬಾಳಕಂಬೊಲ್ ಕಾಲಮಂ ಬಱದೆ ಕಳೆದೆನೆಂದು ತನ್ನನಾದಮಾನುಂ ನಿಂದಿಸಿ ತತ್ಪಾದಮೂಲದೊಳ್ ತಪ್ಪಂಬಟ್ಟು ಪಂಚಮಹಾಬ್ರತಂಗಳನೇಱೆಸಿಕೊಂಡು ಪಡಿದಮಣಂಗೇಳ್ದ ತದನಂತರಂ ನಿಶ್ಚಯ ಸಮ್ಯ್ವಕ್ರಮಂ ಕೈಕೊಂಡಿಂ ಬೞಕ್ಕೆ ಮಹಾಕಾಳಮೆಂಬ ಶ್ಮಶಾನಕ್ಕೆ ಪೋಗಿ ಯಾವಜ್ಜೀವಮಾಹಾರಕ್ಕೆ ನಿವೃತ್ತಿಗೆಯ್ದು ಪ್ರಾಯೋಪಗಮನ ವಿಧಾನದಿಂ ಪ್ರಚ್ಛನ್ನಮಪ್ಪೆಡೆಯೊಳ್ ಮೃತಕ ಸೆಜ್ಜೆಯೊಳಿರ್ದು ಸನ್ಯಸನಂಗೆಯ್ದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಧ್ಯಾನಿಸುತ್ತಿರ್ಪನ್ನೆಗಂ ಇತ್ತ ವಾಯುಭೂತಿಯಪ್ಪ ಭವದಂದಿನತ್ತಿಗೆಯಪ್ಪ ಸೋಮದತ್ತೆಯೆಂಬೊಳ್ ನಿದಾನಂಗೆಯ್ದು ತನ್ನ ನಾಲ್ವರ್ ಮಕ್ಕಳುಂ ತಾನುಂ
ಹುಲ್ಲಿನ ಹನಿಗೆ ಸಿಕ್ಕಿ ಮಂಗಳಕರಸುಖಗಳನ್ನು ಒದಗಿಸುವ ಒಳ್ನಡತೆಯಿಂದ ಕೆಳಕ್ಕೆ ಜಾರಿಹೋಗಿದ್ದೇನೆ* – ಎಂದು ತನ್ನನ್ನು ತಾನೇ ನಿಂದಿಸಿಕೊಂಡನು. ಮಂಚದಿಂದ ಇಳಿದು, ಮನೆಯಲ್ಲಿದ್ದ ಬಟ್ಟೆಗಳನ್ನೆಲ್ಲ ತೆಗೆದುಕೊಂಡು ಉಪ್ಪರಿಗೆ ಮನೆಯ ಹಿಂಗಡೆಯ ಕಿಟಕಿಗೆ ಕಟ್ಟಿಕೊಂಡು ಒಂದೊಂದರ ತುದಿಗೆ ಒಂದೊಂದು ಬಟ್ಟೆಯನ್ನು ಕಟ್ಟಿ, ಅದನ್ನು ಹಿಡಿದು ಕೆಳಗಿಳಿದು ಜಿನಾಲಯಕ್ಕೆ ಬಂದು ಜಿನೇಶನನ್ನು ವಂದಿಸಿದನು. ದಯಾಭದ್ರಮುನಿಗಳಿಗೆ ಸಾಷ್ಟಾಂಗ ವಂದಿಸಿ “ನನಗೆ ದೀಕ್ಷೆಯನ್ನು ಅನುಗ್ರಹಿಸಿ ನನ್ನನ್ನು ಸಂಸಾರಸಮುದ್ರದಿಂದ ಎತ್ತಿರಿ* ಎಂದು ಹೇಳಿದನು. ಆಗ ನಿನಗೆ ಮೂರು ದಿವಸದ ಆಯುಷ್ಯ ಮಾತ್ರವಿರುವುದು* ಎಂದರು. ಆಗ ಸುಕುಮಾರಸ್ವಾಮಿ – “ಈಗ ಈ ನಿಸ್ಸಾರವಾದ ಶರೀರದಿಂದ ಸಾರವತ್ತಾದ ತಪಸ್ಸನ್ನು ಕೈಕೊಂಡು ನಾನು ಬಹಳಕಾಲ ಆಚರಿಸಲಿಲ್ಲ. ನಿಸ್ಸಾರವಾದ ಸುಖಾನುಭವದಲ್ಲಿ ಸಿಕ್ಕಿಕೊಂಡು ಹೇಲಿನಲ್ಲಿ ಆಟವಾಡುವ ಬಾಲಕನ ಹಾಗೆ ವ್ಯರ್ಥವಾಗಿ ಕಾಲವನ್ನು ಕಳೆದೆನು* ಎಂದು ತನ್ನನ್ನು ಅತಿಶಯವಾಗಿ ಹಳಿದುಕೊಂಡನು. ಆ ಮುನಿಗಳ ಪಾದದ ಬುಡದಲ್ಲಿ ತಪಸ್ಸಿನ ಆಚರಣೆಯನ್ನು ಸ್ವೀಕರಿಸಿ, ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ಮಹಾವ್ರತಗಳನ್ನು ಕೈಕೊಂಡು ದೋಷಗಳಿಗೆ ಪ್ರಾಯಶ್ಚಿತ್ತಗಳನ್ನು (ಪಡಿಕಮಣ) ಕೇಳಿದ ನಂತರ ಜೈನತತ್ವವನ್ನು ಸ್ವೀಕರಿಸಿ ಮಹಾಕಾಳವೆಂಬ ಶ್ಮಶಾನಕ್ಕೆ ಹೋಗಿ ಜೀವವಿರುವವರೆಗೂ ಆಹಾರವನ್ನು ಸೇವಿಸದೆ, ಆಮರಣ ಉಪವಾಸ ವಿಧಾನದಿಂದ ಗುಪ್ತವಾದ ಸ್ಥಳದಲ್ಲಿ ಶವಾಸನದಲ್ಲಿದ್ದು, ಸಂನ್ಯಾಸವನ್ನು ಮಾಡುತ್ತ ಧರ್ಮಧ್ಯಾನ ಶುಕ್ಲಧ್ಯಾನ ಎಂಬ ಧ್ಯಾನಗಳಲ್ಲಿ ಮಗ್ನನಾಗಿದ್ದನು. ಆ ಕಡೆಯಲ್ಲಿ ವಾಯುಭೂತಿಯಾಗಿದ್ದ ಜನ್ಮದದಿಂನ ಅತ್ತಿಗೆಯಾಗಿದ್ದ ಸೋಮದತ್ತೆ ಎಂಬುವಳು (ಜನ್ಮಾಂತರದಲ್ಲಿ ನರಿಯಾಗಿ ಮಕ್ಕಳೊಂದಿಗೆ ನಿನ್ನ ಕಾಲುಗಳನ್ನು ತಿನ್ನುವವಳಾಗುವೆನೆಂದು) ಪ್ರತಿಜ್ಞೆಮಾಡಿ ತನ್ನ ನಾಲ್ಕು ಮಂದಿ ಮಕ್ಕಳೂ ತಾನೂ
ಸಂಸಾರಸಮುದ್ರದೊಳ್ ನೀಡುಂ ತಿಱ್ರನೆ ತಿರಿದು ಬಂದು ಪೆಣ್ಣರಿಯಾಗಿ ಪುಟ್ಟಿ ತನ್ನ ನಾಲ್ಕು ಮಱಗಳ್ವೆರಸಾಹಾರಮನಱಸಿ ತೊೞಲುತ್ತಂ ಬರ್ಪುದನ್ನೆಗಂ ಸುಕುಮಾರಸ್ವಾಮಿಯುಂ ಮಹಾಕಾಳಕ್ಕೆ ಪೋಪನೆಲ್ಲಾ ಕಾಲಮುಂ ಮಣಿಕುಟ್ಟಿಮಭೂಮಿಯೊಳ್ ಪಾಸಿದ ನೇತ್ರಪೞಯ ಮೇಗೆ ನಡೆದ ಮೃದು ಲಲಿತಮಪ್ಪ ಚರಣದ್ವಯದೊಳ್ ಮುನ್ನೆಂದಂ ನೆಲನಂ ಕಿಟ್ಟಿಯಱಯದೊಂ ಕಠಿನಭೂಮಿಯೊಳ್ ನಡೆದೊಡೆ ಕಿಱುಗಲ್ಗಳುಂ ಪೆಟ್ಟಿಗಳುಮಗುೞ್ದು ಪುಗೊಳೊಡೆದು ಪೊಱಮಟ್ಟು ಕರಗದ ದಾರೆವೊಲೆಡೆವಱಯದೆ ಮಹಾಕಾಳಶ್ಮಶಾನಂಬರಗಮೊಕ್ಕ ನೆತ್ತರ ದಾರೆಯ ಗಂದದಿಂದಂ ನರಿಗಳ್ ಬಂದು ಕಂಡು ರಾಗಿಸಿ ಮಱಗಳ್ವೆರಸಡಿಯಿಂದಂ ತೊಟ್ಟೆರಡುಂ ಕಾಲ್ಗಳಂ ಮೊೞಕಾಲ್ವರೆಗಮೊಂದುದಿವಸಂ ತಿಂದತ್ತೆರಡನೆಯ ದಿವಸಂ ಮೊೞಕಾಲಿಂ ತೊಟ್ಟು ಕಟಿವರೆಗಂ ತಿಂದತ್ತು ಮೂರನೆಯ ದಿವಸಂ ಬಸಿಱಂ ಪೋೞ್ದು ಕರುಳಂ ತೋಡಿ ತಿನೆ ಪೃಥಕ್ರ್ವವಿತರ್ಕವೀಚಾರಮೆಂಬ ಪ್ರಥಮ ಶುಕ್ಲಧ್ಯಾನದೊಳ್ ಕೂಡಿಯುಪಶಾಂತ ಗುಣಸ್ಥಾನದೊಳಿರ್ದು ರತ್ನತ್ರಯಮಂ ಸಾದಿಸಿ ಸಯಸತ್ತಮ ದೇವನಾಗಿ ಪುಟ್ಟಿದೊಂ ಮತ್ತಿತ್ತ ತಾಯುಂ ಪೆಂಡಿರುಂ ಪರಿವಾರಮುಮೆಲ್ಲಾ ದೆಸೆಗಳೊಳಂ ಪರಿವರಿದು ಪೋಗಿ ಸುಕುಮಾರಸ್ವಾಮಿಯನ್ ಹೊಸೂರಾ ಆಹೋ ಮಹಾಪುರುಷ ಅಹೊ ಧೈರ್ಯವಂತ ಅಹೊ
ಸಂಸಾರವೆಂಬ ಸಮುದ್ರದಲ್ಲಿ ವಿಶೇಷವಾಗಿ ತಿರ್ರನೆ ಸುತ್ತುತ್ತ ಬಂದು, ಹೆನ್ಣು ನರಿಯಾಗಿ ಹುಟ್ಟಿ ತನ್ನ ನಾಲ್ಕು ಮರಿಗಳೊಂದಿಗೆ ಅದು ಆಹಾರವನ್ನು ಹುಡುಕುತ್ತ ಸುತ್ತಾಡುತ್ತಾ ಬರುತ್ತಿತ್ತು. ಸುಕುಮಾರಸ್ವಾಮಿ ಮಹಾಕಾಳವೆಂಬ ಶ್ಮಶಾನದ ಕಡೆಗೆ ಹೋಗುತ್ತಿದ್ದವನು. ಅವನು ಯಾವ ಕಾಲದಲ್ಲಿ ನೋಡಿದರೂ ರತ್ನಮಯವಾದ ಜಗಲಿಯ ಮೇಲೆ ಹಾಸಿದ ರೇಷ್ಮೆ ವಸ್ತ್ರದ ಮೇಲೆ ನಡೆದ ತನ್ನ ಮೆತ್ತಗಾದ ಮತ್ತು ಚೆಲುವಾದ ಎರಡು ಪಾದಗಳಲ್ಲಿ ಹಿಂದೆ ಎಂದೂ ನೆಲವನ್ನು ಮುಟ್ಟಿಯೂ ಅರಿಯದವನು, ಅವನು ಈಗ ಕಠಿನವಾದ ನೆಲದಲ್ಲಿ ನಡೆಯಲು, ಹರಳುಕಲ್ಲುಗಳೂ ಹೆಂಟೆ (ಗಟ್ಟಿ)ಗಳೂ ನಾಟಿಕೊಂಡು ಗುಳ್ಳೆಯೆದ್ದು ಒಡೆದು ಅದರಿಂದ ಹೊರಟ ರಕ್ತವು ಕರಗದಿಂದ ಇಳಿಯುವ ನೀರಿನ ಧಾರೆಯಂತೆ ನಿರಂತರವಾಗಿ ಸುರಿದಿತ್ತು. ಮಹಾಕಾಳ ಶ್ಮಶಾನದವರೆಗೂ ಸುರಿದ ರಕ್ರದ ಧಾರೆಯ ವಾಸನೆಯಿಂದ ನರಿಗಳು ಬಂದು ನೋಡಿದವು. ಆ ಹೆಣ್ಣುನರಿ ಸಂತೊಷಗೊಂಡು ತನ್ನ ಮರಿಗಳ ಸಮೇತವಾಗಿ ಮೊದಲನೆಯ ದಿನ ಸುಕುಮಾರ ಸ್ವಾಮಿಯ ಎರಡು ಕಾಲುಗಳನ್ನು ಪಾದದಿಂದ ಪ್ರಾರಂಭಿಸಿ ಮೊಣಕಾಲುಗಳವರೆಗೆ ತಿಂದಿತು. ಎರಡನೆಯ ದಿವಸ ಮೊಣಕಾಲುಗಳಿಂದ ಪ್ರಾರಂಭಿಸಿ ಸೊಂಟದವರೆಗೆ ತಿಂದಿತು. . ಮೂರನೆಯ ದಿವಸ ಹೊಟ್ಟೆಯನ್ನು ಸೀಳಿ ಕರುಳನ್ನು ತೋಡಿ ತಿನ್ನುತ್ತಿತ್ತು. ಆಗ ಸುಕುಮಾಸ್ವಾಮಿಯು ಪೃಥಕ್ತ್ವ, ವಿತರ್ಕ, ವೀಚಾರ – ಎಂಬ ಮೊದಲನೆಯ ಶ್ಲೋಕಧ್ಯಾನದಲ್ಲಿ ಸೇರಿಕೊಂಡು ಉಪಶಾಂತಿ ಎಂಬ ಗುಣಸ್ಥಾನದಲ್ಲಿದ್ದು ಸಮ್ಯಗ್ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ಚಾರಿತ್ರ – ಎಂಬ ರತ್ನತ್ರಯವನ್ನು ಸಾಧನೆ ಮಾಡಿ ಅತ್ಯಂತ ಶ್ರೇಷ್ಠ ದೇವತೆಯಾಗಿ ಜನಿಸಿದನು. ಆ ಮೇಲೆ ಇತ್ತಲಾಗಿ ಸುಕುಮಾರಸ್ವಾಮಿಯ ತಾಯಿಯೂ ಹೆಂಡಿರೂ ಪರಿವಾರವೂ ಎಲ್ಲಾ ದಿಕ್ಕುಗಳಲ್ಲಿಯೂ ಸಂಚರಿಸಿಕೊಂಡು ಹೋಗಿ ಸುಕುಮಾರಸ್ವಾಮಿಯನ್ನು ಎರಡು ದಿವಸ ಇರುಳು ಹಗಲೂ ಹುಡುಕಿದರು. ಆದರೆ ಕಾಣಲಿಲ್ಲ ಮೂರನೆಯ ದಿವಸದಂದು ಸಂಜೆ ಹೊತ್ತಿನಲ್ಲಿ ದೇವತೆಗಳು ಬಂದು ಸುಕುಮಾರಸ್ವಾಮಿಯನ್ನು “ಆಹಾ ಶೂರನೇ, ಆಹಾ
ಸಂಸಾರಭೀರು ನಿನ್ನಂತುಪಸರ್ಗಮನಾರಪ್ಪೊಡು ಸೈರಿಸಿ ರತ್ನತ್ರಯಮಂ ಸಾಸಿದೊರಿಲ್ಲೆಂದು ದೇವತೆಗಳ್ ಪೊಗಳ್ವ ಕಳಕಳಧ್ವನಿಯುಮಂ ದೇವದುಂದುಭಿಯ ರವಮುಮಂ ಯಶೋಭದ್ರೆ ನೋಡಿ ದೆವಸಂಘಾತಮಂ ಕಂಡು ಮಗನ ಸಾವನಱದು ಬಯ್ಗಿರುಳಾದಾಗಳ್ ಮೂವತ್ತಿರ್ವರ್ ಸೊಸೆವಿರ್ಕಳ್ಗಂ ಪೇೞ್ದಟ್ಟಿ ಸುಕುಮಾರಸ್ವಾಮಿ ನಿಮಗೆಲ್ಲರ್ಗೆ ಮುಳಿದು ಪೋಗಿಯಡಂಗಿರ್ದೊನನಾನಱವೆಂ ನೀವೆಲ್ಲಂ ನೆಱೆಯೆ ತೊಟ್ಟುಟ್ಟು ಪಸದನಂಗೊಂಡು ಚೆಲ್ವೆಯರಾಗಿ ಬನ್ನಿಂ ಪೋಪಂ ತಿಳಿಪಿಕೊಂಡು ಬರ್ಪಂ ನಿಮ್ಮ ಸ್ವಾಮಿಯನೆಂದೊಡವರ್ಗಳನಿಬರುಂ ರಾಗಿಸಿ ಕೈಗೆಯ್ದತ್ತೆಯೊಡನೆ ಪರಿವಾರಸಹಿತಂ ಮಹಾಕಾಳಕ್ಕೆ ಪೋಗಿ ನೋೞ್ಪರನ್ನೆಗಂ ನಮೇರು ಮಂದಾರ ಸಂತಾನಕ ಪಾರಿಯಾತ್ರಮೆಂಬ ದೇವರ್ಕಳ್ ಸುರಿದ ಪುಷ್ಪವೃಷ್ಟಿಯಿಂದಂ ಮುಚ್ಚೆಪಟ್ಟನಾಗಿ ಕಂಪಿಮಗೆಱಗಿದ ತುಂಬಿಯ ಸಮೂಹಮಂ ಮೇಗೆ ಸುೞವುದಂ ಕಂಡಿಲ್ಲಿರ್ದ್ದನೆಂದು ಯಶೋಭದ್ರೆ ತೋಱದೊಡೆ ಪೋಗಿ ತೆಱೆದು ನೋೞ್ಪರನ್ನೆಗಂ ಮೃತಕಮಂ ಕಂಡನಿಬರುಂ ಮೂರ್ಛೆವೋಗಿ ನೀಡಱಂದೆೞ್ಚರ್ತು ತಮ್ಮ ಬಸಿಱುಮಂ ತಲೆಯುಮಂಬಡಿದುಕೊಂಡು ಸುಕುಮಾರಸ್ವಾಮಿಯ ರೂಪಮಂ ತೇಜಮುಮಂ ಯೌವನಮಂ ಲಾವಣ್ಯಮಂ ಸೌಭಾಗ್ಯಮಂ ಯಶಮಂ ಮೆಲ್ಪಂ ನುಡಿಯ ಬಲ್ಮೆಯಂ ಶುಚಿತ್ವಮಂ ಶೌಚಮಂ ಶ್ರೀಯಂ ಸಂಪತ್ತಂ ಸೊಬಗಂ ಒಲ್ಮೆಯಂ ಧೈರ್ಯಮಂ ಎಂದಿವು ಮೊದಲಾಗೊಡೆಯವಾತನೊಳ್ ನೆಲಸಿರ್ದ ಗುಣಂಗಳಂ
ಧೈರ್ಯಶಾಲಿಯೇ, ಆಹಾ ಸಂಸಾರಕ್ಕೆ ಹೆದರಿದವನೇ, ನಿನ್ನ ಹಾಗೆ ಉಪಸರ್ಗಗಳನ್ನು ಸಹಿಸಿಕೊಂಡು ರತ್ನತ್ರಯವನ್ನು ಸಾಸಿದವರು ಯಾರೂ ಇಲ್ಲ* ಎಂದು ಹೊಗಳುತ್ತಿದ್ದರು. ಹಾಗೆ ಹೊಗಳುವ ಗದ್ದಲದ ಧ್ವನಿಯನ್ನೂ ದೇವಲೋಕದ ದುಂದುಭಿವಾದ್ಯದ ಶಬ್ದವನ್ನೂ ಯಶೋಭದ್ರೆ ಕೇಳಿ, ದೇವತಾಸಮೂಹವನ್ನು ಕಂಡು ತನ್ನ ಮಗನು ಸತ್ತುದು ನಿಜವೆಂದು ತಿಳಿದುಕೊಂಡಳು. ಅಂದು ರಾತ್ರಿ ಮೂವತ್ತೆರಡು ಮಂದಿ ಸೊಸೆಯಂದಿರಿಗೂ ಅವಳು ಹೇಳಿಕಳುಹಿಸಿದಳು. ಅವರೊಡನೆ ಹೀಗೆಂದಳು – “ಸುಕುಮಾರಸ್ವಾಮಿ ನಿಮ್ಮೆಲ್ಲರ ಮೇಲೆಯೂ ಕೋಪಿಸಿಕೊಂಡು ಹೋಗಿ ಅಡಗಿರುತ್ತಾನೆ. ಅವನು ಎಲ್ಲಿರುವನೆಂದು ನಾನು ಬಲ್ಲೆ. ನೀವೆಲ್ಲರೂ ವಿಶೇಷವಾಗಿ ಉಡಿಗೆತೊಡಿಗೆಗಳನ್ನು ಧರಿಸಿ ಶೃಂಗಾರಮಾಡಿಕೊಂಡು ಚೆಲುವೆಯರಾಗಿ ಬನ್ನಿ, ಹೋಗೋಣ. ನಿಮ್ಮ ಒಡೆಯನಾದ ಸುಕುಮಾರನನ್ನು ಸಂತಯಿಸಿಕೊಂಡು ಬರೋಣ* ಹೀಗೆನ್ನಲು ಅವರೆಲ್ಲರೂ ಸಂತೋಷಗೊಂಡು ಸಿಂಗರಿಸಿಕೊಂಡು ಅತ್ತೆ (ಯಶೋಭದ್ರೆ)ಯೊಂದಿಗೆ ಮಹಾಕಾಳ ಶ್ಮಶಾನಕ್ಕೆ ಹೋಗಿ ನೋಡಿದರು. ಆಗ ಸುರಪುನ್ನಾಗ, ಮಂದಾರ, ಕಲ್ಪವೃಕ್ಷ, ಪಾರಿಯಾತ್ರಗಳ ಹೂಮಳೆಯನ್ನು ದೇವತೆಗಳು ಸುರಿಸಲು ಅದರಿಂದ ಮುಚ್ಚಲ್ಪಟ್ಟವನಾಗಿ, ಹೂಗಂಪಿಗೆ ಬಂದೆರಗಿದ ತುಂಬಿಗಳ ಹಿಂಡು ಮೇಲುಗಡೆ ಸುಳಿಯುವುದನ್ನು ಕಂಡು ಸುಕುಮಾರನು ಇಲ್ಲಿದ್ದಾನೆ ಎಂದು ಯಶೋಭದ್ರೆ ತೋರಿಸಿದಳು. ಆಗ ಇವರು ಹೋಗಿ, ಮುಚ್ಚಿದ್ದನ್ನು ತೆರೆದು ನೋಡಿದರು. ಹೆಣವನ್ನು ಕಂಡು ಅವರೆಲ್ಲರೂ ಮೂರ್ಛೆ ಹೋದರು. ಬಹಳ ಹೊತ್ತಾದನಂತರ ಎಚ್ಚರಗೊಂಡು ತಮ್ಮ ಹೊಟ್ಟೆಯನ್ನೂ ತಲೆಯನ್ನೂ ಬಡಿದುಕೊಂಡು ಸುಕುಮಾರಸ್ವಾಮಿಯ ರೂಪ, ಕಾಂತಿ, ಯಾವನ, ಲಾವಣ್ಯ, ಸೌಭಾಗ್ಯ, ಕೀರ್ತಿಗಳನ್ನೂ ಮೃದುಸ್ವಭಾವವನ್ನೂ ಮಾತಿನ ಪ್ರೌಢಿಮೆಯನ್ನೂ ಶುಚಿತ್ವವನ್ನೂ ಶುದ್ಧಗುಣವನ್ನೂ, ಶೋಭೆಯನ್ನೂ, ಸಂಪತ್ತನ್ನೂ, ಸೊಬಗನ್ನೂ, ಪ್ರೀತಿಯನ್ನೂ ಧೈರ್ಯ ಮುಂತಾಗಿರುವ ಆತನಲ್ಲಿ ನೆಲಸಿಕೊಂಡಿದ್ದ ಗುಣಗಳನ್ನೂ
ನೆನೆನೆನೆದನಿಬರುಂ ಪ್ರಲಾಪಂಗೆಯ್ಯುತ್ತಂ ಸೈರಿಸಲಾಱದೆ ನಿರಂತರಂ ಮೂರ್ಛೆವೋಗುತ್ತಂ ನೀಡುಂ ಬೇಗಂ ದುಃಖಂಗೆಯ್ದಳ್ತು ನೀರಿೞದೆಣ್ಬರ್ ಬಸಿಱ ಪೆಂಡಿರುೞಯೆ ಇರ್ಪತ್ತು ನಾಲ್ವರ್ ಪೆಂಡಿರುಂ ಮತ್ತಂ ಪೆಱರ್ ನಂಟರ್ಕಳುಂ ಪರಿವಾರಮುಂ ಯಶೊಭದ್ರೆಯೊಡನೆ ದಯಾಭದ್ರರ್ ಗುರುಗಳಾಗೆ ಕಮಳಶ್ರೀ ಕಂತಿಯರ್ ಕಂತಿಯರಾಗೆ ತಪಂಬಟ್ಟುಗ್ರೋಗ್ರತಪಂಗೆಯ್ದನಿಬರುಂ ಸೌಧರ್ಮಕಲ್ಪಂ ಮೊದಲಾಗೊಡೆಯ ಕಲ್ಪಂಗಳೊಳ್ ಪುಟ್ಟಿದರ್ ಮುತ್ತಿಂತಪ್ಪುದಂ ಚಿಂತಿಸಲುಂ ಸೈರಿಸಲುಮಾಗದ ತಿರಿಕೋಪಸರ್ಗಮನವಂತಿ ಸುಕುಮಾರಸ್ವಾಮಿ ಮೂಱು ದಿವಸಮಿರುಳುಂ ಪಗಲುಂ ಸೈರಿಸಿ ರತ್ನತ್ರಯಮನೆಂತು ಸಾದಿಸಿದನಂತೆ ಸನ್ಯಸನಂಗೆಯ್ದಿರ್ದಾರಾಧಕರಪ್ಪ ಮಹಾಪುರುಷರುಮವಂತಿ ಸುಕುಮಾರಸ್ವಾಮಿಯ ಪರಮಸುಖಿಯಪ್ಪುಪಸರ್ಗಮಂ ವಿಜಯವಿಧಾನಮಂ ಮನದೊಳನವರತಂ ಚಿಂತಿಸುತ್ತಾಪ್ತಾಗಮ ಪದಾರ್ಥರ್ದಿಗಳೊಳತೀವಸ್ಥಿರರಾಗಿ ಪರಮ ಸಹಜ ನಿಜ ರತ್ನತ್ರಯದೊಳ್ ಕೂಡಿ ಆಭೇದವಾಗೆಯ್ದೆ ಕೂಡಿ ಶರೀರಂ ಮೊದಲಾಗೊಡೆಯ ಸಮಸ್ತ ಬಾಹ್ಯಾಭ್ಯಂತರ ಪರಿಗ್ರಹಂಗಳಂ ನೆಱೆ ತೊಱೆದು ಅಪೂರ್ವಪವರ್ಗಸುಖಂಗಳನೆಯ್ದುಗೆ ಮತ್ತುಜ್ಜೇನಿಯ ತೆಂಕಣ ದೆಸೆಯೊಳವಂತಿ ಸುಕುಮಾರಸ್ವಾಮಿಯ ಕಾಲಂಗೆಯ್ದೆಡೆ ಈಗಳುಂ ಪುಣ್ಯಮುಂ ಪವಿತ್ರಮುಮಾದುದು
ಮತ್ತೆಮತ್ತೆ ನೆನಸಿಕೊಳ್ಳುತ್ತ, ಅವರೆಲ್ಲರೂ ಗೋಳಾಡುತ್ತ ಸಹಿಸಲಾರದೆ ಎಡೆಬಿಡದೆ ಆಗಾಗ ಮೂರ್ಛೆಗೊಳ್ಳುತ್ತ, ಬಹಳ ಹೊತ್ತಿನ ತನಕ ದುಃಖಪಡುತ್ತ ಅತ್ತು, ಸ್ನಾನ ಮಾಡಿದರು. ಅವರಲ್ಲಿ ಎಂಟು ಮಂದಿ ಗರ್ಭಿಣಿ ಸ್ತ್ರೀಯರನ್ನು ಬಿಟ್ಟು ಉಳಿದ ಇಪ್ಪತ್ತನಾಲ್ಕು ಮಂದಿ ಹೆಂಡಿರೂ ಮತ್ತಿತರ ನೆಂಟರೂ ಪರಿವಾರದವರೂ ಯಶೋಭದ್ರೆಯೊಂದಿಗೆ ತಪಸ್ಸನ್ನು ಕೈಗೊಂಡರು. ಅವರಿಗೆ ದಯಾಭದ್ರರು ಗುರುಗಳಾದರು. ಕಮಲಶ್ರೀ ಕಂತಿಯರು ಮಾರ್ಗದರ್ಶಿಗಳಾದ ಸನ್ಯಾಸಿನಿಯರಾದರು, ಹೀಗೆ ಯಶೋಭದ್ರೆಯೊಂದಿಗೆ ಅತ್ತಂತ ಘೋರವಾದ ತಪಸ್ಸನ್ನು ಮಾಡಿ ಅವರೆಲ್ಲರೂ ಸೌಧರ್ಮಕಲ್ಪವೇ ಮೊದಲಾಗಿರುವ ಸ್ವರ್ಗಗಳಲ್ಲಿ ಹುಟ್ಟಿದರು. ಆಮೇಲೆ ಈರೀತಿಯಾಗಿರುವುದನ್ನು ಯೋಚಿಸಲೂ ಸಹಿಸಲೂ ಸಾಧ್ಯವಾಗದಂತಹ ಪ್ರಾಣ್ಯುಪದ್ರವ (ತಿರಿಕೋಪಸರ್ಗ)ವನ್ನು ಅವಂತಿ ಸುಕುಮಾರನು ಮೂರುದಿವಸ ಇರುಳೂ ಹಗಲೂ ಸಹಿಸಿಕೊಂಡು ರತ್ನತ್ರಯ (ಸಮ್ಯಗ್ದರ್ಶನ – ಜ್ಞಾನ – ಚಾರಿತ್ರ)ವನ್ನು ಹೇಗೆ ಸಾಸಿದನೋ ಹಾಗೆಯೇ ಸಂನ್ಯಾಸನ ಕೈಗೊಂಡು ಆರಾಧನೆ ಮಾಡತಕ್ಕ ಇದರ ಮಹಾಪುರುಷರೂ ಸುಕುಮಾರಸ್ವಾಮಿಗೆ ಪರಮ ಸುಖವನ್ನೊದಗಿಸಿದ ಉಪಸರ್ಗವನ್ನೂ ಅದನ್ನು ಗೆಲ್ಲುವ ಕ್ರಮವನ್ನೂ ಮನಸ್ಸಿನಲ್ಲಿ ಯಾವಾಗಲೂ ಯೋಚಿಸುತ್ತ ಆತ್ಮೀಯವಾದ ಆಗಮ (ಶಾಸ್ತ್ರ)ಗಳಲ್ಲಿಯೂ ನವಪದಾರ್ಥಗಳಲ್ಲಿಯೂ ಋದ್ಧಿ (ಸಿದ್ಧಿ)ಗಳಲ್ಲಿಯೂ ಅತ್ಯಂತ ಸ್ಥಿರರಾಗಿದ್ದುಕೊಂಡು ಸಹಜವಾದ ಮತ್ತು ನಿಜವಾದ ರತ್ನತ್ರಯದಲ್ಲಿ ಒಂದಾಗಿ, ಭೇದವಿಲ್ಲದಂತೆ ಕೂಡಿ ದೇಹವೇ ಮೊದಲಾದ ಎಲ್ಲಾ ಹೊರಗಿನ ಮತ್ತು ಒಳಗಿನ ಪರಿಗ್ರಹಗಳನ್ನು ವಿಶೇಷವಾಗಿ ಬಿಟ್ಟು ಅಪೂರ್ವವೆನಿಸುವ ಮುಕ್ತಿ ಸುಖಗಳನ್ನು ಪಡೆಯಲಿ! ಆಮೇಲೆ, ಉಜ್ಜಯಿನಿಯ ದಕ್ಷಿಣ ದಿಶಾಭಾಗದಲ್ಲಿ ಅವಂತಿ ಸುಕುಮಾರಸ್ವಾಮಿ ದೇಹತ್ಯಾಗ ಮಾಡಿದ ಸ್ಥಳ ಇಂದಿಗೂ ಪುಣ್ಯಕರವೂ ಪವಿತ್ರವೂ ಆಯಿತು.
ಮತ್ತಂ ಮಹಾಪುರುಷನ ಶರೀರಮಂ ಚತುರ್ನಿಕಾಯಾಮರತತಿಗಳ್ ಭಕ್ತಿಯಿಂದಗರು ಕಾಲಾಗರು ಗೋಶೀರ್ಷ ಚಂದನಂ ಮೊದಲಗೊಡೆಯ ಅನೇಕ ಸುಗಂಧ ದ್ರವ್ಯಂಗಳಿಂದಂ ಪೂಜಿಸಿದ ವಸ್ತುಗಳ್ ಕಾಲಾಂತರದಿಂ ಕರಗಿ ಬಿೞ್ದುದಾ ಸ್ಥಾನಮೆಂಬುದು ಗಂಧವತಿಯೆಂಬ ತೊಱೆಯಾದುದು ದೇವರ್ಕಳ್ ಪೊಗೞ್ದ ಕಳಕಳಧ್ವನಿಯಿಂ ಪೆಂಡಿರ್ಕಳ ಪ್ರಳಾಪಂಗೆಯ್ದೞ್ತ ಕಳಕಳಧ್ವನಿಯಿಂದಂ ಕಳಕಳಾಯತಮೆಂದು ಸಿದ್ಧಾಯತಮಾದುದು.
ಅದಲ್ಲದೆ, ಆ ಮಹಾಪುರುಷನ ದೇಹವನ್ನು ಭವನಪತಿ, ವ್ಯಂತರಿಕ, ಜ್ಯೋತಿಷ್ಕ ಮತ್ತು ವಿಮಾನವಾಸಿಗಳೆಂಬ ನಾಲ್ಕು ಬಗೆಯ ದೇವತೆಗಳು ಭಕ್ತಿಯಿಂದ ಅಗರು, ಕಾಳಾಗರು, ಗೋರೋಚನ, ಗಂಧ, ಶ್ರೀಗಂಧ – ಮುಂತಾಗಿರುವ ಹಲವಾರು ಸುವಾಸನೆಯ ದ್ರವ್ಯಗಳಿಂದ ಪೂಜಿಸಿದ ವಸ್ತುಗಳು ಕೆಲವು ಕಾಲಾನಂತರ ಕರಗಿ ಬಿದ್ದುವು. ಹಾಗೆ ಬಿದ್ದ ಸ್ಥಳವು ‘ಗಂಧವತಿ’ ಎಂಬ ಹೆಸರಿನ ಹೊಳೆಯಾಗಿ ಪರಿಣಮಿಸಿತು. ದೇವತೆಗಳು ಕೊಂಡಾಡಿದ ಕಳಕಳ ಧ್ವನಿಯಿಂದಲೂ ಸುಕುಮಾರಸ್ವಾಮಿಯ ಹೆಂಡಿರು ದುಃಖಿಸಿ ಅತ್ತ ಕಳಕಳ ಶಬ್ದದಿಂದಲೂ ‘ಕಳಕಳಾಯತ’ ಎಂಬ ಹೆಸರುಳ್ಳ ಸಿದ್ಧಕ್ಷೇತ್ರವೂ ಆಯಿತು.\
*****ಕೃಪೆ: ಕಣಜ****
ತುಂಬ ಚೆನ್ನಾಗಿದೆ ನಮಸ್ಕಾರ
ಪ್ರತ್ಯುತ್ತರಅಳಿಸಿHello sir
ಪ್ರತ್ಯುತ್ತರಅಳಿಸಿ