ನನ್ನ ಪುಟಗಳು

28 ಏಪ್ರಿಲ್ 2020

ಮನಸ್ಸಿಗೆ ಹೇಳಿ ! ನೀನೇಕೆ ಸ್ತಬ್ಧನಾಗಿರುವೆ?


ನಾವು ಪ್ರತಿದಿನ ಪ್ರತಿಕ್ಷಣ ಮಾಡುವ ಪ್ರತಿಯೊಂದು ಕಾರ್ಯಗಳಿಗೂ ನಮ್ಮ ಒಳಗೆ ಕೆಲಸ ಮಾಡುವ ಮನಸ್ಸೇ ವಾರಸುದಾರ. ಇಂತಹ ಮನಸ್ಸು ಎಷ್ಟೊಂದು ಅಗೋಚರ. ಇದನ್ನು ಅರಿತು ಕೆಲಸ ಮಾಡುವವನೇ ನಿಜವಾದ ಚರ. ಜಗತ್ತಿನ ಆಗುಹೋಗುಗಳಿಗೆ ದೇವರನ್ನೇ ದೂರುವ ನಾವು ನಮ್ಮೊಳಗಿನ ಜಯ ಅಪಜಯಗಳಿಗೂ ದೇವರನ್ನು ಹೊಣೆಗಾರನನ್ನಾಗಿಸುವುದು ಎಷ್ಟು ಸಮಂಜಸ. ನಾನೊಬ್ಬ ಉದ್ಯೋಗಿ ಎಂದಾದರೆ ಆ ಕ್ಷೇತ್ರದಲ್ಲಿ ಇಂದು ಇದ್ದಂತೆ ನನ್ನ ಮನಸ್ಸು ನಾಳೆ ಇರಬೇಕೆಂದಿಲ್ಲ. ಇಂದಿನ ಸಂತೋಷಕ್ಕೆ ನಾವೇ ಕಾರಣವಾದಂತೆ ನಾಳಿನ ದುಃಖಕ್ಕೂ ನಾವೇ ಕಾರಣ. ನಿದ್ದೆಯೊಂದು ಮಾನವನ ಅರ್ಧ ಸಾವು ಎನ್ನುತ್ತಾರೆ. ಅಂದರೆ ಪ್ರತಿನಿತ್ಯ ಸತ್ತು ಹುಟ್ಟುವ ನಮಗೆ ಪ್ರತಿದಿನವೂ ಹೊಸದಾಗಿಯೇ ಇರುವುದು. ಇದರೊಂದಿಗೆ ನಾವು ಎದುರಿಸಿದ್ದೆಲ್ಲವೂ ನಮಗೆ ಒದಗಿ ಬಂದ ಅನುಭವವೇ ಆಗಿದೆ. ಈ ವೈಪರಿತ್ಯಗಳ ನಡುವೆ ನಮ್ಮ ಮನಸ್ಸನ್ನು ಹದಗೊಳಿಸುವುದೇ ನಮ್ಮ ಆ ದಿನದ ಮೊದಲ ಕರ್ತವ್ಯವಾಗಿದೆ. ತಬಲ ವಾದಕ ಅದನ್ನು ನುಡಿಸುವ ಮುನ್ನ ಅದರ ಎಲ್ಲಾ ಆಯಾಮಗಳನ್ನು ಪರೀಕ್ಷಿಸಿ ಸಿದ್ಧಪಡಿಸುವಂತೆ, ಸಂಗೀತಗಾರ ತನ್ನ ಹಿನ್ನೆಲೆ ವಾದ್ಯಗಳನ್ನು ಶ್ರುತಿಮಾಡಿಕೊಳ್ಳುವಂತೆ ನಾವು ಇಂದಿನ ದಿನದ ಕಾಯಕ ವೇದಿಕೆಯಲ್ಲಿ ದೇಹದೊಂದಿಗೆ ಮನಸ್ಸನ್ನು ಶ್ರುತಿ ಮಾಡಿಕೊಳ್ಳಬೇಕಲ್ಲವೇ. ನೆನ್ನೆಯ ಕಾರ್ಯವೈಖರಿಗಿಂತ ಇಂದಿನ ಕಾರ್ಯ ಉತ್ತಮವಾಗಿದ್ದರೆ ಅದುವೇ ನಿಜವಾದ ಸಾಧನೆ ಎಂದಿದ್ದಾರೆ ಕ್ರಾಂತಿ ವೀರ ಚಂದ್ರಶೇಖರ್ ಆಜಾ಼ದ್. ಈ ಎಲ್ಲಾ ಅಂಶಗಳು ತಾತ್ವಿಕವಾಗಿ ಯೋಚಿಸಿದಾಗ ದಿಟವೆನಿಸಿದರೂ ; ಪ್ರಾಯೋಗಿಕವಾಗಿ ಕೆಲವೊಮ್ಮೆ ಜೀವನದಲ್ಲಿ ನಮ್ಮ ಮನಸ್ಸು ವಿಚಲಿತಗೊಂಡು ಸ್ತಬ್ಧರಾಗುತ್ತೇವೆ. ಆಗ ನಿಜವಾಗಿಯೂ ನಾವು ಮಾಡಬೇಕಾದುದೇನು ಎಂಬುದು ತೋಚದೆ ಯಾವುದೋ ತಪ್ಪು ನಿರ್ಧಾರಕ್ಕೆ ಮನಸ್ಸನ್ನು ಒಡ್ಡುತ್ತೇವೆ. ಆದರೆ ಇಲ್ಲಿ ಇರುವುದೇ ನಮ್ಮ ನಿಜವಾದ ಅಗ್ನಿಪರೀಕ್ಷೆ. ಅದುವೇ ನಮ್ಮ ಸತ್ವಪರೀಕ್ಷೆಯಾಗಿರುತ್ತದೆ. ಆಗ ಕೇಳಿ ಮನಸ್ಸಿಗೆ ನೀನೇಕೆ ಸ್ತಬ್ಧನಾಗಿರುವೆ? ಕರೆಯಿರಿ ನಿಮ್ಮೊಡನೆ. ಸಂಗೀತಗಾರ ಶ್ರುತಿ ಮಾಡಿದಂತೆ ಸರಿಯಾದ ‘ಸರಿಗಮಪದನಿ’ ರೂಪಿಸಿ; ಸಪ್ತ ಸ್ವರಗಳ ಸಂಗಮದೊಡನೆ ಸಂಗೀತದ ಇಂಪನ್ನು ಆಲಿಸಿ.ದೇಹ ಮನಸ್ಸು ಒಂದಾದಾಗ ಒಂದು ದಿವ್ಯವಾದ ಶಕ್ತಿ ನಿಮ್ಮಿಂದ ಹೊರಹೊಮ್ಮುವುದು. ಅದುವೇ ನಿಮ್ಮೊಳಗಿನ ಸಾತ್ವಿಕ ಪ್ರತಿಭೆ. ಇದುವೇ ಮುಂದೆ ಸ್ವಭಾವವಾದಾಗ ನಮ್ಮ ವ್ಯಕ್ತಿತ್ವವೇ ಸಾತ್ವಿಕ ಪ್ರಜ್ಞೆಯನ್ನು ರೂಪಿಸಿಕೊಳ್ಳುವುದು. ಸಮಾಜದಲ್ಲಿ ಸಾತ್ವಿಕರಾಗಿ ಬಾಳಿ ಉಜ್ವಲ ಭವಿಷ್ಯವನ್ನು ಬೆಳಗುವಿರಿ. ಇದಕ್ಕೆ ನಿಶ್ಚಿತವಾಗಿ ಬೇಕಿರುವುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಮಂಡಲ ಹಾಗೂ ಸಿಡಿಲಿನಂತಹ ಇಚ್ಚಾಶಕ್ತಿ. ಅಲ್ಲವೇ ……………
- ಚರಣ್ ರಾಜ್ ಯಡಾಡಿ ಶ್ಯಾನುಭೋಗರಬೆಟ್ಟು ಯಡಾಡಿ ಮತ್ಯಾಡಿ ಅಂಚೆ ಕುಂದಾಪುರ ತಾಲ್ಲೂಕು
ಉಡುಪಿ ಜಿಲ್ಲೆ 576222

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ