ನನ್ನ ಪುಟಗಳು

10 ಏಪ್ರಿಲ್ 2018

ಪಂಪಭಾರತ : ಗದ್ಯಾನುವಾದ - ಚತುರ್ದಶಾಶ್ವಾಸಂ

ಚತುರ್ದಶಾಶ್ವಾಸಂ
ಕಂ|| ಶ್ರೀ ರಾಮಾಲಿಂಗಿತ ವಿಪು
ಳೋರಸ್ಕಂ ಭಾಸ್ಕರಪ್ರತಾಪಂ ನಿಜ ದೋ|
ರ್ಮೇರು ಮಥಿತಾರಿ ಬಳ ಕೂ
ಪಾರಂ ಸಂಹಾರಿತಾರಿ ಶೌರ್ಯಂ ಹರಿಗಂ|| ೧

ತನ್ನಿಱದು ಗೆಲ್ದ ಕೊಳುಗುಳ
ವನ್ನೋಡಲ್ ಚಕ್ರಪಾಣಿಯುಂ ತನ್ನ ಸಹೋ|
ತ್ಪನ್ನರುಮೊಡವರೆ ಬಂದು ವಿ
ಪನ್ನೋಗ್ರಾರಾತಿವರ್ಗನಾಹವಧರೆಯಂ| ೨

ವ|| ಎಯ್ದಿ ತನ್ನಿಂದಮಂತಕಾನನಮನೆಯ್ದಿದ ಮಹಾ ಪ್ರಚಂಡಮಂಡಳಿಕಮಕುಟ ಬದ್ದಸಾಮಂತಮಹಾಸಾಮಂತಸಂಹತಿಯುಮನೆಣಿಕೆಗೞದ ಕರಿತುರಗವರೂಥ ಪದಾತಿಗಳುಮಂ ನೋಡಿ ಮುರಾರಿಯ ಮೊಗಮಂ ನೋಡೆಯಧೋಕ್ಷಜನಜಾತಶತ್ರುವನಿಂತೆಂದಂ-

ಉ|| ಶಾತ ಶರಾಗ್ನಿ ಭಗ್ನ ಭಟ ಕೋಟಿ ವಿಭೀಷಣಮುಗ್ರವೈರಿಸಂ
ಘಾತಕರೀಂದ್ರರುಂದ್ರಕಟಕೂಟಪರಿಚ್ಯುತಭೃಂಗಮಾಳಿಕಾ|
ಪೀತಮದಾಂಬುಕಂ ಪ್ರಕೃತಿರಕ್ತಜಳಾಸವಮತ್ತಯೋಗಿನೀ
ವ್ರಾತಪರೀತಭೂತಸದನಂ ಕದನಂ ಕದನತ್ರಿಣೇತ್ರನಾ|| ೩

ಚ|| ಸುರಿತ ವರೂಥ ಚಕ್ರ ಹತಿಯಿಂ ಧರಣೀತಳಮತ್ತಮಿತ್ತಮ
ೞ್ದರಿಯೆ ವಿಯತ್ತಳಂ ಬಗೆದು ನೋೞ್ಪೊಡೆ ನಾಡೆ ಪತತ್ಪತತ್ರಿ ಜ|
ರ್ಝರಿತಮೆ ದಿಕ್ತಟಂ ರಿಪು ನರಾಪ ರಕ್ತ ಧುನೀ ಪ್ರವಾಹ ಪಿಂ
ಜರಿತಮೆ ಬೀರಮಂ ಪೊಗೞ್ವನೇವೊಗೞ್ವಂ ಕದನತ್ರಿಣೇತ್ರನಾ|| ೪

ವ|| ಎಂಬನ್ನೆಗಂ ಧೃತರಾಷ್ಟ್ರನುಂ ಗಾಂಧಾರಿಯುಮೊಂದಾಗಿ ಬರೆ ದುರ್ಯೋಧನನ ಪೆಂಡಿರಪ್ಪ ಭಾನುಮತಿಯುಂ ಚಂದ್ರಮತಿಯುಂ ಮೊದಲಾಗೆ ಸಮಸ್ತಾಂತಪುರಮುಂ ದುಶ್ಯಾಸನ ಲಕ್ಕಣ ಭೂರಿಶ್ರವಸ್ಸೋಮದತ್ತ ಭಗದತ್ತ ಬಾಹ್ಲೀಕ ಶಲ್ಯ ಶಕುನಿ ಸೈಂಧವ ಕರ್ಣ ಪ್ರಮುಖರಪ್ಪ ನಾಯಕರ ಪೆಂಡಿರುಂ ತಮ್ಮ ಗಂಡರಂ ಕೊಳುಗುಳದೊಳಱಸಿ ಕಾಣದೆ ಬಾಯೞದು ಪಳಯಿಸುತ್ತುಂ ಯೂಧಪತಿ ಕೆಡೆಯೆ ದೆಸೆದಪ್ಪಿದ ವನಕರಿಕರೇಣುಗಳುಮನಡರ್ಪಿಲ್ಲದೆ ಕಲ್ಪವೃಕ್ಷಮುಡಿದು ಕೆಡೆಯೆ ಬಂಬಲ ಬಾಡಿದ ವನಲತೆಗಳುಮಂ ಪೋಲ್ತು-

೧. ಸಂಪಲ್ಲಕ್ಷ್ಮಿಯಿಂದ ಆಲಿಂಗಿಸಲ್ಪಟ್ಟ ವಿಸ್ತಾರವಾದ ಎದೆಯುಳ್ಳವನೂ ಸೂರ್ಯನ ತೇಜಸ್ಸುಳ್ಳವನೂ ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾಸಮುದ್ರವುಳ್ಳವನೂ ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾಸಮುದ್ರವುಳ್ಳವನೂ ಶತ್ರುಗಳನ್ನು ಕೊಂದ ಶೌರ್ಯವುಳ್ಳವನೂ ಆದ ಅರಿಕೇಸರಿಯು (ಅರ್ಜುನನು) ೨. ತಾನು ಯುದ್ಧಮಾಡಿ ಗೆದ್ದ ಯುದ್ಧಭೂಮಿಯನ್ನು ನೋಡಲು ಕೃಷ್ಣನೂ ತನ್ನ ಸಹೋದರರೂ ಜೊತೆಯಲ್ಲಿ ಬರಲು ನಾಶಮಾಡಲ್ಪಟ್ಟ ಭಯಂಕರವಾದ ಶತ್ರುಗಳನ್ನುಳ್ಳ ಧರ್ಮರಾಯನೂ ಯುದ್ಧಭೂಮಿಯನ್ನು ಬಂದು ಸೇರಿದನು. ವ|| ತನ್ನಿಂದ ಯಮನ ಬಾಯನ್ನು ಸೇರಿದ ಮಹಾಶೂರರಾದ ಮಂಡಳಿಕ, ಮಕುಟಬದ್ಧ ಸಾಮಂತಮಹಾಸಾ ಮಂತಸ ಮೂಹವನ್ನು ಎಣಿಕೆಯನ್ನು ಮೀರಿದ ಅಸಂಖ್ಯಾತವಾದ ಆನೆ, ಕುದುರೆ, ತೇರು, ಕಾಲಾಳು ಸೈನ್ಯವನ್ನು ನೋಡಿ ಕೃಷ್ಣನ ಮುಖವನ್ನು ನೋಡಲು ಕೃಷ್ಣನು ಧರ್ಮರಾಯನನ್ನು ಕುರಿತು ಹೀಗೆಂದನು. ೩. ಹರಿತವಾದ ಬಾಣಗಳ ಬೆಂಕಿಯಿಂದ ಹಾಳಾದ ಅನೇಕ ಯೋಧರಿಂದ ಭಯಂಕರವಾದುದೂ ಭಯಂಕರವಾದ ಶತ್ರುಗಳು ಸಮೂಹಗಳಿಂದಲೂ ಆನೆಗಳು ವಿಸ್ತಾರವಾದ ಕಪೋಲದ ಕಡೆಯಿಂದ ಹರಿಯತ್ತಿರುವ ಮದೋದಕವನ್ನು ಕುಡಿಯುತ್ತಿರುವ ದುಂಬಿಗಳ ಸಮೂಹಗಳಿಂದಲೂ, ಸಹಜವಾಗಿ ರಕ್ತಜಲವೆಂಬ ಮದ್ಯದಿಂದ ಸೊಕ್ಕಿರುವ ಯೋಗಿನೀಜನಗಳ ಗುಂಪಿನಿಂದಲೂ ಸುತ್ತುವರಿಯಲ್ಪಟ್ಟು ಅರ್ಜುನನ ಯುದ್ಧರಂಗವು ಪಿಶಾಚಿಗಳ ಆವಾಸಸ್ಥಾನವಾಗಿದೆ. ೪. ಪ್ರಕಾಶಮಾನವಾದ ತೇರಿನ ಗಾಲಿಗಳ ಹೊಡೆತದಿಂದ ಭೂಪ್ರದೇಶವು ಅಲ್ಲಲ್ಲಿ ಹಳ್ಳತಗ್ಗುಗಳಿಂದ ಕೂಡಿದೆ. ಆಕಾಶಪ್ರದೇಶವು ಬೀಳುತ್ತಿರುವ ಬಾಣಗಳ ಚೂರುಗಳಿಂದ ಜರ್ಝರಿತವಾಗಿ ಹೋಗಿದೆ. ದಿಗ್ಭಾಗಗಳು ಶತ್ರುರಾಜರ ರಕ್ತದ ನದಿಯ ಪ್ರವಾಹದಿಂದ ಕೆಂಪು ಹಳದಿ ಮಿಶ್ರವಾದ ಬಣ್ಣದಿಂದ ಕೂಡಿದೆ. ಅರ್ಜುನನ ಪ್ರತಾಪವನ್ನು ವರ್ಣಿಸುವುದು ಹೇಗೆ ಸಾಧ್ಯ. ವ|| ಎನ್ನುವಷ್ಟರಲ್ಲಿ ಧೃತರಾಷ್ಟ್ರನೂ ಗಾಂಧಾರಿಯೂ ಒಟ್ಟುಗೂಡಿ ಬಂದರು. ದುರ್ಯೋಧನನ ಹೆಂಡತಿಯರಾದ ಭಾನುಮತಿಯೂ ಚಂದ್ರಮತಿಯೂ ಸಮಸ್ತ ರಾಣಿವಾಸವೂ ಲಕ್ಷಣ ಭೂರಿಶ್ರವ ಸೋಮದತ್ತ ಭಗದತ್ತ ಬಾಹ್ಲಿಕ ಶಲ್ಯಶಕುನಿ ಸೈಂಧವ ಕರ್ಣನೇ ಮೊದಲಾದ ಪ್ರಮುಖನಾಯಕರ ಹೆಂಡತಿಯರೂ ಗಟ್ಟಿಯಾಗಿ ಅಳುತ್ತಾ ಸಲಗನು ಕೆಡೆಯಲು ದಿಕ್ಕುಕಾಣದ ಕಾಡಿನ ಹೆಣ್ಣಾನೆಗಳನ್ನೂ ಕಲ್ಪವೃಕ್ಷವು ಮುರಿದು ಬೀಳಲು ಅವಲಂಬನವಿಲ್ಲದೆ ಸುಟ್ಟು ಬಾಡಿದ

ಚಂ|| ಇಱವ ಪಿಣಿಲ್ ತೆರಳ್ದೊವ ಕಣ್ಣನಿ ಮಾಣದೆ ಮೋದೆ ಶೋಕದ
ಚ್ಚಿಱದವೊಲಿರ್ದ ಬಾಸುೞನೊಳೞ್ದು ಕನಲ್ದು ಬೞಲ್ದು ಜೋಲ್ದ ಮೆಯ್|
ಮಱುಗುವ ಬೇಗದೊಳ್ಮೊಗಮಣಂ ದೆಸೆಗಾಣದ ನೋಟಮಾರುಮಂ
ಮಱುಗಿಸೆ ಬಂದುದಂದು ಕರುಣಂ ಬರೆ ವೈರಿನೃಪಾಂಗನಾಜನಂ|| ೫

ವ|| ಆಗಳ್ ಧರ್ಮಪುತ್ರಂ ಧೃತರಾಷ್ಟ್ರಂಗಂ ಗಾಂಧಾರಿಗಮೆಱಗಿ ಪೊಡೆವಟ್ಟು-

ಕಂ|| ಏಗೆಯ್ದುಮೆನ್ನ ಧರೆಯೊ
ರ್ವಾಗಮುಮಂ ನೀಮೆ ಬೆಸಸೆಯುಂ ಕುಡದಿನಿತಂ|
ಮೇಗಿಲ್ಲದೆ ನೆಗೆೞ್ದಱದಂ
ನಾಗಧ್ವಜನಯ್ಯ ನೀಮದರ್ಕೞಲದಿರಿಂ|| ೬

ಆತನೊಡವೋಯ್ತು ಪಗೆ ನಿಮ
ಗಾತನಿನಗ್ಗಳದ ಮಗನೆನಾಂ ನಖ ಮಾಂಸ|
ಪ್ರೀತಿಯೊಳೆ ನೆಗೞ್ವೆನಿಂ ಪಡೆ
ಮಾತೇಂ ಪಂಬಲಿಸದೆನ್ನ ಪೇೞ್ದುದುಗೆಯ್ಯಿಂ|| ೭

ವ|| ಎಂಬುದುಂ ಧೃತರಾಷ್ಟ್ರನಿಂತೆಂದಂ-

ಕಂ|| ತನಯಶತಮಾದುದಲ್ತೆನ
ಗನಿವಾರಿತ ದುಖಶತಮೆ ತಾನಾದುದವಂ|
ನೆನೆಯೆಂ ಸಂಸ್ಕಾರಿಸಲೀ
ವನಿತೆಯರ್ಗವರವರ ಪುರುಷರಂ ಕುಡವೇೞ್ಕುಂ|| ೮

ವ|| ಎಂಬುದುಮದಾವುದು ದೋಷಮವರ್ಗೆಲ್ಲಂ ಸಂಸ್ಕಾರವಿಯಂ ನಾನೆ ಪಕ್ಕದೊಳಿರ್ದು ಮಾಡುಸುವೆನೆಂಬನ್ನೆಗಂ ಕೊಂತಿ ಬಂದು ಕರ್ಣನ ಕಳೇವರಮಂ ತೞ್ಕೈಸಿ ಕೊಂಡು ಪಾಂಡವರಯ್ವರುಮನಲ್ಲಿಗೆ ಬರಿಸಿ-

ಕಂ|| ನಿಮ್ಮಣ್ಣನೆನ್ನ ಪಿರಿಯ ಮ
ಗಮ್ಮಾತೇಂ ಕರ್ಣನಾಂ ಮಹಾಪಾತಕಿಯೆಂ|
ನಿಮ್ಮಯ ಮೋಹದಿನೀತಂ
ಗಾಮ್ಮಾಡಿದೆನಿನಿತನೆಂದು ಶೋಕಂಗೆಯ್ದಳ್|| ೯

ವ|| ಆಗಳಯ್ವರುಮಾ ಮಾತಂ ಕೇಳ್ದು ಭೋಂಕನೆರ್ದೆದೆಯೆ ಸಹೋದರ ಶೋಕದೊಳ್ ಮನ್ಯುಮಿಕ್ಕು ಸೈರಿಸಲಾಱದೆ-

ಕಾಡುಬಳ್ಳಿಗಳನ್ನೂ ಹೋಲುತ್ತಾ ೫. ಸಡಿಲವಾಗಿರುವ ಜಡೆ, ಪ್ರವಾಹವಾಗಿ ಸುರಿಯುವ ಕಣ್ಣೀರು, ಬಿಡದೆ ಹೊಡೆದುಕೊಳ್ಳುತ್ತಿರಲು ದುಖದ ಅಚ್ಚಿಟ್ಟಹಾಗೆ ಇದ್ದ ಬಾಸುಂಡೆಗಳಲ್ಲಿ ತಗ್ಗಾಗಿ ಕೆರಳಿ ಆಯಾಸಗೊಂಡು ಜೋಲುತ್ತಿರುವ ಮೈ, ವ್ಯಥೆಪಡುವ ಹೊತ್ತಿನಲ್ಲಿ ದಿಕ್ಕುಕಾಣದೆ (ಕಣ್ಣುಗಳಲ್ಲಿ ನೀರು ತುಂಬಿಕೊಂಡಿರುವುದರಿಂದ) ನೋಟ ಇವು ಯಾರನ್ನಾದರೂ ದುಖಿಸುವಂತೆ ಮಾಡಲು ಶತ್ರುರಾಜರ ರಾಣಿಯರು ಕರುಣೆಯೇ ಮೂರ್ತಿಮತ್ತಾಗಿ ಬಂದಂತೆ ಅಲ್ಲಿಗೆ ಬಂದರು. ವ|| ಆಗ ಧರ್ಮರಾಜನು ಧೃತರಾಷ್ಟ್ರನಿಗೂ ಗಾಂzsiರಿಗೂ ಬಗ್ಗಿ ನಮಸ್ಕಾರಮಾಡಿ

೬. ಏನು ಮಾಡಿದರೂ ನನ್ನ ರಾಜ್ಯದ ಒಂದು ಭಾಗವನ್ನು ನೀವೆ ಹೇಳಿದರೂ ಕೊಡದೆ ಸ್ವಲ್ಪವೂ ಉತ್ತಮವಾಗಿಲ್ಲದ ರೀತಿಯಲ್ಲಿ ಇಷ್ಟನ್ನೂ ಮಾಡಿ ಸರ್ಪಧ್ವಜನಾದ ದುರ್ಯೋಧನನು ಸತ್ತನು. ನೀವು ಅದಕ್ಕಾಗಿ ದುಖಪಡಬೇಡಿ. ೭. ದ್ವೇಷವು ಆತನೊಡನೆಯೇ ಹೋಯಿತು. ನಾನು ಆತನಿಗಿಂತ ಉತ್ತಮನಾದ ಮಗನಾಗಿದ್ದೇನೆ. ಉಗುರುಮಾಂಸಗಳಿಗಿರುವಷ್ಟು ಬಹು ಅನ್ಯೋನ್ಯವಾದ ಪ್ರೀತಿಯಿಂದಲೇ ನಡೆದುಕೊಳ್ಳುತ್ತೇನೆ. ಬೇರೆ ಮಾತೇನು? ಹಂಬಲಿಸದೆ ನಾನು ಹೇಳಿದುದನ್ನು ಮಾಡಿ ವ|| ಎನ್ನುಲು ಧೃತರಾಷ್ಟ್ರನ್ನು ಹೀಗೆಂದನು. ೮. ನನಗೆ ನೂರುಮಕ್ಕಳಾಗಲಿಲ್ಲ. ತಡೆಯಲಾಗದ ನೂರು ದುಖಗಳೇ ತಾನಾದುವು. ಅವುಗಳನ್ನು ನೆನೆಯುವುದಿಲ್ಲ; ಈ ಸ್ತ್ರೀಯರು ಅವರವರ ಪತಿದೇಹಗಳನ್ನು ಶವಸಂಸ್ಕಾರ ಮಾಡಲು ಅವರಿಗೆ ಕೊಡಬೇಕು. ವ|| ಎನ್ನುವಷ್ಟರಲ್ಲಿ ದೋಷವೇನಿದೆ? ಅವರುಗಳ ಸಂಸ್ಕಾರವಿಯನ್ನೆಲ್ಲ ನಾನೇ ಪಕ್ಕದಲ್ಲಿದ್ದು ಮಾಡಿಸುತ್ತೇನೆ ಎನ್ನುವಷ್ಟರಲ್ಲಿ ಕುಂತೀದೇವಿಯು ಬಂದು ಕರ್ಣನ ಹೆಣವನ್ನು ತಬ್ಬಿಕೊಂಡು ಪಾಂಡವರೈದುಜನವನ್ನೂ ಅಲ್ಲಿಗೆ ಬರಮಾಡಿದಳು.

೯. ಕರ್ಣನು ನಿಮ್ಮಣ್ಣ, ನನ್ನ ಹಿರಿಯ ಮಗ, ಹೇಳುವುದೇನು? ನಾನು ಮಹಾಪಾತಕಿ, ನಿಮ್ಮ ಮೇಲಿನ (ಮೋಹದಿಂದ) ಈತನಿಗೆ

ಚಂ|| ಅೞಪಿದರಾರುಮಿಲ್ಲೆಮಗೆ ನೀನೆಮಗಣ್ಣನೆಯೆಂದು ಮುನ್ನಮಾ
ಮಱದೊಡೆ ಪಟಮಂ ನೆಲನುಮಂ ನಿನಗಿತ್ತು ಕುರುಪ್ರಧಾನನೊಳ್|
ಕಱುಪನೆ ನಿಚ್ಚಟಂ ಬಿಸುಟು ನಿನ್ನಯ ಪೇೞ್ದ್ದುದುಗೆಯ್ದು ಪಾೞಯಂ
ಮೆಯೆವೆ ಬಾಯ ತಂಬುಲದೊಳಂ ಮಡುಗೂೞೊಳಮಂಗವಲ್ಲಭಾ|| ೧೦

ವ|| ಎಂದು ಶೋಕಾಕ್ರಾಂತರಾದರಂ ನಾರಾಯಣಂ ಸಂತೈಸಿ ಕೊಂದರ್ ಕೊಲೆ ಸಾವರೆಂಬುದು ಜಗದ್ವ್ಯಾಪಾರವಿಶ್ವರನಿಚ್ಛೆಯಿಂದ ನೆಗೞ್ಗುಮೆಂದು ದುಖೋಪಶಮನಂ ಮಾಡಿದೊಡೆ ಸಮಾಹಿತಚಿತ್ತರಾಗಿ ಕೊಳುಗುಳನಂ ವಿವಿಧಾನದಿಂ ಬಳಸಿ ದುರ್ಯೋಧನಂ ಮೊದಲಾಗೆ ಕುರುಕ್ಷೇತ್ರದೊಳ್ ಸತ್ತರಸುಮಕ್ಕಳೆಲ್ಲರುಮನೊಂದಾಗಿ ತಂದು ಬೆಟ್ಟಾಗೊಟ್ಟಿ ಕರ್ಣನ ಕಳೇವರಮನನಿಬರಿಂ ಮಿಗೆ ಮಹಾಬ್ರಾಹ್ಮಣರಿಂದಂ ಮಂತ್ರವಿಯಿಂದಿರಿಸಿ ಹರಿಚಂದನ ಕರ್ಪೂರ ಕಾಳಾಗರುಕಾಷ್ಠಂಗಳಿಂದಂ ಯಥೋಕ್ತ ವಿಯಿಂ ಸಂಸ್ಕಾರಿಸಿ ಕರ್ಣಂಗೆ ಕರ್ಣಸ್ಥಳಿಯೆಂಬ ತೀರ್ಥಮಂ ಮಾಡಿ ಜಳದಾನಾದಿ ಕ್ರಿಯೆಗಳಂ ನಿರ್ವರ್ತಿಸೆ ತದನಂತರದೊಳ್ ಧೃತರಾಷ್ಟ್ರನುಂ ಗಾಂಧಾರಿಯುಂ ಪುತ್ರವಿಯೋಗದುಖದಿಂ ಮುನಿವನಮನಾಶ್ರಯಿಸಿದರ್ ಕೊಂತಿಯುಂ ಕರ್ಣನ ಶೋಕದೊಳ್ ಧರ್ಮಪುತ್ರನಂ ಬೀೞ್ಕೊಂಡವರೊಡನೆ ತಪಶ್ಚರಣಪರಾಯಣೆಯಾದಳಿತ್ತ ಧರ್ಮನಂದನಂ ದೇವಕೀನಂದನನನಿಂತೆಂದಂ-

ಮ|| ಇನಿತೊಂದುಗ್ರರಣಪ್ರಘಟ್ಟಕದೊಳೀ ಭಾರಾವತಾರಂ ಧರಾಂ
ಗನೆಗೀಯಿರ್ವರಿನಾದುದಾಯ್ತೆನಗೆ ನಿರ್ದಾಯಾದ್ಯವಿ ಸಾ|
ಲ್ಗೆನಗಿಂ ರಾಜ್ಯಮೆ ಬಾೞ್ತೆಯಲ್ತು ಹರಿಗಂಗುತ್ಸಾಹದಿಂ ಪಟ್ಟ ಬಂ
ಧನಮಂ ಮಾಡುವಮಿಂದೆ ಹಸ್ತಿನಪುರಪ್ರಸ್ಥಾನಮಂ ಮಾಡುವಂ|| ೧೧

ವ|| ಎಂಬುದುಮಶೇಷ ಧರಾಭಾರಮಂ ಶೇಷಂ ತಾಳ್ದುವಂತೆ ವಿಕ್ರಮಾರ್ಜುನಂಗಲ್ಲದೆ ಪೆಱಂಗೆ ತಾಳ್ದಲರಿದಿದರ್ಕಾನುಮೊಡಂಬಡುವೆನೆಂದು ಮುಕುಂದನನೇಕ ಮುಕುಂದಬೃಂದಂಗಳ್ ಮೊೞಗೆ ಶುಭಮೂಹೂರ್ತದೊಳರಿಕೇಸರಿಯಂ ಮುಂದಿಟ್ಟು ಹಸ್ತಿನಪುರೋಪವನಮನೆಯ್ದೆ ವಂದಾಗಳ್-

ಚಂ|| ಮೃದುಮಧುರಸ್ವನಂ ನೆಗೞೆ ಬಂದೇಳಮಾವಿನೊಳಿರ್ದು ಕೂಡೆ ಪಾ
ಡಿದುದು ಮದಾಳಿಮಾಲೆ ಪುಗಲೆನ್ನದೆ ಪುಗಲೆನ್ನದೆ ದಲ್ ಪುಗಿಮೆಂದು ಮೆಲ್ಪುಗುಂ|
ದದ ದನಿಯಿಂ ತಳಿರ್ತಸುಗೆಯೊಳ್ ನೆಲಸಿರ್ದ ಪಿಕಾಳಿ ಮೆಲ್ಲನೂ
ಳ್ದುದು ಮನಮಾ ತೀಡಿದುದು ತೆಂಕಣ ತಂಬೆಲರಪ್ಪಿಕೊಳ್ವವೋಲ್|| ೧೨

ಇಷ್ಟನ್ನೂ ನಾನೇ ಮಾಡಿದೆನು ಎಂದು ದುಖಿಸಿದಳು- ವ|| ಆಗ ಅಯ್ವರು ಸಹೋದರರು ಆ ಮಾತನ್ನು ಕೇಳಿ ವಿಶೇಷವಾಗಿ ದುಖಿಸಿ ಸಹಿಸಲಾರದೆ- ೧೦. “ನೀನು ನಮಗಣ್ಣನೆಂದು ನಮಗೆ ಯಾರೂ ತಿಳಿಸಲಿಲ್ಲ. ಮೊದಲು ತಿಳಿದಿದ್ದರೆ ಪಟ್ಟವನ್ನೂ ರಾಜ್ಯವನ್ನೂ ನಿನಗೆ ಕೊಟ್ಟು ಕೌರವಮುಖ್ಯಸ್ಥನಾದ ದುರ್ಯೋಧನನಲ್ಲಿ ದ್ವೇಷವನ್ನು ಶಾಶ್ವತವಾಗಿ ಬಿಸಾಡಿ ನೀನು ಹೇಳಿದುದನ್ನು ಮಾಡಿಕೊಂಡು ನಿನ್ನ ಬಾಯಿದಂಬುಲದಲ್ಲಿಯೂ ಇಟ್ಟ ತಂಗಳು ಅನ್ನದಲ್ಲಿಯೂ ಸಂಪ್ರದಾಯವನ್ನು ಪಾಲಿಸುತ್ತಿರುತ್ತಿದ್ದೆವಲ್ಲವೆ? ವ|| ಎಂದು ದುಖದಿಂದ ಕೂಡಿದ್ದವರನ್ನು ಕೃಷ್ಣನು ಸಮಾಧಾನಪಡಿಸಿ ಕೊಂದವರು ಕೊಲೆಗೆ ಈಡಾಗಿ ಸಾಯುತ್ತಾರೆ ಎಂಬುದು ಲೋಕೋಕ್ತಿ. ಈಶ್ವರನ ಇಚ್ಛೆಯಿಂದಲೇ ನಡೆಯುತ್ತದೆ ಎಂದು ದುಖವನ್ನು ಹೋಗಲಾಡಿಸಿದನು. ಯುದ್ಧರಂಗವನ್ನು ಶಾಸ್ತ್ರರೀತಿಯಲ್ಲಿ ಸುತ್ತಿನೋಡಿ ದುರ್ಯೋಧನನೇ ಮೊದಲಾಗಿ ಕುರುಕ್ಷೇತ್ರದಲ್ಲಿ ಸತ್ತ ಎಲ್ಲ ರಾಜಕುಮಾರರನ್ನೂ ತಂದು ಒಟ್ಟಿಗೆ ಬೆಟ್ಟದಂತೆ ರಾಶಿಮಾಡಿದರು. ಕರ್ಣನ ಶರೀರವನ್ನು ಅಷ್ಟು ಜನವನ್ನೂ ಮೀರುವ ರೀತಿಯಲ್ಲಿ ಬ್ರಾಹ್ಮಣರಿಂದ ವಿಪೂರ್ವಕವಾಗಿ ಇರಿಸಿ ಶ್ರೀಗಂಧ, ಕರ್ಪೂರ, ಕರಿಯ ಅಗರು ಸೌದೆಯಿಂದ ಶಾಸ್ತ್ರದಲ್ಲಿ ಹೇಳಿರುವಂತೆ ಸಂಸ್ಕಾರಮಾಡಿದರು. ಕರ್ಣನ ಜ್ಞಾಪಕಾರ್ಥವಾಗಿ ಕರ್ಣಸ್ಥಳಿಯೆಂಬ ಕ್ಷೇತ್ರವನ್ನು ನಿರ್ಮಿಸಿದರು. ತರ್ಪಣವೇ ಮೊದಲಾದ ಕ್ರಿಯೆಗಳನ್ನು ಮಾಡಿ ಮುಗಿಸಿದರು. ಧೃತರಾಷ್ಟ್ರನೂ ಗಾಂಧಾರಿಯೂ ಮಕ್ಕಳನ್ನು ಅಗಲಿದ ದುಖದಿಂದ ಋಷಿಗಳ ತಪೋವನವನ್ನು ಆಶ್ರಯಿಸಿದರು. ಕುಂತೀದೇವಿಯೂ ಕರ್ಣನ ದುಖದಿಂದ ಧರ್ಮರಾಯನ ಅಪ್ಪಣೆಯನ್ನು ಪಡೆದು ಹೊರಟು ತಪಸ್ಸಿನಲ್ಲಿ ನಿರತಳಾದಳು. ಈ ಕಡೆ ಧರ್ಮರಾಯನು ಕೃಷ್ಣನಿಗೆ ಹೀಗೆಂದನು- ೧೧. ಇಷ್ಟು ಭಯಂಕರವಾದ ಈ ಯುದ್ಧಸಮಾರಂಭದಲ್ಲಿ ಈ ಭೀಮಾರ್ಜುನರಿಬ್ಬರಿಂದ ಭೂದೇವಿಗೆ ಈ ಭಾರದ ಇಳಿಯುವಿಕೆ ಆಯಿತು. ನನಗೆ ದಾಯಾದಿಗಳಿಲ್ಲದಿರುವುದೂ ಆಯಿತು. ಈ ವೈಭವವೇ ನನಗೆ ಸಾಕು. ನನಗೆ ಇನ್ನು ರಾಜ್ಯದಿಂದ ಪ್ರಯೋಜನವಿಲ್ಲ. ಹರಿಗನಾದ ಅರ್ಜುನನಿಗೆ ಇಂದೇ ಪಟ್ಟಾಭಿಷೇಕವನ್ನು ಮಾಡೋಣ, ಈ ದಿನವೇ ಹಸ್ತಿನಾಪುರಕ್ಕೆ ಪ್ರಯಾಣ ಮಾಡೋಣ. ವ|| ಎನ್ನಲು “ಸಮಸ್ತಭೂಭಾರವನ್ನೂ ಆದಿಶೇಷನು ಧರಿಸುವ ಹಾಗೆ ವಿಕ್ರಮಾರ್ಜುನನಲ್ಲದೆ ಬೇರೆಯವರಿಗೆ ಧರಿಸಲಸಾಧ್ಯ; ಇದಕ್ಕೆ ನಾನೂ ಒಪ್ಪುತ್ತೇನೆ”. ಎಂದು ಕೃಷ್ಣನು ಅನೇಕ ಮಂಗಳವಾದ್ಯಗಳ ಸಮೂಹವು ಭೋರ್ಗರೆಯುತ್ತಿರಲು ಶುಭಮುಹೂರ್ತದಲ್ಲಿ ಅರಿಕೇಸರಿಯನ್ನು ಮುಂದಿಟ್ಟು ಹಸ್ತಿನಾಪಟ್ಟಣದ ಸಮೀಪದಲ್ಲಿರುವ ತೋಟವನ್ನು ಸಮೀಪಿಸಿದನು.

೧೨. ಮೃದುಮಧುರವಾದ ಧ್ವನಿಯಿಂದ ಫಲಿತ ಎಳಮಾವಿನ ಮರದಲ್ಲಿದ್ದುಕೊಂಡು ಮದಿಸಿದ ದುಂಬಿಯ ಸಮೂಹವು ಕೂಡಲೆ

ಚಂ|| ಪಸರಿಸಿ ಬಂದ ಮಾಮರನೆ ಬೆಳ್ಗೊಡೆ ರಾಗದ ಪುಂಜದನ್ನವ
ಷ್ಪಸುಗೆಯ ನೀಳ್ದ ಕೆಂದಳಿರೆ ಪಾಳಿಮಹಾಧ್ವಜಮೆತ್ತಮಿಂಪನಾ|
ಳ್ದೆಸೆವಳಿಗೀತಿ ತಾನೆ ಜಯಗೀತಿಗಳಾಗಿರೆ ವಿಕ್ರಮಾರ್ಜುನಂ
ಗೊಸೆದಿದಿರ್ವರ್ಪವೋಲ್ ಬನವದೊಪ್ಪಿದುದಿಂತು ಬಸಂತರಾಜನಾ|| ೧೩

ವ|| ಆಗಳ್ ನಗರಪ್ರವೇಶಂಗೆಯ್ಯಲೆಂದು ಕಿಱದಾನುಂ ಬೇಗಮಾ ಪುರೋಪವನದೊಳ್ ವಿಶ್ರಮಿಸಿ ಪಂಚರತ್ನಮಯ ಮಂಡನಾಯೋಗ ಮಂಡಿತವಿಜಯಗಜಾರೂಢನಾದ ವಿಜಯನಂ ಮುಂದಿಟ್ಟು ಮಹಾವಿಭೂತಿಯಿಂದಯ್ವರುಂ ನಿಜಾನ್ವಯ ರಾಜದ್ರಾಜಧಾನಿಯಂ ಪುಗೆ-

ಮ|| ನವಕಾಳಾಗರುಧೂಪಧೂಮತತಿಸೌಗಂಧಂಗಳಿಂ ಸಯ್ತು ನೀ
ಳ್ದು ವಿಯಚ್ಚಕ್ರದೊಳಲ್ಲಿ ಮಂದಮರುತವ್ಯಾಘಾತದಿಂದೆಯ್ದೆ ತೋ|
ರ್ಪವೊಲಾಗಿರ್ದುದು ಕಣ್ಗೆ ವಂದುದು ಪುರಸ್ತ್ರೀ ಪಾಂಡುಪುತ್ರಂಗಮು
ತ್ಸವದಿಂ ಮುನ್ನರಿದಿರ್ದ ತನ್ನ ಪಿಣಿಲಂ ಕೂರ್ತಂದು ಬಿಟ್ಟಂತೆವೋಲ್|| ೧೪

ಮಲ್ಲಿಕಮಾಲೆ|| ಓಳಿದೋರಣಮಾಯ್ತು ಹಾರದ ಪಚ್ಛೆಸಾರದ ಮಾಲೆ ಸೌ
ಧಾಳಿಯೊಳ್ಗುಡಿಯಾಯ್ತು ಚೀನದ ಸುಯ್ಯತಾಣದ ಪಟ್ಟೆ ಹ|
ರ್ಮ್ಯಾಳಿದಪ್ಪದೆ ರಯ್ಯಮಾಯ್ತೆಸೆವಾಟ ಪಾಟದ ಗೀತಿ ಕ
ಣ್ಗೋಳಿವಟ್ಟುದದೊಂದು ಚೆಲ್ವು ದಲಾಯ್ತು ತತ್ಪುರಮಧ್ಯದೊಳ್|| ೧೫

ಮಾಲಿನಿ|| ಪ್ರವರತರ ಪುರಂನೂಪುರಾರಾವಮೆತ್ತಂ
ಕಿವಿಗೆ ವರೆ ವಿಳಾಸಂ ಕಣ್ಗೆ ಶೇಷಾಕ್ಷತೌಘ|
ದ್ರವಮೆ ತಮಗಮಿತ್ತತ್ತಿಂಬನೆಂಬನ್ನೆಗಂ ಪಾಂ
ಡವರೆ ಪುಗೆ ಪೊೞಲ್ಗಂದೊಟ್ಟ ಬೆಟ್ಟಾಯ್ತು ರಾಗಂ|| ೧೬

ವ|| ಅಂತು ಪುರುಜನಜನಿತಾಶೀರ್ವಾದಸಹಸ್ರಂಗಳೊಡನೆ ಸೂಸುವ ಶೇಷಾಕ್ಷತಂಗಳ ನಾನುತ್ತುಂ ಬಂದು ತತ್ಪುರಾಂಗನೆಯ ಮುಖಸರಸಿಜಮಲರ್ದಂತೆಸೆದೊಪ್ಪುವ ರಾಜಮಂದಿರಮಂ ಪೊಕ್ಕು ಧರ್ಮನಂದನಂ ದೇವಕೀನಂದನನೊಳ್ ಪರಮಾನಂದಂ ಬೆರಸು ಸಾಮಂತ ಚೂಡಾಮಣಿಯ ಪಟ್ಟಬಂಧನ ಮಹೋತ್ಸವಮಂ ಸಮಕೊಳಿಸಿ ರಿಕ್ರಮಾರ್ಜುನನನಿಂತೆಂದಂ-

ಹಾಡಿತು. ಪ್ರವೇಶಮಾಡಬೇಡ ಎನ್ನದೆ ಪ್ರವೇಶಮಾಡಿ ಎಂದು ಕಡಿಮೆಯಾಗದ ಧ್ವನಿಯಿಂದ ಚಿಗುರಿದ ಅಶೋಕಮರದಲ್ಲಿ ನೆಲಸಿದ್ದ ಕೋಗಿಲೆಗಳ ಗುಂಪು ನಿಧಾನವಾಗಿ ಕೂಗಿತು. ಮನಸ್ಸಿಗೆ ತೃಪ್ತಿಯಾಗುವಂತೆ ಆಲಿಂಗನ ಮಾಡಿಕೊಳ್ಳುವ ಹಾಗೆ ದಕ್ಷಿಣದಿಕ್ಕಿನ ತಂಗಾಳಿಯು ಬೀಸಿತು. ೧೩. ಚಿಗುರಿ ಹೂವಾದ ಮಾವಿನಮರವೇ ಶ್ವೇತಚ್ಛತ್ರಿ; ಕೆಂಪುಬಣ್ಣದ ರಾಶಿಯಂತಿರುವ ಅಶೋಕವೃಕ್ಷದ ಕೆಂಪುಚಿಗುರೇ ಪಾಳಿಧ್ವಜಗಳು. ಎಲ್ಲ ಕಡೆಯಲ್ಲಿಯೂ ಸೌಂದರ್ಯದಿಂದ ಕೂಡಿ ಪ್ರಕಾಶಿಸುವ ದುಂಬಿಯ ಹಾಡೇ ಜಯಗೀತೆಗಳಾಗಿರಲು ವಿಕ್ರಮಾರ್ಜುನನನ್ನು ಪ್ರೀತಿಯಿಂದ ಸ್ವಾಗತಿಸುವ ಹಾಗೆ ವಸಂತರಾಜನ ವನವು ಪ್ರಕಾಶಮಾನವಾಗಿತ್ತು. ವ|| ಆಗ ನಗರಪ್ರವೇಶಮಾಡಬೇಕೆಂದು ಸ್ವಲ್ಪ ಕಾಲ ಆ ಪಟ್ಟಣದ ಸಮೀಪದ ತೋಟದಲ್ಲಿದ್ದು ವಿಶ್ರಾಂತಿ ಹೊಂದಿ ಪಂಚರತ್ನದಿಂದ ಕೂಡಿದ ಆಭರಣಗಳ ಸಮೂಹದಿಂದ ಅಲಂಕರಿಸಲ್ಪಟ್ಟ ವಿಜಯಗಜವನ್ನು ಹತ್ತಿರುವ ಅರ್ಜುನನನ್ನು ಮುಂದುಮಾಡಿಕೊಂಡು ಮಹಾವೈಭವದಿಂದ ಅಯ್ದುಜನವೂ ತಮ್ಮ ವಂಶಪಾರಂಪರ್ಯವಾಗಿ ಬಂದು ಪ್ರಕಾಶಿಸುತ್ತಿರುವ ರಾಜಧಾನಿಯನ್ನು ಪ್ರವೇಶಿಸಿದರು. ೧೪. ಹೊಸದಾದ ಕರಿಯ ಅ ಗರುಧೂಪದ ಹೊಗೆಯ ಸಮೂಹವು ಸುವಾಸನೆಗಳಿಂದ ಕೂಡಿ ನೇರವಾಗಿ ಆಕಾಶದಲ್ಲಿ ಉದ್ದವಾಗಿ ಹರಡಿ ಅಲ್ಲಿ ನಿಧಾನವಾಗಿ ಬೀಸುವ ಗಾಳಿಯಿಂದ ಹೊಡೆಯಲ್ಪಟ್ಟು ಆಕರ್ಷಕವಾಗುವ ಹಾಗೆ ಆಯಿತು. ಪಟ್ಟಣವೆಂಬ ಹೆಂಗಸು ಪಾಂಡುಪುತ್ರನಾದ ಅರ್ಜುನನಿಗಾಗಿ ಸಂತೋಷದಿಂದ ಮೊದಲು ಕತ್ತರಿಸಿದ್ದ ತನ್ನ ಜಡೆಯನ್ನು ಈಗ ಪ್ರೀತಿಯಿಂದ ಇಳಿಯಬಿಟ್ಟ ಹಾಗೆ ಕಣ್ಣಿಗೆ ಮನೋಹರವಾಗಿ ಕಂಡಿತು. ೧೫. ಆ ಪಟ್ಟಣದ ಮಧ್ಯದಲ್ಲಿ ಹಾರವಾಗಿ ಮಾಡಿರುವ ಹಸಿರುವಾಣಿಯ ಸಾರವತ್ತಾದ ತೋರಣಗಳು ಸಾಲಾಗಿ ರಂಜಿಸಿದುವು. ಉಪ್ಪರಿಗೆಗಳ ಸಾಲಿನಲ್ಲಿ ರೇಷ್ಮೆಯ ಕಸೂತಿ ಕೆಲಸಮಾಡಿದ ನವುರಾದ ಬಟ್ಟೆಗಳಿಂದ ಕೂಡಿದ ಒಳ್ಳೆಯ ಬಾವುಟಗಳು ಎಲ್ಲ ಉಪ್ಪರಿಗೆಗಳಲ್ಲಿಯೂ ಪ್ರಕಾಶಸಿದುವು. ನೃತ್ಯ ಸಂಗೀತ ಹಾಡುಗಳು ಮನೋಹರವಾದುವು. ಅದು ಕಣ್ಣಿಗೆ ಸೌಂದರ್ಯರಾಶಿಯಾಗಿ ಕಂಡಿತು. ೧೬. ಅತಿಶ್ರೇಷ್ಠರಾದ ಅಂತಪುರಸ್ತ್ರೀಯರ ಕಾಲಂದಿಗೆಯ ಧ್ವನಿಯು ಎಲ್ಲ ಕಡೆಯಲ್ಲಿಯೂ ಕೇಳಿಸುತ್ತಿರಲು ಕಣ್ಣುಗಳಿಗೆ ವೈಭವವು ತೋರಿ ಬರಲು, ಆಶೀರ್ವಾದದ ಅಕ್ಷತೆಗಳ ಸಮೂಹವು ತಮಗೂ ಸಂತೋಷವನ್ನೂ ಕೊಟ್ಟಿತು ಎನ್ನುತ್ತಿರಲು ಪಾಂಡವರು ಪುರಪ್ರವೇಶಮಾಡುವ ಸಂತೋಷವು ಅತ್ಯತಿಶಯವಾಯಿತು. ವ|| ಹಾಗೆ ಪಟ್ಟಣದ ಜನಗಳಿಂದ ಉದ್ಭವವಾದ ಆಶೀರ್ವಾದ ಸಹಸ್ರಗಳನ್ನೂ ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಧರಿಸುತ್ತ ಬಂದು ಆ ಪುರಸ್ತ್ರೀಯ ಮುಖಕಮಲವು ಅರಳಿದಂತೆ ಪ್ರಕಾಶಿಸುತ್ತಿರುವ ಅರಮನೆಯನ್ನು ಪ್ರವೇಶೀಸಿದರು. ಧರ್ಮರಾಜನು ಕೃಷ್ಣನೊಡನೆ

ಉ|| ಪ್ರಾಯದ ಪೆಂಪೆ ಪೆಂಪೆಮಗೆ ವಿಱದರಂ ತವೆ ಕಂದ ಪೆಂಪು ಕ
ಟ್ಟಾಯದ ಪೆಂಪು ಶಕ್ರನೊಡನೇಱದ ಪೆಂಪಿವು ಪೆಂಪುವೆತ್ತು ನಿ|
ಟ್ಟಾಯುಗಳಾಗಿ ನಿನ್ನೊಳಮರ್ದಿದುವು ನೀಂ ತಲೆವೀಸದುರ್ವರಾ
ಶ್ರೀಯನಿದಾಗದೆನ್ನದೊಳಕೊಳ್ ಪರಮೋತ್ಸವದಿಂ ಗುಣಾರ್ಣವಾ|| ೧೭

ವ|| ಎಂದು ಧರ್ಮಪುತ್ರನುಂ ದೇವಕೀಪುತ್ರನುಂ ಮರುತ್ಪುತ್ರನುಮಮರೇಂದ್ರ ಪುತ್ರನನೆಂತಾನುಮೊಡಂಬಡಿಸಿ ನಾಳೆ ಪಟ್ಟಬದ್ಧೋತ್ಸವಮೆಂದು ಮುನ್ನಿನ ದಿವಸಂ ಮಯನಿಂ ಪಂಚರತ್ನಮಯಮಾದ ಸಭಾಮಂಟಪಮಂ ತರಿಸಿ ವಸಿಷ್ಠ ಕಶ್ಯಪ ವ್ಯಾಸ ವಿಶ್ವಾಮಿತ್ರ ಭರದ್ವಾಜಾದಿ ಮುನಿಪತಿಗಳಂ ಬರಿಸಿ ಮಾತಳಿಯ ಕೆಯ್ಯೊಳ್ ದೇವೇಂದ್ರನಟ್ಟಿದ ಕಲ್ಪವೃಕ್ಷದ ತಳಿರ್ಗಳನೈರಾವತದ ಹರವೃಷಭದ ಕೋಡ ಮಣ್ಣುಮನಾಕಾಶಗಂಗೆಯ ನೀರುಮಂ ಮಂದಾರಪಾರಿಜಾತದ ಪೂಮಾಲೆಗಳುಮಂ ವರುಣದೇವನಟ್ಟಿದ ಕ್ಷಾರಕ್ಷೀರೇಕ್ಷುದಮಧುಘೃತಸ್ವಾದೂದಕಂಗಳೆಂಬೇೞುಂ ಸಮುದ್ರಂಗಳ ಚತುರ್ದಶ ಮಹಾನದಿಗಳ ನೀರುಮಂ ತೞತೞ ತೊಳಗುವ ಕಳಧೌತ ಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರವನಿತಾಜನಕ್ಕಂ ಸಾಮಂತಚಕ್ರಕ್ಕಮುಡಲಿಕ್ಕಿ ಧವಳಚ್ಛತ್ರ ಚಾಮರಸಿಂಹಾಸನ ಪಟ್ಟವರ್ಧನಕುಲಧನಾದಿ ರಾಜ್ಯಚಿಹ್ನಂಗಳಂ ವಿವಿಧ ವಿಧಾನದಿಂದಮವಾಸಿಸಿ ಗಂಗಾಜಳಪವಿತ್ರೀಕೃತಗಾತ್ರನುಂ ಕೌಶೇಯ ಪರಿಧಾನನುಮಾಗಿರ್ದ ಮಾನನಿಧಾನನಂ ತಂದು ಪೊಡೆವಡಿಸಿ ಮಂಗಳಪಟಹಂಗಳುಂ ಮಂಗಳಗೀತಿಗಳುಮೆಸೆಯೆ ಕಳಕಳಾವರ್ತಮಾಗೆ ಜಾಗರಮಿರ್ದು ಮಱುದಿವಸಂ ಪ್ರಶಸ್ತ ಮೌಹೂರ್ತಿಕ ನಿರೂಪಿತ ಶುಭ ಲಗ್ನೋದಯ ದಿಂದಷ್ಟೋತ್ತರಶತ ಪೂರ್ಣಕುಂಭಂಗಳಂ ಚತುರ್ವೇದ ಪಾರಗರಪ್ಪ ಧರಾಮ ರರೆತ್ತಿಕೊಂಡು ಮಂತ್ರಪೂತ ಜಲಂಗಳಿಂ ವಿಯಿಸಿ-

ಚಂ|| ಸ್ರ|| ವನಪ್ರಧ್ವಾನದಿಂ ಮಂಗಳಪಹರವಂ ಪೆರ್ಚೆ ಮಾಂಗಲ್ಯಗೇಯ
ಧ್ವನಿಯಿಂದಾಶಾಂತರಂ ಘೂರ್ಣಿಸಿ ಸೊಗಯಿಸೆ ಕೆಯ್ಗೆಯ್ದು ಸಾಮಂತ ಸೀಮಂ|
ತಿನಿಯರ್ ಮುಂದಾಡೆ ಭೋರೆಂದೆಸೆಯೆ ಜಯಜಯಧ್ವಾನಮೋರಂತೆ ವಾರಾಂ
ಗನೆಯರ್ ವಂದಾಡೆ ಸಂದೀ ವಿಭವದೊಳರಿಗಂಗಾಯ್ತು ರಾಜ್ಯಾಭಿಷೇಕಂ|| ೧೮

ವ|| ಆಗಳ್ ರಾಜ್ಯಾಭಿಷೇಕದ ನಂತರದೊಳ್ ಧರ್ಮನಂದನಂ ವಾಯುನಂದನಂ ದೇವಕೀನಂದನನಶ್ವಿನೀನಂದನರಯ್ವರುಮನೇಕ ಮಂಗಳಾಭರಣಾಳಂಕೃತಶರೀರರರಿಕೇಸರಿಯಂ ಕೇಸರಿವಿಷ್ಟರದೊಳ್ ಕುಳ್ಳಿರಿಸಿ ಪಂಚರತ್ನಶಿಖಾವಿರಾಜಮಾನಮಪ್ಪ ಪಟ್ಟಮನೆತ್ತಿ ಯಾದವ ವಂಶಸಂಭೂತೆಯುಮನೇಕಲಕ್ಷಣೋಪೇತೆಯುಮಪ್ಪ ಸುಭದ್ರೆಗೆ ಮಹಾದೇವಿವಟ್ಟಮಂ ಕಟ್ಟಿದಾಗಳ್-

ವಿಶೇಷ ಸಂತೋಷದಿಂದ ಕೂಡಿ ಸಾಮಂತಚೂಡಾಮಣಿಯಾದ ಅರ್ಜುನನ ಪಟ್ಟಾಭಿಷೇಕಮಹೋತ್ಸವವನ್ನೇರ್ಪಡಿಸಿ ಅರ್ಜುನನನ್ನು ಕುರಿತು ಹೀಗೆಂದನು- ೧೭. ಗುಣಾರ್ಣವಾ ಪ್ರಾಯದ ವೈಭವ; ನಮ್ಮನ್ನು ಅತಿಕ್ರಮಿಸಿದವರನ್ನು ನಾಶವಾಗುವಂತೆ ಕೊಂದ ವೈಭವ; ಅತ್ಯಕವಾದ ಪರಾಕ್ರಮದ ವೈಭವ; ಇಂದ್ರನೊಡನೆ ಅವನ ಅರ್ಧಾಸನವನ್ನು ಹತ್ತಿದ ವೈಭವ ಇವು ಆಕ್ಯವನ್ನು ಹೊಂದಿ ದೀರ್ಘಾಯುವಾಗಿ ನಿನ್ನಲ್ಲಿ ಸೇರಿಕೊಂಡು ಪ್ರಕಾಶವಾಗಿವೆ. ಅರ್ಜುನ, ನೀನು ತಲೆಬೀಸದೆ (ಅಸಮ್ಮತಿಯನ್ನುಪ್ರದರ್ಶಿಸದೆ) ಇದು ನನ್ನಿಂದಾಗುವುದಿಲ್ಲ ಎನ್ನದೆ ಈ ರಾಜ್ಯಸಂಪತ್ತನ್ನು ಅತ್ಯಂತ ಸಂತೋಷದಿಂದ ನೀನು ಅಂಗೀಕರಾಮಾಡು. ವ|| ಎಂದು ಧರ್ಮರಾಯನೂ ಕೃಷ್ಣನೂ ಭೀಮನೂ ಅರ್ಜುನನ್ನು ಹೇಗೂ ಒಪ್ಪಿಸಿದರು. ನಾಳೆಯೇ ಪಟ್ಟವನ್ನು ಕಟ್ಟುವ ದಿವಸವೆಂದು ದೇವಲೋಕದ ಶಿಲ್ಪಿಯಾದ ಮಯನೆಂಬುವನಿಂದ ಪಂಚರತ್ನಮಯವಾದ ಸಭಾಮಂಟಪವನ್ನು ತರಿಸಿದರು. ವಸಿಷ್ಠ, ಕಶ್ಯಪ, ವ್ಯಾಸ, ವಿಶ್ವಾಮಿತ್ರ, ಭಾರದ್ವಾಜರೇ ಮೊದಲಾದ ಋಷಿಶ್ರೇಷ್ಠರನ್ನು ಬರಮಾಡಿದರು. ಮಾತಲಿಯ ಕಯ್ಯಲ್ಲಿ ದೇವೇಂದ್ರನು ಕಲ್ಪವೃಕ್ಷದ ಚಿಗುರುಗಳನ್ನೂ ಐರಾವತವೆಂಬಾನೆಯೂ ಈಶ್ವರನ ನಂದಿಯೂ ಕೊಂಬಿನಿಂದ ಎಬ್ಬಿಸಿದ ಮಣ್ಣನ್ನೂ ಆಕಾಶಗಂಗೆಯ ನೀರನ್ನು ನಮೇರು ಮಂದಾರ ಪಾರಿಜಾತಗಳೆಂಬ ದೇವಲೋಕದ ಮರಗಳ ಹೂವುಗಳಿಂದ ಕೂಡಿದ ನೀರುಗಳನ್ನೂ ಕಳುಹಿಸಿಕೊಟ್ಟನು. ವರುಣದೇವನು ಉಪ್ಪು, ಹಾಲು, ಕಬ್ಬಿನ ರಸ, ಮೊಸರು, ಜೇನು, ತುಪ್ಪ, ಸಿಹಿನೀರುಗಳ ಏಳು ಸಮುದ್ರಗಳ ಮತ್ತು ಹದಿನಾಲ್ಕು ಮಹಾನದಿಗಳ ಪುಣ್ಯತೀರ್ಥವನ್ನು ಕಳುಹಿಸಿಕಟ್ಟನು. ಅವನ್ನು ಥಳಥಳನೆ ಹೊಳೆಯುವ ಸ್ವಚ್ಛವಾದ ಬಿಳಿಯ ಕೊಡಗಳಲ್ಲಿ ತುಂಬಿ ತಂದಿರುವ ವೇಶ್ಯಾಸ್ತ್ರೀಯರಿಗೂ ಸಾಮಂತರಾಜಸಮೂಹಕ್ಕೂ ಉಡುಗೊರೆಯನ್ನು ಕೊಟ್ಟನು. ಶ್ವೇತಚ್ಛತ್ರ (ಬಿಳಿಯ ಕೊಡೆ) ಚಾಮರ, ಸಿಂಹಾಸನ, ಪಟ್ಟದಾನೆ, ಕುಲಧನವೇ ಮೊದಲಾದ ರಾಜ್ಯಚಿಹ್ನೆಗಳನ್ನು ಬೇರೆ ಬೇರೆ ರೀತಿಯಿಂದ ಪ್ರತಿಷ್ಠೆ ಮಾಡಿಸಿದನು. ಗಂಗಾಜಲದಿಂದ ಪವಿತ್ರವನ್ನಾಗಿ ಮಾಡಲ್ಪಟ್ಟ ಶರೀರವುಳ್ಳವನೂ ರೇಷ್ಮೆಯ ವಸ್ತ್ರದ ಹೊದಿಕೆಯುಳ್ಳವನೂ ಆದ ಅರ್ಜುನನನ್ನು ನಮಸ್ಕಾರಮಾಡಿಸಿ ಮಂಗಳವಾದ್ಯಗಳೂ ಮಂಗಳಗೀತೆಗಳೂ ಪ್ರಕಾಶಿಸುತ್ತಿರಲು ಕಳಕಳಧ್ವನಿಯಿಂದ ಆವರಿಸಲ್ಪಟ್ಟು ಜಾಗರಣೆಯಿರಿಸಿದನು. ಮಾರನೆಯ ದಿವಸ ಪ್ರಶಸ್ತವಾದ ಜೋಯಿಸರಿಂದ ನಿಷ್ಕರ್ಷಿಸಲ್ಪಟ್ಟ ಶುಭಮುಹೂರ್ತದಲ್ಲಿ ನೂರೆಂಟು ಪೂರ್ಣಕುಂಭಗಳನ್ನು ನಾಲ್ಕು ವೇದಗಳಲ್ಲಿಯೂ ಪಂಡಿತರಾದ ಬ್ರಾಹ್ಮಣರು ಎತ್ತಿಕೊಂಡು ಮಂತ್ರಪೂತವಾದ ನೀರಿನಿಂದ ಸ್ನಾನಮಾಡಿಸಿದರು. ೧೮. ಸಮುದ್ರಘೋಷದಂತೆ ಮಂಗಳವಾದ್ಯಧ್ವನಿಯು ಹೆಚ್ಚಿದುವು. ಮಂಗಳಗೀತೆಗಳ ಧ್ವನಿಯಿಂದ ದಿಕ್ಕುಗಳ ಒಳಭಾಗವೆಲ್ಲ ಶಬ್ದಮಾಡಿ ಸೊಗಯಿಸಿದುವು. ಅಲಂಕರಾರಮಾಡಿಕೊಂಡಿರುವ ಸಾಮಂತರಾಜರ ಸ್ತ್ರೀಯರು ಮುಂಭಾಗದಲ್ಲಿ ನೃತ್ಯವಾಡಿದರು. ಜಯಜಯಧ್ವನಿಯು ಒಂದೇ ಸಮನಾಗಿ ಭೋರೆಂದು ಧ್ವನಿಮಾಡುತ್ತಿರಲು ವೇಶ್ಯಾಸ್ತ್ರೀಯರು ಬಂದು ನೃತ್ಯವಾಡಿದರು. ಇಂದು ಈ ವೈಭವದಲ್ಲಿ ಅರಿಗನಿಗೆ (ಅರ್ಜುನನಿಗೆ) ರಾಜ್ಯಾಭಿಷೇಕವಾಯಿತು. ವ|| ರಾಜ್ಯಾಭಿಷೇಕವಾದ ಮೇಲೆ ಧರ್ಮರಾಯನೂ ಭೀಮ ಕೃಷ್ಣ ನಕುಲಸಹದೇವರೇ ಮೊದಲಾದ ಅಯ್ದುಜನರೂ

ಚಂ|| ನೆಗಱ್ದ್ದುದು ದೇವದುಂದುಭಿರವಂ ಸುರನಂದನದಿಂ ಪೊದೞ್ದ ಬ
ಲ್ಮುಗುಳ್ಗಳ ತಂದಲಂದು ಕವಿತಂದುದದಂ ತನಿಸೋಂಕು ಸೋಂಕಿ ಮೆ|
ಲ್ಲಗೆ ಮಲಯಾನಿಳಂ ಸುಱದೊಡಂದು ಜಗಂ ಪೊಸತಾದುದೆಂದೊಡೇ
ವೊಗೞ್ವ್ವುದೊ ಪಟ್ಟಬಂಧನಮಹೋತ್ಸವಮಂ ಜಗದೇಖಮಲ್ಲನಾ|| ೧೯

ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಯೊಳೊಂದಿ ಸಾಂದಿನೊಳ್
ಕತ್ತುರಿಯೊಂದು ಕೋಳ್ಗೆಸಳೋಕುಳಿ ಚಂದನಗಂಧವಾರಿಯೊಳ್|
ಸುತ್ತಲುಮೞ್ಕಱಂ ಪಡೆವ ಗೇಯದ ಪೆಂಪಿನಲಂಪನಾರ್ಗಮಾ
ರ್ತಿತ್ತುದು ಪಟ್ಟಬಂಧನಮಹೋತ್ಸವಮಾ ಪಡೆಮೆಚ್ಚೆ ಗಂಡನಾ|| ೨೦

ವ|| ಮತ್ತಮೈರಾವಣಾನ್ವಯನುಂ ಸುರಭಿನಿಶ್ವಾಸನುಂ ಸೂಕ್ಷ್ಮಬಿಂದುರುಚಿರನುಂ ಕಾಳಿಂಗ

ವನಸಂಭೂತನುಮನೇಕಲಕ್ಷಣೋಪೇತನುಮಪ್ಪ ತ್ರಿಭುವನಾಭರಣಮೆಂಬಾನೆಗಮುಭಯಕುಲ ಶುದ್ಧನುಂ ಗುಣಶುದ್ಧನುಂ ಗುಣಸಮುದ್ರನುಮಪ್ಪ ಮಹಾಮಂತ್ರಿಯಭವನುಮುಚ್ಚೈಶ್ಯ್ರವಾನ್ವಯ ಸಂಭವನುಂ ಪ್ರಶಸ್ತ ಲಕ್ಷಣ ಲಕ್ಷಿತನುಮಪ್ಪ ತ್ರಿಭುವನಿತಿಲಕಮೆಂಬ ಕುದುರೆಗಂ ಪಟ್ಟಂಗಟ್ಟಿ ಪುರುಷೋತ್ತಮನ ತಂಗೆಯುಂ ತಾನುಂ ತುಳಾಪುರುಷಮನಿರ್ದು ಲೋಕಕ್ಕೆಲ್ಲಂ ಬಿಯಮಂ ಮೆದು-

ಚಂ|| ತೊರೆದುದು ಕಾಮಧೇನು ತುಱುಗಲ್ಗೊನೆವಣ್ತುದು ಕಲ್ಪವೃಕ್ಷವಿ
ಶ್ವರನ ವರಫ್ರಸಾದಮಿದಿರ್ಗೊಂಡುದು ಸುತ್ತಿಱದೊಂದು ಮುತ್ತಿನಾ|
ಗರಮೆ ತೆರಳ್ದುದೆಯ್ದೆ ರಸ ಸಿದ್ಧಿಯುಮಾಯ್ತೆನೆ ತನ್ನನಾಸೆವ
ಟ್ಟೆರೆದವರ್ಗಿತ್ತು ಪೊಮ್ಮಯದೆ ಮಾಡಿದನೀ ನೆಲನಂ ಗುಣಾರ್ಣವಂ|| ೨೧

ವ|| ಅಂತು ಚಾಗಂಗೆಯ್ದು ಸಿಂಹಾಸನಮಸ್ತಕಸ್ಥಿತನುಂ ವಿರಾಜಮಾನ ಧವಳಚ್ಛತ್ರಚಾಮರ ಸಹಸ್ರಸಂಛಾದಿತನುಮಾಗಿ ವಿಕ್ರಾಂತುಂಗ ನೊಡ್ಡೋಲಗಂಗೊಟ್ಟಿರೆ-

ಕಂ|| ಎಡೆಗೊಂಡಿರಿಮುತ್ಸಂಚಂ
ನುಡಿಯದಿರಿಂ ನೃಪತಿ ನುಡಿಯಿಂ ನೀಮಿ|
ರ್ಪೆಡೆಯೊಳಿರಿಂ ನೀವಱವಿರ್
ಮಿಡುಕಿದೊಡೆನೆ ಚಿತ್ರವೇತ್ರದಂಡಧರರ್ಕಳ್|| ೨೨

ಅನೇಕ ಒಡವೆಗಳಿಂದ ಅಲಂಕಾರಮಾಡಲ್ಪಟ್ಟ ಶರೀರರಾಗಿ ಅರಿಕೇಸರಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಅಯ್ದು ರತ್ನಗಳಿಂದ ಖಚಿತವಾದ ತಲೆಯ ಪಟ್ಟ (ಶಿರಪೇಷ್)ದಿಂದ ಪ್ರಕಾಶಮಾನವಾದ ಪಟ್ಟವಸ್ತ್ರವನ್ನು ಕಟ್ಟಿ ಯಾವದವಂಶದಲ್ಲಿ ಹುಟ್ಟಿದವಳೂ ಅನೇಕ ಲಕ್ಷಣಗಳಿಂದ ಕೂಡಿದವಳೂ ಆದ ಸುಭದ್ರೆಗೆ ಮಹಾರಾಣಿಯ ಪಟ್ಟವನ್ನು ಕಟ್ಟಿದರು. ೧೯. ದೇವದುಂದುಭಿಯಾಯ್ತು. ದೇವತೆಗಳ ತೋಟದಿಂದ ವ್ಯಾಪಿಸಿದ ದೊಡ್ಡ ಹೂಗಳ ತುಂತುರುಮಳೆಯಾಯಿತು. (ಪುಷ್ಪವೃಷ್ಟಿಯಾಯಿತು) ಅದರ ಇಂಪಾದ ಸ್ಪರ್ಶದಿಂದ ನಿಧಾನವಾಗಿ ಮಲಯಮಾರುತವು ಸುಳಿದಾಡಿತು. ಆ ದಿನ ಲೋಕವೇ ಹೊಸತಾಯಿತು ಎಂದರೆ ಜಗದೇಕಮಲ್ಲನಾದ ಅರ್ಜುನನ ಪಟ್ಟಬಂಧ ಮಹೋತ್ಸವವನ್ನು ಏನೆಂದು ಹೊಗಳುವುದು ೨೦. ಮುತ್ತು ಪಚ್ಚೆ ರತ್ನ ಮತ್ತು ವಜ್ರಗಳ ಸಾಲುಗಳಲ್ಲಿ ಸೇರಿ ಶ್ರೀಗಂಧ ಕಸ್ತೂರಿ ಮೊದಲಾದುವುಗಳ ಒಳ್ಳೆಯ ಕೆಸರಿನಲ್ಲಿಯೂ ಶ್ರೀಗಂಧದ ಪರಿಮಳಯುಕ್ತವಾದ ನೀರಿನಲ್ಲಿಯೂ ಓಕುಳಿಯಾಡಿಸುತ್ತ ಎಲ್ಲೆಡೆಯಲ್ಲಿಯೂ ಪ್ರೀತಿಯನ್ನುಂಟುಮಾಡುವ ಸಂಗೀತದ ವೈಭವದಿಂದ ಕೂಡಿದ ಅರ್ಜುನನ ಪಟ್ಟಬಂಧನಮಹೋತ್ಸವವು ಎಂತಹವರಿಗೂ ಸಾಕಷ್ಟು ಸಂತೋಷವನ್ನು ಕೊಟ್ಟಿತು. ವ|| ಮತ್ತು ಐರಾವತದ ವಂಶದಲ್ಲಿ ಹುಟ್ಟಿದುದೂ ಸುಗಂಧಯುಕ್ತವಾದ ಉಸಿರುಳ್ಳುದೂ ಸೂಕ್ಷ್ಮವಾದುದೂ ಸಣ್ಣ ಸಣ್ಣ ಬಿಳಿಯ ಮಚ್ಚೆಗಳಿಂದ ರಮ್ಯವಾದುದೂ ಕಳಿಂಗದೇಶದ ಅರಣ್ಯದಲ್ಲಿ ಹುಟ್ಟಿದುದೂ ಅನೇಕ ಲಕ್ಷಣಗಳಿಂದ ಕೂಡಿದುದೂ ಆಗಿರುವ ತ್ರಿಭುವನಾಭರಣವೆಂಬ ಆನೆಗೂ ಉಭಯಕುಲಶುದ್ಧನೂ ಗುಣಸಮುದ್ರನೂ ಆಗಿರುವ ಮಹಾಮಂತ್ರಿಯ ಮನೆಯಲ್ಲಿಯೇ ಬೆಳೆದ (?) ಉಚ್ಚೆ ಶ್ರವದ ವಂಶದಲ್ಲಿಯೇ ಜನಿಸಿರುವ ಪ್ರಶಸ್ತವಾದ ಲಕ್ಷಣಗಳಿಂದ ಗುರುತುಮಾಡಲ್ಪಟ್ಟ ತ್ರಿಭುವನತಿಲಕವೆಂಬ ಕುದುರೆಗೂ ಪಟ್ಟವನ್ನು ಕಟ್ಟಿದರು. ಕೃಷ್ಣನ ತಂಗಿಯಾದ ಸುಭದ್ರೆಯೂ ಅರ್ಜುನನೂ ತುಲಾಪುರಷಭಾರವಿದ್ದು (ತನ್ನ ತೂಕದಷ್ಟು ಚಿನ್ನವನ್ನು ತೂಕಮಾಡಿ ದಾನಮಾಡುವುದು) ಲೋಕಕ್ಕೆಲ್ಲ ತಮ್ಮ ದಾನದ ವೈಭವವನ್ನು ಮೆರೆದರು. ೨೧. ಕಾಮಧೇನುವೆಂಬ ದೇವಲೋಕದ ಹಸುವು ಹಾಲನ್ನು ಸುರಿಸಿತು. ಕಲ್ಪವೃಕ್ಷವು ಕಿಕ್ಕಿರಿದು

ಓಳಿಕೊಳೆ ಪೊಳೆವ ಕಣ್ಗಳ್
ನೀಲಿಮವನಜಂಗಳೋಳಿ ಕೊಳ್ಳದುವುಂ ತಾ|
ಮೋಳಿಕೊಳಲಂತೆ ಗಣಿಕೆಯ
ರೋಳಿಯೊಳೆ ಮಡಲ್ತ ಲತೆಗಳಿರ್ಪಂತಿರ್ದರ್|| ೨೩

ಕಂ|| ಸಾರ್ಚಿದ ಲೋಹಾಸನದೊಳ
ಮರ್ಚಿದ ಬೊಂದರಿಗೆ ಪೞಯ ಬಿತ್ತರಿಗೆ ಕರಂ|
ಪೆರ್ಚುವ ಮಹಿಮೆಯನೆಯ್ದೆ ನಿ
ಮಿರ್ಚೆ ಮಹಾ ಮಕುಟ ಬದ್ಧರೋಳಿಯೊಳಿರ್ದರ್

ಮಗ ಮಗ ಮಗಿಸುವ ಮೃಗಮದ
ದಗರುವ ಕಪ್ಪುರದ ಕಂಪುಮಂ ಸೂಡಿದ ಬಾ|
ಸಿಗದ ಪೊಸಗಂಪನಿಂಬಾ
ಗೊಗೆದಿರೆ ಮಾಡಿದುದು ಚಾಮರರುಹಗಂಧವಹಂ|| ೨೫

ಪಸರಿಸಿದ ತಾರಹಾರದ
ಪೊಸವೆಳ್ದಿಂಗಳುಮನಮರ್ದ ಪೆರ್ದುಡುಗೆಗಳೊಳ್|
ಮಿಸುಗುವ ಪೊಸ ಮಾಣಿಕದಳ
ವಿಸಿಲುಮನೊಡಗಾಣಲಾದುದರಿಗನ ಸಭೆಯೊಳ್|| ೨೬

ವ|| ಅಂತು ದೇವೇಂದ್ರನಾಸ್ಥಾನಮನೆ ಪೋಲ್ತು ಸೊಗಯಿಸುವ ಸಂಸಾರಸಾರೋದಯ ನಾಸ್ಥಾನದೊಳೊರ್ವ ವೈತಾಳಿಕಂ ನಿಂದಿರ್ದು ಮೃದುಮಧುರಗಂಭೀರಧ್ವನಿಯಿನಿಂತೆಂದಂ-

ತುಂಬಿದ ಹಣ್ಣುಗಳಿಂದ ಕೂಡಿದ ಗೊನೆಯನ್ನುಳ್ಳುದಾಯಿತು. ಈಶ್ವರನ ವರಪ್ರಸಾದವು ಎದಿರುಗೊಂಡಿತು. ಸುತ್ತಲೂ ಒಂದು ಮುತ್ತಿನ ಭಂಡಾರವೇ ಆವರಿಸಿಕೊಂಡು ಚಲಿಸಿತು. ಸಂಪೂರ್ಣವಾಗಿ ರಸಸಿದ್ಧಿ ಆಯಿತು ಎನ್ನುವ ಹಾಗೆ ತನ್ನಲ್ಲಿ ಆಸೆಯಿಂದ ಬಂದು ಬೇಡಿದವರಿಗೆ ಅವರ ತೃಪ್ತ್ಯನುಸಾರವಾಗಿ ದಾನಮಾಡಿ ಲೋಕವನ್ನೆಲ್ಲ ಸುವರ್ಣಮಯವನ್ನಾಗಿ ಮಾಡಿದನು. ವ|| ಹಾಗೆ ದಾನಮಾಡಿ ಸಿಂಹಾಸನದ ಮೇಲುಭಾಗದಲ್ಲಿ ಕುಳಿತವನೂ ಹೊಳೆಯುತ್ತಿರುವ ಸಾವಿರಾರು ಬೆಳುಗೊಡೆ ಮತ್ತು ಚಾಮರಗಳಿಂದ ಮುಸುಕಲ್ಪಟ್ಟವನೂ ವಿಶೇಷ ಪರಾಕ್ರಮಿಯೂ ಆದ ಅರ್ಜುನನು ಸಭಾಮಧ್ಯದಲ್ಲಿ ಓಲಗಗೊಟ್ಟನು. ೨೨. ನಿಮ್ಮ ನಿಮ್ಮ ಸ್ಥಳದಲ್ಲಿರಿ; ಗಟ್ಟಿಯಾಗಿ ಮಾತನಾಡಬೇಡಿ; ರಾಜನು ಮಾತನಾಡಿದ ಮೇಲೆ ನೀವು ಮಾತನಾಡಿ; ನೀವು ಇರುವ ಸ್ಥಳದಲ್ಲಿಯೇ ಇರಿ; ಅಲುಗಾಡಿದರೆ ತಕ್ಷಣವೇ ಬಗೆಬಗೆಯಾದ ಬೆತ್ತವನ್ನು ಹಿಡಿದಿರುವ ಕಟ್ಟಿಗೆಕಾರರ ಅನುಭವವು ನಿಮಗಾಗುತ್ತದೆ. (ಅವರ ದಂಡದ ಏಟುಗಳ ರುಚಿ ನಿಮಗೆ ಅನುಭವವಾಗುತ್ತದೆ ಎಂದಭಿಪ್ರಾಯ). ೨೩. ಎಂದು ಹೇಳುತ್ತಿರುವ ಕಾವಲವರ ಹೊಳೆಯುವ ಕಣ್ಣುಗಳು ಸಾಲಾಗಿರಲು ಕನ್ನೆ ದಿಲೆಯ ತೋಟದಲ್ಲಿ ಒಪ್ಪುವ ಕನ್ನೆ ದಿಲೆಯ ಹೂವುಗಳು ಕ್ರಮಬದ್ಧವಾಗಿ ಸಾಲಾಗಿರುವಂತೆ ವೇಶ್ಯಾಸ್ತ್ರೀಯರು ಸಾಲಾಗಿ ಚಿಗುರಿದ ಬಳ್ಳಿಗಳಂತೆ ಕಂಡರು. ೨೪. ಹತ್ತಿರವಿಟ್ಟಿರುವ ಲೋಹಾಸನಗಳಲ್ಲಿ (ಚಿನ್ನ, ಬೆಳ್ಳಿ ಮೊದಲಾದ ಲೋಹಗಳಿಂದ ಕೂಡಿದ ಕುರ್ಚಿಗಳಲ್ಲಿ) ಸೇರಿರುವ ಮೆತ್ತೆಗಳು (ಪೞಯ?) ಸಣ್ಣ ಪೀಠಗಳೂ ವಿಶೇಷ ವೈಭವವನ್ನತಿಶಯವಾಗಿ ಉಂಟು ಮಾಡಲು ಮಹಾರಾಜರುಗಳು ಸಾಲಾಗಿದ್ದರು. ೨೫. ಸುಗಂಧವನ್ನು ಬೀರುತ್ತಿರುವ ಕಸ್ತೂರಿ ಅಗರು ಮತ್ತು ಪಚ್ಚಕರ್ಪೂರದ ವಾಸನೆಯನ್ನು ಅಲ್ಲಿ ನೆರೆದವರು ಮುಡಿದು ಕೊಂಡಿರುವ ಬಾಸಿಗದ ಹೊಸ ವಾಸನೆಯನ್ನು ಚಾಮರ ಬೀಸುವುದರಿಂದ ಎದ್ದ ಗಾಳಿಯು ಎಬ್ಬಿಸುತ್ತಿರಲು ಅದು ಸಂತೋಷದಾಯಕವೇ ಆಯಿತು. ೨೬. ಪ್ರಸರಿಸಿರುವ ಮುತ್ತಿನ ಹಾರಗಳ ಹೊಸಬೆಳ್ದಿಂಗಳುಗಳನ್ನು ಧರಿಸಿರುವ ಬೆಲೆಯುಳ್ಳ ಆಭರಣಗಳಲ್ಲಿ ಪ್ರಕಾಶಿಸುವ ಹೊಸ ಮಾಣಿಕ್ಯಗಳ ಎಳೆಯ ಬಿಸಿಲನ್ನೂ, ಅರಿಕೇಸರಿಯ ಆಸ್ಥಾನದಲ್ಲಿ ಒಟ್ಟಿಗೆ ಕಾಣಲು ಸಾಧ್ಯವಾಯಿತು. ವ|| ಹಾಗೆ ದೇವೇಂದ್ರನ ಸಭೆಯನ್ನೇ ಹೋಲುತ್ತ ಸೊಗಯಿಸುವ ಸಂಸಾರಸಾರೋದಯನಾದ ಅರ್ಜುನನ ಆಸ್ಥಾನದಲ್ಲಿದ್ದ ವಿವಿಧತಾಳಗಳನ್ನು ಉಪಯೋಗಿಸಿ ಹಾಡುವ ಗಾಯಕನಾದ ವೈತಾಳಿಕನು ಎದ್ದು ನಿಂತು ಮೃದುಮಧುರಗಂಭೀರ

ಸ್ರ|| ಆಸೇತೋ ರಾಮ ಚಾಪಾಟನಿ ತಟಯುಗ ಟಂಕಾಂಕಿತಾಖಂಡ ಖಂಡಾ
ದಾ ಪೀಯೂಷಾಬ್ಧಿ ದುಗ್ಧಪ್ಲವ ಧವಳ ಕನತ್ಕಂದರಾನ್ಮಂದರಾದ್ರೇ|
ಆಚಂದ್ರಾರ್ಕ ಪ್ರತೀತೋಭಯ ಗಿರಿಶಿಖರಾತ್ ಸ್ವೋದಯಸ್ಯೆ ಕ ಹೇತೋ
ಶೈಲೇಳಾಕಲ್ಪಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗ|| ೨೭

ಶಾ|| ಶೌರ್ಯಂ ಯಸ್ಯ ಗುಣಾರ್ಣವ ಕ್ಷಿತಿಪತೇಸ್ಸವ್ಯಾಪಸವ್ಯಕ್ರಮಾತ್
ಗರ್ವಾಕೃಷ್ಟವಿಕರ್ಣಟಂಕನಿಕರೋತ್ಕೀರ್ಣಪ್ರಭಾವಾಕ್ಷರೈ|
ಮತ್ತಾರಿದ್ವಿಪಮಸ್ತಕಸ್ಥಿತಶಿಲಾಷಟ್ಟಂ ಸದಾಖ್ಯಾಯತೇ
ತಸ್ಯಾಯಂ ಪುನರುಕ್ತ ಏವ ಸಮರ ಶ್ಲಾಘ್ಯಪ್ರಶಸ್ತಿಕ್ರಮ|| ೨೮

ಏತತ್ಕಂಪಿತ ಪರ್ವತಾಸ್ಸು ಚಕಿತಾ ಏತುಂ ಸಮುದ್ರಂ ಪುನ
ಸಪ್ತದ್ವೀಪ ಜಿಗೀಷಯಾ ವಿಜಯಿನಾ ಕೇನಾಪಿ ಪುರಿಜೀಕೃತಂ|
ಯಜ್ಜಾತಂ ಶರ ಶಂಕು ಶಲ್ಯ ಶತಕೈಸ್ಸಂತಾಪ್ಯ ಶತ್ರುದ್ವಿಪಾನ್
ನಿಶ್ವಾಸೋಪರತಾನ್ ಗುಣಾರ್ಣವಮಹೀಪಾಲೇನ ಯುದ್ಧಾವನೌ|| ೨೯

ಪೃಥ್ವಿ|| ಪರಸ್ಪರ ವಿರುದ್ಧಯೋರ್ವಿನಯ ಯೌವನಾರಂಭಯೋ
ಪ್ರಭೂತ ಸಹಜೇರ್ಷ್ಯಯೋರಪಿ ಸರಸ್ವತೀ ಶ್ರೀಸ್ತಿಯೋ||
ತಥಾಚ ಪರಿಹಾರಿಣೋರಪಿ ಮಹಾ ಕ್ಷಮಾ ಶೌರ್ಯಯೋ
ಚಿರಂ ಪ್ರಥಮ ಸಂಗಮೋ ಹರಿಗ ಭೂಪತೌ ದೃಶ್ಯತೇ| ೩೦

ವ|| ಅಂತಾತಂ ಪೊಗೞ್ದು ಮಾಣ್ದ ನಂತರದೊಳೆತ್ತಿಕೊಂಡ ಶ್ರುತಿಯಂ ಪಲ್ಲಟಿಸದೆಯುಂ ಮತ್ತಂ ಪರಿಚ್ಛೇದಂಗಳನಱದುಮೊಟ್ಟಜೆಯ ರಾಜಿಯಿಂ ಕಣ್ಗಳಿಂಚರದೊಳಂ ಪೊಂಪುೞವೋಗೆ ಮಂಗಳಪಾಠಕರಿರ್ವರೊಂದೆ ಕೊರಲೊಳಿಂತೆಂದು ಮಂಗಳವೃತ್ತಂಗಳನೋದಿದರ್-

ಶಾ|| ರಂಗತ್ತುಂಗತರಂಗಭಂಗುರಲಸದ್ಗಂಗಾಜಳಂ ನರ್ಮದಾ
ಸಂಗ ಸ್ವಚ್ಛವನಂ ಪ್ರಸಿದ್ಧ ವರದಾ ಪುಣ್ಯಾಂಬು ಗೋದಾವರೀ|
ಸಂಗತ್ಯೋರ್ಜಿತವಾರಿಸಾರ ಯುಮುನಾ ನೀಳೋರ್ಮಿ ನೀರಂ ಭುಜೋ
ತ್ತುಂಗಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೧

ಧ್ವನಿಯಿಂದ ಹಾಡಿದನು. ೨೭. ಶ್ರೀರಾಮನ ಬಿಲ್ಲಿನ ಕೊಪ್ಪಿನ ಎರಡು ಕಡೆಗಳೆಂಬ ಉಳಿಯಿಂದ ಗುರುತು ಮಾಡಲ್ಪಟ್ಟ ಸಮಗ್ರವಾದ ಭರತಖಂಡದಲ್ಲಿ ರಾಮಸೇತುವಿನವರೆಗೂ ಹಾಲಿನ ಪ್ರವಾಹದಂತೆ ಬೆಳ್ಳಗೆ ಪ್ರಕಾಶಿಸುತ್ತಿರುವ ಕ್ಷೀರಸಾಗರದಂತೆ ಮಂದರಪರ್ವತ ಕಣಿವೆಯವರೆಗೂ ತನ್ನಅಭಿವೃದ್ಧಿಗೆ ಒಂದೇ ಕಾರಣವಾಗಿರುವ ಚಂದ್ರ ಸೂರ್ಯರ ಪರ್ಯಂತ ಪ್ರಸಿದ್ಧರಾಗಿರುವ ಪೂರ್ವ ಪಶ್ಚಿಮ ಪರ್ವತಗಳ ಪರ್ವತಭೂಮಿಗಳಿರುವ ಶಿಖರಗಳವರೆಗೂ ಕಾಲದವರೆಗೂ ವಿಕ್ರಾಂತತುಂಗನಾದ ಅರ್ಜುನನು ಈ ಭೂಮಂಡಲವನ್ನು ರಕ್ಷಿಸಲಿ. ೨೮. ಯಾವ ಗುಣಾರ್ಣವನೆಂಬ ಬಿರುದುಳ್ಳ ಅರಿಕೇಸರಿರಾಜನ (ಅರ್ಜುನನ) ಪರಾಕ್ರಮವು ಬಲ ಮತ್ತು ಎಡಗೈಗಳಿಂದ ಪ್ರಯೋಗಮಾಡುವ ಕ್ರಮವಾದ ಗರ್ವದಿಂದ ಕೂಡಿ ಕಿವಿಯವರೆಗೂ ಸೆಳೆಯುವ ಬಾಣಗಳೆಂಬ ಶತ್ರುರಾಜರ ಮದ್ದಾನೆಗಳ ಕುಂಭಸ್ಥಳದಲ್ಲಿ ಶಕ್ತಿಯುತವಾದ ಉಳಿಗಳ ಸಮೂಹದಿಂದ ಅಕ್ಷರಗಳಿಂದ ಕೊರೆಯಲ್ಪಟ್ಟಿರುವ ಶಾಸನಷ್ಮಲಕಗಳು ಪ್ರಕಾಶಪಡಿಸುತ್ತಿರುವ ಆ ಅರಿಕೇಸೆರಿಯ ಯುದ್ಧಪ್ರಶಸ್ತಿಯು ಪುನರುಕ್ತವಾಗುತ್ತಿರಲಿ. ೨೯. ಗುಣಾರ್ಣವಮಹೀಪಾಲನ ಯುದ್ಧಭೂಮಿಯಲ್ಲಿ ಅವನ ಹರಿತವಾದ ನೂರಾರು ಬಾಣಗಳಿಂದ ಹತವಾದ ಶತ್ರುರಾಜರ ಆನೆಗಳು ಸಪ್ತ ದ್ವೀಪಗಳನ್ನೂ ಗೆಲ್ಲಬೇಕೆಂಬ ಆಶೆಯುಳ್ಳ ಇಂದ್ರನಿಗೆ ಹೆದರಿ ನಡುಗುತ್ತ ಸಮುದ್ರಪ್ರವೇಶಮಾಡುತ್ತಿರುವ ಕುಲಪರ್ವತಗಳ ರಾಜಿಯ ಹಾಗಿವೆ. ೩೦. ಪರಸ್ಪರ ವಿರೋಗಳಾದ ವಿನಯ ಮತ್ತು ಯವ್ವನಗಳನ್ನೂ ಸಹಜವಾಗಿಯೇ ಹುಟ್ಟಿರುವ ಅಸೂಯೆಯಿಂದ ಕೂಡಿದ ಸರಸ್ವತಿ ಮತ್ತು ಲಕ್ಷ್ಮಿಗಳನ್ನೂ ಹಾಗೆಯೇ ಪರಸ್ಪರ ನಾಶಕಾರಿಗಳಾದ ದಯೆ ಮತ್ತು ಶೌರ್ಯಗಳನ್ನೂ ಬಹುಕಾಲವಾದ ಮೇಲೆ ಮೊತ್ತ ಮೋದಲನೆಯ ಸಲ ಅರಿಕೇಸರಿ ರಾಜನಲ್ಲಿ ಮಾತ್ರ ಒಟ್ಟಿಗೆ ನೋಡಬಹುದಾಗಿದೆ. ವ|| ಹಾಗೆ ಅವನು ಹೊಗಳಿ ನಿಲ್ಲಿಸಿಯಾದ ಮೇಲೆ ಶಾಸ್ತ್ರವನ್ನು (ವೇದಾಕ್ಷರಗಳನ್ನು) ವ್ಯತ್ಸಾಸಮಾಡದೆಯೂ (ಸುಸ್ವರವಾಗಿ) ನಿಲ್ಲಿಸಬೇಕಾದ ಸ್ಥಳಗಳನ್ನೂ ತಿಳಿದೂ ಸಂಪೂರ್ಣಾರ್ಥ ದ್ಯೋತಕವಾಗುವ ಹಾಗೂ ಕಂಡಂತೆ ಇನಿದಾದ ಸ್ವರಗಳಿಂದ ಕೂಡಿ ರೋಮಾಂಚವಾಗುವ ಹಾಗೂ ಇಬ್ಬರು ಮಂಗಳಪಾಠಕರು ಒಕ್ಕೊರಲಿನಿಂದ ಮಂಗಳಸ್ತೋತ್ರವನ್ನು ಪಠಿಸಿದರು. ೩೧. ನರ್ತನ ಮಾಡುತ್ತಿರುವ ಅಲೆಗಳಿಂದ ವಿರ್ಭಾವಾಗುತ್ತಿರುವ (ಘರ್ಷಣೆಯನ್ನು ಹೊಂದುತ್ತಿರುವ) ಪ್ರಕಾಶಮಾನವಾದ ಗಂಗಾಜಲವೂ, ಸ್ವಚ್ಛವಾಗಿರುವ ನರ್ಮದಾನದಿಯ ನೀರೂ ಪ್ರಸಿದ್ಧವೂ ಪವಿತ್ರವೂ ಆದ ವರದಾನದಿಯ ನೀರೂ ಶ್ರೇಷ್ಠವಾದ ಗೋದಾವರಿಯ ನೀರೂ ಸಾರವತ್ತಾದ ಯಮುನಾನದಿಯ ನೀಲಿಯ ಬಣ್ಣದ ಅಲೆಗಳಿಂದ ಕೂಡಿದ ನೀರೂ ಇವೆಲ್ಲವೂ ಎತ್ತರವಾದ ಭುಜಗಳುಳ್ಳ ಅರಿಗನಿಗೆ (ಅರ್ಜುನನಿಗೆ)

ಮ|| ಶ್ರುತದೇವೀವಚನಾಮೃತಂ ಶ್ರುತಕಥಾಳಾಪಂ ಶ್ರುತಸ್ಕಂದ ಸಂ
ತತಿ ಶಶ್ವಚ್ಚ್ರುತಪಾರಗ ಶ್ರುತಿ ಮಹೋರ್ಮ್ಯುಲ್ಲಾಸಿವಾರಾಶಿವಾ|
ರಿತಧಾತ್ರೀತಳಗೀತಿ ನಿರ್ಮಳಯಶಂಗಾರೂಢಸರ್ವಜ್ಞ ಭೂ
ಪತಿಗೊಲ್ದಾಗಳುವಿಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೨

ಶಾ|| ಕೈಳಾಸಂ ನಿಷಧಾಪಾಂಗ ನಿಕಟಕ್ಷೋಣೀಧರಂ ನೀಳ ಕು
ತ್ಕೀಳಂ ಕಂದಮಹೀಧರಂ ಶಿಖರನಾಮೋದ್ಯನ್ನಗಂ ಪ್ರಸುರ|
ತ್ಪ್ರಾಳೇಯಾಚಲವಿತನೆಮ್ಮವೊಲಿಳಾಭೃನ್ನಾಥನೆಂದಿಂತಿಳಾ
ಪಾಳಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೩

ಮ|| ಜಳ ದ್ವೀಪ ರಸತಳಾಂಬರ ಕುಲಾದ್ರೀಂದ್ರಂಗಳೋರಂತೆ ತ
ನ್ನೊಳಮುದ್ಯತ್ಕಟಕಂಗಳಾವಹ ಮಹಾದ್ರವ್ಯಂಗಳೋರಂತೆ ಮಂ|
ಗಳಕಾರ್ಯಂಗಳನಿತ್ತು ಮತ್ತೆ ಮಣಿಭೂಷಾತುಂಗರತ್ನಾಂಶು ಪಾ
ಟಳಿತಂಗೀಗರಿಗಂಗೆ ಮಂಗಳ ಮಹಾಶ್ರೀಯಂ ಜಯಶ್ರೀಯುಮಂ|| ೩೪

ನಯನಾನಂದ ಮೃಗಾಂಕಬಿಂಬಮುದಯಂಗೆಯ್ವರ್ಕಬಿಂಬಂ ಮನ
ಪ್ರಿಯಲಕ್ಷ್ಮೀ ವದನೇಂದು ಬಿಂಬಮಖಿಲ ಕ್ಷ್ಮಾದವೀಪರ್ವಾಪ್ರಮೋ|
ದ ಯಶೋಬಿಂಬಮುದಗ್ರದಿಕ್ಕರಿಕರಾಕರಾಕಾರೋಲ್ಲಸದ್ಬಾಹುಗೀ
ಪ್ರಿಯಗಳ್ಳಂಗೊಸೆದೀಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೫

ವ|| ಎಂದು ಪೊಗೞ್ದು ಮಾಣ್ದ ನಂತರದೊಳ್ ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜಾದಿ ಮಹಾಮುನಿಪ್ರತತಿಗಳ್ ಬಂದು ನಿಜಕಮಂಡಲುಜಲಂಗಳೊಳ್ ಬೆರಸಿದ ಧವಳಾಕ್ಷತಂಗಳಂ ತಳಿದು-

ವ|| ಅರಿ ಭೂಪಾಳ ದವಾನಳಂ ಹರಿಗ ನಿನ್ನುಗ್ರಾಸಿ ಧಾರಾಂಬು ಶ್ರೀ
ಕರದಿಂ ಮೞ್ಗ್ಗುಗೆ ದಾನವರ್ಷ ಸಲಿಲಂ ಕೊಳ್ಗರ್ಥಿ ಸಸ್ಯಕ್ಕೆ ಕಿ|
ನ್ನರಿಯರ್ ಪಾಡುಗೆ ನಿನ್ನದೊಂದು ಪಲವುಂ ಬಣ್ಣಂಗಳಂ ಮೇರು ಮಂ
ದರ ಕೈಳಾಸ ಮಹೇಂದ್ರ ನೀಳ ನಿಷಧಾದ್ರೀಂದ್ರೋಪಕಂಠಂಗಳೊಳ್|| ೩೬

ಮಂಗಳಕರವಾದ ಸಂಪತ್ತನ್ನೂ ಜಯಲಕ್ಷ್ಮಿಯನ್ನೂ ಕೊಡಲಿ. ೩೨. ಸರಸ್ವತಿ ವಚನಗಳೆಂಬ ಅಮೃತವೂ ಪುರಾಣಸಿದ್ಧವೂ ಆದ ಕಥಾಸಮೂಹಗಳೂ ಜಿನಾಗಮಗಳೂ ಜಪ ವೇದ ಸಮೂಹಗಳೂ ಅನಂತವಾದ ವೇದಗಳಲ್ಲಿ ಪಂಡಿತರಾದವರ ಜ್ಞಾನಗಳೆಂಬ ದೊಡ್ಡ ಅಲೆಗಳಿಂದ ಸಮುದ್ರದಿಂದ ಪರಿವೃತರಾದ ಭೂಮಿಯ ಸಮುದ್ರಗೀತೆಗಳೂ ಇವೆಲ್ಲವೂ ನಿರ್ಮಲ ಕೀರ್ತಿಯುಳ್ಳ ಆರೂಢಸರ್ವಜ್ಞನೆಂಬ ಬಿರುದುಳ್ಳ ಅರಿಕೇಸರಿ ರಾಜನಿಗೆ (ಅರ್ಜುನನಿಗೆ) ಪ್ರೀತಿಯಿಂದ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಸರ್ವದಾ ಕೊಡಲಿ-

೩೩. ಕೈಲಾಸ ಪರ್ವತ, ನಿಷಧಪರ್ವತ ಮತ್ತು ಅಂಗದೇಶಕ್ಕೆ ಸಮೀಪವಾದ ಪರ್ವತ, ನೀಲಗಿರಿಯೆಂಬ ಪರ್ವತ, ಕಂದವೆಂಬ ಪರ್ವತ, ಶಿಖರವೆಂಬ ಪರ್ವತ ಎತ್ತರವೂ ಪ್ರಕಾಶವೂ ಆದ ಹಿಮವತ್ಪರ್ವತ ಇವೆಲ್ಲ ಅರಿಕೇಸರಿಯೂ ನಮ್ಮ ಹಾಗೆಯೇ ರಾಜಾರಾಜ, ಚಕ್ರವರ್ತಿ (ಇಳೆಯನ್ನು ಧರಿಸಿರುವವನು) ಎಂದು ಭೂಪಾಲನಾದ ಅರಿಕೇಸರಿಗೆ (ಅರ್ಜುನನಿಗೆ) ಮಂಗಳ ಮಹಾಶ್ರೀಯನ್ನೂ ಜಯಶ್ರೀಯನ್ನೂ ಅನುಗ್ರಹಿಸಲಿ. ೩೪. ಸಮುದ್ರ, ದ್ವೀಪ, ಪಾತಾಳ, ಆಕಾಶ ಮತ್ತು ಕುಲಪರ್ವತಗಳು ತಮ್ಮಲ್ಲಿರುವ ಅಮೂಲ್ಯವಾದ ವಸ್ತುಗಳನ್ನು ಒಂದೇ ಸಮನಾದ ಮಂಗಳಕಾರ್ಯಗಳನ್ನು ಪಾಟಳಕಾಂತಿಯಿಂದ ಪ್ರಕಾಶಮಾನವಾದ ಅರಿಗಂಗೆ ಕೊಟ್ಟು ಮಂಗಳಕಾರ್ಯಗಳನ್ನೂ ಜಯಶ್ರೀಯನ್ನೂ ದಯಪಾಲಿಸಲಿ. ೩೫. ಕಣ್ಣುಗಳಿಗಾನಂದವನ್ನುಂಟುಮಾಡುವ ಚಂದ್ರಬಿಂಬವೂ ಬಾಲಸೂರ್ಯನ ಬಿಂಬವೂ ಮನಸ್ಸಿಗೆ ಪ್ರಿಯಳಾದ ಲಕ್ಷ್ಮೀದೇವಿಯ ಮುಖಚಂದ್ರಬಿಂಬವೂ ಸಮಸ್ತವಾದ ಭೂಮಿ, ದ್ವೀಪ, ಮತ್ತು ಸಮುದ್ರಗಳಿಗೆ ಸಂತೋಷವನ್ನುಂಟುಮಾಡುವ ಯಶೋಬಿಂಬವೂ (ಕ್ರೀರ್ತಿಸಮೂಹವೂ) ದೀರ್ಘವಾದ ದಿಗ್ಗಜಗಳ ಸೊಂಡಿಲುಗಳ ಆಕಾರವನ್ನುಳ್ಳ ಪ್ರಕಾಶಮಾನವಾದ ಬಾಹುಗಳನ್ನುಳ್ಳ ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಅರಿಕೇಸರಿಗೆ (ಅರ್ಜುನನಿಗೆ) ಸಂತೋಷಿಸಿ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಕೊಡಲಿ ವ|| ಎಂದು ಹೊಗಳಿ ನಿಲ್ಲಿಸಿಯಾದಮೇಲೆವ್ಯಾಸ ಕಶ್ಯಪ ವಿಶ್ವಾಮಿತ್ರ ಭಾರದ್ವಾಜರೇ ಮೊದಲಾದ ಮಹಾಮುನಿಗಳ ಸಮೂಹಗಳು ಬಂದು ತಮ್ಮ ಕಮಂಡಲುಗಳ ನೀರಿನಿಂದ ಬೆರಸಿದ ಬಿಳಿಯ ಅಕ್ಷತೆಗಳನ್ನು ಚೆಲ್ಲಿ (ಆಶೀವಾದಪೂರ್ವಕ ತಲೆಯ ಮೇಲೆ ಎರಚಿ) ಹರಸಿದರು. ೩೬. ಎಲೈ ಅರ್ಜುನನೇ ಶತ್ರುರಾಜರೆಂಬ ಕಾಡುಕಿಚ್ಚು ನಿನ್ನ ಭಯಂಕರವಾದ ಕತ್ತಿಯ ಅಲಗೆಂಬ ನೀರಿನ ಹನಿಗಳಿಂದ (ಅಸಿಧಾರೆಯ ಹನಿಗಳಿಂದ) ಅಳಿದುಹೋಗಲಿ. ಯಾಚಕರೆಂಬ ವೃಕ್ಷಕ್ಕೆ ನಿನ್ನ ದಾನವೆಂಬ ಮಳೆಯು ಸುರಿಯಲಿ. ನಿನ್ನ ಸ್ತುತಿರೂಪವಾದ

ವ|| ಎಂದು ಪರಸಿ ತಮ್ಮ ನಿವಾಸಂಗಳ್ಗೆ ಪೋದರಾಗಳ್ ಧರ್ಮನಂದನನೆನಗೆ ನಿನ್ನ ರಾಜ್ಯಾಭಿವೃದ್ಧಿಯಂ ನೋಡುತಿರ್ಪುದುಂ ಮುಮುಕ್ಷು ವೃತ್ತಿಯೊಳಿರ್ಪುದುಮಲ್ಲದೆ ಪೆಱತೇನುಂ ಬಾೞ್ತೆಯಲ್ಲೆಂದು ಭೀಮ ನಕುಳ ಸಹದೇವರ್ಕಳ್ಗೆ ದುರ್ಯೋಧನನ ತಮ್ಮನಪ್ಪ ಯುಯುತ್ಸುಗಮವರ್ ಬೇಡಿದ ನಾಡುಗಳನೆ ಕುಡಿಸಿ ಸಂತಸಂಬಡಿಸೆ ಪುರುಷೋತ್ತಮನಂ ವಿಬುಧವನಜವನಕಳಹಂಸನುಮಿಂತೆಂದಂ-

ಕಂ|| ನಿನ್ನ ದಯೆಯಿಂದಮರಿ ನೃಪ
ರನ್ನೆ ಕೊಂದೆಮಗೆ ಸಕಳ ರಾಜ್ಯಶ್ರೀಯುಂ|
ನಿನ್ನ ಬಲದಿಂದೆ ಸಾರ್ದುದು
ನಿನ್ನುಪಕಾರಮನದೇತಳ್ ನೀಗುವೆನೋ|| ೩೭

ವ|| ಎಂದು ಮುಕುಂದನನನುನಯ ವಚನ ರಚನಾ ಪರಂಪರೆಗಳಿಂದ ಸಂತಸಂ ಬಡೆನುಡಿದು ಸಾತ್ಯಕಿವೆರಸನರ್ಘ್ಯವಸ್ತುವಾಹನ ಸಹಿತಂ ದ್ವಾರಾವತಿಗೆ ಕಳಿಪಿ ಸಕಳಭುವನತಳ ಭಾರಮನವಯವದಿಂ ತಾಳ್ದಿರ್ದುದಾತ್ತವೃತ್ತಿಯೊಳುದಾತ್ತನಾರಾಯಣನುಂ ಭುವನ ಭವನೋದರದೊಳ್ ಪಸರಿಸಿದ ತೇಜದೊಳ್ ಪ್ರಚಂಡ ಮಾರ್ತಂಡನುಂ ಆವೆಡೆಯೊಳಮಸ ಮಾನಮೆನಿಸಿದ ಮಹಾಮಹಿಮೆಯೊಳುದಾರಮಹೇಶ್ವರನುಂ ನಳ ನಹುಷ ಮಾಂಧಾತರಂ ಮಸುಳೆವಂದ ನೆಗೞ್ತೆಯೊಳೆ ಮನುಜಮಾಂಧಾತನುಂ ತ್ರಿಣೇತ್ರನುಮನಸುಂಗೊಳಿಸಿದ ಸಾಹಸದೊಳ್ ಕದನತ್ರಿಣೇತ್ರನುಂ ಅಚಳಿತ ಪ್ರತಿಜ್ಞೆಯೊಳ್ ಪ್ರತಿಜ್ಞಾ ಗಾಂಗೇಯನುಂ ರಾಮನುಮನೇೞಸಿದ ಸಹಾಸದೊಳಕಳಂಕರಾಮನುಂ ಬೇಡಿದರ ಬೇಡಿದುದಂ ಮಾರ್ಕೊಳ್ಳದೀವುದಱಂ ಪ್ರತ್ಯಕ್ಷಜೀಮೂತವಾಹನೆನುಂ ಚತುರ್ದನ ಭುವನಂಗಳೊಳ್ ತನಗೆ ಮಾರ್ಮಲೆವರಿಲ್ಲಪ್ಪುದಱಂ ಜಗದೇಕಮಲ್ಲನುಂ ಉರ್ಕಿ ಬಂದು ಮೇಲ್ವಾಯ್ದ ಮಾರ್ವಲಂಗಳಂ ತನ್ನ ಬಾಳ ಬಾಯೊಳೞiಡಿದುದೞಂ ಪರಸೈನ್ಯಭೈರವನುಂ ಅರಾತಿ ಗಜಘಟೆಗಳೆನಿತು ಬಂದೊಡ್ಡೆಯುಂ ತನ್ನೊಂದಮಂದಧ್ವನಿಗೊಡ್ಡೊಡೆ ದೋಡುವುದಱಂ ವೈರಿಗಜಘಟಾವಿಘಟನನುಂ ತನಗಿದಿರನದಿರದೊಡ್ಡಿದ ವಿದ್ವಿಷ್ಟ ಬಲಂ ನೋಡೆ ನೋಡೆ ಕರಗುವುದಱಂ ವಿದ್ವಿಷ್ಟ ವಿದ್ರಾವಣನುಂ ಅರಾತಿ ವನ ಗಹನಮನಳುರ್ದು ಕೊಳ್ವುದಱಂದಮರಾತಿ ಕಾಳಾನಳನುಂ ಪಗೆವರೆಂಬ ಕುರಂಗಂಗಳನೊಂದೊಂದಳೊಂದಲೀ ಯದೆೞ್ಬಟ್ಟುವುದಱಂ ರಿಪುಕುರಂಗಕಂಠೀರವನುಂ ವಿಕ್ರಾಂತದೊಳ್ ತನ್ನಿರ್ದಲ್ಲಿ ತಾನೆ ಪಿರಿಯನಪ್ಪುದಱಂ ವಿಕ್ರಾಂತ ತುಂಗನುಂ ಆವೆಡೆಯೊಳಂ ವಿಕ್ರಮಂ ಕ್ರಮಮೆನಿಸಿದುದಱಂ ಪರಾಕ್ರಮಧವಳನುಂ ಎಂತಪ್ಪ ಸಂಗ್ರಾಮದೊಳಂ

ಅನೇಕ ಹಾಡುಗಳನ್ನು ಕಿನ್ನರಿಯರು ಮೇರು, ಮಂದರ, ಕೈಲಾಸ, ಮಹೇಂದ್ರ, ನಿಷಧ ಪರ್ವತಗಳ ಸಮೀಪ ಪ್ರದೇಶಗಳಲ್ಲಿ (ತಪ್ಪಲಿನಲ್ಲಿ) ಹಾಡಲಿ. ವ|| ಎಂಬುದಾಗಿ ಆಶೀರ್ವಾದಮಾಡಿ ತಮ್ಮ ಮನೆಗಳಿಗೆ ಹೋದರು. ಆಗ ಧರ್ಮರಾಯನು ಅರ್ಜುನ! ನಿನ್ನ ರಾಜ್ಯಾಭಿವೃದ್ಧಿಯನ್ನು ನೋಡುತ್ತಿರುವುದೂ ಮೋಕ್ಷೇಚ್ಛುಗಳಾದ ತಪಸ್ವಿಗಳ ವೃತ್ತಿಯಲ್ಲಿರುವುದೂ ಅಲ್ಲೆದ ನನಗೆ ಬೇರೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿ ಹಾಗೆಯೇ ಭೀಮ ನಕುಲ ಸಹದೇವರುಗಳಿಗೂ ದುರ್ಯೋಧನನ ತಮ್ಮನಾದ ಯುಯುತ್ಸುವಿಗೂ ಅವರು ಕೇಳಿದ ನಾಡುಗಳನ್ನು ಕೊಡಿಸಿ ಸಂತೋಷಪಡಿಸಿದನು. ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು, ೩೭. ನನ್ನ ಕೃಪೆಯಿಂದ ಶತ್ರುರಾಜರನ್ನು ಸಂಪೂರ್ಣವಾಗಿ ಕೊಂದ ನಮಗೆ ಸಕಳ ರಾಜ್ಯಸಂಪತ್ತೂ ನಿನ್ನ ಶಕ್ತಿಯಿಂದಲೇ ಕೈಸೇರಿತು. ನಿನ್ನ ಸಹಾಯವನ್ನು ಯಾವುದರಲ್ಲಿ ತೀರಿಸಲಿ ವ|| ಎಂದು ಕೃಷ್ಣನನ್ನು ಪ್ರೀತಿಯುಕ್ತವಾದ ಮಾತುಗಳ ಸಮೂಹದಿಂದ ಸಂತೋಷಪಡುವ ಹಾಗೆ ಮಾತನಾಡಿ ಸಾತ್ಯಕಿಯೊಡನೆ ಬೆಲೆಯೇ ಇಲ್ಲದ ಅನೇಕ ವಸ್ತುವಾಹನಗಳ ಸಹಿತವಾಗಿ ದ್ವಾರಾವತಿಗೆ ಕಳುಹಿಸಿದನು. ಸಮಸ್ತವಾದ ಭೂಮಂಡಲದ ಭಾರವನ್ನೂ ಸುಲಭವಾಗಿ ಧರಿಸಿ ಉದಾತ್ತ ವೃತ್ತಿಯಲ್ಲಿದ್ದು ಉದಾತ್ತನಾರಾಯಣನೂ ಭುವನೋದರದಲ್ಲಿ (ಪ್ರಪಂಚವೆಂಬ ಮನೆಯ ಒಳಭಾಗದಲ್ಲಿ) ಪ್ರಸರಿಸಿದ ತೇಜಸ್ಸಿನಿಂದ ಪ್ರಚಂಡಮಾರ್ತಂಡನೂ (ಅತ್ಯಂತ ಕಾಂತಿಯುಕ್ತವಾದ ಸೂರ್ಯ) ಯಾವ ಕಡಯಲ್ಲಿಯೂ ಸಮಾನವೇ ಇಲ್ಲದವನು ಎಂಬ ಮಹಿಮೆಯಿಂದ ಉದಾರಮಹೇಶ್ವರನೂ ನಳನಹುಷಮಾಂಧಾತರನ್ನು ಕಾಂತಿಹೀನಮಾಡಿದ ಪ್ರಸಿದ್ಧಿಯಿಂದ ಮನುಜಮಾಂಧಾತನೂ ಮುಕ್ಕಣ್ಣನನ್ನೂ ಆಶ್ಚರ್ಯಪಡಿಸಿದ ಸಾಹಸದಿಂದ ಕದನತ್ರಿಣೇತ್ರನೂ ಚಲಿಸದೇ ಇದ್ದ ಪ್ರತಿಜ್ಞೆಯಿಂದ ಪ್ರತಿಜ್ಞಾಗಾಂಗೇಯನೂ ರಾಮನನ್ನೂ ಹಿಯ್ಯಾಳಿಸಿದ ಸಾಹಸದಿಂದ ಅಕಳಂಕ ರಾಮನೂ ಬೇಡಿದವರಿಗೆ ಅವರು ಬೇಡಿದುದನ್ನು ಪ್ರತಿಮಾತನಾಡದೆ ಕೊಡುವುದರಿಂದ ಪ್ರತ್ಯಕ್ಷ ಜೀಮೂತವಾಹನನೂ ಹದಿನಾಲ್ಕು ಲೋಕಗಳಲ್ಲಿಯೂ ತನಗೆ ಪ್ರತಿಭಟಿಸುವವರಿಲ್ಲದುದರಿಂದ ಜಗದೇಕಮಲ್ಲನೂ ಕೊಬ್ಬಿ ಬಂದು ಮೇಲೆ ಬೀಳುವ ಪ್ರತಿಸೈನ್ಯವನ್ನು ತನ್ನ ಕತ್ತಿಯ ಮೊನೆಯಿಂದ ನಾಶಪಡಿಸಿದುದರಿಂದ ಪರಸೈನ್ಯ ಭೈರವನೂ ಶತ್ರುಪಕ್ಷಗಳ ಆನೆಯ ಸಮೂಹವು ಎಷ್ಟು ಬಂದು ಚಾಚಿದರೂ ತನ್ನ ಒಂದು ಗರ್ಜನೆಗೆ ಗುಂಪು ಚೆದುರಿ ಓಡುವುದರಿಂದ ವೈರಿಗಜಘಟಾವಿಘಟನನೂ ತನಗೆ ಇದಿರಾಗಿ ಹೆದರದೆ ಬಂದು ಒಡ್ಡಿದ ಶತ್ರುಸೈನ್ಯವು ನೋಡುನೋಡುತ್ತಿರುವಾಗಲೇ ಕರುಗುವುದರಿಂದ ವಿದ್ವಿಷ್ಟ ವಿದ್ರಾವಣನೂ ಶತ್ರುಗಳೆಂಬ ಕಾಡಿನ ಒಳಭಾಗವನ್ನು ವ್ಯಾಪಿಸಿ ಸುಡುವುದರಿಂದ ಅರಾತಿ ಕಾಳಾನಳನೂ ಹಗೆಗಳೆಂಬ ಜಿಂಕೆಗಳನ್ನು ಒಂದೂ ಬಿಡದಂತೆ ಬೆನ್ನಟ್ಟಿ ಕೊಲ್ಲುವುದರಿಂದ ಅವಕಾಶವಿಲ್ಲದೆ ಓಡಿಸುವುದರಿಂದ ರಿಪು ಕುರಂಗಕಂಠೀರವನೂ ಪರಾಕ್ರಮದಲ್ಲಿ ತಾನಿದ್ದ ಜಾಗದಲ್ಲಿಯೇ ಹಿರಿಯನಾದುದರಿಂದ ವಿಕ್ರಾಂತತುಂಗನೂ, ಎಲ್ಲ ಕಡೆಯಲ್ಲಿಯೂ ಪರಾಕ್ರಮವೇ ತನಗೆ ಯೋಗ್ಯವಾದುದೆಂದು ಅಂಗೀಕರಿಸುವುದರಿಂದ ಪರಾಕ್ರಮಧವಳನೂ ಎಂತಹ ಯುದ್ಧದಲ್ಲಿಯೂ

ಪೋಗದೆ ನಟ್ಟು ನಿಲ್ವುದಱಂ ಸಮರೈಕಮೇರುವುಂ ಗೊಜ್ಜಿಗನೆಂಬ ಸಕಳ ಚಕ್ರವರ್ತಿ ಮುಳಿಯೆ ತನಗೆ ಶರಣಾಗತನಾದ ವಿಜಯಾದಿತ್ಯನಂ ಕಾದ ಬಲ್ಲಾಳ್ತನದೊಳ್ ಶರಣಾಗತ ಜಳನಿಯುಂ ವಿನಯಮೇ ತನಗೆ ಭೂಷಣಮಾಗೆ ಮಾಡುವುದಱಂ ವಿನಯ ಭೂಷಣನುಂ ಲೋಕಕ್ಕೆಲ್ಲಮಸಾಧಾರಣಮಪ್ಪ ದಾನಗುಣದೊಳ್ ಲೋಕೈಕಕಲ್ಪದ್ರುಮನುಂ ಎನಿತಾನುಂ ಗಜಗಮನಂಗಳಂ ತಾನೆ ಸಮೆದನಪ್ಪುದಱಂ ಗಜಗಮನರಾಜಪುತ್ರನುಂ ಎಂತಪ್ಪ ಗರ್ವವ್ಯಾಳಿಯುಮನತಿವರ್ತಿಗಳುಮನಾರೂಢದೊಳ್ ತನಗಳವಡುವುದಱಂದಾರೂಢ ಸರ್ವಜ್ಞನುಂ ಪರಮಾತ್ಮನಂತೆ ಲೋಕಾಲೋಕದ ವಸ್ತುಗಳುಮಂ ಕರತಳಾಮಳಕಮಾಗಱವುದರಿಂ ನೃಪ ಪರಮಾತ್ಮನುಂ ಎಂತಪ್ಪ ಪಂಡಿತರ ಗೋಷ್ಠಿಯೊಳಂ ತಾನೆ ಸೊಗಯಿಸುವುದಱಂ ವಿಬುಧ ವನಜವನಕಳಹಂಸನುಂ ಕೆಯ್ಗೆಯ್ಯದೆ ಸೊಗಯಿಸುವನಪ್ಪುದಱಂ ಸಹಜಮನೋಜನುಂ ಎಂತಪ್ಪ ಬರ್ದೆಯರುಮಂ ಬಗೆಗೆ ವರಿಸುವ ತಕ್ಕಿನೊಳ್ ಸುರತಮಕರಧ್ವಜನುಂ ಕೂರ್ಪ ಕೂರದರ ಕೂರದರ ಪಡೆಗಳೆರಡುಂ ತನ್ನನೆ ಮೆಚ್ಚುವುದಱಂ ಪಡೆಮೆಚ್ಚೆಗಂಡನುಂ ಎಂತಪ್ಪ ಮಾರ್ವಲಂಗಳುಮಂ ನೋಡುತ್ತೆ ಗೆಲ್ವುದಱಂ ನೋಡುತ್ತೆ ಗೆಲ್ವನುಂ ಮಹಾ ಭಾರಾವತಾರದೊಳತಿರಥ ಮಹಾರಥ ಸಮರರ್ಥಾರ್ಧರಥರ್ಕಳಂ ಪಡಲ್ವಡಿಸುವುದಱಂ ಸಾಹಸಾರ್ಜುನನುಮಮರೇಂದ್ರನೊಳರ್ಧಾಸನಮೇಱದ ಮಹಾ ಮಹಿಮೆಯೊಳ್ ಮಹಿಮ್ಹಾರ್ಣವನುಮರಿಕರಿಗಳಂ ಪಡಲ್ವಡಿಸುವ ಬೀರದೊಳರಿ ಕೇಸರಿಯುಮಾಗಿ-

ಚಂ|| ಪಸದನಮಾವುದಾವ ಋತುವಿಂಗಮರ್ದೊಪ್ಪುಗುಮಾವ ಪೊೞ್ತದಾ
ವೆಕಸದೊಳೊಂದುಗುಂ ವಿನಯಮಾವೆಡೆಗಾವುದು ಚಿಲ್ವುವೆತ್ತು ರಂ|
ಜಿಸುಗುಮದರ್ಕದಂ ಸಮಱ ನಿಚ್ಚಲುಮಾ ಬಿಯಮಾ ವಿನೋದಮಾ
ಪಸದನಮಾ ವಿಳಾಸದೊಳೊಡಂಬಡೆ ಭೋಗಿಸಿದಂ ಗುಣಾರ್ಣವಂ|| ೩೮

ಪಸರಿಸಿ ನೀಳ್ದ ತನ್ನ ಜಸದೊಳ್ ಪೆಱನೊರ್ವನ ಕೀರ್ತಿ ತಳ್ತು ರಂ
ಜಿಸೆ ನೆಗೞiತನೇಂ ನೆಗೞ್ದನೆಂಬ ಚಲಂ ಮಿಗೆ ತನ್ನ ಪೆಂಪು ತ|
ನ್ನೆಸಕಮೆ ತನ್ನ ವಿಕ್ರಮಮೆ ತನ್ನ ನೆಗೞ್ತೆಯೆ ತನ್ನ ಮಾತೆ ತಾ
ನೆಸೆವ ಜಗತ್ರಯಕ್ಕೆನಿಸಿ ಪಾಲಿಸಿದಂ ನೆಲನಂ ಗುಣಾರ್ಣವಂ|| ೩೯

ಕಂ|| ಆ ಮಳಯಾಚಳ ಹಿಮಗಿರಿ
ಸೀಮಾವನಿತಳಕೆ ಬೆಂಗಿಮಂಡಳದೊಳ್ ಚಿ|
ಲ್ವಾವಗಮೆ ತನಗದೊಂದೂರ್
ನಾಮದೊಳಂ ವೆಂಗಿಪೞು ಕರಂ ಸೊಗಯಿಸುಗುಂ|| ೪೦

ಬಿಟ್ಟುಹೋಗದೆ ಸ್ಥಿರವಾಗಿ ನಿಲ್ಲುವುದರಿಂದ ಸಮರೈಕಮೇರುವೂ ಗೊಜ್ಜಿಗನೆಂಬ ಸಕಳಚಕ್ರವರ್ತಿಯ ಕೋಪಕ್ಕೆ ಪಾತ್ರನಾದ ವಿಜಯಾದಿತ್ಯನನ್ನು ರಕ್ಷಿಸಿದ ಪರಾಕ್ರಮದಿಂದ (ರಕ್ಷಿಸಿದುದರಿಂದ) ಶರಣಾಗತಜಳನಿಯ. ವಿನಯವನ್ನೇ ತನಗೆ ಒಡವೆಯನ್ನಾಗಿ ಮಾಡಿಕೊಂಡಿರುವುದರಿಂದ ವಿನಯಭೂಷಣನೂ ಲೋಕಕ್ಕೆಲ್ಲ ಅಸಾಧಾರಣ ರೀತಿಯದಾಗಿರುವ ದಾನಗುಣದಿಂದ ಲೋಕೈಕ ಕಲ್ಪದ್ರುಮನೂ ಎಷ್ಟೋ ಗಜಶಾಸ್ತ್ರಗಳನ್ನು ತಾನೆ ರಚಿಸಿರುವುದರಿಂದ ಗಜಾಗಮ ರಾಜಪುತ್ರನೂ ಎಂತಹ ಮದ್ದಾನೆಯನ್ನೂ ವಶಕ್ಕೆ ಬರದೇ ಇರುವ ತುಂಟಾನೆಗಳನ್ನೂ ಹತ್ತುವುದರಲ್ಲಿ ಸಮರ್ಥನಾಗಿರುವುದರಿಂದ ಆರೂಢಸರ್ವಜ್ಞನೂ ಪರಮಾತ್ಮನ ಹಾಗೆ ಲೋಕಾಲೋಕ ವಸ್ತುಗಳನ್ನು ಕಯ್ಯಲ್ಲಿರುವ ನೆಲ್ಲಿಯಕಾಯಿನಂತೆ ತಿಳಿದಿರುವುದರಿಂದ ನೃಪಪರಮಾತ್ಮನೂ ಎಂತಹ ವಿದ್ವಾಂಸರ ಸಮೂಹದಲ್ಲಿಯೂ ತಾನೇ ಪ್ರಕಾಶಮಾನವಾಗಿರುವುದರಿಂದ ವಿಬುಧವನಜವನಕಳಹಂಸನೂ ಅಲಂಕಾರಮಾಡಿಕೊಳ್ಳದೆಯೇ ಸುಂದರನಾಗಿರುವುದರಿಂದ ಸಹಜಮನೋಜನೂ ಎಂತಹ ಪ್ರೌಢಸ್ತ್ರೀಯರನ್ನೂ ತನ್ನಲ್ಲಿ ಪ್ರೀತಿಮಾಡುವ ಹಾಗೆ ಮಾಡುವ ಯೋಗ್ಯತೆಯಿಂದ ಸುರತಮಕರದ್ವಜನೂ ಪ್ರೀತಿಸುವ ಮತ್ತು ಪ್ರೀತಿಸದಿರುವ ಎರಡುಸೈನ್ಯಗಳೂ ತನ್ನನ್ನು ಮೆಚ್ಚುವುದರಿಂದ ಪಡೆಮೆಚ್ಚೆಗಂಡನೂ ಎಂತಹ ಪ್ರತಿಸೈನ್ಯವನ್ನೂ ನೋಡುವುದರಿಂದಲೇ ಗೆಲ್ಲುವುದರಿಂದ ನೋಡುತ್ತೆ ಗೆಲ್ವನೂ ಮಹಾಭಾರತ ಯುದ್ಧದಲ್ಲಿ ಅತಿರಥ ಸಮರಥ ಅರ್ಥರಥರುಗಳನ್ನೂ ಕೆಳಗೆ ಬೀಳುವ ಹಾಗೆ ಮಾಡುವುದರಿಂದ ಸಾಹಸಾರ್ಜುನನೂ ದೇವೇಂದ್ರನೊಡನೆ ಅರ್ಧಾಸನವನ್ನು ಹತ್ತಿದ ಮಹಾಮಹಿಮೆಯಿಂದ ಮಹಿಮಾರ್ಣವನೂ ಶತ್ರುಗಳು ಆನೆಗಳನ್ನು ಕೆಳಗುರುಳಿಸುವುದರಿಂದ ಅರಿಕೇಸರಿಯೂ ಆಗಿ ೩೯. ಯಾವ ಋತುವಿಗೆ ಯಾವ ಅಲಂಕಾರವೊಪ್ಪುವುದು, ಯಾವ ಹೊತ್ತು ಯಾವ ಕಾರ್ಯಕ್ಕೆ ಒಪ್ಪುತ್ತದೆ ಯಾವ ಸ್ಥಳಕ್ಕೆ ಯಾವ ವಿನಯ (ನೀತಿ) ಸೊಗಸಾಗಿದೆ ಅದಕ್ಕೆ ಅದನ್ನು ಸರಿಯಾಗಿ ಸೇರಿಸಿ (ಹೊಂದಿಸಿಕೊಂಡು) ಪ್ರತಿದಿನವೂ ಆ ವೆಚ್ಚ, ಆ ಸಂತೋಷ, ಆ ಅಲಂಕಾರ, ಆ ವಿಲಾಸಗಳಲ್ಲಿ ಸೇರಿ ಮನೋಹರವಾಗುವ ರೀತಿಯಲ್ಲಿ (ಅರಿಕೇಸರಿಯು) ಗುಣಾರ್ಣವನು ಸುಖವಾಗಿದ್ದನು. ೩೯. ಪ್ರಸರಿಸಿ ಬೆಳೆದ ತನ್ನ ಯಶಸ್ಸಿನೊಡನೆ ಇನ್ನೊಬ್ಬನ ಕೀರ್ತಿ ಸಮಾನವಾಗಿ ಸೇರಿ ಪ್ರಕಾಶಿಸಿದರೆ ಅವನು ಪ್ರಸಿದ್ಧನೆ ಎಂಬ ಛಲವು ಹೆಚ್ಚಾಗಿರಲು ತನ್ನ ವೈಭವ, ತನ್ನ ಪರಾಕ್ರಮ, ತನ್ನ ಪ್ರಸಿದ್ಧಿ, ತನ್ನ ಮಾತು ಇವುಗಳೇ ಪ್ರಸಿದ್ಧವಾಗಿರುವ ಮೂರು ಲೋಕಗಳಿಗೂ ತಾನೇ ಎನಿಸಿ ಗುಣಾರ್ಣವನು ರಾಜ್ಯವನ್ನು ಪಾಲಿಸಿದನು. ೪೦. ಮಲಯಪರ್ವತದಿಂದ ಹಿಡಿದು ಹಿಮವತ್ಪರ್ವತವನ್ನು ಮೇರೆಯಾಗಿ ಉಳ್ಳ ಭೂಭಾಗದಲ್ಲಿ ವೆಂಗಿದೇಶವೇ ಯಾವಾಗಲೂ ಸುಂದರವಾಗಿರುವುದು. ಅದರಲ್ಲಿ ವೆಂಗಿಪಳು ಎಂಬುದು ವಿಶೇಷವಾಗಿ ಶೋಭಿಸುವುದು.

ಅದುವೆ ವಸಂತಂ ಕೊಟ್ಟೂ
ರೊದವಿದ ನಿಡುಗುಂದಿ ಮಿಕ್ಕ ವಿಕ್ರಮ ಪುರವೆಂ|
ಬುದುಮಗ್ರಹಾರ ಸಂಪ
ತ್ಪದವಿಗಳೊಳಮಗ್ರಗಣ್ಯನೂರ್ಜಿತಪುಣ್ಯಂ|| ೪೧

ನಯಶಾಲಿ ವತ್ಸ ಗೋತ್ರ
ಶ್ರಯಣೀಯನನೇಕ ಸಕಳ ಶಾಸ್ತ್ರಾರ್ಥ ವಿನಿ|
ಶ್ಚಯ ಮತಿ ಕೃತಿ ಮಾಧವ ಸೋ
ಮಯಾಜಿ ಸಲೆ ನೆಗೞ್ದನಾಸಮುದ್ರಂಬರೆಗಂ|| ೪೨

ಉ|| ಶಕ್ರ ಶಶಾಂಕ ಸೂರ್ಯ ಪವಮಾನರುಮಾತನ ಹೋಮ ಮಂತ್ರ ಚ
ಕ್ರ ಕ್ರಮಕಕ್ಕಣಂ ಮಿಡುಕಲಾಗಡೆ ಶಾಪಮನೀಗುಮೆಂದೆ ದಿ|
ಕ್ಚಕ್ರಮುಮಂಜಿ ಬೆರ್ಚಿ ಬೆಸಕೆಯ್ವುದದಲ್ಲದಗುರ್ವು ಪರ್ವೆ ಸ
ರ್ವಕ್ರತುಯಾಜಿಯಾದನಳವಿಂತುಟು ಮಾಧವಸೋಮಯಾಜಿಯಾ|| ೪೩

ಕಂ|| ವರ ದಿಗ್ವನಿತೆಗೆ ಮಾಟದ
ಕುರುಳಾ ತ್ರೈಭುವನಕಾಂತೆಗಂ ದಲ್ ಕಂಠಾ|
ಭರಣಮೆನೆ ಪರೆದ ತನ್ನ
ಧ್ವರ ಧೂಮದೆ ಕರಿದು ಮಾಡಿದಂ ನಿಜಯಶಮಂ|| ೪೪

ತತ್ತನಯನಖಿಳ ಕರಿ ತುರ
ಗೋತ್ತಮ ಮಣಿ ಕನಕ ಸಾರ ವಸ್ತುವನೆರೆದ|
ಗ್ಮಿತ್ತು ಸಲೆ ನೆಗೞ್ದನತಿ ಪುರು
ಷೋತ್ತಮನಭಿಮಾನಚಂದ್ರನೆನಿಪಂ ಪೆಸರಿಂ|| ೪೫

ಕಂ|| ಆತಂಗೆ ಭುವನ ಭವನ
ಖ್ಯಾತಂಗೆ ಸಮಸ್ತ ವೇದ ವೇದಾಂಗ ಸಮು|
ದ್ಯೋತಿತ ಮತಿಯುತನುಚಿತ ಪು
ರಾತನ ಚರಿತಂ ತನೂಭವಂ ಕೊಮರಯ್ಯಂ|| ೪೬

೪೧. ಆವೆಂಗಿಪಳುವಿನಲ್ಲಿ ವಸಂತ ಕೊಟ್ಟೂರು ನಿಡುಗುಂದಿ ಅತ್ಯತಿಶಯವಾದ ವಿಕ್ರಮಪುರ ಎಂಬುವ ಅಗ್ರಹಾರಗಳು ಶೋಭಾಯಮಾನವಾಗಿವೆ. ಅಲ್ಲಿಯ ಸಂಪತ್ಪದವಿಗಳಲ್ಲಿ ಅಗ್ರಗಣ್ಯನಾದವನೂ ಅಭಿವೃದ್ಧಿಯಾಗುತ್ತಿರುವ ಪುಣ್ಯವುಳ್ಳವನೂ ಆದ ೪೨. ವಿನಯಶಾಲಿಯೂ ವತ್ಸಗೋತ್ರವನ್ನು ಆಶ್ರಯಿಸಿದವನೂ ಸಕಲ ಶಾಸ್ತ್ರಾರ್ಥಗಳಲ್ಲಿ ಸ್ಥಿರವಾದ ಪಾಂಡಿತ್ಯವುಳ್ಳವನೂ ಆದ ಮಾಧವ ಸೋಮಯಾಜಿಯೆಂಬುವನು ಸಮುದ್ರ ಕಡೆಯವರೆಗೂ ಬಹುಪ್ರಸಿದ್ಧನಾಗಿದ್ದನು. ೪೩. ಇಂದ್ರಚಂದ್ರ ಸೂರ್ಯವಾಯುದೇವತೆಗಳೂ ಆತನ ಹೋಮ ಮಂತ್ರ ಸಮೂಹಕ್ಕೆ ಸ್ವಲ್ಪವೂ ಅಡ್ಡಿ ಮಾಡುತ್ತಿರಲಿಲ್ಲ. ಮಾಡಿದರೆ ಶಾಪವನ್ನು ಕೊಡುತ್ತಾನೆಂದೇ ದಿಙ್ಮಂಡಲಗಳೂ ಹೆದರಿ ಸೇವೆ ಮಾಡುತ್ತವೆ. ಅಲ್ಲದೆ ಅವನು ಸರ್ವಕ್ರತುಯೆಂಬಯಜ್ಞವನ್ನು ಮಾಡಿದವನು. ಮಾಧವ ಸೋಮಯಾಜಿಯ ಶಕ್ತಿಯಂತಹುದು. ೪೪. ಶ್ರೇಷ್ಠವಾದ ದಿಕ್ಕೆಂಬ ಸ್ತ್ರೀಗೆ ಕತ್ತಿನ ಆಭರಣವು ಎನ್ನುವ ಹಾಗೆ ವ್ಯಾಪಿಸಿರುವ ತನ್ನ ಯಜ್ಞದೂಮದಿಂದ (ಹೊಗೆಯಿಂದ) ತನ್ನ ಯಶಸ್ಸನ್ನೂ ಕಪ್ಪಾಗಿ ಮಾಡಿಕೊಂಡನು. ೪೫. ಪುರುಷರಲ್ಲಿ ಅತಿಶ್ರೇಷ್ಠನಾದ ಅವನ ಮಗನಾದ ಅಭಿಮಾನಚಂದ್ರನೆಂಬ ಹೆಸರುಳ್ಳವನು ಬೇಡಿದವರಿಗೆ ತನ್ನ ಸಮಸ್ತ ಆನೆ ಕುದುರೆ ಉತ್ತಮ ರತ್ನ ಚಿನ್ನ ಮೊದಲಾದ ಉತ್ತಮ ವಸ್ತುಗಳನ್ನು ದಾನಮಾಡಿ ವಿಶೇಷ ಪ್ರಸಿದ್ಧನಾದನು. ೪೬. ಭೂಮಂಡಲದಲ್ಲಿ ಪ್ರಸಿದ್ಧನಾದ ಆತನಿಗೆ ಸಕಲ ವೇದಶಾಸ್ತ್ರಗಳಿಂದ ಪ್ರಕಾಶಿಸಲ್ಪಟ್ಟ ಬುದ್ಧಿಯುಳ್ಳವನೂ ಉಚಿತವಾದ ಪ್ರಾಚೀನ ಆಚರಸಂಪನ್ನನಾದವನೂ ಆದ ಮಗನು ಕೊಮರಯ್ಯನೆಂಬುವನು. ಆ ಕೊಮರಯ್ಯನಿಗೆ ಭೂಮ್ಯಾಕಾಶಗಳಲ್ಲಿ ಹರಡಿರುವ ತನ್ನ ಗುಣವೆಂಬ ಮಣಿಗಳಿಗೆ ಸಮುದ್ರದಂತಿರುವವನೂ ಅಜ್ಞಾನವೆಂಬ ಕತ್ತಲನ್ನು ಪರಿಹರಿಸುವವನೂ ಆದ ಅಭಿರಾಮದೇವರಾಯನೆಂಬುವನು ಮಗನು. ೪೮. ಜಾತಿಯಲ್ಲೆಲ್ಲ ಉತ್ತಮ ಜಾತಿಯ ಬ್ರಾಹ್ಮಣಕುಲದವನಿಗೆ ಧರ್ಮದಲ್ಲೆಲ್ಲ ಜೈನಧರ್ಮವೇ ಉತ್ತಮವಾದುದೆಂದು (ಯೋಗ್ಯವಾದುದು) ಆ ಜಾತಿಯನ್ನು ಅಭಿವೃದ್ಧಿಮಾಡಿ ತನ್ನ ಖ್ಯಾತಿಯನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಂಡನು. ಅವನ ಮಗನೇ ಪ್ರಸಿದ್ಧನಾದ ಕವಿತಾಗುಣಾರ್ಣವ ಎಂಬ ಬಿರುದಿನ ಪಂಪ.

ಆ ಕೊಮರಯ್ಯಂಗವನಿತ
ಳಾಕಾಶ ವ್ಯಾಪ್ತ ನಿಜ ಗುಣ ಮಣಿ ರ|
ತ್ನಾಕರನಜ್ಞಾನತಮೋ
ನೀಕರನಭಿರಾಮ ದೇವರಾಯಂ ತನಯಂ|| ೪೭

ಉ|| ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ
ಮಾತೊ ಜಿನೇಂದ್ರ ಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತ|
ಜ್ಜಾತಿಯನುತ್ತರೋತ್ತರಮೆ ಮಾಡಿ ನೆಗೆೞದನಿಂತಿರಾತ್ಮ ವಿ
ಖ್ಯಾತಿಯನಾತನಾತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ|| ೪೮

ಕಂ|| ಪಂಪಂ ಧಾತ್ರೀವಳಯ ನಿ
ಳಿಂಪಂ ಚತುರಂಗ ಬಳ ಭಯಂಕರಣಂ ನಿ|
ಷ್ಕಂಪಂ ಲಲಿತಾಲಂಕರ
ಣಂ ಪಂಚಶರೈಕರೂಪನಪಗತಪಾಪಂ|| ೪೯

ಚಂ|| ಕವಿತೆ ನೆಗೞ್ತೆಯಂ ನಿಱಸೆ ಜೋಳದ ಪಾಱ ನಿಜಾನಾಥನಾ
ಹವದೊಳರಾತಿನಾಯಕರ ಪಟ್ಟನೆ ಪಾಱಸೆ ಸಂದ ಪೆಂಪು ಭೂ|
ಭುವನದೊಳಾಗಳುಂ ಬೆಳಗೆ ಮಿಕ್ಕಭಿಮಾನದ ಮಾತು ಕೀರ್ತಿಯಂ
ವಿವರಿಸೆ ಸಂದನೇಂ ಕಲಿಯೊ ಸತ್ಕವಿಯೋ ಕವಿತಾಗುಣಾಣವಂ|| ೫೦

ಕಂ|| ಆತಂಗರಿಕೇಸರಿ ಸಂ
ಪ್ರೀತಿಯೆ ಬೞಯಟ್ಟಿ ಪಿರಿದನಿತ್ತು ನಿಜಾಭಿ|
ಖ್ಯಾತಿಯನಿಳೆಯೊಳ್ ನಿಱಸ
ಲ್ಕೀ ತೆಱದಿತಿಹಾಸ ಕಥೆಯನೊಪ್ಪಿಸೆ ಕುಱತಂ|| ೫೧

ಶ್ರೌತಮಿದು ತನಗೆ ಗಂಗಾ
ಸ್ರೋತದವೊಲಳುಂಬಮಾಗಿ ಗೆಡೆಗೊಳ್ಳದೆ ವಿ|
ಖ್ಯಾತ ಕವಿ ವೃಷಭ ವಂಶೋ
ದ್ಭೂತಮೆನಲ್ ಬರಿಸದೊಳಗೆ ಸಮೆವಿನೆಗಮಿದಂ|| ೫೨

ವ|| ಅದೆಂತೆನೆ ಆದಿವಂಶಾವತಾರಸಂಭವಂ ರಂಗಪ್ರವೇಶಂ ಜತುಗೃಹದಾಹಂ ಹಿಡಿಂಬ ವಧೆಬಕಾಸುರವಧೆ ದ್ರೌಪದೀಸ್ವಯಂವರಂ ವೈವಾಹಂ ಯುಷ್ಠಿರಪಟ್ಟಬಂಧನಂ ಇಂದ್ರಪ್ರಸ್ಥ ಪ್ರವೇಶಂ ಅರ್ಜುನದಿಗ್ವಿಜಯಂ ದ್ವಾರಾವತೀಪ್ರವೇಶಂ ಸುಭದ್ರಾಹರಣಂ ಸುಭದ್ರಾ ವಿವಾಹಂ ಖಾಂಡವವನ ದಹನಂ ಮಯ ದರ್ಶನಂ ನಾರದಾಗಮನಂ ಜರಾಸಂಧ ವಧೆ ರಾಜಸೂಯಂ ಶಿಶುಪಾಲವಧೆ ದ್ಯೂತವ್ಯತಿಕರಂ ವನ ಪ್ರವೇಶಂ ಕಿವಿರ‍್ಮ ವಧೆ ಕಾಮ್ಯಕವನದರ್ಶನಂ ದ್ವೆ ತವನ ಪ್ರವೇಶಂ ಸೈಂಧವಬಂಧನಂ ಚಿತ್ರಾಂಗದಯುದ್ಧಂ ಕಿರಾತದೂತಾಗಮನಂ ದ್ರೌಪದೀವಾಕ್ಯಂ ಪಾರಾಶರ ವೀಕ್ಷಣಂ ಇಂದ್ರಕೀಲಾಭಿಗಮನಂ ಈಶ್ವರಾರ್ಜುನ ಯುದ್ಧಂ ದಿವ್ಯಾಸ್ತ್ರಲಾಭಂ ಇಂದ್ರಲೋಕಾಲೋಕನಂ ನಿವಾತಕವಚಾಸುರವಧೆ ಕಾಳಕೇಯ ಪೌಳೋಮವಧೆ ಸೌಗಂಕಕಮಲಾಹರಣಂ ಜಟಾಸುರವಧೆ ಮಾಯಾಮತ್ತಹಸ್ತಿ ವ್ಯಾಜಂ ವಿರಾಟಪುರ

೪೯. ಪಂಪನು ಭೂಮಂಡಲದ ಶ್ರೇಷ್ಠದೇವತೆ. ಚತುರಂಗಸೈನ್ಯಗಳಿಗೆ ಭಯವನ್ನುಂಟುಮಾಡುವವನು. ಧೈರ್ಯಶಾಲಿ (ನಡುಗದವನು) ಸುಂದರವಾದ ಅಲಂಕಾರವುಳ್ಳವನು. ಮನ್ಮಥನ ಹಾಗೆಯೇ ಇರುವ ರೂಪವುಳ್ಳವನು, ಪಾಪರಹಿತನಾದವನು – ೫೦. ತನ್ನ ಕವಿತ್ವವು ಖ್ಯಾತಿಯನ್ನು ಸ್ಥಾಪಿಸಿತು. ಅನ್ನದಾತನಲ್ಲಿದ್ದ ಉಪ್ಪಿನ ಋಣವು ತನ್ನ ರಾಜನ ಯುದ್ಧದಲ್ಲಿ ಶತ್ರುನಾಯಕರ ವೀರಪಟ್ಟಗಳನ್ನು ಹಾರಿಸುವಂತಹ ಹಿರಿಮೆಯನ್ನೂ ತನ್ನ ಯಶಸನ್ನೂ ವಿವರಿಸಿತು. ಕವಿತಾಗುಣಾರ್ಣವನು ಬಹು ಪ್ರಸಿದ್ಧನಾದನು. ಪಂಪಕವಿ ಎಂತಹ ಶೂರನೋ ಎಂತಹ ಸತ್ಕವಿಯೋ? ೫೧. ಆತನಿಗೆ (ಆ ಪಂಪನಿಗೆ) ಅರಿಕೇಸರಿರಾಜನು ಅತ್ಯಂತ ಪ್ರೀತಿಯಿಂದ ಹೇಳಿಕಳುಹಿಸಿ ವಿಶೇಷವಾಗಿ ದಾನಮಾಡಿ ತನ್ನ ಕೀರ್ತಿಯನ್ನು ಭೂಮಿಯಲ್ಲಿ ಸ್ಥಾಪಿಸೆಂದು ಹೇಳಲು ಈ ರೀತಿಯಾದ ಇತಿಹಾಸ ಕಥೆಯನ್ನು ರಚಿಸಿ ಒಪ್ಪಿಸಲು ನಿಶ್ಚಯಿಸಿದನು.

೫೨. ವೇದಸದೃಶವಾದ ಈ ಕೃತಿಯು ತನಗೆ ಗಂಗಾಪ್ರವಾಹದಂತೆ ಅತ್ಯತಿಶಯವಾಗಿ ಪರರ ಸಹಾಯವನ್ನಪೇಕ್ಷಿಸದೆ ಪ್ರಸಿದ್ಧರಾದ ಕವಿಶ್ರೇಷ್ಠರ ಪರಂಪರೆಯಲ್ಲಿಯೇ ಹುಟ್ಟಿತು ಎನ್ನುವ ಹಾಗೆ ಒಂದು ವರ್ಷದಲ್ಲಿ ರಚಿತವಾಯಿತು. ವ|| ಅದು ಹೇಗೆಂದರೆ ಆದಿವಂಶಾವತಾರಸಂಭವ, ರಂಗಪ್ರವೇಶ, ಅರಗಿನಮನೆಯ ದಾಹ, ಹಿಡಿಂಬವಧೆ, ಬಕಾಸುರವಧೆ, ದ್ರೌಪದೀಸ್ವಯಂವರ, ವಿವಾಹ, ಧರ್ಮರಾಯಪಟ್ಟಾಭಿಪೇಕ, ಇಂದ್ರಪ್ರಸ್ಥಪ್ರವೇಶ, ಅರ್ಜುನ ದಿಗ್ವಿಜಯ, ದ್ವಾರಾವತೀ ಪ್ರವೇಶ, ಸುಭದ್ರಾಹರಣ, ಸುಭದ್ರಾವಿವಾಹ, ಖಾಂಡವವನ ದಹನ, ಮಯದರ್ಶನ,

ಪ್ರವೇಶಂ ಕೀಚಕವಧೆ ದಕ್ಷಿಣೋತ್ತರ ಗೋಗ್ರಹಣಂ ಅಭಿಮನ್ಯು ವಿವಾಹಂ ಮಂತ್ರಾಳೋಚನಂ ದೂತಕಾರ್ಯಂ ಕುರುಕ್ಷೇತ್ರಪ್ರಯಾಣಂ ಭೀಷ್ಮ ಕರ್ಣ ವಿವಾದಂ ಯುದ್ಧೋದ್ಯೋಗಂ ಶ್ವೇತವಧೆ ಭೀಷ್ಮಶರ ಶಯನಂ ದ್ರೋಣಾಭಿಷೇಕಂ ಅಭಿಮನ್ಯು ವಧೆ ಸೈಂಧವ ವಧೆ ಘಟೋತ್ಕಚ ವಧೆ ದ್ರೋಣಚಾಪ ಮೋಕ್ಷಂ ದ್ರೋಣ ವಧೆ ಅಶ್ವತ್ಥಾಮ ಕರ್ಣ ವಿವಾದಂ ಕರ್ಣಾಭಿಷೇಕಂ ಸಂಸಪ್ತಕ ವಧೆ ದುಶ್ಯಾಸನ ವಧೆ ವೇಣೀಸಂಹನನಂ ಕರ್ಣಾರ್ಜುನ ಯುದ್ಧಂ ಕರ್ಣ ಸೂರ್ಯಲೋಕಪ್ರಾಪ್ತಿ ಶಲ್ಯಾಭಿಷೇಕಂ ಶಲ್ಯನಿಪಾತನಂ ಭೀಮ ದುಯೋಧನ ಗದಾಯುದ್ಧಂ ದುಯೋಧನ ವಧೆ ಪಂಚಪಾಂಡವಹರಣಂ ಸ್ತ್ರೀಪರ್ವಂ ಅರ್ಜುನಾಭಿಷೇಕಂ ಪೆಱವುಮುಪಾಖ್ಯಾನ ಕಥೆಗಳೊಳಮೊಂದುಂ ಕುಂದಲೀಯದೆಪೇೞ್ಗೆಂ-

ಚಂ|| ಎಸೆಯೆ ಸಮಸ್ತ ಭಾರತಮನಾವ ನರೇಂದ್ರರುಮಾರ್ತು ಕೂರ್ತು ಪೇ
ೞಸರೆ ಕವೀಂದ್ರರುಂ ನೆಯೆ ಪೇೞರೆ ಪೇೞಪೊಡೆಯ್ದೆ ನೀನೆ ಪೇ|
ಱಸುವೆಯುದಾತ್ತ ಕೀರ್ತಿ ನಿಲೆ ಪೇೞ್ವೊಡೆ ಪಂಪನೆ ಪೇೞ್ಗುಮಿಂತು ಪೇ
ೞಸಿದ ನರೇಂದ್ರರುಂ ನೆಯೆ ಪೇೞ್ದ ಕವೀಂದ್ರರುಮಾರ್ ಧರಿತ್ರಿಯೊಳ್|| ೫೩

ಎನೆ ಸಕಲಾವನೀತಳ ಜನಂ ಪಿರಿದುಂ ದಯೆಗೆಯ್ದು ಸಾರ್ಚಿ ಮೆ
ಲ್ಲನೆ ಪಿರಿದಪ್ಪ ಗೌರವದ ಮೈಮೆಯ ಮನ್ನಣೆಯೋಳಿಗಲ್ ಕರಂ|
ಮನಮನಲರ್ಚೆ ಕೀರ್ತಿ ಜಗದೊಳ್ ನಿಲೆ ಪೇೞಸಿದಂ ಜಗಕ್ಕೆ ನ
ಚ್ಚಿನ ಕವಿತಾ ಗುಣಾರ್ಣವನಿನೀ ಕೃತಿ ಬಂಧನಮಂ ಗುಣಾರ್ಣವಂ|| ೫೪

ಪಿರಿಯಕ್ಕರ|| ತುಡುಗೆ ನಿಚ್ಚಲುಂ ಪಂಚರತ್ನಂಗಳುಂ ಪೊಱಮಡೆ ತನ್ನುಡುವುಪ್ಪಟಂಗಳ್
ಮಡಿಯೊಳಾಗೆಯುಮೞ್ಕಱಂ ಕಂಡಾಗಳ್ ಪಿರಿಯ ಬಿತ್ತರಿಗೆಯಂ ಕೆಲದೊಳಿಕ್ಕಿ|
ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಗಂ ಲೆಕ್ಕಮಿಲ್ಲೆನಿಸಿ ರಾಗಂ
ಗಿಡದೆ ಕೊಂಡಾಡಿದಂ ಬಲ್ಲಹನಱಯೆ ಗುಣಾರ್ಣವಂ ಕವಿತಾಗುಣಾರ್ಣವನಂ|| ೫೫

ಬೀರದಳವಿಯ ನನ್ನಿಯ ಚಾಗದ ಶಾಸನಂ ಚಂದ್ರರ್ಕತಾರಂಬರಂ
ಮೇರು ನಿಲ್ವಿನಂ ನಿಲವೇೞ್ಕುಂ ಕಾವ್ಯಕ್ಕೆ ತಾನಿತ್ತಂ ಶಾಸನದಗ್ರಹಾರಂ|
ಸಾರಮೆಂಬಿನಂ ಪೆಸರಿಟ್ಟು ತಾನೀಯೆ ಹರಿಗನ ಧರ್ಮ ಭಂಡಾರದಂತೆ
ಸಾರಮಾದುದು ಬಿಟ್ಟಗ್ರಹಾರಮಾ ಬಚ್ಚೆಸಾಸಿರದೊಳು ಧರ್ಮವುರಂ|| ೫೬

ನಾರದಾಗಮನ, ಜರಾಸಂಧವಧೆ, ರಾಜಸೂಯ, ಶಿಶುಪಾಲವಧೆ, ದ್ಯೂತವ್ರ್ಯತಿಕರ, ವನಪ್ರವೇಶ, ಕೀಚಕವಧೆ, ಕಾಮ್ಯಕವನದರ್ಶನ, ದ್ವೆ ತವನಪ್ರವೇಶ, ಸೈಂಧವಬಂಧನ, ಚಿತ್ರಾಂಗದಯುದ್ಧ, ಕಿರಾತದೂತಾಗಮನ, ದ್ರೌಪದೀವಾಕ್ಯ, ವ್ಯಾಸರ ದರ್ಶನ, ಇಂದ್ರಕೀಲಾಭಿಗಮನ, ಈಶ್ವರಾರ್ಜುನಯುದ್ಧ, ದಿವ್ಯಾಸ್ತ್ರಲಾಭ, ಇಂದ್ರಾಲೋಕಾಲೋಕನ, ನಿವಾತಕವಚಾಸುರವಧೆ, ಕಾಳಕೇಯಪೌಳೋಮವಧೆ, ಸೌಗಂಕಕಮಲಾಹರಣ, ಜಟಾಸುರವಧೆ, ಮತ್ತಗಜದ ವೃತ್ತಾಂತ, ವಿರಾಟಪುರಪ್ರವೇಶ, ಕೀಚಕವಧೆ, ದಕ್ಷಿಣೋತ್ತರ ಗೋಗ್ರಹಣ, ಅಭಿಮನ್ಯುವಿವಾಹ, ಮಂತ್ರಾಲೋಚನೆ, ದೂತಕಾರ್ಯ, ಕುರುಕ್ಷೇತ್ರ ಪ್ರಯಾಣ, ಭೀಷ್ಮಕರ್ಣವಿವಾದ, ಯುದ್ಧೋದ್ಯೋಗ, ಶ್ವೇತವಧೆ, ಭೀಷ್ಮಶರಶಯನ, ದ್ರೋಣಾಭಿಷೇಕ, ಅಭಿಮನ್ಯುವಧೆ, ಸೈಂಧವವಧೆ, ಘಟೋತ್ಕಚವಧೆ, ದ್ರೋಣಚಾಪಮೋಕ್ಷ, ದ್ರೋಣವಧೆ, ಅಶ್ವತ್ಥಾಮಕರ್ಣ ವಿವಾದ, ಕರ್ಣಾಭಿಷೇಕ, ಸಂಸಪ್ತಕವಧೆ, ದುಶ್ಯಾಸನವಧೆ, ಮುಡಿಯನ್ನು ಕಟ್ಟುವುದು, ಕರ್ಣಾರ್ಜುನರ ಯುದ್ಧ, ಕರ್ಣನ ಸೂರ್ಯಲೋಕಪ್ರಾಪ್ತಿ, ಶಲ್ಯಾಭಿಷೇಕ, ಶಲ್ಯನಿಪಾತನ, ಭೀಮದುರ್ಯೋಧನ ಗದಾಯುದ್ಧ, ದುಯೋಧನವಧೆ, ಪಂಚಪಾಂಡವಹರಣ, ಸ್ತ್ರೀಪರ್ವ, ಅರ್ಜುನಾಭಿಷೇಕ ಮೊದಲಾದ ಇತರ ಅನೇಕ ಉಪಾಖ್ಯಾನ ಕತೆಗಳಲ್ಲಿ ಒಂದೂ ತಪ್ಪದೆ ಹೇಳಿದೆನು. ೫೩. ಇದುವರೆಗೆ ಯಾವ ರಾಜರೂ ಸಮರ್ಥರಾಗಿ ಪ್ರೀತಿಯಿಂದ ಪ್ರಸಿದ್ಧವಾದ ಸಮಗ್ರಭಾರತವನ್ನು ಹೇಳಿಸಿಲ್ಲ. ಕವಿಶ್ರೇಷ್ಠರೂ ಪೂರ್ಣವಾಗಿ ಹೇಳಿಲ್ಲ. ಹೇಳಿಸುವುದಾದರೆ ನೀನೆ ಚೆನ್ನಾಗಿ ಹೇಳಿಸುತ್ತೀಯೆ; ಉನ್ನತವಾದ ಕೀರ್ತಿ ನಿಲ್ಲುವ ಹಾಗೆ ಹೇಳುವ ಪಕ್ಷದಲ್ಲಿ ಪಂಪನೆ ಹೇಳುತ್ತಾನೆ. ಹೀಗೆ ಹೇಳಿಸಿದ ರಾಜರೂ ಪೂರ್ಣವಾಗಿ ಹೇಳಿದ ಕವಿಶ್ರೇಷ್ಠರೂ ಲೋಕದಲ್ಲಿ ಯಾರಿದ್ದಾರೆ? ೫೪. ಎಂದು ಸಮಸ್ತ ಭೂಮಂಡಲದ ಜನವೂ ಹೇಳಲು ಗುಣಾರ್ಣವನಾದ ಅರಿಕೇಸರಿಯು ವಿಶೇಷವಾದ ಕೃಪೆಮಾಡಿ ಹಿರಿದಾದ ಮಹಿಮೆಯ ಸತ್ಕಾರಸಮೂಹಗಳನ್ನು ಸದ್ದಿಲ್ಲದೆ ಮಾಡಿ ವಿಶೇಷವಾಗಿ ಮನಸ್ಸನ್ನು ಅರಳಿಸಲು (ತೃಪ್ತಿಪಡಿಸಲು) ಅವನ ಕೀರ್ತಿ ನಿಲ್ಲುವಂತೆ ಲೋಕದಲ್ಲಿ ಪ್ರಸಿದ್ಧನಾದ ಕವಿತಾಗುಣಾರ್ಣವನಾದ ಪಂಪನಿಂದ ಈ ಕಾವ್ಯಪ್ರಬಂಧವನ್ನು ಗುಣಾರ್ಣವನು ಹೇಳಿಸಿದನು. ೫೫. ಪ್ರತಿನಿತ್ಯವೂ ಆಭರಣಗಳನ್ನೂ ಪಂಚರತ್ನಗಳನ್ನೂ ಹೊರಗೆ ಹೊರಡಬೇಕಾದರೆ ತಾನು ಸ್ವಂತವಾಗಿ ಧರಿಸುವ ಶ್ರೇಷ್ಠವಾದ ವಸ್ತ್ರಗಳನ್ನೂ ಒಳ್ಳೆಯ ಮಡಿಯಾಗಿರುವ ಸ್ಥಿತಿಯಲ್ಲಿ ಪ್ರೀತಿಯಿಂದ ಕೊಡುವನು. ಉನ್ನತವಾದ ಆಸನಗಳನ್ನೂ ತನ್ನ ಪಕ್ಕದಲ್ಲಿಯೇ ಹಾಸಿ ಕುಳ್ಳಿರಿಸಿಕೊಂಡು ಗೌರವಿಸುವನು. ಅವನು ದಾನಮಾಡುವ ಹಳ್ಳಿಗಳಿಗೂ ಗೋವುಗಳೇ ಮೊದಲಾದ ಪ್ರಾಣಿಗಳಿಗೂ ದಾಸಿಯರಿಗೂ ಲೆಕ್ಕವೇ ಇಲ್ಲ. ಪ್ರೀತಿಯು ಕಡಿಮೆಯಾಗದಂತೆ ರಾಷ್ಟ್ರಕೂಟರ ರಾಜನಾದ ವಲ್ಲಭದೇವನಾದ ಮೂರನೆಯ ಕೃಷ್ಣನು ತಿಳಿಯುವಂತೆ ಕವಿತಾಗುಣಾರ್ಣವನಾದ ಪಂಪಕವಿಯನ್ನು ಸತ್ಕರಿಸಿದನು. ೫೬. ತನ್ನ ವೀರ್ಯದ ಪರಾಕ್ರಮದ ಶಕ್ತಿಯ ಸತ್ಯದ ದಾನದ (ಪ್ರತೀಕಾರವಾಗಿರುವ) ಶಾಸನವು ಚಂದ್ರಸೂರ್ಯ ನಕ್ಷತ್ರಗಳಿರುವವರೆಗೆ ಮೇರುಪರ್ವತ ನಿಲ್ಲುವಂತೆ ಕಾವ್ಯಕ್ಕೆ ಬಹುಮಾನವಾಗಿ (ಸಂಭಾವನೆಯಾಗಿ) ತಾನು ಕೊಟ್ಟ ಶಾಸನದಗ್ರಹಾರವು ಸಾರವತ್ತಾಗಿ ನಿಲ್ಲಬೇಕು

ಚಂ|| ದೆಸೆ ಮಖಧೂಮದಿಂ ದ್ವಿಜರ ಹೋಮದಿನೊಳ್ಗೆ ಹಂಸ ಕೋಕ ಸಾ
ರಸ ಕಳ ನಾದದಿಂದೊಳಗೆ ವೇದನಿನಾದದಿನೆತ್ತಮೆಯ್ದೆ ಶೋ|
ಭಿಸೆ ಸುರಮಥ್ಯಮಾನ ವನ ಕ್ಷುಭಿತಾರ್ಣ ಘೋಷದಂತೆ ಘೂ
ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ|| ೫೭

ಕಂ|| ರಾಜದ್ರಾಜಕಮೆನಿಸಿದ
ಸಾಜದ ಪುಲಿಗೆಯ ತಿರುಳ ಕನ್ನಡದೊಳ್ ನಿ|
ರ್ವ್ಯಾಜದೆಸಕದೊಳೆ ಪುದಿದೊಂ
ದೋಜೆಯ ಬಲದಿನಿಯ ಕವಿತೆ ಪಂಪನ ಕವಿತೇ|| ೫೮

ಚಂ|| ಪುದಿದ ಜಸಂ ಪೊದೞ್ದ ಚಳಮೊಂದಿದಳಂಕೃತಿ ಕೈತ ದೇಸಿಯೆಂ
ಬುದನೆನೆ ವಸ್ತು ವಿದ್ಯೆಯೆನೆ ಕಬ್ಬಮೆ ಮುನ್ನಮವಂತಿವಲ್ಲದ|
ಲ್ಲದೆ ಪೆಱವಿಲ್ಲ ಕಬ್ಬಮೆನೆ ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆ
ಟ್ಟಿದುವು ಸಮಸ್ತಭಾರತಮುಮಾದಿಪುರಾಣಮಹಾಪ್ರಬಂಧಮುಂ|| ೫೯

ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂ
ತಳಕೆ ಸಮಸ್ತ ಭಾರತಮುಮಾದಿಪುರಾಣಮುಮೆಂದು ಮೆಯ್ಯಸುಂ|
ಗೊಳುತಿರೆ ಪೂಣ್ದು ಪೂಣ್ದ ತೆಱದೊಂದಱುದಿಂಗಳೊಳೊಂದು ಮೂಱು ತಿಂ
ಗಳೊಳೆ ಸಮಾಪ್ತಿಯಾದುದೆನೆ ಬಣ್ಣಿಸಿದಂ ಕವಿತಾಗುಣಾರ್ಣವಂ|| ೬೦

ಕ್ಷಿತಿಗೆ ಸಮಸ್ತ ಭಾರತಮುಮಾದಿಪುರಾಣಮುವಿಗಳೊಂದಳಂ
ಕೃತಿಯವೊಲಿರ್ದುವೇಕಱಯ ಪೋದವರಾದವರೊಳ್ ಸರಸ್ವತೀ|
ಮತಿ ಕವಿತಾಗುಣಕ್ಕೆ ಪದೆದೆಯ್ದೆವರಲ್ಕೆ ಕವಿಂದ್ರರಾರ್ ಸರ
ಸ್ವತಿಗೆ ವಿಳಾಸಮಂ ಪೊಸತು ಮಾಡುವ ಪಂಪನ ವಾಗ್ವಿಲಾಸಮಂ|| ೬೧

ಉ|| ವ್ಯಾಸಮುನಿ ಪ್ರಣೂತ ಕೃತಿಯಂ ಸಲೆ ಪೇೞ್ದು ಸತ್ಯವಿ
ವ್ಯಾಸ ಸಮಾಗಮಾನ್ವಿತಮನಾದಿಪುರಾಣಮನೆಯ್ದೆ ಪೇೞ್ದು ವಾ|
ಕ್ಶ್ರೀ ಸುಭಗಂ ಪುರಾಣಕವಿಯುಂ ಧರೆಗಾಗಿರೆಯುಣ್ಮಿ ಪೊಣ್ಮುವೀ
ದೇಸಿಗಳುಂತೆ ನಾಡೊವಜನಾದನೊ ಪೇೞ್ ಕವಿತಾಗುಣಾರ್ಣವಂ|| ೬೨

ಎಂದು ಹೊಸದಾಗಿ ನಾಮಕರಣಮಾಡಿ ಕೊಡಲು ಆ ಬಚ್ಚೆಸಾಸಿರವೆಂಬ ನಾಡಿನಲ್ಲಿ ಧರ್ಮಪುರವೆಂಬ ಅಗ್ರಹಾರವು ಅರಿಕೇಸರಿಯ ಧರ್ಮಭಂಡಾರದಂತೆ (ಧರ್ಮವು ಕೂಡಿಟ್ಟಿರುವ ಉಗ್ರಾಣದಂತೆ) ಸಾರವತ್ತಾದುದು ಆಯಿತು. ೫೭. ದಿಕ್ಕುಗಳು ಯಜ್ಞಯಾಗಗಳ ಹೊರೆಯಿಂದಲೂ ಬ್ರಾಹ್ಮಣರು ಮಾಡುವ ಹೋಮದಿಂದಲೂ ಒಳ್ಳೆಯ ಕೆರೆಗಳು ಹಂಸ ಚಕ್ರವಾಕ ಸಾರಸಪಕ್ಷಿಗಳ ಮಧುರವಾದ ಧ್ವನಿಯಿಂದಲೂ ಊರಿನ ಒಳಭಾಗವು ವೇದಘೋಷದಿಂದಲೂ ತುಂಬಿರಲು ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದ ಘೋಷದಂತೆ ಅರಿಕೇಸರಿಯು ಧರ್ಮವಾಗಿ ಕೊಟ್ಟ ಧರ್ಮಪುರವು ಶಬ್ದಮಾಡುತ್ತ ಯಾವಾಗಲೂ ಬಹು ರಮಣೀಯವಾಗಿತ್ತು. ೫೮. ಪಂಪನ ಕವಿತ್ವವು ಪ್ರಕಾಶಮಾನವಾದ ರಾಜನುಳ್ಳದ್ದು ಎಂದೆನಿಸಿದ ಪುಲಿಗೆರೆಯ ಸಹಜವಾದ ತಿರುಳುಕನ್ನಡದಲ್ಲಿ ಋಜುವಾದ ಕಾವ್ಯಮಾರ್ಗದಲ್ಲಿ ಶಕ್ತಿಯುಕ್ತವಾಗಿಯೂ ಇಂಪಾಗಿಯೂ ಇರುವಂತೆ ರಚಿತವಾಗಿದೆ. ೫೯. ಕೂಡಿಕೊಂಡಿರುವ ಯಶಸ್ಸು ವ್ಯಾಪ್ತವಾದ ಓಜಸ್ಸು ಅಥವಾ ಕಾಂತಿ, ಸೇರಿಕೊಂಡಿರುವ ಅಲಂಕಾರ, ದೇಸಿ ರಚನೆಯೆಂಬುದನ್ನೇ ಪ್ರಧಾನವಸ್ತುಗಳನ್ನಾಗಿ ಉಳ್ಳ ಕಾವ್ಯಗಳು ವಿದ್ಯೆಗಿಂತ ಮಾನ್ಯವಾದುವು. ಅವಲ್ಲದವು ಕಾವ್ಯವೇ ಅಲ್ಲ. ಈ ಭಾರತವೂ ಆದಿಪುರಾಣವೂ ಅವುಗಳ ಹಾಗಿರದೆ ಮೇಲೆ ಹೇಳಿದ ಗುಣಗಳಲ್ಲದೆ ಬೇರೆಯಲ್ಲ ಎಂದೆನಿಸಿಕೊಂಡು ಪ್ರಾಚೀನಕಾವ್ಯಗಳನ್ನೆಲ್ಲ ಪರಾಜಿತವನ್ನಾಗಿ (ಹೊಡೆದು ಹಾಕಿದುವು) ಮಾಡಿದುವು. ೬೦. ಇಲ್ಲಿ ವಿಕ್ರಮಾರ್ಜುನವಿಜಯ ಅಥವಾ ಭಾರತದಲ್ಲಿ ಸಮಸ್ತಭೂಮಂಡಲಕ್ಕೆ ಲೋಕವ್ಯವಹಾರವನ್ನೂ ಅಲ್ಲಿ ಆ ಆದಿಪುರಾಣದಲ್ಲಿ ಜಿನಾಗಮವನ್ನೂ ಪ್ರಕಾಶಪಡಿಸುತ್ತೇನೆ. ಸಮಸ್ತಭಾರತವೂ ಆದಿಪುರಾಣವೂ ನನ್ನ ಶರೀರವನ್ನೂ ಪ್ರಾಣವನ್ನೂ ಆಕ್ರಮಿಸಿಕೊಂಡಿರಲು ಪ್ರತಿಜ್ಞೆಮಾಡಿ ಆ ಪ್ರತಿಜ್ಞೆ ಮಾಡಿದ ರೀತಿಯಲ್ಲಿಯೇ ಒಂದು (ಭಾರತವು) ಆರು ತಿಂಗಳಲ್ಲಿಯೂ ಮತ್ತೊಂದು (ಆದಿಪುರಾಣವು) ಮೂರುತಿಂಗಳಲ್ಲಿಯೂ ಪೂರ್ಣವಾಯಿತು ಎನ್ನುವ ಹಾಗೆ ಕವಿತಾಗುಣಾರ್ಣವನಾದ ಪಂಪನು ವರ್ಣಿಸಿದನು. ೬೧. ಸಮಸ್ತ ಭಾರತವೂ ಆದಿಪುರಾಣವೂ ಲೋಕಕ್ಕೆ ಈಗ ಒಂದು ಅಲಂಕಾರದಂತಿದೆ. ಏಕೆ ಗೊತ್ತಿದೆಯೇ? ಹಿಂದೆ ಆಗಿಹೋದವರಲ್ಲಿಯೂ ಈಗ ಆಗಿರುವವರಲ್ಲಿಯೂ ಸರಸ್ವತೀಮತಿಯಾಗಿ ಪಂಪನ ಕವಿತಾಗುಣಕ್ಕೆ ಆಸೆಪಟ್ಟು ಅವನ ಮೇಲ್ಮೆಯ ಹತ್ತಿರಕ್ಕೆ ಬರುವವರೂ ಸರಸ್ವತಿಗೆ ವಿಳಾಸವನ್ನು ಹೊಸದುಮಾಡುವ ಅವನ ಮಾತಿನ ವೈಭವವನ್ನು ಮೀರುವವರೂ ಯಾರೂ ಇಲ್ಲ. ೬೨. ವ್ಯಾಸಮಹರ್ಷಿಗಳಿಂದ ಹೊಗಳಲ್ಪಟ್ಟ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿಯೂ ಪ್ರಸಿದ್ಧರಾದ ಸತ್ಕವಿಗಳ

ಚಂ|| ಪುದಿದಿರೆ ರಾಗಮುರ್ಕೆ ಪೊಸವೇಟದಲಂಪುಗಳೆಲ್ಲಮೋದಿದ
ರ್ಗಿದಱನುಯಾಯಿಗಳ್ಗೆಸೆವುದಾರ ಗುಣಂ ಸಕಳಾವನೀಶ್ವರ|
ರ್ಗದಟನಳುರ್ಕೆ ಭೃತ್ಯನಿವಹಕ್ಕೆ ಚದುರ್ ಗಣಿಕಾಜನಕ್ಕೆ ಕುಂ
ದದೆ ನೆಲಸಿರ್ಕೆ ಮಹಿತಳಕ್ಕೆ ಮದೀಯ ಕೃತಿಪ್ರಬಂಧದಿಂ|| ೬೩

ಮ||ಸ್ರ|| ಚಲದೊಳ್‌ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನುತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ|
ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ
ರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ|| ೬೪

ಮ|| ಕರಮೞ್ಕರ್ತು ಸಮಸ್ತ ಭಾರತ ಕಥಾ ಸಂಬಂಧಮಂ ಬಾಜಿಸಲ್
ಬರೆಯಲ್ ಕೇಳಲೊಡರ್ಚುವಂಗಮಿದಱ ಳ್ ತನ್ನಿಷ್ಟವಪ್ಪನ್ನಮು|
ತ್ತರಮಕ್ಕುಂ ಧೃತಿ ತುಷ್ಟಿ ಪುಷ್ಚಿ ವಿಭವಂ ಸೌಭಾಗ್ಯಮಿಷ್ಟಾಂಗನಾ
ಸುರತಂ ಕಾಂತಿಯಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ|| ೬೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ

ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಚತುರ್ದಶಾಶ್ವಾಸಂ

ವ್ಯಾಖ್ಯಾನ ಮತ್ತು ಸಹವಾಸಗಳಿಂದ ಕೂಡಿರುವ ಆದಿಪುರಾಣವನ್ನು ಚೆನ್ನಾಗಿ ಹೇಳಿಯೂ ಪಂಪನು ವಾಕ್ಸಂಪತ್ತಿನ ಸೌಂದರ್ಯವುಳ್ಳವನೂ ಪುರಾಣರಚನೆ ಮಾಡಿದ ಕವಿಯೂ ಭೂಮಿಗೆ ಆಗಿರಲು ಹಾಗೆಯೆ; ದೇಸಿಗುಣಗಳೂ ಉನ್ನತವಾಗಿ ಅಭಿವೃದ್ಧಿ ಯಾಗುತ್ತಿರಲು ಕವಿತಾಗುಣಾರ್ಣವನು ‘ನಾಡ ಒವಜ’- ನಾಡಿನ ಓಜ ಎಂದರೆ ನಾಡಿಗೇ ಆಚಾರ್ಯನೂ ಆದನು. ೬೩. ಭೂಮಂಡಲದಲ್ಲಿ ಈ ನನ್ನ ಕೃತಿಬಂಧವನ್ನು ಓದಿದರಿಗೆ ವ್ಯಾಪ್ತವಾದ ಸಂತೋಷವೂ ಇದರಂತೆ ನಡೆದುಕೊಂಡವರಿಗೆ ಅಭಿವೃದ್ಧಿಯಾಗುತ್ತಿರುವ ಪ್ರಣಯ ವೈಭವವೂ ಸಮಸ್ತರಾಜಮಂಡಲಕ್ಕೆ ಪ್ರಕಾಶವಾದ ಔದಾರ್ಯಗುಣವೂ ಸೇವಕವರ್ಗಕ್ಕೆ ಪರಾಕ್ರಮಾತಿಶಯವೂ ವೇಶ್ಯಾಜನಕ್ಕೆ ಚಾತುರ್ಯವೂ ಕಡಿಮೆಯಾಗದೆ ನೆಲಸಿರಲಿ. ೬೪. ಚಲದಲ್ಲಿ ದುಯೋಧನನೂ ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ ಬಲದಲ್ಲಿ ಶಲ್ಯನೂ ಗುಣೌನ್ನತಿಯಲ್ಲಿ ಭೀಷ್ಮನೂ ಚಾಪವಿದ್ಯಾಕೌಶಲದಲ್ಲಿ ದ್ರೋಣಾಚಾರ್ಯನೂ ಸಾಹಸದ ಮಹಿಮೆಯಲ್ಲಿ ಅರ್ಜುನನೂ ಧರ್ಮದಲ್ಲಿ ಪರಿಶುದ್ಧಮನಸ್ಸುಳ್ಳ ಧರ್ಮರಾಯನೂ ಶ್ರೇಷ್ಠರಾದವರು. ಇವರಿಂದ ಭಾರತವು ಲೋಕಪೂಜ್ಯವಾಗಿದೆ. ೬೫. ಸಮಸ್ತಭಾರತಕಥಾಪ್ರಬಂಧವನ್ನು ಪ್ರೀತಿಸಿ ವಾಚಿಸಲು (ಓದಲು) ಕೇಳಲು ಬರೆಯಲು ಪ್ರಾರಂಭಮಾಡುವವನಿಗೆ ಬೇಕಾದಷ್ಟು ಅಭಿವೃದ್ಧಿಯಾಗುತ್ತದೆ. ಧೈರ್ಯ, ತೃಪ್ತಿ, ಬಲ, ವೈಭವ, ಸೌಭಗ್ಯ, ತನ್ನ ಇಷ್ಟಳಾದ ಸ್ತ್ರೀಯ ಸಂಭೋಗ, ಶಾಂತಿ, ವೃದ್ಧಿ, ವೈಭವ, ಭದ್ರ, ಶುಭ, ಮಂಗಳ ಇವೆಲ್ಲವೂ ಆಗುತ್ತವೆ. ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳವನೂ ಆದ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಹದಿನಾಲ್ಕನೆಯ ಆಶ್ವಾಸವು.
***********
ಮುಂದಿನ ಭಾಗ :    ಪಂಪಭಾರತ : ಅನುಬಂಧ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ