ನನ್ನ ಪುಟಗಳು

26 ನವೆಂಬರ್ 2013

ಕನ್ನಡಿಗರ ತಾಯಿ (ಪದ್ಯ-1)

ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಬರೆದಿರುವ ಪ್ರಸ್ತುತ ಕವಿತೆಯನ್ನು ‘ಶತಮಾನದ ಮಕ್ಕಳ ಸಾಹಿತ್ಯ’ (ಸಂಪಾದಕರು: ಎನ್.ಎಸ್.ರಘುನಾಥ್) ಕೃತಿಯಿಂದ ಆರಿಸಿಕೊಳ್ಳಲಾಗಿದೆ.
ರಾಷ್ಟ್ರಕವಿ ಎಂ. ಗೋವಿಂದ ಪೈ
ಎಂ.ಗೋವಿಂದಪೈ (ಚಿತ್ರ ಕೃಪೆ: ಕನ್ನಡಪ್ರಭ)
ಗೋವಿಂದ ಪೈ ಅವರ ಕೈಬರಹ (ಕೃಪೆ: ವಿಕಿಪೀಡಿಯಾ)

           ಕನ್ನಡದ ಪ್ರಥಮ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಜನ್ಮತಾಳಿದ ದಿನ ಮಾರ್ಚ್ 23, 1883. ಅವರು ಜನಿಸಿದ್ದು ಮಂಜೇಶ್ವರದಲ್ಲಿ. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರು. ಬಿ. ಎ ಪರೀಕ್ಷೆ ಕಟ್ಟಿದ್ದಾಗ ಅವರ ತಂದೆ (ಮಂಗಳೂರಿನ ಸಾಹುಕಾರ ತಿಮ್ಮ ಪೈ) ಅವರ ಮರಣದ ದೆಸೆಯಿಂದಾಗಿ ಪರೀಕ್ಷೆಯ ಮಧ್ಯದಲ್ಲಿಯೇ ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿ ಮನೆಯ ಹೊಣೆಯನ್ನು ಹೊರಬೇಕಾಯಿತು. ಆದ್ದರಿಂದ ಅವರು ಬಿ.ಎ ಪದವಿಯನ್ನು ಪಡೆಯಲಾಗಲಿಲ್ಲ. ಆದರೂ ಅವರು ಇಂಗ್ಲಿಷ್ ವಿಭಾಗದಲ್ಲಿ ಉನ್ನತ ಶ್ರೇಣಿ ಗಳಿಕೆಗಾಗಿ ಚಿನ್ನದ ಪದಕ ಗಳಿಸಿದರು. ಅವರ ವ್ಯಾಸಂಗ ಅರ್ಧಕ್ಕೇ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ ಸಾಗಿತು. ಅವರು ತಮ್ಮ ತಾಯಿಯ ಊರಾದ ಮಂಜೇಶ್ವರದಲ್ಲಿ ಹುಟ್ಟಿದ್ದು ಮಾತ್ರವಲ್ಲದೆ, ಆಕೆಯ ಮೂಲಕ ತಮಗೆ ದತ್ತವಾದ ಆಸ್ತಿಯನ್ನೂ ನೋಡಿಕೊಂಡು ಅಲ್ಲಿಯೇ ನೆಲೆಸಿದ್ದರಿಂದ ಅವರನ್ನು ಮಂಜೇಶ್ವರದ ಗೋವಿಂದ ಪೈ ಎಂದು ಕರೆಯುವುದೇ ರೂಢಿಯಾಯಿತು.
        ಗೋವಿಂದ ಪೈ ಅವರ ಪತ್ನಿ ಕೃಷ್ಣಾಬಾಯಿ ಅವರು ತಮ್ಮ 45ನೆಯ ವಯಸ್ಸಿನಲ್ಲಿ ಕಣ್ಮುಚ್ಚಿದರು. ಆಕೆಯ ನೆನಪಿನಲ್ಲಿ ‘ಗೊಮ್ಮಟ ಜಿನಸ್ತುತಿ’ ಎಂಬ ಒಂದು ಕವಿತೆಯನ್ನು ರಚಿಸಿ ಆಕೆಗೆ ಕಾಣಿಕೆಯಾಗಿತ್ತರು. ಜೊತೆಗೆ ಸಹಧರ್ಮಿಣಿಯ ನೆನಪಿಗೆ ಬಾಷ್ಪಾಂಜಲಿಯಾಗಿ ತಮ್ಮನ್ನು ಅಗಲಿಸಿದ ವಿಧಾತನಿಗೆ ಶ್ರದ್ಧಾಂಜಲಿಯಾಗಿ 87 ಕವಿತೆಗಳನ್ನು ಬರೆದು ‘ನಂದಾದೀಪ’ವೆಂಬ ಕವನ ಸಂಕಲನವೊಂದನ್ನು ಅಣಿಗೊಳಿಸಿದ್ದರು. ಅವರ ಕ್ರಮಬದ್ಧವಾದ ವ್ಯಾಸಂಗ ಅರ್ಧಕ್ಕೇ ನಿಂತಂತೆ, ಅವರ ದಾಂಪತ್ಯ ಜೀವನದ ಎಳೆಯೂ ಅರ್ಧದಲ್ಲಿಯೇ ಕಡಿದು ಬಿದ್ದಿತು. ಈ ಎರಡೂ ಅನಿರೀಕ್ಷಿತಗಳಿಂದ ಅವರು ಕುಗ್ಗಿ ಕುಸಿಯದೇ ತಮ್ಮ ದೀರ್ಘಾಯುಷ್ಯವನ್ನು ಧೀಮಂತರಾಗಿಯೇ ನಿರ್ವಹಿಸಿದರು. ಸುತ್ತ ಮುತ್ತಲೂ ಸರ್ವದಾ ಸ್ಮಿತವನ್ನು ಸೂಸುತ್ತಿದ್ದ ಸುಂದರವಾದ ಸೃಷ್ಟಿ ಸೌಂದರ್ಯ, ಕುಟೀರದ ಸನಿಹದಲ್ಲಿಯೇ ಇದ್ದ ಕರಾವಳಿಯ ಕಡಲಿನ ಗೆಳೆತನ, ಮನೆಗೆ ಬಂದು ಹೋಗುವ ಬಂಧು ಬಳಗದವರ ಅಭಿಮಾನ, ಸಾಹಿತ್ಯ ಬಾಂಧವರ ಸಂವಾದದ ಸವಿ ಮತ್ತು ಸಹೋದರನ ಕುಟುಂಬದ ಸಹವಾಸಗಳಲ್ಲಿ ಅವರ ಜೀವನ ಸುಗಮವಾಗಿಯೇ ಸಾಗಿತು. ತಮ್ಮ ವ್ಯಾಸಂಗದ ಕೋಣೆಯಲ್ಲಿ ಗೋಡೆಗೆ ತೂಗು ಹಾಕಿದ್ದ ಪತ್ನಿಯ ಭಾವಚಿತ್ರಕ್ಕೆ ಪ್ರತಿನಿತ್ಯವೂ ಒಂದು ಪುಷ್ಪವನ್ನು ಸಮರ್ಪಿಸದೆ ದಿನದ ಕೆಲಸ ಮೊದಲಾಗುತ್ತಿರಲಿಲ್ಲವೆಂದು, ಮಾಸ್ತಿಯವರು ಹೇಳಿರುವ ಮಾತಿನಿಂದ ತಿಳಿದು ಬರುತ್ತದೆ. ಮುಪ್ಪಿನಲ್ಲಿಯೂ ಮುಗ್ಧರಂತೆ ಕಂಡುಬಂದ ವಾಙ್ಮಯ ವಿಶಾರದರನ್ನು ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಕವಿತೆಯಲ್ಲಿ ‘ಬೆಳ್ಳಿ ಮೀಸೆಯ ಮಗು’ ಎಂದು ಕರೆದಿರುವುದು ಇಂದಿಗೂ ಒಂದು ಅಚ್ಚುಕಟ್ಟಾದ ನುಡಿಗಟ್ಟಿನಂತಿದೆ.
        ಗೋವಿಂದ ಪೈ ಅವರ ಹೆಸರನ್ನು ಕೇಳಿದ ಕೂಡಲೇ ಅವರೊಬ್ಬ ಸುಪ್ರಸಿದ್ಧ ಸಂಶೋಧಕರೆಂದು ಎಲ್ಲರಿಗೂ ಕೂಡಲೇ ಸ್ಫುರಿಸುವುದು. ಗೋವಿಂದ ಪೈ ಅವರ ಸಾಹಿತ್ಯ ವ್ಯವಸಾಯ, ಕಾವ್ಯಸೃಷ್ಟಿಯಿಂದ ಅರಳಿರುವುದನ್ನು ಕೂಡಾ ಮರೆಯುವಂತಿಲ್ಲ. ಹಲವು ನಾಟಕಗಳನ್ನೂ ಅವರು ರಚಿಸಿದ್ದಾರೆ. 1900ರಲ್ಲಿ ‘ಸುವಾಸಿನಿ’ ಎಂಬ ಮಂಗಳೂರಿನ ಪತ್ರಿಕೆಗೆ ‘ಸುವಾಸಿನಿ’ ಎಂಬ ಹೆಸರಿನಲ್ಲಿಯೇ ಮೂರು ಕಂದ ಪದ್ಯಗಳನ್ನು ಬರೆದು ಕಳುಹಿಸಿದರು. ಅದು ಆ ಪತ್ರಿಕೆಯಲ್ಲಿ ಪ್ರಕಟವಾದುದಲ್ಲದೆ ಅದಕ್ಕಾಗಿ ಇಟ್ಟಿದ್ದ ಬಹುಮಾನವೂ ಬಂದಿತು. ಆಗ ಪೈ ಅವರು 8ನೆಯ ತರಗತಿಯಲ್ಲಿ ಓದುತ್ತಿದ್ದರು. 1911ರ ಸುಮಾರಿನಲ್ಲಿ ಅವರು ರವೀಂದ್ರರ ಎರಡು ಕವನಗಳನ್ನೂ, ಮಹಮ್ಮದ್ ಇಕ್ಬಾಲ್ ಅವರ ಒಂದು ಪದ್ಯವನ್ನೂ ಅನುವಾದಿಸಿದರು. ಅಂದಿನ ‘ಸ್ವದೇಶಾಭಿಮಾನಿ’ ಪತ್ರಿಕೆಯಲ್ಲಿ ಅವುಗಳು ಪ್ರಕಟವಾದಾಗ ದೊಡ್ಡ ಹುಯಿಲೇ ಎದ್ದಿತೆಂದು ತಿಳಿದು ಬರುತ್ತದೆ. ಅನಂತರ ಅವರ ಗಮನ ಇಂಗ್ಲಿಷ್ ಕವಿತೆಗಳಲ್ಲಿ ಪ್ರಯೋಗವಾಗುತ್ತಿದ್ದ ಅಂತ್ಯಾಕ್ಷರ ಪ್ರಾಸಕ್ಕೆ ಹೆಚ್ಚಾಗಿ ಮನವೊಲಿದಂತೆ ಕಾಣುತ್ತದೆ. ಆಧುನಿಕ ಕನ್ನಡ ಕವಿತೆಗಳು ಬಳಕೆಗೆ ಬಂದಂತೆಲ್ಲಾ ಪೈ ಅವರ ಕಾವ್ಯ ಸಾಮ್ರಾಜ್ಯ ವಿಸ್ತರಿಸಲಾರಂಭಿಸಿತು. ಅವರ ಮೊದಲ ಕವನ ಸಂಕಲನವಾದ ‘ಗಿಳಿವಿಂಡು’ವನ್ನು ಅವರ ಗುರುಗಳಾದ ಪಂಜೆ ಮಂಗೇಶರಾಯರು ‘ಬಾಲ ಸಾಹಿತ್ಯ ಮಂಡಲ’ದ ಮೂಲಕ ಬೆಳಕಿಗೆ ತಂದರು.
        ಅವರ ಎರಡನೆಯ ಕವನ ಸಂಕಲನವಾದ ‘ನಂದಾದೀಪ’ದ ಸಂಕಲನದ ರೂಪುರೇಷೆಗಳನ್ನೆಲ್ಲಾ ಅಣಿಗೊಳಿಸಿದ್ದರು. ಆದರೆ ಈ ಅಪೂರ್ವ ಸಂಕಲನ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಲಿಲ್ಲ. ಪ್ರಕಾಶಕರು ಎಚ್ಚರಿಕೆ ವಹಿಸಿ ಪೈ ಅವರ ಸೂಚನೆಗಳನ್ನು ಚಾಚೂ ತಪ್ಪದೆ ಇದನ್ನು ಬೆಳಕಿಗೆ ತಂದರು. ಮುಂದೆ ಅಲ್ಲಿ ಇಲ್ಲಿ ಚೆಲ್ಲಿ ಹೋಗಿದ್ದ ಅವರ ಕವನಗಳನ್ನು ಹುಡುಕಿ ‘ಹೃದಯರಂಗ’ ಎಂಬ ಮೂರನೆಯ ಕವನ ಸಂಕಲನವನ್ನೂ ಕಾವ್ಯಾಲಯದವರು ಪ್ರಕಟಿಸಿದ್ದಾರೆ. ಅದೇ ತೆರನಾಗಿ ‘ಇಟಂಕ’, ‘ಇಂಗಡಲು’ ಮುಂತಾದ ಕವನ ಸಂಕಲನಗಳು ಕೂಡಾ ಮುಂದೆ ಮುದ್ರಣಗೊಂಡವು. ಅಷ್ಟೇ ಅಲ್ಲದೆ ಗೋವಿಂದ ಪೈ ಅವರ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಎಂಬ ಅವರ ಪ್ರಸಿದ್ಧವಾದ ಎರಡು ನೀಳ್ಗವಿತೆಗಳು ಮೊದಲು ಬಿಡಿ ಬಿಡಿಯಾಗಿ ಅನಂತರ ಒಟ್ಟುಗೂಡಿ ಪ್ರಕಟಗೊಂಡಿವೆ.
         ಗೋವಿಂದ ಪೈ ಅವರ ಕವನಗಳಲ್ಲಿ ಚಂಪೂ ಕವಿಗಳಲ್ಲಿ ಕಂಡುಬರುವಂತೆ ಪ್ರತಿಭೆ ಮತ್ತು ಪಾಂಡಿತ್ಯಗಳೆರಡೂ ಹದವಾಗಿ ಕೂಡಿಕೊಂಡು ಬರುತ್ತವೆ. ಅವರು ತಾವು ಬರೆಯುವ ಅಪೂರ್ವ ಶಬ್ದಗಳಿಗೆ, ಇಲ್ಲ ತಾವೇ ಸೃಷ್ಟಿಸುವ ಪದಗಳಿಗೆ ಅಡಿಟಿಪ್ಪಣಿಯನ್ನು ಕೊಡುವುದನ್ನು ಕಂಡು ಕೆಲವರಿಗೆ ಬೆರಗಾಗಬಹುದು. ಅವರ ಪಾಲಿಗೆ ಈ ಕವನ ಕ್ರಿಯೆ ಒಂದು ಚಪಲವಲ್ಲ. ಅದು ಒಂದು ಅಪೂರ್ವವಾದ ಕಲಾ ಕೌಶಲ, ಕಲ್ಪನೆ ಮತ್ತು ಕಲೆಗಳ ಮಧುರ ಸಮನ್ವಯ. ಅವರಿಗೆ ಕವಿ-ಕಾವ್ಯಗಳಲ್ಲಿರುವ ಶ್ರದ್ಧೆ, ಗೌರವಗಳು ಅಪಾರವಾದುದು. ಪೈ ಅವರು ‘ಕವಿತಾವತಾರ’ವೆಂಬ ಕವನದಲ್ಲಿ ವಾಲ್ಮೀಕಿಯನ್ನು ನೆನೆದು, “ಸುಯ್ಯೊಂದು, ನರುಕಂಬನಿಯೊಂದು, ಬಿಕ್ಕೊಂದು – ಕವಿತೆ ಗಡ ಮರುಕಂ” ಎಂದು ಹೇಳಿರುವ ಮಾತು ಔಪಚಾರಿಕವಲ್ಲ. ಅದು ಅವರ ಅಂತಃಕಾರಣದ ಅನುಭವವೂ ಹೌದು. ಕವಿತೆಯ ಕರ್ಮವನ್ನು ಮರ್ಮವನ್ನು ಚೆನ್ನಾಗಿ ಚಿಂತನೆ ಮಾಡಿರುವ ಅವರು “ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತನಿಗೂಡಿ, ಕವಿತೆ ನವರಸ ರಂಗವದು, ತ್ರಿವೇಣಿಯ ಸಂಗಮಿದೊ ನೆನಸು ಕನಸು ಮನಸ್ಸಿನ ತ್ರಿತಯಮೊಡಗೂಡಿ” ಎಂದು ವರ್ಣಿಸುವ ಅವರು ಕವಿತೆಗೆ ಶೋಭಾವಹವಾದ ಪ್ರಾಸ, ಛಂದಸ್ಸು, ಶೈಲಿ, ಅರ್ಥಲಾಲಿತ್ಯಗಳನ್ನು ಪುರಸ್ಕರಿಸುವ ರೀತಿ ವಿಶಿಷ್ಟವಾದದ್ದು.
          ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಕುಡಿಯೊಡೆದು, ಕನ್ನಡನಾಡಿನ ಸುತ್ತಲೂ ಬಳ್ಳಿವರಿದು ಕಡೆಗೆ ಭಾರತಾಂಬೆಯ ಮುಡಿಯಲ್ಲಿ ಹೂವಾಗಿ ಅರಳಿ ಪರಿಣಮಿಸುತ್ತದೆ. “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲಸಾಲುಗಳು. “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂದು ಅಂದು ಅವರು ಕೊರಳೆತ್ತಿ ಹಾಡಿದ ಹಾಡು ಎಂದೆಂದಿಗೂ ತನುಮನಗಳಲ್ಲಿ ಮಾರ್ದನಿಸುತ್ತಿರುವುದು. “ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮೆವು” ಎಂಬ ಮಾತುಗಳು, ಅವರ ಬಾಯಿಂದ ಹೊರಹೊಮ್ಮಿದ ಮಂತ್ರಗಳೇ ಸರಿ! ಮುಂದೆ “ಭಾರತದಲಿ ಸರ್ವಧರ್ಮಮೊಂದಲಿ ಸದನಂ, ಮಾಣಿಸಲೀಕೆಯ ಸ್ವಸ್ತಿಧ್ವಜಮಧರ್ಮದೊಳಕದನಂ” ಎಂದು ಶುಭವನ್ನು ಕೋರುವರು. ಕಡೆಗೆ ‘ಭಾರತಾಂಬೆಯ ಮಹಿಮೆಯನ್ನು’ ಮತ್ತೆ ಮತ್ತೆ ಮೆಚ್ಚಿಕೊಂಡು ‘ಭಾರತವನಳಿಯುತ್ತ ನನಗೆ ಜೀವನವೆತ್ತ? ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು ತಮ್ಮ ಭಕ್ತಿಯ ಸುಮಮಾಲೆಯನ್ನು ಆಕೆಯ ಮುಡಿಗೆ ತೊಡಿಸಿ ‘ಭಾರತ ಯಶೋಗಾನವೆನ್ನೆದೆಯ ತಾನ’ “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ಹಿಗ್ಗುವರು.
          ಸ್ವಾತಂತ್ರ್ಯದ ನಂತರದಲ್ಲಿ ಸ್ವಾತಂತ್ರ್ಯದಾತನನ್ನು ನೆನೆದು “ಏನು ತೋರಿಸಿದೆಮಗೆ? ಮೇಣೇಮನಿತ್ತೆ: ಕಳಕೊಂಡ ಬಿಡುಗಡೆಯನೆಮಗಿತ್ತೆ ತಂದೆ! ಆದರೀಗಣ ಕಥೆಯ ಬಲ್ಲೆಯಾ ಮತ್ತೆ? ರಾಹುವನು ತೊಲಗಿಸಿದೆ, ಕೇತುವನು ತಂದೆ” ಎಂದು ಮರುಗುತ್ತಾರೆ. ಗಾಂಧೀಜಿಯನ್ನು ಸ್ಮರಿಸಿ “ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು!” ಎಂದು ಯಾತನೆ ಪಡುತ್ತಾರೆ. ಸ್ವತಂತ್ರ ಭಾರತದ ಅತಂತ್ರವನ್ನು ಕಂಡು ವರ್ಷವರ್ಷವೂ ಬರೆದಿರುವ ಚತುರ್ದಶಪದಿಗಳನ್ನು ನೋಡಿದರೆ, ಕವಿಯ ಕಂಬನಿಯ ಕುಯ್ಲನ್ನು ಕಾಣಬಹುದು. ಗೋವಿಂದ ಪೈ ಅವರ ಈ ದೇಶ ಪ್ರೇಮ ಸ್ವದೇಶಕ್ಕೆ ಮಾತ್ರ ಸೀಮಿತವಾಗದೆ, ದೂರದ ತುರ್ಕಿಯನ್ನು ಕಬಳಿಸಲು ಇಟಲಿಯು ಮಾಡಿದ ಸನ್ನಾಹವನ್ನು ಖಂಡಿಸುವವರೆಗೂ ವ್ಯಾಪಿಸಿರುವುದು.
          ಗೋವಿಂದಪೈ ಅವರ ಅಧ್ಯಾತ್ಮಿಕ ದೃಷ್ಟಿ ಹೇಗೆ ಸರ್ವಜನಾದರಣೀಯವಾಗಿದೆ ಎನ್ನುವುದನ್ನು ಅವರ ಕೆಲವು ಕವನಗಳಿಂದ ಗ್ರಹಿಸಬಹುದು. ಪಂಡರಾಪುರದ ವಿಠೋಬನನ್ನು ಮೊದಲ್ಗೊಂಡು, ಜೆರುಸಲೇಮಿನ ಯೇಸು ಕ್ರಿಸ್ತನ ವರೆಗೆ ಅವರ ಆಧ್ಯಾತ್ಮಿಕ ಧಾರೆ ಪ್ರವಹಿಸಿದೆ. ಅವತಾರ ಪುರುಷರಾದ ಶ್ರೀಕೃಷ್ಣ ಮತ್ತು ಬುದ್ಧರಲ್ಲಿ ಅವರಿಗೆ ಸಮಾನ ಗೌರವ ಭಾವನೆ.
           ಎಲ್ಲಿಯ ಕೃಷ್ಣ – ಎಲ್ಲಿಯ ಕ್ರಿಸ್ತ? ಆದರೆ ಗೋವಿಂದ ಪೈ ಅವರ ಆದ್ಯಾತ್ಮಿಕ ಪ್ರಜ್ಞೆಗೆ ಆ ಇಬ್ಬರೂ ಒಂದೇ ಶಕ್ತಿಯ ಎರಡು ಅವತಾರಗಳೆಂಬ ಪೂಜ್ಯಭಾವನೆ! ಸಂಪ್ರದಾಯಬದ್ಧವಾದ ಧಾರ್ಮಿಕ ಪ್ರಪಂಚದಲ್ಲಿ ಇದಕ್ಕಿಂತಲೂ ಕ್ರಾಂತಿಕಾರಕವಾದ ತರ್ಕವನ್ನು ಹೂಡಲು ಸಾಧ್ಯವೇ? ಪೈ ಅವರ ‘ಯೇಸುಕೃಷ್ಣ’ ಎಂಬ ಕವಿತೆಯಲ್ಲಿ ಈ ಅಸದೃಶ ಸಾಮ್ಯವನ್ನು ಎತ್ತಿ ತೋರಿಸಿದ್ದಾರೆ. ಕೃಷ್ಣನು ಸೆರೆಮನೆಯಲ್ಲಿ ಹುಟ್ಟಿದರೆ, ಯೇಸುವು ದನದ ಕೊಟ್ಟಿಗೆಯಲ್ಲಿ ಹುಟ್ಟಿದವನು. ಒಬ್ಬ ಕೊಳಲೂದಿ ದನಗಾಹಿ ಎನಿಸಿದರೆ, ಇನ್ನೊಬ್ಬ ಬಡಗಿಯ ಕೆಲಸವನ್ನು ಅವಲಂಬಿಸಿದವನು. ಒಬ್ಬ ರಾಧೆಯ ಪ್ರೇಮಪಾಶದಲ್ಲಿ ಬಂಧಿತನಾದರೆ, ಇನ್ನೊಬ್ಬ ಮಗ್ದಲದ ಮರಿಯಳ ಅನುರಾಗಕ್ಕೆ ಪಾತ್ರನಾಗುತ್ತಾನೆ. ಒಬ್ಬ ಕೌರವನಿಂದ ಬಂಧಿತನಾದರೆ, ಇನ್ನೊಬ್ಬನು ತನ್ನವರ ಮೂಲಕವೇ ತಲೆಗೆ ಮುಳ್ಳಿನ ಕಿರೀಟವನ್ನು ತೊಡಬೇಕಾಗುತ್ತದೆ. ಈ ತೆರನಾದ ಸಾದೃಶ್ಯ ಪರಂಪರೆಯನ್ನು ಪಟ್ಟಿ ಮಾಡಿ, ಕಡೆಗೆ ಪೈ ಅವರು “ಯದುನಾಥನೆ ಯೂದನಾಥನಲ್ಲವೇ?” ಎಂದು ವಿಸ್ಮಯಚಕಿತರಾಗುವರು.
          ಉಡುಪಿಯ ಕೃಷ್ಣನಲ್ಲಿ ಅವರ ಮೊರೆ ವಿಶಿಷ್ಟವಾಗಿದೆ. ದ್ವಾಪರಯುಗದಲ್ಲಿ ಮಹಾಭಾರತದಲ್ಲಿ ಸೂತ್ರಧಾರನಂತಿದ್ದು ಧರ್ಮವನ್ನು ಉದ್ಧರಿಸಿದಂತೆ ಇಂದಿನ ಭಾರತದ ಗೋಳನ್ನು ಪರಿಹರಿಸಬೇಕೆಂದು ಆತನಲ್ಲಿ ಕವಿ ಮೊರೆಯಿಡುವರು. “ಬಡಗೋಳ ಕೇಳೆಮ್ಮ ಕಡಗೋಲ ಕನ್ನ! ಸಡಗರಿಸೋ ಬಿಡುಗಡಿಸೆ ಭಾರತದ ನಿನ್ನ!” ಎಂಬ ನುಡಿ ಪೈ ಅವರ ಹೃದಯವೈಶಾಲ್ಯಕ್ಕೆ ಸಾಕ್ಷಿಯಂತಿದೆ. ‘ಶ್ರೀ ಗೊಮ್ಮಟಜಿನಸ್ತುತಿ’ಯಲ್ಲಿ ಅವರ ಪಾರಮಾರ್ಥಿಕ ದೃಷ್ಟಿ ಆ ವಿಗ್ರಹದಷ್ಟೇ ಎತ್ತರವೂ ಬಿತ್ತರವೂ ಆದುದು.
          ತನ್ನ ದುರ್ದೈವದಿಂದ ಮೂರು ಮಕ್ಕಳನ್ನು ಒಟ್ಟಿಗೆ ಕಳೆದುಕೊಂಡ ಹತಭಾಗಿನಿಯೊಬ್ಬಳ ಕುರಿತು ಬರೆದ ಮಾತಿನಲ್ಲಿ ‘ಅಂದಿನಿಂದಾಕೆ ನಕ್ಕಿಲ್ಲ, ಅತ್ತಿಲ್ಲ’ ಎಂಬ ಪಂಕ್ತಿ ಪೂರ್ಣಪ್ರಮಾಣದ ಪಶ್ಚಾತ್ತಾಪ ಪ್ರತಿಸ್ಪಂದಿಸುತ್ತದೆ. ‘ಮಾತಂಗಿ’ ಎಂಬ ಕಥನ ಕವನದಲ್ಲಿ ಅಸ್ಪೃಶ್ಯ ಜನರ ಕುರಿತ ಅನುಕಂಪೆ, ‘ಭಿಕ್ಷುವೂ ಪಕ್ಷಿಯೂ’ ಎಂಬಲ್ಲಿ ಗೋಚರವಾಗುವ ಭಿಕ್ಷುವಿನ ಸಹನೆ, ‘ವಾಸವದತ್ತೆ’ ಎಂಬಲ್ಲಿ ಪರಿತ್ಯಕ್ತ ವೇಶ್ಯೆಯ ಬಗ್ಗೆ ಪ್ರಕಾಶಿತವಾಗುವ ಉಪಗುಪ್ತನ ಉದಾರದೃಷ್ಟಿ ಮೊದಲಾದುವು ಕವಿಯ ಮಾನವೀಯತೆಯನ್ನು ಪ್ರತಿಬಿಂಬಿಸುವ ಉತ್ತಮ ಉದಾಹರಣೆಗಳು.
          ಗೋವಿಂದ ಪೈ ಅವರು ವಿಭೂತಿ ಮಹತ್ವವನ್ನು ಕಂಡಲ್ಲಿ ಕೈಮುಗಿದು ತಲೆಬಾಗುವ ತಲೆಮಾರಿನವರು. ಈ ಕ್ಷೇತ್ರದಲ್ಲಿ ಅವರಿಗೆ ಕಾಲ ದೇಶಗಳ ಅಂತರವಾಗಲಿ; ಜಾತಿ, ಮತ, ಪಂಥಗಳ ತಾರತಮ್ಯವಾಗಲಿ ಇಲ್ಲ. ಅವರ ಈ ಪೂಜ್ಯ ಭಾವನೆ ಯೇಸುವಿನ ಕಡೆಯ ದಿನವನ್ನು ಕುರಿತು ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ವಿಶ್ವರೂಪವನ್ನೇ ತಾಳಿರುವುದನ್ನು ಕಾಣಬಹುದು. ಈ ಎರಡೂ ಕೃತಿಗಳೂ ಧಾರ್ಮಿಕ ಪುರುಷರನ್ನು ಕುರಿತಾದುದರಿಂದ ವಿಷಯವನ್ನು ಪ್ರತಿಪಾದಿಸುವಲ್ಲಿ ಕವಿಯ ಹೊಣೆ ಬಹಳ ದೊಡ್ಡದಾದುದು. ಆ ಸಲುವಾಗಿಯೇ ಗೋವಿಂದ ಪೈ ಅವರು ‘ಗೊಲ್ಗೊಥಾ’ದ ವಸ್ತುವನ್ನು ಸಂಗ್ರಹಿಸುವಲ್ಲಿ ಮೂಲ ಆಕರಗಳನ್ನು ಎಷ್ಟು ನಿಷ್ಠೆಯಿಂದ ವ್ಯಾಸಂಗ ಮಾಡಿರುವರೆನ್ನುವುದನ್ನು, ‘’ವೈಶಾಖಿ’ಗೆ ಸಂಬಂಧಿಸಿದ ಪಾಳಿಭಾಷೆಯ ಗ್ರಂಥಗಳನ್ನೇ ಅವಲಂಬಿಸಿರುವರೆಂಬುದನ್ನೂ ಅವರು ಕೊಟ್ಟಿರುವ ಟಿಪ್ಪಣಿಗಳಿಂದ ತಿಳಿಯಬಹುದು. ಅವರು ಕೈಕೊಂಡಿರುವ ಕೆಲಸವಾದರೋ ಆಯಾ ಧರ್ಮದ ಪ್ರಚಾರವಲ್ಲ. ಆಯಾ ಮಹಾಪುರುಷರ ಮರಣದ ಮಹಾತ್ಮೆ ಮಾತ್ರ!
          ಗೊಲ್ಗೊಥಾದಲ್ಲಿ ಯೇಸುವಿನ ಮೇಲಿನ ಅಂತಃಕರಣವೆಲ್ಲ ತನಗೆ ತಾನೇ ರೂಪುವೆತ್ತು ಕಡೆದು ನಿಲ್ಲಿಸಿದ ಜೀವಂತ ಕೃತಿಯೆನ್ನಿಸಿ ಕನ್ನಡದಲ್ಲಿ ಅಮರವಾಗಿದೆ. ಆ ಬಳಿಕ ಕೆಲವು ವರ್ಷಗಳ ತರುವಾಯ ರಚಿಸಿದ ‘ವೈಶಾಖಿ’ ಯಲ್ಲಿ ವೈಶಾಖ ಶುಕ್ಲ ಪೂರ್ಣಿಮೆಯಂದು ರಾಜಕುಮಾರನಾಗಿ ಹುಟ್ಟಿದ ಸಿದ್ಧಾರ್ಥನು, ಸರ್ವವನ್ನೂ ತ್ಯಾಗ ಮಾಡಿ ಸಂನ್ಯಾಸವನ್ನು ಕೈಗೊಂಡು, ವೈಶಾಖ ಶುಕ್ಲ ಪೂರ್ಣಮಿಯಂದೇ ಜ್ಞಾನೋದಯವನ್ನು ಪಡೆದು ಬುದ್ಧನೆಂಬ ಹೆಸರಿನಿಂದ ಜಗತ್ಪ್ರಸಿದ್ಧನಾಗಿ, ವೈಶಾಖ ಶುಕ್ಲ ಪೂರ್ಣಮಿಯಂದೇ ಪರಿನಿರ್ವಾಣವನ್ನು ಪಡೆದುದರಿಂದ ಕವಿಗಳು ಈ ಹೆಸರನ್ನು ಇಟ್ಟಿರುವುದು ಅರ್ಥಪೂರ್ಣವಾಗಿದೆ.
            ಕವಿ ಮತ್ತು ಸಂಶೋಧಕನ ಪ್ರಜ್ಞೆಗಳೆರಡನ್ನೂ ಒಳಗೊಂಡಿರುವ ಗೋವಿಂದ ಪೈ ಅವರ ವಿಶಿಷ್ಟ ವ್ಯಕ್ತಿತ್ವ ಡಾ. ಎ. ಎನ್. ಉಪಾಧ್ಯೆ ಅಂತಹ ಮಹಾನ್ ಸಂಶೋಧಕರನ್ನೂ ವಿಸ್ಮಿತಗೊಳಿಸಿದೆ. ಗೋವಿಂದ ಪೈ ಅವರ ಸಂಶೋಧನ ಪ್ರಬಂಧಗಳನ್ನು ಸಾವಧಾನವಾಗಿ ಪರಿಶೀಲಿಸಿದಲ್ಲಿ ಅವರ ಪ್ರತಿಯೊಂದು ಲೇಖನವೂ ಅಪೂರ್ವವಾದ ಗಣಿ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮುಂತಾದ ಕೆಲವು ಲೇಖನಗಳನ್ನು ಇಲ್ಲಿ ಹೆಸರಿಸಬಹುದು. ಗೋವಿಂದ ಪೈ ಸಂಶೋಧನ ಸಂಪುಟ 1995ರ ವರ್ಷದಲ್ಲಿ ಪ್ರಕಟವಾಗಿದೆ.
          ಗೋವಿಂದ ಪೈ ಅವರು ‘ಚಿತ್ರಭಾನು’, ‘ಹೆಬ್ಬೆರಳು’, ‘ತಾಯಿ’, ‘ಕಾಯಾಯ್ ಕೊಮಾಜಿ’ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮ ಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧಗಳಲ್ಲಿ ‘ಆತ್ಮಕಥನ’ ಅವರ ಸಾಹಿತ್ಯ ಕೃಷಿಯ ಮಥನದ ನವನೀತವೆನಿಸಿದೆ. ‘ಬರಹಗಾರನ ಹಣೆಬರಹ’ ಲೇಖಕನ ಕಷ್ಟನಿಷ್ಟುರಗಳ ಕೈಗನ್ನಡಿಯಂತಿದೆ. ‘ಕನಸಾದ ನನಸು’ ಪೈ ಅವರಿಗೆ ತಮ್ಮ ಗುರುಗಳಾದ ಪಂಜೆಯವರಲ್ಲಿದ್ದ ಪೂಜ್ಯಭಾವದ ಪ್ರತೀಕದಂತಿದೆ. ಅವರ ಒಡನಾಡಿಗಳಾದ ಎಂ.ಎನ್. ಕಾಮತ್, ಕಿಲ್ಲೆ ಅವರ ಸ್ನೇಹದ ಬಗ್ಗೆ ಬರೆದಿರುವ ಅವರ ಬರಹಗಳು, ಎಂ.ಆರ. ಶ್ರೀನಿವಾಸ ಮೂರ್ತಿಗಳಿಗೆ ನೆನಪು, ಬೇಂದ್ರೆಯವರಿಗೆ ಐವತ್ತು ದಾಟಿದ್ದಕ್ಕೆ ಸಲ್ಲಿಸಿದ ಹರಕೆ ಇವೆಲ್ಲಾ ಮನನೀಯವೆನಿಸಿವೆ.
         ಇಂಥ ಮಹಾಚೇತನರಾದ ಗೋವಿಂದ ಪೈ ಅವರು ಸೆಪ್ಟಂಬರ್ 6, 1963ರಲ್ಲಿ ತಮ್ಮ ಎಂಭತ್ತನೆಯ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಅವರು ಬಿಟ್ಟು ಹೋಗಿರುವ ಸಾರಸ್ವತ ಸಂಪತ್ತು ಅಪಾರವಾಗಿರುವುದರಿಂದ, ಅವರ ಆ ಉಪಕಾರ ಸ್ಮರಣೆಗಾಗಿ ಕನ್ನಡಿಗರು ಅವರಿಗೆ ಚಿರಋಣಿಗಳಾಗಿದ್ದಾರೆ.

(ಕೃಪೆ: ಜಿ.ವರದರಾಜರಾವ್ ಅವರ ಎಂ. ಗೋವಿಂದ ಪೈ ಅವರ ಕುರಿತ ಬರಹ)


**********

21 ಕಾಮೆಂಟ್‌ಗಳು:

  1. ಪದ್ಯದ ಸಾರಾಂಶ ಕೊಟ್ಟಿದ್ದರೆ ಚೆನ್ನಾಗಿರುತ್ತದೆ

    ಪ್ರತ್ಯುತ್ತರಅಳಿಸಿ